೦೯

೦೦೦ ಸೂ ಸಕಲ ...{Loading}...

ಸೂ. ಸಕಲ ಮುನಿಜನ ಸಹಿತ ಗಿರಿವನ
ನಿಕರದಲಿ ತೊಳಲಿದನು ರಾಜ
ನ್ಯಕ ಶಿರೋಮಣಿ ಧರ್ಮನಂದನ ತೀರ್ಥಯಾತ್ರೆಯಲಿ

೦೦೧ ಅರಸ ಕೇಳೈ ...{Loading}...

ಅರಸ ಕೇಳೈ ಪಾರ್ಥನಿದ್ದನು
ವರುಷವೈದರೊಳಿಂದ್ರ ಭವನದ
ಸಿರಿಯ ಸಮ್ಮೇಳದ ಸಗಾಢದ ಸೌಮನಸ್ಯದಲಿ
ನರನ ಹದನೇನೊ ಧನಂಜಯ
ನಿರವದೆಲ್ಲಿ ಕಿರೀಟಿ ನಮ್ಮನು
ಮರೆದು ಕಳೆದನಲಾಯೆನುತ ಯಮಸೂನು ಚಿಂತಿಸಿದ ॥1॥

೦೦೨ ಕಳುಹಿದನು ಲೋಮಶನನವನೀ ...{Loading}...

ಕಳುಹಿದನು ಲೋಮಶನನವನೀ
ತಳಕೆ ಸುರಪತಿ ಸಿತಹಯನ ಕೌ
ಶಲವನೊಡಹುಟ್ಟಿದರಿಗರುಹಲ್ಕಿಕಭ್ರ ಮಾರ್ಗದಲಿ
ಇಳಿದನಾ ಮುನಿಪತಿ ಧರಿತ್ರೀ
ತಳಕೆ ಕಾಮ್ಯಕನಾಮ ವನದಲಿ
ತಳಿರ ಗೂಡಾರದಲಿ ಕಂಡನು ಧರ್ಮನಂದನನ ॥2॥

೦೦೩ ಈತನಿದಿರೆದ್ದಘ್ರ್ಯ ಪಾದ್ಯವ ...{Loading}...

ಈತನಿದಿರೆದ್ದಘ್ರ್ಯ ಪಾದ್ಯವ
ನಾ ತಪೋನಿಧಿಗಿತ್ತು ಬಹಳ
ಪ್ರೀತಿಯಲಿ ಬೆಸಗೊಂಡನವರಾಗಮನ ಸಂಗತಿಯ
ಆತನಮಲ ಸ್ವರ್ಗಸದನ ಸು
ಖಾತಿಶಯವನು ತಿಳುಹಿದನು ಪುರು
ಹೂತ ಭವನದಲರ್ಜುನನ ವಾರತೆಯ ವಿವರಿಸಿದ ॥3॥

೦೦೪ ನುಡಿನುಡಿಗೆ ಸುಕ್ಷೇಮ ...{Loading}...

ನುಡಿನುಡಿಗೆ ಸುಕ್ಷೇಮ ಕುಶಲವ
ನಡಿಗಡಿಗೆ ಬೆಸಗೊಂಡು ಪುಳಕದ
ಗುಡಿಯ ಬೀಡಿನ ರೋಮಪುಳಕದ ಪೂರ್ಣ ಹರುಷದಲಿ
ಪೊಡವಿಯಧಿಪತಿ ಬಳಿಕ ತೊಳಲಿದ
ನಡವಿಯಡವಿಯ ತೀರ್ಥಯಾತ್ರೆಗೆ
ಮಡದಿ ನಿಜ ಪರಿವಾರವವನೀದೇವಕುಲ ಸಹಿತ ॥4॥

೦೦೫ ವರ ಪುಲಸ್ತ್ಯ ...{Loading}...

ವರ ಪುಲಸ್ತ್ಯ ಮುನೀಂದ್ರ ಭೀಷ್ಮಂ
ಗರುಹಿದುತ್ತಮ ತೀರ್ಥವನು ವಿ
ಸ್ತರಿಸಿದನು ಲೋಮಶ ಮುನೀಶ್ವರನವನಿಪಾಲಂಗೆ
ಧರಣಿಪತಿ ಬೃಹದಶ್ವನನು ಪತಿ
ಕರಿಸಿ ನಿಜ ರಾಜ್ಯಾಪಹಾರದ
ಪರಮ ದುಃಖ ಪರಂಪರೆಯನರುಹಿದನು ಖೇದದಲಿ ॥5॥

೦೦೬ ಆತನೀತನ ಸನ್ತವಿಟ್ಟು ...{Loading}...

ಆತನೀತನ ಸಂತವಿಟ್ಟು
ದ್ಯೂತದಲಿ ನಳ ಚಕ್ರವರ್ತಿ ಮ
ಹೀತಳವ ಸೋತನು ಕಣಾ ಕಲಿಯಿಂದ ಪುಷ್ಕರಗೆ
ಭೂತಳವ ಬಿಸುಟಡವಿಗೈದಿದ
ನಾತ ನಿಜವಧು ಸಹಿತ ವನದಲಿ
ಕಾತರಿಸಿ ನಿಜಸತಿಯ ಬಿಸುಟನು ಹಾಯ್ದನಡವಿಯಲಿ ॥6॥

೦೦೭ ಬಳಿಕ ಕಾರ್ಕೋಟಕನ ...{Loading}...

ಬಳಿಕ ಕಾರ್ಕೋಟಕನ ದೆಸೆಯಿಂ
ದಳಿಯ ನಿಜಋತುಪರ್ಣ ಭೂಪನ
ನಿಳಯಕೋಲೈಸಿದನು ಬಾಹುಕನೆಂಬ ನಾಮದಲಿ
ಲಲನೆ ತೊಳಲಿದು ಬರುತ ತಂದೆಯ
ನಿಳಯವನು ಸಾರಿದಳು ಬಳಿಕಾ
ನಳಿನಮುಖಿಯಿಂದಾಯ್ತು ನಳ ಭೂಪತಿಗೆ ನಿಜರಾಜ್ಯ ॥7॥

೦೦೮ ಆತನಾಪತ್ತದು ಮಹೀಪತಿ ...{Loading}...

ಆತನಾಪತ್ತದು ಮಹೀಪತಿ
ನೀ ತಳೋದರಿ ಸಹಿತ ನಿನ್ನೀ
ಭ್ರಾತೃಜನ ಸಹಿತೀ ಮಹಾಮುನಿ ಮುಖ್ಯಜನ ಸಹಿತ
ಕಾತರಿಸುತಿಹೆ ನಿನ್ನವೊಲು ವಿ
ಖ್ಯಾತರಾರೈ ಪುಣ್ಯತರರೆಂ
ದಾ ತಪೋನಿಧಿ ಸಂತವಿಟ್ಟನು ಧರ್ಮನಂದನನ ॥8॥

೦೦೯ ನಳ ಮಹೀಪತಿಯಕ್ಷ ...{Loading}...

ನಳ ಮಹೀಪತಿಯಕ್ಷ ಹೃದಯವ
ತಿಳಿದು ಋತುಪರ್ಣನಲಿ ಕಾಲವ
ಕಳೆದು ಗೆಲಿದನು ಪುಷ್ಕರನ ವಿದ್ಯಾತಿಮಹಿಮೆಯಲಿ
ಗೆಲಿದು ಕೌರವ ಶಕುನಿಗಳು ನಿ
ನ್ನಿಳೆಯ ಕೊಂಡರು ಮರಳಿ ಜೂಜಿಂ
ಗಳುಕಬೇಡೆಂದಕ್ಷಹೃದಯವ ಮುನಿಪ ಕರುಣಿಸಿದ ॥9॥

೦೧೦ ಬಳಿಕ ಲೋಮಶ ...{Loading}...

ಬಳಿಕ ಲೋಮಶ ಸಹಿತ ನೃಪಕುಲ
ತಿಲಕ ಬಂದನಗಸ್ತ್ಯನಾಶ್ರಮ
ದೊಳಗೆ ಬಿಟ್ಟನು ಪಾಳೆಯವನಾ ಮುನಿಯ ಚರಿತವನು
ತಿಳುಹಿದನು ಲೋಮಶನು ವೃತ್ರನ
ಕಲಹಕೆಂದು ದಧೀಚಿ ಮುನಿಪತಿ
ಯೆಲುವನಮರರು ಬೇಡಿದುದನರುಹಿದನು ಜನಪತಿಗೆ ॥10॥

೦೧೧ ಆ ಮುನಿಯ ...{Loading}...

ಆ ಮುನಿಯ ಕಂಕಾಳದಲಿ ಸು
ತ್ರಾಮ ಕೊಂದನು ವೃತ್ರನನು ಬಳಿ
ಕಾ ಮಹಾದಾನವರ ರಕ್ಕಸ ಕೋಟಿ ಜಲಧಿಯಲಿ
ಭೀಮ ಬಲರಡಗಿದರು ಬಂದೀ
ಭೂಮಿಯಲ್ಲಿ ವಸಿಷ್ಠನಾಶ್ರಮ
ದಾ ಮುನೀಂದ್ರರ ತಿಂದರವರು ಸಹಸ್ರ ಸಂಖ್ಯೆಯಲಿ ॥11॥

೦೧೨ ಚ್ಯವನನಾಶ್ರಮದೊಳಗೆ ಮೂರನು ...{Loading}...

ಚ್ಯವನನಾಶ್ರಮದೊಳಗೆ ಮೂರನು
ತಿವಿದು ಭಾರದ್ವಾಜನಾಶ್ರಮ
ಕವರ ಮುನಿದೆಪ್ಪತ್ತ ನುಂಗಿದರೇನನುಸುರುವೆನು
ದಿವಿಜರಿತ್ತಲಗಸ್ತ್ಯನನು ಪರು
ಠವಿಸಿದರು ಸಾಗರವನಾ ಮುನಿ
ಹವಣಿಸಿದ ಜಠರದಲಿ ಕೊಂದನು ದೈತ್ಯದಾನವರ ॥12॥

೦೧೩ ಸಗರಸುತ ಚರಿತವನು ...{Loading}...

ಸಗರಸುತ ಚರಿತವನು ಕಪಿಲನ
ದೃಗುಶಿಖೆಯಲುರಿದುದನು ಬಳಿಕವ
ರಿಗೆ ಭಗೀರಥನಿಳುಹಿದಮರನದೀ ಕಥಾಂತರವ
ವಿಗಡ ಮುನಿ ಇಲ್ವಲನ ವಾತಾ
ಪಿಗಳ ಮರ್ದಿಸಿ ವಿಂಧ್ಯಗಿರಿ ಹ
ಬ್ಬುಗೆಯ ನಿಲಿಸಿದಗಸ್ತ್ಯಚರಿತವ ಮುನಿಪ ವರ್ಣಿಸಿದ ॥13॥

೦೧೪ ಕೇಳಿದನು ನೃಪ ...{Loading}...

ಕೇಳಿದನು ನೃಪ ಋಷ್ಯಶೃಂಗ ವಿ
ಶಾಲ ಕಥೆಯ ಕಳಿಂಗ ದೇಶದ
ಕೂಲವತಿಗಳ ಮಿಂದು ಗಂಗಾಜಲಧಿ ಸಂಗಮದ
ಮೇಲೆ ವೈತರಣಿಯ ವರೋತ್ತರ
ಕೂಲವನು ದಾಂಟಿದನು ನೃಪಕುಲ
ಕಾಲಯವನಾಶ್ರಮಕೆ ಬಂದರು ರೇಣುಕಾಸುತನ ॥14॥

೦೧೫ ಪರಶುರಾಮನ ಕಾರ್ತವೀರ್ಯನ ...{Loading}...

ಪರಶುರಾಮನ ಕಾರ್ತವೀರ್ಯನ
ಧುರದೊಳಿಪ್ಪತ್ತೊಂದು ಸೂಳಿನೊ
ಳರಿದರಾಯರ ಕಂಠನಾಳದ ನೆತ್ತರಿನ ನದಿಯ
ಪರಮ ಪಿತೃತರ್ಪಣವನಾತನ
ಪರಶುವಿನ ನೆಣವಸೆಯ ತೊಳಹದ
ವರನದಿಯ ವಿಸ್ತರಣವನು ಕೇಳಿದನು ಯಮಸೂನು ॥15॥

೦೧೬ ಬನ್ದನವನಿಪನಾ ಪ್ರಭಾಸದ ...{Loading}...

ಬಂದನವನಿಪನಾ ಪ್ರಭಾಸದ
ವಂದನೆಗೆ ಬಳಿಕಲ್ಲಿ ಯಾದವ
ವೃಂದ ದರ್ಶನವಾಯ್ತು ಬಹುವಿಧ ತೀರ್ಥತೀರದಲಿ
ಮಿಂದನಾತಗೆ ಗಯನ ಚರಿತವ
ನಂದು ರೋಮಶ ಹೇಳಿದನು ನಲ
ವಿಂದ ಸಂಯಾತಿ ಚ್ಯವನ ಸಂವಾದ ಸಂಗತಿಯ ॥16॥

೦೧೭ ಚ್ಯವನ ಮುನಿಯ ...{Loading}...

ಚ್ಯವನ ಮುನಿಯ ವಿವಾಹವನು ರೂ
ಪವನು ಮುನಿಗಶ್ವಿನಿಗಳಿತ್ತುದ
ನವರಿಗಾ ಮುನಿ ಮಖ ಹವಿರ್ಭಾಗ ಪ್ರಸಂಗತಿಯ
ಅವರಿಗಿಂದ್ರನ ಮತ್ಸರವ ದಾ
ನವನ ನಿರ್ಮಾಣವನು ಬಳಿಕಿನೊ
ಳವನಿಪಗೆ ಮಾಂಧಾತ ಚರಿತವನೊರೆದನಾ ಮುನಿಪ ॥17॥

೦೧೮ ಸೋಮಕನ ಚರಿತವ ...{Loading}...

ಸೋಮಕನ ಚರಿತವ ಮರುತ್ತ ಮ
ಹಾ ಮಹಿಮನಾಚಾರ ಧರ್ಮ
ಸ್ತೋಮವನು ವಿರಚಿಸಿ ಯಯಾತಿಯ ಸತ್ಕಥಾಂತರವ
ಭೂಮಿಪತಿ ಕೇಳಿದನು ಶಿಬಿಯು
ದ್ದಾಮತನವನು ತನ್ನ ಮಾಂಸವ
ನಾ ಮಹೇಂದ್ರಾಗ್ನಿಗಳಿಗಿತ್ತ ವಿಚಿತ್ರ ವಿಸ್ತರವ ॥18॥

೦೧೯ ಕೇಳಲಷ್ಟಾವಕ್ರ ಚರಿತವ ...{Loading}...

ಕೇಳಲಷ್ಟಾವಕ್ರ ಚರಿತವ
ಹೇಳಿದನು ರೋಮಶಮುನೀಂದ್ರ ನೃ
ಪಾಲಕಂಗರುಹಿದನು ಯಾವತ್ ಋಷಿಯ ಸತ್ಕಥೆಯ
ಬಾಳಡವಿ ಬಯಲಾಯ್ತು ಫಲ ಮೃಗ
ಜಾಲ ಸವೆದುದು ಗಂಧಮಾದನ
ಶೈಲ ವನದಲಿ ವಾಸವೆಂದವನೀಶ ಹೊರವಂಟ ॥19॥

೦೨೦ ಅರಸ ಬನ್ದನು ...{Loading}...

ಅರಸ ಬಂದನು ಗಂಧಮಾದನ
ಗಿರಿಯ ತಪ್ಪಲಿಗಗ್ನಿಹೋತ್ರದ
ಪರಮಋಷಿಗಳು ಮಡದಿ ಸಕಲ ನಿಯೋಗಿಜನ ಸಹಿತ
ಸರಸಿ ನೆರೆಯವು ಸ್ನಾನ ಪಾನಕೆ
ತರು ಲತಾವಳಿಗಳು ಯುಧಿಷ್ಠಿರ
ನರಮನೆಯ ಸೀವಟಕೆ ಸಾಲವು ನೃಪತಿ ಕೇಳ್ ಎಂದ ॥20॥

೦೨೧ ಮರುದಿವಸವಲ್ಲಿನ್ದ ಬೆಟ್ಟದ ...{Loading}...

ಮರುದಿವಸವಲ್ಲಿಂದ ಬೆಟ್ಟದ
ಹೊರೆಗೆ ನಡೆತರಲಭ್ರದಲಿ ಗುಡಿ
ಯಿರಿದು ಮೆರೆದುದು ಮೇಘ ಮಿಂಚಿದುದಖಿಳ ದೆಸೆದೆಸೆಗೆ
ಬರಸಿಡಿಲ ಬೊಬ್ಬೆಯಲಿ ಪರ್ವತ
ಬಿರಿಯೆ ಬಲುಗತ್ತಲೆಯ ಬಿಂಕಕೆ
ನರರ ಕಣುಮನ ಹೂಳೆ ತೂಳಿತು ಮಳೆ ಮಹೀತಳವ ॥21॥

೦೨೨ ಮರನ ಮರ ...{Loading}...

ಮರನ ಮರ ತಕ್ಕೈಸಿದವು ಕುಲ
ಗಿರಿಯ ಗಿರಿ ಮುಂಡಾಡಿದವು ತೆರೆ
ತೆರೆಗಳಲಿ ಗಂಟಿಕ್ಕಿದವು ಸಾಗರದ ಸಾಗರದ
ಧರಣಿ ಕದಡಲು ಸವಡಿಯಡಿಕಿಲು
ಜರಿಯದಿಹುದೇ ಜಗದ ಬೋನಕೆ
ಹರಿಗೆ ಹೇಳೆನೆ ಬೀಸಿದುದು ಬಿರುಗಾಳಿ ಬಿರುಸಿನಲಿ ॥22॥

೦೨೩ ಕೆದರಿತಲ್ಲಿಯದಲ್ಲಿ ಮಳೆಯಲಿ ...{Loading}...

ಕೆದರಿತಲ್ಲಿಯದಲ್ಲಿ ಮಳೆಯಲಿ
ಹುದುಗಿತಲ್ಲಿಯದಲ್ಲಿ ಕಣಿಗಿಲು
ಕದಳಿಗಳ ಮರೆಗೊಂಡುದಲ್ಲಿಯದಲ್ಲಿ ಹರಿಹರಿದು
ಬೆದರಿತಲ್ಲಿಯದಲ್ಲಿ ಕರಕರ
ದೊದರಿತಲ್ಲಿಯದಲ್ಲಿ ಬಲುವಳೆ
ಸದೆದುದಿವರನು ಸೇಡುಗೊಂಡುದು ಜನದ ಸುಮ್ಮಾನ ॥23॥

೦೨೪ ಬಗಿದು ಹೊಕ್ಕರು ...{Loading}...

ಬಗಿದು ಹೊಕ್ಕರು ಮೆಳೆಗಳನು ಮಿಂ
ಚುಗಳ ಕಂಬೆಳಗಿನಲಿ ದಾರಿಯ
ತೆಗೆತೆಗೆದು ಸಾರಿದರು ಸಂದಣಿ ಮರನ ಹೆಮ್ಮರನ
ಬಿಗಿದ ರೋಮದ ಹುದಿದ ಕೈಗೊ
ಪ್ಪೆಗಳ ನಡುಕದ ಮೈಯ ಕಡು ಸೇ
ಡುಗಳ ಶೀತದ ಸಕಲಜನ ಹುದುಗಿದುದರಣ್ಯದಲಿ ॥24॥

೦೨೫ ಹೊಳೆವ ಕಙ್ಗಳ ...{Loading}...

ಹೊಳೆವ ಕಂಗಳ ಕಾಂತಿ ಬಲುಗ
ತ್ತಲೆಯ ಝಳಪಿಸೆ ಘೋರ ವಿಪಿನದೊ
ಳಳಿಕುಲಾಳಕಿ ಬಂದಳೊಬ್ಬಳೆ ಮಳೆಗೆ ಕೈಯೊಡ್ಡಿ
ಬಲಿದು ಮೈ ನಡನಡುಗಿ ಹಲು ಹಲು
ಹಳಚಿ ನೆನೆದಳು ವಾರಿಯಲಿ ತನು
ಹಳಹಳಿಸೆ ಬಳಲಿದಳು ಚರಣದ ಹೊನಲ ಹೋರಟೆಗೆ ॥25॥

೦೨೬ ಎಡಹು ಬೆರಳಿನ ...{Loading}...

ಎಡಹು ಬೆರಳಿನ ಕಾಲ ಮುಳುಗಳ
ಕಡುವಳೆಯ ಘಾಟಳಿಪ ಗಾಳಿಯ
ಸಿಡಿಲು ಮಿಂಚಿನ ಗಲ್ಲಣೆಯ ಘೋರಾಂಧಕಾರದಲಿ
ಒಡನೆ ಮಾನಿಸರಿಲ್ಲ ಕರೆದೊಡೆ
ನುಡಿವರಿಲ್ಲ ಕರದ್ವಯದಿ ತಡ
ವಿಡುತ ಪೈಸರದೊಳಗೆ ಸೂಸಿತು ಮೈ ಮಹಾಸತಿಯ ॥26॥

೦೨೭ ಗಾಳಿಗೊರಗಿದ ಕದಳಿಯನ್ತಿರೆ ...{Loading}...

ಗಾಳಿಗೊರಗಿದ ಕದಳಿಯಂತಿರೆ
ಲೋಲಲೋಚನೆ ಥಟ್ಟುಗೆಡೆದಳು
ಮೇಲುಸುರ ಬಲುಮೂರ್ಛೆಯಲಿ ಮುದ್ರಿಸಿದ ಚೇತನದ
ಬಾಲೆಯಿರೆ ಬೆಳಗಾಯ್ತು ತೆಗೆದುದು
ಗಾಳಿ ಬಿರುವಳೆ ಭೀಮ ನಕುಲ ನೃ
ಪಾಲರರಸಿದರೀಕೆಯನು ಕಂಡವರ ಬೆಸಗೊಳುತ ॥27॥

೦೨೮ ಬರುತ ಕಣ್ಡರು ...{Loading}...

ಬರುತ ಕಂಡರು ಬಟ್ಟೆಯಲಿ ನಿ
ರ್ಭರದ ಮೂರ್ಛಾ ಮೋಹಿತಾಂತಃ
ಕರಣೆಯನು ಹಾಯೆನುತ ಬಿದ್ದರು ಪವನಜಾದಿಗಳು
ಧರಣಿಪತಿ ತೆಗೆದೀಕೆಯನು ಕು
ಳ್ಳಿರಿಸಿ ತನ್ನಯ ತೊಡೆಯ ಮೇಲಾ
ದರಿಸಿ ಮಂತ್ರಿಸಿ ನೀರ ತಳಿದನು ರಕ್ಷೆಗಳ ರಚಿಸಿ ॥28॥

೦೨೯ ಉಪಚರಿಸಿ ರಕ್ಷೋಘ್ನ ...{Loading}...

ಉಪಚರಿಸಿ ರಕ್ಷೋಘ್ನ ಸೂಕ್ತದ
ಜಪವ ಮಾಡಿಸಿ ವಚನಮಾತ್ರದ
ರಪಣದಲಿ ರಚಿಸಿದನು ಗೋಧನ ಭೂಮಿ ದಾನವನು
ನೃಪತಿ ಕೇಳೊಂದೆರಡು ಗಳಿಗೆಯೊ
ಳಪಹರಿಸಿದುದು ಮೂರ್ಛೆ ಸತ್ಯ
ವ್ಯಪಗತೈಶ್ವರ್ಯರನು ಕಂಡಳು ಕಾಂತೆ ಕಣ್ದೆರೆದು ॥29॥

೦೩೦ ನೆಲೆವನೆಯ ಮಾಡದಲಿ ...{Loading}...

ನೆಲೆವನೆಯ ಮಾಡದಲಿ ರತ್ನಾ
ವಳಿಯ ನುಣ್ಬೆಳಗಿನಲಿ ಹಂಸೆಯ
ತುಳಿಯ ಮೇಲ್ವಾಸಿನಲಿ ಪವಡಿಸುವೀಕೆಗಿಂದೀಗ
ಹಳುವದಲಿ ಘೋರಾಂಧಕಾರದ
ಮಳೆಯೊಳೊಬ್ಬಳೆ ನಡೆದು ನೆನೆದೀ
ಕಲುನೆಲದೊಳೊರಗಿದಳೆನುತ ಮರುಗಿದನು ಧರಣೀಶ ॥30॥

೦೩೧ ಹರೆದುದುಬ್ಬಿದ ಮೂರ್ಛೆ ...{Loading}...

ಹರೆದುದುಬ್ಬಿದ ಮೂರ್ಛೆ ಕರಣೋ
ತ್ಕರದ ಕಳವಳವಡಗಿತರಸನ
ನರಸಿ ಸಂತೈಸಿದಳು ತಪ್ಪೇನಿದು ಪುರಾಕೃತದ
ಪರುಠವಣೆಗೇಕಳಲು ಮುಂದಣ
ಗಿರಿಯ ಗಮನೋಪಾಯವನು ಗೋ
ಚರಿಸಿರೇ ಸಾಕೆಂದಳಂಬುಜಮುಖಿ ಮಹೀಪತಿಗೆ ॥31॥

೦೩೨ ಇದೆ ಮುನಿವ್ರಜವಗ್ನಿ ...{Loading}...

ಇದೆ ಮುನಿವ್ರಜವಗ್ನಿ ಹೋತ್ರಿಗ
ಳಿದೆ ಕುಟುಂಬಿಗಳಾಪ್ತ ಪರಿಜನ
ವಿದೆ ವರ ಸ್ತ್ರೀ ಬಾಲವೃದ್ಧ ನಿಯೋಗಿಜನ ಸಹಿತ
ಇದೆ ಮಹಾಕಾಂತಾರವಿನಿಬರ
ಪದಕೆ ವನ ಮಾರ್ಗದಲಿ ಸೇರುವ
ಹದನ ಕಾಣೆನು ಶಿವ ಶಿವೆಂದಳು ಕಾಂತೆ ಭೂಪತಿಗೆ ॥32॥

೦೩೩ ಆಯತಾಕ್ಷಿಯ ನುಡಿಗೆ ...{Loading}...

ಆಯತಾಕ್ಷಿಯ ನುಡಿಗೆ ಪಾಂಡವ
ರಾಯ ಮೆಚ್ಚಿದನಿನ್ನು ಗಮನೋ
ಪಾಯವೆಂತೆಂದೆನುತ ಚಿಂತಿಸಿದನು ಘಟೋತ್ಕಚನ
ರಾಯ ಕೇಳೈ ಕಮಲನಾಭನ
ಮಾಯೆಯೋ ನಾವರಿಯೆವಾಕ್ಷಣ
ವಾಯುವೇಗದಲಭ್ರದಿಂದಿಳಿತಂದನಮರಾರಿ ॥33॥

೦೩೪ ವೀರ ದೈತ್ಯನ ...{Loading}...

ವೀರ ದೈತ್ಯನ ಬಹಳ ದುಷ್ಟರಿ
ವಾರವದನಾರೆಣಿಸುವರು ಮುಂ
ಗಾರಿರುಳ ತನಿಯರಕ ನೀಲಾಚಲದ ಖಂಡರಣೆ
ಘೋರ ರಾಹು ವ್ಯೂಹವೆನೆ ಸುರ
ವೈರಿಗಳ ಮೈಗಾಂತಿ ಲಹರಿಯ
ಪೂರದಲಿ ಜಗ ಮುಳುಗೆ ಬಂದುದು ಲಕ್ಷಸಂಖ್ಯೆಯಲಿ ॥34॥

೦೩೫ ದೇವ ಬೆಸಸಾ ...{Loading}...

ದೇವ ಬೆಸಸಾ ನಮ್ಮ ಬರಿಸಿದು
ದಾವ ಹದನು ನವೀನ ಭಟರಿದೆ
ದೇವರಿಪುಗಳು ಹೇಳು ನೆನಹಿನ ರಾಜಕಾರಿಯವ
ಆವುದೆನಗುದ್ಯೋಗವೆನೆ ಸಂ
ಭಾವಿಸಿದನಸುರನನು ಜಾರುವ
ಜೀವಮರುತನ ಮರಳಿ ನಿಲಿಸಿತು ನಿನ್ನ ನುಡಿಯೆಂದ ॥35॥

೦೩೬ ದುರ್ಗವಿದೆ ...{Loading}...

ದುರ್ಗವಿದೆ ನಮ್ಮಂಘ್ರಿಶಕ್ತಿಯ
ನುಗ್ಗಿ ಬೀತುದು ಸಾಹಸಿಗ ನೀ
ನಗ್ಗಳೆಯರಿದೆ ನಿನ್ನವರು ಪಡಿಗಿರಿಗಳಾ ಗಿರಿಗೆ
ಹುಗ್ಗಿಗರ ಹೆಗಲೇರಿಸೊಂದೇ
ಲಗ್ಗೆಯಲಿ ನಡೆಸೆನೆ ಹಸಾದದ
ಮೊಗ್ಗೆಗೈಗಳ ದನುಜ ತಗ್ಗಿದನರಸನಿದಿರಿನಲಿ ॥36॥

೦೩೭ ಹೊತ್ತನರಸನನರಸನನುಜರ ...{Loading}...

ಹೊತ್ತನರಸನನರಸನನುಜರ
ನೆತ್ತಿದನು ನೃಪನರಸಿಯನು ಬಳಿ
ಕೆತ್ತಿ ಕೈವೀಸಿದನು ಭಟರಿಗೆ ತೋರಿ ಪರಿಜನವ
ಹೊತ್ತರನಿಬರನಸುರ ಭಟರೊ
ತ್ತೊತ್ತೆಯಾದುದು ಬೆನ್ನಿನಲಿ ಬಿಗಿ
ದೆತ್ತಿ ಹಾಯ್ದರು ಮುಗಿಲ ಥಟ್ಟಿನ ಪರಿಯ ಜೋಡಿನಲಿ ॥37॥

೦೩೮ ಅಸುರ ದೇಹಸ್ಪರ್ಶವಸಮಂ ...{Loading}...

ಅಸುರ ದೇಹಸ್ಪರ್ಶವಸಮಂ
ಜಸವಲಾ ತನಗೆನುತ ಮುನಿ ರೋ
ಮಶನು ಗಗನೇಚರರ ಗತಿಯಲಿ ಬಂದನಿವರೊಡನೆ
ವಿಷಮ ಗಿರಿಕಾನನ ಕದಧ್ವ
ಪ್ರಸರವನು ಹಿಂದಿಕ್ಕಿ ಹೊದ್ದಿದ
ರೆಸೆವ ನರನಾರಾಯಣಾಶ್ರಮ ವರತಪೋವನವ ॥38॥

೦೩೯ ಅಲ್ಲಿಯಖಿಳ ಋಷಿವ್ರಜವು ...{Loading}...

ಅಲ್ಲಿಯಖಿಳ ಋಷಿವ್ರಜವು ಭೂ
ವಲ್ಲಭನನಾತಿಥ್ಯ ಪೂಜಾ
ಸಲ್ಲಲಿತ ಸಂಭಾವನಾ ಮಧುರೋಕ್ತಿ ರಚನೆಯಲಿ
ಅಲ್ಲಿಗಲ್ಲಿಗೆ ಸಕಲ ಮುನಿ ಜನ
ವೆಲ್ಲವನು ಮನ್ನಿಸಿದನಾ ವನ
ದಲ್ಲಿ ನೂಕಿದನೆಂಟು ದಿನವನು ನೃಪತಿ ಕೇಳ್ ಎಂದ ॥39॥

+೦೯ ...{Loading}...