೦೮

೦೦೦ ಸೂ ಭಯಭರಿತ ...{Loading}...

ಸೂ. ಭಯಭರಿತ ಭಕ್ತಿಯಲಿ ಕಾಮಾ
ರಿಯನು ಗೆಲಿದರ್ಜುನನು ಹರ ವೈ
ರಿಯನು ಗೆಲಿದನು ಧೈರ್ಯದಿಂದೂರ್ವಶಿಯ ಶಾಪದಲಿ

೦೦೧ ಕೇಳು ಜನಮೇಜಯ ...{Loading}...

ಕೇಳು ಜನಮೇಜಯ ಧರಿತ್ರೀ
ಪಾಲ ಪಾರ್ಥನ ಮೈಯ ಹುಲು ರೋ
ಮಾಳಿ ಹರಿಯದು ಮನುಮಥನ ಖಂಡೆಯದ ಗಾಯದಲಿ
ಬೀಳುಕೊಟ್ಟಳು ಚಿತ್ರಸೇನನ
ನಾ ಲತಾಂಗಿ ಸಹಸ್ರಸಂಖ್ಯೆಯ
ಖೇಳಮೇಳದ ಸತಿಯರನು ಕರೆಸಿದಳು ಹರುಷದಲಿ ॥1॥

೦೦೨ ವನಜಲೋಚನೆ ಮಾಡಿದಳು ...{Loading}...

ವನಜಲೋಚನೆ ಮಾಡಿದಳು ಮ
ಜ್ಜನವನಮಳ ದುಕೂಲ ಪರಿಮಂ
ಡನದಲೆಸೆದಳು ವಿವಿಧ ರತ್ನಾಭರಣ ಶೋಭೆಯಲಿ
ತನತನಗೆ ಭರಣಿಗಳಲನುಲೇ
ಪನವ ತಂದರು ವಿಳಸದಧಿವಾ
ಸನೆಯ ಕುಸುಮದ ಮೊಗ್ಗೆಯಲಿ ರಚಿಸಿದರು ಸಿರಿಮುಡಿಯ ॥2॥

೦೦೩ ತಿಗುರ ಗೆಲಿದಳು ...{Loading}...

ತಿಗುರ ಗೆಲಿದಳು ತಿಲಕವನು ತೆ
ತ್ತಿಗರಲಂಕರಿಸಿದರು ಹೊಳಹಿನ
ಹೊಗರ ಹೊಸ ಜವ್ವನದ ಜೋಡಿಯ ಜಾಡಿ ಯಿಮ್ಮಡಿಸೆ
ಉಗಿದೊರೆಯ ಕೂರಲಗೊ ಧಾರೆಯ
ಮಿಗೆ ಹಿಡಿದ ಖಂಡೆಯವೊ ಕಾಮನ
ಹಗೆಗೆ ಹುಟ್ಟಿದ ಧೂಮಕೇತುವೊ ರೂಪು ಸುರಸತಿಯ ॥3॥

೦೦೪ ಪರಿಮಳದ ಪುತ್ಥಳಿಯೊ ...{Loading}...

ಪರಿಮಳದ ಪುತ್ಥಳಿಯೊ ಚೆಲುವಿನ
ಕರುವಿನೆರಕವೊ ವಿಟರ ಪುಣ್ಯದ
ಪರಿಣತೆಯೊ ಕಾಮುಕರ ಭಾಗ್ಯದ ಕಲ್ಪತರುಫಲವೊ
ಸ್ಮರನ ವಿಜಯಧ್ವಜವೊ ಮನ್ಮಥ
ಪರಮ ಶಾಸ್ತ್ರದ ಮೂಲಮಂತ್ರವೊ
ಸುರಸತಿಯರಧಿ ದೇವತೆಯೊ ವರ್ಣಿಸುವೊಡರಿದೆಂದ ॥4॥

೦೦೫ ಲೋಕವಶ್ಯದ ತಿಲಕವೋ ...{Loading}...

ಲೋಕವಶ್ಯದ ತಿಲಕವೋ ಜಗ
ದೇಕ ರತ್ನವೊ ವಿಗಡ ಮುನಿ ಚಿ
ತ್ತಾಕರುಷಣದ ಮಂತ್ರವಾದವೊ ಋಷಿತಪಃಫಲವೊ
ಲೋಕಸೌಂದರ್ಯೈಕ ಸರ್ಗವೊ
ನಾಕಸುಖ ಸಾಕಾರವೊ ರೂ
ಪೈಕ ತಾಣವೊ ಚಿತ್ರವಾಯ್ತೂರ್ವಶಿಯ ಬರವಿನಲಿ ॥5॥

೦೦೬ ನೆರೆದರಬಲೆಯರಙ್ಗವಟ್ಟದ ...{Loading}...

ನೆರೆದರಬಲೆಯರಂಗವಟ್ಟದ
ಪರಿಮಳದ ಮುತ್ತಿಗೆಯ ತುಂಬಿಯ
ತೆರಳಿಕೆಯ ಕತ್ತಲೆಯ ಕೆದರುವ ಕಣ್ಣ ಬೆಳಗುಗಳ
ಪರಿಪರಿಯ ಹೊಂದೊಡಿಗೆಗಳ ಪರಿ
ಪರಿಗಳುಡಿಗೆಯ ದೇಶಿ ಮಿಗೆ ಪರಿ
ಪರಿಯ ಮುಡಿಗಳ ಮುಗುದೆಯರು ಬಳಸಿದರು ಬಾಲಕಿಯ ॥6॥

೦೦೭ ಹೆಗಲು ಹಡಪದ ...{Loading}...

ಹೆಗಲು ಹಡಪದ ಹಿಡಿದ ಮುಕುರಾ
ಳಿಗಳ ಚಿಮ್ಮುವ ಸೀಗುರಿಯ ಹಾ
ವುಗೆಯ ಹೇಮನಿಬಂಧ ಕಳಶದ ತಾಳವೃಂತಕದ
ಮುಗುದೆಯರು ಮನುಮಥನ ಮೊನೆಯಾ
ಳುಗಳ ಮುಸುಕಿತು ಮಾನಿನಿಯ ದಂ
ಡಿಗೆಯ ಮೈಕಾಂತಿಗಳ ದೂವಾಳಿಗಳ ಲಹರಿಯಲಿ ॥7॥

೦೦೮ ತುರಗಮೇಧದ ರಾಜಸೂಯದ ...{Loading}...

ತುರಗಮೇಧದ ರಾಜಸೂಯದ
ವರ ಮಹಾಕ್ರತುಕಾರರೀಕೆಯ
ಚರಣದುಂಗುಟ ತುದಿಯ ಕಾಂಬರೆ ಪೂತು ಫಲುಗುಣನ
ಪರಮಪುಣ್ಯವದೇನು ತಾನಿ
ದ್ದರಮನೆಗೆ ಸತಿ ಬಂದಳೇನ
ಚ್ಚರಿಯೆನುತ ಹೊಗಳಿದರು ಮಾಗಧರಿಂದ್ರ ನಂದನನ ॥8॥

೦೦೯ ಧರಣಿಪತಿ ಕೇಳವರ ...{Loading}...

ಧರಣಿಪತಿ ಕೇಳವರ ತೊತ್ತಿರ
ಹೊರಗೆಲಸದವದಿರ ಪಸಾಯಿತೆ
ಯರಿಗೆ ಪಡಿಗವ ನೀಡಸಲ್ಲರು ಸೋಮಯಾಜಿಗಳು
ವರುಣಸೂನು ಜಯಂತ ನಳಕೂ
ಬರರು ಸಮಯವನೊಮ್ಮೆ ಕಾಣದೆ
ವರುಷವೋಲೈಸುವರು ಸೌಧದ ದಾರವಟ್ಟದಲಿ ॥9॥

೦೧೦ ಜನಮನದ ಸಙ್ಕಲೆವನೆಯೊ ...{Loading}...

ಜನಮನದ ಸಂಕಲೆವನೆಯೊ ಲೋ
ಚನಮೃಗದ ತಡೆವೇಂಟೆಕಾತಿಯೊ
ಮನುಮಥನ ಸಂಜೀವನೌಷಧಿಯೋ ಮಹಾದೇವ
ಮನಸಿಜನ ಮಾರಾಂಕ ಕಾಮುಕ
ಜನದ ಜೀವಾರ್ಥಕ್ಕೆ ವಿಭುವೆಂ
ದೆನಿಸಿದೂರ್ವಶಿ ಬಂದಳರ್ಜುನ ದೇವನರಮನೆಗೆ ॥10॥

೦೧೧ ಮೆಲುನುಡಿಗೆ ಗಿಣಿ ...{Loading}...

ಮೆಲುನುಡಿಗೆ ಗಿಣಿ ಹೊದ್ದಿದವು ಸರ
ದುಲಿಗೆ ಕೋಗಿಲೆಯೌಕಿದವು ಪರಿ
ಮಳದ ಪಸರಕೆ ತೂಳಿದವು ತುಂಬಿಗಳು ಡೊಂಬಿಯಲಿ
ಹೊಳೆವ ಮುಖಕೆ ಚಕೋರಚಯವಿ
ಟ್ಟಳಿಸಿದವು ನೇವುರದ ಬೊಬ್ಬೆಗೆ
ಸಿಲುಕಿದವು ಹಂಸೆಗಳು ಕಮಲಾನನೆಯ ಕೆಳದಿಯರ ॥11॥

೦೧೨ ಅಲರ್ದ ಪೊನ್ದಾವರೆಯ ...{Loading}...

ಅಲರ್ದ ಪೊಂದಾವರೆಯ ಹಂತಿಯೊ
ತಳಿತ ಮಾವಿನ ಬನವೊ ಮಿಗೆ ಕ
ತ್ತಲಿಪ ಬಹಳ ತಮಾಲ ಕಾನನವೋ ದಿಗಂತದಲಿ
ಹೊಳೆವ ವಿದ್ರುಮ ವನವೊ ಕುಸುಮೋ
ಚ್ಚಲಿತ ಕೇತಕಿ ದಳವೊ ರಂಭಾ
ವಳಿಯೊ ಕಾಂತಾಜನವೊ ಕಮಲಾನನೆಯ ಮುಂಗುಡಿಯೊ ॥12॥

೦೧೩ ಬನ್ದಳೂರ್ವಶಿ ಬಳ್ಳಿ ...{Loading}...

ಬಂದಳೂರ್ವಶಿ ಬಳ್ಳಿ ಮಿಂಚಿನ
ಮಂದಿಯಲಿ ಮುರಿದಿಳಿವ ಮರಿ ಮುಗಿ
ಲಂದದಲಿ ದಂಡಿಗೆಯನಿಳಿದಳು ರಾಜ ಭವನದಲಿ
ಮುಂದೆ ಪಾಯವಧಾರು ಸತಿಯರ
ಸಂದಣಿಯ ಸಿಂಜಾ ರವದ ಸೊಗ
ಸಿಂದ ಶಬ್ದಬ್ರಹ್ಮ ಸೋತುದು ಸೊರಹಲೇನೆಂದ ॥13॥

೦೧೪ ಬಾಗಿಲಲಿ ಬಾಗಿಲಲಿ ...{Loading}...

ಬಾಗಿಲಲಿ ಬಾಗಿಲಲಿ ನಿಂದರು
ಸೋಗೆಗಣ್ಣಬಲೆಯರು ಸೆಜ್ಜೆಯ
ಬಾಗಿಲಲಿ ಚಾಮರದ ಹಡಪದ ಚಪಲೆಯರು ಸಹಿತ
ಆ ಗರುವೆ ಹೊಕ್ಕಳು ಮಹಾಹಿಯ
ಭೋಗತಲ್ಪದ ಹರಿಯೊಲಿಹ ಶತ
ಯಾಗ ಸುತನನು ಕಂಡಳಂಗನೆ ಮಣಿಯ ಮಂಚದಲಿ ॥14॥

೦೧೫ ಹೊಳೆವ ಮಣಿದೀಪಾಂಶುಗಳ ...{Loading}...

ಹೊಳೆವ ಮಣಿದೀಪಾಂಶುಗಳ ಮು
ಕ್ಕುಳಿಸಿದವು ಕಡೆಗಂಗಳಿಂದೂ
ಪಳದ ಭಿತ್ತಿಯ ಬೆಳಗನಣೆದುದು ಬಹಳ ತನುಕಾಂತಿ
ಕೆಳದಿಯರ ಕಂಠದಲಿ ಕೈಗಳ
ನಿಳುಹಿ ನಿಂದಳು ತರುಣಿ ನೃಪ ಕುಲ
ತಿಲಕನಂಗೋಪಾಂಗದಲಿ ಹರಹಿದಳು ಕಣ್ಮನವ ॥15॥

೦೧೬ ಎಳೆಯ ಬೆಳದಿಙ್ಗಳವೊಲೀಕೆಯ ...{Loading}...

ಎಳೆಯ ಬೆಳದಿಂಗಳವೊಲೀಕೆಯ
ತಳತಳಿಪ ಮುಖಚಂದ್ರಮನ ತಂ
ಬೆಳಗು ಸುಳಿದುದು ಸಾರತರ ಪರಿಮಳದ ಪೂರದಲಿ
ತಿಳಿದುದೀತನ ನಿದ್ರೆ ಕರಣಾ
ವಳಿಯ ಪರಮ ಪ್ರೀತಿರಸದಲಿ
ಮುಳುಗಿ ಸುಖಭಾರದಲಿ ಭುಲ್ಲವಿಸಿದನು ಕಲಿಪಾರ್ಥ ॥16॥

೦೧೭ ಹರ ಮಹಾ ...{Loading}...

ಹರ ಮಹಾ ದೇವೀಯಘಾಟದ
ಪರಿಮಳವಿದೆತ್ತಣದೆನುತ ಮೈ
ಮುರಿದು ಕಂಡನಪೂರ್ವ ಪರಿಮಳ ಸಾರದಲಿ ಪಾರ್ಥ
ಕಿರಣ ಲಹರಿಯ ದಿವ್ಯ ರತ್ನಾ
ಭರಣ ರುಚಿರತರ ಪ್ರಭಾ ಪಂ
ಜರದೊಳಗೆ ಹೊಳೆಹೊಳೆವ ಮದನಾಲಸೆಯನೂರ್ವಶಿಯ ॥17॥

೦೧೮ ಹಾ ಮಹಾ ...{Loading}...

ಹಾ ಮಹಾ ದೇವಿಯರಲಾ ಸು
ತ್ರಾಮನೋಲಗದೊಳಗೆ ನರ್ತನ
ರಾಮಣೀಯಕ ರಚನೆಯಲಿ ರಂಜಿಸಿದಳಾ ಸಭೆಯ
ಈ ಮಹಿಳೆಯಭಿವಂದನೀಯೆ ನಿ
ರಾಮಯದ ಶಶಿವಂಶ ಜನನಿ ಸ
ನಾಮೆಯಲ್ಲಾ ಶಿವಯೆನುತ ಮಣಿಮಂಚದಿಂದಿಳಿದ ॥18॥

೦೧೯ ಏನು ಬಿಜಯಙ್ಗೈದಿರಿತ್ತಲು ...{Loading}...

ಏನು ಬಿಜಯಂಗೈದಿರಿತ್ತಲು
ಮಾನನಿಧಿ ಕುಳ್ಳಿರಿ ಸುರೇಂದ್ರನ
ಮಾನಿನಿಯರಭಿವಂದನೀಯರು ನಾವು ಕೃತಾರ್ಥರಲ
ಏನು ಬೆಸಸೆನಗೇನು ಹದ ನಿಮ
ಗಾನು ಮಗನುಪಚಾರವೇಕೆ ಮ
ನೋನುರಾಗದಲರುಹಿಯೆಂದನು ಪಾರ್ಥನೂರ್ವಶಿಗೆ ॥19॥

೦೨೦ ನುಡಿಗೆ ಬೆರಗಾದಳು ...{Loading}...

ನುಡಿಗೆ ಬೆರಗಾದಳು ಮನೋಜನ
ಸಡಗರಕೆ ತೆಕ್ಕಿದಳು ಪಾರ್ಥನ
ನಡವಳಿಗೆ ಮೆಚ್ಚಿದಳು ಬೆಚ್ಚಿದಳಂಗಜಾಸ್ತ್ರದಲಿ
ಕಡುಗಿದಳು ಖಾತಿಯಲಿ ಲಜ್ಜೆಯ
ಬಿಡೆಯದಲಿ ಭಯಗೊಂಡಳಂಗನೆ
ಮಿಡುಕಿದಳು ವಿವಿಧಾನುಭಾವದ ರಸದ ಭಂಗಿಯಲಿ ॥20॥

೦೨೧ ಏಕೆ ನುಡಿದನೊ ...{Loading}...

ಏಕೆ ನುಡಿದನೊ ಚಿತ್ರಸೇನನ
ದೇಕೆ ನಾ ಕೈಕೊಂಡೆನೆತ್ತಣ
ಕಾಕು ಮೂಳಗೆ ಕೋಳುಹೋದೆನೊ ಕಾಮನೆಂಬವಗೆ |
ಲೋಕ ವರ್ತಕವಲ್ಲದಿವನನ
ದೇಕೆ ವಿಧಿ ನಿರ್ಮಿಸಿದನೋ ನಾ
ನೇಕೆ ನರನೇಕೆನುತ ಸುಯ್ದಳು ಬೈದು ಕಮಲಜನ ॥21॥

೦೨೨ ವಿಕಳಮತಿಯೋ ಮೇಣಿವ ...{Loading}...

ವಿಕಳಮತಿಯೋ ಮೇಣಿವ ನಪುಂ
ಸಕನೊ ಜಡನೋ ಶ್ರೋತ್ರಿಯನೊ ಬಾ
ಧಕನೊ ಖಳನೋ ಖೂಳನೋ ಮಾನವ ವಿಕಾರವಿದೊ
ವಿಕಟ ತಪಸಿನ ದೇವ ದೈತ್ಯರ
ಮಕುಟವಾಂತುದು ವಾಮ ಪಾದವ
ನಕಟ ಕೆಟ್ಟೆನಲಾ ಯೆನುತ ಕರಗಿದಳು ನಳಿನಾಕ್ಷಿ ॥22॥

೦೨೩ ಎಲವೊ ರಾಯನ ...{Loading}...

ಎಲವೊ ರಾಯನ ಹೇಳಿಕೆಯಲಂ
ಡಲೆದನೆನ್ನನು ಚಿತ್ರಸೇನಕ
ನಲುಗಿ ನಟ್ಟವು ಕಾಮಶರವೆನ್ನಂತರಂಗದಲಿ
ಒಲಿದು ಬಂದಬಲೆಯರ ಟೆಕ್ಕರಿ
ಗಳೆವುದೇ ವಿಟ ಧರ್ಮವಕಟಾ
ತಿಳಿಯಲಾ ತಾನಾವಳೆಂಬುದನೆಂದಳಿಂದುಮುಖಿ ॥23॥

೦೨೪ ಶಿವ ಶಿವೀ ...{Loading}...

ಶಿವ ಶಿವೀ ಮಾತೇಕೆ ಕಾಮನ
ಬವಣೆಯಲಿ ನೀವರಿಯದಿರೆ ವಾ
ಸವನ ನೇಮವು ಚಿತ್ರಸೇನನ ನುಡಿಗಳಂತಿರಲಿ
ಎವಗಕರ್ತವ್ಯದಲಿ ಮನ ಸಂ
ಭವಿಸುವುದೆ ನೀವೆಮ್ಮ ವಂಶೋ
ದ್ಭವಕೆ ಜನನಿಯಲಾಯೆನುತ ವಿನಯದಲಿ ನರ ನುಡಿದ ॥24॥

೦೨೫ ನಾರಿ ನೀ ...{Loading}...

ನಾರಿ ನೀ ಪೂರ್ವದಲಿ ನಮ್ಮ ಪು
ರೂರವನ ಸತಿ ನಿನಗೆ ಬಳಿಕ ಕು
ಮಾರ ಜನಿಸಿದನಾಯುವಾತನೊಳುದಿಸಿದನು ನಹುಷ
ವೀರ ರಾಜ ಪರಂಪರೆಯು ಬರ
ಲಾರಿಗಾವುದಿಸಿದೆವು ನಮ್ಮ ವಿ
ಚಾರಿಸಿದುದಿಲ್ಲಾಯೆನುತ ವಿನಯದಲಿ ನರ ನುಡಿದ ॥25॥

೦೨೬ ಪ್ರಣವದರ್ಥ ವಿಚಾರವೆತ್ತಲು ...{Loading}...

ಪ್ರಣವದರ್ಥ ವಿಚಾರವೆತ್ತಲು
ಗಣಿಕೆಯರಮನೆಯ ಸ್ವರಾಕ್ಷರ
ಗಣಿತ ಲಕ್ಷಣವೆತ್ತ ರತಿಕೇಳೀ ವಿಧಾನದಲಿ
ಬಣಗು ಭಾರತ ವರ್ಷದವದಿರ
ಭಣಿತ ನಮ್ಮೀ ದೇವ ಲೋಕಕೆ
ಸಣಬಿನಾರವೆ ಚೈತ್ರರಥದೊಳಗೆಂದಳಿಂದುಮುಖಿ ॥26॥

೦೨೭ ಅಯ್ಯನಯ್ಯನು ನಿಮ್ಮವರ ...{Loading}...

ಅಯ್ಯನಯ್ಯನು ನಿಮ್ಮವರ ಮು
ತ್ತಯ್ಯನಾತನ ಭಾವಮೈದುನ
ನಯ್ಯನಗ್ರಜರನುಜರೆಂಬೀ ಜ್ಞಾತಿ ಬಾಂಧವರ
ಕೈಯಲರಿಗಳ ಹೊಯ್ದು ಶಿರನರಿ
ದುಯ್ಯಲಾಡಿದವರ್ಗೆ ಮೇಣ್ ಮಖ
ದಯ್ಯಗಳಿಗಾನೊಬ್ಬಳೆಂದಳು ನಗುತ ನಳಿನಾಕ್ಷಿ ॥27॥

೦೨೮ ಮರೆಯ ಮಾತನ್ತಿರಲಿ ...{Loading}...

ಮರೆಯ ಮಾತಂತಿರಲಿ ಸಾಕದ
ಮರೆದು ಕಳೆ ಮಾನಿನಿಯರಿಚ್ಛೆಯ
ನರಿಯದವನು ಸುರೇಂದ್ರನಾಗಲಿ ಚಂದ್ರನಾಗಿರಲಿ
ಕುರಿ ಕಣಾ ಫಡ ಖೂಳ ನೀನೆಂ
ತರಿವೆಯೆನೆ ನಡನಡುಗಿ ಕೈ ಮುಗಿ
ದೆರಗಿ ಮಗುಳೀ ಮಾತನೆಂದನು ಪಾರ್ಥನೂರ್ವಶಿಗೆ ॥28॥

೦೨೯ ಇದು ಮನುಷ್ಯಶರೀರ ...{Loading}...

ಇದು ಮನುಷ್ಯಶರೀರ ತದ್ಧ
ರ್ಮದಲಿ ತನ್ನವಸಾನ ಪರಿಯಂ
ತಿದರೊಳವ್ಯಭಿಚಾರದಲಿ ವರ್ತಿಸಿದ ಬಳಿಕಿನಲಿ
ತ್ರಿದಶರಲ್ಲಿಗೆ ಬಂದರಾ ಮಾ
ರ್ಗದಲಿ ನಡೆವುದು ದೇವತಾ ದೇ
ಹದಲಿ ಬಲವತ್ತರವು ದೇಹ ವಿಶೇಷ ವಿಧಿಯೆಂದ ॥29॥

೦೩೦ ಅಹುದಹುದಲೇ ಶ್ರೌತ ...{Loading}...

ಅಹುದಹುದಲೇ ಶ್ರೌತ ಪಥದಲಿ
ಬಹಿರಿ ನೀವೇ ಸ್ಮಾರ್ತವಿಧಿ ಸ
ನ್ನಿಹಿತರೆಂಬುದನರಿಯದೇ ಮೂಜಗದ ಜನವೆಲ್ಲ
ಮಹಿಳೆಯೊಬ್ಬಳೊಳೈವರೊಡಗೂ
ಡಿಹರು ನೀವೇನಲ್ಲಲೇ ನಿ
ಸ್ಪೃಹರು ನೀವ್ ನಮ್ಮಲ್ಲಿ ಹರ ಹರಯೆಂದಳಿಂದುಮುಖಿ ॥30॥

೦೩೧ ತಾಯ ನೇಮದಲನ್ದು ...{Loading}...

ತಾಯ ನೇಮದಲಂದು ಕಮಲದ
ಳಾಯತಾಕ್ಷಿಯ ಕೂಟವೈವರಿ
ಗಾಯಿತದು ತಪ್ಪೇನು ಜನನಿಯ ನುಡಿಯಲಂಘ್ಯವಲೆ
ಕಾಯ ಸೌಖ್ಯಕೆ ಕಾಮ ಸುಖದ ವಿ
ಡಾಯ ತತುವಕೆ ವೇಡೆಗೊಂಡು ನ
ವಾಯಿಯಲಿ ದುರ್ಗತಿಗೆ ದುವ್ವಾಳಿಸುವನಲ್ಲೆಂದ ॥31॥

೦೩೨ ತಾಯ ನೇಮದಲೈವರಿಗೆ ...{Loading}...

ತಾಯ ನೇಮದಲೈವರಿಗೆ ಕಮ
ಲಾಯತಾಕ್ಷಿಯ ಕೂಟವೇ ಸುರ
ರಾಯ ನಿಮ್ಮಯ್ಯನು ವಿಲಂಘ್ಯವೆ ನಿನಗೆ ಪಿತೃವಚನ
ರಾಯನಟ್ಟಲು ಬಂದೆನೀ ಕುಸು
ಮಾಯುಧನ ಕಗ್ಗೊಲೆಯ ಕೆದರುವು
ಪಾಯವನು ನೀ ಬಲ್ಲೆಯೆಂದಳು ವನಿತೆ ವಿನಯದಲಿ ॥32॥

೦೩೩ ಸರಸಿಜದ ಮಧು ...{Loading}...

ಸರಸಿಜದ ಮಧು ಮಧುಕರನನನು
ಕರಿಸಿದೊಡೆ ಚಂದ್ರಿಕೆ ಚಕೋರನ
ವರಿಸಿದರೆ ನಿಧಿಲಕ್ಷ್ಮಿ ಸುಳಿದರೆ ನಯನ ವೀಧಿಯಲಿ
ಗರುವೆಯರು ಮೇಲಿಕ್ಕಿ ಪುರುಷನ
ನರಸಿದರೆ ಜಾರುವರೆ ಸುಡಲಾ
ಸರಸಿಜವನಾ ಚಂದ್ರಿಕೆಯನಾ ನಿಧಿಯನಾ ವಧುವ ॥33॥

೦೩೪ ತಿಳುಹಿದೊಡೆ ಸುರ ...{Loading}...

ತಿಳುಹಿದೊಡೆ ಸುರ ಲೋಕದವರತಿ
ಗಳಹೆಯರಲಾಯೆಂಬೆ ಮನ್ಮಥ
ಖಳ ಕಣಾ ನಿಷ್ಕರುಣಿ ನೀ ಸೌಭಾಗ್ಯ ಗರ್ವದಲಿ
ಬಲುಮೆ ಬಿದ್ದುದು ವಾಸಿಯಲಿ ಕಂ
ದೊಳಸುಗೊಂಡುದು ಕಾಮಶರ ಮನ
ವಳುಕೆ ಕೆಡಹಿತು ವಿರಹತಾಪದಲೆಂದಳಿಂದುಮುಖಿ ॥34॥

೦೩೫ ಕಾಡಲಾಗದು ನಿಮ್ಮೊಡನೆ ...{Loading}...

ಕಾಡಲಾಗದು ನಿಮ್ಮೊಡನೆ ಮುರಿ
ದಾಡಲಮ್ಮೆನು ಮನಕೆ ಧೈರ್ಯದ
ಜೋಡ ತೊಟ್ಟಿದಿರಾಗಿ ನಿಲೆ ನನೆಯಂಬು ನಾಟುವುದೆ
ಖೋಡಿಯೇಕಿದಕವ್ವೆ ಮಕ್ಕಳ
ನೋಡ ಬಂದರೆ ಬೇರೆ ಕಷ್ಟವ
ನಾಡುವರೆ ಬಲ್ಲವರು ಬಿಜಯಂಗೈಯಿ ನೀವೆಂದ ॥35॥

೦೩೬ ರೋಷವೀರೆಲೆಯಾಯ್ತು ಲಜ್ಜೆಯ ...{Loading}...

ರೋಷವೀರೆಲೆಯಾಯ್ತು ಲಜ್ಜೆಯ
ಮೀಸಲಳಿದುದು ಬಲು ವಿಧದ ಬಹು
ವಾಸಿಗಳು ಪಲ್ಲವಿಸಿದವು ಕೆಲ್ಲವಿಸಿತನುತಾಪ
ಆಶೆ ಪೈಸರವೋಯ್ತು ಕಡು ಝಳ
ಸೂಸಿದುದು ಸುಯ್ಲಿನಲಿ ಕಂಗಳು
ಕೇಸುರಿಯ ಮುಕ್ಕುಳಿಸಿದವು ಹೆಕ್ಕಳಿಸಿ ಕಾಮಿನಿಯ ॥36॥

೦೩೭ ಸೊಮ್ಪಡಗಿತು ಮುಖೇನ್ದು ...{Loading}...

ಸೊಂಪಡಗಿತು ಮುಖೇಂದು ತನುಲತೆ
ಕಂಪಿಸಿದುದಡಿಗಡಿಗೆ ಮೈ ತನಿ
ಗಂಪಿನಲಿ ಮಘಮಘಿಸಿತಮಲ ಸ್ವೇದ ಸಲಿಲದಲಿ
ತಂಪಿನಲಿ ಶಿಖಿ ಮಧುರದಲಿ ಕಟು
ನುಂಪಿನಲಿ ಬಿರಿಸಮೃತದಲಿ ವಿಷ
ಗುಂಪಿನಲಿ ನೆಲೆಯಾದವೋಲ್ ಸತಿಗಾಯ್ತು ಘನರೋಷ ॥37॥

೦೩೮ ಕೆತ್ತಿದವು ತುಟಿ ...{Loading}...

ಕೆತ್ತಿದವು ತುಟಿ ಕದಪಿನಲಿ ಕೈ
ಹತ್ತಿಸುತ ತೂಗಿದಳು ಶಿರವನು
ತತ್ತರೋಷಾಯುಧವ ಮಸೆದಳು ಧಾರೆಗಂಗಳಲಿ
ಎತ್ತಿದುಬ್ಬೇಗದ ವಿಕಾರದ
ಚಿತ್ತ ಬುದ್ಧಿ ಮನಂಗಳಾತ್ಮನ
ಜೊತ್ತಿಸಿದವದ್ಭುತದಹಂಕಾರದಲಿ ಕಾಮಿನಿಯ ॥38॥

೦೩೯ ಎಲವೊ ಭಣ್ಡರ ...{Loading}...

ಎಲವೊ ಭಂಡರ ಭಾವ ಖೂಳರ
ನಿಳಯ ಖಳರಧಿನಾಥ ವಂಚಕ
ತಿಲಕ ಗಾವಿಲರೊಡೆಯ ಬಂಧುವೆ ದುಷ್ಟನಾಯಕರ
ಎಲೆ ಮರುಳೆ ತಾನಾವಳೆಂಬುದ
ತಿಳಿಯಲಾ ನೀನಾವನೆಂಬುದ
ನಿಳೆಯರಿಯದೇ ಭಂಡ ಫಡ ಹೋಗೆಂದಳಿಂದುಮುಖಿ ॥39॥

೦೪೦ ಒಲಿದು ಬನ್ದವರಾವು ...{Loading}...

ಒಲಿದು ಬಂದವರಾವು ಸೊಬಗಿನೊ
ಳೊಲಿಸಿ ಮರುಗಿಪ ಮಿಂಡ ನೀನತಿ
ಸುಲಭರಾವ್ ದುರ್ಲಭನು ನೀ ದೇವೇಂದ್ರ ಕಟಕದಲಿ
ಎಲೆ ನಪುಂಸಕ ಗಂಡು ವೇಷದ
ಸುಳಿವು ನಿನಗೇಕೆನುತ ಸತಿ ಕಳ
ವಳಿಸಿ ಕರವೆತ್ತಿದಳು ಹಿಡಿ ಹಿಡಿ ಶಾಪವಿದೆಯೆನುತ ॥40॥

೦೪೧ ತುಳುಕಿತದ್ಭುತ ರೋಷ ...{Loading}...

ತುಳುಕಿತದ್ಭುತ ರೋಷ ಸುಯ್ಲಿನ
ಝಳ ಹೊಡೆದು ಮೂಗುತಿಯ ಮುತ್ತಿನ
ಬೆಳಕು ಕುಂದಿತು ಕುಂದಿತಮಳಚ್ಛವಿ ಮುಖಾಂಬುಜದ
ಹೊಳೆ ಹೊಳೆವ ಕೆಂದಳದ ಸೆಳ್ಳುಗು
ರ್ಗಳ ಮಯೂಖದ ಮಣಿಯ ಮುದ್ರಿಕೆ
ಗಳ ಮರೀಚಿಯಲೆಸೆದುದೆತ್ತಿದ ಹಸ್ತವೂರ್ವಶಿಯ ॥41॥

೦೪೨ ರಾಹು ತುಡುಕಿದ ...{Loading}...

ರಾಹು ತುಡುಕಿದ ಶಶಿಯೊ ಮೇಣ್ ರೌ
ದ್ರಾಹಿ ಮಸ್ತಕ ಮಾಣಿಕವೊ ಕಡು
ಗಾಹಿನಮೃತವೊ ಕುಪಿತ ಸಿಂಹದ ಗುಹೆಯ ಮೃಗಮದವೊ
ಲೋಹ ಧಾರೆಯ ಮಧುವೊ ಕಳಿತ ಹ
ಲಾಹಳದ ಕಜ್ಜಾಯವೆನಿಸಿತು
ರೂಹು ಸುಮನೋಹರ ಭಯಂಕರವಾಯ್ತು ಸುರಸತಿಯ ॥42॥

೦೪೩ ನರಮೃಗಾಧಮ ನಿಮ್ಮ ...{Loading}...

ನರಮೃಗಾಧಮ ನಿಮ್ಮ ಭಾರತ
ವರುಷ ಭೂಮಿಯೊಳೊಂದು ವರುಷಾಂ
ತರ ನಪುಂಸಕನಾಗಿ ಚರಿಸು ನಿರಂತರಾಯದಲಿ
ಹರಿಯ ಮರೆಯೊಗು ಹರನ ನೀನನು
ಸರಿಸು ನಿಮ್ಮಯ್ಯಂಗೆ ಹೇಳಿದು
ನಿರುತ ತಪ್ಪದು ಹೋಗೆನುತ ಮೊಗದಿರುಹಿದಳು ಚಪಲೆ ॥43॥

೦೪೪ ಮೂಗನಾದನು ಬಹಳ ...{Loading}...

ಮೂಗನಾದನು ಬಹಳ ಧೈರ್ಯದ
ಬೇಗಡೆಯ ಬಿಡೆ ಬಿಗಿದ ಬೆರಗಿನ
ಮೂಗಿನಂಗುಲಿಗಳ ಧನಂಜಯನೊಲೆದು ನಿಜಶಿರವ
ಆಗಲಿದು ಸುರಭವನ ವಧುಗಳು
ನಾಗರಿಗರಿವರೆತ್ತ ಭಾರತ
ಭೂಗತರು ತಾವೆತ್ತಲಿದು ಘಟಿಸಿದುದು ವಿಧಿಯೆಂದ ॥44॥

೦೪೫ ಸುರಪತಿಗೆ ಸೂಚಿಸಿದೆನೇ ...{Loading}...

ಸುರಪತಿಗೆ ಸೂಚಿಸಿದೆನೇ ಮೇಣ್
ಕರೆಸಿದೆನೆ ಕಮಲಾನನೆಯ ನಿ
ಷ್ಠುರದ ನುಡಿಗಪರಾಧವುಂಟೇ ತಾನು ಮಾಡಿದುದು
ವರುಷತನಕ ನಪುಂಸಕದಲಾ
ಚರಿಸ ಬಲ್ಲೆನೆ ಸಾಕು ದೇಹಾಂ
ತರವನಂಗೀಕರಿಸುವೆನಲಾ ತನ್ನ ಸುಡಲೆಂದ ॥45॥

೦೪೬ ಎಲೆ ವಿಧಾತ್ರ ...{Loading}...

ಎಲೆ ವಿಧಾತ್ರ ಕೃತಾಪರಾಧ
ಸ್ಥಳಕೆ ದಂಡ ಪ್ರಾಪ್ತಿಯಲ್ಲದೆ
ವಿಲಸಿತದ ವೇದಾರ್ಥದಲಿ ಮನ್ವಾದಿ ಮಾರ್ಗದಲಿ
ಚಲಿಸದಾಚರಿಸಿದೊಡೆ ಧರ್ಮ
ಸ್ಥಳದೊಳೇನು ನಿಮಿತ್ತವಕಟಾ
ಗಳಿತ ಪೌರುಷನಾಗಿ ಬದುಕುವನಲ್ಲ ತಾನೆಂದ ॥46॥

೦೪೭ ತಪವನಾಚರಿಸಿದೊಡೆ ವರ ...{Loading}...

ತಪವನಾಚರಿಸಿದೊಡೆ ವರ ಪಾ
ಶುಪತ ಶರವೆನಗಾಯ್ತು ಧರ್ಮವೆ
ತಪವಲಾಯೆಂದರಿದು ನಡೆದರೆ ಷಂಡತನವಾಯ್ತು
ತಪವೆರಡು ಸರಿ ಫಲದೊಳಾದುದು
ವಿಪರಿತದ ಗತಿ ಗಹನ ತರವೇ
ವಿಪುಳ ಕರ್ಮಸ್ಥಿತಿಯೆನುತ ತೂಗಿದನು ನಿಜಶಿರವ ॥47॥

೦೪೮ ಶಿವನ ಶರವೆನಗಾಯ್ತು ...{Loading}...

ಶಿವನ ಶರವೆನಗಾಯ್ತು ರಿಪು ಕೌ
ರವರ ರಕುತದ ರಾಟಳವನೆ
ತ್ತುವೆನು ಕಟ್ಟಾ ಮುಡಿಯನೆಂಬೆನು ದುರುಪದೀ ಸತಿಗೆ
ಇವಳು ಭಂಗಿಸಿ ಬೂತುಗೆಡಹಿದ
ಹವಣನಾರಿಗೆ ಹೇಳುವೆನು ವರ
ಯುವತಿಗೀ ನುಡಿಯೊಸಗೆಯೇ ಹಾಯೆನುತ ಬಿಸುಸುಯ್ದ ॥48॥

೦೪೯ ಅರಸ ಕೇಳೈ ...{Loading}...

ಅರಸ ಕೇಳೈ ಚಿತ್ರಸೇನನ
ಕರೆಸಿಯೂರ್ವಶಿ ಪಾರ್ಥ ಮಾಡಿದ
ದುರುಳತನವನು ದೂರಿದೊಡೆ ಸುರಸತಿಯ ಸಂತೈಸಿ
ಸುರಪತಿಗೆ ಗಂಧರ್ವನಿವರಿ
ಬ್ಬರ ನಿರೋಧ ನಿಬಂಧನವನೆ
ಚ್ಚರಿಸಲರ್ಜುನನರಮನೆಗೆ ಬಂದನು ಬಲಧ್ವಂಸಿ ॥49॥

೦೫೦ ಮಗನಪ್ಪಿದನೆನ್ನ ತನ್ದೆಗೆ ...{Loading}...

ಮಗನಪ್ಪಿದನೆನ್ನ ತಂದೆಗೆ
ದುಗುಡವೇಕೆನ್ನಾನೆಗೆತ್ತಣ
ಬೆಗಡಿನ್ನರಸಂಗಿದೆತ್ತಣ ದೆಸೆಯ ದುಮ್ಮಾನ
ಮೊಗದ ತನಿ ಹಳಹಳಿಕೆ ನೇತ್ರಾಂ
ಬುಗಳೊಲದ್ದುದು ನಿಜ ಮನೋವೃ
ತ್ತಿಗಳೊಳಗೆ ನುಡಿ ಮುಳುಗಿತೇನಿದು ಚಿತ್ರವಾಯ್ತೆಂದ ॥50॥

೦೫೧ ನುಡಿಸೆ ತಲೆವಾಗಿದನು ...{Loading}...

ನುಡಿಸೆ ತಲೆವಾಗಿದನು ಲಜ್ಜೆಯ
ಝಡಿತೆಯಲಿ ಝೊಮ್ಮೇರಿದಂತೆವೆ
ಮಿಡುಕದಿರೆ ಮಗುಳಪ್ಪಿ ಹರಿ ಮೊಗ ನೆಗಹಿ ಮುಂಡಾಡಿ
ಬಿಡು ಮನೋಗ್ಲಾನಿಯನು ಸತಿ ಕೆಡೆ
ನುಡಿದುದೆಲ್ಲವನೆನಗೆ ಸೈರಿಸು
ಮಡದಿಯರಲೇನುಂಟು ಗುಣವೆನ್ನಾಣೆ ಹೇಳೆಂದ ॥51॥

೦೫೨ ಎಲೆ ಕಿರೀಟಿ ...{Loading}...

ಎಲೆ ಕಿರೀಟಿ ವೃಥಾ ಮನೋವ್ಯಥೆ
ತಳಿತುದೇಕೂರ್ವಶಿಯ ಶಾಪದ
ಲಳುಕಿದೈ ತತ್ಕ್ರೋಧ ನಿನಗುಪಕಾರವಾಯ್ತು ಕಣ
ಹಳುವದಲಿ ಹನ್ನೆರಡು ವರುಷದ
ತಲಹಿನಜ್ಞಾತದಲಿ ವರುಷವ
ಕಳೆವಡಿದು ಸಾಧನವೆಯಾಯ್ತು ಶಿಖಂಡಿತನವೆಂದ ॥52॥

೦೫೩ ಖೋಡಿಯಿಲ್ಲೆಲೆ ಮಗನೆ ...{Loading}...

ಖೋಡಿಯಿಲ್ಲೆಲೆ ಮಗನೆ ಚಿಂತಿಸ
ಬೇಡ ನಿಮ್ಮ್ಮಜ್ಞಾತದಲಿ ನೆರೆ
ಜೋಡಲಾ ಜಾಣಾಯ್ಲ ರಿಪುಜನ ದೃಷ್ಟಿಶರಹತಿಗೆ
ಕೂಡಿತಿದು ಪುಣ್ಯದಲಿ ಸುರಸತಿ
ಮಾಡಿದಪಕೃತಿ ನಿನ್ನ ಭಾಷೆಯ
ಬೀಡ ಸಲಹಿದುದರಿಯೆ ನೀ ಸಾಹಿತ್ಯನಲ್ಲೆಂದ ॥53॥

೦೫೪ ಎನ್ದು ಪಾರ್ಥನ ...{Loading}...

ಎಂದು ಪಾರ್ಥನ ಸಂತವಿಟ್ಟು ಪು
ರಂದರನು ತನ್ನರಮನೆಗೆ ನಡೆ
ತಂದನರ್ಜುನ ಸಹಿತ ವಿವಿಧ ವಿನೋದ ವಿಭವದಲಿ
ಅಂದು ಶಿಖಿ ಪವನಾದಿಗಳು ನಲ
ವಿಂದ ಕೊಟ್ಟರು ಶರವನಮರೀ
ವೃಂದ ಸೂಸಿತು ಸೇಸೆಯನು ಜಯರವದ ರಭಸದಲಿ ॥54॥

೦೫೫ ಸುರಪನರುಹಿದನಸ್ತ್ರ ಶಸ್ತ್ರೋ ...{Loading}...

ಸುರಪನರುಹಿದನಸ್ತ್ರ ಶಸ್ತ್ರೋ
ತ್ತರ ರಹಸ್ಯವನಮರ ಭುವನದ
ಭರತ ವಿದ್ಯೆಯನರುಹಿಸಿದನಾ ಶಾಸ್ತ್ರವಿಧಿಯಿಂದ
ಸುರರಿಗಲಗಣಸಾದ ದೈತ್ಯರ
ನೊರಸಿದನು ತತ್ಕೀರ್ತಿಲತೆ ಕುಡಿ
ವರಿದು ಬೆಳೆದುದು ವೀರನಾರಾಯಣನ ಮೈದುನನ ॥55॥

+೦೮ ...{Loading}...