೦೬

೦೦೦ ಸೂ ಕದನ ...{Loading}...

ಸೂ. ಕದನ ಮುಖದಲಿ ಖೋಡಿಯಿಲ್ಲದೆ
ಬೆದರದೊದಗಿದ ನರಗೆ ಕಾರು
ಣ್ಯದಲಿ ಕಾಮವಿರೋಧಿ ಕೊಟ್ಟನು ಪಾಶುಪತ ಶರವ

೦೦೧ ಎಲೆ ಕಿರಾತ ...{Loading}...

ಎಲೆ ಕಿರಾತ ಮದೀಯ ಬಾಣದ
ಬಲೆಗೆ ನೀ ಮೃಗವಾಗದಿರು ನಿ
ನ್ನಳವ ಮೆರೆಯಾ ಬನದ ನರಿ ಮೊಲ ಹುಲ್ಲೆ ಹರಿಣನಲಿ
ಗೆಲಿದ ಗರುವನು ನೀನು ನಿನ್ನ
ಗ್ಗಳಿಕೆಗಾವಂಜುವೆವು ನಿನ್ನೀ
ದಳಕೆ ಪತಿಯುಂಟಾದಡಾತನ ಕೊಂಡುಬಾಯೆಂದ ॥1॥

೦೦೨ ಎನಲು ನಕ್ಕನು ...{Loading}...

ಎನಲು ನಕ್ಕನು ಶಂಭು ಭಕ್ತನ
ಮನದ ಧೃತಿಯನು ಭುಜ ಬಲವನಾ
ತನ ಪರಾಕ್ರಮ ಲಕ್ಷ್ಮಿಯನು ಪಾರ್ವತಿಗೆ ತೋರಿಸುತ
ನೆನೆದು ನುಡಿದನಿದೇನು ತಮ್ಮಡಿ
ನಿನಗೆ ತಪದಲಿ ಖಡ್ಗವೇಕೀ
ಧನು ಶರಾವಳಿಯೇಕೆ ನಿನ್ನಂಗವಣೆಯೇನೆಂದ ॥2॥

೦೦೩ ಏಕೆ ನಿನಗೀ ...{Loading}...

ಏಕೆ ನಿನಗೀ ತಪದ ಚಿಂತೆ ವಿ
ವೇಕ ಶಾಸ್ತ್ರ ವಿಚಾರವಿದು ವಿಪಿ
ನೌಕಸರ ಸಂಹಾರ ವಿದ್ಯಾವೃತ್ತಿ ನಿನ್ನದಲೆ
ಆಕೆವಾಳರ ಕರೆಸು ನೀನೇ
ಕಾಕಿ ನಿನ್ನಲಿ ಹರಿಯದಾಹವ
ವೇಕೆ ನಿನಗೀಗೆಂದು ಕಪಟ ಕಿರಾತನನು ಜರೆದ ॥3॥

೦೦೪ ನೀವು ಬಲ್ಲಿರಿ ...{Loading}...

ನೀವು ಬಲ್ಲಿರಿ ಶಾಸ್ತ್ರದಲಿ ಶ
ಸ್ತ್ರಾವಳಿಯಲಾವಿಂದು ಪಕ್ಷಿ ಮೃ
ಗಾವಳಿಯ ಬೇಂಟೆಯಲಿ ಬಲ್ಲೆವು ಜಾತಿ ಧರ್ಮವಿದು
ನೀವು ಬಲುಹುಳ್ಳವರು ನಿಮ್ಮೊಡ
ನಾವು ಸೆಣಸುವರಲ್ಲ ನಿಮ್ಮವೊ
ಲಾವ ಋಷಿ ಶಸ್ತ್ರಜ್ಞನಾತನ ಬಿರುದ ತಡೆಯೆಂದ ॥4॥

೦೦೫ ಕಟಕಿಯೇಕೆ ಪುಳಿನ್ದ ...{Loading}...

ಕಟಕಿಯೇಕೆ ಪುಳಿಂದ ನಾವು
ಬ್ಬಟೆಯ ತಪಸಿಗಳೆಂಬುದಿದು ವಿ
ಸ್ಫುಟವಲೇ ತಪ್ಪೇನು ನಿನ್ನೊಡನೆಂದು ಫಲವೇನು
ಜಟೆ ಮೃಗಾಜಿನ ಭಸ್ಮದೊಡನು
ತ್ಕಟದ ಧನು ಶರ ಖಡ್ಗದಲಿ ಧೂ
ರ್ಜಟಿಯಿಹನು ನಾವವರ ಶಿಷ್ಯರು ಶಬರ ಕೇಳ್ ಎಂದ ॥5॥

೦೦೬ ಲೋಕ ಶಿಕ್ಷಕರಲ್ಲಲೇ ...{Loading}...

ಲೋಕ ಶಿಕ್ಷಕರಲ್ಲಲೇ ನಮ
ಗೇಕೆ ನಿಮ್ಮಯ ತಪದ ಚಿಂತೆ ಪಿ
ನಾಕಧರನಡಹಾಯ್ದರೆಯು ಬಿಡೆವೆಮ್ಮ ವಾಸಿಗಳ
ಈ ಕಳಂಬವಿದೆಮ್ಮದೆನುತ ವ
ನೌಕಹದ ನೆಳಲಿನಲಿ ನಿಂದು ಪಿ
ನಾಕಿ ನುಡಿದನು ಕಡಿದನೀತನ ಸೈರಣೆಯ ಮನವ ॥6॥

೦೦೭ ಮಸಗಿದನು ನಿಮ್ಮಾತನುಗಿದೆ ...{Loading}...

ಮಸಗಿದನು ನಿಮ್ಮಾತನುಗಿದೆ
ಬ್ಬಿಸಿದ ಹುಲಿಯೋ ನೊಂದ ಹಂದಿಯೊ
ಹಸಿದ ಭುಜಗನೊ ಕಾದ ಕಟ್ಟುಕ್ಕಿನ ಛಡಾಳಿಕೆಯೊ
ಉಸುರುಗಳ ಕಾರ್ಬೊಗೆಗಳಾಲಿಯ
ಬಿಸುಗುದಿಯ ಬಲು ಕೆಂಡವಂಬಿನ
ಹೊಸ ಮಸೆಗಳುರಿ ಝಾಡಿ ಝಳಪಿಸೆ ಪಾರ್ಥ ಖತಿಗೊಂಡ ॥7॥

೦೦೮ ಆದಡಿದ ಕೊಳ್ಳೆನುತ ...{Loading}...

ಆದಡಿದ ಕೊಳ್ಳೆನುತ ಕೆನ್ನೆಗೆ
ಸೇದಿಬಿಟ್ಟನು ಸರಳನದು ಹಿಂ
ದಾದುದಾ ಬಳಿ ಸರಳನದ ಹಿಂದಿಕ್ಕಿ ಮತ್ತೊಂದು
ಹೋದುದದ ಹಿಂದಿಕ್ಕಿ ಮತ್ತೊಂ
ದೈದಿತತಿ ವೇಗಾಯ್ಲ ತನದನು
ವಾದಸಾಧ್ಯದ ಸರಳು ಕವಿದವು ಬಿಟ್ಟ ಸೂಟಿಯಲಿ ॥8॥

೦೦೯ ಏನ ಹೇಳುವೆನರಸ ...{Loading}...

ಏನ ಹೇಳುವೆನರಸ ಶರದಭಿ
ಮಾನ ದೇವತೆಯುಂಟಲಾ ಹರಿ
ಸೂನುವರಿಯದಡಂಬೆಯರಿಯಳೆ ಚಂಡಿಕಾದೇವಿ
ಭಾನುಮಂಡಳದಂಧಕಾರದ
ವೈನತೇಯನ ಭುಜಗತತಿಯ ಸ
ಮಾನಧರ್ಮವ ಕಂಡೆನೀಶನೊಳರ್ಜುನಾಸ್ತ್ರದಲಿ ॥9॥

೦೧೦ ಮತ್ತೆ ಸುರಿದನು ...{Loading}...

ಮತ್ತೆ ಸುರಿದನು ಸರಳ ಮಳೆಯನ
ದೆತ್ತ ನಭ ದೆಸೆಯೆತ್ತ ಧಾರುಣಿ
ಯೆತ್ತಲರ್ಜುನನೆತ್ತ ಕಪಟ ಕಿರಾತ ತಾನೆತ್ತ
ಹೊತ್ತ ಹೊಗರಿನ ಮೊರೆವ ಗರಿಗಳ
ಮುತ್ತುಗಿಡಿಗಳ ಹೊಳೆವ ಧಾರೆಯ
ಮೊತ್ತದಂಬೌಕಿದವು ಮೃತ್ಯುಂಜಯನ ಸಮ್ಮುಖಕೆ ॥10॥

೦೧೧ ಮಞ್ಜು ಮುಸುಕಿದೊಡೇನು ...{Loading}...

ಮಂಜು ಮುಸುಕಿದೊಡೇನು ಪರ್ವತ
ವಂಜುವುದೆ ಹಾಲಾಹಲವ ನೊಣ
ನೆಂಜಲಿಸುವುದೆ ವಡಬಶಿಖಿ ನನೆವುದೆ ತುಷಾರದಲಿ
ಕಂಜ ನಾಳದಿ ಕಟ್ಟುವಡೆವುದೆ
ಕುಂಜರನು ನರಶರದ ಜೋಡಿನ
ಜುಂಜುವಳೆಯಲಿ ಜಾಹ್ನವೀಧರ ಜಾರುವನೆಯೆಂದ ॥11॥

೦೧೨ ಕೆರಳಿದನು ಹೇರಮ್ಬ ...{Loading}...

ಕೆರಳಿದನು ಹೇರಂಬ ಗುಹನ
ಬ್ಬರಿಸಿದನು ರೋಷದಲಿ ಮಸಗಿತು
ತರತರದ ವರವೀರಭದ್ರಾದ್ಯಖಿಳ ಭೂತಗಣ
ಹರನು ಕಂಡನಿದೇನಿದೆನಗ
ಚ್ಚರಿ ಧನಂಜಯನೆಮಗೆ ನೂರ್ಮಡಿ
ಕರಹಿತವ ನಿಮ್ಮಿಂದ ನೀವ್ ಗಜಬಜಿಸಬೇಡೆಂದ ॥12॥

೦೧೩ ಎನುತ ಕೊಣ್ಡನು ...{Loading}...

ಎನುತ ಕೊಂಡನು ಧನುವನಾ ಪಾ
ರ್ಥನ ಶರೌಘವನೆಚ್ಚಡೀಶನ
ಮೊನೆಗಣೆಯಲಕ್ಕಾಡಿದವು ಬಾಡಿದವು ಬಳಿಸರಳು
ಕನಲಿ ಕಿವಿವರೆಗುಗಿದು ಫಡ ಹೋ
ಗೆನುತ ಮಗುಳೆಚ್ಚನು ಧನಂಜಯ
ನನಿತು ಶರವನು ಕಡಿದು ಮದನವಿರೋಧಿ ಮಗುಳೆಚ್ಚ ॥13॥

೦೧೪ ಎಸುಗೆಯೊಳ್ಳಿತು ಶಬರನತಿ ...{Loading}...

ಎಸುಗೆಯೊಳ್ಳಿತು ಶಬರನತಿ ಸಾ
ಹಸಿಕನೈ ಬಿಲ್ಲಾಳಲಾ ಸರಿ
ಬೆಸನನೆಚ್ಚನು ನಮ್ಮೊಡನೆ ಮಝ ಪೂತು ಹಾಯ್ಕೆನುತ
ಹೊಸ ಮಸೆಯ ಹೊಗರಲಗುಗಳ ದ
ಳ್ಳಿಸುವ ಧಾರೆಯ ಕೆಂಗರಿಯ ಡಾ
ಳಿಸುವ ಕಣೆಗಳ ಶರನಿಧಿಯ ಕವಿಸಿದನು ಕಲಿಪಾರ್ಥ ॥14॥

೦೧೫ ಈಡಿರಿದವೊನ್ದೊನ್ದರಲೆ ಹೊಗೆ ...{Loading}...

ಈಡಿರಿದವೊಂದೊಂದರಲೆ ಹೊಗೆ
ಝಾಡಿ ಝಳಪಿಸೆ ಉರಿಗಳಲಿ ಸರ
ಳೋಡಿದವು ಗಾಂಡಿವವನೊದೆದು ಮಹೇಶನಿದಿರಿನಲಿ
ಕಾಡಿದೊಡೆ ಕಾರುಣ್ಯನಿಧಿ ಕೊಂ
ಡಾಡುತಿರ್ದನು ಪಾರ್ಥನಂಬಿನ
ಮೂಡಿಗೆಯ ಸಂವರಣೆ ಸವೆದುದು ಸವೆಯದಾಟೋಪ ॥15॥

೦೧೬ ಎಲೆ ಕಿರಾತ ...{Loading}...

ಎಲೆ ಕಿರಾತ ಕಿರಾತರೊಳಗ
ಗ್ಗಳೆಯನಹೆಯೋ ದೇವದಾನವ
ರೊಳಗೆ ಸೈರಿಸಿ ನಿಲುವನಾವನು ನಮ್ಮ ವಿಲಗದಲಿ
ಅಳುಕದಿರು ಕಲಿಯಾಗೆನುತ ತುದಿ
ಹಿಳುಕ ಮಂತ್ರಿಸಿ ದಿವ್ಯ ಬಾಣಾ
ವಳಿಗಳಲಿ ಬಾಲೇಂದುಮೌಳಿಯನೆಚ್ಚನಾ ಪಾರ್ಥ ॥16॥

೦೧೭ ಏಸು ಮನ್ತ್ರಾಸ್ತ್ರದಲಿ ...{Loading}...

ಏಸು ಮಂತ್ರಾಸ್ತ್ರದಲಿ ಮುಸುಕಿದ
ರೈಸುವನು ಹರ ನುಂಗಿದನು ಮಗು
ಳೇಸು ಕೂರಂಬುಗಳನೆಚ್ಚರೆ ಕಡಿದನಂಬಿನಲಿ
ಈಸು ವೆಗ್ಗಳರಾರೆನಿಪಭಿ
ಜ್ಞಾಸೆ ಬೇಡಾ ಕ್ಷಾತ್ರ ತಾಮಸ
ವೇಸು ಬಲುಹೋ ನಿಮ್ಮ ಜಾತಿಗೆ ರಾಯ ಕೇಳ್ ಎಂದ ॥17॥

೦೧೮ ಅನ್ದು ಖಾಣ್ಡವ ...{Loading}...

ಅಂದು ಖಾಂಡವ ವನದ ದಹನದೆ
ಬಂದುದಕ್ಷಯ ಬಾಣವಿದು ತಾ
ನಿಂದು ಬರತುದು ಬಹಳ ಜಲನಿಧಿ ಬತ್ತುವಂದದಲಿ
ಇಂದುಮೌಳಿಯ ಸೇವೆಗಿಂದು ಪು
ಳಿಂದ ಕಂಟಕನಾದನೇ ಹಾ
ಯೆಂದು ಗರ್ಜಿಸಿ ಚಾಪದಿಂದಪ್ಪಳಿಸಿದನು ಶಿವನ ॥18॥

೦೧೯ ಕಳಚಿದನು ದಣ್ಡೆಯಲಿ ...{Loading}...

ಕಳಚಿದನು ದಂಡೆಯಲಿ ಗಾಯದ
ಲಳುಕಿದನಲಾಯೆನುತ ಮಗುಳ
ಪ್ಪಳಿಸಿದನು ಮೇಲ್ವಾಯ್ದು ಹೊಯ್ದನು ಜರೆದು ಝೋಂಪಿಸುತ
ಮೆಲುನಗೆಯಲರ್ಜುನನ ಚಾಪವ
ಸೆಳೆದುಕೊಂಡನು ತನ್ನ ಭಕ್ತನ
ಬೆಳವಿಗೆಯ ಮಾಡಿದನುಘೇಯೆಂದುದು ಸುರಸ್ತೋಮ ॥19॥

೦೨೦ ತಿಳಿವನುಗಿದಡಿಗಿಕ್ಕಿ ಮರವೆಯ ...{Loading}...

ತಿಳಿವನುಗಿದಡಿಗಿಕ್ಕಿ ಮರವೆಯ
ಕಳಕಳವೆ ಮೇಲಾಯ್ತು ತಾಮಸ
ಜಲನಿಧಿಯ ತಾಯ್ಮಳಲ ಮುಟ್ಟಿತು ಮನ ಧನಂಜಯನ
ಸೆಳೆದನೊರೆಯಲಡಾಯುಧವ ಬೀ
ಳೆಲವೊ ಶಬರಯೆನುತ್ತ ಹೊಯ್ದನು
ತಳಿರೆಲೆಯ ತಳೆದೆಳೆವೆರೆಯ ನೆಲೆವನೆಯ ಪಶುಪತಿಯ ॥20॥

೦೨೧ ಆಯುಧದ ಬರಿಮುಷ್ಟಿಯುಳಿಯಲ ...{Loading}...

ಆಯುಧದ ಬರಿಮುಷ್ಟಿಯುಳಿಯಲ
ಡಾಯುಧವ ಶಿವ ಕೊಂಡನೀತನ
ಬಾಯ ಹವಣಿನ ತುತ್ತಹುದೆ ತ್ರಿಪುರಾರಿಯೊಡ್ಡವಣೆ
ರಾಯ ಕೇಳೈ ಪಾರ್ಥನುಬ್ಬಟೆ
ಬೀಯದೀಸರ ಮೇಲೆ ಮತ್ತೆ ವಿ
ಡಾಯಿಯಾಯ್ತತಿ ಚಪಲತನದ ವಿವೇಕ ಮಡಮುರಿಯೆ ॥21॥

೦೨೨ ಮರನ ಹೆಗ್ಗೊಮ್ಬುಗಳಲಿಟ್ಟನು ...{Loading}...

ಮರನ ಹೆಗ್ಗೊಂಬುಗಳಲಿಟ್ಟನು
ತಿರುಹಿ ಕಲ್ಗುಂಡುಗಳ ಮಳೆಯಲಿ
ಹರನ ನಾದಿದನೇನನೆಂಬೆನು ಪಾರ್ಥನುರವಣೆಯ
ಸರಳ ಸಾರದಲಿನಿತುವನು ಕ
ತ್ತರಿಸಿ ಕರುಣಾವನಧಿ ನುಡಿದನು
ಮರುಳೆ ತಮ್ಮಡಿ ಕೈದುವುಳ್ಳೊಡೆ ಕೊಂಡು ಬಾಯೆಂದ ॥22॥

೦೨೩ ಕೈದುವೇಕೆ ಪುಳಿನ್ದ ...{Loading}...

ಕೈದುವೇಕೆ ಪುಳಿಂದ ನಮ್ಮೊಡ
ನೈದಿಸಾ ಭುಜ ಯುದ್ಧದಲಿ ಬಲು
ಗೈದುವಿದೆಲಾ ಮುಷ್ಟಿ ನಿನಗದುಪಾಯ ಚೊಕ್ಕೆಯವ
ಕಾಯ್ದುಕೊಳ್ಳನುವಾಗು ನಿನ್ನವ
ರೈದಿ ನೋಡಲಿಯೆನುತ ಭುಜವನು
ಹೊಯ್ದು ನಿಂದನು ಪಾರ್ಥನುರೆ ಬೆರಗಾಗೆ ಭೂತಗಣ ॥23॥

೦೨೪ ಕಣ್ಡಿರೇ ದೇವಿಯರು ...{Loading}...

ಕಂಡಿರೇ ದೇವಿಯರು ನರನು
ದ್ದಂಡತನವನು ತರಗೆಲೆಯ ಕೈ
ಗೊಂಡು ತಿಂಗಳು ನಾಲ್ಕ ಪವನಗ್ರಾಸದಿಂ ಬಳಿಕ
ದಂಡಿಸಿದನೀ ದೇಹವನು ನಾ
ವಂಡಲೆಯಲೊದಗಿದನಲೇ ಸಮ
ದಂಡಿಯಲಿ ನಮ್ಮೊಡನೆಯೆಂದನು ನಗುತ ಶಶಿಮೌಳಿ ॥24॥

೦೨೫ ಹಾರಿತಾಯುಧವೆನ್ದು ಭೀತಿಗೆ ...{Loading}...

ಹಾರಿತಾಯುಧವೆಂದು ಭೀತಿಗೆ
ಮಾರುವೋದನೆ ವೀರರಸ ನೊರೆ
ಯಾರಿತೇ ನಿಜಬಾಹು ಶಕ್ತಿಯೊಳುಂಟೆ ಖಯಖೋಡಿ
ಮೀರಿ ಹತ ಕಂತುಕದವೊಲು ಪುಟ
ವೇರುತಿದೆ ವಿಕ್ರಮ ಚಡಾಳಿಸಿ
ಬೀರುತಿದೆ ಭುಜ ಭಾರಿಯಂಕವ ದೇವಿ ನೋಡೆಂದ ॥25॥

೦೨೬ ಈತ ನರನೆಮ್ಬವ ...{Loading}...

ಈತ ನರನೆಂಬವ ಕಣಾ ಸಂ
ಗಾತಿ ನಾರಾಯಣ ಋಷಿಗೆ ತಾ
ವೀತಗಳು ಹರಿಯಂಶಭೂತರು ಭಕ್ತರಿವರೆಮಗೆ
ಈತನೆಮ್ಮಯ ಪಾಶುಪತ ವಿ
ಖ್ಯಾತ ಬಾಣವ ಬೇಡಿ ತಪದಲಿ
ವೀತರಾಗದ್ವೇಷನಾದನು ಕಾಂತೆ ಕೇಳ್ ಎಂದ ॥26॥

೦೨೭ ಕೊಡುವೆನೀತಙ್ಗೆಮ್ಮ ಶರವನು ...{Loading}...

ಕೊಡುವೆನೀತಂಗೆಮ್ಮ ಶರವನು
ಮಡದಿ ಮತ್ತೆಯು ನೋಡು ಪಾರ್ಥನ
ಕಡುಹನೆನುತಿದಿರಾಂತು ಬಾಹಪ್ಪಳಿಸಿ ಬೊಬ್ಬಿಡುತ
ಹಿಡಿದರಿಬ್ಬರು ಕೈಗಳನು ಹೊ
ಕ್ಕೊಡನೆ ಹತ್ತಾಹತ್ತಿಯಲಿ ಮಿಗೆ
ಜಡಿತೆಯಲಿ ಚಾಳೈಸಿದರು ಬಹುವಿಧದ ಬಿನ್ನಣವ ॥27॥

೦೨೮ ಬಿಗಿವ ಬಿಡಿಸುವ ...{Loading}...

ಬಿಗಿವ ಬಿಡಿಸುವ ಬಿಡಿಸಿದಾಕ್ಷಣ
ತೆಗೆವ ಕಳಚುವ ಕೊಂಬ ಲಳಿಯಲಿ
ಹೊಗುವ ಹತ್ತುವ ಲವಣಿಯಲಿ ಲಾಗಿಸುವ ಹೊರವಡುವ
ಚಿಗಿವ ತೊಡಚುವ ಬಿಗಿವ ಬಿಡಿಸುವ
ಬಗಿವ ಬಳಸುವ ಬಂದ ಗತಿಯಲಿ
ಲಗಡಿಸುವ ಲೋಕೈಕ ವೀರರು ಹೊಕ್ಕು ಹೆಣಗಿದರು ॥28॥

೦೨೯ ಕರವಳಯ ತಳಹತ್ತ ...{Loading}...

ಕರವಳಯ ತಳಹತ್ತ ಡೊಕ್ಕರ
ಶಿರವ ಧಣುಧಣು ವಟ್ಟತಳ ಖೊ
ಪ್ಪರ ದುವಂಗುಲ ಕಂದ ಡೊಕ್ಕರ ತೋರಹತ್ತದಲಿ
ಸರಿಸವಂಕಡ ಬಂಧಪಟ್ಟಸ
ಉರಗ ಬಂಧನ ಬಾಹು ದಣುವಂ
ತರಲಗಡಿಯೆಂಬಿನಿತರಲಿ ತೋರಿದರು ಕೌಶಲವ ॥29॥

೦೩೦ ಮುರಿವ ಬಿಡಿಸುವ ...{Loading}...

ಮುರಿವ ಬಿಡಿಸುವ ಢಗೆಯ ಸೈರಿಸಿ
ತೆರಳಿಚುವ ತಳ ಮೇಲುಗಳಲು
ತ್ತರಿಸವೇಳುವ ಬೀಳ್ವ ಹತ್ತುವ ಸುಳಿವ ವಂಚಿಸುವ
ಹೊರಳ್ವ ತನು ಹೋರಟೆಯ ಸತ್ವೋ
ತ್ಕರುಷ ಸರಿಯೆನೆ ಶಂಭು ಶಿಷ್ಯಗೆ
ಪರಿವಿಡಿಯ ತೋರಿಸುವೊಲಿದ್ದನು ಭೂಪ ಕೇಳ್ ಎಂದ ॥30॥

೦೩೧ ಗಾಯವುಣ್ಟೇ ತೋರು ...{Loading}...

ಗಾಯವುಂಟೇ ತೋರು ನಿನಗಡು
ಪಾಯೊ ಬಿಡು ಚೊಕ್ಕೆಯವನೆನುತಲ
ಜೇಯನೊಡನಿದಿರೆದ್ದು ತಿವಿದನು ಹರನ ಪೇರುರವ
ಗಾಯ ಘಾತಿಗೆ ನಿಮ್ಮ ಮತವೆನ
ಗಾಯಿತೆನುತ ಪುರಾರಿ ಕಡುಪೂ
ರಾಯದಲಿ ಕರವೆತ್ತಿ ನಸು ತಿವಿದನು ಧನಂಜಯನ ॥31॥

೦೩೨ ತರಹರಿಸಿ ನರನಿಕ್ಕಿದನು ...{Loading}...

ತರಹರಿಸಿ ನರನಿಕ್ಕಿದನು ಶಂ
ಕರನ ವಕ್ಷಸ್ಥಳವನೆಡೆಯಲಿ
ಮುರಿದು ಕಳಚಿ ಗಿರೀಶನೆರಗಿದನಿಂದ್ರನಂದನನ
ಮರಳಿ ತಿವಿದನು ಪಾರ್ಥನಾತನ
ಶಿರಕೆ ಕೊಟ್ಟನು ಶಂಭುವಿಂತಿ
ಬ್ಬರ ವಿಷಮ ಗಾಯದ ಗಡಾವಣೆ ಗಲ್ಲಿಸಿತು ಜಗವ ॥32॥

೦೩೩ ಸುಯ್ಲ ಹೊಗೆಗಳ ...{Loading}...

ಸುಯ್ಲ ಹೊಗೆಗಳ ಹೊದರುದಿವಿಗುಳ
ಮಯ್ಲುಳಿಯ ಮುರಿವುಗಳ ದೃಢ ವೇ
ಗಾಯ್ಲರಿಕ್ಕಿದ ಗಾಯ ಗಾಯಕೆ ಮುಷ್ಟಿ ಕಿಡಿಯೇಳೆ
ಶಯ್ಲಹತಿಗಳ ಭಾರಣೆಯ ಬಲು
ಪೊಯ್ಲಬೆಳೆ ಸಿರಿವಂತರಿವರೆನ
ಲಯ್ಲು ಪೈಲದ ಜರಡುಗಳೆ ನರನಾಥ ಕೇಳ್ ಎಂದ ॥33॥

೦೩೪ ತ್ರಾಣವೆನ್ತುಟೊ ಶಿವಶಿವಾ ...{Loading}...

ತ್ರಾಣವೆಂತುಟೊ ಶಿವಶಿವಾ ಸ
ತ್ರಾಣನಹೆ ಬಹುದಿವಸ ಭುವನ
ಪ್ರಾಣವೇ ಪೋಷಣವಲಾ ಮಝ ಪೂತು ಜಗಜಟ್ಟಿ
ಕಾಣೆನಿವಗೆ ಸಮಾನರನು ಶಿವ
ನಾಣೆ ಗುಣದಲಸೂಯವೇತ
ನ್ನಾಣೆ ನೋಡೌ ಶಬರಿಯೆಂದನು ನಗುತ ಮದನಾರಿ ॥34॥

೦೩೫ ನಿನಗೆ ನಾ ...{Loading}...

ನಿನಗೆ ನಾ ಬೆರಗಾದೆ ನೀನಿಂ
ದೆನಗೆ ಮೆಚ್ಚಿದೆ ದೇವದಾನವ
ಜನವೆನಗೆ ಪಾಡಲ್ಲ ನೀ ಹಲ್ಲಣಿಸಿದೈ ನಮ್ಮ
ಇನನೊ ಮೇಣ್ ದೇವೇಂದ್ರನೋ ಹರ
ತನುಜನೋ ಹರಿಯೋ ಮಹಾ ದೇ
ವನೊ ಕಿರಾತನೊ ನೀನೆನುತ ಮತ್ತೆರಗಿದನು ಶಿವನ ॥35॥

೦೩೬ ಗಾಯವನು ಮನ್ನಿಸುತ ...{Loading}...

ಗಾಯವನು ಮನ್ನಿಸುತ ಶಿವ ಪೂ
ರಾಯದಲಿ ಮೆಟ್ಟಿದನು ಪಾರ್ಥನ
ಬಾಯಳೊಕ್ಕುದು ರುಧಿರ ನಾಸಿಕದೆರಡು ಬಾಹೆಯಲಿ
ನೋಯನೊಂದನು ಮೀರಿ ಮುನಿಯಲ
ಪಾಯವಾದುದಕಟಕಟಾ ತ
ಪ್ಪಾಯಿತೇ ತಪ್ಪಾಯ್ತೆನುತ ಮರುಗಿದನು ಮದನಾರಿ ॥36॥

೦೩೭ ಬಿರಿದುದೀತನ ಗರ್ವಗಿರಿ ...{Loading}...

ಬಿರಿದುದೀತನ ಗರ್ವಗಿರಿ ಮದ
ಮುರಿದುದೀತನ ಶಕ್ತಿ ಸಲೆ ಟೆ
ಬ್ಬರಿಸಿತಿಂದ್ರಿಯ ವರ್ಗ ನೆಗ್ಗಿತು ನೆನಹಿನೊಡ್ಡವಣೆ
ಹರಿದುದಂಗಸ್ವೇದಜಲ ಕಾ
ಹುರತೆ ಕಾಲ್ವೊಳೆಯಾಯ್ತು ಮತಿ ನಿ
ಬ್ಬರದ ಬೆರಗಿನ ಬೇಟದಲಿ ಬೆಂಡಾದನಾ ಪಾರ್ಥ ॥37॥

೦೩೮ ಆವ ಸುವ್ರತ ...{Loading}...

ಆವ ಸುವ್ರತ ಭಂಗವೋ ಮೇ
ಣಾವ ದೈವ ದ್ರೋಹವೋ ತಾ
ನಾವ ಶಿವಭಕ್ತಾಪರಾಧಿಯೊ ಪೂರ್ವಜನ್ಮದಲಿ
ಆವ ಹಿರಿಯರ ಹಳಿದೆನೋ ಮೇ
ಣಾವ ಧರ್ಮವನಳಿದೆನೋ ತನ
ಗಾವ ಪರಿ ಪರಿಭವಮಹೀರುಹ ಫಲಿತವಾಯ್ತೆಂದ ॥38॥

೦೩೯ ಈತ ದಿಟಕೆ ...{Loading}...

ಈತ ದಿಟಕೆ ಪುಳಿಂದನೇ ವಿ
ಖ್ಯಾತ ನರ ತಾನಲ್ಲಲೇ ದಿಟ
ಜಾತ ಪಾರ್ಥನೆ ತಾ ನಿಧಾನಿಸೆ ಶಬರನಿವನಲ್ಲ
ಈತ ಪಲ್ಲಟವಾದನೋ ಮೇಣ್
ಶ್ವೇತ ತುರಗನ ಪಲ್ಲಟವೊ ಕುಂ
ತೀತನುಜ ತಾನಲ್ಲ ನಿಶ್ಚಯವೆನುತ ಚಿಂತಿಸಿದ ॥39॥

೦೪೦ ಅರಿದನೇ ಶಿವನೆನ್ದು ...{Loading}...

ಅರಿದನೇ ಶಿವನೆಂದು ದೈವದ
ಸರಿಯ ಬಲುಹನು ಕಂಡೊಡೆಯು ದಿಟ
ವರಿಯಬಹುದೆ ರಹಸ್ಯಮಾಯಾ ಗೋಪಿತಾತ್ಮಕನ
ಅರುಹಿಕೊಡವೇ ವೇದ ಶಿರನೆ
ಚ್ಚರಿಸಿ ತನ್ನನಖಂಡ ಚಿನ್ಮಯ
ದರಿವು ತಾನೆಂದಾವನರಿದನು ರಾಯ ಕೇಳ್ ಎಂದ ॥40॥

೦೪೧ ಹನ್ದಿಯೇತಕೆ ತನಗೆ ...{Loading}...

ಹಂದಿಯೇತಕೆ ತನಗೆ ಬನದ ಪು
ಳಿಂದನಲಿ ಸೆಣಸಾಗಲೇಕೆ ಪು
ಳಿಂದನೇ ಮಾನ್ಯಕನು ನಾವವಮಾನ್ಯರಾದೆವೆಲೆ
ಇಂದುಮೌಳಿಯುಪೇಕ್ಷೆಯೋ ತಾ
ನಿಂದು ಶಿವಪದ ಭಕ್ತಿ ಶೂನ್ಯನೊ
ಮಂದಭಾಗ್ಯನು ತಾನಲಾ ಹಾಯೆನುತ ಚಿಂತಿಸಿದ ॥41॥

೦೪೨ ಏಕೆ ಚಿನ್ತೆ ...{Loading}...

ಏಕೆ ಚಿಂತೆ ವೃಥಾ ಮನೋವ್ಯಥೆ
ಕಾಕಲಾ ನಾನಜ್ಞನಾಗೆ ಪಿ
ನಾಕಿ ಮಾಡುವುದೇನು ಮರೆಯೊಗುವೆನು ಮಹೇಶ್ವರನ
ಈ ಕಿರಾತನ ಹರಿಬವನು ಬಳಿ
ಕೇಕ ನಿಮಿಷಕೆ ಗೆಲುವೆನೆನುತ ವಿ
ವೇಕಸಿರಿಯ ಕಟಾಕ್ಷಚಿತ್ತಕೆ ಮಾರಿದನು ಮನವ ॥42॥

೦೪೩ ಮಣಲ ಲಿಙ್ಗವ ...{Loading}...

ಮಣಲ ಲಿಂಗವ ಮಾಡಿದನು ನಿ
ರ್ಗುಣನ ಸಗುಣಾರಾಧನೆಯ ಮ
ನ್ನಣೆಗಳಲಿ ವಿಸ್ತರಿಸಿದನು ವಿವಿಧಾಗಮೋಕ್ತದಲಿ
ಕಣಗಿಲೆಯ ಬಂದುಗೆಯ ಕಕ್ಕೆಯ
ಸಣಬಸರಿಸದ ಕುಸುಮದಲಿ ರಿಪು
ಗಣ ಭಯಂಕರನರ್ಚಿಸಿದನಂಧಾಸುರಾಂತಕನ ॥43॥

೦೪೪ ಅಮಲ ಶೈವಸ್ತವವ ...{Loading}...

ಅಮಲ ಶೈವಸ್ತವವ ಹೇಳಿದು
ನಮಿಸಿದನು ಬಲವಂದು ಪುನರಪಿ
ವಿಮಲಮತಿ ಮೈಯಿಕ್ಕಿದನು ನಿಜಭಾವಶುದ್ಧಿಯಲಿ
ಕಮಲಭವ ಸುರವಂದ್ಯ ಗಿರಿಜಾ
ರಮಣ ಭಕ್ತಕುಟುಂಬಿ ದೇವೋ
ತ್ತಮ ತ್ರಿಯಂಬಕ ಪುಷ್ಟಿವರ್ಧನ ಕರುಣಿಸುವುದೆಂದ ॥44॥

೦೪೫ ಗೆಲಿದನೆನ್ನನು ಶಬರನೀತನ ...{Loading}...

ಗೆಲಿದನೆನ್ನನು ಶಬರನೀತನ
ಗೆಲುವ ಶಕ್ತಿಯ ಕೊಡು ಕಿರಾತನ
ಬಲುಹು ಭಂಗಿಸಿತೆನ್ನ ಬಿಂಕದವೊಡೆಯ ನೀನಿರಲು
ಹಲವು ಮಾತೇನಿವನ ಮುರಿವ
ಗ್ಗಳಿಕೆಯನೆ ಕೃಪೆ ಮಾಡೆನುತ ಪರ
ಬಲ ಭಯಂಕರ ಭುಜವನೊದರಿಸುತಿತ್ತ ಮುಂದಾದ ॥45॥

೦೪೬ ಕಾಣಬಹುದೋ ಶಬರ ...{Loading}...

ಕಾಣಬಹುದೋ ಶಬರ ನಿನ್ನೀ
ಪ್ರಾಣವೆನ್ನಾಧೀನವರಿಯಾ
ಸ್ಥಾಣುವಿನ ಬಲುಹುಂಟು ಹಿಂಡುವೆನಿನ್ನು ನಿನ್ನಸುವ
ಗೋಣ ಮುರಿವೆನು ಮಿಡುಕಿದೊಡೆ ಶಿವ
ನಾಣೆ ಬಾ ಸಮ್ಮುಖಕೆ ಹಾಣಾ
ಹಾಣಿಗಿನ್ನನುವಾಗೆನುತಲೆವೆಯಿಕ್ಕದೀಕ್ಷಿಸಿದ ॥46॥

೦೪೭ ಕಣ್ಡನರ್ಜುನನೀ ಕಿರಾತನ ...{Loading}...

ಕಂಡನರ್ಜುನನೀ ಕಿರಾತನ
ಮಂಡೆಯಲಿ ತಾ ಮಳಲ ಲಿಂಗದ
ಮಂಡೆಯಲಿ ಪೂಜಿಸಿದ ಬಹುವಿಧ ಕುಸುಮ ಮಂಜರಿಯ
ಕಂಡನಿತ್ತಲು ಮುರಿದು ಪುನರಪಿ
ಕಂಡನೀ ಶಬರಂಗಿದೆತ್ತಣ
ದಂಡಿಯೋ ಹಾಯೆನುತ ಸೈವೆರಗಾದನಾ ಪಾರ್ಥ ॥47॥

೦೪೮ ಆಗಲಿದನಾರೈವೆನೆನುತವ ...{Loading}...

ಆಗಲಿದನಾರೈವೆನೆನುತವ
ನಾಗಮೋಕ್ತದಿ ಮತ್ತೆ ಲಿಂಗದ
ಮೇಗರೆಯ ನಿರ್ಮಾಲ್ಯವನು ಬೇರಿರಿಸಿ ಭಕ್ತಿಯಲಿ
ಹೂಗಳನು ತಿರಿದೊಟ್ಟಿ ಕರುಣಾ
ಸಾಗರನ ಬಲವಂದು ದಕ್ಷನ
ಯಾಗಹರನೆ ನಮಃಶಿವಾಯೆನುತಿತ್ತ ಮುಂದಾದ ॥48॥

೦೪೯ ಮತ್ತೆ ಕಣ್ಡನು ...{Loading}...

ಮತ್ತೆ ಕಂಡನು ಖಂಡಪರಶುವಿ
ನುತ್ತಮಾಂಗದಲೀಚೆಯಲಿ ಲಿಂ
ಗೋತ್ತಮಾಂಗದ ಮೇಲೆ ಕಾಣನು ಕುಸುಮ ಮಂಜರಿಯ
ತುತ್ತಿದುವು ಕೌತುಕವ ರಂಜಿಸಿ
ಹೊತ್ತವದುಭುತವನು ಭಯಾನಕ
ವೆತ್ತ ರಸದಲಿ ಮುಳುಗಿದವು ಕಂಗಳು ಧನಂಜಯನ ॥49॥

೦೫೦ ಶಿವನಲಾ ಸಾಕ್ಷಾಚ್ಚತುರ್ದಶ ...{Loading}...

ಶಿವನಲಾ ಸಾಕ್ಷಾಚ್ಚತುರ್ದಶ
ಭುವನ ಕರ್ತುವಲಾ ಕಿರಾತ
ವ್ಯವಹರಣೆಯಲಿ ಸುಳಿದುದಸ್ಮದನುಗ್ರಹಾರ್ಥವಲ
ಎವಗಿದನಶನ ತಪದ ಪಿತ್ತದ
ಬವಣೆ ತಲೆಗೇರಿದುದಲಾ ಶಿವ
ಶಿವ ಮಹಾದೇವೆನುತ ಮರುಗಿದನಂದು ಕಲಿಪಾರ್ಥ ॥50॥

೦೫೧ ಹೃದಯವಿಬ್ಬಗಿಯಾಯ್ತು ಕಙ್ಗಳು ...{Loading}...

ಹೃದಯವಿಬ್ಬಗಿಯಾಯ್ತು ಕಂಗಳು
ಬೆದರಿದವು ವೈವರ್ಣದಲಿ ತನು
ಗದಗದಿಸಿತಡಿಗಡಿಗೆ ಜಡಿದುದು ರೋಮ ಹರುಷದಲಿ
ಉದುರಿದವು ನೇತ್ರಾಂಬು ಬಿಂಕದ
ಬೆದರಿಕೆಯ ಮೂಢತೆಯ ತಿಳಿವಿನ
ಮುದದ ಖೇದದ ಗಾಯ ಘಾತಿಗೆ ಪಾರ್ಥನೊಳಗಾದ ॥51॥

೦೫೨ ಸ್ವೇದ ಜಲದಲಿ ...{Loading}...

ಸ್ವೇದ ಜಲದಲಿ ಮಿಂದು ಪುನರಪಿ
ಖೇದಪಂಕದೊಳದ್ದು ಬಹಳ ವಿ
ಷಾದ ರಜದಲಿ ಹೊರಳಿ ಭಯರಸ ನದಿಯೊಳೀಸಾಡಿ
ಮೈದೆಗೆದು ಮರನಾಗಿ ದೆಸೆಯಲಿ
ಬೀದಿವರಿವುತ ವಿವಿಧ ಭಾವದ
ಭೇದದಲಿ ಮನ ಮುಂದುಗೆಡುತಿರ್ದುದು ಧನಂಜಯನ ॥52॥

೦೫೩ ಏಸು ಬಾಣದಲೆಚ್ಚರೆಯು ...{Loading}...

ಏಸು ಬಾಣದಲೆಚ್ಚರೆಯು ಹೊರ
ಸೂಸಿದವು ನಾನರಿದುದಿಲ್ಲ ಮ
ಹಾ ಶರೌಘವ ಕಳುಹೆ ನುಂಗಿದಡರಿದೆನೇ ಬಳಿಕ
ಆ ಶರಾಸನ ಖಡ್ಗವನು ಕೊಳ
ಲೈಸರೊಳಗೆಚ್ಚತ್ತೆನೇ ಹಿಂ
ದೇಸು ಜನ್ಮದ ಜಾಡ್ಯಜವನಿಕೆಯಾಯ್ತು ತನಗೆಂದ ॥53॥

೦೫೪ ಆವನನು ಜಪ ...{Loading}...

ಆವನನು ಜಪ ಯಜ್ಞದಲಿ ಸಂ
ಭಾವಿಸುವರಾವನ ಪದಾಂಬುಜ
ಸೇವೆಯಲಿ ಸನಕಾದಿಗಳು ಧನ್ಯಾಭಿಮಾನಿಗಳು
ಆವನೊಬ್ಬನು ನಾದಬಿಂದು ಕ
ಳಾ ವಿಶೇಷಾತೀತನೀತನೊ
ಳಾವು ಸಮರಕೆ ಸೆಣಸಿದೆವಲಾ ಶಿವಶಿವಾಯೆಂದ ॥54॥

೦೫೫ ಆವನನು ಯಜ್ಞಾದಿ ...{Loading}...

ಆವನನು ಯಜ್ಞಾದಿ ಕರ್ಮದೊ
ಳಾವನನು ನಿಯಮಾದಿ ಯೋಗದೊ
ಳಾವನನು ವಿವಿಧಾರ್ಚನಾಂಕಿತ ಭಕ್ತಿ ಮಾರ್ಗದಲಿ
ಆವನನು ಜೀವಾತ್ಮ ಚೈತ
ನ್ಯಾವಲಂಬನನೆಂದು ಭಜಿಸುವ
ರಾವು ರಣದಲಿ ಸೆಣಸಿದೆವಲಾ ಶಿವ ಶಿವಾಯೆಂದ ॥55॥

೦೫೬ ಲೋಕವಾವನ ಮಾಯೆಯೀ ...{Loading}...

ಲೋಕವಾವನ ಮಾಯೆಯೀ ಜಗ
ಕಾಕೆವಾಳರದಾರು ಚಂದ್ರ ದಿ
ವಾಕರ ಗ್ರಹರಾಶಿ ತಾರೆಗಳಾರ ತೇಜದಲಿ
ಲೋಕರಚನಾ ರಕ್ಷೆ ಸಂಹೃತಿ
ಯಾಕರಣೆ ತಾನಾರದಾ ಜಗ
ದೇಕ ದೈವದ ಕೂಡೆ ತೋಟಿಯೆ ಶಿವ ಶಿವಾಯೆಂದ ॥56॥

೦೫೭ ಜೀವರೂಪನು ಸಾಕ್ಷಿ ...{Loading}...

ಜೀವರೂಪನು ಸಾಕ್ಷಿ ಕೂಟ
ಸ್ಥಾವಲಂಬನ ಕರ್ತು ಚೇತನ
ನಾವನೀ ಕ್ಷೇತ್ರಜ್ಞನಂತರ್ಯಾಮಿ ಸಂಜ್ಞೆಯಲಿ
ಆವನಮಲ ಪ್ರತ್ಯಗಾತುಮ
ನಾವನುರು ಪರಮಾತ್ಮನೀಶ್ವರ
ನಾವನಾತನ ಕೂಡೆ ಕದನವೆ ಶಿವ ಶಿವಾಯೆಂದ ॥57॥

೦೫೮ ಸ್ಫುರದಲಿಙ್ಗನು ಲಿಙ್ಗ ...{Loading}...

ಸ್ಫುರದಲಿಂಗನು ಲಿಂಗ ಮೂಲೋ
ತ್ಕರನುದಾರವ್ಯಕ್ತ ಸದ ಸ
ತ್ಪರದ ಪರಶಿವನಾರು ಶೈವೋತ್ಕರುಷ ಲಿಂಗದಲಿ
ಪರಮ ಪರರೂಪಾತ್ಪರಾತ್ಪರ
ತರ ನಿರೂಪನದಾವನಾತನೊ
ಳರರೆ ನಾವೆಚ್ಚಾಡಿದೆವಲಾ ಶಿವ ಶಿವಾಯೆಂದ ॥58॥

೦೫೯ ಆರಕಾರ ಉಕಾರ ...{Loading}...

ಆರಕಾರ ಉಕಾರ ವಿಮಲ ಮ
ಕಾರ ಯುಕ್ತೇಕಾಕ್ಷರದ ವಿ
ಸ್ತಾರಿಯಾವನು ಮಾತೃಕಾಕ್ಷರ ರೂಪನಕ್ಷಯನು
ಆರು ವಾಙ್ಮಯನಾರು ವಾಚೋ
ದೂರನಾರು ವಚೋ ನಿಯಾಮಕ
ನಾರವನ ಕೂಡೆವಗೆ ಕಲಹವೆ ಶಿವ ಶಿವಾಯೆಂದ ॥59॥

೦೬೦ ಗಾಹು ಹತ್ತಾಹತ್ತಿ ...{Loading}...

ಗಾಹು ಹತ್ತಾಹತ್ತಿ ಗಡ ನಿ
ರ್ದೇಹನೊಡನೆ ಮಹಾಶರೌಘಕೆ
ಮೇಹು ಗಡ ಜೀವನವು ಮೃತ್ಯುಂಜಯನ ಸೀಮೆಯಲಿ
ಆಹ ಮೂದಲೆ ಗಡ ಸುನಿಗಮ
ವ್ಯೂಹದೂರನ ಕೂಡೆ ಹರನೊಡ
ನಾಹವಕೆ ಸಮಜೋಳಿ ನಾವ್ಗಡ ಶಿವ ಶಿವಾಯೆಂದ ॥60॥

೦೬೧ ಎವಗೆರಡು ಕಣು ...{Loading}...

ಎವಗೆರಡು ಕಣು ವಿಶ್ವತೋ ಚ
ಕ್ಷುವಿನೊಡನೆ ಸಕ್ರೋಧ ದರುಶನ
ವೆವಗೆರಡು ಭುಜ ವಿಶ್ವತೋಭುಜನೊಡನೆ ಸಂಗ್ರಾಮ
ಭುವನ ಚರಣನ ವಿಶ್ವತೋಮುಖ
ಶಿವನ ನಮ್ಮೀ ಕಾಲು ನಾಲಗೆ
ಯವಡಗಿಸಿ ಗೆಲಲಾವ್ ಸಮರ್ಥರೆ ಶಿವ ಶಿವಾಯೆಂದ ॥61॥

೦೬೨ ಹೂಡಿ ಜಗವನು ...{Loading}...

ಹೂಡಿ ಜಗವನು ಜಗದ ಜೀವರ
ಕೂಡೆ ಬೆರಸಿ ಸಮಸ್ತ ವಿಷಯದೊ
ಳಾಡಿ ಸೊಗಸುವನಾತನುಪಭೋಗ ಪ್ರಪಂಚದಲಿ
ಹೂಡದಳಿಯದ ಗಮಿಸಿ ಮರಳದ
ಕೂಡದಗಲದ ನಿತ್ಯತೃಪ್ತ ನಿ
ರೂಢನೊಡನೆಚ್ಚಾಡಿದೆವಲಾ ಶಿವ ಶಿವಾಯೆಂದ ॥62॥

೦೬೩ ಆವನೊಬ್ಬನಣೋರಣೀಯನ ದಾವನುರು ...{Loading}...

ಆವನೊಬ್ಬನಣೋರಣೀಯನ
ದಾವನುರು ಮಹತೋ ಮಹೀಯನ
ದಾವ ನಿರುತಂ ದೃಷ್ಟಿಸಂಗತ ವಿಶ್ವ ಸಮಯದಲಿ
ಆವನೊಬ್ಬನು ನಾಮರೂಪು ಗು
ಣಾವಲಂಬನನಲ್ಲದೀಶ್ವರ
ನಾವನಾತನೊಳೆಮಗೆ ತೋಟಿಯೆ ಶಿವ ಶಿವಾಯೆಂದ ॥63॥

೦೬೪ ಸೇವ್ಯನನು ಸತ್ಕೃತಿಗಳಲಿ ...{Loading}...

ಸೇವ್ಯನನು ಸತ್ಕೃತಿಗಳಲಿ ದೃ
ಷ್ಟವ್ಯನನು ದೃಢಚಿತ್ತದಲಿ ಮಂ
ತ್ರವ್ಯನಾ ಶ್ರೋತವ್ಯನನು ಸಂಕೀರ್ತಿತವ್ಯನನು
ಅವ್ಯಯನನಕ್ಷಯನನಭವನ
ನವ್ಯಥನನಜ್ಞಾನದಲಿ ಯೋ
ದ್ಧವ್ಯನೆಂದೇ ಸೆಣಸಿದೆವಲಾ ಶಿವ ಶಿವಾಯೆಂದ ॥64॥

೦೬೫ ಸ್ಫುರದಕಾರಾದಿಯ ಹಕಾರೋ ...{Loading}...

ಸ್ಫುರದಕಾರಾದಿಯ ಹಕಾರೋ
ತ್ತರದ ಶಬ್ದಬ್ರಹ್ಮಮಯ ವಿ
ಸ್ತರದಹಂತತ್ವದ ಮಹತ್ತತ್ವಾತಿಶಯ ಪದದ
ಪುರುಷ ಮೂಲ ಪ್ರಕೃತಿಗಳನು
ತ್ತರಿಸಿ ತೊಳತೊಳ ತೊಳಗಿ ಬೆಳಗುವ
ಪರಮ ಶಿವನಲಿ ಸೆಣಸಿದೆವಲಾ ಶಿವ ಶಿವಾಯೆಂದ ॥65॥

೦೬೬ ಸರಸಿಜಾಸನ ವಿಷ್ಣು ...{Loading}...

ಸರಸಿಜಾಸನ ವಿಷ್ಣು ರುದ್ರೇ
ಶ್ವರ ಸzಶಿವರಾವಳೊಬ್ಬಳ
ಚರಣ ಸೇವಾ ಸಂಗದಲ್ಲಿಯೆ ಸುಪ್ರತಿಷ್ಠಿತರು
ಪರಮ ಶಕ್ತಿಯದಾವನಂಘ್ರಿಗೆ
ಶಿರವನೊಡ್ಡಿಹಳಾ ಮಹೋತ್ತಮ
ಪರಮ ಶಿವನಲಿ ಸೆಣಸಿದೆವಲಾ ಶಿವ ಶಿವಾಯೆಂದ ॥66॥

೦೬೭ ಈ ಪರಿಯಲರ್ಜುನನ ...{Loading}...

ಈ ಪರಿಯಲರ್ಜುನನ ಮನದನು
ತಾಪವನು ಕಾಣುತ್ತ ಶಾಬರ
ರೂಪ ರಚನೆಯ ತೆರೆಯ ಮರೆಯಲಿ ಮೆರೆವ ಚಿನ್ಮಯದ
ರೂಪನವ್ಯಾಹತ ನಿಜೋನ್ನತ
ರೂಪ ರಸದಲಿ ನರನ ಚಿತ್ತದ
ತಾಪವಡಗಲು ತಂಪನೆರೆದನು ತರುಣಶಶಿಮೌಳಿ ॥67॥

೦೬೮ ಅರಸ ಕೇಳೈ ...{Loading}...

ಅರಸ ಕೇಳೈ ನಿಮ್ಮ ಪಾರ್ಥನ
ಪರಮ ಪುಣ್ಯೋದಯವನೀಶನ
ಕರುಣವನು ಶುಕ ಸನಕ ಸಿದ್ಧಾದ್ಯರಿಗಗೋಚರದ
ನಿರುಪಮಿತ ನಿಜರೂಪವನು ವಿ
ಸ್ತರಿಸಿದನು ವಿವಿಧ ಪ್ರಭಾವೋ
ತ್ಕರದ ನಿರುಗೆಯ ತೋರಿದನು ಸುರಕೋಟಿ ಕೈಮುಗಿಯೆ ॥68॥

೦೬೯ ಬಲಿದ ಚನ್ದ್ರಿಕೆಯೆರಕವೆನೆ ...{Loading}...

ಬಲಿದ ಚಂದ್ರಿಕೆಯೆರಕವೆನೆ ತಳ
ತಳಿಸಿ ಬೆಳಗುವ ಕಾಯ ಕಾಂತಿಯ
ಪುಲಿದೊಗಲ ಕೆಂಜೆಡೆಯ ಕೇವಣದಿಂದು ಫಣಿಪತಿಯ
ಹೊಳೆವ ಹರಿಣನ ಅಕ್ಷಮಾಲಾ
ವಲಯದಭಯದ ವರದಕರ ಪರಿ
ಕಲಿತನೆಸೆದನು ಶಂಭು ಸದ್ಯೋಜಾತ ವಕ್ತ್ರದಲಿ ॥69॥

೦೭೦ ಹೊಳೆವ ಕುಙ್ಕುಮ ...{Loading}...

ಹೊಳೆವ ಕುಂಕುಮ ಕಾಂತಿಯಲಿ ತಳ
ತಳಿಪ ತನು ಗಜಚರ್ಮದುಡುಗೆಯ
ಲಲಿತ ದಂತಪ್ರಭೆಯ ದರಹಸಿತಾನನಾಂಬುಜದ
ವಿಲಸಿತಾಭಯ ವರದ ಕರ ಪರಿ
ಲುಳಿತ ಪರಶು ದೃಢಾಕ್ಷಮಾಲಾ
ವಳಿಗಳೊಪ್ಪಿರೆ ವಾಮದೇವಾನನದಿ ರಂಜಿಸಿದ ॥70॥

೦೭೧ ಕಾಳಮೇಘ ಸುವರ್ಣದುರು ...{Loading}...

ಕಾಳಮೇಘ ಸುವರ್ಣದುರು ದಂ
ಷ್ಟ್ರಾಳಿ ಭೀಷಣದಮಳ ಜಪಮಣಿ
ಮಾಲಿಕೆಯ ಸುತಿ ಮುಖದ ಪಾಶಾಂಕುಶದ ಡಮರುಗದ
ಶೂಲ ಘನ ಖಟ್ವಾಂಗ ದ್ರುಹಿಣ ಕ
ಪಾಲ ಫಣಿವಲಯದ ಕರೋಟೀ
ಮಾಲೆಯಿಂದ ಮಹೋಗ್ರನೆಸೆದನಘೋರವಕ್ತ್ರದಲಿ ॥71॥

೦೭೨ ಪರಶು ಡಮರುಗ ...{Loading}...

ಪರಶು ಡಮರುಗ ಖಡ್ಗ ಖೇಟಕ
ಶರ ಧನುಃಶೂಲದ ಕಪಾಲದ
ಕರದ ರಕ್ತಾಂಬರದ ಫಣಿಪನ ಭೋಗ ಭೂಷಣದ
ಸ್ಫುರದಘೋರದಭೇದದಭಯದ
ಕರದ ಪರಶು ಮೃಗಂಗಳಲಿ ತ
ತ್ಪುರುಷ ಮುಖದಲಿ ಮೆರೆದನೆರಕದ ಮಿಂಚಿನಂದದಲಿ ॥72॥

೦೭೩ ಎಳೆಯ ಮುತ್ತಿನ ...{Loading}...

ಎಳೆಯ ಮುತ್ತಿನ ಢಾಳವನು ಮು
ಕ್ಕುಳಿಸಿದಂಗಚ್ಛವಿಯಭಯವರ
ಲುಳಿತ ಜಪಮಣಿ ವೇದ ಪಾಶಾಂಕುಶದ ಡಮರುಗದ
ಲಲಿತ ಖಟ್ವಾಂಗದ ಕಪಾಲದ
ಹೊಳೆವ ಶೂಲದ ಕರದ ನಿಗಮಾ
ವಳಿ ಶಿರೋಮಣಿ ಮೆರೆದನಂದೀಶಾನ ವಕ್ತ್ರದಲಿ ॥73॥

೦೭೪ ಬೇರೆ ಬೇರುರಿಗಣ್ಣುಗಳ ...{Loading}...

ಬೇರೆ ಬೇರುರಿಗಣ್ಣುಗಳ ಫೂ
ತ್ಕಾರದಹಿ ಬಂಧದ ಜಟಾ ಕೋ
ಟೀರ ಭಾರದ ಮುಖಚತುಷ್ಟಯ ಭುಜಚತುಷ್ಟಯದ
ವಾರಿಜಾಸನ ವಿಷ್ಣು ರುದ್ರಾ
ಧಾರನೀಶ್ವರ ಪಂಚವಕ್ತ್ರಾ
ಕಾರದಲಿ ಶಿವ ಮೆರೆದ ಪಂಚಬ್ರಹ್ಮರೂಪದಲಿ ॥74॥

೦೭೫ ಶ್ರುತಿಗಳುಪನಿಷದಾದ್ಯಖಿಳ ದೇ ...{Loading}...

ಶ್ರುತಿಗಳುಪನಿಷದಾದ್ಯಖಿಳ ದೇ
ವತೆಯರಾಕಲ್ಪಿತ ಕಿರಾತಾ
ಕೃತಿಯನುಳಿದರು ಸುಳಿದರೀಶನ ಸುತ್ತುವಳಯದಲಿ
ಸ್ಮಿತಮಧುರ ಮುಖಕಾಂತಿ ಕಲ್ಲೋ
ಲಿತ ಕಟಾಕ್ಷಚ್ಛವಿಯಲೀಶನ
ಧೃತಿಯಲೀಡಿರಿದೆಡದಲೆಸೆದರು ಗೌರಿದೇವಿಯರು ॥75॥

೦೭೬ ಸನಕ ನಾರದ ...{Loading}...

ಸನಕ ನಾರದ ಭೃಗು ಪರಾಶರ
ತನುಜ ಭಾರದ್ವಾಜ ಗೌತಮ
ಮುನಿ ವಸಿಷ್ಠ ಸನತ್ಕುಮಾರನು ಕಣ್ವನುಪಮನ್ಯು
ವನಕೆ ಬಂದರು ಪಾರ್ಥ ಕೇಳಿದು
ನಿನಗೆ ಸಿದ್ಧಿ ಗಡೆಮಗೆ ಲೇಸಾ
ಯ್ತೆನುತ ಮೈಯಿಕ್ಕಿದುದು ಹರನಂಘ್ರಿಯಲಿ ಮುನಿನಿಕರ ॥76॥

೦೭೭ ಜಯ ಜಯೆನ್ದುದು ...{Loading}...

ಜಯ ಜಯೆಂದುದು ನಿಖಿಳ ಜಗವ
ಕ್ಷಯನ ದರುಶನಕೆಂದು ಸುತಿ ಕೋ
ಟಿಯ ಗಡಾವಣೆ ಗಾಸಿಯಾದುದು ಹರನ ಗಲ್ಲಣೆಗೆ
ನಿಯತವೇನೋ ಜನ್ಮಶತ ಸಂ
ಚಯದೊಳರರೆ ಕೃತಾರ್ಥನರ್ಜುನ
ಜಯವೆನಲು ಮೊಳಗಿದವು ಭೇರಿಗಳಮರ ಕಟಕದಲಿ ॥77॥

೦೭೮ ಬಿಟ್ಟ ಸೂಟಿಯೊಳೆದ್ದು ...{Loading}...

ಬಿಟ್ಟ ಸೂಟಿಯೊಳೆದ್ದು ಹರುಷಕೆ
ಕೊಟ್ಟು ಮನವನು ನೋಡುತಿರ್ದನು
ನಟ್ಟ ದೃಷ್ಟಿಯೊಳೊಗುವ ಜಲದಲಿ ರೋಮ ಪುಳಕದಲಿ
ಬಿಟ್ಟು ಹಿಡಿದನು ಹರನ ಕಾಣದೆ
ತೊಟ್ಟ ಜಡೆಗಳ ರೋಮ ಹರುಷದ
ಲಿಟ್ಟೆಡೆಯ ಮೈದವಕದರ್ಜುನ ನಿಂದು ಬೆರಗಾದ ॥78॥

೦೭೯ ಹರಹಿನಲಿ ಹೊದರೆದ್ದು ...{Loading}...

ಹರಹಿನಲಿ ಹೊದರೆದ್ದು ಹರುಷದ
ಹೊರಳಿಯಲಿ ಹೊಡಕರಿಸಿ ಚಿತ್ತವ
ತಿರುಹಿ ಹಿಡಿದನು ಮನಕೆ ಬುದ್ಧಿಯ ಹಮ್ಮು ಹಮ್ಮುಗೆಯ
ಕೊರಳುಗೊಳಿಸಿ ಕುಲಾಲ ಚಕ್ರದ
ಪರಿಬವಣಿಗೆಯ ಪಾಡಿನಲಿ ಕಾ
ತರಿಸುತವನಿಗೆ ಮೈಯನಿತ್ತನು ನೀಡಿ ಭುಜಯುಗವ ॥79॥

೦೮೦ ಕ್ಷಮಿಸುವುದು ಸರ್ವೇಶ ...{Loading}...

ಕ್ಷಮಿಸುವುದು ಸರ್ವೇಶ ಸರ್ವೋ
ತ್ತಮ ವೃಥಾ ಸುಭಟಾಭಿಮಾನ
ಭ್ರಮಿತನನು ಮೋಹಾಂಧಕೂಪಜಲಾವಗಾಹದಲಿ
ಸ್ತಿಮಿತನನು ದುರ್ಬೋಧ ವೇದ
ಭ್ರಮಿತನನು ಕಲ್ಯಾಣಪದ ನಿ
ರ್ಗಮಿತನನು ಕಾರುಣ್ಯನಿಧಿ ಕೈಗಾಯಬೇಕೆಂದ ॥80॥

೦೮೧ ಅರಿದರಿದು ಮತಿಗೆಟ್ಟ ...{Loading}...

ಅರಿದರಿದು ಮತಿಗೆಟ್ಟ ಮಾನವ
ಕುರಿಯಲಾ ನೆರೆ ಕಂಡು ಕಂಡೆ
ಚ್ಚರದ ಖೂಳನಲಾ ವಿವೇಕದ ಮೂಗು ಮಾರಿಯಲ
ಬರಿಮನದ ಬಾಹಿರನೊಳೆನ್ನಲಿ
ಮರೆವುದಪರಾಧವನು ನಿನ್ನನೆ
ಮೆರೆವುದೈ ಕಾರುಣ್ಯನಿಧಿ ಕೈಗಾಯಬೇಕೆಂದ ॥81॥

೦೮೨ ದೇವ ದೇವ ...{Loading}...

ದೇವ ದೇವ ಕೃಪಾಂಬುನಿಧಿ ಭ
ಕ್ತಾವಲಂಬನ ಭಕ್ತದೇಹಿಕ
ಸೇವಕಪ್ರಿಯ ಭೂತಭಾವನ ಭಾವನಾತೀತ
ದೇವವಂದಿತ ಕಾಲರೂಪ ಮ
ಹಾ ವಿಭವ ಭವರಹಿತ ಪಾವನ
ಪಾವಕಾಂಬಕ ಸುತಿಕುಟುಂಬಿಕ ಕರುಣಿಸುವುದೆಂದ ॥82॥

೦೮೩ ಜಯ ಜಗತ್ರಯನಾಥ ...{Loading}...

ಜಯ ಜಗತ್ರಯನಾಥ ಭಕ್ತಾ
ಶ್ರಯಸದಾಶಿವ ಭಕ್ತವತ್ಸಲ
ಲಯವಿಹೀನ ಮಹೇಶ ಮನ್ಮಥಹರ ಮಹಾದೇವ
ಭಯರಹಿತ ಭಾಳಾಕ್ಷ ಲೋಕ
ವ್ಯಯಭವನ ದುರ್ಲಕ್ಷಿ ದೇವ
ತ್ರಯ ನಮಸ್ಕೃತ ನಿಗಮ ಸತ್ಕೃತ ಕರುಣಿಸುವುದೆಂದ ॥83॥

೦೮೪ ಸರ್ವಗತ ಸರ್ವಜ್ಞ ...{Loading}...

ಸರ್ವಗತ ಸರ್ವಜ್ಞ ಸರ್ವದ
ಸರ್ವಭಾವನ ಸರ್ವತೋಮುಖ
ಸರ್ವಪೂಜಿತ ಸರ್ವಸಾಧಕ ಸರ್ವಗುಣನಿಲಯ
ಸರ್ವ ಸರ್ವಾಶ್ರಯ ಸಮಾಹಿತ
ಸರ್ವಮಯ ಸರ್ವೇಶ್ವರೇಶ್ವರ
ಸರ್ವ ದುಃಖಾಪಹ ಮಹೇಶ್ವರ ಕರುಣಿಸುವುದೆಂದ ॥84॥

೦೮೫ ರೂಪರಹಿತ ಸರೂಪ ...{Loading}...

ರೂಪರಹಿತ ಸರೂಪ ನಿರ್ಮಲ
ರೂಪ ವಿಶ್ವಾಧಾರ ಸದಸ
ದ್ರೂಪರೂಪ ವ್ಯೋಮ ರೂಪಕ ಸರ್ವತೋರೂಪ
ರೂಪರಸಗಂಧಾದಿ ವಿಷಯ ವಿ
ರೂಪ ರೂಪಾತೀತ ಸಂವಿ
ದ್ರೂಪ ವಿಮಲವಿರೂಪಲೋಚನ ಕರುಣಿಸುವುದೆಂದ ॥85॥

೦೮೬ ರಚಿತ ಮಾಯ ...{Loading}...

ರಚಿತ ಮಾಯ ವಿಮಾಯ ಮಾಯಾ
ನಿಚಿತ ಮಾಯಾಧಾರ ಮಾಯಾ
ರುಚಿರ ಮಾಯಾರೂಪ ಮಾಯಾಮಯ ಜಗನ್ಮಾಯ
ಶುಚಿ ಸತೇಜೋಬಲ ಹಿರಣ್ಯ
ಪ್ರಚಯತೇಜ ಸುತೇಜ ಗೌರೀ
ಕುಚಯುಗಾಂಕಿತವಕ್ಷನೀಕ್ಷಿಸಿ ಕರುಣಿಸುವುದೆಂದ ॥86॥

೦೮೭ ಪರಮಹಂಸ ಪರಾತ್ಮ ...{Loading}...

ಪರಮಹಂಸ ಪರಾತ್ಮ ಪರಮೇ
ಶ್ವರ ಪರಬ್ರಹ್ಮೈಕ ವಿಗ್ರಹ
ಪರಮಶಿವ ಪರತತ್ವರೂಪ ಪರಾತ್ಪರಾನಂದ
ಪರಮಗುಣ ಪರಶಕ್ತಿ ವಾಗೀ
ಶ್ವರ ಪರಾರ್ತಿಹರೇಶ ಪರ ಶಂ
ಕರ ಪರಂಜ್ಯೋತಿಯೆ ಪರೋತ್ತಮ ಕರುಣಿಸುವುದೆಂದ ॥87॥

೦೮೮ ಲಿಙ್ಗಮಯ ನಿರ್ಲಿಙ್ಗ ...{Loading}...

ಲಿಂಗಮಯ ನಿರ್ಲಿಂಗ ತೇಜೋ
ಲಿಂಗ ಲಿಂಗಾತ್ಮಕ ಸದಾಶಿವ
ಲಿಂಗ ನಿರ್ಮಳ ಲಿಂಗ ಲಿಂಗಸ್ಥಿತ ಮಹಾಲಿಂಗ
ಲಿಂಗ ವಿಲಸಿತ ಲಿಂಗ ಚಿನುಮಯ
ಲಿಂಗ ಚೇತನ ಲಿಂಗ ದುರ್ಗಾ
ಲಿಂಗಿತಾಂಗ ವಿಲಾಸ ಶಂಕರ ಕರುಣಿಸುವುದೆಂದ ॥88॥

೦೮೯ ನಿರವಧಿಕ ನಿರ್ಮಾಯ ...{Loading}...

ನಿರವಧಿಕ ನಿರ್ಮಾಯ ನಿಸ್ಪೃಹ
ನಿರುಪಮಿತ ನಿದ್ರ್ವಂದ್ವ ನಿರ್ಗುಣ
ನಿರವಯವ ನಿರ್ಲೇಪ ನಿರವಗ್ರಹ ನಿರಾಧಾರ
ನಿರುಪಮ ನಿರಾಮಯ ನಿರಂತರ
ನಿರವಶೇಷ ನಿರಂಗ ನಿರ್ಮಲ
ನಿರತಿಶಯ ನಿಷ್ಕಳ ಮಹೇಶ್ವರ ಕರುಣಿಸುವುದೆಂದ ॥89॥

೦೯೦ ವಾಮದೇವ ದುರನ್ತವಿಮಲ ...{Loading}...

ವಾಮದೇವ ದುರಂತವಿಮಲ
ವ್ಯೋಮಕೇಶ ಕೃತಾಂತಹರ ನಿ
ಸ್ಸೀಮ ಮೃತ್ಯುಂಜಯ ಸಮಂಜಸ ಸರ್ವತೋಭದ್ರ
ಭೀಮ ಭರ್ಗ ಕಪರ್ದಿ ಕಲ್ಪಿತ
ನಾಮ ರೂಪತ್ರಯ ವೃಷಧ್ವಜ
ಕಾಮಹರ ಕರುಣಾಮಹಾರ್ಣವ ಕರುಣಿಸುವುದೆಂದ ॥90॥

೦೯೧ ಹರಹರಾ ತ್ರೈಮೂರ್ತಿ ...{Loading}...

ಹರಹರಾ ತ್ರೈಮೂರ್ತಿ ರೂಪನು
ಧರಿಸಿಯತುಳ ಮಹಾಷ್ಟಮೂರ್ತಿಯ
ಧರಿಸಿಯನುಪಮ ವಿಶ್ವಮೂರ್ತಿಯ ಧರಿಸಿ ರಂಜಿಸುವ
ಪರಿಯನರಿವವನಾರು ದೇವಾ
ಸುರ ಮುನೀಶರಿಗರಿದು ಕೃಪೆಯಿಂ
ಕರುಣಿಸಲು ಬಂದೈ ಮಹಾದೇವೆಂದನಾ ಪಾರ್ಥ ॥91॥

೦೯೨ ದೇವ ಸುರ ...{Loading}...

ದೇವ ಸುರ ದನುಜೇಶವಂದಿತ
ದೇವ ಮನುಮುನಿನಿಕರಪೂಜಿತ
ದೇವ ತತ್ವಾಕಾರ ಭಾವಿಪೊಡತಿ ನಿರಾಕಾರ
ದೇವ ಸಾಕಾರದಲಿ ನಿಜ ಭ
ಕ್ತಾವಳಿಯನುದ್ಧರಿಪ ಶಿವ ಮಾ
ದೇವ ಕರುಣಿಸಿದೈಯನಾಥಂಗೆಂದನಾ ಪಾರ್ಥ ॥92॥

೦೯೩ ಹರನೆ ಗಙ್ಗಾಧರನೆ ...{Loading}...

ಹರನೆ ಗಂಗಾಧರನೆ ಗಿರಿಜಾ
ವರನೆ ಶಶಿಶೇಖರನೆ ದಕ್ಷಾ
ಧ್ವರಹರನೆ ಶಂಕರನೆ ನಿಜಭಕ್ತರ ಮನೋಹರನೆ
ಕರುಣಿಸುವುದುದ್ಧರಿಸುವುದು ಸಂ
ಹರಿಸು ಮತ್ಪರಿಭವವನೆಂದುರು
ತರದ ಭಕ್ತಿಯಲಂದು ಸೈಗೆಡೆದಿರ್ದನಾ ಪಾರ್ಥ ॥93॥

೦೯೪ ಧರಣಿಪತಿ ಕೇಳೀಶನೀತನ ...{Loading}...

ಧರಣಿಪತಿ ಕೇಳೀಶನೀತನ
ಹೊರೆಗೆ ಬಿಜಯಂಗೈದು ಪಾರ್ಥನ
ಶಿರವ ಹಿಡಿದೆತ್ತಿದನು ಬಿಗಿಯಪ್ಪಿದನು ಬರಸೆಳೆದು
ಮರುಳು ಮಗನೆ ಮಹಾ ತಪಸ್ಸಂ
ಚರಣೆಯಲಿ ನೊಂದೈಯೆನುತ ಕಡು
ಗರುಣಿ ಕರುಣಾಮೃತ ಸಮುದ್ರದೊಳದ್ದಿದನು ನರನ ॥94॥

೦೯೫ ಕೂಡೆ ಮೈದಡವಿದನು ...{Loading}...

ಕೂಡೆ ಮೈದಡವಿದನು ಚೈಮುಂ
ಡಾಡಿದನು ಮನ ನೋಯದಿರು ನೀ
ಮಾಡಿದುಪಹತಿಯೆಂಬುದೆಮಗರ್ಚನೆ ನಮಸ್ಕಾರ
ಕೋಡದಿರು ಕೊಂಕದಿರು ಭಕ್ತಿಗೆ
ನಾಡೆ ಮೆಚ್ಚಿದೆನೆನ್ನ ಚಿತ್ತಕೆ
ಖೋಡಿಯಿಲ್ಲೆಲೆ ಮಗನೆ ಗುಹ ಗಣಪತಿಗಳಾಣೆಂದ ॥95॥

೦೯೬ ನರನು ನೀ ...{Loading}...

ನರನು ನೀ ಪೂರ್ವದಲಿ ಪೀತಾಂ
ಬರನ ವಿಮಲಾಂಶ ಪ್ರಸೂತನು
ಪರಮಋಷಿ ನೀನೆನ್ನ ಭಕ್ತನು ಚಿಂತೆ ಬೇಡಿನ್ನು
ವರದನಾದೆನು ಮಗನೆ ಶಸ್ತ್ರೋ
ತ್ಕರವನಿದನೀ ಮುನ್ನ ಕೊಳ್ಳೆಂ
ದುರುತರ ಪ್ರೇಮದಲಿ ಕೊಟ್ಟನು ಖಡ್ಗಶರ ಧನುವ ॥96॥

೦೯೭ ಸಲಿಸುವೆನು ನೀ ...{Loading}...

ಸಲಿಸುವೆನು ನೀ ಬೇಡಿದುದ ನಿ
ಸ್ಖಲಿತವಂಜದಿರಿನ್ನು ಸಾಕೆನೆ
ಸುಲಭ ನೀ ಭಕ್ತರಿಗೆ ಭಯವಿನ್ನೇಕೆ ನಮಗೆನುತ
ಸಲಿಸು ಪಾಶುಪತಾಸ್ತ್ರವನು ವೆ
ಗ್ಗಳದ ಬೊಮ್ಮಶಿರೋಸ್ತ್ರವನು ಕೈ
ಗೊಳಿಸುವುದು ಕೃಪೆಯುಳ್ಳೊಡೆಂದನು ನಗುತ ಕಲಿಪಾರ್ಥ ॥97॥

೦೯೮ ಸವಡಿ ನುಡಿಯುಣ್ಟೇ ...{Loading}...

ಸವಡಿ ನುಡಿಯುಂಟೇ ಚತುರ್ದಶ
ಭುವನ ದಾಹವದಕ್ಷವೀ ಬಾ
ಣವನು ಕೊಟ್ಟೆನು ಮಗನೆ ಬೊಮ್ಮಶಿರೋಮಹಾಶರವ
ದಿವಿಜ ದನುಜ ಭುಜಂಗಮಾದಿಗ
ಳವಗಡಿಸಲುರೆ ಹೆಚ್ಚುವುದು ಸಂ
ಭವಿಸಿದಾಹುತಿಯೆಂದು ಶರವುದ್ದಂಡ ಬಲವೆಂದ ॥98॥

೦೯೯ ಸರಸಿಯಲಿ ಮಿನ್ದಾಚಮನ ...{Loading}...

ಸರಸಿಯಲಿ ಮಿಂದಾಚಮನ ವಿ
ಸ್ತರಣೆಯೆಲ್ಲವ ಮಾಡಿ ಶೂಲಿಯ
ಚರಣದಲಿ ಮೈಯಿಕ್ಕಿ ನಿಂದನು ಭಾವಶುದ್ಧಿಯಲಿ
ಸರಳ ಸಾಂಗೋಪಾಂಗ ಮಂತ್ರೋ
ಚ್ಚರಣ ಸಂಹೃತಿ ಮೋಕ್ಷವನು ವಿ
ಸ್ತರಿಸುತ ರಹಸ್ಯದಲಿ ಕೊಟ್ಟನು ಪಾಶುಪತ ಶರವ ॥99॥

೧೦೦ ಜಗವುಘೇಯೆನ್ದುದು ಜಯಧ್ವನಿ ...{Loading}...

ಜಗವುಘೇಯೆಂದುದು ಜಯಧ್ವನಿ
ಗಗನದಲಿ ಗಾಢಿಸಿತು ಹೂವಿನ
ಮುಗುಳ ಸುರಿವಳೆ ಸುರಿದುದೀಶ್ವರನಂಘ್ರಿಕಮಲದಲಿ
ಢಗೆಯ ತಳಿ ಮುರಿದುದು ಮನೋರಥ
ದಗಳು ತುಂಬಿತು ನರನ ಮನ ಬು
ದ್ಧಿಗಳು ನೆರೆ ಸಿಲುಕಿತ್ತು ಹರುಷೋತ್ಸವದ ದಾಳಿಯಲಿ ॥100॥

೧೦೧ ಹರನ ಕೋಮಲಪಾಣಿ ...{Loading}...

ಹರನ ಕೋಮಲಪಾಣಿ ಕಮಲ
ಸ್ಪರುಶ ಪೀಯೂಷದಲಿ ಮುಳುಗಿದ
ನರನ ತನು ನಿರ್ಮೋಕ ಮುಕ್ತ ಭುಜಂಗನಂದದಲಿ
ಕಿರಣ ಲಹರಿಯ ಲಳಿಯ ದಿವ್ಯೋ
ತ್ಕರದ ಚಪಲಚ್ಛವಿಯ ಚಾರು
ಸ್ಫುರಣದಲಿ ಬೋಳೈಸಿದುದು ಸುರ ನರರ ಕಣ್ಮನವ ॥101॥

೧೦೨ ಸುರಮುನೀಶರ ವೇದ ...{Loading}...

ಸುರಮುನೀಶರ ವೇದ ಮಂತ್ರೋ
ಚ್ಚರಣ ನಾದದ ಗರುಡ ಗಂಧ
ರ್ವರ ಮಹಾಸ್ತುತಿರವದ ತುಂಬುರ ನಾರದಾದಿಗಳ
ವರ ರಸಾನ್ವಿತ ಗೀತದೂರ್ವಶಿ
ಯರ ಸುನೃತ್ಯದ ದಿವ್ಯವಾದ್ಯದ
ಹರನ ಕರುಣಾಂಬುಧಿಯಲೋಲಾಡಿದನು ಕಲಿಪಾರ್ಥ ॥102॥

೧೦೩ ಧರೆಗೆಸೆವ ಧರ್ಮಾರ್ಥ ...{Loading}...

ಧರೆಗೆಸೆವ ಧರ್ಮಾರ್ಥ ಕಾಮೋ
ತ್ಕರವನನುಪಮ ಮೋಕ್ಷಪದವನು
ಧುರದೊಳಹಿತರ ಗೆಲುವ ಶೌರ್ಯೋನ್ನತಿಯ ಸಾಹಸವ
ಕರುಣಿಸಿದನಪ್ಪಿದನು ಕರೆದನು
ಗಿರಿತನುಜೆ ನೀನುದ್ಧರಿಪುದೀ
ಪರಮ ಭಕ್ತನನೆನಲು ಕರುಣದೊಳೀಕ್ಷಿಸಿದಳಗಜೆ ॥103॥

೧೦೪ ಗಿರಿಜೆ ತ್ರಿಜಗನ್ಮಾತೆ ...{Loading}...

ಗಿರಿಜೆ ತ್ರಿಜಗನ್ಮಾತೆ ರಕ್ಷಿಸು
ಪರಮ ಕರುಣಾಮೂರ್ತಿ ಜಗದೊಳು
ಸಿರಿ ಸರಸ್ವತಿ ಚಂಡಿ ದುರ್ಗಿಯರೆಂಬ ನಾಮದಲಿ
ಚರಿಸುತಿಹ ನಿನ್ನೇಕ ಮೂರ್ತಿಯ
ಪರಿಯನರಿವವರಾರೆನುತ ತ
ಚ್ಚರಣ ಯುಗಳಕ್ಕೆರಗಿ ಪುಳಕಿತನಾದನಾ ಪಾರ್ಥ ॥104॥

೧೦೫ ಕಞ್ಜನಾಭನ ಮೈದುನನೆ ...{Loading}...

ಕಂಜನಾಭನ ಮೈದುನನೆ ಬಾ
ರಂಜದಿರು ನಿನಗಾಂತ ರಿಪುಗಳ
ಭಂಜಿಸುವ ಸಾಮಥ್ರ್ಯದನುವನು ತಳೆದು ರಂಜಿಸುವ
ಅಂಜನಾಸ್ತ್ರವನಿತ್ತೆ ಮಗನೆ ಧ
ನಂಜಯನೆ ನಿನಗೆನುತ ಕರುಣದಿ
ಮಂಜುಳಾರವದಿಂದ ತಚ್ಛಸ್ತ್ರವನು ಬೆಸಸಿದಳು ॥105॥

೧೦೬ ಒನ್ದು ದಶ ...{Loading}...

ಒಂದು ದಶ ಶತ ಸಾವಿರದ ಹೆಸ
ರಿಂದ ಲಕ್ಷವು ಕೋಟಿಯಗಣಿತ
ದಿಂದ ನಿನಗಾಂತದಟ ರಿಪುಗಳ ತಿಂದು ತೇಗುವುದು
ಬಂದು ಬೆಸನನು ಬೇಡುವುದು ತಾ
ನೊಂದು ಶರ ರೂಪಾಗೆನುತ ಮುದ
ದಿಂದ ವರ ಮಂತ್ರೋಪದೇಶವನಿತ್ತಳರ್ಜುನಗೆ ॥106॥

೧೦೭ ಕರಿಮುಖನ ಷಣ್ಮುಖನ ...{Loading}...

ಕರಿಮುಖನ ಷಣ್ಮುಖನ ಚರಣ
ಕ್ಕೆರಗಿ ನುತಿಸುತ್ತಿರಲು ಪಾರ್ಥನ
ಪರಮಭಕ್ತಿಗೆ ಮೆಚ್ಚಿ ತೆಗೆದಪ್ಪಿನು ಕರುಣದಲಿ
ವರ ಮಹಾಸ್ತ್ರಂಗಳನು ಮಂತ್ರೋ
ತ್ಕರವನವರೊಲಿದಿತ್ತು ಗೆಲು ನೀ
ಧುರದೊಳಹಿತರನೆಂದು ಪರಸಿದರಾ ಧನಂಜಯನ ॥107॥

೧೦೮ ಸರಳ ಸಾಙ್ಗೋಪಾಙ್ಗವನು ...{Loading}...

ಸರಳ ಸಾಂಗೋಪಾಂಗವನು ನಿನ
ಗರುಹಿದೆನು ನೀನಿನ್ನು ಶಕ್ರನ
ಪುರಕೆ ನಡೆ ನಿನ್ನುತ್ತರೋತ್ತರ ಕಾರ್ಯಗತಿಗಳಿಗೆ
ಹರಿ ಸಹಾಯನು ನಮ್ಮ ಸತ್ವದ
ಪರಮರೂಪಾತನು ಕಣಾ ನೀ
ನರಿದಿರೆಂದು ಮಹೇಶ ಬೀಳ್ಕೊಟ್ಟನು ಧನಂಜಯನ ॥108॥

೧೦೯ ನಿಮ್ಮ ಕಥೆ ...{Loading}...

ನಿಮ್ಮ ಕಥೆ ವೇದೋಕ್ತವಾಗಲಿ
ನಿಮ್ಮ ಚರಿತ ಸುಚರಿತವಾಗಲಿ
ನಿಮ್ಮ ಕಥನಾಮೃತವನಾಲಿಸಿ ಕೇಳ್ದರಘ ಕೆಡಲಿ
ನಿಮ್ಮ ನಿಂದಿಸುವವರುಗಳು ದು
ಷ್ಕರ್ಮಿಗಳು ಪಾತಕರು ತಾನಿದು
ನಮ್ಮ ಮತವೆಂದಭವ ಹರಸಿದನಾ ಧನಂಜಯನ ॥109॥

೧೧೦ ದೇವಿಯರು ಗುಹ ...{Loading}...

ದೇವಿಯರು ಗುಹ ಗಣಪ ಮುಖ್ಯ ಗ
ಣಾವಳಿಗೆ ಪೊಡಮಟ್ಟನವರ ಕೃ
ಪಾವಲೋಕನದಿಂದ ಹೊಂಪುಳಿ ಹೋದನಡಿಗಡಿಗೆ
ದೇವ ಬಿಜಯಂಗೈದ ರಜತ
ಗ್ರಾವಶಿಖರಕೆ ಮನದೊಳಗೆ ಸಂ
ಭಾವಿಸಿದನೀ ವೀರನಾರಾಯಣನ ಮೈದುನನ ॥110॥

+೦೬ ...{Loading}...