೦೦೦ ಸೂ ಮುನಿನಿಕರ ...{Loading}...
ಸೂ. ಮುನಿನಿಕರ ಬಿನ್ನವಿಸೆ ಕರುಣಾ
ವನಧಿ ಶಂಭು ಕಿರಾತಮಯ ರೂ
ಪಿನಲಿ ಹೊಕ್ಕನು ವನದಲೆಚ್ಚನು ಮೂಕದಾನವನ
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
ಸೂಚನೆ : ಮುನಿಗಡಣದ ಪ್ರಾರ್ಥನೆಯಂತೆ ದಯಾನಿಧಿಯಾದ ಶಂಕರನು ಕಿರಾತ ರೂಪಿನಿಂದ ವನಕ್ಕೆ ಬಂದು ಮೂಕಾಸುರನನ್ನು ಹೊಡೆದನು.
ಪದಾರ್ಥ (ಕ.ಗ.ಪ)
ಎಚ್ಚನು - ಹೊಡೆದನು
ಮೂಲ ...{Loading}...
ಸೂ. ಮುನಿನಿಕರ ಬಿನ್ನವಿಸೆ ಕರುಣಾ
ವನಧಿ ಶಂಭು ಕಿರಾತಮಯ ರೂ
ಪಿನಲಿ ಹೊಕ್ಕನು ವನದಲೆಚ್ಚನು ಮೂಕದಾನವನ
೦೦೧ ಮರಳಿದನು ದೇವೇನ್ದ್ರನತ್ತಲು ...{Loading}...
ಮರಳಿದನು ದೇವೇಂದ್ರನತ್ತಲು
ಹರನೊಡನೆ ಹೊರೆಯೇರಿದಂತಃ
ಕರಣ ಹಿಗ್ಗಿತು ಹುದುಗಿದನು ಬಹಿರಂಗ ಭಾವನೆಯ
ಧರಣಿ ಮೊದಲೆನೆ ಭೂತ ಪಂಚಕ
ಮರುತ ಪಂಚಕ ವಿಷಯವಿಂದ್ರಿಯ
ಕರಣವಿಪ್ಪತ್ತೈದು ತತ್ವಾತ್ಮಕನ ಚಿಂತಿಸಿದ ॥1॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ದೇವೇಂದ್ರನು ಹಿಂದಿರುಗಿದ ಮೇಲೆ ಅರ್ಜುನನಿಗೆ ಪರಶಿವನ ಕುರಿತಾಗಿ ರೋಮಾಂಚನವಾಗಿ ಅವನ ಅಂತರಂಗದಲ್ಲಿ ಭಕ್ತಿ ಹೆಚ್ಚಾಯಿತು. ಹೊರಗಿನ ಭಾವನೆಗಳನ್ನು ನಿಗ್ರಹಿಸಿದನು. ಪಂಚಭೂತಗಳು, ಪಂಚತನ್ಮಾತ್ರೆಗಳು, ಪಂಚಪ್ರಾಣಗಳು, ಪಂಚಕರ್ಮೇಂದ್ರಿಯಗಳು, ಪಂಚಜ್ಞಾನೇಂದ್ರಿಯಗಳು ಈ ಇಪ್ಪತ್ತೈದು ತತ್ವಗಳಲ್ಲಿರುವ ಪರಮೇಶ್ವರನನ್ನು ಅವನು ಧ್ಯಾನಿಸಿದನು.
ಪದಾರ್ಥ (ಕ.ಗ.ಪ)
ಹೊರೆಯೇರು -ಪುಳಕಗೊಳ್ಳು
ಹುದುಗು - ಅದುಮು, ನಿಗ್ರಹಿಸು
ಟಿಪ್ಪನೀ (ಕ.ಗ.ಪ)
ಇಪ್ಪತ್ತೈದು ತತ್ತ್ವಗಳು -
ಪಂಚಭೂತಗಳು,
ಪಂಚತನ್ಮಾತ್ರೆಗಳು,
ಪಂಚಪ್ರಾಣಗಳು,
ಪಂಚಕರ್ಮೇಂದ್ರಿಯಗಳು,
ಪಂಚಜ್ಞಾನೇಂದ್ರಿಯಗಳು
ಮೂಲ ...{Loading}...
ಮರಳಿದನು ದೇವೇಂದ್ರನತ್ತಲು
ಹರನೊಡನೆ ಹೊರೆಯೇರಿದಂತಃ
ಕರಣ ಹಿಗ್ಗಿತು ಹುದುಗಿದನು ಬಹಿರಂಗ ಭಾವನೆಯ
ಧರಣಿ ಮೊದಲೆನೆ ಭೂತ ಪಂಚಕ
ಮರುತ ಪಂಚಕ ವಿಷಯವಿಂದ್ರಿಯ
ಕರಣವಿಪ್ಪತ್ತೈದು ತತ್ವಾತ್ಮಕನ ಚಿಂತಿಸಿದ ॥1॥
೦೦೨ ಮೇಲೆ ವಿದ್ಯಾರಾಗ ...{Loading}...
ಮೇಲೆ ವಿದ್ಯಾರಾಗ ನೀತಿಯ
ಕಾಲಕಲಯಾತ್ಮಕನ ಮಾಯೆಯ
ಮೇಲುಪೋಗಿನ ಶುದ್ಧವಿದ್ಯಾರೂಪನೀಶ್ವರನ
ಕೇಳು ನೃಪತಿ ಸದಾಶಿವನನು
ತ್ತಾಳ ಶಕ್ತಿಯನಖಿಲ ತತ್ವದ
ಮೌಳಿಮಣಿಯನಖಂಡ ಚಿನುಮಯ ಶಿವನ ಚಿಂತಿಸಿದ ॥2॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ವಿದ್ಯೆ, ಪ್ರೀತಿ, ನೀತಿ, ಕಾಲ ಮುಂತಾದ ಕಲೆಗಳನ್ನು ಮತ್ತು ಮಾಯೆಯನ್ನು ನಾಶ ಮಾಡುವ ಶುದ್ಧ ವಿದ್ಯಾರೂಪನಾದ ಸದಾಶಿವನನ್ನು, ದುರ್ಜಯವಾದ ಶಕ್ತಿ ರೂಪನನ್ನು ಎಲ್ಲ ತತ್ತ್ತ್ವಗಳ ಶಿರೋಮಣಿಯಾದ ಅಖಂಡ ಚಿನ್ಮಯನನ್ನು ಅರ್ಜುನನು ಧ್ಯಾನಿಸಿದನು.
ಪದಾರ್ಥ (ಕ.ಗ.ಪ)
ಕಾಲಕ - ಕಲೆ, ಕರೆ, ಕಪ್ಪುಚುಕ್ಕೆ
ಮೆಲುಪೋಗು - ನಾಶ
ಉತ್ತಾಳ - ದುರ್ಜಯ, ಗೆಲ್ಲು ಸಾಧ್ಯವಿಲ್ಲದ
ಮೂಲ ...{Loading}...
ಮೇಲೆ ವಿದ್ಯಾರಾಗ ನೀತಿಯ
ಕಾಲಕಲಯಾತ್ಮಕನ ಮಾಯೆಯ
ಮೇಲುಪೋಗಿನ ಶುದ್ಧವಿದ್ಯಾರೂಪನೀಶ್ವರನ
ಕೇಳು ನೃಪತಿ ಸದಾಶಿವನನು
ತ್ತಾಳ ಶಕ್ತಿಯನಖಿಲ ತತ್ವದ
ಮೌಳಿಮಣಿಯನಖಂಡ ಚಿನುಮಯ ಶಿವನ ಚಿಂತಿಸಿದ ॥2॥
೦೦೩ ಮೂರು ದಿನಕೊಮ್ಮೊಮ್ಮೆ ...{Loading}...
ಮೂರು ದಿನಕೊಮ್ಮೊಮ್ಮೆ ಫಲದಾ
ಹಾರದಲಿ ನೂಕಿದನು ತಿಂಗಳ
ನಾರು ದಿವಸಕೆ ಫಲವಗೊಂಡನು ತಿಂಗಳೆರಡರಲಿ
ಮೂರು ತಿಂಗಳ ಕಳೆದನಿಂತೀ
ರಾರು ದಿವಸಕೆ ಕಂದ ಮೂಲಾ
ಹಾರದಲಿ ತರಗೆಲೆಯಲಿರ್ದನು ನಾಲ್ಕು ಮಾಸದಲಿ ॥3॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಒಂದು ತಿಂಗಳ ಕಾಲ, ಮೂರು ದಿನಗಳಿಗೊಮ್ಮೆ ಫಲಾಹಾರ ಸೇವಿಸಿದನು. ಮುಂದಿನ ಎರಡು ತಿಂಗಳುಗಳ ಕಾಲ ಆರು ದಿನಗಳಿಗೊಮ್ಮೆ ಫಲವನ್ನು ಸೇವಿಸಿದನು. ನಂತರದ ಮೂರು ತಿಂಗಳುಗಳ ಕಾಲ ಹನ್ನೆರಡು ದಿನಕ್ಕೊಮ್ಮೆ ಕಂದಮೂಲಗಳನ್ನು ಸೇವಿಸಿದನು. ಆ ನಂತರದ ನಾಲ್ಕು ತಿಂಗಳುಗಳ ಕಾಲ ತರಗೆಲೆಯನ್ನು ಮಾತ್ರ ಸೇವಿಸಿದನು.
ಮೂಲ ...{Loading}...
ಮೂರು ದಿನಕೊಮ್ಮೊಮ್ಮೆ ಫಲದಾ
ಹಾರದಲಿ ನೂಕಿದನು ತಿಂಗಳ
ನಾರು ದಿವಸಕೆ ಫಲವಗೊಂಡನು ತಿಂಗಳೆರಡರಲಿ
ಮೂರು ತಿಂಗಳ ಕಳೆದನಿಂತೀ
ರಾರು ದಿವಸಕೆ ಕಂದ ಮೂಲಾ
ಹಾರದಲಿ ತರಗೆಲೆಯಲಿರ್ದನು ನಾಲ್ಕು ಮಾಸದಲಿ ॥3॥
೦೦೪ ಬಳಿಕ ಪವನಾಹಾರದಲಿ ...{Loading}...
ಬಳಿಕ ಪವನಾಹಾರದಲಿ ನಿ
ಸ್ಖಲಿತ ಶಿವಪದ ಭಕ್ತಿ ಸುಧೆಯಲಿ
ತಳಿತ ರೋಮಾಂಚನದ ಕಂದದ ಕುಂದದವಯವದ
ಥಳಥಳಿಸುವಾನನದೆ ಸತ್ಯೋ
ಜ್ಜ್ವಲಿತ ಚಿತ್ತದ ಸುಪ್ರಭಾವದ
ಬಳವಿಗೆಯಲುತ್ಕೋಚವಾಯಿತು ತಪ ಧನಂಜಯನ ॥4॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಆಮೇಲೆ ವಾಯುಸೇವನೆ ಮಾತ್ರದಿಂದ ಶಿವಪದವನ್ನು ಭಜಿಸುತ್ತಾ, ರೋಮಾಂಚನದ ಸುಖವನ್ನು ಅನುಭವಿಸಿದನು. ಆದರೂ ಅವನು ಕಂದಲಿಲ್ಲ, ಕುಂದಲಿಲ್ಲ. ಮುಖದಲ್ಲಿ ತೇಜಸ್ಸು ಹೆಚ್ಚಿತು. ಅರ್ಜುನನ ತಪಸ್ಸು ಉಜ್ವಲವಾಗಿ ವ್ಯಾಪಿಸಿತು.
ಪದಾರ್ಥ (ಕ.ಗ.ಪ)
ಬಳವಿಗೆ-ಬೆಳವಣಿಗೆ
ಮೂಲ ...{Loading}...
ಬಳಿಕ ಪವನಾಹಾರದಲಿ ನಿ
ಸ್ಖಲಿತ ಶಿವಪದ ಭಕ್ತಿ ಸುಧೆಯಲಿ
ತಳಿತ ರೋಮಾಂಚನದ ಕಂದದ ಕುಂದದವಯವದ
ಥಳಥಳಿಸುವಾನನದೆ ಸತ್ಯೋ
ಜ್ಜ್ವಲಿತ ಚಿತ್ತದ ಸುಪ್ರಭಾವದ
ಬಳವಿಗೆಯಲುತ್ಕೋಚವಾಯಿತು ತಪ ಧನಂಜಯನ ॥4॥
೦೦೫ ಯಮದಲುತ್ಸಾಹಿಸಿದ ನಿಯಮ ...{Loading}...
ಯಮದಲುತ್ಸಾಹಿಸಿದ ನಿಯಮ
ಶ್ರಮವ ಗೆಲಿದನು ಶಂಭುವಿನ ಪದ
ಕಮಲ ಬಯಸಿಕೆಯಾದುದೆತ್ತಿದ ಜೀವ ಪರಮನಲಿ
ಭ್ರಮಿಸುವಿಂದ್ರಿಯ ಗಣವನುಗಿದಾ
ಕ್ರಮಿಸಿ ಶಂಕರಭಾವದಲಿ ಸಂ
ಕ್ರಮಿಸಿ ಧರಿಸಿ ಸಮಾಧಿಯನು ತಳೆದಾತ್ಮಪರನಾದ ॥5॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಯಮ, ನಿಯಮಾದಿಗಳ ಅನುಷ್ಠಾನಗಳಿಂದ ಶಿವನ ಪದಕಮಲದಲ್ಲಿ ಲೀನವಾಗಿರುವ, ಚಂಚಲವಾದ ಇಂದ್ರಿಯಗಳನ್ನು ಮರೆತು ಶಂಕರನನ್ನೇ ಕುರಿತ ಧ್ಯಾನದಲ್ಲಿ ಮನಸ್ಸನ್ನು ಕೇಂದ್ರೀಕರಿಸಿ, ಸಮಾಧಿಸ್ಥಿತಿಯನ್ನು ತಳೆದು ಆತ್ಮ ಚಿಂತನೆಯಲ್ಲಿ ಮುಳುಗಿದನು.
ಪದಾರ್ಥ (ಕ.ಗ.ಪ)
ಬಯಸಿಕೆ - ಬೆಸೆದೊಕೊಂಡಿರುವ
ಶಂಕರಭಾವ - ಶಂಕರನನ್ನೇ ಕುರಿತ ಧ್ಯಾನ
ಮೂಲ ...{Loading}...
ಯಮದಲುತ್ಸಾಹಿಸಿದ ನಿಯಮ
ಶ್ರಮವ ಗೆಲಿದನು ಶಂಭುವಿನ ಪದ
ಕಮಲ ಬಯಸಿಕೆಯಾದುದೆತ್ತಿದ ಜೀವ ಪರಮನಲಿ
ಭ್ರಮಿಸುವಿಂದ್ರಿಯ ಗಣವನುಗಿದಾ
ಕ್ರಮಿಸಿ ಶಂಕರಭಾವದಲಿ ಸಂ
ಕ್ರಮಿಸಿ ಧರಿಸಿ ಸಮಾಧಿಯನು ತಳೆದಾತ್ಮಪರನಾದ ॥5॥
೦೦೬ ವಿಮಳಮತಿ ಕೇಳಿನ್ದ್ರಿಯಾರ್ಥ ...{Loading}...
ವಿಮಳಮತಿ ಕೇಳಿಂದ್ರಿಯಾರ್ಥ
ಭ್ರಮೆಯ ಜಾಗ್ರದವಸ್ಥೆಯಂತಃ
ಸ್ತಿಮಿರ ಕರಣ ಭ್ರಮೆಯಲುದಿತ ಸ್ವಪ್ನವೀಧಿಯಲಿ
ಗಮಿತ ತದ್ವಾಸನೆಯ ಬೀಜ
ಕ್ರಮ ಸುಷುಪ್ತ್ಯಾವಸ್ಥೆಯಲಿ ಸಂ
ಕ್ರಮಿಸದಗ್ಗದ ತುರ್ಯ ಶಿವನನು ಪಾರ್ಥ ಚಿಂತಿಸಿದ ॥6॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಇಂದ್ರಿಯಜ್ಞಾನದ ಜಾಗ್ರತ್ ಸ್ಥಿತಿಯನ್ನು ದಾಟಿ, ಒಳಗಿನ ಕತ್ತಲೆಯಲ್ಲಿ ಭ್ರಮೆಯಂತಿರುವ ಸ್ವಪ್ನಾವಸ್ಥೆ , ಅದನ್ನು ಮೀರಿ, ಮುಂದೆ ದೊರಕುವ ಸುಷುಪ್ತಿ ಈ ಸ್ಥಿತಿಗಳನ್ನು ಮೀರಿದ ದಿವ್ಯವಾದ ಆನಂದ ರೂಪಿಯಾದ ಶಿವನನ್ನು ಅರ್ಜುನನು ಧ್ಯಾನಿಸಿದನು ಕೇಳು ವಿಳಮತಿ ಎಂದು ಜನಮೇಜಯನಿಗೆ ವೈಶಂಪಾಯನರು ಹೇಳಿದರು.
ಪಾಠಾನ್ತರ (ಕ.ಗ.ಪ)
ಸುಷುಪ್ತ್ಯಾವಸ್ಥೆಯಲಿ ಎಂಬ ಶಬ್ದವು -ಸುಷುಪ್ತ್ಯವಸ್ಥೆಯಲಿ ಎಂದಿರಬೇಕು. ಛಂದಸ್ಸಿನ ಅನುಕೂಲಕ್ಕೆ ಕವಿ ಈ ಪ್ರಯೋಗವನ್ನು ಬಳಸಿರಬೆಕು.
ಟಿಪ್ಪನೀ (ಕ.ಗ.ಪ)
ನಾಲ್ಕು ಅವಸ್ಥೆಗಳು :
ಜಾಗೃತಿ
ಸ್ವಪ್ನ
ಸುಷುಪ್ತಿ
ತುರೀಯ
ಮೂಲ ...{Loading}...
ವಿಮಳಮತಿ ಕೇಳಿಂದ್ರಿಯಾರ್ಥ
ಭ್ರಮೆಯ ಜಾಗ್ರದವಸ್ಥೆಯಂತಃ
ಸ್ತಿಮಿರ ಕರಣ ಭ್ರಮೆಯಲುದಿತ ಸ್ವಪ್ನವೀಧಿಯಲಿ
ಗಮಿತ ತದ್ವಾಸನೆಯ ಬೀಜ
ಕ್ರಮ ಸುಷುಪ್ತ್ಯಾವಸ್ಥೆಯಲಿ ಸಂ
ಕ್ರಮಿಸದಗ್ಗದ ತುರ್ಯ ಶಿವನನು ಪಾರ್ಥ ಚಿಂತಿಸಿದ ॥6॥
೦೦೭ ತಾನೆ ಶಿವನೋ ...{Loading}...
ತಾನೆ ಶಿವನೋ ಮೇಣು ಶಿವನ
ಧ್ಯಾನ ತನಗದ್ವೈತದನುಸಂ
ಧಾನವಿದು ಜವನಿಕೆಯೊಜೀವಾತುಮನ ಜಂಜಡಕೆ
ಧ್ಯಾನವೋ ಮೇಣ್ ಧ್ಯೇಯವೋ ತ
ದ್ಧ್ಯಾನ ಕರ್ತುವೊ ತ್ರಿಪುಟಿರಹಿತನೊ
ತಾನು ಮೇಣೆನಲಾಯ್ತು ಚಿತ್ತದ ಶುದ್ಧಿಯರ್ಜುನನ ॥7॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ತಾನೇ ಶಿವನಾಗಿದ್ದೇನೆಯೇ ? ಅಥವಾ ಶಿವಧ್ಯಾನವು ತನಗೆ ಅದ್ವೈತ ಸ್ಥಿತಿಯನ್ನು ತಲುಪಲು ಸಾಧನವಾಗಿದೆಯೋ ಅಥವಾ ತನ್ನ ಈಸ್ಥಿತಿ ಜೀವಾತ್ಮ ಮತ್ತು ಪರಮಾತ್ಮನ ನಡುವಣ ಪರದೆಯಾಗಿದೆಯೋ? ತಾನು ಮಾಡುತ್ತಿರುವುದು ಧ್ಯಾನವೋ ಅಥವಾ ಕೇವಲ ಧ್ಯೇಯವೋ ತಾನು ಧ್ಯಾನ ಮಾಡುತ್ತಿರುವವನೋ ಅಥವಾ ಜ್ಞಾತೃ, ಜ್ಞಾನ ಜ್ಞೇಯಗಳನ್ನು ಮೀರಿದವನೋ? ಎಂಬಂತೆ ಅವನಲ್ಲಿ ಚಿತ್ತಶುದ್ಧಿ ಉಂಟಾಯಿತು.
ಪದಾರ್ಥ (ಕ.ಗ.ಪ)
ಜವನಿಕೆ - ತೆರೆ
ತ್ರಿಪುಟಿ -ಜ್ಞಾತೃ, ಜ್ಞಾನ ಜ್ಞೇಯ
ಟಿಪ್ಪನೀ (ಕ.ಗ.ಪ)
ತ್ರಿಪುಟಿ -ಜ್ಞಾತೃ, ಜ್ಞಾನ ಮತ್ತು ಜ್ಞೇಯ
ಮೂಲ ...{Loading}...
ತಾನೆ ಶಿವನೋ ಮೇಣು ಶಿವನ
ಧ್ಯಾನ ತನಗದ್ವೈತದನುಸಂ
ಧಾನವಿದು ಜವನಿಕೆಯೊಜೀವಾತುಮನ ಜಂಜಡಕೆ
ಧ್ಯಾನವೋ ಮೇಣ್ ಧ್ಯೇಯವೋ ತ
ದ್ಧ್ಯಾನ ಕರ್ತುವೊ ತ್ರಿಪುಟಿರಹಿತನೊ
ತಾನು ಮೇಣೆನಲಾಯ್ತು ಚಿತ್ತದ ಶುದ್ಧಿಯರ್ಜುನನ ॥7॥
೦೦೮ ಮುನಿಯಿದೇನೈ ಚಿತ್ರವಾಯ್ತ ...{Loading}...
ಮುನಿಯಿದೇನೈ ಚಿತ್ರವಾಯ್ತ
ರ್ಜುನನ ಚಿತ್ತದೊಳೇನು ತಾಮಸ
ಜನಿತ ಕರ್ಮವೊ ಶುದ್ಧ ತತ್ವಜ್ಞಾನ ಜಲಧಿಯಲಿ
ಮನ ಮುಳುಗಿ ಮಗುಳೆದ್ದು ಶಿತಿ ಕಂ
ಠನಲಿ ಶಸ್ತ್ರಾಸ್ತ್ರವನು ಬೇಡಿದ
ನೆನಲು ಜನಮೇಜಯಗೆ ಮುನಿಯಿಂತೆಂದ ನಸುನಗುತ ॥8॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ಋಷಿವರನೇ ! ಏನಿದು ವಿಚಿತ್ರ ? ಪರಿಶುದ್ಧ ತತ್ವಜ್ಞಾನದಲ್ಲಿ ಮಿಂದೆದ್ದು ಭಗವಂತನಲ್ಲಿ ಶಸ್ತ್ರಾಸ್ತ್ರವನ್ನು ಅವನು ಬೇಡಿದನೆಂದರೆ ಅರ್ಜುನನ ಮನಸ್ಸಿನಲ್ಲಿ ತಾಮಸಭಾವ ಉಂಟಾಯಿತೇ ?’ ಎಂದು ಜನಮೇಜಯನು ಕೇಳಲು ವೈಶಂಪಾಯನನು ನಗುತ್ತಾ ಈ ರೀತಿ ಹೇಳಿದನು.
ಪದಾರ್ಥ (ಕ.ಗ.ಪ)
ಶಿತಿಕಂಠ - ಈಶ್ವರ
ಮೂಲ ...{Loading}...
ಮುನಿಯಿದೇನೈ ಚಿತ್ರವಾಯ್ತ
ರ್ಜುನನ ಚಿತ್ತದೊಳೇನು ತಾಮಸ
ಜನಿತ ಕರ್ಮವೊ ಶುದ್ಧ ತತ್ವಜ್ಞಾನ ಜಲಧಿಯಲಿ
ಮನ ಮುಳುಗಿ ಮಗುಳೆದ್ದು ಶಿತಿ ಕಂ
ಠನಲಿ ಶಸ್ತ್ರಾಸ್ತ್ರವನು ಬೇಡಿದ
ನೆನಲು ಜನಮೇಜಯಗೆ ಮುನಿಯಿಂತೆಂದ ನಸುನಗುತ ॥8॥
೦೦೯ ಅರಸ ಕೇಳೈ ...{Loading}...
ಅರಸ ಕೇಳೈ ರಾಜಸಾಂತಃ
ಕರಣವದು ಕಾಮ್ಯೈಕ ಸಿದ್ಧಿ
ಸ್ಫುರಣೆಗೋಸುಗ ತಪವಲೇ ರಾಜ್ಯಾಭಿಲಾಷೆಯಲಿ
ಹರಚರಣನಿಕ್ಷಿಪ್ತ ಚೇತಃ
ಸ್ಫುರಣೆ ತತ್ಪರಿಯಂತ ಉಕ್ಕಿತು
ಪರಮವಸ್ತು ನಿಜಸ್ವಭಾವಕೆ ಚಿತ್ರವೇನೆಂದ ॥9॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ಅರಸನೇ ಕೇಳು. ಅದು ಅವನ ರಾಜಸ ಭಾವ. ರಾಜ್ಯಾಭಿಲಾಷೆಯಿಂದಲೇ ಅವನು ತಪಸ್ಸನ್ನು ಕೈಗೊಂಡಿದ್ದು ತಾನೇ ? ಭಗವಂತನ ಪ್ರೇರಣೆಯಂತೆ ಆ ಭಾವ ಉಕ್ಕಿತು ಅಷ್ಟೆ. ಅದೂ ಕೂಡಾ ಭಗವಂತನ ನಿಜಸ್ವಭಾವವೇ. ವಿಚಿತ್ರವೇನಿಲ್ಲ’ ಎಂದನು.
ಪದಾರ್ಥ (ಕ.ಗ.ಪ)
ಹರಚರಣನಿಕ್ಷಿಪ್ತ - ಈಶ್ವರನ ಪಾದದಲ್ಲಿ ಇಟ್ಟಿರುವ
ಕಾಮ್ಯೈಕ ಸಿದ್ಧಿ - ಇಷ್ಟಾರ್ಥ ಸಿದ್ಧಿ
ಮೂಲ ...{Loading}...
ಅರಸ ಕೇಳೈ ರಾಜಸಾಂತಃ
ಕರಣವದು ಕಾಮ್ಯೈಕ ಸಿದ್ಧಿ
ಸ್ಫುರಣೆಗೋಸುಗ ತಪವಲೇ ರಾಜ್ಯಾಭಿಲಾಷೆಯಲಿ
ಹರಚರಣನಿಕ್ಷಿಪ್ತ ಚೇತಃ
ಸ್ಫುರಣೆ ತತ್ಪರಿಯಂತ ಉಕ್ಕಿತು
ಪರಮವಸ್ತು ನಿಜಸ್ವಭಾವಕೆ ಚಿತ್ರವೇನೆಂದ ॥9॥
೦೧೦ ಮೇಲೆ ಮೇಲೀತನ ...{Loading}...
ಮೇಲೆ ಮೇಲೀತನ ತಪೋಗ್ನಿ
ಜ್ವಾಲೆ ಜಡಿದುದು ತಡೆದುದಭ್ರ
ಸ್ಥಾಳಿಯಲಿ ಸೈವರಿವ ಸೂರ್ಯಾಚಂದ್ರಮ ಪ್ರಭೆಯ
ಢಾಳಿಸುವ ಪರಿಧೌತ ಮೌನ ಕ
ರಾಳ ತೇಜೋಗರ್ಭ ತಪಧೂ
ಮಾಳಿಯಲಿ ಮೇಘಾಳಿ ಮಸಗಿದುದರಸ ಕೇಳ್ ಎಂದ ॥10॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅರ್ಜುನನ ತಪೋಜ್ವಾಲೆ ಮೇಲೆ ಮೇಲೇರಿ ಆಕಾಶವನ್ನು ವ್ಯಾಪಿಸಿ ಸೂರ್ಯಚಂದ್ರರ ಪ್ರಭೆಯನ್ನು ಆವರಿಸಿತು. ಆ ತೇಜಸ್ಸಿನ ಜ್ವಾಲೆಯಿಂದ ಮೋಡಗಳು ಮಸುಕುಗೊಂಡವು.
ಪದಾರ್ಥ (ಕ.ಗ.ಪ)
ಢಾಳಿಸುವ - ಪ್ರಕಾಶಿಸುತ್ತಿರುವ
ಪರಿಧೌತ - ಶುಭ್ರವಾದ
ಮೂಲ ...{Loading}...
ಮೇಲೆ ಮೇಲೀತನ ತಪೋಗ್ನಿ
ಜ್ವಾಲೆ ಜಡಿದುದು ತಡೆದುದಭ್ರ
ಸ್ಥಾಳಿಯಲಿ ಸೈವರಿವ ಸೂರ್ಯಾಚಂದ್ರಮ ಪ್ರಭೆಯ
ಢಾಳಿಸುವ ಪರಿಧೌತ ಮೌನ ಕ
ರಾಳ ತೇಜೋಗರ್ಭ ತಪಧೂ
ಮಾಳಿಯಲಿ ಮೇಘಾಳಿ ಮಸಗಿದುದರಸ ಕೇಳೆಂದ ॥10॥
೦೧೧ ಆತನುಗ್ರತಪಃ ಪ್ರಭಾ ...{Loading}...
ಆತನುಗ್ರತಪಃ ಪ್ರಭಾ ವಿ
ಖ್ಯಾತಿ ವಿಗಡಿಸಿತಖಿಳ ಲೋಕ
ವ್ರಾತವನು ಸೋತವನು ಕೌರವನೋ ಯುಧಿಷ್ಠಿರನೊ
ಈತನೀಶ್ವರಶಸ್ತ್ರವನು ಕೈ
ಯಾತುಕೊಂಡರೆ ಬಳಿಕ ರಿಪು ನೃಪ
ಜಾತವಿದಿರೇ ಕೇಳು ಜನಮೇಜಯ ಮಹೀಪಾಲ ॥11॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅವನ ಉಗ್ರವಾದ ತಪಸ್ಸಿನ ಜ್ವಾಲೆ ಅಖಿಳ ಲೋಕಗಳನ್ನು ತೊಂದರೆಗೀಡುಮಾಡಿತು. ಈಗ ಕೌರವನು ಸೋತನೇ ? ಅಥವಾ ಧರ್ಮರಾಯ ಸೋತನೇ ? ಇವನಿಗೇನಾದರೂ ಪರಶಿವನಿಂದ ಶಸ್ತ್ರ ಪ್ರಾಪ್ತಿಯಾದರೆ, ವೈರಿಗಳು ಇವನಿಗೆ ಎದುರು ನಿಲ್ಲಬಲ್ಲರೇ ? ಎಂದು ವೈಶಂಪಾಯನನು ಜನಮೇಜಯ ರಾಜನಿಗೆ ಹೇಳಿದನು.
ಪದಾರ್ಥ (ಕ.ಗ.ಪ)
ವಿಗಡಿಸು - ತೊಂದರೆಗೀಡುಮಾಡು
ಮೂಲ ...{Loading}...
ಆತನುಗ್ರತಪಃ ಪ್ರಭಾ ವಿ
ಖ್ಯಾತಿ ವಿಗಡಿಸಿತಖಿಳ ಲೋಕ
ವ್ರಾತವನು ಸೋತವನು ಕೌರವನೋ ಯುಧಿಷ್ಠಿರನೊ
ಈತನೀಶ್ವರಶಸ್ತ್ರವನು ಕೈ
ಯಾತುಕೊಂಡರೆ ಬಳಿಕ ರಿಪು ನೃಪ
ಜಾತವಿದಿರೇ ಕೇಳು ಜನಮೇಜಯ ಮಹೀಪಾಲ ॥11॥
೦೧೨ ಏನನೆಮ್ಬೆನು ಪಾರ್ಥನುಗ್ರ ...{Loading}...
ಏನನೆಂಬೆನು ಪಾರ್ಥನುಗ್ರ ತ
ಪೋ ನಿದಾಘ ಜ್ವಾಲೆಯನು ಸಂ
ಧಾನವನು ತತ್ಪರಿಸರದ ಪಾವನ ತಪೋಧನರ
ಮೌನವುರೆ ಸೀದುದು ಜಪಾನು
ಷ್ಠಾನ ಬಿಡೆ ಬೆವರಿತು ಸಮಾಧಿ
ಧ್ಯಾನ ಸೀಕರಿಯಾಯ್ತು ಸಾರವಿಚಾರ ಶಮಸಹಿತ ॥12॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅರ್ಜುನನ ಉಗ್ರವಾದ ತಪಸ್ಸಿನ ಕಾವಿನ ಜ್ವಾಲೆಯನ್ನು ಏನೆಂದು ಹೇಳಲಿ ? ಆ ಪರಿಸರದ ಪುಣ್ಯ ತಪಸ್ವಿಗಳೆಲ್ಲರ ಮೌನವು ಭಂಗಗೊಂಡಿತು. ಅವರ ಜಪಾನುಷ್ಠಾನವು ಕೈತಪ್ಪಿ ಸಮಾಧಿಸ್ಥಿತಿಯು ಭಂಗವಾಯಿತು. ಅವರ ಏಕಾಗ್ರತೆಯ ಧ್ಯಾನಕ್ಕೆ ಚ್ಯುತಿ ಬಂದಿತು.
ಪದಾರ್ಥ (ಕ.ಗ.ಪ)
ನಿದಾಘ - ಕಾವು, ಬೇಗೆ
ಸೀಕರಿಯಾಗು - ಸುಟ್ಟುಹೋಗು, ಕರಕಲಾಗು
ಮೂಲ ...{Loading}...
ಏನನೆಂಬೆನು ಪಾರ್ಥನುಗ್ರ ತ
ಪೋ ನಿದಾಘ ಜ್ವಾಲೆಯನು ಸಂ
ಧಾನವನು ತತ್ಪರಿಸರದ ಪಾವನ ತಪೋಧನರ
ಮೌನವುರೆ ಸೀದುದು ಜಪಾನು
ಷ್ಠಾನ ಬಿಡೆ ಬೆವರಿತು ಸಮಾಧಿ
ಧ್ಯಾನ ಸೀಕರಿಯಾಯ್ತು ಸಾರವಿಚಾರ ಶಮಸಹಿತ ॥12॥
೦೧೩ ಶ್ರುತಿಯ ಲುಳಿ ...{Loading}...
ಶ್ರುತಿಯ ಲುಳಿ ತಗ್ಗಿತು ವಿವೇಕ
ಸ್ಥಿತಿಗೆ ಪಲ್ಲಟವಾಯ್ತು ಮತ್ಸರ
ಮತಿಯ ಮೈಲಿಗೆ ಬಿದ್ದುದಾತ್ಮಜ್ಞಾನದೃಷ್ಟಿಯಲಿ
ಧೃತಿಯ ಹೊರಬಾಹೆಯಲಾಸೂಯಾ
ಸತಿಯ ತೋಹಿನ ಮನೆಯಲಿದ್ದರು
ಯತಿಗಳೀತನ ತಪದ ತೇಜದ ಹೊದರ ಹೊಯ್ಲಿನಲಿ ॥ 13 ॥*
ಕೋಪಪಂಟಿಸಿತಾಧಿ ಭೌತಿಕ
ತಾಪ ತಳಿತುದು ಹೃದಯದೀಶ್ವರ
ರೂಪವನು ಮುಚ್ಚಿದುದು ಮಾಯಾಮೋಹಮುದ್ರೆಯಲಿ|
ಶಾಪಭೀತರಹಂ ಮಮತ್ವ ಕೃ
ತಾಪರಾಧರು ವಿಕೃತಗುಣ ಯ
ಜ್ಞೋಪವೀತರು ಮಸಗಿದರು ಮುನಿಗಳು ತಪೋವನದ ॥13-1॥
ಕೋಪ ಪಂಟಿಸಿತಾದಿ ಭೌತಿಕ
ತಾಪ ತಳಿತುದು ಹೃದಯದೀಶ್ವರ
ರೂಪವನು ಮುಚ್ಚಿದುದು ಮಾಯಾ ಮೋಹಮುದ್ರೆಯಲಿ
ಶಾಪಭೀತರಹಂ ಮಮತ್ವ ಕೃ
ತಾಪರಾಧರು ವಿಕೃತಗುಣ ಯ
ಜ್ಞೋಪವೀತರು ಮಸಗಿದರು ಮುನಿಗಳು ತಪೋವನದ ॥13 ಅ ॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅರ್ಜುನನ ತಪಸ್ಸಿನ ಉರಿಗೆ ವೇದಘೋಷದ ಗತಿ ನಿಧಾನಗೊಂಡಿತು, ಯತಿಗಳ ವಿವೇÉಕವು ಜಾರಿ ಅವರ ಮನಸ್ಸು ಮತ್ಸರದಿಂದ ಅಪವಿತ್ರಗೊಂಡಿತು ಮತ್ತು ಯತಿಗಳ ಆತ್ಮಜ್ಞಾನದ ಚಿಂತನೆಯ ಸುತ್ತ ಅಸೂಯೆ ಆವರಿಸಿಕೊಂಡಿತು.
13-1 ಕೋಪವು ಹೆಚ್ಚಿ ಪ್ರಾಪಂಚಿಕವಾದ ತಾಪವು ದಟ್ಟವಾಯಿತು. ಹೃದಯದಲ್ಲಿದ್ದ ಶಿವನ ರೂಪವನ್ನು ಮಾಯಾಮೋಹದ ಮುದ್ರೆ ಆವರಿಸಿತು. ಶಾಪಕ್ಕೆ ಹೆದರುವವರು ಅಹಂಕಾರವನ್ನು ಹೊಂದಿದವರು, ವಿಕೃತಗುಣಗಳನ್ನೇ ಯಜ್ಞೋಪವೀತವಾಗಿ ಉಳ್ಳವರಾದ ಆ ತಪೋವನದ ಮುನಿಗಳು ಆವೇಶಭರಿತರಾದರು.
ಪದಾರ್ಥ (ಕ.ಗ.ಪ)
13 ಲುಳಿ-ಶೀಘ್ರಗಮನ
13-1
ಪಂಟಿಸು - ಹೆಚ್ಚಾಗು, ವ್ಯಾಪಿಸು
ಆಧಿಭೌತಿಕ - ಪ್ರಾಪಂಚಿಕ
ಅಹಂ ಮಮತ್ವ ಕೃತಾಪರಾಧರು - ಅಹಂಕಾರವನ್ನು ಹೊಂದಿರುವವರು.
ಟಿಪ್ಪನೀ (ಕ.ಗ.ಪ)
- 1958ರಲ್ಲಿ ಪ್ರಕಟವಾದ ಜನಪ್ರಿಯ ಆವೃತ್ತಿಯ ಕುಮಾರವ್ಯಾಸ ಭಾರತದಲ್ಲಿ ಈ ಪದ್ಯ ಮತ್ತು ಇಲ್ಲಿ ಕೊಡಲಾಗಿರುವ ಇನ್ನೊಂದು ಪದ್ಯದ ಬೇರೆ ಬೇರೆ ಸಾಲುಗಳು ಇರುವ ಒಂದು ಪದ್ಯವಿದೆ. ಅದನ್ನ ಇಲ್ಲಿ ಸರಿಪಡಿಸಿ ಸರಿಯಾದ ಪದ್ಯದ ಪಾಠಗಳನ್ನು ಒದಗಿಸಲಾಗಿದೆ.
ಮೂಲ ...{Loading}...
ಶ್ರುತಿಯ ಲುಳಿ ತಗ್ಗಿತು ವಿವೇಕ
ಸ್ಥಿತಿಗೆ ಪಲ್ಲಟವಾಯ್ತು ಮತ್ಸರ
ಮತಿಯ ಮೈಲಿಗೆ ಬಿದ್ದುದಾತ್ಮಜ್ಞಾನದೃಷ್ಟಿಯಲಿ
ಧೃತಿಯ ಹೊರಬಾಹೆಯಲಾಸೂಯಾ
ಸತಿಯ ತೋಹಿನ ಮನೆಯಲಿದ್ದರು
ಯತಿಗಳೀತನ ತಪದ ತೇಜದ ಹೊದರ ಹೊಯ್ಲಿನಲಿ ॥ 13 ॥*
ಕೋಪಪಂಟಿಸಿತಾಧಿ ಭೌತಿಕ
ತಾಪ ತಳಿತುದು ಹೃದಯದೀಶ್ವರ
ರೂಪವನು ಮುಚ್ಚಿದುದು ಮಾಯಾಮೋಹಮುದ್ರೆಯಲಿ|
ಶಾಪಭೀತರಹಂ ಮಮತ್ವ ಕೃ
ತಾಪರಾಧರು ವಿಕೃತಗುಣ ಯ
ಜ್ಞೋಪವೀತರು ಮಸಗಿದರು ಮುನಿಗಳು ತಪೋವನದ ॥13-1॥
ಕೋಪ ಪಂಟಿಸಿತಾದಿ ಭೌತಿಕ
ತಾಪ ತಳಿತುದು ಹೃದಯದೀಶ್ವರ
ರೂಪವನು ಮುಚ್ಚಿದುದು ಮಾಯಾ ಮೋಹಮುದ್ರೆಯಲಿ
ಶಾಪಭೀತರಹಂ ಮಮತ್ವ ಕೃ
ತಾಪರಾಧರು ವಿಕೃತಗುಣ ಯ
ಜ್ಞೋಪವೀತರು ಮಸಗಿದರು ಮುನಿಗಳು ತಪೋವನದ ॥13 ಅ ॥
೦೧೪ ಹಳಿವ ಹಾವಸೆ ...{Loading}...
ಹಳಿವ ಹಾವಸೆ ಮನದೊಳಿದ್ದರು
ಕೆಲರು ಕೆಲರೆಡೆಯಾಡುತಿರ್ದರು
ತಿಳಿವು ಮರವೆಗಳಲ್ಲಿ ಕೆಲರುಪಶಾಂತಿ ಭಾವದಲಿ
ಕೆಲರಿದೇನಿವಗಿಲ್ಲಿ ತೊಲಗಿಸಿ
ಕಳೆವುದೀತನನೆಂದು ತಮ್ಮೊಳು
ಕಳವಳಿಸುತೊಮ್ಮೊತ್ತವಾದುದು ಸಕಲ ಮುನಿನಿಕರ ॥14॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕೆಲವರು ಮನಸ್ಸಿನಲ್ಲಿ ಕಲ್ಮಷವನ್ನು ಹೊಂದಿದ್ದರು. ಕೆಲವರು ಸ್ಮೃತಿ-ವಿಸ್ಮೃತಿ-ಉಪಶಾಂತಿ ಭಾವಗಳಲ್ಲಿ ವಿಹರಿಸುತ್ತಿದ್ದರು. ಇವನಿಗೆ ಇಲ್ಲೇನು ಕೆಲಸ? ಇವನನ್ನು ಇಲ್ಲಿಂದ ಓಡಿಸಬೇಕೆಂದು ಕಳವಳಿಸುತ್ತಿದ್ದರು. ಈ ಎಲ್ಲ ಋಷಿಗಳೂ ಇದಕ್ಕಾಗಿ ಒಂದೆಡೆ ಸೇರಿದರು.
ಪದಾರ್ಥ (ಕ.ಗ.ಪ)
ಹಾವಸೆ-ಪಾಚಿಸಸ್ಯ, ಕಲ್ಮಷ,
ಮೂಲ ...{Loading}...
ಹಳಿವ ಹಾವಸೆ ಮನದೊಳಿದ್ದರು
ಕೆಲರು ಕೆಲರೆಡೆಯಾಡುತಿರ್ದರು
ತಿಳಿವು ಮರವೆಗಳಲ್ಲಿ ಕೆಲರುಪಶಾಂತಿ ಭಾವದಲಿ
ಕೆಲರಿದೇನಿವಗಿಲ್ಲಿ ತೊಲಗಿಸಿ
ಕಳೆವುದೀತನನೆಂದು ತಮ್ಮೊಳು
ಕಳವಳಿಸುತೊಮ್ಮೊತ್ತವಾದುದು ಸಕಲ ಮುನಿನಿಕರ ॥14॥
೦೧೫ ಕೆದರಿದವು ಜಡೆಯಕ್ಷಮಾಲೆಗ ...{Loading}...
ಕೆದರಿದವು ಜಡೆಯಕ್ಷಮಾಲೆಗ
ಳುದುರಿದವು ಕರದಲಿ ಕಮಂಡಲ
ವದುರಿದವು ಹಳುವಾಯ್ತು ಹರಿಣಾಜಿನ ಮುನೀಶ್ವರರ
ಕದಡಿತಂಗವಿಭೂತಿ ಕಡುಗೋ
ಪದಲಿ ಹರಿದರು ಹರಗಿರಿಯ ಹ
ತ್ತಿದರು ಕಂಡರು ರಾಜಮೌಳಿಯ ರಾಜಮಂದಿರವ ॥15॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಮುನಿಗಳ ಜಡೆ ಕೆದರಿತು. ಜಪಮಾಲೆ ಕೆಳಗೆ ಬಿದ್ದಿತು. ಕಮಂಡಲ ಅಲುಗಾಡಿತು. ಉಟ್ಟ ಜಿಂಕೆಯ ಚರ್ಮ ಹಾಳಾಯ್ತು. ಮೈಗೆ ಲೇಪಿಸಿದ ಭಸ್ಮವು ಅಳಿಸಿತು. ಎಲ್ಲರೂ ಕೋಪೋದ್ರಿಕ್ತರಾಗಿ ಕೈಲಾಸ ಪರ್ವತವನ್ನು ಏರಿ, ಚಂದ್ರಶೇಖರನಾದ ಶಿವನ ಮಂದಿರವನ್ನು ಕಂಡರು.
ಪದಾರ್ಥ (ಕ.ಗ.ಪ)
ಅಕ್ಷಮಾಲೆ - ಜಪಮಾಲೆ
ರಾಜಮೌಳಿ - ಚಂದ್ರಶೇಖರ
ಮೂಲ ...{Loading}...
ಕೆದರಿದವು ಜಡೆಯಕ್ಷಮಾಲೆಗ
ಳುದುರಿದವು ಕರದಲಿ ಕಮಂಡಲ
ವದುರಿದವು ಹಳುವಾಯ್ತು ಹರಿಣಾಜಿನ ಮುನೀಶ್ವರರ
ಕದಡಿತಂಗವಿಭೂತಿ ಕಡುಗೋ
ಪದಲಿ ಹರಿದರು ಹರಗಿರಿಯ ಹ
ತ್ತಿದರು ಕಂಡರು ರಾಜಮೌಳಿಯ ರಾಜಮಂದಿರವ ॥15॥
೦೧೬ ಶಿವನ ಭವನವ ...{Loading}...
ಶಿವನ ಭವನವ ದೂರದಲಿ ಕಂ
ಡಿವರು ಮೈಯಿಕ್ಕಿದರು ವರಮುನಿ
ನಿವಹ ಬಂದುದು ಬಾಗಿಲವದಿರು ಬಿನ್ನಹದ ಹದನ
ವಿವರಿಸಲು ಕರೆಸಿದನು ಕರುಣಾ
ರ್ಣವನ ಕಂಡರು ಮೈಯ ಚಾಚಿದ
ರವನಿಯಲಿ ಜಯ ಜಯ ಮಹೇಶ ನಮಃಶಿವಾಯೆನುತ ॥16॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ದೂರದಿಂದಲೇ ಶಿವನ ಮಂದಿರವನ್ನು ಕಂಡು ಮುನಿಗಳು ನಮಿಸಿದರು. ದ್ವಾರಪಾಲಕರು ವಿಷಯವನ್ನು ತಿಳಿಸಲು, ಅವರನ್ನು ಶಿವನು ಒಳಕ್ಕೆ ಕರೆಸಿದನು. ಎಲ್ಲ ಮುನಿಗಳೂ ಕರುಣಾ ಸಮುದ್ರನಾದ ಈಶ್ವರನನ್ನು ಕಂಡು ನಮಃ ಶಿವಾಯ ಎಂದು ನೆಲದ ಮೇಲೆ ಉದ್ದಂಡ ನಮಸ್ಕಾರ ಮಾಡಿದರು.
ಮೂಲ ...{Loading}...
ಶಿವನ ಭವನವ ದೂರದಲಿ ಕಂ
ಡಿವರು ಮೈಯಿಕ್ಕಿದರು ವರಮುನಿ
ನಿವಹ ಬಂದುದು ಬಾಗಿಲವದಿರು ಬಿನ್ನಹದ ಹದನ
ವಿವರಿಸಲು ಕರೆಸಿದನು ಕರುಣಾ
ರ್ಣವನ ಕಂಡರು ಮೈಯ ಚಾಚಿದ
ರವನಿಯಲಿ ಜಯ ಜಯ ಮಹೇಶ ನಮಃಶಿವಾಯೆನುತ ॥16॥
೦೧೭ ಏಳಿರೈ ಸಾಕೇಳಿರೈ ...{Loading}...
ಏಳಿರೈ ಸಾಕೇಳಿರೈ ಸಾ
ಕೇಳಿ ಕುಳ್ಳಿರಿ ಬಂದ ಕಾರ್ಯವ
ಹೇಳಿಯೆನೆ ಮುನಿನಿಕರವೆದ್ದುದು ನೊಸಲ ಕೈಗಳಲಿ
ಹೇಳಿ ನೀವ್ ಹೇಳಿನ್ನು ಹಿರಿಯರು
ಹೇಳಿಯೆನುತೊಳಗೊಳಗೆ ಘೋಳಾ
ಘೋಳಿ ಮಸಗಿದುದೊಬ್ಬ ಮುನಿ ನಿಲಿಸಿದನು ಕಳಕಳವ ॥17॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ಏಳಿ, ಸಾಕು, ಕುಳಿತುಕೊಳ್ಳಿ’ ಬಂದ ಕಾರ್ಯವೇನು ?’ ಎಂದು ಪರಶಿವನು ಕೇಳಿದನು. ಶಿವನನ್ನು ನಮಸ್ಕರಿಸುತ್ತ, ಮುನಿಸಮೂಹ ಎದ್ದು ನಿಂತಿತು. ಅವರ ಪೈಕಿ ‘ಹಿರಿಯರು ನೀವು ಹೇಳಿ, ಹಿರಿಯರಾದ ನೀವು ಹೇಳಿ’ ಎಂದು ಋಷಿಗಳ ನಡುವೆ ಗೊಂದಲವುಂಟಾದಾಗ ಒಬ್ಬ ಮುನಿಯು ಗೊಂದಲವನ್ನು ನಿಲ್ಲಿಸಿ ಮಾತಿಗೆ ತೊಡಗಿದನು.
ಪದಾರ್ಥ (ಕ.ಗ.ಪ)
ಘೋಳಾ ಘೋಳಿ - ಗೊಂದಲ, ಗದ್ದಲ
ನೊಸಲ ಕೈಗಳಲಿ -ಹಣೆಯ ಮೆಲೆ ಕೈ ಇರಿಸಿ ( ನಮಸ್ಕರಿಸುತ್ತ)
ಮೂಲ ...{Loading}...
ಏಳಿರೈ ಸಾಕೇಳಿರೈ ಸಾ
ಕೇಳಿ ಕುಳ್ಳಿರಿ ಬಂದ ಕಾರ್ಯವ
ಹೇಳಿಯೆನೆ ಮುನಿನಿಕರವೆದ್ದುದು ನೊಸಲ ಕೈಗಳಲಿ
ಹೇಳಿ ನೀವ್ ಹೇಳಿನ್ನು ಹಿರಿಯರು
ಹೇಳಿಯೆನುತೊಳಗೊಳಗೆ ಘೋಳಾ
ಘೋಳಿ ಮಸಗಿದುದೊಬ್ಬ ಮುನಿ ನಿಲಿಸಿದನು ಕಳಕಳವ ॥17॥
೦೧೮ ನೀಲಲೋಹಿತ ಚಿತ್ತವಿಸು ...{Loading}...
ನೀಲಲೋಹಿತ ಚಿತ್ತವಿಸು ಶಶಿ
ಮೌಳಿ ಬಿನ್ನಹ ನಿಗಮ ಮಹಿಳಾ
ಮೌಳಿಮಣಿ ನೀರಾಜಿತಾಂಘ್ರಿ ಸರೋಜನವಧಾನ
ಪಾಲಿಸುವುದಾರ್ತರನು ಪರಮ ಕೃ
ಪಾಳುನೀನತಿ ದೀನರಾವು ವಿ
ಟಾಳ ಸಂಗತಿಯಾದುದೆಮ್ಮಯ ಜಪತಪಸ್ಥಿತಿಗೆ ॥18॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಹೇ ತ್ರಿಯಂಬಕನೇ, ಚಂದ್ರಶೇಖರನೇ, ವೇದವನಿತೆಯರಿಂದ ಪೂಜೆಗೊಳ್ಳುವವನೇ, ನಮ್ಮ ಬಿನ್ನಹವನ್ನು ಅವಧರಿಸು. ದಯಾನಿಧಿಯಾದ ನೀನು ದೀನರಾಗಿ ಬಂದ ನಮ್ಮನ್ನು ಕಾಪಾಡಬೇಕು. ನಮ್ಮ ಜಪತಪಾದಿಗಳಿಗೆ ತೊಂದರೆಯುಂಟಾಗಿದೆ”.
ಪದಾರ್ಥ (ಕ.ಗ.ಪ)
ನೀಲಲೋಹಿತ - ನೀಲಿ ಕಂಠ, ಕೆಂಪುಜಡೆಗಳನ್ನು ಉಳ್ಳವನು , ಈಶ್ವರ
ನೀರಾಜಿತ - ಪೂಜೆಗೊಳ್ಳುವವನು
ಆರ್ತ - ದೀನ
ವಿಟಾಳ - ಅಪವಿತ್ರ
ಮೂಲ ...{Loading}...
ನೀಲಲೋಹಿತ ಚಿತ್ತವಿಸು ಶಶಿ
ಮೌಳಿ ಬಿನ್ನಹ ನಿಗಮ ಮಹಿಳಾ
ಮೌಳಿಮಣಿ ನೀರಾಜಿತಾಂಘ್ರಿ ಸರೋಜನವಧಾನ
ಪಾಲಿಸುವುದಾರ್ತರನು ಪರಮ ಕೃ
ಪಾಳುನೀನತಿ ದೀನರಾವು ವಿ
ಟಾಳ ಸಂಗತಿಯಾದುದೆಮ್ಮಯ ಜಪತಪಸ್ಥಿತಿಗೆ ॥18॥
೦೧೯ ಶಾನ್ತಿಯೇ ಮನೆ ...{Loading}...
ಶಾಂತಿಯೇ ಮನೆ ನಿಮ್ಮ ಚರಣದ
ಚಿಂತೆಯೇ ಮನೆವಾರ್ತೆ ವರ ವೇ
ದಾಂತ ತತ್ವರಹಸ್ಯ ಮನನಾದಿಗಳು ಸರ್ವಸ್ವ
ದಾಂತಿಯೇ ಸುಖಭೋಗ ಮಾಯಾ
ಶ್ರಾಂತಿಯೇ ಮಾಹಾತ್ಮ್ಯೆಯಿವು ಋಷಿ
ಸಂತತಿಗೆ ವರ್ತನವಲೇ ವೈದಿಕ ವಿಧಾನದಲಿ ॥19॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಶಾಂತಿಯೇ ಮನೆ, ಶಿವಧ್ಯಾನವೇ ಮನೆ ವಾರ್ತೆ, ವೇದಾಂತ ತತ್ವ ರಹಸ್ಯಗಳ ಚಿಂತನೆಯೇ ಸರ್ವಸ್ವ.. ಆತ್ಮನಿಗ್ರಹವೇ ಸುಖ, ಮಾಯೆಯಿಂದ ಬಿಡುಗಡೆ ಪಡೆಯುವುದೇ ಮಹತ್ವದ್ದು . ಇವು ಋಷಿಗಳಿಗೆ ವೈದಿಕ ವಿಧಾನವಲ್ಲವೇ.
ಪದಾರ್ಥ (ಕ.ಗ.ಪ)
ದಾಂತಿ - ಆತ್ಮ ನಿಗ್ರಹ
ಶ್ರಾಂತಿ - ಬಳಲಿಕೆ
ಮೂಲ ...{Loading}...
ಶಾಂತಿಯೇ ಮನೆ ನಿಮ್ಮ ಚರಣದ
ಚಿಂತೆಯೇ ಮನೆವಾರ್ತೆ ವರ ವೇ
ದಾಂತ ತತ್ವರಹಸ್ಯ ಮನನಾದಿಗಳು ಸರ್ವಸ್ವ
ದಾಂತಿಯೇ ಸುಖಭೋಗ ಮಾಯಾ
ಶ್ರಾಂತಿಯೇ ಮಾಹಾತ್ಮ್ಯೆಯಿವು ಋಷಿ
ಸಂತತಿಗೆ ವರ್ತನವಲೇ ವೈದಿಕ ವಿಧಾನದಲಿ ॥19॥
೦೨೦ ಹೋದ ಹೊಲಬಿಲ್ಲದರೊಳಗೆ ...{Loading}...
ಹೋದ ಹೊಲಬಿಲ್ಲದರೊಳಗೆ ದು
ರ್ಭೇದ ತಪವೇ ಹೊಗೆವುತದೆ ಹೊ
ಳ್ಳಾದವೆಮ್ಮ ಸಮಾಧಿ ಸೈರಣೆ ಶಮದಮಾದಿಗಳು
ಕಾದುದಾ ವನಭೂಮಿ ತರು ಗು
ಲ್ಮಾದಿಗಳು ಕಟ್ಟೊಣಗಲಾದವು
ತೀದುದೆಮ್ಮಯ ನಿತ್ಯವಿಧಿಯೊಬ್ಬನ ದೆಸೆಯಲಿಂದು ॥20॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಆದರೆ ಈ ದಾರಿಯಲ್ಲಿ ನಡೆಯಲು ಸಾಧ್ಯವಿಲ್ಲ. ತಪಸ್ಸನ್ನು ಕೈಗೊಳ್ಳುವುದು ಅಸಾಧ್ಯವಾಗಿದೆ. ಶಮದಮಾದಿ ಗುಣಗಳು ನಷ್ಟವಾದವು. ಕಾಡು, ನೆಲ ಮರಗಿಡಗಳೆಲ್ಲಾ ಕಾದು ಒಣಗಿಹೋದವು. ಒಬ್ಬನ ದೆಸೆಯಿಂದಾಗಿ ನಮ್ಮ ನಿತ್ಯವಿಧಿಯೇ ಕೆಟ್ಟುಹೋಯಿತು.
ಪದಾರ್ಥ (ಕ.ಗ.ಪ)
ಹೊಲಬು - ದಾರಿ
ದುರ್ಭೇದ - ಪ್ರವೇಶಿಸಲಾಗದ
ಹೊಳ್ಳಾಗು - ಪೊಳ್ಳಾಗು , ನಿಷ್ಫಲವಾಗು
ಗುಲ್ಮ - ಪೊದೆ
ಮೂಲ ...{Loading}...
ಹೋದ ಹೊಲಬಿಲ್ಲದರೊಳಗೆ ದು
ರ್ಭೇದ ತಪವೇ ಹೊಗೆವುತದೆ ಹೊ
ಳ್ಳಾದವೆಮ್ಮ ಸಮಾಧಿ ಸೈರಣೆ ಶಮದಮಾದಿಗಳು
ಕಾದುದಾ ವನಭೂಮಿ ತರು ಗು
ಲ್ಮಾದಿಗಳು ಕಟ್ಟೊಣಗಲಾದವು
ತೀದುದೆಮ್ಮಯ ನಿತ್ಯವಿಧಿಯೊಬ್ಬನ ದೆಸೆಯಲಿಂದು ॥20॥
೦೨೧ ರಾಯನೋ ಮೇಣವನು ...{Loading}...
ರಾಯನೋ ಮೇಣವನು ರಾವುತ
ಪಾಯಕನೊ ಋಷಿಯಲ್ಲ ಋಷಿಗೇ
ಕಾಯುಧಂಗಳ ಗೊಡವೆ ನಮಗೇಕದರ ಬೂತಾಟ
ಸಾಯಕದ ಬತ್ತಳಿಗೆ ಚಾಪವ
ಡಾಯುಧದ ಕುಶೆವೆರಳ ಜಡೆಗಳ
ನಾಯತದಲನುಚಿತದ ಸಂಗದ ತಪಸಿಯಹನೆಂದ ॥21॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅವನು ರಾಜನೋ, ಅಶ್ವಾರೋಹಿಯೋ ಅಥವಾ ಕಾಲಾಳೋ ತಿಳಿಯದು. ಅವನು ಋಷಿಯಲ್ಲ. ಋಷಿಗಳಿಗೇಕೆ ಆಯುಧಗಳ ಗೊಡವೆ?. ನಮಗೆ ಅದರ ಗೋಜು. ಬಿಲ್ಲು ಬಾಣ ಬತ್ತಳಿಕೆ, ಅಡಾಯುಧ, ಬೆರಳಿನಲ್ಲಿ ದರ್ಭೆ ಇರುವ ಇವನಿಗೆ ಜಟೆ ಬೇರೆ ಇದೆ. ಈತ ವಿಪರ್ಯಾಸದ ತಪಸ್ವಿಯೇ ಸರಿ.
ಪದಾರ್ಥ (ಕ.ಗ.ಪ)
ಪಾಯಕ - ಕಾಲಾಳು
ಬೂತಾಟ - ಗೋಜು, ಗೊಡವೆ.
ಸಾಯಕ - ಬಾಣ
ಮೂಲ ...{Loading}...
ರಾಯನೋ ಮೇಣವನು ರಾವುತ
ಪಾಯಕನೊ ಋಷಿಯಲ್ಲ ಋಷಿಗೇ
ಕಾಯುಧಂಗಳ ಗೊಡವೆ ನಮಗೇಕದರ ಬೂತಾಟ
ಸಾಯಕದ ಬತ್ತಳಿಗೆ ಚಾಪವ
ಡಾಯುಧದ ಕುಶೆವೆರಳ ಜಡೆಗಳ
ನಾಯತದಲನುಚಿತದ ಸಂಗದ ತಪಸಿಯಹನೆಂದ ॥21॥
೦೨೨ ಆಡಿದೊಡೆ ನಾವ್ ...{Loading}...
ಆಡಿದೊಡೆ ನಾವ್ ಮುನಿಗಸೂಯವ
ಮಾಡಿದವರುಗಳಿಂದು ನಿಮ್ಮಡಿ
ಗಾಡದಿದ್ದರೆ ಬಿಸಿಲ ರಾಶಿಯನುರಿದು ಸೂತಕವ
ಕೂಡಿತೆಮ್ಮಯ ನಿತ್ಯವಿಧಿ ತಪ
ಗೇಡಿಯನು ಬಿಡದೆಬ್ಬಿಸೆಮಗೆಡೆ
ಮಾಡಿಕೊಡಬೇಕೆಂದು ಮತ್ತೆರಗಿದರು ಶಿವಪದಕೆ ॥22॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಇದನ್ನು ಹೇಳಿದರೆ ಆ ಮುನಿಗೆ ಅಸೂಯೆಪಟ್ಟ ಹಾಗಾಗುತ್ತದೆ. ಹೇಳದೇ ಇದ್ದರೆ ಬಿಸಿಲ ಬೇಗೆಯಿಂದ ನಮ್ಮ ನಿತ್ಯ ವಿಧಿ ಹಾಳಾಗಿಹೋಗುತ್ತದೆ. ಈ ತಪಗೇಡಿಯನ್ನು ಎಬ್ಬಿಸಿ, ನಮಗೆ ಅವಕಾಶ ಮಾಡಿಕೊಡಬೇಕು” ಎಂದು ಶಿವನ ಪಾದದಲ್ಲಿ ಬಿದ್ದು ಬೇಡಿ ಕೊಂಡರು.
ಪದಾರ್ಥ (ಕ.ಗ.ಪ)
ಸೂತಕ - ಮೈಲಿಗೆ
ತಪಗೇಡಿ - ತಪಸ್ಸನ್ನು ಹಾಳು ಮಾಡುವವನು
ಮೂಲ ...{Loading}...
ಆಡಿದೊಡೆ ನಾವ್ ಮುನಿಗಸೂಯವ
ಮಾಡಿದವರುಗಳಿಂದು ನಿಮ್ಮಡಿ
ಗಾಡದಿದ್ದರೆ ಬಿಸಿಲ ರಾಶಿಯನುರಿದು ಸೂತಕವ
ಕೂಡಿತೆಮ್ಮಯ ನಿತ್ಯವಿಧಿ ತಪ
ಗೇಡಿಯನು ಬಿಡದೆಬ್ಬಿಸೆಮಗೆಡೆ
ಮಾಡಿಕೊಡಬೇಕೆಂದು ಮತ್ತೆರಗಿದರು ಶಿವಪದಕೆ ॥22॥
೦೨೩ ಮತ್ತೆ ನಮ್ಮನು ...{Loading}...
ಮತ್ತೆ ನಮ್ಮನು ಪಿಸುಣರೆಂದೇ
ಚಿತ್ತವಿಸಲಾಗದು ತಪೋವನ
ಹೊತ್ತುತಿದೆ ವಿಪರೀತ ತಪಸಿಯ ತೀವ್ರತೇಜದಲಿ
ಇತ್ತಲೊಂದು ತಪೋವನವನೆಮ
ಗಿತ್ತು ಕರುಣಿಸು ಮೇಣ್ ವಿಕಾರಿಯ
ನೆತ್ತಿ ಕಳೆ ಕಾರುಣ್ಯನಿಧಿಯೆಂದುದು ಮುನಿಸ್ತೋಮ ॥23॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಆಮೇಲೆ ನಮ್ಮನ್ನು ಚಾಡಿಕೋರರೆಂದು ದೂಷಿಸಬೇಡಿ. ಈ ತಪೋವನ ಅವನ ತೇಜಸ್ಸಿನಿಂದ ಸುಟ್ಟುಹೋಗುತ್ತಿದೆ. ಬೇರೊಂದು ತಪೋವನವನ್ನು ನಮಗೆ ಕರುಣಿಸು, ಇಲ್ಲವೆ ಆ ವಿಕೃತ ತಪಸ್ವಿಯನ್ನು ನಿವಾರಿಸಬೇಕು ಎಂದು ಮುನಿಸ್ತೋಮ ಪ್ರಾರ್ಥಿಸಿತು.
ಪದಾರ್ಥ (ಕ.ಗ.ಪ)
ಪಿಸುಣ - ಚಾಡಿಕೋರ
ಮೂಲ ...{Loading}...
ಮತ್ತೆ ನಮ್ಮನು ಪಿಸುಣರೆಂದೇ
ಚಿತ್ತವಿಸಲಾಗದು ತಪೋವನ
ಹೊತ್ತುತಿದೆ ವಿಪರೀತ ತಪಸಿಯ ತೀವ್ರತೇಜದಲಿ
ಇತ್ತಲೊಂದು ತಪೋವನವನೆಮ
ಗಿತ್ತು ಕರುಣಿಸು ಮೇಣ್ ವಿಕಾರಿಯ
ನೆತ್ತಿ ಕಳೆ ಕಾರುಣ್ಯನಿಧಿಯೆಂದುದು ಮುನಿಸ್ತೋಮ ॥23॥
೦೨೪ ಕೇಳುತವನಾರೋಯೆನುತ ಶಶಿ ...{Loading}...
ಕೇಳುತವನಾರೋಯೆನುತ ಶಶಿ
ಮೌಳಿ ವಿಮಲಜ್ಞಾನ ದೃಷ್ಟಿಯೊ
ಳಾಳನರಿದನು ಮನದೊಳಗೆ ನಮ್ಮವನಲಾಯೆನುತ
ಬಾಲಹಿಮಕರಕಿರಣನೊಡನೆ ಸ
ಮೇಳವಹ ನಗೆ ಮಿನುಗೆ ಮುನಿಜನ
ಜಾಲವನು ನೋಡಿದನು ಕರೆದನು ಕೃಪೆಯ ತನಿಮಳೆಯ ॥24॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಈ ಪ್ರಾರ್ಥನೆಯನ್ನು ಕೇಳುತ್ತ, ಪರಶಿವನು ಅವನಾರೆಂದು ದಿವ್ಯದೃಷ್ಟಿಯಿಂದ ನೋಡಿ, ಅವನು ತಮ್ಮವನೆಂದು ತಿಳಿದು ಎಳೆಯ ಚಂದ್ರಕಿರಣಕ್ಕೆ ಹೋಲುವಂತಹ ನಗುವನ್ನು ಪ್ರಕಟಿಸಿ ಮುನಿಸ್ತೋಮವನ್ನು ನೋಡುತ್ತಾ ಕೃಪಾದೃಷ್ಟಿಯನ್ನು ಬೀರಿದನು.
ಪದಾರ್ಥ (ಕ.ಗ.ಪ)
ಬಾಲ ಹಿಮಕರ ಕಿರಣ - ಬಾಲ ಚಂದ್ರನ ಕಿರಣ
ಸಮೇಳ - ಒಟ್ಟುಗೂಡಿಕೆ, ಸೇರಿಕೊಂಡಿರುವುದು.
ಮೂಲ ...{Loading}...
ಕೇಳುತವನಾರೋಯೆನುತ ಶಶಿ
ಮೌಳಿ ವಿಮಲಜ್ಞಾನ ದೃಷ್ಟಿಯೊ
ಳಾಳನರಿದನು ಮನದೊಳಗೆ ನಮ್ಮವನಲಾಯೆನುತ
ಬಾಲಹಿಮಕರಕಿರಣನೊಡನೆ ಸ
ಮೇಳವಹ ನಗೆ ಮಿನುಗೆ ಮುನಿಜನ
ಜಾಲವನು ನೋಡಿದನು ಕರೆದನು ಕೃಪೆಯ ತನಿಮಳೆಯ ॥24॥
೦೨೫ ಅರಿದೆ ನಾನಞ್ಜದಿರಿ ...{Loading}...
ಅರಿದೆ ನಾನಂಜದಿರಿ ಹುಯ್ಯಲ
ಬರಿದೆ ತಂದಿರಿ ನಿಮ್ಮ ಗೆಲವಿಂ
ಗೆರಗುವವನವನಲ್ಲ ಬೇರಿಹುದಾತನಂಗವಣೆ
ಅರುಹಲೇಕೆ ಭವತ್ತಪೋವನ
ನೆರೆ ನಿಮಗೆ ನಾನವನನೆಬ್ಬಿಸಿ
ತೆರಹ ಮಾಡಿಸಿಕೊಡುವೆನೆಂದನು ನಗುತ ಶಶಿಮೌಳಿ ॥25॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ತಿಳಿದೆ, ಹೆದರಬೇಡಿ. ಸುಮ್ಮನೆ ದೂರನ್ನು ತಂದಿರಿ. ನಿಮ್ಮ ಸಾಧನೆಗೆ ಅವನು ಅಡ್ಡಿ ಬರುವವನಲ್ಲ. ಅವನ ಉದ್ದೇಶ ಬೇರೆಯೇ ಇದೆ. ಅವನನ್ನು ನಾನು ಎಬ್ಬಿಸಿ, ನಿಮ್ಮ ತಪೋವನವನ್ನು ತೆರವುಗೊಳಿಸಿಕುಡುತ್ತೇನೆ.’ ಎಂದು ಶಿವನು ನಗುತ್ತಾ ಹೇಳಿದನು.
ಪದಾರ್ಥ (ಕ.ಗ.ಪ)
ಅಂಗವಣೆ-ಉದ್ದೇಶ, ಹುಯ್ಯಲು-ದೂರು
ಮೂಲ ...{Loading}...
ಅರಿದೆ ನಾನಂಜದಿರಿ ಹುಯ್ಯಲ
ಬರಿದೆ ತಂದಿರಿ ನಿಮ್ಮ ಗೆಲವಿಂ
ಗೆರಗುವವನವನಲ್ಲ ಬೇರಿಹುದಾತನಂಗವಣೆ
ಅರುಹಲೇಕೆ ಭವತ್ತಪೋವನ
ನೆರೆ ನಿಮಗೆ ನಾನವನನೆಬ್ಬಿಸಿ
ತೆರಹ ಮಾಡಿಸಿಕೊಡುವೆನೆಂದನು ನಗುತ ಶಶಿಮೌಳಿ ॥25॥
೦೨೬ ಏಳಿ ನೀವಾಶ್ರಮಕೆ ...{Loading}...
ಏಳಿ ನೀವಾಶ್ರಮಕೆ ಪೋಗಿ ಚ
ಡಾಳಿಸದು ಮುನಿವರನ ತಪವಿ
ನ್ನೇಳಿದಿಟ ಭಯವಿಲ್ಲವೆಂದು ಕರಾಂಬುಜವ ನೆಗಹಿ
ಬೀಳುಗೊಟ್ಟನು ಸಕಲ ಮುನಿಜನ
ಜಾಲವನು ಕರೆ ಭೂತ ನಿಕರವ
ಮೇಳವಿಸಹೇಳೆಂದು ನಂದೀಶ್ವರಗೆ ನೇಮಿಸಿದ ॥26॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ಏಳಿ, ನೀವೆಲ್ಲರೂ ನಿಮ್ಮ ಆಶ್ರಮಗಳಿಗೆ ಹಿಂದಿರುಗಿ. ಇನ್ನು ಮುನಿಯ ತಪಸ್ಸು ನಿಮ್ಮನ್ನು ಸುಡುವುದಿಲ್ಲ ಹೆದರಬೇಡಿ’ ಎಂದು ಅಭಯ ಹಸ್ತವನ್ನು ತೋರಿ ಮುನಿಗಳನ್ನು ಬೀಳ್ಕೊಟ್ಟು, ಎಲ್ಲ ಭೂತಗಣಗಳನ್ನೂ ಸೇರಿಸು ಎಂದು ನಂದೀಶ್ವರನಿಗೆ ಶಿವನು ಆಜ್ಞಾಪಿಸಿದನು.
ಪದಾರ್ಥ (ಕ.ಗ.ಪ)
ಚಡಾಳಿಸು -ಮೇಲಾಗು, ಆಧಿಕ್ಯ ಹೊಂದು
ಮೂಲ ...{Loading}...
ಏಳಿ ನೀವಾಶ್ರಮಕೆ ಪೋಗಿ ಚ
ಡಾಳಿಸದು ಮುನಿವರನ ತಪವಿ
ನ್ನೇಳಿದಿಟ ಭಯವಿಲ್ಲವೆಂದು ಕರಾಂಬುಜವ ನೆಗಹಿ
ಬೀಳುಗೊಟ್ಟನು ಸಕಲ ಮುನಿಜನ
ಜಾಲವನು ಕರೆ ಭೂತ ನಿಕರವ
ಮೇಳವಿಸಹೇಳೆಂದು ನಂದೀಶ್ವರಗೆ ನೇಮಿಸಿದ ॥26॥
೦೨೭ ಅರಸ ಕೇಳೈ ...{Loading}...
ಅರಸ ಕೇಳೈ ಬೇಂಟೆಯೆಂದೀ
ಶ್ವರನ ಕಟಕದೊಳೊದರಿದುದು ಡಂ
ಗುರದ ದನಿ ಡಾವರದೊಳೈದಿತು ನಿಖಿಳ ಭುವನವನು
ಪರಮ ಕರುಣಾಸಿಂಧು ಭಕ್ತನ
ಹೊರೆವ ಭರದಲಿ ಭೂರಿ ಮೃಗಯಾ
ಚರಣೆಗೋಸುಗ ಶಬರ ವರರೂಪದಲಿ ರಂಜಿಸಿದ ॥27॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ಅರಸನೆ ಕೇಳು, ಶಿವಗಣಗಳ ಮಧ್ಯೆ ‘ಬೇಟೆ’ ಎಂಬ ಡಂಗುರದ ಧ್ವನಿ ಹಬ್ಬಿ, ಸರ್ವಲೋಕವನ್ನು ಆವರಿಸಿತು. ಭಕ್ತನನ್ನು ಕರುಣಿಸಬೇಕೆಂಬ ಉತ್ಸಾಹದಿಂದ ದಯಾಸಿಂಧುವಾದ ಶಂಕರನು ಭಾರಿ ಬೇಟೆಗೋಸುಗ ಕಿರಾತರೂಪವನ್ನು ಧರಿಸಿದನು.
ಪದಾರ್ಥ (ಕ.ಗ.ಪ)
ಮೃಗಯಾ - ಬೇಟೆ
ಡಾವರ - ಗದ್ದಲ
ಮೂಲ ...{Loading}...
ಅರಸ ಕೇಳೈ ಬೇಂಟೆಯೆಂದೀ
ಶ್ವರನ ಕಟಕದೊಳೊದರಿದುದು ಡಂ
ಗುರದ ದನಿ ಡಾವರದೊಳೈದಿತು ನಿಖಿಳ ಭುವನವನು
ಪರಮ ಕರುಣಾಸಿಂಧು ಭಕ್ತನ
ಹೊರೆವ ಭರದಲಿ ಭೂರಿ ಮೃಗಯಾ
ಚರಣೆಗೋಸುಗ ಶಬರ ವರರೂಪದಲಿ ರಂಜಿಸಿದ ॥27॥
೦೨೮ ತೆಗೆದು ತಲೆಮಾಲೆಯನು ...{Loading}...
ತೆಗೆದು ತಲೆಮಾಲೆಯನು ಹಸುರಂ
ಗಿಗಳ ತೊಟ್ಟನು ಸುತ್ತುಬರೆ ಹೀ
ಲಿಗಳ ಹರಹಿನ ಪಾರಿವದ ಚಲ್ಲಣವನಳವಡಿಸಿ
ಬಿಗಿಜಡೆಯ ಶಶಿಮುಖಕೆ ಪತ್ರಾ
ಳಿಗಳ ಕಟ್ಟಿ ಕಿರಾತವೇಷದ
ವಿಗಡದೇವರ ದೇವ ಕೊಂಡನು ಚಾಪ ಮಾರ್ಗಣವ ॥28॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ರುಂಡಮಾಲೆಯನ್ನು ತೆಗೆದು, ಹಸಿರಿನ ಅಂಗಿಯನ್ನು ತೊಟ್ಟು, ನವಿಲುಗರಿಗಳಿಂದ ಹೆಣೆದ ಬಟ್ಟೆಯನ್ನು ಸುತ್ತಿಕೊಂಡು, ಪಾರಿವಾಳದ ಪುಕ್ಕಗಳಿರುವ ಚಲ್ಲಣವನ್ನು ಧರಿಸಿದನು. ಚಂದ್ರನನ್ನು ಮುಚ್ಚುವಂತೆ ಎಲೆಗೊಂಚಲುಗಳನ್ನು ಸಿಕ್ಕಿಸಿಕೊಂಡು, ಕಿರಾತ ವೇಷಧಾರಿಯಾದ ಶಿವನು ಬಿಲ್ಲು ಬಾಣಗಳನ್ನು ಹಿಡಿದನು.
ಪದಾರ್ಥ (ಕ.ಗ.ಪ)
ಹೀಲಿ-ನವಿಲುಗರಿಗಳಿಂದ ತಯಾರಿಸಿದ ಉಡುಪು
ಪಾರಿವ - ಪಾರಿವಾಳ
ಮೂಲ ...{Loading}...
ತೆಗೆದು ತಲೆಮಾಲೆಯನು ಹಸುರಂ
ಗಿಗಳ ತೊಟ್ಟನು ಸುತ್ತುಬರೆ ಹೀ
ಲಿಗಳ ಹರಹಿನ ಪಾರಿವದ ಚಲ್ಲಣವನಳವಡಿಸಿ
ಬಿಗಿಜಡೆಯ ಶಶಿಮುಖಕೆ ಪತ್ರಾ
ಳಿಗಳ ಕಟ್ಟಿ ಕಿರಾತವೇಷದ
ವಿಗಡದೇವರ ದೇವ ಕೊಂಡನು ಚಾಪ ಮಾರ್ಗಣವ ॥28॥
೦೨೯ ದೇವನನುರೂಪದಲಿ ನಿನ್ದರು ...{Loading}...
ದೇವನನುರೂಪದಲಿ ನಿಂದರು
ದೇವಿಯರು ಗುಹ ಗಣಪತಿಗಳೆ
ಲ್ಲಾ ವಿನೋದವ ನೋಡಿ ಧರಿಸಿದರೊಲಿದು ಶಾಬರವ
ಆ ವಿಗಡ ನಂದೀಶ ವೀರಕ
ದೇವಲಕ ರೇಣುಕ ಮಹೋದರ
ದಾವಶಿಖಿಮುಖ ವೀರಭದ್ರಾದ್ಯಖಿಲ ಭೂತಗಣ ॥29॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಪಾರ್ವತಿ ದೇವಿಯೂ ಶಿವನಂತೆ ಶಬರಿ ವೇಷವನ್ನು ಧರಿಸಿದಳು. ಈ ಎಲ್ಲಾ ವಿನೋದಗಳನ್ನು ನೋಡಿ ಸುಬ್ರಹ್ಮಣ್ಯ ಗಣಪತಿಯರೂ ಶಬರ ರೂಪವನ್ನು ಧರಿಸಿದರು. ನಂದಿ, ವೀರಭದ್ರ, ದೇವಲಕ, ರೇಣುಕ, ಮಹೋದರ, ದಾವಶಿಖಿಮುಖರೇ ಮುಂತಾದ ಎಲ್ಲಾ ಭೂತಗಣಗಳು ಶಬರರೂಪವನ್ನು ಧರಿಸಿದವು.
ಪದಾರ್ಥ (ಕ.ಗ.ಪ)
ಶಾಬರ -ಬೇಟೆಗಾರ ಉಡುಪು
ಮೂಲ ...{Loading}...
ದೇವನನುರೂಪದಲಿ ನಿಂದರು
ದೇವಿಯರು ಗುಹ ಗಣಪತಿಗಳೆ
ಲ್ಲಾ ವಿನೋದವ ನೋಡಿ ಧರಿಸಿದರೊಲಿದು ಶಾಬರವ
ಆ ವಿಗಡ ನಂದೀಶ ವೀರಕ
ದೇವಲಕ ರೇಣುಕ ಮಹೋದರ
ದಾವಶಿಖಿಮುಖ ವೀರಭದ್ರಾದ್ಯಖಿಲ ಭೂತಗಣ ॥29॥
೦೩೦ ಅರಸ ಕೇಳೈ ...{Loading}...
ಅರಸ ಕೇಳೈ ಸಪ್ತಮಾತೃಕೆ
ಯರು ಮಹೋಪನಿಷನ್ನಿತಂಬಿನಿ
ಯರು ದಿಶಾದೇವಿಯರು ಶ್ರುತಿವಿದ್ಯಾದಿಶಕ್ತಿಯರು
ಉರಗಿಯರು ವಿದ್ಯಾಧರಿಯರ
ಪ್ಸರಿಯರೌಷಧ ಮಂತ್ರ ದೇವತೆ
ಯರು ಪುಳಿಂದಿಯರಾಯ್ತು ಪರಮೇಶ್ವರಿಯ ಬಳಸಿನಲಿ ॥30॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅರಸನೇ ಕೇಳು. ಸಪ್ತಮಾತೃಕೆಯರು, ಉಪನಿಷತ್ ದೇವಿಯರು, ದಿಗ್ವನಿತೆಯರು, ವೇದವಿದ್ಯಾಂಗನೆಯರು, ನಾಗಕನ್ಯೆಯರು ವಿದ್ಯಾಧರಿಯರು, ಅಪ್ಸರೆಯರು, ಔಷಧ ಮಂತ್ರ ದೇವತೆಗಳೆಲ್ಲರೂ ಶಬರಿಯರಾಗಿ ಪರಶಿವೆಯ ಸುತ್ತಮುತ್ತ ಸೇರಿದರು.
ಪದಾರ್ಥ (ಕ.ಗ.ಪ)
ಪುಳಿಂದಿ -ಬೇಡತಿ, ಶಬರಿ
ಟಿಪ್ಪನೀ (ಕ.ಗ.ಪ)
ಸಪ್ತ ಮಾತೃಕೆಯರು :
ಅ] ಬ್ರಾಹ್ಮೀ, ಮಾಹೇಶ್ವರೀ, ಕೌಮಾರೀ, ವೈಷ್ಣವೀ, ವಾರಾಹೀ, ಇಂದ್ರಾಣೀ, ಚಾಮುಂಡಾ
ಆ] ಶ್ರೀ, ಲಕ್ಷ್ಮೀ, ಧೃತಿ, ಮೇಧಾ, ಶ್ರದ್ದಾ, ವಿದ್ಯಾ, ಸರಸ್ವತೀ
- ಟಿ ವಿ ವೆಂಕಟಾಚಲ ಶಾಸ್ತ್ರೀ , ಶ್ರೀವತ್ಸ ನಿಘಂಟು ಪುಟ 294, ಪ್ರಕಾಶಕರು ಪುಸ್ತಕ ಪ್ರಾಧಿಕಾರ 1999
ಮೂಲ ...{Loading}...
ಅರಸ ಕೇಳೈ ಸಪ್ತಮಾತೃಕೆ
ಯರು ಮಹೋಪನಿಷನ್ನಿತಂಬಿನಿ
ಯರು ದಿಶಾದೇವಿಯರು ಶ್ರುತಿವಿದ್ಯಾದಿಶಕ್ತಿಯರು
ಉರಗಿಯರು ವಿದ್ಯಾಧರಿಯರ
ಪ್ಸರಿಯರೌಷಧ ಮಂತ್ರ ದೇವತೆ
ಯರು ಪುಳಿಂದಿಯರಾಯ್ತು ಪರಮೇಶ್ವರಿಯ ಬಳಸಿನಲಿ ॥30॥
೦೩೧ ಧೃತಿ ಮಹೋನ್ನತಿ ...{Loading}...
ಧೃತಿ ಮಹೋನ್ನತಿ ತುಷ್ಟಿಪುಷ್ಟಿ
ಸ್ಮೃತಿ ಸರಸ್ವತಿ ಸಂವಿಧಾಯಕಿ
ಮತಿ ಮನಸ್ವಿನಿ ಸಿದ್ಧಿ ಕೀರ್ತಿಖ್ಯಾತಿ ನಿಯತಮತಿ
ಗತಿ ಕಳಾಮಾನಿನಿ ಕಳಾವತಿ
ರತಿ ರಸಾವತಿ ಚಂಡಿ ಜಯೆ ಮಧು
ಮತಿಯೆನಿಪ ದೇವಿಯರು ಶಬರಿಯರಾಯ್ತು ನಿಮಿಷದಲಿ ॥31॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಧೃತಿ, ತುಷ್ಟಿ, ಪುಷ್ಟಿ, ಸ್ಮೃತಿ, ಸರಸ್ವತಿ, ಸಿದ್ಧಿ, ಕೀರ್ತಿ, ಖ್ಯಾತಿ, ಮತಿ, ಗತಿ, ಕಲಾ, ಕಲಾವತಿ, ರತಿ, ರಸವತಿ, ಚಂಡಿ, ಜಯೆ, ಮಧುಮತಿ ಮುಂತಾದ ದೇವಿಯರೂ ಕೂಡಲೇ ಶಬರಿಯಾದರು.
ಮೂಲ ...{Loading}...
ಧೃತಿ ಮಹೋನ್ನತಿ ತುಷ್ಟಿಪುಷ್ಟಿ
ಸ್ಮೃತಿ ಸರಸ್ವತಿ ಸಂವಿಧಾಯಕಿ
ಮತಿ ಮನಸ್ವಿನಿ ಸಿದ್ಧಿ ಕೀರ್ತಿಖ್ಯಾತಿ ನಿಯತಮತಿ
ಗತಿ ಕಳಾಮಾನಿನಿ ಕಳಾವತಿ
ರತಿ ರಸಾವತಿ ಚಂಡಿ ಜಯೆ ಮಧು
ಮತಿಯೆನಿಪ ದೇವಿಯರು ಶಬರಿಯರಾಯ್ತು ನಿಮಿಷದಲಿ ॥31॥
೦೩೨ ಮಾರಿ ಚಾಮುಣ್ಡಿ ...{Loading}...
ಮಾರಿ ಚಾಮುಂಡಿ ಸ್ಮಶಾನಾ
ಕಾರವತಿ ವರ ಕಾಳರಾತ್ರಿ ಮ
ಹೀರಮಣಿ ಜಯಲಕ್ಷ್ಮಿ ಯೋಗಿನಿ ಯಜ್ಞ ದೇವಿಯರು
ವೀರಸಿರಿ ವನಲಕ್ಷ್ಮಿ ಶಾಕಿನಿ
ನಾರಿ ದೇವತೆ ಡಾಕಿನೀಮುಖಿ
ಭೂರಿ ಶಕ್ತಿಯರೈದೆ ಶಬರಿಯರಾಯ್ತು ನಿಮಿಷದಲಿ ॥32॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಮಾರಿ, ಚಾಮುಂಡಿ, ಸ್ಮಶಾನಾಕಾರವತಿ, ಕಾಳರಾತ್ರಿ, ಭೂದೇವಿ, ಜಯಲಕ್ಷ್ಮಿ, ಯೋಗಿನಿ, ಯಜ್ಞದೇವಿ, ವೀರಲಕ್ಷ್ಮಿ, ವನಲಕ್ಷ್ಮಿ, ಶಾಕಿನಿ ಡಾಕಿನಿ ಮುಂತಾದ ಶಕ್ತಿ ದೇವತೆಗಳೆಲ್ಲಾ ಕೂಡಲೇ ಶಬರಿಯರಾದರು.
ಮೂಲ ...{Loading}...
ಮಾರಿ ಚಾಮುಂಡಿ ಸ್ಮಶಾನಾ
ಕಾರವತಿ ವರ ಕಾಳರಾತ್ರಿ ಮ
ಹೀರಮಣಿ ಜಯಲಕ್ಷ್ಮಿ ಯೋಗಿನಿ ಯಜ್ಞ ದೇವಿಯರು
ವೀರಸಿರಿ ವನಲಕ್ಷ್ಮಿ ಶಾಕಿನಿ
ನಾರಿ ದೇವತೆ ಡಾಕಿನೀಮುಖಿ
ಭೂರಿ ಶಕ್ತಿಯರೈದೆ ಶಬರಿಯರಾಯ್ತು ನಿಮಿಷದಲಿ ॥32॥
೦೩೩ ಚಾಳಿಸಿದ ಹದವಿಲ್ಲುಗಳ ...{Loading}...
ಚಾಳಿಸಿದ ಹದವಿಲ್ಲುಗಳ ಬಡಿ
ಕೋಲುಗಳ ಸಂಕಲೆಯ ನಾಯ್ಗಳ
ಕೋಲುವಲೆಗಳ ಸಿಡಿವಲೆಯ ಮಿಡಿವಲೆಯ ಸೂವಲೆಯ
ಕಾಲುಗಣ್ಣಿಯ ಹೆಬ್ಬಲೆಯ ಬೆ
ಳ್ಳಾಲವಲೆಗಳ ಮಯಣದಂಟಿನ
ಮೇಲುಕೊಂಬಿನ ಬೇಟೆಗಾರರು ಬಳಸಿದರು ಶಿವನ ॥33॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಹದಮಾಡಿದ ಬಿಲ್ಲು, ಬಡಿವ ಕೋಲು, ಸಂಕೋಲೆ, ನಾಯಿಗಳು, ಕೋಲುಬಲೆ, ಸಿಡಿಬಲೆ, ಮಿಡಿಬಲೆ, ಸೂವಲೆ, ಹೆಬ್ಬಲೆ, ಬೆಳ್ಳಾಲವಲೆ, ಮೇಣದಂಟಿನ ಕೊಂಬುಗಳನ್ನು ಇವುಗಳನ್ನು ಹಿಡಿದ ಬೇಟೆಗಾರರು ಶಿವನನ್ನು ಸುತ್ತುವರಿದರು.
ಮೂಲ ...{Loading}...
ಚಾಳಿಸಿದ ಹದವಿಲ್ಲುಗಳ ಬಡಿ
ಕೋಲುಗಳ ಸಂಕಲೆಯ ನಾಯ್ಗಳ
ಕೋಲುವಲೆಗಳ ಸಿಡಿವಲೆಯ ಮಿಡಿವಲೆಯ ಸೂವಲೆಯ
ಕಾಲುಗಣ್ಣಿಯ ಹೆಬ್ಬಲೆಯ ಬೆ
ಳ್ಳಾಲವಲೆಗಳ ಮಯಣದಂಟಿನ
ಮೇಲುಕೊಂಬಿನ ಬೇಟೆಗಾರರು ಬಳಸಿದರು ಶಿವನ ॥33॥
೦೩೪ ಶ್ರುತಿಗಳೂಳಿಗ ...{Loading}...
ಶ್ರುತಿಗಳೂಳಿಗ ತರ್ಕಶಾಸ್ತ್ರದ
ಗತಿಯ ಸೋಹಿನ ಮಂತ್ರಮಯ ಸಂ
ತತಿಯ ಸೊಂಪಿನ ವಿವಿಧ ಜಪ ಯಜ್ಞಾದಿಗಳ ಬಲೆಯ
ವ್ರತದ ಜಂತ್ರದ ಕಣ್ಣಿಗಳ ಸ
ತ್ಕೃತಿಯ ಕೋಲ್ಗುಂಡುಗಳ ಯೋಗ
ಸ್ಥಿತಿಯ ಸರಳಿನ ಶಬರರೈದಿತು ಶಿವನ ಬಳಸಿನಲಿ ॥34॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ವೇದಗಳೇ ಸೇವಕರಾದ, ತರ್ಕಶಾಸ್ತ್ರಗಳೇ ಬೇಟೆಗೆ ಕಟ್ಟಿದ ಸಾಕುಪ್ರಾಣಿಗಳಾಗಿರುವ, ಮಂತ್ರಗಳ ಸಮೂಹದಿಂದ ಸಮೃದ್ಧವಾಗಿರುವ ವಿವಿಧ ಜಪಯಜ್ಞಗಳೇ ಬಲೆಯಾಗಿರುವ, ವ್ರತಗಳೇ ಬೇಟೆಯ ಯಂತ್ರದ ಕುಣಿಕೆಗಳಾಗಿರುವ ಪುಣ್ಯವೇ ಕೋಲು, ಗುಂಡುಗಳಾಗಿರುವ ಯೋಗಸ್ಥಿತಿಯೆ ಬಾಣಗಳಾಗಿರುವ ಬೇಟೆಗಾರರು ಶಿವನನ್ನು ಬಳಸಿ ನಿಂತರು.
ಪದಾರ್ಥ (ಕ.ಗ.ಪ)
ಸೋಹು - ದೀಹದ ಮೃಗ
ಜಂತ್ರ - ಯಂತ್ರ
ಕಣ್ಣಿ - ಕುಣಿಕೆ
ಸತ್ಕೃತಿ - ಪುಣ್ಯ
ಮೂಲ ...{Loading}...
ಶ್ರುತಿಗಳೂಳಿಗ ತರ್ಕಶಾಸ್ತ್ರದ
ಗತಿಯ ಸೋಹಿನ ಮಂತ್ರಮಯ ಸಂ
ತತಿಯ ಸೊಂಪಿನ ವಿವಿಧ ಜಪ ಯಜ್ಞಾದಿಗಳ ಬಲೆಯ
ವ್ರತದ ಜಂತ್ರದ ಕಣ್ಣಿಗಳ ಸ
ತ್ಕೃತಿಯ ಕೋಲ್ಗುಂಡುಗಳ ಯೋಗ
ಸ್ಥಿತಿಯ ಸರಳಿನ ಶಬರರೈದಿತು ಶಿವನ ಬಳಸಿನಲಿ ॥34॥
೦೩೫ ಶ್ರವಣ ಮನನದ ...{Loading}...
ಶ್ರವಣ ಮನನದ ಬೀಸುವಲೆ ಶಾಂ
ಭವ ಸುವೇದಾ ದೀಕ್ಷೆಗಳ ಬಲು
ಗವಣೆಗಳ ಪಶುಪಾಶ ಬಂಧದ ಬೋಳೆಯಂಬುಗಳ
ನವ ವಿಧಾಮಲ ಭಕ್ತಿಗಳ ರಣ
ತವಕ ದೀಹದ ಹುಲ್ಲೆಗಳ ಮೃಗ
ಭವ ವಿದಾರಣ ಸುಭಟರೈದಿತು ಶಿವನ ನೇಮದಲಿ ॥35॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಶ್ರವಣ ಮನನಗಳೆಂಬ ಬೀಸು ಬಲೆ, ಶಾಂಕರವೇದದೀಕ್ಷೆಗಳೆಂಬ ಕವಣೆ ಹಿಡಿದು, ಪಶುಪಾಶ ಬಾಣಗಳೊಂದಿಗೆ ನವವಿಧದ ಭಕ್ತಿಗಳೆಂಬ ರಣತವಕದ ದೀಹದ ಜಿಂಕೆಗಳೊಡನೆ, ಸುಭಟ ಸಮೂಹವು ಶಿವನ ಆಜ್ಞೆಯಿಂದ ಹೊರಟಿತು.
ಟಿಪ್ಪನೀ (ಕ.ಗ.ಪ)
ನವವಿಧ ಭಕ್ತಿ : ಶ್ರವಣ, ಕೀರ್ತನ, ಸ್ಮರಣ, ಪಾದಸೇವನ, ಅರ್ಚನ, ವಂದನ, ದಾಸ್ಯ, ಸಖ್ಯ, ಆತ್ಮನಿವೇದನ
ಮೂಲ ...{Loading}...
ಶ್ರವಣ ಮನನದ ಬೀಸುವಲೆ ಶಾಂ
ಭವ ಸುವೇದಾ ದೀಕ್ಷೆಗಳ ಬಲು
ಗವಣೆಗಳ ಪಶುಪಾಶ ಬಂಧದ ಬೋಳೆಯಂಬುಗಳ
ನವ ವಿಧಾಮಲ ಭಕ್ತಿಗಳ ರಣ
ತವಕ ದೀಹದ ಹುಲ್ಲೆಗಳ ಮೃಗ
ಭವ ವಿದಾರಣ ಸುಭಟರೈದಿತು ಶಿವನ ನೇಮದಲಿ ॥35॥
೦೩೬ ಸೋಹಿದೊಡೆ ದೆಸೆದೆಸೆಗೆ ...{Loading}...
ಸೋಹಿದೊಡೆ ದೆಸೆದೆಸೆಗೆ ಹಾಯ್ದುದು
ಮೋಹತಮ ಡಂಭಾದಿ ಮೃಗತತಿ
ತೋಹಿನಲಿ ಬಿದ್ದುದು ಮಹಾಪಾತಕ ಮದೇಭಚಯ
ದ್ರೋಹ ದೀಹಾಮೃಗವಸೂಯ ವ
ರಾಹ ಸಂಕೀರ್ಣೋಪಪಾತಕ
ದೇಹವಳಿದವನಂತವದರೊಳು ಶಿವನ ಬೇಂಟೆಯಲಿ ॥36॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಬೆನ್ನಟ್ಟಿದಾಕ್ಷಣ ಮೋಹವು ದಿಕ್ಕುದಿಕ್ಕಿಗೆ ಓಡಿತು. ಡಂಬವೆಂಬ ಮೃಗಕುಲ ಕಣಿವೆಯಲ್ಲಿ ಬಿದ್ದಿತು. ಮಹಾಪಾಪವೆಂಬ ಮದ ಗಜ ಸಮೂಹವು, ದ್ರೋಹವೆಂಬ ದೀಹಾಮೃಗವು, ಅಸೂಯೆಯೆಂಬ ಹಂದಿಯು ಶಿವನ ಬೇಟೆಯಿಂದ ವಿನಾಶಹೊಂದಿದವು.
ಪದಾರ್ಥ (ಕ.ಗ.ಪ)
ಸೋಹು-ಅಟ್ಟು
ಮೂಲ ...{Loading}...
ಸೋಹಿದೊಡೆ ದೆಸೆದೆಸೆಗೆ ಹಾಯ್ದುದು
ಮೋಹತಮ ಡಂಭಾದಿ ಮೃಗತತಿ
ತೋಹಿನಲಿ ಬಿದ್ದುದು ಮಹಾಪಾತಕ ಮದೇಭಚಯ
ದ್ರೋಹ ದೀಹಾಮೃಗವಸೂಯ ವ
ರಾಹ ಸಂಕೀರ್ಣೋಪಪಾತಕ
ದೇಹವಳಿದವನಂತವದರೊಳು ಶಿವನ ಬೇಂಟೆಯಲಿ ॥36॥
೦೩೭ ಜಯ ಜಯೆನ್ದುದು ...{Loading}...
ಜಯ ಜಯೆಂದುದು ನಿಖಿಳ ಜಗ ಶ್ರುತಿ
ಚಯ ಛಡಾಳಿಸಿ ಹೊಗಳುತಿರ್ದುದು
ನಯನ ಗೋಚರವಾಯ್ತು ಸಾಕ್ಷಾತ್ಪರನು ಶಿವತತ್ವ
ಲಯದ ಜನನದ ಸುಳಿಯ ಸಂಸೃತಿ
ಮಯ ಸಮುದ್ರವ ಸುರಿದು ಸಲೆ ನಿ
ರ್ಭಯವು ಭಕುತರಿಗೆಂಬವೊಲು ಮಸಗಿತು ಮಹಾಸಬುದ ॥37॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಸರ್ವಲೋಕಗಳು ಜಯಜಯವೆನ್ನಲು, ವೇದಗಳು ಸ್ತುತಿಗೈಯ್ಯಲು, ಸಾಕ್ಷಾತ್ ಶಿವ ಸ್ವರೂಪವು ದೃಷ್ಟಿಗೋಚರವಾಯಿತು. ಲಯ ಮತ್ತು ಹುಟ್ಟಿನ ಸುಳಿಯನ್ನುಳ್ಳ ಸಂಸಾರವೆಂಬ ಸಮುದ್ರವನ್ನು ನಾಶಮಾಡಿ ಭಕ್ತರಿಗೆ ಅಭಯ ಪ್ರದಾನದ ಮಹಾ ಶಬ್ದವೊಂದು ಕೇಳಿತು.
ಪದಾರ್ಥ (ಕ.ಗ.ಪ)
ಸಂಸೃತಿ - ಸಂಸಾರ, ಐಹಿಕ ಬಂದನ
ಸಬುದ - ಶಬ್ದ
ಮೂಲ ...{Loading}...
ಜಯ ಜಯೆಂದುದು ನಿಖಿಳ ಜಗ ಶ್ರುತಿ
ಚಯ ಛಡಾಳಿಸಿ ಹೊಗಳುತಿರ್ದುದು
ನಯನ ಗೋಚರವಾಯ್ತು ಸಾಕ್ಷಾತ್ಪರನು ಶಿವತತ್ವ
ಲಯದ ಜನನದ ಸುಳಿಯ ಸಂಸೃತಿ
ಮಯ ಸಮುದ್ರವ ಸುರಿದು ಸಲೆ ನಿ
ರ್ಭಯವು ಭಕುತರಿಗೆಂಬವೊಲು ಮಸಗಿತು ಮಹಾಸಬುದ ॥37॥
೦೩೮ ಹೇಳುವೊಡೆ ರೋಮಾಞ್ಚನವಲೇ ...{Loading}...
ಹೇಳುವೊಡೆ ರೋಮಾಂಚನವಲೇ
ಕೇಳು ನೃಪ ಕೈಲಾಸವಾಸಿಯ
ಲೀಲೆಯನು ನಿಜಭಕ್ತಜನ ಸಂದರ್ಶನಾರ್ಥವಲೆ
ಆಳು ನಡೆತಂದಿಂದ್ರ ಕೀಲದ
ಶೈಲವನು ಬೆರೆಸಿತು ಮಹಾದ್ಭುತ
ದೇಳಿಗೆಯನೇನೆಂಬೆನೈ ಕೈರಾತ ವಿಭ್ರಮವ ॥38॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅರಸನೇ ಕೇಳು. ಕೈಲಾಸವಾಸಿಯಾದ ಶಿವನಲೀಲೆಯನ್ನು ಹೇಳುವಾಗ ರೋಮಾಂಚನವೆನಿಸುತ್ತದೆ. ಭಕ್ತನನ್ನು ಕಾಣಬೇಕೆಂಬುದು ಶಿವನ ಉದ್ದೇಶವಲ್ಲವೆ? ಶಿವನ ಸೇನೆ ಇಂದ್ರಕೀಲ ಪರ್ವತಕ್ಕೆ ಬಂದು ಆ ಪರ್ವತವನ್ನು ಮುತ್ತಿ ಅದ್ಭುತವನ್ನುಂಟು ಮಾಡಿದ ಬೇಟೆಯ ಸಂಭ್ರಮವನ್ನು ಏನು ಹೇಳಲಿ ?
ಪದಾರ್ಥ (ಕ.ಗ.ಪ)
ಕೈರಾತ- ಬೇಟೆಗಾರರಿಗೆ ಸಂಬಂಧಿಸಿದ
ಮೂಲ ...{Loading}...
ಹೇಳುವೊಡೆ ರೋಮಾಂಚನವಲೇ
ಕೇಳು ನೃಪ ಕೈಲಾಸವಾಸಿಯ
ಲೀಲೆಯನು ನಿಜಭಕ್ತಜನ ಸಂದರ್ಶನಾರ್ಥವಲೆ
ಆಳು ನಡೆತಂದಿಂದ್ರ ಕೀಲದ
ಶೈಲವನು ಬೆರೆಸಿತು ಮಹಾದ್ಭುತ
ದೇಳಿಗೆಯನೇನೆಂಬೆನೈ ಕೈರಾತ ವಿಭ್ರಮವ ॥38॥
೦೩೯ ಇಮ್ಬಿನಲ್ಲಿಹ ಮೂಕ ...{Loading}...
ಇಂಬಿನಲ್ಲಿಹ ಮೂಕ ದಾನವ
ನೆಂಬನೊಬ್ಬನು ತನ್ಮಹಾದ್ರಿ ನಿ
ತಂಬ ವನದ ನಿಕುಂಜದಲಿ ನಿರ್ಭಯ ವಿಹಾರದಲಿ
ಚುಂಬಿಸಿತು ಬಲುರಭಸವೆನೆ ವಿಲ
ಯಾಂಬುಧಿಯ ಕಳಕಳವನಮರರ
ತಿಂಬೆನೀಕ್ಷಣವೆನುತ ಖಳನಾಲಿಸಿದನಾ ಧ್ವನಿಯ ॥39॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಆ ಮಹಾಪರ್ವತದ ತಪ್ಪಲಿನಲ್ಲಿ ್ಲ ನಿರ್ಭಯವಾಗಿ ಓಡಾಡುತ್ತಿದ್ದ ಮೂಕನೆಂಬ ದಾನವನು ಈ ಅಬ್ಬರದ ಧ್ವನಿಯನ್ನು ಕೇಳಿದನು. ದೇವತೆಗಳನ್ನು ಈಗಲೇ ತಿಂದು ಬಿಡುತ್ತೇನೆ ಎಂದು ಪ್ರಳಯಕಾಲದ ಸಮುದ್ರದ ರಭಸದಲ್ಲಿ ಎದ್ದನು.
ಪದಾರ್ಥ (ಕ.ಗ.ಪ)
ಇಂಬು - ಆಶ್ರಯ
ನಿಕುಂಜ - ಪೊದೆ
ನಿತಂಬ - ಬೆಟ್ಟದ ಸಾನು
ಮೂಲ ...{Loading}...
ಇಂಬಿನಲ್ಲಿಹ ಮೂಕ ದಾನವ
ನೆಂಬನೊಬ್ಬನು ತನ್ಮಹಾದ್ರಿ ನಿ
ತಂಬ ವನದ ನಿಕುಂಜದಲಿ ನಿರ್ಭಯ ವಿಹಾರದಲಿ
ಚುಂಬಿಸಿತು ಬಲುರಭಸವೆನೆ ವಿಲ
ಯಾಂಬುಧಿಯ ಕಳಕಳವನಮರರ
ತಿಂಬೆನೀಕ್ಷಣವೆನುತ ಖಳನಾಲಿಸಿದನಾ ಧ್ವನಿಯ ॥39॥
೦೪೦ ಹನ್ದಿಯಾದನು ದನುಜನಾ ...{Loading}...
ಹಂದಿಯಾದನು ದನುಜನಾ ಗಿರಿ
ಕಂದರವ ಹೊರವಂಟು ಬೇಂಟೆಯ
ಮಂದಿಯೊಳಗಡಹಾಯ್ದನೆತ್ತಿದನಡ್ಡ ಬಿದ್ದವರ
ಹಂದಿಯೋ ತಡೆ ನಾಯಿಗಳ ಬಿಡಿ
ಹಿಂದೆ ಹಿಡಿ ಕೆಡೆ ಕುತ್ತು ಕೈಗೊ
ಳ್ಳೆಂದು ಗಜಬಜಿಸಿತ್ತು ಗಾವಳಿ ಗಹನ ಮಧ್ಯದಲಿ ॥40॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ವನದ ಕಣಿವೆಯಿಂದ ಹೊರಬಂದ ಆ ರಾಕ್ಷಸನು ಹಂದಿಯ ರೂಪವನ್ನು ತಾಳಿ, ಬೇಟೆಗಾರರನ್ನು ಅಡಹಾಯ್ದನು. ಆಗ ‘ಹೋ… ಹಂದಿಯೋ.. ನಾಯಿಗಳನ್ನು ಬಿಡಿ. ಹಿಡಿ, ಕಡಿ, ಕೆಡೆಯೆಂದು ಕೂಗುತ್ತಾ ಅರಣ್ಯ ಮಧ್ಯದಲ್ಲಿ ಬೇಟೆಗಾರರ ಹಿಂಡು ಗಜಬಜಿಸಿ ಬೊಬ್ಬೆಹಾಕಿತು.
ಪದಾರ್ಥ (ಕ.ಗ.ಪ)
ಗಾವಳಿ-ಬೊಬ್ಬೆ
ಮೂಲ ...{Loading}...
ಹಂದಿಯಾದನು ದನುಜನಾ ಗಿರಿ
ಕಂದರವ ಹೊರವಂಟು ಬೇಂಟೆಯ
ಮಂದಿಯೊಳಗಡಹಾಯ್ದನೆತ್ತಿದನಡ್ಡ ಬಿದ್ದವರ
ಹಂದಿಯೋ ತಡೆ ನಾಯಿಗಳ ಬಿಡಿ
ಹಿಂದೆ ಹಿಡಿ ಕೆಡೆ ಕುತ್ತು ಕೈಗೊ
ಳ್ಳೆಂದು ಗಜಬಜಿಸಿತ್ತು ಗಾವಳಿ ಗಹನ ಮಧ್ಯದಲಿ ॥40॥
೦೪೧ ಎಳೆವೆರೆಯನೌಡಿದ್ದ್ದ ರಾಹುವೊ ...{Loading}...
ಎಳೆವೆರೆಯನೌಡಿದ್ದ್ದ ರಾಹುವೊ
ಚಲನೆವಡೆರ್ದಿಂಜನಾದ್ರಿಯೋ
ಬೆಳೆದು ಬೀಳದ ಮೇಘವೋ ಕಾರೊಡಲ ಸೂಕರನೋ
ಮುಳಿದು ಘೂಡಿಘುಡಿಸುತ್ತ ಕಿಡಿಕಂ
ಗಳಲಿ ಕಾರ್ಬೊಗೆಯುಸಿರಿನಲಿ ಕೆ
ಕ್ಕಳಿಸಿದೆಕ್ಕ್ಕಲ ನೋಡುತಿರ್ದುದು ದೇವಸಂತತಿಯ ॥41॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಎಳೆಯ ವಯಸ್ಸಿನ ದಾಡೆಯುಳ್ಳ ರಾಹುವೋ, ಚಲಿಸುತ್ತಿರುವ ಅಂಜನಪರ್ವತವೋ ಮಳೆ ಚೆಲ್ಲಲು ಸಿದ್ಧವಾಗಿರುವ ಕಾರ್ಮೊಡವೋ ಕಪ್ಪುಒಡಲಿನ ಆ ಹಂದಿಯೋ? ಅದು ಸಿಟ್ಟಿನಿಂದ ಹೂಂಕರಿಸುತ್ತ (ಮೂಕದಾನವನು) ಕಣ್ಣುಗಳಿಂದ ಕಿಡಿ ಯುಗುಳುತ್ತಾ, ಕೋಪದಿಂದ ಕಪ್ಪಾಗಿದೆಯೋ ಎನ್ನುವಂತಹ ಉಸಿರನ್ನು ಹೊರಚೆಲ್ಲುತ್ತಾ, ಕಣ್ಣುಗಳನ್ನು ಕೆಕ್ಕರಿಸಿ ದೇಸಮೂಹವನ್ನು ನೋಡುತ್ತಿತ್ತು.
ಪದಾರ್ಥ (ಕ.ಗ.ಪ)
ಎಳೆವರೆ-ಬಾಲಚಂದ್ರ
ಪಾಠಾನ್ತರ (ಕ.ಗ.ಪ)
Éಎಳೆವೆರೆಯ ನಡುವಿದ್ದ ರಾಹುವೊ
ಲಳವಡುವ ದಾಡೆಗಳ ದೊಗುಮಿಗೆ
ಬೆಳೆದ ನೀಲಾಚಲಕೆ ಸರಿಯೆಂದೆನಿಪ ಹೇರೊಡಲ
ಮುಳಿದು ಗರ್ಜಿಸಿ ಕಿಡಿಸುರಿವ ಕಂ
ಗಳಲಿ ರೌದ್ರಾಟೋಪದಲಿ ಕೆ
ಕ್ಕಳಿಸಿದಿಕ್ಕೆಲ ನೋಡುತಿರ್ದುದು ದೇವ ಸಂತತಿಯ
—->
ಎಳೆವೆರೆಯನೌಡಿದ್ದ್ದ ರಾಹುವೊ
ಚಲನೆವಡೆರ್ದಿಂಜನಾದ್ರಿಯೋ
ಬೆಳೆದು ಬೀಳದ ಮೇಘವೋ ಕಾರೊಡಲ ಸೂಕರನೋ
ಮುಳಿದು ಘೂಡಿಘುಡಿಸುತ್ತ ಕಿಡಿಕಂ
ಗಳಲಿ ಕಾರ್ಬೊಗೆಯುಸಿರಿನಲಿ ಕೆ
ಕ್ಕಳಿಸಿದೆಕ್ಕ್ಕಲ ನೋಡುತಿರ್ದುದು ದೇವಸಂತತಿಯ
ಪದ್ಯ ಪೂರ್ತಿಯಾಗಿ ಬೇರೆಯಾಗಿದೆ.
ಸ್ವೀಕೃತ ಪಾಠ : ಅರಣ್ಯಪರ್ವ, ಮೈ.ವಿ.ವಿ. ಸಂ : ಸಿ ಪಿ ಕೆ.
ಮೂಲ ...{Loading}...
ಎಳೆವೆರೆಯನೌಡಿದ್ದ್ದ ರಾಹುವೊ
ಚಲನೆವಡೆರ್ದಿಂಜನಾದ್ರಿಯೋ
ಬೆಳೆದು ಬೀಳದ ಮೇಘವೋ ಕಾರೊಡಲ ಸೂಕರನೋ
ಮುಳಿದು ಘೂಡಿಘುಡಿಸುತ್ತ ಕಿಡಿಕಂ
ಗಳಲಿ ಕಾರ್ಬೊಗೆಯುಸಿರಿನಲಿ ಕೆ
ಕ್ಕಳಿಸಿದೆಕ್ಕ್ಕಲ ನೋಡುತಿರ್ದುದು ದೇವಸಂತತಿಯ ॥41॥
೦೪೨ ಕೂಡೆ ಕಟ್ಟಿತು ...{Loading}...
ಕೂಡೆ ಕಟ್ಟಿತು ಭೂತಗಣ ಧ್ವನಿ
ಮಾಡಿ ಜಡಿದಬ್ಬರಿಸಿ ಮೋರೆಯ
ನೀಡಿ ನಾಯ್ಗಳು ತುಡುಕಿದವು ತಿರುಗಿದೊಲೆ ಹಿಮ್ಮಡಿಯ
ಝಾಡಿಸುತ ಕವಿದೆತ್ತಲೊಂದೇ
ದಾಡೆ ಬರತುದು ನೂರು ಗಾಯವ
ನೋಡುತಿರ್ದುದು ಸೇನೆ ಕಂಡನು ಶೂಲಿ ಸೂಕರನ ॥42॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕೂಡಲೇ ಭೂತಗಣವು ಕೂಗುತ್ತಾ ಸುತ್ತುವರಿದವು. ನಾಯಿಗಳು ಮುಖವನ್ನು ಮುಂದೆ ಚಾಚಿ ಹಂದಿಯ ಹಿಮ್ಮಡಿಯನ್ನು ಕಚ್ಚಿದವು. ಆಗ ಆ ಹಂದಿ ಝಾಡಿಸಿ ಒಂದೇ ದಾಡೆಯಿಂದ ಕೊಡಹಲು, ನಾಯಿಗಳಿಗೆ ನೂರು ಗಾಯಗಳಾದವು. ಆಗ ಪರಶಿವನು ಅದನ್ನು ನೋಡಿದನು.
ಮೂಲ ...{Loading}...
ಕೂಡೆ ಕಟ್ಟಿತು ಭೂತಗಣ ಧ್ವನಿ
ಮಾಡಿ ಜಡಿದಬ್ಬರಿಸಿ ಮೋರೆಯ
ನೀಡಿ ನಾಯ್ಗಳು ತುಡುಕಿದವು ತಿರುಗಿದೊಲೆ ಹಿಮ್ಮಡಿಯ
ಝಾಡಿಸುತ ಕವಿದೆತ್ತಲೊಂದೇ
ದಾಡೆ ಬರತುದು ನೂರು ಗಾಯವ
ನೋಡುತಿರ್ದುದು ಸೇನೆ ಕಂಡನು ಶೂಲಿ ಸೂಕರನ ॥42॥
೦೪೩ ಇಡುವ ಸೆಲ್ಲೆಹ ...{Loading}...
ಇಡುವ ಸೆಲ್ಲೆಹ ಬಲ್ಲೆಹದ ಹೆ
ಗ್ಗಿಡಿಯನುಗುಳುವ ಬಾಯ ಧಾರೆಯ
ನುಡಿದು ಹರಹಿ ಮಹೋಗ್ರತರ ಜಾಯಿಲನ ಜಂಗುಳಿಯ
ಕಡಿದು ಕೆಡಹಿ ಪುಳಿಂದ ಶಬರಿಯ
ರೆಡೆಗೆಡೆಯಲೊಡಹಾಯ್ದು ಮಿಗೆ ಘುಡಿ
ಘುಡಿಸಿ ಕವಿದೈತರಲು ಧೃತಿಗೆಟ್ಟುದು ಗಣಸ್ತೋಮ ॥43॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ತನ್ನ ಮೆಲೆ ಬಿದ್ದ ಎಲ್ಲಾ ಆಯುಧಗಳನ್ನೂ ತುಂಡರಿಸಿ ಕಣ್ಣುಗಳಿಂದ ಕಿಡಿಯುಗುಳುತ್ತಾ, ಘರ್ಜಿಸುತ್ತಾ ಬೇಟೆಗಾರರನ್ನು ತಿವಿದು, ನಾಯಿಗಳನ್ನು ಕೆಡಹುತ್ತಾ ಶಬರಶಬರಿಯರ ಮೇಲೆ ಹಂದಿಯು ನುಗ್ಗಿ ಬರಲು, ಶಿವ ಗಣವೆಲ್ಲಾ ಧೃತಿ ಗೆಟ್ಟಿತು.
ಪದಾರ್ಥ (ಕ.ಗ.ಪ)
ಜಾಯಿಲ - ನಾಯಿ
ಪುಳಿಂದ - ಬೇಟೆಗಾರ
ಮೂಲ ...{Loading}...
ಇಡುವ ಸೆಲ್ಲೆಹ ಬಲ್ಲೆಹದ ಹೆ
ಗ್ಗಿಡಿಯನುಗುಳುವ ಬಾಯ ಧಾರೆಯ
ನುಡಿದು ಹರಹಿ ಮಹೋಗ್ರತರ ಜಾಯಿಲನ ಜಂಗುಳಿಯ
ಕಡಿದು ಕೆಡಹಿ ಪುಳಿಂದ ಶಬರಿಯ
ರೆಡೆಗೆಡೆಯಲೊಡಹಾಯ್ದು ಮಿಗೆ ಘುಡಿ
ಘುಡಿಸಿ ಕವಿದೈತರಲು ಧೃತಿಗೆಟ್ಟುದು ಗಣಸ್ತೋಮ ॥43॥
೦೪೪ ಇದುವೆ ಸಮಯವಲಾಯೆನುತ ...{Loading}...
ಇದುವೆ ಸಮಯವಲಾಯೆನುತ ಹೂ
ಡಿದನು ಬಾಣವನುಗಿದು ಪೂರಾ
ಯದಲಿ ತೂಗಿ ಪಿನಾಕಿಯೆಚ್ಚನು ಮೂಕದಾನವನ
ಒದೆದು ಹಾಯ್ದುದು ಬಾಣಗರಿದೋ
ರಿದುದು ಬದಿಯಲಿ ಕೊಡಹಿ ಗೋಳಿಡು
ತದು ಧನಂಜಯನತ್ತ ಹೋದುದು ಹೊತ್ತಕಣೆ ಸಹಿತ ॥44॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಇದೇ ಸಮಯ ಎಂದು ಪಿನಾಕಪಾಣಿಯಾದ ಶಿವನು ಮೂಕದಾನವನ ಮೇಲೆ ಶರವನ್ನು ಪ್ರಯೋಗಿಸಿದನು. ಆ ಬಾಣ ಹಂದಿಯನ್ನು ಹೊಕ್ಕು ಮತ್ತೊಂದು ಬದಿಯಿಂದ ಹೊರಬಂದಾಗ, ಬಾಣದ ಹಿಂಭಾಗದ ಗರಿ ಹೊರಗೆ ಕಾಣಿಸಿತು. ಆ ಹಂದಿಯಾದರೋ ಗೋಳಿಡುತ್ತಾ ಬಾಣಸಮೇತವಾಗಿ ಅರ್ಜುನನತ್ತ ಓಡಿಹೋಯಿತು.
ಪದಾರ್ಥ (ಕ.ಗ.ಪ)
ಕಣೆ - ಬಾಣ
ಮೂಲ ...{Loading}...
ಇದುವೆ ಸಮಯವಲಾಯೆನುತ ಹೂ
ಡಿದನು ಬಾಣವನುಗಿದು ಪೂರಾ
ಯದಲಿ ತೂಗಿ ಪಿನಾಕಿಯೆಚ್ಚನು ಮೂಕದಾನವನ
ಒದೆದು ಹಾಯ್ದುದು ಬಾಣಗರಿದೋ
ರಿದುದು ಬದಿಯಲಿ ಕೊಡಹಿ ಗೋಳಿಡು
ತದು ಧನಂಜಯನತ್ತ ಹೋದುದು ಹೊತ್ತಕಣೆ ಸಹಿತ ॥44॥
೦೪೫ ಬನ್ದು ಗಿರಿ ...{Loading}...
ಬಂದು ಗಿರಿ ಕಂದರದೊಳಿಹ ಮುನಿ
ವೃಂದದೊಳಗಡಹಾಯ್ದು ಕೆಡಹುತ
ಹಂದಿ ಮೋರೆಯ ನೆಗಹಿ ಮಲೆವುತ ಗಜರಿ ಗರ್ಜಿಸಿತು
ಮಂದಿ ಬೆದರುತ ಗೋಳಿಡುತಲಾ
ಇಂದುಧರನೇ ಬಲ್ಲ ಶಿವ ಶಿವ
ಯೆಂದು ಮೊರೆಯಿಡೆ ಕೇಳಿ ಕಂದೆರೆದೆದ್ದನಾ ಪಾರ್ಥ ॥45॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಗಿರಿ ಕಂದರದಲ್ಲಿದ್ದ ಮುನಿಗಳ ಕಡೆಗೆ ಓಡಿ ಬಂದ ಆ ಹಂದಿ ಅವರನ್ನು ಅಡಹಾಯ್ದು ಕೆಡಹಿ, ಮಲೆತು ಘರ್ಜಿಸಿತು. ಆಗ ಆ ಮುನಿಗಳು ಹೆದರಿ ಶಿವಶಿವಾ ನೀನೇ ಕಾಪಾಡು ಎಂದು ಗೋಳಿಡಲು, ಪಾರ್ಥನು ಕಣ್ಣು ತೆರೆದನು.
ಪದಾರ್ಥ (ಕ.ಗ.ಪ)
ಇಂದುಧರ - ಈಶ್ವರ
ಮೂಲ ...{Loading}...
ಬಂದು ಗಿರಿ ಕಂದರದೊಳಿಹ ಮುನಿ
ವೃಂದದೊಳಗಡಹಾಯ್ದು ಕೆಡಹುತ
ಹಂದಿ ಮೋರೆಯ ನೆಗಹಿ ಮಲೆವುತ ಗಜರಿ ಗರ್ಜಿಸಿತು
ಮಂದಿ ಬೆದರುತ ಗೋಳಿಡುತಲಾ
ಇಂದುಧರನೇ ಬಲ್ಲ ಶಿವ ಶಿವ
ಯೆಂದು ಮೊರೆಯಿಡೆ ಕೇಳಿ ಕಂದೆರೆದೆದ್ದನಾ ಪಾರ್ಥ ॥45॥
೦೪೬ ಕಣ್ಡನರ್ಜುನನೀ ವರಾಹನ ...{Loading}...
ಕಂಡನರ್ಜುನನೀ ವರಾಹನ
ದಂಡಿ ಲೇಸಲ್ಲೆನುತ ಬಾಣವ
ಗಾಂಡಿವದೊಳಳವಡಿಸಿ ಬೊಬ್ಬಿರಿದೆಚ್ಚನಾ ಖಳನ
ದಿಂಡುಗೆಡೆದುದು ಕಾಲ ಕೊಡಹುತ
ಗಂಡಶೈಲದವೋಲು ಭೂತವ
ದಿಂಡುದರಿಯುವ ಹಂದಿ ಬಿದ್ದುದು ಪಾರ್ಥನಿದಿರಿನಲಿ ॥46॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಆ ಹಂದಿಯನ್ನು ಕಂಡ ಅರ್ಜುನನು ಅದರ ರೀತಿ ಸರಿಯಿಲ್ಲ ಎನ್ನುತ್ತಾ ಗಾಂಡೀವಕ್ಕೆ ಬಾಣವನ್ನು ಹೂಡಿ ಅದರ ಮೇಲೆ ಪ್ರಯೋಗಿಸಿದನು. ಆ ಕೂಡಲೇ ಇತರ ಜೀವಿಗಳನ್ನು ಹಿಂಸಿಸುತ್ತಿದ್ದ ಆ ಹಂದಿಯು ಕಾಲನ್ನು ಕೊಡಹುತ್ತಾ ಪರ್ವತದ ಮೇಲಿಂದ ಉರುಳಿಬಿದ್ದ ದೊಡ್ಡ ಬಂಡೆಯಂತೆ ಅರ್ಜುನನ ಎದುರೇ ಬಿದ್ದಿತು.
ಪದಾರ್ಥ (ಕ.ಗ.ಪ)
ದಂಡಿ -ರೀತಿ
ದಿಂಡುಗೆಡೆ - ಕೆಳಗೆ ಬೀಳು
ಗಂಡ ಶೈಲ - ಪರ್ವತದಿಂದುರುಳಿದ ಹೆಬ್ಬಂಡೆ
ಮೂಲ ...{Loading}...
ಕಂಡನರ್ಜುನನೀ ವರಾಹನ
ದಂಡಿ ಲೇಸಲ್ಲೆನುತ ಬಾಣವ
ಗಾಂಡಿವದೊಳಳವಡಿಸಿ ಬೊಬ್ಬಿರಿದೆಚ್ಚನಾ ಖಳನ
ದಿಂಡುಗೆಡೆದುದು ಕಾಲ ಕೊಡಹುತ
ಗಂಡಶೈಲದವೋಲು ಭೂತವ
ದಿಂಡುದರಿಯುವ ಹಂದಿ ಬಿದ್ದುದು ಪಾರ್ಥನಿದಿರಿನಲಿ ॥46॥
೦೪೭ ಬನ್ದನೀಶ್ವರ ನಾವು ...{Loading}...
ಬಂದನೀಶ್ವರ ನಾವು ಕೆಡಹಿದ
ಹಂದಿ ನಮ್ಮದು ತೆಗೆಯಿಯೆನೆ ನರ
ನೆಂದ ನಮ್ಮಂಬಿನಲಿ ಬಿದ್ದುದು ಸಾರು ನೀನೆನಲು
ಬಂದುದೇಕಾಮಿಷ ವಿರೋಧದ
ಕುಂದು ಪಾರ್ಥನ ಚಿತ್ತದಲಿ ಬಾ
ಲೇಂದುಧರನೆಂದೆತ್ತಬಲ್ಲನು ಕೆಣಕಿದನು ಶಿವನ ॥47॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಶಿವನು ಬಂದು - ‘ನಾವು ಕೆಡಹಿದ ಹಂದಿ, ಇದನ್ನು ತೆಗೆಯಿರಿ’ ಎಂದನು. ಆಗ ಅರ್ಜುನನು ‘ಇದು ನನ್ನ ಬಾಣದಿಂದ ಬಿದ್ದಿದೆ, ನೀನು ನಡೆ’ ಎಂದ. ಪಾರ್ಥನ ಮನಸ್ಸಿನಲ್ಲಿ ಆಸೆಯ ವಿರೋಧವೃತ್ತಿಯಲ್ಲಿ ಕುಂದೇಕೆ ಬಂದಿತು? ಇವನೇ ಶಿವನೆಂದು ತಿಳಿಯದೆ, ಅವನನ್ನು ಪಾರ್ಥನು ಕೆಣಕಿದನು.
ಪದಾರ್ಥ (ಕ.ಗ.ಪ)
ಆಮಿಷ - ಆಸೆ
ಬಾಲೇಂದುಧರ - ಈಶ್ವರ
ಪಾಠಾನ್ತರ (ಕ.ಗ.ಪ)
ಬಂದುದೇಕಾಮಿಪ - ಬಂದುದೇಕಾಮಿಷ
ಅರಣ್ಯಪರ್ವ , ಮೈ.ವಿ.ವಿ.
ಮೂಲ ...{Loading}...
ಬಂದನೀಶ್ವರ ನಾವು ಕೆಡಹಿದ
ಹಂದಿ ನಮ್ಮದು ತೆಗೆಯಿಯೆನೆ ನರ
ನೆಂದ ನಮ್ಮಂಬಿನಲಿ ಬಿದ್ದುದು ಸಾರು ನೀನೆನಲು
ಬಂದುದೇಕಾಮಿಷ ವಿರೋಧದ
ಕುಂದು ಪಾರ್ಥನ ಚಿತ್ತದಲಿ ಬಾ
ಲೇಂದುಧರನೆಂದೆತ್ತಬಲ್ಲನು ಕೆಣಕಿದನು ಶಿವನ ॥47॥