೦೪

೦೦೦ ಸೂ ಭಜಿಸಿದನು ...{Loading}...

ಸೂ. ಭಜಿಸಿದನು ನರನಿಂದ್ರಕೀಲದೊ
ಳಜ ಸುರಾರ್ಚಿತ ಚರಣ ಕಮಲನ
ತ್ರಿಜಗದಧಿಪತಿಯನು ಮಹಾ ನಟರಾಯಧೂರ್ಜಟಿಯ

೦೦೧ ಕೇಳು ಜನಮೇಜಯ ...{Loading}...

ಕೇಳು ಜನಮೇಜಯ ಧರಿತ್ರೀ
ಪಾಲ ಪಾಂಡುಕುಮಾರರಟವಿಯ
ಪಾಳಿಯಲಿ ಪರುಠವಿಸಿದರು ಪದಯುಗ ಪರಿಭ್ರಮವ
ಲೋಲಲೋಚನೆ ಸಹಿತ ತತ್ಕುಲ
ಶೈಲದಲಿ ತದ್ವಿಪಿನದಲಿ ತ
ತ್ಕೂಲವತಿಗಳ ತೀರದಲಿ ತೊಳಲಿದರು ಬೇಸರದೆ ॥1॥

೦೦೨ ಫಳ ಮೃಗಾವಳಿ ...{Loading}...

ಫಳ ಮೃಗಾವಳಿ ಸವೆದುದಿನ್ನೀ
ಹಳುವು ಸಾಕಿನ್ನೊಂದರಣ್ಯ
ಸ್ಥಳವ ನೋಡಲಿ ಕಟಕ ನಡೆಯಲಿ ವಿಪ್ರಸಂಕುಲದ
ಸುಲಭವೀ ವನವೆಂದು ತಮ್ಮೊಳು
ತಿಳಿದು ಪಾರ್ಥ ಯುಧಿಷ್ಠಿರರು ಮುನಿ
ಕುಲ ಸಹಿತ ನಲವಿಂದ ಹೊಕ್ಕರು ದ್ವೈತಕಾನನವ ॥2॥

೦೦೩ ಅರಸ ಕಳುಹಿದ ...{Loading}...

ಅರಸ ಕಳುಹಿದ ದೂತನಾ ಗಜ
ಪುರವ ಹೊಕ್ಕು ತದೀಯ ವಾರ್ತಾ
ಭರದ ವಿವರವನರಿದು ಬಂದನು ಕಂಡನವನಿಪನ
ಕುರುನೃಪಾಲನ ಮದವನಾತನ
ಸಿರಿಯನಾತನ ಬಲುಹನಾತನ
ಪರಿಯನರುಹಿದನಬುಜಮುಖಿ ಪವನಜರು ಕಳವಳಿಸೆ ॥3॥

೦೦೪ ಮೂದಲಿಸಿದಳು ದ್ರುಪದ ...{Loading}...

ಮೂದಲಿಸಿದಳು ದ್ರುಪದ ತನುಜೆ ವೃ
ಕೋದರನನರ್ಜುನನವನಿಪ
ನಾದಿಯಾದೈವರನು ಕೌರವನೃಪನ ಪತಿಕರಿಸಿ
ಆದೊಡಿದೆ ಕುರುರಾಜವಂಶ
ಚ್ಛೇದ ಧೀರ ಕುಠಾರವೆನುತ ವೃ
ಕೋದರನು ತೂಗಿದನು ಗದೆಯನು ಗಾಢಕೋಪದಲಿ ॥4॥

೦೦೫ ಏಕಿದೇಕೆ ವೃಥಾ ...{Loading}...

ಏಕಿದೇಕೆ ವೃಥಾ ನಿಶಾಟ
ವ್ಯಾಕರಣ ಪಾಂಡಿತ್ಯವಕಟ ವಿ
ವೇಕ ರಹಿತನೆ ನೀ ವೃಕೋದರ ದ್ರುಪದ ಸುತೆಯಂತೆ
ಸಾಕು ಸಾಕೈ ತಮ್ಮ ಸತ್ಯವೆ
ಸಾಕು ನಮಗೆ ಮದೀಯ ಪುಣ್ಯ
ಶ್ಲೋಕತೆಯನುಳುಹೆಂದು ಗಲ್ಲವ ಹಿಡಿದನನಿಲಜನ ॥5॥

೦೦೬ ಅರಸಿ ನಿನ್ನಯ ...{Loading}...

ಅರಸಿ ನಿನ್ನಯ ಶೋಕವಹ್ನಿಯೊ
ಳುರಿವುದರಿನೃಪಜಲಧಿ ಕೇಳಂ
ಬುರುಹಲೋಚನೆ ನಿನ್ನ ಲೋಚನವಾರಿ ಪೂರದಲಿ
ಕುರುನೃಪಾಲನ ಸತಿಯ ಶೋಕ
ಸ್ಫುರದನಲನುಜ್ವಲಿಸುವುದು ರಿಪು
ವಿರಚಿತದ ವಿಪರೀತಕಿದು ವಿಪರೀತವಹುದೆಂದ ॥6॥

೦೦೭ ಆ ಸಮಯದಲಿ ...{Loading}...

ಆ ಸಮಯದಲಿ ಬಂದನಗ್ಗದ
ಭೂಸುರ ಶ್ರೀಕಂಠನೋ ಪ
ದ್ಮಾಸನನ ಪಲ್ಲಟವೊ ಕಮಲಾಂಬಕನ ಚುಂಬಕವೊ
ಭಾಸುರ ಕ್ರತುಶತದ ರೂಪ ವಿ
ಳಾಸವೋ ಶ್ರುತಿಕೋಟಿಕನ್ಯಾ
ವಾಸಭವನವೊ ದೇವ ವೇದವ್ಯಾಸ ಮುನಿರಾಯ ॥7॥

೦೦೮ ಹಾ ಮಹಾದೇವಾಯಿದಾರು ...{Loading}...

ಹಾ ಮಹಾದೇವಾಯಿದಾರು ಮ
ಹಾ ಮುನೀಶ್ವರರೆನುತ ಮುನಿಪ
ಸ್ತೋಮವೆದ್ದುದು ಧರ್ಮನಂದನನವರಿಗಿದಿರಾಗಿ
ಪ್ರೇಮ ಪುಳಕದ ನಯನ ಸಲಿಲದ
ರೋಮಹರ್ಷದ ಸತ್ಯಭಾವದ
ಭೂಮಿಪತಿ ಮೈಯಿಕ್ಕಿದನು ಮುನಿವರನ ಚರಣದಲಿ ॥8॥

೦೦೯ ವಿವಿಧ ಮುನಿಗಳ ...{Loading}...

ವಿವಿಧ ಮುನಿಗಳ ಗೋತ್ರನಾಮ
ಪ್ರವರ ಸಹಿತಭಿವಾದ ಕರ್ಮೋ
ತ್ಸವವ ಕೈಕೊಳುತನಿಬರನು ಮನ್ನಿಸಿದನುಚಿತದಲಿ
ಯುವತಿ ಪದಕೆರಗಿದೊಡೆ ಭೂಯಾತ್
ತವ ಮನೋರಥವೆನುತ ನಸುನಗು
ತವನಿಪಾಲನ ಪರ್ಣಶಾಲೆಗೆ ಮುನಿಪನೈತಂದ ॥9॥

೦೧೦ ಇದೆ ಪವಿತ್ರ ...{Loading}...

ಇದೆ ಪವಿತ್ರ ಪಲಾಶ ಪತ್ರದ
ಲುದಕವಘ್ರ್ಯಾಚಮನ ಪಾದ್ಯ
ಕ್ಕಿದೆ ವಿಮಳ ದರ್ಭೋಪರಚಿತಾಸನ ವಿಳಾಸದಲಿ
ಇದನು ಕಾಂಚನ ಪಾತ್ರಜಲವೆಂ
ದಿದು ವರಾಸನವೆಂದು ಕೈಕೊಂ
ಬುದು ಯಥಾಸಂಭವದಲೆಂದನು ಧರ್ಮನಂದನನು ॥10॥

೦೧೧ ಈ ಪವಿತ್ರೋದಕವಲೇ ...{Loading}...

ಈ ಪವಿತ್ರೋದಕವಲೇ ದೋ
ಷಾಪಹರ ದರ್ಭಾಸನದಲಿಂ
ದೀ ಪೃಥಿವಿ ಸರ್ವಾಧಿಪತ್ಯವು ಸೇರುವುದು ನಿನಗೆ
ಭೂಪಕೇಳೈ ಜೇನುನೊಣದ ಮ
ಧೂಪಚಯವವಕಿಲ್ಲವೇ ಸ
ರ್ವಾಪಹಾರವು ಪರರಿಗಾ ಕೌರವನ ಸಿರಿಯೆಂದ ॥11॥

೦೧೨ ಒಡಲು ಬೀಳಲಿ ...{Loading}...

ಒಡಲು ಬೀಳಲಿ ಮೇಣು ತಮ್ಮದಿ
ರಡವಿಯಲಿ ಹಾಯಿಕ್ಕಿ ಹೋಗಲಿ
ಮಡದಿ ಮುನಿಯಲಿ ಬಸಿದು ಬೀಳಲಿ ಧರಣಿ ಕುರುಪತಿಗೆ
ಎಡೆಯಲುಳಿವಿವರಾಗು ಹೋಗಿನ
ಗೊಡವೆಯೆನಗಿಲ್ಲೆನ್ನ ಸತ್ಯದ
ನುಡಿಗೆ ಹಾದರವಿಲ್ಲದಂತಿರೆ ಕರುಣಿಸುವುದೆಂದ ॥12॥

೦೧೩ ಬಾಧೆಯುಣ್ಟೇ ನಿನ್ನ ...{Loading}...

ಬಾಧೆಯುಂಟೇ ನಿನ್ನ ಸತ್ಯಕೆ
ಸಾಧಿಸುವುದವಧಿಯನು ನಿನ್ನ ವಿ
ರೋಧಿಗಳಿಗೆ ನಿವಾಸವಹುದು ಕೃತಾಂತಲೋಕದಲಿ
ಆಧಿಪತ್ಯ ಭ್ರಮಿತರಲಿ ರಾ
ಜ್ಯಾದಿಯಲಿ ಕಡೆಗೊಂಡಿರಖಿಲ ನಿ
ರೋಧವನು ಕಡನನು ಸವೃದ್ಧಿಕವಾಗಿ ಕೊಡಿಯೆಂದ ॥13॥

೦೧೪ ಆವುದರಿದಿವರಿಗೆ ಭವತ್ಕರು ...{Loading}...

ಆವುದರಿದಿವರಿಗೆ ಭವತ್ಕರು
ಣಾವಲೋಕನವುಂಟು ಪುನರಪಿ
ದೇವಕೀ ನಂದನನಲೊದಗುವ ಮೇಲುನೋಟದಲಿ
ಈ ವಿಪತ್ತೇಸರದು ಪಾಂಡವ
ಜೀವಿಗಳು ನೀವಿಬ್ಬರಿರಲೆಂ
ದಾ ವಿಭಾಂಡಕ ಶೌನಕಾದಿಗಳೆಂದರಾ ಮುನಿಗೆ ॥14॥

೦೧೫ ಕರೆಸಿ ದ್ರುಪದಾತ್ಮಜೆಯ ...{Loading}...

ಕರೆಸಿ ದ್ರುಪದಾತ್ಮಜೆಯ ಕಂಬನಿ
ಯೊರತೆಯಾರಲು ನುಡಿದನಾಕೆಯ
ಕರಣದಲಿ ಕಿವಿಗೊಂಡ ಕಳಕಳವನು ವಿಭಾಡಿಸಿದ
ಧರಣಿಪತಿಗೇಕಾಂತ ಭವನದೊ
ಳೊರೆದನೀಶ್ವರ ವಿಷಯ ಮಂತ್ರಾ
ಕ್ಷರವನಂಗೋಪಾಂಗ ಮುದ್ರಾಶಕ್ತಿಗಳು ಸಹಿತ ॥15॥

೦೧೬ ಇದು ಮಹೀಶರ ...{Loading}...

ಇದು ಮಹೀಶರ ಶೋಕಹರವಿಂ
ತಿದು ವಿರೋಧಿಬಲ ಪ್ರಭಂಜನ
ವಿದು ಸಕಲ ಪುರುಷಾರ್ಥ ಸಾಧನವಖಿಳ ದುರಿತಹರ
ಇದು ಮಹಾಧಿವ್ಯಾಧಿಹರವಿಂ
ತಿದನು ನೀ ಕೊಳ್ಳರ್ಜುನಂಗೊರೆ
ವುದು ರಹಸ್ಯದೊಳೆಂದು ಮುನಿ ಕರುಣಿಸದನರಸಂಗೆ ॥16॥

೦೧೭ ಪಾರ್ಥನೈದುವುದಿನ್ದ್ರಕೀಲದೊ ...{Loading}...

ಪಾರ್ಥನೈದುವುದಿಂದ್ರಕೀಲದೊ
ಳರ್ಥಿಸಲಿ ಶಂಕರನನಖಿಳ
ಸ್ವಾರ್ಥ ಸಿದ್ಧಿಗೆ ಬೀಜವಿದು ಬೇರೊಂದು ಬಯಸದಿರು
ವ್ಯರ್ಥರವದಿರು ನಿನ್ನ ಹಗೆಯ ಕ
ದರ್ಥನದೊಳಿನ್ನೇನು ಜಗಕೆ ಸ
ಮರ್ಥನೊಬ್ಬನೆ ಶಂಭು ಕೃಪೆ ಮಾಡುವನು ನಿನಗೆಂದ ॥17॥

೦೧೮ ಇನ್ದುಮುಖಿಯನು ಭೀಮನನು ...{Loading}...

ಇಂದುಮುಖಿಯನು ಭೀಮನನು ಯಮ
ನಂದನನನರ್ಜುನನ ಯಮಳರ
ನಂದು ಕೊಂಡಾಡಿದನು ಮೈದಡವಿದನು ಮೋಹದಲಿ
ಬಂದು ಸಂದಣಿಸಿದ ಮುನಿ ದ್ವಿಜ
ವೃಂದವನು ಮನ್ನಿಸಿ ನಿಜಾಶ್ರಮ
ಮಂದಿರಕೆ ಮುದದಿಂದ ಬಿಜಯಂಗೈದನಾ ಮುನಿಪ ॥18॥

೦೧೯ ಅರಸ ಕೇಳೈ ...{Loading}...

ಅರಸ ಕೇಳೈ ಮುನಿಪನತ್ತಲು
ಸರಿದನಿತ್ತಲು ಪಾರ್ಥನನು ನೃಪ
ಕರೆದು ವೇದವ್ಯಾಸನಿತ್ತುಪದೇಶ ವಿಸ್ತರವ
ಅರುಹಿದನು ಕೈಲಾಸ ಸೀಮಾ
ವರುಷದಲ್ಲಿಹುದಿಂದ್ರ ಕೀಲದ
ಗಿರಿ ಮಹೇಶ ಕ್ಷೇತ್ರವಲ್ಲಿಗೆ ಹೋಗು ನೀನೆಂದ ॥19॥

೦೨೦ ಅಲ್ಲಿ ಭಜಿಸುವದಮಳ ...{Loading}...

ಅಲ್ಲಿ ಭಜಿಸುವದಮಳ ಗಿರಿಜಾ
ವಲ್ಲಭನನಾಮ್ನಾಯ ಜಿಹ್ವೆಗೆ
ದುರ್ಲಭನನಧಿದೈವವನು ಬ್ರಹ್ಮೇಂದ್ರ ಭಾಸ್ಕರರ
ಬಲ್ಲೆನೆಂಬರ ಬಹಳ ಗರ್ವವ
ಘಲ್ಲಿಸುವ ಗಡ ತನ್ನ ಭಕ್ತರು
ಬಲ್ಲಿದರು ತನಗೆಂಬ ಬೋಳೆಯರರಸನಿಹನೆಂದ ॥20॥

೦೨೧ ಏಳು ನೀ ...{Loading}...

ಏಳು ನೀ ಪ್ರತ್ಯೂಷದಲಿ ಶಶಿ
ಮೌಳಿ ಮೈದೋರಲಿ ತದೀಯ ಶ
ರಾಳಿಗಳು ಸಿದ್ಧಿಸಲಿ ಸೇರಲಿ ಶಿವನ ಕೃಪೆ ನಿನಗೆ
ಸೋಲದಿರು ಸುರಸತಿಯರಿಗೆ ಸ
ಮ್ಮೇಳವಾಗದಿರವರೊಡನೆ ಕೈ
ಮೇಳವಿಸುವುದು ಕಾಮವೈರಿಯ ಚರಣಕಮಲದಲಿ ॥21॥

೦೨೨ ಮುಗ್ಗದಿರು ಮಾಯೆಯಲಿ ...{Loading}...

ಮುಗ್ಗದಿರು ಮಾಯೆಯಲಿ ಮದದಲಿ
ನೆಗ್ಗದಿರು ರೋಷದ ವಿಡಂಬದ
ಲಗ್ಗಳೆಯತನದಿಂದಹಂಕೃತಿ ಭರದಿ ಮೆರೆಯದಿರು
ಅಗ್ಗಿಸದಿರಾತ್ಮನನು ಲೋಭದೊ
ಳೊಗ್ಗದಿರು ಲಘುವಾಗದಿರು ಮಿಗೆ
ಹಿಗ್ಗದಿರು ಹೊಗಳಿಕೆಗೆ ಮನದಲಿ ಪಾರ್ಥ ಕೇಳ್ ಎಂದ ॥22॥

೦೨೩ ಆಡದಿರಸತ್ಯವನು ಕಪಟವ ...{Loading}...

ಆಡದಿರಸತ್ಯವನು ಕಪಟವ
ಮಾಡದಿರು ನಾಸ್ತಿಕರೊಡನೆ ಮಾ
ತಾಡದಿರು ಕೆಳೆಗೊಳ್ಳದಿರು ವಿಶ್ವಾಸಘಾತಕರ
ಖೋಡಿಗಳೆಯದಿರಾರುವನು ಮೈ
ಗೂಡದಿರು ಪರವಧುವಿನಲಿ ರಣ
ಖೇಡನಾಗದಿರೆಂದು ನುಡಿದನು ನೃಪತಿಯರ್ಜುನಗೆ ॥23॥

೦೨೪ ಕ್ರೂರರಿಗೆ ಶಠರಿಗೆ ...{Loading}...

ಕ್ರೂರರಿಗೆ ಶಠರಿಗೆ ವೃಥಾಹಂ
ಕಾರಿಗಳಿಗತಿ ಕುಟಿಲರಿಗೆಯುಪ
ಕಾರಿಯಪಘಾತರಿಗೆ ಭೂತದ್ರೋಹಿ ಜೀವರಿಗೆ
ಜಾರರಿಗೆ ಜಡರಿಗೆ ನಿಕೃಷ್ಟಾ
ಚಾರರಿಗೆ ಪಿಸುಣರಿಗೆ ಧರ್ಮವಿ
ದೂರರಿಗೆ ಕಲಿಪಾರ್ಥ ಕೇಳ್ ಪರಲೋಕವಿಲ್ಲೆಂದ ॥24॥

೦೨೫ ಭ್ರಾತೃ ಮಿತ್ರ ...{Loading}...

ಭ್ರಾತೃ ಮಿತ್ರ ವಿರೋಧಕಗೆ ಪಿತೃ
ಮಾತೃಘಾತಿಗೆ ಖಳನಿಗುತ್ತಮ
ಜಾತಿನಾಶಕನಿಂಗೆ ವರ್ಣಾಶ್ರಮ ವಿದೂಷಕಗೆ
ಜಾತಿಸಂಕರಕಾರಗಾ ಕ್ರೋ
ಧಾತಿರೇಕಗೆ ಗಾಢ ಗರ್ವಿಗೆ
ಭೂತವೈರಿಗೆ ಪಾರ್ಥ ಕೇಳ್ ಪರಲೋಕವಿಲ್ಲೆಂದ ॥25॥

೦೨೬ ಸ್ವಾಮಿಕಾರ್ಯ ವಿಘಾತಕಙ್ಗತಿ ...{Loading}...

ಸ್ವಾಮಿಕಾರ್ಯ ವಿಘಾತಕಂಗತಿ
ಕಾಮುಕಗೆ ಮಿಥ್ಯಾಪವಾದಿಗೆ
ಭೂಮಿದೇವ ದ್ವೇಷಿಗತ್ಯಾಶಿಗೆ ಬಕವ್ರತಿಗೆ
ಗ್ರಾಮಣಿಗೆ ಪಾಷಂಡಗಾತ್ಮ ವಿ
ರಾಮಕಾರಿಗೆ ಕೂಟಸಾಕ್ಷಿಗೆ
ನಾಮಧಾರಿಗೆ ಪಾರ್ಥ ಕೇಳ್ ಪರಲೋಕವಿಲ್ಲೆಂದ ॥26॥

೦೨೭ ಅದರಿನಾವಙ್ಗುಪಹತಿಯ ಮಾ ...{Loading}...

ಅದರಿನಾವಂಗುಪಹತಿಯ ಮಾ
ಡದಿರು ಸಚರಾಚರದ ಚೈತ
ನ್ಯದಲಿ ನಿನ್ನನೆ ಬೆರೆಸಿ ಕಾಬುದು ನಿನ್ನ ತನುವೆಂದು
ಬೆದರದಿರು ಬಲುತಪಕೆ ಶೂಲಿಯ
ಪದಯುಗವ ಮರೆಯದಿರು ಹರಿಯನು
ಹೃದಯದಲಿ ಪಲ್ಲಟಿಸದಿರು ಸುಖಿಯಾಗು ಹೋಗೆಂದ ॥27॥

೦೨೮ ಕರುಣಿಸಲಿ ಕಾಮಾರಿ ...{Loading}...

ಕರುಣಿಸಲಿ ಕಾಮಾರಿ ಕೃಪೆಯಿಂ
ವರ ಮಹಾಸ್ತ್ರವನಿಂದ್ರ ಯಮ ಭಾ
ಸ್ಕರ ಹುತಾಶನ ನಿರುತಿ ವರುಣ ಕುಬೇರ ಮಾರುತರು
ಸುರರು ವಸುಗಳು ಸಿದ್ಧ ವಿದ್ಯಾ
ಧರ ಮಹೋರಗ ಯಕ್ಷ ಮನು ಕಿಂ
ಪುರುಷರೀಯಲಿ ನಿನಗೆ ವಿಮಳಸ್ವಸ್ತಿವಾಚನವ ॥28॥

೦೨೯ ಎನೆ ಹಸಾದವೆನುತ್ತೆ ...{Loading}...

ಎನೆ ಹಸಾದವೆನುತ್ತೆ ಯಮ ನಂ
ದನಗೆ ಭೀಮಂಗೆರಗಿದನು ಮುನಿ
ಜನಕೆ ಮೈಯಿಕ್ಕಿದನು ಮುಳುಗಿದನಕ್ಷತೌಘದಲಿ
ವನಜಮುಖಿ ಮುನಿ ವಧುಗಳಾಶೀ
ರ್ವಿನುತ ದಧಿ ದೂರ್ವಾಕ್ಷತೆಯನು
ಬ್ಬಿನಲಿ ಕೈಕೊಳುತನಿಬರನು ಮನ್ನಿಸಿದನುಚಿತದಲಿ ॥29॥

೦೩೦ ನೆನೆಯದಿರು ತನುಸುಖವ ...{Loading}...

ನೆನೆಯದಿರು ತನುಸುಖವ ಮನದಲಿ
ನೆನೆ ವಿರೋಧಿಯ ಸಿರಿಯನೆನ್ನಯ
ಘನತರದ ಪರಿಭವವ ನೆನೆ ನಿಮ್ಮಗ್ರಜರ ನುಡಿಯ
ಮುನಿವರನ ಮಂತ್ರೋಪದೇಶವ
ನೆನೆವುದಭವನ ಚರಣ ಕಮಲವ
ನೆನುತ ದುರುಪದಿಯೆರಗಿದಳು ಪಾರ್ಥನ ಪದಾಬ್ಜದಲಿ ॥30॥

೦೩೧ ಹರನ ಚರಣವ ...{Loading}...

ಹರನ ಚರಣವ ಭಜಿಸುವೆನು ದು
ರ್ಧರ ತಪೋನಿಷ್ಠೆಯಲಿ ಕೇಳೆಲೆ
ತರುಣಿ ಪಾಶುಪತಾಸ್ತ್ರವಾದಿಯ ದಿವ್ಯಮಾರ್ಗಣವ
ಪುರಹರನ ಕೃಪೆಯಿಂದ ಪಡೆದಾ
ನರಿಗಳನು ಸಂಹರಿಸಿ ನಿನ್ನಯ
ಪರಿಭವಾಗ್ನಿಯ ನಂದಿಸುವೆ ನಿಲ್ಲೆಂದನಾ ಪಾರ್ಥ ॥31॥

೦೩೨ ಬಿಗಿದ ಬತ್ತಳಿಕೆಯನು ...{Loading}...

ಬಿಗಿದ ಬತ್ತಳಿಕೆಯನು ಹೊನ್ನಾ
ಯುಗದ ಖಡುಗ ಕಠಾರಿ ಚಾಪವ
ತೆಗೆದನಳವಡೆಗಟ್ಟಿ ಬದ್ದುಗೆದಾರ ಗೊಂಡೆಯವ
ದುಗುಡ ಹರುಷದ ಮುಗಿಲ ತಲೆಯೊ
ತ್ತುಗಳಿಗಿಟ್ಟೆಡೆಯಾಗಿ ಗುಣ ಮೌ
ಳಿಗಳ ಮಣಿ ಕಲಿಪಾರ್ಥ ಬೀಳ್ಕೊಂಡನು ನಿಜಾಗ್ರಜನ ॥32॥

೦೩೩ ಹರಡೆ ವಾಮದೊಳುಲಿಯೆ ...{Loading}...

ಹರಡೆ ವಾಮದೊಳುಲಿಯೆ ಮಧುರ
ಸ್ವರದಲಪಸವ್ಯದಲಿ ಹಸುಬನ
ಸರ ಸಮಾಹಿತಮಾಗೆ ಸೂರ್ಯೋದಯದ ಸಮಯದಲಿ
ಹರಿಣ ಭಾರದ್ವಾಜನುಡಿಕೆಯ
ಸರಟ ನಕುಲನ ತಿದ್ದುಗಳ ಕು
ಕ್ಕುರನ ತಾಳಿನ ಶಕುನವನು ಕೈಕೊಳುತ ನಡೆತಂದ ॥33॥

೦೩೪ ನೀಲಕಣ್ಠನ ಮನದ ...{Loading}...

ನೀಲಕಂಠನ ಮನದ ಬಯಕೆಗೆ
ನೀಲಕಂಠನೆ ಬಲಕೆ ಬಂದುದು
ಮೇಲುಪೋಗಿನ ಸಿದ್ಧಿ ದೈತ್ಯಾಂತಕನ ಬುದ್ಧಿಯಲಿ
ಕಾಲ ಗತಿಯಲಿ ಮೇಲೆ ಪರರಿಗ
ಕಾಲ ಗತಿಯನು ಕಾಬೆನೈಸಲೆ
ಶೂಲಧರನೇ ಬಲ್ಲನೆನುತೈತಂದನಾ ಪಾರ್ಥ ॥34॥

೦೩೫ ಅರಸ ಕೇಳೈ ...{Loading}...

ಅರಸ ಕೇಳೈ ಬರುತ ಭಾರತ
ವರುಷವನು ದಾಂಟಿದನು ತಂಪಿನ
ಗಿರಿಯ ತಪ್ಪಲನಿಳಿದನಾ ಹರಿವರುಷ ಸೀಮೆಯಲಿ
ಬೆರಸಿದನು ಬಳಿಕುತ್ತರೋತ್ತರ
ಸರಣಿಯಲಿ ಸೈನಡೆದು ಹೊಕ್ಕನು
ಸುರರ ಸೇವ್ಯವನಿಂದ್ರಕೀಲ ಮಹಾವನಾಂತರವ ॥35॥

೦೩೬ ಗಿಳಿಯ ಮೃದು ...{Loading}...

ಗಿಳಿಯ ಮೃದು ಮಾತುಗಳ ಮರಿಗೋ
ಗಿಲೆಯ ಮಧುರ ಧ್ವನಿಯ ಹಂಸೆಯ
ಕಳರವದ ಮರಿನವಿಲ ಕೇಕಾರವದ ನಯಸರದ
ಮೆಲುದನಿಯ ಪಾರಿವದ ತುಂಬಿಯ
ಲಲಿತ ಗೀತದ ವನದ ಸಿರಿ ಬಗೆ
ಗೊಳಿಸಿತೈ ಪೂರ್ವಾಭಿಭಾಷಣದಲಿ ಧನಂಜಯನ ॥36॥

೦೩೭ ಸೊಮ್ಪೆಸೆವ ಕೋಗಿಲೆಯ ...{Loading}...

ಸೊಂಪೆಸೆವ ಕೋಗಿಲೆಯ ಸರ ದೆಸೆ
ತಂಪೆಸೆವ ತಂಬೆಲರ ಹುವ್ವಿನ
ಜೊಂಪವನು ಜೊಂಪಿಸುವ ಮರಿದುಂಬಿಗಳ ಮೇಳವದ
ಪೆಂಪೊಗುವ ತಾವರೆಗೊಳಂಗಳ
ತಂಪಿನೊದವಿನ ವನದ ಸೊಗಸಿನ
ಸೊಂಪು ಸೆಳೆದುದು ಮನವನೀತನನರಸ ಕೇಳ್ ಎಂದ ॥37॥

೦೩೮ ಚಾರುತರ ಪರಿಪಕ್ವ ...{Loading}...

ಚಾರುತರ ಪರಿಪಕ್ವ ನವ ಖ
ರ್ಜೂರ ರಸಧಾರಾ ಪ್ರವಾಹ ಮ
ನೋರಮೇಕ್ಷು ವಿಭೇದ ವಿದ್ರುಮರಸದ ದಾಳಿಂಬ
ಭೂರಿ ಜಂಬು ಮಧೂಕ ಪನಸ
ಸ್ಫಾರ ರಸಪೂರಾನುಕಲಿತ ವಿ
ಹಾರ ಸುರಮಹಿಳಾಭಿರಂಜಿಸುವಖಿಳ ವನಭೂಮಿ ॥38॥

೦೩೯ ವಿಲಸದಭ್ರದಲಿಹ ಮಹಾತರು ...{Loading}...

ವಿಲಸದಭ್ರದಲಿಹ ಮಹಾತರು
ಕುಲದಿನಮರನದೀಸ್ತನಂಧಯ
ಫಲರಸದ ಸವಿಗಳಲಿ ದಿಕ್ಕೂಲಂಕಷೋನ್ನತಿಯ
ಸುಳಿವ ಪರಿಮಳ ಪವನನಿಂ ಕಂ
ಗೊಳಿಸಿತರ್ಜುನ ಕಾಮ್ಯ ಸಿದ್ಧಿ
ಸ್ಥಳದೊಳಂತರ್ಮಿಥುನ ಕಾನನವರಸ ಕೇಳ್ ಎಂದ ॥39॥

೦೪೦ ಇಲ್ಲಿ ನಿಲ್ಲರ್ಜುನ ...{Loading}...

ಇಲ್ಲಿ ನಿಲ್ಲರ್ಜುನ ತಪೋವನ
ಕಿಲ್ಲಿ ನೆಲೆ ಶ್ರುತಿಯುವತಿ ಸೂಸುವ
ಚೆಲ್ಲೆಗಂಗಳ ಮೊನೆಗೆ ಮೀಸಲುಗುಡದ ಮೈಸಿರಿಯ
ದುರ್ಲಲಿತದಷ್ಟಾಂಗ ಯೋಗದ
ಕೊಲ್ಲಣಿಗೆಯಲಿ ಕೂಡದಪ್ರತಿ
ಮಲ್ಲ ಶಿವನ ಕ್ಷೇತ್ರವಿದೆಯೆಂದುದು ನಭೋನಿನದ ॥40॥

೦೪೧ ಧರಣಿಪನ ಬೀಳ್ಕೊಣ್ಡು ...{Loading}...

ಧರಣಿಪನ ಬೀಳ್ಕೊಂಡು ಮಾರ್ಗಾಂ
ತರದೊಳಾರಡಿಗೈದು ಹೊಕ್ಕನು
ಹರನ ಕರುಣಾ ಸಿದ್ಧಿಸಾಧನವೆನಿಪ ಗಿರಿವನವ
ಮರುದಿವಸದುದಯದಲಿ ಮಿಂದನು
ಸರಸಿಯಲಿ ಸಂಧ್ಯಾಭಿಮುಖದಲಿ
ತರಣಿಗಘ್ರ್ಯವನಿತ್ತು ದೇವವ್ರಜಕೆ ಕೈಮುಗಿದ ॥41॥

೦೪೨ ವಿನುತ ಶಾಮ್ಭವ ...{Loading}...

ವಿನುತ ಶಾಂಭವ ಮಂತ್ರಜಪ ಸಂ
ಜನಿತ ನಿರ್ಮಲ ಭಾವಶುದ್ಧಿಯ
ಮನದೊಳರ್ಜುನನೆತ್ತಿ ನಿಂದನು ದೀರ್ಘ ಬಾಹುಗಳ
ನೆನಹು ನೆಮ್ಮಿತು ಶಿವನನಿತರದ
ನನೆಕೊನೆಯ ತೆರಳಿಕೆಯ ತೊಡಬೆಯ
ಮನದ ಸಂಚಲವೀಚುವೋದುದು ಕಲಿ ಧನಂಜಯನ ॥42॥

೦೪೩ ಮುಗುಳುಗಙ್ಗಳ ಮೇಲು ...{Loading}...

ಮುಗುಳುಗಂಗಳ ಮೇಲು ಗುಡಿದೋ
ಳುಗಳ ಮಿಡುಕುವ ತುಟಿಯ ತುದಿಗಾ
ಲುಗಳ ಹೊರಿಗೆಯ ತಪದ ನಿರಿಗೆಯ ನಿಷ್ಪ್ರಕಂಪನದ
ಬಿಗಿದ ಬಿಲ್ಲಿನ ಬೆನ್ನಬತ್ತಳಿ
ಕೆಗಳ ಕಿಗ್ಗಟ್ಟಿನ ಕಠಾರಿಯ
ಹೆಗಲಡಾಯುಧ ಹೊಸ ತಪಸಿ ತೊಡಗಿದನು ಬಲುತಪವ ॥43॥

೦೪೪ ಅರಸ ಕೇಳೈ ...{Loading}...

ಅರಸ ಕೇಳೈ ವಿಪ್ರವೇಷವ
ಧರಿಸಿ ಧರೆಗಿಳಿದನು ಸುರೇಶ್ವರ
ತರಹರಿಸದೀ ಮಾತನೆಂದನು ನಿಜಕುಮಾರಂಗೆ
ಮರಿಚ ಮೌಕ್ತಿಕ ಲೋಹ ಹೇಮಾ
ಭರಣ ಚರ್ಮ ದುಕೂಲ ಮಿಳಿ ಹಾ
ದರಿಯ ಹೂವಿನ ದಂಡೆಗೇಕನಿವಾಸವೇಕೆಂದ ॥44॥

೦೪೫ ಆವ ಸೇರಿಕೆ ...{Loading}...

ಆವ ಸೇರಿಕೆ ಜಪಕೆ ಚಾಪ ಶ
ರಾವಳಿಗೆ ಶಮೆ ದಮೆಗೆ ಖಡ್ಗಕಿ
ದಾವ ಸಮ್ಮೇಳನ ವಿಭೂತಿಗೆ ಕವಚ ಸೀಸಕಕೆ
ಆವುದಿದರಭಿದಾನ ತಪವೋ
ಡಾವರಿಗ ವಿದ್ಯಾ ಸಮಾಧಿಯೊ
ನೀವಿದೆಂತಹ ಋಷಿಗಳೆಂಬುದನರಿಯೆ ನಾನೆಂದ ॥45॥

೦೪೬ ಕನ್ದೆರೆದು ನೋಡಿದನು ...{Loading}...

ಕಂದೆರೆದು ನೋಡಿದನು ನೀವೇ
ನೆಂದರೆಯು ಹೃದಯಾಬ್ಜ ಪೀಠದ
ಲಿಂದುಮೌಳಿಯನಿರಿಸಿ ಮೆಚ್ಚಿಸುವೆನು ಸಮಾಧಿಯಲಿ
ಇಂದಿನೀ ಬಹಿರಂಗ ಚಿಹ್ನೆಯ
ಕುಂದು ಹೆಚ್ಚಿನಲೇನು ಫಲವೆನ
ಲಂದು ತಲೆದೂಗಿದನು ಸುರಪತಿ ತೋರಿದನು ನಿಜವ ॥46॥

೦೪೭ ಮಗನೆ ನಿನ್ನಯ ...{Loading}...

ಮಗನೆ ನಿನ್ನಯ ಮನದ ನಿಷ್ಠೆಗೆ
ಸೊಗಸಿದೆನು ಪಿರಿದಾಗಿ ಹರನಿ
ಲ್ಲಿಗೆ ಬರಲಿ ಕರುಣಿಸಲಿ ನಿನ್ನ ಮನೋಭಿವಾಂಛಿತವ
ಹಗೆಗೆ ಹರಿವಹುದೆಂದು ಸುರ ಮೌ
ಳಿಗಳ ಮಣಿ ಸರಿದನು ವಿಮಾನದ
ಲಗಧರನ ಮೈದುನನ ಮಹಿಮೆಯನಿನ್ನು ಕೇಳ್ ಎಂದ ॥47॥

+೦೪ ...{Loading}...