೦೦೦ ಸೂ ಸಕಲ ...{Loading}...
ಸೂ. ಸಕಲ ಯದುಬಲ ಸಹಿತ ಭಕ್ತ
ಪ್ರಕರ ಪಾಲಕನೊಲವಿನಲಿ ಕಾ
ಮ್ಯಕ ಮಹಾಕಾನನಕೆ ಬಿಜಯಂಗೈದನಸುರಾರಿ
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
ಸೂಚನೆ : ಸಕಲನಾದ ಯಾದವ ಬಲದೊಂದಿಗೆ ಭಕ್ತಜನ ಪಾಲಕನಾದ ಶ್ರೀಕೃಷ್ಣನು ಕಾಮ್ಯಕವನಕ್ಕೆ ಬಂದನು.
ಮೂಲ ...{Loading}...
ಸೂ. ಸಕಲ ಯದುಬಲ ಸಹಿತ ಭಕ್ತ
ಪ್ರಕರ ಪಾಲಕನೊಲವಿನಲಿ ಕಾ
ಮ್ಯಕ ಮಹಾಕಾನನಕೆ ಬಿಜಯಂಗೈದನಸುರಾರಿ
೦೦೧ ಅರಸ ಕೇಳೈ ...{Loading}...
ಅರಸ ಕೇಳೈ ದ್ವಾರಕಾಪುರ
ವರಕೆ ಬಂದುದು ವಾರ್ತೆ ಪೀತಾಂ
ಬರನ ಬಹಳಾಸ್ಥಾನದಲಿ ವರ್ತಿಸಿದುದಡಿಗಡಿಗೆ
ಧರೆಸಹಿತ ನಿಜವಸ್ತು ವಾಹನ
ಪರಮ ವಿಭವವ ಬಿಸುಟು ಭಾರಿಯ
ಪರಿಭವದಿ ನಟ್ಟಡವಿಯೊಕ್ಕರು ಪಾಂಡುಸುತರೆಂದು ॥1॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅರಸನೇ ಕೇಳು ಪಾಂಡುರಾಜನ ಮಕ್ಕಳು ರಾಜ್ಯದೊಂದಿಗೆ ವಸ್ತುವಾಹನಾದಿ ಪರಮವೈಭವಗಳನ್ನು ಸೋತು ಕಾಡು ಸೇರಿದರೆಂಬ ಸುದ್ದಿಯು ದ್ವಾರಾವತಿಗೆ ತಲುಪಿ, ಶ್ರೀಕೃಷ್ಣನ ಆಸ್ಥಾನದಲ್ಲಿ ಹಬ್ಬಿತು.
ಮೂಲ ...{Loading}...
ಅರಸ ಕೇಳೈ ದ್ವಾರಕಾಪುರ
ವರಕೆ ಬಂದುದು ವಾರ್ತೆ ಪೀತಾಂ
ಬರನ ಬಹಳಾಸ್ಥಾನದಲಿ ವರ್ತಿಸಿದುದಡಿಗಡಿಗೆ
ಧರೆಸಹಿತ ನಿಜವಸ್ತು ವಾಹನ
ಪರಮ ವಿಭವವ ಬಿಸುಟು ಭಾರಿಯ
ಪರಿಭವದಿ ನಟ್ಟಡವಿಯೊಕ್ಕರು ಪಾಂಡುಸುತರೆಂದು ॥1॥
೦೦೨ ಕೇಳಿ ತಲೆದೂಗಿದನು ...{Loading}...
ಕೇಳಿ ತಲೆದೂಗಿದನು ಮೂಗಿನ
ಮೇಲುವೆರಳಿನ ಹೊತ್ತ ದುಗುಡದ
ತೂಳಿದುಬ್ಬೆಯ ನಟ್ಟನೋಟದ ನೆಗ್ಗಿದುತ್ಸವದ
ಹೂಲಿದೂಹೆಯ ಹಿಳಿದ ನೆಗಹಿನ
ಹೇಳಲರಿದೆನೆ ಹುದಿದ ಭಾವದ
ಲಾಲಿಸಿದನಸುರಾರಿ ದೂತವ್ರಜದ ಬಿನ್ನಪವ ॥2॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ದೂತರಾಡಿದ ವಾರ್ತೆಯನ್ನು ಕೇಳಿ ಶ್ರೀಕೃಷ್ಣನು ತಲೆದೂಗಿದನು. ಮೂಗಿನ ಮೇಲೆ ಬೆರಳಿಟ್ಟನು. ಸಂಕಟ ಹೆಚ್ಚಿ, ಒಂದೇ ಕಡೆ ನೋಡುತ್ತಾ ನಿರುತ್ಸಾಹಿಯಾದನು. ಊಹೆಯ ಬಿರುಗಾಳಿ ಬೀಸಿ, ಕಂಬನಿಯ ಕಟ್ಟೆ ಒಡೆಯಿತು. ಈ ಭಾವನೆಗಳನ್ನು ಪ್ರಕಟಪಡಿಸದೆ, ಅವರ ಬಿನ್ನಹವನ್ನು ಲಾಲಿಸಿದನು.
ಪದಾರ್ಥ (ಕ.ಗ.ಪ)
ಹೂಲಿ-ಎಚ್ಚರಿಕೆ, ಬಿರುಗಾಳಿ, ಹಿಳಿ-ಒಡೆಯ, ನೆಗಹು-ಉತ್ಸಾಹ , ತೂಳಿದ - ಮುಂದುವರೆದ, ಉಬ್ಬೆ - ಉದ್ವೇಗ, ನೆಗ್ಗು - ಕಡಮೆಯಾಗು , ಹೂಳಿದ - ಮರೆಯಾದ, ಹಿಳಿದ- ನಾಶವಾದ
ಮೂಲ ...{Loading}...
ಕೇಳಿ ತಲೆದೂಗಿದನು ಮೂಗಿನ
ಮೇಲುವೆರಳಿನ ಹೊತ್ತ ದುಗುಡದ
ತೂಳಿದುಬ್ಬೆಯ ನಟ್ಟನೋಟದ ನೆಗ್ಗಿದುತ್ಸವದ
ಹೂಲಿದೂಹೆಯ ಹಿಳಿದ ನೆಗಹಿನ
ಹೇಳಲರಿದೆನೆ ಹುದಿದ ಭಾವದ
ಲಾಲಿಸಿದನಸುರಾರಿ ದೂತವ್ರಜದ ಬಿನ್ನಪವ ॥2॥
೦೦೩ ಅಕಟ ಕಪಟ ...{Loading}...
ಅಕಟ ಕಪಟ ದ್ಯೂತದಲಿ ನೃಪ
ಮುಕುರನುನ್ನತಿ ಮುರಿದುದೇ ಕೌ
ಳಿಕದಲೀ ಕೌರವರು ಕೊಂಡರೆ ಧರ್ಮಜನ ನೆಲನ
ಅಕುಟಿಲರಿಗೇಕಿದು ನಿರಾಬಾ
ಧಕರಿಗೇಕಿದು ಸಕಲ ಸುಜನ
ಪ್ರಕರವಂದ್ಯರಿಗೇಕೆನುತ್ತಸುರಾರಿ ಚಿಂತಿಸಿದ ॥3॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅಯ್ಯೋ, ಕಪಟದ್ಯೂತದಲ್ಲಿ ರಾಜಶ್ರೇಷ್ಠರ ಉನ್ನತಿ ಕೆಡೆದುಹೋಯಿತೆ ? ಕೌರವರು ಮೋಸದಿಂದ ಧರ್ಮರಾಯನ ರಾಜ್ಯವನ್ನು ಸೂರೆಗೊಂಡರೆ ? ಮುಗ್ಧರೂ, ಸಜ್ಜನಪ್ರೀತರೂ ಆಗಿರುವ ಪಾಂಡವರಿಗೆ ಹೀಗಾಯಿತಲ್ಲಾ ಎಂದು ಶ್ರೀಕೃಷ್ಣನು ಚಿಂತಿಸಿದನು.
ಪದಾರ್ಥ (ಕ.ಗ.ಪ)
ಕೌಳಿಕ-ಮೋಸ
ಮೂಲ ...{Loading}...
ಅಕಟ ಕಪಟ ದ್ಯೂತದಲಿ ನೃಪ
ಮುಕುರನುನ್ನತಿ ಮುರಿದುದೇ ಕೌ
ಳಿಕದಲೀ ಕೌರವರು ಕೊಂಡರೆ ಧರ್ಮಜನ ನೆಲನ
ಅಕುಟಿಲರಿಗೇಕಿದು ನಿರಾಬಾ
ಧಕರಿಗೇಕಿದು ಸಕಲ ಸುಜನ
ಪ್ರಕರವಂದ್ಯರಿಗೇಕೆನುತ್ತಸುರಾರಿ ಚಿಂತಿಸಿದ ॥3॥
೦೦೪ ಹಿರಿದು ಹರಿ ...{Loading}...
ಹಿರಿದು ಹರಿ ಚಿಂತಿಸಿದನೀ ವ್ಯತಿ
ಕರವನರಿಯದ ಮುಗುದರಿದನಾ
ರರಿವರೈ ವಿಶ್ವಂಭರಾ ಭಾರಾಪರೋದನಕೆ
ಧರಣಿಯಲಿ ಮೈಗೊಂಡು ದೈತ್ಯರ
ನೊರಸಿದನು ಬಳಿಕುಳಿದ ಪಾಂಡವ
ಕುರುನೃಪರ ಕದಡಿಸಿದನೆಲೆ ಭೂಪಾಲ ಕೇಳ್ ಎಂದ ॥4॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಭೂಪತಿಯೇ ಕೇಳು ಶ್ರೀಕೃಷ್ಣನು ಬಹಳವಾಗಿ ಚಿಂತಿಸಿದನು. ವಿರಾಟ್ಪುರುಷನು ಭೂಮಿಯಲ್ಲಿ ಅವತರಿಸಿ, ದೈತ್ಯರನ್ನು ಸಂಹರಿಸಿ, ಪಾಂಡವ ಕೌರವರ ನಡುವೆ ಕಲಹವುಂಟುಮಾಡಿದ ಈ ತಂತ್ರವನ್ನು ಮುಗ್ಧ ಜನರು ಹೇಗೆ ತಾನೆ ತಿಳಿಯಬಲ್ಲರು ?
ಪದಾರ್ಥ (ಕ.ಗ.ಪ)
ವಿಶ್ವಂಭರೆ - ಭೂಮಿ
ಮೂಲ ...{Loading}...
ಹಿರಿದು ಹರಿ ಚಿಂತಿಸಿದನೀ ವ್ಯತಿ
ಕರವನರಿಯದ ಮುಗುದರಿದನಾ
ರರಿವರೈ ವಿಶ್ವಂಭರಾ ಭಾರಾಪರೋದನಕೆ
ಧರಣಿಯಲಿ ಮೈಗೊಂಡು ದೈತ್ಯರ
ನೊರಸಿದನು ಬಳಿಕುಳಿದ ಪಾಂಡವ
ಕುರುನೃಪರ ಕದಡಿಸಿದನೆಲೆ ಭೂಪಾಲ ಕೇಳೆಂದ ॥4॥
೦೦೫ ಏನನೆಮ್ಬೆನು ಜೀಯ ...{Loading}...
ಏನನೆಂಬೆನು ಜೀಯ ಕಡು ದು
ಮ್ಮಾನದಲಿ ಹೊರವಂಟು ಬಂದನು
ದಾನವಾಂತಕನೈದಿದವು ದಂಡಿಗೆಗಳರಸಿಯರ
ಆ ನಿಖಿಳ ನೃಪವರ್ಗ ಯಾದವ
ಸೇನೆ ಕವಿದುದು ಪಾಂಡುಪುತ್ರರ
ಕಾನನವ ಕರುಣಾಳು ಹೊಕ್ಕನು ಹಲವು ಪಯಣದಲಿ ॥5॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಶ್ರೀಕೃಷ್ಣನು ತುಂಬಾ ದುಃಖದಿಂದಲೇ ಹೊರಟು ಬಂದನು. ಅವನೊಂದಿಗೆ ಅರಸಿಯರು ದಂಡಿಗೆಗಳನ್ನೇರಿ ಹೊರಟರು. ಜೊತೆಗೆ ಯಾದವ ರಾಜರು ಸೇನಾ ಸಹಿತರಾಗಿ ಪ್ರಯಾಣ ಮಾಡಿ ಪಾಂಡವರಿರುವ ಅರಣ್ಯವನ್ನು ಹೊಕ್ಕರು.
ಮೂಲ ...{Loading}...
ಏನನೆಂಬೆನು ಜೀಯ ಕಡು ದು
ಮ್ಮಾನದಲಿ ಹೊರವಂಟು ಬಂದನು
ದಾನವಾಂತಕನೈದಿದವು ದಂಡಿಗೆಗಳರಸಿಯರ
ಆ ನಿಖಿಳ ನೃಪವರ್ಗ ಯಾದವ
ಸೇನೆ ಕವಿದುದು ಪಾಂಡುಪುತ್ರರ
ಕಾನನವ ಕರುಣಾಳು ಹೊಕ್ಕನು ಹಲವು ಪಯಣದಲಿ ॥5॥
೦೦೬ ಕೇಳಿದಾಗಳೆ ಬನ್ದರಾ ...{Loading}...
ಕೇಳಿದಾಗಳೆ ಬಂದರಾ ಪಾಂ
ಚಾಲ ಕೇಕಯ ದೃಷ್ಟಕೇತು ನೃ
ಪಾಲ ಕುಂತೀಭೋಜ ಸೃಂಜಯ ಸೋಮಕಾದಿಗಳು
ಮೇಲೆ ಮೇಲೀ ನಾಲ್ಕು ದಿನದಲಿ
ಮೂಲೆಯರಸುಗಳಿವರ ಕಂಡುಪ
ಲಾಲಿಸಲು ಬರುತಿರ್ದರಾ ಕಾಮ್ಯಕ ವನಾಂತರಕೆ ॥6॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಇದನ್ನು ಕೇಳಿದಾಗಲೇ ಪಾಂಚಾಲ, ಕೇಕಯ, ಧೃಷ್ಟಕೇತು, ಕುಂತೀಭೋಜ, ಸೃಂಜಯ, ಸೋಮಕರೇ ಮುಂತಾದ ರಾಜರುಗಳೂ ಬಂದರು. ಆ ಮೇಲೆ ನಾಲ್ಕು ದಿನಗಳಲ್ಲಿ ಮೂಲೆ ಮೂಲೆಯ ಅರಸುಗಳೂ ಕಾಮ್ಯಕವನಕ್ಕೆ ಬಂದು ಸೇರಿದರು.
ಪದಾರ್ಥ (ಕ.ಗ.ಪ)
ಉಪಲಾಲಿಸು - ಸಮಾಧಾನ ಮಾಡು
ಮೂಲ ...{Loading}...
ಕೇಳಿದಾಗಳೆ ಬಂದರಾ ಪಾಂ
ಚಾಲ ಕೇಕಯ ದೃಷ್ಟಕೇತು ನೃ
ಪಾಲ ಕುಂತೀಭೋಜ ಸೃಂಜಯ ಸೋಮಕಾದಿಗಳು
ಮೇಲೆ ಮೇಲೀ ನಾಲ್ಕು ದಿನದಲಿ
ಮೂಲೆಯರಸುಗಳಿವರ ಕಂಡುಪ
ಲಾಲಿಸಲು ಬರುತಿರ್ದರಾ ಕಾಮ್ಯಕ ವನಾಂತರಕೆ ॥6॥
೦೦೭ ಇವರು ಬನ್ದರು ...{Loading}...
ಇವರು ಬಂದರು ನಿಖಿಳ ಭೂಸುರ
ನಿವಹ ಸಹಿತಿದಿರಾಗಿ ವರ ಬಾಂ
ಧವರೊಳಭಿವಂದ್ಯರಿಗೆ ತತ್ಸಮರಿಗೆ ಕನಿಷ್ಠರಿಗೆ
ಅವರಿಗವರವರುಚಿತ ಸತ್ಕಾ
ರವನು ಮಾಡಿ ಮುರಾರಿಯಂಘ್ರಿಯ
ನವಿರಳಾಶ್ರುಗಳಿಂದ ನಾದಿದರರಸ ಕೇಳ್ ಎಂದ ॥7॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅರಸನೇ ಕೇಳು ಬ್ರಾಹ್ಮಣರಿಂದೊಡಗೂಡಿ ಬಂದು, ಬಂಧು ಬಾಂಧವರಿಗೆ, ಹಿರಿಯರಿಗೆ, ಕಿರಿಯರಿಗೆ, ಸಮಾನರಿಗೆ ಅವರವರಿಗೆ ಯುಕ್ತವಾದ ಉಪಚಾರಗಳನ್ನು ಮಾಡಿ, ಶ್ರೀಕೃಷ್ಣನ ಪಾದಪದ್ಮವನ್ನು ಕಂಬನಿಯ ಧಾರೆಯಿಂದ ತೊಯ್ದನು.
ಮೂಲ ...{Loading}...
ಇವರು ಬಂದರು ನಿಖಿಳ ಭೂಸುರ
ನಿವಹ ಸಹಿತಿದಿರಾಗಿ ವರ ಬಾಂ
ಧವರೊಳಭಿವಂದ್ಯರಿಗೆ ತತ್ಸಮರಿಗೆ ಕನಿಷ್ಠರಿಗೆ
ಅವರಿಗವರವರುಚಿತ ಸತ್ಕಾ
ರವನು ಮಾಡಿ ಮುರಾರಿಯಂಘ್ರಿಯ
ನವಿರಳಾಶ್ರುಗಳಿಂದ ನಾದಿದರರಸ ಕೇಳೆಂದ ॥7॥
೦೦೮ ಬೇರೆ ಬೇರೈವರನು ...{Loading}...
ಬೇರೆ ಬೇರೈವರನು ತೆಗೆದು ಮು
ರಾರಿಯಪ್ಪಿದನಡಿಗಡಿಗೆ ದೃಗು
ವಾರಿಗಳನೊರಸಿದನು ಪೀತಾಂಬರದ ಸೆರಗಿನಲಿ
ಸಾರು ಸಾರೆನಲುಗ್ಗಡಣೆಯ ವಿ
ಕಾರವಿನ್ನೇಕೆನುತ ರಾಯನ
ನಾರಿ ಬಂದಳು ಕವಿದು ಬಿದ್ದಳು ಹರಿಯ ಚರಣದಲಿ ॥8॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಶ್ರೀಕೃಷ್ಣನು ಪಾಂಡವರೈವರನ್ನೂ ಪ್ರತ್ಯೇಕವಾಗಿ ಆಲಿಂಗಿಸಿ, ಅವರ ಕಣ್ಣೀರನ್ನು ತನ್ನ ಪೀತಾಂಬರದ ಸೆರಗಿನಿಂದ ಒರೆಸಿದನು. ಅಷ್ಟರಲ್ಲಿ ದಾರಬಿಡು,ಬಿಡು ಎಂಬ ಘೋಷದ ಮಧ್ಯೆ ಪಾಂಡವರರಸಿಯಾದ ದ್ರೌಪದಿಯು ಬಂದು ಹರಿಯ ಚರಣಕ್ಕೆ ಕವಿದು ಬಿದ್ದಳು.
ಟಿಪ್ಪನೀ (ಕ.ಗ.ಪ)
ದೃಗುವಾರಿ - ಕಣ್ಣೀರು, ಉಗ್ಗಡಣೆ -ಘೋಷಣೆ
ಮೂಲ ...{Loading}...
ಬೇರೆ ಬೇರೈವರನು ತೆಗೆದು ಮು
ರಾರಿಯಪ್ಪಿದನಡಿಗಡಿಗೆ ದೃಗು
ವಾರಿಗಳನೊರಸಿದನು ಪೀತಾಂಬರದ ಸೆರಗಿನಲಿ
ಸಾರು ಸಾರೆನಲುಗ್ಗಡಣೆಯ ವಿ
ಕಾರವಿನ್ನೇಕೆನುತ ರಾಯನ
ನಾರಿ ಬಂದಳು ಕವಿದು ಬಿದ್ದಳು ಹರಿಯ ಚರಣದಲಿ ॥8॥
೦೦೯ ಒರಲಿದಳು ದೆಸೆಯೊಡನೊರಲೆ ...{Loading}...
ಒರಲಿದಳು ದೆಸೆಯೊಡನೊರಲೆ ಮಿಗೆ
ಹೊರಳಿದಳು ಹರಿ ಪಾದದಲಿ ಮೈ
ಮರೆದಳಂಗನೆ ತನುವ ಮುಸುಕಿದ ಕೇಶಪಾಶದಲಿ
ಕರಗಿದಳು ಕಂದಿದಳು ಮಮ್ಮಲ
ಮರುಗಿ ಕರುಗಂದಿದಳು ದೃಗುಜಲ
ದೊರತೆಯುಕ್ಕಿತು ಮೇಲೆ ಮೇಲೆ ಮಹೀಶನಂಗನೆಗೆ ॥9॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ದ್ರೌಪದಿಯು ದುಃಖದುಮ್ಮಳದಿಂದ ಹರಿಪಾದದಲ್ಲಿ ಹೊರಳುತ್ತಾ, ಬಿಚ್ಚಿಹೋದ ಕೇಶರಾಶಿಯಿಂದ ಮೈಮರೆತಳು. ಆಕೆಯ ಮುಖದಿಂದ ಕಂಬನಿಯ ಕೋಡಿಯೇ ಹರಿಯಿತು.
ಮೂಲ ...{Loading}...
ಒರಲಿದಳು ದೆಸೆಯೊಡನೊರಲೆ ಮಿಗೆ
ಹೊರಳಿದಳು ಹರಿ ಪಾದದಲಿ ಮೈ
ಮರೆದಳಂಗನೆ ತನುವ ಮುಸುಕಿದ ಕೇಶಪಾಶದಲಿ
ಕರಗಿದಳು ಕಂದಿದಳು ಮಮ್ಮಲ
ಮರುಗಿ ಕರುಗಂದಿದಳು ದೃಗುಜಲ
ದೊರತೆಯುಕ್ಕಿತು ಮೇಲೆ ಮೇಲೆ ಮಹೀಶನಂಗನೆಗೆ ॥9॥
೦೧೦ ಹಿನ್ದೆ ಸೆಳೆಸೀರೆಯಲಕಟ ...{Loading}...
ಹಿಂದೆ ಸೆಳೆಸೀರೆಯಲಕಟ ಗೋ
ವಿಂದ ರಕ್ಷಿಸನಾಥನಾಥ ಮು
ಕುಂದ ಕಾಯೈ ಕೃಷ್ಣ ರಕ್ಷಿಸು ಕರುಣಿಸಸುರಾರಿ
ಇಂದಿರಾಪತಿಯೇ ಯಶೋದಾ
ನಂದನನೆ ಕಾರುಣ್ಯನಿಧಿ ಸಲ
ಹೆಂದರುಳುಹಿದ ದೈವ ನೀ ಮೈದೋರಿದೈ ತನಗೆ ॥10॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ಹಿಂದೊಮ್ಮೆ ವಸ್ತ್ರಾಪಹಾರದ ಸಂದರ್ಭದಲ್ಲಿ ‘ಕೃಷ್ಣ, ಗೋವಿಂದ, ಇಂದಿರಾಪತಿ, ಅನಾಥನಾಥ, ಅಸುರಾರಿ ಕಾಪಾಡು’ ಎಂದು ಕೂಗಿ ಕರೆದಾಗ ರಕ್ಷಿಸಿದ ದೇವನೇ ಇಂದು ನನಗೆ ದರ್ಶನವಿತ್ತೆಯಲ್ಲಾ’ ಎಂದು ಸ್ತುತಿಸಿದಳು.
ಮೂಲ ...{Loading}...
ಹಿಂದೆ ಸೆಳೆಸೀರೆಯಲಕಟ ಗೋ
ವಿಂದ ರಕ್ಷಿಸನಾಥನಾಥ ಮು
ಕುಂದ ಕಾಯೈ ಕೃಷ್ಣ ರಕ್ಷಿಸು ಕರುಣಿಸಸುರಾರಿ
ಇಂದಿರಾಪತಿಯೇ ಯಶೋದಾ
ನಂದನನೆ ಕಾರುಣ್ಯನಿಧಿ ಸಲ
ಹೆಂದರುಳುಹಿದ ದೈವ ನೀ ಮೈದೋರಿದೈ ತನಗೆ ॥10॥
೦೧೧ ಶ್ರುತಿಗಳಿಗೆ ಮೈದೋರೆ ...{Loading}...
ಶ್ರುತಿಗಳಿಗೆ ಮೈದೋರೆ ಸುಪತಿ
ವ್ರತೆಯರಿಗೆ ಗೋಚರಿಸೆಯತಿ ಸಂ
ತತಿಯ ನಿರ್ಮಳ ಸಾರ ಸಮ್ಯಕ್ಜ್ಞಾನ ದೀಧಿತಿಗೆ
ಮತಿಗೊಡದ ಮಹಿಮಾಂಬುನಿಧಿಯೆನ
ಗತಿಶಯವನೇ ಮಾಡಿ ಲಜ್ಜಾ
ಸ್ಥಿತಿಯನುಳುಹಿದ ದೈವ ನೀ ಮೈದೋರಿದೈ ತನಗೆ ॥11॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ದೇವಾ, ನಿಗಮಗಳಿಗೆ ನಿಲುಕದ, ಪತಿವ್ರತಾ ಶಿರೋಮಣಿಯರಿಗೆ ಗೋಚರಿಸದ, ಯೋಗೀಶ್ವರರಿಗೆ ದರ್ಶನವೀಯದ ಮಹಿಮಾನ್ವಿತನಾದ ನೀನು ನನ್ನ ಮಾನವನ್ನು ಕಾಪಾಡಿದೆ’ ಈಗ ನನಗೆ ದರ್ಶನವನ್ನು ನೀಡಿದ್ದೀಯೆ ಎಂದು ಸ್ತುತಿಸಿದಳು.
ಮೂಲ ...{Loading}...
ಶ್ರುತಿಗಳಿಗೆ ಮೈದೋರೆ ಸುಪತಿ
ವ್ರತೆಯರಿಗೆ ಗೋಚರಿಸೆಯತಿ ಸಂ
ತತಿಯ ನಿರ್ಮಳ ಸಾರ ಸಮ್ಯಕ್ಜ್ಞಾನ ದೀಧಿತಿಗೆ
ಮತಿಗೊಡದ ಮಹಿಮಾಂಬುನಿಧಿಯೆನ
ಗತಿಶಯವನೇ ಮಾಡಿ ಲಜ್ಜಾ
ಸ್ಥಿತಿಯನುಳುಹಿದ ದೈವ ನೀ ಮೈದೋರಿದೈ ತನಗೆ ॥11॥
೦೧೨ ಪೆಸರುಗೊಣ್ಡರೆ ಹಿನ್ದೆ ...{Loading}...
ಪೆಸರುಗೊಂಡರೆ ಹಿಂದೆ ಬಂದು
ಬ್ಬಸದ ಭಾರ ವ್ಯಸನವನು ಹಿಂ
ಗಿಸಿದೆ ಸಾಕ್ಷಾದ್ದೃಷ್ಟ ದರುಶನವೇನನಿತ್ತಪುದೊ
ಹೆಸರುಗೊಳಲರಿಯದೆ ಮನೋವಾ
ಗ್ವಿಸರ ಮರಳಿದ ತರ್ಕ ನಿಗಮ
ಪ್ರಸರಣದ ಪರದೈವ ನೀ ಮೈದೋರಿದೈ ತನಗೆ ॥12॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ನಿನ್ನ ನಾಮೋಚ್ಚಾರಣೆ ಮಾಡಿದರೆ, ಹಿಂದೆಯೇ ಬಂದು ಸಂಕಟಗಳನ್ನೆಲ್ಲ ಕಳೆದೆ. ನಿನ್ನ ಸಾಕ್ಷಾತ್ ದರ್ಶನವು ಇನ್ನೇನನ್ನು ನೀಡುತ್ತದೋ. ಹೆಸರುಗಳನ್ನು ಹೇಳಲೂ ತಿಳಿಯದೆ, ಮನಸ್ಸು ಮಾತುಗಳಿಗೆ ಸಿಲುಕದ ತರ್ಕ ವೇದಗಳಿಗೆ ಗೋಚರಿಸದ ಓ ಪರದೈವವೇ ನೀನು ಈಗ ನನಗೆ ದರ್ಶನ ನೀಡಿದೆಯಲ್ಲಾ !
ಮೂಲ ...{Loading}...
ಪೆಸರುಗೊಂಡರೆ ಹಿಂದೆ ಬಂದು
ಬ್ಬಸದ ಭಾರ ವ್ಯಸನವನು ಹಿಂ
ಗಿಸಿದೆ ಸಾಕ್ಷಾದ್ದೃಷ್ಟ ದರುಶನವೇನನಿತ್ತಪುದೊ
ಹೆಸರುಗೊಳಲರಿಯದೆ ಮನೋವಾ
ಗ್ವಿಸರ ಮರಳಿದ ತರ್ಕ ನಿಗಮ
ಪ್ರಸರಣದ ಪರದೈವ ನೀ ಮೈದೋರಿದೈ ತನಗೆ ॥12॥
೦೧೩ ಪತಿಗಳಿವರಞ್ಜಿದರು ಧರ್ಮ ...{Loading}...
ಪತಿಗಳಿವರಂಜಿದರು ಧರ್ಮ
ಸ್ಥಿತಿಯನರಿದವರಳುಕಿದರು ತ
ತ್ಪಿತೃ ಪಿತಾಮಹ ಗುರುಗಳಡಗಿದರವನಿಯಲಿ ಬಗಿದು
ಗತಿವಿಹೀನೆಗೆ ಕೃಷ್ಣ ನೀನೇ
ಗತಿಯೆನುತ ಬಾಯ್ವಿಡಲು ಲಜ್ಜಾ
ಸ್ಥಿತಿಯನುಳುಹಿದ ದೈವ ನೀ ಮೈದೋರಿದೈ ತನಗೆ ॥13॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಈ ಗಂಡಂದಿರೂ ಅಂಜಿದರು, ಧರ್ಮಸ್ಥಿತಿಯನ್ನು ತಿಳಿದು ಅಳುಕಿದರು. ಅವರ ತಂದೆಯಂದಿರು, ಅಜ್ಜ, ಗುರುಗಳೆಲ್ಲರೂ ಬಚ್ಚಿಟ್ಟುಕೊಂಡರು. ಆಗ ಈ ಗತಿವಿಹೀನೆಯು ‘ಕೃಷ್ಣಾ ನೀನೇ ಗತಿ’ ಎಂದು ಗೋಗರೆಯಲು, ನನ್ನ ಮಾನ ಸಂರಕ್ಷಣೆ ಮಾಡಿದ ದೈವವೇ ನನಗೆ ಈಗ ದರ್ಶನ ನೀಡಿದೆಯಲ್ಲಾ ?
ಮೂಲ ...{Loading}...
ಪತಿಗಳಿವರಂಜಿದರು ಧರ್ಮ
ಸ್ಥಿತಿಯನರಿದವರಳುಕಿದರು ತ
ತ್ಪಿತೃ ಪಿತಾಮಹ ಗುರುಗಳಡಗಿದರವನಿಯಲಿ ಬಗಿದು
ಗತಿವಿಹೀನೆಗೆ ಕೃಷ್ಣ ನೀನೇ
ಗತಿಯೆನುತ ಬಾಯ್ವಿಡಲು ಲಜ್ಜಾ
ಸ್ಥಿತಿಯನುಳುಹಿದ ದೈವ ನೀ ಮೈದೋರಿದೈ ತನಗೆ ॥13॥
೦೧೪ ದಾನ ಯಜ್ಞ ...{Loading}...
ದಾನ ಯಜ್ಞ ತಪೋ ವ್ರತಾನು
ಷ್ಠಾನ ನಿಷ್ಠರು ಕಾಣರಷ್ಟ ವಿ
ಧಾನ ಯೋಗದ ಸಿದ್ಧರರಿಯರು ನಿನ್ನ ಸುಳಿವುಗಳ
ಜ್ಞಾನ ಮಧ್ಯ ತ್ರಿಪುಟಿಯನುಸಂ
ಧಾನರಹಿತ ಜ್ಞಪ್ತಿರೂಪನು
ತಾನೆನಿಪ ಪರಬೊಮ್ಮ ನೀ ಮೈದೋರಿದೈ ತನಗೆ ॥14॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ನಿನ್ನ ಚಲನವಲನವನ್ನು ದಾನ ಯಜ್ಞ ತಪಸ್ಸುಗಳಲ್ಲಿ ತೊಡಗಿದ ತಪಸ್ವಿಗಳೂ ಅರಿಯರು. ಯೋಗಯೋಗಾಂಗಗಳನ್ನು ತಿಳಿದ ಸಿದ್ಧರೂ ನಿನ್ನ ಸುಳಿವನ್ನು ತಿಳಿಯರು. ಜ್ಞಾನರೂಪನೂ, ಪರಬ್ರಹ್ಮಸ್ವರೂಪನೂ ಆಗಿರುವ ನೀನು ಮತ್ತೆ ನನಗೆ ಮೈದೋರಿದೆಯಲ್ಲಾ !
ಮೂಲ ...{Loading}...
ದಾನ ಯಜ್ಞ ತಪೋ ವ್ರತಾನು
ಷ್ಠಾನ ನಿಷ್ಠರು ಕಾಣರಷ್ಟ ವಿ
ಧಾನ ಯೋಗದ ಸಿದ್ಧರರಿಯರು ನಿನ್ನ ಸುಳಿವುಗಳ
ಜ್ಞಾನ ಮಧ್ಯ ತ್ರಿಪುಟಿಯನುಸಂ
ಧಾನರಹಿತ ಜ್ಞಪ್ತಿರೂಪನು
ತಾನೆನಿಪ ಪರಬೊಮ್ಮ ನೀ ಮೈದೋರಿದೈ ತನಗೆ ॥14॥
೦೧೫ ಕಾಯಿದೈ ಪ್ರಹ್ಲಾದ ...{Loading}...
ಕಾಯಿದೈ ಪ್ರಹ್ಲಾದ ಮಾರ್ಕಂ
ಡೇಯ ವನಗಜವಂಬರೀಷನ
ಕಾಯಿದೈ ಕಾರುಣ್ಯದಲಿ ಪಾತಕಿಯಜಾಮಿಳನ
ಕಾಯಿದೈ ಗೋವಿಂದಯೆನೆ ತ
ನ್ನಾಯತಿಕೆಯಭಿಮಾನವನು ನೀ
ಕಾಯಿದೈ ಹರಿಯೆನುತ ಪದದಲಿ ಹೊರಳಿದಳು ತರಳೆ ॥15॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಪ್ರಹ್ಲಾದ, ಮಾರ್ಕಂಡೇಯ, ಕಾಡಿನ ಆನೆ, ಅಂಬರೀಷ, ಅಜಮಿಳಾದಿಗಳನ್ನು ಕಾಪಾಡಿದ ಗೋವಿಂದನೇ…. ನನ್ನ ಮಾನವನ್ನು ಕಾಪಾಡಿದ ಶ್ರೀಹರಿಯೇ….’ ಎಂದು ಹರಿಚರಣದಲ್ಲಿ ದ್ರೌಪದಿ ಹೊರಳಾಡಿದಳು.
ಟಿಪ್ಪನೀ (ಕ.ಗ.ಪ)
ಅಂಬರೀಷ - ಕನ್ನಡ ಕಾವ್ಯ ಯಕ್ಷಗಾನಗಳ ಪ್ರಸಿದ್ದ ಅಂಬರೀಷನೆಂಬ ಪುರಾಣಪುರುಷನ ವಿಷಯ ಮಹಾಭಾರತದಲ್ಲಿ ಬರುವುದಿಲ್ಲ. ಭಾಗವತ ರಾಮಾಯಣಗಳಲ್ಲಿ ಅಂಬರೀಷರ ಕಥೆಗಳಿವೆ. ಒಬ್ಬ ಅಂಬರೀಷ ದ್ವಾದಶೀವ್ರತ ಮಹಿಮೆ ಸಾರಿದವನು. ಇವನ ದ್ವಾದಶೀವ್ರತ ಪರೀಕ್ಷಿಸಲು ಬಂದ ದುರ್ವಾಸರು ಊಟಕ್ಕೆ ಬರುವುದಾಗಿ ಹೇಳಿ ಹೋದವರು ಎಷ್ಟು ಹೊತ್ತಾದರೂ ಬರಲಿಲ್ಲ. ಕೊನೆಗೆ ವ್ರತಭಂಗ ಮಾಡಲಿಷ್ಟವಿಲ್ಲದೆ ಅಂಬರೀಷನು ತನ್ನ ಪುರೋಹಿತರ ಸಲಹೆಯಂತೆ ನೀರನ್ನು ಕುಡಿದು ಕುಳಿತ ವ್ರತದ ನಂತರ ಉಪವಾಸವಿದ್ದರೆ ವ್ರತದ ಫಲ ಹೋಗುತ್ತದೆ ಎಂಬ ಹೆದರಿಕೆ ಆತನಿಗೆ! ಊಟಕ್ಕೆ ಬಂದ ದುರ್ವಾಸರು ಇವನ ಮೇಲೆ ಕ್ರೋಧದಿಂದ ‘ಮಹಾಕೃತ್ಯೆ’ಯನ್ನು ತಮ್ಮ ಜುಟ್ಟಿನಿಂದ ಸೃಷ್ಟಿಸಿಬಿಟ್ಟರು. ಆದರೆ ವಿಷ್ಣುವಿನ ಚಕ್ರ ಆ ಮಹಾಕೃತ್ಯೆಯನ್ನು ಕೊಂದು ದುರ್ವಾಸರನ್ನೇ ಅಟ್ಟಿಕೊಂಡು ಹೋಯಿತು. ಬ್ರಹ್ಮ ಈಶ್ವರ ನಾರಾಯಣರ ಬಳಿಗೆ ಓಡಿದರೂ ಪ್ರಯೋಜನವಾಗದೆ ಕೊನೆಗೆ ಅಂಬರೀಷನ ಕಾಲಿಗೆ ಬೀಳಬೇಕಾಯಿತು ದುರ್ವಾಸರು. ಇಂಥ ಮಹಿಮಾವಂತ ಅಂಬರೀಷ. ಭಕ್ತರ ಮಹಿಮೆಯನ್ನು ವಿವರಿಸಲು ಈ ಕಥೆ ಬಳಕೆಗೊಂಡಿರುವಂತಿದೆ.
ಇನ್ನೊಬ್ಬ ಅಂಬರೀಷ ಇದ್ದಾನೆ. ಇವನೂ ವಿಷ್ಣುಭಕ್ತ. ಅಪಾಯ ಬಂದಾಗ ವಿಷ್ಣುವಿನ ಚಕ್ರ ತನ್ನನ್ನು ಕಾಪಾಡಬೇಕು ಎಂದು ವಿಷ್ಣುವನ್ನು ಪ್ರಾರ್ಥಿಸಿ ವರ ಪಡೆದಿದ್ದ. ಇವನ ಮಗಳು ಶ್ರೀಮತಿಯನ್ನು ನಾರದ-ಪರ್ವತ ಇಬ್ಬರು ಬಯಸಿದರು. ಸ್ವಯಂವರದಲ್ಲಿ ವಿಷ್ಣು ಮಾಯೆಗೆ ಒಳಗಾದ ಇಬ್ಬರಿಗೂ ದಕ್ಕದ ಶ್ರೀಮತಿ ಮಹಾವಿಷ್ಣುವನ್ನೇ ಕೈಹಿಡಿದಳು. ಶಪಿಸಲು ಬಂದ ನಾರದ ಪರ್ವತರನ್ನು ಚಕ್ರ ಅಟ್ಟಿಸಿಕೊಂಡು ಬಂದು ಕೊನೆಗೆ ಅವರು ಅಂಬರೀಷನ ಕಾಲಿಗೆ ಬಿದ್ದು ಉಳಿದುಕೊಂಡರು.
ಮೂರನೇ ಅಂಬರೀಷ ಶುನಶ್ಯೇಪನ ಕಥೆಯಲ್ಲಿ ಬರುವ ರಾಜ. ನಾಲ್ಕನೇ ಅಂಬರೀಷ ಮಹಾಭಾರತದಲ್ಲಿ ಉಕ್ತನಾಗಿದ್ದಾನೆ. ಇವನು ‘ಷೋಡಶ ಚಕ್ರವರ್ತಿಗಳು’ ಎಂದು ಪ್ರಸಿದ್ಧಾದ ಹದಿನಾರು ಜನರಲ್ಲಿ ಒಬ್ಬ. ಈತನ ವಿಷಯವು ಆದಿಪರ್ವದ ಒಂಬತ್ತನೇ ಅಧ್ಯಾಯದಲ್ಲಿ ವನಪರ್ವದ 129ನೆ ಅಧ್ಯಾಯದಲ್ಲೂ ಬರುತ್ತದೆ. ಇವನು ನಾಭಾಗ ಚಕ್ರವರ್ತಿಯ ಮಗ. ಯಮುನಾ ನದಿಯ ಕಣಿವೆಯಲ್ಲಿ ಯಾಗ ಮಾಡಿದ ಮಹನೀಯ. ಒಂದು ಕೋಟಿ ರಾಜರುಗಳನ್ನು ಗೆದ್ದು ಒಂದು ನೂರು ಅಶ್ವಮೇಧ ಯಾಗಗಳನ್ನು ಮಾಡಿದವನೆಂದು ಕೀರ್ತಿತನಾಗಿರುವ ದೊರೆ ಈತ. ರಾಜರುಗಳನ್ನು ಅವರ ಆಸ್ತಿಯ ಸಮೇತ ಬ್ರಾಹ್ಮಣರಿಗೆ ದಾನ ಮಾಡಿದವನೆಂದು ಮಹಾಭಾರತ ಇವನನ್ನು ಕೀರ್ತಿಸಿದೆ. ಒಂದು ಅರ್ಬುದ ಸಂಖ್ಯೆಯ ಗೋವುಗಳನ್ನು ದಾನ ಮಾಡಿ ತನ್ನ ನಗರದ ಸಮಸ್ತ ಪ್ರಜೆಗಳೊಂದಿಗೆ ಸ್ವರ್ಗಕ್ಕೆ ಹೋದನೆಂದು ವ್ಯಾಸರು ಹೇಳುತ್ತಾರೆ. ತನ್ನ ಅನುಭವಗಳನ್ನು ಹರಳುಗಟ್ಟಿಸಿ ಈತ ಹೇಳಿರುವ ‘ಅಂಬರೀಷ ಗೀತೆ’ ಒಂದು ಸೊಗಸಾದ ನೀತಿಪದ್ಯಗಳ ಮಾಲಿಕೆಯಾಗಿದೆ.
ಮೂಲ ...{Loading}...
ಕಾಯಿದೈ ಪ್ರಹ್ಲಾದ ಮಾರ್ಕಂ
ಡೇಯ ವನಗಜವಂಬರೀಷನ
ಕಾಯಿದೈ ಕಾರುಣ್ಯದಲಿ ಪಾತಕಿಯಜಾಮಿಳನ
ಕಾಯಿದೈ ಗೋವಿಂದಯೆನೆ ತ
ನ್ನಾಯತಿಕೆಯಭಿಮಾನವನು ನೀ
ಕಾಯಿದೈ ಹರಿಯೆನುತ ಪದದಲಿ ಹೊರಳಿದಳು ತರಳೆ ॥15॥
೦೧೬ ಏಳು ತಾಯೆ ...{Loading}...
ಏಳು ತಾಯೆ ಸರೋಜಮುಖಿ ಪಾಂ
ಚಾಲೆ ನೊಂದೌ ತಂಗಿಯೆನುತ ಕೃ
ಪಾಳು ಕಂಬನಿದೊಡೆದು ಕೊಡಹಿದನವಯವದ ರಜವ
ಮೇಲು ಮುಚ್ಚಳ ತೆರೆದ ತನುವಿನ
ಹೇಳಿಗೆಯ ಶೋಕಾಹಿಯಂತಿರೆ
ಲೋಲಲೋಚನೆಯಳಲು ಮಿಗೆ ಹೆಕ್ಕಳಿಸಿತಡಿಗಡಿಗೆ ॥16॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ತಂಗಿ, ಕಮಲವದನೆ…. ದ್ರೌಪದೀ… ಏಳು…. ನೊಂದೆಯಾ… ಎಂದು ಶ್ರೀಹರಿ ಅವಳ ಕಂಬನಿ ಒರೆಸಿ, ಅಂಗಾಂಗದ ಧೂಳನ್ನು ಕೊಡಹಿದನು. ಬುಟ್ಟಿಯ ಮುಚ್ಚಳ ತೆರೆದಾಗ ಹಾವು ಬುಸ್ಸೆಂದು ಮೇಲೇಳುವಂತೆ, ಕಾಂತಿಹೀನೆಯಾದ ದ್ರೌಪದಿಯ ದುಃಖ ಅಡಿಗಡಿಗೆ ಹೆಚ್ಚಾಯಿತು.
ಪದಾರ್ಥ (ಕ.ಗ.ಪ)
ಹೆಕ್ಕಳಿಸು-ಹೆಚ್ಚು
ಮೂಲ ...{Loading}...
ಏಳು ತಾಯೆ ಸರೋಜಮುಖಿ ಪಾಂ
ಚಾಲೆ ನೊಂದೌ ತಂಗಿಯೆನುತ ಕೃ
ಪಾಳು ಕಂಬನಿದೊಡೆದು ಕೊಡಹಿದನವಯವದ ರಜವ
ಮೇಲು ಮುಚ್ಚಳ ತೆರೆದ ತನುವಿನ
ಹೇಳಿಗೆಯ ಶೋಕಾಹಿಯಂತಿರೆ
ಲೋಲಲೋಚನೆಯಳಲು ಮಿಗೆ ಹೆಕ್ಕಳಿಸಿತಡಿಗಡಿಗೆ ॥16॥
೦೧೭ ಆ ಸಕಲ ...{Loading}...
ಆ ಸಕಲ ಪರಿವಾರವಾ ಧರ
ಣೀಶರಾ ಮುನಿ ನಿಕರವಾ ಜನ
ವಾ ಸತೀ ನಿಕುರುಂಬವಾ ಗಜ ಘೋಟಕವ್ರಾತ
ಆ ಸರೋಜಾನನೆಯ ಬಹಳ
ಕ್ಲೇಶಗಳ ಕಂಡಕ್ಷಿಜಲವಾ
ರಾಸಿಯಲಿ ತೇಕಾಡುತಿರ್ದುದು ರಾಯ ಕೇಳ್ ಎಂದ ॥17॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ದ್ರೌಪದಿಯ ಕಣ್ಣೀರನ್ನು ಕಂಡು ಸಕಲ ಪರಿವಾರವೂ, ಸಮಸ್ತ ರಾಜಮಹಾರಾಜರೂ, ಮುನಿಜನರೂ, ಸ್ತ್ರೀಸಮೂಹವೂ, ಆನೆಕುದುರೆಗಳೂ ಕಂಬನಿಯ ಧಾರೆಯಲ್ಲಿ ತೇಲಿದವು. ಎಂದು ವೈಶಂಪಾಯನರು ಹೇಳಿದರು.
ಟಿಪ್ಪನೀ (ಕ.ಗ.ಪ)
ನಿಕುರುಂಬ - ಸಮೂಹ, ಗುಂಪು, ಘೋಟಕ -ಕುದುರೆ.
ಮೂಲ ...{Loading}...
ಆ ಸಕಲ ಪರಿವಾರವಾ ಧರ
ಣೀಶರಾ ಮುನಿ ನಿಕರವಾ ಜನ
ವಾ ಸತೀ ನಿಕುರುಂಬವಾ ಗಜ ಘೋಟಕವ್ರಾತ
ಆ ಸರೋಜಾನನೆಯ ಬಹಳ
ಕ್ಲೇಶಗಳ ಕಂಡಕ್ಷಿಜಲವಾ
ರಾಸಿಯಲಿ ತೇಕಾಡುತಿರ್ದುದು ರಾಯ ಕೇಳೆಂದ ॥17॥
೦೧೮ ಮುಡಿಯ ಸಂವರಿಸಬಲೆ ...{Loading}...
ಮುಡಿಯ ಸಂವರಿಸಬಲೆ ಸೀರೆಯ
ನುಡು ನವಾಂಬರವಿದೆ ವಿರೋಧವ
ಬಿಡು ಸುಯೋಧನ ರಾಜಸಂತತಿಯುರಿದುದಿನ್ನೇನು
ಕೆಡಿಸಿಕೊಂಡರು ನಾಯ್ಗಳಿನ್ನದ
ನುಡಿದು ಫಲವೇನಕಟ ಕೈಕೊಂ
ಡಡವಿಯನುಭವ ಸವೆಯೆ ಸೈರಿಪುದೆಂದನಸುರಾರಿ ॥18॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ದ್ರೌಪದಿ, ಮುಡಿಯನ್ನು ಸರಿಗೊಳಿಸು. ಹೊಸಸೀರೆಯನ್ನು ತಂದಿದ್ದೇನೆ, ಉಡು. ಈ ದುಃಖವನ್ನು ಕಳೆ. ಕೌರವನ ಸಂತಾನವೇ ಇನ್ನೇನು ನಾಶವಾಗುತ್ತದೆ. ಆ ನಾಯಿಗಳು ತಾವೇ ಕೆಟ್ಟು ಹೋದರು. ಅದನ್ನು ಹೇಳಿ ಏನು ಪ್ರಯೋಜನ ? ಈ ವನವಾಸದ ಅವಧಿ ಕಳೆಯುವವರೆಗೆ ಸೈರಿಸು’ ಎಂದ ಶ್ರೀಕೃಷ್ಣ.
ಮೂಲ ...{Loading}...
ಮುಡಿಯ ಸಂವರಿಸಬಲೆ ಸೀರೆಯ
ನುಡು ನವಾಂಬರವಿದೆ ವಿರೋಧವ
ಬಿಡು ಸುಯೋಧನ ರಾಜಸಂತತಿಯುರಿದುದಿನ್ನೇನು
ಕೆಡಿಸಿಕೊಂಡರು ನಾಯ್ಗಳಿನ್ನದ
ನುಡಿದು ಫಲವೇನಕಟ ಕೈಕೊಂ
ಡಡವಿಯನುಭವ ಸವೆಯೆ ಸೈರಿಪುದೆಂದನಸುರಾರಿ ॥18॥
೦೧೯ ತುರುಬ ಕಟ್ಟುವ ...{Loading}...
ತುರುಬ ಕಟ್ಟುವ ಹದನ ನಿಮ್ಮಡಿ
ಯರಿಯದೆಂದೆನೆ ಸಕಲ ಸಚರಾ
ಚರದ ಚೇತನರೂಪ ದೇಹಿ ನಿಕಾಯ ಕೃತಸಾಕ್ಷಿ
ತರಿದು ದುಶ್ಯಾಸನನ ವಕ್ಷದೊ
ಳೊರೆವ ರಕುತದೊಳದ್ದಿ ಕಟ್ಟುವ
ದುರುಬನರಿಯಾ ಕೃಷ್ಣಯೆಂದಳು ಕಮಲಮುಖಿ ನಗುತ ॥19॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ಈ ತುರುಬನ್ನು ಕಟ್ಟುವುದು ನಿನಗೆ ತಿಳಿಯದು ಎನ್ನೋಣವೆಂದರೆ ನೀನು ಸಕಲ ಚರಾಚರದ ಚೈತನ್ಯರೂಪಗಳಿಗೂ ಸಾಕ್ಷೀರೂಪನಾಗಿದ್ದೀಯ. ದುಶ್ಶಾಸನನ ಎದೆಯ ರಕ್ತದಿಂದ ಅದ್ದಿ ತುರುಬನ್ನು ಕಟ್ಟುವುದು ನಿನಗೆ ಗೊತ್ತಲ್ಲವೆ? ’ ಎಂದಳು ದ್ರೌಪದಿ.
ಪದಾರ್ಥ (ಕ.ಗ.ಪ)
ನಿಕಾಯ - ಸಮೂಹ, ಗುಂಪು
ಮೂಲ ...{Loading}...
ತುರುಬ ಕಟ್ಟುವ ಹದನ ನಿಮ್ಮಡಿ
ಯರಿಯದೆಂದೆನೆ ಸಕಲ ಸಚರಾ
ಚರದ ಚೇತನರೂಪ ದೇಹಿ ನಿಕಾಯ ಕೃತಸಾಕ್ಷಿ
ತರಿದು ದುಶ್ಯಾಸನನ ವಕ್ಷದೊ
ಳೊರೆವ ರಕುತದೊಳದ್ದಿ ಕಟ್ಟುವ
ದುರುಬನರಿಯಾ ಕೃಷ್ಣಯೆಂದಳು ಕಮಲಮುಖಿ ನಗುತ ॥19॥
೦೨೦ ಐಸಲೇ ದುರ್ಯೋಧನಾದಿಗ ...{Loading}...
ಐಸಲೇ ದುರ್ಯೋಧನಾದಿಗ
ಳೇಸರವದಿರು ಭೀಮ ಪಾರ್ಥರ
ಬೀಸರಕೆ ಬಲುಗೈಯೆ ಬರ್ಹಿರ್ಮುಖರ ಭಾರವಣೆ
ದೂಸಕನ ರಕ್ತದಲಿ ನಿನ್ನಯ
ಕೇಶವನು ಕಟ್ಟಿಸುವೆ ನಿನ್ನಯ
ಭಾಷೆ ತನ್ನದು ತಾಯೆ ತವಕಿಸಬೇಡ ನೀನೆಂದ ॥20॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅಷ್ಟೇ ಅಲ್ಲವೆ? ದುರ್ಯೋಧನಾದಿಗಳು ಯಾವ ಲೆಕ್ಕ. ಭೀಮಾರ್ಜುನರನ್ನು ಎದುರಿಸಲು ದೇವತೆಗಳಿಗೂ ಸಾಧ್ಯವಿಲ್ಲ. ಆ ಪಾಪಿಯ ರಕ್ತದಲ್ಲಿ ನಿನ್ನ ಕೇಶವನ್ನು ಕಟ್ಟಿಸುತ್ತೇನೆ. ಆ ನಿನ್ನ ಪ್ರತಿಜ್ಞೆ ನನ್ನದು. ನೀನು ಕಳವಳಿಸಬೇಡ. ಎಂದನು ಶ್ರೀಕೃಷ್ಣ.
ಪದಾರ್ಥ (ಕ.ಗ.ಪ)
ದೂಸಕ-ಪಾಪಿ, ಬೀಸರ-ಅಂತ್ಯ, ನಾಶ
ಮೂಲ ...{Loading}...
ಐಸಲೇ ದುರ್ಯೋಧನಾದಿಗ
ಳೇಸರವದಿರು ಭೀಮ ಪಾರ್ಥರ
ಬೀಸರಕೆ ಬಲುಗೈಯೆ ಬರ್ಹಿರ್ಮುಖರ ಭಾರವಣೆ
ದೂಸಕನ ರಕ್ತದಲಿ ನಿನ್ನಯ
ಕೇಶವನು ಕಟ್ಟಿಸುವೆ ನಿನ್ನಯ
ಭಾಷೆ ತನ್ನದು ತಾಯೆ ತವಕಿಸಬೇಡ ನೀನೆಂದ ॥20॥
೦೨೧ ವರ ತಪಸ್ವಿನಿ ...{Loading}...
ವರ ತಪಸ್ವಿನಿ ನೀನು ನಿನ್ನನು
ಕೆರಳಿಚಿದರೇ ಕುನ್ನಿಗಳು ಮಿಗೆ
ಭರತಸಂತತಿ ಫಲಿತ ಕದಳಿಯ ತೆರದೊಳಾಯಿತಲ
ಕುರುಡನರಿಯದೆ ಹೋದರೆಯು ಕಂ
ಗುರುಡರಾದರೆ ಭೀಷ್ಮ ವಿದುರಾ
ದ್ಯರು ಮಹಾದೇವೆನುತ ಮುರರಿಪು ತೂಗಿದನು ಶಿರವ ॥21॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ನೀನು ತಪಸ್ವಿನಿ ! ನಿನ್ನನ್ನು ಆ ನಾಯಿಗಳು ಕೆರಳಿಸಿದರೇ ? ಈ ಭರತವಂಶ ಹಣ್ಣಾದ ಬಾಳೆಯಂತಾಯಿತು. ಕುರುಡನಾದ ಧೃತರಾಷ್ಟ್ರನಿಗೆ ಕಾಣದೇ ಹೋದರೂ, ಭೀಷ್ಮವಿದುರಾದಿಗಳೂ ಕುರುಡರಾಗಿ ಬಿಟ್ಟರಲ್ಲಾ, ಶಿವಶಿವಾ….. ಎಂದು ಶ್ರೀಕೃಷ್ಣ ತಲೆದೂಗಿದನು.
ಮೂಲ ...{Loading}...
ವರ ತಪಸ್ವಿನಿ ನೀನು ನಿನ್ನನು
ಕೆರಳಿಚಿದರೇ ಕುನ್ನಿಗಳು ಮಿಗೆ
ಭರತಸಂತತಿ ಫಲಿತ ಕದಳಿಯ ತೆರದೊಳಾಯಿತಲ
ಕುರುಡನರಿಯದೆ ಹೋದರೆಯು ಕಂ
ಗುರುಡರಾದರೆ ಭೀಷ್ಮ ವಿದುರಾ
ದ್ಯರು ಮಹಾದೇವೆನುತ ಮುರರಿಪು ತೂಗಿದನು ಶಿರವ ॥21॥
೦೨೨ ಶಕುನಿ ಕಲಿಸಿದ ...{Loading}...
ಶಕುನಿ ಕಲಿಸಿದ ಕಪಟವೇ ಕೌ
ಳಿಕದ ಜೂಜಿದು ನಿಮ್ಮನೀ ಕಾ
ಮ್ಯಕಕೆ ತಂದುದು ಜೂಜಿನಲಿ ತಾನಿಲ್ಲಲೇಯೆನಲು
ಸಕಲ ಜೀವರ ಕರ್ಣಸಾಕ್ಷಿ
ಪ್ರಕರಚೈತನ್ಯ ಸ್ವರೂಪಾ
ತ್ಮಕನು ನೀನಲ್ಲಿಲ್ಲ ಹುಸಿಯಲ್ಲೆಂದಳಿಂದುಮುಖಿ ॥22॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ಇದು ಶಕುನಿಯ ಕಪಟದ್ಯೂತದ ಫಲ. ಇದರಿಂದಾಗಿ ನೀವು ಈ ಕಾಮ್ಯಕವನಕ್ಕೆ ಬರಬೇಕಾಯಿತು. ಆಗ ನಾನು ಅಲ್ಲಿರಲಿಲ್ಲ’ ಎಂದು ಶ್ರೀಕೃಷ್ಣನು ಹೇಳಲು, ‘ಸಕಲ ಜೀವಸಾಕ್ಷಿಯೂ, ಸರ್ವಚೈತನ್ಯದಾಯಕನೂ ಆದ ನೀನು ಅಲ್ಲಿರಲಿಲ್ಲ ಎಂದರೆ ಅದು ಸುಳ್ಳಲ್ಲ ’ ಎಂದು ದ್ರೌಪದಿ ಕೇಳಿದಳು.
ಮೂಲ ...{Loading}...
ಶಕುನಿ ಕಲಿಸಿದ ಕಪಟವೇ ಕೌ
ಳಿಕದ ಜೂಜಿದು ನಿಮ್ಮನೀ ಕಾ
ಮ್ಯಕಕೆ ತಂದುದು ಜೂಜಿನಲಿ ತಾನಿಲ್ಲಲೇಯೆನಲು
ಸಕಲ ಜೀವರ ಕರ್ಣಸಾಕ್ಷಿ
ಪ್ರಕರಚೈತನ್ಯ ಸ್ವರೂಪಾ
ತ್ಮಕನು ನೀನಲ್ಲಿಲ್ಲ ಹುಸಿಯಲ್ಲೆಂದಳಿಂದುಮುಖಿ ॥22॥
೦೨೩ ದೇವಿ ತಾನಿದನರಿದೊಡಾ ...{Loading}...
ದೇವಿ ತಾನಿದನರಿದೊಡಾ ವಸು
ದೇವನಾಣೆ ಮಹಾದ್ಭುತವನದ
ನೇವೊಗಳ್ವೆನು ಯದುನೃಪಾಲ ವಿಪತ್ಪರಂಪರೆಯ
ನೀವು ಮಾಡಿದ ಯಜ್ಞ ಮುಖದ ವ
ಳಾವಳಿಯೊಳಾವಿರಲು ಮುತ್ತಿತು
ದೇವರಿಪುಬಲ ನಿಕರವಸ್ಮದ್ದ್ವಾರಕಾಪುರಿಯ ॥23॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ದೇವಿ… ಇದು ನನಗೆ ಗೊತ್ತಿದ್ದರೆ ವಸುದೇವನಾಣೆ. ಬರಲಾಗಿಲ್ಲ. . ನೀವು ಮಾಡಿದ ರಾಜಸೂಯದ ಸಂದರ್ಭದಲ್ಲಿ ನಾವು ಇದ್ದಾಗ ಯಾದವರಿಗೊದಗಿದ ವಿಪತ್ತಿನ ಬಗ್ಗೆ ಏನು ಹೇಳಲಿ? ಆಗ ನಮ್ಮ ದ್ವಾರಕಾವತಿಗೆ ರಾಕ್ಷಸರು ದಾಳಿ ಮಾಡಿದ್ದರು.
ಟಿಪ್ಪನೀ (ಕ.ಗ.ಪ)
ಸಾವಿತ್ರಿ - ಸಂಕಲ್ಪಶಕ್ತಿಯಿಂದ ದೃಢಚಿತ್ರದಿಂದ ನಿರತರ ಪರಿಶ್ರಮದಿಂದ ಹೆಣ್ಣು ಎಂತ ಕಠಿಣ ಪರಿಸ್ಥಿತಿಯನ್ನೂ ಮಾರ್ಪಡಿಸಿಕೊಳ್ಳಬಲ್ಲಳು ಎಂಬುದಕ್ಕೆ ಸಾವಿತ್ರಿ ಸತ್ಯವಾನದ ಹಳೆಯ ಕಥೆ ಸಾಕ್ಷಿಯಾಗುತ್ತದೆ. ತುಂಬ ಪ್ರಾಚೀನವಾದ ಈ ಕಥೆಯನ್ನು ಅರಣ್ಯಪರ್ವದಲ್ಲಿ ತೀರ್ಥಯಾತ್ರೆ ಮಾಡುತ್ತಿದ್ದ ಧರ್ಮರಾಯನಿಗೆ ಮಾರ್ಕಂಡೇಯರು ಹೇಳುತ್ತಾರೆ.
‘‘ಪತಿವ್ರತಾಯಾ ಮಹಾತ್ಮ್ಯಂ ಸಾವಿತ್ರ್ಯಾಃ’’ ಎಂಬ ಮಾತು ಪ್ರಸಿದ್ಧವಾಗಿದೆ. ಅರವಿಂದರು ಈಕೆಯ ಬಗೆಗೆ ಒಂದು ಮಹಾಕಾವ್ಯವನ್ನೇ ರಚಿಸಿದ್ದಾರೆ.
ಮಾದ್ರದೇಶದ ರಾಜನಾದ ಅಶ್ವಪತಿ ಮಾಲವರಾಜಕುಮಾರಿ ಸತ್ಯವತಿಯನ್ನು ಮದುವೆಯಾಗಿದ್ದ. ಈಕೆಗೆ ಮಾಲವಿ ಎಂಬ ಹೆಸರೂ ಇತು. ಆದರೆ ಈ ದಂಪತಿಗಳಿಗೆ ಬಹಳ ಕಾಲ ಮಕ್ಕಳಿರಲಿಲ್ಲ. ತುಂಬ ಶ್ರದ್ಧೆಯಿಂದ ಹದಿನೆಂಟು ವರ್ಷಗಳಷ್ಟು ದೀರ್ಘಕಾಲ ಸಾವಿತ್ರೀದೇವಿಯ ಆರಾಧನೆ ಮಾಡಿದರು. ರಾಜನು ಒಂದು ಲಕ್ಷ ಆಹುತಿಗಳಿಂದ ಹೋಮಮಾಡಿ ಸಾವಿತ್ರಿದೇವಿಯನ್ನು ಒಲಿಸಿಕೊಂಡ. ಅವಳು ಪ್ರಸನ್ನಳಾಗಿ ಹೇಳಿದಳು: ‘‘ರಾಜ! ನಿನಗೆ ತೇಜಸ್ವಿನಿಯಾದ ಒಬ್ಬಳು ಮಗಳು ಹುಟ್ಟಿ ವಂಶಕ್ಕೇ ಹೆಸರು ತರುತ್ತಾಳೆ.’’
ಹಾಗೆ ಹುಟ್ಟಿದ ಮಗಳಿಗೂ ತಂದೆ ಸಾವಿತ್ರಿ ಎಂದೇ ಹೆಸರಿಟ್ಟ. ಆ ರಾಜಪುತ್ರಿ ಮಹಾಸುಂದರಿಯಾಗಿದ್ದರೂ ಅವಳನ್ನು ಮದುವೆಯಾಗಲು ಯಾವ ರಾಜಪುತ್ರನೂ ಮುಂದೆ ಬರಲಿಲ್ಲ. (ಬಹುಶಃ ಒಂದು ವರ್ಷಕ್ಕೆ ಪತಿವಿಯೋಗ ಎಂದು ಯಾರೋ ಜೋಯಿಸರು ಹೇಳಿದ್ದರೋ ಏನೋ!) ಆಗ ರಾಜನು ಒಬ್ಬ ಮಂತ್ರಿಯನ್ನು ಜೊತೆ ಮಾಡಿಕೊಟ್ಟು, ಒಂದು ಸುವರ್ಣ ರಥದಲ್ಲಿ ಆಕೆಯನ್ನು ಕುಳ್ಳಿರಿಸಿ ‘‘ನಿನ್ನ ಪತಿಯನ್ನು ನೀನೇ ಆಯ್ದುಕೊಂಡು ಬಾ’’ ಎಂದು ಹೇಳಿದ. ಅವಳು ರಥದಲ್ಲಿ ವರಾನ್ವೇಷಣೆ ಮಾಡುತ್ತಾ ಹಲವಾರು ತೀರ್ಥಕ್ಷೇತ್ರಗಳನ್ನು ಸಂದರ್ಶಿಸಿ ಊರಿಗೆ ಹಿಂದಿರುಗಿದಳು. ಸತ್ಯವಾನನನ್ನು ವರನಾಗಿ ಆಯ್ದುಕೊಂಡಿರುವ ವಿಷಯ ತಿಳಿಸಿದಳು. ವಾಸ್ತವವಾಗಿ ಅವನೂ ರಾಜಕುಮಾರ. ಆದರೆ ಅವನ ತಂದೆ ಕುರುಡನಾಗಿದ್ದರಿಂದ ಪಕ್ಕದ ಸೀಮೆಯ ರಾಜನು ರಾಜ್ಯವನ್ನು ಕಿತ್ತುಕೊಂಡು ಇವರನ್ನೆಲ್ಲ ಕಾಡಿಗೆ ಓಡಿಸಿದ್ದನಂತೆ. ಇಂಥವನಿಗೆ ಹೇಗೆ ಮಗಳನ್ನು ಕೊಡುವುದು ಎಂಬ ಚಿಂತೆ ಕಾಡಿದರೂ ಮಗಳ ಸಂಕಲ್ಪವನ್ನು ಕಂಡು ತಂದೆ ಒಪ್ಪಿ ಮದುವೆ ಮಾಡಿಕೊಟ್ಟ.. ಸತ್ಯವಾನನ ಆಯುಷ್ಯವು ಇನ್ನು ಒಂದೇ ವರ್ಷ ಎಂದು ನಾರದರು ತಿಳಿಸಿದರೂ ಸಾವಿತ್ರಿ ತನ್ನ ನಿಶ್ಚಯವನ್ನು ಬದಲಿಸಲಿಲ್ಲವಾದ್ದರಿಂದ ಅಶ್ವಪತಿಗೆ ಮಗಳನ್ನು ಸತ್ಯವಾನನಿಗೆ ಮದುವೆ ಮಡಿಕೊಡದೆ ಬೇರೆ ದಾರಿ ಇರಲಿಲ್ಲ.
ಸತ್ಯವಾನ ಮೇಧಾವಿ, ಅಶ್ವಪ್ರಿಯ ಮಣ್ಣಿನಲ್ಲೂ ಕುದುರೆಗಳನ್ನು ಸೃಷ್ಟಿಸುವ ಶಕ್ತಿ ಅವನಿಗಿದ್ದುದರಿಂದ ಅವನನ್ನು ಚಿತ್ರಾಶ್ವ ಎಂದರೂ ಕರೆಯುತ್ತಿದ್ದರು.
ಕಾಡಿನಲ್ಲಿ ಅಚ್ಚುಕಟ್ಟಾಗಿ ಅತ್ತೆ ಮಾವಂದಿರ ಸೇವೆ ಮಾಡಿಕೊಂಡಿದ್ದ ಸಾವಿತ್ರಿ ಸತ್ಯವಾನನ ಸಾವಿನ ದಿನ ಅವನನ್ನು ಕಾಡಿಗೆ ಹಿಂಬಾಲಿಸಿದಳು. ಸೌದೆ ಒಡೆಯುತ್ತ ಆಯಾಸದಿಂದ ಸಾವಿತ್ರಿಯ ತೊಡೆಯಮೇಲೆ ಮಲಗಿದ ಸತ್ಯವಾನನ ಪಕ್ಕದಲ್ಲಿ ಯಮರಾಜ ನಿಂತಿದ್ದ. ಸತ್ಯವಾನನು ಮಹಿಮಾವಂತನಾಗಿದ್ದುದರಿಂದ ಜೀವವನ್ನು ಕೊಂಡೊಯ್ಯಲು ಸೇವಕರನ್ನು ಕಳಿಸದೆ ಸ್ವಯಂ ಯಮನೇ ಬಂದಿದ್ದ.
ಸಾವಿತ್ರಿ ಯಮನನ್ನು ಹಿಂಬಾಲಿಸಿದ್ದು, ಯಮನಿಗೂ ಅವಳಿಗೂ ನಡೆದ ಸಚಿವಾದ ಎಲ್ಲರಿಗೂ ತಿಳಿದ ವಿಷಯವೇ ಆಗಿದೆ. ಯಮನಿಂದ ನಾಲ್ಕು ವರಗಳನ್ನು ಪಡೆದ ಸಾವಿತ್ರಿ ತನ್ನ ಮಾವನಿಗೆ ದೃಷ್ಟಿ ಶಕ್ತಿ ಹಿಂದಕ್ಕೆ ಬರಲಿ, ರಾಜ್ಯ ಮರಳಿ ಲಭಿಸಲಿ, ತನ್ನ ತಂದೆಗೆ ಮತ್ತೆ ಸಂತಾನವಾಗಲಿ, ನನಗೂ ಒಂದು ಮಗುವಾಗಲಿ ಎಂಬ ನಾಲ್ಕು ಬೇಡಿಕೆಗಳನ್ನು ಮುಂದಿರಿಸಿದಳು. ಸತ್ಯವಾನನ ಪ್ರಾಣವೊಂದನ್ನು ಬಿಟ್ಟು ಏನು ಬೇಕಾದರೂ ಕೇಳು ಕೊಡುತ್ತೇನೆ ಎಂದು ಮಾತುಕೊಟ್ಟಿದ್ದ ಯಮ ಒಂದಲ್ಲ ನಿನಗೆ ನೂರು ಮಕ್ಕಳಾಗಲಿ ಉತ್ಸಾಹದಲ್ಲಿ ಹೇಳಿ ಕೊನೆಗೆ ತನ್ನ ಮಾತಿಗೇ ತಾನೇ ಸಿಕ್ಕಿಕೊಂಡು ಸತ್ಯವಾನನನ್ನು ಬದುಕಿಸಬೇಕಾಯಿತು. ಯಮಸರ್ಪಕ್ಕೆ ಅವಳು ಜೀರ್ಣಿಸಿಕೊಳ್ಳಲಾಗದ ಕಪ್ಪೆಯಾದಳು.
‘ನಂಬು, ನಿನ್ನನೆ ನಂಬು,
ಮಂತ್ರ ದೀಕ್ಷತೆಗೆ ಗುರಿ ತಪ್ಪದೆಂದೂ’
ಎಂಬ ಕುವೆಂಪು ಮಾತಿಗೆ ಭಾಷ್ಯ ಬರದಂತಿದೆ ಸಾವಿತ್ರಿಯ ಜೀವನ.
ಮೂಲ ...{Loading}...
ದೇವಿ ತಾನಿದನರಿದೊಡಾ ವಸು
ದೇವನಾಣೆ ಮಹಾದ್ಭುತವನದ
ನೇವೊಗಳ್ವೆನು ಯದುನೃಪಾಲ ವಿಪತ್ಪರಂಪರೆಯ
ನೀವು ಮಾಡಿದ ಯಜ್ಞ ಮುಖದ ವ
ಳಾವಳಿಯೊಳಾವಿರಲು ಮುತ್ತಿತು
ದೇವರಿಪುಬಲ ನಿಕರವಸ್ಮದ್ದ್ವಾರಕಾಪುರಿಯ ॥23॥
೦೨೪ ಲಗ್ಗೆಗಳುಕುವುದಲ್ಲಲೇ ಬಲು ...{Loading}...
ಲಗ್ಗೆಗಳುಕುವುದಲ್ಲಲೇ ಬಲು
ದುರ್ಗವದು ದುರ್ಭೇದವವರೊಳ
ಗಗ್ಗಳೆಯರಿದ್ದುದು ಹಲಾಯುಧ ಮನ್ಮಥಾದಿಗಳು
ಬಗ್ಗಿ ಕವಿವ ಕಠೋರ ದೈತ್ಯರ
ನುಗ್ಗು ನುರಿ ಮಾಡಿದರು ಹರಣದ
ಸುಗ್ಗಿ ಮೆರೆದುದು ಮಾರ್ಬಲದೊಳಬುಜಾಕ್ಷಿ ಕೇಳ್ ಎಂದ ॥24॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ದುರ್ಭೇದ್ಯವಾದ ಆ ಕೋಟೆ ದಾಳಿಗೆ ತತ್ತರಿಸುವುದೆ ? ಬಲರಾಮ ಪ್ರದ್ಯುಮ್ನಾದಿ ಮಹಾಪರಾಕ್ರಮಿಗಳು ಅಲ್ಲಿದ್ದರು. ಅವರು ಮೇಲೆ ಬಿದ್ದ ದೈತ್ಯರನ್ನು ಸದೆಬಡಿದರು. ಶತ್ರು ಸೈನ್ಯದಲ್ಲಿ ರಾಶಿರಾಶಿ ದೈತ್ಯರು ಮೃತ್ಯುವನ್ನೈದಿದರು. ಎಂದು ಕೃಷ್ಣನು ದ್ರೌಪದಿಗೆ ಹೇಳಿದನು.
ಪದಾರ್ಥ (ಕ.ಗ.ಪ)
ಹಲಾಯುಧ- ಬಲರಾಮ, ಮಾರ್ಬಲ - ಶತ್ರು ಸೈನ್ಯ.
ಮೂಲ ...{Loading}...
ಲಗ್ಗೆಗಳುಕುವುದಲ್ಲಲೇ ಬಲು
ದುರ್ಗವದು ದುರ್ಭೇದವವರೊಳ
ಗಗ್ಗಳೆಯರಿದ್ದುದು ಹಲಾಯುಧ ಮನ್ಮಥಾದಿಗಳು
ಬಗ್ಗಿ ಕವಿವ ಕಠೋರ ದೈತ್ಯರ
ನುಗ್ಗು ನುರಿ ಮಾಡಿದರು ಹರಣದ
ಸುಗ್ಗಿ ಮೆರೆದುದು ಮಾರ್ಬಲದೊಳಬುಜಾಕ್ಷಿ ಕೇಳೆಂದ ॥24॥
೦೨೫ ಅಳುಕಿ ಮುತ್ತಿಗೆದೆಗೆದು ...{Loading}...
ಅಳುಕಿ ಮುತ್ತಿಗೆದೆಗೆದು ಸಾಲ್ವನ
ದಳ ಮುರಿದು ನಿಜಪುರಕೆ ಹಾಯ್ದುದು
ಗೆಲವು ಸಾತ್ಯಕಿ ರಾಮಕಾಮಾದಿಗಳ ವಶವಾಯ್ತು
ಬಳಿಕ ನಿಮ್ಮಯ ರಾಜಸೂಯಕೆ
ಕಳಶವಿಟ್ಟು ಮದೀಯ ನಗರಿಯ
ಕಳವಳವ ಸಂತೈಸಿ ನಡೆದೆವು ಸಾಲ್ವ ಪಟ್ಟಣಕೆ ॥25॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಸಾಲ್ವನ ಸೇನೆ ಹೆದರಿ ಮುತ್ತಿಗೆಯನ್ನು ಹಿಂತೆಗೆದುಕೊಂಡು ತನ್ನ ನಗರಕ್ಕೆ ಓಡಿತು. ಬಲರಾಮ ಸಾತ್ಯಕಿ ಪ್ರದ್ಯುಮ್ನಾದಿಗಳು ಯುದ್ಧದಲ್ಲಿ ವಿಜಯಿಗಳಾದರು. ನಿಮ್ಮ ರಾಜಸೂಯಕ್ಕೆ ಮಂಗಲಹಾಡಿ, ನಮ್ಮ ದ್ವಾರಕೆಯ ಕಳವಳವನ್ನು ಹೋಗಲಾಡಿಸಿ, ಸಾಲ್ವನ ಪಟ್ಟಣಕ್ಕೆ ಹೊರಟೆವು.
ಮೂಲ ...{Loading}...
ಅಳುಕಿ ಮುತ್ತಿಗೆದೆಗೆದು ಸಾಲ್ವನ
ದಳ ಮುರಿದು ನಿಜಪುರಕೆ ಹಾಯ್ದುದು
ಗೆಲವು ಸಾತ್ಯಕಿ ರಾಮಕಾಮಾದಿಗಳ ವಶವಾಯ್ತು
ಬಳಿಕ ನಿಮ್ಮಯ ರಾಜಸೂಯಕೆ
ಕಳಶವಿಟ್ಟು ಮದೀಯ ನಗರಿಯ
ಕಳವಳವ ಸಂತೈಸಿ ನಡೆದೆವು ಸಾಲ್ವ ಪಟ್ಟಣಕೆ ॥25॥
೦೨೬ ಏನನೆಮ್ಬೆನು ಸಾಲ್ವಪುರದ ...{Loading}...
ಏನನೆಂಬೆನು ಸಾಲ್ವಪುರದ ನ
ವೀನ ಮಾಯಾರಚನೆಯನು ನಮ
ಗಾನಲಸದಳವುಳಿದ ಗೀರ್ವಾಣರಿಗೆ ಗೋಚರವೆ
ದಾನವನ ಮಾಯಾಪುರದ ಸಂ
ಸ್ಥಾನ ವರ್ಮವನರಿದು ಶರ ಸಂ
ಧಾನದಲಿ ಸಂಹರಿಸಿದೆವು ಸಾಲ್ವಾದಿ ರಿಪುಭಟರ ॥26॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಸಾಲ್ವಪುರದ ಮಾಯಾ ರಚನೆಯನ್ನು ಏನು ಹೇಳಲಿ !ನಮಗೇ ಅದನ್ನು ತಿಳಿಯಲು ಸಾಧ್ಯವಾಗಲಿಲ್ಲ. ಇನ್ನು ಉಳಿದ ದೇವತೆಗಳಿಗೆ ಸಾಧ್ಯವೇ? . ಆ ರಾಕ್ಷಸನ ಮಾಯಾಪುರದ ರಹಸ್ಯವನ್ನು ಭೇದಿಸಿ, ಶತ್ರುಭಟರನ್ನು ಬಾಣಪ್ರಯೋಗದಿಂದ ಸಂಹಾರ ಮಾಡಿದೆವು.
ಪದಾರ್ಥ (ಕ.ಗ.ಪ)
ಗೀರ್ವಾಣ - ದೇವತೆಗಳು, ವರ್ಮ - ರಹಸ್ಯ
ಮೂಲ ...{Loading}...
ಏನನೆಂಬೆನು ಸಾಲ್ವಪುರದ ನ
ವೀನ ಮಾಯಾರಚನೆಯನು ನಮ
ಗಾನಲಸದಳವುಳಿದ ಗೀರ್ವಾಣರಿಗೆ ಗೋಚರವೆ
ದಾನವನ ಮಾಯಾಪುರದ ಸಂ
ಸ್ಥಾನ ವರ್ಮವನರಿದು ಶರ ಸಂ
ಧಾನದಲಿ ಸಂಹರಿಸಿದೆವು ಸಾಲ್ವಾದಿ ರಿಪುಭಟರ ॥26॥
೦೨೭ ಅತ್ತಲಾ ಕೋಳಾಹಳದಲಿರ ...{Loading}...
ಅತ್ತಲಾ ಕೋಳಾಹಳದಲಿರ
ಲಿತ್ತಲಾದುದು ಜೂಜು ನಿಮ್ಮ ವಿ
ಪತ್ತು ಕಂಡುದು ತೆರಹ ತಪ್ಪಿಸಿ ನಮ್ಮ ಸುಳಿವುಗಳ
ಇತ್ತಲಾವಿರೆ ಮೇಣು ದೋರಕಿ
ಯತ್ತಲಿರೆ ನೀವಡವಿವೊಕ್ಕರೆ
ಹೆತ್ತಳೋ ದೇವಕಿ ಮಗನನೆಂದನು ಮುರಧ್ವಂಸಿ ॥27॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ಆಕಡೆ ನಾವು ಯುದ್ಧದಲ್ಲಿ ತೊಡಗಿರುವಾಗ, ಈ ಕಡೆ ಕಪಟ ಜೂಜಿನಿಂದ ನೀವು ಸಂಕಷ್ಟಕ್ಕೆ ಸಿಲುಕಿದಿರಿ. ನಾವು ಒಂದೆಡೆ, ದ್ವಾರಕೆಯಿಂದ ದೂರವಿದ್ದಾಗ ನೀವು ಕಾನನವನ್ನು ಪ್ರವೇಶಿಸಿದಿರಿ. ನಿಮಗೆ ಬಂದ ವಿಪತ್ತುಗಳ ಸುದ್ದ್ದಿಯ ಸುಳಿವೂ ನಮಗೆ ಸಿಕ್ಕಲಿಲ್ಲ. ಹಾಗಲ್ಲದಿದ್ದರೆ ದೇವಕಿ ನನ್ನನ್ನು ಹೆತ್ತು ಏನು ಫಲವಾಯ್ತು ?’ ಎಂದು ಶ್ರೀಹರಿಯು ಹೇಳಿದನು.
ಮೂಲ ...{Loading}...
ಅತ್ತಲಾ ಕೋಳಾಹಳದಲಿರ
ಲಿತ್ತಲಾದುದು ಜೂಜು ನಿಮ್ಮ ವಿ
ಪತ್ತು ಕಂಡುದು ತೆರಹ ತಪ್ಪಿಸಿ ನಮ್ಮ ಸುಳಿವುಗಳ
ಇತ್ತಲಾವಿರೆ ಮೇಣು ದೋರಕಿ
ಯತ್ತಲಿರೆ ನೀವಡವಿವೊಕ್ಕರೆ
ಹೆತ್ತಳೋ ದೇವಕಿ ಮಗನನೆಂದನು ಮುರಧ್ವಂಸಿ ॥27॥
೦೨೮ ದ್ವಾರಕೆಯಲಿರು ...{Loading}...
ದ್ವಾರಕೆಯಲಿರು ಮತ್ಪುರದಲಿರತಿ
ದೂರದಲ್ಲಿರು ಮೇಣು ನಮ್ಮಯ
ಸಾರೆ ನಿಮ್ಮಡಿಯಿರಲಿ ನಿಮ್ಮೀ ಪಾಂಡುನಂದನರ
ಭಾರ ನಿಮ್ಮದು ಭಕ್ತ ಜನದಾ
ಧಾರ ನೆಮ್ಮಿದನಾಥರಾವತಿ
ಕಾರಣಿಕ ನೀನೆಂದು ಬಿದ್ದಳು ಮತ್ತೆ ಚರಣದಲಿ ॥28॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ನೀನು ದ್ವಾರಕೆಯಲ್ಲಿರು, ನಮ್ಮ ಪುರದಲ್ಲಿ ಅಥವಾ ಇನ್ನೂ ದೂರದಲ್ಲಿರು. ಆದರೆ ನಮ್ಮ ಮೇಲೆ ಅನುಗ್ರಹವಿದ್ದರೆ ಸರಿ. ನಿನ್ನವರೇ ಆದ ಈ ಪಾಂಡವರನ್ನು ರಕ್ಷಿಸುವ ಹೊಣೆ ನಿನ್ನದು. ಭಕ್ತವತ್ಸಲ… ಅನಾಥ ಬಂಧು… ಎನ್ನುತ್ತ ಮತ್ತೆ ಹರಿಪದದಲ್ಲಿ ದ್ರೌಪದಿ ಬಿದ್ದಳು.
ಪಾಠಾನ್ತರ (ಕ.ಗ.ಪ)
ದ್ವಾರಕಾ ತತ್ಪುರಿದಲಿರುವತಿ -ದ್ವಾರಕೆಯಲಿರು ಮತ್ಪುರದಲಿರತಿ
ಮೂಲ ...{Loading}...
ದ್ವಾರಕೆಯಲಿರು ಮತ್ಪುರದಲಿರತಿ
ದೂರದಲ್ಲಿರು ಮೇಣು ನಮ್ಮಯ
ಸಾರೆ ನಿಮ್ಮಡಿಯಿರಲಿ ನಿಮ್ಮೀ ಪಾಂಡುನಂದನರ
ಭಾರ ನಿಮ್ಮದು ಭಕ್ತ ಜನದಾ
ಧಾರ ನೆಮ್ಮಿದನಾಥರಾವತಿ
ಕಾರಣಿಕ ನೀನೆಂದು ಬಿದ್ದಳು ಮತ್ತೆ ಚರಣದಲಿ ॥28॥
೦೨೯ ಮಗನ ಕರೆದರೆ ...{Loading}...
ಮಗನ ಕರೆದರೆ ಯಮನ ದೂತರ
ತಗುಳುವಂದು ಸಮೀಪವರ್ತಿಯೆ
ನಗಧರ ಶ್ರೀಕಾಂತ ಸಲಹೆನೆ ಮುನಿ ಕುಮಾರಕನ
ಉಗುಳಿಚಿದೆಲಾ ಮೃತ್ಯುವಿನ ತಾ
ಳಿಗೆಯೊಳಂದು ಸಮೀಪವರ್ತಿಯೆ
ಜಗದುದರ ನೀ ಜಾಣನಹೆಯೆಂದಳು ಸರೋಜಮುಖಿ ॥29॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ಸಾಂದೀಪನಿ ಮುನಿಯ ಕುಮಾರನನ್ನು ಮೃತ್ಯುವು ಒಯ್ದಾಗ, ಶ್ರೀಕಾಂತ… ಗೋವರ್ಧನೋದ್ಧಾರಿ… ಎಂದು ಆ ಮುನಿಯು ಮೊರೆಯಿಡಲು, ನೀನು ಆ ಮುನಿಕುಮಾರನನ್ನು ಮತ್ತೆ ಮೃತ್ಯುವಿನ ಬಾಯಿಯಿಂದ ಮರಳಿ ತಂದೊಪ್ಪಿಸಿದೆ ಜಗನ್ನಾಥಾ.. ಆಗ ನೀನು ಅತಿ ಸಮೀಪದಲ್ಲಿಯೇ ಇದ್ದೆಯಾ ? ನೀನು ಬಹಳ ಜಾಣ’ ಎಂದು ದ್ರೌಪದಿ ಸ್ತುತಿಸಿದಳು.
ಪದಾರ್ಥ (ಕ.ಗ.ಪ)
ತಗೂ - ಬೆನ್ನಟ್ಟು , ಉಗುಳಿಚು - ಹೊರಬರಿಸು
ಟಿಪ್ಪನೀ (ಕ.ಗ.ಪ)
ಸಾಂದೀಪನಿ - ಸಾಂದೀಪನಿ ಬಲರಾಮ ಕೃಷ್ಣ ಕುಚೇಲರ ವಿದ್ಯಾಗುರುಗಳು. ಅವಂತಿ ಈ ಗುರುಗಳ ನಿವಾಸ ಸ್ಥಾನ. ಈತನ ಬಳಿಗೆ ವಿದ್ಯಾಭ್ಯಾಸ ಮಾಡಲು ಅನೇಕ ದೇಶಗಳಿದ ರಾಜಕುಮಾರರು ಬರುತ್ತಿದ್ದರು. ಗಗನ ಋಷಿಯ ಸಲಹೆಯಂತೆ ವಸುದೇವನು ಬಲರಾಮ-ಕೃಷ್ಣರನ್ನು ಸಾಂದಿಪನಿಯ ಆಶ್ರಮಕ್ಕೆ ಕರೆತಂದು ಅವರನ್ನು ಒಪ್ಪಿಸಿ ಶಿಷ್ಯರನ್ನಾಗಿ ಮಾಡಿದ. ವಿದ್ಯಾಭ್ಯಾಸ ಕಾಲದ ಒಂದು ಘಟನೆ ಸಭಾಪರ್ವದ 38ನೆಯ ಅಧ್ಯಾಯದಲ್ಲಿ ಬರುತ್ತದೆ. ಒಮ್ಮೆ ಕೃಷ್ಣ ಬಲರಾಮರು ಕುಚೇಲನೊಂದಿಗೆ ಕಟ್ಟಿಗೆ ಆರಿಸಿ ತರಲು ಕಾಡಿಗೆ ಹೋದರು. ಭಾರಿ ಮಳೆ ಮತ್ತು ಬಿರುಗಾಳಿಗೆ ಸಿಕ್ಕಿ ಕಾಡಿನಲ್ಲಿ ದಾರಿತಪ್ಪಿದರು. ಕಾಡಿನಲ್ಲೆಲ್ಲ ಅಲೆಯುತ್ತಿದ್ದ ಅವರನ್ನು ಗುರು ಸಾಂದೀಪನಿ ಹುಡುಕಿ ಆಶ್ರಮಕ್ಕೆ ಕರೆತಂದ ಘಟನೆ ಅದು. ಸಾಂದೀಪನಿ ಬಹುಶ್ರುತರಾದ ಗುರು. ಬಲರಾಮ ಕೃಷ್ಣರು ಶ್ರದ್ಧೆಯಿಂದ ಗುರುಸೇವೆ ಮಾಡಿ ಅರವತ್ತನಾಲ್ಕು ದಿನಗಳಲ್ಲಿ ಷಡಂಗಸಹಿತ ವೇದಗಳನ್ನು ಅಧ್ಯಯನ ಮಾಡಿದರು. ಅವರ ಬಳಿಯೇ ಚಿತ್ರಕಲೆ, ಗಣಿತ, ಸಂಗೀತ ಮತ್ತು ವೈದ್ಯವಿದ್ಯೆಗಳನ್ನು ಕಲಿತರು. U್ಪಜಶಿಕ್ಷಣ ಅಶ್ವಶಿಕ್ಷಣಗಳನ್ನು ಕಲಿಯಲು ಮತ್ತೆ ಹನ್ನೆರಡು ದಿನ ಹಿಡಿಯಿತು. ಇವನ್ನೆಲ್ಲ ಸಾಂಗವಾಗಿ ಕಲಿತ ಮೇಲೆ ಎಂಬತ್ತು ದಿನಗಳ ಅವಧಿಯಲ್ಲಿ ಧನುರ್ವೇದವನ್ನು ಕಲಿಯಲು ಮತ್ತೆ ಗುರುಗಳ ಬಳಿಗೆ ಹೋದರು.
ಎಲ್ಲ ವಿದ್ಯೆಗಳನ್ನೂ ಕಲಿತನಂತರ ಶಿಷ್ಯರು ಗುರುದಕ್ಷಿಣೆಯನ್ನು ಕೊಟ್ಟು ಊರಿಗೆ ಹಿಂದಿರುಗುವುದು ರೂಢಿಯಾಗಿತ್ತು. ಅದರಂತೆ ಅವರು ಏನು ಕೊಡಬೇಕೆಂಬ ಬಗೆಗೆ ಗುರುಗಳನ್ನೇ ಕೇಳಿದರು. ಆದರೆ ಗುರುಗಳಿಗೆ ಹಣ ಕಾಸು ಬೇಕಾಗಿರಲಿಲ್ಲ. ಅಳುತ್ತ ಅವರು ತಮ್ಮ ಸಂಸಾರ ಜೀವನದ ಒಂದು ದುರಂತ ಘಟನೆಯನ್ನು ವಿವರಿಸಿದರು. ಅವರಿಗೆ ಒಬ್ಬ ಮಗನಿದ್ದನಂತೆ. ಅವನು ಒಮ್ಮೆ ಪ್ರಭಾಸ ತೀರ್ಥದಲ್ಲಿ ಸ್ನಾನ ಮಾಡುತ್ತಿದಾಗ ಒಬ್ಬ ರಾಕ್ಷಸ ಅವನನ್ನು ಅಪಹರಿಸಿಕೊಂಡು ನೀರಿನೊಳಗೆ ಎಳೆದುಕೊಂಡು ಹೋಗಿ ಅಲ್ಲಿ ಕೊಂದು ಹಾಕಿರಬಹುದು, ಒಟ್ಟಿನಲ್ಲಿ ಆ ಹುಡುಗ ಮುಳುಗಿದವನು ಮೇಲೆ ಏಳಲಿಲ್ಲವಂತೆ. ಈ ದುರ್ಘಟನೆಯನ್ನು ವಿವರಿಸಿದ ನಂತರ ಗುರುಗಳು ಬಲರಾಮಕೃಷ್ಣರಿಗೆ
‘‘ಅವನನ್ನು ಬದುಕಿಸಿ ತಂದುಕೊಟ್ಟರೆ ಅದೇ ಗುರುದಕ್ಷಿಣೆ’’ ಎಂದು ಹೇಳಿದರು. ಇದು ಆಗದ ಕೆಲಸ ಎಂದು ಎಷ್ಟು ಹೇಳಿದರೂ ಗುರು ಕೇಳುವ ಸ್ಥಿತಿಯಲ್ಲಿರಲಿಲ್ಲ. ಕೊನೆಗೆ ಆ ಹುಡುಗನನ್ನು ಬದುಕಿಸಿ ತರುವುದಾಗಿ ಪ್ರತಿಜ್ಞೆ ಮಾಡಿದರು. ರಾಮ, ಕೃಷ್ಣನು ರಥದಲ್ಲಿ ಕುಳಿತು ಮೊದಲು ನೇರವಾಗಿ ವರುಣನ ಬಳಿಗೆ ಹೋದರು. ವರುಣನು ‘ಪಂಚಜನ’ ಎಂಬ ರಾಕ್ಷಸನು ಶಂಖದಾಕಾರದಲ್ಲಿ ನೀರಿನಲ್ಲಿ ಓಡಾಡುತ್ತಿದ್ದಾನೆಂದೂ ಅವನೇ ಈ ಕೆಲಸ ಮಾಡಿದ್ದಾನೆಂದೂ ಹೇಳಿದ. ಕೂಡಲೇ ಇವನು ನೀರು ಹೊಕ್ಕು ಆ ಪಂಚಜನ್ಯ ಎಂಬ ಶಂಖದಾಕಾರದ ರಾಕ್ಷಸನನ್ನು ಹಿಡಿದು ಎಳೆದುಕೊಂಡು ಬಂದು ಅವನ ದೇಹವನ್ನೆಲ್ಲ ಶೋಧಿಸಿದರು. ಂಪ್ಪು ಮಾತ್ರ ಉಳಿಯಿತು. ದೇಹ ಸಿಕ್ಕಲಿಲ್ಲ. ಆಗ ಆ ಶಂಖವನ್ನೇ ಜೋರಾಗಿ ಊದುತ್ತ ಅವರಿಬ್ಬರೂ ಯಮನ ಬಳಿಗೆ ಹೋದರು. ಯಮನಿಗೆ ತಾವು ಬಂದಿರುವ ಉದ್ದೇಶವನ್ನು ತಿಳಿಸಿದರು. ಯಮನು ಆ ಹುಡುಗನನ್ನು ಹುಡುಕಿಕೊಟ್ಟ. ಆ ಹುಡುಗನನ್ನು ಗುರುದಕ್ಷಿಣೆಯಾಗಿ ಗುರುಗಳಿಗೆ ಸಮರ್ಪಿಸಿ ಮಧುರೆಗೆ ಹಿಂದಿರುಗಿದರು. ಶಂಖವು ‘ಪಾಂಚಜನ್ಯ’ ಎಂಬ ಪ್ರಸಿದ್ದ ಶಂಖವಾಗಿ ಕೃಷ್ಣನ ಬಳಿ ಉಳಿಯಿತು.
ಸತ್ತವರು ಬದುಕಿ ಬರುವ ಕಥೆಗಳು ಮಹಾಭಾರತದಲ್ಲಿ ಕೆಲವಿವೆ. ಅವುಗಳಲ್ಲಿ ಇದೂ ಒಂದು. ಶಿಷ್ಯರು ಆಶ್ರಮಕ್ಕೆ ಹಿಂದಿರುಗಲಿಲ್ಲ ಎಂಬ ಸುದ್ದಿಯನ್ನು ಕೇಳಿ ತಲ್ಲಣಗೊಂಡು ಅರ್ಧರಾತ್ರಿಯಲ್ಲಿ ಅವರನ್ನು ಹುಡುಕಿಕೊಂಡು ಕಾಡಿಗೆ ಹೋಗುವ ಸಾಂದೀಪನಿ ಗುರುಗಳ ಶಿಷ್ಯವಾತ್ಸಲ್ಯ ಮೆಚ್ಚಿಕೆಗೆ ಪಾತ್ರವಾಗುವಂಥದು.ಸಾಂದೀಪನಿ :
ಮೂಲ ...{Loading}...
ಮಗನ ಕರೆದರೆ ಯಮನ ದೂತರ
ತಗುಳುವಂದು ಸಮೀಪವರ್ತಿಯೆ
ನಗಧರ ಶ್ರೀಕಾಂತ ಸಲಹೆನೆ ಮುನಿ ಕುಮಾರಕನ
ಉಗುಳಿಚಿದೆಲಾ ಮೃತ್ಯುವಿನ ತಾ
ಳಿಗೆಯೊಳಂದು ಸಮೀಪವರ್ತಿಯೆ
ಜಗದುದರ ನೀ ಜಾಣನಹೆಯೆಂದಳು ಸರೋಜಮುಖಿ ॥29॥
೦೩೦ ಆಯಿತೇಳೌ ತಙ್ಗಿ ...{Loading}...
ಆಯಿತೇಳೌ ತಂಗಿ ನೀ ಪಿರಿ
ದಾಯಸವನನುಭವಿಸಲುದಿಸಿದೆ
ರಾಯನಾಡಿದ ಭಾಷೆ ಸಲಲಿ ವನಪ್ರವಾಸದಲಿ
ವಾಯುತನುಜನ ಕೈಯಲೇ ನಿ
ನ್ನಾಯತಿಕೆಯಹುದಾ ಪ್ರತಿಜ್ಞೆಗೆ
ತಾಯೆ ತಾ ಹೊಣೆಯೆಂದು ಕೊಟ್ಟನು ಸತಿಗೆ ನಂಬುಗೆಯ ॥30॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ತಂಗಿ, ಆಯಿತು. ಏಳು, ನೀನು ಅತಿಯಾದ ದುಃಖವನ್ನು ಅನುಭವಿಸಲಿಕ್ಕಾಗಿಯೇ ಹುಟ್ಟಿದೆ, ಇರಲಿ. ಧರ್ಮಜನಾಡಿದಂತೆ ವನವಾಸದ ಪ್ರತಿಜ್ಞೆ ಈಡೇರಲಿ. ಭೀಮಸೇನನ ಕೈಯಿಂದಲೇ ನಿನ್ನ ಶಪಥ ನೆರವೇರಿಸುತ್ತೇನೆ. ಇದಕ್ಕೆ ನಾನೇ ಹೊಣೆ’ ಎಂದು ದ್ರೌಪದಿಗೆ ಶ್ರೀಹರಿಯು ನಂಬುಗೆಯ ಮಾತನ್ನಿತ್ತನು.
ಪದಾರ್ಥ (ಕ.ಗ.ಪ)
ಆಯಸ - ದುಃಖ
ಆಯತಿಕೆ - ಕ್ಷೇಮ
ಮೂಲ ...{Loading}...
ಆಯಿತೇಳೌ ತಂಗಿ ನೀ ಪಿರಿ
ದಾಯಸವನನುಭವಿಸಲುದಿಸಿದೆ
ರಾಯನಾಡಿದ ಭಾಷೆ ಸಲಲಿ ವನಪ್ರವಾಸದಲಿ
ವಾಯುತನುಜನ ಕೈಯಲೇ ನಿ
ನ್ನಾಯತಿಕೆಯಹುದಾ ಪ್ರತಿಜ್ಞೆಗೆ
ತಾಯೆ ತಾ ಹೊಣೆಯೆಂದು ಕೊಟ್ಟನು ಸತಿಗೆ ನಂಬುಗೆಯ ॥30॥
೦೩೧ ಸನ್ತವಿಟ್ಟನು ಬೇರೆ ...{Loading}...
ಸಂತವಿಟ್ಟನು ಬೇರೆ ಬೇರೆ ಕೃ
ತಾಂತಸುತ ಭೀಮಾದಿಗಳು ಮುನಿ
ಸಂತತಿಯ ಮನ್ನಿಸಿದನವರವರುಚಿತ ವೃತ್ತಿಯಲಿ
ಎಂತು ಹದಿಮೂರಬುದವೀ ನೃಪ
ಸಂತತಿಗೆ ಸೌಹಾರ್ದವಕಟ ವ
ನಾಂತರದೊಳೆಂದಸುರರಿಪು ನುಡಿದನು ಯುಧಿಷ್ಠಿರಗೆ ॥31॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಧರ್ಮರಾಯ ಭೀಮಸೇನಾದಿಗಳನ್ನು ಬೇರೆಬೇರೆಯಾಗಿ ಶ್ರೀಕೃಷ್ಣನು ಸಂತೈಸಿ, ಮುನಿ ನಿಕರವನ್ನು ಉಚಿತವಾದ ರೀತಿಯಲ್ಲಿ ಮನ್ನಿಸಿದನು. ಮುಂದಿನ ಹದಿಮೂರು ವರ್ಷಗಳ ಕಾಲ ಈ ರಾಜ ಸಂಕುಲಕ್ಕೆ ಈ ಕಾಡಿನಲ್ಲಿ ಹೇಗೆ ಕ್ಷೇಮವಾಗಿರುತ್ತಾರೆಯೋ? ಎಂದು ಶ್ರೀಕೃಷ್ಣ ಧರ್ಮರಾಯನಲ್ಲಿ ಕೇಳಿದನು.
ಮೂಲ ...{Loading}...
ಸಂತವಿಟ್ಟನು ಬೇರೆ ಬೇರೆ ಕೃ
ತಾಂತಸುತ ಭೀಮಾದಿಗಳು ಮುನಿ
ಸಂತತಿಯ ಮನ್ನಿಸಿದನವರವರುಚಿತ ವೃತ್ತಿಯಲಿ
ಎಂತು ಹದಿಮೂರಬುದವೀ ನೃಪ
ಸಂತತಿಗೆ ಸೌಹಾರ್ದವಕಟ ವ
ನಾಂತರದೊಳೆಂದಸುರರಿಪು ನುಡಿದನು ಯುಧಿಷ್ಠಿರಗೆ ॥31॥
೦೩೨ ಕಳುಹುವುದು ಸೌಭದ್ರೆಯನು ...{Loading}...
ಕಳುಹುವುದು ಸೌಭದ್ರೆಯನು ನಿಜ
ಲಲನೆಯರನವರವರ ತಾಯ್ವನೆ
ಗಳಿಗೆ ಬೀಳ್ಕೊಡು ನಿಮ್ಮ ಪಂಚದ್ರೌಪದೀಸುತರ
ಹಳುವ ದಾಟಲಿ ದ್ರುಪದ ನಂದನೆ
ಯಳಲ ಶಿಖಿಗಿಂಧನವಲೇ ಕುರು
ಕುಲದ ಕರಡದ ಬಣಬೆ ಕಾದುರುಹುವುದು ಕೇಳ್ ಎಂದ ॥32॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ಸುಭದ್ರೆಯನ್ನು, ನಿಮ್ಮ ಬೇರೆ ಹೆಂqತಿಯರನ್ನೂ ಅವರವರ ತವರು ಮನೆಗೆ ಕಳುಹಿಸು, ದ್ರೌಪದಿಯ ಐವರು ಕುಮಾರರನ್ನು ಕಳುಹಿಸು. ದ್ರೌಪದಿ ಕಾಡಿನಲ್ಲಿಯೇ ಇರಲಿ. ಈ ದ್ರೌಪದಿಯ ದುಃಖಾಗ್ನಿಯು ಕುರುಕುಲವೆಂಬ ಹುಲ್ಲು ಮೆದೆ ಉರಿದು ಹೋಗಲು ಇಂಧನವಾಗುತ್ತದೆ’ ಎಂದು ಶ್ರೀಕೃಷ್ಣನು ಹೇಳಿದನು.
ಪದಾರ್ಥ (ಕ.ಗ.ಪ)
ಕರಡ-ಹುಲ್ಲು, ಬಣಬೆ-ಮೆದೆ.
ಟಿಪ್ಪನೀ (ಕ.ಗ.ಪ)
ಇತರ ಪಾಂಡವ ಪತ್ನಿಯರು :
ನಕುಲನ ಪತ್ನಿ - ಚೇದಿರಾಜನ ಮಗಳು ಕರೇಣುದೇವಿ
ಸಹದೇವನ ಪತ್ನಿ - ಮದ್ರರಾಜನ ಪುತ್ರಿ ವಿಜಯಾ
ಮೂಲ ...{Loading}...
ಕಳುಹುವುದು ಸೌಭದ್ರೆಯನು ನಿಜ
ಲಲನೆಯರನವರವರ ತಾಯ್ವನೆ
ಗಳಿಗೆ ಬೀಳ್ಕೊಡು ನಿಮ್ಮ ಪಂಚದ್ರೌಪದೀಸುತರ
ಹಳುವ ದಾಟಲಿ ದ್ರುಪದ ನಂದನೆ
ಯಳಲ ಶಿಖಿಗಿಂಧನವಲೇ ಕುರು
ಕುಲದ ಕರಡದ ಬಣಬೆ ಕಾದುರುಹುವುದು ಕೇಳೆಂದ ॥32॥
೦೩೩ ಎನ್ದು ಕಳುಹಿ ...{Loading}...
ಎಂದು ಕಳುಹಿ ಸುಭದ್ರೆಯನು ನರ
ನಂದನನ ಬೀಳ್ಕೊಡಿಸಿದನು ನೃಪ
ನಂದನರ ಕಳುಹಿಸಿದನಾ ಪಾಂಚಾಲ ನೃಪನೊಡನೆ
ಇಂದುವದನೆಯ ಸಂತವಿಟ್ಟು ಮು
ಕುಂದ ರಥವೇರಿದನು ಕುಂತೀ
ನಂದನರು ಕಳುಹುತ್ತ ಬಂದರು ಕಮಲಲೋಚನನ ॥33॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಸುಭದ್ರೆಯನ್ನು ಅಭಿಮನ್ಯುವಿನೊಂದಿಗೆ ಕಳಿಸಿ, ಉಪಪಾಂಡವರನ್ನು ಪಾಂಚಾಲರಾಯನೊಂದಿಗೆ ಕಳುಹಿಸಿ, ದ್ರೌಪದಿಯನ್ನು ಸಮಾಧಾನಪಡಿಸಿ, ಶ್ರೀಕೃಷ್ಣನು ರಥವನ್ನೇರಲು ಪಾಂಡವರು ಅವನನ್ನು ಬೀಳ್ಗೊಟ್ಟರು.
ಮೂಲ ...{Loading}...
ಎಂದು ಕಳುಹಿ ಸುಭದ್ರೆಯನು ನರ
ನಂದನನ ಬೀಳ್ಕೊಡಿಸಿದನು ನೃಪ
ನಂದನರ ಕಳುಹಿಸಿದನಾ ಪಾಂಚಾಲ ನೃಪನೊಡನೆ
ಇಂದುವದನೆಯ ಸಂತವಿಟ್ಟು ಮು
ಕುಂದ ರಥವೇರಿದನು ಕುಂತೀ
ನಂದನರು ಕಳುಹುತ್ತ ಬಂದರು ಕಮಲಲೋಚನನ ॥33॥
೦೩೪ ಬೀಳುಗೊಣ್ಡರು ಕೃಷ್ಣನನು ...{Loading}...
ಬೀಳುಗೊಂಡರು ಕೃಷ್ಣನನು ಪಾಂ
ಚಾಲಪತಿಯನು ಪಂಚ ಕೇಕಯ
ಚೋಳ ಕೇರಳ ಪಾಂಡ್ಯ ಕುಂತೀಭೋಜ ನಂದನರ
ಬೀಳುಕೊಟ್ಟರು ಧೃಷ್ಟಕೇತುನೃ
ಪಾಲ ಮೊದಲಾದಖಿಳ ಧರಣೀ
ಪಾಲಕರು ದುಗುಡದಲಿ ಹೊಕ್ಕರು ತಮ್ಮ ನಗರಿಗಳ ॥34॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಪಾಂಡವರು ಶ್ರೀಕೃಷ್ಣನನ್ನು, ಪಾಂಚಾಲ, ಪಂಚಕೇಕಯ, ಚೋಳ, ಕೇರಳ, ಪಾಂಡ್ಯ, ಕುಂತೀಭೋಜ, ಧೃಷ್ಟಕೇತು ಮುಂತಾದ ರಾಜರುಗಳನ್ನು ಬೀಳ್ಗೊಟ್ಟರು. ಅವರೆಲ್ಲರೂ ದುಃಖದಿಂದಲೇ ತಮ್ಮ ತಮ್ಮ ನಗರವನ್ನು ಪ್ರವೇಶಿಸಿದರು.
ಮೂಲ ...{Loading}...
ಬೀಳುಗೊಂಡರು ಕೃಷ್ಣನನು ಪಾಂ
ಚಾಲಪತಿಯನು ಪಂಚ ಕೇಕಯ
ಚೋಳ ಕೇರಳ ಪಾಂಡ್ಯ ಕುಂತೀಭೋಜ ನಂದನರ
ಬೀಳುಕೊಟ್ಟರು ಧೃಷ್ಟಕೇತುನೃ
ಪಾಲ ಮೊದಲಾದಖಿಳ ಧರಣೀ
ಪಾಲಕರು ದುಗುಡದಲಿ ಹೊಕ್ಕರು ತಮ್ಮ ನಗರಿಗಳ ॥34॥
೦೩೫ ಸನ್ತವಿಸಿ ಪಾಣ್ಡವರನಾ ...{Loading}...
ಸಂತವಿಸಿ ಪಾಂಡವರನಾ ಮುನಿ
ಸಂತತಿಯ ಮನ್ನಿಸಿ ಮಹೀಭಾ
ರಾಂತರವ ನಿಶ್ಚಯಿಸಿ ಭಾರತ ಪಾರಿಶೇಷಕವ
ಅಂತಕಾಂತಕ ನೊಲವು ಮಿಗೆ ಜಗ
ದಂತರಂಗಸ್ಥಾಯಿ ಲಕ್ಷ್ಮೀ
ಕಾಂತ ಬಿಜಯಂಗೈದು ಹೊಕ್ಕನು ದೋರಕಾಪುರಿಯ ॥35॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಪಾಂಡವರನ್ನು ಸಂತೈಸಿ, ಮುನಿ ಸಮೂಹವನ್ನು ಮನ್ನಿಸಿ, ಭೂಭಾರ ಹರಣಕ್ಕಾಗಿ ಮಹಾಭಾರತ ಯುದ್ಧವನ್ನು ನಿರ್ಧರಿಸಿ, ಪರಶಿವನಿಗೆ ಸಂತೋಷ ಉಂಟಾಗುವಂತೆ ಸಮಸ್ತ ಲೋಕಗಳ ಅಂತರ್ಯಾಮಿಯಾದ ಶ್ರೀಕೃಷ್ಣನು ದ್ವಾರಕಾನಗರಿಗೆ ಹಿಂತಿರುಗಿದನು.
ಪದಾರ್ಥ (ಕ.ಗ.ಪ)
ಪಾರಿಶೇಷಕ - ಉಳಿದದ್ದು
ಅಂತಕಾಂತಕ - ಈಶ್ವರ
ಪಾಠಾನ್ತರ (ಕ.ಗ.ಪ)
ಅಂತಕಾಂತಕನಲವು- ಅಂತಕಾಂತಕನೊಲವು
ಅರಣ್ಯಪರ್ವ, ಮೈ.ವಿ.ವಿ.
ಮೂಲ ...{Loading}...
ಸಂತವಿಸಿ ಪಾಂಡವರನಾ ಮುನಿ
ಸಂತತಿಯ ಮನ್ನಿಸಿ ಮಹೀಭಾ
ರಾಂತರವ ನಿಶ್ಚಯಿಸಿ ಭಾರತ ಪಾರಿಶೇಷಕವ
ಅಂತಕಾಂತಕ ನೊಲವು ಮಿಗೆ ಜಗ
ದಂತರಂಗಸ್ಥಾಯಿ ಲಕ್ಷ್ಮೀ
ಕಾಂತ ಬಿಜಯಂಗೈದು ಹೊಕ್ಕನು ದೋರಕಾಪುರಿಯ ॥35॥