೦೨

೦೦೦ ಸೂ ಸಕಲ ...{Loading}...

ಸೂ. ಸಕಲ ಯದುಬಲ ಸಹಿತ ಭಕ್ತ
ಪ್ರಕರ ಪಾಲಕನೊಲವಿನಲಿ ಕಾ
ಮ್ಯಕ ಮಹಾಕಾನನಕೆ ಬಿಜಯಂಗೈದನಸುರಾರಿ

೦೦೧ ಅರಸ ಕೇಳೈ ...{Loading}...

ಅರಸ ಕೇಳೈ ದ್ವಾರಕಾಪುರ
ವರಕೆ ಬಂದುದು ವಾರ್ತೆ ಪೀತಾಂ
ಬರನ ಬಹಳಾಸ್ಥಾನದಲಿ ವರ್ತಿಸಿದುದಡಿಗಡಿಗೆ
ಧರೆಸಹಿತ ನಿಜವಸ್ತು ವಾಹನ
ಪರಮ ವಿಭವವ ಬಿಸುಟು ಭಾರಿಯ
ಪರಿಭವದಿ ನಟ್ಟಡವಿಯೊಕ್ಕರು ಪಾಂಡುಸುತರೆಂದು ॥1॥

೦೦೨ ಕೇಳಿ ತಲೆದೂಗಿದನು ...{Loading}...

ಕೇಳಿ ತಲೆದೂಗಿದನು ಮೂಗಿನ
ಮೇಲುವೆರಳಿನ ಹೊತ್ತ ದುಗುಡದ
ತೂಳಿದುಬ್ಬೆಯ ನಟ್ಟನೋಟದ ನೆಗ್ಗಿದುತ್ಸವದ
ಹೂಲಿದೂಹೆಯ ಹಿಳಿದ ನೆಗಹಿನ
ಹೇಳಲರಿದೆನೆ ಹುದಿದ ಭಾವದ
ಲಾಲಿಸಿದನಸುರಾರಿ ದೂತವ್ರಜದ ಬಿನ್ನಪವ ॥2॥

೦೦೩ ಅಕಟ ಕಪಟ ...{Loading}...

ಅಕಟ ಕಪಟ ದ್ಯೂತದಲಿ ನೃಪ
ಮುಕುರನುನ್ನತಿ ಮುರಿದುದೇ ಕೌ
ಳಿಕದಲೀ ಕೌರವರು ಕೊಂಡರೆ ಧರ್ಮಜನ ನೆಲನ
ಅಕುಟಿಲರಿಗೇಕಿದು ನಿರಾಬಾ
ಧಕರಿಗೇಕಿದು ಸಕಲ ಸುಜನ
ಪ್ರಕರವಂದ್ಯರಿಗೇಕೆನುತ್ತಸುರಾರಿ ಚಿಂತಿಸಿದ ॥3॥

೦೦೪ ಹಿರಿದು ಹರಿ ...{Loading}...

ಹಿರಿದು ಹರಿ ಚಿಂತಿಸಿದನೀ ವ್ಯತಿ
ಕರವನರಿಯದ ಮುಗುದರಿದನಾ
ರರಿವರೈ ವಿಶ್ವಂಭರಾ ಭಾರಾಪರೋದನಕೆ
ಧರಣಿಯಲಿ ಮೈಗೊಂಡು ದೈತ್ಯರ
ನೊರಸಿದನು ಬಳಿಕುಳಿದ ಪಾಂಡವ
ಕುರುನೃಪರ ಕದಡಿಸಿದನೆಲೆ ಭೂಪಾಲ ಕೇಳ್ ಎಂದ ॥4॥

೦೦೫ ಏನನೆಮ್ಬೆನು ಜೀಯ ...{Loading}...

ಏನನೆಂಬೆನು ಜೀಯ ಕಡು ದು
ಮ್ಮಾನದಲಿ ಹೊರವಂಟು ಬಂದನು
ದಾನವಾಂತಕನೈದಿದವು ದಂಡಿಗೆಗಳರಸಿಯರ
ಆ ನಿಖಿಳ ನೃಪವರ್ಗ ಯಾದವ
ಸೇನೆ ಕವಿದುದು ಪಾಂಡುಪುತ್ರರ
ಕಾನನವ ಕರುಣಾಳು ಹೊಕ್ಕನು ಹಲವು ಪಯಣದಲಿ ॥5॥

೦೦೬ ಕೇಳಿದಾಗಳೆ ಬನ್ದರಾ ...{Loading}...

ಕೇಳಿದಾಗಳೆ ಬಂದರಾ ಪಾಂ
ಚಾಲ ಕೇಕಯ ದೃಷ್ಟಕೇತು ನೃ
ಪಾಲ ಕುಂತೀಭೋಜ ಸೃಂಜಯ ಸೋಮಕಾದಿಗಳು
ಮೇಲೆ ಮೇಲೀ ನಾಲ್ಕು ದಿನದಲಿ
ಮೂಲೆಯರಸುಗಳಿವರ ಕಂಡುಪ
ಲಾಲಿಸಲು ಬರುತಿರ್ದರಾ ಕಾಮ್ಯಕ ವನಾಂತರಕೆ ॥6॥

೦೦೭ ಇವರು ಬನ್ದರು ...{Loading}...

ಇವರು ಬಂದರು ನಿಖಿಳ ಭೂಸುರ
ನಿವಹ ಸಹಿತಿದಿರಾಗಿ ವರ ಬಾಂ
ಧವರೊಳಭಿವಂದ್ಯರಿಗೆ ತತ್ಸಮರಿಗೆ ಕನಿಷ್ಠರಿಗೆ
ಅವರಿಗವರವರುಚಿತ ಸತ್ಕಾ
ರವನು ಮಾಡಿ ಮುರಾರಿಯಂಘ್ರಿಯ
ನವಿರಳಾಶ್ರುಗಳಿಂದ ನಾದಿದರರಸ ಕೇಳ್ ಎಂದ ॥7॥

೦೦೮ ಬೇರೆ ಬೇರೈವರನು ...{Loading}...

ಬೇರೆ ಬೇರೈವರನು ತೆಗೆದು ಮು
ರಾರಿಯಪ್ಪಿದನಡಿಗಡಿಗೆ ದೃಗು
ವಾರಿಗಳನೊರಸಿದನು ಪೀತಾಂಬರದ ಸೆರಗಿನಲಿ
ಸಾರು ಸಾರೆನಲುಗ್ಗಡಣೆಯ ವಿ
ಕಾರವಿನ್ನೇಕೆನುತ ರಾಯನ
ನಾರಿ ಬಂದಳು ಕವಿದು ಬಿದ್ದಳು ಹರಿಯ ಚರಣದಲಿ ॥8॥

೦೦೯ ಒರಲಿದಳು ದೆಸೆಯೊಡನೊರಲೆ ...{Loading}...

ಒರಲಿದಳು ದೆಸೆಯೊಡನೊರಲೆ ಮಿಗೆ
ಹೊರಳಿದಳು ಹರಿ ಪಾದದಲಿ ಮೈ
ಮರೆದಳಂಗನೆ ತನುವ ಮುಸುಕಿದ ಕೇಶಪಾಶದಲಿ
ಕರಗಿದಳು ಕಂದಿದಳು ಮಮ್ಮಲ
ಮರುಗಿ ಕರುಗಂದಿದಳು ದೃಗುಜಲ
ದೊರತೆಯುಕ್ಕಿತು ಮೇಲೆ ಮೇಲೆ ಮಹೀಶನಂಗನೆಗೆ ॥9॥

೦೧೦ ಹಿನ್ದೆ ಸೆಳೆಸೀರೆಯಲಕಟ ...{Loading}...

ಹಿಂದೆ ಸೆಳೆಸೀರೆಯಲಕಟ ಗೋ
ವಿಂದ ರಕ್ಷಿಸನಾಥನಾಥ ಮು
ಕುಂದ ಕಾಯೈ ಕೃಷ್ಣ ರಕ್ಷಿಸು ಕರುಣಿಸಸುರಾರಿ
ಇಂದಿರಾಪತಿಯೇ ಯಶೋದಾ
ನಂದನನೆ ಕಾರುಣ್ಯನಿಧಿ ಸಲ
ಹೆಂದರುಳುಹಿದ ದೈವ ನೀ ಮೈದೋರಿದೈ ತನಗೆ ॥10॥

೦೧೧ ಶ್ರುತಿಗಳಿಗೆ ಮೈದೋರೆ ...{Loading}...

ಶ್ರುತಿಗಳಿಗೆ ಮೈದೋರೆ ಸುಪತಿ
ವ್ರತೆಯರಿಗೆ ಗೋಚರಿಸೆಯತಿ ಸಂ
ತತಿಯ ನಿರ್ಮಳ ಸಾರ ಸಮ್ಯಕ್ಜ್ಞಾನ ದೀಧಿತಿಗೆ
ಮತಿಗೊಡದ ಮಹಿಮಾಂಬುನಿಧಿಯೆನ
ಗತಿಶಯವನೇ ಮಾಡಿ ಲಜ್ಜಾ
ಸ್ಥಿತಿಯನುಳುಹಿದ ದೈವ ನೀ ಮೈದೋರಿದೈ ತನಗೆ ॥11॥

೦೧೨ ಪೆಸರುಗೊಣ್ಡರೆ ಹಿನ್ದೆ ...{Loading}...

ಪೆಸರುಗೊಂಡರೆ ಹಿಂದೆ ಬಂದು
ಬ್ಬಸದ ಭಾರ ವ್ಯಸನವನು ಹಿಂ
ಗಿಸಿದೆ ಸಾಕ್ಷಾದ್ದೃಷ್ಟ ದರುಶನವೇನನಿತ್ತಪುದೊ
ಹೆಸರುಗೊಳಲರಿಯದೆ ಮನೋವಾ
ಗ್ವಿಸರ ಮರಳಿದ ತರ್ಕ ನಿಗಮ
ಪ್ರಸರಣದ ಪರದೈವ ನೀ ಮೈದೋರಿದೈ ತನಗೆ ॥12॥

೦೧೩ ಪತಿಗಳಿವರಞ್ಜಿದರು ಧರ್ಮ ...{Loading}...

ಪತಿಗಳಿವರಂಜಿದರು ಧರ್ಮ
ಸ್ಥಿತಿಯನರಿದವರಳುಕಿದರು ತ
ತ್ಪಿತೃ ಪಿತಾಮಹ ಗುರುಗಳಡಗಿದರವನಿಯಲಿ ಬಗಿದು
ಗತಿವಿಹೀನೆಗೆ ಕೃಷ್ಣ ನೀನೇ
ಗತಿಯೆನುತ ಬಾಯ್ವಿಡಲು ಲಜ್ಜಾ
ಸ್ಥಿತಿಯನುಳುಹಿದ ದೈವ ನೀ ಮೈದೋರಿದೈ ತನಗೆ ॥13॥

೦೧೪ ದಾನ ಯಜ್ಞ ...{Loading}...

ದಾನ ಯಜ್ಞ ತಪೋ ವ್ರತಾನು
ಷ್ಠಾನ ನಿಷ್ಠರು ಕಾಣರಷ್ಟ ವಿ
ಧಾನ ಯೋಗದ ಸಿದ್ಧರರಿಯರು ನಿನ್ನ ಸುಳಿವುಗಳ
ಜ್ಞಾನ ಮಧ್ಯ ತ್ರಿಪುಟಿಯನುಸಂ
ಧಾನರಹಿತ ಜ್ಞಪ್ತಿರೂಪನು
ತಾನೆನಿಪ ಪರಬೊಮ್ಮ ನೀ ಮೈದೋರಿದೈ ತನಗೆ ॥14॥

೦೧೫ ಕಾಯಿದೈ ಪ್ರಹ್ಲಾದ ...{Loading}...

ಕಾಯಿದೈ ಪ್ರಹ್ಲಾದ ಮಾರ್ಕಂ
ಡೇಯ ವನಗಜವಂಬರೀಷನ
ಕಾಯಿದೈ ಕಾರುಣ್ಯದಲಿ ಪಾತಕಿಯಜಾಮಿಳನ
ಕಾಯಿದೈ ಗೋವಿಂದಯೆನೆ ತ
ನ್ನಾಯತಿಕೆಯಭಿಮಾನವನು ನೀ
ಕಾಯಿದೈ ಹರಿಯೆನುತ ಪದದಲಿ ಹೊರಳಿದಳು ತರಳೆ ॥15॥

೦೧೬ ಏಳು ತಾಯೆ ...{Loading}...

ಏಳು ತಾಯೆ ಸರೋಜಮುಖಿ ಪಾಂ
ಚಾಲೆ ನೊಂದೌ ತಂಗಿಯೆನುತ ಕೃ
ಪಾಳು ಕಂಬನಿದೊಡೆದು ಕೊಡಹಿದನವಯವದ ರಜವ
ಮೇಲು ಮುಚ್ಚಳ ತೆರೆದ ತನುವಿನ
ಹೇಳಿಗೆಯ ಶೋಕಾಹಿಯಂತಿರೆ
ಲೋಲಲೋಚನೆಯಳಲು ಮಿಗೆ ಹೆಕ್ಕಳಿಸಿತಡಿಗಡಿಗೆ ॥16॥

೦೧೭ ಆ ಸಕಲ ...{Loading}...

ಆ ಸಕಲ ಪರಿವಾರವಾ ಧರ
ಣೀಶರಾ ಮುನಿ ನಿಕರವಾ ಜನ
ವಾ ಸತೀ ನಿಕುರುಂಬವಾ ಗಜ ಘೋಟಕವ್ರಾತ
ಆ ಸರೋಜಾನನೆಯ ಬಹಳ
ಕ್ಲೇಶಗಳ ಕಂಡಕ್ಷಿಜಲವಾ
ರಾಸಿಯಲಿ ತೇಕಾಡುತಿರ್ದುದು ರಾಯ ಕೇಳ್ ಎಂದ ॥17॥

೦೧೮ ಮುಡಿಯ ಸಂವರಿಸಬಲೆ ...{Loading}...

ಮುಡಿಯ ಸಂವರಿಸಬಲೆ ಸೀರೆಯ
ನುಡು ನವಾಂಬರವಿದೆ ವಿರೋಧವ
ಬಿಡು ಸುಯೋಧನ ರಾಜಸಂತತಿಯುರಿದುದಿನ್ನೇನು
ಕೆಡಿಸಿಕೊಂಡರು ನಾಯ್ಗಳಿನ್ನದ
ನುಡಿದು ಫಲವೇನಕಟ ಕೈಕೊಂ
ಡಡವಿಯನುಭವ ಸವೆಯೆ ಸೈರಿಪುದೆಂದನಸುರಾರಿ ॥18॥

೦೧೯ ತುರುಬ ಕಟ್ಟುವ ...{Loading}...

ತುರುಬ ಕಟ್ಟುವ ಹದನ ನಿಮ್ಮಡಿ
ಯರಿಯದೆಂದೆನೆ ಸಕಲ ಸಚರಾ
ಚರದ ಚೇತನರೂಪ ದೇಹಿ ನಿಕಾಯ ಕೃತಸಾಕ್ಷಿ
ತರಿದು ದುಶ್ಯಾಸನನ ವಕ್ಷದೊ
ಳೊರೆವ ರಕುತದೊಳದ್ದಿ ಕಟ್ಟುವ
ದುರುಬನರಿಯಾ ಕೃಷ್ಣಯೆಂದಳು ಕಮಲಮುಖಿ ನಗುತ ॥19॥

೦೨೦ ಐಸಲೇ ದುರ್ಯೋಧನಾದಿಗ ...{Loading}...

ಐಸಲೇ ದುರ್ಯೋಧನಾದಿಗ
ಳೇಸರವದಿರು ಭೀಮ ಪಾರ್ಥರ
ಬೀಸರಕೆ ಬಲುಗೈಯೆ ಬರ್ಹಿರ್ಮುಖರ ಭಾರವಣೆ
ದೂಸಕನ ರಕ್ತದಲಿ ನಿನ್ನಯ
ಕೇಶವನು ಕಟ್ಟಿಸುವೆ ನಿನ್ನಯ
ಭಾಷೆ ತನ್ನದು ತಾಯೆ ತವಕಿಸಬೇಡ ನೀನೆಂದ ॥20॥

೦೨೧ ವರ ತಪಸ್ವಿನಿ ...{Loading}...

ವರ ತಪಸ್ವಿನಿ ನೀನು ನಿನ್ನನು
ಕೆರಳಿಚಿದರೇ ಕುನ್ನಿಗಳು ಮಿಗೆ
ಭರತಸಂತತಿ ಫಲಿತ ಕದಳಿಯ ತೆರದೊಳಾಯಿತಲ
ಕುರುಡನರಿಯದೆ ಹೋದರೆಯು ಕಂ
ಗುರುಡರಾದರೆ ಭೀಷ್ಮ ವಿದುರಾ
ದ್ಯರು ಮಹಾದೇವೆನುತ ಮುರರಿಪು ತೂಗಿದನು ಶಿರವ ॥21॥

೦೨೨ ಶಕುನಿ ಕಲಿಸಿದ ...{Loading}...

ಶಕುನಿ ಕಲಿಸಿದ ಕಪಟವೇ ಕೌ
ಳಿಕದ ಜೂಜಿದು ನಿಮ್ಮನೀ ಕಾ
ಮ್ಯಕಕೆ ತಂದುದು ಜೂಜಿನಲಿ ತಾನಿಲ್ಲಲೇಯೆನಲು
ಸಕಲ ಜೀವರ ಕರ್ಣಸಾಕ್ಷಿ
ಪ್ರಕರಚೈತನ್ಯ ಸ್ವರೂಪಾ
ತ್ಮಕನು ನೀನಲ್ಲಿಲ್ಲ ಹುಸಿಯಲ್ಲೆಂದಳಿಂದುಮುಖಿ ॥22॥

೦೨೩ ದೇವಿ ತಾನಿದನರಿದೊಡಾ ...{Loading}...

ದೇವಿ ತಾನಿದನರಿದೊಡಾ ವಸು
ದೇವನಾಣೆ ಮಹಾದ್ಭುತವನದ
ನೇವೊಗಳ್ವೆನು ಯದುನೃಪಾಲ ವಿಪತ್ಪರಂಪರೆಯ
ನೀವು ಮಾಡಿದ ಯಜ್ಞ ಮುಖದ ವ
ಳಾವಳಿಯೊಳಾವಿರಲು ಮುತ್ತಿತು
ದೇವರಿಪುಬಲ ನಿಕರವಸ್ಮದ್ದ್ವಾರಕಾಪುರಿಯ ॥23॥

೦೨೪ ಲಗ್ಗೆಗಳುಕುವುದಲ್ಲಲೇ ಬಲು ...{Loading}...

ಲಗ್ಗೆಗಳುಕುವುದಲ್ಲಲೇ ಬಲು
ದುರ್ಗವದು ದುರ್ಭೇದವವರೊಳ
ಗಗ್ಗಳೆಯರಿದ್ದುದು ಹಲಾಯುಧ ಮನ್ಮಥಾದಿಗಳು
ಬಗ್ಗಿ ಕವಿವ ಕಠೋರ ದೈತ್ಯರ
ನುಗ್ಗು ನುರಿ ಮಾಡಿದರು ಹರಣದ
ಸುಗ್ಗಿ ಮೆರೆದುದು ಮಾರ್ಬಲದೊಳಬುಜಾಕ್ಷಿ ಕೇಳ್ ಎಂದ ॥24॥

೦೨೫ ಅಳುಕಿ ಮುತ್ತಿಗೆದೆಗೆದು ...{Loading}...

ಅಳುಕಿ ಮುತ್ತಿಗೆದೆಗೆದು ಸಾಲ್ವನ
ದಳ ಮುರಿದು ನಿಜಪುರಕೆ ಹಾಯ್ದುದು
ಗೆಲವು ಸಾತ್ಯಕಿ ರಾಮಕಾಮಾದಿಗಳ ವಶವಾಯ್ತು
ಬಳಿಕ ನಿಮ್ಮಯ ರಾಜಸೂಯಕೆ
ಕಳಶವಿಟ್ಟು ಮದೀಯ ನಗರಿಯ
ಕಳವಳವ ಸಂತೈಸಿ ನಡೆದೆವು ಸಾಲ್ವ ಪಟ್ಟಣಕೆ ॥25॥

೦೨೬ ಏನನೆಮ್ಬೆನು ಸಾಲ್ವಪುರದ ...{Loading}...

ಏನನೆಂಬೆನು ಸಾಲ್ವಪುರದ ನ
ವೀನ ಮಾಯಾರಚನೆಯನು ನಮ
ಗಾನಲಸದಳವುಳಿದ ಗೀರ್ವಾಣರಿಗೆ ಗೋಚರವೆ
ದಾನವನ ಮಾಯಾಪುರದ ಸಂ
ಸ್ಥಾನ ವರ್ಮವನರಿದು ಶರ ಸಂ
ಧಾನದಲಿ ಸಂಹರಿಸಿದೆವು ಸಾಲ್ವಾದಿ ರಿಪುಭಟರ ॥26॥

೦೨೭ ಅತ್ತಲಾ ಕೋಳಾಹಳದಲಿರ ...{Loading}...

ಅತ್ತಲಾ ಕೋಳಾಹಳದಲಿರ
ಲಿತ್ತಲಾದುದು ಜೂಜು ನಿಮ್ಮ ವಿ
ಪತ್ತು ಕಂಡುದು ತೆರಹ ತಪ್ಪಿಸಿ ನಮ್ಮ ಸುಳಿವುಗಳ
ಇತ್ತಲಾವಿರೆ ಮೇಣು ದೋರಕಿ
ಯತ್ತಲಿರೆ ನೀವಡವಿವೊಕ್ಕರೆ
ಹೆತ್ತಳೋ ದೇವಕಿ ಮಗನನೆಂದನು ಮುರಧ್ವಂಸಿ ॥27॥

೦೨೮ ದ್ವಾರಕೆಯಲಿರು ...{Loading}...

ದ್ವಾರಕೆಯಲಿರು ಮತ್ಪುರದಲಿರತಿ
ದೂರದಲ್ಲಿರು ಮೇಣು ನಮ್ಮಯ
ಸಾರೆ ನಿಮ್ಮಡಿಯಿರಲಿ ನಿಮ್ಮೀ ಪಾಂಡುನಂದನರ
ಭಾರ ನಿಮ್ಮದು ಭಕ್ತ ಜನದಾ
ಧಾರ ನೆಮ್ಮಿದನಾಥರಾವತಿ
ಕಾರಣಿಕ ನೀನೆಂದು ಬಿದ್ದಳು ಮತ್ತೆ ಚರಣದಲಿ ॥28॥

೦೨೯ ಮಗನ ಕರೆದರೆ ...{Loading}...

ಮಗನ ಕರೆದರೆ ಯಮನ ದೂತರ
ತಗುಳುವಂದು ಸಮೀಪವರ್ತಿಯೆ
ನಗಧರ ಶ್ರೀಕಾಂತ ಸಲಹೆನೆ ಮುನಿ ಕುಮಾರಕನ
ಉಗುಳಿಚಿದೆಲಾ ಮೃತ್ಯುವಿನ ತಾ
ಳಿಗೆಯೊಳಂದು ಸಮೀಪವರ್ತಿಯೆ
ಜಗದುದರ ನೀ ಜಾಣನಹೆಯೆಂದಳು ಸರೋಜಮುಖಿ ॥29॥

೦೩೦ ಆಯಿತೇಳೌ ತಙ್ಗಿ ...{Loading}...

ಆಯಿತೇಳೌ ತಂಗಿ ನೀ ಪಿರಿ
ದಾಯಸವನನುಭವಿಸಲುದಿಸಿದೆ
ರಾಯನಾಡಿದ ಭಾಷೆ ಸಲಲಿ ವನಪ್ರವಾಸದಲಿ
ವಾಯುತನುಜನ ಕೈಯಲೇ ನಿ
ನ್ನಾಯತಿಕೆಯಹುದಾ ಪ್ರತಿಜ್ಞೆಗೆ
ತಾಯೆ ತಾ ಹೊಣೆಯೆಂದು ಕೊಟ್ಟನು ಸತಿಗೆ ನಂಬುಗೆಯ ॥30॥

೦೩೧ ಸನ್ತವಿಟ್ಟನು ಬೇರೆ ...{Loading}...

ಸಂತವಿಟ್ಟನು ಬೇರೆ ಬೇರೆ ಕೃ
ತಾಂತಸುತ ಭೀಮಾದಿಗಳು ಮುನಿ
ಸಂತತಿಯ ಮನ್ನಿಸಿದನವರವರುಚಿತ ವೃತ್ತಿಯಲಿ
ಎಂತು ಹದಿಮೂರಬುದವೀ ನೃಪ
ಸಂತತಿಗೆ ಸೌಹಾರ್ದವಕಟ ವ
ನಾಂತರದೊಳೆಂದಸುರರಿಪು ನುಡಿದನು ಯುಧಿಷ್ಠಿರಗೆ ॥31॥

೦೩೨ ಕಳುಹುವುದು ಸೌಭದ್ರೆಯನು ...{Loading}...

ಕಳುಹುವುದು ಸೌಭದ್ರೆಯನು ನಿಜ
ಲಲನೆಯರನವರವರ ತಾಯ್ವನೆ
ಗಳಿಗೆ ಬೀಳ್ಕೊಡು ನಿಮ್ಮ ಪಂಚದ್ರೌಪದೀಸುತರ
ಹಳುವ ದಾಟಲಿ ದ್ರುಪದ ನಂದನೆ
ಯಳಲ ಶಿಖಿಗಿಂಧನವಲೇ ಕುರು
ಕುಲದ ಕರಡದ ಬಣಬೆ ಕಾದುರುಹುವುದು ಕೇಳ್ ಎಂದ ॥32॥

೦೩೩ ಎನ್ದು ಕಳುಹಿ ...{Loading}...

ಎಂದು ಕಳುಹಿ ಸುಭದ್ರೆಯನು ನರ
ನಂದನನ ಬೀಳ್ಕೊಡಿಸಿದನು ನೃಪ
ನಂದನರ ಕಳುಹಿಸಿದನಾ ಪಾಂಚಾಲ ನೃಪನೊಡನೆ
ಇಂದುವದನೆಯ ಸಂತವಿಟ್ಟು ಮು
ಕುಂದ ರಥವೇರಿದನು ಕುಂತೀ
ನಂದನರು ಕಳುಹುತ್ತ ಬಂದರು ಕಮಲಲೋಚನನ ॥33॥

೦೩೪ ಬೀಳುಗೊಣ್ಡರು ಕೃಷ್ಣನನು ...{Loading}...

ಬೀಳುಗೊಂಡರು ಕೃಷ್ಣನನು ಪಾಂ
ಚಾಲಪತಿಯನು ಪಂಚ ಕೇಕಯ
ಚೋಳ ಕೇರಳ ಪಾಂಡ್ಯ ಕುಂತೀಭೋಜ ನಂದನರ
ಬೀಳುಕೊಟ್ಟರು ಧೃಷ್ಟಕೇತುನೃ
ಪಾಲ ಮೊದಲಾದಖಿಳ ಧರಣೀ
ಪಾಲಕರು ದುಗುಡದಲಿ ಹೊಕ್ಕರು ತಮ್ಮ ನಗರಿಗಳ ॥34॥

೦೩೫ ಸನ್ತವಿಸಿ ಪಾಣ್ಡವರನಾ ...{Loading}...

ಸಂತವಿಸಿ ಪಾಂಡವರನಾ ಮುನಿ
ಸಂತತಿಯ ಮನ್ನಿಸಿ ಮಹೀಭಾ
ರಾಂತರವ ನಿಶ್ಚಯಿಸಿ ಭಾರತ ಪಾರಿಶೇಷಕವ
ಅಂತಕಾಂತಕ ನೊಲವು ಮಿಗೆ ಜಗ
ದಂತರಂಗಸ್ಥಾಯಿ ಲಕ್ಷ್ಮೀ
ಕಾಂತ ಬಿಜಯಂಗೈದು ಹೊಕ್ಕನು ದೋರಕಾಪುರಿಯ ॥35॥

+೦೨ ...{Loading}...