೧೬

೦೦೦ ಸೂಚನೆ ದ್ಯೂತಮುಖದಲಿ ...{Loading}...

ಸೂಚನೆ: ದ್ಯೂತಮುಖದಲಿ ನಿಖಿಳ ರಾಜ್ಯವ
ಸೋತು ತನ್ನನುಜಾತ ಮುನಿ ಸಂ
ಘಾತ ಸಹಿತವವನೀಶ ವನವಾಸಕ್ಕೆ ಹೊರವಂಟ

೦೦೧ ಕೇಳು ಜನಮೇಜಯ ...{Loading}...

ಕೇಳು ಜನಮೇಜಯ ಧರಿತ್ರೀ
ಪಾಲ ಕುಂತಿಯ ನಂದನರು ತ
ಮ್ಮಾಳೊಡನೆ ಹೇಳಿದರು ಸೌಭದ್ರಾದಿ ತನಯರಿಗೆ
ಬಾಲಕಿಯ ಬೇಳಂಬವನು ಜೂ
ಜಾಳಿಗಳ ಜಜ್ಝಾರತನವನು
ಕೇಳಿ ಬೈದುದು ಸೇನೆ ಖತಿಯಲಿ ಖಳಚತುಷ್ಟಯವ ॥1॥

೦೦೨ ಎತ್ತಿತೀ ಪಾಳಯವು ...{Loading}...

ಎತ್ತಿತೀ ಪಾಳಯವು ನಿಜಪುರ
ದತ್ತ ತಿರುಗಿತು ಜನಜನಿತ ರಾ
ಜೋತ್ತಮನ ಕಡೆಯಾಯ್ತು ಸತ್ಯಕ್ಷಮೆ ಪರಾಕ್ರಮಕೆ
ಇತ್ತಲಡುಪಾಯ್ಬೇಗೆ ಬಿಸುಗುದಿ
ಕಿತ್ತಡವು ಕಾರ್ಪಣ್ಯ ಕಪಟ ಖ
ಳೋತ್ತಮರ ಹೃದಯದಲಿ ಹುದುಗಿತು ನೃಪತಿ ಕೇಳ್ ಎಂದ ॥2॥

೦೦೩ ರವಿಯುದಯದಲಿ ಕೌರವೇನ್ದ್ರನ ...{Loading}...

ರವಿಯುದಯದಲಿ ಕೌರವೇಂದ್ರನ
ಭವನಕೈತಂದನು ಕುಠಾರರ
ಜವಳಿಯನು ಕರೆಸಿದನು ರಾಧಾಸುತನ ಸೌಬಲನ
ಅವನಿಪತಿ ಗಾಂಧಾರಿಯರು ಪಾಂ
ಡವರ ಮನ್ನಿಸಿ ಕಳುಹಿದರು ತ
ಮ್ಮವನಿಗೈದಿದರೆಂದನಾ ದುಶ್ಯಾಸನನು ನಗುತ ॥3॥

೦೦೪ ಮುರಿಮುರಿದು ಪಟ್ಟಣವ ...{Loading}...

ಮುರಿಮುರಿದು ಪಟ್ಟಣವ ನೋಡುತ
ನರ ವೃಕೋದರರೌಡುಗಚ್ಚುತ
ತಿರುಗಿದರು ಗಡ ಗಾಢ ಬದ್ಧಭೃಕುಟಿ ಭೀಷಣರು
ಕರಿಯ ಸೊಗಡಿನ ಮೃಗಪತಿಗೆ ಮೈ
ಹರಿದ ಹಂದಿಗೆ ನೊಂದ ಹಾವಿಂ
ಗರಸ ಮೈ ಚಾಚಿದೆಯಲಾ ನೀನೆಂದನಾ ಶಕುನಿ ॥4॥

೦೦೫ ಅವರ ಹೆಣ್ಡಿರ ...{Loading}...

ಅವರ ಹೆಂಡಿರ ಮುಂದಲೆಯ ಹಿಡಿ
ದವಗಡವ ಮಾಡಿಸಿದೆ ಪಟ್ಟದ
ಯುವತಿಯಾಕೆಯ ಭಂಗಬಡಿಸಿದೆ ನಿನ್ನಲಾಪನಿತ
ಅವಳ ದೈವೋದಯವದೈಸಲೆ
ಸವಡಿ ಸೀರೆಯ ಸುತ್ತು ಸಡಿಲದು
ನಿವಗದಾಗಳೆ ಮರೆದು ಹಿಂಗಿದುದೆಂದನಾ ಕರ್ಣ ॥5॥

೦೦೬ ಬೊಪ್ಪನಿತ್ತನು ವರವೆನಗದು ...{Loading}...

ಬೊಪ್ಪನಿತ್ತನು ವರವೆನಗದು
ತಪ್ಪಿಸಲು ತೀರುವುದೆ ಭೀಮನ
ದರ್ಪಕರ್ಜುನನುಬ್ಬಟೆಗೆ ಮಾಡಿದೆವು ಮದ್ದುಗಳ
ತಪ್ಪಿಸಿತಲೇ ದೈವಗತಿ ನ
ಮ್ಮಪ್ಪನೇ ಕೆಡಿಸಿದನು ನವಗಿ
ನ್ನಪ್ಪುದಾಗಲಿಯೆಂದು ಸುಯ್ದನು ಕೌರವರರಾಯ ॥6॥

೦೦೭ ಜಯವಹುದೆ ನಿರ್ವೇದದಲಿ ...{Loading}...

ಜಯವಹುದೆ ನಿರ್ವೇದದಲಿ ನಿ
ರ್ಭಯವಹುದೆ ಬಿಸುಸುಯ್ಲಿನಲಿ ನಿ
ರ್ನಯವಹುದೆ ರಿಪು ನೃಪರಿಗಿದು ತಾ ನೀತಿ ಮಾರ್ಗದಲಿ
ನಿಯತವಿದು ನಿಶ್ಯೇಷ ನಿಮ್ಮ
ನ್ವಯಕೆ ನಿರ್ವಾಹವನು ಗಾಂಧಾ
ರಿಯಲಿ ನಿಮ್ಮಯ್ಯನಲಿ ಬೆಸಗೊಳ್ಳೆಂದನಾ ಶಕುನಿ ॥7॥

೦೦೮ ಅರಸ ಕೇಳ್ ...{Loading}...

ಅರಸ ಕೇಳ್ ಧೃತರಾಷ್ಟ್ರ ಭೂಪತಿ
ಯರಮನೆಗೆ ನಡೆತಂದರೀ ನಾ
ಲ್ವರು ವಿಷಾದವಿಡಂಬ ವಿಹ್ವಲಕರಣವೃತ್ತಿಯಲಿ
ಪರಿಮಿತದಿ ಕುಳ್ಳಿರಿಸಿದರು ಸಹ
ಚರನ ಶೋಧಿಸಿ ಕಡು ರಹಸ್ಯದೊ
ಳರಸಿಯನು ಬರಹೇಳಿದರು ಗಾಂಧಾರಿ ದೇವಿಯನು ॥8॥

೦೦೯ ಅವರ ದಾಸ್ಯವ ...{Loading}...

ಅವರ ದಾಸ್ಯವ ಬಿಡಿಸಿ ನೀ ರಾ
ಜ್ಯವನು ಕರುಣಿಸಿ ನೀತಿಯಲಿ ನಿ
ಮ್ಮವರ ಕಳುಹಿದಿರೆಂದು ಕೇಳಿದೆವಾಯ್ತು ಪರಿತೋಷ
ಅವರು ನಿವಗತಿ ಭಕ್ತರೈ ಬಾಂ
ಧವರಲೇ ತಪ್ಪೇನು ಧರ್ಮ ಪ್ರವರರಿಗೆ
ನೀವೊಲಿದಿರೆಂದನು ಕೌರವರರಾಯ ॥9॥

೦೧೦ ನಾವಲೇ ಹೊರಗವರ ...{Loading}...

ನಾವಲೇ ಹೊರಗವರ ಹೆಂಡಿರ
ಹೇವಗೆಡಿಸಿದೆವವರ ಸೋಲಿಸಿ
ಜೀವ ಮಾತ್ರವನುಳುಹಿ ಸೆಳೆದೆವು ಸಕಲ ವಸ್ತುಗಳ
ನೀವು ಕರುಣಿಸಿದಿರಿ ಕೃಪಾರಸ
ಭಾವ ಹಿರಿಯರಲುಂಟೆಲೇ ತ
ಪ್ಪಾವುದೈ ತಪ್ಪಾವುದೆನುತಲ್ಲಾಡಿದನು ಶಿರವ ॥10॥

೦೧೧ ತಾಯೆ ನೇಮವೆ ...{Loading}...

ತಾಯೆ ನೇಮವೆ ಹಗೆಯ ಕೈಯಲಿ
ಸಾಯಲಾರೆವು ಸಾಗರಾಂತದ
ರಾಯರಿಲ್ಲಾ ಹೊರೆಯಲಾಪೆವು ಬೆಂದ ಬಸುರುಗಳ
ಕಾಯಿದನು ಕರುಣದಲಿ ತಂದೆ ಸ
ಹಾಯವಹ ಪಾಂಡವರ ಕೂಡಿಯೆ
ರಾಯ ಬದುಕಿರಲೆಮ್ಮ ಕಳುಹೆಂದೆರಗಿದನು ಪದಕೆ ॥11॥

೦೧೨ ಏಕೆ ಬೆಸಗೊಳ್ಳಬಲೆ ...{Loading}...

ಏಕೆ ಬೆಸಗೊಳ್ಳಬಲೆ ಸುತರವಿ
ವೇಕ ವಿಷಮಗ್ರಹ ವಿಕಾರ
ವ್ಯಾಕರಣ ದುರ್ಲಲಿತ ದುಷ್ಕೃತವೀಪ್ರಳಾಪವಿದು
ಈ ಕುಲವನೀ ಪುರವನೀ ಲ
ಕ್ಷ್ಮೀಕರವನೀ ಜಗವನೀ ವಿಭ
ವಾಕೃತಿಯನಂಬುಧಿಯೊಳದ್ದುವ ನಿನ್ನ ಮಗನೆಂದ ॥12॥

೦೧೩ ಸರಹಸುಗೆಯಿನ್ದರ್ಧರಾಜ್ಯದ ...{Loading}...

ಸರಹಸುಗೆಯಿಂದರ್ಧರಾಜ್ಯದ
ಸಿರಿಗೆ ಯೋಗ್ಯರು ಬಾಹುಸತ್ವಕೆ
ಸುರರು ಸರಿಯಿಲ್ಲಿವರ ಪಾಡೇ ಮನುಜ ಜಂತುಗಳು
ಚರಿತವೆಂಬರೆ ಋಷಿಗಳಿಗೆ ಗೋ
ಚರಿಸದವರಾಚರಣೆ ನಿನಗೆಂ
ತರಿ ವಿನಾಶನ ಸಿದ್ಧಿಯೆಂದನು ಮಗಗೆ ಧೃತರಾಷ್ಟ್ರ ॥13॥

೦೧೪ ಬೇಹವರು ಸರಿರಾಜ್ಯಕದು ...{Loading}...

ಬೇಹವರು ಸರಿರಾಜ್ಯಕದು ಸಂ
ದೇಹವೇ ಮೇಲವರು ಸತ್ವದ
ಸಾಹಸದ ಸತ್ಯದ ಸದಾಚಾರದ ನಿವಾಸರಲೆ
ಸ್ನೇಹಿತರು ನಿನಗವರ ಮೇಗವ
ಗಾಹಿಸಿದೆವನ್ಯಾಯದಲಿ ಸ
ದ್ರೋಹರಾವಿನ್ನೆಮಗೆ ನೇಮವೆಯೆನುತ ಹೊರವಂಟ ॥14॥

೦೧೫ ಕಲಕಿತರಸನ ಕರಣ ...{Loading}...

ಕಲಕಿತರಸನ ಕರಣ ಕಂಗಳ
ಕುಳಿಗಳಲಿ ನೀರೂರೆತವಕಟಕ
ಟೆಲೆಗೆ ಕರೆಯಾ ಪಾಪಿ ಮಗನನು ಕುರುಕುಲಾಂತಕನ
ಸೆಳೆದು ತಂದರು ಕರ್ಣ ಶಕುನಿಗ
ಳಳಲಿಗನ ತೆಗೆದಪ್ಪಿದರು ಕುರು
ತಿಲಕ ನಿನ್ನುಳಿದೊಡಲ ಹಿಡಿವೆನೆಯೆಂದನಂಧ ನೃಪ ॥15॥

೦೧೬ ಏನು ಮಾಡುವೆವವರ ...{Loading}...

ಏನು ಮಾಡುವೆವವರ ಕೆಡಿಸುವ
ಡೇನು ಹದನನು ಕಂಡೆ ದೈವಾ
ಧೀನನಿಷ್ಠರ ಮುರಿವುದರಿದನ್ಯಾಯ ತಂತ್ರದಲಿ
ಏನು ನಿನ್ನಭಿಮತವು ನಿನ್ನೊಳ
ಗಾನು ಹೊರಗೇ ಕಂದ ನುಡಿ ದು
ಮ್ಮಾನ ಬೇಡೆನ್ನಾಣೆನುತ ಸಂತೈಸಿದನು ಮಗನ ॥16॥

೦೧೭ ನೊನ್ದರವರಗ್ಗಳಿಸಿ ಹೃದಯದೊ ...{Loading}...

ನೊಂದರವರಗ್ಗಳಿಸಿ ಹೃದಯದೊ
ಳೊಂದಿ ಬೆರಸರು ಮರಹು ತೆರಹಿನೊ
ಳಂದಗೆಡಿಸುವರಲ್ಲದುಳುಹರು ನಿನ್ನ ಸಂತತಿಯ
ಒಂದು ಸತ್ತಿಗೆ ನಮ್ಮದಿಲ್ಲಿಗೆ
ನಿಂದುದೆನಿಸಲಿ ನಾವು ನಿಲಲವ
ರೊಂದು ಸತ್ತಿಗೆಯಾಗಿ ಸಲಹಲಿ ಸಕಳ ಭೂತಳವ ॥17॥

೦೧೮ ಹುದುವ ಸೈರಿಸಿ ...{Loading}...

ಹುದುವ ಸೈರಿಸಿ ಬಳಸಿದರು ದುರು
ಪದಿಯನವರೈವರು ಧರಿತ್ರಿಯ
ಹುದುವ ಸೈರಿಸಲಾರೆನವರೊಡನಿಂದು ಮೊದಲಾಗಿ
ಒದೆದು ಕಳೆ ನಮ್ಮಿನಿಬರನು ನೇ
ಹದಲಿ ಸಲಹೈವರನು ನೀನಿಂ
ದೊದೆವುದೈವರ ನಮ್ಮ ಹಿಡಿ ಬೇರಿಲ್ಲ ಮತವೆಂದ ॥18॥

೦೧೯ ಅನಿಲಜನ ಬಾಯ್ಬಡಿಕತನವ ...{Loading}...

ಅನಿಲಜನ ಬಾಯ್ಬಡಿಕತನವ
ರ್ಜುನನ ಬರಿಬೊಬ್ಬಾಟ ಸಹದೇ
ವನ ಸಗರ್ವದ ಮಾತು ಮೈಯಿಕ್ಕುವವು ಬಳಿಕಿನಲಿ
ಮನೆಮೊಗವ ಕಾಣಿಸದೆ ಘನ ಕಾ
ನನದೊಳಗೆ ಸುಳಿವಂತೆ ಮಂತ್ರವ
ನೆನೆದೆನಿದು ನಿಮ್ಮಡಿಯ ಚಿತ್ತಕೆ ಬಹರೆ ಬೆಸಸೆಂದ ॥19॥

೦೨೦ ಮರುಳು ಮಗನೇ ...{Loading}...

ಮರುಳು ಮಗನೇ ಶಿವ ಶಿವಾ ಮನ
ಬರಡನೇ ತಾನಕಟ ನಿಮ್ಮೈ
ಶ್ವರಿಯ ಹಗೆ ದಾಯಾದ್ಯರುಗಳಭ್ಯುದಯದಲಿ ಸೊಗಸೆ
ದುರುಳರವದಿರು ದೈವಮುಖದೆ
ಚ್ಚರಿಕೆ ಘನಕೆಡರೆಂದು ಮೇಗರೆ
ಹೊರೆಮನದ ಸೂಸಕದ ನೇಹವನರಸುತಿಹೆನೆಂದ ॥20॥

೦೨೧ ಕರೆಸಿಕೊಡಿ ನೀವಿಲ್ಲಿಗವರೈ ...{Loading}...

ಕರೆಸಿಕೊಡಿ ನೀವಿಲ್ಲಿಗವರೈ
ವರನು ಜೂಜಿನಲೊಂದು ಹಲಗೆಯ
ಲರಸ ನೀ ಚಿತ್ತವಿಸು ಹನ್ನೆರಡಬುದ ವಿಪಿನದಲಿ
ವರುಷವೊಂದಜ್ಞಾತವದರೊಳ
ಗರಿದೆವಾದೊಡೆ ಮರಳಿ ವಿಪಿನಕೆ
ವರುಷ ಹನ್ನೆರಡಕ್ಕೆ ಕೊಡುವೆವು ಮತ್ತೆ ವೀಳೆಯವ ॥21॥

೦೨೨ ಅಹುದು ಮನ್ತ್ರವಿದೆನ್ದು ...{Loading}...

ಅಹುದು ಮಂತ್ರವಿದೆಂದು ಚಿತ್ತಕೆ
ಬಹರೆ ಕಳುಹಿ ಮನುಷ್ಯರನು ಕರೆ
ಸಹಿತರನು ವಿದುರಾದಿಗಳ ಕೊಂಡೆಯಕೆ ಕಿವಿಗೊಡದೆ
ಕುಹಕವುಂಟೇ ನಮ್ಮ ಕಳುಹುವು
ದಹ ಮತವ ಬೆಸೆಸೆನಲು ನಿಮ್ಮೊಳು
ಕುಹಕವೊಂಟೇ ಮಗನೆ ಕರೆಸುವೆನೀಗ ಪಾಂಡವರ ॥22॥

೦೨೩ ಪ್ರಾತಿಕಾಮಿಕ ಬಾ ...{Loading}...

ಪ್ರಾತಿಕಾಮಿಕ ಬಾ ಯುಧಿಷ್ಟಿರ
ಭೂತಳೇಶನ ಕರೆದು ತಾರೈ
ತಾತ ಕಳುಹಿದನೆಂಬುದಿಂದ್ರಪ್ರಸ್ಥದಲ್ಲಿರಲಿ
ಪ್ರೀತಿಪೂರ್ವಕವಲ್ಲದಲಿ ವಿ
ಘಾತಿಯಿಲ್ಲೆಂದುಚಿತ ವಚನದೊ
ಳಾತಗಳನೊಡಗೊಂಡು ಬಾ ಹೋಗೆಂದನಂಧನೃಪ ॥23॥

೦೨೪ ಕೇಳಿದರು ಭೀಷ್ಮಾದಿಗಳು ...{Loading}...

ಕೇಳಿದರು ಭೀಷ್ಮಾದಿಗಳು ಬರ
ಹೇಳಿದರೆ ಪಾಂಡವರನಕಟಾ
ಹೇಳಿದರೆ ಕೌರವರ ನೂರ್ವರನಂತಕಾಲಯಕೆ
ಹೇಳಿದರೆ ಹೇಳಿಗೆಯ ಹಾವಿನ
ಮೇಲು ಮುಚ್ಚಳ ಮುರಿಯಲೆಂದಿದ
ಕೇಳಿದೆವೆ ಕೌತುಕವನೆಂದರು ಕುದಿದು ತಮ್ಮೊಳಗೆ ॥24॥

೦೨೫ ಉರುವ ಮಕ್ಕಳನಿಕ್ಕಿ ...{Loading}...

ಉರುವ ಮಕ್ಕಳನಿಕ್ಕಿ ಸಾಧಿಸು
ವರಿಕೆ ಯಾವುದು ಹೇಳಲಾಗದೆ
ಕುರಿಗಳೇ ನಿನ್ನವರು ಬಲ್ಲರೆ ಮೇಲಣಪಜಯವ
ಮರುಗುವಳು ಗಾಂಧಾರಿ ಮಕ್ಕಳ
ಹರುವ ಕಂಡರೆ ಮೇಲೆ ನಿನಗೇ
ನರಿಯಬಾರದಲಾ ಮರುಳೆಯೆಂದಳಲಿದನು ಭೀಷ್ಮ ॥25॥

೦೨೬ ಕೊಮ್ಬುದೇ ಖಳಜನಕೆ ...{Loading}...

ಕೊಂಬುದೇ ಖಳಜನಕೆ ಸಾಧುಗ
ಳೆಂಬ ಮಾತು ವಿಧಾತೃಕಲ್ಪಿತ
ವೆಂಬ ವಿಷದುಗ್ಗಡಕೆ ಗಾರುಡವೇನ ಮಾಡುವದು
ತುಂಬುವುದು ಬತ್ತುವುದು ಕಾಲನ
ಡೊಂಬಿದಾರಿಗೆ ಸಾಧ್ಯ ನಾವೇ
ನೆಂಬುದಿದಕೆಂದಳಲಿದರು ಭೀಷ್ಮಾದಿ ಸಜ್ಜನರು ॥26॥

೦೨೭ ಇವರ ವಞ್ಚಿಸಿ ...{Loading}...

ಇವರ ವಂಚಿಸಿ ರಜನಿ ಮಧ್ಯದೊ
ಳವನ ಕಳುಹಿದಡಾತನೈತಂ
ದಿವರ ಪಾಳಯದೊಳಗೆ ಹೊಕ್ಕನು ಹಲವು ಪಯಣದಲಿ
ಅವನಿಪತಿ ಮರುದಿವಸ ಬೀಡೆ
ತ್ತುವ ನಿಧಾನವನರಿದು ರಾಯನ
ಭವನಿಕೆಯ ಹೊರಬಾಹೆಯಲಿ ದಂಡಿಗೆಯನವನಿಳಿದ ॥27॥

೦೨೮ ಕರೆದು ಹೇಳಿದನಾತ ...{Loading}...

ಕರೆದು ಹೇಳಿದನಾತ ಪಡಿಹಾ
ರರಿಗೆ ತಾನೈ ಪ್ರಾತಿಕಾಮಿಕ
ನರಸ ಕಳುಹಲು ಬಂದೆನಗ್ಗದ ರಾಜಕಾರಿಯಕೆ
ಧರಣಿಪಾಲಂಗರುಹಿಯೆನೆ ನೃಪ
ವರೆಗೆ ಬಿನ್ನಹ ಮಾಡೆ ಕರೆಸಿದ
ಡಿರದೆ ಹೊಕ್ಕನು ದೂತನಂದಾ ರಾಯನೋಲಗವ ॥28॥

೦೨೯ ದರುಶನವನಿತ್ತವನಿಪಾಲನ ...{Loading}...

ದರುಶನವನಿತ್ತವನಿಪಾಲನ
ಚರಣದಲಿ ಮೈಯಿಕ್ಕಿ ನಿಂದನು
ನರ ವೃಕೋದರ ನಕುಲ ಸಹದೇವರಿಗೆ ಕೈಮುಗಿದು
ಧರಣಿಪನ ಮೊಗಸನ್ನೆಯಲಿ ಕು
ಳ್ಳಿರಲಿದೇನೈ ಪ್ರಾತಿಕಾಮಿಕ
ಬರವು ಬೇಗದೊಳಾಯ್ತೆನುತ ಬೆಸಗೊಂಡನಾ ಭೀಮ ॥29॥

೦೩೦ ಬರವು ಬೇರೇನೊಡೆಯರಟ್ಟಿದ ...{Loading}...

ಬರವು ಬೇರೇನೊಡೆಯರಟ್ಟಿದ
ರರಸನಲ್ಲಿಗೆ ಹಿಂದೆ ಜೂಜಿನೊ
ಳೊರಸೊರಸು ಮಿಗೆ ಮಸೆದುದಿತ್ತಂಡಕ್ಕೆ ಮನ ಮುನಿಸು
ಹರೆದು ಹೋಯ್ತದು ಹೃದಯ ಶುದ್ಧಿಯೊ
ಳೆರಡರಸುಗಳು ಜೂಜನಾಡಲಿ
ಮರಳಿ ಬಿಜಯಂಗೈವುದೆಂದಟ್ಟಿದನು ಧೃತರಾಷ್ಟ್ರ ॥30॥

೦೩೧ ಮರಳಿ ಕರೆಸುವುದೆನ್ದು ...{Loading}...

ಮರಳಿ ಕರೆಸುವುದೆಂದು ಕಂಬನಿ
ವೆರಸಿ ಕುರುಪತಿ ಪಿತನ ಚಿತ್ತವ
ಕರಗಿಸಿದನೋ ಮೇಣು ತಾ ಕರೆಸಿದಳೊ ಗಾಂಧಾರಿ
ಕರೆಸುವವದಿರು ಭಂಡರೋ ಮೇ
ಣ್ಮರಳಿ ಹೋಹರು ಭಂಡರೋ ನೀ
ನರಿವವುದೇನೈ ಪ್ರಾತಿಕಾಮಿಕಯೆಂದನಾ ಭೀಮ ॥31॥

೦೩೨ ಬೊಪ್ಪನವರಟ್ಟಿದರೆ ಶಿವ ...{Loading}...

ಬೊಪ್ಪನವರಟ್ಟಿದರೆ ಶಿವ ಶಿವ
ತಪ್ಪ ನೆನೆವರೆ ಭೀಮ ಸೈರಿಸು
ತಪ್ಪನಾಡದೆ ನಮಗೆ ಮುನಿವಳೆ ತಾಯಿ ಗಾಂಧಾರಿ
ತಪ್ಪಲೊಮ್ಮಿಗೆ ಪಾಂಡು ಕುಂತಿಗೆ
ಮುಪ್ಪಿನಲಿ ಮರುಳಾಟವಾಗಲಿ
ತಪ್ಪುವನೆ ಧೃತರಾಷ್ಟ್ರನೆಂದನು ನಗುತ ಯಮಸೂನು ॥32॥

೦೩೩ ಖಳರು ಮೊದಲಲಿ ...{Loading}...

ಖಳರು ಮೊದಲಲಿ ಕೌರವರು ಕಲಿ
ಮೊಳೆಯನಂಕುರಿಸಿವ ಕುವಿದ್ಯಾ
ಕಲಿತ ಮಾಯರು ಕರ್ಣ ಶಕುನಿಗಳವರ ಸಂಗದಲಿ
ತಿಳಿದು ನಡೆವವನಲ್ಲವಿದು ನಿ
ರ್ಮಲದ ನೀತಿಗೆ ಸಲ್ಲ ನಿಜ ಪಿತ
ನೊಳಗು ನಿರ್ಮಳವಿಲ್ಲವೆಂದನು ನಗುತ ಕಲಿಭೀಮ ॥33॥

೦೩೪ ನೆನಹಿನಭಿಮತವಲ್ಲ ದುರ್ಯೋ ...{Loading}...

ನೆನಹಿನಭಿಮತವಲ್ಲ ದುರ್ಯೋ
ಧನನ ಸೌಬಲ ಕರ್ಣರಭಿಮತ
ಜನಪ ಧೃತರಾಷ್ಟ್ರನಿಗೆ ಗಾಂಧಾರಿಗೆಯಲಂಘ್ಯವಿದು
ಅನುನಯದ ಹೊತ್ತಲ್ಲ ನೀವ್ ಹ
ಸ್ತಿನಪುರಿಯ ಹೊಕ್ಕಾಗ ಘನ ಕಾ
ನನಕೆ ಗಮಿಸುವಿರೆಂದರಾ ಧೌಮ್ಯಾದಿ ಮಂತ್ರಿಗಳು ॥34॥

೦೩೫ ಕರೆಯೆ ಕಾದುವುದಾಡುವುದು ...{Loading}...

ಕರೆಯೆ ಕಾದುವುದಾಡುವುದು ಸಂ
ಗರಕೆ ಜೂಜಿಂಗಿದು ಮಹೀಶರ
ಪರಮ ಧರ್ಮವಲೇ ನಿಧಾನಿಸೆ ವೈದಿಕಾಂಗದಲಿ
ಗುರುವಲಾ ಧೃತರಾಷ್ಟ್ರನಾತನು
ಕರೆಸಿದಲ್ಲಿ ವಿಘಾತಿ ಬಂದರೆ
ಬರಲಿ ಸೈರಿಸಬಲ್ಲೆನೆಂದನು ಧರ್ಮನಂದನನು ॥35॥

೦೩೬ ಜನಪನಾಜ್ಞೆಯ ಮೀರಿ ...{Loading}...

ಜನಪನಾಜ್ಞೆಯ ಮೀರಿ ಬಳಸುವು
ದನುಚಿತವು ನಮಗಿನ್ನು ಭೀಮಾ
ರ್ಜುನ ನಕುಲ ಸಹದೇವರಭಿಮತವೆಮ್ಮ ಮತವೆನಲು
ಮನ ಮೊದಲು ಕರಣಂಗಳಾತ್ಮಂ
ಗನುಚರರೊ ಬಾಧಕರೊ ನಿಮ್ಮಯ
ಮನಕೆ ಚೆಮ್ಮಾವುಗೆಗಳೆಂದರು ಪವನಜಾದಿಗಳು ॥36॥

೦೩೭ ಮರಳಿ ಪಾಳೆಯ ...{Loading}...

ಮರಳಿ ಪಾಳೆಯ ಬಿಡಲಿ ಶಿಷ್ಟರ
ಕರೆಸಿ ಪೇಳೆನುತವನಿಪತಿ ಗಜ
ಪುರಿಗೆ ತಿರುಗಿದನರಿಯನೇ ಕೌರವನ ಕೃತ್ರಿಮವ
ಕೊರಳಲಿಕ್ಕಿದ ವಿಧಿಯ ಕಣ್ಣಿಯ
ಹುರಿ ಬಲುಹಲೇ ಧರ್ಮಸುತನೊಡ
ಮುರಿಚಲಾಪನೆ ಕೇಳು ಜನಮೇಜಯ ಮಹೀಪಾಲ ॥37॥

೦೩೮ ಸುತರು ಸಚಿವರು ...{Loading}...

ಸುತರು ಸಚಿವರು ಮಂತ್ರಿಗಳು ನಿಜ
ಸತಿಯರಾಪ್ತರು ಬಂಧುಗಳು ಭೂ
ಪತಿಗಳನುಜರು ಬುಧರು ಚಾತುರ್ಬಲದ ನಾಯಕರು
ಮತವು ಮರಳುವದಲ್ಲ ಧರಣೀ
ಪತಿಯನುತ್ಸಾಹಿಸುವ ಗತಿ ಸಂ
ಗತವಲೇ ನವಗೆನುತ ನಡೆದುದು ಬುಧಜನಸ್ತೋಮ ॥38॥

೦೩೯ ಭರದ ಪಯಣದಲಿವರು ...{Loading}...

ಭರದ ಪಯಣದಲಿವರು ಹಸ್ತಿನ
ಪುರದ ಹೊರಬಾಹೆಯಲಿ ಬಿಟ್ಟರು
ಪರಿರಚಿತ ಗಜ ತುರಗ ಶಾಲೆಯ ವಿಪುಳ ವೀಧಿಯಲಿ
ಬಿರಿಯೆ ನೆಲನಳ್ಳಿರಿವ ವಾದ್ಯದ
ಮೊರೆವ ಭೇರಿಯ ಬಹಳ ಕಹಳ
ಸ್ವರದ ಕಳಕಳ ತೀವಿತಬುಜ ಭವಾಂಡ ಖರ್ಪರವ ॥39॥

೦೪೦ ಏನಿದದ್ಭುತ ರಭಸವಿದೆಲಾ ...{Loading}...

ಏನಿದದ್ಭುತ ರಭಸವಿದೆಲಾ
ಮಾನನಿಧಿಗಳು ಮರಳಿ ಕುಂತೀ
ಸೂನುಗಳ ಬಲ ಬಂದು ಬಿಟ್ಟುದು ಪುರದ ಬಾಹೆಯಲಿ
ಏನು ಕೌರವರೊಡನೆ ಶರ ಸಂ
ಧಾನವೋ ವಿನಯಾನುಗುಣ ಸಂ
ಧಾನವೋ ತಾನೆನುತ ಗಜಬಜಿಸಿದುದು ಗಜನಗರ ॥40॥

೦೪೧ ಪುರವ ಹೊಕ್ಕನು ...{Loading}...

ಪುರವ ಹೊಕ್ಕನು ನೃಪತಿ ಪರಿಮಿತ
ಪರಿಜನದಲಾ ರಾಜಬೀದಿಯ
ನೆರವಿ ನೆರವಿಯ ಜನದ ಪುನರಾಗಮನ ವಿಸ್ಮಯವ
ಪರಿಣತ ಸ್ತ್ರೀಬಾಲ ವೃದ್ಧರ
ವಿರಸ ವಚನವನಾಲಿಸುತ ನೃಪ
ನರಮನೆಗೆ ಬಂದೆರಗಿದನು ಧೃತರಾಷ್ಟ್ರನಂಘ್ರಿಯಲಿ ॥41॥

೦೪೨ ಸೋಲದಲಿ ಮನನೊನ್ದು ...{Loading}...

ಸೋಲದಲಿ ಮನನೊಂದು ಹೋದುದು
ಹೋಲದೆಮ್ಮಭಿಮತಕೆ ನಿಮ್ಮೊಳು
ಮೇಳದಿಂದೊಂದಾಗಿ ಮಜ್ಜನ ಭೋಜನಾದಿಗಳ
ಲೀಲೆಯಲಿ ಮಾಡುವುದು ಸದ್ಯೂ
ತಾಳಿಯಲಿ ರಮಿಸುವುದು ಮನದ ವಿ
ಟಾಳವಿಲ್ಲದೆ ಬದುಕಿ ನಿಮ್ಮೊಳಗೆಂದನಂಧನೃಪ ॥42॥

೦೪೩ ಕೃತಕವಿಲ್ಲದೆ ಬನ್ದೆ ...{Loading}...

ಕೃತಕವಿಲ್ಲದೆ ಬಂದೆ ನೀನೀ
ವ್ಯಥಿಕರಕೆ ಮನ ಬಹರೆ ಸುಖ ಸಂ
ಗತ ಸುಹೃದ್ದ್ಯೂತದಲಿ ರಮಿಸೈ ಕಂದ ಹೋಗೆಂದು
ಸುತತನದ ಸೌಹಾರ್ದ ಸಂಭಾ
ವಿತದ ಹೊರಬಾಹೆಯಲಿ ಧರಣೀ
ಪತಿಯನುಪಚರಿಸಿದನು ಚದುರಿಗತನದಿ ಧೃತರಾಷ್ಟ್ರ ॥43॥

೦೪೪ ಸರ್ವಲೋಕ ವಿನಾಶಕರವೀ ...{Loading}...

ಸರ್ವಲೋಕ ವಿನಾಶಕರವೀ
ಗುರ್ವಣೆಯ ದೈವಾಭಿಪಾಕಕೆ
ದರ್ವಿಯಾಯಿತು ಧರ್ಮಪುತ್ರನ ಬುದ್ಧಿವಿಸ್ತಾರ
ಸರ್ವಜನವೊಂದೆಸೆ ಯುಧಿಷ್ಟಿರ
ನೋರ್ವನೊಂದೆಸೆ ಶಕುನಿ ಕೌರವ
ರೀರ್ವರೊಂದೆಸೆ ಜೂಜಿನಭಿಮತರಸವ ಕೇಳ್ ಎಂದ ॥44॥

೦೪೫ ಬನ್ದು ಕುಳ್ಳಿರ್ದುದು ...{Loading}...

ಬಂದು ಕುಳ್ಳಿರ್ದುದು ಸಭಾಸದ
ವೃಂದ ನೆರೆದುದು ಮತ್ತೆ ಜೂಜಿನ
ದಂದುಗದ ದುವ್ರ್ಯಸನ ಮುಸುಕಿತು ಧರ್ಮನಂದನನ
ತಂದು ಮಣಿಮಯ ಸಾರಿವಲಗೆಯ
ನಂದು ಮೋಹರಿಸಿದರು ಜೂಜಿಂ
ಗಿಂದು ಕುಲದ ಮಹಿಶನನುವಾದನು ಸರಾಗದಲಿ ॥45॥

೦೪೬ ಎಳ್ಳನಿತು ಖಯಖೋಡಿ ...{Loading}...

ಎಳ್ಳನಿತು ಖಯಖೋಡಿ ಚಿತ್ತದೊ
ಳಿಲ್ಲ ನಿಜ ಪಾಂಡಿತ್ಯ ಪರಿಣತಿ
ಬಿಲ್ಲ ಬಿಸುಟುದು ಬೆದರಿಹೋಯ್ತು ವಿವೇಕವಿಸ್ತಾರ
ಖುಲ್ಲರೊಡನೆಯೆ ಖೇಳಮೇಳಕೆ
ಚಲ್ಲಣವ ವೆಂಟಣಿಸಲಾ ಜನ
ವೆಲ್ಲ ಮರುಗಿತು ಧರ್ಮಜನ ಮರುಜೂಜಿನುಬ್ಬಟೆಗೆ ॥46॥

೦೪೭ ತೆಗೆದು ಸಾರಿಯ ...{Loading}...

ತೆಗೆದು ಸಾರಿಯ ಹೂಡಿ ಹಾಸಂ
ಗಿಗಳ ಹೊಸೆದನು ಶಕುನಿ ಧರ್ಮಜ
ಹೊಗಳು ಹೊಣೆಯನು ವಚನಿಸೊಡ್ಡವನಿದು ವಿನೋದವಲೆ
ಬಗೆವಡೊಂದೇ ಹಲಗೆ ಮೇಲಣ
ದುಗುಣ ಸಲ್ಲದು ಜೂಜುಗಾರರ
ವಿಗಡತನನವಲ್ಲೆಂದು ನೃಪತಿಗೆ ಸೂಸಿದನು ನಗೆಯ ॥47॥

೦೪೮ ಲಲಿತ ರಾಗದ ...{Loading}...

ಲಲಿತ ರಾಗದ ರಸದ ಗೋರಿಯ
ಬಿಲುಸವಿಯ ಮೃಗದಂತೆ ವಿಷಯದ
ಕುಳಿಯೊಳಗೆ ಕಾಲ್ದೊಡಕಿ ಬಿದ್ದ ಸುಯೋಗಿಯಂದದಲಿ
ಕಲಿತ ವಿಕಳಾವೇಶದಲಿ ವಿ
ಹ್ವಲಿತ ವಿವಿಧಶ್ರೋತ್ರ ನಯ ಸಂ
ಚಲಿತನೆಂದನು ಶಕುನಿ ನೀ ನುಡಿಯೊಡ್ಡವೇನೆಂದು ॥48॥

೦೪೯ ಧರಣಿಪತಿ ಕೇಳ್ ...{Loading}...

ಧರಣಿಪತಿ ಕೇಳ್ ನಿನ್ನ ಧಾರಿಣಿ
ಕುರುಪತಿಯ ನೆಲನೊಡ್ಡ ನಿಮ್ಮೀ
ಯೆರಡರಸುಗಳೊಳಾರು ಸೋತರು ಸೋತ ಭೂಪತಿಗೆ
ವರುಷ ಹನ್ನೆರಡರಲಿ ವನದೊಳ
ಗಿರವು ಮೇಣಜ್ಞಾತವೊಂದೇ
ವರುಷ ಹದಿನಾಲ್ಕರಲಿ ಹೊಗುವುದು ತಮ್ಮ ಪಟ್ಟಣವ ॥49॥

೦೫೦ ಮರೆಯಲಿಹುದಜ್ಞಾತ ವಾಸದೊ ...{Loading}...

ಮರೆಯಲಿಹುದಜ್ಞಾತ ವಾಸದೊ
ಳರಿದರಾದೊಡೆ ಮತ್ತೆ ವನದಲಿ
ಚರಿಸುವುದು ಹನ್ನೆರಡು ವರುಷವು ಸತ್ಯಭಾಷೆಯಲಿ
ಮುರಿದು ತಪ್ಪಿದ ನೃಪನನೀಶ್ವರ
ನರಿವನೈಸಲೆ ರಾಜಧರ್ಮವ
ಮೆರೆವರಾಡುವುದೊಡ್ಡವೀ ಪರಿಯೆಂದನಾ ಶಕುನಿ ॥50॥

೦೫೧ ಅಞ್ಜುವರೆ ನಿಲು ...{Loading}...

ಅಂಜುವರೆ ನಿಲು ಜೂಜುಗಾರರ
ಭಂಜವಣೆಗೊಳಗಹರೆ ಬಾ ನೃಪ
ರೆಂಜಲಿಸಿ ಬಿಡಬಹುದೆ ಪರಮ ದ್ಯೂತ ರಸಸುಧೆಯ
ರಂಜಕರು ನಾವಲ್ಲ ಜೂಜಿಗೆ
ಕಂಜಭವ ತಾನೆನ್ನೊಡನೆ ಕೆಲ
ರಂಜದಿಹರಾರೆಂದು ಗರುವವ ಸೂಸಿದನು ಶಕುನಿ ॥51॥

೦೫೨ ಉಗ್ರಭಾಷೆಯದೇಕೆ ಶಿವಶಿವ ...{Loading}...

ಉಗ್ರಭಾಷೆಯದೇಕೆ ಶಿವಶಿವ
ವಿಗ್ರಹ ಪ್ರತಿಮುಖದ ವಿಷಮಾ
ವಗ್ರಹದಲಿದು ಬೆಂದುಹೋಗದೆ ಭರತಸಂತಾನ
ನಿಗ್ರಹಿಸಲೇಕಕಟ ಕುರುಕುಲ
ದಗ್ರಿಯನನೆಂದಖಿಳ ಸಚಿವರು
ದಗ್ರಚರಿತರು ಮುರಿದು ನುಡಿದರು ನೀತಿವಚನದಲಿ ॥52॥

೦೫೩ ವಿದುರ ಗುರು ...{Loading}...

ವಿದುರ ಗುರು ಗುರುಸೂನು ಬಾಹ್ಲಿಕ
ನದಿಯ ಮಗ ಗಾಂಧಾರಿ ಕುಂತೀ
ಸುದತಿ ಭೂರಿಶ್ರವ ಯುಯುತ್ಸು ವಿಕರ್ಣ ಸೃಂಜಯರು
ಇದು ವಿಷಮವೆಂದಾ ಕೃಪ ದ್ರೌ
ಪದಿ ವೃಕೋದರ ಪಾರ್ಥ ಯಮಳರು
ಕುದಿದರೊಳಗೊಳಗಾಡಲಮ್ಮದೆ ರಾಯನಿದಿರಲಿ ॥53॥

೦೫೪ ಕ್ಷಿತಿಪ ಕೇಳ್ ...{Loading}...

ಕ್ಷಿತಿಪ ಕೇಳ್ ದುವ್ರ್ಯಸನ ವಿಷಮ
ವ್ಯತಿಕರದ ಭಾಷೆಯನು ನೃಪ ಮಿಗೆ
ಪತಿಕರಿಸಿದನು ಹೊಸೆದು ಹಾಸಂಗಿಗಳ ಹಾಯ್ಕಿದನು
ಸತಿಯ ದಕ್ಷಿಣ ನಯನವೀ ಭೂ
ಪತಿಯ ವಾಮ ಭುಜಾಕ್ಷಿಗಳು ದು
ರ್ಗತಿಯ ಸೂಚಿಸಿ ತೋರುತಿರ್ದವು ಧರ್ಮನಂದನನ ॥54॥

೦೫೫ ದಾಯವೇ ಮಝ ...{Loading}...

ದಾಯವೇ ಮಝ ಪೂತು ದುಗತಿಗ
ನಾಯಸವಲೇ ಚೌಕವೊಂದೇ
ಕಾಯಲಾಗದೆ ಹಾಯ್ಕ ಹಾಯ್ಕೆಂದೊದರಿ ಗರ್ಜಿಸಿದ
ರಾಯ ಸೋತನು ಧರ್ಮಸುತ ಕುರು
ರಾಯ ಗೆಲಿದನು ಕಟ್ಟು ಗುಡಿಯನು
ರಾಯನೂರೊಳಗೆಂದು ಮಿಗೆ ಬೊಬ್ಬಿರಿದನಾ ಶಕುನಿ ॥55॥

೦೫೬ ಹಣುಗಿತರಸನ ವದನ ...{Loading}...

ಹಣುಗಿತರಸನ ವದನ ತಾಳಿಗೆ
ಯೊಣಗಿತವನಿಗೆ ನಟ್ಟದಿಟ್ಟಿಯ
ಮಣಿದ ನೆನಹಿನ ಮುರಿದ ಮಹಿಮೆಯ ತಾಗಿದಪದೆಸೆಯ
ಜುಣುಗಿದುಬ್ಬಿನ ಸತ್ಯದಲಿ ಕೇ
ವಣಿಸಿದರಿವಿನ ವಿಕೃತ ಕರ್ಮದ
ಕುಣಿಕೆಗೊಲೆದೊಲೆದರಸನಿದ್ದನು ಹೊತ್ತ ದುಗುಡದಲಿ ॥56॥

೦೫೭ ಉಬ್ಬು ಮುರಿದುದು ...{Loading}...

ಉಬ್ಬು ಮುರಿದುದು ತಮ್ಮೊಳೊಬ್ಬರ
ನೊಬ್ಬರೀಕ್ಷಿಸಿ ಕೈಯ್ಯಗಲ್ಲದ
ನಿಬ್ಬರದ ನಿಡುಸುಯ್ಲು ಖೋಡಿಯ ಮನದ ಕಳ್ಗುದಿಯ
ಜಬ್ಬುಲಿಯ ಜಾಣಿಕೆಯ ಚಿಂತೆಯ
ಹಬ್ಬುಗೆಯ ಹರವಸದ ಖೇದದ
ಮಬ್ಬಿನಲಿ ಹಣಗಿದರು ಪವನಜ ಫಲುಗುಣಾದಿಗಳು ॥57॥

೦೫೮ ಕಣ್ಡನೇ ಧೃತರಾಷ್ಟ್ರನನು ...{Loading}...

ಕಂಡನೇ ಧೃತರಾಷ್ಟ್ರನನು ಕೈ
ಕೊಂಡನೇ ವನದೀಕ್ಷೆಯನು ಪಿತ
ನಂಡಲೆದು ಕೃಷ್ಣಾಜಿನವನುಡುಗೊರೆಯನಿತ್ತನಲೆ
ಚಂಡಿಗೊಂಡರೆ ನನಗೆ ನಿನ್ನಿನ
ಭಂಡತನ ಬಾರದಲೆ ವನವಾ
ಖಂಡಲಪ್ರಸ್ಥವಲೆ ನಿನಗಿನ್ನೆಂದಳಿಂದುಮುಖಿ ॥58॥

೦೫೯ ಕಳೆದು ಬಿಸುಟರು ...{Loading}...

ಕಳೆದು ಬಿಸುಟರು ಮತ್ತೆ ರತ್ನಾ
ವಳಿಯ ವಿವಿಧಾಭರಣವನು ಪರಿ
ಲಲಿತ ಕೃಷ್ಣಾಜಿನವ ಹೊದೆದರು ಹಾಯ್ಕಿ ಹಚ್ಚಟವ
ನಳಿನಮುಖಿ ನಳನಳಿಪ ಮುಕ್ತಾ
ವಳಿಯಲಂಕಾರವನುಗಿದು ಸಭೆ
ಯೊಳಗೆ ಬಿಸುಟಳು ನಿಂದಳಬಲೆ ನಿಜಾಭಿರೂಪದಲಿ ॥59॥

೦೬೦ ಸಾಲದೇ ನಿಮಗಿನ್ನು ...{Loading}...

ಸಾಲದೇ ನಿಮಗಿನ್ನು ಕೌರವ
ರೋಲಗದ ಫಲವಾಯ್ತಲಾ ವನ
ಮಾಲೆ ಕೊರಳಿಂಗಲ್ಲ ಚರಣಾಭರಣವಾಯಿತೆಲೆ
ಬೀಳುಕೊಳಿರೇ ಬೊಪ್ಪನವರನು
ಮೇಲೆ ಮೋಹದ ತಾಯಲಾ ನಡೆ
ಹೇಳಿ ಕಳುಹಿಸಿಕೊಂಬೆವೆಂದನು ಭೂಪತಿಗೆ ಭೀಮ ॥60॥

೦೬೧ ಬನ್ದರಿವರರಮನೆಗೆ ನೇಮವೆ ...{Loading}...

ಬಂದರಿವರರಮನೆಗೆ ನೇಮವೆ
ಯೆಂದು ಪದಕೆರಗಿರೆ ಕಣಿ ನೀ
ರಿಂದ ನನೆದನು ತಂದೆ ಮಕ್ಕಳ ಬಿಟ್ಟು ಬದುಕುವನೆ
ಇಂದುಮುಖಿ ಮರುಗಿದಳು ನಾವಿ
ನ್ನೆಂದು ಕಾಬೆವು ನಿಮ್ಮನಕಟಕ
ಟೆಂದಳತಿ ಮೋಹಿತೆಯಲಾ ಕುಂತೀ ಕುಮಾರರಿಗೆ ॥61॥

೦೬೨ ವನದೊಳತ್ಯಾಯಾಸ ನೀವೆಂ ...{Loading}...

ವನದೊಳತ್ಯಾಯಾಸ ನೀವೆಂ
ತನುಭಿಸುವಿರಿ ಪಾಪಿ ದುರ್ಯೋ
ಧನನದುರ್ಜನ ಸಂಗ ನಿವಗಿದು ಸಿಂಗಿಯಾದುದಲೆ
ವನಿತೆ ನಿಮ್ಮೊಡನೆಂತು ತೊಳಲುವ
ಳನವರತ ಗಿರಿ ಗುಹೆಯ ಘಟ್ಟವ
ನೆನುತ ನುಡಿದಳು ಕುಟಿಲಗರ್ಭದ ಗುಣದ ಬೆಳವಿಗೆಯ ॥62॥

೦೬೩ ಬೀಳುಕೊಡಿರೇ ಸಾಕು ...{Loading}...

ಬೀಳುಕೊಡಿರೇ ಸಾಕು ಬಹಳ ಕೃ
ಪಾಳುಗಳಲಾ ವಿಧಿಯ ಚಿತ್ತ ವಿ
ಟಾಳ ಗತಿಗೇನಾಯ್ತು ಹದಿಮೂರಬುದವವಧಿಯಲೆ
ಮೇಲೆ ನಿಮ್ಮಾತ್ಮಜರಿಗವನೀ
ಪಾಲನೆಯ ಪರುಟವದ ಪಟ್ಟವ
ಪಾಲಿಸುವರಿದಕೇನು ಹೊಲ್ಲೆಹವೆಂದನಾ ಧೌಮ್ಯ ॥63॥

೦೬೪ ಫಳಕುಜದ ಪಲ್ಲವದ ...{Loading}...

ಫಳಕುಜದ ಪಲ್ಲವದ ಪದಕರ
ತಳದ ವಿಪುಲ ತಮಾಲ ಪತ್ರದ
ಲಲಿತ ಕೇತಕಿ ನಖದ ದಾಡಿಮ ದಂತಪಂಗ್ತಿಗಳ
ನಳಿನ ನಯನದ ಮಧುಪ ಕುಲ ಕುಂ
ತಳದ ವನಸಿರಿ ಸವತಿಯಾದಳು
ಜಲಜಮುಖಿ ಪಾಂಚಾಲೆಗೆಂದನು ಧೌಮ್ಯಮುನಿ ನಗುತ ॥64॥

೦೬೫ ಇವರು ಕಳುಹಿಸಿಕೊಣ್ಡರಾ ...{Loading}...

ಇವರು ಕಳುಹಿಸಿಕೊಂಡರಾ ನೃಪ
ಭವನವನು ಹೊರವಂಟರೊಡನು
ತ್ಸವ ವಿಹೀನರು ವಿದುರ ಭೀಷ್ಮ ದ್ರೋಣ ಗೌತಮರು
ಅವನಿಪತಿ ದುರ್ಯೋಧನಾದಿಗ
ಳವನ ಸಹಭವರುಳಿಯೆ ಬಂದುದು
ವಿವಿಧಜನದೊತ್ತೊತ್ತೆ ಮಸಗಿತು ರಾಜಬೀದಿಯಲಿ ॥65॥

೦೬೬ ಸನ್ದಣಿಸಿದುದು ಕೇರಿಕೇರಿಯ ...{Loading}...

ಸಂದಣಿಸಿದುದು ಕೇರಿಕೇರಿಯ
ಮಂದಿ ಮನೆಮನೆ ಮೇಲೆ ಘನತರು
ವೃಂದದಲಿ ಪುರಸದನ ಶಿಖರೌಘದಲಿ ಶೋಕಿಸುತ
ನಿಂದುದಲ್ಲಿಯದಲ್ಲಿ ನೋಟಕ
ರಿಂದ ಕೆತ್ತುದು ಬೀದಿ ಪುರಜನ
ಬಂದಿಯಲಿ ಸಿಲುಕಿದ ನೃಪಾಲರು ನಡೆದರೊಗ್ಗಿನಲಿ ॥66॥

೦೬೭ ಕುತ್ತುದಲೆಗಳ ಮೃಗದ ...{Loading}...

ಕುತ್ತುದಲೆಗಳ ಮೃಗದ ತೊಗಲಿನ
ಸುತ್ತು ಹೊದಕೆಗಳೆಡದ ಕೈಗಳೊ
ಳೆತ್ತಿದಾಯುಧ ತತಿಯ ಭಂಗದ ಭೂರಿ ತಾಪದಲಿ
ಹೊತ್ತುವೆದೆಗಳ ಹೊಗೆವ ಮೋರೆಯ
ಕಿತ್ತಡದ ಕಡುಗೋಪ ಸಮತೆಗ
ಳಿತ್ತಡಿಯ ತಡವಾಯ್ತು ನೃಪರೈತಂದರೊಗ್ಗಿನಲಿ ॥67॥

೦೬೮ ಮುನ್ದಣಾತನು ಪಾರ್ಥನಾತನ ...{Loading}...

ಮುಂದಣಾತನು ಪಾರ್ಥನಾತನ
ಹಿಂದೆ ಭೂಪತಿ ಧರ್ಮಪುತ್ರನ
ಹಿಂದೆ ಮಾದ್ರೀತನಯರಿಬ್ಬರ ಹಿಂದೆ ಪಾಂಚಾಲೆ
ಹಿಂದೆ ಕುಂತೀದೇವಿಯಾಕೆಯ
ಹಿಂದಣಾತನು ಭೀಮನೆಂದಾ
ಮಂದಿ ತೋರಿದುದೊಬ್ಬರೊಬ್ಬರಿಗಿವರನೀಕ್ಷಿಸುತ ॥68॥

೦೬೯ ಹರನ ಜೋಡು ...{Loading}...

ಹರನ ಜೋಡು ಮುರಾಂತಕನ ಸಮ
ದೊರೆ ವಿರಿಂಚನ ಪಾಡು ಶಕ್ರನ
ಸರಿಸದವರಿಗೆ ಭಂಗವೀ ವಿಧಿಯೀ ವಿಪತ್ತುಗಳೆ
ನರರನೀ ಕೌರವರ ಮಿಕ್ಕಿನ
ನೊರಜುಗಳ ಪಾಡೇನು ಶಿವಶಿವ
ಕರುಣಿಯಲ್ಲ ವಿಧಾತ್ರನೆಂದುದು ನೆರೆದ ಜನನಿಕರ ॥69॥

೦೭೦ ಕೇಳಿದಭಿಮನ್ಯು ಪ್ರಮುಖ ...{Loading}...

ಕೇಳಿದಭಿಮನ್ಯು ಪ್ರಮುಖ ಭೂ
ಪಾಲ ತನುಜರು ಸಚಿವರಾಪ್ತರು
ಪಾಳೆಯದ ತಲ್ಲಣದ ಖಯಖೋಡಿಯ ಮನೋವ್ಯಥೆಯ
ಹೇಳಲರಿಯೆನು ಬಂದು ಕಂಡರು
ಗೋಳಿಡುತ ಪದಕೆರಗಿದರು ನೃಪ
ನಾಲಿ ನೀರೇರಿದುವು ನನೆದರು ನಯನವಾರಿಯಲಿ ॥70॥

೦೭೧ ಕರೆಸಿದನು ಪರಿವಾರವನು ...{Loading}...

ಕರೆಸಿದನು ಪರಿವಾರವನು ನಿಮ
ಗರಸು ಕೌರವನೆಮ್ಮ ಗಜ ರಥ
ತುರಗ ಕೊಟ್ಟಿಗೆಯೆತ್ತು ಭಂಡಿ ಕೊಟಾರ ಕೊಪ್ಪರಿಗೆ
ಸರಕು ಸರ್ವಸ್ವಗಳು ಕೌರವ
ನರಮನೆಗೆ ನಡೆಯಲಿ ವನಾಂತದೊ
ಳಿರವು ನಮಗೆಂದರುಹಿದನು ಸಚಿವರಿಗೆ ಸಹದೇವ ॥71॥

೦೭೨ ಕರಿಗಳನು ಕೌರವನ ...{Loading}...

ಕರಿಗಳನು ಕೌರವನ ಮಾವಂ
ತರಿಗೆ ಕೈಗೊಳಿಸಿದರು ರಥಹಯ
ತುರುಗಳಂ ಕೈವರ್ತಿಸಿತು ಸೂತರಿಗೆ ಗೋವರಿಗೆ
ಸರಕನವನಿಪನನುಚರರಿಗು
ತ್ತರಿಸಿದರು ಪಾರಕವನೊಪ್ಪಿಸಿ
ವರ ಸುಭಟರಳವಡಿಸಿಕೊಂಡರು ಕಾನನೋಚಿತವ ॥72॥

೦೭೩ ಹರಿದರಿನ್ದ್ರಪ್ರಸ್ಥಕಾತನ ...{Loading}...

ಹರಿದರಿಂದ್ರಪ್ರಸ್ಥಕಾತನ
ಚರರು ಸಚಿವರು ಹೊಕ್ಕು ಪಾಂಡವ
ರರಮನೆಯ ಮುದ್ರಿಸಿದರಲ್ಲಿಯ ನಾಡು ಬೀಡುಗಳ
ಕರೆಸಿ ಕಾಣಿಕೆಗೊಂಡು ಠಾಣಾಂ
ತರದ ನಾಯಕವಾಡಿಗಳ ಸಂ
ವರಣೆಗಳ ಸಂತವಿಸಿದರು ಕುರುರಾಜ ಮುದ್ರೆಯಲಿ ॥73॥

೦೭೪ ಅರಸ ಕೇಳಾಶ್ಚರ್ಯವನು ...{Loading}...

ಅರಸ ಕೇಳಾಶ್ಚರ್ಯವನು ಗಜ
ಪುರದ ಬೀದಿಯೊಳಿವರು ಬರುತಿರೆ
ದುರುಳ ದುಶ್ಯಾಸನನು ಮಿಗೆ ಹರಿತಂದನೇಡಿಸುತ
ಬೆರರಲನಾಡಿಸಿ ಹೋದರೀ ಹೋ
ದರಸು ಕಾನನದೆತ್ತು ಪುನರಪಿ
ಸರಿದವೆತ್ತುಗಳೆನುತ ಬಂದನು ಹಿಂದೆ ಪವನಜನ ॥74॥

೦೭೫ ತಿರುಗಿಕಣ್ಡನು ಭೀಮನುಬ್ಬಿದ ...{Loading}...

ತಿರುಗಿಕಂಡನು ಭೀಮನುಬ್ಬಿದ
ಹರುಷಹೃದಯನ ಮನದ ರೋಷದೊ
ಳರಸನನು ನೋಡಿದನು ಭೂಪತಿ ಮೊಗದ ಸನ್ನೆಯಲಿ
ತಿರುಹಿದನು ತಮ್ಮನನು ಗದೆಯನು
ತಿರುಗಿಹಾಯಿಕಿ ಹಿಡಿದು ಮಾರುತಿ
ಯರಸನಾಜ್ಞೆಯೊಳಂಜಿ ನಡೆದನು ನೃಪತಿ ಕೇಳ್ ಎಂದ ॥75॥

೦೭೬ ಪುರವ ಹೊರವಣ್ಟಿವರು ...{Loading}...

ಪುರವ ಹೊರವಂಟಿವರು ಗಂಗಾ
ವರನದಿಯ ತೀರದಲಿ ನಿಂದರು
ಪರಿಜನವ ಕಳುಹಿದರು ಧೃತರಾಷ್ಟ್ರನ ಪಸಾಯಿತರ
ಗುರುಜನಕೆ ಪೊಡವಂಟು ಬೀಳ್ಕೊಂ
ಡರು ನದೀಜ ದ್ರೋಣ ಕೃಪರನು
ಕರೆದು ಕುಂತಿಯ ನಿಲಿಸಿದರು ವಿದುರನ ನಿವಾಸದಲಿ ॥76॥

೦೭೭ ಕಳುಹಿ ಮರಳಿದು ...{Loading}...

ಕಳುಹಿ ಮರಳಿದು ವಿದುರನರಸನ
ನಿಲಯಕೈತಂದನು ಕುಮಾರರ
ಕಳುಹಿ ಬಂದೈ ತಮ್ಮ ಮತವೇನಾ ಯುಧಿಷ್ಟಿರನ
ಉಳಿದವರ ಹದನೇನು ದುರುಪದಿ
ಲಲನೆಯೇನೆಂದಳು ನಿದಾನವ
ತಿಳಿದು ಬಂದೈ ಹೇಳೆನುತ ಧೃತರಾಷ್ಟ್ರ ಬೆಸಗೊಂಡ ॥77॥

೦೭೮ ಮುನಿಪ ಜಪಿಸುತ ...{Loading}...

ಮುನಿಪ ಜಪಿಸುತ ಹೋದನಗ್ನಿಯ
ವಿನುತ ಸೂಕ್ತವನೆತ್ತು ಗೈದುವಿ
ನನಿಲಜನು ದುಗುಡದಲಿ ಫಲುಗುಣ ಯಮಳರೊಂದಾಗಿ
ವನಿತೆಯನು ನಡುವಿಟ್ಟು ಹೊರವಂ
ಟನು ಯುಧಿಷ್ಠಿರ ನೃಪತಿ ನಿಯತದಿ
ನೆನೆವುತಿದ್ದನು ವೀರನಾರಾಯಣನ ಪದಯುಗವ ॥78॥

೦೭೯ ಇತಿ ಶ್ರೀಮದಚಿನ್ತ್ಯ ...{Loading}...

ಇತಿ ಶ್ರೀಮದಚಿಂತ್ಯ ಮಹಿಮ ಗದುಗಿನ
ವೀರನಾರಾಯಣ ಚರಣಾರವಿಂದ ಮಕರಂದ
ಮಧುಪಾನ ಪರಿಪುಷ್ಟ ವಚಃ ಷಟ್ಪದೀ ನಿಕಾಯ
ಶ್ರೀಮತ್ಕುಮಾರವ್ಯಾಸ ಯೋಗೀಂದ್ರ ವಿರಚಿತಮಪ್ಪ
ಕರ್ಣಾಟ ಭಾರತ ಕಥಾಮಂಜರಿಯೊಳ್
ಸಭಾಪರ್ವಂ ಸಮಾಪ್ತಮಾದುದು.

+೧೬ ...{Loading}...