೧೪

೦೦೦ ಸೂಚನೆ ರಾಯ ...{Loading}...

ಸೂಚನೆ: ರಾಯ ಪಾಂಡವರರಸಿ ಕಮಲ ದ
ಳಾಯತಾಕ್ಷಿಯ ಪರಿಭವವನೆರೆ
ಕಾಯಿದುದೆಲಾ ವೀರನಾರಾಯಣನ ಸಿರಿನಾಮ

೦೦೧ ಕೇಳು ಜನಮೇಜಯ ...{Loading}...

ಕೇಳು ಜನಮೇಜಯ ಧರಿತ್ರೀ
ಪಾಲ ವಿದುರನ ಮಾತ ಮುರಿದು ನೃ
ಪಾಲನೆಚ್ಚರಿಸಿದನು ಕಣುಸನ್ನೆಯಲಿ ಸೌಬಲನ
ಏಳು ಧರ್ಮಜ ಸೋತೆಲಾ ನಿ
ನ್ನಾಳು ಕುದುರೆಯನಿನ್ನು ಸಾಕು ದ
ಯಾಳುವಲ್ಲ ಸುಯೋಧನನು ಧನವಿಲ್ಲ ನಿನಗೆಂದ ॥1॥

೦೦೨ ತೆಗೆವೆನೇ ಸಾರಿಗಳ ...{Loading}...

ತೆಗೆವೆನೇ ಸಾರಿಗಳ ನಿನ್ನೀ
ನಗೆಮೊಗದ ಸಿರಿ ಸೀದು ಕರಿಯಾ
ಯ್ತುಗುಳುತಿದೆ ನಿನ್ನನುಜರಿಂಗಿತ ರೋಷಪಾವಕನ
ಸೊಗಸು ಬೀಯದು ರಪಣವಿಲ್ಲದ
ಬೆಗಡು ನೋಯದು ಕ್ಷತ್ರಧರ್ಮದ
ತಗಹು ಸಾಯದು ನಿನಗೆನುತ ಗಹಗಹಿಸಿದನು ಶಕುನಿ ॥2॥

೦೦೩ ಎಲವೋ ಸೌಬಲ ...{Loading}...

ಎಲವೋ ಸೌಬಲ ವಿತ್ತವೀಸರ
ಲಳಿದುದೆ ನೀ ನಗುವವೋಲ್ನ
ಮ್ಮೊಳಗು ಡಿಳ್ಳವೆ ರಪಣವಿದೆಲ್ಲಾ ಬಹಳ ಭಂಡಾರ
ಸುಳಿಸು ಹಾಸಂಗಿಗಳ ಮೋಹರ
ಗೊಳಿಸು ಸಾರಿಯನೊಂದು ರೇಖೆಯ
ಬಳಿಯಲೊಂದೇ ಕೋಟಿ ಧನವೆಂದೊದರಿದನು ಭೂಪ ॥3॥

೦೦೪ ದುಗುಣಕಿಕ್ಕಿದನರಸನಾಚೆಗೆ ...{Loading}...

ದುಗುಣಕಿಕ್ಕಿದನರಸನಾಚೆಗೆ
ತೆಗೆದನವ ಮೂರೆಂದು ನಾಲ್ಕ
ಕ್ಕುಗಿದನವನಿಪನೈದ ಕಳೆದನು ಬಹಳವನು ಶಕುನಿ
ತೆಗೆದ ನಿಮ್ಮಡಿಗರಸನವನಾ
ತ್ರಿಗುಣ ಪಂಚಕ ಸಪ್ತ ನವಮ
ಪ್ರಗುಣವೆಂದನು ಶಕುನಿ ಸೋಲಿಸಿದನು ಮಹೀಪತಿಯ ॥4॥

೦೦೫ ಎಣಿಸಿದನು ರೇಖೆಗಳ ...{Loading}...

ಎಣಿಸಿದನು ರೇಖೆಗಳ ನಿಮ್ಮೊಡ
ಗಣಿತ ಸಂಖ್ಯಾ ಸಿದ್ಧವಸ್ತುವ
ನೆಣಿಸಲರ್ಬುದ ಸಂಖ್ಯೆಯಾಯಿತು ಹಲಗೆಯೊಂದರಲಿ
ಗುಣನಿಧಿಯೆ ಮಗುಳೊಡ್ಡಲಾಪರೆ
ಪಣವ ಸಬುದಿಸು ಕೇಳ್ವೆನೆನೆ ನೃಪ
ಗುಣಶಿರೋಮಣಿ ಧರ್ಮಸುತ ನಸು ನಗುತಲಿಂತೆಂದ ॥5॥

೦೦೬ ಹೂಡು ಸಾರಿಯ ...{Loading}...

ಹೂಡು ಸಾರಿಯ ರೇಖೆ ರೇಖೆಗೆ
ಮಾಡಿದರ್ಬುದ ಧನ ಸುಯೋಧನ
ನಾಡಿ ನೋಡಲಿ ಹಾಯ್ಕು ಹಾಸಂಗಿಗಳ ಹಾಯ್ಕೆನುತ
ಆಡಿದನು ಯಮಸೂನು ಖಾಡಾ
ಖಾಡಿಯಲಿ ಸಾರಿಗಳೊಡನೆ ಹೋ
ಗಾಡಿದನು ಭಂಡಾರವನು ಭೂಪಾಲ ಕೇಳ್ ಎಂದ ॥6॥

೦೦೭ ಸಾರಿ ಸೋತವು ...{Loading}...

ಸಾರಿ ಸೋತವು ಸೋಲು ನಿನಗನು
ಸಾರಿ ನೀವೈವರು ವನಾಂತಕೆ
ಸಾರಿ ಸಾಕಿನ್ನೊಡ್ಡಲಾಪರೆ ಮತ್ತೆ ನುಡಿ ಧನವ
ಭೂರಮಣ ಹೇಳೆನಲು ರೇಖೆಯ
ಭಾರಿಯೊಡ್ಡಕೆ ಪದ್ಮ ಸಂಖ್ಯೆಯ
ಭೂರಿ ಧನವಿದೆ ರಪಣವೆಂದನು ನಗುತ ಯಮಸೂನು ॥7॥

೦೦೮ ಬರಹಕಿಮ್ಮಡಿ ನೂರು ...{Loading}...

ಬರಹಕಿಮ್ಮಡಿ ನೂರು ಮಡಿ ಸಾ
ವಿರದ ಮಡಿ ಪರಿಯಂತವಿಕ್ಕಿತು
ಹರುಷ ನನೆ ಕೊನೆಯಾಯ್ತು ಹೆಚ್ಚಿತು ಕಲಿಮಲಾವೇಶ
ಸ್ಥಿರವೆ ಹಿಂಗಿತು ವಾಸಿ ಪಾಡಿನ
ದುರುಳತನವುಬ್ಬೆದುದಡಿಗಡಿ
ಗರಸನೊಡ್ಡಿದ ಮೇಲೆ ಮೇಲೊಡ್ಡವನು ವಿರಚಿಸಿದ ॥8॥

೦೦೯ ತೀರಿತಿನ್ದ್ರಪ್ರಸ್ಥದುರು ಭಂ ...{Loading}...

ತೀರಿತಿಂದ್ರಪ್ರಸ್ಥದುರು ಭಂ
ಡಾರ ತನ್ನರಮನೆಯ ಪೈಕದ
ವಾರಕದ ಭಂಗಾರವೊಡ್ಡಿತು ಕೋಟಿ ಸಂಖ್ಯೆಯಲಿ
ಸೇರಿತದು ಕುರುಪತಿಗೆ ರಾಯನ
ನಾರಿಯರ ವಿವಿಧಾಭರಣ ಸಿಂ
ಗಾರವೊಡ್ಡಿತು ಕೊಂಡು ಮುಳುಗಿತು ಖಡ್ಡತನ ನೃಪನ ॥9॥

೦೧೦ ನಕುಲ ಸಹದೇವಾರ್ಜುನರ ...{Loading}...

ನಕುಲ ಸಹದೇವಾರ್ಜುನರ ಮಣಿ
ಮಕುಟ ಕರ್ಣಾಭರಣ ಪದಕಾ
ದಿಕ ಸಮಸ್ತಾಭರಣವೊಡ್ಡಿತು ಹಲಗೆಯೊಂದರಲಿ
ವಿಕಟ ಮಾಯಾ ವಿಷಮ ಕರ್ಮವ
ನಕಟ ಬಲ್ಲನೆ ಸಾಧುಜನ ಸೇ
ವಕನು ಸೋತನು ಸಾಧ್ಯವಹುದೇ ವಿಧಿಯ ಮುಳಿಸಿನಲಿ ॥10॥

೦೧೧ ಸೋತೆಲಾ ಕೌನ್ತೇಯ ...{Loading}...

ಸೋತೆಲಾ ಕೌಂತೇಯ ನಿಮಿಷಕೆ
ಬೀತುದೇ ನಿನ್ನಖಿಳ ಸಿರಿ ವಿ
ಖ್ಯಾತಿ ಬರತುದೆ ವೇಡೆಗೆದರಿತೆ ಮನದ ವಾಸಿಗಳ
ಪ್ರೀತಿಯುಂಟೇ ನಿಮಗೆ ಮತ್ತೀ
ದ್ಯೂತದಲಿ ಧನವಿಲ್ಲಲಾ ಗ
ರ್ವಾತಿರೇಕವ ಬೀಳುಗೊಂಡಿರೆಯೆಂದನಾ ಶಕುನಿ ॥11॥

೦೧೨ ಖಿನ್ನನಾದನು ರಾಜ್ಯಲಕ್ಷ್ಮಿಯ ...{Loading}...

ಖಿನ್ನನಾದನು ರಾಜ್ಯಲಕ್ಷ್ಮಿಯ
ಬೆನ್ನ ಕಂಡನು ಬಳಚಿ ಹೋದ ನಿ
ಜೋನ್ನತಿಯಲವನೀಶನಿದ್ದನು ಮುರಿದ ಮಹಿಮೆಯಲಿ
ಇನ್ನು ಪಣವೇನೋ ವಿರೋಧಿಗ
ಳೆನ್ನ ಭಂಗಿಸಿ ನುಡಿದರದಕಿ
ನ್ನೆನ್ನಿನಿಕ್ಕಿ ದ್ಯೂತವಿಜಯವ ಸಾಧಿಸುವೆನೆಂದ ॥12॥

೦೧೩ ಎಲವೊ ಫಡ ...{Loading}...

ಎಲವೊ ಫಡ ಫಡ ಶಕುನಿ ಗರ್ವದ
ತಳಿ ಮುರಿವುದೇ ನಿನ್ನ ದುರ್ಮತಿ
ಗಳಿಗೆ ಹೂಡಿದ ದುರ್ಗವಿದೆ ತನ್ನಂತರಂಗದಲಿ
ಉಳಿದ ಧನವೇಗುವುದು ಜೀವ
ಸ್ಥಳವಿದೇ ಮೇಲೊಡ್ಡವೊಂದೇ
ಹಲಗೆಗೊಡ್ಡಿದೆನೆನ್ನ ನಕುಲನೆಂದನಾ ಭೂಪ ॥13॥

೦೧೪ ವಾಸಿಗನುಜನನೊಡ್ಡಿದರೆ ನಮ ...{Loading}...

ವಾಸಿಗನುಜನನೊಡ್ಡಿದರೆ ನಮ
ಗೀಸರಲಿ ಭಯವೇನು ನೋಡುವೆ
ವೈಸಲೇ ನೃಪ ಹಾಯ್ಕು ಹಾಸಂಗಿಗಳ ಹಾಯ್ಕೆನುತ
ಆ ಶಕುನಿ ಪೂರ್ವಾರ್ಜಿತದ ಡೊ
ಳ್ಳಾಸದಲಿ ಡಾವರಿಸಿ ಧರ್ಮವಿ
ನಾಶಿ ನಕುಲನ ಗೆಲಿದು ಬೊಬ್ಬಿರಿದನವನಿಪನ ಜರೆದ ॥14॥

೦೧೫ ಅರಸ ಸೋತೈ ...{Loading}...

ಅರಸ ಸೋತೈ ನಕುಲನನು ಹೇ
ವರಿಸದಿರು ಹೇಳೊಡ್ಡವನು ವಿ
ಸ್ತರಿಸಲೊಂದೇ ಹಲಗೆ ಸೋಲ್ವುದು ಹೇಳು ಹೇಳೆನಲು
ವರಿಸಿದೆನು ಸಹದೇವನನು ನೆರೆ
ಮರಳಿಚುವೆನೆನ್ನಖಿಳ ವಸ್ತೂ
ತ್ಕರವನೆಂದನು ಧರ್ಮನಂದನನರಸ ಕೇಳ್ ಎಂದ ॥15॥

೦೧೬ ಹರಿಬದಲಿ ತನ್ನಖಿಳ ...{Loading}...

ಹರಿಬದಲಿ ತನ್ನಖಿಳ ವಸ್ತೂ
ತ್ಕರವ ಮರಳಿಚುವನು ಮಹೀಪತಿ
ಕಿರಿಯ ತಮ್ಮನವೊಡ್ಡಿದನು ಮಾದ್ರೀ ಕುಮಾರಕನ
ಅರಸ ದಾಯವೆ ಬಾ ಜಯಾಂಗದ
ಸಿರಿಯೆ ಬಾ ಕುರುರಾಯ ರಾಜೋ
ತ್ಕರುಷ ಸಿದ್ಧಿಯೆ ಬಾಯೆನುತ ಗರ್ಜಿಸಿದನಾ ಶಕುನಿ ॥16॥

೦೧೭ ಏನ ಬಣ್ಣಿಸುವೆನು ...{Loading}...

ಏನ ಬಣ್ಣಿಸುವೆನು ವಿಕಾರಿಗ
ಳೇನ ನೆನೆಯರು ಕಪಟ ವಿಧದಲಿ
ಮಾನನಿಧಿ ತಾ ಸೋತನನುಜದ್ವಯ ಮಹಾಧನವ
ಗ್ಲಾನಿಚಿತ್ತದೊಳಿಲ್ಲಲೇ ಸುಮ
ನೋನುರಾಗವೆ ಭೀಮ ಪಾರ್ಥರು
ತಾನಿದೊಮ್ಮಿಗೆ ಬದುಕಿದರು ನಿಮಗೆಂದನಾ ಶಕುನಿ ॥17॥

೦೧೮ ಭೇದಮನ್ತ್ರವ ಮಾಡಿ ...{Loading}...

ಭೇದಮಂತ್ರವ ಮಾಡಿ ನಮ್ಮನು
ಭೇದಿಸುವ ಗಡ ಸುಬಲ ಸುತನಕ
ಟೀ ದುರಾತ್ಮನ ನೋಡಿರೈ ಸಭ್ಯರು ಶಿವಾಯೆನುತ
ಆ ದುರಾಗ್ರಹಿ ಲೋಕಜನ ಪರಿ
ವಾದಪದನಿರ್ಭೀತನಕ್ಷ ವಿ
ನೋದ ಕರ್ದಮ ಮಗ್ನನೊಡ್ಡಿದನಾ ಧನಂಜಯನ ॥18॥

೦೧೯ ಎಲೆ ಧನಞ್ಜಯ ...{Loading}...

ಎಲೆ ಧನಂಜಯ ನಿನ್ನನೊಡ್ಡಿದ
ಛಲಿ ಯುಧಿಷ್ಠಿರನಿಲ್ಲಿ ಸೋತರೆ
ಬಳಿಕ ನಿನ್ನನು ಮಾರಿದನಲಾ ಕೌರವೇಶ್ವರಗೆ
ತಿಳಿದು ಭೀಮಾರ್ಜುನರು ನೀವ್ ನಿ
ಮ್ಮೊಳಗೆ ಬಲಿದಿಹುದೆನಲು ಖತಿಯಲಿ
ಮುಳಿದು ಬೈದರು ಭೀಮ ಪಾರ್ಥರು ಸುಬಲ ನಂದನನ ॥19॥

೦೨೦ ದೇಹಿಗೆರವೇ ದೇಹಬಲವೋ ...{Loading}...

ದೇಹಿಗೆರವೇ ದೇಹಬಲವೋ
ದೇಹಿ ಭೂಪತಿ ಧರ್ಮಪುತ್ರನ
ದೇಹವಾವಿದರೊಳಗೆ ನಿನ್ನ ಕುಮಂತ್ರ ಭಾವಿತದ
ಊಹೆಗೊಂಬುದೆ ಕಪಟದಿಂದವ
ಗಾಹಿಸುವೆ ಸಾಕಿನ್ನು ಮೇಲಣ
ಗಾಹುಗತಕಗಳೆಮ್ಮೊಳೆಂದರು ಜರೆದು ಸೌಬಲನ ॥20॥

೦೨೧ ಮೇಲೆ ಹೇಳುವುದೇನು ...{Loading}...

ಮೇಲೆ ಹೇಳುವುದೇನು ಸಾರಿಯ
ಸಾಲು ಮುರಿದುದು ಸೆರೆಯ ಕಳವಿನ
ಕಾಲು ಕೀಲ್ಗಳನಾರು ಬಲ್ಲರು ಕುಟಿಲ ಕೋವಿದರ
ಹೇಳುವದರಿಮ್ಮುನ್ನ ಶಕುನಿಗೆ
ಬೀಳುವುದು ಬೇಕಾದ ದಾಯವು
ಕೌಳಿಕದ ವಿಧಿಪಾಶ ತೊಡಕಿತು ನೀಗಿತರ್ಜುನನ ॥21॥

೦೨೨ ಸೋತಿರರಸರೆ ಮತ್ತೆ ...{Loading}...

ಸೋತಿರರಸರೆ ಮತ್ತೆ ಹೇಳೀ
ದ್ಯೂತ ಶಿಖಿಗಾಹುತಿಯನೆನೆ ಕುಂ
ತೀತನುಜನೊಡ್ಡಿದನು ವಿಗಡ ಬಕಾಸುರಾಂತಕನ
ಆತುದೊಂದರೆಗಳಿಗೆ ಸೌಬಲ
ಸೋತ ಧರ್ಮಜ ಗೆಲಿದ ಧರ್ಮಜ
ಸೋತ ಸೌಬಲ ಗೆಲಿದನೆಂಬವೊಲಾಯ್ತು ಘನ ರಭಸ ॥22॥

೦೨೩ ಆ ಹಲಗೆ ...{Loading}...

ಆ ಹಲಗೆ ಸೋತುದು ಯುಧಿಷ್ಠಿರ
ನೂಹೆ ಮುರಿದುದು ಮುಂದುಗೆಟ್ಟನು
ರಾಹು ಹಿಡಿದ ಹಿಮಾಂಶು ಮಂಡಲದುಳಿದ ಕಳೆಯಂತೆ
ತೋಹಿನಲಿ ತೊಟ್ಟಿಸಿದ ಮೃಗದವೊ
ಲೂಹೆಯಳಿದುದು ಯಂತ್ರಸೂತ್ರದ
ಹೂಹೆಯಂತಿರೆ ನೃಪತಿ ತೆತ್ತನು ಹಗೆಗೆ ತನುಧನವ ॥23॥

೦೨೪ ಜನಪ ಮಾರಿದೆ ...{Loading}...

ಜನಪ ಮಾರಿದೆ ಭೀಮಸೇನಾ
ರ್ಜುನರು ಸಹಿತೊಡಹುಟ್ಟಿದರ ನಿ
ರ್ಧನಿಕನಾಗಿಯು ಮತ್ತೆ ಬಿಡದೇ ದ್ಯೂತದುವ್ರ್ಯಸನ
ಎನಲು ಶಕುನಿಯು ಜರೆದು ತಾನೇ
ಧನವಲಾ ಸಾಕೊಂದು ಹಲಗೆಯೊ
ಳೆನಗೆ ಜಯವೀ ದಾಯವೆಂದೊಡ್ಡಿದನು ಜನನಾಥ ॥24॥

೦೨೫ ಹೇಳಲೇನದನವರು ರಚಿಸಿದ ...{Loading}...

ಹೇಳಲೇನದನವರು ರಚಿಸಿದ
ಬೇಳುವೆಯನಾ ಶಕುನಿಯೊಡ್ಡಿದ
ಕಾಲು ಕುಣಿಕೆಯೊಳಾರು ಬೀಳರು ನೃಪತಿ ನಿಮಿಷದಲಿ
ಬೀಳುಗೊಟ್ಟನು ತನ್ನನಾ ಜನ
ಜಾಲವಿದ್ದುದು ಬಿಗಿದ ಬೆರಗಿನೊ
ಳಾಲಿಸುವುರೇ ಜೀಯ ಪಣವೇನೆಂದನಾ ಶಕುನಿ ॥25॥

೦೨೬ ಎಲವೊ ಸೌಬಲ ...{Loading}...

ಎಲವೊ ಸೌಬಲ ಸಾಕಿದೊಂದೇ
ಹಲಗೆ ಸರ್ವಸ್ವಾಪಹಾರವ
ನಿಳುಹುವೆನು ನೀಲಾಳಕಿಯನೊಡ್ಡುವೆನು ಬಾಲಕಿಯ
ಉಳಿದ ಧನವೆಮ್ಮೈವರಿಗೆ ನಿ
ಷ್ಖಲಿತವಿದು ಹೂಡೆನಲು ಹರುಷದ
ಲಳಿಯ ಚೌಪಟಮಲ್ಲ ಸಾರಿಯ ಸಾಲ ಜೋಡಿಸಿದ ॥26॥

೦೨೭ ಆಡಿದನು ಯಮಸೂನು ...{Loading}...

ಆಡಿದನು ಯಮಸೂನು ಮಿಗೆ ಹೋ
ಗಾಡಿದನು ಮನುಮಥನ ಖಾಡಾ
ಖಾಡಿ ಖಾತಿಯಕಟ ಮದನನ ಮಂತ್ರದೇವತೆಯ
ಕೂಡೆ ತಿವಿದನು ಕಟ್ಟಿದನು ಕಳಿ
ದೋಡಿಸಿದ ಸಾರಿಗಳ ಸೋಲದ
ಖೋಡಿಯನು ಚಿತ್ರಿಸಿದನರಸನು ಚಿತ್ತಭಿತ್ತಿಯಲಿ ॥27॥

೦೨೮ ಬೆರಗು ಬೆಳೆದುದು ...{Loading}...

ಬೆರಗು ಬೆಳೆದುದು ಮನದ ಮಿಡುಕಿನ
ಮರುಕ ಮುಂದಲೆಗೊಟ್ಟುದರಿವಿನ
ಸೆರಗು ಹಾರಿತು ಲಜ್ಜೆ ಬೆಳಗಿತು ಬಿಟ್ಟ ಬೀದಿಯಲಿ
ಉರುಬಿತಪದೆಸೆ ರಾಜ್ಯಲಕ್ಷ್ಮಿಯ
ತುರುಬು ಕೈದೊಳಸಾಯ್ತು ಹಗೆಗಾ
ನರಿಯೆನರಸನ ವಿರಸ ಚೇತೋಭಾವ ಭಂಗಿಗಳ ॥28॥

೦೨೯ ಮೊಳೆನಗೆಯ ಕಟಕಿಗಳ ...{Loading}...

ಮೊಳೆನಗೆಯ ಕಟಕಿಗಳ ಹದಿರಿನ
ಹಳಿವುಗಳ ಸನ್ನೆಗಳ ಸವಿಬೈ
ಗುಳಿನ ಜಾಣಿನನೋಟಗಳ ಜೊತ್ತಿನ ನವಾಯಿಗಳ
ಒಳದೆಗಹಿನುಬ್ಬುಗಳ ಮೀಸೆಯೊ
ಳಿಳಿವ ಬೆರಳ್ಗಳ ಕರ್ಣ ಸೈಂಧವ
ಖಳತಿಲಕ ದುಶ್ಶಾಸನಾದಿಗಳಿದ್ದರೀಚೆಯಲಿ ॥29॥

೦೩೦ ಕಳಕಳದ ಕನ್ದೆರವೆಗಳ ...{Loading}...

ಕಳಕಳದ ಕಂದೆರವೆಗಳ ಕುರು
ಕುಲದ ನಿರ್ಮೂಲನದ ನಿಶ್ಚಯ
ದೊಳಗುವರಿದಾಲೋಚನೆಯ ನಿದ್ರ್ರವದ ತಾಳಿಗೆಯ
ತಳಿತ ಮೋನದ ಬೀತ ಹರುಷದ
ಜಲದ ನಯನದಲಿದ್ದರಾ ವಿ
ಹ್ವಲರು ಭೀಷ್ಮ ವಿಕರ್ಣ ವಿದುರ ದ್ರೋಣ ಗೌತಮರು ॥30॥

೦೩೧ ಇಟ್ಟ ಮೂಗಿನ ...{Loading}...

ಇಟ್ಟ ಮೂಗಿನ ಬೆರಳ ನೆಲದಲಿ
ನಟ್ಟ ದೃಷ್ಟಿಯ ಕಳವು ಜೂಜಿನ
ದಿಟ್ಟರಾಟಕೆ ಬಲಿದ ಬೆರಗಿನ ಬಿಗಿದ ಖಾತಿಗಳ
ತಟ್ಟಿಸುವ ರಿಪುವರ್ಗ ಶಿಖಿಯಲಿ
ಸುಟ್ಟ ಕರಣ ಚತುಷ್ಟಯದ ಜಗ
ಜಟ್ಟಿಗಳು ಭೀಮಾರ್ಜುನಾದಿಗಳಿರ್ದರೀಚೆಯಲಿ ॥31॥

೦೩೨ ಹಾಸ ಗರ್ವದ ...{Loading}...

ಹಾಸ ಗರ್ವದ ಮೋನದಲಿ ಸಂ
ತೋಷ ಗರ್ವದ ದುಗುಡದಲಿ ಸುವಿ
ಳಾಸ ಗರ್ವದ ಖೇದದಲಿ ಮದಗರ್ವ ಚಿಂತೆಯಲಿ
ವೈಸಿಕದ ಕಣಿ ಕುಟಿಲ ಮಂತ್ರದ
ಮೀಸಲಳಿಯದ ಕುಹಕ ವಿದ್ಯಾ
ವಾಸಗೃಹ ಧೃತರಾಷ್ಟ್ರನಿದ್ದನು ವಿಕೃತ ಭಾವದಲಿ ॥32॥

೦೩೩ ಜನಪತಿಯ ಜಾಡ್ಯವನು ...{Loading}...

ಜನಪತಿಯ ಜಾಡ್ಯವನು ಭೀಮಾ
ರ್ಜುನರ ಸೈರಣೆಗಳನು ದುರ್ಯೋ
ಧನನ ದುಶ್ಚೇಷ್ಟೆಯನು ಶಕುನಿಯ ಸಾರ ಕೃತ್ರಿಮವ
ತನತನಗೆ ಕಂಡರು ಮಹೀಸುರ
ಜನಪ ವೈಶ್ಯ ಚತುರ್ಥರುಕ್ಕಿದ
ಮನದಳಲಿನಲಿ ಬೈದರಚ್ಯುತ ಹರ ಚತುರ್ಮುಖರ ॥33॥

೦೩೪ ನ್ಯಾಯವೆಮ್ಮದು ಮುನ್ನ ...{Loading}...

ನ್ಯಾಯವೆಮ್ಮದು ಮುನ್ನ ಸೋತಿರಿ
ಜೀಯ ನಿಮ್ಮೊಡಹುಟ್ಟಿದರು ಸಹಿ
ತಾಯತಾಕ್ಷಿಯ ಬಳಿಕ ಸೋತಿರಿ ಬಲುಹ ಮಾಡೆವೆಲೆ
ರಾಯನೊಲಿದುದ ಮಾಡಲಾವ
ನ್ಯಾಯವರ್ತಿಗಳಲ್ಲಲೇ ಬೆಸ
ಸಾ ಯುಧಿಷ್ಠಿರಯೆನುತ ಕೈಗಳ ಮುಗಿದನಾ ಶಕುನಿ ॥34॥

೦೩೫ ಗೆಲಿದು ಕೊಟ್ಟೆನು ...{Loading}...

ಗೆಲಿದು ಕೊಟ್ಟೆನು ಸಕಲ ಚಾತು
ರ್ಬಲವನಾ ಭಂಡಾರ ಸಹಿತ
ಗ್ಗಳೆಯರೈವರ ಕಮಲಮುಖಿಯನು ರಾಜ್ಯ ಸಿರಿಸಹಿತ
ಕಲಶವಿಟ್ಟೆನು ಕೊಟ್ಟ ಭಾಷೆಗೆ
ಎಲೆ ಸುಯೋಧನಯೆಂದು ನಯನಾಂ
ಗುಲಿಯ ಸಂಕೇತದಲಿ ಸನ್ನೆಯ ಮಾಡಿದನು ಶಕುನಿ ॥35॥

೦೩೬ ವಿದುರ ಬಾ ...{Loading}...

ವಿದುರ ಬಾ ನಮ್ಮಾಕೆಯಾ ದ್ರೌ
ಪದಿಯ ಕರೆ ಬೆಸಗೊಂಬೆ ತೊತ್ತಿರ
ಸದನದಿಚ್ಛೆಯೊ ರಾಣಿವಾಸದ ಮನೆಯಪೇಕ್ಷಿತವೋ
ಬೆದರಬೇಡಿನ್ನಬುಜಮುಖಿಗಾ
ವುದು ಮನೋರಥವೆಮ್ಮೊಳುಂಟೆಂ
ಬುದು ಲತಾಂಗಿಯ ಕರೆವುದೆಂದನು ಕೌರವರ ರಾಯ ॥36॥

೦೩೭ ಸಿಡಿಲ ಪೊಟ್ಟಣಗಟ್ಟಿ ...{Loading}...

ಸಿಡಿಲ ಪೊಟ್ಟಣಗಟ್ಟಿ ಸೇಕವ
ಕೊಡುವರೇ ಹರನೇತ್ರ ವಹ್ನಿಯೊ
ಳಡಬಳವ ಸುಡಬಗೆದಲಾ ಮರುಳೇ ಮಹೀಪತಿಯೆ
ಹೆಡೆತಲೆಯ ತುರಿಸುವರೆ ಹಾವಿನ
ಹೆಡೆಯೊಳಕಟಾ ಪಾಂಡುಪುತ್ರರ
ಮಡದಿ ತೊತ್ತಹಳೇ ಶಿವಾ ಎಂದಳಲಿದನು ವಿದುರ ॥37॥

೦೩೮ ಕಾಳಕೂಟದ ತೊರೆಗಳಲಿ ...{Loading}...

ಕಾಳಕೂಟದ ತೊರೆಗಳಲಿ ಜಲ
ಕೇಳಿಯೇ ಕಾಲಾಂತಕನ ದಂ
ಷ್ಟ್ರಾಳಿಯಲಿ ನವಿಲುಯ್ಯಲೆಯ ನೀವಾಡಲಾಪಿರಲೆ
ಕಾಲರುದ್ರನ ಲಳಿಯ ನಾಟ್ಯದ
ಕೇಳಿಕೆಗೆ ನೀವರ್ತಿಕಾರರೆ
ಹೋಲದೋ ಶಿವಯೆನುತ ಕಂಬನಿದುಂಬಿದನು ವಿದುರ ॥38॥

೦೩೯ ಬಡಗಲುತ್ತರಕುರು ನರೇನ್ದ್ರರ ...{Loading}...

ಬಡಗಲುತ್ತರಕುರು ನರೇಂದ್ರರ
ನಡುಗಿಸಿದರುದಯಾದ್ರಿ ತನಕವೆ
ನಡೆದು ಮುರಿದರು ಮೂಡಣರಸುಗಳತುಳ ಭುಜಬಲರ
ಪಡುವಲಗಣಿತ ಯವನ ತೆಂಕಲು
ಗಡೆ ವಿಭೀಷಣನೀ ಮಹೀಶರ
ಬಡಿದ ಪಾಂಡವರರಸಿ ತೊತ್ತಹಳೇ ಶಿವಾಯೆಂದ ॥39॥

೦೪೦ ತಿರುವ ಕೊರಳಲಿ ...{Loading}...

ತಿರುವ ಕೊರಳಲಿ ತೊಡಿಸಲಾರದೆ
ತೆರಳಿದರು ಚತುರಂಗ ಪೃಥ್ವೀ
ಶ್ವರರು ಮಾಗಧ ಚೈದ್ಯ ಮೊದಲಾದತುಲ ಭುಜಬಲರು
ತಿರುವನೇರಿಸಿ ಧನುವನುಗಿದ
ಬ್ಬರಿಸಿ ಗಗನದ ಯಂತ್ರಮತ್ಸ್ಯವ
ಮುರಿದ ಪಾಂಡವರರಸಿ ತೊತ್ತಹಳೇ ಶಿವಾಯೆಂದ ॥40॥

೦೪೧ ಬಕನ ಮುರಿದರು ...{Loading}...

ಬಕನ ಮುರಿದರು ವನದಲಿ ಹಿಡಿಂ
ಬಕನ ಹಣಿದರು ಮಾಗಧನ ಸು
ಪ್ರಕಟಬಲನಂಬುಜದ ನಾಳವನಾನೆ ಕೀಳ್ವಂತೆ
ಸಕಲಜನ ನೃಪರರಿಯೆ ಸೀಳಿದ
ರಕಟ ಮಾರಿಯ ಬೇಟವೇ ಪಾ
ತಕವಲಾ ಪಾಂಚಾಲೆ ತೊತ್ತಹಳೆ ಶಿವಾಯೆಂದ ॥41॥

೦೪೨ ಸೋಲಿಸಿದೆ ನೀನೀಗಲೀ ...{Loading}...

ಸೋಲಿಸಿದೆ ನೀನೀಗಲೀ ನರ
ಪಾಲರನು ಜೂಜಿನಲಿ ಮೇಲಣ
ಕಾಳಗದ ಕಳನೊಳಗೆ ಕವಿತಹ ಕೋಲ ತೋಹಿನಲಿ
ಸೋಲವೊಂದಕೆ ನೂರು ನೂರರ
ಮೇಲೆ ಸಾವಿರ ಸಾವಿರದ ಮೈ
ಸಾಲ ಲಕ್ಷವನಂತವಾಗಿಯೆ ತೆಗೆವರವರೆಂದೆ ॥42॥

೦೪೩ ಎಳೆದು ತರಿಸಾ ...{Loading}...

ಎಳೆದು ತರಿಸಾ ದ್ರೌಪದಿಯ ನೀ
ಕಳಕಳಕೆ ಕೈಗೊಟ್ಟವೋಲ
ಸ್ಖಲಿತರಿಹರಕ್ಷಮತೆಯಲಿ ತತ್ಸಮಯ ಪರಿಯಂತ
ಬಳಿಕ ನೂರ್ವರ ಸತಿಯರಕ್ಕೆಯ
ಕಳವಳದ ಬಿಡುಮುಡಿಯ ಬಸುರಿನ
ತಳದ ಬಿರುಪೊಯ್ಲುಗಳ ಭಂಗವ ಕಾಂಬರಿವರೆಂದ ॥43॥

೦೪೪ ಇವನವರ ಬಹಿರಙ್ಗ ...{Loading}...

ಇವನವರ ಬಹಿರಂಗ ಜೀವ
ವ್ಯವಹರಣೆಯಾತನು ವೃಥಾ ತಾ
ನಿವನ ಕೆಣಕಿದೆನಕಟ ಬೋಧಭ್ರಾಂತಿ ಬಾಹಿರನ
ಇವನಿರಲಿ ಬಾ ಪ್ರಾತಿಕಾಮಿಕ
ಯುವತಿಯನು ಕರೆ ಹೋಗು ನೀನೆನ
ಲವ ಹಸಾದವ ಹಾಯ್ಕಿ ಬಂದನು ದೇವಿಯರಮನೆಗೆ ॥44॥

೦೪೫ ಬನ್ದು ಬಾಗಿಲ ...{Loading}...

ಬಂದು ಬಾಗಿಲ ಕಾಹಿಗಳ ಕರೆ
ದೆಂದನರಸಿಗೆ ಬಿನ್ನವಿಸಿ ತಾ
ಬಂದ ಹದನನು ಕಾರ್ಯವುಂಟೆನೆ ಹಲವು ಬಾಗಿಲಲಿ
ಬಂದುದಲ್ಲಿಯದಲ್ಲಿಗರುಹಿಸ
ಲಿಂದುಮುಖಿ ಕೇಳಿದಳು ಬರ ಹೇ
ಳೆಂದರಾತನ ಹೊಗಿಸಿದರು ಹೊಕ್ಕನು ಸತೀಸಭೆಯ ॥45॥

೦೪೬ ಹೊಳೆವ ಕಙ್ಗಳ ...{Loading}...

ಹೊಳೆವ ಕಂಗಳ ಕಾಂತಿಗಳ ಥಳ
ಥಳಿಪ ವದನಪ್ರಭೆಯ ರತ್ನಾ
ವಳಿಯ ಬಹುವಿಧ ರಶ್ಮಿಗಳ ಲಾವಣ್ಯ ಲಹರಿಗಳ
ಎಳೆನಗೆಯ ಸುಲಿಪಲ್ಲ ಮುಕ್ತಾ
ವಳಿಯ ನಖ ದೀಧಿತಿಯ ಬೆಳಗಿನ
ಬಳಗವೆನೆ ಬಾಲಕಿಯರಿದ್ದರು ಸತಿಯ ಬಳಸಿನಲಿ ॥46॥

೦೪೭ ಗಿಳಿಯ ಮೆಲು ...{Loading}...

ಗಿಳಿಯ ಮೆಲು ನುಡಿಗಳ ವಿನೋದದಿ
ಕೆಲರು ವೀಣಾಧ್ವನಿಯ ರಹಿಯಲಿ
ಕೆಲರು ಸರಸ ಸುಗಂಧ ಸಂಗೀತದ ಸಮಾಧಿಯಲಿ
ಕೆಲರು ನೆತ್ತದಲಮಳ ಮುಕ್ತಾ
ವಳಿಯ ಚೆಲುವಿನ ಚದುರೆಯರು ಕಂ
ಗೊಳಿಸಿತಬಲೆಯ ಮಣಿಯ ಮಂಚದ ಸುತ್ತುವಳೆಯದಲಿ ॥47॥

೦೪೮ ಸಕಲ ಶಕ್ತಿಪರೀತ ...{Loading}...

ಸಕಲ ಶಕ್ತಿಪರೀತ ವಿಮಳಾಂ
ಬಿಕೆಯವೋಲ್ ವರಮಂತ್ರ ದೇವೀ
ನಿಕರ ಮಧ್ಯದಿ ಶೋಭಿಸುವ ಸಾವಿತ್ರಿಯಂದದಲಿ
ವಿಕಟ ರಶ್ಮಿ ನಿಬದ್ಧ ರತ್ನ
ಪ್ರಕರ ಮಧ್ಯದ ಕೌಸ್ತುಭದವೊಲ್
ಚಕಿತ ಬಾಲಮೃಗಾಕ್ಷಿ ಮೆರೆದಳು ಯುವತಿ ಮಧ್ಯದಲಿ ॥48॥

೦೪೯ ಸುತ್ತಲೆಸೆಯೆ ವಿಲಾಸಿನೀಜನ ...{Loading}...

ಸುತ್ತಲೆಸೆಯೆ ವಿಲಾಸಿನೀಜನ
ಹತ್ತು ಸಾವಿರ ನಡುವೆ ಕಂಡನು
ಮತ್ತಕಾಶಿನಿಯನು ಪತಿವ್ರತೆಯರ ಶಿರೋಮಣಿಯ
ಹತ್ತಿರೈತರಲಂಜಿಸಿದನು ತ
ನ್ನುತ್ತಮಾಂಗಕೆ ಕರಯುಗವ ಚಾ
ಚುತ್ತ ಬಿನ್ನಹ ಮಾಡಿದನು ಪಾಂಚಾಲ ನಂದನೆಗೆ ॥49॥

೦೫೦ ತಾಯೆ ಬಿನ್ನಹವಿನ್ದು ...{Loading}...

ತಾಯೆ ಬಿನ್ನಹವಿಂದು ನಿಮ್ಮಯ
ರಾಯ ಸೋತನು ಜೂಜಿನಲಿ ಕುರು
ರಾಯ ಗೆಲಿದನು ಕೋಶವನು ಗಜತುರಗ ರಥಸಹಿತ
ನೋಯಲಾಗದು ಹಲವು ಮಾತೇ
ನಾ ಯುಧಿಷ್ಠಿರನೃಪತಿ ಸೋತನು
ತಾಯೆ ಭೀಮಾರ್ಜುನ ನಕುಲ ಸಹದೇವ ನೀವ್ಸಹಿತ ॥50॥

೦೫೧ ಅರಳಿದಮ್ಬುಜ ವನಕೆ ...{Loading}...

ಅರಳಿದಂಬುಜ ವನಕೆ ಮಂಜಿನ
ಸರಿಯು ಸುರಿವಂದದಲಿ ಸುಗ್ಗಿಯ
ಸಿರಿಯ ಹೊಸ ಬೆಳುದಿಂಗಳನು ಬಲುಮುಗಿಲು ಕವಿದಂತೆ
ಚರನ ಬಿನ್ನಹಕರಸಿ ಮೊದಲಾ
ಗಿರೆ ಸಮಸ್ತ ಸಖೀಜನದ ಮುಖ
ಸರಸಿರುಹ ಬಾಡಿದವು ಮುಸುಕಿತು ಮೌನಮಯಜಲಧಿ ॥51॥

೦೫೨ ದೂತ ಹೇಳೈ ...{Loading}...

ದೂತ ಹೇಳೈ ತಂದೆ ಜೂಜನ
ಜಾತರಿಪುವಾಡಿದನೆ ಸೋತನೆ
ಕೈತವದ ಬಲೆಗಾರರವದಿರು ಶಕುನಿ ಕೌರವರು
ದ್ಯೂತದಲಿ ಮುನ್ನೇನನೊಡ್ಡಿದ
ಸೋತನೇನನು ಶಿವ ಶಿವಾ ನಿ
ರ್ಧೂತಕಿಲ್ಬಿಷನರಸನೆಂದಳು ದ್ರೌಪದಾದೇವಿ ॥52॥

೦೫೩ ತಾಗಿದುದಲಾ ನಾರದಾದ್ಯರ ...{Loading}...

ತಾಗಿದುದಲಾ ನಾರದಾದ್ಯರ
ನಾಗತವನರುಹಿದರು ಹಿಂದೆ ವಿ
ಯೋಗವಾಯಿತೆ ಲಕ್ಷ್ಮಿಗಿಂದ್ರ ಪ್ರಸ್ಥಪುರವರದ
ಹೋಗಲದು ಮುನ್ನೇನನೊಡ್ಡಿದ
ನೀಗಿದನು ಗಡ ತನ್ನನೆಂತಿದ
ರಾಗು ಹೋಗೇನೆಂದು ನುಡಿದಳು ಪ್ರಾತಿಕಾಮಿಕನ ॥53॥

೦೫೪ ಮೊದಲಲರ್ಥವ ಹೆಸರುಗೊಣ್ಡೊ ...{Loading}...

ಮೊದಲಲರ್ಥವ ಹೆಸರುಗೊಂಡೊ
ಡ್ಡಿದನು ಸೋತನು ಮರಳೆ ಮಗುಳೊ
ಡ್ಡಿದನು ಹೇರಾಳದಲಿ ಧನವನು ಕರಿಘಟಾವಳಿಯ
ಕುದುರೆ ರಥ ನಿಮ್ಮಡಿಯ ಮೇಳದ
ಸುದತಿಯರೊಡ್ಡಿದನು ಸೋತನು
ತುದಿಯಲನುಜರನೊಡ್ಡಿ ಸೋತನು ತಾಯೆ ಕೇಳ್ ಎಂದ ॥54॥

೦೫೫ ಬಳಿಕ ತನ್ನನೆ ...{Loading}...

ಬಳಿಕ ತನ್ನನೆ ಸೋತನಲ್ಲಿಂ
ಬಳಿಕ ನಿಮ್ಮಡಿಗಳಿಗೆ ಬಂದುದು
ಖಳರು ಶಕುನಿ ಸುಯೋಧನರು ನೀವಾಗಳೆಂದಿರಲೆ
ಅಳುಕಬೇಡಿನ್ನೇನು ಭೂಪತಿ
ತಿಲಕ ತನ್ನನು ಮುನ್ನ ಸೋಲಿದು
ಬಳಿಕ ತನ್ನನು ಸೋತನೇ ಹೇಳೆಂದಳಿಂದುಮುಖಿ ॥55॥

೦೫೬ ಅಹುದು ತನ್ನನು ...{Loading}...

ಅಹುದು ತನ್ನನು ಮುನ್ನ ಸೋತನು
ಮಹಿಳೆಗೊಡ್ಡಿದೆನೆಂದು ನಿಮ್ಮನು
ಮಹಿಪ ಸೋತನು ತಾಯೆ ಬಿಜಯಂಗೈಯ್ಯಬೇಹುದೆನೆ
ವಿಹಿತವಿದು ಮಾನುಷವೆ ದೈವದ
ಕುಹಕವೈಸಲೆ ಮಗನೆ ತಾನೇ
ಬಹೆನು ನೀ ಹೋಗೊಮ್ಮೆ ಹೇಳೀ ಮಾತನಾ ಸಭೆಗೆ ॥56॥

೦೫೭ ಮುನ್ನ ತನ್ನನು ...{Loading}...

ಮುನ್ನ ತನ್ನನು ಸೋತ ಬಳಿಕಿನೊ
ಳೆನ್ನ ಸೋತರೆ ಸಲುವುದೇ ಸಂ
ಪನ್ನ ವಿಮಲಜ್ಞಾನರರಿದೀ ಪ್ರಶ್ನೆಗುತ್ತರವ
ಎನ್ನ ಮೆಚ್ಚಿಸಿಕೊಡಲಿ ತಾ ಬಹೆ
ನೆನ್ನು ಹೋಗೆನಲವನು ಭಯದಲಿ
ತನ್ನೊಳಗೆ ನಡುಗುತ್ತ ಬಂದನು ಕೌರವನ ಸಭೆಗೆ ॥57॥

೦೫೮ ಜೀಯ ದೇವಿಯರೆನ್ದ ...{Loading}...

ಜೀಯ ದೇವಿಯರೆಂದ ಮಾತಿದು
ರಾಯ ಮುನ್ನವೆ ತನ್ನ ಸೋತಬು
ಜಾಯತಾಕ್ಷಿಯ ಬಳಿಕ ಸೋತರೆ ಧರ್ಮಸೂಕ್ಷ್ಮದಲಿ
ರಾಯಸಭೆಯಲಿ ಹಿರಿಯರರಿದದ
ರಾಯತವನರುಹಿದರೆ ಬಹೆನೆಂ
ದಾ ಯುವತಿ ಬಿನ್ನಹವ ಮಾಡಿದಳೆಂದು ಕೈಮುಗಿದ ॥58॥

೦೫೯ ರಾಯ ಸೋತನು ...{Loading}...

ರಾಯ ಸೋತನು ತನ್ನ ನಾವ
ನ್ಯಾಯದಲಿ ತಹುದಿಲ್ಲ ತೊತ್ತಿರ
ಲಾಯದಲಿ ಕೂಡುವೆವು ಕರೆಯೆನಲಿವನು ಗರ ಹೊಡೆದು
ವಾಯುಸುತನಂಜಿಸುವನೆಂದೀ
ನಾಯಿ ಬೆದರಿದನಕಟ ದೂತನ
ಬಾಯ ನೋಡಾಯೆನುತ ಮಿಗೆ ಗರ್ಜಿಸಿದ ಕುರುರಾಯ ॥59॥

೦೬೦ ತಮ್ಮ ಬಾರೈ ...{Loading}...

ತಮ್ಮ ಬಾರೈ ಹೋಗು ದಿಟ ನೀ
ನಮ್ಮುವರೆ ಹಿಡಿದೆಳೆದು ತಾ ನೃಪ
ರೆಮ್ಮ ಕಿಂಕರರೈವರಿವರಿದ್ದೇನ ಮಾಡುವರು
ತಮ್ಮ ಕರ್ಮವಿಪಾಕ ಗತಿ ನೆರೆ
ತಮ್ಮನೇ ಕೆಡಿಸುವುದು ಧರ್ಮ ವಿ
ದೆಮ್ಮ ಕಾರಣವಲ್ಲ ನೀ ಹೋಗೆಂದನಾ ಭೂಪ ॥60॥

೦೬೧ ಗಾಳಿಯಳ್ಳೆಯನಿರಿಯಲಗ್ನಿ ...{Loading}...

ಗಾಳಿಯಳ್ಳೆಯನಿರಿಯಲಗ್ನಿ
ಜ್ವಾಲೆಯಲಿ ತಟ್ಟಿಯವೆ ಕಡುಹಿನ
ಕಾಳಕೂಟದ ನದಿಗೆ ನಂಜಿನ ಹೊನಲು ಬೆರೆಸಿದರೆ
ವಾಳೆಯವೆ ದುಶ್ಶಾಸನನು ಜಗ
ದೂಳಿಗದ ದುರುದುಂಬಿ ಕುರುಪತಿ
ಮೇಲೆ ನೇಮಿಸಲುಚಿತಗೈವನೆ ಭೂಪ ಕೇಳ್ ಎಂದ ॥61॥

೦೬೨ ಹರಿದನವ ಬೀದಿಯಲಿ ...{Loading}...

ಹರಿದನವ ಬೀದಿಯಲಿ ಬಿಡುದಲೆ
ವೆರೆಸಿ ಸತಿಯರಮನೆಯ ಬಾಗಿಲ
ಚರರು ತಡೆದರೆ ಮೆಟ್ಟಿದನು ತಿವಿದನು ಕಠಾರಿಯಲಿ
ತರುಣಿಯರು ಕಂಡಂಜಿ ಹೊಕ್ಕರು
ಸರಸಿಜಾಕ್ಷಿಯ ಮರೆಯನೀ ಖಳ
ನುರವಣಿಸಿದನು ರಾಹು ತಾರಾಧಿಪನ ತಗುಳ್ವಂತೆ ॥62॥

೦೬೩ ಬನ್ದನಿವನಬುಜಾಕ್ಷಿಯಿದಿರಲಿ ...{Loading}...

ಬಂದನಿವನಬುಜಾಕ್ಷಿಯಿದಿರಲಿ
ನಿಂದನೆಲೆಗೇ ಗರುವತನವಿದು
ಹಿಂದೆ ಸಲುವುದು ಸಲ್ಲದಿರು ಕುರುರಾಜ ಭವನದಲಿ
ಇಂದು ಮೆರೆ ನಡೆ ನಮ್ಮ ತೊತ್ತಿರ
ಮುಂದೆ ಮೆರೆ ನಡೆ ಮಂಚದಿಂದಿಳಿ
ಯೆಂದು ಜರೆದನು ಕೌರವಾನುಜನಾ ಮಹಾಸತಿಯ ॥63॥

೦೬೪ ಜನಪನನುಜನು ನೀನೆನಗೆ ...{Loading}...

ಜನಪನನುಜನು ನೀನೆನಗೆ ಮೈ
ದುನನಲೇ ತಪ್ಪೇನು ಯಮ ನಂ
ದನನು ಸೋಲಲಿ ನನ್ನ ಪ್ರಶ್ನೆಗೆ ಕೊಡಲಿ ಮರುಮಾತ
ಅನುಜ ಕೇಳೈ ಪುಷ್ಪವತಿ ತಾ
ನೆನಗೆ ರಾಜಸಭಾ ಪ್ರವೇಶವ
ದನುಚಿತವಲೇ ಹೇಳೆನಲು ಖಳರಾಯ ಖತಿಗೊಂಡ ॥64॥

೦೬೫ ಎಲ್ಲಿಯದು ದುಷ್ಪ್ರಶ್ನೆ ...{Loading}...

ಎಲ್ಲಿಯದು ದುಷ್ಪ್ರಶ್ನೆ ಮರು ಮಾ
ತೆಲ್ಲಿಯದು ನೀ ಪುಷ್ಪವತಿಯಾ
ಗಿಲ್ಲಿ ಫಲವತಿಯಾಗು ನಡೆ ಕುರುರಾಯಭವನದಲಿ
ಖುಲ್ಲರೈವರು ತಮ್ಮ ಸೋತರು
ಬಲ್ಲವಿಕೆಯುಚಿತವನು ಮೌಳಿಯ
ನಲ್ಲಿ ತೋರಾಯೆನುತ ತಪ್ಪಿದನಹಹ ಸಿರಿಮುಡಿಗೆ ॥65॥

೦೬೬ ಆ ಮಹೀಶಕ್ರತುವರದೊಳು ...{Loading}...

ಆ ಮಹೀಶಕ್ರತುವರದೊಳು
ದ್ದಾಮ ಮುನಿಜನರಚಿತ ಮಂತ್ರ
ಸ್ತೋಮ ಪುಷ್ಕಲ ಪೂತ ಪುಣ್ಯಜಲಾಭಿಷೇಚನದ
ಶ್ರೀಮುಡಿಗೆ ಕೈಯಿಕ್ಕಿದನು ವರ
ಕಾಮಿನೀ ನಿಕುರುಂಬವಕಟಕ
ಟಾ ಮಹಾಸತಿ ಶಿವ ಶಿವಾಯೆಂದೊದರಿತಲ್ಲಲ್ಲಿ ॥66॥

೦೬೭ ಕೆದರಿದವು ಸೂಸಕದ ...{Loading}...

ಕೆದರಿದವು ಸೂಸಕದ ಮುತ್ತುಗ
ಳುದುರಿದವು ಸೀಮಂತ ಮಣಿಗಳ
ಹೊದರು ಮುರಿದವು ಕರ್ಣಪೂರದ ರತ್ನದೋಲೆಗಳು
ಸುದತಿಯರು ಗೋಳಿಡುತ ಬರೆ ಮೆ
ಟ್ಟಿದನು ತಿವಿದನು ಕಾಲಲಡಬಿ
ದ್ದುದು ಸಖೀಜನವೆಳೆದು ಝಾಡಿಸಿ ಜರೆದು ಝೋಂಪಿಸಿದ ॥67॥

೦೬೮ ಮಣಿದ ತನುವಿನ ...{Loading}...

ಮಣಿದ ತನುವಿನ ವೇಗಗತಿಯಲಿ
ಝಣಝಣಿಪ ನೂಪುರದ ರವ ಕಂ
ಕಣದ ದನಿ ಕೇವಣದ ಹೊಂಗಿರುಗೆಜ್ಜೆಗಳ ರಭಸ
ಗಣಿಕೆಯರ ಕೆಳದಿಯರ ಹಾಹಾ
ರಣಿತಕಿವು ನೆರವಾದವಾ ಪ
ಟ್ಟಣವ ತುಂಬಿತು ಶೋಕವದನೇನೆಂಬೆನದ್ಭುತವ ॥68॥

೦೬೯ ಹಡಪಗಿತಿಯರು ಸೀಗುರಿಯ ...{Loading}...

ಹಡಪಗಿತಿಯರು ಸೀಗುರಿಯ ಕ
ನ್ನಡಿಯವರು ಮೇಳದ ವಿನೋದದ
ನುಡಿನಗೆಯ ಸಖಿಯರು ಪಸಾಯ್ತೆಯರಾಪ್ತ ದಾಸಿಯರು
ಒಡನೆ ಬಂದರು ಕಂಬನಿಯ ಬಿಡು
ಮುಡಿಯ ಹಾಹಾರವದ ರಭಸದ
ನಡೆಯಲಖಿಳ ವಿಲಾಸಿನಿಯರು ಸಹಸ್ರ ಸಂಖ್ಯೆಯಲಿ ॥69॥

೦೭೦ ನಗೆಮೊಗವನೊಮ್ಮೆಯು ಪಯೋಧರ ...{Loading}...

ನಗೆಮೊಗವನೊಮ್ಮೆಯು ಪಯೋಧರ
ಯುಗಳ ನೋಡುವ ಸಖ್ಯದಲಿ ದೃಗು
ಯುಗಳ ಜಲಬಿಂದುಗಳಿಗಾ ಜಲಬಿಂದು ಸುರಿವಂತೆ
ಒಗುವ ಖಂಡಿತ ಹಾರ ಮುಕ್ತಾ
ಳಿಗಳು ಮೆರೆದವು ಮಾನಿನಿಯರು
ಬ್ಬೆಗದ ರೋದನ ರೌರವದೊಳೈತಂದಳಿಂದುಮುಖಿ ॥70॥

೦೭೧ ಬೆದರುಗಙ್ಗಳ ಬಿಟ್ಟ ...{Loading}...

ಬೆದರುಗಂಗಳ ಬಿಟ್ಟ ಮಂಡೆಯ
ಹುದಿದ ಹಾಹಾರವದ ತೊಡಕಿದ
ಪದಯುಗದ ಮೇಲುದಿನ ಬೀದಿಯ ಧೂಳಿ ಧೂಸರದ
ವದನಕಮಲದ ಖಳನ ವಾಮಾಂ
ಗದಲಿ ಬಾಗಿದ ತನುಲತೆಯ ವರ
ಸುದತಿ ಬಂದಳು ರಾಜಸಭೆಗೆ ನೃಪಾಲ ಕೇಳ್ ಎಂದ ॥71॥

೦೭೨ ಅಹಹ ಪಾಣ್ಡವ ...{Loading}...

ಅಹಹ ಪಾಂಡವ ರಾಯ ಪಟ್ಟದ
ಮಹಿಳೆಗೀ ವಿಧಿಯೇ ಮಹಾಕ್ರತು
ವಿಹಿತ ಮಂತ್ರ ಜಲಾಭಿಷಿಕ್ತ ಕಚಾಗ್ರಕಿದು ವಿಧಿಯೆ
ಮಿಹಿರ ಬಿಂಬವ ಕಾಣದೀನೃಪ
ಮಹಿಳೆಗಿದು ವಿಧಿಯೇ ವಿಧಾತನ
ಕುಹಕವೈಸಲೆ ಶಿವ ಶಿವಾಯೆಂದರು ಸಭಾಜನರು ॥72॥

೦೭೩ ತುಳುಕಿದವು ಕಮ್ಬನಿಗಳಾ ...{Loading}...

ತುಳುಕಿದವು ಕಂಬನಿಗಳಾ ಸಭೆ
ಯೊಳಗೆ ದುಶ್ಯಾಸನ ಸುಯೋಧನ
ಖಳ ಶಿರೋಮಣಿ ಶಕುನಿ ಕರ್ಣ ಜಯದ್ರಥಾದ್ಯರಿಗೆ
ತಳಿತುದದ್ಭುತಹರ್ಷ ಮುಖ ಮಂ
ಡಲಕೆ ಸೀರೆಯನವುಚಿ ನಯನೋ
ದ್ಗಳಿತ ಜಲಧಾರೆಯಲಿ ನೆನೆದುದು ಸಭೆ ವಿಷಾದದಲಿ ॥73॥

೦೭೪ ವ್ಯಾಕುಲವನಿದ ಕಾಮ್ಬ ...{Loading}...

ವ್ಯಾಕುಲವನಿದ ಕಾಂಬ ಕಣ್ಣುಗ
ಳೇಕೆ ರಾಜಕುಮಾರಿಯೀಕೆಯ
ಶೋಕ ರಸವನು ಕುಡಿವ ಕರ್ಣದ್ವಯವಿದೇಕೆಮಗೆ
ಏಕೆ ವಿಧಿ ನಿರ್ಮಿಸಿದನೋ ನಾ
ವೇಕೆ ಸಪ್ರಾಣರೊ ಶಿವಾಯೆಂ
ದಾ ಕುಠಾರರ ಬೈದುದಾ ಸಭೆಯಲಿ ಬುಧವ್ರಾತ ॥74॥

೦೭೫ ವನಜಮುಖಿಯಕ್ಕೆಯನು ದುಶ್ಶಾ ...{Loading}...

ವನಜಮುಖಿಯಕ್ಕೆಯನು ದುಶ್ಶಾ
ಸನನ ದುರ್ನೀತಿಯನು ದುರ್ಯೋ
ಧನನ ದುಶ್ಚೇಷ್ಟೆಯನು ಕಂಡೀ ಭೀಮ ಫಲುಗುಣರು
ಮನದೊಳಗೆ ಕೌರವನ ಕರುಳನು
ತನಿ ರಕುತದಲಿ ಕುದಿಸಿದರು ವಾ
ಜನಿಕ ಕರ್ಮಕ್ರಿಯೆಗೆ ನೆನೆವುದನರಿದನಾ ಭೂಪ ॥75॥

೦೭೬ ಹುಬ್ಬಿನಲಿ ನಿಲಿಸಿದನು ...{Loading}...

ಹುಬ್ಬಿನಲಿ ನಿಲಿಸಿದನು ಪವನಜ
ನುಬ್ಬಟೆಯನರ್ಜುನನ ವಿಕೃತಿಯ
ನಿಬ್ಬರಾಲಾಪವನು ಧರ್ಮರಹಸ್ಯ ನಿಷ್ಠೆಯಲಿ
ಹಬ್ಬಿದುದು ಭೀಷ್ಮಂಗೆ ಶೋಕದ
ಮಬ್ಬು ಗುರು ಗೌತಮರು ವಿದುರನು
ಸರ್ಬ ಖೇದಾಂಬುಧಿಯೊಳದ್ದರು ಭೂಪ ಕೇಳ್ ಎಂದ ॥76॥

೦೭೭ ಅರಸಕೇಳೈ ಬಳಿಕ ...{Loading}...

ಅರಸಕೇಳೈ ಬಳಿಕ ಹಸ್ತಿನ
ಪುರದೊಳಾಯ್ತೀ ವಾರ್ತೆ ಬಳಿಕೀ
ಪುರದ ಬಹಿರೋದ್ಯಾನ ವೀಧಿಗಳೊಳಗೆ ಹರಹಿನಲಿ
ಅರಸಿಯರು ಸೌಭದ್ರನವರೈ
ವರ ಕುಮಾರರು ಮಂತ್ರಿಗಳು ಮು
ಖ್ಯರು ಪಸಾಯ್ತರು ಕೇಳಿದರು ಪಾಂಡವ ಪರಾಜಯವ ॥77॥

೦೭೮ ಬನ್ದರಿದಿರೊಳು ಕೌರವರ ...{Loading}...

ಬಂದರಿದಿರೊಳು ಕೌರವರ ಕಡೆ
ನಂದನರ ಕಡೆ ಯಾವುದೆನೆ ಸಾ
ವಂದದಲಿ ಹೊಯ್ದಾಡಿ ಹಿಡಿವೆವು ಸುರರ ಸೂಳೆಯರ
ಎಂದು ತಮ್ಮೊಳು ನೆರೆದು ಸೇನಾ
ವೃಂದ ಸಜ್ಜೋಡಿನಲಿ ಕಾಳಗ
ಕಂದು ಮೋಹರಿಸಿದರು ಹಸ್ತಿನಪುರದ ಬಾಹೆಯಲಿ ॥78॥

೦೭೯ ಇತ್ತಲಬಲೆಯ ವಿಧಿಯ ...{Loading}...

ಇತ್ತಲಬಲೆಯ ವಿಧಿಯ ಕೇಳತಿ
ಮತ್ತನೈ ಧೃತರಾಷ್ಟ್ರ ಸುತನೀ
ಮತ್ತಗಜಗಾಮಿನಿಯ ಬಿಡಿಸಿದನವನ ಕೈಯಿಂದ
ನೆತ್ತ ಸೋತುದು ನಿನ್ನನೊಡ್ಡಿ ನೃ
ಪೋತ್ತಮನು ಸಲೆ ಮಾರ ಮಾರಿದ
ನತ್ತಡೇನಹುದೆಲೆಗೆ ತೊತ್ತಿರ ಹಿಂಡ ಹೊಗುಯೆಂದ ॥79॥

೦೮೦ ಲಲಿತ ಬುದ್ಧಿಗಳೀಗ ...{Loading}...

ಲಲಿತ ಬುದ್ಧಿಗಳೀಗ ನೋಡಿರಿ
ಲಲನೆಯನು ಸತಿ ದಿಟ್ಟೆಯೆನ್ನದಿ
ರೆಲೆ ಸುಯೋಧನ ರಾಜಸಭೆಯಿದು ದೋಷರಹಿತವಲೆ
ಗೆಲುವಿದೆಂತುಟೊ ತನ್ನ ಸೋಲಿದು
ಬಳಿಕ ಸೋತರೆ ಧರ್ಮಗತಿಯನು
ತಿಳಿದು ಹೇಳಲಿ ತತ್ಸಭಾಸದರೆಂದಳಿಂದುಮುಖಿ ॥80॥

೦೮೧ ಹಿರಿಯರಿಲ್ಲದ ಸಭೆ ...{Loading}...

ಹಿರಿಯರಿಲ್ಲದ ಸಭೆ ಮನುಷ್ಯರ
ನೆರವಿಯದು ಸಭೆಯಲ್ಲ ಮೂರ್ಖರು
ಹಿರಿಯರಲ್ಲ ಯಥಾರ್ಥ ಭಾಷಣ ಭೀತಚೇತನರು
ಹಿರಿಯರಿದೆ ಸಾಮಾಜಿಕರು ಸ
ಚ್ಚರಿತರಿದೆಲಾ ಸ್ತ್ರೀಮತವನು
ತ್ತರಿಸಲಾಗದೆ ಧರ್ಮಶಾಸ್ತ್ರದೊಳೆಂದಳಿಂದುಮುಖಿ ॥81॥

೦೮೨ ಚಪಳೆ ಫಡ ...{Loading}...

ಚಪಳೆ ಫಡ ಹೋಗಿವಳು ಹಲಬರ
ನುಪಚರಿಸುವುದನರಿಯಲಾದುದು
ದ್ರುಪದನಂದನೆ ನಡೆ ವಿಳಾಸಿನಿಯರ ವಿಧಾನದಲಿ
ಕೃಪಣನೇ ಕುರುರಾಯ ನಿನಗಿ
ನ್ನಪದೆಸೆಯ ಹೊಲೆ ಹೋಯ್ತು ರಾಯನ
ವಿಪುಳ ವಿಭವವನನುಭವಿಸು ನಡೆಯೆಂದನಾ ಕರ್ಣ ॥82॥

೦೮೩ ಅಹುದೆಲೇ ಬಳಿಕೇನು ...{Loading}...

ಅಹುದೆಲೇ ಬಳಿಕೇನು ದಾಸ್ಯಕೆ
ವಿಹಿತವಾಯಿತು ನಿನ್ನ ತನುವಿನ
ಲಹ ಮನೋವ್ಯಥೆಯೇಕೆ ರಾಣೀವಾಸವೀಧಿಯಲಿ
ಮಹಿಳೆಯರ ಸಖ್ಯದಲಿ ಸೌಖ್ಯದ
ರಹಣಿಗೊಡಬಡು ವಾರಕದಲತಿ
ಬಹಳ ಭೂಷಣ ಭಾರದಲಿ ಮೆರೆಯೆಂದನಾ ಶಕುನಿ ॥83॥

೦೮೪ ವಾರಕದ ವಿವಿಧಾಭರಣ ...{Loading}...

ವಾರಕದ ವಿವಿಧಾಭರಣ ಶೃಂ
ಗಾರವಂತಿರಲೀಕೆಯಾಡಿದ
ಸಾರ ಭಾಷೆಗೆ ನೆನೆಯರೇ ನಿರ್ವಾಹ ಸಂಗತಿಯ
ಓರೆಪೋರೆಯೊಳಾಡಿ ಧರ್ಮದ
ಧಾರಣೆಯ ಧಟ್ಟಿಸುವದಿದು ಗಂ
ಭೀರರಿಗೆ ಗರುವವಾಯಿಯೇ ಸುಡಲೆಂದನಾ ಭಿಷ್ಮ ॥84॥

೦೮೫ ತುಟ್ಟಿಸಲಿ ಧನ ...{Loading}...

ತುಟ್ಟಿಸಲಿ ಧನ ಮಾನಗರ್ವದ
ಬೆಟ್ಟ ಮುರಿಯಲಿ ಜೀವವೊಡಲನು
ಬಿಟ್ಟು ಹಿಂಗಲಿ ಬಿಡೆನು ಸತ್ಯವನೆಂದು ಯಮಸೂನು
ನೆಟ್ಟನೇ ನಿಶ್ಚೈಸಿದುದನೊಡ
ಹುಟ್ಟಿದರು ಮನ್ನಿಸಿದರಲ್ಲದೆ
ಹುಟ್ಟಿ ಹೊಂದಲು ಗತಿಯಹುದೆ ನಿನಗೆಂದನಾ ಭೀಷ್ಮ ॥85॥

೦೮೬ ಅಳಿಯದನ್ತಿರೆ ಸತ್ಯಧರ್ಮದ ...{Loading}...

ಅಳಿಯದಂತಿರೆ ಸತ್ಯಧರ್ಮದ
ನೆಳಲು ನೆಗ್ಗದೆ ಕೀರ್ತಿವಧುವಿನ
ಸುಳಿವು ನೋಯದೆ ತಳಿರು ಬಾಡದೆ ಧೈರ್ಯ ಸುರಕುಜದ
ಹಳಿವಿಗಳುಕದೆ ವೈರಿವರ್ಗದ
ಕಳಕಳಕೆ ಮೈಗೊಡದೆ ನೃಪ ನಿ
ರ್ಮಳದಲಿದ್ದರೆ ನಿನಗೆ ಸದರವೆಯೆಂದನಾ ಭೀಷ್ಮ ॥86॥

೦೮೭ ಸೋತಬಳಿಕಿವರೆಮ್ಮ ವಶವ ...{Loading}...

ಸೋತಬಳಿಕಿವರೆಮ್ಮ ವಶವ
ಖ್ಯಾತಿಯಲಿ ನಾವ್ ನಡೆವರಲ್ಲ ವೃ
ಥಾತಿರೇಕದಿ ನೀವು ಘೂರ್ಮಿಸಲಂಜುವೆನೆ ನಿಮಗೆ
ಈ ತಳೋದರಿ ತೊತ್ತಿರಲಿ ಸಂ
ಘಾತವಾಗಲಿ ಸಾಕು ನಿಮ್ಮಯ
ಮಾತೆನುತ ಕುರುರಾಯ ಜರೆದನು ಭೀಷ್ಮ ಗುರು ಕೃಪರ ॥87॥

೦೮೮ ನೊನ್ದನೀ ಮಾತಿನಲಿ ...{Loading}...

ನೊಂದನೀ ಮಾತಿನಲಿ ಮಾರುತ
ನಂದನನು ಸಹದೇವನನು ಕರೆ
ದೆಂದನಗ್ನಿಯ ತಾ ಯುದಿಷ್ಠಿರ ನೃಪನ ತೋಳುಗಳ
ಮಂದಿ ನೋಡಲು ಸುಡುವೆನೇಳೇ
ಳೆಂದು ಜರೆದರೆ ಹಿಡಿದು ಮಾದ್ರೀ
ನಂದನನ ನಿಲಿಸಿದನು ಫಲಗುಣ ನುಡಿದನನಿಲಜನ ॥88॥

೦೮೯ ಏನಿದೇನೈ ಭೀಮ ...{Loading}...

ಏನಿದೇನೈ ಭೀಮ ನಿಲು ಯಮ
ಸೂನು ಶಿವ ಶಿವ ಗುರುವಲಾ ನಮ
ಗೀ ನಿತಂಬಿನಿಯಾದಿಯಾದ ಸಮಸ್ತ ವಸ್ತುಗಳು
ಈ ನರೇಂದ್ರಗೆ ಸರಿಯೆ ಕುಂತೀ
ಸೂನುವೇ ಪ್ರಾಣಾರ್ಥದಿಂದ ಸ
ಘಾನನೈ ನಮಗೀತನೇ ಗತಿಯೆಂದನಾ ಪಾರ್ಥ ॥89॥

೦೯೦ ಹಿಙ್ಗಿ ಹೋಗಲಿ ...{Loading}...

ಹಿಂಗಿ ಹೋಗಲಿ ತನುವನಸು ಸ
ಪ್ತಾಂಗ ಬೇಯಲಿ ಖೋಡಿ ಮನದಲಿ
ಹಿಂಗುವದೆ ಹರಹರ ಧನಂಜಯ ಕಾಕ ಬಳಸಿದೆಲ
ಅಂಗನೆಯ ಮೇಲೊಡ್ಡವೇ ಲಲಿ
ತಾಂಗಿಗೀ ವಿಧಿಯೇಕೆ ನಮಗೀ
ಭಂಗ ಸಾಲದೆ ಸುಡುವೆನಾದೊಡೆ ತನ್ನ ತೋಳುಗಳ ॥90॥

೦೯೧ ಈಯವಸ್ಥೆಗೆ ತನ್ದ ...{Loading}...

ಈಯವಸ್ಥೆಗೆ ತಂದ ಕೌರವ
ನಾಯಿಗಳ ನಿಟ್ಟೆಲುವ ಮುರಿದು ನ
ವಾಯಿಯಲಿ ಘಟ್ಟಿಸದೆ ಕೊಬ್ಬಿದ ತನ್ನ ತೋಳುಗಳ
ವಾಯುಸಖನಲಿ ಸುಡುವೆನೀಗಳೆ
ಬೀಯವಾಗಲಿ ದೇಹವಾಚಂ
ದ್ರಾಯತವೆ ಎಂದೊಡನೊಡನೆ ಮಿಡುಕಿದನು ಕಲಿಭೀಮ ॥91॥

೦೯೨ ಅಕಟ ಧರ್ಮಜ ...{Loading}...

ಅಕಟ ಧರ್ಮಜ ಭೀಮ ಫಲುಗುಣ
ನಕುಲ ಸಹದೇವಾದ್ಯರಿರ ಬಾ
ಲಕಿಯನೊಪ್ಪಿಸಿ ಕೊಟ್ಟಿರೇ ಮೃತ್ಯುವಿನ ತಾಳಿಗೆಗೆ
ವಿಕಳರಾದಿರೆ ನಿಲ್ಲಿ ನೀವೀ
ಗಕುಟಿಲರಲಾ ಭೀಷ್ಮ ಗುರು ಬಾ
ಹ್ಲಿಕ ಕೃಪಾದಿಗಳುತ್ತರವ ಕೊಡಿಯೆಂದಳಬುಜಾಕ್ಷಿ ॥92॥

೦೯೩ ಕಙ್ಗಳಿನ್ದನುಯೋಗ ನಿಜ ...{Loading}...

ಕಂಗಳಿಂದನುಯೋಗ ನಿಜ ಹ
ಸ್ತಾಂಗುಲಿಯೊಳುತ್ತರ ಲಸದ್ಭ್ರೂ
ಭಂಗದಲಿ ಸಂದೇಹ ಮುಖ ವಿಕೃತಿಯಲಿ ದುರ್ನೀತಿ
ಇಂಗಿತದಲಾಂಗಿಕದ ಭಾವಾ
ಭಂಗ ಪರಿಯನು ಯೋಗಯುಕ್ತ ನ
ಯಂಗಳಲಿ ತಿಳಿದುಸುರದಿರ್ದುದು ಸಭೆ ಸುಭೀತಿಯಲಿ ॥93॥

೦೯೪ ಅರಿದು ಮೌನವೊ ...{Loading}...

ಅರಿದು ಮೌನವೊ ಮೇಣು ಮಾನಿನಿ
ಯೊರಲುತಿರಲೆಂದಾದುಪೇಕ್ಷೆಯೊ
ಮುರಿದು ನುಡಿವುದಸಾಧ್ಯವೋ ಮೇಣಾವುದಿದರೊಳಗೆ
ಅರಿಯಿರೇ ಸಮವರ್ತಿದೂತನ
ಮುರುಕವನು ನೀವೇಕೆ ನಿಮ್ಮನು
ಮರೆದಿರೆಂದು ವಿಕರ್ಣ ಜರೆದನು ತತ್ಸಭಾಸದರ ॥94॥

೦೯೫ ಹುಸಿವಚನ ಪೌರುಷ್ಯ ...{Loading}...

ಹುಸಿವಚನ ಪೌರುಷ್ಯ ಲಲನಾ
ವಿಷಯ ಮೃಗತೃಷ್ಣಾ ಪಿಪಾಸಾ
ವ್ಯಸನಿ ಬಲ್ಲನೆ ಧರ್ಮತತ್ವರಹಸ್ಯನಿಶ್ಚಯವ
ಉಸುರಲಮ್ಮಿರೆ ವೈದಿಕದ ತನಿ
ರಸದ ಸವಿ ನಿಮಗಲ್ಲದಾರಿಗೆ
ಬಸಿದು ಬೀಳ್ತುದು ಭೀಷ್ಮಯೆಂದು ವಿಕರ್ಣ ಗರ್ಜಿಸಿದ ॥95॥

೦೯೬ ತನ್ನ ಸೋತಾಗಲೆ ...{Loading}...

ತನ್ನ ಸೋತಾಗಲೆ ಮಹೀಪತಿ
ಯನ್ಯನಾದನು ಸತಿಗೆ ತನ್ನಿಂ
ಮುನ್ನ ಸೋತರೆ ತನ್ನ ಧನವೈಸಲೆ ವಿಚಾರಿಸಲು
ಅನ್ಯನನ್ಯಳ ಸೋತ ಗಡ ತಾ
ತನ್ನ ಧನವೆಂದರಸ ಶಕುನಿಯ
ಬಿನ್ನಣಕೆ ಬೆಳ್ಳಾದನೆಂದು ವಿಕರ್ಣ ಖತಿಗೊಂಡ ॥96॥

೦೯೭ ಫಡ ವಿಕಾರವೆ ...{Loading}...

ಫಡ ವಿಕಾರವೆ ನಮ್ಮೊಡನೆ ಬಾ
ಯ್ಬಡಿಕತನವೇ ಕುರು ಮಹೀಪತಿ
ಯೊಡನೆ ಹುಟ್ಟಿದೆಯಾದ ಕಾರಣ ಬಿಟ್ಟೆವೀಸರಲಿ
ನುಡಿದರೇ ಭೀಷ್ಮಾದಿಗಳು ನೀ
ನೊಡಬಡಿಸಲೆಂತರಿವೆ ಧರ್ಮದ
ಕಡೆ ಮೊದಲ ಕೈವಾರ ನಿನಗೇಕೆಂದನಾ ಕರ್ಣ ॥97॥

೦೯೮ ಏಕಪತಿ ಬಹುಸತಿಯರೆಮ್ಬುದು ...{Loading}...

ಏಕಪತಿ ಬಹುಸತಿಯರೆಂಬುದು
ಲೋಕ ಪದ್ಧತಿಯಾದುದದು ತಾ
ನೇಕಸತಿ ಬಹುಪತಿಗಳಿದು ವೈದಿಕ ವಿರುದ್ಧವಲೆ
ಲೌಕಿಕವ್ಯವಹಿತದ ಕರ್ಮವ
ನೀ ಕುಮಾರ್ಗಿಗಳಲ್ಲಿ ಕಂಡೆವು
ನೀ ಕುರುವ್ರಜದೊಳಗೆ ಜನಿಸೆ ವಿಕರ್ಣ ಹೋಗೆಂದ ॥98॥

೦೯೯ ಅಹುದು ಕರ್ಣನ ...{Loading}...

ಅಹುದು ಕರ್ಣನ ನುಡಿ ವಿಕರ್ಣನು
ಬಹುವಚನ ಪಂಡಿತನು ಬಾಹಿರ
ನಹುದಲೇ ಕುರುರಾಜ ವಂಶದೊಳುದಿಸಿ ಫಲವೇನು
ಅಹಿತಹಿತ ವಿಜ್ಞಾನಿಯಲ್ಲದ
ಬೃಹದುದರ ಕಿಂಕರನ ನುಡಿ ಕಿಂ
ಗಹನವೇ ಕಲಿಕರ್ಣಯೆಂದನು ನಗುತ ಕುರುರಾಯ ॥99॥

೧೦೦ ಹಾರ ಪದಕ ...{Loading}...

ಹಾರ ಪದಕ ಕಿರೀಟ ಮಣಿ ಕೇ
ಯೂರ ಕರ್ಣಾಭರಣವೆಂಬಿವು
ಭಾರವಲ್ಲಾ ತೆಗೆಯ ಹೇಳ್ ದಾಕ್ಷಿಣ್ಯವೇನಿದಕೆ
ನಾರಿಗೀ ವಸ್ತ್ರಾಭರಣ ಶೃಂ
ಗಾರವೇಕಿನ್ನಿವನು ತೆಗೆ ಕೈ
ವಾರವಿದಕೇಕೆಂದು ದುಶ್ಶಾಸನಗೆ ನೇಮಿಸಿದ ॥100॥

೧೦೧ ತೆಗೆದು ಬಿಸುಟರು ...{Loading}...

ತೆಗೆದು ಬಿಸುಟರು ಹಾರ ಪದಕಾ
ದಿಗಳನಿವರೈವರು ದುಕೂಲವ
ನುಗಿದು ಹಾಯ್ಕಿದರಿದ್ದರಿವರೊಂದೊಂದು ವಸ್ತ್ರದಲಿ
ಹೊಗೆಮೊಗದ ಕಿಡಿಗಣ್ಣ ಕೆಮ್ಮೀ
ಸೆಗಳ ಗುಜುರಿನ ಜುಂಜು ಗೇಶದ
ವಿಗಡನೆದ್ದನು ಬಂದು ಹಿಡಿದನು ದ್ರೌಪದಿಯ ಸೆರಗ ॥101॥

೧೦೨ ಮುರುಹಿದರು ಮುಸುಡಗಳ ...{Loading}...

ಮುರುಹಿದರು ಮುಸುಡಗಳ ಮಿಗೆ ನೀ
ರೊರೆವ ಕಂಗಳಲಕಟಕಟ ನಿ
ಷ್ಠುರವಿದೇಕಪಕೀರ್ತಿಯೇಕನುಚಿತವಿದೇಕೆನುತ
ಕರಗಿದರು ಕಂದಿದರು ಮಮ್ಮಲ
ಮರುಗಿದರು ಭೀಷ್ಮಾದಿಗಳು ಜ
ರ್ಝರಿತರಾದರು ತಡೆಯಲಾರದೆ ಖಳನ ದುಷ್ಕೃತವ ॥102॥

೧೦೩ ಅಳುಕಿದನೆ ಸುಡಲವನ ...{Loading}...

ಅಳುಕಿದನೆ ಸುಡಲವನ ಮೇಲುದ
ಸೆಳೆದನುನ್ನತ ಕುಚವ ನಳಿತೋ
ಳ್ಗಳಲಿ ಮುಚ್ಚಿದಳಬಲೆ ಬೆಚ್ಚಿದಳವನ ನಿಷ್ಠುರಕೆ
ಕಳವಳಿಸಿದಳು ಬೆರಲಿನಲಿ ದೃಗು
ಜಲವ ಬಿದುರುತ ನೋಡಿದಳು ನೃಪ
ತಿಲಕನನು ಭೀಮಾರ್ಜುನರ ಮಾದ್ರೀಕುಮಾರಕರ ॥103॥

೧೦೪ ಮುರಿದವನಿಬರ ಮೋರೆ ...{Loading}...

ಮುರಿದವನಿಬರ ಮೋರೆ ಮಹಿಪನ
ಕೊರಲ ಕೊಂಕಿನಲಿದ್ದರಾ ಸೋ
ದರರು ಸಾರವನಲ್ಲಿ ಕಾಣದೆ ಭೀಷ್ಮ ಗುರು ಕೃಪರ
ಮರಳಿ ನೋಡಿದಳಕಟ ಗಂಗಾ
ವರಕುಮಾರ ದ್ರೋಣ ಕೃಪರೀ
ಸೆರಗ ಬಿಡಿಸಿರೆ ತಂದೆಗಳಿರೆಂದೊರಲಿದಳು ತರಳೆ ॥104॥

೧೦೫ ಕ್ರೂರನಿವ ದುಶ್ಶಾಸನನು ...{Loading}...

ಕ್ರೂರನಿವ ದುಶ್ಶಾಸನನು ಗಾಂ
ಧಾರಿ ಬಿಡಿಸೌ ಸೆರಗ ಸೊಸೆಯ
ಲ್ಲಾರು ಕೇಳೌ ತಂಗಿಯಲ್ಲಾ ನಿಮಗೆ ಭಾನುಮತಿ
ವೀರ ಸೈಂಧವನರಸಿ ರಾಜ ಕು
ಮಾರಿ ನೀ ನಾದಿನಿಯಲಾ ಖಳ
ರೌರವದದೊಳದ್ದುವನು ಬಿಡಿಸೆಂದೊರಲಿದಳು ತರಳೆ ॥105॥

೧೦೬ ಎಲೆ ವಿಲಾಸಿನಿಯರಿರ ...{Loading}...

ಎಲೆ ವಿಲಾಸಿನಿಯರಿರ ಭೂಪನ
ತಿಳಿಹಿರೌ ತಾಯ್ಗಳಿರ ನೀವಿಂ
ದೆಲೆ ಪಸಾಯ್ತೆಯರಿರ ಸಹೋದರಿಯೆಂದು ಕೌರವನ
ತಿಳುಹಿರೌ ಶರಣಾಗತರ ತಾ
ನುಳುಹಿ ಕೊಂಬುದು ಧರ್ಮವಕಟಾ
ಕಲುಹೃದಯರೌ ನೀವೆನುತ ಹಲುಬಿದಳು ತರಳಾಕ್ಷಿ ॥106॥

೧೦೭ ಧಾರುಣೀಪತಿಗಳಿರ ರಾಜ ...{Loading}...

ಧಾರುಣೀಪತಿಗಳಿರ ರಾಜ ಕು
ಮಾರರಿರ ಮಂತ್ರಿಗಳಿರಾ ಪರಿ
ವಾರಕಿದು ಪಂಥವೆ ವಿಚಾರಿಸಿ ನಿರಪರಾಧಿಯನು
ನಾರಿಯೊಬ್ಬಳನಕಟ ಸಭೆಯಲಿ
ಸೀರೆಯುಡೆಯುರ್ಚುವರು ಕೆಟ್ಟೆನು
ಕಾರಣಿಕರಿಲ್ಲಾ ಶಿವಾಯೆಂದೊರಲಿದಳು ತರಳೆ ॥107॥

೧೦೮ ಪತಿಗಳೆನ್ನನು ಮಾರಿ ...{Loading}...

ಪತಿಗಳೆನ್ನನು ಮಾರಿ ಧರ್ಮ
ಸ್ಥಿತಿಯ ಕೊಂಡರು ಭೀಷ್ಮ ಮೊದಲಾ
ದತಿರಥರು ಪರಹಿತವ ಬಿಸುಟರು ವ್ಯರ್ಥಭೀತಿಯಲಿ
ಸುತನ ಸಿರಿ ಕಡುಸೊಗಸಲಾ ಭೂ
ಪತಿಗೆ ಗಾಂಧಾರಿಗೆ ಅನಾಥೆಗೆ
ಗತಿಯ ಕಾಣೆನು ಶಿವ ಶಿವಾಯೆಂದೊರಲಿದಳು ತರಳೆ ॥108॥

೧೦೯ ಮೈದೆಗೆದವೀ ಪ್ರಾಣವಾಯುಗ ...{Loading}...

ಮೈದೆಗೆದವೀ ಪ್ರಾಣವಾಯುಗ
ಳೈದು ಬಳಿಕೆನಗಾರು ಮರುಗುವ
ರೈದೆತನವೊಂದುಳಿಯಲುಳಿವುದು ಮಿಕ್ಕ ಮಹಿಮೆಗಳು
ಬೈದು ಫಲವಿನ್ನೇನು ನಿನ್ನಯ
ಮೈದುನರ ಮರುಳಾಟಕೆನ್ನನು
ಕಾಯ್ದುಕೊಳ್ಳೈ ಕೃಷ್ಣಯೊಂದೊರಲಿದಳು ಲಲಿತಾಂಗಿ ॥109॥

೧೧೦ ಸುಲಿವರೂರೊಳಗುಟ್ಟ ಸೀರೆಯ ...{Loading}...

ಸುಲಿವರೂರೊಳಗುಟ್ಟ ಸೀರೆಯ
ನೆಲೆ ಮುರಾಂತಕ ರಕ್ಷಿಸೈ ಶಶಿ
ಕಳೆಗೆ ಸದರವೆ ರಾಹು ರಚಿಸಿದ ತುಟಿಯ ತೋಟಿಯದು
ಸೆಳೆವರಸುವನು ಖಳರು ಸೀರೆಯ
ಸುಲಿದರುಳಿಯೆನು ಕೃಷ್ಣ ಕರುಣಾ
ಜಲಧಿಯೇ ಕೈಗಾಯಬೇಕೆಂದೊರಲಿದಳು ತರಳೆ ॥110॥

೧೧೧ ಗತಿವಿಹೀನರಿಗಕಟ ನೀನೇ ...{Loading}...

ಗತಿವಿಹೀನರಿಗಕಟ ನೀನೇ
ಗತಿಯಲೈ ಗೋವಿಂದ ರಿಪು ಬಾ
ಧಿತರಿಗಬಲರಿಗಾರ್ತರಿಗೆ ನೀ ಪರಮ ಬಂಧುವಲ
ಸತಿ ಪಶು ದ್ವಿಜ ಬಾಧೆಯಲಿ ಜೀ
ವಿತವ ತೊರೆವರು ಗರುವರದು ಹಿಂ
ಗಿತೆ ಸುಯೋಧನ ಸಭೆಯೊಳೆಂದೊರಲಿದಳು ಲಲಿತಾಂಗಿ ॥111॥

೧೧೨ ಕಾಯಿದೈ ಕರುಣದಲಿ ...{Loading}...

ಕಾಯಿದೈ ಕರುಣದಲಿ ದಿವಿಜರ
ತಾಯ ಪರಿಭವವನು ಪಯೋಧಿಯ
ಹಾಯಿದಮರಾರಿಗಳ ಖಂಡಿಸಿ ತಲೆಯ ಚೆಂಡಾಡಿ
ಕಾಯಿದೈ ಜಾನಕಿಯನೆನ್ನನು
ಕಾಯಬೇಹುದು ಹೆಣ್ಣ ಹರಿಬಕೆ
ನೋಯಬಲ್ಲರೆ ಕೆಲಬರೆಂದೊರಲಿದಳು ತರಳಾಕ್ಷಿ ॥112॥

೧೧೩ ವೇದವಧುಗಳ ಕಾಯ್ದೆಲಾ ...{Loading}...

ವೇದವಧುಗಳ ಕಾಯ್ದೆಲಾ ತಮ
ಬಾಧೆಯಲಿ ಖಳನಿಂದ ಧರಣಿ ಮ
ಹೋದಧಿಯಲಕ್ಕಾಡಿದರೆ ದಾಡೆಯಲಿ ದಾನವನ
ಕೋದು ಹಾಕೀ ಭೂತ ಧಾತ್ರಿಯ
ಕಾದೆಲಾ ಕಾರುಣ್ಯಸಿಂಧುವೆ
ಮೇದಿನೀಪತಿ ಮನ್ನಿಸೆಂದೊರಲಿದಳು ತರಳಾಕ್ಷಿ ॥113॥

೧೧೪ ರಕ್ಷಿಸಿದೆ ಯೋಗಿಣಿಯ ...{Loading}...

ರಕ್ಷಿಸಿದೆ ಯೋಗಿಣಿಯ ಬೆದರುವ
ದಕ್ಷಸುತೆಯನು ಕೋಪಶಿಖಿ ತಿಮಿ
ರಾಕ್ಷನಾ ಜಮದಗ್ನಿ ಮುನಿಪನ ನುಡಿಯನನುಕರಿಸಿ
ರಕ್ಷಿಸಿದೆ ರೇಣುಕೆಯನೆನ್ನನು
ಪೇಕ್ಷಿಸದಿರೈ ಕರುಣದಲಿ ಕಮ
ಲಾಕ್ಷ ಬಿಡಿಸಾ ಸೆರಗನೆಂದೊರಲಿದಳು ಹರಿಣಾಕ್ಷಿ ॥114॥

೧೧೫ ದೇವಕೀದೇವಿಯರ ಸೆರೆಯನು ...{Loading}...

ದೇವಕೀದೇವಿಯರ ಸೆರೆಯನು
ದೇವ ಕೃಪೆಯಲಿ ಬಿಡಿಸಿದೈ ಕರು
ಣಾವಲಂಬದಿ ಕಳಚಿದೈ ಹದಿನಾರು ಸಾವಿರದ
ದೇವಕನ್ಯಾ ಬಂಧನವನಭಿ
ಭಾವಕರ ಕೌರವರ ಭಂಗಿಸಿ
ದೇವ ಬಿಡಿಸೈ ಸೆರಗನೆಂದೊರಲಿದಳು ಪಾಂಚಾಲೆ ॥115॥

೧೧೬ ಶಿಶುವಧೆಗೆ ಸೀವರಿಸದಸುರನ ...{Loading}...

ಶಿಶುವಧೆಗೆ ಸೀವರಿಸದಸುರನ
ಬಸುರ ಹೂಮಾಲೆಯನು ನೀ ತುರು
ಬಿಸಿದೆಲಾ ನಖರಾಜಿಗಬಲನ ಕಾಯ್ದು ಕರುಣದಲಿ
ಶಿಶುವನಯ್ಯಂಗಿತ್ತು ಜಲಧಿಯ
ಮುಸುಕನುಗಿದತಿ ಕರುಣಿಯೇ ಹೆಂ
ಗುಸಿನ ಹರಿಬಕೆ ಕೃಪೆಯ ಮಾಡೆಂದೊರಲಿದಳು ತರಳೆ ॥116॥

೧೧೭ ತುರುವ ನುಙ್ಗಿದ ...{Loading}...

ತುರುವ ನುಂಗಿದ ಫಣಿಯ ಗಂಟಲ
ಮುರಿದು ಕಾಯ್ದೈ ಗೋವುಗಳ ಗಿರಿ
ಮರೆಯಲಿಂದ್ರನ ಖಾತಿಗಳುಕದೆ ಕಾಯ್ದೆ ಗೋಕುಲವ
ಮೆರೆದೆಲಾ ಕೃಪೆಯಲಿ ಗಜೇಂದ್ರನ
ಮುರಿಯಲೀಯದೆ ಖಳನು ಸೋಕಿದ
ಸೆರಗ ಬಿಡಿಸೈ ಕೃಷ್ಣಯೆಂದಳು ಪಾಂಡವರ ರಾಣಿ ॥117॥

೧೧೮ ಒದೆದೊಡೊಲಿದವರುಣ್ಟೆ ಬೈದೊಡೆ ...{Loading}...

ಒದೆದೊಡೊಲಿದವರುಂಟೆ ಬೈದೊಡೆ
ಪದವನಿತ್ತವರುಂಟೆ ಕರುಣಾ
ಸ್ಪದರ ನಾ ಕೇಳ್ದರಿಯೆನೇ ಕಮಲಾಸನಾದ್ಯರಲಿ
ಪದವ ಸೋಂಕಿದ ಮೂಹೊರಡು ತಿ
ದ್ದಿದುದು ಗಡ ಹೆಂಗುಸಿನ ಹೇರಾ
ಳದ ಕೃಪಾಳುವೆ ಕೃಷ್ಣ ಸಲಹೆಂದೊರಲಿದಳು ತರಳೆ ॥118॥

೧೧೯ ಸೊಕ್ಕಿದನ್ತಕದೂತರನು ಸದೆ ...{Loading}...

ಸೊಕ್ಕಿದಂತಕದೂತರನು ಸದೆ
ದೊಕ್ಕಲಿಕ್ಕಿಯಜಾಮಿಳನ ಹಿಂ
ದಿಕ್ಕಿ ಕೊಂಡೆಯಲೈ ದುರಾತ್ಮ ಕ್ಷತ್ರ ಬಂಧದಲಿ
ಸೊಕ್ಕಿದರು ಕೌರವರು ಖಳರಿಗೆ
ಸಿಕ್ಕಿದೆನು ನಿನಗಲ್ಲದಾರಿಗೆ
ಕಕ್ಕುಲಿತೆಬಡುವೆನು ಮುರಾಂತಕಯೆಂದಳಿಂದುಮುಖಿ ॥119॥

೧೨೦ ಚರಣ ಭಜಕರ ...{Loading}...

ಚರಣ ಭಜಕರ ಮಾನ ಹಾನಿಯ
ಹರಿಬವಾರದು ಕೃಷ್ಣ ನಾಮ
ಸ್ಮರಣಧನಿಕರಿಗುಂಟೆ ಘಲ್ಲಣೆ ಘೋರ ಪಾತಕದ
ಪರಮ ಭಕ್ತಕುಟುಂಬಕನು ನೀ
ಕರುಣಿಯಲ್ಲದೊಡೀ ಕುಟುಂಬಕೆ
ಶರಣದಾರೈ ಕೃಷ್ಣ ಸಲಹೆಂದೊರಲಿದಳು ತರಳೆ ॥120॥

೧೨೧ ನಾಥರಿಲ್ಲದ ಶಿಶುಗಳಿಗೆ ...{Loading}...

ನಾಥರಿಲ್ಲದ ಶಿಶುಗಳಿಗೆ ನೀ
ನಾಥನೈ ಗೋವಿಂದ ಸಲಹೈ
ಯೂಥಪತಿಗಳು ಬಿಸುಟ ಕರಿಣಿಗೆ ಕೃಪೆಯ ನೀ ಮಾಡೈ
ನಾಥರಿಲ್ಲೆನಗಿಂದು ದೀನಾ
ನಾಥ ಬಾಂಧವ ನೀನಲೈ ವರ
ಮೈಥಿಲೀಪತಿ ಮನ್ನಿಸೆಂದೊರಲಿದಳು ಮೃಗನಯನೆ ॥121॥

೧೨೨ ಹೊಲಬುದಪ್ಪಿದ ಹುಲ್ಲೆ ...{Loading}...

ಹೊಲಬುದಪ್ಪಿದ ಹುಲ್ಲೆ ಬೇಡನ
ಬಲೆಗೆ ಬಿದ್ದಂತಾದೆನೈ ಬಲು
ಹಳುವದಲಿ ತಾಯ್ಬಿಸುಟ ಶಿಶು ತಾನಾದೆನೆಲೆ ಹರಿಯೆ
ಕೊಲುವವೈ ಕಾಗೆಗಳಕಟ ಕೋ
ಗಿಲೆಯ ಮರಿಯನು ಕೃಷ್ಣ ಕರುಣಾ
ಜಲಧಿಯೇ ಕೈಗಾಯಬೇಕೆಂದೊರಲಿದಳು ತರಳೆ ॥122॥

೧೨೩ ಅಕಟ ಹಂಸೆಯ ...{Loading}...

ಅಕಟ ಹಂಸೆಯ ಮರಿಯ ಮೋದುವ
ಬಕನ ತೆಗೆಸೈ ಗಿಡುಗನೆರಗುವ
ಶುಕನ ಶೋಕವ ಮಾಣಿಸೈ ವಾಣಿಯವೆ ಭಕುತರಲಿ
ಪ್ರಕಟಭೂತಗ್ರಹದ ಬಾಧೆಗೆ
ವಿಕಳೆ ನಿನ್ನಯ ಬಿರುದ ತಡೆದೆನು
ಭಕುತವತ್ಸಲನಹರೆ ಸಲಹೆಂದೊರಲಿದಳು ತರಳೆ ॥123॥

೧೨೪ ಆರಿಗೊರಲುವೆನೈ ಖಳಾಪ ...{Loading}...

ಆರಿಗೊರಲುವೆನೈ ಖಳಾಪ
ಸ್ಮಾರವಿದೆ ಸೆರೆವಿಡಿದು ತನ್ನಸು
ವಾರಿಗೆಯು ವೈರಾಗ್ಯ ಗಡ ಮತ್ಪ್ರಾಣ ವಿಭುಗಳಿಗೆ
ಘೋರತರ ಭವದುರಿತ ತರುವಿನ
ಬೇರ ಸುಡುವೀ ನಿನ್ನ ನಾಮಕೆ
ನಾರಿಯಕ್ಕೆಯ ನಿಲಿಸಲೇನರಿದೆಂದಳಿಂದುಮುಖಿ ॥124॥

೧೨೫ ಕರುಣಿ ನೀ ...{Loading}...

ಕರುಣಿ ನೀ ಕಾರುಣ್ಯ ಪಾತ್ರದ
ತರಳೆ ತಾ ದೀನಾರ್ತಿದುಃಖೋ
ತ್ತರಣ ನೀ ದೀನಾರ್ತ ದುಃಖಿತೆಯಾನು ಜಗವರಿಯೆ
ಪರಮ ಪಾಲಕ ನೀನೆ ಗತ್ಯಂ
ತರದ ವಿಹ್ವಲೆ ತಾನಲಾ ನಿ
ಷ್ಠುರವಿದೇನೈ ಕೃಷ್ಣಯೆಂದೊರಲಿದಳು ತರಳಾಕ್ಷಿ ॥125॥

೧೨೬ ಮರೆದೆನಭ್ಯುದಯದಲಿ ನೀನೆಂ ...{Loading}...

ಮರೆದೆನಭ್ಯುದಯದಲಿ ನೀನೆಂ
ದರಿವೆನಾಪತ್ತಿನಲಿ ಮದದಲಿ
ಮುರುಕಿಸುವೆನುಬ್ಬಿನಲಿ ಕಳವಳಿಸುವೆನು ಖೋಡಿಯಲಿ
ಅರಿಯದಜ್ಞರ ಗುಣವ ದೋಷವ
ನರಸುವರೆ ನಿನ್ನಡಿಯ ಕೃಪೆಯನು
ಮೆರೆಯಲಾಗದೆ ಕೃಷ್ಣಯೆಂದೊರಲಿದಳು ನಳಿನಾಕ್ಷಿ ॥126॥

೧೨೭ ಋಷಿಗಳತಿ ತಾರ್ಕಿಕರು ...{Loading}...

ಋಷಿಗಳತಿ ತಾರ್ಕಿಕರು ಕರ್ಮ
ವ್ಯಸನಿಗಳು ಕೋವಿದರು ಮಿಕ್ಕಿನ
ವಿಷಯದೆರೆ ಮೀನುಗಳು ಮೂಢಮನುಷ್ಯರೆಂಬವರು
ಒಸೆದು ನಿನ್ನವರೆಂದು ಬಗೆವರೆ
ಬಸಿದು ಬೀಳುವ ಕೃಪೆಯ ನೀ ತೋ
ರಿಸೆಯಿದೇನೈ ಕೃಷ್ಣಯೆಂದೊರಲಿದಳು ನಳಿನಾಕ್ಷಿ ॥127॥

೧೨೮ ತುಸು ಮೊದಲು ...{Loading}...

ತುಸು ಮೊದಲು ಚತುರಾಸ್ಯ ಪರಿಯಂ
ತೆಸೆವುದೇ ಭುವನದಲಿ ಜೀವ
ಪ್ರಸರವಿದ್ದುದು ದುಃಖಸೌಖ್ಯದ ತಾರತಮತೆಯಲಿ
ಉಸುರು ಪಸರಣವಿಲ್ಲದೆನ್ನು
ಬ್ಬಸದ ಭೀತಿಯ ಬೇಗೆ ಮಿಗೆ ದಾ
ಹಿಸುವುದೈ ಕಾರುಣ್ಯನಿಧಿಯೆಂದೊರಲಿದಳು ತರಳೆ ॥128॥

೧೨೯ ನನ್ದಗೋಪ ಕುಮಾರ ...{Loading}...

ನಂದಗೋಪ ಕುಮಾರ ಗೋಪೀ
ವೃಂದ ವಲ್ಲಭ ದೈತ್ಯಮಥನ ಮು
ಕುಂದ ಮುರಹರ ಭಕ್ತವತ್ಸಲ ಘನ ಕೃಪಾಜಲಧೆ
ನೊಂದೆನೈ ನುಗ್ಗಾದೆನೈ ಗೋ
ವಿಂದ ಕೃಪೆ ಮಾಡಕಟೆನುತ ಪೂ
ರ್ಣೇಂದುಮುಖಿ ಹಲುಬಿದಳು ಬಲು ತೆರದಿಂದಲಚ್ಯುತನ ॥129॥

೧೩೦ ಇತ್ತ ದ್ವಾರಾವತಿಯೊಳಗೆ ...{Loading}...

ಇತ್ತ ದ್ವಾರಾವತಿಯೊಳಗೆ ದೇ
ವೋತ್ತಮನು ಭಕುತರಿಗೆ ತನ್ನನು
ತೆತ್ತು ಬದುಕುವನೆಂಬ ಪರಮ ವ್ರತದ ನಿಷ್ಠೆಯನು
ಚಿತ್ತದಲಿ ನೆಲೆಗೊಳಿಸಿ ರುಕ್ಮಿಣಿ
ಸತ್ಯಭಾಮೆಯರೊಳು ಸಮೇಳದ
ನೆತ್ತ ಸಾರಿಯ ಹರಹಿ ಹಾಸಂಗಿಯನು ದಾಳಿಸುತ ॥130॥

೧೩೧ ಕೇಳಿದನು ಮುರವೈರಿ ...{Loading}...

ಕೇಳಿದನು ಮುರವೈರಿ ತನ್ನಯ
ಮೇಳದೈವರ ಸತಿಯ ಹುಯ್ಯಲ
ನಾಳಿನೊಂದಪಮಾನವಾಳ್ದಂಗೆಂಬ ನುಡಿಯಿಂದ
ಕೋಳುಹೋದುವೆ ಪಾಂಡುಪುತ್ರರ
ಬಾಳುವೆಗಳಕಟೆನುತ ಲಕ್ಷ್ಮೀ
ಲೋಲ ಚಿಂತಿಸಿ ನುಡಿದ ರುಕ್ಮಿಣಿದೇವಿಗೀ ಹದನ ॥131॥

೧೩೨ ಕ್ರೂರ ದುರ್ಯೋಧನನು ...{Loading}...

ಕ್ರೂರ ದುರ್ಯೋಧನನು ದೃಪದ ಕು
ಮಾರಿ ಪಾಂಚಾಲೆಯನು ಸಭೆಯಲಿ
ಸೀರೆಯನು ಸುಲಿಯಲ್ಕೆ ಕಾಯೈ ಕೃಷ್ಣಯೆಂದೆನುತ
ನಾರಿಯೊರಲುತ್ತಿಹಳು ವುಟ್ಟಾ
ಸೀರೆ ಸೆಳೆಯಲು ಬಳಿಕಲಕ್ಷಯ
ಸೀರೆಯಾಗಲಿಯೆಂದ ಗದುಗಿನ ವೀರ ನಾರಯಣ ॥132॥

+೧೪ ...{Loading}...