೧೧

೦೦೦ ಸೂಚನೆ ರಾಜಸೂಯ ...{Loading}...

ಸೂಚನೆ : ರಾಜಸೂಯ ಕ್ರತು ಸಮಾಪ್ತಿಯೊ
ಳಾ ಜನಾರ್ದನ ಮುಖ್ಯರನು ಯಮ
ರಾಜಸುತ ಕಳುಹಿದನು ಹೊಕ್ಕರು ತಮ್ಮ ನಗರಿಗಳ

೦೦೧ ಕೇಳು ಜನಮೇಜಯ ...{Loading}...

ಕೇಳು ಜನಮೇಜಯ ಧರಿತ್ರೀ
ಪಾಲ ರಣ ಗಜಬಜದ ಗೋಳಾ
ಗೋಳಿ ತಣಿತುದು ಹಂತಿಗಟ್ಟಿತು ಮತ್ತೆ ನೃಪನಿಕರ
ಮೇಲಣಂತರ್ವೇದಿಗಳ ಮುನಿ
ಪಾಳಿ ಮಂತ್ರಾಹುತಿಗೆ ಕವಿವುರಿ
ನಾಲಗೆಯ ಲಾವಣಿಗೆ ತಳಿತುದು ಯಜ್ಞಕುಂಡದಲಿ ॥1॥

೦೦೨ ತಳಿತು ತಿವಿದಾಡಿದವು ...{Loading}...

ತಳಿತು ತಿವಿದಾಡಿದವು ಮುರಿದೊಡ
ಗಲಸಿದವು ಹೊಗೆ ಸುತ್ತಿ ಸಿಮಿ ಸಿಮಿ
ಮೊಳಗಿ ಹೊದರೆದ್ದವು ಸಗಾಢದಲುಬ್ಬಿ ಭುಗು ಭುಗಿಸಿ
ಸುಳಿ ಸುಳಿದು ಭೋರೆಂದು ಬಿಗಿದ
ವ್ವಳಿಸಿದವು ಘೃತ ಧಾರೆಗಳಿಗು
ಚ್ಚಳಿಸಿದವು ಹರಹಿನಲಿ ನಾಲಗೆ ಹವ್ಯವಾಹನನ ॥2॥

೦೦೩ ಶ್ರುತಿ ವಿಧಾನರ ...{Loading}...

ಶ್ರುತಿ ವಿಧಾನರ ವಿಮಳ ಪೂರ್ಣಾ
ಹುತಿಯ ಪಾರಾಯಣದ ನಿಗಮ
ಪ್ರತತಿಗಳ ಪರಿಪೂತ ಪರಿಮಳಮಯ ದಿಶಾವಳಿಯ
ಕ್ರತು ಸಮಾಪ್ತಿಯಲವಭೃತದ ಭೂ
ಪತಿಯ ವಿಮಳಸ್ನಾನ ಪುಣ್ಯೋ
ಚಿತದಲೋಕುಳಿಯಾಡಿ ದಣಿದುದು ಲೋಕ ಸುರನರರ ॥3॥

೦೦೪ ಅರಸ ಚಿತ್ತವಿಸೊನ್ದು ...{Loading}...

ಅರಸ ಚಿತ್ತವಿಸೊಂದು ಲಕ್ಷದ
ಧರಣಿಯಮರರ ಭೋಜನಾಂತಕೆ
ಮೊರೆವುದೊಂದೇ ಬಾರಿ ಶಂಖಧ್ವನಿ ಛಡಾಳದಲಿ
ಪರುಠವಣೆಯಿದು ರಾಜಸೂಯಾ
ಧ್ವರದ ಮೊದಲವಸಾನ ಪರಿಯಂ
ತರದೊಳೋರಂತದಲಿ ಹಗಲಿರುಳೂದಿತನವರತ ॥4॥

೦೦೫ ಏಸು ಲಕ್ಷವದೇಸು ...{Loading}...

ಏಸು ಲಕ್ಷವದೇಸು ಕೋಟಿಯ
ದೇಸು ನಿರ್ಬುದವೇಸು ಖರ್ವವ
ದೇಸು ಪದ್ಮ ದ್ವಿಜರ ಗಣನೆಯನರಿವರಾರದನು
ಏಸು ಭಕ್ಷ್ಯೋದನದ ಪರ್ವತ
ರಾಶಿ ದಧಿ ಘೃತ ದುಗ್ಧ ಮಧು ವಾ
ರಾಸಿಯೊಡ್ಡಣೆ ಮೆರೆದುದಿಂದ್ರಪ್ರಸ್ಥ ನಗರಿಯಲಿ ॥5॥

೦೦೬ ಓಗರದ ರಾಶಿಗಳ ...{Loading}...

ಓಗರದ ರಾಶಿಗಳ ಗಿರಿ ಕಂ
ಡಾಗಲಂತಿರೆ ಮರಳಿ ಕಾಣೆನು
ಸಾಗರದವೊಲೆ ದಧಿ ಘೃತಾದಿ ಮಹಾ ಪ್ರವಾಹಚಯ
ಆಗಳಂತಿರೆ ಬತ್ತುವವು ನಿಮಿ
ಷಾಗಮಕೆ ತುಂಬುವವು ಯಮಜನ
ಯಾಗಲಕ್ಷ್ಮಿಯನಲ್ಪಮತಿ ಬಣ್ಣಿಸುವಡರಿದೆಂದ ॥6॥

೦೦೭ ಅರಸ ಮೈಯಿಕ್ಕಿದನು ...{Loading}...

ಅರಸ ಮೈಯಿಕ್ಕಿದನು ಸನ್ಮುನಿ
ವರ ಸಮಾಜಕೆ ನಿಮ್ಮ ಕೃಪೆಯಲಿ
ಧರಣಿಪಾಧ್ವರ ಸಿದ್ಧಿಯಾಯ್ತು ನಿರಂತರಾಯದಲಿ
ಕರುಣ ನಿಮ್ಮದು ನಿಮ್ಮ ಮಿಗೆ ಸ
ತ್ಕರಿಸಲರಿಯೆನು ಹೆಚ್ಚು ಕುಂದಿನ
ಹುರುಳನೀಕ್ಷಿಸಲಾಗದೆಂದನು ಮುಗಿದು ಕರಯುಗವ ॥7॥

೦೦೮ ಮನ್ನಿಸಿದನವರುಗಳನುಡುಗೊರೆ ...{Loading}...

ಮನ್ನಿಸಿದನವರುಗಳನುಡುಗೊರೆ
ಹೊನ್ನ ವಿವಿಧಾಭರಣ ಪಶುಗಳ
ಲುನ್ನತಾಶೀರ್ವಾದ ವಚನದೊಳವನಿಪನ ಹರಸಿ
ಸನ್ನುತರು ತಮ್ಮಾಶ್ರಮಕೆ ಸಂ
ಪನ್ನ ಸತ್ಯರು ಮರಳಿದರು ಪ್ರತಿ
ಪನ್ನ ಯಜ್ಞವಿಳಾಸನೊಪ್ಪಿದನಿಂದ್ರ ವಿಭವದಲಿ ॥8॥

೦೦೯ ರಾಜ ವರ್ಗವನವರವರ ...{Loading}...

ರಾಜ ವರ್ಗವನವರವರ ನಿಜ
ತೇಜ ಮಾನ್ಯೋಚಿತದ ಗಜ ರಥ
ವಾಜಿ ವಿವಿಧಾಭರಣ ವಸನ ವಧೂ ಕದಂಬದಲಿ
ಆ ಜಗತ್ಪತಿಯುಳಿಯೆ ಪಾರ್ಥಿವ
ರಾಜಿಯನು ಮನ್ನಿಸಿ ಯುಧಿಷ್ಠಿರ
ರಾಜನನುಜರು ಕೂಡಿ ಕಳುಹಿಸಿದನು ಮಹೀಶ್ವರರ ॥9॥

೦೧೦ ಫಲುಗುಣನು ಧೃತರಾಷ್ಟ್ರ ...{Loading}...

ಫಲುಗುಣನು ಧೃತರಾಷ್ಟ್ರ ಭೀಷ್ಮರ
ಕಳುಹಿದನು ಗುರು ಗುರುತನೂಜರ
ಬಳಿಯೊಳನಿಲಜ ಬಂದನಾ ಕೃಪನೊಡನೆ ಸಹದೇವ
ಬಳಿಯಲೈದಿದ ನಕುಲನಾ ಸೌ
ಬಲನ ಸೈಂಧವ ಶಲ್ಯನನು ಕೌ
ಸಲ ವಿರಾಟ ದ್ರುಪದಸುತ ಭಗದತ್ತ ಭೂಪತಿಯ ॥10॥

೦೧೧ ಅರಸ ಕೇಳೈ ...{Loading}...

ಅರಸ ಕೇಳೈ ಪಾಂಡ್ಯ ಭೂಮೀ
ಶ್ವರ ಕಳಿಂಗ ಪ್ರಮುಖ ತೆಂಕಣ
ಧರಣಿಪರ ಬಳಿಯಲಿ ಘಟೋತ್ಕಚ ಯೋಜನಾಂತರವ
ವರ ಕುಮಾರರು ನಿಖಿಳ ಪೃಥ್ವೀ
ಶ್ವರರನವರವರುಚಿತದಲಿ ಸತು
ಕರಿಸಿ ಮರಳಿದು ಬಂದರಿಂದ್ರಪ್ರಸ್ಥ ಪುರವರಕೆ ॥11॥

೦೧೨ ಕರೆಸಿದನು ಹರಿ ...{Loading}...

ಕರೆಸಿದನು ಹರಿ ಪಾಂಡುಪುತ್ರರ
ನರಸಿ ಸಹಿತೇಕಾಂತ ಭವನದೊ
ಳುರುತರ ಪ್ರೇಮೈಕ ರಸ ಸಂಸಿಕ್ತ ವಚನದಲಿ
ಭರಿತವಾಯಿತೆ ರಾಜಸೂಯಾ
ಧ್ವರ ಸದಾಹುತಿ ತೃಪ್ಯ ಮಾಣಾ
ಮರ ಮಹೀಶ್ವರ ವಿಭವ ವಿಳಸಿತ ಪಾಂಡು ಪದವೆಂದ ॥12॥

೦೧೩ ದೇವನಙ್ಘ್ರಿಯ ಮುಸುಕಿದವು ...{Loading}...

ದೇವನಂಘ್ರಿಯ ಮುಸುಕಿದವು ಮುಕು
ಟಾವಳಿಗಳೈವರ ಸತಿಯ ಸಂ
ಭಾಷಣೆಯ ಮಧುರೋಕ್ತಿರಸದಲಿ ನಗುತ ಮನ್ನಿಸಿದ
ಓವಿದನು ಮುರವೈರಿ ಕಾರು
ಣ್ಯಾವಲೋಕನದಿಂದ ನಿನ್ನವ
ರಾವ ಭವದಲಿ ಭಜಿಸಿದರೊ ನಿಷ್ಠೆಯಲಿ ಹರಿಪದವ ॥13॥

೦೧೪ ದೇವ ನಿಮ್ಮಡಿಯಙ್ಘ್ರಿ ...{Loading}...

ದೇವ ನಿಮ್ಮಡಿಯಂಘ್ರಿ ಕಮಲವ
ನಾವ ನೆನೆದನವಂಗೆ ತುಸುವ
ಲ್ಲಾ ವಿರಿಂಚಾದ್ಯಮರ ಪದವಿದು ನಿಗಮ ಸಿದ್ಧವಲೆ
ನಾವು ಸಾಕ್ಷಾದಮಳ ಮೂರ್ತಿಸು
ಧಾವಸೇಚನಧೂತಕಿಲ್ಬಿಷ
ರಾವುದರಿದೈ ಬೊಪ್ಪನವರಿಗೆ ಶಕ್ರಪದವೆಂದ ॥14॥

೦೧೫ ಮಸಗಿದರೆ ಮಾಗಧನು ...{Loading}...

ಮಸಗಿದರೆ ಮಾಗಧನು ಯಜ್ಞವ
ಮಿಸುಕಲೀವನೆ ಚೈದ್ಯನಿಂದು
ಬ್ಬಸವ ಮಾಡಿದೊಡೆಮ್ಮ ಕೈಯಲಿ ಹರಿವ ಹೆಕ್ಕಳವೆ
ಶಿಶುವೊರಲಿದರೆ ಕಂಬದಲಿ ತೋ
ರಿಸಿದ ಕರುಣಾಜಲಧಿಯೇ ಪಾ
ಲಿಸಿದೆಲಾ ಪಾಂಡವರನೆಂದಳು ಹೊರಳಿ ಚರಣದಲಿ ॥15॥

೦೧೬ ಏಳೆನುತ ತೆಗೆದಪ್ಪಿದನು ...{Loading}...

ಏಳೆನುತ ತೆಗೆದಪ್ಪಿದನು ಕರು
ಣಾಳು ಪರಿತೋಷಾಶ್ರುಪೂರ್ಣ ವಿ
ಶಾಲ ಲೋಚನ ನೋಡಿದನು ತನ್ನವರನೊಲವಿನಲಿ
ಬಾಲಕಿಯೆ ಬಾ ತಂಗಿ ಬಾ ನೀ
ಲಾಳಕಿಯೆ ಬಾಯೆನುತ ಮಿಗೆ ಪಾಂ
ಚಾಲೆಯನು ಕರೆದಸುರರಿಪು ಸೂಚಿಸಿದನಂಗನೆಗೆ ॥16॥

೦೧೭ ನಮ್ಬದಿರು ಸಿರಿಯನು ...{Loading}...

ನಂಬದಿರು ಸಿರಿಯನು ಪತಿವ್ರತೆ
ಯೆಂಬರಿಗೆ ಗುರು ವಿಷಾದ ವಿ
ಡಂಬ ಹರುಷಂಗಳಲಿ ನೀನಿಹುದೇಕ ಚಿತ್ತದಲಿ
ತುಂಬುವುದು ಬತ್ತುವುದು ರಾಜ್ಯದ
ಡೊಂಬು ಹರಿಮೇಖಲೆ ವಿದ್ಯಾ
ಡಂಬರವಿದೆಂದಸುರರಿಪು ಸೂಚಿಸಿದನಂಗನೆಗೆ ॥17॥

೦೧೮ ವಿಷವ ಗೆಲಿದಿರಿ ...{Loading}...

ವಿಷವ ಗೆಲಿದಿರಿ ಹಿಂದೆ ಕಿಚ್ಚಿನ
ದೆಸೆಯಲುಳಿದಿರಿ ದಾಯಗರು ದು
ವ್ರ್ಯಸನಿಗಳು ದುಸ್ಸಹವು ನಿಮ್ಮಭ್ಯುದಯವಹಿತರಿಗೆ
ವಿಷಮವಿವಲೇ ದ್ಯೂತ ಮೃಗಯಾ
ವ್ಯಸನ ಪಾರ್ಥಿವಜಾತಿಗಿವು ದು
ರ್ವಿಷಯವಿದರಲಿ ನೆಗ್ಗಿದರು ನಳ ದಶರಥಾದಿಗಳು ॥18॥

೦೧೯ ಸೋತು ನಡೆವುದು ...{Loading}...

ಸೋತು ನಡೆವುದು ಹಿರಿಯರಲಿ ಸಂ
ಪ್ರೀತಿಯನು ಸುಜನರಲಿ ನಿರ್ಮಳ
ನೀತಿಯನು ಪರಿವಾರ ಪುರಜನ ನಾಡು ಬೀಡಿನಲಿ
ಖ್ಯಾತಿಯನು ಧರ್ಮದಲಿ ವೈರಿ
ವ್ರಾತದಲಿ ಪೌರುಷವನಖಿಳ
ಜ್ಞಾತಿಗಳಲೆಚ್ಚರಿಕೆಯೊಳಗಿಹುದೆಂದನಸುರಾರಿ ॥19॥

೦೨೦ ಎನ್ದು ಬುದ್ಧಿಯ ...{Loading}...

ಎಂದು ಬುದ್ಧಿಯ ಹೇಳಿ ಪಾರ್ಥನ
ನಂದನನ ಕರೆಸಿದನು ತಾಯ್ಸಹಿ
ತೆಂದನವರಿಗೆ ನಯದಲುಚಿತ ಪ್ರೀತಿವಚನದಲಿ
ಬಂದು ಕುಂತಿಗೆ ಸಾರನಗೆನುಡಿ
ಯಿಂದ ವಿನಯವ ಮಾಡಿ ಪಾಂಡವ
ನಂದನರ ಮನ್ನಿಸಿದನತಿ ಕಾರುಣ್ಯ ಭಾವದಲಿ ॥20॥

೦೨೧ ಯಾದವರು ಪಾಣ್ಡವರು ...{Loading}...

ಯಾದವರು ಪಾಂಡವರು ತನ್ನವ
ರಾದುದದುವೆ ಕುಟುಂಬವದು ಮಹ
ದಾದಿ ಸೃಷ್ಟಿಗದಾರ ರಕ್ಷೆ ಕುಟುಂಬವಾವನದು
ಆದರಿಸಿದನು ಕೆಲರನು ಹೊರ
ಗಾದವರು ಕೆಲರಾಯ್ತು ಹರಿ ಮಾ
ಯಾ ದುರಾಗ್ರಹವೃತ್ತಿಯೀ ಹದನೆಂದನಾ ಮುನಿಪ ॥21॥

೦೨೨ ಆ ಶುಭಗ್ರಹದುದಯದಲಿ ...{Loading}...

ಆ ಶುಭಗ್ರಹದುದಯದಲಿ ತಿಥಿ
ರಾಶಿ ನಕ್ಷತ್ರಾದಿ ಪುಣ್ಯೋ
ದ್ಭಾಸಮಾನ ಮುಹೂರ್ತದಲಿ ಸುಸ್ವರ ವಿಳಾಸದಲಿ
ಭೂಸುರಾಶೀವಾರ್ದದಲಿ ಲ
ಕ್ಷ್ಮೀಶ ಪಯಣವ ಮಾಡಿದನು ಕ
ಟ್ಟಾಸುರದಲೊದರಿದವು ಘನ ಗಂಭೀರ ಭೇರಿಗಳು ॥22॥

೦೨೩ ದೇಶದಲಿ ಕಾಲದಲಿ ...{Loading}...

ದೇಶದಲಿ ಕಾಲದಲಿ ದೆಸೆಯಲಿ
ರಾಸಿಯಲಿ ತಾರಾಗ್ರಹಾದಿಗ
ಳೈಸರಲಿ ತಾ ತನ್ನ ಚೇಷ್ಟೆಗಳಿವರ ವರ್ತನಕೆ
ಈಸು ಮಹಿಮೆಯ ಮರೆಸಿ ಲೋಕ ವಿ
ಳಾಸ ಚೇಷ್ಟೆಯನನುಸರಿಸಿ ನರ
ವೇಷವನು ನಟಿಸಿದನು ಹರಿ ಹೂಳಿದ ನಿಜೋನ್ನತಿಯ ॥23॥

೦೨೪ ಕಲಿ ವಿಡೂರಥ ...{Loading}...

ಕಲಿ ವಿಡೂರಥ ಸಾಂಬ ಸಾತ್ಯಕಿ
ದಳಪತಿ ಪ್ರದ್ಯುಮ್ನ ಯಾದವ
ಕುಲ ಸಚಿವನಕ್ರೂರನುದ್ಧವ ಚಾರು ಕೃತವರ್ಮ
ಬಲ ಪದಾತಿಯ ರಥ ನಿಕರದ
ಗ್ಗಳೆಯ ಗಜ ವಾಜಿಗಳ ಸಂದಣಿ
ಯೊಳಗೆ ನಿಂದರು ಕೃಷ್ಣರಾಯನ ರಥದ ಬಳಸಿನಲಿ ॥24॥

೦೨೫ ಅನುಜ ತನುಜರು ...{Loading}...

ಅನುಜ ತನುಜರು ಸಹಿತ ಕುಂತೀ
ತನಯ ದೂರಕೆ ಕಳುಹಿ ಮರಳಿದು
ಮನೆಗೆ ಬಂದನು ಕೃಷ್ಣವಿರಹ ವಿಶಾಲ ಖೇದದಲಿ
ಮುನಿಪ ವೇದವ್ಯಾಸ ಧೌಮ್ಯರ
ನನುಸರಿಸಿ ದಾಹಿಸುವ ದುಗುಡವ
ನನಿತುವನು ಬಿನ್ನವಿಸಿದನು ಮಿಡಿಮಿಡಿದು ಕಂಬನಿಯ ॥25॥

೦೨೬ ಅಸುರರಿಪು ಕೃಪೆಯಿನ್ದ ...{Loading}...

ಅಸುರರಿಪು ಕೃಪೆಯಿಂದ ನಿರ್ವಾ
ಹಿಸಿದನೀ ಯಜ್ಞವನು ಪೂರ್ವದ
ವಸುಮತೀಶರ ಪಾಡಿಗೆಣೆಯೆಂದೆನ್ನ ಪತಿಕರಿಸಿ
ಬಿಸುಟು ಬಿಜಯಂಗೈದನೀಯು
ಬ್ಬಸವನಾರೊಡನುಸುರುವೆನು ಹಿಂ
ದೆಸೆವ ಗೋಕುಲವಾಯ್ತು ಪುರವಿದು ಕೃಷ್ಣವಿರಹದಲಿ ॥26॥

೦೨೭ ಅರಸ ಕೇಳೈ ...{Loading}...

ಅರಸ ಕೇಳೈ ದೈತ್ಯ ದಾನವ
ರುರವಣೆಯ ಯದು ನಾಯಕರು ನಿ
ಸ್ತರಿಸಲರಿಯರು ಕೃಷ್ಣನಿಲ್ಲದೆ ಭೀತಿ ದ್ವಾರಕಿಗೆ
ಕರುಣ ನಿಮ್ಮಲಿ ಕಿರಿದೆ ನಿಮ್ಮೊಳ
ಗೆರಕವಲ್ಲವೆ ಚಿಂತೆ ಸಾಕಂ
ತಿರಲಿಯೆಂದವನೀಶನನು ಸಂತೈಸಿದನು ಮುನಿಪ ॥27॥

೦೨೮ ಆ ಮುಕುನ್ದನ ...{Loading}...

ಆ ಮುಕುಂದನ ನೆನಹು ನಮಗೆ ನಿ
ರಾಮಯವು ನೀವಿರಲು ಚಿಂತಾ
ವೈಮನಸ್ಯದ ವೇಧೆ ಮುರಿದುದು ಸಾಕದಂತಿರಲಿ
ಈ ಮಹೋತ್ಪಾತ ಪ್ರಬಂಧ ವಿ
ರಾಮ ಕರ್ಮವ ಬೆಸಸಿಯೆನೆ ನಗು
ತಾ ಮುನೀಶ್ವರ ನುಡಿದನವನೀಪತಿ ಶಿರೋಮಣಿಗೆ ॥28॥

೦೨೯ ಇದು ಕಣಾ ...{Loading}...

ಇದು ಕಣಾ ಕುರುರಾಯ ವಂಶಾ
ಭ್ಯುದಯ ವಿಗ್ರಹಪೂರ್ವ ಸೂಚಿಕ
ವಿದು ಸುಯೋಧನ ನೃಪನ ಕತಿಪಯ ಕಾಲ ಸುಖಬೀಜ
ಇದು ಸಮಸ್ತ ಕ್ಷತ್ರ ಕುಲ ವಾ
ರಿದಘಟೋಚ್ಚಾಟನ ಸಮೀರಣ
ವಿದರ ಫಲ ನಿಮಗಪಜಯಾವಹವೆಂದನಾ ಮುನಿಪ ॥29॥

೦೩೦ ಅರಿದಿಹುದು ನೀನಾಪ್ತ ...{Loading}...

ಅರಿದಿಹುದು ನೀನಾಪ್ತ ವಚನವ
ಮರೆಯದಿರು ವೇದೋಕ್ತ ಕರ್ಮದ
ಹೊರಿಗೆ ನಿನ್ನದು ನಿನ್ನ ಹೊದ್ದದು ಕಲುಷ ಕಲಿಮಲದ
ಕರುಬರೀ ಕೌರವರು ಮಖವಿದು
ಮೆರೆದುದದ್ಭುತವಾಗಿ ನಿನ್ನನು
ಮುರಿವರಲ್ಲದೆ ನಿಮ್ಮವರು ಸೈರಿಸುವರಲ್ಲೆಂದ ॥30॥

೦೩೧ ನುಡಿಯದಿರಸತ್ಯವನು ರಾಜ್ಯವ ...{Loading}...

ನುಡಿಯದಿರಸತ್ಯವನು ರಾಜ್ಯವ
ಬಿಡು ವಿಭಾಡಿಸಿ ನಿನ್ನ ವಧುವಿನ
ಮುಡಿಗೆ ಹಾಯ್ದರೆ ನೀನಧರ್ಮದ ತಡಿಯನಡರದಿರು
ಒಡಲುಗೂಡಿ ಸಮಸ್ತ ಧನವಿದು
ಕೆಡುವುದಗ್ಗದ ಮೋಕ್ಷಲಕ್ಷ್ಮಿಯ
ಮುಡಿಗೆ ಹಾಯ್ವೊಡೆ ಸತ್ಯವೊಂದನೆ ನಂಬು ನೀನೆಂದ ॥31॥

೦೩೨ ಅಜ್ಞರವದಿರು ನೀವು ...{Loading}...

ಅಜ್ಞರವದಿರು ನೀವು ನೆರೆ ಸ
ರ್ವಜ್ಞರವದಿರಧರ್ಮನಿಷ್ಠರು
ಯಜ್ಞ ದೀಕ್ಷಿತರಿಂದು ನೀವು ಸಮಸ್ತ ಜಗವರಿಯೆ
ಯಜ್ಞರಿಪುಗಳು ನಿಪುಣರಿಗೆ ವರ
ಯಾಜ್ಞಿಕರಿಗಾಚಾರಹೀನರ
ಭಿಜ್ಞಮತವಿದು ತಪ್ಪದೆಂದನು ಮುನಿ ನೃಪಾಲಂಗೆ ॥32॥

೦೩೩ ಇದುವೆ ರೇಖಾಮಾತ್ರ ...{Loading}...

ಇದುವೆ ರೇಖಾಮಾತ್ರ ಸರ್ವಾಂ
ಗದಲಿ ನಿನ್ನನು ಮರೆಯದಿರು ಕೊಂ
ಕಿದರೆ ಕರುಣಾಜಲಧಿ ಜೈಸಲುವುಂಟು ಹರಿ ನಿನಗೆ
ಬೆದರದಿರು ವಿಗಡಿಸುವ ವಿಷಯಾ
ಸ್ಪದದೊಳೆಂದು ಮುನೀಂದ್ರನೈವರು
ಸುದತಿ ಸಹಿತನಿಬರಿಗೆ ಬುದ್ಧಿಯ ಹೇಳಿ ಹೊರವಂಟ ॥33॥

೦೩೪ ಮುನಿಪ ಕಳುಹಿಸಿಕೊಣ್ಡು ...{Loading}...

ಮುನಿಪ ಕಳುಹಿಸಿಕೊಂಡು ಬದರೀ
ವನಕೆ ತಿರುಗಿದನತ್ತಲಿತ್ತಲು
ಜನಪ ಬಂದನು ಬಳಿಕ ಮಯನಿರ್ಮಿತ ಮಹಾಸಭೆಗೆ
ಮುನಿಗಳುಳಿದವರನು ಮಹೀಸುರ
ಜನ ಸಹಿತ ಭೂಪಾಲಶೇಷವ
ನನುನಯದಿ ಮಿಗೆ ಸತ್ಕರಿಸಿ ಬೀಳ್ಕೊಟ್ಟನುಚಿತದಲಿ ॥34॥

೦೩೫ ಅರಸ ಕೇಳೈ ...{Loading}...

ಅರಸ ಕೇಳೈ ಕೌರವೇಂದ್ರನ
ಕರೆಸಿದನು ದುಶ್ಶಾಸನಾದಿಕ
ದುರುಳ ಕೌರವ ಶತಕ ಸಹಿತಲೆ ಸಭೆಗೆ ನಡೆತಂದು
ಪರಿಭವಕೆ ಗುರಿಯಾಗಿ ಹಾಸ್ಯದ
ಹರಹಿನಲಿ ಹಳುವಾಗಿ ಪಾಂಡವ
ರರಸನನು ಬೀಳ್ಕೊಂಡು ಹಸ್ತಿನಪುರಕೆ ಹೊರವಂಟ ॥35॥

೦೩೬ ಭೂಮಿಲಮ್ಬದ ನಿಖಿಳ ...{Loading}...

ಭೂಮಿಲಂಬದ ನಿಖಿಳ ಭೂಪ
ಸ್ತೋಮ ಸಹಿತ ಸುಯೋಧನನು ಹೃ
ತ್ತಾಮಸದ ಚಾವಡಿಯ ಝಾಡಿಯ ರೋಷ ಪಾವಕದ
ಧೂಮಮುಖನೈತಂದು ಗಜಪುರ
ಸೀಮೆಯಲಿ ಪಾಳಯವ ಬಿಡಿಸಿದ
ವೈಮನಸ್ಯದಲಿರುಳು ಹೊಕ್ಕನು ಹಸ್ತಿನಾಪುರವ ॥36॥

+೧೧ ...{Loading}...