೦೦೦ ಸೂಚನೆ ರಾಜಸೂಯ ...{Loading}...
ಸೂಚನೆ : ರಾಜಸೂಯ ಕ್ರತು ಸಮಾಪ್ತಿಯೊ
ಳಾ ಜನಾರ್ದನ ಮುಖ್ಯರನು ಯಮ
ರಾಜಸುತ ಕಳುಹಿದನು ಹೊಕ್ಕರು ತಮ್ಮ ನಗರಿಗಳ
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
ಸೂ : ರಾಜಸೂಯಯಾಗ ಸಮಾಪ್ತಿಯಾದ ಮೇಲೆ ಜನಾರ್ದನನೇ ಮೊದಲಾದವರನ್ನು ಯುಧಿಷ್ಠಿರ ಬೀಳ್ಕೊಂಡ. ಎಲ್ಲರೂ ಅವರವರ ನಗರಗಳಿಗೆ ಹೋದರು
ಪದಾರ್ಥ (ಕ.ಗ.ಪ)
ಮೂಲ ...{Loading}...
ಸೂಚನೆ : ರಾಜಸೂಯ ಕ್ರತು ಸಮಾಪ್ತಿಯೊ
ಳಾ ಜನಾರ್ದನ ಮುಖ್ಯರನು ಯಮ
ರಾಜಸುತ ಕಳುಹಿದನು ಹೊಕ್ಕರು ತಮ್ಮ ನಗರಿಗಳ
೦೦೧ ಕೇಳು ಜನಮೇಜಯ ...{Loading}...
ಕೇಳು ಜನಮೇಜಯ ಧರಿತ್ರೀ
ಪಾಲ ರಣ ಗಜಬಜದ ಗೋಳಾ
ಗೋಳಿ ತಣಿತುದು ಹಂತಿಗಟ್ಟಿತು ಮತ್ತೆ ನೃಪನಿಕರ
ಮೇಲಣಂತರ್ವೇದಿಗಳ ಮುನಿ
ಪಾಳಿ ಮಂತ್ರಾಹುತಿಗೆ ಕವಿವುರಿ
ನಾಲಗೆಯ ಲಾವಣಿಗೆ ತಳಿತುದು ಯಜ್ಞಕುಂಡದಲಿ ॥1॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಯುದ್ಧದ ಗಜಬಜ ಗೋಳಾಗೋಳಿ ಎಲ್ಲಾ ತಣ್ಣಗಾಯಿತು. ರಾಜರುಗಳೆಲ್ಲ ಮತ್ತೆ ಸಾಲುಗಟ್ಟಿ ಯಜ್ಞಶಾಲೆಯನ್ನು ಸೇರಿದರು. ಮೇಲಿನ ಅಂತರ್ವೇದಿಗಳಲ್ಲಿ ಮುನಿಗಳು ಯಜ್ಞ ಕ್ರಿಯೆಗಳಲ್ಲಿ ತೊಡಗಿದರು. ಅವರು ಕೊಟ್ಟ ಮಂತ್ರಾಹುತಿಗೆ ಯಜ್ಞಕುಂಡದಲ್ಲಿ ಉರಿಯ ನಾಲಿಗೆಗಳ ಸುಂದರ ವಿನ್ಯಾಸ ಕವಿದುಬಂದವು.
ಪದಾರ್ಥ (ಕ.ಗ.ಪ)
ಲಾವಣಿಗೆ -ಸುಂದರ ವಿನ್ಯಾಸ
ತಣಿತುದು- ತಣ್ಣಗಾಯಿತು
ಹಂತಿಗಟ್ಟು - ಸಾಲುಗಟ್ಟು
ಮೂಲ ...{Loading}...
ಕೇಳು ಜನಮೇಜಯ ಧರಿತ್ರೀ
ಪಾಲ ರಣ ಗಜಬಜದ ಗೋಳಾ
ಗೋಳಿ ತಣಿತುದು ಹಂತಿಗಟ್ಟಿತು ಮತ್ತೆ ನೃಪನಿಕರ
ಮೇಲಣಂತರ್ವೇದಿಗಳ ಮುನಿ
ಪಾಳಿ ಮಂತ್ರಾಹುತಿಗೆ ಕವಿವುರಿ
ನಾಲಗೆಯ ಲಾವಣಿಗೆ ತಳಿತುದು ಯಜ್ಞಕುಂಡದಲಿ ॥1॥
೦೦೨ ತಳಿತು ತಿವಿದಾಡಿದವು ...{Loading}...
ತಳಿತು ತಿವಿದಾಡಿದವು ಮುರಿದೊಡ
ಗಲಸಿದವು ಹೊಗೆ ಸುತ್ತಿ ಸಿಮಿ ಸಿಮಿ
ಮೊಳಗಿ ಹೊದರೆದ್ದವು ಸಗಾಢದಲುಬ್ಬಿ ಭುಗು ಭುಗಿಸಿ
ಸುಳಿ ಸುಳಿದು ಭೋರೆಂದು ಬಿಗಿದ
ವ್ವಳಿಸಿದವು ಘೃತ ಧಾರೆಗಳಿಗು
ಚ್ಚಳಿಸಿದವು ಹರಹಿನಲಿ ನಾಲಗೆ ಹವ್ಯವಾಹನನ ॥2॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅಗ್ನಿಯ ನಾಲಿಗೆಗಳು ಹವಿಸ್ಸನ್ನು ಸವಿಯಲು ಮೇಲಕ್ಕೆ ನುಗ್ಗಿ ಬಂದು ತಮ್ಮ ತಮ್ಮಲ್ಲೇ ತಿವಿದಾಡಿದುವು. ಹಿಂತಿರುಗಿ ಮತ್ತೆ ಒಟ್ಟುಗೂಡಿದವು. ಹೊಗೆ ಸುತ್ತಿ ಸಿಮಿಸಿಮಿ ಎಂದು ರಾಶಿಯಾಗಿ ಮೇಲೆದ್ದಿತು. ಮತ್ತೆ ದಟ್ಟವಾಗಿ ಉರಿ ಮೇಲೆದ್ದು ಭುಗುಭುಗು ಎನ್ನುತ್ತಾ ಸುಳಿಸುಳಿದು ಭೋರೆಂದು ಸಶಬ್ದವಾಗಿ ನುಗ್ಗಿತು. ತುಪ್ಪದ ಧಾರೆಗಳಿಗೆ ಅಗ್ನಿಯ ನಾಲಗೆ ಇನ್ನಷ್ಟು ಮೇಲೆ ನೆಗೆದು ಹರಡಿಕೊಂಡವು.
ಪದಾರ್ಥ (ಕ.ಗ.ಪ)
ಮೂಲ ...{Loading}...
ತಳಿತು ತಿವಿದಾಡಿದವು ಮುರಿದೊಡ
ಗಲಸಿದವು ಹೊಗೆ ಸುತ್ತಿ ಸಿಮಿ ಸಿಮಿ
ಮೊಳಗಿ ಹೊದರೆದ್ದವು ಸಗಾಢದಲುಬ್ಬಿ ಭುಗು ಭುಗಿಸಿ
ಸುಳಿ ಸುಳಿದು ಭೋರೆಂದು ಬಿಗಿದ
ವ್ವಳಿಸಿದವು ಘೃತ ಧಾರೆಗಳಿಗು
ಚ್ಚಳಿಸಿದವು ಹರಹಿನಲಿ ನಾಲಗೆ ಹವ್ಯವಾಹನನ ॥2॥
೦೦೩ ಶ್ರುತಿ ವಿಧಾನರ ...{Loading}...
ಶ್ರುತಿ ವಿಧಾನರ ವಿಮಳ ಪೂರ್ಣಾ
ಹುತಿಯ ಪಾರಾಯಣದ ನಿಗಮ
ಪ್ರತತಿಗಳ ಪರಿಪೂತ ಪರಿಮಳಮಯ ದಿಶಾವಳಿಯ
ಕ್ರತು ಸಮಾಪ್ತಿಯಲವಭೃತದ ಭೂ
ಪತಿಯ ವಿಮಳಸ್ನಾನ ಪುಣ್ಯೋ
ಚಿತದಲೋಕುಳಿಯಾಡಿ ದಣಿದುದು ಲೋಕ ಸುರನರರ ॥3॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಶ್ರುತಿವಿಧಾನಗಳನ್ನು ಬಲ್ಲವರು ನಿರ್ಮಲವಾದ ಪೂರ್ಣಾಹುತಿಯನ್ನು ಅರ್ಪಿಸಿದರು. ನಿಗಮಾದಿಗಳ ಪಾರಾಯಣ ನಡೆಯಿತು. ಹವಿಸ್ಸಿನ ಪರಿಪೂತ ಪರಿಮಳ ಎಲ್ಲ ದಿಕ್ಕುಗಳಿಗೂ ವ್ಯಾಪಿಸಿತು. ಹೀಗೆ ರಾಜಸೂಯಯಾಗ ಸಮಾಪ್ತಿಗೊಂಡಿತು. ಯಜ್ಞದೀಕ್ಷಿತನಾಗಿದ್ದ ಯುಧಿಷ್ಠಿರ ಅವಭೃತ ಸ್ನಾನ ಮಾಡಿದ. ಆ ಪುಣ್ಯಸ್ನಾನ ಉಚಿತವಾಗುವಂತೆ ಸುರನರರುಗಳೆಲ್ಲ ಓಕುಳಿಯಾಡಿ ಹರ್ಷಗೊಂಡು ತೃಪ್ತಿರಾದರು.
ಪದಾರ್ಥ (ಕ.ಗ.ಪ)
ಪರಿಪೂತ-ಪವಿತ್ರವಾದ, ನಿರ್ಮಲವಾದ
ಮೂಲ ...{Loading}...
ಶ್ರುತಿ ವಿಧಾನರ ವಿಮಳ ಪೂರ್ಣಾ
ಹುತಿಯ ಪಾರಾಯಣದ ನಿಗಮ
ಪ್ರತತಿಗಳ ಪರಿಪೂತ ಪರಿಮಳಮಯ ದಿಶಾವಳಿಯ
ಕ್ರತು ಸಮಾಪ್ತಿಯಲವಭೃತದ ಭೂ
ಪತಿಯ ವಿಮಳಸ್ನಾನ ಪುಣ್ಯೋ
ಚಿತದಲೋಕುಳಿಯಾಡಿ ದಣಿದುದು ಲೋಕ ಸುರನರರ ॥3॥
೦೦೪ ಅರಸ ಚಿತ್ತವಿಸೊನ್ದು ...{Loading}...
ಅರಸ ಚಿತ್ತವಿಸೊಂದು ಲಕ್ಷದ
ಧರಣಿಯಮರರ ಭೋಜನಾಂತಕೆ
ಮೊರೆವುದೊಂದೇ ಬಾರಿ ಶಂಖಧ್ವನಿ ಛಡಾಳದಲಿ
ಪರುಠವಣೆಯಿದು ರಾಜಸೂಯಾ
ಧ್ವರದ ಮೊದಲವಸಾನ ಪರಿಯಂ
ತರದೊಳೋರಂತದಲಿ ಹಗಲಿರುಳೂದಿತನವರತ ॥4॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಒಂದು ಲಕ್ಷ ಜನ ಬ್ರಾಹ್ಮಣರ ಭೋಜನ ಮುಗಿಯಿತೆಂದರೆ ಒಮ್ಮೆ ಗಟ್ಟಿಯಾಗಿ ಎಲ್ಲರ ಕಿವಿಗೂ ಬೀಳುವಂತೆ ಶಂಖವನ್ನು ಊದುತ್ತಿದ್ದರು. ಇದು ಅಲ್ಲಿ ಗೊತ್ತುಪಡಿಸಿದ್ದ ವ್ಯವಸ್ಥೆ. ರಾಜಸೂಯಯಾಗ ಪ್ರಾರಂಭಗೊಂಡಾಗಿನಿಂದ ಅಂತ್ಯವಾಗುವವರೆಗೆ ಒಂದೇ ಸಮನೆ ಹಗಲೂ ಇರುಳೂ ಶಂಖವನ್ನು ಊದುತ್ತಲೇ ಇದ್ದರು.
ಪದಾರ್ಥ (ಕ.ಗ.ಪ)
ಛಡಾಳ-ಅತಿಶಯತೆ,
ಪರುಠವಣೆ-ವ್ಯವಸ್ಥೆ.
ಮೂಲ ...{Loading}...
ಅರಸ ಚಿತ್ತವಿಸೊಂದು ಲಕ್ಷದ
ಧರಣಿಯಮರರ ಭೋಜನಾಂತಕೆ
ಮೊರೆವುದೊಂದೇ ಬಾರಿ ಶಂಖಧ್ವನಿ ಛಡಾಳದಲಿ
ಪರುಠವಣೆಯಿದು ರಾಜಸೂಯಾ
ಧ್ವರದ ಮೊದಲವಸಾನ ಪರಿಯಂ
ತರದೊಳೋರಂತದಲಿ ಹಗಲಿರುಳೂದಿತನವರತ ॥4॥
೦೦೫ ಏಸು ಲಕ್ಷವದೇಸು ...{Loading}...
ಏಸು ಲಕ್ಷವದೇಸು ಕೋಟಿಯ
ದೇಸು ನಿರ್ಬುದವೇಸು ಖರ್ವವ
ದೇಸು ಪದ್ಮ ದ್ವಿಜರ ಗಣನೆಯನರಿವರಾರದನು
ಏಸು ಭಕ್ಷ್ಯೋದನದ ಪರ್ವತ
ರಾಶಿ ದಧಿ ಘೃತ ದುಗ್ಧ ಮಧು ವಾ
ರಾಸಿಯೊಡ್ಡಣೆ ಮೆರೆದುದಿಂದ್ರಪ್ರಸ್ಥ ನಗರಿಯಲಿ ॥5॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಎಷ್ಟು ಲಕ್ಷವೋ, ಎಷ್ಟು ಕೋಟಿಯೋ, ಎಷ್ಟು ನಿರ್ಬುದವೋ, ಎಷ್ಟು ಖರ್ವವೋ, ಎಷ್ಟು ಪದ್ಮವೋ ಊಟಮಾಡಿದ ದ್ವಿಜರ ಗಣನೆಯನ್ನು ಮಾಡಿ ತಿಳಿದವರಾರು ? ಇಂದ್ರಪ್ರಸ್ಥ ನಗರಿಯಲ್ಲಿ ಅನೇಕ ಬಗೆಯ ಭಕ್ಷ್ಯಗಳು, ಅನ್ನದ ಪರ್ವತಗಳ ರಾಶಿ, ಮೊಸರು, ತುಪ್ಪ, ಹಾಲು, ಜೇನುಗಳ ಒಂದೊಂದು ಸಮುದ್ರವೇ ಏರ್ಪಾಟಾಗಿತ್ತು
ಪದಾರ್ಥ (ಕ.ಗ.ಪ)
ವಾರಾಸಿ-ಸಮುದ್ರ,
ಒಡ್ಡಣೆ-ಏರ್ಪಾಟು,
ಟಿಪ್ಪನೀ (ಕ.ಗ.ಪ)
ನಿರ್ಬುದ, ಖರ್ವ, ಇತ್ಯಾದಿ :
ಭಾರತೀಯ ಗಣಿತದಲ್ಲಿ ಎಣಿಕೆಯ ಕ್ರಮದ ಅಂಕೆ ಸಂಖ್ಯೆಗಳಿಗೆ ಅನೇಕ ಪದಗಳನ್ನು ಟಂಕಿಸಲಾಗಿದೆ. ಅವುಗಳ ಪ್ರಮಾಣವನ್ನು ಗಮನಿಸಿದರೆ ಸುಲಭವಾಗಿ ಊಹಿಸಲು ಅಸಾಧ್ಯ ಎನಿಸುತ್ತವೆ. ಬೇರೆ ಯಾವ ದೇಶದಲ್ಲಿಯೂ ಇಂತಹ ಸಂಖ್ಯೆಗಳನ್ನು ಅಂದಾಜಿಸಿದಂತಿಲ್ಲ, ಅವುಗಳ ಅಗತ್ಯವನ್ನು ಕಂಡುಕೊಂಡಂತಿಲ್ಲ. ಉದಾಹರಣೆಗೆ ಯೂರೋಪಿನಲ್ಲಿ ಬಹುಕಾಲ ಗ್ರೀಕರು ಬಳಸಿದ ಮೈರಾಯಿಡ್ (10^8) ಎಂಬುದೇ ಅತ್ಯಂತ ದೊಡ್ಡ ಸಂಖ್ಯೆಯಾಗಿತ್ತು. ಈಗ ಮಾತ್ರ ಅವರು ಬಿಲಿಯನ್, ಟ್ರಿಲಿಯನ್, ಕ್ವಿಂಟಿಲಿಯನ್ ಮತ್ತು ಈಚೆಗೆ ಅತಿದೊಡ್ಡ ಸಂಖ್ಯೆಯಾಗಿ ಸೆಂಟಿಲಿಯನ್ ( 10^300) ಎಂಬ ಅಂಕಿತಗಳನ್ನು ಬಳಸುತ್ತಿದ್ದಾರೆ. ಗೊಗೋಲ್ ಎಂಬ ಸಂಖ್ಯೆ 10^100 ಎಂಬ ಮೌಲ್ಯವನ್ನು ಪ್ರತಿನಿಧಿಸುತ್ತದೆ. ಈ ಸಂಖ್ಯೆಯನ್ನು ನೆನಪಿಗೆ ತರುವ ಇನ್ನೊಂದು ಸಂಗತಿ ಎಂದರೆ ಈಗ ಜನಪ್ರಿಯವಾಗಿರುವ ಗೂಗಲ್ ಎಂಬ ಮಾಹಿತಿ ತಂತ್ರಜ್ಞಾನ ಸಂಸ್ಥೆ.
ಭಾರತದಲ್ಲಿ ಅತಿ ಪ್ರಾಚೀನವಾಗಿ ಉಲ್ಲೇಖಗೊಂಡಿರುವ ಸಂಖ್ಯೆ ಕ್ವಿಂಟಿಲಿಯನ್ಗಿನ್ನ ಬಹುದೊಡ್ಡದಾಗಿದೆ ಎಂಬುದು ಗಮನಾರ್ಹ. ಇಲ್ಲಿ ಭಾರತೀಯರು ಕಂಡುಕೊಂಡು ಬಳಸಿದ ಎಣಿಕೆಯ ಪದಗಳನ್ನು ನೀಡಲಾಗಿದೆ.
ಅವುಗಳ ವಿವರಗಳನ್ನು ನೀಡಿರುವವರು : ಪ್ರೊ. ಎಸ್. ಬಾಲಚಂದ್ರರಾವ್, ಬೆಂಗಳೂರು.
ವೇದ ಉಪನಿಷತ್ತುಗಳಿಂದ ಹಿಡಿದು ರಾಮಾಯಣ ಮಹಾಭಾರತಗಳಲ್ಲಿಯೂ ಇವು ಉಲ್ಲೇಖಗೊಂಡಿವೆ. ಕುಮಾರವ್ಯಾಸ ಇವುಗಳಲ್ಲಿ ಕೆಲವನ್ನು ಉಲ್ಲೇಖಿಸುತ್ತಾನೆ. (ಸಭಾಪರ್ವ, 11ನೆಯ ಸಂಧಿ, ಐದನೆಯ ಪದ್ಯ) ಆದರೆ ಅವು ಬೇರೆ ಬೇರೆ ಆಕರಗಳಲ್ಲಿ ಬೇರೆಬೇರೆ ಅಂಕಿತಗಳಲ್ಲಿ ಬಳಕೆಯಾಗಿವೆ.
ಒಟ್ಟಾರೆ ನಮ್ಮಲ್ಲಿ ಇದ್ದಿರಬಹುದಾದ ಅಂಕಿತಗಳನ್ನು ಹೀಗೆ ಪಟ್ಟಿಮಾಡಬಹುದು.
- ಎರಡನೇ ಭಾಸ್ಕರನ ಲೀಲಾವತೀ ಗ್ರಂಥ
ಹತ್ತು ಕೋಟಿ - ಅರ್ಬುದ, ಅಬ್ದ (10^8),
ನೂರು ಅರ್ಬುದ - ಖರ್ವ (10^10),
ಹತ್ತು ಖರ್ವ - ನಿಖರ್ವ (10^11),
ಹತ್ತು ನಿಖರ್ವ- ಮಹಾಪದ್ಮ (10^12),
ಹತ್ತು ಮಹಾಪದ್ಮ - ಶಂಖ (10^13),
ಹತ್ತು ಶಂಖ - ಜಲಧಿ (10^14),
ಹತ್ತು ಜಲಧಿ - ಅಂತ್ಯ (10^15),
ಹತ್ತು ಅಂತ್ಯ - ಮಧ್ಯ (10^16)
ಹತ್ತು ಮಧ್ಯ - ಪರಾರ್ಧ (10^17)
ಗಮನಿಸಿ : ಇಲ್ಲಿಯ ಅಂಕಿತಗಳು ಬೇರೆ ಬೇರೆ ಪದ್ಧತಿಯಲ್ಲಿ ಬೇರೆ ಬೇರೆ ಮೌಲ್ಯಗಳನ್ನು ಸೂಚಿಸುತ್ತವೆ. ಉದಾಹರಣೆಗೆ ಪರಾರ್ಧ ಎನ್ನುವುದನ್ನು ಯಜುರ್ವೇದದ ತೈತ್ತರೀಯ ಸಂಹಿತೆಯಲ್ಲಿ (10^12),ಎಂಬ ಮೌಲ್ಯವನ್ನು ಸೂಚಿಸಲು ಬಳಸಲಾಗಿದೆ. - ವಾಲ್ಮೀಕಿ ರಾಮಾಯಣ (ಕಪಿಸೈನ್ಯದ ಎಣಿಕೆಯ ಸಂದರ್ಭದಲ್ಲಿ ಈ ಅಂಕಿತಗಳನ್ನು ಕಾಣಬಹುದು. ಯುದ್ಧಕಾಂಡ, ಸರ್ಗ 28)
ಶಂಖ - (10^12), ( ಒಂದು ಲಕ್ಷ ಕೋಟಿ)
ಮಹಾಶಂಖ - (10^17),
ವೃಂದ - (10^22),
ಮಹಾವೃಂದ - (10^27),
ಪದ್ಮ- (10^32),
ಮಹಾಪದ್ಮ - (10^37),
ಖರ್ವ - (10^42),
ಮಹಾಖರ್ವ - (10^47),
ಸಮುದ್ರ - (10^52),
ಔಘ - (10^57),
ಮಹೌಘ -(10^62), - ಬೌದ್ಧಗ್ರಂಥ ಲಲಿತ ವಿಸ್ತರ
ಲಲಿತವಿಸ್ತರದಲ್ಲಿ ಉಲ್ಲೇಖವಾದಂತೆ ಅರ್ಜುನ ಎಂಬ ಗಣಿತಜ್ಞನು ಗೌತಮ(ಬೋಧಿಸ್ತವ)ನನ್ನು ಕೋಟಿಯ ನಂತರದ ಸಂಖ್ಯೆಗಳನ್ನು ನೂರರ ಮಡಿಯಲ್ಲಿ ಹೆಚ್ಚಿಸಿ ಹೇಳಬಲ್ಲೆಯಾ ಎಂದು ಕೇಳಿದಾಗ ಅವನು ಈ ಮುಂದೆ ಸೂಚಿಸಿರುವ ಸಂಖ್ಯೆಗಳನ್ನು ಹೇಳಿದನಂತೆ.
ನೂರು ಕೋಟಿ - ಆಯತ 10 ^ 9
ನೂರು ಆಯತ - ನಿಯತ 10 ^ 11
ನೂರು ನಿಯತ - ಕಂಕರ 10 ^ 13
ನೂರು ಕಂಕರ - ವಿವರ 10 ^ 15
ನೂರು ವಿವರ - ಕ್ಷೋಭ್ಯ 10 ^ 17
ನೂರು ಕ್ಷೋಭ್ಯ - ವಿವಹ 10 ^ 19
ನೂರು ವಿವಹ - ಉತ್ಸಂಗ 10 ^ 21
ನೂರು ಉತ್ಸಂಗ- ಬಹುಳ 10 ^ 23
ನೂರು ಬಹುಳ- ನಾಗಬಲ 10 ^ 25
ನೂರು ನಾಗಬಲ-ತಿತಿಲಂಬ 10 ^ 27
ನೂರು ತಿತಿಲಂಬ-ವ್ಯವಸ್ಥನ ಪ್ರಜ್ಞಪ್ತಿ 10 ^ 29
ನೂರು ವ್ಯವಸ್ಥನ ಪ್ರಜ್ಞಪ್ತಿ- ಹೇತುಹಿಳ 10 ^ 31
ನೂರು ಹೇತುಹಿಳ- ಕರಹು 10 ^ 33
ನೂರು ಕರಹು -ಹೇತ್ವಿಂದ್ರಿಯ 10 ^ 35
ನೂರು ಹೇತ್ವಿಂದ್ರಿಯ- ಸಮಾಪ್ತ ಲಂಬ 10 ^ 37
ನೂರು ಸಮಾಪ್ತಲಂಬ - ಗಣನಗತಿ 10 ^ 39
ನೂರು ಗಣನಗತಿ - ನಿರವದ್ಯ 10 ^ 41
ನೂರು ನಿರವದ್ಯ - ಮುದ್ರಾಬಲ 10 ^ 43
ನೂರು ಮುದ್ರಾಬಲ - ಸರ್ವಬಲ 10 ^ 45
ನೂರು ಸರ್ವಬಲ - ವಿಸಂಜ್ಞಾಗತಿ 10 ^ 47
ನೂರು ವಿಸಂಜ್ಞಾಗತಿ - ಸರ್ವಜ್ಞಾ 10 ^ 49
ನೂರು ಸರ್ವಜ್ಞಾ - ವಿಭೂತಂಗಮಾ 10 ^ 51
ನೂರು ವಿಭೂತಂಗಮಾ - ತಲ್ಲಕ್ಷಣ 10 ^ 53
ಹೀಗೆ ತಲ್ಲಕ್ಷಣವೆಂದರೆ ಒಂದರ ಮುಂದೆ ಐವತ್ಮೂರು ಸೊನ್ನೆಗಳನ್ನು ಬರೆದಾಗ ದೊರೆಯುವ ಒಂದು ಬೃಹತ್ಸಂಖ್ಯೆ.
ದಕ್ಷಿಣ ಭಾರತದ ಗಣಿತಜ್ಞರು ಸಂಖ್ಯೆ ಮತ್ತು ಅವುಗಳ ಹೆಸರುಗಳ ಕುರಿತು ತಮ್ಮ ಕಾಣಿಕೆಯನ್ನು ನೀಡಿದ್ದಾರೆ. ಆಕರ :
ಮಧ್ಯಯುಗೀನ ಗಣಿತ ಶಾಸ್ತ್ರಕ್ಕೆ ದಕ್ಷಿಣ ಭಾರತದ ಕೊಡುಗೆ, ಲೇಖಕರು ವೆಣುಗೋಪಾಲ ಹೇರೂರ, ಸಂಪಾದಕರು, ಸಂ.ಮಧುಸೂದನ ಶಾಸ್ತ್ರೀ ಹಂಪೀಹೊಳಿ
ಪ್ರಕಾಶಕರು ಸನಾತನ ಜ್ಞಾನ ವಿಜ್ಞಾನ ಪ್ರತಿಷ್ಠಾನ, ಧಾರವಾಡ, ಪ್ರಕಟಣಾ ವರ್ಷ,2003
ಅವುಗಳ ವಿವರಗಳು ಹೀಗಿವೆ.
ಶ್ರೀಧರ (750), ಶ್ರೀಪತಿ (1039), ಭಾಸ್ಕರ (1150), ನಾರಾಯಣ (1356)
ಈ ಎಲ್ಲರು ಹೀಗೆ ಸೂಚಿಸಿದ್ದಾರೆ.
ಸಂಖ್ಯಾ ಸ್ಥಾನ ಸ್ಥಾನ ಬೆಲೆ ಸ್ಥಾನ ನಾಮ
1 10^0 ಏಕ
2 10^1 ದಶ
3 10^2 ಶತ
4 10^3 ಸಹಸ್ರ
5 10^4 ಆಯುತ
6 10^5 ಲಕ್ಷ
7 10^6 ಪ್ರಯುತ
8 10^7 ಕೋಟಿ
9 10^8 ಅರ್ಬುದ
10 10^9 ಅಬ್ಜ, ಪದ್ಮ, ಸರೋಜ
11 10^10 ಖರ್ವ
12 10^11 ನಿಖರ್ವ
13 10^12 ಮಹಾಸರೋಜ,
ಮಹಾಪದ್ಮ ಮಹಾಬ್ಜ
14 10^13 ಶಂಕು
15 10^14 ಸರಿತಾಪತಿ ಜಲಧಿ
ಪಾರವಾರ
16 10^15 ಅಂತ್ಯ
17 10^16 ಮಧ್ಯ
18 10^17 ಪರಾರ್ಧ
ಮಹಾವೀರ (850)
ಸಂಖ್ಯಾಸ್ಥಾನ ಸ್ಥಾನ ಬೆಲೆ ಸ್ಥಾನನಾಮ
1 10^0 ಏಕ
2 10^1 ದಶ
3 10^2 ಶತ
4 10^3 ಸಹಸ್ರ
5 10^4 ದಶ ಸಹಸ್ರ
6 10^5 ಲಕ್ಷ
7 10^6 ದಶಲಕ್ಷ
8 10^7 ಕೋಟಿ
9 10^8 ದಶಕೋಟಿ
10 10^9 ಶತ ಕೋಟಿ
11 10^10 ಅರ್ಬುದ
12 10^11 ನ್ಯರ್ಬುದ
13 10^12 ಖರ್ವ
14 10^13 ಮಹಾಖರ್ವ
15 10^14 ಪದ್ಮ
16 10^15 ಮಹಾಪದ್ಮ
17 10^16 ಕ್ಷೋಣಿ
18 10^17 ಮಹಾಕ್ಷೋಣಿ
19 10^18 ಶಂಖ
20 10^19 ಮಹಾಶಂಖ
21 10^20 ಮಹಾವೀರ
22 10^21 ಮಹಾಕ್ಷಿತಿ
23 10^22 ಕ್ಷೋಭ
24 10^23 ಮಹಾಕ್ಷೋಭ
ಯಲ್ಲಯ್ಯ (1480)
ಸಂಖ್ಯಾಸ್ಥಾನ ಸ್ಥಾನ ಬೆಲೆ ಸ್ಥಾನ ನಾಮ
1 10^0 ಏಕ
2 10^1 ದಶ
3 10^2 ಶತ
4 10^3 ಸಹಸ್ರ
5 10^4 ಆಯುತ
6 10^5 ಲಕ್ಷ
7 10^6 ಪ್ರಯುತ
8 10^7 ಕೋಟಿ
9 10^8 ದಶಕೋಟಿ
10 10^9 ಶತ ಕೋಟಿ
11 10^10 ಅರ್ಬುದ
12 10^11 ನ್ಯರ್ಬುದ
13 10^12 ಖರ್ವ
14 10^13 ಮಹಾಖರ್ವ
15 10^14 ಪದ್ಮ
16 10^15 ಮಹಾಪದ್ಮ
17 10^16 ಶಂಖ
18 10^17 ಮಹಾಶಂಖ
19 10^18 ಕ್ಷೋಣಿ
20 10^19 ಮಹಾಕ್ಷೋಣಿ
21 10^20 ಮಹಾವೀರ
22 10^21 ಮಹಾಕ್ಷಿತಿ
23 10^22 ಕ್ಷೋಭ
24 10^23 ಮಹಾಕ್ಷೋಭ
25 10^24 ಪರಾಧನ
26 10^25 ಸಾಗರ
27 10^26 ಅನಂತ
28 10^27 ಚಿಂತ್ಯ
29 10^28 ಭೂರಿ
ಪಾವಳೂರಿ ಮಲ್ಲಿಕಾರ್ಜುನ (ಸು.ಕ್ರಿ.ಶ. 1100)
ಸಂಖ್ಯಾಸ್ಥಾನ ಸ್ಥಾನಬೆಲೆ ಸ್ಥಾನ ನಾಮ
1 10^0 ಏಕ
2 10^1 ದಶ
3 10^2 ಶತ
4 10^3 ಸಹಸ್ರ
5 10^4 ದಶ ಸಹಸ್ರ
6 10^5 ಲಕ್ಷ
7 10^6 ದಶಲಕ್ಷ
8 10^7 ಕೋಟಿ
9 10^8 ದಶಕೋಟಿ
10 10^9 ಶತ ಕೋಟಿ
11 10^10 ಅರ್ಬುದ
12 10^11 ನ್ಯರ್ಬುದ
13 10^12 ಖರ್ವ
14 10^13 ಮಹಾಖರ್ವ
15 10^14 ಪದ್ಮ
16 10^15 ಮಹಾಪದ್ಮ
17 10^16 ಶಂಖ
18 10^17 ಮಹಾಶಂಖ
19 10^18 ಕ್ಷೋಣಿ
20 10^19 ಮಹಾಕ್ಷೋಣಿ
21 10^20 ಮಹಾವೀರ
22 10^21 ಮಹಾಕ್ಷಿತಿ
23 10^22 ಕ್ಷೋಭ
24 10^23 ಮಹಾಕ್ಷೋಭ
25 10^24 ನಿಧಿ
26 10^25 ಮಹಾನಿಧಿ
27 10^26 ಪರಾರ್ಧ
28 10^27 ಪರತ
29 10^28 ಅನಂತ
30 10^29 ಸಾಗರ
31 10^30 ಅವ್ಯಯ
32 10^31 ಅಪ್ರಮೇಯ
33 10^32 ಅತುಲ
34 10^33 ಅಮೇಯ
35 10^34 ಭೂರಿ
36 10^35 ಮಹಾಭೂರಿ
ರಾಜಾದಿತ್ಯ (1190)
ಸಂಖ್ಯಾಸ್ಥಾನ ಸ್ಥಾನ ಬೆಲೆ ಸ್ಥಾನ ನಾಮ
1 10^0 ಎಕ್ಕಂ
2 10^1 ದಾಹಂ
3 10^2 ಶತಂ
4 10^3 ಸಾವಿರ
5 10^4 ದಾ ಸಾವಿರ
6 10^5 ಲಕ್ಷ
7 10^6 ದಾ ಲಕ್ಷ
8 10^7 ಕೋಟಿ
9 10^8 ದಾ ಕೋಟಿ
10 10^9 ಶತ ಕೋಟಿ
11 10^10 ಅರ್ಬುದ
12 10^11 ನ್ಯರ್ಬುದ
13 10^12 ಖರ್ವ
14 10^13 ಮಹಾಖರ್ವ
15 10^14 ಪದ್ಮ
16 10^15 ಮಹಾಪದ್ಮ
17 10^16 ಕ್ಷೋಣಿ
18 10^17 ಮಹಾಕ್ಷೋಣಿ
19 10^18 ಶಂಖ
20 10^19 ಮಹಾಶಂಖ
21 10^20 ಕ್ಷಿತಿ
22 10^21 ಮಹಾಕ್ಷಿತಿ
23 10^22 ಕ್ಷೋಭ
24 10^23 ಮಹಾಕ್ಷೋಭ
25 10^24 ನದಿ
26 10^25 ಮಹಾನದಿ
27 10^26 ನಗ
28 10^27 ಮಹಾನಗ
29 10^28 ರಥ
30 10^29 ಮಹಾರಥ
31 10^30 ಹರಿ
32 10^31 ಮಹಾಹರಿ
33 10^32 ಫಣಿ
34 10^33 ಮಹಾಫಣಿ
35 10^34 ಕ್ರತು
36 10^35 ಮಹಾಕ್ರತು
37 10^36 ಸಾಗರ
38 10^37 ಮಹಾಸಾಗರ
39 10^38 ಪರಿಮಿತ
40 10^39 ಮಹಾಪರಿಮಿತ
ಮೂಲ ...{Loading}...
ಏಸು ಲಕ್ಷವದೇಸು ಕೋಟಿಯ
ದೇಸು ನಿರ್ಬುದವೇಸು ಖರ್ವವ
ದೇಸು ಪದ್ಮ ದ್ವಿಜರ ಗಣನೆಯನರಿವರಾರದನು
ಏಸು ಭಕ್ಷ್ಯೋದನದ ಪರ್ವತ
ರಾಶಿ ದಧಿ ಘೃತ ದುಗ್ಧ ಮಧು ವಾ
ರಾಸಿಯೊಡ್ಡಣೆ ಮೆರೆದುದಿಂದ್ರಪ್ರಸ್ಥ ನಗರಿಯಲಿ ॥5॥
೦೦೬ ಓಗರದ ರಾಶಿಗಳ ...{Loading}...
ಓಗರದ ರಾಶಿಗಳ ಗಿರಿ ಕಂ
ಡಾಗಲಂತಿರೆ ಮರಳಿ ಕಾಣೆನು
ಸಾಗರದವೊಲೆ ದಧಿ ಘೃತಾದಿ ಮಹಾ ಪ್ರವಾಹಚಯ
ಆಗಳಂತಿರೆ ಬತ್ತುವವು ನಿಮಿ
ಷಾಗಮಕೆ ತುಂಬುವವು ಯಮಜನ
ಯಾಗಲಕ್ಷ್ಮಿಯನಲ್ಪಮತಿ ಬಣ್ಣಿಸುವಡರಿದೆಂದ ॥6॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅನ್ನದ ರಾಶಿಯ ಪರ್ವತಗಳನ್ನು ನೋಡಿದವರು ಕ್ಷಣ ಬಿಟ್ಟು ಹಿಂತಿರುಗಿ ನೋಡಿದರೆ ಅವು ಅಲ್ಲಿ ಇರುತ್ತಲೇ ಇರಲಿಲ್ಲ. ಸಾಗರದ ಹಾಗೆ ತುಂಬಿ ಹರಿಯುತ್ತಿದ್ದ ಮೊಸರು ತುಪ್ಪ ಇವೇ ಮೊದಲಾದುವು. ಆಗಾಗಲೇ ಬತ್ತಿ ಹೋಗುತ್ತಿದ್ದುವು. ಮತ್ತೆ ಮತ್ತೆ ತುಂಬುತ್ತಿದ್ದುವು. ಯುಧಿಷ್ಠಿರನ ಯಾಗಲಕ್ಷ್ಮಿಯನ್ನು ಅಲ್ಪಮತಿಯಾದವನು ವರ್ಣಿಸಲಾರ.
ಪದಾರ್ಥ (ಕ.ಗ.ಪ)
ಮೂಲ ...{Loading}...
ಓಗರದ ರಾಶಿಗಳ ಗಿರಿ ಕಂ
ಡಾಗಲಂತಿರೆ ಮರಳಿ ಕಾಣೆನು
ಸಾಗರದವೊಲೆ ದಧಿ ಘೃತಾದಿ ಮಹಾ ಪ್ರವಾಹಚಯ
ಆಗಳಂತಿರೆ ಬತ್ತುವವು ನಿಮಿ
ಷಾಗಮಕೆ ತುಂಬುವವು ಯಮಜನ
ಯಾಗಲಕ್ಷ್ಮಿಯನಲ್ಪಮತಿ ಬಣ್ಣಿಸುವಡರಿದೆಂದ ॥6॥
೦೦೭ ಅರಸ ಮೈಯಿಕ್ಕಿದನು ...{Loading}...
ಅರಸ ಮೈಯಿಕ್ಕಿದನು ಸನ್ಮುನಿ
ವರ ಸಮಾಜಕೆ ನಿಮ್ಮ ಕೃಪೆಯಲಿ
ಧರಣಿಪಾಧ್ವರ ಸಿದ್ಧಿಯಾಯ್ತು ನಿರಂತರಾಯದಲಿ
ಕರುಣ ನಿಮ್ಮದು ನಿಮ್ಮ ಮಿಗೆ ಸ
ತ್ಕರಿಸಲರಿಯೆನು ಹೆಚ್ಚು ಕುಂದಿನ
ಹುರುಳನೀಕ್ಷಿಸಲಾಗದೆಂದನು ಮುಗಿದು ಕರಯುಗವ ॥7॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಯುಧಿಷ್ಠಿರ ಸನ್ಮುನಿವರರ ಸಮೂಹಕ್ಕೆ ಅಡ್ಡಬಿದ್ದು ನಮಸ್ಕರಿಸಿ, “ನಿಮ್ಮ ಕೃಪೆಯಿಂದ ಈ ರಾಜಸೂಯಯಾಗ ನಿರ್ವಿಘ್ನವಾಗಿ
ನೆರವೇರಿತು. ಎಲ್ಲವೂ ನಿಮ್ಮ ದಯೆ. ನಿಮ್ಮನ್ನು ನಾನು ಹೇಗೆ ವಿಶೇಷವಾಗಿ ಸತ್ಕರಿಸಿಬೇಕೆಂಬುದನ್ನು ತಿಳಿಯೆನು. ಲೋಪದೋಷಗಳು ಏನೇ ನಡೆದಿದ್ದರೂ ಅದನ್ನು ನೋಡಬಾರದು." ಎನ್ನುತ್ತಾ ಕೈಮುಗಿದ.
ಪದಾರ್ಥ (ಕ.ಗ.ಪ)
ಮೈಯಿಕ್ಕು-ಬಾಗಿ ನಮಸ್ಕರಿಸು
ಮೂಲ ...{Loading}...
ಅರಸ ಮೈಯಿಕ್ಕಿದನು ಸನ್ಮುನಿ
ವರ ಸಮಾಜಕೆ ನಿಮ್ಮ ಕೃಪೆಯಲಿ
ಧರಣಿಪಾಧ್ವರ ಸಿದ್ಧಿಯಾಯ್ತು ನಿರಂತರಾಯದಲಿ
ಕರುಣ ನಿಮ್ಮದು ನಿಮ್ಮ ಮಿಗೆ ಸ
ತ್ಕರಿಸಲರಿಯೆನು ಹೆಚ್ಚು ಕುಂದಿನ
ಹುರುಳನೀಕ್ಷಿಸಲಾಗದೆಂದನು ಮುಗಿದು ಕರಯುಗವ ॥7॥
೦೦೮ ಮನ್ನಿಸಿದನವರುಗಳನುಡುಗೊರೆ ...{Loading}...
ಮನ್ನಿಸಿದನವರುಗಳನುಡುಗೊರೆ
ಹೊನ್ನ ವಿವಿಧಾಭರಣ ಪಶುಗಳ
ಲುನ್ನತಾಶೀರ್ವಾದ ವಚನದೊಳವನಿಪನ ಹರಸಿ
ಸನ್ನುತರು ತಮ್ಮಾಶ್ರಮಕೆ ಸಂ
ಪನ್ನ ಸತ್ಯರು ಮರಳಿದರು ಪ್ರತಿ
ಪನ್ನ ಯಜ್ಞವಿಳಾಸನೊಪ್ಪಿದನಿಂದ್ರ ವಿಭವದಲಿ ॥8॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅವರುಗಳನ್ನೆಲ್ಲ ರಾಜ ನಾನಾ ಉಡುಗೊರೆಗಳಿಂದ, ಚಿನ್ನ, ನಾನಾ ಆಭರಣಗಳು, ಹಸುಗಳಿಂದ ಗೌರವಿಸಿದ. ಸನ್ನುತರೂ ಸಂಪನ್ನ ಸತ್ಯರೂ ಆದ ಆ ಮುನಿಶ್ರೇಷ್ಠರು ಉನ್ನತ ಆಶೀರ್ವಾದದಿಂದ ಅವನನ್ನು ಹರಸಿ ತಮ್ಮ ತಮ್ಮ ಆಶ್ರಮಕ್ಕೆ ಹಿಂತಿರುಗಿದರು. ಯಜ್ಞವನ್ನು ನೆರವೇರಿಸಿದ ಉಲ್ಲಾಸದಿಂದ ಯುಧಿಷ್ಠಿರ ಇಂದ್ರನ ವೈಭವದಿಂದ ಶೋಭಿಸುತ್ತಿದ್ದ.
ಪದಾರ್ಥ (ಕ.ಗ.ಪ)
ಮೂಲ ...{Loading}...
ಮನ್ನಿಸಿದನವರುಗಳನುಡುಗೊರೆ
ಹೊನ್ನ ವಿವಿಧಾಭರಣ ಪಶುಗಳ
ಲುನ್ನತಾಶೀರ್ವಾದ ವಚನದೊಳವನಿಪನ ಹರಸಿ
ಸನ್ನುತರು ತಮ್ಮಾಶ್ರಮಕೆ ಸಂ
ಪನ್ನ ಸತ್ಯರು ಮರಳಿದರು ಪ್ರತಿ
ಪನ್ನ ಯಜ್ಞವಿಳಾಸನೊಪ್ಪಿದನಿಂದ್ರ ವಿಭವದಲಿ ॥8॥
೦೦೯ ರಾಜ ವರ್ಗವನವರವರ ...{Loading}...
ರಾಜ ವರ್ಗವನವರವರ ನಿಜ
ತೇಜ ಮಾನ್ಯೋಚಿತದ ಗಜ ರಥ
ವಾಜಿ ವಿವಿಧಾಭರಣ ವಸನ ವಧೂ ಕದಂಬದಲಿ
ಆ ಜಗತ್ಪತಿಯುಳಿಯೆ ಪಾರ್ಥಿವ
ರಾಜಿಯನು ಮನ್ನಿಸಿ ಯುಧಿಷ್ಠಿರ
ರಾಜನನುಜರು ಕೂಡಿ ಕಳುಹಿಸಿದನು ಮಹೀಶ್ವರರ ॥9॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ರಾಜವರ್ಗವನ್ನು ಅವರವರ ತೇಜಸ್ಸು ಮಾನ್ಯತೆಗಳಿಗೆ ಉಚಿತವೆನಿಸುವಂತೆ ಗಜ, ರಥ, ವಾಜಿ ಬಗೆಬಗೆಯ ಆಭರಣ, ವಸ್ತ್ರ,
ವಧೂ ನಿವಹಗಳಿಂದ ಗೌರವಿಸಿದ. ಜಗತ್ಪತಿಯಾದ ಶ್ರೀಕೃಷ್ಣನೊಬ್ಬನನ್ನು ಬಿಟ್ಟು ಎಲ್ಲ ರಾಜರನ್ನೂ ತನ್ನ ತಮ್ಮಂದಿರೊಡಗೂಡಿ
ಗೌರವದಿಂದ ಕಳಿಸಿಕೊಟ್ಟ.
ಪದಾರ್ಥ (ಕ.ಗ.ಪ)
ಕದಂಬ-ನಿವಹ , ಸಮೂಹ
ಮೂಲ ...{Loading}...
ರಾಜ ವರ್ಗವನವರವರ ನಿಜ
ತೇಜ ಮಾನ್ಯೋಚಿತದ ಗಜ ರಥ
ವಾಜಿ ವಿವಿಧಾಭರಣ ವಸನ ವಧೂ ಕದಂಬದಲಿ
ಆ ಜಗತ್ಪತಿಯುಳಿಯೆ ಪಾರ್ಥಿವ
ರಾಜಿಯನು ಮನ್ನಿಸಿ ಯುಧಿಷ್ಠಿರ
ರಾಜನನುಜರು ಕೂಡಿ ಕಳುಹಿಸಿದನು ಮಹೀಶ್ವರರ ॥9॥
೦೧೦ ಫಲುಗುಣನು ಧೃತರಾಷ್ಟ್ರ ...{Loading}...
ಫಲುಗುಣನು ಧೃತರಾಷ್ಟ್ರ ಭೀಷ್ಮರ
ಕಳುಹಿದನು ಗುರು ಗುರುತನೂಜರ
ಬಳಿಯೊಳನಿಲಜ ಬಂದನಾ ಕೃಪನೊಡನೆ ಸಹದೇವ
ಬಳಿಯಲೈದಿದ ನಕುಲನಾ ಸೌ
ಬಲನ ಸೈಂಧವ ಶಲ್ಯನನು ಕೌ
ಸಲ ವಿರಾಟ ದ್ರುಪದಸುತ ಭಗದತ್ತ ಭೂಪತಿಯ ॥10॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಧೃತರಾಷ್ಟ್ರ ಭೀಷ್ಮರನ್ನು ಅರ್ಜುನ ಸ್ವಲ್ಪ ದೂರ ಜೊತೆಯಲ್ಲಿ ಹೋಗಿ ಕಳಿಸಿಕೊಟ್ಟ. ದ್ರೋಣ ಅಶ್ವತ್ಥಾಮರನ್ನು ಭೀಮ ಜೊತೆಗೂಡಿ ಹೋಗಿ ಬೀಳ್ಕೊಂಡ. ಕೃಪನೊಡನೆ ಸಹದೇವ ಹೋಗಿ ಬೀಳ್ಕೊಂಡ. ಶಕುನಿ, ಸೈಂಧವ, ಶಲ್ಯ, ಕೌಸಲ, ವಿರಾಟರನ್ನು ನಕುಲ ಕಳಿಸಿಕೊಟ್ಟ. ಭಗದತ್ತನನ್ನು ದ್ರುಪದನ ಮಗ ಕಳಿಸಿಕೊಟ್ಟ.
ಪದಾರ್ಥ (ಕ.ಗ.ಪ)
ಮೂಲ ...{Loading}...
ಫಲುಗುಣನು ಧೃತರಾಷ್ಟ್ರ ಭೀಷ್ಮರ
ಕಳುಹಿದನು ಗುರು ಗುರುತನೂಜರ
ಬಳಿಯೊಳನಿಲಜ ಬಂದನಾ ಕೃಪನೊಡನೆ ಸಹದೇವ
ಬಳಿಯಲೈದಿದ ನಕುಲನಾ ಸೌ
ಬಲನ ಸೈಂಧವ ಶಲ್ಯನನು ಕೌ
ಸಲ ವಿರಾಟ ದ್ರುಪದಸುತ ಭಗದತ್ತ ಭೂಪತಿಯ ॥10॥
೦೧೧ ಅರಸ ಕೇಳೈ ...{Loading}...
ಅರಸ ಕೇಳೈ ಪಾಂಡ್ಯ ಭೂಮೀ
ಶ್ವರ ಕಳಿಂಗ ಪ್ರಮುಖ ತೆಂಕಣ
ಧರಣಿಪರ ಬಳಿಯಲಿ ಘಟೋತ್ಕಚ ಯೋಜನಾಂತರವ
ವರ ಕುಮಾರರು ನಿಖಿಳ ಪೃಥ್ವೀ
ಶ್ವರರನವರವರುಚಿತದಲಿ ಸತು
ಕರಿಸಿ ಮರಳಿದು ಬಂದರಿಂದ್ರಪ್ರಸ್ಥ ಪುರವರಕೆ ॥11॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಪಾಂಡ್ಯ ಕಳಿಂಗ ಮೊದಲಾದ ದಕ್ಷಿಣದೇಶಗಳ ರಾಜರೊಡನೆ ಘಟೋತ್ಕಚ ಯೋಜನಾಂತರಗಳವರೆಗೆ ಹೋಗಿ ಬೀಳ್ಕೊಟ್ಟ.
ಉಳಿದ ಎಲ್ಲ ರಾಜರುಗಳನ್ನು ಪಾಂಡವ ಕುಮಾರರು ಅವರವರನ್ನು ಯಥೋಚಿತವಾಗಿ ಸತ್ಕರಿಸಿ ಬೀಳ್ಕೊಟ್ಟು ಹಿಂತಿರುಗಿದರು.
ಎಲ್ಲರೂ ಇಂದ್ರಪ್ರಸ್ಥ ನಗರವನ್ನು ಸೇರಿದರು.
ಪದಾರ್ಥ (ಕ.ಗ.ಪ)
ಮೂಲ ...{Loading}...
ಅರಸ ಕೇಳೈ ಪಾಂಡ್ಯ ಭೂಮೀ
ಶ್ವರ ಕಳಿಂಗ ಪ್ರಮುಖ ತೆಂಕಣ
ಧರಣಿಪರ ಬಳಿಯಲಿ ಘಟೋತ್ಕಚ ಯೋಜನಾಂತರವ
ವರ ಕುಮಾರರು ನಿಖಿಳ ಪೃಥ್ವೀ
ಶ್ವರರನವರವರುಚಿತದಲಿ ಸತು
ಕರಿಸಿ ಮರಳಿದು ಬಂದರಿಂದ್ರಪ್ರಸ್ಥ ಪುರವರಕೆ ॥11॥
೦೧೨ ಕರೆಸಿದನು ಹರಿ ...{Loading}...
ಕರೆಸಿದನು ಹರಿ ಪಾಂಡುಪುತ್ರರ
ನರಸಿ ಸಹಿತೇಕಾಂತ ಭವನದೊ
ಳುರುತರ ಪ್ರೇಮೈಕ ರಸ ಸಂಸಿಕ್ತ ವಚನದಲಿ
ಭರಿತವಾಯಿತೆ ರಾಜಸೂಯಾ
ಧ್ವರ ಸದಾಹುತಿ ತೃಪ್ಯ ಮಾಣಾ
ಮರ ಮಹೀಶ್ವರ ವಿಭವ ವಿಳಸಿತ ಪಾಂಡು ಪದವೆಂದ ॥12॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಬಂದಿದ್ದ ಅತಿಥಿಗಳೆಲ್ಲರೂ ತಮ್ಮ ತಮ್ಮ ನಗರಿಗಳಿಗೆ ಹಿಂತಿರುಗಿದ ಮೇಲೆ, ಹರಿಯು ಅರಸಿಯಾದ ದ್ರೌಪದಿಯೊಡನೆ
ಪಾಂಡುಪುತ್ರರನ್ನು ಏಕಾಂತಭವನಕ್ಕೆ ಕರೆಸಿ, ಅತಿಶಯವಾದ ಪ್ರೇಮ ರಸದಿಂದ ನೆನೆದ ಮಧುರವಾದ ಮಾತುಗಳಿಂದ “ರಾಜಸೂಯಯಾಗ ಪರಿಪೂರ್ಣವಾಯಿತೇ ? ಉತ್ತಮ ಆಹುತಿಗಳಿಂದ ತೃಪ್ತಿ ಹೊಂದಿದ ದೇವೇಂದ್ರನ ಆಸ್ಥಾನವೈಭವ ಪಾಂಡುರಾಜನಿಗೆ ಪ್ರಾಪ್ತವಾಯಿತೇ ?” ಎಂದು ಕೇಳಿದ.
ಪದಾರ್ಥ (ಕ.ಗ.ಪ)
ಮೂಲ ...{Loading}...
ಕರೆಸಿದನು ಹರಿ ಪಾಂಡುಪುತ್ರರ
ನರಸಿ ಸಹಿತೇಕಾಂತ ಭವನದೊ
ಳುರುತರ ಪ್ರೇಮೈಕ ರಸ ಸಂಸಿಕ್ತ ವಚನದಲಿ
ಭರಿತವಾಯಿತೆ ರಾಜಸೂಯಾ
ಧ್ವರ ಸದಾಹುತಿ ತೃಪ್ಯ ಮಾಣಾ
ಮರ ಮಹೀಶ್ವರ ವಿಭವ ವಿಳಸಿತ ಪಾಂಡು ಪದವೆಂದ ॥12॥
೦೧೩ ದೇವನಙ್ಘ್ರಿಯ ಮುಸುಕಿದವು ...{Loading}...
ದೇವನಂಘ್ರಿಯ ಮುಸುಕಿದವು ಮುಕು
ಟಾವಳಿಗಳೈವರ ಸತಿಯ ಸಂ
ಭಾಷಣೆಯ ಮಧುರೋಕ್ತಿರಸದಲಿ ನಗುತ ಮನ್ನಿಸಿದ
ಓವಿದನು ಮುರವೈರಿ ಕಾರು
ಣ್ಯಾವಲೋಕನದಿಂದ ನಿನ್ನವ
ರಾವ ಭವದಲಿ ಭಜಿಸಿದರೊ ನಿಷ್ಠೆಯಲಿ ಹರಿಪದವ ॥13॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಎಲ್ಲರ ಕಿರೀಟಗಳೂ ದೇವನ ಅಂಘ್ರಿಗೆ ಮುಸುಕಿದವು. ಶ್ರೀ ಕೃಷ್ಣ ಪಾಂಡವರೈಔರನ್ನು ಮತ್ತು ದ್ರೌಪದಿಯನ್ನು ಕಾರುಣ್ಯಾವಲೋಕನದಿಂದ ನೋಡಿ ನಸು ನಗುತ್ತಾ ಮಧುರೋಕ್ತಿಗಳಿಂದ ಸಂಭಾಷಿಸಿ ಅವರನ್ನು ಮನ್ನಿಸಿದ. ವೈಶಂಪಾಯನ ಜನಮೇಜಯ ರಾಜನಿಗೆ “ನಿನ್ನವರು ಯಾವ ಜನ್ಮದಲ್ಲಿ ನಿಷ್ಠೆಯಿಂದ ಶ್ರೀಕೃಷ್ಣ ಪಾದಗಳನ್ನು ಭಜಿಸಿದ್ದರೋ ಇಂತಹ ದಿವ್ಯ ಸನ್ನಿವೇಶ ಪ್ರಾಪ್ತವಾಯಿತು.” ಎಂದು ಹೇಳಿದನು.
ಪದಾರ್ಥ (ಕ.ಗ.ಪ)
ಓವು-ಕಾಪಾಡು, ರಕ್ಷಿಸು
ಮೂಲ ...{Loading}...
ದೇವನಂಘ್ರಿಯ ಮುಸುಕಿದವು ಮುಕು
ಟಾವಳಿಗಳೈವರ ಸತಿಯ ಸಂ
ಭಾಷಣೆಯ ಮಧುರೋಕ್ತಿರಸದಲಿ ನಗುತ ಮನ್ನಿಸಿದ
ಓವಿದನು ಮುರವೈರಿ ಕಾರು
ಣ್ಯಾವಲೋಕನದಿಂದ ನಿನ್ನವ
ರಾವ ಭವದಲಿ ಭಜಿಸಿದರೊ ನಿಷ್ಠೆಯಲಿ ಹರಿಪದವ ॥13॥
೦೧೪ ದೇವ ನಿಮ್ಮಡಿಯಙ್ಘ್ರಿ ...{Loading}...
ದೇವ ನಿಮ್ಮಡಿಯಂಘ್ರಿ ಕಮಲವ
ನಾವ ನೆನೆದನವಂಗೆ ತುಸುವ
ಲ್ಲಾ ವಿರಿಂಚಾದ್ಯಮರ ಪದವಿದು ನಿಗಮ ಸಿದ್ಧವಲೆ
ನಾವು ಸಾಕ್ಷಾದಮಳ ಮೂರ್ತಿಸು
ಧಾವಸೇಚನಧೂತಕಿಲ್ಬಿಷ
ರಾವುದರಿದೈ ಬೊಪ್ಪನವರಿಗೆ ಶಕ್ರಪದವೆಂದ ॥14॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ದೇವ ಯಾರು ನಿಮ್ಮ ಪಾದ ಕಮಲವನ್ನು ಸ್ಮರಿಸುವರೋ ಅವರಿಗೆ ಬ್ರಹ್ಮನೇ ಮೊದಲಾದವರ ಸ್ಥಾನ ಕೂಡ ಅಲ್ಪವಾದುದಲ್ಲವೇ? ಸಾಕ್ಷಾತ್ ನಿನ್ನ ಪವಿತ್ರ ಮೂರ್ತಿಯ ಅಮೃತ ಸಿಂಚನದಿಂದ ನಮ್ಮ ಪಾಪಗಳೆಲ್ಲ ತೊಡೆದು ಹೋದುವು, ಪವಿತ್ರರಾದೆವು. ತಂದೆಯವರಿಗೆ ಇಂದ್ರನ ಪದವಿ ದೊರೆಯುವುದು ಏನು ಮಹಾ ಕಷ್ಟ?
ಪದಾರ್ಥ (ಕ.ಗ.ಪ)
ಸುಧಾವಸೇಚನ - ಅಮೃತ ಸಿಂಚನ
ಧೂತ ಕಿಲ್ಬಿಷ- ಕಳೆದ ಕಲ್ಮಶ , ಇಲ್ಲಿ ಪಾಪ
ಮೂಲ ...{Loading}...
ದೇವ ನಿಮ್ಮಡಿಯಂಘ್ರಿ ಕಮಲವ
ನಾವ ನೆನೆದನವಂಗೆ ತುಸುವ
ಲ್ಲಾ ವಿರಿಂಚಾದ್ಯಮರ ಪದವಿದು ನಿಗಮ ಸಿದ್ಧವಲೆ
ನಾವು ಸಾಕ್ಷಾದಮಳ ಮೂರ್ತಿಸು
ಧಾವಸೇಚನಧೂತಕಿಲ್ಬಿಷ
ರಾವುದರಿದೈ ಬೊಪ್ಪನವರಿಗೆ ಶಕ್ರಪದವೆಂದ ॥14॥
೦೧೫ ಮಸಗಿದರೆ ಮಾಗಧನು ...{Loading}...
ಮಸಗಿದರೆ ಮಾಗಧನು ಯಜ್ಞವ
ಮಿಸುಕಲೀವನೆ ಚೈದ್ಯನಿಂದು
ಬ್ಬಸವ ಮಾಡಿದೊಡೆಮ್ಮ ಕೈಯಲಿ ಹರಿವ ಹೆಕ್ಕಳವೆ
ಶಿಶುವೊರಲಿದರೆ ಕಂಬದಲಿ ತೋ
ರಿಸಿದ ಕರುಣಾಜಲಧಿಯೇ ಪಾ
ಲಿಸಿದೆಲಾ ಪಾಂಡವರನೆಂದಳು ಹೊರಳಿ ಚರಣದಲಿ ॥15॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ದ್ರೌಪದಿ “ಮಾಗಧನು ಬದುಕಿದ್ದು ಅವನು ಆಕ್ರಮಣ ಮಾಡಿದ್ದರೆ ನಮ್ಮ ಯಜ್ಞ ನಡೆಯುತ್ತಿತ್ತೆ ? ಇಂದು ಆತಂಕವನ್ನು ಉಂಟುಮಾಡಿದ್ದ ಚೈದ್ಯ ನಮ್ಮಿಂದ ಹೋಗಲಾಡಿಸಬಹುದಾಗಿದ್ದ ಪೀಡೆಯೇ ? ಮಗು ಮೊರೆಯಿಟ್ಟ ಮಾತ್ರಕ್ಕೇ ಅವನ
ರಕ್ಷಣೆಗಾಗಿ ಕಂಬದಲ್ಲಿ ಕಾಣಿಸಿಕೊಂಡ ಕರುಣಾಸಾಗರ ನೀನು ಪಾಂಡವರನ್ನು ಕಾಪಾಡಿದೆ ಎನ್ನುತ್ತಾ ಅವನ ಪಾದಗಳ ಮೇಲೆ ಹೊರಳಿದಳು.
ಪದಾರ್ಥ (ಕ.ಗ.ಪ)
ಹೆಕ್ಕಳ-ಪೀಡೆ
ಮೂಲ ...{Loading}...
ಮಸಗಿದರೆ ಮಾಗಧನು ಯಜ್ಞವ
ಮಿಸುಕಲೀವನೆ ಚೈದ್ಯನಿಂದು
ಬ್ಬಸವ ಮಾಡಿದೊಡೆಮ್ಮ ಕೈಯಲಿ ಹರಿವ ಹೆಕ್ಕಳವೆ
ಶಿಶುವೊರಲಿದರೆ ಕಂಬದಲಿ ತೋ
ರಿಸಿದ ಕರುಣಾಜಲಧಿಯೇ ಪಾ
ಲಿಸಿದೆಲಾ ಪಾಂಡವರನೆಂದಳು ಹೊರಳಿ ಚರಣದಲಿ ॥15॥
೦೧೬ ಏಳೆನುತ ತೆಗೆದಪ್ಪಿದನು ...{Loading}...
ಏಳೆನುತ ತೆಗೆದಪ್ಪಿದನು ಕರು
ಣಾಳು ಪರಿತೋಷಾಶ್ರುಪೂರ್ಣ ವಿ
ಶಾಲ ಲೋಚನ ನೋಡಿದನು ತನ್ನವರನೊಲವಿನಲಿ
ಬಾಲಕಿಯೆ ಬಾ ತಂಗಿ ಬಾ ನೀ
ಲಾಳಕಿಯೆ ಬಾಯೆನುತ ಮಿಗೆ ಪಾಂ
ಚಾಲೆಯನು ಕರೆದಸುರರಿಪು ಸೂಚಿಸಿದನಂಗನೆಗೆ ॥16॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಏಳು, ಎಂದು ದ್ರೌಪದಿಯನ್ನು ಮೇಲೆಬ್ಬಿಸಿ ಆ ಕರುಣಾಳು ತೆಗೆದಪ್ಪಿಕೊಂಡ. ಹರ್ಷಾಶ್ರುಗಳನ್ನು ಮಿಡಿಯುತ್ತಾ ಆ ವಿಶಾಲಾಕ್ಷನಾದ ಹರಿ ಆ ತನ್ನ ಬಂಧುಗಳನ್ನು ಪ್ರೀತಿಯಿಂದ ನೋಡಿದ. ಅನಂತರ ದ್ರೌಪದಿಗೆ “ಬಾಲಕಿಯೆ ಬಾ, ತಂಗಿ ಬಾ, ಕಪ್ಪು ಮುಂಗೂದಲುಳ್ಳವಳೇ ಬಾ” ಎಂದು ಬಗೆಬಗೆಯಾಗಿ ಕರೆಯುತ್ತಾ, ಮುಂದೆ ಬುದ್ಧಿವಾದ ಹೇಳತೊಡಗಿದ.
ಪದಾರ್ಥ (ಕ.ಗ.ಪ)
ಪರಿತೋಷ-ಸಂತೋಷ, ನೀಲಾಳಕಿ-ಕಪ್ಪು ಮುಂಗೂದಲುಳ್ಳವಳು
ಮೂಲ ...{Loading}...
ಏಳೆನುತ ತೆಗೆದಪ್ಪಿದನು ಕರು
ಣಾಳು ಪರಿತೋಷಾಶ್ರುಪೂರ್ಣ ವಿ
ಶಾಲ ಲೋಚನ ನೋಡಿದನು ತನ್ನವರನೊಲವಿನಲಿ
ಬಾಲಕಿಯೆ ಬಾ ತಂಗಿ ಬಾ ನೀ
ಲಾಳಕಿಯೆ ಬಾಯೆನುತ ಮಿಗೆ ಪಾಂ
ಚಾಲೆಯನು ಕರೆದಸುರರಿಪು ಸೂಚಿಸಿದನಂಗನೆಗೆ ॥16॥
೦೧೭ ನಮ್ಬದಿರು ಸಿರಿಯನು ...{Loading}...
ನಂಬದಿರು ಸಿರಿಯನು ಪತಿವ್ರತೆ
ಯೆಂಬರಿಗೆ ಗುರು ವಿಷಾದ ವಿ
ಡಂಬ ಹರುಷಂಗಳಲಿ ನೀನಿಹುದೇಕ ಚಿತ್ತದಲಿ
ತುಂಬುವುದು ಬತ್ತುವುದು ರಾಜ್ಯದ
ಡೊಂಬು ಹರಿಮೇಖಲೆ ವಿದ್ಯಾ
ಡಂಬರವಿದೆಂದಸುರರಿಪು ಸೂಚಿಸಿದನಂಗನೆಗೆ ॥17॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ನೀನು ಸಂಪತ್ತನ್ನು ನಂಬಬೇಡ. ನೀನು ಪತಿವ್ರತೆಯರಿಗೆ ಗುರು. ದುಃಖ ಪರಿಹಾಸ, ಹರ್ಷಗಳು ಪ್ರಾಪ್ತವಾದಾಗ ಸಮಚಿತ್ತತೆಯಿಂದ ಇರು. ತುಂಬುವುದು ಬತ್ತುವುದು ರಾಜ್ಯದ ತೋರಿಕೆ. ಇದು ಇಂದ್ರಜಾಲ ವಿದ್ಯೆಯ ಆಟೋಪ - ಎಂದು ಅವಳಿಗೆ ಹೇಳಿದ.
ಪದಾರ್ಥ (ಕ.ಗ.ಪ)
ಡೊಂಬು-ತೋರಿಕೆ, ಡಂಬರ-ಆಟೋಪ
ಮೂಲ ...{Loading}...
ನಂಬದಿರು ಸಿರಿಯನು ಪತಿವ್ರತೆ
ಯೆಂಬರಿಗೆ ಗುರು ವಿಷಾದ ವಿ
ಡಂಬ ಹರುಷಂಗಳಲಿ ನೀನಿಹುದೇಕ ಚಿತ್ತದಲಿ
ತುಂಬುವುದು ಬತ್ತುವುದು ರಾಜ್ಯದ
ಡೊಂಬು ಹರಿಮೇಖಲೆ ವಿದ್ಯಾ
ಡಂಬರವಿದೆಂದಸುರರಿಪು ಸೂಚಿಸಿದನಂಗನೆಗೆ ॥17॥
೦೧೮ ವಿಷವ ಗೆಲಿದಿರಿ ...{Loading}...
ವಿಷವ ಗೆಲಿದಿರಿ ಹಿಂದೆ ಕಿಚ್ಚಿನ
ದೆಸೆಯಲುಳಿದಿರಿ ದಾಯಗರು ದು
ವ್ರ್ಯಸನಿಗಳು ದುಸ್ಸಹವು ನಿಮ್ಮಭ್ಯುದಯವಹಿತರಿಗೆ
ವಿಷಮವಿವಲೇ ದ್ಯೂತ ಮೃಗಯಾ
ವ್ಯಸನ ಪಾರ್ಥಿವಜಾತಿಗಿವು ದು
ರ್ವಿಷಯವಿದರಲಿ ನೆಗ್ಗಿದರು ನಳ ದಶರಥಾದಿಗಳು ॥18॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅನಂತರ ಎಲ್ಲರನ್ನೂ ಕುರಿತು “ಹಿಂದೆಲ್ಲಾ ಅನೇಕ ಕಷ್ಟಗಳನ್ನು ಎದುರಿಸಿದಿರಿ. ವಿಷವನ್ನು ಗೆದ್ದಿರಿ. ಬೆಂಕಿಯ ದೆಸೆಯಿಂದ
ಉಳಿದಿರಿ. ನಿಮ್ಮ ದಾಯಾದಿಗಳು ದುವ್ರ್ಯಸನವುಳ್ಳವರು. ನಿಮ್ಮ ಏಳಿಗೆ ಅವರಿಗೆ ಅಸಹನೀಯವಾಗುತ್ತದೆ. ಇದು ದುಃಖಕರವಾದುದು. ಕ್ಷತ್ರಿಯ ಜಾತಿಗೆ ಜೂಜು, ಬೇಟೆ ಇವು ಕೆಟ್ಟ ವಿಷಯಗಳು. ನಳದಶರಥಾದಿಗಳು ಇದರಿಂದ ಹಾಳಾದರು.
ಪದಾರ್ಥ (ಕ.ಗ.ಪ)
ಮೂಲ ...{Loading}...
ವಿಷವ ಗೆಲಿದಿರಿ ಹಿಂದೆ ಕಿಚ್ಚಿನ
ದೆಸೆಯಲುಳಿದಿರಿ ದಾಯಗರು ದು
ವ್ರ್ಯಸನಿಗಳು ದುಸ್ಸಹವು ನಿಮ್ಮಭ್ಯುದಯವಹಿತರಿಗೆ
ವಿಷಮವಿವಲೇ ದ್ಯೂತ ಮೃಗಯಾ
ವ್ಯಸನ ಪಾರ್ಥಿವಜಾತಿಗಿವು ದು
ರ್ವಿಷಯವಿದರಲಿ ನೆಗ್ಗಿದರು ನಳ ದಶರಥಾದಿಗಳು ॥18॥
೦೧೯ ಸೋತು ನಡೆವುದು ...{Loading}...
ಸೋತು ನಡೆವುದು ಹಿರಿಯರಲಿ ಸಂ
ಪ್ರೀತಿಯನು ಸುಜನರಲಿ ನಿರ್ಮಳ
ನೀತಿಯನು ಪರಿವಾರ ಪುರಜನ ನಾಡು ಬೀಡಿನಲಿ
ಖ್ಯಾತಿಯನು ಧರ್ಮದಲಿ ವೈರಿ
ವ್ರಾತದಲಿ ಪೌರುಷವನಖಿಳ
ಜ್ಞಾತಿಗಳಲೆಚ್ಚರಿಕೆಯೊಳಗಿಹುದೆಂದನಸುರಾರಿ ॥19॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಹಿರಿಯರ ವಿಷಯದಲ್ಲಿ ಸೋತು ನಡೆಯಬೇಕು. ಸುಜನರಲ್ಲಿ ತುಂಬ ಪ್ರೀತಿಯಿಡಬೇಕು. ಪರಿವಾರದವರಲ್ಲಿ, ಪುರಜನರಲ್ಲಿ,
ನಾಡುಬೀಡುಗಳಲ್ಲಿ ನಿರ್ಮಲವಾದ ನೀತಿಯಿಂದ ನಡೆದುಕೊಳ್ಳಬೇಕು. ಧರ್ಮದಲ್ಲಿ ಖ್ಯಾತಿವಂತರಾಗಬೇಕು. ವೈರಿಸಮೂಹದಲ್ಲಿ
ಪೌರುಷವನ್ನು ಮೆರೆಯಬೇಕು. ಎಲ್ಲ ಜ್ಞಾತಿಗಳ ವಿಷಯದಲ್ಲಿಯೂ ಎಚ್ಚರಿಕೆಯಿಂದಿರಬೇಕು.
ಪದಾರ್ಥ (ಕ.ಗ.ಪ)
ಮೂಲ ...{Loading}...
ಸೋತು ನಡೆವುದು ಹಿರಿಯರಲಿ ಸಂ
ಪ್ರೀತಿಯನು ಸುಜನರಲಿ ನಿರ್ಮಳ
ನೀತಿಯನು ಪರಿವಾರ ಪುರಜನ ನಾಡು ಬೀಡಿನಲಿ
ಖ್ಯಾತಿಯನು ಧರ್ಮದಲಿ ವೈರಿ
ವ್ರಾತದಲಿ ಪೌರುಷವನಖಿಳ
ಜ್ಞಾತಿಗಳಲೆಚ್ಚರಿಕೆಯೊಳಗಿಹುದೆಂದನಸುರಾರಿ ॥19॥
೦೨೦ ಎನ್ದು ಬುದ್ಧಿಯ ...{Loading}...
ಎಂದು ಬುದ್ಧಿಯ ಹೇಳಿ ಪಾರ್ಥನ
ನಂದನನ ಕರೆಸಿದನು ತಾಯ್ಸಹಿ
ತೆಂದನವರಿಗೆ ನಯದಲುಚಿತ ಪ್ರೀತಿವಚನದಲಿ
ಬಂದು ಕುಂತಿಗೆ ಸಾರನಗೆನುಡಿ
ಯಿಂದ ವಿನಯವ ಮಾಡಿ ಪಾಂಡವ
ನಂದನರ ಮನ್ನಿಸಿದನತಿ ಕಾರುಣ್ಯ ಭಾವದಲಿ ॥20॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಹೀಗೆ ಬುದ್ಧಿವಾದವನ್ನು ಹೇಳಿ, ಕೃಷ್ಣ ಅರ್ಜುನನ ಮಗನನ್ನು ತಾಯಿಯೊಡನೆ ಕರೆಸಿ ಅವರಿಗೂ ನಯದಿಂದ ಯಥೋಚಿತ
ಪ್ರೀತಿಯಿಂದ ಹಿತವಚನಗಳನ್ನು ಹೇಳಿದ. ಅನಂತರ ಕುಂತಿಯ ಬಳಿಗೆ ಬಂದು ಸಾರವತ್ತಾಗಿ ನಗೆನುಡಿಯಿಂದ ಮಾತನಾಡಿ
ವಿನಯದಿಂದ ನಡೆದು, ಪಾಂಡವನಂದನರನ್ನೂ ದಯಾಭಾವದಿಂದ ಆದರಿಸಿದನು.
ಪದಾರ್ಥ (ಕ.ಗ.ಪ)
ಮೂಲ ...{Loading}...
ಎಂದು ಬುದ್ಧಿಯ ಹೇಳಿ ಪಾರ್ಥನ
ನಂದನನ ಕರೆಸಿದನು ತಾಯ್ಸಹಿ
ತೆಂದನವರಿಗೆ ನಯದಲುಚಿತ ಪ್ರೀತಿವಚನದಲಿ
ಬಂದು ಕುಂತಿಗೆ ಸಾರನಗೆನುಡಿ
ಯಿಂದ ವಿನಯವ ಮಾಡಿ ಪಾಂಡವ
ನಂದನರ ಮನ್ನಿಸಿದನತಿ ಕಾರುಣ್ಯ ಭಾವದಲಿ ॥20॥
೦೨೧ ಯಾದವರು ಪಾಣ್ಡವರು ...{Loading}...
ಯಾದವರು ಪಾಂಡವರು ತನ್ನವ
ರಾದುದದುವೆ ಕುಟುಂಬವದು ಮಹ
ದಾದಿ ಸೃಷ್ಟಿಗದಾರ ರಕ್ಷೆ ಕುಟುಂಬವಾವನದು
ಆದರಿಸಿದನು ಕೆಲರನು ಹೊರ
ಗಾದವರು ಕೆಲರಾಯ್ತು ಹರಿ ಮಾ
ಯಾ ದುರಾಗ್ರಹವೃತ್ತಿಯೀ ಹದನೆಂದನಾ ಮುನಿಪ ॥21॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಯಾದವರೂ ಪಾಂಡವರೂ ತನ್ನವರಾದರು, ಅದೇ ತನ್ನ ಕುಟುಂಬ. ಹಾಗಾದರೆ ಮಹಾದಾದಿ ಸೃಷ್ಟಿಗೆ ಯಾರ ರಕ್ಷೆ? ಯಾರ ಕುಟುಂಬ ಅದು? ಹರಿ ಕೆಲವರನ್ನು ಆದರಿಸಿದನು, ಕೆಲವರು ಹೊರಗಿನವರಾಗಿ ಉಳಿದರು. ಹರಿಮಾಯೆಯ ದುರಾಗ್ರಹ - ಪ್ರವೃತ್ತಿಯೇ ಹೀಗೆ ಎಂದು ವೈಶಂಪಾಯನನು ಹೇಳಿದನು.
ಪದಾರ್ಥ (ಕ.ಗ.ಪ)
ಮೂಲ ...{Loading}...
ಯಾದವರು ಪಾಂಡವರು ತನ್ನವ
ರಾದುದದುವೆ ಕುಟುಂಬವದು ಮಹ
ದಾದಿ ಸೃಷ್ಟಿಗದಾರ ರಕ್ಷೆ ಕುಟುಂಬವಾವನದು
ಆದರಿಸಿದನು ಕೆಲರನು ಹೊರ
ಗಾದವರು ಕೆಲರಾಯ್ತು ಹರಿ ಮಾ
ಯಾ ದುರಾಗ್ರಹವೃತ್ತಿಯೀ ಹದನೆಂದನಾ ಮುನಿಪ ॥21॥
೦೨೨ ಆ ಶುಭಗ್ರಹದುದಯದಲಿ ...{Loading}...
ಆ ಶುಭಗ್ರಹದುದಯದಲಿ ತಿಥಿ
ರಾಶಿ ನಕ್ಷತ್ರಾದಿ ಪುಣ್ಯೋ
ದ್ಭಾಸಮಾನ ಮುಹೂರ್ತದಲಿ ಸುಸ್ವರ ವಿಳಾಸದಲಿ
ಭೂಸುರಾಶೀವಾರ್ದದಲಿ ಲ
ಕ್ಷ್ಮೀಶ ಪಯಣವ ಮಾಡಿದನು ಕ
ಟ್ಟಾಸುರದಲೊದರಿದವು ಘನ ಗಂಭೀರ ಭೇರಿಗಳು ॥22॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಆ ಶುಭಗ್ರಹ ಉದಿಸಿದಾಗ, ತಿಥಿ, ರಾಶಿ, ನಕ್ಷತ್ರ ಮೊದಲಾದ ಪುಣ್ಯದಿಂದ ಬೆಳಗುವ ಮುಹೂರ್ತದಲ್ಲಿ, ವಿಪ್ರರು ಸುಸ್ವರವಿಲಾಸದಿಂದ ಆಶೀರ್ವಚನಗಳನ್ನು ಹೇಳಲು ಕೃಷ್ಣ ಪ್ರಯಾಣವನ್ನು ಬೆಳೆಸಿದ. ಆಗ ಗುಡುಗಿನಂತೆ ಅತಿಶಯವಾಗಿ ಧ್ವನಿಮಾಡುವ ಭೇರಿಗಳು ಗಟ್ಟಿಯಾಗಿ ಶಬ್ದ ಮಾಡಿದವು.
ಪದಾರ್ಥ (ಕ.ಗ.ಪ)
ಆಸುರದಲಿ-ಅತಿಶಯವಾಗಿ
ಘನ - ಮೋಡ
ಮೂಲ ...{Loading}...
ಆ ಶುಭಗ್ರಹದುದಯದಲಿ ತಿಥಿ
ರಾಶಿ ನಕ್ಷತ್ರಾದಿ ಪುಣ್ಯೋ
ದ್ಭಾಸಮಾನ ಮುಹೂರ್ತದಲಿ ಸುಸ್ವರ ವಿಳಾಸದಲಿ
ಭೂಸುರಾಶೀವಾರ್ದದಲಿ ಲ
ಕ್ಷ್ಮೀಶ ಪಯಣವ ಮಾಡಿದನು ಕ
ಟ್ಟಾಸುರದಲೊದರಿದವು ಘನ ಗಂಭೀರ ಭೇರಿಗಳು ॥22॥
೦೨೩ ದೇಶದಲಿ ಕಾಲದಲಿ ...{Loading}...
ದೇಶದಲಿ ಕಾಲದಲಿ ದೆಸೆಯಲಿ
ರಾಸಿಯಲಿ ತಾರಾಗ್ರಹಾದಿಗ
ಳೈಸರಲಿ ತಾ ತನ್ನ ಚೇಷ್ಟೆಗಳಿವರ ವರ್ತನಕೆ
ಈಸು ಮಹಿಮೆಯ ಮರೆಸಿ ಲೋಕ ವಿ
ಳಾಸ ಚೇಷ್ಟೆಯನನುಸರಿಸಿ ನರ
ವೇಷವನು ನಟಿಸಿದನು ಹರಿ ಹೂಳಿದ ನಿಜೋನ್ನತಿಯ ॥23॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ದೇಶದಲ್ಲಿ, ಕಾಲದಲ್ಲಿ, ದೆಸೆಯಲ್ಲಿ, ರಾಶಿಯಲ್ಲಿ ತಾರಾಗ್ರಹಾದಿಗಳೆಲ್ಲದರಲ್ಲಿಯೂ ಅವನೇ ವ್ಯಾಪಿಸಿರುವನು. ಅವುಗಳ ವರ್ತನಕ್ಕೆ ಇವನೇ ಕಾರಣ. ಆದರೂ ಇಷ್ಟೆಲ್ಲ ಮಹಿಮೆಯನ್ನೂ ಮರೆಮಾಡಿ. ವಿಲಾಸದಿಂದ ಲೌಕಿಕವಾದ ವರ್ತನೆಗಳನ್ನೇ ಅಳವಡಿಸಿಕೊಂಡು ನರವೇಷವನ್ನು ಧರಿಸಿ, ತನ್ನ ನಿಜವಾದ ಉನ್ನತಿಯನ್ನು ಅದುಮಿಟ್ಟು ನರರಂತೆಯೇ ನಟಿಸುತ್ತಿದ್ದಾನೆ ಕೃಷ್ಣ.
ಪದಾರ್ಥ (ಕ.ಗ.ಪ)
ಮೂಲ ...{Loading}...
ದೇಶದಲಿ ಕಾಲದಲಿ ದೆಸೆಯಲಿ
ರಾಸಿಯಲಿ ತಾರಾಗ್ರಹಾದಿಗ
ಳೈಸರಲಿ ತಾ ತನ್ನ ಚೇಷ್ಟೆಗಳಿವರ ವರ್ತನಕೆ
ಈಸು ಮಹಿಮೆಯ ಮರೆಸಿ ಲೋಕ ವಿ
ಳಾಸ ಚೇಷ್ಟೆಯನನುಸರಿಸಿ ನರ
ವೇಷವನು ನಟಿಸಿದನು ಹರಿ ಹೂಳಿದ ನಿಜೋನ್ನತಿಯ ॥23॥
೦೨೪ ಕಲಿ ವಿಡೂರಥ ...{Loading}...
ಕಲಿ ವಿಡೂರಥ ಸಾಂಬ ಸಾತ್ಯಕಿ
ದಳಪತಿ ಪ್ರದ್ಯುಮ್ನ ಯಾದವ
ಕುಲ ಸಚಿವನಕ್ರೂರನುದ್ಧವ ಚಾರು ಕೃತವರ್ಮ
ಬಲ ಪದಾತಿಯ ರಥ ನಿಕರದ
ಗ್ಗಳೆಯ ಗಜ ವಾಜಿಗಳ ಸಂದಣಿ
ಯೊಳಗೆ ನಿಂದರು ಕೃಷ್ಣರಾಯನ ರಥದ ಬಳಸಿನಲಿ ॥24॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕಲಿ ವಿಡೂರಥ, ಸಾಂಬ, ಸಾತ್ಯಕಿ, ದಳಪತಿಯಾದ ಪ್ರದ್ಯುಮ್ನ, ಯಾದವಕುಲ ಸಚಿವನಾದ ಅಕ್ರೂರ, ಉದ್ಧವ ಕೃತವರ್ಮ
ಇವರೆಲ್ಲರೂ ಪದಾತಿ, ರಥ, ಅತಿಶಯವಾದ ಗಜ, ಕುದುರೆ - ಈ ಚತುರಂಗ ಸೇನೆಯೊಡನೆ ಕೃಷ್ಣನ ರಥವನ್ನು ಬಳಸಿ ನಿಂತರು.
ಪದಾರ್ಥ (ಕ.ಗ.ಪ)
ಅಗ್ಗಳೆಯ-ಅತಿಶಯವಾದ
ಮೂಲ ...{Loading}...
ಕಲಿ ವಿಡೂರಥ ಸಾಂಬ ಸಾತ್ಯಕಿ
ದಳಪತಿ ಪ್ರದ್ಯುಮ್ನ ಯಾದವ
ಕುಲ ಸಚಿವನಕ್ರೂರನುದ್ಧವ ಚಾರು ಕೃತವರ್ಮ
ಬಲ ಪದಾತಿಯ ರಥ ನಿಕರದ
ಗ್ಗಳೆಯ ಗಜ ವಾಜಿಗಳ ಸಂದಣಿ
ಯೊಳಗೆ ನಿಂದರು ಕೃಷ್ಣರಾಯನ ರಥದ ಬಳಸಿನಲಿ ॥24॥
೦೨೫ ಅನುಜ ತನುಜರು ...{Loading}...
ಅನುಜ ತನುಜರು ಸಹಿತ ಕುಂತೀ
ತನಯ ದೂರಕೆ ಕಳುಹಿ ಮರಳಿದು
ಮನೆಗೆ ಬಂದನು ಕೃಷ್ಣವಿರಹ ವಿಶಾಲ ಖೇದದಲಿ
ಮುನಿಪ ವೇದವ್ಯಾಸ ಧೌಮ್ಯರ
ನನುಸರಿಸಿ ದಾಹಿಸುವ ದುಗುಡವ
ನನಿತುವನು ಬಿನ್ನವಿಸಿದನು ಮಿಡಿಮಿಡಿದು ಕಂಬನಿಯ ॥25॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅನುಜರು ತನುಜರ ಸಹಿತ ಯುಧಿಷ್ಠಿರ ಕೃಷ್ಣನನ್ನು ಸ್ವಲ್ಪ ದೂರದವರೆಗೆ ಕಳುಹಿಸಿ ಮರಳಿದನು. ಕೃಷ್ಣನ ಅಗಲಿಕೆಯ ದುಃಖ ಅವನನ್ನು ಕಾಡತೊಡಗಿತು. ವೇದವ್ಯಾಸ ಹಾಗೂ ಧೌಮ್ಯ ಮುನಿಗಳ ಬಳಿಗೆ ಹೋಗಿ ತನ್ನನ್ನು ಸುಡುತ್ತಿರುವ ವಿರಹ ವೇದನೆಯನ್ನು ಮೇಲಿಂದ ಮೇಲೆ ಕಣ್ಣೀರು ಸುರಿಸುತ್ತಾ ನಿವೇದಿಸಿಕೊಂಡ.
ಪದಾರ್ಥ (ಕ.ಗ.ಪ)
ಮೂಲ ...{Loading}...
ಅನುಜ ತನುಜರು ಸಹಿತ ಕುಂತೀ
ತನಯ ದೂರಕೆ ಕಳುಹಿ ಮರಳಿದು
ಮನೆಗೆ ಬಂದನು ಕೃಷ್ಣವಿರಹ ವಿಶಾಲ ಖೇದದಲಿ
ಮುನಿಪ ವೇದವ್ಯಾಸ ಧೌಮ್ಯರ
ನನುಸರಿಸಿ ದಾಹಿಸುವ ದುಗುಡವ
ನನಿತುವನು ಬಿನ್ನವಿಸಿದನು ಮಿಡಿಮಿಡಿದು ಕಂಬನಿಯ ॥25॥
೦೨೬ ಅಸುರರಿಪು ಕೃಪೆಯಿನ್ದ ...{Loading}...
ಅಸುರರಿಪು ಕೃಪೆಯಿಂದ ನಿರ್ವಾ
ಹಿಸಿದನೀ ಯಜ್ಞವನು ಪೂರ್ವದ
ವಸುಮತೀಶರ ಪಾಡಿಗೆಣೆಯೆಂದೆನ್ನ ಪತಿಕರಿಸಿ
ಬಿಸುಟು ಬಿಜಯಂಗೈದನೀಯು
ಬ್ಬಸವನಾರೊಡನುಸುರುವೆನು ಹಿಂ
ದೆಸೆವ ಗೋಕುಲವಾಯ್ತು ಪುರವಿದು ಕೃಷ್ಣವಿರಹದಲಿ ॥26॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕೃಷ್ಣ ಕೃಪೆಯಿಂದ ಈ ಯಜ್ಞವನ್ನು ನೆರವೇರಿಸಿಕೊಟ್ಟ .ಹಿಂದಿನ ರಾಜರಿಗೆ ನೀನು ಸಮಾನ ಎಂದು ನನ್ನನ್ನು ಕೊಂಡಾಡಿದ. ಈಗ ನನ್ನನ್ನು ಅಗಲಿ ಹೊರಟುಹೋದ. ಈ ದುಃಖವನ್ನು ಯಾರಲ್ಲಿ ಹೇಳಿಕೊಳ್ಳಲಿ? ಕೃಷ್ಣನ ಅಗಲಿಕೆಯಿಂದ ಈ ಪಟ್ಟಣ ಹಿಂದೆ ಇದ್ದ ಗೋಕುಲದಂತೆಯೇ ಆಯಿತು ಎಂದ.
ಪದಾರ್ಥ (ಕ.ಗ.ಪ)
ಎಣೆ-ಸಮಾನ
ಮೂಲ ...{Loading}...
ಅಸುರರಿಪು ಕೃಪೆಯಿಂದ ನಿರ್ವಾ
ಹಿಸಿದನೀ ಯಜ್ಞವನು ಪೂರ್ವದ
ವಸುಮತೀಶರ ಪಾಡಿಗೆಣೆಯೆಂದೆನ್ನ ಪತಿಕರಿಸಿ
ಬಿಸುಟು ಬಿಜಯಂಗೈದನೀಯು
ಬ್ಬಸವನಾರೊಡನುಸುರುವೆನು ಹಿಂ
ದೆಸೆವ ಗೋಕುಲವಾಯ್ತು ಪುರವಿದು ಕೃಷ್ಣವಿರಹದಲಿ ॥26॥
೦೨೭ ಅರಸ ಕೇಳೈ ...{Loading}...
ಅರಸ ಕೇಳೈ ದೈತ್ಯ ದಾನವ
ರುರವಣೆಯ ಯದು ನಾಯಕರು ನಿ
ಸ್ತರಿಸಲರಿಯರು ಕೃಷ್ಣನಿಲ್ಲದೆ ಭೀತಿ ದ್ವಾರಕಿಗೆ
ಕರುಣ ನಿಮ್ಮಲಿ ಕಿರಿದೆ ನಿಮ್ಮೊಳ
ಗೆರಕವಲ್ಲವೆ ಚಿಂತೆ ಸಾಕಂ
ತಿರಲಿಯೆಂದವನೀಶನನು ಸಂತೈಸಿದನು ಮುನಿಪ ॥27॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ವ್ಯಾಸಮುನಿ ಯುಧಿಷ್ಠಿರನಿಗೆ ಸಮಾಧಾನ ಹೇಳುತ್ತಾ “ದೈತ್ಯ ದಾನವರ ಕಾಟವನ್ನು ಯದುನಾಯಕರು ನಿರ್ವಹಿಸಲಾರರು.
ಅದಕ್ಕೆ ಕೃಷ್ಣನೇ ಇರಬೇಕು. ಅವನಿಲ್ಲದೆ ದ್ವಾರಕೆಗೆ ಭೀತಿ ಇದ್ದದ್ದೇ. ನಿಮ್ಮ ಮೇಲೆ ಅವನಿಗೆ ಕರುಣೆ ಕಡಮೆಯೇ? ನಿಮ್ಮ ಮೇಲೆ ಪ್ರೀತಿಯಲ್ಲವೆ? ಚಿಂತೆ ಸಾಕು, ಸುಮ್ಮನಿರು” ಎಂದ.
ಪದಾರ್ಥ (ಕ.ಗ.ಪ)
ಉರವಣೆ-ಕಾಟ
ನಿಸ್ತರಿಸು - ನಿಭಾಯಿಸು, ನಿರ್ವಹಿಸು
ಮೂಲ ...{Loading}...
ಅರಸ ಕೇಳೈ ದೈತ್ಯ ದಾನವ
ರುರವಣೆಯ ಯದು ನಾಯಕರು ನಿ
ಸ್ತರಿಸಲರಿಯರು ಕೃಷ್ಣನಿಲ್ಲದೆ ಭೀತಿ ದ್ವಾರಕಿಗೆ
ಕರುಣ ನಿಮ್ಮಲಿ ಕಿರಿದೆ ನಿಮ್ಮೊಳ
ಗೆರಕವಲ್ಲವೆ ಚಿಂತೆ ಸಾಕಂ
ತಿರಲಿಯೆಂದವನೀಶನನು ಸಂತೈಸಿದನು ಮುನಿಪ ॥27॥
೦೨೮ ಆ ಮುಕುನ್ದನ ...{Loading}...
ಆ ಮುಕುಂದನ ನೆನಹು ನಮಗೆ ನಿ
ರಾಮಯವು ನೀವಿರಲು ಚಿಂತಾ
ವೈಮನಸ್ಯದ ವೇಧೆ ಮುರಿದುದು ಸಾಕದಂತಿರಲಿ
ಈ ಮಹೋತ್ಪಾತ ಪ್ರಬಂಧ ವಿ
ರಾಮ ಕರ್ಮವ ಬೆಸಸಿಯೆನೆ ನಗು
ತಾ ಮುನೀಶ್ವರ ನುಡಿದನವನೀಪತಿ ಶಿರೋಮಣಿಗೆ ॥28॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಆ ಮುಕುಂದನ ಸ್ಮರಣೆ ನಮ್ಮನ್ನು ನಿರಾತಂಕಗೊಳಿಸುತ್ತದೆ. ನೀವಿರುವುದರಿಂದ ನಮಗೆ ಚಿಂತೆ ದ್ವೇಷಗಳ ಬಾಧೆ ಪರಿಹಾರವಾಯಿತು. ಅದು ಹಾಗಿರಲಿ. ಈಗ ಕಾಣಿಸಿಕೊಂಡವಲ್ಲ ಮಹಾ ಉತ್ಪಾತಗಳು ಅವಕ್ಕೆ ಶಮನಕಾರಕ ಕರ್ಮವೇನೆಂದು ತಿಳಿಸಿ ಎನ್ನಲು ಆ ಮುನೀಶ್ವರ ನಗುತ್ತಾ ಯುಧಿಷ್ಠಿರನಿಗೆ ಹೀಗೆ ಹೇಳಿದ.
ಪದಾರ್ಥ (ಕ.ಗ.ಪ)
ನಿರಾಮಯ-ನಿರಾತಂಕ
ಮೂಲ ...{Loading}...
ಆ ಮುಕುಂದನ ನೆನಹು ನಮಗೆ ನಿ
ರಾಮಯವು ನೀವಿರಲು ಚಿಂತಾ
ವೈಮನಸ್ಯದ ವೇಧೆ ಮುರಿದುದು ಸಾಕದಂತಿರಲಿ
ಈ ಮಹೋತ್ಪಾತ ಪ್ರಬಂಧ ವಿ
ರಾಮ ಕರ್ಮವ ಬೆಸಸಿಯೆನೆ ನಗು
ತಾ ಮುನೀಶ್ವರ ನುಡಿದನವನೀಪತಿ ಶಿರೋಮಣಿಗೆ ॥28॥
೦೨೯ ಇದು ಕಣಾ ...{Loading}...
ಇದು ಕಣಾ ಕುರುರಾಯ ವಂಶಾ
ಭ್ಯುದಯ ವಿಗ್ರಹಪೂರ್ವ ಸೂಚಿಕ
ವಿದು ಸುಯೋಧನ ನೃಪನ ಕತಿಪಯ ಕಾಲ ಸುಖಬೀಜ
ಇದು ಸಮಸ್ತ ಕ್ಷತ್ರ ಕುಲ ವಾ
ರಿದಘಟೋಚ್ಚಾಟನ ಸಮೀರಣ
ವಿದರ ಫಲ ನಿಮಗಪಜಯಾವಹವೆಂದನಾ ಮುನಿಪ ॥29॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ನೋಡಪ್ಪಾ, ಇದು ವಂಶದ ಏಳಿಗೆ ಹಾಗೂ ಯುದ್ಧಗಳಿಗೆ ಪೂರ್ವಸೂಚನೆ. ಕೆಲವು ಕಾಲದವರೆಗೆ ಸುಯೋಧನನಿಗೆ ಸುಖಬೀಜ. ಸಮಸ್ತ ಕ್ಷಾತ್ರಕುಲವೆಂಬ ಮೋಡಗಳ ರಾಶಿಯನ್ನು ಹಾರಿಸಿ ಓಡಿಸುವ ಬಿರುಗಾಳಿ. ಇದರ ಫಲವಾಗಿ ನಿಮಗೆ ಅಪಜಯವುಂಟಾಗುತ್ತದೆ.”
ಪದಾರ್ಥ (ಕ.ಗ.ಪ)
ಕತಿಪಯ-ಕೆಲವು
ಮೂಲ ...{Loading}...
ಇದು ಕಣಾ ಕುರುರಾಯ ವಂಶಾ
ಭ್ಯುದಯ ವಿಗ್ರಹಪೂರ್ವ ಸೂಚಿಕ
ವಿದು ಸುಯೋಧನ ನೃಪನ ಕತಿಪಯ ಕಾಲ ಸುಖಬೀಜ
ಇದು ಸಮಸ್ತ ಕ್ಷತ್ರ ಕುಲ ವಾ
ರಿದಘಟೋಚ್ಚಾಟನ ಸಮೀರಣ
ವಿದರ ಫಲ ನಿಮಗಪಜಯಾವಹವೆಂದನಾ ಮುನಿಪ ॥29॥
೦೩೦ ಅರಿದಿಹುದು ನೀನಾಪ್ತ ...{Loading}...
ಅರಿದಿಹುದು ನೀನಾಪ್ತ ವಚನವ
ಮರೆಯದಿರು ವೇದೋಕ್ತ ಕರ್ಮದ
ಹೊರಿಗೆ ನಿನ್ನದು ನಿನ್ನ ಹೊದ್ದದು ಕಲುಷ ಕಲಿಮಲದ
ಕರುಬರೀ ಕೌರವರು ಮಖವಿದು
ಮೆರೆದುದದ್ಭುತವಾಗಿ ನಿನ್ನನು
ಮುರಿವರಲ್ಲದೆ ನಿಮ್ಮವರು ಸೈರಿಸುವರಲ್ಲೆಂದ ॥30॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಇದನ್ನು ತಿಳಿದುಕೋ, ಆಪ್ತವಚನವನ್ನು ಮರೆಯಬೇಡ. ವೇದೋಕ್ತ ಕರ್ಮದ ರಕ್ಷಣೆಯ ಭಾರ ನಿನ್ನದು. ಆಗ ಈ ಕಲಿಯುಗದ ಕಲ್ಮಷ ನಿನಗೆ ಅಂಟುವುದಿಲ್ಲ. ಈ ಕೌರವರು ಹೊಟ್ಟೆಕಿಚ್ಚಿನವರು, ಈ ಯಜ್ಞ ಅದ್ಭುತವಾಗಿ ರಂಜಿಸಿತು. ಕೌರವರು ನಿನ್ನನ್ನು ಹಾಳುಮಾಡಲು ಬಯಸುವರಲ್ಲದೆ ಸೈರಿಸಿಕೊಳ್ಳುವವರಲ್ಲ.
ಪದಾರ್ಥ (ಕ.ಗ.ಪ)
ಮೂಲ ...{Loading}...
ಅರಿದಿಹುದು ನೀನಾಪ್ತ ವಚನವ
ಮರೆಯದಿರು ವೇದೋಕ್ತ ಕರ್ಮದ
ಹೊರಿಗೆ ನಿನ್ನದು ನಿನ್ನ ಹೊದ್ದದು ಕಲುಷ ಕಲಿಮಲದ
ಕರುಬರೀ ಕೌರವರು ಮಖವಿದು
ಮೆರೆದುದದ್ಭುತವಾಗಿ ನಿನ್ನನು
ಮುರಿವರಲ್ಲದೆ ನಿಮ್ಮವರು ಸೈರಿಸುವರಲ್ಲೆಂದ ॥30॥
೦೩೧ ನುಡಿಯದಿರಸತ್ಯವನು ರಾಜ್ಯವ ...{Loading}...
ನುಡಿಯದಿರಸತ್ಯವನು ರಾಜ್ಯವ
ಬಿಡು ವಿಭಾಡಿಸಿ ನಿನ್ನ ವಧುವಿನ
ಮುಡಿಗೆ ಹಾಯ್ದರೆ ನೀನಧರ್ಮದ ತಡಿಯನಡರದಿರು
ಒಡಲುಗೂಡಿ ಸಮಸ್ತ ಧನವಿದು
ಕೆಡುವುದಗ್ಗದ ಮೋಕ್ಷಲಕ್ಷ್ಮಿಯ
ಮುಡಿಗೆ ಹಾಯ್ವೊಡೆ ಸತ್ಯವೊಂದನೆ ನಂಬು ನೀನೆಂದ ॥31॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅಸತ್ಯವನ್ನು ನುಡಿಯಬೇಡ. ರಾಜ್ಯವನ್ನಾದರೂ ಬಿಡು, ಪರರು ನಿನ್ನ ಪತ್ನಿಯ ಮುಡಿಗೆ ಕೈಹಾಕಿ ಅಪಮಾನಮಾಡಿದರೂ ಅಧರ್ಮದ ದಡವನ್ನೇರಬೇಡ. ಈ ಶರೀರದೊಡನೆ ಸಮಸ್ತ ಸಂಪತ್ತೂ ನಾಶಹೊಂದುವಂತಹದೇ. ಮೋಕ್ಷಲಕ್ಷ್ಮಿಯ ಮುಡಿಯನ್ನು
ಸೇರಬೇಕೆಂದಿದ್ದರೆ ನೀನು ಸತ್ಯವೊಂದನ್ನೇ ನಂಬು.
ಪದಾರ್ಥ (ಕ.ಗ.ಪ)
ಮೂಲ ...{Loading}...
ನುಡಿಯದಿರಸತ್ಯವನು ರಾಜ್ಯವ
ಬಿಡು ವಿಭಾಡಿಸಿ ನಿನ್ನ ವಧುವಿನ
ಮುಡಿಗೆ ಹಾಯ್ದರೆ ನೀನಧರ್ಮದ ತಡಿಯನಡರದಿರು
ಒಡಲುಗೂಡಿ ಸಮಸ್ತ ಧನವಿದು
ಕೆಡುವುದಗ್ಗದ ಮೋಕ್ಷಲಕ್ಷ್ಮಿಯ
ಮುಡಿಗೆ ಹಾಯ್ವೊಡೆ ಸತ್ಯವೊಂದನೆ ನಂಬು ನೀನೆಂದ ॥31॥
೦೩೨ ಅಜ್ಞರವದಿರು ನೀವು ...{Loading}...
ಅಜ್ಞರವದಿರು ನೀವು ನೆರೆ ಸ
ರ್ವಜ್ಞರವದಿರಧರ್ಮನಿಷ್ಠರು
ಯಜ್ಞ ದೀಕ್ಷಿತರಿಂದು ನೀವು ಸಮಸ್ತ ಜಗವರಿಯೆ
ಯಜ್ಞರಿಪುಗಳು ನಿಪುಣರಿಗೆ ವರ
ಯಾಜ್ಞಿಕರಿಗಾಚಾರಹೀನರ
ಭಿಜ್ಞಮತವಿದು ತಪ್ಪದೆಂದನು ಮುನಿ ನೃಪಾಲಂಗೆ ॥32॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಕೌರವರು ಅಜ್ಞರು, ನೀವು ಮಹಾ ಸರ್ವಜ್ಞರು, ಅವರು ಅಧರ್ಮನಿರತರು, ನೀವು, ಇಂದು ಜಗತ್ತಿಗೇ ತಿಳಿದಿರುವಂತೆ ಯಜ್ಞ
ದೀಕ್ಷಿತರಾಗಿದ್ದವರು. ಅವರು ಯಜ್ಞವಿರೋಧಿಗಳು, ಯಾಜ್ಞಿಕರಿಗೂ ಆಚಾರಹೀನರಿಗೂ ಹೊಂದಿಕೆಯಾದೀತೇ ?” ಎಂದು ಮುನಿಯು ಧರ್ಮರಾಯನಿಗೆ ಹೇಳಿದನು.
ಪದಾರ್ಥ (ಕ.ಗ.ಪ)
ಮೂಲ ...{Loading}...
ಅಜ್ಞರವದಿರು ನೀವು ನೆರೆ ಸ
ರ್ವಜ್ಞರವದಿರಧರ್ಮನಿಷ್ಠರು
ಯಜ್ಞ ದೀಕ್ಷಿತರಿಂದು ನೀವು ಸಮಸ್ತ ಜಗವರಿಯೆ
ಯಜ್ಞರಿಪುಗಳು ನಿಪುಣರಿಗೆ ವರ
ಯಾಜ್ಞಿಕರಿಗಾಚಾರಹೀನರ
ಭಿಜ್ಞಮತವಿದು ತಪ್ಪದೆಂದನು ಮುನಿ ನೃಪಾಲಂಗೆ ॥32॥
೦೩೩ ಇದುವೆ ರೇಖಾಮಾತ್ರ ...{Loading}...
ಇದುವೆ ರೇಖಾಮಾತ್ರ ಸರ್ವಾಂ
ಗದಲಿ ನಿನ್ನನು ಮರೆಯದಿರು ಕೊಂ
ಕಿದರೆ ಕರುಣಾಜಲಧಿ ಜೈಸಲುವುಂಟು ಹರಿ ನಿನಗೆ
ಬೆದರದಿರು ವಿಗಡಿಸುವ ವಿಷಯಾ
ಸ್ಪದದೊಳೆಂದು ಮುನೀಂದ್ರನೈವರು
ಸುದತಿ ಸಹಿತನಿಬರಿಗೆ ಬುದ್ಧಿಯ ಹೇಳಿ ಹೊರವಂಟ ॥33॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ರೇಖಾಮಾತ್ರದಲ್ಲಿ ಹೇಳಬೇಕೆಂದರೆ ಇಷ್ಟೇ. ಸರ್ವಾಂಗದಲ್ಲೂ ನಿನ್ನನ್ನು ನೀನು ಮರೆಯಬೇಡ. ಏನಾದರೂ ತೊಂದರೆ
ಬಂದರೆ ಅದನ್ನು ಜಯಿಸಲು ಕರುಣಾಸಾಗರ ಕೃಷ್ಣ ನಿನ್ನ ಪಾಲಿಗೆ ಇದ್ದೇ ಇದ್ದಾನೆ. ನಿನ್ನನ್ನು ವಿರೋಧಿಸುವ ವಿಷಯಗಳ ಸಂದರ್ಭಗಳಲ್ಲಿ ಹೆದರಬೇಡ. ಎಂದು ವ್ಯಾಸ ಮುನೀಂದ್ರ ಪಾಂಡವರೈವರಿಗೂ ದ್ರೌಪದಿಗೂ ಬುದ್ಧಿವಾದ ಹೇಳಿ ಹೊರಟ.
ಪದಾರ್ಥ (ಕ.ಗ.ಪ)
ಮೂಲ ...{Loading}...
ಇದುವೆ ರೇಖಾಮಾತ್ರ ಸರ್ವಾಂ
ಗದಲಿ ನಿನ್ನನು ಮರೆಯದಿರು ಕೊಂ
ಕಿದರೆ ಕರುಣಾಜಲಧಿ ಜೈಸಲುವುಂಟು ಹರಿ ನಿನಗೆ
ಬೆದರದಿರು ವಿಗಡಿಸುವ ವಿಷಯಾ
ಸ್ಪದದೊಳೆಂದು ಮುನೀಂದ್ರನೈವರು
ಸುದತಿ ಸಹಿತನಿಬರಿಗೆ ಬುದ್ಧಿಯ ಹೇಳಿ ಹೊರವಂಟ ॥33॥
೦೩೪ ಮುನಿಪ ಕಳುಹಿಸಿಕೊಣ್ಡು ...{Loading}...
ಮುನಿಪ ಕಳುಹಿಸಿಕೊಂಡು ಬದರೀ
ವನಕೆ ತಿರುಗಿದನತ್ತಲಿತ್ತಲು
ಜನಪ ಬಂದನು ಬಳಿಕ ಮಯನಿರ್ಮಿತ ಮಹಾಸಭೆಗೆ
ಮುನಿಗಳುಳಿದವರನು ಮಹೀಸುರ
ಜನ ಸಹಿತ ಭೂಪಾಲಶೇಷವ
ನನುನಯದಿ ಮಿಗೆ ಸತ್ಕರಿಸಿ ಬೀಳ್ಕೊಟ್ಟನುಚಿತದಲಿ ॥34॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ವ್ಯಾಸಮುನಿ ಬೀಳ್ಕೊಂಡು ಬದರಿಕಾಶ್ರಮಕ್ಕೆ ಹೊರಟ. ಈ ಕಡೆ ಯುಧಿಷ್ಠಿರ ಮಯನಿರ್ಮಿತ ಸಭಾಭವನಕ್ಕೆ ಬಂದ.
ಇನ್ನೂ ಉಳಿದಿದ್ದ ಮುನಿಗಳನ್ನೂ, ವಿಪ್ರರು ಸಹಿತ ರಾಜರುಗಳನ್ನೂ ಯೋಗ್ಯರೀತಿಯಲ್ಲಿ ಪ್ರೀತಿಯಿಂದ ಸತ್ಕರಿಸಿ ಬೀಳ್ಕೊಟ್ಟ.
ಪದಾರ್ಥ (ಕ.ಗ.ಪ)
ಮೂಲ ...{Loading}...
ಮುನಿಪ ಕಳುಹಿಸಿಕೊಂಡು ಬದರೀ
ವನಕೆ ತಿರುಗಿದನತ್ತಲಿತ್ತಲು
ಜನಪ ಬಂದನು ಬಳಿಕ ಮಯನಿರ್ಮಿತ ಮಹಾಸಭೆಗೆ
ಮುನಿಗಳುಳಿದವರನು ಮಹೀಸುರ
ಜನ ಸಹಿತ ಭೂಪಾಲಶೇಷವ
ನನುನಯದಿ ಮಿಗೆ ಸತ್ಕರಿಸಿ ಬೀಳ್ಕೊಟ್ಟನುಚಿತದಲಿ ॥34॥
೦೩೫ ಅರಸ ಕೇಳೈ ...{Loading}...
ಅರಸ ಕೇಳೈ ಕೌರವೇಂದ್ರನ
ಕರೆಸಿದನು ದುಶ್ಶಾಸನಾದಿಕ
ದುರುಳ ಕೌರವ ಶತಕ ಸಹಿತಲೆ ಸಭೆಗೆ ನಡೆತಂದು
ಪರಿಭವಕೆ ಗುರಿಯಾಗಿ ಹಾಸ್ಯದ
ಹರಹಿನಲಿ ಹಳುವಾಗಿ ಪಾಂಡವ
ರರಸನನು ಬೀಳ್ಕೊಂಡು ಹಸ್ತಿನಪುರಕೆ ಹೊರವಂಟ ॥35॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅನಂತರ ಯಧಿಷ್ಠಿರ ಕೌರವೇಂದ್ರನನ್ನು ಕರೆಸಿದ. ಅವನು ದುಶ್ಶಾಸನನೇ ಮೊದಲಾದ ತನ್ನ ದುಷ್ಟ ತಮ್ಮಂದಿರು ನೂರ್ವರೊಡನೆ
ಬಂದು ಅವಮಾನಕ್ಕೆ ಗುರಿಯಾಗಿ ಹಾಸ್ಯದ ಹರಹಿನಲ್ಲಿ ಹಗುರವಾಗಿ, ಪಾಂಡವರನ್ನು ಬೀಳ್ಕೊಂಡು ಹಸ್ತಿನಾಪುರಕ್ಕೆ ಹೊರಟ.
ಪದಾರ್ಥ (ಕ.ಗ.ಪ)
ಹಳು- ಹಗುರ
ಮೂಲ ...{Loading}...
ಅರಸ ಕೇಳೈ ಕೌರವೇಂದ್ರನ
ಕರೆಸಿದನು ದುಶ್ಶಾಸನಾದಿಕ
ದುರುಳ ಕೌರವ ಶತಕ ಸಹಿತಲೆ ಸಭೆಗೆ ನಡೆತಂದು
ಪರಿಭವಕೆ ಗುರಿಯಾಗಿ ಹಾಸ್ಯದ
ಹರಹಿನಲಿ ಹಳುವಾಗಿ ಪಾಂಡವ
ರರಸನನು ಬೀಳ್ಕೊಂಡು ಹಸ್ತಿನಪುರಕೆ ಹೊರವಂಟ ॥35॥
೦೩೬ ಭೂಮಿಲಮ್ಬದ ನಿಖಿಳ ...{Loading}...
ಭೂಮಿಲಂಬದ ನಿಖಿಳ ಭೂಪ
ಸ್ತೋಮ ಸಹಿತ ಸುಯೋಧನನು ಹೃ
ತ್ತಾಮಸದ ಚಾವಡಿಯ ಝಾಡಿಯ ರೋಷ ಪಾವಕದ
ಧೂಮಮುಖನೈತಂದು ಗಜಪುರ
ಸೀಮೆಯಲಿ ಪಾಳಯವ ಬಿಡಿಸಿದ
ವೈಮನಸ್ಯದಲಿರುಳು ಹೊಕ್ಕನು ಹಸ್ತಿನಾಪುರವ ॥36॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಭೂಮಿಯಿರುವಷ್ಟು ವಿಸ್ತಾರಕ್ಕೆ ಹರಡಿದ್ದ ರಾಜಸಮೂಹದೊಡನೆ ಸುಯೋಧನನು ಹೃದಯದಲ್ಲಿ ದ್ವೇಷವನ್ನು ತುಂಬಿಕೊಂಡು,
ಒಳಗಿನ ರೋಷಾಗ್ನಿಕಾರಣದಿಂದ ಕಪ್ಪಿಟ್ಟ ಮುಖದಲ್ಲಿ ಗಜಪುರದ ಎಲ್ಲೆಗೆ ಬಂದ. ಅಲ್ಲೇ ಬೀಡುಬಿಟ್ಟ. ಮನಸ್ಸು ಕೆಟ್ಟು
ರಾತ್ರಿಯ ಹೊತ್ತಿನಲ್ಲಿ ಹಸ್ತಿನಾಪುರವನ್ನು ಪ್ರವೇಶಿಸಿದ.
ಪದಾರ್ಥ (ಕ.ಗ.ಪ)
ಝಾಡಿ-ಆಧಿಕ್ಯ, ಅತಿಶಯತೆ
ಮೂಲ ...{Loading}...
ಭೂಮಿಲಂಬದ ನಿಖಿಳ ಭೂಪ
ಸ್ತೋಮ ಸಹಿತ ಸುಯೋಧನನು ಹೃ
ತ್ತಾಮಸದ ಚಾವಡಿಯ ಝಾಡಿಯ ರೋಷ ಪಾವಕದ
ಧೂಮಮುಖನೈತಂದು ಗಜಪುರ
ಸೀಮೆಯಲಿ ಪಾಳಯವ ಬಿಡಿಸಿದ
ವೈಮನಸ್ಯದಲಿರುಳು ಹೊಕ್ಕನು ಹಸ್ತಿನಾಪುರವ ॥36॥