೦೦೦ ಸೂಚನೆ ರಾಜಸೂಯದೊಳಗ್ರ ...{Loading}...
ಸೂಚನೆ: ರಾಜಸೂಯದೊಳಗ್ರ ಪೂಜಾ
ರಾಜಿತನ ಶ್ರುತಿ ಮೌಳಿ ಮಣಿಯ ವಿ
ರಾಜಿತನ ಶಿಶುಪಾಲ ಜರೆದನು ಪೂರ್ವವೈರದಲಿ
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
ಸೂ : ರಾಜಸೂಯಯಾಗದಲ್ಲಿ ಅಗ್ರಪೂಜೆಗೆ ಪಾತ್ರನಾದಂತಹ ವೇದಗಳ ಶಿರೋ ರತ್ನ ಎನಿಸಿ ವಿರಾಜಿತನಾದಂತಹ ಶ್ರೀಕೃಷ್ಣನನ್ನು, ಶಿಶುಪಾಲನು ಪೂರ್ವವೈರ ಕಾರಣದಿಂದ ನಿಂದಿಸಿದ.
ಪದಾರ್ಥ (ಕ.ಗ.ಪ)
ಶ್ರುತಿ ಮೌಳಿ ಮಣಿ - ವೇದಗಳ ಶಿರೋ ರತ್ನ
ಮೂಲ ...{Loading}...
ಸೂಚನೆ: ರಾಜಸೂಯದೊಳಗ್ರ ಪೂಜಾ
ರಾಜಿತನ ಶ್ರುತಿ ಮೌಳಿ ಮಣಿಯ ವಿ
ರಾಜಿತನ ಶಿಶುಪಾಲ ಜರೆದನು ಪೂರ್ವವೈರದಲಿ
೦೦೧ ಕೇಳು ಜನಮೇಜಯ ...{Loading}...
ಕೇಳು ಜನಮೇಜಯ ಧರಿತ್ರೀ
ಪಾಲ ಮುನಿಮಧ್ಯದಲಿ ನಿಮ್ಮ ನೃ
ಪಾಲ ಭೀಷ್ಮಂಗೆಂದನತಿ ಗಂಭೀರ ನಾದದಲಿ
ಭಾಳ ನೇತ್ರಗೆ ಪಡಿಯೆನಿಪ ಭೂ
ಪಾಲರಿದರೊಳಗಗ್ರ ಪೂಜ್ಯನ
ಹೇಳೆನಲು ಗಾಂಗೇಯ ನುಡಿದನು ವೇದ ಸನುಮತವ ॥1॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಆ ಮುನಿಗಳ ಮಧ್ಯದಲ್ಲಿ ಯುಧಿಷ್ಠಿರ ರಾಜ ಭೀಷ್ಮನನ್ನು ಕುರಿತು ಗಂಭೀರವಾದ ಧ್ವನಿಯಲ್ಲಿ “ಪರಮೇಶ್ವರನಿಗೆ ಪ್ರತಿರೂಪವೆಂಬಂತೆ ಇಲ್ಲಿ ರಾಜರುಗಳಿದ್ದಾರೆ. ಅವರಲ್ಲಿ ಅಗ್ರಪೂಜೆಗೆ ಪಾತ್ರನಾದವನಾರು ಹೇಳು” ಎಂದು ಕೇಳಿದ. ಅದಕ್ಕೆ ಭೀಷ್ಮ ವೇದಸಮ್ಮತವಾದ ಮಾತನ್ನು ಹೇಳಿದ.
ಪದಾರ್ಥ (ಕ.ಗ.ಪ)
ಮೂಲ ...{Loading}...
ಕೇಳು ಜನಮೇಜಯ ಧರಿತ್ರೀ
ಪಾಲ ಮುನಿಮಧ್ಯದಲಿ ನಿಮ್ಮ ನೃ
ಪಾಲ ಭೀಷ್ಮಂಗೆಂದನತಿ ಗಂಭೀರ ನಾದದಲಿ
ಭಾಳ ನೇತ್ರಗೆ ಪಡಿಯೆನಿಪ ಭೂ
ಪಾಲರಿದರೊಳಗಗ್ರ ಪೂಜ್ಯನ
ಹೇಳೆನಲು ಗಾಂಗೇಯ ನುಡಿದನು ವೇದ ಸನುಮತವ ॥1॥
೦೦೨ ಆರು ತಾರಾಗ್ರಹದ ...{Loading}...
ಆರು ತಾರಾಗ್ರಹದ ಮಧ್ಯದೊ
ಳಾರು ದಿನಕರನುಳಿಯೆ ಬಳಿಕಾ
ರಾರು ಸುರ ನಿಕರದಲಿ ಸೇವ್ಯರು ಶೂಲಧರನುಳಿಯೆ
ಆರು ನಿರ್ಜರ ನಿವಹದಲಿ ಜಂ
ಭಾರಿಯಲ್ಲದೆ ಮಾನನೀಯರ
ದಾರು ಜಗದಲಿ ಕೃಷ್ಣನಲ್ಲದೆ ಪೂಜ್ಯತಮರೆಂದ ॥2॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ನಕ್ಷತ್ರ ಗ್ರಹಗಳ ನಡುವೆ ಸೂರ್ಯನನ್ನು ಬಿಟ್ಟರೆ ಪೂಜ್ಯರಾರು ? ಸುರನಿಕರದಲ್ಲಿ ತ್ರಿಶೂಲಧರನನ್ನು ಬಿಟ್ಟರೆ ಸೇವ್ಯರು ಯಾರು ? ನಿರ್ಜರರಲ್ಲೆಲ್ಲ ದೇವೇಂದ್ರನನ್ನು ಬಿಟ್ಟರೆ ಪೂಜ್ಯರು ಯಾರು ? ಅಂತೆಯೇ ಈ ಜಗತ್ತಿನಲ್ಲಿ ಕೃಷ್ಣನಲ್ಲದೆ ಪೂಜ್ಯತಮರಾದವರು ಬೇರಾರಿದ್ದಾರೆ ?” ಎಂದ.
ಪದಾರ್ಥ (ಕ.ಗ.ಪ)
ನಿರ್ಜರ - ದೇವತೆಗಳು ( ಮುಪ್ಪಿಲ್ಲದವರು)
ಜಂಭಾರಿ - ಜಂಭ ಎಂಬ ರಕ್ಷಸನನ್ನು ಕೊಂದ ಇಂದ್ರ
ಮೂಲ ...{Loading}...
ಆರು ತಾರಾಗ್ರಹದ ಮಧ್ಯದೊ
ಳಾರು ದಿನಕರನುಳಿಯೆ ಬಳಿಕಾ
ರಾರು ಸುರ ನಿಕರದಲಿ ಸೇವ್ಯರು ಶೂಲಧರನುಳಿಯೆ
ಆರು ನಿರ್ಜರ ನಿವಹದಲಿ ಜಂ
ಭಾರಿಯಲ್ಲದೆ ಮಾನನೀಯರ
ದಾರು ಜಗದಲಿ ಕೃಷ್ಣನಲ್ಲದೆ ಪೂಜ್ಯತಮರೆಂದ ॥2॥
೦೦೩ ಗಿರಿಗಳಲಿ ಹೇಮಾದ್ರಿ ...{Loading}...
ಗಿರಿಗಳಲಿ ಹೇಮಾದ್ರಿ ಘನಸಾ
ಗರದೊಳಗೆ ದುಗ್ಧಾಬ್ಧಿ ದೇವಾ
ಸುರ ನರೋರಗ ನಿಕರದಲಿ ನಾರಾಯಣನೆ ಮಿಗಿಲು
ಅರಸ ಸಂಶಯವೇಕೆ ಕೃಷ್ಣನ
ಚರಣವನು ತೊಳೆ ರಾಜಸೂಯಾ
ಧ್ವರಕೆ ಪೂಜಾಪಾತ್ರನೀ ಹರಿಯೆಂದನಾ ಭೀಷ್ಮ ॥3॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಗಿರಿಗಳಲ್ಲೆಲ್ಲ ಹೇಮಾದ್ರಿ, ಘನಸಾಗರಗಳಲ್ಲೆಲ್ಲ ಕ್ಷೀರಸಾಗರ, ದೇವಾಸುರ, ನರ, ಉರಗರಲ್ಲೆಲ್ಲ ನಾರಾಯಣನೆ ಮಿಗಿಲಾದವನು.
ಈ ವಿಷಯದಲ್ಲಿ ಸಂಶಯವೇಕೆ? ಶ್ರೀಕೃಷ್ಣನ ಪಾದಗಳನ್ನು ತೊಳೆ. ಈ ರಾಜಸೂಯಯಾಗಕ್ಕೆ ಪೂಜ್ಯಪಾತ್ರನಾದವನು ಈ ಕೃಷ್ಣ” ಎಂದ.
ಪದಾರ್ಥ (ಕ.ಗ.ಪ)
ಅಧ್ವರ - ಯಾಗ
ಮೂಲ ...{Loading}...
ಗಿರಿಗಳಲಿ ಹೇಮಾದ್ರಿ ಘನಸಾ
ಗರದೊಳಗೆ ದುಗ್ಧಾಬ್ಧಿ ದೇವಾ
ಸುರ ನರೋರಗ ನಿಕರದಲಿ ನಾರಾಯಣನೆ ಮಿಗಿಲು
ಅರಸ ಸಂಶಯವೇಕೆ ಕೃಷ್ಣನ
ಚರಣವನು ತೊಳೆ ರಾಜಸೂಯಾ
ಧ್ವರಕೆ ಪೂಜಾಪಾತ್ರನೀ ಹರಿಯೆಂದನಾ ಭೀಷ್ಮ ॥3॥
೦೦೪ ವ್ಯಾಸ ನಾರದ ...{Loading}...
ವ್ಯಾಸ ನಾರದ ರೋಮಶಾದಿಗ
ಳೀ ಸಮಸ್ತ ಮುನೀಂದ್ರರಿದೆ ಯೀ
ಕೇಶವನು ಪೂಜಾರುಹನೆಯೆಂದಿವರ ಬೆಸಗೊಳ್ಳೈ
ಲೇಸನಾಡಿದೆ ಭೀಷ್ಮ ಬಳಿಕೇ
ನೀ ಸಮಸ್ತ ಚರಾಚರದೊಳೀ
ವಾಸುದೇವನೆ ಪೂಜ್ಯನೆಂದುದು ಸಕಲ ಮುನಿ ನಿಕರ ॥4॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ವ್ಯಾಸ ನಾರದ, ರೋಮಶ ಮೊದಲಾದ ಈ ಸಮಸ್ತ ಮುನೀಂದ್ರರಿದ್ದಾರೆ. ಈ ಕೃಷ್ಣನು ಪೂಜಾರ್ಹನೆ ಎಂದು ಇವರನ್ನು ಕೇಳಿ ನೋಡು” ಎಂದ. ಆ ಸಕಲ ಮುನಿಗಳೂ ಒಕ್ಕೊರಲಿನಿಂದ “ಭೀಷ್ಮ, ನೀನು ಸರಿಯಾದದ್ದನ್ನೇ ಹೇಳಿದೆ, ಈ ಸಮಸ್ತ ಚರಾಚರಗಳಲ್ಲಿ ವಾಸುದೇವನೇ ಪೂಜ್ಯ” ಎಂದರು.
ಪದಾರ್ಥ (ಕ.ಗ.ಪ)
ಮೂಲ ...{Loading}...
ವ್ಯಾಸ ನಾರದ ರೋಮಶಾದಿಗ
ಳೀ ಸಮಸ್ತ ಮುನೀಂದ್ರರಿದೆ ಯೀ
ಕೇಶವನು ಪೂಜಾರುಹನೆಯೆಂದಿವರ ಬೆಸಗೊಳ್ಳೈ
ಲೇಸನಾಡಿದೆ ಭೀಷ್ಮ ಬಳಿಕೇ
ನೀ ಸಮಸ್ತ ಚರಾಚರದೊಳೀ
ವಾಸುದೇವನೆ ಪೂಜ್ಯನೆಂದುದು ಸಕಲ ಮುನಿ ನಿಕರ ॥4॥
೦೦೫ ತರಿಸಿದನು ನವ ...{Loading}...
ತರಿಸಿದನು ನವ ಹೇಮಮಣಿ ಭಾ
ಸುರದ ಮಂಚದ ಮೇಲೆ ಲಲಿತಾ
ಸ್ತರಣದಡಿಕಿಲುವಾಸಗಳ ನಿರ್ಮಳ ನಿಕಾರಗಳ
ಮೆರೆದುದೆಳ ಬೆಳುದಿಂಗಳಿನ ಮೋ
ಹರದ ಮಾರೊಡ್ಡೆನಿಸಿ ಭೂಮೀ
ಶ್ವರ ಸಭಾ ಮಧ್ಯದಲಿ ಧರಣೀಪಾಲ ಕೇಳ್ ಎಂದ ॥5॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಆಗ ಯುಧಿಷ್ಠಿರ ಹೊಸದಾಗಿ ಹೊಳೆಯುತ್ತಿದ್ದ ರತ್ನಖಚಿತವಾದ ಚಿನ್ನದ ಮಂಚವನ್ನು ಆ ರಾಜರುಗಳ ಸಭಾಮಧ್ಯದಲ್ಲಿ ತರಿಸಿಟ್ಟ. ಅದರ ಮೇಲೆ ಸುಂದರವಾದ ನಿರ್ಮಳ ವಸ್ತ್ರಗಳನ್ನು ಹಾಸುಗಳನ್ನು ಒಂದರಮೇಲೋಂದರಂತೆ ಜೋಡಿಸಿದರು. ಅದು ಬೆಳುದಿಂಗಳಿನ ಪ್ರತಿರೂಪವೋ ಎಂಬಂತೆ ಶೋಭಿಸಿತು.
ಪದಾರ್ಥ (ಕ.ಗ.ಪ)
ನಿಕಾರ-ಒಂದು ಬಗೆಯ ವಸ್ತ್ರ
ಲಲಿತಾಸ್ತರಣ - ಸುಂದರವಾದ ಪೀಠ
ನಿಕಾರ - ವಸ್ತ್ರ
ಮೂಲ ...{Loading}...
ತರಿಸಿದನು ನವ ಹೇಮಮಣಿ ಭಾ
ಸುರದ ಮಂಚದ ಮೇಲೆ ಲಲಿತಾ
ಸ್ತರಣದಡಿಕಿಲುವಾಸಗಳ ನಿರ್ಮಳ ನಿಕಾರಗಳ
ಮೆರೆದುದೆಳ ಬೆಳುದಿಂಗಳಿನ ಮೋ
ಹರದ ಮಾರೊಡ್ಡೆನಿಸಿ ಭೂಮೀ
ಶ್ವರ ಸಭಾ ಮಧ್ಯದಲಿ ಧರಣೀಪಾಲ ಕೇಳೆಂದ ॥5॥
೦೦೬ ವಿನಯದಲಿ ಸಹದೇವ ...{Loading}...
ವಿನಯದಲಿ ಸಹದೇವ ಕೈಗೊ
ಟ್ಟನುಪಮನ ತಂದನು ಪಿತಾಮಹ
ಜನಕ ಪಾಯವಧಾರು ಗಂಗಾಜನಕನವಧಾರು
ದನುಜರಿಪುವವಧಾನವವಧಾ
ನೆನುತ ವಿಮಳ ಮಹಾಘ್ರ್ಯ ಸಿಂಹಾ
ಸನಕೆ ಬಿಜಯಂಗೈಸಿದರು ಕುಳ್ಳಿರ್ದನಸುರಾರಿ ॥6॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಸಹದೇವ ನಮ್ರತೆಯಿಂದ ಕೃಷ್ಣನ ಬಳಿ ಹೋಗಿ ಅವನ ಕೈ ಹಿಡಿದು, ಕರೆತಂದ. ಮಿಕ್ಕೆಲ್ಲರೂ ಬ್ರಹ್ಮನ ತಂದೆಯೆ ಪಾಯವಧಾರು, ಗಂಗಾಜನಕ ಅವಧಾರು, ದನುಜರಿಪು ಅವಧಾನ ಅವಧಾನ ಎನ್ನುತ್ತಾ ಅವನನ್ನು ಸಿಂಹನದೆಡೆಗೆ ನಡೆಸಿದರು. ಶ್ರೀ ಕೃಷ್ಣನು ಸಿಂಹಾಸನದಲ್ಲಿ ಕುಳಿತುಕೊಂಡ.
ಪದಾರ್ಥ (ಕ.ಗ.ಪ)
ಮಹಾಘ್ರ್ಯ - ಅಗ್ರಪೂಜೆಗಾಗಿ ಮೀಸಲಾಗಿದ್ದ ಆಸನ
ಮೂಲ ...{Loading}...
ವಿನಯದಲಿ ಸಹದೇವ ಕೈಗೊ
ಟ್ಟನುಪಮನ ತಂದನು ಪಿತಾಮಹ
ಜನಕ ಪಾಯವಧಾರು ಗಂಗಾಜನಕನವಧಾರು
ದನುಜರಿಪುವವಧಾನವವಧಾ
ನೆನುತ ವಿಮಳ ಮಹಾಘ್ರ್ಯ ಸಿಂಹಾ
ಸನಕೆ ಬಿಜಯಂಗೈಸಿದರು ಕುಳ್ಳಿರ್ದನಸುರಾರಿ ॥6॥
೦೦೭ ತನ್ದು ಮಣಿಮಯ ...{Loading}...
ತಂದು ಮಣಿಮಯ ಪಡಿಗದಲಿ ಗೋ
ವಿಂದನಂಘ್ರಿಯತೊಳೆದು ಗಂಗೆಯ
ತಂದೆವೀಗಳೆ ತಾವೆನುತ ತಮ್ಮುತ್ತಮಾಂಗದಲಿ
ವಂದಿಸುತ ವೈದಿಕದ ಪರಿವಿಡಿ
ಯಿಂದ ಮಧುಪರ್ಕಾದಿ ಪೂಜೆಗ
ಳಿಂದ ಸತ್ಕರಿಸಿದರು ಸಚರಾಚರ ಜಗತ್ಪತಿಯ ॥7॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ರತ್ನಖಚಿತವಾದ ಹರಿವಾಣವನ್ನು ತಂದಿಟ್ಟು, ಅದರಲ್ಲಿ ಕೃಷ್ಣನ ಪಾದಗಳನ್ನಿರಿಸಿ ತೊಳೆದು, ಅವನ ಪಾದಗಳಿಂದ ಗಂಗೆಯನ್ನು
ತಂದಂತಾಯಿತು. ಎನ್ನುತ್ತಾ, ಅವನ ಪಾದಗಳಿಗೆ ವಂದಿಸಿದರು. ವೈದಿಕ ವಿಧಾನದಿಂದ ಆ ಸಚರಾಚರ ಜಗತ್ಪತಿಯಾದ ಕೃಷ್ಣನನ್ನು
ಮಧುಪರ್ಕಾದಿ ಪೂಜೆಗಳಿಂದ ಸತ್ಕರಿಸಿದರು.
ಪದಾರ್ಥ (ಕ.ಗ.ಪ)
ಪಡಿಗ-ಹರಿವಾಣ,
ಮೂಲ ...{Loading}...
ತಂದು ಮಣಿಮಯ ಪಡಿಗದಲಿ ಗೋ
ವಿಂದನಂಘ್ರಿಯತೊಳೆದು ಗಂಗೆಯ
ತಂದೆವೀಗಳೆ ತಾವೆನುತ ತಮ್ಮುತ್ತಮಾಂಗದಲಿ
ವಂದಿಸುತ ವೈದಿಕದ ಪರಿವಿಡಿ
ಯಿಂದ ಮಧುಪರ್ಕಾದಿ ಪೂಜೆಗ
ಳಿಂದ ಸತ್ಕರಿಸಿದರು ಸಚರಾಚರ ಜಗತ್ಪತಿಯ ॥7॥
೦೦೮ ಆಯೆನುತ ಮನವುಕ್ಕಿ ...{Loading}...
ಆಯೆನುತ ಮನವುಕ್ಕಿ ಮುನಿಗಳು
ಘೇಯೆನಲು ನಿರ್ಜರರ ಭೇರಿ ನ
ವಾಯಿಯಲಿ ಮೊಳಗಿದದವು ಸುರಿದವು ಮುಗುಳ ತನಿಮಳೆಯ
ರಾಯನಧ್ವರ ಕರ್ಮ ಸತ್ಫಲ
ವಾಯಿತೀ ಭೂಪತಿ ಕೃತಾರ್ಥನ
ಲಾಯೆನುತ ಸಭೆ ಹೊಗಳಿತಂದು ಸಮುದ್ರ ಘೋಷದಲಿ ॥8॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ಆ’ ಎನ್ನುತ್ತಾ ಮನವುಕ್ಕಿ ಮುನಿಗಳು ‘ಉಘೇ’ ಎಂದು ಹರ್ಷೋದ್ಗಾರ ಮಾಡಿದರು. ದೇವತೆಗಳು ಆನಂದಭೇರಿಗಳನ್ನು
ಹೊಸಪರಿಯಿಂದ ಮೊಳಗಿಸಿದರು. ಹೂವಿನ ಮಳೆಯನ್ನು ಸುರಿಸಿದರು. ಸಭೆಯಲ್ಲಿದ್ದವರೆಲ್ಲ ಯುಧಿಷ್ಠಿರ ರಾಜನ ಅಧ್ವರ ಕರ್ಮ ಸತ್ಫಲದ್ದಾಯಿತು. ಯುಧಿಷ್ಠಿರ ಕೃತಾರ್ಥನಾದ ಎಂದು ಸಮುದ್ರ ಘೋಷಿಸಿದಂತೆ ಹೊಗಳಿದರು.
ಪದಾರ್ಥ (ಕ.ಗ.ಪ)
ನವಾಯಿಯಲಿ-ಹೊಸರೀತಿಯಿಂದ
ಪಾಠಾನ್ತರ (ಕ.ಗ.ಪ)
ದತ್ಕೃತ –> ಸತ್ಫಲ
ಸಭಾಪರ್ವ, ಮೈ.ವಿ.ವಿ.
ಶ್ರೀ ಸಿ. ಬಸಪ್ಪ.
ಮೂಲ ...{Loading}...
ಆಯೆನುತ ಮನವುಕ್ಕಿ ಮುನಿಗಳು
ಘೇಯೆನಲು ನಿರ್ಜರರ ಭೇರಿ ನ
ವಾಯಿಯಲಿ ಮೊಳಗಿದದವು ಸುರಿದವು ಮುಗುಳ ತನಿಮಳೆಯ
ರಾಯನಧ್ವರ ಕರ್ಮ ಸತ್ಫಲ
ವಾಯಿತೀ ಭೂಪತಿ ಕೃತಾರ್ಥನ
ಲಾಯೆನುತ ಸಭೆ ಹೊಗಳಿತಂದು ಸಮುದ್ರ ಘೋಷದಲಿ ॥8॥
೦೦೯ ಈ ಮಹಾಧ್ವರ ...{Loading}...
ಈ ಮಹಾಧ್ವರ ಕರ್ಮವೇ ಸು
ತ್ರಾಮನವರಿಗೆ ಹವ್ಯ ಸಿದ್ಧಿ ಮ
ಹಾ ಮಹೀಸುರ ಮುನಿ ನಿಕರದೇಕತ್ರ ಸಮ್ಮಿಳಿತ
ಈ ಮಹೀಶರ ಬರವಿದೆಲ್ಲರೊ
ಳೀ ಮುಕುಂದನ ಪೂಜೆಗಿದುವೆ ಸ
ಭಾ ಮನೋಹರವೆಂದು ಮಾರ್ಕಂಡೇಯ ಮುನಿ ನುಡಿದ ॥9॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಈ ಮಹಾಧ್ವರ ಕರ್ಮದಿಂದ ದೇವೇಂದ್ರನ ಕಡೆಯವರಿಗೆಲ್ಲ ಹವ್ಯಸಿದ್ಧಿಯಾಯಿತು. ಮಹಾವಿಪ್ರರುಗಳು ಮುನಿಗಳು ಎಲ್ಲ
ಒಂದೆಡೆ ಸೇರುವಂತಾಯಿತು. ಇವೆಲ್ಲದಕ್ಕಿಂತ ಈ ಮುಕುಂದನಿಗೆ ಅಗ್ರಪೂಜೆ ನಡೆಸಿದುದು ಈ ಸಭೆಗೆ ಮನೋಹರವೆನಿಸಿತು. ಎಂದು
ಮಾರ್ಕಂಡೇಯ ಮುನಿ ಹೇಳಿದ.
ಪದಾರ್ಥ (ಕ.ಗ.ಪ)
ಮೂಲ ...{Loading}...
ಈ ಮಹಾಧ್ವರ ಕರ್ಮವೇ ಸು
ತ್ರಾಮನವರಿಗೆ ಹವ್ಯ ಸಿದ್ಧಿ ಮ
ಹಾ ಮಹೀಸುರ ಮುನಿ ನಿಕರದೇಕತ್ರ ಸಮ್ಮಿಳಿತ
ಈ ಮಹೀಶರ ಬರವಿದೆಲ್ಲರೊ
ಳೀ ಮುಕುಂದನ ಪೂಜೆಗಿದುವೆ ಸ
ಭಾ ಮನೋಹರವೆಂದು ಮಾರ್ಕಂಡೇಯ ಮುನಿ ನುಡಿದ ॥9॥
೦೧೦ ಅವನಿಯಮರರ ಕಳಕಳವ ...{Loading}...
ಅವನಿಯಮರರ ಕಳಕಳವ ಪಾಂ
ಡವರ ಸುಮ್ಮಾನವನು ನೃಪ ಕೌ
ರವರ ಮಾತ್ಸರ್ಯೋಪಲಾಲಿತ ಹರುಷ ವಿಭ್ರಮವ
ಅವನಿಪಾಲರು ಕಂಡರೀಯು
ತ್ಸವವ ಕಂಡಿರೆ ನೀವೆನುತ ತ
ಮ್ಮವರೊಳೊಬ್ಬರನೊಬ್ಬ್ಬರುರೆ ನೋಡಿದರು ಬೆರಗಾಗಿ ॥10॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ವಿಪ್ರರ ಕಳಕಳ ಒಂದು ಕಡೆ. ಇನ್ನೊಂದು ಕಡೆ ಪಾಂಡವರ ಸುಮ್ಮಾನ, ಮತ್ತೊಂದು ಕಡೆ ಕೌರವರ ಹೊಟ್ಟೆಕಿಚ್ಚಿನಿಂದ ಕೂಡಿದ ಹರ್ಷವಿಭ್ರಮ ಎಲ್ಲವನ್ನೂ ರಾಜರುಗಳು ಕಂಡರು. ನೋಡಿದಿರಾ ಎಷ್ಟು ಚೆನ್ನಾಗಿ ನಡೆಯಿತು ಉತ್ಸವ ಎಂದು ಒಬ್ಬರನ್ನೊಬ್ಬರು ಬೆರಗಿನಿಂದ ನೋಡಿದರು.
ಪದಾರ್ಥ (ಕ.ಗ.ಪ)
ಉಪಲಾಲಿತ- ಪೋಷಿತ
ಮೂಲ ...{Loading}...
ಅವನಿಯಮರರ ಕಳಕಳವ ಪಾಂ
ಡವರ ಸುಮ್ಮಾನವನು ನೃಪ ಕೌ
ರವರ ಮಾತ್ಸರ್ಯೋಪಲಾಲಿತ ಹರುಷ ವಿಭ್ರಮವ
ಅವನಿಪಾಲರು ಕಂಡರೀಯು
ತ್ಸವವ ಕಂಡಿರೆ ನೀವೆನುತ ತ
ಮ್ಮವರೊಳೊಬ್ಬರನೊಬ್ಬ್ಬರುರೆ ನೋಡಿದರು ಬೆರಗಾಗಿ ॥10॥
೦೧೧ ಕೆಲರು ಪಾಣ್ಡವ ...{Loading}...
ಕೆಲರು ಪಾಂಡವ ಮೈತ್ರಿಯಲಿ ಕೆಲ
ಕೆಲರು ಕೃಷ್ಣನ ಬಲುಮೆಯಲಿ ಕೆಲ
ಕೆಲರು ಧೀರತ್ವದಲಿ ಕೆಲರನುಚಿತದ ಭೀತಿಯಲಿ
ಕೆಲರಿದೇಕವಗೆಂದು ಧರಣೀ
ವಳಯದವನಿಪರಿದ್ದರವರೊಳು
ಖಳಶಿರೋಮಣಿ ಮಸಗಿದನು ಭೂಪಾಲ ಕೇಳ್ ಎಂದ ॥11॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕೆಲವರು ಪಾಂಡವರ ಸ್ನೇಹದಿಂದ, ಕೆಲವರು ಕೃಷ್ಣನ ಸಾಮಥ್ರ್ಯದಿಂದ, ಕೆಲವರು ಧೀರತ್ವದಿಂದ, ಮತ್ತೆ ಕೆಲವರು ಅನುಚಿತವಾದೀತೆಂಬ ಭಯದಿಂದ ಕೆಲವರು ಇದೇಕೆ ನಮಗೆ ಎಂಬ ಔದಾಸೀನ್ಯದಿಂದ ಇದ್ದರು. ಅವರ ಪೈಕಿ ಖಳಶಿರೋಮಣಿಯಾದ ಶಿಶುಪಾಲ ಕೆರಳಿದ.
ಪದಾರ್ಥ (ಕ.ಗ.ಪ)
ಮೂಲ ...{Loading}...
ಕೆಲರು ಪಾಂಡವ ಮೈತ್ರಿಯಲಿ ಕೆಲ
ಕೆಲರು ಕೃಷ್ಣನ ಬಲುಮೆಯಲಿ ಕೆಲ
ಕೆಲರು ಧೀರತ್ವದಲಿ ಕೆಲರನುಚಿತದ ಭೀತಿಯಲಿ
ಕೆಲರಿದೇಕವಗೆಂದು ಧರಣೀ
ವಳಯದವನಿಪರಿದ್ದರವರೊಳು
ಖಳಶಿರೋಮಣಿ ಮಸಗಿದನು ಭೂಪಾಲ ಕೇಳೆಂದ ॥11॥
೦೧೨ ಹೊತ್ತಿತೆದೆ ಹೇರಾಳ ...{Loading}...
ಹೊತ್ತಿತೆದೆ ಹೇರಾಳ ತಮದಲಿ
ಕೆತ್ತಿದವು ಮೀಸೆಗಳು ಕಂಗಳು
ಹೊತ್ತವರುಣಚ್ಛವಿಯನುಬ್ಬರಿಸಿದುದು ಗೋನಾಳಿ
ಕೆತ್ತುದರಿವಿನ ಕದ ಕಟಾಕ್ಷಿಸಿ
ಮಿತ್ತು ವೊಲಿದಳು ರೋಷ ಮಿಗೆ ಹೊಗ
ರೆತ್ತಿತೈ ಶಿಶುಪಾಲವೀರನ ವಚನಮಯ ಖಡುಗ ॥12॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಮಹಾ ತಮಸ್ಸಿನಿಂದ ಶಿಶುಪಾಲನ ಹೃದಯ ಧಗ್ಗನೆ ಹೊತ್ತಿಕೊಂಡಿತು. ಅವನ ಮೀಸೆ ಕುಣಿಯತೊಡಗಿತು. ಕಣ್ಣುಗಳು ಕೆಂಪೇರಿದುವು. ಕುತ್ತಿಗೆ ಉಬ್ಬಿತು. ವಿವೇಕದ ಬಾಗಿಲು ಮುಚ್ಚಿಕೊಂಡಿತು. ಮೃತ್ಯು ದೇವತೆ ಅವನ ಮೇಲೆ ತನ್ನ ಕಡೆಗಣ್ನೋಟವನ್ನು
ಬೀರಿzಳು. ಹೀಗೆ ರೋಷ ಕೆರಳಿದಾಗ ಅವನ ಮಾತುಗಳ ಖಡ್ಗದ ಕಾಂತಿ ಹೆಚ್ಚಿ ಝಳಪಿಸಿತು.
ಪದಾರ್ಥ (ಕ.ಗ.ಪ)
ಕೆತ್ತಿದವು - ಕುಣಿದವು
ಅರುಣಚ್ಛವಿ -ಕೆಂಪು ಬಣ್ಣ
ಗೋನಾಳಿ -ಕಂಠ
ಕೆತ್ತುದು- ಮುಚ್ಚಿತು
ಮೂಲ ...{Loading}...
ಹೊತ್ತಿತೆದೆ ಹೇರಾಳ ತಮದಲಿ
ಕೆತ್ತಿದವು ಮೀಸೆಗಳು ಕಂಗಳು
ಹೊತ್ತವರುಣಚ್ಛವಿಯನುಬ್ಬರಿಸಿದುದು ಗೋನಾಳಿ
ಕೆತ್ತುದರಿವಿನ ಕದ ಕಟಾಕ್ಷಿಸಿ
ಮಿತ್ತು ವೊಲಿದಳು ರೋಷ ಮಿಗೆ ಹೊಗ
ರೆತ್ತಿತೈ ಶಿಶುಪಾಲವೀರನ ವಚನಮಯ ಖಡುಗ ॥12॥
೦೧೩ ಏನೆಲವೊ ಸಹದೇವ ...{Loading}...
ಏನೆಲವೊ ಸಹದೇವ ವಸುಧೆಯ
ಮಾನನಿಧಿಗಳ ಮುಂದೆ ನಂದನ
ಸೂನುವಿಗೆ ಸಿಂಹಾಸನದ ಮೇಲಘ್ರ್ಯಸತ್ಕೃತಿಯೆ
ನೀನರಿಯದವ ನಿಮ್ಮ ಯಾಗಕೆ
ಹಾನಿಯಲ್ಲಾ ನಿಮ್ಮ ಹಿರಿಯರಿ
ದೇನ ನೆಗಳಿದರಕಟ ಖೂಳರು ಪಾಂಡುಸುತರೆಂದ ॥13॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಏನೆಲವೊ ಸಹದೇವ ! ಈ ಭೂಮಿಯ ಮೇಲಿನ ಮಾನನಿಧಿಗಳಾದ ರಾಜರುಗಳ ಮುಂದೆ ನಂದಗೋಪನ ಮಗನಾದ
ಕೃಷ್ಣನನ್ನು ಸಿಂಹಾಸನದ ಮೇಲೆ ಕುಳ್ಳಿರಿಸಿ ಅಗ್ರಪೂಜೆ ಮಾಡುವುದೇ ? ನೀನೇನೋ ತಿಳಿಯದವನು, ನಿಮ್ಮ ಯಾಗಕ್ಕೆ ಇದರಿಂದ ಕೆಡುಕಾಯಿತಲ್ಲವೇ ? ನಿಮ್ಮ ಹಿರಿಯರು ಇದೇನು ಮಾಡಿದರು ? ಅಯ್ಯೋ ಈ ಪಾಂಡುವಿನ ಮಕ್ಕಳು ನೀಚರು ಎಂದ.
ಪದಾರ್ಥ (ಕ.ಗ.ಪ)
ನೆಗಳಿದರು -ಹೇಳಿದರು
ಮೂಲ ...{Loading}...
ಏನೆಲವೊ ಸಹದೇವ ವಸುಧೆಯ
ಮಾನನಿಧಿಗಳ ಮುಂದೆ ನಂದನ
ಸೂನುವಿಗೆ ಸಿಂಹಾಸನದ ಮೇಲಘ್ರ್ಯಸತ್ಕೃತಿಯೆ
ನೀನರಿಯದವ ನಿಮ್ಮ ಯಾಗಕೆ
ಹಾನಿಯಲ್ಲಾ ನಿಮ್ಮ ಹಿರಿಯರಿ
ದೇನ ನೆಗಳಿದರಕಟ ಖೂಳರು ಪಾಂಡುಸುತರೆಂದ ॥13॥
೦೧೪ ಯದುಗಳಿವದಿರು ಮುನ್ನ ...{Loading}...
ಯದುಗಳಿವದಿರು ಮುನ್ನ ರಾಜ್ಯಾ
ಸ್ಪದದ ಸಿಂಹಾಸನಕೆ ಬಾಹಿರ
ರದರೊಳೀತನ ಖೋಡಿಯನು ಜಗವೆಲ್ಲ ಬಲ್ಲುದಲೆ
ಇದು ಮಹಾಧ್ವರವಿಲ್ಲಿ ನೆರೆದಿ
ದ್ದುದು ಮಹಾ ಕ್ಷತ್ರಿಯರು ಗೋವರ
ಸದೆಗನಿಲ್ಲಿಗೆ ಶ್ರೇಷ್ಠನೇ ಸಹದೇವ ಕೇಳ್ ಎಂದ ॥14॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಈ ಯಾದವರು ಮೊದಲಿಂದಲೂ ಸಿಂಹಾಸನಕ್ಕೆ ಅರ್ಹರಾದವರಲ್ಲ. ಅದರಲ್ಲೂ ಈ ಕೃಷ್ಣನ ದುಷ್ಟತನವನ್ನು ಪ್ರಪಂಚವೆಲ್ಲ ಬಲ್ಲುದಲ್ಲವೇ ? ಇದು ಮಹಾಯಾಗ. ಇಲ್ಲಿ ಮಹಾ ಕ್ಷತ್ರಿಯರುಗಳು ಬಂದಿದ್ದಾರೆ. ಇಂತಹ ಸಭೆಯಲ್ಲಿ ದನ ಕಾಯುವವನು ಶ್ರೇಷ್ಠನೆನಿಸುತ್ತಾನಯೆ ಸಹದೇವ ?
ಪದಾರ್ಥ (ಕ.ಗ.ಪ)
ಸದೆಗ- ಕಾಯುವವನು
ಮೂಲ ...{Loading}...
ಯದುಗಳಿವದಿರು ಮುನ್ನ ರಾಜ್ಯಾ
ಸ್ಪದದ ಸಿಂಹಾಸನಕೆ ಬಾಹಿರ
ರದರೊಳೀತನ ಖೋಡಿಯನು ಜಗವೆಲ್ಲ ಬಲ್ಲುದಲೆ
ಇದು ಮಹಾಧ್ವರವಿಲ್ಲಿ ನೆರೆದಿ
ದ್ದುದು ಮಹಾ ಕ್ಷತ್ರಿಯರು ಗೋವರ
ಸದೆಗನಿಲ್ಲಿಗೆ ಶ್ರೇಷ್ಠನೇ ಸಹದೇವ ಕೇಳೆಂದ ॥14॥
೦೧೫ ತ್ರಿದಶರಿಗೆ ಸರಿತೂಕ ...{Loading}...
ತ್ರಿದಶರಿಗೆ ಸರಿತೂಕ ಸಾಮ
ಥ್ರ್ಯದಲಿ ಶುದ್ಧ ಶ್ರೌತ ಸನ್ಮಾ
ರ್ಗದಲಿ ಶಿವಶಿವ ರಾಜ ಋಷಿಗಳಲಾ ಮಹೀತಳಕೆ
ಉದಯದಿನನಂದದಲಿ ನೃಪರಿ
ರ್ದುದು ಸತೇಜವೃಜರು ಗೋವರ
ಸದೆಗನಿಲ್ಲಿಗೆ ಶಿಷ್ಟನೇ ಸಹದೇವ ಹೇಳೆಂದ ॥15॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಇಲ್ಲಿ ಸೇರಿರುವಂತಹ ರಾಜರುಗಳೆಲ್ಲ ಸಾಮಥ್ರ್ಯದಲ್ಲಿ ದೇವತೆಗಳಿಗೆ ಸರಿಸಮಾನರು. ಶುದ್ಧ ಶ್ರೌತ ಸನ್ಮಾರ್ಗದಲ್ಲಿ, ಶಿವ ಶಿವಾ,
ಇವರು ಈ ಭೂಮಿಯ ಮೇಲೆ ರಾಜರ್ಷಿಗಳಲ್ಲವೇ ? ಉದಯಿಸುವ ಸೂರ್ಯನಂತೆ ತೇಜೋಮಯರಾಗಿರ ತಕ್ಕವರಲ್ಲವೇ ಈ ರಾಜರು ! ಗೋವು ಕಾಯತಕ್ಕವನು ಇಲ್ಲಿಗೆ ಯೋಗ್ಯನಾಗುವನೇ ಸಹದೇವ ?
ಪದಾರ್ಥ (ಕ.ಗ.ಪ)
ಶ್ರೌತ-ವೇದ ಸಮ್ಮತವಾದ, ತ್ರಿದಶ-ದೇವತೆ
ಮೂಲ ...{Loading}...
ತ್ರಿದಶರಿಗೆ ಸರಿತೂಕ ಸಾಮ
ಥ್ರ್ಯದಲಿ ಶುದ್ಧ ಶ್ರೌತ ಸನ್ಮಾ
ರ್ಗದಲಿ ಶಿವಶಿವ ರಾಜ ಋಷಿಗಳಲಾ ಮಹೀತಳಕೆ
ಉದಯದಿನನಂದದಲಿ ನೃಪರಿ
ರ್ದುದು ಸತೇಜವೃಜರು ಗೋವರ
ಸದೆಗನಿಲ್ಲಿಗೆ ಶಿಷ್ಟನೇ ಸಹದೇವ ಹೇಳೆಂದ ॥15॥
೦೧೬ ಬಾಲಕನು ಸಹದೇವನೀತನು ...{Loading}...
ಬಾಲಕನು ಸಹದೇವನೀತನು
ಹೇಳನಿಲ್ಲಿಯ ಹೆಚ್ಚು ಕುಂದು ನೃ
ಪಾಲ ನಿನ್ನದು ಧರ್ಮ ತತ್ವ ರಹಸ್ಯ ಸಂಗತಿಯ
ಕೇಳುವೆಗಳವು ಬೇರೆ ಚರಿತದ
ಪಾಳಿ ತಾನದು ಬೇರೆಲಾ ಪಶು
ಪಾಲರೀಯಧ್ವರಕೆ ಪೂಜ್ಯರೆ ಶಿವಶಿವಾಯೆಂದ ॥16॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಈ ಸಹದೇವನೇನೋ ಬಾಲಕ, ಇದು ಹೆಚ್ಚೋ ಕುಂದೋ ಎಂಬುದನ್ನು ಅವನು ಹೇಳಲಾರ. ಅದು ನಿನಗೆ ಸೇರಿದುದು.
ಧರ್ಮ ತತ್ತ್ವ, ರಹಸ್ಯ ಸಂಗತಿಗಳನ್ನು ಕೇಳಿ ತಿಳಿದುಕೊಳ್ಳುವುದೇ ಬೇರೆ. ಅವನ್ನು ಆಚರಿಸುವ ರೀತಿಯೇ ಬೇರೆ. ದನಕಾಯುವವರು ಈ ಅಧ್ವರಕ್ಕೆ ಪೂಜ್ಯರಾಗುವವರೇ, ಶಿವ ಶಿವಾ ! ಎಂದ.
ಪದಾರ್ಥ (ಕ.ಗ.ಪ)
ಚರಿತದ ಪಾಳಿ -ಆಚರಣೆಯ ಕ್ರಮ
ಮೂಲ ...{Loading}...
ಬಾಲಕನು ಸಹದೇವನೀತನು
ಹೇಳನಿಲ್ಲಿಯ ಹೆಚ್ಚು ಕುಂದು ನೃ
ಪಾಲ ನಿನ್ನದು ಧರ್ಮ ತತ್ವ ರಹಸ್ಯ ಸಂಗತಿಯ
ಕೇಳುವೆಗಳವು ಬೇರೆ ಚರಿತದ
ಪಾಳಿ ತಾನದು ಬೇರೆಲಾ ಪಶು
ಪಾಲರೀಯಧ್ವರಕೆ ಪೂಜ್ಯರೆ ಶಿವಶಿವಾಯೆಂದ ॥16॥
೦೧೭ ತರಳರಿವದಿರು ಪಾಣ್ಡುಸುತರಂ ...{Loading}...
ತರಳರಿವದಿರು ಪಾಂಡುಸುತರಂ
ತಿರಲಿ ನೀ ಸುಪ್ರೌಢನೆಂದಾ
ದರಿಸಿದೈ ವಸುದೇವ ಸುತನಲಿ ಶಿಷ್ಟಯೋಗ್ಯತೆಯ
ಧರಣಿಪಾಲರ ಮಧ್ಯದಲಿ ಭಾ
ಸ್ಕರನು ಗಡ ತುರು ಪಳ್ಳಿಕಾರರ
ಪುರದ ಭಾಸ್ಕರನೀತನಲ್ಲಾ ಭೀಷ್ಮ ಹೇಳೆಂದ ॥17॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಈ ಪಾಂಡುಸುತರೇನೋ ಇನ್ನೂ ಹುಡುಗರು, ಅವರ ವಿಷಯ ಇರಲಿ, ಭೀಷ್ಮ, ಈ ವಸುದೇವನ ಮಗನನ್ನು ಸುಪ್ರೌಢನೆಂದು ಗೌರವಿಸಿದೆಯಲ್ಲ, ಇವನಲ್ಲಿ ಯಾವ ಶಿಷ್ಟ ಯೋಗ್ಯತೆಯನ್ನು ಕಂಡೆ ? ರಾಜರುಗಳ ನಡುವೆ ಇವನು ಸೂರ್ಯನಂತೆ ತೇಜೋವಂತನೇ ? ದನ ಕಾಯುವ ಹಳ್ಳಿಕಾರರ ಊರಿಗೆ ಇವನು ಸೂರ್ಯನಲ್ಲವೇ ? ನೀನೇ ಹೇಳು.
ಪದಾರ್ಥ (ಕ.ಗ.ಪ)
ಮೂಲ ...{Loading}...
ತರಳರಿವದಿರು ಪಾಂಡುಸುತರಂ
ತಿರಲಿ ನೀ ಸುಪ್ರೌಢನೆಂದಾ
ದರಿಸಿದೈ ವಸುದೇವ ಸುತನಲಿ ಶಿಷ್ಟಯೋಗ್ಯತೆಯ
ಧರಣಿಪಾಲರ ಮಧ್ಯದಲಿ ಭಾ
ಸ್ಕರನು ಗಡ ತುರು ಪಳ್ಳಿಕಾರರ
ಪುರದ ಭಾಸ್ಕರನೀತನಲ್ಲಾ ಭೀಷ್ಮ ಹೇಳೆಂದ ॥17॥
೦೧೮ ಶಿವನ ಸರಿ ...{Loading}...
ಶಿವನ ಸರಿ ಮಂಚದಲಿ ಸರಸಿಜ
ಭವನ ಸಮ ಗದ್ದುಗೆಗಳಲಿ ವಾ
ಸವನ ತೊಡೆ ಸೋಂಕಿನಲಿ ಕುಳ್ಳಿಹರೀ ಮಹೀಶ್ವರರು
ಇವರ ಸರಿಸಕೆ ಸಲ್ಲದೀ ಯಾ
ದವನನುದ್ದದಲಿರಿಸಿ ಬಹುಮಾ
ನವನು ಮಾಡಿದೆ ಭೀಷ್ಮ ಯಜ್ಞವನಳಿದೆ ನೀನೆಂದ ॥18॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಇಲ್ಲಿ ಸೇರಿರುವ ರಾಜರುಗಳು ಶಿವನಿಗೆ ಸರಿಸಮಾನವಾದ ಪೀಠದಲ್ಲಿ, ಬ್ರಹ್ಮನಿಗೆ ಸರಿಸಮಾನವಾದ ಗದ್ದುಗೆಯಲ್ಲಿ, ಕುಳಿತುಕೊಳ್ಳುವಂತಹರು, ದೇವೇಂದ್ರನ ತೊಡೆಸೋಕುವಂತೆ ಜೊತೆಯಲ್ಲಿ ಕುಳಿತುಕೊಳ್ಳುವಂತಹವರು. ಇವರ ಸರಿಸಮಕ್ಕೆ ಅರ್ಹನಲ್ಲದಂತಹ ಈ ಯಾದವನನ್ನು ಹಿರಿಯಸ್ಥಾನದಲ್ಲಿಟ್ಟು ಗೌರವಿಸಿದೆ. ಭೀಷ್ಮ, ನೀನು ಯಜ್ಞವನ್ನೇ ಹಾಳು ಮಾಡಿದೆ ಎಂದ.
ಪದಾರ್ಥ (ಕ.ಗ.ಪ)
ಮೂಲ ...{Loading}...
ಶಿವನ ಸರಿ ಮಂಚದಲಿ ಸರಸಿಜ
ಭವನ ಸಮ ಗದ್ದುಗೆಗಳಲಿ ವಾ
ಸವನ ತೊಡೆ ಸೋಂಕಿನಲಿ ಕುಳ್ಳಿಹರೀ ಮಹೀಶ್ವರರು
ಇವರ ಸರಿಸಕೆ ಸಲ್ಲದೀ ಯಾ
ದವನನುದ್ದದಲಿರಿಸಿ ಬಹುಮಾ
ನವನು ಮಾಡಿದೆ ಭೀಷ್ಮ ಯಜ್ಞವನಳಿದೆ ನೀನೆಂದ ॥18॥
೦೧೯ ಸಕಲ ಶಾಸ್ತ್ರಶ್ರವಣ ...{Loading}...
ಸಕಲ ಶಾಸ್ತ್ರಶ್ರವಣ ವೇದ
ಪ್ರಕರ ಧರ್ಮ ವಿಚಾರ ಪೌರಾ
ಣಿಕ ಕಥಾ ಪ್ರಾಗಲ್ಬ್ಯವಿನಿತರ ಸಾರ ಸಂಗತಿಯ
ಅಕಟ ನೀರಲಿ ನೆರಹಿ ಪಶು ಪಾ
ಲಕನ ಪೂಜಾ ಸಾಧಾನಾರ್ಥ
ಪ್ರಕಟನಾದೈ ಭೀಷ್ಮ ಮೂರ್ಖಾಧಮನು ನೀನೆಂದು ॥19॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಭೀಷ್ಮ ನೀನು ಸಕಲ ಶಾಸ್ತ್ರಗಳನ್ನು ಕೇಳಿದವನು. ವೇದಗಳನ್ನು ಓದಿದವನು. ಧರ್ಮವಿಚಾರಗಳನ್ನು ತಿಳಿದವನು ಪೌರಾಣಿಕ ಕಥೆಯಲ್ಲಿ ಪಾಂಡಿತ್ಯವುಳ್ಳವನು ಇಷ್ಟೆಲ್ಲದರ ಸಾರಸಂಗತಿಯನ್ನೂ ನೀರಲ್ಲಿ ಕದಡಿದಂತೆ ಮಾಡಿ ಹಸು ಕಾದವನನ್ನು ಪೂಜೆಗೆ ಸಾಧನವನ್ನಾಗಿ ಪ್ರಕಟಿಸಿದೆಯಲ್ಲ. ನೀನು ಮೂರ್ಖಾಧಮ ಎಂದ.
ಪದಾರ್ಥ (ಕ.ಗ.ಪ)
ಪ್ರಾಗಲ್ಭ್ಯ- ಪರಿಣತನಾದವನು
ನೆರಹಿ - ಕದಡಿ
ಮೂಲ ...{Loading}...
ಸಕಲ ಶಾಸ್ತ್ರಶ್ರವಣ ವೇದ
ಪ್ರಕರ ಧರ್ಮ ವಿಚಾರ ಪೌರಾ
ಣಿಕ ಕಥಾ ಪ್ರಾಗಲ್ಬ್ಯವಿನಿತರ ಸಾರ ಸಂಗತಿಯ
ಅಕಟ ನೀರಲಿ ನೆರಹಿ ಪಶು ಪಾ
ಲಕನ ಪೂಜಾ ಸಾಧಾನಾರ್ಥ
ಪ್ರಕಟನಾದೈ ಭೀಷ್ಮ ಮೂರ್ಖಾಧಮನು ನೀನೆಂದು ॥19॥
೦೨೦ ಹಿರಿಯನೆನ್ದನೀತನಲಿ ಪೂಜಾ ...{Loading}...
ಹಿರಿಯನೆಂದನೀತನಲಿ ಪೂಜಾ
ವರಣವೇ ವಸುದೇವನೀ ಮುರ
ಹರನ ಪಿತನಿದ್ದಂತೆ ಮೇಣೀ ದ್ರುಪದ ಭೂಪತಿಯ
ವರಿಸಿ ನೀವಾಚಾರ್ಯನೆಂದಾ
ದರಿಸುವರೆ ರಾಯರಿಗೆ ಅಸ್ತ್ರದ
ಗುರುವಲಾ ದ್ರೋಣಂಗೆ ಪೂಜೆಯ ಮಾಡಿರೇಕೆಂದ ॥20॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಹಿರಿಯನೆಂದು ಇವನನ್ನು ಪೂಜೆಗೆ ಆರಿಸಿಕೊಂಡಿರಾ ? ಇವನ ತಂದೆಯಾದ ವಸುದೇವನಿದ್ದಾನಲ್ಲ ! ಅಥವಾ ದ್ರುಪದ ರಾಜನನ್ನು ಆರಿಸಿಕೊಳ್ಳಬಹುದಿತ್ತಲ್ಲ ? ಆಚಾರ್ಯನೆಂದು ಗೌರವಿಸಬೇಕಾಗಿದ್ದಿದ್ದರೆ ರಾಜರಿಗೆಲ್ಲ ಅಸ್ತ್ರದ ಗುರುವಾದ ದ್ರೋಣನಿದ್ದಾನಲ್ಲ, ಆತನಿಗೆ ಪೂಜೆ ಮಾಡಬಹುದಿತ್ತಲ್ಲವೆ ?
ಪದಾರ್ಥ (ಕ.ಗ.ಪ)
ಮೂಲ ...{Loading}...
ಹಿರಿಯನೆಂದನೀತನಲಿ ಪೂಜಾ
ವರಣವೇ ವಸುದೇವನೀ ಮುರ
ಹರನ ಪಿತನಿದ್ದಂತೆ ಮೇಣೀ ದ್ರುಪದ ಭೂಪತಿಯ
ವರಿಸಿ ನೀವಾಚಾರ್ಯನೆಂದಾ
ದರಿಸುವರೆ ರಾಯರಿಗೆ ಅಸ್ತ್ರದ
ಗುರುವಲಾ ದ್ರೋಣಂಗೆ ಪೂಜೆಯ ಮಾಡಿರೇಕೆಂದ ॥20॥
೦೨೧ ಈತನಿಲ್ಲಿ ಸದಸ್ಯನೇ ...{Loading}...
ಈತನಿಲ್ಲಿ ಸದಸ್ಯನೇ ವಿ
ಖ್ಯಾತ ವೇದ ವ್ಯಾಸಋತ್ವಿ
ಗ್ಭೂತನಾಥಂಗಗ್ರ ಪೂಜೆಯನೇಕೆ ಮಾಡಿಸರಿ
ಈತ ನಿಮಗೆ ಪಿತಾಮಹನೆ ಗಂ
ಗಾತನುಜನೈದನೆ ವಿಶೇಷಕೆ
ಗೌತಮನಲಾ ಕೃಪನ ಮನ್ನಿಸಿರೇಕೆ ನೀವೆಂದ ॥21॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಈತನಿಲ್ಲಿ ಸದಸ್ಯನೇ ? ಋತ್ವಿಜರೆಲ್ಲರಿಗೂ ಈಶ್ವರನಂತಿರುವ ಋತ್ವಿಗ್ಭೂತನಾಥನಾದ ವೇದವ್ಯಾಸನಿದ್ದನಲ್ಲ ಅವನಿಗೇಕೆ ಪೂಜೆ ಮಾಡಲಿಲ್ಲ ? ಈತನೇನು ನಿಮಗೆ ಪಿತಾಮಹನೇ ? ಅತಿಶಯವಾಗಿ ಪಿತಾಮಹ ಭೀಷ್ಮನೇ ಇದ್ದಾನಲ್ಲ ! ಕೃಪನು ಶ್ರೇಷ್ಠನಾದ ಗೌತಮಕುಲೋದ್ಭವನಲ್ಲವೇ?, ಅವನನ್ನೇಕೆ ಗೌರವಿಸಲಿಲ್ಲ ?
ಪದಾರ್ಥ (ಕ.ಗ.ಪ)
ಗೌತಮ-ಕೃಪ, ಇಲ್ಲಿ ಕೃಪನು ಶ್ರೇಷ್ಠನಾದ ಗೌತಮ ಗೋತ್ರದವನಲ್ಲವೇ ಎಂದು.
ಮೂಲ ...{Loading}...
ಈತನಿಲ್ಲಿ ಸದಸ್ಯನೇ ವಿ
ಖ್ಯಾತ ವೇದ ವ್ಯಾಸಋತ್ವಿ
ಗ್ಭೂತನಾಥಂಗಗ್ರ ಪೂಜೆಯನೇಕೆ ಮಾಡಿಸರಿ
ಈತ ನಿಮಗೆ ಪಿತಾಮಹನೆ ಗಂ
ಗಾತನುಜನೈದನೆ ವಿಶೇಷಕೆ
ಗೌತಮನಲಾ ಕೃಪನ ಮನ್ನಿಸಿರೇಕೆ ನೀವೆಂದ ॥21॥
೦೨೨ ವೀರರಿಗೆ ಕೊಡಬೇಹುದೇ ...{Loading}...
ವೀರರಿಗೆ ಕೊಡಬೇಹುದೇ ರಣ
ಧೀರನಶ್ವತ್ಥಾಮನೈದನೆ
ಸಾರನಲ್ಲಾ ಚಾಪಧರರೊಳಗೇಕಲವ್ಯ ನೃಪ
ಪೌರವೇಯರೊಳಧಿಕ ಬಾಹ್ಲಿಕ
ಗಾರು ಸರಿ ಕೊಡಿರೇಕೆ ಕೃಷ್ಣನಿ
ದಾರೊಳಗಾರೆಂದಗ್ರಪೂಜೆಯ ಕೊಟ್ಟಿರಕಟೆಂದ ॥22॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ವೀರನಿಗೆ ಕೊಡಬೇಕೆಂದಿದ್ದಿದ್ದರೆ ರಣಧೀರನಾದ ಅಶ್ವತ್ಥಾಮನಿದ್ದಾನೆ. ಬಿಲ್ಗಾರರಲ್ಲಿ ಸಾರಭೂತನಾದವನು ಏಕಲವ್ಯರಾಜನಿದ್ದಾನೆ. ಪೌರವೇಯರಲ್ಲಿ ಅಧಿಕನೆನಸಿದ ಬಾಹ್ಲಿಕನಿಗೆ ಯಾರು ಸರಿ ? ಅವನಿಗೇ ಕೊಡಬಹುದಿತ್ತಲ್ಲ ! ಇಷ್ಟು ಜನರಲ್ಲಿ ಕೃಷ್ಣನು ಯಾರೆಂದು ಅವನಿಗೆ ಅಗ್ರಪೂಜೆ ಕೊಟ್ಟಿರಿ ?
ಪದಾರ್ಥ (ಕ.ಗ.ಪ)
ಮೂಲ ...{Loading}...
ವೀರರಿಗೆ ಕೊಡಬೇಹುದೇ ರಣ
ಧೀರನಶ್ವತ್ಥಾಮನೈದನೆ
ಸಾರನಲ್ಲಾ ಚಾಪಧರರೊಳಗೇಕಲವ್ಯ ನೃಪ
ಪೌರವೇಯರೊಳಧಿಕ ಬಾಹ್ಲಿಕ
ಗಾರು ಸರಿ ಕೊಡಿರೇಕೆ ಕೃಷ್ಣನಿ
ದಾರೊಳಗಾರೆಂದಗ್ರಪೂಜೆಯ ಕೊಟ್ಟಿರಕಟೆಂದ ॥22॥
೦೨೩ ನರನ ಸಖನೀ ...{Loading}...
ನರನ ಸಖನೀ ಕೃಷ್ಣನೆಂದಾ
ದರಿಸುವರೆ ಗಂಧರ್ವ ನಿಮ್ಮೀ
ನರನ ಸಖನಲ್ಲಾ ವಿರೋಧಿಯೆ ಚಿತ್ರರಥ ನಿಮಗೆ
ಅರಸನಲ್ಲಾ ದ್ರುಮನು ವರ ಕಿಂ
ಪುರುಷ ಮಾನ್ಯನು ನಿಮ್ಮ ಯಜ್ಞದೊ
ಳುರುಳುಕರಿಗಲ್ಲದೆ ವಿಶಿಷ್ಟರಿಗಿಲ್ಲ ಗತಿಯೆಂದ ॥23॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅರ್ಜುನನಿಗೆ ಗೆಳೆಯನೆಂದು ಕೃಷ್ಣನನ್ನು ಆದರಿಸುವಂತಿದ್ದರೆ ಗಂಧರ್ವ ರಾಜ ಚಿತ್ರರಥ ಅರ್ಜುನನ ಗೆಳೆಯನಲ್ಲವೆ, ಅವನೇನು
ಶತ್ರುವೇ ನಿಮಗೆ ? ಕಿಂಪುರುಷರಲ್ಲಿ ಮಾನ್ಯನಾದ ದ್ರುಮರಾಜನಿಲ್ಲವೆ ? ನಿಮ್ಮ ಯಜ್ಞದಲ್ಲಿ ಅಸ್ಥಿರನಾದವನಿಗಲ್ಲದೆ ವಿಶಿಷ್ಟರಾದವರಿಗೆ ಗತಿಯಿಲ್ಲ !
ಪದಾರ್ಥ (ಕ.ಗ.ಪ)
ಉರುಳುಕ-ಅಸ್ಥಿರನಾದ, ಚಂಚಲ
ಮೂಲ ...{Loading}...
ನರನ ಸಖನೀ ಕೃಷ್ಣನೆಂದಾ
ದರಿಸುವರೆ ಗಂಧರ್ವ ನಿಮ್ಮೀ
ನರನ ಸಖನಲ್ಲಾ ವಿರೋಧಿಯೆ ಚಿತ್ರರಥ ನಿಮಗೆ
ಅರಸನಲ್ಲಾ ದ್ರುಮನು ವರ ಕಿಂ
ಪುರುಷ ಮಾನ್ಯನು ನಿಮ್ಮ ಯಜ್ಞದೊ
ಳುರುಳುಕರಿಗಲ್ಲದೆ ವಿಶಿಷ್ಟರಿಗಿಲ್ಲ ಗತಿಯೆಂದ ॥23॥
೦೨೪ ಮಾನ್ಯರಿಗೆ ಮನ್ನಣೆಯಹರೆ ...{Loading}...
ಮಾನ್ಯರಿಗೆ ಮನ್ನಣೆಯಹರೆ ಸಾ
ಮಾನ್ಯನೇ ಭಗದತ್ತ ನಿಮಗೇ
ನನ್ಯನೇ ಸೌಬಲೇಯ ಜಯದ್ರಥನೇಕೆ ಮನ್ನಿಸರಿ
ಶೂನ್ಯ ವಿಭವವೆ ಮಗಧಸೂನು ಸು
ಮಾನ್ಯನಲ್ಲಾ ದಂತವಕ್ರ ವ
ದಾನ್ಯಭಟ್ಟನು ಕೃಷ್ಣನಿಲ್ಲಿಗೆ ಯೋಗ್ಯನಹನೆಂದ ॥24॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಮಾನ್ಯರಿಗೆ ಮನ್ನಣೆ ಮಾಡಬೇಕಿಂದಿದ್ದರೆ ಈ ಭಗದತ್ತನೇನು ಸಾಮಾನ್ಯನೆ ? ಶಕುನಿಯು ನಿಮಗೇನು ಹೊರಗಿನವನೇ ? ಜಯದ್ರಥನನ್ನೇಕೆ ನೀವು ಗೌರವಿಸಬಾರದಾಗಿತ್ತು ? ಮಗಧನ ಮಗ ವೈಭವವಿಲ್ಲದವನೇನು ? ಉದಾರಿಯಾದ ದಂತವಕ್ರ ಮಾನ್ಯನಲ್ಲವೇನು ? ಏನೇ ಆದರೂ ಕೇವಲ ಮಾತುಗಾರನಾದ ಕೃಷ್ಣನು ಇಲ್ಲಿಗೆ ಯೋಗ್ಯನಲ್ಲ.
ಪದಾರ್ಥ (ಕ.ಗ.ಪ)
ವದಾನ್ಯಭಟ್ಟನು-ಮಾತುಗಾರ
ಮೂಲ ...{Loading}...
ಮಾನ್ಯರಿಗೆ ಮನ್ನಣೆಯಹರೆ ಸಾ
ಮಾನ್ಯನೇ ಭಗದತ್ತ ನಿಮಗೇ
ನನ್ಯನೇ ಸೌಬಲೇಯ ಜಯದ್ರಥನೇಕೆ ಮನ್ನಿಸರಿ
ಶೂನ್ಯ ವಿಭವವೆ ಮಗಧಸೂನು ಸು
ಮಾನ್ಯನಲ್ಲಾ ದಂತವಕ್ರ ವ
ದಾನ್ಯಭಟ್ಟನು ಕೃಷ್ಣನಿಲ್ಲಿಗೆ ಯೋಗ್ಯನಹನೆಂದ ॥24॥
೦೨೫ ಉರುವ ನೃಪನಲ್ಲಾ ...{Loading}...
ಉರುವ ನೃಪನಲ್ಲಾ ಸುದಕ್ಷಿಣ
ನರಿಯರೇ ಮಾಳವನನೀತನ
ಮರೆದಿರೇ ಸಾಲ್ವನನು ಭೀಷ್ಮಕ ರುಗ್ಮ ಭೂಪತಿಯ
ಮೊರೆಯ ಮರೆದಿರೆ ಶಲ್ಯ ಭೂಪತಿ
ಹೊರಗಲಾ ವರ ರಾಜಸೂಯಕೆ
ಕರುವ ಕಾವವನಲ್ಲದುಳಿದರುಯೋಗ್ಯರಲ್ಲೆಂದ ॥25॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಶ್ರೇಷ್ಠ ರಾಜನಲ್ಲವೇ ಸುದಕ್ಷಿಣನು ? ಮಾಳವರಾಜನು ನಿಮಗೆ ಗೊತ್ತಿಲ್ಲವೆ ? ಈ ಸಾಲ್ವನನ್ನು ನೀವು ಮರೆತಿರಾ ? ಭೀಷ್ಮಕ ರುಗ್ಮ ರಾಜರು ನೆನಪಿಗೆ ಬರಲಿಲ್ಲವೇ ? ಶಲ್ಯಭೂಪತಿಯ ನಂಟಸ್ತಿಕೆಯನ್ನು ಮರೆತುಬಿಟ್ಟಿರಾ ? ಆತ ಈ ರಾಜಸೂಯಕ್ಕೆ ಹೊರಗಾದವನಲ್ಲವೇ ? ದನಕರು ಕಾಯುವವನನ್ನು ಬಿಟ್ಟರೆ ನಿಮಗೆ ಅನ್ಯರು ಯೋಗ್ಯರಲ್ಲ.
ಪದಾರ್ಥ (ಕ.ಗ.ಪ)
ಉರುವ- ಶ್ರೇಷ್ಠ
ಟಿಪ್ಪನೀ (ಕ.ಗ.ಪ)
ಸುದಕ್ಷಿಣ - ರಾಜರುಗಳು ಎಷ್ಟೇ ವೈಭವ ಪೂರ್ಣ ಭೋಗ ಜೀವನವನ್ನು ನಡೆಸಿದರೂ, ಸಪ್ತವ್ಯಸನಗಳಲ್ಲಿ ಮುಳುಗಿದ್ದರೂ ಮಹಾಯುದ್ದ ಎಂದ ಕೂಡಲೇ ಅವರ ಕಿವಿ ನೆಟ್ಟಗಾಗುತ್ತವೆ. ಪರಾಕ್ರಮ ಪ್ರದರ್ಶನಕ್ಕೆ ಅವರ ಭುಜಗಳು ಕುಣಿಯುತ್ತಿರುತ್ತವೆ. ಕರೆ ಬಂದ ಕೂಡಲೇ ಅವರ ಕಿವಿ ನೆಟ್ಟಗಾಗುತ್ತವೆ. ಪರಾಕ್ರಮ ಪ್ರದರ್ಶನಕ್ಕೆ ಅವರ ಭುಜಗಳು ಕುಣಿಯುತ್ತಿರುತ್ತವೆ. ಕರೆ ಬಂದ ಕೂಡಲೇ ತಮಗೆ ಪ್ರಿಯವಾದ ಪಕ್ಷಕ್ಕೆ ಸೇರಿ ಹೋರಾಡಲು ನುಗ್ಗಿ ಬಿಡುತ್ತಾರೆ ಕಾಬೂಲಿನ (ಕಾಂಬೋಜ) ರಜ ಸುದಕ್ಷಿಣ ಈ ನಿಯಮಕ್ಕೆ ಅತೀತವಲ್ಲ. ಕೌರವನಿಂದ ಪ್ರಾರ್ಥನೆಯ ಕಲೆ ಬಂದ ಕೂಡಲೇ ತನ್ನಲ್ಲಿದ್ದ ಒಂದು ಅಕ್ಷೋಹಿಣಿಯ ಭಾರಿಯ ಸೇನೆಯೊಂದಿಗೆ ಕುರುಕ್ಷೇತ್ರದಲ್ಲಿ ಬಂದಿಳಿತ ಸಮಸ್ತ ವೈಭವೋಪೇತ ದಿವ್ಯಾಭರಣಗಳೊಂದಿಗೆ ಅವನು ಯುದ್ಧಕ್ಕೆ ಹೊರಡುತ್ತಿದ್ದನೆಂದು ಮಹಾಭಾರತದಲ್ಲಿ ಹೇಳಲಾಗಿದೆ. ಇದನ್ನು ಸಮರ್ಥಿಸುವಂತೆ ಅವನು ಅನೇಕ ಮುಖ್ಯ ಭೂಷಣಾಲಂಕೃತನಾಗಿ ಪರ್ವತದಂತೆ ದರ್ಶನೀಯ ವ್ಯಕ್ತಿಯಾಗಿದ್ದನೆಂದು ದ್ರೋಣಪರ್ವದ ಬರುತ್ತನೆಯ ಅಧ್ಯಾಯವು ಸಮರ್ಥಿಸುತ್ತದೆ. ಇವನು ದ್ರೌಪದೀ ಸ್ವಯಂವರದಲ್ಲಿ ಭಾಗವಹಿಸಿದ್ದನೆಂದು ತಿಳಿದುಬರುತ್ತದೆ ‘ರಥಾತಿರಥಸಂಖ್ಯಾನ ಪರ್ವ’ದಲ್ಲಿ ಈತನನ್ನು ‘ರಥಿ’ ಎಂದು ಕರೆಯಲಾಗಿದೆ. ಕೌರವನ ಕಡೆ ಹೋರಾಡಿದ ವೀರರುಗಳಲ್ಲಿ ಅಗ್ರಗಣ್ಯನೆಂದು ಮಹಾಭಾರತ ಗುರುತಿಸುತ್ತದೆ ಭಾರಿಯ ಯವನ ಮತ್ತು ಶಕರ ಸೇನೆ ಇವನೊಂದಿಗೆ ಬಂದಿತ್ತು. ಇವನ ಹಲವಾರು ತಮ್ಮಂದಿರೂ ಅಣ್ಣನ ಸಂಯಮಕ್ಕೊಂದು ಕೌರವ ಸೈನ್ಯಕ್ಕೆ ಬಂದು ಸೇರಿದ್ದರು.
ಮೊದಲ ದಿನ ಸುದಕ್ಷಿಣನು ಶ್ರುತಕರ್ಮನೊಂದಿಗೆ ದ್ವಂದ್ವ ಯುದ್ಧವನ್ನು ಮಾಡಿದನೆಂದು ಹೇಳಲಾಗಿದೆ. ಅರ್ಜುನ ಅಬಿಮನ್ಯುಗಳೊಂದಿಗೂ ಹೋರಾಡಿದ ಕೀರ್ತಿ ಇವನದು. ಕೌರವ ಸೇನೆಯ ದಂಡನಾಯಕರುಗಳೆಲ್ಲ ಈತನ ಪೌರುಷವನ್ನು ಬಲ್ಲವರಾಗಿದ್ದರು. ಭೀಷ್ಮರು ನಿರ್ಮಿಸಿದ್ದ ಸರ್ವತೋಭದ್ರ ಎಂಬ ವ್ಯೂಹದ ಬಲಭಾಗದಲ್ಲಿ ನಿಂತು ಹೋರಾಡಿದ ಕೀರ್ತಿ ಈತನಿಗೆ ಸಲ್ಲುತ್ತದೆ ಹಾಗೆಲೋ ಭೀಷ್ಮರ ಕ್ರೌಂಚವ್ಯೂಹದಲ್ಲೂ ಈತ ಮಿಂಚಿದ್ದಾನೆ. ದ್ರೋಣರ ಆಜ್ಞೆಯಂತೆ ಸೈಂಧವನನ್ನು ಅರ್ಜುನನಿಂದ ಕಾಪಾಡುವ ಹೊಣೆ ಹೊತ್ತವರಲ್ಲಿ ಸುದಕ್ಷಿಣನೂ ಪ್ರಮುಖವಾಗಿದ್ದಾನೆ ದ್ರೋಣರ ಗರುಡವ್ಯೂಹದಲ್ಲಿ ಈತನಿಗೆ ಸ್ಥಾನವಿದ್ದಿತು. ಅರ್ಜುನನೊಡನೆ ನೇರವಾಗಿ ಹೋರಾಡುವ ಅವಕಾಶವೂ ಇವನನು ಕೊಂದುಹಾಕಿದ. ಪ್ರೀತಿಯ ಅಣ್ಣನಾದ ಸುದಕ್ಷಿಣನ ಸಾವಿಗಾಗಿ ಮರುಗಿದ ಅವನ ವೀರ ತಮ್ಮಂದಿರು ಕೂಡ ಅರ್ಜುನನೊಂದಿಗೆ ಭಯಂಕರವಾಗಿ ಕಾದಾಡಿ ಸತ್ತರು.
ಯುದ್ಧದ ಹಸಿದ ಹೊಟ್ಟಿಗೆ ಒಂದು ದೇಶದ ಜನ ಸಾಕಾಗುವುದಿಲ್ಲವೆಂದು ಕಾಣುತ್ತದೆ. ಆದ್ದರಿಂದ ದೇಶವಿದೇಶದ ಸೇನೆಗಳಲ್ಲಿ ಕೌರವ-ಪಾಂಡವರ ಪರವಾಗಿ ಹೋರಾಡಲು ಬಂದುವು. ಆದರೆ ಗೆದ್ದವನು ಧರ್ಮರಾಯನಾದರೂ ಅವನ ಸೇನೆ ಹೇಳ ಹೆಸರಿಲ್ಲದಂತಾದುದು ದೌರ್ಭಾಗ್ಯ.
ಮೂಲ ...{Loading}...
ಉರುವ ನೃಪನಲ್ಲಾ ಸುದಕ್ಷಿಣ
ನರಿಯರೇ ಮಾಳವನನೀತನ
ಮರೆದಿರೇ ಸಾಲ್ವನನು ಭೀಷ್ಮಕ ರುಗ್ಮ ಭೂಪತಿಯ
ಮೊರೆಯ ಮರೆದಿರೆ ಶಲ್ಯ ಭೂಪತಿ
ಹೊರಗಲಾ ವರ ರಾಜಸೂಯಕೆ
ಕರುವ ಕಾವವನಲ್ಲದುಳಿದರುಯೋಗ್ಯರಲ್ಲೆಂದ ॥25॥
೦೨೬ ಭೂರಿ ಭೂರಿಶ್ರವರು ...{Loading}...
ಭೂರಿ ಭೂರಿಶ್ರವರು ನಿಮ್ಮೊಳ
ಗಾರ ಹೊಯ್ದರು ಸೋಮದತ್ತ ಮ
ಹೀರಮಣನತಿ ಮಾನ್ಯನಲ್ಲಾ ಅಗ್ರ ಪೂಜೆಯಲಿ
ಸಾರಧರ್ಮವಿದೆಂದು ಬಂದೆವಿ
ದಾರು ಬಲ್ಲರು ಹಳ್ಳಿಕಾರರ
ನಾರಿಯರ ನೆರೆ ಮಿಂಡನಲ್ಲದೆ ಯೋಗ್ಯರಿಲ್ಲೆಂದು ॥26॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅತಿಶಯರಾದ ಭೂರಿಶ್ರವರು ನಿಮ್ಮಲ್ಲಿ ಯಾರನ್ನು ಹೊಯ್ದರು ?ಅವರೇನು ನಿಮಗೆ ಶತ್ರುಗಳಲ್ಲವಲ್ಲ. ಸೋಮದತ್ತ ರಾಜ ಅಗ್ರಪೂಜೆಗೆ ಅತಿ ಮಾನ್ಯವಲ್ಲವೇ ? ಇಲ್ಲಿ ಸಾರವತ್ತಾಗಿ ಧರ್ಮ ನಡೆಯುತ್ತದೆಂದು ನಾವು ಬಂದೆವು. ಆದರೆ ಇಲ್ಲಿ ಹಳ್ಳಿಕಾರರ ನಾರಿಯರಿಗೆ ಮಿಂಡನಾದ ಕೃಷ್ಣನಲ್ಲದೆ ಬೇರೆ ಯಾರೂ ಯೋಗ್ಯರಲ್ಲವೆಂಬುದನ್ನು ಯಾರು ಬಲ್ಲರು ?
ಪದಾರ್ಥ (ಕ.ಗ.ಪ)
ಮೂಲ ...{Loading}...
ಭೂರಿ ಭೂರಿಶ್ರವರು ನಿಮ್ಮೊಳ
ಗಾರ ಹೊಯ್ದರು ಸೋಮದತ್ತ ಮ
ಹೀರಮಣನತಿ ಮಾನ್ಯನಲ್ಲಾ ಅಗ್ರ ಪೂಜೆಯಲಿ
ಸಾರಧರ್ಮವಿದೆಂದು ಬಂದೆವಿ
ದಾರು ಬಲ್ಲರು ಹಳ್ಳಿಕಾರರ
ನಾರಿಯರ ನೆರೆ ಮಿಂಡನಲ್ಲದೆ ಯೋಗ್ಯರಿಲ್ಲೆಂದು ॥26॥
೦೨೭ ವಿನ್ದನನುವಿನ್ದಾ ಮಹೀಶರು ...{Loading}...
ವಿಂದನನುವಿಂದಾ ಮಹೀಶರು
ಬಂದಿರೈ ಕಾಂಭೋಜನೃಪನೈ
ತಂದೆಲಾ ಗಾಂಧಾರ ಶಕುನಿ ಬೃಹದ್ರಥಾದಿಗಳು
ಬಂದಿರಿಲ್ಲಿಗೆ ಧರ್ಮಸಾಧನ
ವೆಂದು ಬಯಸಿದಿರಿವರ ಯಾಗಕೆ
ನಂದಗೋಪನ ಮಕ್ಕಳಲ್ಲದೆ ಯೋಗ್ಯರಿಲ್ಲೆಂದ ॥27॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ವಿಂದ ಅನುವಿಂದ ಕಾಂಭೋಜರಾಜ ಗಾಂಧಾರದ ಶಕುನಿ ಬೃಹದ್ರಥನೇ ಮೊದಲಾದವರು ಇಲ್ಲಿಗೆ ಬಂದಿದ್ದೀರಿ. ಈ ಯಜ್ಞ ಒಂದು ಧರ್ಮಸಾಧನ ಎಂದು ತಿಳಿದು ನೀವೆಲ್ಲ ಬಂದಿರಿ. ಆದರೆ ಇಲ್ಲಿ ನಂದಗೋಪನ ಮಕ್ಕಳಲ್ಲದೆ ಬೇರೆ ಯಾರೂ ಯೋಗ್ಯರಲ್ಲ.
ಪದಾರ್ಥ (ಕ.ಗ.ಪ)
ಮೂಲ ...{Loading}...
ವಿಂದನನುವಿಂದಾ ಮಹೀಶರು
ಬಂದಿರೈ ಕಾಂಭೋಜನೃಪನೈ
ತಂದೆಲಾ ಗಾಂಧಾರ ಶಕುನಿ ಬೃಹದ್ರಥಾದಿಗಳು
ಬಂದಿರಿಲ್ಲಿಗೆ ಧರ್ಮಸಾಧನ
ವೆಂದು ಬಯಸಿದಿರಿವರ ಯಾಗಕೆ
ನಂದಗೋಪನ ಮಕ್ಕಳಲ್ಲದೆ ಯೋಗ್ಯರಿಲ್ಲೆಂದ ॥27॥
೦೨೮ ಈ ಋಷಿಗಳೀ ...{Loading}...
ಈ ಋಷಿಗಳೀ ಮಂತ್ರವೀ ಸಂ
ಭಾರವೀ ಪೌರಾಣ ಕಥೆಯೀ
ಭೂರಿ ಭೋಜನವೀ ಮಹಾ ಗೋ ರತ್ನ ಧನ ಧಾನ್ಯ
ಸಾರತರ ವೇದೋಕ್ತಮಾರ್ಗ ವಿ
ಚಾರವಿದ್ದುದು ಹೊರಗೆ ಗೋಪೀ
ಜಾರ ಸತ್ಕೃತಿಯೊಳಗೆ ವಿಷವಿದನರಿದುದಿಲ್ಲೆಂದ ॥28॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಈ ಋಷಿಗಳು, ಈ ಮಂತ್ರ, ಈ ಸಂಭಾರ, ಈ ಪೌರಾಣಿಕ ಕಥೆ, ಈ ಭೂರಿಭೋಜನ ಈ ಗೋವು ರತ್ನ ಧನ ಧಾನ್ಯಗಳು,
ಸಾರತರವಾದ ವೇದೋಕ್ತಮಾರ್ಗದ ವಿಚಾರ ಇವೆಲ್ಲ ಹೊರಗಡೆ ಕಂಡವು. ಈ ಗೋಪಿ ಜಾರನಿಗೆ ಸತ್ಕಾರವೆನ್ನುವುದು ಒಳಗಡೆಯೇ ವಿಷದಂತೆ ಸೇರಿಕೊಂಡಿತ್ತು. ಇದನ್ನು ನಾನು ತಿಳಿದಿರಲಿಲ್ಲ.
ಪದಾರ್ಥ (ಕ.ಗ.ಪ)
ಮೂಲ ...{Loading}...
ಈ ಋಷಿಗಳೀ ಮಂತ್ರವೀ ಸಂ
ಭಾರವೀ ಪೌರಾಣ ಕಥೆಯೀ
ಭೂರಿ ಭೋಜನವೀ ಮಹಾ ಗೋ ರತ್ನ ಧನ ಧಾನ್ಯ
ಸಾರತರ ವೇದೋಕ್ತಮಾರ್ಗ ವಿ
ಚಾರವಿದ್ದುದು ಹೊರಗೆ ಗೋಪೀ
ಜಾರ ಸತ್ಕೃತಿಯೊಳಗೆ ವಿಷವಿದನರಿದುದಿಲ್ಲೆಂದ ॥28॥
೦೨೯ ಸ್ನಾತಕವ್ರತಿಯಲ್ಲ ಋತ್ವಿಜ ...{Loading}...
ಸ್ನಾತಕವ್ರತಿಯಲ್ಲ ಋತ್ವಿಜ
ನೀತನಲ್ಲಾಚಾರ್ಯನಲ್ಲ ಮ
ಹೀತಳಾಧಿಪನಲ್ಲ ಗುರುವಲ್ಲಸುರರಿಪು ನಿಮಗೆ
ಈತನೇ ಪ್ರಿಯನೆಂದು ಕೃಷ್ಣಂ
ಗೋತು ಕೊಡುವರೆ ಬೇರೆ ಕೊಡುವುದು
ಭೂತಳೇಶರ ಮುಂದೆ ಮನ್ನಿಪುದುಚಿತವಲ್ಲೆಂದ ॥29॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಈತನೇನು ಸ್ನಾತಕವ್ರತಿಯಲ್ಲ. ಋತ್ವಿಜನಲ್ಲ, ಆಚಾರ್ಯನಲ್ಲ, ಯಾವುದೇ ರಾಜ್ಯಕ್ಕೆ ಒಡೆಯನೂ ಅಲ್ಲ. ನಿಮಗೆ ಗುರುವೂ
ಅಲ್ಲ. ಆದರೂ ಈತನೇ ನಿಮಗೆ ಪ್ರಿಯನೆಂದು ಬಯಸಿ ಅಗ್ರಸ್ಥಾನ ಕೊಡಬೇಕೆಂದಿದ್ದರೆ ಪ್ರತ್ಯೇಕವಾಗಿ ಖಾಸಗಿಯಾಗಿ ಕೊಡಿ. ಎಲ್ಲ ರಾಜರುಗಳ ಮುಂದೆ ಹೀಗೆ ಅವನನ್ನು ಗೌರವಿಸುವುದು ಉಚಿತವಲ್ಲ.
ಪದಾರ್ಥ (ಕ.ಗ.ಪ)
ಮೂಲ ...{Loading}...
ಸ್ನಾತಕವ್ರತಿಯಲ್ಲ ಋತ್ವಿಜ
ನೀತನಲ್ಲಾಚಾರ್ಯನಲ್ಲ ಮ
ಹೀತಳಾಧಿಪನಲ್ಲ ಗುರುವಲ್ಲಸುರರಿಪು ನಿಮಗೆ
ಈತನೇ ಪ್ರಿಯನೆಂದು ಕೃಷ್ಣಂ
ಗೋತು ಕೊಡುವರೆ ಬೇರೆ ಕೊಡುವುದು
ಭೂತಳೇಶರ ಮುಂದೆ ಮನ್ನಿಪುದುಚಿತವಲ್ಲೆಂದ ॥29॥
೦೩೦ ರಾಯ ನಿನಗಾವಿನ್ದು ...{Loading}...
ರಾಯ ನಿನಗಾವಿಂದು ದಿಟ ಸಿ
ದ್ಧಾಯವನು ನಾವ್ತೆತ್ತೆವಲ್ಲದೆ
ವಾಯುಜನ ಫಲುಗುಣನ ಬಿಲ್ಲಿನ ಬಲುಮೆಗಂಜಿದೆವೆ
ರಾಯ ಠಕ್ಕಿನ ನಿಧಿಯ ಠೌಳಿಯ
ಮಾಯಕಾರನ ತಂದು ಮನ್ನಿಸಿ
ರಾಯರಭಿಮಾನವ ವಿಭಾಡಿಸಿಕೊಂಡೆ ನೀನೆಂದ ॥30॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ರಾಜ ನಿನಗೆ ನಾವಿಂದು ತೆರಿಗೆಯನ್ನು ಕೊಟ್ಟೆವು ನಿಜ. ಆದರೆ ನಿನಗಾಗಿ ತೆತ್ತೆವೇ ಹೊರತು ಭೀಮನ ಅರ್ಜುನನ ಬಿಲ್ಲಿನ
ಬಲುಮೆಗೆ ಹೆದರಿಕೊಂಡು ಕೊಟ್ಟೆವೇ ? ಈ ವಂಚಕನಾದ ಮಾಯಕಾರನನ್ನು ತಂದು ಗೌರವಿಸಿ ರಾಜರಿಗೆಲ್ಲ ನಿನ್ನ ಮೇಲಿದ್ದ ಅಭಿಮಾನವನ್ನು ಹಾಳು ಮಾಡಿಕೊಂಡೆ.
ಪದಾರ್ಥ (ಕ.ಗ.ಪ)
ಮೂಲ ...{Loading}...
ರಾಯ ನಿನಗಾವಿಂದು ದಿಟ ಸಿ
ದ್ಧಾಯವನು ನಾವ್ತೆತ್ತೆವಲ್ಲದೆ
ವಾಯುಜನ ಫಲುಗುಣನ ಬಿಲ್ಲಿನ ಬಲುಮೆಗಂಜಿದೆವೆ
ರಾಯ ಠಕ್ಕಿನ ನಿಧಿಯ ಠೌಳಿಯ
ಮಾಯಕಾರನ ತಂದು ಮನ್ನಿಸಿ
ರಾಯರಭಿಮಾನವ ವಿಭಾಡಿಸಿಕೊಂಡೆ ನೀನೆಂದ ॥30॥
೦೩೧ ಧರ್ಮಮಯವೀ ಯಜ್ಞ ...{Loading}...
ಧರ್ಮಮಯವೀ ಯಜ್ಞ ನೀನೇ
ಧರ್ಮಸುತನೆಂದಿದ್ದೆವಿಲ್ಲಿ ವಿ
ಕವರ್iವಾಯಿತಸೂಯವೆ ಶಿವನಾಣೆ ಜಗವರಿಯೆ
ಧರ್ಮವೇ ಅಪ್ರಾಪ್ತ ಕಾರ್ಯದ
ಕರ್ಮವೀ ನೃಪನಿಕರ ಮೆಚ್ಚಲ
ಧರ್ಮಸುತನೆಂದಾಯ್ತು ನಿನ್ನಭಿಧಾನವಿಂದಿನಲಿ ॥31॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಧರ್ಮಮಯವಾದದ್ದು ಈ ಯಜ್ಞ, ನೀನೂ ಧರ್ಮಸುತ ಎಂದೇ ಇದ್ದೆವು. ಇಲ್ಲಿ ವಿಕರ್ಮವಾಯಿತು. ಇದು ಅಸೂಯೆಯ ಮಾತಲ್ಲ. ಶಿವನಾಣೆ, ಈ ವಿಷಯ ಜಗತ್ತಿಗೇ ತಿಳಿದಿದೆ. ಇದು ಧರ್ಮವಾದೀತೇ ? ಅಪ್ರಾಪ್ತ ಕಾರ್ಯದ ಕರ್ಮ. ಈ ರಾಜರುಗಳೆಲ್ಲ ಮೆಚ್ಚುವಂತೆ ಈಗ ನಿನ್ನ ಹೆಸರು ಅಧರ್ಮಸುತ ಎಂದಾಯ್ತು.
ಪದಾರ್ಥ (ಕ.ಗ.ಪ)
ಮೂಲ ...{Loading}...
ಧರ್ಮಮಯವೀ ಯಜ್ಞ ನೀನೇ
ಧರ್ಮಸುತನೆಂದಿದ್ದೆವಿಲ್ಲಿ ವಿ
ಕವರ್iವಾಯಿತಸೂಯವೆ ಶಿವನಾಣೆ ಜಗವರಿಯೆ
ಧರ್ಮವೇ ಅಪ್ರಾಪ್ತ ಕಾರ್ಯದ
ಕರ್ಮವೀ ನೃಪನಿಕರ ಮೆಚ್ಚಲ
ಧರ್ಮಸುತನೆಂದಾಯ್ತು ನಿನ್ನಭಿಧಾನವಿಂದಿನಲಿ ॥31॥
೦೩೨ ಆಯಿತಿದು ಜಡ ...{Loading}...
ಆಯಿತಿದು ಜಡ ಧರ್ಮಜನು ಗಾಂ
ಗೇಯ ಜಡನೀ ತಾಗುದಟ್ಟಿನ
ದಾಯವರಿಯದೆ ನಿನ್ನ ಕರೆದರೆ ಕೃಷ್ಣ ಬೆರೆತೆಯಲ
ರಾಯ ರತುನದ ನಡುವೆ ನೀನನು
ನಾಯಕವೊ ನಾಯಕವೊ ಮೇಣುಪ
ನಾಯಕವೊ ನೀನಾವನೆಂದನು ಜರೆದು ಮುರಹರನ ॥32॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಇದೇನೋ ಆಯ್ತು, ಧರ್ಮರಾಯನೂ ಮೂರ್ಖ, ಭೀಷ್ಮನೂ ಮೂರ್ಖ ಎಂದಿಟ್ಟುಕೊಳ್ಳೋಣ. ತಾಕುವುದೋ ತಟ್ಟುವುದೋ ಎಂಬ ವ್ಯತ್ಯಾಸವನ್ನರಿಯದೆ ಅವರು ನಿನ್ನನ್ನು ಕರೆದ ಮಾತ್ರಕ್ಕೇ ಕೃಷ್ಣ, ನೀನು ಸೊಕ್ಕಿಬಿಟ್ಟೆಯೆಲ್ಲೋ, ರಾಜರತ್ನಗಳ ಮಾಲೆಯಲ್ಲಿ ನೀನು ನಾಯಕರತ್ನವೋ ವಿದೂಷಕ ರತ್ನವೋ ಉಪನಾಯಕರತ್ನವೋ, ನೀನಾವನು? ಎಂದು ಕೃಷ್ಣನನ್ನೇ ನೇರವಾಗಿ ಜರೆಯತೊಡಗಿದ.
ಪದಾರ್ಥ (ಕ.ಗ.ಪ)
ಮೂಲ ...{Loading}...
ಆಯಿತಿದು ಜಡ ಧರ್ಮಜನು ಗಾಂ
ಗೇಯ ಜಡನೀ ತಾಗುದಟ್ಟಿನ
ದಾಯವರಿಯದೆ ನಿನ್ನ ಕರೆದರೆ ಕೃಷ್ಣ ಬೆರೆತೆಯಲ
ರಾಯ ರತುನದ ನಡುವೆ ನೀನನು
ನಾಯಕವೊ ನಾಯಕವೊ ಮೇಣುಪ
ನಾಯಕವೊ ನೀನಾವನೆಂದನು ಜರೆದು ಮುರಹರನ ॥32॥
೦೩೩ ಈ ಋಷಿಗಳೇ ...{Loading}...
ಈ ಋಷಿಗಳೇ ಬಣಗುಗಳು ಬಡ
ಹಾರುವರು ದಕ್ಷಿಣೆ ಸುಭೋಜನ
ಪೂರವಾದರೆ ಸಾಕು ಮಾನ್ಯರ ವಾಸಿವಟ್ಟದಲಿ
ಹೋರುವವರಿವರಲ್ಲ ನೆರೆದೀ
ವೀರ ನೃಪರಭಿಮಾನಿಗಳು ನೆರೆ
ಸೈರಿಸಿದರಿದು ನಿನಗೆ ಸದರವೆ ಕೃಷ್ಣ ಹೇಳೆಂದ ॥33॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಈ ಋಷಿಗಳೇ ಅಲ್ಪರಾದವರು. ಬಡ ಹಾರುವರಿಗಾದರೋ ದಕ್ಷಿಣೆ ಹಾಗೂ ಪುಷ್ಕಳವಾದ ಭೋಜನ ಪೂರಯಿಸಿಬಿಟ್ಟರೆ ಸಾಕು. ಮಾನ್ಯವಂತರ ಹೆಚ್ಚುಕುಂದಿಗಾಗಿ ಹೋರಾಟ ಮಾಡುವವರಲ್ಲ. ಇಲ್ಲಿ ಸೇರಿರುವ ವೀರರಾಜರುಗಳೋ ಅಭಿಮಾನಿಗಳು, ಸೈರಿಸಿಕೊಂಡರು. ಆದ ಮಾತ್ರಕ್ಕೆ ನಿನಗೆ ಸದರವಾಯಿತೆ ಕೃಷ್ಣ ?
ಪದಾರ್ಥ (ಕ.ಗ.ಪ)
ಮೂಲ ...{Loading}...
ಈ ಋಷಿಗಳೇ ಬಣಗುಗಳು ಬಡ
ಹಾರುವರು ದಕ್ಷಿಣೆ ಸುಭೋಜನ
ಪೂರವಾದರೆ ಸಾಕು ಮಾನ್ಯರ ವಾಸಿವಟ್ಟದಲಿ
ಹೋರುವವರಿವರಲ್ಲ ನೆರೆದೀ
ವೀರ ನೃಪರಭಿಮಾನಿಗಳು ನೆರೆ
ಸೈರಿಸಿದರಿದು ನಿನಗೆ ಸದರವೆ ಕೃಷ್ಣ ಹೇಳೆಂದ ॥33॥
೦೩೪ ಅರಿಯದವರಾದರಿಸಿದರೆ ನೀ ...{Loading}...
ಅರಿಯದವರಾದರಿಸಿದರೆ ನೀ
ನರಿಯ ಬೇಡವೆ ನಿನ್ನ ಕುಂದಿನ
ಕೊರತೆಗಳನಾರರಿಯರೀ ಭೂಪಾಲ ಮಧ್ಯದಲಿ
ಕುರುಬರೂರಲಿ ಗಾಜು ಮಾಣಿಕ
ವರಿಯದವರಿಗೆ ಕೃಷ್ಣ ನೀ ಕಡು
ಬೆರೆತಲಾ ನೆರೆ ಮರೆದೆಲಾ ನಿನ್ನಂತರವನೆಂದ ॥34॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ತಿಳಿವಳಿಕೆಯಿಲ್ಲದೆ ಅವರು ಗೌರವಿಸಿದ ಮಾತ್ರಕ್ಕೇ ನೀನು ನಿನ್ನ ಕುಂದು ಕೊರತೆಗಳನ್ನು ತಿಳಿದುಕೊಳ್ಳಬೇಡವೇ ? ನಿನ್ನ ಕುಂದುಕೊರತೆಗಳು ಈ ರಾಜರ ನಡುವೆ ಯಾರಿಗೆ ಗೊತ್ತಿಲ್ಲ ? ಕುರುಬರ ಊರಿನಲ್ಲಿ ಗಾಜೇ ಮಾಣಿಕ್ಯ! ಹಾಗೆ ಅರಿಯದವರಿಗೆ ಕೃಷ್ಣ, ನೀನು ಸೊಕ್ಕಿಬಿಟ್ಟು ನಿನ್ನ ಮಟ್ಟವನ್ನು ಮರೆತುಬಿಟ್ಟೆಯಲ್ಲ ?
ಪದಾರ್ಥ (ಕ.ಗ.ಪ)
ಮೂಲ ...{Loading}...
ಅರಿಯದವರಾದರಿಸಿದರೆ ನೀ
ನರಿಯ ಬೇಡವೆ ನಿನ್ನ ಕುಂದಿನ
ಕೊರತೆಗಳನಾರರಿಯರೀ ಭೂಪಾಲ ಮಧ್ಯದಲಿ
ಕುರುಬರೂರಲಿ ಗಾಜು ಮಾಣಿಕ
ವರಿಯದವರಿಗೆ ಕೃಷ್ಣ ನೀ ಕಡು
ಬೆರೆತಲಾ ನೆರೆ ಮರೆದೆಲಾ ನಿನ್ನಂತರವನೆಂದ ॥34॥
೦೩೫ ಕುಲದಲಧಿಕರು ರಾಜ್ಯದಲಿ ...{Loading}...
ಕುಲದಲಧಿಕರು ರಾಜ್ಯದಲಿ ವೆ
ಗ್ಗಳರು ಭುಜಸತ್ವದಲಿ ಸೇನಾ
ಬಲದಲುತ್ತಮರಿವರ ಭಂಗಿಸಿ ನಿನಗೆ ಮನ್ನಣೆಯೆ
ಕುಲವು ಯದುಕುಲ ರಾಜ್ಯವೇ ಕಡ
ಲೊಳ ಕುರುವ ನಿನ್ನೋಟಗುಳಿತನ
ದಳವ ಮಾಗಧ ಕಾಲಯವನರು ಬಲ್ಲರವರೆಂದ ॥35॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಇಲ್ಲಿ ನೆರೆದಿರುವ ರಾಜರು ಕುಲದಲ್ಲಿ ಶ್ರೇಷ್ಠರೆನಿಸಿದವರು. ರಾಜ್ಯದಲ್ಲಿ ಅತಿಶಯರಾದವರು. ಭುಜಪರಾಕ್ರಮದಲ್ಲಿ ಮತ್ತು ಸೇನೆಯಲ್ಲಿ ಬಲಶಾಲಿಗಳೆನಿಸಿದರು. ಅವರನ್ನು ಅಪಮಾನಗೊಳಿಸಿ ನಿನಗೆ ಮರ್ಯಾದೆಯೇ? ನಿನ್ನ ಕುಲವೋ ಯಾದವರದು. ನಿನ್ನ ರಾಜ್ಯವೋ ಕಡಲೊಳಗಿನ ಸಣ್ಣದ್ವೀಪ. ಹೇಡಿಯಂತೆ ನೀನು ಶತ್ರುಗಳಿಗೆ ಹೆದರಿ ಓಡಿದುದನ್ನು ಮಾಗಧ ಕಾಲಯವನರು ಬಲ್ಲರು !
ಪದಾರ್ಥ (ಕ.ಗ.ಪ)
ಕುರುವ-ದ್ವೀಪ
ಮೂಲ ...{Loading}...
ಕುಲದಲಧಿಕರು ರಾಜ್ಯದಲಿ ವೆ
ಗ್ಗಳರು ಭುಜಸತ್ವದಲಿ ಸೇನಾ
ಬಲದಲುತ್ತಮರಿವರ ಭಂಗಿಸಿ ನಿನಗೆ ಮನ್ನಣೆಯೆ
ಕುಲವು ಯದುಕುಲ ರಾಜ್ಯವೇ ಕಡ
ಲೊಳ ಕುರುವ ನಿನ್ನೋಟಗುಳಿತನ
ದಳವ ಮಾಗಧ ಕಾಲಯವನರು ಬಲ್ಲರವರೆಂದ ॥35॥
೦೩೬ ಬೇವಿನಾರವೆಯೊಳಗೆ ಕಳಹಂ ...{Loading}...
ಬೇವಿನಾರವೆಯೊಳಗೆ ಕಳಹಂ
ಸಾವಳಿಗೆ ರಮ್ಯವೆ ಜಪಾಕುಸು
ಮಾವಳಿಗಳಲಿಮಧುಕರನ ಮೋಹರಕೆ ಮನ್ನಣೆಯೆ
ಈ ವಿಕಾರದ ಯಜ್ಞದಲಿ ರಾ
ಜಾವಳಿಗೆ ಮನ್ನಣೆಯೆ ಶಿವಶಿವ
ನೀವು ಗೋಪೀಜಾರರಿಲ್ಲಿಗೆ ಶಿಷ್ಟರಹಿರೆಂದ ॥36॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಬೇವಿನಗಿಡಗಳ ತೋಪಿನಲ್ಲಿ ಕಲಹಂಸಗಳಿಗೆ ಸೊಗಸೆನ್ನಿಸುತ್ತದೆಯೇ, ಕೆಂಪು ದಾಸವಾಳದ ಹೂಗಳಿರುವೆಡೆಯಲ್ಲಿ ದುಂಬಿಗಳ ದಂಡಿಗೆ ಮಾನ್ಯತೆಯುಂಟೆ ? ಅಂತೆಯೇ ಈ ವಿಕಾರದ ಯಜ್ಞದಲ್ಲಿ ರಾಜರುಗಳಿಗೆ ಮಾನ್ಯತೆಯುಂಟೇ ? ಶಿವ ಶಿವಾ ! ಗೋಪೀಜಾರರಾದ ನೀವೇ ಇಲ್ಲಿಗೆ ಯೋಗ್ಯರು.
ಪದಾರ್ಥ (ಕ.ಗ.ಪ)
ಆರವೆ-ತೋಟ
ಕಲಹಂಸ- ಹಂಸಪಕ್ಷಿ
ಮೂಲ ...{Loading}...
ಬೇವಿನಾರವೆಯೊಳಗೆ ಕಳಹಂ
ಸಾವಳಿಗೆ ರಮ್ಯವೆ ಜಪಾಕುಸು
ಮಾವಳಿಗಳಲಿಮಧುಕರನ ಮೋಹರಕೆ ಮನ್ನಣೆಯೆ
ಈ ವಿಕಾರದ ಯಜ್ಞದಲಿ ರಾ
ಜಾವಳಿಗೆ ಮನ್ನಣೆಯೆ ಶಿವಶಿವ
ನೀವು ಗೋಪೀಜಾರರಿಲ್ಲಿಗೆ ಶಿಷ್ಟರಹಿರೆಂದ ॥36॥
೦೩೭ ಜರಡುಮಖವೀ ಮಖಕೆ ...{Loading}...
ಜರಡುಮಖವೀ ಮಖಕೆ ಹೋಲುವ
ಧರಣಿಪತಿಯೀ ಮಖಕೆ ಧರಣೀ
ಶ್ವರಗೆ ಪಾಸಟಿ ಭೀಷ್ಮನೀ ಮಖಭೂಪ ಭೀಷ್ಮರಿಗೆ
ಸರಿಸನಾದನು ಕೃಷ್ಣನೀ ಮಖ
ಧರಣಿಪತಿ ಭೀಷ್ಮಂಗೆ ಕೃಷ್ಣಗೆ
ಸರಿಯ ಕಾಣೆನು ನಿಮ್ಮೊಳೊಬ್ಬರಿಗೊಬ್ಬರೆಣೆಯೆಂದ ॥37॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಈ ಯಜ್ಞವೆ ಒಂದು ಪೊಳ್ಳು ಯಜ್ಞ. ಈ ಪೊಳ್ಳು ಯಜ್ಞಕ್ಕೆ ಸರಿಯಾಗಿದ್ದಾನೆ ಯುಧಿಷ್ಠಿರ ರಾಜ. ಈ ಯಜ್ಞ ಮತ್ತು ಯುಧಿಷ್ಠಿರ ನಿಗೆ ಸರಿಸಾಟಿಯಾಗಿದ್ದಾನೆ ಭೀಷ್ಮ. ಈ ಯಜ್ಞ ,ಯುಧಿಷ್ಠಿರ, ಭೀಷ್ಮನಿಗೆ ಸರಿಸಮಾನನಾಗಿದ್ದಾನೆ ಕೃಷ್ಣ. ನೀವು ಒಬ್ಬರಿಗೊಬ್ಬರು ಸರಿಯಾಗಿದ್ದೀರಿ. ನಿಮಗೆ ಸರಿಹೊಂದುವವರನ್ನು ಬೇರೆಲ್ಲೂ ಕಾಣೆ.
ಪದಾರ್ಥ (ಕ.ಗ.ಪ)
ಮೂಲ ...{Loading}...
ಜರಡುಮಖವೀ ಮಖಕೆ ಹೋಲುವ
ಧರಣಿಪತಿಯೀ ಮಖಕೆ ಧರಣೀ
ಶ್ವರಗೆ ಪಾಸಟಿ ಭೀಷ್ಮನೀ ಮಖಭೂಪ ಭೀಷ್ಮರಿಗೆ
ಸರಿಸನಾದನು ಕೃಷ್ಣನೀ ಮಖ
ಧರಣಿಪತಿ ಭೀಷ್ಮಂಗೆ ಕೃಷ್ಣಗೆ
ಸರಿಯ ಕಾಣೆನು ನಿಮ್ಮೊಳೊಬ್ಬರಿಗೊಬ್ಬರೆಣೆಯೆಂದ ॥37॥
೦೩೮ ಸೀಳಿವನ ಹೆಡತಲೆಯೊಳಗೆ ...{Loading}...
ಸೀಳಿವನ ಹೆಡತಲೆಯೊಳಗೆ ತೆಗೆ
ನಾಲಗೆಯನೆಲೆ ಕುನ್ನಿಗಳಿರಿದ
ಕೇಳುವರೆ ಪತಿನಿಂದೆಯನು ಪಾತಕಕೆ ಗುರುವಲ್ಲ
ಏಳೆನುತ ಕೃತವರ್ಮ ಸಾಂಬ ನೃ
ಪಾಲ ಮೊದಲಾದಖಿಳ ಯಾದವ
ಜಾಲವೆದ್ದುದು ಬಿಗಿದ ಬಿಲುಗಳ ಸೆಳೆದಡಾಯುಧದಿ ॥38॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಶಿಶುಪಾಲನ ಇಷ್ಟೊಂದು ನಿಂದೆಯ ಮಾತುಗಳನ್ನು ಕೇಳಿ ಕೆರಳಿದ ಕೃತವರ್ಮ, ಸಾಂಬ ಮೊದಲಾದ ಎಲ್ಲ ಯಾದವರೂ ಬಿಗಿದ ಬಿಲ್ಲುಗಳನ್ನೂ ಆಯುಧವನ್ನೂ ಸಜ್ಜುಗೊಳಿಸಿಕೊಂಡು ಎದ್ದು ರೋಷಾವೇಷದಿಂದ “ಇವನ ಹಿಂದಲೆಯನ್ನು ಸೀಳಿ ನಿಂದಿಸುತ್ತಿರುವ ಇವನ ನಾಲಿಗೆಯನ್ನು ಕಿತ್ತು ತೆಗೆಯಿರೋ ! ಕುನ್ನಿಗಳೇ, ಪತಿನಿಂದೆಯನ್ನು ಕೇಳಿಸಿಕೊಂಡು ಕುಳಿತಿರುವಿರಲ್ಲ ! ಹೀಗೆ ಕೇಳುವುದೂ ಪಾಪಕ್ಕೆ ಗುರುವಲ್ಲವೇ ? ಏಳಿ ಎಂದು ಅಬ್ಬರಿಸಿದರು.
ಪದಾರ್ಥ (ಕ.ಗ.ಪ)
ಹೆಡತಲೆ- ಹಿಂದಲೆ, ತಲೆಯ ಹಿಂಭಾಗ
ಮೂಲ ...{Loading}...
ಸೀಳಿವನ ಹೆಡತಲೆಯೊಳಗೆ ತೆಗೆ
ನಾಲಗೆಯನೆಲೆ ಕುನ್ನಿಗಳಿರಿದ
ಕೇಳುವರೆ ಪತಿನಿಂದೆಯನು ಪಾತಕಕೆ ಗುರುವಲ್ಲ
ಏಳೆನುತ ಕೃತವರ್ಮ ಸಾಂಬ ನೃ
ಪಾಲ ಮೊದಲಾದಖಿಳ ಯಾದವ
ಜಾಲವೆದ್ದುದು ಬಿಗಿದ ಬಿಲುಗಳ ಸೆಳೆದಡಾಯುಧದಿ ॥38॥
೦೩೯ ಕದಡಿತಖಿಳಾಸ್ಥಾನ ಹೋಯೆಂ ...{Loading}...
ಕದಡಿತಖಿಳಾಸ್ಥಾನ ಹೋಯೆಂ
ದೊದರಿ ಋಷಿಗಳ ತಾಳಿಗೆಗಳೊಣ
ಗಿದವು ಹಲ್ಲಣಿಸಿದವು ರಥ ಮಾತಂಗ ವಾಜಿಗಳು
ಕೆದರಿತೀಚೆಯ ದೆಸೆ ಸುನೀತನ
ಸದೆದು ತೆಗೆ ಸುಂಟಿಗೆಯನೆನುತಲಿ
ಯದು ನೃಪಾಲರು ಗಜಬಜಿಸಲೆಡೆವೊಕ್ಕನಾ ಭೀಷ್ಮ ॥39॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಆ ಸಭೆ ಅಲ್ಲೋಲ ಕಲ್ಲೋಲವಾಯಿತು. ಹೋ ಎಂದು ಆತಂಕದಿಂದ ಉದ್ಗರಿಸಿದ ಋಷಿಗಳ ಗಂಟಲು ಒಣಗಿತು. ರಥ ಆನೆ
ಕುದುರೆಗಳು ಹಲ್ಲಣ ಮೊದಲಾದವುಗಳಿಂದ ಸಜ್ಜಾದುವು. ಈಚೆಯ ಕಡೆಯಲ್ಲಿ ಇತರ ರಾಜರುಗಳೂ “ಈ ಶಿಶುಪಾಲನನ್ನು ಸದೆಬಡಿದು ಅವನ ಹೃದಯದ ಮಾಂಸವನ್ನು ಕೀಳಿರೋ” ಎಂದು ಗಜಬಜಿಸತೊಡಗಿದರು. ಆಗ ಭೀಷ್ಮ ನಡುವೆ ಪ್ರವೇಶಿಸಿದ.
ಪದಾರ್ಥ (ಕ.ಗ.ಪ)
ಹಲ್ಲಣಿಸಿದವು - ಕುದುರೆಗಳು ಸಜ್ಜುಗೊಳಿಸಲ್ಪಟ್ಟವು.
ಮೂಲ ...{Loading}...
ಕದಡಿತಖಿಳಾಸ್ಥಾನ ಹೋಯೆಂ
ದೊದರಿ ಋಷಿಗಳ ತಾಳಿಗೆಗಳೊಣ
ಗಿದವು ಹಲ್ಲಣಿಸಿದವು ರಥ ಮಾತಂಗ ವಾಜಿಗಳು
ಕೆದರಿತೀಚೆಯ ದೆಸೆ ಸುನೀತನ
ಸದೆದು ತೆಗೆ ಸುಂಟಿಗೆಯನೆನುತಲಿ
ಯದು ನೃಪಾಲರು ಗಜಬಜಿಸಲೆಡೆವೊಕ್ಕನಾ ಭೀಷ್ಮ ॥39॥
೦೪೦ ನಿಲಿಸಿದನು ಕಳಕಳವನೀ ...{Loading}...
ನಿಲಿಸಿದನು ಕಳಕಳವನೀ ಯದು
ಬಲವ ತೆಗೆದನು ಮತ್ತೆ ಮೌನದ
ಜಲಧಿಯಾಸ್ಥಾನದಿದಿರಲಿ ನಿಂದು ಸಹದೇವ
ಎಲೆ ಸುನೀತ ವೃಥಾ ವಿರೋಧ
ಸ್ಖಲಿತನಾದೆ ಮುರಾರಿ ಮಾನ್ಯರ
ತಿಲಕನೀತನ ಪೂಜೆ ಯಾಗಕೆ ಕಳಸವಾಯ್ತೆಂದ ॥40॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಭೀಷ್ಮ ಗುಜುಗುಜು ಗದ್ದಲವನ್ನು ನಿಲ್ಲಿಸಿದ. ಯಾದವ ಸೈನ್ಯವನ್ನೆಲ್ಲ ಹಿಂದಕ್ಕೆ ಕಳಿಸಿದ. ಮತ್ತೆ ಸಭೆಯಲ್ಲಿ ಮೌನ ನೆಲೆಸಿತು.
ಆಗ ಸಹದೇವ ಸಭೆಯ ಎದುರು ನಿಂತು “ಶಿಶುಪಾಲ ವ್ಯರ್ಥವಾದ ವಿರೋಧದಿಂದ ಜಾರಿದೆ. ಈ ಮುರಾರಿ, ಮಾನ್ಯರಿಗೆ ತಿಲಕ
ಪ್ರಾಯದವನು. ಅವನಿಗೆ ಅಗ್ರಪೂಜೆ ನಡೆಸಿದುದು ಈ ಯಾಗಕ್ಕೆ ಕಳಶಪ್ರಾಯವಾಯ್ತು ಎಂದ.
ಪದಾರ್ಥ (ಕ.ಗ.ಪ)
ಮೂಲ ...{Loading}...
ನಿಲಿಸಿದನು ಕಳಕಳವನೀ ಯದು
ಬಲವ ತೆಗೆದನು ಮತ್ತೆ ಮೌನದ
ಜಲಧಿಯಾಸ್ಥಾನದಿದಿರಲಿ ನಿಂದು ಸಹದೇವ
ಎಲೆ ಸುನೀತ ವೃಥಾ ವಿರೋಧ
ಸ್ಖಲಿತನಾದೆ ಮುರಾರಿ ಮಾನ್ಯರ
ತಿಲಕನೀತನ ಪೂಜೆ ಯಾಗಕೆ ಕಳಸವಾಯ್ತೆಂದ ॥40॥
೦೪೧ ಧರಣಿಪತಿಯೇ ಸಕಲ ...{Loading}...
ಧರಣಿಪತಿಯೇ ಸಕಲ ಧರ್ಮದ
ಪರಮಸೀಮೆ ಮುಕುಂದನೇ ಮಾ
ನ್ಯರಿಗೆ ಗುರು ವಂದ್ಯರಿಗೆ ವಂದ್ಯನು ದೈವಕಧಿದೈವ
ಸುರನದೀ ನಂದನನು ಸಾಕ್ಷಾ
ತ್ಪರಮಶಿವನೀ ಯಜ್ಞ ಲೋಕೋ
ತ್ತರದ ಮಖವಿದು ನಿನ್ನ ಕುಮತಿಗೆ ಸಾಧ್ಯವಲ್ಲೆಂದ ॥41॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಯುಧಿಷ್ಠಿರ ರಾಜನೇ ಧರ್ಮದ ಪರಮಸೀಮೆ. ಈ ಮುಕುಂದನೇ ಮಾನ್ಯರಿಗೆ ಗುರು. ವಂದ್ಯರಿಗೆ ವಂದ್ಯ. ದೈವಕ್ಕೆ ಅಧಿದೈವ. ಭೀಷ್ಮನು ಸಾಕ್ಷಾತ್ ಪರಶಿವ. ಈ ಯಜ್ಞ ಲೋಕೋತ್ತರವಾದ ಯಜ್ಞವೆನಿಸಿತು. ನಿನ್ನ ದುರ್ಬುದ್ಧಿಗೆ ಇದೆಲ್ಲ ಅರ್ಥವಾಗುವುದು ಸಾಧ್ಯವಿಲ್ಲ.
ಪದಾರ್ಥ (ಕ.ಗ.ಪ)
ಮೂಲ ...{Loading}...
ಧರಣಿಪತಿಯೇ ಸಕಲ ಧರ್ಮದ
ಪರಮಸೀಮೆ ಮುಕುಂದನೇ ಮಾ
ನ್ಯರಿಗೆ ಗುರು ವಂದ್ಯರಿಗೆ ವಂದ್ಯನು ದೈವಕಧಿದೈವ
ಸುರನದೀ ನಂದನನು ಸಾಕ್ಷಾ
ತ್ಪರಮಶಿವನೀ ಯಜ್ಞ ಲೋಕೋ
ತ್ತರದ ಮಖವಿದು ನಿನ್ನ ಕುಮತಿಗೆ ಸಾಧ್ಯವಲ್ಲೆಂದ ॥41॥
೦೪೨ ನಿನ್ನನೆನ್ನೆನು ಚೈದ್ಯ ...{Loading}...
ನಿನ್ನನೆನ್ನೆನು ಚೈದ್ಯ ಕೃಷ್ಣನ
ಮನ್ನಣೆಗೆ ಸೆಣಸುವರಿಗಿದೆ ತೊಡ
ರೆನ್ನ ಪಾದದಲೆನುತ ಧರಣಿಯನೊದೆದನಂಘ್ರಿಯಲಿ
ಇನ್ನ ನೀನು ಸುಲೋಚನಾಂಧಕ
ನಿನ್ನೊಡನೆ ಫಲವೇನು ಕದನಕೆ
ಬನ್ನಿ ಮಿಡುಕುಳ್ಳವರೆನುತ ಗಜರಿದನು ಸಹದೇವ ॥42॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ನಿನ್ನನ್ನು ನಿಂದಿಸುವುದಿಲ್ಲ ಚೈದ್ಯ, ಕೃಷ್ಣನ ಗೌರವವನ್ನು ಕೆಣಕುವವರು ನನ್ನನ್ನು ಎದುರಿಸಲಿ ಎಂದು ಸವಾಲು ಹಾಕುತ್ತೇನೆ ಎನ್ನುತ್ತಾ
ಕಾಲಿನಿಂದ ಭೂಮಿಯನ್ನು ಒದ್ದ. ಮತ್ತೆ ಮುಂದುವರಿಸಿ, “ಇನ್ನು ನೀನುÉೂಳ್ಳೆಯ ಕಣ್ಣಿದ್ದೂ ಕಣ್ಣು ಕಾಣದ ಕುರುಡ, ನಿನ್ನ ಬಳಿ ಮಾತನಾಡಿ
ಪ್ರಯೋಜನವೇನು ? ಶಕ್ತಿಯಿರುವವರು ಬನ್ನಿ ಯುದ್ಧಕ್ಕೆ” ಎಂದು ಗರ್ಜಿಸಿದ.
ಪದಾರ್ಥ (ಕ.ಗ.ಪ)
ಮಿಡುಕು-ಶಕ್ತಿ
ಮೂಲ ...{Loading}...
ನಿನ್ನನೆನ್ನೆನು ಚೈದ್ಯ ಕೃಷ್ಣನ
ಮನ್ನಣೆಗೆ ಸೆಣಸುವರಿಗಿದೆ ತೊಡ
ರೆನ್ನ ಪಾದದಲೆನುತ ಧರಣಿಯನೊದೆದನಂಘ್ರಿಯಲಿ
ಇನ್ನ ನೀನು ಸುಲೋಚನಾಂಧಕ
ನಿನ್ನೊಡನೆ ಫಲವೇನು ಕದನಕೆ
ಬನ್ನಿ ಮಿಡುಕುಳ್ಳವರೆನುತ ಗಜರಿದನು ಸಹದೇವ ॥42॥
೦೪೩ ನುಡಿಯದದು ಮೌನಗ್ರಹದ ...{Loading}...
ನುಡಿಯದದು ಮೌನಗ್ರಹದ ಹೆಡ
ಗುಡಿಯಲಿದ್ದುದು ರಾಯ ಕುಲವವ
ಗಡೆಯನೆದ್ದನು ಸಿಂಹ ಪೀಠದಿ ನೋಡಿ ಕೆಲಬಲನ
ಕಡೆಯ ಝಣಝಣ ರವ ಮಸಗಲಿವ
ನೊಡನೆ ಹೊರವಂಟುದು ನೃಪಾಲಕ
ರೊಡಮುರುಚಿದರುಹಿಡಿವ ಸಚಿವ ಪಸಾಯ್ತ ಮಂತ್ರಿಗಳ ॥43॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಸಹದೇವನ ಗರ್ಜನೆಗೆ ರಾಜಕುಲದವರೆಲ್ಲ ತೆಪ್ಪಗಾಗಿ ಮೌನಗ್ರಹದ ಹಿಂಗಟ್ಟಿನ ಬಂಧನದಲ್ಲಿದ್ದರು. ಆಗ ಆ ಪ್ರತಿಭಟನಕಾರ ಶಿಶುಪಾಲ ಅತ್ತ ಇತ್ತ ನೋಡುತ್ತಾ ತನ್ನ ಕಡಗಗಳು ಝಣ ಝಣ ಶಬ್ದಮಾಡುತ್ತಿರಲು ತನ್ನ ಸಿಂಹಾಸನವನ್ನು ಬಿಟ್ಟೆದ್ದು ಹೊರಟ. ಅವನ ಜೊತೆಯಲ್ಲಿ ಕೆಲವು ರಾಜರುಗಳು ಅವನನ್ನನುಸರಿಸಿದರು. ಸಚಿವರು ಪಸಾಯ್ತರು, ಮಂತ್ರಿಗಳು ತಡೆಯುತ್ತಿದ್ದರೂ ಅಲಕ್ಷ್ಯದಿಂದ ಹೊರಟರು.
ಪದಾರ್ಥ (ಕ.ಗ.ಪ)
ಹೆಡಗುಡಿ- ಹಿಂಗಟ್ಟು, ಬಂಧನ
ಮೂಲ ...{Loading}...
ನುಡಿಯದದು ಮೌನಗ್ರಹದ ಹೆಡ
ಗುಡಿಯಲಿದ್ದುದು ರಾಯ ಕುಲವವ
ಗಡೆಯನೆದ್ದನು ಸಿಂಹ ಪೀಠದಿ ನೋಡಿ ಕೆಲಬಲನ
ಕಡೆಯ ಝಣಝಣ ರವ ಮಸಗಲಿವ
ನೊಡನೆ ಹೊರವಂಟುದು ನೃಪಾಲಕ
ರೊಡಮುರುಚಿದರುಹಿಡಿವ ಸಚಿವ ಪಸಾಯ್ತ ಮಂತ್ರಿಗಳ ॥43॥
೦೪೪ ಶಿವಶಿವಾ ತಪ್ಪಾಯ್ತು ...{Loading}...
ಶಿವಶಿವಾ ತಪ್ಪಾಯ್ತು ನಮ್ಮು
ತ್ಸವಕೆ ಬಂದವನಿಪನ ಗುಣದೋ
ಷವನು ನಾವೀಕ್ಷಿಸುವುದನುಚಿತವೆಂದು ವಿನಯದಲಿ
ಅವನಿಪತಿ ಬೆಂಬತ್ತಿ ಗಮನಕೆ
ತವಕಿಸುವ ಶಿಶುಪಾಲಕನ ಹಿಡಿ
ದವುಚಿದನು ಮಧುರೋಕ್ತಿಯಲಿ ನುಡಿಸಿದನು ಬೋಳೈಸಿ ॥44॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಆಗ ಯುಧಿಷ್ಠಿರ, ಮುಂದುವರಿಯಲು ತವಕಿಸುತ್ತಿದ್ದ ಶಿಶುಪಾಲನನ್ನು ತಬ್ಬಿ ಹಿಡಿದು ಶಿವಶಿವಾ ತಪ್ಪಾಯ್ತು. ನಮ್ಮ ಉತ್ಸವಕ್ಕೆ
ಬಂದ ರಾಜರ ಗುಣದೋಷವನ್ನು ನೋಡುವುದು ಉಚಿತವಲ್ಲ ಎಂದು ವಿನಯದಿಂದ ಮಧುರವಾದ ಮಾತುಗಳಿಂದ ಅವನನ್ನು ಸಮಾಧಾನಪಡಿಸಿದ.
ಪದಾರ್ಥ (ಕ.ಗ.ಪ)
ಮೂಲ ...{Loading}...
ಶಿವಶಿವಾ ತಪ್ಪಾಯ್ತು ನಮ್ಮು
ತ್ಸವಕೆ ಬಂದವನಿಪನ ಗುಣದೋ
ಷವನು ನಾವೀಕ್ಷಿಸುವುದನುಚಿತವೆಂದು ವಿನಯದಲಿ
ಅವನಿಪತಿ ಬೆಂಬತ್ತಿ ಗಮನಕೆ
ತವಕಿಸುವ ಶಿಶುಪಾಲಕನ ಹಿಡಿ
ದವುಚಿದನು ಮಧುರೋಕ್ತಿಯಲಿ ನುಡಿಸಿದನು ಬೋಳೈಸಿ ॥44॥
೦೪೫ ಅರಿಯರೇ ಮುನಿ ...{Loading}...
ಅರಿಯರೇ ಮುನಿ ಮುಖ್ಯರೀತನ
ನುರುವ ದೈವವಿದೆಂದು ನೀ ಕ
ಟ್ಟಿರಿತಗಾರನೆ ರಾಯರಿದೆಲಾ ಸಕಲ ಗುಣಯುತರು
ಕರುಬತನದಲಿ ನೀನಕಟ ತೆರ
ನರಿಯದೆಂಬರೆ ಬಾರೆನುತ ಮುಂ
ಜೆರಗ ಹಿಡಿದೆಳೆದವನ ತಂದನು ಭೂಪ ಜನ ಸಹಿತ ॥45॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಇವನು ಶ್ರೇಷ್ಠ ದೈವವೆಂದು ಋಷಿ ಮುಖ್ಯರೆಲ್ಲ ತಿಳಿದಿದ್ದಾರಲ್ಲವೇ ? ನೀನು ಮಹಾ ಶೂರನೇ ? ಸಕಲ ಗುಣಯುತರಾದ ರಾಜರುಗಳಿದ್ದಾರಲ್ಲ. ಈಷ್ರ್ಯೆಯಿಂದ ನಿಜಸ್ಥಿತಿಯನ್ನು ಅರಿಯದೆ ಹೀಗೆ ಹೇಳುವುದೆ ? ಬಾ ಎನ್ನುತ್ತಾ ಶಿಶುಪಾಲನನ್ನು ಮತ್ತು ಅವನೊಡನೆ ಹೊರಟಿದ್ದ ರಾಜರುಗಳನ್ನು ಹಿಂದಕ್ಕೆ ಕರೆತಂದ.
ಪದಾರ್ಥ (ಕ.ಗ.ಪ)
ಪಾಠಾನ್ತರ (ಕ.ಗ.ಪ)
ಕುರುಬತನದಲಿ –> ಕರುಬತನದಲಿ
ಸಭಾಪರ್ವ, ಮೈ.ವಿ.ವಿ.
ಶ್ರೀ ಸಿ.ಬಸಪ್ಪ
ಮೂಲ ...{Loading}...
ಅರಿಯರೇ ಮುನಿ ಮುಖ್ಯರೀತನ
ನುರುವ ದೈವವಿದೆಂದು ನೀ ಕ
ಟ್ಟಿರಿತಗಾರನೆ ರಾಯರಿದೆಲಾ ಸಕಲ ಗುಣಯುತರು
ಕರುಬತನದಲಿ ನೀನಕಟ ತೆರ
ನರಿಯದೆಂಬರೆ ಬಾರೆನುತ ಮುಂ
ಜೆರಗ ಹಿಡಿದೆಳೆದವನ ತಂದನು ಭೂಪ ಜನ ಸಹಿತ ॥45॥
೦೪೬ ಎಲೆ ಮರುಳೆ ...{Loading}...
ಎಲೆ ಮರುಳೆ ಭೂಪಾಲ ನೊರಜಿನ
ಕಳಕಳಕೆ ಕರಿ ಬೆಚ್ಚುವುದೆ ಮಂ
ಡಳಿಯ ಮರಿ ಮಿಡುಕಿದರೆ ಕಳವಳಿಸುವುದೆ ಕಲಿ ಸಿಂಹ
ಗಿಳಿಯ ಮುರುಕಕೆ ಗಿಡಗನುಗಿದ
ವ್ವಳಿಸುವುದೆ ಹರಿಗಿವನು ಗಣ್ಯನೆ
ಗಳಹನಿವನೊಡನಾವುದನುನಯವೆಂದನಾ ಭೀಷ್ಮ ॥46॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅವನು ಯುಧಿಷ್ಠಿರನಿಗೆ “ಎಲೆ ಮರುಳೆ ಭೂಪಾಲ, ನುಸಿ ಗದ್ದಲ ಮಾಡಿದರೆ ಆನೆ ಹೆದರಿಕೊಳ್ಳುತ್ತದೆಯೋ? ಬೆಕ್ಕಿನ ಮರಿ ದಿಟ್ಟತನ ತೋರಿಸಿತೆಂದು ಕಲಿ ಸಿಂಹ ಅಳುಕಿನಿಂದ ಕಳವಳಗೊಳ್ಳುವುದೇ ? ಗಿಳಿಯ ಮುರುಕಕ್ಕೆ ಗಿಡಗ ಹೆದರಿ ಹಿಂಜರಿಯುವುದೇ ? ಕೃಷ್ಣನಿಗೆ ಇವನೊಬ್ಬ ಲಕ್ಷ್ಯವೇ ? ವ್ಯರ್ಥವಾಗಿ ಹರಟುವ ಇವನೊಡನೆ ಅನುನಯವೆಂತಹುದು ?
ಪದಾರ್ಥ (ಕ.ಗ.ಪ)
ಮುರುಕ - ಅಬ್ಬರ
ಮಂಡಳಿ - ಬೆಕ್ಕು
ಮೂಲ ...{Loading}...
ಎಲೆ ಮರುಳೆ ಭೂಪಾಲ ನೊರಜಿನ
ಕಳಕಳಕೆ ಕರಿ ಬೆಚ್ಚುವುದೆ ಮಂ
ಡಳಿಯ ಮರಿ ಮಿಡುಕಿದರೆ ಕಳವಳಿಸುವುದೆ ಕಲಿ ಸಿಂಹ
ಗಿಳಿಯ ಮುರುಕಕೆ ಗಿಡಗನುಗಿದ
ವ್ವಳಿಸುವುದೆ ಹರಿಗಿವನು ಗಣ್ಯನೆ
ಗಳಹನಿವನೊಡನಾವುದನುನಯವೆಂದನಾ ಭೀಷ್ಮ ॥46॥
೦೪೭ ಗರುವ ಗರುವನನಖಿಳ ...{Loading}...
ಗರುವ ಗರುವನನಖಿಳ ವಿದ್ಯಾ
ಪರಿಣತನ ಪರಿಣತನು ವೀರನು
ಧುರದ ವೀರನನರಿವನಿಂತಿದು ಲೋಕವಿಖ್ಯಾತ
ಗರುವನ¯್ಲ ಸುನೀತ ವಿದ್ಯಾ
ಪರಿಣತನು ತಾನಲ್ಲ ಘನಸಂ
ಗರದೊಳಿವನಾಳಲ್ಲ ಕೃಷ್ಣನನರಿವನೆಂತೆಂದ ॥47॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಮಾನ್ಯನಾದವನನ್ನು ಮಾನ್ಯನು, ಅಖಿಳ ವಿದ್ಯಾಪರಿಣಿತನಾದವನನ್ನು ವಿದ್ಯಾಪರಿಣಿತನಾದವನು, ವೀರನಾದವನನ್ನು ಯುದ್ಧವೀರನು ಅರಿಯಬಲ್ಲ. ಇದು ಲೋಕ ಪ್ರಸಿದ್ಧ ವಿಷಯ. ಈ ಶಿಶುಪಾಲ ಮಾನ್ಯನಲ್ಲ. ವಿದ್ಯಾಪರಿಣತನಲ್ಲ. ಯುದ್ಧದಲ್ಲಿ ಮಹಾವೀರನೂ ಅಲ್ಲ. ಕೃಷ್ಣನನ್ನು ಇವನು ಹೇಗೆ ಅರಿತಾನು ?
ಪದಾರ್ಥ (ಕ.ಗ.ಪ)
ಮೂಲ ...{Loading}...
ಗರುವ ಗರುವನನಖಿಳ ವಿದ್ಯಾ
ಪರಿಣತನ ಪರಿಣತನು ವೀರನು
ಧುರದ ವೀರನನರಿವನಿಂತಿದು ಲೋಕವಿಖ್ಯಾತ
ಗರುವನ¯್ಲ ಸುನೀತ ವಿದ್ಯಾ
ಪರಿಣತನು ತಾನಲ್ಲ ಘನಸಂ
ಗರದೊಳಿವನಾಳಲ್ಲ ಕೃಷ್ಣನನರಿವನೆಂತೆಂದ ॥47॥
೦೪೮ ಅರಸನರಸನು ಕಾದಿ ...{Loading}...
ಅರಸನರಸನು ಕಾದಿ ಹಿಡಿದಾ
ದರಿಸಿ ಬಿಟ್ಟು ತದೀಯ ರಾಜ್ಯದೊ
ಳಿರಿಸಿದರೆ ಗುರುವಾತನಾತಂಗಿದುವೆ ಶ್ರುತಿಸಿದ್ಧ
ಅರಸುಗಳನನಿಬರನು ಸೋಲಿಸಿ
ಮರಳಿ ರಾಜ್ಯದೊಳಿರಿಸನೇ ಮುರ
ಹರನು ಗುರುವಲ್ಲಾ ಮಹೀಶರಿಗೆಂದನಾ ಭೀಷ್ಮ ॥48॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಯುದ್ಧದಲ್ಲಿ ಸೋಲಿಸಿದ ರಾಜನನ್ನು ಅವನ ರಾಜ್ಯದಲ್ಲಿ ಅವನನ್ನೇ ರಾಜನನ್ನಾಗಿ ಮುಂದುವರೆಸಿದರೆ, ಗೆದ್ದ ರಾಜ ಅವನಿಗೆ ಗುರುವಾದಂತೆ ಇದು ವೇದೋಕ್ತವಾದ ವಿಷಯ. ಶ್ರೀ ಕೃಷ್ಣನು ಅಷ್ಟೊಂದು ರಾಜರನ್ನು ಸೋಲಿಸಿ ಮತ್ತೆ ಅವರನ್ನು ಅವರವರ ರಾಜ್ಯದಲ್ಲೇ ನೆಲೆಗೊಳಿಸಿ ಆ ರಾಜರುಗಳಿಗೆಲ್ಲ ಗುರುವೆನಿಸಿಕೊಂಡನಲ್ಲವೆ ?
ಪದಾರ್ಥ (ಕ.ಗ.ಪ)
ಮೂಲ ...{Loading}...
ಅರಸನರಸನು ಕಾದಿ ಹಿಡಿದಾ
ದರಿಸಿ ಬಿಟ್ಟು ತದೀಯ ರಾಜ್ಯದೊ
ಳಿರಿಸಿದರೆ ಗುರುವಾತನಾತಂಗಿದುವೆ ಶ್ರುತಿಸಿದ್ಧ
ಅರಸುಗಳನನಿಬರನು ಸೋಲಿಸಿ
ಮರಳಿ ರಾಜ್ಯದೊಳಿರಿಸನೇ ಮುರ
ಹರನು ಗುರುವಲ್ಲಾ ಮಹೀಶರಿಗೆಂದನಾ ಭೀಷ್ಮ ॥48॥
೦೪೯ ಮಗಧಸುತನೀ ಸಾಲ್ವ ...{Loading}...
ಮಗಧಸುತನೀ ಸಾಲ್ವ ಹಂಸನ
ಮಗ ನಿಶುಂಭನ ಸೂನು ನರಕನ
ಮಗನು ಪೌಂಡ್ರಿಕ ದಂತವಕ್ರನ ತನುಜರಿವರೆಲ್ಲ
ಹಗೆಯ ಮಾಡಿ ಮುರಾಂತಕನ ಕಾ
ಳಗದೊಳೆಲ್ಲರನಿಕ್ಕಿ ಪಟ್ಟವ
ಬಿಗಿಸಿಕೊಂಡವರಲ್ಲವೇ ಹೇಳೆಂದನಾ ಭೀಷ್ಮ ॥49॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಜರಾಸಂಧನ ಮಗ, ಈ ಸಾಲ್ವ, ಹಂಸನ ಮಗ, ನಿಶುಂಭನ ಮಗ, ನರಕನ ಮಗ, ಪೌಂಡ್ರಕ ದಂತವಕ್ರರ ಮಕ್ಕಳು ಕೃಷ್ಣನ ಮೇಲೆ ಶತ್ರುತ್ವ ಸಾಧಿಸಿದವರು. ಕೃಷ್ಣ ಅವರೆಲ್ಲರನ್ನೂ ಸೋಲಿಸಿದರೂ ಅನಂತರ ಅವರನ್ನು ಅವರವರ ರಾಜ್ಯದಲ್ಲೇ ರಾಜರನ್ನಾಗಿ ಉಳಿಸಲಿಲ್ಲವೆ ? ಹೇಳು ಎಂದ.
ಪದಾರ್ಥ (ಕ.ಗ.ಪ)
ಮೂಲ ...{Loading}...
ಮಗಧಸುತನೀ ಸಾಲ್ವ ಹಂಸನ
ಮಗ ನಿಶುಂಭನ ಸೂನು ನರಕನ
ಮಗನು ಪೌಂಡ್ರಿಕ ದಂತವಕ್ರನ ತನುಜರಿವರೆಲ್ಲ
ಹಗೆಯ ಮಾಡಿ ಮುರಾಂತಕನ ಕಾ
ಳಗದೊಳೆಲ್ಲರನಿಕ್ಕಿ ಪಟ್ಟವ
ಬಿಗಿಸಿಕೊಂಡವರಲ್ಲವೇ ಹೇಳೆಂದನಾ ಭೀಷ್ಮ ॥49॥
೦೫೦ ಜ್ಞಾನವೃದ್ಧರು ವಿಪ್ರರಲಿ ...{Loading}...
ಜ್ಞಾನವೃದ್ಧರು ವಿಪ್ರರಲಿ ಸ
ನ್ಮಾನನೀಯರು ಶೌರ್ಯವೃದ್ಧರು
ಮಾನವೇಂದ್ರರೊಳಧಿಕವಿದು ಪೌರಾಣ ಸಿದ್ಧವಲೆ
ಜ್ಞಾನವೃದ್ಧನು ಕೃಷ್ಣನಾಹವ
ದೀನನೇ ಘನ ಶೌರ್ಯನೆಂಬುದ
ತಾನರಿಯನೇ ಚೈದ್ಯ ಭೂಪತಿಯೆಂದನಾ ಭೀಷ್ಮ ॥50॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ವಿಪ್ರರಲ್ಲಿ ಜ್ಞಾನವೃದ್ಧರು ಮನ್ನಣೆಗೆ ಪಾತ್ರರು. ರಾಜರಲ್ಲಿ ಶೌರ್ಯವೃದ್ಧರು ಅಧಿಕರೆನಿಸಿಕೊಳ್ಳುತ್ತಾರೆ. ಇದು ಪುರಾಣ ಪ್ರಸಿದ್ಧವಾದುದು. ಜ್ಞಾನವೃದ್ಧನಾದ ಶ್ರೀಕೃಷ್ಣ ಯುದ್ಧಕ್ಕೆ ಹೆದರದ, ಘನಶೌರ್ಯವಂತ ಎಂಬುದು ಚೈದ್ಯನಿಗೆ ತಿಳಿಯದೇ ?
ಪದಾರ್ಥ (ಕ.ಗ.ಪ)
ಮೂಲ ...{Loading}...
ಜ್ಞಾನವೃದ್ಧರು ವಿಪ್ರರಲಿ ಸ
ನ್ಮಾನನೀಯರು ಶೌರ್ಯವೃದ್ಧರು
ಮಾನವೇಂದ್ರರೊಳಧಿಕವಿದು ಪೌರಾಣ ಸಿದ್ಧವಲೆ
ಜ್ಞಾನವೃದ್ಧನು ಕೃಷ್ಣನಾಹವ
ದೀನನೇ ಘನ ಶೌರ್ಯನೆಂಬುದ
ತಾನರಿಯನೇ ಚೈದ್ಯ ಭೂಪತಿಯೆಂದನಾ ಭೀಷ್ಮ ॥50॥
೦೫೧ ಏನ ಹೇಳ್ವುದು ...{Loading}...
ಏನ ಹೇಳ್ವುದು ಧರ್ಮತತ್ವ ನಿ
ಧಾನದಲಿ ಮುನಿ ಮುಖ್ಯರಿವರ
ಜ್ಞಾನಿಗಳು ಶಿಶುಪಾಲ ತತ್ವಜ್ಞಾನ ಪಂಡಿತನು
ಆ ನಿಶಾಟರು ಮೆಚ್ಚರಗ್ಗದ
ಭಾನುರಶ್ಮಿಯನಂಧಕಾರ
ಜ್ಞಾನನಿಷ್ಠರು ನಿಪುಣರೈಸಲೆಯೆಂದನಾ ಭೀಷ್ಮ ॥51॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಈ ವಿಚಿತ್ರಕ್ಕೆ ಏನು ಹೇಳೋಣ ? ಧರ್ಮತತ್ವವನ್ನು ನಿರ್ಣಯಿಸಿ ಹೇಳುವಲ್ಲಿ ಮುನಿ ಮುಖ್ಯರೇ, ಇಲ್ಲಿ ಅಜ್ಞಾನಿಗಳು ! ಶಿಶುಪಾಲ ತತ್ವಜ್ಞಾನ ಪಂಡಿತ ! ರಾತ್ರಿಯಲ್ಲಿ ಮಾತ್ರ ಸಂಚರಿಸುವ ಪಿಶಾಚಿಗಳು ಸೂರ್ಯರಶ್ಮಿಯನ್ನು ಮೆಚ್ಚುವುದಿಲ್ಲ. ಜ್ಞಾನಾಂಧಕಾರದಲ್ಲಿ ಮುಳುಗಿರುವವರೇ ಇಲ್ಲಿ ನಿಪುಣರಲ್ಲವೇ?
ಪದಾರ್ಥ (ಕ.ಗ.ಪ)
ಮೂಲ ...{Loading}...
ಏನ ಹೇಳ್ವುದು ಧರ್ಮತತ್ವ ನಿ
ಧಾನದಲಿ ಮುನಿ ಮುಖ್ಯರಿವರ
ಜ್ಞಾನಿಗಳು ಶಿಶುಪಾಲ ತತ್ವಜ್ಞಾನ ಪಂಡಿತನು
ಆ ನಿಶಾಟರು ಮೆಚ್ಚರಗ್ಗದ
ಭಾನುರಶ್ಮಿಯನಂಧಕಾರ
ಜ್ಞಾನನಿಷ್ಠರು ನಿಪುಣರೈಸಲೆಯೆಂದನಾ ಭೀಷ್ಮ ॥51॥
೦೫೩ ಕರುಣಿಸೈ ಗಾಙ್ಗೇಯ ...{Loading}...
ಕರುಣಿಸೈ ಗಾಂಗೇಯ ಕೃಷ್ಣನ
ಚರಿತವನು ಶಿಶುಪಾಲ ಭೂಪನ
ಕರಣವೃತ್ತಿಯ ಕದಡು ತಿಳಿಯಲಿ ದೈವ ದೂರನಲೆ
ದುರುಳನಿವನ ದುರುಕ್ತಿಗಳ ಕೇ
ಳ್ದರಿಗೆ ಪ್ರಾಯಶ್ಚಿತ್ತವಿದು ವಿ
ಸ್ತರಿಸ ಬೇಹುದು ಸಕಲ ಜನಮತವೆಂದನಾ ಭೂಪ ॥53॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಆಗ ಯುಧಿಷ್ಠಿರ ಭೀಷ್ಮನನ್ನು ಬೇಡಿದ. “ಗಾಂಗೇಯ ಶ್ರೀಕೃಷ್ಣ ಚರಿತೆಯನ್ನು ವಿವರಿಸಿ ಕರುಣಿಸು. ಶಿಶುಪಾಲನ ಕಲುಷಿತವಾಗಿರುವ ಮನವಚನಕಾಯಗಳು ತಿಳಿಯಾಗಲಿ. ಇವನು ದೈವದೂರನಾದವನಲ್ಲವೆ, ಇವನ ದುರುಕ್ತಿಗಳನ್ನು ಕೇಳಿದವರಿಗೆ ಇದು ಪ್ರಾಯಶ್ಚಿತ್ತವಾಗುತ್ತದೆ. ವಿಸ್ತಾರವಾಗಿ ಹೇಳು, ಇದು ಸಕಲಜನರ ಅಪೇಕ್ಷೆ ಎಂದ.
ಪದಾರ್ಥ (ಕ.ಗ.ಪ)
ಮೂಲ ...{Loading}...
ಕರುಣಿಸೈ ಗಾಂಗೇಯ ಕೃಷ್ಣನ
ಚರಿತವನು ಶಿಶುಪಾಲ ಭೂಪನ
ಕರಣವೃತ್ತಿಯ ಕದಡು ತಿಳಿಯಲಿ ದೈವ ದೂರನಲೆ
ದುರುಳನಿವನ ದುರುಕ್ತಿಗಳ ಕೇ
ಳ್ದರಿಗೆ ಪ್ರಾಯಶ್ಚಿತ್ತವಿದು ವಿ
ಸ್ತರಿಸ ಬೇಹುದು ಸಕಲ ಜನಮತವೆಂದನಾ ಭೂಪ ॥53॥
೦೫೪ ಕೇಳು ಧರ್ಮಜ ...{Loading}...
ಕೇಳು ಧರ್ಮಜ ಸಕಲ ಋಷಿಗಳು
ಕೇಳಿರೈ ನೆರೆದವನಿಪಾಲರು
ಕೇಳಿರೈ ನೆರೆದಖಿಳ ಜನ ಚಿತ್ತಾವಧಾನದಲಿ
ಶ್ರೀಲತಾಂಗಿಯ ವಲ್ಲಭನ ಸ್ತುತಿ
ಮೌಳಿಮೌಕ್ತಿಕಪಾದಪೀಠನ
ಲೀಲೆಯನು ಚಿತ್ತವಿಸಿ ಗದುಗಿನ ವೀರನರಯಣನ ॥54॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಧರ್ಮಜ ಕೇಳು, ಸಕಲ ಋಷಿಗಳೇ ನೀವು ಕೇಳಿರಿ. ಇಲ್ಲಿ
ಸೇರಿರುವ ಎಲ್ಲ ರಾಜರುಗಳೇ ಕೇಳಿರಿ. ಇಲ್ಲಿರುವ ಸಮಸ್ತ ಜನರೂ ಚಿತ್ತವಿಟ್ಟು ಕೇಳಿ. ಲಕ್ಷ್ಮೀರಮಣನೂ ಶ್ರುತಿಗಳಿಂದ ವಂದಿಸಲ್ಪಟ್ಟವನೂ ಆದ ಗದುಗಿನ ವೀರನಾರಾಯಣನ ಲೀಲೆಗಳನ್ನು ಹೇಳುವೆ ಮನಸ್ಸು ಕೊಟ್ಟು ಕೇಳಿರಿ.” ಎಂದು ಭೀಷ್ಮನು ಹೇಳಲು ಪ್ರಾರಂಭಿಸಿದ
ಪದಾರ್ಥ (ಕ.ಗ.ಪ)
ಮೂಲ ...{Loading}...
ಕೇಳು ಧರ್ಮಜ ಸಕಲ ಋಷಿಗಳು
ಕೇಳಿರೈ ನೆರೆದವನಿಪಾಲರು
ಕೇಳಿರೈ ನೆರೆದಖಿಳ ಜನ ಚಿತ್ತಾವಧಾನದಲಿ
ಶ್ರೀಲತಾಂಗಿಯ ವಲ್ಲಭನ ಸ್ತುತಿ
ಮೌಳಿಮೌಕ್ತಿಕಪಾದಪೀಠನ
ಲೀಲೆಯನು ಚಿತ್ತವಿಸಿ ಗದುಗಿನ ವೀರನರಯಣನ ॥54॥