೦೦೦ ಸೂಚನೆ ನಡೆದು ...{Loading}...
ಸೂಚನೆ : ನಡೆದು ವಿವಿಧ ದ್ವೀಪ ಪತಿಗಳ
ಜಡಿದು ಕಪ್ಪವ ಕೊಂಡು ತೆಂಕಣ
ಕಡಲ ವಳಯದ ನೃಪರ ಗೆಲಿದನು ಸಹದೇವ
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
ಸೂ : ಹೋಗಿ ನಾನಾ ದ್ವೀಪಗಳ ಒಡೆಯರನ್ನೆಲ್ಲ ಬಡಿದು ಹಾಕಿ ಕಪ್ಪವನ್ನು ಸ್ವೀಕರಿಸಿ ದಕ್ಷಿಣದ ಸಾಗರದ ತೀರದವರೆಗಿನ ರಾಜರನ್ನೆಲ್ಲ ಗೆದ್ದು ಬಂದ ವೀರ ಸಹದೇವ.
ಪದಾರ್ಥ (ಕ.ಗ.ಪ)
ವೀರ ಸಹದೇವ-ಶೂರನಾದ ಸಹದೇವನು, ನಡೆದು-ಸೇನಾ ಸಮೇತವಾಗಿ ಹೊರಟು, ವಿವಿಧ ದ್ವೀಪ ಪತಿಗಳ ಜಡಿದು-ನಾನಾ ದ್ವೀಪಗಳ ಒಡೆಯರನ್ನು ಬಡಿದು, ಕಪ್ಪವ ಕೊಂಡು-ಕಪ್ಪವನ್ನು ಸ್ವೀಕರಿಸಿ, ತೆಂಕಣ ಕಡಲ ವಳಯದ-ದಕ್ಷಿಣ ಸಮುದ್ರ ತೀರದವರೆಗಿನ,
ನೃಪರ ಗೆಲಿದನು-ರಾಜರುಗಳನ್ನೆಲ್ಲ ಗೆದ್ದು ಬಂದನು
ಮೂಲ ...{Loading}...
ಸೂಚನೆ : ನಡೆದು ವಿವಿಧ ದ್ವೀಪ ಪತಿಗಳ
ಜಡಿದು ಕಪ್ಪವ ಕೊಂಡು ತೆಂಕಣ
ಕಡಲ ವಳಯದ ನೃಪರ ಗೆಲಿದನು ಸಹದೇವ
೦೦೧ ಕೇಳು ಜನಮೇಜಯ ...{Loading}...
ಕೇಳು ಜನಮೇಜಯ ಧರಿತ್ರೀ
ಪಾಲ ಸಹದೇವನ ಸಗಾಡಿಕೆ
ಯಾಳುತನವಿವರಾರ ಹವಣಲ್ಲೆಂಬ ತೆರನಾಯ್ತು
ಆಳು ನಡೆದುದು ತೆಂಕಣವನೀ
ಪಾಲರೀತನ ಬಿರಿಸಿಗೀತನ
ದಾಳಿಗೀತನ ದೆಸೆಗೆ ದೆಸೆಗೆಟ್ಟುದು ದಿಗಂತದಲಿ ॥1॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಸಹದೇವನ ತೀವ್ರತೆ, ಅವನ ಪರಾಕ್ರಮ ಉಳಿದವರ ಪ್ರಮಾಣದ್ದಲ್ಲ ಎಂಬಂತೆ ಆಯಿತಂತೆ. ಸೈನ್ಯ ಮುಂದುವರಿಯುತ್ತಿತ್ತು. ದಕ್ಷಿಣ ದಿಕ್ಕಿನಲ್ಲಿದ್ದ ರಾಜರು ಇವನ ಬಿರುಸಿಗೆ ಇವನ ದಾಳಿಗೆ ತಡೆಯಲಾರದೆ ದೆಸೆಗೆಟ್ಟರು.
ಪದಾರ್ಥ (ಕ.ಗ.ಪ)
ಕೇಳು ಜನಮೇಜಯ ಧರಿತ್ರೀ ಪಾಲ-ಜನಮೇಜಯ ರಾಜನೇ ಕೇಳು, ಎಂದು ವೈಶಂಪಾಯ ಹೇಳುತ್ತಿದ್ದಾನೆ, ಸಹದೇವನ ಸಗಾಡಿಕೆ-ಸಹದೇವನ ಶೌರ್ಯ, ಆಳುತನ-ಪರಾಕ್ರಮ, ಇವರಾರ ಹವಣಲ್ಲ-ಇವರಾರಿಗೂ ಬರಲಾರದು, ಎಂಬ ತೆರನಾಯ್ತು-ಎಂಬ ರೀತಿ ಆಯಿತು, ಆಳು ನಡೆದುದು-ಸೇನೆ ಮುಂದುವರಿದು ಹೋಯಿತು, ತೆಂಕಣವನೀಪಾಲರು-ದಕ್ಷಿಣದಲ್ಲಿದ್ದ ರಾಜರುಗಳು, ಈತನ ಬಿರಿಸಿಗೆ-ಇವನ ಬಿರುಸಿಗೆ, ಈತನ ದಾಳಿಗೆ-ಇವನ ಆಕ್ರಮಣಕ್ಕೆ, ಈತನ ದೆಸೆಗೆ-ಇವನ ವಿಷಯಕ್ಕೆ, ದಿಗಂತದಲಿ-ಆ ದಿಕ್ಕಿನ ಅಂತ್ಯದವರೆಗೂ,
ದೆಸೆಗೆಟ್ಟುದು-ದಿಕ್ಕುಗೆಟ್ಟರು
ಮೂಲ ...{Loading}...
ಕೇಳು ಜನಮೇಜಯ ಧರಿತ್ರೀ
ಪಾಲ ಸಹದೇವನ ಸಗಾಡಿಕೆ
ಯಾಳುತನವಿವರಾರ ಹವಣಲ್ಲೆಂಬ ತೆರನಾಯ್ತು
ಆಳು ನಡೆದುದು ತೆಂಕಣವನೀ
ಪಾಲರೀತನ ಬಿರಿಸಿಗೀತನ
ದಾಳಿಗೀತನ ದೆಸೆಗೆ ದೆಸೆಗೆಟ್ಟುದು ದಿಗಂತದಲಿ ॥1॥
೦೦೨ ಶೂರಸೇನನ ಸದೆದು ...{Loading}...
ಶೂರಸೇನನ ಸದೆದು ನೆರೆ ಭಂ
ಡಾರವೆಲ್ಲವ ಕೊಂಡು ತೆಂಕಣ
ವೀರಮತ್ಸ್ಯನ ಗೆಲಿದು ಸರ್ವಸ್ವಾಪಹಾರದಲಿ
ಭೂರಿ ಬಲನಹ ದಂತವಕ್ತ್ರನ
ವಾರಣಾಶ್ವ ರಥಂಗಳನು ಕೊಂ
ಡಾರುಭಟೆಯಲಿ ಮುಂದೆ ನಡೆದನು ತೆಂಕಮುಖವಾಗಿ ॥2॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಶೂರಸೇನನನ್ನು ಬಡಿದು ಹಾಕಿ ಅವನ ಪೂರ್ಣ ಭಂಡಾರವನ್ನೆಲ್ಲ ತೆಗೆದುಕೊಂಡ. ದಕ್ಷಿಣದ ವೀರ ಮತ್ಸ್ಯನನ್ನು ಗೆದ್ದು ಅವನ ಸರ್ವಸ್ವವನ್ನೂ ಅಪಹರಿಸಿದ. ಮಹಾಬಲಶಾಲಿಯಾಗಿದ್ದ ದಂತವಕ್ತ್ರನ ಆನೆ ಕುದುರೆ ರಥಗಳನ್ನೆಲ್ಲ ತೆಗೆದುಕೊಂಡು ಆರ್ಭಟಿಸುತ್ತಾ ದಕ್ಷಿಣಾಭಿಮುಖವಾಗಿ ಹೊರಟ.
ಪದಾರ್ಥ (ಕ.ಗ.ಪ)
ವಾರಣ-ಆನೆ
ಶೂರ ಸೇನನ ಸದೆದು-ಶೂರಸೇನನ್ನು ಬಡಿದು, ನೆರೆ ಭಂಡಾರವೆಲ್ಲವ ಕೊಂಡು-ಭಂಡಾರವೆಲ್ಲವನ್ನೂ ಕಿತ್ತುಕೊಂಡು ತೆಂಕಣ ವೀರಮತ್ಸ್ಯನ-ತೆಂಕಣ ದೇಶದ ವೀರ ಮತ್ಸ್ಯರಾಜನನ್ನು, ಗೆಲಿದು ಸರ್ವಸ್ವಾಪಹಾರದಲಿ-ಸರ್ವಸ್ವವನ್ನೂ ಅಪಹರಿಸುವಂತೆ ಗೆದ್ದು, ಭೂರಿ ಬಲನಹ-ಮಹಾ ಬಲಶಾಲಿಯಾಗಿದ್ದ, ದಂತವಕ್ತ್ರನ ವಾರಣಾಶ್ವ ರಥಂಗಳನು ಕೊಂಡು-ಆನೆ ಕುದುರೆ ರಥಗಳನ್ನು ಪಡೆದು
ಆರುಭಟೆಯಲಿ-ಆರ್ಭಟ ಮಾಡುತ್ತಾ, ತೆಂಕಮುಖವಾಗಿ-ದಕ್ಷಿಣಾಭಿಮುಖವಾಗಿ ಮುಂದೆ ನಡೆದನು
ಮೂಲ ...{Loading}...
ಶೂರಸೇನನ ಸದೆದು ನೆರೆ ಭಂ
ಡಾರವೆಲ್ಲವ ಕೊಂಡು ತೆಂಕಣ
ವೀರಮತ್ಸ್ಯನ ಗೆಲಿದು ಸರ್ವಸ್ವಾಪಹಾರದಲಿ
ಭೂರಿ ಬಲನಹ ದಂತವಕ್ತ್ರನ
ವಾರಣಾಶ್ವ ರಥಂಗಳನು ಕೊಂ
ಡಾರುಭಟೆಯಲಿ ಮುಂದೆ ನಡೆದನು ತೆಂಕಮುಖವಾಗಿ ॥2॥
೦೦೩ ಖಳ ನಿಶಾಚರ ...{Loading}...
ಖಳ ನಿಶಾಚರ ಕೋಟಿಗಳನರೆ
ಗಳಿಗೆಯೊಳಗಾಕ್ರಮಿಸಿದನು ಮಂ
ಡಳಿಕ ಮನ್ನೆಯರಾಂಪರೇ ಚತುರಂಗ ಪದಹತಿಗೆ
ಹೊಳೆತಡಿಯ ಗಿರಿ ದುರ್ಗ ವಿಪಿನ
ಸ್ಥಳದ ಧರಣಿಪರಿದಿರುವಂದ
ಗ್ಗಳೆಯ ಗಜ ರಥ ಹಯ ಸಹಿತ ತೆತ್ತರು ಸುವಸ್ತುಗಳ ॥3॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ದುಷ್ಟರಾದ ಕೋಟಿ ಮಂದಿ ರಾಕ್ಷಸರನ್ನು ಅರ್ಧಗಳಿಗೆಯಲ್ಲಿ ಆಕ್ರಮಿಸಿದ. ಇವನ ಚತುರಂಗಸೇನೆಯ ಕಾಲತುಳಿತಕ್ಕೆ ಮನ್ನೆಯರು, ಮಾಂಡಲಿಕರು ನಿಲ್ಲಬಲ್ಲರೇ ? ನದೀತೀರ ಬೆಟ್ಟ ದುರ್ಗ ಕಾಡು ಹೀಗೆ ಎಲ್ಲೆಲ್ಲಿದ್ದ ರಾಜರುಗಳೂ ತಾವಾಗಿ ಇವನನ್ನು ಎದುರುಗೊಂಡು ಆನೆ ಕುದುರೆ ರಥಗಳೊಡನೆ ಸಮಸ್ತ ವಸ್ತುಗಳನ್ನು ಒಪ್ಪಿಸಿದರು.
ಪದಾರ್ಥ (ಕ.ಗ.ಪ)
ಖಳ ನಿಶಾಚರ ಕೋಟಿಗಳನು-ದುಷ್ಟರಾದ ಕೋಟಿ ರಾಕ್ಷಸರನ್ನು, ಅರೆಗಳಿಗೆಯೊಳಗಾಕ್ರಮಿಸಿದನು-ಅರ್ಧಘಳಿಗೆಯಲ್ಲೇ ಆಕ್ರಮಣ ಮಾಡಿದನು, ಮಂಡಳಿಕ ಮನ್ನೆಯರು-ಮಂಡಲಾಧಿಪತಿಗಳು, ಚತುರಂಗ ಪದಹತಿಗೆ-ಚತುರಂಗ ಸೇನೆಯ ಪಾದಗಳ ತುಳಿತವನ್ನು
ಆಂಪರೇ-ತಡೆದುಕೊಳ್ಳಬಲ್ಲರೇ
ಹೊಳೆತಡಿಯ-ನದೀತೀರದ, ಗಿರಿ ದುರ್ಗ ವಿಪಿನ ಸ್ಥಳದ-ಬೆಟ್ಟ, ದುರ್ಗ ಕಾಡಿನ, ಸ್ಥಳದ-ಪ್ರದೇಶದ, ಧರಣಿಪರು-ರಾಜರುಗಳು ತಾವಾಗಿಯೇ, ಇದಿರುವಂದು-ಸಹದೇವನನ್ನು ಎದುರುಗೊಂಡು, ಅಗ್ಗಳೆಯ-ಶ್ರೇಷ್ಠವಾದಂತಹ, ಗಜ ರಥ ಹಯ ಸಹಿತ-ಆನೆ ರಥ, ಕುದುರೆಗಳ ಸಮೇತ, ಸುಮಸ್ತುಗಳ ತೆತ್ತರು-ಉತ್ತಮವಾದ ವಸ್ತುಗಳನ್ನು ಕೊಟ್ಟರು
ಮೂಲ ...{Loading}...
ಖಳ ನಿಶಾಚರ ಕೋಟಿಗಳನರೆ
ಗಳಿಗೆಯೊಳಗಾಕ್ರಮಿಸಿದನು ಮಂ
ಡಳಿಕ ಮನ್ನೆಯರಾಂಪರೇ ಚತುರಂಗ ಪದಹತಿಗೆ
ಹೊಳೆತಡಿಯ ಗಿರಿ ದುರ್ಗ ವಿಪಿನ
ಸ್ಥಳದ ಧರಣಿಪರಿದಿರುವಂದ
ಗ್ಗಳೆಯ ಗಜ ರಥ ಹಯ ಸಹಿತ ತೆತ್ತರು ಸುವಸ್ತುಗಳ ॥3॥
೦೦೪ ಬನ್ದು ಕುನ್ತೀಬೋಜ ...{Loading}...
ಬಂದು ಕುಂತೀಬೋಜ ಮೊಮ್ಮನ
ಮಂದಿರದ ಸುಕ್ಷೇಮ ಕುಶಲವ
ನಂದು ಕೇಳಿದು ಕೊಟ್ಟನತಿಶಯ ಸಾರವಸ್ತುಗಳ
ಮುಂದೆ ಚರ್ಮಣ್ವತಿಯ ಜಂಭಕ
ನಂದನನನಪ್ಪಳಿಸಿ ಗಜ ಹಯ
ವೃಂದವನು ಕೊಂಡೆತ್ತಿ ಬಿಟ್ಟನವಂತಿ ದೇಶದಲಿ ॥4॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕುಂತಿಭೋಜನು ತಾನಾಗಿ ಮೊಮ್ಮಗನಾದ ಸಹದೇವನ ಬಳಿಗೆ ಬಂದು ಯೋಗಕ್ಷೇಮವನ್ನು ವಿಚಾರಿಸಿ ಅತಿಶಯವಾದ ಸಾರವಸ್ತುಗಳನ್ನು ಕೊಟ್ಟ. ಮುಂದೆ ಚರ್ಮಣ್ವತಿಯ ಜಂಭಕನ ಮಗನನ್ನು ಅಪ್ಪಳಿಸಿ ಅವನಿಂದ ಆನೆ ಕುದುರೆಗಳ ಸಮೂಹವನ್ನು ಸಂಗ್ರಹಿಸಿ ಸೇನೆಯನ್ನು ಆವಂತಿದೇಶಕ್ಕೆ ನಡೆಯಿಸಿದ.
ಪದಾರ್ಥ (ಕ.ಗ.ಪ)
ಬಂದು ಕುಂತೀಬೋಜ-ಅಜ್ಜನಾದ ಕುಂತೀ ಭೋಜನು ಮೊಮ್ಮನ ಮಂದಿರದ ಸುಕ್ಷೇಮ ಕುಶಲವನು ಅಂದು ಕೇಳಿದು-ಮೊಮ್ಮಗನಾದ ಸಹದೇವನ ಮತ್ತು ಮನೆಯವರೆಲ್ಲರ ಕ್ಷೇಮ ಸಮಾಚಾರವನ್ನೆಲ್ಲ ಕೇಳಿ ಅತಿಶಯ ಸಾರವಸ್ತುಗಳ-ಅತ್ಯಂತ ಶ್ರೇಷ್ಠವಾದ ವಸ್ತುಗಳನ್ನು ಕೊಟ್ಟನು ಮುಂದೆ ಚರ್ಮಣ್ವತಿಯ ಜಂಭಕನಂದನನನು-ಜಂಭಕನೆಂಬವನ ಮಗನನ್ನು ಅಪ್ಪಳಿಸಿ-ಬಡಿದು
ಗಜ ಹಯವೃಂದವನು ಕೊಂಡು-ಆನೆ ಕುದುರೆಗಳ ಸಮೂಹವನ್ನೇ ತೆಗೆದುಕೊಂಡು ಎತ್ತಿ ಬಿಟ್ಟನವಂತಿ ದೇಶದಲಿ-ದಂಡೆತ್ತಿ ಮುಂದುವರಿದು ಆವತಿ ದೇಶದಲ್ಲಿ ನೀಡುಬಿಟ್ಟನು
ಮೂಲ ...{Loading}...
ಬಂದು ಕುಂತೀಬೋಜ ಮೊಮ್ಮನ
ಮಂದಿರದ ಸುಕ್ಷೇಮ ಕುಶಲವ
ನಂದು ಕೇಳಿದು ಕೊಟ್ಟನತಿಶಯ ಸಾರವಸ್ತುಗಳ
ಮುಂದೆ ಚರ್ಮಣ್ವತಿಯ ಜಂಭಕ
ನಂದನನನಪ್ಪಳಿಸಿ ಗಜ ಹಯ
ವೃಂದವನು ಕೊಂಡೆತ್ತಿ ಬಿಟ್ಟನವಂತಿ ದೇಶದಲಿ ॥4॥
೦೦೫ ತರುಬಿದರೆ ವಿನ್ದಾನುವಿನ್ದರ ...{Loading}...
ತರುಬಿದರೆ ವಿಂದಾನುವಿಂದರ
ಮುರಿದು ಕಪ್ಪವ ಕೊಂಡು ಭೀಷ್ಮಕ
ನರಪತಿಯ ಗೆಲಿದಲ್ಲಿ ಮನ್ನಿಸಿಕೊಂಡನುಚಿತದಲಿ
ಬರಬರಲು ಕುಂತಲ ನೃಪನನಾ
ಕರಿಸಿ ಕಪ್ಪವ ಕೊಂಡು ಖಳ ತಿ
ತ್ತಿರಿ ಕಿಳೀಂದ್ರಕರೆಂಬ ಬೇಡರ ಧುರದೊಳೋಡಿಸಿದ ॥5॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ವಿಂದಾನುವಿಂದರು ಅಡ್ಡಿಪಡಿಸಲು ಅವರನ್ನು ಸೋಲಿಸಿ ಕಪ್ಪವನ್ನು ಪಡೆದು ಭೀಷ್ಮಕರಾಜನನ್ನು ಗೆದ್ದು ಅವನಿಂದ ಸನ್ಮಾನಿತನಾಗಿ, ಮುಂದೆ ಕುಂತಲರಾಜನನ್ನು ವಶಪಡಿಸಿಕೊಂಡು ಕಪ್ಪ ಪಡೆದು, ದುಷ್ಟರಾದ ತಿತ್ತಿರಿ ಮತ್ತು ಕಿಳೀಂದ್ರಕರನ್ನು ಯುದ್ಧದಲ್ಲಿ ಸೋಲಿಸಿ
ಓಡಿಸಿಬಿಟ್ಟ.
ಪದಾರ್ಥ (ಕ.ಗ.ಪ)
ವಿಂದಾನುವಿಂದರ ತರುಬಿದರೆ-ವಿಂದ ಅನುವಿಂದ ಎಂಬುವರು ಎದುರು ಬೀಳಲು ಅವರನ್ನು, ಮುರಿದು-ಸೋಲಿಸಿ ಅವರಿಂದ
ಕಪ್ಪವ ಕೊಂಡು-ಕಪ್ಪವನ್ನು ಸ್ವೀಕರಿಸಿ, ಭೀಷ್ಮಕ ನರಪತಿಯ ಗೆಲಿದು-ಭೀಷ್ಮಕ ರಾಜನನ್ನು ಗೆದ್ದು, ಅಲ್ಲಿ-ಅವನ ಬಳಿ, ಮನ್ನಿಸಿಕೊಂಡನುಚಿತದಲಿ-ಯೋಗ್ಯ ರೀತಿಯಲ್ಲಿ ಅವನಿಂದ ಉಪಚರಿಸಲ್ಪಟ್ಟ, ಬರಬರಲು-ಮುಂದೆ ಬರುಬರುತ್ತಾ, ಕುಂತಲ ನೃಪನನು-ಕುಂತಲ ರಾಜನನ್ನು, ಆಕರಿಸಿ-ವಶಪಡಿಸಿಕೊಂಡು, ಅವನಿಂದ ಕಪ್ಪವ ಕೊಂಡು-ಕಪ್ಪವನ್ನು ಸ್ವೀಕರಿಸಿ, ಖಳ ತಿತ್ತಿರಿ ಕಿಳೀಂದ್ರಕರೆಂಬ ಬೇಡರ-ದುಷ್ಟರಾದ ತಿತ್ತಿರಿ ಹಾಗೂ ತಿಳೀಂದ್ರಕ ಎಂಬ ಬೇಡರನ್ನು, ಧುರದೊಳೋಡಿಸಿದ-ಯುದ್ಧದಲ್ಲಿ ಸೋಲಿಸಿ ಓಡಿಸಿಬಿಟ್ಟ
ಟಿಪ್ಪನೀ (ಕ.ಗ.ಪ)
ಭೀಷ್ಮಕ - ಭೀಷ್ಮಕನು ವಿದರ್ಭದ ಅಧಿಪತಿ. ಭೋಜವಂಶದ ಅರಸ. ಹಿರಣ್ಯರೋಮ ಎಂದೂ ಇವನನ್ನು ಕರೆಯುತ್ತಾರೆ. ಮಹಾವೀರನಾಗಿದ್ದ ಈತ ಇಂದ್ರಸಖನಾಗಿ ದೇವತೆಗಳಿಗೆ ಪ್ರಿಯನಾಗಿದ್ದ. ‘ವ-ಜಯತ್ ಸ ಪಾಂಡ್ಯಕ್ರಥ ಕೃಶಿಕಾನ್’ ಎಂದು ವ್ಯಾಸರ ಹೇಳಿ ಈತ ಪಾಂಡ್ಯರನ್ನು ಕ್ರಥರನ್ನು ಕೈಶಿಕರನ್ನು ಗೆದ್ದು ಪ್ರತಿಷ್ಠೆಯನ್ನು ಹೆಚ್ಚಿಸಿಕೊಂಡನೆನ್ನುತ್ತಾರೆ. ಇವನ ತಮ್ಮ ಆಕೃತಿ.
‘ಭ್ರಾತಾಯಸ್ಯಾಕೃತಿಃ ಶೂರೋ ಜಾಮದಗ್ನ್ಯಸಮೋಭವತ್’
ಪರಶುರಾಮನಿಗೆ ಸಮಾನವಾಗಿದ್ದ ಈ ತಮ್ಮನ ಸಹಾಯದಿಂದ ಭೀಷ್ಮಕನ ಕೀರ್ತಿ ಬೆಳಗಿತ್ತು. ಇಂದ್ರನೊಂದಿಗೆ ಆಪ್ತನಾಗಿದ್ದ ಈತ ಆ ಕಾಲದ ಮಹಾ ಬಲಶಾಲಿ ಚಕ್ರವರ್ತಿಯಾಗಿದ್ದ ಮಗಧ ಭೂಪಾಲ ಜರಾಸಂಧನಿಗೆ ಮಹಾಭಕ್ತನೂ ಆಗಿದ್ದನೆಂದು ವ್ಯಾಸರು ಹೇಳುತ್ತಾರೆ. (ಸ ಭಕ್ತೋ ಮಗಧೋ ರಾಜಾ ಭೀಷ್ಮಕಃ ಪರವೀರಹಾ).
ಭೋಜಕಟ ನಗರ ಈತನ ರಾಜಧಾನಿಯಾಗಿತ್ತು. ಕುಂಡಿನೀ ನಗರ ಎಂದೂ ಹೇಳುತ್ತಾರೆ. ಭೀಷ್ಮಕನ ಬಗೆಗೆ ಹೆಚ್ಚಿನ ವಿವರಗಳು ಭಾಗವತದಲ್ಲಿ ದೊರಕುತ್ತವೆ. ಭೀಷ್ಮಕನಿಗೆ ಆರು ಜನ ಮಕ್ಕಳು. ಐದು ಗಂಡು, ಒಂದು ಹೆಣ್ಣು, ರುಕ್ಮಿಣಿ ಇವನ ಮಗಳು. ರುಕ್ಮ, ರುಕ್ಮರಥ, ರುಕ್ಮಬಾಹು, ರುಕ್ಮಕೇಶ ಮತ್ತು ರುಕ್ಮಮಾಲಿ ಗಂಡುಮಕ್ಕಳು.
ಇತ್ತ ಇಂದ್ರ ಮೊದಲಾದ ದೇವತೆಗಳ ಸಂಬಂಧವಿದ್ದರೆ ಅತ್ತ ರಾಕ್ಷಸ ಸ್ವಭಾಔದ ಜನರೊಂದಿಗೂ ಭೀಷ್ಮಕನು ಸಂಬಂಧವಿರಿಸಿಕೊಂಡಿದ್ದುದು ಒಂದು ವಿಚಿತ್ರ ಸಂಗತಿ. ಇಷ್ಟೇ ಅಲ್ಲ. ಇವನು ಶ್ರೀಕೃಷ್ಣನಿಗೆ ಹೆಣ್ಣು ಕೊಟ್ಟ ಮಾವನೆಂದು ಪ್ರಸಿದ್ಧನಾಗಿದ್ದಾನೆ. ತಾನೆ! ಆದರೆ ತನ್ನ ಏಕೈಕ ಪುತ್ರಿಯನ್ನು ಜರಾಸಂಧನ ಸ್ನೇಹಿತನಾಗಿದ್ದ ಶಿಶುಪಾಲನಿಗೆ ಕೊಟ್ಟು ಮದುವೆ ಮಾಡಲು ಈತನೂ ಇವನ ಮಗನಾದ ರುಕ್ಮನೂ ಮನಸ್ಸು ಮಾಡಿದ್ದರು. ರುಕ್ಮಿಣಿಯ ಸ್ವಯಂವರಕ್ಕೂ ಏರ್ಪಾಡು ಮಾಡಿದ್ದರು ಆದರೆ ಅಲ್ಲಿ ನ್ಯಾಯ ದೊರೆಯುವ ಭರವಸೆ ಇಲಲದೆ ರುಕ್ಮಿಣಿ ಉಪಾಯವಾಗಿ ‘ರಾಕ್ಷಸ ವಿವಾಹ’ವಾಗುವಂತೆ ಶ್ರೀಕೃಷ್ಣನಿಗೆ ಹೇಳಿ ಕಳುಹಿಸಿದ್ದರಿಂದ ಶ್ರೀಕೃಷ್ಣನು ಬಂದು ಇವಳನ್ನು ಅಪಹರಿಸಿ, ಅಡ್ಡ ಬಂದ ವೀರರನ್ನೆಲ್ಲ ಪರಾಭವಗೊಳಿಸಿದುದು ಇತಿಹಾಸ ಪ್ರಸಿದ್ದ ಕಥನವಾಗಿದೆ. ಜರಾಸಂಧನ ಪತನವಾದ ಮೇಲೆ ಕೂಡ ಭೀಷ್ಮಕನಿಗೆ ಪಾಂಡವರ ಮೇಲೆ ಅಸಹನೆ ಇದ್ದೇ ಇದ್ದುದರಿಂದ ಸಹದೇವನು ರಾಜಸೂಯ ಯಾಗದ ಸಂದರ್ಭದಲ್ಲಿ ದಿಗ್ವಿಜಯಕ್ಕೆಂದು ಬಂದಾಗ ಭೀಷ್ಮಕನು ಪ್ರತಿಭಟಿಸಿ ನಿಂತು ಎರಡು ದಿನ ಹೋರಾಡಿದ. ಕೊನೆಗೆ ಅಧಿಕ ಬಲನಾಗಿದ್ದ ಸಹದೇವನ ಕೈಯಲ್ಲಿ ಕಪ್ಪಕಾಣಿಕೆಗಳನ್ನು ಕೊಟ್ಟುಕಳಿಸಿದ. ಜರಾಸಂಧನ ಪ್ರಬಲ ಮಿತ್ರ ವರ್ಗದಲ್ಲಿ ಒಬ್ಬನಾಗಿದ್ದ ಈತ ಶಿಶುಪಾಲ ಸಾಲ್ವಾದಿಗಳಂತೆ ಕೃಷ್ಣನೊಂದಿಗೆ ಸೆಣಸದೆ ಇದ್ದುದರಿಂದ ಉಳಿದುಕೊಂಡ!
ಮೂಲ ...{Loading}...
ತರುಬಿದರೆ ವಿಂದಾನುವಿಂದರ
ಮುರಿದು ಕಪ್ಪವ ಕೊಂಡು ಭೀಷ್ಮಕ
ನರಪತಿಯ ಗೆಲಿದಲ್ಲಿ ಮನ್ನಿಸಿಕೊಂಡನುಚಿತದಲಿ
ಬರಬರಲು ಕುಂತಲ ನೃಪನನಾ
ಕರಿಸಿ ಕಪ್ಪವ ಕೊಂಡು ಖಳ ತಿ
ತ್ತಿರಿ ಕಿಳೀಂದ್ರಕರೆಂಬ ಬೇಡರ ಧುರದೊಳೋಡಿಸಿದ ॥5॥
೦೦೬ ಉರವಣಿಸಿ ದಳ ...{Loading}...
ಉರವಣಿಸಿ ದಳ ತುಂಗಭದ್ರಾ
ವರ ನದಿಯನುತ್ತರಿಸಿ ಪಂಪಾ
ಸರದ ತಡಿಯಲಿ ಬಿಟ್ಟನಾ ವಿರುಪಾಕ್ಷ ಸೀಮೆಯಲಿ
ಗಿರಿಚರರ ವನಚರರ ಬಿಂಕವ
ನೊರಸಿ ಕಿಷ್ಕಿಂಧಾದ್ರಿಯಲಿ ಸಂ
ಚರಿಸಿ ಬಿಟ್ಟುದು ಕಟಕ ಬಹುವಿಧ ವಾದ್ಯ ರಭಸದಲಿ ॥6॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಸೈನ್ಯ ಸಡಗರದಿಂದ ಹೊರಟು ತುಂಗಭದ್ರಾನದಿಯನ್ನು ದಾಟಿ ಪಂಪಾ ಸರೋವರದ ತೀರದಲ್ಲಿ ಬೀಡುಬಿಟ್ಟಿತು. ಆ ವಿರೂಪಾಕ್ಷ ಸೀಮೆಯಲ್ಲಿ ಗಿರಿಚರರ ವನಚರರ ಗರ್ವವನ್ನಡಗಿಸಿ ನಾನಾ ವಾದ್ಯಗಳ ರಭಸದಿಂದ ಹೊರಟು ಕಿಷ್ಕಿಂಧಾದ್ರಿಯಲ್ಲಿ ಬೀಡುಬಿಟ್ಟಿತು.
ಪದಾರ್ಥ (ಕ.ಗ.ಪ)
ದಳ-ಸಹದೇವನ ಸೈನ್ಯ, ಉರವಣಿಸಿ-ರಭಸದಿಂದ ಮುಂದುವರಿದು, ತುಂಗಭದ್ರಾವರ ನದಿಯನುತ್ತರಿಸಿ-ಶ್ರೇಷ್ಠವಾದ ತುಂಗಭದ್ರಾ ನದಿಯನ್ನು ದಾಟಿತು, ಪಂಪಾಸರದ ತಡಿಯಲಿ-ಪಂಪಾಸರೋವರದ ತೀರದಲ್ಲಿ, ವಿರುಪಾಕ್ಷ ಸೀಮೆಯಲಿ-ವಿರೂಪಾಕ್ಷನ ನೆಲೆಯಿದ್ದ ಆ ಪ್ರದೇಶದಲ್ಲಿ ಸಹದೇವ ಸೇನೆಯನ್ನು, ಬಿಟ್ಟನು-ನೆಲೆಗೊಳಿಸಿದನು, ಗಿರಿಚರರ ವನಚರರ-ಬೆಟ್ಟಗಳಲ್ಲಿ ಕಾಡುಗಳಲ್ಲಿ ವಾಸಿಸುವ ಜನಾಂಗಗಳ, ಬಿಂಕವ-ಗರ್ವವನ್ನು, ಬರಸಿ-ಅಳಿಸಿ ಹಾಕಿ, ಕಿಷ್ಕಿಂಧಾದ್ರಿಯಲಿ ಸಂಚರಿಸಿ-ಕಿಷ್ಕಿಂಧೆಯ ಬೆಟ್ಟಗಳಲ್ಲೆಲ್ಲ ಒಡಾಡಿ
ಬಹುವಿಧ ವಾದ್ಯ ರಭಸದಲಿ-ನಾನಾ ಬಗೆಯ ರಣವಾದ್ಯಗಳ ಭೋರ್ಗರೆತದೊಡನೆ, ಬಿಟ್ಟುದು ಕಟಕ-ಸೇನೆ ಬೀಡುಬಿಟ್ಟಿತು
ಮೂಲ ...{Loading}...
ಉರವಣಿಸಿ ದಳ ತುಂಗಭದ್ರಾ
ವರ ನದಿಯನುತ್ತರಿಸಿ ಪಂಪಾ
ಸರದ ತಡಿಯಲಿ ಬಿಟ್ಟನಾ ವಿರುಪಾಕ್ಷ ಸೀಮೆಯಲಿ
ಗಿರಿಚರರ ವನಚರರ ಬಿಂಕವ
ನೊರಸಿ ಕಿಷ್ಕಿಂಧಾದ್ರಿಯಲಿ ಸಂ
ಚರಿಸಿ ಬಿಟ್ಟುದು ಕಟಕ ಬಹುವಿಧ ವಾದ್ಯ ರಭಸದಲಿ ॥6॥
೦೦೭ ಕೇಳಿದನು ಕಿಷ್ಕಿನ್ಧ ...{Loading}...
ಕೇಳಿದನು ಕಿಷ್ಕಿಂಧ ಗಿರಿಯ ವಿ
ಶಾಲ ಶೃಂಗವನು ನೆರೆ ಘನ ನಿ
ಸ್ಸಾಳ ಮೊಳಗಿದರೊಡನೆ ಮೊಳಗಿತು ಗಿರಿ ಗುಹಾ ನಿಕರ
ಆಳಿದೆತ್ತಣದೆನುತ ಕಪಿಬಲ
ಜಾಲ ನೆರೆದುದು ಮುರಿದು ತರು ಶಾ
ಖಾಳಿಗಳ ಕೈದುಗಳ ಕೈಯಲಿ ತರುಬಿದರು ಬಲವ ॥7॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕಿಷ್ಕಿಂಧ ಗಿರಿಯಲ್ಲಿ ವಿಶಾಲವಾದ ಕೊಂಬುಗಳ ಧ್ವನಿ ಮಾಡಿದವು. ಭೇರಿಗಳೂ ಅತಿಶಯವಾಗಿ ಮೊಳಗಿದುವು. ಆ ಬೆಟ್ಟದ ಗುಹೆಗಳೆಲ್ಲ ಆ ಎಲ್ಲ ಶಬ್ದವನ್ನು ಪ್ರತಿಧ್ವನಿಗೊಳಿಸಿದುವು. ಈ ಸೈನ್ಯ ಎಲ್ಲಿಯದು ಎಂದು ವಿಸ್ಮಿತರಾದ ಕಪಿ ಸೈನ್ಯ ಮರದ ಕೊಂಬೆಗಳನ್ನು ಮುರಿದು ಆಯುಧವಾಗಿ ಹಿಡಿದುಕೊಂಡು ಸಹದೇವನ ಸೈನ್ಯವನ್ನು ಅಡ್ಡಗಟ್ಟಿತು.
ಪದಾರ್ಥ (ಕ.ಗ.ಪ)
ಕಿಷ್ಕಿಂಧ ಗಿರಿಯ ವಿಶಾಲ ಶೃಂಗವನು-ಕಿಷ್ಕಿಂಧ ಪರ್ವತದ, ವಿಶಾಲವಾದ ಶಿಖರ ಪ್ರದೇಶವನ್ನು ಕೇಳಿದನು, ನೆರೆ ಘನ ನಿಸ್ಸಾಳ ಮೊಳಗಿದರೆ-ಮಹಾಭಾರಿಯಾದ ರಣಭೇರಿ ಮೊಳಗಿದರೆ, ಒಡನೆ-ಕೂಡಲೆ, ಗಿರಿ ಗುಹಾ ನಿಕರ-ಆ ಪರ್ವತದಲ್ಲಿದ್ದ ಗುಹೆಗಳ ಸಮೂಹ, ಮೊಳಗಿತು-ಪ್ರತಿಧ್ವನಿ ಮಾಡಿತು, ಆಳಿದೆತ್ತಣದು-ಸೈನ್ಯವಿದೆಲ್ಲಿಯದು, ಎನುತ-ಎಂದು ಯೋಚಿಸುತ್ತಾ, ಕಪಿಬಲ ಜಾಲ-ಅಲ್ಲಿದ್ದ ಕಪಿ ಸೈನ್ಯ ಸಮೂಹ, ತರು ಶಾಖಾಳಿಗಳ-ಮರದ ಕೊಂಬೆಗಳನ್ನು ಮುರಿದು, ಕೈದುಗಳ ಕೈಯಲಿ-ಅವುಗಳನ್ನೇ ಆಯುಧಗಳನ್ನಾಗಿ ಹಿಡಿದು, ತರುಬಿದರು ಬಲವ-ಅಲ್ಲಿಗೆ ಬಂದಿದ್ದ ಶತ್ರುಸೈನ್ಯವನ್ನು ಅಡ್ಡಗಟ್ಟಿತು
ಮೂಲ ...{Loading}...
ಕೇಳಿದನು ಕಿಷ್ಕಿಂಧ ಗಿರಿಯ ವಿ
ಶಾಲ ಶೃಂಗವನು ನೆರೆ ಘನ ನಿ
ಸ್ಸಾಳ ಮೊಳಗಿದರೊಡನೆ ಮೊಳಗಿತು ಗಿರಿ ಗುಹಾ ನಿಕರ
ಆಳಿದೆತ್ತಣದೆನುತ ಕಪಿಬಲ
ಜಾಲ ನೆರೆದುದು ಮುರಿದು ತರು ಶಾ
ಖಾಳಿಗಳ ಕೈದುಗಳ ಕೈಯಲಿ ತರುಬಿದರು ಬಲವ ॥7॥
೦೦೮ ಕವಿದುದೀ ಚತುರಙ್ಗಬಲ ...{Loading}...
ಕವಿದುದೀ ಚತುರಂಗಬಲ ಸಂ
ತವಿಸಿ ಲಗ್ಗೆಯ ಮಾಡಿ ವಾನರ
ನಿವಹದಲಿ ಕರೆದುದು ಶರಾಳಿಯ ಸುಭಟ ಮೇಘಚಯ
ತಿವಿದರಂಬಿನ ಸೋನೆಗಳುಕದೆ
ಸವಡಿ ಮರನಲಿ ಸದೆದು ಹೊಕ್ಕುದು
ರವಿಸುತನ ಸಂತತಿ ಸುಷೇಣನು ವೀರ ವೃಷಸೇನ ॥8॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಚತುರಂಗಸೇನೆ ಅವರನ್ನು ಎದುರಿಸಿ, ಲಗ್ಗೆಮಾಡಿ, ಸುಭಟರೆಂಬ ಮೇಘರಾಶಿ ಕಪಿಸೈನ್ಯದ ಮೇಲೆ ಬಾಣಗಳ ಮಳೆಯನ್ನು ಸುರಿಸಿತು. ಈ ಬಾಣಗಳ ಸೋನೆಗೆ ಅಂಜದೆ ಕವೆಗೋಲುಗಳಿಂದ ಶತ್ರುಗಳನ್ನು ಬಡಿಯುತ್ತಾ ಕಪಿಸೈನ್ಯ ಶತ್ರುಸೈನ್ಯದ ನಡುವೆ ನುಗ್ಗಿತು. ಸುಗ್ರೀವನ ಸಂತತಿಯಾದ ಸುಷೇಣನೂ ವೃಷಸೇನನೂ ಎದುರುಬದರಾದರು.
ಪದಾರ್ಥ (ಕ.ಗ.ಪ)
ಕವಿದುದೀ ಚತುರಂಗಬಲ-ಸಹದೇವನ ಈ ಚತುರಂಗ ಸೇನೆಯೂ, ಕಪಿ ಸೈನ್ಯದ ಮೇಲೆ ಕವಿಯಿತು, ಸಂತವಿಸಿ-ಸಮಾಧಾನ ಮಾಡಿ, ಅದು ಸಾಗದಾಗ, ಲಗ್ಗೆಯ ಮಾಡಿ ಅನಂತರ ವಾನರನಿವಹದಲಿ-ಆ ಕಪಿಗಳ ಸಮೂಹದ ಮೇಲೆ, ಸುಭಟ ಮೇಘಚಯ-ವೀರಯೋಧರ ಸಮೂಹವೆಂಬ ಮೋಡಗಳ ರಾಶಿ, ಶರಾಳಿಯ ಕರೆದುದು-ಬಾಣಗಳ ಮಳೆಯನ್ನು ಸುರಿಸಿತು ಆದರೆ ಕಪಿಗಳು,
ಸೋನೆಗಳುಕದೆ-ಬಾಣಗಳ ಸೋನೆ ಮಳೆಗೆ ಅಂಜದೆ, ಸವಡಿ ಮರನಲಿ-ಕವೆಗೋಲುಗಳಿಂದ ಶತ್ರುಗಳನ್ನು, ಸದೆದು-ಬಡಿಯುತ್ತಾ ಎದುರಾದರು, ರವಿಸಿತನ ಸಂತತಿ-ರವಿಸುತನಾದ ಕರ್ಣನ ಸಂತತಿಯಾದ ಸುಗ್ರೀವನ, ವಂಶದ ಸುಕ್ಷೇಣನೂ, ಸಹದೇವನ ಕಡೆ
ವೃಷಸೇನನೂ ಹೊಕ್ಕುದು-ಯುದ್ಧಕ್ಕೆ ತೊಡಗಿದರು
ಮೂಲ ...{Loading}...
ಕವಿದುದೀ ಚತುರಂಗಬಲ ಸಂ
ತವಿಸಿ ಲಗ್ಗೆಯ ಮಾಡಿ ವಾನರ
ನಿವಹದಲಿ ಕರೆದುದು ಶರಾಳಿಯ ಸುಭಟ ಮೇಘಚಯ
ತಿವಿದರಂಬಿನ ಸೋನೆಗಳುಕದೆ
ಸವಡಿ ಮರನಲಿ ಸದೆದು ಹೊಕ್ಕುದು
ರವಿಸುತನ ಸಂತತಿ ಸುಷೇಣನು ವೀರ ವೃಷಸೇನ ॥8॥
೦೦೯ ದೊರೆಗೆ ದೊರೆಯಿದಿರಾಗಿ ...{Loading}...
ದೊರೆಗೆ ದೊರೆಯಿದಿರಾಗಿ ಕಾದಿತು
ತೆರಳದಿದು ದಿನವೇಳು ಪರಿಯಂ
ತರ ವಿಘಾತಿಯೊಳೊದಗೆ ಮೆಚ್ಚಿದರುಭಯ ವಾನರರು
ಅರಸ ನೀನಾರೆನೆ ಯುಧಿಷ್ಠಿರ
ನರಪತಿಯ ಕಥೆವೇಳೆ ಕೊಟ್ಟರು
ಪರಮ ವಸ್ತು ಪ್ರಚಯವನು ಮಾದ್ರೀ ಕುಮಾರಂಗೆ ॥9॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ದೊರೆಗೆ ದೊರೆ ಎದುರಾಗಿ ಕಾದಿದರು. ಯಾರೂ ಸೋಲಲಿಲ್ಲ. ಏಳು ದಿನ ಯುದ್ಧ ಮುಂದುವರಿಯಿತು. ಇಬ್ಬರಿಗೂ ವಿಘಾತಿಗಳುಂಟಾಯಿತು ಇಬ್ಬರೂ ಪರಸ್ಪರ ಪರಾಕ್ರಮವನ್ನು ಮೆಚ್ಚಿದರು. ಅರಸ ನೀನಾರು ಎಂದು ವಾನರರು ಕೇಳಿದರು. ಯುಧಿಷ್ಠಿರ ರಾಜನ ಸಂಗತಿಯನ್ನೆಲ್ಲ ತಿಳಿಸಲು ಸಹದೇವನಿಗೆ ಶ್ರೇಷ್ಠವಾದ ವಸ್ತು ಸಮೂಹವನ್ನೇ ಕೊಟ್ಟರು.
ಪದಾರ್ಥ (ಕ.ಗ.ಪ)
ದೊರೆಗೆ ದೊರೆ ಇದಿರಾಗಿ-ಸಮಾನನಾದವನಿಗೆ ಸಮಾನನಾಸವನೇ ಎದುರುನಿಂತು, ಕಾದಿತು-ಹೋರಾಡಿದರು, ತೆರಳದಿದು ದಿನವೇಳು ಪರಿಯಂತ-ಏಳುದಿನಗಳವರೆಗೆ ಅವರ ಹೋರಾಟ ಕೊನೆಗಾಣಲಿಲ್ಲ, ವಿಘಾತಿಯೊಳೊದಗೆ-ಇಬ್ಬರಿಗೂ ಗಾಯಾಗಳಗಲು
ಉಭಯ ವಾನರರು, ಮೆಚ್ಚಿದರು-ಪರಸ್ಪರ ಮೆಚ್ಚಿಕೊಂಡರು ಸುಕ್ಷೇಣನು, ಅರಸ ನೀನಾರು-ಯಾರು ರಾಜ ನೀನು ಎಂದು ಕೇಳಲು, ಇವನು ಯುಧಿಷ್ಠಿರ ನರಪತಿಯ ಕಥೆವೇಳೆ-ಯುಧಿಷ್ಠಿರ ರಾಜನ ಕಥೆಯನ್ನು ಹೇಳಲು, ಕಪಿಸಂತತಿಯವರು ಮಾದ್ರೀ ಕುಮಾರಂಗೆ-ಸಹದೇವನಿಗೆ, ಪರಮ ವಸ್ತು ಪ್ರಚಯವನು ಕೊಟ್ಟರು-ಶ್ರೇಷ್ಠವಾದ ವಸ್ತು ಸಮೂಹವನ್ನೇ ಕೊಟ್ಟರು
ಮೂಲ ...{Loading}...
ದೊರೆಗೆ ದೊರೆಯಿದಿರಾಗಿ ಕಾದಿತು
ತೆರಳದಿದು ದಿನವೇಳು ಪರಿಯಂ
ತರ ವಿಘಾತಿಯೊಳೊದಗೆ ಮೆಚ್ಚಿದರುಭಯ ವಾನರರು
ಅರಸ ನೀನಾರೆನೆ ಯುಧಿಷ್ಠಿರ
ನರಪತಿಯ ಕಥೆವೇಳೆ ಕೊಟ್ಟರು
ಪರಮ ವಸ್ತು ಪ್ರಚಯವನು ಮಾದ್ರೀ ಕುಮಾರಂಗೆ ॥9॥
೦೧೦ ತೆರಳುತಲ್ಲಿಮ್ ಬಳಿಕ ...{Loading}...
ತೆರಳುತಲ್ಲಿಂ ಬಳಿಕ ತೆಂಕಣ
ನರಪತಿಗಳಾನುವರೆ ಸೇನೆಯ
ಖುರಪುಟಕೆ ನುಗ್ಗಾಗಿ ತೆತ್ತರು ಸಕಲ ವಸ್ತುಗಳ
ಉರವಣಿಸಿ ಬಲನಡೆದು ನದಿಗಳ
ನರಸಿ ಕಾವೇರಿಯಲಿ ಬಿಟ್ಟುದು
ಹರಿದುದಲ್ಲಿಂ ಧಾಳಿ ಘನ ಮಾಹಿಷ್ಮತೀ ಪುರಕೆ ॥10॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಸೇನೆ ಅಲ್ಲಿಂದ ಮುಂದುವರಿಯಲು, ದಕ್ಷಿಣ ರಾಜರುಗಳು ಆ ಸೇನೆಯನ್ನು ಎದುರಿಸಿಯಾರೇ ? ಆ ಕುದುರೆಗಳ ಗೊರಸಿನ ಪೆಟ್ಟಿಗೇ ಹೆದರಿ ಸಕಲ ವಸ್ತುಗಳನ್ನು ಕೊಟ್ಟುಬಿಟ್ಟರು. ಸೈನ್ಯ ರಭಸದಿಂದ ಮುಂದೆ ನಡೆದು, ನದಿಗಳನ್ನು ಹುಡುಕಿಕೊಂಡು ಹೋಗಿ
ಕಾವೇರಿ ತೀರದಲ್ಲಿ ಬೀಡುಬಿಟ್ಟಿತು. ಅಲ್ಲಿಂದ ಮುಂದುವರಿದು ಮಾಹಿಷ್ಮತೀ ಪುರಕ್ಕೆ ದಾಳಿಯಿಟ್ಟರು.
ಪದಾರ್ಥ (ಕ.ಗ.ಪ)
ಖುರಪುಟ-ಕುದುರೆಯ ಹೆಜ್ಜೆಯ ಸಪ್ಪಳ
ತೆರಳುತಲ್ಲಿಂ ಬಳಿಕ-ಅನಂತರ ಅಲ್ಲಿಂದ ಹೊರಟು ದಕ್ಷಿಣ ದಿಕ್ಕಿಗೆ ಸರಿಯಲು, ತೆಂಕಣ ನರಪತಿಗಳಾನುವರೆ-ದಕ್ಷಿಣ ದೇಶಗಳ ರಾಜರು ಆ ಸೇನೆಯನ್ನು ಎದುರಿಸಿಯಾರೆ ? ಸೇನೆಯ ಖುರಪುಟಕೆ-ಸೇನೆಯ ಕುದುರೆಗಳ ಕಾಲ ತುಳಿತಕ್ಕೆ, ನುಗ್ಗಾಗಿ-ಸುಸ್ತಾಗಿ, ಸಕಲ ವಸ್ತುಗಳ ತೆತ್ತರು-ಸಮಸ್ತವಸ್ತುಗಳನ್ನು ಕೊಟ್ಟರು, ಉರವಣಿಸಿ ಬಲನಡೆದು-ಸೈನ್ಯ ರಭಸದಿಂದ ಮುಂದೆ ನಡೆದು, ನದಿಗಳನರಸಿ-ನದಿಗಳನ್ನು ಹುಡುಕಿಕೊಂಡು ಹೊರಟು, ಕಾವೇರಿಯಲಿ ಬಿಟ್ಟುದು-ಕಾವೇರಿಯ ತೀರದಲ್ಲಿ ಬೀಡು ಬಿಟ್ಟಿತು, ಅಲ್ಲಿಂದ ಮುಂದೆ ಸೇನೆಯ ದಾಳಿ ನಡೆದದ್ದು, ಘನ ಮಾಹಿಷ್ಮತೀ ಪುರಕೆ-ಪ್ರಸಿದ್ಧವಾದ ಮಾಹಿಷ್ಮತೀ ಪುರದ ಮೇಲೆ
ಮೂಲ ...{Loading}...
ತೆರಳುತಲ್ಲಿಂ ಬಳಿಕ ತೆಂಕಣ
ನರಪತಿಗಳಾನುವರೆ ಸೇನೆಯ
ಖುರಪುಟಕೆ ನುಗ್ಗಾಗಿ ತೆತ್ತರು ಸಕಲ ವಸ್ತುಗಳ
ಉರವಣಿಸಿ ಬಲನಡೆದು ನದಿಗಳ
ನರಸಿ ಕಾವೇರಿಯಲಿ ಬಿಟ್ಟುದು
ಹರಿದುದಲ್ಲಿಂ ಧಾಳಿ ಘನ ಮಾಹಿಷ್ಮತೀ ಪುರಕೆ ॥10॥
೦೧೧ ಧಾಳಿಯೆನಲಿದಿರಾಗಿ ಹೊರವಂ ...{Loading}...
ಧಾಳಿಯೆನಲಿದಿರಾಗಿ ಹೊರವಂ
ಟಾಳು ತಾಗಿದುದಲ್ಲಿಗಧಿಪತಿ
ನೀಲನೆಂಬಾತನು ಮಹಾಹವವಾಯ್ತು ಚೂಣಿಯಲಿ
ಹೇಳಲದ್ಭುತವುರಿದುದಧಿಕ
ಜ್ವಾಲೆಯಲಿ ಚತುರಂಗಬಲ ಹರ
ಭಾಳನಯನ ಕವಾಟ ತೆರೆದಂತಾಯ್ತು ನಿಮಿಷದಲಿ ॥11॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ದಾಳಿ ಎಂದು ಹೇಳಿದ ಕೂಡಲೇ ಅಲ್ಲಿನ ಸೈನಿಕರು ಎದುರು ಬಿದ್ದರು. ಅಲ್ಲಿನ ರಾಜ ನೀಲನೆಂಬವನು. ಎರಡು ಪಕ್ಷದವರಿಗೂ ಮಹಾಯುದ್ಧವಾಯಿತು. ಅಲ್ಲೊಂದು ಅದ್ಭುತ ತಲೆದೋರಿತು. ಹರ ತನ್ನ ಹಣೆಗಣ್ಣನ್ನೂ ತೆರೆದನೋ ಎಂಬಂತೆ ಭಾರೀ ಅಗ್ನಿಜ್ವಾಲೆ ಹರಡಿ ಚತುರಂಗ ಸೇನೆಯನ್ನು ಸುಡತೊಡಗಿತು.
ಪದಾರ್ಥ (ಕ.ಗ.ಪ)
ಧಾಳಿಯೆನಲು-ಧಾಳಿ ಎಂದೊಡನೆ, ಇದಿರಾಗಿ ಹೊರವಂಟು-ಎದುರಿಸಲು ಹೊರಟು, ಆಳು-ಸೈನ್ಯ, ತಾಗಿದುದು-ಶತ್ರುಗಳನ್ನು ಆಕ್ರಮಿಸಿತು, ಅಲ್ಲಿಗಧಿಪತಿ ನೀಲನೆಂಬಾತನು-ಆ ರಾಜ್ಯಕ್ಕೆ ಒಡೆಯ ನೀಲನೆಂಬವನು, ಚೂಣಿಯಲಿ-ಸೇನೆಯ ಮುಂಭಾಗದಲಿ, ಮಹಾ ಹವವಾಯ್ತು-ಘೋರ ಯುದ್ಧವಾಯಿತು, ಹೇಳಲು ಅದ್ಭುತ-ವರ್ಣಿಸಲು ಅದ್ಭುತವಾದುದು, ಚತುರಂಗಬಲ-ಚತುರಂಗಸೇನೆ
ಉರಿದುದು ಅಧಿಕ ಜ್ವಾಲೆಯಲಿ-ಮಹಾಜ್ವಾಲೆಯಲ್ಲಿ ಉರಿಯತೊಡಗಿತು, ನಿಮಿಷದಲಿ-ನಿಮಿಷ ಮಾತ್ರದಲಿ, ಹರ-ಶಿವನು
ಭಾಳನಯನ ಕವಾಟ ತೆರೆದಂತಾಯ್ತು-ತನ್ನ ಹಣೆಗಣ್ಣಿನ ಬಾಗಿಲನ್ನು ತೆರೆದಂತಾಯಿತು
ಮೂಲ ...{Loading}...
ಧಾಳಿಯೆನಲಿದಿರಾಗಿ ಹೊರವಂ
ಟಾಳು ತಾಗಿದುದಲ್ಲಿಗಧಿಪತಿ
ನೀಲನೆಂಬಾತನು ಮಹಾಹವವಾಯ್ತು ಚೂಣಿಯಲಿ
ಹೇಳಲದ್ಭುತವುರಿದುದಧಿಕ
ಜ್ವಾಲೆಯಲಿ ಚತುರಂಗಬಲ ಹರ
ಭಾಳನಯನ ಕವಾಟ ತೆರೆದಂತಾಯ್ತು ನಿಮಿಷದಲಿ ॥11॥
೦೧೨ ಉರಿ ಸಮುದ್ರದೊಳದ್ದುದೋ ...{Loading}...
ಉರಿ ಸಮುದ್ರದೊಳದ್ದುದೋ ಮೋ
ಹರವು ತೆಗೆ ತೆಗೆ ಕುನ್ನಿಗಳ ಕಾ
ತರಿಸಿಲೀಯದಿರಾನೆ ಮುರಿಯಲಿ ಹೊಕ್ಕ ಕುದುರೆಗಳು
ಮರಳಿಚಲಿ ತೇರುಗಳ ಸೂತರ
ಕರೆದು ವಾಘೆಯ ಸೆಳೆ ಪದಾತಿಯ
ತಿರುಗ ಹೊಯ್ಹೊಯ್ಯೆನುತ ಮಿಗೆ ಗಜರಿದನು ಸಹದೇವ ॥12॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಸೈನ್ಯವೆಲ್ಲ ಉರಿಯ ಸಮುದ್ರದಲ್ಲಿ ಮುಳುಗಿತೋ ತೆಗೆ ತೆಗೆ ಈ ಕುನ್ನಿಗಳನ್ನು ಕಾತರಗೊಳ್ಳಲು ಬಿಡಬೇಡ. ಆನೆಗಳು ಹಿಂತಿರುಗಲಿ, ಹೊಕ್ಕ ಕುದುರೆಗಳೆಲ್ಲ ಹಿಂತಿರುಗಲಿ, ಸೂತರನ್ನು ಕರೆದು ರಥದ ಕುದುರೆಗಳ ಲಗಾಮುಗಳನ್ನು ಹಿಂದಕ್ಕೆ ಸೆಳೆದುಕೊಳ್ಳುವಂತೆ ಹೇಳು. ಪದಾತಿಗಳನ್ನೆಲ್ಲ ಹಿಂದಕ್ಕೆ ತಿರುಗಿಸು, ಎಂದು ಸಹದೇವ ಗದರಿದ.
ಪದಾರ್ಥ (ಕ.ಗ.ಪ)
ವಾಘೆ-ಲಗಾಮು
ಮೋಹರವು-ಸೈನ್ಯವು, ಉರಿ ಸಮುದ್ರದೊಳದ್ದುದೋ-ಅಗ್ನಿಜ್ವಾಲೆಯೆಂಬ ಸಮುದ್ರದಲ್ಲಿ ಮುಳುಗಿಬಿಟ್ಟಿತಲ್ಲಾ, ತೆಗೆ ತೆಗೆ-ದಾರಿ ಬಿಡು, ಹಿಂದೆಯೇ ಬಾ, ಕುನ್ನಿಗಳ ಕಾತರಿಸಿಲು ಈಯದಿರು-ಈ ಅಲ್ಪರನ್ನು ಕಾತರಗೊಳ್ಳಲು ಬಿಡಬೇಡ, ಆನೆ ಮುರಿಯಲಿ-ಹೋರಾಟಕ್ಕೆ ತೊಡಗಿರುವ ಆನೆಗಳೆಲ್ಲ ಹಿಂತಿರುಗಲಿ, ಹೊಕ್ಕ ಕುದುರೆಗಳು ಮರಳಿಚಲಿ-ಯುದ್ಧಕ್ಕೆ ಹೊಕ್ಕಿರುವ ಕುದುರೆಗಳನ್ನೆಲ್ಲ ಹಿಂತಿರುಗಿಸಲಿ,
ತೇರುಗಳ ಸೂತರ ಕರೆದು ರಥ ನಡೆಸುತ್ತಿರುವ ಸೂತರುಗಳನ್ನು ಕರೆದು, ವಾಘೆಯ ಸೆಳೆ-ಲಗಾಮುಗಳನ್ನು ಹಿಂದಕ್ಕೆ ಸೆಳೆಯುವಂತೆ ಮಾಡು, ಪದಾತಿಯ-ಕಾಲಾಳು ಸೈನ್ಯವನ್ನು, ತಿರುಗ ಹೊಯ್ಹೊಯ್-ಶೀಘ್ರವಾಗಿ ಹಿಂತಿರುಗಿಸು ಹಿಂತಿರುಗಿಸು ಎನುತ,
ಸಹದೇವ ಮಿಗೆ ಗಜರಿದನು-ಜೋರಾಗಿ ಗರ್ಜಿಸಿದ
ಮೂಲ ...{Loading}...
ಉರಿ ಸಮುದ್ರದೊಳದ್ದುದೋ ಮೋ
ಹರವು ತೆಗೆ ತೆಗೆ ಕುನ್ನಿಗಳ ಕಾ
ತರಿಸಿಲೀಯದಿರಾನೆ ಮುರಿಯಲಿ ಹೊಕ್ಕ ಕುದುರೆಗಳು
ಮರಳಿಚಲಿ ತೇರುಗಳ ಸೂತರ
ಕರೆದು ವಾಘೆಯ ಸೆಳೆ ಪದಾತಿಯ
ತಿರುಗ ಹೊಯ್ಹೊಯ್ಯೆನುತ ಮಿಗೆ ಗಜರಿದನು ಸಹದೇವ ॥12॥
೦೧೩ ರಾಯದಳವೇಕುರಿದುದೇನಿದ ...{Loading}...
ರಾಯದಳವೇಕುರಿದುದೇನಿದ
ರಾಯಸವು ಹೊಸತಾಯ್ತು ವೈಶಂ
ಪಾಯ ಮುನಿ ಹೇಳೆನಲು ನಗುತಿಂತೆಂದನಾ ಮುನಿಪ
ರಾಯ ಕೇಳೈ ಪೂರ್ವದಲಿ ಕಮ
ಲಾಯತಾಕ್ಷಿಯರುಂಟು ಹಲಬರು
ವಾಯುಸಖ ಪರದಾರ ಗಮನವ ಮೆಚ್ಚಿದನು ಬಳಿಕ ॥13॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಯುಧಿಷ್ಠಿರ ರಾಜನ ಸೈನ್ಯವೇಕೆ ಉರಿಯ ತೊಡಗಿತು ? ಇದರ ರಹಸ್ಯವೇನು ? ಹೊಸದಾಗಿದೆಯಲ್ಲ ಎಂದು ಜನಮೇಜಯ ಕೇಳಲಾಗಿ ವೈಶಂಪಾಯನ ಮುನಿ ನಗುತ್ತಾ ವಿವರಿಸುತ್ತಾನೆ. ರಾಜ ಕೇಳು, ಹಿಂದೆ ಇಲ್ಲಿ ಹಲವು ಮಂದಿ ಕಮಲನಯನೆಯರಿದ್ದರು. ಅಗ್ನಿಗೆ ಪರಸ್ತ್ರೀಯರ ಸಂಗ ಇಷ್ಟವಾಯಿತು.
ಪದಾರ್ಥ (ಕ.ಗ.ಪ)
ರಾಯದಳವೇಕು ಉರಿದುದು-ಈ ರಾಜರ ಸೈನ್ಯ ಉರಿದಿದ್ದೇಕೆ ? ಏನಿದರ ಆಯಸವು-? ಹೊಸತಾಯ್ತು-ಹೊಸದೆನಿಸಿತು ವೈಶಂಪಾಯ ಮುನಿ ಹೇಳು ಎನಲು ಮುನಿಪ-ಆ ವೈಶಂಪಾಯನು ನಗುತ ಇಂತೆಂದನು-ಹೀಗೆ ಹೇಳಿದ ರಾಯ ಕೇಳೈ-ಜನಮೇಜಯ ರಾಜ ಕೇಳಯ್ಯ ಪೂರ್ವದಲಿ-ಹಿಂದೆ, ಇಲ್ಲಿ ಕಮಲಾಯತಾಕ್ಷಿಯರುಂಟು ಹಲಬರು-ಹಲವರು ಸ್ತ್ರೀಯರಿದ್ದರು ವಾಯುಸಖ-ಅಗ್ನಿ, ಪರದಾರ ಗಮನವ-ಪರಸ್ತ್ರೀಯರ ಸಂಗವನ್ನು ಮೆಚ್ಚಿದನು, ಅಪೇಕ್ಷೆಪಟ್ಟನು, ಬಳಿಕ-ಅನಂತರ
ಮೂಲ ...{Loading}...
ರಾಯದಳವೇಕುರಿದುದೇನಿದ
ರಾಯಸವು ಹೊಸತಾಯ್ತು ವೈಶಂ
ಪಾಯ ಮುನಿ ಹೇಳೆನಲು ನಗುತಿಂತೆಂದನಾ ಮುನಿಪ
ರಾಯ ಕೇಳೈ ಪೂರ್ವದಲಿ ಕಮ
ಲಾಯತಾಕ್ಷಿಯರುಂಟು ಹಲಬರು
ವಾಯುಸಖ ಪರದಾರ ಗಮನವ ಮೆಚ್ಚಿದನು ಬಳಿಕ ॥13॥
೦೧೪ ಪಾವಕ ದ್ವಿಜ ...{Loading}...
ಪಾವಕ ದ್ವಿಜ ವೇಷದಲಿ ಬಂ
ದಾ ವಧುಗಳಡನಿರಲು ನಗರವ
ಕಾವವರು ಹಾದರವ ಹಿಡಿದರು ಹವ್ಯವಾಹನನ
ಕೋವಿದರ ಮುಂದಿಕ್ಕಿದರೆ ಧ
ರ್ಮಾವಲಂಬನ ಶಾಸ್ತ್ರಗಳನು
ದ್ಭಾವಿಸಲು ಭುಗಿಲೆಂದು ತೋರಿದನಗ್ನಿ ನಿಜತನುವ ॥14॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅವನು ಬ್ರಾಹ್ಮಣನ ವೇಷದಲ್ಲಿ ಬಂದು ಆ ಸ್ತ್ರೀಯರೊಡನೆ ಕೂಡುತ್ತಿದ್ದ. ನಗರದ ಕಾವಲಿನವರು ಅಗ್ನಿಯ ಹಾದರವನ್ನು
ಪತ್ತೆ ಹಚ್ಚಿದರು. ಆ ವಿಷಯವನ್ನು ವಿದ್ವಾಂಸರ ಮುಂದೆ ಇಡಲಾಗಿ ಅವರು ಧರ್ಮವನ್ನವಲಂಬಿಸಿದ ಶಾಸ್ತ್ರಗಳನ್ನು ವಿವರಿಸಿದರು.
ಆಗ ಅಗ್ನಿ ಭುಗಿಲ್ ಎಂದು ತನ್ನ ನಿಜಸ್ವರೂಪವನ್ನು ತೋರಿದ.
ಪದಾರ್ಥ (ಕ.ಗ.ಪ)
ಪಾವಕ-ಅಗ್ನಿ, ಹವ್ಯವಾಹನ-ಅಗ್ನಿ
ಪಾವಕ-ಅಗ್ನಿ, ದ್ವಿಜ ವೇಷದಲಿ ಬಂದು-ಬ್ರಾಹ್ಮಣನ ವೇಷದಲ್ಲಿ ಬಂದು, ಆ ವಧುಗಳಿರೊಡನೆ ಇರಲು-ಆ ಸ್ತ್ರೀಯರೊಡನೆ ಕೂಡಿರಲು
ನಗರವ ಕಾವವರು-ನಗರಪಾಲಕರು, ಹವ್ಯವಾಹನನ-ಅಗ್ನಿಯ, ಹಾದರವ ಹಿಡಿದರು-ಹಾದರಮಾಡುತ್ತಿದ್ದುದನ್ನು ಪತ್ತೆಮಾಡಿದರು,
ಕೋವಿದರ ಮುಂದಿಕ್ಕಿದರೆ-ವಿದ್ವಾಂಸರ ಮುಂದೆ ತನಿಖೆಗೆ ಆ ವಿಷಯವನ್ನು ಇಡಲಾಗಿ, ಧರ್ಮಾವಲಂಬನ ಶಾಸ್ತ್ರಗಳನು-ಅವಲಂಬಿಸಬೇಕಾದ ಧರ್ಮಗಳ ಶಾಸ್ತ್ರವನ್ನು, ಉದ್ಭಾವಿಸಲು-ಕುರಿತು ಚಿಂತಿಸಲು ಅದನ್ನು ಸಹಿಸಿದ, ಅಗ್ನಿ ಭುಗಿಲೆಂದು-ಭುಗ್ ಎಂದು, ನಿಜತನುವ ತೋರಿದನು-ತನ್ನ ನಿಜ ಸ್ವರೂಪವನ್ನು ತೋರಿಸಿದನು
ಮೂಲ ...{Loading}...
ಪಾವಕ ದ್ವಿಜ ವೇಷದಲಿ ಬಂ
ದಾ ವಧುಗಳಡನಿರಲು ನಗರವ
ಕಾವವರು ಹಾದರವ ಹಿಡಿದರು ಹವ್ಯವಾಹನನ
ಕೋವಿದರ ಮುಂದಿಕ್ಕಿದರೆ ಧ
ರ್ಮಾವಲಂಬನ ಶಾಸ್ತ್ರಗಳನು
ದ್ಭಾವಿಸಲು ಭುಗಿಲೆಂದು ತೋರಿದನಗ್ನಿ ನಿಜತನುವ ॥14॥
೦೧೫ ಧರಣಿಸುರರಲಿ ಸುಪ್ರಧಾನರು ...{Loading}...
ಧರಣಿಸುರರಲಿ ಸುಪ್ರಧಾನರು
ವೆರಸಿ ಬಂದಗ್ನಿಯ ಪದತ್ರಯ
ಕೆರಗಿ ಕೋಪಸ್ತಂಭವನು ಮಾಡಿದರು ದೈನ್ಯದಲಿ
ಪುರದಲದು ಮೊದಲಾಗಿ ಕಾಮಿನಿ
ಯರಿಗೆ ಹಾದರ ಸಲುವುದಿದು ವಿ
ಸ್ತರಣವೆಂದು ಕೃಶಾನು ವರವನು ಕೊಟ್ಟನಾ ನೃಪಗೆ ॥15॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಬ್ರಾಹ್ಮಣರಲ್ಲಿ ಪ್ರಧಾನರಾದವರೊಡಗೂಡಿ ಬಂದು ಅವರು ದೈನ್ಯದಿಂದ ಅಗ್ನಿಯ ಪದತ್ರಯಗಳಿಗೆ ವಂದಿಸಿ ಅವನ ಕೋಪವನ್ನು ಶಮನ ಮಾಡಿದರು. ಅಂದಿನಿಂದ ಮೊದಲಗೊಂಡು ಆ ಪಟ್ಟಣದಲ್ಲಿ ಸ್ತ್ರೀಯರಿಗೆ ಹಾದರ ಸಲ್ಲುತ್ತದೆ. ಇದು ಎಲ್ಲರಿಗೂ ತಿಳಿದಿರಲಿ
ಎಂದು ಅಗ್ನಿ ಅಲ್ಲಿನ ರಾಜನಿಗೆ ವರವನ್ನು ಕೊಟ್ಟ.
ಪದಾರ್ಥ (ಕ.ಗ.ಪ)
ಧರಣಿಸುರರಲಿ ಸುಪ್ರಧಾನರು ವೆರಸಿ ಬಂದು-ಬ್ರಾಹ್ಮಣರಲ್ಲಿ, ಶ್ರೇಷ್ಠರಾದವರೊಡಗೂಡಿ ವಿಪ್ರರು ಬಂದು, ಅಗ್ನಿಯ ಪದತ್ರಯಕರಗಿ-ಅಗ್ನಿಯ ಮೂರು ಪಾದಗಳಿಗೆ ವಂದಿಸಿ, ದೈನ್ಯದಲಿ-ದೀನತೆಯಿಂದ, ಕೋಪಸ್ತಂಭವನು ಮಾಡಿದರು-ಕೋಪವನ್ನು ತೆದಗಟ್ಟಿದರು,
ಅದು ಮೊದಲಾಗಿ-ಆ ಘಟನೆಯಾದಂದಿನಿಂದ, ಪುರದಲಿ-ಆ ಪಟ್ಟಣದಲಿ, ಕಾಮಿನಿಯರಿಗೆ-ಸ್ತ್ರೀಯರಿಗೆ, ಹಾದರ ಸಲುವುದಿದು-ಹಾದರ ಸಲ್ಲುತ್ತದೆ, ಇದು ವಿಸ್ತರಣವು-ಇದು ವಿಸ್ತಾರವಾಗಿ ಎಲ್ಲರಿಗೂ ತಿಳಿದಿರಲಿ, ಎಂದು ಕೃಶಾನು-ಅಗ್ನಿ, ಆ ನೃಪಗೆ-ಅಲ್ಲಿನ ರಾಜನಿಗೆ, ವರವನು ಕೊಟ್ಟನು
ಮೂಲ ...{Loading}...
ಧರಣಿಸುರರಲಿ ಸುಪ್ರಧಾನರು
ವೆರಸಿ ಬಂದಗ್ನಿಯ ಪದತ್ರಯ
ಕೆರಗಿ ಕೋಪಸ್ತಂಭವನು ಮಾಡಿದರು ದೈನ್ಯದಲಿ
ಪುರದಲದು ಮೊದಲಾಗಿ ಕಾಮಿನಿ
ಯರಿಗೆ ಹಾದರ ಸಲುವುದಿದು ವಿ
ಸ್ತರಣವೆಂದು ಕೃಶಾನು ವರವನು ಕೊಟ್ಟನಾ ನೃಪಗೆ ॥15॥
೦೧೬ ಅದುವೆ ಮೊದಲಾಗೀಗಳಲ್ಲಿಯ ...{Loading}...
ಅದುವೆ ಮೊದಲಾಗೀಗಳಲ್ಲಿಯ
ಸುದತಿಯರು ಸ್ವಚ್ಛಂದ ಚಾರಿಯ
ರಿದರಿನಾ ನೃಪತಿಗೆ ಸಹಾಯವನಗ್ನಿ ಮಾಡುವನು
ಇದನರಿತು ಸಹದೇವನುಪವಾ
ಸದಲಿ ಮಿಂದು ಕುಶಾಗ್ರ ಸಂಸ್ತರ
ಣದಲಿ ಪವಡಿಸಿ ಬೇಡಿಕೊಂಡನು ವಹ್ನಿ ಸೂಕ್ತದಲಿ ॥16॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅಂದಿನಿಂದ ಮೊದಲಾಗಿ ಅಲ್ಲಿನ ಸ್ತ್ರೀಯರು ಸ್ವಚ್ಛಂದಚಾರಿಯರಾದರು. ಇದರಿಂದ ಆ ರಾಜನಿಗೆ ಅಗ್ನಿ ಸಹಾಯಮಾಡುತ್ತಿದ್ದಾನೆ
ಎಂದು ಹೇಳಿದ. ಈ ವಿಷಯವನ್ನು ತಿಳಿದ ಸಹದೇವ ಉಪವಾಸವ್ರತವನ್ನು ಕೈಕೊಂಡು ಸ್ನಾನಮಾಡಿ, ದರ್ಭೆಯ ಹಾಸಿನ ಮೇಲೆ
ಮಲಗಿ, ವಹ್ನಿ ಸೂಕ್ತವನ್ನು ಪಠಿಸಿ ಅಗ್ನಿಯನ್ನು ಹೀಗೆ ಪ್ರಾರ್ಥಿಸಿಕೊಂಡ.
ಪದಾರ್ಥ (ಕ.ಗ.ಪ)
ಅದುವೆ ಮೊದಲಾಗಿ-ಅದಾದಂದಿನಿಂದ, ಈ ಗಳು-ಈಗ, ಅಲ್ಲಿಯ ಸುದತಿಯರು-ಅಲ್ಲಿನ ಸ್ತ್ರೀಯರು, ಸ್ವಚ್ಛಂದ ಚಾರಿಯರು, ಸ್ವೇಚ್ಛಾಚಾರಿಗಳಾಗಿರುವವರು, ಅದರಿನಾ ನೃಪತಿಗೆ-ಆದ್ದರಿಂದ ಆ ರಾಜನಿಗೆ ಅಗ್ನಿ ಸಹಾಯವನು ಮಾಡುವನು, ಇದನರಿತು-ಈ ವಿಷಯವನ್ನು ತಿಳಿದು, ಸಹದೇವನು ಉಪವಾಸದಲಿ-ಉಪವಾಸ ಮಾಡಿ, ಮಿಂದು-ಸ್ನಾನ ಮಾಡಿ, ಕುಶಾಗ್ರ ಸಂಸ್ತರಣದಲಿ-ದರ್ಭೆಯ ಹಾಸಿನ ಮೇಲೆ, ಪವಡಿಸಿ-ಮಲಗಿ, ವಹ್ನಿ ಸೂಕ್ತದಲಿ ಬೇಡಿಕೊಂಡನು-ಅಗ್ನಿಸೂಕ್ತವನ್ನು ಪಠಿಸಿ ಹೀಗೆ ಪ್ರಾರ್ಥಿಸಿದನು
ಮೂಲ ...{Loading}...
ಅದುವೆ ಮೊದಲಾಗೀಗಳಲ್ಲಿಯ
ಸುದತಿಯರು ಸ್ವಚ್ಛಂದ ಚಾರಿಯ
ರಿದರಿನಾ ನೃಪತಿಗೆ ಸಹಾಯವನಗ್ನಿ ಮಾಡುವನು
ಇದನರಿತು ಸಹದೇವನುಪವಾ
ಸದಲಿ ಮಿಂದು ಕುಶಾಗ್ರ ಸಂಸ್ತರ
ಣದಲಿ ಪವಡಿಸಿ ಬೇಡಿಕೊಂಡನು ವಹ್ನಿ ಸೂಕ್ತದಲಿ ॥16॥
೦೧೭ ಯಾಗವಿದು ನಿನಗೋಸುಗವೆ ...{Loading}...
ಯಾಗವಿದು ನಿನಗೋಸುಗವೆ ನೃಪ
ಯಾಗ ಸಿದ್ಧಿಗೆ ಬಂದೆವಲ್ಲದೆ
ಮೇಗೆ ತಾನರಿಯದೆ ಧನಾಶೆಯಲಿವನ ಮುರಿಯವಲೆ
ಈಗ ನೀನಡ್ಡೈಸಲೆಮ್ಮಯ
ಯಾಗವಳಿಯಲಿ ನಿನಗೆ ಮಾಣಲಿ
ಯಾಗ ಪೌರೋಹಿತ್ಯವೆಂದನು ನಗುತ ಸಹದೇವ ॥17॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಈ ಯಾಗ ನಡೆಯುತ್ತಿರುವುದು ನಿನಗೋಸ್ಕರವೇ. ರಾಜಸೂಯ ಯಾಗ ಯಾವ ಅಡ್ಡಿಯೂ ಇಲ್ಲದೆ ಸಿದ್ಧಿಸಲಿ ಎನ್ನುವದಕ್ಕಾಗಿಯೇ ನಾವು ಬಂದಿದ್ದೇವಲ್ಲದೆ ಕೇವಲ ಧನದ ಆಶೆಯಿಂದ ಬಂದವರಲ್ಲ. ಈಗ ನೀನು ನಮಗೆ ಅಡ್ಡಿಯುಂಟುಮಾಡಿದರೆ ನಮ್ಮ ಯಾಗವು ನಿಲ್ಲುತ್ತದೆ. ಆಗ ನಿನಗೆ ಯಾಗದ ಪೌರೋಹಿತ್ಯ ತಪ್ಪಿ ಹೋಗುತ್ತದೆ ಎಂದು ನಗುತ್ತಾ ಹೇಳಿದ, ಸಹದೇವ.
ಪದಾರ್ಥ (ಕ.ಗ.ಪ)
ಯಾಗವಿದು ನಿನಗೋಸುಗವೆ-ಯುಧಿಷ್ಠಿರ ರಾಜಸೂಯ ಯಾಗವನ್ನು ನಡೆಸುತ್ತಿರುವುದು ನಿನಗೋಸ್ಕರವೇ ? ನೃಪಯಾಗ ಸಿದ್ಧಿಗೆ ಬಂದೆವಲ್ಲದೆ-ರಾಜಸೂಯಯಾಗ ಸುಗಮವಾಗಿ, ಪೂರಯಿಸಬೇಕೆಂಬುದಕ್ಕಾಗಿಯೇ ನಾವು ಬಂದಿದ್ದೇವಲ್ಲದೆ, ಮೇಗೆ ತಾನರಿಯದೆ-ಮೇಲು ಮೇಲೆ ತಾನಾಗಿ ತಿಳಿವಳಿಕೆಯಿಲ್ಲದೆ, ಧನಾಶೆಯಲಿ-ಸಂಪತ್ತಿನ ಸಂಗ್ರಹಣೆಗೋಸ್ಕರ, ಇವನ ಮುರಿಯವಲೆ-ಇವನನ್ನು ಕೊಲ್ಲುತ್ತಿಲ್ಲವಷ್ಟೆ, ಈಗ ನೀನಡ್ಡೈಸಲು-ಈಗ ನೀನು ಅಡ್ಡಿಬಂದರೆ, ಎಮ್ಮಯ ಯಾಗವಳಿಯಲಿ-ನಮ್ಮ ಯಾಗವಿರಲಿ, ನಿನಗೆ ಮಾಣಲಿ ಯಾಗ ಪೌರೋಹಿತ್ಯವು-ಅದರ ಮುಂದಾಳುತನ, ಅಗ್ರಮರ್ಯಾದೆ ನಿನಗೆ ತಪ್ಪಿಹೋಗುತ್ತದಷ್ಟೆ, ಎಂದನು ನಗುತ ಸಹದೇವ
ಮೂಲ ...{Loading}...
ಯಾಗವಿದು ನಿನಗೋಸುಗವೆ ನೃಪ
ಯಾಗ ಸಿದ್ಧಿಗೆ ಬಂದೆವಲ್ಲದೆ
ಮೇಗೆ ತಾನರಿಯದೆ ಧನಾಶೆಯಲಿವನ ಮುರಿಯವಲೆ
ಈಗ ನೀನಡ್ಡೈಸಲೆಮ್ಮಯ
ಯಾಗವಳಿಯಲಿ ನಿನಗೆ ಮಾಣಲಿ
ಯಾಗ ಪೌರೋಹಿತ್ಯವೆಂದನು ನಗುತ ಸಹದೇವ ॥17॥
೦೧೮ ಎನ್ದು ನಾನಾವಿಧ ...{Loading}...
ಎಂದು ನಾನಾವಿಧ ವರ ಸ್ತುತಿ
ಯಿಂದ ಹೊಗಳಿದರಗ್ನಿ ಮೆಚ್ಚಿದ
ನಿಂದು ಬಿಡಿಯೆನೆ ಬಿಟ್ಟೆನೀತನ ಮಾರಿದೆನು ನಿನಗೆ
ಎಂದು ಶಿಖಿ ಹಿಮ್ಮೆಟ್ಟಲಾ ದಳ
ಮುಂದೆ ನಡೆದುದು ನೀಲ ಪುರದಲಿ
ಸಂದಣಿಸಿ ಬಳಿಕಾತನೀತನ ಕಂಡು ಪೊಡವಂಟ ॥18॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಹೀಗೆ ಸಹದೇವನು ನಾನಾ ಬಗೆಯ ಶ್ರೇಷ್ಠ ಸ್ತುತಿಗಳಿಂದ ಅಗ್ನಿಯನ್ನು ಹೊಗಳಲು ಅದಕ್ಕೆ ಮೆಚ್ಚಿದ ಅಗ್ನಿ ‘ಇಂದು ಬಿಡಿ ಎಂದು ನೀನು ಬೇಡಿದುದರಿಂದ ಬಿಟ್ಟಿದ್ದೇನೆ. ಇವನನ್ನು ನಿನಗೇ ಮಾರಿದೆ. ನಿನ್ನಿಷ್ಟದಂತೆ ಮಾಡು ಎಂದ. ಸುಡುವುದನ್ನು ನಿಲ್ಲಿಸಿ ಅಗ್ನಿಜ್ವಾಲೆ
ಹಿಮ್ಮೆಟ್ಟಿತು. ಸೈನ್ಯ ಮುಂದುವರಿಯಿತು. ನೀಲಪುರವನ್ನು ಆಕ್ರಮಣ ಮಾಡಿತು. ಆ ರಾಜ ಸಹದೇವನಿಗೆ ಅಧೀನವಾಗಿ ಅವನನ್ನು ಕಂಡು ತಲೆ ಬಾಗಿದ.
ಪದಾರ್ಥ (ಕ.ಗ.ಪ)
ಎಂದು-ಹೀಗೆ, ನಾನಾವಿಧ-ಬಗೆ ಬಗೆಯ, ವರ ಸ್ತುತಿಯಿಂದ ಹೊಗಳಿದರೆ-ಶ್ರೇಷ್ಠ ಸ್ತೋತ್ರಗಳಿಂದ ಹೊಗಳಲಾಗಿ, ಅಗ್ನಿ ಮೆಚ್ಚಿದರೆ-ಅಗ್ನಿ ಸಹದೇವನ ಸ್ತುತಿಯನು ಮೆಚ್ಚಿ, ಇಂದು ಬಿಡಿ ಎನೆ ಬಿಟ್ಟೆನು-ಈ ದಿನ ನೀನು ಬಿಡಿ ಎಂದು ಬೇಡಿದುದರಿಂದ ಸುಡುವುದನ್ನು ಬಿಟ್ಟಿದ್ದೇನೆ, ಈತನ ಮಾರಿದೆನು ನಿನಗೆ-ಈತನ ಈ ರಾಜನನ್ನು, ಮಾರಿದೆನು ನಿನಗೆ-ನಿನಗೆ ಮಾರಿಬಿಟ್ಟಿದ್ದೇನೆ, ಎಂದು ಶಿಖಿ ಹಿಮ್ಮೆಟ್ಟಲು-ಸುಡುವುದನ್ನು ನಿಲ್ಲಿಸಿ ಅಗ್ನಿ ಹಿಂದೆ ಸರಿಯಲು, ಆ ದಳ-ಸಹದೇವನ ಸೈನ್ಯ, ಮುಂದೆ ನಡೆದುದು-ಮುಂದಕ್ಕೆ ಹೊರಟಿತು, ನೀಲ ಪುರದಲಿ ಸಂದಣಿಸಿ-ನೀಲ ಪುರದಲಿ ಸೇನೆ ತಡೆದು ಸಂದಣಿಸಲು ಬಳಿಕ, ಆತನು-ಆ ಪುರದ ರಾಜ ಹೆದರಿ, ಈತನ ಕಂಡು ಪೊಡವೆಂಟ-ಸಹದೇವನನ್ನು ಭೇಟಿಯಾಗಿ ಅವನಿಗೆ ನಮಸ್ಕರಿಸಿದ
ಮೂಲ ...{Loading}...
ಎಂದು ನಾನಾವಿಧ ವರ ಸ್ತುತಿ
ಯಿಂದ ಹೊಗಳಿದರಗ್ನಿ ಮೆಚ್ಚಿದ
ನಿಂದು ಬಿಡಿಯೆನೆ ಬಿಟ್ಟೆನೀತನ ಮಾರಿದೆನು ನಿನಗೆ
ಎಂದು ಶಿಖಿ ಹಿಮ್ಮೆಟ್ಟಲಾ ದಳ
ಮುಂದೆ ನಡೆದುದು ನೀಲ ಪುರದಲಿ
ಸಂದಣಿಸಿ ಬಳಿಕಾತನೀತನ ಕಂಡು ಪೊಡವಂಟ ॥18॥
೦೧೯ ತೆತ್ತನವ ಸರ್ವಸ್ವವನು ...{Loading}...
ತೆತ್ತನವ ಸರ್ವಸ್ವವನು ತಾ
ನೆತ್ತಿ ಬಂದನು ಕೂಡೆ ಬಳಿಕಿನೊ
ಳುತ್ತರೋತ್ತರವಾಯ್ತು ಸಹದೇವನಿಗೆ ದಿಗ್ವಿಜಯ
ಮತ್ತೆ ಸಹ್ಯಾಚಲದ ಕೊಳ್ಳದ
ಗುತ್ತರಿನ ಭೂಪರ ವಿಭಾಡಿಸಿ
ಸುತ್ತಿ ಬಂದಾದರಿಸಿದನು ತದ್ಗಿರಿನಿವಾಸಿಗಳ ॥19॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ನೀಲ ತನ್ನ ಸರ್ವಸ್ವವನ್ನು ಸಹದೇವನಿಗೆ ಅರ್ಪಿಸಿ ತಾನೂ ಅವರೊಡನೆ ಸೇರಿಕೊಂಡ. ಅನಂತರ ಸಹದೇವನಿಗೆ ಮೇಲಿಂದ ಮೇಲೆ ಜಯವುಂಟಾಯಿತು. ಮುಂದೆ ಸಹ್ಯಾಚಲದ ಕೊಳ್ಳದ, ಗುತ್ತರಿನ ರಾಜರುಗಳನ್ನು ಬಡಿದು ಹಾಕಿ, ಅಲ್ಲೆಲ್ಲ ಸುತ್ತಿ ಬಂದು, ಆ ಗಿರಿ ನಿವಾಸಿಗಳನ್ನು ಸಾಂತ್ವನಗೊಳಿಸಿದ.
ಪದಾರ್ಥ (ಕ.ಗ.ಪ)
- ತೆತ್ತನವ ಸರ್ವಸ್ವವನು-ಆ ನೀಲ ಪುರದ ಅರಸ ಸಹದೇವನಿಗೆ ಸರ್ವಸ್ವವನ್ನು ಕೊಟ್ಟುಬಿಟ್ಟ ಅಲ್ಲದೆ ತಾನೆತ್ತಿ ಬಂದನು ಕೂಡೆ-ತಾನೂ ತನ್ನ ಸೇನೆಯೊಡನೆ ಜೊತೆಗೂಡಿ ಹೊರಟ, ಬಳಿಕಿನೊಳು-ಅನಂತರದಲ್ಲಿ, ಸಹದೇವನಿಗೆ ದಿಗ್ವಿಜಯ-ದಿಗ್ವಿಜಯದಲ್ಲಿ, ಉತ್ತರೋತ್ತರವಾಯ್ತು-ಮೇಲಿಂದ ಮೇಲೆ ಒಳ್ಳೆಯದೇ ಆಗುತ್ತ ಹೋಯಿತು, ಮತ್ತೆ-ಅನಂತರ, ಸಹ್ಯಾಚಲದ ಕೊಳ್ಳದ-ಕಣಿವೆಯ,
ಗುತ್ತರಿನ-ಸಮೀಪದಲ್ಲಿದ್ದ, ಭೂಪರ ವಿಭಾಡಿಸಿ-ರಾಜರನ್ನು ಬಡಿದು ಹಾಕಿ, ಸುತ್ತಿ ಬಂದು-ಅಲ್ಲೆಲ್ಲ ಸಂಚರಿಸಿ ಬಂದು, ತದ್ಗಿರಿನಿವಾಸಿಗಳ ಆದರಿಸಿದನು-ಆ ಪರ್ವತ ನಿವಾಸಿಗಳನ್ನು ಗೌರವಿಸಿದನು
ಮೂಲ ...{Loading}...
ತೆತ್ತನವ ಸರ್ವಸ್ವವನು ತಾ
ನೆತ್ತಿ ಬಂದನು ಕೂಡೆ ಬಳಿಕಿನೊ
ಳುತ್ತರೋತ್ತರವಾಯ್ತು ಸಹದೇವನಿಗೆ ದಿಗ್ವಿಜಯ
ಮತ್ತೆ ಸಹ್ಯಾಚಲದ ಕೊಳ್ಳದ
ಗುತ್ತರಿನ ಭೂಪರ ವಿಭಾಡಿಸಿ
ಸುತ್ತಿ ಬಂದಾದರಿಸಿದನು ತದ್ಗಿರಿನಿವಾಸಿಗಳ ॥19॥
೦೨೦ ಇಳಿದು ಕೊಙ್ಕಣ ...{Loading}...
ಇಳಿದು ಕೊಂಕಣ ಗೌಳವರ ಕೇ
ರಳರ ಸದೆದು ಮಹಾಘ್ರರತ್ನಾ
ವಳಿಯ ಹೇರಿಸಿದನು ಸುಚಿತ್ರಾಂಬರವಿಲೇಪನವ
ಜಲಧಿಯಂತದ್ರ್ವೀಪ ಪತಿಗಳ
ಕುಲವ ಶೋಧಿಸಿ ಚೋಳ ಪಾಂಡ್ಯರ
ದಳವ ಧಟ್ಟಿಸಿ ಕೊಂಡನನುಪಮ ಸಾರವಸ್ತುಗಳ ॥20॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಗಿರಿಯನ್ನಿಳದು ಕೊಂಕಣ ಗೌಳವ ಕೇರಳ ರಾಜರನ್ನು ಸದೆದು ಮಹಾ ಮೌಲ್ಯವುಳ್ಳಂತಹ ರತ್ನಗಳನ್ನು ಮನೋಹರವಾದ ವಸ್ತುಗಳನ್ನು ವಿಲೇಪನಗಳ್ನೂ ಅವರಿಂದ ಸಂಗ್ರಹಿಸಿದ. ಮುಂದೆ ಸಮುದ್ರದ ನಡುವೆ ಇದ್ದ ದ್ವೀಪಪತಿಗಳ ವಂಶವನ್ನೆಲ್ಲ ಶೋಧಿಸಿ
ಚೋಳರ ಮತ್ತು ಪಾಂಡ್ಯರ ಸೈನ್ಯವನ್ನು ಥಟ್ಟಿಸಿ ಅನುಪಮವಾದ ಮತ್ತು ಸಾರವತ್ತಾದ ವಸ್ತುಗಳನ್ನು ಅವರಿಂದ ಪಡೆದ.
ಪದಾರ್ಥ (ಕ.ಗ.ಪ)
ಗೌಳವ-ಗೌಡ ಸಾರಸ್ವತರು, ಗೋವಾಪ್ರದೇಶದವರು.
ಇಳಿದು-ಆ ಪರ್ವತ ಪ್ರದೇಶದಿಂದ ಇಳಿದು, ಕೊಂಕಣ ಗೌಳವರ ಕೇರಳರ ಸದೆದು-ಕೊಂಕಣ ದೇಶದವರಬ್ಬೂ, ಗೌಳದೇಶದವರನ್ನೂ, ಕೇರಳದವರನ್ನು, ಸದೆದು-ಬಡಿದು, ಜಯಿಸಿ, ಮಹಾಘ್ರ-ತುಂಬ ಬೆಲೆ ಬಾಳುವಂತಹ, ರತ್ನಾವಳಿಯ ಸುಚಿತ್ರಾಂಬರ ವಿಲೇಪನವ-ರತ್ನಾಭರಣಗಳ್ನೂ, ಸುಂದರವಾದ ವಸ್ತ್ರಗಳನ್ನು, ಲೇಪನಮಾಡಿಕೊಳ್ಳುವ ಸುಗಂಧ ದ್ರವ್ಯಗಳನ್ನೂ, ಹೇರಿಸಿದ-ಬಂಡಿಗಳಲ್ಲಿ ತುಂಬಿಸಿದ ಮುಂದೆ, ಜಲಧಿಯಂತ ದ್ವೀಪ ಪತಿಗಳ ಕುಲವ ಶೋಧಿಸಿ-ಸಮುದ್ರದ ನಡುವಿನ ದ್ವೀಪಗಳಲ್ಲಿ, ಆಳುತ್ತಿದ್ದ ರಾಜರ ಸಮೂಹವನ್ನೆಲ್ಲ ಶೋಧಿಸಿ, ಚೋಳ ಪಾಂಡ್ಯರ ದಳವ ಧಟ್ಟಿಸಿ-ಚೋಳರ ಪಾಂಡ್ಯರ ಸೇನೆಗಳನ್ನು ಎದುರಿಸಿ ಸೋಲಿಸಿ, ಅನುಪಮ ಸಾರವಸ್ತುಗಳ ಕೊಂಡನು-ಅಸದೃಶ್ಯವಾದ ಶ್ರೇಷ್ಠ ವಸ್ತುಗಳನ್ನು ಪಡೆದುಕೊಂಡ
ಮೂಲ ...{Loading}...
ಇಳಿದು ಕೊಂಕಣ ಗೌಳವರ ಕೇ
ರಳರ ಸದೆದು ಮಹಾಘ್ರರತ್ನಾ
ವಳಿಯ ಹೇರಿಸಿದನು ಸುಚಿತ್ರಾಂಬರವಿಲೇಪನವ
ಜಲಧಿಯಂತದ್ರ್ವೀಪ ಪತಿಗಳ
ಕುಲವ ಶೋಧಿಸಿ ಚೋಳ ಪಾಂಡ್ಯರ
ದಳವ ಧಟ್ಟಿಸಿ ಕೊಂಡನನುಪಮ ಸಾರವಸ್ತುಗಳ ॥20॥
೦೨೧ ಕಳುಹಿದನು ಮಿಗೆಯಾಪ್ತ ...{Loading}...
ಕಳುಹಿದನು ಮಿಗೆಯಾಪ್ತ ಪತ್ರಾ
ವಳಿಯ ತನುಜನ ಬಳಿಗೆ ತತ್ಕ್ಷಣ
ದೊಳಗೆ ಹೇಳಿಕೆಯಾಯ್ತು ಪರಿವಾರಕೆ ಘಟೋತ್ಕಚನ
ತಿಳಿದ ಕಾರಿರುಳೆರಕವೋ ಮೇಣ್
ಖಳ ಜನದ ಹೃದಯಾಂಧಕಾರದ
ಹೊಳಕೆಯೋ ತಾನೆನುತಿರಲು ನಡೆತಂದನಾ ದನುಜ ॥21॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಸಹದೇವ ತನ್ನ ಅಣ್ಣ ಮಗ ಘಟೋತ್ಕಚನಿಗೆ ಅತಿಶಯ ಆಪ್ತವಾಗಿ ಪತ್ರ ಬರೆದು ಕಳುಹಿಸಿದ. ಆ ಕ್ಷಣವೇ ಘಟೋತ್ಕಚ ತನ್ನ
ಪರಿವಾರದವರಿಗೆ ತಿಳಿಸಿ ಅವರೊಡನೆ ಸಹದೇವನ ಬಳಿಗೆ ಬಂದ. ತಿಳಿಗೊಂಡ ಕಾಳರಾತ್ರಿಯೋ ದುಷ್ಟಜನರ ಹೃದಯಾಂಧಕಾರದ ಹೋಳೋ ಎಂಬಂತೆ ಅವನು ಕಂಡ.
ಪದಾರ್ಥ (ಕ.ಗ.ಪ)
ತನುಜನ ಬಳಿಗೆ-ಅಣ್ಣನಾದ ಭೀಮನ ಮಗನಾಗಿದ್ದು ತನಗೂ ಮಗನ ಸಮಾನನೇ ಆದ ಘಟೋತ್ಕಚನ ಬಳಿಗೆ ಕಳುಹಿಸಿದನು ಮಿಗೆಯಾಪ್ತ ಪತ್ರಾವಳಿಯ-ಅತ್ಯಂತ ಆತ್ಮೀಯವಾದ ಪತ್ರಗಳನ್ನು ಬರೆದು ಕಳುಹಿಸಿದನು ತತ್ಕ್ಷಣ ದೊಳಗೆ-ಆ ಪತ್ರಗಳು ತಲುಪಿದ ಒಡನೆಯೇ
ಪರಿವಾರಕೆ ಘಟೋತ್ಕಚನ ಹೇಳಿಕೆಯಾಯ್ತು-ಘತೋತ್ಕಚ ತನ್ನ ಪರಿವಾರದವರಿಗೆಲ್ಲ ಸಹದೇವನ ಆಗಮನದ ಸುದ್ದಿಯನ್ನು ತಿಳಿಸಿದ
ತಿಳಿದ ಕಾರಿರುಳೇರಕವೋ-ತಿಳಿಗೊಂಡ ರಾತ್ರಿಯ ಕಗ್ಗತ್ತಲನ್ನು ಎರಕಹೊಯ್ದು ನಿರ್ಮಿಸಿದ್ದಾರೋ ಮೇಣ್-ಅಥವಾ ಖಳ ಜನದ-ದುಷ್ಟಜನರ ಹೃದಯಾಂಧಕಾರ ಹೊಳಕೆಯೋ-ಹೃದಯದ ಕತ್ತಲ ನಡುವೆ ಹೋಳೋ, ತಾನೆನುತಿರಲು-ಎಂಬಂತೆ ಕಾಣುತ್ತಿದ್ದ
ಆ ದನುಜ-ರಾಕ್ಷಿಸಿಯಾದ ಹಿಡಿಂಬೆಯ ಉದರದಲ್ಲಿ ಜನಿಸಿದ ಆ ಘಟೋತ್ಕಚನು ನಡೆತಂದನು-ಸಹದೇವನ ಬಳಿಗೆ ಬಂದನು
ಮೂಲ ...{Loading}...
ಕಳುಹಿದನು ಮಿಗೆಯಾಪ್ತ ಪತ್ರಾ
ವಳಿಯ ತನುಜನ ಬಳಿಗೆ ತತ್ಕ್ಷಣ
ದೊಳಗೆ ಹೇಳಿಕೆಯಾಯ್ತು ಪರಿವಾರಕೆ ಘಟೋತ್ಕಚನ
ತಿಳಿದ ಕಾರಿರುಳೆರಕವೋ ಮೇಣ್
ಖಳ ಜನದ ಹೃದಯಾಂಧಕಾರದ
ಹೊಳಕೆಯೋ ತಾನೆನುತಿರಲು ನಡೆತಂದನಾ ದನುಜ ॥21॥
೦೨೨ ಪಾಳೆಯವ ಹೊಕ್ಕನು ...{Loading}...
ಪಾಳೆಯವ ಹೊಕ್ಕನು ಘಟೋತ್ಕಚ
ನಾಳು ಸಹಿತಯ್ಯಂಗೆ ನಮಿಸಿದ
ನೂಳಿಗವ ಹೇಳೆನಗೆ ಬೆಸಸಾ ರಾಜಕಾರಿಯವ
ವೀಳೆಯವ ತಾಯೆನಲು ನಗುತ ವಿ
ಶಾಲ ವಿನಯಕೆಮೆಚ್ಚಿದನು ಬಲು
ದೋಳಿನಲಿ ಸೆಳೆದಪ್ಪಿ ಮುಂಡಾಡಿದನು ನಂದನನ ॥22॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಘಟೋತ್ಕಚ ತನ್ನ ಪರಿವಾರದೊಡನೆ ಸಹದೇವನ ಪಾಳೆಯವನ್ನು ಪ್ರವೇಶಿಸಿದ. ತನ್ನ ಚಿಕ್ಕಪ್ಪನಿಗೆ ನಮಸ್ಕಾರ ಮಾಡಿದ. ಅನಂತರ “ನಾನು ಏನು ಸೇವೆ ಮಾಡಲಿ ಹೇಳು? ರಾಜಕಾರ್ಯವೇನು? ನನಗೆ ವೀಳೆಯವನ್ನು ಕೊಡು” ಎಂದ. ಸಹದೇವ ಹಸನ್ಮುಖಿಯಾಗಿ ಮಗನ ವಿಶಾಲ ವಿನಯಕ್ಕೆ ಮೆಚ್ಚಿದ. ತನ್ನ ಬಲಿಷ್ಠವಾದ ತೋಳುಗಳಿಂದ ಅವನನ್ನು ಬರಸೆಳೆದು ಅಪ್ಪಿಕೊಂಡು ಮುದ್ದಾಡಿದ.
ಪದಾರ್ಥ (ಕ.ಗ.ಪ)
ಮುಂಡಾಡು-ಮುದ್ದಾಡು
ಘಟೋತ್ಕಚ, ಅಳು ಸಹಿತ-ತನ್ನ ಸೇನೆಯೊಡಗೂಡಿ, ಪಾಳೆಯವ ಹೊಕ್ಕನು-ಸಹದೇವನ ಪಾಳೆಯವನ್ನು ಪ್ರವೇಶಿಸಿದ, ಅಯ್ಯಂಗೆ ನಮಿಸಿದ-ಚಿಕ್ಕಪ್ಪನಿಗೆ ನಮಸ್ಕರಿಸಿದನು, ಊಳಿಗವ ಹೇಳೆನಗೆ-ಮಾಡಲು ನನಗೆ ಕೆಲಸವನ್ನು ಹೇಳು, ರಾಜಕಾರಿಯವ ಬೆಸಸಾ-ರಾಜಕಾರ್ಯ ಏನನ್ನು ಮಾಡಬೇಕಾಗಿದೆ ಅಪ್ಪಣೆ ಕೊಡು, ವೀಳೆಯವ ತಾ-ಅನುಜ್ಞೆ ಕೊಡು, ಎನಲು ಸಹದೇವನ ನಗುತ
ವಿಶಾಲ ವಿನಯಕೆಮೆಚ್ಚಿದನು-ಘಟೋತ್ಕಚನ ಅತಿಶಯವಾದ ನಮ್ರತೆಯನ್ನು ಕಂಡು ಮೆಚ್ಚಿದ, ನಂದನನ-ಆ ಮಗನನ್ನು
ಬಲುದೋಳಿನಲಿ ಸೆಳೆದಪ್ಪಿ ಮುಂಡಾಡಿದನು-ತನ್ನ ಬಲಿಷ್ಠವಾದ ತೋಳುಗಳಿಂದ, ಅವನನ್ನು ಹತ್ತಿರಕ್ಕೆ ಬರಸೆಳೆದು ಅಪ್ಪಿಕೊಂಡು ಮುದ್ದಾಡಿದ
ಮೂಲ ...{Loading}...
ಪಾಳೆಯವ ಹೊಕ್ಕನು ಘಟೋತ್ಕಚ
ನಾಳು ಸಹಿತಯ್ಯಂಗೆ ನಮಿಸಿದ
ನೂಳಿಗವ ಹೇಳೆನಗೆ ಬೆಸಸಾ ರಾಜಕಾರಿಯವ
ವೀಳೆಯವ ತಾಯೆನಲು ನಗುತ ವಿ
ಶಾಲ ವಿನಯಕೆಮೆಚ್ಚಿದನು ಬಲು
ದೋಳಿನಲಿ ಸೆಳೆದಪ್ಪಿ ಮುಂಡಾಡಿದನು ನಂದನನ ॥22॥
೦೨೩ ಮಗನೆ ಲಙ್ಕೆಗೆ ...{Loading}...
ಮಗನೆ ಲಂಕೆಗೆ ಪೋಗು ಮಾನವ
ರಿಗೆ ಮಹೋದಧಿ ಗಮ್ಯವಲ್ಲತಿ
ವಿಗಡತನ ಬೇಡಲ್ಲಿ ವಿನಯದಲೆನ್ನು ಕಾರಿಯವ
ಸೊಗಸಿತೇ ಸಾಮದಲಿ ಕಪ್ಪವ
ತೆಗೆವುದವಗಡಿಸಿದರೆ ಬಳಿಕ
ಲ್ಲಿಗೆ ಶರಾಳಿಗಳಿವೆ ವಿಘಾತಿಗೆ ದೋಷವಿಲ್ಲೆಂದ ॥23॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅನಂತರ ಹೇಳಿದ, “ಮಗನೆ, ಲಂಕೆಗೆ ಹೋಗು, ಈ ಮಹಾಸಾಗರ ಮಾನವರಿಗೆ ದಾಟಲು ಅಸಾಧ್ಯವಾಗಿದೆ. ನೀನು ಅಲ್ಲಿಗೆ ಹೋಗಿ ತುಂಟತನ ಮಾಡಬೇಡ. ವಿನಯದಿಂದ ವಿಭೀಷಣನಿಗೆ ರಾಜಕಾರ್ಯವನ್ನು ಹೇಳು. ಅವನ ಪ್ರಿಯವಾಗಿ ಸ್ನೇಹದಿಂದ ವರ್ತಿಸಿದರೆ ಅವನಿಂದ ಕಪ್ಪವನ್ನು ಸ್ವೀಕರಿಸು. ಅವನು ಪ್ರತಿಭಟಿಸಿದರೆ ಬಾಣಗಳು ಹೇಗೂ ಇವೆ. ವಿಘಾತಿಯುಂಟುಮಾಡಿದರೆ ದೋಷವೇ ಇಲ್ಲ.
ಪದಾರ್ಥ (ಕ.ಗ.ಪ)
ಮಗನೆ ಲಂಕೆಗೆ ಪೊಗು ಮಾನವರಿಗೆ ಮಹೋದಧಿ ಗಮ್ಯವಲ್ಲ-ಮನುಷ್ಯನಿಗೆ ಆ ಮಹಾಸಾಗರ ದಾಟುವುದಕ್ಕೆ ಅಸಾಧ್ಯವಾದುದು
ಅತಿ ವಿಗಡತನ ಬೇಡ-ಅತಿ ತುಂಟತನ ಮಾಡಬೇಡ, ಅಲ್ಲಿ ವಿನಯದಲೆನ್ನು ಕಾರಿಯವ-ನಮ್ಮ ಕಾರ್ಯವನ್ನು ಕುರಿತು ವಿನಯದಿಂದ ಹೇಳು, ಸೊಗಸಿತೇ ಸಾಮದಲಿ ಕಪ್ಪವ ತೆಗೆವುದು-ಅವರಿಗೆ ಮೆಚ್ಚಿಕೆಯಾಯಿತೋ, ಸ್ನೇಹದಿಂದ ಅವರಿಂದ ಕಪ್ಪವನ್ನು ಸ್ವೀಕರಿಸು
ಅವಗಡಿಸಿದರೆ-ಪ್ರತಿಭಟಿಸಿದರೆ, ಬಳಿಕ-ಆಮೇಲೆ, ಅಲ್ಲಿಗೆ ಶರಾಳಿಗಳಿವೆ-ಅಲ್ಲಿಗೆ ಕಳಿಸಲು ನಮ್ಮಲ್ಲೆ ಬಾಣಗಳಿವೆ, ಆಗ ವಿಘಾತಿಗೆ ದೋಷವಿಲ್ಲ-ಅವರಿಗೆ ಘಾಸಿ ಉಂಟು ಮಾಡಿದರೂ, ಅದು ನಮ್ಮ ತಪ್ಪಾಗುವುದಿಲ್ಲ ಎಂದ
ಮೂಲ ...{Loading}...
ಮಗನೆ ಲಂಕೆಗೆ ಪೋಗು ಮಾನವ
ರಿಗೆ ಮಹೋದಧಿ ಗಮ್ಯವಲ್ಲತಿ
ವಿಗಡತನ ಬೇಡಲ್ಲಿ ವಿನಯದಲೆನ್ನು ಕಾರಿಯವ
ಸೊಗಸಿತೇ ಸಾಮದಲಿ ಕಪ್ಪವ
ತೆಗೆವುದವಗಡಿಸಿದರೆ ಬಳಿಕ
ಲ್ಲಿಗೆ ಶರಾಳಿಗಳಿವೆ ವಿಘಾತಿಗೆ ದೋಷವಿಲ್ಲೆಂದ ॥23॥
೦೨೪ ಎನೆ ಹಸಾದವ ...{Loading}...
ಎನೆ ಹಸಾದವ ಹಾಯ್ಕಿ ಭೀಮನ
ತನಯ ಕಳುಹಿಸಿಕೊಂಡು ತೆಂಕಲು
ಮನದಿ ಮುನ್ನವೆ ಬಂದ ರಾಮೇಶ್ವರದ ಶಿವ ಗೃಹಕೆ
ವಿನಯ ಮಿಗೆ ಪೊಡವಂಟು ರಘು ನಂ
ದನನ ಕೀರ್ತಿಸ್ತಂಭಡಂಬರ
ವೆನಿಪ ಸೇತುವ ಕಂಡು ನಡೆದನು ತೆಂಕ ಮುಖವಾಗಿ ॥24॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ತಂದೆಯ ಮಾತನ್ನು, ಹಸಾದವೆಂದು ಒಪ್ಪಿ, ಅಲ್ಲಿಂದ ಬೀಳ್ಕೊಂಡು, ದಕ್ಷಿಣ ದಿಕ್ಕಿಗೆ ಹೊರಟು ಮನೋವೇಗಕ್ಕಿಂತಲೂ ವೇಗವಾಗಿ ರಾಮೇಶ್ವರದ ಶಿವದೇವಾಲಯಕ್ಕೆ ಬಂದ. ಅತಿಶಯ ವಿನಯದಿಂದ ಶಿವನಿಗೆ ವಂದಿಸಿ ರಘುನಂದನನ ಕೀರ್ತಿಸ್ತಂಭದಂತಿದ್ದ ಸೇತುವೆಯನ್ನು ಕಂಡು, ಅದರ ಮೇಲೆ ದಕ್ಷಿಣಾಭಿಮುಖವಾಗಿ ನಡೆದ.
ಪದಾರ್ಥ (ಕ.ಗ.ಪ)
ಹಸಾದವ ಹಾಯ್ಕಿ-ಪ್ರಸಾದವೆಂದು ಸ್ವೀಕರಿಸಿ
ಎನೆ-ಸಹದೇವನು ಹೀಗೆನ್ನಲು, ಅವಿನಗೆ ಹಸಾದವ ಹಾಯ್ಕಿ-ಸಮ್ಮತಿಯನ್ನು ಸೂಚಿಸಿ ಎರಗಿ, ಭೀಮನತನಯ-ಘಟೋತ್ಕಚ,
ಕಳುಹಿಸಿಕೊಂಡು-ಬೀಳ್ಕೊಂಡು, ತೆಂಕಲು-ದಕ್ಷಿಣ ದಿಕ್ಕಿಗೆ, ರಾಮೇಶ್ವರದ ಶಿವ ಗೃಹಕೆ-ರಾಮೇಶ್ವರದ ದೇವಾಲಯಕ್ಕೆ, ಮನದಿ ಮುನ್ನವೆ ಬಂದ-ಮನಸ್ಸಿನಲ್ಲಿ ಕಲ್ಪಿಸಿಕೊಳ್ಳುವ ಮುನ್ನವೇ ಬಂದಿದ್ದ, ವಿನಯ ಮಿಗೆ ಪೊಡವಂಟು-ಅತಿಶಯ ವಿನಯದಿಂದ ರಾಮೇಶ್ವರನಿಗೆ ವಂದಿಸಿ, ರಘು ನಂದನನ-ಶ್ರೀರಾಮನ, ಕೀರ್ತಿಸ್ತಂಭಡಂಬರ ವೆನಿಪ-ಕೀರ್ತಿಸ್ತಂಭವೆಂಬಂತೆ ತೋರುತ್ತಿದ್ದ, ಸೇತುವ ಕಂಡು-ಸೇತುವೆಯನ್ನು ನೋಡಿ, ತೆಂಕ ಮುಖವಾಗಿ ನಡೆದನು-ದಕ್ಷಿಣಾಭಿಮುಖವಾಗಿ ಲಂಕೆಗೆ ಹೊರಟನು
ಮೂಲ ...{Loading}...
ಎನೆ ಹಸಾದವ ಹಾಯ್ಕಿ ಭೀಮನ
ತನಯ ಕಳುಹಿಸಿಕೊಂಡು ತೆಂಕಲು
ಮನದಿ ಮುನ್ನವೆ ಬಂದ ರಾಮೇಶ್ವರದ ಶಿವ ಗೃಹಕೆ
ವಿನಯ ಮಿಗೆ ಪೊಡವಂಟು ರಘು ನಂ
ದನನ ಕೀರ್ತಿಸ್ತಂಭಡಂಬರ
ವೆನಿಪ ಸೇತುವ ಕಂಡು ನಡೆದನು ತೆಂಕ ಮುಖವಾಗಿ ॥24॥
೦೨೫ ತೋರಿತತಿ ದೂರದಲಿ ...{Loading}...
ತೋರಿತತಿ ದೂರದಲಿ ಲಂಕೆಯ
ಮೂರು ಶಿಖರದ ದುರ್ಗವುದಧಿಗೆ
ಮಾರುದದಿಯೆನೆ ಮೆರೆದುದಂದು ಮಣಿಪ್ರಭಾವದಲಿ
ನೂರು ಯೋಜನ ಸೇತು ಮೂಲವ
ಮೀರಿ ನಡೆದನು ಬಡಗವಾಗಿಲ
ಕೀಲಿದಗಳಿನ ಪಡಿಮಗವ ದಾಟಿದನು ವಹಿಲದಲಿ ॥25॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅತಿ ದೂರದಲ್ಲಿ ಮೂರು ಶಿಖರಗಳಿಂದ ಕೂಡಿದ ಲಂಕೆಯ ದುರ್ಗ ಕಾಣಿಸಿತು. ಅದರಿಂದ ಸುತ್ತ ಹರಡುತ್ತಿದ್ದ ರತ್ನಗಳ ಕಾಂತಿಯ ವ್ಯಾಪನೆ ಸಮುದ್ರಕ್ಕೆ ಸಮಾನವೆನ್ನುವಂತಿತ್ತು. ನೂರು ಯೋಜನವಿದ್ದ ಸೇತುವೆಯನ್ನು ದಾಟಿ, ಉತ್ತರದ ಬಾಗಿಲಿನ ಕಡೆಗಿದ್ದ ಕಂದಕವನ್ನು ಶೀಘ್ರವಾಗಿ ದಾಟಿದ.
ಪದಾರ್ಥ (ಕ.ಗ.ಪ)
ತೊರಿತತಿ ದೂರದಲಿ ಲಂಕೆಯ ಮೂರು ಶಿಖರದ ದುರ್ಗವು-ಲಂಕೆಯ ಮೂರು ಶಿಖರಗಳನ್ನುಳ್ಳ ಕೋಟೆಯ ದೂರದಿಂದಲೇ ಕಂಡಿತು ಅದು ಮಣಿಪ್ರಭಾವದಲಿ-ರತ್ನಗಳ ಕಾಂತಿಯಿಂದ ಉದಧಿಗೆ ಮಾರುದದಿಯೆನೆ ಮೆರೆದುದಂದ-ಆ ದಿನ ರತ್ನಗಳೊಡಗೂಡಿದ ಸಮುದ್ರ ಹೇಗೋ ಹಾಗೆ ಇದು ಪ್ರತಿಸಮುದ್ರವೆಂಬಂತೆ ಕಂಡಿತು ನೂರು ಯೋಜನ ವಿಸ್ತಾರವಿದ್ದ ಸೇತುವೆಯನ್ನು ದಾಟಿ
ವಹಿಲದಲಿ-ಶೀಘ್ರವಾಗಿ ಬಡಗ ಬಾಗಿಲ-ಉತ್ತರಕ್ಕಿದ್ದ, ಕೀಲಿದಗಳಿನ-ಅಗುಳಿ ಹಾಕಿದ್ದಂತಹ, ಪಡಿಮಗವ-ಪ್ರವೇಶದ್ವಾರವನ್ನು ದಾಟಿದನು
ಮೂಲ ...{Loading}...
ತೋರಿತತಿ ದೂರದಲಿ ಲಂಕೆಯ
ಮೂರು ಶಿಖರದ ದುರ್ಗವುದಧಿಗೆ
ಮಾರುದದಿಯೆನೆ ಮೆರೆದುದಂದು ಮಣಿಪ್ರಭಾವದಲಿ
ನೂರು ಯೋಜನ ಸೇತು ಮೂಲವ
ಮೀರಿ ನಡೆದನು ಬಡಗವಾಗಿಲ
ಕೀಲಿದಗಳಿನ ಪಡಿಮಗವ ದಾಟಿದನು ವಹಿಲದಲಿ ॥25॥
೦೨೬ ಕೇರಿ ಕೇರಿಗಳೊಳಗೆ ...{Loading}...
ಕೇರಿ ಕೇರಿಗಳೊಳಗೆ ನಿಜ ಪರಿ
ವಾರ ಸಹಿತ ವೃಕೋದರಾತ್ಮಜ
ನಾರಿವನು ತಾನಾರೆನಲು ನಡೆತಂದನೊಲವಿನಲಿ
ವೀರ ದಾನವ ವರ್ಗದಲಿ ಬಹ
ತೋರಹತ್ತನ ಕಂಡಪೂರ್ವ ವಿ
ಕಾರಿ ಮಾನಿಸನಲ್ಲೆನುತ ಮುತ್ತಿದುದು ಪೌರಜನ ॥26॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಬೀದಿ ಬೀದಿಗಳಲ್ಲಿ ಅವನು ನಡೆದು ಬರುತ್ತಿರುವಾಗ ಪುರಜನರೆಲ್ಲ ‘ಯಾರಿವನು, ಇವನು ಯಾರು, ವೀರ ದಾನವರ ವಂಶಕ್ಕೆ ಸೇರಿದವನು. ಬಲಿಷ್ಠವಾದ ತೋಳುಳ್ಳವನು, ಇವನನ್ನು ಹಿಂದೆ ಕಂಡಿಲ್ಲ. ಇವನು ವಿಕಾರಿಯಾದ ಮಾನವನಲ್ಲ ಎನ್ನುತ್ತ ಅವನನ್ನು ನೋಡುವ ಕುತೂಹಲದಲ್ಲಿ ಮುತ್ತಿಕೊಳ್ಳುತ್ತಿದ್ದರು.
ಪದಾರ್ಥ (ಕ.ಗ.ಪ)
ಕೇರಿ ಕೇರಿಗಳೊಳಗೆ-ಬೀದಿ ಬೀದಿಗಳಲ್ಲಿ ವೃಕೋದರಾತ್ಮಜ-ಭೀಮನ ಮಗ ಘಟೋತ್ಕಚನು, ನಿಜ ಪರಿವಾರ ಸಹಿತ-ತನ್ನ ಪರಿವಾರದೊಡಗೂಡಿ, ‘ಆರಿವನು ತಾನಾರು’ ಎಂದು ಲಂಕೆಯ ಜನ ನೋಡಿ ಬೆರಗಾಗುತ್ತಿರಲು, ನಡೆತಂದನೊಲವಿನಲಿ-ಸಂತೋಷದಿಂದ, ವೀರ ದಾನವ ವರ್ಗದಲಿ-ವೀರರಾದ ರಾಕ್ಷಸರ ಪಂಗಡಕ್ಕೆ ಸೇರಿದವನಾಗಿ, ಬಹ-ಬರುತ್ತಿರುವಂತಹ
ತೋರಹತ್ತನ ಕಂಡ-ದಪ್ಪ ತೋಳಿನ ಘಟೋತ್ಕಚನನ್ನು ನೋಡಿ, ಅಪೂರ್ವ ವಿಕಾರಿ-ಅಪೂರ್ವವಾಗಿ ಎಲ್ಲರಂತಲ್ಲದೆ ವಿಕಾರವಾಗಿರತಕ್ಕವನು, ಮಾನಿಸಲ್ಲ-ಮಾನವನಲ್ಲ ಎನುತ, ಪೌರಜನ ಮುತ್ತಿದುದು-ಪುರಜನರು ಕುತೂಹಲದಿಂದ ಅವನನ್ನು ನೋಡಲು ಸುತ್ತ ಸೇರಿದರು
ಮೂಲ ...{Loading}...
ಕೇರಿ ಕೇರಿಗಳೊಳಗೆ ನಿಜ ಪರಿ
ವಾರ ಸಹಿತ ವೃಕೋದರಾತ್ಮಜ
ನಾರಿವನು ತಾನಾರೆನಲು ನಡೆತಂದನೊಲವಿನಲಿ
ವೀರ ದಾನವ ವರ್ಗದಲಿ ಬಹ
ತೋರಹತ್ತನ ಕಂಡಪೂರ್ವ ವಿ
ಕಾರಿ ಮಾನಿಸನಲ್ಲೆನುತ ಮುತ್ತಿದುದು ಪೌರಜನ ॥26॥
೦೨೭ ಬನ್ದನರಮನೆಗಾಗಿ ಬಾಗಿಲ ...{Loading}...
ಬಂದನರಮನೆಗಾಗಿ ಬಾಗಿಲ
ಮುಂದಣೆಡ ಬಲ ಹೇಮ ವೇದಿಯ
ಸಂದಣಿಯ ಜನ ನೋಡಲೆಂದನು ದೋರಪಾಲರಿಗೆ
ಇಂದು ನಾವುತ್ತರದ ಭೂಮಿಪ
ರಿಂದ ಬಂದೆವು ಪೇಳು ನಿಜಪತಿ
ಗೆಂದಡವ ಬಂದನು ವಿಭೀಷಣ ದೇವನೋಲಗಕೆ ॥27॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅರಮನೆಗೆ ಬಂದ. ಬಾಗಿಲ ಮುಂಭಾಗದಲ್ಲಿ ಬಲಗಡೆಯ ಚಿನ್ನದ ಜಗಲಿಯ ಮೇಲೆ ಸಂದಣಿಸಿದ್ದ ಜನ ತನ್ನನ್ನು ಕುತೂಹಲದಿಂದ ನೋಡುತ್ತಿರಲು ದ್ವಾರಪಾಲಕರಿಗೆ “ಇಂದು ನಾವು ಉತ್ತರದ ರಾಜರ ಕಡೆಯಿಂದ ಬಂದಿದ್ದೇವೆ. ನಿಮ್ಮ ಒಡೆಯರಿಗೆ ಹೇಳಿರಿ” ಎಂದ. ಆಗ ದ್ವಾರಪಾಲಕನು ಬಂದು ವಿಭೀಷಣನನ್ನು ಕಂಡ.
ಪದಾರ್ಥ (ಕ.ಗ.ಪ)
ಬಂದನರಮನೆಗಾಗಿ-ಅರಮನೆಗೆ ಬಂದನು, ಬಾಗಿಲ ಮುಂದಣೆಡೆ-ಬಾಗಿಲ ಮುಂಭಾಗದಲ್ಲಿ, ಬಲ ಹೇಮ ವೇದಿಯ ಸಂದಣಿಯ ಜನ-ಬಲಗಡೆಯ ಚಿನ್ನದ ಜಗಲಿಯ, ಮೇಲೆ ಗುಂಪು ಸೇರಿದ್ದಂತಹ ಲಂಕೆಯ ಜನ, ನೋಡಲು-ನೋಡುತ್ತಿರಲು, ದೋರಪಾಲರಿಗೆ ಎಂದನು-ದ್ವಾರಪಾಲರಿಗೆ ಹೀಗೆಂದನು, ಇಂದು ನಾವು ಉತ್ತರದ ಭೂಮಿಪರಿಂದ ಬಂದೆವು-ಈಗ ನಾವು, ಉತ್ತರದ ರಾಜರ ಬಳಿಯಿಂದ ಬಂದಿದ್ದೇವೆ, ಹೇಳು ನಿಜಪತಿಗೆ ಎಂದಡೆ-ನಿಮ್ಮ ಒಡೆಯರಿಗೆ ಹೇಳು ಎನ್ನಲು, ಅವ ಬಂದನು ವಿಭೀಷಣ ದೇವನೋಲಗಕೆ-ಆ ದ್ವಾರಪಾಲಕ, ವಿಭೀಷಣನ ಆ ಸ್ಥಾನಕ್ಕೆ ಬಂದನು
ಮೂಲ ...{Loading}...
ಬಂದನರಮನೆಗಾಗಿ ಬಾಗಿಲ
ಮುಂದಣೆಡ ಬಲ ಹೇಮ ವೇದಿಯ
ಸಂದಣಿಯ ಜನ ನೋಡಲೆಂದನು ದೋರಪಾಲರಿಗೆ
ಇಂದು ನಾವುತ್ತರದ ಭೂಮಿಪ
ರಿಂದ ಬಂದೆವು ಪೇಳು ನಿಜಪತಿ
ಗೆಂದಡವ ಬಂದನು ವಿಭೀಷಣ ದೇವನೋಲಗಕೆ ॥27॥
೦೨೮ ಜೀಯ ಬಿನ್ನಹ ...{Loading}...
ಜೀಯ ಬಿನ್ನಹ ಬಂದನುತ್ತರ
ರಾಯನಟ್ಟಿದ ದೂತನೆನೆ ತ
ಪ್ಪಾಯಿತೇ ಹೊಗಿಸೆನಲು ಕರೆದನು ಕಲಿ ಘಟೋತ್ಕಚನ
ವಾಯು ತನುಜನ ಸುತನು ತನ್ನ ಪ
ಸಾಯತರು ಸಹಿತೊಳಗೆ ಹೊಕ್ಕು ನ
ವಾಯೆಯಲಿ ನಡೆತಂದು ಕಾಣಿಕೆ ಕೊಟ್ಟು ಪೊಡವಂಟ ॥28॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಪ್ರಭು, ವಿಜ್ಞಾಪನೆ ಉತ್ತರದ ರಾಜ ಕಳಿಸಿ ಕೊಟ್ಟಿರುವ ದೂತ ಬಂದಿದ್ದಾನೆ ಎಂದ. ‘ತಪ್ಪಾಯಿತಲ್ಲ! ಕೂಡಲೇ ಒಳಕ್ಕೆ ಕಳುಹಿಸು’
ಎಂದ ವಿಭೀಷಣ. ಅವನು ಕಲಿ ಘಟೋತ್ಕಚನನ್ನು ಒಳಕ್ಕೆ ಕರೆದ. ವಾಯುಪುತ್ರನ ಪುತ್ರನಾದ ಅವನು ತನ್ನ ಪರಿವಾರದೊಡನೆ ಒಳಹೊಕ್ಕು ಠೀವಿಯಿಂದ ನಡೆದುಕೊಂಡು ಬಂದು ಕಾಣಿಕೆಯನ್ನು ಕೊಟ್ಟು ವಿಭೀಷಣನಿಗೆ ಮಣಿದ.
ಪದಾರ್ಥ (ಕ.ಗ.ಪ)
ದ್ವಾರಪಾಲಕ ಬಂದು ವಿಭೀಷಣನ ಮುಂದೆ, ಜೀಯ ಬಿನ್ನಹ-ಪ್ರಭು, ವಿಜ್ಞಾಪನೆ, ಬಂದನುತ್ತರ ರಾಯನಟ್ಟಿದ ದೂತನು ಎನೆ-ಉತ್ತರದ ರಾಜನು, ಕಳಿಸಿಕೊಟ್ಟಿರುವಂತಹ ದೂತನು ಬಂದಿದ್ದಾನೆ ಎನ್ನಲು, ತಪ್ಪಾಯಿತೇ ಹೊಗಿಸೆನಲು-ವಿಭೀಷಣನು ಅಪರಾಧವಾಯಿತಲ್ಲ !
ಕೂಡಲೆ ಒಳಕ್ಕೆ ಕಳಿಸು ಎನ್ನಲು ಅವನು ಹೋಗಿ, ಕಲಿ ಘಟೋತ್ಕಚನ ಕರೆದನು ವಾಯು ತನುಜನ ಸುತನು-ಭೀಮನ ಮಗನಾದ ಘಟೋತ್ಕಚನು, ತನ್ನ ಪಸಾಯತರು ಸಹಿತ-ತನ್ನ ಪರಿವಾರದೊಡನೆ, ಒಳಗೆ ಹೊಕ್ಕು-ಒಳಕ್ಕೆ ಪ್ರವೇಶಿಸಿ, ನವಾಯೆಯಲಿ ನಡೆತಂದು-ಠೀವಿಯಿಂದ ನಡೆದುಕೊಂಡು ಬಂದು, ಕಾಣಿಕೆ ಕೊಟ್ಟು-ರಾಜನಿಗೆ ಕಾಣಿಕೆಯಾಯ್ತು, ಪೊಡವಂಟ-ನಮಸ್ಕರಿಸಿದ
ಮೂಲ ...{Loading}...
ಜೀಯ ಬಿನ್ನಹ ಬಂದನುತ್ತರ
ರಾಯನಟ್ಟಿದ ದೂತನೆನೆ ತ
ಪ್ಪಾಯಿತೇ ಹೊಗಿಸೆನಲು ಕರೆದನು ಕಲಿ ಘಟೋತ್ಕಚನ
ವಾಯು ತನುಜನ ಸುತನು ತನ್ನ ಪ
ಸಾಯತರು ಸಹಿತೊಳಗೆ ಹೊಕ್ಕು ನ
ವಾಯೆಯಲಿ ನಡೆತಂದು ಕಾಣಿಕೆ ಕೊಟ್ಟು ಪೊಡವಂಟ ॥28॥
೦೨೯ ಬಿಗಿದ ಮರಕತ ...{Loading}...
ಬಿಗಿದ ಮರಕತ ಮಣಿಯ ನೆಲಗ
ಟ್ಟುಗಳ ಹವಳದ ಹಲಗೆಗಳ ಮಾ
ಳಿಗೆಯ ವೈಡೂರ್ಯದ ಕವಾಟದ ವಜ್ರಭಿತ್ತಿಗಳ
ಹೊಗರಿಡುವ ಹರಿ ನೀಲಮಣಿ ವೇ
ದಿಗಳ ಮುತ್ತಿನ ಲಂಬಳದ ಲೋ
ವೆಗಳ ಕಾಂತಿಯ ಲಳಿಯ ಲಹರಿಯೊಳೆದ್ದನಮರಾರಿ ॥29॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ನೆಲ ಪಚ್ಚೆಯ ಮಣಿಗಳಿಂದ ಖಚಿತವಾದದ್ದು. ಸೂರು ಹವಳದ ಹಲಗೆಗಳಿಂದ ಜೋಡಿಸಿಲ್ಪಟ್ಟದ್ದು. ಬಾಗಿಲುಗಳು ವೈಡೂರ್ಯಖಚಿತವಾದುವು. ಗೋಡೆಗಳು ವಜ್ರಖಚಿತ. ಕಾಂತಿ ಚೆಲ್ಲುತ್ತಿರುವ ಹರಿನೀಲ ಮಣಿಗಳಿಂದಾದ ವೇದಿಕೆ. ಬೋದಿಗೆಗಳಿಂದ ಮುತ್ತಿನಗೊಂಚಲಗಳು ನೇತಾಡುತ್ತಿವೆ. ಅಲೆ ಅಲೆಯಾಗಿ ಹರಿಯುತ್ತಿದ್ದ ಕಾಂತಿಯ ನಡುವೆ ಆ ರಾಕ್ಷಸರಾಜ, ಅತಿಥಿಯನ್ನು ಸ್ವಾಗತಿಸಲು ಎದ್ದ.
ಪದಾರ್ಥ (ಕ.ಗ.ಪ)
ಬಿಗಿದ ಮರಕತ ಮಣಿಯ ನೆಲಗಟ್ಟುಗಳ-ಪಚ್ಚೆಯ ರತ್ನ ಖಚಿತವಾದ ನೆಲಗಟ್ಟುಗಳ, ಹವಳದ ಹಲಗೆಗಳ ಮಾಳಿಗೆಯ-ಹವಳದ ಹಲಗೆಗಳನ್ನು ಜೋಡಿಸಿದ ಮೇಲ್ಛಾವಣಿಯ, ವೈಡೂರ್ಯದ ಕವಾಟದ-ವೈಡೂರ್ಯ ಖಚಿತವಾದ ಬಾಗಿಳುಳ್ಳ, ವಜ್ರಭಿತ್ತಿಗಳ-ವಜ್ರಖಚಿತವಾದ ಗೋಡೆಗಳ, ಹೊಗರಿಡುವ-ಕಾಂತಿಯನ್ನು ಹೊರಚೆಲ್ಲುತ್ತಿದ್ದಂತಹ ಹರಿ ನೀಲಮಣಿಯ, ವೇದಿಗಳ-ಜಗಲಿಗಳನ್ನುಳ್ಳ
ಮುತ್ತಿನ ಲಂಬಳದ ಲೋವೆಗಳ-ಮುತ್ತಿನಗೊಂಡೆಗಳನ್ನು ಇಳಿಬಿಟ್ಟಿರುವ ಬೋದಿಗೆಗಳಿಂದ ಕೂಡಿದ ರಚನೆಯ, ಕಾಂತಿಯ ಲಳಿಯ ಲಹರಿಯೊಳು-ಅಲೆ ಅಲೆಯಾಗಿ ಹರಿಯುತ್ತಿದ್ದ ಕಾಂತಿಯ ನಡುವೆ ಎದ್ದನ ಮರಾರಿ
ಮೂಲ ...{Loading}...
ಬಿಗಿದ ಮರಕತ ಮಣಿಯ ನೆಲಗ
ಟ್ಟುಗಳ ಹವಳದ ಹಲಗೆಗಳ ಮಾ
ಳಿಗೆಯ ವೈಡೂರ್ಯದ ಕವಾಟದ ವಜ್ರಭಿತ್ತಿಗಳ
ಹೊಗರಿಡುವ ಹರಿ ನೀಲಮಣಿ ವೇ
ದಿಗಳ ಮುತ್ತಿನ ಲಂಬಳದ ಲೋ
ವೆಗಳ ಕಾಂತಿಯ ಲಳಿಯ ಲಹರಿಯೊಳೆದ್ದನಮರಾರಿ ॥29॥
೦೩೦ ಇತ್ತ ಬಾರೈ ...{Loading}...
ಇತ್ತ ಬಾರೈ ಕುಳ್ಳಿರೆತ್ತಣ
ದೆತ್ತ ಬರವಾರಟ್ಟಿದರು ನೀ
ವೆತ್ತಣವರೇನೆಂದು ನಿಮ್ಮಭಿದಾನವೇನಹುದು
ಬಿತ್ತರಿಸಿ ಹೇಳೆನಲು ಕೈಮುಗಿ
ವುತ್ತ ನುಡಿದನು ರಾವಣಾನುಜ
ಚಿತ್ತವಿಪುದೆಮ್ಮಖಿಳ ಪೂರ್ವೋತ್ತರದ ಸಗತಿಯು ॥30॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ವಿಭೀಷಣ ಅವನನ್ನು ಸ್ವಾಗತಿಸುತ್ತಾ, “ಈ ಕಡೆ ಬಾರಯ್ಯ, ಕುಳಿತುಕೊ ಎಲ್ಲಿಂದ ಬಂದೆ ? ಯಾರು ಕಳುಹಿಸಿದರು ? ಎಲ್ಲಿಯವರು ನೀವು ? ನಿಮ್ಮ ಹೆಸರೇನು ? ಎಲ್ಲವನ್ನೂ ವಿಸ್ತಾರವಾಗಿ ಹೇಳು” ಎನ್ನಲು ಘಟೊತ್ಕಚ ಕೈ ಮುಗಿದು “ರಾವಣಾನುಜ, ಲಾಲಿಸು. ನಮ್ಮ ಪೂರ್ವೋತ್ತರದ ಸಂಗತಿಯನ್ನೆಲ್ಲ ಹೇಳುತ್ತೇನೆ.
ಪದಾರ್ಥ (ಕ.ಗ.ಪ)
ಅಭಿಧಾನ-ಹೆಸರು
ಇತ್ತ ಬಾರೈ-ಈ ಕಡೆ ಬಾರಯ್ಯ, ಕುಳ್ಳಿರು-ಕುಳಿತು ಕೊ, ಎತ್ತಣದು ಎತ್ತಣದ ಬರವು-ಎಲ್ಲಿಯದು, ಎಲ್ಲಿಂದ ಬಂದುದು,
ಆರಟ್ಟಿದರು-ಯಾರು ಕಳಿಸಿದರು, ನೀವೆತ್ತಣವರು-ನೀವೆಲ್ಲ ಯಾವ ಕಡೆಯವರು, ಏನೆಂದು ನಿಮ್ಮಭಿದಾನ-ನಿಮ್ಮ ಹೆಸರೇನು ?
ಏನಹುದು-ಏನಾಗುತ್ತಿದೆ, ಬಿತ್ತರಿಸಿ ಹೇಳು ಎನಲು-ವಿಸ್ತಾರವಾಗಿ ಹೇಳು ಎಂದು ವಿಭೀಷಣನು ಹೇಳಲು ಘಟೋತ್ಕಚನು,
ಕೈಮುಗಿ ವುತ್ತ ನುಡಿದನು-ಕೈಮುಗಿದುಕೊಂಡು ಗೌರವದಿಂದ ಹೇಳಿದ, ರಾವಣಾನುಜ ಚಿತ್ತವಿಪುದು-ವಿಭೀಷಣನೇ ಲಾಲಿಸುವುದು,
ಎಮ್ಮ ಅಖಿಳ ಪೂರ್ವೋತ್ತರದ ಸಗತಿಯ-ನಮ್ಮ ಎಲ್ಲಾ ಹಿಂದಿನ ಮುಂದಿನ ಸಂಗತಿಗಳನ್ನೆಲ್ಲ ಹೇಳುವೆ ಕೇಳು.
ಮೂಲ ...{Loading}...
ಇತ್ತ ಬಾರೈ ಕುಳ್ಳಿರೆತ್ತಣ
ದೆತ್ತ ಬರವಾರಟ್ಟಿದರು ನೀ
ವೆತ್ತಣವರೇನೆಂದು ನಿಮ್ಮಭಿದಾನವೇನಹುದು
ಬಿತ್ತರಿಸಿ ಹೇಳೆನಲು ಕೈಮುಗಿ
ವುತ್ತ ನುಡಿದನು ರಾವಣಾನುಜ
ಚಿತ್ತವಿಪುದೆಮ್ಮಖಿಳ ಪೂರ್ವೋತ್ತರದ ಸಗತಿಯು ॥30॥
೦೩೧ ಸೋಮ ವಂಶದಲರಸುಗಳು ...{Loading}...
ಸೋಮ ವಂಶದಲರಸುಗಳು ನಿ
ಸ್ಸೀಮರಿದ್ದರು ಪಲಬರದರೊಳು
ಭೂಮಿಗಧಿಪಪತಿ ಪಾಂಡುವಾತಂಗೈವರಾತ್ಮಜರು
ಆ ಮಹೀಪತಿ ಧರ್ಮನಂದನ
ಭೀಮ ಫಲುಗುಣ ನಕುಲನಲ್ಲಿ ಸ
ನಾಮ ಸಹದೇವಾಖ್ಯನಿನಿಬರು ಚಿತ್ತವಿಸಿಯೆಂದ ॥31॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಸೋಮವಂಶದಲ್ಲಿ ನಿಸ್ಸೀಮರಾದ ರಾಜರುಗಳು ಹಲವರಿದ್ದರು. ಅವರಲ್ಲಿ ಒಬ್ಬ ಭೂಮಿಗೆ ಒಡೆಯನಾಗಿದ್ದ ಪಾಂಡು,
ಆತನಿಗೆ ಐವರು ಪುತ್ರರು, ಧರ್ಮನಂದನ ಭೀಮ, ಫಲಗುಣ, ನಕುಲ ಮತ್ತು ಸಹದೇವ.
ಪದಾರ್ಥ (ಕ.ಗ.ಪ)
ಸೋಮ ವಂಶದಲಿ ಅರಸುಗಳು ನಿಸ್ಸೀಮರಿದ್ದರು ಪಲಬರು-ಚಂದ್ರವಂಶದಲ್ಲಿ ಪ್ರಸಿದ್ಧರಾದದಂತಹ ಹಲವಾರು ರಾಜರುಗಳಿದ್ದರು
ಅದರೊಳು-ಆ ವಂಶದಲ್ಲಿ ಭೂಮಿಗಧಿಪಪತಿ ಪಾಂಡು-ಭೂಮಿಗೆ ಒಡೆಯನಾಗಿದ್ದವನು ಪಾಂಡುರಾಜ ಆತಂಗೆ ಐವರಾತ್ಮಜರು-ಅವನಿಗೆ ಐದು ಜನ ಗಂಡು ಮಕ್ಕಳು ಅವರೇ ಧರ್ಮನಂದನ, ಭೀಮ, ಫಲಗುಣ, ನಕುಲ ಹಾಗೂ ಸನಾಮ-ಪ್ರಸಿದ್ಧನಾದ
ನಾಮ ಸಹದೇವಾಖ್ಯನು-ಸಹದೇವ ಎಂಬ ಹೆಸರಿನವನು ಇನಿಬರು-ಇಷ್ಟು ಮಂದಿ ಚಿತ್ತವಿಸು-ಕೇಳು
ಮೂಲ ...{Loading}...
ಸೋಮ ವಂಶದಲರಸುಗಳು ನಿ
ಸ್ಸೀಮರಿದ್ದರು ಪಲಬರದರೊಳು
ಭೂಮಿಗಧಿಪಪತಿ ಪಾಂಡುವಾತಂಗೈವರಾತ್ಮಜರು
ಆ ಮಹೀಪತಿ ಧರ್ಮನಂದನ
ಭೀಮ ಫಲುಗುಣ ನಕುಲನಲ್ಲಿ ಸ
ನಾಮ ಸಹದೇವಾಖ್ಯನಿನಿಬರು ಚಿತ್ತವಿಸಿಯೆಂದ ॥31॥
೦೩೨ ಅರಸನೆನ್ದರೆ ಸಕಲ ...{Loading}...
ಅರಸನೆಂದರೆ ಸಕಲ ಧರ್ಮಕೆ
ಕರಚರಣವಾದಂತೆಯಾತನ
ಕಿರಿಯರಿಹರು ಚತುರ್ವಿಧೋಪಾಯ ಸ್ವರೂಪದಲಿ
ಸುರಮುನಿಯ ಮತದಿಂದ ಯಾಗೋ
ತ್ಕರ್ಷಕಾದುದು ಬುದ್ಧಿ ಜನಪಾ
ಧ್ವರದ ದಿಗ್ವಿಜಯಾಭಿಸಂಧಿಗೆ ಮಾಡಿದನು ಮನವ ॥32॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅರಸನೆಂದರೆ ಸಕಲ ಧರ್ಮಕ್ಕೆ ಮೈವೆತ್ತಿ ಬಂದಂತೆ. ಅವನ ತಮ್ಮಂದಿರು ನಾಲ್ವರೂ ಚತುರೋಪಾಯಗಳಂತೆ. ದೇವರ್ಷಿ ನಾರದರ ಸಲಹೆಯಂತೆ ರಾಜಸೂಯ ಯಾಗ ಮಾಡಬೇಕೆಂಬ ಆಲೋಚನೆ ಬಂದಿತು. ಅದಕ್ಕೆ ಸಂಬಂಧಿಸಿದಂತೆ ಈ ದಿಗ್ವಿಜಯದ
ಉದ್ದೇಶ ಬಂದಿತು.
ಪದಾರ್ಥ (ಕ.ಗ.ಪ)
ಅರಸನೆಂದರೆ ಸಕಲ ಧರ್ಮಕೆ ಕರ ಚರಣವಾದಂತೆ-ರಾಜನೆಂದರೆ ಎಲ್ಲ ಧರ್ಮಗಳಿಗೂ, ಕೈಕಾಲುಗಳಿದ್ದಂತೆ ಧರ್ಮನಂದನನು ರಾಜ
ಆತನ ಕಿರಿಯರು-ತಮ್ಮಂದಿರು, ಚತುರ್ವಿಧೋಪಾಯ ಸ್ವರೂಪದಲಿ-ನಾಲ್ವರೂ, ಚತುರೋಪಾಯದಂತೆ ಇರತಕ್ಕವರು, ಸುರಮುನಿಯ ಮತದಿಂದ-ದೇವರ್ಷಿಯಾದ ನಾರದನ ಅಭಿಪ್ರಾಯದಂತೆ ಧರ್ಮರಾಜನಿಗೆ, ಯಾಗೋತ್ಕರ್ಷಕೆ ಆದುದು ಬುದ್ಧಿ-ರಾಜ ಸೂಯಯಾಗವನ್ನು ಮಾಡಿ, ಅದರಿಂದ ಉತ್ಕರ್ಷ ಪಡೆಯಬೇಕೆಂಬ ಬುದ್ಧಿ ಬಂದಿತು ಜನಪಾಧ್ವರದ-ರಾಜಸೂಯಯಾಗದ
ದಿಗ್ವಿಜಯಾಭಿಸಂಧಿಗೆ-ಆ ಯಾಗ ಸಂಬಂಧದಲ್ಲಿ ದಿಗ್ವಿಜಯವನ್ನು ಸಾಧಿಸಬೇಕೆಂಬ ಆಲೋಚನೆಗೆ ಮನವ ಮಾಡಿದನು-ಮನಸ್ಸು ಮಾಡಿದ
ಮೂಲ ...{Loading}...
ಅರಸನೆಂದರೆ ಸಕಲ ಧರ್ಮಕೆ
ಕರಚರಣವಾದಂತೆಯಾತನ
ಕಿರಿಯರಿಹರು ಚತುರ್ವಿಧೋಪಾಯ ಸ್ವರೂಪದಲಿ
ಸುರಮುನಿಯ ಮತದಿಂದ ಯಾಗೋ
ತ್ಕರ್ಷಕಾದುದು ಬುದ್ಧಿ ಜನಪಾ
ಧ್ವರದ ದಿಗ್ವಿಜಯಾಭಿಸಂಧಿಗೆ ಮಾಡಿದನು ಮನವ ॥32॥
೦೩೩ ಬಡಗಲರ್ಜುನನುತ್ತರಾಬ್ಧಿಯ ...{Loading}...
ಬಡಗಲರ್ಜುನನುತ್ತರಾಬ್ಧಿಯ
ತಡಿಯ ನೆಲ ಪರಿಯಂತವಸ್ತುವ
ಜಡಿದು ತಂದನು ಮೂಡಲಾವರಿಸಿದನು ಕಲಿ ಭೀಮ
ಪಡುವಲರ್ಜುನನನುಜ ತೆಂಕಣ
ಕಡೆಗೆ ಸಹದೇವಾಖ್ಯನೀ ಪರಿ
ನಡೆವುತಿದ್ದುದು ತಾ ಘಟೋತ್ಕಚ ಭೀಮಸುತನೆಂದ ॥33॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಉತ್ತರದಲ್ಲಿ ಅರ್ಜುನನು ಉತ್ತರಸಾಗರದ ತೀರದವರೆಗೆ ಎಲ್ಲ ರಾಜರನ್ನೂ ಗೆದ್ದು ಕಪ್ಪ ಕಾಣಿಕೆಗಳನ್ನು ತಂದ. ಕಲಿಭೀಮ ಪೂರ್ವ ದಿಕ್ಕನ್ನೆಲ್ಲ ವ್ಯಾಪಿಸಿಕೊಂಡ. ಪಶ್ಚಿಮಕ್ಕೆ ಅರ್ಜುನನ ತಮ್ಮ ನಕುಲ. ದಕ್ಷಿಣದ ಕಡೆಗೆ ಸಹದೇವ ಹೀಗೆ ದಿಗ್ವಿಜಯ ನಡೆಯುತ್ತಿದೆ. ನಾನು ಭೀಮಸೇನನ ಮಗ ಘಟೋತ್ಕಚ.
ಪದಾರ್ಥ (ಕ.ಗ.ಪ)
ಬಡಗಲು-ಉತ್ತರದಲ್ಲಿ, ಅರ್ಜುನನು ಉತ್ತರಾಬ್ಧಿಯ ತಡಿಯ ನೆಲ ಪರಿಯಂತ-ಉತ್ತರ ಸಾಗರದ ತೀರದವರೆಗೆ, ವಸ್ತುವ ಜಡಿದು ತಂದನು-ರಾಜರನ್ನು ಗೆದ್ದು ವಸ್ತುಗಳನ್ನು ಸಂಗ್ರಹಿಸಿ ಭೀಮಸೇನನು, ಮೂಡಲಾ ಆವರಿಸಿದನು-ಆಕ್ರಮಣ ಮಾಡಿದನು, ಪಡುವಲು-ಪಶ್ಚಿಮದಲ್ಲಿ, ಅರ್ಜುನನುಜ-ನಕುಲನು, ತೆಂಕಣ ಕಡೆಗೆ-ದಕ್ಷಿಣಕ್ಕೆ, ಸಹದೇವಾಖ್ಯನು-ಸಹದೇವನೆಂಬವನು, ಈ ಪರಿ ನಡೆವುತಿದ್ದುದು ತಾ-ಈ ರೀತಿ ಅದು ನಡೆಯುತ್ತಿತ್ತು ಎಂದು, ಭೀಮಸುತ ಘಟೋತ್ಕಚ ಹೇಳಿದ.
ಮೂಲ ...{Loading}...
ಬಡಗಲರ್ಜುನನುತ್ತರಾಬ್ಧಿಯ
ತಡಿಯ ನೆಲ ಪರಿಯಂತವಸ್ತುವ
ಜಡಿದು ತಂದನು ಮೂಡಲಾವರಿಸಿದನು ಕಲಿ ಭೀಮ
ಪಡುವಲರ್ಜುನನನುಜ ತೆಂಕಣ
ಕಡೆಗೆ ಸಹದೇವಾಖ್ಯನೀ ಪರಿ
ನಡೆವುತಿದ್ದುದು ತಾ ಘಟೋತ್ಕಚ ಭೀಮಸುತನೆಂದ ॥33॥
೦೩೪ ಅರಸನೊನ್ದು ನಿಮಿತ್ತ ...{Loading}...
ಅರಸನೊಂದು ನಿಮಿತ್ತ ದೇಶಾಂ
ತರ ಪರಿಭ್ರಮಣದಲಿ ವಿಪಿನಾಂ
ತರದೊಳಿರೆಬಂದನು ಹಿಡಿಂಬಕನೆಂಬನಸುರಪತಿ
ಕೆರಳಿಚಿದೊಡಾ ಭೀಮನಾತನ
ನೊರಸಿದನು ಖಳನನುಜೆಯಾತಂ
ಗರಸಿಯಾದಳು ಸತಿ ಹಿಡಿಂಬಿಕೆ ಮಾತೆ ತನಗೆಂದ ॥34॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಯುಧಿಷ್ಠಿರ ರಾಜನು ಕಾರಣಾಂತರದಿಂದ ದೇಶಾಂತರದಲ್ಲಿ ಸುತ್ತುತ್ತಿರಬೇಕಾದಾಗ ವಿಪಿನದಲ್ಲಿ ಹಿಡಿಂಬಕನೆಂಬ ರಾಕ್ಷಸ
ರಾಜ ಕೆರಳಿಸಲಾಗಿ ಭೀಮನು ಆತನನ್ನು ಕೊಂದು ಹಾಕಿದ. ಆ ದುಷ್ಟನ ತಂಗಿ ಅವನ ಅರಸಿಯಾದಳು. ಅವಳೇ ಹಿಡಿಂಬಿಕೆ ಆಕೆ ನನಗೆ ತಾಯಿ.
ಪದಾರ್ಥ (ಕ.ಗ.ಪ)
ಅರಸನು-ಯುಧಿಷ್ಠಿರನು, ಒಂದು ನಿಮಿತ್ತ-ಯಾವುದೋ ಒಂದು ಕಾರಣದಿಂದ, ದೇಶಾಂತರ ಪರಿಭ್ರಮಣದಲಿ-ಅನ್ಯ ದೇಶಗಳಲ್ಲಿ ಸುತ್ತ ಬೇಕಾಗಿ ಬಂದಾಗ, ವಿಪಿನಾಂತರದೊಳಿರ ಬಂದನು-ಕಾಡಿನಲ್ಲಿ ಇರಲೆಂದು ಬಂದನು, ಹಿಡಿಂಬಕನೆಂಬ ಅಸುರಪತಿ-ಹಿಡಿಂಬನೆಂಬ ರಾಕ್ಷಸ ರಾಜ, ಕೆರಳಿಚಿದೊಡೆ-ಕೆರಳಿಸಲಾಗಿ, ಭೀಮನು ಆನಾತನನೊರಸಿದನು-ಭೀಮನು ಅವನನ್ನು ಕೊಂದು ಹಾಕಿದ, ಖಳನನುಜೆ-ಆ ದುಷ್ಟನ ತಂಗಿ ಅರಸಿಯಾದಳು, ಸತಿ ಹಿಡಿಂಬಿಕೆ-ಆ ಭೀಮನ ಪತ್ನಿ ಹಿಡಿಂಬೆ, ಮಾತೆ ತನಗೆ-ನನ್ನ ತಾಯಿ ಎಂದ
ಮೂಲ ...{Loading}...
ಅರಸನೊಂದು ನಿಮಿತ್ತ ದೇಶಾಂ
ತರ ಪರಿಭ್ರಮಣದಲಿ ವಿಪಿನಾಂ
ತರದೊಳಿರೆಬಂದನು ಹಿಡಿಂಬಕನೆಂಬನಸುರಪತಿ
ಕೆರಳಿಚಿದೊಡಾ ಭೀಮನಾತನ
ನೊರಸಿದನು ಖಳನನುಜೆಯಾತಂ
ಗರಸಿಯಾದಳು ಸತಿ ಹಿಡಿಂಬಿಕೆ ಮಾತೆ ತನಗೆಂದ ॥34॥
೦೩೫ ಇನಿಬರಿಗೆಪತಿ ದೇವಕೀ ...{Loading}...
ಇನಿಬರಿಗೆಪತಿ ದೇವಕೀ ನಂ
ದನನಘಾಸುರಮಥನ ಮಧು ಸೂ
ದನ ಮುರಾಂತಕ ದೈತ್ಯ ಮರ್ದನ ಭಕ್ತಸುರಧೇನು
ಮುನಿಹೃದಯ ಪರ್ಯಂಕ ಕರುಣಾ
ವನಧಿ ರಾವಣ ಕಂಠ ಕಾನನ
ಘನ ಪರಶುವೀಕೃಷ್ಣನೈವರ ಜೀವ ಸಖನೆಂದ ॥35॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಇವರೆಲ್ಲರಿಗೂ ಒಡೆಯನಾಗಿರುವವನು ದೇವಕಿನಂದನನೂ ಅಘಾಸುರಮಥನನೂ ಮಧುಸೂದನನೂ ಮುರಾಂತಕನೂ
ದೈತ್ಯಮರ್ದನನೂ ಭಕ್ತಸುರಧೇನುವೂ ಮುನಿಹೃದಯಪರ್ಯಂಕನೂ ಕರುಣಾವನಧಿಯೂ ರಾವಣಕಂಠಕಾನನಕ್ಕೆ ಘನಪರಶುವೂ
ಆದ ಕೃಷ್ಣನು ಇವರೆಲ್ಲರಿಗೆ ಜೀವಸಖ.
ಪದಾರ್ಥ (ಕ.ಗ.ಪ)
ಇನಿಬರಿಗೆಪತಿ-ಇಷ್ಟು ಜನರಿಗೂ ಒಡೆಯನಾಗಿರುವವನು, ದೇವಕೀ ನಂದನನು-ದೇವಕಿಯ ಮಗ ಕೃಷ್ಣ, ಅವನೇ ಅಘಾಸುರ ಮಥನ-ಅಘಾಸುರನನ್ನು ಕೊಂದವನು, ಮಧು ಸೂದನು-ಮಧು ಎಂಬ ರಾಕ್ಷಸನನ್ನು ಕೊಂದವನು, ಮುರಾಂತಕ-ಮುರನನ್ನು ಕೊಂದವನು
ದೈತ್ಯ ಮರ್ದನ-ಅನೆಕ ದೈತ್ಯರನ್ನು ಕೊಂದವನು, ಭಕ್ತಸುರಧೇನು-ಭಕ್ತರಿಗೆ ಕಾಮಧೇನುವಿನಂತೆ ಬಯಸಿದ್ದನ್ನು ಕೊಡುವವನು, ಮುನಿಹೃದಯ ಪರ್ಯಂಕ-ಋಷಿಗಳ ಹೃದಯಕ್ಕೆ ಮೆತ್ತನೆಯ ಹಾಸುಗೆಯಾಗಿರುವವನು, ಕರುಣಾವನಧಿ-ಕರುಣಾ ಸಾಗರ,
ರಾವಣ ಕಂಠ ಕಾನನ ಘನ ಪರಶು-ರಾವಣನ ಕತ್ತುಗಳೆಂಬ ಕಾಡಿಗೆ ಬಲಿಷ್ಠವಾದ ಕೊಡಲಿಯಾಗಿದ್ದವನು
ಈ ಕೃಷ್ಣನು-ಇಂತಹ ಕೃಷ್ಣನು, ಐವರ-ಆ ಐವರು ಪಾಂಡವರ, ಜೀವ ಸಖ-ಪ್ರಾಣಮಿತ್ರ ಎಂದ
ಮೂಲ ...{Loading}...
ಇನಿಬರಿಗೆಪತಿ ದೇವಕೀ ನಂ
ದನನಘಾಸುರಮಥನ ಮಧು ಸೂ
ದನ ಮುರಾಂತಕ ದೈತ್ಯ ಮರ್ದನ ಭಕ್ತಸುರಧೇನು
ಮುನಿಹೃದಯ ಪರ್ಯಂಕ ಕರುಣಾ
ವನಧಿ ರಾವಣ ಕಂಠ ಕಾನನ
ಘನ ಪರಶುವೀಕೃಷ್ಣನೈವರ ಜೀವ ಸಖನೆಂದ ॥35॥
೦೩೬ ಕ್ರತುವಿದಸುರಾರಾತಿಗೀ ಕ್ರತು ...{Loading}...
ಕ್ರತುವಿದಸುರಾರಾತಿಗೀ ಕ್ರತು
ಪತಿ ಯುಧಿಷ್ಠಿರ ದೂತ ನಾನಿದ
ರತಿಶಯವ ನೀ ಬಲ್ಲೆಯೆನೆ ನೋಡಿದನು ತನ್ನವರ
ಹಿತವಿದಿದರಿಂದಧಿಕ ಪುಣ್ಯ
ಪ್ರತತಿಯುಂಟೇ ರಾಮಚಂದ್ರನ
ವಿತತಿ ಕೀರ್ತಿ ತ್ರೇತೆಯೀ ದ್ವಾಪರದಲಾಯ್ತೆಂದ ॥36॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಯಾಗ ನಡೆಯುವುದು ಶ್ರೀಕೃಷ್ಣನಿಗಾಗಿ, ಇದಕ್ಕೆ ಯಜಮಾನ ಯುಧಿಷ್ಠಿರ, ನಾನು ದೂತ. ಇದರ ಅತಿಶಯವು ಏನೆಂದು ನೀನೇ ಬಲ್ಲೆ. ಹೀಗೆನ್ನಲು ವಿಭೀಷಣ ತನ್ನ ಕಡೆಯವರನ್ನು ನೋಡಿ, ಅನ್ಯ ರೀತಿಯಿಂದ ಇದಕ್ಕಿಂತ ಹೆಚ್ಚು ಪುಣ್ಯರಾಶಿ ಬರಲು ಸಾಧ್ಯವೇ ?
ರಾಮಚಂದ್ರನ ವಿಶಾಲವಾದ ಕೀರ್ತಿ ಇದ್ದ ತ್ರೇತಾಯುಗವೇ ಈ ದ್ವಾಪರದಲ್ಲಿ ಬಂದಂತಾಗಿದೆ. ಎಂದು ಹರ್ಷಗೊಂಡ ವಿಭೀಷಣ.
ಪದಾರ್ಥ (ಕ.ಗ.ಪ)
ಕ್ರತುವಿದು ಅಸುರಾರಾತಿಗೆ-ಈ ಯಜ್ಞ ಕೃಷ್ಣನಿಗಾಗಿ, ಕ್ರತುಪತಿ-ಯಜ್ಞಕ್ಕೆ ಯಜಮಾನ ಯುಧಿಷ್ಟಿರ, ದೂತ ನಾನು-ನಾನು ಅವನಿಗೆ ದೂತನಾಗಿ ಬಂದಿರುವವನು, ಇದರತಿಶಯವ ನೀ ಬಲ್ಲೆ-ಇದರ ಅತಿಶಯತೆಯೇನೆಂಬುದನ್ನು ನೀನೆ ಬಲ್ಲೆ, ಎನೆ-ಎಂದು ಹೇಳಲು ವಿಭೀಷಣನು, ತನ್ನವರ ನೋಡಿದನು-ತನ್ನ ಕಡೆಯವರನ್ನು ನೋಡಿದ, ಹಿತವಿದು ಇದರಿಂದಧಿಕ ಪುಣ್ಯ ಪ್ರತತಿಯುಂಟೆ -ಇದು ಹಿತ. ಇದಕ್ಕಿಂತ ಅತಿಶಯವಾದ ಪುಣ್ಯ ದೊರೆತಿತೇ ? ರಾಮಚಂದ್ರನ ವಿತತಿ ಕೀರ್ತಿ ತ್ರೇತೆ-ಶ್ರೀರಾಮನ ವಿಸ್ತಾರ ಕೀರ್ತಿ
ಪಡೆದ ತ್ರೇತಾಯುಗವೇ ಈ ದ್ವಾಪರದಲ್ಲಾಯ್ತು
ಪಾಠಾನ್ತರ (ಕ.ಗ.ಪ)
ಇತರ ವಿಧದಿಂದಧಿಕ –> ಹಿತವಿದಿದರಿಂದಧಿಕ
ಸಭಾಪರ್ವ, ಮೈ.ವಿ.ವಿ.
ಮೂಲ ...{Loading}...
ಕ್ರತುವಿದಸುರಾರಾತಿಗೀ ಕ್ರತು
ಪತಿ ಯುಧಿಷ್ಠಿರ ದೂತ ನಾನಿದ
ರತಿಶಯವ ನೀ ಬಲ್ಲೆಯೆನೆ ನೋಡಿದನು ತನ್ನವರ
ಹಿತವಿದಿದರಿಂದಧಿಕ ಪುಣ್ಯ
ಪ್ರತತಿಯುಂಟೇ ರಾಮಚಂದ್ರನ
ವಿತತಿ ಕೀರ್ತಿ ತ್ರೇತೆಯೀ ದ್ವಾಪರದಲಾಯ್ತೆಂದ ॥36॥
೦೩೭ ತಾವು ಮತ್ರ್ಯರು ...{Loading}...
ತಾವು ಮತ್ರ್ಯರು ಪೂರ್ವಯುಗದವ
ರಾವು ತಮ್ಮಂತರವ ನೋಡದೆ
ದೇವರೆದೆದಲ್ಲಣದ ಲಂಕೆಯ ತಾವನೀಕ್ಷಿಸದೆ
ಆವುದುಚಿತಾನುಚಿತವೆಂಬುದ
ಭಾವಿಸದ ಗರ್ವಿತರ ನೋಡಿ
ನ್ನಾವ ಸದರವೊ ನಾವೆನುತ ಗರ್ಜಿಸಿತು ಖಳನಿಕರ ॥37॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅವರ ಸಂಭಾಷಣೆಯನ್ನು ಕೇಳುತ್ತಿದ್ದ ರಾಕ್ಷಸ ಪರಿವಾರದವರು ಹೀಗೆ ಪ್ರಲಾಪಿಸತೊಡಗಿದರು. “ತಾವು ಮತ್ರ್ಯರು, ನಾವು ಪೂರ್ವದೇವರು(ರಾಕ್ಷಸರು), ತಮಗೂ ನಮಗೂ ಇರುವ ವ್ಯತ್ಯಾಸವನ್ನು ನೋಡದೆ, ದೇವತೆಗಳ ಹೃದಯವನ್ನು ತಲ್ಲಣಗೊಳಿಸುವಂತಹ ಈ ಲಂಕೆಯನ್ನು ಕಾಣದೆ, ಯಾವುದು ಉಚಿತ ಯಾವುದು ಅನುಚಿತ ಎಂಬುದನ್ನು ಯೋಚಿಸದಂತಹ ಗರ್ವಿಷ್ಠರಾಗಿದ್ದಾರೆ. ಇವರನ್ನು ನೋಡಿ, ಇವರಿಗೆ ನಾವು ಇನ್ನೆಷ್ಟು ಸದರವಾದೆವೋ ! ಎನ್ನುತ್ತಾ ಗರ್ಜಿಸಿದರು.
ಪದಾರ್ಥ (ಕ.ಗ.ಪ)
ಪೂರ್ವಯುಗದವರು - ಪೂರ್ವದೇವತೆಗಳು - ರಾಕ್ಷಸರು
ಖಳನಿಕರ-ಘಟೋತ್ಕಚನ ಮಾತುಗಳನ್ನಾಲಿಸುತ್ತಿದ್ದ ಅಲ್ಲಿನ ರಾಕ್ಷಸ, ಪರಿವಾರದವರು ಕ್ರುದ್ಧರಾದರು, ತಾವು ಮತ್ರ್ಯರು-ತಾವು ಸಾವುಳ್ಳವರು, ಪೂರ್ವಯುಗದವರಾವು-ನಾವು ಹಿಂದಿನ ಯುಗಕ್ಕೆ ಸೇರಿದವರು, ತಮ್ಮ ಅಂತರವ ನೋಡದೆ-ನಮಗೂ ತಮಗೂ ಇರುವ ಅಂತರವನ್ನು ಗಮನಿಸದೆ, ದೇವರೆದೆದಲ್ಲಣದ ಲಂಕೆಯ ತಾವನೀಕ್ಷಿಸದೆ-ದೇವತೆಗಳ ಎದೆಯನ್ನು, ನಡುಗಿಸುವ ಈ ಲಂಕೆಯನ್ನು ಕಾಣದೆ, ಆವುದುಚಿತಾನುಚಿತ ಎಂಬುದ ಭಾವಿಸದ-ಯಾವುದು ಯೋಗ್ಯ ಯಾವುದು, ಅಯೋಗ್ಯ ಎಂಬ ವ್ಯತ್ಯಾಸವನ್ನು ಚಿಂತಿಸಿದಂತಹ, ಗರ್ವಿತರ ನೋಡು-ಗವಿಷ್ಠರಾದವರನ್ನು ನೋಡು, ನಾವು ಇನ್ನಾವ ಸದರವೂ-ಇವರ ದೃಷ್ಟಿಯಲ್ಲಿ, ನಾವು ಇನ್ನೆಷ್ಟು ಸದರವಾಗಿಬಿಡುತ್ತೇವೋ?, ಎನುತ ಗರ್ಜಿಸಿತು-ಎಂದು ಗರ್ಜಿಸಿದರು
ಮೂಲ ...{Loading}...
ತಾವು ಮತ್ರ್ಯರು ಪೂರ್ವಯುಗದವ
ರಾವು ತಮ್ಮಂತರವ ನೋಡದೆ
ದೇವರೆದೆದಲ್ಲಣದ ಲಂಕೆಯ ತಾವನೀಕ್ಷಿಸದೆ
ಆವುದುಚಿತಾನುಚಿತವೆಂಬುದ
ಭಾವಿಸದ ಗರ್ವಿತರ ನೋಡಿ
ನ್ನಾವ ಸದರವೊ ನಾವೆನುತ ಗರ್ಜಿಸಿತು ಖಳನಿಕರ ॥37॥
೦೩೮ ನೊಸಲಿನಲಿ ಕಣ್ಣುಳ್ಳ ...{Loading}...
ನೊಸಲಿನಲಿ ಕಣ್ಣುಳ್ಳ ದೇವನು
ವೊಸೆದು ಲಂಕಾ ದ್ವೀಪಸೀಮೆಗೆ
ಮಿಸುಕಲಮ್ಮನು ಬಂದು ಕಂಡವರಿಲ್ಲ ಪಟ್ಟಣವ
ಬಿಸಜಸಂಭವನಾದಿ ದೇವ
ಪ್ರಸರ ಮಿಗೆ ನಡುಗುತ್ತಲಿಪ್ಪುದು
ನುಸಿಗಳಹ ಮಾನವರ ಪಾಡೇನೆನುತ ಗರ್ಜಿಸಿತು ॥38॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಹಣೆಗಣ್ಣನಾದ ಪರಮೇಶ್ವರನೇ ಲಂಕಾ ದ್ವೀಪದ ಕಡೆಗೆ ಬರಲು ಪ್ರಯತ್ನಿಸುವುದಿಲ್ಲ. ನಮ್ಮ ಪಟ್ಟಣವನ್ನು ಬಂದು ಕಂಡವರೇ
ಇಲ್ಲ. ಬ್ರಹ್ಮನಾದಿಯಾಗಿ ದೇವತೆಗಳ ಸಮೂಹ ಭಯದಿಂದ ನಡುಗುತ್ತವೆ. ಹಾಗಿರುವಾಗ ನುಸಿಗಳಾದ ಈ ಮಾನವರ ಪಾಡೇನು?
ಎಂದು ಅಬ್ಬರಿಸಿದರು.
ಪದಾರ್ಥ (ಕ.ಗ.ಪ)
ನೊಸಲಿನಲಿ ಕಣ್ಣುಳ್ಳ ದೇವನು-ಹೆಣೆಗಣ್ಣನಾದ ಪರಮೇಶ್ವರನು, ಒಸೆದು ಲಂಕಾ ದ್ವೀಪಸೀಮೆಗೆ ಮಿಸುಕಲಮ್ಮನು-ಬಯಸಿ ಈ ಲಂಕಾದ್ವೀಪಕ್ಕೆ, ಬರಬೇಕೆಂದು ಮಿಸುಕಲೂಲಾರ, ಬಂದು ಕಂಡವರಿಲ್ಲ ಪಟ್ಟಣವ-ಈ ಪಟ್ಟಣವನ್ನು ಬಂದು ನೋಡಿದವರೇ ಇಲ್ಲ.
ಬಿಸಜಸಂಭವನಾದಿ ದೇವ ಪ್ರಸರ-ಬ್ರಹ್ಮನೇ ಮೊದಲಾದ ದೇವತೆಗಳ ಸಮೂಹವೇ, ಮಿಗೆ ನಡುಗುತ್ತಲಿಪುದು-ಅತಿಶಯವಾಗಿ ಹೆದರಿ ನಡುಗುತ್ತಿದೆ ಹಾಗಿರುವಾಗ, ನುಸಿಗಳಹ-ನುಸಿಗಳಿಂತಿರುವ, ಮಾನವರ ಪಾಡೇನು-ಮನುಷ್ಯರ ಗತಿಯೇನು ? ಎನುತ ಗರ್ಜಿಸಿತು
ಮೂಲ ...{Loading}...
ನೊಸಲಿನಲಿ ಕಣ್ಣುಳ್ಳ ದೇವನು
ವೊಸೆದು ಲಂಕಾ ದ್ವೀಪಸೀಮೆಗೆ
ಮಿಸುಕಲಮ್ಮನು ಬಂದು ಕಂಡವರಿಲ್ಲ ಪಟ್ಟಣವ
ಬಿಸಜಸಂಭವನಾದಿ ದೇವ
ಪ್ರಸರ ಮಿಗೆ ನಡುಗುತ್ತಲಿಪ್ಪುದು
ನುಸಿಗಳಹ ಮಾನವರ ಪಾಡೇನೆನುತ ಗರ್ಜಿಸಿತು ॥38॥
೦೩೯ ಕಾಳಗದೊಳಿನ್ದೆಮಗೆ ದಿವಿಜೇಂ ...{Loading}...
ಕಾಳಗದೊಳಿಂದೆಮಗೆ ದಿವಿಜೇಂ
ದ್ರಾಳಿಯಲಿ ಸಮಭಟರ ಕಾಣೆವು
ಮೇಳವೇ ಮಝಪೂತು ಮತ್ರ್ಯರ ಸಹಸವೆಮ್ಮೊಡನೆ
ತೋಳನಳವಿಗೆ ಮಲೆತ ಕುರಿಗಳ
ಜಾಲದಂತಿಹುದೆಂದು ಮಂದಕ
ರಾಳಮತಿಗಳು ನಗಲು ಕಂಡನು ಕಲಿ ಘಟೋತ್ಕಚನು ॥39॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಯುದ್ಧದಲ್ಲಿ ದೇವೇಂದ್ರನೇ ಮೊದಲಾದವರಲ್ಲಿಯೂ ನಮಗೆ ಸಮಾನರಾದ ಶೂರರಿಲ್ಲ. ನಮಗೂ ಇವರಿಗೂ ಸಮಜೋಡಿಯೇ? ಮಝ ಪೂತು ! ಈ ಮತ್ರ್ಯರು ನಮ್ಮೊಡನೆ ಸಾಹಸ ತೋರಿಸುತ್ತಾರೆ. ಇದು ತೋಳನ ಸಾಮಥ್ರ್ಯಕ್ಕೆ ಪ್ರತಿಯಾಗಿ ಕುರಿಗಳ ಹಿಂಡು ಕೆರಳಿ ನಿಂತಂತಾಯಿತು. ಹೀಗೆ ಮೂರ್ಖರಾದ ದುರ್ಬುದ್ಧಿಯ ರಾಕ್ಷಸರು ನಗುವುದನ್ನು ಕಲಿ ಘಟೋತ್ಕಚನು ನೋಡಿದ.
ಪದಾರ್ಥ (ಕ.ಗ.ಪ)
ಕಾಳಗದೊಳು-ಯುದ್ಧದಲ್ಲಿ, ಇಂದೆಮಗೆ-ಈಗ ನಮಗೆ, ದಿವಿಜೇಂದ್ರಾಳಿಯಲಿ ಸಮಭಟರ ಕಾಣೆವು-ದೇವತೆಗಳ ಸಮೂಹದಲ್ಲೇ
ನಮಗೆ ಸರಿಸಾಟಿಯಾದ ಯೋಧರನ್ನು ಕಾಣೆವು, ಮತ್ರ್ಯರ ಸಹಸ-ಈ ಮಾನವರ ಸಾಹಸ, ಎಮ್ಮೊಡನೆ ಮೇಳವೇ-ನಮಗೆ ಸಮಾನವಾದಿತೇ ? ತೋಲನಳವಿಗೆ ಮಲೆತ-ತೋಳನ ಶಕ್ತಿಯನ್ನು ಎದುರಿಸಲು ಹೊರಟ, ಕುರಿಗಳ ಹಿಂಡಿನಂತಾದೀತು ! ಎಂದ
ಮಂದ ಕರಾಳಮತಿಗಳು-ಮೂರ್ಖರಾದ ದುರ್ಬುದ್ಧಿಯ ರಾಕ್ಷಸರು, ನಗಲು-ಹಾಸ್ಯಮಾಡಿಕೊಂಡು ನಗಲು, ಕಲಿ ಘಟೋತ್ಕಚನು ಕಂಡನು-ಅದನ್ನು ನೋಡಿದನು
ಮೂಲ ...{Loading}...
ಕಾಳಗದೊಳಿಂದೆಮಗೆ ದಿವಿಜೇಂ
ದ್ರಾಳಿಯಲಿ ಸಮಭಟರ ಕಾಣೆವು
ಮೇಳವೇ ಮಝಪೂತು ಮತ್ರ್ಯರ ಸಹಸವೆಮ್ಮೊಡನೆ
ತೋಳನಳವಿಗೆ ಮಲೆತ ಕುರಿಗಳ
ಜಾಲದಂತಿಹುದೆಂದು ಮಂದಕ
ರಾಳಮತಿಗಳು ನಗಲು ಕಂಡನು ಕಲಿ ಘಟೋತ್ಕಚನು ॥39॥
೦೪೦ ನಾಲಗೆಯ ನೆಣಗೊಬ್ಬುಗಳಲಿ ...{Loading}...
ನಾಲಗೆಯ ನೆಣಗೊಬ್ಬುಗಳಲಿ ಛ
ಡಾಲಿಸಿದರೇನಹುದು ಸಭೆಯಲಿ
ಕಾಳಗದೊಳಿದಿರಾರು ಭೀಮಾರ್ಜುನರ ಭಾರಣೆಗೆ
ಆಳುತನವಂತಿರಲಿ ವೈಷ್ಣವ
ಮೌಳಿ ಬೆಸಸಲಿ ಕೇಳ್ವೆನೆನೆ ಕ
ಟ್ಟಾಳುಗಳ ದೇವನು ವಿಭೀಷಣ ನಗುತಲಿಂತೆಂದ ॥40॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ನಾಲಿಗೆಯ ಕೊಬ್ಬಿನಿಂದ ಕೆರಳಿ ಸಭೆಯಲ್ಲಿ ಮಾತನಾಡುವುದರಿಂದ ಏನಾಯಿತು. ಯುದ್ಧದಲ್ಲಿ ಭೀಮಾರ್ಜುನರಿಗೆ
ಸಮಾನರಾದವರಾರಿದ್ದಾರೆ ? ಶೌರ್ಯದ ಮಾತು ಹಾಗಿರಲಿ. ವೈಷ್ಣವಮೌಳಿಯಾದ ವಿಭೀಷಣನು ಅಪ್ಪಣೆ ಕೊಡಿಸಲಿ, ಕೇಳುತ್ತೇನೆ ಎಂದ ಅವನು. ಆಗ ವೀರಯೋಧರುಗಳ ಪ್ರಭುವಾದ ವಿಭೀಷಣನು ನಗುತ್ತಾ ಹೀಗೆಂದ.
ಪದಾರ್ಥ (ಕ.ಗ.ಪ)
ನಾಲಗೆಯ ನೆಣಗೊಬ್ಬುಗಳಲಿ ಛಡಾಲಿಸಿದರೇನಹುದು ಸಭೆಯಲಿ-ಸಭೆಯಲ್ಲಿ, ಕುಳಿತುಕೊಂಡು ನಾಲಗೆಯ ಕೊಬ್ಬಿನಿಂದ ಕೆರಳಿ ಮಾತನಾಡಿದರೆ ಏನಾದೀತು ? ಭೀಮಾರ್ಜುನರ ಭಾರಣೆಗೆ-ಭೀಮಾರ್ಜುನರ ಸಾಮಥ್ರ್ಯಕ್ಕೆ ಕಾಳಗದಲ್ಲಿ-ಯುದ್ಧದಲ್ಲಿ
ಇದಿರಾರು-ಎದುರು ನಿಲ್ಲಬಲ್ಲವರಾರು ? ಆಳುತನವಂತಿರಲಿ-ನಿಮ್ಮ ಶೌರ್ಯದ ವಿಷಯ ಹಾಗಿರಲಿ ವೈಷ್ಣವಮೌಳಿ ಬೆಸಸಲಿ ಕೇಳ್ವೆನು-ವಿಷ್ಣು ಭಕ್ತರಲ್ಲಿ ಶಿರಃಪ್ರಾಯನಾದ ವಿಭೀಷಣನೇ ಅಪ್ಪಣೆ ಕೊಡಿಸಲಿ, ನಾನು ಕೇಳುತ್ತೇನೆ, ಎನೆ-ಎನ್ನಲು, ಕಟ್ಟಾಳುಗಳ ದೇವನು ವಿಭೀಷಣ-ವೀರ ಯೋಧರುಗಳ ಪ್ರಭುವಾದ ವಿಭೀಷಣನು, ನಗುತಲಿಂತೆಂದ-ನಗುತ್ತಾ ಹೀಗೆ ಹೇಳಿದ
ಮೂಲ ...{Loading}...
ನಾಲಗೆಯ ನೆಣಗೊಬ್ಬುಗಳಲಿ ಛ
ಡಾಲಿಸಿದರೇನಹುದು ಸಭೆಯಲಿ
ಕಾಳಗದೊಳಿದಿರಾರು ಭೀಮಾರ್ಜುನರ ಭಾರಣೆಗೆ
ಆಳುತನವಂತಿರಲಿ ವೈಷ್ಣವ
ಮೌಳಿ ಬೆಸಸಲಿ ಕೇಳ್ವೆನೆನೆ ಕ
ಟ್ಟಾಳುಗಳ ದೇವನು ವಿಭೀಷಣ ನಗುತಲಿಂತೆಂದ ॥40॥
೦೪೧ ಕಾಲವಾವುದು ತನ್ನ ...{Loading}...
ಕಾಲವಾವುದು ತನ್ನ ಶಕ್ತಿಯ
ಕೀಳು ಮೇಲಾವುದು ಸಹಾಯದ
ಮೇಲು ಸೆರಗೇನೆಂದು ನೋಡದೆ ಬಯಲ ಗರ್ವದಲಿ
ಸೋಲುವುದು ಜಗವಿಹಪರದ ಗತಿ
ಕಾಳಹುದು ಖಳರರಿಯರದನು
ಬ್ಬೇಳುವರು ಬರಿದೆಂದು ಜರೆದನು ತನ್ನ ಮಂತ್ರಿಗಳ ॥41॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಕಾಲ ಯಾವುದು, ತನ್ನ ಶಕ್ತಿಯ ಕೀಳು ಮೇಲಾವುದು ? ಯಾವ ಆಶ್ರಯದಿಂದ ನಮಗೆ ಸಹಾಯ ಬರುತ್ತದೆ ಎಂಬುದನ್ನು ನೋಡದೆ ವ್ಯರ್ಥವಾದ ಗರ್ವದಿಂದ ಈ ಜಗತ್ತು ಸೋಲುತ್ತದೆ. ಅದರಿಂದ ಇಹಪರದ ಗತಿ ಹಾಳಾಗುತ್ತದೆ. ಅದನ್ನು ನೀಚರು ಅರ್ಥ ಮಾಡಿಕೊಳ್ಳುವುದಿಲ್ಲ. ಸುಮ್ಮನೆ ಅಬ್ಬರಿಸುತ್ತಾರೆ. ಎಂದು ವಿಭೀಷಣ ತನ್ನ ಮಂತ್ರಿಗಳನ್ನೇ ನಿಂದಿಸಿದ.
ಪದಾರ್ಥ (ಕ.ಗ.ಪ)
ಕಾಲವಾವುದು ತನ್ನ ಶಕ್ತಿಯ ಕೀಳು ಮೆಲಾವುದು-ಕಾಲವೆಂಥಹುದು, ತನ್ನ ಸಾಮಥ್ರ್ಯದ ಮೇಲು ಕೀಳು ಎಂಬುದೆಲ್ಲಿಯದು ? ಸಹಾಯದ ಮೇಲು ಸೆರಗೇನೆಂದು ನೋಡದೆ-ಯಾವ ಆಶ್ರಯದಿಂದ ಸಹಾಯ ಬರುತ್ತಿದೆ ಎಂಬುದನ್ನು ಗಮನಿಸಿದೆ ಬಯಲ ಗರ್ವದಲಿ-ವ್ಯರ್ಥವಾದ ಗರ್ವದಿಂದ ಸೋಲುವುದು ಜಗವು-ಜಗತತು ಸೋಲುತ್ತದೆ ಇಹಪರದ ಗತಿಕಾಳಹುದು-ಇಹಲೋಕದ ಹಾಗೂ ಪರಲೋಕದ ಸ್ಥಿತಿ ಹಾಳಾಗುತ್ತದೆ ಖಳರು ಅರಿಯರದನು-ದುಷ್ಟರು ಇದನ್ನು ತಿಳಿಯಲಾರರು ಉಬ್ಬೇಳುವರು ಬರಿದೆ-ವ್ಯರ್ಥವಾಗಿ ಹಾರಾಡುತ್ತಾರೆ ಎಂದು ಜರೆದನು ತನ್ನ ಮಂತ್ರಿಗಳ-ಹೀಗೆ ತನ್ನ ಆ ಮಂತ್ರಿಗಳನ್ನೇ ನಿಂದಿಸಿದ
ಮೂಲ ...{Loading}...
ಕಾಲವಾವುದು ತನ್ನ ಶಕ್ತಿಯ
ಕೀಳು ಮೇಲಾವುದು ಸಹಾಯದ
ಮೇಲು ಸೆರಗೇನೆಂದು ನೋಡದೆ ಬಯಲ ಗರ್ವದಲಿ
ಸೋಲುವುದು ಜಗವಿಹಪರದ ಗತಿ
ಕಾಳಹುದು ಖಳರರಿಯರದನು
ಬ್ಬೇಳುವರು ಬರಿದೆಂದು ಜರೆದನು ತನ್ನ ಮಂತ್ರಿಗಳ ॥41॥
೦೪೨ ಅದರಿನೀ ದ್ವಾಪರದಲೀ ...{Loading}...
ಅದರಿನೀ ದ್ವಾಪರದಲೀ ಹರಿ
ಯುದಯಿಸಿದನಾ ಕಾಲದಲಿ ಸಲ
ಹಿದನು ನಮ್ಮನು ಹಿಡಿದದನಿವರನು ವರ್ತಮಾನದಲಿ
ಪದದ ದರ್ಪದಲಂಬುಜಾಕ್ಷನ
ಪದವ ಮರೆದರೆ ಪಾತಕದ ದು
ರ್ಗದಲಿ ಕೆಡಹನೆ ನಮ್ಮನೆಂದು ವಿಭೀಷಣನು ನುಡಿದ ॥42॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಆದ್ದರಿಂದ ಈ ದ್ವಾಪರ ಯುಗದಲ್ಲಿ ಕೃಷ್ಣ ಉದಯಿಸಿದ್ದಾನೆ. ಆ ಕಾಲದಲ್ಲಿ ನಮ್ಮನ್ನು ಕಾಪಾಡಿದ. ಈ ಕಾಲದಲ್ಲಿ ಇವರನ್ನು ಹಿಡಿದಿದ್ದಾನೆ. ಸ್ಥಾನದ ಗರ್ವದಿಂದ ನಾವು ಶ್ರೀಹರಿಯನ್ನು ಮರೆತರೆ ನಮ್ಮನ್ನು ಅವನು ಪಾಪದ ದುರ್ಗದಲ್ಲಿ ಕೆಡಹುವುದಿಲ್ಲವೇ? ಎಂದ.
ಪದಾರ್ಥ (ಕ.ಗ.ಪ)
ಅದರಿನೀ ದ್ವಾಪರದಲೀ-ಶ ಕಾರಣದಿಂದ ಈ ದ್ವಾಪರ ಯುಗದಲ್ಲಿ, ಹರಿಯುದಯಿಸಿದನು-ಕೃಷ್ಣನು ಹುಟ್ಟಿದ, ಆ ಕಾಲದಲಿ ಸಲಹಿದನು ನಮ್ಮನು-ಆ ಕಾಲದಲ್ಲಿ ಇವನೇ ನಮ್ಮನ್ನು ಕಾಪಾಡಿದ, ಹಿಡಿದದನಿವರನು ವರ್ತಮಾನದಲಿ-ಈ ಕಾಲದಲ್ಲಿ ಇವರನ್ನು ಹಿಡಿದಿದ್ದಾನೆ, ಪದದ ದರ್ಪದಲಿ-ಪದವಿಯ ಗರ್ವದಿಂದ, ಅಂಬುಜಾಕ್ಷನ ಪದವ ಮೆರೆದರೆ-ಹರಿಯ ಪಾದಗಳನ್ನು ಮರೆತರೆ,
ನಮ್ಮನು ಪಾತಕದ ದುರ್ಗದಲಿ ಕೆಡಹನೆ-ಪಾಪದ ದುರ್ಗದಲ್ಲಿ ನಮ್ಮ ಕೆಡುವುವುದಿಲ್ಲವೇ ? ಎಂದು ವಿಭೀಷಣನು ನುಡಿದ-ವಿಭೀಷ್ಣ ಹೀಗೆ ಹೇಳಿದ
ಮೂಲ ...{Loading}...
ಅದರಿನೀ ದ್ವಾಪರದಲೀ ಹರಿ
ಯುದಯಿಸಿದನಾ ಕಾಲದಲಿ ಸಲ
ಹಿದನು ನಮ್ಮನು ಹಿಡಿದದನಿವರನು ವರ್ತಮಾನದಲಿ
ಪದದ ದರ್ಪದಲಂಬುಜಾಕ್ಷನ
ಪದವ ಮರೆದರೆ ಪಾತಕದ ದು
ರ್ಗದಲಿ ಕೆಡಹನೆ ನಮ್ಮನೆಂದು ವಿಭೀಷಣನು ನುಡಿದ ॥42॥
೦೪೩ ತರಿಸಿದನು ಭಣ್ಡಾರದಲಿ ...{Loading}...
ತರಿಸಿದನು ಭಂಡಾರದಲಿ ಪರಿ
ಪರಿಯ ಪೆಟ್ಟಿಗೆಗಳನು ಕಂಠಾ
ಭರಣ ಕಂಕಣ ವಜ್ರ ಮಾಣಿಕ ಮರಕತಾವಳಿಯ
ಚರಣ ನೂಪುರ ಝಳವಟಿಗೆಯುಂ
ಗುರ ಕಿರೀಟಾಂಗದ ಸುಕರ್ಣಾ
ಭರಣವನು ತೆಗೆಸಿದನು ಭೀಮಕುಮಾರ ನೋಡೆನುತ ॥43॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅನಂತರ ವಿಭೀಷಣ ತನ್ನ ಭಂಡಾರದಿಂದ ಬಗೆಬಗೆಯ ಪೆಟ್ಟಿಗೆಗಳನ್ನು ತರಿಸಿದ. ಅವುಗಳಿಂದ ಒಂದೊಂದಾಗಿ ಕಂಠಾಭರಣ
ಕಂಕಣ, ವಜ್ರ ಮಾಣಿಕ್ಯ ಮರಕತಾವಳಿಗಳಿಂದ ತಯಾರಿಸಿದ ಚರಣನೂಪುರ, ಝಳವಟಿಗೆ, ಉಂಗುರ, ಕಿರೀಟ, ಅಂಗದ, ಕಿವಿಯ ಆಭರಣ ಎಂದು ತೆಗೆದು ಭೀಮಕುಮಾರ ನೋಡು ಎಂದು ತೋರಿಸಿದ.
ಪದಾರ್ಥ (ಕ.ಗ.ಪ)
ಕಿರೀಟ, ಅಂಗದ-ತೋಳ್ಬಳೆ ಝಳವಟಿಗೆ-ಕಾಲಿನ ಒಂದು ಆಭರಣ (?)
ತರಿಸಿದನು ಭಂಡಾರದಲಿ ಪರಿಪರಿಯ ಪೆಟ್ಟಿಗೆಗಳನು-ತನ್ನ ಭಂಡಾರದಿಂದ ಬಗೆ ಬಗೆಯ ಪೆಟ್ಟಿಗೆಗಳನ್ನು ತರಿಸಿದ, ಕಂಠಾಭರಣ-ಕತ್ತಿನ ಆಭರಣ, ಮರಕತ-ಪಚ್ಚೆ, ಚರನ ನೂಪುರ-ಕಾಲಿಗೆ ಕಟ್ಟಿಕೊಳ್ಳುವ ಗೆಜ್ಜೆ, ಝಳವಟಿಗೆ-? ಅಂಗದ-ತೋಳಬಳೆ, ಭೀಮಕುಮಾರ-ಘಟೋತ್ಕಚ
ಮೂಲ ...{Loading}...
ತರಿಸಿದನು ಭಂಡಾರದಲಿ ಪರಿ
ಪರಿಯ ಪೆಟ್ಟಿಗೆಗಳನು ಕಂಠಾ
ಭರಣ ಕಂಕಣ ವಜ್ರ ಮಾಣಿಕ ಮರಕತಾವಳಿಯ
ಚರಣ ನೂಪುರ ಝಳವಟಿಗೆಯುಂ
ಗುರ ಕಿರೀಟಾಂಗದ ಸುಕರ್ಣಾ
ಭರಣವನು ತೆಗೆಸಿದನು ಭೀಮಕುಮಾರ ನೋಡೆನುತ ॥43॥
೦೪೪ ನೀಲಮಣಿ ಕಾನ್ತಿಗಳ ...{Loading}...
ನೀಲಮಣಿ ಕಾಂತಿಗಳ ಹೊಯ್ಲಲಿ
ಕಾಳ ರಜನಿಯೊಲಾಯ್ತು ಮುತ್ತಿನ
ಢಾಳ ಢವಳಿಸಲಾಯ್ತು ಚಂದ್ರಿಕರ ತನುವ ಡೊಕ್ಕರಿಸಿ
ಮೇಗೆ ಹೊಂಬಿಸಿಲಾಯ್ತು ಮಾಣಿಕ
ದೇಳಗೆಯ ಲಹರಿಯಲಿ ವರ ರ
ತ್ನಾಳಿ ರುಚಿಯಲಿ ಚಂಡಿಯಾಯಿತು ದಿವಸವಂದಿನಲಿ ॥44॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಆ ಒಡವೆಗಳಿಂದ ನೀಲಮಣಿಯ ಕಾಂತಿ ಹರಡಿದಾಗ ರಾತ್ರಿ ಕವಿದಂತಾಯಿತು. ಮುತ್ತಿನ ಹೊಳಪು ಪ್ರಕಾಶಿಸಿದಾಗ
ಬೆಳುದಿಂಗಳು ಬಂದಂತಾಯಿತು. ಮಾಣಿಕ್ಯದ ರಶ್ಮಿಗಳ ಅತಿಶಯತೆಯಿಂದ ಮೇಲೆ ಹೊಂಬಿಸಲು ಹರಡಿದಂತಾಯಿತು.
ಶ್ರೇಷ್ಠವಾದ ಆ ರತ್ನಗಳ ಕಾಂತಿಯಿಂದ ಅಂದು ಪ್ರಕೃತಿಯ ವಿರುದ್ಧ ನಿಯಮಗಳು ಒಂದೇ ಕಡೆ ಸೇರಿದಂತಾಯಿತು.
ಪದಾರ್ಥ (ಕ.ಗ.ಪ)
ನೀಲಮಣಿ ಕಾಂತಿಗಳ ಹೊಯ್ಲಲಿ-ನೀಲ ರತ್ನದ ಕಾಂತಿ ದಟ್ಟವಾಗಿ ಹರಡಿದಾಗ ಅದರ ಪ್ರಭಾವದಿಂದ ಕಾಳ ರಜನಿಯೊಲಾಯ್ತು-ಕಾಳ ರಾತ್ರಿಯಂತೆ ಕತ್ತಲು ಕವಿದಂತಾಯಿತು ಮುತ್ತಿನ ಢಾಳ ಢವಳಿಸಲು-ಮುತ್ತುಗಳ ಕಾಂತಿ ಪ್ರಕಾಶಮಾನವಾಗಿ ಬೆಳಗಿದಾಗ ಚಂದ್ರಿಕೆ-ಬೆಳುದಿಂಗಳಿನಂತಾಯಿತು, ಮಾಣಿಕದ ಏಳಗೆಯ ಲಹರಿಯಲಿ-ಮಾಣಿಕ್ಯದ ಏರಿದ ಹೊಳಪಿನ ಅಲೆಗಳಲ್ಲಿ, ತನುವ ಡೊಕ್ಕರಿಸಿ-ದೇಹವನ್ನು ಅಪ್ಪಳಿಸಿ, ಮೇಗೆ-ಮೇಲು ಭಾಗದಲ್ಲಿ ಹೊಂಬಿಸಿಲಾಯ್ತು, ವರ ರತ್ನಾಳಿ ರುಚಿಯಲಿ-ಶ್ರೇಷ್ಠವಾದ ಆ ರತ್ನಗಳ ಕಾಂತಿಯಿಂದ
ಅಂದಿನಲಿ-ಆ ದಿನ, ದಿವಸ-ಹಗಲು, ಚಂಡಿಯಾಯಿತು-ಚಂಡಿಯಂತೆ ಪ್ರಕೃತಿಗೆ ವಿರುದ್ಧವಾಗಿ ತೋರಿತು
ಮೂಲ ...{Loading}...
ನೀಲಮಣಿ ಕಾಂತಿಗಳ ಹೊಯ್ಲಲಿ
ಕಾಳ ರಜನಿಯೊಲಾಯ್ತು ಮುತ್ತಿನ
ಢಾಳ ಢವಳಿಸಲಾಯ್ತು ಚಂದ್ರಿಕರ ತನುವ ಡೊಕ್ಕರಿಸಿ
ಮೇಗೆ ಹೊಂಬಿಸಿಲಾಯ್ತು ಮಾಣಿಕ
ದೇಳಗೆಯ ಲಹರಿಯಲಿ ವರ ರ
ತ್ನಾಳಿ ರುಚಿಯಲಿ ಚಂಡಿಯಾಯಿತು ದಿವಸವಂದಿನಲಿ ॥44॥
೦೪೫ ತೆಗೆಸಿದನು ಗಜದನ್ತಮಯ ...{Loading}...
ತೆಗೆಸಿದನು ಗಜದಂತಮಯ ಪೆ
ಟ್ಟಿಗೆಗಳನು ಕರ್ಪುರದ ತವಲಾ
ಯಿಗಳ ಹವಳದ ಮಂಚವನು ಮಣಿಖಚಿತ ರಚನೆಗಳ
ಬಿಗಿದ ವಜ್ರಪ್ರಭೆಯ ಹೊನ್ನಾ
ಯುಗದ ಖಡ್ಗ ಕಠಾರಿಗಳ ಝಗ
ಝಗಿಪ ಹೊಂಗೆಲಸದ ವಿಚಿತ್ರದ ಜೋಡು ಸೀಸಕವ ॥45॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಆನೆಗಳ ದಂತಗಳಿಂದ ತುಂಬಿದ್ದ ಪೆಟ್ಟಿಗೆಗಳನ್ನು, ಕರ್ಪೂರದ, ಕರ್ಪೂರದ ಭರಣಿಗಳನ್ನು, ಮಣಿಖಚಿತ ರಚನೆಗಳನ್ನು ಹವಳದ ಮಂಚವನ್ನು , ವಜ್ರಖಚಿತವಾದ ಚಿನ್ನದ ಹಿಡಿಯುಳ್ಳ ಖಡ್ಗಗಳನ್ನು ಕಠಾರಿಗಳನ್ನೂ ಝಗಝಗಿಸುವ ಚಿನ್ನದ ಕೆಲಸ ಮಾಡಿದ ಅಂಗರಕ್ಷೆಗಳನ್ನೂ ಸೀಸಕಗಳನ್ನೂ ಹೊರತೆಗೆಸಿದ.
ಪದಾರ್ಥ (ಕ.ಗ.ಪ)
ಗಜದಂತಮಯ ಪೆಟ್ಟಿಗೆಗಳನು ತೆಗೆಸಿದನು-ಆನೆಯ ದಂತದಿಂದಲೇ, ತಯಾರಿಸಿದಂತಹ ಪೆಟ್ಟಿಗೆಗಳನ್ನು ತೆಗೆಸಿದನು, ಕರ್ಪುರದ ತವಲಾಯಿಗಳ-ಕರ್ಪೂರದ ಭರಣಿಗಳನ್ನು ತರಿಸಿದ, ಮಣಿಖಚಿತ ರಚನೆಗಳ-ರತ್ನಗಳಿಂದ ಖಚಿತವಾದ ಹವಳದ ಮಂಚವನು ತರಿಸಿದ
ಬಿಗಿದ ವಜ್ರಪ್ರಭೆಯ-ಖಚಿತವಾದ ವಜ್ರಗಳಿಂದ ಪ್ರಕಾಶಮಾನವಾದ, ಹೊನ್ನಾಯುಗದ-ಚಿನ್ನದ ಹಿಡಿಯನ್ನುಳ್ಳ, ಖಡ್ಗ ಕಠಾರಿಗಳ-ಖಡ್ಗಗಳನ್ನು, ಕಠಾರಿಗಳನ್ನು ತರಿಸಿದ, ಝಗಝಲಿಪ ಕೊಂಗೆಲಸದ-ಥಳಥಳಿಸುವ ಚಿನ್ನದ ಕುಸುರಿ ಕೆಲಸಮಾಡಿದ್ದ, ವಿಚಿತ್ರದ-ಮನೋಹರವಾದ, ಜೋಡು ಸೀಸಿಕವ-ಅಂಗರಕ್ಷೆಗಳನ್ನು ತಲೆಯ ಕಾಪನ್ನು ತರಿಸಿದ
ಮೂಲ ...{Loading}...
ತೆಗೆಸಿದನು ಗಜದಂತಮಯ ಪೆ
ಟ್ಟಿಗೆಗಳನು ಕರ್ಪುರದ ತವಲಾ
ಯಿಗಳ ಹವಳದ ಮಂಚವನು ಮಣಿಖಚಿತ ರಚನೆಗಳ
ಬಿಗಿದ ವಜ್ರಪ್ರಭೆಯ ಹೊನ್ನಾ
ಯುಗದ ಖಡ್ಗ ಕಠಾರಿಗಳ ಝಗ
ಝಗಿಪ ಹೊಂಗೆಲಸದ ವಿಚಿತ್ರದ ಜೋಡು ಸೀಸಕವ ॥45॥
೦೪೬ ಗುಳವ ರೆಞ್ಚೆಯ ...{Loading}...
ಗುಳವ ರೆಂಚೆಯ ಹಕ್ಕರಿಕೆ ಹ
ಲ್ಲಳವ ಮಣಿ ಕಾಂಚನಮಯಂಗಳ
ಕೆಲಸ ಗತಿಗಳ ಹೇಮರೇಖೆಯ ವಿವಿಧ ಚಿತ್ರಗಳ
ಬಿಳಿಯ ಚೌರಿಯ ಹೊರೆಗಳುರು ಹ
ತ್ತಳದ ಕಟ್ಟಿಗೆ ಬೇಂಟೆಗಳ ಹದ
ವಿಲು ತದೀಯ ಶರಾಳಿಗಳ ತಂದಿಳುಹಿದರು ಚರರು ॥46॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಚಿನ್ನದ ದಾರಗಳಿಂದ ಕಸೂತಿ ಕೆಲಸ ಮಾಡಿದ್ದಂತಹ ಚಿನ್ನದ ರೇಖೆಗಳ ವಿವಿಧ ಚಿತ್ರಗಳನ್ನು ರಚಿಸಿದಂತಹ ಮತ್ತು
ರತ್ನಖಚಿತವಾಗಿದ್ದಂತಹ ಗುಳ ರೆಂಚೆ ಹಕ್ಕರಿಕೆ ಹಲ್ಲಣ ಇತ್ಯಾದಿ ಆನೆ ಕುದುರೆಗಳಿಗೆ ಹಾಕುವ ಅಲಂಕಾರದ ವಸ್ತುಗಳನ್ನು
ಬಿಳಿಯ ಚೌರಿಯ ಹೊರೆಗಳನ್ನು ಚಾವಟಿಯ ಹಿಡಿಗಳನ್ನು ಬೇಟೆಗೆ ಬಳಸುವ ಹದವಾದ ಬಿಲ್ಲು ಅದಕ್ಕೆ ಬಳಸುವ ಬಾಣಗಳು ಇವನ್ನೆಲ್ಲ ಸೇವಕರು ತಂದಿಳಿಸಿದರು.
ಪದಾರ್ಥ (ಕ.ಗ.ಪ)
ಗುಳ, ರೆಂಚೆ, ಹಕ್ಕರಿಕೆ, ಹಲ್ಲಳ-ಇವು ಆನೆ, ಕುದುರೆಗಳಿಗೆ ಹೊದಿಸುವ ವಸ್ತುಗಳು
ಮಣಿ ಕಾಂಚನಮಯಂಗಳ-ರತ್ನಗಳು ಮತ್ತು ಚಿನ್ನದಿಂದ ಖಚಿತವಾದ, ಕೆಲಸ ಗತಿಗಳ ಹೇಮರೇಖೆಯ ವಿವಿಧ ಚಿತ್ರಗಳ-ಚಿನ್ನದ ದಾರಗಳಿಂದ, ಕಸೂತಿ ಕೆಲಸ ಮಾಡಿದ್ದಂತಹ, ವಿವಿಧ ಚಿತ್ರಗಳನ್ನು ರಚಿಸಿದ್ದಂತಹ, ಗುಳುವ ರೆಂಚೆಯ ಹಕ್ಕರಿಕೆ ಹಲ್ಲಳವ-ಆನೆ ಕುದುರೆಗಳಿಗೆ ಅಲಂಕಾರವಾಗಿ, ಹಾಕುವ ಗುಳರೆಂಚೆ ಹಕ್ಕರಿಕೆ ಹಲ್ಲಣ ಇತ್ಯಾದಿ ವಸ್ತುಗಳನ್ನು, ಉರು ಹತ್ತಳದ ಕಟ್ಟಿಗೆ-ಚಾವಟಿಯ ಹಿಡಿಗಳನ್ನು, ಬೇಂಟೆಗಳ ಹದವಿಲು-ಬೇಟೆಗಳಲ್ಲಿ ಬಳಸುವ ಹದವಾದ ಬಿಲ್ಲು, ತದೀಯ ಶರಾಳಿಗಳ-ಅದರಲ್ಲಿ ಬಳಸುವ ಬಾಣಗಳನ್ನು
ಚರರು ತಂದಿಳುಹಿದರು-ವಿಭಿಷಣನ ಸೇವಕನು ತಂದು ಇಳಿಸಿದರು,
ಮೂಲ ...{Loading}...
ಗುಳವ ರೆಂಚೆಯ ಹಕ್ಕರಿಕೆ ಹ
ಲ್ಲಳವ ಮಣಿ ಕಾಂಚನಮಯಂಗಳ
ಕೆಲಸ ಗತಿಗಳ ಹೇಮರೇಖೆಯ ವಿವಿಧ ಚಿತ್ರಗಳ
ಬಿಳಿಯ ಚೌರಿಯ ಹೊರೆಗಳುರು ಹ
ತ್ತಳದ ಕಟ್ಟಿಗೆ ಬೇಂಟೆಗಳ ಹದ
ವಿಲು ತದೀಯ ಶರಾಳಿಗಳ ತಂದಿಳುಹಿದರು ಚರರು ॥46॥
೦೪೭ ಬಲಮುರಿಯ ಶಙ್ಖಗಳ ...{Loading}...
ಬಲಮುರಿಯ ಶಂಖಗಳ ಗಂಧದ
ಬಲು ಹೊರೆಯ ಕೃಷ್ಣಾಗರುವಿನೊ
ಟ್ಟಿಲ ಸುರಂಗಿನ ಪಟ್ಟಿಪಟ್ಟಾವಳಿಯ ದಿಂಡುಗಳ
ಪುಲಿದೊಗಲ ಕೃಷ್ಣಾಜಿನಂಗಳ
ಹೊಳೆವ ಹೊಂಗೊಪ್ಪರಿಗೆ ಚಿತ್ರಾ
ವಳಿಯ ಸತ್ತಿಗೆ ಹೇಮಘಟ ಸಂತತಿಯನೊಟ್ಟಿದರು ॥47॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಬಲಮುರಿಯ ಶಂಖಗಳನ್ನು ಶ್ರೀಗಂಧದ ಕೊರಡುಗಳ ಹೊರೆಯನ್ನೂ ಕೃಷ್ಣಾಗರುವಿನ ರಾಶಿಯನ್ನು ಒಳ್ಳೆಯ ರಂಗುರಂಗಿನ
ಪಟ್ಟಾವಳಿಯ ದಿಂಡುಗಳನ್ನು ಹುಲಿಯ ಚರ್ಮಕೃಷ್ಣಾಜಿನಗಳನ್ನೂ ಹೊಳೆಯುವ ಚಿನ್ನದ ಕೊಪ್ಪರಿಗೆಗಳನ್ನು ಚಿತ್ರಾವಳಿಯ ಛತ್ರಿಗಳನ್ನೂ ಚಿನ್ನದ ಬಿಂದಿಗೆಗಳನ್ನು ರಾಶಿ ರಾಶಿ ತಂದುಹಾಕಿದರು.
ಪದಾರ್ಥ (ಕ.ಗ.ಪ)
ಒಟ್ಟಿಲು-ರಾಶಿ, ಅಗರು- ಅಗಿಲ್, ಸುಗಂಧದ ಮರ, ಕೃಷ್ಣಾಗರು-ಕಪ್ಪಾಗಿರುವ ಅಗರು
ಬಲಮುರಿಯ ಶಂಖಗಳ-ಬಲಕ್ಕೆ ತಿರುಗಿದ ಶಂಖಗಳನ್ನು, ಗಂಧದ ಬಲು ಹೊರೆಯ-ಶ್ರೀಗಂಧದ ಒಂದು ದೊಡ್ಡ ಹೊರೆಯನ್ನು,
ಕೃಷ್ಣಾಗರುವಿನ ಒಟ್ಟಿಲ-ಕೃಷ್ಣಾ ಗುರುವಿನ ರಾಶಿಯನ್ನು, ಸುರಂಗಿನ ಪಟ್ಟಿಪಟ್ಟಾವಳಿಯ ದಿಂಡುಗಳ-ರಂಗುರಂಗಿನ ಪಟಾವಳಿಯ ದಿಂಡುಗಳನ್ನು, ಹುಲಿದೊಗಲ ಕೃಷ್ಣಾಜಿನಂಗಳ-ಹುಲಿಯ ಚರ್ಮ ಹಾಗೂ ಜಿಂಕೆಯ ಚರ್ಮವನ್ನು, ಹೊಳೆವ ಹೊಂಗೊಪ್ಪರಿಗೆ-ಹೊಳೆಯುವ ಚಿನ್ನದ ಕೊಪ್ಪರಿಗೆಗಳನ್ನು, ಚಿತ್ರಾವಳಿಯ ಸತ್ತಿಗೆ-ಚಿತ್ರಗಳ ರಚನೆಯುಳ್ಳ ಛತ್ರಿಗಳನ್ನು, ಹೇಮಘಟ ಸಂತತಿಯ-ಚಿನ್ನದ ಬಿಂದಿಗೆಗಳ ರಾಶಿಯನ್ನು, ಒಟ್ಟಿದರು-ತಂದು ಗುಡ್ಡೆ ಹಾಕಿದರು
ಮೂಲ ...{Loading}...
ಬಲಮುರಿಯ ಶಂಖಗಳ ಗಂಧದ
ಬಲು ಹೊರೆಯ ಕೃಷ್ಣಾಗರುವಿನೊ
ಟ್ಟಿಲ ಸುರಂಗಿನ ಪಟ್ಟಿಪಟ್ಟಾವಳಿಯ ದಿಂಡುಗಳ
ಪುಲಿದೊಗಲ ಕೃಷ್ಣಾಜಿನಂಗಳ
ಹೊಳೆವ ಹೊಂಗೊಪ್ಪರಿಗೆ ಚಿತ್ರಾ
ವಳಿಯ ಸತ್ತಿಗೆ ಹೇಮಘಟ ಸಂತತಿಯನೊಟ್ಟಿದರು ॥47॥
೦೪೮ ಕೀಳಿಸಿದನರಮನೆಯ ಹೇಮದ ...{Loading}...
ಕೀಳಿಸಿದನರಮನೆಯ ಹೇಮದ
ತಾಳ ಮರ ಹದಿನಾಲ್ಕನಧ್ವರ
ಶಾಲೆಯಿದಿರಲಿ ತೋರಣ ಸ್ತಂಭಂಗಳಹವೆಂದು
ಮೇಲೆ ರಾಕ್ಷಸ ಟಂಕದಚ್ಚಿನ
ಜಾಳಿಗೆಗಳನು ತರಿಸಿ ಕಟ್ಟಿಸಿ
ಮೇಲು ಮುದ್ರೆಗಳಿಕ್ಕಿದವು ಕರೆಸಿದನು ಹೊರೆಯವರ ॥48॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಯಾಗಶಾಲೆಯ ಮುಂಭಾಗದಲ್ಲಿ ತೋರಣ ಸ್ತಂಭಗಳನ್ನಾಗಿಸಬಹುದೆಂದು ತನ್ನರಮನೆಯಲ್ಲಿದ್ದ ಹದಿನಾಲ್ಕು ಚಿನ್ನದ ತಾಳೆಮರಗಳನ್ನು ಕೀಳಿಸಿದ . ರಾಕ್ಷಸ ಟಂಕಿಸಿದ ಜಾಳಿಗೆಗಳನ್ನು ತರಿಸಿ ಕಟ್ಟಿಸಿ ಅವಕ್ಕೆ ಮೇಲುಮುದ್ರೆಯನ್ನು ಹಾಕಿಸಿದ. ಅನಂತರ ಅವುಗಳನ್ನೆಲ್ಲ ಹೊರುವುದಕ್ಕಾಗಿ ಆಳುಗಳನ್ನು ಕರೆಸಿದ.
ಪದಾರ್ಥ (ಕ.ಗ.ಪ)
ಅಧ್ವರ ಶಾಲೆಯಿದಿರಲಿ ತೋರಣ ಸ್ತಂಭಂಗಳಹವೆಂದು-ಯಾಗಶಾಲೆಯ ಮುಂದೆ ತೋರಣ ಸ್ತಂಭಗಳಾಗುವುವೆಂದು
ಅರಮನೆಯ-ತನ್ನ ಅರಮನೆಯ ಮುಂದಿದ್ದ ಕೀಳಿಸಿದನ ಹೇಮದ ತಾಳ ಮರ ಹದಿನಾಲ್ಕನು-ಹದಿನಾಲ್ಕು ಚಿನ್ನದ ತಾಳೆಮರಗಳನ್ನು ಕೀಳಿಸಿದನು ಮೇಲೆ ರಾಕ್ಷಸ ಟಂಕದಚ್ಚಿನ ಜಾಳಿಗೆಗಳನು-ನಾಣ್ಯಗಳ ಮೇಲೆ ರಾಕ್ಷಸ ಟಂಕದ ಅಚ್ಚನ್ನು ಹೊಂದಿದ್ದ ನಾಣ್ಯಗಳ ಥೈಲಿಗಳನ್ನು ತರಿಸಿ ಕಟ್ಟಿಸಿ ಮೇಲು ಮುದ್ರೆಗಳಿಕ್ಕಿದವು-ತರಿಸಿ, ಅವುಗಳನ್ನೆಲ್ಲ ಒಟ್ಟಾಗಿ ಕಟ್ಟಿಸಿ, ಅದರ ಮೇಲೆ ಮುದ್ರೆ ಹಾಕಿಸಿದ
ಕರೆಸಿದನು ಹೊರೆಯವರ-ಅವುಗಳನ್ನೆಲ್ಲ ಹೊತ್ತೊಯ್ಯಲು ಹೊರುವವರನ್ನು ಕರೆಸಿದ
ಮೂಲ ...{Loading}...
ಕೀಳಿಸಿದನರಮನೆಯ ಹೇಮದ
ತಾಳ ಮರ ಹದಿನಾಲ್ಕನಧ್ವರ
ಶಾಲೆಯಿದಿರಲಿ ತೋರಣ ಸ್ತಂಭಂಗಳಹವೆಂದು
ಮೇಲೆ ರಾಕ್ಷಸ ಟಂಕದಚ್ಚಿನ
ಜಾಳಿಗೆಗಳನು ತರಿಸಿ ಕಟ್ಟಿಸಿ
ಮೇಲು ಮುದ್ರೆಗಳಿಕ್ಕಿದವು ಕರೆಸಿದನು ಹೊರೆಯವರ ॥48॥
೦೪೯ ಕುಲಗಿರಿಯನೊಡೆ ಮೀಟಿ ...{Loading}...
ಕುಲಗಿರಿಯನೊಡೆ ಮೀಟಿ ತಮ್ಮಯ
ತಲೆಯೊಳಾನುವ ಕರ್ಕಶಾಂಗದ
ಕಲುದಲೆಯ ಹೇರೊಡಲ ಮಿಡುಕಿನ ಕಾಳ ರಕ್ಕಸರು
ಸೆಳೆದು ಹೊತ್ತರು ಹೊರೆಯನಿವರಿ
ಟ್ಟಳಿಸಿ ಹೊರವಂಟರು ವಿಭೀಷಣ
ಕಳುಹಿದನು ಪವಮಾನ ಸುತ ನಂದನನ ಸತ್ಕರಿಸಿ ॥49॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕುಲಗಿರಿಗಳನ್ನೇ ಒಡೆಯುವಂತೆ ಮೀಟಿ ತೆಗೆದು ತಮ್ಮ ತಲೆಯ ಮೇಲೆ ಹೊರಬಲ್ಲಂತಹ ಕರ್ಕಶಾಂಗವನ್ನುಳ್ಳ ಕಲ್ಲಿನಂತಹ ತಲೆಯನ್ನುಳ್ಳ ಭಾರೀ ದೇಹದ ಮಹಾಶಕ್ತಿಶಾಲಿಗಳಾದ ಕಾಳರಕ್ಕಸರು ಆ ಎಲ್ಲ ವಸ್ತುಗಳನ್ನು ತಲೆಯ ಮೇಲೆ ಹೊತ್ತುಕೊಂಡು ಹೊರಟು ಬಿಟ್ಟರು. ವಿಭೀಷಣ ಘಟೋತ್ಕಚನನ್ನು ಸತ್ಕರಿಸಿ ಕಳಿಸಿಕೊಟ್ಟ.
ಪದಾರ್ಥ (ಕ.ಗ.ಪ)
ಕುಲಗಿರಿಯನೊಡೆ ಮೀಟಿ-ಕುಲಪರ್ವತಗಳನ್ನೇ ಬೇಕಾದರೂ ಮೀಟಿ ತೆಗೆದು, ತಮ್ಮ ತಲೆಯೊಳಾನುವ ಕರ್ಕಶಾಂಗದ-ತಮ್ಮ ತಲೆಯ ಮೇಲೆ ಹೊರಬಲ್ಲಂತಹ ಕಠಿನ ಅಂಗಗಳನ್ನುಳ್ಳ ಕಲುದಲೆಯ ಹೇರೊಡಲ ಮಿಡುಕಿನ ಕಾಳ ರಕ್ಕಸರು-ಬಂಡೆಯಂತಹ
ತಲೆಯನ್ನು ಹೊಂದಿದ್ದು ದೊಡ್ಡ ದೇಹವುಳ್ಳ ಸಮರ್ಥರಾದ ಕಪ್ಪನೆಯ ರಾಕ್ಷಸರು, ಸೆಳೆದು ಹೊತ್ತರು ಹೊರೆಯನು-ಆ ಎಲ್ಲ ವಸ್ತುಗಳ ಹೊರೆಯನ್ನು, ಸೆಳೆದು ತಲೆಯ ಮೇಲೆ ಹೊತ್ತಿಕೊಂಡರು, ಇವರು-ಘಟೋತ್ಕಚನ ಪರಿವಾರದವರು, ಇಟ್ಟಳಿಸಿ ಹೊರವಂಟರು-ಗುಂಪಾಗಿ ಹೊರಟರು, ಪವಮಾನ ಸುತ ನಂದನನ-ಭೀಮನ ಮಗ ಘಟೋತ್ಕಚನನ್ನು ವಿಭೀಷಣನು, ಸತ್ಕರಿಸಿ ಕಳುಹಿದನು-ಸತ್ಕಾರ ಮಾಡಿ ಕಳುಹಿಸಿಕೊಟ್ಟನು
ಮೂಲ ...{Loading}...
ಕುಲಗಿರಿಯನೊಡೆ ಮೀಟಿ ತಮ್ಮಯ
ತಲೆಯೊಳಾನುವ ಕರ್ಕಶಾಂಗದ
ಕಲುದಲೆಯ ಹೇರೊಡಲ ಮಿಡುಕಿನ ಕಾಳ ರಕ್ಕಸರು
ಸೆಳೆದು ಹೊತ್ತರು ಹೊರೆಯನಿವರಿ
ಟ್ಟಳಿಸಿ ಹೊರವಂಟರು ವಿಭೀಷಣ
ಕಳುಹಿದನು ಪವಮಾನ ಸುತ ನಂದನನ ಸತ್ಕರಿಸಿ ॥49॥
೦೫೦ ದನುಜನಬ್ಧಿಯ ದಾಟಿ ...{Loading}...
ದನುಜನಬ್ಧಿಯ ದಾಟಿ ಸಹದೇ
ವನ ಸಮೀಪಕೆ ಬಂದು ರಾವಣ
ನನುಜ ಮಾಡಿದ ಬಹಳ ಸತ್ಕಾರವನು ಬಿನ್ನವಿಸಿ
ಅನಿಬರನು ಕಾಣಿಸಿದನಾ ಕಾಂ
ಚನಮಯದ ಹೊರೆ ಲಕ್ಕ ಸಂಖ್ಯೆಗ
ಳನುಪಮಿತ ರಕ್ಕಸರ ಕಂಡಂಜಿದುದು ನೃಪಕಟಕ ॥50॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಘಟೋತ್ಕಚ ಆ ಲಂಕೆಯ ಸಮುದ್ರವನ್ನು ದಾಟಿ ಸಹದೇವನ ಬಳಿಗೆ ಬಂದು ರಾವಣನ ತಮ್ಮ ತನಗೆ ಮಾಡಿದ ಸತ್ಕಾರಗಳನ್ನೆಲ್ಲ ವಿವರಿಸಿ ತನ್ನ ಜೊತೆಯಲ್ಲಿ ಸಾಮಗ್ರಿಗಳನ್ನು ಹೊತ್ತು ತಂದ ರಾಕ್ಷಸ ಪರಿವಾರವನ್ನು ತೋರಿಸಿದ. ಲಕ್ಷ ಸಂಖ್ಯೆಗಳಲ್ಲಿದ್ದ ಆ ಕಾಂಚನಮಯದ ಹೊರೆಯನ್ನು ಹೊತ್ತು ತಂದ ಅಸಮಾನರಾದ ರಾಕ್ಷಸರನ್ನು ನೋಡಿ ಸಹದೇವನ ಸೈನ್ಯ ಹೆದರಿಬಿಟ್ಟಿತು.
ಪದಾರ್ಥ (ಕ.ಗ.ಪ)
ದನುಜನಬ್ದಿಯ ದಾಟಿ-ಘಟೋತ್ಕಚನು ಸಮುದ್ರವನ್ನು ದಾಟಿ, ಸಹದೇವನ ಸಮೀಪಕೆ ಬಂದು ರಾವಣನನುಜ-ರಾವಣನ ತಮ್ಮ ವಿಭೀಷಣನು ಮಾಡಿದ, ಬಹಳ ಸತ್ಕಾರವನು ಬಿನ್ನವಿಸಿ-ಅತಿಶಯವಾದ ಸತ್ಕಾರಗಳನ್ನೆಲ್ಲ ವಿಜ್ಞಾಪನೆ ಮಾಡಿಕೊಂಡು, ಅನಿಬರನು ಕಾಣಿಸಿದನು. ತನ್ನೊಡನೆ ಬಂದ ಆ ಎಲ್ಲ ಹೊರೆಯವರನ್ನು ಪರಿಚಯ ಮಾಡಿಕೊಟ್ಟ, ಕಾಂಚನಮಯದ ಹೊರೆ ಲಕ್ಕ ಸಂಖ್ಯೆಗಳು-ಲಕ್ಷ ಸಂಖ್ಯೆಯ ಚಿನ್ನಗಳಿಂದ ತುಂಬಿದ ಹೊರೆಗಳನ್ನು, ಅಪರಿಮಿತ ರಕ್ಕಸರ-ಅಸಂಖ್ಯಾತ ರಾಕ್ಷಸರನ್ನು, ಕಂಡಂಜಿದುದು ನೃಪಕಟಕ-ನೋಡಿ ಸಹದೇವನ ಸೈನ್ಯ ಹೆದರಿಬಿಟ್ಟಿತು
ಮೂಲ ...{Loading}...
ದನುಜನಬ್ಧಿಯ ದಾಟಿ ಸಹದೇ
ವನ ಸಮೀಪಕೆ ಬಂದು ರಾವಣ
ನನುಜ ಮಾಡಿದ ಬಹಳ ಸತ್ಕಾರವನು ಬಿನ್ನವಿಸಿ
ಅನಿಬರನು ಕಾಣಿಸಿದನಾ ಕಾಂ
ಚನಮಯದ ಹೊರೆ ಲಕ್ಕ ಸಂಖ್ಯೆಗ
ಳನುಪಮಿತ ರಕ್ಕಸರ ಕಂಡಂಜಿದುದು ನೃಪಕಟಕ ॥50॥
೦೫೧ ಲಾಲಿಸಿದನಾ ಖಳರನೆತ್ತಿತು ...{Loading}...
ಲಾಲಿಸಿದನಾ ಖಳರನೆತ್ತಿತು
ಪಾಳೆಯವು ನಡೆತಂದು ಪಯಣದ
ಮೇಲೆ ಪಯಣವನೈದಿ ಬಂದನು ತಮ್ಮ ಪಟ್ಟಣಕೆ
ಮೇಲೊಗುವ ಸುಮ್ಮಾನ ಸಿರಿಯ ಚ
ಢಾಳದಲಿ ತಂದಖಿಳ ವಸ್ತುವ
ನಾಲಯದೊಳೊಪ್ಪಿಸಿದನವನೀಪತಿಗೆ ಸಹದೇವ ॥51॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಸಹದೇವ ಆ ರಾಕ್ಷಸಪರಿವಾರವನ್ನೆಲ್ಲ ಸತ್ಕರಿಸಿದ. ಅನಂತರ ಸೇನೆ ಅಲ್ಲಿಂದ ಕಾಲ್ತಗೆದು ಹಲವು ದಿನಗಳ ಪಯಣದಿಂದ ತಮ್ಮ ಪಟ್ಟಣ ಇಂದ್ರಪ್ರಸ್ಥಕ್ಕೆ ಬಂದ. ಸಂಗ್ರಹಿಸಿ ತಂದ ಸಂಪತ್ತಿನ ಆಧಿಕ್ಯದಿಂದ ಉಕ್ಕುತ್ತಿದ್ದ ಸುಮ್ಮಾನದಿಂದ ಸಹದೇವ ತಾನು ತಂದ ಅಖಿಳ ವಸ್ತುಗಳನ್ನು ಅಣ್ಣನಿಗೆ ಒಪ್ಪಿಸಿದ.
ಪದಾರ್ಥ (ಕ.ಗ.ಪ)
ಚಢಾಳ-ಆಧಿಕ್ಯ, ಅತಿಶಯತೆ
ಲಾಲಿಸಿದನು ಆ ಖಳರನು-ಆ ರಾಕ್ಷಸರನ್ನೆಲ್ಲ ಸಹದೇವ ಸತ್ಕರಿಸಿದನು, ಎತ್ತಿತು ಪಾಳೆಯವು-ಸೇನೆ ಅಲ್ಲಿಂದ ಹೊರಟಿತು, ನಡೆತಂದು ಪಯಣದ ಮೇಲೆ ಪಯಣವನೈದಿ-ಮುಂದುವರಿಯುತ್ತಾ, ಹಲವು ದಿನಗಳ ಪ್ರಯಾಣ ಮಾಡಿ, ತಮ್ಮ ಪಟ್ಟಣಕೆ ಬಂದನು-ತಮ್ಮ ನಗರಿಯಾದ ಇಂದ್ರಪ್ರಸ್ಥಕ್ಕೆ ಸಹದೇವ ಬಂದ, ಮೇಲೊಗುವ ಸುಮ್ಮಾನ-ಅತಿಶಯವಾದ ಸಂತೋಷ, ಸಿರಿಯ ಚಢಾಳದಲಿ-ಸಂಗ್ರಹಿಸಿ ತಂದ ಸಂಪತ್ತಿನ ಆಧಿಕ್ಯದಿಂದ ಹಿಗ್ಗಿ, ತಂದ ಅಖಿಳ ವಸ್ತುವನಾಲಯದೊಳೊಪ್ಪಿಸಿ-ತಂದ ಎಲ್ಲ ವಸ್ತುಗಳನ್ನು ಅರಮನೆಯಲ್ಲಿ
ಅವನೀಪತಿಗೆ-ಯುಧಿಷ್ಠಿರ ರಾಜನಿಗೆ ಸಹದೇವ ಒಪ್ಪಿಸಿದನು
ಮೂಲ ...{Loading}...
ಲಾಲಿಸಿದನಾ ಖಳರನೆತ್ತಿತು
ಪಾಳೆಯವು ನಡೆತಂದು ಪಯಣದ
ಮೇಲೆ ಪಯಣವನೈದಿ ಬಂದನು ತಮ್ಮ ಪಟ್ಟಣಕೆ
ಮೇಲೊಗುವ ಸುಮ್ಮಾನ ಸಿರಿಯ ಚ
ಢಾಳದಲಿ ತಂದಖಿಳ ವಸ್ತುವ
ನಾಲಯದೊಳೊಪ್ಪಿಸಿದನವನೀಪತಿಗೆ ಸಹದೇವ ॥51॥