೦೦೦ ಸೂಚನೆ ಯಾಗಸಿದ್ಧಿಗೆ ...{Loading}...
ಸೂಚನೆ: ಯಾಗಸಿದ್ಧಿಗೆ ನಡೆದು ಪೂರ್ವ ವಿ
ಭಾಗದಲಿ ಭೂಮಿಪರ ಕೈಯಲಿ
ಸಾಗರೋಪಮ ಧನವ ಮೇಳೈಸಿದನು ಕಲಿ ಭೀಮ
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
ಸೂ : ಯಾಗಸಿದ್ಧಿಗಾಗಿ ಹೊರಟು ಪೂರ್ವದಿಕ್ಕಿನಲ್ಲಿ ರಾಜರ ಕೈಯಿಂದ ಸಾಗರದಷ್ಟು ಹಣವನ್ನು ಸಂಗ್ರಹಿಸಿ ತಂದ ಕಲಿ ಭೀಮ.
ಪದಾರ್ಥ (ಕ.ಗ.ಪ)
ಯಾಗಸಿದ್ಧಿಗೆ-ರಾಜಸೂಯಯಾಗವನ್ನು ಸುಗಮವಾಗಿ, ನೆರವೇರಿಸುವುದಕ್ಕೋಸ್ಕರ, ನಡೆದು-ದಿಗ್ವಿಜಯಕ್ಕೆ ಹೊರಟು,
ಪೂರ್ವ ವಿಭಾಗದಲಿ-ಪೂರ್ವದಿಕಿನಲ್ಲಿದ್ದಂತಹ, ಭೂಮಿಪರ ಕೆಯಲಿ-ರಾಜರುಗಳ ಕೈಯಿಂದ, ಸಾಗರೋಪಮ ಧನವ-ಬಂದು ಸಾಗರದಷ್ಟು ಸಂಪತ್ತನ್ನು, ಕಲಿ ಭೀಮ-ಬಲಶಾಲಿಯಾದ ಭೀಮನು, ಮೇಳೈಸಿದನು-ಸಂಗ್ರಹಿಸಿದನು
ಮೂಲ ...{Loading}...
ಸೂಚನೆ: ಯಾಗಸಿದ್ಧಿಗೆ ನಡೆದು ಪೂರ್ವ ವಿ
ಭಾಗದಲಿ ಭೂಮಿಪರ ಕೈಯಲಿ
ಸಾಗರೋಪಮ ಧನವ ಮೇಳೈಸಿದನು ಕಲಿ ಭೀಮ
೦೦೧ ಕೇಳು ಜನಮೇಜಯ ...{Loading}...
ಕೇಳು ಜನಮೇಜಯ ಧರಿತ್ರೀ
ಪಾಲ ಯಮ ನಂದನನ ಭಾಗ್ಯದ
ಹೋಲಿಕೆಗೆ ಬಹರುಂಟೆ ನಳ ನಹುಷಾದಿ ರಾಯರಲಿ
ಆಳು ನಡೆದುದು ಭೀಮಸೇನನ
ಧಾಳಿಯಿದೆಯೆನೆ ತೆತ್ತುದವನೀ
ಪಾಲಕರು ತಂತಮ್ಮ ನಿಜ ವಿತ್ತಾನುರೂಪದಲಿ ॥1॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ನಳ ನಹುಷಾದಿ ರಾಜರುಗಳಲ್ಲಿ ಯುಧಿಷ್ಠಿರನ ಅದೃಷ್ಟಕ್ಕೆ ಸರಿಸಮಾನರಾದವರಿದ್ದಾರೆಯೇ ? ಸೈನ್ಯ ನಡೆಯತೊಡಗಿತು. ಭೀಮಸೇನ ಧಾಳಿ ಮಾಡಲಿದ್ದಾನೆ ಎಂದು ತಿಳಿಸಿದ ಕೂಡಲೆ ರಾಜರುಗಳು ತಂತಮ್ಮ ಶಕ್ತ್ಯನುಸಾರ ಹಣವನ್ನು ಕೊಟ್ಟುಬಿಟ್ಟರು.
ಪದಾರ್ಥ (ಕ.ಗ.ಪ)
ಕೇಳು ಜನಮೇಜಯ ಧರಿತ್ರೀಪಾಲ-ಜನಮೇಜಯ ರಾಜನೇ ಕೇಳಯ್ಯ, ನಳ ನಹುಷಾದಿ ರಾಯರಲಿ-ನಳ ನಹುಷರೇ ಮೊದಲಾದ ಪ್ರಸಿದ್ಧ ರಾಜರ ಪೈಕಿ, ಯಮ ನಂದನನ-ಯುಧಿಷ್ಠಿರನ, ಭಾಗ್ಯದ-ಅದೃಷ್ಟದ, ಹೋಲಿಕೆಗೆ ಬಹರುಂಟೆ-ಬರುವಂಥವರು ಬೇರೆ ಯಾರಾದರೂ ಇದ್ದಾರೆಯೇ ? ಆಳು ನಡೆದುದು-ಸೈನ್ಯ ಸಜ್ಜಾಗಿ ಜೈತ್ರಯಾತ್ರೆಗೆ ಹೊರಟಿತು, ಭೀಮಸೇನನ ಧಾಳಿ ಇದು ಏನೆ-ಇದು ಭೀಮಸೇನನು ನಡೆಸುತ್ತಿರುವ, ಆಕ್ರಮಣ ಎಂದು ಕೇಳಿದೊಡನೆ, ಅವನೀ ಪಾಲಕರು-ರಾಜರುಗಳು, ತಂತಮ್ಮ ನಿಜ ವಿತ್ತಾನುರೂಪದಲಿ-ತಮತಮಗೆ ಇದ್ದ ಸಂಪತ್ತಿಗೆ ಅನುಗುಣವಾಗಿ, ತೆತ್ತುದ-ಕಾಣಿಕೆಗಳನ್ನು ಒಪ್ಪಿಸಿದರು
ಮೂಲ ...{Loading}...
ಕೇಳು ಜನಮೇಜಯ ಧರಿತ್ರೀ
ಪಾಲ ಯಮ ನಂದನನ ಭಾಗ್ಯದ
ಹೋಲಿಕೆಗೆ ಬಹರುಂಟೆ ನಳ ನಹುಷಾದಿ ರಾಯರಲಿ
ಆಳು ನಡೆದುದು ಭೀಮಸೇನನ
ಧಾಳಿಯಿದೆಯೆನೆ ತೆತ್ತುದವನೀ
ಪಾಲಕರು ತಂತಮ್ಮ ನಿಜ ವಿತ್ತಾನುರೂಪದಲಿ ॥1॥
೦೦೨ ನಡೆದು ಶೋಧಿಸಿ ...{Loading}...
ನಡೆದು ಶೋಧಿಸಿ ರೋಚಮಾನನ
ಹಿಡಿದು ಬಿಟ್ಟನು ಸರ್ವ ವಿತ್ತವ
ನಡಕಿತನಿಲಜನಾಳು ಮುಂದಣ ಚೇದಿ ದೇಶದಲಿ
ಘುಡಿ ಘುಡಿಸೆ ನಿಸ್ಸಾಳವೀ ಗಡ
ಬಡೆಯಿದೇನೆನೆ ಭೀಮಸೇನನ
ಪಡೆಯೆನಲು ಶಿಶುಪಾಲ ಬಂದನು ಕಂಡನುಚಿತದಲಿ ॥2॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಭೀಮ ನಡೆದು ರೋಚಮಾನನನ್ನು ಹುಡುಕಿ ಹಿಡಿದ, ಬಿಡುಗಡೆ ಮಾಡಿದ. ಅವನ ಸೇವಕರು ಸಮಸ್ತ ಧನವನ್ನೂ ತುಂಬಿಕೊಂಡು ಬಂದರು. ಮುಂದಿನ ಚೇದಿ ದೇಶದಲ್ಲಿ ರಣಭೇರಿಯ ಶಬ್ದ ಕೇಳಿದೊಡನೆ ಏನಿದು ಗದ್ದಲ ಎಂದರು. ಭೀಮಸೇನನ ಸೈನ್ಯ ಎಂದೊಡನೆ ಶಿಶುಪಾಲ ಯೋಗ್ಯರೀತಿಯಲ್ಲಿ ಬಂದು ಭೀಮನನ್ನು ಕಂಡ.
ಪದಾರ್ಥ (ಕ.ಗ.ಪ)
ನಡೆದು ಶೋಧಿಸಿ ರೋಚಮಾನನ ಹಿಡಿದು ಬಿಟ್ಟನು-ಭೀಮ ಸೇನೆಯನ್ನು ಮುಂದುವರಿಸಿ, ರೋಚಮಾನನನ್ನು ಬಂಧಿಸಿ ಅವನ ರಾಜ್ಯವನ್ನು ಶೋಧನೆ, ಮಾಡಿ ಅನಂತರ ಬಿದುಗಡೆ ಮಾಡಿದನು, ಅನಿಲಜನಾಳು-ಭೀಮನ ಯೋಧರು, ಸರ್ವ ವಿತ್ತವ ಅಡಕಿತು-ಸಕಲ ಸಂಪತ್ತನ್ನು ಸಂಗ್ರಹಿಸಿ ತುಂಬಿಕೊಂಡರು, ಮುಂದೆ ಚೇದಿ ದೇಶದಲಿ ಘುಡಿ ಘುಡಿಸೆ ನಿಸ್ಸಾಳವು-ರಣಭೇರಿಗಳು ಅಬ್ಬರಿಸಲು
ಚೇದಿ ದೇಶದ ರಾಜನಾದ ಶಿಶುಪಾಲನು, ಗಡಬಡೆಯಿದೇನೆನೆ-ಇದೇನಿದು ಕೋಲಾಹಲ ಎನ್ನಲು, ಅವನ ಸೇವಕರು, ಇದು ಭೀಮಸೇನನ ಪಡೆಯೆನಲು-ಭೀಮಸೇನನ ಸೈನ್ಯ ಎಂದು ಹೇಳಲು, ಶಿಶುಪಾಲನು ಬಂದನು ಕಂಡನುಚಿತದಲಿ-ಯೋಗ್ಯರೀತಿಯಲ್ಲಿ
ಭೀಮನನ್ನು ಭೇಟಿಯಾದ.
ಮೂಲ ...{Loading}...
ನಡೆದು ಶೋಧಿಸಿ ರೋಚಮಾನನ
ಹಿಡಿದು ಬಿಟ್ಟನು ಸರ್ವ ವಿತ್ತವ
ನಡಕಿತನಿಲಜನಾಳು ಮುಂದಣ ಚೇದಿ ದೇಶದಲಿ
ಘುಡಿ ಘುಡಿಸೆ ನಿಸ್ಸಾಳವೀ ಗಡ
ಬಡೆಯಿದೇನೆನೆ ಭೀಮಸೇನನ
ಪಡೆಯೆನಲು ಶಿಶುಪಾಲ ಬಂದನು ಕಂಡನುಚಿತದಲಿ ॥2॥
೦೦೩ ಏನು ಬನ್ದೆಯಪೂರ್ವವೆನೆ ...{Loading}...
ಏನು ಬಂದೆಯಪೂರ್ವವೆನೆ ಯಾ
ಗಾನುರಾಗವನರುಪಲತಿ ಸು
ಮ್ಮಾನದಲಿ ಶಿಶುಪಾಲ ಹೇರಿಸಿದನು ಮಹಾಧನವ
ಮಾನಿಸರ ಕಳುಹಿದರೆ ಸಾಲದೆ
ನೀನಿದೇಕೆಂದುಚಿತದಲಿ ಸ
ನ್ಮಾನಿಸುತ ನಿಲಿಸಿದನು ತಿಂಗಳು ಪವನ ನಂದನನ ॥3॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಏನು ಅಪೂರ್ವವಾಗಿ ಬಂದೆಯಲ್ಲ ಎಂದು ಕೇಳಿದ ಶಿಶುಪಾಲ. ಯಾಗದ ಅಭೀಷ್ಟವನ್ನು ಭೀಮ ತಿಳಿಸಿದಾಗ ಆಳುಗಳನ್ನು ಕಳುಹಿಸಿದ್ದರೆ ಸಾಕಾಗಿತ್ತಲ್ಲ. ನೀನೇಕೆ ಬಂದೆ ಎನ್ನುತ್ತಾ ಆಗಾಧ ಹಣವನ್ನು ಹೇರಿಸಿ ಕಳುಹಿಸಿದ. ಅಲ್ಲದೆ ತಿಂಗಳ ಕಾಲ ಭೀಮನನ್ನು ತನ್ನಲ್ಲಿ ಗೌರವದಿಂದ ಉಳಿಸಿಕೊಂಡಿದ್ದು ಕಳಿಸಿಕೊಟ್ಟ.
ಪದಾರ್ಥ (ಕ.ಗ.ಪ)
ಏನು ಬಂದೆ ಅಪೂರ್ವವೆನೆ-ಶಿಶುಪಾಲ ಭೀಮನನ್ನು ಏನು ಅಪೂರ್ವವಾಗಿ ಬಂದೆಯಲ್ಲ ಎಂದು ಕೇಳಿದ ಭೀಮಸೇನನು, ಯಾಗಾನುರಾಗವನರುಪಲು-ಯುಧಿಷ್ಠಿರನಿಗೆ ರಾಜ ಸೂಯಯಾಗ, ಮಾಡಬೇಕೆಂಬ ಅನುರಾಗವುಂಟಾಯಿತು, ಅದಕ್ಕಾಗಿ ಬಂದೆ ಎಂದು ಹೇಳಲು, ಶಿಶುಪಾಲನು ಸುಮ್ಮಾನದಲಿ-ಮಹಾಸಂತೋಷದಿಂದ, ಹೇರಿಸಿದನು ಮಹಾಧನವ-ಮಹತ್ತಾದ ಸಂಪತ್ತನ್ನು ಸೇರಿಸಿ ಕಳಿಸಿದ, ಮಾನಿಸರ ಕಳುಹಿದರೆ ಸಾಲದೆ ನೀನಿದೇಕೆ-ಜನರನ್ನು ಕಳಿಸಿಕೊಟ್ಟಿದ್ದರೆ, ಸಾಕಿತ್ತು, ನೀನೇ ಏಕೆ ಬಂದೆ ? ಎಂದು ಉಚಿತದಲಿ-ಯೋಗ್ಯವಾದ ಉಪಚಾರದ ಮಾತುಗಳನ್ನಾಡಿ, ಭೀಮಸೇನನ್ನು, ಸನ್ಮಾನಿಸಿದನು-ಸತ್ಕರಿಸಿದ, ಪವನ ನಂದನನ-ಭೀಮನನ್ನು,
ನಿಲಿಸಿದನು ತಿಂಗಳು-ಒಂದು ತಿಂಗಳು ಕಾಲ ತನ್ನಲ್ಲಿ ಅತಿಥಿಯನ್ನಾಗಿ ಉಳಿಸಿಕೊಂಡಿದ್ದ
ಮೂಲ ...{Loading}...
ಏನು ಬಂದೆಯಪೂರ್ವವೆನೆ ಯಾ
ಗಾನುರಾಗವನರುಪಲತಿ ಸು
ಮ್ಮಾನದಲಿ ಶಿಶುಪಾಲ ಹೇರಿಸಿದನು ಮಹಾಧನವ
ಮಾನಿಸರ ಕಳುಹಿದರೆ ಸಾಲದೆ
ನೀನಿದೇಕೆಂದುಚಿತದಲಿ ಸ
ನ್ಮಾನಿಸುತ ನಿಲಿಸಿದನು ತಿಂಗಳು ಪವನ ನಂದನನ ॥3॥
೦೦೪ ನಡೆದು ಮುನ್ದೆ ...{Loading}...
ನಡೆದು ಮುಂದೆ ಕಳಿಂಗ ದೇಶದೊ
ಳಡಸಿ ಬಿಟ್ಟನು ಶೋಣಿವಂತನ
ಹಿಡಿದು ಕಪ್ಪವ ಕೊಂಡು ಸದೆದನು ಕೋಸಲೇಶ್ವರನ
ಅಡಕಿತಲ್ಲಿಯ ಧನ ಪಯೋಧಿಯ
ಕಡೆಯ ಕೋಟೆಯ ಮುರಿಯಲವನೆದೆ
ಯೊಡೆದು ದೀರ್ಘಪ್ರಜ್ಞನಿತ್ತನು ಬೇಹ ವಸ್ತುಗಳ ॥4॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಮುಂದೆ ಕಳಿಂಗದೇಶದಲ್ಲಿ ಬೀಡುಬಿಟ್ಟ. ಅಲ್ಲಿ ಶೋಣಿವಂತನನ್ನು ಹಿಡಿದು ಅವನಿಂದ ಕಪ್ಪವನ್ನು ಪಡೆದು, ಕೋಸಲೇಶ್ವರನನ್ನು ಬಡಿದು ಅವನಿಂದ ಹಣದ ಸಮುದ್ರವನ್ನೇ ಪಡೆದು ಸಾಗಿಸಿದ. ಅನಂತರ ಕಡೆಯ ಕೋಟೆಯನ್ನು ಮುರಿಯಲು ದೀರ್ಘಪ್ರಜ್ಞನು ಹೆದರಿ ಬೇಕಾದ ವಸ್ತುಗಳನ್ನೆಲ್ಲ ಕೊಟ್ಟ.
ಪದಾರ್ಥ (ಕ.ಗ.ಪ)
ಮುಂದೆ ನಡೆದು-ಸೇನೆಯೊಡನೆ ಮುಂದುವರಿದು ಭೀಮನು ಕಳಿಂಗ ದೇಶವನ್ನು ಮುತ್ತಿ ಅಲ್ಲಿ ಸೇನೆಯ ಬೀಡುಬಿಟ್ಟ. ಅಲ್ಲಿ ಶೋಣಿವಂತನನ್ನು ಬಂಧಿಸಿ ಅವನಿಂದ ಕಷ್ಟವನ್ನು ಸ್ವೀಕರಿಸಿ ಮುಂದೆ ಸದೆದನು ಕೋಸಲೇಶ್ವರನ-ಕೋಸಲದ ರಾಜನನ್ನು ಬಡಿದು ಹಾಕಿದ ಅಡಕಿತದಲ್ಲಿಯ ಧನ-ಅಲ್ಲಿನ ಸಂಪತ್ತನ್ನು ತುಂಬಿಕೊಂಡರು ಅನಂತರ ಪಯೋಧಿಯ ಕಡೆಯ-ಸಮುದ್ರದ ಕಡೆಯ
ಕೋಟೆಯ ಮುರಿಯಲು-ಕೋಟೆಯನ್ನು ಮುರಿದು ಕೆಡವಲು ಅವನೆದೆ ದೀರ್ಘಪ್ರಜ್ಞನೆಂಬ ಆ ರಾಜನ ಎದೆಯೊಡೆದು-ಎದೆ ಒಡೆದಂತಾಗಿ ಸೋಲೊಪ್ಪಿಕೊಂಡು ಬೇಹ ವಸ್ತುಗಳ ಇತ್ತನು-ಬೇಡಿದ ವಸ್ತುಗಳನ್ನೆಲ್ಲ ಕೊಟ್ಟನು
ಮೂಲ ...{Loading}...
ನಡೆದು ಮುಂದೆ ಕಳಿಂಗ ದೇಶದೊ
ಳಡಸಿ ಬಿಟ್ಟನು ಶೋಣಿವಂತನ
ಹಿಡಿದು ಕಪ್ಪವ ಕೊಂಡು ಸದೆದನು ಕೋಸಲೇಶ್ವರನ
ಅಡಕಿತಲ್ಲಿಯ ಧನ ಪಯೋಧಿಯ
ಕಡೆಯ ಕೋಟೆಯ ಮುರಿಯಲವನೆದೆ
ಯೊಡೆದು ದೀರ್ಘಪ್ರಜ್ಞನಿತ್ತನು ಬೇಹ ವಸ್ತುಗಳ ॥4॥
೦೦೫ ಆಳು ನಡೆದುದು ...{Loading}...
ಆಳು ನಡೆದುದು ಚೂಣಿಯಲಿ ಗೋ
ಪಾಲನೆಂಬನ ಮುರಿಯೆ ತೆತ್ತುದ
ಹೇಳಲರಿಯೆನು ಸಂಖ್ಯೆಯನು ಮುಂದತ್ತ ಪಾಲಕನ
ಜಾಳಿಸಿದನಾ ಕಾಶಿ ರಾಜನ
ಧಾಳಿಯಲಿ ಕೊಂದನು ಸುಪಾಶ್ರ್ವನ
ಮೇಲೆ ನಡೆದನು ಗಯನ ಮತ್ಸ್ಯನ ಗೆಲಿದನಾ ಭೀಮ ॥5॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಸೈನ್ಯ ಮುಂದೆ ಮುಂದೆ ನಡೆದು ಹೋಯಿತು. ಗೋಪಾಲನೆಂಬವನನ್ನು ಸೋಲಿಸಲು ಅವನು ತೆತ್ತ ವಸ್ತುಗಳ ಸಂಖ್ಯೆಯನ್ನು ಹೇಳಲು ಸಾಧ್ಯವಿಲ್ಲ. ಮುಂದೆ ಆ ಕಡೆ ಪಾಲಕನನ್ನು ಜಾಲಿಸಿಬಿಟ್ಟ. ಕಾಶಿರಾಜನನ್ನು ಧಾಳಿಯಲ್ಲಿ ಕೊಂದ. ಸುಪಾಶ್ರ್ವನ ಮೇಲೆ ಆಕ್ರಮಣ ಮಾಡಿದ. ಗಯ ಮತ್ಸ್ಯರನ್ನು ಗೆದ್ದ.
ಪದಾರ್ಥ (ಕ.ಗ.ಪ)
ಆಳು ನಡೆದುದು ಚೂಣಿಯಲಿ-ಸೈನ್ಯ ಮುಂದು ಮುಂದೆ ನಡೆಯಿತು, ಗೋಪಾಲನೆಂಬನ-ಗೋಪಾಲನೆಂಬ ರಾಜನನ್ನು, ಮುರಿಯೆ-ಸೋಲಿಸಲು, ತೆತ್ತುದ-ಸಂಖ್ಯೆಯನು, ಹೇಳಲರಿಯೆನು-ಅವನು ಎಷ್ಟು ಧನವನ್ನು ಕಾಣಿಕೆಯಾಗಿ, ಕೊಟ್ಟನೆಂಬುದನ್ನು ಸಂಖ್ಯೆಯಲ್ಲಿ ವಿವರಿಸಲಾರೆ. ಅಷ್ಟು ಅಗಾಧವಾಗಿತ್ತು, ಮುಂದೆ ಅತ್ತ ( ಆ ಕಡೆ) ಪಾಲಕ ಎಂಬವನನ್ನು, ಜಾಳಿಸಿದನು-ಭೀಮ ಶೋಧಿಸಿ ಹಾಕಿದ, ಕಾಶಿ ರಾಜನ ಧಾಳಿಯಲಿ ಕೊಂದನು-ಯುದ್ಧದಲ್ಲಿ ಕಾಶೀರಾಜನನ್ನು ಕೊಂದು ಹಾಕಿದ, ಸುಪಾಶ್ರ್ವನ ಮೇಲೆ ನಡೆದ-ಸುಪಾಶ್ರ್ವನೆಂಬ ರಾಜನ ಮೇಲೆ ಆಕ್ರಮಣ ಮಾಡಿದ, ಅನಂತರ ಆ ಭೀಮ ಗಯನ ಮತ್ಸ್ಯನ-ಗಯ ಮತ್ಸ್ಯರನ್ನು ಜಯಿಸಿದ
ಮೂಲ ...{Loading}...
ಆಳು ನಡೆದುದು ಚೂಣಿಯಲಿ ಗೋ
ಪಾಲನೆಂಬನ ಮುರಿಯೆ ತೆತ್ತುದ
ಹೇಳಲರಿಯೆನು ಸಂಖ್ಯೆಯನು ಮುಂದತ್ತ ಪಾಲಕನ
ಜಾಳಿಸಿದನಾ ಕಾಶಿ ರಾಜನ
ಧಾಳಿಯಲಿ ಕೊಂದನು ಸುಪಾಶ್ರ್ವನ
ಮೇಲೆ ನಡೆದನು ಗಯನ ಮತ್ಸ್ಯನ ಗೆಲಿದನಾ ಭೀಮ ॥5॥
೦೦೬ ನಡೆದು ಮುನ್ದೆ ...{Loading}...
ನಡೆದು ಮುಂದೆ ವಿದೇಹನನು ಸದೆ
ಬಡಿದು ಮತ್ತೆ ಕಿರಾತ ಬಲವವ
ಗಡಿಸಿ ಕಾದಿತನಂತವದರೊಳಗೇಳು ಮಾನಿಸರು
ಒಡೆಯರವದಿರ ವಂಗಡವ ಹುಡಿ
ಹುಡಿಯ ಮಾಡಿ ನಿಷಾದ ವರ್ಗವ
ಕೆಡಹಿ ನಿಷಧನ ಹೊಯ್ದು ಸೆಳೆದನು ಸಕಲ ವಸ್ತುಗಳ ॥6॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಮುಂದೆ ನಡೆದು ವಿದೇಹನನ್ನು ಸದೆ ಬಡಿದು, ಮತ್ತೆ ಕಿರಾತ ಬಲವನ್ನು ಸೋಲಿಸಿದ. ಅವರಲ್ಲಿ ಏಳು ಜನ ಒಡೆಯರು, ಅವರ ಒಂದೊಂದು ಪಂಗಡವನ್ನೂ ಪುಡಿಪುಡಿ ಮಾಡಿ ಆ ನಿಷಾದರ ಗುಂಪನ್ನೇ ನಾಶ ಮಾಡಿದ. ಅನಂತರ ನಿಷಧನನ್ನು ಹೊಯ್ದು ಅವನಿಂದ ಸಕಲ ವಸ್ತುಗಳನ್ನು ಸೆಳೆದ.
ಪದಾರ್ಥ (ಕ.ಗ.ಪ)
ನಡೆದು ಮುಂದೆ ವಿದೇಹನನು ಸದೆ ಬಡಿದು-ಮುಂದೆ ಸರಿದು, ವಿದೇಹ ರಾಜನನ್ನು ಸೋಲಿಸಿ, ಮತ್ತೆ ಕಿರಾತ ಬಲವವಗಡಿಸಿ-ಕಿರಾತರ ಸೇನೆಯನ್ನು ಸೋಲಿಸಿದ, ಕಾದಿತನಂತವು-ಆ ಕಿರಾತರು ದೀರ್ಘಕಾಲ ಹೋರಾಡಿದರು, ಅದರೊಳಗೇಳು ಮಾನಿಸರು ಒಡೆಯರು-ಅವರಷ್ಟೆಕೆ ಏಳು ಮಂದಿ ಯಜಮಾನರು, ಅವದಿರವಂಗಡವ-ಅವರೊಬ್ಬರ ಪಂಗಡವನ್ನು, ಹುಡಿ ಹುಡಿಯ ಮಾಡಿ-ಕುಟ್ಟಿ ಪುಡಿ ಪುಡಿ ಮಾಡಿ, ನಿಷಾದ ವರ್ಗವ ಕೆಡಹಿ-ಆ ಬೇಡರ ಸಮೂಹವನ್ನೇ ನಾಶಮಾಡಿದ, ನಿಷಧನ ಹೊಯ್ದು-ನಿಷಧ ರಾಜನನ್ನು ಬಡಿದು, ಸೆಳೆದನು ಸಕಲ ವಸ್ತುಗಳ-ಅವನಿಂದ ಸಮಸ್ತ ವಸ್ತುಗಳನ್ನು ಕಿತ್ತುಕೊಂಡ.
ಮೂಲ ...{Loading}...
ನಡೆದು ಮುಂದೆ ವಿದೇಹನನು ಸದೆ
ಬಡಿದು ಮತ್ತೆ ಕಿರಾತ ಬಲವವ
ಗಡಿಸಿ ಕಾದಿತನಂತವದರೊಳಗೇಳು ಮಾನಿಸರು
ಒಡೆಯರವದಿರ ವಂಗಡವ ಹುಡಿ
ಹುಡಿಯ ಮಾಡಿ ನಿಷಾದ ವರ್ಗವ
ಕೆಡಹಿ ನಿಷಧನ ಹೊಯ್ದು ಸೆಳೆದನು ಸಕಲ ವಸ್ತುಗಳ ॥6॥
೦೦೭ ಮಲೆತು ಕಾದಿದ ...{Loading}...
ಮಲೆತು ಕಾದಿದ ದಂಡ ಧಾರನ
ಗೆಲಿದು ಮಗಧೇಶ ಗಿರಿವ್ರಜ
ದೊಳಗೆ ಪಾಳೆಯ ಬಿಟ್ಟುದವನಿದಿರಾಗಿ ನಡೆತಂದು
ದಳವ ಹೇಳಿದನಾತನಲ್ಲಿಂ
ದಿಳಿದು ಕರ್ಣನ ಗೆಲಿದು ಕಪ್ಪವ
ಸೆಳೆದು ಕೊಂಡದ್ರಿಯಲಿ ಸದೆದನು ಬಹಳ ವನಚರರ ॥7॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕೊಬ್ಬಿ ತನ್ನೊಡನೆ ಹೊರಾಡ ಬಂದ ದಂಡಧಾರನನ್ನು ಗೆದ್ದು ಮಗಧದೇಶಕ್ಕೆ ಹೋಗಿ ಗಿರಿವ್ರಜದಲ್ಲಿ ಬೀಡುಬಿಟ್ಟ. ತನ್ನನ್ನು ಎದುರುಗೊಳ್ಳಲು ಬಂದ ಮಗಧದ ರಾಜ ಸಹದೇವ ತನ್ನ ಸೇನೆಯನ್ನು ಈ ಸೇನೆಯೊಡನೆಯೇ ಸೇರಿಸಿದ. ಗಿರಿವ್ರಜದಿಂದ ಇಳಿದು ಕರ್ಣನನ್ನು ಗೆದ್ದು ಅವನಿಂದ ಕಪ್ಪ ಪಡೆದು, ಬೆಟ್ಟ ಪ್ರದೇಶದಲ್ಲಿ ಬಹಳ ವನಚರರನ್ನು ಸದೆಬಡಿದ.
ಪದಾರ್ಥ (ಕ.ಗ.ಪ)
ಮಲೆತು ಕಾದಿದ-ಕೊಬ್ಬಿ ಪ್ರತಿಭಟಿಸಿ ಹೋರಾಡಿದ, ದಂಡ ಧಾರನಗೆಲಿದು-ದಂಡಧಾರನನ್ನು ಗೆದ್ದು, ಮಗಧೇಶ ಗಿರಿ ವ್ರಜದೊಳಗೆ-ಮಗಧ ರಾಜನ ಗಿರಿವ್ರಜ ಪಟ್ಟಣದಲ್ಲಿ, ಪಾಳೆಯ ಬಿಟ್ಟುದು-ಸೇನೆ ಬೀಡುಬಿಟ್ಟಿತು, ಅವನು-ಆ ಮಗಧ ರಾಜನು, ಇದಿರಾಗಿ ನಡೆತಂದು-ಎದುರಾಗಿ ನಡೆದುಬಂದು, ದಳವ ಹೇಳಿದನು-ತನ್ನ ಸೇನೆ ಭೀಮನ ಸೇನೆಯೊಡನೆ ಬೆರೆಯಲು, ಹೇಳಿದನು-ಆಜ್ಞೆ ಮಾಡಿದನು
ಅಲ್ಲಿಂದಿಳಿದು-ಅಲ್ಲಿಂದ ಇಳಿದು ಬಂದು, ಭೀಮ ಕರ್ಣನ ಗೆಲಿದು-ಕರ್ಣನೆಂಬವನನ್ನು ಗೆದ್ದು, ಕಪ್ಪವ ಸೆಳೆದು ಕೊಂಡು-ಅವನಿಂದ ಕಪ್ಪವನ್ನು ಕಿತ್ತುಕೊಂಡ, ಆದ್ರಿಯಲಿ-ಆ ಬೆಟ್ಟ ಪ್ರದೇಶದಲ್ಲಿ, ಸದೆದನು ಬಹಳ ವನಚರರ-ಅನೇಕ ಕಾಡಜನರನ್ನು ಬಡಿದು ಸೋಲಿಸಿದ
ಮೂಲ ...{Loading}...
ಮಲೆತು ಕಾದಿದ ದಂಡ ಧಾರನ
ಗೆಲಿದು ಮಗಧೇಶ ಗಿರಿವ್ರಜ
ದೊಳಗೆ ಪಾಳೆಯ ಬಿಟ್ಟುದವನಿದಿರಾಗಿ ನಡೆತಂದು
ದಳವ ಹೇಳಿದನಾತನಲ್ಲಿಂ
ದಿಳಿದು ಕರ್ಣನ ಗೆಲಿದು ಕಪ್ಪವ
ಸೆಳೆದು ಕೊಂಡದ್ರಿಯಲಿ ಸದೆದನು ಬಹಳ ವನಚರರ ॥7॥
೦೦೮ ಸೂರೆಗೊಣ್ಡಲ್ಲಿನ್ದ ನಡೆದನು ...{Loading}...
ಸೂರೆಗೊಂಡಲ್ಲಿಂದ ನಡೆದನು
ಮೀರಿ ಗಂಗಾಸಂಗಮವ ಕೈ
ಮೀರಲರಿಯದೆ ಸಂಧಿಗವನೀಶ್ವರರು ವಶವಾಯ್ತು
ಹೇರಿಸಿದನನುಪಮದ ವಸ್ತುವ
ನಾರು ಸಾವಿರ ಭಂಡಿಯಲಿ ನಡೆ
ದೇರಿ ಹೊಯ್ದನು ವಾಸುದೇವನ ಪೌಂಡ್ರಕಾಹ್ವಯನ ॥8॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅಲ್ಲಿನವರನ್ನೆಲ್ಲ ಸೂರೆಮಾಡಿಯಾದ ಮೇಲೆ ಗಂಗಾ ಸಂಗಮಕ್ಕೆ ಹೋದ. ಅಲ್ಲಿನ ರಾಜರುಗಳು ಕೈಮೀರಿ ಹೋಗದೆ ಸಂಧಿ
ಮಾಡಿಕೊಂಡು ಅಧೀನರಾದರು. ಅವರೆಲ್ಲರಿಂದ ಪಡೆದ ಅನುಪಮ ವಸ್ತುಗಳನ್ನು ಭೀಮ ಆರು ಸಾವಿರ ಭಂಡಿಗಳಲ್ಲಿ ಹೇರಿಸಿದ. ಮುಂದೆ ನಡೆದು ಪೌಂಡ್ರಕನೆಂಬ ಹೆಸರಿನ ವಾಸುದೇವನನ್ನೂ ಬಡಿದ.
ಪದಾರ್ಥ (ಕ.ಗ.ಪ)
ಸೂರೆಗೊಂಡು-ಅಲ್ಲಿನವರನ್ನೆಲ್ಲ ಸೂರೆಮಾಡಿದ ಮೇಲೆ, ಅಲ್ಲಿಂದ ನಡೆದನು ಮೀರಿ ಗಂಗಾಸಂಗಮವ-ಮುಂದುವರಿದು ಗಂಗಾಸಂಗಮವನ್ನುಸ ಸೇರಿದ, ಕೈಮಿರಲರಿಯದೆ-ಮೇರೆ ಮೀರಿ ಭಿಮನ ಸೇನೆಯನ್ನು ಎದುರಿಸಲಾರದೆ, ಸಂಧಿಗೆ ಅವನೀಶ್ವರರು ವಶವಾಯ್ತು-ರಾಜರುಗಳೆಲ್ಲ ಸಂಧಿಗೆ, ಒಪ್ಪಿ ಭೀಮನಿಗೆ ವಶವಾದರು ಹೇರಿಸಿದರು, ಹೇರಿಸಿದನು ಅನುಪಮದ ವಸ್ತುವನು, ಆರು ಸಾವಿರ ಭಂಡಿಯಲಿ-ಆರು, ಸಾವಿರ ಭಂಡಿಗಳಲ್ಲಿ ಆ ರಾಜರುಗಳಿತ್ತ ಅನುಪಮವಾದ, ವಸ್ತುಗಳನ್ನೆಲ್ಲ ತುಂಬಿಸಿದ. ನಡೆದು ಏರಿ-ಮುಂದುವರಿದು ಆಕ್ರಮಣ ಮಾಡಿ, ಹೊಯ್ದನು ವಾಸುದೇವನ ಪೌಂಡ್ರಕಾಹ್ವಯನ-ವಾಸುದೇವ ಎಂಬುವನನ್ನು ಪೌಂಡ್ರಕ ಎಂಬುವನನ್ನು ಬಡಿದ.
ಮೂಲ ...{Loading}...
ಸೂರೆಗೊಂಡಲ್ಲಿಂದ ನಡೆದನು
ಮೀರಿ ಗಂಗಾಸಂಗಮವ ಕೈ
ಮೀರಲರಿಯದೆ ಸಂಧಿಗವನೀಶ್ವರರು ವಶವಾಯ್ತು
ಹೇರಿಸಿದನನುಪಮದ ವಸ್ತುವ
ನಾರು ಸಾವಿರ ಭಂಡಿಯಲಿ ನಡೆ
ದೇರಿ ಹೊಯ್ದನು ವಾಸುದೇವನ ಪೌಂಡ್ರಕಾಹ್ವಯನ ॥8॥
೦೦೯ ಪುರವರವನಲ್ಲಿನ್ದ ಮೌಲ್ಯದ ...{Loading}...
ಪುರವರವನಲ್ಲಿಂದ ಮೌಲ್ಯದ
ತೆರಳಿಕೆಯ ಮಾಡಿದನು ಮೂಡಲು
ಹರಿದು ಮುರಿದು ಸಮುದ್ರಸೇನನ ಸರ್ವಗವತೆಯಲಿ
ತೆರಳಿಕೆಯಲ್ಲಿಂದಿಂದ್ರ ಸೇನನ
ನೊರೆಸಿ ಭಂಡಾರವನು ಹೇರಿಸಿ
ಮರಳಿ ವಂಗನನಪ್ಪಳಿಸಿದನು ಲುಬ್ಧಕರು ಸಹಿತ ॥9॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಆ ಶ್ರೇಷ್ಠ ಪುರವನ್ನು ಸೂರೆ ಮಾಡಿ ನಂತರ ಪೂರ್ವಕ್ಕೆ ಹೋಗಿ ಸಮುದ್ರಸೇನನನ್ನು ಸೋಲಿಸಿ ಸರ್ವಸ್ವವನ್ನೂ ಅಪಹರಿಸುವ ಮೂಲಕ ನಾಶಮಾಡಿ, ಅಲ್ಲಿಂದ ಮುಂದುವರೆದು ಇಂದ್ರಸೇನನನ್ನು ಸೋಲಿಸಿ ಭಂಡಾರವನ್ನು ಹೇರಿಸಿ, ಲುಬ್ಧಕರೊಡನೆ ವಂಗನನ್ನೂ ಬಡಿದು ಹಾಕಿದ.
ಪದಾರ್ಥ (ಕ.ಗ.ಪ)
ಪುರವರವನ-ಪುರವರನನ್ನು ಅಲ್ಲಿಂದ ಮೌಲ್ಯದ, ತೆರಳಿಕೆಯ ಮಾಡಿದನು-ಬುಡಸಮೇತ ದೂರಕ್ಕೆ ಓಡಿಸಿಬಿಟ್ಟನು. ಮೂಡಲು ಹರಿದು-ಪೂರ್ವ ದಿಕ್ಕಿಗೆ ನಡೆದು ಹೋಗಿ, ಸಮುದ್ರಸೇನನ-ಸಮುದ್ರ ಸೇನನೆಂಬವನನ್ನು, ಸರ್ವಗವತೆಯಲಿ-ಸಂಪೂರ್ಣವಾಗಿ ಸರ್ವಸ್ವವನ್ನು ಅಪಹರಿಸುವ ಮೂಲಕ, ಮುರಿದು-ನಾಶಮಾಡಿ, ತೆರಳಿಕೆಯಲ್ಲಿಂದು-ಅಲ್ಲಿಂದ ಮುಂದುವರೆದು, ಇಂದ್ರ ಸೇನನನೊರೆಸಿ-ಇಂದೆಸೇನನನ್ನು, ಭಂಡಾರವನು ಹೇರಿಸಿ-ಮರಳಿ ಅಲ್ಲಿಂದ ಹಿಂತಿರುಗಿ, ಲುಬ್ಧಕರು ಸಹಿತ-ಲುಬ್ಧಕರನನ್ನು ಸೇರಿಸಿ, ವಂಗನನು ಅಪ್ಪಳಿಸಿದನು-ವಂಗನನ್ನು ಬಡಿದು ಹಾಕಿದರು
ಮೂಲ ...{Loading}...
ಪುರವರವನಲ್ಲಿಂದ ಮೌಲ್ಯದ
ತೆರಳಿಕೆಯ ಮಾಡಿದನು ಮೂಡಲು
ಹರಿದು ಮುರಿದು ಸಮುದ್ರಸೇನನ ಸರ್ವಗವತೆಯಲಿ
ತೆರಳಿಕೆಯಲ್ಲಿಂದಿಂದ್ರ ಸೇನನ
ನೊರೆಸಿ ಭಂಡಾರವನು ಹೇರಿಸಿ
ಮರಳಿ ವಂಗನನಪ್ಪಳಿಸಿದನು ಲುಬ್ಧಕರು ಸಹಿತ ॥9॥
೦೧೦ ಸಾರಲೋಹಿತನೆಮ್ಬ ಸಾಗರ ...{Loading}...
ಸಾರಲೋಹಿತನೆಂಬ ಸಾಗರ
ತೀರವಾಸಿಗಳೊಳಕುರುವದ ವಿ
ಕಾರ ಚೋನೆಗ ಚೀನ ಬೋಟಕರನು ನಿವಾಸಿಗಳ
ಓರೆ ಬಾಗಿನ ಕುರುವ ಕೊಳ್ಳದ
ಗೌರಿಕರನಪ್ಪಳಿಸಿ ಮಲೆಯ ವಿ
ಹಾರಿಗಳ ಬರಿಗೈದು ತುಂಬಿಸಿದನು ಸುವಸ್ತುಗಳ ॥10॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಸಾರಲೋಹಿತರೆಂಬ ಸಾಗರ ತೀರವಾಸಿಗಳನ್ನು ಒಳಕುರುವದ ವಿಕಾರರು ಚೋನೆಗರು ಚೀನರು ಬೋಟಕರನ್ನೂ ನಿವಾಸಿಗಳನ್ನೂ ಇಳಿಜಾರಿನಲ್ಲಿದ್ದ ಕುರುವ ಕೊಳ್ಳಗಳಲ್ಲಿದ್ದ ಗೌರಿಕರನ್ನು ಅಪ್ಪಳಿಸಿ ಮಲೆಯ ವಿಹಾರಿಗಳನ್ನೆಲ್ಲ ಸೂರೆಮಾಡಿ ಉತ್ತಮ ವಸ್ತುಗಳನ್ನೆಲ್ಲ ತುಂಬಿಸಿಕೊಂಡ.
ಪದಾರ್ಥ (ಕ.ಗ.ಪ)
ಸಾರಲೋಹಿತನೆಂಬ ಸಾಗರ ತೀರ ನಿವಾಸಿಗಳ-ಸಾರಲೋಹಿತರೆಂಬ, ಸಾಗರ ತೀರ ನಿವಾಸಿಗಳನ್ನು, ಒಳ ಕುರುವದ-ಒಳ ದ್ವೀಪಗಳ
ವಿಕಾರ ಚೋನೆಗ ಚೀನ ಬೋಟಕರನು-ವಿಕಾರರು, ಚೋನೆಗಳು, ಚೀನರು, ಬೋಟಕರುಗಳನ್ನು, ನಿವಾಸಿಗಳ-ಅಲ್ಲಲ್ಲಿ ವಾಸಿಸುತ್ತಿದ್ದವರನ್ನು, ಓರೆ ಬಾಗಿನ-ಇಳಿಜಾರದ ಪ್ರದೆಶದ, ಕುರುವ ಕೊಳ್ಳದ-ಗುಡ್ಡಗಳಲ್ಲಿ ಹಾಗೂ ಹಳ್ಳಗಳಲ್ಲಿ ಇದ್ದ, ಗೌರಿಕರನು-ಗೌರಿಕರೆಂಬವರನ್ನು, ಅಪ್ಪಳಿಸಿ-ಬಡಿದು ಹಾಕಿ, ಮಲೆಯ ವಿಹಾರಿಗಳ-ಬೆಟ್ಟದ ಮೇಲಿನ ವಿಹಾರಿಗಳನ್ನು, ಬರಿಗೈದು-ಸುಲಿಗೆ ಮಾಡಿ
ಸುವಸ್ತುಗಳ-ಶ್ರೇಷ್ಠವಾದ ವಸ್ತುಗಳನ್ನು, ತುಂಬಿಸಿದನು-ಭಂಡಿಸಿ ಹೇರಿದನು
ಮೂಲ ...{Loading}...
ಸಾರಲೋಹಿತನೆಂಬ ಸಾಗರ
ತೀರವಾಸಿಗಳೊಳಕುರುವದ ವಿ
ಕಾರ ಚೋನೆಗ ಚೀನ ಬೋಟಕರನು ನಿವಾಸಿಗಳ
ಓರೆ ಬಾಗಿನ ಕುರುವ ಕೊಳ್ಳದ
ಗೌರಿಕರನಪ್ಪಳಿಸಿ ಮಲೆಯ ವಿ
ಹಾರಿಗಳ ಬರಿಗೈದು ತುಂಬಿಸಿದನು ಸುವಸ್ತುಗಳ ॥10॥
೦೧೧ ಧಾಳಿ ಹರಿದುದು ...{Loading}...
ಧಾಳಿ ಹರಿದುದು ಪಂಚ ಗೌಳವ
ರಾಳವೊಡ್ಡಿಯರಾಂಧ್ರ ಜಾಳಾಂ
ದ್ರಾಳಿಗಳನಪ್ಪಳಿಸಿ ಹೂಡಿಸಿದನು ಮಹಾಧನವ
ಮೇಲು ದುರ್ಗದ ಪಾರ್ವತೇಯರಿ
ಗಾಳು ಹರಿದುದು ಸಂದುಗೊಂದಿಯ
ಶೈಲ ಗುಹೆಗಳೊಳರಸಿ ಹಿಡಿದನು ಬಹಳ ಧನಯುತರ ॥11॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಧಾಳಿ ಮುಂದುವರಿಯಿತು. ಗೌಳರು, ವರಾಳರು, ಒಡ್ಡರು, ಆಂಧ್ರರು ಜಾಳಾಂಧ್ರರೇ ಮೊದಲಾದವರನ್ನು ಅಪ್ಪಳಿಸಿ ಅವರೆಲ್ಲರಿಂದ ಮಹಾಧನವನ್ನು ಸಂಗ್ರಹಿಸಿದ. ಮೇಲು ದುರ್ಗದ ಪರ್ವತ ಪ್ರಾಂತೀಯರ ಬಳಿಗೆ ದೂತರನ್ನು ಕಳಿಸಲಾಯಿತು. ಬೆಟ್ಟದ
ಸಂದುಗೊಂದುಗಳನ್ನು ಗುಹೆಗಳನ್ನು ಹುಡುಕಿ ಅನೇಕ ಧನವಂತರನ್ನು ಹಿಡಿದ.
ಪದಾರ್ಥ (ಕ.ಗ.ಪ)
ಧಾಳಿ ಹರಿದುದು-ಧಾಳಿ ಮುಂದುವರಿಯಿತು, ಪಂಚ ಗೌಳವರು, ಆಳವೊಡ್ಡಿಯರು ಆಂಧ್ರರು, ಜಾಳಾಂದ್ರಾಳಿಗಳನು-ಈ ಎಲ್ಲರನ್ನೂ
ಅಪ್ಪಳಿ-ಬಡಿದು ಹಾಕಿ, ಹೊಡಿಸಿದನು ಮಹಾಧನವ-ಅತಿಶಯವಾದ ಸಂಪತ್ತನ್ನು ಬಂಡಿಗಳಲ್ಲಿ ತುಂಬಿಸಿದನು,
ಮೇಲು ದುರ್ಗದ-ದುರ್ಗದ ಮೇಲಿದ್ದಂತಹ, ಪಾರ್ವತೇಯರಿ ಅಳು ಹರಿದುದು-ಪಾರ್ವತೇಯರ ಬಳಿಗೆ ದೂತರನ್ನು, ಸಂದುಗೊಂದಿಯ ಶೈಲ ಗುಹೆಗಳೊಳರಸಿ-ಸಂದುಗೊಂದಿಗಳನ್ನು ಬೆಟ್ಟ ಗುಹೆಗಳನ್ನು ಹುಡುಕಿ, ಬಹಳ ಧನಯುತರ-ಬಹುಜನ ಧನವಂತರನ್ನು ಅರಸಿ, ಹಿಡಿದನು-ಹಿಡಿದು ಹಾಕಿದ.
ಮೂಲ ...{Loading}...
ಧಾಳಿ ಹರಿದುದು ಪಂಚ ಗೌಳವ
ರಾಳವೊಡ್ಡಿಯರಾಂಧ್ರ ಜಾಳಾಂ
ದ್ರಾಳಿಗಳನಪ್ಪಳಿಸಿ ಹೂಡಿಸಿದನು ಮಹಾಧನವ
ಮೇಲು ದುರ್ಗದ ಪಾರ್ವತೇಯರಿ
ಗಾಳು ಹರಿದುದು ಸಂದುಗೊಂದಿಯ
ಶೈಲ ಗುಹೆಗಳೊಳರಸಿ ಹಿಡಿದನು ಬಹಳ ಧನಯುತರ ॥11॥
೦೧೨ ಅರಸಿದನು ನಾವೆಗಳಲಬ್ದಿಯ ...{Loading}...
ಅರಸಿದನು ನಾವೆಗಳಲಬ್ದಿಯ
ಕುರುವದಲಿ ಕೊಬ್ಬಿದ ಧನಾಢ್ಯರ
ಮುರಿದು ಮರಳಿದು ಕೆಲಬಲದಲಾ ದ್ವೀಪ ಪಾಲಕರ
ಸೆರೆವಿಡಿದು ತನಿ ಸೂರೆಯಲಿ ಪಡೆ
ನೆರೆ ದಣಿಯಲಾ ಮ್ಲೇಚ್ಛ ವರ್ಗವ
ತರಿದು ಶೋಧಿಸಿ ತೆಗೆದನಲ್ಲಿಯ ಸಾರ ವಸ್ತುಗಳ ॥12॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಮುಂದೆ ನಾವೆಗಳಲ್ಲಿ ಸಮುದ್ರದ ನಡುವೆಯಲ್ಲಿ ದ್ವೀಪಗಳನ್ನೆಲ್ಲ ಹುಡುಕಿಕೊಂಡು ಹೋಗಿ ಧನಾಢ್ಯರನ್ನೆಲ್ಲ ಸೋಲಿಸಿ ಬಂದ.
ಅಕ್ಕ ಪಕ್ಕ ದ್ವೀಪ ಪಾಲಕರನ್ನು ಸೆರೆ ಹಿಡಿದು ಅವನ ಪಡೆಯು ಕೈ ದಣಿಯುವಷ್ಟು ಸೂರೆ ಮಾಡಿತು. ಮ್ಲೇಚ್ಛ ವರ್ಗವನ್ನೆಲ್ಲ ತರಿದು, ಶೋಧಿಸಿ ಅಲ್ಲಿನ ಸಾರವಸ್ತುಗಳನ್ನೆಲ್ಲ ಸಂಗ್ರಹಿಸಿದ.
ಪದಾರ್ಥ (ಕ.ಗ.ಪ)
ನಾವೆಗಳಲಿ-ಹಡಗುಗಳಲ್ಲಿ, ಅಬ್ದಿಯ ಕುರುವದಲಿ-ಸಮುದ್ರ ಜನಡುವಿನ ದ್ವೀಪಗಳಲ್ಲಿ, ಅರಸಿದನು-ಹುಡುಕಿದ, ಕೊಬ್ಬಿದ ಧನಾಢ್ಯರನು-ದೊರೆತಂತಹ ಐಶ್ವರ್ಯವಂತರನ್ನು, ಮುರಿದು-ಸೋಲಿಸಿ, ಮರಳಿದು-ಹಿಂತಿರುಗಿ, ಕೆಲಬಲದಲಿ ಆ ದ್ವೀಪ ಪಾಲಕರ-ಅಕ್ಕಪಕ್ಕಗಳಲ್ಲಿದ್ದ ಆ ದ್ವೀಪಗಳ ಒಡೆಯರನ್ನು, ಸೆರೆವಿಡಿದು-ಸೆರೆಹಿಡಿದು, ತನಿ ಸೂರೆಯಲಿ-ಅವರನ್ನು ಚೆನ್ನಾಗಿ ಸೂರೆಮಾಡುವಲ್ಲಿ, ಪಡೆ ನೆರೆ ದಣಿಯಲು-ಸೈನ್ಯ ಬಹುವಾಗಿ ದಣಿಯಲು, ಆ ಮ್ಲೇಚ್ಛ ವರ್ಗವ-ಮ್ಲೇಚ್ಛ ಸಮೂಹವನ್ನು, ತರಿದು-ಕತ್ತರಿಸಿ, ಅಲ್ಲಿಯ-ಅವರಲ್ಲಿದ್ದ, ಸಾರ ವಸ್ತುಗಳ ತೆಗೆದನು-ಸಾರವತ್ತಾದ ವಸ್ತುಗಳನ್ನು ಸಂಗ್ರಹಿಸಿಕೊಂಡ.
ಮೂಲ ...{Loading}...
ಅರಸಿದನು ನಾವೆಗಳಲಬ್ದಿಯ
ಕುರುವದಲಿ ಕೊಬ್ಬಿದ ಧನಾಢ್ಯರ
ಮುರಿದು ಮರಳಿದು ಕೆಲಬಲದಲಾ ದ್ವೀಪ ಪಾಲಕರ
ಸೆರೆವಿಡಿದು ತನಿ ಸೂರೆಯಲಿ ಪಡೆ
ನೆರೆ ದಣಿಯಲಾ ಮ್ಲೇಚ್ಛ ವರ್ಗವ
ತರಿದು ಶೋಧಿಸಿ ತೆಗೆದನಲ್ಲಿಯ ಸಾರ ವಸ್ತುಗಳ ॥12॥
೦೧೩ ಆ ಮಹಾ ...{Loading}...
ಆ ಮಹಾ ಭೋಟಕ ಮಹಾಹ್ವಯ
ಧಾಮದಲಿ ದಸ್ಯುಗಳನತಿ ನಿ
ಸ್ಸೀಮ ಯವನ ಕರೂಷರನು ತಾಗಿದನು ವಹಿಲದಲಿ
ಹೇಮ ಮುಕ್ತಾ ರಜತ ಚಂದನ
ರಾಮಣೀಯಕ ವಸ್ತು ನಿಚಯದ
ಸೀಮೆಗಳ ನಾನರಿಯೆನಳವಡಿಸಿದನು ಕಲಿಭೀಮ ॥13॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಆ ಮಹಾಭೋಟಕ ಎಂಬ ಹೆಸರಿನ ಧಾಮದಲ್ಲಿ ದಸ್ಯುಗಳನ್ನೂ ನಿಸ್ಸೀಮ ಯವನ ಕರೂಷಕರನ್ನೂ ವೇಗವಾಗಿ ಹೋಗಿ ಎದುರಿಸಿದ. ಅವರಿಂದ ಸಂಗ್ರಹಿಸಿದ ವಸ್ತುಗಳ ರಾಶಿಯ ಮಿತಿಯೆಷ್ಟೆಂದು ನಾನರಿಯೆ. ಕಲಿಭೀಮ ಅಷ್ಟನ್ನೂ ಸಂಗ್ರಹಿಸಿಕೊಂಡ.
ಪದಾರ್ಥ (ಕ.ಗ.ಪ)
ಆ ಮಹಾ ಭೋಟಕ ಮಹಾಹ್ವಯ ಧಾಮದಲಿ-ಆ ಮಹಾಭೋಟಕರೆಂಬ ದೊಡ್ಡ ಹೆಸರುಳ್ಳವರ ಮನೆಗಳಲ್ಲಿ ಇದ್ದಂತಹ
ದಸ್ಯುಗಳನು ಹಾಗೂ ಅತಿ ನಿಸ್ಸೀಮ-ಮೋರೆ ಅರಿಯದಂತಿದ್ದಹ ಯವನರು ಕರೂಷರು ಎಂಬವರನ್ನು ವಹಿಲದಲಿ ತಾಗಿದನು-ಶೀಘ್ರವಾಗಿ, ಹೋಗಿ ಮುತ್ತಿದನು ಅವರಿಂದ ಪಡೆದ ಹೇಮ-ಚಿನ್ನ, ಮುಕ್ತಾ-ಮುತ್ತು, ರಜತ-ಬೆಳ್ಳಿ, ಚಂದನ-ಶ್ರೀಗಂಧ, ರಾಮಣೀಯಕ-ಮನೋಹರವಾದ, ವಸ್ತು ನಿಚಯದ-ವಸ್ತುಸಮೂಹದ, ಸೀಮೆಗಳ ನಾನರಿಯೆನು-ಮಿತಿ ಏನು ಎಂಬುದನ್ನು ನಾನರಿಯೆ, ಕಲಿಭೀಮನಳವಡಿಸಿದೆನು-ಸಂಗ್ರಹಿಸಿಕೊಂಡ
ಮೂಲ ...{Loading}...
ಆ ಮಹಾ ಭೋಟಕ ಮಹಾಹ್ವಯ
ಧಾಮದಲಿ ದಸ್ಯುಗಳನತಿ ನಿ
ಸ್ಸೀಮ ಯವನ ಕರೂಷರನು ತಾಗಿದನು ವಹಿಲದಲಿ
ಹೇಮ ಮುಕ್ತಾ ರಜತ ಚಂದನ
ರಾಮಣೀಯಕ ವಸ್ತು ನಿಚಯದ
ಸೀಮೆಗಳ ನಾನರಿಯೆನಳವಡಿಸಿದನು ಕಲಿಭೀಮ ॥13॥
೦೧೪ ಮರಳೆಯನಿಲಜನಾ ಮಹಾದ್ಭುತ ...{Loading}...
ಮರಳೆಯನಿಲಜನಾ ಮಹಾದ್ಭುತ
ತರದ ವಸ್ತುವನಾನಲಾಪುದೆ
ಧರಣಿಯೆನೆ ಸಂದಣಿಸಿದವಸಂಖ್ಯಾತ ರಥಯೂಥ
ಅರಸುಗಳ ಸಹಿತೀ ಮಹಾಬಲ
ವೆರಸಿ ಬಂದನು ಭೀಮನಣ್ಣನ
ಚರಣಕೆರಗಿದನರ್ಜುನನ ತಕ್ಕೈಸಿದನು ನಗುತ ॥14॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಭೀಮಸೇನನು ಊರಿಗೆ ಹಿಂತಿರುವಾಗ ಆ ಮಹಾದ್ಭುತ ವಸ್ತುಗಳ ರಾಶಿಯನ್ನು ಈ ಭೂಮಿ ಧರಿಸಲಾದೀತೇ ಎನ್ನುವಂತೆ
ಅಸಂಖ್ಯಾತ ರಥಗಳಲ್ಲಿ ತುಂಬಿಸಿಡಲಾಗಿತ್ತು. ಅರಸರೂ ಜೊತೆಯಲ್ಲಿದ್ದರು, ಮಹಾಸೈನ್ಯವನ್ನು ಜೊತೆಗೂಡಿಸಿಕೊಂಡು ಭೀಮ ಬಂದು ತನ್ನ ಅಣ್ಣನ ಪಾದಗಳಿಗೆರಗಿ ನಗುತ್ತ ಅರ್ಜುನನ್ನು ತಬ್ಬಿಕೊಂಡ.
ಪದಾರ್ಥ (ಕ.ಗ.ಪ)
ಅನಿಲಜನು ಮರಳೆ-ಭೀಮಸೇನನು ಊರಿಗೆ ಹಿಂತಿರುಗಿಸಿದ, ಆ ಮಹಾದ್ಭುತತರ ವಸ್ತುವನು-ಆ ಅತ್ಯಂತ ಅದ್ಭುತವಾದ ಬಗೆಬಗೆಯ ವಸ್ತುಗಳ ರಾಶಿಯನ್ನು, ಧರಣಿ ಆನಲಾಪುದೆ-ಭೂಮಿ ಹೊರಲು ಸಾಧ್ಯವೇ, ಏನೆ-ಎನ್ನುವಂತೆ, ಸಂದಣಿಸಿದವು ಅಸಂಖ್ಯಾತ ರಥಯೂಥ-ಅವುಗಳನ್ನು ಹೊತ್ತ, ಅಸಂಖ್ಯಾತ ರಥಗಳ ದೊಡ್ಡ ಸಮೂಹವೇ ನೆರೆಯಿತು, ಅರಸುಗಳ ಸಹಿತ-ತನ್ನನ್ನು ಹಿಂಬಾಲಿಸಿದ ರಾಜರುಗಳೊಡನೆ, ಮಹಾಬಲವೆರಸಿ-ಮಹಾಸೈನ್ಯದೊಡಗೂಡಿ ಭೀಮನು ಬಂದನು, ಅಣ್ಣನ ಚರಣಗಳಿಗೆರಗಿದನು-ಅಣ್ಣ ಯುಧಿಷ್ಠಿರ ಪಾದಗಳಿಗೆ ವಂದಿಸಿದನು, ಅರ್ಜುನನ ನಗುತ ತಕ್ಕೈಸಿದನು-ಸಂತೋಷದಿಂದ ತಮ್ಮ, ಅರ್ಜುನನನ್ನು ಆಲಿಂಗಿಸಿಕೊಂಡನು
ಮೂಲ ...{Loading}...
ಮರಳೆಯನಿಲಜನಾ ಮಹಾದ್ಭುತ
ತರದ ವಸ್ತುವನಾನಲಾಪುದೆ
ಧರಣಿಯೆನೆ ಸಂದಣಿಸಿದವಸಂಖ್ಯಾತ ರಥಯೂಥ
ಅರಸುಗಳ ಸಹಿತೀ ಮಹಾಬಲ
ವೆರಸಿ ಬಂದನು ಭೀಮನಣ್ಣನ
ಚರಣಕೆರಗಿದನರ್ಜುನನ ತಕ್ಕೈಸಿದನು ನಗುತ ॥14॥