೦೦೦ ಸೂಚನೆ ಭೂಪತಿಯ ...{Loading}...
ಸೂಚನೆ: ಭೂಪತಿಯ ನೇಮದಲಿ ಜಂಬೂ
ದ್ವೀಪ ನವ ಖಂಡದಲಿ ಸಕಳ ಮ
ಹೀಪತಿಗಳನು ಗೆಲಿದು ಕಪ್ಪವ ತಂದನಾ ಪಾರ್ಥ
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
ಸೂ : ಯುಧಿಷ್ಠಿರ ರಾಜನ ಆಜ್ಞೆಯಂತೆ ಅರ್ಜುನ ಜಂಬೂದ್ವೀಪ ನವಖಂಡದಲ್ಲಿ ಸಮಸ್ತ ರಾಜರುಗಳನ್ನು ಗೆದ್ದು ಅವರಿಂದ ಕಪ್ಪವನ್ನು ತಂದ.
ಪದಾರ್ಥ (ಕ.ಗ.ಪ)
ಭೂಪತಿಯ ನೇಮದಲಿ-ಧೃತರಾಷ್ಟ್ರ ರಾಜನ ಅಪ್ಪಣೆಯಂತೆ ಆ ಪಾರ್ಥ- ಆ ಅರ್ಜುನ, ಜಂಬೂ ದ್ವೀಪ ನವ ಖಂಡದಲಿ-ಜಂಬೂ ದ್ವೀಪದ ಒಂಬತ್ತು ಖಂಡಗಳಿಂದ, ಸಕಳ ಮಹೀಪತಿಗಳ ಗೆಲಿದು-ಸಮಸ್ತ ರಾಜರುಗಳನ್ನು ಗೆದ್ದು, ಕಪ್ಪವ ತಂದನಾ-ಅವರಿಂದ ಕಪ್ಪವನ್ನು ಸ್ವೀಕರಿಸಿ ತಂದನು.
ಮೂಲ ...{Loading}...
ಸೂಚನೆ: ಭೂಪತಿಯ ನೇಮದಲಿ ಜಂಬೂ
ದ್ವೀಪ ನವ ಖಂಡದಲಿ ಸಕಳ ಮ
ಹೀಪತಿಗಳನು ಗೆಲಿದು ಕಪ್ಪವ ತಂದನಾ ಪಾರ್ಥ
೦೦೧ ಕೇಳು ಜನಮೇಜಯ ...{Loading}...
ಕೇಳು ಜನಮೇಜಯ ಧರಿತ್ರೀ
ಪಾಲ ಪಾಂಡವ ಪುರಿಗೆ ಲಕ್ಷ್ಮೀ
ಲೋಲ ಬಿಜಯಂಗೈದು ಭೀಮಾರ್ಜುನರ ಗಡಣದಲಿ
ಬಾಲೆಯರ ಕಡೆಗಣ್ಣ ಮಿಂಚಿನ
ಮಾಲೆಗಳ ಲಾಜಾಭಿವರುಷದ
ಲಾಲನೆಯ ರಚನೆಯಲಿ ಹೊಕ್ಕನು ರಾಜಮಂದಿರವ ॥1॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಶ್ರೀಕೃಷ್ಣ ಭೀಮಾರ್ಜುನರೊಡನೆ ಪಾಂಡವರ ನಗರಿ ಇಂದ್ರಪ್ರಸ್ಥಕ್ಕೆ ಬಂದು ಬಾಲೆಯರ ಕಡೆಗಣ್ಣ ಮಿಂಚಿನ ಮಾಲೆಗಳಿಂದಲೂ ಅರಳಿನ ಅಭಿವರ್ಷದಿಂದಲೂ ಸ್ವಾಗತಿಸಲ್ಪಟ್ಟ. ಅರಮನೆಯನ್ನು ಪ್ರವೇಶಿಸಿದ.
ಪದಾರ್ಥ (ಕ.ಗ.ಪ)
ಕೇಳು ಜನಮೇಜಯ ಧರಿತ್ರೀಪಾಲ-ಜನಮೇಜಯ, ರಾಜನೇ ಕೇಳು ಎಂದು ವೈಶಂಪಾಯನ ಭಾರತದ ಕಥೆಯನ್ನು ಮುಂದುವರಿಸಿಕೊಂಡು ಹೋಗುತ್ತಿದ್ದಾನೆ. ಲಕ್ಷ್ಮೀಲೋಲ-ಶ್ರೀಕೃಷ್ಣನು, ಭೀಮಾರ್ಜುನರ ಗಡಣದಲಿ-ಭೀಮ ಅರ್ಜುನರೊಡಗೂಡಿ,
ಪಾಂಡವ ಪುರಿಗೆ ಬಿಜಯಂಗೈದು-ಪಾಂಡವರಿದ್ದ ಇಂದ್ರಪ್ರಸ್ಥನಗರಿಗೆ ದಯಮಾಡಿಸಿ, ಬಾಲೆಯರ ಕಡೆಗಣ್ಣ ಮಿಂಚಿನ, ಮಾಲೆಯ-ಕೃಷ್ಣನ ದರ್ಶನಕ್ಕಾಗಿ ಕುತೂಹಲದಿಂದ ಎದುರು ನೋಡುತ್ತಿದ್ದ, ಸ್ತ್ರೀಯರ ಕಡೆಗಣ್ನೊಟದ ಮಿಂಚಿನ ಮಾಲೆಯ ಹಾಗೂ
ಲಾಜಾಭಿವರುಷದ-ಅರಳಿನ ಸುರಿಮಳೆಯ, ಲಾಲನೆಯ ರಚನೆಯಲಿ-ಪ್ರೀತಿಯ ಸ್ವಾಗತವನ್ನು ಪಡೆದು, ಹೊಕ್ಕನು ರಾಜಮಂದಿರವ-ಅರಮನೆಯನ್ನು ಪ್ರವೇಶಿಸಿದನು.
ಮೂಲ ...{Loading}...
ಕೇಳು ಜನಮೇಜಯ ಧರಿತ್ರೀ
ಪಾಲ ಪಾಂಡವ ಪುರಿಗೆ ಲಕ್ಷ್ಮೀ
ಲೋಲ ಬಿಜಯಂಗೈದು ಭೀಮಾರ್ಜುನರ ಗಡಣದಲಿ
ಬಾಲೆಯರ ಕಡೆಗಣ್ಣ ಮಿಂಚಿನ
ಮಾಲೆಗಳ ಲಾಜಾಭಿವರುಷದ
ಲಾಲನೆಯ ರಚನೆಯಲಿ ಹೊಕ್ಕನು ರಾಜಮಂದಿರವ ॥1॥
೦೦೨ ಕಣ್ಡು ಕೃಷ್ಣನನಿವರ ...{Loading}...
ಕಂಡು ಕೃಷ್ಣನನಿವರ ಕಾಣಿಸಿ
ಕೊಂಡನರಸು ಕ್ಷೇಮ ಕುಶಲವ
ಕಂಡು ಬೆಸಗೊಳಲೇಕೆ ಬಹು ಮಾತಿನಲಿ ಫಲವೇನು
ಕಂಡೆವೈ ನಿನ್ನಮಳ ಕರುಣಾ
ಖಂಡ ಜಲಧಿಯ ಭಕ್ತಜನಕಾ
ಖಂಡಲ ದ್ರುಮವೆಂದು ತಕ್ಕೈಸಿದನು ಹರಿಪದವ ॥2॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಶ್ರೀಕೃಷ್ಣ ಬಂದಿರುವನೆಂಬುದನ್ನು ತಿಳಿದ ಯುಧಿಷ್ಠಿರ ಬಂದು ಅವನನ್ನು ಕಂಡು, “ಕ್ಷೇಮ ಕುಶಲವನ್ನು ಕೇಳಬೇಕೆ, ಬಹುಮಾತಿನಿಂದ ಪ್ರಯೋಜನವೇನು ? ನಿನ್ನ ಶ್ರೇಷ್ಠವಾದ ಕರುಣೆಯ ಅಖಂಡ ಜಲನಿಧಿಯನ್ನು ಮತ್ತು ನೀನು ಭಕ್ತಜನರಿಗೆ ಕಲ್ಪವೃಕ್ಷವಾಗಿರುವುದನ್ನು ಕಂಡೆ ಎನ್ನುತ್ತಾ ಅವನ ಪಾದಗಳನ್ನು ಅಪ್ಪಿದ.
ಪದಾರ್ಥ (ಕ.ಗ.ಪ)
ಅಖಂಡಲದ್ರುಮ-ಕಲ್ಪವೃಕ್ಷ
ಕಂಡು ಕೃಷ್ಣನನು-ಕೃಷ್ಣನನ್ನು ಎದುರುಗೊಂಡು, ಇವರ-ಭೀಮಾರ್ಜುನರನ್ನು, ಕಾಣಿಸಿಕೊಂಡನು-ನೋಡಿ ಸ್ವಾಗಿತಿಸಿದನು,
ಅರಸು ಕ್ಷೇಮ ಕುಶಲವ ಕಂಡು ಬೆಸಗೊಳಲೇಕೆ-ಬಂದ ನಿಮ್ಮನ್ನು ನೋಡಿ, ಕ್ಷೇಮ ಕುಶಲವನ್ನು ಸಂಪ್ರದಾಯದಂತೆ ಬಾಯಿಂದ ಕೇಳಬೇಕೆಕೆ ? ಬಹು ಮಾತಿನಲಿ ಫಲವೇನು-ಹೆಚ್ಚು ಮಾತಿನಿಂದ ಏನು ಪ್ರಯೋಜನ ? ನಿನ್ನ ಅಮಳ-ಪವಿತ್ರನಾದ, ಕರುಣಾಖಂಡ ಜಲಧಿಯ-ಅಖಂಡವಾದ ಕರುಣಾ ಸಾಗರವನ್ನು, ಕಂಡೆವೈ-ನೋಡಿದೆವಲ್ಲವೆ ? ಭಕ್ತಜನಕೆ-ಭಕ್ತರಾದ ನಮಗೆ, ಅಖಂಡಲ ದ್ರುಮವ-ಕಲ್ಪವೃಕ್ಷವಾಗಿರುವ ನಿನ್ನನ್ನು ಕಂಡೆವಲ್ಲವೇ ! ಎಂದು-ಎಂದು ಹೇಳಿ, ಹರಿಪದವ-ಕೃಷ್ಣನ ಪಾದಗಳನ್ನು, ತಕ್ಕೈಸಿದನು-ಅಪ್ಪಿಕೊಂಡನು
ಮೂಲ ...{Loading}...
ಕಂಡು ಕೃಷ್ಣನನಿವರ ಕಾಣಿಸಿ
ಕೊಂಡನರಸು ಕ್ಷೇಮ ಕುಶಲವ
ಕಂಡು ಬೆಸಗೊಳಲೇಕೆ ಬಹು ಮಾತಿನಲಿ ಫಲವೇನು
ಕಂಡೆವೈ ನಿನ್ನಮಳ ಕರುಣಾ
ಖಂಡ ಜಲಧಿಯ ಭಕ್ತಜನಕಾ
ಖಂಡಲ ದ್ರುಮವೆಂದು ತಕ್ಕೈಸಿದನು ಹರಿಪದವ ॥2॥
೦೦೩ ನಡೆದ ಪರಿಯನು ...{Loading}...
ನಡೆದ ಪರಿಯನು ರಿಪು ಪುರವನವ
ಗಡಿಸಿ ಹೊಕ್ಕಂದವನು ಮಗಧನ
ತೊಡಕಿ ತೋಟಿಯ ಮಾಡಿ ಭೀಮನ ಕಾದಿಸಿದ ಪರಿಯ
ಬಿಡದೆ ಹಗಲಿರುಳೊದಗಿ ವೈರಿಯ
ಕಡೆಯ ಕಾಣಿಸಿ ನೃಪರ ಸೆರೆಗಳ
ಬಿಡಿಸಿ ಬಂದಂದವನು ವಿಸ್ತರಿಸಿದನು ಮುರವೈರಿ ॥3॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಜರಾಸಂಧನಲ್ಲಿ ಏನು ನಡೆಯಿತೆಂಬ ಬಗೆಯನ್ನು ಶತ್ರುವಿನ ಪಟ್ಟಣವನ್ನು ಹೇಗೆ ಆಕ್ರಮ ಪ್ರವೇಶ ಮಾಡಿದರೆಂಬುದನ್ನೂ ಮಾಗಧನನ್ನು ಹಿಡಿದು ಅವನೊಡನೆ ಜಗಳ ತೆಗೆದು ಭೀಮನಿಂದ ಯುದ್ಧ ಮಾಡಿಸಿದ ಪರಿಯನ್ನೂ ಬಿಡದೆ ಹಗಲಿರುಳೆನ್ನದೆ ಯುದ್ಧ ಮಾಡಿ ಶತ್ರುವನ್ನು ಕೊನೆಗಾಣಿಸಿ ಬಂಧನದಲ್ಲಿದ್ದ ರಾಜರುಗಳನ್ನು ಬಿಡಿಸಿದ ರೀತಿಯನ್ನು ಯುಧಿಷ್ಠಿರನಿಗೆ ಕೃಷ್ಣನು ವಿವರಿಸಿದ.
ಪದಾರ್ಥ (ಕ.ಗ.ಪ)
ನಡೆದ ಪರಿಯನು-ಏನೇನು ಹೇಗೆ ನಡೆಯಿತು ಎಂಬುದನ್ನು, ರಿಪು ಪುರವನು-ಶತ್ರುವಾದ ಜರಾಸಂಧನ ಪಟ್ಟಣವನ್ನು, ಅವಗಡಿಸಿ ಹೊಕ್ಕಂದವನು-ಅಲಕ್ಷ್ಯಮಾಡಿ ಆ ದ್ವಾರದಲ್ಲಿ ಪ್ರವೇಶಿಸಿದ ರೀತಿಯನ್ನು, ಮಗಧನ ತೊಡಕಿ-ಜರಾಸಂಧನನ್ನು ಕೆಣಕಿ
ತೋಟಿಯ ಮಾಡಿ-ಜಗಳ ತೆಗೆದು, ಭೀಮನ ಕಾದಿಸಿದ ಪರಿಯ-ಭೀಮನಿಂದ ಅವನೊಡನೆ ಯುದ್ಧ ಮಾಡಿಸಿದ ರೀತಿಯನ್ನು, ಹಗಲಿರುಳು ಬಿಡದೆ ಒದಗಿ-ಹಗಲು ಇರುಳೂ, ನಡುವೆ ಬಿಡುವಿಲ್ಲದಂತೆ ಹೋರಾಟ ನಡೆಸಿ, ವೈರಿಯ ಕಡೆಯ ಕಾಣಿಸಿ-ಶತ್ರುವಾದ ಜರಸಂಧನನ್ನು ಕೊನೆಗಾಣಿಸಿ, ನೃಪರ ಸೆರೆಗಳ ಬಿಡಿಸಿ ಬಂದಂದವನು-ಅವನ ಬಂಧನದಲ್ಲಿದ್ದ ಎಲ್ಲ, ರಾಜರುಗಳನ್ನೂ ಬಿಡುಗಡೆ ಮಾಡಿ ಬಂದ ರೀತಿಯನ್ನು, ಮುರವೈರಿ-ಕೃಷ್ಣನು, ವಿಸ್ತರಿಸಿದನು-ವಿಸ್ತಾರವಾಗಿ ಹೇಳಿದನು
ಮೂಲ ...{Loading}...
ನಡೆದ ಪರಿಯನು ರಿಪು ಪುರವನವ
ಗಡಿಸಿ ಹೊಕ್ಕಂದವನು ಮಗಧನ
ತೊಡಕಿ ತೋಟಿಯ ಮಾಡಿ ಭೀಮನ ಕಾದಿಸಿದ ಪರಿಯ
ಬಿಡದೆ ಹಗಲಿರುಳೊದಗಿ ವೈರಿಯ
ಕಡೆಯ ಕಾಣಿಸಿ ನೃಪರ ಸೆರೆಗಳ
ಬಿಡಿಸಿ ಬಂದಂದವನು ವಿಸ್ತರಿಸಿದನು ಮುರವೈರಿ ॥3॥
೦೦೪ ಎಲೆ ಮಹೀಪತಿ ...{Loading}...
ಎಲೆ ಮಹೀಪತಿ ನಿನ್ನ ಯಜ್ಞ
ಸ್ಥಲಕೆ ಬಾಧಕರಿಲ್ಲ ವನದಲಿ
ಪುಲಿಯಿರಲು ಗೋಧನ ಕುಲಕೆ ಯವಸಾಂಬು ಗೋಚರವೆ
ನೆಲನ ಗರುವರ ಗೊಂದಣವನಂ
ಡಲೆವನಖಿಳ ದ್ವೀಪಪತಿಗಳ
ನೆಳಲ ಸೈರಿಸನಳಿದನವನಿನ್ನೇನು ನಿನಗೆಂದ ॥4॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಎಲೆ, ರಾಜ ಇನ್ನು ಯಜ್ಞದ ಕ್ಷೇತ್ರದಲ್ಲಿ ನಿನಗೆ ಅಡ್ಡಿ ಮಾಡುವವರಿಲ್ಲ. ಕಾಡಿನಲ್ಲಿ ಹುಲಿಯಿದ್ದರೆ ಗೋವುಗಳ ಹಿಂಡಿಗೆ ಹುಲ್ಲು ನೀರು ಕಂಡೀತೇ ? ಈ ಭೂಮಿಯ ಮೇಲಿದ್ದ ಗೌರವಯುತರಾದ ರಾಜರ ಗುಂಪನ್ನೇ ಕಾಡಿಪೀಡಿಸುತ್ತಿದ್ದಂತಹ, ಎಲ್ಲ ದ್ವೀಪಪತಿಗಳ ನೆರಳನ್ನು ಸಹ ಸಹಿಸದಿದ್ದಂತಹ ದುಷ್ಟನು ನಾಶವಾದ. ಇನ್ನೇನು ನಿನಗೆ ? ಎಂದ.
ಪದಾರ್ಥ (ಕ.ಗ.ಪ)
ಯವಸಾಂಬು-ಹುಲ್ಲುನೀರು, ಅಂಡಲೆಸು-ಕಾಡಿಪೀಡಿಸು
ಎಲೆ ಮಹೀಪತಿ-ಎಲೆ ರಾಜ, ನಿನ್ನ ಯಜ್ಞಸ್ಥಲಕೆ ಬಾಧಕರಿಲ್ಲ-ನಿನ್ನ ಯಜ್ಞದ ಸ್ಥಳಕ್ಕೆ ಬಂದು ಬಾಧೆ, ಉಂಟುಮಾಡತಕ್ಕವರು ಈಗ ಯಾರೂ ಇಲ್ಲ, ವನದಲಿ-ಕಾಡಿನಲ್ಲಿ, ಪುಲಿಯಿರಲು-ಹುಲಿಯಿರಲಾಗಿ, ಗೋಧನ ಕುಲಕೆ-ಗೋವಿನ ಸಂಪತ್ತಿಗೆ, ಯವಸಾಂಬು-ಹುಲ್ಲು ನೀರು, ಗೋಚರವೆ-ಕಾಣುತ್ತದೆಯೆ, ಕಾಡಿನಲ್ಲಿ ಹುಲ್ಲು, ನೀರು, ಯಥೇಷ್ಟವಾಗಿಯೇ ಇದ್ದರೂ, ಹುಲಿಯ ದೆಸೆಯಿಂದ ಪ್ರಾಣಭಯವುಂಟಾಗಿ ಆಚೆ, ಹೋಗುವುದಕ್ಕಾಗಿ ಧೈರ್ಯ ಬಾರದು, ನೆಲನ ಗರುವರ ಗೊಂದಣವನು-ಭುಮಿಯ ಮೇಲಿದ್ದ ಮಾನ್ಯರಾದ
ರಾಜರ ಸಮೂಹವನ್ನೇ ಕಾಡಿಸುತ್ತಿದ್ದಂತಹ, ಅಖಿಳ ದ್ವೀಪಪತಿಗಳ-ಸಮಸ್ತ ದ್ವೀಪಗಳ ಒಡೆಯರ, ನೆಳಲ ಸೈರಿಸನು-ನೆರಳನ್ನು ಕೂಡ ಸಹಿಸದಿದ್ದಂತಹ ಆ ದುಷ್ಟ ಜರಾಸಂಧ, ಅವನ ಅಳಿದನು-ನಾಶವಾದ, ಇನ್ನೇನು ನಿನಗೆ-ಇನ್ನೇನು ಆತಂಕವಿದೆ ನಿನಗೆ? ಎಂದ ಕೃಷ್ಣ
ಮೂಲ ...{Loading}...
ಎಲೆ ಮಹೀಪತಿ ನಿನ್ನ ಯಜ್ಞ
ಸ್ಥಲಕೆ ಬಾಧಕರಿಲ್ಲ ವನದಲಿ
ಪುಲಿಯಿರಲು ಗೋಧನ ಕುಲಕೆ ಯವಸಾಂಬು ಗೋಚರವೆ
ನೆಲನ ಗರುವರ ಗೊಂದಣವನಂ
ಡಲೆವನಖಿಳ ದ್ವೀಪಪತಿಗಳ
ನೆಳಲ ಸೈರಿಸನಳಿದನವನಿನ್ನೇನು ನಿನಗೆಂದ ॥4॥
೦೦೫ ರಚಿಸು ಯಜ್ಞಾರಮ್ಭವನು ...{Loading}...
ರಚಿಸು ಯಜ್ಞಾರಂಭವನು ನೃಪ
ನಿಚಯವನು ದಾಯಾದ್ಯರನು ಬರಿ
ಸುಚಿತ ವಚನದಲೆಮ್ಮ ಕರೆಸಿದರಾ ಕ್ಷಣಕೆ ಬಹೆವು
ಸಚಿವರಾವೆಡೆ ಕಳುಹು ಬದರಿಯ
ರುಚಿರ ಋಷಿಗಳ ಕರೆಸು ನಿನ್ನಭಿ
ರುಚಿಗೆ ನಿಷ್ಪ್ರತ್ಯೂಹವೆಂದನು ದಾನವಧ್ವಂಸಿ ॥5॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಯಜ್ಞದ ಪ್ರಾರಂಭಕ್ಕೆ ತೊಡಗು, ಉಚಿತ ಮಾತುಗಳಿಂದ ರಾಜರ ಸಮೂಹವನ್ನೂ ದಾಯಾದಿಗಳನ್ನೂ ಬರಮಾಡು. ನನ್ನನ್ನು
ಕರೆದರೆ ಆ ಕ್ಷಣ ಬರುತ್ತೇನೆ. ಸಚಿವರೆಲ್ಲಿದ್ದಾರೆ, ಅವರನ್ನು ಕಳಿಸಿ ಬದರೀಕ್ಷೇತ್ರದಲ್ಲಿರುವ ಶ್ರೇಷ್ಠ ಋಷಿಗಳನ್ನು ಕರೆಸು. ಇನ್ನು ನಿನ್ನ ಇಷ್ಟಾರ್ಥಕ್ಕೆ ಯಾವ ಅಡ್ಡಿಯೂ ಇಲ್ಲ ಎಂದ ಆ ದಾನವಧ್ವಂಸಿ.
ಪದಾರ್ಥ (ಕ.ಗ.ಪ)
ಪ್ರತ್ಯೂಹ-ಅಡ್ಡಿ, ನಿಷ್ಪ್ರತ್ಯೂಹ-ಅಡ್ಡಿಯಿಲ್ಲದಿರವಿಕೆ. ನಿರಾತಂಕ
ರಚಿಸು ಯಜ್ಞಾರಂಭವನು-ಯಜ್ಞ ಪ್ರಾರಂಭಕ್ಕೆ ಬೇಕಾದುದನ್ನೆಲ್ಲ ಮಾಡಿಕೊ, ನೃಪನಿಚಯವನು-ರಾಜಸಮೂಹವನ್ನು, ದಾಯಾದ್ಯರನು-ನಿನ್ನ ದಾಯಾದಿಗಳಾದ ಕೌರವರನ್ನೂ, ಉಚಿತ ವಚನದಲಿ-ಯೋಗ್ಯ ಮಾತುಗಳಿಂದ ಆಹ್ವಾನಿಸಿ, ಬರಿಸು-ಕರೆಸು, ಎಮ್ಮ ಕರೆಸಿದರೆ-ನಮ್ಮನ್ನು ಬರಹೇಳಿದರೆ, ಆ ಕ್ಷಣಕೆ ಬಹೆವು-ಆ ಕೂಡಲೇ ಬರುತ್ತೇವೆ, ಸಚಿವರಾವೆಡೆ-ಸಚಿವರು ಎಲ್ಲಿದ್ದಾರೋ ನೋಡಿ ಅವರನ್ನು ಕರೆಯಲು ಕಳಿಸಿಕೊಡು, ಬದರಿಯ ರುಚಿರ ಋಷಿಗಳ-ಬದರಿ ಕ್ಷೇತ್ರದ ಶ್ರೇಷ್ಠ ಋಷಿಗಳನ್ನು, ಕರೆಸು-ಬರ ಮಾಡು, ನಿನ್ನ ಅಭಿರುಚಿಗೆ-ನಿನ್ನ ಅಭಿಲಾಷೆಗೆ, ನಿಷ್ಪ್ರತ್ಯೂಹವು-ಯಾವ ಅಡ್ಡಿಯೂ ಇಲ್ಲ, ಎಂದನು ದಾನವಧ್ವಂಸಿ-ಕೃಷ್ಣ
ಮೂಲ ...{Loading}...
ರಚಿಸು ಯಜ್ಞಾರಂಭವನು ನೃಪ
ನಿಚಯವನು ದಾಯಾದ್ಯರನು ಬರಿ
ಸುಚಿತ ವಚನದಲೆಮ್ಮ ಕರೆಸಿದರಾ ಕ್ಷಣಕೆ ಬಹೆವು
ಸಚಿವರಾವೆಡೆ ಕಳುಹು ಬದರಿಯ
ರುಚಿರ ಋಷಿಗಳ ಕರೆಸು ನಿನ್ನಭಿ
ರುಚಿಗೆ ನಿಷ್ಪ್ರತ್ಯೂಹವೆಂದನು ದಾನವಧ್ವಂಸಿ ॥5॥
೦೦೬ ಎನ್ದು ಕಳುಹಿಸಿಕೊಣ್ಡು ...{Loading}...
ಎಂದು ಕಳುಹಿಸಿಕೊಂಡು ದೋರಕಿ
ಗಿಂದಿರಾಪತಿ ಮಾಗಧನ ರಥ
ದಿಂದ ಬಿಜಯಂಗೈದನಿನಿಬರು ಕಳುಹಿ ಮರಳಿದರು
ಬಂದ ವೇದವ್ಯಾಸ ಧೌಮ್ಯರ
ನಂದು ಕರೆಸಿ ಯುಧಿಷ್ಠಿರನು ನಿಜ
ಮಂದಿರದೊಳೊಪ್ಪಿದನು ಪರಿಮಿತ ಜನ ಸಮೂಹದಲಿ ॥6॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಹೀಗೆ ಹೇಳಿ ಬೀಳ್ಕೊಂಡು ಮಾಗಧನ ರಥವನ್ನೇ ಏರಿ ಇಂದಿರಾಪತಿ ಕೃಷ್ಣ ದ್ವಾರಕೆಗೆ ಹೊರಟ. ಉಳಿದವರೆಲ್ಲ ಅವನನ್ನು ಕಳಿಸಿಕೊಟ್ಟು ಹಿಂತಿರುಗಿದರು. ಅನಂತರ ಯುಧಿಷ್ಠಿರನು ವೇದವ್ಯಾಸರನ್ನೂ ಧೌಮ್ಯರನ್ನೂ ಕರೆಸಿಕೊಂಡು ತನ್ನ ಮಂದಿರದಲ್ಲಿ ಪರಿಮಿತ
ಜನಸಮೂಹದೊಡನೆ ಸೇರಿದ.
ಪದಾರ್ಥ (ಕ.ಗ.ಪ)
ಎಂದು ಕಳುಹಿಸಿಕೊಂಡು-ಹೀಗೆ ಹೇಳಿದ ನಂತರ ಯುಧಿಷ್ಠಿರನಿಂದ ಬೀಳ್ಕೊಂಡು, ಇಂದಿರಾಪತಿ-ಶ್ರೀಕೃಷ್ಣನು
ಮಾಗಧನ ರಥದಿಂದ-ಗಿರಿವ್ರಜದಿಂದ ತಂದಿದ್ದ ಜರಾಸಂಧನ ರಥದಲ್ಲಿಯೇ ಕುಳಿತು, ದೋರಕಿಗೆ-ದ್ವಾರಕೆಗೆ, ಬಿಜಯಂಗೈದನು-ದಯಮಾಡಿಸಿದನು, ಇನಿಬರು-ಯುಧಿಷ್ಠಿರನೇ ಮೊದಲಾದ ಆತ್ಮೀಯ ಜನರು, ಕಳುಹಿ ಮರಳಿದರು-ಕೃಷ್ಣನನ್ನು ಕಳುಹಿಸಿಕೊಟ್ಟು ಅರಮನೆಗೆ ಹಿಂತಿರುಗಿದರು, ಬಂದ ಯುಧಿಷ್ಟಿರ-ಕೃಷ್ಣನನ್ನು ಬೀಳ್ಕೊಟ್ಟು ಬಂದ ಯುಧಿಷ್ಠಿರ, ಅಂದು-ಆ ದಿನ. ವೇದವ್ಯಾಸ ಧೌಮ್ಯರನು ಕರೆಸಿ, ನಿಜ ಮಂದಿರದೊಳು-ತನ್ನ ಮನೆಯಲ್ಲಿ, ಪರಿಮಿತ ಜನ ಸಮೂಹದಲಿ-ಎಷ್ಟು ಬೇಕೋ ಅಷ್ಟೇ ಜನಗಳೊಡನೆ, ಒಪ್ಪಿದನು-ಸಭೆಯಲ್ಲಿ ಕಾಣಿಸಿಕೊಂಡನು
ಮೂಲ ...{Loading}...
ಎಂದು ಕಳುಹಿಸಿಕೊಂಡು ದೋರಕಿ
ಗಿಂದಿರಾಪತಿ ಮಾಗಧನ ರಥ
ದಿಂದ ಬಿಜಯಂಗೈದನಿನಿಬರು ಕಳುಹಿ ಮರಳಿದರು
ಬಂದ ವೇದವ್ಯಾಸ ಧೌಮ್ಯರ
ನಂದು ಕರೆಸಿ ಯುಧಿಷ್ಠಿರನು ನಿಜ
ಮಂದಿರದೊಳೊಪ್ಪಿದನು ಪರಿಮಿತ ಜನ ಸಮೂಹದಲಿ ॥6॥
೦೦೭ ಅಕಟ ನಾರದನೇಕೆ ...{Loading}...
ಅಕಟ ನಾರದನೇಕೆ ಯಜ್ಞ
ಪ್ರಕಟವನು ಮಾಡಿದನು ನಮಗೀ
ಸಕಲ ಧರಣೀಕ್ಷತ್ರ ವರ್ಗದ ವಿಜಯ ಕಿರುಕುಳವೆ
ವಿಕಟ ಜಂಬೂದ್ವೀಪ ಪರಿಪಾ
ಲಕರು ನಮ್ಮಿನಿಬರಿಗೆ ಸದರವೆ
ಸುಕರವೇ ವರ ರಾಜಸೂಯವೆನುತ್ತ ಚಿಂತಿಸಿದ ॥7॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅಯ್ಯೋ, ನಾರದನು ಏಕಾದರೂ ಈ ಯಜ್ಞದ ವಿಷಯವನ್ನು ಹೇಳಿದ? ಈ ಭೂಮಿಯ ಮೇಲಿರುವ ಎಲ್ಲ ಕ್ಷತ್ರಿಯವರ್ಗವನ್ನೂ ಜಯಿಸುವುದು ಸಾಮಾನ್ಯವಾದ ವಿಷಯವೇ. ಪರಾಕ್ರಮಿಗಳಾದ ಈ ಜಂಬೂ ದ್ವೀಪದ ರಾಜರುಗಳು ನಮ್ಮಿಷ್ಟು ಮಂದಿಗೆ ಸದರವೆನಿಸಿಯಾರೇ, ಶ್ರೇಷ್ಠ ರಾಜಸೂಯ ಯಾಗ ಸುಗಮವಾಗಿ ನಡೆದೀತೇ ಎಂದು ಯುಧಿಷ್ಠಿರ ಚಿಂತಿಸತೊಡಗಿದ.
ಪದಾರ್ಥ (ಕ.ಗ.ಪ)
ಆ ಸಭೆಯಲ್ಲಿ ಯುಧಿಷ್ಠಿರನು, ಅಕಟ-ಅಯ್ಯೋ, ನಾರದನೇಕೆ ರಜ್ಞ ಪ್ರಕಟವನು ಮಾಡಿದನು-ನಾರದನು, ಏಕಾದರೂ ಯಜ್ಞದ ವಿಷಯವನ್ನು ಪ್ರಕಟಿಸಿದ ? ಈ ಸಕಲ ಧರಣೀಕ್ಷತ್ರ ವರ್ಗದ-ಈ ಭೂಮಿಯ ಮೇಲಿರುವ ಸಮಸ್ತ ಕ್ಷತ್ರಿಯ ರಾಜ ಸಮೂಹದ ವಿಜಯ, ನಮಗೇ ಕಿರುಕುಳವೆ-ಕಿರುಕುಳವನ್ನುಂಟುಮಾಡುವಂತಹುದೇ, ವಿಕಟ-ಪರಾಕ್ರಮಿಗಳಾದ, ಜಂಬೂ ದ್ವೀಪ ಪರಿಪಾಲಕರು-ಜಂಬೂ ದ್ವೀಪದಲ್ಲಿರುವ ರಾಜರುಗಳು, ನಮ್ಮಿನಿಬರಿಗೆ-ನಮ್ಮಿಷ್ಟು ಜನರಿಗೆ, ಸದರವೆ-ಗೆಲ್ಲುವುದು ಸುಲಭವೇ ? ವರ ರಾಜಸೂಯ ಸುಕರವೇ-ಶ್ರೇಷ್ಠವಾದ ರಾಜಸೂಯವನ್ನು ಮಾಡುವುದು, ಸುಕರವೇ-ಸುಲಭವಾದೀತೇ ? ಎನುತ್ತ ಚಿಂತಿಸಿದ-ಎಂದು ಚಿಂತೆ ಮಾಡತೊಡಗಿದ.
ಮೂಲ ...{Loading}...
ಅಕಟ ನಾರದನೇಕೆ ಯಜ್ಞ
ಪ್ರಕಟವನು ಮಾಡಿದನು ನಮಗೀ
ಸಕಲ ಧರಣೀಕ್ಷತ್ರ ವರ್ಗದ ವಿಜಯ ಕಿರುಕುಳವೆ
ವಿಕಟ ಜಂಬೂದ್ವೀಪ ಪರಿಪಾ
ಲಕರು ನಮ್ಮಿನಿಬರಿಗೆ ಸದರವೆ
ಸುಕರವೇ ವರ ರಾಜಸೂಯವೆನುತ್ತ ಚಿಂತಿಸಿದ ॥7॥
೦೦೮ ಮಣಿವರಲ್ಲರಸುಗಳು ಮಾಡದೆ ...{Loading}...
ಮಣಿವರಲ್ಲರಸುಗಳು ಮಾಡದೆ
ಮಣಿದೆವಾದರಕೀರ್ತಿಕಾಮಿನಿ
ಕುಣಿವಳೈ ತ್ರೈಜಗದ ಜಿಹ್ವಾರಂಗ ಮಧ್ಯದಲಿ
ಬಣಗುಗಳು ನಾವೆಂದು ನಾಕದ
ಗಣಿಕೆಯರು ನಗುವರು ಸುಯೋಧನ
ನಣಕವಾಡಾಯ್ತು ತೆರನೆಂದರಸ ಬಿಸುಸುಯ್ದ ॥8॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ರಾಜರುಗಳು ಮಣಿವವರಲ್ಲ. ನಾವು ಯಾಗವನ್ನು ಮಾಡದೆ ಮಣಿದರೆ ಅಕೀರ್ತಿ ಎಂಬ ಕಾಮಿನಿ ಮೂರು ಲೋಕಗಳ ಜನರ ನಾಲಿಗೆಗಳ ಮೇಲೆ ಕುಣಿಯುತ್ತಾಳೆ (ಮೂರು ಲೋಕಗಳಿಗೆಲ್ಲ ಅಪಕೀರ್ತಿ ವ್ಯಾಪಿಸುತ್ತದೆ.) ನಾವು ಅಯೋಗ್ಯರೆಂದು ಸ್ವರ್ಗದ
ಗಣಿಕೆಯರಲ್ಲ ಹಾಸ್ಯಮಾಡುತ್ತಾರೆ. ಅತ್ತ ದುರ್ಯೋಧನನೂ ನಮ್ಮನ್ನು ಅಪಹಾಸ್ಯ ಮಾಡುವುದಕ್ಕೆ ದಾರಿಯಾಗುತ್ತದೆ. ಎಂದು ಯುಧಿಷ್ಠಿರ ನಿಟ್ಟುಸಿರು ಬಿಟ್ಟ.
ಪದಾರ್ಥ (ಕ.ಗ.ಪ)
ಬಣಗು-ಅಯೋಗ್ಯ
ಅಕೀರ್ತಿ - ಅಪಕೀರ್ತಿ
ಮಣಿವರಲ್ಲ ಅರಸುಗಳು-ರಾಜರುಗಳು ನಮಗೆ ಸೋಲುವವರಲ್ಲ, ಮಾಡದೆ ಮಣಿದೆವಾದರೆ-ರಾಜಸೂಯವನ್ನು ನಾವು ಸೋಲೊಪ್ಪಿಕೊಂಡರೆ, ತ್ರೈಜಗದ ಜಿಹ್ವಾರಂಗ ಮಧ್ಯದಿ-ಮೂರು ಲೋಕಗಳ ನಾಲಗೆಯೆಂಬ, ನಾಟ್ಯರಂಗದ ನಡುವೆ
ಅಕೀರ್ತಿ ಕಾಮಿನಿ-ಅಪಕೀರ್ತಿಯೆಂಬ ಹೆಣ್ಣು, ಕುಣಿವಳೈ-ಕುಣಿಯ ತೊಡಗುತ್ತಾಳೆ. (ಮೂರು ಲೋಕಗಳಲ್ಲೂ ಅಪಕೀರ್ತಿ ವ್ಯಾಪಿಸುತ್ತಿದೆ !) ಬಣಗುಗಳು ನಾವೆಂದು-ನಾವು ಅಯೋಗ್ಯರೆಂದು, ನಾಕದ ಗಣಿಕೆಯರು-ಸ್ವರ್ಗದಲ್ಲಿನ ವೇಶ್ಯೆಯರು,
ನಗುವರು-ಹಾಸ್ಯಮಾಡಿಕೊಂಡು ನಗುತ್ತಾರೆ, ಈ ಕಡೆ ಸುಯೋಧನನು ಅಣಕವಾಡುವಡೆ ಆಯ್ತು ತೆರನು-ಸುಯೋಧನನೂ
ನಮ್ಮನ್ನು ಹಾಸ್ಯಮಾಡಲು ಅವಕಾಶವಾಯ್ತು, ಎಂದರಸ ಬಿಸುಸುಯ್ದ-ಎಂದು ಯುಧಿಷ್ಠಿರ ನಿಟ್ಟುಸಿರುಬಿಟ್ಟ
ಮೂಲ ...{Loading}...
ಮಣಿವರಲ್ಲರಸುಗಳು ಮಾಡದೆ
ಮಣಿದೆವಾದರಕೀರ್ತಿಕಾಮಿನಿ
ಕುಣಿವಳೈ ತ್ರೈಜಗದ ಜಿಹ್ವಾರಂಗ ಮಧ್ಯದಲಿ
ಬಣಗುಗಳು ನಾವೆಂದು ನಾಕದ
ಗಣಿಕೆಯರು ನಗುವರು ಸುಯೋಧನ
ನಣಕವಾಡಾಯ್ತು ತೆರನೆಂದರಸ ಬಿಸುಸುಯ್ದ ॥8॥
೦೦೯ ಎನಲು ಧಿಮ್ಮನೆ ...{Loading}...
ಎನಲು ಧಿಮ್ಮನೆ ನಿಂದು ಭುಗಿಲೆಂ
ದನು ಕಿರೀಟಿ ವೃಥಾಭಿಯೋಗದ
ಮನಕತಕೆ ಮಾರಾಂಕವಾಯ್ತೇ ಹರ ಮಹಾದೇವ
ನಿನಗಕೀರ್ತಿ ವಧೂಟಿ ಕುಣಿವಳೆ
ಜನದ ಜಿಹ್ವಾರಂಗದಲಿ ಹಾ
ಯೆನುತ ತಲೆದೂಗಿದನು ಘನ ಶೌರ್ಯಾನುಭಾವದಲಿ ॥9॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಆ ಮಾತು ಕೇಳಿದೊಡನೆ ಅರ್ಜುನ ಥಟ್ಟನೆ ಮೇಲೆದ್ದು ಬೆಂಕಿಯ ಜ್ವಾಲೆ ಭಗ್ಗೆಂದು ಉರಿದಂತೆ ಕೆರಳಿ “ವೃಥಾ ಮೇಲೆ ಬಿದ್ದು
ಬಂದ ಚಿಂತೆಗೆ ನಿನ್ನ ಮನಸ್ಸಿನಲ್ಲಿ ಹೋರಾಟಕ್ಕೆ ಅವಾಕಾಶವಾಯಿತೇ ! ಹರ ಮಹಾದೇವ ! ಜನರ ನಾಲಿಗೆಗಳೆಂಬ ರಂಗದ ನಡುವೆ ನಿನ್ನ ಅಪಕೀರ್ತಿಯೆಂಬ ವಧು ನರ್ತನ ಮಾಡುತ್ತಾಳೆಯೇ ? ಹಾ ಮಹಾದೇವ ! ಎಂದು ಉದ್ಗರಿಸುತ್ತ ತನ್ನ ಘನಶೌರ್ಯವನ್ನು ಹೊರಸೂಸುವಂತೆ ತಲೆದೂಗಿದ.
ಪದಾರ್ಥ (ಕ.ಗ.ಪ)
ಮನಕತ-ಚಿಂತೆ, ಮಾರಾಂಕ-ರಣಾಂಗಣ
ಎನಲು-ಯುಧಿಷ್ಠಿರನು ಹೀಗೆ ಹೇಳಲು, ಕಿರೀಟಿ-ಅರ್ಜುನನು, ಧಿಮ್ಮನೆ ನಿಂದು-ಥಟ್ಟನೆ ಎದ್ದು ನಿಂತು, ಭುಗಿಲೆಂದನು-ಬೆಂಕಿಯ ಜ್ವಾಲೆ ಭುಗ್ ಎಂದು, ಹೊತ್ತಿಕೊಳ್ಳುವಂತೆ ಕೆರಳಿದನು, ವೃಥಾಭಿಯೋಗದ ಮನಕತಕೆ ಮಾರಾಂಕವಾಯ್ತೇ, ಹರ ಮಹಾದೇವ-ಮೇಲೆ ಬಿದ್ದು ಚಿಂತೆಗೆ ವ್ಯರ್ಥವಾಗಿ ನಿನ್ನ, ಮನಸ್ಸಿನಲ್ಲಿ ಹೋರಾಟಕ್ಕೆ ಅವಕಾಶವಾಯಿತೇ, ಅಯ್ಯೋ ದೇವರೆ, ನಿನಗೆ ಜನದ ಜಿಹ್ವಾರಂಗಮಧ್ಯದಲಿ-ಜನರ ನಾಲಿಗೆಗಳೆಂಬ, ರಂಗದ ಮಧ್ಯದಲ್ಲಿ ಅತಿ ಕೀರ್ತಿ ವಧೂಟಿ-ಅಕೀರ್ತಿ ಎಂಬ ಕನ್ಯೆ, ಕುಣಿವಳೆ-ಕುಣಿಯುವಳೆ ? ಹಾ ಎನುತ, ಘನ ಶೌರ್ಯಾನುಭಾವದಲಿ-ತನ್ನ ಮಹಾಶೌರ್ಯವನ್ನು ಅಭಿವೃದ್ಧಿಪಡಿಸುವಂತೆ ತಲೆದೂಗಿದನು
ಮೂಲ ...{Loading}...
ಎನಲು ಧಿಮ್ಮನೆ ನಿಂದು ಭುಗಿಲೆಂ
ದನು ಕಿರೀಟಿ ವೃಥಾಭಿಯೋಗದ
ಮನಕತಕೆ ಮಾರಾಂಕವಾಯ್ತೇ ಹರ ಮಹಾದೇವ
ನಿನಗಕೀರ್ತಿ ವಧೂಟಿ ಕುಣಿವಳೆ
ಜನದ ಜಿಹ್ವಾರಂಗದಲಿ ಹಾ
ಯೆನುತ ತಲೆದೂಗಿದನು ಘನ ಶೌರ್ಯಾನುಭಾವದಲಿ ॥9॥
೦೧೦ ಮಣಿಯರೇ ಮನ್ನೆಯರು ...{Loading}...
ಮಣಿಯರೇ ಮನ್ನೆಯರು ನಾಕದ
ಗಣಿಕೆಯರು ನಗುವರೆ ಸುಯೋಧನ
ನಣಕವಾಡುವನೇ ಶಿವಾ ತಪ್ಪೇನು ತಪ್ಪೇನು
ಕಣೆಗಳಿವು ನಾಳಿನಲಿ ಕಬ್ಬಿನ
ಕಣೆಗಳೋ ಗಾಂಡೀವವಿದು ನಿ
ರ್ಗುಣವೊ ತಾನರ್ಜುನ ಮಹೀರುಹವೆಂದನಾ ಪಾರ್ಥ ॥10॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಮತ್ತೆ “ಮಾನ್ಯರಾದ ರಾಜರುಗಳು ಮಣಿಯುವುದಿಲ್ಲವೇ ? ಸ್ವರ್ಗದ ಗಣಿಕೆಯರು ಅಪಹಾಸ್ಯಮಾಡಿ ನಗುವರೇ ? ದುರ್ಯೋಧನನು ಅಣಕವಾಡುತ್ತಾನೆಯೇ ? ಶಿವಾ ! ತಪ್ಪೇನು ತಪ್ಪೇನು ! ಈ ನನ್ನ ಕಣೆಗಳು (ಬಾಣಗಳು) ನಾಳೆ ಕಬ್ಬಿನಗಣೆಗಳಾಗಿ
ಬಿಡುತ್ತವೋ ! ಗಾಂಡೀವ ಧನುಸ್ಸು ನಿರ್ಗುಣ (ಗುಣರಹಿತ - ಹೆದೆ ಇಲ್ಲದುದು) ಆಗಿಬಿಡುತ್ತದೋ ? ಆಗ ನಾನು ಅರ್ಜುನ
ಮಹೀರುಹ (ಮತ್ತಿಯ ಮರ) ಆದಂತಾಯಿತು !” ಎಂದ.
ಪದಾರ್ಥ (ಕ.ಗ.ಪ)
ನಿರ್ಗುಣ-ತಿರುವು ಇಲ್ಲದ್ದು
ಮಣಿಯರೇ ಮನ್ನೆಯರು-ಮಾನ್ಯರಾದ ರಾಜರು ತಲೆಬಾಗುವುದಿಲ್ಲವೆ ? ನಾಕದ ಗಣಿಕೆಯರು ನಗುವರೆ-ಸ್ವರ್ಗದ ವೇಶ್ಯೆಯರು ಹಾಸ್ಯಮಾಡಿ ನಗುತ್ತಾರೆಯೆ, ಸುಯೋಧನನು ಅಣಕವಾಡುವನೇ-ಸುಯೋಧನನು ವ್ಯಂಗ್ಯವಾಗಿ ಮಾತನಾಡುವನೇ ? ಶಿವಾ ! ತಪ್ಪೇನು ತಪ್ಪೇನು-ಅಯ್ಯೋ ದೇವರೇ ನೀನಾಡುವುದದಲ್ಲಿ ತಪ್ಪೆಲ್ಲಿ ಬಂತು ! ಕಣೆಗಳಿವು-ಈ ನನ್ನ ಕಣೆಗಳು (ಬಾಣಗಳು) ನಾಳೆ.
ಕಬ್ಬಿನ ಕಣೆಗಳೋ (ಜಲ್ಲೆಗಳೋ) ! ಗಾಂಡೀವವಿದು-ಈ ನನ್ನ ಗಾಂಡೀವ (ಬಿಲ್ಲು) ನಿರ್ಗುಣವೊ-ಗುಣವಿಲ್ಲದೋ, ತಿರುವು ಇಲ್ಲದುದೋ, ಗುಣಹೀನವಾದುದೋ ? ಹಾಗಾದಪಕ್ಷದಲ್ಲಿ ಅರ್ಜುನನೆನಿಸಿದ ತಾನು. ಅರ್ಜುನ ಮಹೀರುಹ-ಮತ್ತಿಯ ಮರ
ಎಂದನಾ ಪಾರ್ಥ-ಎಂದು ಗೇಲಿಮಾಡಿದ ಅರ್ಜುನ
ಮೂಲ ...{Loading}...
ಮಣಿಯರೇ ಮನ್ನೆಯರು ನಾಕದ
ಗಣಿಕೆಯರು ನಗುವರೆ ಸುಯೋಧನ
ನಣಕವಾಡುವನೇ ಶಿವಾ ತಪ್ಪೇನು ತಪ್ಪೇನು
ಕಣೆಗಳಿವು ನಾಳಿನಲಿ ಕಬ್ಬಿನ
ಕಣೆಗಳೋ ಗಾಂಡೀವವಿದು ನಿ
ರ್ಗುಣವೊ ತಾನರ್ಜುನ ಮಹೀರುಹವೆಂದನಾ ಪಾರ್ಥ ॥10॥
೦೧೧ ಸಕಲ ಜಮ್ಬೂದ್ಪೀಪ ...{Loading}...
ಸಕಲ ಜಂಬೂದ್ಪೀಪ ಪರಿ ಪಾ
ಲಕರ ಭಂಡಾರಾರ್ಥಕಿದೆ ಸು
ಪ್ರಕಟವೆಂದುಂಗುರವನಿತ್ತನು ನೃಪನ ಹಸ್ತದಲಿ
ಸುಕರ ದುಷ್ಕರವೆಂಬ ಚಿಂತಾ
ವಿಕಳತೆಗೆ ನೀ ಪಾತ್ರನೇ ಸಾ
ಧಕರನೇ ಸಂಹರಿಪೆ ತಾ ವೀಳೆಯವನೆನಗೆಂದ ॥11॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಸಕಲ ಜಂಬೂದ್ವೀಪದ ರಾಜರುಗಳ ಸಂಪತ್ತಿಗೆ ಪ್ರತಿಯಾಗಿ ಈ ನನ್ನ ಉಂಗುರವನ್ನು ಪ್ರಕಟವಾಗಿ ಮಾಡುತ್ತಿದ್ದೇನೆ ಎಂದು ಅರ್ಜುನ ಅಣ್ಣನ ಕೈಗೆ ಉಂಗುರವನ್ನು ಕೊಟ್ಟು. ಇದು ಸಾಧ್ಯ ಅಥವಾ ಅಸಾಧ್ಯ ಎಂಬ ಚಿಂತೆಯನ್ನು ಮಾಡುವುದು ನಿನಗೆ ಉಚಿತವೇ? ಸಾಧಕರನ್ನೇ ಸಂಹರಿಸುತ್ತೇನೆ. ತಾ ವೀಳೆಯವನ್ನು (ಅನುಜ್ಞೆ ಕೊಡು) ಎಂದ.
ಪದಾರ್ಥ (ಕ.ಗ.ಪ)
ಸಕಲ ಜಂಬೂದ್ಪೀಪ ಪರಿ ಪಾಲಕರ-ಇಡೀ ಜಂಬೂದ್ವೀಪದ ಎಲ್ಲ ರಾಜರುಗಳ, ಭಂಡಾರಾರ್ಥಕೆ-ಭಂಡಾರದಲ್ಲಿರುವ ಸಂಪತ್ತಿಗೆ ಅಂದರೆ ಸಂಪತ್ತನ್ನು ನಿನಗೆ ತಂದೊಪ್ಪಿಸುವನು ಎಂಬುದಕ್ಕೆ ಸಂಕೇತವಾಗಿ ಇದೆ ಸುಪ್ರಕಟವೆಂದು-ಇದೋ ಪ್ರಕಟವಾಗಿ ತೆಗೆದುಕೊ ಎಂದು ನೃಪನ ಹಸ್ತದಲಿ-ಯುಧಿಷ್ಠಿರ ರಾಜನ ಕೈಯಲ್ಲಿ ಉಂಗುರವನಿತ್ತನು-ಉಂಗುರವನ್ನು ಕೊಟ್ಟ. ಸುಕರ ದುಷ್ಕರ-ಇದು ಸುಲಭವಾಗಿ ಆಗುವಂತಹುದು, ಇದು ಆಗುವುದು ಕಷ್ಟ ಎಂಬ ಚಿಂತಾವಿಕಳತೆಗೆ-ಚಿಂತೆಯ ವ್ಯಾಕುಲಕ್ಕೆ ನೀ ಪಾತ್ರನೇ-ನೀನು ಅರ್ಹನೆ? ಸಾಧಕರನೇ ಸಂಹರಿಪೆ-ನೀನು ಸಾಧಿಸಲು ಹೊರಟವನನ್ನೇ ಸಂಹಾರ ಮಾಡಿಬಿಡುವೆ ! ತಾ ವೀಳೆಯವನು ಎನಗೆ-ನನಗೆ ವೀಳೆಯವನ್ನು ಕೊಡು, ಅನುಮತಿಕೊಡು ಎಂದ.
ಮೂಲ ...{Loading}...
ಸಕಲ ಜಂಬೂದ್ಪೀಪ ಪರಿ ಪಾ
ಲಕರ ಭಂಡಾರಾರ್ಥಕಿದೆ ಸು
ಪ್ರಕಟವೆಂದುಂಗುರವನಿತ್ತನು ನೃಪನ ಹಸ್ತದಲಿ
ಸುಕರ ದುಷ್ಕರವೆಂಬ ಚಿಂತಾ
ವಿಕಳತೆಗೆ ನೀ ಪಾತ್ರನೇ ಸಾ
ಧಕರನೇ ಸಂಹರಿಪೆ ತಾ ವೀಳೆಯವನೆನಗೆಂದ ॥11॥
೦೧೨ ಫೂತು ಫಲುಗುಣ ...{Loading}...
ಫೂತು ಫಲುಗುಣ ನಿನ್ನ ಕುಲಕಭಿ
ಜಾತ ಶೌರ್ಯಕೆ ಗರುವಿಕೆಗೆ ಸರಿ
ಮಾತನಾಡಿದೆ ಸಲುವುದೈ ನಿನಗೆನುತ ಕೊಂಡಾಡಿ
ಈತನುತ್ತರ ದೆಸೆಗೆ ಭೀಮನು
ಶಾತಮನ್ಯುವ ದೆಸೆಗೆ ಯಮಳರ
ಭೀತರಿದ್ದೆಸೆಗೆಂದು ವೇದವ್ಯಾಸ ನೇಮಿಸಿದ ॥12॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅರ್ಜನನ ಮಾತುಗಳನ್ನು ಮೆಚ್ಚಿಕೊಂಡ ವೇದವ್ಯಾಸ ಅವನನ್ನು ಶ್ಲಾಘಿಸುತ್ತಾ “ಫೂತು ಫಲಗುಣ ! ನಿನ್ನ ಸತ್ಕುಲಕ್ಕೆ ಸದ್ವಂಶಕ್ಕೆ ನಿನ್ನ ಶೌರ್ಯಕ್ಕೆ, ನಿನ್ನ ಹಿರಿಮೆಗೆ ತಕ್ಕ ಮಾತನ್ನಾಡಿದೆ. ಇವು ನಿನಗೆ ಒಪ್ಪುತ್ತವೆ” ಎಂದು ಅವನನ್ನು ಉತ್ತರ ದಿಕ್ಕಿಗೂ ಭೀಮನನ್ನು ಪೂರ್ವದಿಕ್ಕಿಗೂ ನಿರ್ಭೀತರಾದ ನಕುಲ ಸಹದೇವರನ್ನು ಪಶ್ಚಿಮ ದಕ್ಷಿಣ ಎರಡು ದಿಕ್ಕುಗಳಿಗೂ ದಿಗ್ವಿಜಯಕ್ಕೆ ಹೋಗುವಂತೆ ನೇಮಿಸಿದ.
ಪದಾರ್ಥ (ಕ.ಗ.ಪ)
ಅಭಿಜಾತ-ಸದ್ವಂಶ
ಶತಮನ್ಯು ದಿಕ್ಕು - ಪೂರ್ವ
ಫೂತು ಫಲುಗುಣ-ಶಹಬಾಸ್ ಅರ್ಜುನ ! ನಿನ್ನ ಕುಲಕೆ ಅಭಿಜಾತ ಶೌರ್ಯಕೆ ಗರುವಿಕೆಗೆ-ನಿನ್ನ ಸತ್ಕುಲಕ್ಕೆ ಒಪ್ಪುವಂತೆ, ನಿನ್ನ ಉತ್ತಮ ಶೌರ್ಯಕ್ಕೆ ಹಾಗೂ ನಿನ್ನ ಹಿರಿಮೆಗೆ ತಕ್ಕಂತೆ ಸರಿಮಾತನಾಡದೆ-ಯೊಗ್ಯವಾದ ಮಾತನ್ನಾಡದೆ ಸಲುವುದೈ ನಿನಗೆ-ಈ ಮಾತು ನಿನಗೆ ಒಪ್ಪುತ್ತದೆ ಕಣಯ್ಯ ಎಂದು ವೇದವ್ಯಾಸ, ಕೊಂಡಾಡಿ-ಹೊಗಳಿ, ಈತನುತ್ತರ ದೆಸೆಗೆ-ಇವನು ಉತ್ತರ ದಿಕ್ಕಿಗೆ, ಭೀಮನು ಶಾತಮನ್ಯುವ ದೆಸೆಗೆ-ಇಂದ್ರ ದಿಕ್ಕಿಗೆ ಅಂದರೆ ಪೂರ್ವಕ್ಕೆ, ಅಭೀತರು ಯಮಳರು-ನಿರ್ಭಯರಾದ ನಕುಲ, ಸಹದೇವರು ಇದ್ದೆಸೆಗೆ-ಉಳಿದ ಎರಡು ದಿಕ್ಕುಗಳಿಗೆ, ದಕ್ಷಿಣ, ಪಶ್ಚಿಮಗಳಿಗೆ, ದಿಗ್ವಿಜಯಕ್ಕಾಗಿ ಹೋಗಲಿ ಎಂದು. ನೇಮಿಸಿದ-ನಿಯಮಿಸಿದ,
ಮೂಲ ...{Loading}...
ಫೂತು ಫಲುಗುಣ ನಿನ್ನ ಕುಲಕಭಿ
ಜಾತ ಶೌರ್ಯಕೆ ಗರುವಿಕೆಗೆ ಸರಿ
ಮಾತನಾಡಿದೆ ಸಲುವುದೈ ನಿನಗೆನುತ ಕೊಂಡಾಡಿ
ಈತನುತ್ತರ ದೆಸೆಗೆ ಭೀಮನು
ಶಾತಮನ್ಯುವ ದೆಸೆಗೆ ಯಮಳರ
ಭೀತರಿದ್ದೆಸೆಗೆಂದು ವೇದವ್ಯಾಸ ನೇಮಿಸಿದ ॥12॥
೦೧೩ ನೆರಹಿ ಬಲವನು ...{Loading}...
ನೆರಹಿ ಬಲವನು ನಾಲ್ಕು ದಿಕ್ಕಿಗೆ
ಪರುಠವಿಸಿದರು ಫಲುಗುಣನನು
ತ್ತರಕೆ ಮೂಡಲು ಪವನಸುತ ದಕ್ಷಿಣಕೆ ಸಹದೇವ
ವರುಣ ದಿಕ್ಕಿಗೆ ನಕುಲನೀ ನಾ
ಲ್ವರಿಗೆ ಕೊಟ್ಟನು ವೀಳೆಯವ ಹಿರಿ
ಯರಸಿ ತಂದಳು ತಳಿಗೆ ತಂಬುಲ ಮಂಗಳಾರತಿಯ ॥13॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಸೈನ್ಯವನ್ನು ಸಜ್ಜುಗೊಳಿಸಿಕೊಂಡು ನಾಲ್ವರೂ ನಲ್ಕು ದಿಕ್ಕಿಗೆ ಹೊರಡಲು ಅಣಿಯಾದರು. ಅರ್ಜುನನು ಉತ್ತರಕ್ಕೆ, ಭೀಮ ಪೂರ್ವದಿಕ್ಕಿಗೆ, ಸಹದೇವ ದಕ್ಷಿಣ ದಿಕ್ಕಿಗೆ, ನಕುಲ ಪಶ್ಚಿಮ ದಿಕ್ಕಿಗೆ ಹೊರಡಬೇಕೆಂದು ನಿರ್ಧಾರವಾಯಿತು. ಈ ನಾಲ್ಕೂ ಜನರಿಗೆ ಧರ್ಮರಾಯನು ವೀಳೆಯವನ್ನು ಕೊಟ್ಟನು. ಹಿರಿಯರಸಿಯಾದ ದ್ರೌಪದಿ ತಳಿಗೆಯಲ್ಲಿ ತಾಂಬೂಲವನ್ನೂ ಮಂಗಳಾರತಿಯನ್ನೂ ತಂದಳು.
ಪದಾರ್ಥ (ಕ.ಗ.ಪ)
ಬಲವನು ನೆರಹಿ-ಸೇನೆಯನ್ನು ಸಜ್ಜನಗೊಳಿಸಿ, ನಾಲ್ಕು ದಿಕ್ಕಿಗೆ-ನಾಲ್ಕೂ ದಿಕ್ಕುಗಳಿಗೆ, ಪರುಠವಿಸಿದರು-ಹೊರಡಲು ಅಣಿಯಾದರು, ಫಲುಗುಣನನು ಉತ್ತರಕೆ-ಅರ್ಜುನನ್ನು ಉತ್ತರಕ್ಕೆ, ಮೂಡಲು ಪವನಸುತ-ಪೂರ್ವಕ್ಕೆ ಭೀಮನು, ದಕ್ಷಿಣಕೆ ಸಹದೇವ-ದಕ್ಷಿಣ ದಿಕ್ಕಿಗೆ ಸಹದೇವ, ವರುಣ ದಿಕ್ಕಿಗೆ ನಕುಲ-ಪಶ್ಚಿಮ ದಿಕ್ಕಿಗೆ ನಕುಲ, ಈ ನಾಲ್ವರಿಗೆ-ಈ ನಾಲ್ಕೂ ಜನರಿಗೆ, ಕೊಟ್ಟನು ವೀಳೆಯವ-ಯುಧಷ್ಠಿರ ವೀಳೆಯವನ್ನು ಅನುಮತಿಯನ್ನು ಕೊಟ್ಟ, ಹಿರಿಯರಸಿ-ದ್ರೌಪದಿ, ತಳಿಗೆ ತಂಬುಲ-ತಾಂಬೂಲದ ತಟ್ಟೆಯನ್ನು, ಮಂಗಳಾರತಿಯ-ಮಂಗಳಕರ ಆರತಿಯನ್ನು ತಂದಳು
ಮೂಲ ...{Loading}...
ನೆರಹಿ ಬಲವನು ನಾಲ್ಕು ದಿಕ್ಕಿಗೆ
ಪರುಠವಿಸಿದರು ಫಲುಗುಣನನು
ತ್ತರಕೆ ಮೂಡಲು ಪವನಸುತ ದಕ್ಷಿಣಕೆ ಸಹದೇವ
ವರುಣ ದಿಕ್ಕಿಗೆ ನಕುಲನೀ ನಾ
ಲ್ವರಿಗೆ ಕೊಟ್ಟನು ವೀಳೆಯವ ಹಿರಿ
ಯರಸಿ ತಂದಳು ತಳಿಗೆ ತಂಬುಲ ಮಂಗಳಾರತಿಯ ॥13॥
೦೧೪ ಪರಮ ...{Loading}...
ಪರಮ ಲಗ್ನದೊಳಿಂದುಕೇಂದ್ರದೊ
ಳಿರಲು ಗುರು ಭಾರ್ಗವರು ಲಗ್ನದೊ
ಳಿರೆ ಶುಭಗ್ರಹದೃಷ್ಟಿ ಸಕಳೇಕಾದಶ ಸ್ಥಿತಿಯ
ಕರಣ ತಿಥಿ ನಕ್ಷತ್ರ ವಾರೋ
ತ್ಕರದಲಭಿಮತ ಸಿದ್ದಿಯೋಗದೊ
ಳರಸನನುಜರು ದಿಗ್ವಿಜಯಕನುವಾದರೊಗ್ಗಿನಲಿ ॥14॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಶ್ರೇಷ್ಠ ಲಗ್ನದಲ್ಲಿ ಚಂದ್ರ ಕೇಂದ್ರದಲ್ಲಿರಲು, ಗುರು ಶುಕ್ರರು ಲಗ್ನ ಸ್ಥಾನದಲ್ಲಿರಲು ಶುಭಗ್ರಹದೃಷ್ಟಿಯೂ ಸಕಲ ಏಕಾದಶ
ಸ್ಥಿತಿಯೂ ಇರಲು, ಕರಣ ತಿಥಿ ನಕ್ಷತ್ರ ವಾರಗಳು ಶ್ರೇಷ್ಠವಾಗಿರಲು ಅಭಿಮತ ಸಿದ್ಧಿಯೋಗದಲ್ಲಿ ಯುಧಿಷ್ಠಿರನ ನಾಲ್ವರು ತಮ್ಮಂದಿರೂ ದಿಗ್ವಿಜಯಕ್ಕೆ ಸಿದ್ಧರಾದರು.
ಪದಾರ್ಥ (ಕ.ಗ.ಪ)
ಪರಮ ಲಗ್ನದೊಳು-ಶ್ರೇಷ್ಠವಾದ ಮಹೂರ್ತದಲ್ಲಿ, ಇಂದು, ಕೇಂದ್ರದೊಳಿರಲು-ಚಂದ್ರ ಕೇಂದ್ರಸ್ಥಾನದಲ್ಲಿರಲು, ಗುರು ಭಾರ್ಗವರು-ಗುರು ಶುಕ್ರರು, ಲಗ್ನದೊಳಿರೆ-ಲಗ್ನದಲ್ಲಿರಲು, ಶುಭಗ್ರಹದೃಷ್ಟಿ-ಶುಭಗ್ರಹ ದೃಷ್ಟಿಯೂ, ಸಕಳೇಕಾದಶ ಸ್ಥಿತಿಯ-ಸಕಲ ಏಕಾದಶ ಸ್ಥಿತಿಯೂ ಇರಲು, ಕರಣ ತಿಥಿ ನಕ್ಷತ್ರ ವಾರೋತ್ಕರದಲಿ-ಉತ್ಕೃಷ್ಟವಾದ ಕರಣ ತಿಥಿ, ನಕ್ಷತ್ರ, ವಾರದಲ್ಲಿ, ಅಭಿಮತ-ಒಪ್ಪಿಗೆಯೂದಂತಹ,
ಸಿದ್ದಿಯೋಗದೊಳು-ಸಿದ್ಧಿಯೋಗದಲ್ಲಿ, ಅರಸನನುಜರು-ಯುಧಿಷ್ಠಿರ ತಮ್ಮಂದಿರು, ಒಗ್ಗಿನಲಿ-ಒಟ್ಟಾಗಿ, ದಿಗ್ವಿಜಯಕೆ ಅನುವಾದರು-ದಿಗ್ವಿಜಯಕ್ಕೆ ಹೊರಡಲು ಸಿದ್ಧವಾದರು
ಮೂಲ ...{Loading}...
ಪರಮ ಲಗ್ನದೊಳಿಂದುಕೇಂದ್ರದೊ
ಳಿರಲು ಗುರು ಭಾರ್ಗವರು ಲಗ್ನದೊ
ಳಿರೆ ಶುಭಗ್ರಹದೃಷ್ಟಿ ಸಕಳೇಕಾದಶ ಸ್ಥಿತಿಯ
ಕರಣ ತಿಥಿ ನಕ್ಷತ್ರ ವಾರೋ
ತ್ಕರದಲಭಿಮತ ಸಿದ್ದಿಯೋಗದೊ
ಳರಸನನುಜರು ದಿಗ್ವಿಜಯಕನುವಾದರೊಗ್ಗಿನಲಿ ॥14॥
೦೧೫ ಅರಸ ವೇದವ್ಯಾಸ ...{Loading}...
ಅರಸ ವೇದವ್ಯಾಸ ಧೌಮ್ಯಾ
ದ್ಯರಿಗೆ ಬಲವೆಂದೆರಗಿ ಕುಂತಿಯ
ಚರಣ ಧೂಳಿಯ ಕೊಂಡು ವಿಪ್ರವ್ರಜಕೆ ಕೈ ಮುಗಿದು
ಅರಸಿಯರು ದೂರ್ವಾಕ್ಷತೆಯ ದಧಿ
ವಿರಚಿತದ ಮಾಂಗಲ್ಯವನು ವಿ
ಸ್ತರಿಸೆ ಬಹುವಿಧ ವಾದ್ಯದಲಿ ಹೊರವಂಟರರಮನೆಯ ॥15॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಯುಧಿಷ್ಠಿರ, ವೇದವ್ಯಾಸ, ಧೌಮ್ಯರೇ ಮೊದಲಾದವರಿಗೆ ಪ್ರದಕ್ಷಿಣೆ ಮಾಡಿ ನಮಸ್ಕರಿಸಿ, ಕುಂತಿಯ ಪಾದಧೂಳಿಯನ್ನು ಸ್ವೀಕರಿಸಿ,
ವಿಪ್ರಸಮೂಹಕ್ಕೆ ವಂದಿಸಿದರು. ಅರಸಿಯರು ದೂರ್ವಾಕ್ಷತೆ ದಧಿಗಳಿಂದ ಮಂಗಳಕಾರ್ಯಗಳನ್ನು ನೆರವೇರಿಸಿದರು. ವಿವಿಧ ಮಂಗಳವಾದ್ಯಗಳು ಮೊಳಗುತ್ತಿದ್ದುವು. ಆಗ ಆ ನಾಲ್ವರೂ ಅರಮನೆಯನ್ನು ಬಿಟ್ಟುಹೊರಟರು.
ಪದಾರ್ಥ (ಕ.ಗ.ಪ)
ಆ ನಾಲ್ವರು ಸೋದರರೂ, ಅರಸ ವೇದವ್ಯಾಸ ಧೌಮ್ಯಾದ್ಯರಿಗೆ-ಯುಧಿಷ್ಠಿರ ವೇದವ್ಯಾಸ, ಧೌಮ್ಯ ಮೊದಲಾದ ಹಿರಿಯರಿಗೆ, ಬಲವೆಂದೆರಗಿ-ಪ್ರದಕ್ಷಿಣೆ ಬಂದು ನಮಸ್ಕರಿಸಿ, ಕುಂತಿಯ ಚರಣ ಧೂಳಿಯ ಕೊಂಡು-ಕುಂತಿಯ ಪಾದಗಳಿಗೂ ವಂದಿಸಿ,
ವಿಪ್ರವ್ರಜಕೆ ಕೈ ಮುಗಿದು-ವಿಪ್ರ ಸಮೂಹಕ್ಕೆ ಕೈಮುಗಿದು, ಅರಸಿಯರು-ಅಂತಃಪುರದ ಸ್ತ್ರೀಯರು, ದೂರ್ವಾಕ್ಷತೆಯ ದಧಿವಿರಚಿತದ ಮಾಂಗಲ್ಯವನು-ಗರಿಕೆ, ಅಕ್ಷತೆ, ಮೊಸರು, ಮೊದಲಾದ ವಸ್ತುಗಳಿಂದ ಮಾಡಿದ ಮಂಗಳ ಕ್ರಿಯೆಯನ್ನು ಸ್ವೀಕರಿಸಿ, ಹೊರವಂಟರರಮನೆಯ-ಅರಮನೆಯನ್ನು ಬಿಟ್ಟು ಹೊರಟರು
ಮೂಲ ...{Loading}...
ಅರಸ ವೇದವ್ಯಾಸ ಧೌಮ್ಯಾ
ದ್ಯರಿಗೆ ಬಲವೆಂದೆರಗಿ ಕುಂತಿಯ
ಚರಣ ಧೂಳಿಯ ಕೊಂಡು ವಿಪ್ರವ್ರಜಕೆ ಕೈ ಮುಗಿದು
ಅರಸಿಯರು ದೂರ್ವಾಕ್ಷತೆಯ ದಧಿ
ವಿರಚಿತದ ಮಾಂಗಲ್ಯವನು ವಿ
ಸ್ತರಿಸೆ ಬಹುವಿಧ ವಾದ್ಯದಲಿ ಹೊರವಂಟರರಮನೆಯ ॥15॥
೦೧೬ ಅರಸ ಕೇಳೈ ...{Loading}...
ಅರಸ ಕೇಳೈ ಮೊದಲಲರ್ಜುನ
ಚರಿತವನು ವಿಸ್ತರದಲರುಪುವೆ
ನುರು ಪರಾಕ್ರಮಿ ನಡೆದು ಬಿಟ್ಟನು ಸಾಲ್ವ ದೇಶದಲಿ
ಪುರಕೆ ದೂತರ ಕಳುಹಲವನಿವ
ರುರವಣೆಗೆ ಮನವಳುಕಿ ಕೊಟ್ಟನು
ತುರಗ ಗಜ ರಥ ಧನ ವಿಲಾಸಿನಿ ಜನವನುಚಿತದಲಿ ॥16॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
ಅರಸ ಕೇಳು, ಮೊದಲು ಅರ್ಜುನನ ದಿಗ್ವಿಜಯದ ವಿಷಯವನ್ನು ವಿಸ್ತಾರವಾಗಿ ಹೇಳುತ್ತೇನೆ. ಪರಾಕ್ರಮಿಯಾದ ಅವನು ಸೇನಾಸಮೇತನಾಗಿ ಹೊರಟು ಮೊದಲು ಸಾಲ್ವದೇಶದಲ್ಲಿ ಬೀಡುಬಿಟ್ಟನು. ಪಟ್ಟಣದೊಳಕ್ಕೆ ದೂತನನ್ನು ಕಳುಹಿಸಿದನು. ಸಾಲ್ವರಾಜ ಅರ್ಜುನನ ಪರಾಕ್ರಮಕ್ಕೆ ಹೆದರಿ, ಕುದುರೆ, ಆನೆ, ರಥ ಹಾಗೂ ಧನ ಮತ್ತು ವಿಲಾಸಿನೀಜನರನ್ನು ಯೋಗ್ಯರೀತಿಯಲ್ಲಿ ಕಳಿಸಿದ.
ಪದಾರ್ಥ (ಕ.ಗ.ಪ)
ಉರವಣೆ-ಸಾಹಸ
ಅರಸ ಕೇಳೈ ಮೊದಲಲರ್ಜುನ ಚರಿತವನು, ವಿಸ್ತರದಲಿ ಅರುಹುವೆನು-ಜನಮೇಜಯ ರಾಜನೇ ಕೇಳು, ಪ್ರಾರಂಭದಲ್ಲಿ ಅರ್ಜುನನ ಕಾರ್ಯವನ್ನು ವಿಸ್ತಾರವಾಗಿ, ಹೇಳುವೆನು ಎಂದು ವೈಶಂಪಾಯ ಹೇಳತೊಡಗುತ್ತಾನೆ.
ಉರು ಪರಾಕ್ರಮಿ-ಮಹಾಶೂರನಾದ ಅರ್ಜುನನು, ನಡೆದು ಬಿಟ್ಟನು ಸಾಲ್ವ ದೇಶದಲಿ-ಸೇನೆಯೊಡನೆ ನಡೆದು, ಮೊದಲಿನ ಸಾಲ್ವದೇಶದಲ್ಲಿ ಬೀಡುಬಿಟ್ಟನು, ಪುರಕೆ ದೂತರ ಕಳುಹಲ-ಪಟ್ಟಣದೊಳಕ್ಕೆ ದೂತರನ್ನು ಕಳಿಸಲಾಗಿ, ಅವನು-ಸಾಲ್ವರಾಜನು,
ಇವರ ಉರವಣೆಗೆ-ಅರ್ಜುನ ಸೈನ್ಯದ ಅಬ್ಬರಕ್ಕೆ, ಅಳುಕಿ-ಹೆದರಿ, ತುರಗ ಗಜ ರಥ ಧನ ವಿಲಾಸಿನಿ ಜನರನ್ನು ಉಚಿತದಲಿ ತಾನಾಗಿ ಕೊಟ್ಟನು
ಮೂಲ ...{Loading}...
ಅರಸ ಕೇಳೈ ಮೊದಲಲರ್ಜುನ
ಚರಿತವನು ವಿಸ್ತರದಲರುಪುವೆ
ನುರು ಪರಾಕ್ರಮಿ ನಡೆದು ಬಿಟ್ಟನು ಸಾಲ್ವ ದೇಶದಲಿ
ಪುರಕೆ ದೂತರ ಕಳುಹಲವನಿವ
ರುರವಣೆಗೆ ಮನವಳುಕಿ ಕೊಟ್ಟನು
ತುರಗ ಗಜ ರಥ ಧನ ವಿಲಾಸಿನಿ ಜನವನುಚಿತದಲಿ ॥16॥
೦೧೭ ಅವನ ಕಾಣಿಸಿಕೊಣ್ಡು ...{Loading}...
ಅವನ ಕಾಣಿಸಿಕೊಂಡು ರಾಜ್ಯದೊ
ಳವನ ನಿಲಿಸಿ ತದೀಯ ಸೇನಾ
ನಿವಹ ಸಹಿತಲ್ಲಿಂದ ನಡೆದನು ಮುಂದೆ ವಹಿಲದಲಿ
ಅವನಿಪತಿ ಕಟದೇವನೆಂಬವ
ನವಗಡಿಸಿ ಸರ್ವಸ್ವವನು ಕೊಂ
ಡವನ ಬಲಸಹಿತಾ ದ್ಯುಮತ್ಸೇನಕನ ಝೋಂಪಿಸಿದ ॥17॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅರ್ಜುನ ಅವನನ್ನು ಕಂಡು ಮುನ್ನಿಸಿ, ಆ ರಾಜ್ಯದಲ್ಲಿ ಅವನನ್ನು ನೆಲೆಗೊಳಿಸಿ ಅವನ ಸೈನ್ಯವನ್ನೂ ಒಳಗೊಂಡು ಶೀಘ್ರವಾಗಿ
ಅಲ್ಲಿಂದ ಮುಂದುವರೆದ. ಮುಂದೆ ಕಟದೇವನೆಂಬುವನು ಪ್ರತಿಭಟಿಸಲು ಅವನನ್ನು ಸೋಲಿಸಿ ಅವನ ಸರ್ವಸ್ವವನ್ನೂ ವಶಪಡಿಸಿಕೊಂಡ. ಅವನ ಸೈನ್ಯವನ್ನೂ ಕೂಡಿಸಿಕೊಂಡು ಮುಂದೆ ನಡೆದು, ದ್ಯುಮತ್ಸೇನನನ್ನು ಬಡಿದುಹಾಕಿದ.
ಪದಾರ್ಥ (ಕ.ಗ.ಪ)
ಅವನ ಸಾಲ್ವವನ್ನು ಕಾಣಿಸಿಕೊಂಡು-ಅರ್ಜುನನು ಭೇಟಿಯಾಗಿ, ರಾಜ್ಯದೊಳು ಅವನ ನಿಲಿಸಿ-ರಾಜ್ಯದಲ್ಲಿ ಅವನನ್ನು ನಿಲ್ಲಲು ಹೇಳಿ,
ತದೀಯ ಸೇನಾ ನಿವಹ ಸಹಿತ-ಅವನ ಸೇನಾ ಸಮೂಹದೊಡನೆ, ವಹಿಲದಲಿ ಮುಂದೆ ನಡೆದನು-ಶೀಘ್ರವಾಗಿ ಮುಂದುವರಿದು ಹೋದನು, ಅನಂತರ ಅವನಿಪತಿ ಕಟದೇವನೆಂಬವನ-ರಾಜ ಕಟದೇವ ಎಂಬವನನ್ನು ಅವ, ಅವಗಡಿಸಿ-ಸೋಲಿಸಿ, ಸರ್ವಸ್ವವನು ಕೊಂಡು-ಅವನ ಸರ್ವಸ್ವವನು ಅಪಹರಿಸಿ, ಅವನ ಬಲಸಹಿತಾ-ಅವನ ಸೇನೆಯನ್ನು ಕೂಡಿಸಿಕೊಂಡು ಹೊರಟು, ಆ ದ್ಯುಮತ್ಸೇನಕನ-ಆ ದ್ಯುಮತ್ಸೇನ ಎಂಬವನ್ನು, ಝೋಂಪಿಸಿದ-ಬಡಿದು ಹಾಕಿದ
ಮೂಲ ...{Loading}...
ಅವನ ಕಾಣಿಸಿಕೊಂಡು ರಾಜ್ಯದೊ
ಳವನ ನಿಲಿಸಿ ತದೀಯ ಸೇನಾ
ನಿವಹ ಸಹಿತಲ್ಲಿಂದ ನಡೆದನು ಮುಂದೆ ವಹಿಲದಲಿ
ಅವನಿಪತಿ ಕಟದೇವನೆಂಬವ
ನವಗಡಿಸಿ ಸರ್ವಸ್ವವನು ಕೊಂ
ಡವನ ಬಲಸಹಿತಾ ದ್ಯುಮತ್ಸೇನಕನ ಝೋಂಪಿಸಿದ ॥17॥
೦೧೮ ಆತನನು ಗೆಲಿದನು ...{Loading}...
ಆತನನು ಗೆಲಿದನು ಸುನಾಭನ
ನೀತಿಗೆಡಿಸಿ ತದೀಯ ಸೇನಾ
ವ್ರಾತ ಸಹಿತಲ್ಲಿಂದ ಪ್ರತಿವಿಂಧ್ಯಕನನಪ್ಪಳಿಸಿ
ಆತನರ್ಥವಕೊಂಡು ತತ್ಪ್ರಾ
ಗ್ಜ್ಯೋತಿಷಕೆ ಧಾಳಿಟ್ಟನಲ್ಲಿ ಮ
ಹಾತಿಬಲನವನೊಡನೆ ಬಲುಹಾಯ್ತರ್ಜುನನ ಸಮರ ॥18॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಮುಂದೆ ಸುನಾಭನನ್ನು ಸೋಲಿಸಿ ಅವನ ಸೇನೆಯನ್ನು ಸೇರಿಸಿಕೊಂಡು, ಪ್ರತಿ ವಿಂಧ್ಯಕನನ್ನು ಅಪ್ಪಳಿಸಿ ಅವನಿಂದ ಹಣಪಡೆದು
ಪ್ರಾಗ್ಜೋತಿಷ ನಗರಕ್ಕೆ ದಾಳಿಯಿಟ್ಟ. ಅಲ್ಲಿನ ಮಹಾಬಲಶಾಲಿಯಾದ ಭಗದತ್ತನೊಡನೆ ಭಾರಿ ಯುದ್ಧವಾಯಿತು.
ಪದಾರ್ಥ (ಕ.ಗ.ಪ)
ಆತನನು ಗೆಲಿದನು-ದ್ಯುಮತ್ಸೇನನ್ನು ಗೆದ್ದ. ಅನಂತರ, ಸುನಾಭ ಎಂಬುವನನ್ನು, ನೀತಿಗೆಡಿಸಿ-ಸೋಲಿಸಿ, ತದೀಯ-ಅವನ, ಸೇನಾವ್ರಾತ-ಸೇನಾಸಮೂಹದೊಡನೆ, ಅಲ್ಲಿಂದ-ಅಲ್ಲಿಂದ ಮುಂದುವರಿದು, ಪ್ರತಿವಿಂದ್ಯಕನನು ಅಪ್ಪಳಿಸಿ-ಪ್ರತಿವಿಂದ್ಯನೆಂಬವನನ್ನು, ಆತನರ್ಥವಕೊಂಡು-ಅವನ ಸಂಪತ್ತನ್ನು ಕಸಿದುಕೊಂಡು, ತತ್ಪ್ರಾಗ್ಜ್ಯೋತಿಷಕೆ-ಆ ಪ್ರಾಗ್ಜ್ಯೋತಿಷ ನಗರಕ್ಕೆ, ಧಾಳಿಟ್ಟನು-ದಾಳಿಯಿಟ್ಟ ಅಲ್ಲಿ,
ಮಹಾತಿಬಲನನೊಡನೆ ಅರ್ಜುನನ ಸಮರ-ಯುದ್ಧ, ಬಲುಹಾಯ್ತ-ದೊಡ್ಡದೇ ಆಯ್ತು
ಮೂಲ ...{Loading}...
ಆತನನು ಗೆಲಿದನು ಸುನಾಭನ
ನೀತಿಗೆಡಿಸಿ ತದೀಯ ಸೇನಾ
ವ್ರಾತ ಸಹಿತಲ್ಲಿಂದ ಪ್ರತಿವಿಂಧ್ಯಕನನಪ್ಪಳಿಸಿ
ಆತನರ್ಥವಕೊಂಡು ತತ್ಪ್ರಾ
ಗ್ಜ್ಯೋತಿಷಕೆ ಧಾಳಿಟ್ಟನಲ್ಲಿ ಮ
ಹಾತಿಬಲನವನೊಡನೆ ಬಲುಹಾಯ್ತರ್ಜುನನ ಸಮರ ॥18॥
೦೧೯ ಜೀನಕರ ಬೋಟಕ ...{Loading}...
ಜೀನಕರ ಬೋಟಕ ಕಿರಾತರ
ನೂನಬಲ ಸಹಿತೀ ಮಹೀಪತಿ
ಸೂನು ಕಾದಿದನೀತನಲಿ ಭಗದತ್ತನೆಂಬವನು
ಈ ನರನ ಶರ ಜಾಲವಿದು ಕ
ಲ್ಪಾನಲನ ಕಾಲಾಟವಿದರೊಡ
ನಾನಲಿಂದ್ರಾದ್ಯರಿಗೆ ಸದರವೆ ರಾಯ ಕೇಳ್ ಎಂದ ॥19॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಜೀನಕರು ಬೋಟಕರು ಕಿರಾತರುಗಳಿಂದ ಕೂಡಿದ ಅಗಾಧ ಬಲದೊಡನೆ ಕೂಡಿ ಭಗದತ್ತ ಅರ್ಜುನನನ್ನು ಎದುರಿಸಿದ. ಆದರೆ ಅರ್ಜುನನ ಬಾಣಜಾಲವೆಂದರೆ ಕಲ್ಪಾಂತದ ಅಗ್ನಿ ವ್ಯಾಪಿಸಿದಂತೆ ! ಅದನ್ನು ಎದುರಿಸಲು ಇಂದ್ರಾದಿಗಳಿಗೆ ತಾನೇ ಸುಲಭವೇ ?
ಪದಾರ್ಥ (ಕ.ಗ.ಪ)
ಜೀನಕರ ಬೋಟಕ ಕಿರಾತರ ಅನೂನ ಬಲ ಸಹಿತ-ಅಗಾಧ ಸೇನೆಯೊಡನೆ, ಈ ಮಹೀಪತಿಸೂನು-ಈ ರಾಜನ ಮಗ ಭಗದತ್ತನೆಂಬವನು, ಈತನಲಿ-ಅರ್ಜುನನೊಡನೆ, ಕಾದಿದನು-ಹೋರಾಡಿದನು, ರಾಯ ಕೇಳು-ಜನಮೇಜಯನೇ ಕೇಳು
ಈ ನರನ ಶರ ಜಾಲವಿದು-ಈ ಅರ್ಜುನನ ಬಾಣಗಳು, ಕಲ್ಪಾನಲನ ಕಾಲಾಟ-ಪ್ರಳಯ ಕಾಲದ ಅಗ್ನಿಯ ತುಳಿತದಂತೆ, ಇದರೊಡನೆ ಆನಲು ಆ ಬಾಣಗಳನ್ನು ಎದುರಿಸಿ ನಿಲ್ಲಲು, ಇಂದ್ರಾದ್ಯರಿಗೆ ಸದರವೆ-ಇಂದ್ರನೇ ಮೊದಲಾದವರಿಗೆ ತಾನೇ ಸುಲಭವೇ ಎಂದ.
ಮೂಲ ...{Loading}...
ಜೀನಕರ ಬೋಟಕ ಕಿರಾತರ
ನೂನಬಲ ಸಹಿತೀ ಮಹೀಪತಿ
ಸೂನು ಕಾದಿದನೀತನಲಿ ಭಗದತ್ತನೆಂಬವನು
ಈ ನರನ ಶರ ಜಾಲವಿದು ಕ
ಲ್ಪಾನಲನ ಕಾಲಾಟವಿದರೊಡ
ನಾನಲಿಂದ್ರಾದ್ಯರಿಗೆ ಸದರವೆ ರಾಯ ಕೇಳೆಂದ ॥19॥
೦೨೦ ಮುರಿಯದಾ ಬಲವೀತನುರುಬೆಗೆ ...{Loading}...
ಮುರಿಯದಾ ಬಲವೀತನುರುಬೆಗೆ
ಹರಿಯದೀ ಬಲವುಭಯ ಬಲದಲಿ
ಕುರಿದರಿಯ ಕುಮ್ಮರಿಯ ಕಡಿತಕೆ ಕಾಣೆನವಧಿಗಳ
ಅರಿಯದೀತನ ದುರ್ಗವೀ ಬಲ
ದಿರಿವುಗಳ ಬೇಳಂಬವನು ಬೇ
ಸರದೆ ಕಾದಿದನೆಂಟು ದಿನ ಭಗದತ್ತನೀತನಲಿ ॥20॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಆದರೂ ಇವನ ಆಕ್ರಮಣಕ್ಕೆ ಭಗದತ್ತನ ಸೈನ್ಯ ಸೋಲಲಿಲ್ಲ. ಇವನ ಸೈನ್ಯವೂ ನೊಂದು ಹಿಂತಿರುಗಲಿಲ್ಲ. ಎರಡೂ ಕಡೆ ಕೊನೆಮೊದಲಿಲ್ಲದೆ ಕುರಿಗಳನ್ನು ತರಿದಂತೆ ಸೈನಿಕರನ್ನು ತರಿದು ಹಾಕಿದರು. ಭಗದತ್ತನ ದುರ್ಗ ಇದುವರೆಗೆ ಇಂತಹ ಸೈನ್ಯ ಆಕ್ರಮಣ ಮಾಡಿದುದನ್ನು ಮತ್ತು ವಿನಾಶವನ್ನು ನೋಡಿರಲಿಲ್ಲ. ಭಗದತ್ತ ಬೇಸರಗೊಳ್ಳದೆ ಎಂಟುದಿನ ಹೋರಾಟ ನಡೆಸಿದ.
ಪದಾರ್ಥ (ಕ.ಗ.ಪ)
ಈತನುರುಬೆಗೆ-ಈ ಅರ್ಜುನನ ಸಾಮಥ್ರ್ಯಕ್ಕೆ, ಆ ಬಲ ಮುರಿಯದು-ಭಗದತ್ತನ ಸೈನ್ಯ ಸೋಲದು, ಉಭಯ ಬಲದಲಿ-ಎರಡೂ ಕಡೆಯ ಸೈನ್ಯದಲಿ, ಕುರಿದರಿಯ ಕುಮ್ಮರಿಯ ಕಡಿತಕೆ-ಕುರಿಗಳನ್ನು ತರಿದು ತರಿದು ರಾಶಿ, ಹಾಕಿದಂತೆ ಸೈನಿಕರನ್ನು ಕಡಿದು ಹಾಕಿದುದಕ್ಕೆ ಕಾಣೆನವಧಿಗಳ-ಮಿತಿಯನ್ನು ಕಾಣೆನು, ಬಲವೀ ಹರಿಯದೀ ಬಲವು, ಈತನ ದುರ್ಗವು-ಭಗದತ್ತನ ಕೋಟೆಯು ಇರುವವರೆಗೆ ಇಂತಹ
ಈ ಬಲದಿರಿವುಗಳ ಬೇಳೆಂಬವನು-ಸೈನ್ಯ ಸಂಚಾರವನ್ನು ವಿನಾಶವನ್ನು, ಅರಿಯದು-ತಿಳಿದಿರಲಿಲ್ಲ, ಭಗದತ್ತನು ಈತನಲಿ-ಅರ್ಜುನನೊಡನೆ, ಬೇಸರದೆ-ಬೇಸರಗೊಳ್ಳದೆ, ಎಂಟು ದಿನ ಕಾದಿದನು-ಎಂಟು ದಿನ ಹೋರಾಡಿದನು
ಮೂಲ ...{Loading}...
ಮುರಿಯದಾ ಬಲವೀತನುರುಬೆಗೆ
ಹರಿಯದೀ ಬಲವುಭಯ ಬಲದಲಿ
ಕುರಿದರಿಯ ಕುಮ್ಮರಿಯ ಕಡಿತಕೆ ಕಾಣೆನವಧಿಗಳ
ಅರಿಯದೀತನ ದುರ್ಗವೀ ಬಲ
ದಿರಿವುಗಳ ಬೇಳಂಬವನು ಬೇ
ಸರದೆ ಕಾದಿದನೆಂಟು ದಿನ ಭಗದತ್ತನೀತನಲಿ ॥20॥
೦೨೧ ಆವನೈ ನೀನಧಿಕತರ ...{Loading}...
ಆವನೈ ನೀನಧಿಕತರ ಸಂ
ಭಾವಿತನು ಹೇಳೆನೆ ಯುಧಿಷ್ಠಿರ
ದೇವನನುಜ ಕಣಾ ಧನಂಜಯನೆನಲು ಮಿಗೆ ಮೆಚ್ಚಿ
ನಾವು ನಿಮ್ಮಯ್ಯಂಗೆ ಸಖರಿಂ
ದಾವು ನಿನ್ನವರೇನು ಬೇಹುದು
ನೀವೆಮಗೆ ಕಡು ಮಾನ್ಯರೆಂದನು ಕಂಡನರ್ಜುನನ ॥21॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅನಂತರ “ಯಾರಯ್ಯ ನೀನು ಅಧಿಕರಾದವರಿಂದ ಗೌರವಕ್ಕೆ ಪಾತ್ರನಾಗುವಂತವನು ? ಹೇಳು ? ಎನ್ನಲು ಅರ್ಜುನ “ಯುಧಿಷ್ಠಿರ ದೇವನ ತಮ್ಮನಯ್ಯಾ, ನಾನು ಧನಂಜಯ” ಎಂದ. ಭಗದತ್ತನಿಗೆ ತುಂಬ ಮೆಚ್ಚಿಕೆಯಾಗಿ “ನಾವು ನಿಮ್ಮ ತಂದೆಗೆ ಸ್ನೇಹಿತರು, ಹಾಗಾಗಿ ಇಂದು ನಾವು ನಿಮ್ಮವರಾದೆವು. ನೀವು ಕಡು ಮಾನ್ಯರು. ಏನು ಬೇಕು ನಿಮಗೆ ?” ಎಂದು ಕೇಳಿದ.
ಪದಾರ್ಥ (ಕ.ಗ.ಪ)
ಅನಂತರ ಶತ್ರುವಿನ ಪರಾಕ್ರಮವನ್ನು ಕಂಡು ವಿಸ್ಮಿತನಾದ ಭಗದತ್ತ, “ಆವನೈ ನೀನಧಿಕರ ಸಂಭಾವಿತನು ಹೇಳು” ಏನೆ-ಯಾರಯ್ಯ,
ನೀನು ಅಧಿಕರಾದವರಿಂದ ಗೌರವಕ್ಕೆ ಪಾತ್ರನಾದವನು, ಹೇಳು ? ಎಂದು ಕೇಳಲು. ಅರ್ಜುನ “ಯುಧಿಷ್ಟಿರ ದೇವನನುಜ ಕಣಾ ಧನಂಜಯನು-ಯುಧಿಷ್ಠಿರ, ದೇವನ ತಮ್ಮ ಕಣಯ್ಯ ಅರ್ಜುನ” ಎಂದ, ಭಗದತ್ತ ಅರ್ಜುನನನ್ನು ಮಿಗೆ ಮೆಚ್ಚಿ-ಬಹುವಾಗಿ ಮೆಚ್ಚಿಕೊಂಡು, ನಾವು ನಿಮ್ಮಯ್ಯಂಗೆ ಸಖರು ನಾವು ನಿಮ್ಮ ತಂದೆ ಪಾಂಡುವಿಗೆ ಸ್ನೇಹಿತರು, ಇಂದಾವು ನಿನ್ನವರು-ಈ ದಿನ ನಾವು ನಿನ್ನವರಾಗಿದ್ದೇವೆ, ಏನು ಬೇಹುದು-ನಿಮಗೆ ಏನು ಬೇಕಾಗಿದೆ ? ನೀವೆಮಗೆ ಕಡು ಮಾನ್ಯರು-ನೀವು ನಮಗೆ ಅತಿಶಯ
ಗೌರವಕ್ಕೆ ಪಾತರ್ರಾದವರು ಎಂದನು, ಅನಂತರ ಕಂಡನರ್ಜುನನ-ಆತ್ಮೀಯವಾಗಿ ಅರ್ಜುನನ್ನು ಭೇಟಿಮಾಡಿದ.
ಮೂಲ ...{Loading}...
ಆವನೈ ನೀನಧಿಕತರ ಸಂ
ಭಾವಿತನು ಹೇಳೆನೆ ಯುಧಿಷ್ಠಿರ
ದೇವನನುಜ ಕಣಾ ಧನಂಜಯನೆನಲು ಮಿಗೆ ಮೆಚ್ಚಿ
ನಾವು ನಿಮ್ಮಯ್ಯಂಗೆ ಸಖರಿಂ
ದಾವು ನಿನ್ನವರೇನು ಬೇಹುದು
ನೀವೆಮಗೆ ಕಡು ಮಾನ್ಯರೆಂದನು ಕಂಡನರ್ಜುನನ ॥21॥
೦೨೨ ಆದರೆಮಗೆಯು ದಿವಿಜಪತಿಯೋ ...{Loading}...
ಆದರೆಮಗೆಯು ದಿವಿಜಪತಿಯೋ
ಪಾದಿ ನೀವೆಮ್ಮಣ್ಣದೇವನ
ಮೇದಿನಿಯ ಸಾಮ್ರಾಜ್ಯ ಪದವಿಯ ರಾಜಸೂಯವನು
ಆಧರಿಸಿ ಸಾಕೆನಲು ಗಜ ಹಯ
ವಾದಿಯಾದ ಸಮಸ್ತ ವಸ್ತುವ
ನೈದೆ ಕೊಟ್ಟನು ಫಲುಗುಣಂಗೆ ಸುಮಿತ್ರಭಾವದಲಿ ॥22॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಹಾಗಿದ್ದರೆ ನೀವೂ ನನಗೆ ದೇವೇಂದ್ರನಂತೆಯೇ, ತಂದೆಯ ಸಮಾನ. ನೀವು ನಮ್ಮ ಅಣ್ಣ ದೇವನ ಸಾಮ್ರಾಜ್ಯ ಪದವಿಯ ರಾಜಸೂಯಯಾಗವನ್ನು ಗೌರವಿಸಿ ಸಾಕು ಎಂದ ಅರ್ಜುನ. ಆನೆ ಕುದುರೆ ಮೊದಲಾದ ಸಮಸ್ತ ವಸ್ತುಗಳನ್ನು ಒಪ್ಪಿಸಿ ಅರ್ಜುನನೊಡನೆ ಸನ್ಮಿತ್ರ ಭಾವವನ್ನು ಪ್ರಕಟಿಸಿದ ಭಗದತ್ತ.
ಪದಾರ್ಥ (ಕ.ಗ.ಪ)
ನೆನಲು ಆದರೆ-ಹಾಗಿದ್ದಲ್ಲಿ, ಎಮಗೆಯು-ನಮಗೂಕೂಡ ನೀವು, ದಿವಿಜಪತಿಯೋಪಾದಿ-ದೇವೇಂದ್ರನಂತೆಯೇ, ಎಮ್ಮಣ್ಣದೇವನ-ನಮ್ಮ ಅಣ್ಣ ಯುಧಿಷ್ಠಿರ ದೇವನು ನಡೆಸಲಿರುವ, ಮೇದಿನಿಯ ಸಾಮ್ರಾಜ್ಯ ಪದವಿಯ ರಾಜಸೂಯವನು-ಇಡೀ ಭೂಮಿಯ ಸಮ್ರಾಟನನ್ನಾಗಿ ಮಾಡುವಂತಹ ರಾಜಸೂಯ ಯಾಗವನ್ನು, ಆದಿರಿಸಿ ಸಾಕು ಎನಲು-ಗೌರವಿಸಿ ನಡೆಸಿಕೊಂಡು ಸಾಕು ಎನ್ನಲು, ಹಯವಾದಿಯಾದ ಸಮಸ್ತ ವಸ್ತು-ಆನೆ ಕುದುರೆ ಮೊದಲಾದ ಸಮಸ್ತ ವಸ್ತುಗಳನ್ನು, ಐದೆ ಕೊಟ್ಟನು ಫಲುಗುಣಂಗೆ ಸುಮಿತ್ರಭಾವದಲಿ-ಶ್ರೇಷ್ಠ ಮಿತ್ರನೆಂಬ ಭಾವನೆಯಿಂದ, ಅರ್ಜುನನಿಗೆ ಅತಿಶಯವಾಗಿ ಕೊಟ್ಟನು
ಮೂಲ ...{Loading}...
ಆದರೆಮಗೆಯು ದಿವಿಜಪತಿಯೋ
ಪಾದಿ ನೀವೆಮ್ಮಣ್ಣದೇವನ
ಮೇದಿನಿಯ ಸಾಮ್ರಾಜ್ಯ ಪದವಿಯ ರಾಜಸೂಯವನು
ಆಧರಿಸಿ ಸಾಕೆನಲು ಗಜ ಹಯ
ವಾದಿಯಾದ ಸಮಸ್ತ ವಸ್ತುವ
ನೈದೆ ಕೊಟ್ಟನು ಫಲುಗುಣಂಗೆ ಸುಮಿತ್ರಭಾವದಲಿ ॥22॥
೦೨೩ ಒನ್ದುತಿಙ್ಗಳು ಪಲವು ...{Loading}...
ಒಂದುತಿಂಗಳು ಪಲವು ಮನ್ನಣೆ
ಯಿಂದ ಮನ್ನಿಸಿ ತನ್ನ ಸೇನಾ
ವೃಂದವನು ಹೇಳಿದನು ಬಳಿಯಲಿ ಕಳುಹಿದನು ನರನ
ಮುಂದೆ ನಡೆದನು ರಾಮಗಿರಿಯಲಿ
ನಿಂದು ಕಪ್ಪವ ಕೊಂಡು ನಡೆದನು
ಮುಂದಣೀಶಾನ್ಯದಲಿ ಹೊಕ್ಕನು ಭುವನಪರ್ವತವ ॥23॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಭಗದತ್ತ ಒಂದು ತಿಂಗಳ ಕಾಲ ಅರ್ಜುನನನ್ನು ಅವನ ಸೈನ್ಯವನ್ನೂ ತನ್ನಲ್ಲಿ ಉಳಿಸಿಕೊಂಡು ಹಲವು ರೀತಿಯಲ್ಲಿ ಉಪಚರಿಸಿದ. ಆಮೇಲೆ ಸೇನಾವೃಂದವನ್ನೂ ಅವನ ಜೊತೆಗೂಡಿಸಿ ಮುಂದಕ್ಕೆ ಕಳಿಸಿಕೊಟ್ಟ. ಅರ್ಜುನನು ಮುಂದೆ ಹೊರಟು ರಾಮಗಿರಿಯಲ್ಲಿ ಕಪ್ಪವನ್ನು ಸ್ವೀಕರಿಸಿ ಅನಂತರ ಈಶಾನ್ಯದಲ್ಲಿ ಭುವನ ಪರ್ವತವನ್ನು ಪ್ರವೇಶಿಸಿದ.
ಪದಾರ್ಥ (ಕ.ಗ.ಪ)
ಅನಂತರ ಭಗದತ್ತನು, ಒಂದು ತಿಂಗಳು-ಒಂದು ತಿಂಗಳು ಕಾಲ, ಪಲವು ಮನ್ನಣೆಯಿಂದ-ಹಲವು ಬಗೆಯು ಉಪಚಾರಗಳಿಂದ,
ಮನ್ನಿಸಿ-ಗೌರವಿಸಿ, ತನ್ನ ಸೇನಾವೃಂದವನು ಹೇಳಿದನು-ತನ್ನ ಸೇನಾ ಸಮೂಹಕ್ಕೂ ಅವನೊಡನೆ ಹೊಗುವಂತೆ ಅಪ್ಪಣೆ ಮಾಡಿದನು,
ಬಳಿಯಲಿ-ಅನಂತರ, ಕಳುಹಿದನು ನರನ-ಅರ್ಜುನನ್ನು ಕಳಿಸಿಕೊಟ್ಟ, ಮುಂದೆ ನಡೆದನು-ಅಲ್ಲಿಂದ ಮುಂದುವರಿದನು ಅರ್ಜುನ ರಾಮಗಿರಿಯಲಿ ನಿಂದು-ನಿಂತು, ಕಪ್ಪವ ಕೊಂಡು-ಅಲ್ಲಿಯ ರಾಜನಿಂದ ಕಪ್ಪವನ್ನು ಪಡೆದು ನಡೆದನು, ಮುಂದಣೀಶಾನ್ಯದಲಿ-ಮುಂದೆ ಈಶಾನ್ಯದಿಕ್ಕಿನಲ್ಲಿ, ಭುವನಪರ್ವತವ ಹೊಕ್ಕನು-ಪ್ರವೇಶಿಸಿದನು.
ಮೂಲ ...{Loading}...
ಒಂದುತಿಂಗಳು ಪಲವು ಮನ್ನಣೆ
ಯಿಂದ ಮನ್ನಿಸಿ ತನ್ನ ಸೇನಾ
ವೃಂದವನು ಹೇಳಿದನು ಬಳಿಯಲಿ ಕಳುಹಿದನು ನರನ
ಮುಂದೆ ನಡೆದನು ರಾಮಗಿರಿಯಲಿ
ನಿಂದು ಕಪ್ಪವ ಕೊಂಡು ನಡೆದನು
ಮುಂದಣೀಶಾನ್ಯದಲಿ ಹೊಕ್ಕನು ಭುವನಪರ್ವತವ ॥23॥
೦೨೪ ಆ ಗಿರೀನ್ದ್ರ ...{Loading}...
ಆ ಗಿರೀಂದ್ರ ನಿವಾಸಿಗಳ ಸರಿ
ಭಾಗ ಧನವನು ಕೊಂಡು ಬಳಿಕ ಮ
ಹಾ ಗಜಾಶ್ವನ ಸೂರೆಗೊಂಡನು ಮುಂದೆ ದಂಡೆತ್ತಿ
ಆ ಗಯಾಳರ ಗಾವಿಲರ ನಿ
ರ್ಭಾಗಧೇಯರ ಮಾಡಿಯುತ್ತರ
ಭಾಗದಲಿ ತಿರುಗಿತ್ತು ಪಾಳೆಯವರಸ ಕೇಳ್ ಎಂದ ॥24॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಆ ಪರ್ವತ ನಿವಾಸಿಗಳಿಂದ ಸರಿಭಾಗ ಧನವನ್ನು ತೆಗೆದುಕೊಂಡು, ಅನಂತರ ಮಹಾಗಜಾಶ್ವನನ್ನು ಸೂರೆಮಾಡಿ, ಗಯಾಳರನ್ನು ಗಾವಿಲರನ್ನಾಗಿಯೂ ನಿರ್ಭಾಗದೇಯರನ್ನಾಗಿಯೂ ಮಾಡಿ ಅರ್ಜುನ ದಂಡನ್ನು ಉತ್ತರಭಾಗಕ್ಕೆ ತಿರುಗಿಸಿದ.
ಪದಾರ್ಥ (ಕ.ಗ.ಪ)
ಗಾವಿಲ-ಮೂರ್ಖ, ನಿರ್ಭಾಗದೇಯ- ಯಾವಭಾಗಕ್ಕೂ ಅರ್ಹರಾಗಿಲ್ಲದ, ಎಲ್ಲವನ್ನೂ ಕಳೆದುಕೊಂಡ
ಆ ಗಿರೀಂದ್ರ ನಿವಾಸಿಗಳ ಸರಿಭಾಗ ಧನವನು ಕೊಂಡು-ಆದೊಡ್ಡ ಪರ್ವತದಲ್ಲಿ ವಾಸವಾಗಿದ್ದವರಿಂದ ಸರಿಭಾಗದ ಧನವನ್ನು
ಪಡೆದು ಬಳಿಕ ಅನಂತರ ಅರ್ಜುನ ಮುಂದೆ ದಂಡೆತ್ತಿ-ದಂಡೆತ್ತಿಕೊಂಡು ಹೋಗಿ ಗಜಾಶ್ವನ ಸೊರೆಗೊಂಡನು-ಸೂರೆ ಮಾಡಿದನು
ಆ ಗಯಾಳರ-ಆ ಕುಹುಕಿಗಳನ್ನು, ಗಾವಿಲರ-ಗ್ರಾಮೀಣರನ್ನು, ನಿರ್ಭಾಗಧೇಯರ ಮಾಡಿ-ನಿರ್ಭಾಗ್ಯರನ್ನಾಗಿ ಮಾಡಿ, ಅರಸ ಕೇಳು-ಜನಮೇಜಯ ರಾಜ ಕೇಳು, ಅನಂತರ ಪಾಳೆಯವು-ಸೇನೆಯ ಉತ್ತರಭಾಗದಲಿ ತಿರುಗಿತ್ತು-ಉತ್ತರದ ಕಡೆಗೆ ತಿರುಗಿತು.
ಮೂಲ ...{Loading}...
ಆ ಗಿರೀಂದ್ರ ನಿವಾಸಿಗಳ ಸರಿ
ಭಾಗ ಧನವನು ಕೊಂಡು ಬಳಿಕ ಮ
ಹಾ ಗಜಾಶ್ವನ ಸೂರೆಗೊಂಡನು ಮುಂದೆ ದಂಡೆತ್ತಿ
ಆ ಗಯಾಳರ ಗಾವಿಲರ ನಿ
ರ್ಭಾಗಧೇಯರ ಮಾಡಿಯುತ್ತರ
ಭಾಗದಲಿ ತಿರುಗಿತ್ತು ಪಾಳೆಯವರಸ ಕೇಳೆಂದ ॥24॥
೦೨೫ ಗಿರಿಯ ತಪ್ಪಲ ...{Loading}...
ಗಿರಿಯ ತಪ್ಪಲ ವನಚರರ ಸಂ
ಹರಿಸಿ ಮುಂದೆ ಬೃಹಂತಕನ ಕಾ
ತರಿಸಿ ಕಾಣಿಸಿಕೊಂಡು ಸೇನಾಬಿಂದು ನಗರಿಯಲಿ
ಇರವ ಮಾಡಿ ಸುಧಾಮ ದೈತ್ಯರ
ನುರೆ ವಿಭಾಡಿಸಿ ಪಾರ್ವತೇಯರ
ಪುರವ ಕೊಂಡು ವುಲೂಕರನು ಪೌರವರ ಭಂಗಿಸಿದ ॥25॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಬೆಟ್ಟದ ತಪ್ಪಲಲ್ಲಿದ್ದ ವನಚರರನ್ನೆಲ್ಲ ಸಂಹರಿಸಿ ಮುಂದೆ ಬೃಹಂತಕನ ಮೇಲೆ ನುಗ್ಗಿ ಅವನನ್ನು ಶರಣಾಗಿಸಿಕೊಂಡು, ಸೇನಾಬಿಂದು ನಗರಿಯಲ್ಲಿ ಬೀಡುಬಿಟ್ಟ. ಅನಂತರ ಸುಧಾಮದೈತ್ಯರನ್ನಡಗಿಸಿ, ಪಾರ್ವತೇಯರಪುರವನ್ನು ಹಿಡಿದು, ಉಲೂಕರನ್ನೂ ಪೌರವರನ್ನೂ ಭಂಗಿಸಿದ.
ಪದಾರ್ಥ (ಕ.ಗ.ಪ)
ಗಿರಿಯ ತಪ್ಪಲ ವನಚರರ ಸಂಹರಿಸಿ-ಬೆಟ್ಟದ ತಪ್ಪಲು, ಪ್ರದೇಶದಲ್ಲಿದ್ದ ವನಚರರನ್ನು ಸಂಹಾರ ಮಾಡಿ, ಮುಂದೆ, ಬೃಹಂತಕನ-ಬೃಹಂತಕನೆಂಬುವನನ್ನು, ಕಾತರಿಸಿ ಕಾಣಿಸಿಕೊಂಡು-ಕಾತರದಿಂದ ಕಂಡು, ಸೇನಾಬಿಂದು ನಗರಿಯಲಿ ಇರವ ಮಾಡಿ-ಸೇನಾಬಿಂದು ನಗರಿಯಲ್ಲಿ ಬೀಡುಬಿಟ್ಟು, ಸುಧಾಮ ದೈತ್ಯರ-ಸುಧಾಮರೆಂಬ ಅಸುರರನ್ನು, ಉರೆ ವಿಭಾಡಿಸಿ-ಪೂರ್ತಿ ನಾಶಮಾಡಿ, ಪಾರ್ವತೇಯರ ಪುರವ ಕೊಂಡು-ಪಟ್ಟಣವನ್ನು ವಶಪಡಿಸಿಕೊಂಡು, ಉಲೂಕರನು ಪೌರವರ-ಉಲೂಕರು ಮತ್ತು ಪೌರವರನ್ನು, ಭಂಗಿಸಿದ-ಸೋಲಿಸಿದ
ಟಿಪ್ಪನೀ (ಕ.ಗ.ಪ)
ಸೇನಾಬಿಂದು - ಸೇನಾಬಿಂದುವೆಂಬ ರಾಜನ ನಗರ
ಮೂಲ ...{Loading}...
ಗಿರಿಯ ತಪ್ಪಲ ವನಚರರ ಸಂ
ಹರಿಸಿ ಮುಂದೆ ಬೃಹಂತಕನ ಕಾ
ತರಿಸಿ ಕಾಣಿಸಿಕೊಂಡು ಸೇನಾಬಿಂದು ನಗರಿಯಲಿ
ಇರವ ಮಾಡಿ ಸುಧಾಮ ದೈತ್ಯರ
ನುರೆ ವಿಭಾಡಿಸಿ ಪಾರ್ವತೇಯರ
ಪುರವ ಕೊಂಡು ವುಲೂಕರನು ಪೌರವರ ಭಂಗಿಸಿದ ॥25॥
೦೨೬ ಮುನ್ದೆ ದಸ್ಯುಗಳೇಳುವನು ...{Loading}...
ಮುಂದೆ ದಸ್ಯುಗಳೇಳುವನು ಕ್ಷಣ
ದಿಂದ ಕಾಶ್ಮೀರಕರ ಸಾಧಿಸಿ
ಬಂದು ದಶಮಂಡಲದ ಲೋಹಿತರನು ವಿಭಾಡಿಸಿದ
ತಂದ ಕಪ್ಪದಲಾ ತ್ರಿಗರ್ತರ
ನಂದು ಹದುಳಿಸಿ ಗರುವಿತರನಾ
ಟಂದು ತೆಂಕಣದಾಭಿಚಾರಕ ರೂಷಕರ ಗೆಲಿದ ॥26॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಮುಂದೆ ದಸ್ಯುಗಳ ಏಳು ರಾಜ್ಯಗಳನ್ನು ಕಾಶ್ಮೀರಕರನ್ನೂ ಕ್ಷಣಮಾತ್ರದಲ್ಲಿ ಗೆದ್ದ. ದಶಮಂಡಲದ ಲೋಹಿತರನ್ನು ಅಡಗಿಸಿದ. ಅಲ್ಲಿಂದ ಕಪ್ಪವನ್ನು ತಂದ. ನಂತರ ತ್ರಿಗರ್ತರನ್ನು ಗೆದ್ದು ಗರ್ವಿಷ್ಠರಾದವರನ್ನು ಪೀಡಿಸಿ ದಕ್ಷಿಣದ ಅಭಿಚಾರಕರನ್ನೂ ರೋಷಕರನ್ನೂ ಗೆದ್ದ.
ಪದಾರ್ಥ (ಕ.ಗ.ಪ)
ಮುಂದೆ ದಸ್ಯುಗಳೇಳುವನು-ದಸ್ಯುಗಳ ಏಳು ರಾಜ್ಯಗಳನ್ನು, ಕಾಶ್ಮೀರಕರ-ಕಾಶ್ಮೀರಕರನ್ನೂ, ಕ್ಷಣದಿಂದ ಸಾಧಿಸಿ-ಕ್ಷಣಮಾತ್ರದಲ್ಲಿ ಗೆದ್ದು,
ಬಂದು-ಅಲ್ಲಿಂದ ಬಂದು, ದಶಮಂಡಲದ ಲೋಹಿತರನು ವಿಭಾಡಿಸಿದ-ಅಡಗಿಸಿದ, ತಂದ ಕಪ್ಪದಲಿ-ಅಲ್ಲಿಂದ ತಂದ ಕಪ್ಪದಿಂದ
ತ್ರಿಗರ್ತರ ನಂದು ಹದುಳಿಸಿ-ಅಂದು ತ್ರಿಗರ್ತರನ್ನು ತೃಪ್ತಿಪಡಿಸಿ, ಅನಂತರ ಗರುವಿತರನು-ಗರ್ವಿಷ್ಠರಾದವರನ್ನು, ಆಟಂದು-ಪೀಡಿಸಿ
ತೆಂಕಣದ-ದಕ್ಷಿಣದಲ್ಲಿದ್ದ, ಅಭಿಚಾರಕ ರೂಷಕರ ಗೆಲಿದ-ಗೆದ್ದ
ಮೂಲ ...{Loading}...
ಮುಂದೆ ದಸ್ಯುಗಳೇಳುವನು ಕ್ಷಣ
ದಿಂದ ಕಾಶ್ಮೀರಕರ ಸಾಧಿಸಿ
ಬಂದು ದಶಮಂಡಲದ ಲೋಹಿತರನು ವಿಭಾಡಿಸಿದ
ತಂದ ಕಪ್ಪದಲಾ ತ್ರಿಗರ್ತರ
ನಂದು ಹದುಳಿಸಿ ಗರುವಿತರನಾ
ಟಂದು ತೆಂಕಣದಾಭಿಚಾರಕ ರೂಷಕರ ಗೆಲಿದ ॥26॥
೦೨೭ ಧಾಳಿಯಿಟ್ಟನು ರೋಚಮಾನನ ...{Loading}...
ಧಾಳಿಯಿಟ್ಟನು ರೋಚಮಾನನ
ಮೇಲೆ ಕಪ್ಪವಕೊಂಡು ಬಿಟ್ಟುದು
ಪಾಳೆಯವು ಚಿತ್ರಾಯುಧನ ನರಸಿಂಹ ನಗರಿಯಲಿ
ಮೇಲೆ ವಂಗರ ಮುರಿದು ವರನೇ
ಪಾಳ ಕರ್ಪರ ಹೂಣಿಯರನು ವಿ
ಶಾಲ ಕಾಂಭೋಜಾದಿಗಳನಪ್ಪಳಿಸಿದನು ತಿರುಗಿ ॥27॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ರೋಚಮಾನನ ಮೇಲೆ ದಾಳಿಯಿಟ್ಟು ಕಪ್ಪ ಪಡೆದು ಮುಂದೆ ಚಿತ್ರಾಯುಧನ ನರಸಿಂಹ ನಗರಿಯಲ್ಲಿ ಸೈನ್ಯ ಬೀಡುಬಿಟ್ಟಿತು. ಅನಂತರ ವಂಗರನ್ನೂ ಸೋಲಿಸಿ, ನೇಪಾಳ ಕರ್ಪರ ಹೂಣಿಯರನ್ನೂ ವಿಶಾಲ ಕಾಂಭೋಜಾದಿಗಳನ್ನು ಅಪ್ಪಳಿಸಿದ.
ಪದಾರ್ಥ (ಕ.ಗ.ಪ)
ರೋಚಮಾನನ ಮೇಲೆ ಧಾಳಿಯಿಟ್ಟನು ಕಪ್ಪವಕೊಂಡು-ಅವನಿಂದ ಕಪ್ಪವನ್ನು ಸ್ವೀಕರಿಸಿ, ಅಲ್ಲಿಂದ ಚಿತ್ರಾಯುಧನ ನರಸಿಂಹ ನಗರಿಯಲಿ ಬಿಟ್ಟುದು, ಪಾಳೆಯವು-ಸೈನ್ಯ ಬೀಡು ಬಿಟ್ಟಿತು, ಮೇಲೆ-ಅನಂತರ, ವಂಗರ ಮುರಿದು-ವಂಗರನ್ನು ಸೋಲಿಸಿ,
ವರನೇಪಾಳ ಕರ್ಪರ ಹೊಣಿಯರನು ಹಾಗೂ ವಿಶಾಲ ಕಾಂಭೋಜಾದಿಗಳನು ತಿರುಗಿ ಅಪ್ಪಳಿಸಿದನು
ಮೂಲ ...{Loading}...
ಧಾಳಿಯಿಟ್ಟನು ರೋಚಮಾನನ
ಮೇಲೆ ಕಪ್ಪವಕೊಂಡು ಬಿಟ್ಟುದು
ಪಾಳೆಯವು ಚಿತ್ರಾಯುಧನ ನರಸಿಂಹ ನಗರಿಯಲಿ
ಮೇಲೆ ವಂಗರ ಮುರಿದು ವರನೇ
ಪಾಳ ಕರ್ಪರ ಹೂಣಿಯರನು ವಿ
ಶಾಲ ಕಾಂಭೋಜಾದಿಗಳನಪ್ಪಳಿಸಿದನು ತಿರುಗಿ ॥27॥
೦೨೮ ಪಾರಶೀಕ ಕಿರಾತ ...{Loading}...
ಪಾರಶೀಕ ಕಿರಾತ ಬರ್ಬರ
ಪಾರಿಯಾತ್ರರ ಮುರಿದು ಸರ್ವ ವಿ
ಹಾರವನು ಮಾಡಿದನು ಮ್ಲೇಚ್ಛ ಸಹಸ್ರಕೋಟಿಗಳ
ಕ್ಷಾರಕರ ಹೂಣಕರ ಡೊಕ್ಕರ
ಪಾರಕರ ಖುರಸಾಣ ಭೂಪರೊ
ಳಾರುಭಟೆಯಲಿ ಕಾದಿ ಕೊಂಡನು ಸಕಲ ವಸ್ತುಗಳ ॥28॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಪಾರಶೀಕ ಕಿರಾತ ಬರ್ಬರ ಪಾರಿಯಾತ್ರರನ್ನು ಸೋಲಿಸಿ, ಮ್ಲೇಚ್ಛರ ಸಹಸ್ರ ಕೋಟಿಗಳನ್ನು ಸ್ವಾಧಿನಪಡಿಸಿಕೊಂಡನು. ಅನಂತರ ಕ್ಷಾರಕರು, ಹೂಣಕರು, ಡೊಕ್ಕರು, ಪಾರಕರು ಹಾಗೂ ಖುರಸಾಣರ ರಾಜರೊಡನೆ ಅರ್ಭಟದಿಂದ ಹೋರಾಡಿ ಅವರಿಂದ ಸಕಲ ವಸ್ತುಗಳನ್ನು ಪಡೆದ.
ಪದಾರ್ಥ (ಕ.ಗ.ಪ)
ಖುರಸಾಣ - ಇರಾನ್ ದೇಶ
ಪಾರಶೀಕ ಕಿರಾತ ಬರ್ಟರ ಪಾರಿಯಾತ್ರರನ್ನು ಮುರಿದು ಸೋಲಿಸಿ, ಮ್ಲೇಚ್ಛ ಸಹಸ್ರಕೋಟಿಗಳ-ಸಹಸ್ರ ಕೋಟಿ ಮ್ಲೇಚ್ಛರ ನಾಡನ್ನೆಲ್ಲ
ವಿಹರಿಸಿ ಬಿಟ್ಟ. ಅನಂತರ, ಹಾರವನು ಮಾಡಿದನು ಕ್ಷಾರಕರ ಹೂಣಕರ ಡೊಕ್ಕರ ಪಾರಕರ ಬುರಸಹಣ ಭೂಪರೊಳು-ಆ ರಾಜರುಗಳಲ್ಲಿ ಆರುಭಟೆಯಲಿ ಕಾದಿ-ಆರ್ಭಟ ಮಾಡುತ್ತಾ ಹೋರಾಡಿ, ಸಕಲ ವಸ್ತುಗಳ ಕೊಂಡನು-ಅವರಿಂದ ಸಮಸ್ತ ವಸ್ತುಗಳನ್ನು ಪಡೆದನು
ಪಾಠಾನ್ತರ (ಕ.ಗ.ಪ)
ಬುರಸಹಣ –>ಖುರಸಾಣ
ಮೈ.ವಿ.ವಿ
ಮೂಲ ...{Loading}...
ಪಾರಶೀಕ ಕಿರಾತ ಬರ್ಬರ
ಪಾರಿಯಾತ್ರರ ಮುರಿದು ಸರ್ವ ವಿ
ಹಾರವನು ಮಾಡಿದನು ಮ್ಲೇಚ್ಛ ಸಹಸ್ರಕೋಟಿಗಳ
ಕ್ಷಾರಕರ ಹೂಣಕರ ಡೊಕ್ಕರ
ಪಾರಕರ ಖುರಸಾಣ ಭೂಪರೊ
ಳಾರುಭಟೆಯಲಿ ಕಾದಿ ಕೊಂಡನು ಸಕಲ ವಸ್ತುಗಳ ॥28॥
೦೨೯ ಬೆದರಿಸಿದನಾ ಹಿಮಗಿರಿಯ ...{Loading}...
ಬೆದರಿಸಿದನಾ ಹಿಮಗಿರಿಯ ಪಾ
ಶ್ರ್ವದ ಕಿರಾತರ ಮುಂದೆ ವಾಯ
ವ್ಯದಲಿ ಶೋಧಿಸಿ ಮರಳಿದನು ಹಿಮಗಿರಿಯ ಕುಕ್ಷಿಯಲಿ
ಪುದಿದ ನಾನಾ ದ್ರೋಣಿಗಳ ಮ
ಧ್ಯದ ಕಿರಾತ ಪುಳಿಂದ ನಿಚಯವ
ಸದೆದು ಹತ್ತಿದನಗ್ರಶಿಖರಕೆ ಪಾರ್ವತೀ ಪಿತನ ॥29॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಹಿಮಗಿರಿಯ ಪಕ್ಕ ಕಿರಾತರನ್ನು ಬೆದರಿಸಿದನು, ಮುಂದೆ ವಾಯುವ್ಯದಲ್ಲಿ ಶೋಧಿಸಿ ಮರಳಿದ, ಹಿಮಗಿರಿಯ ಮಧ್ಯಭಾಗದ ನಾನಾ ಕಣಿವೆಗಳ ನಡುವೆ ತುಂಬಿದ್ದ ಕಿರಾತರ ಪುಳಿಂದರ ಸಮೂಹವನ್ನು ಸದೆಬಡಿದು, ಪರ್ವತರಾಜನ ಶಿಖರವನ್ನೇರಿದ.
ಪದಾರ್ಥ (ಕ.ಗ.ಪ)
ದ್ರೋಣಿ - ಕಣಿವೆ
ಕುಕ್ಷಿ - ಮಧ್ಯಭಾಗ
ಆ ಹಿಮಗಿರಿಯ ಪಾಶ್ರ್ವದ ಕಿರಾತರನು ಬೆದರಿಸಿದನು, ಮುಂದೆ ವಾಯವ್ಯದಲಿ, ಶೋಧಿಸಿ ಮರಳಿದ-ಶೋಧನೆ ಮಾಡಿ ಹಿಂತಿರುಗಿದ
ಹಿಮಗಿರಿಯ ಕುಕ್ಷಿಯಲಿ-ಬಸಿರಿನಲ್ಲಿ, ನಾನಾ ದ್ರೋಣಿಗಳ ಮಧ್ಯದ-ನಾನಾ ಕಣಿವೆಗಳ ಮಧ್ಯದ, ಕಿರಾತ ಪುಳಿಂದ ನಿಚಯವ-ಸಮೂಹ ಪರ್ವತ ರಾಜನ ಹಿಮಾಲಯದ, ಅಗ್ರಶಿಖರಕೆ-ಶಿಖರದ ತುದಿಗೆ, ಹತ್ತಿದನು-ಏರಿದನು
ಮೂಲ ...{Loading}...
ಬೆದರಿಸಿದನಾ ಹಿಮಗಿರಿಯ ಪಾ
ಶ್ರ್ವದ ಕಿರಾತರ ಮುಂದೆ ವಾಯ
ವ್ಯದಲಿ ಶೋಧಿಸಿ ಮರಳಿದನು ಹಿಮಗಿರಿಯ ಕುಕ್ಷಿಯಲಿ
ಪುದಿದ ನಾನಾ ದ್ರೋಣಿಗಳ ಮ
ಧ್ಯದ ಕಿರಾತ ಪುಳಿಂದ ನಿಚಯವ
ಸದೆದು ಹತ್ತಿದನಗ್ರಶಿಖರಕೆ ಪಾರ್ವತೀ ಪಿತನ ॥29॥
೦೩೦ ಎರಡು ಸಾವಿರ ...{Loading}...
ಎರಡು ಸಾವಿರ ಯೋಜನವು ಹಿಮ
ಗಿರಿಯ ಬಹಳೋತ್ಸೇಧ ಶಿಖರಕೆ
ಸರಿಸದಲಿ ಹತ್ತಿದುದು ಪಾಳಯವೇನ ಹೇಳುವೆನು
ಕರಿ ತುರಗ ವರ ರಥ ಪದಾತಿಗೆ
ಪರಿಗಣನೆಯೆಲ್ಲಿಯದು ಹಿಮಗಿರಿ
ಯೆರಡು ಸಾವಿರದಗಲ ತಿರುಗಿತು ರಾಯ ಕೇಳ್ ಎಂದ ॥30॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಹಿಮಗಿರಿಯ ಎತ್ತರ ಎರಡು ಸಾವಿರ ಯೋಜನ. ಅಷ್ಟು ಎತ್ತರದ ಶಿಖರವನ್ನೂ ಸೈನ್ಯ ಸರಾಗವಾಗಿ ಏರಿಬಿಟ್ಟಿತು. ಅಲ್ಲಿ ಪಾಳೆಯ ಬಿಟ್ಟಿದ್ದುದನ್ನು ಏನೆಂದು ಹೇಳಲಿ ! ಆನೆ ಕುದುರೆ ರಥ ಕಾಲಾಳುಗಳ ಎಣಿಕೆಗೆ ಕೊನೆಮೊದಲೆಲ್ಲಿ ! ಅವು ಹಿಮಗಿರಿಯ ಎರಡು ಸಾವಿರ ಯೋಜನದ ಅಗಲಕ್ಕೂ ತಿರುಗಿದುವು.
ಪದಾರ್ಥ (ಕ.ಗ.ಪ)
ಹಿಮಗಿರಿಯ-ಹಿಮವತ್ಪರ್ವತದ, ಬಹಳೋತ್ಸೇಧ-ಮಹಾ ಎತ್ತರ, ಎರಡು ಸಾವಿರ ಯೋಜನವು ಶಿಖರಕೆ-ಆ ಶಿಖರಕ್ಕೆ, ಪಾಳಯವು-ಸೈನ್ಯವು, ಸರಿಸದಲಿ-ಸರಾಗವಾಗಿ, ಹತ್ತಿದವು-ಹತ್ತಿಬಿಟ್ಟವು, ಏನ ಹೇಳುವೆನು-ಆಶ್ಚರ್ಯವನ್ನು ಏನೆಂದು ಹೇಳಲಿ ! ಕರಿ-ಆನೆ, ತುರಗ-ಕುದುರೆ, ರಥ ಪದಾತಿ-ಕಾಲಾಳು ಸೈನ್ಯಗಳಿಗೆ, ಪರಿಗಣನೆಯೆಲ್ಲಿಯದು-ಲೆಕ್ಕವೆಲ್ಲಿದೆ, ಹಿಮಗಿರಿಯ-ಆ ಹಿಮವತ್ಪರ್ವತದ,
ಎರಡು ಸಾವಿರದಗಲ-ಎರಡು ಸಾವಿರದ ಯೋಜನದ ಅಗಲಕ್ಕೂ ತಿರುಗಿತು, ರಾಯ-ಜನಮೇಜಯ ಕೇಳು ಎಂದ
ಮೂಲ ...{Loading}...
ಎರಡು ಸಾವಿರ ಯೋಜನವು ಹಿಮ
ಗಿರಿಯ ಬಹಳೋತ್ಸೇಧ ಶಿಖರಕೆ
ಸರಿಸದಲಿ ಹತ್ತಿದುದು ಪಾಳಯವೇನ ಹೇಳುವೆನು
ಕರಿ ತುರಗ ವರ ರಥ ಪದಾತಿಗೆ
ಪರಿಗಣನೆಯೆಲ್ಲಿಯದು ಹಿಮಗಿರಿ
ಯೆರಡು ಸಾವಿರದಗಲ ತಿರುಗಿತು ರಾಯ ಕೇಳೆಂದ ॥30॥
೦೩೧ ಗಿರಿಯ ಕೋಣೆಯ ...{Loading}...
ಗಿರಿಯ ಕೋಣೆಯ ಕುಹರ ಗುಹೆಗಳ
ಗರುವರುಂಟೆಂದಾ ಪುಳಿಂದರ
ನೊರಸಿ ಕಾಣಿಸಿಕೊಂಡು ಕೊಂಡನು ಸಕಲ ವಸ್ತುಗಳ
ಗಿರಿಯನಿಳಿದುದು ನಡೆದು ಬಲ ಕಿಂ
ಪುರುಷ ಖಂಡದ ಬಹಳ ನದಿಗಳ
ಲೆರಡು ತಡಿಯಲಿ ತಳಿತು ಬಿಟ್ಟುದು ವನ ವನಂಗಳಲಿ ॥31॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಗಿರಿಯ ಮೂಲೆ ಮೂಲೆಯಲ್ಲೂ ಇರುವ ಗುಹೆಗಳಲ್ಲಿಯೂ ಬಿಲಗಳಲ್ಲಿಯೂ ಗಟ್ಟಿಮುಟ್ಟಾದವರಿದ್ದಾರೆಂದು ಕೇಳಿ, ನುಗ್ಗಿ ಆ ಪುಳಿಂದರನ್ನು ಅಡಗಿಸಿ ಅವರನ್ನೆಲ್ಲ ತನ್ನ ಬಳಿಗೆ ಕರೆಸಿ ಅವರಿಂದ ಸಕಲ ವಸ್ತುಗಳನ್ನು ಪಡೆದ. ಅನಂತರ ಸೈನ್ಯವು ಪರ್ವತವನ್ನು
ಇಳಿದು ಕಿಂಪುರುಷ ಖಂಡಕ್ಕೆ ನಡೆದು ಹೋಗಿ ಅಲ್ಲಿನ ಬಹಳ ನದಿಗಳ ಎರಡೂ ದಡಗಳಲ್ಲಿ ಬೀಡುಬಿಟ್ಟಿತು.
ಪದಾರ್ಥ (ಕ.ಗ.ಪ)
ಕುಹರ-ಬಿಲ
ಗಿರಿಯ ಕೋಣೆಯ-ಆ ಪರ್ವತದ ಮೂಲೆ ಮೂಲೆಯ, ಕುಹರ ಗುಹೆಗಳ, ಗರುವರುಂಡೆಂದು-ದರ್ಪಿಷ್ಠರಾದವರಿದ್ದಾರೆಂದು ತಿಳಿದು
ಆ ಪುಳಿಂದರ-ಆ ಬೇಡರನ್ನು, ಒರಸಿ-ಯುದ್ಧದಲ್ಲಿ ಸೋಲಿಸಿ, ಕಾಣಿಸಿಕೊಂಡು-ಭೇಟಿ ಮಾಡಿ, ಸಕಲ ವಸ್ತುಗಳ ಕೊಂಡನು-ಅವರಿಂದ ಸಕಲ ವಸ್ತುಗಳನ್ನು ಸ್ವೀಕರಿಸಿದನು, ಅನಂತರ ಸೇನೆ ಗಿರಿಯನಿಳಿದುದು-ಪರ್ವತವನ್ನು ಇಳಿಯಿತು, ನಡೆದು-ಅಲ್ಲಿಂದ ನಡೆದು, ಬಲ-ಸೈನ್ಯ, ಕಿಂಪುರುಷ ಖಂಡದ, ಬಹಳ ನದಿಗಳ ಎರಡು ತಡಿಯಲಿ-ಎರಡು ತೀರಗಳಲ್ಲಿ, ತಳಿತು ಬಿಟ್ಟುದು-ಒತ್ತೊತ್ತಾಗಿ ಬೀಡುಬಿಟ್ಟಿತು, ವನ ವನಂಗಳಲಿ-ನಾನಾ ಕಾಡುಗಳಲ್ಲಿ
ಮೂಲ ...{Loading}...
ಗಿರಿಯ ಕೋಣೆಯ ಕುಹರ ಗುಹೆಗಳ
ಗರುವರುಂಟೆಂದಾ ಪುಳಿಂದರ
ನೊರಸಿ ಕಾಣಿಸಿಕೊಂಡು ಕೊಂಡನು ಸಕಲ ವಸ್ತುಗಳ
ಗಿರಿಯನಿಳಿದುದು ನಡೆದು ಬಲ ಕಿಂ
ಪುರುಷ ಖಂಡದ ಬಹಳ ನದಿಗಳ
ಲೆರಡು ತಡಿಯಲಿ ತಳಿತು ಬಿಟ್ಟುದು ವನ ವನಂಗಳಲಿ ॥31॥
೦೩೨ ಅದು ಗಣನೆಗೊಮ್ಬತ್ತು ...{Loading}...
ಅದು ಗಣನೆಗೊಂಬತ್ತು ಸಾವಿರ
ವದರೊಳಿದ್ದುದು ಯಕ್ಷಕಿನ್ನರ
ಸುದತಿಯರು ಕಿಂಪುರುಷರತಿರಾಗಿಗಳು ಸುಖಮಯರು
ಇದರ ಘಲ್ಲಣೆಗಾನಲೇನ
ಪ್ಪದು ತದೀಯ ಜನಂಗಳಿತ್ತುದು
ಸುದತಿಯರನಾ ಮಂಡಲಕೆ ಮೀಟಾದ ವಸ್ತುಗಳ ॥32॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಆ ಕಿಂಪುರುಷ ಮಂಡಲ ಲೆಕ್ಕಕ್ಕೆ ಒಂಬತ್ತು ಸಾವಿರ ಯೋಜನವಿತ್ತು. ಅದರಲ್ಲಿದ್ದುದು ಯಕ್ಷಕಿನ್ನರ ಕಿಂಪುರುಷರು. ಅವರೆಲ್ಲ ಅತಿ
ರಾಗಿಗಳು, ಸುಖಮಯರು. ಈ ಸೈನ್ಯದ ಕಾಟವನ್ನು ಅವರಿಂದ ಹೇಗೆ ತಡೆಯಲಾದೀತು ? ಆ ಜನರು ಸುಂದರ ಸ್ತ್ರೀಯರನ್ನೂ
ಅಲ್ಲಿ ದೊರೆಯುವ ಶ್ರೇಷ್ಠವಸ್ತುಗಳನ್ನೂ ಕಾಣಿಕೆಯಾಗಿ ಕೊಟ್ಟರು.
ಪದಾರ್ಥ (ಕ.ಗ.ಪ)
ಮೀಟಾದ-ಶ್ರೇಷ್ಠ ಅದು-ಆ ಕಿಂಪುರುಷ ಮಂಡಲ, ಗಣನೆಗೆ-ಲೆಕ್ಕಕ್ಕೆ, ಒಂಬತ್ತು ಸಾವಿರ-ಒಂಬತ್ತು ಸಾವಿರ, ಯೋಜನ ವಿಸ್ತಾರ,
ಅದರೊಳಿದ್ದುದು-ಖಂಡದಲ್ಲಿದ್ದುದು, ಯಕ್ಷಕಿನ್ನರ-ಸ್ತ್ರೀಯರುಗಳು, ಕಿಂಪುರುಷರು ಅತಿರಾಗಿಳು ಸುಖಮಯರು-ವಿಷಯ ಸುಖವನ್ನು ಬಯಸುವರು, ಇದರ ಘಲ್ಲಣೆಗೆ-ಈ ಸೈನ್ಯದ ಕಾಟಕ್ಕೆ, ಆನಲೇನಪ್ಪದು-ಅವರಿಂದ ತಡೆಯಲು ಹೇಗಾದೀತು ? ತದೀಯ ಜನಂಗಳು-ಆ ಜನರು, ಸುದತಿಯರುನು-ಸ್ತ್ರೀಯರನ್ನು, ಇತ್ತುದು-ಕೊಟ್ಟರು ಅಲ್ಲದೆ, ಆ ಮಂಡಲಕೆ ಮಿಟಾದ ವಸ್ತುಗಳ-ಆ ಮಂಡಲಕ್ಕೆ
ತಕ್ಕುಂತಹ ವಸ್ತುಗಳನ್ನು ಕೊಟ್ಟರು.
ಮೂಲ ...{Loading}...
ಅದು ಗಣನೆಗೊಂಬತ್ತು ಸಾವಿರ
ವದರೊಳಿದ್ದುದು ಯಕ್ಷಕಿನ್ನರ
ಸುದತಿಯರು ಕಿಂಪುರುಷರತಿರಾಗಿಗಳು ಸುಖಮಯರು
ಇದರ ಘಲ್ಲಣೆಗಾನಲೇನ
ಪ್ಪದು ತದೀಯ ಜನಂಗಳಿತ್ತುದು
ಸುದತಿಯರನಾ ಮಂಡಲಕೆ ಮೀಟಾದ ವಸ್ತುಗಳ ॥32॥
೦೩೩ ಅಲ್ಲಿ ಕೆಲಕಡೆಯಲ್ಲಿ ...{Loading}...
ಅಲ್ಲಿ ಕೆಲಕಡೆಯಲ್ಲಿ ಗಿರಿ ಗುಹೆ
ಯಲ್ಲಿ ನೆರೆದ ಕಿರಾತ ವರ್ಗವ
ಚೆಲ್ಲ ಬಡಿದಪಹರಿಸಿದನು ಬಹುವಿಧ ಮಹಾಧನವ
ಮೆಲ್ಲಮೆಲ್ಲನೆ ಹೇಮ ಕೂಟದ
ಕಲ್ಲನಡರಿದನಾ ಮಹಾದ್ರಿಗ
ಳೆಲ್ಲ ಹಿಮಶೈಲದ ಮಹೋನ್ನತಿ ಬಹಳವಿಸ್ತಾರ ॥33॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಆ ದೇಶದ ಅನೇಕ ಗಿರಿಗುಹೆಗಳಲ್ಲಿ ತುಂಬಿದ್ದ ಕಿರಾತವರ್ಗವನ್ನು ಚೆಲ್ಲಬಡಿದು ಅವರಿಂದ ಬಹುವಿಧವಾದ ಮಹಾಧನವನ್ನು ಅಪಹರಿಸಿದ. ಅಲ್ಲಿಂದ ಅರ್ಜುನ ಮೆಲ್ಲಮೆಲ್ಲನೆ ಹೇಮಕೂಟದ ಬಂಡೆಯನ್ನೇರಿದ. ಆ ಹಿಮಶೈಲದ ಮಹೋನ್ನತಿ ಹಾಗೂ ವಿಸ್ತಾರ ಅತಿಶಯವಾದುದು.
ಪದಾರ್ಥ (ಕ.ಗ.ಪ)
ಅಲ್ಲಿ ಕೆಲಕಡೆಯಲ್ಲಿ-ಅಲ್ಲಿ ಕೆಲವು ಕಡೆಗಳಲ್ಲಿ, ಗಿರಿ ಗುಹೆಯಲ್ಲಿ-ಬೆಟ್ಟದ ಗುಹೆಗಳಲ್ಲಿ, ನೆರೆದ-ಕೂಡಿದ್ದ, ಕಿರಾತ ವರ್ಗವ-ಬೇಡರ ಸಮೂಹವನ್ನು, ಚೆಲ್ಲ ಬಡಿದು-ಚೆದುರುವಂತೆ ಬಡಿದು ಹಾಕಿ, ಬಹುವಿಧ ಮಹಾಧನವ-ನಾನಾ ಬಗೆಯ ಸಂಪತ್ತನ್ನು ಅಪಹರಿಸಿದನು
ಅನಂತರ ಮೆಲ್ಲಮೆಲ್ಲನೆ ಹೇಮ ಕೂಟದ ಕಲ್ಲನಡರಿದನು-ಬಂಡೆಯನ್ನು ಏರಿದ, ಆ ಮಹಾದ್ರಿಗಳೆಲ್ಲ-ಆ ಪರ್ವತಗಳೆಲ್ಲವೂ,
ಹಿಮಶೈಲದ-ಆ ಹಿಮವತ್ಪರ್ವತದ, ಮಹೋನ್ನತಿ ಬಹಳ ವಿಸ್ತಾರ-ಅತಿ ಎತ್ತರವಾದ ಮತ್ತು ವಿಸ್ತಾರವಾದ ಪ್ರದೇಶಗಳು
ಮೂಲ ...{Loading}...
ಅಲ್ಲಿ ಕೆಲಕಡೆಯಲ್ಲಿ ಗಿರಿ ಗುಹೆ
ಯಲ್ಲಿ ನೆರೆದ ಕಿರಾತ ವರ್ಗವ
ಚೆಲ್ಲ ಬಡಿದಪಹರಿಸಿದನು ಬಹುವಿಧ ಮಹಾಧನವ
ಮೆಲ್ಲಮೆಲ್ಲನೆ ಹೇಮ ಕೂಟದ
ಕಲ್ಲನಡರಿದನಾ ಮಹಾದ್ರಿಗ
ಳೆಲ್ಲ ಹಿಮಶೈಲದ ಮಹೋನ್ನತಿ ಬಹಳವಿಸ್ತಾರ ॥33॥
೦೩೪ ಅಡರಿತೀ ಬಲವಿದರ ...{Loading}...
ಅಡರಿತೀ ಬಲವಿದರ ಬೊಬ್ಬೆಯ
ಗಡಬಡೆಗೆ ಪದಘಟ್ಟಣೆಗೆ ಹುಡಿ
ಹುಡಿಯಲಾ ಗಿರಿಕೋಟೆ ಕೋಳಾಹಳದ ಕೊಬ್ಬಿನಲಿ
ನಡೆದು ಬಿಟ್ಟುದು ಗಿರಿಯ ತುದಿಯಲಿ
ತುಡುಕಿದುದು ನಾನಾ ದಿಗಂತವ
ತಡೆಯದದುಭುತ ವಾದ್ಯ ಗಜ ಹಯ ರಥದ ನಿರ್ಘೋಷ ॥34॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಸೈನ್ಯವೂ ಹೇಮಕೂಟವನ್ನೇರಿತು. ಅವರ ಬೊಬ್ಬೆ ಗಡಬಡೆಯ ಜೊತೆಗೆ ಪದಘಟ್ಟಣೆಗೆ ಆ ಗಿರಿ ಕೋmಗಳು ಪುಡಿಪುಡಿಯಾದವು. ಆ ಸೈನ್ಯದ ವಾದ್ಯಘೋಷ ಆನೆ ಕುದುರೆ ರಥಗಳಿಂದಾಗುತ್ತಿದ್ದ ನಿರ್ಘೋಷ ನಾನಾ ದಿಗಂತಗಳಿಗೆ ಮುಟ್ಟುತ್ತಿತ್ತು.
ಪದಾರ್ಥ (ಕ.ಗ.ಪ)
ಅಡರತೀ ಬಲ-ಈ ಸೈನ್ಯವೂ ಹೇಮಕೂಟವನ್ನೇರಿಹೋಯಿತು, ಇವರ ಬೊಬ್ಬೆಯ ಗಡಬಡೆಗೆ-ಸೈನಿಕರ ಅಬ್ಬರ ಕೋಲಾಹಲಗಳಿಗೆ ಹಾಗೂ ಪದಘಟ್ಟಣೆಗೆ-ಕಾಲ ತುಳಿತಕ್ಕೆ ಗಿರಿಕೋಟೆ ಬೆಟ್ಟದ ಮೇಲಿನ ಕೋಟೆ, ಹುಡಿ ಹುಡಿಯಲಾ-ಪುಡಿ ಪುಡಿಯಾಗಿ ಬಿಟ್ಟಿತು,
ನಡೆದು ಬಿಟ್ಟುದು ಗಿರಿಯ ತುದಿಯಲಿ-ಸೇನೆ ಗಿರಿಯ ತುದಿಯಲ್ಲಿ ಹೋಗಿ ಬಿಡಿಬಿಟ್ಟಿತು, ತುಡುಕಿದುದು ನಾನಾ ದಿಗಂತವ-ನಾನಾ ದಿಕ್ಕುಗಳ ಅಂತ್ಯದವರೆಗೆ ಸೇನೆ ವ್ಯಾಪಿಸಿತು. ವಾದ್ಯ ನಾನಾ ವಾದ್ಯಗಳ ಹಾಗೂ ಗಜ ಹಯ ರಥಗಳಿಂದಾಗುತ್ತಿದ್ದ, ನಿರ್ಘೋಷ-ಗದ್ದಲ, ತಡೆಯದದುಭುತ-ಅಧ್ಬುತವೆನಿಸಿ ತಡೆಯಲಾರದಾಯಿತು
ಮೂಲ ...{Loading}...
ಅಡರಿತೀ ಬಲವಿದರ ಬೊಬ್ಬೆಯ
ಗಡಬಡೆಗೆ ಪದಘಟ್ಟಣೆಗೆ ಹುಡಿ
ಹುಡಿಯಲಾ ಗಿರಿಕೋಟೆ ಕೋಳಾಹಳದ ಕೊಬ್ಬಿನಲಿ
ನಡೆದು ಬಿಟ್ಟುದು ಗಿರಿಯ ತುದಿಯಲಿ
ತುಡುಕಿದುದು ನಾನಾ ದಿಗಂತವ
ತಡೆಯದದುಭುತ ವಾದ್ಯ ಗಜ ಹಯ ರಥದ ನಿರ್ಘೋಷ ॥34॥
೦೩೫ ಹೇಮಕೂಟದ ಗಿರಿಯ ...{Loading}...
ಹೇಮಕೂಟದ ಗಿರಿಯ ಗಂಧ
ರ್ವಾಮರರ ಝೋಂಪಿಸಿದನವರು
ದ್ದಾಮ ವಸ್ತುವ ಕೊಂಡನಿಳಿದನು ಬಳಿಕ ಪರ್ವತವ
ಆ ಮಹಾ ಹರಿವರುಷದಲ್ಲಿಯ
ಸೀಮೆ ಯೋಜನ ನವ ಸಹಸ್ರ ವಿ
ರಾಮವದರೊಳಗೆಲ್ಲ ವಿವರಿಸಲರಿಯೆ ನಾನೆಂದ ॥35॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅರ್ಜುನ ಹೇಮಕೂಟದ ಗಿರಿಯಲ್ಲಿದ್ದ ಗಂಧರ್ವಾಮರರನ್ನು ನಡುಗಿಸಿ ಅವರಲ್ಲಿನ ಶ್ರೇಷ್ಠ ವಸ್ತುಗಳನ್ನು ಪಡೆದು ಪರ್ವತವನ್ನು
ಇಳಿದು ಬಂದ. ಆ ಹರಿವರ್ಷದ ಸೀಮೆ ಒಂಬತ್ತು ಸಾವಿರಯೋಜನ ವಿಸ್ತಾರವುಳ್ಳದ್ದು ಅದರೊಳಗಿನ ಸಂಗತಿಗಳನ್ನೆಲ್ಲ ನಾ ವಿವರಿಸಲಾರೆ.
ಪದಾರ್ಥ (ಕ.ಗ.ಪ)
ಅರ್ಜುನ ಹೇಮಕೂಟದ ಗಿರಿಯ ಗಂಧರ್ವಾಮರರ-ಆ ಹೇಮಕೂಟಪರ್ವತದಲ್ಲಿದ್ದ ಗಂಧರ್ವ ಮರವನ್ನು, ಝೋಂಪಿಸಿದನು-ನಡುಗಿಸಿದ, ಅವರ ಉದ್ದಾಮ ವಸ್ತುಗಳನು ಕೊಂಡನು-ಅವರಲ್ಲದ್ದ ಶ್ರೇಷ್ಠ ವಸ್ತುಗಳನ್ನು ತೆಗೆದುಕೊಂಡನು, ಇಳಿದನು ಬಳಿಕ ಪರ್ವತವ-ಅನಂತರ ಪರ್ವತವನ್ನು ಇಳಿದು ಬಂದ, ಆ ಮಹಾ ಹರಿವರುಷದಲ್ಲಿಯ ಸೀಮೆ-ಆ ಮಹತ್ತಾದ ಹರಿವರ್ಷದ ಪ್ರದೇಶ
ಯೋಜನ ನವ ಸಹಸ್ರ-ಒಂಬತ್ತು ಸಾವಿರ ಯೋಜನದಷ್ಟು ವಿಸ್ತಾರವಾದುದು, ಅದರೊಳಗೆಲ್ಲ ವಿವರಿಸಲರಿಯೆ ನಾನೆಂದ-ಅದರಲ್ಲಿರುವುದನ್ನೆಲ್ಲ ವಿವರಿಸಲಾರೆ ಎಂದ
ಮೂಲ ...{Loading}...
ಹೇಮಕೂಟದ ಗಿರಿಯ ಗಂಧ
ರ್ವಾಮರರ ಝೋಂಪಿಸಿದನವರು
ದ್ದಾಮ ವಸ್ತುವ ಕೊಂಡನಿಳಿದನು ಬಳಿಕ ಪರ್ವತವ
ಆ ಮಹಾ ಹರಿವರುಷದಲ್ಲಿಯ
ಸೀಮೆ ಯೋಜನ ನವ ಸಹಸ್ರ ವಿ
ರಾಮವದರೊಳಗೆಲ್ಲ ವಿವರಿಸಲರಿಯೆ ನಾನೆಂದ ॥35॥
೦೩೬ ಉತ್ತರೋತ್ತರ ದೇವಭೂಮಿಗ ...{Loading}...
ಉತ್ತರೋತ್ತರ ದೇವಭೂಮಿಗ
ಳೆತ್ತಣವರೀ ದಳ ನಿಚಯ ತಾ
ನೆತ್ತ ಭೂರಿಧ್ವನಿಯನೀ ಗಜಬಜವನೀ ಜನವ
ಎತ್ತಲೆಂದರಿಯರು ವಿನೋದಕೆ
ತೆತ್ತರಲ್ಲಿಯ ಪಕ್ಷಿಮೃಗ ಹಯ
ವುತ್ತಮಾಂಗನೆಯರನು ಮನ್ನಿಸಿ ಕಂಡು ಫಲುಗುಣಗೆ ॥36॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅವೆಲ್ಲ ಉತ್ತರೋತ್ತರ ದೇವಭೂಮಿಗಳು. ಅಲ್ಲಿನವರು ಇವರೆಲ್ಲರ ಆಗಮನವನ್ನು ನೋಡಿ. ಈ ಸೇವಾ ಸಮೂಹವೆಲ್ಲ ಬಂದದ್ದೆಲ್ಲಿಂದ ? ನಾವಿರುವುದೆಲ್ಲಿ ? ಅವರ ಮಹಾಕೋಲಾಹಲದ ಧ್ವನಿಯನ್ನು ಗಜಬಜವನ್ನು ಕೇಳಿ ವಿಸ್ಮಯಗೊಂಡರು.
ಅವರು ಎಲ್ಲಿಯವರೆಂದು ತಿಳಿಯರು. ವಿನೋದಕ್ಕಾಗಿ ತಮ್ಮಲ್ಲಿದ್ದ ಪಕ್ಷಿ, ಮೃಗ, ಕುದುರೆ ಉತ್ತಮ ಅಂಗನೆಯರನ್ನು ಅರ್ಜುನನಿಗೆ ಒಪ್ಪಿಸಿ ಗೌರವಿಸಿದರು.
ಪದಾರ್ಥ (ಕ.ಗ.ಪ)
ಅವೆಲ್ಲ ಉತ್ತರೋತ್ತರ ದೇವಭೂವಿಂಗಳು-ಅತ್ಯಂತ ಉತ್ತರಕ್ಕಿರುವ, ದೇವಭೂಮಿಗಳು ಅಲ್ಲಿನವರು, ಎತ್ತಣವರೀ ದಳ ನಿಚಯ-ಎಲ್ಲಿಯವರು ಈ ಸೈನ್ಯ ಸಮೂಹದವರು, ತಾನೆತ್ತ ಭೂರಿಧ್ವನಿ-ಈ ದೊಡ್ಡ ಗದ್ದಲ ಎಲ್ಲಿಂದುಂಟಾಯಿತು, ಈ ಗಜಬಜವ-ಈ ಕೋಲಾಹಲವನ್ನೂ, ಈ ಜನವನ್ನು, ಎತ್ತಲೆಂದರಿಯರು-ಎಲ್ಲಿ ಎಂದು ತಿಳಿಯರು, ಮನ್ನಿಸಿ ಕಂಡು ಫಲುಗುಣಗೆ-ಗೌರವಿಸಿ ಭೇಟಿಯಾಗಿ ಅರ್ಜುನನಿಗೆ, ವಿನೋದಕೆ-ವಿನೋದದಿಂದ, ಅಲ್ಲಿಯ-ತಮ್ಮಲ್ಲಿನ, ಪಕ್ಷಿಮೃಗ ಹಯ ಉತ್ತಮಾಂಗನೆಯರನು-ಹಕ್ಕಿ ಮೃಗಗಳು ಕುದುರೆ ಹಾಗೂ ಸುಂದರ ಸ್ತ್ರೀಯರುಗಳನ್ನು ಕೊಟ್ಟರು.
ಮೂಲ ...{Loading}...
ಉತ್ತರೋತ್ತರ ದೇವಭೂಮಿಗ
ಳೆತ್ತಣವರೀ ದಳ ನಿಚಯ ತಾ
ನೆತ್ತ ಭೂರಿಧ್ವನಿಯನೀ ಗಜಬಜವನೀ ಜನವ
ಎತ್ತಲೆಂದರಿಯರು ವಿನೋದಕೆ
ತೆತ್ತರಲ್ಲಿಯ ಪಕ್ಷಿಮೃಗ ಹಯ
ವುತ್ತಮಾಂಗನೆಯರನು ಮನ್ನಿಸಿ ಕಂಡು ಫಲುಗುಣಗೆ ॥36॥
೦೩೭ ಎರಡು ಕಡೆಯಮ್ಬುಧಿಯ ...{Loading}...
ಎರಡು ಕಡೆಯಂಬುಧಿಯ ಪಾಶ್ರ್ವದ
ದುರುಳರನು ಧಟ್ಟಿಸಿ ತದೀಯರು
ವೆರಸಿ ಬಡಗಲು ನಡೆದುದಲ್ಲಿಯ ನಿಷಧ ಪರ್ವತಕೆ
ಎರಡು ಸಾವಿರ ಯೋಜನದ ತುದಿ
ವರೆಗೆ ಹತ್ತಿತು ಬಿಟ್ಟಿತಾ ಗಿರಿ
ಬಿರಿಯೆ ಬಿರು ಸೂಳೈಸಿದವು ನಿಸ್ಸಾಳ ಕೋಟಿಗಳು ॥37॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಎರಡೂ ಕಡೆ ಸಾಗರದ ತೀರದಲ್ಲಿದ್ದ ದುಷ್ಟರನ್ನು ಬಡಿದು ಹಾಕಿ, ಅವರನ್ನೂ ಜೊತೆಯಲ್ಲಿ ಕರೆದುಕೊಂಡು ಉತ್ತರದ
ಕಡೆ ಹೊರಟು ನಿಷಧ ಪರ್ವತವನ್ನು ಎರಡು ಸಾವಿರ ಯೋಜನದ ತುದಿಯವರೆಗೆ ಹತ್ತಿ ಸೇನೆ ಅಲ್ಲಿ ಬೀಡುಬಿಟ್ಟಿತು. ಸೇನೆಯಲ್ಲಿದ್ದ ಕೋಟಿ ರಣಭೇರಿಗಳು ಪರ್ವತವೇ ಬಿರಿಯುವಂತೆ ಭೋರ್ಗರೆದುವು.
ಪದಾರ್ಥ (ಕ.ಗ.ಪ)
ಸೂಳೈಸು-ಧ್ವನಿಮಾಡು
ಎರಡು ಕಡೆಯ ಅಂಬುಧಿಯ ಪಾಶ್ರ್ವದ-ಎರಡೂ ಕಡೆ ಸಾಗರದ ತೀರದಲ್ಲಿದ್ದ, ದುರುಳರನು ಧಟ್ಟಿಸಿ-ದುಷ್ಟರನ್ನು ಬಡಿದು ಸೋಲಿಸಿ,
ತದೀಯರು ವೆರಸಿ-ಅವರನ್ನು ಜೊತೆಯಲ್ಲೇ ಕರೆದುಕೊಂಡು ಅರ್ಜುನನ ಸೇನೆ, ಬಡಗಲು-ಉತ್ತರಕ್ಕೆ, ಅಲ್ಲಿಯ ನಿಷಧ ಪರ್ವತಕೆ-ಅಲ್ಲಿದ ನಿರ್ಷ ಪರ್ವತಕ್ಕೆ, ನಡೆದುದು-ನಡೆದು ಹೋಯಿತು, ಎರಡು ಸಾವಿರ ಯೋಜನದ ತುದಿವರೆಗೆ ಹತ್ತಿತು ಬಿಟ್ಟಿತು-ಆ ಪರ್ವತದ
ತುದಿವರೆಗೆ ಎರಡು ಸಾವಿರ ಯೋಜನ ವಿಸ್ತಾರ ಸೇನೆ, ಅಲ್ಲಿಯವರೆಗೂ ಏರಿ ಹರಡಿ ಬೀಡುಬಿಟ್ಟಿತು
ಗಿರಿ ಬಿರಿಯೆ-ಆ ಪರ್ವತವೇ ಬಿರಿದು ಬಿಡುತ್ತದೆಯೋ ಎಂಬಂತೆ, ನಿಸ್ಸಾಳ ಕೋಟಿಗಳು-ಕೋಟಿಗಟ್ಟಲೆಯ ರಣಭೇರಿಗಳು, ಸೂಳೈಸಿದವು-ಭೋರ್ಗರೆದುವು
ಮೂಲ ...{Loading}...
ಎರಡು ಕಡೆಯಂಬುಧಿಯ ಪಾಶ್ರ್ವದ
ದುರುಳರನು ಧಟ್ಟಿಸಿ ತದೀಯರು
ವೆರಸಿ ಬಡಗಲು ನಡೆದುದಲ್ಲಿಯ ನಿಷಧ ಪರ್ವತಕೆ
ಎರಡು ಸಾವಿರ ಯೋಜನದ ತುದಿ
ವರೆಗೆ ಹತ್ತಿತು ಬಿಟ್ಟಿತಾ ಗಿರಿ
ಬಿರಿಯೆ ಬಿರು ಸೂಳೈಸಿದವು ನಿಸ್ಸಾಳ ಕೋಟಿಗಳು ॥37॥
೦೩೮ ಮೇಲೆ ನಿಷಧಾಚಲದ ...{Loading}...
ಮೇಲೆ ನಿಷಧಾಚಲದ ಸುತ್ತಲು
ಧಾಳಿ ಹರಿದುದು ದೆಸೆದೆಸೆಯ ದೈ
ತ್ಯಾಳಿ ಹೆಚ್ಚಿದ ದುಷ್ಟ ದಾನವ ಮಂಡಲೇಶ್ವರರ
ಶೈಲ ಶಿಖರದೊಳುಳ್ಳ ದೊರೆಗಳ
ತಾಳು ಬಾಗಿಲ ಕುತ್ತರಲಿ ಕಾ
ಲಾಳು ಹೊಕ್ಕುದು ಹೊಯ್ದು ಕಟ್ಟಿತು ಕೂಡೆ ಸೂರೆಗಳ ॥38॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಆ ನಿಷಧಾಚಲದ ಸುತ್ತಲೂ ದಿಕ್ಕುದಿಕ್ಕಿನ ದೈತ್ಯರ ಸಮೂಹ ಹಾಗೂ ಅಲ್ಲಿ ವಿಶೇಷವಾಗಿದ್ದ ದುಷ್ಟ ದಾನವಮಂಡಲೇಶ್ವರರ ಮೇಲೆ ಧಾಳಿ ನಡೆಯಿತು. ನಿಷಧ ಶೈಲ ಶಿಖರದಲ್ಲಿದ್ದ ದೊರೆಗಳ ಕೋಟೆಯ ಮರದ ಬಾಗಿಗಿಲುಗಳನ್ನು ರಾಶಿಯಾಗಿಸಿ ಕಾಲಾಳುಗಳು ಒಳಹೊಕ್ಕು ಕೂಡಲೆ
ಸೂರೆಗಳನ್ನು ಕಟ್ಟಿಕೊಂಡರು.
ಪದಾರ್ಥ (ಕ.ಗ.ಪ)
ಮೇಲೆ ನಿಷಧಾಚಲದ ಸುತ್ತಲು ಧಾಳಿ ಹರಿದುದು-ಆ ಪರ್ವತದ ಮೇಲೆ ಎಲ್ಲ ಕಡೆಗಳಲ್ಲೂ ಹೋರಾಟ ನಡೆಯಿತು ದೆಸೆದೆಸೆಯ ದೈತ್ಯಾಳಿ-ದಿಕ್ಕು ದಿಕ್ಕಿನ ದೈತ್ಯರು, ಹೆಚ್ಚಿದ ದುಷ್ಟ ದಾನವರ ಮತ್ತು ಮಂಡಲೇಶ್ವರರ ದಾಳಿ ಅದು. ಶೈಲ ಶಿಖರದೊಳುಳ್ಳ-ಆ ಪರ್ವತ ಶಿಖರದಲ್ಲಿದ್ದ ದೊರೆಗಳ, ತಾಳು ಬಾಗಿಲ ಕುತ್ತರಲಿ-ಮರದ ಬಾಗಿಲುಗಳನ್ನು ರಾಶಿ ಇಕ್ಕಿ ಲಾಳು-ಪದಾತಿ ಸೈನಿಕರು, ಹೊಕ್ಕದು-ಹೊಕ್ಕರು, ಕೊಡೆ-ಜೊತೆಯಲ್ಲೇ, ಹೊಯ್ದು-ಶತ್ರುಗಳನ್ನು ಬಡಿದು, ಸೂರೆಗಳ ಕಟ್ಟಿತು-ಸೂರೆ ಮಾಡಿದ ವಸ್ತುಗಳನ್ನೆಲ್ಲ ಕಟ್ಟಿಕೊಂಡರು
ಪಾಠಾನ್ತರ (ಕ.ಗ.ಪ)
ತಾಳು ಬಾಗಿಲ ಕುತ್ತರಲಿ ಎಂಬ ಪಾಠಕ್ಕೆ
-> ತಾಳು ಬಾಗಿಲ ಕುತ್ತುತಲಿ -> ಕೋಳುವಾಗಿಲ ಕುತ್ತುತಲಿ ?
ಎಂಬ ಪಾಠಾಂತರಗಳೂ ಇವೆ.
ಮೂಲ ...{Loading}...
ಮೇಲೆ ನಿಷಧಾಚಲದ ಸುತ್ತಲು
ಧಾಳಿ ಹರಿದುದು ದೆಸೆದೆಸೆಯ ದೈ
ತ್ಯಾಳಿ ಹೆಚ್ಚಿದ ದುಷ್ಟ ದಾನವ ಮಂಡಲೇಶ್ವರರ
ಶೈಲ ಶಿಖರದೊಳುಳ್ಳ ದೊರೆಗಳ
ತಾಳು ಬಾಗಿಲ ಕುತ್ತರಲಿ ಕಾ
ಲಾಳು ಹೊಕ್ಕುದು ಹೊಯ್ದು ಕಟ್ಟಿತು ಕೂಡೆ ಸೂರೆಗಳ ॥38॥
೦೩೯ ಗಿರಿಯ ಶಿಖರದ ...{Loading}...
ಗಿರಿಯ ಶಿಖರದ ಮೇಲ್ಕಡೆಯನಾ
ಚರಿಸಿ ನಿಷಧಾಚಲವನಿಳಿದು
ನರನ ಪಾಳೆಯ ಬಿಟ್ಟುದಾಗಲಿಳಾ ವ್ರತದ ಮೇಲೆ
ಅರಸ ಕೇಳೊಂಬತ್ತು ಸಾವಿರ
ಪರಿಗಣಿತ ಯೋಜನದ ನೆಲ ಸುರ
ಗಿರಿಯ ಸುತ್ತಣ ದೇಶವತಿ ರಮಣೀಯತರವೆಂದ ॥39॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಆ ಗಿರಿಯ ಶಿಖರದ ಮೇಲುಭಾಗದಲ್ಲಿ ನಡೆದು ನಿಷಧಾಚಲವನ್ನು ಇಳಿದರು. ಆಗ ಇಳಾ ವ್ರತದ ಮೇಲೆ ಅರ್ಜುನನ ಪಾಳಯ ಬೀಡು ಬಿಟ್ಟಿತು. ಆ ಸುರಗಿರಿಯ ಸುತ್ತಲಿದ್ದ ಪ್ರದೇಶ ಒಂಬತ್ತು ಸಾವಿರ ಯೋಜನವೆಂದು ಪರಿಗಣಿಸಲ್ಪಟ್ಟಿದ್ದು ಅತ್ಯಂತ ರಮಣೀಯತರವಾಗಿತ್ತು.
ಪದಾರ್ಥ (ಕ.ಗ.ಪ)
ಗಿರಿಯ ಶಿಖರದ ಮೇಲ್ಕಡೆಯನಾಚರಿಸಿ-ಆ ಪರ್ವತದ ಮೇಲು ಭಾಗದಿಂದ ನಡೆದು ಸೈನ್ಯ, ನಿಷಧಾಚಲವನಿಳಿದುದು-ನಿಷಧ ಪರ್ವತದಿಂದ ಇಳಿಯಿತು ಅನಂತರ, ಇಳಾ ವ್ರತದ ಮೇಲೆ-ಇಳಾವ್ರತ ಪರ್ವತದ ಮೇಲೆ, ಬಿಟ್ಟುದು-ಬಿಡುಬಿಟ್ಟಿತು,
ಅರಸ ಕೇಳು-ಜನೇಮಜಯರಾಜನೇ ಕೇಳು, ಆ ಸುರಗಿರಿಯ ಸುತ್ತಣ ದೇಶವು-ಆ ದೇವಪರ್ವತದ ಮೇಲಿನ ಸುತ್ತಣ ಪ್ರದೇಶವು
ಒಂಬತ್ತು ಸಾವಿರ ಪರಿಗಣಿತ ಯೋಜನದ ನೆಲ-ಒಂಬತ್ತು ಸಾವಿರ, ಯೋಜನ ಭೂಮಿಯುಳ್ಳದ್ದೆಂದು ಪರಿಗಣಿಸಿದ್ದಾರೆ, ಆ ಪ್ರದೇಶ ಅತಿ ರಮಣೀಯತರವಾದುದು
ಮೂಲ ...{Loading}...
ಗಿರಿಯ ಶಿಖರದ ಮೇಲ್ಕಡೆಯನಾ
ಚರಿಸಿ ನಿಷಧಾಚಲವನಿಳಿದು
ನರನ ಪಾಳೆಯ ಬಿಟ್ಟುದಾಗಲಿಳಾ ವ್ರತದ ಮೇಲೆ
ಅರಸ ಕೇಳೊಂಬತ್ತು ಸಾವಿರ
ಪರಿಗಣಿತ ಯೋಜನದ ನೆಲ ಸುರ
ಗಿರಿಯ ಸುತ್ತಣ ದೇಶವತಿ ರಮಣೀಯತರವೆಂದ ॥39॥
೦೪೦ ಚೂಣಿಗಾನುವರಿಲ್ಲ ಪಾರ್ಥನ ...{Loading}...
ಚೂಣಿಗಾನುವರಿಲ್ಲ ಪಾರ್ಥನ
ಬಾಣಕಿದಿರಾರುಂಟು ವಾದ್ಯ
ಶ್ರೇಣಿ ಚಾತುರ್ಬಲದ ಘಲ್ಲಣೆಗಿಲ್ಲ ಗರ್ವಿತರು
ಹೂಣೆ ಹೊಕ್ಕನು ಕನಕ ಶೈಲ
ದ್ರೋಣಿಗಳ ದುರ್ಬಲ ಸುರೌಘವ
ನಾಣೆಗಂಜಿಸಿ ಕಳೆದುಕೊಂಡನು ಸಕಲ ವಸ್ತುಗಳ ॥40॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಸೇನೆಯ ಮುಂಭಾಗದ ಧಾಳಿಯನ್ನು ಎದುರಿಸಬಲ್ಲವರು ಯಾರೂ ಇರಲಿಲ್ಲ. ಅರ್ಜುನನ ಬಾಣವನ್ನು ಯಾರು ಎದುರಿಸಿಯಾರು ? ಅವನ ಚತುರ್ಬಲ ಸೇನೆಯ ವಾದ್ಯ ಘಲ್ಲಣೆಯನ್ನು ಎದುರಿಸಬಲ್ಲಂತಹ ಶೂರರಿಲ್ಲ. (ಇವರೆಲ್ಲರನ್ನೂ ಗೆದ್ದು ಬರುತ್ತೇನೆ ಎಂಬ) ಶಪಥವನ್ನು ಮಾಡಿ ಕನಕಗಿರಿಯ ಕಣಿವೆಗಳನ್ನು ಹೊಕ್ಕು ಅಲ್ಲಿದ್ದ ದುರ್ಬಲ ದೇವತೆಗಳನ್ನೆಲ್ಲ ಕೇವಲ ಆಜ್ಞೆ ಮಾತ್ರದಿಂದಲೇ ಹೆದರಿಸಿ ಅವರಿಂದ ಸಕಲ ವಸ್ತುಗಳನ್ನು ಕಿತ್ತುಕೊಂಡನು.
ಪದಾರ್ಥ (ಕ.ಗ.ಪ)
ಚೂಣಿ-ಸೇನೆಯ ಮುಂಭಾಗ, ಹೂಣೆಹೊಗು-ಶಪಥ ಮಾಡಿ ಮುನ್ನುಗ್ಗು
ಚೂಣಿಗೆ ಆನುವರಿಲ್ಲ-ಸೇವಾ ಮುಂಭಾಗವನ್ನು ಎದುರಿಸುವವರೇ ಇಲ್ಲ. ಪಾರ್ಥನ ಬಾಣಕೆ ಇದಿರಾರುಂಟು-ಅರ್ಜುನನ ಬಾಣವನ್ನು ಎದುರಿಸಬಲ್ಲವರು ಯಾರಿದ್ದಾರೆ ? ವಾದ್ಯ ಶ್ರೇಣಿ-ಸಾಲು ಸಾಲಾಗಿ ನಾನಾ ವಾದ್ಯಗಳು ಚಾತುರ್ಬಲದ ಘಲ್ಲಣೆ-ಚತುರಂಗ ಸೇನೆಯ ಚಲನೆಯ ಗದ್ದಲ ಇವುಗಳಿಗೆ ಕೆರಳಿ ಎದುರಿಸಬಲ್ಲ ಗರ್ವಿತರು ಇಲ್ಲ-ಗರ್ವಿಷ್ಠರು ಇಲ್ಲ ಅರ್ಜುನನು ಹೊಣೆ ಹೊಕ್ಕನು-ಯುದ್ಧ ಮಾಡುತ್ತಾ ಮುನ್ನುಗ್ಗಿದನು, ಆ ಕನಕ ಶೈಲದ ದ್ರೋಣಿಗಳ-ಕಣಿವೆಗಳಲ್ಲಿದ್ದ, ದುರ್ಬಲ ಸುರೌಘವ-ನಿಶ್ಶಕ್ತರಾದ ದೇವತೆಗಳ ಸಮೂಹವನ್ನು, ಆಣೆಗಂಜಿಸಿ-ಕೇವಲ ತನ್ನ ಆಜ್ಞೆಯಿಂದಲೇ ಹೆದರಿಸಿ, ಕಳೆದುಕೊಂಡನು ಸಕಲ ವಸ್ತುಗಳ-ಅವರಿಂದ ಎಲ್ಲ ವಸ್ತುಗಳನ್ನು ಪಡೆದುಕೊಂಡ,
ಮೂಲ ...{Loading}...
ಚೂಣಿಗಾನುವರಿಲ್ಲ ಪಾರ್ಥನ
ಬಾಣಕಿದಿರಾರುಂಟು ವಾದ್ಯ
ಶ್ರೇಣಿ ಚಾತುರ್ಬಲದ ಘಲ್ಲಣೆಗಿಲ್ಲ ಗರ್ವಿತರು
ಹೂಣೆ ಹೊಕ್ಕನು ಕನಕ ಶೈಲ
ದ್ರೋಣಿಗಳ ದುರ್ಬಲ ಸುರೌಘವ
ನಾಣೆಗಂಜಿಸಿ ಕಳೆದುಕೊಂಡನು ಸಕಲ ವಸ್ತುಗಳ ॥40॥
೦೪೧ ಹರಿದು ಹತ್ತಿತು ...{Loading}...
ಹರಿದು ಹತ್ತಿತು ಗಂಧಮಾದನ
ಗಿರಿಯ ಸುತ್ತಣ ಯಕ್ಷ ವಿದ್ಯಾ
ಧರರನಂಜಿಸಿ ಕೊಂಡನಲ್ಲಿಯ ಸಾರ ವಸ್ತುಗಳ
ಗಿರಿಯನಿಳಿದರು ಜಂಬು ನೇರಿಲ
ಮರನ ಕಂಡರು ಗಗನ ಚುಂಬಿತ
ವೆರಡು ಸಾವಿರ ಯೋಜನಾಂತರದೊಳತಿ ವಿಳಾಸದಲಿ ॥41॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಗಂಧಮಾದನಗಿರಿಯನ್ನು ಎಲ್ಲರೂ ಓಡಿಕೊಂಡು ಹತ್ತಿದರು. ಸುತ್ತಲಿದ್ದ ಯಕ್ಷವಿದ್ಯಾಧರರನ್ನೆಲ್ಲ ಅಂಜಿಸಿ ಅರ್ಜುನ ಅವರಿಂದ ಶ್ರೇಷ್ಠ ವಸ್ತುಗಳನ್ನು ಪಡೆದ. ಅನಂತರ ಆ ಗಿರಿಯನ್ನಿಳಿದರು. ಆಕಾಶವನ್ನು ಚುಂಬಿಸುತ್ತಾ ಎರಡು ಸಾವಿರ ಯೋಜನವಾದಷ್ಟು ವಿಸ್ತಾರ ಪ್ರದೇಶದಲ್ಲಿ ವಿಲಾಸದಿಂದ ನಿಂತಿದ್ದ ಎತ್ತರವಾದ ಜಂಬುನೇರಳೆಯ ಮರವನ್ನು ನೋಡಿದರು.
ಪದಾರ್ಥ (ಕ.ಗ.ಪ)
ಹರಿದು ಹತ್ತಿತು ಗಂಧಮಾದನ ಗಿರಿಯ-ಆ ಅರ್ಜುನ ಸೇನೆ, ಗಂಧಮಾದನ ಗಿರಿಯನ್ನು ಓಡಿ ಹತ್ತಿತು, ಗಿರಿಯ ಸುತ್ತಣ ಯಕ್ಷ ವಿದ್ಯಾಧರರನಂಜಿಸಿ-ಆ ಗಿರಿಯ ಸುತ್ತಲೂ, ವಾಸಿಸುತ್ತಿದ್ದ ಯಕ್ಷರನ್ನೂ ವಿದ್ಯಾಧರರನ್ನು ಹೆದರಿಸಿ, ಅಲ್ಲಿನ ಸಾರ ವಸ್ತುಗಳ ಕೊಂಡನು-ಆ ಪ್ರದೇಶದ ಶ್ರೇಷ್ಠವಾದ, ವಸ್ತುಗಳನ್ನೆಲ್ಲ ಪಡೆದ ಅರ್ಜುನ ಗಿರಿಯನಿಳಿದರು, ಅಲ್ಲಿ ಜಂಬು ನೇರಿಲಮರನ ಕಂಡರು-ಬೆಟ್ಟವಿಳಿಯುತ್ತಲೇ, ಅಲ್ಲೊಂದು ಜಂಬುನೇರಳೆಯ ಮರವನ್ನು ನೋಡಿದರು, ಗಗನ ಚುಂಬಿತ-ಅದು ಅತಿ ಎತ್ತರವಾಗಿ ಆಕಾಶಕ್ಕೆ ಮುತ್ತಿಡುತ್ತಿತ್ತು, ಅತಿ ವಿಳಾಸದಲಿ-ಅತಿಶಯ ವಿಲಾಸವಾಗಿ ಹರಡಿದ್ದ, ಆ ಮರದ ವಿಸ್ತಾರ-ಎರಡು ಸಾವಿರ ಯೋಜನದಷ್ಟು
ಅಂತರ-ಒಂದು ಕಡೆಯಿಂದ ಇನ್ನೊಂದು ಕಡೆಗೆ
ಮೂಲ ...{Loading}...
ಹರಿದು ಹತ್ತಿತು ಗಂಧಮಾದನ
ಗಿರಿಯ ಸುತ್ತಣ ಯಕ್ಷ ವಿದ್ಯಾ
ಧರರನಂಜಿಸಿ ಕೊಂಡನಲ್ಲಿಯ ಸಾರ ವಸ್ತುಗಳ
ಗಿರಿಯನಿಳಿದರು ಜಂಬು ನೇರಿಲ
ಮರನ ಕಂಡರು ಗಗನ ಚುಂಬಿತ
ವೆರಡು ಸಾವಿರ ಯೋಜನಾಂತರದೊಳತಿ ವಿಳಾಸದಲಿ ॥41॥
೦೪೨ ಅದರ ಫಲ ...{Loading}...
ಅದರ ಫಲ ಹೇರಾನೆಗಳ ತೋ
ರದಲಿಹವು ಗಿರಿಸಾರ ಶಿಲೆಗಳ
ಹೊದರಿನಲಿ ಬಿದ್ದೊಡೆದು ಹೊಳೆಯಾದುದು ಮಹಾರಸದ
ಅದು ಸುಧಾಮಯವಾಯ್ತು ಜಂಬೂ
ನದಿ ಜಲಸ್ಪರ್ಶದಲಿ ಜಾಂಬೂ
ನದ ಸುವರ್ಣವೆಯಾದುದಾ ನದಿಯೆರಡು ತಡಿವಿಡಿದು ॥42॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅದರ ಹಣ್ಣುಗಳು ಒಂದೊಂದು ಭಾರೀ ಆನೆಗಳಷ್ಟು ಗಾತ್ರವಿತ್ತು. ಹಣ್ಣುಗಳು ಆ ಗಿರಿಯ ಶಿಲೆಗಳ ಮೇಲೆ, ಪೊದೆಗಳಲ್ಲಿ ಬಿದ್ದು ಒಡೆದು ಆ ಮಹಾರಸ ನದಿಯಾಗಿ ಹರಿಯುತ್ತದೆ. ಆ ರಸ ಅಮೃತಮಯವಾಗಿದೆ. ಅದೇ ಜಂಬೂನದಿ. ಆ ಜಲಸ್ಪರ್ಶದಿಂದ ಆ ನದಿಯ ಎರಡು ತೀರದ ಉದ್ದಕ್ಕೂ ಜಾಂಬೂನದ, ಅಂದರೆ ಚಿನ್ನವೇ ಆಗಿಬಿಟ್ಟಿದೆ.
ಪದಾರ್ಥ (ಕ.ಗ.ಪ)
ಅದರ ಫಲ-ಆ ಮರದ ಹಣ್ಣುಗಳು, ಹೇರಾನೆಗಳ ತೋರದಲಿಹವು-ದೊಡ್ಡ ಆನೆಯಷ್ಟು ಗಾತ್ರವಾಗಿದ್ದುವು, ಗಿರಿಸಾರ ಶಿಲೆಗಳ ಹೊದರಿನಲಿ ಬಿದ್ದು-ಆ ಹಣ್ಣುಗಳು ಪಕ್ವವಾದಂತೆ, ಆ ಪರ್ವತದ ಸಾರ ಶಿಲೆಗಳ ಪೊದರುಗಳಲ್ಲಿ ಬಿದ್ದು, ಒಡೆದು ಹೊಳೆಯಾದುದು ಮಹಾರಸದ-ಅದರ ರಸದ ಮಹಾ, ನದಿಯಾಗಿ ಹರಿಯತೊಡಗಿತು ಅದು ಜಂಬೂ ನದಿ, ಸುಧಾಮಯವಾಯ್ತು-ಅದರ ನೀರು ಅಮೃತಪ್ರಾಯವಾಯ್ತು, ಜಲಸ್ಪರ್ಶದಲಿ-ಆ ನೀರಿನ ಸ್ಪರ್ಶದಿಂದ, ಜಾಂಬೂನದ ಸುವರ್ಣ-ಜಂಬೂನದಿಯಿಂದ ಚಿನ್ನವೆನಿಸಿತು, ಆ ನದಿಯ ಎರಡು ತಡಿವಿಡಿದು-ಎರಡೂ ದಡಗಳ ಉದ್ದಕ್ಕೂ
ಮೂಲ ...{Loading}...
ಅದರ ಫಲ ಹೇರಾನೆಗಳ ತೋ
ರದಲಿಹವು ಗಿರಿಸಾರ ಶಿಲೆಗಳ
ಹೊದರಿನಲಿ ಬಿದ್ದೊಡೆದು ಹೊಳೆಯಾದುದು ಮಹಾರಸದ
ಅದು ಸುಧಾಮಯವಾಯ್ತು ಜಂಬೂ
ನದಿ ಜಲಸ್ಪರ್ಶದಲಿ ಜಾಂಬೂ
ನದ ಸುವರ್ಣವೆಯಾದುದಾ ನದಿಯೆರಡು ತಡಿವಿಡಿದು ॥42॥
೦೪೩ ಆ ರಸೋದಕ ...{Loading}...
ಆ ರಸೋದಕ ಪಾನವೇ ಸಂ
ಸಾರ ಸೌಖ್ಯದ ಸಿದ್ದಿಯಿತರಾ
ಹಾರವಿಂಧನ ತಂಡುಲಾಗ್ನಿಕ್ರಮ ವಿಧಾನವದು
ನಾರಿಯರು ಸಹಿತಲ್ಲಿ ಸಿದ್ಧರು
ಚಾರಣರು ರಮಣೀಯ ತೀರ ವಿ
ಹಾರಿಗಳು ಬಹುರತ್ನದಿಂ ಮನ್ನಿಸಿದರರ್ಜುನನ ॥43॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಆ ರಸೋದಕದ ಪಾನವೇ ಸಂಸಾರದ ಸಿದ್ಧಿ. ಇತರ ಆಹಾರವೆಲ್ಲ ಸೌದೆ ಬೆಂಕಿ ಅಕ್ಕಿಗಳಿಂದ ಸಿದ್ಧವಾಗುಂತಹ ಪದಾರ್ಥಗಳಂತೆ ಸಹಜವಾದುದಲ್ಲ. ಆ ನದಿಯ ರಮಣೀಯ ತೀರಗಳಲ್ಲಿ ಸಿದ್ಧರೂ ಚಾರಣರೂ ನಾರಿಯರೊಡನೆ ವಿಹರಿಸುವರು. ಅವರು ಅರ್ಜುನನನ್ನು ಬಹುರತ್ನಗಳಿಂದ ಗೌರವಿಸಿದರು.
ಪದಾರ್ಥ (ಕ.ಗ.ಪ)
ಆ ರಸೋದಕ ಪಾನವೇ-ಆ ಜಂಬೂ ನದಿಯ ಸಾರವತ್ತಾದ ನೀರಿನ ಪಾನವೇ, ಸಂಸಾರ ಸೌಖ್ಯದ ಸಿದ್ದಿ-ಈ ಪ್ರಪಂಚದಲ್ಲಿ ಸುಖದ ಸಿದ್ಧಿಯನ್ನು ತರುವಂತಹುದು, ಇತರಾಹಾರ-ಮನುಷ್ಯ ಸೇವಿಸುವ ಇನ್ನಿತರ ಬಗೆಯ ಆಹಾರಗಳೆಲ್ಲ, ಇಂಧನ-ಸೌಧೆ, ತಂಡುಲ-ಅಕ್ಕಿ
ಅಗ್ನಿ-ಬೆಂಕಿ, ಕ್ರಮ ವಿಧಾನವದು-ಮೊದಲಾದವುಗಳ ಕ್ರಮವಿದ್ದ ಹಾಗೆ, ನಾರಿಯರು ಸಹಿತ-ಅಲ್ಲಿನ ಸ್ತ್ರೀಯರು ಸೇರಿ ಸಿದ್ಧರು ಹಾಗೂ ಚಾರಣರು, ಆ ರಮಣೀಯ ತೀರ ವಿಹಾರಿಗಳು-ಆ ಮನೋಹರವಾದ ನದೀ ತೀರದಲ್ಲಿ, ಅರ್ಜುನನ-ಅರ್ಜುನನ್ನು, ಬಹುರತ್ನದಿ-ಅನೇಕ ರತ್ನಗಳನ್ನು ಕೊಟ್ಟು, ಮನ್ನಿಸಿದರು-ಗೌರವಿಸಿದರು
ಪಾಠಾನ್ತರ (ಕ.ಗ.ಪ)
ಸಿದ್ದಿಯಿತರಾ
ಹಾರವಿಂಧನ –>ಇತರವಿ
ಹಾರವಿಂಧನ
ಈ ಪಾಠಾಂತರ ಮೈ.ವಿ.ವಿ.ಯ ಸಭಾಪರ್ವದಲ್ಲಿದೆ. ಆದರೆ ಒಟ್ಟರ್ಥದಲ್ಲಿ ತುಂಬ ವ್ಯತ್ಯಾಸವೇನೂ ಆಗುವುದಿಲ್ಲ.
ಮೂಲ ...{Loading}...
ಆ ರಸೋದಕ ಪಾನವೇ ಸಂ
ಸಾರ ಸೌಖ್ಯದ ಸಿದ್ದಿಯಿತರಾ
ಹಾರವಿಂಧನ ತಂಡುಲಾಗ್ನಿಕ್ರಮ ವಿಧಾನವದು
ನಾರಿಯರು ಸಹಿತಲ್ಲಿ ಸಿದ್ಧರು
ಚಾರಣರು ರಮಣೀಯ ತೀರ ವಿ
ಹಾರಿಗಳು ಬಹುರತ್ನದಿಂ ಮನ್ನಿಸಿದರರ್ಜುನನ ॥43॥
೦೪೪ ಕೇಳಿ ಸೊಗಸಿದ ...{Loading}...
ಕೇಳಿ ಸೊಗಸಿದ ವಸ್ತುವಿಗೆ ಕ
ಣ್ಣಾಲಿ ಬಿದ್ದಣವಾಯ್ತಲಾ ಸುರ
ಪಾಲ ಪದವಿದರೊರೆಗೆ ಬಹುದೇ ತೀರವಾಸಿಗಳ
ಧಾಳಿ ಧಟ್ಟಣೆಗಳನು ಮಾಣಿಸಿ
ಪಾಳೆಯವನು ಪವನ ಸರೋವರ
ವೇಲೆಯಲಿ ಬಿಡಿಸಿದನು ಜಂಬೂನದಿಯ ತೀರದಲಿ ॥44॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕೇಳಿ ಮೆಚ್ಚಿಕೊಂಡಂತಹ ವಸ್ತು ಕಣ್ಣೆದುರಿಗೇ ಬಂದಾಗ ಕಣ್ಣಿಗೆ ಹಬ್ಬವಾಯಿತು ! ದೇವೇಂದ್ರನ ಪದವಿ ಇದಕ್ಕೆ ಸಮಾನವಾದೀತೇ ? ತೀರವಾಸಿಗಳ ಮೇಲೆ ಧಾಳಿ ಧಟ್ಟಣೆಗಳನ್ನು ಮಾಡದೆ ಅರ್ಜುನನು ಆ ಜಂಬೂನದಿಯ ತೀರದಲ್ಲಿ ಪವನ ಸರೋವರದ ಅಂಚಿನಲ್ಲಿ ಸೇನೆಯ ಪಾಳೆಯವನ್ನು ಬಿಡಿಸಿದನು.
ಪದಾರ್ಥ (ಕ.ಗ.ಪ)
ಬಿದ್ದಣ - ಔತಣ
ವೇಲೆ- ಸಮುದ್ರ ತೀರ.
ಕೇಳಿ ಸೊಗಸಿದ ವಸ್ತುವಿಗೆ-ಕಿವಿಯಿಂದ ಕೇಳಿ ಮಾತ್ರವೇ ಮೆಚ್ಚಿಕೊಂಡಿದ್ದ ವಸ್ತುವಿಗೆ ಕಣ್ಣಾಲಿ-ಕಣ್ಣುಗಳ ನೋಟ, ಬಿದ್ದಣವಾಯ್ತಲಾ-ಔತಣದ ಭೋಜನವಿಕ್ಕಿದಂತಾಯಿತು ಅಲ್ಲವೇ ! ಸುರಪಾಲ ಪದವಿ-ದೇವೇಂದ್ರನ ಪದವಿ ಕೂಡ,
ತೀರವಾಸಿಗಳ-ಆ ಜಂಬೂ ನದಿಯ ತೀರದಲ್ಲಿ ವಾಸಿಸುವ ಜನರ, ಒರೆಗೆ ಬಹುದೇ-ಸರಿಸಮಾನತೆಗೆ ಬಂದಿತೇ ? ಧಾಳಿ ಧಟ್ಟಣೆಗಳನು-ಸೇನೆಯ ಆಕ್ರಮಣ ಮತ್ತು ಬಡಿದಾಟಗಳನ್ನು, ಮಾಣಿಸಿ-ತಪ್ಪಿಸಿ, ಪಾಳೆಯವನು-ಸೇನೆಯ ಬೀಡನ್ನು, ಜಂಬೂನದಿಯ ತೀರದಲಿ-ಆ ಜಂಬೂ ನದಿಯ ತೀರದಲ್ಲೆ ಇದ್ದ, ಪವನ ಸರೋವರ ವೇಲೆಯಲಿ-ಪವನ ಸರೋವರದ ಅಂಚಿನಲ್ಲಿ ಬಿಡಿಸಿದನು
ಟಿಪ್ಪನೀ (ಕ.ಗ.ಪ)
ಪವನ ಸರೋವರ - ಪವನಹೃದ- ಕುರುಕ್ಷೇತ್ರದ ಗಡಿಯಲ್ಲಿರುವ ಒಂದು ಮರುದ್ಗಣ ತೀರ್ಥ. ಇಲ್ಲಿ ಸ್ನಾನ ಮಾಡಿದರೆ ಮನುಷ್ಯ ವಿಷ್ಣು ಲೋಕದಲ್ಲಿ ಪ್ರತಿಷ್ಠಿತನಾಗುತ್ತಾನೆ. ( ಮಹಾಭಾರತ- ವನಪರ್ವ, 83/105)
- ಮಹಾಭಾರತ ಕೋಶ , ಸಿ.ಗೋಪಾಲ ಕೃಷ್ಣ ಶಾಸ್ತ್ರಿ, ಗೋವಿಂದಪೈಸಂಶೋಧನ ಕೇಂದ್ರ, ಉಡುಪಿ.-2006 ಪುಟ282
ಮೂಲ ...{Loading}...
ಕೇಳಿ ಸೊಗಸಿದ ವಸ್ತುವಿಗೆ ಕ
ಣ್ಣಾಲಿ ಬಿದ್ದಣವಾಯ್ತಲಾ ಸುರ
ಪಾಲ ಪದವಿದರೊರೆಗೆ ಬಹುದೇ ತೀರವಾಸಿಗಳ
ಧಾಳಿ ಧಟ್ಟಣೆಗಳನು ಮಾಣಿಸಿ
ಪಾಳೆಯವನು ಪವನ ಸರೋವರ
ವೇಲೆಯಲಿ ಬಿಡಿಸಿದನು ಜಂಬೂನದಿಯ ತೀರದಲಿ ॥44॥
೦೪೫ ಲಲಿತ ದಿವ್ಯಾಭರಣ ...{Loading}...
ಲಲಿತ ದಿವ್ಯಾಭರಣ ರತ್ನಾ
ವಳಿಯನನುಕರಿಸಿದನು ಪಾಳೆಯ
ಸುಳಿದುದಮರಾಚಲದ ಕೇಸರ ಶಿಖರಿಗಳ ಕಳೆದು
ಹೊಳೆ ಹೊಳೆವ ಮೇರುವಿನ ಸುತ್ತಣ
ವಳಯದರ್ಧವನಾಕರಿಸಿ ಕೈ
ವಳಿಸಿ ಬಿಟ್ಟನು ಹೊಕ್ಕಿಳಾವೃತವರುಷ ಸೀಮೆಯಲಿ ॥45॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅಲ್ಲಿ ಮನೋಹರವಾದ ದಿವ್ಯಾಭರಣಗಳನ್ನು ರತ್ನಾವಳಿಯನ್ನು ಸ್ವೀಕರಿಸಿದನು. ಸೈನ್ಯ ಅಲ್ಲಿಂದ ಮುಂದೆ ಅಮರಾಚಲ ಮತ್ತು ಕೇಸರ ಶಿಖರಗಳನ್ನು ದಾಟಿ ಹೊಳೆಹೊಳೆಯುತ್ತಿದ್ದ ಮೇರುಪರ್ವತ ಅರ್ಧವಲಯವನ್ನು ವಶಪಡಿಸಿಕೊಂಡು, ಇಳಾವೃತವರ್ಷದ ಪ್ರದೇಶದಲ್ಲಿ ಬೀಡುಬಿಟ್ಟಿತು.
ಪದಾರ್ಥ (ಕ.ಗ.ಪ)
ಕೈವಳಿಸಿ-ವಶಪಡಿಸಿಕೊಂಡು ? ಅಲ್ಲಿ ಅರ್ಜುನನು ಲಲಿತ-ಮನೋಹರವಾದ ದಿವ್ಯಾಭರಣ ರತ್ನಾವಳಿಯನು-ಶ್ರೇಷ್ಠವಾದ ಆಭರಣಗಳನ್ನೂ, ಶ್ರೇಷ್ಠ ರತ್ನಗಳನ್ನೂ, ಅನುಕರಿಸಿದನು-ಸ್ವೀಕರಿಸಿದನು ಪಾಳೆಯ-ಸೇನೆ, ಅಲ್ಲಿಂದ ಮುಂದಕ್ಕೆ ಹೊರಟು ಅಮರಾಚಲ ಹಾಗೂ ಕೇಸರ ಶಿಖರಿಗಳ ಪರ್ವತಗಳನ್ನು, ಸುಳಿದು-ದಾಟಿ, ಹೊಳೆ ಹೊಳೆವ-ಪ್ರಕಾಶಮಾನವಾಗಿ ಹೊಳೆಯುತ್ತಿದ್ದ, ಮೇರುವಿನ-ಮೇರು ಪರ್ವತದ, ಸುತ್ತಣವಲಯದ ಅರ್ಧವನಾಕರಿಸಿ-ಅರ್ಧಭಾಗವನ್ನೇ ವಶಪಡಿಸಿಕೊಂಡು, ಕೈವಳಿಸಿ-ಕರಗತಮಾಡಿಕೊಂಡು,
ಬಿಟ್ಟನು ಹೊಕ್ಕು ಇಳಾವೃತವರುಷ ಸೀಮೆಯಲಿ-ಅಲ್ಲಿಂದ ಹೊರಟು ಇಳಾವೃತ, ದೇಶದ ಪ್ರದೇಶದಲ್ಲಿ ಬೀಡುಬಿಟ್ಟನು
ಮೂಲ ...{Loading}...
ಲಲಿತ ದಿವ್ಯಾಭರಣ ರತ್ನಾ
ವಳಿಯನನುಕರಿಸಿದನು ಪಾಳೆಯ
ಸುಳಿದುದಮರಾಚಲದ ಕೇಸರ ಶಿಖರಿಗಳ ಕಳೆದು
ಹೊಳೆ ಹೊಳೆವ ಮೇರುವಿನ ಸುತ್ತಣ
ವಳಯದರ್ಧವನಾಕರಿಸಿ ಕೈ
ವಳಿಸಿ ಬಿಟ್ಟನು ಹೊಕ್ಕಿಳಾವೃತವರುಷ ಸೀಮೆಯಲಿ ॥45॥
೦೪೬ ಸೇನೆ ಪಡುವಲು ...{Loading}...
ಸೇನೆ ಪಡುವಲು ತಿರುಗಿ ಸುತ್ತಣ
ವಾನುಪೂರ್ವಿಯ ಗಂಧಮಾದನ
ಸಾನುವನು ವೆಂಠಣಿಸಿಯಡರಿತು ಚೂಣಿಶೃಂಗದಲಿ
ಆ ನಗೇಂದ್ರನನಿಳಿದು ಪಡುವಣ
ಕಾನನಂಗಳ ಕೇತುಮಾಲದ
ಕಾನನಂಗಳ ಕಳೆದು ಬಿಟ್ಟುದು ಸೇನೆ ಬಳಸಿನಲಿ ॥46॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅಲ್ಲಿಂದ ಸೇನೆ ಪಶ್ಚಿಮಕ್ಕೆ ಸುತ್ತಲೂ ಅನುಕ್ರಮವಾಗಿದ್ದ ಗಂಧಮಾದನಪರ್ವತದ ಸಾನುಪ್ರದೇಶವನ್ನು ಬಳಸಿ ಎದುರಿನ ಶಿಖರವನ್ನೇರಿತು. ಮತ್ತೆ ಅಲ್ಲಿಂದಿಳಿದು ಪಶ್ಚಿಮದಲ್ಲಿದ್ದ ಕಾಡುಗಳನ್ನೂ ಕೇತುಮೂಲಪರ್ವತದ ಕಾನನಗಳನ್ನೂ ದಾಟಿ ಅದರ ಬಳಸಿನಲ್ಲಿ ಬೀಡುಬಿಟ್ಟಿತು.
ಪದಾರ್ಥ (ಕ.ಗ.ಪ)
ಸೇನೆ-ಅರ್ಜುನನ ಸೈನ್ಯ, ಪಡುವಲು ತಿರುಗಿ-ಪಶ್ಚಿಮಕ್ಕೆ ತಿರುಗಿ, ಸುತ್ತಣ ಆನುಪೂರ್ವಿಯ-ಸುತ್ತಲೂ ಅನುಕ್ರಮವಾಗಿದ್ದು, ಗಂಧಮಾದನ ಸಾನುವನು-ಗಂಧಮಾದನ ಪರ್ವತದ, ವೆಂಠಣಿಸಿ-ಬಳಸಿ, ಅಡರಿತು ಚೂಣಿ ಶೃಂಗದಲಿ-ಎದುರಿಗೆ ಕಾಣಿಸುತ್ತಿದ್ದ, ಶಿಖರಕ್ಕೆ ಏರಿಹೋಯಿತು, ಆ ನಗೇಂದ್ರನನಿಳಿದು-ಆ ಮಹಾಪರ್ವತವನ್ನು ಇಳಿದು ಪಶ್ಚಿಮದಲ್ಲಿದ, ಕಾನನಂಗಳ-ಕಾಡುಗಳನ್ನು,
ಕೇತುಮಾಲದ-ಕೇತು ಮಾಲ ಪರ್ವತದ, ಕಳೆದು-ದಾಟಿ, ಬಿಟ್ಟುದು ಸೇನೆ ಬಳಸಿನಲಿ-ಅದರ ಸುತ್ತ ಬೀಡುಬಿಟ್ಟಿತು
ಮೂಲ ...{Loading}...
ಸೇನೆ ಪಡುವಲು ತಿರುಗಿ ಸುತ್ತಣ
ವಾನುಪೂರ್ವಿಯ ಗಂಧಮಾದನ
ಸಾನುವನು ವೆಂಠಣಿಸಿಯಡರಿತು ಚೂಣಿಶೃಂಗದಲಿ
ಆ ನಗೇಂದ್ರನನಿಳಿದು ಪಡುವಣ
ಕಾನನಂಗಳ ಕೇತುಮಾಲದ
ಕಾನನಂಗಳ ಕಳೆದು ಬಿಟ್ಟುದು ಸೇನೆ ಬಳಸಿನಲಿ ॥46॥
೦೪೭ ಅಲ್ಲಿ ಸಾಗರ ...{Loading}...
ಅಲ್ಲಿ ಸಾಗರ ತೀರ ಪರಿಯಂ
ತೆಲ್ಲಿ ಗಜಹಯವೆಲ್ಲಿ ಸುದತಿಯ
ರೆಲ್ಲಿ ಮಣಿಗಣವೆಲ್ಲಿ ಬಹುಧನವೆಲ್ಲಿ ರಮಣೀಯ
ಅಲ್ಲಿಗಲ್ಲಿಗೆ ನಡೆದು ಸಾಧಿಸಿ
ಕೆಲ್ಲೆ ಕುಹರದ ಕೋಣೆ ಬಾಗುಗ
ಳೆಲ್ಲವನು ಹೊಕ್ಕರಿಸಿ ತೆರಳಿಚಿದನು ಮಹಾಧನವ ॥47॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅಲ್ಲಿ ಸಾಗರತೀರದವರೆಗೆ ಎಲ್ಲಿ ಆನೆ ಕುದುರೆಗಳಿವೆಯೋ ಎಲ್ಲಿ ಸ್ತ್ರೀಯರಿದ್ದಾರೋ, ಎಲ್ಲಿ ರತ್ನ ರಾಶಿಯಿದೆಯೋ, ಎಲ್ಲಿ ತುಂಬ ಹಣವಿದೆಯೋ, ಎಲ್ಲಿ ರಮಣೀಯ ಪ್ರದೇಶವಿದೆಯೋ, ಅಲ್ಲಿಗೆಲ್ಲ ನಡೆದುಕೊಂಡು ಹೋಗಿ, ಅಕ್ಕಪಕ್ಕ, ಗವಿ, ಕೋಣೆ, ತಿರುವು
ಯಾವ ಸ್ಥಳವನ್ನೂ ಬಿಡದೆ ಒಳಹೊಕ್ಕು ಮಹಾಧನವನ್ನು ಸಂಗ್ರಹಿಸಿದ.
ಪದಾರ್ಥ (ಕ.ಗ.ಪ)
ಅಲ್ಲಿ ಸಾಗರ ತೀರ ಪರಿಯು-ಸಾಗರದ ಅಂಚಿನವರೆಗೂ, ಎಲ್ಲಿ ಗಜಹಯ-ಎಲ್ಲಿ ಆನೆ, ಕುದುರೆ, ಎಲ್ಲಿ ಸುದತಿಯರು ಮಣಿಗಳ-ಸ್ತ್ರೀಯರು ಮತ್ತು ರತ್ನಗಳು, ಎಲ್ಲಿ ಬಹುಧನ-ಹೇರಳವಾದ ಸಂಪತ್ತು, ಎಲ್ಲಿ ರಮಣೀಯ-ಎಲ್ಲಿ ಮನೊಹರವಾಗಿ ಕರಡಿತೋ, ಅಲ್ಲಿಗಲ್ಲಿಗೆ ನಡೆದು-ಅಲ್ಲಿಗೆಲ್ಲಾ ಹೋಗಿ, ಸಾಧಿಸಿ-ಹೋರಾಡಿ ಗೆದ್ದು, ಕೆಲ್ಲೆ-ಅಕ್ಕಪಕ್ಕ, ಕುಹರ-ಗುಹೆ, ಗವಿ, ಕೋಣೆ ಬಾಗುಗಳು-ತಿರುವುಗಳು, ಎಲ್ಲವನು ಹೊಕ್ಕ ಅರಿಸಿ-ಎಲ್ಲ ಕಡೆಯೂ ಪ್ರವೇಶಿಸಿ, ಹುಡುಕಿ, ಮಹಾಧನವ ತೆರಳಿಚಿದನು-ಮಹಾಸಂಪತ್ತನ್ನು ಹೊರಕ್ಕೆ ಸೆಳೆದ
ಮೂಲ ...{Loading}...
ಅಲ್ಲಿ ಸಾಗರ ತೀರ ಪರಿಯಂ
ತೆಲ್ಲಿ ಗಜಹಯವೆಲ್ಲಿ ಸುದತಿಯ
ರೆಲ್ಲಿ ಮಣಿಗಣವೆಲ್ಲಿ ಬಹುಧನವೆಲ್ಲಿ ರಮಣೀಯ
ಅಲ್ಲಿಗಲ್ಲಿಗೆ ನಡೆದು ಸಾಧಿಸಿ
ಕೆಲ್ಲೆ ಕುಹರದ ಕೋಣೆ ಬಾಗುಗ
ಳೆಲ್ಲವನು ಹೊಕ್ಕರಿಸಿ ತೆರಳಿಚಿದನು ಮಹಾಧನವ ॥47॥
೦೪೮ ಎಡಕಡೆಯಲೊಮ್ಬತ್ತು ಸಾವಿರ ...{Loading}...
ಎಡಕಡೆಯಲೊಂಬತ್ತು ಸಾವಿರ
ನಡು ನೆಲನನಾಕರಿಸಿ ಮೂಡಣ
ಕಡೆಗೆ ತಿರುಗಿತು ಗಂಧಮಾದನ ಗಿರಿಯನೇರಿಳಿದು
ನಡೆದಿಳಾವೃತದೊಳಗೆ ಬಿಟ್ಟುದು
ಪಡೆ ಸುರಾದ್ರಿಯನುಳುಹಿ ಬಲದಲಿ
ನಡೆಯಲತಿ ದೂರದಲಿ ಕಂಡರು ಮಂದರಾಚಲವ ॥48॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಎಡಗಡೆಯಲ್ಲಿ ಒಂಬತ್ತು ಸಾವಿರ ನಡುನೆಲವನ್ನು ವಶಪಡಿಸಿಕೊಂಡು ಪೂರ್ವಕ್ಕೆ ತಿರುಗಿ ಗಂಧಮಾದನಗಿರಿಯನ್ನೂ ಇಳಿದು
ಇಳಾವೃತದಲ್ಲಿ ಸೈನ್ಯ ಬೀಡುಬಿಟ್ಟಿತು. ಸುರಾದ್ರಿಯನ್ನು ಬಲಗಡೆಗೆ ಬಿಟ್ಟುಕೊಂಡು ನಡೆದುಹೋಗಲು ದೂರದಲ್ಲಿ ಮಂದರಾಚಲ ಕಂಡಿತು.
ಪದಾರ್ಥ (ಕ.ಗ.ಪ)
ನಡುನೆಲೆ-? ಎಡಕಡೆಯಲಿ-ಎಡಗಡೆಯಲ್ಲಿ, ಒಂಬತ್ತು ಸಾವಿರ ನಡು ನೆಲನನಾಕರಿಸಿ-ಒಂಬತ್ತು ಸಾವಿರ ಯೋಜನದಷ್ಟು,
ನೆಲವನ್ನು ವಶಪಡಿಸಿಕೊಂಡು ಸೈನ್ಯವು, ಮೂಡಣ ಕಡೆಗೆ ತಿರುಗಿತು-ಪೂರ್ವ ದಿಕ್ಕಿಗೆ ತಿರುಗಿತು ಮುಂದೆ, ಗಂಧಮಾದನ ಗಿರಿಯನು ಏರಿ ಇಳಿದು ನಡೆದು-ಮುಂದಕ್ಕೆ ನಡೆದು, ಇಳಾವೃತದೊಳಗೆ-ಇಳಾವೃತದಲ್ಲಿ, ಬಿಟ್ಟುದುಪಡೆ-ಸೇನೆ ಬಿಡು ಬಿಟ್ಟಿತು ಅನಂತರ ಸೈನ್ಯವು,
ಸುರಾದ್ರಿಯನುಳುಹಿ-ಆ ದೇವ ಪರ್ವತವನ್ನು ತ್ಯಜಿಸಿ, ಬಲದಲಿ ನಡೆಯಲು-ಬಲಗಡೆಗೆ ನಡೆದು ಹೋಗಲು, ಅತಿ ದೂರದಲಿ-ಬಹಳ ದೂರದಲ್ಲಿ, ಮಂದರಾಚಲವ(ನ್ನು) ಕಂಡರು
ಮೂಲ ...{Loading}...
ಎಡಕಡೆಯಲೊಂಬತ್ತು ಸಾವಿರ
ನಡು ನೆಲನನಾಕರಿಸಿ ಮೂಡಣ
ಕಡೆಗೆ ತಿರುಗಿತು ಗಂಧಮಾದನ ಗಿರಿಯನೇರಿಳಿದು
ನಡೆದಿಳಾವೃತದೊಳಗೆ ಬಿಟ್ಟುದು
ಪಡೆ ಸುರಾದ್ರಿಯನುಳುಹಿ ಬಲದಲಿ
ನಡೆಯಲತಿ ದೂರದಲಿ ಕಂಡರು ಮಂದರಾಚಲವ ॥48॥
೦೪೯ ಇದುವೆ ಕಡೆಗೋಲಾಯ್ತು ...{Loading}...
ಇದುವೆ ಕಡೆಗೋಲಾಯ್ತು ಕಡೆವಂ
ದುದಧಿಯನು ತಾನಿದು ಮಹಾಗಿರಿ
ಯಿದರ ಬಿಂಕವ ನೋಡಬೇಕಂದರ್ಜುನನ ಸೇನೆ
ಒದರಿ ಹತ್ತಿತು ನಡುವಣರೆದು
ರ್ಗದಲಿ ಬೆಟ್ಟಂಗಳಲಿ ನೃಪರಿ
ದ್ದುದು ಮಹಾಹವವಾಯ್ತು ಪಾರ್ಥನ ಚೂಣಿಯವರೊಡನೆ ॥49॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ದೇವ ದಾನವರು ಸಮುದ್ರವನ್ನು ಕಡೆಯುವಾಗ ಈ ಪರ್ವತವೇ ಕಡೆಗೋಲಾಯಿತು. ಇದು ಮಹಾಗಿರಿ ! ಇದರ ಬಿಂಕವನ್ನು ನೋಡಬೇಕು ಎಂದು ಅರ್ಜುನನ ಸೈನ್ಯ ಹತ್ತತೊಡಗಿತು. ನಡುವಣ ಅರೆದುರ್ಗದಲ್ಲಿಯೂ ಉಳಿದ ಬೆಟ್ಟಗಳಲ್ಲಿಯೂ ರಾಜರುಗಳಿದ್ದರು. ಮುಂಭಾಗದ ಸೇನೆಗೂ ಎದುರು ಪಕ್ಷದ ಸೇನೆಗೂ ಮಹಾಯುದ್ಧವಾಯಿತು.
ಪದಾರ್ಥ (ಕ.ಗ.ಪ)
ಉದಧಿ-ಸಮುದ್ರ
ಉದಧಿಯ ಕಡೆವಂದು-ಕ್ಷೀರ ಸಾಗರವನ್ನು ಕಡೆಯುವ ಸಂದರ್ಭದಲ್ಲಿ, ಇದುವೆ-ಈ ಮಂದರ ಪರ್ವತವೇ ಸುರಸುರಾರಿಗೆ, ಕಡೆಗೋಲಾಯ್ತು-ಕಡೆದು ಅಮೃತವನ್ನು ಉತ್ಪಾದಿಸಲು ಕಡೆಗೋಲಾಯಿತು, ತಾನಿದು ಮಹಾಗಿರಿ-ಈ ಪರ್ವತವಂತೂ ಭಾರಿ ಪರ್ವತ,
ಅದರ ಬಿಂಕವ ನೋಡಬೇಕೆಂದು-ಅದರ ಹೆಮ್ಮೆ, ಎಷ್ಟೆಂದು ನೋಡಬೇಕೆಂದು, ಅರ್ಜುನನ ಸೇನೆ ಒದರಿ-ಅಬ್ಬರಿಸುತ್ತಾ, ಹತ್ತಿತು-ಪರ್ವತವನ್ನೇರಿತು, ನಡುವಣ ಅರೆ ದುರ್ಗದಲಿ ಬೆಟ್ಟಂಗಳಲಿ ನೃಪರಿದ್ದುದು-ರಾಜರುಗಳಿದ್ದರು, ಪಾರ್ಥನ ಚೂಣಿಯವರೊಡನೆ-ಮುಂದುಗಡೆಯಲ್ಲಿದ್ದ ಅರ್ಜುನನ ಸೇನೆಯೊಡನೆ, ಮಹಾಹವವಾಯ್ತು-ಮಹಾಯುದ್ಧವಾಯಿತು
ಮೂಲ ...{Loading}...
ಇದುವೆ ಕಡೆಗೋಲಾಯ್ತು ಕಡೆವಂ
ದುದಧಿಯನು ತಾನಿದು ಮಹಾಗಿರಿ
ಯಿದರ ಬಿಂಕವ ನೋಡಬೇಕಂದರ್ಜುನನ ಸೇನೆ
ಒದರಿ ಹತ್ತಿತು ನಡುವಣರೆದು
ರ್ಗದಲಿ ಬೆಟ್ಟಂಗಳಲಿ ನೃಪರಿ
ದ್ದುದು ಮಹಾಹವವಾಯ್ತು ಪಾರ್ಥನ ಚೂಣಿಯವರೊಡನೆ ॥49॥
೦೫೦ ಇಳುಹಿದರು ಚೂಣಿಯನು ...{Loading}...
ಇಳುಹಿದರು ಚೂಣಿಯನು ಮುಂದರೆ
ನೆಲೆಯ ಭಟರೌಕಿದರು ಭಾರಿಯ
ತಲೆವರಿಗೆಗಳಲೊತ್ತಿದರು ಹೊಗಿಸಿದರು ದುರ್ಗವನು
ಕಲುವಳೆಯ ಕೋಲಾಹಲಕ್ಕಿವ
ರಳುಕದಿರಿದರು ಸುರಗಿಯಲಿ ತೆನೆ
ವಳಿಯ ಹಿಡಿದರು ಹೊಯ್ದು ಕೇಶಾಕೇಶಿ ಯುದ್ಧದಲಿ ॥50॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಮುಂಭಾಗದ ಸೈನ್ಯವನ್ನು ಯುದ್ಧಕ್ಕಿಳಿಸಿದರು. ಮುಂದೆ ಅರೆನೆಲೆಯ ಯೋಧರು ನುಗ್ಗಿದರು. ಭಾರೀ ಗುರಾಣಿಗಳಿಂದ ಒತ್ತಿದರು.
ಕೋಟೆಯೊಳಕ್ಕೆ ಪ್ರವೇಶಿಸುವಂತೆ ಮಾಡಿದರು. ಕಲ್ಲಿನ ಮಳೆಯ ಕೋಲಾಹಲಕ್ಕೆ ಇವರು ಅಳುಕದೆ ಖಡ್ಗಗಳಿಂದ ಶತ್ರುಗಳನ್ನು ಇರಿದರು. ಕೇಶಾಕೇಶಿ ಯುದ್ಧದಲ್ಲಿ ಅವರನ್ನು ಹೊಯ್ದು ತೆನೆವಳಿಯನ್ನ ವಶಪಡಿಸಿಕೊಂಡರು.
ಪದಾರ್ಥ (ಕ.ಗ.ಪ)
ತೆನೆವಳಿ - ಕೋಟೆಯ ಮೇಲ್ಭಾಗ
ಇಳುಹಿದರು ಚೂಣಿಯನು-ಸೇನೆಯ ಮುಂಭಾಗವನ್ನು, ಯುದ್ಧಕ್ಕೆ ತೊಡಗಿಸಿದರು. ಮುಂದೆ ಅರೆನೆಲೆಯ ಸೈನ್ಯವು, ಔಕಿದರು-ಇವರನ್ನು ಆಕ್ರಮಿಸಿದರು, ಇವರು ಭಾರಿಯ ತಲೆವರಿಗೆಗಳಲಿ-ಭಾರೀ ಗುರಾಣಿಗಳಿಂದ ಒತ್ತಿ,
ದುರ್ಗವನು ಹೊಗಿಸಿದರು-ಅವರ ಕೋಟೆಯೊಳಕ್ಕೆ ಸೇನೆಯನ್ನು ನುಗ್ಗಿಸಿದರು, ಕಲುವಳೆಯ ಕೋಲಾಹಲಕ್ಕೆ ಅಳುಕದೆ-ಶತ್ರುಗಳಿಂದ ಬರುತ್ತಿದ್ದ, ಕಲ್ಲುಗಳ ಮಳೆಯ ಕೋಲಾಹಲಕ್ಕೆ ಹೆದರದೆ, ಸುರಗಿಯಲಿ-ಕತ್ತಿಗಳಿಂದ, ಇರಿದರರು-ಅವರನ್ನು ಕಡಿದು ಹಾಕಿದರು,
ಕೇಶಾಕೇಶಿ ಯುದ್ಧದಲ್ಲಿ ಹೊಯ್ದು-ಜುಟ್ಟಾಜುಟ್ಟಿ ಯುದ್ಧದಲ್ಲಿ ಶತ್ರುಗಳನ್ನು ಸೋಲಿಸಿ, ತೆನೆವಳಿಯ ಹಿಡಿದರು-ಕೇಂದ್ರಭಾಗವನ್ನು ವಶಪಡಿಸಿಕೊಂಡರು
ಮೂಲ ...{Loading}...
ಇಳುಹಿದರು ಚೂಣಿಯನು ಮುಂದರೆ
ನೆಲೆಯ ಭಟರೌಕಿದರು ಭಾರಿಯ
ತಲೆವರಿಗೆಗಳಲೊತ್ತಿದರು ಹೊಗಿಸಿದರು ದುರ್ಗವನು
ಕಲುವಳೆಯ ಕೋಲಾಹಲಕ್ಕಿವ
ರಳುಕದಿರಿದರು ಸುರಗಿಯಲಿ ತೆನೆ
ವಳಿಯ ಹಿಡಿದರು ಹೊಯ್ದು ಕೇಶಾಕೇಶಿ ಯುದ್ಧದಲಿ ॥50॥
೦೫೧ ಶಕರು ಖದ್ಯೋತ ...{Loading}...
ಶಕರು ಖದ್ಯೋತ ಪ್ರತಾಪರು
ವಿಕಟ ಜಂಘರು ದೀರ್ಘಮಯ ವೇ
ಣಿಕರು ಪಶುಪಾಲಕ ಪುಳಿಂದರು ಕಂಕಣಾಹ್ವಯರು
ಸಕಲ ದಸ್ಯುಗಳೈದೆ ಸೋತುದು
ವಿಕಳ ಬಲವೊಪ್ಪಿಸಿತು ಸರ್ವ
ಸ್ವಕವ ಸಂಧಾನದಲಿ ನೆಲೆಯಾಯ್ತಲ್ಲಿಯರ್ಜುನಗೆ ॥51॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಶಕರು ಖದ್ಯೋತ ಪ್ರತಾಪರು, ವಿಕಟ ಜಂಘರು, ದೀರ್ಘಮಯ ವೇಣಿಕರು, ಪಶುಪಾಲನೆ ಮಾಡುವ ಪುಳಿಂದರು,
ಕಂಕಣರು ಮುಂತಾದ ಎಲ್ಲಾ ರಾಕ್ಷಸರು ಯುದ್ಧದಲ್ಲಿ ಪೂರ್ಣವಾಗಿ ಸೋತರು. ಸೋತ ಸೈನ್ಯ ತನ್ನ ಸರ್ವಸ್ವವನ್ನೂ ಅರ್ಜುನನಿಗೆ ಒಪ್ಪಿಸಿ ಸಂಧಾನದಲ್ಲಿ ನೆಲೆ ಪಡೆಯಿತು.
ಪದಾರ್ಥ (ಕ.ಗ.ಪ)
ಖದ್ಯೋತ - ಮಿಂಚುಹುಳು
ಶಕರು ಖದ್ಯೋತರು, ಮಿಂಚುಹುಳದಂತೆ ಪ್ರತಾಪರು, ವಿಕಳ ಜಂಘರು-ವಕ್ರವಾದ ಕಾಲುಳ್ಳವರು, ದೀರ್ಘಮಯ ವೇಣಿಕರು-ದೀರ್ಘವಾದ ಜಡೆಗಳನ್ನು ಬಿಟ್ಟವರು, ಪಶುಪಾಲಕ ಪುಳಿಂದರು-ಪಶುಪಾಲನೆ ಮಾಡುವ ಬೇಡರು, ಕಂಕಣಾಹ್ವಯರು-ಕಂಕಣವೆಂಬ ಹೆಸರುಳ್ಳವರು ಹೀಗೆ, ಸಕಲ ದಸ್ಯುಗಳು-ಅಲ್ಲಿದ್ದ ಎಲ್ಲ ರಾಕ್ಷಸರು, ಐದೆ ಸೋತುದು-ಇವರಿಗೆ ಸಂಪೂರ್ಣವಾಗಿ ಸೋತರು, ವಿಕಳ ಬಲ-ಆ ಸೋತ ಸೈನ್ಯ, ಸಂಧಾನದಲಿ-ಸಂಧಿ ಮಾಡಿಕೊಂಡು ಅರ್ಜುನನಿಗೆ, ನೆಲೆಯಾಯ್ತು-ಅಲ್ಲಿ ನೆಲೆ ಉಂಟಾಯಿತು, ಸರ್ವಸ್ವಕವ-ತಮ್ಮ ಸರ್ವಸ್ವವನ್ನೂ, ಒಪ್ಪಿಸಿತು-ಅರ್ಪಿಸಿತು
ಪಾಠಾನ್ತರ (ಕ.ಗ.ಪ)
ವಿಕಳ ಚಿಂಘರು-ವಿಕಟ ಜಂಘರು
ಮೈ.ವಿ.ವಿ
ಮೂಲ ...{Loading}...
ಶಕರು ಖದ್ಯೋತ ಪ್ರತಾಪರು
ವಿಕಟ ಜಂಘರು ದೀರ್ಘಮಯ ವೇ
ಣಿಕರು ಪಶುಪಾಲಕ ಪುಳಿಂದರು ಕಂಕಣಾಹ್ವಯರು
ಸಕಲ ದಸ್ಯುಗಳೈದೆ ಸೋತುದು
ವಿಕಳ ಬಲವೊಪ್ಪಿಸಿತು ಸರ್ವ
ಸ್ವಕವ ಸಂಧಾನದಲಿ ನೆಲೆಯಾಯ್ತಲ್ಲಿಯರ್ಜುನಗೆ ॥51॥
೦೫೨ ಶೋಧಿಸಿದನಾ ಗಿರಿಯನಾಚೆಯ ...{Loading}...
ಶೋಧಿಸಿದನಾ ಗಿರಿಯನಾಚೆಯ
ಹಾದಿಯಲಿ ಹೊರವಂಟು ಬರೆ ಮರಿ
ಯಾದೆಗಿಕ್ಕಿದ ಬೆಟ್ಟವಿದ್ದುದು ಮಾಲ್ಯವಂತ ಗಿರಿ
ಭೇದಿಸಿದನದರೊಳಗು ಹೊರಗಿನ
ಲಾದ ವಸ್ತುವ ಕೊಂಡು ತಚ್ಛೈ
ಲೋದರವನೇರಿಳಿದು ಭದ್ರಾಶ್ವಕ್ಕೆನಡೆತಂದ ॥52॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅರ್ಜುನ ಆ ಗಿರಿಯನ್ನೆಲ್ಲ ಶೋಧಿಸಿದ. ಅನಂತರ ಆಚೆಯ ಹಾದಿಯಿಂದ ಹೊರಟುಬರಲು ಎಲ್ಲೆಯಾಗಿದ್ದಂತಹ ಮಾಲ್ಯವಂತ ಗಿರಿ ಕಂಡಿತು. ಅದರ ಒಳ ಹೊರಗುಗಳನ್ನೆಲ್ಲ ಭೇದಿಸಿ ಆದಷ್ಟು ವಸ್ತುಗಳನ್ನು ಪಡೆದು, ಆ ಗಿರಿಯ ನಡುಭಾಗದಲ್ಲಿ ಏರಿಳಿದು ಭದ್ರಾಶ್ವಕ್ಕೆ ಬಂದ.
ಪದಾರ್ಥ (ಕ.ಗ.ಪ)
ಅರ್ಜುನನು ಶೋಧಿಸಿದನಾ ಗಿರಿಯನು-ಆ ಗಿರಿಯನ್ನೆಲ್ಲ ಶೋಧನೆ ಮಾಡಿದ. ಅನಂತರ ಆಚೆಯ ಹಾದಿಯಲಿ ಹೊರವಂಟು ಬರೆ-ಆ ಕಡೆಯ ಮಾರ್ಗದಿಂದ ಹೊರ ಹೊರಟು ಬರಲು ಮರಿಯಾದೆಗಿಕ್ಕಿದ ಬೆಟ್ಟವಿದ್ದುದು ಮಾಲ್ಯವಂತ ಗಿರಿ-ಮರ್ಯಾದೆಗೋಸ್ಕರ ಅಲ್ಲಿ
ಇಟ್ಟಿದ್ದಾರೋ ಎಂಬಂತೆ ಅಲ್ಲಿ ಮಾಲ್ಯವಂತಗಿರಿ ಇದ್ದಿತು ಅದರ ಒಳಗು ಹೊರಗಿನಲಿ-ಆ ಗಿರಿಯ ಒಳಹೊರಗುಗಳನ್ನೆಲ್ಲ ಅರ್ಜುನ ಶೋಧಿಸಿದ ಆದ ವಸ್ತುವ ಕೊಂಡು-ಸಾಧ್ಯವಾದ ವಸ್ತುಗಳನ್ನೆಲ್ಲ ಅವರಿಂದ ಪಡೆದು ಭೇದಿಸಿದನ ತಚ್ಛೈಲೋದರವನ-ಆ ಬೆಟ್ಟದ ನಡುಭಾಗವನ್ನು ಏರಿ, ಅತ್ತ ಇಳಿದು ಭದ್ರಾಶ್ವಕ್ಕೆ-ಭದ್ರಾಶ್ವ ಎಂಬಲ್ಲಿಗೆ ನಡೆತಂದ-ಬಂದ
ಮೂಲ ...{Loading}...
ಶೋಧಿಸಿದನಾ ಗಿರಿಯನಾಚೆಯ
ಹಾದಿಯಲಿ ಹೊರವಂಟು ಬರೆ ಮರಿ
ಯಾದೆಗಿಕ್ಕಿದ ಬೆಟ್ಟವಿದ್ದುದು ಮಾಲ್ಯವಂತ ಗಿರಿ
ಭೇದಿಸಿದನದರೊಳಗು ಹೊರಗಿನ
ಲಾದ ವಸ್ತುವ ಕೊಂಡು ತಚ್ಛೈ
ಲೋದರವನೇರಿಳಿದು ಭದ್ರಾಶ್ವಕ್ಕೆನಡೆತಂದ ॥52॥
೦೫೩ ಅದು ಮಹಾ ...{Loading}...
ಅದು ಮಹಾ ರಮಣೀಯತರವಂ
ತದರೊಳಿದ್ದುದು ಶುದ್ಧ ಭೋಗಾ
ಸ್ಪದರು ಯಕ್ಷೋರಕ್ಷಗಂಧರ್ವಾಪ್ಸರೋ ನಿಕರ
ಕುದುರೆ ರಥ ಗಜ ಪತ್ತಿ ನಿರ್ಘೋ
ಷದಲಿ ಬೆಬ್ಬಳೆಯಾಯ್ತು ಬೇಳಂ
ಬದ ವಿಘಾತಿಗೆ ಸಿಲುಕಿ ತೆತ್ತುದು ಸಕಲ ವಸ್ತುಗಳ ॥53॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅದು ಮಹಾರಮಣೀಯವಾದ ಪ್ರದೇಶ. ಅಲ್ಲಿದ್ದುದು ಭೋಗಾಸ್ಪದರಾದ ಯಕ್ಷರು ರಕ್ಷರು, ಗಂಧರ್ವರು, ಅಪ್ಸರರು. ಅರ್ಜುನನ ಕುದುರೆ, ರಥ, ಗಜ, ಪದಾತಿ ಸೈನ್ಯಗಳ ಆರ್ಭಟಕ್ಕೇ ಹೆದರಿಬಿಟ್ಟರು. ಚಿಂತೆಯ ಅಘಾತದಿಂದ ಸಮಸ್ತ ವಸ್ತುಗಳನ್ನೂ ಕೊಟ್ಟುಬಿಟ್ಟರು.
ಪದಾರ್ಥ (ಕ.ಗ.ಪ)
ಬೇಳಂಬ-ಚಿಂತೆ
ಅದು ಮಹಾ ರಮಣೀಯತರವು-ಆ ಪ್ರದೇಶ ಅತ್ಯಂತಸುಂದರವಾದದ್ದು, ಅಂತದರೊಳಿದ್ದುದು-ಆ ಪ್ರದೇಶದಲ್ಲಿ ವಾಸವಿದ್ದುದು,
ಶುದ್ಧ ಭೋಗಾಸ್ಪದರು-ಬರೀ ಭೊಗಾಸತ್ತಿಯಿಂದ ಕೂಡಿದ್ದಂತಹ, ಯಕ್ಷೋರಕ್ಷಗಂಧರ್ವಾಪ್ಸರೋ ನಿಕರ-ಯಕ್ಷರು, ರಕ್ಷರು, ಗಂಧರ್ವರು, ಅಪ್ಸರರು ಇವರ ಸಮೂಹ ಅರ್ಜುನನ, ಕುದುರೆ ರಥ ಗಜ ಮತ್ತು ಪತ್ತಿ-ಪದಾತಿ ಸೈನ್ಯಗಳ, ನಿರ್ಘೋಷದಲಿ-ಭಯಂಕರ ಶಬ್ದಕ್ಕೇ, ಬೆಬ್ಬಳೆಯಾಯ್ತು-ಅವರುಗಳು ಹೆದರಿ ಬಿಟ್ಟರು, ಬೇಳಂಬದ ವಿಘಾತಿಗೆ ಸಿಲುಕಿ-ಚಿಂತೆಯ ಆಘಾತಕ್ಕೆ ಸಿಕ್ಕಿ ತೆತ್ತರು
ಸಕಲ ವಸ್ತುಗಳ-ಸಮಸ್ತ ವಸ್ತುಗಳನ್ನು ಕೊಟ್ಟುಬಿಟ್ಟರು
ಮೂಲ ...{Loading}...
ಅದು ಮಹಾ ರಮಣೀಯತರವಂ
ತದರೊಳಿದ್ದುದು ಶುದ್ಧ ಭೋಗಾ
ಸ್ಪದರು ಯಕ್ಷೋರಕ್ಷಗಂಧರ್ವಾಪ್ಸರೋ ನಿಕರ
ಕುದುರೆ ರಥ ಗಜ ಪತ್ತಿ ನಿರ್ಘೋ
ಷದಲಿ ಬೆಬ್ಬಳೆಯಾಯ್ತು ಬೇಳಂ
ಬದ ವಿಘಾತಿಗೆ ಸಿಲುಕಿ ತೆತ್ತುದು ಸಕಲ ವಸ್ತುಗಳ ॥53॥
೦೫೪ ದೊರಕಿತಲ್ಲಿಯಪೂರ್ವ ವಸ್ತೂ ...{Loading}...
ದೊರಕಿತಲ್ಲಿಯಪೂರ್ವ ವಸ್ತೂ
ತ್ಕರ ಸಮುದ್ರದ್ವೀಪ ಪರಿಯಂ
ತರ ನಡೆದನೊಂಬತ್ತು ಸಾವಿರ ಯೋಜನಾಂತರವ
ತಿರುಗಿದನು ಭದ್ರಾಶ್ವಕವನಾ
ಕರಿಸಿ ಬಡಗಲು ನಡೆದರಲ್ಲಿಯ
ಗಿರಿಯ ಕಂಡರು ಹತ್ತಿದರು ಹರುಷದಲಿ ಬೊಬ್ಬಿಡುತ ॥54॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಭದ್ರಾಶ್ವವರ್ಷದ ಒಂಬತ್ತು ಸಾವಿರ ಯೋಜನ ವಿಸ್ತಾರವಾದ ಪ್ರದೇಶವನ್ನು ಸಮುದ್ರ ದ್ವೀಪಗಳವರೆಗೆಸುತ್ತಿ ಅಪೂರ್ವ
ವಸ್ತು ರಾಶಿಯನ್ನು ಪಡೆದ. ಭದ್ರಾಶ್ವವನ್ನು ವಶಪಡಿಸಿಕೊಂಡ ಮೇಲೆ ಉತ್ತರಕ್ಕೆ ನಡೆದು ಅಲ್ಲಿಯ ಬೆಟ್ಟವನ್ನು ಕಂಡು ಸಂತೋಷದಿಂದ
ಬೊಬ್ಬೆಯಿಡುತ್ತಾ ಅದನ್ನು ಹತ್ತಿದರು.
ಪದಾರ್ಥ (ಕ.ಗ.ಪ)
ಅಪೂರ್ವ ವಸ್ತೂತ್ಕರ ದೊರಕಿತಲ್ಲಿ-ಅಲ್ಲಿ ಅಪೂರ್ವವಾದ ವಸ್ತುಗಳ ರಾಶಿಯೇ ಸಿಕ್ಕಿತು, ಸಮುದ್ರದ್ವೀಪ ಪರಿಯಂತರ-ಸಮುದ್ರದಲ್ಲಿರುವ ದ್ವೀಪಗಳವರೆಗೆ, ಒಂಬತ್ತು ಸಾವಿರ ಯೋಜನಾಂತರವ ನಡೆದನು-ಒಂಬತ್ತು ಸಾವಿರ ಯೋಜನಗಳಷ್ಟು ದೂರ ಸಂಚರಿಸಿದನು, ತಿರುಗಿದನು ಭದ್ರಾಶ್ವಕವನು-ಭದ್ರಾಶ್ವದೊಳಗೆಲ್ಲ ಸುತ್ತಿದ, ಆ ಕರಿಸಿ-ಅದನ್ನು ವಶಪಡಿಸಿಕೊಂಡು, ಬಡಗಲು ನಡೆದರು-ಉತ್ತರಕ್ಕೆ ನಡೆದು ಹೋದರು, ಅಲ್ಲಿಯ ಗಿರಿಯ ಕಂಡರು-ಅಲ್ಲಿದ್ದ ಬೆಟ್ಟವನ್ನು ನೋಡಿದರು, ಹತ್ತಿದರು ಹರುಷದಲಿ ಬೊಬ್ಬಿಡು-ಬೊಬ್ಬೆ ಹಾಕುತ್ತಾ ಖುಶಿಯಿಂದ ಅದನ್ನು ಹತ್ತಿದರು,
ಮೂಲ ...{Loading}...
ದೊರಕಿತಲ್ಲಿಯಪೂರ್ವ ವಸ್ತೂ
ತ್ಕರ ಸಮುದ್ರದ್ವೀಪ ಪರಿಯಂ
ತರ ನಡೆದನೊಂಬತ್ತು ಸಾವಿರ ಯೋಜನಾಂತರವ
ತಿರುಗಿದನು ಭದ್ರಾಶ್ವಕವನಾ
ಕರಿಸಿ ಬಡಗಲು ನಡೆದರಲ್ಲಿಯ
ಗಿರಿಯ ಕಂಡರು ಹತ್ತಿದರು ಹರುಷದಲಿ ಬೊಬ್ಬಿಡುತ ॥54॥
೦೫೫ ನೀಲ ಗಿರಿಯಗ್ರದಲಿ ...{Loading}...
ನೀಲ ಗಿರಿಯಗ್ರದಲಿ ಬಿಟ್ಟುದು
ಪಾಳೆಯವು ಬೊಬ್ಬೆಯಲಿ ದಿಕ್ಕಿನ
ಮೂಲೆ ಬಿರಿದುದು ಜರಿದವದ್ರಿಗಳೇನನುಸುರುವೆನು
ಮೇಲು ದುರ್ಗದ ಸಂಧಿಗೊಂದಿಯೊ
ಳಾಳು ಹರಿದುದು ಸೂರೆಗೊಂಡು ವಿ
ಶಾಲ ವಸ್ತುವ ತಂದರಲ್ಲಿದ್ದರಸುಗಳ ಗೆಲಿದು ॥55॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ನೀಲಗಿರಿಯ ತುದಿಯಲ್ಲಿ ಸೇನೆ ಬೀಡುಬಿಟ್ಟಿತು. ಅದರ ಅಬ್ಬರಕ್ಕೆ ದಿಕ್ಕಿನ ಮೂಲೆಗಳೇ ಬಿರಿದುವಂತೆ, ಬೆಟ್ಟಗಳೇ ಜಾರಿ ಕುಸಿದುವಂತೆ ! ಮೇಲಿದ್ದ ಕೋಟೆಯ ಸಂದಿಗೊಂದಿಗಳಿಗೆಲ್ಲ ನುಗ್ಗಿ ಸೈನಿಕರು ಅರಸುಗಳನ್ನು ಗೆದ್ದು ಯಥೇಚ್ಛವಾಗಿ ವಸ್ತುಗಳನ್ನು ತಂದರು.
ಪದಾರ್ಥ (ಕ.ಗ.ಪ)
ನೀಲ ಗಿರಿಯಗ್ರದಲಿ ಬಿಟ್ಟುದು ಪಾಳೆಯವು-ನೀಲಗಿರಿಯ, ಮೇಲುಭಾಗದಲ್ಲಿ ಸೇನೆ ಬೀಡುಬಿಟ್ಟಿತು, ಆ ಸೈನಿಕರ ಬೊಬ್ಬೆಯಲಿ ಕೊಲಾಹಲಕ್ಕೆ, ದಿಕ್ಕಿನ ಮೂಲೆ ಬಿರಿದುದು-ದಿಕ್ಕಿನ ಮೂಲೆಗಳು ಬಿರಿದುವಂತೆ, ಜರಿದವದ್ರಿಗಳು-ಬೆಟ್ಟಗಳೇ ಕೂಸಿದುವಂತೆ
ಏನನುಸುರುವೆನು-ಏನೆಂದು ಹೇಳಲಿ, ಮೇಲು ದುರ್ಗದ-ಬೆಟದ ಮೇಲೆ ದುರ್ಗಮವಾದ ಪ್ರದೇಶಗಳಲ್ಲಿ, ಸಂಧಿಗೊಂದಿಯೊಳಾಳು ಹರಿದುದು-ಸಂದಿಗೊಂದಿಗಳಲೆಲ್ಲ ಸೈನಿಕರು ನುಗ್ಗಿದರು ಅಲ್ಲಿದ್ದ, ಅರಸುಗಳ ಗೆಲಿದು-ರಾಜರುಗಳನ್ನೆಲ್ಲ ಗೆದ್ದು ಸೂರೆಗೊಂಡು
ಅವರನ್ನು ಸೂರೆಗೊಂಡು-ಅವರನ್ನು ಸೂರೆಮಾಡಿ, ವಿಶಾಲ ವಸ್ತುವ ತಂದರು-ಅವರಲ್ಲಿದ್ದ ವಿಶಾಲ ವಸ್ತುಗಳನ್ನೆಲ್ಲ ಹೊತ್ತತಂದರು
ಮೂಲ ...{Loading}...
ನೀಲ ಗಿರಿಯಗ್ರದಲಿ ಬಿಟ್ಟುದು
ಪಾಳೆಯವು ಬೊಬ್ಬೆಯಲಿ ದಿಕ್ಕಿನ
ಮೂಲೆ ಬಿರಿದುದು ಜರಿದವದ್ರಿಗಳೇನನುಸುರುವೆನು
ಮೇಲು ದುರ್ಗದ ಸಂಧಿಗೊಂದಿಯೊ
ಳಾಳು ಹರಿದುದು ಸೂರೆಗೊಂಡು ವಿ
ಶಾಲ ವಸ್ತುವ ತಂದರಲ್ಲಿದ್ದರಸುಗಳ ಗೆಲಿದು ॥55॥
೦೫೬ ಎರಡು ಸಾವಿರದುದ್ದವದು ...{Loading}...
ಎರಡು ಸಾವಿರದುದ್ದವದು ಮ
ತ್ತೆರಡು ಸಾವಿರದಗಲವದನಾ
ಕರಿಸಿ ರಮ್ಯಕ ಭೂಮಿಗಿಳಿದರು ಹೊಕ್ಕರಾ ನೆಲನ
ಅರಸ ಕೇಳಲ್ಲಲ್ಲಿ ಸುಮನೋ
ಹರದ ವಸ್ತುವ ಕೊಂಡು ನವ ಸಾ
ವಿರವನಗಲಕೆ ಸುತ್ತಿ ಬಂದರು ಗೆಲಿದು ಗರ್ವಿತರ ॥56॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಎರಡು ಸಾವಿರ ಪ್ರಮಾಣದ ಉದ್ದ ಮತ್ತು ಎರಡು ಸಾವಿರ ಪ್ರಮಾಣದ ಅಗಲ ಇದ್ದ ಆ ಪ್ರದೇಶವನ್ನು ವಶಪಡಿಸಿಕೊಂಡು ರಮ್ಯಕ ಭೂಮಿಗಿಳಿದು ಪುರವನ್ನು ಪ್ರವೇಶಿಸಿದರು. ಅಲ್ಲಲ್ಲಿ ಸುಮನೋಹರ ವಸ್ತುಗಳನ್ನು ಸಂಗ್ರಹಿಸಿ, ನವಸಹಸ್ರವಿಸ್ತಾರವಿದ್ದ ಪ್ರದೇಶವನ್ನೆಲ್ಲ ಸುತ್ತಿ ಗರ್ವಿಷ್ಠರಾಗಿದ್ದವರನ್ನೆಲ್ಲ ಗೆದ್ದು ಬಂದರು.
ಪದಾರ್ಥ (ಕ.ಗ.ಪ)
ಆ ಪ್ರದೇಶ ಎರಡು ಸಾವಿರದುದ್ದ ಮತ್ತೆರಡು ಸಾವಿರದಗಲ-ಎರಡು ಸಾವಿರ, ಯೋಜನ ಉದ್ದ ಹಾಗೂ ಅಷ್ಟೇ ಅಗಲವಿದ್ದುದು ಅದನ್ನು ಆಕರಿಸಿ-ಅಧೀನಪಡಿಸಿಕೊಂಡು, ರಮ್ಯಕ ಭೂಮಿಗಿಳಿದರು-ರಮ್ಯಕ ಎಂಬ ದೇಶಕ್ಕೆ ಇಳಿದು ಬಂದರು, ಅರಸ ಕೇಳು-ಜನಮೇಜಯ ರಾಜನೇ ಕೇಳು, ಅಲ್ಲಲ್ಲಿ ಸುಮನೋಹರದ ವಸ್ತುವ ಕೊಂಡು-ತುಂಬ ಸುಂದರವಾದ, ವಸ್ತುಗಳನ್ನೆಲ್ಲ ಸಂಗ್ರಹಿಸಿಕೊಂಡು
ನವ ಸಾವಿರವನಗಲಕೆ ಸುತ್ತಿ-ಒಂಬತ್ತು ಸಾವಿರ ಯೋಜನ ವಿಸ್ತಾರವನ್ನು ಸುತ್ತಿ, ಗರ್ವಿತರ ಗೆಲಿದು-ಕೊಬ್ಬು ಮಾಡಿದವರನ್ನು ಗೆದ್ದು ಬಂದರು
ಮೂಲ ...{Loading}...
ಎರಡು ಸಾವಿರದುದ್ದವದು ಮ
ತ್ತೆರಡು ಸಾವಿರದಗಲವದನಾ
ಕರಿಸಿ ರಮ್ಯಕ ಭೂಮಿಗಿಳಿದರು ಹೊಕ್ಕರಾ ನೆಲನ
ಅರಸ ಕೇಳಲ್ಲಲ್ಲಿ ಸುಮನೋ
ಹರದ ವಸ್ತುವ ಕೊಂಡು ನವ ಸಾ
ವಿರವನಗಲಕೆ ಸುತ್ತಿ ಬಂದರು ಗೆಲಿದು ಗರ್ವಿತರ ॥56॥
೦೫೭ ಅರಸ ಕೇಳಲ್ಲಿನ್ದ ...{Loading}...
ಅರಸ ಕೇಳಲ್ಲಿಂದ ಬಡಗಲು
ಹರಿದು ಬಿಟ್ಟರು ಹತ್ತಿದರು ಬೇ
ಸರದೆ ಕಲುದರಿಗಳಲಿ ಬಹಳ ಶ್ವೇತಪರ್ವತವ
ಗಿರಿಯ ತುದಿಗಳ ತೋಟದಲಿ ಗ
ಹ್ವರದ ಕೊಳ್ಳದ ಕೋಹಿನಲಿ ಹೊ
ಕ್ಕಿರಿದು ಶೋಧಿಸಿ ಕೊಂಡರಲ್ಲಿಯ ಸಾರವಸ್ತುಗಳ ॥57॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅಲ್ಲಿಂದ ಉತ್ತರಕ್ಕೆ ಹೊರಟು. ಬೇಸರಗೊಳ್ಳದೆ ಕಲ್ಲುಜರಿಗಳಿಂದ ಕೂಡಿದ ಶ್ವೇತಪರ್ವತವನ್ನು ಹತ್ತಿದರು. ಗಿರಿಯ ತುದಿಯಲ್ಲಿದ್ದ ತೋಟದಲ್ಲಿ ಗುಹೆಗಳು ಹಳ್ಳ ಕೊಳ್ಳಗಳನ್ನೆಲ್ಲ ಹೊಕ್ಕು ಶೋಧಿಸಿ ಸಾರವಸ್ತುಗಳನ್ನು ಸಂಗ್ರಹಿಸಿ ತಂದರು.
ಪದಾರ್ಥ (ಕ.ಗ.ಪ)
ಕೋಹು - ಸಂದಿಗೊಂದಿ
ಅರಸ ಕೇಳ್-ಜನಮೇಜಯ ರಾಜನೇ ಕೇಳು, ಅಲ್ಲಿಂದ ಬಡಗಲು ಹರಿದು-ಅಲ್ಲಿಂದ ಉತ್ತರಕ್ಕೆ ಹೊರಟು, ಬಿಟ್ಟರು-ಬೀಡುಬಿಟ್ಟರು, ಬೇಸರದೆ-ಬೇಸರಗೊಳ್ಳದೆ ಮತ್ತೆ, ಕಲುದರಿಗಳಲಿ-ಕಲ್ಲುಗಳಿಂದಲೂ, ಹಳ್ಳಗಳಿಂದಲೂ ಕೂಡಿದ್ದ, ಬಹಳ ಶ್ವೇತಪರ್ವತವ-ಶ್ವೇತಪರ್ವತದ ಬೆಟ್ಟಗಳನ್ನು ಏರಿದರು, ಗಿರಿಯ ತುದಿಗಳ ತೋಟದಲಿ-ಬೆಟ್ಟದ ಮೇಲ್ಭಾಗದಲ್ಲಿದ್ದ ತೋಟಗಳಲ್ಲಿ ಹಾಗೂ ಗಹ್ವರದ ಕೊಳ್ಳದ ಕೋಹಿನಲಿ-ಗುಹೆಗಳು ಹಳ್ಳಕೊಳ್ಳಗಳು ಮತ್ತು ಸಂದುಗೊಂದಲಘಳನ್ನು ಹೊಕ್ಕು, ಇರಿದು-ಎದುರಿಸಿದವರನ್ನು ಕೊಂದು, ಶೋಧಿಸಿ-ಹುಡುಕಿ, ಕೊಂಡರಲ್ಲಿಯ ಸಾರವಸ್ತುಗಳ-ಅಲ್ಲಿಯ ಶ್ರೇಷ್ಠವಾದ ವಸ್ತುಗಳನ್ನೆಲ್ಲ ತೆಗೆದುಕೊಂಡರು
ಮೂಲ ...{Loading}...
ಅರಸ ಕೇಳಲ್ಲಿಂದ ಬಡಗಲು
ಹರಿದು ಬಿಟ್ಟರು ಹತ್ತಿದರು ಬೇ
ಸರದೆ ಕಲುದರಿಗಳಲಿ ಬಹಳ ಶ್ವೇತಪರ್ವತವ
ಗಿರಿಯ ತುದಿಗಳ ತೋಟದಲಿ ಗ
ಹ್ವರದ ಕೊಳ್ಳದ ಕೋಹಿನಲಿ ಹೊ
ಕ್ಕಿರಿದು ಶೋಧಿಸಿ ಕೊಂಡರಲ್ಲಿಯ ಸಾರವಸ್ತುಗಳ ॥57॥
೦೫೮ ಇಳಿದನಾ ಗಿರಿಯನು ...{Loading}...
ಇಳಿದನಾ ಗಿರಿಯನು ಹಿರಣ್ಮಯ
ದೊಳಗೆ ಬಿಟ್ಟನು ಪಾಳೆಯವ ತ
ದ್ವಲಯ ಮಿಗಿಲೊಂಬತ್ತು ಸಾವಿರ ಯೋಜನಾಂತರವ
ಬಳಸಿ ಬಂದನು ವಿಮಲ ಸೌಧಾ
ವಳಿಯ ನೆಲೆಯುಪ್ಪರಿಗೆಗಳ ವರ
ಲಲನೆಯರು ಕಂಡೀತನನು ಹೊಗಳಿದರು ತಮ ತಮಗೆ ॥58॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಆ ಬೆಟ್ಟವನ್ನಿಳಿದು ಹಿರಣ್ಮಯದಲ್ಲಿ ಬೀಡುಬಿಟ್ಟ. ಆ ವಲಯ ಒಂಬತ್ತು ಸಾವಿರ ಯೋಜನಾಂತರವನ್ನೂ ಮೀರಿತ್ತು. ಅಲ್ಲೆಲ್ಲ
ಸುತ್ತಿ ಬರುವಾಗ ಅಲ್ಲಿನ ಸೌಧಾವಳಿಯ ನೆಲೆಯುಪ್ಪರಿಗೆಗಳಲ್ಲಿದ್ದ ಲಲನೆಯರು ಅರ್ಜುನನನ್ನು ನೋಡಿ ತಮ್ಮ ತಮ್ಮೊಳಗೆ ಅವನನ್ನು ಪ್ರಶಂಸೆ ಮಾಡಿದರು.
ಪದಾರ್ಥ (ಕ.ಗ.ಪ)
ಇಳಿದನಾ ಗಿರಿಯನು-ಅರ್ಜುನ ಆ ಪರ್ವತವನ್ನು ಇಳಿದ ಹಿರಣ್ಮಯ ದೊಳಗೆ ಬಿಟ್ಟನು ಪಾಳೆಯವ-ಹಿರಣ್ಮಯದಲ್ಲಿ (?)ಸೇನೆಯ ಬೀಡು ಬಿಟ್ಟ ತದ್ವಲಯ-ಅದರ ವಿಸ್ತಾರ, ಮಿಗಿಲೊಂಬತ್ತು ಸಾವಿರ ಯೋಜನಾಂತರ-ಒಂಬತ್ತು ಸಾವಿರ ಯೋಜನೆಗಳಿಗೂ ಮೀರಿತ್ತು,
ಅದನ್ನು ಬಳಸಿ ಬಂದನು-ಸುತ್ತಿಕೊಂಡು ಬಂದ ವಿಮಲ ಸೌಧಾವಳಿಯ ನೆಲೆಯುಪ್ಪರಿಗೆಗಳ-ಅಲ್ಲಿದ್ದ ಸೌಧಗಳ ಉಪ್ಪರಿಗೆಗಳಲ್ಲಿ ನೆಲೆಗೊಂಡಿದ್ದ, ವರ ಲಲನೆಯರು-ಸುಂದರ ಸ್ತ್ರೀಯರು, ಈತನನು ಕಂಡು-ಈ ಅರ್ಜುನನನ್ನು ನೋಡಿ, ತಮ ತಮಗೆ-ತಮ್ಮ ತಮ್ಮಲ್ಲೇ, ಹೊಗಳಿದರು-ಮೆಚ್ಚಿ ಶ್ಲಾಘಿಸಿದರು
ಮೂಲ ...{Loading}...
ಇಳಿದನಾ ಗಿರಿಯನು ಹಿರಣ್ಮಯ
ದೊಳಗೆ ಬಿಟ್ಟನು ಪಾಳೆಯವ ತ
ದ್ವಲಯ ಮಿಗಿಲೊಂಬತ್ತು ಸಾವಿರ ಯೋಜನಾಂತರವ
ಬಳಸಿ ಬಂದನು ವಿಮಲ ಸೌಧಾ
ವಳಿಯ ನೆಲೆಯುಪ್ಪರಿಗೆಗಳ ವರ
ಲಲನೆಯರು ಕಂಡೀತನನು ಹೊಗಳಿದರು ತಮ ತಮಗೆ ॥58॥
೦೫೯ ಈತ ಭಾರತ ...{Loading}...
ಈತ ಭಾರತ ವರುಷ ಪತಿಯನು
ಜಾತ ಗಡ ತತ್ಕರ್ಮ ಭೂಮಿಯ
ಲೀತನಧಿಪತಿ ಗೆಲಿದನಿತ್ತಲು ದೇವಭೂಮಿಪರ
ಈತ ಗೌರೀಸುತನವೋಲ್ ಪುರು
ಹೂತ ತನಯತ ವೋಲು ಭುವನ
ಖ್ಯಾತನೆಂದಾ ಸ್ತ್ರೀಕಟಕ ಕೊಂಡಾಡಿತರ್ಜುನನ ॥59॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಆ ಭಾರತವರ್ಷದ ಒಡೆಯನ ತಮ್ಮನಂತೆ. ಆ ಕರ್ಮಭೂಮಿಯಲ್ಲಿ ಈತನೇ ಅಧಿಪತಿ. ಇಲ್ಲಿ ಬಂದು ದೇವಭೂಮಿಯ
ರಾಜರುಗಳನ್ನೆಲ್ಲ ಗೆದ್ದ. ಗೌರಿಯ ಮಗನಾದ ಷಣ್ಮುಖನಂತೆ ಇಂದ್ರನ ಮಗನಾದ ಜಯಂತನಂತೆ ಲೋಕವಿಖ್ಯಾತನಾದವನು
ಎಂದು ಸ್ತ್ರೀ ಸಮೂಹ ಅವನನ್ನು ಕೊಂಡಾಡಿತು.
ಪದಾರ್ಥ (ಕ.ಗ.ಪ)
ಈತ ಭಾರತ ವರುಷ ಪತಿಯ ಅನುಜಾತ-ಇವನು ಭರತವರ್ಷದ, ರಾಜನಾದ ಯುಧಿಷ್ಠಿರನ ತಮ್ಮನಲ್ಲವೆ ? ತತ್ಕರ್ಮ ಭೂಮಿಯಲಿ-ಆ ಕರ್ಮಭೂಮಿಯಲ್ಲಿ, ಈತನಧಿಪತಿ-ಇವನೇ ಒಡೆಯ, ಗೆಲಿದನಿತ್ತಲು ದೇವಭೂಮಿಪರ-ಅವನು ಈ ಕಡೆ ದೇವಭೂಮಿಯ
ರಾಜರುಗಳನ್ನು ಗೆದ್ದುಬಿಟ್ಟಿದ್ದಾನೆ, ಈಗ ಗೌರೀಸುತನವೋಲ್-ಗೌರಿಯ ಮಗನಾದ ಷಣ್ಮುಖನಂತೆ, ಪುರುಹೂತ ತನಯತ ವೋಲು-ಇಂದ್ರನ ಮಗನಾದ ಜಯನಂತೆ, ಭುವನ ಖ್ಯಾತನು-ಲೋಕ ವಿಖ್ಯಾತನಾದವನು ಎಂದು ಸ್ತ್ರೀಕಟಕ-ಸ್ತ್ರೀಯ ಸಮೂಹ
ಕೊಂಡಾಡಿತರ್ಜುನನ-ಅರ್ಜುನನ್ನು ಹೊಗಳಿತು
ಮೂಲ ...{Loading}...
ಈತ ಭಾರತ ವರುಷ ಪತಿಯನು
ಜಾತ ಗಡ ತತ್ಕರ್ಮ ಭೂಮಿಯ
ಲೀತನಧಿಪತಿ ಗೆಲಿದನಿತ್ತಲು ದೇವಭೂಮಿಪರ
ಈತ ಗೌರೀಸುತನವೋಲ್ ಪುರು
ಹೂತ ತನಯತ ವೋಲು ಭುವನ
ಖ್ಯಾತನೆಂದಾ ಸ್ತ್ರೀಕಟಕ ಕೊಂಡಾಡಿತರ್ಜುನನ ॥59॥
೦೬೦ ತನ ತನಗೆ ...{Loading}...
ತನ ತನಗೆ ತರುಣಿಯರು ಹೂವಿನ
ತನಿವಳೆಯ ಕರೆದರು ಕನತ್ಕಾಂ
ಚನ ವಿಭೂಷಣ ರತ್ನಚಯ ಪೂರಿತದ ಪೆಟ್ಟಿಗೆಯ
ವನಿತೆಯರನಾ ದೇಶದಲಿ ಮೀ
ಟೆನಿಪರನು ಮೃಗಪಕ್ಷಿ ಕೃಷ್ಣಾ
ಜಿನವನಂತವನಿತ್ತು ಸತ್ಕರಿಸಿದರು ಫಲುಗುಣನ ॥60॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಆ ಸ್ತ್ರೀಯರು ತಾವು ತಾವಾಗಿಯೇ ಅರ್ಜುನನ ಮೇಲೆ ಹೂಮಳೆಯನ್ನು ಕರೆದರು. ಹೊಳೆಯುವ ಚಿನ್ನದ ಹಾಗೂ ರತ್ನಖಚಿತವಾದ ಆಭರಣಗಳಿಂದ ತುಂಬಿದ ಪೆಟ್ಟಿಗೆಗಳನ್ನು ಕೊಟ್ಟರು. ತಮ್ಮ ದೇಶದಲ್ಲೇ ಅತ್ಯಂತ ರೂಪವತಿಯರೂ ಶ್ರೇಷ್ಠರೂ ಎನಿಸಿದ ಸ್ತ್ರೀಯರನ್ನೂ ಮೃಗಪಕ್ಷಿಗಳನ್ನೂ ಕೃಷ್ಣಾಜಿನವನ್ನು ಕೊಟ್ಟರು.
ಪದಾರ್ಥ (ಕ.ಗ.ಪ)
ತರುಣಿಯರು-ಆ ಸ್ತ್ರೀಯರು, ತನ ತನಗೆ-ತಾವು ತವಾಗಿಯೇ, ಹೂವಿನ ತನಿವಳೆಯ ಕರೆದರು-ಅರ್ಜುನ ಮೇಲೆ ಒಳ್ಳೆಯ,
ಪುಷ್ಪವೃಷ್ಟಿಯನ್ನು ಸುರಿಸಿದರು ಅಲ್ಲದೆ, ಕನತ್ಕಾಂಚನ-ಹೊಳೆವ ಚಿನ್ನದ, ವಿಭೂಷಣ-ಆಭರಣ, ರತ್ನಚಯ ವಿಭೂಷಣ-ರತ್ನಖಚಿತವಾದ ಆಭರಣಗಳಿಂದ, ಪೂರಿತ-ತುಂಬಿದಂತಹ, ಪೆಟ್ಟಿಗೆಯ-ಪೆಟ್ಟಿಗೆಯನ್ನು, ವನಿತೆಯರನು ಆ ದೇಶದಲಿ ಮೀಟೆನಿಪರನು-ತಮ್ಮ ದೇಶಕ್ಕೆ ವಿಶಿಷ್ಟವಾಗಿ, ಸೌಂದರ್ಯವತಿಯರಾದಂತಹ ಸ್ತ್ರೀಯರನ್ನೂ ಮೇಗ, ಮೃಗಪಕ್ಷಿ ಕೃಷ್ಣಾಜಿನವನಂತವನು-ಲೆಕ್ಕವಿಲ್ಲದಷ್ಟು ನಾನಾ, ಮೃಗಗಳನ್ನು ಪಕ್ಷಿಗಳನ್ನು ಕೃಷ್ಣಾಜಿನಗಳನ್ನು, ಇತ್ತು-ಕೊಟ್ಟು, ಫಲುಗುಣನ-ಅರ್ಜುನನನ್ನು, ಸತ್ಕರಿಸಿದರು-ಗೌರವಿಸಿದರು
ಮೂಲ ...{Loading}...
ತನ ತನಗೆ ತರುಣಿಯರು ಹೂವಿನ
ತನಿವಳೆಯ ಕರೆದರು ಕನತ್ಕಾಂ
ಚನ ವಿಭೂಷಣ ರತ್ನಚಯ ಪೂರಿತದ ಪೆಟ್ಟಿಗೆಯ
ವನಿತೆಯರನಾ ದೇಶದಲಿ ಮೀ
ಟೆನಿಪರನು ಮೃಗಪಕ್ಷಿ ಕೃಷ್ಣಾ
ಜಿನವನಂತವನಿತ್ತು ಸತ್ಕರಿಸಿದರು ಫಲುಗುಣನ ॥60॥
೦೬೧ ಧಾರುಣೀಪತಿ ಕೇಳು ...{Loading}...
ಧಾರುಣೀಪತಿ ಕೇಳು ದಳ ನಡು
ದಾರಿ ಬಡಗಣ ಶೃಂಗಪರ್ವತ
ದೋರೆಯಲಿ ದೊರೆಗಳನು ಧಟ್ಟಿಸಿ ಸೆಳೆದು ಬಹು ಧನವ
ಭಾರಣೆಯ ಮುಂಗುಡಿಯ ಕೊಳ್ಳೆಗ
ಳೋರಣಿಸಿ ತುದಿಗೇರಿ ಸಿದ್ಧರ
ಚಾರಣರ ವಿದ್ಯಾಧರರ ಮುತ್ತಿದರು ಮನ್ನಿಸದೆ ॥61॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅಲ್ಲಿಂದ ಹೊರಟ ಸೈನ್ಯ ನಡುದಾರಿಯಲ್ಲಿ ಉತ್ತರ ಶೃಂಗಪರ್ವತದ ಓರೆಯಲ್ಲಿ ರಾಜರುಗಳನ್ನು ಜಂಕಿಸಿ ತುಂಬ ಧನವನ್ನು
ಸೆಳೆದು ತಂದರು. ಹಾಗೇ ಮುಂದುವರಿದು ಮುಂಚೂಣಿಯವರು ಅತಿಶಯವಾಗಿ ಕೊಳ್ಳೆಗಳನ್ನು ಮಾಡುತ್ತಾ ಬೆಟ್ಟದ ತುದಿಗೇರಿ ನಿರ್ದಾಕ್ಷಿಣ್ಯವಾಗಿ ಸಿದ್ಧರು, ಚಾರಣರು, ವಿದ್ಯಾಧರರುಗಳನ್ನು ಮುತ್ತಿದರು.
ಪದಾರ್ಥ (ಕ.ಗ.ಪ)
ಧಾರುಣೀಪತಿ ಕೇಳು-ಜನಮೇಜಯ ರಾಜನೇ ಕೇಳು, ದಳ-ಅರ್ಜುನನ ಸೈನ್ಯ, ನಡು ದಾರಿಯಲಿ-ಮಾರ್ಗಮಧ್ಯದಲ್ಲಿ, ಬಡಗಣ ಶೃಂಗಪರ್ವತ ದೋರೆಯಲಿ-ಉತ್ತರಕ್ಕಿದ್ದ, ಶೃಂಗಪರ್ವತದ ಸಾನು ಪ್ರದೇಶದಲ್ಲಿ ಇದ್ದಂತಹ, ದೊರೆಗಳನು ಧಟ್ಟಿಸಿ-ರಾಜರನ್ನು ಬಡಿದು ಸೋಲಿಸಿ, ಬಹು ಧನವ ಸೆಳೆದು-ತುಂಬ ಧನವನ್ನು ಸಂಗ್ರಹಿಸಿಕೊಂಡರು, ಅನಂತರ ಮುಂದುವರಿದು ಮುಂಗುಡಿಯ-ಕೊಳ್ಳೆ
ಮಾಡುತ್ತಾ ವಸ್ತುಗಳನ್ನು ಜೋಡಿಸಿಕೊಳ್ಳುತ್ತಾ, ತುದಿಗೇರಿ-ಪರ್ವತದ ಮೇಲುಭಾಗಕ್ಕೆ ಹೋಗಿ, ಸಿದ್ಧರ ಚಾರಣರ ವಿದ್ಯಾಧರರ ಮನ್ನಿಸದೆ-ಅಲ್ಲಿದ್ದವರು, ಸಿದ್ಧರು ಚಾರಣರು ವಿಧ್ಯಾಧರ ಎಂದು ಲಕ್ಷ ಮಾಡದೇ, ಮುತ್ತಿದರು-ಆಕ್ರಮಣ ಮಾಡಿದರು
ಮೂಲ ...{Loading}...
ಧಾರುಣೀಪತಿ ಕೇಳು ದಳ ನಡು
ದಾರಿ ಬಡಗಣ ಶೃಂಗಪರ್ವತ
ದೋರೆಯಲಿ ದೊರೆಗಳನು ಧಟ್ಟಿಸಿ ಸೆಳೆದು ಬಹು ಧನವ
ಭಾರಣೆಯ ಮುಂಗುಡಿಯ ಕೊಳ್ಳೆಗ
ಳೋರಣಿಸಿ ತುದಿಗೇರಿ ಸಿದ್ಧರ
ಚಾರಣರ ವಿದ್ಯಾಧರರ ಮುತ್ತಿದರು ಮನ್ನಿಸದೆ ॥61॥
೦೬೨ ಅರಸು ಮೋಹರ ...{Loading}...
ಅರಸು ಮೋಹರ ಹತ್ತಿತಾ ಗಿರಿ
ಎರಡು ಸಾವಿರದಗಲವದರಲಿ
ತುರುಗಿ ಬಿಟ್ಟಿತು ಸೇನೆ ಸೂಳೈಸಿದವು ನಿಸ್ಸಾಳ
ಬಿರಿದುದಾ ಗಿರಿ ಕೆಳಗಣುತ್ತರ
ಕುರುಗಳೆದೆ ಜರ್ಝರಿತವಾಯ್ತ
ಬ್ಬರಕೆ ಬಡಗಣ ಕಡಲು ಕದಡಿತು ತಳದ ತಾಯ್ಮಳಲ ॥62॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಈ ರಾಜರ ಸೈನ್ಯ ಆ ಪರ್ವತವನ್ನೇರಿ ಎರಡು ಸಾವಿರ ಪ್ರಮಾಣ ಅಗಲವಿದ್ದ ಪ್ರದೇಶದಲ್ಲಿ ಬೀಡುಬಿಟ್ಟರು. ಆ ಸೈನ್ಯದ ರಣಭೇರಿಗಳ ಶಬ್ದಕ್ಕೆ ಪರ್ವತವೇ ಬಿರಿಯಿತು. ಆ ಕೆಳಗಿನ ಉತ್ತರಕುರುಗಳ ಎದೆ ಜರ್ಜರಿತವಾಯಿತು. ಉತ್ತರದ ಕಡಲಿನ ತಾಯ್ಮಳಲು ಕದಡಿತು.
ಪದಾರ್ಥ (ಕ.ಗ.ಪ)
ತಾಯ್ಮಳಲು-ತಳಭಾಗದಲ್ಲಿದ್ದ ಮರಳು
ಅರಸು ಮೋಹರ ಹತ್ತಿತಾ-ಈ ರಾಜರ ಸೈನ್ಯ ಮೇಲಕ್ಕೆ ಏರಿ ಹೋಯಿತು, ಆ ಗಿರಿ-ಆ ಪರ್ವತ, ಎರಡು ಸಾವಿರದಗಲ-ಎರಡು ಸಾವಿರ ಯೋಜನದಷ್ಟು ವಿಸ್ತಾರವಾದುದು, ಅದರಲಿ ತುರುಗಿ ಬಿಟ್ಟಿತು ಸೇನೆ-ಅದರಲ್ಲಿ ತುಂಬಿಕೊಂಡು ಸೇನೆ ಬೀಡು ಬಿಟ್ಟಿತು,
ಸೂಳೈಸಿದವು ನಿಸ್ಸಾಳ-ರಣಭೇರಿಗಳು ಧ್ವನಿ ಮಾಡತೊಡಗಿತು, ಬಿರಿದುದಾ ಗಿರಿ-ಅದರ ಗದ್ದಲಕ್ಕೆ ಆ ಪರ್ವತವೇ ಬಿರಿಯಿತು,
ಕೆಳಗಣ-ಕೆಳಗಿದ್ದ, ಉತ್ತರ ಕುರುಗಳೆದೆ-ಆ ಉತ್ತರ ಕರದೇಶದವರ ಹೃದಯ, ಜರ್ಝರಿತವಾಯ್ತ-ಚೂರು ಚೂರಾಯಿತು
ಅಬ್ಬರಕೆ-ಆ ಸೇನೆಯ ವಾದ್ಯಗಳ ಆರ್ಭಟಕ್ಕೆ, ಬಡಗಣ ಕಡಲು-ಉತ್ತರದ ಸಾಗರದಲ್ಲಿ, ತಳದ ತಾಯ್ಮಳಲ-ತಳಭಾಗದಲ್ಲಿದ್ದ ಮರಳು, ಕದಡಿತು-ಕಲಕಿ ಹೋಯಿತು
ಮೂಲ ...{Loading}...
ಅರಸು ಮೋಹರ ಹತ್ತಿತಾ ಗಿರಿ
ಎರಡು ಸಾವಿರದಗಲವದರಲಿ
ತುರುಗಿ ಬಿಟ್ಟಿತು ಸೇನೆ ಸೂಳೈಸಿದವು ನಿಸ್ಸಾಳ
ಬಿರಿದುದಾ ಗಿರಿ ಕೆಳಗಣುತ್ತರ
ಕುರುಗಳೆದೆ ಜರ್ಝರಿತವಾಯ್ತ
ಬ್ಬರಕೆ ಬಡಗಣ ಕಡಲು ಕದಡಿತು ತಳದ ತಾಯ್ಮಳಲ ॥62॥
೦೬೩ ನೆರೆದರಲ್ಲಿಯ ನೃಪರು ...{Loading}...
ನೆರೆದರಲ್ಲಿಯ ನೃಪರು ದೂತರ
ಹರಿಯ ಬಿಟ್ಟರು ಪಾರ್ಥನಿದ್ದೆಡೆ
ಗರಸ ಕೇಳವರುಗಳು ಬಂದರು ಕಂಡರರ್ಜುನನ
ಗಿರಿಯನಿಳಿಯದಿರಿತ್ತಲುತ್ತರ
ಕುರುಗಳಿಹ ಸಂಸ್ಥಾನವಿದು ಗೋ
ಚರಿಸಲರಿಯದು ನರರ ಕಾಲ್ದುಳಿಗೆಂದರವರಂದು ॥63॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಆಗ ಅಲ್ಲಿನ ರಾಜರುಗಳೆಲ್ಲ ಒಂದುಗೂಡಿ ಅರ್ಜುನನ ಬಳಿಗೆ ದೂತರನ್ನು ಕಳಿಸಿ ಸುದ್ದಿ ಮುಟ್ಟಿಸಿ ತಾವೂ ಬಂದು ಕಂಡರು.
“ಗಿರಿಯನ್ನಿಳಿಯ ಬೇಡಿ. ಈ ಕಡೆ ಉತ್ತರಕುರುಗಳಿರುವ ಸಂಸ್ಥಾನ. ಹೋ! ನರರ ಕಾಲ ತುಳಿತದಿಂದ ಅಲ್ಲಿ ಸಂಚಾರ ಮಾಡಲಾಗದು.
ಪದಾರ್ಥ (ಕ.ಗ.ಪ)
ನೆರೆದರಲ್ಲಿಯ ನೃಪರು-ಅಲ್ಲಿನ ರಾಜರೆಲ್ಲ ಸೇರಿದರು, ಪಾರ್ಥನಿದ್ದೆಡೆಗೆ-ಅರ್ಜುನನಿದ್ದ ಸ್ಥಳಕ್ಕೆ, ದೂತರು ಹರಿಯ ಬಿಟ್ಟರು-ದೂತರನ್ನು ಓಡಿಸಿದರು, ಅರಸ ಕೇಳು-ಜನಮೇಜಯನೇ ಕೇಳು, ಅವರುಗಳು ಬಂದರು ಕಂಡರರ್ಜುನನ-ಆ ದೂತರು ಬಂದು ಅರ್ಜುನನ್ನು ಕಂಡರು, ಗಿರಿಯನಿಳಿಯದಿರಿತ್ತಲು-ಈ ಕಡೆ ಪರ್ವತವನ್ನು ಇಳಿದು ಬರಬೇಡ, ಉತ್ತರ ಕುರುಗಳಿಹ ಸಂಸ್ಥಾನವಿದು-ಉತ್ತರಕುರುಗಳಿರುವಂತಹ ರಾಜ್ಯವಿದು, ಹೋ ! ಚರಿಸಲರಿಯದು ನರರ ಕಾಲ್ದುಳಿಗೆ-ಮಾಣವರ, ಕಾಲತುಳಿತಕ್ಕೆ ಎದುರಿಸಿ ಅವರು ಚರಿಸಲಾರರು, ಎಂದರವರಂದು-ಆಗ ಅವರು ಹಾಗೆಂದರು
ಮೂಲ ...{Loading}...
ನೆರೆದರಲ್ಲಿಯ ನೃಪರು ದೂತರ
ಹರಿಯ ಬಿಟ್ಟರು ಪಾರ್ಥನಿದ್ದೆಡೆ
ಗರಸ ಕೇಳವರುಗಳು ಬಂದರು ಕಂಡರರ್ಜುನನ
ಗಿರಿಯನಿಳಿಯದಿರಿತ್ತಲುತ್ತರ
ಕುರುಗಳಿಹ ಸಂಸ್ಥಾನವಿದು ಗೋ
ಚರಿಸಲರಿಯದು ನರರ ಕಾಲ್ದುಳಿಗೆಂದರವರಂದು ॥63॥
೦೬೪ ಅಲ್ಲದಾಕ್ರಮಿಸಿದರೆ ನಿನಗವ ...{Loading}...
ಅಲ್ಲದಾಕ್ರಮಿಸಿದರೆ ನಿನಗವ
ರಲ್ಲಿ ಕಾಣಿಕೆ ದೊರಕಲರಿಯದು
ಬಲ್ಲಿದವರುತ್ತರದ ಕುರುಗಳು ನಿನಗೆ ಬಾಂಧವರು
ಗೆಲ್ಲದಲಿ ಫಲವಿಲ್ಲ ಸಾಹಸ
ವಲ್ಲಿ ಮೆರೆಯದು ಮತ್ರ್ಯದೇಹದೊ
ಳಲ್ಲಿ ಸುಳಿವುದು ಭಾರವೆಂದರು ಚರರು ಫಲುಗುಣಗೆ ॥64॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅಲ್ಲದೆ, ನೀವು ಅವರನ್ನು ಆಕ್ರಮಿಸಿದರೆ ನಿಮಗೆ ಅವರಿಂದ ಕಾಣಿಕೆ ದೊರೆಯದು. ಆ ಉತ್ತರದ ಕುರುಗಳು ಮಹಾ ಬಲಶಾಲಿಗಳು ಅಲ್ಲದೆ, ಅವರು ನಿಮಗೆ ಬಂಧುಗಳು. ಅವರನ್ನು ಜಯಿಸಲು ಸಾಧ್ಯವಿಲ್ಲ. ನಿಮ್ಮ ಸಾಹಸ ಅಲ್ಲಿ ಮೆರೆಯದು. ಈ ಮಾನವ ದೇಹದಿಂದ ಅಲ್ಲಿ ಚಲಿಸುವುದು ಕಷ್ಟ - ಎಂದು ದೂತರು ವಿಜ್ಞಾಪಿಸಿದರು.
ಪದಾರ್ಥ (ಕ.ಗ.ಪ)
ಅಲ್ಲದೆ ಆಕ್ರಮಿಸಿದರೆ-ನೀನೇನಾದರೂ ಆಕ್ರಮಣ ಮಾಡಿದರೆ ನಿನಗೆ ಅವರಲ್ಲಿ, ಕಾಣಿಕೆ ದೊರಕಲರಿಯದು-ಅವರಿಂದ ನಿನಗೆ ಏನೂ ಕಾಣಿಕೆಯೂ ದೊರೆಯಲಾರದು, ಬಲ್ಲಿದವರುತ್ತರದ ಕುರುಗಳು-ಉತ್ತರದ ಕುರುಗಳು ಮಾಹಬಲಶಾಲಿಗಳು, ನಿನಗೆ ಬಾಂಧವರು-ನಿನಗೂ ನೆಂಟರು, ಗೆಲ್ಲದಲಿ ಫಲವಿಲ್ಲ-ಗೆದ್ದರೂ ಪ್ರಯೋಜನವಿಲ್ಲ, ಸಾಹಸವಲ್ಲಿ ಮೆರೆಯದು-ಅಲ್ಲಿ ನಿನ್ನ ಸಾಹಸ ನಡೆಯುವುದಿಲ್ಲ
ಮತ್ರ್ಯದೇಹದೊಳು-ಈ ಮಾನವ ದೇಹದಿಂದ, ಅಲ್ಲಿ ಸುಳಿವುದು-ಅಲ್ಲಿ ಚಲಿಸುವುದು ಭಾರವಾಗುತ್ತದೆ, ಸಾಧ್ಯವಾಗುವುದಿಲ್ಲ, ಎಂದರು ಚರರು ಫಲುಗುಣಗೆ-ಆ ದೂತರು ಹೀಗೆ ಅರ್ಜುನನಿಗೆ ಹೇಳಿದರು
ಮೂಲ ...{Loading}...
ಅಲ್ಲದಾಕ್ರಮಿಸಿದರೆ ನಿನಗವ
ರಲ್ಲಿ ಕಾಣಿಕೆ ದೊರಕಲರಿಯದು
ಬಲ್ಲಿದವರುತ್ತರದ ಕುರುಗಳು ನಿನಗೆ ಬಾಂಧವರು
ಗೆಲ್ಲದಲಿ ಫಲವಿಲ್ಲ ಸಾಹಸ
ವಲ್ಲಿ ಮೆರೆಯದು ಮತ್ರ್ಯದೇಹದೊ
ಳಲ್ಲಿ ಸುಳಿವುದು ಭಾರವೆಂದರು ಚರರು ಫಲುಗುಣಗೆ ॥64॥
೦೬೫ ಮಾಣಲದು ನಮಗವರು ...{Loading}...
ಮಾಣಲದು ನಮಗವರು ಬಂಧು
ಶ್ರೇಣಿಗಳು ಗಡ ಹೋಗಲದು ಕ
ಟ್ಟಾಣೆಯಾವುದು ನಿಮ್ಮ ದೇಶದೊಳುಳ್ಳ ವಸ್ತುಗಳ
ವಾಣಿಯವ ಮಾಡದೆ ಸುಯಜ್ಞದ
ಕಾಣಿಕೆಯನೀವುದು ಯುಧಿಷ್ಠಿರ
ನಾಣೆ ನಿಮಗೆನೆ ತಂದು ಕೊಟ್ಟರು ಸಕಲ ವಸ್ತುಗಳ ॥65॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅದಕ್ಕೆ ಅರ್ಜುನ ‘ಅದನ್ನು ಬಿಡಿ. ನಮಗೆ ಅವರು ನಂಟರ ಸಾಲಿಗೆ ಸೇರಿದವರಲ್ಲವೇ ! ಹೋಗಲು ಕಟ್ಟಾಜ್ಞೆ, ಎಲ್ಲಿ ಬಂತು ?
ನಿಮ್ಮ ದೇಶದಲ್ಲಿರುವ ಶ್ರೇಷ್ಠ ವಸ್ತುಗಳನ್ನು ಚೌಕಾಶಿ ಮಾಡದೆ ಯುಧಿಷ್ಠಿರನ ಮಹಾಯಜ್ಞಕ್ಕೆ ಕಾಣಿಕೆಯಾಗಿ ಕೊಡಿ. ಯುಧಿಷ್ಠಿರನ ಆಣೆ ಇದೆ ನಿಮಗೆ” ಎಂದ. ಆಗ ಅವರು ಸಕಲವಸ್ತುಗಳನ್ನು ತಂದುಕೊಟ್ಟರು.
ಪದಾರ್ಥ (ಕ.ಗ.ಪ)
ಮಾಣಲದು-ಅದು ಹೋಗಲಿ, ನಮಗವರು ಬಂಧು ಶ್ರೇಣಿಗಳು ಗಡ-ಅವರು ನಮಗೆ, ಬಂಧುಗಳ ತಲಮಾರಿನವರಲ್ಲವೇ ?
ಹೋಗಲದು-ಅದು ಹೋಗಲಿ, ಕಟ್ಟಾಣೆಯಾವುದು-ಕಟ್ಟಾಜ್ಞೆ ಎಲ್ಲಿ ಬಂತು, ನಿಮ್ಮ ದೇಶದೊಳುಳ್ಳ ವಸ್ತುಗಳ-ನಿಮ್ಮ ದೇಶದ ವಸ್ತುಗಳನ್ನು, ವಾಣಿಯವ ಮಾಡದೆ-ಚೌಕಶಿ ಮಾಡದೆ, ಸುಯಜ್ಞದ ಕಾಣಿಕೆಯನೀವುದು-ಶ್ರೇಷ್ಠವಾದ, ರಾಜಸೂಯಯಾಗಕ್ಕಾಗಿ ಕಾಣಿಕೆಯನ್ನು ಕೊಡುವುದು, ಯುಧಿಷ್ಠಿರನಾಣೆ ನಿಮಗೆ-ಇದು ನಿಮಗೆ ಯುಧಿಷ್ಠಿರನು ಮಾಡಿರುವ ಆಜ್ಞೆ, ಎನೆ-ಎಂದು ಹೇಳಲು
ಅವರು ಸಕಲ ವಸ್ತುಗಳ ತಂದು ಕೊಟ್ಟರು-ಸಮಸ್ತ, ವಸ್ತುಗಳನ್ನು ತಂದು ಕೊಟ್ಟರು
ಮೂಲ ...{Loading}...
ಮಾಣಲದು ನಮಗವರು ಬಂಧು
ಶ್ರೇಣಿಗಳು ಗಡ ಹೋಗಲದು ಕ
ಟ್ಟಾಣೆಯಾವುದು ನಿಮ್ಮ ದೇಶದೊಳುಳ್ಳ ವಸ್ತುಗಳ
ವಾಣಿಯವ ಮಾಡದೆ ಸುಯಜ್ಞದ
ಕಾಣಿಕೆಯನೀವುದು ಯುಧಿಷ್ಠಿರ
ನಾಣೆ ನಿಮಗೆನೆ ತಂದು ಕೊಟ್ಟರು ಸಕಲ ವಸ್ತುಗಳ ॥65॥
೦೬೬ ತಿರುಗಿತಲ್ಲಿನ್ದಿತ್ತ ಪಾಳೆಯ ...{Loading}...
ತಿರುಗಿತಲ್ಲಿಂದಿತ್ತ ಪಾಳೆಯ
ಮುರಿದು ಬಿಟ್ಟು ಹಿರಣ್ಮಯವನಾ
ಕರಿಸಿ ರಮ್ಯಕದಿಂದಿಳಾವೃತದಿಂದ ದಕ್ಷಿಣಕೆ
ಭರದಿನೈದುತ ಹರಿವರುಷ ಕಿಂ
ಪುರುಷವನು ದಾಟುತ ಹಿಮಾನ್ವಿತ
ಗಿರಿಯನೇರಿದುದಿಳಿದು ಬಂದುದು ತೆಂಕ ಮುಖವಾಗಿ ॥66॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅಲ್ಲಿಂದ ಸೇನೆಯ ಪಾಳೆಯ ಈ ಕಡೆಗೆ ತಿರುಗಿತು. ಹಿರಣ್ಮಯವನ್ನು ವಶಪಡಿಸಿಕೊಂಡು ರಮ್ಯಕದಿಂದ. ಇಳಾವೃತದಿಂದ ದಕ್ಷಿಣಕ್ಕೆ
ವೇಗವಾಗಿ ನಡೆದು ಬರುತ್ತಾ ಹರಿವರ್ಷ ಕಿಂಪುರುಷಗಳನ್ನು ದಾಟಿ, ಹಿಮವತ್ಪರ್ವತವನ್ನು ಏರಿ ಇಳಿದು ಸೇನೆ ದಕ್ಷಿಣಾಭಿಮುಖವಾಗಿ ಬಂದಿತು.
ಪದಾರ್ಥ (ಕ.ಗ.ಪ)
ತಿರುಗಿತಲ್ಲಿಂದಿತ್ತ ಪಾಳೆಯ-ಸೇನೆ ಆ ಕಡೆಯಿಂದ ಈ ಕಡೆಗೆ ತಿರುಗಿತು, ಮುರಿದು ಬಿಟ್ಟು-ಮುಂದೆ ಸೇನೆ ಬೀಡು ಬಿಟ್ಟು, ಹಿರಣ್ಮಯವನಾಕರಿಸಿ-ಹಿರಣ್ಮಯವನ್ನು ವಶಪಡಿಸಿಕೊಂಡು, ರಮ್ಯಕದಿಂದಿಳಾವೃತದಿಂದ ದಕ್ಷಿಣಕೆ-ರಮ್ಯಕ ಹಾಗೂ ಇಳಾ ವೃತದಿಂದ ದಕ್ಷಿಣಕ್ಕೆ, ಭರದಿನೈದುತ-ಶೀಘ್ರ ಗತಿಯಲ್ಲಿ ಬರುತ್ತಾ, ಹರಿವರುಷ ಕಿಂಪುರುಷವನು ದಾಟುತ-ಹರಿವರ್ಷ ಮತ್ತು ಕಿಂಪುರುಷ ದೇಶಗಳನ್ನು ದಾಟಿ, ಹಿಮಾನ್ವಿತ ಗಿರಿಯನೇರಿದುದಿಳಿದು-ಮಂಜು ಮಸುಕಿದ ಪರ್ವತವನೇರಿ ಇಳಿದು, ತೆಂಕ ಮುಖವಾಗಿ ಬಂದುದು-ಅರ್ಜುನನ ಸೇನೆ ದಕ್ಷಿಣಾಭಿಮುಖವಾಗಿ ಬಂದಿತು
ಮೂಲ ...{Loading}...
ತಿರುಗಿತಲ್ಲಿಂದಿತ್ತ ಪಾಳೆಯ
ಮುರಿದು ಬಿಟ್ಟು ಹಿರಣ್ಮಯವನಾ
ಕರಿಸಿ ರಮ್ಯಕದಿಂದಿಳಾವೃತದಿಂದ ದಕ್ಷಿಣಕೆ
ಭರದಿನೈದುತ ಹರಿವರುಷ ಕಿಂ
ಪುರುಷವನು ದಾಟುತ ಹಿಮಾನ್ವಿತ
ಗಿರಿಯನೇರಿದುದಿಳಿದು ಬಂದುದು ತೆಂಕ ಮುಖವಾಗಿ ॥66॥
೦೬೭ ಕಳುಹಿ ಕಳೆದನು ...{Loading}...
ಕಳುಹಿ ಕಳೆದನು ಹಿಂದೆ ಕೂಡಿದ
ಬಲವನವರವರೆಲ್ಲ ಯಾಗ
ಸ್ಥಳಕೆ ಬಹ ನೇಮದಲಿ ಹರಿದುದು ನಿಜ ಪುರಂಗಳಿಗೆ
ನೆಲನನಗಲದ ವಸ್ತುವಿದನೆಂ
ತಳವಡಿಸಿದನೊ ಶಿವಯೆನುತ ಸುರ
ರುಲಿಯೆ ಹೊಕ್ಕನು ಪಾರ್ಥನಿಂದ್ರಪ್ರಸ್ಥ ಪುರವರವ ॥67॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅರ್ಜುನನು ಹಿಂದೆ ತನ್ನನ್ನು ನಾನಾ ಕಡೆಗಳಿಂದ ಬಂದು ಸೇರಿದ ಸೈನ್ಯಗಳನ್ನು ಬೀಳ್ಕೊಂಡು ಎಲ್ಲರನ್ನೂ ಯಾಗಸ್ಥಳಕ್ಕೆ
ಬನ್ನಿರಿ ಎಂದು ನಿಯಮಿಸಿ ಕಳಿಸಿಕೊಟ್ಟ. ಎಲ್ಲರೂ ತಮ್ಮ ತಮ್ಮ ಪಟ್ಟಣಗಳಿಗೆ ಹಿಂತಿರುಗಿದರು. ತಾನು ಸಂಗ್ರಹಿಸಿದ ವಸ್ತುಗಳನ್ನೆಲ್ಲ ತೆಗೆದುಕೊಂಡು ಅರ್ಜುನ ಇಂದ್ರಪ್ರಸ್ಥ ನಗರಿಗೆ ಹಿಂತಿರುಗಿದ. ‘ಭೂಮಿಯಗಲಕ್ಕೂ ವ್ಯಾಪಿಸುವಷ್ಟು ವಸ್ತುಗಳನ್ನು ಅದು ಹೇಗೆ ಸಂಗ್ರಹಿಸಿದನೋ ಶಿವ !’ ಎಂದು ದೇವತೆಗಳು ಆಶ್ಚರ್ಯದಿಂದ ಉದ್ಗರಿಸಿದರು.
ಪದಾರ್ಥ (ಕ.ಗ.ಪ)
ಕಳುಹಿ ಕಳೆದನು ಹಿಂದೆ ಕೋಡಿದ ಬಲವನು-ಪ್ರಾರಂಭದಿಂದ, ನಾನಾ ದೇಶಗಳಲ್ಲಿ ತನ್ನ ಸೇನೆಯೊಡಗೂಡಿ ದಿಗ್ವಿಜಯಕ್ಕೆಂದು
ಬಂದಿದ್ದಂತಹ ದೇಶಗಳ ಸೈನ್ಯವನ್ನು ಅವರವರೆಲ್ಲ, ಯಾಗಸ್ಥಳಕೆ ಬಹ ನೇಮದಲಿ-ಪ್ರತ್ಯೇಕವಾಗಿ ಒಂದೊಂದು ರಾಜ್ಯವರೂ ರಾಜ್ಯಸೂಯಯಾಗ ನಡೆಯುವ ಸ್ಥಳಕೆ ಬರಬೇಕೆಂದು, ಆಜ್ಞೆಮಾಡಿ ಅರ್ಜುನ ಕಳುಹಿಸಿದನು-ಕಳುಹಿಸಿಕೊಟ್ಟನು ಅವರುಗಳೆಲ್ಲ ಹರಿದುದು ನಿಜ ಪುರಂಗಳಿಗೆ-ತಮ್ಮ ತಮ್ಮ ಪಟ್ಟಣಗಳಿಗೆ ಹಿಂತಿರುಗಿದರು ನೆಲನನಗಲದ ವಸ್ತುವಿದನೆಂತಳವಡಿಸಿದನೊ ಶಿವ ಎನುತ-ಭೂಮಿಯಗಲಕ್ಕೂ, ವಿಸ್ತಾರವಾಗಿ ಹರಡಿರುವ ಇಷ್ಟೊಂದು ವಸ್ತುಗಳು ಅರ್ಜುನನು, ಹೇಗೆ ಸಂಗ್ರಹಿಸಿದನೋ ಶಿವಾ ! ಎಂದು
ಸುರರುಲಿಯೆ-ಅದನ್ನು ದೇತಗೆಳಿಗೆ ವಿಸ್ಮಯದಿಂದ ಉದ್ಗರಿಸುತ್ತಿರಲು, ಪಾರ್ಥನು-ಅರ್ಜುನನು, ಇಂದ್ರಪ್ರಸ್ಥ ಪುರವರವ-ಶ್ರೇಷ್ಠವಾದ ಇಂದ್ರಪ್ರಸ್ಥ ನಗರವನ್ನು, ಹೊಕ್ಕನು-ಪ್ರವೇಶಿಸಿದನು
ಮೂಲ ...{Loading}...
ಕಳುಹಿ ಕಳೆದನು ಹಿಂದೆ ಕೂಡಿದ
ಬಲವನವರವರೆಲ್ಲ ಯಾಗ
ಸ್ಥಳಕೆ ಬಹ ನೇಮದಲಿ ಹರಿದುದು ನಿಜ ಪುರಂಗಳಿಗೆ
ನೆಲನನಗಲದ ವಸ್ತುವಿದನೆಂ
ತಳವಡಿಸಿದನೊ ಶಿವಯೆನುತ ಸುರ
ರುಲಿಯೆ ಹೊಕ್ಕನು ಪಾರ್ಥನಿಂದ್ರಪ್ರಸ್ಥ ಪುರವರವ ॥67॥