೦೦೦ ಸೂಚನೆ ಬಲಿಮಥನ ...{Loading}...
ಸೂಚನೆ: ಬಲಿಮಥನ ಫಲುಗುಣರು ಸಹಿತ
ಗ್ಗಳೆಯನೇಕಾಂಗದಲಿ ರಣದಲಿ
ಕಲಿ ಜರಾಸಂಧನನು ಸೀಳಿದು ಬಿಸುಟನಾ ಭೀಮ॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
ಸೂ : ಶ್ರೀಕೃಷ್ಣ ಅರ್ಜುನರೊಡನೆ ಜರಾಸಂಧನ ಬಳಿಗೆ ಹೋದ. ಭೀಮ ಏಕಾಕಿಯಾಗಿ ಹೋರಾಡಿ ಜರಾಸಂಧನನ್ನು ಸೀಳಿ ಎಸೆದ.
ಪದಾರ್ಥ (ಕ.ಗ.ಪ)
ಬಲಿಮಥನ - ಬಲಿಯನ್ನು ನಾಶಮಾಡಿದವನು, ವಾಮನಾವತಾರದ ವಿಷ್ಣು, ಇಲ್ಲಿ ಕೃಷ್ಣ
ಬಲಿಮಥನ-ಕೃಷ್ಣ, ಫಲುಗುಣ-ಅರ್ಜುನ, ಅಗ್ಗಳೆಯನು-ಬಲಿಷ್ಠನಾದ ಭೀಮ, ಏಕಾಂಗದಲಿ-ತಾನೊಬ್ಬನೇ (ಜರಾಸಂಧನನ್ನು), ಸೀಳಿದು ಬಿಸುಟನು-ಸೀಳಿ ಎಸೆದನು
ಮೂಲ ...{Loading}...
ಸೂಚನೆ: ಬಲಿಮಥನ ಫಲುಗುಣರು ಸಹಿತ
ಗ್ಗಳೆಯನೇಕಾಂಗದಲಿ ರಣದಲಿ
ಕಲಿ ಜರಾಸಂಧನನು ಸೀಳಿದು ಬಿಸುಟನಾ ಭೀಮ॥
೦೦೧ ಕೇಳು ಜನಮೇಜಯ ...{Loading}...
ಕೇಳು ಜನಮೇಜಯ ಧರಿತ್ರೀ
ಪಾಲ ಮಂತ್ರಾಳೋಚನೆಗೆ ಭೂ
ಪಾಲ ಕರೆಸಿದನನುಜರನು ಧೌಮ್ಯಾದಿ ಮಂತ್ರಿಗಳ
ಮೇಳವದ ತನಿವೆಳಗುಗಳ ಮಣಿ
ಮೌಳಿಮಂಡಿತರುಪ್ಪರದ ಪಡಿ
ಸೂಳು ಪಾಯವಧಾರಿನಲಿ ಹೊಕ್ಕರು ಸಭಾಸ್ಥಳವ ॥1॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಜನಮೇಜಯ ರಾಜ ಮುಂದೆ ಏನಾಯಿತೆಂದು ಕೇಳು. ಯುಧಿಷ್ಠಿರನು ತನ್ನ ತಮ್ಮಂದಿರನ್ನು ಧೌಮ್ಯನೇ ಮೊದಲಾದ ಮಂತ್ರಿಗಳನ್ನು ಮಂತ್ರಾಲೋಚನೆಗಾಗಿ ಕರೆಸಿದ. ಮಂತ್ರಾಲೋಚನಾಸಭೆಗೆ ಬಂದ ಅವರು ರಶ್ಮಿಗಳನ್ನು ಹೊರಚೆಲ್ಲುತ್ತಿದ್ದ ರತ್ನ ಕಿರೀಟಗಳನ್ನು ಧರಿಸಿದ್ದರು. ಅರಮನೆಯ ಸೇವಕರು ಗಟ್ಟಿಯಾಗಿ ‘ಪಾಯವಧಾರು’ (ಪಾದ ಇಡುವಾಗ ಎಚ್ಚರ) ಎಂದು ಕೂಗಿ ಹೇಳುತ್ತಿರಲು ಎಲ್ಲರೂ ಸಭಾಸ್ಥಳವನ್ನು ಹೊಕ್ಕರು.
ಪದಾರ್ಥ (ಕ.ಗ.ಪ)
ಮಣಿ ಮೌಳಿಮಂಡಿತ-ರತ್ನಕಿರೀಟ ಧರಿಸಿದ, ಉಪ್ಪರದ-ಮೇಲಿನ, ಪಡಿಸೂಳು-ಪ್ರತಿಹಾರಿ, ಪಾಯವಧಾರು-ಕಾಲಿಡುವಾಗ ಎಚ್ಚರಿಕೆ
ಧರಿತ್ರೀಪಾಲ-ರಾಜ, ಭೂಪಾಲ-ರಾಜ ಯುಧಿಷ್ಠಿರನು, ಮಂತ್ರಾಳೋಚನೆಗೆ-ರಾಜಸೂಯ ಯಾಗದ ಬಗೆಗೆ, ಮಂತ್ರಾಲೋಚನೆ ನಡೆಸುವದಕ್ಕಾಗಿ, ಅನುಜರನು-ತಮ್ಮಂದಿರನ್ನು, ಮೇಳವದ ತನಿವೆಳಗುಗಳ-ಒಟ್ಟುಗೂಡಿ ನೂತನವಾಗಿ ಬೆಳಕನ್ನು ಹೊರಚೆಲ್ಲುತ್ತಿದ್ದಂತಹ, ಮಣಿ ಮೌಳಿಮಂಡಿತರು-ರತ್ನಗಳಿಂದ ಖಚಿತವಾದ ಕಿರೀಟಗಳನ್ನು ಧರಿಸಿದ್ದವರು, ಉಪ್ಪರದ-ಉಚ್ಚ ಸ್ವರದಲ್ಲಿನ,
ಪಡಿಸೂಳು-ಪ್ರತಿಸಾರಿ ಹೆಜ್ಜೆಯಿಟ್ಟಾಗಲೂ, ಪಾಯವದಾರಿನಲಿ-ಪಾಯವಧಾರು (ಹೆಜ್ಜೆಯಿಡುವಾಗ ಎಚ್ಚರ), ಎಂದು ಅರಮನೆಯ ಸೇವಕರು ಹೇಳುತ್ತಿರಲಾಗಿ, ಹೊಕ್ಕರು ಸಭಾಸ್ಥಳವ-ಸಭೆಯನ್ನು ಪ್ರವೇಶಿಸಿದರು
ಮೂಲ ...{Loading}...
ಕೇಳು ಜನಮೇಜಯ ಧರಿತ್ರೀ
ಪಾಲ ಮಂತ್ರಾಳೋಚನೆಗೆ ಭೂ
ಪಾಲ ಕರೆಸಿದನನುಜರನು ಧೌಮ್ಯಾದಿ ಮಂತ್ರಿಗಳ
ಮೇಳವದ ತನಿವೆಳಗುಗಳ ಮಣಿ
ಮೌಳಿಮಂಡಿತರುಪ್ಪರದ ಪಡಿ
ಸೂಳು ಪಾಯವಧಾರಿನಲಿ ಹೊಕ್ಕರು ಸಭಾಸ್ಥಳವ ॥1॥
೦೦೨ ದ್ರುಪದ ಧೃಷ್ಟದ್ಯುಮ್ನ ...{Loading}...
ದ್ರುಪದ ಧೃಷ್ಟದ್ಯುಮ್ನ ಮತ್ಸ್ಯಾ
ಧಿಪತಿ ಕೇಕಯ ಪಾಂಡವಾತ್ಮಜ
ರು ಪತಿಕಾರ್ಯ ವಿಚಾರನಿಷ್ಠರು ಬಂದರೋಲಗಕೆ |
ನೃಪತಿ ಹದನೇನಮರ ಮುನಿವರ
ನುಪಚರಿತ ಮಂತ್ರಾರ್ಥ ಸಿದ್ಧಿಗೆ
ರಪಣ ನಮಗುಂಟೀಗ ಬೆಸಸೆಂದರು ಯುಧಿಷ್ಠಿರಗೆ ॥2॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಪ್ರಭುವಿನ ವಿಚಾರದಲ್ಲಿ ನಿಷ್ಠರಾಗಿದ್ದ ದ್ರುಪದ ದೃಷ್ಟದ್ಯುಮ್ನ ಮತ್ಸ್ಯರಾಜ ಕೇಕಯ ಇವರು ಪಾಂಡವರೊಡನೆ ಮಂತ್ರಾಲೋಚನೆಯ ಸಭೆಯನ್ನು ಪ್ರವೇಶಿಸಿದರು. “ರಾಜ, ಸಮಾಚಾರವೇನು, ನಾರದಮುನಿ ತಿಳಿಸಿದ ಕಾರ್ಯವನ್ನು ಸಾಧಿಸಲು ನಮ್ಮಲ್ಲಿ ತಕ್ಕ ಸಾಧನವಿದೆ. ಈಗ ಅಪ್ಪಣೆ ಕೊಡು” ಎಂದರು ಯುಧಿಷ್ಠಿರನಿಗೆ.
ಪದಾರ್ಥ (ಕ.ಗ.ಪ)
ಮತ್ಸ್ಯಾಧಿಪತಿ-ಮತ್ಸ್ಯ ದೇಶದ ರಾಜ, ಪಾಂಡವಾತ್ಮಜರು-ಪಾಂಡುವಿನ ಮಕ್ಕಳು, ಪತಿಕಾರ್ಯ ವಿಚಾರನಿಷ್ಠರ-ಪ್ರಭುವಿನ ಕಾರ್ಯದ ಬಗೆಗೆ
ವಿಚಾರ ಮಾಡಲು ಶ್ರದ್ಧೆಯುಳ್ಳವರು, ಓಲಗಕೆ-ಸಭೆಗೆ, ನೃಪತಿ-ರಾಜ(ಸಂಬೋಧನೆ), ಹದನೇನು-ಸಮಾಚಾರವೇನು?, ಅಮರ ಮುನಿವರನ-ದೇವರ್ಷಿನಾದನಿಂದ, ಉಪಚರಿತ-ಹೇಳಲ್ಪಟ್ಟ, ಮಂತ್ರಾರ್ಥ ಸಿದ್ಧಿಗೆ-ಯಾಗದ ಬಗೆಗೆ ನೆಡೆಸಿದ, ಆಲೋಚನೆಯನ್ನು ಕಾರ್ಯ ರೂಪಕ್ಕೆ ತರಲು, ರಪಣ ನಮಗುಂಟೇ-ನಮಗೆ ಸಾಧನವಿದೆಯೇ ?, ಈಗ ಬೆಸಸು-ಈಗ ಹೇಳು
ಮೂಲ ...{Loading}...
ದ್ರುಪದ ಧೃಷ್ಟದ್ಯುಮ್ನ ಮತ್ಸ್ಯಾ
ಧಿಪತಿ ಕೇಕಯ ಪಾಂಡವಾತ್ಮಜ
ರು ಪತಿಕಾರ್ಯ ವಿಚಾರನಿಷ್ಠರು ಬಂದರೋಲಗಕೆ |
ನೃಪತಿ ಹದನೇನಮರ ಮುನಿವರ
ನುಪಚರಿತ ಮಂತ್ರಾರ್ಥ ಸಿದ್ಧಿಗೆ
ರಪಣ ನಮಗುಂಟೀಗ ಬೆಸಸೆಂದರು ಯುಧಿಷ್ಠಿರಗೆ ॥2॥
೦೦೩ ಧರೆ ನಮಗೆ ...{Loading}...
ಧರೆ ನಮಗೆ ವಶವರ್ತಿ ಖಂಡೆಯ
ಸಿರಿ ನಮಗೆ ಮೈವಳಿ ಯುಧಿಷ್ಠಿರ
ನರಸುತನ ನಳನಹುಷ ನೃಗ ಭರತಾದಿ ಭೂಮಿಪರ |
ಮರೆಸಿತೆಂಬುದು ಲೋಕವೀನಿ
ಬ್ಬರದ ಹೆಸರೆಮಗಿಂದು ಬೊಪ್ಪನ
ಸಿರಿಯನೇವಣ್ಣಿಸುವೆನೆಂದನು ಸುಯ್ದು ಯಮಸೂನು ॥3॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಯುಧಿಷ್ಠಿರ ಹೇಳಿದ, “ಧರೆ ನಮಗೆ ವಶವರ್ತಿಯಾಗಿದೆ. ಖಡ್ಗದ ಸಂಪತ್ತು ನಮಗೆ ಮೈಗೂಡಿದೆ. ಯುಧಿಷ್ಠಿರನ ಆಳ್ವಿಕೆ, ನಳ, ನಹುಷ, ನೃಗ, ಭರತ, ಮೊದಲಾದ ರಾಜರ ಆಳ್ವಿಕೆಯನ್ನು ಮರೆಸಿಬಿಟ್ಟಿತು ಎನ್ನುತ್ತಾರೆ ಜನ. ಈ ಅತಿಶಯವಾದ ಕೀರ್ತಿ ನಮಗೆ ಬಂದಿದೆ. ಆದರೆ ತಂದೆಗೆ ಒದಗಿರುವ ಸಂಪತ್ತನ್ನು ಏನೆಂದು ಹೇಳಲಿ ? ಎಂದು ನಿಟ್ಟುಸಿರು ಬಿಟ್ಟ.
ಪದಾರ್ಥ (ಕ.ಗ.ಪ)
ಖಂಡೆಯ-ಖಡ್ಗ, ಮೈವಳಿ-ಮೈಗೂಡು,
ಧರೆ-ರಾಜ್ಯ, ವಷವರ್ತಿ-ವಶದಲ್ಲಿರುವಂತಹುದು, ಖಂಡೆಯ ಸಿರಿ-ಖಡ್ಗದ ಸಂಪತ್ತು, ಮೈವಳಿ-ಅಧೀನ, ಮರೆಸಿತು-ಮರೆಯುವಂತೆ ಮಾಡಿತು, ಲೋಕ-ಲೋಕದ ಜನ, ನಿಬ್ಬರದ-ಅತಿಶಯವಾದ, ಬೊಪ್ಪನ-ತಂದೆಯಾದ ಪಾಂಡುವಿನ, ಸಿರಿಯನು-ವೈಭವವನ್ನು,
ಏವಣ್ಣಿಸುವೆನು-ಏನೆಂದು ವರ್ಣಿಸಲಿ ? ಸುಯ್ದು-ನಿಟ್ಟುಸಿರು ಬಿಟ್ಟು
ಮೂಲ ...{Loading}...
ಧರೆ ನಮಗೆ ವಶವರ್ತಿ ಖಂಡೆಯ
ಸಿರಿ ನಮಗೆ ಮೈವಳಿ ಯುಧಿಷ್ಠಿರ
ನರಸುತನ ನಳನಹುಷ ನೃಗ ಭರತಾದಿ ಭೂಮಿಪರ |
ಮರೆಸಿತೆಂಬುದು ಲೋಕವೀನಿ
ಬ್ಬರದ ಹೆಸರೆಮಗಿಂದು ಬೊಪ್ಪನ
ಸಿರಿಯನೇವಣ್ಣಿಸುವೆನೆಂದನು ಸುಯ್ದು ಯಮಸೂನು ॥3॥
೦೦೪ ಅಲ್ಲಿ ಸುರರಲಿ ...{Loading}...
ಅಲ್ಲಿ ಸುರರಲಿ ಸುಪ್ರತಿಷ್ಠಿತ
ನಲ್ಲ ಗಡ ಪಾಂಡು ಕ್ಷಿತೀಶ್ವರ
ನಿಲ್ಲಿ ವೈಭವಕೇನು ಫಲ ನಾವವರ ಸದ್ಗತಿಗೆ |
ಇಲ್ಲಿ ರಚಿಸಿದ ರಾಜಸೂಯದಿ
ನೆಲ್ಲವಹುದಯ್ಯಂಗೆ ಮಖವಿದು
ದುರ್ಲಭವು ಕೈಕೊಂಡೆವಾವುದು ಮಂತ್ರವಿದಕೆಂದ ॥4॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅಲ್ಲಿ ದೇವತೆಗಳ ನಡುವೆ ಪಾಂಡುರಾಜ ಸುಪ್ರತಿಷ್ಠನಾಗಿ ಇಲ್ಲ. ಅಲ್ಲವೇ ? ಇಲ್ಲಿ ನಾವು ವೈಭವದಿಂದಿದ್ದು ಏನು ಪ್ರಯೋಜನ ? ನಾವು ತಂದೆಯ ಸದ್ಗತಿಗಾಗಿ ರಾಜಸೂಯ ಯಾಗವನ್ನು ಮಾಡಿದರೆ ಆತನಿಗೆ ಒಳ್ಳೆಯದಾಗುತ್ತದೆ. ಆದರೆ ಈ ಯಾಗ ದುಷ್ಕರವಾದುದು. ಆದರೂ ಸ್ವೀಕರಿಸಿದ್ದೇವೆ. ಇದಕ್ಕೆ ಉಪಾಯವೇನು ಎಂದು ಯುಧಿಷ್ಠಿರನು ಕೇಳಿದ.
ಪದಾರ್ಥ (ಕ.ಗ.ಪ)
ಕ್ಷಿತೀಶ್ವರ-ರಾಜ, ಮಖ-ಯಜ್ಞ
ದೀಕ್ಷಿತನಾಗು-ರಾಜಸೂಯಯಾಗಕ್ಕೆ ದೀಕ್ಷೆಯನ್ನು ಕೈಕೊಳ್ಳು, ನಿರುಪಮ-ಹೋಲಿಕೆಯಿಲ್ಲದ, ಭಾಗಧನವನು-ಒಮದು ಪಾಲು ಹಣವನ್ನು, ಭೂಮಿಪರ-ರಾಜರನ್ನು, ಸದೆದು-ಬಡಿದು, ತಹೆವು-ತರುತ್ತೇವೆ
ಸುರರಲಿ-ದೇವತೆಗಳ ನಡುವೆ, ಪಾಂಡು ಕ್ಷಿತೀಶ್ವರನು-ಪಾಂಡು ರಾಜನು, ಸುಪ್ರತಿಷ್ಠಿತನಲ್ಲ ಗಡ-ಒಳ್ಳೆಯ ಸ್ಥಾನವನ್ನು ಪಡೆದಿಲ್ಲ ಅಲ್ಲವೇ?, ಇಲ್ಲಿ ವೈಭವಕೇನು ಫಲ-ಇಲ್ಲಿ ನಾವು ವೈಭವದಿಂದ ಇದ್ದರೆ ಏನು ಪ್ರಯೋಜನ ?, ಅವರ ಸದ್ಗತಿಗೆ-ಪಾಂಡುರಾಜನಿಗೆ ಒಳ್ಳೆಯ ಗತಿ ಉಂಟಾಗಲೆಂದು ನಾವು ಇಲ್ಲಿ, ರಚಿಸಿದ-ಮಾಡಿದ, ಎಲ್ಲವಹುದು ಅಯ್ಯಂಗೆ-ತಂದೆಯಾದ ಪಾಂಡುವಿಗೆ, ಎಲ್ಲವಹುದು-ಅಪೇಕ್ಷಿಸಿದುದೆಲ್ಲ ಆಗುತ್ತದೆ, ಮಖವಿದು-ಈ ಯಾಗವು, ದುರ್ಲಭವು-ಸುಲಭವಾಗಿ ಆಗುವಂತಹದಲ್ಲಿ, ಕೈಕೊಂಡೆವು-ಸ್ವೀಕರಿಸಿದ್ದೇವೆ, ಆವುದು ಮಂತ್ರವಿದಕೆ-ಇದನ್ನು ಮಾಡಲು ಯೋಜನೆಯೇನು ?
ಮೂಲ ...{Loading}...
ಅಲ್ಲಿ ಸುರರಲಿ ಸುಪ್ರತಿಷ್ಠಿತ
ನಲ್ಲ ಗಡ ಪಾಂಡು ಕ್ಷಿತೀಶ್ವರ
ನಿಲ್ಲಿ ವೈಭವಕೇನು ಫಲ ನಾವವರ ಸದ್ಗತಿಗೆ |
ಇಲ್ಲಿ ರಚಿಸಿದ ರಾಜಸೂಯದಿ
ನೆಲ್ಲವಹುದಯ್ಯಂಗೆ ಮಖವಿದು
ದುರ್ಲಭವು ಕೈಕೊಂಡೆವಾವುದು ಮಂತ್ರವಿದಕೆಂದ ॥4॥
೦೦೫ ಆಗಲಿದಕೇನರಸ ದೀಕ್ಷಿತ ...{Loading}...
ಆಗಲಿದಕೇನರಸ ದೀಕ್ಷಿತ
ನಾಗು ನಿರುಪಮ ರಾಜಸೂಯಕೆ
ಭಾಗ ಧನವನು ಭೂಮಿಪರ ಸದೆದೆಳೆದು ತಹೆವೆಂದು
ಆ ಗರುವರುಬ್ಬೇಳೆತಪ್ಪೇ
ನಾಗಲೀ ಗೋವಿಂದ ಮತದಲಿ
ತೂಗಿ ನೋಡುವೆವಿದರ ತೂಕವನೆಂದನಾ ಭೂಪ ॥5॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಆಗಲಿ, ಇದಕ್ಕೆ ಯೋಚಿಸುವೆಯೇಕೆ ? ಆ ಅನುಪಮವಾದ ರಾಜಸೂಯಯಾಗಕ್ಕೆ ದೀಕ್ಷಿತನಾಗು ರಾಜ. ರಾಜರನ್ನು ಸದೆಬಡಿದು ಅವರಿಂದ ಭಾಗಶಃ ಧನವನ್ನು ಸೆಳೆದು ತರುತ್ತೇವೆ”. ಎಂದು ಅವರು ಉಬ್ಬೆದ್ದು ನುಡಿದರು. ತಪ್ಪೇನು, ಆಗಲಿ ಎಂದು ಸಮ್ಮತಿಸಿ ಯುಧಿಷ್ಠಿರ “ಈ ವಿಚಾರದಲ್ಲಿ ಶ್ರೀಕೃಷ್ಣನ ಅಭಿಪ್ರಾಯವನ್ನು ಪಡೆದುಕೊಳ್ಳೋಣ” ಎಂದ.
ಪದಾರ್ಥ (ಕ.ಗ.ಪ)
ಗರುವ-ಶೂರ
ನಿರುಪಮ ರಾಜಸೂಯಕೆ-ಅನುಪಮವಾದ ಈ ರಾಜಸೂಯ ಯಾಗಮಾಡಲು, ಅರಸ-ರಾಜಾ, ದೀಕ್ಷಿತನಾಗು-ದೀಕ್ಷೆಯನ್ನು ಸ್ವೀಕರಿಸು, ಭಾಗ ಧನವನು-ಅದಕ್ಕೆ ಬೇಕಾಗುವ ಭಾಗಶಃ ಧನವನ್ನು, ಭೂಮಿಪರ ಸದೆದು-ರಾಜರುಗಳನ್ನು ಗೆದ್ದು, ತಹೆವು-ತೆಗೆದುಕೊಂಡು ಬರುತೇವೆ, ಆ ಗರುವರು-ವೀರರು, ಉಬ್ಬೇಳೆ-ಉತ್ಸಾಹಗೊಳ್ಳಲು, ಈ ಗೋವಿಂದ ಮತದಲಿ- ಈ ಕೃಷ್ಣನ ಅಭಿಪ್ರಾಯವೆಂಬ ತಕ್ಕಡಿಯಲ್ಲಿ, ಇದರ ತೂಕವನ್ನು ತೂಗಿ ನೋಡುವೆವು-ತೂಗಿ ನೋಡೋಣ ಎಂದ ರಾಜ ಧೃತರಾಷ್ಟ್ರ
ಮೂಲ ...{Loading}...
ಆಗಲಿದಕೇನರಸ ದೀಕ್ಷಿತ
ನಾಗು ನಿರುಪಮ ರಾಜಸೂಯಕೆ
ಭಾಗ ಧನವನು ಭೂಮಿಪರ ಸದೆದೆಳೆದು ತಹೆವೆಂದು
ಆ ಗರುವರುಬ್ಬೇಳೆತಪ್ಪೇ
ನಾಗಲೀ ಗೋವಿಂದ ಮತದಲಿ
ತೂಗಿ ನೋಡುವೆವಿದರ ತೂಕವನೆಂದನಾ ಭೂಪ ॥5॥
೦೦೬ ಕಳುಹಿದನು ಸಾರಥಿಯನಾ ...{Loading}...
ಕಳುಹಿದನು ಸಾರಥಿಯನಾ ರಥ
ಕೆಲವು ದಿವಸಕೆ ಕೃಷ್ಣಭವನ
ಸ್ಥಳದ ಹೊರಬಾಹೆಯಲಿ ಚಾಚಿತು ಚಪಳ ಗಮನದಲಿ
ಒಳಗೆ ಬಂದನು ಪಾವುಡವ ಮುಂ
ದಿಳುಹಿದನು ಕೃಷ್ಣಂಗೆ ಪಾಂಡವ
ತಿಲಕನಟ್ಟಿದ ಹದನ ಬಿನ್ನಹ ಮಾಡಿದನು ಬಳಿಕ ॥6॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅನಂತರ ಶ್ರೀ ಕೃಷ್ಣನನ್ನು ಕರೆತರಲು ದ್ವಾರಕೆಗೆ ರಥದೊಡನೆ ಸಾರಥಿಯನ್ನು ಕಳಿಸಿಕೊಟ್ಟ. ರಥ ಕೆಲವೇ ದಿವಸಗಳಲ್ಲಿ ಶೀಘ್ರ ಗತಿಯಲ್ಲಿ ಚಲಿಸಿ ಕೃಷ್ಣನ ಮನೆಯ ಹೊರಗೆ ನಿಂತಿತು. ಸಾರಥಿ ಮನೆಯ ಒಳಹೊಕ್ಕು, ಉಡುಗೊರೆಯನ್ನು ಮುಂದಿಟ್ಟು ಕೃಷ್ಣನಿಗೆ ಯುಧಿಷ್ಠಿರ ತನ್ನನ್ನು ಕಳಿಸಿಕೊಟ್ಟ ಸಮಾಚಾರವನ್ನೆಲ್ಲ ತಿಳಿಸಿದ.
ಪದಾರ್ಥ (ಕ.ಗ.ಪ)
ಪಾವಡ-ಉಡುಗೊರೆ
ಹೊರಬಾಹೆಯಲಿ-ಹೊರಭಾಗದಲ್ಲಿ, ಚಪಳ ಗಮನದಲಿ-ವೇಗವಾಗಿ ಹೋಗಿ, ಚಾಚಿತು-ನಿಂತಿತು, ಪಾವುಡವ ಮಂದಿಳುಹಿದನು-ಉಡುಗೊರೆಯನ್ನು ಕೃಷ್ಣನ ಮುಂದೆ ಇಟ್ಟ, ಪಾಂಡವ ತಿಲಕನು-ಪಾಂಡವ ಶ್ರೇಷ್ಠನಾದ ಯುಧಿಷ್ಠಿರ, ಅಟ್ಟಿದ ಹದನ-ಕಳುಹಿಸಿಕೊಟ್ಟಿರುವ ಸಮಾಚಾರವನ್ನು, ಬಿನ್ನಹ ಮಾಡಿದನು-ಅರಿಕೆ ಮಾಡಿಕೊಂಡನು
ಮೂಲ ...{Loading}...
ಕಳುಹಿದನು ಸಾರಥಿಯನಾ ರಥ
ಕೆಲವು ದಿವಸಕೆ ಕೃಷ್ಣಭವನ
ಸ್ಥಳದ ಹೊರಬಾಹೆಯಲಿ ಚಾಚಿತು ಚಪಳ ಗಮನದಲಿ
ಒಳಗೆ ಬಂದನು ಪಾವುಡವ ಮುಂ
ದಿಳುಹಿದನು ಕೃಷ್ಣಂಗೆ ಪಾಂಡವ
ತಿಲಕನಟ್ಟಿದ ಹದನ ಬಿನ್ನಹ ಮಾಡಿದನು ಬಳಿಕ ॥6॥
೦೦೭ ತಿಳಿದನಲ್ಲಿಯ ರಾಜಕಾರ್ಯದ ...{Loading}...
ತಿಳಿದನಲ್ಲಿಯ ರಾಜಕಾರ್ಯದ
ನೆಲೆಯನಕ್ರೂರಾದಿ ಸಚಿವರ
ತಿಳುಹಿದನು ಶಿಶುಪಾಲ ಕಂಸನ ಮಾವನಿಂತಿವರ
ಕೊಲುವಡಿದು ಹದ ನಮ್ಮ ಭಾವನ
ನಿಳಯದುತ್ಸಹ ಸೌಮನಸ್ಯವ
ಬಳಸುವರೆ ಹೊತ್ತಿದು ಮನೋರಥ ಸಿದ್ಧಿ ನಮಗೆಂದ ॥7॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕೃಷ್ಣನಿಗೆ ಅಲ್ಲಿನ ರಾಜಕಾರ್ಯದ ಸ್ಥಿತಿಯೆಲ್ಲ ತಿಳಿಯಿತು. ಅಕ್ರೂರಾದಿ ಸಚಿವರಿಗೆ ವಿಷಯ ತಿಳಿಸಿ, ಶಿಶುಪಾಲ, ಕಂಸನ ಮಾವ (ಜರಾಸಂಧ) ಇಂಥವರನ್ನು ಕೊಲ್ಲಲು ಇದು ಹದವಾದ ಸಮಯ. ನಮ್ಮ ಭಾವನ (ಯಧಿಷ್ಠಿರನ) ಮನೆಯ ಉತ್ಸಾಹ ಮತ್ತು ಸೌಮನಸ್ಯಗಳನ್ನು ಬಳಸಿದರೆ (ದುಷ್ಟನಿಗ್ರಹದ) ನಮ್ಮ ಮನೋರಥ ಸಿದ್ಧಿಯಾಗುತ್ತದೆ ಎಂದ.
ಪದಾರ್ಥ (ಕ.ಗ.ಪ)
ಸೌಮನಸ್ಯ-ಸಂತೋಷ
ರಾಜಕಾರ್ಯದ ನೆಲೆಯ-ರಾಜಕಾರ್ಯದ ಸ್ಥಿತಿಯನ್ನು, ಕಂಸನ ಮಾವ-ಜರಾಸಂಧ, ಇಂತಿವರ ಕೊಲುವಡೆ-ಇಂಥವರನ್ನು, ಕೊಲ್ಲಬೇಕಾದರೆ, ಇದು ಹದ-ಇದು ಸರಿಯಾದ ಸಮಯ, ಭಾವನ ನಿಳಯದ-ಯುಧಿಷ್ಠಿರನ ಮನೆಯ, ಉತ್ಸಹ ಸೌಮನಸ್ಯವ-ಪ್ರಸನ್ನವಾದ ಉತ್ಸವಸಂದರ್ಭವನ್ನು, ಬಳಸಿದರೆ-ಉಪಯೋಗಿಸಿದರೆ, ಮನೋರಥ ಸಿದ್ಧಿ-ದುಷ್ಟ ಶಿಕ್ಷಣ ಮಾಡಬೇಕೆಂಬ ಬಯಕೆಯ ಸಿದ್ಧಿ, ಹರಿವುದು-ನೆರವೇರುತ್ತದೆ
ಮೂಲ ...{Loading}...
ತಿಳಿದನಲ್ಲಿಯ ರಾಜಕಾರ್ಯದ
ನೆಲೆಯನಕ್ರೂರಾದಿ ಸಚಿವರ
ತಿಳುಹಿದನು ಶಿಶುಪಾಲ ಕಂಸನ ಮಾವನಿಂತಿವರ
ಕೊಲುವಡಿದು ಹದ ನಮ್ಮ ಭಾವನ
ನಿಳಯದುತ್ಸಹ ಸೌಮನಸ್ಯವ
ಬಳಸುವರೆ ಹೊತ್ತಿದು ಮನೋರಥ ಸಿದ್ಧಿ ನಮಗೆಂದ ॥7॥
೦೦೮ ಎನ್ದು ವಸುದೇವಾದಿ ...{Loading}...
ಎಂದು ವಸುದೇವಾದಿ ಯಾದವ
ವೃಂದವನು ಬಲಭದ್ರರಾಮನ
ಹಿಂದಿರಿಸಿ ಬಳಿಕಿಂದ್ರಸೇನನ ಕೂಡೆ ವೊಲವಿನಲಿ
ಬಂದನಿಂದ್ರಪ್ರಸ್ಥ ಪಟ್ಟಣ
ಕಂದು ವೊಸಗೆಯ ಗುಡಿಯ ತೋರಣ
ದಿಂದ ಕನ್ನಡಿ ಕಳಶದಲಿ ಕೊಂಡಾಡಿದರು ಹರಿಯ ॥8॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಹೀಗೆ ಹೇಳಿ, ವಸುದೇವನೆ ಮೊದಲಾದ ಯಾದವರನ್ನು ಬಲರಾಮ ರಕ್ಷಣೆಯಲ್ಲಿರಿಸಿ ಬೀಳ್ಕೊಂಡು ಇಂದ್ರಸೇನನೊಡನೆ ರಥವೇರಿ ಇಂದ್ರಪ್ರಸ್ಥ ನಗರಿಗೆ ಬಂದ. ಸಂತೋಷದ ಧ್ವಜ ತೋರಣಗಳಿಂದಲೂ ಕಳಶ ಕನ್ನಡಿಗಳಿಂದಲೂ ಪುರಜನ ಎದುರುಗೊಂಡು ಸ್ವಾಗತಿಸಿ ಕೃಷ್ಣನನ್ನು ಕೊಂಡಾಡಿದರು.
ಪದಾರ್ಥ (ಕ.ಗ.ಪ)
ಒಸಗೆ-ಸಂತೋಷ, ಗುಡಿ-ಬಾವುಟ
ವಸುದೇವಾದಿ ಯಾದವ ವೃಂದವನು-ವಸುದೇವನೇ ಮೊದಲಾದ, ಯಾದವ ಜನರನ್ನೆಲ್ಲ, ಬಲಭದ್ರರಾಮನ ಹಿಂದಿರಿಸಿ-ಬಲರಾಮನ ರಕ್ಷಣೆಗೆ ವಹಿಸಿ, ಇಂದ್ರಸೇನನ ಕೂಡೆ-ಇಂದ್ರಸೇನನೊಡಗೂಡಿ, ಒಲವಿನಲಿ-ಸಂತೋಷದಿಂದ, ಅಂದು-ಆ ದಿನ ಇಂದ್ರಪ್ರಸ್ಥ ನಗರಿಯಲ್ಲಿ ಹರ್ಷಸೂಚಕವಾದ, ಧ್ವಜಗಳಿಂದಲೂ ತೋರಣಗಳಿಂದಲೂ ಕಳಶಕನ್ನಡಿಗಳಿಂದಲೂ ಸ್ವಾಗತಿಸಿ, ಹರಿಯ-ಕೃಷ್ಣನನ್ನು,
ಕೊಂಡಾಡಿದರು-ಸ್ತುತಿಸಿದರು
ಟಿಪ್ಪಣೆ:
ವಸುದೇವ
ಇಂದ್ರಸೇನ
ಬಲಭದ್ರರಾಮ
ಮೂಲ ...{Loading}...
ಎಂದು ವಸುದೇವಾದಿ ಯಾದವ
ವೃಂದವನು ಬಲಭದ್ರರಾಮನ
ಹಿಂದಿರಿಸಿ ಬಳಿಕಿಂದ್ರಸೇನನ ಕೂಡೆ ವೊಲವಿನಲಿ
ಬಂದನಿಂದ್ರಪ್ರಸ್ಥ ಪಟ್ಟಣ
ಕಂದು ವೊಸಗೆಯ ಗುಡಿಯ ತೋರಣ
ದಿಂದ ಕನ್ನಡಿ ಕಳಶದಲಿ ಕೊಂಡಾಡಿದರು ಹರಿಯ ॥8॥
೦೦೯ ಪುರಕೆ ಬಿಜಯಙ್ಗೈಸಿ ...{Loading}...
ಪುರಕೆ ಬಿಜಯಂಗೈಸಿ ತಂದರು
ಹರಿಯನರಮನೆಗನಿಬರಂತಃ
ಪುರದ ಕಾಣಿಕೆಗೊಂಡು ಬಾಂಧವ ಜನವನುಚಿತದಲಿ
ಹರಸಿ ಮಧುರ ಪ್ರೀತಿಯಿಂದಾ
ದರಿಸಿ ಮಂತ್ರಾಳೋಚನೆಯ ಮಂ
ದಿರದೊಳೇಕಾಂತದಲಿ ಭೂಪತಿಗೆಂದನಸುರಾರಿ ॥9॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಶ್ರೀಕೃಷ್ಣನನ್ನು ಊರೊಳಕ್ಕೆ ಕರೆತಂದರು. ಕೃಷ್ಣನು ಅಂತಃಪುರದ ಕಾಣಿಕೆಯನ್ನು ಸ್ವೀಕರಿಸಿ, ಬಂಧುಗಳನ್ನೆಲ್ಲ ಉಚಿತ ರೀತಿಯಲ್ಲಿ ಆಶೀರ್ವದಿಸಿ ಮಧುರವಾದ ಪ್ರೀತಿಯಿಂದ ಎಲ್ಲರನ್ನೂ ಆದರಿಸಿ ಮಂತ್ರಾಲೋಚನೆಯ ಮಂದಿರಕ್ಕೆ ಬಂದು ಏಕಾಂತದಲ್ಲಿ ಯುಧಿಷ್ಠಿರನೊಡನೆ ಮಾತನಾಡಿದ.
ಪದಾರ್ಥ (ಕ.ಗ.ಪ)
ಪುರಕೆ ಬಿಜಯಂಗೈಸಿ ತಂದರು-ಕೃಷ್ಣನನ್ನು ಗೌರವದಿಂದ ಪಟ್ಟಣದೊಳಕ್ಕೆ ಕರೆತಂದು ಅರಮನೆಗೆ ಬರಮಾಡಿಕೊಂಡರು ಕೃಷ್ಣ,
ಅಂತಃಪುರದ ಕಾಣಿಕೆಗೊಂಡು-ಅಂತಃಪುರದಲ್ಲಿದ್ದವರನ್ನು ಕಂಡು, ಅವರಿಂದ ಕಾಣಿಕೆಯನ್ನು ಸ್ವೀಕರಿಸಿ, ಬಾಂಧವ ಜನವನು ಉಚಿತದಲಿ ಹರಸಿ-ಬಂಧುಗಳನ್ನೆಲ್ಲ ಯೋಗ್ಯರೀತಿಯಲ್ಲಿ ಆಶೀರ್ವದಿಸಿ, ಮಧುರ ಪ್ರೀತಿಯಿಂದಾದರಿಸಿ-ಅತಿಶಯವಾದ ಪ್ರೀತಿಯಿಂದ
ಎಲ್ಲರನ್ನೂ ಆತ್ಮೀಯವಾಗಿ ಕಂಡು ಮಂತ್ರಾಲೋಚನೆಯ ಸಭೆಗೆ ಬಂದು ಏಕಾಂತದಲ್ಲಿ, ಅಸುರಾರಿ-ಕೃಷ್ಣ, ಭೂಪತಿಗೆ-ಯುಧಿಷ್ಠಿರನಿಗೆ,
ಎಂದನು-ಹೀಗೆ ಹೇಳಿದನು
ಮೂಲ ...{Loading}...
ಪುರಕೆ ಬಿಜಯಂಗೈಸಿ ತಂದರು
ಹರಿಯನರಮನೆಗನಿಬರಂತಃ
ಪುರದ ಕಾಣಿಕೆಗೊಂಡು ಬಾಂಧವ ಜನವನುಚಿತದಲಿ
ಹರಸಿ ಮಧುರ ಪ್ರೀತಿಯಿಂದಾ
ದರಿಸಿ ಮಂತ್ರಾಳೋಚನೆಯ ಮಂ
ದಿರದೊಳೇಕಾಂತದಲಿ ಭೂಪತಿಗೆಂದನಸುರಾರಿ ॥9॥
೦೧೦ ಏನು ಕರೆಸಿದಿರೈ ...{Loading}...
ಏನು ಕರೆಸಿದಿರೈ ಪ್ರಯೋಜನ
ವೇನು ನಿಮ್ಮುತ್ಸಾಹ ಶಕ್ತಿಯೊ
ಳೇನು ದುರ್ಘಟವೇನು ಶಂಕಿತವೇನು ಸಂಸ್ಖಲಿತ
ದಾನವರ ಕೌರವರ ವೈರದೊ
ಳೇನು ವಿಗ್ರಹವಿಲ್ಲಲೇ ಹದ
ನೇನೆನಲು ಕೃಷ್ಣಂಗೆ ಬಿನ್ನಹ ಮಾಡಿದನು ನೃಪತಿ ॥10॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಏತಕ್ಕೆ ಕರೆಸಿದಿರಿ? ನನ್ನಿಂದ ಏನಾಗಬೇಕು? ನಿಮ್ಮ ಉತ್ಸಾಹಶಕ್ತಿಯಲ್ಲಿ ಏನು ದುರ್ಘಟನೆ ನಡೆದಿದೆ? ಸಂದೇಹವೇನು ಉಂಟಾಗಿದೆ. ತಪ್ಪಿ ಹೋಗಿರುವಂತಹದೇನು ? ದಾನವರು ಹಾಗು ಕೌರವರೊಡನೆ ನಿಮಗಿರುವ ವೈರದಿಂದ ಯುದ್ಧವೇನೂ ಪ್ರಾಪ್ತವಾಗಿಲ್ಲ ತಾನೇ? ಪರಿಸ್ಥಿತಿಯೇನು ? ಎಂದು ಕೇಳಲು ಕೃಷ್ಣನಿಗೆ ಯುಧಿಷ್ಠಿರ ರಾಜ ಹೀಗೆ ವಿಜ್ಞಾಪನೆ ಮಾಡಿದ.
ಪದಾರ್ಥ (ಕ.ಗ.ಪ)
ವಿಗ್ರಹ-ಯುದ್ಧ
ಏನು ಕರೆಸಿದಿರೈ-ಯಾತಕ್ಕೆ ನನ್ನನ್ನು ಕರೆಸಿದರಯ್ಯ ? ಪ್ರಯೋಜನವೇನು-ನನ್ನಿಂದ ಏನಾಗಬೇಕು ? ದುರ್ಘಟ-ದುರ್ಘಟನೆ, ಶಂಕಿತ-ಸಂದೇಹ, ಸಂಸ್ಖಲಿತ-ಜಾರಿ ಹೋಗಿರುವುದು, ವಿಗ್ರಹವಿಲ್ಲಲೇ-ಯುದ್ಧೇನೂ ಇಲ್ಲವಷ್ಟೆ ? ಹದನೇನು-ಏನು ಸಮಾಚಾರ ? ಬಿನ್ನಹ ಮಾಡಿದನು-ಭಿನ್ನವಿಸಿಕೊಂಡನು, ನೃಪತಿ-ರಾಜ
ಮೂಲ ...{Loading}...
ಏನು ಕರೆಸಿದಿರೈ ಪ್ರಯೋಜನ
ವೇನು ನಿಮ್ಮುತ್ಸಾಹ ಶಕ್ತಿಯೊ
ಳೇನು ದುರ್ಘಟವೇನು ಶಂಕಿತವೇನು ಸಂಸ್ಖಲಿತ
ದಾನವರ ಕೌರವರ ವೈರದೊ
ಳೇನು ವಿಗ್ರಹವಿಲ್ಲಲೇ ಹದ
ನೇನೆನಲು ಕೃಷ್ಣಂಗೆ ಬಿನ್ನಹ ಮಾಡಿದನು ನೃಪತಿ ॥10॥
೦೧೧ ದನುಜರಲಿ ಕುರುಸೇನೆಯಲಿ ...{Loading}...
ದನುಜರಲಿ ಕುರುಸೇನೆಯಲಿ ಭಯ
ವೆನಗೆ ಭಾರಿಯೆ ನಿಮ್ಮ ಘನಪದ
ವನಜವಿದು ಸೀಸಕವಲೇ ತನ್ನುತ್ತಮಾಂಗದಲಿ
ಮುನಿಯ ಹೇಳಿಕೆ ಬೊಪ್ಪಗಮರೇಂ
ದ್ರನಲಿ ಸಮರಸವಿಲ್ಲ ಗಡ ನ
ಮ್ಮಿನಿಬರಲಿ ಸಾಮಥ್ರ್ಯವಿದ್ದುದಕೇನು ಫಲವೆಂದ ॥11॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ದನುಜರಲ್ಲಾಗಲಿ ಕುರು ಸೈನ್ಯದಲ್ಲಾಗಲಿ ಭಯ ನಮಗೆ ಭಾರಿಯನಿಸುತ್ತದೆಯೇ ? ನಿನ್ನ ಶ್ರೇಷ್ಠನಾದ ಪಾದಕಮಲಗಳು ನಮ್ಮ ತಲೆಗೆ ತಲೆಗಾಪಿನಂತಿವೆಯಲ್ಲವೆ? ನಾರದಮುನಿ ಹೇಳಿದಂತೆ ನಮ್ಮಯ್ಯ ಪಾಂಡುವಿಗೆ ದೇವೇಂದ್ರನೊಡನೆ ಸರಿಸಾಮ್ಯತೆಯಿಲ್ಲವಲ್ಲವೇ. ನಮ್ಮ ಇಷ್ಟು ಜನರಲ್ಲಿಯೂ ಸಾಮಥ್ರ್ಯವಿದ್ದೂ ಏನು ಪ್ರಯೋಜನವಾಯಿತು ?
ಪದಾರ್ಥ (ಕ.ಗ.ಪ)
ಪದಪವನಜ-ಪಾದಕಮಲ, ಸೀಸಕ-ತಲೆಗಾಪು
ದನುಜರು-ಅಸುರರು, ಭಾರಿಯೆ-ದೊಡ್ಡದೇ ? ಘನಪದವನಜ-ಶ್ರೇಷ್ಠವಾದ ಪಾದಕಮಲ, ಸೀಸಕವಲೇ-ತಲೆಯನ್ನು ರಕ್ಷಿಸುವ, ತೆಲೆಗಾವಲ್ಲವೇ ? ಉತ್ತಮಾಂಗ-ತಲೆ, ಬೊಪ್ಪಗೆ-ತಂದೆ ಪಾಂಡುವಿಗೆ, ನಾರದ ಮುನಿಯ ಹೇಳಿಕೆಯಂತೆ, ಅಮರೇಂದ್ರನಲಿ-ದೇವೇಂದ್ರನೊಡನೆ, ಸಮರಸವಿಲ್ಲ ಗಡ-ಹೊಂದಾಣಿಕೆಯಿಲ್ಲವಂತೆ ! ನಮ್ಮಿನಿಬರಲಿ-ಮಕ್ಕಳಾದ ನಮ್ಮ ಇಷ್ಟು ಮಂದಿಯಲ್ಲಿ, ಸಾಮಥ್ರ್ಯವಿದ್ದುದಕೆ-ಪರಾಕ್ರಮವಿದ್ದಾಗ್ಯೂ, ಏನು ಫಲ-ಏನು ಪ್ರಯೋಜನವಾಯಿತು ?
ಮೂಲ ...{Loading}...
ದನುಜರಲಿ ಕುರುಸೇನೆಯಲಿ ಭಯ
ವೆನಗೆ ಭಾರಿಯೆ ನಿಮ್ಮ ಘನಪದ
ವನಜವಿದು ಸೀಸಕವಲೇ ತನ್ನುತ್ತಮಾಂಗದಲಿ
ಮುನಿಯ ಹೇಳಿಕೆ ಬೊಪ್ಪಗಮರೇಂ
ದ್ರನಲಿ ಸಮರಸವಿಲ್ಲ ಗಡ ನ
ಮ್ಮಿನಿಬರಲಿ ಸಾಮಥ್ರ್ಯವಿದ್ದುದಕೇನು ಫಲವೆಂದ ॥11॥
೦೧೨ ಪಿತನ ಪರಮಪ್ರೀತಿಗುನ್ನತ ...{Loading}...
ಪಿತನ ಪರಮಪ್ರೀತಿಗುನ್ನತ
ಗತಿಗೆ ನಿರ್ಮಳ ರಾಜಸೂಯ
ಕ್ರತುವೆ ಸಾಧನವೆಂದು ಮುನಿಯುಪದೇಶಿಸಿದ ತನಗೆ
ಕ್ರತು ಮಹಾಕ್ರತು ಸಕಲಧರಣೀ
ಪತಿಗಳರ್ಥವ ಗುಣದಲೀಯರು
ವ್ರತವೆನಗೆ ಸಂಕಲ್ಪವಾಯ್ತಿದಕೇನು ಹದನೆಂದ ॥12॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ತಂದೆಯ ಪರಮ ಪ್ರೀತಿಗೂ ಉನ್ನತಗತಿಗೂ ನಿರ್ಮಲ ರಾಜಸೂಯಯಾಗವೇ ಸಾಧನ ಎಂದು ನಾರದ ಮುನಿ ನನಗೆ ಬೋಧಿಸಿದ. ರಾಜಸೂಯಯಾಗ ಒಂದು ಮಹಾಯಾಗ. ಎಲ್ಲ ರಾಜರೂ ತಾವಗಿಯೇ ಸಂಪತ್ತನ್ನು ಕೊಡುವುದಿಲ್ಲ. ಆ ವ್ರತವನ್ನು ಕೈಕೊಳ್ಳಬೇಕೆಂದು ನಾನು ಸಂಕಲ್ಪ ಮಾಡಿದ್ದೇನೆ. ಇದಕ್ಕೆ ಮಾಡುವುದೇನು?
ಪದಾರ್ಥ (ಕ.ಗ.ಪ)
ಕ್ರತು -ಯಜ್ಞ
ಪಿತನ ಪರಮಪ್ರೀತಿಗೆ-ತಂದೆಗೆ ಪರಮಪ್ರೀತಿಯನ್ನು ತೋರಿಸಬೇಕಾದರೆ, ಉನ್ನತಗತಿಗೆ-ಅವನಿಗೆ ಶ್ರೇಷ್ಠ ಗತಿಯನ್ನು ಉಂಟುಮಾಡಬೇಕಾದರೆ, ರಾಜಸೂಯ ಕ್ರತುವೆ-ರಾಜಸೂಯ ಯಾಗವೇ, ಸಾಧನ ಎಂದು ಮುನಿ-ನಾರದ ಮುನಿ, ಉಪದೇಶಿಸಿದ-ಉಪದೇಶಮಾಡಿದ, ಕ್ರತು-ಆ ಯಾಗ, ಮಹಾಕ್ರತು-ಸಾಧಾರಣವಾದುದಲ್ಲಿ ಮಹಾಯಾಗ, ಸಕಲಧ ರಣೀಪತಿಗಳು-ಭೂಮಿಯ ಮೇಲಿರುವ ಸಮಸ್ತ ರಾಜರೂ, ಅರ್ಥವ-ಹಣವನ್ನು, ಗುಣದಲೀಯ-ಸಹಜ ಗುಣವಾಗಿ ಕೊಡುವುದಿಲ್ಲ, ವ್ರತವೆನೆಗೆ ಸಂಕಲ್ಪವಾಯಿತು
ವ್ರತವನ್ನು ಕೈಕೊಂಡು ಸಂಕಲ್ಪಮಾಡಿಬಿಟ್ಟಿದ್ದೇನೆ, ಇದಕೇನು ಹದನು-ಇದಕ್ಕೇನು ದಾರಿ?
ಮೂಲ ...{Loading}...
ಪಿತನ ಪರಮಪ್ರೀತಿಗುನ್ನತ
ಗತಿಗೆ ನಿರ್ಮಳ ರಾಜಸೂಯ
ಕ್ರತುವೆ ಸಾಧನವೆಂದು ಮುನಿಯುಪದೇಶಿಸಿದ ತನಗೆ
ಕ್ರತು ಮಹಾಕ್ರತು ಸಕಲಧರಣೀ
ಪತಿಗಳರ್ಥವ ಗುಣದಲೀಯರು
ವ್ರತವೆನಗೆ ಸಂಕಲ್ಪವಾಯ್ತಿದಕೇನು ಹದನೆಂದ ॥12॥
೦೧೩ ತಿರುಗಿದರೆ ಸಙ್ಕಲ್ಪ ...{Loading}...
ತಿರುಗಿದರೆ ಸಂಕಲ್ಪ ಹಾನಿಯ
ಪರಮ ಪಾತಕವಿದು ಮಹಾ ನಿ
ಷ್ಠುರದ ಮಖವಿನ್ನಮರ ಮುನಿಪತಿ ದೇವಲೋಕದಲಿ
ಹರಹುವನು ಪರಿಹಾಸ್ಯಮಯ ಸಾ
ಗರವ ದಾಟಿಸು ಜೀಯ ಭವಸಾ
ಗರದಿನಿದು ಮಿಗಿಲೇ ಮುರಾಂತಕಯೆಂದನಾ ಭೂಪ ॥13॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಹಿಂಜರಿದರೆ ಸಂಕಲ್ಪ ಹಾನಿಯಾಗುತ್ತದೆ. ಅದು ಪರಮ ಪಾಪ. ಯಾಗ ಮಹಾ ಕಠಿನವಾದುದು. ನಾರದಮುನಿ ದೇವಲೋಕದಲ್ಲೆಲ್ಲ ಈ ಸುದ್ದಿಯನ್ನು ಹರಡಿದರೆ ಪರಿಹಾಸವಾಗುತ್ತದೆ. ಆದ್ದರಿಂದ ನೀನೇ ಹೇಗಾದರೂ ಈ ಸಾಗರವನ್ನು ದಾಟಿಸು. ಮುರಾಂತಕ, ಭವಸಾಗರವನ್ನೇ ದಾಟಿಸುವ ನಿನಗೆ ಇದು ದೊಡ್ಡ ವಿಷಯವೇ?
ಪದಾರ್ಥ (ಕ.ಗ.ಪ)
ತಿರುಗಿದರೆ-ಮುಂದುವರಿಯದೆ ಹಿಂತಿರುಗಿದರೆ, ಸಂಕಲ್ಪ ಹಾನಿಯ ಪರಮ ಪಾತಕ-ಮಾಡಿದ ಸಂಕಲ್ಪವನ್ನು, ನೆರವೇರಿಸದಿದ್ದರೆ ಅದರಿಂದ ಮಹಾಪಾಪವುಂಟಾಗುತ್ತದೆ, ಇದು ಮಹಾ ನಿಷ್ಠುರದ ಮಖವು-ಇದು ತುಂಬ ಕಠಿಣವಾದ ಯಜ್ಞ, ಇನ್ನು ಅಮರ ಮುನಿಪತಿ-ಇನ್ನು ಆ ದೇವರ್ಷಿ ನಾರದ, ದೇವಲೋಕದಲ್ಲೆಲ್ಲ ಈ ಸುದ್ದಿಯನ್ನು ಹರಡಿಬಿಡುತ್ತಾನೆ, ಸಂಕಲ್ಪ ನೆರವೇರಿಸದಿದ್ದರೆ ಪರಿಹಾಸ್ಯಕ್ಕೆ ಗುರಿಯಾಗಬೇಕಾಗುತ್ತದೆ ಆದ್ದರಿಂದ ಜೀಯ-ಸ್ವಾಮಿ, ಸಾಗರವ ದಾಟಿಸು-ಈ ಸಾಗರವನ್ನು ಹೇಗಾದರೂ ದಾಟಿಸು
ಭವಸಾಗರದಿಂ ಇದು ಮಿಗಿಲೇ ಮುರಾಂತಕ-ನೀನು ಭವಸಾಗರವನ್ನೇ ದಾಟಿಸಲಬಲ್ಲವನು ಇದೇನು ನಿನಗೆ ದೊಡ್ಡ ವಿಷಯವೇ ? ಕೃಷ್ಣ,
ಟಿಪ್ಪಣೆ :
ಅಮರ ಮುನಿಪತಿ
ಮುರಾಂತಕ
ಮೂಲ ...{Loading}...
ತಿರುಗಿದರೆ ಸಂಕಲ್ಪ ಹಾನಿಯ
ಪರಮ ಪಾತಕವಿದು ಮಹಾ ನಿ
ಷ್ಠುರದ ಮಖವಿನ್ನಮರ ಮುನಿಪತಿ ದೇವಲೋಕದಲಿ
ಹರಹುವನು ಪರಿಹಾಸ್ಯಮಯ ಸಾ
ಗರವ ದಾಟಿಸು ಜೀಯ ಭವಸಾ
ಗರದಿನಿದು ಮಿಗಿಲೇ ಮುರಾಂತಕಯೆಂದನಾ ಭೂಪ ॥13॥
೦೧೪ ನಕ್ಕನಸುರವಿರೋಧಿ ಮುನಿ ...{Loading}...
ನಕ್ಕನಸುರವಿರೋಧಿ ಮುನಿ ಹಾ
ಯಿಕ್ಕಿದನಲಾ ಬಲೆಯನಕಟಾ
ಸಿಕ್ಕಿದಿರಲಾ ಸ್ವಾಮಿದ್ರೋಹರು ಸದರವೇ ನೃಪರು
ಅಕ್ಕಜದ ಮಖವಿದರ ಚೂಣಿಗೆ
ಚುಕ್ಕಿಯಾಯಿತು ಮನ ಮಹೀಶನ
ಮಕ್ಕಳಾಟಿಕೆಯಾಯ್ತೆನುತ ತೂಗಿದನು ಸಿರಿಮುಡಿಯ ॥14॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಯುಧಿಷ್ಠಿರನ ಮಾತನ್ನಾಲಿಸಿದ ಕೃಷ್ಣ ಪರಿಹಾಸ ಮಾಡಿಕೊಂಡು ನಗುತ್ತಾ “ಹಾ ! ನಾರದ ಮುನಿ ಬಲೆ ಹಾಕಿಬಿಟ್ಟನಲ್ಲ ! ಅಯ್ಯೋ ನೀವು ಸಿಕ್ಕಿಹಾಕಿಕೊಂಡಿರಲ್ಲ ! ನೀವು ಸ್ವಾಮಿದ್ರೋಹರಾದಿರಿ ! ರಾಜರನ್ನು ಗೆಲ್ಲುವುದೆಂದರೇನು ಅಷ್ಟು ಸುಲಭವೇ ? ಅತಿಶಯವಾದ ಯಾಗವಿದು. ಮೊಟ್ಟ ಮೊದಲಿಗೇ ಯುಧಿಷ್ಠಿರ ರಾಜನ ಮನಸ್ಸು ಯಾಗವನ್ನು ಗುರಿಯಾಗಿಸಿಕೊಂಡಿತು. ಇದು ಮಕ್ಕಳಾಟದಂತೆ ಆಗಿಬಿಟ್ಟಿತಲ್ಲ ಎಂದು ಕೃಷ್ಣ ವಿನೋದದಿಂದ ತಲೆದೂಗಿದ.
ಪದಾರ್ಥ (ಕ.ಗ.ಪ)
ಅಕ್ಕಜ-ಆಶ್ಚರ್ಯ, ಮಖ-ಯಜ್ಞ, ಚೂಣಿ-ಸೇನೆಯ ಮುಂಭಾಗ
ಯುಧಿಷ್ಠೀರನ ಮಾತು ಕೇಳಿ ನಕ್ಕನಸುರವಿರೋಧಿ-ಕೃಷ್ಣ ನಕ್ಕ, ಮುನಿ ಹಾ ಇಕ್ಕಿದನಲಾ ಬಲೆಯನು-ಆ ದೇವರ್ಷಿ ಅಂತೂ
ಬಲೆ ಹಾಕಿದನಲ್ಲಾ ! ಸಿಕ್ಕಿದಿರಲಾ ಸ್ವಾಮಿದ್ರೋಹರು-ನೀವು ಸ್ವಾಮಿ ಎನ್ನುವ ನನಗೆ ತಿಳಿಸದೆಯೇ ದ್ರೋಹ ಮಾಡಿ ಆ ಬಲೆಯಲ್ಲಿ ಸಿಕ್ಕಿಹಾಕಿಕೊಂಡಿರಲ್ಲಾ ! ಸದರವೇ ನೃಪರು-ರಾಜರನ್ನು ಗೆದ್ದು ಕಾಣಿಕೆ ಸಂಗ್ರಹಿಸುವುದೆಂದರೆ ಸುಲಭವೇ ? ಅಕ್ಕಜದ ಮಖವು-ಈ ರಾಜಸೂಯವೆಂಬುದು ಅತಿಶಯವಾದ ಯಾಗ, ಮಹೀಶನ-ಯುಧಿಷ್ಠಿರ ರಾಜನ, ಮನ-ಮನಸ್ಸು, ಅದರ ಚೂಣಿಗೆ-ಅದರ ಮುಂಭಾಗಕ್ಕೆ ಗುರಿಯಾಯಿತು, ಮಕ್ಕಳಾಟಿಕೆಯಾಯ್ತು-ಅಸಾಧಾರಣ ಕೆಲಸವಾದುದರಿಂದ, ಕೇವಲ ಮಕ್ಕಳ ಆಟದಂತೆ ಆಯಿತು,
ಎಂದು ಕೃಷ್ಣ ತನ ಸಿರಿಮುಡಿಯ-ಸಂಪದ್ಯುಕ್ತವಾದ ತಲೆಯನ್ನು ತೂಗಿದ.
ಟಿಪ್ಪನೀ (ಕ.ಗ.ಪ)
ಚುಕ್ಕಿಯಾಯಿತು - ಚುಕ್ಕಿಯೆನೆ ಶುಕ್ರಂ
ಮೂಲ ...{Loading}...
ನಕ್ಕನಸುರವಿರೋಧಿ ಮುನಿ ಹಾ
ಯಿಕ್ಕಿದನಲಾ ಬಲೆಯನಕಟಾ
ಸಿಕ್ಕಿದಿರಲಾ ಸ್ವಾಮಿದ್ರೋಹರು ಸದರವೇ ನೃಪರು
ಅಕ್ಕಜದ ಮಖವಿದರ ಚೂಣಿಗೆ
ಚುಕ್ಕಿಯಾಯಿತು ಮನ ಮಹೀಶನ
ಮಕ್ಕಳಾಟಿಕೆಯಾಯ್ತೆನುತ ತೂಗಿದನು ಸಿರಿಮುಡಿಯ ॥14॥
೦೧೫ ಕೆದರಿ ಸಪ್ತದ್ವೀಪಪತಿಗಳ ...{Loading}...
ಕೆದರಿ ಸಪ್ತದ್ವೀಪಪತಿಗಳ
ಸದೆದು ರಚಿಸುವ ರಾಜಸೂಯದ
ಹದನನಂಗೈಸುವನದಾರೀ ವರ್ತಮಾನದಲಿ
ಸುದತಿಯರ ಸೂಳೆಯರ ಮುಂದು
ಬ್ಬಿದೆಯಲಾ ನಾರದನ ಘಲ್ಲಣೆ
ಗಿದು ಸುದುರ್ಘಟವಿಂದು ಬಿದ್ದ ವಿಘಾತಿ ಬಲುಹೆಂದ ॥15॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಸಪ್ತದ್ವೀಪಗಳ ರಾಜರನ್ನು ಚೆದುರಿಸಿ ಸದೆಬಡಿದು ಮಾಡಬೇಕಾದ ಯಾಗ ಈ ರಾಜಸೂಯ. ಈಗಿನ ಕಾಲದಲ್ಲಿ ಇಂತಹ ಯಾಗವನ್ನು ಕೈಕೊಂಡು ನಿರ್ವಹಿಸುವರಾರು? ನಾರದನ ಬಣ್ಣದ ಮಾತು ಕೇಳಿ ಸುದತಿಯರ ಮತ್ತು ಸೂಳೆಯರ ಮುಂದೆ ಉಬ್ಬಿಹೋದೆಯಲ್ಲಾ ! ಇದು ಬಹಳ ದುಷ್ಕರವಾದ ಕಾರ್ಯ. ಬಿದ್ದ ಏಟು ಬಲವಾಗಿದೆ.
ಪದಾರ್ಥ (ಕ.ಗ.ಪ)
ಅಂಗೈಸು-ನಿರ್ವಹಿಸು, ಘಲ್ಲಣೆ-ಕಾಟ
ಕೆದರಿ-ಚದುರಿಸಿ, ಸದೆದು-ಬಡಿದು ಹಾಕಿ, ಸೋಲಿಸಿ, ರಚಿಸುವ-ಮಾಡುವ, ಹದನನು-ವಿಚಾರವನ್ನು, ಅಂಗೈಸುವನದುರು-ಕೈಕೊಂಡು ನಿರ್ವಹಿಸುವವನಾರು? ಈ ವರ್ತಮಾನದಲಿ-ಈಗಿನ ಕಾಲದಲ್ಲಿ, ಸುದತಿಯರು-ಸ್ತ್ರೀಯರು, ಉಬ್ಬಿದೆಯಲಾ-ಹೆಮ್ಮೆಪಟ್ಟು ಕೊಂಡೆಯಲ್ಲವೆ ? ನಾರದನ ಘಲ್ಲಣೆ-ನಾರದನು ಕೊಟ್ಟ ಕಾಟಕ್ಕೆ, ಇದು ಸುದುರ್ಘಟ-ಆ ಆಪತ್ತು ಪ್ರಾಪ್ತವಾಯಿತು, ಇಂದು ಬಿದ್ದ ವಿಘಾತಿ-ಈಗ ಬಿದ್ದಿರುವ ಪೆಟ್ಟು, ಬಲುಹು-ಮಹತ್ತಾದುದು ಎಂದು
ಮೂಲ ...{Loading}...
ಕೆದರಿ ಸಪ್ತದ್ವೀಪಪತಿಗಳ
ಸದೆದು ರಚಿಸುವ ರಾಜಸೂಯದ
ಹದನನಂಗೈಸುವನದಾರೀ ವರ್ತಮಾನದಲಿ
ಸುದತಿಯರ ಸೂಳೆಯರ ಮುಂದು
ಬ್ಬಿದೆಯಲಾ ನಾರದನ ಘಲ್ಲಣೆ
ಗಿದು ಸುದುರ್ಘಟವಿಂದು ಬಿದ್ದ ವಿಘಾತಿ ಬಲುಹೆಂದ ॥15॥
೦೧೬ ಮೊದಲಲೇ ನಿಮ್ಮವರು ...{Loading}...
ಮೊದಲಲೇ ನಿಮ್ಮವರು ನಿಮ್ಮ
ಭ್ಯುದಯವನು ಸೇರುವರೆ ಕೌರವ
ರದರೊಳಗ್ಗದ ಕರ್ಣ ಶಕುನಿ ಜಯದ್ರಥಾದಿಗಳು
ಕುದುಕುಳಿಗಳೀಚೆಯಲಿ ಕಂಸನ
ಮದಮುಖನ ಪರಿವಾರವಿದೆ ದೂ
ರದಲಿ ಮಗಧನ ಹೊರೆಯಲದನೇವಣ್ಣಿಸುವೆನೆಂದ ॥16॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಮೊದಲಲ್ಲೆ ನಿಮ್ಮ ಆ ಕೌರವರು ನಿಮ್ಮ ಅಭ್ಯುದಯವನ್ನು ಸಹಿಸುತ್ತಾರೆಯೇ? ಅವರಲ್ಲೂ ಪರಾಕ್ರಮಿಯಾದ ಕರ್ಣ ಶಕುನಿ ಜಯದ್ರಥಾದಿಗಳು ಹೊಟ್ಟೆಕಿಚ್ಚಿನವರು. ಈಚೆ ದೂರದಲ್ಲಿ ಮಗಧರಾಜನ ಸಮೀಪದಲ್ಲೇ, ಕಂಸನ ಗರ್ವಪೂರಿತ ಪರಿವಾರವಿದೆ. ನಾನೇನು ಬಣ್ಣಿಸಲಿ ?
ಪದಾರ್ಥ (ಕ.ಗ.ಪ)
ಕುದುಕುಳಿ-ಹೊಟ್ಟೆಕಿಚ್ಚಿನವ
ಮದಮುಖ - ಗರ್ವಿಷ್ಠ
ಮೊದಲಲೇ-ಪ್ರಾರಂಭದಲ್ಲೇ, ನಿಮ್ಮವರು-ನಿಮ್ಮದಾಯಾದಿಗಳು, ನಿಮ್ಮಭ್ಯುದಯವನು-ನಿಮ್ಮ ಏಳಿಗೆಯನ್ನು, ಸೇರುವರೆ-ಸಹಿಸಿಕೊಳ್ಳುವರೆ ? ಅಗ್ಗದ-ಶ್ರೇಷ್ಠರೆನಿಸಿದ, ಕುದುಕುಳಿಗಳು-ಹೊಟ್ಟೆಕಿಚ್ಚಿನವರು, ಈಚೆಯಲಿ-ಈ ಕಡೆ, ಪರಿವಾರವಿದೆ-ನಂಟರಿಷ್ಟರಿದ್ದಾರೆ, ಏನು ಬಣ್ಣಿಸುವೆನು-ನಾನೇನು ವಿವರಿಸಲಿ ?
ಮೂಲ ...{Loading}...
ಮೊದಲಲೇ ನಿಮ್ಮವರು ನಿಮ್ಮ
ಭ್ಯುದಯವನು ಸೇರುವರೆ ಕೌರವ
ರದರೊಳಗ್ಗದ ಕರ್ಣ ಶಕುನಿ ಜಯದ್ರಥಾದಿಗಳು
ಕುದುಕುಳಿಗಳೀಚೆಯಲಿ ಕಂಸನ
ಮದಮುಖನ ಪರಿವಾರವಿದೆ ದೂ
ರದಲಿ ಮಗಧನ ಹೊರೆಯಲದನೇವಣ್ಣಿಸುವೆನೆಂದ ॥16॥
೦೧೭ ಕಾಲಯವನಾ ದನ್ತವಕ್ರ ...{Loading}...
ಕಾಲಯವನಾ ದಂತವಕ್ರ ನೃ
ಪಾಲರಲಿ ದುರುದುಂಬಿಯೈ ಶಿಶು
ಪಾಲ ಪೌಂಡ್ರಕರೆಂಬರಿಗೆ ಸಮದಂಡಿಯೆಮ್ಮೊಡನೆ
ಖೂಳರೀರ್ವರು ಹಂಸ ಡಿಬಿಕರು
ಸಾಲುವನ ಮುರ ನರಕರಾಳನನ
ಮೇಳವವನೇನೆಂಬೆನೈ ಭೂಪಾಲ ಕೇಳ್ ಎಂದ ॥17॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕಾಲಯವನ, ದಂತವಕ್ರ, ರಾಜರಲ್ಲಿ ಪರಮನೀಚನಾದ ಶಿಶುಪಾಲ, ಪೌಂಡ್ರಕ ಎಂಬವರಿಗೆ ನಮ್ಮೊಡನೆ ಸರಿಸಮಾನತೆ. ಹಂಸ, ಡಿಬಿಕ ಎಂಬವರಿಬ್ಬರೂ ದುಷ್ಟರು. ಇನ್ನು ಸಾಲ್ವ, ಮುರ, ನರಕ ಮತ್ತಿವರ ಪರಿವಾರವನ್ನು ಏನೆಂದು ಹೇಳಲಿ ?
ಪದಾರ್ಥ (ಕ.ಗ.ಪ)
ದುರುದುಂಬಿ-ನಿಚ
ನೃಪಾಲರಲಿ-ರಾಜರುಗಳಲ್ಲಿ, ದುರುದುಂಬಿಯೈ-ನೀಚನಯ್ಯ ! ಸಮದಂಡಿಯೆಮ್ಮೊಡನೆ-ನಮ್ಮೊಡನೆ ಸರಿಸಮಾನ ಖೂಳರೀರ್ವರು ಹಂಸ ಡಿಬಿಕರು, ಸಾಲುವನ ಮುರ ನರಕರ ಮೇಳವನು-ಒಕ್ಕೂಟವನ್ನು, ಏನೆಂಬೆನೈ-ಏನೆಂದು ಹೇಳಲಯ್ಯಾ ?
ಮೂಲ ...{Loading}...
ಕಾಲಯವನಾ ದಂತವಕ್ರ ನೃ
ಪಾಲರಲಿ ದುರುದುಂಬಿಯೈ ಶಿಶು
ಪಾಲ ಪೌಂಡ್ರಕರೆಂಬರಿಗೆ ಸಮದಂಡಿಯೆಮ್ಮೊಡನೆ
ಖೂಳರೀರ್ವರು ಹಂಸ ಡಿಬಿಕರು
ಸಾಲುವನ ಮುರ ನರಕರಾಳನನ
ಮೇಳವವನೇನೆಂಬೆನೈ ಭೂಪಾಲ ಕೇಳೆಂದ ॥17॥
೦೧೮ ಕೆಲವರಿದರೊಳು ನಮ್ಮ ...{Loading}...
ಕೆಲವರಿದರೊಳು ನಮ್ಮ ಕೈಯಲಿ
ಕೊಲೆಗೆ ಭಂಗಕೆ ಬಂದು ಬಿಟ್ಟರು
ಕೆಲಕೆ ಸರಿವವನಲ್ಲ ಮಲೆವರ ಮಾರಿ ಮಾಗಧನು
ಬಳಿಕೆಮಗೆ ಬಲವದ್ವಿರೋಧದ
ತೊಳಸು ಬಿದ್ದುದು ತೋಟಿಗಾರದೆ
ಜಲಧಿ ಮಧ್ಯದಲೂರ ಕಟ್ಟಿದೆವರಸ ಕೇಳ್ ಎಂದ ॥18॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಇವರಲ್ಲಿ ಕೆಲವರು ನಮ್ಮ ಕೈಯಲ್ಲಿ ಕೊಲೆಗೂ ಭಂಗಕ್ಕೂ ಗುರಿಯಾದವರು. ಗರ್ವದಿಂದ ಮೆರೆದವರಿಗೆ ಮಾರಿಯಂತಿರುವ ಮಾಗಧ (ಜರಾಸಂಧ) ಪಕ್ಕಕ್ಕೆ ಸರಿಯುವವನಲ್ಲ. ಕಂಸನನ್ನು ಕೊಂದಮೇಲೆ ಮಗಧರೊಡನೆ ಬದ್ಧ ದ್ವೇಷವುಂಟಾಗಿ ಅವನ ಕಾಟವನ್ನು ತಡೆಯಲಾರದೆ ಅವನೊಡನೆ ಹೋರಾಡಲಾರದೆ ಸಮುದ್ರದ ನಡುವೆ ಊರನ್ನು ಕಟ್ಟಿಕೊಂಡೆವು. ರಾಜ.
ಪದಾರ್ಥ (ಕ.ಗ.ಪ)
ತೊಳಸು-ಕಾಟ, ತೋಟಿ-ಹೋರಾಟ
ಕೆಲವರಿದರೊಳು-ಇವರಲ್ಲಿ ಕೆಲವರು, ನಮ್ಮ ಕೈಯಲಿ-ನನ್ನ ಕೈಯಿಂದ, ಕೊಲೆಗೆ ಭಂಗಕೆ ಬಂದು ಬಿಟ್ಟರು-ಕೊಲೆಗೆ ಗುರಿಯಾದರು,
ಸೋಲಿಗೆ ಅಪಮಾನಕ್ಕೆ ಗುರಿಯಾದರು, ಇನ್ನೊಬ್ಬ ಮಲೆವರ ಮಾರಿ-ಪ್ರತಿಭಟಿಸುವವರಲ್ಲಿ, ಮಾರಿ-ಮಾರಿಯಂತಿರುವನು,
ಮಾಗಧನು-ಜರಾಸಂಧನು, ಕೆಲಕೆ ಸರಿವವನಲ್ಲ-ಪಕ್ಕಕ್ಕೆ ಜರುಗುವವನಲ್ಲ, ಹಾಗಾಗಿ ಎಮಗೆ ಬಲವದ್ವರೋಧದ ತೊಳಸು ಬಿದ್ದುದು-ಅವನೊಡನೆ, ನನಗೆ ಬಲಿಷ್ಠವಾದ ಶತ್ರುವಿನ ತೊಡಕುಂಟಾಯಿತು, ತೋಟಿಗಾರದೆ-ಅವನೊಡನೆ ಯುದ್ಧಮಾಡಲಾಗದೆ, ಜಲಧಿ ಮಧ್ಯದಲೂರ ಕಟ್ಟಿದೆವರಸ-ಸಮುದ್ರದ ನಡುವೆ, ಊರನ್ನು ನಿರ್ಮಿಸಿಕೊಂಡೆನಯ್ಯ
ಟಿಪ್ಪನೀ (ಕ.ಗ.ಪ)
ಮಾಗಧ (ಜರಾಸಂಧ)
ಜರಾಸಂಧ :
ಮಹಾಭಾರತದಲ್ಲಿ ಬರುವ ಮಹಾಪ್ರಬಲ ಚಕ್ರವರ್ತಿಗಳಲ್ಲಿ ಜರಾಸಂಧ ಪ್ರಮುಖನಾದವನು. ಬಿಹಾರದ ರಾಜಗೃಹ ಎಂಬ ನಗರವೇ ಈತನ ರಾಜಧಾನಿ. ಹಿಂದಿನ ಮಗಧ ರಾಜಧಾನಿಯ ದೊರೆ ಬೃಹದ್ರಥನ ಮಗನೇ ಈ ಜರಾಸಂಧ.
ಬೃಹದ್ರಥನಿಗೆ ಇಬ್ಬರು ಹೆಂಡಿರಿದ್ದರು. ಮಕ್ಕಳಿರಲಿಲ್ಲ. ಚಂಡಕೌಶಿಕನೆಂಬ ಮುನಿಮಂತ್ರಿಸಿಕೊಟ್ಟ ಮಾವಿನಹಣ್ಣನ್ನು ಇಬ್ಬರು ಪತ್ನಿಯರಿಗೂ ಹಂಚಿದ್ದಿರಂದ ಇಬ್ವರಿಗೂ ಒಂದೊಂದು ಹೋಳಾಗಿ ಮಗು ಹುಟ್ಟಿತು. ಬೇಸರದಿಂದ ಆ ಹೋಳುಗಳನ್ನು ಸ್ಮಶಾನದಲ್ಲಿ ಎಸೆದು ಬರುವಂತೆ ದೊರೆ ಆಜ್ಞೆ ಮಾಡಿದ. ಆದರೆ ಅರಮನೆಯಲ್ಲಿ ವಿಶೇಷ ಪೂಜೆಬರುವಂತೆ ದೊರೆ ಆಜ್ಞೆ ಮಾಡಿದ. ಆದರೆ ಅರಮನೆಯಲ್ಲಿ ವಿóಶೇಷಪೂಜೆ ಪಡೆಯುತ್ತಿದ್ದ ರಾಕ್ಷಸಿ ಜರೆ ಎಂಬುವಳು ಆ ಎರಡು ಹೋಳುಗಳನ್ನು ಕೂಡಿಸಿ ಮಗುವಿಗೆ ಜೀವ ಬರಿಸಿ ‘ಜರಾಸಂಧ’ ಎಂದು ಹೆಸರಿಟ್ಟಳು.
ಗಿರಿವ್ರಜವನ್ನು ರಾಜಧಾನಿಯನ್ನಾಗಿ ಮಾಡಿಕೊಂಡು ಜರಾಸಂಧನು ಮಹಾಬಲಶಾಲಿಯಾಗಿದ್ದನು. ಈತನ ಅಳಿಯನೇ ಕಂಸ. ಅವನೂ ರಾಕ್ಷಸ. ವಿಪ್ರಚಿತ್ತಿ ಎಂಬ ರಾಕ್ಷ ವಂಶದಿಂದ ಬಂದ ಜರಾಸಂಧನೂ ರಾಕ್ಷ¸ನೇ. ಇವನಿಗೆ ಶ್ರೀಕೃಷ್ಣನ ಮೇಲೆ ಅಪಾರ ದ್ವೇಷವಿತ್ತು.
ತನ್ನ ಅಳಿಯನನ್ನು ಕೃಷ್ಣನು ಕೊಂದ ಮೇಲಂತೂ ಅವನಿಗೆ ಕೃಷ್ಣ ದ್ವೇಷ ಮತ್ತಷ್ಟೂ ಹೆಚ್ಚಾಯಿತು. ಶ್ರೀ ಕೃಷ್ಣ ಎಲ್ಲಿಗೆ ಹೋದರೂ ಅಟ್ಟಿಸಿಕೊಂಡು ಹೋಗಿ ಕೊಲ್ಲುವ ಪ್ರಯತ್ನ ನಡೆಸಿದ ಇವನ ಪೀಡೆಯನ್ನು ಸಹಿಸಲಾಗದೆ ಶ್ರೀಕೃಷ್ಣನು ಚೌರಾಶೀತಿ (ಎಂಬತ್ತನಾಲ್ಕು) ದುರ್ಗಗಳಿಗೆ ಓಡಿ ತಲೆ ಮರೆಸಿಕೊಲ್ಳಬೇಕಾಗಿತ್ತು. ಹದಿನೆಂಟು ದುರ್ಗಗಳಿಗೆ ಓಡಿ ತಲೆ ಮರೆಸಿಕೊಳ್ಳ್ಳಬೇಕಾಗಿತ್ತು. ಹದಿನೆಂಟು ಬಾರಿ ಮಧುರೆಗೆ ಮುತ್ತಿಗೆ ಹಾಕಿದ ಈ ಜರಾಸಂಧ ಕೊನೆಯಬಾರಿ ನಗರವನ್ನು ಸುಟ್ಟುಹಾಕಿದ.
ಶ್ರೀಕೃಷ್ಣ, ಬಲರಾಮರು ಮತ್ತು ಯಾದವರು ಜರಾಸಂಧನ ಹಿಂಸೆ ತಡೆಯಲಾರದೆ ಅನರ್ತ ದೇಶಕ್ಕೆ ವಲಸೆ ಬಂದು ದ್ವಾರಕಾ ನಗರದಲ್ಲಿ ವಾಸ ಮಾಡಬೇಕಾಯಿತು. ಅಲ್ಲಿ ಸಮುದ್ರ ವ್ಯಾಪಾರದಲ್ಲಿ ತೊಡಗಿ ಯಾದವ ಜನಾಂಗ ಪ್ರವರ್ಧಮಾನಕ್ಕೆ ಬಂದಿತು.
ಈ ಕಡೆ ಜರಾಸಂಧನು ಭೈರವನನ್ನು ಮೆಚ್ಚಿಸಲು ‘‘ಪುರುಷಮೇಧ’’ ಎಂಬ ಯಜ್ಞ ಮಾಡಬೇಕೆಂದು ಎಂಬತ್ತಾರು ಸಾವಿರ ಮಂದಿ ರಾಜಕುಮಾರರನ್ನು ಸೆರೆಮನೆಯಲ್ಲಿ ಇರಿಸಿದ್ದನು.
ಶ್ರೀಕೃಷ್ಣ ಉಪಾಯವಾಗಿ ಜರಾಸಂಧನ ಮಂತ್ರಿಗಳಾಗಿದ್ದ ಹಂಸ-ಡಿಬಿಕರನ್ನು ಕೊಂದ. ಮುಂದೆ ರಾಜಸೂಯ ಯಾಗದ ಸಂದರ್ಭದ್ಲಿ ಭೀಮಾರ್ಜುನರನ್ನು ಕರೆದುಕೊಂಡು ಬ್ರಾಹ್ಮಣ ವೇಷದಲ್ಲಿ ಬಂದು ಸಾಕಷ್ಟು ದಾಂಧಲೆ ಮಾಡಿ ಕೊನೆಗೆ ಭೀಮ ಜರಾಸಂಧರ ನಡುವೆ ದ್ವಂದ್ವ ಯುದ್ಧ ಮಾಡಿಸಿದ.
ಎಪ್ಪತ್ತನಾಲ್ಕು ವರ್ಷದ ಜರಾಸಂಧ ಭಯಂಕವಾಗಿ ಹನ್ನೊಂದು ದಿನಗಳವರೆಗೆ ಭೀಮನೆದುರು ಹೋರಾಡಿ ಸತ್ತ. ಅವನ ದೇಹವನ್ನು ಎರಡು ಭಾಗ ಮಾಡಿ ಅಸಂಗತವಾಗಿ ಜಡಿಸಿ ಜರಾಸಂಧನನ್ನು ಕೊಂದು ಹಾಕಿದ. ಮಹೇಶ್ವರ ಯಾಗಕ್ಕಾಗಿ ಜರಾಸಂಧನು ಬಂಧಿಸಿದ್ದ ರಾಜಪುತ್ರರೆಲ್ಲರ ಬಿಡುಗಡೆಯಾಯಿತು.
ನರಮೇಧ ನಿಂತಿತು. ಜರಾಸಂಧನಂಥ ಲೋಕಘಾತಕನನ್ನು ಮೊದಲು ಕೊಲ್ಲಿಸಿದ್ದರಿಂದ ಪಾಂಡವರ ರಾಜಸೂಯಯಾಗ ನಿರ್ವಿಘ್ನವಾಗಿ ನಡೆಯಿತು.
ಮೂಲ ...{Loading}...
ಕೆಲವರಿದರೊಳು ನಮ್ಮ ಕೈಯಲಿ
ಕೊಲೆಗೆ ಭಂಗಕೆ ಬಂದು ಬಿಟ್ಟರು
ಕೆಲಕೆ ಸರಿವವನಲ್ಲ ಮಲೆವರ ಮಾರಿ ಮಾಗಧನು
ಬಳಿಕೆಮಗೆ ಬಲವದ್ವಿರೋಧದ
ತೊಳಸು ಬಿದ್ದುದು ತೋಟಿಗಾರದೆ
ಜಲಧಿ ಮಧ್ಯದಲೂರ ಕಟ್ಟಿದೆವರಸ ಕೇಳೆಂದ ॥18॥
೦೧೯ ಮಾವದೇವನ ಮುರಿದಡಾತನ ...{Loading}...
ಮಾವದೇವನ ಮುರಿದಡಾತನ
ದೇವಿಯರು ಬಳಿಕೆಮ್ಮ ದೂರಿದ
ರಾ ವಿಗಡ ಮಗಧಂಗೆ ಮಧುರೆಯ ಮೇಲೆ ದಂಡಾಯ್ತು
ನಾವು ನಾನಾ ದುರ್ಗದಲಿ ಸಂ
ಭಾವಿಸಿದೆವಾತನನು ನಿಮ್ಮೊಡ
ನಾವು ಕೂಡಿದಡಾತ ಮುನಿಯನೆ ಭೂಪ ಕೇಳ್ ಎಂದ ॥19॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಮಾವ ಕಂಸನನ್ನು ಕೊಂದಮೇಲೆ ಅವನ ಪತ್ನಿಯರು ಉದ್ಧಟನಾದ ಮಾಗಧನಲ್ಲಿ ದೂರಿದರು. ಆತ ಮಧುರೆಯ ಮೇಲೆ ದಂಡೆತ್ತಿ ಬಂದ. ನಾನಾ ದುರ್ಗಗಳಲ್ಲಿ ಅವರೊಡನೆ ಹೋರಾಡಿ ಸೋತೆವು. ಈಗ ನಿಮ್ಮೊಡನೆ ನಾವು ಸೇರಿದರೆ ಅವನಿಗೆ ಕೋಪ ಬಾರದೆ, ರಾಜ?
ಪದಾರ್ಥ (ಕ.ಗ.ಪ)
ವಿಗಡ-ಉದ್ಧಟ
ಮಾವದೇವನ ಮುರಿದೊಡೆ-ಸೋದರ ಮಾವನಾದ ಕಂಸನನ್ನು ಕೊಲ್ಲಲಾಗಿ, ಆತನ ದೇವಿಯರು-ಅವನ ರಾಣಿಯರು, ಎಮ್ಮ ದೂರಿದರೆ-ನನ್ನ ಮೇಲೆ ದೂರು ಹೇಳಲು, ಆ ವಿಗಡ-ಆ ಉದ್ಧಟನಾದ ಜರಾಸಂಧ, ಮಧುರೆಯ ಮೇಲೆ ದಂಡಾಯ್ತು-ಮಧುರೆಯ ಮೇಲೆ ದಂಡೆತ್ತಿ ಬಂದ, ಯಾದವರಾದ ನಾವು ನಾನಾ ದುರ್ಗದಲಿ-ನಾನಾ ಕೋಟೆಗಳಲ್ಲಿ, ಸಂಭಾವಿಸಿದೆವು-ಎದುರಿಸಿ ಹೋರಾಡಿದೆವು, ನಿಮ್ಮೊಡನೆ ನಾವು ಕೂಡಿದಡೆ-ನಾವು ನಿಮ್ಮ ಜೊತೆ ಸೇರಿದರೆ, ಆತ ಮುನಿಯನೆ-ಅವನಿಗೆ ನಮ್ಮ ಮೇಲೆ ಕೋಪಬರುವುದಿಲ್ಲವೇ?
ಟಿಪ್ಪನೀ (ಕ.ಗ.ಪ)
ಕಂಸನ ಹೆಂಡತಿಯರಿಬ್ಬರೂ ಜರಾಸಂಧನ ಮಕ್ಕಳು. ಕಂಸನನ್ನು ಕೊಂದನೆಂಬುದರಿಂದಲೇ ಜರಾಸಂಧನಿಗೆ ಕೃಷ್ಣನ ಮೆಲೆ ಹಗೆ.
ಮೂಲ ...{Loading}...
ಮಾವದೇವನ ಮುರಿದಡಾತನ
ದೇವಿಯರು ಬಳಿಕೆಮ್ಮ ದೂರಿದ
ರಾ ವಿಗಡ ಮಗಧಂಗೆ ಮಧುರೆಯ ಮೇಲೆ ದಂಡಾಯ್ತು
ನಾವು ನಾನಾ ದುರ್ಗದಲಿ ಸಂ
ಭಾವಿಸಿದೆವಾತನನು ನಿಮ್ಮೊಡ
ನಾವು ಕೂಡಿದಡಾತ ಮುನಿಯನೆ ಭೂಪ ಕೇಳೆಂದ ॥19॥
೦೨೦ ಅರಸ ಕೇಳ್ನೂರೊನ್ದು ...{Loading}...
ಅರಸ ಕೇಳ್ನೂರೊಂದು ವಂಶದ
ಧರಣಿಪರು ಮಾಗಧನ ಮನೆಯಲಿ
ಸೆರೆಯಲೈದರೆ ಬಿಡಿಸಬೇಕು ನಿರಂತರಾಯದಲಿ
ದುರುಳನವ ಭಗದತ್ತ ಬಾಹ್ಲಿಕ
ನರಕ ವೃದ್ಧಕ್ಷತ್ರ ಮೊದಲಾ
ದರಸುಗಳು ಬಲಗರ್ವಿತರಸಂಖ್ಯಾತರಹರೆಂದ ॥20॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅರಸ ಕೇಳು, ನೂರೊಂದು ವಂಶಗಳ ರಾಜರು ಜರಾಸಂಧನ ಬಳಿ ಬಂಧನದಲ್ಲಿದ್ದಾರೆ. ಅವರಿಗೆ ಯಾವ ತೊಂದರೆಯೂ ಉಂಟಾಗದಂತೆ ಅವರನ್ನು ಬಿಡಿಸಬೇಕು. ಆ ಭಗದತ್ತನೂ ದುಷ್ಟ. ಬಾಹ್ಲಿಕ, ನರಕ, ವೃದ್ಧಕ್ಷತ್ರ ಇವರುಗಳು ಬಲಶಾಲಿಗಳಾಗಿ ಗರ್ವಿಷ್ಠರಾಗಿದ್ದಾರೆ. ಇಂಥವರು ಅಸಂಖ್ಯಾತರಿದ್ದಾರೆ.
ಪದಾರ್ಥ (ಕ.ಗ.ಪ)
ನಿರಂತರಾಯದಲಿ-ಅಡ್ಡಿಯಿಲ್ಲದೆ
ಅರಸ ಕೇಳ್-ಯುಧಿಷ್ಠಿರ ರಾಜ ಕೇಳು, ನೂರೊಂದು ವಂಶಗಳ ಧರಣಿಪರು-ರಾಜರು, ಮಾಗಧನ ಮನೆಯಲಿ ಸೆರೆಯಲೈದರೆ-ಅವನ ಮನೆಯಲ್ಲೇ ಬಂಧನದಲ್ಲಿದ್ದಾರೆ, ನಿರಂತರಾಯದಲಿ-ಅವರಿಗೆ ಯಾವ ಅಡ್ಡಿಯೂ ಉಂಟಾಗದಂತೆ ಅವರನ್ನು, ಬಿಡಿಸಬೇಕು-ಬಿಡುಗಡೆ ಮಾಡಬೇಕು, ದುರುಳನವ-ಅವನು ಮಹಾದುಷ್ಟ, ಅವನೇ ಅಲ್ಲದೆ ಭಗದತ್ತ, ಬಾಹ್ಲಿಕ, ನರಕ ವೃದ್ಧ ಕ್ಷತ್ರ ಮೊದಲಾದ ರಾಜರುಗಳು, ಬಲಗರ್ವಿತರು-ಬಲಶಾಲಿಗಳಾಗಿದ್ದು ಗರ್ವಿಷ್ಠರಾಗಿದ್ದಾರೆ, ಇಂಥವರು ಅಸಂಖ್ಯಾತರಹರು-ಲೆಕ್ಕವಿಲ್ಲದಷ್ಟು ಮಂದಿಯಿದ್ದಾರೆ
ಟಿಪ್ಪನೀ (ಕ.ಗ.ಪ)
ಬಾಹ್ಲಿಕ :
ಇವನಿಗೆ ವಾಹ್ಲಿಕ ಎಂದೂ ಹೆಸರಿದೆ ‘ವಾಹ್ಲಿಕಂ ಪ್ರಪತಾ ಮಹಂ’ ಎರಡೂ ಇವನ ಬಗೆಗೆ ಹೇಳಲಾಗಿದೆ. ಮಹಾಭಾರತದಲ್ಲಿ ಬಹಳ ವಯಸ್ಸಾದ ಯೋಧರು ಇದ್ದದ್ದು ನಿಜ. ಕೌರವ ಭೀಮಾದಿಗಳೇ ಅರವತ್ತು ದಾಟಿದ್ದುದನ್ನು ಜ್ಞಾಪಿಸಿಕೊಳ್ಳಬೇಕು. ಇನ್ನೂ ಹಿರಿಯರೆಂದರೆ ದ್ರೋಣ, ಶಲ್ಯ, ಭಗದತ್ತ ಕೃಪ ಮೊದಲಾದವರು. ಅವರೆಲ್ಲರಿಗಿಂತ ಹಿರಿಯರೆಂದರೆ ಭೀಷ್ಮರಲ್ಲವೇ. ಆದರೆ ವಾಹ್ಲಿಕ ಮಹಾರಾಜನ ಭೀಷ್ಮರಿಗೆ ಚಿಕ್ಕಪ್ಪನಾಗಬೇಕು ಎಂದರೆ ಅವನ ವಯಸ್ಸನ್ನು ಊಹಿಸಿಕೊಳ್ಳಿ.
ಬಾಹ್ಲಿಕನೂ ಪ್ರಸಿದ್ಧ ಕುರುವಂಶಕ್ಕೆ ಸೇರಿದವನು. ಕುರು ಎಂಬ ದೊರೆಯ ಮಗ ಒಂದನೇ ಜನಮೇಜಯ. ಈ ವಂಶದ ಪ್ರತೀಪ ಮಹಾರಾಜ ಮತ್ತು ಶಿಬಿ ದೇಶದ ರಾಜಕುಮಾರಿ ಸುನಂದೆ ಇವರಿಗೆ ಮೂವರು ಮಕ್ಕಳು. ದೇವಾಪಿ, ಶಂತನು ಮತ್ತು ಬಾಹ್ಲಿಕ. ಪ್ರತೀಪನ ಮರಣಾನಂತರ ದೇವಾಪಿ ನಿರಾಸಕ್ತನಾಗಿದ್ದುದರಿಂದ ಶಂತನು ಬಾಹ್ಲಿಕರು ರಾಜರಾದರು. ಆದರೆ ಶ್ರೀಮಂತ ಸೋದರಮಾವನ ರಾಜ್ಯವನ್ನು ಆಳಲು ಒಪ್ಪಿ ಶಂತನುವಿಗೇ ರಾಜ್ಯವನ್ನು ಬಿಟ್ಟು ಬಾಹ್ಲಿಕನು ಕುರುವಂಶದಿಂದ ಬೇರ್ಪಡೆಯಾದ. ತನ್ನ ಅಣ್ಣನ ಮಗನಾದ ಚಿಕ್ಕಪ್ಪ ಭೀಷ್ಮರೊಂದಿಗೆ ಅವನ ಂಬಧ ಚೆನ್ನಾಗಿದ್ದುದರಿಂದ ಉದ್ದಕ್ಕೂ ಕುದುವಂಶದ ಹಿತೈಷಿಯಾಗಿಯೇ ಉಳಿದ. ಕೌರವ ಪಕ್ಷದ ವೀರರ ಪಟ್ಟಿಯಲ್ಲಿ ಮತ್ತೆ ಮತ್ತೆ ಪ್ರಸ್ತಾವಿತನಾಗುವ ಬಾಹ್ಲಿಕ ಇಳಿವಯಸ್ಸಿನಲ್ಲೂ ಭೀಷ್ಮದ್ರೋಣಾದಿಗಳೊಂದಿಗೆ ಸೇರಿ ಉತ್ಸಾಹದಿಂದ ಯುದ್ಧದಲ್ಲಿ ಭಾಗವಹಿಸಿದ್ದಾನೆ ನಿಜ. ಆದರೆ ವಾಸ್ತವವಾಗಿ ಈತನಿಗೆ ಪಾಂಡವ-ಕೌರವರು ಹಗೆಗಳಾಗುವುದು. ಇಷ್ಟವಿಲ್ಲ ಅದನ್ನು ಸಭೆಯಲ್ಲಿ ಎಲ್ಲರೆದುರಿಗೆ ಹಲವಾರು ಬಾರಿ ಹೇಳಿದ್ದಾನೆ. ದ್ಯೂತವನ್ನು ನೇರವಾಗಿ ವಿರೋಧಿಸಿದವರಲ್ಲಿ ಬಾಹ್ಲಿಕನು ಪ್ರಮುಖನಾಗಿದ್ದಾನೆ. ಸ್ವಭಾವತಃ ಶಾಂತಿಪ್ರಿಯನಾದ ಈತ ಪಾಂಡವರ-ಕೌರವ ಯುದ್ಧವನ್ನು ತಪ್ಪಿಸಲು ಮಹಾನ್ ಪ್ರಯತ್ನ ಮಾಡಿದ್ದಾನೆ. ಕೌರವರ ರಾಯಭಾರಿಯಾಗಿದ್ದ ಸಂಜಯನು ಹಿಂದಿರುಗಿ ಬಂದು ಸುದ್ದಿ ಹೇಳಿದಾಗ ಬಾಹ್ಲಿಕ ಆಸಕ್ತಿಯಿಂದ ಕೌರವ ಸಭೆಗೆ ಬಂದಿದ್ದನ್ನು ಗಮನಿಸಬೇಕು. ‘‘ಭರತರ ನಡುವೆ ಶಾಂತಿ ನೆಲಸುವುದನ್ನು ಬಿಟ್ಟರೆ ನನಗೆ ಬೇರೆ ಆಸೆಗಳೇ ಇಲ್ಲ’’ ಎಂಬ ಅವನ ಹೇಳಿಕೆಯಲ್ಲಿ ವ್ಯಕ್ತವಾಗುವ ಕಾಳಜಿಯನ್ನು ಗಮನಿಸಬೇಕು. ಪಾಂಡವ ಕೌರವರ ಬಗೆಗೆ ಅವನ ಚಿಂತನೆಯೂ ಅಪೂರ್ವವಾಗಿದೆ. ದ್ರೋಣಪರ್ವದ ಮೂರನೆಯ ಅಧ್ಯಾಯದಲ್ಲಿ ಅವನು ಹೇಳುವ ಮಾತು ಅರ್ಥಪೂರ್ಣವಾದದ್ದುಃ ‘‘ಸತ್ಪುರುಷರಾದ ಪಾಂಡವರು ಅಸುಖಿಗಳಾಗಿದ್ದಾರೆ. ದುಷ್ಟ ಕೌರವನು ಸುಖಿಯಾಗಿದ್ದಾನೆ. ಇದನ್ನು ನೋಡುವ ಮಿತಬುದ್ಧಿಯ ಜನರು ದುಷ್ಟ ಜೀವನವೇ ಒಳ್ಳೆಯದೆಂದು ಭಾವಿಸಬಹುದು.’’
ಇಷ್ಟಾದರೂ ಯುದ್ಧದಲ್ಲಿ ಅವನು ಭೀಷ್ಮದ್ರೋಣ ಕೃಪಾದಿಗಳಂತೆ ಕೌರವನ ಪಕ್ಷದಲ್ಲೇ ಇದ್ದು ಹೋರಾಡುತ್ತಾನೆ (?) ಎಂಬ ರಥವನ್ನೇರಿ ಇವನು ಯುದ್ಧಕ್ಕೆ ಬಂದು ನಿಂತ ಸಂದರ್ಭ ಸಂಶಪ್ತಕ ಪರ್ವದಲ್ಲಿದೆ. ಘಟೋತ್ಕಚ ಸಾತ್ಯಕಿ ಬೀಮ ಅರ್ಜುನ ಮೊದಲಾದ ಪಾಂಡವ ವೀರರ ಮೇಲೆ ಈತ ಯುದ್ಧ ಮಾಡುತ್ತಾನೆ. ಕೊನೆಗೆ ಇವನನ್ನು ಇವನ ಮಕ್ಕಳಾದ ಸೋಮದತ್ತಾದಿಗಳನ್ನು ಭೀಮನು ಕೊಲ್ಲುತ್ತಾನೆ.
ಈ ಹಿರಿಯ ಪ್ರಜೆಯ ಬಗೆಗೆ ಕೌರವ ಪಾಂಡವ ಪಡಗೆಳೆರಡಕ್ಕೂ ಗೌರವವಿತ್ತು ಎಂಬುದು ಸ್ಮರಣೀಯ ಸಂಗತಿಯಾಗಿದೆ.
ಮೂಲ ...{Loading}...
ಅರಸ ಕೇಳ್ನೂರೊಂದು ವಂಶದ
ಧರಣಿಪರು ಮಾಗಧನ ಮನೆಯಲಿ
ಸೆರೆಯಲೈದರೆ ಬಿಡಿಸಬೇಕು ನಿರಂತರಾಯದಲಿ
ದುರುಳನವ ಭಗದತ್ತ ಬಾಹ್ಲಿಕ
ನರಕ ವೃದ್ಧಕ್ಷತ್ರ ಮೊದಲಾ
ದರಸುಗಳು ಬಲಗರ್ವಿತರಸಂಖ್ಯಾತರಹರೆಂದ ॥20॥
೦೨೧ ಅವರಿರಿಲಿ ಮತ್ತಿತ್ತಲುತ್ತರ ...{Loading}...
ಅವರಿರಿಲಿ ಮತ್ತಿತ್ತಲುತ್ತರ
ದವನಿಪರು ದಕ್ಕಡರು ಧರಣೀ
ಧವರೊಳಧಿಕ ದೊಠಾರರಗ್ಗದ ಚೀನ ಬೋಟಕರು
ರವಿಯುದಯಗಿರಿ ಶಿಖರದಲಿ ಪಾ
ರ್ಥಿವರು ದಕ್ಷಿಣ ಚೋಳ ಪಾಂಡ್ಯ
ಪ್ರವರರದೆ ವಿಕ್ರಮ ಹಿರಣ್ಯ ಮದಾಂಧರವರೆಂದ ॥21॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅವರಿರಲಿ, ಮತ್ತೆ ಈ ಕಡೆ ಉತ್ತರದ ರಾಜರು, ಶೂರರು. ಚೀನರು ಬೋಟಕರು ರಾಜರುಗಳಲ್ಲೇ ಮಹಾಶೂರರು. ಪೂರ್ವದಿಕ್ಕಿನ ತುದಿಯಲ್ಲಿ ಅನೇಕ ರಾಜರಿದ್ದಾರೆ. ದಕ್ಷಿಣದಲ್ಲಿ ಚೋಳ ಪಾಂಡ್ಯರಿದ್ದಾರೆ. ಇವರೆಲ್ಲ ಪರಾಕ್ರಮದಲ್ಲಿಯೂ ಸಂಪತ್ತಿನಲ್ಲಿಯೂ ಮದಾಂಧರಾಗಿದ್ದಾರೆ.
ಪದಾರ್ಥ (ಕ.ಗ.ಪ)
ದಕ್ಕಡರು-ಶೂರರು, ದೊಠಾರ-ದೃಢಮನಸ್ಸಿನಿಂದ, ಧರಣೀಧವ-ರಾಜ
ಅವನಿಪರು-ರಾಜರು, ದಕ್ಕಡರು-ಶೂರರು, ಧರಣೀಧವರೊಳಗೆ-ರಾಜರೊಳಗೆ, ಅಧಿಕ ದೊಠಾರರು-ಅತಿಶಯ ದೃಢಮನಸ್ಸಿನವರು,
ಅಗ್ಗದ-ಅತಿಶಯವಾದ, ರವಿಯುದಯಗಿರಿ ಶಿಖರದಲಿ-ಸೂರ್ಯನುದಿಸುವ, ಪೂರ್ವದಿಕ್ಕಿನಲ್ಲಿರುವ ಬೆಟ್ಟದ ಶಿಖರದಲ್ಲಿ ವಾಸಿಸುವಂತಹ, ಪಾರ್ಥಿವರು-ರಾಜರು, ಪ್ರವರರು-ಮೊದಲಾದವರು, ವಿಕ್ರಮ ಹಿರಣ್ಯ ಮದಾಂಧರು-ಪರಾಕ್ರಮ ಹಾಗೂ ಸಂಪತ್ತಿನಲ್ಲಿ ಗರ್ವಾಂಧರಾದವರು
ಮೂಲ ...{Loading}...
ಅವರಿರಿಲಿ ಮತ್ತಿತ್ತಲುತ್ತರ
ದವನಿಪರು ದಕ್ಕಡರು ಧರಣೀ
ಧವರೊಳಧಿಕ ದೊಠಾರರಗ್ಗದ ಚೀನ ಬೋಟಕರು
ರವಿಯುದಯಗಿರಿ ಶಿಖರದಲಿ ಪಾ
ರ್ಥಿವರು ದಕ್ಷಿಣ ಚೋಳ ಪಾಂಡ್ಯ
ಪ್ರವರರದೆ ವಿಕ್ರಮ ಹಿರಣ್ಯ ಮದಾಂಧರವರೆಂದ ॥21॥
೦೨೨ ಔಕಿ ಚದುರಙ್ಗದ ...{Loading}...
ಔಕಿ ಚದುರಂಗದ ನೃಪಾಲರ
ನೂಕಬಹುದಿದಕೇನು ಯಾಗ
ವ್ಯಾಕರಣಕಿವರಿಬ್ಬರೇ ದೂಷಕರು ಧರಣಿಯಲಿ
ಈ ಕುಠಾರರು ಕದನ ಮುಖವಿದವಿ
ವೇಕಿಗಳು ಶಿಶುಪಾಲ ಮಾಗಧ
ರಾಕೆವಾಳರು ವೈರಿರಾಯರೊಳರಸ ಕೇಳ್ ಎಂದ ॥22॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಯುದ್ಧದಲ್ಲಿ ಆಕ್ರಮಣಮಾಡಿ ಚತುರಂಗ ಬಲಶಾಲಿಗಳಾದ ರಾಜರುಗಳನ್ನೆಲ್ಲ ಸೋಲಿಸಿ ಓಡಿಸಬಹುದು. ಆದರೆ ಯಾಗಕ್ಕೆ ವಿರೋಧಿಗಳಾಗಿರುವವರು ಈ ಭೂಮಿಯಲ್ಲಿ ಈ ಇಬ್ಬರೇ- ಶಿಶುಪಾಲ ಮಾಗಧರು. ದುಷ್ಟರಾದ ಇವರು ಅವಿವೇಕಗಳು. ವೈರಿರಾಯರಲ್ಲೆಲ್ಲ ಈ ಇಬ್ಬರೇ ಗಟ್ಟಿಗರು, ಮಹಾಶೂರರು.
ಪದಾರ್ಥ (ಕ.ಗ.ಪ)
ಕುಠಾರ-ದುಷ್ಟ, ಆಕೆವಾಳ-ಶೂರ
ಇಷ್ಟಾದರೂ ಚತುರಂಗದ ನೃಪಾಲರ ಔಕಿ ನೂಕಬಹುದು-ಚತುರಂಗದಿಂದ ಕೂಡಿದ ರಾಜರನ್ನು ಸದೆಬಡಿದುತಳ್ಳಬಹುದು,
ಇದಕೇನು-ಅದಕ್ಕೇನು, ಆದರೆ ಯಾಗವ್ಯಾಕರಣಕೆ-ರಾಕಸೂಯ ಯಾಗವೆಂಬ ವ್ಯಾಕರಣಕ್ಕೆ, ದೂಷಕರು-ಶತ್ರುಗಳಾಗಿರುವವರು ಶಿಶುಪಾಲ ಮಾಗಧ ಈ ಇಬ್ಬರೇ, ಧರಣಿಯಲಿ-ಭೂಮಿಯಲ್ಲಿ, ಈ ಕುಠಾರರು-ತನಗೆ ಕಾವು ಕೊಟ್ಟ ವಂಶವನ್ನೇ ನಾಶಮಾಡುವ
ಕೊಡಲಿಯಂತೆ ರಾಜವಂಶಕ್ಕೇ ವಿನಾಶಕರಾಗಿರುವ ಈ ಇಬ್ಬರು, ಕದನ ಮುಖವಿದವಿ ವೇಕಿಗಳು-ಯುದ್ಧದ ಎದುರಿನಲ್ಲಿ
ಅವಿವೇಕದಿಂದ ನಡೆದುಕೊಳ್ಳುವವರು, ವೈರಿರಾಯರೊಳು-ಶತ್ರುರಾಜರಲ್ಲೆಲ್ಲ, ಆಕೆವಾಳರು-ಮಹಾಶೂರರು, ಅರಸ ಕೇಳು-ರಾಜ ಕೇಳು
ಮೂಲ ...{Loading}...
ಔಕಿ ಚದುರಂಗದ ನೃಪಾಲರ
ನೂಕಬಹುದಿದಕೇನು ಯಾಗ
ವ್ಯಾಕರಣಕಿವರಿಬ್ಬರೇ ದೂಷಕರು ಧರಣಿಯಲಿ
ಈ ಕುಠಾರರು ಕದನ ಮುಖವಿದವಿ
ವೇಕಿಗಳು ಶಿಶುಪಾಲ ಮಾಗಧ
ರಾಕೆವಾಳರು ವೈರಿರಾಯರೊಳರಸ ಕೇಳೆಂದ ॥22॥
೦೨೩ ಅಧಿಕರಿವರಿಬ್ಬರೊಳಗಾ ಮಾ ...{Loading}...
ಅಧಿಕರಿವರಿಬ್ಬರೊಳಗಾ ಮಾ
ಗಧನೆ ಬಲುಗೈ ರಾಜಸೂಯಕೆ
ಸದರವನು ನಾ ಕಾಣೆನಾತನ ಖಂಡೆಯದ ಮೊನೆಗೆ
ನಿಧನವಲ್ಲದೆ ಧನವ ನೆರಹುವ
ಹದನ ನೀನೇ ಕಾಂಬೆಯಾತನ
ವಧೆಯು ಹರಿಯದು ನಮ್ಮ ಕೈಯಲಿ ರಾಯ ಕೇಳ್ ಎಂದ ॥23॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅಧಿಕರಾದ ಈ ಇಬ್ಬರಲ್ಲಿ ಆ ಮಾಗಧನೇ ಹೆಚ್ಚು ಬಲಶಾಲಿ. ಅವನ ಶೌರ್ಯದಿಂದಾಗಿ ರಾಜಸೂಯ ಯಾಗವನ್ನು ನಡೆಸುವುದು ಸುಲಭವೆಂದು ನನಗೆ ತೋರುವುದಿಲ್ಲ. ಅವನ ಸಾವೆಂಬ ಪರಿಹಾರದ ಹೊರತಾಗಿ ಯಾಗಕ್ಕೆ ಧನವನ್ನು ಸಂಗ್ರಹಿಸುವುದು ಕಷ್ಟವೆಂಬುದನ್ನು ನೀನೇ ಕಂಡುಕೊಳ್ಳುವೆ. ರಾಜ, ನಮ್ಮ ಕೈಯಲ್ಲಿ ಅವನನ್ನು ಕೊಲ್ಲಲು ಸಾಧ್ಯವಿಲ್ಲ.
ಪದಾರ್ಥ (ಕ.ಗ.ಪ)
ಅಧಿಕರಿವರಿಬ್ಬರೊಳಗೆ-ಅತಿಶಯರೆನಿಸಿದ ಈ ಇಬ್ಬರಲ್ಲಿ, ಮಾಗಧನೆ-ಜರಾಸಂಧನೆ, ಬಲುಗೈ-ಹೆಚ್ಚು ಬಲಶಾಲಿ ಆದ್ದರಿಂದ, ರಾಜಸೂಯಕೆ-ರಾಜಸೂಯಯಾಗ ನಡೆಸಲು, ಸದರವನು ನಾ ಕಾಣೆ-ಅನುಕೂಲತೆಯನ್ನು ನಾ ಕಾಣೆ, ಆತನ ಖಂಡೆಯದ ಮೊನೆಗೆ-ಆತನ ಕತ್ತಿಯ ಮೊನೆ ತಾಗಿದಲ್ಲಿ, ನಿಧನವಲ್ಲದೆ-ಸಾವು ಬಂದೀತಲ್ಲದೆ, ಧನವ ನೆರಹುವ ಹದನ-ರಾಜಸೂಯಯಾಗಕ್ಕೆ ಬೇಕಾದ ಹಣವನ್ನು ಸಂಗ್ರಹ ಮಾಡುವ ರೀತಿಯನ್ನು ನಾ ತಿಳಿಯೆ, ನೀನೇ ಕಾಣುವೆ ಆತನ ಆ ಜರಾಸಂಧನ, ವಧೆಯು-ಕೊಲೆಯು,
ಹರಿಯದು ನಮ್ಮ ಕೈಯಲಿ-ನಮ್ಮ ಕೈಯಿಂದ ಸಾಧ್ಯವಿಲ್ಲ
ಮೂಲ ...{Loading}...
ಅಧಿಕರಿವರಿಬ್ಬರೊಳಗಾ ಮಾ
ಗಧನೆ ಬಲುಗೈ ರಾಜಸೂಯಕೆ
ಸದರವನು ನಾ ಕಾಣೆನಾತನ ಖಂಡೆಯದ ಮೊನೆಗೆ
ನಿಧನವಲ್ಲದೆ ಧನವ ನೆರಹುವ
ಹದನ ನೀನೇ ಕಾಂಬೆಯಾತನ
ವಧೆಯು ಹರಿಯದು ನಮ್ಮ ಕೈಯಲಿ ರಾಯ ಕೇಳೆಂದ ॥23॥
೦೨೪ ಕಂಸನನು ಕೆಡಹಿದೆವು ...{Loading}...
ಕಂಸನನು ಕೆಡಹಿದೆವು ಮುರಿದೆವು
ಹಂಸ ಡಿಬಿಕರ ಪೌಂಡ್ರಕರ ನಿ
ರ್ವಂಶವೆನೆ ಸವರಿದೆವು ಮುರ ನರಕಾದಿ ದಾನವರ
ಹಿಂಸೆಯಿವನಲಿ ಹರಿಯದಿವ ನಿ
ಸ್ಸಂಶಯನು ವಿಜಯದಲಿ ಯಾಗ
ಧ್ವಂಸಕನ ನೆರೆ ಮುರಿವುಪಾಯವ ಕಾಣೆ ನಾನೆಂದ ॥24॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕಂಸನನ್ನು ಕೆಡವಿದೆವು. ಹಂಸ, ಡಿಬಿಕ, ಪೌಂಡ್ರಕರನ್ನು ತುಂಡರಿಸಿದೆವು. ಮುರನರಕಾದಿ ದಾನವರನ್ನು ನಿರ್ವಂಶವಾಗುವಂತೆ ಸವರಿಹಾಕಿದೆವು. ಆದರೆ ಇವನಲ್ಲಿ ಮಾತ್ರ ಹಿಂಸೆ ನಡೆಯುವುದಿಲ್ಲ. ಇವನು ನಿಸ್ಸಂಶಯವಾಗಿ ವಿಜಯವನ್ನು ಗಳಿಸುವನು. ಇವನು ಯಾಗಧ್ವಂಸಕ. ಇವನನ್ನು ಕೊಲ್ಲುವ ಉಪಾಯವನ್ನು ನಾ ಕಾಣೆ.
ಪದಾರ್ಥ (ಕ.ಗ.ಪ)
ಕಂಸನನು ಕೆಡಹಿದೆವು-ಕಂಸನನ್ನು ಬೀಳಿಸದೆ, ಹಂಸ, ಡಿಬಿಕರ ಪೌಂಡ್ರಕರ-ಹಂಸ, ಡಿಂಬಿಕ, ಪೌಂಡ್ರಕರನ್ನು, ಮುರಿದೆವು-ಕೊಂದು ಹಾಕಿದೆ, ಮುರ ನರಕಾದಿ ದಾನವರ-ಮುರ, ನರ ಮೊದಲಾದ ರಾಕ್ಷಸರನ್ನು, ನಿರ್ವಂಶವೆನೆ-ನಿರ್ವಂಶವಾಗುವಂತೆ, ಸವರಿದೆವು-ನಾಶಮಾಡಿದೆ, ಇವನಲಿ-ಈ ಜರಾಸಂಧನಲ್ಲಿ ಮಾತ್ರ, ಹಿಂಸೆ ಹರಿಯದು-ಹಿಂಸೆ ಯಾವ ಕೆಲಸಕ್ಕೂ ಬಾರದು, ಇವ-ಇವನು,
ವಿಜಯದಲಿ ನಿಸ್ಸಂಶಯನು-ವಿಜಯ ಗಳಿಸುವುದರಲ್ಲಿ, ಸಂಶಯವಿಲ್ಲದವನು ಆದ್ದರಿಂದ, ಯಾಗಧ್ವಂಸಕನ-ಯಾಗವನ್ನು ನಾಶಮಾಡುವಂತಹ, ಇವನನ್ನು ನೆರೆ ಮುರಿವ-ಪೂರ್ಣವಾಗಿ ನಾಶಮಾಡುವಂತಹ, ಉಪಾಯವ-ಉಪಾಯವನ್ನು, ಕಾಣೆ ನಾನು-ನಾನು ಕಾಣೆ
ಮೂಲ ...{Loading}...
ಕಂಸನನು ಕೆಡಹಿದೆವು ಮುರಿದೆವು
ಹಂಸ ಡಿಬಿಕರ ಪೌಂಡ್ರಕರ ನಿ
ರ್ವಂಶವೆನೆ ಸವರಿದೆವು ಮುರ ನರಕಾದಿ ದಾನವರ
ಹಿಂಸೆಯಿವನಲಿ ಹರಿಯದಿವ ನಿ
ಸ್ಸಂಶಯನು ವಿಜಯದಲಿ ಯಾಗ
ಧ್ವಂಸಕನ ನೆರೆ ಮುರಿವುಪಾಯವ ಕಾಣೆ ನಾನೆಂದ ॥24॥
೦೨೫ ಈಸು ಘನವೇ ...{Loading}...
ಈಸು ಘನವೇ ಕೃಷ್ಣ ಯಾಗ
ದ್ವೇಷಿಗಳು ಪಿರಿದಾಗಲೆವಗಿ
ನ್ನೈಸಲೇ ವರರಾಜಸೂಯಾಧ್ವರಕೆ ಸಂನ್ಯಾಸ
ಈಸು ದೈತ್ಯರು ನಿನ್ನ ಕೈಯಲಿ
ಘಾಸಿಯಾದರು ಮಗಧನೊಬ್ಬನು
ಮೀಸಲಳಿಯನು ಗಡ ಮಹಾದೇವೆಂದನಾ ಭೂಪ ॥25॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಇದು ಇಷ್ಟೊಂದು ಕಷ್ಟವಾದುದೇ ಕೃಷ್ಣ ? ಯಾಗದ್ವೇಷಿಗಳು ಹೀಗೆ ದೊಡ್ಡದಾಗಿದ್ದರೆ ನಾನು ರಾಜಸೂಯಯಾಗದ ಆಸೆಯನ್ನು ತ್ಯಜಿಸಬೇಕಾದೀತು. ಇಷ್ಟೊಂದು ದೈತ್ಯರು ನಿನ್ನ ಕೈಯಿಂದ ಹತರಾದರು. ಈ ಮಾಗಧನೊಬ್ಬನು ಮಾತ್ರ ಮೀಸಲಿಟ್ಟಂತೆ ನಾಶವಾಗುವವನಲ್ಲ ಅಲ್ಲವೇ ? ಮಹಾದೇವ ! ಎಂದು ಉದ್ಗರಿಸಿದ ಯುಧಿಷ್ಠಿರ.
ಪದಾರ್ಥ (ಕ.ಗ.ಪ)
ಅಧ್ವರ-ಯಾಗ
ಈಸು ಘನವೇ ಕೃಷ್ಣ-ಇಷ್ಟೊಂದು ಮಹತ್ತಾದುದೇ ಕೃಷ್ಣ ? ಯಾಗ ದ್ವೇಷಿಗಳು ಪಿರಿದಾಗಲು-ಯಾಗಕ್ಕೆ ಶತ್ರುಗಳಾದ ಇಂಥವರು ಇರಲಾಗಿ, ಇನ್ನೈಸಲೇ ವರರಾಜಸೂಯಾಧ್ವರಕೆ ಸಂನ್ಯಾಸ-ಇನ್ನು ಶ್ರೇಷ್ಠವಾದ ರಾಜಸೂಯಯಾಗ ಮಾಡುವ ವಿಷಯಕ್ಕೆ ಸಂನ್ಯಾಸ ಸ್ವೀಕರಿಸಬೇಕಷ್ಟೆ, ಈಸು ದೈತ್ಯರು-ಇಷ್ಟೊಂದು ದೈತ್ಯರು, ನಿನ್ನ ಕೈಯಲಿ ಘಾಸಿಯಾದರು-ನಿನ್ನ ಕೈಯಿಂದ ನಾಶವಾದರು, ಮಗಧನೊಬ್ಬನು-ಜರಾಸಂಧ ಒಬ್ಬ ಮಾತ್ರ, ಮೀಸಲಳಿಯನು ಗಡ-ಮೀಸಲಿಟ್ಟಂತೆ ನಾಶವಾಗುವುದಿಲ್ಲ ಅಲ್ಲವೇ ? ಮಹಾದೇವ ಎಂದು ವಿಸ್ಮಯಗೊಂಡನು
ಮೂಲ ...{Loading}...
ಈಸು ಘನವೇ ಕೃಷ್ಣ ಯಾಗ
ದ್ವೇಷಿಗಳು ಪಿರಿದಾಗಲೆವಗಿ
ನ್ನೈಸಲೇ ವರರಾಜಸೂಯಾಧ್ವರಕೆ ಸಂನ್ಯಾಸ
ಈಸು ದೈತ್ಯರು ನಿನ್ನ ಕೈಯಲಿ
ಘಾಸಿಯಾದರು ಮಗಧನೊಬ್ಬನು
ಮೀಸಲಳಿಯನು ಗಡ ಮಹಾದೇವೆಂದನಾ ಭೂಪ ॥25॥
೦೨೬ ಅಹಹ ಯಾಗ ...{Loading}...
ಅಹಹ ಯಾಗ ವ್ರತಕೆ ಭಂಗವ
ತಹುದೆ ಜೀಯ ಮುರಾರಿ ಕೃಪೆ ಸ
ನ್ನಿಹಿತವಾಗಲಿ ಸಾಕು ನೋಡಾ ತನ್ನ ಕೈಗುಣವ
ಬಹಳ ಬಲನೇ ಮಾಗಧನು ನಿನ
ಗಹಿತನೇ ತಾ ವೀಳೆಯವ ಸುರ
ಮಹಿಳೆಯರ ತೋಳಿನಲಿ ತೋರುವೆನೆಂದನಾ ಭೀಮ ॥26॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಆಗ ಭೀಮನು “ಅಹಹ ! ಯಾಗವ್ರತಕ್ಕೆ ಭಂಗವನ್ನು ತರುವುದೇ? ಪ್ರಭು ಮುರಾರಿ,ಯ ಕೃಪೆ ನನಗೆ ಪ್ರಾಪ್ತವಾಗಲಿ ಸಾಕು. ಆಗ ನೋಡು ನನ್ನ ಕೈಗುಣವನ್ನು. ಬಹಳ ಬಲಿಷ್ಠನಾದವನೇ ಮಾಗಧ ? ನಿನಗೆ ಶತ್ರುವೇ ? ವೀಳೆಯವನ್ನು ಕೊಡು. ಅವನನ್ನು ದೇವಲೋಕದಲ್ಲಿ ಸುರಮಹಿಳೆಯರ ಆಲಿಂಗನದಲ್ಲಿರುವಂತೆ ಮಾಡುತ್ತೇನೆ” ಎಂದ.
ಪದಾರ್ಥ (ಕ.ಗ.ಪ)
ಸನ್ನಿಹಿತ-ಸಮೀಪ, ಅಹಿತ-ಶತ್ರು
ವೀಳೆಯವನ್ನು ಕೊಡು - ಅಪ್ಪಣೆ ಕೊಡು.
ಯಾಗ ವ್ರತಕೆ ಭಂಗವ ತಹುದೆ-ಯಾಗದ ವ್ರತಕ್ಕೆ ಭಂಗವನ್ನು ಉಂಟುಮಾಡುವುದೇ ? ಜೀಯ-ಪ್ರಭು, ಮುರಾರಿ-ಕೃಷ್ಣ, ಕೃಪೆ ಸನ್ನಿಹಿತವಾಗಲಿ-ನಿನ್ನ ಕೃಪೆ ನನ್ನ ಮೇಲೆ ಉಂಟಾಗಲಿ, ಸಾಕು-ನಿನ್ನ ಕೃಪೆಯೊಂದಿದ್ದರೆ ಸಾಕು, ಆಗ ನೋಡಾ ತನ್ನ ಕೈಗುಣವ-ನೋಡು ತನ್ನ ತೋಳಿನ ಸಾಮಥ್ರ್ಯವನ್ನು, ಬಹಳ ಬಲನೇ ಮಾಗಧನು-ಆ ಜರಾಸಂಧನು ಮಹಾಶಕ್ತಿಶಾಲಿಯೇ ? ನಿನಗೆ ಅಹಿತನೇ-ನಿನಗೆ ಶತ್ರುವೇ ? ತಾ ವೀಳೆಯವ-ನನಗೆ ವೀಳೆಯ ಕೊಡು, ಅನುಮತಿ ಕೊಡು ಅವನನ್ನು ಕೊಂದು ಅವನು ವೀರಸ್ವರ್ಗದಲ್ಲಿ ಸುರಮಹಿಳೆಯರ ತೋಳುಗಳಲ್ಲಿ ಇರುವಂತೆ ಮಾಡುತ್ತೇನೆ, ಎಂದ ಆ ಭೀಮ
ಮೂಲ ...{Loading}...
ಅಹಹ ಯಾಗ ವ್ರತಕೆ ಭಂಗವ
ತಹುದೆ ಜೀಯ ಮುರಾರಿ ಕೃಪೆ ಸ
ನ್ನಿಹಿತವಾಗಲಿ ಸಾಕು ನೋಡಾ ತನ್ನ ಕೈಗುಣವ
ಬಹಳ ಬಲನೇ ಮಾಗಧನು ನಿನ
ಗಹಿತನೇ ತಾ ವೀಳೆಯವ ಸುರ
ಮಹಿಳೆಯರ ತೋಳಿನಲಿ ತೋರುವೆನೆಂದನಾ ಭೀಮ ॥26॥
೦೨೭ ಮುರುಕಿಸುವ ಮನ್ನೆಯರ ...{Loading}...
ಮುರುಕಿಸುವ ಮನ್ನೆಯರ ನಾಳವ
ಮುರಿವೆನಖಿಳ ದ್ವೀಪ ಪತಿಗಳ
ತೆರಿಸುವೆನು ಹೊರಿಸುವೆನು ನೆತ್ತಿಯಲವರ ವಸ್ತುಗಳ
ಕರುಬನೇ ಮಾಗಧನು ರಣದಲಿ
ತರಿವೆನಾತನ ನಿಮ್ಮ ಯಾಗದ
ಹೊರಿಗೆ ತನ್ನದು ಕರೆಸು ಋಷಿಗಳನೆಂದನಾ ಭೀಮ ॥27॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಸೊಕ್ಕಿರುವ ನಾಯಕರ ಗಂಟಲ ನಾಳವನ್ನು ಮುರಿಯುತ್ತೇನೆ. ಅಖಿಳ ದ್ವೀಪಗಳ ಒಡೆಯರನ್ನು ಕಪ್ಪ ತೆರುವಂತೆ ಮಾಡುತ್ತೇನೆ. ಅವರು ಕೊಟ್ಟ ವಸ್ತುಗಳನ್ನು ಅವರ ನೆತ್ತಿಯ ಮೇಲೆ ಹೊರಿಸಿ ತರಿಸುತ್ತೇನೆ. ಮಾಗಧನು ಕರುಬುವನೇ ? ಯುದ್ಧದಲ್ಲಿ ಅವನನ್ನು ತರಿದು ಹಾಕುತ್ತೇನೆ. ನಿಮ್ಮ ಯಾಗದ ಜವಾಬ್ದಾರಿ ನನ್ನದು. ಯಾಗ ಮಾಡಿಸಲು ಋಷಿಗಳನ್ನೆಲ್ಲ ಕರೆಸಿ ಎಂದ ಭೀಮ.
ಪದಾರ್ಥ (ಕ.ಗ.ಪ)
ಮುರುಕಿಸು-ಗರ್ವಿಸು, ಮನ್ನೆಯ-ಮಾನ್ಯ, ತೆರಿಸು-ಕಪ್ಪ ತೆರುವಂತೆ ಮಾಡು, ಕರುಬ-ಹೊಟ್ಟೆಕಿಚ್ಚು ಪಡುವವ, ಹೊರಿಗೆ-ಹೊಣೆ
ಮುರುಕಿಸುವ-ವಕ್ರವಾಗಿ ನಡೆದು ಕೊಳ್ಳುವ, ವಿರೋಧಿಸುವ, ಮನ್ನೆಯರ-ಮಾನ್ಯರ, ನಾಯಕರ, ನಾಳವ-ಗಂಟಲ ನಾಶವನ್ನು, ದ್ವೀಪ ಪತಿಗಳ-ದ್ವೀಪಗಳ ಒಡೆಯರನ್ನು, ತೆರಿಸುವೆನು ಹೊರಿಸುವೆನು ನೆತ್ತಿಯಲಿ ಅವರ ವಸ್ತುಗಳ-ಅವರ ವಸ್ತುಗಳನ್ನು ಹೊರತೆಗೆಸಿ ಅವರ ನೆತ್ತಿಯ ಮೇಲೆ ಹೊರಿಸಿ ತರಿಸುತ್ತೇನೆ, ಮಾಗಧನು-ಜರಾಸಂಧನು, ಕರುಬನೇ-ಹೊಟ್ಟೆಕಿಚ್ಚಿನವನೇ, ರಣದಲಿ-ಯುದ್ಧದಲ್ಲಿ, ಆತನ ತರಿವೆನು-ಅವನನ್ನು ಕಡಿದು ಹಾಕುತ್ತೇನೆ, ನಿಮ್ಮ ಯಾಗದ ಹೊರಿಗೆ ತನ್ನದು ಕರೆಸು ಋಷಿಗಳನು-ಯಾಗ ನಡೆಸಲು ಅಗತ್ಯವಾದ ಋಷಿಗಳನ್ನು ಬರಮಾಡು ಎಂದ ಭೀಮ
ಮೂಲ ...{Loading}...
ಮುರುಕಿಸುವ ಮನ್ನೆಯರ ನಾಳವ
ಮುರಿವೆನಖಿಳ ದ್ವೀಪ ಪತಿಗಳ
ತೆರಿಸುವೆನು ಹೊರಿಸುವೆನು ನೆತ್ತಿಯಲವರ ವಸ್ತುಗಳ
ಕರುಬನೇ ಮಾಗಧನು ರಣದಲಿ
ತರಿವೆನಾತನ ನಿಮ್ಮ ಯಾಗದ
ಹೊರಿಗೆ ತನ್ನದು ಕರೆಸು ಋಷಿಗಳನೆಂದನಾ ಭೀಮ ॥27॥
೦೨೮ ಅಹುದಲೇ ಬಳಿಕೇನು ...{Loading}...
ಅಹುದಲೇ ಬಳಿಕೇನು ಯಾಗೋ
ಪಹರಣಕೆ ಸಂನ್ಯಾಸ ಗಡ ವಿ
ಗ್ರಹದಲಧಿಕರು ಗಡ ಜರಾಸಂಧಾದಿ ನಾಯಕರು
ಮಹಿಯ ಮನ್ನೆಯರಧ್ವರವ ನಿ
ರ್ವಹಿಸಲೀಯರು ಗಡ ಶಿವಾ ಶಿವ
ರಹವ ಮಾಡಿದನರಸನೆಂದನು ನಗುತ ಕಲಿಪಾರ್ಥ ॥28॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಹೌದಲ್ಲವೇ, ಮತ್ತೇನು? ಯಾಗದ ವ್ಯವಸ್ಥೆಗೆ ಸಂನ್ಯಾಸವೋ ? ಯುದ್ಧದಲ್ಲಿ ಜರಾಸಂಧ ಮೊದಲಾದ ನಾಯಕರು ಅತಿಶಯರಾದವರೋ ? ಭೂಮಿಯ ಮೇಲಿನ ರಾಜರೆಲ್ಲ ಯಾಗವನ್ನು ಮಾಡಲು ಬಿಡುವುದಿಲ್ಲ ಅಲ್ಲವೇ? ಶಿವಶಿವಾ ! ಯಾಗವನ್ನೇ ತ್ಯಜಿಸಿಬಿಟ್ಟ ನಮ್ಮ ರಾಜ !” ಎಂದು ಅರ್ಜುನ ನಗುತ್ತಾ ವಿನೋದಿಸಿದ.
ಪದಾರ್ಥ (ಕ.ಗ.ಪ)
ಉಪಹರಣ-ವ್ಯವಸ್ಥೆ, ರಹವ-ಸೋಜಿಗವನ್ನು
ಅಹುದಲೇ-ಹೌದಲ್ಲವೇ, ಯಾಗೋಪಹರಣಕೆ-ಯಾಗದ ವ್ಯವಸ್ಥಗೆ, ಸಂನ್ಯಾಸ ಗಡ-ಸಂನ್ಯಾಸವೇ ? ವಿಗ್ರಹದಲಿ-ಯುದ್ಧದಲ್ಲಿ, ಅಧಿಕರು ಗಡ-ಅತಿಶಯರಲ್ಲವೇ ? ಜರಾಸಂಧಾದಿ ನಾಯಕರು-ಜರಾಸಂಧನೇ ಮೊದಲಾದ ವೀರರು, ಮಹಿಯ ಮನ್ನೆಯರು-ಭೂಮಿಯ ಮೇಲಿರುವ ನಾಯಕರು, ಅಧ್ವರವ-ಯಾಗವನ್ನು, ನಿರ್ವಹಿಸಲೀಯರು ಗಡ-ನೆರವೇರಿಸಲು ಬಿಡುವುದಿಲ್ಲ ಅಲ್ಲವೇ ?
ರಹವ ಮಾಡಿದನರಸನು-ನಮ್ಮ ಧರ್ಮರಾಜ ಸೋಜಿಗವನ್ನೇ ಉಂಟು ಮಾಡಿದ. ಎಂದು ನಕ್ಕ ಹಾಸ್ಯ ಮಾಡಿದ ಅರ್ಜುನ
ಮೂಲ ...{Loading}...
ಅಹುದಲೇ ಬಳಿಕೇನು ಯಾಗೋ
ಪಹರಣಕೆ ಸಂನ್ಯಾಸ ಗಡ ವಿ
ಗ್ರಹದಲಧಿಕರು ಗಡ ಜರಾಸಂಧಾದಿ ನಾಯಕರು
ಮಹಿಯ ಮನ್ನೆಯರಧ್ವರವ ನಿ
ರ್ವಹಿಸಲೀಯರು ಗಡ ಶಿವಾ ಶಿವ
ರಹವ ಮಾಡಿದನರಸನೆಂದನು ನಗುತ ಕಲಿಪಾರ್ಥ ॥28॥
೦೨೯ ಏಕೆ ಗಾಣ್ಡೀವವಿದು ...{Loading}...
ಏಕೆ ಗಾಂಡೀವವಿದು ಶರಾವಳಿ
ಯೇಕೆ ಇಂದ್ರಾಗ್ನೇಯ ವಾರುಣ
ವೇಕೆ ರಥವಿದು ರಾಮಭೃತ್ಯ ಧ್ವಜವಿಳಾಸವಿದು
ಲೋಕರಕ್ಷಾ ಶಿಕ್ಷೆಗಿಂತಿವು
ಸಾಕು ಹುಲು ಮಂಡಳಿಕರಿವದಿರ
ನೂಕಲರಿಯದೆ ಜೀಯ ಜಂಜಡವೇಕೆ ಬೆಸಸೆಂದ ॥29॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಈ ಗಾಂಡೀವವೇಕಿರಬೇಕು ? ಈ ಬಾಣಗಳೇಕೆ, ಇಂದ್ರ ಆಗ್ನೇಯ ವಾರುಣ ಇತ್ಯಾದಿ ಅಸ್ತ್ರಗಳೇಕೆ ಇರಬೇಕು? ರಾಮಭಕ್ತನಾದ ಆಂಜನೇಯನು ನೆಲಸಿರುವ ಧ್ವಜ ಹಾರಾಡುತ್ತಿರುವ ಈ ರಥವು ತಾನೇ ಏಕೆ? ಲೋಕವನ್ನು ರಕ್ಷಿಸಲಾಗಲಿ ಶಿಕ್ಷಿಸಲಾಗಲಿ ಇವಿಷ್ಟು ಸಾಕು. ಅಲ್ಪರಾದ ಮಾಂಡಲಿಕರನ್ನು ಇವು ಸೋಲಿಸಲಾರವೇ ? ಜೀಯಾ, ಕಳವಳವೇಕೆ? ನನಗೆ ಅಪ್ಪಣೆ ಕೊಡು” ಎಂದು ಅರ್ಜುನನು ಹೇಳಿದನು.
ಪದಾರ್ಥ (ಕ.ಗ.ಪ)
ರಾಮಭೃತ್ಯ-ಆಂಜನೇಯ,
ಜಂಜಡ-ಕಳವಳ
ಏಕೆ ಗಾಂಡೀವವಿದು-ಈ ಗಾಂಡೀವ ಧನುಸ್ಸೇಕೆ ಇರಬೇಕು? ಶರಾವಳಿಯೇಕೆ-ಬಾಣಗಳೇಕೆ? ಇಂದ್ರಾಗ್ನೇಯ ವಾರುಣವೇಕೆ-ಐಂದ್ರ, ಆಗ್ನೇಯ, ವಾರುಣ, ಇತ್ಯಾದಿ ಅಸ್ತ್ರಗಳೇಕೆ ? ಏಕೆ ರಥವಿದು-ಈ ರಥವೇಕೆ ಬೇಕು? ರಥವಿದು ರಾಮಭೃತ್ಯ ಧವಜವಿಲಾಸವಿದು-ರಥದ ಮೇಲೆ ಹನುಮನ ಧ್ವಜದ ವಿಲಾಸ ವೇಕೆ ಇರಬೇಕು? ಲೋಕರಕ್ಷಾ ಶಿಕ್ಷೆಗೆ-ಲೋಕವನ್ನು ರಕ್ಷಿಸಲು ಮತ್ತು ಶಿಕ್ಷಿಸಲು
ಇಂತು ಇವು ಸಾಕು, ಹುಲು ಮಂಡಳಿಕರಿವದಿರ-ಅಲ್ಪರಾದ ಈ ಮಾಂಡಲಿಕರ, ನೂಕಲು-ಬಡಿದೋಡಿಸಲು, ಅರಿಯದೆ ಜೀಯ-ನನಗೆ ತಿಳಿಯದೆ ಪ್ರಭು, ಜಂಜಡವೇಕೆ-ಕಳವಳವೇಕೆ ? ಬೆಸಸು-ಅಪ್ಪಣೆ ಕೊಡು
ಮೂಲ ...{Loading}...
ಏಕೆ ಗಾಂಡೀವವಿದು ಶರಾವಳಿ
ಯೇಕೆ ಇಂದ್ರಾಗ್ನೇಯ ವಾರುಣ
ವೇಕೆ ರಥವಿದು ರಾಮಭೃತ್ಯ ಧ್ವಜವಿಳಾಸವಿದು
ಲೋಕರಕ್ಷಾ ಶಿಕ್ಷೆಗಿಂತಿವು
ಸಾಕು ಹುಲು ಮಂಡಳಿಕರಿವದಿರ
ನೂಕಲರಿಯದೆ ಜೀಯ ಜಂಜಡವೇಕೆ ಬೆಸಸೆಂದ ॥29॥
೦೩೦ ನೆರಹು ಹಾರುವರನು ...{Loading}...
ನೆರಹು ಹಾರುವರನು ದಿಗಂತಕೆ
ಹರಹು ನಮ್ಮನು ಬಂಧುವರ್ಗವ
ಕರೆಸು ರಚಿಸಲಿ ಕಾಣಬೇಹುದು ಕದನ ಕಾಮುಕರ
ಸೊರಹಲರಿಯೆನು ಸಾಧುಗಳನಾ
ದರಿಸುವೆನು ಚಾವಟೆಯರನು ಚಿ
ಮ್ಮುರಿಯ ಬಿಗಿಸುವೆನಮರಿಯರ ಕಡೆಗಣ್ಣ ಕಣ್ಣಿಯಲಿ ॥30॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ವಿಪ್ರರನ್ನು ಇಲ್ಲಿ ಸೇರಿಸು. ನಮ್ಮನ್ನು ದಿಗಂತಗಳಿಗೆ ಕಳಿಸು. ಬಂಧುವರ್ಗವನ್ನೆಲ್ಲ ಕರೆಸು. ವ್ಯವಸ್ಥೆ ಮಾಡಲಿ. ಯುದ್ಧ ಕಾಮುಕರನ್ನು ನಾವೂ ನೋಡೋಣ. ನಾನು ವೃಥಾ ಹರಟಲಾರೆ. ಸಾಧುಗಳನ್ನು ಮಾತ್ರ ಆದರಿಸುತ್ತೇನೆ. ಉದ್ಧಟತನದಿಂದ ಕೊಬ್ಬಿರುವವರನ್ನು ಸುರವನಿತೆಯ ಕಡೆಗಣ್ಣನೋಟವೆಂಬ ಹಗ್ಗದಿಂದ ಹೆಡಮುರಿಗೆ ಕಟ್ಟಿಸುತ್ತೇನೆ.
ಪದಾರ್ಥ (ಕ.ಗ.ಪ)
ಸೊರಹು-ಹರಟು, ಚಾವಟೆಯರು-ಉದ್ಧಟರು, ಚಿಮ್ಮುರಿಯ ಬಿಗಿಸು-ಹೆಡಮುರಿಗೆ ಕಟ್ಟಿಸು
ನೆರಹು ಹಾರುವರನು-ಬ್ರಾಹ್ಮಣರನ್ನೆಲ್ಲ ಕರೆಸು, ದಿಗಂತಕೆ ಹರಹ-ದಿಕ್ಕುಗಳ ತುದಿಯವರೆಗೂ ಕಳಿಸಿಕೊಡು ನಂಟರಿಷ್ಟರನ್ನೆಲ್ಲ ಬರಮಾಡು, ರಚಿಸಲಿ-ವ್ಯವಸ್ಥೆ ಮಾಡಲಿ, ಕದನ ಕಾಮುಕರ-ಯುದ್ಧದ ಬಳಕೆಯಳ್ಳವರನ್ನು ನೋಡೋಣ, ಸೊರಹಲರಿಯೆನು-ಬಾಯಲ್ಲಿ ಸುಮ್ಮನೆ ಮಾತಾಡುವುದಿಲ್ಲ, ಸಾಧುಗಳನು ಸಾಧುಗಳಾದವರನ್ನು ಗೌರವಿಸುತ್ತೇನೆ, ಚಾವಟೆಯರನು-ಉದ್ಧಟರಾದವರನ್ನು,
ಸುರವನಿತೆಯ-ಸ್ವರ್ಗದ ಗಣಿಕೆಯೆ, ಕಡೆಗಣ್ಣ ಕಣ್ಣಿಯಲಿ-ಕಡೆಗಣ್ ನೋಟವೆಂಬ ಹಗ್ಗದಲ್ಲಿ, ಚಿಮ್ಮುರಿಯ ಬಿಗಿಸುವೆನು-ಹೆಡಮುರಿಗೆ ಕಟ್ಟಿಸುತ್ತೇನೆ (ವೀರಸ್ವರ್ಗವನ್ನು ಸೇರಿಸುತ್ತೇನೆ)
ಮೂಲ ...{Loading}...
ನೆರಹು ಹಾರುವರನು ದಿಗಂತಕೆ
ಹರಹು ನಮ್ಮನು ಬಂಧುವರ್ಗವ
ಕರೆಸು ರಚಿಸಲಿ ಕಾಣಬೇಹುದು ಕದನ ಕಾಮುಕರ
ಸೊರಹಲರಿಯೆನು ಸಾಧುಗಳನಾ
ದರಿಸುವೆನು ಚಾವಟೆಯರನು ಚಿ
ಮ್ಮುರಿಯ ಬಿಗಿಸುವೆನಮರಿಯರ ಕಡೆಗಣ್ಣ ಕಣ್ಣಿಯಲಿ ॥30॥
೦೩೧ ಅಹುದು ಭೀಮಾರ್ಜುನರ ...{Loading}...
ಅಹುದು ಭೀಮಾರ್ಜುನರ ನುಡಿ ನಿ
ರ್ವಹಿಸದೇ ಬಳಿಕೇನು ನಿಜಕುಲ
ವಿಹಿತವಲ್ಲಾ ವಿನಯ ವಿಕ್ರಮ ವಿದ್ಯೆ ನೃಪನೀತಿ
ಗಹನವೇ ಗಂಡುಗರಿಗಿದಿರಾ
ರಹಿತ ಬಲವಿನ್ನರಸ ಚಿಂತಾ
ಮಹಿಳೆಗವಸರವಲ್ಲ ಮನ ಮಾಡೆಂದನಸುರಾರಿ ॥31॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಹೌದು, ಭೀಮಾರ್ಜುನರ ಮಾತು ನೆರವೇರದಿರುತ್ತದೆಯೇ ಇನ್ನೇನು? ಕ್ಷತ್ರಿಯ ಕುಲಕ್ಕೆ ವಿಹಿತವಾಗಿಯೇ ಇದೆಯಲ್ಲ ಅವರ ಮಾತು ವಿನಯ, ವಿಕ್ರಮ, ವಿದ್ಯೆ ರಾಜನೀತಿ ಎಲ್ಲವೂ ! ಗಂಡಸುತನವಿರುವ ಇವರಿಗೆ ಇದು ಗಂಭೀರವಾದ ವಿಷಯವೇ ? ಇವರನ್ನು ಎದುರಿಸಬಲ್ಲಂತಹ ಶತ್ರುಬಲ ಇನ್ನಾವುದಿದ್ದೀತು ? ರಾಜ, ಇನ್ನು ಚಿಂತಾ ಮಹಿಳೆಗೆ ಅವಕಾಶವಿಲ್ಲ. ಯಾಗದ ನಿರ್ಧಾರವನ್ನು ಕೈಗೊಳ್ಳು” ಎಂದು ಶ್ರೀಕೃಷ್ಣನು ಹೇಳಿದನು.
ಪದಾರ್ಥ (ಕ.ಗ.ಪ)
ಗಂಡುಗರು-ಶೂರರು
ಭೀಮಾರ್ಜುನರ ನುಡಿ-ಭೀಮ ಅರ್ಜುನರು ಆಡಿದ ಮಾತು, ಅಹುದು-ನಿಜ, ನಿರ್ವಹಿಸದೇ ಬಳಿಕೇನು-ನೆರವೇರದೆ ಏಕಿರುತ್ತದೆ?
ವಿನಯ ವಿಕ್ರಮ ವಿದ್ಯೆ ನೃಪನೀತಿ-ನಮ್ರತೆ, ಪರಾಕ್ರಮ, ವಿದ್ಯೆ ಹಾಗೂ ರಾಜನೀತಿ, ನಿಜಕುಲ ವಿಹಿತವಲ್ಲಾ-ನಿಮ್ಮ ವಂಶಕ್ಕೆ ಸಹಜವಾದುದಲ್ಲವೇ ? ಗಂಡುಗರಿಗೆ-ಶೂರರಾದವರಿಗೆ, ಗಹನವೇ-ಇದೇನು ಗಂಭಿರವಾದ ವಿಷಯವೇ ? ಇನ್ನು ಇದಿರಾರು ಅಹಿತ ಬಲ-ಇನ್ನು ಎದುರಿಸಬಲ್ಲಂತಹ ಶತ್ರುಗಳಾರಿದ್ದಾರು ? ಅರಸ-ರಾಜ, ಚಿಂತಾ ಮಹಿಳೆಗೆ ಅವಸರದಲ್ಲಿ-ಚಿಂತೆಯೆಂಬ ಸ್ತ್ರೀಗೆ ಈಗ ಅವಕಾಶವಿಲ್ಲ, ಮನ ಮಾಡು-ಯಾಗ ಮಾಡುವುದೆಂದು ನಿರ್ಧಾರ ಮಾಡಿಬಿಡು ಎಂದ ಅಸುರಾರಿ-ಕೃಷ್ಣ
ಮೂಲ ...{Loading}...
ಅಹುದು ಭೀಮಾರ್ಜುನರ ನುಡಿ ನಿ
ರ್ವಹಿಸದೇ ಬಳಿಕೇನು ನಿಜಕುಲ
ವಿಹಿತವಲ್ಲಾ ವಿನಯ ವಿಕ್ರಮ ವಿದ್ಯೆ ನೃಪನೀತಿ
ಗಹನವೇ ಗಂಡುಗರಿಗಿದಿರಾ
ರಹಿತ ಬಲವಿನ್ನರಸ ಚಿಂತಾ
ಮಹಿಳೆಗವಸರವಲ್ಲ ಮನ ಮಾಡೆಂದನಸುರಾರಿ ॥31॥
೦೩೨ ಎಮಗೆ ಭೀಮಾರ್ಜುನರ ...{Loading}...
ಎಮಗೆ ಭೀಮಾರ್ಜುನರ ಕೊಡು ರಿಪು
ರಮಣಿಯರ ಸೀಮಂತ ಮಣಿಗಳ
ನಿಮಿಷದಲಿ ತರಿಸುವೆನು ಹರಿಸುವೆನಹಿತ ಭೂಮಿಪರ
ಸಮರ ಜಯವಿನ್ನಾಯ್ತು ಯಜ್ಞೋ
ದ್ಯಮಕೆ ನಿಷ್ಪ್ರತ್ಯೂಹವಿನ್ನು
ಭ್ರಮೆಯ ಮಾಡದಿರೆಂದು ನೃಪತಿಗೆ ನುಡಿದನಸುರಾರಿ ॥32॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಮತ್ತೆ ಯುಧಿಷ್ಠರನಿಗೆ “ನನ್ನ ಜೊತೆಯಲ್ಲಿ ಭೀಮಾರ್ಜುನರನ್ನು ಕಳಿಸು. ಶತ್ರುಗಳ ಪತ್ನಿಯರ ಸೀಮಂತಮಣಿಗಳನ್ನು ನಿಮಿಷ ಮಾತ್ರದಲ್ಲಿ ತರಿಸಿಕೊಡುತ್ತೇನೆ. ಶತ್ರುರಾಜರನ್ನು ಮುಗಿಸಿಬಿಡುತ್ತೇನೆ. ಯುದ್ಧವನ್ನು ಗೆದ್ದಾಯಿತೆಂದೇ ತಿಳಿ. ಇನ್ನು ಯಜ್ಞಕ್ಕೆ ಯಾವ ಅಡ್ಡಿಯೂ ಇರದು. ನಿನ್ನ ಮನಸ್ಸಿಗೆ ಯಾವ ಭ್ರಮೆಯೂ ಬೇಡ” ಎಂದ.
ಪದಾರ್ಥ (ಕ.ಗ.ಪ)
ನಿಷ್ಪ್ರತ್ಯೂಹ-ಅಡ್ಡಿಯಿಲ್ಲದಿರುವುದು, ನಿರಾತಂಕ
ಎಮಗೆ ಭೀಮಾರ್ಜುನರ ಕೊಡು-ನನ್ನೊಡನೆ ಭೀಮ ಅರ್ಜುನರನ್ನು ಕಳಿಸಿಕೊಡು, ರಿಪು ರಮಣಿಯರ-ಶತ್ರುರಾಜ ಪತ್ನಿಯರ, ಸೀಮಂತ ಮಣಿಗಳ-ಮಾಂಗಲ್ಯದ ರತ್ನಗಳನ್ನು, ನಿಮಿಷದಲಿ ತರಿಸುವೆನು-ನಿಮಿಷ ಮಾತ್ರದಲ್ಲಿ ತರಿಸಿಕೊಡುತ್ತೇನೆ, (ಶತ್ರುರಾಜರ ಸಾವಿನಿಂದ ಅವರನ್ನು ವಿಧವೆಯರನ್ನಾಗಿಸಿ ಬಿಡುತ್ತೇನೆ), ಅಹಿತ ಭೂಮಿಪರ-ಶತ್ರುರಾಜರುಗಳನ್ನು, ಹರಿಸುವೆನ-ನಾಶಮಾಡಿಸಿಬಿಡುತ್ತೇನೆ, ಸಮರ ಜಯವಿನ್ನಾಯ್ತು-ಇನ್ನು ಯುದ್ಧವನ್ನು ಜಯಿಸಿ ಆಯಿತೆಂದು ತಿಳಿ. ಇನ್ನು ಭ್ರಮೆಯ ಮಾಡದಿರು-ಯಾವ ಭ್ರಮೆಯನ್ನು ಇಟ್ಟುಕೊಳ್ಳಬೇಡ, ಯಜ್ಞೋದ್ಯಮಕೆ-ಯಜ್ಞದ ಕಾರ್ಯಕ್ಕೆ, ನಿಷ್ಪ್ರತ್ಯೂಹ-ಯಾವ ಅಡ್ಡಿಯೂ ಇರದು ಎಂದು, ನೃಪತಿಗೆ-ಧರ್ಮರಾಜನಿಗೆ, ನುಡಿದನಸುರಾರಿ-ಕೃಷ್ಣ ಹೇಳಿದ
ಮೂಲ ...{Loading}...
ಎಮಗೆ ಭೀಮಾರ್ಜುನರ ಕೊಡು ರಿಪು
ರಮಣಿಯರ ಸೀಮಂತ ಮಣಿಗಳ
ನಿಮಿಷದಲಿ ತರಿಸುವೆನು ಹರಿಸುವೆನಹಿತ ಭೂಮಿಪರ
ಸಮರ ಜಯವಿನ್ನಾಯ್ತು ಯಜ್ಞೋ
ದ್ಯಮಕೆ ನಿಷ್ಪ್ರತ್ಯೂಹವಿನ್ನು
ಭ್ರಮೆಯ ಮಾಡದಿರೆಂದು ನೃಪತಿಗೆ ನುಡಿದನಸುರಾರಿ ॥32॥
೦೩೩ ಕಙ್ಗಳನುಜರು ಚಿತ್ತ ...{Loading}...
ಕಂಗಳನುಜರು ಚಿತ್ತ ನೀವೆ
ನ್ನಂಗವಣೆಗಿನ್ನೇನು ಭಯವಾ
ವಂಗದಲಿ ನಂಬಿಹವಲೇ ನಿಮ್ಮಂಘ್ರಿಪಂಕಜವ
ಸಂಗರದ ಜಯ ನಿನ್ನದಲ್ಲಿಯ
ಭಂಗ ನಿನ್ನದು ಭಕ್ತ ಜನದನು
ಸಂಗಿ ನೀನಿರಲೇನು ನಮಗರಿದೆಂದನಾ ಭೂಪ ॥33॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ತಮ್ಮಂದಿರಾದ ಭೀಮಾರ್ಜುನರು ನನ್ನ ಎರಡು ಕಣ್ಣುಗಳು ! ನೀವೆ ನನ್ನ ಮನಸ್ಸು ! ನನ್ನ ಉದ್ದೇಶಕ್ಕೆ ಇನ್ನಾವ ರೀತಿಯಲ್ಲಿ ತಾನೇ ಭಯವಿದೆ ? ನಿಮ್ಮ ಪಾದಕಮಲಗಳನ್ನೇ ನಾವು ನಂಬಿದ್ದೇವಲ್ಲವೇ? ಯುದ್ಧದಲ್ಲಿನ ಜಯ ನಿನಗೇ ಸೇರಿದುದು. ಅಲ್ಲಿ ಏನು ಭಂಗವುಂಟಾದರೂ ನಿನಗೇ ಸೇರಿದುದು. ಭಕ್ತಜನರ ಬೆನ್ನ ಹಿಂದೆ ನೀನಿರುವಾಗ ನಮಗೆ ಅಸಾಧ್ಯವಾದುದಾವುದು ? ಎಂದು ಯುಧಿಷ್ಠಿರ ಹೇಳಿದ.
ಪದಾರ್ಥ (ಕ.ಗ.ಪ)
ಕಂಗಳನುಜರು-ತಮ್ಮಂದಿರಾದ ಭೀಮಾರ್ನುಜನರೇ ನನ್ನ ಎರಡು ಕಣ್ಣುಗಳು, ಚಿತ್ತ ನೀವು-ನೀವೇ ನನ್ನ ಮನಸ್ಸು ನನ್ನ ಅಂಗವಣೆಗೆ-ಉದ್ದೇಶಕ್ಕೆ, ಅವಂಗದಲಿ-ಯಾವ ಭಾಗದಲ್ಲಿ ತಾನೇ, ಇನ್ನೇನು ಭಯವು-ಇನ್ನು ಭಯವೆಲ್ಲಿದೆ ? ಅಂಘ್ರಿಪಂಕಜವ-ನಿಮ್ಮ ಪಾದಕಮಲಗಳನ್ನೇ, ನಂಬಿಹವಲೇ-ನಂಬಿದ್ದೇವಲ್ಲವೇ ? ಸಂಗರದ ಜಯ-ನನ್ನ ತಮ್ಮಂದಿರು ಯುದ್ಧದಲ್ಲಿ ಜಯಗಳಿಸುವುದು,
ನಿನ್ನದು-ನಿನಗೆ ಸೇರಿದುದು, ಅಲ್ಲಿಯ ಭಂಗ-ಅಲ್ಲಿ ಉಂಟಾಗಬಹುದಾದ ಸೇಲು, ನಿನ್ನದು-ನಿನಗೇ ಸೇರಿದುದು, ಭಕ್ತ ಜನದ ಅನುಸಂಗಿ-ಭಕ್ತರನ್ನೇ ಬೆಂಬಲಿಸಿ ಹೋಗುವ, ನೀನಿರಲು-ನೀನು ಇರಲಾಗಿ, ಏನು ನಮಗರಿದು-ನಮಗೆ ಅಸಾಧ್ಯವಾದುದೇನು ?
ಎಂದನಾ ಭೂಪ-ಎಂದ ರಾಜ
ಮೂಲ ...{Loading}...
ಕಂಗಳನುಜರು ಚಿತ್ತ ನೀವೆ
ನ್ನಂಗವಣೆಗಿನ್ನೇನು ಭಯವಾ
ವಂಗದಲಿ ನಂಬಿಹವಲೇ ನಿಮ್ಮಂಘ್ರಿಪಂಕಜವ
ಸಂಗರದ ಜಯ ನಿನ್ನದಲ್ಲಿಯ
ಭಂಗ ನಿನ್ನದು ಭಕ್ತ ಜನದನು
ಸಂಗಿ ನೀನಿರಲೇನು ನಮಗರಿದೆಂದನಾ ಭೂಪ ॥33॥
೦೩೪ ವಿಗಡ ಯಾಗಕೆ ...{Loading}...
ವಿಗಡ ಯಾಗಕೆ ಸಕಲ ರಾಯರು
ಹಗೆ ಮರುತ್ತನು ಕಾರ್ತವೀರ್ಯಾ
ದಿಗಳು ಕೆಲವರಶಕ್ತರಾದರು ರಾಜಸೂಯದಲಿ
ಬಗೆಯಲಿದ ದುಷ್ಕಾಲವಸುರರೊ
ಳಗಡು ಮಾಗಧನವನ ಮುರಿದರೆ
ಸುಗಮ ನಿಮ್ಮಯ್ಯಂಗೆ ಸುರಪದವೆಂದನಸುರಾರಿ ॥34॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಈ ಮಹತ್ತಾದ ಯಾಗಕ್ಕೆ ಎಲ್ಲ ರಾಜರೂ ಶತ್ರುಗಳೇ. ಮರುತ್ತ ಕಾರ್ತವೀರ್ಯಾದಿ ಕೆಲವರು ರಾಜಸೂಯಯಾಗವನ್ನು ಮಾಡಲು ಅಶಕ್ತರಾದರು. ಯೋಚಿಸಿದರೆ ಇದು ಕೆಟ್ಟ ಕಾಲ. ಅಸುರರಲ್ಲೆಲ್ಲ ಮಗಧ ದೇಶದ ರಾಜ ಜರಾಸಂಧ ಮಹಾದುಷ್ಟ. ಅವನನ್ನು ಕೊಂದರೆ ನಿಮ್ಮ ತಂದೆಯು ಸುರಪದವನ್ನು ಪಡೆಯುವುದು ಸುಗಮವಾಗುತ್ತದೆ ಎಂದು ಮುರವೈರಿ ನಗುತ್ತಾ ಹೇಳಿದನು.
ಪದಾರ್ಥ (ಕ.ಗ.ಪ)
ಅಗಡು-ಭಯಂಕರ, ವಿಗಡ-ದುಷ್ಕರ
ವಿಗಡ ಯಾಗಕೆ-ಈ ಮಹತ್ತಾದ ಯಾಗಕ್ಕೆ, ಸಕಲ ರಾಯರು-ಎಲ್ಲ ರಾಯರುಗಳು, ಹಗೆ-ಶತ್ರುಗಳು, ಮರುತ್ತನು ಕಾರ್ತವೀರ್ಯಾ-ಮೊದಲಾದ ರಾಜರು, ಅಶಕ್ತರಾದರು ರಾಜಸೂಯದಲಿ-ರಾಜಸೂಯಯಾಗವನ್ನು ನಡೆಸಲಾರದೆ ದುರ್ಬಲರಾದರು, ಬಗೆಯಲು-ಯೋಚಿಸಿದರೆ ಇದು, ದುಷ್ಕಾಲ-ಕೆಟ್ಟ ಕಾಲ, ಅಸುರರೊಳು-ದೈತ್ಯರೆಲ್ಲರ, ಮಾಗಧನು-ಜರಾಸಂಧನು, ಅಗಡು-ಮಹಾದುಷ್ಟ, ಅವನ ಮುರಿದರೆ-ಅವನನ್ನು ನಾಶಮಾಡಿದರೆ, ನಿಮ್ಮಯ್ಯಂಗೆ-ನಿಮ್ಮ ತಂದೆಯಾದ ಪಾಂಡುವಿಗೆ, ಸುರಪದವು-ದೇವತೆಯ ಪದವಿ, ಸುಗಮ-ಸುಲಭವಾಗಿ ಪ್ರಾಪ್ತವಾಗುತ್ತದೆ, ಎಂದನಸುರಾರಿ-ಎಂದ ಕೃಷ್ಣ
ಮೂಲ ...{Loading}...
ವಿಗಡ ಯಾಗಕೆ ಸಕಲ ರಾಯರು
ಹಗೆ ಮರುತ್ತನು ಕಾರ್ತವೀರ್ಯಾ
ದಿಗಳು ಕೆಲವರಶಕ್ತರಾದರು ರಾಜಸೂಯದಲಿ
ಬಗೆಯಲಿದ ದುಷ್ಕಾಲವಸುರರೊ
ಳಗಡು ಮಾಗಧನವನ ಮುರಿದರೆ
ಸುಗಮ ನಿಮ್ಮಯ್ಯಂಗೆ ಸುರಪದವೆಂದನಸುರಾರಿ ॥34॥
೦೩೫ ಆರವನು ಹಿರಿದಾಗಿ ...{Loading}...
ಆರವನು ಹಿರಿದಾಗಿ ನೀ ಕೈ
ವಾರಿಸುವೆ ಕಮಲಾಕ್ಷ ಮಾಗಧ
ನಾರುಭಟೆ ತಾನೇನು ವರವೋ ಸಹಜ ವಿಕ್ರಮವೊ
ವೀರರಿದೆ ಸಿಡಿಲಂತೆ ಸಕಲ ಮ
ಹೀ ರಮಣರಿದರೊಳಗೆ ನೃಪಮಖ
ವೈರಿ ಗಡ ಬೆಸಸೆಂದಡೆಂದನು ನಗುತ ಮುರವೈರಿ ॥35॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಆಗ ಯುಧಿಷ್ಠಿರ “ಯಾರವನು? ನೀನು ಇಷ್ಟು ದೊಡ್ಡದಾಗಿ ಹೊಗಳುತ್ತಿರುವುದು ಕೃಷ್ಣ? ಆ ಮಾಗಧನ ಆರ್ಭಟ ತಾನೇನು ವರವೋ ಅಥವಾ ಸಹಜ ಪರಾಕ್ರಮವೋ ? ಸಮಸ್ತ ರಾಜರುಗಳೆಲ್ಲ ಎಷ್ಟೋ ಮಂದಿ ಸಿಡಿಲಿನಂಥವರು ಇದ್ದಾರೆ. ನಿಜ. ಅವರಲ್ಲಿ ಈ ಮಾಗಧನೇ ರಾಜಸೂಯಕ್ಕೆ ವೈರಿಯೆ ? ಎಂದು ಕೇಳಿದ.
ಪದಾರ್ಥ (ಕ.ಗ.ಪ)
ಕೈವಾರಿಸು-ಹೊಗಳು, ಅರುಭಟೆ-ಆರ್ಭಟ, ಬೆಸಸು-ಹೇಳು
ಆರವನು ಕಮಲಾಕ್ಷ-ಯಾರವನು ಕೃಷ್ಣ, ನೀ ಹಿರಿದಾಗಿ ಕೈವಾರಿಸುವೆ-ನೀನು ದೊಡ್ಡದಾಗಿ ಹೊಗಳುತ್ತಿರುವೆಯಲ್ಲ ?, ಮಾಗಧನ-ಆ ಜರಾಸಂಧನ, ಆರುಭಟೆ-ಆರ್ಭಟ, ತಾನೇನು-ತಾನೆಂತಹುದು ?, ವರವೋ ಸಹಜ ವಿಕ್ರಮವೊ-ಅವನ ಪರಾಕ್ರಮ ದೇವತೆಗಳ
ವರದಿಂದ ಬಂದದೋ ಅಥವಾ ಅವನಿಗೆ ಸಹಜವಾಗಿ ಬಂದದೋ ? ವೀರರಿದೆ ಸಿಡಿಲಂತೆ ಸಕಲ-ಮಹೀರಮಣರು ಪ್ರಪಂಚದಲ್ಲಿ
ಎಲ್ಲರಾಜರ ಪೈಕಿ ಸಿಡಿಲಿನಂತೆ ಇರುವ ವೀರರೂ ಇದ್ದಾರೆ, ಅದರಲ್ಲಿ ನರಪ-ಈ ಮಗಧ ರಾಜ, ಮಖವೈರಿ ಗಡ-ನಮ್ಮ ಯಾಗಕ್ಕೆ ಶತ್ರುವಲ್ಲವೇ ? ಬೆಸಸು-ಅವನ ವಿಷಯವನ್ನು ತಿಳಿಸು ಎಂದ. ಅದಕ್ಕೆ ಮುರವೈರಿ-ಕೃಷ್ಣ, ನಗುತ ಎಂದನು-ನಗುತ್ತಾ ಅವನ ಕಥೆಯನ್ನು ಹೇಳಿದ
ಮೂಲ ...{Loading}...
ಆರವನು ಹಿರಿದಾಗಿ ನೀ ಕೈ
ವಾರಿಸುವೆ ಕಮಲಾಕ್ಷ ಮಾಗಧ
ನಾರುಭಟೆ ತಾನೇನು ವರವೋ ಸಹಜ ವಿಕ್ರಮವೊ
ವೀರರಿದೆ ಸಿಡಿಲಂತೆ ಸಕಲ ಮ
ಹೀ ರಮಣರಿದರೊಳಗೆ ನೃಪಮಖ
ವೈರಿ ಗಡ ಬೆಸಸೆಂದಡೆಂದನು ನಗುತ ಮುರವೈರಿ ॥35॥
೦೩೬ ಧರಣಿಪತಿ ಕೇಳೈ ...{Loading}...
ಧರಣಿಪತಿ ಕೇಳೈ ಬೃಹದ್ರಥ
ನರಸು ಮಾಗಧ ಮಂಡಲಕೆ ತ
ತ್ಪುರಿ ಗಿರಿವ್ರಜವೆಂಬುದಲ್ಲಿ ಸಮಸ್ತ ವಿಭವದಲಿ
ಧರೆಯ ಪಾಲಿಸುತಿದ್ದನಾತಂ
ಗರಸಿಯರು ಸೇರಿದರು ಕಾಶೀ
ಶ್ವರನ ತನುಜೆಯರಿಬ್ಬರದುಬುತ ರೂಪು ಗುಣಯುತರು ॥36॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕೃಷ್ಣ ಹೇಳಿದ “ರಾಜ, ಕೇಳು. ಮಾಗಧ ಮಂಡಲಕ್ಕೆ ಬೃಹದ್ರಥ ರಾಜನಾಗಿದ್ದ. ಅವನ ಪಟ್ಟಣ ಗಿರಿವ್ರಜವೆಂಬುದು. ಅಲ್ಲಿ ಅವನು ಸಮಸ್ತ ವೈಭವದಿಂದ ರಾಜ್ಯವನ್ನು ಪಾಲಿಸುತ್ತಿದ್ದ. ಅದ್ಭುತವಾದ ಗುಣವತಿಯರಾದ, ಕಾಶೀರಾಜನ ಇಬ್ಬರು ಪುತ್ರಿಯರು ಅವನ ರಾಣಿಯರು.
ಪದಾರ್ಥ (ಕ.ಗ.ಪ)
ಅವನೀಪತಿ ಕೇಳೈ-ಕೇಳಯ್ಯ ರಾಜ, ಮಾಗಧ ಮಂಡಲಕೆ-ಮಗಧ ರಾಜ್ಯಕ್ಕೆ ಬೃಹದ್ರಥ ಎಂಬವನು, ಅರಸು-ರಾಜನಾಗಿದ್ದ, ತತ್ಪುರಿ ಗಿರಿವ್ರಜವೆಂಬುದು-ಅವನ ಪಟ್ಟಣ ಗಿರಿವ್ರಜ ಎಂಬದು, ಅಲ್ಲಿ ಸಮಸ್ತ ವಿಭವದಲಿ-ಎಲ್ಲ ಬಗೆಯ ವೈಭವಗಳಿಂದ ಅವನು ಧರೆಯ ಪಾಲಿಸುತ್ತಿದ್ದನು, ಧರೆಯ ಪಾಲಿಸುತಿದ್ದನು-ರಾಜ್ಯವನ್ನಾಳುತ್ತಿದ್ದ, ಕಾಶೀಶ್ವರನ-ಕಾಶೀರಾಜನ, ತನುಜೆಯರಿಬ್ಬರು-ಇಬ್ಬರು ಹೆಣ್ಣುಮಕ್ಕಳು,
ಅದುಬುತ ರೂಪು ಗುಣಯುತರು-ಅದ್ಭುತವಾದ ರೂಪ ಮತ್ತು ಗುಣಗಳಿಂದ ಕೂಡಿದಂತಹವನು, ಆತಂಗರಸಿಯರು-ಅವನ ರಾಣಿಯಾಗಿದ್ದರು
ಮೂಲ ...{Loading}...
ಧರಣಿಪತಿ ಕೇಳೈ ಬೃಹದ್ರಥ
ನರಸು ಮಾಗಧ ಮಂಡಲಕೆ ತ
ತ್ಪುರಿ ಗಿರಿವ್ರಜವೆಂಬುದಲ್ಲಿ ಸಮಸ್ತ ವಿಭವದಲಿ
ಧರೆಯ ಪಾಲಿಸುತಿದ್ದನಾತಂ
ಗರಸಿಯರು ಸೇರಿದರು ಕಾಶೀ
ಶ್ವರನ ತನುಜೆಯರಿಬ್ಬರದುಬುತ ರೂಪು ಗುಣಯುತರು ॥36॥
೦೩೭ ಅವರೊಡನೆ ಸತ್ಕಥಾ ...{Loading}...
ಅವರೊಡನೆ ಸತ್ಕಥಾ ಸಂ
ಭವ ವಿನೋದದಲಿದ್ದನೀ ವೈ
ಭವ ಫಲವಪುತ್ರರಿಗೆ ಬಹು ದುಃಖೋಪಚಯವೆಂದು
ಅವನಿಪತಿ ವೈರಾಗ್ಯದಲಿ ರಾ
ಜ್ಯವನು ಬಿಸುಟು ತಪಃಪ್ರಭಾವ
ವ್ಯವಹರಣೆಯಲಿ ತನುವ ನೂಕುವೆನೆನುತ ಹೊರವಂಟ ॥37॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅವರೊಡನೆ ಸಲ್ಲಾಪ ಮಾಡಿಕೊಂಡು ಅವನು ವಿನೋದದಿಂದಿದ್ದ. ಅಪುತ್ರರಾದವರಿಗೆ ಈ ವೈಭವ ಫಲ ದುಃಖವನ್ನುಂಟು ಮಾಡುವುದು ಎಂದು ಅವನಿಗೆ ಅರಿವಾಯಿತು. ವೈರಾಗ್ಯ ಬಂದು ಅವನು ರಾಜ್ಯವನ್ನು ತ್ಯಜಿಸಿ ತಪಃ ಪ್ರಭಾವದ ವ್ಯವಹಾರದಲ್ಲಿ ಈ ದೇಹವನ್ನು ನೂಕುತ್ತೇನೆ ಎಂದು ಹೊರಟುಬಿಟ್ಟ.
ಪದಾರ್ಥ (ಕ.ಗ.ಪ)
ಉಪಚಯ-ಪ್ರಾಪ್ತಿ
ಅವರೊಡನೆ-ಆ ರಾಣಿಯರೊಡನೆ, ಸತ್ಕಥಾ ಸಂಭವ-ಒಳ್ಳೆಯ ಕಥೆಯಿಂದ ದೊರೆಯುವ, ವಿನೋದದಲಿದ್ದನು-ವಿನೋದವನ್ನು ಅನುಭವಿಸಿಕೊಂಡು ಇದ್ದನು, ಈ ವೈಭವ ಫಲ-ಈ ವೈಭವದ ಫಲವು, ಅಪುತ್ರರಿಗೆ-ಗಂಡು ಮಕ್ಕಳಾದವರಿಗೆ ಬಹು ದುಃಖೋಪಚಯವೆಂದು-ತುಂಬಾ ದುಃಖಉಂಟುಮಡುವದೆಂದು ತಿಳಿದು, ಅವನಿಪತಿ-ಆ ರಾಜ, ವೈರಾಗ್ಯದಲಿ-ವೈರಾಗ್ಯವನು ಹೊಂದಿದವನಾಗಿ, ರಾಜ್ಯವನು ಬಿಸುಟು-ರಾಜ್ಯವನ್ನು ತ್ಯಾಗ ಮಾಡಿ, ತಪಃಪ್ರಭಾವ ವ್ಯವಹರಣೆಯಲಿ-ತಪಸ್ಸಿನ ಪ್ರಭಾವವನ್ನು ಗಳಿಸುವ ವ್ಯವಹಾರದಲ್ಲಿ, ತನುವ ನೂಕುವೆನು-ತನುವು ತ್ಯಜಿಸುವೆನು, ಎನುತ ಹೊರವಂಟ-ಎಂದು ಹೊರಟ
ಮೂಲ ...{Loading}...
ಅವರೊಡನೆ ಸತ್ಕಥಾ ಸಂ
ಭವ ವಿನೋದದಲಿದ್ದನೀ ವೈ
ಭವ ಫಲವಪುತ್ರರಿಗೆ ಬಹು ದುಃಖೋಪಚಯವೆಂದು
ಅವನಿಪತಿ ವೈರಾಗ್ಯದಲಿ ರಾ
ಜ್ಯವನು ಬಿಸುಟು ತಪಃಪ್ರಭಾವ
ವ್ಯವಹರಣೆಯಲಿ ತನುವ ನೂಕುವೆನೆನುತ ಹೊರವಂಟ ॥37॥
೦೩೮ ಊರ ಹೊರವಡುವುತ್ತ ...{Loading}...
ಊರ ಹೊರವಡುವುತ್ತ ಕಂಡನು
ಪಾರಿಕಾಂಕ್ಷಿಯನೊಬ್ಬನನು ಮುನಿ
ವೀರಕಾಂಕ್ಷಿಯನಾಂಗಿರಾತ್ಮಜ ಚಂಡ ಕೌಶಿಕನ
ನಾರಿಯರು ಸಹಿತವವನ ಚರಣಾಂ
ಭೋರುಹಕ್ಕಭಿನಮಿಸಲತಿ ವಿ
ಸ್ತಾರಿಸಿದನಾಶೀರ್ವಚನವನು ಮುನಿ ನೃಪಾಲಂಗೆ ॥38॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಊರನ್ನು ಬಿಡುತ್ತಲೇ ಆಂಗಿರನ ಮಗನಾದ ಚಂಡಕೌಶಿಕನೆಂಬ ವೀರಕಾಂಕ್ಷಿಯಾದ ಮುನಿಯನ್ನು ಕಂಡ. ತನ್ನ ಪತ್ನಿಯರೊಡನೆ ಅವನ ಪಾದಗಳಿಗೆ ನಮಸ್ಕರಿಸಿ ಆಶೀರ್ವಾದವನ್ನು ಪಡೆದ.
ಪದಾರ್ಥ (ಕ.ಗ.ಪ)
ಪಾರಿಕಾಂಕ್ಷಿ-ಮುನಿ, ಅಂಭೋರುಹ-ಕಮಲ
ಊರ ಹೊರವಡುವುತ್ತ-ಊರನ್ನು ಬಿಟ್ಟು ಹೊರಕ್ಕೆ ಬರುತ್ತಲೇ, ಆಂಗಿರಾತ್ಮಜ ಚಂಡ ಕೌಶಿಕನ-ಆಂಗಿರಸ ಮಗನಾದ ಚಂಡ,
ಕೌಶಿಕನೆಂಬ ವೀರಕಾಂಕ್ಷಿಯಾದ ಪಾರಿಕಾಂಕ್ಷಿಯನ್ನು-ಮುನಿಯನ್ನು ಕಂಡನು, ನಾರಿಯರು ಸಹಿತ-ತನ್ನ ಪತ್ನಿಯರೊಡಗೂಡಿ,
ಈ ರಾಜ ಅವನ ಚರಣಾಂಭೋರುಹಕ್ಕಭಿನಮಿಸಲು-ಪಾದಕಮಲಗಳಿಗೆ ವಂದಿಸಲು, ಮುನಿ-ಆ ಚಂಡಕೌಶಿಕ ಮುನಿ, ನೃಪಾಲಂಗೆ-ರಾಜನಿಗೆ, ಅತಿ ವಿಸ್ತಾರಿಸಿದನಾಶೀರ್ವಚನವನು-ಅತಿ ವಿಶದವಾಗಿ ಆಶೀರ್ವಚನಗಳನ್ನು ನುಡಿದ
ಮೂಲ ...{Loading}...
ಊರ ಹೊರವಡುವುತ್ತ ಕಂಡನು
ಪಾರಿಕಾಂಕ್ಷಿಯನೊಬ್ಬನನು ಮುನಿ
ವೀರಕಾಂಕ್ಷಿಯನಾಂಗಿರಾತ್ಮಜ ಚಂಡ ಕೌಶಿಕನ
ನಾರಿಯರು ಸಹಿತವವನ ಚರಣಾಂ
ಭೋರುಹಕ್ಕಭಿನಮಿಸಲತಿ ವಿ
ಸ್ತಾರಿಸಿದನಾಶೀರ್ವಚನವನು ಮುನಿ ನೃಪಾಲಂಗೆ ॥38॥
೦೩೯ ಏನಿದರಸನೆ ವದನದಲಿ ...{Loading}...
ಏನಿದರಸನೆ ವದನದಲಿ ದು
ಮ್ಮಾನವೆನಲನಪತ್ಯತಾ ಚಿಂ
ತಾನುರೂಪದ ದುಗುಡವಿದು ನಿಮ್ಮಂಘ್ರಿ ಸೇವೆಯಲಿ
ಹಾನಿ ದುಷ್ಕೃತಕಹುದಲೇ ಸುತ
ಹೀನ ರಾಜ್ಯವ ಬಿಸುಟೆನಗೀ
ಕಾನನದ ಸಿರಿ ಸಾಕೆನುತ ಬಿಸುಸುಯ್ದನಾ ಭೂಪ ॥39॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಆ ಮುನಿ ರಾಜನನ್ನು ಮುಖದಲ್ಲಿ ಏಕೆ ದುಃಖ ಕಾಣುತ್ತಿದೆ ಎಂದು ಕೇಳಿದ. ಅದಕ್ಕೆ ರಾಜ, ಮಕ್ಕಳಿಲ್ಲದ ಚಿಂತೆಯಿಂದ ಉಂಟಾಗಿರುವ ದುಃಖವಿದು. ತಮ್ಮ ಪಾದಸೇವೆಯಿಂದ ಪಾಪ ಕಳೆದುಹೋಗುತ್ತದೆಯಲ್ಲವೇ ? ಮಕ್ಕಳಿಲ್ಲದೆ ರಾಜ್ಯವನ್ನು ತ್ಯಜಿಸಿದ ನನಗೆ ಕಾಡಿನ ಸಂಪತ್ತೇ ಸಾಕು, ಎಂದು ನಿಟ್ಟುಸಿರು ಬಿಟ್ಟ.
ಪದಾರ್ಥ (ಕ.ಗ.ಪ)
ದುಮ್ಮಾನ-ದುಃಖ, ಅನಪತ್ಯತಾ-ಗಂಡುಮಕ್ಕಳಿಲ್ಲದುದು, ದುಷ್ಕೃತ-ಪಾಪ, ಬಿಸುಸುಯ್ದ-ನಿಟ್ಟುಸಿರು ಬಿಟ್ಟ.
ಆ ಮುನಿ ರಾಜನಿಗೆ, ಏನಿದರಸನೆ ವದನದಲಿ ದುಮ್ಮಾನ-ಏನಯ್ಯ ರಾಜ, ಮುಖದಲ್ಲಿ, ದುಃಖ ಕಾಣುತ್ತಿದೆ ಎಂದು ಕೇಳಲು ಗಜನು
ಅಪತ್ಯತಾ ಚಿಂತಾನುರೂಪದ ದುಗುಡವಿದು-ಮಕ್ಕಳಿಲ್ಲವೆಂಬ, ಚಿಂತೆಯಿಂದ ಉಂಟಾದ ದುಃಖವಿದು, ನಿಮ್ಮಂಘ್ರಿ ಸೇವೆಯಲಿ-ನಿಮ್ಮ ಪಾದಸೇವೆ ಮಾಡುವುದರಿಂದ, ಹಾನಿ ದುಷ್ಕೃತಹುದಲೇ-ಪಾಪ ನಾಶವಾಗುವುದಿಲ್ಲವೇ ? ಸುತ ಹೀನ-ಪುತ್ರನಿಲ್ಲದೆ, ರಾಜ್ಯವ ಬಿಸುಟೆನಗೀ-ರಾಜ್ಯವನ್ನು ತ್ಯಾಗಮಾಡಿ ಬಂದ ನನಗೆ, ಕಾನನದ ಸಿರಿ ಸಾಕು-ಕಾಡಿನ ಈ ಸಂಪತ್ತೇ ಸಾಕು ಎಂದು, ಬಿಸುಸುಯ್ದು-ನಿಟ್ಟುಸಿರು ಬಿಟ್ಟ
ಮೂಲ ...{Loading}...
ಏನಿದರಸನೆ ವದನದಲಿ ದು
ಮ್ಮಾನವೆನಲನಪತ್ಯತಾ ಚಿಂ
ತಾನುರೂಪದ ದುಗುಡವಿದು ನಿಮ್ಮಂಘ್ರಿ ಸೇವೆಯಲಿ
ಹಾನಿ ದುಷ್ಕೃತಕಹುದಲೇ ಸುತ
ಹೀನ ರಾಜ್ಯವ ಬಿಸುಟೆನಗೀ
ಕಾನನದ ಸಿರಿ ಸಾಕೆನುತ ಬಿಸುಸುಯ್ದನಾ ಭೂಪ ॥39॥
೦೪೦ ಐಸಲೇ ಸುತಹೀನ ...{Loading}...
ಐಸಲೇ ಸುತಹೀನ ರಾಜ್ಯವಿ
ಳಾಸ ನಿಷ್ಫಲವಹುದಲೇ ಸಂ
ತೋಷವೇ ಸುತಲಾಭವಾದರೆ ಹೊಲ್ಲೆಯೇನಿದಕೆ
ಆ ಸಮರ್ಥ ಮುನೀಂದ್ರನಂತ
ರ್ಭಾಸಿತಾತ್ಮಧ್ಯಾನಸುಖ ವಿ
ನ್ಯಾಸದಿರಲಂಕದಲಿ ಬಿದ್ದುದು ಮಧುರ ಚೂತ ಫಲ ॥40॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಹೌದಲ್ಲವೇ, ಮಕ್ಕಳಿಲ್ಲದ ಮೇಲೆ ರಾಜ್ಯ ನಿಷ್ಪಲವಾಗುತ್ತದಲ್ಲವೇ! ಸುತ ಲಾಭವಾದರೆ ಅದರಲ್ಲಿ ದೋಷವೇನು ? ಹೀಗೆಂದು ಆ ಸಮರ್ಥನಾದ ಮುನೀಂದ್ರನು ಅಂತರಂಗದಲ್ಲಿ ಹೊಳೆವ ಆತ್ಮಧ್ಯಾನದಲ್ಲಿ ನಿರತನಾಗಿದ್ದಾಗ ಒಂದು ಸವಿಯಾದ ಮಾವಿನ ಹಣ್ಣು ಅವನ ಮಡಿಲಿಗೆ ಬಿದ್ದಿತು.
ಪದಾರ್ಥ (ಕ.ಗ.ಪ)
ಹೊಲ್ಲೆಯ-ದೋಷ, ಚೂತ-ಮಾವು
ಐಸಲೇ-ಹೌದಲ್ಲವೇ ! ಸುತಹೀನ-ಮಗನಿಲ್ಲದ, ರಾಜ್ಯವಿಳಾಸ-ರಾಜ್ಯದ ವೈಭೋಗ, ನಿಷ್ಫಲವಹುದಲೇ-ನಿಷ್ಪಲವೆನಿಸುತ್ತದಲ್ಲವೇ,
ಸುತಲಾಭವಾದರೆ-ಪುತ್ರಪ್ರಾಪ್ತಿಯಾದರೆ, ಸಂತೋಷವೇ ಹೊಲ್ಲೆಯೇನಿದಕೆ-ಅದರಲ್ಲಿ ತಪ್ಪೇನು ? ಹೀಗೆ ಹೇಳಿದ, ಆ ಸಮರ್ಥನಾದ ಮುನೀಂದ್ರನು ಅಂತರ್ಭಾಸಿತಾತ್ಮಧ್ಯಾನಸುಖ, ವಿನ್ಯಾಸದೆ ಇರಲು-ಅಂತರಂಗದಲ್ಲಿ ಹೊಳೆದ ಆತ್ಮಧ್ಯಾನದಿಂದ ಉಂಟಾದ ಸುಖದ ವಿಸ್ತಾರದಲ್ಲಿ ಇರಲಾಗಿ, ಅಂಕದಲಿ-ಆತನ ಮಡಿಲಿನಲ್ಲಿ, ಮಧುರ ಚೂತ ಫಲ-ಒಂದು ಸವಿಯಾದ ಮಾವಿನಹಣ್ಣು, ಬಿದ್ದುದು-ಬಿದ್ದಿತು
ಮೂಲ ...{Loading}...
ಐಸಲೇ ಸುತಹೀನ ರಾಜ್ಯವಿ
ಳಾಸ ನಿಷ್ಫಲವಹುದಲೇ ಸಂ
ತೋಷವೇ ಸುತಲಾಭವಾದರೆ ಹೊಲ್ಲೆಯೇನಿದಕೆ
ಆ ಸಮರ್ಥ ಮುನೀಂದ್ರನಂತ
ರ್ಭಾಸಿತಾತ್ಮಧ್ಯಾನಸುಖ ವಿ
ನ್ಯಾಸದಿರಲಂಕದಲಿ ಬಿದ್ದುದು ಮಧುರ ಚೂತ ಫಲ ॥40॥
೦೪೧ ಕನ್ದೆರೆದು ಮುನಿ ...{Loading}...
ಕಂದೆರೆದು ಮುನಿ ಬಳಿಕ ಭೂಪತಿ
ಗೆಂದನಿದ ಕೋ ಪುತ್ರ ಸಂತತಿ
ಗೆಂದು ಸಾಧನವಿದನು ಕೊಡು ನೀನೊಲಿದು ವಧುಗೆನಲು
ಕಂದಿದಾನನ ಉಜ್ವಲ ಪ್ರಭೆ
ಯಿಂದ ಬೆಳಗಿತು ರಾಣಿಯರು ಸಹಿ
ತಂದು ಮುನಿಪದಕೆರಗಿ ಪರಿತೋಷದಲಿ ನಿಂದಿರ್ದ ॥41॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಆಗ ಮುನಿ ಕಣ್ಣು ತೆರೆದು ರಾಜನಿಗೆ ಇದು ಪುತ್ರಸಂತಾನಕ್ಕೆ ಸಾಧನ. ಇದನ್ನು ಪ್ರೀತಿಯಿಂದ ನಿನ್ನ ಪತ್ನಿಗೆ ಕೊಡು ಎಂದ. ಕಳೆಗೆಟ್ಟಿದ್ದ ಅವನ ಮುಖ ಪ್ರಕಾಶಮಾನವಾಯಿತು. ತನ್ನ ರಾಣಿಯರೊಡನೆ ಸಂತೋಷದಿಂದ ಮುನಿಯ ಪಾದಗಳಿಗೆ ವಂದಿಸಿ ಎದ್ದು ನಿಂತ.
ಪದಾರ್ಥ (ಕ.ಗ.ಪ)
ಬಳಿಕ-ಅನಂತರ, ಮುನಿ-ಆ ಚಂಡ ಕೌಶಿಕ ಮುನಿಯು, ಕಂದೆರೆದು ಭೂಪತಿಗೆಂದನು-ಆ ರಾಜನಿಗೆ ಹೇಳಿದ, ಇದಕೋ ಪುತ್ರ ಸಂತತಿಗೆಂದು-ಪುತ್ರ ಸಂತಾನವನ್ನು ಪಡೆಯುವುದಕ್ಕೆಂದು, ಸಾಧನವಿದನು-ಸಾಧನವಾದ ಈ ಹಣವನ್ನು, ನೀನೊಲಿದ ವಧುಗೆ-ನೀನು ಮೆಚ್ಚಿದ ಹೆಂಡತಿಗೆ, ಕೊಡು ಎನಲು ಕಂದಿದಾನನ-ಕಳೆಗುಂದಿದ್ದ ರಾಜನ ಮುಖ, ಉಜ್ವಲ ಪ್ರಭೆಯಿಂದ ಬೆಳಗಿತು-ಪ್ರಕಾಶಮಾನ ಕಾಂತಿಯಿಂದ ಬೆಳಗಿತು, ರಾಣಿಯರು ಸಹಿತ-ತನ್ನ ಇಬ್ಬರೂ ರಾಣಿಯೊಡನೆ, ಮುನಿಪದಕೆರಗಿ-ಆ ಮುನಿಯ ಪಾದಗಳಿಗೆ ನಮಸ್ಕರಿಸಿ,
ಪರಿತೋಷದಲಿ-ಮಹಾಸಂತೋಷದಿಂದ ನಿಂತಿದ್ದ
ಮೂಲ ...{Loading}...
ಕಂದೆರೆದು ಮುನಿ ಬಳಿಕ ಭೂಪತಿ
ಗೆಂದನಿದ ಕೋ ಪುತ್ರ ಸಂತತಿ
ಗೆಂದು ಸಾಧನವಿದನು ಕೊಡು ನೀನೊಲಿದು ವಧುಗೆನಲು
ಕಂದಿದಾನನ ಉಜ್ವಲ ಪ್ರಭೆ
ಯಿಂದ ಬೆಳಗಿತು ರಾಣಿಯರು ಸಹಿ
ತಂದು ಮುನಿಪದಕೆರಗಿ ಪರಿತೋಷದಲಿ ನಿಂದಿರ್ದ ॥41॥
೦೪೨ ವರವನೊನ್ದನು ಹೆಸರುಗೊಣ್ಡೀ ...{Loading}...
ವರವನೊಂದನು ಹೆಸರುಗೊಂಡೀ
ಧರಣಿಪತಿಗಾ ಮುನಿಪ ಕೊಟ್ಟನು
ಪುರಕೆ ಮರಳಿದನರಸನಾ ಮುನಿ ತೀರ್ಥಯಾತ್ರೆಯಲಿ
ಸರಿದನತ್ತಲು ಚೂತಫಲವಿದ
ನೆರಡು ಮಾಡಿ ಬೃಹದ್ರಥನು ತ
ನ್ನರಸಿಯರಿಗಿತ್ತನು ಯುಧಿಷ್ಠಿರ ಕೇಳು ಕೌತುಕವ ॥42॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಹೀಗೆ ಮುನಿ ಒಂದು ವರವನ್ನು ಕೊಟ್ಟು ತೀರ್ಥಯಾತ್ರೆಗೆಂದು ಅತ್ತ ಹೊರಟ. ಇತ್ತ ರಾಜ ತನ್ನ ಪಟ್ಟಣಕ್ಕೆ ಹಿಂತಿರುಗಿದ. ಊರಿಗೆ ಬಂದ ರಾಜ ಮಾವಿನ ಹಣ್ಣನ್ನು ಎರಡು ಭಾಗ ಮಾಡಿ ತನ್ನ ಇಬ್ಬರು ಅರಸಿಯರಿಗೂ ಕೊಟ್ಟ. ಯುಧಿಷ್ಠಿರನೆ ಆಶ್ಚರ್ಯವನ್ನು ಕೇಳು.”
ಪದಾರ್ಥ (ಕ.ಗ.ಪ)
ಚೂತಫಲ-ಮಾವಿನ ಹಣ್ಣು
ಆ ಮುನಿಪ-ಧರಣಿಪತಿಗೆ, ಹೆಸರುಗೊಂಡು ವರವನೊಂದನು ಕೊಟ್ಟನು-ರಾಜನಿಗೆ ಹೇಳಿ, ಬಂದು ವರವನ್ನು ಕೊಟ್ಟನು, ಪುರಕೆ ಮರಳಿದನರಸು-ರಾಜ ತನ್ನ ಪಟ್ಟಣಕ್ಕೆ ಹಿಂತಿರುಗಿದ ಆ ಮುನಿ, ತೀರ್ಥಯಾತ್ರೆಯಲಿ ಸರಿದನತ್ತಲು-ತೀರ್ಥಯಾತ್ರೆನೆಂದು, ಆ ಕಡೆ ಹೊರಟ. ಆ ಬೃಹದ್ರಥ ರಾಜ ಮುನಿ ಕೊಟ್ಟಿದ್ದ, ಚೂತಫಲವಿದ-ಈ ಮಾವಿನ ಹಣ್ಣನ್ನು, ಎರಡು ಮಾಡಿ-ಎರಡು ಭಾಗ ಮಾಡಿ,
ತನ್ನರಸಿಯರಿಗಿತ್ತನು-ತನ್ನ ಇಬ್ಬರು ರಾಣಿಯರಿಗೂ ಕೊಟ್ಟ, ಅನಂತರ ಯುಧಿಷ್ಠಿರ ಕೇಳು ಕೌತುಕವ-ನಡೆದ ಆಶ್ಚರ್ಯವನ್ನು ಕೇಳು
ಮೂಲ ...{Loading}...
ವರವನೊಂದನು ಹೆಸರುಗೊಂಡೀ
ಧರಣಿಪತಿಗಾ ಮುನಿಪ ಕೊಟ್ಟನು
ಪುರಕೆ ಮರಳಿದನರಸನಾ ಮುನಿ ತೀರ್ಥಯಾತ್ರೆಯಲಿ
ಸರಿದನತ್ತಲು ಚೂತಫಲವಿದ
ನೆರಡು ಮಾಡಿ ಬೃಹದ್ರಥನು ತ
ನ್ನರಸಿಯರಿಗಿತ್ತನು ಯುಧಿಷ್ಠಿರ ಕೇಳು ಕೌತುಕವ ॥42॥
೦೪೩ ಬಲಿದುದವರಿಗೆ ಗರ್ಭ ...{Loading}...
ಬಲಿದುದವರಿಗೆ ಗರ್ಭ ಜನನದ
ನೆಲೆಯ ಕಾಲಕೆ ಸತಿಯರುದರದೊ
ಳಿಳಿದುದೊಂದೊಂದವಯವದ ಸೀಳೆರಡು ಸಮವಾಗಿ
ಬಳಿಕ ಕಂಡವರಕಟ ದುಷ್ಕೃತ
ಫಲವೆ ಸುಡಲಿವನೆನುತ ಬಿಸುಟರು
ಹೊಳಲ ಹೊರಬಾಹೆಯಲಿ ನಡುವಿರುಳರಸ ಕೇಳ್ ಎಂದ ॥43॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಇಬ್ಬರೂ ಗರ್ಭಧರಿಸಿ ಸಕಾಲದಲ್ಲಿ ಮಗುವಿನ ಅರ್ಧರ್ಧ ಭಾಗವನ್ನು ಹೆತ್ತರು.. ಅದನ್ನು ನೋಡಿ ಅಯ್ಯೋ ಪಾಪದ ಫಲವಾಯಿತಲ್ಲ, ಸುಡಲಿ ಎಂದು ನಡುರಾತ್ರಿಯಲ್ಲಿ ಊರಾಚೆ ಎಸೆದು ಬಂದರು.
ಪದಾರ್ಥ (ಕ.ಗ.ಪ)
ದುಷ್ಕೃತ-ಪಾಪ, ಹೊಳಲು-ಪಟ್ಟಣ, ಬಾಹೆ-ಹೊರಗೆ
ಬಲಿದುದವರಿಗೆ ಗರ್ಭ-ಅವರಿಬ್ಬರಿಗೂ ಗರ್ಭ ಬೆಳೆಯಿತು, ಜನನದ ನೆಲೆಯ ಕಾಲಕೆ-ಮಗುವನ್ನು ಹೆರುವ ಸಮಯ ಬಂದಾಗ, ಸವತಿಯರುದರದೊಳು-ಆ ಇಬ್ಬರು ಸವತಿಯರ ಗರ್ಭದಿಂದಲೂ, ಇಳಿದುದು ಒಂದೊಂದೊಂದವಯವದ ಸೀಳೆರಡು ಸಮವಾಗಿ-ದೇಹದ, ಅಂಗಗಳು ಸಮವಾಗಿ ಎರಡು ಭಾಗವಾಗಿ ಒಂದೊಂದು ಭಾಗ, ಒಬ್ಬೊಬ್ಬರಿಂದ ಹೊರಬಂದಿತು ಬಳಿಕ ಕಂಡವರು-ಅನಂತರ, ಅದನ್ನು ಅವನರು ಅಕಟ-ಅಯ್ಯೋ, ದುಷ್ಕೃತ ಫಲವೆ-ನಮ್ಮ ಪಾಪದ ಫಲವೇ, ಸುಡಲಿ ಇದನು-ಇದನ್ನು ಸುಡಲಿ ಎನ್ನುತ್ತಾ, ನಡುವಿರುಳು-ನಡುರಾತ್ರಿಯಲ್ಲಿ, ಹೊಳಲ ಹೊರಬಾಹೆಯಲಿ-ಪಟ್ಟದ ಹೊರಭಾಗದಲ್ಲಿ, ಬಿಸುಟರು-ಎಸೆದುಬಿಟ್ಟರು
ಮೂಲ ...{Loading}...
ಬಲಿದುದವರಿಗೆ ಗರ್ಭ ಜನನದ
ನೆಲೆಯ ಕಾಲಕೆ ಸತಿಯರುದರದೊ
ಳಿಳಿದುದೊಂದೊಂದವಯವದ ಸೀಳೆರಡು ಸಮವಾಗಿ
ಬಳಿಕ ಕಂಡವರಕಟ ದುಷ್ಕೃತ
ಫಲವೆ ಸುಡಲಿವನೆನುತ ಬಿಸುಟರು
ಹೊಳಲ ಹೊರಬಾಹೆಯಲಿ ನಡುವಿರುಳರಸ ಕೇಳೆಂದ ॥43॥
೦೪೪ ನಡುವಿರುಳು ಜರೆಯೆಮ್ಬ ...{Loading}...
ನಡುವಿರುಳು ಜರೆಯೆಂಬ ರಕ್ಕಸಿ
ಯಡಗನರಸುತ ಬಂದು ಕಂಡಳು
ಮಿಡುಕುವೀ ಸೀಳೆರಡವನು ಹೊರ ಹೊಳಲ ಬಾಹೆಯಲಿ
ತುಡುಕಿದಳು ಸೀಳ್ದೇಕೆ ತಿನ್ನದೆ
ಮಡಗಿದರೊ ಕೌತುಕವದೇನೀ
ಯೆಡಬಲನಿದೆಂದಸುರೆ ದಿಟ್ಟಿಸಿ ನೋಡಿದಳು ಶಿಶುವ ॥44॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಆ ನಡು ರಾತ್ರಿಯಲ್ಲಿ ಜರೆಯೆಂಬ ರಾಕ್ಷಸಿ ಮಾಂಸವನ್ನು ಹುಡುಕಿಕೊಂಡು ಬರುತ್ತಾ ಊರಾಚೆ ಮಿಡುಕುತ್ತಾ ಬಿದ್ದಿದ್ದ ಮಗುವಿನ ಎರಡು ಸೀಳುಗಳನ್ನು ನೋಡಿದಳು. ಸೀಳಿ ಅದೇಕೆ ತಿನ್ನದೆ ಬಿಟ್ಟರೋ ಎಂದು ಕುತೂಹಲಗೊಂಡು ಕೈಗೆ ತೆಗೆದುಕೊಂಡು ಆ ಶಿಶುವಿನ ಆ ಎಡಬಲ ಭಾಗಗಳನ್ನು ನೋಡಿದಳು.
ಪದಾರ್ಥ (ಕ.ಗ.ಪ)
ಅಡಗು-ಮಾಂಸ
ನಡುವಿರುಳು-ಆ ನಡು ರಾತ್ರಿಯಲ್ಲಿ, ಜರೆ ಎಂಬ ರಕ್ಕಸಿ-ರಾಕ್ಷಸಿ ಬಂದು, ಹೊಳೆಲಿ ಹೊರ ಬಾಹೆಯಲಿ-ಪಟ್ಟಣದ ಆ ಹೊರಭಾಗದಲ್ಲಿ, ಮಿಡುಕುವೀ ಸೀಳೆರಡವನು-ಜೀವ ಸ್ಪಂದಿಸುತ್ತಿದ್ದ ಈ ಎರಡು ಸೀಳುಗಳನ್ನು, ಕಂಡಳು-ನೋಡಿದಳು, ತುಡುಕಿದಳು-ಕೈಗೆ ತೆಗೆದುಕೊಂಡಳು, ಸೀಳ್ದೇಕೆ ತಿನ್ನದೆ ಮಡಗಿದರೊ-ದೇಹವನ್ನು ಎರಡು ಭಾಗವಾಗಿ, ಸೀಳಿ ತಿನ್ನದೆ ಏಕೆ ಇಟ್ಟುಬಿಟ್ಟರೋ ಎಂದುಕೊಂಡು, ಕೌತುಕವದೇನೀ ಈ ಎಡಬಲನಿದು-ಏನಾಶ್ಚರ್ಯ ಎಡಬಲಗಳು ಹೀಗೆ ಇವೆಯಲ್ಲ ಎಂದು-ಎಂದುಕೊಂಡು
ಅಸುರೆ-ಆ ಜರೆಯೆಂಬ ರಾಕ್ಷಸಿ, ಶಿಶುವ ದಿಟ್ಟಿಸಿ ನೋಡಿದಳು-ಮಗುವನ್ನು ದಿಟ್ಟಿಸಿ ನೋಡಿದಳು
ಟಿಪ್ಪನೀ (ಕ.ಗ.ಪ)
ಜರೆ - ಮಹಾಭಾರತದಲ್ಲಿ ದೇವಪಾತ್ರಗಳಂತೆಯೇ ರಾಕ್ಷಸ ಪಾತ್ರಗಳು ಸಾಕಷ್ಟಿವೆ. ಜರಾಸಂಧನಿಗೆ ಆ ಹೆಸರು ಬರುವುದಕ್ಕೆ ಕಾರಣಳಾದ ರಾಕ್ಷಸಿ ಜರೆ. ಮಗಧದ ಚಕ್ರವರ್ತಿ ಬೃಹದ್ರಥನು ಕಾಶಿ ರಾಜಪುತ್ರಿಯರನ್ನು ಮದುವೆಯಾಗಿದ್ದ. ಬಹಳಕಾಲ ಮಕ್ಕಳಿಲ್ಲದೆ ಕೊರಗುತ್ತಿದ್ದ ಈಗ ಒಮ್ಮೆ ಚಂಡಕೌಶಿಕ ಮುನಿಗಳ ದರ್ಶನ ಮಾಡಿದ. ತನ್ನ ಕೊರಗನ್ನು ಹೇಳಿಕೊಂಡ. ಅವರು ಕರುಣೆಯಿಂದ ಒಂದು ಹಣ್ಣನ್ನು ಮಂತ್ರಿಸಿಕೊಟ್ಟು ಪುತ್ರ ಸಂತಾನವಾಗಲಿ ಎಂದು ಹರಸಿ ಇದನ್ನು ಹೆಂಡತಿಗೆ ಕೊಡು ಎಂದು ಹೇಳಿದರು. ಇಬ್ಬರು ಪತ್ನಿಯರಿಗೂ ಬೃಹದ್ರಥನು ಆ ಹಣ್ಣನ್ನು ಹಂಚಿದ. ಇದರಿಂದ ಶುಭದ ಬದಲಿಗೆ ಅಶುಭವೇ ಆಗುವುದರಲ್ಲಿತ್ತು. ಮಗುವೇನೋ ಹುಟ್ಟಿತು. ಆದರೆ ಹಣ್ಣನ್ನು ಬೃಹದ್ರಥನು ಎರಡು ಭಾಗ ಮಾಡಿದ್ದಂತೆ ಈ ಮಗುವೂ ಎರಡು ನಿರ್ಜೀವ ಹೋಳಾಗಿ ಬಿಟ್ಟಿತು. ತಾಯಂದಿರು ಹೆದರಿ ಈ ಶರೀರ ಭಾಗಗಳನ್ನು ಎಸೆಯಲು ಹೇಳಿದರು. ದಾದಿಯರು ಬಟ್ಟಿಯಲ್ಲಿ ಎರಡು ಶಕಲಗಳನ್ನೂ ತುಂಬಿಕೊಂಡು ರಸ್ತೆಯ ಒಂದು ಚೌಕದಲ್ಲಿ ಎಸೆದು ಬಂದರು.
ಆ ರಾತ್ರಿ ರಕ್ತಮಾಂಸಖಾದಿನಿಯಾದ ಒಬ್ಬರು ‘ಜರೆ’ ಎಂಬ ರಾಕ್ಷಸಿ ಆ ತುಣುಕುಗಳನ್ನು ಕಂಡು ತಿನ್ನಲೆಂದು ಎತ್ತಿಕೊಂಡಳು. ಅವಳಿಗೆ ಏನನ್ನಿಸಿತೋ, ತಿನ್ನುವ ಮೊದಲು ಎರಡು ಹೋಳುಗಳನ್ನೂ ಒಂದಾಗಿ ಜೋಡಿಸಿದಳು. ಕೂಡಲೇ ಒಬ್ಬ ಕುಮಾರ ಮೂಡಿಬಂದ. ಅವನಿಗೆ ಜೀವವೂ ಇತ್ತು. ವಜ್ರಸಾರದಿಂದ ಮಾಡಿದೆಯೋ ಎಂಬಂತೆ ಆ ಮಗು ತುಂಬ ಭಾರವಾಗಿತ್ತು. ರಾಕ್ಷಸಿಗೆ ಕೂಡ ಆ ಮಗುವನ್ನು ಎತ್ತಲಾಗಲಿಲ್ಲ. ಅದು ಜೋರಾಗಿ ಅಳಲಾರಂಬಿಸಿತು. ಆ ಮಗುವಿನ ಅಳು ಕೇಳಿ ಅರಮನೆಯವರೆಲ್ಲ ಆಚೆಗೆ ಬಂದರು. ಆ ವೇಳೆಗೆ ಮಾನವ ವೇಷ ಧರಿಸಿದ ಜರೆ ಬೃಹದ್ರಥನನ್ನು ಕರೆಸಿ ಅವನಿಗೆ ನಡೆದದ್ದನ್ನೆಲ್ಲ ವಿವರಿಸಿದಳು. ತನ್ನ ಕಿರುಪರಿಚಯವನ್ನೂ ಮಾಡಿಕೊಂಡಳು. ‘‘ದೊರೆ! ನಾನು ಕಾಮರೂಪಿಯಾದ ರಾಕ್ಷಸಿ-ಜರೆ. ನನಗೆ ಮೇರುಪರ್ವತವನ್ನು ಕೂಡ ನುಂಗುವಷ್ಟು ಶಕ್ತಿಯಿದೆ. ಆದ್ದರಿಂದ ನಿನ್ನ ಮಗುವನ್ನು ಭಕ್ಷಿಸುವುದು ಅಷ್ಟೇನೂ ದೊಡ್ಡ ಸಂಗತಿಯಲ್ಲ. ಕನಿಕರದಿಂದ ಈ ಮಗುವಿಗೆ ರೂಪಕೊಟ್ಟಿದ್ದೇನೆ, ಜೀವ ಕೊಟ್ಟಿದ್ದೇನೆ. ಇದನ್ನು ಸಾಕಿಕೋ. ನಾನು ಮೊದಲು ಗೃಹದೇವತೆಯಾಗಿದ್ದೆ. ಆ ನೆನಪಿಗೆ ಈಗಲೂ ನಿಮ್ಮೂರಿನಲ್ಲಿ ಮನೆಮನೆಯಲ್ಲೂ ನನ್ನನ್ನು ಪೂಜಿಸುತ್ತಾರೆ. ನಿಮ್ಮ ಮನೆಯಲ್ಲಿ ಕೂಡ ನನ್ನ ಪೂಜೆ ನಡೆಯುವುದನ್ನು ನೋಡಿ ನಿನಗೆ ಏನಾದರೂ ಸಹಾಯ ಮಾಡುವ ಮನಸ್ಸಾಗಿತ್ತು. ಈಗ ಅವಕಾಶ ಕೂಡಿ ಬಂದಿದೆ’’ ಎಂದು ಹೇಳಿ ಆ ಮಗುವನ್ನು ರಾಜನಿಗೂ ಪತ್ನಿಯರಿಗೂ ಒಪ್ಪಿಸಿದಳು. ಒಪ್ಪಿಸಿಯಾದ ಮೇಲೆ ಈ ಮಗುವಿಗೆ ನನ್ನ ಹೆಸರನ್ನೇ ಇಡಬೇಕು ಎಂಬ ನಿಬಂಧನೆಯನ್ನೂ ಹಾಕಿದಳು. ರಾಜನು ಸಂತೋಷದಿಂದ ಮಗುವನ್ನು ಸ್ವೀಕರಿಸಿ ಅವಳ ಇಷ್ಟದಂತೆಯೇ ಜರಾಸಂಧ ಎಂಬ ಹೆಸರನ್ನೇ ಇಟ್ಟ.
ದೇವಪೂಜೆಯೊಂದೇ ಅಲ್ಲದೆ ರಾಕ್ಷಸಪೂಜೆಯ ಸಂಪ್ರದಾಯವೂ ಪ್ರಾಚೀನ ಭಾರತದಲ್ಲಿ ಇತ್ತು ಎಂಬ ಸಂಗತಿ ಈ ಕಥೆಯಿಂದ ತಿಳಿದುಬರುತ್ತದೆ. ‘‘ಪಾತಕಿಗಳೊಡಲೊಳಿಹ ಪರಮಾತ್ಮನಂತೆ’’ ಎಂದು ಲಕ್ಷ್ಮೀಶನು ಹೇಳಿರುವುದು ಈಕೆಯ ನಡತೆಗೆ ಸರಿಯಾಗಿ ಒಪ್ಪುತ್ತದೆ. ಯಾರೋ ಎಸೆದುಹೋಗಿದ್ದ ಮಗುವಿನ ಎರಡು ಭಾಗಗಳನ್ನು ತಿನ್ನುವ ಮೊದಲು ಚೇಷ್ಟೆಗೆ ಜೋಡಿಸಿಟ್ಟ ಜರೆ ಹಾಗೆ ಜೋಡಿಸಿದ್ದರ ಪರಿಣಾಮವಾಗಿ ಮಗು ಬದುಕಿದುದನ್ನು ಕಂಡು ಕೃಪೆ ಮಾಡಿ ಆ ಜೀವಂತ ಮಗುವನ್ನು ಬೃಹದ್ರಥನಿಗೆ ಒಪ್ಪಿಸಿದ್ದು ಎಂತಹ ವಿಚಿತ್ರ ಘಟನೆ! ಆದರೆ ಋಷಿಯ ಕರುಣೆಯಿಂದ ಹುಟ್ಟಿದ ಈ ಮಗು ರಾಕ್ಷಸಿಯ ಕರುಣೆಯಿಂದ ಬೆಳೆದು ರಾಕ್ಷಸೀ ಗುಣಗಳನ್ನೇ ರೂಢಿಸಿಕೊಂಡದ್ದು ದುರಂತದ ಸಂಗತಿಯಾಗಿದೆ.
ಮೂಲ ...{Loading}...
ನಡುವಿರುಳು ಜರೆಯೆಂಬ ರಕ್ಕಸಿ
ಯಡಗನರಸುತ ಬಂದು ಕಂಡಳು
ಮಿಡುಕುವೀ ಸೀಳೆರಡವನು ಹೊರ ಹೊಳಲ ಬಾಹೆಯಲಿ
ತುಡುಕಿದಳು ಸೀಳ್ದೇಕೆ ತಿನ್ನದೆ
ಮಡಗಿದರೊ ಕೌತುಕವದೇನೀ
ಯೆಡಬಲನಿದೆಂದಸುರೆ ದಿಟ್ಟಿಸಿ ನೋಡಿದಳು ಶಿಶುವ ॥44॥
೦೪೫ ಶಿಶುವನಾರೋ ಸೀಳ್ದು ...{Loading}...
ಶಿಶುವನಾರೋ ಸೀಳ್ದು ತಿನ್ನದೆ
ಬಿಸುಟು ಹೋದರೆನುತ್ತ ಜರೆ ಸಂ
ಧಿಸಿದಳಾಕಸ್ಮಿಕದ ಸೀಳೆರಡನು ವಿನೋದದಲಿ
ಪಸರಿಸಿದುದಸು ಮೇಘರವ ಘೂ
ರ್ಮಿಸುವೋಲ್ ಚೀರಿದನು ಗಿರಿಗಳ
ಬೆಸುಗೆ ಬಿಡೆ ನಡುವಿರುಳು ಕೋಳಾಹಳಿಸಿತಾ ರಭಸ ॥45॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಶಿಶುವನ್ನು ಯಾರೋ ಸೀಳಿ ತಿನ್ನದೆ ಎಸೆದು ಹೋಗಿದ್ದಾರೆ ಎಂದುಕೊಂಡು ಜರೆ ಕುತೂಹಲದಿಂದ ಅಕಸ್ಮಾತ್ತಾಗಿ ಸೀಳೆರಡನ್ನೂ ಜೋಡಿಸಿದಳು. ಅದಕ್ಕೆ ಜೀವ ಬಂದು ಸಿಡಿಲಬ್ಬರಿಸಿದಂತೆ ಬೆಟ್ಟಗಳು ಬೆಸುಗೆ ಬಿಟ್ಟವೋ ಎಂಬಂತೆ ಆ ನಡುರಾತ್ರಿಯಲ್ಲಿ ಗಟ್ಟಿಯಾಗಿ ಅಳತೊಡಗಿತು.
ಪದಾರ್ಥ (ಕ.ಗ.ಪ)
ಅಸು-ಪ್ರಾಣ
ಶಿಶುವನಾರೋ ಸೀಳ್ದು ತಿನ್ನದೆ ಬಿಸುಟು ಹೋದರು-ಯಾರೋ ಮಗುವನ್ನು ತಿನ್ನಲೆಂದು ಸೀಳಿ ಎರಡು ಭಾಗ ಮಾಡಿ, ತಿನ್ನದೆ
ಎಸೆದು ಹೊಟು ಹೋಗಿದ್ದಾರೆ ಎನುತ್ತ-ಎಂದು ಕೊಳ್ಳುತ್ತ ಜರೆ, ಆಕಸ್ಮಿಕದ ಸೀಳೆರಡನು-ಆಕಸ್ಮಾತ್ತಾಗಿ ಆಗಿದ್ದ ಆ ಎರಡು ಸೀಳುಗಳನ್ನು, ವಿನೋದದಲಿ-ವಿನೋದಕ್ಕಾಗಿ, ಸಂಧಿಸಿದಳು-ಜೋಡಿಸಿದಳು, ಪಸರಿಸಿದುದು ಅಸು-ಆ ದೇಹದಲ್ಲಿ ಪ್ರಾಣ ಹರಡಿತು,
ಮೇಘರವ ಘೂರ್ಮಿಸುವೋಲ್-ಮೋಡಗಳ ಘರ್ಜನೆ ಮೊಳಗುವಂತೆ ಆ ಮಗು ಗಿರಿಗಳ ಬೆಸುಗೆ ಬಿಡೆ-ಭೂಮಿಯೊಡನೆ ಪರ್ವತಗಳ ಬೆಸುಗೆ ಕಿತ್ತು ಉರಳಿದವೋ ಎಂಬಂತೆ, ಚೀರಿದನು-ಅರಚಿದನು, ಆ ನಡುವಿರುಳು-ನಡುರಾತ್ರಿಯಲ್ಲಿ, ಆ ರಭಸ ಕೋಳಾಹಳಿಸಿತು-ಆ ಅಳುವಿನ ಜೋರು ಕೋಲಾಹಲವನ್ನುಂಟುಮಾಡಿತು
ಮೂಲ ...{Loading}...
ಶಿಶುವನಾರೋ ಸೀಳ್ದು ತಿನ್ನದೆ
ಬಿಸುಟು ಹೋದರೆನುತ್ತ ಜರೆ ಸಂ
ಧಿಸಿದಳಾಕಸ್ಮಿಕದ ಸೀಳೆರಡನು ವಿನೋದದಲಿ
ಪಸರಿಸಿದುದಸು ಮೇಘರವ ಘೂ
ರ್ಮಿಸುವೋಲ್ ಚೀರಿದನು ಗಿರಿಗಳ
ಬೆಸುಗೆ ಬಿಡೆ ನಡುವಿರುಳು ಕೋಳಾಹಳಿಸಿತಾ ರಭಸ ॥45॥
೦೪೬ ಊರ ಹೊರವಳಯದಲಿದೇನು ...{Loading}...
ಊರ ಹೊರವಳಯದಲಿದೇನು ಮ
ಹಾ ರಭಸವಿರುಳೆನುತ ಹರಿದುದು
ಪೌರಜನ ಝೋಂಪಿಸುವ ಕೈದೀವಿಗೆಯ ಬೆಳಗಿನಲಿ
ಅರಿವಳು ತಾನೆನುತ ಕಂಡುದು
ದೂರದಲಿ ದಾನವಿಯನವಳ ಘ
ನೋರುಗಳ ಸೋಗಿಲಲಿ ಕೈದೊಟ್ಟಿಲ ಕುಮಾರಕನ ॥46॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಊರ ಹೊರೆಗೆ ಇದೇನು ಅರಚಾಟ ಕೇಳುತ್ತಿದೆ ಎಂದು ಪುರದ ಜನ ಊರ ಹೊರಕ್ಕೆ ಬಂದು, ಅತ್ತಿತ್ತ ಹೊಯ್ದೂಡುತ್ತಿದ್ದ ಕೈದೀವಿಗೆಯ ಬೆಳಕಿನಲ್ಲಿ ಯಾರಿವಳು ಎನ್ನುತ್ತಾ ಆ ದಾನವಿಯನ್ನು ಮತ್ತು ಅವಳ ದೊಡ್ಡ ತೊಡೆಗಳ ಮೇಲೆ ಮಡಿಲಿನಲ್ಲಿ ತನ್ನ ಕೈಗಳನ್ನೇ ತೊಟ್ಟಿಲಾಗಿಸಿ ಕೊಂಡಿದ್ದ ಆ ಕುಮಾರನನ್ನು ನೋಡಿದರು.
ಪದಾರ್ಥ (ಕ.ಗ.ಪ)
ಝೋಂಪಿಸು-ತುಯ್ದಾಡು, ಕೈದೊಟ್ಟಿಲು-ಕೈಯೇ ತೊಟ್ಟಿಲು
ಇರುಳು-ಈ ರಾತ್ರಿಯಲ್ಲಿ, ಊರ ಹೊರವಲಯದಲಿ-ಊರ ಹೊರಗಿನ ಆವರಣದಲಿ, ಇದೇನು ಮಹಾ ರಭಸ-ಇದೇನಿದು ಮಹಾ ಗದ್ದಲ ಕೇಳಿಬರುತ್ತಿದೆಯಲ್ಲ ಎನುತ, ಪೌರಜನ-ಪುರದ ಜನಗಳು, ಝೋಂಪಿಸುವ-ಗಾಳಿಗೆ ತೋನೆದಾಡುತ್ತಿದ್ದ ಜ್ವಾಲೆಯುಳ್ಳ, ಕೈದೀವಿಗೆಯ ಬೆಳಗಿನಲಿ-ಕೈದೀವಟಿಗೆಗಳ ಬೆಳಕಿನಲ್ಲಿ, ಹರಿದುದು-ಧಾವಿಸಿ ಬಂದರು, ಅರಿವಳು ತಾನು-ಇವಳು ಯಾರು ಎನುತ,
ದೂರದಲಿ-ದೂರದಿಂದಲೇ, ದಾನವಿಯನು ಆ ರಾಕ್ಷಸಿಯನ್ನು ಹಾಗೂ ಅವಳ, ಘನೋರುಗಳ ಸೋಗಿಲಲಿ-ಅವಳ ದೊಡ್ಡ ತೊಡೆಗಳ ಮಡಿಲಿನಲ್ಲಿ, ಕೈದೊಟ್ಟಿಲ ಕುಮಾರಕನ-ಕೈಯನ್ನೇ ತೊಟ್ಟಿಲನ್ನಾಗಿ ಮಲಗಿಸಿಕೊಂಡಿದ್ದ ಆ ಕುಮಾರನನ್ನು ಕಂಡುದು ನೋಡಿದರು
ಮೂಲ ...{Loading}...
ಊರ ಹೊರವಳಯದಲಿದೇನು ಮ
ಹಾ ರಭಸವಿರುಳೆನುತ ಹರಿದುದು
ಪೌರಜನ ಝೋಂಪಿಸುವ ಕೈದೀವಿಗೆಯ ಬೆಳಗಿನಲಿ
ಅರಿವಳು ತಾನೆನುತ ಕಂಡುದು
ದೂರದಲಿ ದಾನವಿಯನವಳ ಘ
ನೋರುಗಳ ಸೋಗಿಲಲಿ ಕೈದೊಟ್ಟಿಲ ಕುಮಾರಕನ ॥46॥
೦೪೭ ನಿನ್ದುದಲ್ಲಿಯದಲ್ಲಿ ರಕ್ಕಸಿ ...{Loading}...
ನಿಂದುದಲ್ಲಿಯದಲ್ಲಿ ರಕ್ಕಸಿ
ಯೆಂದು ಭಯದಲಿ ಬಳಿಕ ಕರುಣದ
ಲೆಂದಲವಳಂಜದಿರಿ ಹೋ ಹೋ ಯೆನುತ ಕೈ ನೆಗಹಿ
ಇಂದಿವನು ಮಗನೆನಗೆ ಭೂಪತಿ
ಬಂದನಾದರೆ ಕೊಡುವೆನೀತನ
ನೆಂದಡಾಕ್ಷಣ ಕೇಳಿ ಹರಿತಂದನು ಮಹೀಪಾಲ ॥47॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅಯ್ಯೋ, ರಾಕ್ಷಸಿ ಎಂದು ಭಯಗೊಂಡು ಜನ ಅಲ್ಲಲ್ಲೇ ನಿಂತುಬಿಟ್ಟರು. ಅವಳು ಕರುಣೆಯಿಂದ ಅವರಿಗೆ, ಹೋಹೋ ಹೆದರಬೇಡಿ ಎಂದು ಕೈಯೆತ್ತಿ ಧೈರ್ಯ ಹೇಳಿ, ಇಂದು ಇವನು ನನ್ನ ಮಗ, ರಾಜ ಬಂದರೆ ಅವನಿಗೆ ಕೊಡುತ್ತೇನೆ ಎಂದಳು. ಆ ಸುದ್ದಿಯನ್ನು ಕೇಳಿದ ರಾಜ ಓಡಿ ಬಂದ.
ಪದಾರ್ಥ (ಕ.ಗ.ಪ)
ಬಂದಪುರ ಜನ ಅವಳನ್ನು ನೋಡಿ, ರಕ್ಕಸಿಯೆಂದು-ಅವಳು ರಾಕ್ಷಸಿ ಎಂದು ತಿಳಿದು, ಅಲ್ಲಿಯದಲ್ಲಿ ನಿಂದುದು-ಅಲ್ಲಲ್ಲೇ ನಿಂತುಬಿಟ್ಟರು
ಬಳಿಕ-ಅನಂತರ ಜರೆ, ಕರುಣದಿನೆಂದಳ-ದಯೆಯಿಂದಲೇ ಹೇಳಿದಳು, ಅಂಜದಿರಿ ಹೋ ಹೋ ಯೆನುತ ಕೈ ನೆಗಹಿ-ಕೈಯೆತ್ತಿ ಹೋ ಹೋ, ಎಂದು ಸಂತೈಸುತ್ತಾ ಹೆದರಬೇಡಿ ಎಂದು ಆಶ್ವಾಸನೆ ಕೊಟ್ಟು, ಇಂದಿವನು ಮಗನೆನಗೆ-ಈ ದಿನ ಇವನು ನನಗೆ ಮಗನಾಗಿದ್ದಾನೆ,
ಭೂಪತಿ ಬಂದನಾದರೆ-ರಾಜನು ಬಂದರೆ, ಕೊಡುವೆನೀತನನು-ಅವನಿಗೆ ಇವನನ್ನು ಕೊಡುವೆನು, ಎಂದಡೆ-ಎನ್ನಲಾಗಿ, ಆ ಕ್ಷಣ-ಕೂಡಲೇ ಆ ಸುದ್ದಿಯನ್ನು ಹೇಳಿದ, ಮಹೀಪಾಲ-ರಾಜ ಬೃಹದ್ರಥ, ಹರಿತಂದನು-ಓಡಿಬಂದನು
ಮೂಲ ...{Loading}...
ನಿಂದುದಲ್ಲಿಯದಲ್ಲಿ ರಕ್ಕಸಿ
ಯೆಂದು ಭಯದಲಿ ಬಳಿಕ ಕರುಣದ
ಲೆಂದಲವಳಂಜದಿರಿ ಹೋ ಹೋ ಯೆನುತ ಕೈ ನೆಗಹಿ
ಇಂದಿವನು ಮಗನೆನಗೆ ಭೂಪತಿ
ಬಂದನಾದರೆ ಕೊಡುವೆನೀತನ
ನೆಂದಡಾಕ್ಷಣ ಕೇಳಿ ಹರಿತಂದನು ಮಹೀಪಾಲ ॥47॥
೦೪೮ ಅರಸ ಕೋ ...{Loading}...
ಅರಸ ಕೋ ನಿನ್ನವನನೀ ಮುನಿ
ವರ ಕುಮಾರನನೆನ್ನ ಹೆಸರಲಿ
ಕರೆವುದೀತನ ಸೀಳ ಬೆಚ್ಚವಳಾನು ಬೆದರದಿರು
ಜರೆಯೆನಿಪುದಭಿದಾನವೆನ್ನದು
ವರ ಜರಾಸಂಧಕನವನು ಸುರ
ನರರೊಳಗೆ ಬಲುಗೈಯನಹನೆಂದಿತ್ತಿಳರ್ಭಕನ ॥48॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ರಾಜನಿಗೆ ಆ ಮಗುವನ್ನು ಕೊಡುತ್ತಾ “ಅರಸ, ನಿನ್ನವನು ಈ ಮುನಿವರ-ಕುಮಾರ ! ತೆಗೆದುಕೋ. ಇವನನ್ನು ನನ್ನ ಹೆಸರಿನಿಂದ ಕರೆ. ಸೀಳುಗಳನ್ನು ಒಂದುಗೂಡಿಸಿದವಳು ನಾನು. ಹೆದರಬೇಡ. ಜರೆ ಎಂದು ನನ್ನ ಹೆಸರು. ಆದ್ದರಿಂದ ಇವನು ಜರಾಸಂಧ ! ಸುರರು ನರರಲ್ಲಿ ಇವನು ಮಹಾ ಬಲಶಾಲಿಯಾಗುತ್ತಾನೆ” ಎಂದು ಆ ಮಗುವನ್ನು ಕೊಟ್ಟಳು.
ಪದಾರ್ಥ (ಕ.ಗ.ಪ)
ಬೆಚ್ಚವಳು-ಬೆಸೆದವಳು-ಜೋಡಿಸಿದವಳು. ಅಭಿಧಾನ-ಹೆಸರು, ಬಲುಗೈಯ-ಶೂರ
ಅರ್ಭಕ - ಮಗು
ಅರಸ ಕೋ ನಿನ್ನವನನು-ರಾಜ ತೆಗೆದುಕೋ ನಿನ್ನ ಮಗನನ್ನೂ, ಈ ಮುನಿವರ ಕುಮಾರನ-ಈ ಮುನಿ ಶ್ರೇಷ್ಠ ಮಗನನ್ನು, ನನ್ನ ಹೆಸರಲಿ ಕರೆವುದು-ನನ್ನ ಹೆಸರಿನಿಂದ ಕರೆ, ಈತನ ಸೀಳನು ಬೆಚ್ಚವಳಾನು-ಈತನ ದೇಹದ ಎರಡು ಸೀಳುಗಳನ್ನು ಬೆಸೆದವಳು ನಾನು, ಬೆದರದಿರು-ಹೆದರೆಬೇಡ, ಜರೆಯನಿಪುದಭಿದಾನವೆನ್ನದು-ನನ್ನ ಹೆಸರು ಜರೆ ಎಂಬುದು ಆದ್ದರಿಂದ ವರು ಶ್ರೇಷ್ಠನಾದ,
ಜರಾಸಂಧಕನವನು-ಅವನು ಜರಾಸಂಧ(ಕ), ಸುರನರರೊಳಗೆ-ದೇವತೆಗಳು ಮಾನವರಲ್ಲಿ, ಬಲುಗೈಅಹನು-ಮಹಾ ಬಲಶಾಲಿಯಾಗುತ್ತಾನೆ, ಎಂದಿತ್ತಿಳರ್ಭಕನ-ಎಂದು ಹೇಳಿ ಆ ಮಗನನ್ನು ಕೊಟ್ಟಳು.
ಮೂಲ ...{Loading}...
ಅರಸ ಕೋ ನಿನ್ನವನನೀ ಮುನಿ
ವರ ಕುಮಾರನನೆನ್ನ ಹೆಸರಲಿ
ಕರೆವುದೀತನ ಸೀಳ ಬೆಚ್ಚವಳಾನು ಬೆದರದಿರು
ಜರೆಯೆನಿಪುದಭಿದಾನವೆನ್ನದು
ವರ ಜರಾಸಂಧಕನವನು ಸುರ
ನರರೊಳಗೆ ಬಲುಗೈಯನಹನೆಂದಿತ್ತಿಳರ್ಭಕನ ॥48॥
೦೪೯ ಅಸುರೆಯನು ಮನ್ನಿಸಿದನಾಕೆಯ ...{Loading}...
ಅಸುರೆಯನು ಮನ್ನಿಸಿದನಾಕೆಯ
ಪೆಸರ ಮಗನಿವನೆಂದು ಲೋಕ
ಪ್ರಸರವರಿಯಲು ನಲವಿನಲಿ ಸಾಕಿದನು ಮಾಗಧನ
ಅಸುರರಲಿ ಮತ್ರ್ಯರಲಿ ಸುರರಲಿ
ಯೆಸಕವುಳ್ಳವನೆನಿಸಿದನು ಸಾ
ಹಸದ ಜೋಡಣೆ ಜಡಿದುದವನಲಿ ರಾಯ ಕೇಳ್ ಎಂದ ॥49॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಬೃಹದ್ರಥ ಆ ರಾಕ್ಷಸಿಯನ್ನು ಗೌರವಿಸಿದ. ಲೋಕಕ್ಕೆಲ್ಲ ತಿಳಿಯುವಂತೆ ಅವಳ ಹೆಸರನ್ನೇ ಮಗನಿಗಿಟ್ಟು ಸಾಕಿದ. ಜರಾಸಂಧ ಸುರಾಸುರಮತ್ರ್ಯರಲ್ಲೇ ಮಹಾ ಪರಾಕ್ರಮಶಾಲಿ ಎನ್ನಿಸಿದ. ದೇಹದ ಜೋಡಣೆಯಾದಂತೆಯೇ ಅವನಲ್ಲಿ ಸಾಹಸದ ಜೋಡಣೆಯೂ ಆಯಿತು.
ಪದಾರ್ಥ (ಕ.ಗ.ಪ)
ಎಸಕ-ಶಕ್ತಿ
ಬೃಹದ್ರಥ ರಾಜ, ಅಸುರೆಯನು ಮನ್ನಿಸಿದನು-ಆ ಜರೆಯೆಂಬ, ರಾಕ್ಷಿಸಯನ್ನು ಗೌರವಿಸಿದ, ಆಕೆಯ ಪೆಸರ ಮಗನಿವನೆಂದು-ಆಕೆಯ ಹೆಸರಿನ, ಅಂದರೆ, ಆಕೆಯ ಮಗನೆಂಬ ಅರ್ಥ ಬರುವ, ಆಕೆಯಿಂದ ಸಂಧಿಸಲ್ಪಟ್ಟವನು, ಎಂಬ ಅರ್ಥ ಬರುವ ಹೆಸರಿನವನೆಂದು
ಲೋಕಪ್ರಸರವರಿಯಲು-ಲೋಕಕ್ಕೆಲ ತಿಳಿಯುವಂತೆ, ನಲವಿನಲಿ-ಸಂತೋಷದಿಂದ, ಮಾಗಧನ-ಜರಾಸಂಧನ್ನು ಸಾಕಿದನು, ಅಸುರರಲಿ-ರಾಕ್ಷಸರಲಿ, ಮತ್ರ್ಯರಲಿ-ಮಾನವರಲ್ಲಿ, ಸುರರಲಿ-ದೇವತೆಗಳಲ್ಲಿ, ಎಸಕವುಳ್ಳವನು-ಪರಾಕ್ರಮವುಳ್ಳವನು, ನೆನಿಸಿದನು-ಎಂದು ಪ್ರಸಿದ್ಧನಾದನು, ರಾಯ ಕೇಳು-ಧರ್ಮಜ ಕೇಳು, ಅವನಲಿ-ಆ ಮಗುವಿನಲ್ಲಿ, ಸಾಹಸದ ಜೋಡಣೆ ಜಡಿದುದು-ಸಾಹಸಗಿಡಿದು ತುಂಬಿಕೊಂಡಿತು ಎಂದ
ಮೂಲ ...{Loading}...
ಅಸುರೆಯನು ಮನ್ನಿಸಿದನಾಕೆಯ
ಪೆಸರ ಮಗನಿವನೆಂದು ಲೋಕ
ಪ್ರಸರವರಿಯಲು ನಲವಿನಲಿ ಸಾಕಿದನು ಮಾಗಧನ
ಅಸುರರಲಿ ಮತ್ರ್ಯರಲಿ ಸುರರಲಿ
ಯೆಸಕವುಳ್ಳವನೆನಿಸಿದನು ಸಾ
ಹಸದ ಜೋಡಣೆ ಜಡಿದುದವನಲಿ ರಾಯ ಕೇಳೆಂದ ॥49॥
೦೫೦ ಅದರಿನಾ ಮಾಗಧನ ...{Loading}...
ಅದರಿನಾ ಮಾಗಧನ ಮುರಿದ
ಲ್ಲದೆ ನೃಪಾಲಕರಂಜಿ ಕಪ್ಪದೊ
ಳೊದಗಲರಿಯರು ಮೆರೆಯಲೀಯರು ಯಾಗ ಮಂಟಪವ
ಇದು ನಿಧಾನವು ಭೀಮ ಪಾರ್ಥರಿ
ಗಿದು ಮುಹೂರ್ತವು ವೀಳೆಯವ ತಾ
ಕದನ ವಿಜಯದ ವೀರ ಸೇಸೆಯನಿಕ್ಕಿ ಕಳುಹೆಂದ ॥50॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಆದ್ದರಿಂದ ಆ ಮಾಗಧನನ್ನು ನಾಶಮಾಡಿದಲ್ಲದೆ ರಾಜರುಗಳು ನಮಗೆ ಅಂಜಿ ಕಪ್ಪವನ್ನು ಕೊಡಲಾರರು. ಯಾಗಮಂಟಪವನ್ನು
ಬೆಳಗಲು ಬಿಡುವುದಿಲ್ಲ. ಇದು ನಿಶ್ಚಯ. ಭೀಮಾರ್ಜುನರಿಗೆ ಇದೇ ಮುಹೂರ್ತ. ಅವರಿಗೆ ವೀಳೆಯವನ್ನು ಕೊಡು. ಅವರಿಗೆ ವಿಜಯದ ವೀರ ಅಕ್ಷತೆಗಳನ್ನು ಹಾಕಿ ಆಶೀರ್ವದಿಸಿ ಕಳುಹಿಸು ಎಂದ.
ಪದಾರ್ಥ (ಕ.ಗ.ಪ)
ಸೇಸೆ-ಮಂತ್ರಾಕ್ಷತೆ
ಆದರಿಂ-ಆದ್ದರಿಂದ, ಆ ಮಾಗಧನ-ಆ ಜರಾಸಂಧನನ್ನು, ಮುರಿದಲ್ಲದೆ-ನಾಶಮಾಡಿದಲ್ಲದೆ, ನೃಪಾಲರು-ಉಳಿದ ರಾಜರುಗಳು,
ಅಂಜಿ-ಅವನಿಗೆ ಹೆದರಿಕೊಂಡು, ಕಪ್ಪದೊಳೊದಗಲರಿಯರು-ಕಪ್ಪದ ವಿಷಯದಲ್ಲಿ ನೆರವಾಗಲಾರರು, ಯಾಗ ಮಂಟಪವ-ಯಾಗಮಂಟಪವನ್ನು, ಮೆರೆಯಲೀಯರು-ಮೆರೆಯುವುದಕ್ಕೆ ನಿಡುವುದಿಲ್ಲ, ಇದು ನಿಧಾನವು-ಇದು ಇರುವ ವಿಷಯ, ಭೀಮ ಪಾರ್ಥರಿಗೆ-ಭೀಮಾರ್ಜುನರಿಗೆ ಅವನನ್ನೆದುರಿಸಲು, ಇದು ಮುಹೂರ್ತವು-ಸರಿಯಾದ ವೇಳೆ ಆದ್ದರಿಂದ, ವೀಳೆಯವ ತಾ-ಅನುಜ್ಞೆ ಕೊಡು, ವಿಜಯದ ವೀರ ಸೇಸೆಯ ಸಿಕ್ಕಿ ಕಳುಹು-ವಿಜಯವಾಗಲಿ ಎಂದು ಆ ವೀರರಿಗೆ ಅಕ್ಷತೆಯನ್ನು ಹಾಕಿ ಆಶಿರ್ವದಿಸಿ ಕಳುಹಿಸು
ಮೂಲ ...{Loading}...
ಅದರಿನಾ ಮಾಗಧನ ಮುರಿದ
ಲ್ಲದೆ ನೃಪಾಲಕರಂಜಿ ಕಪ್ಪದೊ
ಳೊದಗಲರಿಯರು ಮೆರೆಯಲೀಯರು ಯಾಗ ಮಂಟಪವ
ಇದು ನಿಧಾನವು ಭೀಮ ಪಾರ್ಥರಿ
ಗಿದು ಮುಹೂರ್ತವು ವೀಳೆಯವ ತಾ
ಕದನ ವಿಜಯದ ವೀರ ಸೇಸೆಯನಿಕ್ಕಿ ಕಳುಹೆಂದ ॥50॥
೦೫೧ ಮರೆಯದೇತಕೆ ರಾಜಸೂಯದ ...{Loading}...
ಮರೆಯದೇತಕೆ ರಾಜಸೂಯದ
ಹೊರಿಗೆ ನಿನ್ನದು ರಾಣಿಕವ ನಾ
ನರಿಯೆನೆಮ್ಮರ್ಥಾಭಿಮಾನ ಪ್ರಾಣದೊಡೆಯನಲೆ
ಕಿರಿಯರಿವದಿರು ರಾಜಸೂಯದ
ಕರುಬರತಿ ಬಲ್ಲಿದರು ಕೃಪೆಯನು
ಮೆರೆವುದೆಂದಸುರಾರಿಯಂಘ್ರಿಗೆ ಚಾಚಿದನು ಶಿರವ ॥51॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಮುಚ್ಚು ಮರೆಯೇಕೆ, ರಾಜಸೂಯದ ಜವಾಬ್ದಾರಿಯೆಲ್ಲ ನಿನ್ನದು. ವ್ಯವಸ್ಥೆಯನ್ನು ನಾನರಿಯೆ. ನಮ್ಮ ಅರ್ಥ ಅಭಿಮಾನ ಪ್ರಾಣ ಎಲ್ಲದಕ್ಕೂ ನೀನೇ ಒಡೆಯನಲ್ಲವೇ ? ಇವರು ಕಿರಿಯರು. ರಾಜಸೂಯವನ್ನು ಮತ್ಸರದಿಂದ ಕಾಣುವವರು ಮಹಾ ಬಲಶಾಲಿಗಳು. ನೀನು ಕೃಪೆತೋರಬೇಕು ಎನ್ನುತ್ತಾ ಯುಧಿಷ್ಠಿರ ಕೃಷ್ಣನ ಪಾದಗಳಿಗೆ ತಲೆಯಿಟ್ಟು ವಂದಿಸಿದ.
ಪದಾರ್ಥ (ಕ.ಗ.ಪ)
ರಾಣಿಕ-ಹೊಂದಾಣಿಕೆ,ವ್ಯವಸ್ಥೆ
ಕರುಬರು-ಹೊಟ್ಟೆಕಿಚ್ಚಿನವರು
ಮರೆಯದೇತಕೆ-ಮುಚ್ಚುಮರೆಯೇತಕ್ಕೆ, ರಾಜಸೂಯದ ಹೊರಿಗೆ-ರಾಜಸೂಯಯಾಗವನ್ನು ನಿರ್ವಹಿಸುವ ಹೊಣೆಗಾರಿಕೆ, ನಿನ್ನದು ರಾಣಿಕವ-ಹೊಂದಾಣಿಕೆಯನ್ನು, ಎಮ್ಮ-ನಮ್ಮ, ಅರ್ಥ ಅಭಿಮಾನ ಪ್ರಾಣ-ಸಂಪತ್ತು ಗೌರವ ಪ್ರಾಣಗಳಿಗೆ, ಒಡೆಯನಲೆ-ನೀನೇ ಪ್ರಭುವಲ್ಲವೇ ? ಕಿರಿಯರಿವದಿರು-ಇವರು ಚಿಕ್ಕವರು, ರಾಜಸೂಯದ ಕರುಬರು-ರಾಜಸೂಯ ಮಾಡುವುದನ್ನು, ಕಂಡು ಹೊಟ್ಟೆಕಿಚ್ಚು ಪಡುವವರು, ಬಲ್ಲಿದರು-ಬಲಿಷ್ಠರು, ಕೃಪೆಯನು ಮೆರೆವುದು-ನೀನೇ ಕೃಪೆ ತೋರಿಸಬೇಕು ಎಂದು, ಅಸುರಾರಿಯಂಘ್ರಿಗೆ-ಕೃಷ್ಣನ ಪಾದಗಳಿಗೆ, ಚಾಚಿದನು ಶಿರವ-ತಲೆಯಿಟ್ಟು ನಮಸ್ಕರಿಸಿದ
ಮೂಲ ...{Loading}...
ಮರೆಯದೇತಕೆ ರಾಜಸೂಯದ
ಹೊರಿಗೆ ನಿನ್ನದು ರಾಣಿಕವ ನಾ
ನರಿಯೆನೆಮ್ಮರ್ಥಾಭಿಮಾನ ಪ್ರಾಣದೊಡೆಯನಲೆ
ಕಿರಿಯರಿವದಿರು ರಾಜಸೂಯದ
ಕರುಬರತಿ ಬಲ್ಲಿದರು ಕೃಪೆಯನು
ಮೆರೆವುದೆಂದಸುರಾರಿಯಂಘ್ರಿಗೆ ಚಾಚಿದನು ಶಿರವ ॥51॥
೦೫೨ ಎತ್ತಿದನು ಮುರವೈರಿ ...{Loading}...
ಎತ್ತಿದನು ಮುರವೈರಿ ರಾಯನ
ಮಸ್ತಕವ ನಸುನಗುತ ಕರೆ ಸುಮು
ಹೊರ್ತಿಕರನಕ್ಷೋಹಿಣಿಯ ಬರಹೇಳು ದಳಪತಿಯ
ಸುತ್ತಣರಸರಿಗೋಲೆಯುಡುಗೊರೆ
ಯಿತ್ತು ದೂತರ ಕಳುಹು ಬಳಿಕಿನೊ
ಳುತ್ತರೋತ್ತರಸಿದ್ಧಿ ನಿನಗಹುದೆಂದನಸುರಾರಿ ॥52॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕೃಷ್ಣ ನಗುತ್ತಾ ಯುಧಿಷ್ಠಿರನ ತಲೆಯನ್ನು ಹಿಡಿದೆತ್ತಿದ. ಜೋಯಿಸರನ್ನು ಕರೆ, ಅಪಾರವಾದ ಸೈನ್ಯವನ್ನು ಬರಹೇಳು. ದಳಪತಿಯನ್ನು ಬರಮಾಡು. ಸುತ್ತಮುತ್ತ ಇರುವ ರಾಜರಿಗೆ ದೂತರ ಮೂಲಕ ಓಲೆಯನ್ನು ಉಡುಗೊರೆಯನ್ನೂ ಕೊಟ್ಟು ಕಳುಹಿಸು. ಅನಂತರ ಮೇಲಿಂದ ಮೇಲೆ ನಿನಗೆ ಒಳ್ಳೆಯದಾಗುತ್ತದೆ ಎಂದ.
ಪದಾರ್ಥ (ಕ.ಗ.ಪ)
ಅಕ್ಷೋಹಿಣಿ-ಇಲ್ಲಿ ಅಪಾರ ಸಂಖ್ಯೆಯ ಸೈನ್ಯ.
ಎತ್ತಿದನು ಮುರವೈರಿ ರಾಯನ ಮಸ್ತಕವನು-ಕೃಷ್ಣ ಧರ್ಮರಾಜನ ತಲೆಯನ್ನು ಹಿಡಿದೆತ್ತಿದ್ದನು ಅನಂತರ, ನಸುನಗುತ ಸುಮುಹೊರ್ತಿಕರನು ಕರೆ-ಒಳ್ಳೆಯ ಮುಹೂರ್ತವನು, ನೋಡಿ ತಿಳಿಸುವ ಪುರೋಹಿತರನ್ನು ಕರೆ, ಅಕ್ಷೋಹಿಣಿಯ-ಸೈನ್ಯವನ್ನು,
ದಳಪತಿಯ-ಸೇನಾಪತಿಯನ್ನು ಬರಹೇಳು, ಸುತ್ತಣರಸುಗಳಿಗೆ ಓಲೆಯುಡುಗೊರೆಯಿತ್ತು-ಪತ್ರಿಕೆಗಳನ್ನು ಉಡೊಗೊರೆಗಳನ್ನು ಕೊಟ್ಟು ದೂತರನ್ನು ಕಳುಹು-ಕಳುಹಿಸಿದನು, ಬಳಿಕಿನೊಳು-ಅನಂತರ ನಿನಗೆ, ಉತ್ತರೋತ್ತರಸಿದ್ಧಿ-ಮೇಲಿಂದ ಮೇಲೆ ಕಾರ್ಯಗಳ ಸಿದ್ಧಿ
ಅಹುದು-ಉಂಟಾಗುವುದು, ಎಂದನಸುರಾರಿ-ಎಂದ ಕೃಷ್ಣ
ಮೂಲ ...{Loading}...
ಎತ್ತಿದನು ಮುರವೈರಿ ರಾಯನ
ಮಸ್ತಕವ ನಸುನಗುತ ಕರೆ ಸುಮು
ಹೊರ್ತಿಕರನಕ್ಷೋಹಿಣಿಯ ಬರಹೇಳು ದಳಪತಿಯ
ಸುತ್ತಣರಸರಿಗೋಲೆಯುಡುಗೊರೆ
ಯಿತ್ತು ದೂತರ ಕಳುಹು ಬಳಿಕಿನೊ
ಳುತ್ತರೋತ್ತರಸಿದ್ಧಿ ನಿನಗಹುದೆಂದನಸುರಾರಿ ॥52॥
೦೫೩ ರೂಢಿಸಿದ ಸುಮುಹೂರ್ತದಲಿ ...{Loading}...
ರೂಢಿಸಿದ ಸುಮುಹೂರ್ತದಲಿ ಹೊರ
ಬೀಡು ಬಿಟ್ಟುದು ದಧಿಯ ದೂರ್ವೆಯ
ಕೂಡಿದಕ್ಷತೆಗಳ ಸುಲಾಜಾವಳಿಯ ಮಂಗಳದ
ಜೋಡಿಗಳ ಜಯರವದ ದೈತ್ಯವಿ
ಭಾಡಸೂಕ್ತದ ವಿಗಡ ಬಿರುದು ಪ
ವಾಡಗಳ ಪಾಠಕರ ಗಡಬಡೆ ಗಾಡಿಸಿತು ನಭವ ॥53॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಒಳ್ಳೆಯ ಮುಹೂರ್ತದಲ್ಲಿ ಊರ ಹೊರಗೆ ಬೀಡು ಬಿಡಲಾಯಿತು. ಮೊಸರು, ಗರಿಕೆ, ಅಕ್ಷತೆ, ಅರಳು ಮೊದಲಾದ ಮಂಗಳ ದ್ರವ್ಯಗಳೊಡನೆ ಜಯಘೋಷ ಮಾಡುತ್ತಾ ದೈತ್ಯನಾಶಕವೆನಿಸಿದ gಕ್ಷೋಘ್ನ ಸೂಕ್ತವನ್ನು ಪಠಿಸಿದರು. ಸ್ತುತಿ ಪಾಠಕರು ಬಿರುದು ಪವಾಡಗಳನ್ನು ಘೋಷಿಸಿದರು. ಇವುಗಳ ಗದ್ದಲ ಆಕಾಶದಲ್ಲೆಲ್ಲ ತುಂಬಿ ಹೋಯಿತು.
ಪದಾರ್ಥ (ಕ.ಗ.ಪ)
ಲಾಜ-ಅರಳು, ದಧಿ-ಮೊಸರು, ದೂರ್ವೆ-ಗರಿಕೆ, ದೈತ್ಯವಿಭಾಡ-ದೈತ್ಯರನ್ನು ನಾಶಮಾಡುವ.
ಪ್ರಸಿದ್ಧವಾದ ಸುಮುಹೂರ್ತದಲಿ ಹೊರಬೀಡು ಬಿಟ್ಟುದು-ಸೈನ್ಯ ಊರ ಹೊರಗೆ ಬೀಡು ಬಿಟ್ಟಿತು, ದಧಿ-ಮೊಸರು, ದೂರ್ವೆ-ಗರಿಕೆ ಇವುಗಳೊಡಗೂಡಿದ ಅಕ್ಷತೆ ಅಲ್ಲದೆ, ಸುಲಾಜಾವಳಿಯ-ಉತ್ತಮ ಅರಳಿನಿಂದ ಕೂಡಿದ ಎಲ್ಲ ಮಂಗಳ ದ್ರವ್ಯಗಳೊಡನೆ ಮಂಗಳ ವಾದ್ಯಗಳ, ಜಯರವದ-ಜಯ, ದೈತ್ಯವಿಭಾಡಸೂಕ್ತದ-ರಕ್ಷೋಘ್ನ ಸೂಕ್ತ ಪಠನದ, ವಿಗಡ ಬಿರುದು ಪವಾಡಗಳ ಪಾಠಕರ-ಸ್ತುತಿಪಾಠಕರು ವರ್ಣಿಸುತ್ತಿದ್ದ, ರಾಜನ ಪರಾಕ್ರಮ ಬಿರುದು ಅದ್ಭುತ ಸಾಧನೆಗಳ, ಗಡಬಡೆ-ಕೋಲಾಹಲ, ನಭವ ಗಾಡಿಸಿತು-ಆಕಾಶವನ್ನು ತುಂಬಿತು
ಮೂಲ ...{Loading}...
ರೂಢಿಸಿದ ಸುಮುಹೂರ್ತದಲಿ ಹೊರ
ಬೀಡು ಬಿಟ್ಟುದು ದಧಿಯ ದೂರ್ವೆಯ
ಕೂಡಿದಕ್ಷತೆಗಳ ಸುಲಾಜಾವಳಿಯ ಮಂಗಳದ
ಜೋಡಿಗಳ ಜಯರವದ ದೈತ್ಯವಿ
ಭಾಡಸೂಕ್ತದ ವಿಗಡ ಬಿರುದು ಪ
ವಾಡಗಳ ಪಾಠಕರ ಗಡಬಡೆ ಗಾಡಿಸಿತು ನಭವ ॥53॥
೦೫೪ ಆಳು ನಡೆಯಲಿ ...{Loading}...
ಆಳು ನಡೆಯಲಿ ಮಗಧರಾಯನ
ಮೇಲೆ ದಂಡು ಮುಕುಂದ ದಳಪತಿ
ಹೇಳಿಕೆಗೆ ಭೀಮಾರ್ಜುನರ ಬರಹೇಳು ಹೇಳೆನುತ
ಆಳು ಸಾರಿದರವನಿಪತಿಗಳು
ಮೇಳದಲಿ ಹೊರವಂಟು ಬರೆ ದೆ
ಖ್ಖಾಳವನು ನೋಡಿದರು ನಡೆದರು ಪಯಣಗತಿಗಳಲಿ ॥54॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಮಗಧ ರಾಜನ ಮೇಲೆ ಯುದ್ದಕ್ಕೆ ಸೈನ್ಯ ನಡೆಯಲಿ. ಇದಕ್ಕೆ ಆಜ್ಞೆ ಮಾಡಲು ಕೃಷ್ಣನೇ ಸೇನಾಧಿಪತಿ. ಭೀಮಾರ್ಜುನರನ್ನು ಬರಹೇಳು ಬರಹೇಳು ಎಂದು ಆಳುಗಳು ಸಾರಿದರು. ರಾಜರುಗಳೆಲ್ಲ ಒಂದುಗೂಡಿ ಹೊರಟು ಸೇನೆಯ ವೈಭವವನ್ನು ನೋಡುತ್ತಾ ಹಂತಹಂತವಾದ ಪ್ರಯಾಣ ಗತಿಯಲ್ಲಿ ಮುನ್ನಡೆದರು.
ಪದಾರ್ಥ (ಕ.ಗ.ಪ)
ದೆಖ್ಖಾಳ-ವೈಭವ
ದಂಡು-ಸೈನ್ಯ, ಆಳು-ಯೋಧರುಗಳು, ಮಗಧರಾಯನ ಮೇಲೆ ನಡೆಯಲಿ ಮುಕುಂದ ದಳಪತಿ ಹೇಳಿಕೆಗೆ-ಆಜ್ಞೆ ಮಾಡಲು ಶ್ರೀಕೃಷ್ಣನೇ ಸೇನಾಧಿಪತಿ, ಭೀಮಾರ್ಜುನರ ಬರಹೇಳು ಹೇಳೆನುತ-ಭೀಮ ಅರ್ಜುನರನ್ನು ಬರಹೇಳು ಎನ್ನುತ್ತ, ಆಳು ಸಾರಿದರು-ಆಳುಗಳು ಕೂಗಿ ಹೇಳಿದರು, ಅವನಿಪತಿಗಳು-ರಾಜರುಗಳು, ಮೇಳದಲಿ ಹೊರವಂಟು ಬರೆ-ಒಟ್ಟುಗೂಡಿ ಹೊರಟು ಬರುತ್ತಾ,
ದೆಖ್ಖಾಳವನು ನೋಡಿದರು-ಆ ಸೇನೆಯ ವೈಭವವನ್ನು ನೋಡಿದರು, ಪಯಣಗತಿಯಲಿ ನಡೆದರು-ದಿನದಿನದ ಪ್ರಯಾಣವನ್ನು ಮಾಡುತ್ತಾ ನಡೆದರು
ಮೂಲ ...{Loading}...
ಆಳು ನಡೆಯಲಿ ಮಗಧರಾಯನ
ಮೇಲೆ ದಂಡು ಮುಕುಂದ ದಳಪತಿ
ಹೇಳಿಕೆಗೆ ಭೀಮಾರ್ಜುನರ ಬರಹೇಳು ಹೇಳೆನುತ
ಆಳು ಸಾರಿದರವನಿಪತಿಗಳು
ಮೇಳದಲಿ ಹೊರವಂಟು ಬರೆ ದೆ
ಖ್ಖಾಳವನು ನೋಡಿದರು ನಡೆದರು ಪಯಣಗತಿಗಳಲಿ ॥54॥
೦೫೫ ಜನಪ ಕೇಳೈ ...{Loading}...
ಜನಪ ಕೇಳೈ ಕೃಷ್ಣ ಭೀಮಾ
ರ್ಜುನರು ವಿಮಳಸ್ನಾತಕವ್ರತ
ಮುನಿಗಳಾದರು ನಡೆದು ಪಯಣದ ಮೇಲೆ ಪಯಣದಲಿ
ಜನದ ಕಾಣಿಕೆಗೊಳುತ ನಾನಾ
ಜನಪದಂಗಳ ಕಳೆದು ಗಂಗಾ
ವಿನುತ ನದಿಯನು ಹಾಯ್ದು ಬಂದರು ಪೂರ್ವ ಮುಖವಾಗಿ ॥55॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕೃಷ್ಣ ಮತ್ತು ಭೀಮಾರ್ಜುನರು ಸ್ನಾತಕವ್ರತ ಧರಿಸಿದ ಮುನಿಗಳಂತಾದರು. ಹಲವು ದಿನಗಳ ಪ್ರಯಾಣ ಮಾಡಿ ಮಾರ್ಗದಲ್ಲಿ ಜನರ ಕಾಣಿಕೆಗಳನ್ನು ಸ್ವೀಕರಿಸುತ್ತಾ ಹಲವು ರಾಜ್ಯಗಳನ್ನು ದಾಟಿ, ಪ್ರಸಿದ್ಧ ಗಂಗಾ ನದಿಯನ್ನು ದಾಟಿ ಪೂರ್ವಮುಖವಾಗಿ ತಿರುಗಿದರು.
ಪದಾರ್ಥ (ಕ.ಗ.ಪ)
ಸ್ನಾತಕವ್ರತಿ-ಬ್ರಹ್ಮಚರ್ಯದಲ್ಲಿ ವಿದ್ಯಾಭ್ಯಾಸ ಮುಗಿಸಿದವನು.
ಜನಪ ಕೇಳೈ-ಜನಮೇಜಯ ರಾಜನೇ ಕೇಳಯ್ಯ, ಕೃಷ್ಣ ಭೀಮಾರ್ಜುನರು-ಕೃಷ್ಣ ಭೀಮ ಅರ್ಜುನ ಮೂವರೂ, ವಿಮಳ-ಶ್ರೇಷ್ಠರಾದ,
ಸ್ನಾತಕವ್ರತ ಮುನಿಗಳಾದರು-ಬ್ರಹ್ಮ ಚರ್ಯ ವ್ರತದಲ್ಲಿ ವಿದ್ಯಾಭ್ಯಾಸ ಮುಗಿಸಿದವರ ವೇಷಧಾರಿಗಳಾದರು, ಪಯಣದ ಮೇಲೆ ಪಯಣದಲಿ-ಹಲವು ದಿನಗಳ ಪ್ರಯಾಣದಿಂದ, ಜನದ ಕಾಣಿಕೆಗೊಳುತ-ಜನರಿಂದ ಕಾಣಿಕೆಗಳನ್ನು ಸ್ವೀಕರಿಸುತ್ತ, ನಾನಾ ಜನಪದಂಗಳ ಕಳೆದು-ನಾನಾ ರಾಜ್ಯಗಳನ್ನು ದಾಟಿ, ಗಂಗಾ ವಿನುತ ನದಿಯನು ಹಾಯ್ದು-ಶ್ರೇಷ್ಠವಾದ ಗಂಗಾನದಿಯನ್ನು ಹಾಯ್ದು, ಪೂರ್ವ ಮುಖವಾಗಿ ಬಂದರು-ಪೂರ್ವಾಭಿಮುಖವಾಗಿ ಬಂದರು
ಮೂಲ ...{Loading}...
ಜನಪ ಕೇಳೈ ಕೃಷ್ಣ ಭೀಮಾ
ರ್ಜುನರು ವಿಮಳಸ್ನಾತಕವ್ರತ
ಮುನಿಗಳಾದರು ನಡೆದು ಪಯಣದ ಮೇಲೆ ಪಯಣದಲಿ
ಜನದ ಕಾಣಿಕೆಗೊಳುತ ನಾನಾ
ಜನಪದಂಗಳ ಕಳೆದು ಗಂಗಾ
ವಿನುತ ನದಿಯನು ಹಾಯ್ದು ಬಂದರು ಪೂರ್ವ ಮುಖವಾಗಿ ॥55॥
೦೫೬ ಬರುತ ಕಣ್ಡರು ...{Loading}...
ಬರುತ ಕಂಡರು ಕೂಡೆ ಕೊಬ್ಬಿದ
ಸಿರಿಯನೂರೂರುಗಳ ಸೊಂಪಿನ
ಭರಿತವನು ಗೋಧನ ಸಮೃದ್ಧಿಯ ಧಾನ್ಯರಾಶಿಗಳ
ವರ ನದಿಯ ಕಾಲುವೆಯ ತೋಟದ
ತೆರಳಿಕೆಯ ಪನಸಾಮ್ರ ಪೂಗೋ
ತ್ಕರದ ರಮ್ಯಾರಾಮ ಮಂಡಿತ ಮಗಧಮಂಡಲವ ॥56॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಮುಂದೆ ಮಗಧ ಮಂಡಲಕ್ಕೆ ಬಂದಂತೆ ಎಲ್ಲ ಊರುಗಳಲ್ಲೂ ಐಶ್ವರ್ಯ ಸಮೃದ್ಧವಾಗಿದ್ದುದನ್ನು, ಅವು ಸಸ್ಯ ಸಮೃದ್ಧಿಯಿಂದ ಸೊಂಪಾಗಿದ್ದುದನ್ನು ಅಲ್ಲಿ ಗೋಧನ, ಧಾನ್ಯರಾಶಿಗಳು ಹೇರಳವಾಗಿದ್ದುದನ್ನು ಕಂಡರು. ಮಗಧರಾಜ್ಯದಲ್ಲಿ ನದಿ ಕಾಲುವೆಗಳು ತುಂಬಿ ಹರಿಯುತ್ತಿದ್ದುದನ್ನು, ತೋಟಗಳಲ್ಲಿ ಹಲಸು ಮಾವು ಅಡಕೆ ಸಮೃದ್ಧವಾಗಿ ತುಂಬಿ ರಮಣೀಯವಾಗಿ ಕಾಣುತ್ತಿದ್ದುದನ್ನು ಅವರು ಪ್ರಯಾಣದಲ್ಲಿ ಕಂಡರು.
ಪದಾರ್ಥ (ಕ.ಗ.ಪ)
ಪನಸ-ಹಲಸು, ಆಮ್ರ-ಮಾವು, ಪೂಗ-ಅಡಿಕೆ, ಉತ್ಕರ-ಸಮೂಹ, ರಾಶಿ
ಬರುತ-ಮಾರ್ಗದಲ್ಲಿ ಬರುತ್ತಾ, ಕೂಡೆ-ಒಮ್ಮೆಲೇ, ಕೊಬ್ಬಿದ ಸಿರಿಯನು-ಅತಿಶಯವಾಗಿ ಬೆಳೆದಿದ್ದ ಸಂಪತ್ತನ್ನು, ಊರೂರುಗಳ-ಊರೂರುಗಳಲ್ಲಿನ, ಸೊಂಪಿನ ಭರಿತವನು-ಸೊಂಪಾಗಿದ್ದ ಸಮೃದ್ಧಿಯನ್ನು, ಧಾನ್ಯರಾಶಿಗಳ-ಧಾನ್ಯರಾಶಿಗಳನ್ನು, ವರ ನದಿಯ-ಶ್ರೇಷ್ಠವಾದ ನದಿಗಳನ್ನು, ಕಾಲುವೆಯ-ಕಾಲುವೆಯನ್ನು, ತೋಟದ ತೆರಳಿಕೆಯ-ಗುಂಪು ಗುಂಪಾದ ತೋಟಗಳನು, ಪನಸ ಆಮ್ರ ಪೂಗೋತ್ಕರದ-ಹಲಸು, ಮಾವು ಅಡಕೆ, ಮೊದಲಾದ ಮರಗಳಿಂದ ತುಂಬಿದ, ರಮ್ಯಾರಾಮವನು ಹೀಗೆ ಇವುಗಳಿಂದೆಲ್ಲ ಮಂಡಿತ ಕೂಡಿದ್ದ, ಮಗಧಮಂಡಲವ-ಮಗಧರಾಜ್ಯವನ್ನು, ಕಂಡರು-ನೋಡಿದರು
ಮೂಲ ...{Loading}...
ಬರುತ ಕಂಡರು ಕೂಡೆ ಕೊಬ್ಬಿದ
ಸಿರಿಯನೂರೂರುಗಳ ಸೊಂಪಿನ
ಭರಿತವನು ಗೋಧನ ಸಮೃದ್ಧಿಯ ಧಾನ್ಯರಾಶಿಗಳ
ವರ ನದಿಯ ಕಾಲುವೆಯ ತೋಟದ
ತೆರಳಿಕೆಯ ಪನಸಾಮ್ರ ಪೂಗೋ
ತ್ಕರದ ರಮ್ಯಾರಾಮ ಮಂಡಿತ ಮಗಧಮಂಡಲವ ॥56॥
೦೫೭ ಮೆಳೆಗಳೇ ದ್ರಾಕ್ಷೆಗಳು ...{Loading}...
ಮೆಳೆಗಳೇ ದ್ರಾಕ್ಷೆಗಳು ವೃಕ್ಷಾ
ವಳಿಗಳೇ ಸಹಕಾರ ದಾಡಿಮ
ಫಲಿತ ಪನಸ ಕ್ರಮುಕ ಜಂಬೂ ಮಾತುಳಂಗಮಯ
ಕಳವೆ ಶಾಲೀಮಯವು ಹೊನಲ
ಸ್ಖಳಿತ ಲಕ್ಷ್ಮೀಮಯವು ನಗರಾ
ವಳಿಗಳೆನೆ ಶೋಭಿಸಿತು ಜನಪದವಿವರ ಕಣುಮನಕೆ ॥57॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅಲ್ಲಿ ಸ್ವೇಚ್ಛೆಯಾಗಿ ಬೆಳೆದ ಮೆಳೆಗಳೆಂದರೆ ದ್ರಾಕ್ಷಿಗಳು. ವೃಕ್ಷಗಳೆಂದರೆ ಮಾವು, ದಾಳಿಂಬೆ, ಫಲಬಿಟ್ಟ ಹಲಸು, ಅಡಕೆ,
ನೇರಳೆ ಮಾದಳ ಮುಂತಾದವು. ಗದ್ದೆಗಳು ಶಾಲೀಮಯ. ನದಿ ಕಾಲುವೆಗಳಲ್ಲಿ ನೀರಿನ ಪ್ರವಾಹ ನಿರಂತರವಾಗಿತ್ತ್ತು. ಅಲ್ಲಿನ ನಗರಗಳೆಲ್ಲ ಸಂಪತ್ಸಮೃದ್ಧವಾಗಿ ಶೋಭಿಸುತ್ತಿದ್ದವು.
ಪದಾರ್ಥ (ಕ.ಗ.ಪ)
ಕ್ರಮುಕ-ಅಡಕೆ, ಜಂಬೂ-ನೇರಳೆ, ಕಳವೆ-ಬತ್ತ (ಇಲ್ಲಿ ಬತ್ತದ ಗದ್ದೆಗಳು) , ಶಾಲೀ-ಭತ್ತ
ಸಹಕಾರ - ಮಾವು
ಮಾತುಳಂಗ - ಮಾದಳ
ಮೆಳೆಗಳೇ-ಆ ಮಗಧ ಮಂಡಲದಲ್ಲಿ ಸ್ವೇಚ್ಛೆಯಾಗಿ ಬೆಳೆದಿದ್ದ ಪೊದೆಗಳೇ ದ್ರಾಕ್ಷಿಗಳು, ಅಲ್ಲಿ ಬೆಳೇದಿದ್ದ ವೃಕ್ಷಾವಳಿಗಳೇ-ಮರಗಳೇ,
ಸಹಕಾರ-ಮಾವು, ದಾಡಿಮ-ದಾಳಿಂಬೆ, ಪನಸ-ಹಲಸು, ಕ್ರಮುಕ-ಅಡಿಕೆ, ಜಂಬೂ-ನೇರಿಲೆ, ಮಾತುಳಂಗಮಯ-ಮಾದಳಗಳಿಂದ ತುಂಬಿದುದು, ನಗರಾವಳಿಗಳು-ಆ ರಾಜ್ಯದಲ್ಲಿದ್ದ ಪಟ್ಟಣಗಳು, ಕಳವೆ ಶಾಲೀಮಯವು-ನಾನಾ ಬಗೆಯ ಬತ್ತದ ಗದ್ದೆಗಳಿಂದ ತುಂಬಿದವು, ಹೊನಲ-ನದಿಯ ಪ್ರವಾಹ, ಅಸ್ಖಲಿತ ಲಕ್ಷ್ಮೀಮಯವು-ಸ್ವಲ್ಪವೂ ಕೊರತೆಯಾಗದ ನೀರಿನ ಸಮೃದ್ಧಿಯಿಂದ ಕೂಡಿದುದು
ಎನೆ-ಎಂಬಂತೆ, ಜನಪದವು-ಆ ರಾಜ್ಯವು, ಇವರ ಕಣುಮನಕೆ-ಇವರ ಕಣ್ಣೀರು ಮನಸ್ಸಿಗೂ, ಶೋಭಿಸಿತು-ಬೆಳಗಿತು
ಮೂಲ ...{Loading}...
ಮೆಳೆಗಳೇ ದ್ರಾಕ್ಷೆಗಳು ವೃಕ್ಷಾ
ವಳಿಗಳೇ ಸಹಕಾರ ದಾಡಿಮ
ಫಲಿತ ಪನಸ ಕ್ರಮುಕ ಜಂಬೂ ಮಾತುಳಂಗಮಯ
ಕಳವೆ ಶಾಲೀಮಯವು ಹೊನಲ
ಸ್ಖಳಿತ ಲಕ್ಷ್ಮೀಮಯವು ನಗರಾ
ವಳಿಗಳೆನೆ ಶೋಭಿಸಿತು ಜನಪದವಿವರ ಕಣುಮನಕೆ ॥57॥
೦೫೮ ದೇಶ ಹಗೆವನದೆನ್ದು ...{Loading}...
ದೇಶ ಹಗೆವನದೆಂದು ಕಡ್ಡಿಯ
ಘಾಸಿ ಮಾಡದೆ ಮಿಗೆ ವಿನೋದದ
ಲೈಸು ಪಡೆ ನಡೆತಂದು ಬಿಟ್ಟುದು ಗಿರಿಯ ತಪ್ಪಲಲಿ
ಆ ಸರೋರುಹಬಂಧು ಚರಮಾ
ಶಾಸತಿಯ ಚುಂಬಿಸೆ ಗಿರಿವ್ರಜ
ದಾ ಶಿಖರವನು ಹತ್ತಿದರು ಹರಿ ಭೀಮ ಫಲುಗುಣರು ॥58॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ದೇಶ ಶತ್ರುವಿನದೆಂಬ ಕಾರಣ ಸೈನಿಕರು ಒಂದು ಕಡ್ಡಿಯನ್ನೂ ನಾಶಮಾಡದೆ, ಅತಿಶಯ ವಿನೋದದಿಂದ ನಡೆದು ಬಂದು ಗಿರಿಯ ತಪ್ಪಲಲ್ಲಿ ಬೀಡು ಬಿಟ್ಟರು. ಆ ಸರೋರುಹ ಬಂಧುವಾದ(ಕಮಲ ಮಿತ್ರನಾದ ) ಸೂರ್ಯನು ಪಶ್ಚಿಮ ದಿಗಂಗನೆಯನ್ನು ಚುಂಬಿಸಿದಾಗ ಅಂದರೆ ಸೂರ್ಯಮುಳುಗಿದಾಗ, ಕೃಷ್ಣಭೀಮಾರ್ಜುನರು ಗಿರಿವ್ರಜದ ಶಿಖರವನ್ನು ಏರಿದರು.
ಪದಾರ್ಥ (ಕ.ಗ.ಪ)
ಸರೋರುಹ ಬಂಧು-ಸೂರ್ಯ,
ಚರಮಾಶಾ-ಪಶ್ಚಿಮ ದಿಕ್ಕು
ದೇಶ ಹಗೆವನದೆಂದು-ಮಗಧ ದೇಶ-ಶತ್ರುಗೇರಿದುದಾದುದರಿಂದ, ಕಡ್ಡಿಯ ಘಾಸಿ ಮಾಡದೆ-ಒಂದು ಕಡ್ಡಿಯನ್ನು ಕೂಡ ನಾಶಮಾಡದೆ, ಮಿಗೆ ವಿನೋದದಲಿ-ಅತಿಶಯ ಆನಂದದಿಂದ, ಐಸು ಪಡೆ-ಅಷ್ಟು ಸೈನ್ಯ, ನಡೆತಂದು-ನಡೆದುಬಂದು, ಗಿರಿಯ ತಪ್ಪಲಲಿ-ಗಿರಿವ್ರಜವೆಂದ ಬೆಟ್ಟದ ತಪ್ಪಲಲ್ಲಿ, ಬಿಟ್ಟುದು-ಬೀಡು ಬಿಟ್ಟಿತು, ಆ ಸರೋರುಹಬಂಧು-ಸೂರ್ಯನು, ಚರಮಾಶಾಸತಿಯ-ಪಶ್ಚಿಮ ಅಂಗನೆಯನ್ನು, ಚುಂಬಿಸೆ-ಮುತ್ತಿಡಲು ಅಂದರೆ ಸೂರ್ಯ ಪಶ್ಚಿಮದಲ್ಲಿ ಮುಳುಗಲು, ಹರಿ ಭೀಮ ಫಲುಗುಣರು-ಕೃಷ್ಣ ಭೀಮ ಅರ್ಜುನರು, ಆ ಗಿರಿವ್ರಜದ-ಗಿರಿವ್ರಜವೆಂಬ ಆ ಬೆಟ್ಟದ, ಶಿಖರವನು-ತುದಿಯನ್ನು, ಹತ್ತಿದರು-ಏರಿದರು
ಮೂಲ ...{Loading}...
ದೇಶ ಹಗೆವನದೆಂದು ಕಡ್ಡಿಯ
ಘಾಸಿ ಮಾಡದೆ ಮಿಗೆ ವಿನೋದದ
ಲೈಸು ಪಡೆ ನಡೆತಂದು ಬಿಟ್ಟುದು ಗಿರಿಯ ತಪ್ಪಲಲಿ
ಆ ಸರೋರುಹಬಂಧು ಚರಮಾ
ಶಾಸತಿಯ ಚುಂಬಿಸೆ ಗಿರಿವ್ರಜ
ದಾ ಶಿಖರವನು ಹತ್ತಿದರು ಹರಿ ಭೀಮ ಫಲುಗುಣರು ॥58॥
೦೫೯ ವೃಷಭಚರ್ಮ ನಿಬದ್ಧ ...{Loading}...
ವೃಷಭಚರ್ಮ ನಿಬದ್ಧ ಭೇರಿಗ
ಳೆಸೆದವಕ್ಷತೆ ಗಂಧಮಾಲ್ಯ
ಪ್ರಸರದಲಿ ಶೈಲಾಗ್ರದಲಿ ಸಂಪನ್ನ ಪೂಜೆಯಲಿ
ಅಸುರರಿಪು ಭೀಮಾರ್ಜುನರು ತ
ದ್ವಿಷಮ ಭೇರೀತ್ರಯವ ಹೊಯ್ದೆ
ಬ್ಬಿಸಿದರದುಭುತ ರವ ಮಿಗಿಲು ಕೆಡೆದುದು ಧರಿತ್ರಿಯಲಿ ॥59॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಬೆಟ್ಟದ ಮೇಲೆ ಎತ್ತಿನ ಚರ್ಮದಿಂದ ನಿರ್ಮಿಸಿದ ಮೂರು ಭೇರಿಗಳಿದ್ದವು. ಅವುಗಳನ್ನು ಗಂಧಮೌಲ್ಯಗಳಿಂದ ಪೂಜಿಸಲಾಗಿತ್ತು. ಕೃಷ್ಣ ಭೀಮಾರ್ಜುನರು ಆ ಭಾರೀ ಭೇರಿಗಳನ್ನು ಬಡಿದು ಅದ್ಭುತ ಶಬ್ದವನ್ನುಂಟು ಮಾಡಿದರು. ಆ ಮೂರು ಭೇರಿಗಳು ಭೂಮಿಗುರುಳಿದುವು.
ಪದಾರ್ಥ (ಕ.ಗ.ಪ)
ಶೈಲಾಗ್ರದಲಿ-ಗಿರಿವ್ರಜ ಬೆಟ್ಟದ ಮೇಲುಭಾಗದಲ್ಲಿ, ಅಕ್ಷತೆ ಗಂಧಮಾಲ್ಯ ಪ್ರಸರದಲಿ-ಅಕ್ಷತೆ ಗಂಧ ಹೂವಿನ ಮಾಲೆ, ಮೊದಲಾದ ಪೂಜಾದ್ರವ್ಯಗಳಿಂದ, ಸಂಪನ್ನ ಪೂಜೆಯಲಿ-ಚೆನ್ನಾಗಿ ಪೂಜಿಸಲ್ಪಟ್ಟು, ಎಸೆವ-ಆಕರ್ಷಣಿಯವಾಗಿ ಕಾಣುತ್ತಿದ್ದ ಎತ್ತಿನ ಚರ್ಮದಿಂದ
ನಿರ್ಮಿಸಲ್ಪಟ್ಟಿದ್ದ ಭಾರಿಯಾದ ಮೂರು ಭೇರಿಗಳನ್ನು, ಅಸುರರಿಪು ಭೀಮಾರ್ಜುನರು-ಕೃಷ್ಣ ಭೀಮ ಅರ್ಜುನರು, ಬಡಿದು ಭಯಂಕರ ಶಬ್ದವನ್ನುಂಟು ಮಾಡಿ ಭೂಮಿಗೆ ಉರುಳಿಸಿದರು.
ಮೂಲ ...{Loading}...
ವೃಷಭಚರ್ಮ ನಿಬದ್ಧ ಭೇರಿಗ
ಳೆಸೆದವಕ್ಷತೆ ಗಂಧಮಾಲ್ಯ
ಪ್ರಸರದಲಿ ಶೈಲಾಗ್ರದಲಿ ಸಂಪನ್ನ ಪೂಜೆಯಲಿ
ಅಸುರರಿಪು ಭೀಮಾರ್ಜುನರು ತ
ದ್ವಿಷಮ ಭೇರೀತ್ರಯವ ಹೊಯ್ದೆ
ಬ್ಬಿಸಿದರದುಭುತ ರವ ಮಿಗಿಲು ಕೆಡೆದುದು ಧರಿತ್ರಿಯಲಿ ॥59॥
೦೬೦ ಏನಿದದುಭುತವೆನ್ದು ನಡುವಿರು ...{Loading}...
ಏನಿದದುಭುತವೆಂದು ನಡುವಿರು
ಳಾ ನರೇಶ್ವರನಮಳ ವೇದ ವಿ
ಧಾನದಲಿ ತಚ್ಛಾಂತಿಗೋಸುಗ ಕರೆಸಿ ಭೂಸುರರ
ದಾನದಲಿ ವಿವಿಧಾಗ್ನಿಕಾರ್ಯ ವಿ
ಧಾನದಲಿ ವಿಪ್ರೌಘವಚನ ಸ
ಘಾನದಲಿ ಮಗಧೇಶನಿದ್ದನು ರಾಯ ಕೇಳ್ ಎಂದ ॥60॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಆ ನಡು ರಾತ್ರಿಯಲ್ಲಿ ಏನಿದದ್ಭುತ ಎಂದುಕೊಂಡು ಮಗಧರಾಜ ಉತ್ಪಾತ ಶಾಂತಿಗಾಗಿ ಬ್ರಾಹ್ಮಣರನ್ನು ಕರೆಸಿ ವೇದವಿಧಾನದಲ್ಲಿ ಶಾಂತಿಯನ್ನಾಚರಿಸಿ ದಾನಗಳನ್ನು ಮಾಡಿ ವಿಪ್ರರಿಂದ ವಿವಿಧ ಅಗ್ನಿಕಾರ್ಯಗಳನ್ನು ಮಾಡಿಸುತ್ತಾ ಅವರ ಮಂತ್ರಗಳನ್ನಾಲಿಸುತ್ತಾ ಇದ್ದ.
ಪದಾರ್ಥ (ಕ.ಗ.ಪ)
ಆ ಶಬ್ದವನ್ನು ಕೇಳಿದ ಜರಾಸಂಧ, ಏನಿದದುಭುತವೆಂದು ನಡುವಿರುಳು-ಈ ನಡುರಾತ್ರಿಯಲ್ಲಿ ಏನಿದದ್ಭುತ ಎಂದುಕೊಳ್ಳುತ್ತಾ, ಆ ನರೇಶ್ವರನು-ಆ ಮಗಧ ರಾಜ, ಕರೆಸಿ ಭೂಸುರರ-ಬ್ರಾಹಣರನ್ನು ಕರೆಸಿ, ಆಮಳ ವೇದ ವಿಧಾನದಲಿ-ಶ್ರೇಷ್ಠವಾದ ವೇದಗಳಲ್ಲಿ ಹೇಳಿರುವ ಪ್ರಕಾರ, ತಚ್ಛಾಂತಿಗೋಸುಗ-ಆ ಅಮಂಗಳದ ಶಾಂತಿಗೋಸ್ಕರ, ದಾನದಲಿ-ದಾನದಿಂದಲೂ, ವಿವಿಧ-ಬಗೆಬಗೆಯ ಅಗ್ನಿಕಾರ್ಯ, ವಿಧಾನದಲಿ-ನಾನಾ ರೀತಿಯ ಅಗ್ನಿಕಾರ್ಯಗಳಿಂದಲೂ, ವಿಪ್ರೌಘವಚನ ಸಘಾನದಲಿ-ವಿಪ್ರರ ಬಾಯಿಂದ ಹೊಮ್ಮುತ್ತಿದ್ದ
ಘನವಾದ ಮಂತ್ರಗಳನ್ನು ಆಲಿಸುತ್ತಲೂ ಇದ್ದ
ಮೂಲ ...{Loading}...
ಏನಿದದುಭುತವೆಂದು ನಡುವಿರು
ಳಾ ನರೇಶ್ವರನಮಳ ವೇದ ವಿ
ಧಾನದಲಿ ತಚ್ಛಾಂತಿಗೋಸುಗ ಕರೆಸಿ ಭೂಸುರರ
ದಾನದಲಿ ವಿವಿಧಾಗ್ನಿಕಾರ್ಯ ವಿ
ಧಾನದಲಿ ವಿಪ್ರೌಘವಚನ ಸ
ಘಾನದಲಿ ಮಗಧೇಶನಿದ್ದನು ರಾಯ ಕೇಳೆಂದ ॥60॥
೦೬೧ ಇವರು ಗಿರಿಯಿನ್ದಿಳಿದು ...{Loading}...
ಇವರು ಗಿರಿಯಿಂದಿಳಿದು ರಾತ್ರಿಯೊ
ಳವನ ನಗರಿಯ ರಾಜ ಬೀದಿಯ
ವಿವಿಧ ವಸ್ತುವ ಸೂರೆಗೊಂಡರು ಹಾಯ್ದು ದಳದುಳವ
ತಿವಿದರಡ್ಡೈಸಿದರನುಬ್ಬಿದ
ತವಕಿಗರು ಮಗಧೇಂದ್ರರಾಯನ
ಭವನವನು ಹೊಕ್ಕರು ವಿಡಂಬದ ವಿಪ್ರವೇಷದಲಿ ॥61॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಈ ಮೂವರು ಗಿರಿಯಿಂದ ಇಳಿದು ರಾತ್ರಿಯಲ್ಲೆ ಆ ಪಟ್ಟಣದ ರಾಜಬೀದಿಯಲ್ಲಿ ನುಗ್ಗಿ ನಾನಾ ವಸ್ತುಗಳನ್ನು ಸೂರೆ ಮಾಡಿದರು. ಅಡ್ಡಿಪಡಿಸಲು ಬಂದವರನ್ನು ತಿವಿದರು. ಗೆಲುವಿನಿಂದ ಉಬ್ಬಿಹೋದ ಆ ಉತ್ಸಾಹಿಗಳು ಆ ತೋರಿಕೆಯ ವಿಪ್ರವೇಷದಲ್ಲಿಯೆ ಮಗಧರಾಜನ ಅರಮನೆಯನ್ನು ಪ್ರವೇಶಿಸಿದರು.
ಪದಾರ್ಥ (ಕ.ಗ.ಪ)
ತವಕಿಗರು-ಉತ್ಸಾಹಿಗಳು
ದಳದುಳ - ಸೂರೆ
ಇವರು-ಕೃಷ್ಣಭೀಮಾರ್ಜುನರು ಮೂವರೂ, ಗಿರಿಯಿಂದಿಳಿದು-ಬೆಟ್ಟದಿಂದ ಕೆಳಕ್ಕಿಳಿದು, ರಾತ್ರಿಯೊಳು-ಆ ರಾತ್ರಿಯಲ್ಲೇ ನಗರದ ರಾಜಬೀದಿಯಲ್ಲಿದ್ದ ನಾನಾ ವಸ್ತುಗಳನ್ನು, ಸೂರೆಗೊಂಡರು-ಸೂರೆಮಾಡಿದರು, ದಳದುಳವ ಹಾಯ್ದು-ಕೊಳ್ಳೆ ಮಾಡಲು ಹೊರಟು,
ಅಡ್ಡೈಸಿದರನು ತಿವಿದರು-ಅಡ್ಡಬಂದವರನ್ನು ಕತ್ತಿಯಿಂದ ತಿವಿದರು ಅನಂತರ, ಉಬ್ಬಿದ ತವಕಿಗರು-ಗೆಲುವಿನಿಂದ ಗರ್ವಗೊಂಡ ಉತ್ಸಾಹಿಗಳು, ವಿಡಂಬದ ವಿಪ್ರವೇಷದಲಿ-ಆ ತೋರಿಕೆಯ ಬ್ರಾಹ್ಮಣ ವೇಷದಿಂದಲೇ, ಮಗಧೇಂದ್ರರಾಯನ-ಮಗಧರಾಜನಾದ ಜರಸಂಧನ, ಭವನವನು ಹೊಕ್ಕರು-ಅರಮನೆಯನ್ನು ಪ್ರವೇಶಿಸಿದರು
ಮೂಲ ...{Loading}...
ಇವರು ಗಿರಿಯಿಂದಿಳಿದು ರಾತ್ರಿಯೊ
ಳವನ ನಗರಿಯ ರಾಜ ಬೀದಿಯ
ವಿವಿಧ ವಸ್ತುವ ಸೂರೆಗೊಂಡರು ಹಾಯ್ದು ದಳದುಳವ
ತಿವಿದರಡ್ಡೈಸಿದರನುಬ್ಬಿದ
ತವಕಿಗರು ಮಗಧೇಂದ್ರರಾಯನ
ಭವನವನು ಹೊಕ್ಕರು ವಿಡಂಬದ ವಿಪ್ರವೇಷದಲಿ ॥61॥
೦೬೨ ಉರವಣಿಸಿದರು ಮೂರು ...{Loading}...
ಉರವಣಿಸಿದರು ಮೂರು ಕೋಟೆಯ
ಮುರಿದರದ್ವಾರದಲಿ ರಾಯನ
ಹೊರೆಗೆ ಬಂದರು ಕಂಡರಿದಿರೆದ್ದನು ಜರಾಸಂಧ
ಧರಣಿಯಮರರಪೂರ್ವಿಗರು ಭಾ
ಸುರರು ಭದ್ರಾಕಾರರೆಂದಾ
ದರಿಸಿ ಮಧುಪರ್ಕಾದಿಗಳ ಮಾಡಿದನು ಭಕ್ತಿಯಲಿ ॥62॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅವರು ರಭಸದಿಂದ ನುಗ್ಗಿದರು. ಮೂರು ಕೋಟೆಯನ್ನು ಮುರಿದು ಹಿಂದಿನ ಬಾಗಿಲಿನಿಂದ ರಾಜನ ಬಳಿಗೆ ಬಂದರು. ಅವರನ್ನು ನೋಡಿದೊಡನೆ ಮಾಗಧ ಎದುರುಗೊಂಡು ಈ ಬ್ರಾಹ್ಮಣರು ಅನನ್ಯ ತೇಜಸ್ವಿಗಳಾಗಿದ್ದಾರೆ. ಶುಭ ಲಕ್ಷಣಗಳಿಂದ ಕೂಡಿದ್ದಾರೆ ಎಂದುಕೊಂಡು ಮಧುಪರ್ಕಾದಿಗಳಿಂದ ಸತ್ಕರಿಸಿ ಭಕ್ತಿಯಿಂದ ಅವರನ್ನು ಗೌರವಿಸಿದ.
ಪದಾರ್ಥ (ಕ.ಗ.ಪ)
ಉರವಣಿಸು-ರಭಸದಿಂದ ಮುನ್ನುಗ್ಗು, ಹೊರೆಗೆ-ಸಮೀಪಕ್ಕೆ
ಅದ್ವಾರದಲಿ -ಹಿಂದಿನ ಬಾಗಿಲಲ್ಲಿ
ಉರವಣಿಸಿದರು-ರಭಸದಿಂದ ನುಗ್ಗಿದರು, ಮೂರು ಕೋಟೆಯ ಮುರಿದರು-ಮೂರು ಕೋಟೆಗಳನ್ನು ಹೊಡೆದು ಕೆಡವಿದರು,
ಆದ್ವಾರದಲಿ-ಅಪಮಾರ್ಗದಲಿ, ರಾಯನ ಹೊರೆಗೆ ಬಂದರು-ರಾಜ ಜರಾಸಂಧನ ಬಳಿಗೆ ಬಂದರು, ಕಂಡರು-ರಾಜನನ್ನು ನೋಡಿದರು, ಆಗಂತುಕವಿಪ್ರರನ್ನು ಕಂಡ ರಾಜ ಗೌರವದಿಂದ, ಇದಿರೆದ್ದನು-ಅವರ ಮುಂದೆ ಎದ್ದು ನಿಂತನು, ಧರಣಿಯಮರರು ಅಪೂರ್ವಿಗರು-ಅಪೂರ್ವರಾದ ವಿಪ್ರರು ಆಗಮಿಸಿದ್ದೀರಿ, ಭಾಸುರರು-ತೇಜಸ್ವಿಗಳಾದವರು, ಭದ್ರಾಕಾರರು-ಸುಂದರವಾದ ರೂಪವುಳ್ಳವರು, ಎಂದಾದರಿಸಿ-ಎಂದು ಹೊಗಳಿ ಗೌರವಿಸಿ, ಭಕ್ತಿಯಲಿ-ಭಕ್ತಿಯಿಂದ, ಮಧುಪರ್ಕಾದಿಗಳ ಮಾಡಿದನು-ಮಧುಪರ್ಕವೇ ಮೊದಲಾದ, ಸತ್ಕಾರಗಳನ್ನು ಮಾಡಿದನು
ಮೂಲ ...{Loading}...
ಉರವಣಿಸಿದರು ಮೂರು ಕೋಟೆಯ
ಮುರಿದರದ್ವಾರದಲಿ ರಾಯನ
ಹೊರೆಗೆ ಬಂದರು ಕಂಡರಿದಿರೆದ್ದನು ಜರಾಸಂಧ
ಧರಣಿಯಮರರಪೂರ್ವಿಗರು ಭಾ
ಸುರರು ಭದ್ರಾಕಾರರೆಂದಾ
ದರಿಸಿ ಮಧುಪರ್ಕಾದಿಗಳ ಮಾಡಿದನು ಭಕ್ತಿಯಲಿ ॥62॥
೦೬೩ ಕೇಳಿದನು ಕುಶಲವನು ...{Loading}...
ಕೇಳಿದನು ಕುಶಲವನು ಕುಶಲವ
ಹೇಳಿದರು ಕುಳ್ಳಿರಿಯೆನಲು ಭೂ
ಪಾಲಕರು ಕುಳ್ಳಿರ್ದರೆವೆಯಿಕ್ಕದೆ ನಿರೀಕ್ಷಿಸುತ
ಹೇಳಿರೈ ನಿಮಗಾವ ದೇಶ ವಿ
ಶಾಲ ಗೋತ್ರವದಾವುದೆನುತ ವಿ
ಲೋಲ ಮತಿ ಚಿಂತಿಸಿದನಿವದಿರು ವಿಪ್ರರಲ್ಲೆಂದು ॥63॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅವರ ಕುಶಲವನ್ನು ಕೇಳಿದ. ಅವರು ಕುಶಲವನ್ನು ಹೇಳಿದರು. ಕುಳಿತುಕೊಳ್ಳಿ ಎಂದ, ಕುಳಿತುಕೊಂಡರು. ಅವನನ್ನೇ ದುರುಗುಟ್ಟಿ ನೋಡುತ್ತಿದ್ದರು. ನಿಮ್ಮ ಗೋತ್ರವದಾವುದು ಹೇಳಿ ಎಂದ. ಆದರೂ ಆ ಚಂಚಲಮತಿಗೆ ಇವರು ಬ್ರಾಹ್ಮಣರಲ್ಲ ಎಂದೇ ಅನ್ನಿಸಿತು.
ಪದಾರ್ಥ (ಕ.ಗ.ಪ)
ಕೇಳಿದನು ಕುಶಲವನು-ಅತಿಥಿಗಳನ್ನು ಸಹಜವಾಗಿ ವಿಚಾಸಿಸುವಂತೆ, ಜರಾಸಂಧ ಯೋಗಕ್ಷೇಮವನ್ನು ವಿಚಾರಿಸಿದ, ಕುಶಲವ ಹೇಳಿದರು-ಅವರು ಕ್ಷೇಮವನ್ನು ಹೇಳಿದರು, ಕುಳ್ಳಿರಿಯೆನಲು-ಕುಳಿತುಕೊಳ್ಳಿರಿ ಎನಲು, ಭೂಪಾಲಕರು-ಆ ಧರಣಿಪಾಲಕರಾದ ಮೂವರೂ, ಕುಳ್ಳಿರ್ದರು-ಕುಳಿತುಕೊಂಡರು ಜರಾಸಂಧ, ಎವೆಯಿಕ್ಕದೆ ನಿರೀಕ್ಷಿಸುತ-ಕಣ್ಣುಮಿಟುಕಿಸದೆ ಅವರನ್ನೇ ನೋಡುತ್ತಾ ನಿಮಗೆ
ಆವ ದೇಶ-ನಿಮ್ಮ ದೇಶವಾವುದು, ವಿಶಾಲ ಗೋತ್ರವಾವುದು-ವಿಸ್ತೃತವಾದ ನಿಮ್ಮ ವಂಶವಾವುದು ? ಹೇಳಿರೈ-ಹೇಳಿರಯ್ಯ, ಎನುತ-ಎನ್ನುತ್ತಾ, ವಿಲೋಲ ಮತಿ-ಚಂಚಲಮತಿಯಾದ ಅವನು, ಇವದಿರು-ಇವರು, ವಿಪ್ರರಲ್ಲ-ಬ್ರಾಹ್ಮಣರಲ್ಲ, ಎಂದು ಚಿಂತಿಸಿದನು-ಎಂದು ಯೋಚಿಸಿದ
ಮೂಲ ...{Loading}...
ಕೇಳಿದನು ಕುಶಲವನು ಕುಶಲವ
ಹೇಳಿದರು ಕುಳ್ಳಿರಿಯೆನಲು ಭೂ
ಪಾಲಕರು ಕುಳ್ಳಿರ್ದರೆವೆಯಿಕ್ಕದೆ ನಿರೀಕ್ಷಿಸುತ
ಹೇಳಿರೈ ನಿಮಗಾವ ದೇಶ ವಿ
ಶಾಲ ಗೋತ್ರವದಾವುದೆನುತ ವಿ
ಲೋಲ ಮತಿ ಚಿಂತಿಸಿದನಿವದಿರು ವಿಪ್ರರಲ್ಲೆಂದು ॥63॥
೦೬೪ ಸ್ನಾತಕ ವ್ರತ ...{Loading}...
ಸ್ನಾತಕ ವ್ರತ ವೇಷದಲಿ ಬಂ
ದಾತಗಳು ತಾವಿವರು ಶಸ್ತ್ರ
ವ್ರಾತದಲಿ ಶಿಕ್ಷಿತರು ಕರ್ಕಶ ಬಾಹುಪಾಣಿಗಳು
ಕೈತವದಿನೈತಂದರರ್ಥವ
ನೀತಗಳು ಬಯಸರು ವಿರೋಧ
ಪ್ರೀತಿಮುಖರಿವರಾರೊ ಶಿವಶಿವಯೆನುತ ಚಿಂತಿಸಿದ ॥64॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಸ್ನಾತಕ ವ್ರತಿಗಳ ವೇಷವನ್ನು ಧರಿಸಿ ಬಂದವರು ಇವರು ನಾನಾ ಆಯುಧಗಳಲ್ಲಿ ಶಿಕ್ಷಣ ಪಡೆದವರು. ಇವನ ಕಠಿನವಾದ ತೋಳುಗಳೇ ಅದನ್ನು ತಿಳಿಸುತ್ತವೆ. ಮೋಸದಿಂದ ಬಂದಿದ್ದಾರೆ. ಇವರು ಹಣವನ್ನು ಬಯಸುವವರಲ್ಲ. ಶಿವ ಶಿವ! ಶತ್ರುತ್ವದಲ್ಲಿಯೇ ಪ್ರೀತಿಯನ್ನು ಕಾಣುವವರು ಎಂದು ಆಲೋಚಿಸಿದ.
ಪದಾರ್ಥ (ಕ.ಗ.ಪ)
ವ್ರಾತ-ಸಮೂಹ, ಕೈತವ-ಮೋಸ
ಸ್ನಾತಕ ವ್ರತ ವೇಷದಲಿ ಬಂದಾತಗಳು ತಾವಿವರು-ಇವರು ಸ್ನಾತಕರಾದ ವಿಪ್ರವೇಷ ಧರಿಸಿಕೊಂಡು ಬಂದಿದ್ದಾರೆ, ಶಸ್ತ್ರವ್ರಾತದಲಿ-ನಾನಾಶಸ್ತ್ರ ಪ್ರಯೋಗಗಳಲ್ಲಿ, ಶಿಕ್ಷಿತರು-ಶಿಕ್ಷಣ ಪಡೆದವರು, ಕರ್ಕಶ ಬಾಹುಪಾಣಿಗಳು-ಕಠಿಣವಾದ ತೋಳುಗಳನ್ನು ಕೈಗಳನ್ನೂ
ಹೊಂದರುವರು, ಕೈತವದಿನೈತಂದರು-ಮೋಸದಿಂದ ಬಂದಿದ್ದಾರೆ, ಈತಗಳು-ಇವರು, ಅರ್ಥವ ಬಯಸರು-ಹಣವನ್ನು ಅಪೇಕ್ಷಿಸುವವರಲ್ಲ, ವಿರೋಧ ಪ್ರೀತಿ ಮುಖರು-ಶತ್ರುತ್ವದಲ್ಲಿ ಪ್ರೀತಿಯನ್ನು ಹೊಂದಿರುವವರು, ಇವರಾರೋ ಶಿವ ಶಿವ-ಶಿವ ಶಿವ, ಇವರು ಯಾರಪ್ಪೆ, ಎನುತ ಚಿಂತಿಸಿದ-ಎಂದು ಚಿಂತಾಮಗ್ನನಾದ
ಮೂಲ ...{Loading}...
ಸ್ನಾತಕ ವ್ರತ ವೇಷದಲಿ ಬಂ
ದಾತಗಳು ತಾವಿವರು ಶಸ್ತ್ರ
ವ್ರಾತದಲಿ ಶಿಕ್ಷಿತರು ಕರ್ಕಶ ಬಾಹುಪಾಣಿಗಳು
ಕೈತವದಿನೈತಂದರರ್ಥವ
ನೀತಗಳು ಬಯಸರು ವಿರೋಧ
ಪ್ರೀತಿಮುಖರಿವರಾರೊ ಶಿವಶಿವಯೆನುತ ಚಿಂತಿಸಿದ ॥64॥
೦೬೫ ಆರಿವರು ದೇವತ್ರಯವೊ ...{Loading}...
ಆರಿವರು ದೇವತ್ರಯವೊ ಜಂ
ಭಾರಿ ಯಮ ಮಾರುತರೊ ರವಿ ರಜ
ನೀರಮಣ ಪಾವಕರೊ ಕಪಟ ಸ್ನಾತಕವ್ರತದ
ಧಾರುಣೀಶ್ವರರೊಳಗೆ ಧಿಟ್ಟರ
ದಾರು ತನ್ನೊಳು ತೊಡಕಿ ನಿಲುವ ವಿ
ಕಾರಿಗಳ ನಾ ಕಾಣೆನೆಂದನು ತನ್ನ ಮನದೊಳಗೆ ॥65॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಯಾರಿವರು? ಬ್ರಹ್ಮ ವಿಷ್ಣು ಮಹೇಶ್ವgರೋ ? ಇಂದ್ರ ಯಮ ಮಾರುತರೋ ? ಸೂರ್ಯ ಚಂದ್ರ ಅಗ್ನಿಗಳೋ ? ತನ್ನನ್ನು ಎದುರಿಸಿ ನಿಲ್ಲಬಲ್ಲ ಧೈರ್ಯಶಾಲಿಗಳಾದ ರಾಜರ ಪೈಕಿ ಈ ಸ್ನಾತಕ ವ್ರತದ ಕಪಟ ವೇಷಧಾರಿಗಳು ಯಾರಿರಬಹುದು? ಈ ವಿಕಾರಿಗಳನ್ನು ನಾ ಕಾಣೆ ಎಂದುಕೊಂಡ ಮಾಗಧ, ತನ್ನ ಮನಸ್ಸಿನಲ್ಲೇ !
ಪದಾರ್ಥ (ಕ.ಗ.ಪ)
ಜಂಭಾರಿ-ಇಂದ್ರ, ರಜನೀ ರಮಣ-ಚಂದ್ರ
ಆರಿವರು-ಯಾರು ಇವರು? ಕಪಟ ಸ್ನಾತಕವ್ರತದ-ಮೋಸದಿಂದ ಸ್ನಾತಕ ವೇಷ ತಳೆದು ಬಂದ, ದೇವತ್ರಯವೊ-ಬ್ರಹ್ಮ ವಿಷ್ಣು ಮಹೇಶ್ವರರೋ?, ಜಂಭಾರಿ ಯಮ ಮಾರುತರೊ-ಇಂದ್ರ ಯಮ ವಾಯುಗಳೇ? ರವಿ ರಜನೀರಮಣ ಪಾವಕರೊ-ಸೂರ್ಯ, ಚಂದ್ರ, ಅಗ್ನಿಗಳೋ? ಧಾರುಣೀಶ್ವರರೊಳಗೆ-ಈಗಿರುವ ರಾಜರುಗಳೆಲ್ಲ, ಧಿಟ್ಟರದಾರು-ನನ್ನನ್ನು ಎದುರಿಸಿ ನಿಲ್ಲುವಂತಹ ಧೈರ್ಯಶಾಲಿಗಳು ಯಾರು? ತನ್ನೊಳು ತೊಡಕಿ ನಿಲುವ-ತನ್ನನ್ನು ಕೆಣಕಿ ಯುದ್ಧಕ್ಕೆ ನಿಲ್ಲುವಂತಹ, ವಿಕಾರಿಗಳ-ಬುದ್ಧಿಗೆಟ್ಟವರನ್ನು, ನಾ ಕಾಣೆನು ಎಂದನು ತನ್ನ ಮನದೊಳಗೆ
ಮೂಲ ...{Loading}...
ಆರಿವರು ದೇವತ್ರಯವೊ ಜಂ
ಭಾರಿ ಯಮ ಮಾರುತರೊ ರವಿ ರಜ
ನೀರಮಣ ಪಾವಕರೊ ಕಪಟ ಸ್ನಾತಕವ್ರತದ
ಧಾರುಣೀಶ್ವರರೊಳಗೆ ಧಿಟ್ಟರ
ದಾರು ತನ್ನೊಳು ತೊಡಕಿ ನಿಲುವ ವಿ
ಕಾರಿಗಳ ನಾ ಕಾಣೆನೆಂದನು ತನ್ನ ಮನದೊಳಗೆ ॥65॥
೦೬೬ ಈಗ ಮಿಡುಕುಳ್ಳವರು ...{Loading}...
ಈಗ ಮಿಡುಕುಳ್ಳವರು ಮಹಿಯಲಿ
ನಾಗಪುರದರಸುಗಳು ನಮ್ಮವ
ರಾಗಿಹರು ಪಾಂಡುವಿನ ಮಕ್ಕಳು ಮಿರಿ ಖಳರಲ್ಲ
ಸಾಗರೋಪಾಂತ್ಯದ ನರೇಂದ್ರರು
ಭೋಗಿಸಿದ ಮುತ್ತುಗಳು ಭಾವಿಸ
ಲೀ ಗಯಾಳರ ಗರ್ವವೇನು ನಿಮಿತ್ತವಾಯ್ತೆಂದ ॥66॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಈಗ ಪ್ರಪಂಚದಲ್ಲಿ ಪರಾಕ್ರಮವುಳ್ಳ ರಾಜರೆಂದರೆ ಹಸ್ತಿನಾಪುರದ ರಾಜರು ಅವರು ನಮ್ಮವರೇ ಆಗಿದ್ದಾರೆ. ಪಾಂಡುವಿನ ಮಕ್ಕಳು ಸಹ ಅಷ್ಟೇನೂ ದುಷ್ಟರಲ್ಲ ಸಾಗರ ತೀರದ ರಾಜರುಗಳಂತೂ ನಾನಾಗಲೇ ಸವಿ ನೋಡಿರುವ ಮುತ್ತುಗಳೇ. ಈ ಹೇಡಿಗಳಿಗೆ ಗರ್ವವೆಲ್ಲಿಂದ ಬಂದಿತು ? ಎಂದಾಲೋಚಿಸಿದ.
ಪದಾರ್ಥ (ಕ.ಗ.ಪ)
ಮಿಡುಕು-ಶಕ್ತಿ, ಮಹಿ-ಭೂಮಿ, ಗಯಾಳ-ಹೇಡಿ
ಮಹಿಯಲಿ-ಈ ಭೂಮಿಯ ಮೇಲೆ, ಈಗ ಮಿಡುಕುಳ್ಳವರು-ಶಕ್ತಿಯಿರುವವರು, ನಾಗಪುರದರಸುಗಳು-ಹಸ್ತನಾವತಿಯ ರಾಜರುಗಳು ಅವರು, ನಮ್ಮವರಾಗಿಹರು-ನಮ್ಮ ಪಕ್ಷದವರೇ ಆಗಿದ್ದಾರೆ, ಪಾಂಡುವಿನ ಮಕ್ಕಳು-ಪಾಂಡವರು, ಮಿರಿ ಖಳರಲ್ಲ-ಮಿತಿಮೀರಿ ದುಷ್ಟರೇನಲ್ಲ, ಸಾಗರೋಪಾಂತ್ಯದ ನರೇಂದ್ರರು-ಕಡಲ ತೀರದ ರಾಜರುಗಳು, ಭೋಗಿಸಿದ ಮುತ್ತುಗಳು-ನಾನಾಗಲೇ ರುಚಿನೋಡಿರುವಂಥವರು, ಭಾವಿಸಲು-ಯೋಚಿಸಿ ನೊಡಿದರೆ, ಈ ಗಯಾಳರ-ಈ ಹೇಡಿಗಳ, ಗರ್ವವೇನು ನಿಮಿತ್ತವಾಯ್ತ-ಅಹಂಕಾರ ಯಾವ ಕಾರಣದಿಂದ ಉಂಟಾಯಿತು? ಎಂದ-ಎಂದಾಲೋಚಿಸಿದ
ಮೂಲ ...{Loading}...
ಈಗ ಮಿಡುಕುಳ್ಳವರು ಮಹಿಯಲಿ
ನಾಗಪುರದರಸುಗಳು ನಮ್ಮವ
ರಾಗಿಹರು ಪಾಂಡುವಿನ ಮಕ್ಕಳು ಮಿರಿ ಖಳರಲ್ಲ
ಸಾಗರೋಪಾಂತ್ಯದ ನರೇಂದ್ರರು
ಭೋಗಿಸಿದ ಮುತ್ತುಗಳು ಭಾವಿಸ
ಲೀ ಗಯಾಳರ ಗರ್ವವೇನು ನಿಮಿತ್ತವಾಯ್ತೆಂದ ॥66॥
೦೬೭ ಯಾದವರು ಹಿನ್ದೆಮ್ಮೊಡನೆ ...{Loading}...
ಯಾದವರು ಹಿಂದೆಮ್ಮೊಡನೆ ಹಗೆ
ಯಾದವರು ಬಳಿಕವರೊಳಗೆ ತುರು
ಗಾದವನ ಕರುಗಾದವನ ಮಾಧವನ ಮಾತೇನು
ಮೇದಿನಿಯ ಮಂಡಳಿಕ ಮನ್ನೆಯ
ರಾದವರು ನಮ್ಮೊಡನೆ ಸೆಣಸುವ
ರಾದಡಿದು ದುಷ್ಕಾಲ ವಶವಿದು ಚಿತ್ರವಾಯ್ತೆಂದ ॥67॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಯಾದವರು ಹಿಂದೆ ನಮ್ಮ ಶತ್ರುಗಳಾಗಿದ್ದರು. ಆ ದನ ಕಾಯುತ್ತಿದ್ದ ಮಾಧವನದು ಯಾವ ಲೆಕ್ಕ ! ಈ ಭೂಮಿಯಲ್ಲಿ ಮಾಂಡಲಿಕರಾದವರೂ ಮಾನ್ಯರಾದವರೂ ನಮ್ಮೊಡನೆ ಹೋರಾಟಕ್ಕೆ ಬಂದರೆ ಇದು ಕೆಟ್ಟ ಕಾಲವೇ ಆಯಿತು. ವಿಚಿತ್ರವಾಗಿದೆ ಎಂದಾಲೋಚಿಸಿದ.
ಪದಾರ್ಥ (ಕ.ಗ.ಪ)
ಯಾದವರು ಹಿಂದೊಮ್ಮೆ-ಹಿಂದೆ ಒಂದು ಕಾಲದಲ್ಲಿ, ಹಗೆಯಾದವರು-ಶತ್ರುಗಳಾಗಿದ್ದವರು, ಬಳಿಕ-ಅನಂತರ, ಅವರೊಳಗೆ-ಅವರಪೈಕಿ, ತುರುಗಾದವನ ಕರುಗಾದವನ ಮಾಧವನ ಮಾತೇನು-ಕಸುಕರುಗಳನ್ನು, ಕಾದ ಆ ಕೃಷ್ಣನ, ಮಾತೇನು-ವಿಷಯ ಯಾವ ಲೆಕ್ಕ?, ಮೇದಿನಿಯ ಮಂಡಳಿಕ ಮನ್ನೆಯರಾದವರು-ಭೂಮೆಯ ಮೇಲಿರುವ ಮಂಡಲಾಧಿಪತಿಗಳು ? ನಿಮ್ಮೊಡನೆ ನಮ್ಮೊಡನೆ ಸೆಣಸುವರಾದಡೆ-ಹೋರಾಟಕ್ಕೆ ನಿಲ್ಲುವದಾದರೆ, ಇದು ದುಷ್ಕಾಲ ವಶ-ಇದು ಅವರಿಗೆ ಕೆಟ್ಟಕಾಲವಷ್ಟೆ, ಚಿತ್ರವಾಯ್ತು-ಆಶ್ಚರ್ಯವಾಗಿದೆ
ಮೂಲ ...{Loading}...
ಯಾದವರು ಹಿಂದೆಮ್ಮೊಡನೆ ಹಗೆ
ಯಾದವರು ಬಳಿಕವರೊಳಗೆ ತುರು
ಗಾದವನ ಕರುಗಾದವನ ಮಾಧವನ ಮಾತೇನು
ಮೇದಿನಿಯ ಮಂಡಳಿಕ ಮನ್ನೆಯ
ರಾದವರು ನಮ್ಮೊಡನೆ ಸೆಣಸುವ
ರಾದಡಿದು ದುಷ್ಕಾಲ ವಶವಿದು ಚಿತ್ರವಾಯ್ತೆಂದ ॥67॥
೦೬೮ ಬವರಿಗರು ನೀವ್ ...{Loading}...
ಬವರಿಗರು ನೀವ್ ವಿಪ್ರವೇಷದ
ಜವನಿಕೆಯ ಜಾಣಾಯ್ಲತನದಿಂ
ದವಗೆಡಿಸಿ ಹೊಕ್ಕಿರಿಯಪರದ್ವಾರದಲಿ ನೃಪಸಭೆಯ
ನಿವಗಿದೇನೀ ವಸನ ಕಪಟ
ವ್ಯವಹರಣೆ ಕೃತ್ರಿಮವೊ ಸಹಜವೊ
ರವಣ ಮತ್ತೇನುಂಟು ಹೇಳಿನ್ನಂಜಬೇಡೆಂದ ॥68॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಯುದ್ಧದಲ್ಲಿ ಆಸಕ್ತಿಯುಳ್ಳವರು ನೀವು. ವಿಪ್ರವೇಷದ ಮುಸುಕನ್ನು ಧರಿಸಿ ಜಾಣತನದಿಂದ ಅಪದ್ವಾರ ಮೂಲಕ ರಾಜಸಭೆಯನ್ನು ಪ್ರವೇಶಿಸಿದ್ದೀರಿ. ನಿಮಗೆ ಇದೇನು ಈ ವೇಷ, ಮೋಸದ ವ್ಯವಹಾರ ? ಇದೇನು ನಿಮಗೆ ಕೃತ್ರಿಮವಾದದ್ದೋ ಸಹಜವಾದದ್ದೋ ?
ಪರಿಹಾಸ ಮತ್ತೇನಿದೆ? ಹೇಳಿ, ಹೆದರಬೇಡಿ ಎಂದ.
ಪದಾರ್ಥ (ಕ.ಗ.ಪ)
ಜಾಣಾಯ್ಲತನ-ಜಾಣತನ, ಅಪದ್ವಾರ-ಹಿಂಬಾಗಿಲು, ರವಣ-ಪರಿಹಾಸ
ಬವರಿಗರು ನೀವ್-ಯುದ್ಧದಲ್ಲಿ ಆಸಕ್ತರಾದ ನೀವು, ವಿಪ್ರವೇಷದ ಜವನಿಕೆಯ ಜಾಣಾಯ್ಲತನದಿಂದ-ಬ್ರಾಹ್ಮಣ ವೇಷದ ಮುಸುಕು ಹಾಕಿಕೊಳ್ಳುವ ಜಾಣತನದಿಂದ, ಅಗೆಡಿಸಿ-ಅವಹೇಳನೆಯನ್ನೂ ತೋರಿ, ಹೊಕ್ಕಿರಿ-ಈ ರಾಜಸಭೆಯನ್ನು ಪ್ರವೇಶಿಸಿದಿರಿ, ನಿವಗೆ-ನಿಮಗೆ
ಇದೇನೀ ವಸನ ಕಪಟ ವ್ಯವಹರಣೆ-ಈ ವೇಷವೇನು, ಕಪಟ ವ್ಯವಹಾರವೇಕೆ ?, ಕೃತ್ರಿಮವೊ ಸಹಜವೊ-ಕಪಟತನದಿಂದ ಮಾಡಿದುದೋ ಸಹಜವಾಗಿ ಮಾಡಿದುದೋ? ರವಣ ಮತ್ತೇನುಂಟು-ಇದರಲ್ಲಿ ಮತ್ತೇನು ವಿನೋದವಿದೆ ? ಹೇಳಿ ಇನ್ನಂಜಬೇಡಿ ಎಂದ
ಮೂಲ ...{Loading}...
ಬವರಿಗರು ನೀವ್ ವಿಪ್ರವೇಷದ
ಜವನಿಕೆಯ ಜಾಣಾಯ್ಲತನದಿಂ
ದವಗೆಡಿಸಿ ಹೊಕ್ಕಿರಿಯಪರದ್ವಾರದಲಿ ನೃಪಸಭೆಯ
ನಿವಗಿದೇನೀ ವಸನ ಕಪಟ
ವ್ಯವಹರಣೆ ಕೃತ್ರಿಮವೊ ಸಹಜವೊ
ರವಣ ಮತ್ತೇನುಂಟು ಹೇಳಿನ್ನಂಜಬೇಡೆಂದ ॥68॥
೦೬೯ ಸ್ನಾತಕ ವ್ರತವೇನು ...{Loading}...
ಸ್ನಾತಕ ವ್ರತವೇನು ಪಾರ್ಥಿವ
ಜಾತಿಗಿಲ್ಲಲೆ ವೈಶ್ಯಕುಲಕಿದು
ಪಾತಕವು ನಾವಿಂದು ಪಾರ್ಥಿವ ಜಾತಿ ಸಂಭವರು
ಸ್ನಾತಕರು ನಾವ್ ವೈರಿ ಗೃಹದಲ
ಭೀತರದ್ವಾರ ಪ್ರವೇಶವ
ನೀತಿಯಲ್ಲ ಪುರಾಣಸಿದ್ಧವಿದೆಂದನಸುರಾರಿ ॥69॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅದಕ್ಕೆ ಕೃಷ್ಣ “ಸ್ನಾತಕವ್ರತವೇನು ಕ್ಷತ್ರಿಯರಿಗಿಲ್ಲವೆ ? ವೈಶ್ಯಕುಲದವರಿಗೆ ಪಾತಕವಷ್ಟೆ. ನಾವು ಕ್ಷತ್ರಿಯ ಜಾತಿಯಲ್ಲಿ ಹುಟ್ಟಿದವರು. ಸ್ನಾತಕರು, ಶತ್ರುವಿನ ಮನೆಯಲ್ಲಿ ನಿರ್ಭಯರಾಗಿರುವವರು. ವೈರಿಗಳು ಮನೆಗೆ ಅಪದ್ವಾರದಲ್ಲಿ ಪ್ರವೇಶಿಸುವುದು ಅನೀತಿಯಲ್ಲ ಇದು ಪುರಾಣ ಪ್ರಸಿದ್ಧವಾದುದು” ಎಂದ.
ಪದಾರ್ಥ (ಕ.ಗ.ಪ)
ಅದ್ವಾರ-ಹಿಂಬಾಗಿಲು
ಸ್ನಾತಕ ವ್ರತವೇನು ಪಾರ್ಥಿವ ಜಾತಿಗೆ-ಕ್ಷತ್ರಿಯ ವರ್ಣಕ್ಕೆ, ಇಲ್ಲಲೆ-ಇಲ್ಲವೇ ? ವೈಶ್ಯಕುಲಕಿದು ಪಾತಕವು-ವೈಶ್ಯವರ್ಣಕ್ಕೆ ಇದು ಪಾಪವಾಗುತ್ತದೆ, ನಾವಿಂದು-ಇಂದು ನಾವು, ಪಾರ್ಥಿವ ಜಾತಿ ಸಂಭವರು-ಕ್ಷತ್ರಿಯ ಜಾತಿಯಲ್ಲಿ ಹುಟ್ಟಿದವರು, ಸ್ನಾತಕರು ನಾವ್-ನಾವು ಸ್ನಾತಕರು, ವೈರಿ ಗೃಹದಲ-ಶತ್ರುವಿನ ಮನೆಯಲ್ಲಿ, ಅಭೀತರು ಅದ್ವಾರ ಪ್ರವೇಶ-ಬಾಗಿಲಿಲ್ಲದ ಬಾಗಿಲಲ್ಲಿ ಪ್ರವೇಶಿಸುವುದು, ಅನೀತಿಯಲ್ಲ-ನೀತಿಗೆ ವಿರುದ್ಧವಲ್ಲ, ಪುರಾಣಸಿದ್ಧವಿದು-ಪುರಾಣದಲ್ಲಿ ಹೇಳಲ್ಪಟ್ಟಿರುವುದು ಹಿಂದಿನಿಂದಲೇ ನಡೆದು ಬಂದ ಆಚಾರ, ಎಂದನಸುರಾರಿ-ಎಂದ ಕೃಷ್ಣ
ಮೂಲ ...{Loading}...
ಸ್ನಾತಕ ವ್ರತವೇನು ಪಾರ್ಥಿವ
ಜಾತಿಗಿಲ್ಲಲೆ ವೈಶ್ಯಕುಲಕಿದು
ಪಾತಕವು ನಾವಿಂದು ಪಾರ್ಥಿವ ಜಾತಿ ಸಂಭವರು
ಸ್ನಾತಕರು ನಾವ್ ವೈರಿ ಗೃಹದಲ
ಭೀತರದ್ವಾರ ಪ್ರವೇಶವ
ನೀತಿಯಲ್ಲ ಪುರಾಣಸಿದ್ಧವಿದೆಂದನಸುರಾರಿ ॥69॥
೦೭೦ ವೈರಿ ಭವನವೆ ...{Loading}...
ವೈರಿ ಭವನವೆ ನಮ್ಮದಿದು ನಾವ್
ವೈರಿಗಳೆ ನಿಮಗೆಮಗೆ ಜನಿಸಿದ
ವೈರಬಂಧ ನಿಮಿತ್ತವಾವುದು ನಿಮ್ಮ ಪಕ್ಷದಲಿ
ಆರು ನೀವೀ ಬ್ರಾಹ್ಮಣರು ನಿಮ
ಗಾರುಪಾಧ್ಯರು ಹೇಳಿ ನಿಮ್ಮ ವಿ
ಕಾರ ಬರಿದೇ ಹೋಗದೆಂದನು ಮಗಧಪತಿ ನಗುತ ॥70॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಈ ನಮ್ಮ ಮನೆ ನಿಮಗೆ ಶತ್ರುವಿನ ಮನೆಯೇ ? ನಾವು ಶತ್ರುಗಳೇ ? ನಮಗೂ ನಿಮಗೂ ವೈರವುಂಟಾಗುವುದಕ್ಕೆ ಕಾರಣವೇನು ? ಯಾರು ನೀವು, ಈ ಬ್ರಾಹ್ಮಣರು ? ನಿಮಗೆ ಉಪಾಧ್ಯಾಯರು ಯಾರು ? ನಿಮ್ಮ ಈ ವಿಕಾರದ ನಡತೆ ಸುಮ್ಮನೆ ಹೋಗುವುದಿಲ್ಲ” ಎಂದ ನಗುತ್ತ ಮಗಧರಾಜ.
ಪದಾರ್ಥ (ಕ.ಗ.ಪ)
ವೈರಿ ಭವನವೆ ನಮ್ಮದಿದು-ಈ ನಮ್ಮ ಮನೆ ಶತ್ರುವಿನ ಮನೆಯೆ ? ನಾವ್ ವೈರಿಗಳೆ ನಿಮಗೆ-ನಾವು ನಿಮಗೆ ಶತ್ರುಗಳೇ ? ಎಮಗೆ ಜನಿಸಿದ ವೈರಬಂದ ನಿಮಿತ್ತವಾವುದು-ನಿಮ್ಮಬ್ಬರಿಗೆ ಹುಟ್ಟಿದ ಶತ್ರುತ್ವಕ್ಕೆ, ನಿಮ್ಮ ಪಕ್ಷದಲ್ಲಿ-ನಿಮ್ಮ ಅಭಿಪ್ರಾಯದಂತೆ ಕಾರಣವೇನು?
ಆರು ನೀವೀ ಬ್ರಾಹ್ಮಣರು-ಬ್ರಾಹ್ಮಣರಾದ ನೀವು ಯಾರು ? ನಿಮಗಾರುಪಾಧ್ಯರು-ನಿಮಗೆ ಆಚಾರ್ಯರು ಆರು? ಹೇಳಿ ನಿಮ್ಮ ವಿಕಾರ-ನಿಮ್ಮ ದುರ್ನಡತೆ ಬರಿದೇ ಹೋಗದು-ವ್ಯರ್ಥವಾಗುವುದಿಲ್ಲ, ಶಿಕ್ಷೆಯನ್ನು ಪಡದೇ ಪಡೆಯುತ್ತದೆ ಎಂದನು ಮಗಧಪತಿ ನಗುತ-ಜರಾಸಂಧ ನಗುತ್ತಾ ಹೇಳಿದ
ಮೂಲ ...{Loading}...
ವೈರಿ ಭವನವೆ ನಮ್ಮದಿದು ನಾವ್
ವೈರಿಗಳೆ ನಿಮಗೆಮಗೆ ಜನಿಸಿದ
ವೈರಬಂಧ ನಿಮಿತ್ತವಾವುದು ನಿಮ್ಮ ಪಕ್ಷದಲಿ
ಆರು ನೀವೀ ಬ್ರಾಹ್ಮಣರು ನಿಮ
ಗಾರುಪಾಧ್ಯರು ಹೇಳಿ ನಿಮ್ಮ ವಿ
ಕಾರ ಬರಿದೇ ಹೋಗದೆಂದನು ಮಗಧಪತಿ ನಗುತ ॥70॥
೦೭೧ ಮುರಿದು ಹಲಬರಿಳಾದಿನಾಥರ ...{Loading}...
ಮುರಿದು ಹಲಬರಿಳಾದಿನಾಥರ
ಸೆರೆಯಲಿಕ್ಕಿದೆ ರಾಜ್ಯ ಮದದಲಿ
ಮರೆದು ಮಾನ್ಯರನಿರಿದು ಹೆಚ್ಚಿಸಿಕೊಂಡೆ ಭುಜಬಲವ
ಅರಿಯದಳುಪಿದ ಪಾತಕಕೆ ಬಿಡು
ಸೆರೆಯ ಪ್ರಾಯಶ್ಚಿತ್ತವಿದು ನಾ
ವುರುವ ವೇಷದುಪಾಧ್ಯರೆಂದನು ನಗುತ ಮುರಹರನು ॥71॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅದಕ್ಕೆ ಕೃಷ್ಣ ನಗುತ್ತ “ನೀನು ರಾಜ್ಯದ ಮದದಲ್ಲಿ ಹಲವು ಮಂದಿ ರಾಜರನ್ನು ಸೋಲಿಸಿ ಸೆರೆಯಲ್ಲಿಟ್ಟಿದ್ದೀಯೆ. ಮೈಮರೆತು ಅನೇಕ ಮಾನ್ಯರನ್ನು ಕೊಂದು ನಿನ್ನ ಬಾಹುಬಲವನ್ನು ಹೆಚ್ಚಿಸಿಕೊಂಡೆ. ತಿಳಿಯದೆ ದುರಾಸೆಯಿಂದ ಮಾಡಿದ ಪಾಪಕ್ಕೆ ಪ್ರಾಯಶ್ಚಿತ್ತರೂಪವಾಗಿ ಆ ರಾಜರನ್ನು ಸೆರೆಯಿಂದ ಬಿಡುಗಡೆ ಮಾಡು. ನಾವು ಉತ್ತಮ ವೇಷದ ಉಪಾಧ್ಯರು” ಎಂದ.
ಪದಾರ್ಥ (ಕ.ಗ.ಪ)
ಉರುವ-ಶ್ರೇಷ್ಠ
ಹಲಬರಿಳಾದಿನಾಥರ-ಹಲವಾರು ರಾಜರುಗಳನ್ನು, ಮುರಿದು-ಸೋಲಿಸಿ, ಸೆರೆಯಲಿಕ್ಕಿದೆ-ಬಂಧನದಲ್ಲಿಟ್ಟಿದ್ದೀಯೆ, ರಾಜ್ಯ ಮದದಲಿ-ರಾಜ್ಯದ ಮದದಿಂದ, ಮರೆದು-ಮೈಮೆರೆತು, ಮಾನ್ಯರನಿರಿದು-ಮಾನ್ಯರಾದ ರಾಜರುಗಳನ್ನು ಕೊಂದು, ಹೆಚ್ಚಸಿಕೊಂಡೆ ಭುಜಬಲವ-ನಿನ್ನ ಬಾಹು ಸಾಮಥ್ರ್ಯವನ್ನು ಹೆಚ್ಚಿಸಿಕೊಂಡೆ, ಅರಿಯದಳುಪಿದ-ತಿಳಿಯದೆ ಆಸೆ ಪಟ್ಟು, ಪಾತಕಕೆ-ಮಾಡಿಕೊಂಡ ಪಾಪಕ್ಕೆ, ಬಿಡು ಸೆರೆಯ-ಬಂದನದಲ್ಲಿರುವ ರಾಜರನ್ನು ಬಿಡುಗಡೆಮಾಡು, ಪ್ರಾಯಶ್ಚಿತ್ತವಿದು-ನೀಮಾಡಿದ ಪಾಪಕ್ಕೆ ಇದು ಪ್ರಾಯಶ್ಚಿತ್ತ, ನಾವು ಉರುವ ವೇಷದ-ನಾವು ಶ್ರೇಷ್ಠ ವೇಷ ಧರಿಸಿದ ಉಪಾಧ್ಯರು, ಎಂದನು ನಗುತ ಮುರಹರನು-ಕೃಷ್ಣ ಹೀಗೆ ನಗುತ್ತಾ ಹೇಳಿದ
ಮೂಲ ...{Loading}...
ಮುರಿದು ಹಲಬರಿಳಾದಿನಾಥರ
ಸೆರೆಯಲಿಕ್ಕಿದೆ ರಾಜ್ಯ ಮದದಲಿ
ಮರೆದು ಮಾನ್ಯರನಿರಿದು ಹೆಚ್ಚಿಸಿಕೊಂಡೆ ಭುಜಬಲವ
ಅರಿಯದಳುಪಿದ ಪಾತಕಕೆ ಬಿಡು
ಸೆರೆಯ ಪ್ರಾಯಶ್ಚಿತ್ತವಿದು ನಾ
ವುರುವ ವೇಷದುಪಾಧ್ಯರೆಂದನು ನಗುತ ಮುರಹರನು ॥71॥
೦೭೨ ಆ ನೃಪಾಲರ ...{Loading}...
ಆ ನೃಪಾಲರ ಮಗನೊ ಮೊಮ್ಮಗನೊ
ನೀನವರ ಬಾಂಧವನೊ ಭೃತ್ಯನೊ
ನೂನವಕ್ಷನೊ ಬೆರಳ ಬದೆಗನೊ ಕುರುಳ ಕೋಮಳನೊ
ಏನು ನಿನ್ನಂಘವಣೆ ನೀನಾ
ರಾ ನರೇಂದ್ರರ ಸೆರೆಯ ಬಿಡುಗಡೆ
ಗೇನನೆಂಬೆನು ರಹವನೆಂದನು ತೂಗಿ ಮಣಿಶಿರವ ॥72॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ನೀನಾರು ಅವರ ಬಿಡುಗಡೆಯನ್ನು ಕೇಳುವದಕ್ಕೆ, ಅವರ ಮಗನೋ ಮೊಮ್ಮಗನೋ ಬಂಧುವೋ ಸೇವಕನೋ ? ನೂನವಕ್ಷನೋ ? (ಧೈರ್ಯ ಇಲ್ಲದವನೋ) ಬೆರಳಬದೆಗನೋ ? ಕುರುಳ ಕೋಮಲನೊ ? ಏನು ನಿನ್ನ ಉದ್ದೇಶ ? ಈ ಸೋಜಿಗವನ್ನು ಹೇಳಲಿ ?” ಎಂದು ರತ್ನ ಕಿರೀಟವನ್ನು ಧರಿಸಿದ್ದ ತಲೆಯನ್ನು ತೂಗಿದ.
ಪದಾರ್ಥ (ಕ.ಗ.ಪ)
ನೂನವಕ್ಷ-ಮಲತಮ್ಮನ ಮಗ, ರಹವ-ಸೋಜಿಗವನ್ನು, ಅಂಘವಣೆ-ಉದ್ದೇಶ, ಬದೆಗ-ನೀಚ
ನೀನು ಆ ನೃಪಾಲರ-ಆ ರಾಜರ ಮಗನೊ ಮೊಮ್ಮಗನೊ, ಅವರ ಬಾಂಧವರೊ-ಬಂಧುವೋ ?, ಭೃತ್ಯನೊ-ಸೇವಕನೋ ? ನೂನವಕ್ಷನೊ-ಮಲತಮ್ಮನ ಮಗನೋ? ಬೆರಳ ಬದೆಗನೊ-ಬೆರಳೆತ್ತಿ ತೋರಿದರೆ ಸೇನೆಗೆ ಸಿದ್ಧನಾಗುವ ಸೇವಕನೋ ? ಕೀಳಾಳೋ? ಕುರುಳ ಕೋಮಳನೊ-ಕಂಚುಕಿಯೋ, ಅಂತಃಪುರದ ಸೇವಕನೋ ? ಏನು ನಿನ್ನಂಘವಣೆ-ನಿನ್ನ ಉದ್ದೇಶವೇನು ? ಆ ನರೇಂದ್ರರ, ಸೆರೆಯ ಬಿಡುಗಡೆ-ಬಂಧನದಿಂದ ಬಿಡುಗಡೆ ಮಾಡುವುದಕ್ಕೆ ನೀನಾರು? ಎಂದು ಮಣಿಶಿರವ ತೂಗಿ-ರತ್ನಕಿರೀಟವನ್ನು ಧರಿಸಿದ್ದ ತಲೆಯನ್ನು ತೂಗುತ್ತಾ, ಏನೆಂಬೆನು ರಹವನು-ಈ ಸೋಜಿಗವನ್ನು ಏನೆಂದು ಹೇಳಲಿ ಎಂದ
ಮೂಲ ...{Loading}...
ಆ ನೃಪಾಲರ ಮಗನೊ ಮೊಮ್ಮಗನೊ
ನೀನವರ ಬಾಂಧವನೊ ಭೃತ್ಯನೊ
ನೂನವಕ್ಷನೊ ಬೆರಳ ಬದೆಗನೊ ಕುರುಳ ಕೋಮಳನೊ
ಏನು ನಿನ್ನಂಘವಣೆ ನೀನಾ
ರಾ ನರೇಂದ್ರರ ಸೆರೆಯ ಬಿಡುಗಡೆ
ಗೇನನೆಂಬೆನು ರಹವನೆಂದನು ತೂಗಿ ಮಣಿಶಿರವ ॥72॥
೦೭೩ ಎಲವೊ ಧರೆಯಲಧರ್ಮಶೀಲರ ...{Loading}...
ಎಲವೊ ಧರೆಯಲಧರ್ಮಶೀಲರ
ತಲೆಯ ಚೆಂಡಾಡುವೆವು ಧರ್ಮವ
ನೊಲಿದು ಕೊಂಡಾಡುವೆವು ಶಿಕ್ಷಾ ರಕ್ಷಣ ವ್ಯಸನ
ನೆಲೆ ನಮಗೆ ನೀನರಿಯೆ ರಾಜಾ
ವಳಿಯ ಬಿಡು ಫಡ ಭಂಡವಿದ್ಯೆಯ
ಬಳಸುವಾ ನಮ್ಮೊಡನೆಯೆಂದನು ದಾನವಧ್ವಂಸಿ ॥73॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕೃಷ್ಣ ಉತ್ತರ ಕೊಟ್ಟು “ಎಲವೋ ಈ ಭೂಮಿಯಲ್ಲಿ ಅಧರ್ಮದಿಂದ ನಡೆವವರ ತಲೆಯನ್ನು ಕಡಿದು ಚಂಡಾಡುವೆವು. ಧರ್ಮವನ್ನು ಪ್ರೀತಿಸಿ ಕೊಂಡಾಡುವೆವು. ಹೀಗೆ ಶಿಕ್ಷೆಮಾಡುವುದು ಮತ್ತು ರಕ್ಷಿಸುವುದು ಈ ವೃತ್ತಿಯೇ ನಮಗೆ ನೆಲೆ. ಇದು ನಿನಗೆ ತಿಳಿಯದು. ಛೇ, ರಾಜರುಗಳನ್ನು ಬಿಡುಗಡೆ ಮಾಡು. ನಮ್ಮೊಡನೆ ಲಜ್ಜೆಗಟ್ಟ ವಿದ್ಯೆಯನ್ನು ಬಳಸುವೆಯಾ ?”
ಪದಾರ್ಥ (ಕ.ಗ.ಪ)
ಎಲವೊ-ಎಲೊ ಮಾಗಧ, ಧರೆಯಲಿ-ಈ ಪ್ರಪಂಚದಲ್ಲಿ, ಅಧರ್ಮಶೀಲರ ತಲೆಯ ಚೆಂಡಾಡುವೆವು-ಅರ್ಧದಿಂದ ನಡೆಯುವವರ ತಲೆಗಳನ್ನು ಕಡಿದು ಚೆಂಡಾಡುತ್ತೇನೆ, ಧರ್ಮವನೊಲಿದು ಕೊಂಡಾಡುವೆವು-ಧರ್ಮ ನೆಲೆಸಿರುವುದನ್ನು ನೋಡಿ, ಕೊಂಡಾಡುವೆವು-ಹೊಗಳುತ್ತೇವೆ ನಮಗೆ, ಶಿಕ್ಷಾ ರಕ್ಷಣ ವ್ಯಸನ-ಶಿಕ್ಷಿಸುವುದು ರಕ್ಷಿಸುವುದೇ ನಮ್ಮ ಕೆಲಸ, ನೀನರಿಯೆ-ಅದನ್ನು ನೀನು ತಿಳಿಯೆ, ರಾಜಾವಳಿಯ ಬಿಡು-ಬಂಧನದಲ್ಲಿರುವ ಆ ರಾಜರುಗಳನ್ನೆಲ್ಲ, ನೀನು ಬಿಡುಗಡೆ ಮಾಡು, ಫಡ-ಛೇ ! ಭಂಡ ವಿದ್ಯೆಯ ಬಳಸುವಾ ನಮ್ಮೊಡನೆ-ನಮ್ಮ ಜೊತೆ, ಭಂಡವಿದ್ಯೆಯನ್ನು ಬಳಸುವೆಯೇನೋ ? ಎಂದನು ದಾನವಧ್ವಂಸಿ-ಎಂದ ಕೃಷ್ಣ
ಮೂಲ ...{Loading}...
ಎಲವೊ ಧರೆಯಲಧರ್ಮಶೀಲರ
ತಲೆಯ ಚೆಂಡಾಡುವೆವು ಧರ್ಮವ
ನೊಲಿದು ಕೊಂಡಾಡುವೆವು ಶಿಕ್ಷಾ ರಕ್ಷಣ ವ್ಯಸನ
ನೆಲೆ ನಮಗೆ ನೀನರಿಯೆ ರಾಜಾ
ವಳಿಯ ಬಿಡು ಫಡ ಭಂಡವಿದ್ಯೆಯ
ಬಳಸುವಾ ನಮ್ಮೊಡನೆಯೆಂದನು ದಾನವಧ್ವಂಸಿ ॥73॥
೦೭೪ ಇವರು ಗಡ ...{Loading}...
ಇವರು ಗಡ ಜಗದೊಳಗೆ ಶಿಕ್ಷಾ
ಸವನದಲಿ ದೀಕ್ಷಿತರು ಗಡ ಕೈ
ತವದ ಭಂಡರು ನೀವೊ ನಾವೋ ಸಾಕದಂತಿರಲಿ
ಕವಡುತನದಲಿ ದಿಟ್ಟರಹಿರಂ
ಘವಣೆಯೊಳ್ಳಿತು ನಿಮ್ಮ ನಿಜವನು
ವಿವರಿಸಿರೆ ನೀವಾರು ಹೇಳೆಂದನು ಜರಾಸಂಧ ॥74॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಓಹೋ ಇವರು ಶಿಕ್ಷಿಸುವ ಯಜ್ಞದಲ್ಲಿ ದೀಕ್ಷಿತರಂತೆ ! ಕುಟಿಲತನದಲ್ಲಿ ಭಂಡರಾದವರು ನೀವೋ ನಾವೋ ? ಆ ಮಾತು ಹಾಗಿರಲಿ, ಕುಟಿಲತನದಲ್ಲಿ ಧೈರ್ಯಶಾಲಿಗಳಿದ್ದೀರಿ. ನಿಮ್ಮ ಸಾಹಸ ಚೆನ್ನಾಗಿದೆ. ನಿಮ್ಮ ನಿಜ ಸಂಗತಿಯನ್ನು ವಿವರಿಸಿ. ನೀವು ಯಾರು ಹೇಳಿ” ಎಂದ ಜರಾಸಂಧ.
ಪದಾರ್ಥ (ಕ.ಗ.ಪ)
ಸವನ-ಯಜ್ಞ, ಕೈತವ-ಮೋಸ, ಕವಡುತನ-ಕುಟಿಲತೆ
ಅದಕ್ಕೆ ಜರಾಸಂಧನು ಓಹೋ ! ಇವರು ಜಗದೊಳಗೆ-ಈ ಲೋಕದಲ್ಲಿ, ಶಿಕ್ಷಾಸವನದಲಿ-ಶಿಕ್ಷಿಸುವ ಯಜ್ಞದಲ್ಲಿ, ದೀಕ್ಷಿತರು ಗಡ-ದೀಕ್ಷೆಯನ್ನು ಕೈಕೊಂಡಿರುವವರಲ್ಲವೆ ? ಕೈತವದ ಭಂಡರು-ಮೋಸದಿಂದನಡೆದುಕೊಳ್ಳು ಭಂಡರು ನೀವೊ ನಾವೋ, ಸಾಕು ಅದು ಅಂತಿರಲಿ-ಹಾಗಿರಲಿ, ಕವಡುತನದಲಿ-ಮೋಸಮಾಡುವುದರಲ್ಲಿ, ದಿಟ್ಟರಹಿರಿ-ಧೈರ್ಯಶಾಲಿಗಳು, ಅಂಘವಣೆ-ನಿಮ್ಮ ಸಾಹಸ, ಉದ್ದೇಶ
ಒಳ್ಳಿತು-ಒಳ್ಳೆಯದು, ನಿಮ್ಮ ನಿಜವನು ವಿವರಿಸಿರೆ-ನಿಮ್ಮ ನಿಜ ಸಂಗತಿಯನ್ನು ವಿವರಿಸಿರಯ್ಯ, ನೀವಾರು ಹೇಳಿ-ಎಂದು
ಮೂಲ ...{Loading}...
ಇವರು ಗಡ ಜಗದೊಳಗೆ ಶಿಕ್ಷಾ
ಸವನದಲಿ ದೀಕ್ಷಿತರು ಗಡ ಕೈ
ತವದ ಭಂಡರು ನೀವೊ ನಾವೋ ಸಾಕದಂತಿರಲಿ
ಕವಡುತನದಲಿ ದಿಟ್ಟರಹಿರಂ
ಘವಣೆಯೊಳ್ಳಿತು ನಿಮ್ಮ ನಿಜವನು
ವಿವರಿಸಿರೆ ನೀವಾರು ಹೇಳೆಂದನು ಜರಾಸಂಧ ॥74॥
೦೭೫ ಕೇಳಿ ಮಾಡುವುದೇನು ...{Loading}...
ಕೇಳಿ ಮಾಡುವುದೇನು ತಾನಸು
ರಾಳಿ ಧೂಳೀಪಟಲ ವೈರಿ ನೃ
ಪಾಲ ಚೌಪಟಮಲ್ಲನೀತನು ಭೀಮಸೇನ ಕಣಾ
ಭಾಳನೇತ್ರನ ಭುಜಬಲದ ಸಮ
ಪಾಳಿಯರ್ಜುನನೀತನೇಳಾ
ಕಾಳಗವ ಕೊಡು ನಮ್ಮ್ಮೊಳೊಬ್ಬರಿಗೆಂದನಸುರಾರಿ ॥75॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅದಕ್ಕೆ ಕೃಷ್ಣ, “ಕೇಳಿ ಏನು ಮಾಡುತ್ತ್ತೀಯೆ ? ನಾನು ಅಸುರರನ್ನೆಲ್ಲ ಧೂಳೀಪಟ ಮಾಡುವ ಶತ್ರು. ಈತ ನಾಲ್ಕೂ ಕಡೆಗಳಿಂದ ಆಕ್ರಮಣ ಮಾಡುವ ಶತ್ರುರಾಜರುಗಳನ್ನು ಏಕಕಾಲದಲ್ಲಿ ಎದುರಿಸಬಲ್ಲ ಭೀಮ. ಈತ ಭಾಳನೇತ್ರನಾದ ಪರಮೇಶ್ವರನ ಬಾಹುಬ¯ಕ್ಕೆ ಸಮಾನ ಬಲನಾದ ಅರ್ಜುನ. ನಮ್ಮಲ್ಲಿ ಯಾರಾದರೊಬ್ಬರೊಡನೆ ಹೋರಾಡು” ಎಂದನು
ಪದಾರ್ಥ (ಕ.ಗ.ಪ)
ಚೌಪಟಮಲ್ಲ-ನಾಲ್ಕು ದಿಕ್ಕುಗಳಿಂದ ಆಕ್ರಮಣ, ಮಾಡಿದ ಶತ್ರುಗಳನ್ನು ಒಬ್ಬನೇ ಎದುರಿಸಬಲ್ಲ ಸಾಹಸಿ, ಭಾಳನೇತ್ರ-ಹಣೆಗಣ್ಣ
ಕೇಳಿ ಮಾಡುವುದೇನು-ಕೇಳಿ ಏನು ಮಾಡುತ್ತೀಯೆ ? ತಾನು-ನಾನು, ಅಸುರಾಳಿ ಧೂಳೀಪಟಲ-ಅಸುರರನ್ನೆಲ್ಲ ಧೂಳೀಪಟಮಾಡಿದವನು, ಈತನು-ಇವನು, ವೈರಿ ನೃಪಾಲ ಚೌಪಟಮಲ್ಲನು-ನಾಲ್ಕೂ ಕಡೆಯಿಂದ ಏಕಕಾಲದಲ್ಲಿ
ಆಕ್ರಮಣಮಾಡಲು ಬಂದ ಶತ್ರುರಾಜರ ಸೈನ್ಯವನ್ನು ಎದುರಿಸಬಲ್ಲ, ಭೀಮಸೇನ ಕಣಾ-ಭೀಮಸೇನನಯ್ಯಾ ಈತನು, ಭಾಳನೇತ್ರನ-ಹಣೆಗಣ್ಣನಾದ ಪರಮೇಶ್ವರನ, ಭುಜಬಲದ ಸಮಪಾಳಿ-ಭುಜಪರಾಕ್ರಮಕ್ಕೆ ಸರಿಸಾಟಿಯಾದ ಅರ್ಜುನನು, ಏಳಾ-ಏಳಯ್ಯ, ನಮ್ಮ್ಮೊಳೊಬ್ಬರಿಗೆ-ಈ ನಮ್ಮ ಮೂವರಲ್ಲಿ ಒಬ್ಬನಿಗೆ, ಕಾಳಗವ ಕೊಡು-ಒಬ್ಬರೊಡನರ ಯುದ್ಧಮಾಡು, ಎಂದನು ಅಸುರಾರಿ-ಕೃಷ್ಣ
ಟಿಪ್ಪನೀ (ಕ.ಗ.ಪ)
ಚೌಪಟಮಲ್ಲ-ನಾಲ್ಕು ದಿಕ್ಕುಗಳಿಂದ ಆಕ್ರಮಣ, ಮಾಡಿದ ಶತ್ರುಗಳನ್ನು ಒಬ್ಬನೇ ಎದುರಿಸಬಲ್ಲ ಸಾಹಸಿ,
ಮೂಲ ...{Loading}...
ಕೇಳಿ ಮಾಡುವುದೇನು ತಾನಸು
ರಾಳಿ ಧೂಳೀಪಟಲ ವೈರಿ ನೃ
ಪಾಲ ಚೌಪಟಮಲ್ಲನೀತನು ಭೀಮಸೇನ ಕಣಾ
ಭಾಳನೇತ್ರನ ಭುಜಬಲದ ಸಮ
ಪಾಳಿಯರ್ಜುನನೀತನೇಳಾ
ಕಾಳಗವ ಕೊಡು ನಮ್ಮ್ಮೊಳೊಬ್ಬರಿಗೆಂದನಸುರಾರಿ ॥75॥
೦೭೬ ಕೇಳಿ ಕೆದರಿದ ...{Loading}...
ಕೇಳಿ ಕೆದರಿದ ಕಡು ನಗೆಯಲಡ
ಬೀಳುತೇಳುತ ಬಿರುವನಿಯ ಕ
ಣ್ಣಾಲಿಗಳ ಝೊಮ್ಮೆದ್ದ ರೋಮದ ಜಡಿವ ಬಿಡುದಲೆಯ
ಸೂಳು ನಗೆ ಬೆಳುನಗೆಯಲಡಿಗಡಿ
ಗಾಳಿ ಮುಸುಗುಬ್ಬಸದಲಿದ್ದು ಕ
ರಾಳಮತಿ ಸಂತೈಸಿ ನೆರೆ ತನ್ನವರಿಗಿಂತೆಂದ ॥76॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಆ ಮಾತನ್ನು ಕೇಳಿ ಜರಾಸಂಧನಿಗೆ ತಡೆಯಲಾರದಷ್ಟು ನಗು ಬಂದಿತು. ತಡೆಯಲಾರದ ನಗುವಿನಿಂದ ಬಿದ್ದು ಏಳುತ್ತಿದ್ದ ! ಕಣ್ಣಲ್ಲಿ ರಭಸದಿಂದ ಹನಿಗಳುದುರಿದುವು. ಉದ್ವೇಗದಿಂದ ಮೈ ರೋಮಾಂಚಗೊಂಡಿತು ! ಬಿರಿಹೊಯ್ದು ತಲೆ ಅದುರುತ್ತಿತ್ತು. ಸೂಳುನಗೆ ಬೆಳುನಗೆಗಳಿಂದ ಮತ್ತೆ ಮತ್ತೆ ನಕ್ಕು ಉಸಿರುಕಟ್ಟಿದಂತಾಗಿ ಆ ದುರ್ಬುದ್ಧಿಯ ಜರಾಸಂಧ ಸಮಾಧಾನ ಮಾಡಿಕೊಂಡು ತನ್ನ ಕಡೆಯವರಿಗೆ ಹೀಗೆಂದ.
ಪದಾರ್ಥ (ಕ.ಗ.ಪ)
ಸೂಳುನಗು -ಅವಿರತವಾದ ನಗು
ಬೆಳುನಗು - ಹಲ್ಲುಕಾಣುವ ನಗು
ಕೇಳಿ ಕೆದರಿದ ಕಡು ನಗೆಯಲಿ-ಕೃಷ್ಣನ ಮಾತುಗಳನ್ನು ಕೇಳಿ ತನ್ನಲ್ಲಿ ಕೆರಳಿದ ನಗುವಿನಿಂದ ಬೀಳುತ್ತ ಏಳುತ್ತ, ಬಿರುವನಿಯ-ಬಿರುಸಾದ ಧ್ವನಿ ಕಣ್ಣಾಲಿಗಳ ತಿರುಗುತ್ತುದೆ, ಬೀಳುತೇಳುತ ಝೊಮ್ಮೆದ್ದ ರೋಮದ-ಜುಮ್ಮೆಂದು ರೋಮಾಂಚವುಂಟಾಗಿದೆ, ಜಡಿವ ಬಿಡುದಲೆಯ-ಕೆದರಿದ ತಲೆ ಅದುರುತ್ತಿದೆ, ಸೂಳು ನಗೆ ಬಿಳಿನಗೆ-? ಅಡಿಗಡಿಗೆ-ಮತ್ತೆ ಮತ್ತೆ, ಆಳಿ ಮುಳುಗಿ-ಅದ್ದಿಮುಳುಗಿ, ಮುಸುಗುಬ್ಬಸದ ಅದ್ದು-ಉಸಿರು ಕಟ್ಟಿ ಉಸಿರಾಡಂತಾಗಿ, ಕರಾಳಮತಿ-ಆ ದುಷ್ಟ ಬುದ್ಧಿಯ ಜರಾಸಂಧ, ಸಂತೈಸಿ-ತನ್ನನ್ನು ಸಮಾಧಾನಮಾಡಿಕೊಂಡು, ನೆರೆ ತನ್ನವರಿಗೆ-ಪಕ್ಕದಲ್ಲಿದ್ದ ತನ್ನವರಿಗೆ, ಇಂತೆಂದ-ಹೀಗೆ ಹೇಳಿದ
ಮೂಲ ...{Loading}...
ಕೇಳಿ ಕೆದರಿದ ಕಡು ನಗೆಯಲಡ
ಬೀಳುತೇಳುತ ಬಿರುವನಿಯ ಕ
ಣ್ಣಾಲಿಗಳ ಝೊಮ್ಮೆದ್ದ ರೋಮದ ಜಡಿವ ಬಿಡುದಲೆಯ
ಸೂಳು ನಗೆ ಬೆಳುನಗೆಯಲಡಿಗಡಿ
ಗಾಳಿ ಮುಸುಗುಬ್ಬಸದಲಿದ್ದು ಕ
ರಾಳಮತಿ ಸಂತೈಸಿ ನೆರೆ ತನ್ನವರಿಗಿಂತೆಂದ ॥76॥
೦೭೭ ಈತನಾರೆನ್ದರಿವಿರೈ ನ ...{Loading}...
ಈತನಾರೆಂದರಿವಿರೈ ನ
ಮ್ಮಾತನೀತನು ನಮ್ಮ ಕಂಸಂ
ಗೀತನಳಿಯನು ನಮಗೆ ಮೊಮ್ಮನು ಮಗನು ದೇವಕಿಗೆ
ಈತ ಕಾಣಿರೆ ಹಿಂದೆ ಚೌರಾ
ಶೀತಿ ದುರ್ಗದೊಳೋಡಿ ಬದುಕಿದ
ನೀತ ಬಲುಗೈ ಬಂಟನೆಂದನು ಮಗಧಪತಿ ನಗುತ ॥77॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಈತನಾರೆಂದು ತಿಳಿದಿದ್ದೀರಾ, ಈತ ನಮ್ಮವನೇ ! ನಮ್ಮ ಕಂಸನಿಗೆ ಈತ ಅಳಿಯ. ನನಗೆ ಮೊಮ್ಮನಾಗಬೇಕು. ದೇವಕಿಗೆ ಮಗ. ನೋಡಿ, ಹಿಂದೆ ಎಂಬತ್ನಾಲ್ಕು ಕೋಟೆಗಳಲ್ಲಿ ಓಡಿ ಬದುಕಿಕೊಂಡ ಈತ ಮಹಾ ಸಾಹಸಿ - ಎಂದು ಮಾಗಧ ನಗುತ್ತಾ ಹೇಳಿದ.
ಪದಾರ್ಥ (ಕ.ಗ.ಪ)
ಚೌರಾಶೀತಿ -ಎಂಬತ್ನಾಲ್ಕು
ಈತನಾರೆಂದರಿವಿರೈ-ಇವನು ಯಾರೆಂದು ತಿಳಿದಿರುವಿರೇನಯ್ಯ ! ನಮ್ಮಾತನೀತನು-ಇವನು ನಮ್ಮವನೇ, ನಮ್ಮ ಕಂಸಂಗೆ ಈತನಳಿಯನು-ಇವನು ಸೋದರಳಿಯ, ನಮಗೆ ಮೊಮ್ಮನನು-ನನಗೂ ಮೊಮ್ಮಗನಾಗಬೇಕು, ಮಗನು ದೇವಕಿಗೆ-ದೇವಕಿಯ ಮಗ,
ಈತ ಕಾಣಿರೆ-ನೋಡಿ ಈತನು, ಹಿಂದೆ ಚೌರಾಶೀತಿ-ಇಪ್ಪತ್ನಾಲ್ಕು ದುರ್ಗಗಳಲ್ಲಿ ಓಡಿ ಬದುಕಿದನು. ಈತ, ಬಲುಗೈ ಬಂಟ-ಮಹಾಬಲಶಾಲಿಯಾದ ಯೋಧ ಎಂದ ನಗುತ್ತಾ
ಮೂಲ ...{Loading}...
ಈತನಾರೆಂದರಿವಿರೈ ನ
ಮ್ಮಾತನೀತನು ನಮ್ಮ ಕಂಸಂ
ಗೀತನಳಿಯನು ನಮಗೆ ಮೊಮ್ಮನು ಮಗನು ದೇವಕಿಗೆ
ಈತ ಕಾಣಿರೆ ಹಿಂದೆ ಚೌರಾ
ಶೀತಿ ದುರ್ಗದೊಳೋಡಿ ಬದುಕಿದ
ನೀತ ಬಲುಗೈ ಬಂಟನೆಂದನು ಮಗಧಪತಿ ನಗುತ ॥77॥
೦೭೮ ಕೊಳಲ ರಾಗದ ...{Loading}...
ಕೊಳಲ ರಾಗದ ರಹಿಯೊ ಕಲ್ಲಿಯ
ಕಲಸುಗೂಳೋ ಹಳ್ಳಿಕಾತಿಯ
ರೊಳಗುಡಿಯ ಹಾದರವೊ ತುರುಗಾಹಿಗಳ ತೋಹುಗಳೊ
ಬಲುಸರಳ ಸರಿವಳೆಯ ಮಿದುಳೊಡೆ
ಗಲಸುಗಳಡಾಯುಧದ ತಳುಕಿನ
ಕೊಳಗುಳದ ಜಯಸಿರಿಯ ಕಾಹಿನೊಳಾರು ನೀನೆಂದ ॥78॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಜರಾಸಂಧ ಮತ್ತೆ ಕೃಷ್ಣನ ಕಡೆ ತಿರುಗಿ “ಇದೇನು ಕೊಳಲಿನ ರಾಗದ ಒಂದು ಪ್ರಕಾರವೋ, ಕಲ್ಲಿಯ ಚೀಲದಲ್ಲಿ ಒಯ್ದ ಕಲಸನ್ನದ ಬುತ್ತಿಯೋ, ಹಳ್ಳಿಯ ಹೆಂಗಸಿನೊಡನೆ ನಡೆಸಿದ ರಹಸ್ಯದ ವ್ಯಭಿಚಾರವೋ, ದನ ಕಾಯುವವರ ತೋಪುಗಳೋ ? ಇದು ಧಾರಾಕಾರವಾಗಿ ಸುರಿವ ಶಕ್ತಿಶಾಲಿಯಾದ ಬಾಣಗಳ ಮಳೆಯ, ತಲೆಯನ್ನು ಸೀಳಿ ಮೆದುಳನ್ನು ಕಲಸಿ ಹಾಕುವ ಕತ್ತಿಯ ಯುದ್ಧ ! ಅದರಲ್ಲಿ ಜಯಸಿರಿಯ ರಕ್ಷಣೆಯನ್ನು ಮಾಡುತ್ತೇನೆ ಎನ್ನುವ ನೀನು ಯಾರು ?” ಎಂದು ಕೇಳಿದ
ಪದಾರ್ಥ (ಕ.ಗ.ಪ)
ರಹಿ-ಪ್ರಕಾರ, ಕಲ್ಲಿ-ಬುತ್ತಿ ಒಯ್ಯುವ ಉದ್ದೇಶದಿಂದ ತಯಾರಿಸಿದ ಚೀಲ, ತೋಹು-ತೋಪು, ಸರಳ-ಬಾಣದ, ಅಡಾಯುಧ-ಕತ್ತಿ, ಕೊಳಗುಳ-ಯುದ್ಧ
ಕೊಳಲ ರಾಗದ ರಹಿಯೊ-ನಿನ್ನ ಕೊಳಲಿನ ರಾಗದ ಒಂದು ಪ್ರಕಾರವೋ ? ಕಲ್ಲಿಯ ಕಲಸುಗಳೋ-ಕಲ್ಲಿಯ ಚೀಲದಲ್ಲಿ ಒಯ್ದ ಕಲಸನ್ನದ ಬುತ್ತಿಯೋ ? ಹಳ್ಳಿಯ ಸ್ತ್ರೀಯೊಡನೆ ರಹಸ್ಯವಾಗಿ ನಡೆಸಿದ ವ್ಯಭಿಚಾರವೋ ? ತುರುಗಾಹಿಗಳ-ದನಕಾಯುವವರ,
ತೋಹುಗಳೊ-ತೋಪುಗಳೊ ? ಬಲುಸರಳ-ಶಕ್ತಿಗಳಾದ ಬಾಣಗಳ, ಸರಿವಳೆಯ-ಒಂದೆ ಸಮನೆ ಸುರಿವ ಮಳೆಯ, ಮಿದುಳೊಡೆಗಲಸುಗಳ-ತಲೆಯನ್ನು ಸೀಳಿ ಮಿದುಳನ್ನು, ಮೆದುಳನ್ನು ಕಲಸಿ ಮುದ್ದೆ ಮಾಡುವ, ಅಡಾಯುಧ-ಕತ್ತಿಗಳ ಜೋಡಿಯ ಯುದ್ಧದಲ್ಲಿ ಪಡೆದ, ಜಯಸಿರಿಯ-ಜಯಲಕ್ಷ್ಮಿಯ, ಕಾಹಿನೊಳು-ರಕ್ಷಣೆಯಲ್ಲಿ, ಆರು ನೀನು-ನೀನು ಯಾರು ? ಎಂದ
ಮೂಲ ...{Loading}...
ಕೊಳಲ ರಾಗದ ರಹಿಯೊ ಕಲ್ಲಿಯ
ಕಲಸುಗೂಳೋ ಹಳ್ಳಿಕಾತಿಯ
ರೊಳಗುಡಿಯ ಹಾದರವೊ ತುರುಗಾಹಿಗಳ ತೋಹುಗಳೊ
ಬಲುಸರಳ ಸರಿವಳೆಯ ಮಿದುಳೊಡೆ
ಗಲಸುಗಳಡಾಯುಧದ ತಳುಕಿನ
ಕೊಳಗುಳದ ಜಯಸಿರಿಯ ಕಾಹಿನೊಳಾರು ನೀನೆಂದ ॥78॥
೦೭೯ ಹೋರಿ ಹೆಙ್ಗುಸು ...{Loading}...
ಹೋರಿ ಹೆಂಗುಸು ಬಂಡಿ ಪಕ್ಷಿ ಸ
ಮೀರಣಾಶ್ವಾಜಗರ ಗಾರ್ದಭ
ವೀರರೀತನ ಘಾತಿಗಳುಕಿತು ಕಂಸ ಪರಿವಾರ
ಆರುಭಟೆಯುಳ್ಳವನು ಕಂಸನ
ತೋರಹತ್ತನ ತೊಡಕಿದನು ಗಡ
ಭಾರಿಯಾಳಹನುಂಟು ಶಿವಶಿವಯೆಂದನು ಮಗಧ ॥79॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕಂಸನ ಪರಿವಾರದವರಾದ ಹೋರಿ, ಹೆಂಗಸು, ಬಂಡಿ, ಹಕ್ಕಿ, ಗಾಳಿ, ಕುದುರೆ, ಹೆಬ್ಬಾವು, ಕತ್ತೆ ಈ ವೀರರು ಇವನ ಪೆಟ್ಟಿಗೆ ಅಳುಕಿದರು. ಇವನು ಸುಮ್ಮನೆ ಆರ್ಭಟ ಮಾಡುವವನು ! ಪರಾಕ್ರಮಿಯಾದ ಕಂಸನೊಡನೆ ಸೆಣಸಿದನಂತೆ ! ಶಿವಶಿವಾ ! ಇವನು ಮಹ ಶೂರ ! ಎಂದು ಮಗಧ ಹಾಸ್ಯಮಾಡಿದ.
ಪದಾರ್ಥ (ಕ.ಗ.ಪ)
ಗಾರ್ದಭ-ಕತ್ತೆ, ತೋರಹತ್ತ-ಬಲಿಷ್ಠ ಕೈ ಉಳ್ಳವ
ಹೋರಿ ಹೆಂಗುಸು ಬಂಡಿ ಪಕ್ಷಿ ಸಮೀರಣ-ಗಾಳಿ, ಅಶ್ವ, ಕುದುರೆ, ಅಜಗರ, ಹೆಬ್ಬಾವು, ಗಾರ್ದಭ-ಕತ್ತೆ ಈ ರೂಪದಲ್ಲಿದ್ದ ವೀರರು,
ಕಂಸ ಪರಿವಾರ-ಕಂಸನ ಪರಿವಾರದವರು, ಈತನ ಘಾತಿಗೆ ಅಳುಕಿತು-ಇವನ ಪೆಟ್ಟಿನಿಂದ ನಾಶ ಹೊಂದಿದರು, ಆರುಭಟೆಯುಳ್ಳವನು-ಆರ್ಭಟಮಾಡುವವನು, ತೋರಹತ್ತನ ಕಂಸನ-ಬಲಿಷ್ಠ ತೋಳಿನ ಕಂಸನನು, ತೊಡಕಿದನು ಗಡ-ಯುದ್ಧಕ್ಕೆ ತೊಡಕಿಸಿಕೊಂಡನಲ್ಲವೇ?, ಭಾರಿಯಾಳಹನು-ಭಾರಿಯೋಧನಾಗಿದ್ದಾನೆ, ಉಂಟು-ನಿಜ ಶಿವಶಿವ ! ಎಂದನು ಮಗಧ
ಮೂಲ ...{Loading}...
ಹೋರಿ ಹೆಂಗುಸು ಬಂಡಿ ಪಕ್ಷಿ ಸ
ಮೀರಣಾಶ್ವಾಜಗರ ಗಾರ್ದಭ
ವೀರರೀತನ ಘಾತಿಗಳುಕಿತು ಕಂಸ ಪರಿವಾರ
ಆರುಭಟೆಯುಳ್ಳವನು ಕಂಸನ
ತೋರಹತ್ತನ ತೊಡಕಿದನು ಗಡ
ಭಾರಿಯಾಳಹನುಂಟು ಶಿವಶಿವಯೆಂದನು ಮಗಧ ॥79॥
೦೮೦ ಎಲವೊ ಗೋವಳ ...{Loading}...
ಎಲವೊ ಗೋವಳ ನಿನ್ನ ಕಂಸನ
ನಿಳಯವೋ ಪೌಂಡ್ರಕನ ಕದನದ
ಕಳನೊ ಹಂಸನ ಹೋರಟೆಯೊ ಮೇಣ್ ಡಿಬಿಕನಡುಪಾಯೊ
ಹುಲಿಗೆ ಮೊಲನಭ್ಯಾಗತನೆ ಕರಿ
ಕಳಭ ಸಿಂಹಕೆ ಸರಿಯೆ ನೀ ನಿ
ನ್ನಳವನರಿಯದೆ ಹೊಕ್ಕು ಕೆಣಕಿದೆ ಕೆಟ್ಟೆ ಹೋಗೆಂದ ॥80॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ಎಲವೋ ಗೋವಳ, ಇದೇನು ನಿನ್ನ ಕಂಸನ ಮನೆಯೋ, ಪೌಂಡ್ರಕನ ಯುದ್ಧದ ಅಂಗಳವೋ, ಹಂಸನೊಡನೆ ನಡೆಸಿದ ಹೋರಾಟವೋ ಅಥವಾ ಡಿಬಿಕನ ಸೆಣಸಾಟವೋ ? ಹುಲಿಗೆ ಮೊಲ ಅಭ್ಯಾಗತನಾಗುವುದೇ ? ಆನೆಯ ಮರಿ ಸಿಂಹಕ್ಕೆ ಸರಿ ಸಮಾನವೇ ? ನೀನು ನನ್ನ ಸಾಮಥ್ರ್ಯವೇನೆಂದು ತಿಳಿಯದೆ ನನ್ನ ಮನೆಯೊಳಕ್ಕೆ ಬಂದು ನನ್ನನ್ನು ಕೆಣಕಿ ಕೆಟ್ಟೆ, ಹೋಗು” ಎಂದ.
ಪದಾರ್ಥ (ಕ.ಗ.ಪ)
ಕಳ-ಯುದ್ಧರಂಗ, ಹೋರಟೆ-ಹೋರಾಟ, ಅಡುಪಾಯ-ಸೆಣಸಾಟ, ಕಳಭ-ಆನೆಮರಿ
ಇಷ್ಟಾದ ನಂತರ ನೇರವಾಗಿ ಕೃಷ್ಣನೊಡನೆ ಮಾತಿಗಿಳಿಯುತ್ತಾನೆ, ಎಲವೊ ಗೋವಳ-ಧನ ಕಾಯುವವನೆ ಈ ನನ್ನ ನೆಲೆಯನ್ನು ಏನೆಂದು ತಿಳಿದೆ ? ಇದೇನು “ಕಂಸನ ನಿಳಯವೋ-ಕಂಸನ ಮನೆಯೋ ? ಪೌಂಡ್ರಕನ ಕದನದ ಕಳನೊ-ಪೌಂಡ್ರಕನೊಡನೆ ನಡೆಸಿದ ಯುದ್ಧದ, ಕಳನೊ-ರಂಗವೋ ? ಹಂಸನ ಹೋರಟೆಯೊ-ಹಂಸನೊಡನೆ ನಡೆಸಿದ ಹೋರಾಟವೋ ? ಮೇಣ್-ಅಥವಾ ಡಿಬಿಕನ
ಅಡುಪಾಯೊ-ಸೆಣಸಾಟವೋ ? ಹುಲಿಗೆ-ನನ್ನಂತಹ ಹುಲಿಗೆ, ಮೊಲನು-ನಿನ್ನಂತಹ ಮೊಲ, ಅನಭ್ಯಾಗತನೆ-ಅತಿಥಿಯಾದನೆ ?
ಕರಿಕಳಭ-ಆನೆಮರಿಯಾದ ನೀನು, ಸಿಂಹಕೆ ಸರಿಯೆ-ನನ್ನಂತಹ ಸಿಂಹಕ್ಕೆ ಹೊಂದಿಕೆಯೇ ? ನೀ ನೀನು ನಿನ್ನಳವನರಿಯದೆ-ನಿನ್ನ ಶಕ್ತಿಯೇನೆಂದು ತಿಳಿಯದೆ, ಹೊಕ್ಕು-ನನ್ನ ಅರಮನೆಯನ್ನು ಒಳಹೊಕ್ಕು, ಕೆಣಕಿದೆ-ನನ್ನನ್ನು ಕೆರಳಿಸಿದೆ ಕೆಟ್ಟೆ ಹೋಗು ಎಂದ
ಮೂಲ ...{Loading}...
ಎಲವೊ ಗೋವಳ ನಿನ್ನ ಕಂಸನ
ನಿಳಯವೋ ಪೌಂಡ್ರಕನ ಕದನದ
ಕಳನೊ ಹಂಸನ ಹೋರಟೆಯೊ ಮೇಣ್ ಡಿಬಿಕನಡುಪಾಯೊ
ಹುಲಿಗೆ ಮೊಲನಭ್ಯಾಗತನೆ ಕರಿ
ಕಳಭ ಸಿಂಹಕೆ ಸರಿಯೆ ನೀ ನಿ
ನ್ನಳವನರಿಯದೆ ಹೊಕ್ಕು ಕೆಣಕಿದೆ ಕೆಟ್ಟೆ ಹೋಗೆಂದ ॥80॥
೦೮೧ ಇದುವೆ ಪಿತ್ತದ ...{Loading}...
ಇದುವೆ ಪಿತ್ತದ ವಿಕಳವೋ ಮ
ದ್ಯದ ವಿಕಾರವೊ ಭಂಗಿ ತಲೆಗೇ
ರಿದುದೊ ಭಟನಾದರೆ ವಿಘಾತದಲೇಳು ಕಾಳಗಕೆ
ಸದನ ನಿನ್ನದು ಸೂಳೆಯರ ಮುಂ
ದೊದರಿ ಫಲವೇನೆದ್ದು ಬಾ ಭಾ
ಳದಲಿ ಬರೆದುದ ತೊಡೆವೆನೆಂದನು ದಾನವಧ್ವಂಸಿ ॥81॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅದಕ್ಕೆ ಕೃಷ್ಣ ಜರಾಸಂಧನಿಗೆ “ಇದೇನು ನಿನಗೆ ಪಿತ್ತ ಕೆರಳಿ ಉಂಟಾದ ಕಳವಳವೋ, ಮದ್ಯಪಾನದಿಂದಾದ ವಿಕಾರವೋ, ಭಂಗಿಯ ಸೇವನೆ ತಲೆಗೇರಿತೋ ! ನೀನು ವೀರನಾದರೆ ಯುದ್ಧಕ್ಕೆ ಬಾ. ಮನೆ ನಿನ್ನದು, ಸೂಳೆಯರ ಮುಂದೆ ಬಡಬಡಿಸಿದರೆ ಪ್ರಯೋಜನವೇನು ? ಬಾ ಯುದ್ಧಕ್ಕೆ, ನಿನ್ನ ಹಣೆಯಬರಹವನ್ನು ಅಳಿಸಿ ಹಾಕುತ್ತೇನೆ” ಎಂದ.
ಪದಾರ್ಥ (ಕ.ಗ.ಪ)
ಜರಾಸಂಧನಿಗೆ ಉತ್ತರವಾಗಿ ಕೃಷ್ಣ ಹೇಳುತ್ತಾನೆ, ಇದುವೆ ಪಿತ್ತದ ವಿಕಳವೋ-ಇದೇನು ಪಿತ್ತದ ವಿಕಾರವೋ ? ಮದ್ಯದ ವಿಕಾರವೊ ಭಂಗಿ ತಲೆಗೇರಿದುದೊ-ಭಂಗಿ ಸೇರಿ ಅದರ ಪ್ರಭಾವ ತಲೆಗೇರಿತೋ ? ಭಟನಾದರೆ-ನೀನು ವೀರನಾದರೆ, ವಿಘಾತದಲಿ-ಈ ಪೆಟ್ಟಿನ ದೆಸೆಯಿಂದ, ಏಳು ಕಾಳಗಕೆ-ಯುದ್ಧಕ್ಕೆ ಏಳು, ಸದನ ನಿನ್ನದು-ಮನೆಯೇನೋ ನಿನ್ನದು, ಸೂಳೆಯರ ಮುಂದೊದರಿ ಫಲವೇನು-ಸೂಳೆಯರ ಮುಂದೆ, ಜಂಬ ಕೊಚ್ಚಿಕೊಂಡಂತೆ ನಿನ್ನ ಪರಿವಾರದೊಡನೆ ಸುಮ್ಮನೆ, ಮಾತನಾಡಿಕೊಂಡರೆ ಪ್ರಯೋಜನವೇನು ಎದ್ದು ಬಾ, ಯುದ್ಧಕ್ಕೆ ಭಾಳದಲಿ ಬರೆದುದ ತೊಡೆವೆನು-ನಿನ್ನ ಹಣೆಯಲಿ, ಬರೆದಿರುವುದನ್ನು ಅಳಿಸಿ ಹಾಕುತ್ತಾನೆ ಎಂದನು
ದಾನವಧ್ವಂಸಿ-ಕೃಷ್ಣ
ಮೂಲ ...{Loading}...
ಇದುವೆ ಪಿತ್ತದ ವಿಕಳವೋ ಮ
ದ್ಯದ ವಿಕಾರವೊ ಭಂಗಿ ತಲೆಗೇ
ರಿದುದೊ ಭಟನಾದರೆ ವಿಘಾತದಲೇಳು ಕಾಳಗಕೆ
ಸದನ ನಿನ್ನದು ಸೂಳೆಯರ ಮುಂ
ದೊದರಿ ಫಲವೇನೆದ್ದು ಬಾ ಭಾ
ಳದಲಿ ಬರೆದುದ ತೊಡೆವೆನೆಂದನು ದಾನವಧ್ವಂಸಿ ॥81॥
೦೮೨ ಎಲವೊ ಗೋಪಕುಮಾರ ...{Loading}...
ಎಲವೊ ಗೋಪಕುಮಾರ ಕಂಸನ
ಲಲನೆಯರ ವೈಧವ್ಯ ದುಃಖಾ
ನಲನ ನಂದಿಸಲಾಯ್ತು ನಿನ್ನಯ ರುಧಿರ ಜಲಧಾರೆ
ಅಳಿದ ಕಂಸನ ಕಾಲಯವನನ
ಕಳನ ಹರಿಬವ ಗೆಲಿದು ದೈತ್ಯಾ
ವಳಿಯ ಬಂಧುತ್ವವನು ಬಳಸುವೆನೆಂದನಾ ಮಗಧ ॥82॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಎಲವೋ ಗೊಲ್ಲರ ಹುಡಗನೇ, ಸುರಿವ ನಿನ್ನ ರಕ್ತದ ಧಾರೆ ಕಂಸನ ಪತ್ನಿಯರ ವೈಧವ್ಯದುಃಖದ ಬೆಂಕಿಯನ್ನು ಆರಿಸುವುದಕ್ಕೆ ಸಹಾಯವಾಯಿತು. ಸತ್ತ ಆ ಕಂಸನ, ಕಾಲಯವನನ ಯುದ್ಧದಿಂದ ಬಂದ ಹೊಣೆಯನ್ನು ಸ್ವೀಕರಿಸಿ ಯುದ್ಧಮಾಡಿ ಗೆದ್ದು ನಾನು ದೈತ್ಯರ ಬಂಧು ಎನಿಸಿಕೊಳ್ಳುತ್ತೇನೆ” ಎಂದ ಜರಾಸಂಧ.
ಪದಾರ್ಥ (ಕ.ಗ.ಪ)
ಅನಲ-ಬೆಂಕಿ, ರುಧಿರ-ರಕ್ತ
ಎಲವೊ ಗೋಪಕುಮಾರ-ದನ ಕಾಯುವ ಹುಡುಗನೇ, ನಿನ್ನಯ ರುಧಿರ ಜಲಧಾರೆ-ನಿನ್ನ ದೇಹದಿಂದ ಸುರಿವ ರಕ್ತಧಾರೆ, ಕಂಸನ ಲಲನೆಯರ-ಕಂಸನ ಪತ್ನಿಯರ, ವೈಧವ್ಯ ದುಃಖಾನಲನ-ವೈಧವ್ಯದ ದುಃಖದ ಬೆಂಕಿಯನ್ನು, ನಂದಿಸಲಾಯ್ತು-ಆರಿಸುವುದಕ್ಕೆ ನೆರವಾಗುತ್ತದೆ, ಅಳಿದ-ಸತ್ತ, ಕಂಸನ ಮತ್ತು ಕಾಲಯವನನ ಕಳನ ಹರಿಬವ ಯುದ್ಧದಲ್ಲಾದುದಕ್ಕೆ, ಪ್ರತೀಕಾರದ ಹೊಣೆಯನ್ನು ಹೊತ್ತು, ಗೆಲಿದು-ಗೆದ್ದು, ದೈತ್ಯಾವಳಿಯ ಬಂಧುತ್ವವನು-ದೈತ್ಯರ ನಂಟಸ್ತಿಕೆ, ಬಳಸುವೆನು-ಬೆಳೆಸುತ್ತೇನೆ ಎಂದನು ಆ ಮಗಧ
ಮೂಲ ...{Loading}...
ಎಲವೊ ಗೋಪಕುಮಾರ ಕಂಸನ
ಲಲನೆಯರ ವೈಧವ್ಯ ದುಃಖಾ
ನಲನ ನಂದಿಸಲಾಯ್ತು ನಿನ್ನಯ ರುಧಿರ ಜಲಧಾರೆ
ಅಳಿದ ಕಂಸನ ಕಾಲಯವನನ
ಕಳನ ಹರಿಬವ ಗೆಲಿದು ದೈತ್ಯಾ
ವಳಿಯ ಬಂಧುತ್ವವನು ಬಳಸುವೆನೆಂದನಾ ಮಗಧ ॥82॥
೦೮೩ ಗೋವಳರು ನಿರ್ಲಜ್ಜರದರೊಳು ...{Loading}...
ಗೋವಳರು ನಿರ್ಲಜ್ಜರದರೊಳು
ನೀವು ಗರುವರು ರಾಜಪುತ್ರರು
ಸಾವ ಬಯಸುವನೊಡನೆ ಬಂದಿರಿ ತಪ್ಪ ಮಾಡಿದಿರಿ
ನೀವು ಮಕ್ಕಳು ನಿಮ್ಮ ಹಿರಿಯರ
ಠಾವಿನಲಿ ಬುಧರಿಲ್ಲಲಾ ನಿಮ
ಗಾವ ಹದನಹುದೆನುತ ನುಡಿದನು ಭೀಮ ಫಲುಗುಣರ ॥83॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅನಂತರ ಅವನು ಭೀಮಾರ್ಜುನರ ಕಡೆ ತಿರುಗಿ “ಈ ದನಕಾಯುವವರು ಲಜ್ಜೆಯಿಲ್ಲದವರು. ನೀವು ಗೌರವ ಶಾಲಿಗಳಾದ ರಾಜಪುತ್ರರು ನೀವು ಅವನೊಡನೆ ಸೇರುವುದೇ? ಸಾವು ಬಯಸುವವನೊಡನೆ ಬಂದಿರಲ್ಲಾ ! ತಪ್ಪು ಮಾಡಿದಿರಿ. ನೀವಿನ್ನೂ ಚಿಕ್ಕವರು. ನಿಮ್ಮ ಹಿರಿಯರ ಸ್ಥಾನದಲ್ಲಿ ತಿಳಿದವರು ಇರಲಿಲ್ಲವೇ ? ನಿಮಗೆ ಯಾವ ಸ್ಥಿತಿ ಒದಗುವುದೋ” ಎಂದ.
ಪದಾರ್ಥ (ಕ.ಗ.ಪ)
ಅನಂತರ ಮಾಗಧ ಭೀಮಾರ್ಜುನರ ಕಡೆ ತಿರುಗಿ ಹೇಳತೊಡಗುತ್ತಾನೆ, ಗೋವಳರು ನಿರ್ಲಜ್ಜರು-ದನಕಾಯುವವರು ನಾಚಿಕೆಯಿಲ್ಲದವರು, ಅದರೊಳು-ಅದರಲ್ಲಿ, ನೀವು ಗರುವರು-ಗೌರವಾನ್ವಿತರು ಹಾಗೂ ರಾಜಪುತ್ರರು ಸಾವ ಬಯಸುವನೊಡನೆ ಬಂದಿರಿ-ಸಾವು ಬರಲಿ, ಎಂದು ಆಸೆಪಟ್ಟು ಬಂದಿರುವ ಅವನೊಡನೆ ಬಂದಿರಿ, ತಪ್ಪು ಮಾಡಿದಿರಿ ನೀವು ಮಕ್ಕಳು-ನೀವಿನ್ನು ಚಿಕ್ಕವರು,
ನಿಮ್ಮ ಹಿರಿಯರ ಠಾವಿನಲಿ-ನಿಮ್ಮ ಹಿರಿಯರ ಸ್ಥಾನದಲ್ಲಿ, ಬುಧರಿಲ್ಲಲಾ-ತಿಳಿವಳಿಕೆ ಇದ್ದವರು ಇಲ್ಲವೇ ? ನಿಮಗಾವ ಹದನಹುದು-ನಿಮ್ಮ ಸ್ಥಿತಿಯೇನಾದೀತು ? ಎನುತ ನುಡಿದನು ಭೀಮ ಫಲುಗುಣರ-ಹೀಗೆಂದು ಭೀಮಾರ್ಜುನರಿಗೆ ಹೇಳಿದ
ಮೂಲ ...{Loading}...
ಗೋವಳರು ನಿರ್ಲಜ್ಜರದರೊಳು
ನೀವು ಗರುವರು ರಾಜಪುತ್ರರು
ಸಾವ ಬಯಸುವನೊಡನೆ ಬಂದಿರಿ ತಪ್ಪ ಮಾಡಿದಿರಿ
ನೀವು ಮಕ್ಕಳು ನಿಮ್ಮ ಹಿರಿಯರ
ಠಾವಿನಲಿ ಬುಧರಿಲ್ಲಲಾ ನಿಮ
ಗಾವ ಹದನಹುದೆನುತ ನುಡಿದನು ಭೀಮ ಫಲುಗುಣರ ॥83॥
೦೮೪ ಸಾಕಿದೇತಕೆ ಹೊಳ್ಳು ...{Loading}...
ಸಾಕಿದೇತಕೆ ಹೊಳ್ಳು ನುಡಿಗೆ ವಿ
ವೇಕಿಗಳು ಮೆಚ್ಚುವರೆ ಯುಧ್ಧ
ವ್ಯಾಕರಣ ಪಾಂಡಿತ್ಯವುಳ್ಳರೆ ತೋರಿಸುವುದೆಮಗೆ
ಈ ಕಮಲನೇತ್ರಂಗೆ ಫಡ ನೀ
ನಾಕೆವಾಳನೆ ಶಿವಶಿವಾ ಜಗ
ದೇಕ ದೈವದ ಕೂಡೆ ದಂಡಿಯೆಯೆಂದನಾ ಭೀಮ ॥84॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅದಕ್ಕೆ ಭೀಮ ಅವನಿಗೆ ಉತ್ತರ ಹೇಳುತ್ತಾನೆ “ಸಾಕು ಇದೇಕೆ, ಈ ಹೊಳ್ಳು ನುಡಿಗೆ ವಿವೇಕಿಗಳು ಮೆಚ್ಚುತ್ತಾರೆಯೇ ? ನಿನ್ನಲ್ಲಿ
ಯುದ್ಧವೆಂಬ ವ್ಯಾಕರಣದ ಪಾಂಡಿತ್ಯ ಇರುವುದಾದರೆ ಆ ಪಾಂಡಿತ್ಯವನ್ನು ನಮ್ಮೊಡನೆ ತೋರಿಸು. ಛೇ, ನೀನೇನು ಶ್ರೀಕೃಷ್ಣನಿಗೆ ಯೋಗ್ಯನೆನಿಸುವ ಶೂರನೇ ? ಶಿವ ಶಿವಾ ! ಜಗದೇಕ ದೈವವೆನಿಸಿದ ಅವನಿಗೆ ನೀನು ಸಾಟಿಯೇ ? ಎಂದ.
ಪದಾರ್ಥ (ಕ.ಗ.ಪ)
ಆಕೆವಾಳ-ಶೂರ, ದಂಡಿ-ಸಾಟಿ
ಸಾಕು-ಸಾಕುಮಾಡು, ಇದೇತಕೆ-ಈ ಮಾತುಗಳಲ್ಲಿ, ಹೊಳ್ಳು ನುಡಿಗೆ ವಿವೇಕಿಗಳು ಮೆಚ್ಚುವರೆ-ಈ ಜೊಳ್ಳು ಮಾತುಗಳನ್ನು ತಿಳುವಳಿಕೆಯಿರುವರು ಮೆಚ್ಚಿಕೊಳ್ಳುತ್ತಾರೆಯೇ ? ಯುಧ್ಧ ವ್ಯಾಕರಣ ಪಾಂಡಿತ್ಯವುಳ್ಳರೆ-ಯುದ್ಧವೆಂಬ ವ್ಯಾಕರಣದ ಪಾಂಡಿತ್ಯ ಇರುವುದಾದರೆ, ನಿಮಗೆ ತೋರಿಸುವುದು-ನಮ್ಮ ಮುಂದೆ ತೋರಿಸು, ಈ ಕಮಲನೇತ್ರಂಗೆ-ಈ ಕೃಷ್ಣನಿಗೆ, ಫಡ-ಛೇ ! ನೀನಾಕೆವಾಳನೆ-ಯುದ್ಧದಲ್ಲಿ ಎದುರಿಸಬಲ್ಲಂತಹ ಶೂರನೇ ? ಶಿವಶಿವಾ ! ಜಗದೇಕ ದೈವದ ಕೂಡೆ ದಂಡಿಯೆ-ಜಗತ್ತಿಗೇ ಏಕಮಾತ್ರದೈವವೆನಿಸಿದ
ಈತನೊಡೆನೆ, ದಂಡಿಯೆ-ನೀನು ಸಾಟಿಯೇ, ಎಂದನಾ ಭೀಮ
ಮೂಲ ...{Loading}...
ಸಾಕಿದೇತಕೆ ಹೊಳ್ಳು ನುಡಿಗೆ ವಿ
ವೇಕಿಗಳು ಮೆಚ್ಚುವರೆ ಯುಧ್ಧ
ವ್ಯಾಕರಣ ಪಾಂಡಿತ್ಯವುಳ್ಳರೆ ತೋರಿಸುವುದೆಮಗೆ
ಈ ಕಮಲನೇತ್ರಂಗೆ ಫಡ ನೀ
ನಾಕೆವಾಳನೆ ಶಿವಶಿವಾ ಜಗ
ದೇಕ ದೈವದ ಕೂಡೆ ದಂಡಿಯೆಯೆಂದನಾ ಭೀಮ ॥84॥
೦೮೫ ದಿಟ್ಟರಹಿರೋ ಸಾವನರಿಯದೆ ...{Loading}...
ದಿಟ್ಟರಹಿರೋ ಸಾವನರಿಯದೆ
ಕೆಟ್ಟಿರಕಟಾ ಕಾಳು ಗೋಪನ
ಗೊಟ್ಟಿಯಾಟಕೆ ಗುರಿಗಳಾದಿರಿ ನಿಮ್ಮ ಗುರುಸಹಿತ
ಚಟ್ಟಳೆಯ ಚತುರಾಸ್ಯನಿವೊರಡ
ಹುಟ್ಟಿದರ ಸಮಜೋಳಿ ಗಡ ಜಗ
ಜಟ್ಟಿಗಳು ತಾವಿವರೆನುತ ತಲೆದೂಗಿದನು ಮಗಧ ॥85॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಭೀಮನಾಡಿದುದಕ್ಕೆ ಉತ್ತರವಾಗಿ ಮಾಗಧ “ಪರವಾಗಿಲ್ಲ ಧೈರ್ಯಶಾಲಿಗಳಾಗಿದ್ದೀರಿ ! ಅಯ್ಯೋ, ಸಾವನ್ನರಿಯದೆ ಕೆಟ್ಟಿರಿ ! ಈ ದುಷ್ಟ ಗೋಪಾಲನ ಒಡನಾಟದಿಂದ ನಿಮ್ಮ ಗುರುಸಹಿತ ಇಂತಹದಕ್ಕೆ ಗುರಿಯಾದಿರಿ. ಆ ಅತಿಶಯದ ಬ್ರಹ್ಮನಿಗೆ ಒಡಹುಟ್ಟಿದವರಿಗೆ ಸಮಜೋಡಿಯಲ್ಲವೇ ? ತಾವು ಜಗಜಟ್ಟಿಗಳು !” ಎಂದು ಹಾಸ್ಯದಿಂದ ತಲೆದೂಗಿದ.
ಪದಾರ್ಥ (ಕ.ಗ.ಪ)
ಕಾಳಗೋಪ-ದುಷ್ಟಗೋಪ, ಗೊಟ್ಟಿಯಾಟ-ಒಡನಾಟ, ಚಟ್ಟಳೆ-ಅತಿಶಯ
ದಿಟ್ಟರಹಿರೋ-ಪರವಾಗಿಲ್ಲ ಧೈರ್ಯಶಾಲಿಗಳಾಗಿದ್ದೀರಿ, ಸಾವನರಿಯದೆ-ಸಾವು ಬರುತ್ತದೆಲ್ಲಾ ಎಂಬುದನ್ನು ತಿಳಿಯದೆ, ಕೆಟ್ಟಿರಕಟಾ-ಅಯ್ಯೋ ಕೆಟ್ಟಿರಲ್ಲಾ ! ಕಾಳು ಗೋಪನ-ಈ ದುಷ್ಟ ಗೋವಳಿಗನ, ಗೊಟ್ಟಿಯಾಟಕೆ-ಒಡನಾಟಕ್ಕೆ, ನಿಮ್ಮ ಗುರುಸಹಿತ-ನಿಮ್ಮ ಗುರುವಾದ ಇವನ ಸಮೇತ ಗುರಿಗಳಾದಿರಿ, ಚಟ್ಟಳೆಯ ಚತುರಾಸ್ಯನು-ಶಿಷ್ಯತ್ವದ ಆ ಬ್ರಹ್ಮನು, ಇವರ ಒಡಹುಟ್ಟಿದವರ-ಇವನ ಜೊತೆಯಲ್ಲೇ ಹುಟ್ಟಿದವರಿಗೆ, ಸಮಜೋಳಿ ಗಡ-ಸಮಜೋಡಿಯಲ್ಲವೇ ? ಇವರು ಜಗಜಟ್ಟಿಗಳು-ಜಗತ್ಪ್ರಸಿದ್ಧರಾದ ಶೂರರು ! ಎಂದು ಮಗಧ-ಆ ಜರಾಸಂಧನು, ತಲೆದೂಗಿದನು-ಹಾಸ್ಯದಿಂದ ತಲೆದೂಗಿದನು
ಮೂಲ ...{Loading}...
ದಿಟ್ಟರಹಿರೋ ಸಾವನರಿಯದೆ
ಕೆಟ್ಟಿರಕಟಾ ಕಾಳು ಗೋಪನ
ಗೊಟ್ಟಿಯಾಟಕೆ ಗುರಿಗಳಾದಿರಿ ನಿಮ್ಮ ಗುರುಸಹಿತ
ಚಟ್ಟಳೆಯ ಚತುರಾಸ್ಯನಿವೊರಡ
ಹುಟ್ಟಿದರ ಸಮಜೋಳಿ ಗಡ ಜಗ
ಜಟ್ಟಿಗಳು ತಾವಿವರೆನುತ ತಲೆದೂಗಿದನು ಮಗಧ ॥85॥
೦೮೬ ಬೈದು ಫಲವೇನೆಮಗೆ ...{Loading}...
ಬೈದು ಫಲವೇನೆಮಗೆ ಮೇಳದ
ಮೈದುನರು ನೀವಲ್ಲಲೇದಳ
ವೈದೆ ನೂಕಲಿ ನಿಮ್ಮ ಮೂವರು ಸಹಿತ ನಮ್ಮೊಡನೆ
ಕೈದುವುಂಟೇ ತರಿಸಿ ಕೊಡಿಸುವೆ
ನೈದಿ ನೀವಾಳಾಗಿ ನಿಮ್ಮೊಡ
ನೈದುವೆನು ಬಲರಾಮನುಳಿದಾನೆಂದನಾ ಮಗಧ ॥86॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ನಾವು ನಿಮ್ಮನ್ನು ಬೈದು ಪ್ರಯೋಜನವೇನು ? ಎಷ್ಟಾದರೂ ಜೊತೆಗೂಡಿದ ಮೈದಂದಿರಲ್ಲವೇ ನೀವು ? ನಿಮ್ಮ ಮೂರು ಜನದೊಡನೆ ಸೈನ್ಯ ನನ್ನ ಮೇಲೆ ಏರಿಬರಲಿ. ಆಯುಧವುಂಟೇ, ಇಲ್ಲದಿದ್ದಲ್ಲಿ ತರಿಸಿಕೊಡುತ್ತೇನೆ. ವೀರಭಟರಾಗಿ ಯುದ್ಧಕ್ಕೆ ಬನ್ನಿ. ನೀವು ಮೂವರು ಒಟ್ಟಾಗಿ ಬನ್ನಿ ನಾನು ನಿಮ್ಮನ್ನು ಎದುರಿಸುತ್ತೇನೆ, ಬಲರಾಮನೊಬ್ಬನನ್ನು ಹೊರತು ಪಡಿಸಿದರೆ ನನ್ನನ್ನು ಮೀರಿಸುವವರಿಲ್ಲ. " ಎಂದ ಆ ಮಗಧ.
ಪದಾರ್ಥ (ಕ.ಗ.ಪ)
ಕೈದು-ಆಯುಧ
ಬೈದು ಫಲವೇನಮಗೆ-ನಿಮ್ಮನ್ನು ಬೈದರೆ ನಮಗೇನು ಪ್ರಯೋಜನ, ಮೇಳದಮೈದುನರು ನೀವಲ್ಲಲೇ-ಎಷ್ಟಾದರೂ ಒಂದುಗೂಡಿದ,
ದಳವೈದೆ ನೂಕಲಿ ನಿಮ್ಮ ಮೂವರು ಸಹಿತ ನಮ್ಮೊಡನೆ-ಇಡೀ ಸೈನ್ಯ ನನ್ನ ಮೇಲೆ ಯುದ್ಧಕ್ಕೆ ಬರಲಿ, ನಾನು ಯುದ್ಧಕ್ಕೆ ಸಿದ್ಧ
ಕೈದುವುಂಟೇ-ಆಯುಧಗಳಿವೆಯೇ ? ತರಿಸಿ ಕೊಡುವೆನು-ಬೇಕಿದ್ದರೆ ತರಿಸಿಕೊಡುತ್ತೇನೆ, ಐದಿ ನೀವಾಳಗಿ-ನೀವು ವೀರರಾಗಿ ನನ್ನ ಮೇಲೆ ಯುದ್ಧಕ್ಕೆ ಬನ್ನಿ, ನಿಮ್ಮೊಡನೈದುವೆನು-ನಿಮ್ಮೊಡನೆ ಯುದ್ಧಕ್ಕೆ ಬರುವೆನು, ಬಲರಾಮನುಳಿದು-ಬಲರಾಮ ನನ್ನ ಬಿಟ್ಟು ನೀವು ಮೂವರೂ, ಒಟ್ಟಿಗೆ ಬನ್ನಿ ಎಂದನು ಮಗಧ
ಮೂಲ ...{Loading}...
ಬೈದು ಫಲವೇನೆಮಗೆ ಮೇಳದ
ಮೈದುನರು ನೀವಲ್ಲಲೇದಳ
ವೈದೆ ನೂಕಲಿ ನಿಮ್ಮ ಮೂವರು ಸಹಿತ ನಮ್ಮೊಡನೆ
ಕೈದುವುಂಟೇ ತರಿಸಿ ಕೊಡಿಸುವೆ
ನೈದಿ ನೀವಾಳಾಗಿ ನಿಮ್ಮೊಡ
ನೈದುವೆನು ಬಲರಾಮನುಳಿದಾನೆಂದನಾ ಮಗಧ ॥86॥
೦೮೭ ಎಲವೊ ಬಾಹಿರ ...{Loading}...
ಎಲವೊ ಬಾಹಿರ ಮಗಧ ಹಲಧರಳಿ
ನಳಿಯೆ ಪಾಂಡವ ನೃಪರು ಪರಿಯಂ
ತಳವು ನಿನಗೊಬ್ಬಂಗೆ ಸೇರುವುದೇ ಮಹಾದೇವ
ಅಳಿವು ತಪ್ಪದು ನುಡಿಯೊಳಲ್ಪವ
ಬಳಸಲೇತಕೆ ವೀರನಹೆ ನ
ಮ್ಮೊಳಗೆ ಮೂವರೊಳೊಬ್ಬನನು ವರಿಸೆಂದನಸುರಾರಿ ॥87॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಎಲವೋ ಬಹಿಷ್ಕೃತನಾದ ಮಾಗಧ ! ಬಲರಾಮನೊಬ್ಬನನ್ನು ಬಿಟ್ಟು ಪಾಂಡವನೃಪರವರೆಗೆ ಎಲ್ಲರೊಡನೆ ಹೋರಾಡುವ ಸಾಮಥ್ರ್ಯ ನಿನ್ನೊಬ್ಬನಿಗಿದೆಯೇ ? ಮಹಾದೇವ ! ನಿನಗೆ ಅಳಿವು ತಪ್ಪದು. ಮಾತಿನಲ್ಲಿ ಅಲ್ಪತೆಯನ್ನು ಏಕೆ ಬಳಸಲಿ ? ನೀನು ವೀರನೇ ? ನಮ್ಮ ಮೂವರಲ್ಲಿ ಒಬ್ಬರನ್ನು ಆರಿಸಿಕೋ ?” ಎಂದು ಕೃಷ್ಣನು ಹೇಳಿದನು.
ಪದಾರ್ಥ (ಕ.ಗ.ಪ)
ಬಲರಾಮನನ್ನು ಬಿಟ್ಟು ಎಂದುದಕ್ಕೆ ಕೆರಳಿದ ಕೃಷ್ಣ ಹೇಳುತ್ತಾನೆ, ಎಲವೊ ಬಾಹಿರ-ಬಹಿಷ್ಕೃತ, ಬಾಹಿರ ಮಗಧ-ಹೊರಗಿಡಲ್ಪಟ್ಟ ಮಾಗಧನೇ, ಹಲಧರನುಳಿಯೆ-ಬಲರಾಮನನ್ನು ಬಿಟ್ಟು, ಪಾಂಡವ ನೃಪರು ಪರಿಯಂತ-ಪಾಂಡವ ರಾಜರವರೆಗಿನವರ,
ಅಳವು-ಸಾಮಥ್ರ್ಯ, ನಿನಗೊಬ್ಬಂಗೆ ಸೇರುವುದೇ-ನಿನಗೊಬ್ಬನಿಗೆ ಮೀಸಲಾಗಿದೆಯೇ ? ಮಹಾದೇವ ಅಳಿವು ತಪ್ಪದು-ನಿನಗೆ ಸಾವು ತಪ್ಪದು, ನುಡಿಯೊಳಲ್ಪವ ಬಳಸಲೇತಕೆ-ಮಾತಿನಲ್ಲಿ ಸಣ್ಣ ತನವನ್ನು ಏಕೆ ತೋರಿಸಬೇಕು ? ವೀರನಹೆ-ನೀನು ವೀರನಾಗಿದ್ದೆಯೇ ?
ನಮ್ಮೊಳಗೆ ಮೂವರೊಳು-ನಮ್ಮ ಮೂವರ ಪೈಕಿ, ಒಬ್ಬರನು ವರಿಸು-ಒಬ್ಬರನು ಆಯ್ದುಕೋ, ಎಂದನು ಅಸುರಾರಿ-ಕೃಷ್ಣ
ಮೂಲ ...{Loading}...
ಎಲವೊ ಬಾಹಿರ ಮಗಧ ಹಲಧರಳಿ
ನಳಿಯೆ ಪಾಂಡವ ನೃಪರು ಪರಿಯಂ
ತಳವು ನಿನಗೊಬ್ಬಂಗೆ ಸೇರುವುದೇ ಮಹಾದೇವ
ಅಳಿವು ತಪ್ಪದು ನುಡಿಯೊಳಲ್ಪವ
ಬಳಸಲೇತಕೆ ವೀರನಹೆ ನ
ಮ್ಮೊಳಗೆ ಮೂವರೊಳೊಬ್ಬನನು ವರಿಸೆಂದನಸುರಾರಿ ॥87॥
೦೮೮ ಅಕಟ ನಿಮಗೀ ...{Loading}...
ಅಕಟ ನಿಮಗೀ ಸಮರವಾವ
ಶ್ಯಕವೆ ನಮಗಖ್ಯಾತಿಯಲ್ಲಿದು
ಸಕಲ ಜನವರಿದಿರೆಯೆನುತ ನೋಡಿದನು ತನ್ನವರ
ಪ್ರಕಟವೈ ನಿಮ್ಮಾಳುತನ ಯದು
ನಿಕರಕಾವಂಜುವೆವು ರಣ ನಾ
ಟಕ ಪಲಾಯನ ಪಂಡಿತರು ನೀವೆಂದನಾ ಮಗಧ ॥88॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಅಯ್ಯೋ, ನಿಮಗೆ ಈ ಯುದ್ಧ ಅವಶ್ಯಕವೇ ? ನಮಗೆ ಅಪಕೀರ್ತಿಯಲ್ಲವೇ ! ಈ ವಿಷಯ ಎಲ್ಲ ಜನರಿಗೂ ತಿಳಿದಿರಲಿ” ಎಂದು ತನ್ನ ಕಡೆಯವರನ್ನು ನೋಡಿದ. ಅನಂತರ ಕೃಷ್ಣನನ್ನು “ನಿಮ್ಮ ಪರಾಕ್ರಮ ನಮಗೆ ಪ್ರಕಟವಾಗಿದೆಯಲ್ಲ ! ಯಾದವರ ಸಮೂಹಕ್ಕೋ ನಾವಂಜುವೆವು. ನೀವು ರಣನಾಟಕ ಪಲಾಯನ ಪಂಡಿತರು” ಎಂದು ವ್ಯಂಗ್ಯವಾಡಿದ.
ಪದಾರ್ಥ (ಕ.ಗ.ಪ)
ಅಕಟ-ಅಯ್ಯೋ ! ನಿಮಗೆ, ಸಮರವಾವಶ್ಯಕವೆ-ಈ ಯುದ್ಧ ಅಗತ್ಯವೇ ? ನಮಗಖ್ಯಾತಿಯಲ್ಲಿದು-ನಮಗೆ ಅಪಖ್ಯಾತಿ ಬರುತ್ತದೆಯಲ್ಲವೇ ? (ಅಲ್ಪ ಬಲರೆನ್ನದುರಿಸಿ ಕೊಂದನೆಂಬ ಕಾರಣದಿಂದ) ಇದು ಸಕಲ ಜನ ಅರಿದಿರೆ-ಈ ಸಂಗತಿಯನ್ನು ಎಲ್ಲ ಜನರೂ ಅರಿದಿರೆ-ತಿಳಿದಿರೆ ಎನುತ, ತನ್ನವರ ನೋಡಿದನು-ತನ್ನವರ ಕಡೆ ತಿರುಗಿ ನೋಡಿದ, (ಅನಂತರ ಕೃಷ್ಣನ್ನು ಗೇಲಿ ಮಾಡುತ್ತಾನೆ)
ನಿಮ್ಮಾಳುತನ ಪ್ರಕಟವೈ-ನಿಮ್ಮ ಪರಾಕ್ರಮ ವ್ಯಕ್ತವಾಗಿಯೇ ಇದೆಯಲ್ಲ ! ಯದುನಿಕರಕೆ-ಯಾದವರಿಗೆ, ಆವಂಜುವೆವು-ನಾವು ಹೆದರುತ್ತೇವೆ, ರಣ ನಾಟಕ ಪಲಾಯನ ಪಂಡಿತರು ನೀವು-ನೀವು ಯುದ್ಧವೆಂಬ, ನಾಟಕವಾಡಿ ಓಡಿಹೋಗುವುದರಲ್ಲಿ ಪರಿಣತರು !
ಎಂದನಾ ಮಗಧ-ಎಂದ ಜರಾಸಂಧ
ಮೂಲ ...{Loading}...
ಅಕಟ ನಿಮಗೀ ಸಮರವಾವ
ಶ್ಯಕವೆ ನಮಗಖ್ಯಾತಿಯಲ್ಲಿದು
ಸಕಲ ಜನವರಿದಿರೆಯೆನುತ ನೋಡಿದನು ತನ್ನವರ
ಪ್ರಕಟವೈ ನಿಮ್ಮಾಳುತನ ಯದು
ನಿಕರಕಾವಂಜುವೆವು ರಣ ನಾ
ಟಕ ಪಲಾಯನ ಪಂಡಿತರು ನೀವೆಂದನಾ ಮಗಧ ॥88॥
೦೮೯ ಪಾರ್ಥ ನೀ ...{Loading}...
ಪಾರ್ಥ ನೀ ಮಗುವೆಮ್ಮೊಡನೆ ರಣ
ದರ್ಥಿಯಾದರೆ ಭೀಮಸೇನ ಸ
ಮರ್ಥನಹನಾತಂಗೆ ಕೊಟ್ಟೆನು ಕಳನ ಕಾಳಗವ
ವ್ಯರ್ಥವಿದು ತಾ ಹೋಗಲಿನ್ನು ಪ
ರಾರ್ಥ ಕಂಟಕವಾಗಲೇತಕೆ
ತೀರ್ಥವೈಸಲೆ ಶಸ್ತ್ರಧಾರೆಯಿದೆಂದನಾ ಮಗಧ ॥89॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಪಾರ್ಥ ನಮ್ಮೊಡನೆ ಯುದ್ಧ ಮಾಡಲು ನೀನು ಚಿಕ್ಕವನು. ಯುದ್ಧವನ್ನು ಬೇಡಲು ಭೀಮ ಸಮರ್ಥನಾಗಿದ್ದಾನೆ. ಆತನೊಡನೆ ಯುದ್ಧ ಮಾಡುವೆ. ಇದರಿಂದ ನನಗೇನೂ ಪ್ರಯೋಜನವಿಲ್ಲ. ವ್ಯರ್ಥ ! ಅದು ಹೋಗಲಿ, ಪರಾರ್ಥಕ್ಕೆ ನಾನೇಕೆ ಅಡ್ಡಿಯಾಗಬೇಕು ?
ಈ ಶಸ್ತ್ರಧಾರೆ ಧಾರಾತೀರ್ಥದಂತೆ ಪರಮಪವಿತ್ರವಾದುದುಲ್ಲವೇ ?” ಎಂದ.
ಪದಾರ್ಥ (ಕ.ಗ.ಪ)
ಪಾರ್ಥ-ಅರ್ಜುನ, ನೀ ಮಗುವು-ನೀನಿನ್ನೂ ಚಿಕ್ಕವನೂ, ಎಮ್ಮೊಡನೆ ರಣದರ್ಥಿಯಾದರೆ-ನನ್ನೊಡನೆ ಯುದ್ಧವನ್ನು ಬೇಡುವಂತಿದ್ದರೆ
ಭೀಮಸೇನ ಸಮರ್ಥನಹನು-ಸಮರ್ಥನಾಗಿರುವನು, ಆತಂಗೆ ಕೊಟ್ಟೆನು ಕಳನ ಕಾಳಗವ-ಆತನೊಡನೆ ಯುದ್ಧ ಮಾಡಲು ಸಮ್ಮತಿಸುವೆ, ವ್ಯರ್ಥವಿದು-ಆ ಯುದ್ಧ ನನಗೆ ವ್ಯರ್ಥ, ನನಗೇನೂ ಪ್ರಯೋಜನವಾಗದೂ, ತಾ ಹೋಗಲಿ-ಅದು ಹೋಗಲಿ
ಇನ್ನು ಪರಾರ್ಥ ಕಂಟಕವಾಗಲೇತಕೆ-ಬೇರೆಯವರಿಗೆ ಬೇಕಾಗಿದ್ದರೆ, ನಾನೇಕೆ ಅಡ್ಡಿಯಾಗಬೇಕು ? ಶಸ್ತ್ರಧಾರೆ-ಶಸ್ತ್ರ ತೀಕ್ಷ್ಣವಾದ ಅಲಗು, ತೀರ್ಥವೈಸಲೆ-ಧಾರಾ ತೀರ್ಥದಂತೆ ಪವಿತ್ರವಾದುದೇ ಅಲ್ಲವೆ ?
ಮೂಲ ...{Loading}...
ಪಾರ್ಥ ನೀ ಮಗುವೆಮ್ಮೊಡನೆ ರಣ
ದರ್ಥಿಯಾದರೆ ಭೀಮಸೇನ ಸ
ಮರ್ಥನಹನಾತಂಗೆ ಕೊಟ್ಟೆನು ಕಳನ ಕಾಳಗವ
ವ್ಯರ್ಥವಿದು ತಾ ಹೋಗಲಿನ್ನು ಪ
ರಾರ್ಥ ಕಂಟಕವಾಗಲೇತಕೆ
ತೀರ್ಥವೈಸಲೆ ಶಸ್ತ್ರಧಾರೆಯಿದೆಂದನಾ ಮಗಧ ॥89॥
೦೯೦ ತರಿಸಿದನು ಚನ್ದನದ ...{Loading}...
ತರಿಸಿದನು ಚಂದನದ ಸಾದಿನ
ಭರಣಿಗಳ ಕರ್ಪೂರ ವರಕ
ತ್ತುರಿ ಜವಾಜಿ ಪ್ರಮುಖ ಬಹುವಿಧ ಯಕ್ಷಕರ್ದಮವ
ಹರಿ ವೃಕೋದರ ಪಾರ್ಥರಿದಿರಲಿ
ಭರಣಿಗಳ ನೂಕಿದನು ಮಾಲ್ಯಾಂ
ಬರ ವಿಲೇಪನದಿಂದಲಂಕರಿಸಿದರು ನಿಜತನುವ ॥90॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಹೀಗೆ ಕಾಳಗಕ್ಕೆ ಸಮ್ಮತಿಸಿದ ಮೇಲೆ ಮಗಧೇಶ್ವರನಾದ ಜರಾಸಂಧ ಚಂದನದ ಸಾದಿನ ಭರಣಿಗಳನ್ನೂ ಕರ್ಪೂರ, ಒಳ್ಳೆಯ ಕಸ್ತೂರಿ, ಜವಾಜಿ ಮೊದಲಾದ ಬಹುಬಗೆಯ ವಸ್ತುಗಳನ್ನು ಸೇರಿಸಿ ತಯಾರಿಸಿದ ಸುಗಂಧಲೇಪನ ದ್ರವ್ಯವನ್ನು ತರಿಸಿ ಆ ಭರಣಿಗಳನ್ನು ಕೃಷ್ಣ, ಭೀಮ, ಪಾರ್ಥರ ಕಡೆಗೆ ತಳ್ಳಿದ. ಎಲ್ಲರೂ ಮಾಲೆ, ವಸ್ತ್ರ, ವಿಲೇಪನಗಳಿಂದ ತಮ್ಮನ್ನು ಅಲಂಕರಿಸಿಕೊಂಡರು.
ಪದಾರ್ಥ (ಕ.ಗ.ಪ)
ಯಕ್ಷಕರ್ದಮ-ಸುಗಂಧಲೇಪನ ದ್ರವ್ಯ
ಯುಧ್ಧದ ತಿರ್ಮಾನವಾದ ಮೇಲೆ ಜರಾಸಂಧ, ಚಂದನದ-ಶ್ರೀಗಂಧದ, ಸಾದಿನ-ಪರಿಮಳ ದ್ರವ್ಯದ, ಭರಣಿಗಳ-ಭರಣಿಗಳನ್ನು, ಕರ್ಪೂರ ವರಕತ್ತುರಿ-ಶ್ರೇಷ್ಠ ಕಸ್ತೂರಿ, ಜವಾಜಿ ಪ್ರಮುಖ-ಮೊದಲಾದ, ಬಹುವಿಧ-ನಾನಾ ಬಗೆಯೆ, ಯಕ್ಷಕರ್ದಮವ-ಸುಗಂಧ ಲೇಪನ ದ್ರವ್ಯಗಳನ್ನು ತರಿಸಿದನು, ಹರಿ-ಕೃಷ್ಣ, ವೃಕೋದರ-ಭೀಮ, ಪಾರ್ಥ-ಅರ್ಜುನ, ಇವರ ಇದಿರಲಿ-ಮುಂದೆ, ಭರಣಿಗಳ ನೂಕಿದನು-ಭರಣಿಗಳನ್ನು ತಳ್ಳಿದನು ಎಲ್ಲರೂ, ಮಾಲ್ಯಾಂಬರ ವಿಲೇಪನದಿಂದ-ಹೂ ಮಾಲೆ, ವಸ್ತ್ರ ವಿಲೇಪನ-ಮೈಗೆ ಸುಗಂಧ ದ್ರವ್ಯಗಳಲೇಪನದಿಂದ, ನಿಜತನುವ-ದೇಹಗಳನ್ನು, ಅಲಂಕರಿಸಿದರು-ಅಲಂಕಾರ ಮಾಡಿಕೊಂಡರು
ಮೂಲ ...{Loading}...
ತರಿಸಿದನು ಚಂದನದ ಸಾದಿನ
ಭರಣಿಗಳ ಕರ್ಪೂರ ವರಕ
ತ್ತುರಿ ಜವಾಜಿ ಪ್ರಮುಖ ಬಹುವಿಧ ಯಕ್ಷಕರ್ದಮವ
ಹರಿ ವೃಕೋದರ ಪಾರ್ಥರಿದಿರಲಿ
ಭರಣಿಗಳ ನೂಕಿದನು ಮಾಲ್ಯಾಂ
ಬರ ವಿಲೇಪನದಿಂದಲಂಕರಿಸಿದರು ನಿಜತನುವ ॥90॥
೦೯೧ ಅಙ್ಕಕಿಬ್ಬರು ಭಟರು ...{Loading}...
ಅಂಕಕಿಬ್ಬರು ಭಟರು ತಿಲಕಾ
ಲಂಕರಣಶೋಭೆಯಲಿ ರಣ ನಿ
ಶ್ಶಂಕರನುವಾದರು ಸುಕರ್ಪುರ ವೀಳೆಯಂಗೊಂಡು
ಬಿಂಕದುಬ್ಬಿನ ರೋಮ ಪುಳಕದ
ಮುಂಕುಡಿಯ ಸುಮ್ಮಾನದಂಕೆಯ
ಝಂಕೆಗಳ ಭರ ಭುಲ್ಲವಿಸಿದುದು ಭೀಮ ಮಾಗಧರ ॥91॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಹೋರಾಟಕ್ಕೆ ಸಿದ್ಧರಾದ ಭೀಮ ಜರಾಸಂಧರಿಬ್ಬರೂ ತಿಲಕವಿಟ್ಟು, ಕರ್ಪೂರ ವೀಳೆಯವನ್ನು ಹಾಕಿಕೊಂಡು, ಯುದ್ಧದ ಭಯವಿಲ್ಲದೆ ಹೋರಾಟಕ್ಕೆ ಸಿದ್ಧರಾಗಿ ನಿಂತರು. ಇಬ್ಬರೂ ಬಿಂಕದಿಂದ ಉಬ್ಬಿ ರೋಮಾಂಚಗೊಂಡರು. ಆಗ ಭೀಮ ಮಾಗಧರ ಮುಂದಿದ್ದ ಸೈನ್ಯಗಳು ರೋಮಾಂಚಗೊಂಡರೂ, ಮುಂದಾಗುವುದರ ಬಗ್ಗೆ ಹೆಚ್ಚಾದ ಆತಂಕದಿಂದ ಇದ್ದರು.
ಪದಾರ್ಥ (ಕ.ಗ.ಪ)
ಅಂಕಕೆ-ಹೋರಾಟಕ್ಕೆ, ಇಬ್ಬರು ಭಟರು-ಭೀಮ ಜರಾಸಂಧ ಇಬ್ಬರು ಯೋಧರೂ, ತಿಲಕಾಲಂಕರಣಶೋಭೆಯಲಿ-ತಿಲಕವಿಟ್ಟು ಹೂ, ಸುಗಂಧ ದ್ರವ್ಯಾದಿಗಳಿಂದ, ರಣ ನಿಶ್ಶಂಕರು-ಯುದ್ಧದ ವಿಷಯದಲ್ಲಿ ಯಾವ ಸಂದೇಹವೂ ಭಯವೂ ಇಲ್ಲದವರಾಗಿ, ಸುಕರ್ಪುರ ವೀಳೆಯಂಗೊಂಡು-ಕರ್ಪೂರ ಮಿಶ್ರತ ವೀಳೆಯನ್ನು ಹಾಕಿಕೊಂಡು, ಬಿಂಕದುಬ್ಬಿನ-ಅತಿಶಯ ಬಿಂಕದಿಂದ ಕೂಡಿದವರಾಗಿ, ರೋಮ ಪುಳಕದ-ರೋಮಾಂಚಿತರಾಗಿ, ಮುಂಕುಡಿಯ ಸುಮ್ಮಾನದ-ಚಿಗುರೊಡೆಯುತ್ತಿರುವ ಸಂತೋಷದಿಂದ, ಭೀಮ ಮಾಗಧನ-ಭೀಮನ ಹಾಗೂ ಜರಸಂಧನ, ಅಂಕೆಯ ಝಂಕೆಣೆಯ ಭರ-ಠೀವಿಯ ಮತ್ತು ಅಬ್ಬರದ ಸಡಗರ, ಭುಲ್ಲವಿಸಿದುದು-ಉತ್ಸಾಹ ಶೀಲವಾಯಿತು
ಮೂಲ ...{Loading}...
ಅಂಕಕಿಬ್ಬರು ಭಟರು ತಿಲಕಾ
ಲಂಕರಣಶೋಭೆಯಲಿ ರಣ ನಿ
ಶ್ಶಂಕರನುವಾದರು ಸುಕರ್ಪುರ ವೀಳೆಯಂಗೊಂಡು
ಬಿಂಕದುಬ್ಬಿನ ರೋಮ ಪುಳಕದ
ಮುಂಕುಡಿಯ ಸುಮ್ಮಾನದಂಕೆಯ
ಝಂಕೆಗಳ ಭರ ಭುಲ್ಲವಿಸಿದುದು ಭೀಮ ಮಾಗಧರ ॥91॥
೦೯೨ ರಣದೊಳಾವುದು ಕೈದು ...{Loading}...
ರಣದೊಳಾವುದು ಕೈದು ಹಿರಿಯು
ಬ್ಬಣವೊ ಪರಿಘವೊ ಸುರಗಿಯೋ ಡೊಂ
ಕಣಿಯೊ ಗದೆಯೋ ಭಿಂಡಿವಾಳವೊ ಪರಶು ತೋಮರವು
ಕಣೆ ಧನುವೊ ಕಕ್ಕಡೆಯೊ ಮುಷ್ಟಿಯೊ
ಹಣಿದಕಾವುದು ಸದರವದರಲಿ
ಕೆಣಕಿ ನೋಡಾ ತನ್ನನೆಂದನು ಭೀಮ ಮಾಗಧನ ॥92॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಯುದ್ಧದಲ್ಲಿ ಯಾವ ಆಯುಧವನ್ನು ಬಳಸೋಣ. ಹಿರಿಯುಬ್ಬಣವೊ, ಪರಿಘವೊ, ಸುರಗಿಯೋ ಡೊಂಕಣಿಯೊ, ಗದೆಯೋ, ಭಿಂಡಿವಾಳವೊ, ಪರಶುವೋ, ತೋಮರವೋ, ಬಿಲ್ಲುಬಾಣಗಳೋ, ಕಕ್ಕಡೆಯೊ, ಮುಷ್ಟಿಯೊ ಯುದ್ಧಕ್ಕೆ ಯಾವುದು ನಿನಗೆ ಸುಲಭವೋ ಅದರಲ್ಲಿ ನನ್ನನ್ನು ಕೆಣಕಿ ನೋಡು ಎಂದು ಭೀಮನು ಜರಾಸಂಧನಿಗೆ ಹೇಳಿದನು.
ಪದಾರ್ಥ (ಕ.ಗ.ಪ)
ಹಿರಿಯುಬ್ಬಣ-?
ಪರಿಘ-ಲಾಳವಿಂಡಿಗೆ, ಕಬ್ಬಿಣದ ಒಂದು ಬಗೆಯ ಆಯುಧ
ಸುರಗಿ-ಕಿರುಗತ್ತಿ
ಡೊಂಕಣಿ-ಈಟಿ,
ಭಿಂಡಿವಾಳ-ಸಣ್ಣಭಲ್ಲೆ
ತೋಮರ-ಒಂದು ಬಗೆಯ ಈಟಿ
ಕಕ್ಕಡೆ-ಗರಗಸದಂತೆ ಬಾಯುಳ್ಳ ಒಂದು ಆಯುಧ ?
ರಣದೊಳು-ಯುದ್ಧದಲ್ಲಿ, ಆವುದು ಕೈದು-ಬಳಸುವ ಆಯುಧ ಯಾವುದು ? ಹಿರಿಯುಬ್ಬಣವೊ ಸುರಗಿಯೋ ಪರಿಘವೊ ಡೊಂಕಣಿಯೊ, ಗದೆಯೋ ಭಿಂಡಿವಾಳವೊ ಪರಶು ತೋಮರವು, ಕಣೆ(ಬಾಣ) ಧನು(ಬಿಲ್ಲು)ವೊ ಕಕ್ಕಡೆಯೊ ಮುಷ್ಟಿಯೊ
ಹಣಿದಕೆ-ಥಳಿಸುವುದಕ್ಕೆ, ಆವುದು ಸದರ ಆದರಲಿ-ಯಾವುದು ಸುಲಭವೋ ಅದರಲ್ಲಿ, ಕೆಣಕಿ ನೋಡಾ ತನ್ನನು-ಕೆರಳಿಸಿ ನೋಡು ನನ್ನನ್ನು ಎಂದನು, ಭೀಮ ಮಗಧನ-ಜರಾಸಂಧನನ್ನು ಕುರಿತು
ಮೂಲ ...{Loading}...
ರಣದೊಳಾವುದು ಕೈದು ಹಿರಿಯು
ಬ್ಬಣವೊ ಪರಿಘವೊ ಸುರಗಿಯೋ ಡೊಂ
ಕಣಿಯೊ ಗದೆಯೋ ಭಿಂಡಿವಾಳವೊ ಪರಶು ತೋಮರವು
ಕಣೆ ಧನುವೊ ಕಕ್ಕಡೆಯೊ ಮುಷ್ಟಿಯೊ
ಹಣಿದಕಾವುದು ಸದರವದರಲಿ
ಕೆಣಕಿ ನೋಡಾ ತನ್ನನೆಂದನು ಭೀಮ ಮಾಗಧನ ॥92॥
೦೯೩ ಆಯುಧಙ್ಗಳಲೇನು ನೀ ...{Loading}...
ಆಯುಧಂಗಳಲೇನು ನೀ ನಾ
ಗಾಯುತದ ಬಲನೆಂಬರಾ ನುಡಿ
ವಾಯವೋ ಕಲಿಭೀಮ ದಿಟವೋ ನೋಡಬೇಹುದಲೆ
ಆಯಿತೇ ಸಮಜೋಳಿ ನಿನಗಡು
ಪಾಯವೋ ಚೊಕ್ಕೆಯವೊ ನುಡಿ ಮನ
ದಾಯತವನೆನಗೆನುತ ಹತ್ತಾಹತ್ತಿಗನುವಾದ ॥93॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಆಯುಧಗಳಲ್ಲೇನು, ನೀನು ಹತ್ತು ಸಾವಿರ ಆನೆಗಳ ಬಲವುಳ್ಳವನೆನ್ನುವರು ಕಲಿಭೀಮ. ಆ ಮಾತು ಸುಳ್ಳೋ ನಿಜವೋ ನೋಡಬೇಕಲ್ಲವೇ ? ಸಮಜೋಡಿ ಆಯಿತೇ ನಿನಗೆ ? ಅದು ಅಡುಪಾಯವೋ ಚೊಕ್ಕೆಯವೋ ? ನಿನ್ನ ಮನದ ಇಷ್ಟವನ್ನು ನನಗೆ ಹೇಳು ಎನ್ನುತ್ತಾ ಹತ್ತಾ ಹತ್ತಿಗೆ ಮಗಧ ಸಿದ್ಧನಾದ
ಪದಾರ್ಥ (ಕ.ಗ.ಪ)
ಚೊಕ್ಕೆಯ-ಮಲ್ಲಯುದ್ಧದ ಒಂದು ಪಟ್ಟು, ನಾಗ-ಆನೆ, ಹತ್ತಾಹತ್ತಿ-ಮಲ್ಲಯುದ್ಧ, ನಾಗಾಯುತದ ಬಲ-10 ಸಾವಿರ ಆನೆಗಳ ಶಕ್ತಿ,
ಸಮಜೋಳಿ-ಸಮಜೋಡಿ
ಅಡುಪಾಯ -ಮಲ್ಲಯುದ್ಧದ ಒಂದು ಪಟ್ಟು
ಆಯುಧಂಗಳಲೇನು-ಈ ಆಯುಧಗಳಿಂದ ಏನಾಗಬೇಕಾಗಿದೆ ? ನೀ ನಾಗಾಯುತದ ಬಲನೆಂಬರು-ನೀನು ಹತ್ತು ಸಾವಿರ ಆನೆಗಳ
ಶಕ್ತಿಯುಳ್ಳವನು ಎನ್ನುವರು, ಆ ನುಡಿ-ಆ ಮಾತು, ವಾಯವೋ-ತೋರಿಕೆಯದೋ, ದಿಟವೋ-ನಿಜವಾದುದೋ, ನೋಡಬೇಹುದಲೆ-ನೋಡಬೇಕಲ್ಲವೆ ?, ಕಲಿಭೀಮ-ಶೂರನಾದ ಭಿಮಸೇನನೇ, ಆಯಿತೇ ಸಮಜೋಳಿ-ನನಗೂ ನಿನಗೂ ಸಮಜೋಡಿ ಆಯಿತೇ ?,
ನಿನಗೆ ಅದು ಪಾಯವೋ ಚೊಕ್ಕೆಯವೊ-(ಮಲ್ಲಯುದ್ಧದಲ್ಲಿ ಬಳಸುವ ಪಟ್ಟುಗಳು), ಮನದ ಆಯತವನು ನುಡಿ ಎನಗೆ-ನಿನ್ನ ಮನಸ್ಸಿಗೆ ಒಪ್ಪಿತವೇ, ಎಂಬುದನ್ನು ನನಗೆ ಹೇಳು, ಎನುತ-ಎಂದು ಹೇಳುತ್ತಾ, ಜರಾಸಂಧ ಹತ್ತಾಹತ್ತಿಗೆ-ಬರಿಗೈಗಳಿಂದಲೇ ಹೊರಾಡುವುದಕ್ಕೆ, ಅಂದರೆ ಮಲ್ಲಯುದ್ಧಕ್ಕೆ ಅನುವಾದ-ಸಿದ್ಧವಾದ
ಮೂಲ ...{Loading}...
ಆಯುಧಂಗಳಲೇನು ನೀ ನಾ
ಗಾಯುತದ ಬಲನೆಂಬರಾ ನುಡಿ
ವಾಯವೋ ಕಲಿಭೀಮ ದಿಟವೋ ನೋಡಬೇಹುದಲೆ
ಆಯಿತೇ ಸಮಜೋಳಿ ನಿನಗಡು
ಪಾಯವೋ ಚೊಕ್ಕೆಯವೊ ನುಡಿ ಮನ
ದಾಯತವನೆನಗೆನುತ ಹತ್ತಾಹತ್ತಿಗನುವಾದ ॥93॥
೦೯೪ ಧರಣಿಪತಿ ಕೇಳ್ಮಾಗಧನ ...{Loading}...
ಧರಣಿಪತಿ ಕೇಳ್ಮಾಗಧನ ಮಂ
ದಿರದ ರಾಜಾಂಗಣದೊಳವನೀ
ಸುರರು ನೋಟಕರಾದರಿಲ್ಲಿ ಮುರಾರಿ ಫಲುಗುಣರು
ಎರಡು ಬಲ ಮೋಹರಿಸಿ ನಿಂದುದು
ಪುರದ ಹೊರ ಬಾಹೆಯಲಿ ಕೃತ ಸಂ
ಚರಣ ಕಾರ್ತಿಕ ಶುದ್ಧ ಪಾಡ್ಯದೊಳಾಹವಾರಂಭ ॥94॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಜರಾಸಂಧನ ಅರಮನೆಯ ಮುಂದಿನ ರಾಜಾಂಗಣದಲ್ಲಿ ವಿಪ್ರರೆಲ್ಲ ಪ್ರೇಕ್ಷಕರಾದರು. ಕೃಷ್ಣಾರ್ಜುನರೂ ಅವರೊಡನೆ ಸೇರಿದರು. ಊರ ಹೊರಭಾಗದಲ್ಲಿ ಎರಡೂ ಕಡೆಗಳ ಸೈನ್ಯ ಸಜ್ಜಾಗಿ ನಿಂತಿತು. (ಕೃತಸಂಚರಣ?) ಕಾರ್ತಿಕ ಶುದ್ಧ ಪಾಡ್ಯದ ದಿನ ಅವರಿಬ್ಬರ ಯುದ್ಧ ಪ್ರಾರಂಭವಾಯಿತು.
ಪದಾರ್ಥ (ಕ.ಗ.ಪ)
ಮೋಹರಿಸಿ-ಗುಂಪುಮಾಡಿ, ಬಾಹೆ-ಹೊರಭಾಗ
ಕೃತಸಂಚರಣ -?
ಧರಣಿಪತಿ ಕೇಳ್-ಜನಮೇಜಯ ರಾಜನೇ ಕೇಳು, ಮಾಗಧನ ಮಂದಿರದ ರಾಜಾಂಗಣದೊಳು-ಜರಾಸಂಧನ ಅರಮನೆಯ ರಾಜಾಂಗಣದಲ್ಲಿ, ಅವನೀಸುರರು-ವಿಪ್ರರೆಲ್ಲ, ನೋಟಕರಾದರು-ಪ್ರೇಕ್ಷಕರಾದರು, ಇಲ್ಲಿ-ಈ ಕಡೆ, ಮುರಾರಿ ಫಲುಗುಣರು-ಕೃಷ್ಣ ಅರ್ಜುನರು ನೊಟಕರಾದರು, ಎರಡು ಬಲ-ಎರಡು ಕಡೆಯ ಸೈನ್ಯವೂ, ಪುರದ ಹೊರ ಬಾಹೆಯಲಿ-ಪಟ್ಟನದ ಹೊರಭಾಗದಲ್ಲಿ,
ಮೋಹರಿಸಿ ನಿಂದುದು-ಸಜ್ಜಾಗಿ ನಿಂದುವು, ಕೃತ ಸಂಚರಣ-ಆಚರಣೆಗಳೆಲ್ಲ ಮುಗಿಸಿ, ಕಾರ್ತಿಕ ಶುದ್ಧ ಪಾಡ್ಯದೊಳು-ಕಾರ್ತಿಕ ಮಾಸದ ಶುಕ್ಲಪಕ್ಷದ, ಪ್ರಥಮೆಯಂದುಭಿಮ-ಜರಾಸಂಧರ, ಅಹವ-ಯುದ್ಧ, ಆರಂಭ-ಮೊದಲಾಯಿತು
ಮೂಲ ...{Loading}...
ಧರಣಿಪತಿ ಕೇಳ್ಮಾಗಧನ ಮಂ
ದಿರದ ರಾಜಾಂಗಣದೊಳವನೀ
ಸುರರು ನೋಟಕರಾದರಿಲ್ಲಿ ಮುರಾರಿ ಫಲುಗುಣರು
ಎರಡು ಬಲ ಮೋಹರಿಸಿ ನಿಂದುದು
ಪುರದ ಹೊರ ಬಾಹೆಯಲಿ ಕೃತ ಸಂ
ಚರಣ ಕಾರ್ತಿಕ ಶುದ್ಧ ಪಾಡ್ಯದೊಳಾಹವಾರಂಭ ॥94॥
೦೯೫ ಸಿಡಿಲು ಬೊಬ್ಬಿಡುವನ್ತೆ ...{Loading}...
ಸಿಡಿಲು ಬೊಬ್ಬಿಡುವಂತೆ ಹೊಯ್ದರು
ಮುಡುಹುಗಳ ಮಝ ಪೂತು ಮಲ್ಲೆನು
ತಡಿಗಡಿಗೆ ನೂಕಿದರು ಲವಣಿಯ ನೀಡಿ ಸಾರದಲಿ
ತುಡುಕಲೀಯದೆ ತಿರುಗಿದರು ಗಡ
ಬಡಿಸಿ ದಂಡೆಯೊಳೊತ್ತಿದರು ಸಮ
ಚಡಿಸಿ ನಿಂದರು ನೀಲ ನಿಷಧಾಚಲಕೆ ಮಲೆವಂತೆ ॥95॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಸಿಡಿಲು ಬೊಬ್ಬೆಯಿಟ್ಟಂತೆ ತಮ್ಮ ಭುಜಗಳನ್ನು ತಟ್ಟಿಕೊಂಡರು. ‘ಮಝ ಪೂತು ಮಲ್ಲ !’ ಎಂದು ಒಬ್ಬರನ್ನೊಬ್ಬರು ಪ್ರಶಂಸಿಸುತ್ತಾ ಮತ್ತೆ ಮತ್ತೆ ಒಬ್ಬರನ್ನೊಬ್ಬರು ತಳ್ಳಾಡಿದರು. ಹಿಂದೆಮುಂದೆ ಸಮಯೋಚಿತವಾಗಿ ಬಾಗುತ್ತಾ ಹಿಡಿತಕ್ಕೆ ಸಿಗದಂತೆ ತಿರುಗಿದರು. ಕೋಲಾಹಲ ಮಾಡುತ್ತಾ ದಂಡೆಯೆತ್ತಿದರು. ನೀಲಪರ್ವತ ನಿಷಧಾಚಲ ಎರಡೂ ಒಂದನ್ನೊಂದು ಎದುರಿಸಿ ಹೋರಾಟಕ್ಕೆ ನಿಂತಂತೆ ಸಮಸಮವಾಗಿ ಸೆಟೆದು ನಿಂತರು.
ಪದಾರ್ಥ (ಕ.ಗ.ಪ)
ಸಮಚಡಿಸಿ-? ಮುಡುಹು-ಭುಜ, ಲವಣೆ-ನುಸುಳುವಿಕೆ
ಸಿಡಿಲು ಬೊಬ್ಬಿಡುವಂತೆ-ಸಿಡಿಲಿ ಅಬ್ಬರಿಸುವಂತೆ, ಹೊಯ್ದರು ಮುಡುಹುಗಳ-ತಮ್ಮ ಭುಜಗಳನ್ನು ತಟ್ಟಿಕೊಂಡರು, ‘ಮಝ ಪೂತು ಮಲ್ಲ’ ಎನುತ-ಎಂದು ಪ್ರಶಂಸೆಯ ಮಾತುಗಳನ್ನಾಡುತ್ತಾ, ಅಡಿಗಡಿಗೆ-ಮತ್ತೆ ಮತ್ತೆ, ನೂಕಿದರು-ಒಬ್ಬರಿಗೊಬ್ಬರು ತಳ್ಳಾಡಿದರು, ಲವಣಿಯ ನೀಡಿ ಸಾರದಲಿ-ಹಿಂದೆ ಮುಂದೆ ಸಮಯೋಚಿತವಾಗಿ ಬಾಗುತ್ತಾ, ತುಡುಕಲೀಯದೆ-ಹಿಡಿತಕ್ಕೆ ಸಿಗದಂತೆ ತಿರುಗಿದರು
ಗಡಬಡಿಸಿ-ಗದ್ದಲ ಮಾಡುತ್ತಾ, ದಂಡೆಯೊಳೊತ್ತಿದರು-ದಂಡೆಯೊತ್ತಿದರು, ನೀಲ ನಿಷಧಾಚಲಕೆ ಮಲೆವಂತೆ-ನೀಲ ಪರ್ವತ ನಿಷಧಾಚಲವನ್ನೆದುರಿಸಿ ಹೊರಾಟಕ್ಕೆ ನಿಂತಂತೆ, ಸಮಚಡಿಸಿ ನಿಂದರು-ಸಮ ಸಮವಾಗಿ ಹೋರಾಡುತ್ತಾ ನಿಂತರು
ಮೂಲ ...{Loading}...
ಸಿಡಿಲು ಬೊಬ್ಬಿಡುವಂತೆ ಹೊಯ್ದರು
ಮುಡುಹುಗಳ ಮಝ ಪೂತು ಮಲ್ಲೆನು
ತಡಿಗಡಿಗೆ ನೂಕಿದರು ಲವಣಿಯ ನೀಡಿ ಸಾರದಲಿ
ತುಡುಕಲೀಯದೆ ತಿರುಗಿದರು ಗಡ
ಬಡಿಸಿ ದಂಡೆಯೊಳೊತ್ತಿದರು ಸಮ
ಚಡಿಸಿ ನಿಂದರು ನೀಲ ನಿಷಧಾಚಲಕೆ ಮಲೆವಂತೆ ॥95॥
೦೯೬ ಸಿಕ್ಕರೊಬ್ಬರಿಗೊಬ್ಬರುರೆ ಕೈ ...{Loading}...
ಸಿಕ್ಕರೊಬ್ಬರಿಗೊಬ್ಬರುರೆ ಕೈ
ಮಿಕ್ಕುಹರಿಯರು ಕೊಂಡ ಠಾಣದ
ಠಕ್ಕಿನಲಿ ಮೈಗೊಡರು ತಿರಿಮುರಿವುಗಳ ಮಂಡಿಯಲಿ
ಎಕ್ಕಹತ್ತದುಹತ್ತದಲಿ ಸಲೆ
ಮಿಕ್ಕು ಸತ್ರಾಣದಲಿ ಮಿಗೆ ಸರಿ
ವೊಕ್ಕು ಹಿಡಿದರು ಬಿನ್ನಣದ ಚೊಕ್ಕೆಯದ ಚಾಳಿಯಲಿ ॥96॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಬಗೆ ಬಗೆಯ ಪಟ್ಟುಗಳಲ್ಲಿ ಒಬ್ಬರನೊಬ್ಬರು ಸಿಕ್ಕಿಸಿಕೊಳ್ಳಲು ಹೆಣಗಿದಾಗ ಒಬ್ಬರಿಗೊಬ್ಬರು ಸಿಕ್ಕರೂ ಕೈಮೀರಿ ಹೋಗುವರು.
ಇದ್ದ ಸ್ಥಾನವನ್ನು ಠಕ್ಕಿನಿಂದ ತಿರಿಮುರಿವುಗಳನ್ನು ಮಾಡಿ ಮಂಡಿಗಳ ಸೂಕ್ಷ್ಮ ಚಲನವಲನಗಳಿಂದ ತಪ್ಪಿಸಿಕೊಳ್ಳುತ್ತಿದ್ದರು. ಒಂದು ಕೈಯಲ್ಲಿ, ಎರಡು ಕೈಗಳಲ್ಲಿ ಬಲವಾಗಿ ವಿವಿಧ ಚಾತುರ್ಯಗಳಿಂದ ಒಬ್ಬರನ್ನೊಬ್ಬರು ಹಿಡಿದರು.
ಸೂಚನೆ: ಇದರಲ್ಲಿ ಬರುವ ಎಲ್ಲ ಶಬ್ದಗಳು ಮಲ್ಲಯುದ್ಧದ ನಾನಾವಟ್ಟುಗಳಿಗೆ ಅನ್ವಯಿಸುವುವು.
ಪದಾರ್ಥ (ಕ.ಗ.ಪ)
ಠಾಣ -ಸ್ಥಾನ
ಠಕ್ಕು -ಮೋಸ
ಎಕ್ಕಹತ್ತದುಹತ್ತ - ಒಂದು ಕೈ ಎರಡು ಕೈ
ಚೊಕ್ಕೆಯ - ಬಿನ್ನಾಣ, ಚಾತುರ್ಯ, ಮಲ್ಲಯುದ್ಧದ ಒಂದು ಪಟ್ಟು
ಚಾಳಿ - ರೀತಿ, ಕ್ರಮ
ಸಿಕ್ಕರು ಒಬ್ಬರಿಗೆ ಒಬ್ಬರು-ಒಬ್ಬರಿಗೆ ಒಬ್ಬರು ಹಿಡಿತಕ್ಕೆ ಸಿಗರು, ಕೈಮಿಕ್ಕುಹರಿಯರು-ಕೈಮೀರಿ ಆಚೆಗೆ ಹೋಗರು, ಕೊಂಡ ಹೆಜ್ಜೆಯ-ಇಟ್ಟ ಹೆಜ್ಜೆಯನ್ನು, ತಿರಿಮುರಿವುಗಳ ಮಂಡಿಗಳ-ತಿರಿವು ಮುರಿಗಳ ಮಂಡಿಗಳನ್ನು, ಠಕ್ಕಿನಲಿ-ವಂಚನೆಯಿಂದ, ಮೈಗೊಡರು-ಹಿಡಿಯಲು ಸಿಗಿಸುತ್ತಿರಲಿಲ್ಲ, ಇಕ್ಕಿದರು ಗಳಹತ್ತದಲಿ-ಇಬ್ಬರೂ ಪರಸ್ಪರ ಕುತ್ತಿಗೆಗಳನ್ನೂ ಕಯಗಳಿಂದ ಬೀಗಿದರು, ಸಲೆಮಿಕ್ಕು ಸತ್ರಾಣದಲಿ-ಶಕ್ತಿಯುತವಾಗಿ ಮುಂದುವರಿದು, ಮಿಗೆ ಸರಿವೊಕ್ಕುಅತಿಶಯವಾಗಿ ಒಳನುಗ್ಗಿ, ಬಿನ್ನಣದ ಚೊಕ್ಕೆಯದ ಜೋಡಿಯಲಿ ಹಿಡಿದರು
ಪಾಠಾನ್ತರ (ಕ.ಗ.ಪ)
ಹೆಜ್ಜೆಯ –> ಠಾಣದ.
ಇಕ್ಕಿದರು ಗಳಹತ್ತದಲಿ –> ಎಕ್ಕಹತ್ತದುಹತ್ತದಲಿ
ಜೋಡಿಯಲಿ - ಚಾಳಿಯಲಿ
-ಕುಮಾರವ್ಯಾಸ ಭಾರತ ಸಂಗ್ರಹ
-ಎಂವಿ ಸೀ , ಬಿ ಎಂ ಶ್ರೀ ಪ್ರತಿಷ್ಠಾನ
ಮೂಲ ...{Loading}...
ಸಿಕ್ಕರೊಬ್ಬರಿಗೊಬ್ಬರುರೆ ಕೈ
ಮಿಕ್ಕುಹರಿಯರು ಕೊಂಡ ಠಾಣದ
ಠಕ್ಕಿನಲಿ ಮೈಗೊಡರು ತಿರಿಮುರಿವುಗಳ ಮಂಡಿಯಲಿ
ಎಕ್ಕಹತ್ತದುಹತ್ತದಲಿ ಸಲೆ
ಮಿಕ್ಕು ಸತ್ರಾಣದಲಿ ಮಿಗೆ ಸರಿ
ವೊಕ್ಕು ಹಿಡಿದರು ಬಿನ್ನಣದ ಚೊಕ್ಕೆಯದ ಚಾಳಿಯಲಿ ॥96॥
೦೯೭ ಬಿಡಿಸಿ ಗಳಹತ್ತವನು ...{Loading}...
ಬಿಡಿಸಿ ಗಳಹತ್ತವನು ಡೊಕ್ಕರ
ಕೊಡೆ ಮುರಿವ ಸಕುಟುಂಬ ಡೊಕ್ಕರ
ಕಡಸಿ ಕತ್ತರಿಘಟ್ಟಿಸುವ ಗಳಹತ್ತಡೊಕ್ಕರವ
ತಡೆವ ಚೌವಂಗುಲ ದುವಂಗುಲ
ಕೊಡೆಮುರಿವ ಪಟ್ಟಸಕೆ ಚಾಚುವ
ಝಡಿತೆಗೊದಗುವ ಭಟರು ಹೆಣಗಿದರರಸ ಕೇಳ್ ಎಂದ ॥97॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
ಗಳಹತ್ತವನ್ನು ಬಿಡಿಸಿ ಡೊಕ್ಕರ ಕೊಡಲು, ತಿರುಗುವ, ಸಕುಟುಂಬ ಡೊಕ್ಕರಕ್ಕೆ ಅಡಸಿ ಕತ್ತರಿಘಟ್ಟಿಸುವ, ಗಳಹತ್ತ ಡೊಕ್ಕರವ ತಡೆವ, ಚೌವಂಗುಲ ದುವಂಗುಲಕ್ಕೆ ಬಡೆಯುರಿವ, ಪಟ್ಟಸಕೆ ಚಾಚುವ ಝಡಿತೆಗೆ ಒದಗುವ ಇಬ್ಬರು ಯೋಧರೂ ಪರಸ್ಪರ ಹೆಣಗಿದರು.
ಪದಾರ್ಥ (ಕ.ಗ.ಪ)
ಗಳಹತ್ತವನು-ಕುತ್ತಿಗೆಯ ಹಿಡಿತವನ್ನು ಬಿಡಿಸಿ, ಡೊಕ್ಕರ ಕೊಡೆ ಮುರಿವ-ತಿರುಗುವ ಸಕುಟುಂಬ ಡೊಕ್ಕರಂತೆ, ಅಡಸಿ ಕತ್ತರಿಘಟ್ಟಿಸುವ ಗಳಹತ್ತ ಡೊಕ್ಕರವ, ತಡೆವ ಚೌವಂಗುಲ ದುವಂಗುಲಕೆ ಒಡೆಮುರಿವ ಪಟ್ಟಸಕೆ ಚಾಚುವ, ಝಡಿತೆಗೆ ಒದಗುವ ಭಟರು-ಆ ಇಬ್ಬರು, ಯೋಧರೂ ಹೆಣಗಿದರು-ಹೋರಾಡಿದರು
ಮೂಲ ...{Loading}...
ಬಿಡಿಸಿ ಗಳಹತ್ತವನು ಡೊಕ್ಕರ
ಕೊಡೆ ಮುರಿವ ಸಕುಟುಂಬ ಡೊಕ್ಕರ
ಕಡಸಿ ಕತ್ತರಿಘಟ್ಟಿಸುವ ಗಳಹತ್ತಡೊಕ್ಕರವ
ತಡೆವ ಚೌವಂಗುಲ ದುವಂಗುಲ
ಕೊಡೆಮುರಿವ ಪಟ್ಟಸಕೆ ಚಾಚುವ
ಝಡಿತೆಗೊದಗುವ ಭಟರು ಹೆಣಗಿದರರಸ ಕೇಳೆಂದ ॥97॥
೦೯೮ ಎಳೆದು ದಣುವಟ್ಟೆಯಲಿ ...{Loading}...
ಎಳೆದು ದಣುವಟ್ಟೆಯಲಿ ಬೊಪ್ಪರ
ದೊಳಗೆ ಜಾಳಿಸಿ ಚಿಮ್ಮಿ ಝಡಿತೆಯ
ಸೆಳೆದು ಮುಡುಹಿನಲೌಕಿ ಬಿಗಿದರು ಪಟ್ಟ ಮುಡುಹಿನಲಿ
ಸುಳಿದು ಮರ್ಕಟ ಬಂಧದಲಿ ಕರ
ವಳಯದಲಿ ಕೈ ದುಡುಕಿ ಶಿರವ
ಟ್ಟಳೆಯ ಚಲ್ಲಣ ಪಟ್ಟಿಯವರೊದಗಿದರು ಪಟುಭಟರು ॥98॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ದಣವಟ್ಟೆಯಲಿ ಎಳೆದು, ಬೊಪ್ಪರದೊಳಗೆ ಜಾಳಿಸಿ ಚಿಮ್ಮಿ, ಝಡಿತೆಯ ಸೆಳೆದು, ಮುಡುಹಿನಲೌಕಿ ಪಟ್ಟ ಮದಣಮಡುಹಿನಲಿ
ಬಬಿಗಿದರು. ಮರ್ಕಟಬಂಧದಲ್ಲಿ ಸುಳಿದು, ಕರವಳಯುದಲಿ ಶಿರವನ್ನು ಕೈದುಡುಕಿ, ಅಟ್ಟಳೆಯ ಚಲ್ಲಣ ಪಟ್ಟಿಯವರು ಪಟುಭಟರು ಒದಗಿದರು.
ಪದಾರ್ಥ (ಕ.ಗ.ಪ)
ದಣವಟ್ಟೆ-? ಬೊಪ್ಪರ-? ಝಡಿತೆ-?
ದಣುವಟ್ಟೆಯಲಿ ಎಳೆದು ಬೊಪ್ಪರದೊಳಗೆ ಜಾಳಿಸಿ, ಚಿಮ್ಮಿ ಝಡಿತೆಯ ಸೆಳೆದು ಮುಡುಹಿನಲಿ ಔಕಿ ಪಟ್ಟ, ಮುಡುಹಿನಲಿ ಬಿಗಿದರು ಮರ್ಕಟ ಬಂಧದಲಿ, ಕರವಳಯದಲಿ ಶಿರವ ಕೈ ದುಡುಕಿ, ಅಟ್ಟಳೆಯ ಚಲ್ಲಣ ಪಟ್ಟಿಯವರು, ಪಟುಭಟರು ಒದಗಿದರು
ಮೂಲ ...{Loading}...
ಎಳೆದು ದಣುವಟ್ಟೆಯಲಿ ಬೊಪ್ಪರ
ದೊಳಗೆ ಜಾಳಿಸಿ ಚಿಮ್ಮಿ ಝಡಿತೆಯ
ಸೆಳೆದು ಮುಡುಹಿನಲೌಕಿ ಬಿಗಿದರು ಪಟ್ಟ ಮುಡುಹಿನಲಿ
ಸುಳಿದು ಮರ್ಕಟ ಬಂಧದಲಿ ಕರ
ವಳಯದಲಿ ಕೈ ದುಡುಕಿ ಶಿರವ
ಟ್ಟಳೆಯ ಚಲ್ಲಣ ಪಟ್ಟಿಯವರೊದಗಿದರು ಪಟುಭಟರು ॥98॥
೦೯೯ ಅಗಡಿಯಲಿ ಲೋಟಿಸಿ ...{Loading}...
ಅಗಡಿಯಲಿ ಲೋಟಿಸಿ ನಿರಂತರ
ಲಗಡಿಯಲಿ ಲಾಗಿಸಿ ನಿಬಂಧದ
ಬಿಗುಹುಗಳ ಕುಮ್ಮರಿಯ ಕುಹರದ ನಾಗಬಂಧಗಳ
ತೆಗಹುಗಳ ತೊಡಕುಗಳ ತುಳುಕಿನ
ಜಗಳುಗಳ ಜೋಡಣೆಯ ನಿಡು ಸು
ಯ್ಲುಗಳ ಸೌರಂಭದ ಸಗಾಢರು ಹೊಕ್ಕು ಹೆಣಗಿದರು ॥99॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅಗಡಿಯಲ್ಲಿ ಲೋಟಿಸಿ, ನಿರಂತರವಾಗಿ ಲಗಡಿಯಲ್ಲಿ ಲಾಗಿಸಿ, ನಿಭಂದದ ಬೆಗುಹೋಗಳ, ಕುಮ್ಮರಿಯ ಕುಹರದ ನಾಗಬಂಧಗಳ, ತೆಗಹುಗಳ, ತೊಡಕುಗಳ, ತುಳುಕಿನ ಜಗಳುಗಳ, ಜೋಡಣೆಯ ನಿಡುಸುಯ್ಲುಗಳ ಸೌರಂಭದ ಸಗಾಢರು ಹೊಕ್ಕು ಹೆಣಗಿದರು.
ಪದಾರ್ಥ (ಕ.ಗ.ಪ)
ಅಗಡಿಯಲಿ ಲೋಟಿಸಿ ನಿರಂತರ, ಲಗಡಿಯಲಿ ಲಾಗಿಸಿ ನಿಬಂಧದ ಬಿಗುಹುಗಳ ಕುಮ್ಮರಿಯ ಕುಹರದ ನಾಗಬಂಧಗಳ ತೆಗಹುಗಳ ತೊಡಕುಗಳ ತುಳುಕಿನ ಜಗಳುಗಳ ಜೋಡಣೆಯ ನಿಡು ಸುಯ್ಲುಗಳ ಸೌರಂಭದ ಸಗಾಢರು ಹೊಕ್ಕು ಹೆಣಗಿದರು
ಮೂಲ ...{Loading}...
ಅಗಡಿಯಲಿ ಲೋಟಿಸಿ ನಿರಂತರ
ಲಗಡಿಯಲಿ ಲಾಗಿಸಿ ನಿಬಂಧದ
ಬಿಗುಹುಗಳ ಕುಮ್ಮರಿಯ ಕುಹರದ ನಾಗಬಂಧಗಳ
ತೆಗಹುಗಳ ತೊಡಕುಗಳ ತುಳುಕಿನ
ಜಗಳುಗಳ ಜೋಡಣೆಯ ನಿಡು ಸು
ಯ್ಲುಗಳ ಸೌರಂಭದ ಸಗಾಢರು ಹೊಕ್ಕು ಹೆಣಗಿದರು ॥99॥
೧೦೦ ಧೂಳಿ ಕುಡಿದುದು ...{Loading}...
ಧೂಳಿ ಕುಡಿದುದು ಬೆಮರನಾ ಕೆಂ
ಧೂಳಿ ನೆನೆದುದು ಬೆವರಿನಲಿ ತಳ
ಮೇಲು ನಿಮಿಷಕೆ ಮೇಲು ತಳ ಬಿಡುಹುಗಳ ಬಿಗುಹುಗಳ
ಸೂಳು ನಾಸಾ ಪುಟದ ಪವನನ
ತಾಳಿಗೆಯ ಕರ್ಪುರದ ಕವಳದ
ತೋಳ ತೆಕ್ಕೆಯ ತವಕಿಗರು ಹೆಣಗಿದರು ಪಟುಭಟರು ॥100॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಧೂಳು ಬೆವರನ್ನು ಕುಡಿಯಿತು. ಕೆಂಧೂಳು ಬೆವರಿನಲ್ಲಿ ನೆನೆಯಿತು. ಸಡಿಲಿಸುವುದು ಮತ್ತು ಬಂಧಿಸುವುದು. ನಿಮಿಷದಲ್ಲಿ ಮೇಲಿದ್ದುದು ಕೆಳಕ್ಕಾಯಿತು ಕೆಳಗಿದ್ದುದು ಮೇಲಕ್ಕಾಯಿತು. ಸರದಿಯಂತೆ ಮೂಗಿನ ಹೊಳ್ಳೆಗಳಿಂದ ಉಸಿರನ್ನು ಹೊಮ್ಮಿಸುತ್ತಿದ್ದ, ಕರ್ಪೂರ ಮಿಶ್ರಿತ ತಂಬುಲದ ಕವಳವನ್ನು ಗಂಟಲಿಗೆ ಹಾಕಿಕೊಳ್ಳುತ್ತಿದ್ದ ಪರಸ್ಪರ ತೋಳುಗಳನ್ನು ಹಣೆದುಕೊಂಡಿದ್ದಂತಹ ತವಕಿಗರಾದ ಆ ಪಟುಭಟರು ಹೋರಾಡುತ್ತಿದ್ದರು.
ಪದಾರ್ಥ (ಕ.ಗ.ಪ)
ಧೂಳಿ ಕುಡಿದುದು ಬೆಮರನಾ-ಅವರ ಶರೀರದಿಂದ ಸುರಿಯುತ್ತಿದ್ದ, ಬೆವರನ್ನು ಧೂಳು ಕುಡಿಯಿತು, ಕೆಂಧೂಳಿ ನೆನೆದುದು ಬೆವರಿನಲಿ-ಕೆಂಧೂಳು ಅವರ ಬೆವರು ಸೇರಿ ಕೆಸರಾಯಿತು, ತಳ ಮೇಲು ನಿಮಿಷಕೆ ಮೇಲು ತಳ-ಕೆಳಗಿದ್ದವನು ಮೇಲಕ್ಕೆ ನಿಮಿಷ, ಮಾತ್ರದಲೇ ಮೇಲಿದ್ದವನು ಕೆಳಕ್ಕೆ ಬರುತ್ತಿದ್ದ, ಬಿಡುಹುಗಳ ಬಿಗುಹುಗಳ-ಬಿಡಿಸಿಕೊಳ್ಳುತ್ತಿದ್ದರು ಮತ್ತೆ ಬಿಗಿಯುತ್ತಿದ್ದರು, ಸೂಳು ನಾಸಾ ಪುಟದ ಪವನನ-ಮೇಲಿಂದ ಮೇಲೆ ಎದುರಿಸಿರು ಮೂಗಿನಿಂದ ಹೊರಡುತ್ತಿತ್ತು, ತಾಳಿಗೆಯ ಕರ್ಪುರದ ಕವಳದ-ಗಂಟಲಿಗೆ ಕರ್ಪೂರ ಮಿಶ್ರಿತ ವೀಳ್ಯದ, ಕವಳವನ್ನು ಹಾಕಿಕೊಳ್ಳುತ್ತಿದ್ದರು ಗಂಟಲಿಗೆ, ತೋಳ ತೆಕ್ಕೆಯ ತವಕಿಗರು-ಪರಸ್ಪರ ತೋಳುಗಳನ್ನು, ಹೆಣೆದುಕೊಂಡು ಉತ್ಸಾಹದಲ್ಲಿದ್ದ, ಪಟುಭಟರು ಹೆಣಗಿದರು-ಹೋರಾಡಿದರು
ಮೂಲ ...{Loading}...
ಧೂಳಿ ಕುಡಿದುದು ಬೆಮರನಾ ಕೆಂ
ಧೂಳಿ ನೆನೆದುದು ಬೆವರಿನಲಿ ತಳ
ಮೇಲು ನಿಮಿಷಕೆ ಮೇಲು ತಳ ಬಿಡುಹುಗಳ ಬಿಗುಹುಗಳ
ಸೂಳು ನಾಸಾ ಪುಟದ ಪವನನ
ತಾಳಿಗೆಯ ಕರ್ಪುರದ ಕವಳದ
ತೋಳ ತೆಕ್ಕೆಯ ತವಕಿಗರು ಹೆಣಗಿದರು ಪಟುಭಟರು ॥100॥
೧೦೧ ತೀರದಿಬ್ಬರ ಸತ್ವವವನಿಯ ...{Loading}...
ತೀರದಿಬ್ಬರ ಸತ್ವವವನಿಯ
ಸಾರದಿಬ್ಬರ ಬಲುಹುಗಾಣದು
ಪಾರುಖಾಣೆಯವದಟರಿಬ್ಬರ ಭುಜಬಲಾಟೋಪ
ಸಾರವಳಿಯದು ಮುಳಿಸು ದರ್ಪದ
ಧಾರೆ ಮುರಿಯದು ಜಯದ ತೃಷ್ಣೆಯ
ತೋರಹತ್ತರು ಹೆಣಗಿದರು ಕಲಿಭೀಮ ಮಾಗಧರು ॥101॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಇಬ್ಬರ ಶಕ್ತಿಯೂ ಇನ್ನೂ ಮುಗಿಯಲಿಲ್ಲ. ಇಬ್ಬರ ಸಾಮಥ್ರ್ಯವೂ ಇನ್ನೂ ಕೊನೆಮುಟ್ಟಲಿಲ್ಲ. ಆ ಶೂರರಿಬ್ಬರ ಭುಜಬಲದ ಆಟೋಪವೂ ಕೊನೆಗೊಳ್ಳಲಿಲ್ಲ. ಇಬ್ಬರ ಶಕ್ತಿಯೂ ಕುಗ್ಗಲಿಲ್ಲ. ಅವರ ರೋಷವಾಗಲಿ ದರ್ಪವಾಗಲಿ ಧಾರಾಕಾರವಾಗಿ ಮುಂದುವರಿಯುತ್ತಿತ್ತೇ ಹೊರತು ನಿಂತು ಹೋಗಲಿಲ್ಲ. ಜಯದ ತೃಷ್ಣೆಯಿಂದ ಆ ತೋರಹತ್ತರಾದ ಕಲಿಭೀಮ ಮಾಗಧರು ಹೆಣಗುತ್ತಿದ್ದರು.
ಪದಾರ್ಥ (ಕ.ಗ.ಪ)
ಪಾರುಖಾಣೆ- ಅಂತ್ಯ, ತೋರಹತ್ತ-ಬಲಿಷ್ಠರಾದ ಕೈಗಳುಳ್ಳವರು.
ಇಬ್ಬರ ಸತ್ವವು-ಆ ಇಬ್ಬರ ಸಾಮಥ್ರ್ಯವೂ, ತೀರದ-ಕೊನೆಗೊಳ್ಳಲಿಲ್ಲ, ಇಬ್ಬರ ಬಲುಹು-ಇಬ್ಬರ ಶಕ್ತಿಯೂ, ಅವನಿಯ ಸಾರದು-ಭೂಮಿಗೆ ಇಳಿಯಲಿಲ್ಲ, ಅವರಿಬ್ಬರ-ಆ ಇಬ್ಬರು ಪರಾಕ್ರಮಿಗಳ, ಭುಜಬಲಾಟೋಪ-ಬಾಹು ಸಾಮಥ್ರ್ಯದ ಅಬ್ಬರ, ಪಾರುಖಾಣೆಯವ ಕಾಣದು-ಕೊನೆ ಮುಟ್ಟಲಿಲ್ಲ, ಸಾರವಳಿಯದು ಮುಳಿಸ-ಪರಸ್ಪರರ ಕೋಪ ತನ್ನ ಶಕ್ತಿಯನ್ನು ಕಳೆದುಕೊಳ್ಳಲಿಲ್ಲ, ದರ್ಪದ ಧಾರೆ ಮುರಿಯದು-ಅವರ ಗರ್ವದ ಧಾರೆ ಕಡಿದುಹೋಗಲಿಲ್ಲ, ಜಯದ ತೃಷ್ಣೆಯ-ಜಯವನ್ನು ಪಡೆಯಲೇಬೇಕೆಂಬ ತೀವ್ರದಾಹವನ್ನು ಹೊಂದಿದ್ದ, ತೋರಹತ್ತರು ಬಲಿಷ್ಠವಾದ ಕೈಗಳಿದ್ದ, ಕಲಿಭೀಮ ಮಾಗಧರು-ಆ ಶೂರನಾದ ಭೀಮ ಮತ್ತು ಜರಾಸಂಧರು,
ಹೆಣಗಿದರು-ಹೋರಾಡಿದರು
ಮೂಲ ...{Loading}...
ತೀರದಿಬ್ಬರ ಸತ್ವವವನಿಯ
ಸಾರದಿಬ್ಬರ ಬಲುಹುಗಾಣದು
ಪಾರುಖಾಣೆಯವದಟರಿಬ್ಬರ ಭುಜಬಲಾಟೋಪ
ಸಾರವಳಿಯದು ಮುಳಿಸು ದರ್ಪದ
ಧಾರೆ ಮುರಿಯದು ಜಯದ ತೃಷ್ಣೆಯ
ತೋರಹತ್ತರು ಹೆಣಗಿದರು ಕಲಿಭೀಮ ಮಾಗಧರು ॥101॥
೧೦೨ ಪೂತು ಮಝ ...{Loading}...
ಪೂತು ಮಝ ಜಗಜಟ್ಟಿ ಧಣು ಧಣು
ವಾತಸುತ ಪರಬಲಭಯಂಕರ
ಸೋತನೋ ಪ್ರತಿಮಲ್ಲನೆಂದರು ಕೃಷ್ಣ ಫಲುಗುಣರು
ಭೀತನಾದನು ಭೀಮನಹಿತವಿ
ಘಾತಿ ಮಾಗಧರಾಯ ಮಲ್ಲ
ವ್ರಾತ ಕುಲಗಿರಿವಜ್ರನೆಂದುದು ಮಗಧ ಪರಿವಾರ ॥102॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಆಗ ಕೃಷ್ಣಾರ್ಜುನರು “ಪೂತು ಮಝು ಜಗಜಟ್ಟಿ ! ಧಣು ಧಣು ! ಪರಬಲಭಯಂಕರನಾದ ವಾಯುಸುತನೇ, ಇಗೋ ನಿನ್ನ ಪ್ರತಿಮಲ್ಲನಾದ ಜರಾಸಂಧ ಸೋತನು” ಎಂದು ಉದ್ಘೋಷಿಸಿದರು. ಅತ್ತ ಮಾಗಧನ ಪರಿವಾರದವರೂ ಸಹ “ಶತ್ರುಗಳ ನಾಶಕಾರಿಯಾದ ಕುಲಗಿರಿಯಂತಿರುವ ಮಲ್ಲ ಗುಂಪಿಗೆ ವಜ್ರದಂತಿರುವ ಮಾಗzsನೇ ಭೀತನಾದನು ಭೀಮ !” ಎಂದು ಉದ್ಘೋಷಿಸಿದರು.
ಪದಾರ್ಥ (ಕ.ಗ.ಪ)
ವಾತಸುತ-ಭೀಮ, ಅಹಿತವಿಘಾತಿ-ಶತ್ರುವನ್ನು ಗಾಯಗೊಳಿಸಿದವನು, ಕುಲಗಿರಿ ವಜ್ರ-ಕುಲಪರ್ವತವನ್ನು ಛೇದಿಸುವ, ವಜ್ರಾಯುಧಂತಿರುವವನು,
ಕೃಷ್ಣ ಫಲುಗುಣರು-ಕೃಷ್ಣ ಅರ್ಜುನರು ಭೀಮನನ್ನು ಉತ್ತೇಜಿಸುವುದಕ್ಕಾಗಿ, ‘ಪೂತು ಮಝ ಜಗಜಟ್ಟಿ !’ ‘ಧಣು ಧಣು, ವಾತಸುತ !’ ‘ಪರಬಲಭಯಂಕರ !’ ಸೋತನೋ ಪ್ರತಿಮಲ್ಲನು-ನನ್ನ ವಿರೋಧಿ ಯೋಧ ಸೋತನೆಯ್ಯಾ ! ಎಂದರು, ಮಗಧ ಪರಿವಾರ-ಮಾಗಧನ ಪರಿವಾರದವರು, ‘ಭೀತನಾದನು ಭೀಮನು !’ ಅಹಿತ ವಿಘಾತಿ ಮಾಗಧರಾಯ-ಶತ್ರುನಾಶಕದ ಜರಾಸಂಧ ರಾಜನೇ,
ಮಲ್ಲವ್ರಾತ ಕುಲಗಿರಿವಜ್ರ-ಮಲ್ಲರ ಸಮೂಹವೆಂಬ ಕುಲಪರ್ವತಕ್ಕೆ, ವಜ್ರಾಯುಧದಂತೆ ಇರುವವನೇ ! ಎಂದುದು-ಎಂದು ಘೋಷಿಸಿದರು
ಮೂಲ ...{Loading}...
ಪೂತು ಮಝ ಜಗಜಟ್ಟಿ ಧಣು ಧಣು
ವಾತಸುತ ಪರಬಲಭಯಂಕರ
ಸೋತನೋ ಪ್ರತಿಮಲ್ಲನೆಂದರು ಕೃಷ್ಣ ಫಲುಗುಣರು
ಭೀತನಾದನು ಭೀಮನಹಿತವಿ
ಘಾತಿ ಮಾಗಧರಾಯ ಮಲ್ಲ
ವ್ರಾತ ಕುಲಗಿರಿವಜ್ರನೆಂದುದು ಮಗಧ ಪರಿವಾರ ॥102॥
೧೦೩ ಅಲಸಿದರು ಬಿನ್ನಣಕೆ ...{Loading}...
ಅಲಸಿದರು ಬಿನ್ನಣಕೆ ಬಿಗುಹಿನ
ಕಳಿವುಗಳ ಬೇಸರಿಕೆಯಲಿ ಕಡು
ಲುಳಿ ಮಸಗಿ ಡಾವರಿಸಿ ಮನವನುಪಾಯ ಡಾವರಕೆ
ತೊಲಗಿ ನಿಂದರು ಕರ್ಪುರದ ತನಿ
ಹಳುಕನಣಲೊಳಗಡಸಿ ದಂಡೆಯ
ಬಲಿದು ಬರಸಿಡಿಲೆರಕವೆನೆ ತಾಗಿದರು ಬಳಸಿನಲಿ ॥103॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಚಾತುರ್ಯದಿಂದ ಪಟ್ಟುಗಳನ್ನು ಹಾಕುತ್ತಾ (ಎಷ್ಟೋಹೊತ್ತು )ಯುದ್ಧ ಮಾಡುತ್ತಿದ್ದ ಇಬ್ಬರಿಗೂ ಬೇಸರವಾಯಿತು. ನಂತರ ಯುದ್ಧದ ವೇಗ ಹೆಚ್ಚಾಗಿ ದಾಹಗೊಂಡು, ಮನಸ್ಸುಗಳು ಅದಕ್ಕೆ ಪರಿಹಾರ ಬಯಸಲು ಯುದ್ಧವನ್ನು ತಾತ್ಕಾಲಿಕವಾಗಿ ನಿಲ್ಲಿಸಿ ಕರ್ಪುರದ ಚೂರುಗಳನ್ನು ಬಾಯೊಳಕ್ಕೆ ತುರುಕಿಕಕೊಂಡು ನಂತರ ಬರಸಿಡಿಲು ಎರಗಿದಂತೆ ಒಬ್ಬರನ್ನೊಬ್ಬರು ತಾಗಿದರು.
ಪದಾರ್ಥ (ಕ.ಗ.ಪ)
ಅಲಸಿದರು ಬಿನ್ನಣಕೆ-ಒಬ್ಬರು ಇನ್ನೊಬ್ಬರ ಪಾಂಡಿತ್ಯಕ್ಕೆ, ಅಲಸಿದರು-ಸೋತು ಆಯಾಸಗೊಂಡರು, ಬಿಗುಹಿನ, ಕಳಿವುಗಳ ಬೇಸರಿಕೆಯಲಿ ಕಡುಲುಳಿ ಮಸಗಿ ಡಾವರಿಸಿ, ಮನವನು ಉಪಾಯ ಡಾವರಕೆ, ತೊಲಗಿ ನಿಂದರು, ಕರ್ಪುರದ-ಕರ್ಪುರದ, ತನಿಹಳುಕನು-ಹೊಸ ಹಳಕುಗಳನ್ನು, ಅಣಲೊಳಗಡಸಿ-ಬಾಯೊಳಕ್ಕೆ ತುರುಕಿಕೊಂಡು, ದಂಡೆಯ ಬಲಿದು-ದಂಡೆಗಳನ್ನು ಒತ್ತಿ ಅನಂತರ, ಬರಸಿಡಿಲೆರಕವೆನೆ-ಬರಸಿಡಿಲು ಎರಗಿತೋ ಎಂಬಂತೆ, ತಾಗಿದರು ಬಳಸಿನಲಿ-ಇದ್ದಕ್ಕಿದ್ದಂತೆ ಬಳಸಿ ಆಕ್ರಮಿಸಿದರು
ಮೂಲ ...{Loading}...
ಅಲಸಿದರು ಬಿನ್ನಣಕೆ ಬಿಗುಹಿನ
ಕಳಿವುಗಳ ಬೇಸರಿಕೆಯಲಿ ಕಡು
ಲುಳಿ ಮಸಗಿ ಡಾವರಿಸಿ ಮನವನುಪಾಯ ಡಾವರಕೆ
ತೊಲಗಿ ನಿಂದರು ಕರ್ಪುರದ ತನಿ
ಹಳುಕನಣಲೊಳಗಡಸಿ ದಂಡೆಯ
ಬಲಿದು ಬರಸಿಡಿಲೆರಕವೆನೆ ತಾಗಿದರು ಬಳಸಿನಲಿ ॥103॥
೧೦೪ ಬಾಳ ಹೊಯ್ಲೋ ...{Loading}...
ಬಾಳ ಹೊಯ್ಲೋ ಸಿಡಿಲ ತೊಡರಿನ
ಸೂಳುಗಳೊ ಸಿಡಿದಲೆಯ ಗಿರಿಗಳ
ಬೀಳುಗಳೊ ಬಿರುಹೊಯ್ಲ ಧಾರೆಯ ಕಿಡಿಯ ತುಂಡುಗಳೊ
ತೋಳ ನೆಗಹಿನ ಮುಷ್ಟಿ ಘಾತದ
ಮೇಲು ಘಾಯದ ಲುಳಿಯ ಘೋಳಾ
ಘೋಳಿಗಳನಾರೆಣಿಸುವರು ಕಲಿಭೀಮ ಮಾಗಧರ ॥104॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಇದೇನು ಖಡ್ಗದ ಹೊಡೆತವೋ, ಸಿಡಿಲ ತೊಡರಿನ ಸೂಳುಗಳೋ, ಸಿಡಿದು ಬೀಳುತ್ತಿರುವ ಪರ್ವತದ ಶೃಂಗಗಳೋ, ಜೋರಾಗಿ ಹೊಡೆದದ್ದರಿಂದ ಉಂಟಾದ ಒಂದೇ ಸಮನೆ ಸುರಿಯುತ್ತಿದ್ದ ಬೆಂಕಿಯ ಕಿಡಿಗಳೋ ಎಂಬಂತೆ ತೋಳೆತ್ತಿ ಹೊಡೆಯುತ್ತಿದ್ದ ಕಲೀಭೀಮ ಮಾಗಧರ ಮುಷ್ಠಿಘಾತದ ಮೇಲುಘಾಯದ ಅತಿಶಯತೆಯನ್ನು ಅವರ ಹೋರಾಟದ ಅಬ್ಬರವನ್ನು ಯಾರು ವರ್ಣಿಸಿಯಾರು ?
ಪದಾರ್ಥ (ಕ.ಗ.ಪ)
ಲುಳಿ-ರಭಸ
ಘೋಳಾಘೋಳಿ-ಅಬ್ಬರ
ಕಲಿಭೀಮ ಮಾಗಧರು ಪರಸ್ಪರ ಹೊಡೆದಾಡುವಾಗ, ಬಾಳ ಹೊಯ್ಲೋ-ಖಡ್ಗದ ಹೊಡೆತವೋ, ಸಿಡಿಲ ತೊಡರಿನ ಸೂಳುಗಳೊ-ಸಿಡಿಲ ಆಕ್ರಮಣ ಗರ್ಜನೆಗಳು, ಸಿಡಿದಲೆಯ ಗಿರಿಗಳ ಬೀಳುಗಳೊ-ಗಿರಿಗಳ ಶಿಖರ, ಸಿಡಿದು ಬೀಳುತ್ತಿರುವ ಶಬ್ದವೋ
ಬಿರುಹೊಯ್ಲ ಧಾರೆಯ ಕಿಡಿಯ ತುಂಡುಗಳೊ-ಬಿರುಸಿನಿಂದ, ಹೊಡೆದಾಗ ಶಸ್ತ್ರದ ಧಾರೆಯಿಂದ ಎದ್ದ ಕಿಡಿಯ ತುಂಡುಗಳೋ
ತೋಳ ನೆಗಹಿನ ಮುಷ್ಟಿ ಘಾತದ-ತೋಳನ್ನು ಮೇಲೆತ್ತಿ ಮುಷ್ಟಿಕಟ್ಟಿ ಹೊಡೆದಾಗ ಆದ, ಮೇಲು ಘಾಯದ ಲುಳಿಯ-ಕೈಚಳಕದ
ಘೋಳಾಘೋಳಿಗಳನು-ಪೆಟ್ಟುಗಳನ್ನು, ಆರೆಣಿಸುವರು-ಲೆಕ್ಕಹಾಕುವರಾರು ?
ಮೂಲ ...{Loading}...
ಬಾಳ ಹೊಯ್ಲೋ ಸಿಡಿಲ ತೊಡರಿನ
ಸೂಳುಗಳೊ ಸಿಡಿದಲೆಯ ಗಿರಿಗಳ
ಬೀಳುಗಳೊ ಬಿರುಹೊಯ್ಲ ಧಾರೆಯ ಕಿಡಿಯ ತುಂಡುಗಳೊ
ತೋಳ ನೆಗಹಿನ ಮುಷ್ಟಿ ಘಾತದ
ಮೇಲು ಘಾಯದ ಲುಳಿಯ ಘೋಳಾ
ಘೋಳಿಗಳನಾರೆಣಿಸುವರು ಕಲಿಭೀಮ ಮಾಗಧರ ॥104॥
೧೦೫ ಕುಸಿದು ಘಾಯವ ...{Loading}...
ಕುಸಿದು ಘಾಯವ ಕಳೆದು ವಕ್ಷದ
ಬೆಸುಗೆ ಬಿಡೆ ಸಿಡಿದೆದ್ದು ಹೊಯ್ಲಿಗೆ
ಮುಸುಡ ತಿರುಹುವ ಮೈಯನೊಡ್ಡಿದಡೌಕಿ ಧಟ್ಟಿಸುವ
ಅಸಮಸೆಗೆ ಮೈಯಳುಕದೆರಗುವ
ಹುಸಿವ ಜಾರುವ ಹೊಳೆವ ಹಣುಗುವ
ಬೆಸುವ ಬಿಡಿಸುವ ದಿಷ್ಟಿವಾಳರು ಹೊಕ್ಕು ಹೆಣಗಿದರು ॥105॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಬಗ್ಗಿ ಘಾಯವನ್ನು ತಪ್ಪಿಸಿಕೊಳ್ಳುವರು. ಎದೆಯ ಬೆಸುಗೆ ಬಿಡುವಂತೆ ಸಿಡಿದೆದ್ದು ಹೊಡೆತಕ್ಕೆ ಮುಖವನ್ನು ತಿರುಗಿಸಿ ಬಿಡುವರು. ಮೈಯನ್ನು ಒಡ್ಡಿದರೆ ಅವುಕಿ ಧಟ್ಟಿಸುವರು. ಸಣ್ಣ ಗಾಯಗಳಿಗೆ ಹೆದರದೆ ಮತ್ತೆ ಎರಗುವ, ಒಬ್ಬರಿಂದೊಬ್ಬರು ಬಿಡಿಸಿಕೊಳ್ಳುತ್ತಾ, ಮತ್ತೆ ಒಬ್ಬರನ್ನೊಬ್ಬರು ಹಿಡಿಯುವ ಮತ್ತು ಹಿಡಿತದಿಂದ ಜಾರುವ ಆ ಶೂರರು ಪರಸ್ಪರ ಹೊಕ್ಕು ಹೆಣಗಿದರು.
ಪದಾರ್ಥ (ಕ.ಗ.ಪ)
ಅಸಮನೆ-? ದಿಷ್ಟಿವಾಳ-ಶೂರ ?
ಕುಸಿದು ಘಾಯವ ಕಳೆದು-ಹೊಡೆತ ಬೀಳಲಿದ್ದಾಗ ತತ್ಕ್ಷಣ, ಬಗ್ಗಿ ಆಗಲಿದ್ದ ಗಾಯವನ್ನು ತಪ್ಪಿಸಿಕೊಂಡು, ವಕ್ಷದ ಬೆಸುಗೆ ಬಿಡೆ-ಎದೆಯ ಬೆಸುಗೆ ಕಳಚಿಹೋಯಿತು ಎಂಬಂತೆ, ಸಿಡಿದೆದ್ದು-ಸಿಡಿದು ಹಾಕಿ, ಹೊಯ್ಲಿಗೆ-ಹೊಡೆತಕ್ಕೆ, ಮುಸುಡ ತಿರುಹುವ-ಮುಖವನ್ನು ತಿರುಗಿಸಿಕೊಳ್ಳುವ, ಮೈಯನೊಡ್ಡಿದಡೆ-ಮೈಯನ್ನು ನೀಡಿದರೆ, ಔಕಿ ಧಟ್ಟಿಸುವ-ಬಲವಾಗಿ ಬಡಿಯುವ, ಅಸಮಸೆಗೆ-ಅಡ್ಡಾದಿಡ್ಡಿಗೆ, ಮೈಯಳುಕದೆ-ದೇಹಕ್ಕಾಗಿ ಅಂಜದೆ, ಎರಗುವ-ಶತ್ರುವಿನ ಮೇಲೆ ಬೀಳುವ, ಹುಸಿವ-ತಪ್ಪಿಸಿಕೊಳ್ಳುವ, ಜಾರುವ-ಜಾರಿಕೊಳ್ಳುವ,
ಹಣುಗುವ-ಅಡಗಿಕೊಳ್ಳುವ, ಬೆಸುವ-ಬೆಸೆದುಕೊಳ್ಳುವ, ಬಿಡಿಸುವ-ಬೆಸೆದುಕೊಂಡದ್ದನ್ನು ಬೇರ್ಪಡಿಸುವ, ದಿಷ್ಟಿವಾಳರು-ಸೂಕ್ಷ್ಮ ನೋಟವುಳ್ಳ ಗುರಿಕಾರರಾದ ಅವರು, ಹೊಕ್ಕು ಹೆಣಗಿದರು-ಒಬ್ಬರನ್ನೊಬ್ಬರು ಆಕ್ರಮಿಸಿ ಹೋರಾಡಿದರು
ಮೂಲ ...{Loading}...
ಕುಸಿದು ಘಾಯವ ಕಳೆದು ವಕ್ಷದ
ಬೆಸುಗೆ ಬಿಡೆ ಸಿಡಿದೆದ್ದು ಹೊಯ್ಲಿಗೆ
ಮುಸುಡ ತಿರುಹುವ ಮೈಯನೊಡ್ಡಿದಡೌಕಿ ಧಟ್ಟಿಸುವ
ಅಸಮಸೆಗೆ ಮೈಯಳುಕದೆರಗುವ
ಹುಸಿವ ಜಾರುವ ಹೊಳೆವ ಹಣುಗುವ
ಬೆಸುವ ಬಿಡಿಸುವ ದಿಷ್ಟಿವಾಳರು ಹೊಕ್ಕು ಹೆಣಗಿದರು ॥105॥
೧೦೬ ಪವನಜನ ರಾವಣನ ...{Loading}...
ಪವನಜನ ರಾವಣನ ಝಾಡಿಯ
ತಿವಿತಗಳು ಚಾಣೂರ ಕೃಷ್ಣರ
ಜವಳಿ ಹೊಯ್ಲಿವರೊಳಗೆ ಜೋಡಿಸವೇನ ಹೇಳುವೆನು
ಶಿವನ ಡಮರುಗದಾಟವೋ ಭೈ
ರವನ ಫಣೆಗಣ್ಣಾಟವೋ ಬಿರು
ದಿವಿಗುಳಿನ ದೆಖ್ಖಾಳ ಮಸಗಿತು ಭೀಮ ಮಾಗಧರ ॥106॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಆಂಜನೇಯ ಹಾಗೂ ರಾವಣರ ಝಾಡಿಯ ತಿವಿತಗಳು ಚಾಣೂರ ಕೃಷ್ಣರ ಜೋಡಿ ಹೊಡೆತಗಳು, ಭೀಮಮಾಗಧರ ತಿವಿತ ಹೊಡೆತಗಳಿಗೆ ಸರಿದೂಗುತ್ತಿರಲಿಲ್ಲ. ಏನು ಹೇಳಲಿ ! ಇದೇನು ಶಿವನ ಡಮರುಗದ ಆಟವೋ, ಭೈರವನ ಹಣೆಗಣ್ಣಿನ ಆಟವೋ ಎಂಬಂತೆ ಭೀಮಮಾಗಧರ ಹೊಡೆತಗಳ ಅತಿಶಯ ಹೆಚ್ಚಾಯಿತು.
ಪದಾರ್ಥ (ಕ.ಗ.ಪ)
ತಿವಿಗುಳು -ಹೊಡೆದಾಟ
ಪವನಜನ ರಾವಣನ-ಆಂಜನೇಯ ಮತ್ತು ರಾವಣರ, ಝಾಡಿಯ ತಿವಿತಗಳು-ರಭಸದಿಂದ ಕೂಡಿದ ತಿವಿತಗಳು, ಚಾಣೂರ ಕೃಷ್ಣರ-ಚಾಣೂರ ಮತ್ತು ಕೃಷ್ಣರ ನಡುವೆ ಪರಸ್ಪರ ಉಂಟಾದ, ಜವಳಿ ಹೊಯ್ಲ-ಜೋಡಿ ಹೊಡತಗಳು, ಇವರೊಳಗೆ ಜೋಡಿಸವು-ಭೀಮ ಜರಾಸಂಧರ ಹೊಡೆತಗಳಿಗೆ ಜೋಡಿಯಾಗವು, ಏನು ಹೇಳುವೆನು-ಏನು ಹೇಳಲಿ, ಶಿವನ ಡಮರುಗದಾಟವೋ-ಇದೇನು ಶಿವನ ಡಮರುಗದ ಆಟವೋ, ಭೈರವನ ಫಣೆಗಣ್ಣಾಟವೋ-ಭೈರವನ ಹಣೆಗಣ್ಣಿನ ಆಟವೋ ಎಂಬಂತೆ, ಭೀಮ ಮಾಗಧರ-ಜರಾಸಂಧ
ತಿವಿಗುಳಿನ ದೆಖ್ಖಾಳ-ತಿವಿತಗಳ ತೀವ್ರತೆ, ಮಸಗಿತು-ಹೆಚ್ಚಿತು
ಮೂಲ ...{Loading}...
ಪವನಜನ ರಾವಣನ ಝಾಡಿಯ
ತಿವಿತಗಳು ಚಾಣೂರ ಕೃಷ್ಣರ
ಜವಳಿ ಹೊಯ್ಲಿವರೊಳಗೆ ಜೋಡಿಸವೇನ ಹೇಳುವೆನು
ಶಿವನ ಡಮರುಗದಾಟವೋ ಭೈ
ರವನ ಫಣೆಗಣ್ಣಾಟವೋ ಬಿರು
ದಿವಿಗುಳಿನ ದೆಖ್ಖಾಳ ಮಸಗಿತು ಭೀಮ ಮಾಗಧರ ॥106॥
೧೦೭ ಕುಣಿದವಿಬ್ಬರ ಮುಷ್ಟಿಯಿಬ್ಬರ ...{Loading}...
ಕುಣಿದವಿಬ್ಬರ ಮುಷ್ಟಿಯಿಬ್ಬರ
ಹಣೆಯಲೆದೆಯಲಿ ಮೋರೆಯಲಿ ಭುಜ
ದಣಸಿನಲಿ ಕಂದದಲಿ ಶಿರದಲಿ ಬದಿಯಲುದರದಲಿ
ಝಣು ವಿರೋಧಿ ವಿಭಾಡ ಝಣು ಝಣು
ಝಣು ಜಗತ್ರಯ ಜಟ್ಟಿ ಝಣು ಝಣು
ಝಣು ಝಣೆಂಬಬ್ಬರಣೆ ಮಸಗಿದುದೆರಡು ಬಾಹೆಯಲಿ ॥107॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಇಬ್ಬರ ಮುಷ್ಠಿಗಳೂ ಆ ಇಬ್ಬರ ಹಣೆಯಲ್ಲಿ ಎದೆಯಲ್ಲಿ ಮೋರೆಯಲ್ಲಿ ಭುಜದ ಅಣಸಿನಲ್ಲಿ ಹೆಗಲಿನಲ್ಲಿ ತಲೆಯಲ್ಲಿ ಪಕ್ಕೆಯಲ್ಲಿ ಹೊಟ್ಟೆಯಲ್ಲಿ ಕುಣಿಯುತ್ತಿದ್ದವು ! ಝಣು ಝಣು ವಿರೋಧಿವಿನಾಶಕ” ! ‘ಝಣು ಝಣು ಝಣು ಜಗತ್ರಯ ಜಟ್ಟಿ’ ! ‘ಝಣು ಝಣು ಝಣು ಝಣು’ ! ಎಂಬ ಆರ್ಭಟ ಎರಡೂ ಪಕ್ಷಗಳಲ್ಲಿ ಏಳುತ್ತಿತ್ತು.
ಪದಾರ್ಥ (ಕ.ಗ.ಪ)
ವಿರೋಧಿವಿಭಾಡ-ಶತ್ರುವನ್ನು ನಾಶಮಾಡುವವನೇ !
ಇಬ್ಬರ ಮುಷ್ಟಿ-ಭೀಮ ಜರಾಸಂಧ ಇಬ್ಬರ ಮುಷ್ಟಿಗಳೂ, ಇಬ್ಬರ ಹಣೆಯಲಿ-ಹಣೆಯ ಮೇಲೆ, ಎದೆಯಲಿ-ಎದೆಯ ಮೇಲೆ
ಮೋರೆಯಲಿ-ಮುಖದ ಮೇಲೆ, ಭುಜದಣಸಿನಲಿ-ಭುಜದ ಕೀಲಿನ ಮೇಲೆ, ಬದಿಯಲಿ-ಪಕ್ಕೆಗಳ ಮೇಲೆ, ಉದರದಲಿ-ಹೊಟ್ಟೆಯ ಮೇಲೆ, ಕುಣಿದವು-ಕುಣಿದಾಡಿದವು, ಎರಡು ಬಾಹೆಯಲಿ-ಆಗ ಎರಡೂ ಪಕ್ಷಗಳಲ್ಲೂ ಜನ, ಝಣು ವಿರೋಧಿ ವಿಭಾಡ-ಝಣು ಶತ್ರುವಿನಾಶಕನೇ ! ಝಣು ಝಣು ಝಣು ಜಗತ್ರಯ ಜಟ್ಟಿ-ಝಣು ಝಣು ಝಣು ಮೂರು ಲೋಕಗಳಲ್ಲೂ ಏಕೈಕ ನೆನಿಸಿದ ಶೂರನೇ ! ಝಣು ಝಣು ಝಣು ಝಣು ಅಬ್ಬರಣೆ-ಆರ್ಭಟ, ಮಸಗಿತು-ಉಂಟಾಯಿತು
ಮೂಲ ...{Loading}...
ಕುಣಿದವಿಬ್ಬರ ಮುಷ್ಟಿಯಿಬ್ಬರ
ಹಣೆಯಲೆದೆಯಲಿ ಮೋರೆಯಲಿ ಭುಜ
ದಣಸಿನಲಿ ಕಂದದಲಿ ಶಿರದಲಿ ಬದಿಯಲುದರದಲಿ
ಝಣು ವಿರೋಧಿ ವಿಭಾಡ ಝಣು ಝಣು
ಝಣು ಜಗತ್ರಯ ಜಟ್ಟಿ ಝಣು ಝಣು
ಝಣು ಝಣೆಂಬಬ್ಬರಣೆ ಮಸಗಿದುದೆರಡು ಬಾಹೆಯಲಿ ॥107॥
೧೦೮ ಹೊಯ್ಲ ಹೊದರೆದ್ದವು ...{Loading}...
ಹೊಯ್ಲ ಹೊದರೆದ್ದವು ವಿಘಾತದ
ಕಯ್ಲುಳಿಯ ಕಡುಘಾಯ ಘಾಯಕೆ
ಮೆಯ್ಲವಣೆ ಲಂಬಿಸಿತು ಕಡುಹಿನ ಖತಿಯ ಕೈಮಸಕ
ಹೊಯ್ಲ ಹೊಗೆಗಳ ಹೋರಟೆಯ ವೇ
ಗಾಯ್ಲ ಮುಷ್ಟಾಮುಷ್ಟಿ ಗತಿಯ ದೃ
ಢಾಯ್ಲರಪ್ಪಳಿಸಿದರು ಪದ ಘಟ್ಟಣೆಗೆ ನೆಲ ಕುಸಿಯೆ ॥108॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಹೊಡೆತಗಳು ಅಧಿಕವಾದುವು. ಕೈಯನ್ನು ವೇಗವಾಗಿ ಎತ್ತಿ ಹೊಡೆಯುವ ರಭಸಕ್ಕೆ ಘಾಯಗಳಾಗುತ್ತಿದ್ದವು. ಅವುಗಳಿಗೆ ಪ್ರತಿಯಾಗಿ ವಿವಿಧ ವರಸೆಗಳಲ್ಲಿ ಯುದ್ಧ ಮುಂದುವರೆಯಿತು. ಮಹಾಕೋಪದಿಂದ ಅವರು ಹೊಡೆದಾಡುತ್ತಿದ್ದರೆ ಹೊಗೆ ಏಳುತ್ತಿತ್ತು. ಚುರುಕಿನ ಗತಿಯ ದೃಢಕಾಯರು ಒಬ್ಬರನ್ನೊಬ್ಬರು ಅಪ್ಪಳಿಸುತ್ತಿದ್ದರು. ಅವರ ಕಾಲಿನ ಘಟ್ಟಣೆಗೆ ನೆಲ ಕುಸಿಯಿತು.
ಪದಾರ್ಥ (ಕ.ಗ.ಪ)
ಹೊಯ್ಲ ಹೊದರೆದ್ದವು-ಹೊಡೆತಗಳು ಅಧಿಕವಾದುವು, ವಿಘಾತದ ಕಯ್ಲುಳಿಯ ಕಡುಘಾಯ ಘಾಯಕೆ, ಮೆಯ್ಲವಣೆ ಲಂಬಿಸಿತು ಖತಿಯ ಕೈಮಸಕ ಹೊಯ್ಲ ಹೊಗೆಗಳ ಹೋರಟೆಯ, ವೇಗಾಯ್ಲ ಮುಷ್ಟಾಮುಷ್ಟಿ ಗತಿಯ ದೃಢಾಯ್ಲರು ಅಪ್ಪಳಿಸಿದರು, ಪದ ಘಟ್ಟಣೆಗೆ-ಕಾಲಿನ ರಭಸದ ತುಳಿತಕ್ಕೆ, ನೆಲ ಕುಸುಯೆ-ನೆಲ ಕುಸಿದು ಹಳ್ಳಿ ಬೀಳಲಾಗಿ
ಮೂಲ ...{Loading}...
ಹೊಯ್ಲ ಹೊದರೆದ್ದವು ವಿಘಾತದ
ಕಯ್ಲುಳಿಯ ಕಡುಘಾಯ ಘಾಯಕೆ
ಮೆಯ್ಲವಣೆ ಲಂಬಿಸಿತು ಕಡುಹಿನ ಖತಿಯ ಕೈಮಸಕ
ಹೊಯ್ಲ ಹೊಗೆಗಳ ಹೋರಟೆಯ ವೇ
ಗಾಯ್ಲ ಮುಷ್ಟಾಮುಷ್ಟಿ ಗತಿಯ ದೃ
ಢಾಯ್ಲರಪ್ಪಳಿಸಿದರು ಪದ ಘಟ್ಟಣೆಗೆ ನೆಲ ಕುಸಿಯೆ ॥108॥
೧೦೯ ಆವ ಸಾಧನೆಯೋ ...{Loading}...
ಆವ ಸಾಧನೆಯೋ ವಿಘಾತಿಯ
ಲಾವಣಿಗೆಗದ್ರಿಗಳು ಬಿರಿದವು
ಮೈವಳಿಯಲುಕ್ಕಿದುದು ಕಡುಹಿನ ಖತಿಯ ಕೈಮಸಕ
ತಾವರೆಯ ತೆತ್ತಿಗನ ಕುಮುದದ
ಜೀವಿಗನ ಮಿಗೆ ಮೇಲು ನೋಟದೊ
ಳಾ ವಿಗಡರುಗಳಡಸಿ ತಿವಿದಾಡಿದರು ಬೇಸರದೆ ॥109॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅವರಿಬ್ಬರದೂ ಎಂತಹ ಅದ್ಭುತ ಸಾಧನೆಯೋ ! ಅವರ ಹೊಡೆತಗಳ ಆಕ್ರಮಣಕ್ಕೆ ಬೆಟ್ಟಗಳು ಬಿರಿದುವು. ಸಾಮಥ್ರ್ಯದಿಂದ ಹೋರಾಡುವಾಗ ರೋಷದಲ್ಲಿ ಕಡುಗೋಪದಿಂದ ಅವರು ಚಾತುರ್ಯದಿಂದ ಪರಸ್ಪರ ವಂಚಿಸುವುದು ಹೆಚ್ಚಾಯಿತು. ಹಗಲು ರಾತ್ರಿಗಳಲ್ಲಿ ಸೂರ್ಯಚಂದ್ರರು ಮೇಲುಗಡೆ ವೀಕ್ಷಕರಾಗಿರಲು ಆ ವೀರರಿಬ್ಬರೂ ಬೇಸರವಿಲ್ಲದೆ ಹೊಡೆದಾಡಿದರು.
ಪದಾರ್ಥ (ಕ.ಗ.ಪ)
ಲಾವಣಿಗೆ-ಆಕ್ರಮಣ, ತೆತ್ತಿಗ-ಮಿತ್ರ, ತಾವರೆಯ ತೆತ್ತಿಗ-ಸೂರ್ಯ, ವಿಗಡ-ಶೂರ ಮೈವಳಿ - ಸಾಮಥ್ರ್ಯ
ಆವ ಸಾಧನೆಯೋ-ಎಂತಹ ಅದ್ಭುತ ಸಾಧನೆಯೋ, ಅವರಿಬ್ಬರಿದೂ ವಿಘಾತಿಯ ಲಾವಣಿಗೆಗೆ-ಅವರ ಬಲವಾದ ಪೆಟ್ಟಿನ ಚಾತುರ್ಯಕ್ಕೆ, ಆದ್ರಿಗಳು ಬಿರಿದವು-ಬೆಟ್ಟಗಳೇ ಸೀಳುಬಿಟ್ಟವು, ಮೈವಳಿಯಲಿ ಉಕ್ಕಿದುದು ಕಡುಹಿನ ಖತಿಯ ಕೈಮಸಕ, ತಾವರೆಯ ತೆತ್ತಿಗನ-ಕಮಬಂಧುವಾದ ಸೂರ್ಯನು, ಕುಮುದದ ಜೀವಿಗಳ-ನೈದಿಲೆಯ ಜೀವವೆನಿಸಿದ ಚಂದ್ರನು, ಮಿಗೆ ಮೇಲು ನೋಟದೊಳು-ಅತಿಶಯವಾಗಿ ಮೇಲಿನಿಂದ, ಅವರಿಬ್ಬರ ಹೋರಾಟವನ್ನು ನೋಡಿತ್ತಿರಲಾಗಿ ಅಂದರೆ, ಹಗಲೂ ರಾತ್ರಿ ನಿರಂತರವಾಗಿ
ವಿಗಡರುಗಳು-ಆ ಪರಾಕ್ರಮಗಳಿಬ್ಬರೂ, ಬೇಸರದೆ-ಸ್ವಲ್ಪವೂ ಬೇಸರಪಟ್ಟುಕೊಳ್ಳದೆ, ಅಡಸಿ-ಒಬ್ಬರನ್ನೊಬ್ಬರು ಆಕ್ರಮಿಸಿ ತಿವಿದಾಡಿದರು
ಮೂಲ ...{Loading}...
ಆವ ಸಾಧನೆಯೋ ವಿಘಾತಿಯ
ಲಾವಣಿಗೆಗದ್ರಿಗಳು ಬಿರಿದವು
ಮೈವಳಿಯಲುಕ್ಕಿದುದು ಕಡುಹಿನ ಖತಿಯ ಕೈಮಸಕ
ತಾವರೆಯ ತೆತ್ತಿಗನ ಕುಮುದದ
ಜೀವಿಗನ ಮಿಗೆ ಮೇಲು ನೋಟದೊ
ಳಾ ವಿಗಡರುಗಳಡಸಿ ತಿವಿದಾಡಿದರು ಬೇಸರದೆ ॥109॥
೧೧೦ ತೆಗೆಯರರ್ಜುನ ಕೃಷ್ಣರೀತನ ...{Loading}...
ತೆಗೆಯರರ್ಜುನ ಕೃಷ್ಣರೀತನ
ನುಗಿಯರವನವರವನನಿರುಳಿನ
ಹಗಲ ವಿವರಣೆಯಿಲ್ಲ ಮಜ್ಜನ ಭೋಜನಾದಿಗಳ
ಬಗೆಗೆ ತಾರರು ಬಾಹುಸತ್ವದ
ಹೊಗರು ಹೋಗದು ಮನದ ಖಾತಿಯ
ತೆಗಹು ತಗ್ಗದು ಹೊಕ್ಕು ತಿವಿದಾಡಿದರು ಬೇಸರದೆ ॥110॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅರ್ಜುನ ಕೃಷ್ಣರು ಭೀಮನನ್ನು ಹಿಂದಕ್ಕೆ ಕರೆದುಕೊಳ್ಳುತ್ತಿರಲಿಲ್ಲ. ಮಾಗಧನ ಕಡೆಯವರೂ ಅವನನ್ನು ಹಿಂದಕ್ಕೆ ಕರೆದುಕೊಳ್ಳುತ್ತಿರಲಿಲ್ಲ ರಾತ್ರಿ ಹಗಲಿನ ಪರಿವೆಯೇ ಇರಲಿಲ್ಲ. ಮಜ್ಜನ ಭೋಜನಾದಿಗಳೂ ಅವರ ಮನಸ್ಸಿಗೆ ಬರುತ್ತಿರಲಿಲ್ಲ. ಅವರಿಬ್ಬರ ಬಾಹುಸತ್ವದ ಹೊಗರು ಹೋಗದು. ಅವರ ಮನಸ್ಸಿನ ಕೋಪವು ತಗ್ಗುತ್ತಿರಲಿಲ್ಲ. ಇಬ್ಬರೂ ಒಬ್ಬರನ್ನೊಬ್ಬರ ಮೆಲೆ ಬಿದ್ದು ಹೊಡೆದಾಡಿದರು.
ಪದಾರ್ಥ (ಕ.ಗ.ಪ)
ಹೊಗರು-ಕಾಂತಿ
ಅರ್ಜುನ ಕೃಷ್ಣರು, ಈತನ-ಭೀಮನನ್ನು, ತೆಗೆಯರು-ಹಿಂದಕ್ಕೆ ಸೆಳೆದುಕೊಳ್ಳರು ಅಂತೆಯೇ ಅವರು-ಜರಾಸಂಧನ ಕಡೆಯವರು, ಅವನ ಅವರವನು-ತಮ್ಮ ಕಡೆಯವಾದ ಅವನನ್ನು, ಉಗಿಯರು-ಹಿಂತಿಗೆಯರು ಹಾಗಾಗಿ, ಇರುಳಿನ ಹಗಲ ವಿವರಣೆಯಿಲ್ಲ-ರಾಥ್ರಿ ಹಗಲಿನ ವಿವರವನ್ನೇ ಯಾರೂ ಸಮನಿಸಲಿಲ್ಲ, ಮಜ್ಜನ ಭೋಜನಾದಿಗಳ-ಸ್ನಾನ ಊಟ ಮೊದಲಾದವನ್ನು, ಬಗೆಗೆ ತಾರರು-ಮನಸ್ಸಿಗೇ ತಂದು ಕೊಳ್ಳಲಿಲ್ಲ, ಬಾಹುಸತ್ವದ ಹೊಗರು ಹೋಗದು-ಇಬ್ಬರ ಬಾಹು ಸಾಮಥ್ರ್ಯದಲ್ಲೂ ಕಳೆ ಕುಗ್ಗಲಿಲ್ಲ, ಮನದ ಖಾತಿಯ-ಶತ್ರುವಿನ ಬಗ್ಗೆ ಇಬ್ಬರ, ತೆಗಹು ತಗ್ಗದು-ಪ್ರಮಾಣ ಕುಗ್ಗಲಿಲ್ಲ ಇಬ್ಬರೂ, ಬೇಸರದೆ-ಬೇಸರಗೊಳ್ಳದೆ ಪರಸ್ಪರ ಹೊಕ್ಕು-ಆಕ್ರಮಣ ಮಾಡಿ, ತಿವಿದಾಡಿದರು-ಹೆಣಗಾಡಿದರು
ಮೂಲ ...{Loading}...
ತೆಗೆಯರರ್ಜುನ ಕೃಷ್ಣರೀತನ
ನುಗಿಯರವನವರವನನಿರುಳಿನ
ಹಗಲ ವಿವರಣೆಯಿಲ್ಲ ಮಜ್ಜನ ಭೋಜನಾದಿಗಳ
ಬಗೆಗೆ ತಾರರು ಬಾಹುಸತ್ವದ
ಹೊಗರು ಹೋಗದು ಮನದ ಖಾತಿಯ
ತೆಗಹು ತಗ್ಗದು ಹೊಕ್ಕು ತಿವಿದಾಡಿದರು ಬೇಸರದೆ ॥110॥
೧೧೧ ಸತ್ವ ಸವೆಯದು ...{Loading}...
ಸತ್ವ ಸವೆಯದು ಮನದ ಮುಳಿಸಿನ
ಬಿತ್ತು ಬೀಯದು ಜಯದ ಬಯಕೆಯ
ಸುತ್ತು ಸಡಿಲದುಬಿಂಕ ಬೀಯದು ನೋಯದಾಟೋಪ
ತೆತ್ತ ಕೈ ಕಂಪಿಸದು ಮುಷ್ಟಿಯ
ಹತ್ತುಗೆಗೆ ಮನ ಝೋಂಪಿಸದು ಮದ
ವೆತ್ತಿ ಮೆಟ್ಟಿದರೊಬ್ಬರೊಬ್ಬರ ಮರ್ಮಘಾತದಲಿ ॥111॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಸಾಮಥ್ರ್ಯ ಕಡಿಮೆಯಾಗಲಿಲ್ಲ. ಮನಸ್ಸಿನ ಕೋಪ ನಾಶವಾಗಲಿಲ್ಲ. ಜಯದ ಬಯಕೆಯ ಬೀಜ ವ್ಯಯವಾಗಲಿಲ್ಲ. ಆಟೋಪಕ್ಕೆ ತಗ್ಗಲಿಲ್ಲ. ಹೊಡೆದಾಡುತ್ತಿದ್ದ ತೆತ್ತ ಕೈ ಕಂಪಿಸಲಿಲ್ಲ. ಭರದ ಏಟುಗಳು ಬಿದ್ದರೂ ಮನಸ್ಸಿನಲ್ಲಿ ಹೆದರಿಕೆ ಹುಟ್ಟುತ್ತಿರಲಿಲ್ಲ. ಮದವೇರಿ ಮರ್ಮಘಾತವಾಗುವಂತೆ ಒಬ್ಬರು ಒಬ್ಬರನ್ನು ಮೆಟ್ಟಿದರು.
ಪದಾರ್ಥ (ಕ.ಗ.ಪ)
ಸತ್ವ ಸವೆಯದು-ಇಬ್ಬರ ಶಕ್ತಿಯೂ ಕುಗ್ಗದು, ಮುಳಿಸಿನ ಬಿತ್ತು ಬೀಯದು-ಪರಸ್ಪರರ ಮೇಲಿನ ಕೋಪ ಇದ್ದಷ್ಟೇ, ಖರ್ಚಾಗಲಿಲ್ಲ, ಜಯದ ಬಯಕೆಯ ಸುತ್ತು ಸಡಿಲದು-ತಮ್ಮ ಸುತ್ತಿಕೊಂಡಿದ್ದ, ಜಯದ ಬಯಕೆ ಸಡಿಲವಾಗಲಿಲ್ಲ, ಬಿಂಕ ಬೀಯದು-ಗರ್ವ ಅಡಗಲಿಲ್ಲ, ನೋಯದಾಟೋಪ-ಅವರ ದರ್ಪಕ್ಕೆ ನೋವಾಗಲಿಲ್ಲ, ತೆತ್ತ ಕೈ-ನೀಡಿದ ಕೈ, ಕಂಪಿಸದು-ನಡುಗದು, ಮುಷ್ಟಿಯ ಹತ್ತುಗೆಗೆ-ಮುಷ್ಟಿ ಬಂದು ಗುದ್ದಿದರೆ, ಮನ ಝೋಂಪಿಸದು-ಮನಸ್ಸು ಅದುರದು, ಮದವೆತ್ತಿ-ಮದ ಏರಿ, ಮರ್ಮಘಾತದಲಿ-ಮರ್ಮಕ್ಕೆ ಘಾಸಿಯುಂಟು ಮಾಡುವಂತೆ, ಒಬ್ಬರೊಬ್ಬರ-ಒಬ್ಬರು ಇನ್ನೊಬ್ಬರನ್ನು, ಮೆಟ್ಟಿದರು-ಹಾಕಿ ತುಳಿದರು
ಮೂಲ ...{Loading}...
ಸತ್ವ ಸವೆಯದು ಮನದ ಮುಳಿಸಿನ
ಬಿತ್ತು ಬೀಯದು ಜಯದ ಬಯಕೆಯ
ಸುತ್ತು ಸಡಿಲದುಬಿಂಕ ಬೀಯದು ನೋಯದಾಟೋಪ
ತೆತ್ತ ಕೈ ಕಂಪಿಸದು ಮುಷ್ಟಿಯ
ಹತ್ತುಗೆಗೆ ಮನ ಝೋಂಪಿಸದು ಮದ
ವೆತ್ತಿ ಮೆಟ್ಟಿದರೊಬ್ಬರೊಬ್ಬರ ಮರ್ಮಘಾತದಲಿ ॥111॥
೧೧೨ ಅರಸಕೇಳೈದನೆಯದಿವಸದೊ ...{Loading}...
ಅರಸಕೇಳೈದನೆಯದಿವಸದೊ
ಳುರುಭಯಂಕರವಾಯ್ತು ಕದನದ
ಭರದೊಳೆಡೆದೆರಹಿಲ್ಲ ವಿಶ್ರಮವಿಲ್ಲ ನಿಮಿಷದಲಿ
ಎರಡು ದೆಸೆಯಲಿ ವೀಳೆಯದ ಕ
ರ್ಪುರದ ಕವಳದ ಕೈ ಚಳಕದಲಿ
ತೆರಹನಲ್ಲದೆ ಮತ್ತೆ ಕಾಣೆನು ಯುದ್ಧರಂಗದಲಿ ॥112॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಐದನೆಯ ದಿವಸದಲ್ಲಿ ಯುದ್ಧ ಬಲು ಭಯಂಕರವಾಯ್ತು. ಯುದ್ಧದಲ್ಲಿ ಯಾರಿಗೂ ಬಿಡುವಿಲ್ಲ. ಒಂದು ನಿಮಿಷವೂ ವಿಶ್ರಾಂತಿಯಿಲ್ಲ. ಎರಡು ಪಕ್ಷಗಳಲ್ಲಿಯೂ ಕರ್ಪೂರ ವೀಳೆಯವನ್ನು ಕೊಡುತ್ತಿದ್ದಾಗ ಮಾತ್ರ ಬಿಡುವು ಕಾಣುತ್ತಿತ್ತೇ ಹೊರತು ಅವರಿಬ್ಬರ ಹೋರಾಟದಲ್ಲಿ ಬಿಡುವು ಕಾಣಲಿಲ್ಲ.
ಪದಾರ್ಥ (ಕ.ಗ.ಪ)
ಅರಸ ಕೇಳು-ಜನಮೇಜಯ ರಾಜನೇ ಕೇಳು, ಐದನೆಯ ದಿವಸದೊಳು-ಐದನೆಯ ದಿನದಲ್ಲಿ, ಉರು ಭಯಂಕರವಾಯ್ತು-ಅವರಿಬ್ಬರ ಹೋರಾಟ ಅತಿ, ಭಯಂಕರವಾಗಿ ಕಂಡಿತು, ಕದನದ ಭರದೊಳು-ಹೋರಾಟದ ರಭಸದಲ್ಲೇನೂ, ಎಡೆದೆರಹಿಲ್ಲ-ಬಿಡುವು ಉಂಟಾಗಲಿಲ್ಲ, ವಿಶ್ರಮವಿಲ್ಲ ನಿಮಿಷದಲಿ-ನಿಮಿಷ ಮಾತ್ರವೂ ವಿಶ್ರಾಂತಿಯಿಲ್ಲ, ಎರಡು ದೆಸೆಯಲಿ-ಎರಡೂ ಕಡೆಗಳಲ್ಲಿ, ವೀಳೆಯದ ಕರ್ಪುರದ ಕವಳದ-ವೀಳೆಯವನ್ನು ಹಾಕಿಕೊಳ್ಳುವುದಕ್ಕೆ, ಕರ್ಪೂರದ ಹಳಕುಗಳನ್ನು ಬಾಯಿಗೆ ಎಸೆದುಕೊಳ್ಳುವುದಕ್ಕೆ
ಎಲೆಯಡಿಕೆಯ ಸೇವನೆಗಾಗಿ, ಕೈ ಚಳಕದಲಿ-ಚುರುಕಾಗಿ ಕೈಯನ್ನು ಬಳಸುವಲ್ಲಿ ಮಾತ್ರ, ತೆರಹನಲ್ಲದೆ-ಬಿಡುವನ್ನು ಕಾಣಲಾಗುತ್ತಿತ್ತೆ ಹೊರತು ಮತ್ತೆ ಕಾಣದು, ಯುದ್ಧರಂಗದಲಿ-ಅವರಿಬ್ಬರ ಹೋರಾಡುವ ಸಂದರ್ಭದಲ್ಲಿ, ಮಾತ್ರ ಬಿಡುವೆಂಬುದನ್ನು ಕಾಣಲೇ ಇಲ್ಲ
ಮೂಲ ...{Loading}...
ಅರಸಕೇಳೈದನೆಯದಿವಸದೊ
ಳುರುಭಯಂಕರವಾಯ್ತು ಕದನದ
ಭರದೊಳೆಡೆದೆರಹಿಲ್ಲ ವಿಶ್ರಮವಿಲ್ಲ ನಿಮಿಷದಲಿ
ಎರಡು ದೆಸೆಯಲಿ ವೀಳೆಯದ ಕ
ರ್ಪುರದ ಕವಳದ ಕೈ ಚಳಕದಲಿ
ತೆರಹನಲ್ಲದೆ ಮತ್ತೆ ಕಾಣೆನು ಯುದ್ಧರಂಗದಲಿ ॥112॥
೧೧೩ ಭರದ ಭಾರಣೆಯಲಿ ...{Loading}...
ಭರದ ಭಾರಣೆಯಲಿ ಚತುರ್ದಶಿ
ಯಿರುಳು ಮಗಧನ ಬಾಹುಸತ್ವದ
ಮುರಿವು ಮೊಳೆತುದು ಶೌರ್ಯ ಸೆಡೆದುದು ಭರದ ಬಿಗುಹಿನಲಿ
ಉರು ಪರಾಕ್ರಮ ತೇಜ ಪಡುವಣ
ತರಣಿಯಾದುದು ಧಟ್ಟಣೆಯ ಧರ
ಧುರಕೆ ನಿದ್ರ್ರವ ಜಿಹ್ವೆಯಾದುದು ನಿಮಿಷ ನಿಮಿಷದಲಿ ॥113॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಭರದ ಭಾರಣೆಯಲ್ಲಿ ಚತುರ್ದಶಿಯ ರಾತ್ರಿ ಮಗಧರಾಜನ ಬಾಹು ಸತ್ವದಲ್ಲಿ ಕುಸಿತ ಕಾಣಿಸಿಕೊಂಡಿತು. ಭಯದ ಬಿಗುಹಿನಲ್ಲಿ
ಶೌರ್ಯವು ಸೆಡೆತುಕೊಂಡಿತು. ಅವನ ಪರಾಕ್ರಮದ ತೇಜಸ್ಸು ಪಶ್ಚಿಮದ ಸೂರ್ಯನಂತೆ ಇಳಿಯತೊಡಗಿತು. ಅತಿಶಯವಾದ ಹೊಡೆತಗಳಿಂದ ನಿಮಿಷ ನಿಮಿಷಕ್ಕೂ ಅವನ ನಾಲಿಗೆ ಒಣಗುತ್ತಾ ಬಂದಿತು.
ಪದಾರ್ಥ (ಕ.ಗ.ಪ)
ತರಣಿ-ಸೂರ್ಯ, ಧರಧುರ-ಆಧಿಕ್ಯ, ಅತಿಶಯ
ಭರದ ಭಾರಣೆಯಲಿ-ಸಡಗರದ ಆ ಯುದ್ಧದ ಹೊಣಿಗಾರಿಕೆ ಇರಲಾಗಿ, ಚತುರ್ದಶಿಯಿರುಳು-ಹದಿನಾಲ್ಕನೆಯ ದಿನದ ರಾತ್ರಿ, ಮಗಧನ-ಜರಾಸಂಧನ, ಬಾಹುಸತ್ವದ ಮುರಿವು ಮೊಳೆತುದು-ಬಾಹು ಸಾಮಥ್ರ್ಯದಲ್ಲಿ, ತಿರುವು ಮೊಳೆಯಿತು(ಕಾಣಿಸಿತು), ಭಯದ ಬಿಗುಹಿನಲಿ-ಭಯದ ಬಿಗಿತದಿಂದ, ಶೌರ್ಯ ಸೆಡೆದುದು-ಪರಾಕ್ರಮ ಕುಗ್ಗಿತು, ಉರು ಪರಾಕ್ರಮ ತೇಜ-ಮಹತ್ತಾಗಿದ್ದ ಪರಾಕ್ರಮ ತೇಜಸ್ಸು, ಧಟ್ಟಣೆಯ ಧರಧುರಕೆ-ದಟ್ಟವಾದ ಉತ್ಸಾಹಕ್ಕೆ, ಪಡುವಣ ತರಣಿಯಾದುದು-ಪಶ್ಚಿಮದಲ್ಲಿ ಮುಳುಗುವ, ಸೂರ್ಯನ ತೇಜಸ್ಸಿನಂತಾಯಿತು, ನಿಮಿಷ ನಿಮಿಷದಲಿ-ಒಂದೊಂದು ನಿಮಿಷಕ್ಕೂ, ನಿದ್ರ್ರವ ಜಿಹ್ವೆಯಾದುದು-ನಾಲಿಗೆ ಒಣಗುತ್ತ ಬಂದಿತು
ಮೂಲ ...{Loading}...
ಭರದ ಭಾರಣೆಯಲಿ ಚತುರ್ದಶಿ
ಯಿರುಳು ಮಗಧನ ಬಾಹುಸತ್ವದ
ಮುರಿವು ಮೊಳೆತುದು ಶೌರ್ಯ ಸೆಡೆದುದು ಭರದ ಬಿಗುಹಿನಲಿ
ಉರು ಪರಾಕ್ರಮ ತೇಜ ಪಡುವಣ
ತರಣಿಯಾದುದು ಧಟ್ಟಣೆಯ ಧರ
ಧುರಕೆ ನಿದ್ರ್ರವ ಜಿಹ್ವೆಯಾದುದು ನಿಮಿಷ ನಿಮಿಷದಲಿ ॥113॥
೧೧೪ ಬೇಸರಿಕೆ ಬೇರೂರಿದುದು ...{Loading}...
ಬೇಸರಿಕೆ ಬೇರೂರಿದುದು ಜಯ
ದಾಸೆ ಜಾರಿತು ದಿಟ್ಟತನದ ವಿ
ಳಾಸ ಹಾರಿತು ಸುಪ್ರತಾಪದ ಕೆಂಪು ಕರಿದಾಯ್ತು
ಮೀಸಲಳಿದುದು ಮುಳಿಸು ಶೌರ್ಯದ
ವಾಸಿ ಪೈಸರವಾಯ್ತು ರಣದಾ
ವೇಶವಿಳಿದುದು ಮಗಧಪತಿಗಿದನರಿದನಸುರಾರಿ ॥114॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅವನಿಗೆ ನಿರಾಸಕ್ತಿ ಮೂಡಿತು. ಜಯದ ಆಸೆ ಜಾರಿತು. ದಿಟ್ಟತನ ವಿಲಾಸವೆಲ್ಲ ಹಾರಿಹೋಯಿತು. ಕೆಂಪಗೆ ಜ್ವಲಿಸುತ್ತಿದ್ದ ಅವನ ಪ್ರತಾಪವೆಲ್ಲ ಕರಿಕಾಗಿಬಿಟ್ಟಿತು. ಶತ್ರುವಿನ ಮೇಲೆ ಮೀಸಲಾಗಿದ್ದ ಅವನ ಆಕ್ರೋಶ ಅಳಿಯಿತು. ಶೌರ್ಯದ ಮೇಲಾಟ ಕಳೆದು ಹೋಯಿತು. ರಣದ ಆವೇಶ ಇಳಿಯಿತು. ಇದನ್ನು ಶ್ರೀಕೃಷ್ಣ ಗಮನಿಸಿದ.
ಪದಾರ್ಥ (ಕ.ಗ.ಪ)
ಪೈಸರವಾಯ್ತು-ಕಳೆದುಹೋಯಿತು.
ಮಗಧಪತಿಗೆ-ಮಗಧ ರಾಜನಿಗೆ, ಬೇಸರಿಕೆ ಬೇರೂರಿದುದು-ಬೇಸರಿಕೆ ಬೇರೂರಿತು, ಜಯದಾಸೆ ಜಾರಿತು-ಗೆಲ್ಲುವೆನೆಂಬ ಆಸೆ ಹೊರಟು ಹೋಯಿತು, ದಿಟ್ಟತನದ ವಿಳಾಸ ಹಾರಿತು-ವಿಲಾಸದಂತೆ ಇದ್ದ ಧೈರ್ಯ ಅದೃಶ್ಯವಾಯಿತು, ಸುಪ್ರತಾಪದ ಕೆಂಪು ಕರಿದಾಯ್ತು-ಇದುವರೆಗೆ ಕೆಂಪಗಿದ್ದಂತಹ, ವಿಶೇಷ ಪ್ರತಾಪ ಈಗ ಕಷ್ಟವಾಯಿತು, ಮೀಸಲಳಿದುದು ಮುಳಿಸು-ಮೀಸಲಿಟ್ಟಂತೆ ಶತ್ರುವಿನ ಮೇಲಿದ್ದ
ಕೋಪ ಹೊರಟು ಹೋಯಿತು, ಶೌರ್ಯದ ವಾಸಿ ಪೈಸರವಾಯ್ತು-ಹಟ ಹಿಡಿದಂತಿದ್ದ ಶೌರ್ಯ ಕಳೆದು ಹೋಯತು, ರಣದಾವೇಶವಿಳಿದುದು-ಯುದ್ಧ ಮುಂದುವರಿಸಬೇಕೆಂಬ, ಆವೇಶವೆಲ್ಲ ಜಾರಿಹೋಯಿತು, ಇದನರಿದನಸುರಾರಿ-ಕೃಷ್ಣ ಇದನ್ನು ಅರಿತುಕೊಂಡ
ಮೂಲ ...{Loading}...
ಬೇಸರಿಕೆ ಬೇರೂರಿದುದು ಜಯ
ದಾಸೆ ಜಾರಿತು ದಿಟ್ಟತನದ ವಿ
ಳಾಸ ಹಾರಿತು ಸುಪ್ರತಾಪದ ಕೆಂಪು ಕರಿದಾಯ್ತು
ಮೀಸಲಳಿದುದು ಮುಳಿಸು ಶೌರ್ಯದ
ವಾಸಿ ಪೈಸರವಾಯ್ತು ರಣದಾ
ವೇಶವಿಳಿದುದು ಮಗಧಪತಿಗಿದನರಿದನಸುರಾರಿ ॥114॥
೧೧೫ ಹೊರಗೆ ಬಲಿದೊಳಡಿಳ್ಳವನು ...{Loading}...
ಹೊರಗೆ ಬಲಿದೊಳಡಿಳ್ಳವನು ಪರ
ರರಿಯದಂತಿರೆ ತಿವಿವ ಮಗಧನ
ಪರಿಯನರಿದನು ದನುಜರಿಪು ಪರರಿಂತಜ್ಞನಲೆ
ಅರಿವುದರಿದೆ ಚರಾಚರಂಗಳ
ಹೊರಗೊಳಗು ತಾನಲ್ಲದಿಲ್ಲಿದ
ನರಿಯನೆ ಶಿವಯೆಂದನಾ ಜನಮೇಜಯನು ನಗುತ ॥115॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಹೊರಗೆ ಸತ್ವಶಾಲಿಯಂತೆ ಕಾಣಿಸಿಕೊಳ್ಳುತ್ತ ಒಳಗೆ ಸತ್ವಗುಂದಿರುವುದನ್ನು ತೋರ್ಪಡಿಸಿಕೊಳ್ಳದ ಹಾಗೆ ತಿವಿಯುತ್ತಿದ್ದ ಮಗಧನ ಪರಿಯನ್ನು ಪರೇಂಗಿತಜ್ಞನಾದ ಕೃಷ್ಣ ಅರಿತ. ಚರಾಚರಗಳ ಒಳಹೊರಗೆಲ್ಲ ಸರ್ವಾಂತರ್ಯಾಮಿಯಾಗಿರುವವನಿಗೆ ಅಷ್ಟು ತಿಳಿಯಲಾಗದೆ, ಶಿವ, ಎಂದು ಜನಮೇಯ ನಗುತ್ತಾ ಉದ್ಗರಿಸಿದ.
ಪದಾರ್ಥ (ಕ.ಗ.ಪ)
ಒಳಡಿಳ್ಳ-ಒಳಗೆ ಸತ್ವಹೀನ, ಇಂಗಿತಜ್ಞ-ಮನೋಭಾವವನ್ನು ತಿಳಿದವನು.
ಹೊರಗೆ ಬಲಿದು ಒಳಡಿಳ್ಳವನು ಪರರರಿಯದಂತಿರೆ-ಹೊರಗೆ, ಮಾತ್ರ ಬಲಶಾಲಿಯಂತೆ ತೋರಿಸಿಕೊಂಡು ಒಳಗೆ ಖಾಲಿ ಎಂಬುದು
ಪರರಿಗೆ ತಿಳಿಯದಿರಲಿ ಎಂಬಂತೆ ಶತ್ರುವನ್ನು ತಿವಿಯುತ್ತಿದ್ದ, ಮಗಧನ-ಜರಾಸಂಧ, ಪರಿಯನು-ರೀತಿಯನ್ನು, ನರಿದನು ದನುಜರಿಪು-ಕೃಷ್ಣ ತಿಳಿದುಕೊಂಡ, ಪರರಿಂತಜ್ಞನಲೆ-ಇತರ ಮನಸಲ್ಲಿರುವುದನ್ನು ಅರಿಯಬಲ್ಲವನಲ್ಲವೆ ? ಆ ಸಂದರ್ಭದಲ್ಲಿ ವೈಶಂಪಾಯನಿಂದ ಭಾರತದ ಕಥೆಯನ್ನು, ಆಲಿಸುತ್ತಿದ್ದ ಜನಮೇಜಯ ರಾಜನೂ ಸಹ, “ಚರಾಚರಂಗಳ ಹೊರಗೊಳಗು ತಾನು-ಚರ ಅಚರ ಜಗತ್ತೆಲ್ಲದರ, ಹೊರಗು ಒಳಗು ಎಲ್ಲ ತಾನೇ ಆಗಿರುವ ಕೃಷ್ಣ, ಅಲ್ಲದೆ ಇಲ್ಲಿದನರಿಯನೆ ಶಿವ !” ಎಲ್ಲ ಬಿಟ್ಟು ಇಲ್ಲಿನ
ಈ ವಿಷಯವನ್ನು ತಿಳಿಯನೆ ಶಿವ ! ಎಂದನು.
ಮೂಲ ...{Loading}...
ಹೊರಗೆ ಬಲಿದೊಳಡಿಳ್ಳವನು ಪರ
ರರಿಯದಂತಿರೆ ತಿವಿವ ಮಗಧನ
ಪರಿಯನರಿದನು ದನುಜರಿಪು ಪರರಿಂತಜ್ಞನಲೆ
ಅರಿವುದರಿದೆ ಚರಾಚರಂಗಳ
ಹೊರಗೊಳಗು ತಾನಲ್ಲದಿಲ್ಲಿದ
ನರಿಯನೆ ಶಿವಯೆಂದನಾ ಜನಮೇಜಯನು ನಗುತ ॥115॥
೧೧೬ ಎಲೆಲೆ ಪವನಜ ...{Loading}...
ಎಲೆಲೆ ಪವನಜ ಮಾಗಧೇಶ್ವರ
ನಳವನರಿದಾ ನಿನ್ನ ತಂದೆಯ
ಬಲುಹು ಕೊಂಡೀ ರಿಪುವ ಮುರಿ ನೆನೆ ನೆನೆ ಸಮೀರಣನ
ಬಲುಮುಗಿಲು ಬಿರುಗಾಳಿಯೊಡ್ಡಿನೊ
ಳಳುಕದೇ ಫಡ ಬೇಗ ಮಾಡೆನೆ
ಕಲಿ ವೃಕೋದರನನಿಲರೂಪ ಧ್ಯಾನಪರನಾದ ॥116॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಎಲೆಲೆ ಪವನಜ, ಮಾಗಧೇಶ್ವರನ ಶಕ್ತಿಯೇನಾಯಿತೆಂಬುದನ್ನು ತಿಳಿದೆಯಾ ? ನಿನ್ನ ತಂದೆಯಾದ ವಾಯುವಿನಿಂದ ಸಾಮಥ್ರ್ಯವನ್ನು ಪಡೆದು ಶತ್ರುವನ್ನು ಕೊಲ್ಲು. ನೆನೆ ನೆನೆ ವಾಯುವನ್ನು. ಎಷ್ಟೇ ಮೇಘಗಳ ರಾಶಿಯಿದ್ದರೂ ಬಿರುಗಾಳಿ ಬೀಸಿತೆಂದರೆ ಅಳುಕದೆ ಕೂತಿರುತ್ತದೆಯೇ ? ಬೇಗ ಮಾಡು ಆ ಕೆಲಸವನ್ನು ಎಂದ ಕೃಷ್ಣ. ಆಗ ಭೀಮನು ವಾಯುದೇವರನ್ನು ಧ್ಯಾನಿಸಿದ.
ಪದಾರ್ಥ (ಕ.ಗ.ಪ)
ಕೂಡಲೇ ಭಿಮನನ್ನು ಪ್ರಚೋದಿಸುತ್ತಾನೆ, ಎಲೆಲೆ ಪವನಜ-ಎಲೈ ಭೀಮ, ಮಾಗಧೇಶ್ವರ ಅಳವನು ಅರಿದಾ-ಜರಾಸಂಧನ ಶಕ್ತಿಯೇನಾಯಿತೆಂದು ತಿಳಿದೆಯಾ ? ನಿನ್ನ ತಂದೆಯ ಬಲುಹು ಕೊಂಡು-ನಿನ್ನ ತಂದೆಯಾದ ವಾಯುವಿನ ಸಾಮಥ್ರ್ಯವನ್ನು ಪಡೆದು
ಈ ರಿಪುವ ಮುರಿ-ಈ ಶರುವನ್ನು ನಾಶ ಮಾಡು, ನೆನೆ ನೆನೆ ಸಮೀರಣನ-ಕೂಡಲೆ ಸ್ಮರಿಸು ತಂದೆ ವಾಯುವನ್ನು, ಬಲುಮುಗಿಲು-ಮೋಡದ ರಾಶಿ ಭಾರಿಯೇ ಆಗಿದ್ದರೂ, ಬಿರುಗಾಳಿಯೊಡ್ಡಿನೊ-ಬಿರುಗಾಳಿ ನುಗ್ಗಿತೆಂದರೆ, ಅಳುಕದೇ-ಅದಕ್ಕೆ ಅಂಜಿ ತೆರಳುವುದಿಲ್ಲವೆ?
ಆದ್ದರಿಂದ ಬೇಗ ಮಾಡು ಮಾಡಬೇಕಾದ ಕೆಲಸವನ್ನು ಬೇಗ ಮಾಡು, ಎನೆ-ಎನ್ನಲು, ಕಲಿ ವೃಕೋದರನು-ಮೊದಲೇ ಶೂರನಾಗಿದ್ದ ಭೀಮನು, ಆ ನಿಲರೂಪ ಧ್ಯಾನಪರನಾದ-ವಾಯುವಿನ ರೂಪವನ್ನು ಧ್ಯಾನಿಸತೊಡಗಿದ
ಮೂಲ ...{Loading}...
ಎಲೆಲೆ ಪವನಜ ಮಾಗಧೇಶ್ವರ
ನಳವನರಿದಾ ನಿನ್ನ ತಂದೆಯ
ಬಲುಹು ಕೊಂಡೀ ರಿಪುವ ಮುರಿ ನೆನೆ ನೆನೆ ಸಮೀರಣನ
ಬಲುಮುಗಿಲು ಬಿರುಗಾಳಿಯೊಡ್ಡಿನೊ
ಳಳುಕದೇ ಫಡ ಬೇಗ ಮಾಡೆನೆ
ಕಲಿ ವೃಕೋದರನನಿಲರೂಪ ಧ್ಯಾನಪರನಾದ ॥116॥
೧೧೭ ಧ್ಯಾನದಲಿ ತನ್ಮಯತೆಯಾಗಲ ...{Loading}...
ಧ್ಯಾನದಲಿ ತನ್ಮಯತೆಯಾಗಲ
ನೂನ ಸಾಹಸನಾಗಿ ಮಗಧ ಮ
ಹಾ ನರೇಂದ್ರನ ತುಡುಕಿ ಹಿಡಿದನು ಮಲ್ಲಗಂಟಿನಲಿ
ಆ ನಗೆಯನೇವಣ್ಣಿಸುವೆನನು
ಮಾನಿಸದೆ ಬೀಸಿದನು ಬವಣೆಯ
ಭಾನುಮಂಡಲದಂತೆ ತಿರುಗಿದನಾ ಜರಾಸಂಧ ॥117॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಭೀಮ ತನ್ಮಯನಾದ, ತಂದೆಯನ್ನು ಧ್ಯಾನಿಸಿದ, ಶಕ್ತಿಯನ್ನು ಪಡೆದ. ಅತಿಶಯ ಸಾಹಸ ಪಡೆದವನಾಗಿ ಮಗಧಮಹಾನರೇಂದ್ರನನ್ನು ಹಿಡಿದು ಮಲ್ಲಗಂಟಿನಲ್ಲಿ ಸಿಕ್ಕಿ ಹಾಕಿದ. ಆಗ ಭೀಮನಿಗಾದ ಸಂತೋಷವನ್ನು ಏನೆಂದು ಹೇಳಲಿ ! ಅವನನ್ನು ಎತ್ತಿ ತಿರುಗಿಸಿ ಎಸೆದ. ಜರಾಸಂಧ ಸೂರ್ಯಮಂಡಲದಂತೆ ಗಿರ್ರನೆ ತಿರುಗಿದ.
ಪದಾರ್ಥ (ಕ.ಗ.ಪ)
ಅನೂನ-ಕೊರತೆಯಿಲ್ಲದ, ಅತಿಶಯವಾದ, ಬವಣೆ-ಭ್ರಮಣೆ, ಸುತ್ತುವಿಕೆ
ಧ್ಯಾನದಲಿ ತನ್ಮಯತೆಯಾಗಲು-ವಾಯುವನ್ನು ಧ್ಯಾನಿಸುವಲ್ಲಿ ತನ್ಮಯನಾಗಿರಲು, ಅನೂನ ಸಾಹಸನಾಗಿ-ಭೀಮನುಕೊರತೆಯಿಲ್ಲದ ಮಹಾಸಾಹಸಿಯಾಗಿ, ಮಲ್ಲಗಂಟಿನಲಿ-ಮಲ್ಲಗಂಟಿನಲ್ಲಿ, ಮಗಧ ಮಹಾ ನರೇಂದ್ರನ-ಆ ಮಗಧ ಮಹಾರಾಜನನ್ನು, ತುಡುಕಿ ಹಿಡಿದನು-ನುಗ್ಗಿ ಹಿಡಿದು ಹಾಕಿದನು, ಆ ನಗೆಯನೇವಣ್ಣಿಸುವೆನನು-ಆಗ ಭೀಮನಿಗಾದ ಸಂತೋಷವನ್ನು, ಅವನ ನಗುವನ್ನು ಏನೆಂದು ವರ್ಣಿಸಲಿ ? ಮಾನಿಸದೆ ಬೀಸಿದನು-ತಡಮಾಡದೆ ಜರಸಂಧನನ್ನು ಬೀಸಿದ, ಬವಣೆಯ ಭಾನುಮಂಡಲದಂತೆ-ನಿರಂತವಾಗಿ ತಿರುಗುವ ಸೂರ್ಯಮಂಡಲದಂತೆ, ತಿರುಗಿದಾ ಜರಾಸಂಧ-ಆ ಜರಸಂಧ ತಿರುಗತೊಡಗಿದ
ಮೂಲ ...{Loading}...
ಧ್ಯಾನದಲಿ ತನ್ಮಯತೆಯಾಗಲ
ನೂನ ಸಾಹಸನಾಗಿ ಮಗಧ ಮ
ಹಾ ನರೇಂದ್ರನ ತುಡುಕಿ ಹಿಡಿದನು ಮಲ್ಲಗಂಟಿನಲಿ
ಆ ನಗೆಯನೇವಣ್ಣಿಸುವೆನನು
ಮಾನಿಸದೆ ಬೀಸಿದನು ಬವಣೆಯ
ಭಾನುಮಂಡಲದಂತೆ ತಿರುಗಿದನಾ ಜರಾಸಂಧ ॥117॥
೧೧೮ ಬರಸೆಳೆದು ಕರದಿನ್ದ ...{Loading}...
ಬರಸೆಳೆದು ಕರದಿಂದ ಮಾಗಧ
ನೆರಡು ಕಾಲನು ಹಿಡಿದು ಸೀಳಿದು
ಧರೆಗೆ ಬಿಸುಟನು ಸಂಧಿಸಿದವಾ ಸೀಳ್ ತತುಕ್ಷಣಕೆ
ಮರಳಿ ಪವನಜ ಹಿಡಿದು ಸೀಳುವ
ನಿರದೆ ಮಗುಳವು ಸಂಧಿಸುವವೀ
ಪರಿ ಹಲವು ಸೂಳಿನಲಿ ಭೀಮನೊಳೊದಗಿದನು ಮಗಧ ॥118॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ತನ್ನ ಕೈಗಳಿಂದ ಅವನನ್ನು ಬರಸೆಳೆದು ಕಾಲುಗಳನ್ನು ಹಿಡಿದು ಎರಡು ಭಾಗವಾಗಿ ಶರೀರವನ್ನು ಸೀಳಿ ಭೂಮಿಯ ಮೇಲೆ ಎಸೆದ. ಆದರೆ ಆ ಕ್ಷಣವೇ ಆ ಸೀಳುಗಳು ಮತ್ತೆ ಒಟ್ಟು ಸೇರಿದುವು. ಭೀಮ ಅವನನ್ನು ಹಿಡಿದು ಮತ್ತೆ ಸೀಳಿ ಹಾಕಿದ. ಮತ್ತೆ ಸಂಧಿಸಿದುವು. ಹೀಗೆ ಹಲವು ಬಾರಿ ಮಗಧ ಭೀಮನೊಡನೆ ಹೋರಾಟಕ್ಕೆ ನಿಲ್ಲುತ್ತಿದ್ದ.
ಪದಾರ್ಥ (ಕ.ಗ.ಪ)
ಸೂಳ್-ಸರದಿ, ಸಲ
ಬರಸೆಳೆದು ಕರದಿಂದ-ಕೈಯಿಂದ ಮಗಧನನ್ನು ಹಿಡಿದು ಎಳೆದುಕೊಂಡ, ಕಾಲನು ಹಿಡಿದು ಸೀಳಿದು-ಒಂದೊಂದು ಕಾಲನ್ನು ಒಂದೊಂದು, ಕೈಯಲ್ಲಿ ಹಿಡಿದು ಎರಡು ಪಾಲಾಗಿ ಸೀಳಿ, ಧರೆಗೆ ಬಿಸುಟನು-ಭೂಮಿಗೆ ಎಸೆದ, ಸಂಧಿಸಿದವಾ ಸೀಳ್ ತತುಕ್ಷಣಕೆ-ಆ ತಕ್ಷಣವೇ ಆ ಸೀಳುಗಳು, ಮತ್ತೆ ಜೋಡಿಸಿಕೊಂಡು ಒಂದಾದವು, ಮರಳಿ ಪವನಜ ಹಿಡಿದು ಸೀಳುವನು-ಭೀಮ ಮತ್ತೆ ಅವನನ್ನು
ಹಿಡಿದು ಸೀಳುವನು, ಇರದೆ ಮಗುಳವು ಸಂಧಿಸುವವು-ಅವು ಮತ್ತೆ, ಮೊದಲಿನಂತೆಯೇ ಜೋಡಿಯಾಗುವುವು, ಈ ಪರಿ-ಈ ರೀತಿ
ಹಲವು ಸೂಳಿನಲಿ-ಹಲವು ಸಾರಿ, ಭೀಮನೊಳೊದಗಿದನು ಮಗಧ-ಜರಾಸಂಧ ಮತ್ತೆ ಮತ್ತೆ, ಜೀವ ಕಳೆದು ಭೀಮನ ಮೇಲೆ ಎರಗುತ್ತಿದ್ದ
ಮೂಲ ...{Loading}...
ಬರಸೆಳೆದು ಕರದಿಂದ ಮಾಗಧ
ನೆರಡು ಕಾಲನು ಹಿಡಿದು ಸೀಳಿದು
ಧರೆಗೆ ಬಿಸುಟನು ಸಂಧಿಸಿದವಾ ಸೀಳ್ ತತುಕ್ಷಣಕೆ
ಮರಳಿ ಪವನಜ ಹಿಡಿದು ಸೀಳುವ
ನಿರದೆ ಮಗುಳವು ಸಂಧಿಸುವವೀ
ಪರಿ ಹಲವು ಸೂಳಿನಲಿ ಭೀಮನೊಳೊದಗಿದನು ಮಗಧ ॥118॥
೧೧೯ ಮುರಮಥನನದನರಿತು ನಿಜಕರ ...{Loading}...
ಮುರಮಥನನದನರಿತು ನಿಜಕರ
ವೆರಡ ಪಲ್ಲಟವಾಗಿ ಸಂಧಿಸ
ಲರಿವಿದಾರಣ ಭೀಮ ನೋಡುತ ಮರಳಿ ಮಾಗಧನ
ಎರಡು ಸೀಳನು ಮಾಡಿ ಹೊಯ್ದ
ಬ್ಬರಿಸಿ ಪಲ್ಲಟವಾಗಿ ಸೇರಿಸಿ
ತಿರುಗಿಸಿದನೇನೆಂಬೆನುನ್ನತ ಬಾಹುಸತ್ವದಲಿ ॥119॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅದನ್ನರಿತ ಕೃಷ್ಣ ತನ್ನ ಎರಡು ಕೈಗಳನ್ನು ಪಲ್ಲಟವಾಗಿ ಜೋಡಿಸಿ ಭೀಮನಿಗೆ ಸಂಜ್ಞೆ ಮಾಡಿದ. ಅದನ್ನು ಅರ್ಥಮಾಡಿಕೊಂಡ ಅರಿವಿದಾರಣನಾದ ಭೀಮ ಮತ್ತೆ ಮಗಧನನ್ನು ಬಡಿದು ಅಬ್ಬರಿಸಿ ಅವನನ್ನು ಎರಡು ಪಾಲಾಗಿ ಸೀಳಿ, ಆ ಸೀಳುಗಳನ್ನು ಪಲ್ಲಟವಾಗಿ ಜೋಡಿಸಿ, ತನ್ನ ತೋಳ ಸಾಮಥ್ರ್ಯದಿಂದ ಆಗಸದಲ್ಲಿ ತಿರುಗಿಸಿದ.
ಪದಾರ್ಥ (ಕ.ಗ.ಪ)
ಮುರಮಥನನು-ಕೃಷ್ಣನು, ಅದನರಿತು-ಅದನ್ನು ಅರ್ಥವೂ ಮಾಡಿಕೊಂಡು, ನಿಜಕರವೆರಡ ಪಲ್ಲಟವಾಗಿ ಸಂಧಿಸಲು-ತನ್ನ ಎರಡು ಕೈಗಳನ್ನೂ, ಅದಲು ಬದಲಾಗಿ ಜೋಡಿಸಲು, ಅರಿವಿದಾರಣ ಭೀಮ-ಶತ್ರುಗಳನ್ನು ಸೀಳುವಂತಹ ಭೀಮ, ನೋಡುತ-ನೋಡಿ ಅರ್ಥಮಾಡಿಕೊಂಡು, ಮರಳಿ-ಮತ್ತೆ, ಮಾಗಧನ-ಜರಾಸಂಧನನ್ನು, ಎರಡು ಸೀಳನು ಮಾಡಿ ಹೊಯ್ದಬ್ಬರಿಸಿ-ಎರಡು ಸೀಳುಮಾಡಿ
ಬಡಿದು ಆರ್ಭಟಿಸುತ್ತಾ, ಪಲ್ಲಟವಾಗಿ ಸೇರಿಸಿ-ಅದಲು ಬದಲು ಮಾಡಿ ಜೋಡಿಸಿ, ತಿರುಗಿಸಿದನು-ಸುತ್ತಿಸಿದನು, ಉನ್ನತ ಬಾಹುಸತ್ವದಲಿ-ಅತಿಶಯವಾದಂತಹ ಬಾಹುಸಾಮಥ್ರ್ಯದಿಂದ, ಏನೆಂಬೆನು-ಅವನ ಬಲುಹನ್ನು ಏನೆಂದು ವರ್ಣಿಸಲಿ ?
ಮೂಲ ...{Loading}...
ಮುರಮಥನನದನರಿತು ನಿಜಕರ
ವೆರಡ ಪಲ್ಲಟವಾಗಿ ಸಂಧಿಸ
ಲರಿವಿದಾರಣ ಭೀಮ ನೋಡುತ ಮರಳಿ ಮಾಗಧನ
ಎರಡು ಸೀಳನು ಮಾಡಿ ಹೊಯ್ದ
ಬ್ಬರಿಸಿ ಪಲ್ಲಟವಾಗಿ ಸೇರಿಸಿ
ತಿರುಗಿಸಿದನೇನೆಂಬೆನುನ್ನತ ಬಾಹುಸತ್ವದಲಿ ॥119॥
೧೨೦ ತಿರುಹಿದನು ನೂರೆಣ್ಟು ...{Loading}...
ತಿರುಹಿದನು ನೂರೆಂಟು ಸೂಳನು
ಧರೆಯೊಳಪ್ಪಳಿಸಿದನು ಬಳಿಕಾ
ಪುರಜನದ ಪರಿಜನದ ಹಾಹಾರವದ ರಹಿ ಮಸಗೆ
ತೆರಳಿತಲ್ಲಿಯದಲ್ಲಿ ಮಾಗಧ
ನರಸಿಯರು ಬಿಡುಮುಡಿಯ ಜಠರದ
ಕರದ ಬಿರುಹೊಯ್ಲಿನಲಿ ಹೊರವಂಟರು ನಿಜಾಲಯವ ॥120॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಹಾಗೆ ನೂರೆಂಟು ಬಾರಿ ತಿರುಗಿಸಿ ಭೂಮಿಯ ಮೇಲೆ ಅಪ್ಪಳಿಸಿದ. ಆಗ ಆ ಪುರಜನರ, ಮಗಧನ ಪರಿಜನರ ಹಾಹಾ ರವದ ತೀವ್ರತೆ ಹೆಚ್ಚಿತು. ಮಗಧನ ಅಂತಃಪುರದ ಸ್ತ್ರೀಯರು ತಲೆಯನ್ನು ಬಿರಿಹೊಯ್ದಕೊಂಡು ಹೊಟ್ಟೆಯನ್ನು ಬಡಿದುಕೊಳ್ಳುತ್ತಾ
ತಮ್ಮ ಮನೆಗಳಿಂದ ಹೊರಟುಬಂದರು.
ಪದಾರ್ಥ (ಕ.ಗ.ಪ)
ರಹಿ - ತೀವ್ರತೆ
ರುಹಿದನು ನೂರೆಂಟು ಸೂಳನು-ನೂರೆಂಟು ಸಾರಿ ಆ ದೇಹವನ್ನು ಸುತ್ತಿಸಿದ, ಅನಂತರ ಧರೆಯೊಳಪ್ಪಳಿಸಿದನು-ಭೂಮಿಗೆ ಅಪ್ಪಳಿಸಿದ, ಬಳಿಕ-ಅನಂತರ, ಆ ಪುರಜನದ ಪರಿಜನದ-ಆಪಟ್ಟದ ಜನರ ಹಾಗೂ ಅವನ ಪರಿವಾರದವರ, ಹಾಹಾರವದ ರಹಿ ಮಸಗೆ-ಹಾಹಾ ಎಂಬ ರೋಧನದ ಧ್ವನಿಯ ಗದ್ದಲ ಹೆಚ್ಚಿತು, ಜನ ತೆರಳಿತು ಅಲ್ಲಿಯದಲ್ಲಿ-ಇದ್ದಲ್ಲಿಂದ ಬರತೊಡಗಿದರು,
ಮಾಗಧ ನರಸಿಯರು-ಜರಾಸಂಧನ ಮಡದಿಯರು, ಬಿಡುಮುಡಿಯ-ತಲೆಯನ್ನು ಬಿರಿಹೊಯ್ದುಕೊಂಡವರಾಗಿ, ಜಠರದ ಕರದ ಬಿರುಹೊಯ್ಲಿನಲಿ-ತಮ್ಮ ಕೈಗಳಿಂದ ಬಿರುಸಾಗಿ, ಹೊಟ್ಟೆಯನ್ನು ಬಡಿದುಕೊಳ್ಳುತ್ತಾ, ನಿಜಾಲಯವ ಹೊರವಂಟರು-ತಮ್ಮ ವಸತಿಯನ್ನು ಬಿಟ್ಟು ಹೊರಟರು
ಮೂಲ ...{Loading}...
ತಿರುಹಿದನು ನೂರೆಂಟು ಸೂಳನು
ಧರೆಯೊಳಪ್ಪಳಿಸಿದನು ಬಳಿಕಾ
ಪುರಜನದ ಪರಿಜನದ ಹಾಹಾರವದ ರಹಿ ಮಸಗೆ
ತೆರಳಿತಲ್ಲಿಯದಲ್ಲಿ ಮಾಗಧ
ನರಸಿಯರು ಬಿಡುಮುಡಿಯ ಜಠರದ
ಕರದ ಬಿರುಹೊಯ್ಲಿನಲಿ ಹೊರವಂಟರು ನಿಜಾಲಯವ ॥120॥
೧೨೧ ಮನೆ ಮನೆಯ ...{Loading}...
ಮನೆ ಮನೆಯ ಕದವಿಕ್ಕಿದವು ನೃಪ
ವನಿತೆಯರು ಹೊರವಂಟರಲ್ಲಿಯ
ಮನುಜರಡಗಿದರದ್ರಿ ಗುಹೆಯಲಿ ಬೇಹ ಬೇಹವರು
ಜನದ ಕೋಲಾಹಲವನಾತನ
ತನುಜರೋಟವನವನ ಸತಿಯರ
ನಿನದವನು ಕಂಡಸುರಹರ ಸಾರಿದನು ಕೈ ನೆಗೆಹಿ ॥121॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಮನೆ ಮನೆಯ ಬಾಗಿಲುಗಳು ಮುಚ್ಚಿದುವು. ಅರಮನೆಯ ಸ್ತ್ರೀಯರು ಹೊರಹೊರಟರು. ಅಲ್ಲಿಯ ಪುರುಷರು ಬೆಟ್ಟದ ಗುಹೆಗಳಲ್ಲಿ ಅಡಗಿಕೊಳ್ಳ ತೊಡಗಿದರು. ಜನದ ಕೋಲಾಹಲವನ್ನು ಜರಾಸಂಧನ ಮಕ್ಕಳ ಓಟವನ್ನೂ ಅವನ ಸತಿಯರ ರೋದನ ಧ್ವನಿಯನ್ನು ಕಂಡ ಕೃಷ್ಣ ಕೈಯತ್ತಿ ಅವರಿಗೆ ಅಭಯವನ್ನು ಸಾರಿ ಹೇಳತೊಡಗಿದ.
ಪದಾರ್ಥ (ಕ.ಗ.ಪ)
ನೆಗಹು-ಎತ್ತು
ಮನೆ ಮನೆಯ ಕದವಿಕ್ಕಿದವು-ಒಂದೊಂದು ಮನೆಯ ಬಾಗಿಲೂ ಮುಚ್ಚಿತು, ನೃಪವನಿತೆಯರು ಹೊರವಂಟರು-ರಾಜನ ಅಂತಃಪುರದ ಸ್ತ್ರೀಯರೆಲ್ಲ ಹೊರಬಂದರು, ಅಲ್ಲಿಯ ಮನುಜರು-ಅಲ್ಲಿದ್ದ ಜನರೆಲ್ಲ, ಬೇಹ ಬೇಹವರು-ಬೇಕು ಬೇಕಾದವರು, ಅದ್ರಿ ಗುಹೆಯಲಿ ಅಡಗಿದರು-ಶತ್ರುಗಳು ಏನು ಮಾಡುವರೋ, ಎಂಬ ಭಯದಿಂದ ಬೆಟ್ಟದ ಗುಹೆಗಳಲ್ಲಿ ಅವಿತುಕೊಂಡರು, ಜನದ ಕೋಲಾಹಲವನು-ಜನರ ಆ ಗದ್ದಲವನ್ನು, ಆತನ ತನುಜರ ಓಟವನು-ಅವನ ಮಕ್ಕಳು ಹೆದರಿ ಓಡುತ್ತಿದ್ದುದನ್ನು, ಅವನ ಸತಿಯರ ನಿನದವನು-ಅವನ ಪತ್ನಿಯರ ಧ್ವನಿಯನ್ನು, ಕಂಡು-ನೋಡಿ, ಅಸುರಹರ-ಶ್ರೀಕೃಷ್ಣ, ಕೈ ನೆಗೆಹಿ-ಕೈಯೆತ್ತಿ, ಸಾರಿದನು-ಹೀಗೆ ಸಾರಿ ಹೇಳಿದನು
ಮೂಲ ...{Loading}...
ಮನೆ ಮನೆಯ ಕದವಿಕ್ಕಿದವು ನೃಪ
ವನಿತೆಯರು ಹೊರವಂಟರಲ್ಲಿಯ
ಮನುಜರಡಗಿದರದ್ರಿ ಗುಹೆಯಲಿ ಬೇಹ ಬೇಹವರು
ಜನದ ಕೋಲಾಹಲವನಾತನ
ತನುಜರೋಟವನವನ ಸತಿಯರ
ನಿನದವನು ಕಂಡಸುರಹರ ಸಾರಿದನು ಕೈ ನೆಗೆಹಿ ॥121॥
೧೨೨ ಅಞ್ಜದಿರಿ ಪುರದವರು ...{Loading}...
ಅಂಜದಿರಿ ಪುರದವರು ವನಿತೆಯ
ರಂಜದಿರಿ ಮಾಗಧನ ಪರಿಜನ
ವಂಜದಿರಿ ಮಂತ್ರಿ ಪ್ರಧಾನ ಪಸಾಯ್ತರಾದವರು
ಅಂಜದಿರಿ ಕರೆಯಿವನ ಮಗನನು
ಭಂಜಿಸುವುದಿಲ್ಲಕಟ ಭೀಮ ಧ
ನಂಜಯರು ಕೊಟ್ಟಭಯವೆಂದನು ನಗುತ ಮುರವೈರಿ ॥122॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಪಟ್ಟಣದ ಜನರು ಹೆದರಬೇಡಿ ಸ್ತ್ರೀಯರು ಹೆದರಬೇಡಿ. ಮಾಗಧನ ಪರಿವಾರದವರು ಹೆದರಬೇಡಿ. ಮಂತ್ರಿಗಳು ಪ್ರಧಾನರು ಸಾಮಂತರುಗಳು ಹೆದರಬೇಡಿ. ಮಾಗಧನ ಮಗನನ್ನು ಕರೆಯಿರಿ. ಯಾರನ್ನೂ ಹಿಂಸಿಸುವುದಿಲ್ಲ. ಭೀಮಾರ್ಜುನರು ಕೊಟ್ಟ ಅಭಯವಿದು ಎಂದು ಕೃಷ್ಣ ನಗುತ್ತಾ ಹೇಳಿದ.
ಪದಾರ್ಥ (ಕ.ಗ.ಪ)
ಪಸಾಯ್ತರು-ಸಾಮಂತರು
ಅಂಜದಿರಿ ಪುರದವರು-ಪಟ್ಟಣದ ಜನರು ಹೆದರಬೇಡಿ, ವನಿತೆಯ ರಂಜದಿರಿ-ಸ್ತ್ರೀಯರು ಹೆದರಬೇಡಿ, ಮಾಗಧನ-ಜರಾಸಂಧನ
ಪರಿಜನ-ಪರಿವಾರದವರು, ಅಂಜದಿರಿ-ಹೆದರಬೇಡಿ, ಮಂತ್ರಿ ಪ್ರಧಾನ ಪಸಾಯ್ತರಾದವರು-ಮಂತ್ರಿಗಳು ಪ್ರಧಾನರು ಅಧಿಕಾರವರ್ಗದವರು, ಅಂಜದಿರಿ-ಹೆದರಬೇಡಿ, ಕರೆಯಿ ಅವನ ಮಗನನು-ಜರಾಸಂಧನ ಮಗನನ್ನು ಕರೆಯಿರಿ, ಅಕಟ-ಅಯ್ಯೋ
ಭಂಜಿಸುವುದಿಲ್ಲ-ಕೊಲ್ಲುವುದಿಲ್ಲ, ಭೀಮ ಧನಂಜಯರು-ಭೀಮಾರ್ಜುನರು, ಕೊಟ್ಟ ಅಭಯವು-ಕೊಟ್ಟ ಅಭಯ ಇದು
ಎಂದನು ನಗುತ ಮುರವೈರಿ-ಹೀಗೆಂದು ಕೃಷ್ಣಾ ನಗುತ್ತಾ ಹೇಳಿದ
ಮೂಲ ...{Loading}...
ಅಂಜದಿರಿ ಪುರದವರು ವನಿತೆಯ
ರಂಜದಿರಿ ಮಾಗಧನ ಪರಿಜನ
ವಂಜದಿರಿ ಮಂತ್ರಿ ಪ್ರಧಾನ ಪಸಾಯ್ತರಾದವರು
ಅಂಜದಿರಿ ಕರೆಯಿವನ ಮಗನನು
ಭಂಜಿಸುವುದಿಲ್ಲಕಟ ಭೀಮ ಧ
ನಂಜಯರು ಕೊಟ್ಟಭಯವೆಂದನು ನಗುತ ಮುರವೈರಿ ॥122॥
೧೨೩ ಮುರಿದು ಕೆಡೆಹಿದರರಿಯನಲ್ಲಿಯ ...{Loading}...
ಮುರಿದು ಕೆಡೆಹಿದರರಿಯನಲ್ಲಿಯ
ಸೆರೆಯ ಮನೆಗಳ ಹೊಕ್ಕು ರಾಯರ
ಸೆರೆಗಳನು ಬಿಡಿಸಿದರು ನಾನಾ ದ್ವೀಪಪಾಲಕರ
ಮೆರೆವ ಮಣಿಮಯ ರಶ್ಮಿವಳಯದ
ಮಿರುಪ ರಥವನು ಕೊಂಡು ನಗರದ
ಹೊರವಳಯದಲಿ ಬಂದು ಹೊಕ್ಕರು ತಮ್ಮ ಪಾಳೆಯವ ॥123॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಶತ್ರುವನ್ನು ಅಲ್ಲಿ ಹೊಡೆದು ಕೆಡವಿದರು. ಅಲ್ಲಿಯ ಸೆರೆಮನೆಗಳನ್ನು ಪ್ರವೇಶಿಸಿ, ಅಲ್ಲಿ ಬಂಧನದಲ್ಲಿದ್ದ ನಾನಾ ದ್ವೀಪಪಾಲಕರನ್ನೆಲ್ಲ ಬಿಡುಗಡೆ ಮಾಡಿದರು. ಅನಂತರ ಶೋಭಾಯಮಾನವಾದ ರತ್ನಖಚಿತವಾದ ರತ್ನಗಳ ಕಿರಣಗಳಿಂದ ಬೆಳಗುತ್ತಿದ್ದ ರಥವನ್ನೇರಿಕೊಂಡು ಕೃಷ್ಣ ಭೀಮಾರ್ಜುನರು ನಗರವನ್ನು ದಾಟಿ ತಮ್ಮ ಪಾಳಯಕ್ಕೆ ಬಂದರು.
ಪದಾರ್ಥ (ಕ.ಗ.ಪ)
ಮುರಿದು ಕೆಡೆಹಿದರರಿಯನು-ಶತ್ರುವಾದ ಜರಾಸಂಧನನ್ನು ಕೊಂದುಹಾಕಿದರು, ಅಲ್ಲಿಯ ಸೆರೆಯ ಮನೆಗಳ ಹೊಕ್ಕು-ಅಲ್ಲಿದ್ದ ಸೆರೆಮಗಳನ್ನು ಪ್ರವೇಶಿಸಿ, ನಾನಾ ದ್ವೀಪಪಾಲಕರ, ರಾಯರ-ನಾನಾ ದ್ವೀಪಗಳ ಒಡೆಯರಾಗಿದ್ದ ರಾಜರುಗಳ, ಸೆರೆಗಳನು ಬಿಡಿಸಿದನು-ಬಂಧನಗಳನ್ನು ಬಿಡಿಸಿದರು, ಮೆರೆವ ಮಣಿಮಯ ರಶ್ಮಿವಳಯದ-ಸೊಗಸಾಗಿ ಶೋಭಿಸುತ್ತಿದ್ದ, ರತ್ನಗಳ ಕಾಂತಿಯಿಂದ ಬೆಳಗುತ್ತಿದ್ದ
ಮಿರುಪ-ಥಳಥಳಿಸುತ್ತಿದ್ದ, ರಥವನು ಕೊಂಡು-ರಥವನ್ನು ಪಡೆದುಕೊಂಡು ಅದರಲ್ಲಿ ಕುಳಿತು, ನಗರದ ಹೊರವಳಯದಲಿ ಬಂದು ಹೊಕ್ಕರು ತಮ್ಮ ಪಾಳೆಯವ-ನಗರದ ಹೊರಭಾಗಕ್ಕೆ ಬಂದು ತಮ್ಮ ಪಾಳಯವನ್ನು ಪ್ರವೇಶಿಸಿದರು
ಮೂಲ ...{Loading}...
ಮುರಿದು ಕೆಡೆಹಿದರರಿಯನಲ್ಲಿಯ
ಸೆರೆಯ ಮನೆಗಳ ಹೊಕ್ಕು ರಾಯರ
ಸೆರೆಗಳನು ಬಿಡಿಸಿದರು ನಾನಾ ದ್ವೀಪಪಾಲಕರ
ಮೆರೆವ ಮಣಿಮಯ ರಶ್ಮಿವಳಯದ
ಮಿರುಪ ರಥವನು ಕೊಂಡು ನಗರದ
ಹೊರವಳಯದಲಿ ಬಂದು ಹೊಕ್ಕರು ತಮ್ಮ ಪಾಳೆಯವ ॥123॥
೧೨೪ ಪೌರಜನ ಕಾಣಿಕೆಗಳಲಿ ...{Loading}...
ಪೌರಜನ ಕಾಣಿಕೆಗಳಲಿ ಕಂ
ಸಾರಿ ಭೀಮಾರ್ಜುನರ ಕಂಡುದು
ಧಾರುಣೀಪಾಲಕರು ಬಂದರು ಬೆನ್ನಲಿವರುಗಳ
ಘೋರವಡಗಿದುದೆಮ್ಮ ಕಾರಾ
ಗಾರ ಬಂಧವಿಮುಕ್ತವಾಯ್ತುಪ
ಕಾರವೆಮ್ಮಿಂದಾವುದೆಂದರು ನೃಪರು ಕೈ ಮುಗಿದು ॥124॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಪುರಜನರೆಲ್ಲ ಕಾಣಿಕೆಗಳೊಡನೆ ಕೃಷ್ಣ ಭೀಮಾರ್ಜುನರನ್ನು ಬಂದು ಕಂಡರು. ಅವರ ಬೆನ್ನ ಹಿಂದೆಯೇ ರಾಜರುಗಳೆಲ್ಲ
ಬಂದರು. ಘೋರವಾದದ್ದು ಕಳೆದುಹೋಯಿತು. ನಮ್ಮ ಕಾರಾಗೃಹವಾಸ ಮುಕ್ತವಾಯಿತು. ನಿಮಗೆ ಪ್ರತಿಯಾಗಿ ನಾವೇನು ಉಪಕಾರ ಮಾಡೋಣ ಎಂದು ರಾಜರುಗಳು ಕೈ ಮುಗಿದುಕೊಂಡು ಬೇಡಿದರು.
ಪದಾರ್ಥ (ಕ.ಗ.ಪ)
ಕಾರಾಗಾರ-ಬಂದೀಖಾನೆ
ಪೌರಜನ-ಪುರಜನರು ಕಾಣಿಕೆಗಳಲಿ-ಕಾಣಿಕೆಗಳೊಡನೆ, ಕಂಸಾರಿ ಭೀಮಾರ್ಜುನರ ಕಂಡುದು-ಕೃಷ್ಣ ಭೀಮ, ಅರ್ಜುನರನ್ನು ಬಂದು ಕಂಡರು, ಬೆನ್ನಲಿವರುಗಳ-ಅವರ ಬೆನ್ನಹಿಂದೆಯೇ, ಧಾರುಣೀಪಾಲಕರು ಬಂದರು ಘೋರವಡಗಿದುದು-ನಮ್ಮ ಭಯಂಕರವಾಗಿದ್ದ ಸ್ಥಿತಿ ಕೊನೆಗೊಂಡಿತು, ಎಮ್ಮ ಕಾರಾಗಾರ ಬಂಧವಿಮುಕ್ತವಾಯ್ತು-ನಮ್ಮ ಕಾರಾಗೃಹ, ಬಂಧನ ಕೊನೆಗೊಂಡು ಸ್ವತಂತ್ರರಾದೆವು
ಹೀಗೆ ಹೇಳಿ ನೃಪರು-ಆ ರಾಜರುಗಳು, ಕೈ ಮುಗಿದು-ಕೈಮುಗಿದುಕೊಂಡು, ಉಕಾರವೆಮ್ಮಿಂದಾವುದು-ನಾವು ನಿಮಗೆ ಮಾಡಬಹುದಾದ ಉಪಕಾರವೇನು ಎಂದು ಹೇಳಿದರು
ಮೂಲ ...{Loading}...
ಪೌರಜನ ಕಾಣಿಕೆಗಳಲಿ ಕಂ
ಸಾರಿ ಭೀಮಾರ್ಜುನರ ಕಂಡುದು
ಧಾರುಣೀಪಾಲಕರು ಬಂದರು ಬೆನ್ನಲಿವರುಗಳ
ಘೋರವಡಗಿದುದೆಮ್ಮ ಕಾರಾ
ಗಾರ ಬಂಧವಿಮುಕ್ತವಾಯ್ತುಪ
ಕಾರವೆಮ್ಮಿಂದಾವುದೆಂದರು ನೃಪರು ಕೈ ಮುಗಿದು ॥124॥
೧೨೫ ನವೆದಿರತಿ ದುಃಖದಲಿ ...{Loading}...
ನವೆದಿರತಿ ದುಃಖದಲಿ ಬಿಡುಗಡೆ
ಪವನಸುತನಿಂದಾಯ್ತು ನಿಜರಾ
ಜ್ಯವನು ಹೊಗುವುದು ಪೌರಜನ ಪರಿಜನವ ಸಲಹುವುದು
ಎಮಗೆ ಮಾಳ್ಪುಪಕಾರ ಬೇರಿ
ಲ್ಲವನಿಪನ ವರ ರಾಜಸೂಯಕೆ
ನಿವನಿವಗೆ ಮುಂಕೊಂಡು ಬಹುದೆಂದನು ಮುರಾಂತಕನು ॥125॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ತುಂಬ ದುಃಖದಿಂದ ನೀವು ಕೃಶವಾಗಿದ್ದೀರಿ. ಭೀಮಸೇನನಿಂದ ನಿಮಗೆ ಬಿಡುಗಡೆಯಾಯ್ತು. ನಿಮ್ಮ ರಾಜ್ಯಗಳಿಗೆ ಹೋಗಿರಿ, ನಿಮ್ಮ ಪೌರಜನ ಪುರಜನರನ್ನು ಸಲಹಿರಿ. ನಮಗೆ ನೀವು ಮಾಡುವ ಉಪಕಾರ ಬೇರೇನೂ ಇಲ್ಲ. ಯುಧಿಷ್ಠಿರ ರಾಜನು ನಡೆಸುವ ರಾಜಸೂಯ ಯಾಗಕ್ಕೆ ನೀವು ನೀವಾಗಿಯೇ ಮುಂದಾಗಿ ಬಂದು ಭಾಗವಹಿಸಿರಿ ಎಂದ ಕೃಷ್ಣ.
ಪದಾರ್ಥ (ಕ.ಗ.ಪ)
ಅದಕ್ಕೆ ಕೃಷ್ಣ ಹೇಳಿದ, ನವೆದಿರತಿ ದುಃಖದಲಿ-ಬಂಧನದ ದುಃಖದಿಂದ ಕೃಶವಾಗಿದ್ದೀರಿ, ಬಿಡುಗಡೆ ಪವನಸುತನಿಂದಾಯ್ತು-ನಿಮ್ಮ ಬಿಡುಗಡೆ ಭಿಮಸೇನನಿಂದ ಆಯಿತು, ನಿಜರಾಜ್ಯವನು ಹೊಗುವುದು-ನಿಮ್ಮ ನಿಮ್ಮ ರಾಜ್ಯಗಳಿಗೆ ಹೋಗಿರಿ, ಪೌರಜನ ಪರಿಜನವ ಸಲಹುವುದು-ಪುರದ ಜನರನ್ನೂ ಪರಿಜನರನ್ನೂ ರಕ್ಷಿಸಿರಿ, ಎಮಗೆ ಮಾಳ್ಪುಪಕಾರ ಬೇರಿಲ್ಲ-ನಮಗೆ ನೀವು ಮಾಡಬಹುದಾದ ಉಪಕಾರ ಬೇರೆನಿಲ್ಲ, ಅವನಿಪನ ರಾಜಸೂಯಕೆ-ಯುಧಿಷ್ಠಿರ ರಾಜನು ಮಾಡುವ ರಾಜಸೂಯಯಾಗಕ್ಕೆ, ನಿವನಿವಗೆ ಮುಂಕೊಂಡು ಬಹುದು-ನೀವು ನೀವಾಗಿಯೇ ಹೊರಟು ಬರುವುದು, ಎಂದನು ಮುರಾಂತಕನು-ಎಂದ ಕೃಷ್ಣ
ಮೂಲ ...{Loading}...
ನವೆದಿರತಿ ದುಃಖದಲಿ ಬಿಡುಗಡೆ
ಪವನಸುತನಿಂದಾಯ್ತು ನಿಜರಾ
ಜ್ಯವನು ಹೊಗುವುದು ಪೌರಜನ ಪರಿಜನವ ಸಲಹುವುದು
ಎಮಗೆ ಮಾಳ್ಪುಪಕಾರ ಬೇರಿ
ಲ್ಲವನಿಪನ ವರ ರಾಜಸೂಯಕೆ
ನಿವನಿವಗೆ ಮುಂಕೊಂಡು ಬಹುದೆಂದನು ಮುರಾಂತಕನು ॥125॥
೧೨೬ ನಗರಜನ ಮನ್ತ್ರಿ ...{Loading}...
ನಗರಜನ ಮಂತ್ರಿ ಪ್ರಧಾನಾ
ದಿಗಳು ಸಹಿತ ಕುಮಾರನೈತಂ
ದಗಧರನ ಪದಕೆರಗಿದನು ಭೀಮಾರ್ಜುನಾಂಘ್ರಿಯಲಿ
ಮಗಗೆ ತಂದೆಯ ಮಾರ್ಗದಲಿ ನಂ
ಬುಗೆಯೊ ಕರುಣಾ ರಕ್ಷಣದ ನಂ
ಬುಗೆಯೊ ಚಿತ್ತವಿಸೆಂದರಾ ಮಂತ್ರಿಗಳು ಕೈಮುಗಿದು ॥126॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಜರಾಸಂಧನ ಮಗ, ನಗರಜನ ಮಂತ್ರಿ ಪ್ರಧಾನರುಗಳೊಡನೆ ಬಂದು ಶ್ರೀಕೃಷ್ಣನ ಪಾದಗಳಿಗೆ ಹಾಗೂ ಭೀಮಾರ್ಜುನರ ಪಾದಗಳಿಗೆ ಎರಗಿದ. ಮಂತ್ರಿಗಳು ಕೃಷ್ಣನನ್ನು ಕುರಿತು ಈ ಜರಾಸಂಧನ ಮಗನಿಗೆ ತಂದೆಯ ಮಾರ್ಗವೇ ಖಚಿತವೋ ಅಥವಾ ನಿಮ್ಮ ಕರುಣೆ ರಕ್ಷಣೆ ದೊರಕುವುದೋ ಎಂದು ಕೈಮುಗಿದು ಕೇಳಿದರು.
ಪದಾರ್ಥ (ಕ.ಗ.ಪ)
ಅಗಧರ-ಕೃಷ್ಣ
ನಗರಜನ ಮಂತ್ರಿ ಪ್ರಧಾನಾದಿಗಳು ಸಹಿತ-ಪುರಜನರು ಮತ್ತು ಮಂತ್ರಿ ಪ್ರಧಾನಾದಿಗಳೊಡನೆ ಕುಮಾರನು-ಜರಾಸಂಧನ ಮಗ ಸಹದೇವನು, ಐತಂದು-ಬಂದು, ಅಗಧರನ-ಕೃಷ್ಣನ, ಪದಕೆರಗಿದನು-ಕಾಲಿಗೆ ನಮಸ್ಕರಿಸಿದನು, ಭೀಮಾರ್ಜುನಾಂಘ್ರಿಯಲಿ-ಭೀಮ ಅರ್ಜುನರ ಪಾದಗಳಲ್ಲಿ, ಎರಗಿದರು-ನಮಸ್ಕರಿಸಿದರು, ಮಗಗೆ-ಜರಾಸಂಧನ ಮಗನಿಗೆ, ತಂದೆಯ ಮಾರ್ಗದಲಿ ನಂಬುಗೆಯೊ-ತಂದೆ ನಡೆಯುತ್ತಿದ್ದ ದಾರಿಯಲ್ಲಿ ನಂಬಿಕೆಯೂ, ಕರುಣಾ ರಕ್ಷಣದ ನಂಬುಗೆಯೊ-ಕರುಣೆ ಮತ್ತು ಪ್ರಚಾರ ರಕ್ಷಣೆಗಳಲ್ಲಿ ನಂಬಿಕೆಯೋ,
ಚಿತ್ತವಿಸಿ-ಲಾಲಿಸಿರಿ, ಎಂದರಾ ಮಂತ್ರಿಗಳು ಕೈಮುಗಿದು-ಎಂದು ಆ ಮಂತ್ರಿಗಳು ಕೈ ಮುಗಿದು ಕೇಳಿಕೊಂಡರು
ಮೂಲ ...{Loading}...
ನಗರಜನ ಮಂತ್ರಿ ಪ್ರಧಾನಾ
ದಿಗಳು ಸಹಿತ ಕುಮಾರನೈತಂ
ದಗಧರನ ಪದಕೆರಗಿದನು ಭೀಮಾರ್ಜುನಾಂಘ್ರಿಯಲಿ
ಮಗಗೆ ತಂದೆಯ ಮಾರ್ಗದಲಿ ನಂ
ಬುಗೆಯೊ ಕರುಣಾ ರಕ್ಷಣದ ನಂ
ಬುಗೆಯೊ ಚಿತ್ತವಿಸೆಂದರಾ ಮಂತ್ರಿಗಳು ಕೈಮುಗಿದು ॥126॥
೧೨೭ ಶವವ ಸಂಸ್ಕರಿಸುವುದು ...{Loading}...
ಶವವ ಸಂಸ್ಕರಿಸುವುದು ಮಾಗಧ
ನವನಿಯಲಿ ಸಹದೇವಗಭಿಷೇ
ಕವನು ಮಾಡಿಸಿದಲ್ಲದೆತ್ತಲು ಮುರಿವುದಿಲ್ಲೆಂದು
ಅವರಿಗಭಯವನಿತ್ತು ಪರಿವಾ
ರವನು ಕಳುಹಿದರಿತ್ತಲಾತನ
ಯುವತಿಯರು ಬೇಡಿದರು ವಹ್ನಿಯ ಪಡೆದು ಮರಳಿದರು ॥127॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಜರಾಸಂಧನ ಶವವನ್ನು ಸಂಸ್ಕಾರಮಾಡಿರಿ. ಅವನ ರಾಜ್ಯದಲ್ಲಿ ಅವನ ಮಗ ಸಹದೇವನಿಗೆ ಅಭಿಷೇಕವನ್ನು ಮಾಡಿಸಿದಲ್ಲದೆ ನಾವು ಎಲ್ಲಿಗೂ ಹೊರಡುವುದಿಲ್ಲ ಎಂದು ಹೇಳಿ, ಅವರಿಗೆ ಅಭಯವನ್ನು ಕೊಟ್ಟು ಆ ಎಲ್ಲ ಪರಿವಾರವನ್ನೂ ಕಳಿಸಿಕೊಟ್ಟರು. ಈ ಕಡೆ ಜರಾಸಂಧನ ಪತ್ನಿಯರು ಸಹಗಮನಕ್ಕೆ ಕೃಷ್ಣನ ಅನುಮತಿಯನ್ನು ಪಡೆದುಕೊಂಡು ಹಿಂತಿರುಗಿದರು.
ಪದಾರ್ಥ (ಕ.ಗ.ಪ)
ವಹ್ನಿ-ಬೆಂಕಿ
ಮಾಗಧ ಶವವ ಸಂಸ್ಕರಿಸುವುದು-ಜರಾಸಂಧನ ಶವಸಂಸ್ಕಾರ ಮಾಡುವುದು, ಸಹದೇವಗೆ-ಸಹದೇವನಿಗೆ, ಅಭಿಷೇಕವನು ಮಾಡಿಸಿದಲ್ಲದೆ-ರಾಜ್ಯಾಭಿಷೇಕವನ್ನು ಮಾಡಿಸಿದಲ್ಲದೆ, ಎತ್ತಲು ಮುರಿವುದಿಲ್ಲ-ಯಾವ ಕಡೆಗೂ ತಿರುಗುವುದಿಲ್ಲ ಎಂದು
ಅವರಿಗೆ ಅಭಯವನಿತ್ತು-ಧೈರ್ಯ ಹೇಳಿ, ಪರಿವಾರವನು ಕಳಿಸಿದರು-ರಾಜಪರಿವಾರದವರನ್ನು ಕಳಿಸಿಕೊಟ್ಟರು, ಇತ್ತಲು-ಈ ಕಡೆಯಲ್ಲಿ,
ಆತನ ಯುವತಿಯರು-ಜರಾಸಂಧನ ಪತ್ನಿಯರು, ವಹ್ನಿಯ ಬೇಡಿದರು-ಸಹಗಮನ ಮಾಡಲು ಅಪ್ಪಣೆ ಬೇಡಿದರು, ಪಡೆದು ಮರಳಿದರು-ಅಪ್ಪಣೆ ಪಡೆದು ಹಿಂತಿರುಗಿದರು
ಮೂಲ ...{Loading}...
ಶವವ ಸಂಸ್ಕರಿಸುವುದು ಮಾಗಧ
ನವನಿಯಲಿ ಸಹದೇವಗಭಿಷೇ
ಕವನು ಮಾಡಿಸಿದಲ್ಲದೆತ್ತಲು ಮುರಿವುದಿಲ್ಲೆಂದು
ಅವರಿಗಭಯವನಿತ್ತು ಪರಿವಾ
ರವನು ಕಳುಹಿದರಿತ್ತಲಾತನ
ಯುವತಿಯರು ಬೇಡಿದರು ವಹ್ನಿಯ ಪಡೆದು ಮರಳಿದರು ॥127॥
೧೨೮ ಅವನ ಸಂಸ್ಕಾರದಲಿ ...{Loading}...
ಅವನ ಸಂಸ್ಕಾರದಲಿ ನಾರೀ
ನಿವಹ ಸಹಗತವಾಯ್ತು ವೈದಿಕ
ವಿವಿಧ ವಿಧಿಯಲಿ ಮಾಡಿದರು ಶೇಷಕ್ರಿಯಾದಿಗಳ
ಅವನ ಮಗ ಸಹದೇವನಾತಂ
ಗವನಿಯಲಿ ಪಟ್ಟಾಭಿಷೇಕೋ
ತ್ಸವವ ಮಾಡಿಸಿ ಕೊಟ್ಟನಭಯವನಾ ಪರಿಗ್ರಹಕೆ ॥128॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಮಗಧನ ಶವಸಂಸ್ಕಾರ ನಡೆದಾಗ ಅವನ ಪತ್ನಿಯರು ಸಹಗಮನ ಮಾಡಿದರು. ನಾನಾ ವೈದಿಕ ವಿಧಿಗಳಿಂದ ಕೂಡಿದ ಉತ್ತರಕ್ರಿಯಾದಿಗಳನ್ನು ನೆರವೇರಿಸಿದರು. ಅವನ ಮಗ ಸಹದೇವನಿಗೆ ರಾಜ್ಯದ ಪಟ್ಟಾಭಿಷೇಕವನ್ನು ಮಾಡಿಸಿ ಅವನಿಗೆ ಅಭಯವನ್ನು ಕೊಟ್ಟರು.
ಪದಾರ್ಥ (ಕ.ಗ.ಪ)
ಶೇಷಕ್ರಿಯ-ಸತ್ತವರಿಗೆ ನಡೆಸುವ ಉತ್ತರಕ್ರಿಯೆ
ಅವನ ಸಂಸ್ಕಾರದಲಿ-ಜರಾಸಂಧನ ಶವ ಸಂಸ್ಕಾರ ನಡೆದಾಗ, ನಾರೀ ನಿವಹ-ರಾಣಿಯರ ಸಮೂಹ, ಸಹಗತವಾಯ್ತು-ಸಹಗಮನ ಮಾಡಿದರು, ವೈದಿಕ ವಿವಿಧ ವಿಧಿಯಲಿವೈದಿಕ ವಿಧಾನದಲ್ಲಿ, ಶೇಷಕ್ರಿಯಾದಿಗಳ ಮಾಡಿದರು-ಉತ್ತರ ಕ್ರಿಯೆಗಳನ್ನು ನಡೆಸಿದರು,
ಅವನ ಮಗ ಸಹದೇವನು ಆತಂಗೆ-ಅವನಿಗೆ, ಅವನಿಯಲಿ-ಆ ರಾಜ್ಯದಲ್ಲಿ, ಪಟ್ಟಾಭಿಷೇಕೋತ್ಸವವ ಮಾಡಿಸಿ-ರಾಜ್ಯಾಭಿಷೇಕ ಮಾಡಿಸಿ,
ಆ ಪರಿಗ್ರಹಕೆ-ಆ ರಾಜ್ಯಸ್ವೀಕಾರಕ್ಕೆ, ಕೊಟ್ಟನಭಯವನು-ಅಭಯವನ್ನು ನೀಡಿದ ಕೃಷ್ಣ
ಮೂಲ ...{Loading}...
ಅವನ ಸಂಸ್ಕಾರದಲಿ ನಾರೀ
ನಿವಹ ಸಹಗತವಾಯ್ತು ವೈದಿಕ
ವಿವಿಧ ವಿಧಿಯಲಿ ಮಾಡಿದರು ಶೇಷಕ್ರಿಯಾದಿಗಳ
ಅವನ ಮಗ ಸಹದೇವನಾತಂ
ಗವನಿಯಲಿ ಪಟ್ಟಾಭಿಷೇಕೋ
ತ್ಸವವ ಮಾಡಿಸಿ ಕೊಟ್ಟನಭಯವನಾ ಪರಿಗ್ರಹಕೆ ॥128॥
೧೨೯ ತೇರುಗಳ ತೇಜಿಗಳನಾ ...{Loading}...
ತೇರುಗಳ ತೇಜಿಗಳನಾ ಭಂ
ಡಾರವನು ಗಜಘಟೆ ಸಹಿತ ವಿ
ಸ್ತಾರ ವಿಭವವನೊಪ್ಪುಗೊಂಡರು ಮಗಧ ನಂದನನ
ಧಾರುಣಿಯನವಗಿತ್ತು ಸಕಳ ಮ
ಹೀರಮಣರನು ಕಳುಹಿ ಬಂದನು
ವೀರನಾರಾಯಣನು ಶಕ್ರಪ್ರಸ್ಥಪುರವರಕೆ ॥129॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅನಂತರ ಆ ಮಾಗಧನ ಮಗ ಸಹದೇವನು ರಥಗಳನ್ನೂ ಕುದುರೆಗಳನ್ನೂ ಆನೆಗಳನ್ನೂ ತುಂಬ ಸಂಪತ್ತನ್ನೂ ಶ್ರೀಕೃಷ್ಣನಿಗೆ ಒಪ್ಪಿಸಿಕೊಟ್ಟ. ಶ್ರೀಕೃಷ್ಣ ಅವನಿಗೆ ರಾಜ್ಯವನ್ನೊಪ್ಪಿಸಿ ಉಳಿದೆಲ್ಲ ರಾಜರುಗಳನ್ನೂ ಕಳಿಸಿಕೊಟ್ಟು ಭೀಮಾರ್ಜುನರೊಡನೆ ಇಂದ್ರಪ್ರಸ್ಥ ನಗರಿಗೆ ಹಿಂತಿರುಗಿದ.
ಪದಾರ್ಥ (ಕ.ಗ.ಪ)
ಶಕ್ರ-ದೇವೆಂದ್ರ
ಮಗಧ ನಂದನನ-ಸಹದೇವನ, ತೇರುಗಳ-ರಥಗಳನ್ನು, ತೇಜಿಗಳನು-ಕುದುರೆಗಳನ್ನು, ಆ ಭಂಡಾರವನು ಗಜಘಟೆ ಸಹಿತ-ಆನೆಗಳ ಸೈನ್ಯದೊಡಗೂಡಿ, ವಿಸ್ತಾರ ವಿಭವವನು ಒಪ್ಪುಗೊಂಡರು-ವಿಶಾಲ ಸಂಪತ್ತನ್ನು ಸ್ವೀಕರಿಸಿದರು, ಧಾರುಣಿಯನವಗಿತ್ತು-ರಾಜ್ಯವನ್ನು ಅವನಿಗೆ ಒಪ್ಪಿಸಿ, ಸಕಳ ಮಹೀರಮಣರನು ಕಳುಹಿ-ಅಮಸ್ತರಾಜರನ್ನೂ ಬೀಳ್ಕೊಂಡು, ವೀರನಾರಾಯಣನು-ಕೃಷ್ಣನು, ಶಕ್ರಪ್ರಸ್ಥಪುರವರಕೆ-ಇಂದ್ರಪ್ರಸ್ಥ ಪಟ್ಟಣಕ್ಕೆ, ಬಂದನು-ಭೀಮಾರ್ಜುನರೊಡನೆ ಬಂದು ಸೇರಿದನು
ಮೂಲ ...{Loading}...
ತೇರುಗಳ ತೇಜಿಗಳನಾ ಭಂ
ಡಾರವನು ಗಜಘಟೆ ಸಹಿತ ವಿ
ಸ್ತಾರ ವಿಭವವನೊಪ್ಪುಗೊಂಡರು ಮಗಧ ನಂದನನ
ಧಾರುಣಿಯನವಗಿತ್ತು ಸಕಳ ಮ
ಹೀರಮಣರನು ಕಳುಹಿ ಬಂದನು
ವೀರನಾರಾಯಣನು ಶಕ್ರಪ್ರಸ್ಥಪುರವರಕೆ ॥129॥