೦೨

೦೦೦ ಸೂಚನೆ ಬಲಿಮಥನ ...{Loading}...

ಸೂಚನೆ: ಬಲಿಮಥನ ಫಲುಗುಣರು ಸಹಿತ
ಗ್ಗಳೆಯನೇಕಾಂಗದಲಿ ರಣದಲಿ
ಕಲಿ ಜರಾಸಂಧನನು ಸೀಳಿದು ಬಿಸುಟನಾ ಭೀಮ॥

೦೦೧ ಕೇಳು ಜನಮೇಜಯ ...{Loading}...

ಕೇಳು ಜನಮೇಜಯ ಧರಿತ್ರೀ
ಪಾಲ ಮಂತ್ರಾಳೋಚನೆಗೆ ಭೂ
ಪಾಲ ಕರೆಸಿದನನುಜರನು ಧೌಮ್ಯಾದಿ ಮಂತ್ರಿಗಳ
ಮೇಳವದ ತನಿವೆಳಗುಗಳ ಮಣಿ
ಮೌಳಿಮಂಡಿತರುಪ್ಪರದ ಪಡಿ
ಸೂಳು ಪಾಯವಧಾರಿನಲಿ ಹೊಕ್ಕರು ಸಭಾಸ್ಥಳವ ॥1॥

೦೦೨ ದ್ರುಪದ ಧೃಷ್ಟದ್ಯುಮ್ನ ...{Loading}...

ದ್ರುಪದ ಧೃಷ್ಟದ್ಯುಮ್ನ ಮತ್ಸ್ಯಾ
ಧಿಪತಿ ಕೇಕಯ ಪಾಂಡವಾತ್ಮಜ
ರು ಪತಿಕಾರ್ಯ ವಿಚಾರನಿಷ್ಠರು ಬಂದರೋಲಗಕೆ |
ನೃಪತಿ ಹದನೇನಮರ ಮುನಿವರ
ನುಪಚರಿತ ಮಂತ್ರಾರ್ಥ ಸಿದ್ಧಿಗೆ
ರಪಣ ನಮಗುಂಟೀಗ ಬೆಸಸೆಂದರು ಯುಧಿಷ್ಠಿರಗೆ ॥2॥

೦೦೩ ಧರೆ ನಮಗೆ ...{Loading}...

ಧರೆ ನಮಗೆ ವಶವರ್ತಿ ಖಂಡೆಯ
ಸಿರಿ ನಮಗೆ ಮೈವಳಿ ಯುಧಿಷ್ಠಿರ
ನರಸುತನ ನಳನಹುಷ ನೃಗ ಭರತಾದಿ ಭೂಮಿಪರ |
ಮರೆಸಿತೆಂಬುದು ಲೋಕವೀನಿ
ಬ್ಬರದ ಹೆಸರೆಮಗಿಂದು ಬೊಪ್ಪನ
ಸಿರಿಯನೇವಣ್ಣಿಸುವೆನೆಂದನು ಸುಯ್ದು ಯಮಸೂನು ॥3॥

೦೦೪ ಅಲ್ಲಿ ಸುರರಲಿ ...{Loading}...

ಅಲ್ಲಿ ಸುರರಲಿ ಸುಪ್ರತಿಷ್ಠಿತ
ನಲ್ಲ ಗಡ ಪಾಂಡು ಕ್ಷಿತೀಶ್ವರ
ನಿಲ್ಲಿ ವೈಭವಕೇನು ಫಲ ನಾವವರ ಸದ್ಗತಿಗೆ |
ಇಲ್ಲಿ ರಚಿಸಿದ ರಾಜಸೂಯದಿ
ನೆಲ್ಲವಹುದಯ್ಯಂಗೆ ಮಖವಿದು
ದುರ್ಲಭವು ಕೈಕೊಂಡೆವಾವುದು ಮಂತ್ರವಿದಕೆಂದ ॥4॥

೦೦೫ ಆಗಲಿದಕೇನರಸ ದೀಕ್ಷಿತ ...{Loading}...

ಆಗಲಿದಕೇನರಸ ದೀಕ್ಷಿತ
ನಾಗು ನಿರುಪಮ ರಾಜಸೂಯಕೆ
ಭಾಗ ಧನವನು ಭೂಮಿಪರ ಸದೆದೆಳೆದು ತಹೆವೆಂದು
ಆ ಗರುವರುಬ್ಬೇಳೆತಪ್ಪೇ
ನಾಗಲೀ ಗೋವಿಂದ ಮತದಲಿ
ತೂಗಿ ನೋಡುವೆವಿದರ ತೂಕವನೆಂದನಾ ಭೂಪ ॥5॥

೦೦೬ ಕಳುಹಿದನು ಸಾರಥಿಯನಾ ...{Loading}...

ಕಳುಹಿದನು ಸಾರಥಿಯನಾ ರಥ
ಕೆಲವು ದಿವಸಕೆ ಕೃಷ್ಣಭವನ
ಸ್ಥಳದ ಹೊರಬಾಹೆಯಲಿ ಚಾಚಿತು ಚಪಳ ಗಮನದಲಿ
ಒಳಗೆ ಬಂದನು ಪಾವುಡವ ಮುಂ
ದಿಳುಹಿದನು ಕೃಷ್ಣಂಗೆ ಪಾಂಡವ
ತಿಲಕನಟ್ಟಿದ ಹದನ ಬಿನ್ನಹ ಮಾಡಿದನು ಬಳಿಕ ॥6॥

೦೦೭ ತಿಳಿದನಲ್ಲಿಯ ರಾಜಕಾರ್ಯದ ...{Loading}...

ತಿಳಿದನಲ್ಲಿಯ ರಾಜಕಾರ್ಯದ
ನೆಲೆಯನಕ್ರೂರಾದಿ ಸಚಿವರ
ತಿಳುಹಿದನು ಶಿಶುಪಾಲ ಕಂಸನ ಮಾವನಿಂತಿವರ
ಕೊಲುವಡಿದು ಹದ ನಮ್ಮ ಭಾವನ
ನಿಳಯದುತ್ಸಹ ಸೌಮನಸ್ಯವ
ಬಳಸುವರೆ ಹೊತ್ತಿದು ಮನೋರಥ ಸಿದ್ಧಿ ನಮಗೆಂದ ॥7॥

೦೦೮ ಎನ್ದು ವಸುದೇವಾದಿ ...{Loading}...

ಎಂದು ವಸುದೇವಾದಿ ಯಾದವ
ವೃಂದವನು ಬಲಭದ್ರರಾಮನ
ಹಿಂದಿರಿಸಿ ಬಳಿಕಿಂದ್ರಸೇನನ ಕೂಡೆ ವೊಲವಿನಲಿ
ಬಂದನಿಂದ್ರಪ್ರಸ್ಥ ಪಟ್ಟಣ
ಕಂದು ವೊಸಗೆಯ ಗುಡಿಯ ತೋರಣ
ದಿಂದ ಕನ್ನಡಿ ಕಳಶದಲಿ ಕೊಂಡಾಡಿದರು ಹರಿಯ ॥8॥

೦೦೯ ಪುರಕೆ ಬಿಜಯಙ್ಗೈಸಿ ...{Loading}...

ಪುರಕೆ ಬಿಜಯಂಗೈಸಿ ತಂದರು
ಹರಿಯನರಮನೆಗನಿಬರಂತಃ
ಪುರದ ಕಾಣಿಕೆಗೊಂಡು ಬಾಂಧವ ಜನವನುಚಿತದಲಿ
ಹರಸಿ ಮಧುರ ಪ್ರೀತಿಯಿಂದಾ
ದರಿಸಿ ಮಂತ್ರಾಳೋಚನೆಯ ಮಂ
ದಿರದೊಳೇಕಾಂತದಲಿ ಭೂಪತಿಗೆಂದನಸುರಾರಿ ॥9॥

೦೧೦ ಏನು ಕರೆಸಿದಿರೈ ...{Loading}...

ಏನು ಕರೆಸಿದಿರೈ ಪ್ರಯೋಜನ
ವೇನು ನಿಮ್ಮುತ್ಸಾಹ ಶಕ್ತಿಯೊ
ಳೇನು ದುರ್ಘಟವೇನು ಶಂಕಿತವೇನು ಸಂಸ್ಖಲಿತ
ದಾನವರ ಕೌರವರ ವೈರದೊ
ಳೇನು ವಿಗ್ರಹವಿಲ್ಲಲೇ ಹದ
ನೇನೆನಲು ಕೃಷ್ಣಂಗೆ ಬಿನ್ನಹ ಮಾಡಿದನು ನೃಪತಿ ॥10॥

೦೧೧ ದನುಜರಲಿ ಕುರುಸೇನೆಯಲಿ ...{Loading}...

ದನುಜರಲಿ ಕುರುಸೇನೆಯಲಿ ಭಯ
ವೆನಗೆ ಭಾರಿಯೆ ನಿಮ್ಮ ಘನಪದ
ವನಜವಿದು ಸೀಸಕವಲೇ ತನ್ನುತ್ತಮಾಂಗದಲಿ
ಮುನಿಯ ಹೇಳಿಕೆ ಬೊಪ್ಪಗಮರೇಂ
ದ್ರನಲಿ ಸಮರಸವಿಲ್ಲ ಗಡ ನ
ಮ್ಮಿನಿಬರಲಿ ಸಾಮಥ್ರ್ಯವಿದ್ದುದಕೇನು ಫಲವೆಂದ ॥11॥

೦೧೨ ಪಿತನ ಪರಮಪ್ರೀತಿಗುನ್ನತ ...{Loading}...

ಪಿತನ ಪರಮಪ್ರೀತಿಗುನ್ನತ
ಗತಿಗೆ ನಿರ್ಮಳ ರಾಜಸೂಯ
ಕ್ರತುವೆ ಸಾಧನವೆಂದು ಮುನಿಯುಪದೇಶಿಸಿದ ತನಗೆ
ಕ್ರತು ಮಹಾಕ್ರತು ಸಕಲಧರಣೀ
ಪತಿಗಳರ್ಥವ ಗುಣದಲೀಯರು
ವ್ರತವೆನಗೆ ಸಂಕಲ್ಪವಾಯ್ತಿದಕೇನು ಹದನೆಂದ ॥12॥

೦೧೩ ತಿರುಗಿದರೆ ಸಙ್ಕಲ್ಪ ...{Loading}...

ತಿರುಗಿದರೆ ಸಂಕಲ್ಪ ಹಾನಿಯ
ಪರಮ ಪಾತಕವಿದು ಮಹಾ ನಿ
ಷ್ಠುರದ ಮಖವಿನ್ನಮರ ಮುನಿಪತಿ ದೇವಲೋಕದಲಿ
ಹರಹುವನು ಪರಿಹಾಸ್ಯಮಯ ಸಾ
ಗರವ ದಾಟಿಸು ಜೀಯ ಭವಸಾ
ಗರದಿನಿದು ಮಿಗಿಲೇ ಮುರಾಂತಕಯೆಂದನಾ ಭೂಪ ॥13॥

೦೧೪ ನಕ್ಕನಸುರವಿರೋಧಿ ಮುನಿ ...{Loading}...

ನಕ್ಕನಸುರವಿರೋಧಿ ಮುನಿ ಹಾ
ಯಿಕ್ಕಿದನಲಾ ಬಲೆಯನಕಟಾ
ಸಿಕ್ಕಿದಿರಲಾ ಸ್ವಾಮಿದ್ರೋಹರು ಸದರವೇ ನೃಪರು
ಅಕ್ಕಜದ ಮಖವಿದರ ಚೂಣಿಗೆ
ಚುಕ್ಕಿಯಾಯಿತು ಮನ ಮಹೀಶನ
ಮಕ್ಕಳಾಟಿಕೆಯಾಯ್ತೆನುತ ತೂಗಿದನು ಸಿರಿಮುಡಿಯ ॥14॥

೦೧೫ ಕೆದರಿ ಸಪ್ತದ್ವೀಪಪತಿಗಳ ...{Loading}...

ಕೆದರಿ ಸಪ್ತದ್ವೀಪಪತಿಗಳ
ಸದೆದು ರಚಿಸುವ ರಾಜಸೂಯದ
ಹದನನಂಗೈಸುವನದಾರೀ ವರ್ತಮಾನದಲಿ
ಸುದತಿಯರ ಸೂಳೆಯರ ಮುಂದು
ಬ್ಬಿದೆಯಲಾ ನಾರದನ ಘಲ್ಲಣೆ
ಗಿದು ಸುದುರ್ಘಟವಿಂದು ಬಿದ್ದ ವಿಘಾತಿ ಬಲುಹೆಂದ ॥15॥

೦೧೬ ಮೊದಲಲೇ ನಿಮ್ಮವರು ...{Loading}...

ಮೊದಲಲೇ ನಿಮ್ಮವರು ನಿಮ್ಮ
ಭ್ಯುದಯವನು ಸೇರುವರೆ ಕೌರವ
ರದರೊಳಗ್ಗದ ಕರ್ಣ ಶಕುನಿ ಜಯದ್ರಥಾದಿಗಳು
ಕುದುಕುಳಿಗಳೀಚೆಯಲಿ ಕಂಸನ
ಮದಮುಖನ ಪರಿವಾರವಿದೆ ದೂ
ರದಲಿ ಮಗಧನ ಹೊರೆಯಲದನೇವಣ್ಣಿಸುವೆನೆಂದ ॥16॥

೦೧೭ ಕಾಲಯವನಾ ದನ್ತವಕ್ರ ...{Loading}...

ಕಾಲಯವನಾ ದಂತವಕ್ರ ನೃ
ಪಾಲರಲಿ ದುರುದುಂಬಿಯೈ ಶಿಶು
ಪಾಲ ಪೌಂಡ್ರಕರೆಂಬರಿಗೆ ಸಮದಂಡಿಯೆಮ್ಮೊಡನೆ
ಖೂಳರೀರ್ವರು ಹಂಸ ಡಿಬಿಕರು
ಸಾಲುವನ ಮುರ ನರಕರಾಳನನ
ಮೇಳವವನೇನೆಂಬೆನೈ ಭೂಪಾಲ ಕೇಳ್ ಎಂದ ॥17॥

೦೧೮ ಕೆಲವರಿದರೊಳು ನಮ್ಮ ...{Loading}...

ಕೆಲವರಿದರೊಳು ನಮ್ಮ ಕೈಯಲಿ
ಕೊಲೆಗೆ ಭಂಗಕೆ ಬಂದು ಬಿಟ್ಟರು
ಕೆಲಕೆ ಸರಿವವನಲ್ಲ ಮಲೆವರ ಮಾರಿ ಮಾಗಧನು
ಬಳಿಕೆಮಗೆ ಬಲವದ್ವಿರೋಧದ
ತೊಳಸು ಬಿದ್ದುದು ತೋಟಿಗಾರದೆ
ಜಲಧಿ ಮಧ್ಯದಲೂರ ಕಟ್ಟಿದೆವರಸ ಕೇಳ್ ಎಂದ ॥18॥

೦೧೯ ಮಾವದೇವನ ಮುರಿದಡಾತನ ...{Loading}...

ಮಾವದೇವನ ಮುರಿದಡಾತನ
ದೇವಿಯರು ಬಳಿಕೆಮ್ಮ ದೂರಿದ
ರಾ ವಿಗಡ ಮಗಧಂಗೆ ಮಧುರೆಯ ಮೇಲೆ ದಂಡಾಯ್ತು
ನಾವು ನಾನಾ ದುರ್ಗದಲಿ ಸಂ
ಭಾವಿಸಿದೆವಾತನನು ನಿಮ್ಮೊಡ
ನಾವು ಕೂಡಿದಡಾತ ಮುನಿಯನೆ ಭೂಪ ಕೇಳ್ ಎಂದ ॥19॥

೦೨೦ ಅರಸ ಕೇಳ್ನೂರೊನ್ದು ...{Loading}...

ಅರಸ ಕೇಳ್ನೂರೊಂದು ವಂಶದ
ಧರಣಿಪರು ಮಾಗಧನ ಮನೆಯಲಿ
ಸೆರೆಯಲೈದರೆ ಬಿಡಿಸಬೇಕು ನಿರಂತರಾಯದಲಿ
ದುರುಳನವ ಭಗದತ್ತ ಬಾಹ್ಲಿಕ
ನರಕ ವೃದ್ಧಕ್ಷತ್ರ ಮೊದಲಾ
ದರಸುಗಳು ಬಲಗರ್ವಿತರಸಂಖ್ಯಾತರಹರೆಂದ ॥20॥

೦೨೧ ಅವರಿರಿಲಿ ಮತ್ತಿತ್ತಲುತ್ತರ ...{Loading}...

ಅವರಿರಿಲಿ ಮತ್ತಿತ್ತಲುತ್ತರ
ದವನಿಪರು ದಕ್ಕಡರು ಧರಣೀ
ಧವರೊಳಧಿಕ ದೊಠಾರರಗ್ಗದ ಚೀನ ಬೋಟಕರು
ರವಿಯುದಯಗಿರಿ ಶಿಖರದಲಿ ಪಾ
ರ್ಥಿವರು ದಕ್ಷಿಣ ಚೋಳ ಪಾಂಡ್ಯ
ಪ್ರವರರದೆ ವಿಕ್ರಮ ಹಿರಣ್ಯ ಮದಾಂಧರವರೆಂದ ॥21॥

೦೨೨ ಔಕಿ ಚದುರಙ್ಗದ ...{Loading}...

ಔಕಿ ಚದುರಂಗದ ನೃಪಾಲರ
ನೂಕಬಹುದಿದಕೇನು ಯಾಗ
ವ್ಯಾಕರಣಕಿವರಿಬ್ಬರೇ ದೂಷಕರು ಧರಣಿಯಲಿ
ಈ ಕುಠಾರರು ಕದನ ಮುಖವಿದವಿ
ವೇಕಿಗಳು ಶಿಶುಪಾಲ ಮಾಗಧ
ರಾಕೆವಾಳರು ವೈರಿರಾಯರೊಳರಸ ಕೇಳ್ ಎಂದ ॥22॥

೦೨೩ ಅಧಿಕರಿವರಿಬ್ಬರೊಳಗಾ ಮಾ ...{Loading}...

ಅಧಿಕರಿವರಿಬ್ಬರೊಳಗಾ ಮಾ
ಗಧನೆ ಬಲುಗೈ ರಾಜಸೂಯಕೆ
ಸದರವನು ನಾ ಕಾಣೆನಾತನ ಖಂಡೆಯದ ಮೊನೆಗೆ
ನಿಧನವಲ್ಲದೆ ಧನವ ನೆರಹುವ
ಹದನ ನೀನೇ ಕಾಂಬೆಯಾತನ
ವಧೆಯು ಹರಿಯದು ನಮ್ಮ ಕೈಯಲಿ ರಾಯ ಕೇಳ್ ಎಂದ ॥23॥

೦೨೪ ಕಂಸನನು ಕೆಡಹಿದೆವು ...{Loading}...

ಕಂಸನನು ಕೆಡಹಿದೆವು ಮುರಿದೆವು
ಹಂಸ ಡಿಬಿಕರ ಪೌಂಡ್ರಕರ ನಿ
ರ್ವಂಶವೆನೆ ಸವರಿದೆವು ಮುರ ನರಕಾದಿ ದಾನವರ
ಹಿಂಸೆಯಿವನಲಿ ಹರಿಯದಿವ ನಿ
ಸ್ಸಂಶಯನು ವಿಜಯದಲಿ ಯಾಗ
ಧ್ವಂಸಕನ ನೆರೆ ಮುರಿವುಪಾಯವ ಕಾಣೆ ನಾನೆಂದ ॥24॥

೦೨೫ ಈಸು ಘನವೇ ...{Loading}...

ಈಸು ಘನವೇ ಕೃಷ್ಣ ಯಾಗ
ದ್ವೇಷಿಗಳು ಪಿರಿದಾಗಲೆವಗಿ
ನ್ನೈಸಲೇ ವರರಾಜಸೂಯಾಧ್ವರಕೆ ಸಂನ್ಯಾಸ
ಈಸು ದೈತ್ಯರು ನಿನ್ನ ಕೈಯಲಿ
ಘಾಸಿಯಾದರು ಮಗಧನೊಬ್ಬನು
ಮೀಸಲಳಿಯನು ಗಡ ಮಹಾದೇವೆಂದನಾ ಭೂಪ ॥25॥

೦೨೬ ಅಹಹ ಯಾಗ ...{Loading}...

ಅಹಹ ಯಾಗ ವ್ರತಕೆ ಭಂಗವ
ತಹುದೆ ಜೀಯ ಮುರಾರಿ ಕೃಪೆ ಸ
ನ್ನಿಹಿತವಾಗಲಿ ಸಾಕು ನೋಡಾ ತನ್ನ ಕೈಗುಣವ
ಬಹಳ ಬಲನೇ ಮಾಗಧನು ನಿನ
ಗಹಿತನೇ ತಾ ವೀಳೆಯವ ಸುರ
ಮಹಿಳೆಯರ ತೋಳಿನಲಿ ತೋರುವೆನೆಂದನಾ ಭೀಮ ॥26॥

೦೨೭ ಮುರುಕಿಸುವ ಮನ್ನೆಯರ ...{Loading}...

ಮುರುಕಿಸುವ ಮನ್ನೆಯರ ನಾಳವ
ಮುರಿವೆನಖಿಳ ದ್ವೀಪ ಪತಿಗಳ
ತೆರಿಸುವೆನು ಹೊರಿಸುವೆನು ನೆತ್ತಿಯಲವರ ವಸ್ತುಗಳ
ಕರುಬನೇ ಮಾಗಧನು ರಣದಲಿ
ತರಿವೆನಾತನ ನಿಮ್ಮ ಯಾಗದ
ಹೊರಿಗೆ ತನ್ನದು ಕರೆಸು ಋಷಿಗಳನೆಂದನಾ ಭೀಮ ॥27॥

೦೨೮ ಅಹುದಲೇ ಬಳಿಕೇನು ...{Loading}...

ಅಹುದಲೇ ಬಳಿಕೇನು ಯಾಗೋ
ಪಹರಣಕೆ ಸಂನ್ಯಾಸ ಗಡ ವಿ
ಗ್ರಹದಲಧಿಕರು ಗಡ ಜರಾಸಂಧಾದಿ ನಾಯಕರು
ಮಹಿಯ ಮನ್ನೆಯರಧ್ವರವ ನಿ
ರ್ವಹಿಸಲೀಯರು ಗಡ ಶಿವಾ ಶಿವ
ರಹವ ಮಾಡಿದನರಸನೆಂದನು ನಗುತ ಕಲಿಪಾರ್ಥ ॥28॥

೦೨೯ ಏಕೆ ಗಾಣ್ಡೀವವಿದು ...{Loading}...

ಏಕೆ ಗಾಂಡೀವವಿದು ಶರಾವಳಿ
ಯೇಕೆ ಇಂದ್ರಾಗ್ನೇಯ ವಾರುಣ
ವೇಕೆ ರಥವಿದು ರಾಮಭೃತ್ಯ ಧ್ವಜವಿಳಾಸವಿದು
ಲೋಕರಕ್ಷಾ ಶಿಕ್ಷೆಗಿಂತಿವು
ಸಾಕು ಹುಲು ಮಂಡಳಿಕರಿವದಿರ
ನೂಕಲರಿಯದೆ ಜೀಯ ಜಂಜಡವೇಕೆ ಬೆಸಸೆಂದ ॥29॥

೦೩೦ ನೆರಹು ಹಾರುವರನು ...{Loading}...

ನೆರಹು ಹಾರುವರನು ದಿಗಂತಕೆ
ಹರಹು ನಮ್ಮನು ಬಂಧುವರ್ಗವ
ಕರೆಸು ರಚಿಸಲಿ ಕಾಣಬೇಹುದು ಕದನ ಕಾಮುಕರ
ಸೊರಹಲರಿಯೆನು ಸಾಧುಗಳನಾ
ದರಿಸುವೆನು ಚಾವಟೆಯರನು ಚಿ
ಮ್ಮುರಿಯ ಬಿಗಿಸುವೆನಮರಿಯರ ಕಡೆಗಣ್ಣ ಕಣ್ಣಿಯಲಿ ॥30॥

೦೩೧ ಅಹುದು ಭೀಮಾರ್ಜುನರ ...{Loading}...

ಅಹುದು ಭೀಮಾರ್ಜುನರ ನುಡಿ ನಿ
ರ್ವಹಿಸದೇ ಬಳಿಕೇನು ನಿಜಕುಲ
ವಿಹಿತವಲ್ಲಾ ವಿನಯ ವಿಕ್ರಮ ವಿದ್ಯೆ ನೃಪನೀತಿ
ಗಹನವೇ ಗಂಡುಗರಿಗಿದಿರಾ
ರಹಿತ ಬಲವಿನ್ನರಸ ಚಿಂತಾ
ಮಹಿಳೆಗವಸರವಲ್ಲ ಮನ ಮಾಡೆಂದನಸುರಾರಿ ॥31॥

೦೩೨ ಎಮಗೆ ಭೀಮಾರ್ಜುನರ ...{Loading}...

ಎಮಗೆ ಭೀಮಾರ್ಜುನರ ಕೊಡು ರಿಪು
ರಮಣಿಯರ ಸೀಮಂತ ಮಣಿಗಳ
ನಿಮಿಷದಲಿ ತರಿಸುವೆನು ಹರಿಸುವೆನಹಿತ ಭೂಮಿಪರ
ಸಮರ ಜಯವಿನ್ನಾಯ್ತು ಯಜ್ಞೋ
ದ್ಯಮಕೆ ನಿಷ್ಪ್ರತ್ಯೂಹವಿನ್ನು
ಭ್ರಮೆಯ ಮಾಡದಿರೆಂದು ನೃಪತಿಗೆ ನುಡಿದನಸುರಾರಿ ॥32॥

೦೩೩ ಕಙ್ಗಳನುಜರು ಚಿತ್ತ ...{Loading}...

ಕಂಗಳನುಜರು ಚಿತ್ತ ನೀವೆ
ನ್ನಂಗವಣೆಗಿನ್ನೇನು ಭಯವಾ
ವಂಗದಲಿ ನಂಬಿಹವಲೇ ನಿಮ್ಮಂಘ್ರಿಪಂಕಜವ
ಸಂಗರದ ಜಯ ನಿನ್ನದಲ್ಲಿಯ
ಭಂಗ ನಿನ್ನದು ಭಕ್ತ ಜನದನು
ಸಂಗಿ ನೀನಿರಲೇನು ನಮಗರಿದೆಂದನಾ ಭೂಪ ॥33॥

೦೩೪ ವಿಗಡ ಯಾಗಕೆ ...{Loading}...

ವಿಗಡ ಯಾಗಕೆ ಸಕಲ ರಾಯರು
ಹಗೆ ಮರುತ್ತನು ಕಾರ್ತವೀರ್ಯಾ
ದಿಗಳು ಕೆಲವರಶಕ್ತರಾದರು ರಾಜಸೂಯದಲಿ
ಬಗೆಯಲಿದ ದುಷ್ಕಾಲವಸುರರೊ
ಳಗಡು ಮಾಗಧನವನ ಮುರಿದರೆ
ಸುಗಮ ನಿಮ್ಮಯ್ಯಂಗೆ ಸುರಪದವೆಂದನಸುರಾರಿ ॥34॥

೦೩೫ ಆರವನು ಹಿರಿದಾಗಿ ...{Loading}...

ಆರವನು ಹಿರಿದಾಗಿ ನೀ ಕೈ
ವಾರಿಸುವೆ ಕಮಲಾಕ್ಷ ಮಾಗಧ
ನಾರುಭಟೆ ತಾನೇನು ವರವೋ ಸಹಜ ವಿಕ್ರಮವೊ
ವೀರರಿದೆ ಸಿಡಿಲಂತೆ ಸಕಲ ಮ
ಹೀ ರಮಣರಿದರೊಳಗೆ ನೃಪಮಖ
ವೈರಿ ಗಡ ಬೆಸಸೆಂದಡೆಂದನು ನಗುತ ಮುರವೈರಿ ॥35॥

೦೩೬ ಧರಣಿಪತಿ ಕೇಳೈ ...{Loading}...

ಧರಣಿಪತಿ ಕೇಳೈ ಬೃಹದ್ರಥ
ನರಸು ಮಾಗಧ ಮಂಡಲಕೆ ತ
ತ್ಪುರಿ ಗಿರಿವ್ರಜವೆಂಬುದಲ್ಲಿ ಸಮಸ್ತ ವಿಭವದಲಿ
ಧರೆಯ ಪಾಲಿಸುತಿದ್ದನಾತಂ
ಗರಸಿಯರು ಸೇರಿದರು ಕಾಶೀ
ಶ್ವರನ ತನುಜೆಯರಿಬ್ಬರದುಬುತ ರೂಪು ಗುಣಯುತರು ॥36॥

೦೩೭ ಅವರೊಡನೆ ಸತ್ಕಥಾ ...{Loading}...

ಅವರೊಡನೆ ಸತ್ಕಥಾ ಸಂ
ಭವ ವಿನೋದದಲಿದ್ದನೀ ವೈ
ಭವ ಫಲವಪುತ್ರರಿಗೆ ಬಹು ದುಃಖೋಪಚಯವೆಂದು
ಅವನಿಪತಿ ವೈರಾಗ್ಯದಲಿ ರಾ
ಜ್ಯವನು ಬಿಸುಟು ತಪಃಪ್ರಭಾವ
ವ್ಯವಹರಣೆಯಲಿ ತನುವ ನೂಕುವೆನೆನುತ ಹೊರವಂಟ ॥37॥

೦೩೮ ಊರ ಹೊರವಡುವುತ್ತ ...{Loading}...

ಊರ ಹೊರವಡುವುತ್ತ ಕಂಡನು
ಪಾರಿಕಾಂಕ್ಷಿಯನೊಬ್ಬನನು ಮುನಿ
ವೀರಕಾಂಕ್ಷಿಯನಾಂಗಿರಾತ್ಮಜ ಚಂಡ ಕೌಶಿಕನ
ನಾರಿಯರು ಸಹಿತವವನ ಚರಣಾಂ
ಭೋರುಹಕ್ಕಭಿನಮಿಸಲತಿ ವಿ
ಸ್ತಾರಿಸಿದನಾಶೀರ್ವಚನವನು ಮುನಿ ನೃಪಾಲಂಗೆ ॥38॥

೦೩೯ ಏನಿದರಸನೆ ವದನದಲಿ ...{Loading}...

ಏನಿದರಸನೆ ವದನದಲಿ ದು
ಮ್ಮಾನವೆನಲನಪತ್ಯತಾ ಚಿಂ
ತಾನುರೂಪದ ದುಗುಡವಿದು ನಿಮ್ಮಂಘ್ರಿ ಸೇವೆಯಲಿ
ಹಾನಿ ದುಷ್ಕೃತಕಹುದಲೇ ಸುತ
ಹೀನ ರಾಜ್ಯವ ಬಿಸುಟೆನಗೀ
ಕಾನನದ ಸಿರಿ ಸಾಕೆನುತ ಬಿಸುಸುಯ್ದನಾ ಭೂಪ ॥39॥

೦೪೦ ಐಸಲೇ ಸುತಹೀನ ...{Loading}...

ಐಸಲೇ ಸುತಹೀನ ರಾಜ್ಯವಿ
ಳಾಸ ನಿಷ್ಫಲವಹುದಲೇ ಸಂ
ತೋಷವೇ ಸುತಲಾಭವಾದರೆ ಹೊಲ್ಲೆಯೇನಿದಕೆ
ಆ ಸಮರ್ಥ ಮುನೀಂದ್ರನಂತ
ರ್ಭಾಸಿತಾತ್ಮಧ್ಯಾನಸುಖ ವಿ
ನ್ಯಾಸದಿರಲಂಕದಲಿ ಬಿದ್ದುದು ಮಧುರ ಚೂತ ಫಲ ॥40॥

೦೪೧ ಕನ್ದೆರೆದು ಮುನಿ ...{Loading}...

ಕಂದೆರೆದು ಮುನಿ ಬಳಿಕ ಭೂಪತಿ
ಗೆಂದನಿದ ಕೋ ಪುತ್ರ ಸಂತತಿ
ಗೆಂದು ಸಾಧನವಿದನು ಕೊಡು ನೀನೊಲಿದು ವಧುಗೆನಲು
ಕಂದಿದಾನನ ಉಜ್ವಲ ಪ್ರಭೆ
ಯಿಂದ ಬೆಳಗಿತು ರಾಣಿಯರು ಸಹಿ
ತಂದು ಮುನಿಪದಕೆರಗಿ ಪರಿತೋಷದಲಿ ನಿಂದಿರ್ದ ॥41॥

೦೪೨ ವರವನೊನ್ದನು ಹೆಸರುಗೊಣ್ಡೀ ...{Loading}...

ವರವನೊಂದನು ಹೆಸರುಗೊಂಡೀ
ಧರಣಿಪತಿಗಾ ಮುನಿಪ ಕೊಟ್ಟನು
ಪುರಕೆ ಮರಳಿದನರಸನಾ ಮುನಿ ತೀರ್ಥಯಾತ್ರೆಯಲಿ
ಸರಿದನತ್ತಲು ಚೂತಫಲವಿದ
ನೆರಡು ಮಾಡಿ ಬೃಹದ್ರಥನು ತ
ನ್ನರಸಿಯರಿಗಿತ್ತನು ಯುಧಿಷ್ಠಿರ ಕೇಳು ಕೌತುಕವ ॥42॥

೦೪೩ ಬಲಿದುದವರಿಗೆ ಗರ್ಭ ...{Loading}...

ಬಲಿದುದವರಿಗೆ ಗರ್ಭ ಜನನದ
ನೆಲೆಯ ಕಾಲಕೆ ಸತಿಯರುದರದೊ
ಳಿಳಿದುದೊಂದೊಂದವಯವದ ಸೀಳೆರಡು ಸಮವಾಗಿ
ಬಳಿಕ ಕಂಡವರಕಟ ದುಷ್ಕೃತ
ಫಲವೆ ಸುಡಲಿವನೆನುತ ಬಿಸುಟರು
ಹೊಳಲ ಹೊರಬಾಹೆಯಲಿ ನಡುವಿರುಳರಸ ಕೇಳ್ ಎಂದ ॥43॥

೦೪೪ ನಡುವಿರುಳು ಜರೆಯೆಮ್ಬ ...{Loading}...

ನಡುವಿರುಳು ಜರೆಯೆಂಬ ರಕ್ಕಸಿ
ಯಡಗನರಸುತ ಬಂದು ಕಂಡಳು
ಮಿಡುಕುವೀ ಸೀಳೆರಡವನು ಹೊರ ಹೊಳಲ ಬಾಹೆಯಲಿ
ತುಡುಕಿದಳು ಸೀಳ್ದೇಕೆ ತಿನ್ನದೆ
ಮಡಗಿದರೊ ಕೌತುಕವದೇನೀ
ಯೆಡಬಲನಿದೆಂದಸುರೆ ದಿಟ್ಟಿಸಿ ನೋಡಿದಳು ಶಿಶುವ ॥44॥

೦೪೫ ಶಿಶುವನಾರೋ ಸೀಳ್ದು ...{Loading}...

ಶಿಶುವನಾರೋ ಸೀಳ್ದು ತಿನ್ನದೆ
ಬಿಸುಟು ಹೋದರೆನುತ್ತ ಜರೆ ಸಂ
ಧಿಸಿದಳಾಕಸ್ಮಿಕದ ಸೀಳೆರಡನು ವಿನೋದದಲಿ
ಪಸರಿಸಿದುದಸು ಮೇಘರವ ಘೂ
ರ್ಮಿಸುವೋಲ್ ಚೀರಿದನು ಗಿರಿಗಳ
ಬೆಸುಗೆ ಬಿಡೆ ನಡುವಿರುಳು ಕೋಳಾಹಳಿಸಿತಾ ರಭಸ ॥45॥

೦೪೬ ಊರ ಹೊರವಳಯದಲಿದೇನು ...{Loading}...

ಊರ ಹೊರವಳಯದಲಿದೇನು ಮ
ಹಾ ರಭಸವಿರುಳೆನುತ ಹರಿದುದು
ಪೌರಜನ ಝೋಂಪಿಸುವ ಕೈದೀವಿಗೆಯ ಬೆಳಗಿನಲಿ
ಅರಿವಳು ತಾನೆನುತ ಕಂಡುದು
ದೂರದಲಿ ದಾನವಿಯನವಳ ಘ
ನೋರುಗಳ ಸೋಗಿಲಲಿ ಕೈದೊಟ್ಟಿಲ ಕುಮಾರಕನ ॥46॥

೦೪೭ ನಿನ್ದುದಲ್ಲಿಯದಲ್ಲಿ ರಕ್ಕಸಿ ...{Loading}...

ನಿಂದುದಲ್ಲಿಯದಲ್ಲಿ ರಕ್ಕಸಿ
ಯೆಂದು ಭಯದಲಿ ಬಳಿಕ ಕರುಣದ
ಲೆಂದಲವಳಂಜದಿರಿ ಹೋ ಹೋ ಯೆನುತ ಕೈ ನೆಗಹಿ
ಇಂದಿವನು ಮಗನೆನಗೆ ಭೂಪತಿ
ಬಂದನಾದರೆ ಕೊಡುವೆನೀತನ
ನೆಂದಡಾಕ್ಷಣ ಕೇಳಿ ಹರಿತಂದನು ಮಹೀಪಾಲ ॥47॥

೦೪೮ ಅರಸ ಕೋ ...{Loading}...

ಅರಸ ಕೋ ನಿನ್ನವನನೀ ಮುನಿ
ವರ ಕುಮಾರನನೆನ್ನ ಹೆಸರಲಿ
ಕರೆವುದೀತನ ಸೀಳ ಬೆಚ್ಚವಳಾನು ಬೆದರದಿರು
ಜರೆಯೆನಿಪುದಭಿದಾನವೆನ್ನದು
ವರ ಜರಾಸಂಧಕನವನು ಸುರ
ನರರೊಳಗೆ ಬಲುಗೈಯನಹನೆಂದಿತ್ತಿಳರ್ಭಕನ ॥48॥

೦೪೯ ಅಸುರೆಯನು ಮನ್ನಿಸಿದನಾಕೆಯ ...{Loading}...

ಅಸುರೆಯನು ಮನ್ನಿಸಿದನಾಕೆಯ
ಪೆಸರ ಮಗನಿವನೆಂದು ಲೋಕ
ಪ್ರಸರವರಿಯಲು ನಲವಿನಲಿ ಸಾಕಿದನು ಮಾಗಧನ
ಅಸುರರಲಿ ಮತ್ರ್ಯರಲಿ ಸುರರಲಿ
ಯೆಸಕವುಳ್ಳವನೆನಿಸಿದನು ಸಾ
ಹಸದ ಜೋಡಣೆ ಜಡಿದುದವನಲಿ ರಾಯ ಕೇಳ್ ಎಂದ ॥49॥

೦೫೦ ಅದರಿನಾ ಮಾಗಧನ ...{Loading}...

ಅದರಿನಾ ಮಾಗಧನ ಮುರಿದ
ಲ್ಲದೆ ನೃಪಾಲಕರಂಜಿ ಕಪ್ಪದೊ
ಳೊದಗಲರಿಯರು ಮೆರೆಯಲೀಯರು ಯಾಗ ಮಂಟಪವ
ಇದು ನಿಧಾನವು ಭೀಮ ಪಾರ್ಥರಿ
ಗಿದು ಮುಹೂರ್ತವು ವೀಳೆಯವ ತಾ
ಕದನ ವಿಜಯದ ವೀರ ಸೇಸೆಯನಿಕ್ಕಿ ಕಳುಹೆಂದ ॥50॥

೦೫೧ ಮರೆಯದೇತಕೆ ರಾಜಸೂಯದ ...{Loading}...

ಮರೆಯದೇತಕೆ ರಾಜಸೂಯದ
ಹೊರಿಗೆ ನಿನ್ನದು ರಾಣಿಕವ ನಾ
ನರಿಯೆನೆಮ್ಮರ್ಥಾಭಿಮಾನ ಪ್ರಾಣದೊಡೆಯನಲೆ
ಕಿರಿಯರಿವದಿರು ರಾಜಸೂಯದ
ಕರುಬರತಿ ಬಲ್ಲಿದರು ಕೃಪೆಯನು
ಮೆರೆವುದೆಂದಸುರಾರಿಯಂಘ್ರಿಗೆ ಚಾಚಿದನು ಶಿರವ ॥51॥

೦೫೨ ಎತ್ತಿದನು ಮುರವೈರಿ ...{Loading}...

ಎತ್ತಿದನು ಮುರವೈರಿ ರಾಯನ
ಮಸ್ತಕವ ನಸುನಗುತ ಕರೆ ಸುಮು
ಹೊರ್ತಿಕರನಕ್ಷೋಹಿಣಿಯ ಬರಹೇಳು ದಳಪತಿಯ
ಸುತ್ತಣರಸರಿಗೋಲೆಯುಡುಗೊರೆ
ಯಿತ್ತು ದೂತರ ಕಳುಹು ಬಳಿಕಿನೊ
ಳುತ್ತರೋತ್ತರಸಿದ್ಧಿ ನಿನಗಹುದೆಂದನಸುರಾರಿ ॥52॥

೦೫೩ ರೂಢಿಸಿದ ಸುಮುಹೂರ್ತದಲಿ ...{Loading}...

ರೂಢಿಸಿದ ಸುಮುಹೂರ್ತದಲಿ ಹೊರ
ಬೀಡು ಬಿಟ್ಟುದು ದಧಿಯ ದೂರ್ವೆಯ
ಕೂಡಿದಕ್ಷತೆಗಳ ಸುಲಾಜಾವಳಿಯ ಮಂಗಳದ
ಜೋಡಿಗಳ ಜಯರವದ ದೈತ್ಯವಿ
ಭಾಡಸೂಕ್ತದ ವಿಗಡ ಬಿರುದು ಪ
ವಾಡಗಳ ಪಾಠಕರ ಗಡಬಡೆ ಗಾಡಿಸಿತು ನಭವ ॥53॥

೦೫೪ ಆಳು ನಡೆಯಲಿ ...{Loading}...

ಆಳು ನಡೆಯಲಿ ಮಗಧರಾಯನ
ಮೇಲೆ ದಂಡು ಮುಕುಂದ ದಳಪತಿ
ಹೇಳಿಕೆಗೆ ಭೀಮಾರ್ಜುನರ ಬರಹೇಳು ಹೇಳೆನುತ
ಆಳು ಸಾರಿದರವನಿಪತಿಗಳು
ಮೇಳದಲಿ ಹೊರವಂಟು ಬರೆ ದೆ
ಖ್ಖಾಳವನು ನೋಡಿದರು ನಡೆದರು ಪಯಣಗತಿಗಳಲಿ ॥54॥

೦೫೫ ಜನಪ ಕೇಳೈ ...{Loading}...

ಜನಪ ಕೇಳೈ ಕೃಷ್ಣ ಭೀಮಾ
ರ್ಜುನರು ವಿಮಳಸ್ನಾತಕವ್ರತ
ಮುನಿಗಳಾದರು ನಡೆದು ಪಯಣದ ಮೇಲೆ ಪಯಣದಲಿ
ಜನದ ಕಾಣಿಕೆಗೊಳುತ ನಾನಾ
ಜನಪದಂಗಳ ಕಳೆದು ಗಂಗಾ
ವಿನುತ ನದಿಯನು ಹಾಯ್ದು ಬಂದರು ಪೂರ್ವ ಮುಖವಾಗಿ ॥55॥

೦೫೬ ಬರುತ ಕಣ್ಡರು ...{Loading}...

ಬರುತ ಕಂಡರು ಕೂಡೆ ಕೊಬ್ಬಿದ
ಸಿರಿಯನೂರೂರುಗಳ ಸೊಂಪಿನ
ಭರಿತವನು ಗೋಧನ ಸಮೃದ್ಧಿಯ ಧಾನ್ಯರಾಶಿಗಳ
ವರ ನದಿಯ ಕಾಲುವೆಯ ತೋಟದ
ತೆರಳಿಕೆಯ ಪನಸಾಮ್ರ ಪೂಗೋ
ತ್ಕರದ ರಮ್ಯಾರಾಮ ಮಂಡಿತ ಮಗಧಮಂಡಲವ ॥56॥

೦೫೭ ಮೆಳೆಗಳೇ ದ್ರಾಕ್ಷೆಗಳು ...{Loading}...

ಮೆಳೆಗಳೇ ದ್ರಾಕ್ಷೆಗಳು ವೃಕ್ಷಾ
ವಳಿಗಳೇ ಸಹಕಾರ ದಾಡಿಮ
ಫಲಿತ ಪನಸ ಕ್ರಮುಕ ಜಂಬೂ ಮಾತುಳಂಗಮಯ
ಕಳವೆ ಶಾಲೀಮಯವು ಹೊನಲ
ಸ್ಖಳಿತ ಲಕ್ಷ್ಮೀಮಯವು ನಗರಾ
ವಳಿಗಳೆನೆ ಶೋಭಿಸಿತು ಜನಪದವಿವರ ಕಣುಮನಕೆ ॥57॥

೦೫೮ ದೇಶ ಹಗೆವನದೆನ್ದು ...{Loading}...

ದೇಶ ಹಗೆವನದೆಂದು ಕಡ್ಡಿಯ
ಘಾಸಿ ಮಾಡದೆ ಮಿಗೆ ವಿನೋದದ
ಲೈಸು ಪಡೆ ನಡೆತಂದು ಬಿಟ್ಟುದು ಗಿರಿಯ ತಪ್ಪಲಲಿ
ಆ ಸರೋರುಹಬಂಧು ಚರಮಾ
ಶಾಸತಿಯ ಚುಂಬಿಸೆ ಗಿರಿವ್ರಜ
ದಾ ಶಿಖರವನು ಹತ್ತಿದರು ಹರಿ ಭೀಮ ಫಲುಗುಣರು ॥58॥

೦೫೯ ವೃಷಭಚರ್ಮ ನಿಬದ್ಧ ...{Loading}...

ವೃಷಭಚರ್ಮ ನಿಬದ್ಧ ಭೇರಿಗ
ಳೆಸೆದವಕ್ಷತೆ ಗಂಧಮಾಲ್ಯ
ಪ್ರಸರದಲಿ ಶೈಲಾಗ್ರದಲಿ ಸಂಪನ್ನ ಪೂಜೆಯಲಿ
ಅಸುರರಿಪು ಭೀಮಾರ್ಜುನರು ತ
ದ್ವಿಷಮ ಭೇರೀತ್ರಯವ ಹೊಯ್ದೆ
ಬ್ಬಿಸಿದರದುಭುತ ರವ ಮಿಗಿಲು ಕೆಡೆದುದು ಧರಿತ್ರಿಯಲಿ ॥59॥

೦೬೦ ಏನಿದದುಭುತವೆನ್ದು ನಡುವಿರು ...{Loading}...

ಏನಿದದುಭುತವೆಂದು ನಡುವಿರು
ಳಾ ನರೇಶ್ವರನಮಳ ವೇದ ವಿ
ಧಾನದಲಿ ತಚ್ಛಾಂತಿಗೋಸುಗ ಕರೆಸಿ ಭೂಸುರರ
ದಾನದಲಿ ವಿವಿಧಾಗ್ನಿಕಾರ್ಯ ವಿ
ಧಾನದಲಿ ವಿಪ್ರೌಘವಚನ ಸ
ಘಾನದಲಿ ಮಗಧೇಶನಿದ್ದನು ರಾಯ ಕೇಳ್ ಎಂದ ॥60॥

೦೬೧ ಇವರು ಗಿರಿಯಿನ್ದಿಳಿದು ...{Loading}...

ಇವರು ಗಿರಿಯಿಂದಿಳಿದು ರಾತ್ರಿಯೊ
ಳವನ ನಗರಿಯ ರಾಜ ಬೀದಿಯ
ವಿವಿಧ ವಸ್ತುವ ಸೂರೆಗೊಂಡರು ಹಾಯ್ದು ದಳದುಳವ
ತಿವಿದರಡ್ಡೈಸಿದರನುಬ್ಬಿದ
ತವಕಿಗರು ಮಗಧೇಂದ್ರರಾಯನ
ಭವನವನು ಹೊಕ್ಕರು ವಿಡಂಬದ ವಿಪ್ರವೇಷದಲಿ ॥61॥

೦೬೨ ಉರವಣಿಸಿದರು ಮೂರು ...{Loading}...

ಉರವಣಿಸಿದರು ಮೂರು ಕೋಟೆಯ
ಮುರಿದರದ್ವಾರದಲಿ ರಾಯನ
ಹೊರೆಗೆ ಬಂದರು ಕಂಡರಿದಿರೆದ್ದನು ಜರಾಸಂಧ
ಧರಣಿಯಮರರಪೂರ್ವಿಗರು ಭಾ
ಸುರರು ಭದ್ರಾಕಾರರೆಂದಾ
ದರಿಸಿ ಮಧುಪರ್ಕಾದಿಗಳ ಮಾಡಿದನು ಭಕ್ತಿಯಲಿ ॥62॥

೦೬೩ ಕೇಳಿದನು ಕುಶಲವನು ...{Loading}...

ಕೇಳಿದನು ಕುಶಲವನು ಕುಶಲವ
ಹೇಳಿದರು ಕುಳ್ಳಿರಿಯೆನಲು ಭೂ
ಪಾಲಕರು ಕುಳ್ಳಿರ್ದರೆವೆಯಿಕ್ಕದೆ ನಿರೀಕ್ಷಿಸುತ
ಹೇಳಿರೈ ನಿಮಗಾವ ದೇಶ ವಿ
ಶಾಲ ಗೋತ್ರವದಾವುದೆನುತ ವಿ
ಲೋಲ ಮತಿ ಚಿಂತಿಸಿದನಿವದಿರು ವಿಪ್ರರಲ್ಲೆಂದು ॥63॥

೦೬೪ ಸ್ನಾತಕ ವ್ರತ ...{Loading}...

ಸ್ನಾತಕ ವ್ರತ ವೇಷದಲಿ ಬಂ
ದಾತಗಳು ತಾವಿವರು ಶಸ್ತ್ರ
ವ್ರಾತದಲಿ ಶಿಕ್ಷಿತರು ಕರ್ಕಶ ಬಾಹುಪಾಣಿಗಳು
ಕೈತವದಿನೈತಂದರರ್ಥವ
ನೀತಗಳು ಬಯಸರು ವಿರೋಧ
ಪ್ರೀತಿಮುಖರಿವರಾರೊ ಶಿವಶಿವಯೆನುತ ಚಿಂತಿಸಿದ ॥64॥

೦೬೫ ಆರಿವರು ದೇವತ್ರಯವೊ ...{Loading}...

ಆರಿವರು ದೇವತ್ರಯವೊ ಜಂ
ಭಾರಿ ಯಮ ಮಾರುತರೊ ರವಿ ರಜ
ನೀರಮಣ ಪಾವಕರೊ ಕಪಟ ಸ್ನಾತಕವ್ರತದ
ಧಾರುಣೀಶ್ವರರೊಳಗೆ ಧಿಟ್ಟರ
ದಾರು ತನ್ನೊಳು ತೊಡಕಿ ನಿಲುವ ವಿ
ಕಾರಿಗಳ ನಾ ಕಾಣೆನೆಂದನು ತನ್ನ ಮನದೊಳಗೆ ॥65॥

೦೬೬ ಈಗ ಮಿಡುಕುಳ್ಳವರು ...{Loading}...

ಈಗ ಮಿಡುಕುಳ್ಳವರು ಮಹಿಯಲಿ
ನಾಗಪುರದರಸುಗಳು ನಮ್ಮವ
ರಾಗಿಹರು ಪಾಂಡುವಿನ ಮಕ್ಕಳು ಮಿರಿ ಖಳರಲ್ಲ
ಸಾಗರೋಪಾಂತ್ಯದ ನರೇಂದ್ರರು
ಭೋಗಿಸಿದ ಮುತ್ತುಗಳು ಭಾವಿಸ
ಲೀ ಗಯಾಳರ ಗರ್ವವೇನು ನಿಮಿತ್ತವಾಯ್ತೆಂದ ॥66॥

೦೬೭ ಯಾದವರು ಹಿನ್ದೆಮ್ಮೊಡನೆ ...{Loading}...

ಯಾದವರು ಹಿಂದೆಮ್ಮೊಡನೆ ಹಗೆ
ಯಾದವರು ಬಳಿಕವರೊಳಗೆ ತುರು
ಗಾದವನ ಕರುಗಾದವನ ಮಾಧವನ ಮಾತೇನು
ಮೇದಿನಿಯ ಮಂಡಳಿಕ ಮನ್ನೆಯ
ರಾದವರು ನಮ್ಮೊಡನೆ ಸೆಣಸುವ
ರಾದಡಿದು ದುಷ್ಕಾಲ ವಶವಿದು ಚಿತ್ರವಾಯ್ತೆಂದ ॥67॥

೦೬೮ ಬವರಿಗರು ನೀವ್ ...{Loading}...

ಬವರಿಗರು ನೀವ್ ವಿಪ್ರವೇಷದ
ಜವನಿಕೆಯ ಜಾಣಾಯ್ಲತನದಿಂ
ದವಗೆಡಿಸಿ ಹೊಕ್ಕಿರಿಯಪರದ್ವಾರದಲಿ ನೃಪಸಭೆಯ
ನಿವಗಿದೇನೀ ವಸನ ಕಪಟ
ವ್ಯವಹರಣೆ ಕೃತ್ರಿಮವೊ ಸಹಜವೊ
ರವಣ ಮತ್ತೇನುಂಟು ಹೇಳಿನ್ನಂಜಬೇಡೆಂದ ॥68॥

೦೬೯ ಸ್ನಾತಕ ವ್ರತವೇನು ...{Loading}...

ಸ್ನಾತಕ ವ್ರತವೇನು ಪಾರ್ಥಿವ
ಜಾತಿಗಿಲ್ಲಲೆ ವೈಶ್ಯಕುಲಕಿದು
ಪಾತಕವು ನಾವಿಂದು ಪಾರ್ಥಿವ ಜಾತಿ ಸಂಭವರು
ಸ್ನಾತಕರು ನಾವ್ ವೈರಿ ಗೃಹದಲ
ಭೀತರದ್ವಾರ ಪ್ರವೇಶವ
ನೀತಿಯಲ್ಲ ಪುರಾಣಸಿದ್ಧವಿದೆಂದನಸುರಾರಿ ॥69॥

೦೭೦ ವೈರಿ ಭವನವೆ ...{Loading}...

ವೈರಿ ಭವನವೆ ನಮ್ಮದಿದು ನಾವ್
ವೈರಿಗಳೆ ನಿಮಗೆಮಗೆ ಜನಿಸಿದ
ವೈರಬಂಧ ನಿಮಿತ್ತವಾವುದು ನಿಮ್ಮ ಪಕ್ಷದಲಿ
ಆರು ನೀವೀ ಬ್ರಾಹ್ಮಣರು ನಿಮ
ಗಾರುಪಾಧ್ಯರು ಹೇಳಿ ನಿಮ್ಮ ವಿ
ಕಾರ ಬರಿದೇ ಹೋಗದೆಂದನು ಮಗಧಪತಿ ನಗುತ ॥70॥

೦೭೧ ಮುರಿದು ಹಲಬರಿಳಾದಿನಾಥರ ...{Loading}...

ಮುರಿದು ಹಲಬರಿಳಾದಿನಾಥರ
ಸೆರೆಯಲಿಕ್ಕಿದೆ ರಾಜ್ಯ ಮದದಲಿ
ಮರೆದು ಮಾನ್ಯರನಿರಿದು ಹೆಚ್ಚಿಸಿಕೊಂಡೆ ಭುಜಬಲವ
ಅರಿಯದಳುಪಿದ ಪಾತಕಕೆ ಬಿಡು
ಸೆರೆಯ ಪ್ರಾಯಶ್ಚಿತ್ತವಿದು ನಾ
ವುರುವ ವೇಷದುಪಾಧ್ಯರೆಂದನು ನಗುತ ಮುರಹರನು ॥71॥

೦೭೨ ಆ ನೃಪಾಲರ ...{Loading}...

ಆ ನೃಪಾಲರ ಮಗನೊ ಮೊಮ್ಮಗನೊ
ನೀನವರ ಬಾಂಧವನೊ ಭೃತ್ಯನೊ
ನೂನವಕ್ಷನೊ ಬೆರಳ ಬದೆಗನೊ ಕುರುಳ ಕೋಮಳನೊ
ಏನು ನಿನ್ನಂಘವಣೆ ನೀನಾ
ರಾ ನರೇಂದ್ರರ ಸೆರೆಯ ಬಿಡುಗಡೆ
ಗೇನನೆಂಬೆನು ರಹವನೆಂದನು ತೂಗಿ ಮಣಿಶಿರವ ॥72॥

೦೭೩ ಎಲವೊ ಧರೆಯಲಧರ್ಮಶೀಲರ ...{Loading}...

ಎಲವೊ ಧರೆಯಲಧರ್ಮಶೀಲರ
ತಲೆಯ ಚೆಂಡಾಡುವೆವು ಧರ್ಮವ
ನೊಲಿದು ಕೊಂಡಾಡುವೆವು ಶಿಕ್ಷಾ ರಕ್ಷಣ ವ್ಯಸನ
ನೆಲೆ ನಮಗೆ ನೀನರಿಯೆ ರಾಜಾ
ವಳಿಯ ಬಿಡು ಫಡ ಭಂಡವಿದ್ಯೆಯ
ಬಳಸುವಾ ನಮ್ಮೊಡನೆಯೆಂದನು ದಾನವಧ್ವಂಸಿ ॥73॥

೦೭೪ ಇವರು ಗಡ ...{Loading}...

ಇವರು ಗಡ ಜಗದೊಳಗೆ ಶಿಕ್ಷಾ
ಸವನದಲಿ ದೀಕ್ಷಿತರು ಗಡ ಕೈ
ತವದ ಭಂಡರು ನೀವೊ ನಾವೋ ಸಾಕದಂತಿರಲಿ
ಕವಡುತನದಲಿ ದಿಟ್ಟರಹಿರಂ
ಘವಣೆಯೊಳ್ಳಿತು ನಿಮ್ಮ ನಿಜವನು
ವಿವರಿಸಿರೆ ನೀವಾರು ಹೇಳೆಂದನು ಜರಾಸಂಧ ॥74॥

೦೭೫ ಕೇಳಿ ಮಾಡುವುದೇನು ...{Loading}...

ಕೇಳಿ ಮಾಡುವುದೇನು ತಾನಸು
ರಾಳಿ ಧೂಳೀಪಟಲ ವೈರಿ ನೃ
ಪಾಲ ಚೌಪಟಮಲ್ಲನೀತನು ಭೀಮಸೇನ ಕಣಾ
ಭಾಳನೇತ್ರನ ಭುಜಬಲದ ಸಮ
ಪಾಳಿಯರ್ಜುನನೀತನೇಳಾ
ಕಾಳಗವ ಕೊಡು ನಮ್ಮ್ಮೊಳೊಬ್ಬರಿಗೆಂದನಸುರಾರಿ ॥75॥

೦೭೬ ಕೇಳಿ ಕೆದರಿದ ...{Loading}...

ಕೇಳಿ ಕೆದರಿದ ಕಡು ನಗೆಯಲಡ
ಬೀಳುತೇಳುತ ಬಿರುವನಿಯ ಕ
ಣ್ಣಾಲಿಗಳ ಝೊಮ್ಮೆದ್ದ ರೋಮದ ಜಡಿವ ಬಿಡುದಲೆಯ
ಸೂಳು ನಗೆ ಬೆಳುನಗೆಯಲಡಿಗಡಿ
ಗಾಳಿ ಮುಸುಗುಬ್ಬಸದಲಿದ್ದು ಕ
ರಾಳಮತಿ ಸಂತೈಸಿ ನೆರೆ ತನ್ನವರಿಗಿಂತೆಂದ ॥76॥

೦೭೭ ಈತನಾರೆನ್ದರಿವಿರೈ ನ ...{Loading}...

ಈತನಾರೆಂದರಿವಿರೈ ನ
ಮ್ಮಾತನೀತನು ನಮ್ಮ ಕಂಸಂ
ಗೀತನಳಿಯನು ನಮಗೆ ಮೊಮ್ಮನು ಮಗನು ದೇವಕಿಗೆ
ಈತ ಕಾಣಿರೆ ಹಿಂದೆ ಚೌರಾ
ಶೀತಿ ದುರ್ಗದೊಳೋಡಿ ಬದುಕಿದ
ನೀತ ಬಲುಗೈ ಬಂಟನೆಂದನು ಮಗಧಪತಿ ನಗುತ ॥77॥

೦೭೮ ಕೊಳಲ ರಾಗದ ...{Loading}...

ಕೊಳಲ ರಾಗದ ರಹಿಯೊ ಕಲ್ಲಿಯ
ಕಲಸುಗೂಳೋ ಹಳ್ಳಿಕಾತಿಯ
ರೊಳಗುಡಿಯ ಹಾದರವೊ ತುರುಗಾಹಿಗಳ ತೋಹುಗಳೊ
ಬಲುಸರಳ ಸರಿವಳೆಯ ಮಿದುಳೊಡೆ
ಗಲಸುಗಳಡಾಯುಧದ ತಳುಕಿನ
ಕೊಳಗುಳದ ಜಯಸಿರಿಯ ಕಾಹಿನೊಳಾರು ನೀನೆಂದ ॥78॥

೦೭೯ ಹೋರಿ ಹೆಙ್ಗುಸು ...{Loading}...

ಹೋರಿ ಹೆಂಗುಸು ಬಂಡಿ ಪಕ್ಷಿ ಸ
ಮೀರಣಾಶ್ವಾಜಗರ ಗಾರ್ದಭ
ವೀರರೀತನ ಘಾತಿಗಳುಕಿತು ಕಂಸ ಪರಿವಾರ
ಆರುಭಟೆಯುಳ್ಳವನು ಕಂಸನ
ತೋರಹತ್ತನ ತೊಡಕಿದನು ಗಡ
ಭಾರಿಯಾಳಹನುಂಟು ಶಿವಶಿವಯೆಂದನು ಮಗಧ ॥79॥

೦೮೦ ಎಲವೊ ಗೋವಳ ...{Loading}...

ಎಲವೊ ಗೋವಳ ನಿನ್ನ ಕಂಸನ
ನಿಳಯವೋ ಪೌಂಡ್ರಕನ ಕದನದ
ಕಳನೊ ಹಂಸನ ಹೋರಟೆಯೊ ಮೇಣ್ ಡಿಬಿಕನಡುಪಾಯೊ
ಹುಲಿಗೆ ಮೊಲನಭ್ಯಾಗತನೆ ಕರಿ
ಕಳಭ ಸಿಂಹಕೆ ಸರಿಯೆ ನೀ ನಿ
ನ್ನಳವನರಿಯದೆ ಹೊಕ್ಕು ಕೆಣಕಿದೆ ಕೆಟ್ಟೆ ಹೋಗೆಂದ ॥80॥

೦೮೧ ಇದುವೆ ಪಿತ್ತದ ...{Loading}...

ಇದುವೆ ಪಿತ್ತದ ವಿಕಳವೋ ಮ
ದ್ಯದ ವಿಕಾರವೊ ಭಂಗಿ ತಲೆಗೇ
ರಿದುದೊ ಭಟನಾದರೆ ವಿಘಾತದಲೇಳು ಕಾಳಗಕೆ
ಸದನ ನಿನ್ನದು ಸೂಳೆಯರ ಮುಂ
ದೊದರಿ ಫಲವೇನೆದ್ದು ಬಾ ಭಾ
ಳದಲಿ ಬರೆದುದ ತೊಡೆವೆನೆಂದನು ದಾನವಧ್ವಂಸಿ ॥81॥

೦೮೨ ಎಲವೊ ಗೋಪಕುಮಾರ ...{Loading}...

ಎಲವೊ ಗೋಪಕುಮಾರ ಕಂಸನ
ಲಲನೆಯರ ವೈಧವ್ಯ ದುಃಖಾ
ನಲನ ನಂದಿಸಲಾಯ್ತು ನಿನ್ನಯ ರುಧಿರ ಜಲಧಾರೆ
ಅಳಿದ ಕಂಸನ ಕಾಲಯವನನ
ಕಳನ ಹರಿಬವ ಗೆಲಿದು ದೈತ್ಯಾ
ವಳಿಯ ಬಂಧುತ್ವವನು ಬಳಸುವೆನೆಂದನಾ ಮಗಧ ॥82॥

೦೮೩ ಗೋವಳರು ನಿರ್ಲಜ್ಜರದರೊಳು ...{Loading}...

ಗೋವಳರು ನಿರ್ಲಜ್ಜರದರೊಳು
ನೀವು ಗರುವರು ರಾಜಪುತ್ರರು
ಸಾವ ಬಯಸುವನೊಡನೆ ಬಂದಿರಿ ತಪ್ಪ ಮಾಡಿದಿರಿ
ನೀವು ಮಕ್ಕಳು ನಿಮ್ಮ ಹಿರಿಯರ
ಠಾವಿನಲಿ ಬುಧರಿಲ್ಲಲಾ ನಿಮ
ಗಾವ ಹದನಹುದೆನುತ ನುಡಿದನು ಭೀಮ ಫಲುಗುಣರ ॥83॥

೦೮೪ ಸಾಕಿದೇತಕೆ ಹೊಳ್ಳು ...{Loading}...

ಸಾಕಿದೇತಕೆ ಹೊಳ್ಳು ನುಡಿಗೆ ವಿ
ವೇಕಿಗಳು ಮೆಚ್ಚುವರೆ ಯುಧ್ಧ
ವ್ಯಾಕರಣ ಪಾಂಡಿತ್ಯವುಳ್ಳರೆ ತೋರಿಸುವುದೆಮಗೆ
ಈ ಕಮಲನೇತ್ರಂಗೆ ಫಡ ನೀ
ನಾಕೆವಾಳನೆ ಶಿವಶಿವಾ ಜಗ
ದೇಕ ದೈವದ ಕೂಡೆ ದಂಡಿಯೆಯೆಂದನಾ ಭೀಮ ॥84॥

೦೮೫ ದಿಟ್ಟರಹಿರೋ ಸಾವನರಿಯದೆ ...{Loading}...

ದಿಟ್ಟರಹಿರೋ ಸಾವನರಿಯದೆ
ಕೆಟ್ಟಿರಕಟಾ ಕಾಳು ಗೋಪನ
ಗೊಟ್ಟಿಯಾಟಕೆ ಗುರಿಗಳಾದಿರಿ ನಿಮ್ಮ ಗುರುಸಹಿತ
ಚಟ್ಟಳೆಯ ಚತುರಾಸ್ಯನಿವೊರಡ
ಹುಟ್ಟಿದರ ಸಮಜೋಳಿ ಗಡ ಜಗ
ಜಟ್ಟಿಗಳು ತಾವಿವರೆನುತ ತಲೆದೂಗಿದನು ಮಗಧ ॥85॥

೦೮೬ ಬೈದು ಫಲವೇನೆಮಗೆ ...{Loading}...

ಬೈದು ಫಲವೇನೆಮಗೆ ಮೇಳದ
ಮೈದುನರು ನೀವಲ್ಲಲೇದಳ
ವೈದೆ ನೂಕಲಿ ನಿಮ್ಮ ಮೂವರು ಸಹಿತ ನಮ್ಮೊಡನೆ
ಕೈದುವುಂಟೇ ತರಿಸಿ ಕೊಡಿಸುವೆ
ನೈದಿ ನೀವಾಳಾಗಿ ನಿಮ್ಮೊಡ
ನೈದುವೆನು ಬಲರಾಮನುಳಿದಾನೆಂದನಾ ಮಗಧ ॥86॥

೦೮೭ ಎಲವೊ ಬಾಹಿರ ...{Loading}...

ಎಲವೊ ಬಾಹಿರ ಮಗಧ ಹಲಧರಳಿ
ನಳಿಯೆ ಪಾಂಡವ ನೃಪರು ಪರಿಯಂ
ತಳವು ನಿನಗೊಬ್ಬಂಗೆ ಸೇರುವುದೇ ಮಹಾದೇವ
ಅಳಿವು ತಪ್ಪದು ನುಡಿಯೊಳಲ್ಪವ
ಬಳಸಲೇತಕೆ ವೀರನಹೆ ನ
ಮ್ಮೊಳಗೆ ಮೂವರೊಳೊಬ್ಬನನು ವರಿಸೆಂದನಸುರಾರಿ ॥87॥

೦೮೮ ಅಕಟ ನಿಮಗೀ ...{Loading}...

ಅಕಟ ನಿಮಗೀ ಸಮರವಾವ
ಶ್ಯಕವೆ ನಮಗಖ್ಯಾತಿಯಲ್ಲಿದು
ಸಕಲ ಜನವರಿದಿರೆಯೆನುತ ನೋಡಿದನು ತನ್ನವರ
ಪ್ರಕಟವೈ ನಿಮ್ಮಾಳುತನ ಯದು
ನಿಕರಕಾವಂಜುವೆವು ರಣ ನಾ
ಟಕ ಪಲಾಯನ ಪಂಡಿತರು ನೀವೆಂದನಾ ಮಗಧ ॥88॥

೦೮೯ ಪಾರ್ಥ ನೀ ...{Loading}...

ಪಾರ್ಥ ನೀ ಮಗುವೆಮ್ಮೊಡನೆ ರಣ
ದರ್ಥಿಯಾದರೆ ಭೀಮಸೇನ ಸ
ಮರ್ಥನಹನಾತಂಗೆ ಕೊಟ್ಟೆನು ಕಳನ ಕಾಳಗವ
ವ್ಯರ್ಥವಿದು ತಾ ಹೋಗಲಿನ್ನು ಪ
ರಾರ್ಥ ಕಂಟಕವಾಗಲೇತಕೆ
ತೀರ್ಥವೈಸಲೆ ಶಸ್ತ್ರಧಾರೆಯಿದೆಂದನಾ ಮಗಧ ॥89॥

೦೯೦ ತರಿಸಿದನು ಚನ್ದನದ ...{Loading}...

ತರಿಸಿದನು ಚಂದನದ ಸಾದಿನ
ಭರಣಿಗಳ ಕರ್ಪೂರ ವರಕ
ತ್ತುರಿ ಜವಾಜಿ ಪ್ರಮುಖ ಬಹುವಿಧ ಯಕ್ಷಕರ್ದಮವ
ಹರಿ ವೃಕೋದರ ಪಾರ್ಥರಿದಿರಲಿ
ಭರಣಿಗಳ ನೂಕಿದನು ಮಾಲ್ಯಾಂ
ಬರ ವಿಲೇಪನದಿಂದಲಂಕರಿಸಿದರು ನಿಜತನುವ ॥90॥

೦೯೧ ಅಙ್ಕಕಿಬ್ಬರು ಭಟರು ...{Loading}...

ಅಂಕಕಿಬ್ಬರು ಭಟರು ತಿಲಕಾ
ಲಂಕರಣಶೋಭೆಯಲಿ ರಣ ನಿ
ಶ್ಶಂಕರನುವಾದರು ಸುಕರ್ಪುರ ವೀಳೆಯಂಗೊಂಡು
ಬಿಂಕದುಬ್ಬಿನ ರೋಮ ಪುಳಕದ
ಮುಂಕುಡಿಯ ಸುಮ್ಮಾನದಂಕೆಯ
ಝಂಕೆಗಳ ಭರ ಭುಲ್ಲವಿಸಿದುದು ಭೀಮ ಮಾಗಧರ ॥91॥

೦೯೨ ರಣದೊಳಾವುದು ಕೈದು ...{Loading}...

ರಣದೊಳಾವುದು ಕೈದು ಹಿರಿಯು
ಬ್ಬಣವೊ ಪರಿಘವೊ ಸುರಗಿಯೋ ಡೊಂ
ಕಣಿಯೊ ಗದೆಯೋ ಭಿಂಡಿವಾಳವೊ ಪರಶು ತೋಮರವು
ಕಣೆ ಧನುವೊ ಕಕ್ಕಡೆಯೊ ಮುಷ್ಟಿಯೊ
ಹಣಿದಕಾವುದು ಸದರವದರಲಿ
ಕೆಣಕಿ ನೋಡಾ ತನ್ನನೆಂದನು ಭೀಮ ಮಾಗಧನ ॥92॥

೦೯೩ ಆಯುಧಙ್ಗಳಲೇನು ನೀ ...{Loading}...

ಆಯುಧಂಗಳಲೇನು ನೀ ನಾ
ಗಾಯುತದ ಬಲನೆಂಬರಾ ನುಡಿ
ವಾಯವೋ ಕಲಿಭೀಮ ದಿಟವೋ ನೋಡಬೇಹುದಲೆ
ಆಯಿತೇ ಸಮಜೋಳಿ ನಿನಗಡು
ಪಾಯವೋ ಚೊಕ್ಕೆಯವೊ ನುಡಿ ಮನ
ದಾಯತವನೆನಗೆನುತ ಹತ್ತಾಹತ್ತಿಗನುವಾದ ॥93॥

೦೯೪ ಧರಣಿಪತಿ ಕೇಳ್ಮಾಗಧನ ...{Loading}...

ಧರಣಿಪತಿ ಕೇಳ್ಮಾಗಧನ ಮಂ
ದಿರದ ರಾಜಾಂಗಣದೊಳವನೀ
ಸುರರು ನೋಟಕರಾದರಿಲ್ಲಿ ಮುರಾರಿ ಫಲುಗುಣರು
ಎರಡು ಬಲ ಮೋಹರಿಸಿ ನಿಂದುದು
ಪುರದ ಹೊರ ಬಾಹೆಯಲಿ ಕೃತ ಸಂ
ಚರಣ ಕಾರ್ತಿಕ ಶುದ್ಧ ಪಾಡ್ಯದೊಳಾಹವಾರಂಭ ॥94॥

೦೯೫ ಸಿಡಿಲು ಬೊಬ್ಬಿಡುವನ್ತೆ ...{Loading}...

ಸಿಡಿಲು ಬೊಬ್ಬಿಡುವಂತೆ ಹೊಯ್ದರು
ಮುಡುಹುಗಳ ಮಝ ಪೂತು ಮಲ್ಲೆನು
ತಡಿಗಡಿಗೆ ನೂಕಿದರು ಲವಣಿಯ ನೀಡಿ ಸಾರದಲಿ
ತುಡುಕಲೀಯದೆ ತಿರುಗಿದರು ಗಡ
ಬಡಿಸಿ ದಂಡೆಯೊಳೊತ್ತಿದರು ಸಮ
ಚಡಿಸಿ ನಿಂದರು ನೀಲ ನಿಷಧಾಚಲಕೆ ಮಲೆವಂತೆ ॥95॥

೦೯೬ ಸಿಕ್ಕರೊಬ್ಬರಿಗೊಬ್ಬರುರೆ ಕೈ ...{Loading}...

ಸಿಕ್ಕರೊಬ್ಬರಿಗೊಬ್ಬರುರೆ ಕೈ
ಮಿಕ್ಕುಹರಿಯರು ಕೊಂಡ ಠಾಣದ
ಠಕ್ಕಿನಲಿ ಮೈಗೊಡರು ತಿರಿಮುರಿವುಗಳ ಮಂಡಿಯಲಿ
ಎಕ್ಕಹತ್ತದುಹತ್ತದಲಿ ಸಲೆ
ಮಿಕ್ಕು ಸತ್ರಾಣದಲಿ ಮಿಗೆ ಸರಿ
ವೊಕ್ಕು ಹಿಡಿದರು ಬಿನ್ನಣದ ಚೊಕ್ಕೆಯದ ಚಾಳಿಯಲಿ ॥96॥

೦೯೭ ಬಿಡಿಸಿ ಗಳಹತ್ತವನು ...{Loading}...

ಬಿಡಿಸಿ ಗಳಹತ್ತವನು ಡೊಕ್ಕರ
ಕೊಡೆ ಮುರಿವ ಸಕುಟುಂಬ ಡೊಕ್ಕರ
ಕಡಸಿ ಕತ್ತರಿಘಟ್ಟಿಸುವ ಗಳಹತ್ತಡೊಕ್ಕರವ
ತಡೆವ ಚೌವಂಗುಲ ದುವಂಗುಲ
ಕೊಡೆಮುರಿವ ಪಟ್ಟಸಕೆ ಚಾಚುವ
ಝಡಿತೆಗೊದಗುವ ಭಟರು ಹೆಣಗಿದರರಸ ಕೇಳ್ ಎಂದ ॥97॥

೦೯೮ ಎಳೆದು ದಣುವಟ್ಟೆಯಲಿ ...{Loading}...

ಎಳೆದು ದಣುವಟ್ಟೆಯಲಿ ಬೊಪ್ಪರ
ದೊಳಗೆ ಜಾಳಿಸಿ ಚಿಮ್ಮಿ ಝಡಿತೆಯ
ಸೆಳೆದು ಮುಡುಹಿನಲೌಕಿ ಬಿಗಿದರು ಪಟ್ಟ ಮುಡುಹಿನಲಿ
ಸುಳಿದು ಮರ್ಕಟ ಬಂಧದಲಿ ಕರ
ವಳಯದಲಿ ಕೈ ದುಡುಕಿ ಶಿರವ
ಟ್ಟಳೆಯ ಚಲ್ಲಣ ಪಟ್ಟಿಯವರೊದಗಿದರು ಪಟುಭಟರು ॥98॥

೦೯೯ ಅಗಡಿಯಲಿ ಲೋಟಿಸಿ ...{Loading}...

ಅಗಡಿಯಲಿ ಲೋಟಿಸಿ ನಿರಂತರ
ಲಗಡಿಯಲಿ ಲಾಗಿಸಿ ನಿಬಂಧದ
ಬಿಗುಹುಗಳ ಕುಮ್ಮರಿಯ ಕುಹರದ ನಾಗಬಂಧಗಳ
ತೆಗಹುಗಳ ತೊಡಕುಗಳ ತುಳುಕಿನ
ಜಗಳುಗಳ ಜೋಡಣೆಯ ನಿಡು ಸು
ಯ್ಲುಗಳ ಸೌರಂಭದ ಸಗಾಢರು ಹೊಕ್ಕು ಹೆಣಗಿದರು ॥99॥

೧೦೦ ಧೂಳಿ ಕುಡಿದುದು ...{Loading}...

ಧೂಳಿ ಕುಡಿದುದು ಬೆಮರನಾ ಕೆಂ
ಧೂಳಿ ನೆನೆದುದು ಬೆವರಿನಲಿ ತಳ
ಮೇಲು ನಿಮಿಷಕೆ ಮೇಲು ತಳ ಬಿಡುಹುಗಳ ಬಿಗುಹುಗಳ
ಸೂಳು ನಾಸಾ ಪುಟದ ಪವನನ
ತಾಳಿಗೆಯ ಕರ್ಪುರದ ಕವಳದ
ತೋಳ ತೆಕ್ಕೆಯ ತವಕಿಗರು ಹೆಣಗಿದರು ಪಟುಭಟರು ॥100॥

೧೦೧ ತೀರದಿಬ್ಬರ ಸತ್ವವವನಿಯ ...{Loading}...

ತೀರದಿಬ್ಬರ ಸತ್ವವವನಿಯ
ಸಾರದಿಬ್ಬರ ಬಲುಹುಗಾಣದು
ಪಾರುಖಾಣೆಯವದಟರಿಬ್ಬರ ಭುಜಬಲಾಟೋಪ
ಸಾರವಳಿಯದು ಮುಳಿಸು ದರ್ಪದ
ಧಾರೆ ಮುರಿಯದು ಜಯದ ತೃಷ್ಣೆಯ
ತೋರಹತ್ತರು ಹೆಣಗಿದರು ಕಲಿಭೀಮ ಮಾಗಧರು ॥101॥

೧೦೨ ಪೂತು ಮಝ ...{Loading}...

ಪೂತು ಮಝ ಜಗಜಟ್ಟಿ ಧಣು ಧಣು
ವಾತಸುತ ಪರಬಲಭಯಂಕರ
ಸೋತನೋ ಪ್ರತಿಮಲ್ಲನೆಂದರು ಕೃಷ್ಣ ಫಲುಗುಣರು
ಭೀತನಾದನು ಭೀಮನಹಿತವಿ
ಘಾತಿ ಮಾಗಧರಾಯ ಮಲ್ಲ
ವ್ರಾತ ಕುಲಗಿರಿವಜ್ರನೆಂದುದು ಮಗಧ ಪರಿವಾರ ॥102॥

೧೦೩ ಅಲಸಿದರು ಬಿನ್ನಣಕೆ ...{Loading}...

ಅಲಸಿದರು ಬಿನ್ನಣಕೆ ಬಿಗುಹಿನ
ಕಳಿವುಗಳ ಬೇಸರಿಕೆಯಲಿ ಕಡು
ಲುಳಿ ಮಸಗಿ ಡಾವರಿಸಿ ಮನವನುಪಾಯ ಡಾವರಕೆ
ತೊಲಗಿ ನಿಂದರು ಕರ್ಪುರದ ತನಿ
ಹಳುಕನಣಲೊಳಗಡಸಿ ದಂಡೆಯ
ಬಲಿದು ಬರಸಿಡಿಲೆರಕವೆನೆ ತಾಗಿದರು ಬಳಸಿನಲಿ ॥103॥

೧೦೪ ಬಾಳ ಹೊಯ್ಲೋ ...{Loading}...

ಬಾಳ ಹೊಯ್ಲೋ ಸಿಡಿಲ ತೊಡರಿನ
ಸೂಳುಗಳೊ ಸಿಡಿದಲೆಯ ಗಿರಿಗಳ
ಬೀಳುಗಳೊ ಬಿರುಹೊಯ್ಲ ಧಾರೆಯ ಕಿಡಿಯ ತುಂಡುಗಳೊ
ತೋಳ ನೆಗಹಿನ ಮುಷ್ಟಿ ಘಾತದ
ಮೇಲು ಘಾಯದ ಲುಳಿಯ ಘೋಳಾ
ಘೋಳಿಗಳನಾರೆಣಿಸುವರು ಕಲಿಭೀಮ ಮಾಗಧರ ॥104॥

೧೦೫ ಕುಸಿದು ಘಾಯವ ...{Loading}...

ಕುಸಿದು ಘಾಯವ ಕಳೆದು ವಕ್ಷದ
ಬೆಸುಗೆ ಬಿಡೆ ಸಿಡಿದೆದ್ದು ಹೊಯ್ಲಿಗೆ
ಮುಸುಡ ತಿರುಹುವ ಮೈಯನೊಡ್ಡಿದಡೌಕಿ ಧಟ್ಟಿಸುವ
ಅಸಮಸೆಗೆ ಮೈಯಳುಕದೆರಗುವ
ಹುಸಿವ ಜಾರುವ ಹೊಳೆವ ಹಣುಗುವ
ಬೆಸುವ ಬಿಡಿಸುವ ದಿಷ್ಟಿವಾಳರು ಹೊಕ್ಕು ಹೆಣಗಿದರು ॥105॥

೧೦೬ ಪವನಜನ ರಾವಣನ ...{Loading}...

ಪವನಜನ ರಾವಣನ ಝಾಡಿಯ
ತಿವಿತಗಳು ಚಾಣೂರ ಕೃಷ್ಣರ
ಜವಳಿ ಹೊಯ್ಲಿವರೊಳಗೆ ಜೋಡಿಸವೇನ ಹೇಳುವೆನು
ಶಿವನ ಡಮರುಗದಾಟವೋ ಭೈ
ರವನ ಫಣೆಗಣ್ಣಾಟವೋ ಬಿರು
ದಿವಿಗುಳಿನ ದೆಖ್ಖಾಳ ಮಸಗಿತು ಭೀಮ ಮಾಗಧರ ॥106॥

೧೦೭ ಕುಣಿದವಿಬ್ಬರ ಮುಷ್ಟಿಯಿಬ್ಬರ ...{Loading}...

ಕುಣಿದವಿಬ್ಬರ ಮುಷ್ಟಿಯಿಬ್ಬರ
ಹಣೆಯಲೆದೆಯಲಿ ಮೋರೆಯಲಿ ಭುಜ
ದಣಸಿನಲಿ ಕಂದದಲಿ ಶಿರದಲಿ ಬದಿಯಲುದರದಲಿ
ಝಣು ವಿರೋಧಿ ವಿಭಾಡ ಝಣು ಝಣು
ಝಣು ಜಗತ್ರಯ ಜಟ್ಟಿ ಝಣು ಝಣು
ಝಣು ಝಣೆಂಬಬ್ಬರಣೆ ಮಸಗಿದುದೆರಡು ಬಾಹೆಯಲಿ ॥107॥

೧೦೮ ಹೊಯ್ಲ ಹೊದರೆದ್ದವು ...{Loading}...

ಹೊಯ್ಲ ಹೊದರೆದ್ದವು ವಿಘಾತದ
ಕಯ್ಲುಳಿಯ ಕಡುಘಾಯ ಘಾಯಕೆ
ಮೆಯ್ಲವಣೆ ಲಂಬಿಸಿತು ಕಡುಹಿನ ಖತಿಯ ಕೈಮಸಕ
ಹೊಯ್ಲ ಹೊಗೆಗಳ ಹೋರಟೆಯ ವೇ
ಗಾಯ್ಲ ಮುಷ್ಟಾಮುಷ್ಟಿ ಗತಿಯ ದೃ
ಢಾಯ್ಲರಪ್ಪಳಿಸಿದರು ಪದ ಘಟ್ಟಣೆಗೆ ನೆಲ ಕುಸಿಯೆ ॥108॥

೧೦೯ ಆವ ಸಾಧನೆಯೋ ...{Loading}...

ಆವ ಸಾಧನೆಯೋ ವಿಘಾತಿಯ
ಲಾವಣಿಗೆಗದ್ರಿಗಳು ಬಿರಿದವು
ಮೈವಳಿಯಲುಕ್ಕಿದುದು ಕಡುಹಿನ ಖತಿಯ ಕೈಮಸಕ
ತಾವರೆಯ ತೆತ್ತಿಗನ ಕುಮುದದ
ಜೀವಿಗನ ಮಿಗೆ ಮೇಲು ನೋಟದೊ
ಳಾ ವಿಗಡರುಗಳಡಸಿ ತಿವಿದಾಡಿದರು ಬೇಸರದೆ ॥109॥

೧೧೦ ತೆಗೆಯರರ್ಜುನ ಕೃಷ್ಣರೀತನ ...{Loading}...

ತೆಗೆಯರರ್ಜುನ ಕೃಷ್ಣರೀತನ
ನುಗಿಯರವನವರವನನಿರುಳಿನ
ಹಗಲ ವಿವರಣೆಯಿಲ್ಲ ಮಜ್ಜನ ಭೋಜನಾದಿಗಳ
ಬಗೆಗೆ ತಾರರು ಬಾಹುಸತ್ವದ
ಹೊಗರು ಹೋಗದು ಮನದ ಖಾತಿಯ
ತೆಗಹು ತಗ್ಗದು ಹೊಕ್ಕು ತಿವಿದಾಡಿದರು ಬೇಸರದೆ ॥110॥

೧೧೧ ಸತ್ವ ಸವೆಯದು ...{Loading}...

ಸತ್ವ ಸವೆಯದು ಮನದ ಮುಳಿಸಿನ
ಬಿತ್ತು ಬೀಯದು ಜಯದ ಬಯಕೆಯ
ಸುತ್ತು ಸಡಿಲದುಬಿಂಕ ಬೀಯದು ನೋಯದಾಟೋಪ
ತೆತ್ತ ಕೈ ಕಂಪಿಸದು ಮುಷ್ಟಿಯ
ಹತ್ತುಗೆಗೆ ಮನ ಝೋಂಪಿಸದು ಮದ
ವೆತ್ತಿ ಮೆಟ್ಟಿದರೊಬ್ಬರೊಬ್ಬರ ಮರ್ಮಘಾತದಲಿ ॥111॥

೧೧೨ ಅರಸಕೇಳೈದನೆಯದಿವಸದೊ ...{Loading}...

ಅರಸಕೇಳೈದನೆಯದಿವಸದೊ
ಳುರುಭಯಂಕರವಾಯ್ತು ಕದನದ
ಭರದೊಳೆಡೆದೆರಹಿಲ್ಲ ವಿಶ್ರಮವಿಲ್ಲ ನಿಮಿಷದಲಿ
ಎರಡು ದೆಸೆಯಲಿ ವೀಳೆಯದ ಕ
ರ್ಪುರದ ಕವಳದ ಕೈ ಚಳಕದಲಿ
ತೆರಹನಲ್ಲದೆ ಮತ್ತೆ ಕಾಣೆನು ಯುದ್ಧರಂಗದಲಿ ॥112॥

೧೧೩ ಭರದ ಭಾರಣೆಯಲಿ ...{Loading}...

ಭರದ ಭಾರಣೆಯಲಿ ಚತುರ್ದಶಿ
ಯಿರುಳು ಮಗಧನ ಬಾಹುಸತ್ವದ
ಮುರಿವು ಮೊಳೆತುದು ಶೌರ್ಯ ಸೆಡೆದುದು ಭರದ ಬಿಗುಹಿನಲಿ
ಉರು ಪರಾಕ್ರಮ ತೇಜ ಪಡುವಣ
ತರಣಿಯಾದುದು ಧಟ್ಟಣೆಯ ಧರ
ಧುರಕೆ ನಿದ್ರ್ರವ ಜಿಹ್ವೆಯಾದುದು ನಿಮಿಷ ನಿಮಿಷದಲಿ ॥113॥

೧೧೪ ಬೇಸರಿಕೆ ಬೇರೂರಿದುದು ...{Loading}...

ಬೇಸರಿಕೆ ಬೇರೂರಿದುದು ಜಯ
ದಾಸೆ ಜಾರಿತು ದಿಟ್ಟತನದ ವಿ
ಳಾಸ ಹಾರಿತು ಸುಪ್ರತಾಪದ ಕೆಂಪು ಕರಿದಾಯ್ತು
ಮೀಸಲಳಿದುದು ಮುಳಿಸು ಶೌರ್ಯದ
ವಾಸಿ ಪೈಸರವಾಯ್ತು ರಣದಾ
ವೇಶವಿಳಿದುದು ಮಗಧಪತಿಗಿದನರಿದನಸುರಾರಿ ॥114॥

೧೧೫ ಹೊರಗೆ ಬಲಿದೊಳಡಿಳ್ಳವನು ...{Loading}...

ಹೊರಗೆ ಬಲಿದೊಳಡಿಳ್ಳವನು ಪರ
ರರಿಯದಂತಿರೆ ತಿವಿವ ಮಗಧನ
ಪರಿಯನರಿದನು ದನುಜರಿಪು ಪರರಿಂತಜ್ಞನಲೆ
ಅರಿವುದರಿದೆ ಚರಾಚರಂಗಳ
ಹೊರಗೊಳಗು ತಾನಲ್ಲದಿಲ್ಲಿದ
ನರಿಯನೆ ಶಿವಯೆಂದನಾ ಜನಮೇಜಯನು ನಗುತ ॥115॥

೧೧೬ ಎಲೆಲೆ ಪವನಜ ...{Loading}...

ಎಲೆಲೆ ಪವನಜ ಮಾಗಧೇಶ್ವರ
ನಳವನರಿದಾ ನಿನ್ನ ತಂದೆಯ
ಬಲುಹು ಕೊಂಡೀ ರಿಪುವ ಮುರಿ ನೆನೆ ನೆನೆ ಸಮೀರಣನ
ಬಲುಮುಗಿಲು ಬಿರುಗಾಳಿಯೊಡ್ಡಿನೊ
ಳಳುಕದೇ ಫಡ ಬೇಗ ಮಾಡೆನೆ
ಕಲಿ ವೃಕೋದರನನಿಲರೂಪ ಧ್ಯಾನಪರನಾದ ॥116॥

೧೧೭ ಧ್ಯಾನದಲಿ ತನ್ಮಯತೆಯಾಗಲ ...{Loading}...

ಧ್ಯಾನದಲಿ ತನ್ಮಯತೆಯಾಗಲ
ನೂನ ಸಾಹಸನಾಗಿ ಮಗಧ ಮ
ಹಾ ನರೇಂದ್ರನ ತುಡುಕಿ ಹಿಡಿದನು ಮಲ್ಲಗಂಟಿನಲಿ
ಆ ನಗೆಯನೇವಣ್ಣಿಸುವೆನನು
ಮಾನಿಸದೆ ಬೀಸಿದನು ಬವಣೆಯ
ಭಾನುಮಂಡಲದಂತೆ ತಿರುಗಿದನಾ ಜರಾಸಂಧ ॥117॥

೧೧೮ ಬರಸೆಳೆದು ಕರದಿನ್ದ ...{Loading}...

ಬರಸೆಳೆದು ಕರದಿಂದ ಮಾಗಧ
ನೆರಡು ಕಾಲನು ಹಿಡಿದು ಸೀಳಿದು
ಧರೆಗೆ ಬಿಸುಟನು ಸಂಧಿಸಿದವಾ ಸೀಳ್ ತತುಕ್ಷಣಕೆ
ಮರಳಿ ಪವನಜ ಹಿಡಿದು ಸೀಳುವ
ನಿರದೆ ಮಗುಳವು ಸಂಧಿಸುವವೀ
ಪರಿ ಹಲವು ಸೂಳಿನಲಿ ಭೀಮನೊಳೊದಗಿದನು ಮಗಧ ॥118॥

೧೧೯ ಮುರಮಥನನದನರಿತು ನಿಜಕರ ...{Loading}...

ಮುರಮಥನನದನರಿತು ನಿಜಕರ
ವೆರಡ ಪಲ್ಲಟವಾಗಿ ಸಂಧಿಸ
ಲರಿವಿದಾರಣ ಭೀಮ ನೋಡುತ ಮರಳಿ ಮಾಗಧನ
ಎರಡು ಸೀಳನು ಮಾಡಿ ಹೊಯ್ದ
ಬ್ಬರಿಸಿ ಪಲ್ಲಟವಾಗಿ ಸೇರಿಸಿ
ತಿರುಗಿಸಿದನೇನೆಂಬೆನುನ್ನತ ಬಾಹುಸತ್ವದಲಿ ॥119॥

೧೨೦ ತಿರುಹಿದನು ನೂರೆಣ್ಟು ...{Loading}...

ತಿರುಹಿದನು ನೂರೆಂಟು ಸೂಳನು
ಧರೆಯೊಳಪ್ಪಳಿಸಿದನು ಬಳಿಕಾ
ಪುರಜನದ ಪರಿಜನದ ಹಾಹಾರವದ ರಹಿ ಮಸಗೆ
ತೆರಳಿತಲ್ಲಿಯದಲ್ಲಿ ಮಾಗಧ
ನರಸಿಯರು ಬಿಡುಮುಡಿಯ ಜಠರದ
ಕರದ ಬಿರುಹೊಯ್ಲಿನಲಿ ಹೊರವಂಟರು ನಿಜಾಲಯವ ॥120॥

೧೨೧ ಮನೆ ಮನೆಯ ...{Loading}...

ಮನೆ ಮನೆಯ ಕದವಿಕ್ಕಿದವು ನೃಪ
ವನಿತೆಯರು ಹೊರವಂಟರಲ್ಲಿಯ
ಮನುಜರಡಗಿದರದ್ರಿ ಗುಹೆಯಲಿ ಬೇಹ ಬೇಹವರು
ಜನದ ಕೋಲಾಹಲವನಾತನ
ತನುಜರೋಟವನವನ ಸತಿಯರ
ನಿನದವನು ಕಂಡಸುರಹರ ಸಾರಿದನು ಕೈ ನೆಗೆಹಿ ॥121॥

೧೨೨ ಅಞ್ಜದಿರಿ ಪುರದವರು ...{Loading}...

ಅಂಜದಿರಿ ಪುರದವರು ವನಿತೆಯ
ರಂಜದಿರಿ ಮಾಗಧನ ಪರಿಜನ
ವಂಜದಿರಿ ಮಂತ್ರಿ ಪ್ರಧಾನ ಪಸಾಯ್ತರಾದವರು
ಅಂಜದಿರಿ ಕರೆಯಿವನ ಮಗನನು
ಭಂಜಿಸುವುದಿಲ್ಲಕಟ ಭೀಮ ಧ
ನಂಜಯರು ಕೊಟ್ಟಭಯವೆಂದನು ನಗುತ ಮುರವೈರಿ ॥122॥

೧೨೩ ಮುರಿದು ಕೆಡೆಹಿದರರಿಯನಲ್ಲಿಯ ...{Loading}...

ಮುರಿದು ಕೆಡೆಹಿದರರಿಯನಲ್ಲಿಯ
ಸೆರೆಯ ಮನೆಗಳ ಹೊಕ್ಕು ರಾಯರ
ಸೆರೆಗಳನು ಬಿಡಿಸಿದರು ನಾನಾ ದ್ವೀಪಪಾಲಕರ
ಮೆರೆವ ಮಣಿಮಯ ರಶ್ಮಿವಳಯದ
ಮಿರುಪ ರಥವನು ಕೊಂಡು ನಗರದ
ಹೊರವಳಯದಲಿ ಬಂದು ಹೊಕ್ಕರು ತಮ್ಮ ಪಾಳೆಯವ ॥123॥

೧೨೪ ಪೌರಜನ ಕಾಣಿಕೆಗಳಲಿ ...{Loading}...

ಪೌರಜನ ಕಾಣಿಕೆಗಳಲಿ ಕಂ
ಸಾರಿ ಭೀಮಾರ್ಜುನರ ಕಂಡುದು
ಧಾರುಣೀಪಾಲಕರು ಬಂದರು ಬೆನ್ನಲಿವರುಗಳ
ಘೋರವಡಗಿದುದೆಮ್ಮ ಕಾರಾ
ಗಾರ ಬಂಧವಿಮುಕ್ತವಾಯ್ತುಪ
ಕಾರವೆಮ್ಮಿಂದಾವುದೆಂದರು ನೃಪರು ಕೈ ಮುಗಿದು ॥124॥

೧೨೫ ನವೆದಿರತಿ ದುಃಖದಲಿ ...{Loading}...

ನವೆದಿರತಿ ದುಃಖದಲಿ ಬಿಡುಗಡೆ
ಪವನಸುತನಿಂದಾಯ್ತು ನಿಜರಾ
ಜ್ಯವನು ಹೊಗುವುದು ಪೌರಜನ ಪರಿಜನವ ಸಲಹುವುದು
ಎಮಗೆ ಮಾಳ್ಪುಪಕಾರ ಬೇರಿ
ಲ್ಲವನಿಪನ ವರ ರಾಜಸೂಯಕೆ
ನಿವನಿವಗೆ ಮುಂಕೊಂಡು ಬಹುದೆಂದನು ಮುರಾಂತಕನು ॥125॥

೧೨೬ ನಗರಜನ ಮನ್ತ್ರಿ ...{Loading}...

ನಗರಜನ ಮಂತ್ರಿ ಪ್ರಧಾನಾ
ದಿಗಳು ಸಹಿತ ಕುಮಾರನೈತಂ
ದಗಧರನ ಪದಕೆರಗಿದನು ಭೀಮಾರ್ಜುನಾಂಘ್ರಿಯಲಿ
ಮಗಗೆ ತಂದೆಯ ಮಾರ್ಗದಲಿ ನಂ
ಬುಗೆಯೊ ಕರುಣಾ ರಕ್ಷಣದ ನಂ
ಬುಗೆಯೊ ಚಿತ್ತವಿಸೆಂದರಾ ಮಂತ್ರಿಗಳು ಕೈಮುಗಿದು ॥126॥

೧೨೭ ಶವವ ಸಂಸ್ಕರಿಸುವುದು ...{Loading}...

ಶವವ ಸಂಸ್ಕರಿಸುವುದು ಮಾಗಧ
ನವನಿಯಲಿ ಸಹದೇವಗಭಿಷೇ
ಕವನು ಮಾಡಿಸಿದಲ್ಲದೆತ್ತಲು ಮುರಿವುದಿಲ್ಲೆಂದು
ಅವರಿಗಭಯವನಿತ್ತು ಪರಿವಾ
ರವನು ಕಳುಹಿದರಿತ್ತಲಾತನ
ಯುವತಿಯರು ಬೇಡಿದರು ವಹ್ನಿಯ ಪಡೆದು ಮರಳಿದರು ॥127॥

೧೨೮ ಅವನ ಸಂಸ್ಕಾರದಲಿ ...{Loading}...

ಅವನ ಸಂಸ್ಕಾರದಲಿ ನಾರೀ
ನಿವಹ ಸಹಗತವಾಯ್ತು ವೈದಿಕ
ವಿವಿಧ ವಿಧಿಯಲಿ ಮಾಡಿದರು ಶೇಷಕ್ರಿಯಾದಿಗಳ
ಅವನ ಮಗ ಸಹದೇವನಾತಂ
ಗವನಿಯಲಿ ಪಟ್ಟಾಭಿಷೇಕೋ
ತ್ಸವವ ಮಾಡಿಸಿ ಕೊಟ್ಟನಭಯವನಾ ಪರಿಗ್ರಹಕೆ ॥128॥

೧೨೯ ತೇರುಗಳ ತೇಜಿಗಳನಾ ...{Loading}...

ತೇರುಗಳ ತೇಜಿಗಳನಾ ಭಂ
ಡಾರವನು ಗಜಘಟೆ ಸಹಿತ ವಿ
ಸ್ತಾರ ವಿಭವವನೊಪ್ಪುಗೊಂಡರು ಮಗಧ ನಂದನನ
ಧಾರುಣಿಯನವಗಿತ್ತು ಸಕಳ ಮ
ಹೀರಮಣರನು ಕಳುಹಿ ಬಂದನು
ವೀರನಾರಾಯಣನು ಶಕ್ರಪ್ರಸ್ಥಪುರವರಕೆ ॥129॥

+೦೨ ...{Loading}...