೦೦೦ ಸೂ ಖಾಣ್ಡವದ ...{Loading}...
ಸೂ. ಖಾಂಡವದ ವನ ದಹನ ದಾವೋ
ಚ್ಚಂಡ ಗಂಡರ ಗಂಡ ದಿವಿಜರ
ಹಿಂಡು ಗೋಳಿಡೆ ಧಾಳಿಯಿಟ್ಟನು ಚಂಡ ಗಾಂಡೀವಿ
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
ಸೂಚನೆ : ಅಗ್ನಿಯು ಖಾಂಡವವನವನ್ನು ತೀಕ್ಷ್ಣವಾದ ಕಾಳ್ಗಿಚ್ಚಿನಂತೆ ಸುಡುವುದಕ್ಕೆ ಪ್ರಾರಂಭಿಸಲು, ಅದರಿಂದಾಗಿ ಗೋಳಿಡುತ್ತಿದ್ದ ದೇವತೆಗಳ ಸಮೂಹದ ಮೇಲೆ ಶೂರರಲ್ಲಿ ಶೂರನಾದ ಪರಾಕ್ರಮಿ ಗಾಂಡೀವಿಯು ಆಕ್ರಮಣ ಮಾಡಿದನು.
ಪದಾರ್ಥ (ಕ.ಗ.ಪ)
ದಹನ-ಸುಡುವಿಕೆ, ದಾವ-ಕಾಳ್ಗಿಚ್ಚು, ಉಚ್ಚಂಡ-ತೀಕ್ಷ್ಣವಾದ, ಗಂಡ-ಶೂರ, ಧಾಳಿ-ಆಕ್ರಮಣ, ಚಂಡ-ಪರಾಕ್ರಮಿ
ಟಿಪ್ಪನೀ (ಕ.ಗ.ಪ)
ಖಾಂಡವ-ಇಂದ್ರನ ಉದ್ಯಾನವನಗಳಲ್ಲಿ ಒಂದು. ಇದು ಸರಸ್ವತೀ, ದೃಷದ್ವತೀ ನದಿಗಳಿಗೆ ಪೂರ್ವಭಾಗದಲ್ಲಿತ್ತು. ಒಮ್ಮೆ ವರುಣಲೋಕದಲ್ಲಿ 12 ವರ್ಷಗಳವರೆಗೆ ಒಂದು ಯಜ್ಞ. ಅದರಿಂದ ಅಗ್ನಿ ದೇವನ ಜೀರ್ಣಶಕ್ತಿಯು ಕುಗ್ಗಿತು. ದೇವ ವೈದ್ಯರಾದ ಅಶ್ವಿನೀ ದೇವತೆಗಳು ಇಂದ್ರನ ಖಾಂಡವ ವನದಲ್ಲಿ ಅಜೀರ್ಣವನ್ನು ಹೋಗಲಾಡಿಸುವ ಉತ್ತಮವಾದ ಮೂಲಿಕೆಗಳಿರುವುವೆಂತಲೂ, ಅವುಗಳನ್ನು ಸೇವಿಸಿದರೆ ಅಗ್ನಿ ಮಾಂದ್ಯ ಮಾಯವಾಗುವುದೆಂತಲೂ ತಿಳಿಸಿದರು. ಅಗ್ನಿದೇವನು ಕೃಷ್ಣಾರ್ಜುನರಲ್ಲಿ ಬ್ರಾಹ್ಮಣ ವೇಷದಿಂದ ಹೋಗಿ ಅವರಿಂದ ಅಭಯವನ್ನು ಪಡೆದು ಆ ವನವನ್ನು ಸುಡತೊಡಗಿದನು.
ಗಾಂಡೀವಿ-ಗಾಂಡೀವ ಒಂದು ದಿವ್ಯ ಧನುಸ್ಸು. ಇದು ಬ್ರಹ್ಮನ ಬಳಿ ಮೊದಲು ಇತ್ತು. ಅವನಿಂದ ಇಂದ್ರನಿಗೂ, ತರುವಾಯ ವರುಣನಿಗೂ ಬಂದು ಸೇರಿತು. ಆಮೇಲೆ ಅಗ್ನಿ ಅದನ್ನು ವರುಣನಿಂದ ಪಡೆದುಕೊಂಡನು. ಖಾಂಡವವನವನ್ನು ಸುಡುವ ಸಮಯದಲ್ಲಿ ಅರ್ಜುನನು ತನಗೆ ಮಾಡಿದ ಉಪಕಾರಕ್ಕಾಗಿ ಅಗ್ನಿಯು ಇದನ್ನು ಅರ್ಜುನನಿಗೆ ಕೊಟ್ಟನು. ಇದರ ಮಹಿಮೆಯಿಂದ ಅರ್ಜುನನು ಎಲ್ಲ ದಿಕ್ಕುಗಳನ್ನು ಗೆದ್ದು ಇಂದ್ರನನ್ನು ಸೋಲಿಸಿದನು. ಇದು ಅರ್ಜುನನ ಮುಖ್ಯವಾದ ಬಿಲ್ಲು. ಈ ಕಾರಣದಿಂದಲೇ ಅರ್ಜುನನಿಗೆ ಗಾಂಡೀವಿಯೆಂದು ಹೆಸರು.
ಮೂಲ ...{Loading}...
ಸೂ. ಖಾಂಡವದ ವನ ದಹನ ದಾವೋ
ಚ್ಚಂಡ ಗಂಡರ ಗಂಡ ದಿವಿಜರ
ಹಿಂಡು ಗೋಳಿಡೆ ಧಾಳಿಯಿಟ್ಟನು ಚಂಡ ಗಾಂಡೀವಿ
೦೦೧ ಕೇಳು ಜನಮೇಜಯ ...{Loading}...
ಕೇಳು ಜನಮೇಜಯ ಧರಿತ್ರೀ
ಪಾಲ ಪಾರ್ಥ ಸುಭದ್ರೆಯಲಿ ಭೂ
ಪಾಲತಿಲಕನು ಜನಿಸಿದನಲೈ ಜಾತ ಮಾತ್ರದಲಿ
ಮೇಲು ಮೊಳಗಿನ ದುಂದುಭಿಯ ದಿವಿ
ಜಾಳಿಗಳ ಹೂವಳೆಯ ಹರುಷದ
ಮೇಳವದ ಮೈಸಿರಿಯನೇನೆಂಬೆನು ಧನಂಜಯನ ॥1॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಪಾರ್ಥ ಸುಭದ್ರೆಯರಿಗೆ ರಾಜ ಶ್ರೇಷ್ಠ ನಾದ ಅಭಿಮನ್ಯುವು ಜನಿಸಿದನಷ್ಟೆ. ಹುಟ್ಟಿದ ಮಾತ್ರಕ್ಕೆ, ಆಕಾಶದಲ್ಲಿ ದುಂದುಭಿಗಳು ಮೊಳಗಿದವು.. ದೇವತೆಗಳು ಹೂಮಳೆಗರೆದರು. ಇವೆರಡರ ಹರುಷದ ಸೇರಿಕೆಯ ಅರ್ಜುನನ ಶೋಭೆಯನ್ನು ಏನೆಂದು ವರ್ಣಿಸುವುದು.
ಪದಾರ್ಥ (ಕ.ಗ.ಪ)
ತಿಲಕ-ಶ್ರೇಷ್ಠ, ಮೇಲು-ಎತ್ತರ, ಮೊಳಗು-ಧ್ವನಿಮಾಡು, ಮೇಳವ-ಸೇರಿಕೆ, ಮೈಸಿರಿ-ಶೋಭೆ
ಮೂಲ ...{Loading}...
ಕೇಳು ಜನಮೇಜಯ ಧರಿತ್ರೀ
ಪಾಲ ಪಾರ್ಥ ಸುಭದ್ರೆಯಲಿ ಭೂ
ಪಾಲತಿಲಕನು ಜನಿಸಿದನಲೈ ಜಾತ ಮಾತ್ರದಲಿ
ಮೇಲು ಮೊಳಗಿನ ದುಂದುಭಿಯ ದಿವಿ
ಜಾಳಿಗಳ ಹೂವಳೆಯ ಹರುಷದ
ಮೇಳವದ ಮೈಸಿರಿಯನೇನೆಂಬೆನು ಧನಂಜಯನ ॥1॥
೦೦೨ ಕಲಿತನಕೆ ನೆಲೆಯಾಯ್ತು ...{Loading}...
ಕಲಿತನಕೆ ನೆಲೆಯಾಯ್ತು ಭುಜದ
ಗ್ಗಳಿಕೆಗಾಸ್ಪದವಾಯ್ತು ನಿಜ ಚಾ
ಪಳವ ಬಿಸುಟಳು ವೀರಸಿರಿ ವಿಕ್ರಮದ ಸಿರಿಸಹಿತ
ಹಳಿವು ಕಳವಳ ಭೀತಿ ಭಂಗ
ಸ್ಖಲನ ಕಂಪನವೆಂಬವಾತನ
ನೆಳಲ ಸೀಮೆಯ ಸೋಂಕಲಮ್ಮವು ಭೂಪ ಕೇಳ್ ಎಂದ ॥2॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಆ ಕುಮಾರನ ಉದಯದಲ್ಲಿ ಸಾಹಸಕ್ಕೆ ಆಶ್ರಯವಾಯ್ತು. ತೋಳಿನ ಸಾಮಥ್ರ್ಯಕ್ಕೆ ಅವಕಾಶವಾಯ್ತು. ವೀರಲಕ್ಷ್ಮಿ, ವಿಕ್ರಮ ಲಕ್ಷ್ಮಿಯೊಂದಿಗೆ ತನ್ನ ಅಸ್ಥಿರತೆಯನ್ನು ಬಿಸುಟುಬಿಟ್ಟಳು. ನಿಂದೆ, ಗೊಂದಲ, ಭಯ, ಅಪಜಯ, ಪ್ರಮಾದ, ನಡುಕ-ಇವುಗಳು ಆತನ ನೆಳಲ ಪ್ರದೇಶದಲ್ಲೂ ಸ್ಪರ್ಶಿಸಲು ಸಾಧ್ಯವಿಲ್ಲ.
ಪದಾರ್ಥ (ಕ.ಗ.ಪ)
ಕಲಿತನ-ಸಾಹಸ, ನೆಲೆ-ಆಶ್ರಯ, ಅಗ್ಗಳಿಕೆ-ಸಾಮಥ್ರ್ಯ, ಚಾಪಳ-ಅಸ್ಥಿರತೆ, ಹಳಿವು-ನಿಂದೆ, ಕಳವಳ-ಗೊಂದಲ, ಭಂಗ-ಅಪಜಯ, ಸ್ಖಲನ-ಪ್ರಮಾದ, ಕಂಪನ-ನಡುಕ, ಸೋಂಕು-ಸ್ಪರ್ಶಿಸು
ಮೂಲ ...{Loading}...
ಕಲಿತನಕೆ ನೆಲೆಯಾಯ್ತು ಭುಜದ
ಗ್ಗಳಿಕೆಗಾಸ್ಪದವಾಯ್ತು ನಿಜ ಚಾ
ಪಳವ ಬಿಸುಟಳು ವೀರಸಿರಿ ವಿಕ್ರಮದ ಸಿರಿಸಹಿತ
ಹಳಿವು ಕಳವಳ ಭೀತಿ ಭಂಗ
ಸ್ಖಲನ ಕಂಪನವೆಂಬವಾತನ
ನೆಳಲ ಸೀಮೆಯ ಸೋಂಕಲಮ್ಮವು ಭೂಪ ಕೇಳೆಂದ ॥2॥
೦೦೩ ಜಾತಕರ್ಮದನನ್ತರದ ವಿ ...{Loading}...
ಜಾತಕರ್ಮದನಂತರದ ವಿ
ಖ್ಯಾತ ನಾಮ ವಿಧಾನವನು ಸಂ
ಪ್ರೀತಿಯಲಿ ಮಾಡಿದನು ಋಷಿ ಭೂಪತಿಯನುಜ್ಞೆಯಲಿ
ವೀತ ಭಯನಭಿಮನ್ಯುವೆನೆ ರಿಪು
ಜಾತ ನಡುಗಿತು ಲೋಕ ಮೂರರೊ
ಳೀತನುದಯದ ಕೀರ್ತಿ ಪಸರಿಸಿತರಸ ಕೇಳ್ ಎಂದ ॥3॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಜಾತಕರ್ಮದ ಬಳಿಕ ಋಷಿಯು ಭೂಪತಿಯ ಒಪ್ಪಿಗೆಯ ಪ್ರಕಾರ ಪ್ರಸಿದ್ಧವಾದ ನಾಮಕರಣ ಮಹೋತ್ಸವದಲ್ಲಿ ಅತಿಶಯವಾದ ಪ್ರೀತಿಯಿಂದ ನಾಮಕರಣ ಮಾಡಿದನು. ನಿರ್ಭೀತನಾದುದರಿಂದ ಅಭಿಮನ್ಯುವೆನಲು ಶತ್ರುಗಳ ಸಮೂಹ ನಡುಗಿತು. ಈತನ ಉದಯದ ಕೀರ್ತಿ ಮೂರು ಲೋಕಗಳಲ್ಲೂ ಹರಡಿತು.
ಪದಾರ್ಥ (ಕ.ಗ.ಪ)
ಅನುಜ್ಞೆ-ಒಪ್ಪಿಗೆ, ವೀತಭಯ-ನಿರ್ಭೀತ, ಪಸರಿಸು-ಹರಡು
ಮೂಲ ...{Loading}...
ಜಾತಕರ್ಮದನಂತರದ ವಿ
ಖ್ಯಾತ ನಾಮ ವಿಧಾನವನು ಸಂ
ಪ್ರೀತಿಯಲಿ ಮಾಡಿದನು ಋಷಿ ಭೂಪತಿಯನುಜ್ಞೆಯಲಿ
ವೀತ ಭಯನಭಿಮನ್ಯುವೆನೆ ರಿಪು
ಜಾತ ನಡುಗಿತು ಲೋಕ ಮೂರರೊ
ಳೀತನುದಯದ ಕೀರ್ತಿ ಪಸರಿಸಿತರಸ ಕೇಳೆಂದ ॥3॥
೦೦೪ ಯಮಸುತಗೆ ಭೀಮಗೆ ...{Loading}...
ಯಮಸುತಗೆ ಭೀಮಗೆ ಕಿರೀಟಿಗೆ
ಯಮಳರಿಗೆ ಸುಕುಮಾರಕರು ನಿಜ
ರಮಣಿಯಲಿ ಜನಿಸಿದರು ಶ್ರುತಸೋಮಕನು ಪ್ರತಿವಿಂದ್ಯ
ವಿಮಲ ಶ್ರುತಕೀರ್ತಿ ಪ್ರತಾಪೋ
ತ್ತಮನು ಶ್ರುತಸೇನಾಖ್ಯನುರು ವಿ
ಕ್ರಮ ಶತಾನೀಕಾಭಿಧಾನರು ದ್ರುಪದ ತನುಜೆಯಲಿ ॥4॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಯಮಸುತ, ಭೀಮ, ಕಿರೀಟಿ, ಯಮಳರಿಗೆ _ ಈ ಐವರಿಗೂ ನಿಜ ಪತ್ನಿ ದ್ರೌಪದಿಯಲ್ಲಿ ಶ್ರುತಸೋಮಕ, ಪ್ರತಿವಿಂದ್ಯ, ಶ್ರುತಕೀರ್ತಿ, ಶ್ರುತಸೇನ, ಶತಾನೀಕ ಎಂಬ ಹೆಸರಿನ ಈ ಐವರು ಪುತ್ರರು ಜನಿಸಿದರು.
ಪದಾರ್ಥ (ಕ.ಗ.ಪ)
ಅಭಿಧಾನ-ಹೆಸರು, ಕಿರೀಟಿ-ಅರ್ಜುನ,
ಟಿಪ್ಪನೀ (ಕ.ಗ.ಪ)
(ಧರ್ಮರಾಜನ ಮಗ ಪ್ರತಿವಿಂದ್ಯ, ಭೀಮನ ಮಗ ಶ್ರುತಸೋಮ, ಅರ್ಜುನನ ಮಗ ಶ್ರುತಕೀರ್ತಿ, ನಕುಲನ ಮಗ ಶತಾನೀಕ, ಮತ್ತು ಸಹದೇವನ ಮಗ ಶ್ರುತಸೇನ)
ಮೂಲ ...{Loading}...
ಯಮಸುತಗೆ ಭೀಮಗೆ ಕಿರೀಟಿಗೆ
ಯಮಳರಿಗೆ ಸುಕುಮಾರಕರು ನಿಜ
ರಮಣಿಯಲಿ ಜನಿಸಿದರು ಶ್ರುತಸೋಮಕನು ಪ್ರತಿವಿಂದ್ಯ
ವಿಮಲ ಶ್ರುತಕೀರ್ತಿ ಪ್ರತಾಪೋ
ತ್ತಮನು ಶ್ರುತಸೇನಾಖ್ಯನುರು ವಿ
ಕ್ರಮ ಶತಾನೀಕಾಭಿಧಾನರು ದ್ರುಪದ ತನುಜೆಯಲಿ ॥4॥
೦೦೫ ಇವರು ಕಳುಹಿದ ...{Loading}...
ಇವರು ಕಳುಹಿದ ಹರುಷ ವಾರ್ತಾ
ಶ್ರವಣ ರಸದಲಿ ಮನಮುಳುಗಿ ಯಾ
ದವ ಶಿರೋಮಣಿ ರಾಮ ವಸುದೇವಾದಿಗಳು ಸಹಿತ
ಇವರ ಪುರಕೈತಂದರಿವರು
ತ್ಸವದಿದಿರ್ಗೊಂಡೊಸಗೆಯಲಿ ಬಾಂ
ಧವರ ಸಂಭಾವಿಸಿದರೈ ಯಮನಂದನಾದಿಗಳು ॥5॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಪಾಂಡವರು ಕಳುಹಿಸಿದ ಹರುಷದ ಸುದ್ದಿಯನ್ನು ಕೇಳಿ ಆನಂದ ರಸದಲ್ಲಿ ಮನಮುಳುಗಿ ಯಾದವ ಶಿರೋಮಣಿಯಾದ ಕೃಷ್ಣನು ಬಲರಾಮ, ವಸುದೇವನೇ ಮೊದಲಾದವರೊಂದಿಗೆ ಪಾಂಡವರ ಪಟ್ಟಣಕ್ಕೆ ಹೊರಟು ಬಂzನು. ಯಮನಂದನಾದಿಗಳು ಇವರನ್ನು ಸಂಭ್ರಮದಲ್ಲಿ ಎದುರುಗೊಂಡು ಕರೆತಂದು, ಬಾಂಧವರನ್ನು ಸಂತೋಷದಲ್ಲಿ ಗೌರವಿಸಿದರು.
ಪದಾರ್ಥ (ಕ.ಗ.ಪ)
ಉತ್ಸವ-ಸಂಭ್ರಮ, ಸಂಭಾವಿಸು-ಗೌರವಿಸು
ಮೂಲ ...{Loading}...
ಇವರು ಕಳುಹಿದ ಹರುಷ ವಾರ್ತಾ
ಶ್ರವಣ ರಸದಲಿ ಮನಮುಳುಗಿ ಯಾ
ದವ ಶಿರೋಮಣಿ ರಾಮ ವಸುದೇವಾದಿಗಳು ಸಹಿತ
ಇವರ ಪುರಕೈತಂದರಿವರು
ತ್ಸವದಿದಿರ್ಗೊಂಡೊಸಗೆಯಲಿ ಬಾಂ
ಧವರ ಸಂಭಾವಿಸಿದರೈ ಯಮನಂದನಾದಿಗಳು ॥5॥
೦೦೬ ಅರಸಿ ಕಾಣವು ...{Loading}...
ಅರಸಿ ಕಾಣವು ವೇದತತಿ ತಾ
ನರಸಿ ಬಂದನು ಭಕ್ತರನು ತನ
ಗೆರಗಿ ಮೆಚ್ಚಿಸಲರಿಯರಜ ರುದ್ರಾಮರೇಶ್ವರರು
ಎರಗುವನು ಯಮಜಂಗೆ ತನ್ನನು
ಕುರುಹುಗಾಣವು ವೇದಶಿರವಿದು
ಮರವೆಯೋ ಹರಿ ಬಂದು ಕಂಡನು ಧರ್ಮನಂದನನ ॥6॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ವೇದ ಸಮೂಹವು ಅವನನ್ನು ಹುಡುಕಿ ಕಾಣವು. ಅಂಥವನು ತಾನೇ ಭಕ್ತರನ್ನು ಹುಡುಕಿಕೊಂಡು ಬಂದನು. ಬ್ರಹ್ಮರುದ್ರ ಇಂದ್ರಾದಿಗಳು ಅವನಿಗೆ ನಮಸ್ಕರಿಸಿ ಮೆಚ್ಚಿಸಲು ತಿಳಿಯರು. ಅಂಥವನು ಯಮಸುತನಿಗೆ ನಮಸ್ಕರಿಸುತ್ತಾನೆ. ಉಪನಿಷತ್ತುಗಳು ಅವನ ಗುರುತನ್ನೂ ಕಾಣಲಾರವು. ಇದು ಏನು ಮರೆವೆಯೋ ಏನೋ. ಅಂತಹ ಹರಿಯು ಧರ್ಮನಂದನನನ್ನು ತಾನಾಗಿ ಬಂದು ನೋಡಿದನು !
ಪದಾರ್ಥ (ಕ.ಗ.ಪ)
ಅಮರೇಶ್ವರ-ದೇವತೆಗಳಿಗೆ ಒಡೆಯ, ಇಂದ್ರ, ಕುರುಹು-ಗುರುತು, ವೇದಶಿರ-ಉಪನಿಷತ್ತು.
ಮೂಲ ...{Loading}...
ಅರಸಿ ಕಾಣವು ವೇದತತಿ ತಾ
ನರಸಿ ಬಂದನು ಭಕ್ತರನು ತನ
ಗೆರಗಿ ಮೆಚ್ಚಿಸಲರಿಯರಜ ರುದ್ರಾಮರೇಶ್ವರರು
ಎರಗುವನು ಯಮಜಂಗೆ ತನ್ನನು
ಕುರುಹುಗಾಣವು ವೇದಶಿರವಿದು
ಮರವೆಯೋ ಹರಿ ಬಂದು ಕಂಡನು ಧರ್ಮನಂದನನ ॥6॥
೦೦೭ ಲೀಲೆಯೋಯಿದು ಮೇಣು ...{Loading}...
ಲೀಲೆಯೋಯಿದು ಮೇಣು ಕೃಷ್ಣನ
ಬಾಲಕೇಳಿಯ ನೆನಹೊ ಬೊಮ್ಮದ
ಕೌಳಿಕದ ಕಣುಮಾಯೆಯೋ ಶಿವಶಿವ ಮಹಾದೇವ
ಕಾಲಿಗೆರಗಿದ ಕೃಷ್ಣನನು ಭೂ
ಪಾಲ ತೆಗೆದಪ್ಪಿದನು ನಿಗಮದ
ಮೌಳಿ ತಲೆವಾಗಿದವು ಲಜ್ಜಾ ಭೂರಿಭಾವದಲಿ ॥7॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಇದು ಲೀಲೆಯೋ, ಅಥವಾ ಕೃಷ್ಣನ ಬಾಲ್ಯದ ಆಟದ ನೆನಪೋ ಇಲ್ಲವೇ ಬ್ರಹ್ಮದ ವಂಚನೆಯ ಕಣ್ಣು ಮಾಯೆಯೋ. ಶಿವಶಿವ ಮಹಾದೇವ ! ಕಾಲಿಗೆ ನಮಸ್ಕರಿಸಿದ ಕೃಷ್ಣನನ್ನು ಧರ್ಮರಾಜ ತೆಗೆದಪ್ಪಿದನು. ಇದನ್ನು ಕಂಡು ವೇದದ ಮೌಳಿಗಳು ಹೆಚ್ಚಿನ ನಾಚಿಕೆಯ ಮನಸ್ಸಿನಿಂದ ತಲೆಬಾಗಿದವು.
ಪದಾರ್ಥ (ಕ.ಗ.ಪ)
ಕೌಳಿಕ-ವಂಚನೆ, ಭೂರಿ-ಹೆಚ್ಚಿನ, ಭಾವ-ಮನಸ್ಸು
ಮೂಲ ...{Loading}...
ಲೀಲೆಯೋಯಿದು ಮೇಣು ಕೃಷ್ಣನ
ಬಾಲಕೇಳಿಯ ನೆನಹೊ ಬೊಮ್ಮದ
ಕೌಳಿಕದ ಕಣುಮಾಯೆಯೋ ಶಿವಶಿವ ಮಹಾದೇವ
ಕಾಲಿಗೆರಗಿದ ಕೃಷ್ಣನನು ಭೂ
ಪಾಲ ತೆಗೆದಪ್ಪಿದನು ನಿಗಮದ
ಮೌಳಿ ತಲೆವಾಗಿದವು ಲಜ್ಜಾ ಭೂರಿಭಾವದಲಿ ॥7॥
೦೦೮ ಅರಸ ಸಹಿತ ...{Loading}...
ಅರಸ ಸಹಿತ ಸಮಸ್ತ ಯಾದವ
ಪರಿಕರದ ಮೇಳದಲಿ ಯಾದವ
ರರಸು ಬಿಜಯಂಗೈದು ಕುಂತಿಯ ಸುತರ ಭವನದಲಿ
ಅರಸಿಯರ ಸುಕುಮಾರ ವರ್ಗವ
ಕರೆಸಿ ಕಾಣಿಸಿಕೊಂಡು ದಿವ್ಯಾ
ಭರಣ ವಸನಾದಿಯಲಿ ಮನ್ನಿಸಿದನು ಮಹೀಶ್ವರರ ॥8॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅರಸನೊಡನೆ ಸಮಸ್ತಯಾದವ ಅನುಯಾಯಿಗಳ ಸಂಗಡ ಯಾದವರರಸನು ಕುಂತೀ ಮಕ್ಕಳ ಭವನಕ್ಕೆ ದಯಮಾಡಿಸಿದನು. ಅಲ್ಲಿ ರಾಣಿಯರನ್ನು ಸುಕುಮಾರ ವರ್ಗವನ್ನು ಕರೆಸಿ ಕಾಣಿಸಿಕೊಂಡು ಮಹೀಶ್ವರರನ್ನು ದಿವ್ಯವಾದ ಆಭರಣ, ವಸ್ತ್ರಗಳೇ ಮೊದಲಾದುವುಗಳಿಂದ ಮರ್ಯಾದೆ ಮಾಡಿದನು.
ಪದಾರ್ಥ (ಕ.ಗ.ಪ)
ಪರಿಕರ-ಅನುಯಾಯಿ, ಮನ್ನಿಸು-ಮರ್ಯಾದೆ ಮಾಡು, ವಸನ-ವಸ್ತ್ರ
ಮೂಲ ...{Loading}...
ಅರಸ ಸಹಿತ ಸಮಸ್ತ ಯಾದವ
ಪರಿಕರದ ಮೇಳದಲಿ ಯಾದವ
ರರಸು ಬಿಜಯಂಗೈದು ಕುಂತಿಯ ಸುತರ ಭವನದಲಿ
ಅರಸಿಯರ ಸುಕುಮಾರ ವರ್ಗವ
ಕರೆಸಿ ಕಾಣಿಸಿಕೊಂಡು ದಿವ್ಯಾ
ಭರಣ ವಸನಾದಿಯಲಿ ಮನ್ನಿಸಿದನು ಮಹೀಶ್ವರರ ॥8॥
೦೦೯ ಜಲಧಿ ಮಧ್ಯದೊಳಿರವೊ ...{Loading}...
ಜಲಧಿ ಮಧ್ಯದೊಳಿರವೊ ಗಗನ
ಸ್ಥಳವೊ ಮೇಣು ಮಹಾಂಧಕಾರದ
ಕಳಿವುಗಳ ವೈಕುಂಠವೋ ಮುನಿಜನದ ಹೃದ್ಗುಹೆಯೊ
ತಿಳಿಯೆ ಸಚರಾಚರದ ಚೇತನ
ದೊಳಗೆಯೋ ನೆಲೆಯಾವುದೆಂಬ
ಗ್ಗಳೆಯ ದೈವದ ನಿಲವ ಕಂಡೆನು ಪಾರ್ಥಭವನದಲಿ ॥9॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಪರಮಪುರುಷನ ನೆಲೆ ಯಾವುದು ? ಸಮುದ್ರದ ಮಧ್ಯದಲ್ಲಿ ಇರುವಿಕೆಯೋ ? ಗಗನ ಸ್ಥಳವೋ, ಅಥವಾ ಅತ್ಯಂತ ಕತ್ತಲೆಯನ್ನು ಅಂತ್ಯಗೊಳಿಸುವ ವೈಕುಂಠವೋ, ಮುನಿಜನರ ಹೃದಯ ಸ್ಥಳವೋ, ವಿಚಾರಿಸಿದರೆ ಚರಾಚರ ವಸ್ತುಗಳ ಚೈತನ್ಯದೊಳಗೋ ? ಯಾವುದು? - ಎಂದು ನೆಲೆಯನ್ನು ತಿಳಿಯಲಾರದ ಆ ಶ್ರೇಷ್ಠ ದೈವದ ನೆಲೆಯು ಅರ್ಜುನನ ಅರಮನೆಯಲ್ಲಿ ಆಯಿತು.
ಮೂಲ ...{Loading}...
ಜಲಧಿ ಮಧ್ಯದೊಳಿರವೊ ಗಗನ
ಸ್ಥಳವೊ ಮೇಣು ಮಹಾಂಧಕಾರದ
ಕಳಿವುಗಳ ವೈಕುಂಠವೋ ಮುನಿಜನದ ಹೃದ್ಗುಹೆಯೊ
ತಿಳಿಯೆ ಸಚರಾಚರದ ಚೇತನ
ದೊಳಗೆಯೋ ನೆಲೆಯಾವುದೆಂಬ
ಗ್ಗಳೆಯ ದೈವದ ನಿಲವ ಕಂಡೆನು ಪಾರ್ಥಭವನದಲಿ ॥9॥
೦೧೦ ಈತನರ್ಜುನನರಮನೆಯೊಳಭಿ ...{Loading}...
ಈತನರ್ಜುನನರಮನೆಯೊಳಭಿ
ಜಾತನೆನಿಪಭಿಮನ್ಯುವನು ಸಂ
ಪ್ರೀತಿಯಿಂದಪ್ಪಿದನು ಕೊಟ್ಟನು ಬಾಲದೊಡಿಗೆಗಳ
ಖ್ಯಾತಪಂಚ ದ್ರೌಪದಿಯ ಸಂ
ಜಾತರನು ಮನ್ನಿಸಿ ಮಹಾ ವಿಭ
ವಾತಿಶಯದಲಿ ಪತಿಕರಿಸಿದನು ಪಾಂಡುನಂದನರ ॥10॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕೃಷ್ಣನು ಅರ್ಜುನನ ಅರಮನೆಯಲ್ಲಿ ಸುಂದರನಾದ ಅಭಿಮನ್ಯುವನ್ನು ಅತಿಶಯವಾದ ಪ್ರೀತಿಯಿಂದ ಅಪ್ಪಿಕೊಂಡನು. ಬಾಲದೊಡಿಗೆಗಳನ್ನು ಕೊಟ್ಟನು. ದ್ರೌಪದಿಯಲ್ಲಿ ಜನಿಸಿದ ಪ್ರಸಿದ್ಧರಾದ ಐವರು ಮಕ್ಕಳನ್ನು ಮನ್ನಿಸಿ, ಅತಿಶಯವಾದ ಮಹಾವೈಭವದಿಂದ ಪಾಂಡುವಿನ ಮಕ್ಕಳನ್ನು ಸ್ವೀಕರಿಸಿದನು.
ಪದಾರ್ಥ (ಕ.ಗ.ಪ)
ಅಭಿಜಾತ-ಸುಂದರ, ಸಂಜಾತ-ಜನಿಸಿದ, ಪತಿಕರಿಸು-ಸ್ವೀಕರಿಸು
ಮೂಲ ...{Loading}...
ಈತನರ್ಜುನನರಮನೆಯೊಳಭಿ
ಜಾತನೆನಿಪಭಿಮನ್ಯುವನು ಸಂ
ಪ್ರೀತಿಯಿಂದಪ್ಪಿದನು ಕೊಟ್ಟನು ಬಾಲದೊಡಿಗೆಗಳ
ಖ್ಯಾತಪಂಚ ದ್ರೌಪದಿಯ ಸಂ
ಜಾತರನು ಮನ್ನಿಸಿ ಮಹಾ ವಿಭ
ವಾತಿಶಯದಲಿ ಪತಿಕರಿಸಿದನು ಪಾಂಡುನಂದನರ ॥10॥
೦೧೧ ಅರಸ ಕೇಳೈ ...{Loading}...
ಅರಸ ಕೇಳೈ ಹಲವು ದಿನ ಸಂ
ಚರಿಸಿ ಸೌಖ್ಯದೊಳಿರ್ದು ತಮ್ಮಯ
ಪುರಿಗೆ ಬಲಭದ್ರನನು ಯಾದವರಾಯ ದಳಸಹಿತ
ಹರಿ ಸಮಾಧಾನದಲಿ ಕಳುಹಿಸಿ
ನರನೊಡನೆ ವೈಹಾಳಿ ಮೃಗಯಾ
ವರ ವಿಹಾರದೊಳಿದ್ದನಿಂದ್ರಪ್ರಸ್ಥ ನಗರಿಯಲಿ ॥11॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅನೇಕ ದಿನಗಳ ಕಾಲ ಪಾಂಡವರೊಡನೆ ತಿರುಗಾಡಿ ಸಂತೋಷದಿಂದಿದ್ದು, ಕೃಷ್ಣನು ಬಲರಾಮನನ್ನು ಯಾದವರಾಯ ಸೈನ್ಯ ಸಮೇತ ತಮ್ಮ ಪಟ್ಟಣಕ್ಕೆ ನೆಮ್ಮದಿಯಲ್ಲಿ ಕಳುಹಿಸಿದನು. ತಾನು ಇಂದ್ರ ಪ್ರಸ್ಥದಲ್ಲೇ ಉಳಿದು ಅರ್ಜುನನೊಡನೆ ಕುದುರೆಯ ಮೇಲೆ ಕುಳಿತು ವಿಹಾರ ಬೇಟೆಯ ವಿನೋದಗಳಲ್ಲಿ, ಕಾಲ ಕಳೆಯುತ್ತಿದ್ದನು.
ಪದಾರ್ಥ (ಕ.ಗ.ಪ)
ಸಂಚರಿಸಿ-ತಿರುಗಾಡಿ, ಸೌಖ್ಯ-ಸಂತೋಷ, ವೈಹಾಳಿ-ಕುದುರೆಯ ಮೇಲೆ ಕುಳಿತು ವಿಹಾರ, ಮೃಗಯಾ-ಬೇಟೆ, ವಿಹಾರ-ವಿನೋದ
ಮೂಲ ...{Loading}...
ಅರಸ ಕೇಳೈ ಹಲವು ದಿನ ಸಂ
ಚರಿಸಿ ಸೌಖ್ಯದೊಳಿರ್ದು ತಮ್ಮಯ
ಪುರಿಗೆ ಬಲಭದ್ರನನು ಯಾದವರಾಯ ದಳಸಹಿತ
ಹರಿ ಸಮಾಧಾನದಲಿ ಕಳುಹಿಸಿ
ನರನೊಡನೆ ವೈಹಾಳಿ ಮೃಗಯಾ
ವರ ವಿಹಾರದೊಳಿದ್ದನಿಂದ್ರಪ್ರಸ್ಥ ನಗರಿಯಲಿ ॥11॥
೦೧೨ ಹರಿ ಧನಞ್ಜಯರೊನ್ದು ...{Loading}...
ಹರಿ ಧನಂಜಯರೊಂದು ದಿನ ಮೃಗ
ಹರಣ ಕೇಳಿಕಳಾಪದಲಿ ಸಂ
ಚರಿಸಿ ಬನದಲಿ ಬಹಳ ಮಾರ್ಗಶ್ರಮದ ಭಾರದಲಿ
ಬರುತ ನೀರಡಸಿದರು ಕಂಡರು
ಸರಸಿಯನು ರಥವಿಳಿದು ನೆಳಲಲಿ
ಪರಿಹೃತಶ್ರಮರಾಗೆ ಹರಿ ಹೊಕ್ಕನು ಸರೋವರವ ॥12॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಒಂದು ದಿನ, ಕೃಷ್ಣ, ಅರ್ಜುನರು ಮೃಗಯಾ ಕ್ರೀಡಾ ವಿನೋದದಲ್ಲಿ ವನದಲ್ಲಿ ತಿರುಗಾಡುತ್ತಿರಲು, ಬಹಳ ಶ್ರಮ,ಆಯಾಸಗಳಿಂದ ಬರುತ್ತ ಬಾಯಾರಿದರು. ದಾರಿಯಲ್ಲಿ ಸರೋವರವನ್ನು ಕಂಡರು. ರಥದಿಂದ ಇಳಿದು ನೆಳಲಲ್ಲಿ ಆಯಾಸ ಪರಿಹರಿಸಿಕೊಳ್ಳಲು ನಿಂತರು. ಕೃಷ್ಣನು ಸರೋವರವನ್ನು ಪ್ರವೇಶಿಸಿದನು.
ಪದಾರ್ಥ (ಕ.ಗ.ಪ)
ಬನ-ವನ, ಮಾರ್ಗಶ್ರಮ-ಆಯಾಸ, ಭಾರ-ಕಷ್ಟ, ನೀರಡಿಸು-ಬಾಯಾರಿಕೆಹೊಂದು, ಸರಸಿ-ಸರೋವರ, ಪರಿಹೃತಶ್ರಮ-ಆಯಾಸ ಪರಿಹರಿಸಿಕೊಳ್ಳಲು.
ಮೂಲ ...{Loading}...
ಹರಿ ಧನಂಜಯರೊಂದು ದಿನ ಮೃಗ
ಹರಣ ಕೇಳಿಕಳಾಪದಲಿ ಸಂ
ಚರಿಸಿ ಬನದಲಿ ಬಹಳ ಮಾರ್ಗಶ್ರಮದ ಭಾರದಲಿ
ಬರುತ ನೀರಡಸಿದರು ಕಂಡರು
ಸರಸಿಯನು ರಥವಿಳಿದು ನೆಳಲಲಿ
ಪರಿಹೃತಶ್ರಮರಾಗೆ ಹರಿ ಹೊಕ್ಕನು ಸರೋವರವ ॥12॥
೦೧೩ ಆ ಸಮಯದಲಿ ...{Loading}...
ಆ ಸಮಯದಲಿ ಬಂದನೊಬ್ಬನು
ಭೂಸುರನು ಕಿಡಿಗಳ ತುಷಾರದ
ಮೀಸೆ ಗಡ್ಡದ ಸುಳಿದಲೆಯ ಕಬ್ಬೊಗೆಯ ಜುಂಜುಗಳ
ಬಾಸರದ ಬಳಲುಡಿಗೆ ಮಟ್ಟಿಯ
ಧೂಸರದ ಮೈದೊಡಿಗೆ ಮೆರೆಯೆ ವಿ
ಲಾಸದಲಿ ನಡೆತಂದನರ್ಜುನ ದೇವನಿದ್ದೆಡೆಗೆ ॥13॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಆ ಸಮಯದಲ್ಲಿ ಅಲ್ಲಿಗೆ ಒಬ್ಬ ಬ್ರಾಹ್ಮಣನು ಬಂದನು. ಬೆಂಕಿಯ ಹನಿಯಂತೆ ರಂಜಿಸುವ ಗಡ್ಡ ಮೀಸೆಗಳು, ಸುಳಿತಲೆ, ತಲೆಯ ಮೇಲೆ ಕಪ್ಪಾದ ಹೊಗೆಯಂತೆ ಒರಟಾದ ಗುಂಗುರು ಕೂದಲು, ಶುಭ್ರ ವಸ್ತ್ರದ ಜೋಲಾಡುವ ಉಡುಗೆ, ಮೃತ್ತಿಕೆಯ ಧೂಳಿನ ಬಣ್ಣದ ಮೈಯ ಒಡವೆ ಇವುಗಳಿಂದ ಶೋಭಿಸಲು, ಕಾಂತಿಯುತನಾಗಿ ಅರ್ಜುನದೇವನಿರುವ ಕಡೆಗೆ ಬಂದನು.
ಪದಾರ್ಥ (ಕ.ಗ.ಪ)
ಭೂಸುರ-ಬ್ರಾಹ್ಮಣ, ತುಷಾರ-ಹನಿ, ಕಟ್ಟೊಗೆ-ಕಪ್ಪಾದ ಹೊಗೆ, ಜುಂಜು-ಒರಟಾದ ಗುಂಗುರು ಕೂದಲು, ಬಾಸರ-ಶುಭ್ರ ವಸ್ತ್ರ, ಬಳಲುಡಿಗೆ-ಜೋತುಬಿದ್ದು ಉಟ್ಟಿರುವ ವಸ್ತ್ರ, ಜೋಲಾಡುವ ಉಡುಗೆ (ಕಚ್ಚೆ, ಪಂಚೆ), ಮಟ್ಟಿ-ಮೃತ್ತಿಕೆ, ಧೂಸರ-ದೂಳಿನ ಬಣ್ಣ, ವಿಲಾಸ-ಕಾಂತಿಯುತ, ಮೈದೊಡಿಗೆ-ಮೈಯ ಒಡವೆ.
ಮೂಲ ...{Loading}...
ಆ ಸಮಯದಲಿ ಬಂದನೊಬ್ಬನು
ಭೂಸುರನು ಕಿಡಿಗಳ ತುಷಾರದ
ಮೀಸೆ ಗಡ್ಡದ ಸುಳಿದಲೆಯ ಕಬ್ಬೊಗೆಯ ಜುಂಜುಗಳ
ಬಾಸರದ ಬಳಲುಡಿಗೆ ಮಟ್ಟಿಯ
ಧೂಸರದ ಮೈದೊಡಿಗೆ ಮೆರೆಯೆ ವಿ
ಲಾಸದಲಿ ನಡೆತಂದನರ್ಜುನ ದೇವನಿದ್ದೆಡೆಗೆ ॥13॥
೦೧೪ ಹರಸಿ ವೇದಾರ್ಥವನು ...{Loading}...
ಹರಸಿ ವೇದಾರ್ಥವನು ಮಿಗೆ ವಿ
ಸ್ತರಿಸಿ ಕೊಂಡಾಡಿದನು ವಿಪ್ರನ
ಪರಮ ಯೋಗ್ಯತೆಗಾರು ಸರಿ ಪರಮೇಷ್ಠಿ ಹೊರತಾಗಿ
ಬರವಿದೇನೆನಗೇನನುಗ್ರಹ
ವರಿಸಿದರೆ ನಿಮ್ಮಿಷ್ಟವನು ಗೋ
ಚರಿಸುವೆನು ತಾನೆನುತ ನುಡಿದನು ಪಾರ್ಥ ಭೂಸುರಗೆ ॥14॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಬಂದ ಬ್ರಾಹ್ಮಣನು ಹರಸಿ ವೇದಾರ್ಥವನ್ನು ವಿವರವಾಗಿ ವಿಸ್ತರಿಸಿ ಸ್ತುತಿಸಿದನು. ಆತನನ್ನು ಕಂಡು ಪಾರ್ಥನು ವಿಪ್ರರ ಶ್ರೇಷ್ಠ ಸಾಮಥ್ರ್ಯಕ್ಕೆ ಬ್ರಹ್ಮನ ಹೊರತಾಗಿ ಬೇರೆ ಯಾರು ತಾನೆ ಸಮನಾದಾರು ? “ನಿಮ್ಮ ಬರವು ಏತಕ್ಕಾಗಿ ? ನನಗೆ ನೀವು ದಯಪಾಲಿಸುವ ಕೃಪೆ ಯಾವುದು ? ನೀವು ಅಪೇಕ್ಷಿಸಿದರೆ ನಿಮ್ಮಿಷ್ಟವನ್ನು ನಾನು ಕೈಗೂಡಿಸುವೆ” ಎಂದು ವಿಪ್ರನಿಗೆ ಹೇಳಿದನು.
ಪದಾರ್ಥ (ಕ.ಗ.ಪ)
ಯೋಗ್ಯತೆ-ಸಾಮಥ್ರ್ಯ, ಪರಮೇಷ್ಠಿ-ಬ್ರಹ್ಮ, ವರಿಸು-ಅಪೇಕ್ಷಿಸು, ಗೋಚರಿಸು-ಕೈಗೂಡಿಸು
ಮೂಲ ...{Loading}...
ಹರಸಿ ವೇದಾರ್ಥವನು ಮಿಗೆ ವಿ
ಸ್ತರಿಸಿ ಕೊಂಡಾಡಿದನು ವಿಪ್ರನ
ಪರಮ ಯೋಗ್ಯತೆಗಾರು ಸರಿ ಪರಮೇಷ್ಠಿ ಹೊರತಾಗಿ
ಬರವಿದೇನೆನಗೇನನುಗ್ರಹ
ವರಿಸಿದರೆ ನಿಮ್ಮಿಷ್ಟವನು ಗೋ
ಚರಿಸುವೆನು ತಾನೆನುತ ನುಡಿದನು ಪಾರ್ಥ ಭೂಸುರಗೆ ॥14॥
೦೧೫ ಪಾರ್ಥ ಕೇಳತಿಗಹನವೇನ್ ...{Loading}...
ಪಾರ್ಥ ಕೇಳತಿಗಹನವೇನ್ ಗ್ರಾ
ಸಾರ್ಥಿಗಳು ನಾವಾದೆವೆಮ್ಮಿ
ಷ್ಟಾರ್ಥಸಿದ್ಧಿಯ ಘಟಿಸು ಸಾಕು ಸಮಗ್ರ ಫಲವಹುದು
ತೀರ್ಥವೇಕಿನ್ನತಿಥಿಯಿರಲು ಪ
ರಾರ್ಥಸಾಧನತನವೆ ಪರಮ
ಸ್ವಾರ್ಥವೆಂಬರು ಸುಜನರೆಂದನು ಕಪಟದ್ವಿಜ ನಗುತ ॥15॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅದಕ್ಕೆ ಆ ಕಪಟ ಬ್ರಾಹ್ಮಣನು ನಗುತ್ತ, “ಪಾರ್ಥ, ಕೇಳು. ಅತಿ ಕಷ್ಟ ಸಾಧ್ಯವೇನಿಲ್ಲ. ನಾವು ಆಹಾರದ ಯಾಚಕರಾಗಿ ಬಂದಿದ್ದೇವೆ. ನಮ್ಮ ಇಷ್ಟಾರ್ಥ ಸಿದ್ಧಿಯನ್ನು ಸಂಭವಿಸು, ಸಾಕು. ಅದರಿಂದ ಸಕಲ ಫಲವುಂಟಾಗುತ್ತದೆ. ಅತಿಥಿಯಿರುವಾಗ ತೀರ್ಥಯಾತ್ರೆಯೇ ? ಇನ್ನೊಬ್ಬರಿಗೆ ಪ್ರಯೋಜನವನ್ನು ದೊರಕಿಸಿಕೊಡುವುದೇ ಪರಮ ಸ್ವಾರ್ಥ ಎಂದು ಸಜ್ಜನರು ಹೇಳುತ್ತಾರೆ” ಎಂದು ಅರ್ಜುನನಿಗೆ ಹೇಳಿದನು.
ಪದಾರ್ಥ (ಕ.ಗ.ಪ)
ಗಹನ-ಕಷ್ಟಸಾಧ್ಯ,
ಗ್ರಾಸ-ಆಹಾರ,
ಅರ್ಥಿ-ಯಾಚಕ,
ಘಟಿಸು-ಸಂಭವಿಸು,
ಪರಾರ್ಥಸಾಧಕತನ-ಇನ್ನೊಬ್ಬರಿಗೆ ಪ್ರಯೋಜನ ದೊರಕಿಸಿಕೊಡುವುದು, ತೀರ್ಥ-ತೀರ್ಥಯಾತ್ರೆ
ಪರಮ ಸ್ವಾರ್ಥ - ಪರಮ ಪ್ರಯೋಜನ
ಮೂಲ ...{Loading}...
ಪಾರ್ಥ ಕೇಳತಿಗಹನವೇನ್ ಗ್ರಾ
ಸಾರ್ಥಿಗಳು ನಾವಾದೆವೆಮ್ಮಿ
ಷ್ಟಾರ್ಥಸಿದ್ಧಿಯ ಘಟಿಸು ಸಾಕು ಸಮಗ್ರ ಫಲವಹುದು
ತೀರ್ಥವೇಕಿನ್ನತಿಥಿಯಿರಲು ಪ
ರಾರ್ಥಸಾಧನತನವೆ ಪರಮ
ಸ್ವಾರ್ಥವೆಂಬರು ಸುಜನರೆಂದನು ಕಪಟದ್ವಿಜ ನಗುತ ॥15॥
೦೧೬ ಕೊಟ್ಟೆನೆನ್ದನು ...{Loading}...
ಕೊಟ್ಟೆನೆಂದನು ಪಾರ್ಥನಿವರೊಡ
ಬಟ್ಟರೀ ನುಡಿಗೇಳಿ ದನುಜ ಘ
ರಟ್ಟ ಬಂದನು ಹದನನರಿದನು ಹವ್ಯವಾಹನನ
ಕೊಟ್ಟುದೇನು ಕಿರೀಟಿಯಿವರೇ
ಮುಟ್ಟಿದರೆ ಮುನಿವವರಲೈ ನೀ
ಕೊಟ್ಟುದುಣ ಬಡಿಸುವುದು ಭಾರವಿದೆಂದನಸುರಾರಿ ॥16॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಕೊಟ್ಟೆ” ಎಂದನು ಪಾರ್ಥ. ಇವರಿಬ್ಬರಲ್ಲೂ ಒಪ್ಪಿಗೆಯಾಯ್ತು. ಈ ಮಾತು ಕೇಳಿ, ರಕ್ಕಸರನ್ನು ನಾಶ ಮಾಡುವ ಕೃಷ್ಣನು ಬಂದನು. ಅಗ್ನಿಯ ರೀತಿಯನ್ನು ತಿಳಿದುಕೊಂಡನು. ಅರ್ಜುನನನ್ನು ಕುರಿತು ಕೃಷ್ಣನು, “ಕಿರೀಟಿ, ಕೊಟ್ಟಿದ್ದೇನು ? ಇವರೋ ಮುಟ್ಟಿದರೆ ಮುನಿಯುವವರು. ನೀನು ಕೊಟ್ಟು ಉಣಬಡಿಸುವುದು ಕಷ್ಟ” ಎಂದನು.
ಪದಾರ್ಥ (ಕ.ಗ.ಪ)
ಒಡಬಡು-ಒಪ್ಪಿಗೆ, ಘರಟ್ಟ-ನಾಶಮಾಡುವವನು, ಹವ್ಯವಾಹನ-ಅಗ್ನಿ (ಹವಿಸ್ಸನ್ನು ಒಯ್ಯುವವನು) ಭಾರ-ಕಷ್ಟ
ಮೂಲ ...{Loading}...
ಕೊಟ್ಟೆನೆಂದನು ಪಾರ್ಥನಿವರೊಡ
ಬಟ್ಟರೀ ನುಡಿಗೇಳಿ ದನುಜ ಘ
ರಟ್ಟ ಬಂದನು ಹದನನರಿದನು ಹವ್ಯವಾಹನನ
ಕೊಟ್ಟುದೇನು ಕಿರೀಟಿಯಿವರೇ
ಮುಟ್ಟಿದರೆ ಮುನಿವವರಲೈ ನೀ
ಕೊಟ್ಟುದುಣ ಬಡಿಸುವುದು ಭಾರವಿದೆಂದನಸುರಾರಿ ॥16॥
೦೧೭ ಮುಖರನಾದೈ ಪಾರ್ಥ ...{Loading}...
ಮುಖರನಾದೈ ಪಾರ್ಥ ಬರ್ಹಿ
ರ್ಮುಖರ ಬಾಣಸದಾತನೀತನು
ಸುಖವೆ ಹೇಳೈ ತಂದೆ ಖಾಂಡವ ವನದ ನಿರ್ದಹನ
ನಿಖಿಳನಿರ್ಜರಬಲಸಹಿತ ಶತ
ಮಖನೊಡನೆ ವಿಗ್ರಹವಲಾ ಸಂ
ಮುಖಕೆ ಬಂದುದು ಭಂಗವೆಂದನು ನಗುತ ಮುರವೈರಿ ॥17॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಪಾರ್ಥ, ನೀನು ಅತಿಯಾಗಿ ಮಾತನಾಡುವವನಾದೆ. ಈತನು ದೇವತೆಗಳ ಅಡುಗೆಯವನು. ಖಾಂಡವವನದ ದಹನ ಸುಲಭವೇ? ನೀನೇ ಹೇಳು. ಎಲ್ಲ ದೇವಬಲ ಸಹಿತ ಇಂದ್ರನೊಡನೆ ಯುದ್ಧ ಮಾಡಬೇಕಾಗುತ್ತದೆ. ಇನ್ನೇನು ಅಪಜಯ ಹತ್ತಿರಕ್ಕೆ ಬಂದಿತು” ಎಂದು ನಗುತ್ತ ಕೃಷ್ಣನು ಹೇಳಿದನು.
ಪದಾರ್ಥ (ಕ.ಗ.ಪ)
ಮುಖರ-ಅತಿಯಾಗಿ ಮಾತನಾಡುವವ, ಬರ್ಹಿರ್ಮುಖರು-ದೇವತೆಗಳು (ಅಗ್ನಿಯ ಮೂಲಕ ಹವಿಸ್ಸನ್ನು ಸೇವಿಸುವವರು), ಬಾಣಸಿಗ-ಅಡುಗೆಯವ, ನಿರ್ಜರ-ದೇವತೆ, ಶತಮಖ-ಇಂದ್ರ, ವಿಗ್ರಹ-ಯುದ್ಧ, ಭಂಗ-ಅಪಜಯ, ಸಂಮುಖ-ಹತ್ತಿರ
ಮೂಲ ...{Loading}...
ಮುಖರನಾದೈ ಪಾರ್ಥ ಬರ್ಹಿ
ರ್ಮುಖರ ಬಾಣಸದಾತನೀತನು
ಸುಖವೆ ಹೇಳೈ ತಂದೆ ಖಾಂಡವ ವನದ ನಿರ್ದಹನ
ನಿಖಿಳನಿರ್ಜರಬಲಸಹಿತ ಶತ
ಮಖನೊಡನೆ ವಿಗ್ರಹವಲಾ ಸಂ
ಮುಖಕೆ ಬಂದುದು ಭಂಗವೆಂದನು ನಗುತ ಮುರವೈರಿ ॥17॥
೦೧೮ ಭಙ್ಗವೇಕೈ ಕೃಷ್ಣ ...{Loading}...
ಭಂಗವೇಕೈ ಕೃಷ್ಣ ನಿರ್ಜರ
ಪುಂಗವನ ಗೆಲಿದವನ ಬಾಣಸಿ
ಗಂಗೆ ಬಾಣಸ ಮಾಡುವೆನು ಖಾಂಡವ ಮಹಾವನವ
ಅಂಘವಣೆಯನು ನೋಡು ನೀನೇ
ಕಾಂಗದಲಿ ನಿರ್ವಹಿಸುವೆನು ಭಯ
ಭಂಗವುಂಟೇ ನಿನ್ನ ಕೃಪೆಯಿರಲೆಂದನಾ ಪಾರ್ಥ ॥18॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅದಕ್ಕೆ ಅರ್ಜುನನು, “ಕೃಷ್ಣ, ಅಪಜಯವೇತಕ್ಕೆ ? ದೇವಶ್ರೇಷ್ಠನನ್ನು ಗೆದ್ದು, ಅವನ ಅಡುಗೆಯವನಿಗೆ ಖಾಂಡವ ಮಹಾವನವನ್ನು ಅಡುಗೆಯನ್ನಾಗಿ ಮಾಡುವೆನು. ನನ್ನ ಪರಾಕ್ರಮವನ್ನು ನೀನು ನೋಡುತ್ತಿರು. ಒಂಟಿಯಾಗಿಯೇ ನಿರ್ವಹಿಸುತ್ತೇನೆ. ನಿನ್ನ ಅನುಗ್ರಹವಿರುವಾಗ ನನಗೆ ಭಯ, ಅಪಜಯವೆಂಬುದು ಉಂಟೇ ?” ಎಂದನು.
ಪದಾರ್ಥ (ಕ.ಗ.ಪ)
ನಿರ್ಜಪುಂಗವ-ದೇವ ಶ್ರೇಷ್ಠ , ಇಲ್ಕು ಇಂದ್ರ ,
ಅಂಘವಣೆ-ಪರಾಕ್ರಮ, ಏಕಾಂಗಿ-ಒಂಟಿ.
ಮೂಲ ...{Loading}...
ಭಂಗವೇಕೈ ಕೃಷ್ಣ ನಿರ್ಜರ
ಪುಂಗವನ ಗೆಲಿದವನ ಬಾಣಸಿ
ಗಂಗೆ ಬಾಣಸ ಮಾಡುವೆನು ಖಾಂಡವ ಮಹಾವನವ
ಅಂಘವಣೆಯನು ನೋಡು ನೀನೇ
ಕಾಂಗದಲಿ ನಿರ್ವಹಿಸುವೆನು ಭಯ
ಭಂಗವುಂಟೇ ನಿನ್ನ ಕೃಪೆಯಿರಲೆಂದನಾ ಪಾರ್ಥ ॥18॥
೦೧೯ ಮೆಚ್ಚಿದನು ಘೃತಯೋನಿ ...{Loading}...
ಮೆಚ್ಚಿದನು ಘೃತಯೋನಿ ಪೂತುರೆ
ನಿಚ್ಚಟನು ನೀನೆನುತ ಕಿಡಿಗಳ
ಬಿಚ್ಚಲುದುರಿತು ಚಾಪ ಮಾರ್ಗಣ ರಥ ತುರಂಗಚಯ
ಅಚ್ಚರಿಯನೇನೆಂಬೆನೈಸ
ಪ್ತಾರ್ಚಿಯಿತ್ತನು ವನವನಿಂದ್ರನ
ಮುಚ್ಚು ಮರೆಯೇಕಿನ್ನು ನಮಗುಣ ಬಡಿಸು ಸಾಕೆಂದ ॥19॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅಗ್ನಿದೇವನು ಮೆಚ್ಚಿದನು “ಪೂತುರೇ, ನೀನು ಸ್ಥಿರ ಚಿತ್ತದವನು” ಎಂದು ಹೊಗಳುತ್ತ ಕಿಡಿಗಳನ್ನು ಬಿಚ್ಚಿದನು. ಆಗ ಬಿಲ್ಲು, ಬಾಣ, ರಥ, ಕುದುರೆಗಳ ಸಮೂಹ ಉದುರಿದವು. ಅಗ್ನಿಯು ಅವುಗಳನ್ನು ಅರ್ಜುನನಿಗೆ ಕೊಟ್ಟನು" ಇಂದ್ರನಿಂದ ಮರೆಸಿಡಬೇಕಾದದ್ದು ಏನು? ಇಂದ್ರನ ವನವನ್ನು ನಮಗೆ ಉಣಬಡಿಸು, ಸಾಕು" ಎಂದು ಅಗ್ನಿ ಹೇಳಿದನು.
ಪದಾರ್ಥ (ಕ.ಗ.ಪ)
ಘೃತಯೋನಿ-ಅಗ್ನಿ (ತುಪ್ಪವು ಉತ್ಪತ್ತಿ ಸ್ಥಾನವಾಗಿರುವವನು)
ಮಾರ್ಗಣ-ಬಾಣ, ತುರಂಗ-ಕುದುರೆ, . ಮುಚ್ಚುಮರೆ-ರಹಸ್ಯ,
ಟಿಪ್ಪನೀ (ಕ.ಗ.ಪ)
ಸಪ್ತಾರ್ಚಿ-ಅಗ್ನಿ, ಕಾಳಿ, ಕರಾಳಿ, ಮನೋಜವೆ, ಸುಲೋಹಿತೆ, ಸುಧೂಮವರ್ಣಿ, ಉಗ್ರೆ ಮತ್ತು ಪ್ರದೀಪ್ತೆ ಎಂಬ ಬೆಂಕಿಯ ಏಳು ನಾಲಗೆಗಳನ್ನು ಹೊಂದಿರುವವನು
ಮೂಲ ...{Loading}...
ಮೆಚ್ಚಿದನು ಘೃತಯೋನಿ ಪೂತುರೆ
ನಿಚ್ಚಟನು ನೀನೆನುತ ಕಿಡಿಗಳ
ಬಿಚ್ಚಲುದುರಿತು ಚಾಪ ಮಾರ್ಗಣ ರಥ ತುರಂಗಚಯ
ಅಚ್ಚರಿಯನೇನೆಂಬೆನೈಸ
ಪ್ತಾರ್ಚಿಯಿತ್ತನು ವನವನಿಂದ್ರನ
ಮುಚ್ಚು ಮರೆಯೇಕಿನ್ನು ನಮಗುಣ ಬಡಿಸು ಸಾಕೆಂದ ॥19॥
೦೨೦ ಧರಣಿಪತಿ ಕೇಳಗ್ನಿಯಿತ್ತನು ...{Loading}...
ಧರಣಿಪತಿ ಕೇಳಗ್ನಿಯಿತ್ತನು
ಹರಿ ಧನಂಜಯರಿಗೆ ರಥಂಗಳ
ನುರು ಶರಾವಳಿ ದಿವ್ಯಧನು ಕೌಮೋದಕೀ ಗದೆಯ
ವರ ತನುತ್ರ ಸಿತಾಶ್ವವಕ್ಷಯ
ಶರ ನಿಷಂಗಾದಿಗಳ ನಿವರು
ಬ್ಬರಿಸಿದರು ಹರುಷದಲಿ ನೆನೆದರು ನಯನ ವಾರಿಯಲಿ ॥20॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅಗ್ನಿಯು ಕೃಷ್ಣ, ಅರ್ಜುನರಿಗೆ ರಥಗಳನ್ನೂ, ಶ್ರೇಷ್ಠ ಬಾಣಗಳನ್ನೂ, ದಿವ್ಯವಾದ ಧನುಸ್ಸನ್ನೂ, ಕೌಮೋದಕೀ ಗದೆಯನ್ನು, ಉತ್ತಮ ರಕ್ಷಾ ಕವಚಗಳನ್ನೂ ಬಿಳಿಯ ಕುದುರೆಗಳನ್ನೂ ಅಕ್ಷಯ ಬಾಣಗಳ ಬತ್ತಳಿಕೆಗಳನ್ನು ಕೊಟ್ಟನು. ಇವರು ಅತಿಶಯವಾದ ಹರುಷದಲ್ಲಿ ಕಣ್ಣೀರಿನಿಂದ ತೊಯ್ದರು.
ಪದಾರ್ಥ (ಕ.ಗ.ಪ)
ತನುತ್ರ-ರಕ್ಷಾ ಕವಚ, ಸಿತಾಶ್ವ-ಬಿಳಿಯ ಕುದುರೆ, ನಿಷಂಗ-ಬತ್ತಳಿಕೆ, ನಯನವಾರಿ-ಕಣ್ಣೀರು, ಅಕ್ಷಯಶರ ನಿಷಂಗ-ಎಂದೆಂದಿಗೂ ವ್ಯಯವಾಗದ ಬಾಣಗಳುಳ್ಳ ಬತ್ತಳಿಕೆ.
ಟಿಪ್ಪನೀ (ಕ.ಗ.ಪ)
ಕೌಮೋದಕೀ - ವಿಷ್ಣುವಿನ ಗದೆಯ ಹೆಸರು. ಖಾಂಡವವನವನ್ನು ಸುಟ್ಟ ಸಮಯದಲ್ಲಿ ಅಗ್ನಿಯು ಶ್ರೀಕೃಷ್ಣನ ವಿಷಯದಲ್ಲಿ ಪ್ರಸನ್ನನಾಗಿ ವರುಣನಿಂದ ಈ ಗದೆಯನ್ನು ಕೃಷ್ಣನಿಗೆ ಕೊಡಿಸಿದನು.
ಮೂಲ ...{Loading}...
ಧರಣಿಪತಿ ಕೇಳಗ್ನಿಯಿತ್ತನು
ಹರಿ ಧನಂಜಯರಿಗೆ ರಥಂಗಳ
ನುರು ಶರಾವಳಿ ದಿವ್ಯಧನು ಕೌಮೋದಕೀ ಗದೆಯ
ವರ ತನುತ್ರ ಸಿತಾಶ್ವವಕ್ಷಯ
ಶರ ನಿಷಂಗಾದಿಗಳ ನಿವರು
ಬ್ಬರಿಸಿದರು ಹರುಷದಲಿ ನೆನೆದರು ನಯನ ವಾರಿಯಲಿ ॥20॥
೦೨೧ ಹೂಡಿದರು ರಥವೆರಡನಿವರು ...{Loading}...
ಹೂಡಿದರು ರಥವೆರಡನಿವರು ಸ
ಘಾಡದಲಿ ಕಪಿ ಗರುಡ ಸಿಂಧವ
ಜೋಡಿಸಿದರೇರಿದರು ನಗುತ ಧನಂಜಯಾಚ್ಯುತರು
ಮೂಡಿಗೆಯ ಮೊನೆಗಣೆಗಳಿಗೆ ಕೈ
ನೀಡಿಬೊಬ್ಬಿರಿದರು ದಿಗಂತವ
ನೀಡಿರಿದುದಬ್ಬರಣೆ ಬಿರಿದುದು ಧರಣಿ ಧಾಳಿಯಲಿ ॥21॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಇವರು ಎರಡು ರಥಗಳನ್ನು ವೇಗದಲ್ಲಿ ಸಿದ್ಧಗೊಳಿಸಿದರು. ಕಪಿಧ್ವಜ, ಗರುಡ ಧ್ವಜಗಳನ್ನು ಜೋಡಿಸಿದರು. ನಗುತ್ತ ಅರ್ಜುನ, ಕೃಷ್ಣರು ರಥಗಳನ್ನು ಏರಿದರು. ಬತ್ತಳಿಕೆಯ ಬಾಣಗಳಿಗೆ ಕೈನೀಡಿ ಗಟ್ಟಿಯಾಗಿ ಧ್ವನಿ ಮಾಡಿದರು. ಗದ್ದಲ ದಿಕ್ತಟವನ್ನು ವ್ಯಾಪಿಸಿದುದು. ಇವರ ಆಕ್ರಮಣದಲ್ಲಿ ಭೂಮಿ ಬಿರುಕು ಬಿಟ್ಟಿತು.
ಪದಾರ್ಥ (ಕ.ಗ.ಪ)
ಹೂಡು-ಸಿದ್ಧಗೊಳಿಸು, ಸಘಾಡ-ವೇಗ, ಸಿಂಧ-ಧ್ವಜ, ಮೂಡಿಗೆ-ಬತ್ತಳಿಕೆ, ಮೊನೆಗಣೆ-ಬಾಣ, ಬೊಬ್ಬಿರಿ-ಗಟ್ಟಿಯಾಗಿ ಧ್ವನಿಮಾಡು, ಅಬ್ಬರಣೆ-ಗದ್ದಲ, ದಿಗಂತ-ದಿಕ್ತಟ, ಈಡಿರಿ-ವ್ಯಾಪಿಸು
ಮೂಲ ...{Loading}...
ಹೂಡಿದರು ರಥವೆರಡನಿವರು ಸ
ಘಾಡದಲಿ ಕಪಿ ಗರುಡ ಸಿಂಧವ
ಜೋಡಿಸಿದರೇರಿದರು ನಗುತ ಧನಂಜಯಾಚ್ಯುತರು
ಮೂಡಿಗೆಯ ಮೊನೆಗಣೆಗಳಿಗೆ ಕೈ
ನೀಡಿಬೊಬ್ಬಿರಿದರು ದಿಗಂತವ
ನೀಡಿರಿದುದಬ್ಬರಣೆ ಬಿರಿದುದು ಧರಣಿ ಧಾಳಿಯಲಿ ॥21॥
೦೨೨ ಬೊಬ್ಬಿರಿದು ಹರಿ ...{Loading}...
ಬೊಬ್ಬಿರಿದು ಹರಿ ಪಾಂಚಜನ್ಯವ
ನುಬ್ಬಿ ಧ್ವನಿ ಮಾಡಿದನು ಪಾರ್ಥನ
ತೆಬ್ಬಿನಬ್ಬರ ತೀವಿತಾ ಬ್ರಹ್ಮಾಂಡ ಮಂಡಲವ
ಗಬ್ಬರಿಸಿದುದು ಗಗನವನು ಶರ
ದುಬ್ಬರದ ಬಲುಗಿಡಿಯ ಗಡಣವು
ಹಬ್ಬಿ ಹರಿದವು ದೆಸೆದೆಸೆಗೆ ನರನಾಥಕೇಳ್ ಎಂದ ॥22॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕೃಷ್ಣನು ಪಾಂಚಜನ್ಯ ಶಂಖವನ್ನು ಉತ್ಸಾಹದಿಂದ ಗಟ್ಟಿಯಾಗಿ ಧ್ವನಿಸಿದನು. ಅರ್ಜುನನ ಬಿಲ್ಲಿನ ಹೆದೆಯ ಆರ್ಭಟವು ಬ್ರಹ್ಮಾಂಡ ಮಂಡಲವನ್ನು ತುಂಬಿತು. ಬಾಣದಿಂದ ಅತಿಶಯವಾಗಿ ಹೊರಬಿದ್ದ ದಪ್ಪ ಕಿಡಿಗಳ ಸಮೂಹವು ಆಕಾಶವನ್ನು ಸೀಳಿದುವು ಹಾಗೂ ದಿಕ್ಕು ದಿಕ್ಕಿಗೆ ವ್ಯಾಪಿಸಿ ಹರಡಿದುವು.
ಪದಾರ್ಥ (ಕ.ಗ.ಪ)
ಉಬ್ಬು-ಉತ್ಸಾಹ, ತೆಬ್ಬು-ಬಿಲ್ಲಿನ ಹೆದೆ, ಗಬ್ಬರಿಸು-ಸೀಳು, ಬಲುಗಿಡಿ-ದಪ್ಪಕಿಡಿ, ಉಬ್ಬರ-ಅತಿಶಯ
ಟಿಪ್ಪನೀ (ಕ.ಗ.ಪ)
ವುಬ್ಬಿ ಹರಿದವು ದೆಸೆದೆಸೆಗೆ ಎಂಬುದಕ್ಕೆ ಬದಲಾಗಿ “ವುಷರ್ಬುಧನ ಕೈ ಬೆಳೆದುದೈ” ಎಂಬ ಪಾಠವಿದೆ. ಉಷರ್ಬುಧ ಅಂದರೆ ಅಗ್ನಿ ಎಂಬ ಅರ್ಥದಲ್ಲಿ ಈ ಪಾಠವೇ ಕವಿಯ ಪಾಠವಿರಲು ಸಾಕು ಎಂಬುದು ಡಿ.ಎಲ್.ಎನ್. ಅವರ ಅಭಿಪ್ರಾಯ (ಕನ್ನಡ ಗ್ರಂಥ ಸಂಪಾದನೆ - ಡಿ.ಎಲ್.ಎನ್. ಪುಟ 131)
ಮೂಲ ...{Loading}...
ಬೊಬ್ಬಿರಿದು ಹರಿ ಪಾಂಚಜನ್ಯವ
ನುಬ್ಬಿ ಧ್ವನಿ ಮಾಡಿದನು ಪಾರ್ಥನ
ತೆಬ್ಬಿನಬ್ಬರ ತೀವಿತಾ ಬ್ರಹ್ಮಾಂಡ ಮಂಡಲವ
ಗಬ್ಬರಿಸಿದುದು ಗಗನವನು ಶರ
ದುಬ್ಬರದ ಬಲುಗಿಡಿಯ ಗಡಣವು
ಹಬ್ಬಿ ಹರಿದವು ದೆಸೆದೆಸೆಗೆ ನರನಾಥಕೇಳೆಂದ ॥22॥
೦೨೩ ಧಾಳಿಯಿಟ್ಟರು ಸುರವನಕೆ ...{Loading}...
ಧಾಳಿಯಿಟ್ಟರು ಸುರವನಕೆ ಸುರ
ಜಾಲ ಸರಿಯಿತು ಬೊಬ್ಬೆಯಲಿ ದೆ
ಖ್ಖಾಳಿಸಿದುದುತ್ಪಾತ ಶತ ಖಾಂಡವದ ಮಧ್ಯದಲಿ
ಕೂಳಿಗಳ ಕುಡಿ ಮೀನವೋಲ್ವಿಹ
ಗಾಳಿ ಹುದುಗಿತು ನಡುಗಿದರು ವನ
ಪಾಲಕರು ನಿಂದೊಣಗಿದವು ಹರಿ ಚಂದನಾದಿಗಳು ॥23॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ದೇವ ವನಕ್ಕೆ ಇವರಿಬ್ಬರು ಮುತ್ತಿಗೆ ಹಾಕಿದರು. ಎದುರುನಿಲ್ಲದೆ ದೇವತೆಗಳ ಸಮೂಹ ಚೀರಾಟದಿಂದ ಹಿಂದಕ್ಕೆ ಸರಿಯಿತು. ಖಾಂಡವವನದ ಮಧ್ಯದಲ್ಲಿ ನೂರಾರು ಅಪಶಕುನಗಳು ಅತಿಶಯವಾಗಿ ತಲೆದೋರಿದುವು. ಬುಟ್ಟಿಯಲ್ಲಿ ಸಿಕ್ಕಿಹಾಕಿಕೊಂಡ ಕುಡಿಮೀನುಗಳಂತೆ ಪಕ್ಷಿಗಳ ಸಮೂಹ ಮುದುರಿಕೊಂಡಿತು. ವನಪಾಲಕರು ನಡುಗಿದರು. ಹರಿಚಂದನಾದಿ ಮರಗಳು ನಿಂತಲ್ಲಿಯೇ ಒಣಗಿ ಹೋದವು.
ಪದಾರ್ಥ (ಕ.ಗ.ಪ)
ದೆಖ್ಖಾಳ-ಅತಿಶಯ, ಬೊಬ್ಬೆ-ಚೀರಾಟ, ಕೂಳಿ-ಮೀನುಗಳನ್ನು ಹಿಡಿಯುವ ಬುಟ್ಟಿ, ಹರಿಚಂದನ-ಶ್ರೀಗಂಧ, ಉತ್ಪಾತ-ಅಪಶಕುನ
ಮೂಲ ...{Loading}...
ಧಾಳಿಯಿಟ್ಟರು ಸುರವನಕೆ ಸುರ
ಜಾಲ ಸರಿಯಿತು ಬೊಬ್ಬೆಯಲಿ ದೆ
ಖ್ಖಾಳಿಸಿದುದುತ್ಪಾತ ಶತ ಖಾಂಡವದ ಮಧ್ಯದಲಿ
ಕೂಳಿಗಳ ಕುಡಿ ಮೀನವೋಲ್ವಿಹ
ಗಾಳಿ ಹುದುಗಿತು ನಡುಗಿದರು ವನ
ಪಾಲಕರು ನಿಂದೊಣಗಿದವು ಹರಿ ಚಂದನಾದಿಗಳು ॥23॥
೦೨೪ ತೂಗಿ ಬಾಣವ ...{Loading}...
ತೂಗಿ ಬಾಣವ ಹೂಡಿ ಕಿವಿವರೆ
ಗಾಗಿ ಬರಸೆಳೆದಾರಿ ಬೊಬ್ಬಿರಿ
ದಾಗಲಿಂತೆಂದನು ಧನಂಜಯನಾ ಧನಂಜಯಗೆ
ಈಗಲೀ ವನದೊಳಗೆ ಖಗ ಮೃಗ
ನಾಗ ಸುರ ದನುಜಾದಿ ಜೀವರ
ಹೋಗಲೀಯದೆ ತರುಬಿ ಶರದಲಿ ಕಾಯಬೇಕೆಂದ ॥24॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಬಿಲ್ಲನ್ನು ತೂಗಿ ಬಾಣವನ್ನು ಹೂಡಿ ಕಿವಿವರೆಗೆ ಸೆಳೆದು ಗರ್ಜಿಸಿ ಗಟ್ಟಿಯಾಗಿ ಧ್ವನಿ ಮಾಡಿದಾಗ ಅಗ್ನಿಯು ಅರ್ಜುನನಿಗೆ ಈ ರೀತಿ ಹೇಳಿದನು : “ಈಗ ಈ ವನದೊಳಗೆ ಇರುವ ಪಕ್ಷಿಗಳು, ಪ್ರಾಣಿಗಳು, ಸರ್ಪಗಳು, ದೇವತೆಗಳು ರಾಕ್ಷಸರು ಮೊದಲಾದ ಜೀವರುಗಳನ್ನು ಹೊರಕ್ಕೆ ಹೋಗದಂತೆ ಬಾಣದಿಂದ ಅಡ್ಡಗಟ್ಟಿ ಉಳಿಸಬೇಕು”.
ಪದಾರ್ಥ (ಕ.ಗ.ಪ)
ಖಗ-ಪಕ್ಷಿ, ತರುಬಿ-ಅಡ್ಡಗಟ್ಟಿ, ಕಾಯ್-ಉಳಿಸು, ಧನಂಜಯ-ಅಗ್ನಿ, ಅರ್ಜುನ
ಮೂಲ ...{Loading}...
ತೂಗಿ ಬಾಣವ ಹೂಡಿ ಕಿವಿವರೆ
ಗಾಗಿ ಬರಸೆಳೆದಾರಿ ಬೊಬ್ಬಿರಿ
ದಾಗಲಿಂತೆಂದನು ಧನಂಜಯನಾ ಧನಂಜಯಗೆ
ಈಗಲೀ ವನದೊಳಗೆ ಖಗ ಮೃಗ
ನಾಗ ಸುರ ದನುಜಾದಿ ಜೀವರ
ಹೋಗಲೀಯದೆ ತರುಬಿ ಶರದಲಿ ಕಾಯಬೇಕೆಂದ ॥24॥
೦೨೫ ಹೈ ಸಮಗ್ರಾತಿಥ್ಯದಲಿ ...{Loading}...
ಹೈ ಸಮಗ್ರಾತಿಥ್ಯದಲಿ ನಿಮ
ಗೀ ಸಮಸ್ತಪ್ರಾಣಿಸಹಿತ ಸು
ರೇಶನುದ್ಯಾನವನು ಕೊಟ್ಟೆನು ಬಾಣ ಧಾರೆಯಲಿ
ನೀ ಸಮಾಧಾನದಲಿ ಸುಪುರೋ
ಡಾಶವಿದೆ ಸಮಿದಾಜ್ಯ ಸಹಿತ ಮ
ಹಾ ಸುವಿಸ್ತಾರದಲಿ ಕೊಂಬುದು ಭೀತಿ ಬೇಡೆಂದ ॥25॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅದಕ್ಕೆ ಅರ್ಜುನನು, “ಓಹೋ ಆಗಬಹುದು ! ನಿಮಗೆ ಸಮಸ್ತ ಪ್ರಾಣಿಗಳ ಸಹಿತ ದೇವೇಂದ್ರನ ವನವನ್ನು ಸಂಪೂರ್ಣ ಆತಿಥ್ಯವಾಗಿ ಬಾಣಗಳನ್ನು ಒಂದೇ ಸಮನಾಗಿ ಬಿಟ್ಟು ಧಾರೆಯೆರೆದು ಕೊಟ್ಟಿದ್ದೇನೆ. ಒಳ್ಳೆಯ ಹವಿಸ್ಸಿದೆ. ಸಮಿತ್ತು ತುಪ್ಪ ಸಹಿತವಾಗಿ ನೀವು ಸಮಾಧಾನದಿಂದ ತೆಗೆದುಕೊಳ್ಳುವುದು. ಇದರಲ್ಲಿ ಹೆದರಿಕೆ ಬೇಡ” ಎಂದು ಅಗ್ನಿಗೆ ಹೇಳಿದನು.
ಪದಾರ್ಥ (ಕ.ಗ.ಪ)
ಸುರೇಶ-ದೇವೇಂದ್ರ, ಸಮಗ್ರ-ಸಂಪೂರ್ಣ, ಧಾರೆ-ಒಂದೇ ಸಮನಾಗಿ ಬಿಡು, ಪುರೋಡಾಶ-ಹವಿಸ್ಸು (ಯಜ್ಞದಲ್ಲಿ ಅರ್ಪಿಸುವ ಅಕ್ಕಿ ಹಿಟ್ಟು), ಆಜ್ಯ-ತುಪ್ಪ
ಮೂಲ ...{Loading}...
ಹೈ ಸಮಗ್ರಾತಿಥ್ಯದಲಿ ನಿಮ
ಗೀ ಸಮಸ್ತಪ್ರಾಣಿಸಹಿತ ಸು
ರೇಶನುದ್ಯಾನವನು ಕೊಟ್ಟೆನು ಬಾಣ ಧಾರೆಯಲಿ
ನೀ ಸಮಾಧಾನದಲಿ ಸುಪುರೋ
ಡಾಶವಿದೆ ಸಮಿದಾಜ್ಯ ಸಹಿತ ಮ
ಹಾ ಸುವಿಸ್ತಾರದಲಿ ಕೊಂಬುದು ಭೀತಿ ಬೇಡೆಂದ ॥25॥
೦೨೬ ಎನುತ ಬಿಡೆ ...{Loading}...
ಎನುತ ಬಿಡೆ ತಿರುವಾಯನೊದೆದು
ಬ್ಬಿನಲಿ ಬೊಬ್ಬಿರಿದಂಬು ಸುರಪನ
ವನವ ಮುತ್ತಿತು ಕೂಡೆ ಹೊತ್ತಿತು ಹೊಗೆಯ ಹೊರಳಿಯಲಿ
ತನಿಗಿಡಿಯ ದಳ್ಳುರಿಯ ನಾಲಿಗೆ
ಕೊನೆಗಳಲ್ಲಾಡಿದವು ಕಡು ಲಾ
ಗಿನಲಿ ಲಂಬಿಸಿ ಚುಂಬಿಸಿದುದರಿ ಲಲಿತ ನಂದನವ ॥26॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಹೀಗೆಂದು ನುಡಿದು ಬಾಣವನ್ನು ಬಿಡಲು, ಬಾಣವು ಬಿಲ್ಲಿನ ಹೆದೆಯನ್ನು ಒದೆದು ಆರ್ಭಟದಿಂದ ಇಂದ್ರನವನವನ್ನು ಆಕ್ರಮಿಸಿತು. ಕೂಡಲೇ ಬೆಂಕಿ ಹೊತ್ತಿತು. ಹೊಗೆಯು ಗುಂಪಾಗಿ ಹೊಮ್ಮಿತು. ಪ್ರಜ್ವಲಿಸುವ ಕೆಂಡದ ದೊಡ್ಡ ಉರಿಯ ನಾಲಗೆಯ ಕೊನೆಗಳು ಅಲ್ಲಾಡಿದುವು. ಬಹು ವೇಗದಲ್ಲಿ ಆ ಮನೋಹರ ತೋಟವನ್ನು ಉರಿ ವ್ಯಾಪಿಸಿ ಚುಂಬಿಸಿತು.
ಪದಾರ್ಥ (ಕ.ಗ.ಪ)
ತಿರುವಾಯ-ಬಿಲ್ಲಿನ ಹೆದೆ, ಸುರಪ-ದೇವತೆಗಳ ಒಡೆಯ, ಇಂದ್ರ, ಹೊರಳಿ-ಗುಂಪು, ತನಿಗಿಡಿ-ಪ್ರಜ್ವಲಿಸುವ ಕೆಂಡ, ದಳ್ಳುರಿ-ದೊಡ್ಡ ಉರಿ, ಲಾಗು-ವೇಗ, ಲಲಿತ-ಮನೋಹರ
ಮೂಲ ...{Loading}...
ಎನುತ ಬಿಡೆ ತಿರುವಾಯನೊದೆದು
ಬ್ಬಿನಲಿ ಬೊಬ್ಬಿರಿದಂಬು ಸುರಪನ
ವನವ ಮುತ್ತಿತು ಕೂಡೆ ಹೊತ್ತಿತು ಹೊಗೆಯ ಹೊರಳಿಯಲಿ
ತನಿಗಿಡಿಯ ದಳ್ಳುರಿಯ ನಾಲಿಗೆ
ಕೊನೆಗಳಲ್ಲಾಡಿದವು ಕಡು ಲಾ
ಗಿನಲಿ ಲಂಬಿಸಿ ಚುಂಬಿಸಿದುದರಿ ಲಲಿತ ನಂದನವ ॥26॥
೦೨೭ ಹೊದರಿನಲಿ ಭುಗುಭುಗಿಲು ...{Loading}...
ಹೊದರಿನಲಿ ಭುಗುಭುಗಿಲು ಭುಗಿಲೆಂ
ದೊದೆದುದುರಿಯಂಬರವನೊಣಗಿದ
ಬಿದಿರ ಮೆಳೆಯಲಿ ಧಗಧಗಿಸಿ ಛಟಛಟನೆ ಛಟಛಟಿಸಿ
ಕದಲಿ ಖರ್ಜೂರಾದಿ ತರು ಜಾ
ಲದಲಿ ಸಿಮಿ ಸಿಮಿ ಸಿಮಿ ಸಿಮಾಯತ
ವೊದಗೆ ಗಹನೋದರದೊಳಗೆ ಘಾಡಿಸಿತು ಘನ ವಹ್ನಿ ॥27॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ದಟ್ಟವಾಗಿ ಎದ್ದ ಉರಿ ಭುಗು ಭುಗಿಲು ಭುಗಿಲೆಂದು ಶಬ್ದ ಮಾಡುತ್ತ ಆಕಾಶವನ್ನು ಅಪ್ಪಳಿಸಿತು. ಒಣಗಿದ ಬಿದಿರ ಪೊದರಿನಲ್ಲಿ ಬೆಂಕಿ ಪ್ರಜ್ವಲಿಸಿ ಛಟಛಟ ಎಂದು ಧ್ವನಿ ಮಾಡಿತು. ಬಾಳೆ, ಖರ್ಜೂರ ಮೊದಲಾದ ಮರಗಳ ಸಮೂಹದಲ್ಲಿ ಬಿದ್ದ ಬೆಂಕಿ ಸಿಮಿಸಿಮಿ ಸಿಮಿಯೆಂದು ಶಬ್ದ ಮಾಡಿತು. ಹೀಗೆ ಅತ್ಯಧಿಕವಾದ ಬೆಂಕಿ ತನ್ನ ಖಾಂಡವವನದ ಉದರಭಾಗದಲ್ಲಿ ಆವರಿಸಿ ಕೊಂಡಿತು.
ಪದಾರ್ಥ (ಕ.ಗ.ಪ)
ಹೊದರು-ದಟ್ಟ, ಮೆಳೆ-ಪೊದರು, ಧಗಧಗಿಸು-ಪ್ರಜ್ವಲಿಸು, ಛಟಛಟಿಸು-ಛಟಛಟ ಎಂದು ಧ್ವನಿಮಾಡು, ಘಾಡಿಸು-ಆವರಿಸು
ಮೂಲ ...{Loading}...
ಹೊದರಿನಲಿ ಭುಗುಭುಗಿಲು ಭುಗಿಲೆಂ
ದೊದೆದುದುರಿಯಂಬರವನೊಣಗಿದ
ಬಿದಿರ ಮೆಳೆಯಲಿ ಧಗಧಗಿಸಿ ಛಟಛಟನೆ ಛಟಛಟಿಸಿ
ಕದಲಿ ಖರ್ಜೂರಾದಿ ತರು ಜಾ
ಲದಲಿ ಸಿಮಿ ಸಿಮಿ ಸಿಮಿ ಸಿಮಾಯತ
ವೊದಗೆ ಗಹನೋದರದೊಳಗೆ ಘಾಡಿಸಿತು ಘನ ವಹ್ನಿ ॥27॥
೦೨೮ ಏನನೆಮ್ಬೆನು ದಿವಿಜ ...{Loading}...
ಏನನೆಂಬೆನು ದಿವಿಜ ರಾಜೋ
ದ್ಯಾನಹಾನಿಯನಾತನಾಳು ಕೃ
ಶಾನುವಿನ ತನಿಗೊಬ್ಬನೀ ಕೃಷ್ಣಾರ್ಜುನರ ಬಲುಹ
ಆ ನಿಖಿಳ ನಿರ್ಜರರು ತಾಗಿ ವಿ
ಮಾನ ಗತಿಯಲಿ ಹಾಯ್ದರಂದವ
ಮಾನಗತಿಯಲಿ ಗಗನದಲಿ ಗೀರ್ವಾಣಪತಿ ಪುರಕೆ ॥28॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ದೇವರಾಜನ ಉದ್ಯಾನವನದ ನಾಶವನ್ನು ಏನೆಂದು ಹೇಳುವುದು ? ಆತನ ಆಳುಗಳೂ, ಅಲ್ಲಿನ ಎಲ್ಲ ದೇವತೆಗಳೂ ವಿಮಾನ ಮಾರ್ಗದಲ್ಲಿ ಬಂದು ಈ ಅಗ್ನಿಯ ಚೆನ್ನಾಗಿ ಬೆಳೆದ ಕೊಬ್ಬನ್ನೂ ಕೃಷ್ಣಾರ್ಜುನರ ಸಾಮಥ್ರ್ಯವನ್ನು ಎದುರಿಸಿ ಹೋರಾಡಲು ಸಾಧ್ಯವಾಗದೆ ಅವಮಾನಿತರಾಗಿ ದೇವೇಂದ್ರನ ಪಟ್ಟಣಕ್ಕೆ ಆಕಾಶದಲ್ಲಿ ಹಾರಿ ಹೋದರು.
ಪದಾರ್ಥ (ಕ.ಗ.ಪ)
ಕೃಶಾನು-ಅಗ್ನಿ, ಬಲುಹು-ಸಾಮಥ್ರ್ಯ, ತನಿ-ಚೆನ್ನಾಗಿ ಬೆಳೆದ
ಟಿಪ್ಪನೀ (ಕ.ಗ.ಪ)
ವಿಮಾನಗತಿ, ಅವಮಾನಗತಿ ಎಂಬ ಪ್ರಯೋಗ ಗಮನಾರ್ಹ
ಮೂಲ ...{Loading}...
ಏನನೆಂಬೆನು ದಿವಿಜ ರಾಜೋ
ದ್ಯಾನಹಾನಿಯನಾತನಾಳು ಕೃ
ಶಾನುವಿನ ತನಿಗೊಬ್ಬನೀ ಕೃಷ್ಣಾರ್ಜುನರ ಬಲುಹ
ಆ ನಿಖಿಳ ನಿರ್ಜರರು ತಾಗಿ ವಿ
ಮಾನ ಗತಿಯಲಿ ಹಾಯ್ದರಂದವ
ಮಾನಗತಿಯಲಿ ಗಗನದಲಿ ಗೀರ್ವಾಣಪತಿ ಪುರಕೆ ॥28॥
೦೨೯ ಹೊಗೆಯ ಬಳಿಯಲಿ ...{Loading}...
ಹೊಗೆಯ ಬಳಿಯಲಿ ತಳಿತ ಹುಯ್ಯಲ
ಬೆಗಡಿದೇನೋ ಕೇಳೆನುತ ಸಿರಿ
ಮೊಗದ ದುಗುಡದ ಸಾವಿರಾಲಿಯೊಳೊಗುವ ಕಿಡಿಗಳಲಿ
ಹಗೆಗಳಾರು ನಿವಾತ ಕವಚಾ
ದಿಗಳೊ ತಾನಾರೆಂಬ ಶಕ್ರನ
ದುಗುಡವನು ದೇವಾಳಿ ಕಂಡುದು ದೂರಿದರು ನರನ ॥29॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಹೊಗೆಯ ಮಾರ್ಗದಲ್ಲಿ ಕೇಳಿ ಬರುವ ಗದ್ದಲದ ಆಶ್ಚರ್ಯವಿದೇನು ? ಕೇಳಿ, ಶತ್ರುಗಳು ಯಾರು ? ನಿವಾತಕವಚಾದಿಗಳೋ? ಮತ್ತೆ ಯಾರೋ ?” ಎಂದು ಪ್ರಸನ್ನ ಮುಖದಲ್ಲಿ ಚಿಂತಿತನಾಗಿ, ಸಾವಿರ ಕಣ್ಣುಗಳಲ್ಲಿ ಕಿಡಿ ಕಾರುತ್ತ ಇರುವ ದೇವೇಂದ್ರನ ಚಿಂತೆಯನ್ನು ದೇವ ಸಮೂಹ ಕಂಡಿತು. ಅರ್ಜುನನ ಬಗ್ಗೆ ದೂರು ಮಾಡಿದರು.
ಪದಾರ್ಥ (ಕ.ಗ.ಪ)
ಹುಯ್ಯಲು-ಗದ್ದಲ, ಬೆಗಡು-ಆಶ್ಚರ್ಯ, ದುಗುಡ-ಚಿಂತೆ, ಆಲಿ-ಕಣ್ಣು, ಶಕ್ರ-ಇಂದ್ರ, ದೇವಾಳಿ-ದೇವಸಮೂಹ
ಮೂಲ ...{Loading}...
ಹೊಗೆಯ ಬಳಿಯಲಿ ತಳಿತ ಹುಯ್ಯಲ
ಬೆಗಡಿದೇನೋ ಕೇಳೆನುತ ಸಿರಿ
ಮೊಗದ ದುಗುಡದ ಸಾವಿರಾಲಿಯೊಳೊಗುವ ಕಿಡಿಗಳಲಿ
ಹಗೆಗಳಾರು ನಿವಾತ ಕವಚಾ
ದಿಗಳೊ ತಾನಾರೆಂಬ ಶಕ್ರನ
ದುಗುಡವನು ದೇವಾಳಿ ಕಂಡುದು ದೂರಿದರು ನರನ ॥29॥
೦೩೦ ನಿನಗೆ ಮಗನೇ ...{Loading}...
ನಿನಗೆ ಮಗನೇ ಪಾರ್ಥ ನಿನ್ನರ
ಮನೆಯ ಬಾಣಸದಾತನೇ ಶಿಖಿ
ಯನುಜನೇ ಮುರವೈರಿ ನಿನಗನುಕೂಲರಾದರೆಲೆ
ಬನದ ಬೇಗೆಯೊ ಪರಿಭವಾಲಂ
ಬನದ ವೊಸಗೆಯೊ ಬಂದುದಿದೆ ಬಿಡು
ಮನೆಯ ಮನ್ನೆಯ ಗಂಡನಾಗೆಂದುದು ಸುರಸ್ತೋಮ ॥30॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ನಿನಗೆ ಮಗನೇ ಪಾರ್ಥ ? ನಿನ್ನ ಅರಮನೆಯ ಅಡುಗೆಯವನೇ ಅಗ್ನಿ? ಅನುಜನೇ ಮುರವೈರಿ ? ಇವರೆಲ್ಲ ನಿನಗೆ ಅನುಕೂಲರಾದರಲ್ಲ ! ವನವನ್ನು ಸುಟ್ಟ ತಾಪ ಈ ಸೋಲಿನ ಆಶ್ರಯಕ್ಕೆ ಸಮಾಚಾರವಾಯ್ತು ! ಈಗ ಮನೆಯನ್ನು ಬಿಡು. ಮುಖಂಡರ ವೀರನಾಗು” ಎಂದು ದೇವಸಮೂಹ ಬಿನ್ನವಿಸಿತು.
ಪದಾರ್ಥ (ಕ.ಗ.ಪ)
ಶಿಖಿ-ಅಗ್ನಿ, ಪರಿಭವ-ಸೋಲು, ಬೇಗೆ-ತಾಪ, ಅವಲಂಬನ-ಆಶ್ರಯ, ಒಸಗೆ-ಸಮಾಚಾರ, ಮನ್ನೆಯ-ಮುಖಂಡ
ಟಿಪ್ಪನೀ (ಕ.ಗ.ಪ)
ಅನುಜನೇ ಮುರವೈರಿ ?
ಮೂಲ ...{Loading}...
ನಿನಗೆ ಮಗನೇ ಪಾರ್ಥ ನಿನ್ನರ
ಮನೆಯ ಬಾಣಸದಾತನೇ ಶಿಖಿ
ಯನುಜನೇ ಮುರವೈರಿ ನಿನಗನುಕೂಲರಾದರೆಲೆ
ಬನದ ಬೇಗೆಯೊ ಪರಿಭವಾಲಂ
ಬನದ ವೊಸಗೆಯೊ ಬಂದುದಿದೆ ಬಿಡು
ಮನೆಯ ಮನ್ನೆಯ ಗಂಡನಾಗೆಂದುದು ಸುರಸ್ತೋಮ ॥30॥
೦೩೧ ಐಸಲೇ ನಮ್ಮವರಲಾ ...{Loading}...
ಐಸಲೇ ನಮ್ಮವರಲಾ ಹೋ
ಹೋ ಸುರರು ಕಳವಳಿಸದಿರಿಯಾ
ಪೈಸನಾಹುತಿಗೊಳಲಿ ಪಾವಕನೆಮ್ಮ ಖಾಂಡವವ
ಈ ಸುರರಿಗಾ ನರರಿಗಂತರ
ವೇಸು ಪೂತುರೆ ಕಾಲಗತಿಯೆನು
ತಾ ಸುರೇಶ್ವರ ಖಾತಿಗೊಂಡನು ಕೃಷ್ಣ ಪಾರ್ಥರಿಗೆ ॥31॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅದನ್ನು ಕೇಳಿದ ಇಂದ್ರನು, “ಹೀಗೋ ! ನಮ್ಮವರಲ್ಲವೇ ! ದೇವತೆಗಳು ಆತಂಕಗೊಳ್ಳದಿರಿ. ಅಗ್ನಿಯು ನಮ್ಮ ಖಾಂಡªವನ್ನು ಅವನ ಕೈಲಾದಷ್ಟನ್ನು ಆಹುತಿ ತೆಗೆದುಕೊಳ್ಳಲಿ. ಈ ದೇವತೆಗಳಿಗೂ ಆ ಮಾನವರಿಗೂ ಅಂತರವೆಷ್ಟು ? ಪೂತುರೇ, ಕಾಲಗತಿ !” ಎಂದು ದೇವೇಂದ್ರನು ಕೃಷ್ಣಾರ್ಜುನರ ಮೇಲೆ ಕೋಪಗೊಂಡನು.
ಪದಾರ್ಥ (ಕ.ಗ.ಪ)
ಕಳವಳ-ಆತಂಕ, ಪಾವಕ-ಅಗ್ನಿ, ಸುರೇಶ್ವರ-ದೇವತೆಗಳಿಗೆಲ್ಲ ಒಡೆಯ,
ಆಪೈಸ- ಆಪ + ಐಸ - ಆಗುವಷ್ಟನ್ನು
ದೇವೇಂದ್ರ, ಖಾತಿ-ಕೋಪ
ಮೂಲ ...{Loading}...
ಐಸಲೇ ನಮ್ಮವರಲಾ ಹೋ
ಹೋ ಸುರರು ಕಳವಳಿಸದಿರಿಯಾ
ಪೈಸನಾಹುತಿಗೊಳಲಿ ಪಾವಕನೆಮ್ಮ ಖಾಂಡವವ
ಈ ಸುರರಿಗಾ ನರರಿಗಂತರ
ವೇಸು ಪೂತುರೆ ಕಾಲಗತಿಯೆನು
ತಾ ಸುರೇಶ್ವರ ಖಾತಿಗೊಂಡನು ಕೃಷ್ಣ ಪಾರ್ಥರಿಗೆ ॥31॥
೦೩೨ ಕಾಹು ತೆಗೆಯಲಿ ...{Loading}...
ಕಾಹು ತೆಗೆಯಲಿ ಕಲ್ಪಮೇಘ
ವ್ಯೂಹಗಳ ಬರಹೇಳು ಕಾಂಬೆನು
ಸಾಹಸವನಿದರೊಳಗೆ ಕೃಷ್ಣ ಧನಂಜಯ ದ್ವಯದ
ಈ ಹದಕೆ ಪಡಿ ಪುಚ್ಛವಿಲ್ಲವ
ಗಾಹಿಸಲಿ ಖಾಂಡವವ ಹುಲ್ಲೆಯ
ಹೂಹೆಗಳು ಹೆಬ್ಬುಲಿಗೆ ಹಾಯ್ವವೆನುತ್ತ ಗರ್ಜಿಸಿದ ॥32॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಕಾವಲು ತೆಗೆಯಲಿ, ಕಲ್ಪಾಂತ ಮೋಡಗಳ ಸಮೂಹವನ್ನು ಬರಹೇಳು. ಕೃಷ್ಣಾರ್ಜುನರಿಬ್ಬರ ಪರಾಕ್ರಮವನ್ನು ಇದರೊಳಗೆ ನೋಡುತ್ತೇನೆ. ಈ ಕ್ರಮದಲ್ಲಿ ಸಂಶಯವಿಲ್ಲ. ಖಾಂಡವವನ್ನು ಮುಳುಗಿಸಲಿ. ಜಿಂಕೆಗಳ ಮರಿಗಳು ದೊಡ್ಡ ಹುಲಿಯ ಮೇಲೆ ಹಾಯುತ್ತವೆ” ಎಂದು ಗರ್ಜಿಸಿದನು.
ಪದಾರ್ಥ (ಕ.ಗ.ಪ)
ಕಾಹು-ಕಾವಲು, ಮೇಘವ್ಯೂಹ-ಮೋಡಗಳ ಸಮೂಹ, ಪಡಿಪುಚ್ಚ-ಸಂಶಯ, ಹದ-ಕ್ರಮ, ಹುಲ್ಲೆ-ಜಿಂಕೆ, ಹೂಹೆ-ಮರಿ, ಹೆಬ್ಬುಲಿ-ದೊಡ್ಡ ಹುಲಿ
ಮೂಲ ...{Loading}...
ಕಾಹು ತೆಗೆಯಲಿ ಕಲ್ಪಮೇಘ
ವ್ಯೂಹಗಳ ಬರಹೇಳು ಕಾಂಬೆನು
ಸಾಹಸವನಿದರೊಳಗೆ ಕೃಷ್ಣ ಧನಂಜಯ ದ್ವಯದ
ಈ ಹದಕೆ ಪಡಿ ಪುಚ್ಛವಿಲ್ಲವ
ಗಾಹಿಸಲಿ ಖಾಂಡವವ ಹುಲ್ಲೆಯ
ಹೂಹೆಗಳು ಹೆಬ್ಬುಲಿಗೆ ಹಾಯ್ವವೆನುತ್ತ ಗರ್ಜಿಸಿದ ॥32॥
೦೩೩ ಅರಸ ಕೇಳ್ಕಲ್ಪಾನ್ತ ...{Loading}...
ಅರಸ ಕೇಳ್ಕಲ್ಪಾಂತ ಮೇಘೋ
ತ್ಕರದ ಪಾಳಯವೆತ್ತಿ ಬಿಟ್ಟುದು
ಧರಣಿಯಗಲಕೆ ಧಾಳಿಯಿಟ್ಟವು ಸಿಡಿಲ ಮಿಂಚುಗಳು
ಕರಿಯ ಬರಿಕೈಗೆಣಿಯೆನಿಪ ನಿ
ಷ್ಠುರದ ಧಾರಾಸಾರ ತೆರಳಿಚಿ
ಸುರಿದುದಾ ಖಾಂಡವದ ಸೀಮಾ ಸನ್ನಿವೇಶದಲಿ ॥33॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಇಂದ್ರನ ಅಪ್ಪಣೆಯಿಂದ ಕಲ್ಪಾಂತ ಮೋಡಗಳ ಸಮೂಹವು ದಂಡೆತ್ತಿ ಹೊರಟು ಭೂಮಿಯಗಲಕ್ಕೂ ಪಾಳೆಯ ಬಿಟ್ಟವು. ಸಿಡಿಲು, ಮಿಂಚುಗಳು ಮುತ್ತಿಗೆ ಹಾಕಿದವು. ಆನೆಯ ಸೊಂಡಲಿಗೆ ಸರಿಯೆನಿಸುವ ಕಠಿಣದ ಒಂದೇ ಸಮನೇ ಸುರಿಯುವ ಮಳೆ ಆ ಖಾಂಡವ ವನದ ಎಲ್ಲೆ ಕಟ್ಟಿನಲ್ಲಿ ದಟ್ಟವಾಗಿ ಸುರಿದುದು.
ಪದಾರ್ಥ (ಕ.ಗ.ಪ)
ಉತ್ತರ-ಸಮೂಹ, ಕರಿ-ಆನೆ, ಬರಿಕೈ-ಸೊಂಡಿಲು, ಎಣೆ-ಸರಿ, ಸೀಮಾ ಸನ್ನಿವೇಶ-ಎಲ್ಲೆ ಕಟ್ಟಿನ ಪ್ರದೇಶ, ಧಾರಾಸಾರ-ಒಂದೇ ಸಮನೆ ಸುರಿಯುವ ಮಳೆ
ಮೂಲ ...{Loading}...
ಅರಸ ಕೇಳ್ಕಲ್ಪಾಂತ ಮೇಘೋ
ತ್ಕರದ ಪಾಳಯವೆತ್ತಿ ಬಿಟ್ಟುದು
ಧರಣಿಯಗಲಕೆ ಧಾಳಿಯಿಟ್ಟವು ಸಿಡಿಲ ಮಿಂಚುಗಳು
ಕರಿಯ ಬರಿಕೈಗೆಣಿಯೆನಿಪ ನಿ
ಷ್ಠುರದ ಧಾರಾಸಾರ ತೆರಳಿಚಿ
ಸುರಿದುದಾ ಖಾಂಡವದ ಸೀಮಾ ಸನ್ನಿವೇಶದಲಿ ॥33॥
೦೩೪ ಆ ಸಕಲ ...{Loading}...
ಆ ಸಕಲ ಸಾಗರವನೊಂದೇ
ಶ್ವಾಸದಲಿ ತೆಗೆದೆತ್ತಿ ಮೊಗುಚಿದ
ವೀ ಸಮಸ್ತ ಬಲಾಹಕಾವಳಿ ಬನದ ಮಧ್ಯದಲಿ
ಏಸು ಸಾಹಸಸತ್ವ ತನಗುಂ
ಟೈಸರಲಿ ತಲೆಯೆತ್ತಿ ಜಲದಲಿ
ಘಾಸಿಯಾದನು ವಹ್ನಿ ನುಡಿದನು ಕೃಷ್ಣ ಪಾರ್ಥರಿಗೆ ॥34॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಈ ಸಮಸ್ತ ಮೋಡಗಳ ಸಮೂಹವು ಆ ಎಲ್ಲ ಸಾಗರಗಳನ್ನು ಒಂದೇ ಉಸಿರಿನಲ್ಲಿ ಹೀರಿ ವನದ ಮಧ್ಯದಲ್ಲಿ ಎತ್ತಿ ಮಗುಚಿ ಹಾಕಿದವು. ಆ ಜಲ ಮಧ್ಯದಲ್ಲಿ ತೊಂದರೆಗೆ ಸಿಕ್ಕಿಕೊಂಡು ತನಗೆ ಎಷ್ಟು ಸಾಹಸ ಸತ್ವ ತನಗುಂಟೋ ಅಷ್ಟನ್ನೂ ಉಪಯೋಗಿಸಿ ಮೆಲ್ಲನೆ ತಲೆಯೆತ್ತಿ ಕೃಷ್ಣಾರ್ಜುನರನ್ನು ಕುರಿತು ಅಗ್ನಿ ನುಡಿದನು.
ಪದಾರ್ಥ (ಕ.ಗ.ಪ)
ಬಲಾಹಕ-ಮೋಡ, ಘಾಸಿ-ತೊಂದರೆ, ವಹ್ನಿ-ಅಗ್ನಿ
ಮೂಲ ...{Loading}...
ಆ ಸಕಲ ಸಾಗರವನೊಂದೇ
ಶ್ವಾಸದಲಿ ತೆಗೆದೆತ್ತಿ ಮೊಗುಚಿದ
ವೀ ಸಮಸ್ತ ಬಲಾಹಕಾವಳಿ ಬನದ ಮಧ್ಯದಲಿ
ಏಸು ಸಾಹಸಸತ್ವ ತನಗುಂ
ಟೈಸರಲಿ ತಲೆಯೆತ್ತಿ ಜಲದಲಿ
ಘಾಸಿಯಾದನು ವಹ್ನಿ ನುಡಿದನು ಕೃಷ್ಣ ಪಾರ್ಥರಿಗೆ ॥34॥
೦೩೫ ಕಲಹವಿನ್ದ್ರನ ಕೂಡೆ ...{Loading}...
ಕಲಹವಿಂದ್ರನ ಕೂಡೆ ಕಲ್ಪದ
ಮಳೆಗಳಿವು ಮಾಣಿಸಿದವೂಟವ
ನೆಳೆದವಣಲಿನ ತುತ್ತನರ್ಜುನ ಕಾಯ್ದುಕೊಳ್ಳೆನಲು
ಮಳೆಗೆ ಶರಪಂಜರವ ವಿರಚಿಸಿ
ಬಳಿಕ ವಾಯವ್ಯಾಸ್ತ್ರದಲಿ ನಿ
ಸ್ಖಲಿತಮೇಘವ್ರಜವನೆಚ್ಚನು ಪಾರ್ಥ ವಹಿಲದಲಿ ॥35॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಕಾಳೆಗ ನಡೆಯುತ್ತಿರುವುದು ಇಂದ್ರನೊಡನೆ. ಇವು ಕಲ್ಪಾಂತದ ಮಳೆಗಳು. ನನ್ನ ಊಟವನ್ನು ತಡೆದವು. ನನ್ನ ಒಳಬಾಯಿಯೊಳಗಿನ ತುತ್ತನ್ನು ಎಳೆದುಕೊಂಡವು. ಅರ್ಜುನಾ, ಕಾಪಾಡಿಕೊಳ್ಳು” ಎಂದನು. ಪಾರ್ಥನು ಸುರಿಯುತ್ತಿರುವ ಮಳೆಗೆ ಮೊದಲು ಬಾಣಗಳ ಪಂಜರವನ್ನು ಕಟ್ಟಿದನು. ನಂತರ ಅಮೋಘವಾದ ಮಳೆಯನ್ನು ಸುರಿಸುವ ಮೋಡಗಳ ಸಮೂಹದ ಮೇಲೆ ವಾಯುವ್ಯಾಸ್ತ್ರವನ್ನು ವೇಗದಿಂದ ಪ್ರಯೋಗಿಸಿದನು.
ಪದಾರ್ಥ (ಕ.ಗ.ಪ)
ಕಲಹ-ಕಾಳೆಗ, ಅಣಲು-ಒಳಬಾಯಿ, ಮಾಣಿಸು-ತಡೆ, ನಿಸ್ಖಲಿತ-ವ್ಯರ್ಥವಾಗದ
ಮೂಲ ...{Loading}...
ಕಲಹವಿಂದ್ರನ ಕೂಡೆ ಕಲ್ಪದ
ಮಳೆಗಳಿವು ಮಾಣಿಸಿದವೂಟವ
ನೆಳೆದವಣಲಿನ ತುತ್ತನರ್ಜುನ ಕಾಯ್ದುಕೊಳ್ಳೆನಲು
ಮಳೆಗೆ ಶರಪಂಜರವ ವಿರಚಿಸಿ
ಬಳಿಕ ವಾಯವ್ಯಾಸ್ತ್ರದಲಿ ನಿ
ಸ್ಖಲಿತಮೇಘವ್ರಜವನೆಚ್ಚನು ಪಾರ್ಥ ವಹಿಲದಲಿ ॥35॥
೦೩೬ ಏನ ಹೇಳುವೆನರಸ ...{Loading}...
ಏನ ಹೇಳುವೆನರಸ ಪಾರ್ಥನ
ನೂನ ಶಕ್ತಿಯನುರುಬಿದನು ಪವ
ಮಾನ ಶರದಲಿ ಪುಷ್ಕಳಾವರ್ತಾದಿ ಘನಘಟೆಯ
ಭಾನು ತಿಮಿರಂಗಳಿಗೆ ಮೇಘ ಮ
ಹಾನಿಲಂಗಳಿಗಾವುದಂತರ
ಸೋನೆ ತೆಗೆದುದು ಹೊಗೆದುದಾ ಖಾಂಡವ ಮಹೋದ್ಯಾನ ॥36॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅರ್ಜುನನ ಕೊರತೆಯಿಲ್ಲದ ಶಕ್ತಿಯನ್ನು ಎಷ್ಟೆಂದು ಹೇಳುವುದು ? ಪುಷ್ಕಳಾವರ್ತ ಮೊದಲಾದ ಪ್ರಳಯದ ಮೋಡಗಳ ಗುಂಪನ್ನು ಪವಮಾನಾಸ್ತ್ರದಿಂದ ತಡೆದನು. ಸೂರ್ಯ ಕತ್ತಲೆಗಳಿಗೂ ಮೋಡ ಮಹಾನಿಲಗಳಿಗೂ ಯಾವುದು ಅಂತರ ? ಮಳೆನಿಂತು ಹೋಯಿತು. ಆ ಖಾಂಡವ ಮಹೋದ್ಯಾನ ಮತ್ತೆ ಹೊಗೆಯಾಡತೊಡಗಿತು.
ಪದಾರ್ಥ (ಕ.ಗ.ಪ)
ಅನೂನ-ಕೊರತೆಯಿಲ್ಲದ, ತಿಮಿರ-ಕತ್ತಲೆ, ಸೋನೆ-ಮಳೆ
ಮೂಲ ...{Loading}...
ಏನ ಹೇಳುವೆನರಸ ಪಾರ್ಥನ
ನೂನ ಶಕ್ತಿಯನುರುಬಿದನು ಪವ
ಮಾನ ಶರದಲಿ ಪುಷ್ಕಳಾವರ್ತಾದಿ ಘನಘಟೆಯ
ಭಾನು ತಿಮಿರಂಗಳಿಗೆ ಮೇಘ ಮ
ಹಾನಿಲಂಗಳಿಗಾವುದಂತರ
ಸೋನೆ ತೆಗೆದುದು ಹೊಗೆದುದಾ ಖಾಂಡವ ಮಹೋದ್ಯಾನ ॥36॥
೦೩೭ ಹಾರಲೂದಿತು ಮೇಘವನು ...{Loading}...
ಹಾರಲೂದಿತು ಮೇಘವನು ಕಿಡಿ
ತೂರಲುಬ್ಬರಿಸಿದುದು ವಹ್ನಿಯ
ನೇರಿಸಿತು ಖಾಂಡವದೊಳಗೆ ಬಿರುಗಾಳಿ ಸುಳಿಸುಳಿದು
ಮೋರೆಯೊಣಗಿದುದಮರರಿಗೆ ಮೈ
ಮಾರಿಗಳ ಸುಡು ಮೂಲೆಯವದಿರು
ಮೀರಿದರಲಾಯೆನುತ ಸುರಪತಿ ತರಿಸಿದನು ಗಜವ ॥37॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಬಿರುಗಾಳಿ ತಿರುತಿರುಗೆದ್ದು ಮೋಡವನ್ನು ಹಾರಿಹೋಗುವಂತೆ ಊದಿತು. ಕಿಡಿ ತೂರುವಂತೆ ಉಬ್ಬರಿಸಿತು. ಖಾಂಡವವನದೊಳಗೆ ಅಲ್ಲಲ್ಲೇ ಸುಳಿದು ಬೆಂಕಿಯನ್ನು ಪುಟಗೊಳಿಸಿ ಹೊತ್ತಿಸಿ ಏರಿಸಿತು. ದೇವತೆಗಳಿಗೆ ಮುಖ ಒಣಗಿತು. “ಮೈ ಮರೆತವರನ್ನು ಸುಡು. ಕೆಲಸಕ್ಕೆ ಬಾರದವರು ಮೀರಿದರಲ್ಲಾ !” ಎಂದು ಚಿಂತಿಸಿ ದೇವೇಂದ್ರನು ಆನೆಯನ್ನು ತರಿಸಿದನು.
ಪದಾರ್ಥ (ಕ.ಗ.ಪ)
ಸುಳಿ-ತಿರುಗುವುದು, ಮೋರೆ-ಮುಖ, ಮೆಯ್ಮಾರಿ-ಮೈಮರೆತವನು, ಮೂಲೆಯವದಿರು-ಕೆಲಸಕ್ಕೆ ಬಾರದವರು
ಮೂಲ ...{Loading}...
ಹಾರಲೂದಿತು ಮೇಘವನು ಕಿಡಿ
ತೂರಲುಬ್ಬರಿಸಿದುದು ವಹ್ನಿಯ
ನೇರಿಸಿತು ಖಾಂಡವದೊಳಗೆ ಬಿರುಗಾಳಿ ಸುಳಿಸುಳಿದು
ಮೋರೆಯೊಣಗಿದುದಮರರಿಗೆ ಮೈ
ಮಾರಿಗಳ ಸುಡು ಮೂಲೆಯವದಿರು
ಮೀರಿದರಲಾಯೆನುತ ಸುರಪತಿ ತರಿಸಿದನು ಗಜವ ॥37॥
೦೩೮ ನೆರೆದುದಮರರು ಸಿದ್ಧ ...{Loading}...
ನೆರೆದುದಮರರು ಸಿದ್ಧ ವಿದ್ಯಾ
ಧರ ಮಹೋರಗ ಯಕ್ಷ ರಾಕ್ಷಸ
ಗರುಡ ಕಿನ್ನರ ಸಾಧ್ಯ ಗುಹ್ಯಕ ಭೂತ ಗಂಧರ್ವ
ತರಣಿ ವಸು ರುದ್ರಾದಿಗಳು ಮೋ
ಹರಿಸಿದರು ಮುಂಗುಡಿಯಲಿಂದ್ರನ
ಸಿರಿಯ ರಭಸವನೇನನೆಂಬೆನು ಭೂಪ ಕೇಳ್ ಎಂದ ॥38॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕೂಡಲೆ ದೇವತೆಗಳೆಲ್ಲ ಸೇರಿದರು. ಸಿದ್ಧ, ವಿದ್ಯಾಧರ, ಮಹೋರಗ, ಯಕ್ಷ, ರಾಕ್ಷಸ, ಗರುಡ, ಕಿನ್ನರ, ಸಾಧ್ಯ, ಗುಹ್ಯಕ, ಭೂತ, ಗಂಧರ್ವ, ಸೂರ್ಯ, ವಸು, ರುದ್ರಾದಿಗಳು - ಎಲ್ಲರೂ ಸೈನ್ಯದ ಮುಂಭಾಗದಲ್ಲಿ ಗುಂಪುಗೂಡಿದರು. ಇಂದ್ರನ ಸಂಪತ್ತಿನ ಆರ್ಭಟವನ್ನು ಏನೆಂದು ವರ್ಣಿಸುವುದು ?
ಪದಾರ್ಥ (ಕ.ಗ.ಪ)
ಮುಂಗುಡಿ-ಸೈನ್ಯದ ಮುಂಭಾಗ, ಮೋಹರಿಸು-ಗುಂಪುಗೂಡು, ರಭಸ-ಆರ್ಭಟ
ಮೂಲ ...{Loading}...
ನೆರೆದುದಮರರು ಸಿದ್ಧ ವಿದ್ಯಾ
ಧರ ಮಹೋರಗ ಯಕ್ಷ ರಾಕ್ಷಸ
ಗರುಡ ಕಿನ್ನರ ಸಾಧ್ಯ ಗುಹ್ಯಕ ಭೂತ ಗಂಧರ್ವ
ತರಣಿ ವಸು ರುದ್ರಾದಿಗಳು ಮೋ
ಹರಿಸಿದರು ಮುಂಗುಡಿಯಲಿಂದ್ರನ
ಸಿರಿಯ ರಭಸವನೇನನೆಂಬೆನು ಭೂಪ ಕೇಳೆಂದ ॥38॥
೦೩೯ ಮಸಗಿತಮರವ್ರಾತವಭ್ರವ ...{Loading}...
ಮಸಗಿತಮರವ್ರಾತವಭ್ರವ
ಮುಸುಕಿದವು ಝಲ್ಲರಿಗಳಿಂದ್ರನ
ವಿಸಸನಕೆ ಮೆಚ್ಚಿಸುವೆ ವಸುಗಳನೆನುತ ತಮತಮಗೆ
ಮುಸುಕಿದರು ಮೃಗರಾಜ ಸಿಂಹದ
ಮುಸುಕನುಗಿವಂದದಲಿ ಬಾಣ
ಪ್ರಸರವನು ಹರಹಿದರು ಮುಂದೆ ಧನಂಜಯಾಚ್ಯುತರ ॥39॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ದೇವತೆಗಳ ಸಮೂಹ ಕೆರಳಿತು. ಛತ್ರಿಗಳು ಆಕಾಶವನ್ನು ಆವರಿಸಿದವು. “ಇಂದ್ರನ ಯುದ್ಧದಲ್ಲಿ ಪ್ರಾಣಗಳನ್ನು ಒಪ್ಪಿಸುವೆವು” ಎಂದು ತಮತಮಗೆ ವ್ಯಾಪಿಸಿದರು. ಮೃಗರಾಜಸಿಂಹದ ಮುಸುಕನ್ನು ತೆಗೆದೊಗೆಯುವ ರೀತಿಯಲ್ಲಿ ಬಾಣ ಸಮೂಹವನ್ನು ಅರ್ಜುನ ಕೃಷ್ಣರ ಮುಂದೆ ಹರಡಿದರು.
ಪದಾರ್ಥ (ಕ.ಗ.ಪ)
ಮಸಗು-ಕೆರಳು, ಝಲ್ಲರಿ-ಛತ್ರಿ, ವಿಸಸನ-ಯುದ್ಧ, ಮೆಚ್ಚಿಸು-ಒಪ್ಪಿಸು, ಮುಸುಕು-ವ್ಯಾಪಿಸು, ಪ್ರಸರ-ಸಮೂಹ
ಮೂಲ ...{Loading}...
ಮಸಗಿತಮರವ್ರಾತವಭ್ರವ
ಮುಸುಕಿದವು ಝಲ್ಲರಿಗಳಿಂದ್ರನ
ವಿಸಸನಕೆ ಮೆಚ್ಚಿಸುವೆ ವಸುಗಳನೆನುತ ತಮತಮಗೆ
ಮುಸುಕಿದರು ಮೃಗರಾಜ ಸಿಂಹದ
ಮುಸುಕನುಗಿವಂದದಲಿ ಬಾಣ
ಪ್ರಸರವನು ಹರಹಿದರು ಮುಂದೆ ಧನಂಜಯಾಚ್ಯುತರ ॥39॥
೦೪೦ ಹೂಣೆ ಮಿಗೆ ...{Loading}...
ಹೂಣೆ ಮಿಗೆ ಹೊಕ್ಕೆಚ್ಚರೋ ಬಹು
ಬಾಣವನು ದೃಢಬಾಣರೋ ಗೀ
ರ್ವಾಣರೋ ನೀವಾರು ನುಡಿಯಿರಲೈ ಮಹಾದೇವ
ಸಾಣೆಯಲಗಿಗೆ ಸಾಲುವಿರಿ ತನಿ
ಶೋಣಿತವ ನೀವ್ಕೊಡದೆ ಸುರಪತಿ
ಯಾಣೆ ಹಿಮ್ಮಟ್ಟಿದರೆನುತ ಬೊಬ್ಬಿರಿದು ನರನೆಚ್ಚ ॥40॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಹಿರಿದಾಗಿ ಪ್ರತಿಜ್ಞೆ ಮಾಡಿ ಹೊಕ್ಕು ಬಹಳ ಬಾಣಗಳನ್ನು ಹೊಡೆದಿದ್ದೀರಿ ! ದೃಢ ಬಾಣರೋ ಅಥವಾ ದೇವತೆಗಳೋ ನೀವು ಯಾರು ? ಹೇಳಿರಯ್ಯಾ, ಮಹಾದೇವಾ ! ನಮ್ಮ ತೀಕ್ಷ್ಣವಾದ ಬಾಣಗಳಿಗೆ ನೀವು ಸಾಕಾಗುವಿರಿ. ನಮ್ಮ ಬಾಣಕ್ಕೆ ನಿಮ್ಮ ಸವಿಯಾದ ರಕ್ತವನ್ನು ಕೊಡದೆ ಹಿಂದೆ ಸರಿದರೆ, ಸುರಪತಿಯ ಆಣೆ” ಎಂದು ಆರ್ಭಟಿಸಿ ಅರ್ಜುನನು ಅವರ ಮೇಲೆ ಬಾಣಪ್ರಯೋಗ ಮಾಡಿದನು.
ಪದಾರ್ಥ (ಕ.ಗ.ಪ)
ಹೂಣು-ಪ್ರತಿಜ್ಞೆಮಾಡು, ಗೀರ್ವಾಣರು-ದೇವತೆಗಳು, ಸಾಣೆ-ತೀಕ್ಷ್ಣ, ಅಲಗು-ಅಂಚು, ಸಾಲು-ಸಾಕಾಗು, ಶೋಣಿತ-ರಕ್ತ
ಮೂಲ ...{Loading}...
ಹೂಣೆ ಮಿಗೆ ಹೊಕ್ಕೆಚ್ಚರೋ ಬಹು
ಬಾಣವನು ದೃಢಬಾಣರೋ ಗೀ
ರ್ವಾಣರೋ ನೀವಾರು ನುಡಿಯಿರಲೈ ಮಹಾದೇವ
ಸಾಣೆಯಲಗಿಗೆ ಸಾಲುವಿರಿ ತನಿ
ಶೋಣಿತವ ನೀವ್ಕೊಡದೆ ಸುರಪತಿ
ಯಾಣೆ ಹಿಮ್ಮಟ್ಟಿದರೆನುತ ಬೊಬ್ಬಿರಿದು ನರನೆಚ್ಚ ॥40॥
೦೪೧ ತುರುಗಿ ಕೂರಮ್ಬುಗಳು ...{Loading}...
ತುರುಗಿ ಕೂರಂಬುಗಳು ಮೈಯಲಿ
ಮುರಿದವರ್ಜುನನೆಸುಗೆಯಲಿ ಕೈ
ಮರೆದುದಮರ ನಿಕಾಯ ಕೆದರಿತು ದೊರೆಯ ಮನ್ನಿಸದೆ
ಮುರಿದುದೀ ಕೃಷ್ಣಾರ್ಜುನರ ಬೊ
ಬ್ಬಿರಿತಕವರೆದೆಯೊಡೆಯಲಿಂದ್ರನ
ಮರೆಯ ಹೊಕ್ಕುದು ದೇವಸಂತತಿ ಭೂಪ ಕೇಳ್ ಎಂದ ॥41॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಹರಿತವಾದ ಬಾಣಗಳು ಬಂದು ಮೈಯಲ್ಲಿ ತುಂಬಿ ತುಂಡಾದವು. ಅರ್ಜುನನ ಬಾಣಪ್ರಯೋಗದಲ್ಲಿ ದೇವತೆಗಳ ಸಮೂಹ ಬೆರಗಾಯಿತು. ದೊರೆಯಾದ ಇಂದ್ರನನ್ನು ಗೌರವಿಸದೆ ಚೆಲ್ಲಾಪಿಲ್ಲಿಯಾಯಿತು. ಕೃಷ್ಣಾರ್ಜುನರ ಆರ್ಭಟಕ್ಕೆ ಅವರ ಎದೆ ಒಡೆಯಲು ದೇವಸಂತತಿ ಇಂದ್ರನ ಮರೆಹೊಕ್ಕಿತು.
ಪದಾರ್ಥ (ಕ.ಗ.ಪ)
ಕೂರಂಬುಗಳು-ಹರಿತವಾದ ಬಾಣಗಳು, ತುರುಗಿ-ತುಂಬಿ, ಮುರಿ-ತುಂಡಾಗು, ಎಸುಗೆ-ಬಾಣಪ್ರಯೋಗ, ಕೈಮರೆ-ಬೆರಗಾಗು, ಮನ್ನಿಸು-ಗೌರವಿಸು, ಬೊಬ್ಬಿರಿತ-ಆರ್ಭಟ, ಕೆದರು-ಚೆಲ್ಲಾಪಿಲ್ಲಿಯಾಗು
ಮೂಲ ...{Loading}...
ತುರುಗಿ ಕೂರಂಬುಗಳು ಮೈಯಲಿ
ಮುರಿದವರ್ಜುನನೆಸುಗೆಯಲಿ ಕೈ
ಮರೆದುದಮರ ನಿಕಾಯ ಕೆದರಿತು ದೊರೆಯ ಮನ್ನಿಸದೆ
ಮುರಿದುದೀ ಕೃಷ್ಣಾರ್ಜುನರ ಬೊ
ಬ್ಬಿರಿತಕವರೆದೆಯೊಡೆಯಲಿಂದ್ರನ
ಮರೆಯ ಹೊಕ್ಕುದು ದೇವಸಂತತಿ ಭೂಪ ಕೇಳೆಂದ ॥41॥
೦೪೨ ನರರು ರಚಿಸಿದ ...{Loading}...
ನರರು ರಚಿಸಿದ ಹವ್ಯಕವ್ಯೋ
ತ್ತರ ಹವಿರ್ಭಾಗವನು ತಿಂದು
ಬ್ಬರಿಸಿ ದೇವಸ್ತ್ರೀ ಕದಂಬದ ಖೇಳ ಮೇಳದಲಿ
ಇರವು ನಿಮಗೀ ರೌದ್ರಬಾಣ
ಸ್ಫುರಿತಕರ್ಕಶ ವಿಸ್ಪುಲಿಂಗೋ
ತ್ಕರದ ಝಳ ನಿಮಗೇಕೆಯೆಂದನು ಪಾರ್ಥ ನಸುನಗುತ ॥42॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಮಾನವರು ಮಾಡಿದ ಹವ್ಯಕವ್ಯಗಳ ಉತ್ತಮ ಹವಿಸ್ಸಿನ ಭಾಗವನ್ನು ತಿಂದು ತಿಂದು ಕೊಬ್ಬಿ ದೇವಸ್ತ್ರೀ ಸಮೂಹದೊಡನೆ ಆಟ, ವಿನೋದ ಗೋಷ್ಠಿಗಳಲ್ಲಿ ಅಸ್ತಿತ್ವ ನಿಮಗೆ. ಈ ರೌದ್ರ ಬಾಣಗಳ ಘರ್ಷಣೆಯಿಂದ ಚಿಮ್ಮಿ ಬಂದ ಕರ್ಕಶವಾದ ಬೆಂಕಿಯ ಕಿಡಿಗಳ ಉಷ್ಣತೆ ನಿಮಗೇಕೆ ? ಎಂದು ನಸುನಗುತ್ತ ದೇವತೆಗಳನ್ನು ಮೂದಲಿಸಿದನು.
ಪದಾರ್ಥ (ಕ.ಗ.ಪ)
ಖೇಳ-ಆಟ, ಮೇಳ-ಗೋಷ್ಠಿ, ಇರವು-ಅಸ್ತಿತ್ವ, ವಿಸ್ಫುಲಿಂಗ-ಬೆಂಕಿಯ ಕಿಡಿ, ಝಳ-ಉಷ್ಣತೆ, ಹವ್ಯಕವ್ಯ-ದೇವತೆಗಳಿಗೆ ಹಾಗೂ ಪಿತೃಗಳಿಗೆ ಅರ್ಪಿಸುವ ಪದಾರ್ಥಗಳು
ಮೂಲ ...{Loading}...
ನರರು ರಚಿಸಿದ ಹವ್ಯಕವ್ಯೋ
ತ್ತರ ಹವಿರ್ಭಾಗವನು ತಿಂದು
ಬ್ಬರಿಸಿ ದೇವಸ್ತ್ರೀ ಕದಂಬದ ಖೇಳ ಮೇಳದಲಿ
ಇರವು ನಿಮಗೀ ರೌದ್ರಬಾಣ
ಸ್ಫುರಿತಕರ್ಕಶ ವಿಸ್ಪುಲಿಂಗೋ
ತ್ಕರದ ಝಳ ನಿಮಗೇಕೆಯೆಂದನು ಪಾರ್ಥ ನಸುನಗುತ ॥42॥
೦೪೩ ಮುರಿದ ನಿರ್ಜರ ...{Loading}...
ಮುರಿದ ನಿರ್ಜರ ಸೇನೆಗಭಯದ
ಕರವ ನೆಗಹಿ ಕರೀಂದ್ರನನು ಶಿರ
ಬಿರಿಯಲಂಕುಶ ಮೊನೆಯೊಳೊತ್ತಿ ಮಹೋಗ್ರ ಕೋಪದಲಿ
ನರ ಮುರಾಂತಕರಿದಿರಿನಲಿ ಮದ
ಕರಿಯ ಬಿಟ್ಟನು ಶಕ್ರನಾತನ
ಬಿರುದ ಸಂಭಾವಿಸಿದರಭ್ರದ ಸೂತ ಮಾಗಧರು ॥43॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ತಿರುಗಿ ಹಿಂದಕ್ಕೆ ಸರಿದ ದೇವ ಸೈನ್ಯಕ್ಕೆ ದೇವೇಂದ್ರನು ಅಭಯ ಹಸ್ತವನೆತ್ತಿ ಧೈರ್ಯಕೊಟ್ಟನು. ಕರೀಂದ್ರನ ತಲೆಯನ್ನು ಒಡೆಯುವಂತೆ ಅಂಕುಶದ ತುದಿಯಿಂದ ಒತ್ತಿ ಅಧಿಕವಾದ ಕೋಪದಿಂದ ಅರ್ಜುನ, ಕೃಷ್ಣರ ಎದುರಿನಲ್ಲಿ ಮದಿಸಿದ ಆನೆಯನ್ನು ಇಂದ್ರನು ಬಿಟ್ಟನು. ಆತನ ಬಿರುದನ್ನು ಆಕಾಶದಲ್ಲಿನ ಸೂತ ಮಾಗಧರು ಹೊಗಳಿದರು.
ಪದಾರ್ಥ (ಕ.ಗ.ಪ)
ನಿರ್ಜರ-ದೇವತೆ, ಮದಕರಿ-ಮದಿಸಿದ ಆನೆ, ಶಕ್ರ-ಇಂದ್ರ, ಅಭ್ರ-ಆಕಾಶ, ಸಂಭಾವಿಸು-ಹೊಗಳು
ಮೂಲ ...{Loading}...
ಮುರಿದ ನಿರ್ಜರ ಸೇನೆಗಭಯದ
ಕರವ ನೆಗಹಿ ಕರೀಂದ್ರನನು ಶಿರ
ಬಿರಿಯಲಂಕುಶ ಮೊನೆಯೊಳೊತ್ತಿ ಮಹೋಗ್ರ ಕೋಪದಲಿ
ನರ ಮುರಾಂತಕರಿದಿರಿನಲಿ ಮದ
ಕರಿಯ ಬಿಟ್ಟನು ಶಕ್ರನಾತನ
ಬಿರುದ ಸಂಭಾವಿಸಿದರಭ್ರದ ಸೂತ ಮಾಗಧರು ॥43॥
೦೪೪ ನಮುಚಿಮಸ್ತಕ ಶೂಲ ...{Loading}...
ನಮುಚಿಮಸ್ತಕ ಶೂಲ ಬಲ ಸಂ
ತಮಸಭಾಸ್ಕರ ಜಂಭ ಭುಜ ವಿ
ಕ್ರಮ ಮಹಾಂಬುಧಿ ಕುಂಭಸಂಭವ ವೃತ್ರ ಗಿರಿವಜ್ರ
ಕಮಲಭವ ಹರ ವಿಷ್ಣು ಹೊರೆಗಾ
ದಮಿತ ಸುರಗಣ ಮೌಳಿಮಣಿ ಸಂ
ಕ್ರಮಣ ಚತುರ ಪದಾಬ್ಜನೆಂದುದು ವಂದಿ ಸಂದೋಹ ॥44॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ನಮುಚಿಯ ತಲೆಗೆ ಶೂಲ, ಸೈನ್ಯವೆಂಬ ಗಾಡಾಂಧಕಾರಕ್ಕೆ ಸೂರ್ಯ, ಜಂಭನ ಬಾಹು ಪರಾಕ್ರಮದ ಮಹಾಸಾಗರಕ್ಕೆ, ಕುಂಭಸಂಭವನಾದ ಅಗಸ್ತ್ಯನಂತೆ, ವೃತ್ರಾಸುರನೆಂಬ ಗಿರಿಗೆ ವಜ್ರಾಯುಧ, ಬ್ರಹ್ಮ, ಹರ, ವಿಷ್ಣು, ಇವರುಗಳ ಹೊರತಾದ ಅಮಿತ ದೇವ ಸಮೂಹದ ಮೌಳಿಮಣಿ, ಸಂಕ್ರಮಣ ಚತುರ ಪದಾಬ್ಜ” ಎಂದು ಸ್ತುತಿ ಪಾಠಕರ ಗುಂಪು ಇಂದ್ರನನ್ನು ಬಿರುದುಗಳಿಂದ ಹೊಗಳಿತು.
ಪದಾರ್ಥ (ಕ.ಗ.ಪ)
ಮಸ್ತಕ-ತಲೆ, ಸಂತಮಸ-ಗಾಢಾಂಧಕಾರ, ಭಾಸ್ಕರ-ಸೂರ್ಯ,
ಟಿಪ್ಪನೀ (ಕ.ಗ.ಪ)
ನಮುಚಿ :
ದೇವತೆಗಳೇ ಪಾಪ ಮಾಡಿದರೆ ಆ ಪಾಪವು ಅವರ ಬೆನ್ನಟ್ಟುತ್ತದೆ ಎಂಬುದಕ್ಕೆ ಒಂದು ಬಲಿಷ್ಠ ನಿದರ್ಶನ ನಮುಚಿಯ ಕಥೆ. ಮಹಾಭಾರತದ ವನಪರ್ವ, ಶಲ್ಯಪರ್ವಗಳಲ್ಲಿ ನಮುಚಿಯ ಕಥೆ ಪ್ರಸ್ಥಾವತವಾಗಿದೆ.
ನಮುಚಿ ಒಬ್ಬ ದಾವನ ಪ್ರಮುಖ. ಕಶ್ಯಪ ಮತ್ತು ದನು ದಂಪತಿಗಳ ಮಗ. ಮಯನ ಸೋದರ. ದೇವತೆಗಳಿಗೂ ರಾಕ್ಷಸರಿಗೂ ವೈರ ಇದ್ದದ್ದೇ ಅಲ್ಲವೆ? ದೇವೇಂದ್ರನ ಭಯದಿಂದ ನಮುಚಿ ಓಡಿಹೋಗಿ ಸೂರ್ಯನ ಕಿರಣಗಳಲ್ಲಿ ಅಡಗಿಕೊಂಡ. ಆಗ ದೇವೇಂದ್ರ ಉಪಾಯವಾಗಿ ನಮುಚಿಯೊಂದಿಗೆ ಸ್ನೇಹವನ್ನು ಬೆಳೆಸಿ ‘‘ನಿನ್ನೊಂದಿಗೆ ನನಗೆ ವೈರತ್ವ ಖಂಡಿತವಾಗಿ ಇಲ್ಲ’’ ಎಂದು ಹೇಳಿದ. ‘‘ಹೆದರಬೇಡ ಒದ್ದೆಯಾದ ವಸ್ತುವನಿಂದಾಗಲಿ, ಒಣಗಿದ ವಸ್ತುವನಿಂದಾಗಲಿ ನಿನ್ನನ್ನು ಕೊಲ್ಲವುದಿಲ್ಲ. ಹಗಲಿನಲ್ಲಿ ನಿನಗೆ ಸಾವಿಲ್ಲ. ರಾತ್ರಿಯಲ್ಲೂ ಸಾವಿಲ್ಲ’’ ಎಂದೆಲ್ಲ ಹೇಳಿ ನಮುಚಿಯ ವಿಶ್ವಾಸವನ್ನು ಗಳಿಸಿಕೊಂಡ ಒಳ್ಳೆಯ ಸಮಯಕ್ಕಾಗಿ ಕಾದಿದ್ದು ನೊರೆಗಳನ್ನೇ ಅಸ್ತ್ರವಾಗಿ ಬಳಸಿ ನಮುಚಿಯ ತಲೆಯನ್ನು ಹಾರಿಸಿದ. ಹಗಲೂ ಅಲ್ಲದೆ ರಾತ್ರಿಯೂ ಅಲ್ಲದ ಸಂಧ್ಯಾಸಮಯದಲ್ಲಿ ನಮುಚಿಯ ಶಿರಚ್ಛೇದನವಾಯಿತು.
ಇಂದ್ರ ಅಲ್ಲಿಗೆ ಮುಗಿಯಿತು ಎಂದುಕೊಂಡ. ಆದರೆ ನಮುಚಿಯ ತಲೆ ಇಂದ್ರನ ಹಿಂದೆಯೇ ಬಂದಿತು. ‘‘ಮಿತ್ರಘಾತೀ, ಪಾಪಾತ್ಮಾ, ನೀನು ಎಲ್ಲಿ ಹೋದರೂ ಬಿಡೆ’’ ಎಂದಿತು. ಬ್ರಹ್ಮಹತ್ಯಾ ದೋಷದಿಂದ ಸಂಕಟಪಟ್ಟ ಇಂದ್ರನಿಗೆ ಬ್ರಹ್ಮನು ‘‘ನೀನು ಅರುಣಾ ನದಿ ಕ್ಷೇತ್ರಕ್ಕೆ ಹೋಗು. ಸರಸ್ವತೀ ನದಿಯ ಸಂಗಮದಿಂದ ಪವಿತ್ರವಾಗಿರುವ ಆ ನದಿಯ ತೀರದಲ್ಲಿ ಯಜ್ಞಮಾಡಿ ಅರುಣೆಯ ನೀರಿನಲ್ಲಿ ಮುಳುಗಿದರೆ ಬ್ರಹ್ಮಹತ್ಯಾ ದೋಷದಿಂದ ಬಿಡುಗಡೆ’’ ಎಂದು ಹೇಳಿದರು.
ದೇವೇಂದ್ರನು ವಿಧಿಬದ್ಧವಾಗಿ ಯಾಗ ಕಾರ್ಯವನ್ನು ಮುಗಿಸುವಾಗಲೂ ನಮುಚಿಯ ತಲೆ ಅವನ ಬೆನ್ನ ಹಿಂದೆಯೇ ಇರುತ್ತಿತ್ತು. ಕೊನೆಗೆ ಋಷಿನಿರ್ಮಿತ ಪುಣ್ಯಜಲವುಳ್ಳ ನದಿಯಲ್ಲಿ ದೇವೇಂದ್ರ ಮುಳುಗಿದಾಗ ನಮುಚಿಯ ತಲೆಯೂ ಅವನ ಹಿಂದೆಯೇ ಬಂದು ಮುಳುಗಿ ಮುಕ್ತಿಹೊಂದಿತು. ಇಂದ್ರನಿಗೂ ಬ್ರಹ್ಮಹತ್ಯಾ ದೋಷದಿಂದ ಮುಕ್ತಿ ಸಿಕ್ಕಂತಾಯಿತು.
ವಚನ ಸಾಹಿತ್ಯದಲ್ಲಿ ‘‘ಗುರುವಿಂಗೂ ಆಚರಣೆ, ಲಿಂಗಕ್ಕೂ ಆಚರಣೆ ಜಂಗಮಕ್ಕೂ ಆಚರಣೆ’’ ಎಂಬ ಮಾತಿದೆ. ಹಾಗೆ ಯಾರೇ ತಪ್ಪು ಮಾಡಿದರೂ ನಿಯತಿ ಅವರನ್ನು ಶಿಕ್ಷಿಸದೆ ಬಿಡುವುದಿಲ್ಲ ಎನ್ನುವುದಕ್ಕೆ ಇಂದ್ರ-ನಮುಚಿಗಳ ಕಥೆ ಒಂದು ಸುಂದರ ನಿದರ್ಶನ. ತಲೆಯು ತಪ್ಪಿತಸ್ಥನನ್ನು ಅಟ್ಟಿಸಿಕೊಂಡು ಬರುವ ದೃಶ್ಯ ಒಂದು ಮಹೋನ್ನತ ಪ್ರತಿಮೆಯಾಗಿ ನಿಲ್ಲುತ್ತದೆ.
ಮೂಲ ...{Loading}...
ನಮುಚಿಮಸ್ತಕ ಶೂಲ ಬಲ ಸಂ
ತಮಸಭಾಸ್ಕರ ಜಂಭ ಭುಜ ವಿ
ಕ್ರಮ ಮಹಾಂಬುಧಿ ಕುಂಭಸಂಭವ ವೃತ್ರ ಗಿರಿವಜ್ರ
ಕಮಲಭವ ಹರ ವಿಷ್ಣು ಹೊರೆಗಾ
ದಮಿತ ಸುರಗಣ ಮೌಳಿಮಣಿ ಸಂ
ಕ್ರಮಣ ಚತುರ ಪದಾಬ್ಜನೆಂದುದು ವಂದಿ ಸಂದೋಹ ॥44॥
೦೪೫ ನೂಕಿದನು ಸುರಪತಿ ...{Loading}...
ನೂಕಿದನು ಸುರಪತಿ ಗಜವನ
ವ್ಯಾಕುಲರಲೇ ಕೃಷ್ಣ ಪಾರ್ಥರಿ
ದೇಕೆ ನಿಮಗೀ ವಾಸಿ ವಾಸವ ಲೇಸು ಮರುಳುವದು
ನಾಕ ನಿಳಯರು ತಂದ ಗೆಲವೇ
ಸಾಕು ಸೋಲುವರಲ್ಲ ನಿಮಗೆ ವಿ
ವೇಕವುಳ್ಳರೆ ತಿರುಗಿಯೆಂದನು ಹರಿಗೆ ಕಲಿಪಾರ್ಥ ॥45॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಹೀಗೆ ಸ್ತುತಿ ಪಾಠಕರು ಹೊಗಳುತ್ತಿರಲು, ದೇವೇಂದ್ರನು ಗಜವನ್ನು ಕೃಷ್ಣಾರ್ಜುನರ ಮೇಲೆ ನೂಕಿದನು. ಕೃಷ್ಣಾರ್ಜುನರು ಸ್ವಲ್ಪವೂ ಚಿಂತೆಗೊಳಗಾಗಲಿಲ್ಲ. “ನಿಮಗೆ ಈ ಸ್ಪರ್ಧೆ ಇದೇಕೆ ? ನೀವು ಹಿಂತಿರುಗುವುದು ಒಳ್ಳೆಯದು ಇಂದ್ರದೇವ ! ಸ್ವರ್ಗ ವಾಸಿಗಳು ತಂದ ಗೆಲವೇ ಸಾಕು ! ನಾವು ನಿಮಗೆ ಸೋಲುವವರಲ್ಲ. ನಿಮಗೆ ವಿವೇಕವಿದ್ದರೆ ಹಿಂತಿರುಗಿ” ಎಂದು ಅರ್ಜುನನು ಇಂದ್ರನಿಗೆ ಹೇಳಿದನು.
ಪದಾರ್ಥ (ಕ.ಗ.ಪ)
ಅವ್ಯಾಕುಲ-ಚಿಂತೆಯಿಲ್ಲದಿರುವುದು, ವಾಸಿ-ಸ್ಪರ್ಧೆ, ವಾಸವ-ಇಂದ್ರ, ನಾಕನಿಳಯರು-ಸ್ವರ್ಗವಾಸಿಗಳು, ಹರಿ-ಇಂದ್ರ,
ಮೂಲ ...{Loading}...
ನೂಕಿದನು ಸುರಪತಿ ಗಜವನ
ವ್ಯಾಕುಲರಲೇ ಕೃಷ್ಣ ಪಾರ್ಥರಿ
ದೇಕೆ ನಿಮಗೀ ವಾಸಿ ವಾಸವ ಲೇಸು ಮರುಳುವದು
ನಾಕ ನಿಳಯರು ತಂದ ಗೆಲವೇ
ಸಾಕು ಸೋಲುವರಲ್ಲ ನಿಮಗೆ ವಿ
ವೇಕವುಳ್ಳರೆ ತಿರುಗಿಯೆಂದನು ಹರಿಗೆ ಕಲಿಪಾರ್ಥ ॥45॥
೦೪೬ ಜನಪ ಕೇಳಾ ...{Loading}...
ಜನಪ ಕೇಳಾ ಸಮಯದೊಳು ವಾ
ಗ್ವನಿತೆಯರಸನು ಗಗನಮಾರ್ಗದೊ
ಳನಿಮಿಷಾಧಿಪನಲ್ಲಿಗೈತರೆ ಕಂಡು ಸುರನಿಕರ
ತನತನಗೆ ಭಾಳದಲಿ ನಿಜ ಕರ
ವನರುಹವ ಮುಗಿಯಿಸಿದರಿಂದ್ರಂ
ಗನುವರವ ಮಾಣಿಸಲು ಬೇಕೆಂದಿಳಿದನಬ್ಜಭವ ॥46॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಆ ಹೊತ್ತಿಗೆ ವಾಣೀಪತಿ ಬ್ರಹ್ಮನು ಆಕಾಶ ಮಾರ್ಗದಲ್ಲಿ ದೇವತೆಗಳ ಅಧಿಪತಿ ಇಂದ್ರ ಬಳಿಗೆ ಬಂದರೆ ಅದನ್ನು ಕಂಡ ದೇವಸಮೂಹವು ತಮತಮಗೆ ಹಣೆಯ ಮೇಲೆ ತಮ್ಮ ಕರಕಮಲಗಳನ್ನೆತ್ತಿ ಮುಗಿದರು. ಈ ಯುದ್ಧವನ್ನು ಇಂದ್ರನಿಂದ ತಪ್ಪಿಸಬೇಕೆಂದು ಕಮಲಭವನು ಇಳಿದು ಬಂದನು.
ಪದಾರ್ಥ (ಕ.ಗ.ಪ)
ವಾಗ್ವನಿತೆ-ವಾಣಿ, ಅನಿಮಿಷರು-ದೇವತೆಗಳು (ರೆಪ್ಪೆ ಹೊಡೆಯದವರು), ಭಾಳ-ಹಣೆ, ವನರುಹ-ಕಮಲ, (ನೀರಿನಲ್ಲಿ ಹುಟ್ಟಿದುದು), ಅಬ್ಜಭವ-ಬ್ರಹ್ಮ (ನೀರಿನಲ್ಲಿ ಹುಟ್ಟಿದ್ದು ಅಬ್ಜ-ಕಮಲ, ಕಮಲದಲ್ಲಿ ಹುಟ್ಟಿದವನು ಬ್ರಹ್ಮ)
ಮೂಲ ...{Loading}...
ಜನಪ ಕೇಳಾ ಸಮಯದೊಳು ವಾ
ಗ್ವನಿತೆಯರಸನು ಗಗನಮಾರ್ಗದೊ
ಳನಿಮಿಷಾಧಿಪನಲ್ಲಿಗೈತರೆ ಕಂಡು ಸುರನಿಕರ
ತನತನಗೆ ಭಾಳದಲಿ ನಿಜ ಕರ
ವನರುಹವ ಮುಗಿಯಿಸಿದರಿಂದ್ರಂ
ಗನುವರವ ಮಾಣಿಸಲು ಬೇಕೆಂದಿಳಿದನಬ್ಜಭವ ॥46॥
೦೪೭ ಮರುಳನೈ ನೀನಿವರನಾರೆಂ ...{Loading}...
ಮರುಳನೈ ನೀನಿವರನಾರೆಂ
ದರಿಯಲಾ ನಾರಾಯಣನು ಮುರ
ಹರನು ನರನಲ್ಲಾ ಧನಂಜಯನಿವರು ಕಿರುಕುಳರೆ
ಮರುಳು ನೀನೆಂದಿಂದ್ರನಾನೆಯ
ತಿರುಹಿದನು ಪರಮೇಷ್ಠಿಯಿತ್ತಲು
ಧರಣಿಪತಿ ಕೇಳನಲ ಕೇಳಿಯನಾ ವನಾಂತದಲಿ ॥47॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಮರುಳನಯ್ಯಾ ನೀನು. ಇವರನ್ನು ಯಾರೆಂದು ತಿಳಿಯಲಿಲ್ಲವಲ್ಲಾ ! ಕೃಷ್ಣನೇ ನಾರಾಯಣನು. ಅರ್ಜುನನು ನರನಲ್ಲವೇ ? ಇವರು ಸಾಮಾನ್ಯ ಮನುಷ್ಯರೇ ? ಮರುಳನಿದ್ದೀಯೆ ನೀನು” ಎಂದು ತಿಳಿಯ ಹೇಳಿ ಇಂದ್ರನ ಆನೆಯನ್ನು ಬ್ರಹ್ಮದೇವನು ಹಿಂತಿರುಗಿಸಿದನು. ಇತ್ತಕಡೆ ಆ ವನಪ್ರದೇಶದಲ್ಲಿ ನಡೆದ ಅಗ್ನಿಯ ಕ್ರೀಡೆಗೆ ಅಡ್ಡಿಯಿಲ್ಲವಾಯ್ತು.
ಪದಾರ್ಥ (ಕ.ಗ.ಪ)
ಕಿರುಕುಳ-ಸಾಮಾನ್ಯ ಮನುಷ್ಯ, ಪರಮೇಷ್ಠಿ-ಶ್ರೇಷ್ಠ ದೈವ, ಬ್ರಹ್ಮ, ಅನಲಕೇಳಿ-ಅಗ್ನಿಯ ಕ್ರೀಡೆ
ಮೂಲ ...{Loading}...
ಮರುಳನೈ ನೀನಿವರನಾರೆಂ
ದರಿಯಲಾ ನಾರಾಯಣನು ಮುರ
ಹರನು ನರನಲ್ಲಾ ಧನಂಜಯನಿವರು ಕಿರುಕುಳರೆ
ಮರುಳು ನೀನೆಂದಿಂದ್ರನಾನೆಯ
ತಿರುಹಿದನು ಪರಮೇಷ್ಠಿಯಿತ್ತಲು
ಧರಣಿಪತಿ ಕೇಳನಲ ಕೇಳಿಯನಾ ವನಾಂತದಲಿ ॥47॥
೦೪೮ ಜಮ್ಬು ಚೂತ ...{Loading}...
ಜಂಬು ಚೂತ ಪಲಾಶ ವಟ ದಾ
ಳಿಂಬ ಬಿಲ್ವ ತಮಾಲ ಚಂಪಕ
ನಿಂಬ ಬಕುಳ ಕಪಿತ್ಥ ಕುಟಜವಶೋಕ ಪುನ್ನಾಗ
ತುಂಬುರರಳಿ ಲವಂಗ ಪೂಗ ಕ
ದಂಬ ಗುಗ್ಗುಲ ಸಾಲ ತಿಲಕೌ
ದುಂಬರಾದಿ ದ್ರುಮ ಕುಲವನಾಲಿಂಗಿಸಿತು ವಹ್ನಿ ॥48॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಜಂಬು, ಮಾವು, ಮುತ್ತುಗ, ಆಲ, ದಾಳಿಂಬ, ಬಿಲ್ವ, ಹೊಂಗೆ, ಚಂಪಕ, ನಿಂಬು, ನಾಗಕೇಸರ, ಬೇಲ, ಬೆಟ್ಟಮಲ್ಲಿಗೆ, ಅಶೋಕ, ಸುರಹೊನ್ನೆ, ಕಾಡುಮಾವು, ಅರಳಿ, ಲವಂಗ, ಅಡಕೆ, ಕದಂಬ, ಗುಗ್ಗುಲ, ಸಾಲ, ತಿಲಕ, ಅತ್ತಿ ಇವೇ ಮೊದಲಾದ ವೃಕ್ಷಗಳ ಸಮೂಹವನ್ನು ಬೆಂಕಿ ಆಲಂಗಿಸಿತು.
ಪದಾರ್ಥ (ಕ.ಗ.ಪ)
ಚೂತ-ಮಾವು, ಪಲಾಶ-ಮುತ್ತುಗ, ವಟ-ಆಲ, ತಮಾಲ-ಹೊಂಗೆ, ಬಕುಳ-ನಾಗಕೇಸರ, ಕಪಿತ್ಥ-ಬೇಲ, ಕುಟಜ-ಬೆಟ್ಟಮಲ್ಲಿಗೆ, ಪುನ್ನಾಗ-ಸುರಹೊನ್ನೆ, ತುಂಬುರ-ಕಾಡುಮಾವು, ಔದುಂಬರ-ಅತ್ತಿ, ಪೂಗ-ಅಡಕೆ, ಗುಗ್ಗುಳ-ಧೂಪ ದ್ರವ್ಯವನ್ನು ಕೊಡುವ ಮರ.
ಮೂಲ ...{Loading}...
ಜಂಬು ಚೂತ ಪಲಾಶ ವಟ ದಾ
ಳಿಂಬ ಬಿಲ್ವ ತಮಾಲ ಚಂಪಕ
ನಿಂಬ ಬಕುಳ ಕಪಿತ್ಥ ಕುಟಜವಶೋಕ ಪುನ್ನಾಗ
ತುಂಬುರರಳಿ ಲವಂಗ ಪೂಗ ಕ
ದಂಬ ಗುಗ್ಗುಲ ಸಾಲ ತಿಲಕೌ
ದುಂಬರಾದಿ ದ್ರುಮ ಕುಲವನಾಲಿಂಗಿಸಿತು ವಹ್ನಿ ॥48॥
೦೪೯ ಸುಳಿಸುಳಿದು ಶಶಿಕಾನ್ತಮಯದ ...{Loading}...
ಸುಳಿಸುಳಿದು ಶಶಿಕಾಂತಮಯದ
ಗ್ಗಳದ ವೇದಿಕೆಗಳಲಿ ನೀಲದ
ನೆಲೆಯ ಚೌಕಿಗೆಗಳಲಿ ಮಂಟಪದಲಿ ಲತಾವಳಿಯ
ಲಲಿತ ಸೌಧದ ಚಾರು ಚಿತ್ರಾ
ವಳಿಯ ಮೇಲ್ಕಟ್ಟುಗಳ ಭವನಂ
ಗಳಲಿ ಬಿಟ್ಟುದು ಕೂಡೆ ಪಾಳಯ ವಹ್ನಿಭೂಪತಿಯ ॥49॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಚಂದ್ರಕಾಂತ ಶಿಲೆಯ ಶ್ರೇಷ್ಠ ವೇದಿಕೆಗಳಲ್ಲಿಯೂ, ನೀಲರತ್ನದ ಆಶ್ರಯವಾದ ಕೈಸಾಲೆಗಳಲ್ಲಿಯೂ, ಲತಾವಳಿಯಿಂದಲಕೃತವಾದ ಮಂಟಪಗಳಲ್ಲಿಯೂ, ಸುಂದರವಾದ ಭವನಗಳಲ್ಲಿಯೂ, ಸುಂದರ ಚಿತ್ರಗಳ ಮೇಲ್ಕಟ್ಟುಗಳ ಭವನಗಳಲ್ಲಿಯೂ ಅಗ್ನಿಭೂಪತಿಯ ಪಾಳಯವು ಕೂಡಲೇ ಬೀಡು ಬಿಟ್ಟಿತು.
ಪದಾರ್ಥ (ಕ.ಗ.ಪ)
ಶಶಿಕಾಂತ-ಚಂದ್ರಕಾಂತ, ನೀಲ-ನವರತ್ನಗಳಲ್ಲಿ ಒಂದು, ಚೌಕಿಗೆ-ಕೈಸಾಲೆ, ಲಲಿತ-ಸುಂದರ, ಚಾರು-ಸುಂದರ, ವಹ್ನಿ-ಅಗ್ನಿ
ಮೂಲ ...{Loading}...
ಸುಳಿಸುಳಿದು ಶಶಿಕಾಂತಮಯದ
ಗ್ಗಳದ ವೇದಿಕೆಗಳಲಿ ನೀಲದ
ನೆಲೆಯ ಚೌಕಿಗೆಗಳಲಿ ಮಂಟಪದಲಿ ಲತಾವಳಿಯ
ಲಲಿತ ಸೌಧದ ಚಾರು ಚಿತ್ರಾ
ವಳಿಯ ಮೇಲ್ಕಟ್ಟುಗಳ ಭವನಂ
ಗಳಲಿ ಬಿಟ್ಟುದು ಕೂಡೆ ಪಾಳಯ ವಹ್ನಿಭೂಪತಿಯ ॥49॥
೦೫೦ ಕುರುಳ ತುಮ್ಬಿಯ ...{Loading}...
ಕುರುಳ ತುಂಬಿಯ ತನಿಗೆದರಿ ಮುಖ
ಸರಸಿಜವ ಚುಂಬಿಸಿ ತಮಾಲದ
ತುರುಬ ಹಿಡಿದಧರ ಪ್ರವಾಳದ ರಸವ ನೆರೆಸವಿದು
ಉರು ಪಯೋಧರ ಬಿಲ್ವವನು ಹೊ
ಯ್ದೊರಸಿ ಕದಳಿಯ ನುಣ್ದೊಡೆಯನಿ
ಟ್ಟೊರಸಿ ರಮಿಸಿತು ವನಸಿರಿಯ ಪಿಪ್ಪಲ ದಳಾಂಗದಲಿ ॥50॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ವಹ್ನಿಜ್ವಾಲೆಯು ವನಲಕ್ಷ್ಮಿಯ ತುಂಬಿಯಂತಿರುವ ಕುರುಳನ್ನು ಕೆದರಿತು, ಮುಖ ಕಮಲವನ್ನು ಚುಂಬಿಸಿತು, ಹೊಂಗೆಯ ತುರುಬನ್ನು ಹಿಡಿದು ಅದರ ಎಳೆಯ ಚಿಗುರಿನ ರಸವನ್ನು ಚೆನ್ನಾಗಿ ಸವಿಯಿತು, ದೊಡ್ಡದಾದ ಪಯೋಧರ ಬಿಲ್ವವನ್ನು ಹೊಡೆದು ಒರಸಿತು. ಬಾಳೆಯ ನುಣ್ದೊಡೆಯನ್ನು ಸವರಿತು. ಅವಳ ದಟ್ಟವಾದ ಅರಳಿಯ ಎಲೆಯಲ್ಲಿ ರಮಿಸಿತು.
ಪದಾರ್ಥ (ಕ.ಗ.ಪ)
ಪ್ರವಾಳ-ಎಳೆಯ ಚಿಗುರು, ಕದಳಿ-ಬಾಳೆ, ದಳ-ದಟ್ಟ, ಪಿಪ್ಪಲ-ಅರಳಿ, ವನಸಿರಿ-ವನಲಕ್ಷ್ಮಿ, ಅಂಗ-ಅವಯವ
ಪಾಠಾನ್ತರ (ಕ.ಗ.ಪ)
ಪಿಪ್ಪಲ ದಳಾಂಗಲಿ- ಪಿಪ್ಪಲ ದಳಾಂಗದಲಿ
ಆದಿ ಪರ್ವ, ಮೈ.ವಿ.ವಿ.
ಕನ್ನಡ ಭಾರತ, ಕನ್ನಡ ವಿ.ವಿ.
ಮೂಲ ...{Loading}...
ಕುರುಳ ತುಂಬಿಯ ತನಿಗೆದರಿ ಮುಖ
ಸರಸಿಜವ ಚುಂಬಿಸಿ ತಮಾಲದ
ತುರುಬ ಹಿಡಿದಧರ ಪ್ರವಾಳದ ರಸವ ನೆರೆಸವಿದು
ಉರು ಪಯೋಧರ ಬಿಲ್ವವನು ಹೊ
ಯ್ದೊರಸಿ ಕದಳಿಯ ನುಣ್ದೊಡೆಯನಿ
ಟ್ಟೊರಸಿ ರಮಿಸಿತು ವನಸಿರಿಯ ಪಿಪ್ಪಲ ದಳಾಂಗದಲಿ ॥50॥
೦೫೧ ಧರಣಿಪತಿ ಕೇಳ್ ...{Loading}...
ಧರಣಿಪತಿ ಕೇಳ್ ಶರಭಮೃಗಪತಿ
ಕರಿ ಕಳಭ ಶಾರ್ದೂಲ ಸೂಕರ
ಕರಡಿ ಕಾಸರಶಲ ಮೃಗಾವನ ಖಡ್ಗ ಗೋಮಾಯು
ಎರಳೆ ಮೊಲ ಸಾರಂಗ ವಾನರ
ನುರು ಕುರಂಗ ಪ್ರಮುಖ ಮೃಗಕುಲ
ವುರುಬಿ ಬಿದ್ದುದು ದಳ್ಳುರಿಯ ಬೆಳ್ಳಾರವಲೆಗಳಲಿ ॥51॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಶರಭ, ಸಿಂಹ, ಆನೆ, ಮರಿಯಾನೆ, ಹುಲಿ, ಹಂದಿ, ಕರಡಿ, ಕಾಡುಕೋಣ, ಮುಳ್ಳುಹಂದಿ, ಕತ್ತೆಕಿರುಬ, ಗೇಂಡಾಮೃಗ, ನರಿ, ಜಿಂಕೆ, ಮೊಲ, ಸಾರಂಗ, ವಾನರ, ಹುಲ್ಲೆ ಮೊದಲಾದ ಮುಖ್ಯವಾದ ಪ್ರಾಣಿ ಕುಲಗಳು ದೊಡ್ಡ ಉರಿಯ ವಿಸ್ತಾರವಾಗಿ ಹರಡಿರುವ ಬಲೆಗಳಲ್ಲಿ ರಭಸವಾಗಿ ಬಿದ್ದುವು.
ಪದಾರ್ಥ (ಕ.ಗ.ಪ)
ಮೃಗಪತಿ-ಸಿಂಹ, ಕಳಭ-ಮರಿಯಾನೆ, ಶಾರ್ದೂಲ-ಹುಲಿ, ಸೂಕರ-ಹಂದಿ, ಕಾಸರ-ಕಾಡುಕೋಣ, ಶಲ-ಮುಳ್ಳುಹಂದಿ, ಮೃಗಾವನ-ಕತ್ತೆಕಿರುಬ, ಖಡ್ಗ-ಗೇಂಡಾಮೃಗ, ಗೋಮಾಯು-ನರಿ, ಎರಳೆ-ಜಿಂಕೆ, ಕುರಂಗ-ಹುಲ್ಲೆ, ಉರುಬು-ರಭಸ, ಬೆಳ್ಳಾರವಲೆ-ವಿಸ್ತಾರವಾಗಿ ಹರಡಿರುವ ಬಲೆ.
ಮೂಲ ...{Loading}...
ಧರಣಿಪತಿ ಕೇಳ್ ಶರಭಮೃಗಪತಿ
ಕರಿ ಕಳಭ ಶಾರ್ದೂಲ ಸೂಕರ
ಕರಡಿ ಕಾಸರಶಲ ಮೃಗಾವನ ಖಡ್ಗ ಗೋಮಾಯು
ಎರಳೆ ಮೊಲ ಸಾರಂಗ ವಾನರ
ನುರು ಕುರಂಗ ಪ್ರಮುಖ ಮೃಗಕುಲ
ವುರುಬಿ ಬಿದ್ದುದು ದಳ್ಳುರಿಯ ಬೆಳ್ಳಾರವಲೆಗಳಲಿ ॥51॥
೦೫೨ ಶುಕ ಮರಾಳ ...{Loading}...
ಶುಕ ಮರಾಳ ಮಯೂರ ಟಿಟ್ಟಿಭ
ಪಿಕ ಚಕೋರ ಕಪೋತ ವಾಯಸ
ಬಕ ಪದಾಯುಧ ಚಕ್ರವಾಕ ಕಳಿಂಗ ಕಲವಿಂಕ
ಕುಕಿಲ ಸಾರಸ ಕಾಕರಿಪು ಚಾ
ತಕ ಭರದ್ವಾಜಾದಿ ಪಕ್ಷಿ
ಪ್ರಕರ ಬಿದ್ದುದು ಬಿಗಿದ ಕೇಸುರಿ ಕಣ್ಣಿವಲೆಗಳಲಿ ॥52॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಗಿಣಿ, ಹಂಸ, ನವಿಲು, ಬಾನಾಡಿಹಕ್ಕಿ, ಕೋಗಿಲೆ, ಚಕೋರ, ಕಪೋತ, ಕಾಗೆ, ಬಕ, ಹುಂಜ, ಚಕ್ರವಾಕ, ಕುಕ್ಕಟ, ಗುಬ್ಬಚ್ಚಿ, ಕೋಗಿಲೆ, ಕೊಕ್ಕರೆ, ಗೂಗೆ, ಚಾತಕ, ಭರದ್ವಾಜ ಮೊದಲಾದ ಪಕ್ಷಿಗಳ ಸಮೂಹ ಬಿಗಿದ ಹಗ್ಗದ ಬಲೆಯ ಕೆಂಪಾದ ಉರಿಯಲ್ಲಿ ಬಿದ್ದುವು.
ಪದಾರ್ಥ (ಕ.ಗ.ಪ)
ಶುಕ-ಗಿಣಿ, ಮಯೂರ-ನವಿಲು, ಮರಾಳ-ಹಂಸ, ಟಿಟ್ಟಿಭ-ಬಾನಾಡಿಹಕ್ಕಿ, ಪಿಕ-ಕೋಗಿಲೆ, ಕಪೋತ-ಪಾರಿವಾಳದಜಾತಿಗೆ ಸೇರಿದ ಒಂದು ಪಕ್ಷಿ, ವಾಯಸ-ಕಾಗೆ, ಪದಾಯುಧ-ಹುಂಜ (ಪಾದವನ್ನೇ ಆಯುಧವಾಗಿ ಉಳ್ಳದ್ದು), ಕಳಿಂಗ-ಕುಕ್ಕಟ, ಕಲವಿಂಕ-ಗುಬ್ಬಚ್ಚಿ, ಕುಕಿಲ-ಕೋಗಿಲೆ, ಸಾರಸ-ಕೊಕ್ಕರೆ, ಕಾಕರಿಪು-ಗೂಗೆ, ಕೇಸುರಿ-ಕೆಂಪುಉರಿ, ಕಣ್ಣಿವಲೆ-ಹಗ್ಗದ ಬಲೆ.
ಮೂಲ ...{Loading}...
ಶುಕ ಮರಾಳ ಮಯೂರ ಟಿಟ್ಟಿಭ
ಪಿಕ ಚಕೋರ ಕಪೋತ ವಾಯಸ
ಬಕ ಪದಾಯುಧ ಚಕ್ರವಾಕ ಕಳಿಂಗ ಕಲವಿಂಕ
ಕುಕಿಲ ಸಾರಸ ಕಾಕರಿಪು ಚಾ
ತಕ ಭರದ್ವಾಜಾದಿ ಪಕ್ಷಿ
ಪ್ರಕರ ಬಿದ್ದುದು ಬಿಗಿದ ಕೇಸುರಿ ಕಣ್ಣಿವಲೆಗಳಲಿ ॥52॥
೦೫೩ ಹರಡೆ ಗೀಜಗ ...{Loading}...
ಹರಡೆ ಗೀಜಗ ಮರಗೊರಲೆ ಕಾ
ಬುರುಲೆ ಲಾವುಗೆ ಗೌಜು ಪಾರಿವ
ನಿರಿಲೆ ಸಾಳುವ ಚಿಲಿಮಿಲಿಗ ಚೆಂಬೋತ ಮೀನ್ಬುಲಿಗ
ಮರಕುಟಿಕ ಕಬ್ಬಕ್ಕಿ ಕೊಟ್ಟುಗ
ವರಲೆ ಕೊಂಚೆ ಕಪಿಂಜ ಗಿಂಚಲು
ಗರಿಗ ಮೊದಲಾದಖಿಳ ಖಗಕುಲ ಬಿದ್ದುದುರಿಯೊಳಗೆ ॥53॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕೊಕ್ಕರೆ, ಗೀಜಗ, ಮರಗೊರಲೆ, ಕಾಬುರುಲೆ, ಪುರಲೆ, ಗೌಜು, ಪಾರಿವಾಳ, ನಿರಿಲೆ, ಗಿಡುಗ, ಚಿಲಿಮಿಲಿಗ, ಕೆಂಪುಕಾಗೆ, ಮೀನನ್ನು ಹಿಡಿದು ತಿನ್ನುವ ಕೊಕ್ಕರೆ ಮೊದಲಾದ ಹಕ್ಕಿಗಳು, ಮರಕುಟಿಗ, ಕರಿಬಣ್ಣದ ಒಂದು ಹಕ್ಕಿ, ತಲೆಯ ಮೇಲೆ ಜುಟ್ಟುಳ್ಳ ಪಕ್ಷಿ, ಹೆಣ್ಣು ಹಂಸ ಪಕ್ಷಿ, ಕ್ರೌಂಚಪಕ್ಷಿ, ತಿತ್ತಿರಿ, ಗಿಂಚಲು, ಗರಿಗ ಮೊದಲಾದ ಎಲ್ಲ ಪಕ್ಷಿಗಳ ಕುಲವು ಉರಿಯೊಳಗೆ ಬಿದ್ದುದು.
ಪದಾರ್ಥ (ಕ.ಗ.ಪ)
ಹರಡೆ-ಕೊಕ್ಕರೆ, ಲಾವುಗೆ-ಪುರಲೆ, ಪಾರಿವ-ಪಾರಿವಾಳ, ಸಾಳುವ-ಗಿಡುಗ, ಚೆಂಬೂತ-ಕೆಂಪು ಕಾಗೆ, ಮೀನ್ಬುಗ-ಮೀನನ್ನು ಹಿಡಿದು ತಿನ್ನುವ ಕೊಕ್ಕರೆ ಮೊದಲಾದ ಹಕ್ಕಿಗಳು, ಕಬ್ಬಕ್ಕಿ-ಕರಿಬಣ್ಣದ ಒಂದು ಹಕ್ಕಿ, ಕೊಟ್ಟುಗ-ತಲೆಯ ಮೇಲೆ ಜುಟ್ಟುಳ್ಳಪಕ್ಷಿ, ವರಲೆ-ಹೆಣ್ಣು ಹಂಸ ಪಕ್ಷಿ, ಕೊಂಚೆ-ಕ್ರೌಂಚ ಪಕ್ಷಿ, ಕಪಿಂಜ-ತಿತ್ತಿರಿ.
ಮೂಲ ...{Loading}...
ಹರಡೆ ಗೀಜಗ ಮರಗೊರಲೆ ಕಾ
ಬುರುಲೆ ಲಾವುಗೆ ಗೌಜು ಪಾರಿವ
ನಿರಿಲೆ ಸಾಳುವ ಚಿಲಿಮಿಲಿಗ ಚೆಂಬೋತ ಮೀನ್ಬುಲಿಗ
ಮರಕುಟಿಕ ಕಬ್ಬಕ್ಕಿ ಕೊಟ್ಟುಗ
ವರಲೆ ಕೊಂಚೆ ಕಪಿಂಜ ಗಿಂಚಲು
ಗರಿಗ ಮೊದಲಾದಖಿಳ ಖಗಕುಲ ಬಿದ್ದುದುರಿಯೊಳಗೆ ॥53॥
೦೫೪ ಝಳಕೆ ತಿಳಿಗೊಳದುದಕ ...{Loading}...
ಝಳಕೆ ತಿಳಿಗೊಳದುದಕ ಕಾದು
ಚ್ಛಳಿಸಿದವು ತನಿಗುದಿದು ಮತ್ಸ್ಯಾ
ವಳಿಗಳಂಬುಜದೆಸಳು ಸೀದವು ತುಂಬಿಗಳು ಸಹಿತ
ಹಿಳಿದು ಸಿಡಿದವು ಚಾರು ಚಂದ್ರೋ
ತ್ಪಳರಚಿತ ಸೋಪಾನ ರತುನಾ
ವಳಿಯ ರಾಶಿಗಳಿದ್ದಲಾದವು ಬಿದ್ದ ಕಿಡಿಗಳಲಿ ॥54॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಬೆಂಕಿಯ ಉಷ್ಣತೆಗೆ ತಿಳಿಗೊಳದ ನೀರು ಕಾದು ಮೇಲಕ್ಕೆ ಚಿಮ್ಮಿ ಹಾರಿದವು. ನೀರು ಚೆನ್ನಾಗಿ ಕುದಿಯುತ್ತಿರಲು ಮೀನುಗಳ ಸಮೂಹವು, ತುಂಬಿಗಳೊಡನೆ ಕಮಲದ ದಳಗಳೂ ಸೀದುಹೋದುವು. ಚಂದ್ರಕಾಂತ ಶಿಲೆಯಿಂದ ನಿರ್ಮಿಸಿದ ಸುಂದರವಾದ ಸೋಪಾನಗಳು ಒಡೆದು ಚೆಲ್ಲಾಪಿಲ್ಲಿಯಾದವು. ರತ್ನಾವಳಿಯ ರಾಶಿಗಳು ಕಿಡಿಗಳಲ್ಲಿ ಬಿದ್ದು ಇದ್ದಿಲಾಗಿ ಹೋದವು.
ಪದಾರ್ಥ (ಕ.ಗ.ಪ)
ಝಳ-ಉಷ್ಣತೆ, ಉಚ್ಚಳಿಸು-ಚಿಮ್ಮು, ಎಸಳು-ದಳ, ಚಂದ್ರೋತ್ಪಲ-ಚಂದ್ರಕಾಂತ ಶಿಲೆ, ಹಿಳಿ-ಒಡೆ, ಸಿಡಿ-ಚಲ್ಲಾಪಿಲ್ಲಿ
ಮೂಲ ...{Loading}...
ಝಳಕೆ ತಿಳಿಗೊಳದುದಕ ಕಾದು
ಚ್ಛಳಿಸಿದವು ತನಿಗುದಿದು ಮತ್ಸ್ಯಾ
ವಳಿಗಳಂಬುಜದೆಸಳು ಸೀದವು ತುಂಬಿಗಳು ಸಹಿತ
ಹಿಳಿದು ಸಿಡಿದವು ಚಾರು ಚಂದ್ರೋ
ತ್ಪಳರಚಿತ ಸೋಪಾನ ರತುನಾ
ವಳಿಯ ರಾಶಿಗಳಿದ್ದಲಾದವು ಬಿದ್ದ ಕಿಡಿಗಳಲಿ ॥54॥
೦೫೫ ಇಟ್ಟಣಿಸಿ ಛಿಟಿಛಿಟಿಸಿ ...{Loading}...
ಇಟ್ಟಣಿಸಿ ಛಿಟಿಛಿಟಿಸಿ ಶಿಖಿ ಪುಟ
ವಿಟ್ಟುದೊಣಗಿಲು ಹೊದರಿನಲಿ ಮಿಗೆ
ತೊಟ್ಟ ಕಬ್ಬೊಗೆ ಝಗೆಯ ಹೊರಳಿಯ ಕಿಡಿಯ ಗಡಣದಲಿ
ಹುಟ್ಟಿದುರಿ ಹೆಮ್ಮರನ ಸುತ್ತಲು
ಕಟ್ಟಿತಲ್ಲಿಯ ತೊಡಕಿನಲಿ ಭುಗಿ
ಲಿಟ್ಟು ಕವಿದುದು ತುದಿಗೆ ಬಹು ಶಾಖೋಪಶಾಖೆಗಳ ॥55॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಒಣಗಿದ ಪೊದೆಗಳಲ್ಲಿ ಬೆಂಕಿ ಆಕ್ರಮಿಸಿ ಛಿಟಿ ಛಿಟಿಸಿ ಪುಟವಿಟ್ಟಿತು. ಹೆಚ್ಚಾಗಿ ಉಂಟಾದ ಕಪ್ಪು ಹೊಗೆ ಕಾಂತಿಯುಕ್ತವಾಗಿ ಒಟ್ಟಾಗಿ ಮೇಲೆದ್ದಿತು. ಕಿಡಿಯಸಮೂಹವು ಸುತ್ತಲೂ ಚೆದರಿ ಬಿದ್ದು ಅದರಿಂದ ಹುಟ್ಟಿದ ಉರಿ ದೊಡ್ಡಮರವನ್ನು ಸುತ್ತುಗಟ್ಟಿತು. ಅಲ್ಲಿ ಸಿಕ್ಕಿಕೊಂಡ ಉರಿ ಧಗಧಗಿಸಿ ಮರದ ಅನೇಕ ಶಾಖೋಪಶಾಖೆಗಳ ತುದಿಗೆ ಮುತ್ತಿತು.
ಪದಾರ್ಥ (ಕ.ಗ.ಪ)
ಹೊದರು-ಪೊದೆ, ಕಬ್ಬೊಗೆ-ಕಪ್ಪು ಹೊಗೆ, ಝಗೆ-ಕಾಂತಿ, ಹೊರಳಿ-ಒಟ್ಟಾಗಿ, ತೊಡಕು-ಸಿಕ್ಕಿಕೊಳ್ಳು, ಭುಗಿಲ್-ಧಗಧಗಿಸಿ
ಮೂಲ ...{Loading}...
ಇಟ್ಟಣಿಸಿ ಛಿಟಿಛಿಟಿಸಿ ಶಿಖಿ ಪುಟ
ವಿಟ್ಟುದೊಣಗಿಲು ಹೊದರಿನಲಿ ಮಿಗೆ
ತೊಟ್ಟ ಕಬ್ಬೊಗೆ ಝಗೆಯ ಹೊರಳಿಯ ಕಿಡಿಯ ಗಡಣದಲಿ
ಹುಟ್ಟಿದುರಿ ಹೆಮ್ಮರನ ಸುತ್ತಲು
ಕಟ್ಟಿತಲ್ಲಿಯ ತೊಡಕಿನಲಿ ಭುಗಿ
ಲಿಟ್ಟು ಕವಿದುದು ತುದಿಗೆ ಬಹು ಶಾಖೋಪಶಾಖೆಗಳ ॥55॥
೦೫೬ ಹೊಗೆಯ ಹಬ್ಬುಗೆ ...{Loading}...
ಹೊಗೆಯ ಹಬ್ಬುಗೆ ಸತ್ಯಲೋಕವ
ನುಗಿದುದುರಿನಾಲಗೆಯ ಗರವೊ
ಟ್ಟಗೆಯ ತೊಳಲಿಕೆ ತೆರಳಿಚಿತು ತೆತ್ತೀಸು ಕೋಟಿಗಳ
ಹಗಲಗಡಿತಕೆ ಹೊಕ್ಕುದೋ ಕಡೆ
ಮುಗಿಲ ಕಾಣೆನು ದಿವವನೆತ್ತಣ
ಗಗನಮಣಿ ನಕ್ಷತ್ರ ಚಂದ್ರಮರರಸ ಕೇಳ್ ಎಂದ ॥56॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಹೊಗೆಯು ವ್ಯಾಪಿಸಿ ಸತ್ಯ ಲೋಕವನ್ನು ಚುಚ್ಚಿತು. ಉರಿನಾಲಗೆಯು ಗರವೊಟ್ಟಿಗೆಗಳಲ್ಲೆಲ್ಲಾ ತೊಳಲಾಡಿ ಅಲ್ಲಿದ್ದ ಮೂವತ್ತು ಮೂರು ಕೋಟಿ ದೇವತೆಗಳನ್ನು ಹೊರಡಿಸಿತು. ಹೊಗೆ ಮುಗಿಲು ಹೊರ ಹೊರಟು ಹರಡಿ ಹಗಲನ್ನು ಕಡಿದು ಹಾಕಿತು. ಆಕಾಶವೇ ಕಾಣಿಸಲಿಲ್ಲ. ಹಾಗಿರುವಲ್ಲಿ ಸೂರ್ಯಚಂದ್ರ ನಕ್ಷತ್ರಗಳೆತ್ತಣವು ?
ಪದಾರ್ಥ (ಕ.ಗ.ಪ)
ಹಬ್ಬು-ವ್ಯಾಪಿಸು, ತೆತ್ತೀಸುಕೋಟಿ-ಮೂವತ್ತು ಮೂರು ಕೋಟಿ, ದಿನ-ಆಕಾಶ, ಗಗನಮಣಿ-ಸೂರ್ಯ, ಗರವೊಟ್ಟಗೆ - ಗಸ್ತು
ಮೂಲ ...{Loading}...
ಹೊಗೆಯ ಹಬ್ಬುಗೆ ಸತ್ಯಲೋಕವ
ನುಗಿದುದುರಿನಾಲಗೆಯ ಗರವೊ
ಟ್ಟಗೆಯ ತೊಳಲಿಕೆ ತೆರಳಿಚಿತು ತೆತ್ತೀಸು ಕೋಟಿಗಳ
ಹಗಲಗಡಿತಕೆ ಹೊಕ್ಕುದೋ ಕಡೆ
ಮುಗಿಲ ಕಾಣೆನು ದಿವವನೆತ್ತಣ
ಗಗನಮಣಿ ನಕ್ಷತ್ರ ಚಂದ್ರಮರರಸ ಕೇಳೆಂದ ॥56॥
೦೫೭ ಛಿಳಿ ಛಿಳಿಲು ...{Loading}...
ಛಿಳಿ ಛಿಳಿಲು ಛಿಳಿ ರವದ ಘುಳು ಘುಳು
ಘುಳು ಘುಳ ಧ್ವನಿಮಯದಿ ಕಪಿಗಳ
ಕಿಳಿಕಿಳಾಯತ ರವದಿ ಮೃಗ ಸಂಕುಳದ ಕಳ ಕಳದಿ
ಹಿಳಿದುರಿವ ಹೆಬ್ಬಿದಿರ ಗಂಟಿನ
ಠಳಠಳತ್ಕಾರದಿ ದಿಶಾ ಮಂ
ಡಳದ ಮೂಲೆಗಳೊಡೆದುದದ್ಭುತವಾಯ್ತು ವನದಹನ ॥57॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ವನವು ಸುಡುತ್ತಿರುವಾಗ ಛಿಳಿಛಿಳಿಲು, ಛಿಳಿ ಶಬ್ದ ಘುಳು ಘುಳು ಘುಳಧ್ವನಿ, ಕಪಿಗಳ ಕಿಳಿಕಿಳಿ ಧ್ವನಿ, ಮೃಗ ಸಮೂಹದ ಕಳಕಳ ಧ್ವನಿ, ದೊಡ್ಡ ಬೊಂಬಿನ ಗಂಟೊಡೆದು ಏಳುವ ಠಳ ಠಳ ಧ್ವನಿ, ಈ ಬಗೆ ಬಗೆಯ ಧ್ವನಿ ಸಮೂಹವು ದಿಕ್ಕುಗಳ ಮೂಲೆಗಳನ್ನು ಒಡೆದು ಅದ್ಭುತವಾಯ್ತು.
ಪದಾರ್ಥ (ಕ.ಗ.ಪ)
ಸಂಕುಳ-ಸಮೂಹ, ರವ-ಶಬ್ದ, ಹೆಬ್ಬಿದಿರು-ದೊಡ್ಡ ಬೊಂಬು, ಹಿಳಿ-ಒಡೆ
ಮೂಲ ...{Loading}...
ಛಿಳಿ ಛಿಳಿಲು ಛಿಳಿ ರವದ ಘುಳು ಘುಳು
ಘುಳು ಘುಳ ಧ್ವನಿಮಯದಿ ಕಪಿಗಳ
ಕಿಳಿಕಿಳಾಯತ ರವದಿ ಮೃಗ ಸಂಕುಳದ ಕಳ ಕಳದಿ
ಹಿಳಿದುರಿವ ಹೆಬ್ಬಿದಿರ ಗಂಟಿನ
ಠಳಠಳತ್ಕಾರದಿ ದಿಶಾ ಮಂ
ಡಳದ ಮೂಲೆಗಳೊಡೆದುದದ್ಭುತವಾಯ್ತು ವನದಹನ ॥57॥
೦೫೮ ಅರಸ ಕೇಳೈ ...{Loading}...
ಅರಸ ಕೇಳೈ ಮುನ್ನ ವಿತಳಕೆ
ಗರುಡ ಭಯವಾಯ್ತೆಂದು ತಕ್ಷಕ
ನಿರಿಸಿದನು ನಿಜಸುತನನಮರೇಶ್ವರನನುಜ್ಞೆಯಲಿ
ಇರಲಿರಲು ಸುತರಾದರಾತಂ
ಗುರಗ ವಂಶದೊಳಶ್ವಸೇನಗೆ
ಹಿರಿದು ಹೆಚ್ಚಿತು ತಕ್ಷಕನ ಸಂತತಿ ವನಾಂತದಲಿ ॥58॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಹಿಂದೆ ವಿತಳಕ್ಕೆ ಗರುಡನ ಭಯವಾಯ್ತೆಂದು ತಕ್ಷಕನು ತನ್ನ ಮಗ ಅಶ್ವಸೇನನನ್ನು ದೇವೇಂದ್ರನ ಆಜ್ಞೆಯಿಂದ ಆ ಖಾಂಡವವನದಲ್ಲಿ ಇರಿಸಿದ್ದನು. ಅಶ್ವಸೇನನು ಆ ವನದಲ್ಲಿ ನೆಲಸಿ ವಾಸಿಸುತ್ತಿದ್ದಾಗ ಅವನಿಗೆ ಮಕ್ಕಳಾದರು. ಕಾಲಾಂತರದಲ್ಲಿ ತಕ್ಷಕನ ಸಂತತಿ ಆ ವನ ಪ್ರದೇಶದಲ್ಲಿ ಬಹಳವಾಗಿ ಹೆಚ್ಚಿತು.
ಟಿಪ್ಪನೀ (ಕ.ಗ.ಪ)
ವಿತಳ-ಏಳು ಅಧೋಲೋಕಗಳಲ್ಲಿ ಒಂದು.
ತಕ್ಷಕ-ಕಶ್ಯಪ ಮುನಿಯಿಂದ ಕದ್ರುವಿನಲ್ಲಿ ಜನಿಸಿದ ಸರ್ಪರಾಜ. ಇವನಿಗೆ ಅಶ್ವಸೇನ, ಶತ್ರುಸೇನರೆಂಬ ಇಬ್ಬರು ಮಕ್ಕಳಿದ್ದರು. ಇಪ್ಪತ್ತೇಳು ನಾಗಕುಲಗಳ ರಾಜ.
ಅಶ್ವಸೇನ-ಸರ್ಪರಾಜನಾದ ತಕ್ಷಕನ ಮಗ, ಖಾಂಡವವನ ದಹನ ಸಮಯದಲ್ಲಿ ಬದುಕಿಕೊಂಡ ಸರ್ಪಗಳಲ್ಲಿ ಇವನೂ ಒಬ್ಬ.
ಮೂಲ ...{Loading}...
ಅರಸ ಕೇಳೈ ಮುನ್ನ ವಿತಳಕೆ
ಗರುಡ ಭಯವಾಯ್ತೆಂದು ತಕ್ಷಕ
ನಿರಿಸಿದನು ನಿಜಸುತನನಮರೇಶ್ವರನನುಜ್ಞೆಯಲಿ
ಇರಲಿರಲು ಸುತರಾದರಾತಂ
ಗುರಗ ವಂಶದೊಳಶ್ವಸೇನಗೆ
ಹಿರಿದು ಹೆಚ್ಚಿತು ತಕ್ಷಕನ ಸಂತತಿ ವನಾಂತದಲಿ ॥58॥
೦೫೯ ಆ ಮಹಾ ...{Loading}...
ಆ ಮಹಾ ವನವಹ್ನಿ ಭೂತ
ಸ್ತೋಮ ಸಂಹೃತಿ ಕರ್ಮ ಶೌರ್ಯೋ
ದ್ದಾಮವವಗಾಹಿಸುತ ಬರುತಿರೆ ಮುಂದೆ ಚೂಣಿಯಲಿ
ಧೂಮವಿಳಿದುದು ಹುತ್ತಿನಲಿ ನಿ
ಸ್ಸೀಮ ಜನಿತ ಜ್ವಾಲೆಗಳ ಝಳ
ವಾ ಮಹೋರಗಚಯವ ಚುಂಬಿಸಿತರಸ ಕೇಳ್ ಎಂದ ॥59॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಆ ಖಾಂಡವ ವನದಲ್ಲಿ ದಹಿಸತೊಡಗಿದ ಮಹಾ ಕಾಳ್ಗಿಚ್ಚು ಪ್ರಾಣಿಗಳ ಸಮೂಹದ ಸಂಹಾರ ಕಾರ್ಯ ಮಾಡುತ್ತ ಶ್ರೇಷ್ಠವಾಗಿ ವ್ಯಾಪಿಸಿ ಬರುತ್ತಿರಲು ಮುಂದೆ ಮುಂಭಾಗದಲ್ಲಿ ಹುತ್ತಿನಲ್ಲಿ ಹೊಗೆ ಇಳಿಯಿತು. ಮೇರೆ ಮೀರಿ ಹುಟ್ಟಿದ ಉರಿಯ ಝಳವು ಒಳಗಡಗಿದ್ದ ದೊಡ್ಡ ಸರ್ಪಗಳ ಸಮೂಹವನ್ನು ಸ್ಪರ್ಶಿಸಿತು.
ಪದಾರ್ಥ (ಕ.ಗ.ಪ)
ಭೂತಗಳ ಸಮೂಹ-ಪ್ರಾಣಿಗಳ ಸಮೂಹ, ಸಂಹೃತಿಕರ್ಮ-ಸಂಹಾರ ಕಾರ್ಯ, ಉದ್ದಾಮ-ಶ್ರೇಷ್ಠ, ಅವಗಾಹಿಸು: ವ್ಯಾಪಿಸು, ನಿಸ್ಸೀಮ-ಮೇರೆಮೀರಿದ, ಚಯ-ಸಮೂಹ, ಚುಂಬಿಸು-ಸ್ಪರ್ಶಿಸು
ಮೂಲ ...{Loading}...
ಆ ಮಹಾ ವನವಹ್ನಿ ಭೂತ
ಸ್ತೋಮ ಸಂಹೃತಿ ಕರ್ಮ ಶೌರ್ಯೋ
ದ್ದಾಮವವಗಾಹಿಸುತ ಬರುತಿರೆ ಮುಂದೆ ಚೂಣಿಯಲಿ
ಧೂಮವಿಳಿದುದು ಹುತ್ತಿನಲಿ ನಿ
ಸ್ಸೀಮ ಜನಿತ ಜ್ವಾಲೆಗಳ ಝಳ
ವಾ ಮಹೋರಗಚಯವ ಚುಂಬಿಸಿತರಸ ಕೇಳೆಂದ ॥59॥
೦೬೦ ಹೂಸಿ ಹುತ್ತಿನ ...{Loading}...
ಹೂಸಿ ಹುತ್ತಿನ ಮಣ್ಣ ರಂಧ್ರಿಸಿ
ಕಾಸಿದವು ಫಣಿಕುಲವ ಮೇಣ್ದೊ
ಳ್ಳಾಸದಲಿ ಡಾವರಿಸಿದವು ಕಿಡಿ ಧೂತಧೂಮದಲಿ
ಆಸುರದ ಕಬ್ಬೊಗೆಯ ಕವಚದ
ಕೇಸುರಿಗಳೊಳ ಬಿದ್ದುದುರಿ ಹೊರ
ಸೂಸಿ ಹಿಡಿದವು ಹಾವುಗಳ ಬಲು ಹೊದರಹೊರಳಿಗಳ ॥60॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಹೊತ್ತಿಕೊಂಡ ಬೆಂಕಿಯ ಜ್ವಾಲೆಗಳು ಹುತ್ತದ ಮಣ್ಣಿನಲ್ಲಿ ರಂಧ್ರ ಮಾಡಿ ಒಳಗಿನ ಸರ್ಪಕುಲವನ್ನು ಸುಟ್ಟವು. ಹೊಗೆಯಿಂದ ನಿವಾರಿಸಿದ ಕಿಡಿಗಳು ವಂಚನೆಯಲ್ಲಿ ಆವರಿಸಿದವು. ಭಯಂಕರವಾದ ಕಪ್ಪಾದ ಹೊಗೆಯ ಕವಚವನ್ನು ತೊಟ್ಟ ಕೆಂಪಾದ ಉರಿಗಳು ಒಳಬಿದ್ದುವು. ಉರಿಯನ್ನು ಹೊರ ಚೆಲ್ಲಿ ಹಾವುಗಳ ಬಹಳ ರಾಶಿ ರಾಶಿಗಳನ್ನು ಹಿಡಿದು ನುಂಗಿದವು.
ಪದಾರ್ಥ (ಕ.ಗ.ಪ)
ಹೂಸು-ಹಚ್ಚು, ದೊಳ್ಳಾಸ-ವಂಚನೆ, ಡಾವರಿಸು-ಆವರಿಸು, ಧೂತ-ನಿವಾರಿಸಲ್ಪಟ್ಟ, ಆಸುರ-ಭಯಂಕರ, ಸೂಸು-ಚೆಲ್ಲು, ಹೊದರು-ರಾಶಿ, ಹೊರಳಿ-ರಾಶಿ
ಮೂಲ ...{Loading}...
ಹೂಸಿ ಹುತ್ತಿನ ಮಣ್ಣ ರಂಧ್ರಿಸಿ
ಕಾಸಿದವು ಫಣಿಕುಲವ ಮೇಣ್ದೊ
ಳ್ಳಾಸದಲಿ ಡಾವರಿಸಿದವು ಕಿಡಿ ಧೂತಧೂಮದಲಿ
ಆಸುರದ ಕಬ್ಬೊಗೆಯ ಕವಚದ
ಕೇಸುರಿಗಳೊಳ ಬಿದ್ದುದುರಿ ಹೊರ
ಸೂಸಿ ಹಿಡಿದವು ಹಾವುಗಳ ಬಲು ಹೊದರಹೊರಳಿಗಳ ॥60॥
೦೬೧ ಹೆಡೆಯ ಮಣಿಗಳ ...{Loading}...
ಹೆಡೆಯ ಮಣಿಗಳ ಕಂಡು ಸೂಸಿದ
ಕಿಡಿಗಳಹ ಹಾಯೆನುತ ಶಿರಗಳ
ಕೊಡಹಿ ಮರುಗಿದರುರಗಿಯರು ಮರಿಗಳಿಗೆ ಮೈಚಾಚಿ
ಕಡು ಹೊಗೆಯ ಕೇಸುರಿಯ ಕಿಡಿಗಳ
ಗಡಣದಲಿ ಕೌರೆದ್ದು ಮೈಗಳ
ಕೊಡಹಿ ಬಿಸುಸುಯ್ಯುತ್ತ ಮುಗ್ಗಿದವಹಿಗಳುರಿಯೊಳಗೆ ॥61॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಬಿಲದೊಳಗೆ ಅಡಗಿದ್ದ ಹೆಣ್ಣು ಹಾವುಗಳು ತಮ್ಮ ಹೆಡೆಮಣಿಗಳನ್ನು ಕಂಡು “ಅಹಹಾ ! ಕಿಡಿಗಳು ಕಾಣಿಸಿಕೊಂಡವು” ಎಂದು ತಲೆಗಳನ್ನು ಕೊಡವಿ ದುಃಖಿಸಿ ಮರಿಗಳಿಗೆ ಮೈಯೊಡ್ಡಿ ಮರೆ ಮಾಡಿದವು. ಹೆಚ್ಚಾದ ಹೊಗೆ, ಕೆಂಪಾದ ಕಿಡಿಗಳ ಸಮೂಹದಲ್ಲಿ ಸುಟ್ಟ್ಟ ಮೈಗಳನ್ನು ಕೊಡಹಿ ನಿಟ್ಟುಸಿರು ಬಿಡುತ್ತ ಸರ್ಪಗಳು ಉರಿಯೊಳಗೆ ಮುಗಿಬೀಳುತ್ತಿದ್ದವು.
ಪದಾರ್ಥ (ಕ.ಗ.ಪ)
ಉರಗಿ-ಹೆಣ್ಣು ಹಾವು, ಸೂಸು-ಕಾಣಿಸಿಕೊಳ್ಳು, ಚಾಚು-ಒಡ್ಡು, ಕಡು-ಹೆಚ್ಚಾದ, ಕೌರು-ಸುಟ್ಟುಹೋಗು, ಮುಗ್ಗು-ಮುಗಿ ಬೀಳು.
ಮೂಲ ...{Loading}...
ಹೆಡೆಯ ಮಣಿಗಳ ಕಂಡು ಸೂಸಿದ
ಕಿಡಿಗಳಹ ಹಾಯೆನುತ ಶಿರಗಳ
ಕೊಡಹಿ ಮರುಗಿದರುರಗಿಯರು ಮರಿಗಳಿಗೆ ಮೈಚಾಚಿ
ಕಡು ಹೊಗೆಯ ಕೇಸುರಿಯ ಕಿಡಿಗಳ
ಗಡಣದಲಿ ಕೌರೆದ್ದು ಮೈಗಳ
ಕೊಡಹಿ ಬಿಸುಸುಯ್ಯುತ್ತ ಮುಗ್ಗಿದವಹಿಗಳುರಿಯೊಳಗೆ ॥61॥
೦೬೨ ಹುದಿದುರಿವ ಹುತ್ತಿನಲಿ ...{Loading}...
ಹುದಿದುರಿವ ಹುತ್ತಿನಲಿ ಕೂಳ್ಗುದಿ
ಗುದಿದು ಸರ್ಪಸ್ತೋಮ ಮಧ್ಯದೊ
ಳೊದೆದು ಹಾಯಿದನಶ್ವಸೇನನು ಗಗನ ಮಂಡಲಕೆ
ಕೆದರಿದವು ಕೆಂಗಿಡಿಗಳುರಿಯು
ಬ್ಬಿದುದು ಘುಳುಘುಳು ರಭಸ ಮಿಗೆ ಹೆ
ಚ್ಚಿದುದು ತಬ್ಬಿದುದೀತನನು ತಡವರಿಸಿ ಗಗನದಲಿ ॥62॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ವ್ಯಾಪಿಸಿ ಉರಿಯುವ ಹುತ್ತದೊಳಗೆ ಒಳಗೊಳಗೆ ಕುದಿದು, ಕುದಿಯುವ ಹಾವುಗಳ ಸಮೂಹದ ಮಧ್ಯದಿಂದ ಅಶ್ವಸೇನನು ನೆಗೆದು ಬಂದು ಗಗನ ಮಂಡಲಕ್ಕೆ ಚಿಮ್ಮಿ ಹಾರಿದನು. ಕೂಡಲೇ ಕೆಂಪಾದ ಕಿಡಿಗಳ ಉರಿಯು ಉಂಟಾಯಿತು. ಘುಳು ಘುಳು ರಭಸ ಬಹಳ ಹೆಚ್ಚಾಯಿತು. ಉಕ್ಕಿದ ಉರಿ ಗಗನ ಮಾರ್ಗದಲ್ಲಿ ಹಾಯುವ ಅಶ್ವಸೇನನನ್ನು ಹುಡುಕಿ ಅಪ್ಪಿಕೊಂಡಿತು.
ಪದಾರ್ಥ (ಕ.ಗ.ಪ)
ಹುದಿ-ವ್ಯಾಪಿಸು, ಕೂಳ್ಗುದಿ-ಒಳಗೊಳಗೆ ಕುದಿ, ಉಬ್ಬು-ಉಂಟಾಗು, ತಡವರಿಸು-ಹುಡುಕು, ತಬ್ಬು-ಅಪ್ಪಿಕೊಳ್ಳು.
ಮೂಲ ...{Loading}...
ಹುದಿದುರಿವ ಹುತ್ತಿನಲಿ ಕೂಳ್ಗುದಿ
ಗುದಿದು ಸರ್ಪಸ್ತೋಮ ಮಧ್ಯದೊ
ಳೊದೆದು ಹಾಯಿದನಶ್ವಸೇನನು ಗಗನ ಮಂಡಲಕೆ
ಕೆದರಿದವು ಕೆಂಗಿಡಿಗಳುರಿಯು
ಬ್ಬಿದುದು ಘುಳುಘುಳು ರಭಸ ಮಿಗೆ ಹೆ
ಚ್ಚಿದುದು ತಬ್ಬಿದುದೀತನನು ತಡವರಿಸಿ ಗಗನದಲಿ ॥62॥
೦೬೩ ಉರಿಯ ಗಣ್ಟಲನೊದೆದು ...{Loading}...
ಉರಿಯ ಗಂಟಲನೊದೆದು ಫಣಿ ಮಿ
ಕ್ಕುರವಣಿಸೆ ಹಾಹಾ ಧನಂಜಯ
ಹರಿವುತಿದೆ ಹಾವೊಂದು ಹೋದುದು ಬಾಯ ತುತ್ತೆನಗೆ
ತರಿಸಿಕೊಡು ಶರವೇಢೆಯನು ವಿ
ಸ್ತರಿಸು ವಹಿಲದೊಳೆನಲು ವೈಶ್ವಾ
ನರನ ಮಾತಿಗೆ ನಗುತ ಕೊಂಡನು ವಿಜಯ ಗಾಂಡಿವವ ॥63॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಉರಿಯ ಗಂಟಲಿಗೆ ಸಿಕ್ಕದೆ ತಪ್ಪಿಸಿಕೊಂಡು ಆ ಸರ್ಪವು ರಭಸದಿಂದ ಮುನ್ನುಗ್ಗಲು, “ಹಾಹಾ ! ಧನಂಜಯಾ ! ಒಂದು ಹಾವು ಹಾರುತಿದೆ, ನನ್ನ ಬಾಯ ತುತ್ತು ತಪ್ಪಿ ಹೋಯಿತು, ತರಿಸಿಕೊಡು, ಬಾಣಗಳ ಸುತ್ತುಗಟ್ಟುವಿಕೆಯಿಂದ ವಿಸ್ತಾರವಾಗಿ ತ್ವರಿತವಾಗಿ ಹರಡು” ಎಂದ ಅಗ್ನಿಯ ಮಾತಿಗೆ ನಸುನಗುತ್ತ ವಿಜಯನು ಗಾಂಡೀವವನ್ನು ಕೈಗೆತ್ತಿಕೊಂಡನು.
ಪದಾರ್ಥ (ಕ.ಗ.ಪ)
ಉರವಣಿಸು-ರಭಸದಿಂದ ಮುನ್ನುಗ್ಗು, ವೇಢೆ-ಸುತ್ತುಗಟ್ಟುವಿಕೆ, ವೈಶ್ವಾನರ-ಅಗ್ನಿ, ವಹಿಲ-ತ್ವರಿತ, ವಿಜಯ-ಅರ್ಜುನನ ದಶನಾಮಗಳಲ್ಲಿ ಒಂದು
ಮೂಲ ...{Loading}...
ಉರಿಯ ಗಂಟಲನೊದೆದು ಫಣಿ ಮಿ
ಕ್ಕುರವಣಿಸೆ ಹಾಹಾ ಧನಂಜಯ
ಹರಿವುತಿದೆ ಹಾವೊಂದು ಹೋದುದು ಬಾಯ ತುತ್ತೆನಗೆ
ತರಿಸಿಕೊಡು ಶರವೇಢೆಯನು ವಿ
ಸ್ತರಿಸು ವಹಿಲದೊಳೆನಲು ವೈಶ್ವಾ
ನರನ ಮಾತಿಗೆ ನಗುತ ಕೊಂಡನು ವಿಜಯ ಗಾಂಡಿವವ ॥63॥
೦೬೪ ಆವ ಶರಸನ್ಧಾನವೋ ...{Loading}...
ಆವ ಶರಸಂಧಾನವೋ ಗಗ
ನಾವಲಂಬಿಯ ಕೊರಳನೆಚ್ಚನು
ಪಾವಕನ ಮಧ್ಯದಲಿ ಬಿದ್ದುದು ಮುಂಡವಹಿಪತಿಯ
ಜೀವವುಳಿದುದು ಶಿರದೊಳಾತಂ
ಗಾ ವಿಗಡ ಫಣಿ ನುಡಿದುದೆಲೆ ಗಾಂ
ಡೀವಿ ಮರೆಯದಿರೆನ್ನ ಹಗೆಯಲಿ ಮರಣ ನಿನಗೆನುತ ॥64॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಯಾವ ಶರ ಸಂಧಾನದ ಚಮತ್ಕಾರವೋ ಗಾಂಡೀವಿಯದು ! ಆಕಾಶವನ್ನು ಆಶ್ರಯಿಸಿದ ಅಶ್ವ ಸೇನನ ಕೊರಳಿಗೆ ಬಾಣ ಪ್ರಯೋಗ ಮಾಡಿದನು. ಅವನ ಮುಂಡವು ಅಗ್ನಿಯ ಮಧ್ಯದಲ್ಲಿ ಬಿದ್ದಿತು. ಆತನಿಗೆ ತಲೆಯಲ್ಲಿ ಜೀವವು ಉಳಿಯಿತು. ಆ ಕ್ರೂರವಾದ ಸರ್ಪವು, “ಎಲೆ ಗಾಂಡೀವಿ, ಮರೆಯಬೇಡ. ನನ್ನ ಶತ್ರುತ್ವದಲ್ಲಿ ನಿನಗೆ ಮರಣ” ಎಂದು ಹೇಳಿತು.
ಪದಾರ್ಥ (ಕ.ಗ.ಪ)
ಎಚ್ಚು-ಬಾಣಪ್ರಯೋಗ ಮಾಡು, ವಿಗಡ-ಕ್ರೂರ, ಹಗೆ-ಶತ್ರು
ಮೂಲ ...{Loading}...
ಆವ ಶರಸಂಧಾನವೋ ಗಗ
ನಾವಲಂಬಿಯ ಕೊರಳನೆಚ್ಚನು
ಪಾವಕನ ಮಧ್ಯದಲಿ ಬಿದ್ದುದು ಮುಂಡವಹಿಪತಿಯ
ಜೀವವುಳಿದುದು ಶಿರದೊಳಾತಂ
ಗಾ ವಿಗಡ ಫಣಿ ನುಡಿದುದೆಲೆ ಗಾಂ
ಡೀವಿ ಮರೆಯದಿರೆನ್ನ ಹಗೆಯಲಿ ಮರಣ ನಿನಗೆನುತ ॥64॥
೦೬೫ ಎನ್ದು ಗಗನದೊಳುಲಿದು ...{Loading}...
ಎಂದು ಗಗನದೊಳುಲಿದು ಫಣಿ ಶಿರ
ವಂದು ಪಾಯ್ದುದು ಧರೆಗೆ ರಾಧಾ
ನಂದನನ ಬತ್ತಳಿಕೆಯಲಿ ಶರವಾಗಿ ಜಗವರಿಯೆ
ಸಂದುದದು ಬಳಿಕಿತ್ತಲಿಂದ್ರನ
ನಂದನದ ಬೇಗೆಯಲಿ ಬದುಕಿತು
ಮಂದಪಾಲನ ಸುತಚತುಷ್ಟಯವರಸ ಕೇಳ್ ಎಂದ ॥65॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಆಕಾಶದಲ್ಲಿ ನಿಂತು ಹೀಗೆ ನುಡಿದ ಆ ಸರ್ಪದ ಶಿರಸ್ಸು ಅಂದು ಭೂಮಿಗೆ ಹಾಯ್ದು ಬಂದು ಬಾಣವಾಗಿ ರಾಧಾಪುತ್ರನಾದ ಕರ್ಣನ ಬತ್ತಳಿಕೆಯಲ್ಲಿ ಜಗತ್ತು ತಿಳಿಯುವಂತೆ ಸೇರಿಕೊಂಡಿತು. ಬಳಿಕ ಇತ್ತಕಡೆ ಇಂದ್ರನ ತೋಟ ನಂದನವನದ ದಹನದಲ್ಲಿ ಮಂದಪಾಲ ಮುನಿಯ ಪಕ್ಷಿರೂಪದ ನಾಲ್ಕು ಮಕ್ಕಳು ಬೇಯದೇ ಬದುಕಿಕೊಂಡವು.
ಪದಾರ್ಥ (ಕ.ಗ.ಪ)
ಸಲ್-ಸೇರು, ರಾಧಾನಂದನ-ಕರ್ಣ, ಬೇಗೆ-ದಹನ, ನಂದನ-ದೇವೇಂದ್ರನ ತೋಟ
ಟಿಪ್ಪನೀ (ಕ.ಗ.ಪ)
ಮಂದಪಾಲ - ಮಕ್ಕಳಿಲ್ಲದಿದ್ದರೆ ಸ್ವರ್ಗದಲ್ಲಿ ಸ್ಥಾನವಿಲ್ಲ ಎಂಬ ನಮ್ಮ ಪರಂಪರೆಯ ನಂಬಿಕೆಯನ್ನು ಪೋಷಿಸುರ ಕಥೆ ಮಂದಪಾಲನದು. ಈತ ಸಕಲ ಶಾಸ್ತ್ರಗಳಲ್ಲಿ ಪಾರಂಗತನಾದ ತಪಸ್ವಿ, ವಿಪ್ರರ್ಷಿಗಳ ಪಟ್ಟಿಯಲ್ಲಿ ಈತನ ಹೆಸರಿದೆ. ದೇವೇಂದ್ರ ಬೆಳೆಸಿದ್ದ ಖಾಂಡವ ವನದಲ್ಲಿ ವಾಸವಾಗಿದ್ದು ಅಲ್ಲೇ ತೀರಿಕೊಂಡ. ಈತ ಮಹಾತಪಸ್ವಿಯಾಗಿದ್ದರೂ ಸ್ವರ್ಗದಲ್ಲಿ ಈತನಿಗೆ ಸ್ಥಾನವಿರಲಿಲ್ಲ. ಅಪುತ್ರರಿಗೆ ಸ್ವರ್ಗ ಪ್ರವೇಶವಿಲ್ಲವೆಂದು ತಿಳಿಯಿತು. ಆದುದರಿಂದ ಮಕ್ಕಳನ್ನು ಪಡೆಯಲೆಂದು ಶಾರ್ಥಿ ಎಂಬ ಪಕ್ಷಿಯ ರೂಪದಲ್ಲಿ ಖಾಂಡವ ವನಕ್ಕೆ ಹಿಂತಿರುಗಿದ. ಅಲ್ಲಿ ಜರಿತೆ ಎಂಬ ಸಾರಂಗಿಕೆಯನ್ನು ಮದುವೆಯಾದ. ಜರತಾರಿ ಸಾರಿಸಥತ್ವ, ದ್ರೋನ ಮತ್ತು ಸ್ತಂಭಮಿತ್ರ ಎಂಬ ನಾಲ್ಕು ಮಕ್ಕಳನ್ನು ಪಡೆದ.
ಮೂಲ ...{Loading}...
ಎಂದು ಗಗನದೊಳುಲಿದು ಫಣಿ ಶಿರ
ವಂದು ಪಾಯ್ದುದು ಧರೆಗೆ ರಾಧಾ
ನಂದನನ ಬತ್ತಳಿಕೆಯಲಿ ಶರವಾಗಿ ಜಗವರಿಯೆ
ಸಂದುದದು ಬಳಿಕಿತ್ತಲಿಂದ್ರನ
ನಂದನದ ಬೇಗೆಯಲಿ ಬದುಕಿತು
ಮಂದಪಾಲನ ಸುತಚತುಷ್ಟಯವರಸ ಕೇಳೆಂದ ॥65॥
೦೬೬ ಮೆಚ್ಚಿಸಿದವವು ವಹ್ನಿಸೂಕ್ತವ ...{Loading}...
ಮೆಚ್ಚಿಸಿದವವು ವಹ್ನಿಸೂಕ್ತವ
ನುಚ್ಚರಿಸಿ ತಜ್ಜ್ವಲನ ಮುಖವನು
ಬಿಚ್ಚಿ ಬದುಕಿದವಾ ಮುನಿಯ ಸಂತಾನ ಪಕ್ಷಿಗಳು
ಹೆಚ್ಚಿದುರಿ ಹಬ್ಬುಗೆಯ ಹೊಯ್ಲಲಿ
ಬೆಚ್ಚಿ ಮಯನರ್ಜುನನ ಹೊಗಳಿದು
ಕಿಚ್ಚಿನಲಿ ಬದುಕಿದನು ಧರಣೀಪಾಲ ಕೇಳ್ ಎಂದ ॥66॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಉರಿಯು ಆವರಿಸಿ ಬಂದಾಗ ಅಗ್ನಿ ಸ್ತೋತ್ರ,ವನ್ನು ಉಚ್ಚಾರ ಮಾಡಿ ಅಗ್ನಿಯನ್ನು ಮೆಚ್ಚಿಸಿದವು. ಮುನಿಯ ಸಂತಾನದ ಪಕ್ಷಿಗಳು ಆ ಜ್ವಾಲೆಯ ಮುಖದಿಂದ ನಿವಾರಿಸಿಕೊಂಡು ಬದುಕಿಕೊಂಡವು. ಹೆಚ್ಚಿದ ಉರಿಯ ವ್ಯಾಪಕದ ಹೊಡೆತದಲ್ಲಿ ಹೆದರಿದ ಮಯನು ಅರ್ಜುನನನ್ನು ಹೊಗಳಿ ಆ ಕಿಚ್ಚಿನಲ್ಲಿ ಬೇಯದೇ ಬದುಕಿಕೊಂಡನು.
ಪದಾರ್ಥ (ಕ.ಗ.ಪ)
ವಹ್ನಿ ಸೂಕ್ತ-ಅಗ್ನಿ ಸ್ತೋತ್ರ, ಬಿಚ್ಚು-ನಿವಾರಿಸು, ಹೊಯ್ಲು-ಹೊಡೆತ, ಬೆಚ್ಚು-ಹೆದರು
ಮೂಲ ...{Loading}...
ಮೆಚ್ಚಿಸಿದವವು ವಹ್ನಿಸೂಕ್ತವ
ನುಚ್ಚರಿಸಿ ತಜ್ಜ್ವಲನ ಮುಖವನು
ಬಿಚ್ಚಿ ಬದುಕಿದವಾ ಮುನಿಯ ಸಂತಾನ ಪಕ್ಷಿಗಳು
ಹೆಚ್ಚಿದುರಿ ಹಬ್ಬುಗೆಯ ಹೊಯ್ಲಲಿ
ಬೆಚ್ಚಿ ಮಯನರ್ಜುನನ ಹೊಗಳಿದು
ಕಿಚ್ಚಿನಲಿ ಬದುಕಿದನು ಧರಣೀಪಾಲ ಕೇಳೆಂದ ॥66॥
೦೬೭ ಖಗ ಚತುಷ್ಟಯ ...{Loading}...
ಖಗ ಚತುಷ್ಟಯ ಮಯ ಸಹಿತವುರಿ
ಯುಗುಳಿತುಳಿದ ಸಮಸ್ತ ಭೂತಾ
ಳಿಗಳನಾಹುತಿಗೊಂಡನಗ್ನಿ ಧನಂಜಯಾಜ್ಞೆಯಲಿ
ಗಗನದಿಂದಿಳಿತಂದು ಸುರಪತಿ
ಮಗನ ಮನ್ನಿಸಿ ಕೊಟ್ಟನಗ್ಗದ
ಗಗನಮಣಿಗೆಣೆಯೆನಿಪ ಮಕುಟವನೊಲಿದು ಪಾರ್ಥಂಗೆ ॥67॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅರ್ಜುನನ ಅಪ್ಪಣೆಯಂತೆ, ನಾಲ್ಕು ಪಕ್ಷಿಗಳನ್ನು ಮಯನ ಸಹಿತವಾಗಿ ಉರಿಯು ಉಗುಳಿತು. ಉಳಿದ ಎಲ್ಲ ಪ್ರಾಣಿಗಳ ಸಮೂಹವನ್ನು ಅಗ್ನಿಯು ಆಹುತಿಗೊಂಡನು. ದೇವೇಂದ್ರನು ಅರ್ಜುನನ ಈ ಅದ್ಭುತ ಸಾಹಸವನ್ನು ಕಂಡು ಗಗನದಿಂದ ಇಳಿದು ಬಂದು ಮಗನನ್ನು ಗೌರವಿಸಿ ಸೂರ್ಯನಿಗೆ ಸಮಾನವಾದ ಶ್ರೇಷ್ಠ ಕಿರೀಟವನ್ನು ಪ್ರೀತಿಯಿಂದ ಅರ್ಜುನನಿಗೆ ಕೊಟ್ಟನು.
ಪದಾರ್ಥ (ಕ.ಗ.ಪ)
ಖಗ-ಪಕ್ಷಿ, ಭೂತಾಳಿ-ಪ್ರಾಣಿಗಳ ಸಮೂಹ, ಗಗನಮಣಿ-ಸೂರ್ಯ, ಮಕುಟ-ಕಿರೀಟ
ಟಿಪ್ಪನೀ (ಕ.ಗ.ಪ)
ಮಯನು ದೇವ ದಾನವ ಶಿಲ್ಪಾಚಾರ್ಯ. ರಾಕ್ಷಸಶಿಲ್ಪಿ. ಕಶ್ಯಪನಿಗೆ ದನುವಿನಲ್ಲಿ ಹುಟ್ಟಿದ ಮಗ. ನಮುಚಿಯ ಸೋದರ. ಇವನು ಪರ್ಷಿಯಾ ದೇಶದವನಿರಬಹುದೆಂಬ ವಾದವೂ ಇದೆ. ಮಯನಿಗೆ ಮಾಯಾವಿ, ಮಂಡೋದರಿ ಎಂಬ ಮಕ್ಕಳಿದ್ದರು. (ಇವಳು ರಾವಣನ ಪತ್ನಿಯಾದಳು) ಖಾಂಡವ ವನದ ದಹನದ ಸಂದರ್ಭದಲ್ಲಿ ಬೆಂಕಿಗೆ ಸಿಕ್ಕಿಕೊಳ್ಳಲಿದ್ದ ಈತನನ್ನು ಅರ್ಜುನನು ಕಾಪಾಡಿದ ಕಾರಣ ಮಯನು ಉಳಿದುಕೊಂಡ.
ತಸ್ಯ ಭೀತಸ್ವನಂ ಶ್ರುತ್ವಾ ಮಾಭೈರಿತಿ ಧನಂಜಯಃ
ಪ್ರತ್ಯುವಾಚ ಮಯಂ ಪಾರ್ಥೋ ಜೀವಯನ್ನಿವ ಭಾರತ
ಭಯಗ್ರಸ್ಥನಾದ ಮಯನ ಕೂಗನ್ನು ಕೇಳಿದ ಅರ್ಜುನನು ಅವನಿಗೆ ‘ಹೆದರಬೇಡ’ ಎಂದು ಧೈರ್ಯ ಹೇಳಿ ಅವನನ್ನು ಬದುಕಿಸಿದ. ಈ ಉಪಕಾರದ ಸ್ಮರಣೆಗಾಗಿ ಮಯನು ಧರ್ಮರಾಯನಿಗೆ ಒಂದು ಅದ್ಭುತ ಅರಮನೆಯನ್ನೂ ವಾಸಗೃಹಗಳನ್ನೂ ಸಭಾಮಂದಿರವನ್ನೂ ಮಯಸಭೆಯನ್ನೂ ಕಟ್ಟಿಸಿಕೊಟ್ಟನಂತೆ. ರಾಜಸೂಯಯಾಗಕ್ಕಾಗಿ ಕಟ್ಟಿಕೊಟ್ಟ ಸಭಾಗೃಹ ಅದು. ಮುಂದೆ ಮಯನು ಶಿವನ ಅಜ್ಞೆಯಂತೆ ಕೃಷ್ಣಶತ್ರುವಾದ ಸಾಲ್ವನಿಗೆ ಸೌಭನಗರವನ್ನು ನಿರ್ಮಿಸಿಕೊಟ್ಟ. ಅಸುರರಿಗಾಗಿ ಕಾಮಗಮನ ಶಕ್ತಿಯುಳ್ಳ ತ್ರಿಪುರವನ್ನು ನಿರ್ಮಿಸಿಕೊಟ್ಟು ಉಪಕಾರ ಮಾಡಿದ.
ಮಯಶಿಲ್ಪಿಯ ಸಾಧನೆಯನ್ನು ಮೆಚ್ಚಿದ ದೇವತೆಗಳು ಅವನಿಗೆ ಹೇಮ ಎಂಬ ಕನ್ಯೆಯನ್ನು ಕೊಟ್ಟು ಮದುವೆ ಮಾಡಿದರು. ಮಯನು ಆಕೆಯ ಹೆಸರಿನಲ್ಲಿ ಒಂದು ಸುಂದರ ನಗರಿಯನ್ನು ನಿರ್ಮಿಸಿ ಅಲ್ಲಿ ಅವಳೊಂದಿಗೆ ಸಂಸಾರ ಮಾಡುತ್ತಿದ್ದ. ಇಂಥ ಉನ್ನತಮಟ್ಟದ ವಿಶ್ವಕಲಾವಿದನನ್ನು ಅವನ ಹೆಂಡತಿ ಕೈಬಿಟ್ಟುಹೋದದ್ದು ಮಯನ ಮುಂದಿನ ಬದುಕಿನ ಒಂದು ದುರಂತಘಟ್ಟ ಎಂದು ಹೇಳಬಹುದು.
ಮಯನ ಶಿಲ್ಪಸಾಧನೆಗಳಲ್ಲಿ ಅಪೂರ್ವವಾದ ಮಯಸಭೆಯು ಒಂದೆಂದು ಹೇಳಬಹುದು. ಖಾಂಡವ ವನದಲ್ಲಿ ಮಯನು ಸಿಕ್ಕಿ ಹಾಕಿಕೊಂಡಾಗ ಅರ್ಜುನ ಬಿಡಿಸಿದನಷ್ಟೆ ಆದ್ದರಿಂದ ಕೃತಜ್ಞತಾಪೂರ್ವಕವಾಗಿ ಮಯನು ಪಾಂಡವರಿಗೆ ಸ್ಮರಣೀಯ ಕಾಣಿಕೆಯೊಂದನ್ನು ನೀಡಲು ಬಯಸಿ ಈ ವಿಚಾರವನ್ನು ಶ್ರೀಕೃಷ್ಣನಲ್ಲಿ ಪ್ರಸ್ತಾವಿಸಿದ. ಕೃಷ್ಣ ಸಲಹೆ ಇದು:
‘‘ಮಯ! ಮಣಿಮಯ ದೂಲಗಳ ಕಂಬಗಳಿರುವ ಗೋಡೆ, ಪ್ರಕಾರಗಳಿರುವ ನಿರ್ಮಲ ಸ್ವರ್ಣಮಯ ತಾವರೆಗಳಿರುವ ವಜ್ರಮೀನುಗಳು, ಮುತ್ತಿನ ಕಂಬಳು ಇರುವ, ನೀರೋ ನೆಲವೋ ಕಟ್ಟಡವೋ ಬಯಲೋ ಎಂಬ ದೃಶ್ಯಭ್ರಾಂತಿಯನ್ನುಂಟುಮಾಡುವ, ಪುಷ್ಪೋದ್ಯಾನ ಜಲಸಮೃದ್ಧಿಗಳಿಂದ ಮೆರೆಯುವ ಅಭೂತಪೂರ್ವ ಕಟ್ಟಡವೊಂದನ್ನು ನೀನು ಕಟ್ಟಿಸಿಕೊಡು’’. ಮಯನು ಅವನ ಆಸೆಯಂತೆಯೇ ಯಂತ್ರಮಯವಾದ, ಸಾರ್ವರ್ತುಕೋದ್ಯಾನದಿಂದ ಕಂಗೊಳಿಸುವ ನಯನಮನೋಹರವಾದ ಅರಮನೆಯನ್ನು ಹದಿನಾಲ್ಕು ತಿಂಗಳ ಅವಧಿಯಲ್ಲಿ ನಿರ್ಮಿಸಿಕೊಟ್ಟ. ಎಂಟು ಸಆವಿರ ಜನ ದೈತ್ಯ ಕರ್ಮಚಾರಿಗಳು ಎಲ್ಲೋ ಸಿದ್ಧಪಡಿಸಿ ಆ ವಸ್ತುಗಳನ್ನು ಅಂತರಿಕ್ಷ ಮಾರ್ಗದಲ್ಲಿ ಹೊತ್ತು ತಂದು ಜೋಡಿಸಿಕೊಟ್ಟರು. ಅವನು ಕಟ್ಟಿದ ಕೊಳ, ಮನೆ, ಬಯಲು, ಕಟ್ಟಡ ಪ್ರವೇಶದ್ವಾರಗಳು ದುರ್ಯೋಧನನಿಗೆ ಕಸಿವಿಸಿಯಾಗುವಷ್ಟು ಧೃಷ್ಟಿಭ್ರಮೆಯನ್ನು ಉಂಟುಮಾಡುವಷ್ಟು ವೈಶಿಷ್ಟ್ಯಮಯವಾಗಿದ್ದುವು. ಇಂದು ಭಾರತೀಯ ಶಿಲ್ಪಲೋಕದಲ್ಲಿ ನಯಗಾರಿಕೆ, ಅಂದ, ವೈಭವಗಳಿಗೆ ಮಯ ಹೆಸರುವಾಸಿಯಾಗಿದ್ದಾನೆ.
ಮೂಲ ...{Loading}...
ಖಗ ಚತುಷ್ಟಯ ಮಯ ಸಹಿತವುರಿ
ಯುಗುಳಿತುಳಿದ ಸಮಸ್ತ ಭೂತಾ
ಳಿಗಳನಾಹುತಿಗೊಂಡನಗ್ನಿ ಧನಂಜಯಾಜ್ಞೆಯಲಿ
ಗಗನದಿಂದಿಳಿತಂದು ಸುರಪತಿ
ಮಗನ ಮನ್ನಿಸಿ ಕೊಟ್ಟನಗ್ಗದ
ಗಗನಮಣಿಗೆಣೆಯೆನಿಪ ಮಕುಟವನೊಲಿದು ಪಾರ್ಥಂಗೆ ॥67॥
೦೬೮ ಹರಿಗೆ ವನ್ದಿಸಿ ...{Loading}...
ಹರಿಗೆ ವಂದಿಸಿ ಮಗನನೊಲಿದಾ
ದರಿಸಿ ಮರಳಿದನಿಂದ್ರನಿತ್ತಲು
ಭರದಿನಿವರೈತಂದರಿಂದ್ರಪ್ರಸ್ಥ ಪುರವರಕೆ
ಧರಣಿಪತಿಗಾ ಖಾಂಡವದ ದ
ಳ್ಳುರಿಯ ಹೋಮದ ಹೊಸ ಕಥೆಯ ವಿ
ಸ್ತರಿಸಿ ಹೇಳಿದನಸುರರಿಪು ಭೀಮಾದಿಗಳು ನಲಿಯೆ ॥68॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕೃಷ್ಣನಿಗೆ ವಂದಿಸಿ, ಮಗನನ್ನು ಪ್ರೀತಿಯಿಂದ ಆದರಿಸಿ ಇಂದ್ರನು ಹಿಂತಿರುಗಿದನು. ಇತ್ತಕಡೆ ಇವರು ಇಂದ್ರಪ್ರಸ್ಥ ಪುರಕ್ಕೆ ವೇಗದಿಂದ ಬಂದರು. ಧರ್ಮರಾಜನಿಗೆ ಆ ಖಾಂಡವವನದ ದೊಡ್ಡ ಉರಿಯ ಹೋಮದ ಕಥೆಯನ್ನು ಕೃಷ್ಣನು ವಿಸ್ತಾರವಾಗಿ ಭೀಮಾದಿಗಳು ನಲಿಯುವಂತೆ ಹೇಳಿದನು.
ಮೂಲ ...{Loading}...
ಹರಿಗೆ ವಂದಿಸಿ ಮಗನನೊಲಿದಾ
ದರಿಸಿ ಮರಳಿದನಿಂದ್ರನಿತ್ತಲು
ಭರದಿನಿವರೈತಂದರಿಂದ್ರಪ್ರಸ್ಥ ಪುರವರಕೆ
ಧರಣಿಪತಿಗಾ ಖಾಂಡವದ ದ
ಳ್ಳುರಿಯ ಹೋಮದ ಹೊಸ ಕಥೆಯ ವಿ
ಸ್ತರಿಸಿ ಹೇಳಿದನಸುರರಿಪು ಭೀಮಾದಿಗಳು ನಲಿಯೆ ॥68॥
೦೬೯ ಧಾರುಣೀಶ್ವರರೈವರನು ಸುಕು ...{Loading}...
ಧಾರುಣೀಶ್ವರರೈವರನು ಸುಕು
ಮಾರ ವರ್ಗವನಾ ಸುಭದ್ರಾ
ನಾರಿಯನು ಪಾಂಚಾಲೆಯನು ತತ್ಸಕಲ ಬಾಂಧವರ
ಸೂರಿಗಳ ಸಚಿವಾದಿ ನೃಪ ಪರಿ
ವಾರವನು ಪತಿಕರಿಸಿ ಬಂದನು
ದೋರಕಿಗೆ ಹರುಷದಲಿ ಗದುಗಿನ ವೀರನಾರಯಣ ॥69॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಇದಾದ ಬಳಿಕ ಐವರು ಭೂಮೀಶ್ವರರನ್ನೂ, ಸುಕುಮಾರ ವರ್ಗವನ್ನೂ ಸುಭದ್ರೆಯನ್ನು, ಪಾಂಚಾಲೆಯನ್ನು, ಉಳಿದ ಸಕಲ ಬಾಂಧವರನ್ನು ಪಂಡಿತರನ್ನು ಮಂತ್ರಿಗಳೇ ಮೊದಲಾದ ರಾಜನ ಪರಿವಾರದವರನ್ನು - ಎಲ್ಲರನ್ನು ಉಪಚರಿಸಿ ಸಂತೋಷದಿಂದ ಶ್ರೀಕೃಷ್ಣನು ದ್ವಾರಕೆಗೆ ಬಂದನು.
ಪದಾರ್ಥ (ಕ.ಗ.ಪ)
ಸೂರಿ-ಪಂಡಿತ, ಪತಿಕರಿಸು-ಉಪಚರಿಸು
ಮೂಲ ...{Loading}...
ಧಾರುಣೀಶ್ವರರೈವರನು ಸುಕು
ಮಾರ ವರ್ಗವನಾ ಸುಭದ್ರಾ
ನಾರಿಯನು ಪಾಂಚಾಲೆಯನು ತತ್ಸಕಲ ಬಾಂಧವರ
ಸೂರಿಗಳ ಸಚಿವಾದಿ ನೃಪ ಪರಿ
ವಾರವನು ಪತಿಕರಿಸಿ ಬಂದನು
ದೋರಕಿಗೆ ಹರುಷದಲಿ ಗದುಗಿನ ವೀರನಾರಯಣ ॥69॥
೦೭೦ ಇತಿ ಶ್ರೀಮದಚಿನ್ತ್ಯ ...{Loading}...
ಇತಿ ಶ್ರೀಮದಚಿಂತ್ಯ ಮಹಿಮ ಗದುಗಿನ
ವೀರನಾರಾಯಣ ಚರಣಾರವಿಂದ ಮಕರಂದ
ಮಧುಪಾನ ಪರಿಪುಷ್ಟ ವಚಃ ಷಟ್ಪದೀ ನಿಕಾಯ
ಶ್ರೀಮತ್ಕುಮಾರವ್ಯಾಸ ಯೋಗೀಂದ್ರ ವಿರಚಿತಮಪ್ಪ
ಕರ್ಣಾಟ ಭಾರತ ಕಥಾಮಂಜರಿಯೊಳ್
ಆದಿಪರ್ವಂ ಸಮಾಪ್ತಮಾದುದು.
ಸರ್ವ-ಟೀಕೆಗಳು ...{Loading}...
ಮೂಲ ...{Loading}...
ಇತಿ ಶ್ರೀಮದಚಿಂತ್ಯ ಮಹಿಮ ಗದುಗಿನ
ವೀರನಾರಾಯಣ ಚರಣಾರವಿಂದ ಮಕರಂದ
ಮಧುಪಾನ ಪರಿಪುಷ್ಟ ವಚಃ ಷಟ್ಪದೀ ನಿಕಾಯ
ಶ್ರೀಮತ್ಕುಮಾರವ್ಯಾಸ ಯೋಗೀಂದ್ರ ವಿರಚಿತಮಪ್ಪ
ಕರ್ಣಾಟ ಭಾರತ ಕಥಾಮಂಜರಿಯೊಳ್
ಆದಿಪರ್ವಂ ಸಮಾಪ್ತಮಾದುದು.