೨೦

೦೦೦ ಸೂ ಖಾಣ್ಡವದ ...{Loading}...

ಸೂ. ಖಾಂಡವದ ವನ ದಹನ ದಾವೋ
ಚ್ಚಂಡ ಗಂಡರ ಗಂಡ ದಿವಿಜರ
ಹಿಂಡು ಗೋಳಿಡೆ ಧಾಳಿಯಿಟ್ಟನು ಚಂಡ ಗಾಂಡೀವಿ

೦೦೧ ಕೇಳು ಜನಮೇಜಯ ...{Loading}...

ಕೇಳು ಜನಮೇಜಯ ಧರಿತ್ರೀ
ಪಾಲ ಪಾರ್ಥ ಸುಭದ್ರೆಯಲಿ ಭೂ
ಪಾಲತಿಲಕನು ಜನಿಸಿದನಲೈ ಜಾತ ಮಾತ್ರದಲಿ
ಮೇಲು ಮೊಳಗಿನ ದುಂದುಭಿಯ ದಿವಿ
ಜಾಳಿಗಳ ಹೂವಳೆಯ ಹರುಷದ
ಮೇಳವದ ಮೈಸಿರಿಯನೇನೆಂಬೆನು ಧನಂಜಯನ ॥1॥

೦೦೨ ಕಲಿತನಕೆ ನೆಲೆಯಾಯ್ತು ...{Loading}...

ಕಲಿತನಕೆ ನೆಲೆಯಾಯ್ತು ಭುಜದ
ಗ್ಗಳಿಕೆಗಾಸ್ಪದವಾಯ್ತು ನಿಜ ಚಾ
ಪಳವ ಬಿಸುಟಳು ವೀರಸಿರಿ ವಿಕ್ರಮದ ಸಿರಿಸಹಿತ
ಹಳಿವು ಕಳವಳ ಭೀತಿ ಭಂಗ
ಸ್ಖಲನ ಕಂಪನವೆಂಬವಾತನ
ನೆಳಲ ಸೀಮೆಯ ಸೋಂಕಲಮ್ಮವು ಭೂಪ ಕೇಳ್ ಎಂದ ॥2॥

೦೦೩ ಜಾತಕರ್ಮದನನ್ತರದ ವಿ ...{Loading}...

ಜಾತಕರ್ಮದನಂತರದ ವಿ
ಖ್ಯಾತ ನಾಮ ವಿಧಾನವನು ಸಂ
ಪ್ರೀತಿಯಲಿ ಮಾಡಿದನು ಋಷಿ ಭೂಪತಿಯನುಜ್ಞೆಯಲಿ
ವೀತ ಭಯನಭಿಮನ್ಯುವೆನೆ ರಿಪು
ಜಾತ ನಡುಗಿತು ಲೋಕ ಮೂರರೊ
ಳೀತನುದಯದ ಕೀರ್ತಿ ಪಸರಿಸಿತರಸ ಕೇಳ್ ಎಂದ ॥3॥

೦೦೪ ಯಮಸುತಗೆ ಭೀಮಗೆ ...{Loading}...

ಯಮಸುತಗೆ ಭೀಮಗೆ ಕಿರೀಟಿಗೆ
ಯಮಳರಿಗೆ ಸುಕುಮಾರಕರು ನಿಜ
ರಮಣಿಯಲಿ ಜನಿಸಿದರು ಶ್ರುತಸೋಮಕನು ಪ್ರತಿವಿಂದ್ಯ
ವಿಮಲ ಶ್ರುತಕೀರ್ತಿ ಪ್ರತಾಪೋ
ತ್ತಮನು ಶ್ರುತಸೇನಾಖ್ಯನುರು ವಿ
ಕ್ರಮ ಶತಾನೀಕಾಭಿಧಾನರು ದ್ರುಪದ ತನುಜೆಯಲಿ ॥4॥

೦೦೫ ಇವರು ಕಳುಹಿದ ...{Loading}...

ಇವರು ಕಳುಹಿದ ಹರುಷ ವಾರ್ತಾ
ಶ್ರವಣ ರಸದಲಿ ಮನಮುಳುಗಿ ಯಾ
ದವ ಶಿರೋಮಣಿ ರಾಮ ವಸುದೇವಾದಿಗಳು ಸಹಿತ
ಇವರ ಪುರಕೈತಂದರಿವರು
ತ್ಸವದಿದಿರ್ಗೊಂಡೊಸಗೆಯಲಿ ಬಾಂ
ಧವರ ಸಂಭಾವಿಸಿದರೈ ಯಮನಂದನಾದಿಗಳು ॥5॥

೦೦೬ ಅರಸಿ ಕಾಣವು ...{Loading}...

ಅರಸಿ ಕಾಣವು ವೇದತತಿ ತಾ
ನರಸಿ ಬಂದನು ಭಕ್ತರನು ತನ
ಗೆರಗಿ ಮೆಚ್ಚಿಸಲರಿಯರಜ ರುದ್ರಾಮರೇಶ್ವರರು
ಎರಗುವನು ಯಮಜಂಗೆ ತನ್ನನು
ಕುರುಹುಗಾಣವು ವೇದಶಿರವಿದು
ಮರವೆಯೋ ಹರಿ ಬಂದು ಕಂಡನು ಧರ್ಮನಂದನನ ॥6॥

೦೦೭ ಲೀಲೆಯೋಯಿದು ಮೇಣು ...{Loading}...

ಲೀಲೆಯೋಯಿದು ಮೇಣು ಕೃಷ್ಣನ
ಬಾಲಕೇಳಿಯ ನೆನಹೊ ಬೊಮ್ಮದ
ಕೌಳಿಕದ ಕಣುಮಾಯೆಯೋ ಶಿವಶಿವ ಮಹಾದೇವ
ಕಾಲಿಗೆರಗಿದ ಕೃಷ್ಣನನು ಭೂ
ಪಾಲ ತೆಗೆದಪ್ಪಿದನು ನಿಗಮದ
ಮೌಳಿ ತಲೆವಾಗಿದವು ಲಜ್ಜಾ ಭೂರಿಭಾವದಲಿ ॥7॥

೦೦೮ ಅರಸ ಸಹಿತ ...{Loading}...

ಅರಸ ಸಹಿತ ಸಮಸ್ತ ಯಾದವ
ಪರಿಕರದ ಮೇಳದಲಿ ಯಾದವ
ರರಸು ಬಿಜಯಂಗೈದು ಕುಂತಿಯ ಸುತರ ಭವನದಲಿ
ಅರಸಿಯರ ಸುಕುಮಾರ ವರ್ಗವ
ಕರೆಸಿ ಕಾಣಿಸಿಕೊಂಡು ದಿವ್ಯಾ
ಭರಣ ವಸನಾದಿಯಲಿ ಮನ್ನಿಸಿದನು ಮಹೀಶ್ವರರ ॥8॥

೦೦೯ ಜಲಧಿ ಮಧ್ಯದೊಳಿರವೊ ...{Loading}...

ಜಲಧಿ ಮಧ್ಯದೊಳಿರವೊ ಗಗನ
ಸ್ಥಳವೊ ಮೇಣು ಮಹಾಂಧಕಾರದ
ಕಳಿವುಗಳ ವೈಕುಂಠವೋ ಮುನಿಜನದ ಹೃದ್ಗುಹೆಯೊ
ತಿಳಿಯೆ ಸಚರಾಚರದ ಚೇತನ
ದೊಳಗೆಯೋ ನೆಲೆಯಾವುದೆಂಬ
ಗ್ಗಳೆಯ ದೈವದ ನಿಲವ ಕಂಡೆನು ಪಾರ್ಥಭವನದಲಿ ॥9॥

೦೧೦ ಈತನರ್ಜುನನರಮನೆಯೊಳಭಿ ...{Loading}...

ಈತನರ್ಜುನನರಮನೆಯೊಳಭಿ
ಜಾತನೆನಿಪಭಿಮನ್ಯುವನು ಸಂ
ಪ್ರೀತಿಯಿಂದಪ್ಪಿದನು ಕೊಟ್ಟನು ಬಾಲದೊಡಿಗೆಗಳ
ಖ್ಯಾತಪಂಚ ದ್ರೌಪದಿಯ ಸಂ
ಜಾತರನು ಮನ್ನಿಸಿ ಮಹಾ ವಿಭ
ವಾತಿಶಯದಲಿ ಪತಿಕರಿಸಿದನು ಪಾಂಡುನಂದನರ ॥10॥

೦೧೧ ಅರಸ ಕೇಳೈ ...{Loading}...

ಅರಸ ಕೇಳೈ ಹಲವು ದಿನ ಸಂ
ಚರಿಸಿ ಸೌಖ್ಯದೊಳಿರ್ದು ತಮ್ಮಯ
ಪುರಿಗೆ ಬಲಭದ್ರನನು ಯಾದವರಾಯ ದಳಸಹಿತ
ಹರಿ ಸಮಾಧಾನದಲಿ ಕಳುಹಿಸಿ
ನರನೊಡನೆ ವೈಹಾಳಿ ಮೃಗಯಾ
ವರ ವಿಹಾರದೊಳಿದ್ದನಿಂದ್ರಪ್ರಸ್ಥ ನಗರಿಯಲಿ ॥11॥

೦೧೨ ಹರಿ ಧನಞ್ಜಯರೊನ್ದು ...{Loading}...

ಹರಿ ಧನಂಜಯರೊಂದು ದಿನ ಮೃಗ
ಹರಣ ಕೇಳಿಕಳಾಪದಲಿ ಸಂ
ಚರಿಸಿ ಬನದಲಿ ಬಹಳ ಮಾರ್ಗಶ್ರಮದ ಭಾರದಲಿ
ಬರುತ ನೀರಡಸಿದರು ಕಂಡರು
ಸರಸಿಯನು ರಥವಿಳಿದು ನೆಳಲಲಿ
ಪರಿಹೃತಶ್ರಮರಾಗೆ ಹರಿ ಹೊಕ್ಕನು ಸರೋವರವ ॥12॥

೦೧೩ ಆ ಸಮಯದಲಿ ...{Loading}...

ಆ ಸಮಯದಲಿ ಬಂದನೊಬ್ಬನು
ಭೂಸುರನು ಕಿಡಿಗಳ ತುಷಾರದ
ಮೀಸೆ ಗಡ್ಡದ ಸುಳಿದಲೆಯ ಕಬ್ಬೊಗೆಯ ಜುಂಜುಗಳ
ಬಾಸರದ ಬಳಲುಡಿಗೆ ಮಟ್ಟಿಯ
ಧೂಸರದ ಮೈದೊಡಿಗೆ ಮೆರೆಯೆ ವಿ
ಲಾಸದಲಿ ನಡೆತಂದನರ್ಜುನ ದೇವನಿದ್ದೆಡೆಗೆ ॥13॥

೦೧೪ ಹರಸಿ ವೇದಾರ್ಥವನು ...{Loading}...

ಹರಸಿ ವೇದಾರ್ಥವನು ಮಿಗೆ ವಿ
ಸ್ತರಿಸಿ ಕೊಂಡಾಡಿದನು ವಿಪ್ರನ
ಪರಮ ಯೋಗ್ಯತೆಗಾರು ಸರಿ ಪರಮೇಷ್ಠಿ ಹೊರತಾಗಿ
ಬರವಿದೇನೆನಗೇನನುಗ್ರಹ
ವರಿಸಿದರೆ ನಿಮ್ಮಿಷ್ಟವನು ಗೋ
ಚರಿಸುವೆನು ತಾನೆನುತ ನುಡಿದನು ಪಾರ್ಥ ಭೂಸುರಗೆ ॥14॥

೦೧೫ ಪಾರ್ಥ ಕೇಳತಿಗಹನವೇನ್ ...{Loading}...

ಪಾರ್ಥ ಕೇಳತಿಗಹನವೇನ್ ಗ್ರಾ
ಸಾರ್ಥಿಗಳು ನಾವಾದೆವೆಮ್ಮಿ
ಷ್ಟಾರ್ಥಸಿದ್ಧಿಯ ಘಟಿಸು ಸಾಕು ಸಮಗ್ರ ಫಲವಹುದು
ತೀರ್ಥವೇಕಿನ್ನತಿಥಿಯಿರಲು ಪ
ರಾರ್ಥಸಾಧನತನವೆ ಪರಮ
ಸ್ವಾರ್ಥವೆಂಬರು ಸುಜನರೆಂದನು ಕಪಟದ್ವಿಜ ನಗುತ ॥15॥

೦೧೬ ಕೊಟ್ಟೆನೆನ್ದನು ...{Loading}...

ಕೊಟ್ಟೆನೆಂದನು ಪಾರ್ಥನಿವರೊಡ
ಬಟ್ಟರೀ ನುಡಿಗೇಳಿ ದನುಜ ಘ
ರಟ್ಟ ಬಂದನು ಹದನನರಿದನು ಹವ್ಯವಾಹನನ
ಕೊಟ್ಟುದೇನು ಕಿರೀಟಿಯಿವರೇ
ಮುಟ್ಟಿದರೆ ಮುನಿವವರಲೈ ನೀ
ಕೊಟ್ಟುದುಣ ಬಡಿಸುವುದು ಭಾರವಿದೆಂದನಸುರಾರಿ ॥16॥

೦೧೭ ಮುಖರನಾದೈ ಪಾರ್ಥ ...{Loading}...

ಮುಖರನಾದೈ ಪಾರ್ಥ ಬರ್ಹಿ
ರ್ಮುಖರ ಬಾಣಸದಾತನೀತನು
ಸುಖವೆ ಹೇಳೈ ತಂದೆ ಖಾಂಡವ ವನದ ನಿರ್ದಹನ
ನಿಖಿಳನಿರ್ಜರಬಲಸಹಿತ ಶತ
ಮಖನೊಡನೆ ವಿಗ್ರಹವಲಾ ಸಂ
ಮುಖಕೆ ಬಂದುದು ಭಂಗವೆಂದನು ನಗುತ ಮುರವೈರಿ ॥17॥

೦೧೮ ಭಙ್ಗವೇಕೈ ಕೃಷ್ಣ ...{Loading}...

ಭಂಗವೇಕೈ ಕೃಷ್ಣ ನಿರ್ಜರ
ಪುಂಗವನ ಗೆಲಿದವನ ಬಾಣಸಿ
ಗಂಗೆ ಬಾಣಸ ಮಾಡುವೆನು ಖಾಂಡವ ಮಹಾವನವ
ಅಂಘವಣೆಯನು ನೋಡು ನೀನೇ
ಕಾಂಗದಲಿ ನಿರ್ವಹಿಸುವೆನು ಭಯ
ಭಂಗವುಂಟೇ ನಿನ್ನ ಕೃಪೆಯಿರಲೆಂದನಾ ಪಾರ್ಥ ॥18॥

೦೧೯ ಮೆಚ್ಚಿದನು ಘೃತಯೋನಿ ...{Loading}...

ಮೆಚ್ಚಿದನು ಘೃತಯೋನಿ ಪೂತುರೆ
ನಿಚ್ಚಟನು ನೀನೆನುತ ಕಿಡಿಗಳ
ಬಿಚ್ಚಲುದುರಿತು ಚಾಪ ಮಾರ್ಗಣ ರಥ ತುರಂಗಚಯ
ಅಚ್ಚರಿಯನೇನೆಂಬೆನೈಸ
ಪ್ತಾರ್ಚಿಯಿತ್ತನು ವನವನಿಂದ್ರನ
ಮುಚ್ಚು ಮರೆಯೇಕಿನ್ನು ನಮಗುಣ ಬಡಿಸು ಸಾಕೆಂದ ॥19॥

೦೨೦ ಧರಣಿಪತಿ ಕೇಳಗ್ನಿಯಿತ್ತನು ...{Loading}...

ಧರಣಿಪತಿ ಕೇಳಗ್ನಿಯಿತ್ತನು
ಹರಿ ಧನಂಜಯರಿಗೆ ರಥಂಗಳ
ನುರು ಶರಾವಳಿ ದಿವ್ಯಧನು ಕೌಮೋದಕೀ ಗದೆಯ
ವರ ತನುತ್ರ ಸಿತಾಶ್ವವಕ್ಷಯ
ಶರ ನಿಷಂಗಾದಿಗಳ ನಿವರು
ಬ್ಬರಿಸಿದರು ಹರುಷದಲಿ ನೆನೆದರು ನಯನ ವಾರಿಯಲಿ ॥20॥

೦೨೧ ಹೂಡಿದರು ರಥವೆರಡನಿವರು ...{Loading}...

ಹೂಡಿದರು ರಥವೆರಡನಿವರು ಸ
ಘಾಡದಲಿ ಕಪಿ ಗರುಡ ಸಿಂಧವ
ಜೋಡಿಸಿದರೇರಿದರು ನಗುತ ಧನಂಜಯಾಚ್ಯುತರು
ಮೂಡಿಗೆಯ ಮೊನೆಗಣೆಗಳಿಗೆ ಕೈ
ನೀಡಿಬೊಬ್ಬಿರಿದರು ದಿಗಂತವ
ನೀಡಿರಿದುದಬ್ಬರಣೆ ಬಿರಿದುದು ಧರಣಿ ಧಾಳಿಯಲಿ ॥21॥

೦೨೨ ಬೊಬ್ಬಿರಿದು ಹರಿ ...{Loading}...

ಬೊಬ್ಬಿರಿದು ಹರಿ ಪಾಂಚಜನ್ಯವ
ನುಬ್ಬಿ ಧ್ವನಿ ಮಾಡಿದನು ಪಾರ್ಥನ
ತೆಬ್ಬಿನಬ್ಬರ ತೀವಿತಾ ಬ್ರಹ್ಮಾಂಡ ಮಂಡಲವ
ಗಬ್ಬರಿಸಿದುದು ಗಗನವನು ಶರ
ದುಬ್ಬರದ ಬಲುಗಿಡಿಯ ಗಡಣವು
ಹಬ್ಬಿ ಹರಿದವು ದೆಸೆದೆಸೆಗೆ ನರನಾಥಕೇಳ್ ಎಂದ ॥22॥

೦೨೩ ಧಾಳಿಯಿಟ್ಟರು ಸುರವನಕೆ ...{Loading}...

ಧಾಳಿಯಿಟ್ಟರು ಸುರವನಕೆ ಸುರ
ಜಾಲ ಸರಿಯಿತು ಬೊಬ್ಬೆಯಲಿ ದೆ
ಖ್ಖಾಳಿಸಿದುದುತ್ಪಾತ ಶತ ಖಾಂಡವದ ಮಧ್ಯದಲಿ
ಕೂಳಿಗಳ ಕುಡಿ ಮೀನವೋಲ್ವಿಹ
ಗಾಳಿ ಹುದುಗಿತು ನಡುಗಿದರು ವನ
ಪಾಲಕರು ನಿಂದೊಣಗಿದವು ಹರಿ ಚಂದನಾದಿಗಳು ॥23॥

೦೨೪ ತೂಗಿ ಬಾಣವ ...{Loading}...

ತೂಗಿ ಬಾಣವ ಹೂಡಿ ಕಿವಿವರೆ
ಗಾಗಿ ಬರಸೆಳೆದಾರಿ ಬೊಬ್ಬಿರಿ
ದಾಗಲಿಂತೆಂದನು ಧನಂಜಯನಾ ಧನಂಜಯಗೆ
ಈಗಲೀ ವನದೊಳಗೆ ಖಗ ಮೃಗ
ನಾಗ ಸುರ ದನುಜಾದಿ ಜೀವರ
ಹೋಗಲೀಯದೆ ತರುಬಿ ಶರದಲಿ ಕಾಯಬೇಕೆಂದ ॥24॥

೦೨೫ ಹೈ ಸಮಗ್ರಾತಿಥ್ಯದಲಿ ...{Loading}...

ಹೈ ಸಮಗ್ರಾತಿಥ್ಯದಲಿ ನಿಮ
ಗೀ ಸಮಸ್ತಪ್ರಾಣಿಸಹಿತ ಸು
ರೇಶನುದ್ಯಾನವನು ಕೊಟ್ಟೆನು ಬಾಣ ಧಾರೆಯಲಿ
ನೀ ಸಮಾಧಾನದಲಿ ಸುಪುರೋ
ಡಾಶವಿದೆ ಸಮಿದಾಜ್ಯ ಸಹಿತ ಮ
ಹಾ ಸುವಿಸ್ತಾರದಲಿ ಕೊಂಬುದು ಭೀತಿ ಬೇಡೆಂದ ॥25॥

೦೨೬ ಎನುತ ಬಿಡೆ ...{Loading}...

ಎನುತ ಬಿಡೆ ತಿರುವಾಯನೊದೆದು
ಬ್ಬಿನಲಿ ಬೊಬ್ಬಿರಿದಂಬು ಸುರಪನ
ವನವ ಮುತ್ತಿತು ಕೂಡೆ ಹೊತ್ತಿತು ಹೊಗೆಯ ಹೊರಳಿಯಲಿ
ತನಿಗಿಡಿಯ ದಳ್ಳುರಿಯ ನಾಲಿಗೆ
ಕೊನೆಗಳಲ್ಲಾಡಿದವು ಕಡು ಲಾ
ಗಿನಲಿ ಲಂಬಿಸಿ ಚುಂಬಿಸಿದುದರಿ ಲಲಿತ ನಂದನವ ॥26॥

೦೨೭ ಹೊದರಿನಲಿ ಭುಗುಭುಗಿಲು ...{Loading}...

ಹೊದರಿನಲಿ ಭುಗುಭುಗಿಲು ಭುಗಿಲೆಂ
ದೊದೆದುದುರಿಯಂಬರವನೊಣಗಿದ
ಬಿದಿರ ಮೆಳೆಯಲಿ ಧಗಧಗಿಸಿ ಛಟಛಟನೆ ಛಟಛಟಿಸಿ
ಕದಲಿ ಖರ್ಜೂರಾದಿ ತರು ಜಾ
ಲದಲಿ ಸಿಮಿ ಸಿಮಿ ಸಿಮಿ ಸಿಮಾಯತ
ವೊದಗೆ ಗಹನೋದರದೊಳಗೆ ಘಾಡಿಸಿತು ಘನ ವಹ್ನಿ ॥27॥

೦೨೮ ಏನನೆಮ್ಬೆನು ದಿವಿಜ ...{Loading}...

ಏನನೆಂಬೆನು ದಿವಿಜ ರಾಜೋ
ದ್ಯಾನಹಾನಿಯನಾತನಾಳು ಕೃ
ಶಾನುವಿನ ತನಿಗೊಬ್ಬನೀ ಕೃಷ್ಣಾರ್ಜುನರ ಬಲುಹ
ಆ ನಿಖಿಳ ನಿರ್ಜರರು ತಾಗಿ ವಿ
ಮಾನ ಗತಿಯಲಿ ಹಾಯ್ದರಂದವ
ಮಾನಗತಿಯಲಿ ಗಗನದಲಿ ಗೀರ್ವಾಣಪತಿ ಪುರಕೆ ॥28॥

೦೨೯ ಹೊಗೆಯ ಬಳಿಯಲಿ ...{Loading}...

ಹೊಗೆಯ ಬಳಿಯಲಿ ತಳಿತ ಹುಯ್ಯಲ
ಬೆಗಡಿದೇನೋ ಕೇಳೆನುತ ಸಿರಿ
ಮೊಗದ ದುಗುಡದ ಸಾವಿರಾಲಿಯೊಳೊಗುವ ಕಿಡಿಗಳಲಿ
ಹಗೆಗಳಾರು ನಿವಾತ ಕವಚಾ
ದಿಗಳೊ ತಾನಾರೆಂಬ ಶಕ್ರನ
ದುಗುಡವನು ದೇವಾಳಿ ಕಂಡುದು ದೂರಿದರು ನರನ ॥29॥

೦೩೦ ನಿನಗೆ ಮಗನೇ ...{Loading}...

ನಿನಗೆ ಮಗನೇ ಪಾರ್ಥ ನಿನ್ನರ
ಮನೆಯ ಬಾಣಸದಾತನೇ ಶಿಖಿ
ಯನುಜನೇ ಮುರವೈರಿ ನಿನಗನುಕೂಲರಾದರೆಲೆ
ಬನದ ಬೇಗೆಯೊ ಪರಿಭವಾಲಂ
ಬನದ ವೊಸಗೆಯೊ ಬಂದುದಿದೆ ಬಿಡು
ಮನೆಯ ಮನ್ನೆಯ ಗಂಡನಾಗೆಂದುದು ಸುರಸ್ತೋಮ ॥30॥

೦೩೧ ಐಸಲೇ ನಮ್ಮವರಲಾ ...{Loading}...

ಐಸಲೇ ನಮ್ಮವರಲಾ ಹೋ
ಹೋ ಸುರರು ಕಳವಳಿಸದಿರಿಯಾ
ಪೈಸನಾಹುತಿಗೊಳಲಿ ಪಾವಕನೆಮ್ಮ ಖಾಂಡವವ
ಈ ಸುರರಿಗಾ ನರರಿಗಂತರ
ವೇಸು ಪೂತುರೆ ಕಾಲಗತಿಯೆನು
ತಾ ಸುರೇಶ್ವರ ಖಾತಿಗೊಂಡನು ಕೃಷ್ಣ ಪಾರ್ಥರಿಗೆ ॥31॥

೦೩೨ ಕಾಹು ತೆಗೆಯಲಿ ...{Loading}...

ಕಾಹು ತೆಗೆಯಲಿ ಕಲ್ಪಮೇಘ
ವ್ಯೂಹಗಳ ಬರಹೇಳು ಕಾಂಬೆನು
ಸಾಹಸವನಿದರೊಳಗೆ ಕೃಷ್ಣ ಧನಂಜಯ ದ್ವಯದ
ಈ ಹದಕೆ ಪಡಿ ಪುಚ್ಛವಿಲ್ಲವ
ಗಾಹಿಸಲಿ ಖಾಂಡವವ ಹುಲ್ಲೆಯ
ಹೂಹೆಗಳು ಹೆಬ್ಬುಲಿಗೆ ಹಾಯ್ವವೆನುತ್ತ ಗರ್ಜಿಸಿದ ॥32॥

೦೩೩ ಅರಸ ಕೇಳ್ಕಲ್ಪಾನ್ತ ...{Loading}...

ಅರಸ ಕೇಳ್ಕಲ್ಪಾಂತ ಮೇಘೋ
ತ್ಕರದ ಪಾಳಯವೆತ್ತಿ ಬಿಟ್ಟುದು
ಧರಣಿಯಗಲಕೆ ಧಾಳಿಯಿಟ್ಟವು ಸಿಡಿಲ ಮಿಂಚುಗಳು
ಕರಿಯ ಬರಿಕೈಗೆಣಿಯೆನಿಪ ನಿ
ಷ್ಠುರದ ಧಾರಾಸಾರ ತೆರಳಿಚಿ
ಸುರಿದುದಾ ಖಾಂಡವದ ಸೀಮಾ ಸನ್ನಿವೇಶದಲಿ ॥33॥

೦೩೪ ಆ ಸಕಲ ...{Loading}...

ಆ ಸಕಲ ಸಾಗರವನೊಂದೇ
ಶ್ವಾಸದಲಿ ತೆಗೆದೆತ್ತಿ ಮೊಗುಚಿದ
ವೀ ಸಮಸ್ತ ಬಲಾಹಕಾವಳಿ ಬನದ ಮಧ್ಯದಲಿ
ಏಸು ಸಾಹಸಸತ್ವ ತನಗುಂ
ಟೈಸರಲಿ ತಲೆಯೆತ್ತಿ ಜಲದಲಿ
ಘಾಸಿಯಾದನು ವಹ್ನಿ ನುಡಿದನು ಕೃಷ್ಣ ಪಾರ್ಥರಿಗೆ ॥34॥

೦೩೫ ಕಲಹವಿನ್ದ್ರನ ಕೂಡೆ ...{Loading}...

ಕಲಹವಿಂದ್ರನ ಕೂಡೆ ಕಲ್ಪದ
ಮಳೆಗಳಿವು ಮಾಣಿಸಿದವೂಟವ
ನೆಳೆದವಣಲಿನ ತುತ್ತನರ್ಜುನ ಕಾಯ್ದುಕೊಳ್ಳೆನಲು
ಮಳೆಗೆ ಶರಪಂಜರವ ವಿರಚಿಸಿ
ಬಳಿಕ ವಾಯವ್ಯಾಸ್ತ್ರದಲಿ ನಿ
ಸ್ಖಲಿತಮೇಘವ್ರಜವನೆಚ್ಚನು ಪಾರ್ಥ ವಹಿಲದಲಿ ॥35॥

೦೩೬ ಏನ ಹೇಳುವೆನರಸ ...{Loading}...

ಏನ ಹೇಳುವೆನರಸ ಪಾರ್ಥನ
ನೂನ ಶಕ್ತಿಯನುರುಬಿದನು ಪವ
ಮಾನ ಶರದಲಿ ಪುಷ್ಕಳಾವರ್ತಾದಿ ಘನಘಟೆಯ
ಭಾನು ತಿಮಿರಂಗಳಿಗೆ ಮೇಘ ಮ
ಹಾನಿಲಂಗಳಿಗಾವುದಂತರ
ಸೋನೆ ತೆಗೆದುದು ಹೊಗೆದುದಾ ಖಾಂಡವ ಮಹೋದ್ಯಾನ ॥36॥

೦೩೭ ಹಾರಲೂದಿತು ಮೇಘವನು ...{Loading}...

ಹಾರಲೂದಿತು ಮೇಘವನು ಕಿಡಿ
ತೂರಲುಬ್ಬರಿಸಿದುದು ವಹ್ನಿಯ
ನೇರಿಸಿತು ಖಾಂಡವದೊಳಗೆ ಬಿರುಗಾಳಿ ಸುಳಿಸುಳಿದು
ಮೋರೆಯೊಣಗಿದುದಮರರಿಗೆ ಮೈ
ಮಾರಿಗಳ ಸುಡು ಮೂಲೆಯವದಿರು
ಮೀರಿದರಲಾಯೆನುತ ಸುರಪತಿ ತರಿಸಿದನು ಗಜವ ॥37॥

೦೩೮ ನೆರೆದುದಮರರು ಸಿದ್ಧ ...{Loading}...

ನೆರೆದುದಮರರು ಸಿದ್ಧ ವಿದ್ಯಾ
ಧರ ಮಹೋರಗ ಯಕ್ಷ ರಾಕ್ಷಸ
ಗರುಡ ಕಿನ್ನರ ಸಾಧ್ಯ ಗುಹ್ಯಕ ಭೂತ ಗಂಧರ್ವ
ತರಣಿ ವಸು ರುದ್ರಾದಿಗಳು ಮೋ
ಹರಿಸಿದರು ಮುಂಗುಡಿಯಲಿಂದ್ರನ
ಸಿರಿಯ ರಭಸವನೇನನೆಂಬೆನು ಭೂಪ ಕೇಳ್ ಎಂದ ॥38॥

೦೩೯ ಮಸಗಿತಮರವ್ರಾತವಭ್ರವ ...{Loading}...

ಮಸಗಿತಮರವ್ರಾತವಭ್ರವ
ಮುಸುಕಿದವು ಝಲ್ಲರಿಗಳಿಂದ್ರನ
ವಿಸಸನಕೆ ಮೆಚ್ಚಿಸುವೆ ವಸುಗಳನೆನುತ ತಮತಮಗೆ
ಮುಸುಕಿದರು ಮೃಗರಾಜ ಸಿಂಹದ
ಮುಸುಕನುಗಿವಂದದಲಿ ಬಾಣ
ಪ್ರಸರವನು ಹರಹಿದರು ಮುಂದೆ ಧನಂಜಯಾಚ್ಯುತರ ॥39॥

೦೪೦ ಹೂಣೆ ಮಿಗೆ ...{Loading}...

ಹೂಣೆ ಮಿಗೆ ಹೊಕ್ಕೆಚ್ಚರೋ ಬಹು
ಬಾಣವನು ದೃಢಬಾಣರೋ ಗೀ
ರ್ವಾಣರೋ ನೀವಾರು ನುಡಿಯಿರಲೈ ಮಹಾದೇವ
ಸಾಣೆಯಲಗಿಗೆ ಸಾಲುವಿರಿ ತನಿ
ಶೋಣಿತವ ನೀವ್ಕೊಡದೆ ಸುರಪತಿ
ಯಾಣೆ ಹಿಮ್ಮಟ್ಟಿದರೆನುತ ಬೊಬ್ಬಿರಿದು ನರನೆಚ್ಚ ॥40॥

೦೪೧ ತುರುಗಿ ಕೂರಮ್ಬುಗಳು ...{Loading}...

ತುರುಗಿ ಕೂರಂಬುಗಳು ಮೈಯಲಿ
ಮುರಿದವರ್ಜುನನೆಸುಗೆಯಲಿ ಕೈ
ಮರೆದುದಮರ ನಿಕಾಯ ಕೆದರಿತು ದೊರೆಯ ಮನ್ನಿಸದೆ
ಮುರಿದುದೀ ಕೃಷ್ಣಾರ್ಜುನರ ಬೊ
ಬ್ಬಿರಿತಕವರೆದೆಯೊಡೆಯಲಿಂದ್ರನ
ಮರೆಯ ಹೊಕ್ಕುದು ದೇವಸಂತತಿ ಭೂಪ ಕೇಳ್ ಎಂದ ॥41॥

೦೪೨ ನರರು ರಚಿಸಿದ ...{Loading}...

ನರರು ರಚಿಸಿದ ಹವ್ಯಕವ್ಯೋ
ತ್ತರ ಹವಿರ್ಭಾಗವನು ತಿಂದು
ಬ್ಬರಿಸಿ ದೇವಸ್ತ್ರೀ ಕದಂಬದ ಖೇಳ ಮೇಳದಲಿ
ಇರವು ನಿಮಗೀ ರೌದ್ರಬಾಣ
ಸ್ಫುರಿತಕರ್ಕಶ ವಿಸ್ಪುಲಿಂಗೋ
ತ್ಕರದ ಝಳ ನಿಮಗೇಕೆಯೆಂದನು ಪಾರ್ಥ ನಸುನಗುತ ॥42॥

೦೪೩ ಮುರಿದ ನಿರ್ಜರ ...{Loading}...

ಮುರಿದ ನಿರ್ಜರ ಸೇನೆಗಭಯದ
ಕರವ ನೆಗಹಿ ಕರೀಂದ್ರನನು ಶಿರ
ಬಿರಿಯಲಂಕುಶ ಮೊನೆಯೊಳೊತ್ತಿ ಮಹೋಗ್ರ ಕೋಪದಲಿ
ನರ ಮುರಾಂತಕರಿದಿರಿನಲಿ ಮದ
ಕರಿಯ ಬಿಟ್ಟನು ಶಕ್ರನಾತನ
ಬಿರುದ ಸಂಭಾವಿಸಿದರಭ್ರದ ಸೂತ ಮಾಗಧರು ॥43॥

೦೪೪ ನಮುಚಿಮಸ್ತಕ ಶೂಲ ...{Loading}...

ನಮುಚಿಮಸ್ತಕ ಶೂಲ ಬಲ ಸಂ
ತಮಸಭಾಸ್ಕರ ಜಂಭ ಭುಜ ವಿ
ಕ್ರಮ ಮಹಾಂಬುಧಿ ಕುಂಭಸಂಭವ ವೃತ್ರ ಗಿರಿವಜ್ರ
ಕಮಲಭವ ಹರ ವಿಷ್ಣು ಹೊರೆಗಾ
ದಮಿತ ಸುರಗಣ ಮೌಳಿಮಣಿ ಸಂ
ಕ್ರಮಣ ಚತುರ ಪದಾಬ್ಜನೆಂದುದು ವಂದಿ ಸಂದೋಹ ॥44॥

೦೪೫ ನೂಕಿದನು ಸುರಪತಿ ...{Loading}...

ನೂಕಿದನು ಸುರಪತಿ ಗಜವನ
ವ್ಯಾಕುಲರಲೇ ಕೃಷ್ಣ ಪಾರ್ಥರಿ
ದೇಕೆ ನಿಮಗೀ ವಾಸಿ ವಾಸವ ಲೇಸು ಮರುಳುವದು
ನಾಕ ನಿಳಯರು ತಂದ ಗೆಲವೇ
ಸಾಕು ಸೋಲುವರಲ್ಲ ನಿಮಗೆ ವಿ
ವೇಕವುಳ್ಳರೆ ತಿರುಗಿಯೆಂದನು ಹರಿಗೆ ಕಲಿಪಾರ್ಥ ॥45॥

೦೪೬ ಜನಪ ಕೇಳಾ ...{Loading}...

ಜನಪ ಕೇಳಾ ಸಮಯದೊಳು ವಾ
ಗ್ವನಿತೆಯರಸನು ಗಗನಮಾರ್ಗದೊ
ಳನಿಮಿಷಾಧಿಪನಲ್ಲಿಗೈತರೆ ಕಂಡು ಸುರನಿಕರ
ತನತನಗೆ ಭಾಳದಲಿ ನಿಜ ಕರ
ವನರುಹವ ಮುಗಿಯಿಸಿದರಿಂದ್ರಂ
ಗನುವರವ ಮಾಣಿಸಲು ಬೇಕೆಂದಿಳಿದನಬ್ಜಭವ ॥46॥

೦೪೭ ಮರುಳನೈ ನೀನಿವರನಾರೆಂ ...{Loading}...

ಮರುಳನೈ ನೀನಿವರನಾರೆಂ
ದರಿಯಲಾ ನಾರಾಯಣನು ಮುರ
ಹರನು ನರನಲ್ಲಾ ಧನಂಜಯನಿವರು ಕಿರುಕುಳರೆ
ಮರುಳು ನೀನೆಂದಿಂದ್ರನಾನೆಯ
ತಿರುಹಿದನು ಪರಮೇಷ್ಠಿಯಿತ್ತಲು
ಧರಣಿಪತಿ ಕೇಳನಲ ಕೇಳಿಯನಾ ವನಾಂತದಲಿ ॥47॥

೦೪೮ ಜಮ್ಬು ಚೂತ ...{Loading}...

ಜಂಬು ಚೂತ ಪಲಾಶ ವಟ ದಾ
ಳಿಂಬ ಬಿಲ್ವ ತಮಾಲ ಚಂಪಕ
ನಿಂಬ ಬಕುಳ ಕಪಿತ್ಥ ಕುಟಜವಶೋಕ ಪುನ್ನಾಗ
ತುಂಬುರರಳಿ ಲವಂಗ ಪೂಗ ಕ
ದಂಬ ಗುಗ್ಗುಲ ಸಾಲ ತಿಲಕೌ
ದುಂಬರಾದಿ ದ್ರುಮ ಕುಲವನಾಲಿಂಗಿಸಿತು ವಹ್ನಿ ॥48॥

೦೪೯ ಸುಳಿಸುಳಿದು ಶಶಿಕಾನ್ತಮಯದ ...{Loading}...

ಸುಳಿಸುಳಿದು ಶಶಿಕಾಂತಮಯದ
ಗ್ಗಳದ ವೇದಿಕೆಗಳಲಿ ನೀಲದ
ನೆಲೆಯ ಚೌಕಿಗೆಗಳಲಿ ಮಂಟಪದಲಿ ಲತಾವಳಿಯ
ಲಲಿತ ಸೌಧದ ಚಾರು ಚಿತ್ರಾ
ವಳಿಯ ಮೇಲ್ಕಟ್ಟುಗಳ ಭವನಂ
ಗಳಲಿ ಬಿಟ್ಟುದು ಕೂಡೆ ಪಾಳಯ ವಹ್ನಿಭೂಪತಿಯ ॥49॥

೦೫೦ ಕುರುಳ ತುಮ್ಬಿಯ ...{Loading}...

ಕುರುಳ ತುಂಬಿಯ ತನಿಗೆದರಿ ಮುಖ
ಸರಸಿಜವ ಚುಂಬಿಸಿ ತಮಾಲದ
ತುರುಬ ಹಿಡಿದಧರ ಪ್ರವಾಳದ ರಸವ ನೆರೆಸವಿದು
ಉರು ಪಯೋಧರ ಬಿಲ್ವವನು ಹೊ
ಯ್ದೊರಸಿ ಕದಳಿಯ ನುಣ್ದೊಡೆಯನಿ
ಟ್ಟೊರಸಿ ರಮಿಸಿತು ವನಸಿರಿಯ ಪಿಪ್ಪಲ ದಳಾಂಗದಲಿ ॥50॥

೦೫೧ ಧರಣಿಪತಿ ಕೇಳ್ ...{Loading}...

ಧರಣಿಪತಿ ಕೇಳ್ ಶರಭಮೃಗಪತಿ
ಕರಿ ಕಳಭ ಶಾರ್ದೂಲ ಸೂಕರ
ಕರಡಿ ಕಾಸರಶಲ ಮೃಗಾವನ ಖಡ್ಗ ಗೋಮಾಯು
ಎರಳೆ ಮೊಲ ಸಾರಂಗ ವಾನರ
ನುರು ಕುರಂಗ ಪ್ರಮುಖ ಮೃಗಕುಲ
ವುರುಬಿ ಬಿದ್ದುದು ದಳ್ಳುರಿಯ ಬೆಳ್ಳಾರವಲೆಗಳಲಿ ॥51॥

೦೫೨ ಶುಕ ಮರಾಳ ...{Loading}...

ಶುಕ ಮರಾಳ ಮಯೂರ ಟಿಟ್ಟಿಭ
ಪಿಕ ಚಕೋರ ಕಪೋತ ವಾಯಸ
ಬಕ ಪದಾಯುಧ ಚಕ್ರವಾಕ ಕಳಿಂಗ ಕಲವಿಂಕ
ಕುಕಿಲ ಸಾರಸ ಕಾಕರಿಪು ಚಾ
ತಕ ಭರದ್ವಾಜಾದಿ ಪಕ್ಷಿ
ಪ್ರಕರ ಬಿದ್ದುದು ಬಿಗಿದ ಕೇಸುರಿ ಕಣ್ಣಿವಲೆಗಳಲಿ ॥52॥

೦೫೩ ಹರಡೆ ಗೀಜಗ ...{Loading}...

ಹರಡೆ ಗೀಜಗ ಮರಗೊರಲೆ ಕಾ
ಬುರುಲೆ ಲಾವುಗೆ ಗೌಜು ಪಾರಿವ
ನಿರಿಲೆ ಸಾಳುವ ಚಿಲಿಮಿಲಿಗ ಚೆಂಬೋತ ಮೀನ್ಬುಲಿಗ
ಮರಕುಟಿಕ ಕಬ್ಬಕ್ಕಿ ಕೊಟ್ಟುಗ
ವರಲೆ ಕೊಂಚೆ ಕಪಿಂಜ ಗಿಂಚಲು
ಗರಿಗ ಮೊದಲಾದಖಿಳ ಖಗಕುಲ ಬಿದ್ದುದುರಿಯೊಳಗೆ ॥53॥

೦೫೪ ಝಳಕೆ ತಿಳಿಗೊಳದುದಕ ...{Loading}...

ಝಳಕೆ ತಿಳಿಗೊಳದುದಕ ಕಾದು
ಚ್ಛಳಿಸಿದವು ತನಿಗುದಿದು ಮತ್ಸ್ಯಾ
ವಳಿಗಳಂಬುಜದೆಸಳು ಸೀದವು ತುಂಬಿಗಳು ಸಹಿತ
ಹಿಳಿದು ಸಿಡಿದವು ಚಾರು ಚಂದ್ರೋ
ತ್ಪಳರಚಿತ ಸೋಪಾನ ರತುನಾ
ವಳಿಯ ರಾಶಿಗಳಿದ್ದಲಾದವು ಬಿದ್ದ ಕಿಡಿಗಳಲಿ ॥54॥

೦೫೫ ಇಟ್ಟಣಿಸಿ ಛಿಟಿಛಿಟಿಸಿ ...{Loading}...

ಇಟ್ಟಣಿಸಿ ಛಿಟಿಛಿಟಿಸಿ ಶಿಖಿ ಪುಟ
ವಿಟ್ಟುದೊಣಗಿಲು ಹೊದರಿನಲಿ ಮಿಗೆ
ತೊಟ್ಟ ಕಬ್ಬೊಗೆ ಝಗೆಯ ಹೊರಳಿಯ ಕಿಡಿಯ ಗಡಣದಲಿ
ಹುಟ್ಟಿದುರಿ ಹೆಮ್ಮರನ ಸುತ್ತಲು
ಕಟ್ಟಿತಲ್ಲಿಯ ತೊಡಕಿನಲಿ ಭುಗಿ
ಲಿಟ್ಟು ಕವಿದುದು ತುದಿಗೆ ಬಹು ಶಾಖೋಪಶಾಖೆಗಳ ॥55॥

೦೫೬ ಹೊಗೆಯ ಹಬ್ಬುಗೆ ...{Loading}...

ಹೊಗೆಯ ಹಬ್ಬುಗೆ ಸತ್ಯಲೋಕವ
ನುಗಿದುದುರಿನಾಲಗೆಯ ಗರವೊ
ಟ್ಟಗೆಯ ತೊಳಲಿಕೆ ತೆರಳಿಚಿತು ತೆತ್ತೀಸು ಕೋಟಿಗಳ
ಹಗಲಗಡಿತಕೆ ಹೊಕ್ಕುದೋ ಕಡೆ
ಮುಗಿಲ ಕಾಣೆನು ದಿವವನೆತ್ತಣ
ಗಗನಮಣಿ ನಕ್ಷತ್ರ ಚಂದ್ರಮರರಸ ಕೇಳ್ ಎಂದ ॥56॥

೦೫೭ ಛಿಳಿ ಛಿಳಿಲು ...{Loading}...

ಛಿಳಿ ಛಿಳಿಲು ಛಿಳಿ ರವದ ಘುಳು ಘುಳು
ಘುಳು ಘುಳ ಧ್ವನಿಮಯದಿ ಕಪಿಗಳ
ಕಿಳಿಕಿಳಾಯತ ರವದಿ ಮೃಗ ಸಂಕುಳದ ಕಳ ಕಳದಿ
ಹಿಳಿದುರಿವ ಹೆಬ್ಬಿದಿರ ಗಂಟಿನ
ಠಳಠಳತ್ಕಾರದಿ ದಿಶಾ ಮಂ
ಡಳದ ಮೂಲೆಗಳೊಡೆದುದದ್ಭುತವಾಯ್ತು ವನದಹನ ॥57॥

೦೫೮ ಅರಸ ಕೇಳೈ ...{Loading}...

ಅರಸ ಕೇಳೈ ಮುನ್ನ ವಿತಳಕೆ
ಗರುಡ ಭಯವಾಯ್ತೆಂದು ತಕ್ಷಕ
ನಿರಿಸಿದನು ನಿಜಸುತನನಮರೇಶ್ವರನನುಜ್ಞೆಯಲಿ
ಇರಲಿರಲು ಸುತರಾದರಾತಂ
ಗುರಗ ವಂಶದೊಳಶ್ವಸೇನಗೆ
ಹಿರಿದು ಹೆಚ್ಚಿತು ತಕ್ಷಕನ ಸಂತತಿ ವನಾಂತದಲಿ ॥58॥

೦೫೯ ಆ ಮಹಾ ...{Loading}...

ಆ ಮಹಾ ವನವಹ್ನಿ ಭೂತ
ಸ್ತೋಮ ಸಂಹೃತಿ ಕರ್ಮ ಶೌರ್ಯೋ
ದ್ದಾಮವವಗಾಹಿಸುತ ಬರುತಿರೆ ಮುಂದೆ ಚೂಣಿಯಲಿ
ಧೂಮವಿಳಿದುದು ಹುತ್ತಿನಲಿ ನಿ
ಸ್ಸೀಮ ಜನಿತ ಜ್ವಾಲೆಗಳ ಝಳ
ವಾ ಮಹೋರಗಚಯವ ಚುಂಬಿಸಿತರಸ ಕೇಳ್ ಎಂದ ॥59॥

೦೬೦ ಹೂಸಿ ಹುತ್ತಿನ ...{Loading}...

ಹೂಸಿ ಹುತ್ತಿನ ಮಣ್ಣ ರಂಧ್ರಿಸಿ
ಕಾಸಿದವು ಫಣಿಕುಲವ ಮೇಣ್ದೊ
ಳ್ಳಾಸದಲಿ ಡಾವರಿಸಿದವು ಕಿಡಿ ಧೂತಧೂಮದಲಿ
ಆಸುರದ ಕಬ್ಬೊಗೆಯ ಕವಚದ
ಕೇಸುರಿಗಳೊಳ ಬಿದ್ದುದುರಿ ಹೊರ
ಸೂಸಿ ಹಿಡಿದವು ಹಾವುಗಳ ಬಲು ಹೊದರಹೊರಳಿಗಳ ॥60॥

೦೬೧ ಹೆಡೆಯ ಮಣಿಗಳ ...{Loading}...

ಹೆಡೆಯ ಮಣಿಗಳ ಕಂಡು ಸೂಸಿದ
ಕಿಡಿಗಳಹ ಹಾಯೆನುತ ಶಿರಗಳ
ಕೊಡಹಿ ಮರುಗಿದರುರಗಿಯರು ಮರಿಗಳಿಗೆ ಮೈಚಾಚಿ
ಕಡು ಹೊಗೆಯ ಕೇಸುರಿಯ ಕಿಡಿಗಳ
ಗಡಣದಲಿ ಕೌರೆದ್ದು ಮೈಗಳ
ಕೊಡಹಿ ಬಿಸುಸುಯ್ಯುತ್ತ ಮುಗ್ಗಿದವಹಿಗಳುರಿಯೊಳಗೆ ॥61॥

೦೬೨ ಹುದಿದುರಿವ ಹುತ್ತಿನಲಿ ...{Loading}...

ಹುದಿದುರಿವ ಹುತ್ತಿನಲಿ ಕೂಳ್ಗುದಿ
ಗುದಿದು ಸರ್ಪಸ್ತೋಮ ಮಧ್ಯದೊ
ಳೊದೆದು ಹಾಯಿದನಶ್ವಸೇನನು ಗಗನ ಮಂಡಲಕೆ
ಕೆದರಿದವು ಕೆಂಗಿಡಿಗಳುರಿಯು
ಬ್ಬಿದುದು ಘುಳುಘುಳು ರಭಸ ಮಿಗೆ ಹೆ
ಚ್ಚಿದುದು ತಬ್ಬಿದುದೀತನನು ತಡವರಿಸಿ ಗಗನದಲಿ ॥62॥

೦೬೩ ಉರಿಯ ಗಣ್ಟಲನೊದೆದು ...{Loading}...

ಉರಿಯ ಗಂಟಲನೊದೆದು ಫಣಿ ಮಿ
ಕ್ಕುರವಣಿಸೆ ಹಾಹಾ ಧನಂಜಯ
ಹರಿವುತಿದೆ ಹಾವೊಂದು ಹೋದುದು ಬಾಯ ತುತ್ತೆನಗೆ
ತರಿಸಿಕೊಡು ಶರವೇಢೆಯನು ವಿ
ಸ್ತರಿಸು ವಹಿಲದೊಳೆನಲು ವೈಶ್ವಾ
ನರನ ಮಾತಿಗೆ ನಗುತ ಕೊಂಡನು ವಿಜಯ ಗಾಂಡಿವವ ॥63॥

೦೬೪ ಆವ ಶರಸನ್ಧಾನವೋ ...{Loading}...

ಆವ ಶರಸಂಧಾನವೋ ಗಗ
ನಾವಲಂಬಿಯ ಕೊರಳನೆಚ್ಚನು
ಪಾವಕನ ಮಧ್ಯದಲಿ ಬಿದ್ದುದು ಮುಂಡವಹಿಪತಿಯ
ಜೀವವುಳಿದುದು ಶಿರದೊಳಾತಂ
ಗಾ ವಿಗಡ ಫಣಿ ನುಡಿದುದೆಲೆ ಗಾಂ
ಡೀವಿ ಮರೆಯದಿರೆನ್ನ ಹಗೆಯಲಿ ಮರಣ ನಿನಗೆನುತ ॥64॥

೦೬೫ ಎನ್ದು ಗಗನದೊಳುಲಿದು ...{Loading}...

ಎಂದು ಗಗನದೊಳುಲಿದು ಫಣಿ ಶಿರ
ವಂದು ಪಾಯ್ದುದು ಧರೆಗೆ ರಾಧಾ
ನಂದನನ ಬತ್ತಳಿಕೆಯಲಿ ಶರವಾಗಿ ಜಗವರಿಯೆ
ಸಂದುದದು ಬಳಿಕಿತ್ತಲಿಂದ್ರನ
ನಂದನದ ಬೇಗೆಯಲಿ ಬದುಕಿತು
ಮಂದಪಾಲನ ಸುತಚತುಷ್ಟಯವರಸ ಕೇಳ್ ಎಂದ ॥65॥

೦೬೬ ಮೆಚ್ಚಿಸಿದವವು ವಹ್ನಿಸೂಕ್ತವ ...{Loading}...

ಮೆಚ್ಚಿಸಿದವವು ವಹ್ನಿಸೂಕ್ತವ
ನುಚ್ಚರಿಸಿ ತಜ್ಜ್ವಲನ ಮುಖವನು
ಬಿಚ್ಚಿ ಬದುಕಿದವಾ ಮುನಿಯ ಸಂತಾನ ಪಕ್ಷಿಗಳು
ಹೆಚ್ಚಿದುರಿ ಹಬ್ಬುಗೆಯ ಹೊಯ್ಲಲಿ
ಬೆಚ್ಚಿ ಮಯನರ್ಜುನನ ಹೊಗಳಿದು
ಕಿಚ್ಚಿನಲಿ ಬದುಕಿದನು ಧರಣೀಪಾಲ ಕೇಳ್ ಎಂದ ॥66॥

೦೬೭ ಖಗ ಚತುಷ್ಟಯ ...{Loading}...

ಖಗ ಚತುಷ್ಟಯ ಮಯ ಸಹಿತವುರಿ
ಯುಗುಳಿತುಳಿದ ಸಮಸ್ತ ಭೂತಾ
ಳಿಗಳನಾಹುತಿಗೊಂಡನಗ್ನಿ ಧನಂಜಯಾಜ್ಞೆಯಲಿ
ಗಗನದಿಂದಿಳಿತಂದು ಸುರಪತಿ
ಮಗನ ಮನ್ನಿಸಿ ಕೊಟ್ಟನಗ್ಗದ
ಗಗನಮಣಿಗೆಣೆಯೆನಿಪ ಮಕುಟವನೊಲಿದು ಪಾರ್ಥಂಗೆ ॥67॥

೦೬೮ ಹರಿಗೆ ವನ್ದಿಸಿ ...{Loading}...

ಹರಿಗೆ ವಂದಿಸಿ ಮಗನನೊಲಿದಾ
ದರಿಸಿ ಮರಳಿದನಿಂದ್ರನಿತ್ತಲು
ಭರದಿನಿವರೈತಂದರಿಂದ್ರಪ್ರಸ್ಥ ಪುರವರಕೆ
ಧರಣಿಪತಿಗಾ ಖಾಂಡವದ ದ
ಳ್ಳುರಿಯ ಹೋಮದ ಹೊಸ ಕಥೆಯ ವಿ
ಸ್ತರಿಸಿ ಹೇಳಿದನಸುರರಿಪು ಭೀಮಾದಿಗಳು ನಲಿಯೆ ॥68॥

೦೬೯ ಧಾರುಣೀಶ್ವರರೈವರನು ಸುಕು ...{Loading}...

ಧಾರುಣೀಶ್ವರರೈವರನು ಸುಕು
ಮಾರ ವರ್ಗವನಾ ಸುಭದ್ರಾ
ನಾರಿಯನು ಪಾಂಚಾಲೆಯನು ತತ್ಸಕಲ ಬಾಂಧವರ
ಸೂರಿಗಳ ಸಚಿವಾದಿ ನೃಪ ಪರಿ
ವಾರವನು ಪತಿಕರಿಸಿ ಬಂದನು
ದೋರಕಿಗೆ ಹರುಷದಲಿ ಗದುಗಿನ ವೀರನಾರಯಣ ॥69॥

೦೭೦ ಇತಿ ಶ್ರೀಮದಚಿನ್ತ್ಯ ...{Loading}...

ಇತಿ ಶ್ರೀಮದಚಿಂತ್ಯ ಮಹಿಮ ಗದುಗಿನ
ವೀರನಾರಾಯಣ ಚರಣಾರವಿಂದ ಮಕರಂದ
ಮಧುಪಾನ ಪರಿಪುಷ್ಟ ವಚಃ ಷಟ್ಪದೀ ನಿಕಾಯ
ಶ್ರೀಮತ್ಕುಮಾರವ್ಯಾಸ ಯೋಗೀಂದ್ರ ವಿರಚಿತಮಪ್ಪ
ಕರ್ಣಾಟ ಭಾರತ ಕಥಾಮಂಜರಿಯೊಳ್
ಆದಿಪರ್ವಂ ಸಮಾಪ್ತಮಾದುದು.

+೨೦ ...{Loading}...