೦೦೦ ಸೂ ಆ ...{Loading}...
ಸೂ. ಆ ಸುರಾರಿವಿರೋಧಿ ಪುರದಲಿ
ವಾಸವಾತ್ಮಜ ಮದುವೆಯಾಗಿ ವಿ
ಲಾಸದಲಿ ಹೊಕ್ಕನು ಸುಭದ್ರಾ ಸಹಿತ ನಿಜಪುರವ
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
ಸೂಚನೆ : ದೇವತೆಗಳಿಗೆ ಶತ್ರುವಾದ ದಾನವರ ವೈರಿಯಾದ ಕೃಷ್ಣನ ಪಟ್ಟಣ ದ್ವಾರಕೆಯಲ್ಲಿ ಇಂದ್ರನ ಮಗನಾದ ಅರ್ಜುನನು ಮದುವೆಯಾಗಿ ಸುಭದ್ರೆಯೊಡನೆ ತನ್ನ ಪುರವಾದ ಇಂದ್ರಪ್ರಸ್ಥವನ್ನು ಉಲ್ಲಾಸದಲ್ಲಿ ಪ್ರವೇಶಿಸಿದನು.
ಪದಾರ್ಥ (ಕ.ಗ.ಪ)
ವಾಸವ-ಇಂದ್ರ, ಆತ್ಮಜ-ಮಗ, ವಿಲಾಸ-ಉಲ್ಲಾಸ
ಮೂಲ ...{Loading}...
ಸೂ. ಆ ಸುರಾರಿವಿರೋಧಿ ಪುರದಲಿ
ವಾಸವಾತ್ಮಜ ಮದುವೆಯಾಗಿ ವಿ
ಲಾಸದಲಿ ಹೊಕ್ಕನು ಸುಭದ್ರಾ ಸಹಿತ ನಿಜಪುರವ
೦೦೧ ಕೇಳು ಜನಮೇಜಯ ...{Loading}...
ಕೇಳು ಜನಮೇಜಯ ಧರಿತ್ರೀ
ಪಾಲ ನಾರದಮುನಿ ನರೇಂದ್ರನ
ಬೀಳುಕೊಂಡನು ಚಪಲಗತಿಯಲಿ ಚಿಗಿದನಂಬರಕೆ
ಮೇಲೆ ಬಳಿಕೊಂದವಗಡವನೇ
ವೇಳುವೆನು ಪಾರ್ಥಂಗೆ ಬಂದುದ
ಕಾಲಗತಿಯೈಸಲೆ ವಿದೇಶ ಭ್ರಮಣವಾಯ್ತೆಂದ ॥1॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ನಾರದಮುನಿಯು ಧರ್ಮರಾಜನನ್ನು ಬೀಳ್ಕೊಂಡು ಶೀಘ್ರವಾಗಿ ಆಕಾಶಕ್ಕೆ ಹಾರಿದನು. ಆನಂತರ ಅರ್ಜುನನಿಗೆ ಬಂದ ತೊಂದರೆಯನ್ನು ಏನೆಂದು ಹೇಳುವುದು. ಕಾಲಗತಿಯಲ್ಲವೆ ? ಪಾರ್ಥನಿಗೆ ಪರದೇಶದ ಸುತ್ತುವಿಕೆ ಉಂಟಾಯ್ತು.
ಪದಾರ್ಥ (ಕ.ಗ.ಪ)
ಚಪಲ-ಶೀಘ್ರತೆ, ಗತಿ-ಮಾರ್ಗ, ಚಿಗಿ-ಹಾರು, ಅಂಬರ-ಆಕಾಶ, ಅವಗಡ-ತೊಂದರೆ, ವಿದೇಶ-ಪರದೇಶ, ಭ್ರಮಣ-ಸುತ್ತುವಿಕೆ
ಮೂಲ ...{Loading}...
ಕೇಳು ಜನಮೇಜಯ ಧರಿತ್ರೀ
ಪಾಲ ನಾರದಮುನಿ ನರೇಂದ್ರನ
ಬೀಳುಕೊಂಡನು ಚಪಲಗತಿಯಲಿ ಚಿಗಿದನಂಬರಕೆ
ಮೇಲೆ ಬಳಿಕೊಂದವಗಡವನೇ
ವೇಳುವೆನು ಪಾರ್ಥಂಗೆ ಬಂದುದ
ಕಾಲಗತಿಯೈಸಲೆ ವಿದೇಶ ಭ್ರಮಣವಾಯ್ತೆಂದ ॥1॥
೦೦೨ ನರನ ವಳಿತದೊಳೊನ್ದು ...{Loading}...
ನರನ ವಳಿತದೊಳೊಂದು ಸಮಯದೊ
ಳಿರುಳು ತಸ್ಕರ ಬಾಧೆಯಲಿ ಭೂ
ಸುರರು ಬಾಯ್ಬಿಡುತೈದೆಯಿಂದ್ರಪ್ರಸ್ಥ ಪುರವರವ
ಮೊರೆಯಬಾಯ್ಗಳ ಹುಲ್ಲು ಕೈಗಳ
ಹರಿದ ಮೈಗಳ ಸೆಕೆಯ ಸುಯ್ಗಳ
ತರದ ಬೈಗಳ ಕಳಕಳವ ಕೇಳಿದನು ಕಲಿಪಾರ್ಥ ॥2॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅರ್ಜುನನ ಅಧಿಕಾರಕ್ಕೆ ಸೇರಿದ ಪ್ರದೇಶದಲ್ಲಿ ಒಂದು ರಾತ್ರಿಯ ವೇಳೆಯಲ್ಲಿ ಕಳ್ಳರ ತೊಂದರೆಯಲ್ಲಿ ಸಿಲುಕಿದ ಬ್ರಾಹ್ಮಣರು ಮರುಗುತ್ತ ಇಂದ್ರಪ್ರಸ್ಥ ಪಟ್ಟಣಕ್ಕೆ ಬಂದರು. ಅವರ ಆರ್ತ ಧ್ವನಿಯ ಬಾಯ್ಗಳು, ಹುಲ್ಲು ಹಿಡಿದಿರುವ ಕೈಗಳು, ಗಾಯದ ಮೈಗಳು, ತಾಪದ ನಿಟ್ಟುಸಿರು, ವಿಧವಿಧದ ಬೈಗಳು - ಇವುಗಳ ಗಲಾಟೆಯನ್ನು ವೀರನಾದ ಅರ್ಜುನನು ಕೇಳಿದನು.
ಪದಾರ್ಥ (ಕ.ಗ.ಪ)
ವಳಿತ-ಅಧಿಕಾರಕ್ಕೆ ಸೇರಿದ ಪ್ರದೇಶ, ತಸ್ಕರ-ಕಳ್ಳ, ಮೊರೆ-ಆರ್ತಧ್ವನಿ,
ಹುಲ್ಲುಕೈ-ಹುಲ್ಲುಹಿಡಿದ, ಶರಣಾಗತಿಯನ್ನು ಸೂಚಿಸುವ ಕೈ.
ಮೂಲ ...{Loading}...
ನರನ ವಳಿತದೊಳೊಂದು ಸಮಯದೊ
ಳಿರುಳು ತಸ್ಕರ ಬಾಧೆಯಲಿ ಭೂ
ಸುರರು ಬಾಯ್ಬಿಡುತೈದೆಯಿಂದ್ರಪ್ರಸ್ಥ ಪುರವರವ
ಮೊರೆಯಬಾಯ್ಗಳ ಹುಲ್ಲು ಕೈಗಳ
ಹರಿದ ಮೈಗಳ ಸೆಕೆಯ ಸುಯ್ಗಳ
ತರದ ಬೈಗಳ ಕಳಕಳವ ಕೇಳಿದನು ಕಲಿಪಾರ್ಥ ॥2॥
೦೦೩ ಕರೆಸಿ ವಿಪ್ರರ ...{Loading}...
ಕರೆಸಿ ವಿಪ್ರರ ಬಾಧೆಗಳನಾ
ದರಿಸಿ ಕೇಳಿದು ಸಂತವಿಸಿ ಪರಿ
ಹರಿಸಿ ಕೊಡುವೆನು ದುಷ್ಟ ಪಾಟಚ್ಚರಪರಿಪ್ಲವವ
ಮರಳಿ ನೀವೆಂದವರ ಬೀಳ್ಕೊಂ
ಡರಿ ನಿವಾರಣ ಬಂದನಗ್ಗದ
ಶರಧನುವ ಕೊಳಲೆಂದು ರಾಯನ ಸೆಜ್ಜೆಯರಮನೆಗೆ ॥3॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಆ ಬ್ರಾಹ್ಮಣರನ್ನು ಕರೆಸಿ, ಅವರಿಗಾದ ತೊಂದರೆಗಳನ್ನು ಪ್ರೀತಿಯಿಂದ ಕೇಳಿ ಸಮಾಧಾನ ಮಾಡಿ “ಕೆಟ್ಟ ಕಳ್ಳರ ತೊಂದರೆಗಳನ್ನು ನಿವಾರಿಸಿ ಕೊಡುವೆನು, ನೀವು ಹಿಂತಿರುಗಿ ಹೋಗಿ” ಎಂದು ಶತ್ರು ನಿವಾರಣನಾದ ಅರ್ಜುನನು ತನ್ನ ಶ್ರೇಷ್ಠವಾದ ಬಿಲ್ಲು ಬಾಣಗಳನ್ನು ತೆಗೆದುಕೊಳ್ಳಲು ರಾಜನ ಮಲಗುವ ಅರಮನೆಗೆ ಬಂದನು.
ಪದಾರ್ಥ (ಕ.ಗ.ಪ)
ಪಾಟಚ್ಚರ-ಕಳ್ಳ, ಪರಿಪ್ಲವ-ತೊಂದರೆ, ಅರಿನಿವಾರಣ-ಶತ್ರುವನ್ನು ಪರಿಹರಿಸುವವನು (ಅರ್ಜುನ) ಸೆಜ್ಜೆ-ಶಯ್ಯೆ (ಸಜ್ಜೆಯರಮನೆ-ಮಲಗುವ ಅರಮನೆ)
ಮೂಲ ...{Loading}...
ಕರೆಸಿ ವಿಪ್ರರ ಬಾಧೆಗಳನಾ
ದರಿಸಿ ಕೇಳಿದು ಸಂತವಿಸಿ ಪರಿ
ಹರಿಸಿ ಕೊಡುವೆನು ದುಷ್ಟ ಪಾಟಚ್ಚರಪರಿಪ್ಲವವ
ಮರಳಿ ನೀವೆಂದವರ ಬೀಳ್ಕೊಂ
ಡರಿ ನಿವಾರಣ ಬಂದನಗ್ಗದ
ಶರಧನುವ ಕೊಳಲೆಂದು ರಾಯನ ಸೆಜ್ಜೆಯರಮನೆಗೆ ॥3॥
೦೦೪ ಸಮಯವೇನೆನೆ ಜೀಯ ...{Loading}...
ಸಮಯವೇನೆನೆ ಜೀಯ ರಾಯನು
ರಮಣಿಯೊಡನೇಕಾಂತವೆನಲ
ಸ್ತಮಿತ ಹರುಷನು ನಿಂದು ನೆನೆದನು ತನ್ನ ಮನದೊಳಗೆ
ಅಮರಮುನಿ ಮತವೊಂದು ಮಂಚದ
ರಮಣಿ ರಮಣರ ದರುಶನವಿದ
ಕ್ರಮವೆನಿಪುದೀ ವಚನ ಸಂಘಟಿಸಿತ್ತು ತನಗೆಂದ ॥4॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಧರ್ಮರಾಯನ ಸಮಯವೇನು ? ಎಂದು ಅರ್ಜುನನು ಕೇಳಿದಾಗ, ಧರ್ಮರಾಜನು ದ್ರೌಪದಿಯೊಂದಿಗೆ ಏಕಾಂತದಲ್ಲಿ ಇರುವನೆಂದು ತಿಳಿಸಲು, ಹರ್ಷಗೆಟ್ಟವನಾಗಿ ನಿಂತು ತನ್ನ ಮನಸ್ಸಿನಲ್ಲಿ ಆಲೋಚಿಸಿದನು. ದೇವ ಮುನಿ ನಾರದರ ಅಭಿಪ್ರಾಯವೊಂದಿದೆ. ಮಂಚದಲ್ಲಿರುವ ಧರ್ಮರಾಜ ದ್ರೌಪದಿಯರ ದರ್ಶನವು ಕ್ರಮವಲ್ಲದ್ದು. ಈ ಮಾತು ನನಗೆ ಉಂಟಾಯಿತು ಎಂದುಕೊಂಡನು ಅರ್ಜುನನು.
ಪದಾರ್ಥ (ಕ.ಗ.ಪ)
ಮತ-ಅಭಿಪ್ರಾಯ, ಸಂಘಟಿಸು-ಉಂಟಾಗು
ಮೂಲ ...{Loading}...
ಸಮಯವೇನೆನೆ ಜೀಯ ರಾಯನು
ರಮಣಿಯೊಡನೇಕಾಂತವೆನಲ
ಸ್ತಮಿತ ಹರುಷನು ನಿಂದು ನೆನೆದನು ತನ್ನ ಮನದೊಳಗೆ
ಅಮರಮುನಿ ಮತವೊಂದು ಮಂಚದ
ರಮಣಿ ರಮಣರ ದರುಶನವಿದ
ಕ್ರಮವೆನಿಪುದೀ ವಚನ ಸಂಘಟಿಸಿತ್ತು ತನಗೆಂದ ॥4॥
೦೦೫ ಈಗಲೀ ವಿಪ್ರರಲಿ ...{Loading}...
ಈಗಲೀ ವಿಪ್ರರಲಿ ಖಳರಭಿ
ಯೋಗವಾರ್ತಾಶ್ರವಣ ಬಹು ದುರಿ
ತಾಗಮವು ತನಗಾವುದೋ ಕರ್ತವ್ಯವೆಂದೆನುತ
ಈಗಲೀ ಸಂದಿಗ್ಧ ಸಮಯ
ತ್ಯಾಗ ಧರ್ಮ ವಿರೋಧ ಕೃತ್ಯವಿ
ಭಾಗವಾವುದೊ ಶಾಸ್ತ್ರದೃಷ್ಟಿಯೊಳೆಂದು ಚಿಂತಿಸಿದ ॥5॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಈಗ ವಿಪ್ರರ ಮೇಲೆ ದುಷ್ಟರ ಆಕ್ರಮಣದ ಸುದ್ದಿ ಬಂದಿದೆ. ಅದನ್ನಾಲಿಸದಿದ್ದರೆ ಬಹಳ ಪಾಪ ಬರುವುದು. ನನಗೆ ಈಗ ಕರ್ತವ್ಯ ಯಾವುದು ? ಎಂದು ಚಿಂತಿಸಿದನು. “ಈಗ ಇದು ನನಗೆ ಜಟಿಲವಾದುದು. ಸಮಯ ಪ್ರಜ್ಞೆಯ ತ್ಯಾಗವೋ ? ಧರ್ಮ ವಿರೋಧವೋ ? ಇವೆರಡರಲ್ಲಿ ಯಾವುದು ಶಾಸ್ತ್ರ ದೃಷ್ಟಿಯಲ್ಲಿ ಕರ್ತವ್ಯ ?” ಎಂದು ಮನಸ್ಸಿನಲ್ಲಿ ಆಲೋಚಿಸಿದನು.
ಪದಾರ್ಥ (ಕ.ಗ.ಪ)
ಅಭಿಯೋಗ-ಆಕ್ರಮಣ,
ಸಂದಿಗ್ಧ-ಜಟಿಲ
ಸಮಯ ತ್ಯಾಗ - ಸಮಯಾಸಮಯ ವಿವೇಚನೆಯನ್ನು ಬದಿಗಿರಿಸುವುದು
ಮೂಲ ...{Loading}...
ಈಗಲೀ ವಿಪ್ರರಲಿ ಖಳರಭಿ
ಯೋಗವಾರ್ತಾಶ್ರವಣ ಬಹು ದುರಿ
ತಾಗಮವು ತನಗಾವುದೋ ಕರ್ತವ್ಯವೆಂದೆನುತ
ಈಗಲೀ ಸಂದಿಗ್ಧ ಸಮಯ
ತ್ಯಾಗ ಧರ್ಮ ವಿರೋಧ ಕೃತ್ಯವಿ
ಭಾಗವಾವುದೊ ಶಾಸ್ತ್ರದೃಷ್ಟಿಯೊಳೆಂದು ಚಿಂತಿಸಿದ ॥5॥
೦೦೬ ಎರಡು ಪಾತಕವಿವೆ ...{Loading}...
ಎರಡು ಪಾತಕವಿವೆ ಬಲಾಬಲ
ವೆರಡರೊಳು ಸಾಮಾನ್ಯ ಪಕ್ಷಾಂ
ತರ ವಿಶೇಷವದಾವುದದರೊಳಗೆಂದು ಚಿತ್ತದಲಿ
ಒರೆದೊರೆದು ನೋಡಿದನು ತೂಕವ
ಬರೆಸಿ ಕಾಹಿನ ಕಂದುಕುಂದನು
ಪರಿಕಿಸುತ ನಿಶ್ಚೈಸಿ ತಿಳಿದನು ತನ್ನ ಮನದೊಳಗೆ ॥6॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಎರಡು ಪಾಪಗಳಿವೆ. ಇವುಗಳ ಬಲಾಬಲವೇನು ? ಸಾಮಾನ್ಯ ಯಾವುದು ? ಇನ್ನೊಂದು ಮಗ್ಗುಲಿನಲ್ಲಿ ವಿಶೇಷ ಯಾವುದು ?” ಎಂದು ಮನಸ್ಸಿನಲ್ಲಿ ವಿಚಾರ ಮಾಡಿ ನೋಡಿದನು. ಯಾವುದನ್ನು ಕಾಪಾಡಿದರೆ ಯಾವ ದೋಷ ತಪ್ಪುಗಳು ಬರುತ್ತದೆಯೆಂದು ತೂಗಿ ನೋಡಿ ತನ್ನ ಮನಸ್ಸಿನಲ್ಲಿ ನಿರ್ಧರಿಸಿ ತಿಳಿದುಕೊಂಡನು.
ಪದಾರ್ಥ (ಕ.ಗ.ಪ)
ಪಕ್ಷಾಂತರ-ಇನ್ನೊಂದು ಮಗ್ಗುಲು, ಕಾಹು-ಕಾಪಾಡು, ಕಂದು-ದೋಷ, ಕುಂದು-ತಪ್ಪು
ಮೂಲ ...{Loading}...
ಎರಡು ಪಾತಕವಿವೆ ಬಲಾಬಲ
ವೆರಡರೊಳು ಸಾಮಾನ್ಯ ಪಕ್ಷಾಂ
ತರ ವಿಶೇಷವದಾವುದದರೊಳಗೆಂದು ಚಿತ್ತದಲಿ
ಒರೆದೊರೆದು ನೋಡಿದನು ತೂಕವ
ಬರೆಸಿ ಕಾಹಿನ ಕಂದುಕುಂದನು
ಪರಿಕಿಸುತ ನಿಶ್ಚೈಸಿ ತಿಳಿದನು ತನ್ನ ಮನದೊಳಗೆ ॥6॥
೦೦೭ ಅರಸನರಸಿಯರೊನ್ದು ಮಞ್ಚದೊ ...{Loading}...
ಅರಸನರಸಿಯರೊಂದು ಮಂಚದೊ
ಳಿರಲು ಕಂಡರೆ ಭೂಪ್ರದಕ್ಷಿಣ
ವರುಷವೊಂದರೊಳಿದಕೆ ಪ್ರಾಯಶ್ಚಿತ್ತ ವಿಧಿಯುಂಟು
ಧರಣಿಯಮರರುಪಪ್ಲವವ ಪರಿ
ಹರಿಸದಿರಲಾ ಪಾತಕಕೆ ಸಂ
ಹರಣವುಂಟೇ ಶಾಸ್ತ್ರದೃಷ್ಟಿಯೊಳೆಂದು ಚಿಂತಿಸಿದ ॥7॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ರಾಜರಾಣಿಯರು ಒಂದು ಮಂಚದಲ್ಲಿರುವಾಗ ಕಂಡರೆ ಒಂದು ವರ್ಷಕಾಲ ಭೂಪ್ರದಕ್ಷಿಣೆ ಮಾಡುವುದು. ಇದಕ್ಕೆ ಪ್ರಾಯಶ್ಚಿತ್ತ ಕ್ರಮವುಂಟು. ವಿಪ್ರರ ಕೇಡನ್ನು ಪರಿಹರಿಸದಿದ್ದರೆ ಉಂಟಾಗುವ ಪಾಪಕ್ಕೆ ಶಾಸ್ತ್ರ ದೃಷ್ಟಿಯಲ್ಲಿ ಪರಿಹಾರವುಂಟೇ ?” ಎಂದು ಅರ್ಜುನನು ಮನಸ್ಸಿನಲ್ಲಿ ಯೋಚಿಸಿದನು.
ಪದಾರ್ಥ (ಕ.ಗ.ಪ)
ಉಪಪ್ಲವ-ಕೇಡು, ಸಂಹರಣ-ಪರಿಹಾರ
ಮೂಲ ...{Loading}...
ಅರಸನರಸಿಯರೊಂದು ಮಂಚದೊ
ಳಿರಲು ಕಂಡರೆ ಭೂಪ್ರದಕ್ಷಿಣ
ವರುಷವೊಂದರೊಳಿದಕೆ ಪ್ರಾಯಶ್ಚಿತ್ತ ವಿಧಿಯುಂಟು
ಧರಣಿಯಮರರುಪಪ್ಲವವ ಪರಿ
ಹರಿಸದಿರಲಾ ಪಾತಕಕೆ ಸಂ
ಹರಣವುಂಟೇ ಶಾಸ್ತ್ರದೃಷ್ಟಿಯೊಳೆಂದು ಚಿಂತಿಸಿದ ॥7॥
೦೦೮ ಎನುತ ನರನೊಳಹೊಕ್ಕು ...{Loading}...
ಎನುತ ನರನೊಳಹೊಕ್ಕು ತನ್ನಯ
ಧನು ಶರಂಗಳ ಕೊಂಡು ನುಡಿದನು
ಮುನಿವಚನ ಸಂಘಟಿತ ನೃಪದಂಪತಿ ವಿಲೋಕನದ
ಘನ ದುರಿತ ನಿಷ್ಕೃತಿಗೆ ವರುಷದೊ
ಳೆನಗೆ ದೇಶಭ್ರಮಣವಾಯ್ತೆಲೆ
ಜನಪ ಚಿಂತಿಸಬೇಡೆನುತ ಹೊರವಂಟನಾ ಪಾರ್ಥ ॥8॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಎಂದು ನಿಶ್ಚಯ ಮಾಡಿಕೊಂಡ ಅರ್ಜುನನು ಧರ್ಮರಾಜನ ಅರಮನೆಯನ್ನು ಪ್ರವೇಶಿಸಿ, ತನ್ನ ಬಿಲ್ಲು ಬಾಣಗಳನ್ನು ತೆಗೆದುಕೊಂಡು, ಅಣ್ಣನಿಗೆ “ಮುನಿಯ ಅಭಿಪ್ರಾಯದ ಪ್ರಕಾರ ರಾಜದಂಪತಿಗಳನ್ನು ನೋಡುವಿಕೆಯಿಂದ ಉಂಟಾದ ದೊಡ್ಡ ಪಾಪದ ಪರಿಹಾರಕ್ಕೆ ಒಂದು ವರ್ಷ ಕಾಲ ನನಗೆ ದೇಶದ ತಿರುಗಾಟ ಉಂಟಾಯಿತು. ಮಹಾರಾಜಾ, ಯೋಚಿಸಬೇಡ” ಎಂದು ಹೇಳಿ ಅರ್ಜುನನು ಹೊರ ಹೊರಟನು.
ಪದಾರ್ಥ (ಕ.ಗ.ಪ)
ನಿಷ್ಕೃತಿ-ಪರಿಹಾರ, ವಿಲೋಕನ-ನೋಡುವಿಕೆ, ಭ್ರಮಣ-ತಿರುಗಾಟ
ಮೂಲ ...{Loading}...
ಎನುತ ನರನೊಳಹೊಕ್ಕು ತನ್ನಯ
ಧನು ಶರಂಗಳ ಕೊಂಡು ನುಡಿದನು
ಮುನಿವಚನ ಸಂಘಟಿತ ನೃಪದಂಪತಿ ವಿಲೋಕನದ
ಘನ ದುರಿತ ನಿಷ್ಕೃತಿಗೆ ವರುಷದೊ
ಳೆನಗೆ ದೇಶಭ್ರಮಣವಾಯ್ತೆಲೆ
ಜನಪ ಚಿಂತಿಸಬೇಡೆನುತ ಹೊರವಂಟನಾ ಪಾರ್ಥ ॥8॥
೦೦೯ ಇರಿದು ಕಳ್ಳರವಳ್ಳಿಗಳ ...{Loading}...
ಇರಿದು ಕಳ್ಳರವಳ್ಳಿಗಳ ಕುರಿ
ದರಿದು ಭೂಸುರರೂರುಗಳ ಸೆರೆ
ತುರುಗಳನು ತಂದಿತ್ತನರ್ಜುನನಾ ಮಹೀಸುರರ
ತುರುಗಿದಾಶೀರ್ವಾದ ಮಳೆಗಳು
ಕರೆಯೆ ಹೆಚ್ಚಿದ ವೀರಕೀರ್ತಿಯ
ತೊರೆಗಳೊಳು ತೇಕಾಡುತಿರ್ದುದು ಸಕಲ ಜನನಿಕರ ॥9॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅರ್ಜುನನು, ಕಳ್ಳರ ಹಳ್ಳಿಗಳ ಮೇಲೆ ಯುದ್ಧ ಮಾಡಿ ಕಳ್ಳರನ್ನು ಕಡಿದು ಹಾಕಿ ವಿಪ್ರರ ಊರುಗಳಲ್ಲಿ ಸೆರೆಹಿಡಿದಿದ್ದ ದನಗಳನ್ನು ತಂದುಕೊಟ್ಟನು. ಆ ಬ್ರಾಹ್ಮಣರ ಆಶೀರ್ವಾದದ ಮಳೆಗಳು ಇವನ ಮೇಲೆ ಸುರಿಯುತ್ತಿರಲು, ಹೆಚ್ಚಿನ ವೀರ ಕೀರ್ತಿಯ ತೊರೆಗಳಲ್ಲಿ ಸಕಲ ಜನ ಸಮೂಹ ತೇಲಾಡತೊಡಗಿತು.
ಪದಾರ್ಥ (ಕ.ಗ.ಪ)
ಪಳ್ಳಿ-ಹಳ್ಳಿ, ಇರಿ-ಯುದ್ಧ ಮಾಡು, ಕುರಿದರಿದು-ಕಡಿದು ಹಾಕಿ, ತೇಕು-ತೇಲು
ಮೂಲ ...{Loading}...
ಇರಿದು ಕಳ್ಳರವಳ್ಳಿಗಳ ಕುರಿ
ದರಿದು ಭೂಸುರರೂರುಗಳ ಸೆರೆ
ತುರುಗಳನು ತಂದಿತ್ತನರ್ಜುನನಾ ಮಹೀಸುರರ
ತುರುಗಿದಾಶೀರ್ವಾದ ಮಳೆಗಳು
ಕರೆಯೆ ಹೆಚ್ಚಿದ ವೀರಕೀರ್ತಿಯ
ತೊರೆಗಳೊಳು ತೇಕಾಡುತಿರ್ದುದು ಸಕಲ ಜನನಿಕರ ॥9॥
೦೧೦ ಧಾರುಣೀಪತಿ ಕೇಳು ...{Loading}...
ಧಾರುಣೀಪತಿ ಕೇಳು ಗಂಗಾ
ತೀರಕೈದಿದನರ್ಜುನನು ಭಾ
ಗೀರಥೀ ಸ್ನಾನಾವಗಾಹ ವಿಶುದ್ಧ ವಿಗ್ರಹನ
ದೂರದಲಿ ಕಂಡುರಗ ರಾಜಕು
ಮಾರಿ ವರಸಿದಳೊಲವಿನಲಿ ಜಂ
ಭಾರಿತನಯನನಿಳುಹಿದಳು ಪಾತಾಳಮಂದಿರಕೆ ॥10॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅರ್ಜುನನು ಭೂಪ್ರದಕ್ಷಿಣೆಗೆ ಹೊರಟು, ಗಂಗಾನದಿ ತೀರಕ್ಕೆ ಬಂದನು. ಭಾಗೀರಥಿಯಲ್ಲಿ ಮುಳುಗಿ ಸ್ನಾನ ಮಾಡಿ ಪವಿತ್ರನಾದ ಅರ್ಜುನನ ಮೂರ್ತಿಯನ್ನು ನೋಡಿ ಉರಗರಾಜಕುಮಾರಿಯಾದ ಉಲೂಪಿ ಪ್ರೀತಿಯಿಂದ ಅವನನ್ನು ಮೆಚ್ಚಿ ವರಿಸಿದಳು. ಅವನನ್ನು ಪಾತಾಳ ಮಂದಿರಕ್ಕೆ ಕರೆದುಕೊಂಡು ಹೋದಳು.
ಪದಾರ್ಥ (ಕ.ಗ.ಪ)
ಅವಗಾಹ-ಮುಳುಗು, ವಿಶುದ್ಧ-ಪವಿತ್ರ, ವಿಗ್ರಹ-ಮೂರ್ತಿ, ಜಂಭಾರಿ-ಇಂದ್ರ, ತನಯ-ಮಗ, (ಜಂಭ ಎಂಬ ರಾಕ್ಷಸನ ಶತ್ರು)
ಟಿಪ್ಪನೀ (ಕ.ಗ.ಪ)
ಜಂಭ-ರಾಕ್ಷಸ ರಾಜನಾಗಿದ್ದ ತಾರಕಾಸುರನ ಹತ್ತು ಮಂದಿ ಪ್ರಧಾನರಲ್ಲಿ ಒಬ್ಬನು. ಇವನ ಮಗಳಾದ ಕಯಾದು ಹಿರಣ್ಯಕಶಿಪುವನ್ನು ಮದುವೆಯಾಗಿ ಪ್ರಹ್ಲಾದನೇ ಮೊದಲಾದ ನಾಲ್ವರು ಪುತ್ರರನ್ನು ಪಡೆದಳು.
ಉರಗರಾಜಕುಮಾರಿ - ಉಲೂಪಿ - ನಾಗಕನ್ಯಕೆ. ಕೌರವ್ಯನೆಂಬ ನಾಗರಾಜನ ಮಗಳು. ಅರ್ಜುನ ತೀರ್ಥಯಾತ್ರೆಗೆ ಹೋಗಿದ್ದಾಗ ಇವಳನ್ನು ಮದುವೆಯಾಗಿ ಇರಾವಂತನೆಂಬ ಮಗನನ್ನು ಪಡೆದನು. ಮುಂದೆ ಪಾಂಡವರು ಅಶ್ವಮೇಧ ಯಾಗ ಮಾಡಿದ ಸಂದರ್ಭದಲ್ಲಿ ಅರ್ಜುನನಿಗೂ ಬಭ್ರುವಾಹನನಿಗೂ ಯುದ್ಧವಾಗಿ ಹತನಾದ ಅರ್ಜುನನನ್ನು ಇವಳು ಸಂಜೀವನ ಮಣಿಯಿಂದ ಬದುಕಿಸಿದಳು.
ಮೂಲ ...{Loading}...
ಧಾರುಣೀಪತಿ ಕೇಳು ಗಂಗಾ
ತೀರಕೈದಿದನರ್ಜುನನು ಭಾ
ಗೀರಥೀ ಸ್ನಾನಾವಗಾಹ ವಿಶುದ್ಧ ವಿಗ್ರಹನ
ದೂರದಲಿ ಕಂಡುರಗ ರಾಜಕು
ಮಾರಿ ವರಸಿದಳೊಲವಿನಲಿ ಜಂ
ಭಾರಿತನಯನನಿಳುಹಿದಳು ಪಾತಾಳಮಂದಿರಕೆ ॥10॥
೦೧೧ ವಿಭವದಲಿ ವಾಸುಕಿಯ ...{Loading}...
ವಿಭವದಲಿ ವಾಸುಕಿಯ ತಂಗಿಯ
ನುಭಯ ವಂಶ ವಿಶುದ್ಧೆಯನು ಹರಿ
ನಿಭನು ಪಾಣಿಗ್ರಹಣವನು ಮಾಡಿದನು ವೊಲವಿನಲಿ
ಅಭಿಮತ ಕ್ರೀಡಾವಿನೋದದ
ರಭಸದಲಿ ದಿನ ಸವೆಯೆ ಗರ್ಭ
ಪ್ರಭವವಾಯ್ತು ಕುಮಾರ ಜನಿಸಿದನುರಗನಾರಿಯಲಿ ॥11॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಎರಡೂ ವಂಶಗಳಿಗೆ ಪವಿತ್ರಳಾದ ಆ ವಾಸುಕಿಯ ತಂಗಿಯನ್ನು ಇಂದ್ರ ಸಮಾನನಾದ ಅರ್ಜುನನು ವೈಭವದಿಂದ ಮದುವೆಯಾದನು. ಪ್ರೀತಿಯಿಂದ ಅವರಿಬ್ಬರೂ ಇಷ್ಟವಾದ ವಿನೋದದ ಆಟಗಳ ವೇಗದಲ್ಲಿ ದಿನಗಳನ್ನು ಕಳೆಯುತ್ತಿರಲು, ಉಲೂಪಿಯಲ್ಲಿ ಗರ್ಭೋತ್ಪತ್ತಿಯಾಯಿತು. ಉಲೂಪಿಯಲ್ಲಿ ಕುಮಾರನು ಹುಟ್ಟಿದನು.
ಪದಾರ್ಥ (ಕ.ಗ.ಪ)
ವಿಶುದ್ಧೆ-ಪವಿತ್ರಳು, ಹರಿನಿಭ-ಇಂದ್ರಸಮಾನನಾದ, ಪಾಣಿಗ್ರಹಣ-ಮದುವೆ, ಅಭಿಮತ-ಇಷ್ಟವಾದ, ಪ್ರಭವ-ಉತ್ಪತ್ತಿ
ಮೂಲ ...{Loading}...
ವಿಭವದಲಿ ವಾಸುಕಿಯ ತಂಗಿಯ
ನುಭಯ ವಂಶ ವಿಶುದ್ಧೆಯನು ಹರಿ
ನಿಭನು ಪಾಣಿಗ್ರಹಣವನು ಮಾಡಿದನು ವೊಲವಿನಲಿ
ಅಭಿಮತ ಕ್ರೀಡಾವಿನೋದದ
ರಭಸದಲಿ ದಿನ ಸವೆಯೆ ಗರ್ಭ
ಪ್ರಭವವಾಯ್ತು ಕುಮಾರ ಜನಿಸಿದನುರಗನಾರಿಯಲಿ ॥11॥
೦೧೨ ಸುತನಿರಾವಾನೆನಿಸಿ ತೊಳಗಿದ ...{Loading}...
ಸುತನಿರಾವಾನೆನಿಸಿ ತೊಳಗಿದ
ನತಿ ಬಹಳ ಬಲನಾತನನು ನಿಜ
ಸತಿಯನಲ್ಲಿಯೆ ನಿಲಿಸಿ ಕಳುಹಿಸಿಕೊಂಡನುಚಿತದಲಿ
ಕ್ಷಿತಿಗೆ ಬಂದನು ಜಾಹ್ನವೀ ಸಂ
ಗತ ಸಮುದ್ರದ ತೀರದಲಿ ಸೇ
ವಿತ ಸಕಲ ತೀರ್ಥೌಘನೈದಿದನಿಂದ್ರ ದಿಙ್ಮುಖವ ॥12॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಆ ಮಗನು ಇರಾವಂತನೆಂದು ಅತಿಪರಾಕ್ರಮಿಯಾಗಿ ಪ್ರಕಾಶಿಸಿದನು. ಅವನನ್ನು, ತನ್ನ ಪತ್ನಿ ಉಲೂಪಿಯನ್ನು ಅಲ್ಲಿಯೇ ಬಿಟ್ಟು ಅವರಿಂದ ಉಚಿತವಾಗಿ ಕಳುಹಿಸಿಕೊಂಡನು. ಅವರಿಂದ ಬೀಳ್ಕೊಂಡು, ಮತ್ತೆ ಭೂಮಿಗೆ ಬಂದನು. ಗಂಗಾ ಸಂಗಮದ ಸಾಗರದ ತೀರದಲ್ಲಿ ಪೂರ್ವ ದಿಕ್ಕಿನ ಮೂಲಕ ಎಲ್ಲ ತೀರ್ಥ ಕ್ಷೇತ್ರಗಳಲ್ಲಿ ಸೇವೆ ಮಾಡಿ ಹೊರಟನು.
ಪದಾರ್ಥ (ಕ.ಗ.ಪ)
ಇರಾವಂತ-ಪದ್ಯ 10ರಲ್ಲಿನ ‘ಉರಗರಾಜಕುಮಾರಿ’ ಟಿಪ್ಪಣಿ ನೋಡಿ. ಕ್ಷಿತಿ-ಭೂಮಿ, ಸಂಗತ-ಸಂಗಮ, ಇಂದ್ರ ದಿಙ್ಮುಖ-ಪೂರ್ವ ದಿಕ್ಕಿನ ಕಡೆಯಿಂದ
ಮೂಲ ...{Loading}...
ಸುತನಿರಾವಾನೆನಿಸಿ ತೊಳಗಿದ
ನತಿ ಬಹಳ ಬಲನಾತನನು ನಿಜ
ಸತಿಯನಲ್ಲಿಯೆ ನಿಲಿಸಿ ಕಳುಹಿಸಿಕೊಂಡನುಚಿತದಲಿ
ಕ್ಷಿತಿಗೆ ಬಂದನು ಜಾಹ್ನವೀ ಸಂ
ಗತ ಸಮುದ್ರದ ತೀರದಲಿ ಸೇ
ವಿತ ಸಕಲ ತೀರ್ಥೌಘನೈದಿದನಿಂದ್ರ ದಿಙ್ಮುಖವ ॥12॥
೦೧೩ ಅರಸ ಕೇಳುತ್ತರದ ...{Loading}...
ಅರಸ ಕೇಳುತ್ತರದ ಪೂರ್ವದ
ಪರಮ ತೀರ್ಥವ್ರಾತವನು ವಿ
ಸ್ತರಿಸಿ ಸಾಗರ ತೀರದಲಿ ದಕ್ಷಿಣ ದಿಶಾವರಕೆ
ತಿರುಗಿದನು ತತ್ಪಂಚ ಗೋದಾ
ವರಿಯ ತೀರಕೆ ತುಂಗಭದ್ರಾ
ವರ ನದಿಯನುತ್ತರಿಸಿ ಕಾಂಚೀನಗರಕೈತಂದ ॥13॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಪೂರ್ವೋತ್ತರ ದಿಕ್ಕುಗಳಲ್ಲಿನ ಪವಿತ್ರವಾದ ತೀರ್ಥಕ್ಷೇತ್ರಗಳನ್ನೆಲ್ಲಾ ವೀಕ್ಷಿಸಿ ಸಾಗರದ ತೀರದಲ್ಲಿಯೇ ದಕ್ಷಿಣ ದೆಸೆಗೆ ತಿರುಗಿದನು. ಅಲ್ಲಲ್ಲಿಯ ಕ್ಷೇತ್ರಗಳನ್ನು ಸಂದರ್ಶಿಸುತ್ತ ಪಂಚ ಗೋದಾವರಿಯ ತೀರಕ್ಕೆ ಬಂದನು. ಅಲ್ಲಿಂದ ಮುಂದುವರಿದು ತುಂಗಭದ್ರಾನದಿಯನ್ನು ದಾಟಿ ಕಾಂಚೀನಗರಕ್ಕೆ ಬಂದನು.
ಪದಾರ್ಥ (ಕ.ಗ.ಪ)
ದಿಶಾವರ-ದೆಸೆ, ಉತ್ತರಿಸು-ದಾಟು
ಮೂಲ ...{Loading}...
ಅರಸ ಕೇಳುತ್ತರದ ಪೂರ್ವದ
ಪರಮ ತೀರ್ಥವ್ರಾತವನು ವಿ
ಸ್ತರಿಸಿ ಸಾಗರ ತೀರದಲಿ ದಕ್ಷಿಣ ದಿಶಾವರಕೆ
ತಿರುಗಿದನು ತತ್ಪಂಚ ಗೋದಾ
ವರಿಯ ತೀರಕೆ ತುಂಗಭದ್ರಾ
ವರ ನದಿಯನುತ್ತರಿಸಿ ಕಾಂಚೀನಗರಕೈತಂದ ॥13॥
೦೧೪ ಆ ನಗರದಧಿದೈವ ...{Loading}...
ಆ ನಗರದಧಿದೈವ ನಿಕರಕೆ
ತಾ ನಮಿಸಿ ತತ್ಸಕಲ ತೀರ್ಥ
ಸ್ನಾನ ಕರ್ಮವ ರಚಿಸಿ ಬಂದನು ಜಲಧಿ ತೀರದಲಿ
ವಾನರರ ಭುಜಬಲಸಮಾಖ್ಯಾ
ನೂನಶಾಸನವನು ಸುರಾರಿ ವಿ
ತಾನ ರವಿ ರಾಹುವನು ಕಂಡನು ಸೇತುಬಂಧನವ ॥14॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಆ ನಗರದ ಅಭಿಮಾನ ದೇವತೆಗಳಿಗೆ ನಮಸ್ಕರಿಸಿ, ಸಕಲ ತೀರ್ಥ ಸ್ನಾನ ಕರ್ಮಗಳನ್ನೂ ನೆರವೇರಿಸಿ, ಸಮುದ್ರ ತೀರದಲ್ಲಿಯೇ ಪ್ರಯಾಣ ಮಾಡುತ್ತ, ವಾನರರ ಪರಾಕ್ರಮದ ಕುಂದಿಲ್ಲದ ಕೀರ್ತಿಯನ್ನು ದಾಖಲಿಸುವ, ದೇವತೆಗಳ ಶತ್ರುವಾದ ರಾಕ್ಷಸರ ಸಮೂಹದ ಲಂಕೆಯೆಂಬ ಸೂರ್ಯನನ್ನು ಆಕ್ರಮಿಸುವ ರಾಹುವಿನಂತಿರುವ ಸೇತುವೆಯನ್ನು ನೋಡಿದನು.
ಪದಾರ್ಥ (ಕ.ಗ.ಪ)
ಅಧಿದೈವ-ಅಭಿಮಾನಿದೇವತೆ. ಭುಜಬಲಿ-ಪರಾಕ್ರಮಿ, ಸಮಾಖ್ಯಾ-ಕೀರ್ತಿ, ಅನೂನ-ಕುಂದಿಲ್ಲದ, ಶಾಸನ-ದಾಖಲೆ, ವಿತಾನ-ಸಮೂಹ, ಸೇತುಬಂಧನ-ಸೇತುವೆ
ಮೂಲ ...{Loading}...
ಆ ನಗರದಧಿದೈವ ನಿಕರಕೆ
ತಾ ನಮಿಸಿ ತತ್ಸಕಲ ತೀರ್ಥ
ಸ್ನಾನ ಕರ್ಮವ ರಚಿಸಿ ಬಂದನು ಜಲಧಿ ತೀರದಲಿ
ವಾನರರ ಭುಜಬಲಸಮಾಖ್ಯಾ
ನೂನಶಾಸನವನು ಸುರಾರಿ ವಿ
ತಾನ ರವಿ ರಾಹುವನು ಕಂಡನು ಸೇತುಬಂಧನವ ॥14॥
೦೧೫ ವರ ಧನುಷ್ಕೋಟಿಯಲಿ ...{Loading}...
ವರ ಧನುಷ್ಕೋಟಿಯಲಿ ಮಿಂದೀ
ಶ್ವರ ಪದಾಂಬುಜಕೆರಗಿ ತತ್ಪರಿ
ಸರದ ಪಂಚ ತಟಾಕದಲಿ ಘನ ಮಕರರೂಪದಲಿ
ಸುರವಧುಗಳಿರಲವರ ಶಾಪವ
ಪರಿಹರಿಸಿ ತತ್ತೀರ್ಥಸೇವಾ
ಪರಮಪಾವನಕರಣನಾದನು ಭೂಪ ಕೇಳ್ ಎಂದ ॥15॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಶ್ರೇಷ್ಠವಾದ ಧನುಷ್ಕೋಟಿಯಲ್ಲಿ ಸ್ನಾನ ಮಾಡಿ, ಈಶ್ವರನ ಪಾದ ಕಮಲಗಳಿಗೆ ನಮಸ್ಕರಿಸಿ, ಆ ಸಾಮೀಪ್ಯದ ಐದು ಕೊಳಗಳಲ್ಲಿ ದೊಡ್ಡ ದೊಡ್ಡ ಮೊಸಳೆಗಳ ರೂಪದಲ್ಲಿ ದೇವತಾಸ್ತ್ರೀಯರುಗಳಿರಲು, ಅವರನ್ನು ಶಾಪದಿಂದ ವಿಮೋಚನೆಗೊಳಿಸಿ, ಆ ತೀರ್ಥ ಸೇವೆಯಿಂದ ಅವನು ಅತ್ಯಂತ ಪರಿಶುದ್ಧ ಮನಸ್ಸನ್ನು ಹೊಂದಿದನು.
ಪದಾರ್ಥ (ಕ.ಗ.ಪ)
ವರ-ಶ್ರೇಷ್ಠ, ಪರಿಸರ-ಸಾಮೀಪ್ಯ, ತಟಾಕ-ಕೆರೆ, ಮಕರ-ಮೊಸಳೆ,
ಟಿಪ್ಪನೀ (ಕ.ಗ.ಪ)
ಪಂಚತಟಾಕ (ನಾರೀತೀರ್ಥ) - ಸೌಭದ್ರ, ಪೌಲೋಮ, ಅಗಸ್ತ್ಯ, ಕಾರಂಧಮ, ಭಾರದ್ವಾಜ - ಈ ಐದು ಕೊಳಗಳಿಗೂ ನಾರೀತೀರ್ಥ ಎಂಬ ಹೆಸರು ಸಲ್ಲುತ್ತದೆ. ಒಮ್ಮೆ ಸೌರಭೇಯೀ, ವನ್ದಾ, ಸಮೀಚೀ, ಬುದ್ಬುದ, ಲತಾ ಎಂಬ ಐವರು ಅಪ್ಸರಸಿಯರೂ ಒಟ್ಟುಗೂಡಿ ಮಣಿಪುರದ ಸಮೀಪದಲ್ಲಿರುವ ವನದಲ್ಲಿ ಸ್ವೇಚ್ಛೆಯಾಗಿ ಗೀತಾದಿಗಳಿಂದ ವಿಹರಿಸುತ್ತಿದ್ದರು. ಅಲ್ಲಿಯೇ ಸ್ವಲ್ಪ ದೂರದಲ್ಲಿ ವೇದಾಧ್ಯಯನ ಮಾಡುತ್ತಿದ್ದ ಒಬ್ಬ ಮುನಿ, ಇವರ ಹಾವಳಿಯಿಂದ ಬೇಸತ್ತು “ನೀವು ಐವರೂ ಮೊಸಗಳೆಗಳಾಗಿರಿ” ಎಂದು ಶಾಪಕೊಟ್ಟನು. ಅಪ್ಸರಸಿಯರು ಹೆದರಿ ಆ ಮುನಿಯನ್ನು ಮರೆಹೋಗಲಾಗಿ, ನೂರು ವರ್ಷಗಳ ತರುವಾಯ ಒಬ್ಬ ಮಹಾಪುರುಷನಿಂದ ಶಾಪವಿಮೋಚನೆಯಾಗುತ್ತದೆಂದು ಅನುಗ್ರಹಿಸಿದ. ಆರೀತಿ, ಅರ್ಜುನನು ಈ ಅಪ್ಸರಸಿಯರ ಶಾಪವಿಮೋಚನೆಗೆ ಕಾರಣನಾದನು.
ಧನುಷ್ಕೋಟಿ-ರಾಮೇಶ್ವರ ಸಮೀಪದಲ್ಲಿರುವ ಒಂದು ತೀರ್ಥ, ಪೂರ್ವ ಪಶ್ಚಿಮ ಸಮುದ್ರಗಳ ಸಂಗಮಸ್ಥಳ. ರಾವಣ ವಧಾ ನಂತರ ರಾಮ ಅಯೋಧ್ಯೆಗೆ ಹೊರಟಾಗ ವಿಭೀಷಣನ ಕೋರಿಕೆಯಂತೆ ರಾಮನು ತನ್ನ ಬಿಲ್ಲಿನ ತುದಿಯಿಂದ (ಧನುಷ್ಕೋಟಿ) ನಿರ್ಮಿಸಿದ್ದ ಸೇತುವೆಯನ್ನು ಅಲ್ಲಲ್ಲಿ ಕತ್ತರಿಸಿದನು.
ಮೂಲ ...{Loading}...
ವರ ಧನುಷ್ಕೋಟಿಯಲಿ ಮಿಂದೀ
ಶ್ವರ ಪದಾಂಬುಜಕೆರಗಿ ತತ್ಪರಿ
ಸರದ ಪಂಚ ತಟಾಕದಲಿ ಘನ ಮಕರರೂಪದಲಿ
ಸುರವಧುಗಳಿರಲವರ ಶಾಪವ
ಪರಿಹರಿಸಿ ತತ್ತೀರ್ಥಸೇವಾ
ಪರಮಪಾವನಕರಣನಾದನು ಭೂಪ ಕೇಳೆಂದ ॥15॥
೦೧೬ ಈತನನು ಕಣ್ಡರಿದು ...{Loading}...
ಈತನನು ಕಂಡರಿದು ಪಾಂಡ್ಯಮ
ಹೀತಳಾಧಿಪ ನಿಜ ಕುಮಾರಿಯ
ನೀತಗಿತ್ತನು ಬಭ್ರುವಾಹನನಾದನಾಕೆಯಲಿ
ಈತ ಕಳುಹಿಸಿಕೊಂಡು ದೈತ್ಯಾ
ರಾತಿಗೆರಗಿಯನಂತಶಯನ
ಖ್ಯಾತಿ ವಿಭವವನೀಕ್ಷಿಸುತ ಹರುಷದಲಿ ನಡೆತಂದ ॥16॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಪಾಂಡ್ಯ ದೇಶದ ಮಹಾರಾಜನು ಇವನನ್ನು ನೋಡಿ ತಿಳಿದುಕೊಂಡು, ತನ್ನ ಮಗಳನ್ನು ಈತನಿಗೆ ಕೊಟ್ಟನು. ಆಕೆಯಲ್ಲಿ ಬಭ್ರುವಾಹನನು ಜನಿಸಿದನು. ಅನಂತರ ಪಾಂಡ್ಯರಾಜನಿಂದ ಕಳುಹಿಸಿಕೊಂಡು ಅರ್ಜುನನು ಅನಂತಶಯನಕ್ಕೆ ಬಂದು ರಕ್ಕಸರಿಗೆ ಶತ್ರುವಾದ ಪರಮಾತ್ಮನಿಗೆ ನಮಸ್ಕರಿಸಿ ಅಲ್ಲಿಯ ಪ್ರಸಿದ್ಧವಾದ ವೈಭವವನ್ನು ನೋಡುತ್ತಾ ಸಂತೋಷದಲ್ಲಿ ಮುನ್ನಡೆದನು.
ಪದಾರ್ಥ (ಕ.ಗ.ಪ)
ಅರಾತಿ-ಶತ್ರು, ಅನನ್ತಶಯನ-ವಿಷ್ಣು (ಆದಿಶೇಷನ ಮೇಲೆ ಮಲಗುವವನು)
ಟಿಪ್ಪನೀ (ಕ.ಗ.ಪ)
ಪಾಂಡ್ಯ - ದ್ರವಿಡ ದೇಶಾಧೀಶ್ವರನಾದ ಪ್ರವೀರನೆಂಬವನಿಗೆ ಈ ಹೆಸರು ರೂಢವಾಗಿದೆ. ಈತನಿಗೆ ಮಲಯಧ್ವಜ, ಚಿತ್ರವಾಹನ ಎಂಬ ನಾಮಾಂತರಗಳು,
ಚಿತ್ರಾಂಗದ-ಚಿತ್ರವಾಹನನ ಮಗಳು, ಅರ್ಜುನನ ಹೆಂಡತಿ, ಬಭ್ರುವಾಹನನ ತಾಯಿ.
ಮೂಲ ...{Loading}...
ಈತನನು ಕಂಡರಿದು ಪಾಂಡ್ಯಮ
ಹೀತಳಾಧಿಪ ನಿಜ ಕುಮಾರಿಯ
ನೀತಗಿತ್ತನು ಬಭ್ರುವಾಹನನಾದನಾಕೆಯಲಿ
ಈತ ಕಳುಹಿಸಿಕೊಂಡು ದೈತ್ಯಾ
ರಾತಿಗೆರಗಿಯನಂತಶಯನ
ಖ್ಯಾತಿ ವಿಭವವನೀಕ್ಷಿಸುತ ಹರುಷದಲಿ ನಡೆತಂದ ॥16॥
೦೧೭ ನದಿ ನದವನುತ್ತರಿಸಿ ...{Loading}...
ನದಿ ನದವನುತ್ತರಿಸಿ ಹರಿ ಹರ
ಪದಯುಗಳಕಭಿನಮಿಸಿ ತದ್ದೇ
ಶದ ಸುತೀರ್ಥಕ್ಷೇತ್ರವೆನಿತುಳ್ಳನಿತನಾದರಿಸಿ
ಮುದದ ಮುರವಿನ ಹಂಸೆಗಳ ತನಿ
ಮದದ ಚಾತಕವಕ್ಕಿಗಳ ಮೇ
ಘದ ಸಘಾಡದ ಮೇಳವವ ನೋಡುತ್ತ ನಡೆತಂದ ॥17॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅಲ್ಲಿಂದ ಅನೇಕ ನದಿನದಗಳನ್ನು ದಾಟಿ, ಹರಿಹರರ ಪಾದದ್ವಯಕ್ಕೆ ನಮಸ್ಕರಿಸಿ, ಆ ಪ್ರದೇಶದಲ್ಲಿ ಎಷ್ಟು ಒಳ್ಳೆಯ ತೀರ್ಥ ಕ್ಷೇತ್ರಗಳಿವೆಯೋ ಅಷ್ಟನ್ನೂ ಪ್ರೀತಿಯಿಂದ ನೋಡಿದನು. ಹಾಗೆಯೇ ಬರುತ್ತಾ ಹಂಸಗಳ ಸಂತೋಷದ ಕುಸಿತವನ್ನು, ಜಾತಕ ಪಕ್ಷಿಗಳ ಅಧಿಕವಾದ ಹಿಗ್ಗನ್ನೂ ವೇಗವಾಗಿ ಸೇರುತ್ತಿದ್ದ ಮೋಡವನ್ನು ನೋಡುತ್ತಾ ನಡೆತಂದನು.
ಪದಾರ್ಥ (ಕ.ಗ.ಪ)
ಮುರವು-ಕುಸಿತ,
ಮದ-ಹಿಗ್ಗು,
ಸಘಾಡ-ವೇಗ
ನದಿ -ಹೆಣ್ಣು ನದಿ, ಪಶ್ಚಿಮದಿಂದ ಪೂರ್ವಕ್ಕೆ ಹರಿಯುವಂತಹ ನದಿ
ನದ - ಗಂಡು ನದಿ - ಪೂರ್ವದಿಂದ ಪಶ್ಚಿಮಕ್ಕೆ ಹರಿಯುವಂತಹ ನದಿ
ಮೂಲ ...{Loading}...
ನದಿ ನದವನುತ್ತರಿಸಿ ಹರಿ ಹರ
ಪದಯುಗಳಕಭಿನಮಿಸಿ ತದ್ದೇ
ಶದ ಸುತೀರ್ಥಕ್ಷೇತ್ರವೆನಿತುಳ್ಳನಿತನಾದರಿಸಿ
ಮುದದ ಮುರವಿನ ಹಂಸೆಗಳ ತನಿ
ಮದದ ಚಾತಕವಕ್ಕಿಗಳ ಮೇ
ಘದ ಸಘಾಡದ ಮೇಳವವ ನೋಡುತ್ತ ನಡೆತಂದ ॥17॥
೦೧೮ ಒಡ್ಡು ಮೆರೆದುದು ...{Loading}...
ಒಡ್ಡು ಮೆರೆದುದು ಮೇಘಘಟೆ ಬಿಸಿ
ಲೊಡ್ಡು ಮುರಿದುದು ಚಂದ್ರಸೂರ್ಯರ
ನಡ್ಡವಿಸಿ ಹಿಡಿಯಾಳ ಹಿಡಿದವು ಮುಗಿಲ ಚೂಣಿಗಳು
ಖಡ್ಡಿ ತಡೆವುದೆ ಕಡಲನುಡುಗಣ
ದೊಡ್ಡ ಕಾಣೆನು ಮುಗಿಲ ಬೆನಕಗೆ
ಲಡ್ಡುಗೆಗಳಾದವು ಸಮಸ್ತಗ್ರಹ ಸುತಾರೆಗಳು ॥18॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಮೋಡಗಳ ಸಮೂಹ ಎನ್ನುವ ಸೈನ್ಯ ಕಾಣಿಸಿಕೊಂಡವು. ಆಗ ಬಿಸಿಲೆಂಬ ಸೈನ್ಯ ಹಿಂತಿರುಗಿತು. ಮುಂದಳದಲ್ಲಿದ್ದ ಮೋಡಗಳು ಚಂದ್ರ ಸೂರ್ಯರನ್ನು ಮರೆ ಮಾಡಿ ಸೆರೆಯಾಳನ್ನಾಗಿ ಹಿಡಿದು ಬಿಟ್ಟವು. ಕಡ್ಡಿಯು ಸಮುದ್ರವನ್ನು ತಡೆಯಲು ಸಾಧ್ಯವೇ ? ನಕ್ಷತ್ರಗಳ ಸಮೂಹವು ಎಲ್ಲಿ ಹೋಯಿತೋ ಗೋಚರಿಸದು. ಸಮಸ್ತ ಗ್ರಹತಾರೆಗಳು ಮೋಡವೆಂಬ ಗಣಪನಿಗೆ ಲಡ್ಡುಗೆಗಳಾಗಿ ಹೋದವು.
ಪದಾರ್ಥ (ಕ.ಗ.ಪ)
ಒಡ್ಡು-ಸೈನ್ಯ, ಘಟೆ-ಸಮೂಹ, ಹಿಡಿಯಾಳು-ಸೆರೆಯಾಳು, ಖಡ್ಡಿ-ಕಡ್ಡಿ, ಉಡುಗಣ-ನಕ್ಷತ್ರ, ಬೆನಕ-ಗಣಪ
ಮೂಲ ...{Loading}...
ಒಡ್ಡು ಮೆರೆದುದು ಮೇಘಘಟೆ ಬಿಸಿ
ಲೊಡ್ಡು ಮುರಿದುದು ಚಂದ್ರಸೂರ್ಯರ
ನಡ್ಡವಿಸಿ ಹಿಡಿಯಾಳ ಹಿಡಿದವು ಮುಗಿಲ ಚೂಣಿಗಳು
ಖಡ್ಡಿ ತಡೆವುದೆ ಕಡಲನುಡುಗಣ
ದೊಡ್ಡ ಕಾಣೆನು ಮುಗಿಲ ಬೆನಕಗೆ
ಲಡ್ಡುಗೆಗಳಾದವು ಸಮಸ್ತಗ್ರಹ ಸುತಾರೆಗಳು ॥18॥
೦೧೯ ಆಳಕರೆ ಕಟಕವನು ...{Loading}...
ಆಳಕರೆ ಕಟಕವನು ಸೂರ್ಯನ
ಮೇಲೆ ಬರಹೇಳೆಂಬ ಮೇಘ ನೃ
ಪಾಲಕನ ಡಂಗುರವೊ ಮೊಳಗುವ ಸಿಡಿಲಿನಬ್ಬರವೊ
ಆಲಿಕಲ್ಗಳೊ ಮುಗಿಲ ಮುಂಗುಡಿ
ಯಾಳ ಹೊಯ್ಲಲಿ ಬೀಳ್ವ ತಾರಾ
ಮಾಲೆಗಳೊ ಜೀಮೂತಲತೆ ಲಂಬಿಸಿದುದಂಬರವ ॥19॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಆಳನ್ನು ಕರೆ, ಸೈನ್ಯವನ್ನು ಸೂರ್ಯನ ಮೇಲೆ ಬೀಳಲು ಬರಹೇಳು” ಎಂದು ಮೇಘಮಹಾರಾಜ ಸಾರಿಸಿದ ಡಂಗುರವೋ ಎನ್ನುವಂತೆ ಸಿಡಿಲಿನ ಆರ್ಭಟ ಅಬ್ಬರಿಸಿತು. ಆಲಿಕಲ್ಲುಗಳೋ, ಮೋಡಗಳ ಮುಂದಳದ ಸೈನ್ಯದ ಹೊಡೆತದಿಂದ ಬೀಳುವ ನಕ್ಷತ್ರ ಮಾಲೆಗಳೋ ಹೇಳಲಾರದಾಯಿತು. ಮೋಡದ ಬಳ್ಳಿ ಆಕಾಶದವರೆಗೂ ವಿಸ್ತರಿಸಿತು.
ಪದಾರ್ಥ (ಕ.ಗ.ಪ)
ಕಟಕ-ಸೈನ್ಯ, ಜೀಮೂತ-ಮೋಡ, ಲಂಬಿಸು-ವಿಸ್ತರಿಸು
ಮೂಲ ...{Loading}...
ಆಳಕರೆ ಕಟಕವನು ಸೂರ್ಯನ
ಮೇಲೆ ಬರಹೇಳೆಂಬ ಮೇಘ ನೃ
ಪಾಲಕನ ಡಂಗುರವೊ ಮೊಳಗುವ ಸಿಡಿಲಿನಬ್ಬರವೊ
ಆಲಿಕಲ್ಗಳೊ ಮುಗಿಲ ಮುಂಗುಡಿ
ಯಾಳ ಹೊಯ್ಲಲಿ ಬೀಳ್ವ ತಾರಾ
ಮಾಲೆಗಳೊ ಜೀಮೂತಲತೆ ಲಂಬಿಸಿದುದಂಬರವ ॥19॥
೦೨೦ ಮಿಞ್ಚಿದವು ದೆಸೆಗಳಲಿ ...{Loading}...
ಮಿಂಚಿದವು ದೆಸೆಗಳಲಿ ಗಮನಕೆ
ಮುಂಚಿದವು ಹಂಸೆಗಳು ನಭದಲಿ
ಹೊಂಚಿದುದು ಜೀವನಕೆ ಜೀವನ ವಿರಹಿ ನಿಕುರುಂಬ
ಪಂಚಪತಿಯರೊ ಮೇಣಿವರು ಪತಿ
ವಂಚಕಿಯರೋ ಗ್ರೀಷ್ಮಕಾಲದ
ಪಂಚತೆಯೊಳಾಲಿಂಗಿಸಿತು ದಿಗ್ವಧುಗಳಂಬುದವ ॥20॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ದಿಕ್ಕು ದಿಕ್ಕುಗಳಲ್ಲಿ ಮಿಂಚುಗಳು ಪ್ರಕಾಶಿಸಿದುವು. ನಡೆಗೆ ಮುಂದಾದವು ಹಂಸೆಗಳು. ಬದುಕಿನಲ್ಲಿನ ವಿಯೋಗಿಗಳ ಸಮೂಹ ಆಕಾಶದಲ್ಲಿ ನೀರಿಗಾಗಿ ನಿರೀಕ್ಷಿಸಿದವು. ಗ್ರೀಷ್ಮ ಋತು ಕೊನೆಗೊಂಡಿತು. ದಿಗ್ವಧುಗಳು ಮೋಡಗಳನ್ನು ಅಪ್ಪಿಕೊಂಡವು. ಈ ದಿಗ್ವನಿತೆಯರು ದ್ರೌಪದಿಯಂತೆ ಪಂಚ ಪತಿಯರಾಗಿರಬಹುದೆ ? ಅಂದರೆ, ಇವರಿಗೆ ಕೇವಲ ಗ್ರೀಷ್ಮನೊಬ್ಬನೇ ಗಂಡನಾಗಿರದೆ ವಸಂತ, ಗ್ರೀಷ್ಮ, ವರ್ಷ, ಶರತ್ ಮತ್ತು ಹೇಮಂತ (ವರ್ಷಕ್ಕೆ ಐದು ಋತುಗಳು ಎಂದು ವೈದಿಕ ಕಾಲದ ಪರಿಕಲ್ಪನೆ. ಹೇಮಂತ ಶಿಶಿರ ಸೇರಿ ಒಂದೇ ಋತು) ಎಂಬ ಐದು ಋತುಗಳೂ ಗಂಡಂದಿರಾಗಿರಬಹುದೇ ? ಅಥವಾ ಈ ದಿಗ್ವಧುಗಳು ಪತಿವಂಚಕಿಯರಾಗಿದ್ದು ತಮ್ಮ ಗಂಡನಾದ ಗ್ರೀಷ್ಮ ಮರಣ ಹೊಂದಿದಾಗ ಪರಪುರುಷರಾದ ಮೋಡಗಳನ್ನು ಅಪ್ಪಿಕೊಂಡಿರಬಹುದೆ ?
ಪದಾರ್ಥ (ಕ.ಗ.ಪ)
ಮಿಂಚು-ಪ್ರಕಾಶಿಸು, ಗಮನ-ನಡೆ, ಹೊಂಚು-ನಿರೀಕ್ಷಿಸು, ಜೀವನ-ನೀರು, ನಿಕುರುಂಬ-ಸಮೂಹ, ಪಂಚತೆ-ಸಾವು (ಕೊನೆ) ಅಂಬುದ-ಮೋಡ
ಪಾಠಾನ್ತರ (ಕ.ಗ.ಪ)
ವರ್ಷಕ್ಕೆ ಐದು ಋತುಗಳು ಎಂದು ವೈದಿಕ ಕಾಲದ ಪರಿಕಲ್ಪನೆ. ಹೇಮಂತ ಶಿಶಿರ ಸೇರಿ ಒಂದೇ ಋತು
ಮೂಲ ...{Loading}...
ಮಿಂಚಿದವು ದೆಸೆಗಳಲಿ ಗಮನಕೆ
ಮುಂಚಿದವು ಹಂಸೆಗಳು ನಭದಲಿ
ಹೊಂಚಿದುದು ಜೀವನಕೆ ಜೀವನ ವಿರಹಿ ನಿಕುರುಂಬ
ಪಂಚಪತಿಯರೊ ಮೇಣಿವರು ಪತಿ
ವಂಚಕಿಯರೋ ಗ್ರೀಷ್ಮಕಾಲದ
ಪಂಚತೆಯೊಳಾಲಿಂಗಿಸಿತು ದಿಗ್ವಧುಗಳಂಬುದವ ॥20॥
೦೨೧ ಜನಪ ಕೇಳೈ ...{Loading}...
ಜನಪ ಕೇಳೈ ಕಾರ್ಮುಗಿಲ ಮುಂ
ಬನಿಗಳೊಳು ವಹಿಲದಲಿ ಕೇರಳ
ಜನಪದದ ತೌಳವದ ಕೊಂಕಣ ವಿಷಮವೀಧಿಯಲಿ
ಜಿನುಗಿನಲಿ ಬಹುಮಳೆಗಳಲಿ ನೆನೆ
ನೆನೆದು ಸಾಗರ ತೀರದಲಿ ಬಂ
ದನು ಕಿರೀಟಿ ವಿಚಾರಿಸುತ ಮುರಹರನ ಪಟ್ಟಣವ ॥21॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕಪ್ಪು ಮೋಡಗಳಿಂದ ನೆಲದ ಮೇಲೆ ಬೀಳುವ ಮೊದಲ ಮಳೆಯ ಹನಿಗಳಲ್ಲಿ ಬೇಗ ಬೇಗ ಕೇರಳ, ತುಳು, ಕೊಂಕಣ ದೇಶಗಳ ಕಷ್ಟ ಪರಿಸ್ಥಿತಿಯ ದಾರಿಗಳಲ್ಲಿ ನಡೆದು ಸೋನೆಮಳೆ, ಜಡಿಮಳೆಗಳಲ್ಲಿ ತೋಯ್ದು ಸಮುದ್ರ ತೀರದಲ್ಲಿ ಕೃಷ್ಣನ ಪಟ್ಟಣ ದ್ವಾರಕಿಯನ್ನು ವಿಚಾರಿಸುತ್ತ ಪಾರ್ಥನು ಬಂದನು.
ಪದಾರ್ಥ (ಕ.ಗ.ಪ)
ಕಾರ್ಮುಗಿಲು-ಕಪ್ಪುಮೋಡ, ಮುಂಬನಿ-ನೆಲದ ಮೇಲೆ ಬೀಳುವ ಮೊದಲ ಮಳೆಯ ಹನಿ, ಜನಪದ-ದೇಶ, ಜಿನುಗು-ಸೋನೆಮಳೆ, ವಿಷಮ-ಕಷ್ಟ ಪರಿಸ್ಥಿತಿ
ಟಿಪ್ಪನೀ (ಕ.ಗ.ಪ)
ಕಿರೀಟಿ-ಪಾರ್ಥನ ಒಂದು ಹೆಸರು - ಅರ್ಜುನನು ಪಾಶುಪತಾಸ್ತ್ರಾದಿಗಳನ್ನು ಪಡೆದು ಸ್ವರ್ಗದಲ್ಲಿದ್ದಾಗ, ಇಂದ್ರನಿಂದ ಜಯಿಸಲಾಗದ ಶತ್ರುಗಳನ್ನು ಅರ್ಜುನನು ಗೆದ್ದು ಮಹೋಪಕಾರ ಮಾಡಿದುದಕ್ಕಾಗಿ ಇಂದ್ರ ಅರ್ಜುನನನ್ನು ತನ್ನ ಸಿಂಹಾಸನದ ಮೇಲೆ ಕುಳ್ಳಿರಿಸಿ, ತನ್ನ ಕಿರೀಟವನ್ನು ಅವನ ತಲೆಯ ಮೇಲಿಟ್ಟು ಗೌರವಿಸಿದ. ಈ ಕಾರಣದಿಂದ ಅರ್ಜುನನಿಗೆ ಕಿರೀಟಿ ಎಂಬ ಹೆಸರು ಬಂತು.
ಮೂಲ ...{Loading}...
ಜನಪ ಕೇಳೈ ಕಾರ್ಮುಗಿಲ ಮುಂ
ಬನಿಗಳೊಳು ವಹಿಲದಲಿ ಕೇರಳ
ಜನಪದದ ತೌಳವದ ಕೊಂಕಣ ವಿಷಮವೀಧಿಯಲಿ
ಜಿನುಗಿನಲಿ ಬಹುಮಳೆಗಳಲಿ ನೆನೆ
ನೆನೆದು ಸಾಗರ ತೀರದಲಿ ಬಂ
ದನು ಕಿರೀಟಿ ವಿಚಾರಿಸುತ ಮುರಹರನ ಪಟ್ಟಣವ ॥21॥
೦೨೨ ಪುರವ ಹೊರವಣ್ಟೆಣ್ಟು ...{Loading}...
ಪುರವ ಹೊರವಂಟೆಂಟು ತಿಂಗಳು
ಪರಿಹರಿಸಿತೀ ಕೃಷúರಾಯನ
ಪುರದೊಳಗೆ ನೂಕುವೆನು ವರ್ಷಾಕಾಲ ವಿಭ್ರಮವ
ವರುಷವೊಂದು ಸಮಾಪ್ತಿ ಬಳಿಕಿನೊ
ಳರಸನಂಘ್ರಿ ವಿಲೋಕನಾ ವಿ
ಸ್ತರಣವಹುದೆಂದಾತ ನಿಶ್ಚೈಸಿದನು ಮನದೊಳಗೆ ॥22॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಇಂದ್ರಪ್ರಸ್ಥ ಪಟ್ಟಣವನ್ನು ಬಿಟ್ಟು ಹೊರಟು ಎಂಟು ತಿಂಗಳು ಕಳೆಯಿತು. ಮಳೆಗಾಲದಲ್ಲಿ ಅಲೆದಾಟವನ್ನು ಕೃಷ್ಣರಾಯನ ದ್ವಾರಕಾಪಟ್ಟಣದೊಳಗೆ ಕಳೆಯುವೆನು. ಅಲ್ಲಿಗೆ ಒಂದು ವರ್ಷ ಮುಗಿಯುತ್ತದೆ. ನಂತರ, ಅರಸನ ಪಾದಗಳ ದರ್ಶನವೊದಗುತ್ತದೆ” ಎಂದು ಅರ್ಜುನನು ಮನಸ್ಸಿನಲ್ಲಿ ನಿಶ್ಚಯಿಸಿದನು.
ಪದಾರ್ಥ (ಕ.ಗ.ಪ)
ನೂಕು-ಕಳೆ, ವರ್ಷಾಕಾಲ-ಮಳೆಗಾಲ, ವಿಭ್ರಮ-ಅಲೆದಾಟ
ಮೂಲ ...{Loading}...
ಪುರವ ಹೊರವಂಟೆಂಟು ತಿಂಗಳು
ಪರಿಹರಿಸಿತೀ ಕೃಷúರಾಯನ
ಪುರದೊಳಗೆ ನೂಕುವೆನು ವರ್ಷಾಕಾಲ ವಿಭ್ರಮವ
ವರುಷವೊಂದು ಸಮಾಪ್ತಿ ಬಳಿಕಿನೊ
ಳರಸನಂಘ್ರಿ ವಿಲೋಕನಾ ವಿ
ಸ್ತರಣವಹುದೆಂದಾತ ನಿಶ್ಚೈಸಿದನು ಮನದೊಳಗೆ ॥22॥
೦೨೩ ಅರಸ ಕೇಳ್ ...{Loading}...
ಅರಸ ಕೇಳ್ ಸಂನ್ಯಾಸಿ ವೇಷದ
ಪರಿಕರವನಳವಡಿಸಿ ಶೌರಿಯ
ಪುರದ ಹೊರ ಬಾಹೆಯಲಿ ಹೆಚ್ಚಿದ ಬನದ ಮಧ್ಯದಲಿ
ಇರುಳು ಕಗ್ಗತ್ತಲೆಯೊಳೌಕುವ
ಸರಿವಳೆಗೆ ಸಲೆ ಸೇಡುಗೊಳುತು
ಬ್ಬರಿಸಿ ಕೃಷ್ಣನ ನೆನೆವುತಿದ್ದನು ಮರನ ಹೊಳ್ಳಿನಲಿ ॥23॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಸಂನ್ಯಾಸಿ ವೇಷದ ಸಲಕರಣೆಗಳನ್ನು ಹೊಂದಿಸಿಕೊಂಡು ಕೃಷ್ಣನ ಪಟ್ಟಣದ ಹೊರಪ್ರದೇಶದಲ್ಲಿ ಬೆಳೆದ ಉದ್ಯಾನವನದ ಮಧ್ಯದಲ್ಲಿ ನಿಂತನು. ರಾತ್ರಿಯ ಕಗ್ಗತ್ತಲೆಯಲ್ಲಿ ಸುರಿಯುವ ಧಾರಾಕಾರವಾದ ಮಳೆಯಲ್ಲಿ ನೆನೆದು ಮರದ ಪೊಟರೆಯಲ್ಲಿ ಒಂದೇ ಸಮನೆ ಸುರುಟಿಕೊಳ್ಳುತ್ತ ಅರ್ಜುನನು ಅತಿಶಯವಾಗಿ ಕೃಷ್ಣನನ್ನು ಸ್ಮರಿಸಿಕೊಳ್ಳುತ್ತಿದ್ದನು.
ಪದಾರ್ಥ (ಕ.ಗ.ಪ)
ಪರಿಕರ-ಸಲಕರಣೆ, ಸರಿವಳೆ-ಧಾರಾಕಾರವಾದ ಮಳೆ, ಶೌರಿ-ಕೃಷ್ಣ, ಹೊಳ್ಳು-ಪೊಟರೆ, ಸಲೆ-ಅತಿಶಯ, ಸೇಡುಗೊಳ್ಳು-ಸುರುಟಿಕೊಳ್ಳು
ಮೂಲ ...{Loading}...
ಅರಸ ಕೇಳ್ ಸಂನ್ಯಾಸಿ ವೇಷದ
ಪರಿಕರವನಳವಡಿಸಿ ಶೌರಿಯ
ಪುರದ ಹೊರ ಬಾಹೆಯಲಿ ಹೆಚ್ಚಿದ ಬನದ ಮಧ್ಯದಲಿ
ಇರುಳು ಕಗ್ಗತ್ತಲೆಯೊಳೌಕುವ
ಸರಿವಳೆಗೆ ಸಲೆ ಸೇಡುಗೊಳುತು
ಬ್ಬರಿಸಿ ಕೃಷ್ಣನ ನೆನೆವುತಿದ್ದನು ಮರನ ಹೊಳ್ಳಿನಲಿ ॥23॥
೦೨೪ ದೇವನತ್ತಲು ಸತ್ಯಭಾಮಾ ...{Loading}...
ದೇವನತ್ತಲು ಸತ್ಯಭಾಮಾ
ದೇವಿಯರ ಮೇಳದಲಿಯಿರುತಿ
ರ್ದೀ ವಿಲಾಸವ ನೆನೆದು ನಕ್ಕನು ಶಕ್ರನಂದನನ
ಆವಳೋ ನೆನಹಿನಲಿ ಸುಳಿದಳು
ಭಾವದಲಿ ಸುಮ್ಮಾನವೇನೆನೆ
ದೇವಿ ಬೇರೊಂದಿಲ್ಲ ಮನ ನಿನ್ನಾಣೆ ಕೇಳ್ ಎಂದ ॥24॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅತ್ತಕಡೆ ಶ್ರೀಕೃಷ್ಣನು ಸತ್ಯಭಾಮಾದೇವಿಯೊಂದಿಗೆ ವಿನೋದದಲ್ಲಿ ಇದ್ದವನು ಅರ್ಜುನನ ಈ ವಿಹಾರವನ್ನು ನೆನೆದು ನಕ್ಕನು. ಅದನ್ನು ಕಂಡು ಸತ್ಯಭಾಮಾ, “ಯಾವಳೋ ಮನಸ್ಸಿನಲ್ಲಿ ಆವರಿಸಿದಳು. ಅದಕ್ಕೇ ಈ ಸಂತೋಷ” ಎಂದಳು. ಅದಕ್ಕೆ ಕೃಷ್ಣನು, “ದೇವೀ ಬೇರೊಂದು ಏನೂ ಇಲ್ಲ ನನ್ನ ಮನಸ್ಸಿನಲ್ಲಿ, ನಿನ್ನಾಣೆ ಕೇಳು” ಎಂದು ಹೇಳತೊಡಗಿದನು.
ಪದಾರ್ಥ (ಕ.ಗ.ಪ)
ಮೇಳ-ವಿನೋದ, ವಿಲಾಸ-ವಿಹಾರ, ಸುಳಿ-ಆವರಿಸು, ಸುಮ್ಮಾನ-ಸಂತೋಷ, ಶಕ್ರನಂದನ-ಇಂದ್ರನ ಮಗ, ಅರ್ಜುನ
ಮೂಲ ...{Loading}...
ದೇವನತ್ತಲು ಸತ್ಯಭಾಮಾ
ದೇವಿಯರ ಮೇಳದಲಿಯಿರುತಿ
ರ್ದೀ ವಿಲಾಸವ ನೆನೆದು ನಕ್ಕನು ಶಕ್ರನಂದನನ
ಆವಳೋ ನೆನಹಿನಲಿ ಸುಳಿದಳು
ಭಾವದಲಿ ಸುಮ್ಮಾನವೇನೆನೆ
ದೇವಿ ಬೇರೊಂದಿಲ್ಲ ಮನ ನಿನ್ನಾಣೆ ಕೇಳೆಂದ ॥24॥
೦೨೫ ನರನ ನೀ ...{Loading}...
ನರನ ನೀ ಕೇಳ್ದರಿಯಲಾ ಸೋ
ದರದ ಮೈದುನನೆನಗೆ ಕುಂತಿಯ
ವರ ಕುಮಾರಕನಾತನೀ ದ್ವಾರಾವತಿಯ ಹೊರಗೆ
ಮರದ ಹೊಳ್ಳೊಳು ಹೊಕ್ಕು ಸಿಕ್ಕಿದ
ನರಿಯವೊಲೈದಾನೆ ನಾನುಪ
ಚರಿಸಿ ಬಹೆನೆಂದೆನುತ ಮಂಚವನಿಳಿದನಸುರಾರಿ ॥25॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಪಾರ್ಥನ ವಿಚಾರವನ್ನು ನೀನು ಕೇಳಿಬಲ್ಲೆಯಷ್ಟೆ. ಅವನು ನನಗೆ ಸೋದರದ ಮೈದುನ. ಕುಂತಿಯ ಶ್ರೇಷ್ಠ ಪುತ್ರನು. ಆತನು ಈ ದ್ವಾರಾವತಿಯ ಹೊರಗೆ ಮರದ ಪೊಟರೆಯಲ್ಲಿ ಹೊಕ್ಕು ಸಿಕ್ಕಿ ಹಾಕಿಕೊಂಡ ನರಿಯಂತೆ ಇದ್ದಾನೆ. ನಾನು ಹೋಗಿ ಅವನನ್ನು ಆರೈಕೆ ಮಾಡಿ ಬರುತ್ತೇನೆ” ಎಂದು ಹೇಳುತ್ತ ಮಂಚವನ್ನು ಇಳಿದನು.
ಪದಾರ್ಥ (ಕ.ಗ.ಪ)
ಉಪಚರಿಸಿ-ಆರೈಕೆ ಮಾಡಿ, ಐದಾನೆ-ಇದ್ದಾನೆ
ಮೂಲ ...{Loading}...
ನರನ ನೀ ಕೇಳ್ದರಿಯಲಾ ಸೋ
ದರದ ಮೈದುನನೆನಗೆ ಕುಂತಿಯ
ವರ ಕುಮಾರಕನಾತನೀ ದ್ವಾರಾವತಿಯ ಹೊರಗೆ
ಮರದ ಹೊಳ್ಳೊಳು ಹೊಕ್ಕು ಸಿಕ್ಕಿದ
ನರಿಯವೊಲೈದಾನೆ ನಾನುಪ
ಚರಿಸಿ ಬಹೆನೆಂದೆನುತ ಮಂಚವನಿಳಿದನಸುರಾರಿ ॥25॥
೦೨೬ ಅರಸಿ ಕೇಳೀ ...{Loading}...
ಅರಸಿ ಕೇಳೀ ಬಂದ ಪಾರ್ಥನ
ಕರೆದುಪಾಯಾಂತರದೊಳೀವೆನು
ಸರಸಿಜಾನನೆಯನು ಸುಭದ್ರೆಯನಿಂದು ತಪ್ಪಿದರೆ
ಕರೆಸಿ ದುರ್ಯೋಧನಗೆ ಕೊಡಿಸುವ
ಭರವು ಬಲಭದ್ರನದು ಪಾರ್ಥನ
ಬರವು ಲೇಸಾಯ್ತೆನುತ ಹೊರವಂಟನು ನಿಜಾಲಯವ ॥26॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಅರಸೀ, ಕೇಳು, ಈಗ ಬಂದಿರುವ ಈ ಪಾರ್ಥನನ್ನು ಕರೆದು ಬೇರೊಂದು ಉಪಾಯದಿಂದ ಕಮಲಮುಖಿ ಸುಭದ್ರೆಯನ್ನು ಇವನಿಗೆ ಕೊಡುವೆನು. ಈಗ ತಪ್ಪಿದರೆ, ದುರ್ಯೋಧನನನ್ನು ಕರೆಸಿ ಅವಳನ್ನು ಕೊಡುವ ಉತ್ಕಟೇಚ್ಛೆ ಬಲರಾಮನದು. ಅರ್ಜುನನು ಬಂದದ್ದು ಒಳ್ಳೆಯದಾಯಿತು” ಎಂದು ಹೇಳಿ ಅರಮನೆಯಿಂದ ಹೊರ ಹೊರಟನು.
ಪದಾರ್ಥ (ಕ.ಗ.ಪ)
ಉಪಾಯಾಂತರ-ಬೇರೊಂದು ಉಪಾಯ, ಭರ-ಉತ್ಕಟೇಚ್ಛೆ
ಮೂಲ ...{Loading}...
ಅರಸಿ ಕೇಳೀ ಬಂದ ಪಾರ್ಥನ
ಕರೆದುಪಾಯಾಂತರದೊಳೀವೆನು
ಸರಸಿಜಾನನೆಯನು ಸುಭದ್ರೆಯನಿಂದು ತಪ್ಪಿದರೆ
ಕರೆಸಿ ದುರ್ಯೋಧನಗೆ ಕೊಡಿಸುವ
ಭರವು ಬಲಭದ್ರನದು ಪಾರ್ಥನ
ಬರವು ಲೇಸಾಯ್ತೆನುತ ಹೊರವಂಟನು ನಿಜಾಲಯವ ॥26॥
೦೨೭ ಬನ್ದನಲ್ಲಿಗೆ ಫಲುಗುಣನ ...{Loading}...
ಬಂದನಲ್ಲಿಗೆ ಫಲುಗುಣನ ಕಂ
ಡೆಂದನೀ ಶೈಲದ ಸಮೀಪದೊ
ಳಿಂದು ನಿಲು ಬಲಭದ್ರನೈತಹನುಚಿತ ವಚನದಲಿ
ಮಂದಿರಕೆ ಬರ ಹೇಳಿದರೆ ಬಾ
ಮುಂದೆ ನಿನ್ನಿಷ್ಟಾರ್ಥ ಸಿದ್ಧಿಪು
ದೆಂದು ಪಾರ್ಥನ ಸಂತವಿಸಿ ಮರಳಿದನು ಮುರವೈರಿ ॥27॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಫಲುಗುಣನಿದ್ದ ವನಕ್ಕೆ ಕೃಷ್ಣನು ಬಂದನು. ಅವನನ್ನು ಕಂಡು ಮಾತನಾಡಿಸಿದನು. “ಈ ಹೊತ್ತು ಈ ಬೆಟ್ಟದ ಹತ್ತಿರದಲ್ಲೇ ನಿಲ್ಲು. ಬಲರಾಮನು ಬರುತ್ತಾನೆ. ಅರಮನೆಗೆ ಬರಬೇಕೆಂದು ಸರಿಯಾದ ಮಾತುಗಳಲ್ಲಿ ಕರೆದರೆ ಬಾ. ಮುಂದೆ ನಿನ್ನ ಇಷ್ಟಾರ್ಥ ನೆರವೇರುವುದು” ಎಂದು ಅರ್ಜುನನನ್ನು ಸಮಾಧಾನ ಮಾಡಿ ಕೃಷ್ಣ ಹಿಂತಿರುಗಿದನು.
ಪದಾರ್ಥ (ಕ.ಗ.ಪ)
ಉಚಿತ-ಸರಿಯಾದ, ಬಲಭದ್ರ-ಬಲರಾಮ, ಮುರವೈರಿ-ಕೃಷ್ಣ, ಶೈಲ-ಬೆಟ್ಟ
ಮೂಲ ...{Loading}...
ಬಂದನಲ್ಲಿಗೆ ಫಲುಗುಣನ ಕಂ
ಡೆಂದನೀ ಶೈಲದ ಸಮೀಪದೊ
ಳಿಂದು ನಿಲು ಬಲಭದ್ರನೈತಹನುಚಿತ ವಚನದಲಿ
ಮಂದಿರಕೆ ಬರ ಹೇಳಿದರೆ ಬಾ
ಮುಂದೆ ನಿನ್ನಿಷ್ಟಾರ್ಥ ಸಿದ್ಧಿಪು
ದೆಂದು ಪಾರ್ಥನ ಸಂತವಿಸಿ ಮರಳಿದನು ಮುರವೈರಿ ॥27॥
೦೨೮ ಪರಮಹಂಸನ ಸುಳಿವು ...{Loading}...
ಪರಮಹಂಸನ ಸುಳಿವು ಸಾಕ್ಷಾ
ತ್ಸರಸಿಜಾಕ್ಷನ ಲೀಲೆ ಗಡ ನ
ಮ್ಮರಸನಭ್ಯುದಯ ಪ್ರಪಂಚವಿದೆಂದು ನಗರದಲಿ
ಹರಹಿದನು ಹರಿ ವಾರ್ತೆಯನು ತಾ
ನರಿಯದಂತಿರೆ ಬಳಿಕ ನೀಲಾಂ
ಬರನು ಬಹಳೋತ್ಸವದೊಳೈದಿದನಾತನಿದ್ದೆಡೆಗೆ ॥28॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಬ್ರಹ್ಮ ಸಿದ್ಧಿಯನ್ನು ಪಡೆದ ಸಂನ್ಯಾಸಿಯ ಸಂಚಾರವು ಸಾಕ್ಷಾತ್ ಕಮಲಾಕ್ಷನ ಲೀಲೆಯೇ ಸರಿ. ನಮ್ಮ ಅರಸನ ಸಂಸಾರದ ಅಭಿವೃದ್ಧಿಯ ಸೂಚನೆಯಿದು” ಎಂದು ನಗರದಲ್ಲಿ ಹರಿಯು ಸುದ್ದಿಯನ್ನು ತನಗೇನು ತಿಳಿಯದು ಎನ್ನುವಂತೆ ಹರಡಿದನು. ಆನಂತರ ಬಲರಾಮನು ಬಹಳ ಸಂಭ್ರಮದಿಂದ ಯತಿಯು ಇದ್ದ ಬಳಿಗೆ ಬಂದನು.
ಪದಾರ್ಥ (ಕ.ಗ.ಪ)
ಪರಮಹಂಸ-(ಬ್ರಹ್ಮಸಿದ್ಧಿಯನ್ನು ಪಡೆದ) ಸಂನ್ಯಾಸಿ, ಸುಳಿವು-ಸಂಚಾರ, ಪ್ರಪಂಚ-ಸಂಸಾರ, ಅಭ್ಯುದಯ-ಅಭಿವೃದ್ಧಿ, ನೀಲಾಂಬರ-ಬಲರಾಮ
ಮೂಲ ...{Loading}...
ಪರಮಹಂಸನ ಸುಳಿವು ಸಾಕ್ಷಾ
ತ್ಸರಸಿಜಾಕ್ಷನ ಲೀಲೆ ಗಡ ನ
ಮ್ಮರಸನಭ್ಯುದಯ ಪ್ರಪಂಚವಿದೆಂದು ನಗರದಲಿ
ಹರಹಿದನು ಹರಿ ವಾರ್ತೆಯನು ತಾ
ನರಿಯದಂತಿರೆ ಬಳಿಕ ನೀಲಾಂ
ಬರನು ಬಹಳೋತ್ಸವದೊಳೈದಿದನಾತನಿದ್ದೆಡೆಗೆ ॥28॥
೦೨೯ ವನ್ದಿಸಿದನಾ ಮುನಿಪತಿಯನಭಿ ...{Loading}...
ವಂದಿಸಿದನಾ ಮುನಿಪತಿಯನಭಿ
ವಂದಿತಾಶೀರ್ವಾದ ಸಂಗತಿ
ಯಿಂದ ವಿವರಿಸಿದನು ಚತುರ್ದಶವಿದ್ಯೆಗಳ ಗತಿಯ
ನಿಂದು ಮೂಗಿನ ಬೆರಳಿನಲಿ ಸಾ
ನಂದ ಮಿಗೆ ಬೆರಗಾಗಿ ನಮ್ಮಯ
ಮಂದಿರಕೆ ನೀವ್ ಬಿಜಯ ಮಾಡುವುದೆನುತ ಕೈಮುಗಿದ ॥29॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಬಲರಾಮನು ಆ ಮುನಿಪತಿಗೆ ನಮಸ್ಕರಿಸಿದನು. ನಮಸ್ಕರಿಸಿದ ಬಲರಾಮನಿಗೆ ಯತಿಯು ಆಶೀರ್ವಾದ ಮಾಡಿದನು. ಆ ಸಂದರ್ಭದಲ್ಲಿ ಹದಿನಾಲ್ಕು ವಿದ್ಯೆಗಳ ಮಾರ್ಗಗಳ ವಿಚಾರವನ್ನು ವಿವರಿಸಿದನು. ಮುನಿಯ ಮಾತನ್ನು ಕೇಳಿ ಬಲರಾಮನು ಸಂತೋಷ ಹೆಚ್ಚಾಗಲು, ಮೂಗಿನ ಮೇಲೆ ಬೆರಳಿಟ್ಟು ಆಶ್ಚರ್ಯದಿಂದ ನಿಂತು. “ನಮ್ಮ ಅರಮನೆಗೆ ದಯಮಾಡಿಸಬೇಕು” ಎಂದು ಕೈಮುಗಿದು ಪ್ರಾರ್ಥಿಸಿದನು.
ಪದಾರ್ಥ (ಕ.ಗ.ಪ)
ಅಭಿವಂದಿತ-ನಮಸ್ಕರಿಸಲ್ಪಟ್ಟ, ಗತಿ-ಮಾರ್ಗ, ಸಂಗತಿ-ವಿಚಾರ, ಸಾನಂದ-ಸಂತೋಷ,
ಟಿಪ್ಪನೀ (ಕ.ಗ.ಪ)
ಚತುರ್ದಶ ವಿದ್ಯೆಗಳು-ಚತುರ್ವೇದಗಳು, ಶಿಕ್ಷಾ ವ್ಯಾಕರಣಾದಿ ವೇದಾಂಗಗಳು, ನ್ಯಾಯಶಾಸ್ತ್ರಗಳು, ಮೀಮಾಂಸೆಗಳು, ಧರ್ಮಶಾಸ್ತ್ರಗಳು ಪುರಾಣಗಳು.
ಮೂಲ ...{Loading}...
ವಂದಿಸಿದನಾ ಮುನಿಪತಿಯನಭಿ
ವಂದಿತಾಶೀರ್ವಾದ ಸಂಗತಿ
ಯಿಂದ ವಿವರಿಸಿದನು ಚತುರ್ದಶವಿದ್ಯೆಗಳ ಗತಿಯ
ನಿಂದು ಮೂಗಿನ ಬೆರಳಿನಲಿ ಸಾ
ನಂದ ಮಿಗೆ ಬೆರಗಾಗಿ ನಮ್ಮಯ
ಮಂದಿರಕೆ ನೀವ್ ಬಿಜಯ ಮಾಡುವುದೆನುತ ಕೈಮುಗಿದ ॥29॥
೦೩೦ ನಾವು ಭಿಕ್ಷುಕರೆಮಗೆ ...{Loading}...
ನಾವು ಭಿಕ್ಷುಕರೆಮಗೆ ರಾಜಗೃ
ಹಾವಲಂಬನವೇಕೆ ಶೈಲ ವ
ನಾವಳಿಗಳಲಿ ವರ ನದೀತೀರದಲಿ ವಾಸಿಪೆವು
ಭಾವಿತ ಪ್ರಾರಬ್ಧಕರ್ಮ ಫ
ಲಾವಳಿಯನುಪಭೋಗಿಸುತ ದೇ
ಹಾವಸಾನವನೀಕ್ಷಿಸುತ್ತಿಹೆವೆಂದನಾ ಪಾರ್ಥ ॥30॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಆ ಪ್ರಾರ್ಥನೆಗೆ ಉತ್ತರವಾಗಿ ಪಾರ್ಥನು, “ನಾವು ಭಿಕ್ಷುಕರು. ನಮಗೆ ಅರಮನೆಯ ಆಶ್ರಯವೇಕೆ ? ಬೆಟ್ಟ, ಅರಣ್ಯ ಪ್ರದೇಶಗಳಲ್ಲಿ, ಪವಿತ್ರವಾದ ನದೀತೀರಗಳಲ್ಲಿ ವಾಸಿಸುತ್ತೇವೆ. ಅದೃಷ್ಟದಂತೆ ನಡೆಯುವ ಕರ್ಮಗಳಿಂದ ಉಂಟಾದ ಫಲಗಳನುಸಾರ ಸುಖದುಃಖಗಳನ್ನು ಅನುಭವಿಸುತ್ತ ದೇಹದ ಅಂತ್ಯವನ್ನು ನಿರೀಕ್ಷಿಸುತ್ತಿಹೆವು” ಎಂದು ಹೇಳಿದನು.
ಪದಾರ್ಥ (ಕ.ಗ.ಪ)
ರಾಜಗೃಹ-ಅರಮನೆ, ಅವಲಂಬನ-ಆಶ್ರಯ, ಭಾವಿತ-ಉಂಟಾದ, ಉಪಭೋಗಿಸು-ಸುಖದುಃಖಗಳನ್ನು ಅನುಭವಿಸು, ಅವಸಾನ-ಅಂತ್ಯ, ಪ್ರಾರಬ್ಧ ಕರ್ಮಫಲ-ಅದೃಷ್ಟದಂತೆ ನಡೆಯುವ ಕರ್ಮಫಲ
ಮೂಲ ...{Loading}...
ನಾವು ಭಿಕ್ಷುಕರೆಮಗೆ ರಾಜಗೃ
ಹಾವಲಂಬನವೇಕೆ ಶೈಲ ವ
ನಾವಳಿಗಳಲಿ ವರ ನದೀತೀರದಲಿ ವಾಸಿಪೆವು
ಭಾವಿತ ಪ್ರಾರಬ್ಧಕರ್ಮ ಫ
ಲಾವಳಿಯನುಪಭೋಗಿಸುತ ದೇ
ಹಾವಸಾನವನೀಕ್ಷಿಸುತ್ತಿಹೆವೆಂದನಾ ಪಾರ್ಥ ॥30॥
೦೩೧ ಅಹುದು ನೀವೇಕಾನ್ತಭವನದೊ ...{Loading}...
ಅಹುದು ನೀವೇಕಾಂತಭವನದೊ
ಳಿಹುದು ಚಾತುರ್ಮಾಸವಿದು ಸಂ
ನಿಹಿತವಾಯ್ತದ ನೂಕಿ ಬಿಜಯಂಗೈವುದಿಚ್ಛೆಯಲಿ
ವಿಹಿತ ಚರಿತರು ನೀವಲಾ ನಿ
ರ್ವಹಿಸುವೆನು ಶುಶ್ರೂಷೆಯನು ಕಿಂ
ಗಹನ ಮಾಡದಿರೆಂದು ತಂದನು ಯತಿಯನರಮನೆಗೆ ॥31॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಹೌದು, ನೀವು ಏಕಾಂತದ ಮನೆಯಲ್ಲೇ ಇರಿ. ಚಾತುರ್ಮಾಸವು ಈಗ ಸಮೀಪದಲ್ಲಿದೆ. ಅದು ಮುಗಿದ ಮೇಲೆ ನಿಮ್ಮ ಅಪೇಕ್ಷೆಯಂತೆ ಎಲ್ಲಿಗೆ ಬೇಕಾದರೂ ಹೋಗಬಹುದು. ನೀವು ಯೋಗ್ಯವಾದ ನಡವಳಿಕೆ ಉಳ್ಳವರಲ್ಲವೇ ! ನಿಮ್ಮ ಉಪಚಾರವನ್ನು ನಿಭಾಯಿಸುವೆನು. ಮಹಾಗಹನವೆಂದು ಯೋಚಿಸಬೇಡಿ” ಎಂದು ಯತಿಯನ್ನು ಒತ್ತಾಯ ಮಾಡಿ ಅರಮನೆಗೆ ತಂದನು.
ಪದಾರ್ಥ (ಕ.ಗ.ಪ)
ಏಕಾಂತ-ರಹಸ್ಯ, ಸಂನಿಹಿತ-ಸಮೀಪ, ವಿಹಿತ-ಯೋಗ್ಯ, ಚರಿತ-ನಡವಳಿಕೆ, ಶುಶ್ರೂಷೆ-ಉಪಚಾರ, ನಿರ್ವಹಿಸು-ನಿಭಾಯಿಸು, ಕಿಂಗಹನ-ಏನು ಮಹಾಗಹನ (ಕಷ್ಟಸಾಧ್ಯವಾದ) ವಿಚಾರ
ಮೂಲ ...{Loading}...
ಅಹುದು ನೀವೇಕಾಂತಭವನದೊ
ಳಿಹುದು ಚಾತುರ್ಮಾಸವಿದು ಸಂ
ನಿಹಿತವಾಯ್ತದ ನೂಕಿ ಬಿಜಯಂಗೈವುದಿಚ್ಛೆಯಲಿ
ವಿಹಿತ ಚರಿತರು ನೀವಲಾ ನಿ
ರ್ವಹಿಸುವೆನು ಶುಶ್ರೂಷೆಯನು ಕಿಂ
ಗಹನ ಮಾಡದಿರೆಂದು ತಂದನು ಯತಿಯನರಮನೆಗೆ ॥31॥
೦೩೨ ಇವರನರಮನೆಯೊಳಗೆ ಕನ್ಯಾ ...{Loading}...
ಇವರನರಮನೆಯೊಳಗೆ ಕನ್ಯಾ
ಭವನ ಮಧ್ಯದೊಳಿರಿಸಿ ಬಳಿಕಿನೊ
ಳಿವರ ಶುಶ್ರೂಷೆಗೆ ಸುಭದ್ರಾದೇವಿಯನು ಕರೆಸಿ
ಇವರಪೂರ್ವ ಮಹಾತ್ಮಕರು ನೀ
ನಿವರ ದೇವಾರ್ಚನೆ ಸಮಾಧಿ
ಪ್ರವರದಲಿ ಬೆಸಸಿದನು ಮಾಡುವುದೆಂದು ನೇಮಿಸಿದ ॥32॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಇವರನ್ನು ಅರಮನೆಯೊಳಗೆ ಕನ್ಯಾಭವನದ ಮಧ್ಯದಲ್ಲಿ ಇರಿಸಿದನು. ಇವರ ಉಪಚಾರಕ್ಕೆ ಸುಭದ್ರಾದೇವಿಯನ್ನು ಕರೆಸಿದನು. “ಇವರು ಅಸಮಾನರಾದ ಮಹಾತ್ಮರು, ಇವರ ದೇವರ ಪೂಜೆ, ಏಕಾಗ್ರತೆ, ಮಂತ್ರಗಳ ಕಾರ್ಯಗಳಲ್ಲಿ ಅಪ್ಪಣೆ ಮಾಡಿದ್ದನ್ನು ಮಾಡಬೇಕು” ಎಂದು ಸುಭದ್ರೆಗೆ ಬಲರಾಮನು ನೇಮಿಸಿದನು.
ಪದಾರ್ಥ (ಕ.ಗ.ಪ)
ಅಪೂರ್ವ-ಅಸಮಾನರಾದ, ಸಮಾಧಿ-ಏಕಾಗ್ರತೆ, ಪ್ರವರ-ಮಂತ್ರ, ಬೆಸಸು-ಅಪ್ಪಣೆ ಮಾಡು
ಮೂಲ ...{Loading}...
ಇವರನರಮನೆಯೊಳಗೆ ಕನ್ಯಾ
ಭವನ ಮಧ್ಯದೊಳಿರಿಸಿ ಬಳಿಕಿನೊ
ಳಿವರ ಶುಶ್ರೂಷೆಗೆ ಸುಭದ್ರಾದೇವಿಯನು ಕರೆಸಿ
ಇವರಪೂರ್ವ ಮಹಾತ್ಮಕರು ನೀ
ನಿವರ ದೇವಾರ್ಚನೆ ಸಮಾಧಿ
ಪ್ರವರದಲಿ ಬೆಸಸಿದನು ಮಾಡುವುದೆಂದು ನೇಮಿಸಿದ ॥32॥
೦೩೩ ಹೊರಗೆ ಕೃಷ್ಣನ ...{Loading}...
ಹೊರಗೆ ಕೃಷ್ಣನ ಕರೆದಿವೆಲ್ಲವ
ನರುಹಿದಡೆ ಮರುಳಾಡಿದನು ಮೈ
ಮರೆದು ತಂಗಿಯನೊಯ್ದು ಬಿಸುಟಿರೆ ಬಣಗು ತಿರುಕನಲಿ
ಅರಸು ಮಗಳನು ತೊತ್ತುಗೆಲಸಕೆ
ಪರುಠವಿಸಿದರೆ ಶಿವಶಿವಾ ನಾ
ವರಿಯೆವಲ್ಲಿಯ ಲೇಸು ಹೊಲ್ಲೆಹವೆಮ್ಮದಲ್ಲೆಂದ ॥33॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಆಮೇಲೆ, ಕೃಷ್ಣನನ್ನು ಹತ್ತಿರ ಕರೆದು, ಇವೆಲ್ಲವನ್ನು ತಿಳಿಸಿದರೆ, ಕೃಷ್ಣನು ಅದನ್ನು ಕೇಳಿ ಏನೂ ತಿಳಿಯದವನಂತೆ ವರ್ತಿಸಿದನು. “ನೀವು ಮೈಮರೆತು ತಂಗಿಯನ್ನು ತೆಗೆದುಕೊಂಡು ಹೋಗಿ ಅಲ್ಪನಾದ ಭಿಕ್ಷುಕನಲ್ಲಿ ಬಿಸುಟು ಬಿಟ್ಟಿರಿ. ರಾಜಕುಮಾರಿಯನ್ನು ಸೇವೆಯ ಕೆಲಸಕ್ಕೆ ಗೊತ್ತು ಮಾಡಿದಿರಾ ! ಶಿವಶಿವಾ ! ಅಲ್ಲಿಯ ಒಳ್ಳೆಯದು, ಕೆಟ್ಟದ್ದು ನಾವು ತಿಳಿಯೆವು. ಅದು ನಮ್ಮದಲ್ಲ” ಎಂದು ಕೃಷ್ಣನು ಬಲರಾಮನಿಗೆ ಹೇಳಿದನು.
ಪದಾರ್ಥ (ಕ.ಗ.ಪ)
ಮರುಳಾಡು-ಏನೂ ತಿಳಿಯದಂತೆ ವರ್ತಿಸು, ಬಣಗು-ಅಲ್ಪ, ತೊತ್ತು-ಸೇವೆ, ಲೇಸು-ಒಳ್ಳೆಯದು, ಹೊಲ್ಲೆಹ-ಕೆಟ್ಟದ್ದು, ಪರುಠವಿಸು-ಗೊತ್ತು ಮಾಡು
ಮೂಲ ...{Loading}...
ಹೊರಗೆ ಕೃಷ್ಣನ ಕರೆದಿವೆಲ್ಲವ
ನರುಹಿದಡೆ ಮರುಳಾಡಿದನು ಮೈ
ಮರೆದು ತಂಗಿಯನೊಯ್ದು ಬಿಸುಟಿರೆ ಬಣಗು ತಿರುಕನಲಿ
ಅರಸು ಮಗಳನು ತೊತ್ತುಗೆಲಸಕೆ
ಪರುಠವಿಸಿದರೆ ಶಿವಶಿವಾ ನಾ
ವರಿಯೆವಲ್ಲಿಯ ಲೇಸು ಹೊಲ್ಲೆಹವೆಮ್ಮದಲ್ಲೆಂದ ॥33॥
೦೩೪ ಮರುಳೆ ನೀ ...{Loading}...
ಮರುಳೆ ನೀ ಹೋಗಾರನೇನೆಂ
ದರಿಯೆ ಯತಿ ಸರ್ವಜ್ಞನೀತನು
ತಿರುಕನೇ ಸಾಕ್ಷಾತು ಲಕ್ಷ್ಮೀಕಾಂತ ಸನ್ನಿಭನು
ಬರಲಿ ಮಾಣಲಿ ಹಾನಿ ವೃದ್ಧಿಯ
ಹರಿಬವೆನ್ನದು ಯತಿ ಮಹಾತ್ಮರ
ನರಿಯದವರೇ ನಾವೆನುತ ಗಜರಿದನು ಬಲರಾಮ ॥34॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕೃಷ್ಣನ ಮಾತು ಬಲರಾಮನಿಗೆ ನಾಟಲಿಲ್ಲ. “ಮರುಳೇ ನೀನು ಹೋಗು. ಯಾರನ್ನು ಏನೆಂದು ತಿಳಿಯೆ. ಯತಿ ಸರ್ವಜ್ಞನು ಈತನು ಭಿಕ್ಷುಕನೇ ? ಸಾಕ್ಷಾತ್ ಲಕ್ಷ್ಮೀಕಾಂತನಿಗೆ ಸದೃಶನು. ಬರಲಿ, ಬಿಡಲಿ, ಹಾನಿವೃದ್ಧಿಯ ಹೊಣೆ ನನ್ನದು. ಯತಿ ಮಹಾತ್ಮರನ್ನು ತಿಳಿಯದವರೇ ನಾವು ?” ಎನುತ್ತ ಬಲರಾಮ ಗದರಿಸಿದನು.
ಪದಾರ್ಥ (ಕ.ಗ.ಪ)
ಸನ್ನಿಭ-ಸದೃಶ, ಮಾಣ್-ಬಿಡು, ಹರಿಬ-ಹೊಣೆ, ಗಜರು-ಗದರು
ಮೂಲ ...{Loading}...
ಮರುಳೆ ನೀ ಹೋಗಾರನೇನೆಂ
ದರಿಯೆ ಯತಿ ಸರ್ವಜ್ಞನೀತನು
ತಿರುಕನೇ ಸಾಕ್ಷಾತು ಲಕ್ಷ್ಮೀಕಾಂತ ಸನ್ನಿಭನು
ಬರಲಿ ಮಾಣಲಿ ಹಾನಿ ವೃದ್ಧಿಯ
ಹರಿಬವೆನ್ನದು ಯತಿ ಮಹಾತ್ಮರ
ನರಿಯದವರೇ ನಾವೆನುತ ಗಜರಿದನು ಬಲರಾಮ ॥34॥
೦೩೫ ಆದರೊಳ್ಳಿತು ತಙ್ಗಿ ...{Loading}...
ಆದರೊಳ್ಳಿತು ತಂಗಿ ಬೆಸಗೈ
ದಾದರಿಸಲೀ ಯತಿಪತಿಯ ನಿಮ
ಗೀ ದುರಾಗ್ರಹವೇಕೆ ಕಾಂಬಿರಿ ಫಲವನಗ್ರದಲಿ
ಹೋದೆವಿದೆ ಮೌನದೊಳೆನುತ್ತಬು
ಜೋದರನು ಹಿಂಗಿದನು ಹರಿಯ ವಿ
ನೋದ ರಚನೆಯನೇನನೆಂಬೆನು ಭೂಪ ಕೇಳ್ ಎಂದ ॥35॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಹಾಗಾದರೆ, ಸರಿ, ಒಳ್ಳೆಯದು ತಂಗಿಯು ಈ ಯತಿಪತಿಯ ಸೇವೆ ಮಾಡಿ ಉಪಚರಿಸಲಿ. ನಿಮಗೆ ಈ ಹಠಮಾರಿತನವೇಕೆ ? ಇದರ ಫಲವನ್ನು ಕೊನೆಯಲ್ಲಿ ಕಾಣುವಿರಿ. ಇದೋ ನಾವು ಮೌನವಾಗಿ ಹೊರಟು ಹೋಗುತ್ತೇವೆ” ಎನುತ್ತ ಕೃಷ್ಣನು ಸಾಗಿದನ.ು. ಹರಿಯ ವಿನೋದರಚನೆಯನ್ನು ಏನೆಂದು ವರ್ಣಿಸುವುದು !
ಪದಾರ್ಥ (ಕ.ಗ.ಪ)
ಬೆಸಗೈದು-ಸೇವೆ ಮಾಡಿ, ದುರಾಗ್ರಹ-ಹಠಮಾರಿತನ, ಅಬುಜೋದರ-ವಿಷ್ಣು, ಕೃಷ್ಣ (ಪದ್ಮನಾಭ)
ಮೂಲ ...{Loading}...
ಆದರೊಳ್ಳಿತು ತಂಗಿ ಬೆಸಗೈ
ದಾದರಿಸಲೀ ಯತಿಪತಿಯ ನಿಮ
ಗೀ ದುರಾಗ್ರಹವೇಕೆ ಕಾಂಬಿರಿ ಫಲವನಗ್ರದಲಿ
ಹೋದೆವಿದೆ ಮೌನದೊಳೆನುತ್ತಬು
ಜೋದರನು ಹಿಂಗಿದನು ಹರಿಯ ವಿ
ನೋದ ರಚನೆಯನೇನನೆಂಬೆನು ಭೂಪ ಕೇಳೆಂದ ॥35॥
೦೩೬ ಬಾಲಕಿಗೆ ಸನ್ನ್ಯಾಸಿ ...{Loading}...
ಬಾಲಕಿಗೆ ಸಂನ್ಯಾಸಿ ದೇವರ
ಮೇಲೆ ಮನವಾಯ್ತವರಿಗೀಕೆಯ
ಮೇಲೆ ನೆಲಸಿತು ಚಿತ್ತ ಕಾಣೆನು ಜಪ ಸಮಾಧಿಗಳ
ಮೇಳವಿಸಿತನ್ಯೋನ್ಯ ರಾಗ ಛ
ಡಾಳಿಸಿದುದಭಿಲಾಷೆ ಕಾಮನ
ಬೇಳುವೆಗೆ ಬೆಂಡಾದುದಿಬ್ಬರ ಧೈರ್ಯವಡಿಗಡಿಗೆ ॥36॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಬಾಲಕಿ ಸುಭದ್ರೆಗೆ ಸಂನ್ಯಾಸಿ ದೇವರ ಮೇಲೆ ಮನಸ್ಸಾಯ್ತು. ಅವರಿಗೆ ಈಕೆಯ ಮೇಲೆ ಮನಸ್ಸು ನೆಲಸಿತು. ಜಪ ಸಮಾಧಿಗಳು ಕಾಣಲಿಲ್ಲ. ಅವರನ್ನು ಪರಸ್ಪರ ಪ್ರೀತಿ ಒಟ್ಟುಗೂಡಿಸಿತು. ಬಯಕೆ ಅಧಿಕವಾಯ್ತು. ಕಾಮನ ಮಾಯೆಗೆ ಇಬ್ಬರ ಧೈರ್ಯವು ಹೆಜ್ಜೆ ಹೆಜ್ಜೆಗೂ ಪೊಳ್ಳಾಯಿತು.
ಪದಾರ್ಥ (ಕ.ಗ.ಪ)
ಮೇಳವಿಸು-ಒಟ್ಟುಗೂಡಿಸು, ಅನ್ಯೋನ್ಯ-ಪರಸ್ಪರ, ಛಡಾಳಿಸು-ಅಧಿಕವಾಗು, ಅಭಿಲಾಷೆ-ಬಯಕೆ, ಬೇಳುವೆ-ಮಾಯೆ, ಅಡಿಗಡಿಗೆ-ಹೆಜ್ಜೆ ಹೆಜ್ಜೆಗೂ, ಬೆಂಡು-ಪೊಳ್ಳು
ಮೂಲ ...{Loading}...
ಬಾಲಕಿಗೆ ಸಂನ್ಯಾಸಿ ದೇವರ
ಮೇಲೆ ಮನವಾಯ್ತವರಿಗೀಕೆಯ
ಮೇಲೆ ನೆಲಸಿತು ಚಿತ್ತ ಕಾಣೆನು ಜಪ ಸಮಾಧಿಗಳ
ಮೇಳವಿಸಿತನ್ಯೋನ್ಯ ರಾಗ ಛ
ಡಾಳಿಸಿದುದಭಿಲಾಷೆ ಕಾಮನ
ಬೇಳುವೆಗೆ ಬೆಂಡಾದುದಿಬ್ಬರ ಧೈರ್ಯವಡಿಗಡಿಗೆ ॥36॥
೦೩೭ ಮಿಡುಕುವುದು ಬಾಯ್ ...{Loading}...
ಮಿಡುಕುವುದು ಬಾಯ್ ಚಿತ್ತವವಳಲಿ
ತೊಡಕಿಹುದು ಜಪಮಾಲೆ ಬೆರಳಲಿ
ನಡೆವುತಿಹುದಕ್ಷಿಗಳು ಮುಕ್ಕುಳಿಸಿಹವು ಮಾನಿನಿಯ
ಮೃಡನ ಪೂಜೆಗೆ ಕೈ ಸುಭದ್ರೆಯ
ಹಿಡಿಹಿನಲಿ ಮನ ವರಸಮಾಧಿಯ
ತೊಡಹು ಹೊರಗೊಳಗಿಂದುಮುಖಿ ನರನಾಥ ಕೇಳ್ ಎಂದ ॥37॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಸಂನ್ಯಾಸಿಯ ಬಾಯಿ ಅಲ್ಲಾಡುವುದು, ಅವನ ಮನಸ್ಸು ಅವಳಲ್ಲಿ ಸಿಕ್ಕಿಕೊಂಡಿಹುದು. ಜಪಮಾಲೆ ಅವನ ಬೆರಳಲ್ಲಿ ಜರುಗುತ್ತಿಹುದು. ಅವನ ಕಣ್ಣುಗಳು ಆ ಸುಭದ್ರೆಯನ್ನು ತುಂಬಿಕೊಳ್ಳುತ್ತಿದ್ದವು. ಶಿವನ ಪೂಜೆಗೆ ಕೈ. ಸುಭದ್ರೆಯ ಹತೋಟಿಯಲ್ಲಿ ಮನಸ್ಸು. ಹೊರಗಡೆಗೆ ಏಕಾಗ್ರತೆಯ ಸೇರಿಕೆ. ಒಳಗೆ ಇಂದುಮುಖಿ. ಹೀಗಾಯಿತು ಪಾರ್ಥನ ಅವಸ್ಥೆ.
ಪದಾರ್ಥ (ಕ.ಗ.ಪ)
ಮಿಡುಕು-ಅಲ್ಲಾಡು, ತೊಡಕು-ಸಿಕ್ಕಿಕೊಳ್ಳು, ನಡೆ-ಜರುಗು, ಮುಕ್ಕುಳಿಸು-ತುಂಬಿಕೊಳ್ಳು, ಹಿಡಿಹು-ಹತೋಟಿ, ತೊಡಹು-ಸೇರಿಕೆ
ಮೂಲ ...{Loading}...
ಮಿಡುಕುವುದು ಬಾಯ್ ಚಿತ್ತವವಳಲಿ
ತೊಡಕಿಹುದು ಜಪಮಾಲೆ ಬೆರಳಲಿ
ನಡೆವುತಿಹುದಕ್ಷಿಗಳು ಮುಕ್ಕುಳಿಸಿಹವು ಮಾನಿನಿಯ
ಮೃಡನ ಪೂಜೆಗೆ ಕೈ ಸುಭದ್ರೆಯ
ಹಿಡಿಹಿನಲಿ ಮನ ವರಸಮಾಧಿಯ
ತೊಡಹು ಹೊರಗೊಳಗಿಂದುಮುಖಿ ನರನಾಥ ಕೇಳೆಂದ ॥37॥
೦೩೮ ಜಾರಿದುದು ಮಳೆಗಾಲವತಿ ...{Loading}...
ಜಾರಿದುದು ಮಳೆಗಾಲವತಿ ಬೆಳು
ಪೇರಿದವು ಮುಗಿಲುಗಳು ಕತ್ತಲೆ
ಸೂರೆವೋದುದು ಹಗಲಿರುಳು ರವಿಶಶಿಗಳುಪಟಲಕೆ
ತಾರಿದವು ನದಿ ನದಗಳಭ್ರಕೆ
ಹಾರಿದವು ಕಳಹಂಸೆಗಳು ತಲೆ
ದೋರಿದವು ತಾವರೆಗಳೆನೆ ಬಂದುದು ಶರತ್ಸಮಯ ॥38॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಹೀಗಿರಲು ಮಳೆಗಾಲವು ಹಿಮ್ಮೆಟ್ಟಿತು - ಮೋಡಗಳು ಅತಿ ಬಿಳುಪೇರಿದವು. ಹಗಲೂ ರಾತ್ರಿಯೂ ಸೂರ್ಯಚಂದ್ರರ ತೊಂದರೆಗೆ ಸಿಕ್ಕಿ ಕತ್ತಲೆ ಸೂರೆವೋದುವು. ನದಿನದಗಳು ಬತ್ತಿಹೋದವು. ಕಳ ಹಂಸೆಗಳು ಆಕಾಶಕ್ಕೆ ಹಾರಿದವು. ತಾವರೆಗಳು ಮೂಡಿದುವು. ಶರತ್ಕಾಲ ಬಂತು.
ಪದಾರ್ಥ (ಕ.ಗ.ಪ)
ಜಾರು-ಹಿಮ್ಮೆಟ್ಟು, ಉಪಟಳ-ತೊಂದರೆ, ತಾರು-ಬತ್ತಿಹೋಗು, ಅಭ್ರ-ಆಕಾಶ, ತಲೆದೋರು-ಮೂಡು
ಮೂಲ ...{Loading}...
ಜಾರಿದುದು ಮಳೆಗಾಲವತಿ ಬೆಳು
ಪೇರಿದವು ಮುಗಿಲುಗಳು ಕತ್ತಲೆ
ಸೂರೆವೋದುದು ಹಗಲಿರುಳು ರವಿಶಶಿಗಳುಪಟಲಕೆ
ತಾರಿದವು ನದಿ ನದಗಳಭ್ರಕೆ
ಹಾರಿದವು ಕಳಹಂಸೆಗಳು ತಲೆ
ದೋರಿದವು ತಾವರೆಗಳೆನೆ ಬಂದುದು ಶರತ್ಸಮಯ ॥38॥
೦೩೯ ಸುದತಿಯನು ಶುಭದಿವಸ ...{Loading}...
ಸುದತಿಯನು ಶುಭದಿವಸ ಸುಮೂಹೂ
ರ್ತದೊಳಿರುಳು ವೈವಾಹವನು ಮಾ
ಡಿದರು ಹರಿ ವಸುದೇವ ದೇವಕಿಯುಗ್ರಸೇನ ನೃಪ
ಮದುವೆಯಾಯಿತು ಬಲನರಿಯದಂ
ದದಲಿ ಹೂಡಿದ ರಥವನೇರಿಸಿ
ಮದವಳಿಗೆ ಸಹಿತರ್ಜುನನ ಕಳುಹಿದನು ಮುರವೈರಿ ॥39॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಆಗ, ಒಂದು ಶುಭ ದಿವಸ ಸುಮುಹೂರ್ತದಲ್ಲಿ ಕೃಷ್ಣ, ವಸುದೇವ, ದೇವಕಿ, ಉಗ್ರಸೇನ ಮಹಾರಾಜ ಇವರೆಲ್ಲರೂ ಸೇರಿ ಸುಂದರಿ ಸುಭದ್ರೆಯ ವಿವಾಹವನ್ನು ಅರ್ಜುನನೊಂದಿಗೆ ರಾತ್ರಿಯಲ್ಲೇ ಮಾಡಿದರು. ಬಲರಾಮ ತಿಳಿಯದಂತೆ ಮದುವೆಯು ನಡೆದು ಹೋಯಿತು. ಮದುವೆಯಾದ ಮೇಲೆ ಹೂಡಿದ ರಥದ ಮೇಲೇರಿಸಿ ವಧುವಿನೊಂದಿಗೆ ಅರ್ಜುನನನ್ನು ಕೃಷ್ಣನು ಕಳುಹಿಸಿಕೊಟ್ಟನು.
ಪದಾರ್ಥ (ಕ.ಗ.ಪ)
ಮದವಳಿಗೆ-ವಧು.
ಮೂಲ ...{Loading}...
ಸುದತಿಯನು ಶುಭದಿವಸ ಸುಮೂಹೂ
ರ್ತದೊಳಿರುಳು ವೈವಾಹವನು ಮಾ
ಡಿದರು ಹರಿ ವಸುದೇವ ದೇವಕಿಯುಗ್ರಸೇನ ನೃಪ
ಮದುವೆಯಾಯಿತು ಬಲನರಿಯದಂ
ದದಲಿ ಹೂಡಿದ ರಥವನೇರಿಸಿ
ಮದವಳಿಗೆ ಸಹಿತರ್ಜುನನ ಕಳುಹಿದನು ಮುರವೈರಿ ॥39॥
೦೪೦ ಪುರವ ಹೊರವಣ್ಟವರು ...{Loading}...
ಪುರವ ಹೊರವಂಟವರು ಬರಲ
ಬ್ಬರಣೆಯಾಯ್ತರಮನೆಯೊಳಗೆ ಸಂ
ಕರುಷಣಂಗರುಹಿದರು ಸಂನ್ಯಾಸಿಯ ಸಮಾಧಿಗಳ
ಅರಸು ಮಗಳನು ಕೊಂಡು ಹಾಯ್ದನೆ
ತಿರುಕ ಮುನಿ ಮಝಭಾಪು ಸುಭಟರ
ಕರೆ ಮುರಾರಿಯ ಮಾತು ತಾಗಿತೆನುತ್ತ ಗರ್ಜಿಸಿದ ॥40॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಇವರು ದ್ವಾರಕಾಪಟ್ಟಣವನ್ನು ಬಿಟ್ಟು ಹೊರಟು ಹೋದ ಮೇಲೆ, ಅರಮನೆಯಲ್ಲಿ ಗದ್ದಲವಾಯ್ತು. ಸಂನ್ಯಾಸಿಯ ಸಮಾಧಿಯ ವಿಷಯವನ್ನು ಬಲರಾಮನಿಗೆ ತಿಳಿಸಿದರು. “ಅರಸುಮಗಳನ್ನು ಆ ತಿರುಕಮುನಿ ಕರೆದುಕೊಂಡು ಓಡಿ ಹೋದನೆ ? ಮಝಭಾಪು, ಕೃಷ್ಣನ ಮಾತು ನಾಟಿತು. ವೀರಯೋಧರನ್ನು ಕರೆಯಿರಿ” ಎಂದು ಬಲರಾಮನು ಗರ್ಜಿಸಿದನು.
ಪದಾರ್ಥ (ಕ.ಗ.ಪ)
ಅಬ್ಬರಣೆ-ಗದ್ದಲ, ತಾಗು-ನಾಟು, ಸುಭಟ-ವೀರಯೋಧ, ಸಂಕರುಷಣ-ಬಲರಾಮ (ಒಂದು ಗರ್ಭದಿಂದ ಮತ್ತೊಂದು ಗರ್ಭಕ್ಕೆ ಸಂಕ್ರಮಿಸಿದ ಕಾರಣ ಸಂಕರ್ಷಣನೆಂದು ಹೆಸರು)
ಮೂಲ ...{Loading}...
ಪುರವ ಹೊರವಂಟವರು ಬರಲ
ಬ್ಬರಣೆಯಾಯ್ತರಮನೆಯೊಳಗೆ ಸಂ
ಕರುಷಣಂಗರುಹಿದರು ಸಂನ್ಯಾಸಿಯ ಸಮಾಧಿಗಳ
ಅರಸು ಮಗಳನು ಕೊಂಡು ಹಾಯ್ದನೆ
ತಿರುಕ ಮುನಿ ಮಝಭಾಪು ಸುಭಟರ
ಕರೆ ಮುರಾರಿಯ ಮಾತು ತಾಗಿತೆನುತ್ತ ಗರ್ಜಿಸಿದ ॥40॥
೦೪೧ ಹೇಳೆವೇ ನಾವ್ ...{Loading}...
ಹೇಳೆವೇ ನಾವ್ ಮುನ್ನ ನೀವ್ ನೀ
ಲಾಳಕಿಯ ಕೆಡಿಸಿದಿರಲಾ ನೀ
ವಾಳ ನೆರಹಿದಡಿನ್ನು ಮಾಡುವುದೇನು ಕಡು ಮುಳಿದು
ಚಾಳಿಸಿದುದಪಕೀರ್ತಿಯಕಟ ವಿ
ಕಾಳಿಸಿತು ಯದುವಂಶವೆನೆ ಕರ
ವಾಳ ಜಡಿದೈದಿದನು ಹಲಧರನರ್ಜುನನ ರಥವ ॥41॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ನಾವು ಮೊದಲೇ ಹೇಳಲಿಲ್ಲವೇ ? ನೀವು ಸುಭದ್ರೆಯನ್ನು ಕೆಡಿಸಿದಿರಲ್ಲಾ ! ನೀವು ಈಗ ಯೋಧರನ್ನು ಸೇರಿಸಿ ಅತಿಯಾಗಿ ಕೋಪಿಸಿಕೊಂಡು ಇನ್ನು ಮಾಡುವುದೇನು ? ಅಪಕೀರ್ತಿ ಬಂದು ಕಾಡಿ ಯದುವಂಶವನ್ನೇ ವ್ಯಾಪಿಸಿತು” ಎಂದು ಕೃಷ್ಣನು ನುಡಿದನು. ಆ ಮಾತನ್ನು ಕೇಳಿ ಬಲರಾಮನು ಖಡ್ಗವನ್ನು ಝಳಪಿಸುತ್ತ ಅರ್ಜುನನ ರಥವನ್ನು ಬೆಂಬತ್ತಿದನು.
ಪದಾರ್ಥ (ಕ.ಗ.ಪ)
ನೀಲಾಳಕಿ-ಸುಭದ್ರೆ (ಕರಿಯ ಕೂದಲುಳ್ಳವಳು) ಚಾಳಿಸು-ಕಾಡು, ವಿಕಾಳಿಸಿತು-ವ್ಯಾಪಿಸಿತು, ಕರವಾಳ-ಖಡ್ಗ, ಜಡಿ-ಝಳಪಿಸು, ಹಲಧರ-ಬಲರಾಮ (ಇವನ ಆಯುಧ ‘ಹಲ’ ವಾದ್ದರಿಂದ)
ಮೂಲ ...{Loading}...
ಹೇಳೆವೇ ನಾವ್ ಮುನ್ನ ನೀವ್ ನೀ
ಲಾಳಕಿಯ ಕೆಡಿಸಿದಿರಲಾ ನೀ
ವಾಳ ನೆರಹಿದಡಿನ್ನು ಮಾಡುವುದೇನು ಕಡು ಮುಳಿದು
ಚಾಳಿಸಿದುದಪಕೀರ್ತಿಯಕಟ ವಿ
ಕಾಳಿಸಿತು ಯದುವಂಶವೆನೆ ಕರ
ವಾಳ ಜಡಿದೈದಿದನು ಹಲಧರನರ್ಜುನನ ರಥವ ॥41॥
೦೪೨ ಮುಸುಕಿದನು ನಾರಾಚದಲಿ ...{Loading}...
ಮುಸುಕಿದನು ನಾರಾಚದಲಿ ನಿ
ಪ್ಪಸರದಲಿ ಹಲಧರನ ಸೇನೆಯ
ಕುಸುರಿದರಿದನು ಕೊಂದನಗಣಿತ ಬಲವನಾ ಪಾರ್ಥ
ಎಸೆವನೇ ಸಂನ್ಯಾಸಿ ಮಾಡಿದ
ಹುಸಿಯುಪನ್ಯಾಸಕ್ಕೆ ಕೊಯ್ವೆನು
ರಸನೆಯನು ದೇವಕಿಯ ಮೇಲಾಣೆನುತ ಗರ್ಜಿಸಿದ ॥42॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಪಾರ್ಥನು ಬಲರಾಮನ ಸೈನ್ಯವನ್ನು ಬಾಣಗಳಿಂದ ರಭಸದಲ್ಲಿ ಆವರಿಸಿದನು. ಲೆಕ್ಕವಿಲ್ಲದಷ್ಟು ಸೈನ್ಯವನ್ನು ಕೊಚ್ಚಿಕೊಂದನು. “ಓಹೋ ಸಂನ್ಯಾಸಿ ಬಾಣವನ್ನು ಹೊಡೆಯುತ್ತಾನೋ ? ಇವನು ಮಾಡಿದ ಸುಳ್ಳಿನ ವ್ಯಾಖ್ಯಾನಕ್ಕೆ ಇವನ ನಾಲಗೆಯನ್ನು ಕೊಯ್ಯುತ್ತೇನೆ. ದೇವಕಿಯ ಮೇಲಾಣೆ” ಎಂದು ಬಲರಾಮನು ಗರ್ಜಿಸಿದನು.
ಪದಾರ್ಥ (ಕ.ಗ.ಪ)
ನಾರಾಚ-ಬಾಣ, ನಿಪ್ಪಸರ-ರಭಸ, ಅಗಣಿತ-ಲೆಕ್ಕವಿಲ್ಲದಷ್ಟು, ಕುಸುರಿದರಿ-ಕೊಚ್ಚು
ಮೂಲ ...{Loading}...
ಮುಸುಕಿದನು ನಾರಾಚದಲಿ ನಿ
ಪ್ಪಸರದಲಿ ಹಲಧರನ ಸೇನೆಯ
ಕುಸುರಿದರಿದನು ಕೊಂದನಗಣಿತ ಬಲವನಾ ಪಾರ್ಥ
ಎಸೆವನೇ ಸಂನ್ಯಾಸಿ ಮಾಡಿದ
ಹುಸಿಯುಪನ್ಯಾಸಕ್ಕೆ ಕೊಯ್ವೆನು
ರಸನೆಯನು ದೇವಕಿಯ ಮೇಲಾಣೆನುತ ಗರ್ಜಿಸಿದ ॥42॥
೦೪೩ ಬಳಿಕ ಹರಿದನು ...{Loading}...
ಬಳಿಕ ಹರಿದನು ಕೃಷ್ಣನೀತನ
ಕೆಲಕೆ ಕರೆದನು ಬಹಳ ರೋಷವ
ನಿಲಿಸಿರೇ ಸಾಕಿನ್ನು ವಸುದೇವಂಗೆ ದೇವಕಿಗೆ
ಮುಳಿವುದೀತನ ದೋಷವಲ್ಲಿದ
ತಿಳಿದೆವಾವರ್ಜುನನು ಗಡ ನಾ
ವಳುಕಲಿನ್ನೇಕೆನುತ ಬೋಧಿಸಿದನು ಹಲಾಯುಧನ ॥43॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಆಮೇಲೆ, ಕೃಷ್ಣನು ಅಲ್ಲಿಗೆ ಹೋದನು. ಅಣ್ಣನನ್ನು ಸಮೀಪಕ್ಕೆ ಕರೆದನು. “ನಿಮ್ಮ ಈ ಬಹಳ ಕೋಪವನ್ನು ನಿಲ್ಲಿಸಿ, ಇನ್ನು ಸಾಕು. ವಸುದೇವ ದೇವಕಿಯರ ಮೇಲೆ ಕೋಪಿಸಿಕೊಳ್ಳಬೇಕು. ಈತನಲ್ಲಿ ತಪ್ಪಿಲ್ಲ. ಇದನ್ನು ನಾವು ಗೊತ್ತು ಮಾಡಿಕೊಂಡೆವು. ಇವನು ಅರ್ಜುನನಲ್ಲವೇ ! ಇನ್ನು ನಾವೇಕೆ ಶಂಕಿಸಬೇಕು ?” ಎಂದು ಬಲರಾಮನನ್ನು ತಿಳಿಯ ಹೇಳಿದನು.
ಪದಾರ್ಥ (ಕ.ಗ.ಪ)
ಕೆಲಕೆ-ಸಮೀಪಕ್ಕೆ, ಮುಳಿ-ಕೋಪಿಸು, ದೋಷ-ತಪ್ಪು, ಅಳುಕು-ಶಂಕಿಸು
ಮೂಲ ...{Loading}...
ಬಳಿಕ ಹರಿದನು ಕೃಷ್ಣನೀತನ
ಕೆಲಕೆ ಕರೆದನು ಬಹಳ ರೋಷವ
ನಿಲಿಸಿರೇ ಸಾಕಿನ್ನು ವಸುದೇವಂಗೆ ದೇವಕಿಗೆ
ಮುಳಿವುದೀತನ ದೋಷವಲ್ಲಿದ
ತಿಳಿದೆವಾವರ್ಜುನನು ಗಡ ನಾ
ವಳುಕಲಿನ್ನೇಕೆನುತ ಬೋಧಿಸಿದನು ಹಲಾಯುಧನ ॥43॥
೦೪೪ ಅಕಟ ದುರ್ಯೋಧನಗೆ ...{Loading}...
ಅಕಟ ದುರ್ಯೋಧನಗೆ ತಪ್ಪಿಸಿ
ಸಕಲ ಯಾದವರಿಲ್ಲಿಗೈದರೆ
ವಿಕಳಮತಿ ನಾನೈಸಲೇ ಕೃಷ್ಣನ ಕುಮಂತ್ರವಿದು
ಅಕುಟಿಲಾಂತಃಕರಣತನ ಬಾ
ಧಕವಲೇ ಗರುವರಿಗೆನುತ ಸ
ಭ್ರುಕುಟಿ ರೌದ್ರಾನನನು ಮುರಿದನು ಪುರಕೆ ಬಲರಾಮ ॥44॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಅಯ್ಯೋ, ದುರ್ಯೋಧನನಿಗೆ ತಪ್ಪಿಸಿ ಸಕಲ ಯಾದವರೂ ಹೀಗೆ ಮಾಡಿದರೆ ? ನಾನು ಬುದ್ಧಿಯಲ್ಲಿ ಕೊರತೆಯನ್ನು ಹೊಂದಿದೆನೆ? ಇದು ಕೃಷ್ಣನ ದುರ್ಬೋಧನೆ. ವಂಚನೆಯಿಲ್ಲದ ಮನಸ್ಸಿರುವುದು ಶ್ರೇಷ್ಠರಿಗೆ ತೊಂದರೆಯಲ್ಲವೇ !” ಎಂದುಕೊಳ್ಳುತ್ತ ಹುಬ್ಬುಗಂಟಿನೊಂದಿಗೆ ರೋಷಮುಖದಿಂದ ಬಲರಾಮನು ದ್ವಾರಕಾ ಪಟ್ಟಣಕ್ಕೆ ಹಿಂತಿರುಗಿದನು.
ಪದಾರ್ಥ (ಕ.ಗ.ಪ)
ವಿಕಳ-ಕೊರತೆ, ಕುಮಂತ್ರ-ದುರ್ಬೋಧನೆ, ಗರುವ-ಶ್ರೇಷ್ಠ, ಬಾಧಕ-ತೊಂದರೆ, ಭ್ರುಕಟಿ-ಹುಬ್ಬುಗಂಟಿಕ್ಕು, ರೌದ್ರ-ರೋಷ
ಟಿಪ್ಪನೀ (ಕ.ಗ.ಪ)
ಬಲರಾಮ -ಬಲರಮ, ಬಲದೇವ, ಸಂಕರ್ಷಣ, ಹಲಾಯುಧ ಪ್ರಾಣಿ ಈ ರೀತಿ ಹಲವಾರು ಹೆಸರುಗಳಿಂದ ಪ್ರಸಿದ್ಧನಾದವನು ಬಲರಾಮ. ಮಹಾಭಾರತದ ಎಲ್ಲ ಮುಖ್ಯ ಪರ್ವಗಳಲ್ಲೂ ಈತನನ್ನು ಕುರಿತ ವಿಚಾರಗಳಿವೆ. ಶ್ರೀಕೃಷ್ಣನ ಅಣ್ಣನಾದ ಈತ ವಸುದೇವ-ರೋಹಿಣಿಯರ ಮಗ, ಇಂದ್ರಸೇನನ ಮೊಮ್ಮಗ
ಮೂಲ ...{Loading}...
ಅಕಟ ದುರ್ಯೋಧನಗೆ ತಪ್ಪಿಸಿ
ಸಕಲ ಯಾದವರಿಲ್ಲಿಗೈದರೆ
ವಿಕಳಮತಿ ನಾನೈಸಲೇ ಕೃಷ್ಣನ ಕುಮಂತ್ರವಿದು
ಅಕುಟಿಲಾಂತಃಕರಣತನ ಬಾ
ಧಕವಲೇ ಗರುವರಿಗೆನುತ ಸ
ಭ್ರುಕುಟಿ ರೌದ್ರಾನನನು ಮುರಿದನು ಪುರಕೆ ಬಲರಾಮ ॥44॥
೦೪೫ ಹರಿಸಹಿತ ಬಲರಾಮನತ್ತಲು ...{Loading}...
ಹರಿಸಹಿತ ಬಲರಾಮನತ್ತಲು
ತಿರುಗಿದನು ಪವಮಾನ ಜವದಲಿ
ಪುರಕೆ ಬಂದನು ಪಾರ್ಥ ಪಯಣದ ಮೇಲೆ ಪಯಣದಲಿ
ಪುರದ ಬಹಿರೋದ್ಯಾನದಲಿ ಸಂ
ವರಿಸಿ ರಥವನು ನಿಲಿಸಿ ನೆಳಲಲಿ
ಪರಿಗತ ಶ್ರಮನಾಗಿ ನಗುತ ಸುಭದ್ರೆಗಿಂತೆಂದ ॥45॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕೃಷ್ಣನ ಸಹಿತವಾಗಿ ಬಲರಾಮನು ಅತ್ತ ಕಡೆ ತಿರುಗಿದನು. ವಾಯುವೇಗದಲ್ಲಿ ಅರ್ಜುನನು ಪಯಣದ ಮೇಲೆ ಪಯಣ ಮಾಡುತ್ತ ಇಂದ್ರಪ್ರಸ್ಥಪುರಕ್ಕೆ ಬಂದನು. ಪಟ್ಟಣದ ಹೊರಗಿನ ಉದ್ಯಾನದಲ್ಲಿ ಸಿದ್ಧ ಮಾಡಿಕೊಂಡು, ರಥವನ್ನು ನಿಲ್ಲಿಸಿ ಉಂಟಾದ ಆಯಾಸವನ್ನು ನೆರಳಲ್ಲಿ ಪರಿಹರಿಸಿಕೊಳ್ಳುತ್ತ, ನಗುತ್ತ ಸುಭದ್ರೆಗೆ ಹೀಗೆ ಹೇಳಿದನು.
ಪದಾರ್ಥ (ಕ.ಗ.ಪ)
ಪವಮಾನ-ವಾಯು, ಜವ-ವೇಗ, ಸಂವರಿಸಿ-ಸಿದ್ಧಮಾಡಿ, ಪರಿಗತ-ಉಂಟಾದ, ಶ್ರಮ-ಆಯಾಸ
ಮೂಲ ...{Loading}...
ಹರಿಸಹಿತ ಬಲರಾಮನತ್ತಲು
ತಿರುಗಿದನು ಪವಮಾನ ಜವದಲಿ
ಪುರಕೆ ಬಂದನು ಪಾರ್ಥ ಪಯಣದ ಮೇಲೆ ಪಯಣದಲಿ
ಪುರದ ಬಹಿರೋದ್ಯಾನದಲಿ ಸಂ
ವರಿಸಿ ರಥವನು ನಿಲಿಸಿ ನೆಳಲಲಿ
ಪರಿಗತ ಶ್ರಮನಾಗಿ ನಗುತ ಸುಭದ್ರೆಗಿಂತೆಂದ ॥45॥
೦೪೬ ಅರಮನೆಗೆ ನಡೆ ...{Loading}...
ಅರಮನೆಗೆ ನಡೆ ದ್ರುಪದ ನಂದನೆ
ಕರೆಸಿದರೆ ನೀ ಹೋಗು ನಿರುತವ
ನರುಹದಿರು ತುರುಗಾಹಿಗಳ ಮಗಳೆಂದು ನುಡಿ ಸಾಕು
ಅರಸಿ ಮಿಗೆ ಮನ್ನಿಸುವಳಲ್ಲಿರು
ಕರೆಸಿ ಕೊಂಬೆನು ಬಳಿಕಲೆಂದೀ
ಸರಸಿಜಾಕ್ಷಿಯ ಕಳುಹಿದನು ನಿಜ ರಾಜಮಂದಿರಕೆ ॥46॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಅರಮನೆಗೆ ನಡೆ, ದ್ರುಪದನ ಮಗಳು ದ್ರೌಪದಿ ಕರೆಸಿಕೊಂಡರೆ ನೀನು ಹೋಗು. ನಿಜವನ್ನು ಹೇಳಬೇಡ. ಗೊಲ್ಲರ ಮಗಳೆಂದು ಹೇಳು, ಸಾಕು. ಅರಸಿ ನಿನ್ನನ್ನು ಬಹಳವಾಗಿ ಮರ್ಯಾದೆ ಮಾಡುವಳು. ನೀನು ಅಲ್ಲೇ ಇರು. ಆಮೇಲೆ ಕರೆಸಿಕೊಳ್ಳುತ್ತೇನೆ” ಹೀಗೆ ಹೇಳಿ, ಈ ಕಮಲಾಕ್ಷಿಯನ್ನು ಅರ್ಜುನನು ತಮ್ಮ ರಾಜಮಂದಿರಕ್ಕೆ ಕಳುಹಿಸಿಕೊಟ್ಟನು.
ಪದಾರ್ಥ (ಕ.ಗ.ಪ)
ನಿರುತ-ನಿಜ,
ತುರುಗಾಹಿ-ಗೊಲ್ಲ,
ಮನ್ನಿಸು-ಮರ್ಯಾದೆ ಮಾಡು
ಮೂಲ ...{Loading}...
ಅರಮನೆಗೆ ನಡೆ ದ್ರುಪದ ನಂದನೆ
ಕರೆಸಿದರೆ ನೀ ಹೋಗು ನಿರುತವ
ನರುಹದಿರು ತುರುಗಾಹಿಗಳ ಮಗಳೆಂದು ನುಡಿ ಸಾಕು
ಅರಸಿ ಮಿಗೆ ಮನ್ನಿಸುವಳಲ್ಲಿರು
ಕರೆಸಿ ಕೊಂಬೆನು ಬಳಿಕಲೆಂದೀ
ಸರಸಿಜಾಕ್ಷಿಯ ಕಳುಹಿದನು ನಿಜ ರಾಜಮಂದಿರಕೆ ॥46॥
೦೪೭ ಬನ್ದಳಬಲೆ ಸಮಸ್ತಪುರಜನ ...{Loading}...
ಬಂದಳಬಲೆ ಸಮಸ್ತಪುರಜನ
ವಿಂದುವದನೆಯ ನೋಡುತಿದ್ದುದು
ಮಂದಿ ಕವಿದುದು ಮನುಜೆಯೇ ಸುರಲೋಕ ವಧುವೆನುತ
ಮಂದಿರಕೆ ಬರೆ ಬಾಗಿಲವದಿರು
ನಿಂದರಲ್ಲಿಯದಲ್ಲಿ ಬಳಿಕರ
ವಿಂದಮುಖಿಯರು ಕಂಡು ದ್ರೌಪದಿಗರುಹಿದರು ಹದನ ॥47॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಈ ಸುಭದ್ರೆಯು ಪುರದೊಳಗೆ ಬಂದಳು. ಪಟ್ಟಣದ ಸಕಲ ಜನರೂ ಈ ಚಂದ್ರಮುಖಿಯನ್ನು ನೋಡುತ್ತಿದ್ದರು. “ಇವಳು ಮನುಷ್ಯಳೇ ಅಲ್ಲ, ದೇವಲೋಕದ ಹೆಂಗಸಿರಬೇಕು” ಎನುತ್ತ ಜನರ ಸಮೂಹ ಇವಳನ್ನು ನೋಡಲು ಮುತ್ತಿದುದು. ಅರಮನೆಗೆ ಬರಲು, ಬಾಗಿಲಲ್ಲಿದ್ದವರು ಅಲ್ಲಲ್ಲಿಯೇ ನಿಂತರು. ಆಮೇಲೆ ಕಮಲ ಮುಖಿಯರು ಇವಳನ್ನು ನೋಡಿ ದ್ರೌಪದಿಗೆ ವಿಷಯವನ್ನು ತಿಳಿಸಿದರು.
ಪದಾರ್ಥ (ಕ.ಗ.ಪ)
ಹದನ-ವಿಷಯ
ಮೂಲ ...{Loading}...
ಬಂದಳಬಲೆ ಸಮಸ್ತಪುರಜನ
ವಿಂದುವದನೆಯ ನೋಡುತಿದ್ದುದು
ಮಂದಿ ಕವಿದುದು ಮನುಜೆಯೇ ಸುರಲೋಕ ವಧುವೆನುತ
ಮಂದಿರಕೆ ಬರೆ ಬಾಗಿಲವದಿರು
ನಿಂದರಲ್ಲಿಯದಲ್ಲಿ ಬಳಿಕರ
ವಿಂದಮುಖಿಯರು ಕಂಡು ದ್ರೌಪದಿಗರುಹಿದರು ಹದನ ॥47॥
೦೪೮ ಕರೆಸಿ ಕಾಣಿಸಿಕೊಣ್ಡು ...{Loading}...
ಕರೆಸಿ ಕಾಣಿಸಿಕೊಂಡು ಪಾಂಡವ
ರರಸಿ ಬೆಸಗೊಳಲೀಕೆ ಪಾರ್ಥನ
ಪರುಠವದ ಮಾತುಗಳನೆಂದಳು ನಗೆಯ ಮೊಳೆ ಮಿನುಗೆ
ಸುರ ಭುಜಂಗಮ ವಧುವೊ ನೀ ಮೇ
ಣರಸು ಮಗಳೋ ತಂಗಿ ನೀ ಗೊ
ಲ್ಲರ ಮಗಳೆ ಪುಸಿಯೆನುತ ತಲೆದೂಗಿದಳು ಪಾಂಚಾಲಿ ॥48॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಪಾಂಡವರರಸಿ ದ್ರೌಪದಿಯು ಇವಳನ್ನು ಕರೆಸಿಕೊಂಡು ನೋಡಿ ಕೇಳಿದರೆ, ಈಕೆ ಅರ್ಜುನನು ಸಿದ್ಧಮಾಡಿಸಿದ ಮಾತುಗಳನ್ನು ನುಡಿದಳು. ಆಗ ದ್ರೌಪದಿಯು ಮಂದಹಾಸದ ಕಾಂತಿಯಿಂದ “ನೀನು ದೇವತಾಸ್ತ್ರೀಯೋ, ನಾಗಕನ್ನಿಕೆಯೋ, ಅಥವಾ ರಾಜಪುತ್ರಿಯೋ ಆಗಿರಬೇಕು. ನೀನು ಗೊಲ್ಲರ ಮಗಳೆ ? ಸುಳ್ಳು” ಎನುತ್ತ ಪಾಂಚಾಲಿ ತಲೆದೂಗಿದಳು.
ಪದಾರ್ಥ (ಕ.ಗ.ಪ)
ಪರುಠವ-ಸಿದ್ಧತೆ, ಮೊಳೆನಗೆ-ಮಂದಹಾಸ, ಮಿನುಗು-ಕಾಂತಿ, ಪಾಂಚಾಲಿ-ಪಾಂಚಾಲ ರಾಜನ ಮಗಳು, ದ್ರೌಪದಿ
ಮೂಲ ...{Loading}...
ಕರೆಸಿ ಕಾಣಿಸಿಕೊಂಡು ಪಾಂಡವ
ರರಸಿ ಬೆಸಗೊಳಲೀಕೆ ಪಾರ್ಥನ
ಪರುಠವದ ಮಾತುಗಳನೆಂದಳು ನಗೆಯ ಮೊಳೆ ಮಿನುಗೆ
ಸುರ ಭುಜಂಗಮ ವಧುವೊ ನೀ ಮೇ
ಣರಸು ಮಗಳೋ ತಂಗಿ ನೀ ಗೊ
ಲ್ಲರ ಮಗಳೆ ಪುಸಿಯೆನುತ ತಲೆದೂಗಿದಳು ಪಾಂಚಾಲಿ ॥48॥
೦೪೯ ಮಸಗಿದವು ನಿಸ್ಸಾಳ ...{Loading}...
ಮಸಗಿದವು ನಿಸ್ಸಾಳ ತತಿ ಗ
ರ್ಜಿಸಿದವರ್ಜುನ ಬಂದನಿದೆಯೆಂ
ದೊಸಗೆವಾತಿನೊಳೂರ ಸುಳಿದರು ದೂತರಲ್ಲಲ್ಲಿ
ಶಶಿಮುಖಿಯರುಪ್ಪಾರತಿಯ ಮಿಗಿ
ಲೆಸೆವ ರತುನಾವಳಿಯ ಕಾಂತಾ
ವಿಸರ ನೂಕಿತು ಪಾರ್ಥ ಹೊಕ್ಕನು ರಾಜಮಂದಿರವ ॥49॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅಷ್ಟರಲ್ಲಿ, ಭೇರೀವಾದ್ಯಗಳು ಬಲವಾಗಿ ಗರ್ಜಿಸಿದವು. ದೂತರು “ಇಗೋ, ಅರ್ಜುನ ಬಂದನು !” ಎಂದು ಶುಭ ಸಮಾಚಾರದ ಮಾತನಾಡುತ್ತ ಊರಿನಲ್ಲೆಲ್ಲಾ ಸುಳಿದಾಡಿದರು. ಚಂದ್ರಮುಖಿಯರು ಉಪ್ಪಾರತಿಯೆತ್ತಿದರು. ಹೆಚ್ಚು ಶೋಭಿಸುವ ರತ್ನಾವಳಿಯ ಸ್ತ್ರೀ ಸಮೂಹ ಮುಂದುವರೆಯಿತು. ಪಾರ್ಥನು ಅರಮನೆಯನ್ನು ಪ್ರವೇಶ ಮಾಡಿದನು.
ಪದಾರ್ಥ (ಕ.ಗ.ಪ)
ನಿಸ್ಸಾಳ-ಭೇರೀವಾದ್ಯ ಒಸಗೆ-ಶುಭ ಸಮಾಚಾರ, ಎಸೆ-ಶೋಭಿಸು, ಕಾಂತಾವಿಸರ-ಸ್ತ್ರೀ ಸಮೂಹ, ನೂಕು-ಮುಂದುವರೆ
ಮೂಲ ...{Loading}...
ಮಸಗಿದವು ನಿಸ್ಸಾಳ ತತಿ ಗ
ರ್ಜಿಸಿದವರ್ಜುನ ಬಂದನಿದೆಯೆಂ
ದೊಸಗೆವಾತಿನೊಳೂರ ಸುಳಿದರು ದೂತರಲ್ಲಲ್ಲಿ
ಶಶಿಮುಖಿಯರುಪ್ಪಾರತಿಯ ಮಿಗಿ
ಲೆಸೆವ ರತುನಾವಳಿಯ ಕಾಂತಾ
ವಿಸರ ನೂಕಿತು ಪಾರ್ಥ ಹೊಕ್ಕನು ರಾಜಮಂದಿರವ ॥49॥
೦೫೦ ಅರಸ ಭೀಮರಿಗೆರಗಿ ...{Loading}...
ಅರಸ ಭೀಮರಿಗೆರಗಿ ನಕುಲಾ
ದ್ಯರನು ಕಾಣಿಸಿಕೊಂಡು ದೇಶಾಂ
ತರದ ತೀರ್ಥೋನ್ನತಿಯನಾ ವೃತ್ತಾಂತ ಸಂಗತಿಯ
ಮುರಹರನ ಸೌಹೃದವನಾತನ
ಕರುಣ ಕನ್ಯಾಲಾಭವನು ವಿ
ಸ್ತರಿಸಿ ಹರುಷಾಂಬುಧಿಯೊಳದ್ದಿದನಗ್ರಜಾನುಜರ ॥50॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಧರ್ಮರಾಜ ಭೀಮರಿಗೆ ನಮಸ್ಕಾರ ಮಾಡಿ, ನಕುಲ ಮೊದಲಾದವರನ್ನು ಕಾಣಿಸಿಕೊಂಡು, ಬೇರೆ ದೇಶಗಳ ತೀರ್ಥಕ್ಷೇತ್ರಗಳ ಮಹತ್ವ, ಅಲ್ಲಿಯ ಘಟನೆಗಳ ವಿಚಾರವನ್ನು, ಕೃಷ್ಣನ ಸೌಜನ್ಯವನ್ನು, ಆತನ ಕರುಣೆಯಿಂದ ತನಗಾದ ಕನ್ಯಾಲಾಭ ಮೊದಲಾದ ವಿಷಯಗಳನ್ನು ವಿಸ್ತರಿಸಿ ಹೇಳಿ ಅಣ್ಣ ತಮ್ಮಂದಿರನ್ನು ಆನಂದ ಸಾಗರದಲ್ಲಿ ಮುಳುಗಿಸಿದನು.
ಪದಾರ್ಥ (ಕ.ಗ.ಪ)
ದೇಶಾಂತರ-ಬೇರೆ ದೇಶ, ವೃತ್ತಾಂತ-ಘಟನೆ, ಮುರಹರ-ಕೃಷ್ಣ, ಸೌಹಾರ್ದ-ಸೌಜನ್ಯ, ಅಂಬುಧಿ-ಸಾಗರ, ಅಗ್ರಜಾನುಜರು-ಅಣ್ಣತಮ್ಮಂದಿರು
ಮೂಲ ...{Loading}...
ಅರಸ ಭೀಮರಿಗೆರಗಿ ನಕುಲಾ
ದ್ಯರನು ಕಾಣಿಸಿಕೊಂಡು ದೇಶಾಂ
ತರದ ತೀರ್ಥೋನ್ನತಿಯನಾ ವೃತ್ತಾಂತ ಸಂಗತಿಯ
ಮುರಹರನ ಸೌಹೃದವನಾತನ
ಕರುಣ ಕನ್ಯಾಲಾಭವನು ವಿ
ಸ್ತರಿಸಿ ಹರುಷಾಂಬುಧಿಯೊಳದ್ದಿದನಗ್ರಜಾನುಜರ ॥50॥
೦೫೧ ಅರಸ ಕೇಳೈ ...{Loading}...
ಅರಸ ಕೇಳೈ ದ್ರೌಪದಿಯ ಮನ
ಬರಿಸಿ ಬೇರರಮನೆಯೊಳೀಕೆಯ
ನಿರಿಸಿದನು ಹರುಷದಲಿ ಕಳೆದರು ಕಾಲ ವಿಭ್ರಮವ
ಇರಲಿರಲು ಪಾರ್ಥಗೆ ಸುಭದ್ರೆಗೆ
ವರಕುಮಾರಕನುದಿಸಿದನು ವಿ
ಸ್ತರಣವಾಯ್ತಭಿಮನ್ಯುವಿನ ಜನನೋತ್ಸವಾಭ್ಯುದಯ ॥51॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅರ್ಜುನನು ದ್ರೌಪದಿಯನ್ನು ಕಂಡು ಆಕೆಯ ಮನವೊಲಿಸಿ ಸುಭದ್ರೆಯನ್ನು ಬೇರೆಯ ಅರಮನೆಯಲ್ಲಿ ಇರಿಸಿದನು. ಸಂತೋಷದಿಂದ ಕಾಲದ ಅವಧಿಯನ್ನು ಕಳೆದರು. ಹೀಗೆ ಇರುತ್ತಿರಲು, ಪಾರ್ಥ ಸುಭದ್ರೆಯರಿಗೆ ಶ್ರೇಷ್ಠ ಮಗನು ಜನಿಸಿದನು. ಅಭಿಮನ್ಯುವಿನ ಜನನೋತ್ಸವದ ಅಭಿವೃದ್ಧಿ ವಿಸ್ತಾರವಾಯಿತು.
ಪದಾರ್ಥ (ಕ.ಗ.ಪ)
ಅಭ್ಯುದಯ-ಅಭಿವೃದ್ಧಿ, ಕಾಲವಿಭ್ರಮ-ಕಾಲದ ಅವಧಿ.
ಮೂಲ ...{Loading}...
ಅರಸ ಕೇಳೈ ದ್ರೌಪದಿಯ ಮನ
ಬರಿಸಿ ಬೇರರಮನೆಯೊಳೀಕೆಯ
ನಿರಿಸಿದನು ಹರುಷದಲಿ ಕಳೆದರು ಕಾಲ ವಿಭ್ರಮವ
ಇರಲಿರಲು ಪಾರ್ಥಗೆ ಸುಭದ್ರೆಗೆ
ವರಕುಮಾರಕನುದಿಸಿದನು ವಿ
ಸ್ತರಣವಾಯ್ತಭಿಮನ್ಯುವಿನ ಜನನೋತ್ಸವಾಭ್ಯುದಯ ॥51॥