೦೦೦ ಸೂ ದಾಯ ...{Loading}...
ಸೂ. ದಾಯ ಭಾಗದೊಳಖಿಳ ರಾಜ್ಯ
ಶ್ರೀಯ ಹಸುಗೆಯ ಕೊಂಡು ಪಾಂಡವ
ರಾಯರೊಪ್ಪಿದರಿಂದ್ರನಿರ್ಮಿತ ರಾಜಧಾನಿಯಲಿ
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
ಸೂಚನೆ : ಸಮಸ್ತ ರಾಜ್ಯಸಂಪತ್ತನ್ನು ಪಾಲು ಮಾಡಿದ್ದರಲ್ಲಿ ತಮ್ಮ ಹಂಚಿಕೆಯನ್ನು ತೆಗೆದುಕೊಂಡು ಪಾಂಡವರು ಇಂದ್ರನಿಂದ ನಿರ್ಮಾಣವಾದ ಇಂದ್ರಪ್ರಸ್ಥವನ್ನು ರಾಜಧಾನಿ ಮಾಡಿಕೊಂಡು ಪ್ರಕಾಶಿಸಿದರು.
ಪದಾರ್ಥ (ಕ.ಗ.ಪ)
ದಾಯ-ಪಾಲು, ಹಸುಗೆ-ಹಂಚಿಕೆ,
ಟಿಪ್ಪನೀ (ಕ.ಗ.ಪ)
ಇಂದ್ರಪ್ರಸ್ಥ-ಹಸ್ತಿನಾವತಿಗೆ ಸಮೀಪದಲ್ಲಿನ ಒಂದು ಪಟ್ಟಣ. ದ್ರೌಪದೀಸ್ವಯಂವರದ ನಂತರ ಧೃತರಾಷ್ಟ್ರನು ಪಾಂಡವರನ್ನು ಕರೆಸಿ ಅವರಿಗೆ ಅರ್ಧರಾಜ್ಯವನ್ನು ಕೊಟ್ಟನು. ಪಾಂಡವರ ರಾಜಧಾನಿ ಈ ಪಟ್ಟಣವಾಯಿತು. ಶ್ರೀಕೃಷ್ಣನು, ವಿಶ್ವಕರ್ಮನ ಮೂಲಕ ಈ ಪಟ್ಟಣವನ್ನು ನಿರ್ಮಾಣ ಮಾಡಿಸಿ ಇಂದ್ರಪ್ರಸ್ಥವೆಂದು ಹೆಸರಿಟ್ಟನು. ಇದು ಯಮುನೆಯ ಒಡ್ಡಿನಲ್ಲಿದೆ. ಇದೇ ಹಳೆಯ ದೆಹಲಿ.
ಮೂಲ ...{Loading}...
ಸೂ. ದಾಯ ಭಾಗದೊಳಖಿಳ ರಾಜ್ಯ
ಶ್ರೀಯ ಹಸುಗೆಯ ಕೊಂಡು ಪಾಂಡವ
ರಾಯರೊಪ್ಪಿದರಿಂದ್ರನಿರ್ಮಿತ ರಾಜಧಾನಿಯಲಿ
೦೦೧ ಕೇಳು ಜನಮೇಜಯ ...{Loading}...
ಕೇಳು ಜನಮೇಜಯ ಧರಿತ್ರೀ
ಪಾಲ ನಿಮ್ಮಯ ಪೂರ್ವಜರು ಸಮ
ಪಾಳಿಗಳ ಸೇರುವೆಯೊಳಿದ್ದರು ಸಾನುರಾಗದಲಿ
ಖೇಳಮೇಳದ ಬೇಟೆಗಳ ವೈ
ಹಾಳಿಗಳ ಜೂಜಿನ ಸಮಂಜಸ
ಲೀಲೆಗಳ ಕೇಳಿಯಲಿ ಕಳೆದರು ವರುಷಪಂಚಕವ ॥1॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಜನಮೇಜಯಮಹಾರಾಜಾ, ಕೇಳು, “ನಿಮ್ಮ ಪೂರ್ವಿಕರಾದ ಕೌರವ ಪಾಂಡವರು ಸರಿಸಮಾನದ ಸೇರಿಕೆಯಲ್ಲಿ ಪ್ರೀತಿಯಿಂದ ಇದ್ದರು. ಆಟಪಾಟದಲ್ಲಿ, ಬೇಟೆಗಳಲ್ಲಿ, ಕುದುರೆ ಸವಾರಿ, ಜೂಜುಗಳ ಸೂಕ್ತವಾದ ಕ್ರೀಡೆಗಳಲ್ಲಿ ಕೌರವ ಪಾಂಡವರು ಐದು ವರ್ಷಗಳನ್ನು ಕಳೆದರು” ಎಂದು ವೈಶಂಪಾಯನರು ಹೇಳಿದರು.
ಪದಾರ್ಥ (ಕ.ಗ.ಪ)
ಸಮಪಾಳಿ-ಸರಿಸಮಾನ, ಸೇರುವೆ-ಸೇರಿಕೆ, ಸಾನುರಾಗ-ಪ್ರೀತಿ, ಖೇಳಮೇಳ-ಆಟಪಾಟ, ವೈಹಾಳಿ-ಕುದುರೆ ಸವಾರಿ, ಸಮಂಜಸ-ಸೂಕ್ತವಾದ
ಮೂಲ ...{Loading}...
ಕೇಳು ಜನಮೇಜಯ ಧರಿತ್ರೀ
ಪಾಲ ನಿಮ್ಮಯ ಪೂರ್ವಜರು ಸಮ
ಪಾಳಿಗಳ ಸೇರುವೆಯೊಳಿದ್ದರು ಸಾನುರಾಗದಲಿ
ಖೇಳಮೇಳದ ಬೇಟೆಗಳ ವೈ
ಹಾಳಿಗಳ ಜೂಜಿನ ಸಮಂಜಸ
ಲೀಲೆಗಳ ಕೇಳಿಯಲಿ ಕಳೆದರು ವರುಷಪಂಚಕವ ॥1॥
೦೦೨ ಕರೆಸಿದನು ಧೃತರಾಷ್ಟ್ರ ...{Loading}...
ಕರೆಸಿದನು ಧೃತರಾಷ್ಟ್ರ ಭೂಪತಿ
ಮುರಹರನ ದ್ರುಪದನ ಯುಧಿಷ್ಠಿರ
ನರ ವೃಕೋದರ ಭೀಷ್ಮ ಗುರು ಕೃಪ ಕರ್ಣ ಶಕುನಿಗಳ
ಎರಡು ಭಾಗವ ಮಾಡಿ ವಿಶ್ವಂ
ಭರೆಯ ರಾಜ್ಯವನುಭಯ ರಾಯರು
ಹೊರೆ ಹೊಗದೆ ಪಾಲಿಸಲಿ ಪಂಥದೊಳೆಂದನಂಧ ನೃಪ ॥2॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಆ ಬಳಿಕ, ಧೃತರಾಷ್ಟ್ರ ಮಹಾರಾಜನು ಕೃಷ್ಣ, ದ್ರುಪದ, ಯುಧಿಷ್ಠಿರ, ಅರ್ಜುನ, ಭೀಮ, ಭೀಷ್ಮ, ದ್ರೋಣ, ಕೃಪ, ಕರ್ಣ, ಶಕುನಿ-ಇವರನ್ನೆಲ್ಲ ಕರೆಸಿದನು. ಅವರೊಡನೆ, “ಈ ಭೂಮಂಡಲದ ರಾಜ್ಯವನ್ನು ಎರಡು ಭಾಗ ಮಾಡಿ ಹಂಚಿಕೊಂಡು ಇಬ್ಬರು ರಾಜರೂ ಮೋಸಕ್ಕೆ ಸಿಕ್ಕದೆ ಪ್ರತಿಜ್ಞೆ ಮಾಡಿ ರಾಜ್ಯವನ್ನು ರಕ್ಷಿಸಲಿ” ಎಂದು ಹೇಳಿದನು.
ಪದಾರ್ಥ (ಕ.ಗ.ಪ)
ವಿಶ್ವಂಭರೆ-ಭೂಮಿ, ಹೊರೆಹೊಗದೆ-ಮೋಸಹೋಗದೆ, ಪಂಥ-ಪ್ರತಿಜ್ಞೆ, ಪಾಲಿಸು-ರಕ್ಷಿಸು
ಮೂಲ ...{Loading}...
ಕರೆಸಿದನು ಧೃತರಾಷ್ಟ್ರ ಭೂಪತಿ
ಮುರಹರನ ದ್ರುಪದನ ಯುಧಿಷ್ಠಿರ
ನರ ವೃಕೋದರ ಭೀಷ್ಮ ಗುರು ಕೃಪ ಕರ್ಣ ಶಕುನಿಗಳ
ಎರಡು ಭಾಗವ ಮಾಡಿ ವಿಶ್ವಂ
ಭರೆಯ ರಾಜ್ಯವನುಭಯ ರಾಯರು
ಹೊರೆ ಹೊಗದೆ ಪಾಲಿಸಲಿ ಪಂಥದೊಳೆಂದನಂಧ ನೃಪ ॥2॥
೦೦೩ ಅಹುದು ಹೊಲ್ಲೆಹವಲ್ಲ ...{Loading}...
ಅಹುದು ಹೊಲ್ಲೆಹವಲ್ಲ ಖುಲ್ಲರ
ಕುಹಕ ಕೊಳ್ಳದು ಬೇರೆ ರಾಜ್ಯದೊ
ಳಿಹರೆ ಸೇರುವೆ ದೃಢವಹುದು ದಾಯಾದ ಮಾರ್ಗದಲಿ
ಗಹನವೇಕಾಮಿಷ ಸಮುದ್ಭವ
ದಹಿತತನದುತ್ತರಣವತಿ ದು
ಸ್ಸಹವಲೇ ನೀ ನೆನೆದ ಹದ ಲೇಸೆಂದನಾ ಭೀಷ್ಮ ॥3॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಅಹುದು, ತಪ್ಪಲ್ಲ, ಬೇರೆ ರಾಜ್ಯಗಳಲ್ಲಿದ್ದರೆ, ನೀಚರ ವಂಚನೆಗೆ ಅವಕಾಶವಾಗದು. ಒಬ್ಬರೊಬ್ಬರಿಗೆ ಸೇರಿಕೆ ಹೆಚ್ಚಳವಾಗುವುದು. ದಾಯಾದ ಮಾರ್ಗದಲ್ಲಿ ಒಂದೇ ವಸ್ತುವಿನ ಬಯಕೆಯಿಂದ ಉದ್ಭವವಾಗುವ ಶತ್ರುತ್ವವನ್ನು ದಾಟುವುದು ಕಷ್ಟವಾದದ್ದು ಹಾಗೂ ಸಹಿಸಲಸಾಧ್ಯವಾದದ್ದು. ನೀನು ಯೋಚಿಸುತ್ತಿರುವ ಕ್ರಮ ಒಳ್ಳೆಯದು” ಎಂದು ಭೀಷ್ಮ ಹೇಳಿದನು.
ಪದಾರ್ಥ (ಕ.ಗ.ಪ)
ಖುಲ್ಲ-ನೀಚ, ಕುಹಕ-ವಂಚನೆ, ದೃಢ-ಹೆಚ್ಚಳ, ಏಕಾಮಿಷ-ಅನೇಕರ ಬಯಕೆಗೆ ಪಾತ್ರವಾದ ಒಂದೇ ವಸ್ತು, ಗಹನ-ಕಷ್ಟವಾದ, ಸಮುದ್ಭವ-ಉದ್ಭವ, ಅಹಿತತನ-ಶತ್ರುತ್ವ, ಉತ್ರರಣ-ದಾಟುವುದು, ದುಸ್ಸಹ-ಸಹಿಸಲಸಾಧ್ಯವಾದ
ಮೂಲ ...{Loading}...
ಅಹುದು ಹೊಲ್ಲೆಹವಲ್ಲ ಖುಲ್ಲರ
ಕುಹಕ ಕೊಳ್ಳದು ಬೇರೆ ರಾಜ್ಯದೊ
ಳಿಹರೆ ಸೇರುವೆ ದೃಢವಹುದು ದಾಯಾದ ಮಾರ್ಗದಲಿ
ಗಹನವೇಕಾಮಿಷ ಸಮುದ್ಭವ
ದಹಿತತನದುತ್ತರಣವತಿ ದು
ಸ್ಸಹವಲೇ ನೀ ನೆನೆದ ಹದ ಲೇಸೆಂದನಾ ಭೀಷ್ಮ ॥3॥
೦೦೪ ಅರಸ ಕೇಳೈ ...{Loading}...
ಅರಸ ಕೇಳೈ ಸಕಲ ರಾಜ್ಯವ
ನೆರಡು ಭಾಗವ ಮಾಡಿ ಪೂರ್ವೋ
ತ್ತರದ ದಕ್ಷಿಣ ಪಶ್ಚಿಮಂಗಳ ಹೆಚ್ಚು ಕುಂದುಗಳ
ಪುರ ನಗರ ಖರ್ವಟ ಮಡಂಬ
ಸ್ಫುರಿತ ಖೇಟಗ್ರಾಮವೆಂಬವ
ನೆರಡು ಭಾಗವ ಮಾಡಿದರು ಕೂಡಿದರು ಸಮವಾಗಿ ॥4॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಸಕಲ ರಾಜ್ಯವನ್ನೂ ಎರಡು ಭಾಗ ಮಾಡಿದರು. ಪೂರ್ವೋತ್ತರ ದಕ್ಷಿಣ ಪಶ್ಚಿಮ ದಿಕ್ಕುಗಳಲ್ಲಿನ ಹೆಚ್ಚು ಕಡಮೆಗಳನ್ನು ಸರಿಮಾಡಿದರು. ಪಟ್ಟಣ, ನಗರ, ಬೆಟ್ಟಗಳಿಂದ ಸುತ್ತಲ್ಪಟ್ಟ ಊರು, ಮಡಂಬ ಖೇಟ, ಗ್ರಾಮ ಎಂಬ ಈ ಪ್ರದೇಶಗಳನ್ನೆಲ್ಲ ಎರಡು ಭಾಗ ಮಾಡಿ ಸಮನಾಗುವಂತೆ ಕೂಡಿಸಿದರು.
ಪದಾರ್ಥ (ಕ.ಗ.ಪ)
ಖರ್ವಟ-ಬೆಟ್ಟಗಳಿಂದ ಸುತ್ತಲ್ಪಟ್ಟ ಊರು, ಮಡಂಬ-ಐನೂರು ಹಳ್ಳಿಗಳಿಗೆ ಮುಖ್ಯವಾದ ನಗರ, ಖೇಟ-ಚಿಕ್ಕಹಳ್ಳಿ
ಮೂಲ ...{Loading}...
ಅರಸ ಕೇಳೈ ಸಕಲ ರಾಜ್ಯವ
ನೆರಡು ಭಾಗವ ಮಾಡಿ ಪೂರ್ವೋ
ತ್ತರದ ದಕ್ಷಿಣ ಪಶ್ಚಿಮಂಗಳ ಹೆಚ್ಚು ಕುಂದುಗಳ
ಪುರ ನಗರ ಖರ್ವಟ ಮಡಂಬ
ಸ್ಫುರಿತ ಖೇಟಗ್ರಾಮವೆಂಬವ
ನೆರಡು ಭಾಗವ ಮಾಡಿದರು ಕೂಡಿದರು ಸಮವಾಗಿ ॥4॥
೦೦೫ ಪುರ ಸುರೇನ್ದ್ರಪ್ರಸ್ಥವರಸಂ ...{Loading}...
ಪುರ ಸುರೇಂದ್ರಪ್ರಸ್ಥವರಸಂ
ಗಿರವು ಧರ್ಮಸುತಂಗೆ ಹಸ್ತಿನ
ಪುರ ಸುಯೋಧನಗುಭಯರಾಯರ ರಾಜಧಾನಿಗಳು
ಚರಮ ದಕ್ಷಿಣವಾಗಿ ಪೂರ್ವೋ
ತ್ತರ ವಿಲಂಬಿತವಾಗಿ ಹಿಮ ಸಾ
ಗರದ ಮಧ್ಯದ ಭೂಮಿಯನು ಸೇರಿಸಿದರೆರಡಾಗಿ ॥5॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಇಂದ್ರಪ್ರಸ್ಥವು ಅರಸಧರ್ಮರಾಜನಿಗೆ, ಹಸ್ತಿನಾಪುರ ಸುರ್ಯೋಧನನಿಗೆ ಹೀಗೆ ಈ ಇಬ್ಬರು ರಾಜರರಿಗೆ ರಾಜಧಾನಿಗಳು. ದಕ್ಷಿಣದ ತುದಿಯವರೆಗೆ ಮತ್ತು ಪೂರ್ವೋತ್ತರವಾಗಿ ಅವಲಂಬಿತವಾದ ಹಿಮವತ್ಪರ್ವತದಿಂದ, ಸಾಗರದ ಪರ್ಯಂತವಾದ ಭೂಮಿಯನ್ನು ಎರಡು ಭಾಗ ಮಾಡಿದರು.
ಪದಾರ್ಥ (ಕ.ಗ.ಪ)
ಚರಮ-ಅಂತ್ಯ, ವಿಲಂಬಿತ-ಅವಲಂಬಿತವಾದ
ಮೂಲ ...{Loading}...
ಪುರ ಸುರೇಂದ್ರಪ್ರಸ್ಥವರಸಂ
ಗಿರವು ಧರ್ಮಸುತಂಗೆ ಹಸ್ತಿನ
ಪುರ ಸುಯೋಧನಗುಭಯರಾಯರ ರಾಜಧಾನಿಗಳು
ಚರಮ ದಕ್ಷಿಣವಾಗಿ ಪೂರ್ವೋ
ತ್ತರ ವಿಲಂಬಿತವಾಗಿ ಹಿಮ ಸಾ
ಗರದ ಮಧ್ಯದ ಭೂಮಿಯನು ಸೇರಿಸಿದರೆರಡಾಗಿ ॥5॥
೦೦೬ ವಾರಣಪ್ರತತಿಯನಘಾಟದ ...{Loading}...
ವಾರಣಪ್ರತತಿಯನಘಾಟದ
ವಾರುವಂಗಳ ಮಣಿಮಯದ ಹೊಂ
ದೇರುಗಳನಾಭರಣವನು ತೆಗೆಸಿದರು ಸಮವಾಗಿ
ಕೌರವರು ಪಾಂಡವರುಗಳ ಮನ
ದೋರೆ ಪೋರೆಯ ತಿಳುಹಿ ವೈರ ವಿ
ಕಾರವನು ಬಿಡಿಸಿದರು ಭೀಷ್ಮಾದಿಗಳು ಹರುಷದಲಿ ॥6॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಆನೆಗಳ ಸಮೂಹ, ವೇಗಶಾಲಿಯಾದ ಕುದುರೆಗಳು, ಮಣಿಮಯದ ಚಿನ್ನದ ತೇರುಗಳು, ಆಭರಣಗಳನ್ನು ತೆಗೆಸಿ ಸಮವಾಗಿ ಹಂಚಿದರು. ಭೀಷ್ಮರೇ ಮೊದಲಾದವರು ಸಂತೋಷದಿಂದ ಕೌರವ ಪಾಂಡವರ ಮನಸ್ಸಿನ ಲೋಪದೋಷಗಳನ್ನು ತಿಳಿಸಿ ದ್ವೇಷದ ಉದ್ವೇಗವನ್ನು ಬಿಡಿಸಿದರು.
ಪದಾರ್ಥ (ಕ.ಗ.ಪ)
ಸಘಾಟದ-ವೇಗ ಶಾಲಿಯಾದ, ಓರೆಪೋರೆ-ಲೋಪದೋಷ, ವಿಕಾರ-ಉದ್ವೇಗ, ವಾರಣಪ್ರತತಿ-ಆನೆಗಳ ಸಮೂಹ, ವಾರುವ-ಕುದುರೆ.
ಮೂಲ ...{Loading}...
ವಾರಣಪ್ರತತಿಯನಘಾಟದ
ವಾರುವಂಗಳ ಮಣಿಮಯದ ಹೊಂ
ದೇರುಗಳನಾಭರಣವನು ತೆಗೆಸಿದರು ಸಮವಾಗಿ
ಕೌರವರು ಪಾಂಡವರುಗಳ ಮನ
ದೋರೆ ಪೋರೆಯ ತಿಳುಹಿ ವೈರ ವಿ
ಕಾರವನು ಬಿಡಿಸಿದರು ಭೀಷ್ಮಾದಿಗಳು ಹರುಷದಲಿ ॥6॥
೦೦೭ ಬಳಿಕ ಸುಮುಹೂರ್ತದಲಿ ...{Loading}...
ಬಳಿಕ ಸುಮುಹೂರ್ತದಲಿ ಹೊರಗುಡಿ
ಬಳಸಿ ಹೊಯಿದವು ರಾಣಿವಾಸದ
ನಿಳಯನಿಳಯದ ತಳಿಗೆದಂಬುಲ ಮಂಗಳಾರ್ತಿಗಳ
ಫಲಸಮೂಹದ ಕಾಣಿಕೆಯ ಕೈ
ಗೊಳುತ ಗಾಂಧಾರಿಗೆ ಮಹೀಶನ
ಲಲನೆಯರಿಗಭಿನಮಿಸಿ ಕಳುಹಿಸಿಕೊಂಡರುಚಿತದಲಿ ॥7॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಬಳಿಕ, ಒಳ್ಳೆಯ ಲಗ್ನದಲ್ಲಿ ಊರ ಹೊರಗೆ ಸುತ್ತಲು ಬಾವುಟಗಳನ್ನು ಹಾರಿಸಿದರು. ರಾಣಿವಾಸದ ಮನೆ ಮನೆಗಳಲ್ಲಿಯೂ ಹರಿವಾಣದಲ್ಲಿನ ಮಂಗಳಾರತಿ ಮತ್ತು ಫಲತಾಂಬೂಲಗಳ ಕಾಣಿಕೆಯನ್ನು ಸ್ವೀಕರಿಸುತ್ತ ಗಾಂಧಾರಿಗೂ ಉಳಿದ ರಾಣಿಯರಿಗೂ ನಮಸ್ಕರಿಸಿ ಯೋಗ್ಯ ರೀತಿಯಲ್ಲಿ ಪಾಂಡವರು ಕಳುಹಿಸಿ ಕೊಂಡರು.
ಪದಾರ್ಥ (ಕ.ಗ.ಪ)
ಗುಡಿ-ಬಾವುಟ, ತಳಿಗೆ-ಹರಿವಾಣ, ಉಚಿತ-ಯೋಗ್ಯ
ಮೂಲ ...{Loading}...
ಬಳಿಕ ಸುಮುಹೂರ್ತದಲಿ ಹೊರಗುಡಿ
ಬಳಸಿ ಹೊಯಿದವು ರಾಣಿವಾಸದ
ನಿಳಯನಿಳಯದ ತಳಿಗೆದಂಬುಲ ಮಂಗಳಾರ್ತಿಗಳ
ಫಲಸಮೂಹದ ಕಾಣಿಕೆಯ ಕೈ
ಗೊಳುತ ಗಾಂಧಾರಿಗೆ ಮಹೀಶನ
ಲಲನೆಯರಿಗಭಿನಮಿಸಿ ಕಳುಹಿಸಿಕೊಂಡರುಚಿತದಲಿ ॥7॥
೦೦೮ ಕಳುಹಲೈತನ್ದನ್ಧನೃಪತಿಯ ...{Loading}...
ಕಳುಹಲೈತಂದಂಧನೃಪತಿಯ
ನಿಲಿಸಿದರು ನಿಳಯದಲಿ ಕೌರವ
ಕುಲದ ನೂರ್ವರ ಕರ್ಣ ಶಕುನಿ ಜಯದ್ರಥಾದಿಗಳ
ನಿಲಿಸಿದರು ಗಜಪುರದ ಯೋಜನ
ದಳತೆಯಲಿ ಗುರು ಭೀಷ್ಮ ವಿದುರರು
ಕೆಲವು ಪಯಣವ ಬಂದು ಕಳುಹಿಸಿಕೊಂಡರುಚಿತದಲಿ ॥8॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕಳುಹಿಸಲು ಬಂದ ಅಂಧನೃಪತಿ ಧೃತರಾಷ್ಟ್ರನನ್ನು ಮನೆಯಲ್ಲೇ ನಿಲ್ಲಿಸಿದರು. ಕೌರವ ಕುಲದ ನೂರುಜನ ರಾಜಪುತ್ರರು, ಕರ್ಣ, ಶಕುನಿ, ಜಯದ್ರಥಾದಿಗಳನ್ನು ಹಸ್ತಿನಾಪುರದ ಯೋಜನದ ಅಳತೆಯಲ್ಲಿ ನಿಲ್ಲಿಸಿದರು. ದ್ರೋಣ, ಭೀಷ್ಮ, ವಿದುರರು ಕೆಲವು ಪಯಣದವರೆಗೆ ಬಂದು ಉಚಿತ ರೀತಿಯಲ್ಲಿ ಕಳಿಸಿಕೊಂಡು ಹಿಂದಿರುಗಿದರು.
ಮೂಲ ...{Loading}...
ಕಳುಹಲೈತಂದಂಧನೃಪತಿಯ
ನಿಲಿಸಿದರು ನಿಳಯದಲಿ ಕೌರವ
ಕುಲದ ನೂರ್ವರ ಕರ್ಣ ಶಕುನಿ ಜಯದ್ರಥಾದಿಗಳ
ನಿಲಿಸಿದರು ಗಜಪುರದ ಯೋಜನ
ದಳತೆಯಲಿ ಗುರು ಭೀಷ್ಮ ವಿದುರರು
ಕೆಲವು ಪಯಣವ ಬಂದು ಕಳುಹಿಸಿಕೊಂಡರುಚಿತದಲಿ ॥8॥
೦೦೯ ಭೂಮಿ ಲಮ್ಬದ ...{Loading}...
ಭೂಮಿ ಲಂಬದ ನೃಪರ ಬಲದು
ದ್ದಾಮ ವಿಭವದೊಳಸುರರಿಪು ಸಹಿ
ತೀ ಮಹೀಪಾಲಕರು ಬಂದರು ಹಲವು ಪಯಣದಲಿ
ರಾಮಣೀಯಕ ರಚನೆಯಲಿ ಸು
ತ್ರಾಮ ನಗರಿಯ ಸೂತ್ರಧಾರೆಯ
ಲಾ ಮನೋಹರ ವಿಶ್ವಕರ್ಮ ವಿನಿರ್ಮಿತ ಪುರಕೆ ॥9॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
ಭೂಮಿಯ ಅಗಲವನ್ನೂ ವ್ಯಾಪಿಸಿಕೊಂಡಿರುವ ರಾಜರ ಪಡೆಯ ವೈಭವದೊಂದಿಗೆ ಕೃಷ್ಣನ ಸಹಿತ ಪಾಂಡವರು ಹಲವು ಪಯಣದಲ್ಲಿ ಇಂದ್ರನ ನಗರ ಅಮರಾವತಿಯ ವಿನ್ಯಾಸದಲ್ಲಿ ವಿಶ್ವಕರ್ಮನಿಂದ ಸುಂದರವಾಗಿ ರಚಿತವಾಗಿದ್ದ ಸೊಗಸಾದ ಇಂದ್ರಪ್ರಸ್ಥ ಪಟ್ಟಣಕ್ಕೆ ಬಂದರು.
ಪದಾರ್ಥ (ಕ.ಗ.ಪ)
ಭೂಮಿಲಂಬ - ಭೂಮಿಯ ಅಗಲದಷ್ಟು ವಿಸ್ತಾರ
ಸೂತ್ರಧಾರೆ - ವಿನ್ಯಾಸ
ರಾಮಣೀಯಕ - ಮನೋಹರವಾದ
ವಿನಿರ್ಮಿತ - ರಚಿಸಿದ
ಮೂಲ ...{Loading}...
ಭೂಮಿ ಲಂಬದ ನೃಪರ ಬಲದು
ದ್ದಾಮ ವಿಭವದೊಳಸುರರಿಪು ಸಹಿ
ತೀ ಮಹೀಪಾಲಕರು ಬಂದರು ಹಲವು ಪಯಣದಲಿ
ರಾಮಣೀಯಕ ರಚನೆಯಲಿ ಸು
ತ್ರಾಮ ನಗರಿಯ ಸೂತ್ರಧಾರೆಯ
ಲಾ ಮನೋಹರ ವಿಶ್ವಕರ್ಮ ವಿನಿರ್ಮಿತ ಪುರಕೆ ॥9॥
೦೧೦ ಧರಣಿಪತಿ ಚಿತ್ತೈಸಿಳಾವೃತ ...{Loading}...
ಧರಣಿಪತಿ ಚಿತ್ತೈಸಿಳಾವೃತ
ವರುಷ ಮಧ್ಯದ ಹೇಮಗಿರಿಯವೊ
ಲರಮನೆಯ ಸಿರಿ ಸೋಲಿಸಿತು ಸುರರಾಜ ವೈಭವವ
ಹರಿಯ ವೀಧಿಯ ಸೋಮ ವೀಧಿಯ
ಮುರಿವುಗಳ ಕೇರಿಗಳ ನೆಲೆಯು
ಪ್ಪರಿಗೆಗಳ ಹೊಂಗೆಲಸದಲಿ ಹೊಳೆಹೊಳೆದುದಾ ನಗರ ॥10॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಇಳಾವೃತ ವರ್ಷದ ಮಧ್ಯದಲ್ಲಿ ಮೆರೆಯುವ ಮೇರುಗಿರಿಯಂತೆ, ಪಟ್ಟಣದ ಮಧ್ಯದಲ್ಲಿ ಶೋಭಿಸಿದ ಅರಮನೆಯ ಸಂಪತ್ತು ದೇವೇಂದ್ರನ ವೈಭವವನ್ನು ಸೋಲಿಸಿತು. ಸೂರ್ಯವೀಧಿ, ಚಂದ್ರ ವೀಧಿಗಳು, ರಸ್ತೆಯ ತಿರುವುಗಳು, ಕೇರಿಗಳು, ಸಾಲುಸಾಲಾದ ಸೌಧಗಳು ಚಿನ್ನದ ಕೆಲಸದಿಂದ ಆ ನಗರದಲ್ಲಿ ಕಂಗೊಳಿಸುತ್ತಿದ್ದವು.
ಪದಾರ್ಥ (ಕ.ಗ.ಪ)
ಹರಿ-ಸೂರ್ಯ,, ಸೋಮ-ಚಂದ್ರ, ಹೇಮಗಿರಿ-ಮೇರುಗಿರಿ, ಮುರಿವು-ತಿರುವು, ಉಪ್ಪರಿಗೆ-ಸೌಧ,
ಟಿಪ್ಪನೀ (ಕ.ಗ.ಪ)
ಇಳಾವೃತ ವರ್ಷ-ನವ ªರ್ಷಗಳಲ್ಲಿ ಒಂದು (ನಾಭಿವರ್ಷ, ಕಿಂಪುರುಷ ವರ್ಷ, ಹರಿವರ್ಷವರ್ಷ, ಇಳಾವೃತ ವರ್ಷ, ರಮ್ಯಕವರ್ಷ, ಹಿರಣ್ಮಯವರ್ಷ, ಕುರುವರ್ಷ, ಭದ್ರಾಶ್ವವರ್ಷ, ಕೇತುಮಾಲವರ್ಷ)
ಮೂಲ ...{Loading}...
ಧರಣಿಪತಿ ಚಿತ್ತೈಸಿಳಾವೃತ
ವರುಷ ಮಧ್ಯದ ಹೇಮಗಿರಿಯವೊ
ಲರಮನೆಯ ಸಿರಿ ಸೋಲಿಸಿತು ಸುರರಾಜ ವೈಭವವ
ಹರಿಯ ವೀಧಿಯ ಸೋಮ ವೀಧಿಯ
ಮುರಿವುಗಳ ಕೇರಿಗಳ ನೆಲೆಯು
ಪ್ಪರಿಗೆಗಳ ಹೊಂಗೆಲಸದಲಿ ಹೊಳೆಹೊಳೆದುದಾ ನಗರ ॥10॥
೦೧೧ ಹೇಮ ನಿರ್ಮಿತ ...{Loading}...
ಹೇಮ ನಿರ್ಮಿತ ದೇವಸದನ
ಸ್ತೋಮದಲಿ ಮಣಿಮಯದ ಫಣಿಪನ
ಹೇಮವೀಧಿಯ ವಿವಿಧ ರತ್ನಾವಳಿಯ ಹಸರದಲಿ
ಕಾಮರಿಪುವಿಂಗೊರೆಯ ಕಟ್ಟುವ
ವಾಮಲೋಚನೆಯರ ವಿಲಾಸದ
ಲಾ ಮಹಾಪುರವೆಸೆದುದಿಂದ್ರಪ್ರಸ್ಥನಾಮದಲಿ ॥11॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಎಲ್ಲೆಲ್ಲಿ ನೋಡಿದರೂ ಚಿನ್ನದಿಂದ ನಿರ್ಮಿಸಿದ ದೇವಸ್ಥಾನದ ಸಾಲುಗಳು, ಹೇಮಮಾರ್ಗದಲ್ಲಿ ಆದಿಶೇಷನ ಹೆಡೆಯಲ್ಲಿರುವ ಮಣಿಗಳಂತೆ ಮಣಿಗಳನ್ನು ಒಳಗೊಂಡಿರುವ ವಿವಿಧ ರತ್ನಗಳ ಹರಡುವಿಕೆ, ಮನ್ಮಥನ ಶತ್ರುವಿಗೆ (ಶಿವನಿಗೆ)ಪರೀಕ್ಷೆಯನ್ನು ಉಂಟುಮಾಡುವ ಸುಂದರಿಯರ ಸೌಂದರ್ಯದಲ್ಲಿ ಆ ಮಹಾನಗರ ಇಂದ್ರಪ್ರಸ್ಥ ಹೆಸರಿಂದ ಶೋಭಿಸುತ್ತಿತ್ತು.
ಪದಾರ್ಥ (ಕ.ಗ.ಪ)
ಫಣಿಪ-ಆದಿಶೇಷ, ಹಸರ-ಹರಡುವಿಕೆ, ಒರೆ-ಪರೀಕ್ಷಿಸು,
ವಾಮಲೋಚನೆ-ಸುಂದರವಾದ ಕಣ್ಣುಳ್ಳವಳು, ಸುಂದರಿ,
ವಿಲಾಸ-ಸೌಂದರ್ಯ
ಮೂಲ ...{Loading}...
ಹೇಮ ನಿರ್ಮಿತ ದೇವಸದನ
ಸ್ತೋಮದಲಿ ಮಣಿಮಯದ ಫಣಿಪನ
ಹೇಮವೀಧಿಯ ವಿವಿಧ ರತ್ನಾವಳಿಯ ಹಸರದಲಿ
ಕಾಮರಿಪುವಿಂಗೊರೆಯ ಕಟ್ಟುವ
ವಾಮಲೋಚನೆಯರ ವಿಲಾಸದ
ಲಾ ಮಹಾಪುರವೆಸೆದುದಿಂದ್ರಪ್ರಸ್ಥನಾಮದಲಿ ॥11॥
೦೧೨ ವಿತತ ವಿಭವದಲಿನ್ದ್ರನಮರಾ ...{Loading}...
ವಿತತ ವಿಭವದಲಿಂದ್ರನಮರಾ
ವತಿಯ ಹೊಗುವಂದದಲಿ ದ್ರುಪದಾ
ಚ್ಯುತರು ಸಹಿತವನೀಶ ಹೊಕ್ಕನು ರಾಜಮಂದಿರವ
ಕೃತಯುಗದೊಳಾ ತ್ರೇತೆಯಲಿ ಭೂ
ಪತಿಗಳಾದರನಂತ ಕುಂತೀ
ಸುತರ ಸಿರಿಗೆಣೆಯಾದುದಿಲ್ಲವನೀಶ ಕೇಳ್ ಎಂದ ॥12॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಮಹಾ ವೈಭವದಿಂದ ಇಂದ್ರನು ಅಮರಾವತಿಯನ್ನು ಪ್ರವೇಶ ಮಾಡುವಂತೆ ದ್ರುಪದ, ಕೃಷ್ಣರೊಂದಿಗೆ ಅವನೀಶ ಧರ್ಮರಾಜನು ರಾಜಮಂದಿರವನ್ನು ಪ್ರವೇಶ ಮಾಡಿದನು. ಕೃತ, ತ್ರೇತಾಯುಗಗಳಲ್ಲಿ ಲೆಕ್ಕವಿಲ್ಲದಷ್ಟು ಭೂಪತಿಗಳಾದರು. ಕುಂತೀಮಕ್ಕಳ ಸಂಪತ್ತಿಗೆ ಸಾಟಿಯಾದುದು ಎಲ್ಲೂ ಕಾಣಲಿಲ್ಲ.
ಪದಾರ್ಥ (ಕ.ಗ.ಪ)
ಎಣೆ-ಸಾಟಿ, ಸಿರಿ-ಸಂಪತ್ತು, ಅನಂತ-ಲೆಕ್ಕವಿಲ್ಲದಷ್ಟು
ಮೂಲ ...{Loading}...
ವಿತತ ವಿಭವದಲಿಂದ್ರನಮರಾ
ವತಿಯ ಹೊಗುವಂದದಲಿ ದ್ರುಪದಾ
ಚ್ಯುತರು ಸಹಿತವನೀಶ ಹೊಕ್ಕನು ರಾಜಮಂದಿರವ
ಕೃತಯುಗದೊಳಾ ತ್ರೇತೆಯಲಿ ಭೂ
ಪತಿಗಳಾದರನಂತ ಕುಂತೀ
ಸುತರ ಸಿರಿಗೆಣೆಯಾದುದಿಲ್ಲವನೀಶ ಕೇಳೆಂದ ॥12॥
೦೧೩ ಬನ್ದು ಕಣ್ಡುದು ...{Loading}...
ಬಂದು ಕಂಡುದು ಸಕಲ ಪುರಜನ
ವಂದು ಕಾಣಿಕೆಯಿತ್ತು ಸುಭಟರ
ಸಂದಣಿಯ ಗಜ ಹಯ ರಥದ ಪದಧೂತ ಧೂಳಿಯಲಿ
ಮಂದಿರದ ಬಾಗಿಲ ಗತಾಗತ
ವೃಂದದೊತ್ತೊತ್ತೆಯಲಿ ಪುರಜನ
ನಿಂದುದಲ್ಲಿಯದಲ್ಲಿ ಪಡೆಯದೆ ರಾಜದರ್ಶನವ ॥13॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಸಮಸ್ತ ಪ್ರಜೆಗಳೂ ಬಂದು ಕಾಣಿಕೆ ಕೊಟ್ಟು ಧರ್ಮರಾಜನನ್ನು ಕಂಡರು. ವೀರಯೋಧರ ಸಮೂಹ, ಆನೆ, ಕುದುರೆ, ರಥ, ಸೈನ್ಯಗಳ ನಡಗೆಯಿಂದ ಒಗೆದ ಧೂಳಿನಿಂದ ಮುಸುಕಿತು. ರಾಜಮಂದಿರದ ಹೆಬ್ಬಾಗಿಲಿನಲ್ಲಿ ಹೋಗಿ ಬರುವವರ ಸಮ್ಮರ್ದದಿಂದ ರಾಜದರ್ಶನ ಪಡೆಯಲಾರದೆ ಎಷ್ಟೋ ಮಂದಿ ಪುರಜನರು ಅಲ್ಲಲ್ಲೇ ನಿಲ್ಲಬೇಕಾಯಿತು.
ಪದಾರ್ಥ (ಕ.ಗ.ಪ)
ಸುಭಟ-ವೀರಯೋಧ, ಸಂದಣಿ-ಸಮೂಹ, ಧೂತ-ಒಗೆದ, ಗತಾಗತ-ಹೋಗಿ ಬರುವವರು, ಒತ್ತೊತ್ತೆ-ಸಂಮರ್ದ
ಮೂಲ ...{Loading}...
ಬಂದು ಕಂಡುದು ಸಕಲ ಪುರಜನ
ವಂದು ಕಾಣಿಕೆಯಿತ್ತು ಸುಭಟರ
ಸಂದಣಿಯ ಗಜ ಹಯ ರಥದ ಪದಧೂತ ಧೂಳಿಯಲಿ
ಮಂದಿರದ ಬಾಗಿಲ ಗತಾಗತ
ವೃಂದದೊತ್ತೊತ್ತೆಯಲಿ ಪುರಜನ
ನಿಂದುದಲ್ಲಿಯದಲ್ಲಿ ಪಡೆಯದೆ ರಾಜದರ್ಶನವ ॥13॥
೦೧೪ ಅತಿಶಯವನೇನೆಮ್ಬೆನಮರಾ ವತಿಯ ...{Loading}...
ಅತಿಶಯವನೇನೆಂಬೆನಮರಾ
ವತಿಯ ಭೋಗಾವತಿಯ ಮಧ್ಯ
ಸ್ಥಿತದ ನಾಯಕರತುನದಂತಿರೆ ಮೆರೆದುದಾ ನಗರ
ಸತತವೀ ಪರಿ ವಿಭವವೀ ಜನ
ವಿತತಿಗಳ ಸನ್ಮಾರ್ಗದಲಿ ಸಂ
ಗತಿಗಳೀ ವಿಸ್ತಾರವೀಪರಿ ಭೂಪ ಕೇಳ್ ಎಂದ ॥14॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಇಂದ್ರಪ್ರಸ್ಥನಗರದ ಹೆಚ್ಚಳವನ್ನು ಏನೆಂದು ಹೇಳುವುದು ? ಅಮರಾವತಿ ಭೋಗಾವತಿಗಳ ನಡುವೆ ನಿಲಿಸಿದ ನಾಯಕ ರತ್ನದಂತೆ ಆ ನಗರ ಮೆರೆಯಿತು. ಎಂದೋ ಒಮ್ಮೆ ಮಾತ್ರವಲ್ಲ. ಎಂದೆಂದೂ ಇದೇ ರೀತಿಯ ವೈಭವಗಳ ವಿಸ್ತಾರವು ಜನಗಳ ಸನ್ಮಾರ್ಗದೊಡನೆ ಈ ರೀತಿಯಲ್ಲಿ ಮೆರೆಯುತ್ತಿತ್ತು. ಮಹಾರಾಜ, ಕೇಳೆಂದು ವೈಶಂಪಾಯನರು ಹೇಳಿದರು.
ಪದಾರ್ಥ (ಕ.ಗ.ಪ)
ಅತಿಶಯ-ಹೆಚ್ಚಳ, ಅಮರಾವತಿ-ಇಂದ್ರನ ರಾಜಧಾನಿ, ಭೋಗವತೀ-ಪಾತಾಳಲೋಕದಲ್ಲಿನ ಒಂದು ಸುಂದರವಾದ ಪಟ್ಟಣ, ಇದು ಸರ್ಪಗಳ ರಾಜಧಾನಿ
ಮೂಲ ...{Loading}...
ಅತಿಶಯವನೇನೆಂಬೆನಮರಾ
ವತಿಯ ಭೋಗಾವತಿಯ ಮಧ್ಯ
ಸ್ಥಿತದ ನಾಯಕರತುನದಂತಿರೆ ಮೆರೆದುದಾ ನಗರ
ಸತತವೀ ಪರಿ ವಿಭವವೀ ಜನ
ವಿತತಿಗಳ ಸನ್ಮಾರ್ಗದಲಿ ಸಂ
ಗತಿಗಳೀ ವಿಸ್ತಾರವೀಪರಿ ಭೂಪ ಕೇಳೆಂದ ॥14॥
೦೧೫ ದ್ರುಪದ ಧೃಷ್ಟದ್ಯುಮ್ನ ...{Loading}...
ದ್ರುಪದ ಧೃಷ್ಟದ್ಯುಮ್ನ ಮೊದಲಾ
ದಪರಿಮಿತ ಬಾಂಧವ ನಿಕಾಯವ
ನುಪಚರಿಸಿ ಕಳುಹಿದನು ಭೂಪತಿ ಪಂಚ ಕೈಕೆಯರ
ವಿಪುಳ ಕಾರುಣ್ಯದಲಿ ಪಾಂಡವ
ನೃಪ ಜನವ ಸಂತೈಸಿ ದಾನವ
ರಿಪು ನಿಜಾವಾಸಕ್ಕೆ ಬಿಜಯಂಗೈಯಲನುವಾದ ॥15॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ದ್ರುಪದ, ಧೃಷ್ಟದ್ಯುಮ್ನ ಮೊದಲಾದ ಮಿತಿಯಿಲ್ಲದ ಬಂಧು ಸಮೂಹವನ್ನು ಹಾಗೂ ಪಂಚಕೈಕೆಯರನ್ನು ಧರ್ಮಜನು ಉಪಚಾರ ಮಾಡಿ ಕಳುಹಿಸಿದನು. ಕೃಷ್ಣನು, ಬಹಳ ಕರುಣದಿಂದ ನೃಪ ಜನರನ್ನು ಸಮಾಧಾನಮಾಡಿ ತನ್ನ ಮನೆಗೆ ಹೊರಡಲು ಸಿದ್ಧನಾದನು.
ಪದಾರ್ಥ (ಕ.ಗ.ಪ)
ಅಪರಿಮಿತ-ಮಿತಿಯಿಲ್ಲದ, ಸಂತೈಸಿ-ಸಮಾಧಾನ ಮಾಡಿ,
ಟಿಪ್ಪನೀ (ಕ.ಗ.ಪ)
ಶೇಷ - ಇವನಿಗೆ ಶೇಷನಾಗ, ಅನಂತ, ವಿಷ್ಣುಶಯ್ಯಾ, ಪನ್ನಾಗಶ್ರೇಷ್ಠ ಎಂಬ ಹೆಸರುಗಳು ಇವೆ. ಸಾವಿರ ನಾಲಗೆಗಳಲ್ಲಿ ಉರಿ ಕಾರು ಆದಿಶೇಷ ಎಂಬ ನಮ್ಮ ಪುರಾಣಗಳು ಈತನನ್ನು ವರ್ಣಿಸಿವೆ. ಭೂಮಿಯನ್ನು ಹೊತ್ತಿರುವುದು ಮತ್ತು ಭಗವಾನ್ ವಿಷ್ಣುವಿಗೆ ಹಾಸಿಗೆಯಾಗಿರುವುದು ಇವನ ಎರಡು ಮಹತ್ಕರ್ಯಗಳು.
್ಜಶೇಷನು ಕದ್ರು-ಕಶ್ಯಪರ ಮಗ. ‘ಪ್ರಥಮತಾ ಜಾತೆ… ವಾಸುಕೀಸ್ತದನಂತರಂ’ ಎಂಬ ಮಾತಿನಿಂದ ಪ್ರಥಮ ಪತುರ ಎಂಬ ಅಂಶ ಸ್ಪಷ್ಟ. ಲಕ್ಷ್ಮಣ, ಬಲರಾಮರು ಶೇಷನ ಅಂಶಾವತಾರಿಗಳು ಎಂದೂ ಹೇಳುತ್ತಾರೆ.
ಸೋದರರಂತೆ, ತಾಯಿಯಂತೆ ಈತನಿಗೆ ವಿನತೆ, ಗರುಡ, ಅರುಣರ ಮೇಲೆ ದ್ವೇಷವಿರಲಿಲ್ಲ. ಅವರೆಲ್ಲರಿಂದ ವಿನತೆ ಗರುಡರಿಗಾದ ಅವಮಾನದಿಂದ ಜುಗುಪ್ಸೆಗೊಂಡ ಶೇಷ ಬದರಿ, ಗಂಧಮಾದನ, ಗೋಕರ್ಣ, ಪುಷ್ಕರವನ, ಹಿಮವತ್ ಪರ್ವತಗಳಲ್ಲಿ ಸಂಚರಿಸಿ ಕೊನೆಗೆ ಬ್ರಹ್ಮನನ್ನು ಕುರಿತು ತಪಸ್ಸು ಮಾಡುತ್ತಾನೆ. ಬ್ರಹ್ಮನು ಪ್ರತ್ಯಕ್ಷನಾದಾಗ ತನ್ನ ತಾಯಿ, ಸೋದರರ ವರ್ತನೆಯನ್ನೂ ಈಗ ಗರುಡನು ತಮಗೆಲ್ಲ ಪ್ರತೀಕಾರ ಮಾಡಲು ಹೊರಟಿರುವುದನ್ನೂ ತಿಳಿಸಿದಾಗ ಸಂತುಷ್ಟಗೊಂಡ ಬ್ರಹ್ಮನು ‘ಶೇಷ, ನೀನು ಸತ್ಯಭಾಷಿ, ಧರ್ಮಪರ ಇಡೀ ಜಗತ್ತನ್ನು ಹೊರಬಲ್ಲ ಸಾಮಥ್ರ್ಯ ನಿನಗಿದೆ. ಈ ಕೆಲಸವನ್ನು ವಹಿಸಿಕೊ ಎರಡನೆಯದಾಗಿ ಗರುಡನೊಂದಿಗೆ ಸ್ನೇಹ ಬೆಳೆಸಿಕೋ’ ಎಂದ. ಸಂತೋಷದಿಂದ ಒಪ್ಪಿಕೊಂಡ ಶೇಷನು ಸ್ಥಿರಭಾವದಿಂದ ಭೂಮಿಯನ್ನು ಭಾರತದಲ್ಲಿ ಹೇಳಲಾಗಿದೆ. ಸುಧೆಗಾಗಿ ಕ್ಷೀರಸಾಗರವನ್ನು ಕಡೆಯಲು ಹೊರಟಾಗ ಅದರ ಹಗ್ಗವಾದವನು ಶೇಷ ಎಂದು ಆದಿಪರ್ವದ ಹದಿನೆಚಿಟನೆಯ ಅಧ್ಯಾಯ ವಿವರಿಸುತ್ತದೆ.
ಆದರೆ ವಾಸುಕಿ ಮೊದಲಾದ ಉಳಿದ ಸರ್ಪಗಳಿಗೆ ಅಣ್ಣ ಶೇಷನ ವರ್ತನೆ ಸರಿಕಾಣಲಿಲ್ಲ. ಆನಮೇಜಯನು ಸರ್ಪಯಾಗ ಮಾಡಬೇಕೆಂಬ ಸಂಕಲ್ಪ ತೊಟ್ಟಾಗ ವಾಸುಕಿಯ ಸರ್ಪ ಸಭೆ ಸೇರಿಸಿ ತಮ್ಮ ಮುಂದಿನ ಕರ್ಯಚಟುವಟಿಕೆಗಳ ಬಗೆಗೆ ಸಮಾಲೋಚಿಸಿದಾಗ ಕೂಡ ಶೇಷನ ನಿರ್ಲಕ್ಷ್ಯವನ್ನು ಖಚಿಡಿಸುತ್ತಾನೆ.
ಶ್ರೀಮನ್ನಾರಾಯಣನೇ ಶೇಷನಾದನವೆಂಬುವರೆಗೂ ಈತನ ಬೆಳವಣಿಗೆಯಿದೆ. ‘ಅಸ್ಮಾನ್ ಮೂರ್ತಿ ಚತುರ್ಥಿಯಾ ಸಸೃಜೋ óಶೇಷಮವ್ಯಯಂ’ ಶೇಷೋ ಭೂತಯಿತ್ವಾಹಂ ಏವೈತಾಂ ಧಾರಯಾಮಿ ವಸುಂಧರಾಂ… ಸುಶ್ವಾಪ ಭಗವಾನ್ ವಿಷ್ಣುಃ…ನಾಗಸ್ಯ ಭೋಗೇಮಹತಿ (ಜಯದ್ರಥ ವಿಮೋಕ್ಷ ಪರ್ವ) ಎಂಬ ಮಾತುಗಳನ್ನು U್ಪಮನಿಸಬಹುದು.
ಗರುಡ, ಶೇಷ ಸ್ನೇಹಿತರಾದದ್ದು ನಮ್ಮ ಪುರಾಣ ಲೋಕದ ಒಂದು ಸುಂದರ ಪ್ರತಿಮೆ. ಗರುಡ ವಿಷ್ಣುವಿನ ಪ್ರಯಾಣ ಕಾಲದ ವಾಹನವಾದರೆ, ಶೇಷನು ನಿದ್ರಾಕಾಲದ ಶಯ್ಯೆಯಾದದ್ದು ಈ ಸ್ನೇಹದ ಫಲ.
W್ರಪುರ ದಹನದ ಕಾಲದಲ್ಲಿ ಶೇಷನು ರಥದ ಒಂದು ಅಕ್ಷವಾಗ್ದಿನೆಂಬುದೂ ಶೇಷನ ಸಾಮಥ್ರ್ಯವನ್ನು ತೋರುವ ಸಂಗತಿಯಾಗಿದೆ.
ಪಂಚ ಕೈಕಯ ಅಥವಾ ಕೈಕೇಯ-ಕೇಕಯ ದೇಶದ ನಿವಾಸಿ ಅಥವಾ ಅಧಿಪತಿ. ರಾಜ ಮತ್ತು ರಾಜಕುಮಾರ. ವಿಶೇಷವಾಗಿ ಕೇಕಯ ದೇಶದ ಐದು ರಾಜಕುಮಾರರು. ಅವರು ಪರಸ್ಪರ ಸಹೋದರರಾಗಿದ್ದರು ಮತ್ತು ಪಾಂಡವ ಪಕ್ಷದಲ್ಲಿ ಸಮ್ಮಿಲಿತವಾಗಿದ್ದರು.
ಮೂಲ ...{Loading}...
ದ್ರುಪದ ಧೃಷ್ಟದ್ಯುಮ್ನ ಮೊದಲಾ
ದಪರಿಮಿತ ಬಾಂಧವ ನಿಕಾಯವ
ನುಪಚರಿಸಿ ಕಳುಹಿದನು ಭೂಪತಿ ಪಂಚ ಕೈಕೆಯರ
ವಿಪುಳ ಕಾರುಣ್ಯದಲಿ ಪಾಂಡವ
ನೃಪ ಜನವ ಸಂತೈಸಿ ದಾನವ
ರಿಪು ನಿಜಾವಾಸಕ್ಕೆ ಬಿಜಯಂಗೈಯಲನುವಾದ ॥15॥
೦೧೬ ಕರೆಸಿ ಕುನ್ತಿಯ ...{Loading}...
ಕರೆಸಿ ಕುಂತಿಯ ದ್ರೌಪದಿಯರನು
ಕರುಣ ವಚನಾಮೃತದ ರಸದಲಿ
ಹೊರೆದು ಕೃತ ದಾಯಾದ ವಿಷಮ ವಿರೋಧ ವರ್ತನವ
ಅರುಹಿ ಸುಯ್ದಾನದ ಸಮಾಹಿತ
ತರದ ಬುದ್ಧಿಯಗಲಿಸಿ ಯಾದವ
ರರಸ ಬಿಜಯಂಗೈದನಾ ದ್ವಾರಕಿಗೆ ಹರುಷದಲಿ ॥16॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕುಂತೀ ದ್ರೌಪದಿಯರನ್ನು ಕರೆಸಿ ಕರುಣವಚನಾಮೃತ ರಸದಲ್ಲಿ ಅವರನ್ನು ಲೇಪಿಸಿದನು. ದಾಯಾದಿಗಳಿಂದ ಉಂಟಾಗಬಹುದಾದ ಹಗೆತನದ ವರ್ತನೆಯ ಕಷ್ಟ ಪರಿಸ್ಥಿತಿಯನ್ನು ತಿಳಿಸಿ, ಎಚ್ಚರಿಕೆಯ ಸಮಾಧಾನದ ಬುದ್ಧಿಯ ಮಾತುಗಳನ್ನು ಹೇಳಿದನು. ಬಳಿಕ ಯಾದವರರಸನು ಸಂತೋಷದಿಂದ ದ್ವಾರಕಿಗೆ ತೆರಳಿದನು.
ಪದಾರ್ಥ (ಕ.ಗ.ಪ)
ಹೊರೆ-ಲೇಪಿಸು, ವಿಷಮ-ಕಷ್ಟ ಪರಿಸ್ಥಿತಿ, ವಿರೋಧ-ಹಗೆತನ, ಸುಯ್ದಾನ-ಎಚ್ಚರಿಕೆ, ಸಮಾಹಿತ-ಸಮಾಧಾನ, ಬಿಜಯಂಗೈಯ್-ತೆರಳು
ಮೂಲ ...{Loading}...
ಕರೆಸಿ ಕುಂತಿಯ ದ್ರೌಪದಿಯರನು
ಕರುಣ ವಚನಾಮೃತದ ರಸದಲಿ
ಹೊರೆದು ಕೃತ ದಾಯಾದ ವಿಷಮ ವಿರೋಧ ವರ್ತನವ
ಅರುಹಿ ಸುಯ್ದಾನದ ಸಮಾಹಿತ
ತರದ ಬುದ್ಧಿಯಗಲಿಸಿ ಯಾದವ
ರರಸ ಬಿಜಯಂಗೈದನಾ ದ್ವಾರಕಿಗೆ ಹರುಷದಲಿ ॥16॥
೦೧೭ ಕಳುಹಿದನು ಪಾಞ್ಚಾಲರನು ...{Loading}...
ಕಳುಹಿದನು ಪಾಂಚಾಲರನು ಯದು
ತಿಲಕ ಮೊದಲಾದಖಿಳ ಬಾಂಧವ
ಕುಲವನುತ್ಸಾಹದಲಿ ಹೊರೆದನು ನಾಡು ಬೀಡುಗಳ
ಬೆಳುಗವತೆಯನ್ಯಾಯವಾರಡಿ
ಕಳವು ದಳವುಳ ಬಂದಿ ಡಾವರ
ಕೊಲೆ ಹುಸಿಗಳಿಲ್ಲಿವರ ರಾಜ್ಯದೊಳರಸ ಕೇಳ್ ಎಂದ ॥17॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಧರ್ಮರಾಜನು, ಪಾಂಚಾಲರನ್ನೂ, ಯದುತಿಲಕ ಮೊದಲಾದ ಎಲ್ಲ ಬಾಂಧವ ಕುಲವನ್ನು ಕಳುಹಿಸಿಕೊಟ್ಟನು. ನಾಡು ಬೀಡುಗಳನ್ನು ಬಹು ಉತ್ಸಾಹದಿಂದ ಕಾಪಾಡಿದನು. ಧರ್ಮರಾಜನ ರಾಜ್ಯದಲ್ಲಿ ದರೋಡೆ, ಅನ್ಯಾಯ, ಸುಲಿಗೆ, ಕಳವು, ಸೂರೆ, ಲೂಟಿ, ಹಿಂಸೆ, ಕೊಲೆ, ಸುಳ್ಳಾಡುವುದು-ಇವು ಯಾವುದೂ ಇರಲಿಲ್ಲ.
ಪದಾರ್ಥ (ಕ.ಗ.ಪ)
ಬೆಳುಗವತೆ-ದರೋಡೆ, ಆರಡಿ-ಸುಲಿಗೆ, ದಳವುಳ-ಸೂರೆ, ಬಂದಿ-ಲೂಟಿ, ಡಾವರ-ಹಿಂಸೆ, ಹುಸಿ-ಸುಳ್ಳಾಡುವುದು
ಮೂಲ ...{Loading}...
ಕಳುಹಿದನು ಪಾಂಚಾಲರನು ಯದು
ತಿಲಕ ಮೊದಲಾದಖಿಳ ಬಾಂಧವ
ಕುಲವನುತ್ಸಾಹದಲಿ ಹೊರೆದನು ನಾಡು ಬೀಡುಗಳ
ಬೆಳುಗವತೆಯನ್ಯಾಯವಾರಡಿ
ಕಳವು ದಳವುಳ ಬಂದಿ ಡಾವರ
ಕೊಲೆ ಹುಸಿಗಳಿಲ್ಲಿವರ ರಾಜ್ಯದೊಳರಸ ಕೇಳೆಂದ ॥17॥
೦೧೮ ಯಾಗವಹ್ನಿಯ ಧೂಮದಲಿ ...{Loading}...
ಯಾಗವಹ್ನಿಯ ಧೂಮದಲಿ ದಿಗು
ಭಾಗ ವಿವರಣವಡಗಿತು ಹವಿ
ರ್ಭಾಗ ಭೋಜನದಿಂದಲಾದುದಜೀರ್ಣವಮರರಿಗೆ
ಯಾಗ ದಕ್ಷಿಣೆಗಳಲಿ ಬಹಳ
ತ್ಯಾಗ ದಾನಕೆ ಲಟಕಟಿಸಿ ತಾ
ವಾಗಿ ಕೈಯಾನರು ಯುಧಿಷ್ಠಿರನೃಪನ ರಾಜ್ಯದಲಿ ॥18॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಯುಧಿಷ್ಠಿರ ಮಹಾರಾಜನ ರಾಜ್ಯದಲ್ಲಿ ಯಾಗಶಾಲೆಯ ಅಗ್ನಿಯಿಂದ ಎದ್ದ ಹೊಗೆಯು ಹರಡಿ ದಿಕ್ಕಿನ ಭಾಗಗಳ ಭೇದ ಮುಚ್ಚಿಹೋಯಿತು. ಹವಿಸ್ಸಿನ ಭಾಗದ ಭೋಜನದಿಂದ ದೇವತೆಗಳಿಗೆ ಅಜೀರ್ಣವಾಯಿತು. ಯಾಗದಲ್ಲಿ ದೊರೆಯುತ್ತಿದ್ದ ಹೆಚ್ಚಿನ ದಾನದಕ್ಷಿಣೆಗಳನ್ನು ಪಡೆದವರು ಸೋಜಿಗಪಟ್ಟು ತಾವಾಗಿ ಕೈ ಒಡ್ಡುತ್ತಿರಲಿಲ್ಲ.
ಪದಾರ್ಥ (ಕ.ಗ.ಪ)
ವಹ್ನಿ-ಅಗ್ನಿ, ಧೂಮ-ಹೊಗೆ, ವಿವರಣ-ಬೇರೆಮಾಡುವುದು, ಲಟಕಟಿಸು-ಚಕಿತರಾಗು, ಆನು-ಒಡ್ಡು
ಮೂಲ ...{Loading}...
ಯಾಗವಹ್ನಿಯ ಧೂಮದಲಿ ದಿಗು
ಭಾಗ ವಿವರಣವಡಗಿತು ಹವಿ
ರ್ಭಾಗ ಭೋಜನದಿಂದಲಾದುದಜೀರ್ಣವಮರರಿಗೆ
ಯಾಗ ದಕ್ಷಿಣೆಗಳಲಿ ಬಹಳ
ತ್ಯಾಗ ದಾನಕೆ ಲಟಕಟಿಸಿ ತಾ
ವಾಗಿ ಕೈಯಾನರು ಯುಧಿಷ್ಠಿರನೃಪನ ರಾಜ್ಯದಲಿ ॥18॥
೦೧೯ ಬಲಿಯ ನಹುಷನ ...{Loading}...
ಬಲಿಯ ನಹುಷನ ದುಂದುಮಾರನ
ನಳನ ಸಗರನ ನೃಗನ ಶಾಕುಂ
ತಳನ ಪುರುಕುತ್ಸನ ಹರಿಶ್ಚಂದ್ರನ ಪುರೂರವನ
ಇಳೆಯ ವಲ್ಲಭರೆನಿಪ ರಾಜಾ
ವಳಿಯ ಮನಮೆಚ್ಚುಗಳನುರ್ವೀ
ಲಲನೆ ಮರೆದಳು ಮೆರೆದಳಾ ಧರ್ಮಜನ ರಾಜ್ಯದಲಿ ॥19॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಬಲಿ, ನಹುಷ, ದುಂದುಮಾರ, ನಳ, ಸಗರ, ನೃಗ, ಶಾಕುಂತಳ, ಪುರುಕುತ್ಸ, ಹರಿಶ್ಚಂದ್ರ, ಪುರೂರವ ಇವರೇ ಮೊದಲಾದ ಭೂಪತಿಗಳೆನಿಸಿದ ರಾಜಸಮೂಹವು ಮಾಡಿದ ಅಂತರಂಗಕ್ಕೆ ಒಪ್ಪುವ ಕೆಲಸಗಳನ್ನು ಭೂತಾಯಿಯು ಮರೆತು ಬಿಟ್ಟಳು. ಧರ್ಮರಾಜನ ರಾಜ್ಯದಲ್ಲಿ ಪ್ರಕಾಶಿಸಿದಳು.
ಪದಾರ್ಥ (ಕ.ಗ.ಪ)
ಇಳೆಯವಲ್ಲಭ-ಭೂಪತಿ, ರಾಜಾವಳಿ-ರಾಜರ ಸಮೂಹ, ಮನಮೆಚ್ಚು-ಅಂತರಂಗಕ್ಕೆ ಒಪ್ಪುವ.
ಟಿಪ್ಪನೀ (ಕ.ಗ.ಪ)
ಬಲಿ-ಪ್ರಹ್ಲಾದಪುತ್ರನಾದ ವಿರೋಚನನ ಮಗ ಇವನ ಮಗ ಬಾಣಾಸುರ. ಬಲಿಗೆ ಇಂದ್ರಸೇನನೆಂಬುದು ನಾಮಾಂತರ. ಇವನ ಹೆಂಡತಿ ವಿಂಧ್ಯಾವಳಿ ,ನಹುಷ-ಚಂದ್ರವಂಶದ ಅರಸು, ಊರ್ವಶೀ ಪುರೂರವರ ಮಗನಾದ ಆಯುವಿನಲ್ಲಿ ಸ್ವರ್ಭಾನವಿಯಲ್ಲಿ ಜನಿಸಿದವನು.ದುಂದುಮಾರ-ಸೂರ್ಯವಂಶದ ಶತ್ರುಜಿತನೆಂಬ ಅರಸನ ಮಗ ಕುವಲಾಶ್ವ, ಋತಧ್ವಜ ಎಂಬುದು ಇವನ ಹೆಸರುಗಳು.ನಳ-ನಿಷಧ ದೇಶಾಧಿಪತಿಯಾದ ವೀರಸೇನರಾಜನ ಮಗ. ಈತನ ಹೆಂಡತಿ ವಿದರ್ಭರಾಜನಾದ ಭೀಮಭೂಪಾಲನ ಮಗಳು ದಮಯಂತಿ.ಸಗರ-ಇಕ್ಷ್ವಾಕು ವಂಶದ ಬಾಹುಕ ರಾಜನ ಮಗ. ವಿಷ ಸಮೇತವಾಗಿ ಹುಟ್ಟಿದ್ದರಿಂದ ಸಗರ ಎಂಬ ಹೆಸರು. ವೈದರ್ಭಿ ಮತ್ತು ಶೈಭ್ಯೆ ಇವನ ಪತ್ನಿಯರು.ನೃಗ-ಸೂರ್ಯವಂಶದ ಅರಸು ಅನೇಕ ಗೋವುಗಳನ್ನು ದಾನ ಮಾಡಿದ ಇಕ್ಷ್ವಾಕುರಾಜನ ಮಗ.ಶಾಕುಂತಳ-ಪೂರುವಂಶದ ಇಲಿಲ ರಾಜನ ಮಗ ದುಷ್ಯಂತನಿಂದ ಶಕುಂತಲೆಯಲ್ಲಿ ಜನಿಸಿದವ, ಸರ್ವದಮನ ಎಂಬುದು ನಾಮಾಂತರ ಪುರುಕುತ್ಸ-ಸೂರ್ಯವಂಶದ ಮಾಂಧಾತೃ ರಾಜನಿಂದ ಬಿಂದುಮತಿಯೆಂಬ ರಾಣಿಯಲ್ಲಿ ಜನಿಸಿದವನು. ಈತನ ಮಗ ಅನರಣ್ಯ.ಹರಿಶ್ಚಂದ್ರ-ಸೂರ್ಯವಂಶದ ಅರಸು, ತ್ರಿಶಂಕು ಮತ್ತು ಸತ್ಯವ್ರತೆಯಲ್ಲಿ ಜನಿಸಿದವ.ಪುರೂರವ-ಚಂದ್ರನ ಪುತ್ರ ಬುಧನಿಂದ ಇಳೆಯಲ್ಲಿ ಜನಿಸಿದವನು. ಊರ್ವಶಿಯಲ್ಲಿ ಆಯು, ಧೀಮಂತ, ಅಮಾವಸು, ದೃಢಾಯು, ವನಾಯು, ಶತಾಯು ಎಂಬ ಪುತ್ರರನ್ನು ಪಡೆದನು.ಧುಂಧುಮಾರ : ಮಧು -ಕೈಟಭರ ಮಗ ಧುಂಧು. ಇವನನ್ನು ಕೊಂದ ಕುವಲಾಶ್ಚನಿಗೆ ಧುಂಧುಮಾರ ಎಂಬ ಹೆಸರು ಬಂದಿದೆ. ಕುವಲಾಶ್ವನು ಇಕ್ಷ್ವಾಕು ವಂಶದ ದೊರೆ ಬೃಹದಶ್ವ ಎಂಬುವನ ಮಗ.- ಹಿಡಿಂಬನ ತಂಗಿಯಾದ ಹಿಡಿಂಬೆ ಅಥವಾ ಕಮಲಪಾಲಿಕೆಯಲ್ಲಿ ಪಾಂಡುಪುತ್ರನಾದ ಭೀಮಸೇನನಿಂದ ಜನಿಸಿದವನು. ಮಹಾಪರಾಕ್ರಮಶಾಲಿ. ಮೃಣ್ಮಯವಾದ ಗಡಿಗೆಯ ಅಡಿಭಾಗದಂತೆ ಬೋಳಾಗಿಯೂ, ನುಣುಪಾಗಿಯೂ ಇವನ ತಲೆ ಇದೆ ಎಂದು ಮಗುವಿನ ತಾಯಿ ನುಡಿದುದರಿಂದ ಇವನನ್ನು ‘ಘಟೋತ್ಕಚ’ ಎಂದು ಕರೆದರು. ಇವನು ರಾಕ್ಷಸ ಸಚಿವತ್ಸರದಲ್ಲಿ ಆಷಾಢಮಾಸದ ಬಿದಿಗೆಯ ಮಧ್ಯಾಹ್ನದಲ್ಲಿ ಜನಿಸಿದನು. ಇವನ ಹೆಂಡತಿ ಕಾಮಕಟಂಕಟಾ ಇವಳು ಪ್ರಾಗ್ಜೋತಿಷ ನಗರಾಧೀಶ್ವರ ನರಕಾಸುರನ ಸೇನಾಪತಿ ಮುರುವೆಂಬ ರಾಕ್ಷಸನ ಮಗಳು.ಕ್ಷಾತ್ರಕ್ಕೆ ಆಸುರೀ ಶಕ್ತಿ ಬೆರೆತರೆ ಹೇಗಿರುತ್ತದೆಂಬುದಕ್ಕೆ ಭೀಮ-ಹಿಡಿಂಬೆಯರ ಮಗ ಘಟೋತ್ಕಚನೇ ಸಾಕ್ಷಿ. ಹಿಡಿಂಬವನದ ಹಿಡಿಂಬ ಇವನಿಗೆ ಮಾವನಾಗಬೇಕು. ಭೀಮ-ಹಿಡಿಂಬಯರಿಗೆ ಮೇóಘವರ್ಣ, ಅಂಜನಪರ್ವ ಎಂಬ ಇಬ್ಬರು ಕುಮಾರರು. ಘಟೋತ್ಕಚನು ರಾಕ್ಷಸನಾದರೂ ಭೀಮನ ಪ್ರಭಾವದಿ .ಸಗರ - ಭಾರತೀಯ ಪುರಾಣ ಮತ್ತು ಇತಿಹಾಸಗಳಲ್ಲೇ ಅಲ್ಲದೆ ಜೈನಕಾವ್ಯ-ಪುರಾಣಗಳಲ್ಲೂ ಈತನ ಹೆಸರು ಪ್ರಸಿದ್ಧವಾಗಿದೆ. ಸಗರನ ಮಕ್ಕಳು ಭೂಶೋಧನೆ ಮಾಡಿ ಸಾಗರವನ್ನು ನಿರ್ಮಿಸಿದ್ದರಿಂದ ಸಮುದ್ರಕ್ಕೆ ಸಾಗರ ಎಂಬ ಹೆಸರು ಬಂದಿದೆಯಂತೆ.
ಮೂಲ ...{Loading}...
ಬಲಿಯ ನಹುಷನ ದುಂದುಮಾರನ
ನಳನ ಸಗರನ ನೃಗನ ಶಾಕುಂ
ತಳನ ಪುರುಕುತ್ಸನ ಹರಿಶ್ಚಂದ್ರನ ಪುರೂರವನ
ಇಳೆಯ ವಲ್ಲಭರೆನಿಪ ರಾಜಾ
ವಳಿಯ ಮನಮೆಚ್ಚುಗಳನುರ್ವೀ
ಲಲನೆ ಮರೆದಳು ಮೆರೆದಳಾ ಧರ್ಮಜನ ರಾಜ್ಯದಲಿ ॥19॥
೦೨೦ ಆದಿ ಯುಗದೊಳು ...{Loading}...
ಆದಿ ಯುಗದೊಳು ಧರ್ಮವಿದ್ದುದು
ಪಾದ ನಾಲ್ಕರ ಗಾಢಗತಿಯಲಿ
ಪಾದವೂಣೆಯವಾದುದಾ ತ್ರೇತಾ ಪ್ರಭಾವದಲಿ
ಪಾದವೆರಡಡಗಿದವು ದ್ವಾಪರ
ದಾದಿಯಲ್ಲಿ ಯುಧಿಷ್ಠಿರನ ರಾ
ಜ್ಯೋದಯದಲಂಕುರಿಸಿ ಸುಳಿದುದು ನಾಲ್ಕು ಪಾದದಲಿ ॥20॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಆದಿಯುಗವಾದ ಕೃತಯುಗದಲ್ಲಿ ಧರ್ಮವು ನಾಲ್ಕು ಪಾದಗಳಿಂದ ದೃಢವಾಗಿ ಕಾಲೂರಿ ನಡೆಯುತ್ತಿತ್ತು. ತ್ರೇತಾಯುಗದ ವರ್ಚಸ್ಸಿನಲ್ಲಿ ಒಂದು ಪಾದದ ಕೊರತೆಯಾಯ್ತು. ದ್ವಾಪರ ಯುಗದ ಪ್ರಾರಂಭದಲ್ಲಿ ಎರಡು ಪಾದಗಳು ಅಡಗಿದವು. ಯುಧಿಷ್ಠಿರನ ರಾಜ್ಯಭಾರ ಪ್ರಾರಂಭವಾದ ಮೇಲೆ ಊನವಾದ ಪಾದಗಳು ಮೊಳೆತು ಧರ್ಮವು ಮತ್ತೆ ನಾಲ್ಕು ಪಾದಗಳಿಂದಲೂ ನಡೆಯತೊಡಗಿತು.
ಪದಾರ್ಥ (ಕ.ಗ.ಪ)
ಊಣೆಯ-ಕೊರತೆ, ಅಂಕುರಿಸು-ಮೊಳೆ
ಮೂಲ ...{Loading}...
ಆದಿ ಯುಗದೊಳು ಧರ್ಮವಿದ್ದುದು
ಪಾದ ನಾಲ್ಕರ ಗಾಢಗತಿಯಲಿ
ಪಾದವೂಣೆಯವಾದುದಾ ತ್ರೇತಾ ಪ್ರಭಾವದಲಿ
ಪಾದವೆರಡಡಗಿದವು ದ್ವಾಪರ
ದಾದಿಯಲ್ಲಿ ಯುಧಿಷ್ಠಿರನ ರಾ
ಜ್ಯೋದಯದಲಂಕುರಿಸಿ ಸುಳಿದುದು ನಾಲ್ಕು ಪಾದದಲಿ ॥20॥
೦೨೧ ಅರಸ ಚಿತ್ತೈಸಾ ...{Loading}...
ಅರಸ ಚಿತ್ತೈಸಾ ಯುಧಿಷ್ಠಿರ
ನರಪತಿಯ ರಾಜ್ಯಪ್ರಭಾವೋ
ತ್ಕರುಷ ವಿಸ್ತರವೇನನೆಂಬೆನು ಸಾಕದಂತಿರಲಿ
ಪರಮ ವಿಭವದೊಳೊಂದು ದಿನವೈ
ವರು ನಿಜಾಸ್ಥಾನದಲಿ ಹರಿ ವಿ
ಷ್ಟರದೊಳಿರ್ದರು ಕಂಡರತಿ ದೂರದಲಿ ನಾರದನ ॥21॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಯುಧಿಷ್ಠರ ನರಪತಿಯ ರಾಜ್ಯದ ಘನತೆಯ ಏಳಿಗೆಯ ವ್ಯಾಪ್ತಿಯನ್ನು ಏನು ಹೇಳುವುದು ! ಸಾಕು, ಅದು ಹಾಗಿರಲಿ. ಪರಮವೈಭವದಲ್ಲಿ ಒಂದು ದಿನ ಐವರು ಪಾಂಡವರು ತಮ್ಮ ಆಸ್ಥಾನದಲ್ಲಿ ಸಿಂಹಾಸನದಲ್ಲಿ ಕುಳಿತಿದ್ದರು. ದೂರದಲ್ಲಿ ನಾರದ ಬರುವುದನ್ನು ಕಂಡರು.
ಪದಾರ್ಥ (ಕ.ಗ.ಪ)
ಪ್ರಭಾವ-ಘನತೆ, ಉತ್ಕರುಷ-ಏಳಿಗೆ, ವಿಸ್ತರ-ವ್ಯಾಪ್ತಿ, ಹರಿವಿಷ್ಟರ-ಸಿಂಹಾಸನ
ಮೂಲ ...{Loading}...
ಅರಸ ಚಿತ್ತೈಸಾ ಯುಧಿಷ್ಠಿರ
ನರಪತಿಯ ರಾಜ್ಯಪ್ರಭಾವೋ
ತ್ಕರುಷ ವಿಸ್ತರವೇನನೆಂಬೆನು ಸಾಕದಂತಿರಲಿ
ಪರಮ ವಿಭವದೊಳೊಂದು ದಿನವೈ
ವರು ನಿಜಾಸ್ಥಾನದಲಿ ಹರಿ ವಿ
ಷ್ಟರದೊಳಿರ್ದರು ಕಂಡರತಿ ದೂರದಲಿ ನಾರದನ ॥21॥
೦೨೨ ಬನ್ದನಿವರೋಲಗಕೆ ಗಗನದಿ ...{Loading}...
ಬಂದನಿವರೋಲಗಕೆ ಗಗನದಿ
ನಿಂದುಮಂಡಲವಿಳಿವವೋಲ್ ನೃಪ
ವೃಂದವೆದ್ದಭಿನಮಿಸಿದುದು ಪದಯುಗಕೆ ಮುನಿಪತಿಯ
ಇಂದು ಧನ್ಯರು ನಾವಲಾ ಮುನಿ
ವಂದ್ಯ ದರ್ಶನವಾಯ್ತಪೂರ್ವವಿ
ದೆಂದು ಕುಂತೀ ತನುಜರಿದಿರೆದ್ದಂಘ್ರಿಗೆರಗಿದರು ॥22॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಗಗನದಿಂದ ಚಂದ್ರಮಂಡಲ ಇಳಿದು ಬರುವಂತೆ ನಾರದನು ಇವರ ರಾಜಸಭೆಗೆ ಬಂದನು. ರಾಜಸಮೂಹವು ಎದ್ದು ಮುನಿಪತಿಯ ಪಾದಗಳಿಗೆ ನಮಿಸಿದುದು. “ಇಂದು ನಾವು ಧನ್ಯರಾದೆವು ! ಗೌರವಾರ್ಹನಾದ ಮುನಿಯ ದರ್ಶನವಾಯ್ತು. ಇದು ಅಸಮಾನವಾದ ಅವಕಾಶ” ಎಂದು ಕುಂತಿಯ ಮಕ್ಕಳು ಎದ್ದು ಅವರನ್ನು ಇದಿರುಗೊಂಡು ಅವರ ಪಾದಗಳಿಗೆ ನಮಸ್ಕರಿಸಿದರು.
ಪದಾರ್ಥ (ಕ.ಗ.ಪ)
ಇಂದು-ಚಂದ್ರ, ವಂದ್ಯ-ಗೌರವಾರ್ಹನಾದ, ಅಪೂರ್ವ-ಅಸಮಾನವಾದ
ಮೂಲ ...{Loading}...
ಬಂದನಿವರೋಲಗಕೆ ಗಗನದಿ
ನಿಂದುಮಂಡಲವಿಳಿವವೋಲ್ ನೃಪ
ವೃಂದವೆದ್ದಭಿನಮಿಸಿದುದು ಪದಯುಗಕೆ ಮುನಿಪತಿಯ
ಇಂದು ಧನ್ಯರು ನಾವಲಾ ಮುನಿ
ವಂದ್ಯ ದರ್ಶನವಾಯ್ತಪೂರ್ವವಿ
ದೆಂದು ಕುಂತೀ ತನುಜರಿದಿರೆದ್ದಂಘ್ರಿಗೆರಗಿದರು ॥22॥
೦೨೩ ಹರಸಿದನು ಮುನಿಯಘ್ರ್ಯಪಾದ್ಯೋ ...{Loading}...
ಹರಸಿದನು ಮುನಿಯಘ್ರ್ಯಪಾದ್ಯೋ
ತ್ಕರವ ಮಧುಪರ್ಕಾಸನಾದಿಯ
ನರಸ ಮಾಡಿದನಮರಮುನಿ ಕೈಕೊಂಡು ಹರುಷದಲಿ
ಪರಿಮಿತದ ಸಮಯದ ವಚೋ ವಿ
ಸ್ತರಣವುಂಟೆನೆ ರಾಯನೋಲಗ
ಹರಿದುದವನೀಪಾಲ ಬಿನ್ನಹ ಮಾಡಿದನು ಮುನಿಗೆ ॥23॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ನಾರದಮುನಿಯು ಅವರನ್ನು ಹರಸಿದನು. ಧರ್ಮರಾಜನು, ಅವರಿಗೆ ಅಘ್ರ್ಯ, ಪಾದ್ಯ ಮಧುಪರ್ಕ ಆಸನಗಳನ್ನು ಅರ್ಪಿಸಿದನು. ದೇವಮುನಿಯು ಸಂತೋಷದಿಂದ ಅವನ್ನು ಸ್ವೀಕರಿಸಿದನು. ಮಿತಿಯುಳ್ಳ ಸಮೂಹದಲ್ಲಿ (ಏಕಾಂತದಲ್ಲಿ) ವಿವರವಾಗಿ ಹೇಳುವ ಮಾತಿದೆ ಎಂದು ಹೇಳಲು ರಾಜನ ಸಭೆಯು ಹರಿಯಿತು. ಭೂಪಾಲನು ಮುನಿಯಲ್ಲಿ ಬಿನ್ನವಿಸಿಕೊಂಡನು.
ಪದಾರ್ಥ (ಕ.ಗ.ಪ)
ಅಘ್ರ್ಯ-ದೇವತೆಗಳಿಗೂ, ಪೂಜ್ಯರಿಗೂ ಕೈತೊಳೆಯಲು ಕೊಡುವ ನೀರು, ಪಾದ್ಯ-ಕಾಲು ತೊಳೆಯುವುದು, ಮಧುಪರ್ಕ-ಅತಿಥಿಗಳನ್ನು ಬರಮಾಡಿಕೊಳ್ಳುವ ಸಮಾರಂಭ, ಪರಿಮಿತ-ಮಿತಿಯುಳ್ಳ, ಸಮಯ-ಸಮೂಹ, ವಚೋವಿಸ್ತರ-ವಿವರವಾಗಿ ಹೇಳುವಿಕೆ
ಮೂಲ ...{Loading}...
ಹರಸಿದನು ಮುನಿಯಘ್ರ್ಯಪಾದ್ಯೋ
ತ್ಕರವ ಮಧುಪರ್ಕಾಸನಾದಿಯ
ನರಸ ಮಾಡಿದನಮರಮುನಿ ಕೈಕೊಂಡು ಹರುಷದಲಿ
ಪರಿಮಿತದ ಸಮಯದ ವಚೋ ವಿ
ಸ್ತರಣವುಂಟೆನೆ ರಾಯನೋಲಗ
ಹರಿದುದವನೀಪಾಲ ಬಿನ್ನಹ ಮಾಡಿದನು ಮುನಿಗೆ ॥23॥
೦೨೪ ಏನು ಬಿಜಯಙ್ಗೈದ ...{Loading}...
ಏನು ಬಿಜಯಂಗೈದ ಹದನೆನ
ಗೇನನುಗ್ರಹ ವಚನ ನಿಮ್ಮಡಿ
ಗೇನನಾ ಬೆಸಗೈವುದೆನಗಾಜ್ಞಾಪಿಸುವುದೆನಲು
ನೀನಘಾಟದ ರಾಜಋಷಿ ನೀ
ಮಾನವನೆ ಧರ್ಮಸ್ವರೂಪನು
ನೀನು ಭವದಾಲೋಕನಾರ್ಥವು ನಮ್ಮ ಬರವೆಂದ ॥24॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಏನು, ತಾವು ದಯಮಾಡಿದ ಔಚಿತ್ಯವೇನು ? ನನಗೆ ತಮ್ಮ ಅನುಗ್ರಹ ವಚನವೇನು ? ನಾನು ಮಾಡಬೇಕಾಗಿರುವುದೇನು ? ಆಜ್ಞಾಪಿಸಬೇಕು " ಎಂದು ಧರ್ಮರಾಜನು ಕೇಳಲು, ಅದಕ್ಕೆ ನಾರದರು” ನೀನು ಅತಿಶಯದ ರಾಜರ್ಷಿ. ನೀನು ಮಾನವನೇ ? ನೀನು ಧರ್ಮಸ್ವರೂಪನು. ನಿನ್ನನ್ನು ನೋಡಬೇಕು ಎಂದು ನಾನು ಬಂದದ್ದು" ಎಂದರು.
ಪದಾರ್ಥ (ಕ.ಗ.ಪ)
ಬಿಜಯಂಗೈ-ದಯಮಾಡು, ಹದನು-ಔಚಿತ್ಯ, ಅಘಾಟ-ಅತಿಶಯ, ಭವತ್-ನಿನ್ನ, ಆಲೋಕನ-ನೋಡುವುದು
ಮೂಲ ...{Loading}...
ಏನು ಬಿಜಯಂಗೈದ ಹದನೆನ
ಗೇನನುಗ್ರಹ ವಚನ ನಿಮ್ಮಡಿ
ಗೇನನಾ ಬೆಸಗೈವುದೆನಗಾಜ್ಞಾಪಿಸುವುದೆನಲು
ನೀನಘಾಟದ ರಾಜಋಷಿ ನೀ
ಮಾನವನೆ ಧರ್ಮಸ್ವರೂಪನು
ನೀನು ಭವದಾಲೋಕನಾರ್ಥವು ನಮ್ಮ ಬರವೆಂದ ॥24॥
೦೨೫ ಅನುಜರನು ಹೇಳುವರೆ ...{Loading}...
ಅನುಜರನು ಹೇಳುವರೆ ಭೀಮಾ
ರ್ಜುನರು ವಧುವಾರೆಂಬರವiರಾಂ
ಗನೆಯರಿಗೆ ನೂರೆಂಟು ಮಡಿಯೀ ದ್ರೌಪದಾದೇವಿ
ಘನ ಸಹಾಯನು ಹವಣಿನವನೆಂ
ಬೆನೆ ಚತುರ್ದಶ ಭುವನಪತಿ ನೃಪ
ನಿನಗೆ ಪಾಡೇ ಪನ್ನಗೇಂದ್ರ ಸುರೇಂದ್ರರಿಂದಿನಲಿ ॥25॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ತಮ್ಮಂದಿರನ್ನು ಹೇಳುವುದಾದರೆ ಭೀಮಾರ್ಜುನರು. ವಧು ಯಾರೆಂದರೆ ದೇವತಾಸ್ತ್ರೀಯರಿಗೆ ನೂರೆಂಟು ಮಡಿ ಈ ದ್ರೌಪದಾದೇವಿ. ಅತ್ಯಧಿಕ ಸಹಾಯಕನಾಗಿರುವ ಸಾಮಥ್ರ್ಯವಿರುವವನೆಂದರೆ, ಹದಿನಾಲ್ಕು ಲೋಕಗಳಿಗೂ ಒಡೆಯನಾಗಿರುವ ಕೃಷ್ಣನು. ಮಹಾರಾಜಾ, ನಿನಗೆ ಇಂದು, ದೇವೇಂದ್ರ, ಪನ್ನಗೇಂದ್ರರು ಸಮಾನರೆ ?” ಎಂದು ಪ್ರಶಂಸಿದನು.
ಪದಾರ್ಥ (ಕ.ಗ.ಪ)
ಘನ-ಅತ್ಯಧಿಕ, ಹವಣು-ಸಾಮಥ್ರ್ಯ, ಪನ್ನಗೇಂದ್ರ-ಆದಿಶೇಷ,
ಟಿಪ್ಪನೀ (ಕ.ಗ.ಪ)
ಚತುರ್ದಶಭುವನ-ಹದಿನಾಲ್ಕು ಲೋಕಗಳು (ಭೂಲೋಕ, ಭುವರ್ಲೋಕ, ಸ್ವರ್ಲೋಕ, ಮಹರ್ಲೋಕ, ಜನೋಲೋಕ, ತಪೋಲೋಕ, ಸತ್ಯ ಲೋಕ ಮತ್ತು ಸಪ್ತಪಾತಾಳಗಳು-ಅತಲ, ವಿತಲ, ಸುತಲ, ರಸಾತಲ, ತಲಾತಲ, ಮಹಾತಲ, ಪಾತಾಲ)
ಮೂಲ ...{Loading}...
ಅನುಜರನು ಹೇಳುವರೆ ಭೀಮಾ
ರ್ಜುನರು ವಧುವಾರೆಂಬರವiರಾಂ
ಗನೆಯರಿಗೆ ನೂರೆಂಟು ಮಡಿಯೀ ದ್ರೌಪದಾದೇವಿ
ಘನ ಸಹಾಯನು ಹವಣಿನವನೆಂ
ಬೆನೆ ಚತುರ್ದಶ ಭುವನಪತಿ ನೃಪ
ನಿನಗೆ ಪಾಡೇ ಪನ್ನಗೇಂದ್ರ ಸುರೇಂದ್ರರಿಂದಿನಲಿ ॥25॥
೦೨೬ ಆದಡೊನ್ದಿಹುದೈವರಿಗೆ ವಧು ...{Loading}...
ಆದಡೊಂದಿಹುದೈವರಿಗೆ ವಧು
ವಾದಳೀ ದ್ರೌಪದಿ ಮಹೇಶ್ವರ
ನಾದಿಯಲಿ ಕರುಣಿಸಿದ ವರದಲಿ ಪುಣ್ಯ ಕಥನವಿದು
ಮೇದಿನಿಯೊಳೇಕಾಮಿಷ ಸ್ಥಿತಿ
ಯಾದಿಯಿದು ವಿಗ್ರಹಕೆ ತಮ್ಮೊಳು
ಕಾದಿದರು ಸುಂದೋಪಸುಂದರು ಭೂಪ ಕೇಳ್ ಎಂದ ॥26॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಆದರೆ, ಒಂದು ವಿಷಯವಿದೆ. ಪೂರ್ವಕಾಲದಲ್ಲಿ ಮಹೇಶ್ವರನು ಕರುಣಿಸಿದ ವರದಿಂದ ಈ ದ್ರೌಪದಿಯು ನಿಮ್ಮೈವರಿಗೆ ವಧುವಾದಳು. ಇದು ಪುಣ್ಯ ಕಥನ. ಭೂಮಿಯಲ್ಲಿ ಒಂದೇ ವಸ್ತುವಿಗೆ ಹಲವರು ಬಯಸುವ ಸ್ಥಿತಿಯಿದು ಕಲಹಕ್ಕೆ ಕಾರಣ. ಸುಂದೋಪ ಸುಂದರು ತಮ್ಮ ತಮ್ಮಲ್ಲೇ ಕಾದಿದರು” ಎಂದು ನಾರದರು ಹೇಳಿದರು.
ಪದಾರ್ಥ (ಕ.ಗ.ಪ)
ಆದಿ-ಪೂರ್ವಕಾಲ, ಏಕಾಮಿಷಸ್ಥಿತಿ-ಒಂದೇ ವಸ್ತುವಿಗೆ ಹಲವರು ಬಯಸುವ ಸ್ಥಿತಿ, ವಿಗ್ರಹ-ಕಲಹ
ಮೂಲ ...{Loading}...
ಆದಡೊಂದಿಹುದೈವರಿಗೆ ವಧು
ವಾದಳೀ ದ್ರೌಪದಿ ಮಹೇಶ್ವರ
ನಾದಿಯಲಿ ಕರುಣಿಸಿದ ವರದಲಿ ಪುಣ್ಯ ಕಥನವಿದು
ಮೇದಿನಿಯೊಳೇಕಾಮಿಷ ಸ್ಥಿತಿ
ಯಾದಿಯಿದು ವಿಗ್ರಹಕೆ ತಮ್ಮೊಳು
ಕಾದಿದರು ಸುಂದೋಪಸುಂದರು ಭೂಪ ಕೇಳೆಂದ ॥26॥
೦೨೭ ಅರಸುಗಳು ತಾವಿಬ್ಬರೇಕೋ ...{Loading}...
ಅರಸುಗಳು ತಾವಿಬ್ಬರೇಕೋ
ದರರು ಬಲುಗೈಗಳು ಸುರಾಸುರ
ನರರೊಳಡುಪಾಯೆಯಲಿ ವೆಂಠಣಿಸಿದರು ಭೂತಳವ
ನೆರೆದು ಸುರರು ಸರೋಜ ಪೀಠಂ
ಗರುಹಿದರು ಬಳಿಕಾತನಿವರನು
ಪರಿಹರಿಸುವುದಕೇನುಪಾಯವೆನುತ್ತ ಚಿಂತಿಸಿದ ॥27॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕೇಳು, ಮಹಾರಾಜಾ, ಇಬ್ಬರು ಅರಸುಗಳು ಒಂದೇ ಹೊಟ್ಟೆಯಲ್ಲಿ ಹುಟ್ಟಿದವರು. ದೇವತೆಗಳು, ರಾಕ್ಷಸರು, ಮಾನವರುಗಳಲ್ಲಿ ಪರಾಕ್ರಮಿಗಳು. ಪೃಥ್ವಿಯನ್ನೆಲ್ಲಾ ಹೋರಾಟದಿಂದ ವ್ಯಾಪಿಸಿದರು. ಆಗ ದೇವತೆಗಳೆಲ್ಲಾ ಸೇರಿ ಬ್ರಹ್ಮನಿಗೆ ಅವರ ತೊಂದರೆಯನ್ನು ಹೇಳಿದರು. ಬಳಿಕ, ಆತನು ಇವರನ್ನು ನಿವಾರಿಸುವುದಕ್ಕೆ ಉಪಾಯವೇನೆಂದು ಚಿಂತಿಸಿದನು.
ಪದಾರ್ಥ (ಕ.ಗ.ಪ)
ಏಕೋದರರು-ಒಂದೇ ಹೊಟ್ಟೆಯಲ್ಲಿ ಹುಟ್ಟಿದವರು (ಒಬ್ಬ ತಾಯಿಯ ಮಕ್ಕಳು), ಬಲುಗೈ-ಪರಾಕ್ರಮಿ, ಅಡುಪಾಯೆ ? (ಅಡುಪಾಡು)-ಹೋರಾಟ, ವೆಂಠಣಿಸು-ವ್ಯಾಪಿಸು, ಪರಿಹರಿಸು-ನಿವಾರಿಸು
ಮೂಲ ...{Loading}...
ಅರಸುಗಳು ತಾವಿಬ್ಬರೇಕೋ
ದರರು ಬಲುಗೈಗಳು ಸುರಾಸುರ
ನರರೊಳಡುಪಾಯೆಯಲಿ ವೆಂಠಣಿಸಿದರು ಭೂತಳವ
ನೆರೆದು ಸುರರು ಸರೋಜ ಪೀಠಂ
ಗರುಹಿದರು ಬಳಿಕಾತನಿವರನು
ಪರಿಹರಿಸುವುದಕೇನುಪಾಯವೆನುತ್ತ ಚಿಂತಿಸಿದ ॥27॥
೦೨೮ ಬಳಿಕಸಙ್ಖ್ಯಾತದ ಸುರೋರಗ ...{Loading}...
ಬಳಿಕಸಂಖ್ಯಾತದ ಸುರೋರಗ
ಲಲನೆಯರಲಿ ತಿಲಾಂಶ ಮಾತ್ರದ
ಚೆಲುವಿಕೆಯನೇ ತೆಗೆದು ನಿರ್ಮಿಸಿದನು ವರಾಂಗನೆಯ
ಬೆಳಗಿತಾಕೆಯ ಹೆಸರು ದಿವಿಜಾ
ವಳಿಯೊಳೈದೆ ತಿಲೋತ್ತಮಾಹ್ವಯ
ದಳಿಕುಲಾಳಕಿಗಬುಜಭವ ನೇಮಿಸಿದನೀ ಹದನ ॥28॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಬ್ರಹ್ಮನು, ಬಳಿಕ ಅಸಂಖ್ಯಾತ ದೇವನಾಗ ಸ್ತ್ರೀಯರಲ್ಲಿ ಒಬ್ಬೊಬ್ಬರಲ್ಲಿ ತಿಲಾಂಶ ಮಾತ್ರದ ಸೌಂದರ್ಯವನ್ನು ತೆಗೆದುಕೊಂಡು ಅದರಿಂದ ಒಬ್ಬ ಶ್ರೇಷ್ಠಳಾದ ಸ್ತ್ರೀಯನ್ನು ಸೃಷ್ಟಿಸಿದನು. ಆಕೆಯ ಹೆಸರು ತಿಲೋತ್ತಮೆಯೆಂದು ದೇವಸಮೂಹದಲ್ಲಿ ಪ್ರಸಿದ್ಧಿಯಾಯಿತು. ತುಂಬಿಗಳ ಗುಂಪನ್ನು ಹೋಲುವ ತಲೆಗೂದಲುಳ್ಳ ಅವಳಿಗೆ ಬ್ರಹ್ಮನು ಈ ಕಾರ್ಯವನ್ನು ನೇಮಿಸಿದನು.
ಪದಾರ್ಥ (ಕ.ಗ.ಪ)
ವರಾಂಗನೆ-ಶ್ರೇಷ್ಠಸ್ತ್ರೀ, ನಿರ್ಮಿಸು-ಸೃಷ್ಟಿಸು, ಆಹ್ವಯ-ಹೆಸರು, ಅಳಿಕುಲಾಳಕಿ-ತುಂಬಿಗಳಗುಂಪನ್ನು ಹೋಲುವ ತಲೆಗೂದಲುಳ್ಳವಳು, ಅಬುಜಭವ-ಕಮಲದಲ್ಲಿ ಹುಟ್ಟಿದವನು, ಬ್ರಹ್ಮ
ಮೂಲ ...{Loading}...
ಬಳಿಕಸಂಖ್ಯಾತದ ಸುರೋರಗ
ಲಲನೆಯರಲಿ ತಿಲಾಂಶ ಮಾತ್ರದ
ಚೆಲುವಿಕೆಯನೇ ತೆಗೆದು ನಿರ್ಮಿಸಿದನು ವರಾಂಗನೆಯ
ಬೆಳಗಿತಾಕೆಯ ಹೆಸರು ದಿವಿಜಾ
ವಳಿಯೊಳೈದೆ ತಿಲೋತ್ತಮಾಹ್ವಯ
ದಳಿಕುಲಾಳಕಿಗಬುಜಭವ ನೇಮಿಸಿದನೀ ಹದನ ॥28॥
೦೨೯ ಅವರ ಕೆಡಿಸುವ ...{Loading}...
ಅವರ ಕೆಡಿಸುವ ಹದನ ಕೈಕೊಂ
ಡವನಿಗೈತಂದಳು ವಿನೋದದೊ
ಳಿವದಿರಿದ್ದರು ಬನದೊಳಗೆ ಮದಿರಾ ಮದೋದ್ಧತರು
ಯುವತಿಯನು ಕಂಡರು ಕಟಾಕ್ಷದ
ಸವಡಿಗೋಲಿಂದೊಡೆದುದೆದೆ ಹರಿ
ದವರು ಹಿಡಿದರು ವಾಮ ದಕ್ಷಿಣ ಕರಗಳಂಗನೆಯ ॥29॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಸುಂದೋಪಸುಂದರನ್ನು ಇಲ್ಲವಾಗಿಸುವ ಕೆಲಸವನ್ನು ಕೈಕೊಂಡು ಭೂಮಿಗೆ ಬಂದಳು. ಇವರು ಮದ್ಯಪಾನದಿಂದ ಅಮಲುಗೊಂಡು ಸೊಕ್ಕಿದವರಾಗಿ ಅರಣ್ಯದಲ್ಲಿ ವಿನೋದದಲ್ಲಿ ಇದ್ದರು. ಆಗ ಅವರಿಬ್ಬರೂ ಈ ಯುವತಿಯನ್ನು ನೋಡಿದರು. ಅವಳ ಕುಡಿನೋಟದ ಜೋಡಿ ಬಾಣಗಳಿಂದ ಅವರೆದೆಯೊಡೆಯಿತು. ಕೂಡಲೇ ಅವರಿಬ್ಬರೂ ಓಡಿಹೋಗಿ ಆ ಹೆಂಗಸಿನ ಎಡಬಲಕೈಗಳನ್ನು ಹಿಡಿದುಕೊಂಡರು.
ಪದಾರ್ಥ (ಕ.ಗ.ಪ)
ಮದಿರಾ-ಮದ್ಯ, ಮದ-ಅಮಲು, ಉದ್ಧತ-ಸೊಕ್ಕು, ಕಟಾಕ್ಷ-ಕುಡಿನೋಟ, ಸವಡಿಗೋಲು-ಜೋಡಿಬಾಣ, ವಾಮ-ಎಡ, ದಕ್ಷಿಣ-ಬಲ, ಕಡು-ಇಲ್ಲವಾಗು.
ಮೂಲ ...{Loading}...
ಅವರ ಕೆಡಿಸುವ ಹದನ ಕೈಕೊಂ
ಡವನಿಗೈತಂದಳು ವಿನೋದದೊ
ಳಿವದಿರಿದ್ದರು ಬನದೊಳಗೆ ಮದಿರಾ ಮದೋದ್ಧತರು
ಯುವತಿಯನು ಕಂಡರು ಕಟಾಕ್ಷದ
ಸವಡಿಗೋಲಿಂದೊಡೆದುದೆದೆ ಹರಿ
ದವರು ಹಿಡಿದರು ವಾಮ ದಕ್ಷಿಣ ಕರಗಳಂಗನೆಯ ॥29॥
೦೩೦ ಎನಗೆ ವಧು ...{Loading}...
ಎನಗೆ ವಧು ತಾ ಮುನ್ನ ಕಂಡೆನು
ತನಗೆ ಸತಿ ತಾ ಮುನ್ನ ಹಿಡಿದೆನು
ತನಗೆನಗೆ ನೀ ನಿಲ್ಲು ನೀ ನಿಲ್ಲೆನುತ ಹೊಯ್ದಾಡಿ
ಜನಪರಿಬ್ಬರು ಮಡಿಯಲಮರಾಂ
ಗನೆ ಮುಗುಳ್ನಗೆ ನಗುತಲಬುಜಾ
ಸನನ ಹೊರೆಗೈದಿದಳು ಕುಂತೀತನುಜ ಕೇಳ್ ಎಂದ ॥30॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ನನಗೆ ಸತಿ ನಾನು ಮೊದಲು ನೋಡಿದೆನು ಎಂದನೊಬ್ಬ. ನನಗೆ ಸತಿ, ನಾನು ಮೊದಲು ಹಿಡಿದುಕೊಂಡೆನು ಎಂದನು ಇನ್ನೊಬ್ಬ. ‘ನನಗೆ’, ‘ತನಗೆ’, ‘ನೀನಿಲ್ಲು’ ‘ನೀ ನಿಲ್ಲು’ ಎನ್ನುತ ಹೊಡೆದಾಡಿದರು. ಒಬ್ಬರನ್ನೊಬ್ಬರು ಹೊಡೆದು ಇಬ್ಬರೂ ಮಡಿದರು. ಆಗ ಆ ದೇವಸ್ತ್ರೀ ಮುಗುಳ್ನಗುತ್ತ ಬ್ರಹ್ಮನ ಸಮೀಪಕ್ಕೆ ಹೊರಟಳು ಕೇಳು, ಕುಂತೀಪುತ್ರನೇ” ಎಂದು ನಾರದರು ಸುಂದೋಪಸುಂದರ ವೃತ್ತಾಂತವನ್ನು ಹೇಳಿದರು.
ಪದಾರ್ಥ (ಕ.ಗ.ಪ)
ಅಬುಜಾಸನ-ಕಮಲಪೀಠ, ಬ್ರಹ್ಮ,
ಟಿಪ್ಪನೀ (ಕ.ಗ.ಪ)
ಸುನ್ದ ಉಪಸುನ್ದ-ಹಿರಣ್ಯಕಶಿಪುವಂಶದ ನಿಕುಂಭನೆಂಬ ರಾಕ್ಷಸನ ಮಕ್ಕಳು. ಇವರಿಬ್ಬರೂ ಬ್ರಹ್ಮನನ್ನು ಕುರಿತು ತಪಸ್ಸು ಮಾಡಿ ಅನ್ಯೋನ್ಯವಾಗಿ ಒಬ್ಬರನ್ನೊಬ್ಬರು ಕೊಲ್ಲಬೇಕೇ ಹೊರತು ಮತ್ತಾರಿಂದಲೂ ಸಾವು ಬರದಂತೆ ವರವನ್ನು ಪಡೆದರು. ಇವರ ಹಾವಳಿ ತಡೆಯಲಾರದೆ ಬ್ರಹ್ಮನು ತಿಲೋತ್ತಮೆಯನ್ನು ಸೃಷ್ಟಿಮಾಡಿ ಅವಳ ಮೂಲಕ ಇವರನ್ನು ನಿವಾರಿಸಿದನು.
ಮೂಲ ...{Loading}...
ಎನಗೆ ವಧು ತಾ ಮುನ್ನ ಕಂಡೆನು
ತನಗೆ ಸತಿ ತಾ ಮುನ್ನ ಹಿಡಿದೆನು
ತನಗೆನಗೆ ನೀ ನಿಲ್ಲು ನೀ ನಿಲ್ಲೆನುತ ಹೊಯ್ದಾಡಿ
ಜನಪರಿಬ್ಬರು ಮಡಿಯಲಮರಾಂ
ಗನೆ ಮುಗುಳ್ನಗೆ ನಗುತಲಬುಜಾ
ಸನನ ಹೊರೆಗೈದಿದಳು ಕುಂತೀತನುಜ ಕೇಳೆಂದ ॥30॥
೦೩೧ ಅದರಿನೀ ಜೀವರಿಗೆ ...{Loading}...
ಅದರಿನೀ ಜೀವರಿಗೆ ದುಸ್ಥಿತಿ
ಸುದತಿಯರ ದೆಸೆಯಿಂದ ರಾಜ್ಯದ
ಹುದುವಿನಲಿ ಮೇಣರ್ಥಗತಿಯಲನರ್ಥ ತಪ್ಪದಲೆ
ಸುದತಿ ನಿಮ್ಮೈವರಿಗೆಯೀ ದ್ರೌ
ಪದಿ ಮಹಾಸತಿ ರಾಗ ಲೋಭದ
ಕದನದಲಿ ಕಾಳಾಗದಿದ್ದರೆ ತುದಿಗೆ ಲೇಸೆಂದ ॥31॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಅದರಿಂದ, ಈ ಜೀವರಿಗೆ ಸುಂದರಿಯರ ಕಾರಣದಿಂದ ದುಸ್ಥಿತಿಯುಂಟಾಗುತ್ತದೆ. ರಾಜ್ಯದ ಹೊಂದಿಕೆಯಲ್ಲಿ ಮತ್ತು ಅರ್ಥದ ಬೆಳವಣಿಗೆಯಲ್ಲಿ ಅನರ್ಥ ತಪ್ಪಿದ್ದಲ್ಲ. ಈ ಮಹಾಸತಿ ದ್ರೌಪದಿಯು ನಿಮ್ಮೈವರಿಗೆ ಮಡದಿ. ರಾಗ ಲೋಭದ ಕಲಹದಲ್ಲಿ ಕೆಟ್ಟದಾಗದಿದ್ದರೆ ಪರಿಣಾಮದಲ್ಲಿ ಒಳ್ಳೆಯದು” ಎಂದು ನಾರದನು ಹೇಳಿದನು.
ಪದಾರ್ಥ (ಕ.ಗ.ಪ)
ಹುದು-ಹೊಂದಿಕೆ, ಕಾಳು-ಕೆಟ್ಟದು
ಮೂಲ ...{Loading}...
ಅದರಿನೀ ಜೀವರಿಗೆ ದುಸ್ಥಿತಿ
ಸುದತಿಯರ ದೆಸೆಯಿಂದ ರಾಜ್ಯದ
ಹುದುವಿನಲಿ ಮೇಣರ್ಥಗತಿಯಲನರ್ಥ ತಪ್ಪದಲೆ
ಸುದತಿ ನಿಮ್ಮೈವರಿಗೆಯೀ ದ್ರೌ
ಪದಿ ಮಹಾಸತಿ ರಾಗ ಲೋಭದ
ಕದನದಲಿ ಕಾಳಾಗದಿದ್ದರೆ ತುದಿಗೆ ಲೇಸೆಂದ ॥31॥
೦೩೨ ಅರಸ ಚಿತ್ತೈಸೊನ್ದು ...{Loading}...
ಅರಸ ಚಿತ್ತೈಸೊಂದು ವತ್ಸರ
ವಿರಲಿ ನಿಮ್ಮೊಬ್ಬರಲಿ ಸತಿ ಮರು
ವರುಷಕೊಬ್ಬನೊಳಿಂತು ಪಂಚಕಕೈದು ವರುಷದಲಿ
ಅರಸಿಯನು ಪತಿಸಹಿತ ಮಂಚದೊ
ಳಿರಲು ಕಾಬುದು ಸಲ್ಲದದು ಗೋ
ಚರಿಸಿದಡೆ ಬಳಿಕದಕೆ ಪ್ರಾಯಶ್ಚಿತ್ತ ವಿಧಿಯುಂಟು ॥32॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಅರಸಾ, ಗಮನವಿಟ್ಟು ಕೇಳು, ಒಂದು ವರ್ಷದವರೆಗೆ ಸತಿ ನಿಮ್ಮಲ್ಲಿ ಒಬ್ಬರ ಜೊತೆ ಇರಲಿ. ಮರುವರ್ಷ ಮತ್ತೊಬ್ಬನಲ್ಲಿರಲಿ. ಹೀಗೆ ಐದು ವರ್ಷದಲ್ಲಿ ಐವರಿಗೂ ಸತಿಯ ಸಹವಾಸ ಸಮನಾಗುತ್ತದೆ. ಈ ಕಾಲದಲ್ಲಿ ಯಾರೇ ಆದರೂ ಅರಸಿಯನ್ನು ಪತಿಸಹಿತ ಮಂಚದಲ್ಲಿರುವಾಗ ಕಾಣುವುದು ಸಲ್ಲದು. ಹಾಗೇನಾದರೂ ಕಂಡರೆ ಅದಕ್ಕೆ ಪ್ರಾಯಶ್ಚಿತ್ತ ನಿಯಮವುಂಟು” ಎಂದು ನಾರದ ಮುಂದುವರೆಸಿದನು.
ಪದಾರ್ಥ (ಕ.ಗ.ಪ)
ಪಂಚಕ-ಐದರ ಗುಂಪು, ಕಾಬುದು-ಕಾಣುವುದು, ವಿಧಿ-ನಿಯಮ
ಮೂಲ ...{Loading}...
ಅರಸ ಚಿತ್ತೈಸೊಂದು ವತ್ಸರ
ವಿರಲಿ ನಿಮ್ಮೊಬ್ಬರಲಿ ಸತಿ ಮರು
ವರುಷಕೊಬ್ಬನೊಳಿಂತು ಪಂಚಕಕೈದು ವರುಷದಲಿ
ಅರಸಿಯನು ಪತಿಸಹಿತ ಮಂಚದೊ
ಳಿರಲು ಕಾಬುದು ಸಲ್ಲದದು ಗೋ
ಚರಿಸಿದಡೆ ಬಳಿಕದಕೆ ಪ್ರಾಯಶ್ಚಿತ್ತ ವಿಧಿಯುಂಟು ॥32॥
೦೩೩ ಆರು ಕಣ್ಡರು ...{Loading}...
ಆರು ಕಂಡರು ಆತನೊಬ್ಬನೆ
ಧಾರುಣಿಯಲಿ ಸುತೀರ್ಥ ಯಾತ್ರಾ
ಭಾರದಲಿ ತಿರುಗುವುದು ಸುತ್ತಲು ವರುಷವೊಂದರಲಿ
ಚಾರು ನಿಷ್ಕೃತಿಯೆನಲು ಮುದದಲಿ
ನಾರದರ ದಿವ್ಯೋಪದೇಶಕೆ
ಸಾರಹೃದಯ ಹಸಾದವೆಂದನು ತಮ್ಮದಿರು ಸಹಿತ ॥33॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಯಾರೇ ನೋಡಿದರೂ, ಆತನೊಬ್ಬನೇ ಭೂಮಿಯಲ್ಲಿ ಒಂದು ವರ್ಷಕಾಲ ತೀರ್ಥಯಾತ್ರೆ ಮಾಡುತ್ತ ಸುತ್ತುತ್ತ ತಿರುಗಬೇಕು. ಹಾಗೆ ಮಾಡಿದರೆ, ಅದೇ ಪ್ರಾಯಶ್ಚಿತ್ತ” ಎಂದು ನಾರದರು ಹೇಳಲು ಸಂತೋಷದಿಂದ ನಾರದರ ದಿವ್ಯವಾದ ಉಪದೇಶಕ್ಕೆ ತಮ್ಮಂದಿರೊಡಗೂಡಿ ಸತ್ತ್ವ ಹೃದಯನು ತಮ್ಮ ಅನುಗ್ರಹವೆಂದು ಹೇಳಿದನು.
ಪದಾರ್ಥ (ಕ.ಗ.ಪ)
ನಿಷ್ಕೃತಿ-ಪ್ರಾಯಶ್ಚಿತ್ತ
ಮೂಲ ...{Loading}...
ಆರು ಕಂಡರು ಆತನೊಬ್ಬನೆ
ಧಾರುಣಿಯಲಿ ಸುತೀರ್ಥ ಯಾತ್ರಾ
ಭಾರದಲಿ ತಿರುಗುವುದು ಸುತ್ತಲು ವರುಷವೊಂದರಲಿ
ಚಾರು ನಿಷ್ಕೃತಿಯೆನಲು ಮುದದಲಿ
ನಾರದರ ದಿವ್ಯೋಪದೇಶಕೆ
ಸಾರಹೃದಯ ಹಸಾದವೆಂದನು ತಮ್ಮದಿರು ಸಹಿತ ॥33॥
೦೩೪ ಮಙ್ಗಳವು ನಿಮಗೆನ್ದು ...{Loading}...
ಮಂಗಳವು ನಿಮಗೆಂದು ಹಂಸೆಯ
ಬೆಂಗೆ ಹಾಯ್ದನು ಬಳಿಕ ನಭದೊಳ
ಭಂಗ ಮುನಿಯಡಗಿದನು ತಮ್ಮೊಳಗೆಂದರೀ ನೃಪರು
ಅಂಗನಾ ವಿಷಯದಲಿ ಸೀಮಾ
ಸಂಗತಿಯ ಸೇರಿಸಿದನೈ ಮುನಿ
ಪುಂಗವನ ಕರುಣದಲಿ ಗದುಗಿನ ವೀರನಾರಯಣ ॥34॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಶುಭವಾಗಲಿ ನಿಮಗೆ ಎಂದು ಹರಸಿ ನಾರದ ಮುನಿಯು ಹಂಸೆಯ ಬೆನ್ನಿಗೆ ಏರಿದನು. ನಂತರ, ಆಕಾಶದಲ್ಲಿ, ಸೋಲಿಲ್ಲದ ಮುನಿ ಮರೆಯಾದನು. ಈ ನೃಪರು ತಮ್ಮೊಳಗೆ “ಮುನಿಶ್ರೇಷ್ಠನು ಗದುಗಿನ ವೀರನಾರಾಯಣನ ಕರುಣೆಯಿಂದ ಅಂಗನೆ ದ್ರೌಪದಿಯ ವಿಷಯದಲ್ಲಿ ಒಂದು ವ್ಯವಸ್ಥೆಯನ್ನು ಸೂಚಿಸಿದನು " ಎಂದು ಮಾತಾಡಿಕೊಂಡರು.
ಪದಾರ್ಥ (ಕ.ಗ.ಪ)
ಮಂಗಳ-ಶುಭ, ನಭ-ಆಕಾಶ, ಪುಂಗವ-ಶ್ರೇಷ್ಠ, ಸೀಮೆ-ಪರಿಮಿತಿ, ಸೇರಿಸು-ಹೊಂದಿಸು.
ಮೂಲ ...{Loading}...
ಮಂಗಳವು ನಿಮಗೆಂದು ಹಂಸೆಯ
ಬೆಂಗೆ ಹಾಯ್ದನು ಬಳಿಕ ನಭದೊಳ
ಭಂಗ ಮುನಿಯಡಗಿದನು ತಮ್ಮೊಳಗೆಂದರೀ ನೃಪರು
ಅಂಗನಾ ವಿಷಯದಲಿ ಸೀಮಾ
ಸಂಗತಿಯ ಸೇರಿಸಿದನೈ ಮುನಿ
ಪುಂಗವನ ಕರುಣದಲಿ ಗದುಗಿನ ವೀರನಾರಯಣ ॥34॥