೦೦೦ ಸೂ ಧಾಳಿಯಲಿ ...{Loading}...
ಸೂ. ಧಾಳಿಯಲಿ ಬಂದರಿಬಲದ ಹೆ
ಚ್ಚಾಳುತನವನು ಮುರಿದು ಸಂಧಿಯ
ಮೇಲೆ ಧರ್ಮಜ ಬಂದು ಹೊಕ್ಕನು ಹಸ್ತಿನಾಪುರವ
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
ಸೂಚನೆ : ಆಕ್ರಮಣದಲ್ಲಿ ಬಂದ ಶತ್ರು ಸೈನ್ಯದ ಗರ್ವವನ್ನು ಮುರಿದು ಸಂಧಿಯಾದ ಮೇಲೆ ಧರ್ಮರಾಜನು ಹಸ್ತಿನಾಪುರಕ್ಕೆ ಬಂದು ಸೇರಿದನು.
ಪದಾರ್ಥ (ಕ.ಗ.ಪ)
ಧಾಳಿ-ಆಕ್ರಮಣ, ಹೆಚ್ಚಾಳುತನ-ಗರ್ವ
ಮೂಲ ...{Loading}...
ಸೂ. ಧಾಳಿಯಲಿ ಬಂದರಿಬಲದ ಹೆ
ಚ್ಚಾಳುತನವನು ಮುರಿದು ಸಂಧಿಯ
ಮೇಲೆ ಧರ್ಮಜ ಬಂದು ಹೊಕ್ಕನು ಹಸ್ತಿನಾಪುರವ
೦೦೧ ಕೇಳು ಜನಮೇಜಯ ...{Loading}...
ಕೇಳು ಜನಮೇಜಯ ನೃಪತಿ ಪಾಂ
ಚಾಲಸುತೆಯ ವಿವಾಹ ವಾರ್ತೆಯ
ಕೇಳಿದರಲೈ ಕೌರವರು ಮರುಗಿದರು ಮರುಕೊಳಿಸಿ
ಆಳ ನೆರಹಿದನಖಿಳದಳ ದೆ
ಖ್ಖಾಳವನು ನೋಡಿದರು ಭೂಮೀ
ಪಾಲ ಸಂಕುಲ ಸಹಿತ ಬಂದರು ದ್ರುಪದ ಪುರಿಗಾಗಿ ॥1॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಪಾಂಚಾಲನಮಗಳ ಮದುವೆಯ ಸಮಾಚಾರವನ್ನು ಕೌರವರು ಕೇಳಿದರು ಮತ್ತೆ ದುಃಖಿಸಿದರು ಮತ್ತೆ ಹೊರಡಲು, ಸೈನ್ಯವನ್ನು ಸೇರಿಸಿದರು. ಎಲ್ಲ ಸೈನ್ಯದ ವೈಭವವನ್ನು ನೋಡಿದರು. ಭೂಮೀಪಾಲ ಸಮೂಹದೊಂದಿಗೆ ದ್ರುಪದನ ಪಟ್ಟಣಕ್ಕೆ ಬಂದರು.
ಪದಾರ್ಥ (ಕ.ಗ.ಪ)
ವಾರ್ತೆ-ಸಮಾಚಾರ, ದೆಖ್ಖಾಳ-ವೈಭವ, ಸಂಕುಲ-ಸಮೂಹ
ಮೂಲ ...{Loading}...
ಕೇಳು ಜನಮೇಜಯ ನೃಪತಿ ಪಾಂ
ಚಾಲಸುತೆಯ ವಿವಾಹ ವಾರ್ತೆಯ
ಕೇಳಿದರಲೈ ಕೌರವರು ಮರುಗಿದರು ಮರುಕೊಳಿಸಿ
ಆಳ ನೆರಹಿದನಖಿಳದಳ ದೆ
ಖ್ಖಾಳವನು ನೋಡಿದರು ಭೂಮೀ
ಪಾಲ ಸಂಕುಲ ಸಹಿತ ಬಂದರು ದ್ರುಪದ ಪುರಿಗಾಗಿ ॥1॥
೦೦೨ ಏನ ಹೇಳುವೆ ...{Loading}...
ಏನ ಹೇಳುವೆ ನಿನ್ನವರ ಜಯ
ಮಾನವನು ಮತ್ತೊಂದು ಪೈಕದ
ಮಾನಭಂಗಸ್ಥಿತಿಯನೆಲೆ ಜನಮೇಜಯಕ್ಷಿತಿಪ
ಭಾನುವಿನ ಮಂಜಿನ ಶಿಲೋಚ್ಚಯ
ಸಾನುವಿನ ವಜ್ರದ ತರಕ್ಷುವ
ಧೇನುವಿನ ಹೋರಟೆಯ ಹವಣದು ಭೂಪ ಕೇಳ್ ಎಂದ ॥2॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಪಾಂಡವರ ಗೆಲುವಿನ ಘನತೆಯನ್ನು ಮತ್ತೊಂದು ಗುಂಪಿನ ಮಾನಭಂಗ ಸ್ಥಿತಿಯನ್ನು ಏನೆಂದು ವರ್ಣಿಸುವುದು ! ಸೂರ್ಯನಿಗೂ ಮಂಜಿಗೂ, ಪರ್ವತ ಶಿಖರಕ್ಕೂ ವಜ್ರಕ್ಕೂ, ಹುಲಿಗೂ ಹಸುವಿಗೂ, ನಡೆಯುವ ಹೋರಾಟದ ರೀತಿಯದು.
ಪದಾರ್ಥ (ಕ.ಗ.ಪ)
ಮಾನ-ಘನತೆ, ಪೈಕ-ಗುಂಪು, ಶಿಲೋಚ್ಛಯ-ಕಲ್ಲುಗಳಿಂದ ಕೂಡಿದುದು, ಪರ್ವತ,
ಸಾನು-ಶಿಖರ, ತರಕ್ಷು-ಹುಲಿ
ಮೂಲ ...{Loading}...
ಏನ ಹೇಳುವೆ ನಿನ್ನವರ ಜಯ
ಮಾನವನು ಮತ್ತೊಂದು ಪೈಕದ
ಮಾನಭಂಗಸ್ಥಿತಿಯನೆಲೆ ಜನಮೇಜಯಕ್ಷಿತಿಪ
ಭಾನುವಿನ ಮಂಜಿನ ಶಿಲೋಚ್ಚಯ
ಸಾನುವಿನ ವಜ್ರದ ತರಕ್ಷುವ
ಧೇನುವಿನ ಹೋರಟೆಯ ಹವಣದು ಭೂಪ ಕೇಳೆಂದ ॥2॥
೦೦೩ ಮುರಿದುದಾ ಹೆಬ್ಬಲ ...{Loading}...
ಮುರಿದುದಾ ಹೆಬ್ಬಲ ವಿಘಾತಿಯ
ಲೊರಗಿದರು ಪಟುಭಟರು ಗಜ ಹಯ
ದೊರತೆ ಬತ್ತಿತು ಭೀಮ ಪಾರ್ಥರ ಶರ ನಿದಾಘದಲಿ
ಉರುಕುಗೊಂಡರು ನಿಚ್ಚಟರು ಕೈ
ಮೆರೆದುದಾಚೆಯ ದೊರೆಗಳಿವದಿರು
ನೆರೆ ವಿಭಾಡಿಸೆ ತೆಗೆದು ಹಾಯ್ದರು ಹಸ್ತಿನಾಪುರಕೆ ॥3॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಭೀಮಾರ್ಜುನರ ಬಾಣಗಳ ಬೇಗೆಯಲ್ಲಿ ಕೌರವರು ಸೇರಿಸಿಕೊಂಡು ಬಂದ ದೊಡ್ಡ ಪಡೆ ಹಿಂತಿರುಗಿತು. ಸಮರ್ಥರಾದ ಯೋಧರು ಹೊಡೆತದಿಂದ ಮಲಗಿದರು. ಆನೆ ಕುದುರೆಗಳ ಒರತೆ ಬತ್ತಿಹೋಯಿತು. ದೃಢಮನಸ್ಕರು ಕೂಡ ಭಯಗೊಂಡರು. ಆ ಕಡೆಯ ದೊರೆಗಳ ಕೈ ಮೇಲಾಗಿ ಕೀರ್ತಿಗೊಂಡರು. ಇವರುಗಳು ಪರಾಜಯಗೊಳ್ಳಲು ಕೌರವರು ಹಿಂದಿರುಗಿ ಹಸ್ತಿನಾಪುರಕ್ಕೆ ಸರಿದುಹೋದರು.
ಪದಾರ್ಥ (ಕ.ಗ.ಪ)
ವಿಘಾತಿ-ಹೊಡೆತ, ಪಟುಭಟರು-ಸಮರ್ಥರಾದ ಯೋಧರು, ನಿದಾಘ-ಬೇಗೆ, ನಿಚ್ಚಟರು-ದೃಢಮನಸ್ಕರು, ಉರುಕು-ಭಯಗೊಳ್, ವಿಭಾಡಿಸು-ಪರಾಜಯಗೊಳ್ಳು
ಮೂಲ ...{Loading}...
ಮುರಿದುದಾ ಹೆಬ್ಬಲ ವಿಘಾತಿಯ
ಲೊರಗಿದರು ಪಟುಭಟರು ಗಜ ಹಯ
ದೊರತೆ ಬತ್ತಿತು ಭೀಮ ಪಾರ್ಥರ ಶರ ನಿದಾಘದಲಿ
ಉರುಕುಗೊಂಡರು ನಿಚ್ಚಟರು ಕೈ
ಮೆರೆದುದಾಚೆಯ ದೊರೆಗಳಿವದಿರು
ನೆರೆ ವಿಭಾಡಿಸೆ ತೆಗೆದು ಹಾಯ್ದರು ಹಸ್ತಿನಾಪುರಕೆ ॥3॥
೦೦೪ ಬಳಿಕ ಪಾಞ್ಚಾಲಕನ ...{Loading}...
ಬಳಿಕ ಪಾಂಚಾಲಕನ ಭೀತಿಯ
ಮೊಳಕೆಯುರಿದುದು ಹರಿದುದುತ್ಸವ
ಜಲಧಿ ವಳಯದ ಭೂತಳಾಗ್ರದ ಭೂತಳೇಂದ್ರರಲಿ
ಹೊಳೆಹೊಳೆವ ರವಿ ರಶ್ಮಿಗಳ್ಪ್ರ
ಜ್ವಲಿಸುವಂತಿರೆ ಪಾಂಡುನಂದನ
ರಳವಿನುಬ್ಬಟೆ ಬಿಸಿಲು ನೆರೆ ಪಸರಿಸಿತು ದೆಸೆದೆಸೆಗೆ ॥4॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಬಳಿಕ ಪಾಂಚಾಲರಾಜನ ಹೆದರಿಕೆಯ ಮೊಳಕೆ ಉರಿದು ಹೋಯಿತು. ಸಮುದ್ರ ವಲಯದಲ್ಲಿರುವ ಭೂಮಂಡಲದ ಭೂಪಾಲಕರಲ್ಲಿ ಸಂಭ್ರಮ ಉಕ್ಕಿ ಹರಿಯಿತು. ಹೊಳೆ ಹೊಳೆಯುವ ಸೂರ್ಯನ ಕಿರಣಗಳು ಕಾಂತಿಗೊಳ್ಳುವಂತೆ ಪಾಂಡುನಂದನರ ಪರಾಕ್ರಮದ ಬಿಸಿಲು ದಿಕ್ಕು ದಿಕ್ಕಿಗೆ ಹರಡಿತು.
ಪದಾರ್ಥ (ಕ.ಗ.ಪ)
ಉತ್ಸವ-ಸಂಭ್ರಮ, ಪ್ರಜ್ವಲಿಸು-ಕಾಂತಿಗೊಳ್ಳು, ಉಬ್ಬಟೆ-ಪರಾಕ್ರಮ
ಮೂಲ ...{Loading}...
ಬಳಿಕ ಪಾಂಚಾಲಕನ ಭೀತಿಯ
ಮೊಳಕೆಯುರಿದುದು ಹರಿದುದುತ್ಸವ
ಜಲಧಿ ವಳಯದ ಭೂತಳಾಗ್ರದ ಭೂತಳೇಂದ್ರರಲಿ
ಹೊಳೆಹೊಳೆವ ರವಿ ರಶ್ಮಿಗಳ್ಪ್ರ
ಜ್ವಲಿಸುವಂತಿರೆ ಪಾಂಡುನಂದನ
ರಳವಿನುಬ್ಬಟೆ ಬಿಸಿಲು ನೆರೆ ಪಸರಿಸಿತು ದೆಸೆದೆಸೆಗೆ ॥4॥
೦೦೫ ಬನ್ದನಲ್ಲಿಗೆ ಸಕಲ ...{Loading}...
ಬಂದನಲ್ಲಿಗೆ ಸಕಲ ಯಾದವ
ವೃಂದ ಸಹಿತ ಮುರಾರಿ ಕುಂತೀ
ನಂದನರು ಬರಲಿದಿರುಗಾಣಿಸಿಕೊಂಡನುಚಿತದಲಿ
ತಂದ ಬಹುವಿಧ ವಸ್ತುಕಾರವ
ನಂದು ಕೊಟ್ಟನು ಗಜ ರಥಾಶ್ವವ
ನಿಂದುವದನೆಯರಿಗೆ ವಿಚಿತ್ರಾಂಬರ ವಿಭೂಷಣವ ॥5॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಸಕಲ ಯಾದವ ವೃಂದ ಸಮೇತನಾಗಿ ಕೃಷ್ಣನು ಅಲ್ಲಿಗೆ ಬಂದನು. ಕುಂತಿಯ ಮಕ್ಕಳು ಎದುರಿಗೆ ಬರಲು ಉಚಿತ ರೀತಿಯಿಂದ ಕಾಣಿಸಿಕೊಂಡನು. ತಾನು ತಂದ ಆನೆ, ಕುದುರೆ ರಥಗಳೇ ಮೊದಲಾದ ಬಹುವಿಧ ವಸ್ತುಗಳನ್ನು, ಚಂದ್ರಮುಖಿಯರಿಗೆ ವಿಚಿತ್ರ ವಸ್ತ್ರ, ಆಭರಣಗಳನ್ನು ಕೊಟ್ಟು ಸನ್ಮಾನಿಸಿದನು.
ಪದಾರ್ಥ (ಕ.ಗ.ಪ)
ಮುರಾರಿ-ಕೃಷ್ಣ (ಮುರ ಎಂಬ ರಾಕ್ಷಸನ ಶತ್ರು)
ಮೂಲ ...{Loading}...
ಬಂದನಲ್ಲಿಗೆ ಸಕಲ ಯಾದವ
ವೃಂದ ಸಹಿತ ಮುರಾರಿ ಕುಂತೀ
ನಂದನರು ಬರಲಿದಿರುಗಾಣಿಸಿಕೊಂಡನುಚಿತದಲಿ
ತಂದ ಬಹುವಿಧ ವಸ್ತುಕಾರವ
ನಂದು ಕೊಟ್ಟನು ಗಜ ರಥಾಶ್ವವ
ನಿಂದುವದನೆಯರಿಗೆ ವಿಚಿತ್ರಾಂಬರ ವಿಭೂಷಣವ ॥5॥
೦೦೬ ಮಗನೆ ಧರ್ಮಜ ...{Loading}...
ಮಗನೆ ಧರ್ಮಜ ಕೇಳು ಭೀಮಾ
ದಿಗಳೆ ಹರಿಯೆಮ್ಮಣ್ಣ ದೇವನ
ಮಗನು ಸೋದರ ಮಾವನೀತನು ನಿಮಗೆ ವಸುದೇವ
ವಿಗಡರೀ ಯಾದವ ನೃಪರು ಬಂ
ಧುಗಳು ನಿಮಗೆಂದೈವರನು ಕೈ
ನೆಗಹಿ ಕಮಲೋದರನ ಕೈಯಲಿ ಕೊಟ್ಟಳಾ ಕುಂತಿ ॥6॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಮಗನೇ ಧರ್ಮಜಾ ಕೇಳು, ಭೀಮಾದಿಗಳೇ ಕೇಳಿ, ಈ ಕೃಷ್ಣ ನಮ್ಮ ಅಣ್ಣ ವಸುದೇವನ ಮಗ. ವಸುದೇವ ನಿಮಗೆ ಸೋದರ ಮಾವ. ಪರಾಕ್ರಮಿಗಳಾದ ಈ ಯಾದವ ನೃಪರು ನಿಮಗೆ ಬಂಧುಗಳು” ಎಂದು ಪರಿಚಯ ಹೇಳಿ ಕುಂತಿಯು ಐವರನ್ನು ಕೈಹಿಡಿದೆತ್ತಿ ಕಮಲನಾಭನ ಕೈಯಲ್ಲಿ ಕೊಟ್ಟಳು.
ಪದಾರ್ಥ (ಕ.ಗ.ಪ)
ಹರಿ-ಕೃಷ್ಣ, ವಿಗಡ-ಪರಾಕ್ರಮಿ
ಮೂಲ ...{Loading}...
ಮಗನೆ ಧರ್ಮಜ ಕೇಳು ಭೀಮಾ
ದಿಗಳೆ ಹರಿಯೆಮ್ಮಣ್ಣ ದೇವನ
ಮಗನು ಸೋದರ ಮಾವನೀತನು ನಿಮಗೆ ವಸುದೇವ
ವಿಗಡರೀ ಯಾದವ ನೃಪರು ಬಂ
ಧುಗಳು ನಿಮಗೆಂದೈವರನು ಕೈ
ನೆಗಹಿ ಕಮಲೋದರನ ಕೈಯಲಿ ಕೊಟ್ಟಳಾ ಕುಂತಿ ॥6॥
೦೦೭ ವನದೊಳಪಗತನಾದನಿವರ ಯ್ಯನು ...{Loading}...
ವನದೊಳಪಗತನಾದನಿವರ
ಯ್ಯನು ಕುಮಾರರ ಬಾಲ್ಯಕಾಲದೊ
ಳೆನಗೆ ರಕ್ಷಾಭಾರ ಬಿದ್ದುದು ಪತಿ ಪರೋಕ್ಷದಲಿ
ಇನಿಬರನು ಗಜಪುರಿಗೆ ಕೊಂಡೊ
ಯ್ದೆನು ಸುಯೋಧನನಿಂದ ವೈರವು
ಜನಿತವಾಯಿತು ಬಳಿಕ ಲಾಕ್ಷಾಭವನ ದಹನದಲಿ ॥7॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಕುಮಾರರ ಬಾಲ್ಯಕಾಲದಲ್ಲೇ ಇವರ ತಂದೆಯು ತೀರಿಹೋದನು. ಗಂಡ ಇಲ್ಲದಿರುವಾಗ ಇವರನ್ನು ಕಾಪಾಡುವ ಹೊಣೆಗಾರಿಕೆ ನನ್ನ ಮೇಲೆ ಬಿದ್ದಿತು. ಇಷ್ಟು ಜನರನ್ನು ಹಸ್ತಿನಾಪುರಕ್ಕೆ ಕರೆದುಕೊಂಡು ಹೋದೆನು. ಅಲ್ಲಿ ಇವರಿಗೆ ಸುಯೋಧನನಿಂದ ವೈರವು ಹುಟ್ಟಿತು. ನಂತರ ಅರಗಿನಮನೆಯನ್ನು ಸುಡುವುದರಲ್ಲಿ ಕೊನೆಗೊಂಡಿತು” ಎಂದು ಕುಂತಿಯು ಕೃಷ್ಣನಿಗೆ ಹೇಳಿದಳು.
ಪದಾರ್ಥ (ಕ.ಗ.ಪ)
ಅಪಗತ-ತೀರಿಹೋದ, ಭಾರ-ಹೊಣೆಗಾರಿಕೆ, ಲಾಕ್ಷಾ ಭವನ-ಅರಗಿನ ಮನೆ, ಪರೋಕ್ಷ-ಇಲ್ಲದಿರುವಾಗ
ಮೂಲ ...{Loading}...
ವನದೊಳಪಗತನಾದನಿವರ
ಯ್ಯನು ಕುಮಾರರ ಬಾಲ್ಯಕಾಲದೊ
ಳೆನಗೆ ರಕ್ಷಾಭಾರ ಬಿದ್ದುದು ಪತಿ ಪರೋಕ್ಷದಲಿ
ಇನಿಬರನು ಗಜಪುರಿಗೆ ಕೊಂಡೊ
ಯ್ದೆನು ಸುಯೋಧನನಿಂದ ವೈರವು
ಜನಿತವಾಯಿತು ಬಳಿಕ ಲಾಕ್ಷಾಭವನ ದಹನದಲಿ ॥7॥
೦೦೮ ಉರಿಯೊಳುಳಿದೆವು ನಿಮ್ಮ ...{Loading}...
ಉರಿಯೊಳುಳಿದೆವು ನಿಮ್ಮ ಚರಣ
ಸ್ಮರಣ ಬಲದಲಿ ಬಹಳ ವಿಪಿನಾಂ
ತರದೊಳಗೆ ತೊಳಲಿದೆವು ಹೊರೆದೆವು ಸಾಯದೊಡಲುಗಳ
ಬರಬರಲು ತತ್ಸರ್ವ ದುಃಖೋ
ತ್ತರ ನಿವಾರಣ ದ್ರುಪದಕನ್ಯಾ
ವರಣ ನಿನ್ನೀಯಂಘ್ರಿ ದರುಶನವೆಂದಳಾ ಕುಂತಿ ॥8॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ನಿಮ್ಮ ಚರಣ ಸ್ಮರಣೆಯ ಬಲದಿಂದ ಅರಗಿನ ಮನೆಯ ಉರಿಗೆ ಸಿಕ್ಕದೆ ಉಳಿದುಕೊಂಡೆವು. ಕಾಡಿನ ಮಧ್ಯಭಾಗದಲ್ಲಿ ಅಲೆದಾಡಿದವು. ಹೇಗೋ ಸಾಯದೆ ಈ ಶರೀರಗಳನ್ನು ಕಾಪಾಡಿಕೊಂಡೆವು. ಹೀಗಿರುತ್ತಿರಲು, ಅಧಿಕವಾದ ದುಃಖವನ್ನು ಹೋಗಲಾಡಿಸುವ ಸಲುವಾಗಿ ದ್ರುಪದ ಕನ್ಯಾವಿವಾಹವೂ, ನಿನ್ನ ಈ ಪಾದಗಳ ದರ್ಶನವೂ ಉಂಟಾಯಿತು. ಎಂದು ಕೃಷ್ಣನಿಗೆ ಕುಂತಿಯು ತಿಳಿಸಿದಳು.
ಪದಾರ್ಥ (ಕ.ಗ.ಪ)
ವಿಪಿನಾಂತರ-ಕಾಡಿನ ಮಧ್ಯಭಾಗ, ತೊಳಲು-ಅಲೆದಾಡು
ಮೂಲ ...{Loading}...
ಉರಿಯೊಳುಳಿದೆವು ನಿಮ್ಮ ಚರಣ
ಸ್ಮರಣ ಬಲದಲಿ ಬಹಳ ವಿಪಿನಾಂ
ತರದೊಳಗೆ ತೊಳಲಿದೆವು ಹೊರೆದೆವು ಸಾಯದೊಡಲುಗಳ
ಬರಬರಲು ತತ್ಸರ್ವ ದುಃಖೋ
ತ್ತರ ನಿವಾರಣ ದ್ರುಪದಕನ್ಯಾ
ವರಣ ನಿನ್ನೀಯಂಘ್ರಿ ದರುಶನವೆಂದಳಾ ಕುಂತಿ ॥8॥
೦೦೯ ದೇವಿ ಚಿತ್ತವಿಸೋಪಚಾರಕ ...{Loading}...
ದೇವಿ ಚಿತ್ತವಿಸೋಪಚಾರಕ
ಭಾವವೇ ಧರ್ಮಜನು ಭೀಮನು
ಭಾವನವರು ಧನಂಜಯಾದಿಗಳೆಮಗೆ ಮೈದುನರು
ಈವುಪಾಧಿ ಸ್ಥಳದೊಳಂತ
ರ್ಜೀವನ ಪ್ರಾಣಾದಿ ವಾಯುಗ
ಳಾವು ನಿಮ್ಮೈವರಿಗೆ ಕಾರಣವೆಂದನಸುರಾರಿ ॥9॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕುಂತಿಯ ಮಾತಿಗೆ ಕೃಷ್ಣನು “ದೇವೀ, ಮನಸ್ಸಿಗೆ ತಂದುಕೋ, ಈ ಔಪಚಾರಿಕ ಭಾವವೇಕೆ ? ಧರ್ಮಜನೂ, ಭೀಮನೂ ಭಾವನವರು ನನಗೆ, ಧನಂಜಯಾದಿಗಳು ಮೈದುನರು. ಈ ಉಪಾಧಿಯಾದ ಶರೀರದಲ್ಲಿ ನಿಮ್ಮೈವರಿಗೂ ಅಂತರ್ಜೀವನದ ಪ್ರಾಣಾದಿವಾಯುಗಳು ನಾವು” ಎಂದು ಹೇಳಿದನು.
ಪದಾರ್ಥ (ಕ.ಗ.ಪ)
ಚಿತ್ತೈಸು-ಮನಸ್ಸಿಗೆ ತಂದುಕೋ, ಅಸುರಾರಿ-ಕೃಷ್ಣ (ರಾಕ್ಷಸರಿಗೆ ಶತ್ರು)
ಮೂಲ ...{Loading}...
ದೇವಿ ಚಿತ್ತವಿಸೋಪಚಾರಕ
ಭಾವವೇ ಧರ್ಮಜನು ಭೀಮನು
ಭಾವನವರು ಧನಂಜಯಾದಿಗಳೆಮಗೆ ಮೈದುನರು
ಈವುಪಾಧಿ ಸ್ಥಳದೊಳಂತ
ರ್ಜೀವನ ಪ್ರಾಣಾದಿ ವಾಯುಗ
ಳಾವು ನಿಮ್ಮೈವರಿಗೆ ಕಾರಣವೆಂದನಸುರಾರಿ ॥9॥
೦೧೦ ದ್ರುಪದ ಗುಡಿಗಟ್ಟಿದನು ...{Loading}...
ದ್ರುಪದ ಗುಡಿಗಟ್ಟಿದನು ಕುಂತಿಯ
ವಿಪುಳ ಹರುಷವನೇನನೆಂಬೆನು
ದ್ರುಪದ ಯದು ಪರಿವಾರವುಲಿದುದು ಜಲದಿ ಘೋಷದಲಿ
ಅಪದೆಸೆಯ ಮುಗಿಲೊಡೆದು ಹೊಳೆಹೊಳೆ
ದುಪರಿಚರ ರವಿಯಂತೆ ತತ್ಕ್ಷಣ
ವಿಪುಳ ತೇಜಃಪುಂಜರೆಸೆದರು ಪಾಂಡು ನಂದನರು ॥10॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕೃಷ್ಣನ ಮಾತು ಕೇಳಿ ದ್ರುಪದನು ಸಂತೋಷಗೊಂಡನು. ಕುಂತಿಯ ಹೆಚ್ಚಾದ ಹರುಷವನ್ನು ಏನೆಂದು ವರ್ಣಿಸುವುದು ? ದ್ರುಪದ ಮತ್ತು ಯಾದವರ ಪರಿವಾರಗಳು ಸಮುದ್ರ ಘೋಷದಲ್ಲಿ ಧ್ವನಿ ಮಾಡಿದುವು. ದುರ್ದಶೆಯ ಮೋಡವನ್ನು ಸೀಳಿ ಹೊಳೆ ಹೊಳೆದು ಮೇಲೆ ಚಲಿಸುವ ಸೂರ್ಯನಂತೆ ಆ ಕ್ಷಣದಲ್ಲಿ ಪಾಂಡುವಿನ ಮಕ್ಕಳು ಬಹಳ ತೇಜೋರಾಶಿಯಲ್ಲಿ ಶೋಭಿಸಿದರು.
ಪದಾರ್ಥ (ಕ.ಗ.ಪ)
ಗುಡಿಗಟ್ಟು-ಸಂತೋಷಗೊಳ್ಳು, ವಿಪುಳ-ಬಹಳ, ಅಪದೆಸೆ-ದುರ್ದಶೆ, ಮುಗಿಲು-ಮೋಡ, ಒಡೆ-ಸೀಳಿ, ಉಪರಿಚರ-ಮೇಲೆ ಚಲಿಸುವ, ಎಸೆ-ಶೋಭಿಸು
ಮೂಲ ...{Loading}...
ದ್ರುಪದ ಗುಡಿಗಟ್ಟಿದನು ಕುಂತಿಯ
ವಿಪುಳ ಹರುಷವನೇನನೆಂಬೆನು
ದ್ರುಪದ ಯದು ಪರಿವಾರವುಲಿದುದು ಜಲದಿ ಘೋಷದಲಿ
ಅಪದೆಸೆಯ ಮುಗಿಲೊಡೆದು ಹೊಳೆಹೊಳೆ
ದುಪರಿಚರ ರವಿಯಂತೆ ತತ್ಕ್ಷಣ
ವಿಪುಳ ತೇಜಃಪುಂಜರೆಸೆದರು ಪಾಂಡು ನಂದನರು ॥10॥
೦೧೧ ಇದಿರೊಳವನಿಪ ಭೀಮನೆಡವಂ ...{Loading}...
ಇದಿರೊಳವನಿಪ ಭೀಮನೆಡವಂ
ಕದಲಿ ಮಾದ್ರೀಸುತರು ಬಲವಂ
ಕದಲಿ ದೇವಕಿ ಕುಂತಿ ವಸುದೇವಾದಿ ಯದುನಿಕರ
ಮುದದಿಯೈವರ ರಮಣಿ ಬಲವಂ
ಕದಲಿ ಕರುಣಾಳುವಿನ ವಾಮಾಂ
ಕದಲಿ ಫಲುಗುಣನೊಪ್ಪೆ ಮೆರೆದನು ದಾನವಧ್ವಂಸಿ ॥11॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಎದುರುಗಡೆ ಮಹಾರಾಜ, ಭೀಮನು ಎಡಪಕ್ಕದಲ್ಲಿ, ಮಾದ್ರೀಸುತರು, ದೇವಕಿ, ಕುಂತಿ ವಸುದೇವನೇ ಮೊದಲಾದ ಯಾದವಸಮೂಹ ಮತ್ತು ಪಾಂಡವರೈವರ ಪತ್ನಿ ದ್ರೌಪದಿಯು ಸಂತೋಷದಲ್ಲಿ ಬಲಪಕ್ಕದಲ್ಲಿಯೂ, ಫಲುಗುಣನು ಕರುಣಾಳುವಿನ ಎಡಪಕ್ಕದಲ್ಲಿಯೂ, ಹೀಗೆ ಕಾಣಿಸುತ್ತಿರಲು ಕೃಷ್ಣನು ಪ್ರಕಾಶಿಸುತ್ತಿದ್ದನು.
ಪದಾರ್ಥ (ಕ.ಗ.ಪ)
ವಾಮಾಂಕ-ಎಡಪಕ್ಕ, ರಮಣಿ-ಪತ್ನಿ, ಒಪ್ಪು-ಕಾಣಿಸು, ದಾನವ ಧ್ವಂಸಿ-ಕೃಷ್ಣ (ದಾನವರನ್ನು ನಾಶಮಾಡುವವನು)
ಮೂಲ ...{Loading}...
ಇದಿರೊಳವನಿಪ ಭೀಮನೆಡವಂ
ಕದಲಿ ಮಾದ್ರೀಸುತರು ಬಲವಂ
ಕದಲಿ ದೇವಕಿ ಕುಂತಿ ವಸುದೇವಾದಿ ಯದುನಿಕರ
ಮುದದಿಯೈವರ ರಮಣಿ ಬಲವಂ
ಕದಲಿ ಕರುಣಾಳುವಿನ ವಾಮಾಂ
ಕದಲಿ ಫಲುಗುಣನೊಪ್ಪೆ ಮೆರೆದನು ದಾನವಧ್ವಂಸಿ ॥11॥
೦೧೨ ಆವುದೋ ಧರ್ಮಜನ ...{Loading}...
ಆವುದೋ ಧರ್ಮಜನ ಭೀಮನ
ಭಾವಶುದ್ಧಿ ಧನಂಜಯನ ಸುಕೃ
ತಾವಲಂಬನ ಸಾರವೆಂತಂಟೊ ಶಿವ ಮಹಾದೇವ
ಠಾವುಗಾಣವು ವೇದವುಪನಿಷ
ದಾವಳಿಗಳೋಲೈಸಿ ಕೃಷ್ಣ ಕೃ
ಪಾ ವಿಲಾಸವ ನೋಡಿಯೆಂದುದು ಸಕಲ ಸುರನಿಕರ ॥12॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಧರ್ಮಜನ, ಭೀಮನ ಭಾವಶುದ್ಧಿ ಅದೇನೋ ! ಧನಂಜಯನ ಪುಣ್ಯಾಶ್ರಯದ ಸತ್ತ್ವವೆಷ್ಟೋ ! ಶಿವಶಿವ ಮಹಾದೇವ ! ವೇದೋಪನಿಷತ್ತುಗಳು ಓಲೈಸಿದರೂ ಕೃಷ್ಣನ ನೆಲೆಯನ್ನು ಕಾಣವು. ಹಾಗಿರುವಲ್ಲಿ ಕೃಷ್ಣನ ಕೃಪಾವಿಲಾಸವನ್ನು ನೋಡಿ !” ಎಂದು ಎಲ್ಲ ದೇವತೆಗಳ ಸಮೂಹ ಕೊಂಡಾಡಿತು.
ಪದಾರ್ಥ (ಕ.ಗ.ಪ)
ಓಲೈಸು-ಓಲಯಿಸು, ಠಾವು-ನೆಲೆ
ಮೂಲ ...{Loading}...
ಆವುದೋ ಧರ್ಮಜನ ಭೀಮನ
ಭಾವಶುದ್ಧಿ ಧನಂಜಯನ ಸುಕೃ
ತಾವಲಂಬನ ಸಾರವೆಂತಂಟೊ ಶಿವ ಮಹಾದೇವ
ಠಾವುಗಾಣವು ವೇದವುಪನಿಷ
ದಾವಳಿಗಳೋಲೈಸಿ ಕೃಷ್ಣ ಕೃ
ಪಾ ವಿಲಾಸವ ನೋಡಿಯೆಂದುದು ಸಕಲ ಸುರನಿಕರ ॥12॥
೦೧೩ ಅರಸ ಚಿತ್ತೈಸನ್ದಿನೋಲಗ ...{Loading}...
ಅರಸ ಚಿತ್ತೈಸಂದಿನೋಲಗ
ಹರಿದುದಾ ಹರಿಸೇನೆ ಬಿಟ್ಟುದು
ಪುರದ ಬಹಿರುದ್ಯಾನ ವೀಧಿಗಳೊಳಗೆ ಹರಹಿನಲಿ
ಕುರುನೃಪಾಲನ ಗುಪ್ತಚಾರರು
ಅರಿದರೀ ವಾರ್ತೆಯನು ಪುರದಲಿ
ಹರಹಿದರು ನೆರೆ ಕೇಳಿದನು ಧೃತರಾಷ್ಟ್ರನೀ ಹದನ ॥13॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಆ ದಿವಸದ ರಾಜನ ಸಭೆ ಮುಗಿಯಿತು. ಆ ಕೃಷ್ಣನ ಸೈನ್ಯ ಊರ ಹೊರಗಿನ ಕೈತೋಟಗಳ ಬೀದಿಗಳಲ್ಲಿ ವಿಸ್ತಾರವಾಗಿ ಹರಡಿ ಬೀಡು ಬಿಟ್ಟಿತು. ಕುರುರಾಜನ ಗುಪ್ತಚಾರರು ಈ ಸಮಾಚಾರವನ್ನು ತಿಳಿದರು. ಹಸ್ತಿನಾಪುರದಲ್ಲಿ ಇದನ್ನು ಹರಡಿದರು. ಧೃತರಾಷ್ಟ್ರನೂ ಈ ವಿಷಯವನ್ನು ಕೇಳಿದನು.
ಪದಾರ್ಥ (ಕ.ಗ.ಪ)
ಓಲಗ-ರಾಜನಸಭೆ, ಹರಹು-ವಿಸ್ತಾರ, ಹರಹು-ಹರಡು
ಮೂಲ ...{Loading}...
ಅರಸ ಚಿತ್ತೈಸಂದಿನೋಲಗ
ಹರಿದುದಾ ಹರಿಸೇನೆ ಬಿಟ್ಟುದು
ಪುರದ ಬಹಿರುದ್ಯಾನ ವೀಧಿಗಳೊಳಗೆ ಹರಹಿನಲಿ
ಕುರುನೃಪಾಲನ ಗುಪ್ತಚಾರರು
ಅರಿದರೀ ವಾರ್ತೆಯನು ಪುರದಲಿ
ಹರಹಿದರು ನೆರೆ ಕೇಳಿದನು ಧೃತರಾಷ್ಟ್ರನೀ ಹದನ ॥13॥
೦೧೪ ಕರೆಸಿದನು ಗಾಙ್ಗೇಯ ...{Loading}...
ಕರೆಸಿದನು ಗಾಂಗೇಯ ಗೌತಮ
ಗುರು ಸುಯೋಧನ ಶಲ್ಯ ಸೈಂಧವ
ಗುರುತನುಜ ರಾಧೇಯ ವಿದುರ ಕಳಿಂಗ ಸೌಬಲರ
ಚರಮುಖ ಪ್ರತಿಪನ್ನ ಬಂಧುರ
ತರ ವಚೋವಿನ್ಯಾಸ ಕರ್ಣ
ಜ್ವರವೋ ಕರ್ಣಾಮೃತವೊ ಕೇಳಿರೆಯೆಂದನಂಧನೃಪ ॥14॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಭೀಷ್ಮ, ಕೃಪ, ದ್ರೋಣ, ಸುಯೋಧನ, ಶಲ್ಯ, ಸೈಂಧವ, ಅಶ್ವತ್ಥಾಮ, ಕರ್ಣ, ವಿದುರ, ಕಳಿಂಗ, ಸೌಬಲ-ಇವರನ್ನೆಲ್ಲ ಕರೆಸಿಕೊಂಡನು. “ಗೂಢಚಾರರ ಮೂಲಕ ಪಡೆದ ಈ ವಾರ್ತೆ ಕಿವಿಗಳಿಗೆ ಬಿಸಿ ಮಾಡುವಂಥ ಸುದ್ದಿಯೋ? ಅಮೃತವೋ ಕೇಳಿದಿರೋ” ಎಂದು ಕೇಳಿದನು ಧೃತರಾಷ್ಟ್ರ.
ಪದಾರ್ಥ (ಕ.ಗ.ಪ)
ಚರ-ಗೂಢಚಾರ, ಪ್ರತಿಪನ್ನ-ಪಡೆದ, ಬಂಧುರ-ಮನೋಹರವಾದ, ವಚನವಿನ್ಯಾಸ-ಮಾತಿನ ರಚನೆ, ಸೌಬಲ-ಸುಬಲರಾಜನ ಮಗ, (ಶಕುನಿ ಮುಂತಾದವರು)
ಮೂಲ ...{Loading}...
ಕರೆಸಿದನು ಗಾಂಗೇಯ ಗೌತಮ
ಗುರು ಸುಯೋಧನ ಶಲ್ಯ ಸೈಂಧವ
ಗುರುತನುಜ ರಾಧೇಯ ವಿದುರ ಕಳಿಂಗ ಸೌಬಲರ
ಚರಮುಖ ಪ್ರತಿಪನ್ನ ಬಂಧುರ
ತರ ವಚೋವಿನ್ಯಾಸ ಕರ್ಣ
ಜ್ವರವೋ ಕರ್ಣಾಮೃತವೊ ಕೇಳಿರೆಯೆಂದನಂಧನೃಪ ॥14॥
೦೧೫ ಕೇಳಿರೈ ಹೇಳುವೆನು ...{Loading}...
ಕೇಳಿರೈ ಹೇಳುವೆನು ಯಾದವ
ರಾಳು ಬಂದುದು ಗಡ ಜನಾರ್ದನ
ಕೋಳುವೋದನು ಗಡ ಯುಧಿಷ್ಠಿರ ಭೀಮ ಪಾರ್ಥರಿಗೆ
ಗಾಳಿ ಬೆಂಬಲವಾಗಲುರಿಯ ಛ
ಡಾಳವನು ನಿರ್ಣೈಸಬಹುದೆ ವಿ
ತಾಳಿಸಿತಲೈ ನಿಮ್ಮ ಗಾರುಡವೆಂದನಾ ನೃಪತಿ ॥15॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಕೇಳಿರಿ, ಹೇಳುವೆನು. ಯಾದವರ ಸೈನ್ಯ ಬಂದಿತಂತೆ. ಜನಾರ್ದನನು ಯುಧಿಷ್ಠಿರ, ಭೀಮ, ಪಾರ್ಥರಿಗೆ ವಶವಾಗಿ ಬಿಟ್ಟನಂತೆ. ಗಾಳಿಯು ಸಹಾಯವಾದರೆ ಉರಿಯ ಆಧಿಕ್ಯವನ್ನು ನಿರ್ಧರಿಸಬಹುದೆ ? ನಿಮ್ಮ ಉಪಾಯ ತಪ್ಪಿಹೋಯಿತು” ಎಂದನು ಮಹಾರಾಜ.
ಪದಾರ್ಥ (ಕ.ಗ.ಪ)
ಕೋಳುವೋದನು-ವಶವಾದನು, ಛಡಾಳ-ಆಧಿಕ್ಯ, ಗಾರುಡ-ಗರುಡಮಂತ್ರ, ವಿತಾಳಿಸು-ತಪ್ಪಿಹೋಗು
ಮೂಲ ...{Loading}...
ಕೇಳಿರೈ ಹೇಳುವೆನು ಯಾದವ
ರಾಳು ಬಂದುದು ಗಡ ಜನಾರ್ದನ
ಕೋಳುವೋದನು ಗಡ ಯುಧಿಷ್ಠಿರ ಭೀಮ ಪಾರ್ಥರಿಗೆ
ಗಾಳಿ ಬೆಂಬಲವಾಗಲುರಿಯ ಛ
ಡಾಳವನು ನಿರ್ಣೈಸಬಹುದೆ ವಿ
ತಾಳಿಸಿತಲೈ ನಿಮ್ಮ ಗಾರುಡವೆಂದನಾ ನೃಪತಿ ॥15॥
೦೧೬ ಎನಲು ಘರ್ಜಿಸುತರಸ ...{Loading}...
ಎನಲು ಘರ್ಜಿಸುತರಸ ಮುರರಿಪು
ಜಿನುಗಿದರೆ ಗಿರಿ ಜರಿವುದೇ ಯಮ
ತನುಜ ಭೀಮಾರ್ಜುನರು ಹಿಡಿದರೆ ಗಗನವಡಗುವುದೆ
ದನುಜರಿಪುವಿನೊಳೇನಹುದು ಬರ
ಲನಿಮಿಷರು ನೆರವಾಗಿ ರಣದಲಿ
ಜನಪ ನೋಡೆಂದರು ಜಯದ್ರಥ ಸೌಬಲಾದಿಗಳು ॥16॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅದನ್ನು ಕೇಳಿ ಜಯದ್ರಥ ಸೌಬಲಾದಿಗಳು ಗರ್ಜಿಸುತ್ತ “ಅರಸಾ, ಕೃಷ್ಣನು ಮಾತಿನ ಮಳೆಗರೆದರೆ ಬೆಟ್ಟವು ಜಾರಿ ಬೀಳುವುದೇ ? ಯಮಪುತ್ರ, ಭೀಮಾರ್ಜುನರು ಹಿಡಿಯಲು ಹೊರಟರೆ ಆಕಾಶವು ಅವರ ಹಿಡಿಯಲ್ಲಿ ಅಡಗುತ್ತದೆಯೇ ? ಈ ದನುಜರಿಪು ಕೃಷ್ಣನಿಂದ ಏನಾಗುತ್ತದೆ ? ದೇವತೆಗಳೇ ಅವರಿಗೆ ಬೆಂಬಲವಾಗಿ ಬರಲಿ ಯುದ್ಧದಲ್ಲಿ, ನೋಡುವೆಯಂತೆ, ಎಂದು ಮರು ನುಡಿದರು.
ಪದಾರ್ಥ (ಕ.ಗ.ಪ)
ಜಿನುಗು-ಮಾತಿನಮಳೆ (?) ಜರಿ-ಜಾರಿಬೀಳು, ದನುಜರಿಪು-ರಾಕ್ಷಸರ ಶತ್ರು, ಕೃಷ್ಣ, ನೆರವು-ಬೆಂಬಲ
ಮೂಲ ...{Loading}...
ಎನಲು ಘರ್ಜಿಸುತರಸ ಮುರರಿಪು
ಜಿನುಗಿದರೆ ಗಿರಿ ಜರಿವುದೇ ಯಮ
ತನುಜ ಭೀಮಾರ್ಜುನರು ಹಿಡಿದರೆ ಗಗನವಡಗುವುದೆ
ದನುಜರಿಪುವಿನೊಳೇನಹುದು ಬರ
ಲನಿಮಿಷರು ನೆರವಾಗಿ ರಣದಲಿ
ಜನಪ ನೋಡೆಂದರು ಜಯದ್ರಥ ಸೌಬಲಾದಿಗಳು ॥16॥
೦೧೭ ಕೊರತೆಯಲ್ಲಿದು ನಿನ್ನೆ ...{Loading}...
ಕೊರತೆಯಲ್ಲಿದು ನಿನ್ನೆ ನಾವ್ಕಂ
ಡರಿದೆವಿವರತಿಬಲರು ಕೃಷ್ಣನ
ಬರಿ ಸಹಾಯದಲೇನು ಭೀಮಾರ್ಜುನರ ಬಲುಹೇನು
ನೆರವಣಿಗೆಯುಳ್ಳವರಲೈ ಹೊ
ಕ್ಕಿರಿದ ರಣ ಹಸಿಯಾರಿತೇ ನೀ
ವರಿಯಿರೇ ಭೂಪಾಲಯೆಂದನು ನಗುತ ಗಾಂಗೇಯ ॥17॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಆಗ ಭೀಷ್ಮರು ನಗುತ್ತ, “ಇದು ಕೊರತೆಯಲ್ಲ. ನಿನ್ನೆ ನಾವು ನೋಡಿ ತಿಳಿದಿದ್ದೇವೆ. ಅವರು ಅತಿಶಯ ಶಕ್ತಿವಂತರು. ಕೃಷ್ಣನ ಬರಿಯ ಸಹಾಯದಲ್ಲೇನು ? ಭೀಮಾರ್ಜುನರ ಬಲುಮೆಯೇನು ? ಅವರು ಪರಿಪೂರ್ಣರಾದವರು. ಹೊಕ್ಕು ಹೋರಾಡಿದಾಗ ಹೊಡೆಸಿಕೊಂಡ ಯುದ್ಧದ ಹಸಿ ಆರಿ ಹೋಯಿತೆ ?” ಎಂದು ಕೇಳಿದನು.
ಪದಾರ್ಥ (ಕ.ಗ.ಪ)
ಬಲುಹು-ಬಲುಮೆ, ನೆರವಣಿಗೆ-ಪರಿಪೂರ್ಣ
ಮೂಲ ...{Loading}...
ಕೊರತೆಯಲ್ಲಿದು ನಿನ್ನೆ ನಾವ್ಕಂ
ಡರಿದೆವಿವರತಿಬಲರು ಕೃಷ್ಣನ
ಬರಿ ಸಹಾಯದಲೇನು ಭೀಮಾರ್ಜುನರ ಬಲುಹೇನು
ನೆರವಣಿಗೆಯುಳ್ಳವರಲೈ ಹೊ
ಕ್ಕಿರಿದ ರಣ ಹಸಿಯಾರಿತೇ ನೀ
ವರಿಯಿರೇ ಭೂಪಾಲಯೆಂದನು ನಗುತ ಗಾಂಗೇಯ ॥17॥
೦೧೮ ಇವರ ಬಲುಹನ್ತಿರಲಿ ...{Loading}...
ಇವರ ಬಲುಹಂತಿರಲಿ ಸಾಕಿ
ನ್ನವರ ಕರೆಸು ವಿರೋಧ ಬಂಧ
ವ್ಯವಹೃತಿಗೆ ಫಲವಿಲ್ಲ ಮೂಲಚ್ಛೇದ ಕರ್ಮವಿದು
ಅವರು ಮುನ್ನತಿಬಲರು ಕೃಷ್ಣನ
ಹವಣ ನೀನೇ ಬಲ್ಲೆಯಿನ್ನೀ
ಸವಡಿಮಾರಿಯ ಸೋಕು ಲೇಸಲ್ಲೆಂದನಾ ಭೀಷ್ಮ ॥18॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಭೀಷ್ಮನು ಮುಂದುವರೆದು, “ಇವರ ಪರಾಕ್ರಮ ಹಾಗಿರಲಿ ಸಾಕು, ಇನ್ನು ಅವರನ್ನು ಕರೆಸು. ವೈರ ಕಟ್ಟಿಕೊಂಡು ವ್ಯವಹರಿಸುವುದರಲ್ಲಿ ಫಲವಿಲ್ಲ. ಬೇರನ್ನು ಕತ್ತರಿಸುವ ಕೆಲಸ ಇದು. ಅವರು ಮೊದಲೇ ಅತಿಬಲರು. ಕೃಷ್ಣನ ಸಾಮಥ್ರ್ಯವನ್ನು ನೀನೇ ಬಲ್ಲೆ. ಇನ್ನು ಈ ಜೋಡಿ ಮಾರಿಗಳ ( ಪಾಂಡವರು ಕೃಷ್ಣ ಇವರಿಬ್ಬರ) ಸ್ಪರ್ಶವು ಒಳ್ಳೆಯದಲ್ಲ” ಎಂದು ಭೀಷ್ಮ ಹೇಳಿದನು.
ಪದಾರ್ಥ (ಕ.ಗ.ಪ)
ವಿರೋಧ-ವೈರ, ಬಂಧ-ಕಟ್ಟು, ವ್ಯವಹೃತಿ-ವ್ಯವಹಾರ, ಮೂಲ-ಬೇರು, ಹವಣ-ಸಾಮಥ್ರ್ಯ, ಸವಡಿ-ಜೋಡಿ, ಸೋಕು-ಸ್ಪರ್ಶ
ಮೂಲ ...{Loading}...
ಇವರ ಬಲುಹಂತಿರಲಿ ಸಾಕಿ
ನ್ನವರ ಕರೆಸು ವಿರೋಧ ಬಂಧ
ವ್ಯವಹೃತಿಗೆ ಫಲವಿಲ್ಲ ಮೂಲಚ್ಛೇದ ಕರ್ಮವಿದು
ಅವರು ಮುನ್ನತಿಬಲರು ಕೃಷ್ಣನ
ಹವಣ ನೀನೇ ಬಲ್ಲೆಯಿನ್ನೀ
ಸವಡಿಮಾರಿಯ ಸೋಕು ಲೇಸಲ್ಲೆಂದನಾ ಭೀಷ್ಮ ॥18॥
೦೧೯ ಕರೆಸು ವಿದುರನ ...{Loading}...
ಕರೆಸು ವಿದುರನ ಕಳುಹಿ ವಾರಣ
ಪುರದ ರಾಜ್ಯ ವಿಭಾಗವನು ವಿ
ಸ್ತರಿಸಿಕೊಡು ಭಂಡಾರವನು ದಾಯಾದ ಮಾರ್ಗದಲಿ
ನರ ಯುಧಿಷ್ಠಿರ ಭೀಮರನು ನೀ
ಬರಿಸು ಮ್ಮವಗುಣವ ನೋಡದೆ
ಬೆರಸಿ ಕೊಡುವೆವು ಕೂಡಿ ಬದುಕುವುದೆಂದನಾ ಭೀಷ್ಮ ॥19॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ವಿದುರನನ್ನು ಕಳಿಸಿ ಅವರನ್ನು ಕರೆಸಿಕೊ. ದಾಯಾದ ಮಾರ್ಗಕ್ಕನುಸಾರವಾಗಿ ಹಸ್ತಿನಪುರದ ರಾಜ್ಯವನ್ನೂ, ಭಂಡಾರವನ್ನೂ ಹಂಚಿಕೊಡು. ಅರ್ಜುನ, ಯುಧಿಷ್ಠಿರ ಭೀಮರನ್ನು ನೀನು ಬರಮಾಡಿಕೊ, ನಿಮ್ಮ ದೋಷಗಳನ್ನು ನೋಡದೆ ಸೇರಿಸಿ ಕೊಡುತ್ತೇವೆ. ನೀವು ಅವರೂ ಕೂಡಿ ಬದುಕುವುದು” ಎಂದು ಹೇಳಿದನು.
ಪದಾರ್ಥ (ಕ.ಗ.ಪ)
ಅವಗುಣ-ದೋಷ, ಬೆರಸು-ಸೇರಿಸು
ಮೂಲ ...{Loading}...
ಕರೆಸು ವಿದುರನ ಕಳುಹಿ ವಾರಣ
ಪುರದ ರಾಜ್ಯ ವಿಭಾಗವನು ವಿ
ಸ್ತರಿಸಿಕೊಡು ಭಂಡಾರವನು ದಾಯಾದ ಮಾರ್ಗದಲಿ
ನರ ಯುಧಿಷ್ಠಿರ ಭೀಮರನು ನೀ
ಬರಿಸು ಮ್ಮವಗುಣವ ನೋಡದೆ
ಬೆರಸಿ ಕೊಡುವೆವು ಕೂಡಿ ಬದುಕುವುದೆಂದನಾ ಭೀಷ್ಮ ॥19॥
೦೨೦ ಕರೆಸಿಕೊಡಿರೈ ನಿಮ್ಮ ...{Loading}...
ಕರೆಸಿಕೊಡಿರೈ ನಿಮ್ಮ ಚಿತ್ತಕೆ
ಬರಿಸಿ ನಡಸುವೆನೆನ್ನ ಮಕ್ಕಳ
ದುರುಳತನದಿಂದಾದ ಹಿಂದಣ ಮಕ್ಕಳಾಟಿಕೆಯ
ಮರೆದು ಕಳೆಯಲಿ ಪಾಂಡುನಂದನ
ರೆರವಿಗರೆ ಬಾ ವಿದುರ ಭೀಷ್ಮನ
ಪರಮ ಮತವೇ ನನ್ನ ಮತ ಹೋಗೆಂದ ಧೃತರಾಷ್ಟ್ರ ॥20॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಕರೆಸಿಕೊಡಿರಯ್ಯ ನಿಮ್ಮ ಮನಸ್ಸಿಗೆ ಸರಿಬರುವಂತೆ ನಡೆಸುವೆನು. ನನ್ನ ಮಕ್ಕಳ ಕೆಟ್ಟತನದಿಂದಾದ ಹಿಂದಿನ ಹುಡುಗಾಟವನ್ನೆಲ್ಲ ಮರೆತು ಬಿಡಲಿ. ಪಾಂಡುವಿನ ಮಕ್ಕಳು ಹೊರಗಿನವರೇ ? ಬಾ, ವಿದುರಾ, ಭೀಷ್ಮನ ಅತ್ಯುತ್ತಮವಾದ ಅಭಿಪ್ರಾಯವೇ ನನ್ನ ಅಭಿಪ್ರಾಯವಾಗಿದೆ. ಹೋಗು, ಅವರನ್ನು ಕರೆದುಕೊಂಡು ಬಾ” ಎಂದು ಧೃತರಾಷ್ಟ್ರನು ಹೇಳಿದನು.
ಪದಾರ್ಥ (ಕ.ಗ.ಪ)
ದುರುಳ-ಕೆಟ್ಟ, ಮಕ್ಕಳಾಟಿಕೆ-ಹುಡುಗಾಟ, ಎರವಿಗರೇ-ಹೊರಗಿನವರೇ, ಪರಮ-ಅತ್ಯುತ್ತಮ, ಮತ-ಅಭಿಪ್ರಾಯ
ಮೂಲ ...{Loading}...
ಕರೆಸಿಕೊಡಿರೈ ನಿಮ್ಮ ಚಿತ್ತಕೆ
ಬರಿಸಿ ನಡಸುವೆನೆನ್ನ ಮಕ್ಕಳ
ದುರುಳತನದಿಂದಾದ ಹಿಂದಣ ಮಕ್ಕಳಾಟಿಕೆಯ
ಮರೆದು ಕಳೆಯಲಿ ಪಾಂಡುನಂದನ
ರೆರವಿಗರೆ ಬಾ ವಿದುರ ಭೀಷ್ಮನ
ಪರಮ ಮತವೇ ನನ್ನ ಮತ ಹೋಗೆಂದ ಧೃತರಾಷ್ಟ್ರ ॥20॥
೦೨೧ ಕಳುಹಿದರು ವಿದುರನನು ...{Loading}...
ಕಳುಹಿದರು ವಿದುರನನು ಬುದ್ಧಿಯ
ಗಲಿಸಿ ಭೀಷ್ಮಾದಿಗಳು ಪಯಣದ
ಲಲಿತ ಸನ್ನಾಹದೊಳು ಪರುಠವಿಸಿದನು ಪಾವುಡವ
ಬಳಿಕ ಸುಮುಹೂರ್ತದಲಿ ವಿಪ್ರಾ
ವಳಿಗಳಾಶೀರ್ವಾದದಲಿ ಮಂ
ಗಳತೆ ಮಿಗಿಲೊಲವಿಂದ ಹಸ್ತಿನಪುರವ ಹೊರವಂಟ ॥21॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಭೀಷ್ಮಾದಿಗಳು ಹೇಳಬೇಕಾದ ಬುದ್ಧಿಯ ಮಾತುಗಳನ್ನೆಲ್ಲಾ ತಿಳಿಯ ಹೇಳಿ ವಿದುರನನ್ನು ಕಳುಹಿಸಿದರು. ಪ್ರಯಾಣದ ಸಿದ್ಧತೆಯನ್ನು ಚೆಲುವಾಗಿ ಮಾಡಿ ಉಡುಗೊರೆಗಳನ್ನು ಸಿದ್ಧಗೊಳಿಸಿದರು. ಬಳಿಕ ಸುಮುಹೂರ್ತದಲ್ಲಿ ವಿಪ್ರ ಸಮೂಹದ ಆಶೀರ್ವಾದದಲ್ಲಿ ಶುಭವು ಅಧಿಕವಾಗಲು ವಿದುರನು ಹಸ್ತಿನಾಪುರದಿಂದ ಹೊರಟನು.
ಪದಾರ್ಥ (ಕ.ಗ.ಪ)
ಸನ್ನಾಹ-ಸಿದ್ಧತೆ,
ಪರುಠವ-ಸಿದ್ಧತೆ
ಪಾವುಡ-ಉಡುಗೊರೆ,
ಮಂಗಳ-ಶುಭ,
ಮಿಗಿಲು-ಅಧಿಕ
ಮೂಲ ...{Loading}...
ಕಳುಹಿದರು ವಿದುರನನು ಬುದ್ಧಿಯ
ಗಲಿಸಿ ಭೀಷ್ಮಾದಿಗಳು ಪಯಣದ
ಲಲಿತ ಸನ್ನಾಹದೊಳು ಪರುಠವಿಸಿದನು ಪಾವುಡವ
ಬಳಿಕ ಸುಮುಹೂರ್ತದಲಿ ವಿಪ್ರಾ
ವಳಿಗಳಾಶೀರ್ವಾದದಲಿ ಮಂ
ಗಳತೆ ಮಿಗಿಲೊಲವಿಂದ ಹಸ್ತಿನಪುರವ ಹೊರವಂಟ ॥21॥
೦೨೨ ಕೇಳು ಭೂಪತಿ ...{Loading}...
ಕೇಳು ಭೂಪತಿ ಹಲವು ಪಯಣದ
ಮೇಲೆ ಪಯಣದಲೈದಿದನು ಪಾಂ
ಚಾಲಪುರವನು ಬಂದನರಮನೆಗಧಿಕ ಹರ್ಷದಲಿ
ಕೇಳಿದರು ಕೌಂತೇಯರೀತನ
ಲಾಲಿಸಿದರಿದಿರೈದಿ ತನು ಪುಳ
ಕಾಳಿಯಲಿ ಮೈ ಮುಳುಗೆ ತೆಗೆದಪ್ಪಿದರು ತಮತಮಗೆ ॥22॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಹಲವು ಪಯಣದ ಮೇಲೆ ಪಯಣ ಮಾಡಿ ಪಾಂಚಾಲಪುರವನ್ನು ಸೇರಿದನು. ಬಹು ಸಂತೋಷದಿಂದ ಅರಮನೆಗೆ ಬಂದನು. ಈತನ ಬರವನ್ನು ಕುಂತಿಯ ಮಕ್ಕಳು ಕೇಳಿದರು. ಎದುರು ಹೋಗಿ ವಿದುರನನ್ನು ಪ್ರೀತಿಯಿಂದ ಸ್ವಾಗತಿಸಿದರು. ರೋಮಾಂಚನದಲ್ಲಿ ಮೈಮುಳುಗುವಂತೆ ಒಬ್ಬೊಬ್ಬರೂ ಹರ್ಷದಿಂದ ಅಪ್ಪಿಕೊಂಡರು.
ಮೂಲ ...{Loading}...
ಕೇಳು ಭೂಪತಿ ಹಲವು ಪಯಣದ
ಮೇಲೆ ಪಯಣದಲೈದಿದನು ಪಾಂ
ಚಾಲಪುರವನು ಬಂದನರಮನೆಗಧಿಕ ಹರ್ಷದಲಿ
ಕೇಳಿದರು ಕೌಂತೇಯರೀತನ
ಲಾಲಿಸಿದರಿದಿರೈದಿ ತನು ಪುಳ
ಕಾಳಿಯಲಿ ಮೈ ಮುಳುಗೆ ತೆಗೆದಪ್ಪಿದರು ತಮತಮಗೆ ॥22॥
೦೨೩ ಕ್ಷೇಮವನು ಕುಶಲವನು ...{Loading}...
ಕ್ಷೇಮವನು ಕುಶಲವನು ಬಂಧು
ಸ್ತೋಮದಲಿ ಕೇಳಿದರು ತಮ್ಮ
ಕ್ಷೇಮ ಕುಶಲವ ಹೇಳಿದರು ಪೂರ್ವಾಪರಸ್ಥಿತಿಯ
ಭೂಮಿಪತಿ ಚಿತ್ತೈಸು ಬಳಿಕಿನ
ರಾಮಣೀಯಕ ಯಾದವೇಂದ್ರ ಶಿ
ರೋಮಣಿಯ ಸಮ್ಮೇಳವನು ಹೇಳಿದನು ವಿದುರಂಗೆ ॥23॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಸಂಬಂಧಿಕರೆಲ್ಲರ ಕ್ಷೇಮ ಕುಶಲವನ್ನು ಕೇಳಿದರು. ತಮ್ಮ ಕ್ಷೇಮ ಕುಶಲವನ್ನೂ, ಹಿಂದುಮುಂದಿನ ಸ್ಥಿತಿಯನ್ನು ಹೇಳಿದರು. ನಂತರ ಸುಂದರನಾದ ಯಾದವೇಂದ್ರ ಶ್ರೇಷ್ಠ ಕೃಷ್ಣನ ಸಖ್ಯವನ್ನು ವಿದುರನಿಗೆ ಹೇಳಿದರು.
ಪದಾರ್ಥ (ಕ.ಗ.ಪ)
ಪೂರ್ವಾಪರ-ಹಿಂದು ಮುಂದಿನ ಸ್ಥಿತಿ, ರಾಮಣೀಯಕ-ಸುಂದರನಾದ, ಶಿರೋಮಣಿ-ಶ್ರೇಷ್ಠ, ಸಂಮೇಳ-ಸಖ್ಯ
ಮೂಲ ...{Loading}...
ಕ್ಷೇಮವನು ಕುಶಲವನು ಬಂಧು
ಸ್ತೋಮದಲಿ ಕೇಳಿದರು ತಮ್ಮ
ಕ್ಷೇಮ ಕುಶಲವ ಹೇಳಿದರು ಪೂರ್ವಾಪರಸ್ಥಿತಿಯ
ಭೂಮಿಪತಿ ಚಿತ್ತೈಸು ಬಳಿಕಿನ
ರಾಮಣೀಯಕ ಯಾದವೇಂದ್ರ ಶಿ
ರೋಮಣಿಯ ಸಮ್ಮೇಳವನು ಹೇಳಿದನು ವಿದುರಂಗೆ ॥23॥
೦೨೪ ತನ್ದ ಪಾವುಡವನಿತುವನು ...{Loading}...
ತಂದ ಪಾವುಡವನಿತುವನು ಯಮ
ನಂದನಂಗೊಪ್ಪಿಸಿದ ದ್ರುಪದ ಮು
ಕುಂದ ಧೃಷ್ಟದ್ಯುಮ್ನ ಕಂದರ್ಪಾನಿರುದ್ಧರಿಗೆ
ತಂದ ವಸ್ತುವನಿತ್ತವನು ಸಾ
ನಂದದಲಿ ನೀಡಿದನು ನಗುತರ
ವಿಂದನಾಭನ ಪದಕೆ ಮೈಯಿಕ್ಕಿದನು ಭಕ್ತಿಯಲಿ ॥24॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ವಿದುರನು ತಾನು ತಂದಿದ್ದ ಉಡುಗೊರೆಯಷ್ಟನ್ನು ಯಮಪುತ್ರನಿಗೆ ಒಪ್ಪಿಸಿದನು. ದ್ರುಪದ, ಕೃಷ್ಣ, ಧೃಷ್ಟದ್ಯುಮ್ನ, ಪ್ರದ್ಯುಮ್ನ, ಅನಿರುದ್ಧರಿಗೆ ತಂದ ವಸ್ತುಗಳನ್ನೆಲ್ಲಾ ಸಂತೋಷದಿಂದ ನೀಡಿದನು. ನಗುತ್ತ ಕಮಲನಾಭನ ಚರಣಗಳಿಗೆ ಭಕ್ತಿಯಿಂದ ನಮಸ್ಕರಿಸಿದನು.
ಪದಾರ್ಥ (ಕ.ಗ.ಪ)
ಸಾನಂದ-ಸಂತೋಷ, ಅರವಿಂದ-ಕಮಲ, ಮೈಯಿಕ್ಕು-ನಮಸ್ಕಾರ ಮಾಡು
ಮೂಲ ...{Loading}...
ತಂದ ಪಾವುಡವನಿತುವನು ಯಮ
ನಂದನಂಗೊಪ್ಪಿಸಿದ ದ್ರುಪದ ಮು
ಕುಂದ ಧೃಷ್ಟದ್ಯುಮ್ನ ಕಂದರ್ಪಾನಿರುದ್ಧರಿಗೆ
ತಂದ ವಸ್ತುವನಿತ್ತವನು ಸಾ
ನಂದದಲಿ ನೀಡಿದನು ನಗುತರ
ವಿಂದನಾಭನ ಪದಕೆ ಮೈಯಿಕ್ಕಿದನು ಭಕ್ತಿಯಲಿ ॥24॥
೦೨೫ ತೆಗೆದು ತಕ್ಕೈಸಿದನು ...{Loading}...
ತೆಗೆದು ತಕ್ಕೈಸಿದನು ಭೀಷ್ಮಾ
ದಿಗಳ ಕುಶಲವ ಕೇಳಿದನು ನಸು
ನಗುತ ಮೈದಡವಿದನು ವಿದುರನನಾ ಕೃಪಾಜಲಧಿ
ವಿಗಡನಾ ಧೃತರಾಷ್ಟ್ರನೀ ಬಂ
ಧುಗಳ ನೆನೆವನೆ ಪಾಂಡುಸುತರಿಗೆ
ಸೊಗಸುವನೆ ನೀ ಬಂದೆ ಲೇಸಾಯ್ತೆಂದನಸುರಾರಿ ॥25॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಆ ಕೃಪಾಸಾಗರನಾದ ಕೃಷ್ಣನು ನಮಸ್ಕರಿಸಿದ ವಿದುರನನ್ನು ಮೇಲಕ್ಕೆತ್ತಿ ಆಲಿಂಗಿಸಿದನು. ಭೀಷ್ಮರೇ ಮೊದಲಾದವರ ಕ್ಷೇಮವನ್ನು ಕೇಳಿದನು. ನಸುನಗುತ್ತ ವಿದುರನ ದೇಹವನ್ನು ನೇವರಿಸಿದನು. “ದುಷ್ಟನಾದ ಆ ಧೃತರಾಷ್ಟ್ರನು ಬಂಧುಗಳನ್ನು ನೆನೆಯುತ್ತಾನೆಯೇ ? ಪಾಂಡುವಿನ ಮಕ್ಕಳಿಗೆ ಸಂತೋಷ ಪಡುವಂತೆ ಮಾಡುವನೆ ? ನೀನು ಬಂದೆ, ಒಳ್ಳೆಯದಾಯಿತು” ಎಂದು ಕೃಷ್ಣನು ಹೇಳಿದನು.
ಪದಾರ್ಥ (ಕ.ಗ.ಪ)
ತಕ್ಕೈಸು-ಆಲಿಂಗಿಸು,
ವಿಗಡ- ದುಷ್ಟ
ಮೈದಡವು-ದೇಹವನ್ನು ನೇವರಿಸು,
ಸೊಗಸು-ಸಂತೋಷಪಡುವಂತೆ ಮಾಡು,
ಲೇಸು-ಒಳ್ಳೆಯದು
ಮೂಲ ...{Loading}...
ತೆಗೆದು ತಕ್ಕೈಸಿದನು ಭೀಷ್ಮಾ
ದಿಗಳ ಕುಶಲವ ಕೇಳಿದನು ನಸು
ನಗುತ ಮೈದಡವಿದನು ವಿದುರನನಾ ಕೃಪಾಜಲಧಿ
ವಿಗಡನಾ ಧೃತರಾಷ್ಟ್ರನೀ ಬಂ
ಧುಗಳ ನೆನೆವನೆ ಪಾಂಡುಸುತರಿಗೆ
ಸೊಗಸುವನೆ ನೀ ಬಂದೆ ಲೇಸಾಯ್ತೆಂದನಸುರಾರಿ ॥25॥
೦೨೬ ಕಳುಹಿದನು ಬೀಡಾರಕಾತನ ...{Loading}...
ಕಳುಹಿದನು ಬೀಡಾರಕಾತನ
ಬಳಿಯ ಪರಿವಾರವನು ಮನ್ನಿಸಿ
ಬಳಿಕ ಮರುದಿನ ಮೇಳವಿಸಿದರು ಮಂತ್ರಶಾಲೆಯಲಿ
ತಿಳಿಹಿದನು ಧೃತರಾಷ್ಟ್ರ ಭೀಷ್ಮರ
ಲಲಿತ ಮತವನು ಬಂಧುವರ್ಗ
ಸ್ಖಲಿತವನು ಸೈರಿಸುವುದೆಂದನು ವಿನಯದಲಿ ವಿದುರ ॥26॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಆತನನ್ನು, ಆತನ ಜೊತೆಯ ಪರಿವಾರದವರನ್ನು ಗೌರವಿಸಿ ತಂಗುವಸ್ಥಳಕ್ಕೆ ಕಳುಹಿಸಿದನು. ನಂತರ, ಮಾರನೆಯ ದಿನ ಮಂತ್ರ ಶಾಲೆಯಲ್ಲಿ ಎಲ್ಲರನ್ನೂ ಸೇರಿಸಿದರು. ಧೃತರಾಷ್ಟ್ರ ಭೀಷ್ಮರ ಸಮಾಧಾನವಾದ ಅಭಿಪ್ರಾಯವನ್ನು ವಿದುರನು ಸಭೆಗೆ ತಿಳಿಸಿದನು. ಬಂಧು ವರ್ಗದವರ ಹಳೆಯ ತಪ್ಪುಗಳನ್ನು ಸಹಿಸಿಕೊಳ್ಳುವುದು ಎಂದು ವಿನಯದಲ್ಲಿ ವಿದುರ ಕೇಳಿಕೊಂಡನು.
ಪದಾರ್ಥ (ಕ.ಗ.ಪ)
ಬೀಡಾರ-ತಂಗುವ ಸ್ಥಳ, ಸ್ಖಲಿತ-ತಪ್ಪು, ಸೈರಿಸು-ಸಹಿಸಿಕೊಳ್ಳು
ಮೂಲ ...{Loading}...
ಕಳುಹಿದನು ಬೀಡಾರಕಾತನ
ಬಳಿಯ ಪರಿವಾರವನು ಮನ್ನಿಸಿ
ಬಳಿಕ ಮರುದಿನ ಮೇಳವಿಸಿದರು ಮಂತ್ರಶಾಲೆಯಲಿ
ತಿಳಿಹಿದನು ಧೃತರಾಷ್ಟ್ರ ಭೀಷ್ಮರ
ಲಲಿತ ಮತವನು ಬಂಧುವರ್ಗ
ಸ್ಖಲಿತವನು ಸೈರಿಸುವುದೆಂದನು ವಿನಯದಲಿ ವಿದುರ ॥26॥
೦೨೭ ಕರೆಸಿದನು ಧೃತರಾಷ್ಟ್ರನಾತನ ...{Loading}...
ಕರೆಸಿದನು ಧೃತರಾಷ್ಟ್ರನಾತನ
ಚರಣವನು ಕಾಂಬುದು ನದೀಸುತ
ಗುರು ಕೃಪರು ನಿಮಗೊಳ್ಳಿದರು ನೀವಖಿಳ ರಾಜ್ಯದಲಿ
ಸರಿಯಕೊಂಬುದು ಸೇರುವಡೆ ಗಜ
ಪುರದೊಳಿಹುದಲ್ಲದೊಡೆ ನಿಮ್ಮ್ಮಯ
ಪುರದಲಿರಿ ನೀವಾತ್ಮ ನಿರ್ಮಿತ ರಾಜಧಾನಿಯಲಿ ॥27॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಧೃತರಾಷ್ಟ್ರನು ನಿಮ್ಮನ್ನು ಕರೆಸಿದ್ದಾನೆ. ಆತನ ಚರಣವನ್ನು ಬಂದು ಕಾಣಿರಿ. ಭೀಷ್ಮ, ದ್ರೋಣ, ಕೃಪರು ನಿಮಗೆ ಒಳ್ಳೆಯವರು. ನೀವು ಸಮಗ್ರ ರಾಜ್ಯದಲ್ಲಿ ಸರಿಪಾಲು ತೆಗೆದುಕೊಳ್ಳಿರಿ, ಸೇರುವ ಹಾಗಿದ್ದರೆ ಹಸ್ತಿನಾಪುರದಲ್ಲಿರಬಹುದು. ಇಲ್ಲವಾದರೆ, ನಿಮ್ಮ ಪುರದಲ್ಲಿ, ನೀವು ಸ್ವಂತ ನಿರ್ಮಿಸಿಕೊಂಡ ಸ್ವಂತ ರಾಜಧಾನಿಯಲ್ಲಿ ಇರಬಹುದು” ಎಂದು ವಿದುರ ತಿಳಿಸಿದನು.
ಮೂಲ ...{Loading}...
ಕರೆಸಿದನು ಧೃತರಾಷ್ಟ್ರನಾತನ
ಚರಣವನು ಕಾಂಬುದು ನದೀಸುತ
ಗುರು ಕೃಪರು ನಿಮಗೊಳ್ಳಿದರು ನೀವಖಿಳ ರಾಜ್ಯದಲಿ
ಸರಿಯಕೊಂಬುದು ಸೇರುವಡೆ ಗಜ
ಪುರದೊಳಿಹುದಲ್ಲದೊಡೆ ನಿಮ್ಮ್ಮಯ
ಪುರದಲಿರಿ ನೀವಾತ್ಮ ನಿರ್ಮಿತ ರಾಜಧಾನಿಯಲಿ ॥27॥
೦೨೮ ಮುರಹರನನಹುದೆನಿಸಿ ಭೂಮೀ ...{Loading}...
ಮುರಹರನನಹುದೆನಿಸಿ ಭೂಮೀ
ಶ್ವರನ ಮೆಚ್ಚಿಸಿ ಭೀಮನನು ಮನ
ಬರಿಸಿ ಪಾರ್ಥನನೊಲಿಸಿ ಮಾದ್ರೀಸುತರನೊಡಬಡಿಸಿ
ಅರಸಿಗಭಿಮತವೆನಿಸಿ ಪಾಂಚಾ
ಲರಿಗೆ ಕಾರ್ಯವಿದೆನಿಸಿ ಕುಂತಿಗೆ
ಪರಮ ಹರುಷವ ರಚಿಸಿ ನುಡಿದನು ಸಂಧಿಯನು ವಿದುರ ॥28॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ವಿದುರನು ಈ ರೀತಿ ನಯವಾಗಿ ಮಾತಾಡಿ ಕೃಷ್ಣನಿಂದ ಹೌದೆನ್ನಿಸಿದನು. ಭೂಮೀಶ್ವರನನ್ನು ಒಪ್ಪಿಸಿದನು. ಭೀಮನ ಮನಸ್ಸು ಹೀಗೆ ಬರುವಂತೆ ಮಾಡಿದನು. ಪಾರ್ಥನನ್ನು ಒಲಿಸಿ, ಮಾದ್ರೀಸುತರನ್ನು ಸಮ್ಮತಿಸುವಂತೆ ಮಾಡಿದನು. ಅರಸಿ ದ್ರೌಪದಿಗೆ ಇಷ್ಟವಾದುದೆನಿಸಿ, ಪಾಂಚಾಲರಿಗೆ ಇದು ಮಾಡಬೇಕಾದದ್ದೆನ್ನಿಸಿದನು. ಕುಂತಿಗೆ ಪೂರ್ಣ ಸಂತೋಷವನ್ನುಂಟುಮಾಡಿ, ಎಲ್ಲರನ್ನೂ ಒಲಿಸಿ ಸಂಧಿಯನ್ನು ಮಾಡಿದನು.
ಪದಾರ್ಥ (ಕ.ಗ.ಪ)
ಮೆಚ್ಚು-ಒಪ್ಪು, ಒಡಬಡಿಸು-ಸಮ್ಮತಿಸು, ಅಭಿಮತ-ಇಷ್ಟವಾದುದು, ಕಾರ್ಯ-ಮಾಡಬೇಕಾದದ್ದು.
ಮೂಲ ...{Loading}...
ಮುರಹರನನಹುದೆನಿಸಿ ಭೂಮೀ
ಶ್ವರನ ಮೆಚ್ಚಿಸಿ ಭೀಮನನು ಮನ
ಬರಿಸಿ ಪಾರ್ಥನನೊಲಿಸಿ ಮಾದ್ರೀಸುತರನೊಡಬಡಿಸಿ
ಅರಸಿಗಭಿಮತವೆನಿಸಿ ಪಾಂಚಾ
ಲರಿಗೆ ಕಾರ್ಯವಿದೆನಿಸಿ ಕುಂತಿಗೆ
ಪರಮ ಹರುಷವ ರಚಿಸಿ ನುಡಿದನು ಸಂಧಿಯನು ವಿದುರ ॥28॥
೦೨೯ ಕದಡು ತಿಳಿದುದು ...{Loading}...
ಕದಡು ತಿಳಿದುದು ಕಾರ್ಯಗತಿಗಾ
ಸ್ಪದವ ಕೊಟ್ಟರು ಬಳಿಕ ಸುಮುಹೂ
ರ್ತದಲಿ ಪಯಣವ ಮಾಡಿದರು ಪಾಂಚಾಲ ದಳ ಸಹಿತ
ಯದುಶಿರೋಮಣಿವೆರಸಿ ಬಹು ಪಯ
ಣದಲಿ ಬಂದರು ಮೇಲೆ ಕೌರವ
ರಿದಿರುಗೊಂಡರು ಕೂಡೆ ಹೊಕ್ಕರು ಹಸ್ತಿನಾಪುರವ ॥29॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ವಿದುರನ ಸಂಧಾನದಿಂದ ಬಗ್ಗಡ ತಿಳಿಯಾಯ್ತು. ಮುಂದಿನ ಕರ್ತವ್ಯದ ದಾರಿಗೆ ಅವಕಾಶ ಮಾಡಿಕೊಟ್ಟರು. ನಂತರ, ಒಳ್ಳೆಯ ಲಗ್ನದಲ್ಲಿ ಪಾಂಚಾಲನ ಸೈನ್ಯ ಸಹಿತ ಪ್ರಯಾಣವನ್ನು ಮಾಡಿದರು. ಯದುಶ್ರೇಷ್ಠ ಕೃಷ್ಣನೊಂದಿಗೆ ಪಾಂಡವರು ಹಲವು ಪಯಣಗಳಲ್ಲಿ ಮುಂದುವರಿದು ರಾಜಧಾನಿಯನ್ನು ಸಮೀಪಿಸಿದಾಗ ಕೌರವರು ಬಂದು ಎದುರುಗೊಂಡರು. ಕೂಡಲೆ ಹಸ್ತಿನಾಪುರವನ್ನು ಪ್ರವೇಶ ಮಾಡಿದರು.
ಪದಾರ್ಥ (ಕ.ಗ.ಪ)
ಕದಡು-ಬಗ್ಗಡ, ಕಾರ್ಯಗತಿ-ಕರ್ತವ್ಯ, ಆಸ್ಪದ-ಅವಕಾಶ, ಮುಹೂರ್ತ-ಲಗ್ನ
ಮೂಲ ...{Loading}...
ಕದಡು ತಿಳಿದುದು ಕಾರ್ಯಗತಿಗಾ
ಸ್ಪದವ ಕೊಟ್ಟರು ಬಳಿಕ ಸುಮುಹೂ
ರ್ತದಲಿ ಪಯಣವ ಮಾಡಿದರು ಪಾಂಚಾಲ ದಳ ಸಹಿತ
ಯದುಶಿರೋಮಣಿವೆರಸಿ ಬಹು ಪಯ
ಣದಲಿ ಬಂದರು ಮೇಲೆ ಕೌರವ
ರಿದಿರುಗೊಂಡರು ಕೂಡೆ ಹೊಕ್ಕರು ಹಸ್ತಿನಾಪುರವ ॥29॥
೦೩೦ ಬನ್ದು ಕಾಣಿಕೆಗೊಟ್ಟು ...{Loading}...
ಬಂದು ಕಾಣಿಕೆಗೊಟ್ಟು ಗಂಗಾ
ನಂದನ ಧೃತರಾಷ್ಟ್ರನನು ಸಾ
ನಂದದಲಿ ಗಾಂಧಾರಿಯನು ಗುರು ಗೌತಮಾದಿಗಳ
ವಂದಿಸಿದರಿವರೈವರವರಾ
ನಂದಜಲ ಪರಿಲುಳಿತ ನಯನಾ
ಸ್ಪಂದ ಪರಿತೋಷದಲಿ ತೆಗೆದಪ್ಪಿದರು ಪಾಂಡವರ ॥30॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅರಮನೆಗೆ ಬಂದು ಇವರೈವರೂ ಭೀಷ್ಮ, ಧೃತರಾಷ್ಟ್ರ, ಗಾಂಧಾರಿ, ದ್ರೋಣ, ಕೃಪ ಮೊದಲಾದವರಿಗೆ ಕಾಣಿಕೆಗೊಟ್ಟು ಸಂತೋಷದಿಂದ ವಂದಿಸಿದರು. ಅವರು ಸಂತೋಷದ ಜಲ ತೊಟ್ಟಿಕ್ಕಿದ ಕಣ್ಣುಗಳ ಸ್ಪಂದನದಿಂದ ಸೂಚಿತವಾದ ಅತ್ಯಂತ ಆನಂದದಲ್ಲಿ ಪಾಂಡವರನ್ನು ತೆಗೆದಪ್ಪಿದರು.
ಪದಾರ್ಥ (ಕ.ಗ.ಪ)
ಪರಿಲುಳಿತ-ತೊಟ್ಟಿಕ್ಕಿದ, ಸ್ಪಂದ-ಸ್ಪಂದನ, ಪರಿತೋಷ-ಅತ್ಯಂತ ಆನಂದ
ಮೂಲ ...{Loading}...
ಬಂದು ಕಾಣಿಕೆಗೊಟ್ಟು ಗಂಗಾ
ನಂದನ ಧೃತರಾಷ್ಟ್ರನನು ಸಾ
ನಂದದಲಿ ಗಾಂಧಾರಿಯನು ಗುರು ಗೌತಮಾದಿಗಳ
ವಂದಿಸಿದರಿವರೈವರವರಾ
ನಂದಜಲ ಪರಿಲುಳಿತ ನಯನಾ
ಸ್ಪಂದ ಪರಿತೋಷದಲಿ ತೆಗೆದಪ್ಪಿದರು ಪಾಂಡವರ ॥30॥
೦೩೧ ಕರೆಸಿ ತನ್ನ ...{Loading}...
ಕರೆಸಿ ತನ್ನ ಕುಮಾರಕರ ನೂ
ರ್ವರನು ಕಾಣಿಸಿದನು ಪರಸ್ಪರ
ಪರಮ ಸಂಪ್ರೀತಿಗಳ ನಿಬಿಡಾಲಿಂಗನೋತ್ಸವದ
ದರುಶನೋಚಿತ ಮಾನ್ಯಮಾನ
ಸ್ಫುರಣದಲಿ ವಿಸ್ತರಿಸಿ ಸೈಂಧವ
ಗುರುತನುಜ ರಾಧೇಯ ಸೌಬಲರಪ್ಪಿದರು ನೃಪನ ॥31॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಧೃತರಾಷ್ಟ್ರನು ತನ್ನ ನೂರ್ವರು ಮಕ್ಕಳನ್ನು ಕರೆಸಿ ಪಾಂಡವರನ್ನು ಕಾಣಿಸಿದನು. ಅವರು ಪರಸ್ಪರ ಅತಿಶಯವಾದ ಪ್ರೀತಿಯಿಂದ ತುಂಬು ಆಲಿಂಗನದ ಸಂಭ್ರಮ ಪಡೆದರು. ಭೇಟಿಗೆ ಉಚಿತವಾಗಿ ಗೌರವಸ್ಥರಿಗೆ ತಕ್ಕಂತೆ ಗೌರವ ನೀಡಬೇಕೆಂಬ ಬುದ್ಧಿ ಹೊಳೆದದ್ದರಿಂದ ಸೈಂಧವ, ಅಶ್ವತ್ಥಾಮ, ಕರ್ಣ, ಶಕುನಿಗಳು ಧರ್ಮರಾಜನನ್ನು ಅಪ್ಪಿಕೊಂಡರು.
ಪದಾರ್ಥ (ಕ.ಗ.ಪ)
ನಿಬಿಡ-ತುಂಬು, ಉತ್ಸವ-ಸಂಭ್ರಮ, ಸ್ಫುರಣ-ಹೊಳೆ
ಮೂಲ ...{Loading}...
ಕರೆಸಿ ತನ್ನ ಕುಮಾರಕರ ನೂ
ರ್ವರನು ಕಾಣಿಸಿದನು ಪರಸ್ಪರ
ಪರಮ ಸಂಪ್ರೀತಿಗಳ ನಿಬಿಡಾಲಿಂಗನೋತ್ಸವದ
ದರುಶನೋಚಿತ ಮಾನ್ಯಮಾನ
ಸ್ಫುರಣದಲಿ ವಿಸ್ತರಿಸಿ ಸೈಂಧವ
ಗುರುತನುಜ ರಾಧೇಯ ಸೌಬಲರಪ್ಪಿದರು ನೃಪನ ॥31॥
೦೩೨ ಯಾದವರು ಪಾಞ್ಚಾಲರಲಿ ...{Loading}...
ಯಾದವರು ಪಾಂಚಾಲರಲಿ ಸಂ
ಪಾದಿಸಿದುದನ್ಯೋನ್ಯ ಘನ ಸಂ
ವಾದ ಸುಖ ಸಂಪ್ರೀತಿ ಮೆರೆಯಲ್ಕಿಷ್ಟ ಸತ್ಕಾರ
ಆದುದುತ್ಸವ ಜನಜನಿತ ಹರು
ಷೋದಧಿಯ ಹೊನಲಿನಲಿ ಹಿಂದಣ
ಭೇದ ಕರ್ದಮವಡಗಿಹೋಯ್ತವನೀಶ ಕೇಳ್ ಎಂದ ॥32॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಯಾದವರು, ಪಾಂಚಾಲರಲ್ಲಿ ಪರಸ್ಪರ ಸಂಭಾಷಣೆಗೆ ಪ್ರಯತ್ನವಾಯಿತು. ಸುಖ ಹಾಗೂ ಅತಿಶಯವಾದ ಪ್ರೀತಿ ಎದ್ದು ತೋರಲು ಇಷ್ಟವಾದ ಮಾರ್ಯಾದೆಗಳನ್ನು ಮಾಡಿದರು. ಉತ್ಸವವಾಯಿತು, ಜನರಲ್ಲಿ ವಿಷಯ ಹಬ್ಬಿ ಉಂಟಾದ ಸಂತೋಷ ಸಾಗರದ ಪ್ರವಾಹದಲ್ಲಿ ಹಿಂದಿನ ಭೇದದ ಕೆಸರು ಮುಚ್ಚಿಹೋಯಿತು.
ಪದಾರ್ಥ (ಕ.ಗ.ಪ)
ಅನ್ಯೋನ್ಯ-ಪರಸ್ಪರ, ಸಂಪ್ರೀತಿ-ಅತಿಶಯವಾದ ಪ್ರೀತಿ, ಸತ್ಕಾರ-ಮರ್ಯಾದೆ, ಜನಜನಿತ-ಜನರಲ್ಲಿ ವಿಷಯ ಹಬ್ಬಿ, ಹೊನಲು-ಪ್ರವಾಹ, ಕರ್ದಮ-ಕೆಸರು
ಮೂಲ ...{Loading}...
ಯಾದವರು ಪಾಂಚಾಲರಲಿ ಸಂ
ಪಾದಿಸಿದುದನ್ಯೋನ್ಯ ಘನ ಸಂ
ವಾದ ಸುಖ ಸಂಪ್ರೀತಿ ಮೆರೆಯಲ್ಕಿಷ್ಟ ಸತ್ಕಾರ
ಆದುದುತ್ಸವ ಜನಜನಿತ ಹರು
ಷೋದಧಿಯ ಹೊನಲಿನಲಿ ಹಿಂದಣ
ಭೇದ ಕರ್ದಮವಡಗಿಹೋಯ್ತವನೀಶ ಕೇಳೆಂದ ॥32॥
೦೩೩ ವೀತ ಭಯರನ್ಯೋನ್ಯ ...{Loading}...
ವೀತ ಭಯರನ್ಯೋನ್ಯ ಪರಮ
ಪ್ರೀತಿಗಳ ಬೆಳವಿಗೆಯಲಿದ್ದರು
ಭೂತಳಾಧಿಪರೈದು ಸಂವತ್ಸರಗಳೊಂದಾಗಿ
ಖ್ಯಾತವಿದು ಪಾಂಚಾಲಪುರದೊಳ
ತೀತವಾಯಿತ್ತೊಂದು ವರುಷವ
ಭೀತ ಧರ್ಮಸುತಂಗೆ ಮುವ್ವತ್ತಾರು ಸಮವಾಯ್ತು ॥33॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ನಿರ್ಭೀತರಾಗಿ ಪರಸ್ಪರ ಅತಿಪ್ರೀತಿಯ ಬೆಳವಿಗೆಯಲ್ಲಿ ಭೂತಳಾಧಿಪರು ಐದು ವರ್ಷಕಾಲ ಒಂದಾಗಿ ಬಾಳಿದರು. ಇದು ಪ್ರಸಿದ್ಧಿಯಾಯ್ತು. ಪಾಂಚಾಲ ಪುರದಲ್ಲಿ ಒಂದು ವರ್ಷ ಕಳೆದು ಹೋಯಿತು. ಹೆದರದ ಧರ್ಮರಾಜನಿಗೆ ಮುವ್ವತ್ತಾರು ವರ್ಷವಾಯ್ತು.
ಪದಾರ್ಥ (ಕ.ಗ.ಪ)
ವೀತಭಯ-ನಿರ್ಭೀತ, ಸಂವತ್ಸರ-ವರ್ಷ, ಖ್ಯಾತ-ಪ್ರಸಿದ್ಧಿ, ಸಮ-ವರ್ಷ.
ಮೂಲ ...{Loading}...
ವೀತ ಭಯರನ್ಯೋನ್ಯ ಪರಮ
ಪ್ರೀತಿಗಳ ಬೆಳವಿಗೆಯಲಿದ್ದರು
ಭೂತಳಾಧಿಪರೈದು ಸಂವತ್ಸರಗಳೊಂದಾಗಿ
ಖ್ಯಾತವಿದು ಪಾಂಚಾಲಪುರದೊಳ
ತೀತವಾಯಿತ್ತೊಂದು ವರುಷವ
ಭೀತ ಧರ್ಮಸುತಂಗೆ ಮುವ್ವತ್ತಾರು ಸಮವಾಯ್ತು ॥33॥