೦೦೦ ಸೂ ವಿಮಲಮುನಿ ...{Loading}...
ಸೂ. ವಿಮಲಮುನಿ ಪಾಂಚಾಲ ಚಿತ್ತ
ಭ್ರಮೆಯನಪಹರಿಸಿದನು ದ್ರೌಪದಿ
ರಮಣಿಯಾದಳು ಹರನ ವರದಲಿ ಪಾಂಡು ತನಯರಿಗೆ
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
ಸೂಚನೆ : ಪವಿತ್ರನಾದ ಮುನಿ ವೇದವ್ಯಾಸನು ಪಾಂಚಾಲನ ಮನಸ್ಸಿನ ಭ್ರಾಂತಿಯನ್ನು ಹೋಗಲಾಡಿಸಿದನು. ಶಿವನ ವರದಿಂದ ದ್ರೌಪದಿಯು ಪಾಂಡುವಿನ ಪುತ್ರರಿಗೆ ಪತ್ನಿಯಾದಳು.
ಪದಾರ್ಥ (ಕ.ಗ.ಪ)
ವಿಮಲ-ಪವಿತ್ರ, ಭ್ರಮೆ-ಭ್ರಾಂತಿ, ಅಪಹರಿಸು-ಹೋಗಲಾಡಿಸು, ರಮಣಿ-ಪತ್ನಿ
ಮೂಲ ...{Loading}...
ಸೂ. ವಿಮಲಮುನಿ ಪಾಂಚಾಲ ಚಿತ್ತ
ಭ್ರಮೆಯನಪಹರಿಸಿದನು ದ್ರೌಪದಿ
ರಮಣಿಯಾದಳು ಹರನ ವರದಲಿ ಪಾಂಡು ತನಯರಿಗೆ
೦೦೧ ಕೇಳು ಜನಮೇಜಯ ...{Loading}...
ಕೇಳು ಜನಮೇಜಯ ಧರಿತ್ರೀ
ಪಾಲ ಕೌರವನೃಪತಿ ಪಯಣದ
ಮೇಲೆ ಪಯಣದಿಲೈದಿ ಹೊಕ್ಕನು ಹಸ್ತಿನಾಪುರವ
ಹೇಳಲೇನುಳಿದಖಿಳ ಧರಣೀ
ಪಾಲಕರ ದುಮ್ಮಾನವನು ಪಾಂ
ಚಾಲ ದೇಶವ ಕಳೆದು ಹೊಕ್ಕರು ತಮ್ಮ ನಗರಿಗಳ ॥1॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಜನಮೇಜಯರಾಯನೇ ಕೇಳು, “ಕೌರವೇಶ್ವರನು ಪಯಣದ ಮೇಲೆ ಪಯಣ ಮಾಡುತ್ತ ಹಸ್ತಿನಾಪುರಕ್ಕೆ ಹೋಗಿ ಸೇರಿದನು. ಉಳಿದ ಎಲ್ಲ ಭೂಪಾಲರಿಗೂ ಆದ ಸಂಕಟವನ್ನು ಏನೆಂದು ಹೇಳುವುದು ? ಪಾಂಚಾಲ ದೇಶದಿಂದ ಹೊರಟು ತಮ್ಮ ತಮ್ಮ ನಗರಗಳನ್ನು ಸೇರಿಕೊಂಡರು.”
ಮೂಲ ...{Loading}...
ಕೇಳು ಜನಮೇಜಯ ಧರಿತ್ರೀ
ಪಾಲ ಕೌರವನೃಪತಿ ಪಯಣದ
ಮೇಲೆ ಪಯಣದಿಲೈದಿ ಹೊಕ್ಕನು ಹಸ್ತಿನಾಪುರವ
ಹೇಳಲೇನುಳಿದಖಿಳ ಧರಣೀ
ಪಾಲಕರ ದುಮ್ಮಾನವನು ಪಾಂ
ಚಾಲ ದೇಶವ ಕಳೆದು ಹೊಕ್ಕರು ತಮ್ಮ ನಗರಿಗಳ ॥1॥
೦೦೨ ಭೀತಿ ಹರಿದುದು ...{Loading}...
ಭೀತಿ ಹರಿದುದು ರಾಯದಳ ಸಂ
ಘಾತ ಸರಿದುದು ಮತ್ತೆ ಸುಜನ
ವ್ರಾತ ನೆರೆದುದು ಮೆರೆದುದವನೀದೇವರಗ್ಗಳಿಕೆ
ವಾತಜನು ಮರಗೊಂಬಿನಲಿ ಮಾ
ರಾತನನು ಮನ್ನಿಸಿ ಕುಲಾಲ ನಿ
ಕೇತನಕೆ ಬಂದೆರಗಿದನು ಧರ್ಮಜನ ಚರಣದಲಿ ॥2॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಭಯ ನಿವಾರಣೆಯಾಯಿತು. ರಾಜರ ಸೈನ್ಯ ಸಮೂಹ ಚಲಿಸಿತು. ಮತ್ತೆ ಸಜ್ಜನರ ಸಮೂಹ ಸೇರಿತು. ಬ್ರಾಹ್ಮಣರ ಶ್ರೇಷ್ಠತೆ ಶೋಭಿಸಿತು. ವಾಯುಪುತ್ರ ಭೀಮನು ಪ್ರತಿಭಟಿಸಿದವನನ್ನು ಮರದ ಕೊಂಬಿನಲ್ಲಿ ಘಾತಿಸಿ ಕುಂಬಾರನ ಮನೆಗೆ ಬಂದನು. ಧರ್ಮರಾಜನ ಪಾದಗಳಿಗೆ ನಮಸ್ಕರಿಸಿದನು.
ಪದಾರ್ಥ (ಕ.ಗ.ಪ)
ಹರಿ-ನಿವಾರಣೆಯಾಗು , ಸಂಘಾತ-ಸಮೂಹ, ವಾತಜ-ವಾಯುಪುತ್ರ, ಭೀಮ, ಮಾರಾತ-ಪ್ರತಿಭಟಿಸಿದ, ಕುಲಾಲ-ಕುಂಬಾರ
ಮೂಲ ...{Loading}...
ಭೀತಿ ಹರಿದುದು ರಾಯದಳ ಸಂ
ಘಾತ ಸರಿದುದು ಮತ್ತೆ ಸುಜನ
ವ್ರಾತ ನೆರೆದುದು ಮೆರೆದುದವನೀದೇವರಗ್ಗಳಿಕೆ
ವಾತಜನು ಮರಗೊಂಬಿನಲಿ ಮಾ
ರಾತನನು ಮನ್ನಿಸಿ ಕುಲಾಲ ನಿ
ಕೇತನಕೆ ಬಂದೆರಗಿದನು ಧರ್ಮಜನ ಚರಣದಲಿ ॥2॥
೦೦೩ ಇತ್ತಲರ್ಜುನನಿನಸುತನ ಬೆಂ ...{Loading}...
ಇತ್ತಲರ್ಜುನನಿನಸುತನ ಬೆಂ
ಬತ್ತಿ ಮರಳಿದನವನಿ ಪಾಲರ
ಮುತ್ತಿಗೆಯ ತೆಗೆಸಿದನು ಜಯಲಕ್ಷ್ಮಿಯ ಕಟಾಕ್ಷದಲಿ
ಮತ್ತ ರಾಯರ ಬೆನ್ನಕಪ್ಪವ
ನೆತ್ತಿದುತ್ಸಹ ವದನದಲಿ ಹೊಗ
ರೆತ್ತಿದಕ್ಷಿಯ ಹೊಳಹಿನಲಿ ಹೊಕ್ಕನು ನೃಪಾಲಯವ ॥3॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಇತ್ತ ಕಡೆ, ಅರ್ಜುನನು ಸೂರ್ಯಪುತ್ರನಾದ ಕರ್ಣನನ್ನು ಬೆನ್ನಟ್ಟಿ ಹಿಂತಿರುಗಿದನು. ಜಯಲಕ್ಷ್ಮಿಯ ಕೃಪಾದೃಷ್ಟಿಯಿಂದ ಭೂಮಿಪರ ಮುತ್ತಿಗೆಯನ್ನು ತೆಗೆಸಿದನು. ಮದಿಸಿದ ರಾಜರನ್ನು ಬೆಂಗೊಟ್ಟೋಡಿಸಿದ ಕಪ್ಪಕಾಣಿಕೆಯನ್ನು ಎತ್ತಿದ ಉತ್ಸಾಹದ ಮುಖದಲ್ಲಿ, ಕಾಂತಿಯುಕ್ತ ಕಣ್ಣಿನ ಹೊಳಪಿನಲ್ಲಿ ಅರಮನೆಯನ್ನು ಪ್ರವೇಶ ಮಾಡಿದನು.
ಪದಾರ್ಥ (ಕ.ಗ.ಪ)
ಇನಸುತ-ಸೂರ್ಯಪುತ್ರ, ಕರ್ಣ, ಕಟಾಕ್ಷ-ಕೃಪಾದೃಷ್ಟಿ, ಕಪ್ಪ-ಕಾಣಿಕೆ, ಹೊಗರು-ಕಾಂತಿ, ಹೊಳಹು-ಹೊಳಪು
ಮೂಲ ...{Loading}...
ಇತ್ತಲರ್ಜುನನಿನಸುತನ ಬೆಂ
ಬತ್ತಿ ಮರಳಿದನವನಿ ಪಾಲರ
ಮುತ್ತಿಗೆಯ ತೆಗೆಸಿದನು ಜಯಲಕ್ಷ್ಮಿಯ ಕಟಾಕ್ಷದಲಿ
ಮತ್ತ ರಾಯರ ಬೆನ್ನಕಪ್ಪವ
ನೆತ್ತಿದುತ್ಸಹ ವದನದಲಿ ಹೊಗ
ರೆತ್ತಿದಕ್ಷಿಯ ಹೊಳಹಿನಲಿ ಹೊಕ್ಕನು ನೃಪಾಲಯವ ॥3॥
೦೦೪ ಈತನುದಯದೊಳಿನ್ದು ಭೂಸುರ ...{Loading}...
ಈತನುದಯದೊಳಿಂದು ಭೂಸುರ
ಜಾತಿಗಾಯ್ತಗ್ಗಳಿಕೆ ಪಾರ್ಥಿವ
ರಾತರಿಂದುಬ್ಬಟೆಯ ಧನುವಿಂದಿವನ ವಶವಾಯ್ತು
ಸೋತು ತೆಗೆದ ಮಹೀಶ್ವರರ ಮಾ
ತೇತಕದು ಮಝ ಪೂತೆನುತ ಜನ
ವೀತನನು ಕೊಂಡಾಡುತಿರ್ದದು ನೆರವಿ ನೆರವಿಯಲಿ ॥4॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಈತನು ಹುಟ್ಟಿದ್ದರಿಂದ ಬ್ರಾಹ್ಮಣ ಜಾತಿಗೆ ಕ್ಷತ್ರಿಯರಿಗಿಂತ ಹೆಚ್ಚಿನ ಶ್ರೇಷ್ಠತೆಯುಂಟಾಯ್ತು. ಅತಿಶಯದ ಧನುಸ್ಸು ಇವತ್ತು ಇವನ ವಶವಾಯ್ತು. ಸೋತು ಓಡಿಹೋದ ಮಹೀಶ್ವರರ ಮಾತು ಅದೇತಕ್ಕೆ ? “ಮಝ ಪೂತು” ಎನುತ್ತ ಜನವು ಗುಂಪು ಗುಂಪಾಗಿ ಈತನನ್ನು ಕೊಂಡಾಡುತ್ತಿದ್ದರು.
ಪದಾರ್ಥ (ಕ.ಗ.ಪ)
ಉಬ್ಬಟೆ-ಅತಿಶಯ, ನೆರವಿ-ಗುಂಪು
ಮೂಲ ...{Loading}...
ಈತನುದಯದೊಳಿಂದು ಭೂಸುರ
ಜಾತಿಗಾಯ್ತಗ್ಗಳಿಕೆ ಪಾರ್ಥಿವ
ರಾತರಿಂದುಬ್ಬಟೆಯ ಧನುವಿಂದಿವನ ವಶವಾಯ್ತು
ಸೋತು ತೆಗೆದ ಮಹೀಶ್ವರರ ಮಾ
ತೇತಕದು ಮಝ ಪೂತೆನುತ ಜನ
ವೀತನನು ಕೊಂಡಾಡುತಿರ್ದದು ನೆರವಿ ನೆರವಿಯಲಿ ॥4॥
೦೦೫ ಬನ್ದನೀತನು ಗತಿಯ ...{Loading}...
ಬಂದನೀತನು ಗತಿಯ ಗರುವಿಕೆ
ಯಿಂದ ತರುಣಿಯ ಹೊರೆಗೆ ಬಾ ನೀ
ನೆಂದು ಕರೆದನು ಸತಿಸಹಿತ ತಿರುಗಿದನು ವಹಿಲದಲಿ
ಇಂದುಮುಖಿಯನು ಕುಂಭಕಾರನ
ಮಂದಿರದ ಹೊರಗಿರಿಸಿ ಫಲುಗುಣ
ಬಂದು ಮೈಯಿಕ್ಕಿದನು ಕುಂತಿಯ ಚರಣಕಮಲದಲಿ ॥5॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಈತನು ಗಂಭೀರ ನಡೆಯಲ್ಲಿ ದ್ರೌಪದಿಯ ಸಮೀಪಕ್ಕೆ ಬಂದನು. “ನೀನು ಬಾ” ಎಂದು ಕರೆದನು. ಅವಳ ಜೊತೆಯಲ್ಲಿ ವೇಗದಿಂದ ಮನೆಯ ಕಡೆ ತಿರುಗಿದನು. ಚಂದ್ರಮುಖಿ ದ್ರೌಪದಿಯನ್ನು ಕುಂಬಾರನ ಮನೆಯ ಹೊರಗೆ ಬಿಟ್ಟು ಫಲುಗುಣನು ಕುಂತಿಯ ಪಾದಕಮಲಗಳಲ್ಲಿ ನಮಸ್ಕರಿಸಿದನು.
ಪದಾರ್ಥ (ಕ.ಗ.ಪ)
ಗರುವಿಕೆ-ಹಿರಿಮೆ, ಹೊರೆ-ಸಮೀಪ, ವಹಿಲ-ವೇಗ, ಕುಂಭಕಾರ-ಕುಂಬಾರ, ಮೈಯಿಕ್ಕು-ನಮಸ್ಕರಿಸು
ಮೂಲ ...{Loading}...
ಬಂದನೀತನು ಗತಿಯ ಗರುವಿಕೆ
ಯಿಂದ ತರುಣಿಯ ಹೊರೆಗೆ ಬಾ ನೀ
ನೆಂದು ಕರೆದನು ಸತಿಸಹಿತ ತಿರುಗಿದನು ವಹಿಲದಲಿ
ಇಂದುಮುಖಿಯನು ಕುಂಭಕಾರನ
ಮಂದಿರದ ಹೊರಗಿರಿಸಿ ಫಲುಗುಣ
ಬಂದು ಮೈಯಿಕ್ಕಿದನು ಕುಂತಿಯ ಚರಣಕಮಲದಲಿ ॥5॥
೦೦೬ ತಾಯೆ ಬಿನ್ನಹವಿನ್ದು ...{Loading}...
ತಾಯೆ ಬಿನ್ನಹವಿಂದು ಧರಣೀ
ರಾಯರೆಲ್ಲರ ಗೆಲಿದು ತಂದೆನು
ನಾಯಕವನನುಪಮಿತ ಮೌಲ್ಯವನಮಲ ಮೌಕ್ತಿಕವ
ತಾಯೆ ಚಿತ್ತೈಸಿದಿರೆಯೆನೆ ಕಡೆ
ವಾಯಿದಳು ತನಿ ಹರುಷದಲಿ ಲೇ
ಸಾಯಿತೈವರು ಕೂಡಿ ಭೋಗಿಪುದೆಂದಳಾ ಕುಂತಿ ॥6॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ತಾಯೇ, ಬಿನ್ನಹ, ಇವತ್ತು ಭೂಪತಿಗಳೆಲ್ಲರನ್ನೂ ಗೆದ್ದು ಶ್ರೇಷ್ಠವಾದದ್ದನ್ನು ಅಸಾಮಾನ್ಯ ಬೆಲೆಯ ಪವಿತ್ರ ಮುತ್ತನ್ನು ತಂದಿದ್ದೇನೆ. ತಾಯೇ ಕೇಳಿದಿರಾ ?” ಎಂದು ಅರ್ಜುನನು ವಿನಯದಿಂದ ಹೇಳಿದನು. ಈ ಮಾತು ಕೇಳಿ ಕುಂತಿಯು ಪೂರ್ಣ ಸಂತೋಷದಲ್ಲಿ ತೇಲಿದಳು. “ಒಳ್ಳೆಯದಾಯಿತು, ಐವರೂ ಕೂಡಿ ಭೋಗಿಸಿರಿ” ಎಂದಳು.
ಪದಾರ್ಥ (ಕ.ಗ.ಪ)
ನಾಯಕವನು-ಶ್ರೇಷ್ಠವಾದದ್ದನ್ನು, ಅನುಪಮಿತ-ಅಸಾಮಾನ್ಯ, ಮೌಲ್ಯ-ಬೆಲೆ, ಮೌಕ್ತಿಕ-ಮುತ್ತು, ಕಡೆವಾಯಿ-ದಾಟು, ತನಿ-ಪೂರ್ಣ
ಮೂಲ ...{Loading}...
ತಾಯೆ ಬಿನ್ನಹವಿಂದು ಧರಣೀ
ರಾಯರೆಲ್ಲರ ಗೆಲಿದು ತಂದೆನು
ನಾಯಕವನನುಪಮಿತ ಮೌಲ್ಯವನಮಲ ಮೌಕ್ತಿಕವ
ತಾಯೆ ಚಿತ್ತೈಸಿದಿರೆಯೆನೆ ಕಡೆ
ವಾಯಿದಳು ತನಿ ಹರುಷದಲಿ ಲೇ
ಸಾಯಿತೈವರು ಕೂಡಿ ಭೋಗಿಪುದೆಂದಳಾ ಕುಂತಿ ॥6॥
೦೦೭ ಎನೆ ಹಸಾದವೆನುತ್ತ ...{Loading}...
ಎನೆ ಹಸಾದವೆನುತ್ತ ಕಮಲಾ
ನನೆಯ ಹೊಡವಂಡಿಸಿದನವ್ವೆಗೆ
ತನುಜ ನೀ ತಂದಮಲಮೌಕ್ತಿಕವಿದೆಯೊ ಶಿವಯೆನುತ
ತನಗೆ ನುಡಿ ತೊದಲಿಸಿತಲಾ ನೀ
ವಿನಿಬರುಪಭೋಗಿಸುವುದೆಂದೆನು
ವನಿತೆಯೈವರಿಗರಸಿಯೇ ಲೇಸೆಂದಳಾ ಕುಂತಿ ॥7॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ತಾಯಿಯು ಹೇಳಿದ್ದಕ್ಕೆ ‘ಮಹಾಪ್ರಸಾದ’ ಎಂದು ನುಡಿದು ಅರ್ಜುನನು ಕಮಲಮುಖಿಯಾದ ದ್ರೌಪದಿಯನ್ನು ಕರೆತಂದು ಕುಂತಿಗೆ ನಮಸ್ಕಾರ ಮಾಡಿಸಿದನು. “ಮಗನೇ, ನೀನು ತಂದ ಪವಿತ್ರವಾದ ಮುತ್ತು ಇದೇಯೇನು ? ಶಿವಶಿವಾ ನನ್ನ ಮಾತು ತಪ್ಪಾಯಿತಲ್ಲ. ನೀವಿಷ್ಟು ಜನರೂ ಅನುಭವಿಸುವುದು ಎಂದುಬಿಟ್ಟೆ. ಹೆಂಗಸೊಬ್ಬಳು ಐವರಿಗೆ ರಾಣಿಯೆ ?” ಎಂದಳು ಆ ಕುಂತಿ.
ಪದಾರ್ಥ (ಕ.ಗ.ಪ)
ಹೊಡವಂಡಿಸು-ನಮಸ್ಕಾರ ಮಾಡಿಸು, ತೊದಲ್-ತಪ್ಪಾಗುವಿಕೆ, ಉಪಭೋಗಿಸು-ಸುಖವನ್ನು ಅನುಭವಿಸು, ವನಿತೆ-ಹೆಂಗಸು
ಮೂಲ ...{Loading}...
ಎನೆ ಹಸಾದವೆನುತ್ತ ಕಮಲಾ
ನನೆಯ ಹೊಡವಂಡಿಸಿದನವ್ವೆಗೆ
ತನುಜ ನೀ ತಂದಮಲಮೌಕ್ತಿಕವಿದೆಯೊ ಶಿವಯೆನುತ
ತನಗೆ ನುಡಿ ತೊದಲಿಸಿತಲಾ ನೀ
ವಿನಿಬರುಪಭೋಗಿಸುವುದೆಂದೆನು
ವನಿತೆಯೈವರಿಗರಸಿಯೇ ಲೇಸೆಂದಳಾ ಕುಂತಿ ॥7॥
೦೦೮ ಜನನಿ ತಪ್ಪದು ...{Loading}...
ಜನನಿ ತಪ್ಪದು ನಿಮ್ಮ ನುಡಿಯೀ
ವನಜಮುಖಿಯೆಮ್ಮೈವರಿಗೆ ಸತಿ
ವಿನುತಗುರುವಚನಾಂಬುನಿಧಿ ಮಕ್ಕಳಿಗಲಂಘ್ಯವಲೆ
ಎನೆ ಯುಧಿಷ್ಠಿರ ನೃಪತಿ ಪಾರ್ಥನ
ಕನಲಿದನು ಕಲಿ ಭೀಮನಲ್ಲೆಂ
ದನು ನಕುಲ ಸಹದೇವರನುಚಿತವೆಂದರರ್ಜುನಗೆ ॥8॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಅಮ್ಮಾ ನಿಮ್ಮ ನುಡಿ ತಪ್ಪದು. ಈ ಕಮಲಮುಖಿ ನಮ್ಮೈವರಿಗೂ ಹೆಂಡತಿ. ಶ್ರೇಷ್ಠವಾದ ಗುರುವಚನಾಮೃತ ಮಕ್ಕಳಿಗೆ ಮೀರಬಾರದ್ದಲ್ಲವೇ ?” ಎಂದು ಅರ್ಜುನ ನುಡಿದರೆ, ಯುಧಿಷ್ಠಿರ ನೃಪತಿ ಪಾರ್ಥನ ಮೇಲೆ ಕೋಪಿಸಿಕೊಂಡನು. ಕಲಿಭೀಮ, “ಇದು ಸಾಧ್ಯವಿಲ್ಲ” ಎಂದನು. ನಕುಲ ಸಹದೇವರು “ಇದು ಯೋಗ್ಯವಲ್ಲದ್ದು” ಎಂದರು. ನಾಲ್ವರೂ ಅರ್ಜುನನಿಗೆ ಪ್ರತಿಯಾಗಿ ಹೇಳಿದರು.
ಪದಾರ್ಥ (ಕ.ಗ.ಪ)
ವಿನುತ-ಶ್ರೇಷ್ಠವಾದ, ಅಲಂಘ್ಯ-ಮೀರಬಾರದ್ದು, ಕನಲು-ಕೋಪಿಸು, ಅನುಚಿತ-ಯೋಗ್ಯವಲ್ಲದ್ದು.
ಮೂಲ ...{Loading}...
ಜನನಿ ತಪ್ಪದು ನಿಮ್ಮ ನುಡಿಯೀ
ವನಜಮುಖಿಯೆಮ್ಮೈವರಿಗೆ ಸತಿ
ವಿನುತಗುರುವಚನಾಂಬುನಿಧಿ ಮಕ್ಕಳಿಗಲಂಘ್ಯವಲೆ
ಎನೆ ಯುಧಿಷ್ಠಿರ ನೃಪತಿ ಪಾರ್ಥನ
ಕನಲಿದನು ಕಲಿ ಭೀಮನಲ್ಲೆಂ
ದನು ನಕುಲ ಸಹದೇವರನುಚಿತವೆಂದರರ್ಜುನಗೆ ॥8॥
೦೦೯ ಎಲ್ಲ ಧರ್ಮದ ...{Loading}...
ಎಲ್ಲ ಧರ್ಮದ ಸಾರವನು ನೀವ್
ಬಲ್ಲಿರೈ ಸಲೆ ಹೇಳ್ವುದಾವುದು
ನಿಲ್ಲಿ ನೀವ್ ಸಹದೇವ ನಕುಲರು ನಿಮಗೆ ಮಾತೇಕೆ
ಬಲ್ಲಿರಖಿಳಾಮ್ನಾಯ ಭಾಷಿತ
ದಲ್ಲಿ ನೋಡಲು ಧರ್ಮಶಾಸ್ತ್ರದೊ
ಳೆಲ್ಲ ತಾಯಿಂದಧಿಕ ಗುರುವಿಲ್ಲೆಂದನಾ ಪಾರ್ಥ ॥9॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅದಕ್ಕೆ ಅರ್ಜುನನು, “ನೀವು ಎಲ್ಲ ಧರ್ಮದ ಸಾರವನ್ನು ಬಲ್ಲಿರಿ. ಇದರಲ್ಲಿ ಹೇಳಬೇಕಾದ್ದೇನಿದೆ ? ಸಹದೇವಾ, ನಕುಲಾ ನೀವು ನಿಲ್ಲಿ, ನಿಮಗೇಕೆ ಮಾತು ? ಸಮಸ್ತ ವೇದಭಾಷೆ, ಧರ್ಮಶಾಸ್ತ್ರಗಳಲ್ಲಿ ವಿಚಾರಿಸಿದರೂ ತಾಯಿಗಿಂತ ಹೆಚ್ಚಿನ ಗುರುಗಳಿಲ್ಲ ಎಂಬುದನ್ನು ನೀವು ತಿಳಿದಿದ್ದೀರಿ” ಎಂದು ಹೇಳಿ ಮುಂದುವರೆಸಿದನು.
ಪದಾರ್ಥ (ಕ.ಗ.ಪ)
ಆಮ್ನಾಯ-ವೇದ, ನೋಡು-ವಿಚಾರಿಸು
ಮೂಲ ...{Loading}...
ಎಲ್ಲ ಧರ್ಮದ ಸಾರವನು ನೀವ್
ಬಲ್ಲಿರೈ ಸಲೆ ಹೇಳ್ವುದಾವುದು
ನಿಲ್ಲಿ ನೀವ್ ಸಹದೇವ ನಕುಲರು ನಿಮಗೆ ಮಾತೇಕೆ
ಬಲ್ಲಿರಖಿಳಾಮ್ನಾಯ ಭಾಷಿತ
ದಲ್ಲಿ ನೋಡಲು ಧರ್ಮಶಾಸ್ತ್ರದೊ
ಳೆಲ್ಲ ತಾಯಿಂದಧಿಕ ಗುರುವಿಲ್ಲೆಂದನಾ ಪಾರ್ಥ ॥9॥
೦೧೦ ಮಾತೃವಚನವಲಙ್ಘ್ಯವಿದು ವಿ ...{Loading}...
ಮಾತೃವಚನವಲಂಘ್ಯವಿದು ವಿ
ಖ್ಯಾತಪದ್ಧತಿ ಲೋಕ ಯಾತ್ರಾ
ಭೀತಿಯಲಿ ಭಯವೇಕೆ ಧರ್ಮರಹಸ್ಯನಿಷ್ಠರಿಗೆ
ಏತಕೀ ಲೋಕಾನುಸರಣೆ ವಿ
ಧೂತ ಕಿಲ್ಬಿಷವಾವುದದು ಧ
ರ್ಮಾತಿಶಯವಿಹಪರಕೆ ಕಡುಹಿತವೆಂದನಾ ಪಾರ್ಥ ॥10॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ತಾಯಿಯ ಮಾತು ಮೀರಬಾರದ್ದು. ಇದು ಪ್ರಸಿದ್ಧವಾದ ಪದ್ಧತಿ. ಧರ್ಮರಹಸ್ಯವನ್ನು ತಿಳಿದು ಅದರಂತೆ ಅನುಷ್ಠಾನ ಮಾಡುವವರಿಗೆ ಲೋಕದ ನಡವಳಿಕೆಯ ಭಯದಲ್ಲಿ ಹೆದರಿಕೆಯೇಕೆ ? ಲೋಕದ ಅನುಸರಿಸುವಿಕೆ ಏತಕ್ಕೆ ? ಯಾವುದರಲ್ಲಿ ಪಾಪ ತೊಳೆಯಲ್ಪಡುತ್ತದೆಯೋ ಅದೇ ಅತಿಶಯವಾದ ಧರ್ಮ. ಅದೇ ಇಹಪರಗಳಿಗೆ ಅತಿ ಒಳ್ಳಿತು” ಎಂದು ಪಾರ್ಥ ಹೇಳಿದನು.
ಪದಾರ್ಥ (ಕ.ಗ.ಪ)
ವಿಖ್ಯಾತ-ಪ್ರಸಿದ್ಧ, ಕಿಲ್ಬಿಷ-ಪಾಪ, ವಿಧೂತ-ತೊಳೆಯಲ್ಪಟ್ಟ
ಮೂಲ ...{Loading}...
ಮಾತೃವಚನವಲಂಘ್ಯವಿದು ವಿ
ಖ್ಯಾತಪದ್ಧತಿ ಲೋಕ ಯಾತ್ರಾ
ಭೀತಿಯಲಿ ಭಯವೇಕೆ ಧರ್ಮರಹಸ್ಯನಿಷ್ಠರಿಗೆ
ಏತಕೀ ಲೋಕಾನುಸರಣೆ ವಿ
ಧೂತ ಕಿಲ್ಬಿಷವಾವುದದು ಧ
ರ್ಮಾತಿಶಯವಿಹಪರಕೆ ಕಡುಹಿತವೆಂದನಾ ಪಾರ್ಥ ॥10॥
೦೧೧ ರಾಗ ಲೋಭ ...{Loading}...
ರಾಗ ಲೋಭ ವ್ಯಾಪ್ತಿಯಲಿ ನೀ
ವೀ ಗುರುವಿಗಳುಪುವರೆ ಸಲೆ ಧ
ರ್ಮಾಗಮವನಾಚರಿಸುವದಲೇ ನಮ್ಮನುಷ್ಠಾನ
ಈಗಳೀ ಗುರುವಚನ ಧರ್ಮ
ತ್ಯಾಗವೇನಿದು ಧರ್ಮವೇ ಉಪ
ಭೋಗವೈವರಿಗೆಂದು ತಿಳುಹಿದನವರನಾ ಪಾರ್ಥ ॥11॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ರಾಗ, ಲೋಭಗಳ ಪ್ರಭಾವಕ್ಕೊಳಗಾಗಿ, ನೀವು ಗುರುವಾದ ನಮ್ಮ ತಾಯಿಯ ಮಾತನ್ನು ಮೀರಬಹುದೇ? ಚೆನ್ನಾಗಿ ಧರ್ಮಶಾಸ್ತ್ರಗಳನ್ನು ಅನುಸರಿಸಿ ನಡೆಯುವುದೇ ಅಲ್ಲವೆ ನಮ್ಮ ಕರ್ತವ್ಯ ? ಈಗ ಈ ಗುರುವಚನ ಪಾಲನೆಯೆಂಬ ಧರ್ಮವನ್ನು ಬಿಡುವುದೇನು ಧರ್ಮವೇ ? ಆದ್ದರಿಂದ ಉಪಭೋಗ ಐವರಿಗೂ ಆಗಬೇಕು ಎಂದು ಪಾರ್ಥ ತಿಳಿ ಹೇಳಿದನು.
ಪದಾರ್ಥ (ಕ.ಗ.ಪ)
ವ್ಯಾಪ್ತಿ-ಪ್ರಭಾವ, ಅಳುಪು-ಬಯಸು
ಮೂಲ ...{Loading}...
ರಾಗ ಲೋಭ ವ್ಯಾಪ್ತಿಯಲಿ ನೀ
ವೀ ಗುರುವಿಗಳುಪುವರೆ ಸಲೆ ಧ
ರ್ಮಾಗಮವನಾಚರಿಸುವದಲೇ ನಮ್ಮನುಷ್ಠಾನ
ಈಗಳೀ ಗುರುವಚನ ಧರ್ಮ
ತ್ಯಾಗವೇನಿದು ಧರ್ಮವೇ ಉಪ
ಭೋಗವೈವರಿಗೆಂದು ತಿಳುಹಿದನವರನಾ ಪಾರ್ಥ ॥11॥
೦೧೨ ಮಾಡದಿರಿ ಸನ್ದೇಹಗಳ ...{Loading}...
ಮಾಡದಿರಿ ಸಂದೇಹಗಳ ಖಯ
ಖೋಡಿಯಿದರೊಳಗಿಲ್ಲ ಧರ್ಮದ
ಮೂಡಿಗೆಯೊಳಂಬಿರಲಿ ಬಹಿರಂಗದಲಿ ಬಳಸದಿರಿ
ಗೂಡು ಹಲವಿಹ ಪಕ್ಷಿಯೊಂದಿದ
ನಾಡಬಾರದು ಸಾಕು ಚಿಂತಿಸ
ಬೇಡಿ ನೀವೆಂದನಿಬರನು ತಿಳುಹಿದನು ಕಲಿಪಾರ್ಥ ॥12॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಸಂಶಯಗಳನ್ನು ಮಾಡಬೇಡಿ. ಇದರಲ್ಲಿ ಯಾವ ಅನುಮಾನವೂ ಇಲ್ಲ. ಧರ್ಮದ ಬತ್ತಳಿಕೆಯಲ್ಲಿ ಬಾಣಗಳು ಇರಲಿ. ಹೊರಗಡೆ ಅದನ್ನು ಉಪಯೋಗಿಸದಿರಿ. ಹಲವು ಗೂಡುಗಳಿರುವ ಪಕ್ಷಿಯೊಂದಿದು. ಇದನ್ನು ಆಕ್ಷೇಪಿಸಬಾರದು. ನೀವು ಚಿಂತಿಸಬೇಡಿ” ಎಂದು ಪ್ರತಿಯೊಬ್ಬರನ್ನು ತಿಳಿಯ ಹೇಳಿ ಪಾರ್ಥ ಅವರನ್ನು ಒಪ್ಪಿಸಿದನು.
ಪದಾರ್ಥ (ಕ.ಗ.ಪ)
ಖಯಖೋಡಿ-ಅನುಮಾನ, ಮೂಡಿಗೆ-ಬತ್ತಳಿಕೆ, ಬಳಸು-ಉಪಯೋಗಿಸು, ಆಡು-ಆಕ್ಷೇಪಿಸು
ಮೂಲ ...{Loading}...
ಮಾಡದಿರಿ ಸಂದೇಹಗಳ ಖಯ
ಖೋಡಿಯಿದರೊಳಗಿಲ್ಲ ಧರ್ಮದ
ಮೂಡಿಗೆಯೊಳಂಬಿರಲಿ ಬಹಿರಂಗದಲಿ ಬಳಸದಿರಿ
ಗೂಡು ಹಲವಿಹ ಪಕ್ಷಿಯೊಂದಿದ
ನಾಡಬಾರದು ಸಾಕು ಚಿಂತಿಸ
ಬೇಡಿ ನೀವೆಂದನಿಬರನು ತಿಳುಹಿದನು ಕಲಿಪಾರ್ಥ ॥12॥
೦೧೩ ಆದುದನುಮತ ತಮ್ಮೊಳಗೆ ...{Loading}...
ಆದುದನುಮತ ತಮ್ಮೊಳಗೆ ತ
ತ್ಸೋದರರು ಸೌಹಾರ್ದದಿಂದ ತ
ಳೋದರಿಯನೊಲಿದೈವರಂಗೀಕರಿಸಿದರು ಬಳಿಕ
ಆದರಣೆಯಲಿ ಕುಂತಿ ಸೊಸೆಗೆ ವೃ
ಕೋದರನ ಭಿಕ್ಷಾನ್ನ ಭಾಗದ
ಭೇದವನು ತಿಳುಹಿದಳು ತೊಡೆಯಲಿ ತೆಗೆದು ಕುಳ್ಳಿರಿಸಿ ॥13॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಆ ಸೋದರರೊಳಗೆ ಒಪ್ಪಿಗೆಯಾಯಿತು. ಆ ಐವರು ಸಹೋದರರು ಮೈತ್ರಿಯಿಂದ, ಪ್ರೀತಿಯಿಂದ ತಳೋದರಿಯನ್ನು ಸ್ವೀಕರಿಸಿದರು. ಅನಂತರ ಕುಂತಿಯು ಸೊಸೆಯನ್ನು ತೊಡೆಯ ಮೇಲೆ ಕುಳ್ಳಿರಿಸಿಕೊಂಡು ಉಪಚಾರ ಮಾಡಿ, ಭೀಮನಿಗೆ ಸಲ್ಲಿಸುವ ಭಿಕ್ಷಾನ್ನ ಹಂಚಿಕೆಯಲ್ಲಿನ ಭಾಗದ ಭೇದವನ್ನು ತಿಳಿಸಿದಳು.
ಪದಾರ್ಥ (ಕ.ಗ.ಪ)
ಅನುಮತ-ಒಪ್ಪಿಗೆ, ಸೌಹಾರ್ದ-ಮೈತ್ರಿ, ತಳೋದರಿ-ತೆಳುವಾದ ಹೊಟ್ಟೆಯುಳ್ಳವಳು, ಆದರಣೆ-ಉಪಚಾರ, ವೃಕೋದರ-ಭೀಮ
ಮೂಲ ...{Loading}...
ಆದುದನುಮತ ತಮ್ಮೊಳಗೆ ತ
ತ್ಸೋದರರು ಸೌಹಾರ್ದದಿಂದ ತ
ಳೋದರಿಯನೊಲಿದೈವರಂಗೀಕರಿಸಿದರು ಬಳಿಕ
ಆದರಣೆಯಲಿ ಕುಂತಿ ಸೊಸೆಗೆ ವೃ
ಕೋದರನ ಭಿಕ್ಷಾನ್ನ ಭಾಗದ
ಭೇದವನು ತಿಳುಹಿದಳು ತೊಡೆಯಲಿ ತೆಗೆದು ಕುಳ್ಳಿರಿಸಿ ॥13॥
೦೧೪ ಇಳಿದನಸ್ತಾಚಲಕೆ ರವಿ ...{Loading}...
ಇಳಿದನಸ್ತಾಚಲಕೆ ರವಿ ನೃಪ
ತಿಲಕರೈವರು ವಿಹಿತಕೃತ್ಯಾ
ವಳಿಗಳನು ವಿಸ್ತರಿಸಿ ಕುಂತಿಯ ಚರಣಕಭಿನಮಿಸಿ
ಜಲರುಹಾಕ್ಷನ ನಾಮಕೀರ್ತನ
ಲುಳಿತ ಪರಮಾನಂದರಸದಲಿ
ಮುಳುಗಿ ಮೂಡುತ್ತಿರ್ದರಂದು ಕುಲಾಲ ಭವನದಲಿ ॥14॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅಷ್ಟರಲ್ಲಿ ಸೂರ್ಯನು ಅಸ್ತಾಚಲಕ್ಕೆ ಇಳಿದನು. ಅಂದು ಕುಂಬಾರನ ಮನೆಯಲ್ಲಿ ನೃಪಶ್ರೇಷ್ಠರೈವರು ಸಂಧ್ಯಾಕಾಲಕ್ಕೆ ಉಚಿತವಾದ ಕಾರ್ಯಗಳನ್ನು ನೆರವೇರಿಸಿ ಕುಂತಿಯ ಪಾದಗಳಿಗೆ ನಮಸ್ಕರಿಸಿ, ಕಮಲಗಣ್ಣಿನ ಕೃಷ್ಣನ ನಾಮಕೀರ್ತನೆ ಮಾಡುತ್ತ ಪರಮಾನಂದ ರಸದಲ್ಲಿ ವ್ಯಾಪಿಸಿ ಮುಳುಗೇಳುತ್ತಿದ್ದರು.
ಪದಾರ್ಥ (ಕ.ಗ.ಪ)
ಅಸ್ತಾಚಲ-ಸೂರ್ಯನು ಮುಳುಗಿ ಮರೆಯಾಗುವಂತೆ ತೋರುವ ಪರ್ವತ, ವಿಹಿತ-ಉಚಿತ, ಜಲರುಹಾಕ್ಷ-ಕಮಲದಂತೆ ಕಣ್ಣುಳ್ಳವನು, ಕೃಷ್ಣ, ಲುಳಿತ-ವ್ಯಾಪಿಸಿ, ಕುಲಾಲ-ಕುಂಬಾರ
ಮೂಲ ...{Loading}...
ಇಳಿದನಸ್ತಾಚಲಕೆ ರವಿ ನೃಪ
ತಿಲಕರೈವರು ವಿಹಿತಕೃತ್ಯಾ
ವಳಿಗಳನು ವಿಸ್ತರಿಸಿ ಕುಂತಿಯ ಚರಣಕಭಿನಮಿಸಿ
ಜಲರುಹಾಕ್ಷನ ನಾಮಕೀರ್ತನ
ಲುಳಿತ ಪರಮಾನಂದರಸದಲಿ
ಮುಳುಗಿ ಮೂಡುತ್ತಿರ್ದರಂದು ಕುಲಾಲ ಭವನದಲಿ ॥14॥
೦೧೫ ಸಿಲುಕಿದುದು ಜನದೃಷ್ಟಿ ...{Loading}...
ಸಿಲುಕಿದುದು ಜನದೃಷ್ಟಿ ಬಲುಗ
ತ್ತಲೆಯ ಬಂಧದೊಳಂಧಕಾರದ
ಜಲಧಿಯಲಿ ಜಗವದ್ದುದೇನೆಂಬೆನು ಮಹಾದ್ಭುತವ
ನಳಿನಮಿತ್ರನ ಬೇಹುಕಾರರ
ಸುಳಿವೊ ತಿಮಿರದ ಪಾಳೆಯದೊಳೆನೆ
ನಿಳಯದ ಸೊಡರು ತಳಿತುದು ಕೂಡೆ ನಗರಿಯಲಿ ॥15॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಆಗ ಜನರ ನೋಟ ಕಗ್ಗತ್ತಲೆಯ ಬಂಧನದಲ್ಲಿ ಸಿಕ್ಕಿಕೊಂಡಿತು. ಕತ್ತಲೆಯ ಸಾಗರದಲ್ಲಿ ಜಗತ್ತು ಮುಳುಗಿತು. ಮಹಾದ್ಭುತವನ್ನು ಏನೆಂದು ಹೇಳುವುದು ? ಕತ್ತಲೆಯ ಬಿಡಾರದಲ್ಲಿ ಸೂರ್ಯನ ಗೂಢಚಾರರ ತಿರುಗಾಟವೋ ಅನ್ನುವಂತೆ ಕೂಡಲೇ ನಗರದಲ್ಲಿ ಮನೆ ಮನೆಯಲ್ಲೂ ದೀಪ ಕಾಣಿಸಿಕೊಂಡಿತು.
ಪದಾರ್ಥ (ಕ.ಗ.ಪ)
ಬಲುಗತ್ತಲೆ-ಕಗ್ಗತ್ತಲೆ, ಅಂಧಕಾರ-ಕತ್ತಲೆ, ತಿಮಿರ-ಕತ್ತಲೆ, ಬೇಹುಗಾರರು-ಗೂಢಚಾರರು, ಸುಳಿವು-ತಿರುಗಾಟ, ಸೊಡರು-ದೀಪ, ತಳಿ-ಕಾಣಿಸು
ಮೂಲ ...{Loading}...
ಸಿಲುಕಿದುದು ಜನದೃಷ್ಟಿ ಬಲುಗ
ತ್ತಲೆಯ ಬಂಧದೊಳಂಧಕಾರದ
ಜಲಧಿಯಲಿ ಜಗವದ್ದುದೇನೆಂಬೆನು ಮಹಾದ್ಭುತವ
ನಳಿನಮಿತ್ರನ ಬೇಹುಕಾರರ
ಸುಳಿವೊ ತಿಮಿರದ ಪಾಳೆಯದೊಳೆನೆ
ನಿಳಯದ ಸೊಡರು ತಳಿತುದು ಕೂಡೆ ನಗರಿಯಲಿ ॥15॥
೦೧೬ ಇವರಿಗುಣ್ಟೇ ದೀಪ ...{Loading}...
ಇವರಿಗುಂಟೇ ದೀಪ ತೈಲ
ದ್ರವಿಣವಿಲ್ಲ ಕುಲಾಲ ಭವನಕೆ
ಕವಿವ ಕಗ್ಗತ್ತಲೆಯ ನುಗ್ಗೊತ್ತಿದುದು ಬೇರೊಂದು
ನವ ಯುವತಿಯಾಭರಣ ಮಣಿರುಚಿ
ನಿವಹವಾಕೆಯ ನಯನಕಾಂತಿಗ
ಳವನಿಪತಿ ಕೇಳ್ ನಿನ್ನ ಪಿತನ ಪಿತಾಮಹರ ಪರಿಯ ॥16॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಇವರಿಗುಂಟೇ ದೀಪ? ಎಣ್ಣೆಯನ್ನು ಕೊಳ್ಳಲು ದ್ರವ್ಯವಿಲ್ಲ. ಆದರೆ ಕುಂಬಾರನ ಮನೆಗೆ ಮುತ್ತಿದ ಕಗ್ಗತ್ತಲೆಯಲ್ಲಿ ನುಸುಳಿ ಆಕ್ರಮಿಸುತ್ತಿದ್ದುದು ಬೇರೊಂದು ಸಾಧನ. ನವಯುವತಿಯ ಆಭರಣದ ಮಣಿಗಳ ಕಾಂತಿ ಸಮೂಹ ಹಾಗೂ ಆಕೆಯ ಕಣ್ಣಿನ ಕಾಂತಿಗಳೂ ಕತ್ತಲೆಯನ್ನು ಓಡಿಸಿದುವು. ನಿನ್ನ ತಂದೆ ಪರೀಕ್ಷಿತನ ತಾತಂದಿರು ಪಾಂಡವರ ರೀತಿಯನ್ನು ಕೇಳು ಮಹಾರಾಜ ಎಂದು ವೈಶಂಪಾಯನರು ಹೇಳಿದರು.
ಪದಾರ್ಥ (ಕ.ಗ.ಪ)
ದ್ರವಿಣ-ದ್ರವ್ಯ, ನುಗ್ಗು-ನುಸುಳು, ಒತ್ತು-ಆಕ್ರಮಿಸು, ರುಚಿ-ಕಾಂತಿ, ನಯನ-ಕಣ್ಣು, ಪರಿ-ರೀತಿ
ಮೂಲ ...{Loading}...
ಇವರಿಗುಂಟೇ ದೀಪ ತೈಲ
ದ್ರವಿಣವಿಲ್ಲ ಕುಲಾಲ ಭವನಕೆ
ಕವಿವ ಕಗ್ಗತ್ತಲೆಯ ನುಗ್ಗೊತ್ತಿದುದು ಬೇರೊಂದು
ನವ ಯುವತಿಯಾಭರಣ ಮಣಿರುಚಿ
ನಿವಹವಾಕೆಯ ನಯನಕಾಂತಿಗ
ಳವನಿಪತಿ ಕೇಳ್ ನಿನ್ನ ಪಿತನ ಪಿತಾಮಹರ ಪರಿಯ ॥16॥
೦೧೭ ಜನಪ ನನ್ದನೆಗೊನ್ದು ...{Loading}...
ಜನಪ ನಂದನೆಗೊಂದು ಕೃಷ್ಣಾ
ಜಿನವನಿತ್ತರು ಶಯನ ಭಾಗಕೆ
ಜನನಿಯಂಘ್ರಿಯ ಬಳಿಯಲೊರಗಿದರೈವರೊಂದಾಗಿ
ವನಿತೆಯವರಂಘ್ರಿಗಳ ತಲೆಗಿಂ
ಬಿನಲಿ ಮಲಗಿದಳಂದಿನಾಹವ
ಜನಿತ ಕೃತಿಯನು ನುಡಿವುತಿರ್ದನು ಪಾರ್ಥನರಸಂಗೆ ॥17॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ರಾಜಪುತ್ರಿ ದ್ರೌಪದಿಗೆ ಮಲಗುವುದಕ್ಕೆ ಒಂದು ಕೃಷ್ಣಾಜಿನವನ್ನು ಕೊಟ್ಟರು. ತಾವೈವರೂ ತಾಯಿ ಕುಂತಿಯ ಪಾದಗಳ ಬಳಿ ಮಲಗಿದರು. ದ್ರೌಪದಿ ಅವರ ಪಾದಗಳನ್ನು ತನ್ನ ತಲೆಗೆ ಆಶ್ರಯ ಮಾಡಿಕೊಂಡು ಮಲಗಿದಳು. ಆಗ, ಅರ್ಜುನನು ಧರ್ಮರಾಜನಿಗೆ ಅಂದಿನ ಯುದ್ಧದಿಂದ ಹುಟ್ಟಿದ ಕಾರ್ಯಗಳನ್ನು ಹೇಳುತ್ತಿದ್ದನು.
ಪದಾರ್ಥ (ಕ.ಗ.ಪ)
ಇಂಬು-ಆಶ್ರಯ, ಜನಿತ-ಹುಟ್ಟಿದ
ಮೂಲ ...{Loading}...
ಜನಪ ನಂದನೆಗೊಂದು ಕೃಷ್ಣಾ
ಜಿನವನಿತ್ತರು ಶಯನ ಭಾಗಕೆ
ಜನನಿಯಂಘ್ರಿಯ ಬಳಿಯಲೊರಗಿದರೈವರೊಂದಾಗಿ
ವನಿತೆಯವರಂಘ್ರಿಗಳ ತಲೆಗಿಂ
ಬಿನಲಿ ಮಲಗಿದಳಂದಿನಾಹವ
ಜನಿತ ಕೃತಿಯನು ನುಡಿವುತಿರ್ದನು ಪಾರ್ಥನರಸಂಗೆ ॥17॥
೦೧೮ ಗೆಲಿದ ಪರಿಯನು ...{Loading}...
ಗೆಲಿದ ಪರಿಯನು ಕೌರವೇಂದ್ರನ
ದಳವ ಮುರಿದಂದವನು ಕರ್ಣನ
ನಳುಕದೆಚ್ಚ ಶರಪ್ರಯೋಗದ ಚಾಪ ಕೌಶಲವ
ಬಲಜಲಧಿ ಮುಕ್ಕುರಿಕಿದರೆ ಮಂ
ಡಲಿಸಿ ಮೊಗೆದಂದವನು ಶಸ್ತ್ರಾ
ವಳಿಯ ಸಂಹರಣವನು ವಿವರಿಸಿದನು ಮಹೀಪತಿಗೆ ॥18॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ತಾನು ಗೆದ್ದ ರೀತಿಯನ್ನೂ ಕೌರವೇಂದ್ರನ ಸೈನ್ಯವನ್ನು ಸೋಲಿಸಿದ ರೀತಿಯನ್ನೂ, ಹೆದರದೆ, ಕರ್ಣನನ್ನು ಹಿಮ್ಮೆಟ್ಟಿಸಿದ ಬಿಲ್ಲಿನ ಚಮತ್ಕಾರವನ್ನೂ, ಸೈನ್ಯ ಸಾಗರ ಪ್ರತಿಭಟಿಸಿದರೆ ಅದನ್ನು ಸುತ್ತುವರಿದು ಆಕ್ರಮಿಸಿದ ರೀತಿಯನ್ನೂ, ಕೊನೆಯಲ್ಲಿ ಶಸ್ತ್ರಗಳನ್ನು ಉಪಸಂಹರಿಸಿದುದನ್ನು ಧರ್ಮರಾಜನಿಗೆ ಅರ್ಜುನನು ವಿವರಿಸಿದನು.
ಪದಾರ್ಥ (ಕ.ಗ.ಪ)
ಮುಕ್ಕುರಿಕು-ಪ್ರತಿಭಟಿಸು, ಮಂಡಳಿಸು-ಸುತ್ತುವರಿ, ಸಂಹರಣ-ಉಪಸಂಹಾರ
ಪಾಠಾನ್ತರ (ಕ.ಗ.ಪ)
ಮೊಗ - ಮೊಗೆ
ಕನ್ನಡ ಭಾರತ, ಕನ್ನಡ ವಿ.ವಿ. ಹಂಪಿ
ಮೂಲ ...{Loading}...
ಗೆಲಿದ ಪರಿಯನು ಕೌರವೇಂದ್ರನ
ದಳವ ಮುರಿದಂದವನು ಕರ್ಣನ
ನಳುಕದೆಚ್ಚ ಶರಪ್ರಯೋಗದ ಚಾಪ ಕೌಶಲವ
ಬಲಜಲಧಿ ಮುಕ್ಕುರಿಕಿದರೆ ಮಂ
ಡಲಿಸಿ ಮೊಗೆದಂದವನು ಶಸ್ತ್ರಾ
ವಳಿಯ ಸಂಹರಣವನು ವಿವರಿಸಿದನು ಮಹೀಪತಿಗೆ ॥18॥
೦೧೯ ಕುದುರೆಯೇರಾಟವನು ಮಾತಂ ...{Loading}...
ಕುದುರೆಯೇರಾಟವನು ಮಾತಂ
ಗದ ಸುಶಿಕ್ಷಾಭೇದವನು ರಥ
ವಿದಿತ ಕೌಶಲವನು ಶರಾಸನವೇದಸಂಗತಿಯ
ಮದವದರಿ ಭಂಜನವ ದಿವ್ಯಾ
ಸ್ತ್ರದಲಿ ಮುಕ್ತಾಮುಕ್ತಸಮರಂ
ಗದ ಸುಸಂಗತಿಯಿಂದ ನೂಕಿದರಿವರು ಯಾಮಿನಿಯ ॥19॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕುದುರೆಯ ಸವಾರಿ, ಆನೆಯ ಒಳ್ಳೆಯ ಶಿಕ್ಷಣದ ವ್ಯತ್ಯಾಸಗಳನ್ನು ರಥದ ಪ್ರಸಿದ್ಧ ಕೌóಶಲವನ್ನು, ಧನುರ್ವೇದ ವಿಚಾರವನ್ನು, ಮದಿಸಿದ ಶತ್ರುಗಳನ್ನು ಸೋಲಿಸುವುದನ್ನು, ದಿವ್ಯಾಸ್ತ್ರಗಳು, ಕೈಯಲ್ಲಿ ಹಿಡಿದು ಎಸೆದು ಪ್ರಯೋಗಿಸುವ ಈಟಿ ಮೊದಲಾದ ಆಯುಧಗಳ ಯುದ್ಧಗಳು ಈ ಎಲ್ಲ ಒಳ್ಳೆಯ ವಿಚಾರ ಮಾಡುತ್ತ ಇವರು ರಾತ್ರಿಯನ್ನು ಕಳೆದರು.
ಪದಾರ್ಥ (ಕ.ಗ.ಪ)
ಯಾಮಿನಿ-ರಾತ್ರಿ
ಮೂಲ ...{Loading}...
ಕುದುರೆಯೇರಾಟವನು ಮಾತಂ
ಗದ ಸುಶಿಕ್ಷಾಭೇದವನು ರಥ
ವಿದಿತ ಕೌಶಲವನು ಶರಾಸನವೇದಸಂಗತಿಯ
ಮದವದರಿ ಭಂಜನವ ದಿವ್ಯಾ
ಸ್ತ್ರದಲಿ ಮುಕ್ತಾಮುಕ್ತಸಮರಂ
ಗದ ಸುಸಂಗತಿಯಿಂದ ನೂಕಿದರಿವರು ಯಾಮಿನಿಯ ॥19॥
೦೨೦ ಆಯುಧದ ಲಕ್ಷಣವನಾ ...{Loading}...
ಆಯುಧದ ಲಕ್ಷಣವನಾ ದಿ
ವ್ಯಾಯುಧದ ಮಂತ್ರಪ್ರಭಾವವ
ನಾಯುಧದ ವಿವಿಧ ಪ್ರಯೋಗವನದರ ಪರಿವಿಡಿಯ
ರಾಯರಂಗದ ಶಕ್ತಿವರ್ಗದು
ಪಾಯಗುಣ ವಿಕ್ರಮ ಪರಾಕ್ರಮ
ನಾಯಕರ ಗುಣಕಥನದಲಿ ನೂಕಿದರು ಯಾಮಿನಿಯ ॥20॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಆಯುಧದ ಲಕ್ಷಣವನ್ನೂ, ದಿವ್ಯ ಆಯುಧದ ಮಂತ್ರ ಪ್ರಭಾವವನ್ನು ಮತ್ತು ವಿವಿಧ ಪ್ರಯೋಗಗಳನ್ನು, ಅದರ ಕ್ರಮವನ್ನೂ ರಾಜನೀತಿಯ ಅನುಸಾರವಾಗಿ ಶಕ್ತಿ ವರ್ಗದ ಉಪಾಯ ಗುಣ, ವಿಕ್ರಮ, ಪರಾಕ್ರಮ, ನಾಯಕರ ಗುಣಕಥನ ಇವುಗಳ ಚರ್ಚೆಯಲ್ಲಿ ರಾತ್ರಿಯನ್ನು ಕಳೆದರು.
ಪದಾರ್ಥ (ಕ.ಗ.ಪ)
ಪರಿವಿಡಿ-ಕ್ರಮ
ಮೂಲ ...{Loading}...
ಆಯುಧದ ಲಕ್ಷಣವನಾ ದಿ
ವ್ಯಾಯುಧದ ಮಂತ್ರಪ್ರಭಾವವ
ನಾಯುಧದ ವಿವಿಧ ಪ್ರಯೋಗವನದರ ಪರಿವಿಡಿಯ
ರಾಯರಂಗದ ಶಕ್ತಿವರ್ಗದು
ಪಾಯಗುಣ ವಿಕ್ರಮ ಪರಾಕ್ರಮ
ನಾಯಕರ ಗುಣಕಥನದಲಿ ನೂಕಿದರು ಯಾಮಿನಿಯ ॥20॥
೦೨೧ ಮುನಿವಳೀ ಸತಿಯೆನ್ದು ...{Loading}...
ಮುನಿವಳೀ ಸತಿಯೆಂದು ನಿದ್ರಾಂ
ಗನೆಯ ನೂಕಿದರವನಿಪರು ಭಾ
ಮಿನಿ ಸಹಿತಲಿರಲಿತ್ತಲೀ ಪಾಂಚಾಲ ಭೂಪತಿಯ
ತನುಜನಿವರ ಪರೀಕ್ಷೆಗೋಸುಗ
ಮುನಿಪ ಕಾಶ್ಯಪಗೂಡಿ ಕೇಳಿದ
ನನಿತು ಮಾತೆಲ್ಲವನು ಮರೆಯಲಿ ನಿಂದು ರಜನಿಯಲಿ ॥21॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಈ ಸತಿ ಕೋಪಿಸುವಳೆಂದು ಭೂಪತಿಗಳು ನಿದ್ರಾಂಗನೆಯನ್ನು ನೂಕಿದರು. ಹೀಗೆ ಇವರು ಅಂದಿನ ಯುದ್ಧದ ವಿವರಗಳನ್ನು ಕುರಿತು ಆಡಿಕೊಳ್ಳುತ್ತ ಆ ಹೆಂಗಸಿನೊಂದಿಗೆ ಇರುತ್ತಿರಲು, ಇತ್ತಕಡೆ, ಈ ಪಾಂಚಾಲ ಮಹಾರಾಜನ ಮಗ ಧೃಷ್ಟದ್ಯುಮ್ನನು ಇವರನ್ನು ಪರೀಕ್ಷಿಸುವುದಕ್ಕಾಗಿ ಕಾಶ್ಯಪ ಮುನಿಯೊಡನೆ ರಹಸ್ಯವಾಗಿ ಹೊರಟು ಬಂದು ಇವರ ಮಾತೆಲ್ಲವನ್ನೂ ಕತ್ತಲೆಯಲ್ಲಿ ಮರೆಯಾಗಿ ನಿಂತು ಕೇಳಿದನು.
ಪದಾರ್ಥ (ಕ.ಗ.ಪ)
ತನುಜ-ಮಗ, ರಜನಿ-ಕತ್ತಲೆ
ಟಿಪ್ಪನೀ (ಕ.ಗ.ಪ)
ಕಾಶ್ಯಪ ಋಷಿ - ಇವನನ್ನು ಕಶ್ಯಪ ಎಂದೂ ಹೇಳುತ್ತಾರೆ. ಈತ ವೇದಾಧ್ಯಯನ ಸಂಪನ್ನನಾದ ಒಬ್ಬ ಬಡಬ್ರಾಹ್ಮಣ. ಮಹಾಭಾರತದ ಆಸ್ತಿಕಪರ್ವದಲ್ಲಿ ಬರುವ ಅಸಾಧಾರಣ ವ್ಯಕ್ತಿ. ಜ್ಞಾನಿ, ಸರ್ಪವೈದ್ಯ, ಪರೋಪಕಾರಿ. ಇವನ ಸಾಧನೆಯನ್ನು ಮೆಚ್ಚು ಸ್ವಯಂ ಬ್ರಹ್ಮನೇ ಈತನಿಗೆ ಸರ್ಪವಿಷದ ಚಿಕಿತ್ಸೆಯ ಮಂತ್ರವನ್ನು ಉಪದೇಶಿಸಿದ್ದನಂತೆ! ಎಂಥ ಉಗ್ರವಿಷವನ್ನೂ ನಿರ್ವೀರ್ಯಗೊಳಿಸುವ ಶಕ್ತಿ ಈತನಿಗಿತ್ತು. ಸಂಜೀವನ ವಿದ್ಯಾನಿಪುಣ ಆತ.
ಪರೀಕ್ಷಿತನಿಗೆ ಬಂದೊದಗಿದ ಶಾಪವನ್ನೂ ತಕ್ಷಕನು ಪರೀಕ್ಷಿತನನ್ನು ಕೊಲ್ಲಲು ಸಮಯ ಕಾಯುತ್ತಿರುವನೆಂಬ ವಿಷಯವನ್ನೂ ತಿಳಿದ ಕಾಶ್ಯಪನು ಹಸ್ತಿನಾಪುರದ ಕಡೆಗೆ ಬರುತ್ತಿದ್ದ. ಕೀರ್ತಿ, ಹಣ ಮತ್ತು ಧರ್ಮವನ್ನು ಗಳಿಸುವುದು ಅವನ ಉದ್ದೇಶವಾಗಿತ್ತು. ಮಹಾರಾಜನನ್ನು ಬದುಕಿಸಿದರೆ ರಾಜನಿಂದ ತುಂಬ ಸಂಪತ್ತು ಸಿಕ್ಕಿ ತನ್ನ ಬಡತನ ನೀಗುತ್ತದೆ, ಒಳ್ಳೆಯ ಹೆಸರೂ ಬರುತ್ತದೆ. ಅಲ್ಲದೆ ಧರ್ಮಾತ್ಮನಾದ ಮಹಾರಾಜನನ್ನು ಬದುಕಿಸುವುದು ಧರ್ಮದ ಗಳಿಕೆಗೂ ಸಹಾಯಕವಾಗುತ್ತದೆ. ಇದು ಅವನ ವಿಚಾರಸರಣಿ.
ಶಾಪ ನೆರವೇರುವಂತೆ ಪರೀಕ್ಷಿತನನ್ನು ಕಚ್ಚಿ ಕೊಲ್ಲಲೆಂದು ತಕ್ಷಕನೂ ಹೊರಟ. ಪರೀಕ್ಷಿತನ ಸುತ್ತ ಇರುವ ಭದ್ರಕಾವಲನ್ನು ಛೇದಿಸಿ ಹೇಗೆ ನುಗ್ಗುವುದು ಎಂಬ ಚಿಂತನೆಯಲ್ಲಿ ಅವನು ಬರುತ್ತಿದ್ದ. ಇವನಿಗೆ ನೇರವಾಗಿ ಆ ಕಾಶ್ಯಪನೇ ಎದುರಿಗೆ ಬರಬೇಕೆ? ಸುಮ್ಮನೆ ಬಾಯಿ ಚಪಲಕ್ಕೆ ಆ ಬ್ರಾಹ್ಮಣನನ್ನು ‘‘ಎಲ್ಲಿಗೆ ಹೋಗುತ್ತಿದ್ದೀಯೆ’’ ಎಂದು ಕೇಳಿದ. ಕಾಶ್ಯಪ ನೇರವಾಗಿ ಸತ್ಯಸಂಗತಿ ಹೇಳಿದ.
‘‘ಆ ತಕ್ಷಕ ನಮ್ಮ ಮಹಾರಾಜ ಪರೀಕ್ಷಿತನನ್ನು ಕೊಲ್ಲುತ್ತಾನಂತೆ. ನಾನು ಮಂತ್ರಪ್ರಭಾವದಿಂದ ಅವನನ್ನು ಬದುಕಿಸಲು ಹೋಗುತ್ತಿದ್ದೇನೆ.’’
ತಕ್ಷಕ ವಿವರವಾಗಿ ಎಲ್ಲ ತಿಳಿದುಕೊಂಡು ಜೋರಾಗಿ ನಕ್ಕ.
‘‘ಆ ತಕ್ಷಕನು ನಾನೇ. ಬೇರೆ ಸರ್ಪಗಳು ಕಡಿದರೆ ನೀನು ಬದುಕಿಸಬಲ್ಲೆ ಎಂದು ಕಾಣುತ್ತದೆ. ಆದರೆ ನಾನು ಕಚ್ಚಿದರೆ ಯಾರೂ ಬದುಕಿಸಲಾರರು!’’
ಕಾಶ್ಯಪನಿಗೂ ನಗು ಬಂತು. ಇಬ್ಬರಿಗೂ ತಮ್ಮತಮ್ಮ ಸಾಮಥ್ರ್ಯದ ಬಗೆಗೆ ಅಪಾರ ವಿಶ್ವಾಸವಿದ್ದುದೇ ಇದಕ್ಕೆ ಕಾರಣ. ಅವನಿಗೆ ತನ್ನ ಶಕ್ತಿಯನ್ನು ಪ್ರದರ್ಶಿಸುವ ಹಂಬಲ ತಕ್ಷಕನಿಗೆ. ಕೂಡಲೇ ಇಬ್ಬರೂ ಒಂದು ಒಪ್ಪಂದಕ್ಕೆ ಬಂದರು. ಸ್ಥಳದಲ್ಲೇ ಸತ್ವಪರೀಕ್ಷೆ ಸ್ಪರ್ಧೆ ನಡೆಯಿತು. ತಕ್ಷಕನು ಆ ಕಾಡಿನಲ್ಲಿದ್ದ ಒಂದು ದೊಡ್ಡ ಅರಳೀಮರವನ್ನು ಕಚ್ಚಿದ. ಕೂಡಲೇ ಆ ಮರ ಸುಟ್ಟು ಬೂದಿಯಾಯಿತು. ಕಾಶ್ಯಪನಿಗೆ ಇದೋನೋ ದೊಡ್ಡ ಸಾಧನೆ ಎನ್ನಿಸಲಿಲ್ಲ. ಕೂಡಲೇ ಅವನು ತನ್ನ ಅದ್ಭುತ ಸಂಜೀವನ ಮಂತ್ರ ಪ್ರಭಾವವನ್ನು ತೋರಿದ. ಏನಾಶ್ಚರ್ಯ! ಕೂಡಲೇ ಆ ಬೂದಿ ಮತ್ತೆ ಕೂಡಕೊಂಡು ಜೀವ ಪಡೆಯಿತು. ಈ ಅದ್ಭುತವನ್ನು ಕಂಡು ತಕ್ಷಕ ಬೆರಗಾದ. ಅವನ ಮನಸ್ಸು ಒಲಿಸಿಕೊಳ್ಳುವ ಯತ್ನ ಮಾಡಿದ.
‘‘ವಿಪ್ರವರ! ಬ್ರಾಹ್ಮಣ ಶಾಪದ ಪರಿಣಾಮವಾಗಿ ಪರೀಕ್ಷಿತನ ಆಯುಸ್ಸು ಮುಗಿಯುತ್ತ ಬಂದಿದೆ. ವಿಧಿಯನ್ನು ಬದಲಾಯಿಸುವ ಪ್ರಯತ್ನ ಮಾಡಬೇಡ. ಅಲ್ಲದೆ ಆ ಪರೀಕ್ಷಿತ ಕೊಡುತ್ತಿದ್ದುದಕ್ಕಿಂತ ಹೆಚ್ಚಿನ ಸಂಪತ್ತನ್ನು ನಾನು ನಿನಗೆ ಕೊಡುತ್ತೇನೆ.’’
ಕೌಶಿಕ ಈ ಸಂಧಾನದ ಮಾತಿಗೆ ಒಪ್ಪಿಕೊಂಡನೆಂದು ಹೇಳಬೇಕಿಲ್ಲವಷ್ಟೆ.
ಅದಿರಲಿ ಆ ನಿರ್ಜನ ಅರಣ್ಯದಲ್ಲಿ ಅವರಿಬ್ಬರಿಗೆ ನಡೆದ ಸಂಭಾಷಣೆ ಹೇಗೆ ಬಯಲಾಯಿತು ಗೊತ್ತೆ? ಅಲ್ಲೊಬ್ಬ ಬ್ರಾಹ್ಮಣ. ಇವರಿಬ್ಬರ ಸಂಭಾಷಣೆ ಕೇಳಲು ಮರಹತ್ತಿ ಕುಳಿತಿದ್ದ. ತಕ್ಷಕನು ಮರವನ್ನು ಸುಟ್ಟಾಗ ಇವನೂ ಬೂದಿಯಾದ ಕಾಶ್ಯಪನು ಬದುಕಿಸಿದಾಗ ಇವನೂ ಬದುಕಿ ಈ ಕಥೆಯನ್ನು ಎಲ್ಲರಿಗೂ ಹೇಳಿದ!
ಮೂಲ ...{Loading}...
ಮುನಿವಳೀ ಸತಿಯೆಂದು ನಿದ್ರಾಂ
ಗನೆಯ ನೂಕಿದರವನಿಪರು ಭಾ
ಮಿನಿ ಸಹಿತಲಿರಲಿತ್ತಲೀ ಪಾಂಚಾಲ ಭೂಪತಿಯ
ತನುಜನಿವರ ಪರೀಕ್ಷೆಗೋಸುಗ
ಮುನಿಪ ಕಾಶ್ಯಪಗೂಡಿ ಕೇಳಿದ
ನನಿತು ಮಾತೆಲ್ಲವನು ಮರೆಯಲಿ ನಿಂದು ರಜನಿಯಲಿ ॥21॥
೦೨೨ ಬನ್ದು ಧೃಷ್ಟದ್ಯುಮ್ನನಯ್ಯಂ ...{Loading}...
ಬಂದು ಧೃಷ್ಟದ್ಯುಮ್ನನಯ್ಯಂ
ಗೆಂದನಿನನಸ್ತಮಯ ಸಂಧ್ಯಾ
ವಂದನೆಯ ತರುವಾಯ ಶಸ್ತ್ರಾಸ್ತ್ರಪ್ರಸಂಗದಲಿ
ಸಂದ ಗಜ ಹಯ ರಥದ ಪರಿವಿಡಿ
ಯಿಂದವರು ನೃಪನೀತಿ ಸಂಗತಿ
ಯಿಂದ ರಾತ್ರಿಯ ಕಳೆದರಾರೆಂದರಿಯೆ ನಾನೆಂದ ॥22॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅರಮನೆಗೆ ಹಿಂದಿರುಗಿ ತಂದೆಯನ್ನು ಕಂಡು ಧೃಷ್ಟದ್ಯುಮ್ನನು “ಸೂರ್ಯಾಸ್ತ ಸಮಯದಲ್ಲಿ ಸಂಧ್ಯಾವಂದನೆಯ ಬಳಿಕ ಅವರು ಶಸ್ತ್ರಾಸ್ತ್ರಗಳನ್ನು ಕುರಿತು, ಆನೆ, ಕುದುರೆ, ರಥಗಳ ಪರಿಪಾಟದ ಬಗ್ಗೆ, ರಾಜನೀತಿ ವಿವರಗಳನ್ನು ಚರ್ಚಿಸುತ್ತ ರಾತ್ರಿಯನ್ನು ಕಳೆದರು. ಅವರು ಯಾರೋ ಕಾಣೆ” ಎಂದನು.
ಪದಾರ್ಥ (ಕ.ಗ.ಪ)
ಪರಿವಿಡಿ-ಪರಿಪಾಟ
ಮೂಲ ...{Loading}...
ಬಂದು ಧೃಷ್ಟದ್ಯುಮ್ನನಯ್ಯಂ
ಗೆಂದನಿನನಸ್ತಮಯ ಸಂಧ್ಯಾ
ವಂದನೆಯ ತರುವಾಯ ಶಸ್ತ್ರಾಸ್ತ್ರಪ್ರಸಂಗದಲಿ
ಸಂದ ಗಜ ಹಯ ರಥದ ಪರಿವಿಡಿ
ಯಿಂದವರು ನೃಪನೀತಿ ಸಂಗತಿ
ಯಿಂದ ರಾತ್ರಿಯ ಕಳೆದರಾರೆಂದರಿಯೆ ನಾನೆಂದ ॥22॥
೦೨೩ ಧರಣಿಪತಿ ಕೇಳ್ ...{Loading}...
ಧರಣಿಪತಿ ಕೇಳ್ ವಿಪ್ರರಾದರೆ
ಸರಸ ನವಭೋಜನದ ಕಥೆ ಮೇಣ್
ನಿರತಿಶಯವೇದಾಂಗವೇದ ತದರ್ಥ ತರ್ಕಗಳು
ಅರಸುಗಳಿಗಾಯುಧದ ಗಜ ರಥ
ತುರಗದೇರಾಟದ ಮಹಾಸ್ತ್ರದ
ವಿರಚನೆಗಳಿವು ಜಾತಿವಿದ್ಯಗಳೆಂದನಾ ಮುನಿಪ ॥23॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕಾಶ್ಯಪರು ದ್ರುಪದನನ್ನು ಕುರಿತು, “ಬ್ರಾಹ್ಮಣರಾಗಿದ್ದರೆ, ರಸಭರಿತವಾದ ಹೊಸ ಭೋಜನದ ಮಾತು ಅಥವಾ ಅತಿ ಉತ್ತಮವಾದ ವೇದ, ವೇದಾಂಗಗಳು ಮತ್ತು ಅವುಗಳ ಅರ್ಥವನ್ನು, ತರ್ಕಗಳ ಬಗ್ಗೆ ಮಾತು ನಡೆಯಬೇಕಾಗಿತ್ತು. ರಾಜರಿಗೆ ಆಯುಧ, ಆನೆ, ರಥ, ಕುದುರೆ ಸವಾರಿ, ಮಹಾಸ್ತ್ರಗಳ ರಚನೆ ಇವು ಜಾತಿವಿದ್ಯೆಗಳು” ಎಂದು ಹೇಳಿದನು.
ಪದಾರ್ಥ (ಕ.ಗ.ಪ)
ಸರಸ-ರಸಭರಿತವಾದ, ನಿರತಿಶಯ-ಅತಿಉತ್ತಮವಾದ
ಮೂಲ ...{Loading}...
ಧರಣಿಪತಿ ಕೇಳ್ ವಿಪ್ರರಾದರೆ
ಸರಸ ನವಭೋಜನದ ಕಥೆ ಮೇಣ್
ನಿರತಿಶಯವೇದಾಂಗವೇದ ತದರ್ಥ ತರ್ಕಗಳು
ಅರಸುಗಳಿಗಾಯುಧದ ಗಜ ರಥ
ತುರಗದೇರಾಟದ ಮಹಾಸ್ತ್ರದ
ವಿರಚನೆಗಳಿವು ಜಾತಿವಿದ್ಯಗಳೆಂದನಾ ಮುನಿಪ ॥23॥
೦೨೪ ಭೂರಿ ಧನ ...{Loading}...
ಭೂರಿ ಧನ ವರ್ಧನ ಸದಾವ್ಯವ
ಹಾರ ಲಾಭಾಲಾಭ ಚಿಂತೆಗ
ಳೂರುಜನಿತರಿಗಂತ್ಯವರ್ಣಕೆ ಕೃಷಿಯ ಮಾತಗಳು
ಆರನಾದರು ಜಾತಿಧರ್ಮದ
ಸೇರುವೆಗಳೇ ಹೇಳುವುವು ನ
ಮ್ಮಾರಯಿಕೆಗಿವರಿಂದು ಕ್ಷತ್ರಿಯರೆಂದು ಮುನಿ ನುಡಿದ ॥24॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಹೆಚ್ಚು, ಸಂಪತ್ತನ್ನು ಬೆಳಸುವುದು ಯಾವಾಗಲೂ, ವ್ಯವಹಾರ ಲಾಭನಷ್ಟದ ಚಿಂತೆಗಳು ವೈಶ್ಯರಿಗೆ ಸಹಜ ವಿಷಯಗಳು, ಶೂದ್ರರಿಗೆ ಕೃಷಿಯ ಮಾತುಗಳು ಸಹಜ. ಇವು ಅವರವರ ಜಾತಿ ವಿದ್ಯೆಗಳು. ಯಾರನ್ನೇ ಆದರೂ ಅವರವರ ಜಾತಿಧರ್ಮದ ಲಕ್ಷಣಗಳೇ ಇವರಿಂಥವರೆಂದು ಗುರುತಿಸಿ ಹೇಳಿಬಿಡುತ್ತವೆ. ನಮ್ಮ ವಿಚಾರದಲ್ಲಿ ಇವರು ಕ್ಷತ್ರಿಯರೇ ಸರಿ ಎಂದು ತೋರುತ್ತದೆ” ಎಂದು ಮುನಿ ನುಡಿದನು.
ಪದಾರ್ಥ (ಕ.ಗ.ಪ)
ವರ್ಧನ-ಬೆಳಸು, ಊರುಜನಿತರು-ತೊಡೆಯಿಂದ ಹುಟ್ಟಿದವರು, ವೈಶ್ಯರು, ಅಂತ್ಯವರ್ಣ-ಶೂದ್ರ, ಆರಯಿಕೆ-ವಿಚಾರ
ಮೂಲ ...{Loading}...
ಭೂರಿ ಧನ ವರ್ಧನ ಸದಾವ್ಯವ
ಹಾರ ಲಾಭಾಲಾಭ ಚಿಂತೆಗ
ಳೂರುಜನಿತರಿಗಂತ್ಯವರ್ಣಕೆ ಕೃಷಿಯ ಮಾತಗಳು
ಆರನಾದರು ಜಾತಿಧರ್ಮದ
ಸೇರುವೆಗಳೇ ಹೇಳುವುವು ನ
ಮ್ಮಾರಯಿಕೆಗಿವರಿಂದು ಕ್ಷತ್ರಿಯರೆಂದು ಮುನಿ ನುಡಿದ ॥24॥
೦೨೫ ಇವರು ಪಾರ್ಥಿವರೊಳಗೆ ...{Loading}...
ಇವರು ಪಾರ್ಥಿವರೊಳಗೆ ಕೇಳ್ ಪಾಂ
ಡವರು ನಿಸ್ಸಂದೇಹವೆಂದೇ
ನಿವಗೆ ನಾವೆನ್ನೆವೆ ವಿವಾಹದ ಪೂರ್ವಕಾಲದಲಿ
ಅವರನುಪಚರಿಸೇಳು ರಚಿಸು
ತ್ಸವವನಾಯ್ತಿದೆ ಪೂರ್ವಗಿರಿಯಲಿ
ರವಿಯುದಯವೆಂದಾ ಪುರೋಹಿತ ತಿಳುಹಿದನು ನೃಪನ ॥25॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಇವರು ಕ್ಷತ್ರಿಯರೊಳಗೆ ಪಾಂಡವರು. ಇದರಲ್ಲಿ ಸ್ವಲ್ಪವೂ ಸಂಶಯವಿಲ್ಲ. ವಿವಾಹದ ಆಲೋಚನೆಯ ಪೂರ್ವದಲ್ಲಿಯೇ ನಾವಿದನ್ನು ನಿಮಗೆ ತಿಳಿಸಿರಲಿಲ್ಲವೆ ? ಏಳು, ಮಹಾರಾಜ ಅವರನ್ನು ಉಪಚರಿಸು, ಉತ್ಸವವನ್ನು ಮಾಡು, ಇಗೋ ನೋಡು ಪೂರ್ವದಲ್ಲಿ ಸೂರ್ಯೋದಯವಾಗುತ್ತಿದೆ” ಎಂದು ಪುರೋಹಿತನು ದ್ರುಪದರಾಯನಿಗೆ ಹೇಳಿದನು.
ಮೂಲ ...{Loading}...
ಇವರು ಪಾರ್ಥಿವರೊಳಗೆ ಕೇಳ್ ಪಾಂ
ಡವರು ನಿಸ್ಸಂದೇಹವೆಂದೇ
ನಿವಗೆ ನಾವೆನ್ನೆವೆ ವಿವಾಹದ ಪೂರ್ವಕಾಲದಲಿ
ಅವರನುಪಚರಿಸೇಳು ರಚಿಸು
ತ್ಸವವನಾಯ್ತಿದೆ ಪೂರ್ವಗಿರಿಯಲಿ
ರವಿಯುದಯವೆಂದಾ ಪುರೋಹಿತ ತಿಳುಹಿದನು ನೃಪನ ॥25॥
೦೨೬ ಒಸಗೆಯಾಯಿತು ಮತ್ತೆ ...{Loading}...
ಒಸಗೆಯಾಯಿತು ಮತ್ತೆ ಗುಡಿಯೆ
ತ್ತಿಸಿತು ನಗರಿಯೊಳಧಿಕ ಹರುಷ
ಪ್ರಸರದಲಿ ರೋಮಾಳಿ ಪಲ್ಲವಿಸಿದುದು ನರಪತಿಯ
ಬಿಸಜಬಂಧುವಿನುದಯದಲಿ ನೃಪ
ವಿಸರಸಹಿತ ಕುಲಾಲಭವನದ
ವಸುಮತೀ ವಲ್ಲಭರ ಕಂಡನು ಬಂದು ಪಾಂಚಾಲ ॥26॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಶುಭ ಸಮಾಚಾರ ಹರಡಿತು. ಊರಿನಲ್ಲೆಲ್ಲಾ ಧ್ವಜಪಟಗಳನ್ನು ಕಟ್ಟಿಸಿದರು. ಹೆಚ್ಚಿನ ಸಂತೋಷದಲ್ಲಿ ಮಹಾರಾಜನು ರೋಮಾಂಚ ಪುಳಕಿತನಾದನು. ಸೂರ್ಯೋದಯದ ನಂತರ ರಾಜರ ಸಮೂಹದೊಂದಿಗೆ ಬಂದು ಕುಂಬಾರನ ಮನೆಯಲ್ಲಿದ್ದ ಭೂಪತಿಗಳನ್ನು ನೋಡಿದನು.
ಪದಾರ್ಥ (ಕ.ಗ.ಪ)
ಒಸಗೆ-ಶುಭಸಮಾಚಾರ, ಗುಡಿ-ಧ್ವಜಪಟ, ವಿಸರ-ಸಮೂಹ, ವಸುಮತಿ-ಭೂಮಿ, ವಲ್ಲಭ-ಪತಿ, ಬಿಸಜ-ಕಮಲ, ಬಂಧು-ಮಿತ್ರ
ಮೂಲ ...{Loading}...
ಒಸಗೆಯಾಯಿತು ಮತ್ತೆ ಗುಡಿಯೆ
ತ್ತಿಸಿತು ನಗರಿಯೊಳಧಿಕ ಹರುಷ
ಪ್ರಸರದಲಿ ರೋಮಾಳಿ ಪಲ್ಲವಿಸಿದುದು ನರಪತಿಯ
ಬಿಸಜಬಂಧುವಿನುದಯದಲಿ ನೃಪ
ವಿಸರಸಹಿತ ಕುಲಾಲಭವನದ
ವಸುಮತೀ ವಲ್ಲಭರ ಕಂಡನು ಬಂದು ಪಾಂಚಾಲ ॥26॥
೦೨೭ ಏಳಿ ಬಿಜಯಙ್ಗೈವುದೆನ್ದು ...{Loading}...
ಏಳಿ ಬಿಜಯಂಗೈವುದೆಂದು ನೃ
ಪಾಲಕರನುಚಿತದಲಿ ನಿಜ ರಾ
ಜಾಲಯಕೆ ತಂದನು ನಿರೀಕ್ಷಿಸುತನಿಬರಿಂಗಿತವ
ಮೇಲು ಮೊಗದ ಗಭೀರಗತಿಯ ಛ
ಡಾಳವನು ಕಂಡಿವರು ರಾಯರ
ಪೀಳಿಗೆಗಳಹುದೆಂದು ನಿಶ್ಚೈಸಿದನು ಮನದೊಳಗೆ ॥27॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಏಳಿ, ದಯಮಾಡಬೇಕು” ಎಂದು ಉಚಿತ ವಚನಗಳಿಂದ ಮಾತಾಡಿಸಿ ಅವರೆಲ್ಲರನ್ನು ಅರಮನೆಗೆ ಕರೆತಂದನು. ಅವರೆಲ್ಲರ ಮನಸ್ಸಿನ ಅಭಿಪ್ರಾಯವನ್ನು ನೋಡಿ ತಿಳಿದುಕೊಂಡನು. ಅವರ ಮುಖದ ಮೇಲಣ, ಗಂಭೀರಗತಿಯ ಆಧಿಕ್ಯವನ್ನು ನೋಡಿ ಇವರು ರಾಜರ ವಂಶದವರೇ ಹೌದೆಂದು ದ್ರುಪದ ರಾಜನು ಮನಸ್ಸಿನಲ್ಲಿ ನಿಶ್ಚಯಿಸಿದನು.
ಪದಾರ್ಥ (ಕ.ಗ.ಪ)
ಬಿಜಯಂಗೈಯಿ-ದಯಮಾಡು, ಇಂಗಿತ-ಅಭಿಪ್ರಾಯ, ಮೇಲುಮೊಗ-ಮುಖದ ಮೇಲ್ಭಾಗ, ಗಭೀರ-ಗಂಭೀರ, ಛಡಾಳ-ಆಧಿಕ್ಯ, ಪೀಳಿಗೆ-ವಂಶ
ಮೂಲ ...{Loading}...
ಏಳಿ ಬಿಜಯಂಗೈವುದೆಂದು ನೃ
ಪಾಲಕರನುಚಿತದಲಿ ನಿಜ ರಾ
ಜಾಲಯಕೆ ತಂದನು ನಿರೀಕ್ಷಿಸುತನಿಬರಿಂಗಿತವ
ಮೇಲು ಮೊಗದ ಗಭೀರಗತಿಯ ಛ
ಡಾಳವನು ಕಂಡಿವರು ರಾಯರ
ಪೀಳಿಗೆಗಳಹುದೆಂದು ನಿಶ್ಚೈಸಿದನು ಮನದೊಳಗೆ ॥27॥
೦೨೮ ಮುದದಿ ಮಙ್ಗಳ ...{Loading}...
ಮುದದಿ ಮಂಗಳ ಮಜ್ಜನವ ಮಾ
ಡಿದರು ದಿವ್ಯಾಂಬರವನುಟ್ಟರು
ಸುದತಿಯರ ಹರಿವಾಣದಾರತಿಗಳನು ಕೈಗೊಳುತ
ಪದಕ ಕರ್ಣಾಭರಣ ಹಾರಾಂ
ಗದದಿನೊಪ್ಪಂಬಡೆದಿವರು ಪೂ
ಸಿದರು ಸಾದು ಜವಾಜಿ ಕತ್ತುರಿ ಯಕ್ಷಕರ್ದಮವ ॥28॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಇವರು ಸಂತೋಷದಿಂದ ಮಂಗಳ ಸ್ನಾನ ಮಾಡಿದರು. ಸುಂದರವಾದ ವಸ್ತ್ರಗಳನ್ನು ಧರಿಸಿದರು. ಸುಂದರಿಯರು ಅಗಲದ ತಟ್ಟೆಯಲ್ಲಿ ಮಾಡಿದ ಆರತಿಗಳನ್ನು ಸ್ವೀಕರಿಸುತ್ತ, ಎದೆಯ ಮೇಲೆ ಜೋಲುವ ಆಭರಣ, ಕಿವಿಯ ಆಭರಣ, ಹಾರ ಮೊದಲಾದ ಆಭರಣಗಳಿಂದ ಅಲಂಕೃತರಾಗಿ ದೇಹಕಾಂತಿಯನ್ನು ಪಡೆದು, ಪರಿಮಳ ದ್ರವ್ಯ, ಪುನುಗು, ಕಸ್ತೂರಿ, ಸುಗಂಧ ಲೇಪನಗಳನ್ನು ಇವರು ಹಚ್ಚಿಕೊಂಡರು.
ಪದಾರ್ಥ (ಕ.ಗ.ಪ)
ಮಜ್ಜನ-ಸ್ನಾನ, ದಿವ್ಯ-ಸುಂದರ, ಅಂಬರ-ವಸ್ತ್ರ, ಹರಿವಾಣ-ಅಗಲದ ತಟ್ಟೆ, ಸುದತಿ-ಒಳ್ಳೆಯ ಹಲ್ಲುವಳು, ಸುಂದರಿ, ಪದಕ-ಎದೆಯ ಮೇಲೆ ಜೋಲುವ ಆಭರಣ, ಒಪ್ಪಂಬಡೆದು-ಕಾಂತಿಯನ್ನು ಪಡೆದು, ಸಾದು-ಪರಿಮಳದ್ರವ್ಯ, ಜವಾಜಿ-ಪುನುಗು, ಯಕ್ಷಕರ್ದಮ-ಸುಗಂಧ ಲೇಪನ, ಪೂಸು-ಹಚ್ಚು
ಮೂಲ ...{Loading}...
ಮುದದಿ ಮಂಗಳ ಮಜ್ಜನವ ಮಾ
ಡಿದರು ದಿವ್ಯಾಂಬರವನುಟ್ಟರು
ಸುದತಿಯರ ಹರಿವಾಣದಾರತಿಗಳನು ಕೈಗೊಳುತ
ಪದಕ ಕರ್ಣಾಭರಣ ಹಾರಾಂ
ಗದದಿನೊಪ್ಪಂಬಡೆದಿವರು ಪೂ
ಸಿದರು ಸಾದು ಜವಾಜಿ ಕತ್ತುರಿ ಯಕ್ಷಕರ್ದಮವ ॥28॥
೦೨೯ ಬಾಸಿಗದ ನೊಸಲಿನಲಿ ...{Loading}...
ಬಾಸಿಗದ ನೊಸಲಿನಲಿ ಮೆರೆವ ಮ
ಹೀಶರೈವರು ಮಂಟಪದ ನೆಲ
ವಾಸಿನಲಿ ಕುಳ್ಳಿರ್ದರನುಪಮ ರಾಜತೇಜದಲಿ
ಆ ಸೊಸೆಯ ಸಂಗಾತ ಕುಂತಿ ವಿ
ಲಾಸದಲಿ ಕುಳ್ಳಿರ್ದಳಾ ವಿ
ನ್ಯಾಸವನು ಜನ ನೋಡುತಿರ್ದುದು ಬಿಗಿದ ಬೆರಗಿನಲಿ ॥29॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಹಣೆಯಲ್ಲಿ ಬಾಸಿಂಗದಿಂದ ಶೋಭಿಸುವ ಐವರು ಮಹೀಶ್ವರರು ಮಂಟಪದ ನೆಲದ ಹಾಸಿನಲ್ಲಿ ಹೋಲಿಕೆಗೆ ಮೀರಿದ ರಾಜ ತೇಜಸ್ಸಿನಿಂದ ಕುಳಿತಿದ್ದರು. ಆ ಸೊಸೆಯ ಸಂಗಡ ಕುಂತಿಯು ಉಲ್ಲಾಸದಿಂದ ಕುಳಿತಿದ್ದಳು. ಈ ವಿಧಾನವನ್ನು ಜನರು ಆವರಿಸಿದ ಆಶ್ಚರ್ಯದಿಂದ ನೋಡುತ್ತಿದ್ದರು.
ಪದಾರ್ಥ (ಕ.ಗ.ಪ)
ಅನುಪಮ-ಹೋಲಿಕೆಗೆ ಮೀರಿದ, ಸಂಗಾತ-ಸಂಗಡ, ವಿಲಾಸ-ಉಲ್ಲಾಸ, ವಿನ್ಯಾಸ-ವಿಧಾನ, ಬೆರಗು-ಆಶ್ಚರ್ಯ, ಬಿಗಿ-ಆವರಿಸು
ಟಿಪ್ಪನೀ (ಕ.ಗ.ಪ)
ಬಾಸಿಗ-ಬಾಸಿಂಗ (ವಿವಾಹ ಸಮಯದಲ್ಲಿ ವಧುವರರ ಹಣೆಗೆ ಕಟ್ಟುವುದಕ್ಕಾಗಿ, ಚಿನ್ನ, ಮುತ್ತು ರತ್ನಗಳಿಂದ ಅಥವಾ ಕಾಗದ ಬೆಂಡುಗಳಿಂದ ರಚಿಸಿದ, ಎಡಬಲಕ್ಕೆ ಗೊಂಚಲುಗಳುಳ್ಳ ಒಂದು ಬಗೆಯ ಅಲಂಕಾರ ಸಾಧನ)
ಮೂಲ ...{Loading}...
ಬಾಸಿಗದ ನೊಸಲಿನಲಿ ಮೆರೆವ ಮ
ಹೀಶರೈವರು ಮಂಟಪದ ನೆಲ
ವಾಸಿನಲಿ ಕುಳ್ಳಿರ್ದರನುಪಮ ರಾಜತೇಜದಲಿ
ಆ ಸೊಸೆಯ ಸಂಗಾತ ಕುಂತಿ ವಿ
ಲಾಸದಲಿ ಕುಳ್ಳಿರ್ದಳಾ ವಿ
ನ್ಯಾಸವನು ಜನ ನೋಡುತಿರ್ದುದು ಬಿಗಿದ ಬೆರಗಿನಲಿ ॥29॥
೦೩೦ ಜಲವನಞ್ಜುಳಿಯಿನ್ದ ದ್ರುಪದನು ...{Loading}...
ಜಲವನಂಜುಳಿಯಿಂದ ದ್ರುಪದನು
ಸೆಳೆದು ಮೆರೆದವ ಬರಲಿ ಯಂತ್ರವ
ಗೆಲಿದ ಗರುವನು ಪಂಚಕರೊಳಗೆಯೆನೆ ನಗುತ
ಇಳಿದನವನಿಪ ಭೀಮನೊಯ್ಯನೆ
ಸುಳಿದನರ್ಜುನ ಹಿಂದೆ ಯಮಳರು
ನಳಿನವದನೆಯ ಹೊರೆಗೆ ಬಂದರು ಭೂಪ ಕೇಳ್ ಎಂದ ॥30॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ದ್ರುಪದರಾಜನು ಬೊಗಸೆಯಲ್ಲಿ ನೀರನ್ನು ತೆಗೆದುಕೊಂಡು, “ನಿಮ್ಮೈವರಲ್ಲಿ ಬಾಣದಿಂದ ಯಂತ್ರವನ್ನು ಗೆದ್ದ ಕೀರ್ತಿಗೊಂಡ ಶ್ರೇಷ್ಠನು ಬರಲಿ” ಎಂದು ಆಹ್ವಾನಿಸಿದನು. ಒಡನೆಯೇ ನಸುನಗುತ್ತ ಧರ್ಮರಾಜನು ಇಳಿದು ಬಂದನು. ಭೀಮನು ಮೆಲ್ಲನೆ ಕಾಣಿಸಿಕೊಂಡನು. ನಂತರ ಅರ್ಜುನನು, ಅವನ ಹಿಂದೆ ನಕುಲ ಸಹದೇವರು, ಹೀಗೆ ಈ ಐವರೂ ಕಮಲಮುಖಿಯ ಬಳಿಗೆ ಒಬ್ಬರ ಹಿಂದೊಬ್ಬರಂತೆ ಬಂದರು.
ಪದಾರ್ಥ (ಕ.ಗ.ಪ)
ಅಂಜುಳಿ-ಬೊಗಸೆ, ಗರುವ-ಶ್ರೇಷ್ಠ, ಒಯ್ಯನೆ-ಮೆಲ್ಲನೆ, ಯಮಳರು-ಅವಳಿಜವಳಿ-ನಕುಲಸಹದೇವ, ನಳಿನ-ಕಮಲ
ಮೂಲ ...{Loading}...
ಜಲವನಂಜುಳಿಯಿಂದ ದ್ರುಪದನು
ಸೆಳೆದು ಮೆರೆದವ ಬರಲಿ ಯಂತ್ರವ
ಗೆಲಿದ ಗರುವನು ಪಂಚಕರೊಳಗೆಯೆನೆ ನಗುತ
ಇಳಿದನವನಿಪ ಭೀಮನೊಯ್ಯನೆ
ಸುಳಿದನರ್ಜುನ ಹಿಂದೆ ಯಮಳರು
ನಳಿನವದನೆಯ ಹೊರೆಗೆ ಬಂದರು ಭೂಪ ಕೇಳೆಂದ ॥30॥
೦೩೧ ಬಿಸುಟನಞ್ಜುಳಿಯುದಕವನು ನಿ ...{Loading}...
ಬಿಸುಟನಂಜುಳಿಯುದಕವನು ನಿ
ಪ್ಪಸರದಲಿ ಬೆರಗಾಗಿ ಭೂಪರ
ಮುಸುಡನೆವೆಯಿಕ್ಕಿದೆ ನಿರೀಕ್ಷಿಸುತೆಂದನಾ ದ್ರುಪದ
ಅಸುರರೋ ಸುರರೋ ಭುಜಂಗರೊ
ವಸುಮತೀಶರೊ ನೀವು ದಿಟ ಮಾ
ನಿಸರ ಪರುಠವವಲ್ಲ ನೀವಾರೆಂದು ಬೆಸಗೊಂಡ ॥31॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಆ ಕ್ಷಣವೆ ಬೊಗಸೆಯಲ್ಲಿನ ನೀರನ್ನು ರಭಸದಿಂದ ಚೆಲ್ಲಿದನು. ಆಶ್ಚರ್ಯಪಟ್ಟು ಭೂಪರ ಮುಖವನ್ನು ತೀಕ್ಷ್ಣವಾಗಿ ನೋಡುತ್ತ “ರಾಕ್ಷಸರೋ, ದೇವತೆಗಳೋ, ಭುಜಂಗರೋ, ಭೂಮೀಶ್ವರರೋ, ನೀವು ? ಇದು, ನಿಜವಾಗಿಯೂ ಮನುಷ್ಯರ ರೀತಿಯಲ್ಲ. ನೀವು ಯಾರು ?” ಎಂದು ದ್ರುಪದನು ಪ್ರಶ್ನೆಮಾಡಿದನು.
ಪದಾರ್ಥ (ಕ.ಗ.ಪ)
ನಿಪ್ಪಸರ-ರಭಸ, ಎವೆಯಿಕ್ಕದೆ-ತೀಕ್ಷ್ಣವಾಗಿ ನೋಡು, ಪರುಠವ-ಪದ್ಧತಿÉ
ಮೂಲ ...{Loading}...
ಬಿಸುಟನಂಜುಳಿಯುದಕವನು ನಿ
ಪ್ಪಸರದಲಿ ಬೆರಗಾಗಿ ಭೂಪರ
ಮುಸುಡನೆವೆಯಿಕ್ಕಿದೆ ನಿರೀಕ್ಷಿಸುತೆಂದನಾ ದ್ರುಪದ
ಅಸುರರೋ ಸುರರೋ ಭುಜಂಗರೊ
ವಸುಮತೀಶರೊ ನೀವು ದಿಟ ಮಾ
ನಿಸರ ಪರುಠವವಲ್ಲ ನೀವಾರೆಂದು ಬೆಸಗೊಂಡ ॥31॥
೦೩೨ ಈತನಗ್ಗದ ಭೀಮನರ್ಜುನ ...{Loading}...
ಈತನಗ್ಗದ ಭೀಮನರ್ಜುನ
ನೀತನಿವರೈಯಮಳರೆಂಬವ
ರೀತಗಳು ನಮ್ಮಿಂದ ಕಿರಿಯರು ನಾವು ಪಾಂಡವರು
ಮಾತೆಯೆಮ್ಮೈವರಿಗೆ ಜಗ ವಿ
ಖ್ಯಾತೆ ಕುಂತೀದೇವಿ ತಾನಿಂ
ದೀ ತಳೋದರಿಯಾದಳೆಮ್ಮೈವರಿಗೆ ವಧುವೆಂದ ॥32॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಈತನು ಶ್ರೇಷ್ಠನಾದ ಭೀಮ, ಈತನು ಅರ್ಜುನ, ನಕುಲ ಸಹದೇವರೆಂಬುವರು ಇವರುಗಳು. ನಮಗಿಂತಲೂ ಚಿಕ್ಕವರು ನಾವು ಪಾಂಡವರು ನಮ್ಮೈವರಿಗೆ ತಾಯಿ, ಜಗತ್ತಿನಲ್ಲಿ ಕೀರ್ತಿವಂತಳಾದ ಕುಂತೀದೇವಿ. ಈ ತಳೋದರಿ ಇಂದು ನಮ್ಮೈವರಿಗೂ ವಧುವಾದಳು” ಎಂದು ಧರ್ಮರಾಜನು ತಮ್ಮ ಪರಿಚಯ ಮಾಡಿಕೊಂಡನು.
ಮೂಲ ...{Loading}...
ಈತನಗ್ಗದ ಭೀಮನರ್ಜುನ
ನೀತನಿವರೈಯಮಳರೆಂಬವ
ರೀತಗಳು ನಮ್ಮಿಂದ ಕಿರಿಯರು ನಾವು ಪಾಂಡವರು
ಮಾತೆಯೆಮ್ಮೈವರಿಗೆ ಜಗ ವಿ
ಖ್ಯಾತೆ ಕುಂತೀದೇವಿ ತಾನಿಂ
ದೀ ತಳೋದರಿಯಾದಳೆಮ್ಮೈವರಿಗೆ ವಧುವೆಂದ ॥32॥
೦೩೩ ಕೊಣ್ಡು ಹರಿದುದು ...{Loading}...
ಕೊಂಡು ಹರಿದುದು ಹರುಷವಾ ಬ್ರ
ಹ್ಮಾಂಡದಗ್ರಕೆ ಮಗಳಿಗೈವರು
ಗಂಡರೆನೆ ಮಗುಳದ್ದು ದಾತನ ಮನ ರಸಾತಳಕೆ
ಕಂಡು ಬಲ್ಲರೆ ಕಂಗಳಲಿ ಕಿವಿ
ಕೊಂಡು ಕೇಳ್ದಿರೆ ಮುನ್ನ ನಮಗೀ
ಭಂಡತನವನು ಮಾಡುವರೆ ನೀವೆಂದನಾದ್ರುಪದ ॥33॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಇವರು ಪಾಂಡವರೆಂಬುದನ್ನು ಕೇಳಿ ದ್ರುಪದರಾಜನ ಸಂತೋಷ ಬ್ರಹ್ಮಾಂಡದ ತುದಿಯವರೆಗೂ ವ್ಯಾಪಿಸಿತು. ಆದರೆ ಮಗಳಿಗೆ ಐವರು ಗಂಡರು ಎಂದ ಕೂಡಲೇ ಅವನ ಮನಸ್ಸು ರಸಾತಳಕ್ಕೆ ಇಳಿದು ಹೋಯಿತು. “ಹಿಂದೆ ಇಂಥದನ್ನು ಏನಾದರು ಕಣ್ಣಾರೆ ನೋಡಿದ್ದೀರಾ ? ಕಿವಿಯಾರೆ ಕೇಳಿಬಲ್ಲಿರಾ ? ನಮ್ಮ ವಿಷಯದಲ್ಲಿ ನೀವು ಇಂತಹ ನಿರ್ಲಜ್ಜೆಯ ಕಾರ್ಯವನ್ನು ಮಾಡಬಹುದೇ” ಎಂದು ದ್ರುಪದನ್ನು ಹೇಳಿದನು.
ಪದಾರ್ಥ (ಕ.ಗ.ಪ)
ಭಂಡತನ-ನಿರ್ಲಜ್ಜೆ
ಮೂಲ ...{Loading}...
ಕೊಂಡು ಹರಿದುದು ಹರುಷವಾ ಬ್ರ
ಹ್ಮಾಂಡದಗ್ರಕೆ ಮಗಳಿಗೈವರು
ಗಂಡರೆನೆ ಮಗುಳದ್ದು ದಾತನ ಮನ ರಸಾತಳಕೆ
ಕಂಡು ಬಲ್ಲರೆ ಕಂಗಳಲಿ ಕಿವಿ
ಕೊಂಡು ಕೇಳ್ದಿರೆ ಮುನ್ನ ನಮಗೀ
ಭಂಡತನವನು ಮಾಡುವರೆ ನೀವೆಂದನಾದ್ರುಪದ ॥33॥
೦೩೪ ಲೋಕ ಸಮ್ಮತವಲ್ಲ ...{Loading}...
ಲೋಕ ಸಂಮತವಲ್ಲ ಶಾಸ್ತ್ರಾ
ನೀಕದಭಿಮತವಲ್ಲ ಕಾಪಥ
ವೇಕೆ ನಿಮಗಿದು ಪಾಂಡುಪುತ್ರರು ನೀವು ಧಾರ್ಮಿಕರು
ಪ್ರಾಕೃತರೆ ನೀವಕಟ ನಿಮ್ಮ ವಿ
ವೇಕವೇನಾಯ್ತಿಲ್ಲಿ ಇಹ ಪರ
ಲೋಕಕಿದು ಸಾಧನವೆಯೆಂದನು ದ್ರುಪದ ಭೂಪಾಲ ॥34॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಇದಕ್ಕೆ ಲೋಕದ ಒಪ್ಪಿಗೆಯಿಲ್ಲ. ಶಾಸ್ತ್ರ ಸಮೂಹದ ಅಭಿಪ್ರಾಯವಲ್ಲ. ನಿಮಗೆ ಈ ಕೆಟ್ಟ ನಡತೆಯೇಕೆ ? ನೀವು ಪಾಂಡುವಿನ ಮಕ್ಕಳು. ಧಾರ್ಮಿಕರು. ನೀವು ಸಾಮಾನ್ಯರೇ ? ಅಯ್ಯೋ ನಿಮ್ಮ ವಿವೇಕವೇನಾಯ್ತು ? ಇಹಪರಕ್ಕಿದು ಸಾಧನವೇ ?” ಎಂದು ದ್ರುಪದ ಮಹಾರಾಜನು ಹೇಳಿದನು.
ಪದಾರ್ಥ (ಕ.ಗ.ಪ)
ಸಂಮತ-ಒಪ್ಪಿಗೆ, ಅಭಿಮತ-ಅಭಿಪ್ರಾಯ, ಕಾಪಥ-ಕೆಟ್ಟನಡತೆ, ಪ್ರಾಕೃತ-ಸಾಮಾನ್ಯ
ಮೂಲ ...{Loading}...
ಲೋಕ ಸಂಮತವಲ್ಲ ಶಾಸ್ತ್ರಾ
ನೀಕದಭಿಮತವಲ್ಲ ಕಾಪಥ
ವೇಕೆ ನಿಮಗಿದು ಪಾಂಡುಪುತ್ರರು ನೀವು ಧಾರ್ಮಿಕರು
ಪ್ರಾಕೃತರೆ ನೀವಕಟ ನಿಮ್ಮ ವಿ
ವೇಕವೇನಾಯ್ತಿಲ್ಲಿ ಇಹ ಪರ
ಲೋಕಕಿದು ಸಾಧನವೆಯೆಂದನು ದ್ರುಪದ ಭೂಪಾಲ ॥34॥
೦೩೫ ಕಾಮ ಮೋಹಿತರಲ್ಲ ...{Loading}...
ಕಾಮ ಮೋಹಿತರಲ್ಲ ವಿಷಯ
ಸ್ತೋಮಭಂಗಿತರಲ್ಲ ಧರ್ಮದ
ಸೀಮೆಯೊಳಗೆಳ್ಳೆನಿತನವಮಾನಿಸುವರಾವಲ್ಲ
ಈ ಮಹಾಸತಿಯೆಮಗೆ ಜನನಿಯ
ನೇಮದಲಿ ವಧುವಾದಳಿಂದು ವಿ
ರಾಮವೇಕೆ ವಿವೇಕಕೆಂದನು ಧರ್ಮಸುತ ನಗುತ ॥35॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅದಕ್ಕೆ ಧರ್ಮರಾಜನು ನಗುತ್ತ, “ನಾವು ಕಾಮ ಮೋಹಕ್ಕೆ ಒಳಗಾದವರಲ್ಲ. ವಿಷಯ ಸಮೂಹದಿಂದ ಸೋತವರಲ್ಲ. ಧರ್ಮದ ಮೇರೆಯಲ್ಲಿ ಎÉಳ್ಳಷ್ಟನ್ನೂ ಅವಮಾನಿಸುವವರು ನಾವಲ್ಲ. ತಾಯಿಯ ಅಪ್ಪಣೆಯಿಂದ ಈ ಸಾಧ್ವಿ ನಮಗೆ ಇಂದು ವಧುವಾದಳು. ವಿವೇಕಕ್ಕೆ ಕೊನೆಯೆಲ್ಲುಂಟಾಯ್ತು ?” ಎಂದನು.
ಪದಾರ್ಥ (ಕ.ಗ.ಪ)
ವಿಷಯಸ್ತೋಮ-ಶಬ್ದ ಸ್ಪರ್ಶ, ರೂಪ, ರಸ, ಗಂಧ, ವಿಷಯಗಳು, ಭಂಗ-ಸೋಲು, ಸೀಮೆ-ಮೇರೆ, ಮಹಾಸತಿ-ಸಾಧ್ವಿ, ವಿರಾಮ-ಕೊನೆ
ಮೂಲ ...{Loading}...
ಕಾಮ ಮೋಹಿತರಲ್ಲ ವಿಷಯ
ಸ್ತೋಮಭಂಗಿತರಲ್ಲ ಧರ್ಮದ
ಸೀಮೆಯೊಳಗೆಳ್ಳೆನಿತನವಮಾನಿಸುವರಾವಲ್ಲ
ಈ ಮಹಾಸತಿಯೆಮಗೆ ಜನನಿಯ
ನೇಮದಲಿ ವಧುವಾದಳಿಂದು ವಿ
ರಾಮವೇಕೆ ವಿವೇಕಕೆಂದನು ಧರ್ಮಸುತ ನಗುತ ॥35॥
೦೩೬ ಏಕಪತಿ ಬಹುಸತಿಯರೆಮ್ಬುದು ...{Loading}...
ಏಕಪತಿ ಬಹುಸತಿಯರೆಂಬುದು
ಲೋಕಪದ್ಧತಿ ಕಂಡೆವಾವಿಂ
ದೇಕ ಪತ್ನಿಗೆ ಪುರುಷಪಂಚಕವನು ಮಹಾದೇವ
ಲೋಕಶಾಸ್ತ್ರ ವಿರುದ್ಧವನು ಕಿವಿ
ಯೋಕರಿಸುತಿವೆ ಕಣ್ಮನಕೆ ಸು
ವ್ಯಾಕುಲತೆ ಹಿರಿದಾದುದೆಂದನು ದ್ರುಪದ ಭೂಪಾಲ ॥36॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಏಕಪತಿ ಬಹುಸತಿಯೆಂಬುದು ಲೋಕಪದ್ಧತಿ. ಮಹಾದೇವ ! ಏಕಪತ್ನಿಗೆ ಪುರುಷರೈವರು ಎಂಬುದನ್ನು ಈ ದಿನ ನಾವು ನೋಡಿದೆವು. ಲೋಕಶಾಸ್ತ್ರಕ್ಕೆ ವಿರುದ್ಧವಾದ ಈ ವಿಚಾರವನ್ನು ಕಿವಿ ಕೇಳಲು ಜಿಗುಪ್ಸೆಪಡುತ್ತಿದೆ. ಕಣ್ಣು ಮನಸ್ಸುಗಳಿಗೆ ವ್ಯಥೆ ಹೆಚ್ಚಾಗಿದೆ” ಎಂದು ದ್ರುಪದ ಭೂಪಾಲನು ವ್ಯಕ್ತಪಡಿಸಿದನು.
ಪದಾರ್ಥ (ಕ.ಗ.ಪ)
ಓಕರಿಸು-ಜಿಗುಪ್ಸೆ ಪಡು, ವ್ಯಾಕುಲತೆ-ವ್ಯಥೆ
ಮೂಲ ...{Loading}...
ಏಕಪತಿ ಬಹುಸತಿಯರೆಂಬುದು
ಲೋಕಪದ್ಧತಿ ಕಂಡೆವಾವಿಂ
ದೇಕ ಪತ್ನಿಗೆ ಪುರುಷಪಂಚಕವನು ಮಹಾದೇವ
ಲೋಕಶಾಸ್ತ್ರ ವಿರುದ್ಧವನು ಕಿವಿ
ಯೋಕರಿಸುತಿವೆ ಕಣ್ಮನಕೆ ಸು
ವ್ಯಾಕುಲತೆ ಹಿರಿದಾದುದೆಂದನು ದ್ರುಪದ ಭೂಪಾಲ ॥36॥
೦೩೭ ಆ ಸಮಯದಲಿ ...{Loading}...
ಆ ಸಮಯದಲಿ ದೇವ ವೇದ
ವ್ಯಾಸಮುನಿಯೈತಂದನಲ್ಲಿ ಮ
ಹೀಶಸಭೆಯಿದಿರೆದ್ದು ಕಂಡುದು ಕಾಣಿಕೆಯ ನೀಡಿ
ದೋಷಗರ್ಭಿತಧರ್ಮವನು ನಿ
ರ್ಣೈಸಲರಿಯದ ಮೂಢಮತಿಗೆ ಮು
ನೀಶ ಕೃಪೆ ಮಾಡೆಂದು ಮೈಯಿಕ್ಕಿದನು ಪಾಂಚಾಲ ॥37॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಆ ಸಮಯಕ್ಕೆ ಸರಿಯಾಗಿ ದೇವ ವೇದವ್ಯಾಸ ಮುನಿ ಅಲ್ಲಿಗೆ ಬಂದನು. ರಾಜಸಭೆ ಎದ್ದು ಎದುರುಗೊಂಡು ಕಾಣಿಕೆ ಕೊಟ್ಟು ನಮಸ್ಕರಿಸಿತು. ಕುಂದನ್ನು ಒಳಗೊಂಡಿರುವ ಧರ್ಮವನ್ನು ನಿರ್ಧರಿಸಲಾಗದೆ ಮೂಢಮತಿಯಾಗಿದ್ದೇನೆ. ಕೃಪೆ ಮಾಡಬೇಕೆಂದು ಪಾಂಚಾಲನು ಮುನೀಶನಿಗೆ ನಮಸ್ಕರಿಸಿದನು.
ಪದಾರ್ಥ (ಕ.ಗ.ಪ)
ದೋಷ-ಕುಂದು, ಗರ್ಭಿತ-ಒಳಗೊಂಡಿರುವ, ನಿರ್ಣಯ-ನಿರ್ಧಾರ
ಮೂಲ ...{Loading}...
ಆ ಸಮಯದಲಿ ದೇವ ವೇದ
ವ್ಯಾಸಮುನಿಯೈತಂದನಲ್ಲಿ ಮ
ಹೀಶಸಭೆಯಿದಿರೆದ್ದು ಕಂಡುದು ಕಾಣಿಕೆಯ ನೀಡಿ
ದೋಷಗರ್ಭಿತಧರ್ಮವನು ನಿ
ರ್ಣೈಸಲರಿಯದ ಮೂಢಮತಿಗೆ ಮು
ನೀಶ ಕೃಪೆ ಮಾಡೆಂದು ಮೈಯಿಕ್ಕಿದನು ಪಾಂಚಾಲ ॥37॥
೦೩೮ ನೆಗಹಿದನು ದ್ರುಪದನನು ...{Loading}...
ನೆಗಹಿದನು ದ್ರುಪದನನು ಯಮಜಾ
ದಿಗಳನೆತ್ತಿದನೊಬ್ಬರೊಬ್ಬರ
ತೆಗೆದು ತಕ್ಕೈಸಿದನು ಮುದದಲಿ ಪಾಂಡುನಂದನರ
ದುಗುಡವೇಕೈ ದ್ರುಪದ ನಿನ್ನಯ
ಮಗಳ ಸೌಭಾಗ್ಯದಲರುಂಧತಿ
ಸೊಗಸಿ ರಂಜಿಸಲರಿಯಳೆಂದನು ಕೃಷ್ಣಮುನಿ ನಗುತ ॥38॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ನಮಸ್ಕರಿಸಿದ ದ್ರುಪದನನ್ನು ವೇದವ್ಯಾಸನು ಮೇಲೆತ್ತಿದನು. ಯಮಪುತ್ರನೇ ಮೊದಲಾದ ಪಾಂಡುನಂದನರೆಲ್ಲರನ್ನು ಒಬ್ಬೊಬ್ಬರನ್ನಾಗಿ ಸಂತೋಷದಿಂದ ಆಲಿಂಗಿಸಿಕೊಂಡನು. ಎಲ್ಲರನ್ನೂ ಮನ್ನಿಸಿ “ದ್ರುಪದಾ, ಚಿಂತೆಯೇತಕ್ಕೆ ? ನಿನ್ನ ಮಗಳ ಸೌಭಾಗ್ಯದಲ್ಲಿ ಆರುಂಧತಿಯೂ ಶೋಭಿಸಿ ಮೆರೆಯಲಾರಳು” ಎಂದನು ನಗುತ್ತ ವ್ಯಾಸಮುನಿ.
ಪದಾರ್ಥ (ಕ.ಗ.ಪ)
ನೆಗಹು-ಮೇಲಕ್ಕೆತ್ತು, ತಕ್ಕೈಸು-ಆಲಿಂಗಿಸು, ದುಗುಡ-ಚಿಂತೆ, ಮುದ-ಸಂತೋಷ, ಸೊಗಸು-ಶೋಭಿಸು, ರಂಜಿಸು-ಮೆರೆ, ಕೃಷ್ಣಮುನಿ-ವ್ಯಾಸಮುನಿ
ಮೂಲ ...{Loading}...
ನೆಗಹಿದನು ದ್ರುಪದನನು ಯಮಜಾ
ದಿಗಳನೆತ್ತಿದನೊಬ್ಬರೊಬ್ಬರ
ತೆಗೆದು ತಕ್ಕೈಸಿದನು ಮುದದಲಿ ಪಾಂಡುನಂದನರ
ದುಗುಡವೇಕೈ ದ್ರುಪದ ನಿನ್ನಯ
ಮಗಳ ಸೌಭಾಗ್ಯದಲರುಂಧತಿ
ಸೊಗಸಿ ರಂಜಿಸಲರಿಯಳೆಂದನು ಕೃಷ್ಣಮುನಿ ನಗುತ ॥38॥
೦೩೯ ಅಹುದಲೇ ಬಳಿಕೇನು ...{Loading}...
ಅಹುದಲೇ ಬಳಿಕೇನು ತಂಗಿಯ
ಬಹಳ ಸುಕೃತೋದಯದಲರಗಿನ
ಗೃಹದ ಗಂಟಲನೊದೆದು ಸುಳಿದರು ಪಾಂಡುನಂದನರು
ಗಹನ ಯಂತ್ರವನೆಚ್ಚ ಪಾರ್ಥನ
ಮಹಿಳೆಗೆನ್ನ ಕುಮಾರಿಗೀಗಲು
ಬಹುಪತಿಗಳಾಯ್ತಿದನು ನೀವ್ ನಿರ್ಣೈಸಬೇಕೆಂದ ॥39॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಅಹುದಲ್ಲವೇ ? ಸಂದೇಹವೇನು ? ಇವಳ ಹೆಚ್ಚಿನ ಪುಣ್ಯೋದಯದಿಂದ ಅರಗಿನ ಮನೆಯ ಕಗ್ಗಂಟನ್ನು ಒದೆದು ತಪ್ಪಿಸಿಕೊಂಡು ಉಳಿದು ಬಂದರು ಈ ಪಾಂಡುಪುತ್ರರು. ಸುಲಭವಲ್ಲದ ಯಂತ್ರವನ್ನು ಹೊಡೆದ ಪಾರ್ಥನ ಮಹಿಳೆ ಇವಳು. ಈ ನನ್ನ ಕುಮಾರಿಗೆ ಈಗ ಬಹುಪತಿಗಳೆಂದಾಯ್ತು. ಇದನ್ನು ನೀವು ನಿರ್ಧರಿಸಬೇಕು” ಎಂದು ಪಾಂಚಾಲರಾಜನು ಕೇಳಿಕೊಂಡನು.
ಪದಾರ್ಥ (ಕ.ಗ.ಪ)
ಸುಕೃತ-ಪುಣ್ಯೋದಯ, ಗಂಟಲು-ಕಗ್ಗಂಟು
ಮೂಲ ...{Loading}...
ಅಹುದಲೇ ಬಳಿಕೇನು ತಂಗಿಯ
ಬಹಳ ಸುಕೃತೋದಯದಲರಗಿನ
ಗೃಹದ ಗಂಟಲನೊದೆದು ಸುಳಿದರು ಪಾಂಡುನಂದನರು
ಗಹನ ಯಂತ್ರವನೆಚ್ಚ ಪಾರ್ಥನ
ಮಹಿಳೆಗೆನ್ನ ಕುಮಾರಿಗೀಗಲು
ಬಹುಪತಿಗಳಾಯ್ತಿದನು ನೀವ್ ನಿರ್ಣೈಸಬೇಕೆಂದ ॥39॥
೦೪೦ ದ್ರುಪದ ಧೃಷ್ಟದ್ಯುಮ್ನ ...{Loading}...
ದ್ರುಪದ ಧೃಷ್ಟದ್ಯುಮ್ನ ಪಾಂಡವ
ನೃಪರು ಕಾಶ್ಯಪಗೂಡಿ ಹೊಕ್ಕರು
ವಿಪುಳತರ ಕಾರುಣ್ಯದಿಂದೇಕಾಂತ ಮಂದಿರವ
ನೃಪತಿ ಸಂಶಯವೇಕೆ ನಾವಿದ
ನಪಹರಿಸುವೆವು ಪಾಂಡುಪುತ್ರರ
ನುಪಚರಿಸು ವೈವಾಹವನು ವಿಸ್ತರಿಸು ಸಾಕೆಂದ ॥40॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಬಳಿಕ ದ್ರುಪದ, ಧೃಷ್ಟದ್ಯುಮ್ನ, ಪಾಂಡವರು, ಕಾಶ್ಯಪ-ಇಷ್ಟು ಜನರನ್ನು ಒಡಗೊಂಡು ವ್ಯಾಸಮುನಿಗಳು ಬಹಳ ಕಾರುಣ್ಯದಿಂದ ಏಕಾಂತ ಮಂದಿರವನ್ನು ಪ್ರವೇಶಿಸಿದರು. “ಮಹಾರಾಜಾ, ಸಂದೇಹವೇತಕ್ಕೆ ? ನಾನಿದನ್ನು ಪರಿಹರಿಸುತ್ತೇನೆ. ಪಾಂಡುಪುತ್ರರನ್ನು ಉಪಚರಿಸು, ಮದುವೆಯನ್ನು ಮಾಡು, ಸಾಕು, ಯೋಚಿಸಬೇಡ” ಎಂದು ಮುನಿಯು ದೃಢವಾಗಿ ನುಡಿದನು.
ಮೂಲ ...{Loading}...
ದ್ರುಪದ ಧೃಷ್ಟದ್ಯುಮ್ನ ಪಾಂಡವ
ನೃಪರು ಕಾಶ್ಯಪಗೂಡಿ ಹೊಕ್ಕರು
ವಿಪುಳತರ ಕಾರುಣ್ಯದಿಂದೇಕಾಂತ ಮಂದಿರವ
ನೃಪತಿ ಸಂಶಯವೇಕೆ ನಾವಿದ
ನಪಹರಿಸುವೆವು ಪಾಂಡುಪುತ್ರರ
ನುಪಚರಿಸು ವೈವಾಹವನು ವಿಸ್ತರಿಸು ಸಾಕೆಂದ ॥40॥
೦೪೧ ವಿಧಿವಿಹಿತ ಲೋಕಾಪವಾದವ ...{Loading}...
ವಿಧಿವಿಹಿತ ಲೋಕಾಪವಾದವ
ನಧಿಕರಿಸಿ ವರ್ಣಾಶ್ರಮಕೆ ಸು
ವ್ಯಧಿಕರಣ ಹುಗದಂತೆ ಸದ್ವ್ಯವಹಾರ ಮಾರ್ಗದಲಿ
ವಿಧಿಸಿದರೆ ನಿಮ್ಮಂಘ್ರಿಗಳ ಸಂ
ನಿಧಿಯಲೇ ಪಾಣಿಗ್ರಹಣವನು
ವಿಧುಮುಖಿಗೆ ಮುದದಿಂದ ಮಾಡುವೆನೆಂದನಾ ದ್ರುಪದ ॥41॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅದಕ್ಕೆ ದ್ರುಪದನು, “ವಿಧಿವಿಹಿತವಾಗಿದ್ದು, ಲೋಕಾಪವಾದಕ್ಕೆ ಅವಕಾಶಕೊಡದೆ, ವರ್ಣಾಶ್ರಮಧರ್ಮಕ್ಕೆ ವಿರುದ್ಧ ಮಾತಾಗದಂತೆ ಒಳ್ಳೆಯ ವ್ಯವಹಾರ ಮಾರ್ಗದಲ್ಲಿ ಪರಿಹಾರವನ್ನು ಗೊತ್ತುಮಾಡಿ ಹೇಳಿದರೆ, ನಿಮ್ಮಂಘ್ರಿಗಳ ಸಾಮೀಪ್ಯದಲ್ಲಿಯೇ ಸಂತೋಷದಿಂದ ಚಂದ್ರಮುಖಿ ದ್ರೌಪದಿಗೆ ಮದುವೆಯನ್ನು ಮಾಡುವೆನು” ಎಂದು ದ್ರುಪದ ಹೇಳಿದನು.
ಪದಾರ್ಥ (ಕ.ಗ.ಪ)
ಎಡೆಗೊಡದೆ-ಅವಕಾಶಕೊಡದೆ, ವ್ಯಧಿಕರಣ-ವಿರುದ್ಧ ಮಾತು, ಸಂನಿಧಿ-ಸಾಮೀಪ್ಯ, ವಿಧು-ಚಂದ್ರ, ಪಾಣಿಗ್ರಹಣ-ಮದುವೆ
ಮೂಲ ...{Loading}...
ವಿಧಿವಿಹಿತ ಲೋಕಾಪವಾದವ
ನಧಿಕರಿಸಿ ವರ್ಣಾಶ್ರಮಕೆ ಸು
ವ್ಯಧಿಕರಣ ಹುಗದಂತೆ ಸದ್ವ್ಯವಹಾರ ಮಾರ್ಗದಲಿ
ವಿಧಿಸಿದರೆ ನಿಮ್ಮಂಘ್ರಿಗಳ ಸಂ
ನಿಧಿಯಲೇ ಪಾಣಿಗ್ರಹಣವನು
ವಿಧುಮುಖಿಗೆ ಮುದದಿಂದ ಮಾಡುವೆನೆಂದನಾ ದ್ರುಪದ ॥41॥
೦೪೨ ಧರಣಿಪತಿ ಕೇಳಿವರ ...{Loading}...
ಧರಣಿಪತಿ ಕೇಳಿವರ ತಾಯ್ಮುಂ
ದರಿಯದಾಡಿದಳಾ ನುಡಿಯನು
ತ್ತರಿಸಬಾರದು ಧರ್ಮವಿದು ವರಮಾತೃಭಕ್ತರಿಗೆ
ಗುರುವಚನದ ನಿಮಿತ್ತ ವರ ಪತಿ
ಕರಿಸಿ ಚರಿಸಿದ ಪೂರ್ವಜನ್ಮದ
ಸರಸಿಜಾಕ್ಷಿಯ ಕಥೆಯವನರುಪುವೆನಿನ್ನು ಕೇಳ್ ಎಂದ ॥42॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಧರಣಿಪತಿ, ಕೇಳು, ಇವರ ತಾಯಿ ಮುಂದಾಗುವುದನ್ನು ತಿಳಿಯದೆ ನುಡಿದಳು. ಆ ಮಾತನ್ನು ಮೀರಬಾರದು. ಶ್ರೇಷ್ಠರಾದ ಮಾತೃಭಕ್ತರಿಗೆ ಇದು ಧರ್ಮ. ಗುರುವಿನ ನುಡಿಯ ಕಾರಣದ, ವರವನ್ನು ಅಂಗೀಕರಿಸಿ ನಡೆದುಕೊಂಡ ಕಮಲಾಕ್ಷಿಯಾದ ದ್ರೌಪದಿಯ ಪೂರ್ವ ಜನ್ಮದ ಕಥೆಯನ್ನು ತಿಳಿಸುವೆನು ಇನ್ನು ಕೇಳು” ಎಂದು ವ್ಯಾಸ ಮುನಿ ಪ್ರಾರಂಭಿಸಿದನು.
ಪದಾರ್ಥ (ಕ.ಗ.ಪ)
ಮುಂದರಿಯದೆ-ಮುಂದಾಗುವುದನ್ನು ತಿಳಿಯದೆ ವರ-ಶ್ರೇಷ್ಠ, ನಿಮಿತ್ತ-ಕಾರಣ, ಪತಿಕರಿಸು-ಅಂಗೀಕರಿಸು, ಚರಿಸು-ನಡೆದುಕೊಳ್
ಮೂಲ ...{Loading}...
ಧರಣಿಪತಿ ಕೇಳಿವರ ತಾಯ್ಮುಂ
ದರಿಯದಾಡಿದಳಾ ನುಡಿಯನು
ತ್ತರಿಸಬಾರದು ಧರ್ಮವಿದು ವರಮಾತೃಭಕ್ತರಿಗೆ
ಗುರುವಚನದ ನಿಮಿತ್ತ ವರ ಪತಿ
ಕರಿಸಿ ಚರಿಸಿದ ಪೂರ್ವಜನ್ಮದ
ಸರಸಿಜಾಕ್ಷಿಯ ಕಥೆಯವನರುಪುವೆನಿನ್ನು ಕೇಳೆಂದ ॥42॥
೦೪೩ ಮುನ್ನನಾರಾಯಣಿಯೆನಿಪುದೀ ...{Loading}...
ಮುನ್ನನಾರಾಯಣಿಯೆನಿಪುದೀ
ಕನ್ನಿಕೆಯಪೆಸರೊಬ್ಬ ಗುಣ ಸಂ
ಪನ್ನ ಮುನಿಪನ ವಧು ಪತಿವ್ರತೆಯರಿಗೆ ಗುರುವೆನಿಸಿ
ಉನ್ನತೋನ್ನತ ಭಕ್ತಿಭಯದಲಿ
ತನ್ನ ಪತಿ ಪರದೈವವ್ ಎಂದು ವಿ-
ಪನ್ನನನು ಕೊಂಡಾಡುತಿರ್ದಳು ರಾಯ ಕೇಳ್ ಎಂದ ॥43॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಈ ಕನ್ನಿಕೆ ಹಿಂದೆ ನಾರಾಯಣಿ ಎಂಬ ಹೆಸರಿನವಳು. ಓರ್ವ ಗುಣಸಂಪನ್ನ ಮುನಿಪನ ವಧುವಾಗಿದ್ದಳು. ಪತಿವ್ರತೆಯರಿಗೆ ಗುರುವೆನಿಸಿ, ಪತಿಯೇ ಪರದೈವವೆಂದು ನಂಬಿ ಉತ್ತಮೋತ್ತಮ ಭಯಭಕ್ತಿಯಿಂದ ಕಷ್ಟಕ್ಕೆ ಗುರಿಯಾದ ತನ್ನ ಪತಿಯನ್ನು ಸ್ತುತಿಸುತ್ತಿದ್ದಳು.
ಪದಾರ್ಥ (ಕ.ಗ.ಪ)
ಉನ್ನತೋನ್ನತ-ಉತ್ತಮೋತ್ತಮ, ವಿಪನ್ನ-ಕಷ್ಟಕ್ಕೆ ಗುರಿಯಾದವನು, ಕೊಂಡಾಡು-ಸ್ತುತಿಸು
ಮೂಲ ...{Loading}...
ಮುನ್ನನಾರಾಯಣಿಯೆನಿಪುದೀ
ಕನ್ನಿಕೆಯಪೆಸರೊಬ್ಬ ಗುಣ ಸಂ
ಪನ್ನ ಮುನಿಪನ ವಧು ಪತಿವ್ರತೆಯರಿಗೆ ಗುರುವೆನಿಸಿ
ಉನ್ನತೋನ್ನತ ಭಕ್ತಿಭಯದಲಿ
ತನ್ನ ಪತಿ ಪರದೈವವೆಂದು ವಿ
ಪನ್ನನನು ಕೊಂಡಾಡುತಿರ್ದಳು ರಾಯ ಕೇಳೆಂದ ॥43॥
೦೪೪ ಆ ತಪೋನಿಧಿ ...{Loading}...
ಆ ತಪೋನಿಧಿ ಕುಷ್ಠರೋಗ ಪ
ರೀತ ಬೀಭತ್ಸೆಯಲಿ ಹುದಗಿರ
ಲೀ ತಳೋದರಿ ಭಜಿಸುತಿರ್ದಳು ಭಾವಶುದ್ಧಿಯಲಿ
ಆತನೀಕೆಯ ಕೃತ್ಯದಲಿ ಭಾ
ವಾತಿಶಯದಲಿ ಖೋಡಿಯನು ಹಿಡಿ
ವಾತನಾಗಿರಲೊಂದು ದಿನವಿಂತಾಯ್ತು ಕೇಳ್ ಎಂದ ॥44॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಆ ಋಷಿಯು ವ್ಯಾಪಿಸಿದ ಕುಷ್ಠರೋಗದಿಂದ ಜುಗುಪ್ಸೆ ಪಡುತ್ತ ಸಂಕೋಚ ಮಾಡಿಕೊಳ್ಳುತ್ತಿದ್ದನು. ಈ ಸುಂದರಿ ಅಂಥವನನ್ನು ಭಾವಶುದ್ಧಿಯಿಂದ ಭಜಿಸುತ್ತಿದ್ದಳು. ಆತನು ಈಕೆಯ ಕೆಲಸದಲ್ಲೂ, ಮನೋಭಾವದಲ್ಲೂ ತಪ್ಪನ್ನು ಕಂಡು ಹಿಡಿಯುವಾತನಾಗಿರಲು ಒಂದು ದಿನ ಈ ರೀತಿ ಆಯ್ತು.
ಪದಾರ್ಥ (ಕ.ಗ.ಪ)
ಪರೀತ-ವ್ಯಾಪಿಸು, ಭೀಭತ್ಸೆ-ಜುಗುಪ್ಸೆ
ಮೂಲ ...{Loading}...
ಆ ತಪೋನಿಧಿ ಕುಷ್ಠರೋಗ ಪ
ರೀತ ಬೀಭತ್ಸೆಯಲಿ ಹುದಗಿರ
ಲೀ ತಳೋದರಿ ಭಜಿಸುತಿರ್ದಳು ಭಾವಶುದ್ಧಿಯಲಿ
ಆತನೀಕೆಯ ಕೃತ್ಯದಲಿ ಭಾ
ವಾತಿಶಯದಲಿ ಖೋಡಿಯನು ಹಿಡಿ
ವಾತನಾಗಿರಲೊಂದು ದಿನವಿಂತಾಯ್ತು ಕೇಳೆಂದ ॥44॥
೦೪೫ ಕೊಳೆತ ಬೆರಳನು ...{Loading}...
ಕೊಳೆತ ಬೆರಳನು ಭುಕ್ತ ಶೇಷದೊ
ಳಿಳುಹಿದರೆ ಕಂಡೀಕೆ ಚಿತ್ತದೊ
ಳಳುಕದುಪಭೋಗಿಸೆ ಮುನೀಶ್ವರನದಕೆ ಹರುಷದಲಿ
ಎಲೆಗೆ ಮೆಚ್ಚಿದೆನಿನ್ನು ನೀ ಮನ
ವೊಲಿದುದನು ಬೇಡೆನಲು ಬಳಿಕಾ
ಲಲನೆನುಡಿದಳು ದಿವ್ಯರೂಪಿನೊಳೆನ್ನ ನೆರೆಯೆಂದು ॥45॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಒಂದು ಸಲ ಆತನು ತಿಂದ ಉಚ್ಚಿಷ್ಟದಲ್ಲಿ ತನ್ನ ಕೈಬೆರಳನ್ನು ಇಳಿಸಿದರೆ, ಅದನ್ನು ಕಂಡರೂ ಈಕೆ ಮನಸ್ಸಿನಲ್ಲಿ ಹಿಂಜರಿಯದೆ ಅದನ್ನೇ ತಿಂದಳು. ಮುನೀಶ್ವರನು ಅದಕ್ಕೆ ಸಂತೋಷದಲ್ಲಿ “ಎಲೆಗೇ ನಿನ್ನ ಭಕ್ತಿಗೆ ಮೆಚ್ಚಿದೆನು. ಇನ್ನು ಮನಸ್ಸು ಅಪೇಕ್ಷಿಸಿದ್ದನ್ನು ನೀನು ಬೇಡು” ಎಂದನು. ಬಳಿಕ, ಆ ಲಲನೆ “ಸುಂದರರೂಪಿನಲ್ಲಿ ನನ್ನನ್ನು ಕೂಡು” ಎಂದು ಕೇಳಿದಳು.
ಪದಾರ್ಥ (ಕ.ಗ.ಪ)
ಭುಕ್ತ-ತಿಂದ, ಶೇಷ-ಉಚ್ಚಿಷ್ಟ, ಅಳುಕು-ಹಿಂಜರಿ, ದಿವ್ಯ-ಸುಂದರ
ಮೂಲ ...{Loading}...
ಕೊಳೆತ ಬೆರಳನು ಭುಕ್ತ ಶೇಷದೊ
ಳಿಳುಹಿದರೆ ಕಂಡೀಕೆ ಚಿತ್ತದೊ
ಳಳುಕದುಪಭೋಗಿಸೆ ಮುನೀಶ್ವರನದಕೆ ಹರುಷದಲಿ
ಎಲೆಗೆ ಮೆಚ್ಚಿದೆನಿನ್ನು ನೀ ಮನ
ವೊಲಿದುದನು ಬೇಡೆನಲು ಬಳಿಕಾ
ಲಲನೆನುಡಿದಳು ದಿವ್ಯರೂಪಿನೊಳೆನ್ನ ನೆರೆಯೆಂದು ॥45॥
೦೪೬ ದ್ರುಪದ ಕೇಳಾ ...{Loading}...
ದ್ರುಪದ ಕೇಳಾ ಕುಷ್ಠದೇಹವ
ನಪಹರಿಸಿ ಕಂದರ್ಪರೂಪಿನೊ
ಳುಪಚರಿಸಿ ಕಾಮಿನಿಯನವನತಿ ಕಾಮಕೇಳಿಯಲಿ
ತಪಸಿ ದಣಿದನು ತನ್ನ ಮುನ್ನಿನ
ತಪವ ನೆನೆದನು ದಣಿಯದಿರೆಯೀ
ಚಪಲಲೋಚನೆ ಸೆರಗ ಹಿಡಿದಳು ಹೋಗದಿರಿಯೆನುತ ॥46॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಆ ಕುಷ್ಠ ರೋಗದ ದೇಹವನ್ನು ಪರಿಹರಿಸಿ, ಮನ್ಮಥನ ರೂಪದಿಂದ ಸುಂದರಿಯನ್ನು ಉಪಚಾರ ಮಾಡಿದನು. ಅತಿಯಾದ ಕಾಮಕ್ರೀಡೆಯಲ್ಲಿ ತಪಸ್ವಿ ಆಯಾಸಗೊಂಡನು. ಕಡೆಗೆ ತನ್ನ ಹಿಂದಿನ ತಪಸ್ಸನ್ನು ನೆನೆದನು. ಈ ಚಂಚಲಾಕ್ಷಿ ತಣಿಯಲಿಲ್ಲ. ‘ಹೋಗದಿರಿ’ ಎಂದು ಸೆರಗಹಿಡಿದಳು.
ಮೂಲ ...{Loading}...
ದ್ರುಪದ ಕೇಳಾ ಕುಷ್ಠದೇಹವ
ನಪಹರಿಸಿ ಕಂದರ್ಪರೂಪಿನೊ
ಳುಪಚರಿಸಿ ಕಾಮಿನಿಯನವನತಿ ಕಾಮಕೇಳಿಯಲಿ
ತಪಸಿ ದಣಿದನು ತನ್ನ ಮುನ್ನಿನ
ತಪವ ನೆನೆದನು ದಣಿಯದಿರೆಯೀ
ಚಪಲಲೋಚನೆ ಸೆರಗ ಹಿಡಿದಳು ಹೋಗದಿರಿಯೆನುತ ॥46॥
೦೪೭ ದಿಟ್ಟ ಹೆಙ್ಗುಸೆ ...{Loading}...
ದಿಟ್ಟ ಹೆಂಗುಸೆ ನೃಪರ ಬಸುರಲಿ
ಹುಟ್ಟು ನೀ ಹೋಗೆಂದು ಶಾಪವ
ಕೊಟ್ಟನೀಕೆಗೆ ಹಾಯ್ದನಾ ಮುನಿಪತಿ ತಪೋವನಕೆ
ನಟ್ಟಡವಿಯಲಿ ನಳಿನಮುಖಿ ಕಂ
ಗೆಟ್ಟು ಭಜಿಸಿದಳಖಿಳದುರಿತಘ
ರಟ್ಟನನು ದಿವಿಜೇಂದ್ರವಂದ್ಯನನಿಂದುಶೇಖರನ ॥47॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಆಗ, “ದಿಟ್ಟ ಹೆಂಗುಸೇ, ನೀನು ಕ್ಷತ್ರಿಯರ ಹೊಟ್ಟೆಯಲ್ಲಿ ಜನಿಸು, ಹೋಗು” ಎಂದು ಈಕೆಗೆ ಶಾಪವನ್ನು ಕೊಟ್ಟು, ಆ ಮುನಿಪತಿ ತಪೋವನಕ್ಕೆ ನಡೆದನು. ಕಾಡಿನ ಮಧ್ಯ ಭಾಗದಲ್ಲಿ ಕಮಲಮುಖಿ ದಿಕ್ಕು ತೋರದೆ ಪರಿತಪಿಸುತ್ತ ಎಲ್ಲ ಪಾಪಗಳನ್ನು ನಾಶಪಡಿಸುವವನೂ, ದೇವೇಂದ್ರನಿಂದ ವಂದಿಸಲ್ಪಡುವವನೂ ಆದ ಚಂದ್ರಶೇಖರನನ್ನು ಭಜಿಸಿದಳು.
ಪದಾರ್ಥ (ಕ.ಗ.ಪ)
ನಟ್ಟಡವಿ-ಕಾಡಿನ ಮಧ್ಯಭಾಗ, ಕಂಗೆಟ್ಟು-ದಿಕ್ಕು ತೋರದೆ, ದುರಿತ-ಪಾಪ, ಘರಟ್ಟ-ನಾಶಪಡಿಸುವವನು
ಮೂಲ ...{Loading}...
ದಿಟ್ಟ ಹೆಂಗುಸೆ ನೃಪರ ಬಸುರಲಿ
ಹುಟ್ಟು ನೀ ಹೋಗೆಂದು ಶಾಪವ
ಕೊಟ್ಟನೀಕೆಗೆ ಹಾಯ್ದನಾ ಮುನಿಪತಿ ತಪೋವನಕೆ
ನಟ್ಟಡವಿಯಲಿ ನಳಿನಮುಖಿ ಕಂ
ಗೆಟ್ಟು ಭಜಿಸಿದಳಖಿಳದುರಿತಘ
ರಟ್ಟನನು ದಿವಿಜೇಂದ್ರವಂದ್ಯನನಿಂದುಶೇಖರನ ॥47॥
೦೪೮ ಹಲವು ಕಾಲದಿ ...{Loading}...
ಹಲವು ಕಾಲದಿ ತಪದೊಳಕಟಾ
ಬಳಲಿದಳಲಾ ಮುನಿಯ ವಧುವೆಂ
ದಿಳಿದನೀಶ್ವರನಾ ತಪೋವನಕಾಕೆಯೆದುರಿನಲಿ
ಸುಳಿಯೆ ಕಂದೆರೆದಬಲೆ ಕಂಡಳು
ಸುಲಭನನು ಭಕ್ತರಿಗೆ ತರ್ಕಾ
ವಳಿಗೆ ದುರ್ಲಭನನು ದುರಾಸದ ಮಹಿಮ ಧೂರ್ಜಟಿಯ ॥48॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಹಲವು ಕಾಲ ಕಳೆಯಿತು. “ಅಯ್ಯೋ ಮುನಿ ವಧು ದೀರ್ಘಕಾಲದ ತಪಸ್ಸಿನಲ್ಲಿ ಆಯಾಸಪಟ್ಟಳಲ್ಲಾ” ಎಂದು ಕರುಣೆಯಿಂದ ಈಶ್ವರನು ಆ ತಪೋವನಕ್ಕೆ ಇಳಿದು ಬಂದು ಆಕೆಯ ಎದುರಿನಲ್ಲಿ ಸುಳಿದನು. ಅಬಲೆ ಕಣ್ತೆರೆದು ಭಕ್ತರಿಗೆ ಸುಲಭನೂ, ತರ್ಕಗಳಿಗೆ ದುರ್ಲಭನೂ, ಜಯಿಸಲು ಅಸಾಧ್ಯವಾದ, ಮಹಿಮಾವಂತನಾದ ಶಿವನನ್ನು ನೋಡಿದಳು.
ಪದಾರ್ಥ (ಕ.ಗ.ಪ)
ದುರಾಸದ-ಜಯಿಸಲು ಅಸಾಧ್ಯವಾದ, ಧೂರ್ಜಟಿ-ಭಾರಿಯಾದ ಜಡೆಯುಳ್ಳವ, ಶಿವ
ಮೂಲ ...{Loading}...
ಹಲವು ಕಾಲದಿ ತಪದೊಳಕಟಾ
ಬಳಲಿದಳಲಾ ಮುನಿಯ ವಧುವೆಂ
ದಿಳಿದನೀಶ್ವರನಾ ತಪೋವನಕಾಕೆಯೆದುರಿನಲಿ
ಸುಳಿಯೆ ಕಂದೆರೆದಬಲೆ ಕಂಡಳು
ಸುಲಭನನು ಭಕ್ತರಿಗೆ ತರ್ಕಾ
ವಳಿಗೆ ದುರ್ಲಭನನು ದುರಾಸದ ಮಹಿಮ ಧೂರ್ಜಟಿಯ ॥48॥
೦೪೯ ತರುಣಿ ಮೈಯಿಕ್ಕಿದಳು ...{Loading}...
ತರುಣಿ ಮೈಯಿಕ್ಕಿದಳು ಕರದಲಿ
ಶಿರವ ನೆಗಹಿದನಬುಜಲೋಚನೆ
ವರವ ಕೊಟ್ಟೆನು ಬೇಡಿಕೊಳ್ಳೆನೆ ತರುಣಿ ತಲೆವಾಗಿ
ಹರಪತಿಂ ದೇಹಿ ಪ್ರಭೋ ಶಂ
ಕರಪತಿಂ ದೇಹಿ ಪ್ರಭೋಯೆಂ
ದರಸಿ ಬೇಡಿದಳೈದು ಬಾರಿ ಮಹೇಶನಲಿ ವರವ ॥49॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಶಿವನನ್ನು ಕಂಡು ತರುಣಿ ನಮಸ್ಕರಿಸಿದಳು. ಶಿವನು ಕರದಿಂದ ಅವಳ ತಲೆಯನ್ನು ಹಿಡಿದೆತ್ತಿ “ಕಮಲಲೋಚನೆ, ವರವನ್ನು ಕೊಟ್ಟೆನು, ಬೇಡಿಕೊ” ಎಂದನು. ಈ ತರುಣಿ ತಲೆಬಾಗಿಸಿ “ಹರನೇ ಪತಿಯನ್ನು ಕೊಡು, ಪ್ರಭುವೇ ಶಂಕರಾ, ಪತಿಯನ್ನು ಕೊಡು ಪ್ರಭುವೇ” ಎಂದು ಐದುಸಾರಿ ನುಡಿದು ಮಹೇಶನಲ್ಲಿ ವರವನ್ನು ಬೇಡಿದಳು.
ಮೂಲ ...{Loading}...
ತರುಣಿ ಮೈಯಿಕ್ಕಿದಳು ಕರದಲಿ
ಶಿರವ ನೆಗಹಿದನಬುಜಲೋಚನೆ
ವರವ ಕೊಟ್ಟೆನು ಬೇಡಿಕೊಳ್ಳೆನೆ ತರುಣಿ ತಲೆವಾಗಿ
ಹರಪತಿಂ ದೇಹಿ ಪ್ರಭೋ ಶಂ
ಕರಪತಿಂ ದೇಹಿ ಪ್ರಭೋಯೆಂ
ದರಸಿ ಬೇಡಿದಳೈದು ಬಾರಿ ಮಹೇಶನಲಿ ವರವ ॥49॥
೦೫೦ ಆದಡೈವರು ಪತಿಗಳಹರು ...{Loading}...
ಆದಡೈವರು ಪತಿಗಳಹರು ತ
ಳೋದರಿಯೆ ನಿನಗೆನಲು ಬೆಚ್ಚಿದ
ಳೀ ದುರಿತ ತನಗೇಕೆನುತ ಸತಿ ಮುಚ್ಚಿದಳು ಕಿವಿಯ
ಆದಡಂಜದಿರಂಜದಿರು ವರ
ವೇದಬಾಹಿರವಲ್ಲ ಸತಿಯರೊ
ಳಾದಿ ಪಾತಿವ್ರತ್ಯ ನಿನಗೆಂದನು ಮಖಧ್ವಂಸಿ ॥50॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅದಕ್ಕೆ ಶಿವನು, “ಸುಂದರಿಯೇ ನಿನಗೆ ಐವರು ಪತಿಗಳಾಗುತ್ತಾರೆ” ಎಂದು ಹೇಳಲು ಈ ಸತಿ ಬೆಚ್ಚಿದಳು. “ಈ ಪಾಪ ತನಗೇಕೆ?” ಎನುತ್ತ ಕಿವಿಯನ್ನು ಮುಚ್ಚಿದಳು. ಅದನ್ನು ಕಂಡು, “ಹೆದರಬೇಡ, ಹೆದರಬೇಡ, ಈ ವರವು ವೇದ ಬಹಿಷ್ಕೃತವಲ್ಲ. ಸತಿಯರಲ್ಲಿ ಆದಿಪಾತಿವ್ರತ್ಯ ನಿನಗೆ” ಎಂದನು.
ಪದಾರ್ಥ (ಕ.ಗ.ಪ)
ಮಖಧ್ವಂಸಿ-ದಕ್ಷಯಾಗವನ್ನು ಧ್ವಂಸ ಮಾಡಿದವನು, ಶಿವ. ಬಾಹಿರ-ಬಹಿಷ್ಕೃತ, ಪಾತಿವ್ರತ್ಯ-ಪತಿಗೆ ವಿಧೇಯಳಾಗಿ ವರ್ತಿಸುವುದು
ಮೂಲ ...{Loading}...
ಆದಡೈವರು ಪತಿಗಳಹರು ತ
ಳೋದರಿಯೆ ನಿನಗೆನಲು ಬೆಚ್ಚಿದ
ಳೀ ದುರಿತ ತನಗೇಕೆನುತ ಸತಿ ಮುಚ್ಚಿದಳು ಕಿವಿಯ
ಆದಡಂಜದಿರಂಜದಿರು ವರ
ವೇದಬಾಹಿರವಲ್ಲ ಸತಿಯರೊ
ಳಾದಿ ಪಾತಿವ್ರತ್ಯ ನಿನಗೆಂದನು ಮಖಧ್ವಂಸಿ ॥50॥
೦೫೧ ಶ್ರುತಿಗಳೆಮ್ಬುದೆಯೆಮ್ಮ ...{Loading}...
ಶ್ರುತಿಗಳೆಂಬುದೆಯೆಮ್ಮ ನುಡಿ ಸಂ
ಸೃತಿಗಳೆಮ್ಮಯ ಚೇಷ್ಟೆ ಧರ್ಮದ
ಗತಿ ವಿಚಾರಿಸಲೆಮ್ಮ ನೇಮವು ವಿಹಿತ ವಿಧಿಯೆಂದು
ಕ್ರತುಗಳೀ ಮನ್ವಾದಿಗಳು ಸುರ
ತತಿಗಳಬುಜಭವಾದಿ ದೇವ
ಪ್ರತತಿಯೆನ್ನಾಜ್ಞೆಯೊಳಗೆಂದಾ ಸತಿಗೆ ಶಿವ ನುಡಿದ ॥51॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ವೇದಗಳೆಂಬುದು ನಮ್ಮ ನುಡಿ. ಸಂಸಾರಗಳು ನಮ್ಮಯ ಕಾರ್ಯ. ವಿಚಾರಿಸಿದರೆ, ಧರ್ಮದ ಮಾರ್ಗವೇ ನಮ್ಮ ನೇಮವು ಎನ್ನುವುದು ಯೋಗ್ಯವಾದ ನಿಯಮ. ಯಜ್ಞಗಳು, ಮನ್ವಂತರಗಳು, ಇಂದ್ರಾದಿಗಳು, ಬ್ರಹ್ಮಾದಿ ದೇವತೆಗಳ ಸಮೂಹ, ನನ್ನ ಆಜ್ಞಾನುಸಾರ ನಡೆಯುವುದು” ಎಂದು ಸತಿಗೆ ಶಿವನು ಹೇಳಿದನು.
ಪದಾರ್ಥ (ಕ.ಗ.ಪ)
ಸಂಸೃತಿ-ಸಂಸಾರ, ಕ್ರತು-ಯಜ್ಞ, ಸುರಪತಿ-ಇಂದ್ರ, ಪ್ರತತಿ-ಸಮೂಹ
ಮೂಲ ...{Loading}...
ಶ್ರುತಿಗಳೆಂಬುದೆಯೆಮ್ಮ ನುಡಿ ಸಂ
ಸೃತಿಗಳೆಮ್ಮಯ ಚೇಷ್ಟೆ ಧರ್ಮದ
ಗತಿ ವಿಚಾರಿಸಲೆಮ್ಮ ನೇಮವು ವಿಹಿತ ವಿಧಿಯೆಂದು
ಕ್ರತುಗಳೀ ಮನ್ವಾದಿಗಳು ಸುರ
ತತಿಗಳಬುಜಭವಾದಿ ದೇವ
ಪ್ರತತಿಯೆನ್ನಾಜ್ಞೆಯೊಳಗೆಂದಾ ಸತಿಗೆ ಶಿವ ನುಡಿದ ॥51॥
೦೫೨ ನಿನ್ನ ಕಥನವೆ ...{Loading}...
ನಿನ್ನ ಕಥನವೆ ಪುಣ್ಯಕಥನವು
ನಿನ್ನ ಚರಿತವೆ ಪುಣ್ಯಚರಿತವು
ನಿನ್ನ ನೆನೆದಂಗನೆಗೆ ಬಹುದು ಪತಿವ್ರತಾಭಾವ
ಎನ್ನನುಜ್ಞೆಗೆ ಧವರ್iಚಿಂತಾ
ಪನ್ನೆಯಾಗದಿರೆಂದು ಕೃಪೆಯಲಿ
ತನ್ನ ಸಿರಿ ಕರತಳವನಿರಿಸಿದನುತ್ತಮಾಂಗದಲಿ ॥52॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ನಿನ್ನ ಕಥನವೇ ಪುಣ್ಯ ಕಥನ. ನಿನ್ನ ಚರಿತವೇ ಪುಣ್ಯ ಚರಿತ. ನಿನ್ನನ್ನು ಸ್ಮರಿಸಿದ ಹೆಂಗಸಿಗೆ ಪತಿವ್ರತಾ ಭಾವವುಂಟಾಗುತ್ತದೆ. ನನ್ನ ಆಜ್ಞೆಯಿಂದ ಧರ್ಮಹಾನಿಯಾಗುತ್ತದೆಂದು ಚಿಂತೆಗೊಳಗಾಗಬೇಡ” ಎಂದು ಕೃಪೆಯಿಂದ ತನ್ನ ಮಂಗಳಕರವಾದ ಅಂಗೈಯನ್ನು ಅವಳ ತಲೆಯ ಮೇಲೆ ಇಟ್ಟನು.
ಪದಾರ್ಥ (ಕ.ಗ.ಪ)
ಅನುಜ್ಞೆ-ಆಜ್ಞೆ , ಆಪನ್ನ-ಹೊಂದಿದ, ಸಿರಿ-ಶೋಭೆ, ಕರತಳ-ಅಂಗೈ, ಉತ್ತಮಾಂಗ-ತಲೆ
ಮೂಲ ...{Loading}...
ನಿನ್ನ ಕಥನವೆ ಪುಣ್ಯಕಥನವು
ನಿನ್ನ ಚರಿತವೆ ಪುಣ್ಯಚರಿತವು
ನಿನ್ನ ನೆನೆದಂಗನೆಗೆ ಬಹುದು ಪತಿವ್ರತಾಭಾವ
ಎನ್ನನುಜ್ಞೆಗೆ ಧವರ್iಚಿಂತಾ
ಪನ್ನೆಯಾಗದಿರೆಂದು ಕೃಪೆಯಲಿ
ತನ್ನ ಸಿರಿ ಕರತಳವನಿರಿಸಿದನುತ್ತಮಾಂಗದಲಿ ॥52॥
೦೫೩ ಹರನ ನುಡಿಯೇ ...{Loading}...
ಹರನ ನುಡಿಯೇ ವೇದ ಹರನಾ
ಚರಣೆಯೇ ಸನ್ಮಾರ್ಗ ಹರ ಪತಿ
ಕರಿಸಿ ನುಡಿದುದೆ ಪರಮ ಪಾವನ ಧರ್ಮತತ್ವವದು
ಬರಹ ಸಹಿತಾ ವಿಧಿಯನೊರಸಲು
ಹರ ಸಮರ್ಥನು ಹರನ ಬರಹವ
ನೊರಸಲಾಪರ ತೋರಿಸಾ ಬ್ರಹ್ಮಾದಿ ದೇವರಲಿ ॥53॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಹರನ ನುಡಿಯೇ ವೇದ. ಹರನನ್ನು ಅನುಸರಿಸುವುದೇ ಸನ್ಮಾರ್ಗ. ಹರನು ಒಪ್ಪಿ ನುಡಿದದ್ದೇ ಪರಮ ಪವಿತ್ರವಾದ ಧರ್ಮತತ್ತ್ವ. ಬರಹ ಸಹಿತವಾಗಿ ಆ ಬ್ರಹ್ಮನನ್ನು ನಾಶಮಾಡುವುದಕ್ಕೆ ಹರನು ಸಮರ್ಥನಾಗಿದ್ದಾನೆ. ಹರನ ಬರಹವನ್ನು ನಿವಾರಿಸುವವರು ಬ್ರಹ್ಮಾದಿ ದೇವರಲ್ಲಿ ಯಾರಿದ್ದಾರೆ ? ತೋರಿಸು, ನೋಡೋಣ” ಎಂದು ಮುನಿ ಹೇಳಿದನು.
ಪದಾರ್ಥ (ಕ.ಗ.ಪ)
ಆಚರಣೆ-ಅನುಸರಿಸು,
ಪಾವನ-ಪವಿತ್ರ,
ವಿಧಿ-ಬ್ರಹ್ಮ,
ಒರಸು-ನಾಶಮಾಡು, ನಿವಾರಿಸು
ಮೂಲ ...{Loading}...
ಹರನ ನುಡಿಯೇ ವೇದ ಹರನಾ
ಚರಣೆಯೇ ಸನ್ಮಾರ್ಗ ಹರ ಪತಿ
ಕರಿಸಿ ನುಡಿದುದೆ ಪರಮ ಪಾವನ ಧರ್ಮತತ್ವವದು
ಬರಹ ಸಹಿತಾ ವಿಧಿಯನೊರಸಲು
ಹರ ಸಮರ್ಥನು ಹರನ ಬರಹವ
ನೊರಸಲಾಪರ ತೋರಿಸಾ ಬ್ರಹ್ಮಾದಿ ದೇವರಲಿ ॥53॥
೦೫೪ ಅದರಿನೈವರಿಗೀಕೆ ವಧುವೆಂ ...{Loading}...
ಅದರಿನೈವರಿಗೀಕೆ ವಧುವೆಂ
ಬುದು ಮಹೇಶ್ವರನಾಜ್ಞೆ ನೀನಿಂ
ದಿದಕೆ ಚಿಂತಿಸಬೇಡ ಬಳಿಕಾ ಪಾಂಡುನಂದನರ
ಹದನನರುಹುವೆ ಕೇಳು ನೃಪ ಪೂ
ರ್ವದಲಿ ಸುರಪತಿ ಶಂಕರನ ಶಾ
ಪದಲಿ ನವೆದನು ಹಲವು ಯುಗ ಕೈಲಾಸ ಕುಹರದಲಿ ॥54॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಆದ್ದರಿಂದ ಈಕೆ ಐವರಿಗೆ ವಧುವೆಂಬುದು ಮಹೇಶ್ವರನ ಆಜ್ಞೆ. ಇದಕ್ಕೆ ಈ ಹೊತ್ತು ನೀನು ಚಿಂತಿಸಬೇಡ” ಎಂದು ದ್ರೌಪದಿಯ ಪೂರ್ವ ಚರಿತ್ರೆಯನ್ನು ಹೇಳಿ ಮುನಿ ಮುಂದುವರೆಸಿದನು. “ಪಾಂಡುನಂದನರ ಸಂಗತಿಯನ್ನು ತಿಳಿಸುವೆನು ಕೇಳು, ಮಹಾರಾಜಾ” ಎಂದು ಹೇಳಲು ಆರಂಭಿಸಿದನು. ಪೂರ್ವದಲ್ಲಿ ದೇವೇಂದ್ರ ಶಂಕರನ ಶಾಪದಿಂದ ಹಲವು ಯುಗಗಳ ಕಾಲ ಕೈಲಾಸದ ಗುಹೆಯಲ್ಲಿ ಕೃಶವಾದನು.
ಪದಾರ್ಥ (ಕ.ಗ.ಪ)
ಹದನ-ಸಂಗತಿ, ನವೆ-ಕೃಶವಾಗು, ಕುಹರ-ಗುಹೆ
ಮೂಲ ...{Loading}...
ಅದರಿನೈವರಿಗೀಕೆ ವಧುವೆಂ
ಬುದು ಮಹೇಶ್ವರನಾಜ್ಞೆ ನೀನಿಂ
ದಿದಕೆ ಚಿಂತಿಸಬೇಡ ಬಳಿಕಾ ಪಾಂಡುನಂದನರ
ಹದನನರುಹುವೆ ಕೇಳು ನೃಪ ಪೂ
ರ್ವದಲಿ ಸುರಪತಿ ಶಂಕರನ ಶಾ
ಪದಲಿ ನವೆದನು ಹಲವು ಯುಗ ಕೈಲಾಸ ಕುಹರದಲಿ ॥54॥
೦೫೫ ಬಳಿಕಲಿನ್ದ್ರನು ಮರವೆಯಲಿ ...{Loading}...
ಬಳಿಕಲಿಂದ್ರನು ಮರವೆಯಲಿ ಕಳ
ವಳಿಸಲಾತಂಗೀತನಂದದಿ
ಹಲವು ಯುಗ ಸೆರೆಯಾಯ್ತು ರಜತಾಚಲದ ಕುಹರದಲಿ
ಬಿಲದಲೀ ಪರಿಯೈವರಿಂದ್ರರು
ಸಿಲುಕಿದರು ಶಂಕರನ ಖತಿಯಲಿ
ಬಳಿಕ ಬಿಡುಗಡೆಯಾಯ್ತು ಕಾತ್ಯಾಯನಿಯ ದೆಸೆಯಿಂದ ॥55॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಬಳಿಕ ಮತ್ತೊಬ್ಬ ಇಂದ್ರನು ಅಜ್ಞಾನದಿಂದ ಭ್ರಾಂತಿಗೊಳ್ಳಲು ಆತನಿಗೂ ಈತನ ರೀತಿಯಲ್ಲೇ ಶಿವನ ಶಾಪದಿಂದ ಕೈಲಾಸದ ಗುಹೆಯಲ್ಲಿ ಹಲವು ಯುಗಗಳವರೆಗೆ ಸೆರೆಯಾಯ್ತು. ಇದೇ ರೀತಿ ಐವರು ಇಂದ್ರರು ಶಂಕರನ ಕೋಪಕ್ಕೆ ಗುರಿಯಾಗಿ ಬಿಲದಲ್ಲಿ ಸಿಕ್ಕಿಕೊಂಡರು. ಆ ಮೇಲೆ ಕಾತ್ಯಾಯನಿಯ ದೆಸೆಯಿಂದ ಅವರಿಗೆ ಬಿಡುಗಡೆಯಾಯ್ತು.
ಪದಾರ್ಥ (ಕ.ಗ.ಪ)
ಮರವೆ-ಅಜ್ಞಾನ, ಕಳವಳ-ಭ್ರಾಂತಿ, ರಜತಾಚಲ-ಕೈಲಾಸ, ಖತಿ-ಕೋಪ
ಮೂಲ ...{Loading}...
ಬಳಿಕಲಿಂದ್ರನು ಮರವೆಯಲಿ ಕಳ
ವಳಿಸಲಾತಂಗೀತನಂದದಿ
ಹಲವು ಯುಗ ಸೆರೆಯಾಯ್ತು ರಜತಾಚಲದ ಕುಹರದಲಿ
ಬಿಲದಲೀ ಪರಿಯೈವರಿಂದ್ರರು
ಸಿಲುಕಿದರು ಶಂಕರನ ಖತಿಯಲಿ
ಬಳಿಕ ಬಿಡುಗಡೆಯಾಯ್ತು ಕಾತ್ಯಾಯನಿಯ ದೆಸೆಯಿಂದ ॥55॥
೦೫೬ ಜನಿಸುವುದು ನೀವೈವರಿನ್ದ್ರರು ...{Loading}...
ಜನಿಸುವುದು ನೀವೈವರಿಂದ್ರರು
ಮನುಜ ಲೋಕದೊಳರಸು ಕುಲದಲಿ
ವನಿತೆ ನಿಮ್ಮೈವರಿಗೆಯಹಳೊಬ್ಬಳೆ ನಿಧಾನವಿದು
ಎನಲು ನಡುಗಿದರಕಟ ಮೊದಲಲಿ
ಮನುಜ ಜನ್ಮವೆ ಕಷ್ಟವದರೊಳು
ವನಿತೆಯೊಡ ಹುಟ್ಟಿದರಿಗೊಬ್ಬಳೆ ಶಿವಶಿವ ಎನುತ ॥56॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಇಂದ್ರರು ಬಿಡುಗಡೆಯಾದಾಗ ಶಿವನು, “ನೀವು ಐವರು ಇಂದ್ರರು ಮನುಷ್ಯ ಲೋಕದಲ್ಲಿ ರಾಜಕುಲದಲ್ಲಿ ಹುಟ್ಟುವುದು. ನಿಮ್ಮೈವರಿಗೂ ಒಬ್ಬಳೇ ಹೆಂಡತಿಯಾಗುತ್ತಾಳೆ” ಎಂದು ಹೇಳಿದನು. ಈ ಮಾತು ಕೇಳಿ ಅವರು ನಡುಗಿದರು. “ಅಯ್ಯೋ ! ಮೊದಲಿನಲ್ಲಿ ಮನುಷ್ಯ ಜನ್ಮವೇ ಕಷ್ಟ. ಅದರಲ್ಲಿ ಒಡಹುಟ್ಟಿದವರೈವರಿಗೂ ಒಬ್ಬಳೇ ಹೆಂಡತಿಯೇ ! ಶಿವಶಿವಾ” ಎಂದರು.
ಪಾಠಾನ್ತರ (ಕ.ಗ.ಪ)
ಶಿವಶಿವಾಯೆಂದ - ಶಿವಶಿವ ಎನುತ
ಆದಿ ಪರ್ವ ಮೈ.ವಿ.ವಿ.
ಟಿಪ್ಪನೀ (ಕ.ಗ.ಪ)
ಪಂಚೇಂದ್ರರು - ಐವರು ಪಾಂಡವರು ಒಬ್ಬಳು ದ್ರೌಪದಿಯನ್ನು ಮದುವೆಯಾಗುತ್ತಾರಷ್ಟೆ. ಇದು ಲೋಕನೀತಿಗೆ ವಿರೋಧವಾದ ಕ್ರಮವಲ್ಲವೆ? ಆದರೆ ಸಮಜ ಪ್ರತಿಷ್ಠಿತ ವ್ಯಕ್ತಿಗಳೆನಿಸಿಕೊಂಡವರೇ ಹೀಗೆ ಮಾಡಿದೆ? ವ್ಯಾಸ ಮಹರ್ಷಿಗಳೇ ಇದಕ್ಕೆ ಒಪ್ಪಿಗೆ ಕೊಟ್ಟರೆ….? ಇಂದಿಗೂ ಈ ಪ್ರಶ್ನೆ ಉಳಿದಿದೆ. ವ್ಯಾಸರ ಕಾಲದಲ್ಲೂ ಇತ್ತು. ಅದಕ್ಕೆ ಸಮರ್ಥನೆಗಾಗಿ ಪಂಚೇಂದ್ರರ ಕಥೆ. ಇಂದ್ರಸೇನೆ ಮೌದ್ಗಲ್ಯರ ಕಥೆಗಳು ಹುಟ್ಟಿಕೊಂಡಿವೆ. ಈ ಕಥೆಗಳಲ್ಲಿ ಹುರುಳೂ ಇಲ್ಲ. ತಾರ್ಕಿಕವಾಗಿ ಒಪ್ಪಿಸುವ ಗುಣವೂ ಇಲ್ಲ. ಆದರೂ ಈ ಕಥೆ ಪ್ರಚಲಿತವಾಗಿದೆ. ವ್ಯಾಸರು ದ್ರುಪದನಿಗೆ ಹೇಳುವ ಕಥೆ ಇದು.
ದ್ರೌಪದಿ ಪೂರ್ವಜನ್ಮದಲ್ಲಿ ಇಂದ್ರಸೇನೆ ಎಂಬ ಹೆಸರಿನ ಪತಿವ್ರತೆಯಾಗಿದ್ದಳು. ಇವಳ ಗಂಡ ಮೌದ್ಗಲ್ಯ ಮುನಿ. ಅವನು ರೋಗಿ. ಆದರೂ ಬೇಸರವಿಲ್ಲದೆ ಅವನ ಹೆಂಡತಿ ಪತಿ ಸೇವೆ ಮಾಡುತ್ತಿದ್ದಳು. ಕುಷ್ಠರೋಗಿಯಾದ ಪತಿರಾಯ ಒಂದು ಸಲ ಊಟಮಾಡಿದಾಗ ಎಲೆಯಲ್ಲಿ ಅವನ ಬೆರಳು ಬಿದ್ದುಹೋಯಿತು. ಆದರೂ ಲೆಕ್ಕಿಸದೆ ಅದನ್ನು ಪಕ್ಕ್ಕೆ ಸರಿಸಿ ಇಂದ್ರಸೇನೆ ಊಟ ಮಾಡಿದಳಂತೆ. ಇವಳ ಸೇವಾತತ್ಪರತೆಯನ್ನು ಕಂಡು ಮೌದ್ಗಲ್ಯನು ಒಂದು ವರ ಕೊಟ್ಟ. ‘‘ಏನು ಬೇಕಾದರೂ ಕೇಳಿಕೋ’’ ಎಂದ. ಆಗ ಇಂದ್ರಸೇನೆ ‘‘ನೀನುಸುಂದರ ರೂಪ ಧರಿಸಿ ನನ್ನನ್ನು ರಮಿಸಬೇಕು. ಲೋಕಾಂತರಗಳಲ್ಲಿ ಪ್ರವಾಸ ಮಾಡಿಸಬೇಕು’’ ಎಂದಳು. ಅವನು ಒಪ್ಪಿ ಹಾಗೆಯೇ ಮಾಡಿ ಅವಳನ್ನು ಬಿಟ್ಟು ಘೋರ ತಪಸ್ಸು ಮಾಡಿ ರುದ್ರ ಲೋಕಕ್ಕೆ ಹೋದ ಅಲ್ಲಿಗೆ ಕಥೆ ಮುಗಿಯುವುದಿಲ್ಲ.
ಇಂದ್ರಸೇನೆಗೆ ಶಾರೀರಿಕ ಬಯಕೆ ಹೆಚ್ಚಾಯಿತೇ ಹೊರತು ತಗ್ಗಲಿಲ್ಲ. ಆದುದರಿಂದ ಮುಂದೆ ಕಾಶಿರಾಜನ ಮಗಳಾಗಿ ಚಿರಕಾರಿ ಎಂಬ ಹೆಸರಿನಲ್ಲಿ ಬೆಳೆದಳು. ಭರ್ತನಿಗಾಗಿ ಉಗ್ರತಪಸ್ಸು ಮಾಡಿದಳು. ಆಗ ಅವಳ ಬಳಿಗೆ ಇಂದ್ರ ವಾಯು ಯಮ ಮತ್ತು ಅಶ್ವಿನೀದೇವತೆಗಳು ಬಂದರು. ಬಂದು ‘‘ನಮ್ಮ ಅಂಶದಲ್ಲಿ ಹುಟ್ಟುವ ಮಕ್ಕಳೊಂದಿಗೆ ನಿನ್ನ ಮದುವೆ’’ ಎಂದು ಹೇಳಿ ಹೋದರು. ಅನಂತರ ಅವಳು ಜಲಾಹಾರೆಯಾಗಿ ಅನಂತರ ನಿರಾಹಾರೆಯಾಗಿ ಶಿವನನ್ನು ಕುರಿತು ತಪಸ್ಸು ಮಾಡಿದಳು.
ಮುಂದಿನ ಕಥೆ ಇನ್ನೂ ಗೂಢವಾಗಿದೆ. ಒಬ್ಬಳು ಕನ್ಯೆ ಗಂಗಾಜಲದ ಮಧ್ಯೆ ಅಳುತ್ತಾ ಕುಳಿತಿದ್ದಾಳೆ. ಆಕೆಯ ಕಣ್ಣೀರು ಬಂಗಾರದ ತಾವರೆಯಾಗುತ್ತಿದೆ. ದೇವತೆಗಳು ಆಶ್ಚರ್ಯದಿಂದ ನೀನು ಯಾರು? ಎಂದು ಕೇಳಿದರು. ಅವಳು ಅವರನ್ನೆಲ್ಲ ಪಗಡೆಯಾಡುತ್ತಿರುವ ಶಿವನ ಬಳಿಗೆ ಕರೆದೊಯ್ದಳು. ಅವನು ವರುಣ ಎಂದು ತಿಳಿದ ಇಂದ್ರನು ಅವನ ಮೇಲೆ ಪಗಡೆಯಾಡುತ್ತಿರುವುದಕ್ಕಾಗಿ ಆಕ್ಷೇಪಿಸಿದ. ರುದ್ರನ ಆಜ್ಞೆಯಂತೆ ಅವನನ್ನು ಎಳೆದುಕೊಂಡು ಹೊದರು. ಅಲ್ಲಿ ಹೋದರೆ ಈ ಇಂದ್ರನಂತೆ ಅಲ್ಲಿ ಇನ್ನೂ ನಾಲ್ವರಿದ್ದಾರೆ. ಇವರೇ ಪಂಚೇಂದ್ರರು.
ಅದಲ್ಲದೆ ಒಬ್ಬಳು ಕನ್ಯೆ ‘ಪತೀಂ ದೇಹಿ’ ಎಂದು ಶಿವನನ್ನು ಐದು ಬಾರಿ ಕೇಳಿದ್ದರಿಂದ ಅವಳಿಂದ ಪಂಚಪತಿಗಳಾಗುವಂತೆ ಶಿವನು ಹರಸಿದನಂತೆ.
ಇಂಥ ಅಜ್ಜಿಕತೆಗಳನ್ನು ಹೇಳಿ ವ್ಯಾಸರು ನಮ್ಮನ್ನು ಒಪ್ಪಿಸುವ ಪ್ರಯತ್ನ ಮಾಡುವ ಬದಲಿಗೆ ಪಂಚಪತಿತ್ವದ ಕಲ್ಪನೆಯನ್ನು ವಿಸ್ಮಯಕಾರಿಯಾಗಿಯೇ ಉಳಿಸಿದ್ದರೆ ಚೆನ್ನಾಗಿತ್ತು ಎನ್ನಿಸುತ್ತದೆ.
-ಅ.ರಾ.ಮಿತ್ರ
ಮೂಲ ...{Loading}...
ಜನಿಸುವುದು ನೀವೈವರಿಂದ್ರರು
ಮನುಜ ಲೋಕದೊಳರಸು ಕುಲದಲಿ
ವನಿತೆ ನಿಮ್ಮೈವರಿಗೆಯಹಳೊಬ್ಬಳೆ ನಿಧಾನವಿದು
ಎನಲು ನಡುಗಿದರಕಟ ಮೊದಲಲಿ
ಮನುಜ ಜನ್ಮವೆ ಕಷ್ಟವದರೊಳು
ವನಿತೆಯೊಡ ಹುಟ್ಟಿದರಿಗೊಬ್ಬಳೆ ಶಿವಶಿವ ಎನುತ ॥56॥
೦೫೭ ಹರಹರ ತ್ರಾಯಸ್ವ ...{Loading}...
ಹರಹರ ತ್ರಾಯಸ್ವ ಕರುಣಾ
ಕರ ಮಹಾದೇವೀ ದುರಂತದ
ನರಕ ಭಾಜನಮುಚಿತವೇ ನಿಮ್ಮಂಘ್ರಿದರ್ಶನಕೆ
ಕರುಣಿಸೈ ಮತ್ತೊಂದು ಪರಿಯಲಿ
ವರವನೆನೆ ನಸುನಗುತ ಗೌರೀ
ವರನು ತಿಳುಹಿದನೈವರಿಂದ್ರರಿಗರಸ ಕೇಳ್ ಎಂದ ॥57॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಹರಹರಾ, ಕಾಪಾಡು, ಕರುಣಾಕರಾ, ಮಹಾದೇವಾ ಈ ದುರಂತದ ನರಕದ ಆಸೆಯ ಸ್ಥಿತಿ ಉಚಿತವೇ ? ನಿಮ್ಮ ಪಾದದರ್ಶನಕ್ಕೆ ಇದು ತಕ್ಕ ಫಲವೇ ? ಮತ್ತೊಂದು ರೀತಿಯಲ್ಲಿ ವರವನ್ನು ಕರುಣಿಸಬೇಕು” ಎಂದು ಪ್ರಾರ್ಥಿಸಿದರು. ಗೌರೀವರ ಶಿವನು ಐವರಿಂದ್ರರಿಗೂ ತಿಳಿಸಿ ಹೇಳಿದನು.
ಪದಾರ್ಥ (ಕ.ಗ.ಪ)
ಭಾಜನ-ಪಾತ್ರನಾದವನು
ಮೂಲ ...{Loading}...
ಹರಹರ ತ್ರಾಯಸ್ವ ಕರುಣಾ
ಕರ ಮಹಾದೇವೀ ದುರಂತದ
ನರಕ ಭಾಜನಮುಚಿತವೇ ನಿಮ್ಮಂಘ್ರಿದರ್ಶನಕೆ
ಕರುಣಿಸೈ ಮತ್ತೊಂದು ಪರಿಯಲಿ
ವರವನೆನೆ ನಸುನಗುತ ಗೌರೀ
ವರನು ತಿಳುಹಿದನೈವರಿಂದ್ರರಿಗರಸ ಕೇಳೆಂದ ॥57॥
೦೫೮ ಖೇಡತನವೇಕೆಳ್ಳನಿತು ಖಯ ...{Loading}...
ಖೇಡತನವೇಕೆಳ್ಳನಿತು ಖಯ
ಖೋಡಿಯಿದರೊಳಗಿಲ್ಲ ಮುನಿವಧು
ಬೇಡಿದಳು ಪೂರ್ವದಲಿ ವರವನು ಪಂಚವಾಕ್ಯದಲಿ
ಜೋಡೆನಿಸಿದಳು ನಾರಿ ಧರ್ಮಕೆ
ಕೇಡು ಬಾರದು ನಿಮ್ಮ ನೆರೆ ಕೆ
ಟ್ಟಾಡಿದರ ಬಾಯ್ ಹುಳುವುದೆಂದನು ಬಾಲಶಶಿಮೌಳಿ ॥58॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಭಯವೇಕೆ ನಿಮಗೆ ? ಇದರಲ್ಲಿ ಎಳ್ಳಷ್ಟೂ ಕೊರತೆಯಿಲ್ಲ. ಹಿಂದೆ ಮುನಿವಧು ಪಂಚವಾಕ್ಯದಲ್ಲಿ ಪತಿಯನ್ನು ಬೇಡಿದ್ದಳು. ಆ ನಾರಿ ನಿಮಗೆ ಜೊತೆ ಎನಿಸಿದಳು. ಇದರಿಂದ ಧರ್ಮಕ್ಕೆ ಕೇಡು ಬರುವುದಿಲ್ಲ. ನಿಮ್ಮನ್ನು ಕೆಟ್ಟದಾಗಿ ಮಾತನಾಡಿದವರ ಬಾಯಲ್ಲಿ ಹುಳು ಬೀಳುವುದು” ಎಂದನು ಬಾಲಶಶಿಮೌಳಿ.
ಪದಾರ್ಥ (ಕ.ಗ.ಪ)
ಖೇಡತನ-ಭಯ, ಖಯಖೋಡಿ-ಕೊರತೆ, ಜೋಡು-ಜೊತೆ, ಬಾಲಶಶಿಮೌಳಿ-ಬಾಲಚಂದ್ರನನ್ನು ತಲೆಯಲ್ಲಿ ಧರಿಸಿರುವವನು, ಶಿವ
ಮೂಲ ...{Loading}...
ಖೇಡತನವೇಕೆಳ್ಳನಿತು ಖಯ
ಖೋಡಿಯಿದರೊಳಗಿಲ್ಲ ಮುನಿವಧು
ಬೇಡಿದಳು ಪೂರ್ವದಲಿ ವರವನು ಪಂಚವಾಕ್ಯದಲಿ
ಜೋಡೆನಿಸಿದಳು ನಾರಿ ಧರ್ಮಕೆ
ಕೇಡು ಬಾರದು ನಿಮ್ಮ ನೆರೆ ಕೆ
ಟ್ಟಾಡಿದರ ಬಾಯ್ ಹುಳುವುದೆಂದನು ಬಾಲಶಶಿಮೌಳಿ ॥58॥
೦೫೯ ಎನೆ ಹಸಾದದಲಿನ್ದುಶೇಖರ ...{Loading}...
ಎನೆ ಹಸಾದದಲಿಂದುಶೇಖರ
ನನು ಸುರೇಂದ್ರರು ಬೀಳುಕೊಂಡರು
ಜನಿಸಿದರು ಬಳಿಕಿವರು ಮಹಿಯಲಿ ಮತ್ರ್ಯರೂಪಾಗಿ
ನಿನಗೆ ಮಗಳೀ ವನಿತೆ ಕುಂತಿಯ
ತನುಜರಿವರಳಿಯಂದಿರೇ ನೀ
ನೆನಿತು ಧನ್ಯನೊ ಶಿವಯೆನುತ ತಲೆದೂಗಿದನು ಮುನಿಪ ॥59॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಹೀಗೆ ಐವರಿಂದ್ರರು ಅನುಗೃಹೀತರಾಗಿ ಚಂದ್ರಶೇಖರನನ್ನು ಬೀಳ್ಕೊಂಡು ಬಂದು ಭೂಮಿಯಲ್ಲಿ ಮನುಷ್ಯರ ರೂಪಿನಲ್ಲಿ ಹುಟ್ಟಿದರು. “ನಿನಗೆ ಮಗಳು ಈ ವನಿತೆ, ಕುಂತಿಯ ಮಕ್ಕಳು ಇವರು ಅಳಿಯಂದಿರು. ನೀನೆಷ್ಟು ಪುಣ್ಯವಂತನಯ್ಯಾ !” ಎಂದು ಮುನಿಪತಿ ತಲೆದೂಗಿದನು.
ಪದಾರ್ಥ (ಕ.ಗ.ಪ)
ಇಂದು-ಚಂದ್ರ, ಮಹಿ-ಭೂಮಿ, ತನುಜರು-ಮಕ್ಕಳು, ಧನ್ಯ-ಪುಣ್ಯವಂತ
ಮೂಲ ...{Loading}...
ಎನೆ ಹಸಾದದಲಿಂದುಶೇಖರ
ನನು ಸುರೇಂದ್ರರು ಬೀಳುಕೊಂಡರು
ಜನಿಸಿದರು ಬಳಿಕಿವರು ಮಹಿಯಲಿ ಮತ್ರ್ಯರೂಪಾಗಿ
ನಿನಗೆ ಮಗಳೀ ವನಿತೆ ಕುಂತಿಯ
ತನುಜರಿವರಳಿಯಂದಿರೇ ನೀ
ನೆನಿತು ಧನ್ಯನೊ ಶಿವಯೆನುತ ತಲೆದೂಗಿದನು ಮುನಿಪ ॥59॥
೦೬೦ ಎಲೆ ಮರುಳೆ ...{Loading}...
ಎಲೆ ಮರುಳೆ ಪೂರ್ವದಲಿ ತಾವ್ ತ
ಮ್ಮೊಳಗೆಯೈವರು ಜನಿಸೆ ನಿನ್ನೀ
ನಳಿನಮುಖಿಗಿವರೆಲ್ಲ ವರಗಳು ಪಾಂಡುನಂದನರು
ತಿಳಿಯದಿರೆ ನೋಡಾದೊಡೆನುತ
ಗ್ಗಳೆಯ ಮುನಿಪತಿ ದಿವ್ಯದೃಷ್ಟಿಯ
ಸಲಿಸಿದಡೆ ನೋಡಿದನು ದ್ರುಪದನು ಪಾಂಡುನಂದನರ ॥60॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಹೀಗೆ ಪೂರ್ವಕಥೆಯನ್ನು ವಿವರಿಸಿ, “ಎಲೆ ಮರುಳೆ, ಪೂರ್ವದಲ್ಲಿ ತಾವು ತಮ್ಮಿಂದಲೇ ಐವರು ಜನಿಸಲು ನಿನ್ನ ಈ ಕಮಲಮುಖಿಗೆ ಇವರೆಲ್ಲ ವರಗಳು, ಪಾಂಡುನಂದನರು. ತಿಳಿಯದಿದ್ದರೆ ನೀನೇ ನೋಡಿ ತಿಳಿ” ಎನುತ್ತ ಶ್ರೇಷ್ಠನಾದ ಮುನಿಪತಿಯು ದ್ರುಪದನಿಗೆ ದಿವ್ಯದೃಷ್ಟಿಯನ್ನು ದಯಪಾಲಿಸಿದನು. ದ್ರುಪದನು ಪಾಂಡುನಂದನರನ್ನು ನೋಡಿದನು.
ಪದಾರ್ಥ (ಕ.ಗ.ಪ)
ಅಗ್ಗಳೆ-ಶ್ರೇಷ್ಠ, ಸಲಿಸು-ದಯಪಾಲಿಸು
ಮೂಲ ...{Loading}...
ಎಲೆ ಮರುಳೆ ಪೂರ್ವದಲಿ ತಾವ್ ತ
ಮ್ಮೊಳಗೆಯೈವರು ಜನಿಸೆ ನಿನ್ನೀ
ನಳಿನಮುಖಿಗಿವರೆಲ್ಲ ವರಗಳು ಪಾಂಡುನಂದನರು
ತಿಳಿಯದಿರೆ ನೋಡಾದೊಡೆನುತ
ಗ್ಗಳೆಯ ಮುನಿಪತಿ ದಿವ್ಯದೃಷ್ಟಿಯ
ಸಲಿಸಿದಡೆ ನೋಡಿದನು ದ್ರುಪದನು ಪಾಂಡುನಂದನರ ॥60॥
೦೬೧ ಮೆರೆವ ದೇಹಪ್ರಭೆಗಳಲಿ ...{Loading}...
ಮೆರೆವ ದೇಹಪ್ರಭೆಗಳಲಿ ಮಿರು
ಮಿರುಪ ದಿವ್ಯಾಭರಣ ಕಿರಣದ
ತುರುಗಿನಲಿ ತನಿ ಹೊಳೆವ ದಿವ್ಯಾಂಬರದ ಕಾಂತಿಯಲಿ
ಅರಿವಡಾಯ್ತೆಲ್ಲವಯವದ ಕಂ
ದೆರೆವ ತೇಜಃಪುಂಜ ರಸಮಯ
ದೆರಕವೆನಲಿವರೈವರೊಪ್ಪಿದರಿಂದ್ರ ತೇಜದಲಿ ॥61॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅವನು ಅಲ್ಲಿ ಕಂಡದ್ದೇನು ? ದೇಹ ಕಾಂತಿಯಿಂದ ಶೋಭಿಸುತ್ತಿದೆ. ಹೊಳೆ ಹೊಳೆಯುವ ಸುಂದರವಾದ ಆಭರಣಗಳು ಪ್ರಕಾಶದಿಂದ ತುಂಬಿವೆ. ದಿವ್ಯಾಂಬರದ ಕಾಂತಿ ಅತಿಶಯವಾಗಿ ಹೊಳೆಯುತ್ತಿದೆ. ಕಣ್ಣು ತೆರೆದಿದೆ ! ತೇಜಸ್ಸಿನ ರಾಶಿಯ ರಸಮಯದ ಎರಕವೋ ಅನ್ನುವಂತೆ ಅವರೈವರೂ ಇಂದ್ರ ತೇಜಸ್ಸಿನಿಂದ ಹೊಳೆದರು.
ಪದಾರ್ಥ (ಕ.ಗ.ಪ)
ಮೆರೆ-ಶೋಭಿಸು, ಮಿರುಮಿರುಪ-ಹೊಳೆ ಹೊಳೆಯುವ, ತೇಜಃಪುಂಜ- ತೇಜಸ್ಸಿನ ರಾಶಿ, ಒಪ್ಪು-ಹೊಳೆ
ಮೂಲ ...{Loading}...
ಮೆರೆವ ದೇಹಪ್ರಭೆಗಳಲಿ ಮಿರು
ಮಿರುಪ ದಿವ್ಯಾಭರಣ ಕಿರಣದ
ತುರುಗಿನಲಿ ತನಿ ಹೊಳೆವ ದಿವ್ಯಾಂಬರದ ಕಾಂತಿಯಲಿ
ಅರಿವಡಾಯ್ತೆಲ್ಲವಯವದ ಕಂ
ದೆರೆವ ತೇಜಃಪುಂಜ ರಸಮಯ
ದೆರಕವೆನಲಿವರೈವರೊಪ್ಪಿದರಿಂದ್ರ ತೇಜದಲಿ ॥61॥
೦೬೨ ಮನದ ಝೊಮ್ಮಿನ ...{Loading}...
ಮನದ ಝೊಮ್ಮಿನ ಝಡಿವ ರೋಮಾಂ
ಚನದ ಹುದುಗುವ ಹೊದರುಗಂಗಳ
ಜಿನುಗುವಾತಿನ ಹೂತ ಹರುಷದ ಹೊಂಗಿದುತ್ಸವದ
ಕೊನರೊ ಬೆವರಿನ ಕಳಿದ ಚಿಂತೆಯ
ಮನದ ಭಾವದ ರಾಗರಸದು
ಬ್ಬಿನಲಿ ಹೊಂಪುಳಿ ಹೋದನವರನು ಕಂಡು ಪಾಂಚಾಲ ॥62॥ ॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ದ್ರುಪದರಾಜನ ಮನಸ್ಸಿನಲ್ಲಿ ಉಂಟಾದ ಜೊಂಪಿನ ವ್ಯಾಪನೆಯಿಂದ ರೋಮಾಂಚವೆದ್ದಿತು. ಹೊದರಿನಂತಿರುವ ಕಣ್ಣುಗಳು ಮುಚ್ಚಿಕೊಂಡುವು. ಮಾತು ಮೆದುವಾಯಿತು. ಹರುಷ ಹೂಬಿಟ್ಟಿತು. ಸಂತೋಷದ ಚಿಗುರು ಉಕ್ಕಿ ಚಿಮ್ಮಿತು. ಮೈಬೆವರಿಟ್ಟಿತು. ಮನಸ್ಸಿನ ಚಿಂತೆಯೆಲ್ಲಾ ಕಳೆದುಹೋಯಿತು. ಪಾಂಡವರನ್ನು ಕಂಡು ರಾಗರಸದುಬ್ಬಿನಲ್ಲಿ ಪಾಂಚಾಲ ಭೂಪತಿ ಪಾಂಡುಪುತ್ರರನ್ನು ನೋಡಿ ರೋಮಾಂಚಿತನಾದನು.
ಪದಾರ್ಥ (ಕ.ಗ.ಪ)
ಝೊಮ್ಮ-ಜೊಂಪು, ಝಡಿ-ವ್ಯಾಪಿಸು, ಹುದುಗು-ಮುಚ್ಚಿಕೊಳ್ಳು, ಜಿನುಗುವಾತು-ಪಿಸುಮಾತು, ಹೂತ-ಹೂಬಿಟ್ಟ, ಹೊಂಗು-ಉಕ್ಕಿಚಿಮ್ಮು, ಕೊನರು-ಚಿಗುರು, ಹೊಂಪುಳಿ-ರೋಮಾಂಚ
ಮೂಲ ...{Loading}...
ಮನದ ಝೊಮ್ಮಿನ ಝಡಿವ ರೋಮಾಂ
ಚನದ ಹುದುಗುವ ಹೊದರುಗಂಗಳ
ಜಿನುಗುವಾತಿನ ಹೂತ ಹರುಷದ ಹೊಂಗಿದುತ್ಸವದ
ಕೊನರೊ ಬೆವರಿನ ಕಳಿದ ಚಿಂತೆಯ
ಮನದ ಭಾವದ ರಾಗರಸದು
ಬ್ಬಿನಲಿ ಹೊಂಪುಳಿ ಹೋದನವರನು ಕಂಡು ಪಾಂಚಾಲ ॥62॥ ॥
೦೬೩ ಅರಸ ಕಣ್ಡೈ ...{Loading}...
ಅರಸ ಕಂಡೈ ನರಪತಿಗಳೋ
ಸುರಪತಿಗಳೋ ಮನದ ಸಂಶಯ
ಹರಿದುದೇ ಹಳಿವಿಲ್ಲಲೇ ಲೇಸಾಗಿ ನೋಡೆನಲು
ಪರಮಋಷಿ ನೀ ಪುಣ್ಯದಲಿ ಗೋ
ಚರಿಸಿದೈ ನಿಮ್ಮಡಿಯ ನೇಮವ
ಶಿರದೊಳಾಂತೆನು ಧನ್ಯ ತಾನೆಂದರಸ ಕೈಮುಗಿದ ॥63॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಅರಸಾ, ನೋಡಿದೆಯಾ ? ಇವರು ನರಪತಿಗಳೋ, ಸುರಪತಿಗಳೋ ಹೇಳು. ಮನಸ್ಸಿನ ಸಂಶಯ ಹರಿಯಿತೇ ? ದೋಷವಿಲ್ಲವಲ್ಲಾ ? ಚೆನ್ನಾಗಿ ನೋಡು " ಎಂದು ಮುನಿ ಹೇಳಿದನು. ದ್ರುಪದನು, “ಪರಮಋಷಿ ನೀವು ಪುಣ್ಯವಶದಿಂದ ಕಾಣಿಸಿಕೊಂಡಿರಿ, ನಿಮ್ಮಡಿಯ ಅಪ್ಪಣೆಯನ್ನು ಶಿರದಲ್ಲಿ ಧರಿಸಿದ್ದೇನೆ. ನಾನು ಧನ್ಯನಾದೆ” ಎಂದು ಕೈಮುಗಿದನು.
ಪದಾರ್ಥ (ಕ.ಗ.ಪ)
ಹಳಿವು-ದೋಷ, ಗೋಚರಿಸು-ಕಾಣಿಸಿಕೊ
ಮೂಲ ...{Loading}...
ಅರಸ ಕಂಡೈ ನರಪತಿಗಳೋ
ಸುರಪತಿಗಳೋ ಮನದ ಸಂಶಯ
ಹರಿದುದೇ ಹಳಿವಿಲ್ಲಲೇ ಲೇಸಾಗಿ ನೋಡೆನಲು
ಪರಮಋಷಿ ನೀ ಪುಣ್ಯದಲಿ ಗೋ
ಚರಿಸಿದೈ ನಿಮ್ಮಡಿಯ ನೇಮವ
ಶಿರದೊಳಾಂತೆನು ಧನ್ಯ ತಾನೆಂದರಸ ಕೈಮುಗಿದ ॥63॥
೦೬೪ ನಮ್ಬಿದೈ ಲೇಸಾಗಿ ...{Loading}...
ನಂಬಿದೈ ಲೇಸಾಗಿ ಲಗ್ನ ವಿ
ಲಂಬವಾಗದೆ ಧಾರೆಯೆರೆ ಕಲ
ಶಾಂಬುವಿದೆ ನೀ ಹೋಗು ಕಾಶ್ಯಪ ಹೋಮ ಸಾಧನವ
ತುಂಬು ವಹಿಲದಲವನಿಯಮರ ಕ
ದಂಬ ನೆರೆಯಲಿಯೆನಲು ದ್ರುಪದನ
ಹೊಂಬೆಳೆಯ ತನಿಹರುಷ ಹೊಡೆದೋರಿದುದು ಪುಳಕದಲಿ ॥64॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ನಂಬಿದೆಯೋ, ಲೇಸಾಗಿ ? ಲಗ್ನ ತಡವಾಗದಂತೆ ಧಾರೆಯೆರೆ. ಕಲಶಾಂಬು ಸಿದ್ಧವಾಗಿದೆ. ಕಾಶ್ಯಪಾ, ನೀನು ಹೋಗು, ಹೋಮಸಾಧನವನ್ನು ಬೇಗ ಸಿದ್ಧಪಡಿಸಿಕೊ, ಭೂಸುರ ಸಮೂಹ ಸೇರಲಿ” ಎಂದು ವೇದವ್ಯಾಸರು ನುಡಿಯಲು, ದ್ರುಪದನ ಹೆಚ್ಚಾದ ಸಂತೋಷ ಎಂಬ ಹೊನ್ನಿನ ಬೆಳೆ ಪುಳಕದಲ್ಲಿ ಹೊಡೆದೋರಿತು.
ಪದಾರ್ಥ (ಕ.ಗ.ಪ)
ವಹಿಲ-ಬೇಗ, ನೆರೆ-ಸೇರು, ಹೊಂಬೆಳೆ-ಹೊನ್ನಿನ ಬೆಳೆ, ಹೊಡೆ-ಪೈರಿನಲ್ಲಿ ತೆನೆ ಬರುವುದಕ್ಕಿಂತ ಮೊದಲಿನ ಸ್ಥಿತಿ
ಮೂಲ ...{Loading}...
ನಂಬಿದೈ ಲೇಸಾಗಿ ಲಗ್ನ ವಿ
ಲಂಬವಾಗದೆ ಧಾರೆಯೆರೆ ಕಲ
ಶಾಂಬುವಿದೆ ನೀ ಹೋಗು ಕಾಶ್ಯಪ ಹೋಮ ಸಾಧನವ
ತುಂಬು ವಹಿಲದಲವನಿಯಮರ ಕ
ದಂಬ ನೆರೆಯಲಿಯೆನಲು ದ್ರುಪದನ
ಹೊಂಬೆಳೆಯ ತನಿಹರುಷ ಹೊಡೆದೋರಿದುದು ಪುಳಕದಲಿ ॥64॥
೦೬೫ ಸಾರಿದರು ಮೆಟ್ಟಕ್ಕಿಗಳ ...{Loading}...
ಸಾರಿದರು ಮೆಟ್ಟಕ್ಕಿಗಳ ಗುಡ
ಜೀರಿಗೆಗಳೊದಗಿದವು ಲಗ್ನ ವಿ
ಹಾರದಾಶೀರ್ವಾದದಾಯತ ರವದ ರಭಸದಲಿ
ಧಾರೆಯೆರೆದನು ದ್ರುಪದ ಪಾಂಡು ಕು
ಮಾರರಿಗೆ ನಿಜಸುತೆಯನತಿ ವಿ
ಸ್ತಾರಿಸಿತು ವೈವಾಹರಚನೆ ವಿಶಾಲವಿಭವದಲಿ ॥65॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಎಲ್ಲರೂ ವಿವಾಹ ಮಂಟಪಕ್ಕೆ ಬಂದರು. ವಧೂವರರು ಮೆಟ್ಟಕ್ಕಿಗಳನ್ನು ಮೆಟ್ಟಿದರು ‘ಜೀರಿಗೆ ಬೆಲ್ಲ’ವನ್ನು ಸೂಸಿದರು. ಲಗ್ನಕಾಲದ ಮಂಗಳಾಶೀರ್ವಾದದ ಧ್ವನಿಯ ರಭಸದಲ್ಲಿ ದ್ರುಪದ ರಾಜನು ಪಾಂಡುಕುಮಾರರಿಗೆ ತನ್ನ ಮಗಳನ್ನು ಧಾರೆಯೆರೆದು ಕೊಟ್ಟನು. ಬಹು ವೈಭವದಿಂದ ವಿವಾಹ ಮಹೋತ್ಸವ ನೆರವೇರಿತು.
ಪದಾರ್ಥ (ಕ.ಗ.ಪ)
ಮೆಟ್ಟಕ್ಕಿ-ವಧೂವರರು ವಿವಾಹಕಾಲದಲ್ಲಿ ಮೆಟ್ಟುವ ಅಕ್ಕಿ, ಗುಡ-ಬೆಲ್ಲ, ರವ-ಧ್ವನಿ
ಮೂಲ ...{Loading}...
ಸಾರಿದರು ಮೆಟ್ಟಕ್ಕಿಗಳ ಗುಡ
ಜೀರಿಗೆಗಳೊದಗಿದವು ಲಗ್ನ ವಿ
ಹಾರದಾಶೀರ್ವಾದದಾಯತ ರವದ ರಭಸದಲಿ
ಧಾರೆಯೆರೆದನು ದ್ರುಪದ ಪಾಂಡು ಕು
ಮಾರರಿಗೆ ನಿಜಸುತೆಯನತಿ ವಿ
ಸ್ತಾರಿಸಿತು ವೈವಾಹರಚನೆ ವಿಶಾಲವಿಭವದಲಿ ॥65॥
೦೬೬ ಹೋಮ ಸಮನನ್ತರದಲಖಿಳ ...{Loading}...
ಹೋಮ ಸಮನಂತರದಲಖಿಳ ಧ
ರಾಮರರ ಪೂಜೆಯಲಿ ಭೂತ
ಸ್ತೋಮ ತುಷ್ಟಿಯ ಮಾಡಿದುದು ಸನ್ಮಾನ ದಾನದಲಿ
ಆ ಮುನೀಂದ್ರಂಗೆರಗಿದರು ನೃಪ
ರೀ ಮಹಾಸತಿಸಹಿತ ವಿಮಲ
ಪ್ರೇಮದಲಿ ಮೈ ಮುಳುಗಿ ತೆಗೆದಪ್ಪಿದನು ಪಾಂಡವರ ॥66॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಹೋಮದ ತರುವಾಯದಲ್ಲಿ, ಎಲ್ಲ ವಿಪ್ರರ ಪೂಜೆಯಲ್ಲಿ ಸನ್ಮಾನ ದಾನಗಳಲ್ಲಿ ಸಮಸ್ತ ಜೀವಿಗಳ ಸಮೂಹ ತೃಪ್ತಿ ಪಡೆಯಿತು. ಈ ಮಹಾಪತಿವ್ರತೆ ಸಹಿತ ನೃಪರು ಆ ಮುನೀಂದ್ರನಿಗೆ ನಮಸ್ಕಾರ ಮಾಡಿದರು. ಆತನು ನಿರ್ಮಲ ಪ್ರೇಮದಲ್ಲಿ ಮೈಮುಳುಗಿ ಪಾಂಡವರನ್ನು ತೆಗೆದಪ್ಪಿದನು.
ಪದಾರ್ಥ (ಕ.ಗ.ಪ)
ತುಷ್ಟಿ-ತೃಪ್ತಿ, ವಿಮಲ-ನಿರ್ಮಲ
ಮೂಲ ...{Loading}...
ಹೋಮ ಸಮನಂತರದಲಖಿಳ ಧ
ರಾಮರರ ಪೂಜೆಯಲಿ ಭೂತ
ಸ್ತೋಮ ತುಷ್ಟಿಯ ಮಾಡಿದುದು ಸನ್ಮಾನ ದಾನದಲಿ
ಆ ಮುನೀಂದ್ರಂಗೆರಗಿದರು ನೃಪ
ರೀ ಮಹಾಸತಿಸಹಿತ ವಿಮಲ
ಪ್ರೇಮದಲಿ ಮೈ ಮುಳುಗಿ ತೆಗೆದಪ್ಪಿದನು ಪಾಂಡವರ ॥66॥
೦೬೭ ಪರಮ ವೈಭವದಲಿ ...{Loading}...
ಪರಮ ವೈಭವದಲಿ ಚತುರ್ಥಿಯ
ಮರುದಿವಸದೋಕುಳಿಯ ಪುರಜನ
ಪರಿಜನದ ಸುಮ್ಮಾನ ಶರಧಿಯ ಸಾರ ಸಂಪದವ
ವರ ಮುನಿಪನೀಕ್ಷಿಸಿದನನಿಬರ
ಹರಸಿ ನಯನೀತಿಗಳ ಹೇಳಿದು
ಮರಳಿ ಬಿಜಯಂಗೈದು ಹೊಕ್ಕನು ಬದರಿಕಾಶ್ರಮವ ॥67॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಚತುರ್ಥಿಯ ಮಾರನೆಯ ದಿವಸ ಪರಮವೈಭವದಲ್ಲಿ ಓಕುಳಿಯ ಉತ್ಸವ ನಡೆಯಿತು. ಉತ್ಸವದಲ್ಲಿ ಪುರಜನರ ಮತ್ತು ಪರಿವಾರದ ಸಂತೋಷಸಾಗರದ ಸಕಲಸಂಪತ್ತನ್ನು ಶ್ರೇಷ್ಠ ಮುನಿವ್ಯಾಸನು ನೋಡಿದನು. ಅವರೆಲ್ಲರನ್ನೂ ಹರಸಿ, ನಯನೀತಿಗಳನ್ನು ತಿಳಿಸಿ ಆ ಮುನಿಪತಿ ಹಿಂತಿರುಗಿ ಹೊರಟು ಬದರಿಕಾಶ್ರಮವನ್ನು ಸೇರಿದನು.
ಪದಾರ್ಥ (ಕ.ಗ.ಪ)
ಪರಿಜನ-ಪರಿವಾರ, ಸಾರ-ಸಕಲ
ಮೂಲ ...{Loading}...
ಪರಮ ವೈಭವದಲಿ ಚತುರ್ಥಿಯ
ಮರುದಿವಸದೋಕುಳಿಯ ಪುರಜನ
ಪರಿಜನದ ಸುಮ್ಮಾನ ಶರಧಿಯ ಸಾರ ಸಂಪದವ
ವರ ಮುನಿಪನೀಕ್ಷಿಸಿದನನಿಬರ
ಹರಸಿ ನಯನೀತಿಗಳ ಹೇಳಿದು
ಮರಳಿ ಬಿಜಯಂಗೈದು ಹೊಕ್ಕನು ಬದರಿಕಾಶ್ರಮವ ॥67॥