೧೩

೦೦೦ ಸೂ ಕಮಲಮುಖಿ ...{Loading}...

ಸೂ. ಕಮಲಮುಖಿ ನಡೆತಂದಳಂದಿನ
ಕಮಲೆಯೆನೆ ಪಾಂಚಾಲಸುತೆ ನಿಜ
ರಮಣರನು ನೋಡಿದಳು ಪೃಥ್ವೀಪಾಲ ಪಂಕ್ತಿಯಲಿ

೦೦೧ ಅರಸ ಕೇಳ್ ...{Loading}...

ಅರಸ ಕೇಳ್ ನಾಂದೀಮುಖದ ವಿ
ಸ್ತರಣವಾದುದು ಪೂರ್ವವೇದಿಯ
ವರ ನಿಗಮ ನಿರ್ಘೋಷ ಘಾತಿಸಿತಖಳ ಕಲ್ಮಷವ
ಮರುದಿವಸ ಮಹಿಳಾಶಿರೋಮಣಿ
ಪರಮಸೌಭಾಗ್ಯದ ಸಮುದ್ರದ
ಸಿರಿಯ ಪರಿಣಯವೆಂದು ಸಾರಿತು ಪಾಳಯಂಗಳಲಿ ॥1॥

೦೦೨ ತಿಗುರ ಗೆಲುವುದು ...{Loading}...

ತಿಗುರ ಗೆಲುವುದು ವಶ್ಯ ತಿಲಕಾ
ದಿಗಳನಿಡುವುದು ಮೋಹನದ ಮ
ದ್ದುಗಳ ಮಾಯೆಯ ಬೀಸುವುದು ಸೂಸುವುದು ಸೊಗಸುಗಳ
ಹಗಲು ಕಾಹಿನ ರೂಹುಗಳ ಗಾ
ಹುಗಳ ಮೆರೆವುದು ಮನ್ಮಥನ ಕಾ
ಳಗದ ಖಾಡಾಖಾಡಿಯೆಂದರು ಹೊಯ್ದು ಡಂಗುರವ ॥2॥

೦೦೩ ಹರಸಿಕೊಣ್ಡರು ನಿಖಿಳ ...{Loading}...

ಹರಸಿಕೊಂಡರು ನಿಖಿಳ ಪೃಥ್ವೀ
ಶ್ವರರು ಮಾಯಾಪುರದ ಕಾಂಚೀ
ಪುರದ ಜಾಳಾಂಧರದ ವಿವಿಧಸ್ಥಾನ ದೇವರಿಗೆ
ಕರಿಮುಖನ ಕಜ್ಜಾಯದಲಿ ಸ
ತ್ಕರಿಸಿ ಸಂಶಯ ಭೇದವರ್ಗದ
ಹರುಷದಲಿ ಹೊರವಂಟರೊಬ್ಬರನೊಬ್ಬರುರವಣಿಸಿ ॥3॥

೦೦೪ ಉಬ್ಬು ಮುರಿದುದು ...{Loading}...

ಉಬ್ಬು ಮುರಿದುದು ರಾಯರೊಬ್ಬರ
ನೊಬ್ಬರೀಕ್ಷಿಸಿ ಚೆಲುವಿನಲಿ ಸಿರಿ
ಗೊಬ್ಬಿನಲಿ ಸಾಹಸಿಕೆಯಲಿ ಸೇನಾ ಸಮುದ್ರದಲಿ
ಒಬ್ಬರೊಬ್ಬರಸೂಯೆಯೊಬ್ಬರ
ನೊಬ್ಬರಳುಕಿಸುವದಟುಗಂಗಳ
ಹಬ್ಬದಲಿ ಮನ ಸಂಚು ತಪ್ಪಿತಸಾಧ್ಯ ಚಿಂತೆಯಲಿ ॥4॥

೦೦೫ ಹೋರೆಗರ ಹೊಳ್ಳಿರಿತ ...{Loading}...

ಹೋರೆಗರ ಹೊಳ್ಳಿರಿತ ಜೋಯಿಸ
ರಾರುಭಟೆಗಳ ಬಿಂಕ ಮಾಂತ್ರಿಕ
ರೋರೆಮುಸುಕಿನ ಜಾಳುಜಪವೀ ನೃಪರ ಚಾಳೈಸೆ
ಪೂರವಿಪ ಪುಳಕಂಗಳಲಿ ಸಿಂ
ಗಾರಿಗಳು ಸೀವರಿಸದೈತಂ
ದೋರಣಿಸಿದರು ಸಾಲ ಶೋಭಿತ ಸಿಂಹಪೀಠದಲಿ ॥5॥

೦೦೬ ಕೌರವರು ಯಾದವರು ...{Loading}...

ಕೌರವರು ಯಾದವರು ಸಹಿತೀ
ಧಾರುಣಿ ಕ್ಷತ್ರಿಯರ ವಂಶದ
ವೀರಪಾರ್ಥಿವವಿತತಿ ಕುಳ್ಳಿರ್ದುದು ಸರಾಗದಲಿ
ಸಾರೆ ಸೋದರ ಸಚಿವ ಮಂತ್ರಿ ಕು
ಮಾರ ಚಾಮರ ಹಡಪದೊಳಪರಿ
ವಾರ ಬಳಸಿತುವೊಬ್ಬರೊಬ್ಬರ ಸುತ್ತು ವಳಯದಲಿ ॥6॥

೦೦೭ ಅಙ್ಕೆಯಿದು ಪಾರ್ಥಿವರ ...{Loading}...

ಅಂಕೆಯಿದು ಪಾರ್ಥಿವರ ವಿಭವಾ
ಲಂಕೃತಿಯನದನೇನ ಹೇಳುವೆ
ನಂಕವಿದು ಕಳನೇರಿತಾಹವವೆನಗೆ ತನಗೆನುತ
ಶಂಕರಾರಿಯ ಮಸೆದಲಗು ಮಾ
ರಂಕದುಬ್ಬಿನ ಜಂಕೆಯಂಕೆಯ
ಬಿಂಕವನು ವಿಸ್ತರಿಸುವೆನು ನರನಾಥ ಕೇಳ್ ಎಂದ ॥7॥

೦೦೮ ತರಿಸು ಧನುವನು ...{Loading}...

ತರಿಸು ಧನುವನು ಯಂತ್ರಮತ್ಸ್ಯವ
ನಿರಿಸು ತಳುವದೆ ತಂಗಿಯನಲಂ
ಕರಿಸು ದಂಡಿಗೆಯಿಂದ ತಾ ತೋರಿಸು ಮಹೀಶ್ವರರ
ವರನ ವರಿಸಲಿ ಲಗ್ನವಿದೆ ಹ
ತ್ತಿರೆಯೆನುತ ಪಾಂಚಾಲಭೂಪತಿ
ಕರೆದು ಧೃಷ್ಟದ್ಯುಮ್ನನನು ಬೆಸಸಿದನು ಬೇಗದಲಿ ॥8॥

೦೦೯ ಅರಸನಾಜ್ಞೆಯ ಮೇಲೆ ...{Loading}...

ಅರಸನಾಜ್ಞೆಯ ಮೇಲೆ ಶತ ಸಾ
ವಿರ ನಿತಂಬಿನಿಯರು ಕುಮಾರಿಯ
ಹೊರೆಗೆ ಬಂದರು ತಿಗುರಿದರು ಕುಂಕುಮದಲವಯವವ
ಅರಸಿ ಮಜ್ಜನ ಮಾಡಿ ನೂತನ
ವರದುಕೂಲವನುಟ್ಟು ಸಖಿಯರ
ತರದ ನೆಲನುಗ್ಗಡಣೆಯಲಿ ಬಂದಳು ನಿಜಾಲಯಕೆ ॥9॥

೦೧೦ ಹೊರೆಯ ಸಖಿಯರ ...{Loading}...

ಹೊರೆಯ ಸಖಿಯರ ನೋಟ ಮೈಯಲಿ
ಹರಿದು ಬಳಲದು ಚಿತ್ತವೀಕೆಯ
ಧರಿಸಿ ಕುಸಿಯದು ಕಿವಿಗಳಿಗೆ ಮೆಲ್ನುಡಿಯ ಸವಿಸವಿದು
ಅರುಚಿಯಾಗದು ನಾಸಿಕವು ಮೈ
ಪರಿಮಳದ ಪೂರದಲಿ ಗಂಧಾಂ
ತರಕೆ ನೆರೆಯದು ರೂಪವೇನೆಂಬೆನು ನಿತಂಬಿನಿಯ ॥10॥

೦೧೧ ಮೊಲೆಗಳಲಿ ಸಿಲುಕಿದೊಡೆ ...{Loading}...

ಮೊಲೆಗಳಲಿ ಸಿಲುಕಿದೊಡೆ ನೋಟಕೆ
ಬಳಿಕ ಪುನರಾವರ್ತಿಯೇ ಕಂ
ಗಳಿಗೆ ಕಾಮಿಸಿದರೆಯು ನಿಮಿಷಕೆ ಸಮಯವೆಲ್ಲಿಹುದು
ಲಲಿತ ಮೈಕಾಂತಿಗಳೊಳದ್ದರೆ
ಮುಳುಗಿ ತೆಗೆವವರಾರು ಜಘನ
ಸ್ಥಳಕೆ ಮುರಿದರೆ ಮರಳುದಲೆ ಕಂಗಳಿಗೆ ಹುಸಿಯೆಂದ ॥11॥

೦೧೨ ಹೊಲಬುಗೆಡವೇ ಹೊಳೆವ ...{Loading}...

ಹೊಲಬುಗೆಡವೇ ಹೊಳೆವ ವಕ್ಷ
ಸ್ಥಳದೊಳಗೆ ಜನದೃಷ್ಟಿ ನಳಿತೋ
ಳ್ಗಳಲಿ ಸೆಳ್ಳುಗುರೋಳಿಯಲಿ ಕೆಂದಳದ ಶೋಭೆಯಲಿ
ಸುಳಿದಡಲ್ಲಿಯೆ ನಿಲುವು ದಶನಾ
ವಳಿಯ ಬಿಂಬಾಧರದ ಕದಪಿನ
ಚೆಲುವಿಕೆಗೆ ನರರಾಲಿ ನೆರೆಯವು ನೃಪತಿ ಕೇಳ್ ಎಂದ ॥12॥

೦೧೩ ಅಸಿಯ ನಡುವಿನ ...{Loading}...

ಅಸಿಯ ನಡುವಿನ ನಿಮ್ನ ನಾಭಿಯ
ಮಸುಳ ಬಾಸೆಯ ತೋರ ಮೊಲೆಗಳ
ಮಿಸುಪ ತೊಡೆಗಳ ಚಾರು ಜಂಘೆಯ ಚರಣಪಲ್ಲವದ
ಎಸಳುಗಂಗಳ ತೊಳಗಿ ಬೆಳಗುವ
ಮುಸುಡ ಕಾಂತಿಯ ಮುರಿದ ಕುರುಳಿನ
ಬಿಸಜ ಗಂಧಿಯ ರೂಪನಭಿವರ್ಣಿಸುವಡರಿದೆಂದ ॥13॥

೦೧೪ ಪೂಸುವರೆ ಕತ್ತುರಿ ...{Loading}...

ಪೂಸುವರೆ ಕತ್ತುರಿ ಜವಾಜಿಗ
ಳೈಸಲೇ ಪರಿಮಳವು ಪೂಸದೆ
ಸೂಸಿ ದೆಸೆ ಕಂಪಿಡುತ ಮಘಮಘಿಸುವಳು ಯೋಜನವ
ಈ ಸಮಸ್ತ ಮನುಷ್ಯಧರ್ಮದ
ದೋಷ ಗರ್ಭಿತ ಧಾತುಗಳ ವಿ
ನ್ಯಾಸವೇ ದ್ರೌಪದಿಯ ಭಾವದ ಭಂಗಿ ಬೇರೆಂದ ॥14॥

೦೧೫ ಬೆರಳ ಚೆಲ್ವಿಕೆಯಿನ್ದ ...{Loading}...

ಬೆರಳ ಚೆಲ್ವಿಕೆಯಿಂದ ಮುದ್ರಿಕೆ
ಮೆರೆಯೆ ಪಾಡಗ ನೇವುರಂಗಳು
ಕರ ಚರಣ ಸೌಂದರ್ಯದಲಿ ಬಲುಮೊಲೆಯ ಢಾಳದಲಿ
ಕೊರಳ ಮುತ್ತಿನ ಹಾರ ಸುಮನೋ
ಹರದ ಕದಪುಗಳಿಂದ ಕರ್ಣಾ
ಭರಣವೊಪ್ಪಿದವೇನನೆಂಬೆನು ರೂಪನಂಗನೆಯ ॥15॥

೦೧೬ ಎಸೆವಧರ ರಾಗದಲಿ ...{Loading}...

ಎಸೆವಧರ ರಾಗದಲಿ ಮಿಗೆ ರಂ
ಜಿಸುವವೋಲ್ ಮಾಣಿಕ್ಯ ಮೆರೆದವು
ದಶನ ದೀಧಿತಿಯಿಂದ ಥಳಥಳಿಸಿದವು ಮುತ್ತುಗಳು
ಮಿಸುಪ ದೇಹಚ್ಛವಿಗಳಲಿ ಢಾ
ಳಿಸುವವೋಲ್ ಭೂಷಣದ ಹೇಮ
ಪ್ರಸರ ಮೆರೆದವು ಹೊಗಳೆ ಕವಿ ಯಾರಬುಜಲೋಚನೆಯ ॥16॥

೦೧೭ ಪರಿಮಳದ ಪರಮಾಣುಗಳ ...{Loading}...

ಪರಿಮಳದ ಪರಮಾಣುಗಳ ಸಂ
ವರಿಸಿ ಮುಕ್ತಾಫಲದ ಕೆಂದಾ
ವರೆಯ ಮರಿ ದುಂಬಿಗಳ ವರ್ಣಾಂತರವನಳವಡಿಸಿ
ಸರಸ ವೀಣಾ ಧ್ವನಿಯ ಹಂಸೆಯ
ಗರುವ ಗತಿಗಳನಾಯ್ದು ಮನ್ಮಥ
ವರವಿರಿಂಚಿಯೆ ಸೃಜಿಸಿದನು ಪಾಂಚಾಲ ನಂದನೆಯ ॥17॥

೦೧೮ ಸರಸ ಲಾವಣ್ಯಾಮ್ಬುಮಯ ...{Loading}...

ಸರಸ ಲಾವಣ್ಯಾಂಬುಮಯ ತನು
ಸರಸಿಯಲಿ ಮುಳುಗಿರ್ದ ಯೌವನ
ಕರಿಯ ಕುಂಭಸ್ಥಳವೊ ವಿಪುಳ ಪಯೋಧರ ದ್ವಯವೊ
ತರಳ ನಯನವೊ ಶಫರಿಗಳೊ ತಾ
ವರೆಯೊ ಮುಖವೋ ತುಂಬಿಗಳೊ ನಿರಿ
ಗುರುಳುಗಳೊ ಮಣಿಗಣವೊ ರದನವೊ ಚಿತ್ರವಾಯ್ತೆಂದ ॥18॥

೦೧೯ ರಾಜಸೂಯದ ಕರ್ತೃವೋಲ್ ...{Loading}...

ರಾಜಸೂಯದ ಕರ್ತೃವೋಲ್ ಜಿತ
ರಾಜ ಮಂಡಲವಾಯ್ತು ಮುಖವಿದು
ರಾಜರಾಜನ ಪೋಲ್ದುದಳಕಾವೇಷ್ಟಿ ತತ್ವದಲಿ
ರಾಜನುದ್ಯಾನದವೊಲಾಸ್ಯ ಸ
ರೋಜವಾಯ್ತು ತಮಾಲಪತ್ರ ವಿ
ರಾಜಿತವು ಜನಮೇಜಯ ಕ್ಷಿತಿಪಾಲ ಕೇಳ್ ಎಂದ ॥19॥

೦೨೦ ಜನಪ ಕೇಳುಪಲಾಲಿತಾಞ್ಜನ ...{Loading}...

ಜನಪ ಕೇಳುಪಲಾಲಿತಾಂಜನ
ವೆನೆ ಜಿತಾಕ್ಷವಿಪಕ್ಷವಾದುವು
ವಿನುತ ಕರ್ಣಪ್ರಣಯಗಳು ವೃಷಸೇನ ವೈರದಲಿ
ಜನ ವಿಡಂಬನ ತಾರಕಾ ಮಂ
ಡನ ಕದರ್ಥಿತ ಕುಮುದವೆನೆ ಲೋ
ಚನ ಯುಗಳವೊಪ್ಪಿದವು ವರ ಪಾಂಚಾಲನಂದನೆಯ ॥20॥

೦೨೧ ಏನನೆಮ್ಬೆನು ಮನಸಿಜನ ...{Loading}...

ಏನನೆಂಬೆನು ಮನಸಿಜನ ಮದ
ದಾನೆಯನು ಮನ್ಮಥನ ರತ್ನ ನಿ
ಧಾನವನು ಟಿಪ್ಪಣವನಂಗಜ ಮಂತ್ರ ಸೂತ್ರಕದ
ಮಾನಿನಿಯರಧಿದೈವವನು ಸು
ಜ್ಞಾನಕನ್ಯಾ ಮಾತೃಭವನ
ಸ್ಥಾನವನು ಮೂಲೋಕ ಮೋಹನ ವಶ್ಯ ಚಿತ್ರಕವ ॥21॥

೦೨೨ ನಾರಿಯನು ಸಂಸಾರಸುಖ ...{Loading}...

ನಾರಿಯನು ಸಂಸಾರಸುಖ ಸಾ
ಕಾರಿಯನು ಜನ ನಯನ ಕಾರಾ
ಗಾರಿಯನು ಮುನಿಧೈರ್ಯ ಸರ್ವಸ್ವಾಪಹಾರಿಯನು
ಧೀರರಿಗೆ ಮಾರಂಕವನು ವರ
ಪಾರಿಕಾಂಕ್ಷಿಯ ಚಿತ್ತಚೌರ್ಯ ವಿ
ಹಾರಿಯನು ದ್ರೌಪದಿಯನಭಿವರ್ಣಿಸುವಡಾರೆಂದ ॥22॥

೦೨೩ ನಳಿನಮುಖಿಯರ ಸಕಲಸೃಷ್ಟಿಗೆ ...{Loading}...

ನಳಿನಮುಖಿಯರ ಸಕಲಸೃಷ್ಟಿಗೆ
ಕಳಸವಿದು ಸೌಂದರ್ಯ ವಸನದ
ವಿಲಸವಿದು ರತಿರಮಣವೈಭವ ರತ್ನಕೋಶವಿದು
ಲಲನೆಯರ ಸೀಮಂತಮಣಿ ಜಗ
ದೊಳಗೆ ಚೆಲುವಿನಕಣಿ ತಪೋಧನ
ಕಳಭರಿಗೆ ಸೃಣಿಯೆನಲು ಮೆರೆದುದು ರೂಪವಂಗನೆಯ ॥23॥

೦೨೪ ಹೊಳೆ ಹೊಳೆದುದಾಭರಣ ...{Loading}...

ಹೊಳೆ ಹೊಳೆದುದಾಭರಣ ರತ್ನಾ
ವಳಿಯರುಚಿ ತನ್ಮಣಿ ರುಚಿಯ ಮು
ಕ್ಕುಳಿಸಿತಂಗಚ್ಛವಿ ತದಂಗ ಪ್ರಭೆಯನಡಹಾಯ್ದು
ಥಳಥಳಿಸಿದುದು ವದನ ಮುಖ ಮಂ
ಡಲದ ಕಾಂತಿಯನೊದೆದು ಕಂಗಳ
ಬೆಳಗು ವಿಸಟಂಬರಿದದೇನೆಂಬೆನು ನಿತಂಬಿನಿಯ ॥24॥

೦೨೫ ಕಙ್ಗಳಲಿ ಕುಡಿಮೇಳ ...{Loading}...

ಕಂಗಳಲಿ ಕುಡಿಮೇಳ ಹುಬ್ಬಿನ
ಹೊಂಗಿನಲಿ ಭಂಜವಣೆ ಭಾವದ
ಭಂಗಿಯಲಿ ಪತಿಕರಣೆ ಸಕಲ ಸಖೀ ಕದಂಬದಲಿ
ಇಂಗಿತದ ಬಿರಿಮುಗುಳ ಪರಿಮಳ
ವಂಗಹಾರ ವಿಲಾಸವಿಭ್ರಮ
ಭಂಗಿಗಳು ಬಿಬ್ಬೋಕ ಲಲಿತಾದಿಗಳು ದ್ರೌಪದಿಯ ॥25॥

೦೨೬ ವರವಸನ್ತನ ಬರವು ...{Loading}...

ವರವಸಂತನ ಬರವು ಜಾಜಿಯ
ಬಿರಿಮುಗುಳು ಮರಿದುಂಬಿಗಳ ನಯ
ಸರದದನಿ ಕರಿಕಳಭಲೀಲೆ ನವೇಕ್ಷು ರಸಧಾರೆ
ಮೆರೆವವೋಲ್ ಹೊಸಹೊಗರ ಜವ್ವನ
ಸಿರಿಯ ಜೋಡಣೆ ಜನಮನವನಾ
ವರಿಸಿದುದು ನಿಪ್ಪಸರದಲಿ ಪಾಂಚಾಲ ನಂದನೆಯ ॥26॥

೦೨೭ ಆರತಿಗಳೆತ್ತಿದರು ಬಳಿಕು ...{Loading}...

ಆರತಿಗಳೆತ್ತಿದರು ಬಳಿಕು
ಪ್ಪಾರತಿಯ ಹಾಯ್ಕಿದರು ಮುತ್ತಿನ
ಸಾರ ಸೇಸೆಯ ಸೂಸಿ ಹರಸಿ ಸುವಾಸಿನೀನಿಕರ
ಚಾರುಮುಕುರವ ನೋಡಿ ನಿಂದಳು
ಭಾರಣೆಯ ಗರುವಾಯಿಯಲಿ ಜಂ
ಬೀರಫಲವನು ಕೊಂಡಳಂಗನೆ ವಿಪ್ರಮಂತ್ರದಲಿ ॥27॥

೦೨೮ ಮುನ್ದೆ ಪಾಯವಧಾರು ...{Loading}...

ಮುಂದೆ ಪಾಯವಧಾರು ಸತಿಯರ
ಸಂದಣಿಯ ಸಾಲಿನಲಿ ದಂಡಿಗೆ
ಗಿಂದುಮುಖಿ ಬಂದಳು ಸಿತಾಬ್ಜಕೆ ಲಕ್ಷ್ಮಿಯಂದದಲಿ
ಹಿಂದೆ ಮುಂದಿಕ್ಕೆಲದ ನಾರೀ
ವೃಂದ ನೆರೆದುದು ವೀರ ಪಟಹದ
ದುಂದುಭಿಯ ಡಂಬರದ ರವವಳ್ಳಿರಿದುದಂಬರವ ॥28॥

೦೨೯ ಸಾಲಝಲ್ಲರಿ ಮುಸುಕಿದವು ...{Loading}...

ಸಾಲಝಲ್ಲರಿ ಮುಸುಕಿದವು ಸಮ
ಪಾಳಿಯಲಿ ಸೀಗುರಿಗಳಾಡಿದ
ವಾಲಿಯವಗಾಹಿಸದು ನೆಲನೆನಿತನಿತು ವಳಯದಲಿ
ಬಾಲೆಯರ ಮುಗ್ಧೆಯರನತಿ ಘಾ
ತಾಳೆಯರ ಕಡೆಗಣ್ಣ ಢಾಳದ
ಚಾಳೆಯರ ಚದುರೆಯರನಲ್ಲದೆ ಕಾಣೆ ನಾನೆಂದ ॥29॥

೦೩೦ ನಿರಿದಲೆಯ ಚೊಲ್ಲೆಯದ ...{Loading}...

ನಿರಿದಲೆಯ ಚೊಲ್ಲೆಯದ ತುಂಬಿಯ
ಮರಿಗುರುಳ ಬೈತಲೆಯ ಮುತ್ತಿನ
ಹೆರೆನೊಸಲ ನಿಡು ಹುಬ್ಬುಗಳ ಢಾಳಿಸುವ ಕದಪುಗಳ
ತುರುಗೆವೆಯ ನಿಟ್ಟೆಸಳುಗಂಗಳ
ಮೆರೆವ ಸುಲಿಪಲ್ಲುಗಳೆಸೆವ ನು
ಣ್ಗೊರಳ ನಳಿತೋಳುಗಳ ನೀರೆಯರೈದಿತೊಗ್ಗಿನಲಿ ॥30॥

೦೩೧ ತೋರ ಮೊಲೆಗಳ ...{Loading}...

ತೋರ ಮೊಲೆಗಳ ನಲಿವ ನಡು ಪೊರ
ವಾರಗಳ ನುಣ್ದೊಡೆಯ ಕಿರುದೊಡೆ
ಯೋರಣದ ಹಾವುಗೆಯ ಹೆಜ್ಜೆಯ ಹಂಸೆಗಳ ಗತಿಯ
ನೀರೆಯರ ಮೈಗಂಪುಗಳ ತನಿ
ಸೂರೆಗೆಳಸುವ ತುಂಬಿಗಳ ಕೈ
ವಾರಗಳ ಕಡು ಗರುವೆಯರ ನೆರೆದುದು ಸಖೀನಿವಹ ॥31॥

೦೩೨ ಕೀಲ ಕಡಗದ ...{Loading}...

ಕೀಲ ಕಡಗದ ವಜ್ರಲಹರಿಯ
ಜೋಲೆಯದ ಕಂಕಣದ ರವೆಯದ
ತೋಳಬಂದಿಯ ಕೊರಳ ತ್ರಿಸರದ ಬೆರಳ ಮುದ್ರಿಕೆಯ
ನೀಲ ರತುನದ ಪದಕ ಮಾಣಿಕ
ದೋಲೆಗಳ ಮೂಗುತಿಯ ಮುತ್ತಿನ
ಮೇಲು ಶೃಂಗಾರದ ಸಖೀಜನ ಸಂದಣಿಸಿತಲ್ಲಿ ॥32॥

೦೩೩ ವಿಲಸದೇಕಾವಳಿಯ ಮುತ್ತಿನ ...{Loading}...

ವಿಲಸದೇಕಾವಳಿಯ ಮುತ್ತಿನ
ತಿಲಕ ಸೂಡಗ ಪಾಯವಟ್ಟದ
ಲಲಿತ ಬಂಧದ ವಜ್ರಲಹರಿಯ ತಾರಕಾವಳಿಯ
ಹೊಳೆವ ಕಾಂಚಿಯ ಕಿಂಕಿಣಿಯ ಸಂ
ಕುಲದ ನೇವುರ ವೀರ ಮುದ್ರಾ
ವಳಿಯ ಚರಣಾಭರಣದಬಲೆಯರೈದಿತೊಗ್ಗಿನಲಿ ॥33॥

೦೩೪ ಭ್ರೂಲತೆಯ ಬಿಲುಗಳ ...{Loading}...

ಭ್ರೂಲತೆಯ ಬಿಲುಗಳ ಕಟಾಕ್ಷದ
ಕೋಲ ಹೊದೆಗಳ ಬಾಸೆಗಳ ಕರ
ವಾಳಿಗಳ ಕತ್ತುರಿಯ ತಿಲಕದ ಹರಿಗೆ ಹಲಗೆಗಳ
ತೋಳುಗಳ ಲೌಡಿಗಳ ಸೆಳ್ಳುಗು
ರೋಳಿಗಳ ಸುರಗಿಗಳ ಮನ್ಮಥ
ನಾಳು ನಡೆದುದು ದ್ರೌಪದಿಯ ದಂಡಿಗೆಯ ಬಳಸಿನಲಿ ॥34॥

೦೩೫ ತೋರ ಮೊಲೆಗಳ ...{Loading}...

ತೋರ ಮೊಲೆಗಳ ದಂತಿ ಘಟೆಗಳ
ಚಾರು ಜಘನದ ಜೋಡಿಸಿದ ಹೊಂ
ದೇರುಗಳ ಸುಳಿಗುರುಳುಗಳ ಝಲ್ಲರಿಯ ಝಾಡಿಗಳ
ಚಾರುನಯನದ ಚಪಲಗತಿಗಳ
ವಾರುವಂಗಳ ಮೇಲು ವಸನದ
ಸಾರ ಸಿಂಧದ ಸೇನೆ ನಡೆದುದು ಸತಿಯ ಬಳಸಿನಲಿ ॥35॥

೦೩೬ ಯತಿಗಳಿಗೆ ಮೊನೆದೋರಿ ...{Loading}...

ಯತಿಗಳಿಗೆ ಮೊನೆದೋರಿ ತಣಿಸದು
ವ್ರತಿಗಳಿಗೆ ಬೀರುತ ಸಮಾಧಿ
ಸ್ಥಿತರ ಮೂಗಿನ ಮೇ¯ಡಾಯಧ ಧಾರೆಗಳನೆಳೆದು
ಶ್ರುತಿವಿಹಿತ ಸತ್ಕರ್ಮಿಗಳ ದೀ
ಕ್ಷಿತರ ಮತಿಯಲಿ ತಮ್ಮ ಮುದ್ರಾಂ
ಕಿತವನೊತ್ತುತ ಮೀರಿ ನಡೆದುದು ಯುವತಿಜನ ಕಟಕ ॥36॥

೦೩೭ ಆರು ನಿಲುವರು ...{Loading}...

ಆರು ನಿಲುವರು ಸಮ್ಮುಖಕೆ ಮದ
ನಾರಿಯರ್ಧದ ನಾರಿ ಹರಿ ತಾ
ಹೇರುರದ ಹೆಂಗುಸುರೆ ಬೊಮ್ಮನು ಮಗಳ ಮೊರೆಗೇಡಿ
ಘೋರವದು ಸುರಪತಿಯ ಕಥೆ ಮೈ
ಯಾರೆ ಹೊತ್ತನು ಮದನ ಮುದ್ರಾ
ಧಾರಿಯೆಂಬವೊಲೊದರಿದವು ಮುಂಗುಡಿಯ ಕಹಳೆಗಳು ॥37॥

೦೩೮ ಪಸರಿಸಿತು ತಮ್ಬೆಲರು ...{Loading}...

ಪಸರಿಸಿತು ತಂಬೆಲರು ಬೀತುದು
ಬಿಸಿಲ ಬಿಂಕ ಸರೋಜ ಸಂತತಿ
ಮಸುಳಿದವು ಮದವೇರಿ ಮೆರೆದವು ತಾರಕಾ ನಿವಹ
ಒಸರಿದವು ಶಶಿಕಾಂತ ನೈದಿಲ
ಹಸರ ಹರಿದುದು ಚಕ್ರವಾಕದ
ಬೆಸುಗೆ ಸಡಲಿತು ಚಾರು ಚಂದ್ರಾನನೆಯ ಬರವಿನಲಿ ॥38॥

೦೩೯ ಹೊಳೆವ ಕಙ್ಗಳ ...{Loading}...

ಹೊಳೆವ ಕಂಗಳ ಬೆಳಗಿನಲಿ ಕ
ತ್ತಲಿಸಿದವು ಕಾಮುಕರ ಮುಖ ತನು
ವಳಯ ಕಾಂತಿಯ ತಂಪಿನಲಿ ಬಾಡಿದವು ಬುದ್ಧಿಗಳು
ಲಲಿತ ವಿಭ್ರಮದಿಂದಹಂಕೃತಿ
ಶಿಲೆಗಳೊಡೆದವು ಮೋಹನದ ಹೊ
ಯ್ಲೊಳಗೆ ಹೊಳೆದಡಗಿದವು ಚಿತ್ತ ಮಹಾಮಹೀಶ್ವರರ ॥39॥

೦೪೦ ತರುಣಿಯರ ನವ ...{Loading}...

ತರುಣಿಯರ ನವ ನೀಲ ಮಣಿಗಳ
ಕುರುಳ ಕಬರಿಯ ಭರದ ವರ ಕ
ತ್ತುರಿಯ ತಿಲಕದ ಕಾಳಿಕೆಯ ಘನ ಕಾಂತಿಗಳ ಲಹರಿಗಳ
ಕೊರಳ ಹಾರದ ಕರ್ಣಪೂರದ
ಸರದ ಮೌಕ್ತಿಕ ರುಚಿಯ ಯಮುನಾ
ಸುರನದಿಯ ಸಂಗದಲಿ ಮುಳುಗಿತು ಸಕಲ ನೃಪನಿಕರ ॥40॥

೦೪೧ ಪರಿಮಳಕೆ ಮಿಗೆ ...{Loading}...

ಪರಿಮಳಕೆ ಮಿಗೆ ಕವಿವ ತುಂಬಿಗೆ
ಕೆರಳುವರು ಹುಬ್ಬಿನಲಿ ಪದ ನೇ
ವುರದ ನುಣ್ದನಿಗೆಳಸಿ ಮುತ್ತುವ ರಾಜಹಂಸೆಗಳ
ಹೊರೆಯ ಕೆಳದಿಗೆ ದೂರುವರು ಕೈ
ಯರಗಿಳಿಗೆ ತಮ್ಮಧರಬಿಂಬದ
ಮುರಿವರಿದು ಮುಖದಿರುಹುವರು ಮುಗ್ಧಾಂಗನಾನಿವಹ ॥41॥

೦೪೨ ಕಙ್ಗಳೋರೆಯ ಢಾಳಿಸುವ ...{Loading}...

ಕಂಗಳೋರೆಯ ಢಾಳಿಸುವ ಹಾ
ಸಂಗಿಗಳ ಬಿಗುಹಿನ ದುಹಾರದ
ಭಂಗಿಗಳ ಬಲು ವಿಟರ ಕರಣದ ಸಾರಿಗಳ ಸೆರೆಯ
ಮುಂಗುಡಿಯ ನಿಜನಾರಿಯರ ಕವಿ
ವಂಗವಣೆಗಳ ಜೂಜುಗಾತಿಯ
ರಂಗನೆಯ ದಂಡಿಗೆಯ ಬಳಿವಿಡಿದರು ವಿದಗ್ಧೆಯರು ॥42॥

೦೪೩ ಹಾವುಗೆಯ ಸೀಗುರಿಯ ...{Loading}...

ಹಾವುಗೆಯ ಸೀಗುರಿಯ ವರಚಮ
ರಾವಳಿಯ ಕರ್ಪೂರಗಂಧದ
ಹೂವುಗಳ ಕತ್ತುರಿಯ ಸಾದುಜವಾಜಿ ಕುಂಕುಮದ
ತೀವಿದನುಪಮ ಭಾಜನ ವ್ಯಜ
ನಾವಳಿಯ ಕನ್ನಡಿಯ ವಿವಿಧ ಸ
ಖೀ ವಿಳಾಸಿನಿಯರ ಕದಂಬಕವೈದಿತೊಗ್ಗಿನಲಿ ॥43॥

೦೪೪ ಧರಣಿಪತಿ ಕೇಳಖಿಳ ...{Loading}...

ಧರಣಿಪತಿ ಕೇಳಖಿಳ ಪೃಥ್ವೀ
ಶ್ವರರ ಬಹಳಾಸ್ಥಾನದಲಿ ಮೋ
ಹರಿಸಿದರು ಮೋಹನದ ಮೋಡಾಮೋಡಿಯಬಲೆಯರು
ಅರಸುಗಳ ನಿಡುನೋಟವಲ್ಲಿಯ
ಗರುವೆಯರ ನಸುನೋಟ ತಮ್ಮೊಳು
ಬೆರಸಿ ಹೊಯ್ದಾಡಿದವು ಖಾಡಾಖಾಡಿಯಂದದಲಿ ॥44॥

೦೪೫ ದಾಯ ತಪ್ಪಿತು ...{Loading}...

ದಾಯ ತಪ್ಪಿತು ಗರುವರಾಟ ವಿ
ಡಾಯಗೆಟ್ಟಿತು ವಿಟರನೋಟ ನ
ವಾಯಿಕಾರರ ಕೂಟ ಕುಸಿದುದು ಮಾರ ಶರಹತಿಗೆ
ಘಾಯವಡೆದುದು ಧೃತಿಯಘಾಟ ನ
ವಾಯಿ ಹೆಚ್ಚಿತು ಮತ್ತೆ ಬೇಟ ವ
ರಾಯತಾಕ್ಷಿಯ ಕೂಟಕೆಳಸುವ ಚದುರ ಭೂಮಿಪರ ॥45॥

೦೪೬ ಕೆಲಕಡೆಯ ಕೆಳದಿಯರ ...{Loading}...

ಕೆಲಕಡೆಯ ಕೆಳದಿಯರ ಕಂಗಳ
ಹೊಳಹು ದುವ್ವಾಳಿಯಲಿ ಸುಮತಿ
ಸ್ಖಲಿತ ಕೆಂಧೂಳಿಯಲಿ ಮಾಸಿತು ಮನದ ಮಡಿವರ್ಗ
ಒಳಗೆಯೊತ್ತುವ ಧಗೆಯ ಹೊರಗಣ
ತಳಿತ ಬಿಮ್ಮಿನ ನಗೆಯ ನೃಪ ಮಂ
ಡಲದ ಮೌಳಿಯನೇನನೆಂಬೆನು ರಾಯ ಕೇಳ್ ಎಂದ ॥46॥

೦೪೭ ಚೆಲುವಿಕೆಯ ಚೈತನ್ಯವೋ ...{Loading}...

ಚೆಲುವಿಕೆಯ ಚೈತನ್ಯವೋ ಪರಿ
ಮಳದ ಪುತ್ಥಳಿಯೋ ಲತಾಂಗಿಯ
ಸುಳಿವೊ ಲಾವಣ್ಯೈಕರಸ ಸಾಕಾರ ವಿಭ್ರಮವೊ
ಲಲಿತಶೃಂಗಾರಾಬ್ಧಿ ಮಥನೋ
ಚ್ಚಲಿತ ಸುಧೆಯೋ ಸಾಧಕರಿಗಿದು
ಫಲಿಸಿದರೆ ಕೃತಕೃತ್ಯರವರೆಂದುದು ಸುರಸ್ತೋಮ ॥47॥

೦೪೮ ಈಕೆಯನ್ದುದಿಸಿದರೆ ಮದನಂ ...{Loading}...

ಈಕೆಯಂದುದಿಸಿದರೆ ಮದನಂ
ಗೇಕೆ ದೇಹತ್ಯಾಗವಹುದು ಪಿ
ನಾಕಿ ತಾ ವೈರಾಗ್ಯದಲಿ ಹೊಗುವನೆ ತಪೋವನವ
ಸಾಕು ಗೌತಮಮುನಿಯ ಮುಳಿಸಿನ
ಕಾಕು ನುಡಿ ಫಲಿಸುವುದೆಯೆನುತಾ
ನಾಕಪತಿ ರಂಭಾದಿ ಸತಿಯರ ನೋಡಿದನು ನಗುತ ॥48॥

೦೪೯ ತನ್ದರಾ ಪಾಞ್ಚಾಲೆಯನು ...{Loading}...

ತಂದರಾ ಪಾಂಚಾಲೆಯನು ಹೊ
ನ್ನಂದಣದಲಾಸ್ಥಾನ ಸೀಮೆಗೆ
ಮುಂದೆ ಸಿಂಹಾಸನದ ಸಾಲ ಮಹಾಮಹೀಶ್ವರರ
ಸಂದಣಿಯಲವರವರನಿವರಿವ
ರೆಂದು ವಿವರಿಸಬೇಕೆನುತ ನೃಪ
ನಂದನನು ಹೊದ್ದಿದನು ಕಮಲಾನನೆಯ ದಂಡಿಗೆಯ ॥49॥

೦೫೦ ತಙ್ಗಿ ನೋಡೌ ...{Loading}...

ತಂಗಿ ನೋಡೌ ತಾಯೆ ನಿನ್ನಯ
ಕಂಗಳೊಲಿವರೆ ಚಿತ್ತವಾರ್ಧಿತ
ರಂಗದಲಿ ತೂಗುವರೆ ತೋರುವೆನವನಿಪಾಲಕರ
ಇಂಗಿತದಲವರಂತರಂಗವ
ನಂಗವಟ್ಟದ ಬಳಕೆಯನು ಬಹಿ
ರಂಗದಲಿ ನೀನರಿಯೆನುತ ನುಡಿದನು ನಿಜಾನುಜೆಗೆ ॥50॥

೦೫೧ ಈತ ದುರ್ಯೋಧನ ...{Loading}...

ಈತ ದುರ್ಯೋಧನ ಮಹೀಶ್ವರ
ನೀತ ದುಶ್ಯಾಸನನು ದುರ್ಜಯ
ನೀತ ದುಶ್ಯಳನೀತ ದುಸ್ಸಹನೀತ ಚಿತ್ರರಥ
ಈತ ದುರ್ಮದನೀತ ಚಿತ್ರಕ
ನೀತಗಳು ಕುರುವಂಶದಲಿ ವಿ
ಖ್ಯಾತರಬಲೆ ನಿರೀಕ್ಷಿಸಾ ಧೃತರಾಷ್ಟ್ರನಂದನರ ॥51॥

೦೫೨ ನೋಡಳವರನು ನುಡಿಸಳೀತನ ...{Loading}...

ನೋಡಳವರನು ನುಡಿಸಳೀತನ
ಕೂಡೆ ಭಾವದೊಳಿವರ ಕೊಡಹೀ
ಡಾಡಿದಳಲಾಯೆನುತ ಧೃಷ್ಟದ್ಯುಮ್ನ ನಸುನಗುತ
ನೋಡು ತಂಗಿ ವಿರಾಟನುತ್ತರ
ಗೂಡಿ ಕೀಚಕರನು ಶ್ರುತಾಯುಧ
ಮೂಡಣರಸುಗಳನು ರವಿಧ್ವಜ ರೋಚ ಮಾನಕರ ॥52॥

೦೫೩ ನೀಲಚಿತ್ರಾಯುಧನು ದಕ್ಷಿಣ ...{Loading}...

ನೀಲಚಿತ್ರಾಯುಧನು ದಕ್ಷಿಣ
ಚೋಳ ಕೇರಳ ಪಾಂಡ್ಯ ಧರಣೀ
ಪಾಲಕರೊಳೀ ಚಂದ್ರಸೇನ ಸಮುದ್ರ ಸೇನಕರು
ಲೋಲನಯನೆ ಕಳಿಂಗಧರಣೀ
ಪಾಲನೀತನು ಚೇಕಿತಾನ ನೃ
ಪಾಲನೀತನು ಭಾನುದತ್ತಮಹೀಶ ನೋಡೆಂದ ॥53॥

೦೫೪ ಇತ್ತಲೀಕ್ಷಿಸು ಪೌಣ್ಡ್ರಕನ ...{Loading}...

ಇತ್ತಲೀಕ್ಷಿಸು ಪೌಂಡ್ರಕನ ಭಗ
ದತ್ತನನು ಕಾಂಭೋಜನನು ಹರ
ದತ್ತನನು ವರಹಂಸ ಡಿಬಿಕರ ಮಾದ್ರಭೂಪತಿಯ
ಇತ್ತಲು ಜರಾಸಂಧ ಮಣಿಮಾ
ನಿತ್ತ ಸಹದೇವನು ಬೃಹದ್ರಥ
ನಿತ್ತಲೀತನು ದಂಡಧಾರಕ ನೃಪನು ನೋಡೆಂದ ॥54॥

೦೫೫ ಭೂರಿಭೂರಿಶ್ರವನು ದಕ್ಷಿಣ ...{Loading}...

ಭೂರಿಭೂರಿಶ್ರವನು ದಕ್ಷಿಣ
ವೀರಬಾಹ್ಲಿಕ ವಿಂಧ್ಯ ಚಿತ್ರ ಭ
ಗೀರಥನು ನೃಪವರ ಜಯದ್ರಥ ಶಿಬಿ ಶ್ರುತಾಯುಧರು
ವೀರ ವೃದ್ಧಕ್ಷತ್ರ ಸೃಂಜಯ
ಚಾರು ಭುಜಬಲ ಸೋಮದತ್ತ ಮ
ಹೀರಮಣರಿವರಿತ್ತಲಿದೆ ತರಳಾಕ್ಷಿ ನೋಡೆಂದ ॥55॥

೦೫೬ ಈತ ರುಕ್ಮಾಙ್ಗದ ...{Loading}...

ಈತ ರುಕ್ಮಾಂಗದ ಜಯದ್ಬಲ
ನೀತ ಶ್ರುತಸೇನಾಚ್ಯುತಾಯುಧ
ರೀತಗಳು ನಿಯತಾಯು ದೀರ್ಘೋದರ ಮಹೋದರರು
ಈತ ದಮಘೋಷಾತ್ಮಜನು ವಿ
ಖ್ಯಾತ ಶಿಶುಪಾಲನು ಮಹಾಬಲ
ನೀತನಶ್ವತ್ಥಾಮ ಸೌಬಲನೀತ ನೋಡೆಂದ ॥56॥

೦೫೭ ಭೂತಳದ ರವಿಯನ್ತೆ ...{Loading}...

ಭೂತಳದ ರವಿಯಂತೆ ಹೊಳೆಹೊಳೆ
ವಾತ ಕರ್ಣನು ತನುಜರೀತಂ
ಗೀತಗಳು ವೃಷಸೇನನಗ್ಗದ ಚಿತ್ರಸೇನಕರು
ಈತನಾಹನೆ ನೋಡೆನಲು ಭಾ
ವಾತಿಶಯ ಸಂಬಂಧ ಭಾವದೊ
ಳೀತನನು ನೋಡಿದಳು ತಿರುಹಿದಳಬಲೆ ಲೋಚನವ ॥57॥

೦೫೮ ಉಕ್ಕಿದಾ ಕಿವಿವೇಟ ...{Loading}...

ಉಕ್ಕಿದಾ ಕಿವಿವೇಟ ಕಣ್ ಬೇ
ಟಕ್ಕೆ ತಂದುದು ಕಂಗಳೀಕೆಯ
ಮುಕ್ಕುಳಿಸಿ ಮೈ ಸೋಂಕಿನಲಿ ಲಟಕಟಸಿದುದು ಹೃದಯ
ಸಿಕ್ಕಿತಳಲಿಗೆ ಸೋತು ಸೊಕ್ಕಿನ
ಚುಕ್ಕಿಯೋ ಚಾಪಳವೊ ಸಿದ್ಧಿಯೊ
ಅಕ್ಕಜವೋ ತಾನೆನುತ ಚಿಂತಿಸಿತಾ ನೃಪವ್ರಾತ ॥58॥

೦೫೯ ಇತ್ತ ನೋಡೌ ...{Loading}...

ಇತ್ತ ನೋಡೌ ತಂಗಿ ಯದು ಭೂ
ಪೋತ್ತಮನನಮರಾರಿ ಕದಳೀ
ಮತ್ತ ದಂತಿಯ ನಿಖಿಳ ನಿಗಮಾವಳಿ ಶಿರೋಮಣಿಯ
ಉತ್ತರೋತ್ತರ ರಮ್ಯಮೂರ್ತಿಯ
ನುತ್ತಮಾಮಲ ಕೀರ್ತಿಯನು ಮನ
ಹತ್ತುವಡೆ ಹಳಿವಿಲ್ಲ ಕೃಷ್ಣನ ವರಿಸು ನೀನೆಂದ ॥59॥

೦೬೦ ಮದನನಯ್ಯನು ಮೂಜಗವ ...{Loading}...

ಮದನನಯ್ಯನು ಮೂಜಗವ ಮಾ
ಡಿದನ ತಾತನು ರೂಪ ವಿಭವವ
ನಿದರೊಳಗೆ ನೀ ನೋಡಿಕೋ ಯಾದವ ಶಿರೋಮಣಿಯ
ಸುದತಿಯರ ಸೇರುವೆಗಳನು ನೋ
ಡಿದರೆ ಧಾರುಣಿ ಲಕ್ಷ್ಮಿ ಕೃಷ್ಣನ
ಪದಯುಗವನೋಲೈಸುತಿಹರಬುಜಾಕ್ಷಿ ಕೇಳ್ ಎಂದ ॥60॥

೦೬೧ ಎನಲು ಭಕುತಿಯ ...{Loading}...

ಎನಲು ಭಕುತಿಯ ಭಾವರಸದಲಿ
ನೆನೆದು ಹೊಂಪುಳಿವೋಗಿ ರೋಮಾಂ
ಚನದ ಮೈಯುಬ್ಬಿನಲಿ ತನು ಪುಳಕಾಂಬು ಪೂರದಲಿ
ಮನದೊಳಗೆ ವಂದಿಸಿದಳೆನಗೀ
ತನಲಿ ಗುರುಭಾವನೆಯ ಮತಿ ಸಂ
ಜನಿಸಿತೇನೆಂದರಿಯೆನೆಂದಳು ಕಮಲಮುಖಿ ನಗುತ ॥61॥

೦೬೨ ಹಿರಿಯನೀ ಕೃಷ್ಣಙ್ಗೆ ...{Loading}...

ಹಿರಿಯನೀ ಕೃಷ್ಣಂಗೆ ನೀಲಾಂ
ಬರನು ನೋಡಾದೊಡೆ ಮುರಾರಿಯ
ಹಿರಿಯ ಮಗನನು ಲೋಕಮೂರರ ಬಂಧಿಕಾರನನು
ಹರನ ಕಣ್ಣಿಗೆ ಬಗೆಯನೆಂಬೀ
ಬಿರುದು ಮನ್ಮಥನೀತನೀತನ
ವರ ತನುಜನನಿರುದ್ಧನಿದು ಯದುರಾಜಕುಲವೆಂದ ॥62॥

೦೬೩ ಸಾರಣನು ಕಲಿ ...{Loading}...

ಸಾರಣನು ಕಲಿ ಸಾಂಬನೀತನು
ಚಾರು ದೀಪಕನೀತನಮಲಾ
ಕ್ರೂರ ಸತ್ಯಕನೀತ ಸಾತ್ಯಕಿ ಈತ ಕೃತವರ್ಮ
ಸಾರಮೌಂಜಸನೀತನೀತ ವಿ
ದೂರಣಾದಿ ಸಮಸ್ತ ಯಾದವ
ವೀರರಿದಸಂಖ್ಯಾತ ಕೃಷ್ಣ ಕುಮಾರರಿವರೆಂದ ॥63॥

೦೬೪ ಜಗವನಿನ್ದ್ರಿಯ ಕರಣ ...{Loading}...

ಜಗವನಿಂದ್ರಿಯ ಕರಣ ವಿಷಯಾ
ದಿಗಳನೆಲ್ಲವನೆತ್ತಿ ಮುಖದಲಿ
ತೆಗೆದು ಶ್ರುತಿಶಿರದಮಲ ತತ್ವವನರಸುವಂದದಲಿ
ಬಗೆಯ ಬಯಕೆಯ ಸೊಗಸುಗಳ ದಾ
ಯಿಗನನರಸುತ ಕುಡಿತೆಗಣ್ಣಲಿ
ಮೊಗೆದು ಸೂಸಿದಳಂಬುಜಾನನೆಯಖಿಳ ನೃಪಜನವ ॥64॥

೦೬೫ ಕೆಲರು ಮಧುರಾಪಾಙ್ಗದಲಿ ...{Loading}...

ಕೆಲರು ಮಧುರಾಪಾಂಗದಲಿ ಕಂ
ಗಳ ಮರೀಚಿಯ ಬೆಳಗಿನಲಿ ಕೆಲ
ರೆಳೆನಗೆಯ ಮಿಂಚಿನಲಿ ಸಖಿಯರ ಮೇಳವಾತಿನಲಿ
ಲಲನೆ ನೋಡಿದಳೆಂದು ಸೊಗಸಿನ
ಲೊಲಿವ ಸಖಿಯರಿಗೆಂದಳೆಂದೊಳ
ಗೊಳಗೆ ಬೆರೆತರು ಬಯಲು ಮಧುವಿನ ಬಾಯ ಸವಿಗಳಲಿ ॥65॥

೦೬೬ ಗರುವೆಯಿಙ್ಗಿತವರಿದು ...{Loading}...

ಗರುವೆಯಿಂಗಿತವರಿದು ದಂಡಿಗೆ
ಮುರಿದೊಡನೆಯೈತಂದುದೀಕೆಯ
ನೆರವಿ ಕಳುಹುತ ಕಂಗಳಲಿ ಕರಣೇಂದ್ರಿಯಂಗಳಲಿ
ಬರಿಯ ಡಿಂಬದ ಡೊಂಬಿನಲಿ ಕೇ
ಸರಿಯ ಪೀಠವನಿಳಿಯದಿರ್ದರು
ಧರಣಿಪರು ಮುರವೈರಿ ಗಂಗಾಸೂನು ಹೊರತಾಗಿ ॥66॥

೦೬೭ ಮಡಿಸಿದೆಲೆ ಬೆರಳೊಳಗೆ ...{Loading}...

ಮಡಿಸಿದೆಲೆ ಬೆರಳೊಳಗೆ ಬಾಯೊಳ
ಗಡಸಿದೆಲೆ ಬಾಯೊಳಗೆ ಸಚಿವರ
ನುಡಿಯ ಕೇಳರು ಸುಳಿಯ ಕಾಣರು ಲೋಚನಾಗ್ರದಲಿ
ಕಡುಮುಳಿದ ಕಂದರ್ಪ ಶರವವ
ಘಡಿಸಿ ಕೈಗಳ ನೋಡಿ ನೃಪರೆವೆ
ಮಿಡುಕದಿರ್ದರು ಬೆರಳ ಮೂಗಿನ ಹೊತ್ತ ದುಗುಡದಲಿ ॥67॥

೦೬೮ ರಾಯನೆನ್ದನು ಸಕಲಧರಣೀ ...{Loading}...

ರಾಯನೆಂದನು ಸಕಲಧರಣೀ
ರಾಯರನು ಮನ್ನಿಸದೆ ಮರಳಿದ
ಳಾಯತಾಕ್ಷಿ ಮಹಾಸ್ವಯಂವರದಲಿ ಮಹಾದೇವ
ಜೊಯಿಸರ ಹೋರೆಗರ ಹೇಳಿಕೆ
ಹೋಯಿತೇ ಹೊಳ್ಳಾಗಿ ಪಾಂಡವ
ರಾಯರನು ತೋರಿಸನೆ ಗದುಗಿನ ವೀರ ನಾರಯಣ ॥68॥

+೧೩ ...{Loading}...