೧೧

೦೦೦ ಸೂ ವೀರ ...{Loading}...

ಸೂ : ವೀರ ಕುಂತೀತನುಜರಿರುಳಂ
ಗಾರವರ್ಮನ ಗೆಲಿದು ಹೊಕ್ಕರು
ಧಾರುಣೀಸುರ ವೇಷದಲಿ ಪಾಂಚಾಲಪಟ್ಟಣವ

೦೦೧ ಅರಸ ಕೇಳೈ ...{Loading}...

ಅರಸ ಕೇಳೈ ಕಲಿಬಕಾಸುರ
ಮರಣಸಮನಂತರದೊಳಾ ಪುರ
ವರದೊಳಿರ್ದರು ವಿಮಲ ವಿಪ್ರಸ್ತೋಮದೊಡಗೂಡಿ
ವರುಷ ತುಂಬಿತು ನಮ್ಮ ಹಸ್ತಿನ
ಪುರವ ಹೊರವಂಟಂದಿನಲಿಯೆಂ
ದರಸ ಕುಂತೀದೇವಿಗೆಂದನು ಧರ್ಮಸುತ ನಗುತ ॥1॥

೦೦೨ ಆ ಸಮಯದಲಿ ...{Loading}...

ಆ ಸಮಯದಲಿ ಬಂದನೊಬ್ಬನು
ಭೂಸುರನು ಸಕುತೂಹಲನು ಬಹು
ದೇಶಪರಿಯಟಣ ಪ್ರವಾಸಾಭ್ಯಾಸ ಶಿಕ್ಷೆಯಲಿ
ಗ್ರಾಸ ಯಾಚಕನಾಗಿ ತಮ್ಮ ನಿ
ವಾಸದಲಿ ಸಲೆ ತುಷ್ಟನಾದ ಮ
ಹೀಸುರನ ಮಾತಾಡಿಸಿದನಂದರಸ ವಿನಯದಲಿ ॥2॥

೦೦೩ ಎತ್ತಣಿನ್ದಲಿ ಬರವು ...{Loading}...

ಎತ್ತಣಿಂದಲಿ ಬರವು ಬಳಿಕಿ
ನ್ನೆತ್ತ ಗಮನವು ಪೂರ್ವ ಸುಕೃತವ
ಹೊತ್ತುದಿಂದಿನ ದಿವಸವಿದೆಲಾ ಸುಜನ ಸಂಸರ್ಗ
ಉತ್ತರೋತ್ತರ ಸಿದ್ಧಿಯಿಲ್ಲಿಂ
ದಿತ್ತಲೆಮಗೆನೆ ಹಸ್ತಿನಾಪುರ
ದತ್ತಣಿಂದವೆ ಬಂದೆವಾವುದು ದೇಶ ನಿಮಗೆಂದ ॥3॥

೦೦೪ ನಾವು ನಿಮ್ಮೋಪಾದಿಯಲಿ ...{Loading}...

ನಾವು ನಿಮ್ಮೋಪಾದಿಯಲಿ ತೀ
ರ್ಥಾವಲೋಕನಪರರು ಭಿಕ್ಷಾ
ಜೀವಿಗಳು ನೀವೇಸು ದಿನ ಗಜಪುರವ ಹೊರವಂಟು
ಅವನಲ್ಲಿಗೆ ಪತಿ ಯುಧಿಷ್ಠಿರ
ದೇವನೋ ದುರ್ಯೋಧನನೊ ಬಳಿ
ಕಾವುದುಂಟು ವಿಶೇಷ ಕೌರವ ಪಾಂಡುತನಯರಲಿ ॥4॥

೦೦೫ ಮರುಳುಗಳೊ ನೀವ್ ...{Loading}...

ಮರುಳುಗಳೊ ನೀವ್ ಮೇಣು ನಮ್ಮನು
ಮರುಳು ಮಾಡುವ ಪರಿಯೊ ಪಾಂಡವ
ರರಗು ಮನೆಯಲಿ ಬೆಂದರಿದು ಲೋಕಪ್ರಸಿದ್ಧವಲೆ
ಅರಸು ಕೌರವರಾಯನಾತನ
ಸಿರಿಯನಾತನ ಬಲುಹನಾತನ
ಪರಿಯನಭಿವರ್ಣಿಸುವಡರಿಯೆನು ವಿಪ್ರ ಕೇಳ್ ಎಂದ ॥5॥

೦೦೬ ಅಕಟ ಪಾಣ್ಡವರಳಿದರೇ ...{Loading}...

ಅಕಟ ಪಾಂಡವರಳಿದರೇ ಬಾ
ಧಕರೆ ಪರರಿಗೆ ಲೇಸಿನಲಿ ಕಂ
ಟಕವು ದುಗ್ಧ ವಿಷಂಗಳಲಿ ಹಾಲಿಂಗೆ ಹಾನಿಯಲೆ
ವಿಕಳ ಪುಣ್ಯರು ನಿಲಲಿ ಕುರು ರಾ
ಜಕದೊಳಗೆ ಭೀಷ್ಮಾದಿ ವೃದ್ಧ
ಪ್ರಕರ ಗುರುಸುತ ಗುರು ಕೃಪಾದ್ಯರು ಕುಶಲರೇಯೆಂದ ॥6॥

೦೦೭ ಗುರುಸುತಾದಿ ಸಮಸ್ತ ...{Loading}...

ಗುರುಸುತಾದಿ ಸಮಸ್ತ ಪರಿಜನ
ಪುರಜನಕೆ ಸುಕ್ಷೇಮ ದ್ರುಪದನ
ವರ ಕುಮಾರಿಯ ಮದುವೆ ಗಡ ಪಾಂಚಾಲ ನಗರದಲಿ
ನೆರವುತಿದೆ ನಾನಾ ದಿಗಂತದ
ಧರಣಿಪತಿಗಳು ಭೂರಿಯಲಿ ಮಿಗೆ
ಭರಿತ ದಕ್ಷಿಣೆ ಮೃಷ್ಟ ಭೋಜನವುಂಟು ನಮಗೆಂದ ॥7॥

೦೦೮ ಸಾರವಿದು ನೃಪಕನ್ನಿಕೆಗೆ ...{Loading}...

ಸಾರವಿದು ನೃಪಕನ್ನಿಕೆಗೆ ವರ
ನಾರು ಲಗ್ನವದೆಂದು ಬಳಿಕಾ
ರಾರು ಬಂದರು ಭೂಪತಿಗಳಿದನೆಂದು ಕೇಳಿದಿರಿ
ಭೂರಿಯಲಿ ನಮಗುಂಟೆ ಮೃಷ್ಟ್ಟಾ
ಹಾರ ದಕ್ಷಿಣೆ ನಮ್ಮಭೀಷ್ಟ ವಿ
ಹಾರ ವಾರ್ತೆಯಿದೆಂದು ಧರ್ಮಜ ನುಡಿದನಾ ದ್ವಿಜಗೆ ॥8॥

೦೦೯ ಇವರು ಕಪಟೋಪಾಧ್ಯರೆಮ್ಬುದ ...{Loading}...

ಇವರು ಕಪಟೋಪಾಧ್ಯರೆಂಬುದ
ನವನು ಬಲ್ಲನೆ ಭೂಮಿದೇವ
ಪ್ರವರನೈಸಲೆಯೆಂದು ಬಗೆದನು ಧರ್ಮನಂದನನ
ಅವನಿಯಲಿ ಪಾತಾಳದಲಿ ಸುರ
ಭವನದಲಿ ಪಾಂಚಾಲ ತನುಜೆಗೆ
ಯುವತಿಯರು ಸರಿಯಲ್ಲವೆಂಬುದ ಕೇಳ್ದೆವಾವೆಂದ ॥9॥

೦೧೦ ಈಕೆಗೆಣೆಯಹ ವರನನೀ ...{Loading}...

ಈಕೆಗೆಣೆಯಹ ವರನನೀ ನರ
ಲೋಕದಲಿ ತಾ ಕಾಣೆನರ್ಜುನ
ನೀ ಕುಮಾರಿಯ ರಮಣನೆಂದೇ ಮನದ ಸಂಕಲ್ಪ
ಈಕೆಯಪದೆಸೆಯುದಯದಲಿ ಕುಂ
ತೀಕುಮಾರಕರನಲ ಮುಖದಲಿ
ನಾಕದಲಿ ನೆಲೆಗೊಂಡರೆಂದುಮ್ಮಳಿಸುವನು ದ್ರುಪದ ॥10॥

೦೧೧ ಜ್ವಲನ ನೆರೆ ...{Loading}...

ಜ್ವಲನ ನೆರೆ ನುಂಗಿದನೊ ಮೇಣೆಂ
ಜಲಿಸಿ ಬಿಟ್ಟನೊ ಬಲ್ಲನಾವನು
ಕಲು ಹೃದಯನೈ ಕಮಲಭವನೀ ಪಾಂಡುನಂದನರ
ಸುಳಿವ ಸೈರಿಸನಕಟ ಹೂಹೆಗ
ಳಳಿವ ಹರೆಯವೆ ಶಿವಶಿವಾಯೆಂ
ದಳಲುದೊರೆಯಲಿ ಮುಳುಗಿ ಮೂಡುವ ದ್ರುಪದಪತಿಯೆಂದ ॥11॥

೦೧೨ ಅರಸ ಕೇಳ್ವನು ...{Loading}...

ಅರಸ ಕೇಳ್ವನು ಸಕಲ ದೈವ
ಜ್ಞರಲುಪಶ್ರುತಿಗಳಲಿ ಋಷಿಗಳ
ಪರಮಸಿದ್ಧಾಂತದಲಿ ಮಂತ್ರಾವೇಶ ವಚನದಲಿ
ಧರೆಯೊಳೀಗಳು ಪಾಂಡುಸುತ ಸಂ
ಚರಣೆಯುಂಟದು ಸತ್ಯವೆಂದುಪ
ಚರಿಸಿ ನುಡಿದು ಪುರೋಹಿತನು ಸಂತವಿಸುವನು ನೃಪನ ॥12॥

೦೧೩ ಸರಸಿಜಾನನೆ ನೋಡಿ ...{Loading}...

ಸರಸಿಜಾನನೆ ನೋಡಿ ನೃಪರಲಿ
ವರಿಸುವಳು ವಲ್ಲಭನನೆಂದುಪ
ಚರಿಸುವನು ಸವಿವಾತುಗಳ ಸಾರಾಯ ಸೋನೆಯಲಿ
ಬರಿಸುವುದು ಬಹುದೇಶ ಭೂಮೀ
ಶ್ವರರನವರೊಳು ಪುಣ್ಯದಲಿ ಗೋ
ಚರಿಸರೇ ಗರುವೆಯರ ದೇವಿಗೆ ಪಾಂಡುಸುತರೆಂದ ॥13॥

೦೧೪ ಆದೊಡೀ ಮಗುವಿನ ...{Loading}...

ಆದೊಡೀ ಮಗುವಿನ ಮಹಾ ಪು
ಣ್ಯೋದಯದ ಫಲವೈಸಲೇ ಬರೆ
ಮೇದಿನೀಶ್ವರರೆಲ್ಲರಿಗೆ ಲೇಖಾರ್ಥ ಸಂಗತಿಯ
ಸೋದರರು ಸಹಿತಾ ಸುಯೋಧನ
ನಾದಿಯಾದ ಸಮಸ್ತನೃಪರು ವಿ
ವಾದವಿಲ್ಲದೆ ಬರಲಿ ಕಟ್ಟಿಸು ಪಾವುಡವನೆಂದ ॥14॥

೦೧೫ ಬರೆದ ವೋಲೆಗಳಖಿಳ ...{Loading}...

ಬರೆದ ವೋಲೆಗಳಖಿಳ ಭೂಮೀ
ಶ್ವರರಿಗುಡುಗೊರೆಸಹಿತ ದೂತರು
ಹರಿದರುತ್ತರ ಪೂರ್ವ ದಕ್ಷಿಣ ಪಶ್ಚಿಮಂಗಳಿಗೆ
ಧರೆಯ ಕನ್ಯಾಜನ ಶಿರೋಮಣಿ
ವರ ದ್ರುಪದ ತನುಜಾ ಸ್ವಯಂವರ
ಕರಸುಗಳು ಬಹುದೆಂದು ವಾಚಿಸಿತಖಿಳ ಲೇಖಾರ್ಥ ॥15॥

೦೧೬ ಮಾಡಿದರೆ ಶತಯಾಗವನು ...{Loading}...

ಮಾಡಿದರೆ ಶತಯಾಗವನು ಕೈ
ಗೂಡುವಳು ಶಚಿ ಮಖಸಹಸ್ರವ
ಮಾಡಿ ಮೇಣ್ ಜನಿಸಿದೊಡೆ ಬಹಳೇ ದ್ರೌಪದಾದೇವಿ
ನೋಡುವೆವು ನಡೆ ಜನ್ಮ ಶತದಲಿ
ಕೂಡಿ ಕೊಬ್ಬಿದ ಪುಣ್ಯಫಲ ಕೈ
ಗೂಡುವುದೊ ತಪ್ಪೇನೆನುತ ನೆರೆದುದು ನೃಪಸ್ತೊಮ ॥16॥

೦೧೭ ಆ ಪುರೋಹಿತ ...{Loading}...

ಆ ಪುರೋಹಿತ ವಚನದಲಿ ನಿ
ವ್ರ್ಯಾಪಿತಾಂತವ್ರ್ಯಥೆಯಲವನಿಪ
ನಾ ಪುರಪ್ರಾಂತ್ಯದಲಿ ಸುತ್ತಲು ಮೂರು ಯೋಜನದ
ತೋಪಿನಲಿ ಕಟ್ಟಿಸಿದನಗ್ಗದ
ಭೂಪರಿಗೆ ಭವನವನು ಕೇಳೈ
ದ್ರೌಪದಿಯ ವೈವಾಹ ರಚನಾ ರಾಮಾಣೀಯಕವ ॥17॥

೦೧೮ ನೆರವುತಿದೆ ನಾನಾ ...{Loading}...

ನೆರವುತಿದೆ ನಾನಾ ದಿಗಂತದ
ಧರಣಿಪರು ಕನ್ಯಾರ್ಥಿಗಳು ಭೂ
ಸುರಸಮೂಹದ ಸಾಲು ನೆರದುದು ದಕ್ಷಿಣಾರ್ಥದಲಿ
ಎರಡರೊಳು ನಿಮಗೇನು ಕನ್ಯಾ
ವರಣವೋ ಮೇಣ್ ದಕ್ಷಿಣಾರ್ಥವೊ
ಬರವು ನಿಮಗುಂಟೇಯೆನುತ ದ್ವಿಜನಿವರ ಬೆಸಗೊಂಡ ॥18॥

೦೧೯ ಈಸು ಪರಿಯಲಿ ...{Loading}...

ಈಸು ಪರಿಯಲಿ ನಮ್ಮನೀವಪ
ಹಾಸ ಮಾಡುವಿರಾವು ಭಿಕ್ಷುಕ
ರೈಸಲೇ ಕನ್ಯಾರ್ಥದಲಿ ನಾವೆತ್ತ ನೃಪರೆತ್ತ
ಐಸೆ ನಿಮ್ಮೊಡೆ ನಾವು ಬಹೆವೀ
ಭೂಸುರರ ನೆರವುಂಟಲಾ ಶುಭ
ವಾಸರವ ಬೆಸೆಗೊಂಬೆನೆಂದನು ಧರ್ಮಸುತ ನಗುತ ॥19॥

೦೨೦ ಇವನು ಬಳಿಕ ...{Loading}...

ಇವನು ಬಳಿಕ ನಿಜ ಪ್ರಯೋಜನ
ಭವನಕೈದಿದನಖಿಳ ವಾರ್ತಾ
ವಿವರಣ ವ್ಯಾಖ್ಯಾನ ಸಮನಂತರದ ಸಮಯದಲಿ
ಇವರು ತಮ್ಮೊಳಗೆಂದರವನೀ
ದಿವಿಜಪುರದಲಿ ದೈನ್ಯವೃತ್ತಿಯ
ನಿವಹ ನಿಲಲಿ ನಿರೀಕ್ಷಿಸುವೆವಾ ದ್ರುಪದ ಪಟ್ಟಣವ ॥20॥

೦೨೧ ಆ ಲತಾಙ್ಗಿಯ ...{Loading}...

ಆ ಲತಾಂಗಿಯ ಮದುವೆಗವನೀ
ಪಾಲ ವರ್ಗದ ಬರವು ಗಡ ಹರ
ನೂಳಿಗದ ಹೆಚ್ಚಾಳು ಮಕರಧ್ವಜನ ಮೌಳಿ ಗಡ
ಮೇಳವಹ ಕಿವಿಗಳಿಗೆ ಹಂಗಹ
ವಾಲಿಗಳು ಪರಿವಿಡಿಯ ವೇಧೆಗೆ
ಸೋಲುವವೆಯೆಂದೈವರಾಳೋಚಿಸಿದರೊಳಗೊಳಗೆ ॥21॥

೦೨೨ ಅರಸ ಚಿತ್ತೈಸಮಳ ...{Loading}...

ಅರಸ ಚಿತ್ತೈಸಮಳ ಲಗ್ನಾಂ
ತರದಲಿವರುದಯದಲಿ ಹೊರವಂ
ಟರು ಸುವಿದ್ಯಾ ಪರಿಣತರ ಪಂಡಿತರ ಗಡಣದಲಿ
ಬರುತ ಕಂಡರು ಕಳಶ ಕನ್ನಡಿ
ವರ ಯುವತಿ ಖಗಮೃಗದ ಬಲು ಸು
ಸ್ವರ ಸುಗಂಧಾನಿಲ ಸುಸಂಗತ ಶಕುನ ಸೂಚಕವ ॥22॥

೦೨೩ ಚಾರು ಶಕುನವಿದುತ್ತರೋತ್ತರ ...{Loading}...

ಚಾರು ಶಕುನವಿದುತ್ತರೋತ್ತರ
ವಾರಿಗಿದು ಫಲಿಸುವುದೊ ನಮ್ಮೊಳು
ಹಾರುವರ ಹುಲು ಮೊತ್ತ ಕನ್ಯಾಲಾಭ ಫಲವಿದಕೆ
ಭೂರಿ ಭಾಗ್ಯನು ನಮ್ಮ ವಿಪ್ರರೊ
ಳಾರೆನುತ ತತ್ ಶಕುನಫಲ ವಿ
ಸ್ತಾರವನು ನೆರೆ ವಿವರಿಸುತ ನಡೆದುದು ಬುಧಸ್ತೋಮ ॥23॥

೦೨೪ ಧರಣಿಯಮರರ ಗಡಣದಲಿ ...{Loading}...

ಧರಣಿಯಮರರ ಗಡಣದಲಿ ನಾ
ಲ್ಕೆರಡು ಪಯಣಾಂತರದಲವನೀ
ಸುರರನುಳಿದಾಶ್ರಮದೊಳಗೆ ಪಾರಾಶರವ್ರತಿಯ
ದರುಶನವ ಮಾಡಿದರು ಬಕಸಂ
ಹರಣ ವೃತ್ತಾಂತವನು ನೆರೆ ವಿ
ಸ್ತರಿಸಿದರು ವಿನಯದಲಿ ಬೀಳ್ಕೊಂಡರು ಮುನೀಶ್ವರನ ॥24॥

೦೨೫ ಗಮನ ಭರದಲಿ ...{Loading}...

ಗಮನ ಭರದಲಿ ಭಾರಿಯಧ್ವ
ಶ್ರಮವ ನೋಡದೆ ಭೂಮಿ ನಭದಲಿ
ತಮದ ಚಾವಡಿಯಿಕ್ಕಿದರೆ ಗತಿ ಚಾಪಳವ ಬಿಡದೆ
ದ್ಯುಮಣಿ ಕೈಸೆರೆಯಾಗಲಟವೀ
ಭ್ರಮಣದಲಿ ಬೆಳಗಡಗೆ ಭೂಪೋ
ತ್ತಮರು ಬಂದರು ಬಹಳ ಗಮನದೊಳರ್ಧ ರಾತ್ರಿಯಲಿ ॥25॥

೦೨೬ ಮುನ್ದೆ ಪಾರ್ಥನ ...{Loading}...

ಮುಂದೆ ಪಾರ್ಥನ ಬೀಸುಗೊಳ್ಳಿಗ
ಳಿಂದ ತಮದಾವಳಿ ಮುರಿಯೆ ಬಳಿ
ಸಂದು ಕುಂತೀದೇವಿ ಧರ್ಮಜನಕುಲ ಸಹದೇವ
ಹಿಂದೆ ಭೀಮನ ಕೈಯ ಕೊಳ್ಳಿಯ
ಬಿಂದು ಬೆಳಗಿನಲನಿಬರಟವೀ
ವೃಂದದಲಿ ಬರುತಿರ್ದರಿರುಳವನೀಶ ಕೇಳ್ ಎಂದ ॥26॥

೦೨೭ ಬರುತ ಕಣ್ಡರು ...{Loading}...

ಬರುತ ಕಂಡರು ಮುಂದೆ ಗಂಧ
ರ್ವರ ವಧೂ ನಿಕುರುಂಬವನು ನೇ
ವುರದ ಝಣ ಝಣ ರವದ ಝೇಂಕೃತಿ ಧ್ವನಿಯ
ಅರಳುಗಂಗಳ ಬೆಳಗಿನಲಿ ತಮ
ವಿರುಳು ಬೀತುದು ಬೆಸುವುದಾಗಲೆ
ಕುರುಳ ಕಾಳಿಕೆಯಿಂದ ತತ್ಕಾಂತಾ ಕದಂಬದಲಿ ॥27॥

೦೨೮ ಲಲಿತ ತನುಕಾನ್ತಿಗಳ ...{Loading}...

ಲಲಿತ ತನುಕಾಂತಿಗಳ ಮೊಗೆದರು
ತಿಳಿಗೊಳನ ಜಲವೆಂದು ಕಂಗಳು
ಹೊಳೆಯೆ ಮರಿಮೀನೆಂದು ಹೆಕ್ಕಳಿಸಿದರು ಹಿಡುಹಿನಲಿ
ಅಲರಿದಂಬುಜವೆಂದು ವದನಕೆ
ನಿಲುಕಿ ತುಂಬಿಗಳೆಂದು ಕುರುಳಿಂ
ಗಳುಕಿ ಕೈಗಳ ತೆರೆದರತಿ ಮುಗುದೆಯರು ಖಚರಿಯರು ॥28॥

೦೨೯ ಅವರ ಮುಖಕಾನ್ತಿಗಳಲಙ್ಗ ...{Loading}...

ಅವರ ಮುಖಕಾಂತಿಗಳಲಂಗ
ಚ್ಛವಿಗಳಲಿ ಕಂಕಣದ ಹಾರದ
ವಿವಿಧ ರತ್ನಾಭರಣ ಕಿರಣದ ಲಲಿತ ಲಹರಿಯಲಿ
ಸವೆದುದಗ್ಗದ ತಿಮಿರವವದಿರ
ನಿವರು ಕಂಡರು ಜಲವಿಹಾರದ
ದಿವಿಜಸತಿಯರಲಾಯೆನುತ ಬರುತಿರ್ದರಡವಿಯಲಿ ॥29॥

೦೩೦ ನಾರಿಯರು ಕಣ್ಡರು ...{Loading}...

ನಾರಿಯರು ಕಂಡರು ಸುಲಜ್ಜಾ
ಭಾರದಲಿ ತಡಿಗಡೆಗೆ ಹಾಯಿದು
ಸೀರೆಗಳ ತೆರೆವಿಡಿದರಂಗೋಪಾಂಗ ಲತೆಗಳಿಗೆ
ಆರಿವರು ನಡುವಿರಳು ದರ್ಪ ವಿ
ಕಾರದಲಿ ಕೈಕೊಳ್ಳಿರೆನುತಂ
ಗಾರವರ್ಮನು ಧನುವ ಕೊಂಡನು ನುಡಿಸಿದನು ನರನ ॥30॥

೦೩೧ ಈಸು ಭರದಲಿ ...{Loading}...

ಈಸು ಭರದಲಿ ಗಮನವೆಲ್ಲಿಗೆ
ದೇಶಕಾಲವ ನೋಡದೀ ಸ
ರ್ವಾಸುರದ ಸೌರಂಭವೇನೆನೆ ಪಾರ್ಥ ನಸುನಗುತ
ದೇಶವಿದು ವನ ಕಾಲ ನಡುವಿರು
ಳೈಸಲೇ ನಿಜಕಾರ್ಯ ಸಂಗತಿ
ಗೋಸುಗವೆ ಗತಿಯೆಂದನಾ ಗಂಧರ್ವ ರಾಜಂಗೆ ॥31॥

೦೩೨ ನರರು ಸುಳಿವುದು ...{Loading}...

ನರರು ಸುಳಿವುದು ಪೂರ್ವಭಾಗದ
ಲಿರುಳಿನುತ್ತರ ಭಾಗದಲಿ ಖೇ
ಚರರು ಸುಳಿವುದು ಸೀಮೆ ಚತುರಾನನನ ಸೃಷ್ಟಿಯಲಿ
ಇರುಳಿನುತ್ತರ ಭಾಗವಿದು ನೀವ್
ನರರು ಬಹುದುದ್ದಂಡ ದರ್ಪ
ಜ್ವರಿತವಿದಕೌಷಧಿಯನೆರೆವೆನೆನುತ್ತ ತೆಗೆದೆಚ್ಚ ॥32॥

೦೩೩ ಕನಲಿ ಫಲುಗುಣನಾದಡಿದ ...{Loading}...

ಕನಲಿ ಫಲುಗುಣನಾದಡಿದ ಕೊ
ಳ್ಳೆನುತ ಕೊಳ್ಳಿಯೊಳಿಟ್ಟನಗ್ನಿಯ
ನೆನೆದು ಮಂತ್ರಿಸಲುರಿಮುಖದ ಕಾರ್ಬೊಗೆಯ ಮೊಬ್ಬಿನಲಿ
ಹೊನಲುಗಿಡಿಗಳ ತಗಡುರಿಯ ಕೊಂ
ಡಿನಲಿ ಮುತ್ತಿತು ರಥವನಾತನ
ಧನುವನಾತನ ತನುವನಾತನ ಸರಳ ಸಾರಥಿಯ ॥33॥

೦೩೪ ಉರಿದುದಾ ರಥವವನ ...{Loading}...

ಉರಿದುದಾ ರಥವವನ ಮೈಯಲಿ
ಕರಿಕುವರಿತರಲೋಡಿ ಹೊಕ್ಕನು
ಸರಸಿಯನು ಶಿಖಿಯೊಡನೆ ಹೊಕ್ಕುದು ನೀರನುರೆ ಸುರಿದು
ತರುಣಿ ಹಾಹಾ ಕೆಟ್ಟನೆಂದ
ಬ್ಬರಿಸಲಾ ಗಂಧರ್ವನಂಗನೆ
ಹರಿದಳೆಡಗೈಯಿಂದ ಸಂವರಿಸುತ್ತ ಬಿಡುಮುಡಿಯ ॥34॥

೦೩೫ ಬನ್ದು ಯಮನನ್ದನನ ...{Loading}...

ಬಂದು ಯಮನಂದನನ ಚರಣ
ದ್ವಂದ್ವದಲಿ ಚಾಚಿದಳು ನೊಸಲನು
ತಂದೆ ಕರುಣಿಸು ಕಾಂತಭಿಕ್ಷವ ಕರುಣಿಸೆನಗೆನಲು
ಮುಂದುವರಿಯದಿರೆಲೆ ಧನಂಜಯ
ಕೊಂದರೆನ್ನಾಣೀಕೆಯರಸನ
ತಂದು ಕೊಡು ಬೇಗದಲಿ ಉಪಸಂಹರಿಸು ಶಿಖಿಶರವ ॥35॥

೦೩೬ ಎನೆ ಹಸಾದವೆನುತ್ತ ...{Loading}...

ಎನೆ ಹಸಾದವೆನುತ್ತ ನಿಮಿಷದೊ
ಳನಲನನು ನಂದಿಸಿದನಿತ್ತಲು
ಮನದ ದುಮ್ಮಾನದಲಿ ಲಜ್ಜಾವನತ ಮುಖನಾಗಿ
ಮನುಜರಲ್ಲಿವರಾರೊ ನೋಡುವೆ
ನೆನುತ ಹತ್ತಿರೆ ಬಂದು ನೀವಾ
ರಿನಿತು ಸಾಹಸ ಮಲ್ಲರೆಂದರ್ಜುನನ ಬೆಸಗೊಂಡ ॥36॥

೦೩೭ ನರರು ವೈದೇಶಿಗರು ...{Loading}...

ನರರು ವೈದೇಶಿಗರು ಕಾರ್ಯಾ
ತುರರು ನಾವೆನಲರ್ಜುನನನುಪ
ಚರಿಸಿ ವಿವಿಧ ಗುಣಾನುಮುಖದಲ್ಲಿವರನಂಡಲೆಯೆ
ಧರೆಯೊಳುಂಟೇ ಪಾಂಡುಸುತರೆಂ
ಬರಸುಗಳು ನೀಕೇಳಿ ಬಲ್ಲೈ
ನಿರುತವಾವವರೆಂದು ನುಡಿದನು ನಗುತ ಕಲಿಪಾರ್ಥ ॥37॥

೦೩೮ ಶಿವ ಶಿವಾದೊಡೆ ...{Loading}...

ಶಿವ ಶಿವಾದೊಡೆ ಯಮ ಪುರಂದರ
ಪವನನಶ್ವಿನಿಯರಿಗೆ ನೀವ್ ಸಂ
ಭವಿಸಿದವರೇ ನೀವೆಮಗೆ ಸಂಭಾವನೀಯರಲ
ಇವೆ ಸಹಸ್ರ ತುರಂಗ ದಿವ್ಯೋ
ದ್ಭವವನಘ್ರ್ಯಾಭರಣರತ್ನ
ಪ್ರವರವಿವೆ ಕಾರುಣ್ಯದಲಿ ಕೈಕೊಂಬುದಿವನೆಂದ ॥38॥

೦೩೯ ಬನ್ದವೆಮಗಿವು ನಿನ್ನ ...{Loading}...

ಬಂದವೆಮಗಿವು ನಿನ್ನ ನಾವ್ ಬೇ
ರೆಂದು ಕಾಣೆವು ಪರಮ ಬಾಂಧವ
ರಿಂದು ಮೊದಲಾಗೆಮಗೆ ನೀನೇ ಮೌಲ್ಯಧನವೆಂದ
ಇಂದು ನಿಜರೂಪಡಗಿ ರಾಯರ
ವೃಂದವನು ನೋಡುವೆವು ದ್ರುಪದನ
ನಂದನೆಯ ವೈವಾಹ ರಚನೆಯೊಳೆಂದನಾ ಪಾರ್ಥ ॥39॥

೦೪೦ ಇವು ಮದೀಯ ...{Loading}...

ಇವು ಮದೀಯ ಸುವಸ್ತು ನಿನ್ನಯ
ಭವನದೊಳಗಿರಲೊಂದು ಸಮಯದೊ
ಳಿವನು ತರಿಸುವೆವೆಂದು ಬಳಿಕಂಗಾರವರ್ಮಂಗೆ
ಇವರು ವಿನಯವ ಮಾಡಿ ಗಮನೋ
ತ್ಸವದಲಿರೆ ಗಂಧರ್ವ ನಸು ನಗು
ತಿವರಿಗೆಂದನು ಧರ್ಮಶಾಸ್ತ್ರದ ಸಾರ ಸಂಗತಿಯ ॥40॥

೦೪೧ ಮುನಿಯದಿರು ಕಲಿಪಾರ್ಥ ...{Loading}...

ಮುನಿಯದಿರು ಕಲಿಪಾರ್ಥ ನಿನ್ನಯ
ಘನತರದ ವಿಕ್ರಮಕೆ ದಿವಿಜರು
ದನುಜ ಭುಜಗರು ನೆರೆಯರುಳಿದೀ ನರರ ಪಾಡೇನು
ಅನುಪಮಾನ ಕ್ಷತ್ರವಹ್ನಿಗೆ
ವಿನುತ ವಿಮಲ ಬ್ರಹ್ಮತೇಜೋ
ಘನ ಸಮೀರ ಸಹಾಯವಾಗಲಸಾಧ್ಯವೇನೆಂದ ॥41॥

೦೪೨ ಅರಸ ನಿಮ್ಮೊಳು ...{Loading}...

ಅರಸ ನಿಮ್ಮೊಳು ಪೂರ್ವದಲಿ ಸಂ
ವರಣನೆಂಬನು ಸೂರ್ಯತನುಜೆಗೆ
ಮರುಳುಗೊಂಡನು ಮರೆದು ಕಳೆದನು ರಾಜವೈಭವವ
ಬರಿಯ ಪಾರ್ಥಿವತೇಜದಲಿ ಗೋ
ಚರಿಸದಿರೆ ತತ್ಸತಿ ವಿವಾಹೋ
ತ್ಕರುಷವಾಯ್ತು ವಸಿಷ್ಠನಮಲ ಬ್ರಹ್ಮತೇಜದಲಿ ॥42॥

೦೪೩ ಆ ವಸಿಷ್ಠನ ...{Loading}...

ಆ ವಸಿಷ್ಠನ ಕೌಶಿಕನ ಯು
ದ್ಧಾವಲಂಬನವೇನನೆಂಬೆನು
ದೇವಕುಲವಂಜುವುದು ವಿಶ್ವಾಮಿತ್ರನುಬ್ಬಟೆಗೆ
ಆ ವಿವಿಧ ಮಂತ್ರಾಸ್ತ್ರವನು ಶತ
ಸಾವಿರವನಾ ಬ್ರಹ್ಮದಂಡದ
ಢಾವರದಲೇ ಗೆಲಿದನೊಬ್ಬ ವಸಿಷ್ಠಮುನಿಯೆಂದ ॥43॥

೦೪೪ ಒದಗಲಾರದೆ ತನ್ನ ...{Loading}...

ಒದಗಲಾರದೆ ತನ್ನ ಸುಕ್ಷ
ತ್ರದ ಮಹತ್ವವ ಬಿಸುಟು ಸುಬ್ರಾ
ಹ್ಮದಲಿ ಹೊಕ್ಕನು ವಿಗಡ ವಿಶ್ವಾಮಿತ್ರಮುನಿಯಂದು
ಅದರಿನಿಂದೀ ಕ್ಷತ್ರತೇಜದೊ
ಳುದಿತ ವಿಮಲಬ್ರಹ್ಮವನು ಕೂ
ಡಿದೊಡೆ ಕೌತುಕವೆಂದನಾ ಗಂಧರ್ವನರ್ಜುನಗೆ ॥44॥

೦೪೫ ಇಲ್ಲಿಗಿದೆ ನಾಲ್ಕೈದು ...{Loading}...

ಇಲ್ಲಿಗಿದೆ ನಾಲ್ಕೈದು ಯೋಜನ
ದಲ್ಲಿ ಧೌಮ್ಯಾಶ್ರಮ ವಸಿಷ್ಠಂ
ಗಲ್ಲಿ ಸನ್ನಿಧಿಯಾ ವಸಿಷ್ಠಂಗಾತನನುಜಾತ
ಅಲ್ಲಿ ಪೌರೋಹಿತ್ಯವನು ನಿಮ
ಗೊಲ್ಲೆನೆನ್ನದೆ ಮುನಿಪ ಮಾಡಿದ
ಡೆಲ್ಲ ಲೇಸಹುದೆಂದು ಕಳುಹಿದನಿವರನಾ ಖಚರ ॥45॥

೦೪೬ ಗಮಿಸಿದರು ಬಳಿಕವರು ...{Loading}...

ಗಮಿಸಿದರು ಬಳಿಕವರು ಧೌಮ್ಯಾ
ಶ್ರಮಕೆ ಬಂದರು ಮುನಿಪನಘ್ರ್ಯಾ
ದ್ಯಮಲ ಸತ್ಕಾರೋಚಿತವ ಕೈಕೊಂಡು ವಿನಯದಲಿ
ಎಮಗೆ ಪೌರೋಹಿತ್ಯದಲಿ ಸಂ
ಕ್ರಮಿಸಬೇಕೆಂದೊಡಬಡಿಸಿ ಭೂ
ರಮಣರಲ್ಲಿಂದೈದಿದರು ಪಾಂಚಾಲಪಟ್ಟಣವ ॥46॥

+೧೧ ...{Loading}...