೦೦೦ ಸೂ ವಿಕಟ ...{Loading}...
ಸೂ. ವಿಕಟ ಭುಜಬಲರೇಕಚಕ್ರದೊ
ಳಕುಟಿಲರು ಭೂಸುರರ ರಕ್ಷಿಸಿ
ಬಕನ ಮುರಿದರು ಮೆರೆದರಮಲ ಗುಣಾಗ್ರಹಾರದಲಿ
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
ಸೂಚನೆ : ಉತ್ತಮರೂ ಶಕ್ತಿಯುತರೂ ಪ್ರಾಮಾಣಿಕರೂ ಆದ ಪಾಂಡವರು ಏಕಚಕ್ರ ನಗರದಲ್ಲಿ ಬ್ರಾಹ್ಮಣರನ್ನು ಕಾಪಾಡಿ ಬಕಾಸುರನನ್ನು ಕೊಂದರು. ನಿರ್ಮಲ ಗುಣಗಳ ಬ್ರಾಹ್ಮಣರ ಕೇರಿಯಲ್ಲಿ ಶೋಭಿಸಿದರು.
ಪದಾರ್ಥ (ಕ.ಗ.ಪ)
ವಿಕಟ-ಉತ್ತಮ, ಭುಜಬಲ-ಶಕ್ತಿ, ಅಕುಟಿಲ-ಪ್ರಾಮಾಣಿಕ, ಅಮಲ-ನಿರ್ಮಲ, ಅಗ್ರಹಾರ-ಬ್ರಾಹ್ಮಣರ ಕೇರಿ
ಟಿಪ್ಪನೀ (ಕ.ಗ.ಪ)
ಬಕಾಸುರ - ನೆಮ್ಮದಿಯಿಂದ ಬಾಳಲು ಬಯಸುವ ನಾಗರಿಕರನ್ನು ತಮ್ಮ ದುಷ್ಟ ಮುಷ್ಟಿಯಲ್ಲಿ ಇರಿಸಿಕೊಂಡು ಬಾಳು ಘೋರವೆನಿಸುವಂತೆ ಮಾಡುವ ಭಯೋತ್ಪಾದಕರು ಎಲ್ಲ ಕಾಲಗಳಲ್ಲೂ ವಿಜೃಂಭಿಸುತ್ತಾರೆ ಎಂಬುದಕ್ಕೆ ಮಹಾಭಾರತದಲ್ಲಿ ಬರುವ ಬಕಾಸುರನೇ ಸಾಕ್ಷಿ. ಇವನು ಏಕಚಕ್ರನಗರದ ಹೊರವಲಯದ ಪರ್ವತ ಸೀಮೆಯಲ್ಲಿ ವಾಸಮಾಡುತ್ತಿದ್ದ. ಅರಗಿನ ಮನೆಯಿಂದ ತಪ್ಪಿಸಿಕೊಂಡು ಪಾಂಡವರು ಏಕಚಕ್ರನಗರಕ್ಕೆ ಬಂದು ಒಬ್ಬ ಬ್ರಾಹ್ಮಣನ ಮನೆಯಲ್ಲಿದ್ದರಷ್ಟೆ. ಒಂದು ದಿನ ಅವಳಿಗೆ ಪಕ್ಕದ ಮನೆಯ ಯಜಮಾನನ ಆರ್ತರವ ಕೇಳಿಸಿತು. ಎಷ್ಟೆಂದರೂ ಅವಳು ಕ್ಷತ್ರಿಯ ಕನ್ಯೆಯಲ್ಲವೆ? ಬ್ರಾಹ್ಮಣನ ಬಳಿಗೆ ಹೋಗಿ
‘‘ಕುತೊ ಮೂಲಮಿದಂ ದುಃಖಂ ಜ್ಞಾತುಮಿಚ್ಛಾಮಿ ತತ್ವತಹ’’ ಎಂದು ಸಂಕಟದ ಮೂಲವನ್ನು ಕೆದಕಿದಳು. ಆಗ ಅವಳಿಗೆ ಬಕರಾಕ್ಷಸನ ಕ್ರೌರ್ಯದ ವಿವರಗಳು ದೊರೆತವು. ಊರಿನವರೆಲ್ಲ ಬಕಾಸುರನೊಂದಿಗೆ ಸಂಧಾನ ಮಾಡಿಕೊಂಡು ಪ್ರತಿನಿತ್ಯವೂ ಒಂದೊಂದು ಮನೆಯಿಂದ ಸರದಿಯ ಪ್ರಕರ ಅಪಾರ ಪ್ರಮಾಣದ ಅಡಿಗೆಯನ್ನು ಬಂಡಿಯಲ್ಲಿ ತುಂಬಿ ಆಹಾರದ ಜೊತೆಗೆ ಎತ್ತುಗಳನ್ನೂ, ಬಕನು ಮನುಷ್ಯ ಮಾಂಸಾಪೇಕ್ಷಿಯಾಗಿದ್ದುದರಿಂದ ಒಬ್ಬ ವ್ಯಕ್ತಿಯನ್ನೂ ಕಳಿಸುತ್ತಿದ್ದರಂತೆ. ಈಗಿನ ಸರದಿ ಈ ಬ್ರಾಹ್ಮಣನ ಮನೆಯದು, ಬಾಲಕನನ್ನು ಬಲಿಕೊಡಲು ಇಷ್ಟವಿಲ್ಲದೆ ಆ ಬ್ರಾಹ್ಮಣ ತಾನೇ ಬಲಿಯಾಗಲು ಹೋಗುವುದಾಗಿ ಹೇಳಿದ. ಕುಂತಿಗೆ ಈ ಮಾತು ಕೇಳಿ ಸ್ವಲ್ಪ ಸಂತೋಷವೇ ಆಗಿರಬೇಕು. ದಿನವೂ ಭಿಕ್ಷಾನ್ನದಿಂದ ಬೇಸತ್ತಿರುವ ಭೀಮನಿಗೆ ನಾಳೆಯಾದರೂ ಒಳ್ಳೆಯ ಆಹಾರ ದೊರೆಯುವುದೆಂದು ತಿಳಿದ ಆದ ಸಂತೋಷ ಇದು.
ಅಲ್ಲದೆ ಬಲಶಾಲಿಯಾದ ಭೀಮನು ಆ ರಾಕ್ಷಸನನ್ನು ಕೊಲ್ಲುವ ವಿಷಯದಲ್ಲಿ ಅವಳಿಗೆ ಅನುಮಾನವೇ ಇರಲಿಲ್ಲ. ಈ ಪುಣ್ಯಕಾರ್ಯದಿಂದ ಸೂರಿನ ಜನಗಳಿಗೂ ನೆಮ್ಮದಿಯಾಗುತ್ತದೆಂಬ ಭಾವನೆಯೂ ಅವಳಲ್ಲಿ ಸುಳಿಯಿತು. ತನ್ನ ಐವರು ಮಕ್ಕಳಲ್ಲಿ ಒಬ್ಬನನ್ನು ಬಕನ ಬಳಿಗೆ ಕಳಿಸುವುದಾಗಿ ಕುಂತಿ ಹೇಳಿದಾಗ ಆ ಬ್ರಾಹ್ಮಣನ ಮನೆಯವರೆಲ್ಲ ಬೆರಗಾದರು. ಕೊನೆಗೆ ಕುಂತಿ ಅವರನ್ನೆಲ್ಲ ಒಪ್ಪಿಸಿದಳು. ಬಕಾಸುರವಧಾ ಪ್ರಕರಣವನ್ನು ವ್ಯಾಸ, ಕುಮಾರವ್ಯಾಸ ಇಬ್ಬರೂ ತುಂಬ ದೀರ್ಘವಾದ ಕಥನದ ಮೂಲಕ ವರ್ಣಿಸಿದ್ದಾರೆ. ಈಗಾಗಲೇ ಹಿಡಿಂಬನನ್ನು ಕೊಂದಿದ್ದ ಭೀಮನಿಗೆ ಇದು ಎರಡನೆಯ ಸಂಘರ್ಷ. ಮಾಡಿಟ್ಟಿದ್ದ ಆಹಾರವನ್ನೆಲ್ಲಾ ತಾನೇ ಉಂಟು ಮುಗಿಸಿ ಬಳಿಕ ಬಕಾಸುರನನ್ನು ಭೀಮನು ಕೊಂದು ಹಾಕಿದ ಘಟನೆಯನ್ನು ವ್ಯಾಸ-ಕುಮಾರವ್ಯಾಸರು ರೋಚಕವಾಗಿ ವಿವರಿಸಿದ್ದಾರೆ. ಮರದ ಕೊಂಬೆಗಳಿಂದ ಬಡಿದ ಭೀಮನ ಹೊಡೆತಕ್ಕೆ ಸಿಕ್ಕಿ ಸಾಯುವ ಮುನ್ನ ಬಕಾಸುರನು ಜೋರಾಗಿ ಕಿರುಚಿಕೊಂಡನಷ್ಟೆ. ಈಗ ಅಲ್ಲಿಗೆ ಬಂದ ರಾಕ್ಷಸರನ್ನೆಲ್ಲ ಭೀಮನು ‘ಆ ಊರಿನವರ ತಂಟೆಗೆ ಬಂದರೆ ನಿಮಗೂ ಬಕಾಸುರನಿಗಾದ U್ಪತಿ ಕಾದಿದೆ’ ಎಂದು ಹೆದರಿಸಿ ಓಡಿಸಿದ್ದು ಇನ್ನೊಂದು ವಿಶೇಷ. ಭೀಮನು ಬಕಾಸುರನ ಹೆಣವನ್ನು ಊರ ಮಧ್ಯದಲ್ಲಿ ನೇತು ಹಾಕಿ ಸಾರ್ವಜನಿಕರಿಗೆ ಅಭಯವನ್ನು ಕೊಟ್ಟ.
ಮುಂದಿನ ಅಜ್ಞಾತವಾಸಕ್ಕೆ ತರಬೇತಿ ಪಡೆಯುವವರ ಹಾಗೆ ಏಕಚಕ್ರನಗರದಲ್ಲಿ ಕೌರವ ಭಯದಿಂದ ಒಂದು ಬಗೆಯಲ್ಲಿ ಅಜ್ಞಾತರಾಗಿಯೇ ಉಳಿದಿದ್ದ ಪಾಂಡವರು ತಮಗೆ ಭಿಕ್ಷೆಯಿತ್ತು. ಕಾಪಾಡಿದ ಊರೊಟ್ಟಿನವರ ಅನ್ನದ I್ಮಣವನ್ನು ತೀರಿಸಿದ ಬಗೆ ಅನುಕರಣ ಯೋಗ್ಯವಾದದ್ದಲ್ಲವೇ?
ಬಕಾಸುರ : ಏಕಚಕ್ರ ನಗರದ ಸಮೀಪದಲ್ಲಿ ವಾಸವಾಗಿದ್ದ ರಾಕ್ಷಸ. ಇವನ ತಮ್ಮ ಕಿಮ್ಮೀರ. ಪಾಂಡವರು ಏಕ ಚಕ್ರನಗರದಲ್ಲಿ ವೇಷ ಮರೆಸಿ ವಿಪ್ರರಾಗಿದ್ದಾಗ ಬಕಾಸುರನನ್ನು ಭೀಮನು ಕೊಂದನು.
ಮೂಲ ...{Loading}...
ಸೂ. ವಿಕಟ ಭುಜಬಲರೇಕಚಕ್ರದೊ
ಳಕುಟಿಲರು ಭೂಸುರರ ರಕ್ಷಿಸಿ
ಬಕನ ಮುರಿದರು ಮೆರೆದರಮಲ ಗುಣಾಗ್ರಹಾರದಲಿ
೦೦೧ ಕೇಳು ಜನಮೇಜಯ ...{Loading}...
ಕೇಳು ಜನಮೇಜಯ ಮಹೀಪತಿ
ಶಾಲಿಹೋತ್ರಾಶ್ರಮವನನಿಬರು
ಬೀಳುಕೊಂಡರು ಮತ್ತೆ ಕಂಡರು ಬಾದರಾಯಣನ
ಹೇಳಿದನು ನಿಮಗೇಕಚಕ್ರ ವಿ
ಶಾಲಪುರದೊಳಗಾರು ತಿಂಗಳು
ಕಾಲ ಸವೆಯಲಿ ಬಳಿಕ ಬಳಸುವಿರುತ್ತರೋತ್ತರವ ॥1॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಜನಮೇಜಯ ಮಹಾರಾಜನೇ ಕೇಳು, ಶಾಲಿಹೋತ್ರರ ಆಶ್ರಮವನ್ನು ಅಷ್ಟು ಜನರೂ ಬೀಳುಕೊಂಡರು. ಮತ್ತೆ ಬಾದರಾಯಣರನ್ನು ಕಂಡರು. ಮುನಿಯು “ನಿಮಗೆ ಏಕಚಕ್ರನಗರದಲ್ಲಿ ಆರು ತಿಂಗಳು ಕಾಲ ಕಳೆಯಲಿ ಬಳಿಕ ಅಭಿವೃದ್ಧಿ ಹೊಂದುವಿರಿ” ಎಂದು ಹೇಳಿದನು.
ಪದಾರ್ಥ (ಕ.ಗ.ಪ)
ಸವೆ-ಕಳೆ, ಉತ್ತರೋತ್ತರ-ಅಭಿವೃದ್ಧಿ, ಬಳಸು-ಹೊಂದು
ಟಿಪ್ಪನೀ (ಕ.ಗ.ಪ)
ಏಕಚಕ್ರನಗರ-ಒಂದು ಪಟ್ಟಣ, ಬಕಾಸುರ ಇಲ್ಲಿ ವಾಸ ಮಾಡುತ್ತಿದ್ದನು. ಅರಗಿನ ಮನೆಯಿಂದ ಹೊರಬಿದ್ದ ಬಳಿಕ ಪಾಂಡವರು ಈ ಸ್ಥಳದಲ್ಲಿ ಬ್ರಾಹ್ಮಣ ವೇಷದಲ್ಲಿ ಇರುತ್ತಿದ್ದರು. ಭೀಮನು ಇಲ್ಲಿಯೇ ಬಕಾಸುರನನ್ನು ಕೊಂದದ್ದು.
ಮೂಲ ...{Loading}...
ಕೇಳು ಜನಮೇಜಯ ಮಹೀಪತಿ
ಶಾಲಿಹೋತ್ರಾಶ್ರಮವನನಿಬರು
ಬೀಳುಕೊಂಡರು ಮತ್ತೆ ಕಂಡರು ಬಾದರಾಯಣನ
ಹೇಳಿದನು ನಿಮಗೇಕಚಕ್ರ ವಿ
ಶಾಲಪುರದೊಳಗಾರು ತಿಂಗಳು
ಕಾಲ ಸವೆಯಲಿ ಬಳಿಕ ಬಳಸುವಿರುತ್ತರೋತ್ತರವ ॥1॥
೦೦೨ ಎನ್ದು ಮುನಿ ...{Loading}...
ಎಂದು ಮುನಿ ತಿರುಗಿದನು ಕುಂತೀ
ನಂದನರು ಸುಕ್ಷಾತ್ರ ತೇಜೋ
ವೃಂದವನು ಮುಸುಕಿದರು ವಿಮಲ ಬ್ರಹ್ಮ ರಶ್ಮಿಯಲಿ
ಅಂದವೇರಿದ ಗಡ್ಡ ದರ್ಭೆಗ
ಳಿಂದ ನೆರಿಯುಡಿಗೆಗಳ ನಾಟಕ
ದಿಂದ ಮಟ್ಟಿಯ ಧಟ್ಟು ನೊಸಲಲಿ ದೇಶಿ ಪರಿ ಮೆರೆಯೆ ॥2॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಈ ರೀತಿ ಹೇಳಿ ವ್ಯಾಸಮುನಿ ಮರಳಿದನು. ಕುಂತೀಪುತ್ರರು ತಮ್ಮ ಒಳ್ಳೆಯ ಕ್ಷಾತ್ರ ತೇಜೋರಾಶಿಯನ್ನು ಪವಿತ್ರವಾದ ಬ್ರಹ್ಮ ತೇಜಸ್ಸಿನ ಕಿರಣಗಳಿಂದ ಮರೆ ಮಾಡಿಕೊಂಡರು. ಚೆಲುವಿನ ಗಡ್ಡ, ದರ್ಭೆಗಳು, ನಿರಿಗೆಯ ಉಡುಗೆಯ ಪ್ರದರ್ಶನ, ಹಣೆಯ ಮೇಲೆ ಮೃತ್ತಿಕೆಯ ರಾಶಿ-ಇವುಗಳಿಂದ ದೇಶೀ ರೂಢಿಯಿಂದ ಅವರು ಶೋಭಿಸಿದರು.
ಪದಾರ್ಥ (ಕ.ಗ.ಪ)
ಮುಸುಕು-ಮರೆಮಾಡು, ಮಟ್ಟಿ-ಮೃತ್ತಿಕೆ, ಧಟ್ಟು-ದಪ್ಪವಾಗಿ , ರಾಶಿ, ನೊಸಲು-ಹಣೆ
ಮೂಲ ...{Loading}...
ಎಂದು ಮುನಿ ತಿರುಗಿದನು ಕುಂತೀ
ನಂದನರು ಸುಕ್ಷಾತ್ರ ತೇಜೋ
ವೃಂದವನು ಮುಸುಕಿದರು ವಿಮಲ ಬ್ರಹ್ಮ ರಶ್ಮಿಯಲಿ
ಅಂದವೇರಿದ ಗಡ್ಡ ದರ್ಭೆಗ
ಳಿಂದ ನೆರಿಯುಡಿಗೆಗಳ ನಾಟಕ
ದಿಂದ ಮಟ್ಟಿಯ ಧಟ್ಟು ನೊಸಲಲಿ ದೇಶಿ ಪರಿ ಮೆರೆಯೆ ॥2॥
೦೦೩ ಅವನಿಪತಿ ಕೇಳೇಕಚಕ್ರವ ...{Loading}...
ಅವನಿಪತಿ ಕೇಳೇಕಚಕ್ರವ
ನಿವರು ಹೊಕ್ಕರು ವಿಪ್ರನೊಬ್ಬನ
ಭವನದಲಿ ಮಾಡಿದರು ಬೀಡಾರವನು ವಿನಯದಲಿ
ಇವರು ಯಾಚಕ ವಿಷಯದಾತಿ
ಥ್ಯವನು ಕೈಕೊಂಡಲ್ಲಿ ಕತಿಪಯ
ದಿವಸವನು ನೂಕಿದರು ಭಿಕ್ಷಾ ವಿಹಿತ ವೃತ್ತಿಯಲಿ ॥3॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಮಹಾರಾಜಾ ಕೇಳು, ಏಕಚಕ್ರವನ್ನು ಇವರು ಪ್ರವೇಶಿಸಿದರು. ಬ್ರಾಹ್ಮಣನೊಬ್ಬನ ಮನೆಯಲ್ಲಿ ವಿನಯದಿಂದ ಸ್ಥಳ ಪಡೆದು ಬಿಡಾರ ಮಾಡಿದರು. ಇವರು ಬೇಡುವ ಉದ್ಯೋಗದಲ್ಲಿ ತೊಡಗಿ ಅಲ್ಲಿನ ಬ್ರಾಹ್ಮಣರ ಆತಿಥ್ಯವನ್ನು ಕೈಕೊಂಡು ಅಲ್ಲಿ ಕೆಲವು ದಿನ ಉಚಿತವಾದ ಭಿಕ್ಷಾ ವೃತ್ತಿಯಲ್ಲಿ ಕಾಲಕಳೆದರು.
ಪದಾರ್ಥ (ಕ.ಗ.ಪ)
ಯಾಚಕ-ಬೇಡುವ,
ಭವನ-ಮನೆ,
ಕತಿಪಯ-ಕೆಲವು,
ವಿಹಿತ-ಉಚಿತವಾದ
ಮೂಲ ...{Loading}...
ಅವನಿಪತಿ ಕೇಳೇಕಚಕ್ರವ
ನಿವರು ಹೊಕ್ಕರು ವಿಪ್ರನೊಬ್ಬನ
ಭವನದಲಿ ಮಾಡಿದರು ಬೀಡಾರವನು ವಿನಯದಲಿ
ಇವರು ಯಾಚಕ ವಿಷಯದಾತಿ
ಥ್ಯವನು ಕೈಕೊಂಡಲ್ಲಿ ಕತಿಪಯ
ದಿವಸವನು ನೂಕಿದರು ಭಿಕ್ಷಾ ವಿಹಿತ ವೃತ್ತಿಯಲಿ ॥3॥
೦೦೪ ತನ್ದ ಭಿಕ್ಷಾಶನವನೈವರು ...{Loading}...
ತಂದ ಭಿಕ್ಷಾಶನವನೈವರು
ನಂದನರು ತಾಯಿಗೆ ನಿವೇದಿಸ
ಲಿಂದುಮುಖಿ ಭಾಗದ್ವಯವ ಸಾನಂದದಲಿ ಮಾಡಿ
ಒಂದು ಭಾಗ ವೃಕೋದರಂಗುಳಿ
ದೊಂದು ಭಾಗವ ತಾನು ನಾಲ್ವರು
ನಂದನರು ವಿನಿಯೋಗಿಸುವರವನೀಶ ಕೇಳ್ ಎಂದ ॥4॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ತಂದ ಭಿಕ್ಷಾನ್ನವನ್ನು ಐವರು ಮಕ್ಕಳು ತಾಯಿ ಕುಂತಿಗೆ ಸಮರ್ಪಿಸಲು, ಇಂದುಮುಖಿ ಕುಂತಿಯು ಸಂತೋಷದಿಂದ ಅದನ್ನು ಎರಡು ಭಾಗ ಮಾಡಿ, ಒಂದು ಭಾಗವನ್ನು ಭೀಮನಿಗಿತ್ತು ಉಳಿದೊಂದು ಭಾಗವನ್ನು ತಾನೂ ಹಾಗೂ ನಾಲ್ವರು ಮಕ್ಕಳು ಊಟ ಮಾಡುತ್ತಿದ್ದರು.
ಪದಾರ್ಥ (ಕ.ಗ.ಪ)
ನಿವೇದಿಸು-ಸಮರ್ಪಿಸು, ಸಾನಂದ-ಸಂತೋಷ, ವೃಕೋದರ-ಭೀಮನ ಹೆಸರು (ತೋಳದಂತೆ ಹೊಟ್ಟೆಯುಳ್ಳವನು) ವಿನಿಯೋಗಿಸು-ಉಪಯೋಗಿಸು
ಮೂಲ ...{Loading}...
ತಂದ ಭಿಕ್ಷಾಶನವನೈವರು
ನಂದನರು ತಾಯಿಗೆ ನಿವೇದಿಸ
ಲಿಂದುಮುಖಿ ಭಾಗದ್ವಯವ ಸಾನಂದದಲಿ ಮಾಡಿ
ಒಂದು ಭಾಗ ವೃಕೋದರಂಗುಳಿ
ದೊಂದು ಭಾಗವ ತಾನು ನಾಲ್ವರು
ನಂದನರು ವಿನಿಯೋಗಿಸುವರವನೀಶ ಕೇಳೆಂದ ॥4॥
೦೦೫ ಸಿರಿಯ ಹೇಳ್ವರೆ ...{Loading}...
ಸಿರಿಯ ಹೇಳ್ವರೆ ಹಸ್ತಿನಾಪುರ
ದರಸುಗಳ ಸಂತಾನ ಶೌರ್ಯದ
ಪರಿಯ ನೋಳ್ಪರೆ ಶಕ್ರ ಸೂರ್ಯರ ತೇಜಕುರೆ ಮಿಗಿಲು
ತಿರಿದ ಕೂಳನು ತಾಯಿ ಹಸುಗೆಯ
ಲೆರಡು ಭಾಗವ ಮಾಡಿ ಮಕ್ಕಳ
ಹೊರೆದಳಿನ್ನುಳಿದವರ ಪಾಡೇನರಸ ಕೇಳ್ ಎಂದ ॥5॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಸಂಪತ್ತಿನ ಬಗ್ಗೆ ಹೇಳುವುದಾದರೆ ಹಸ್ತಿನಪುರದ ಅರಸುಗಳ ಸಂತತಿ. ಶೂರತನದ ರೀತಿಯನ್ನು ನೋಡುವುದಾದರೆ ಇಂದ್ರ, ಸೂರ್ಯರ ತೇಜಸ್ಸಿಗೂ ಹೆಚ್ಚು ಅತಿಶಯವಾದದ್ದು. ಮಕ್ಕಳು ಭಿಕ್ಷೆ ಬೇಡಿದ ಅನ್ನವನ್ನು ತಾಯಿ ಕುಂತಿಯು ಪಾಲಿನಲ್ಲಿ ಎರಡು ಭಾಗ ಮಾಡಿ ಮಕ್ಕಳನ್ನು ಕಾಪಾಡಿದಳು. ಇನ್ನು ಉಳಿದವರ ಅವಸ್ಥೆ ಏನು ?
ಪದಾರ್ಥ (ಕ.ಗ.ಪ)
ಸಿರಿ-ಸಂಪತ್ತು, ಸಂತಾನ-ಸಂತತಿ, ಶೌರ್ಯ-ಶೂರತನ, ಪರಿ-ರೀತಿ, ಶಕ್ರ-ಇಂದ್ರ, ಉರೆ-ಹೆಚ್ಚು, ಮಿಗಿಲು-ಅತಿಶಯ, ತಿರಿದ-ಭಿಕ್ಷೆ ಬೇಡಿದ, ಕೂಳು-ಅನ್ನ, ಹಸುಗೆ-ಪಾಲು, ಹೊರೆ-ಕಾಪಾಡು, ಪಾಡು-ಅವಸ್ಥೆ
ಮೂಲ ...{Loading}...
ಸಿರಿಯ ಹೇಳ್ವರೆ ಹಸ್ತಿನಾಪುರ
ದರಸುಗಳ ಸಂತಾನ ಶೌರ್ಯದ
ಪರಿಯ ನೋಳ್ಪರೆ ಶಕ್ರ ಸೂರ್ಯರ ತೇಜಕುರೆ ಮಿಗಿಲು
ತಿರಿದ ಕೂಳನು ತಾಯಿ ಹಸುಗೆಯ
ಲೆರಡು ಭಾಗವ ಮಾಡಿ ಮಕ್ಕಳ
ಹೊರೆದಳಿನ್ನುಳಿದವರ ಪಾಡೇನರಸ ಕೇಳೆಂದ ॥5॥
೦೦೬ ಉದಯವಾಗದ ಮುನ್ನ ...{Loading}...
ಉದಯವಾಗದ ಮುನ್ನ ಸುಬ್ರಾ
ಹ್ಮ್ಯದ ಮುಹೂರ್ತದಲೆದ್ದು ಜನನಿಯ
ಪದಯುಗಕ್ಕಭಿನಮಿಸಿ ಸಂಧ್ಯಾಮಠಕೆ ನಡೆತಂದು
ವಿದಿತ ಸಂಧ್ಯೋಪಾಸ್ಥೆ ಜಪ ನಿಯ
ಮದ ಪುರಾಣಶ್ರವಣ ಮಧ್ಯಾ
ಹ್ನದಲಿ ಭಿಕ್ಷಾಟನಗಳಿವರಿಗೆ ನಿತ್ಯ ವಿಧಿಯೆಂದ ॥6॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಸೂರ್ಯೋದಯವಾಗುವುದಕ್ಕೆ ಮೊದಲೇ ಪ್ರಶಾಂತ ಬ್ರಾಹ್ಮೀ ಮುಹೂರ್ತದಲ್ಲಿ ಎದ್ದು ತಾಯಿಯ ಪಾದಗಳೆರಡಕ್ಕೂ ಅಭಿನಮಿಸಿ ಸಂಧ್ಯಾವಿಧಿಗಳನ್ನು ನಿರ್ವಹಿಸಲು ಏರ್ಪಡಿಸಿದ ಸ್ಥಳಕ್ಕೆ ನಡೆಯುವರು. ಅಲ್ಲಿ ಗೊತ್ತಾದ ಸಂಧ್ಯಾನ (ತ್ರಿಕಾಲಗಳಲ್ಲಿ ಮಾಡುವ ಧ್ಯಾನ), ಜಪಗಳನ್ನು ನಡೆಸಿ, ಪುರಾಣ ಶ್ರವಣ ಮಾಡುವರು. ಮಧ್ಯಾಹ್ನದಲ್ಲಿ ಭಿಕ್ಷಾಟನಕ್ಕೆ ಹೊರಡುವರು. ಇದು ಇವರಿಗೆ ನಿತ್ಯ ನಿಯಮವಾಯ್ತು.
ಪದಾರ್ಥ (ಕ.ಗ.ಪ)
ಸುಬ್ರಾಹ್ಮ್ಯ-ಬ್ರಾಹ್ಮೀ ಮುಹೂರ್ತ (ದಿನದ ಆರಂಭ ಭಾಗ) ಸಂಧ್ಯಾಮಠ-ಸಂಧ್ಯಾವಿಧಿಗಳನ್ನು ನಿರ್ವಹಿಸಲು ಏರ್ಪಡಿಸಿದ ಸ್ಥಳ, ಸಂಧ್ಯೋಪಾಸ್ಥೆ-ಸಂಧ್ಯಾನ-ತ್ರಿಕಾಲಗಳಲ್ಲಿ ಮಾಡುವ ಧ್ಯಾನ ಅಥವಾ ಪ್ರಾರ್ಥನೆ, ಸಂಧ್ಯವಂದನೆ
ವಿಧಿ-ನಿಯಮ
ಮೂಲ ...{Loading}...
ಉದಯವಾಗದ ಮುನ್ನ ಸುಬ್ರಾ
ಹ್ಮ್ಯದ ಮುಹೂರ್ತದಲೆದ್ದು ಜನನಿಯ
ಪದಯುಗಕ್ಕಭಿನಮಿಸಿ ಸಂಧ್ಯಾಮಠಕೆ ನಡೆತಂದು
ವಿದಿತ ಸಂಧ್ಯೋಪಾಸ್ಥೆ ಜಪ ನಿಯ
ಮದ ಪುರಾಣಶ್ರವಣ ಮಧ್ಯಾ
ಹ್ನದಲಿ ಭಿಕ್ಷಾಟನಗಳಿವರಿಗೆ ನಿತ್ಯ ವಿಧಿಯೆಂದ ॥6॥
೦೦೭ ಭೋಜನೋತ್ತರ ವೇಳೆಯಲಿ ...{Loading}...
ಭೋಜನೋತ್ತರ ವೇಳೆಯಲಿ ನೃಪ
ರಾಜವಾರ್ತಾ ಕಥನದಿಂದ ಮ
ಹಾಜನಂಗಳೊಳಾಡುತಿರ್ದರು ನಿಜವಿನೋದದಲಿ
ರಾಜತನವನು ಮರೆದರಾ ದ್ವಿಜ
ರಾಜತೇಜದಿ ಮೆರೆದರಾ ನರ
ರಾಜರಾಜರ ನೀತಿಯಿದು ಭೂಪಾಲ ಕೇಳ್ ಎಂದ ॥7॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಭೋಜನದ ಅನಂತರದ ಸಮಯದಲ್ಲಿ ಮಹಾಜನಗಳೊಡನೆ ಬೆರೆತು ನೃಪರಾಜ ವಾರ್ತಾ ಕಥನದಿಂದ ವಿನೋದವಾಗಿ ಕಾಲ ಕಳೆಯುವರು. ಈ ರೀತಿ ತಮ್ಮ ರಾಜತನವನ್ನು ಮರೆತರು. ದ್ವಿಜರಾಜತೇಜದಲ್ಲಿ ಶೋಭಿಸಿದರು. ನರರಾಜರು ಅನುಸರಿಸಬೇಕಾದ ನೀತಿಯೇ ಇದು.
ಪದಾರ್ಥ (ಕ.ಗ.ಪ)
ಉತ್ತರ-ಅನಂತರ, ಮೆರೆ-ಶೋಭಿಸಿ
ಮೂಲ ...{Loading}...
ಭೋಜನೋತ್ತರ ವೇಳೆಯಲಿ ನೃಪ
ರಾಜವಾರ್ತಾ ಕಥನದಿಂದ ಮ
ಹಾಜನಂಗಳೊಳಾಡುತಿರ್ದರು ನಿಜವಿನೋದದಲಿ
ರಾಜತನವನು ಮರೆದರಾ ದ್ವಿಜ
ರಾಜತೇಜದಿ ಮೆರೆದರಾ ನರ
ರಾಜರಾಜರ ನೀತಿಯಿದು ಭೂಪಾಲ ಕೇಳೆಂದ ॥7॥
೦೦೮ ಇರಲಿರಲು ಮಾಸಾನ್ತರದಲಾ ...{Loading}...
ಇರಲಿರಲು ಮಾಸಾಂತರದಲಾ
ನೆರೆಮನೆಯ ಶೋಕಾರ್ತರವದ
ಬ್ಬರವ ಕೇಳಿದು ಕುಂತಿ ಸಾಯಂಕಾಲ ಸಮಯದಲಿ
ಭರದಿನೈತಂದಕಟ ಭೂಸುರ
ವರ ನಿರೋಧವಿದೇನು ದುಃಖೋ
ತ್ಕರುಷವಾಕಸ್ಮಿಕವದೆಂದಳು ಕುಂತಿ ವಿನಯದಲಿ ॥8॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಹೀಗೆಯೇ ಇರುವಲ್ಲಿ ಕೆಲವು ತಿಂಗಳು ಕಳೆದ ಮೇಲೆ ಆ ಪಕ್ಕದ ಮನೆಯಲ್ಲಿ ಸಾಯಂಕಾಲದ ಸಮಯದಲ್ಲಿ ಶೋಕದ ನೋವಿನ ಕೂಗಿನಿಂದ ದೊಡ್ಡ ಗದ್ದಲವೆದ್ದಿತು. ಅದನ್ನು ಕೇಳಿದ ಕುಂತಿ ಆತುರವಾಗಿ ಅಲ್ಲಿಗೆ ಹೋಗಿ ಮನೆಯ ಯಜಮಾನನನ್ನು ಕಂಡು ವಿನಯದಿಂದ “ವಿಪ್ರಶ್ರೇಷ್ಠನೇ, ವ್ಯಥೆಯಿದೇನು ? ಆಕಸ್ಮಿಕವಾದ ಈ ಅತಿಯಾದ ದುಃಖಕ್ಕೆ ಕಾರಣವೇನು?” ಎಂದು ಹೇಳಿದಳು.
ಪದಾರ್ಥ (ಕ.ಗ.ಪ)
ಶೋಕಾರ್ತರವ-ಶೋಕದ ನೋವಿನ ಕೂಗು, ಅಬ್ಬರ-ದೊಡ್ಡಗದ್ದಲ, ಭರ-ಆತುರ, ನಿರೋಧ-ವ್ಯಥೆ, ಉತ್ಕರುಷ-ಹೆಚ್ಚು, ಅತಿಶಯ, ಆಕಸ್ಮಿಕ-ಅನಿರೀಕ್ಷಿತ
ಮೂಲ ...{Loading}...
ಇರಲಿರಲು ಮಾಸಾಂತರದಲಾ
ನೆರೆಮನೆಯ ಶೋಕಾರ್ತರವದ
ಬ್ಬರವ ಕೇಳಿದು ಕುಂತಿ ಸಾಯಂಕಾಲ ಸಮಯದಲಿ
ಭರದಿನೈತಂದಕಟ ಭೂಸುರ
ವರ ನಿರೋಧವಿದೇನು ದುಃಖೋ
ತ್ಕರುಷವಾಕಸ್ಮಿಕವದೆಂದಳು ಕುಂತಿ ವಿನಯದಲಿ ॥8॥
೦೦೯ ನಾಳೆ ವೈವಾಹೋತ್ಸವದ ...{Loading}...
ನಾಳೆ ವೈವಾಹೋತ್ಸವದ ದೆ
ಖ್ಖಾಳವಿದು ಮೊದಲೀ ವಸಂತದ
ಬಾಲಿಕೆಯರೋಕುಳಿಯ ಮಳೆಯಲಿ ಸಿಡಿಲು ಸುಳಿದುದೆನೆ
ಹೇಳಿರೇ ನಿಮಗಾದವಸ್ಥೆಯ
ಕೇಳಲಾಗದೆಯೆನಲು ದ್ವಿಜನಿದ
ಕೇಳಿ ಫಲವೇನವ್ವಯೆಂದನು ಸುಯ್ದು ದುಗುಡದಲಿ ॥9॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ನಾಳೆ ವಿವಾಹೋತ್ಸವದ ಅತಿಶಯ ನಡೆಯಬೇಕು ಎನ್ನುವಾಗ ವಸಂತದ ಬಾಲಿಕೆಯರ ಓಕುಳಿಯ ಮಳೆಯಲ್ಲಿ ಸಿಡಿಲೆರಗಿತು” ಎಂದನು ಆ ಬ್ರಾಹ್ಮಣನು. “ಹೇಳಿ ಸ್ವಾಮಿ, ನಿಮಗೆ ಆದ ಅವಸ್ಥೆಯೇನು ? ಅದನ್ನು ನಾನು ಕೇಳಲಾಗದೇ ?” ಎಂದು ಕುಂತಿ ಕೇಳಲು, ಆ ಬ್ರಾಹ್ಮಣನು" ಇದನ್ನು ಕೇಳಿ ಫಲವೇನವ್ವ ?" ಎಂದು ದುಃಖದಲ್ಲಿ ನಿಟ್ಟುಸುರಿಟ್ಟು ಬಿಟ್ಟನು.
ಪದಾರ್ಥ (ಕ.ಗ.ಪ)
ದೆಖ್ಖಾಳ-ಅತಿಶಯ, ಸುಯ್ದು- ನಿಟ್ಟುಸಿರು ಬಿಟ್ಟು, ದುಗುಡ-ದುಃಖ
ಮೂಲ ...{Loading}...
ನಾಳೆ ವೈವಾಹೋತ್ಸವದ ದೆ
ಖ್ಖಾಳವಿದು ಮೊದಲೀ ವಸಂತದ
ಬಾಲಿಕೆಯರೋಕುಳಿಯ ಮಳೆಯಲಿ ಸಿಡಿಲು ಸುಳಿದುದೆನೆ
ಹೇಳಿರೇ ನಿಮಗಾದವಸ್ಥೆಯ
ಕೇಳಲಾಗದೆಯೆನಲು ದ್ವಿಜನಿದ
ಕೇಳಿ ಫಲವೇನವ್ವಯೆಂದನು ಸುಯ್ದು ದುಗುಡದಲಿ ॥9॥
೦೧೦ ಹೇಳ ಬೇಹುದು ...{Loading}...
ಹೇಳ ಬೇಹುದು ತನ್ನನಿಷ್ಟವ
ನಾಳಿಗೊಳ್ಳದ ಸುಜನ ನಿಕರಕೆ
ಕೇಳ ಬೇಹುದು ದೀನರಹ ವಿಪ್ರೇಂದ್ರರುಪಹತಿಯ
ಹೇಳು ನೀನೆಲೆ ವಿಪ್ರ ತಾನಿದ
ಕೇಳಿ ದುಃಖಿತಯಾಗಲಾಗದೆ
ಹೇಳ್ “ನ ದುಃಖಂ ಪಂಚಭಿಸ್ಸಹ” ವೆನ್ನದೇ ವಚನ ॥10॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕುಂತಿ ಸುಮ್ಮನಾಗದೆ “ತನಗೆ ಆದ ಕೆಡುಕನ್ನು, ಉಪೇಕ್ಷಿಸದ ಸಜ್ಜನರ ಸಮೂಹಕ್ಕೆ ಹೇಳಬೇಕು. ದುಃಖಿತರಾದ ವಿಪ್ರೇಂದ್ರರ ತೊಂದರೆಯನ್ನು ಕೇಳಬೇಕು. ಅಯ್ಯಾ ಬ್ರಾಹ್ಮಣ ಹೇಳು ಹೇಳು. ಇದನ್ನು ಕೇಳಿ ನಾನು ದುಃಖಿತೆಯಾಗಬಾರದೇನು ? ಐದು ಜನರೊಡನೆ ಹೇಳಿಕೊಂಡ ದುಃಖ, ದುಃಖವಾಗಿ ಉಳಿಯುವುದಿಲ್ಲ ಎಂದು ವಚನವಿಲ್ಲವೇ ?” ಎಂದು ಒತ್ತಾಯ ಮಾಡಿ ಕೇಳಿದಳು.
ಪದಾರ್ಥ (ಕ.ಗ.ಪ)
ಅನಿಷ್ಟ-ಕೆಡುಕು, ದೀನ-ದುಃಖಿತ, ಆಳಿಗೊಳ್-ಉಪೇಕ್ಷಿಸು
“ನ ದುಃಖಂ ಪಂಚಭಿಸ್ಸಹ” : ಐದು ಜನರೊಡನೆ ಹೇಳಿಕೊಂಡ ದುಃಖ ದುಃಖವಲ್ಲ (ಐದು ಜನರ ಜೊತೆಯಲ್ಲಿದ್ದರೆ ದುಃಖವು ದುಃಖವಾಗುವುದಿಲ್ಲ)
ಮೂಲ ...{Loading}...
ಹೇಳ ಬೇಹುದು ತನ್ನನಿಷ್ಟವ
ನಾಳಿಗೊಳ್ಳದ ಸುಜನ ನಿಕರಕೆ
ಕೇಳ ಬೇಹುದು ದೀನರಹ ವಿಪ್ರೇಂದ್ರರುಪಹತಿಯ
ಹೇಳು ನೀನೆಲೆ ವಿಪ್ರ ತಾನಿದ
ಕೇಳಿ ದುಃಖಿತಯಾಗಲಾಗದೆ
ಹೇಳ್ “ನ ದುಃಖಂ ಪಂಚಭಿಸ್ಸಹ” ವೆನ್ನದೇ ವಚನ ॥10॥
೦೧೧ ತಾಯೆ ಕೇಳೀ ...{Loading}...
ತಾಯೆ ಕೇಳೀ ವಿಪ್ರಪುರದೊಳ
ಗಾಯವುಂಟೆನಗೆಂದು ರಕ್ಕಸ
ನಾಯಿ ನೆಲಸಿಹನೂರ ಹೊರಗಣ ಶೈಲಶಿಖರದಲಿ
ಆಯಿದೊಬ್ಬನ ಮನೆಮನೆಗೆ ಮೇ
ಲಾಯಿ ಮಹಿಷದ್ವಯ ಸಹಿತ ನಿ
ರ್ದಾಯದಲಿ ಹನ್ನೆರಡು ಕಂಡುಗದಕ್ಕಿಯೋಗರವ ॥11॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಆ ಬ್ರಾಹ್ಮಣನು ಹೇಳತೊಡಗಿದನು : “ತಾಯೇ ಕೇಳು. ಈ ಬ್ರಾಹ್ಮಣರ ನಗರದಲ್ಲಿ ತನಗೆ ಅನುಕೂಲವಾಗಿದೆಯೆಂದು ಒಬ್ಬ ರಕ್ಕಸ ನಾಯಿ ಊರ ಹೊರಗೆ ಇರುವ ಬೆಟ್ಟದ ತುದಿಯಲ್ಲಿ ನೆಲಸಿದ್ದಾನೆ. ಪ್ರತಿದಿನವೂ ಅವನಿಗೆ ಮನೆ ಮನೆಯಲ್ಲಿ ಒಬ್ಬನನ್ನು ಆರಿಸಿ ಮಿಗಿಲಾಗಿ ಎರಡು ಕೋಣಗಳು ಸಹಿತ ಸಂಪೂರ್ಣವಾಗಿ ಹನ್ನೆರಡು ಕಂಡುಗ ಅಕ್ಕಿಯ ಅನ್ನವನ್ನು ಕಳುಹಿಸಬೇಕು”.
ಪದಾರ್ಥ (ಕ.ಗ.ಪ)
ಆಯ-ಅನುಕೂಲ, ಶೈಲ-ಬೆಟ್ಟ, ಶಿಖರ-ತುದಿ, ಆಯಿದು-ಆರಿಸಿ, ಮೇಲಾಯಿ-ಮಿಗಿಲಾಗಿ, ಮಹಿಷದ್ವಯ-ಎರಡು ಕೋಣಗಳು, ನಿರ್ದಾಯ-ಸಂಪೂರ್ಣ, ಕಂಡುಗ-20 ಕೊಳಗದ ಒಂದು ಅಳತೆ, ಓಗರ-ಅನ್ನ, ಕೊಳಗ : ನಾಲ್ಕು ಬಳ್ಳಗಳ ಪರಿಮಾಣ, ಬಳ್ಳ-ನಾಲ್ಕು ಸೇರಿನ ಅಳತೆ (ಎರಡು, ನಾಲ್ಕು ಹತ್ತು ಅಥವಾ ಹನ್ನೆರಡು ಸೇರಿನ ಅಳತೆಗಳು ಬಳ್ಳವೆಂಬ ಹೆಸರಿನಲ್ಲಿ ಬೇರೆ ಬೇರೆ ಕಡೆಗಳಲ್ಲಿ ಪ್ರಚಾರದಲ್ಲಿದೆ)
ಮೂಲ ...{Loading}...
ತಾಯೆ ಕೇಳೀ ವಿಪ್ರಪುರದೊಳ
ಗಾಯವುಂಟೆನಗೆಂದು ರಕ್ಕಸ
ನಾಯಿ ನೆಲಸಿಹನೂರ ಹೊರಗಣ ಶೈಲಶಿಖರದಲಿ
ಆಯಿದೊಬ್ಬನ ಮನೆಮನೆಗೆ ಮೇ
ಲಾಯಿ ಮಹಿಷದ್ವಯ ಸಹಿತ ನಿ
ರ್ದಾಯದಲಿ ಹನ್ನೆರಡು ಕಂಡುಗದಕ್ಕಿಯೋಗರವ ॥11॥
೦೧೨ ಇನಿತುವನು ಮನೆಮನೆಗೆ ...{Loading}...
ಇನಿತುವನು ಮನೆಮನೆಗೆ ಬಾರಿಯ
ದಿನಕೆ ತೆತ್ತಡೆ ತುಷ್ಟನಿಲ್ಲದ
ದಿನಕೆ ನುಂಗುವನೂರನೀ ಪರಿ ಹಲವು ಕಾಲದಲಿ
ಎನಗೆ ಬಂದುದು ತಾಯೆ ನಾಳಿನ
ದಿನದ ಬಾರಿಯಿದಕ್ಕೆ ತನ್ನಯ
ತನುಜ ತಾನುಳಿದಂತೆ ಮಾನಿಸರಿಲ್ಲ ತನಗೆಂದ ॥12॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಆ ಬ್ರಾಹ್ಮಣನು ಮುಂದುವರೆದು “ಇಷ್ಟನ್ನು ಮನೆಮನೆಗೆ ಸರದಿಯ ದಿನಕ್ಕೆ ಕೊಟ್ಟರೆ ತೃಪ್ತನು. ಇಲ್ಲವಾದರೆ ಆ ದಿನ ಊರನ್ನೇ ನುಂಗುವನು. ಈ ರೀತಿ ಹಲವು ಕಾಲದಿಂದ ನಡೆದು ಬಂದಿದೆ. ತಾಯೇ, ನಾಳೆಯ ದಿನದ ಸರದಿ ನನಗೆ ಬಂದಿದೆ. ಇದಕ್ಕೆ ನಮ್ಮ ಮನೆಯಲ್ಲಿ ನನ್ನ ಮಗನೊಬ್ಬ; ನಾನೊಬ್ಬ; ನನಗೆ ಬೇರೆ ಮನುಷ್ಯರು ಯಾರೂ ಇಲ್ಲ” ಎಂದು ಕುಂತಿಗೆ ಹೇಳಿದನು.
ಪದಾರ್ಥ (ಕ.ಗ.ಪ)
ಬಾರಿ-ಸರದಿ, ತೆರು-ಕೊಡು, ತುಷ್ಟನು-ತೃಪ್ತನು, ತನುಜ-ಮಗ, ಮಾನಿಸರು-ಮನುಷ್ಯರು
ಮೂಲ ...{Loading}...
ಇನಿತುವನು ಮನೆಮನೆಗೆ ಬಾರಿಯ
ದಿನಕೆ ತೆತ್ತಡೆ ತುಷ್ಟನಿಲ್ಲದ
ದಿನಕೆ ನುಂಗುವನೂರನೀ ಪರಿ ಹಲವು ಕಾಲದಲಿ
ಎನಗೆ ಬಂದುದು ತಾಯೆ ನಾಳಿನ
ದಿನದ ಬಾರಿಯಿದಕ್ಕೆ ತನ್ನಯ
ತನುಜ ತಾನುಳಿದಂತೆ ಮಾನಿಸರಿಲ್ಲ ತನಗೆಂದ ॥12॥
೦೧೩ ಮಗನನೀವೆನೆ ಪಾರಲೌಕಿಕ ...{Loading}...
ಮಗನನೀವೆನೆ ಪಾರಲೌಕಿಕ
ವಗಡಹುದಪಖ್ಯಾತಿ ತನ್ನನು
ತಗುಹುದೈಹಿಕದಲ್ಲಿ ಬಳಿಕೀ ಸಂತತಿಚ್ಛೇದ
ಬಗೆಯದೆನ್ನೊಡಲಸುರ ಘಾತಿಗೆ
ಮಿಗೆ ವಿಭಾಡಿಸಿ ಕೊಡುವೆನೆಂದೆನೆ
ನಗುತ ಕುಂತೀದೇವಿ ನುಡಿದಳು ವಿಪ್ರ ಕೇಳ್ ಎಂದು ॥13॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಮತ್ತೆ ಬ್ರಾಹ್ಮಣನು, ಕುಂತಿಗೆ ತಿಳಿಸುತ್ತ “ಮಗನನ್ನು ಕೊಡೋಣವೆಂದರೆ ಪರಲೋಕಗತಿ ಕೆಟ್ಟು ಹೋಗುತ್ತದೆ. ಇಹಲೋಕಕ್ಕೆ ಸಂಬಂಧಿಸಿದಂತೆ ಅಪಕೀರ್ತಿ ನನ್ನನ್ನು ಸೇರುವುದು ಅಲ್ಲದೆ ಈ ನನ್ನ ಪೀಳಿಗೆ ನಿಂತು ಹೋಗುವುದು. ಆದ್ದರಿಂದ ವಿಚಾರ ಮಾಡದೆ ನನ್ನ ಈ ಶರೀರವನ್ನು ರಕ್ಕಸನು ಕೊಲ್ಲವುದಕ್ಕೆ ವಿಶೇಷವಾಗಿ ಆಹುತಿಯಾಗಿ ಕೊಡುವೆನು” ಎಂದು ಹೇಳಲು ಕುಂತೀದೇವಿ ನಗುತ್ತ “ಬ್ರಾಹ್ಮಣನೇ ಕೇಳು” ಎಂದು ನುಡಿದಳು.
ಪದಾರ್ಥ (ಕ.ಗ.ಪ)
ಪಾರಲೌಕಿಕ-ಪರಲೋಕದ ಗತಿ, ಸಂಬಂಧಿಸಿದ, ಅಗಡಾಗು-ಕೆಟ್ಟುಹೋಗು, ಅಪಖ್ಯಾತಿ-ಅಪಕೀರ್ತಿ, ತಗುಹು-ಸೇರು, ಐಹಿಕ-ಇಹಲೋಕಕ್ಕೆ ಸಂಬಂಧಿಸಿದ, ಸಂತತಿ-ಪೀಳಿಗೆ, ಘಾತ-ಕೊಲ್ಲು, ವಿಭಾಡಿಸು-ಆಹುತಿಯಾಗಿಕೊಡು
ಮೂಲ ...{Loading}...
ಮಗನನೀವೆನೆ ಪಾರಲೌಕಿಕ
ವಗಡಹುದಪಖ್ಯಾತಿ ತನ್ನನು
ತಗುಹುದೈಹಿಕದಲ್ಲಿ ಬಳಿಕೀ ಸಂತತಿಚ್ಛೇದ
ಬಗೆಯದೆನ್ನೊಡಲಸುರ ಘಾತಿಗೆ
ಮಿಗೆ ವಿಭಾಡಿಸಿ ಕೊಡುವೆನೆಂದೆನೆ
ನಗುತ ಕುಂತೀದೇವಿ ನುಡಿದಳು ವಿಪ್ರ ಕೇಳೆಂದು ॥13॥
೦೧೪ ಐಸಲೇ ನಿಮಗಾದ ...{Loading}...
ಐಸಲೇ ನಿಮಗಾದ ಗಸಣಿಯಿ
ದೇಸರಾಪತ್ತಂಜಬೇಡ ಮ
ಹಾಸುರನ ಬಾಣಸದ ಬೀಯಕೆ ರಪಣವುಂಟೆಮಗೆ
ಏಸು ಕಂಡುಗದಕ್ಕಿಯೋಗರ
ವೈಸ ನೀನಳವಡಿಸು ಮೇಲುಂ
ಟೇಸು ಸಾಧನವನಿತುವನು ತೆಗೆಸೆಂದಳಾ ಕುಂತಿ ॥14॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಅಷ್ಟೇ ಅಲ್ಲವೇ ! ನಿಮಗೆ ಉಂಟಾದ ವ್ಯಥೆಯದು ಅದೆಷ್ಟರ ಕಷ್ಟದ್ದು ? ಹೆದರಬೇಡ. ಆ ದೊಡ್ಡ ರಕ್ಕಸನ ಅಡಿಗೆಯ ಆಹಾರದ ನಾಶಕ್ಕೆ ನನ್ನಲ್ಲಿ ಸಾಮಥ್ರ್ಯವುಂಟು. ಎಷ್ಟು ಕಂಡುಗದಕ್ಕಿಯ ಅನ್ನವಾಗಬೇಕೋ ಅಷ್ಟನ್ನೂ ನೀನು ಸಿದ್ಧ ಮಾಡು. ಇದರ ಮೇಲೆ ಇನ್ನೇನು ಸಾಧನ ಬೇಕೋ ಅದನ್ನೆಲ್ಲಾ ಕಳುಹಿಸು” ಎಂದಳು ಆ ಕುಂತಿ.
ಪದಾರ್ಥ (ಕ.ಗ.ಪ)
ಗಸಣಿ-ವ್ಯಥೆ, ಏಸರು-ಎಷ್ಟು, ಆಪತ್ತು-ಕಷ್ಟ, ಬಾಣಸ-ಅಡಿಗೆ, ಬೀಯ-ಆಹಾರ, ರಪಣ-ಸಾಮಥ್ರ್ಯ, ಅಳವಡಿಸು-ಸಿದ್ಧಮಾಡು, ತೆಗೆಸು-ಕಳುಹಿಸು.
ಮೂಲ ...{Loading}...
ಐಸಲೇ ನಿಮಗಾದ ಗಸಣಿಯಿ
ದೇಸರಾಪತ್ತಂಜಬೇಡ ಮ
ಹಾಸುರನ ಬಾಣಸದ ಬೀಯಕೆ ರಪಣವುಂಟೆಮಗೆ
ಏಸು ಕಂಡುಗದಕ್ಕಿಯೋಗರ
ವೈಸ ನೀನಳವಡಿಸು ಮೇಲುಂ
ಟೇಸು ಸಾಧನವನಿತುವನು ತೆಗೆಸೆಂದಳಾ ಕುಂತಿ ॥14॥
೦೧೫ ತಿರುಗಿ ನಿಮ್ಮೂರೊಳಗೆ ...{Loading}...
ತಿರುಗಿ ನಿಮ್ಮೂರೊಳಗೆ ಕೂಳನು
ತಿರಿದು ಸಲಹುವೆನೆನ್ನ ಮಕ್ಕಳು
ಧರೆಯನಾಳುವ ಸತ್ಯ ಸಹಸಿಗಳಿದ್ದು ಫಲವೇನು
ಹೊರೆಯಲರಿಯೆನು ದುರುಳನೆರಡೆಂ
ಟರಿಯನದರೊಳಗೊಬ್ಬನುದರಕೆ
ನೆರಹಲಾರೆನು ಕೂಳನೆಂದಳು ಕುಂತಿ ನಸುನಗುತ ॥15॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕುಂತಿಯು ಮುಂದುವರಿಸಿ, “ನಿಮ್ಮ ಊರಿನಲ್ಲಿ ಅಲೆದಾಡಿ, ಅನ್ನವನ್ನು ಬೇಡಿ ತಂದು ನನ್ನ ಮಕ್ಕಳನ್ನು ಸಾಕುತ್ತಿದ್ದೇನೆ. ನನ್ನ ಮಕ್ಕಳು ಭೂಮಿಯನ್ನು ಆಳುವ ಸತ್ಯ ಸಾಹಸಿಗಳಿದ್ದು ಪ್ರಯೋಜನವೇನು ? ಅವರಲ್ಲೊಬ್ಬ ದುಷ್ಟನು. ಅವನನ್ನು ಪೋಷಿಸಲು ತಿಳಿಯದು. ಎರಡು, ಎಂಟರ ವ್ಯತ್ಯಾಸ ತಿಳಿಯದವನು. ಅವನೊಬ್ಬನ ಹೊಟ್ಟೆಗೆ ಆಹಾರವನ್ನು ಜತೆಗೂಡಿಸಲಾರೆನು” ಎಂದು ನಸುನಗುತ್ತ ಕುಂತಿ ಹೇಳಿದಳು.
ಪದಾರ್ಥ (ಕ.ಗ.ಪ)
ತಿರುಗಿ-ಅಲೆದಾಡಿ, ತಿರಿದು-ಬೇಡಿ, ಸಲಹು-ಸಾಕು, ಫಲ-ಪ್ರಯೋಜನ, ಹೊರೆ-ಪೋಷಿಸು, ದುರುಳ-ದುಷ್ಟ, ಎರಡೆಂಟರಿಯನು-ಎರಡಕ್ಕೂ ಎಂಟಕ್ಕೂ ವ್ಯತ್ಯಾಸ ತಿಳಿಯದಿರುವವನು, ನೆರಹು-ಜತೆಗೂಡಿಸು
ಮೂಲ ...{Loading}...
ತಿರುಗಿ ನಿಮ್ಮೂರೊಳಗೆ ಕೂಳನು
ತಿರಿದು ಸಲಹುವೆನೆನ್ನ ಮಕ್ಕಳು
ಧರೆಯನಾಳುವ ಸತ್ಯ ಸಹಸಿಗಳಿದ್ದು ಫಲವೇನು
ಹೊರೆಯಲರಿಯೆನು ದುರುಳನೆರಡೆಂ
ಟರಿಯನದರೊಳಗೊಬ್ಬನುದರಕೆ
ನೆರಹಲಾರೆನು ಕೂಳನೆಂದಳು ಕುಂತಿ ನಸುನಗುತ ॥15॥
೦೧೬ ಸಾಕಲಾರೆನು ಮಗನನಾತನ ...{Loading}...
ಸಾಕಲಾರೆನು ಮಗನನಾತನ
ನೂಕುವೆನು ನಿಮ್ಮಸುರನೂಟಕೆ
ಸಾಕು ತನಗುಳಿದವರೆನಲು ದ್ವಿಜನದಕೆ ಬೆರಗಾಗಿ
ಸಾಕಲಾರದೆ ಮಗನನುರಿಯಲಿ
ನೂಕಿದವರುಂಟೇ ಮಹಾಸತಿ
ಯಾಕೆವಾಳತನಕ್ಕೆ ನಮಿಸಿದೆನೆನುತ ಕೈಮುಗಿದ ॥16॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಆ ಮಗನನ್ನು ಸಾಕಲಾರೆನು. ಆತನನ್ನು ನಿಮ್ಮ ರಾಕ್ಷಸನ ಊಟಕ್ಕೆ ನೂಕುತ್ತೇನೆ. ನನಗೆ ಉಳಿದ ನಾಲ್ವರು ಸಾಕು” ಎಂದಳು. ಅದನ್ನು ಕೇಳಿ ಆ ಬ್ರಾಹ್ಮಣನು ಆಶ್ಚರ್ಯಪಟ್ಟು. “ಸಾಕಲಾರದೆ ಮಗನನ್ನು ಬೆಂಕಿಯಲ್ಲಿ ನೂಕಿದವರು ಯಾರಾದರೂ ಉಂಟೆ ? ಮಹಾಸತೀ ! ನಿನ್ನ ದಿಟ್ಟತನಕ್ಕೆ ನಮಿಸಿದೆನು” ಎನುತ್ತ ಕೈಮುಗಿದನು.
ಪದಾರ್ಥ (ಕ.ಗ.ಪ)
ಆಕೆವಾಳತನ-ದಿಟ್ಟತನ
ಮೂಲ ...{Loading}...
ಸಾಕಲಾರೆನು ಮಗನನಾತನ
ನೂಕುವೆನು ನಿಮ್ಮಸುರನೂಟಕೆ
ಸಾಕು ತನಗುಳಿದವರೆನಲು ದ್ವಿಜನದಕೆ ಬೆರಗಾಗಿ
ಸಾಕಲಾರದೆ ಮಗನನುರಿಯಲಿ
ನೂಕಿದವರುಂಟೇ ಮಹಾಸತಿ
ಯಾಕೆವಾಳತನಕ್ಕೆ ನಮಿಸಿದೆನೆನುತ ಕೈಮುಗಿದ ॥16॥
೦೧೭ ಮರುಳಲಾ ಬ್ರಾಹ್ಮಣ ...{Loading}...
ಮರುಳಲಾ ಬ್ರಾಹ್ಮಣ ವೃಥಾ ವಿ
ಸ್ತರಣ ವಾಕ್ಯವೆ ತನ್ನ ನುಡಿ ಸಂ
ವರಿಸು ಬಂಡಿಯ ನಡೆಸು ಭಕ್ಷ್ಯವ ಸೂಪದಂಶಕವ
ತರಿಸು ತುಪ್ಪದ ಕೊಡನನೊದವಿಸು
ಹರವಿಗಳ ಪಾಲ್ಮೊಸರನೆನೆ ಭೂ
ಸುರನು ಕುಂತಿಗೆ ಕೈಯ್ಯ ಮುಗಿದನು ತಾಯೆ ಬೇಡೆನುತ ॥17॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಬ್ರಾಹ್ಮಣಾ ! ಹುಚ್ಚನಯ್ಯಾ ನೀನು ! ಸುಮ್ಮನೆ ವಿವರಣೆಯ ಮಾತೇ ನನ್ನದು ? ಬಂಡಿಯನ್ನು ಸಿದ್ಧಪಡಿಸು, ಭಕ್ಷ್ಯ, ಸಾರು, ಕರಿದ ಪದಾರ್ಥಗಳನ್ನೂ ಮಾಡಿಸು. ತುಪ್ಪದ ಕೊಡವನ್ನು ತರಿಸು, ಹಾಲು ಮೊಸರುಗಳನ್ನು ತುಂಬಿದ ಪಾತ್ರೆಗಳನ್ನು ಒದಗಿಸು” ಎಂದು ಮತ್ತೆ ಒತ್ತಾಯ ಮಾಡಿ ನುಡಿದ ಕುಂತಿಗೆ “ಬೇಡಮ್ಮಾ ಬೇಡ” ಎನುತ್ತ ಬ್ರಾಹ್ಮಣನು ಕೈಮುಗಿದನು.
ಪದಾರ್ಥ (ಕ.ಗ.ಪ)
ಮರುಳ-ಹುಚ್ಚ, ವೃಥಾ-ಸುಮ್ಮನೆ, ವಿಸ್ತರಣ-ವಿವರಣೆ, ಸಂವರಿಸು-ಸಿದ್ಧಪಡಿಸು, ಸೂಪ-ಸಾರು, ದಂಶಕ-ಕಚ್ಚಿ ತಿನ್ನುವ ಪದಾರ್ಥ, ಹರವಿ-ನೀರು ತುಂಬುವ ಮಣ್ಣಿನ ಪಾತ್ರೆ, ಒದವಿಸು-ಒದಗಿಸು
ಮೂಲ ...{Loading}...
ಮರುಳಲಾ ಬ್ರಾಹ್ಮಣ ವೃಥಾ ವಿ
ಸ್ತರಣ ವಾಕ್ಯವೆ ತನ್ನ ನುಡಿ ಸಂ
ವರಿಸು ಬಂಡಿಯ ನಡೆಸು ಭಕ್ಷ್ಯವ ಸೂಪದಂಶಕವ
ತರಿಸು ತುಪ್ಪದ ಕೊಡನನೊದವಿಸು
ಹರವಿಗಳ ಪಾಲ್ಮೊಸರನೆನೆ ಭೂ
ಸುರನು ಕುಂತಿಗೆ ಕೈಯ್ಯ ಮುಗಿದನು ತಾಯೆ ಬೇಡೆನುತ ॥17॥
೦೧೮ ಎರವು ಮುಯಿಮುಟ್ಟುಣ್ಟು ...{Loading}...
ಎರವು ಮುಯಿಮುಟ್ಟುಂಟು ವಸ್ತೂ
ತ್ಕರದೊಳಗೆ ಭಾವಿಸಲು ಮಕ್ಕಳ
ನೆರೆವ ಕೊಟ್ಟವರುಂಟೆ ಮಾರಿಯ ನಾಲಿಗೆಯ ಸವಿಗೆ
ನೆರವಿ ನಗದೇ ನಮ್ಮನಿಹಪರ
ವೆರಡರಲಿ ಕೇಡಹುದು ಕಷ್ಟವು
ಗರುವೆಯಹುದೌ ತಾಯಿ ನೀ ದಿಟ ಮನುಜೆಯಲ್ಲೆಂದ ॥18॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಪದಾರ್ಥಗಳ ರಾಶಿಯಲ್ಲಿ ಬೇಡಿ ಪಡೆಯುವುದುಂಟು, ಇಲ್ಲವೆ ತೆಗೆದುಕೊಂಡ ಪದಾರ್ಥಕ್ಕೆ ಪ್ರತಿಯಾಗಿ ಕೊಡುವುದುಂಟು, ಯೋಚಿಸಿದರೆ, ಮಕ್ಕಳನ್ನು ಕಡವಾಗಿ ಕೊಟ್ಟವರುಂಟೆ ? ಅದರಲ್ಲೂ ಮೃತ್ಯುವಿನ ನಾಲಿಗೆಯ ರುಚಿಗಾಗಿ ! ನಮ್ಮನ್ನು ನೋಡಿ ಜನಸಂದಣಿ ನಗುವುದಿಲ್ಲವೇ ? ಕೇಳು, ಇಹ ಪರವೆರಡರಲ್ಲೂ ಕಷ್ಟವಾಗುವುದು. ತಾಯಿ ನೀನು ಹಿರಿಯಳು, ಹೌದು, ನಿಜವಾಗಿಯು ಮನುಷ್ಯಳಲ್ಲ !” ಎಂದನು.
ಪದಾರ್ಥ (ಕ.ಗ.ಪ)
ಎರವು-ಬೇಡಿಪಡೆದಿದ್ದು, ಸಾಲ- ಕq, ಮುಯಿಮುಟ್ಟು-ತೆಗೆದುಕೊಂಡದ್ದಕ್ಕೆ, ಪ್ರತಿಯಾಗಿ ಕೊಡುವುದು. ಭಾವಿಸು-ಯೋಚಿಸು, ವಸ್ತೂತ್ಕರ-ಪದಾರ್ಥಗಳ ರಾಶಿ, ನೆರವಿ-ಜನಸಂದಣಿ, ಗರುವೆ-ಹಿರಿಯಳು, ಮನುಜೆ-ಮನುಷ್ಯಳು.
ಮೂಲ ...{Loading}...
ಎರವು ಮುಯಿಮುಟ್ಟುಂಟು ವಸ್ತೂ
ತ್ಕರದೊಳಗೆ ಭಾವಿಸಲು ಮಕ್ಕಳ
ನೆರೆವ ಕೊಟ್ಟವರುಂಟೆ ಮಾರಿಯ ನಾಲಿಗೆಯ ಸವಿಗೆ
ನೆರವಿ ನಗದೇ ನಮ್ಮನಿಹಪರ
ವೆರಡರಲಿ ಕೇಡಹುದು ಕಷ್ಟವು
ಗರುವೆಯಹುದೌ ತಾಯಿ ನೀ ದಿಟ ಮನುಜೆಯಲ್ಲೆಂದ ॥18॥
೦೧೯ ಏನನಿತ್ತು ದಧೀಚಿ ...{Loading}...
ಏನನಿತ್ತು ದಧೀಚಿ ಲೋಗರ
ಹಾನಿಯನು ಕಾಯಿದನು ಶಿಬಿ ತಾ
ನೇನನಿತ್ತನು ಕೇಳಿದೈ ಜೀಮೂತವಾಹನನು
ಏನ ಮಾಡಿದನೆಂದು ನೀನಿದ
ನೇನುವನು ಕೇಳ್ದರಿಯಲಾ ಮ
ತ್ಸೂನುವನು ನಿನ್ನವಸರಕೆ ಕೊಳ್ಳೆಂದಳಾ ಕುಂತಿ ॥19॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಏನನ್ನು ಕೊಟ್ಟು ದಧೀಚಿಯು ಲೋಕದ ಜನರ ತೊಂದರೆಯನ್ನು ಕಾಪಾಡಿದನು ? ಶಿಬಿ ಚಕ್ರವರ್ತಿಯು ತಾನೇನು ಕೊಟ್ಟನು ? ಜೀಮೂತವಾಹನನು ಏನು ಮಾಡಿದನೆಂದು ಕೇಳಿ ಬಲ್ಲೆಯಾ ? ನೀನು ಇದು ಯಾವುದನ್ನೂ ಕೇಳಿ ತಿಳಿದಿಲ್ಲವೆಂದು ಕಾಣುತ್ತದೆ. ನನ್ನ ಮಗನನ್ನು ನಿನ್ನ ಸಂದರ್ಭಕ್ಕೆ ತೆಗೆದುಕೊ ಎಂದು ಕುಂತಿ ಹೇಳಿದಳು.
ಪದಾರ್ಥ (ಕ.ಗ.ಪ)
ಲೋಗರು-ಲೋಕದ ಜನರು, ಮತ್-ನನ್ನ, ಸೂನು-ಮಗ, ಅವಸರ-ಸಂದರ್ಭ
ಟಿಪ್ಪನೀ (ಕ.ಗ.ಪ)
ದಧೀಚಿ-ಸ್ವಾಯಂಭುವ ಮನ್ವಂತರದಲ್ಲಿ, ಬ್ರಹ್ಮಮಾನಸ ಪುತ್ರ ಅಥರ್ವಣ ಮಹರ್ಷಿಯಿಂದ ಕರ್ದಮ ಪುತ್ರಿಯಾದ ಶಾಂತಿಯೆಂಬುವಳಲ್ಲಿ ಜನಿಸಿದ ಮೂವರು ಪುತ್ರರಲ್ಲಿ ಒಬ್ಬನು. ಧೃತವ್ರತ, ಅಥರ್ವಶಿರರೆಂಬುವರು ಈತನ ಅಣ್ಣ ತಮ್ಮಂದಿರು. ದೇವತೆಗಳು ಒಮ್ಮೆ ಈತನಲ್ಲಿಗೆ ಬಂದು ತಮ್ಮ ಅಸ್ತ್ರಗಳನ್ನು ನ್ಯಾಸವಾಗಿಟ್ಟು ಹೋದರು. ಕಾಲಕ್ರಮದಲ್ಲಿ ಅವು ತುಕ್ಕು ಹಿಡಿಯ ಬಂದವು. ಎಷ್ಟು ಕಾಲವಾದರೂ ದೇವತೆಗಳು ಅವುಗಳನ್ನು ಕೊಂಡು ಹೋಗಲಿಲ್ಲ. ಈ ಕಾರಣದಿಂದ ದಧೀಚಿ ಆ ಅಸ್ತ್ರಗಳನ್ನೆಲ್ಲಾ ಜಲದಲ್ಲಿ ಅಭಿಮಂತ್ರಿಸಿ ಪಾನಮಾಡಿಬಿಟ್ಟನು. ಕೆಲಕಾಲದ ಮೇಲೆ ದೇವತೆಗಳು ಬಂದು ಅಸ್ತ್ರಗಳನ್ನು ಕೇಳಿದರು. ದಧೀಚಿ ನಡೆದ ಸಮಾಚಾರವನ್ನು ಹೇಳಿದ. ದೇವತೆಗಳು ನಿರ್ಬಂಧಪಡಿಸ ತೊಡಗಿದರು. ಆಗ ದಧೀಚಿ “ನಿಮ್ಮ ಅಸ್ತ್ರಗಳೆಲ್ಲವೂ ನನ್ನ ಬೆನ್ನ ಮೂಳೆಯಲ್ಲಿ ಬೆರೆತಿವೆ. ನಾನು ಯೋಗ ಬಲದಿಂದ ದೇಹತ್ಯಾಗ ಮಾಡುತ್ತೇನೆ. ನೀವು ನನ್ನ ಬೆನ್ನು ಮೂಳೆಗಳನ್ನು ತೆಗೆದುಕೊಂಡು ನಿಮಗೆ ಬೇಕಾದ ಅಸ್ತ್ರಗಳನ್ನು ಮಾಡಿಸಿಕೊಳ್ಳಿರಿ” ಎಂದು ಹೇಳಿ ದೇಹ ತ್ಯಾಗ ಮಾಡಿದನು. ದೇವತೆಗಳು ದಧೀಚಿಯ ಮೂಳೆಗಳನ್ನು ಸಂಗ್ರಹಿಸಿ, ವಿಶ್ವಕರ್ಮನ ಮೂಲಕ ತಮತಮಗೆ ಬೇಕಾದ ಆಯುಧಗಳನ್ನು ಮಾಡಿಸಿಕೊಂಡರು.
ಶಿಬಿ : ಕಾಶೀ ದೇಶದ ಅರಸನಾದ ವೃಷದರ್ಭರಾಜನ ಮಗ. ಆದ್ದರಿಂದ ವೃಷಾದರ್ಭಿ ಎಂಬುದೂ ಈತನ ಹೆಸರು. ಮರೆ ಹೊಕ್ಕವರನ್ನು ಕಾಪಾಡುವುದು ಈತನ ಮುಖ್ಯ ವ್ರತ. ಒಮ್ಮೆ ಇಂದ್ರನೂ, ಅಗ್ನಿಯೂ ಗಿಡಗ, ಪಾರಿವಾಳಗಳ ರೂಪವನ್ನು ತಳೆದು ಈತನನ್ನು ಪರೀಕ್ಷಿಸುವ ಸಲುವಾಗಿ ಬಂದರು. ಪಾರಿವಾಳ ಮೊದಲು ರಾಜನನ್ನು ಮರೆ ಹೊಕ್ಕಿತು. ಗಿಡಗ ತನ್ನ ಆಹಾರವನ್ನು ತನಗೆ ಒಪ್ಪಿಸಬೇಕೆಂದು ಕೇಳಿತು. ರಾಜ ಪಾರಿವಾಳದ ತೂಕ ತನ್ನ ಶರೀರದ ಮಾಂಸವನ್ನು ಕಡಿದು ತಕ್ಕಡಿಯಲ್ಲಿಟ್ಟ ಆಗ ಇವನ ಶರಣಾಗತ ವ್ರತಕ್ಕೆ ಮೆಚ್ಚಿದ ಇಂದ್ರಾಗ್ನಿಗಳು ಇವನಿಗೆ ಮೈದೋರಿ ಅನೇಕ ವರಗಳನ್ನು ಕೊಟ್ಟರು.
ಜೀಮೂತವಾಹನ - ಒಬ್ಬ ವಿದ್ಯಾಧರ. ಜೀಮೂತ ಕೇತುವಿನ ಮಗ. ವಾಸುಕಿ (ಸರ್ಪರಾಜ) ಹಾಗೂ ಗರುಡನಿಗೂ ಆದ ಒಪ್ಪಂದದಂತೆ ಪ್ರತಿದಿನವೂ ಒಬ್ಬೊಬ್ಬನಾಗನನ್ನು ಗರುಡನಿಗೆ ಆಹಾರವಾಗಿ ಒಪ್ಪಿಸಬೇಕಾಗಿತ್ತು. ಆ ಪ್ರಕಾರ ಶಂಖಚೂಡ ಎಂಬ ನಾಗನ ಸರದಿ ಬಂತು. ಶಂಖಚೂಡನ ತಾಯಿ ಮುದುಕಿಯ ದುಃಖ ನೋಡಲಾರದೆ, ಶಂಖಚೂಡನನ್ನು ಉಳಿಸುವ ಸಲುವಾಗಿ ಅವನಿಗೆ ಪ್ರತಿಯಾಗಿ ಜೀಮೂತವಾಹನ ಗರುಡನಿಗೆ ಗ್ರಾಸವಾಗಿ ಸಮರ್ಪಿಸಿಕೊಂಡು ತ್ಯಾಗ ಮಾಡಿದನು.
ಮೂಲ ...{Loading}...
ಏನನಿತ್ತು ದಧೀಚಿ ಲೋಗರ
ಹಾನಿಯನು ಕಾಯಿದನು ಶಿಬಿ ತಾ
ನೇನನಿತ್ತನು ಕೇಳಿದೈ ಜೀಮೂತವಾಹನನು
ಏನ ಮಾಡಿದನೆಂದು ನೀನಿದ
ನೇನುವನು ಕೇಳ್ದರಿಯಲಾ ಮ
ತ್ಸೂನುವನು ನಿನ್ನವಸರಕೆ ಕೊಳ್ಳೆಂದಳಾ ಕುಂತಿ ॥19॥
೦೨೦ ಆವನರ್ಥ ಪರಾರ್ಥದಲಿ ...{Loading}...
ಆವನರ್ಥ ಪರಾರ್ಥದಲಿ ಸಂ
ಜೀವನಿಯನೈದಿತು ಪರಾರ್ಥದೊ
ಳಾವನಸು ನಿರ್ವಾಣಮಾದುದು ಲೋಕ ಮೂರರಲಿ
ಆ ವಿರಿಂಚಿ ಪುರಂದರಾದಿಯ
ದೇವತತಿಗಿವರಿಬ್ಬರೇ ಸಂ
ಭಾವನೀಯರು ಕೇಳು ಭೂಸುರಯೆಂದಳಾ ಕುಂತಿ ॥20॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಯಾವನ ಸಂಪತ್ತು ಪರಹಿತದಲ್ಲಿ ಸತ್ತವರನ್ನು ಬದುಕಿಸುವ ಮೂಲಿಕೆಯಾಗುತ್ತದೋ, ಯಾರ ಪರಹಿತ ಕಾರ್ಯದಿಂದ ಒಬ್ಬನ ಪ್ರಾಣ ಮುಕ್ತಿಯನ್ನು ಪಡೆಯುತ್ತದೋ ಅವರಿಬ್ಬರೇ ಮೂರು ಲೋಕಗಳಲ್ಲಿ ಆ ಬ್ರಹ್ಮ, ಇಂದ್ರಾದಿ ದೇವತೆಗಳ ಸಮೂಹಕ್ಕೆ ಯೋಗ್ಯರಾದವರು”. ಎಂದು ಮುಂತಾದ ನೀತಿ ವಚನಗಳಿಂದ ಆ ಭೂಸುರನಿಗೆ ಮನದಟ್ಟು ಮಾಡಿದಳು.
ಪದಾರ್ಥ (ಕ.ಗ.ಪ)
ಅರ್ಥ-ಸಂಪತ್ತು, ಪರಾರ್ಥ-ಪರಹಿತ, ನಿರ್ವಾಣ-ಮುಕ್ತಿ, ಸಂಭಾವನೀಯರು-ಯೋಗ್ಯರಾದವರು
ಮೂಲ ...{Loading}...
ಆವನರ್ಥ ಪರಾರ್ಥದಲಿ ಸಂ
ಜೀವನಿಯನೈದಿತು ಪರಾರ್ಥದೊ
ಳಾವನಸು ನಿರ್ವಾಣಮಾದುದು ಲೋಕ ಮೂರರಲಿ
ಆ ವಿರಿಂಚಿ ಪುರಂದರಾದಿಯ
ದೇವತತಿಗಿವರಿಬ್ಬರೇ ಸಂ
ಭಾವನೀಯರು ಕೇಳು ಭೂಸುರಯೆಂದಳಾ ಕುಂತಿ ॥20॥
೦೨೧ ಬಲುಹಿನಲಿ ಭೂಸುರನ ...{Loading}...
ಬಲುಹಿನಲಿ ಭೂಸುರನ ಚಿತ್ತವ
ತಿಳುಹಿ ಬಂದಳು ಮನೆಗೆ ಭೀಮನ
ಕೆಲಕೆ ಕರೆದಳು ಹೇಳಿದಳು ಹೇರಾಳದೌತಣವ
ಉಲಿದು ಮುದದಲಿ ಭೀಮ ಬಾಹ
ಪ್ಪಳಿಸಿದನು ಯಮನಂದನಾದಿಗ
ಳಳಲಿ ನುಡಿದರು ದೈತ್ಯಜಯ ಸಂಶಯದ ಭೇದದಲಿ ॥21॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕುಂತಿಯು ಒತ್ತಾಯದಿಂದ ಬ್ರಾಹ್ಮಣನಿಗೆ ಮನದಟ್ಟು ಮಾಡಿ ತಿಳಿಸಿ ಮನೆಗೆ ಬಂದಳು. ಭೀಮನನ್ನು ಪಕ್ಕಕ್ಕೆ ಕರೆದಳು. ಅವನಿಗೆ ಧಾರಾಳವಾದ ಔತಣದ ಬಗ್ಗೆ ಹೇಳಿದಳು. ಅಬ್ಬರಿಸಿ ಸಂತೋಷದಲ್ಲಿ ಭೀಮನು ಭುಜತಟ್ಟಿದನು. ಯಮನಂದನಾದಿಗಳು ರಕ್ಕಸನ ಜಯಿಸುವ ವಿಷಯದಲ್ಲಿ ಸಂಶಯದ ಅಭಿಪ್ರಾಯವನ್ನು ವ್ಯಕ್ತಪಡಿಸಿ ದುಃಖಿಸಿ ನುಡಿದರು.
ಪದಾರ್ಥ (ಕ.ಗ.ಪ)
ಕೆಲ-ಪಕ್ಕ, ಹೇರಾಳ-ಧಾರಾಳ, ಉಲಿದು-ಧ್ವನಿಮಾಡಿ, ಬಾಹಪ್ಪಳಿಸು-ಭುಜತಟ್ಟು, ಅಳಲಿ-ದುಃಖಿಸಿ
ಮೂಲ ...{Loading}...
ಬಲುಹಿನಲಿ ಭೂಸುರನ ಚಿತ್ತವ
ತಿಳುಹಿ ಬಂದಳು ಮನೆಗೆ ಭೀಮನ
ಕೆಲಕೆ ಕರೆದಳು ಹೇಳಿದಳು ಹೇರಾಳದೌತಣವ
ಉಲಿದು ಮುದದಲಿ ಭೀಮ ಬಾಹ
ಪ್ಪಳಿಸಿದನು ಯಮನಂದನಾದಿಗ
ಳಳಲಿ ನುಡಿದರು ದೈತ್ಯಜಯ ಸಂಶಯದ ಭೇದದಲಿ ॥21॥
೦೨೨ ಮರುಳುಗಳು ನೀವೆನ್ದವರ ...{Loading}...
ಮರುಳುಗಳು ನೀವೆಂದವರ ಚ
ಪ್ಪರಿಸಿದನು ಕಲಿಭೀಮನಾ ನಡು
ವಿರುಳು ತೊಡಗಿತು ವಿಪ್ರ ಭವನದ ಪಾಕಮಯ ರಭಸ
ಹೊರೆದಳೆನ್ನನು ತಾಯಿ ಕುಂತಿಯ
ಹರಸುವೆನು ಪಾರಣೆಯ ಹೊತ್ತಿನೊ
ಳರಸು ನಾಳಿನೊಳಾನೆನುತ ಹಿಗ್ಗಿದನು ಕಲಿಭೀಮ ॥22॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕಲಿಭೀಮನು ಧರ್ಮನಂದನಾದಿಗಳನ್ನು “ಮರುಳುಗಳು ನೀವು” ಎಂದು ಗದರಿಸಿ ನುಡಿದನು. ಆ ಮಧ್ಯರಾತ್ರಿಯಲ್ಲೇ ಬ್ರಾಹ್ಮಣನ ಮನೆಯಲ್ಲಿ ಅಡುಗೆಯ ಸಿದ್ಧತೆ ಭರದಿಂದ ಪ್ರಾರಂಭವಾಯ್ತು. “ನಮ್ಮ ತಾಯಿ ನನ್ನನ್ನು ಕಾಪಾಡಿದಳು. ಪಾರಣೆಯ ಹೊತ್ತಿನಲ್ಲಿ ಅವಳನ್ನು ಹರಸುವೆನು. ನಾಳೆ ನಾನು ರಾಜನು” ಎನುತ್ತ ಕಲಿಭೀಮ ಸಂತೋಷಿಸಿದನು.
ಪದಾರ್ಥ (ಕ.ಗ.ಪ)
ರಭಸ-ಭರ, ಹೊರೆ-ಕಾಪಾಡು, ಹಿಗ್ಗು-ಸಂತೋಷಿಸು
ಮೂಲ ...{Loading}...
ಮರುಳುಗಳು ನೀವೆಂದವರ ಚ
ಪ್ಪರಿಸಿದನು ಕಲಿಭೀಮನಾ ನಡು
ವಿರುಳು ತೊಡಗಿತು ವಿಪ್ರ ಭವನದ ಪಾಕಮಯ ರಭಸ
ಹೊರೆದಳೆನ್ನನು ತಾಯಿ ಕುಂತಿಯ
ಹರಸುವೆನು ಪಾರಣೆಯ ಹೊತ್ತಿನೊ
ಳರಸು ನಾಳಿನೊಳಾನೆನುತ ಹಿಗ್ಗಿದನು ಕಲಿಭೀಮ ॥22॥
೦೨೩ ಪರಿಪರಿಯ ಬಹುಭಕ್ಷ್ಯ ...{Loading}...
ಪರಿಪರಿಯ ಬಹುಭಕ್ಷ್ಯ ಪಾಕದ
ಪರಿಮಳದ ಶಾಕಾದಿಗಳ ವೊ
ಗ್ಗರಣೆಗಳ ಸೌರಭಕೆ ತಿಳಿದುದು ನಿದ್ರೆ ಪವನಜನ
ತರಣಿ ಸುಳಿದನು ಪೂರ್ವ ಶೈಲದ
ಶಿರದ ಬಳಿಯಲಿ ಭೀಮ ಕುಂತಿಯ
ಕರೆದು ಕಳುಹಿದನಾ ಮಹೀಸುರಗೃಹಕೆ ವಹಿಲದಲಿ ॥23॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ವಿಧವಿಧದ ಬಹುಭಕ್ಷ್ಯದ ಅಡುಗೆಯ, ಪರಿಮಳ ಬೀರುವ ಹಲವು ಶಾಕಾದಿಗಳಿಗೆ ಹಾಕುವ ಒಗ್ಗರಣೆಗಳ ಒಳ್ಳೆಯ ಸುವಾಸನೆ ಭೀಮಸೇನನನ್ನು ನಿದ್ರೆಯಿಂದ ಎಚ್ಚರಿಸಿತು. ಪೂರ್ವದಲ್ಲಿನ ಬೆಟ್ಟದ ತುದಿಯಲ್ಲಿ ಸೂರ್ಯನು ಸುಳಿದನು. ಕುಂತಿಯನ್ನು ಭೀಮನು ಕರೆದು ಬ್ರಾಹ್ಮಣನ ಮನೆಗೆ ಬೇಗನೆ ಕಳುಹಿಸಿದನು.
ಪದಾರ್ಥ (ಕ.ಗ.ಪ)
ಪರಿಪರಿ-ವಿಧವಿಧ, ಪಾಕ-ಅಡುಗೆ, ಸೌರಭ-ಸುವಾಸನೆ, ತಿಳಿದುದು-ಎಚ್ಚರವಾದುದು
ಮೂಲ ...{Loading}...
ಪರಿಪರಿಯ ಬಹುಭಕ್ಷ್ಯ ಪಾಕದ
ಪರಿಮಳದ ಶಾಕಾದಿಗಳ ವೊ
ಗ್ಗರಣೆಗಳ ಸೌರಭಕೆ ತಿಳಿದುದು ನಿದ್ರೆ ಪವನಜನ
ತರಣಿ ಸುಳಿದನು ಪೂರ್ವ ಶೈಲದ
ಶಿರದ ಬಳಿಯಲಿ ಭೀಮ ಕುಂತಿಯ
ಕರೆದು ಕಳುಹಿದನಾ ಮಹೀಸುರಗೃಹಕೆ ವಹಿಲದಲಿ ॥23॥
೦೨೪ ಏನು ಬನ್ದಿರಿ ...{Loading}...
ಏನು ಬಂದಿರಿ ತಾಯೆ ಚಾಪಳ
ವೇನೆನಲು ತೆಗೆ ಹೂಡು ಬಂಡಿಯ
ನೇನು ಜಂಜಡ ಬೇಡ ಭಕ್ಷ್ಯವ ಹಿಡಿಸು ಕುನಿಕಿಲಲಿ
ಭಾನುವುದಿಸಿದನೆನಲು ಘನ ಸು
ಮ್ಮಾನದಲಿ ಸಾಧನಸಮಗ್ರವ
ಸೂನುಸಹಿತಡಕಿದನು ಭಾರಿಯ ಬಂಡಿ ಜವ ಜಡಿಯೆ ॥24॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕುಂತಿ ಬಂದದ್ದನ್ನು ಕಂಡು ಆ ಬ್ರಾಹ್ಮಣನು “ಏನು ಬಂದಿರಿ ? ತಾಯೇ ? ಏನು ಚಂಚಲತೆಯೆ ?” ಎಂದು ಕೇಳಲು, ಕುಂತಿಯು “ತೆಗೆ, ಬಂಡಿಯನ್ನು ಕಟ್ಟಿಸು, ಯಾವ ಯೋಚನೆಯೂ ಬೇಡ, ಚೀಲಗಳಲ್ಲಿ ಭಕ್ಷ್ಯವನ್ನು ತುಂಬು. ಆಗಲೇ ಸೂರ್ಯ ಹುಟ್ಟಿದನು” ಎಂದು ಎಚ್ಚರಿಸಲು, ಬಹಳ ಸಂತೋಷದಿಂದ ಎಲ್ಲ ಸಾಧನಗಳನ್ನು ಮಗನೊಟ್ಟಿಗೆ, ಭಾರಿಯ ಬಂಡಿಯಲ್ಲಿ ಅದರ ವೇಗ ತಗ್ಗುವಷ್ಟು ತಂದು ತಂದು ಒಟ್ಟಿದನು.
ಪದಾರ್ಥ (ಕ.ಗ.ಪ)
ಚಾಪಳ-ಚಂಚಲತೆ, ಕುನಿಕಿಲಲಿ-ಚೀಲಗಳಲ್ಲಿ, ಅಡಕು-ಒಟ್ಟು
ಸೂನು -ಮಗ
ಮೂಲ ...{Loading}...
ಏನು ಬಂದಿರಿ ತಾಯೆ ಚಾಪಳ
ವೇನೆನಲು ತೆಗೆ ಹೂಡು ಬಂಡಿಯ
ನೇನು ಜಂಜಡ ಬೇಡ ಭಕ್ಷ್ಯವ ಹಿಡಿಸು ಕುನಿಕಿಲಲಿ
ಭಾನುವುದಿಸಿದನೆನಲು ಘನ ಸು
ಮ್ಮಾನದಲಿ ಸಾಧನಸಮಗ್ರವ
ಸೂನುಸಹಿತಡಕಿದನು ಭಾರಿಯ ಬಂಡಿ ಜವ ಜಡಿಯೆ ॥24॥
೦೨೫ ನಳನಳಿಪ ಬಹುವಿಧದ ...{Loading}...
ನಳನಳಿಪ ಬಹುವಿಧದ ಭಕ್ಷ್ಯಾ
ವಳಿಯ ಹೆಡಗೆಗಳೋರಣಿಸಿ ಮಂ
ಡಳಿಸಿ ಕೂಡಿದ ಹಾಲು ತುಪ್ಪದ ಹಲವು ಹರವಿಗಳ
ಬಳಸಿ ಮುಚ್ಚಿದ ವಿವಿಧ ಶಾಕಾ
ವಳಿಯ ಬೋನದ ಬಿಗಿದ ಕುನಿಕಿಲ
ಕಳವೆಯಕ್ಕಿಯ ಕೂಳ ರಾಶಿಯ ಬಂಡಿ ಜೋಡಿಸಿತು ॥25॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಶೋಭಿಸುವ ಬಹು ವಿಧ ಭಕ್ಷ್ಯಗಳ ಸಮೂಹದ ಬುಟ್ಟಿಗಳು ಸಾಲಾಗಿ ವೃತ್ತಾಕಾರವಾಗಿ ಕೂಡಿದ್ದವು. ಹಾಲು ತುಪ್ಪಗಳು ತುಂಬಿದ ಹಲವು ಮಣ್ಣಿನ ಪಾತ್ರೆಗಳು, ಆ ಪಾತ್ರೆಗಳ ಸುತ್ತ ಮುಚ್ಚಳ ಹಾಕಿ ಮುಚ್ಚಿದ ವಿವಿಧ ಶಾಕಾವಳಿಯ ಆಹಾರದ ಪಾತ್ರೆಗಳು, ಚೀಲಗಳಲ್ಲಿ ತುಂಬಿದ ಅನ್ನದ ರಾಶಿ - ಇವುಗಳಿಂದ ತುಂಬಿ ಬಂಡಿ ಸಿದ್ಧವಾಗಿ ನಿಂತಿತು.
ಪದಾರ್ಥ (ಕ.ಗ.ಪ)
ನಳನಳಿಪ-ಶೋಭಿಸು, ಹೆಡಗೆ-ಬುಟ್ಟಿ, ಓರಣಿಸಿ-ಸಾಲಾಗಿ, ಮಂಡಳಿಸಿ-ವೃತ್ತಾಕಾರವಾಗಿ, ಹರವಿ-ಮಣ್ಣಿನ ಪಾತ್ರೆಗಳು, ಬೋನ-ಆಹಾರ, ಕುನಿಕಿಲ-ಚೀಲ, ಕಳವೆ-ಬತ್ತ
ಪಾಠಾನ್ತರ (ಕ.ಗ.ಪ)
ಹೆಡೆಗೆ-ಹೆಡಗೆ
ಮೂಲ ...{Loading}...
ನಳನಳಿಪ ಬಹುವಿಧದ ಭಕ್ಷ್ಯಾ
ವಳಿಯ ಹೆಡಗೆಗಳೋರಣಿಸಿ ಮಂ
ಡಳಿಸಿ ಕೂಡಿದ ಹಾಲು ತುಪ್ಪದ ಹಲವು ಹರವಿಗಳ
ಬಳಸಿ ಮುಚ್ಚಿದ ವಿವಿಧ ಶಾಕಾ
ವಳಿಯ ಬೋನದ ಬಿಗಿದ ಕುನಿಕಿಲ
ಕಳವೆಯಕ್ಕಿಯ ಕೂಳ ರಾಶಿಯ ಬಂಡಿ ಜೋಡಿಸಿತು ॥25॥
೦೨೬ ಮರಳಿ ಬನ್ದಳು ...{Loading}...
ಮರಳಿ ಬಂದಳು ಕುಂತಿ ಭೀಮನ
ಕರೆದಳೇಳೈ ಪಾರಣೆಗೆ ಕಾ
ತರಿಸದಿರು ಖಳನೊಡನೆ ಸದೆವುದು ಸತ್ವದನುವರಿದು
ಬರವ ಬರಿದೇ ಬೀಯ ಮಾಡದಿ
ರುರುವಣೆಯನರಿದಾನುವುದು ಸಂ
ಹರಿಸು ದೈತ್ಯನನೆಂದು ತಾಯ್ ಹರಸಿದಳು ನಂದನನ ॥26॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕುಂತಿಯು ಮನೆಗೆ ಹಿಂದಿರುಗಿ ಬಂದಳು. ಭೀಮನನ್ನು ಕರೆದಳು. “ಭೀಮಾ, ಎದ್ದೇಳು. ಪಾರಣೆಗೆ ತವಕ ಪಡಬೇಡ. ದುಷ್ಟನೊಡನೆ ಅವನ ಸತ್ವದ ರೀತಿಯನ್ನು ತಿಳಿದುಕೊಂಡು ಅವನನ್ನು ನಾಶಮಾಡುವುದು. ಬಂದಿರುವ ಸಂದರ್ಭವನ್ನು ವ್ಯರ್ಥವಾಗಿ ಕಳೆದು ಬಿಡಬೇಡ. ಅವನ ರಭಸವನ್ನು ತಿಳಿದು ಎದುರಿಸುವುದು. ದೈತ್ಯನನ್ನು ಸಂಹರಿಸು” ಎಂದು ಮಗನನ್ನು ಹರಸಿದಳು.
ಪದಾರ್ಥ (ಕ.ಗ.ಪ)
ಕಾತರಿಸದಿರು-ತವಕ ಪಡಬೇಡ, ಉರುವಣೆ-ರಭಸ
ಮೂಲ ...{Loading}...
ಮರಳಿ ಬಂದಳು ಕುಂತಿ ಭೀಮನ
ಕರೆದಳೇಳೈ ಪಾರಣೆಗೆ ಕಾ
ತರಿಸದಿರು ಖಳನೊಡನೆ ಸದೆವುದು ಸತ್ವದನುವರಿದು
ಬರವ ಬರಿದೇ ಬೀಯ ಮಾಡದಿ
ರುರುವಣೆಯನರಿದಾನುವುದು ಸಂ
ಹರಿಸು ದೈತ್ಯನನೆಂದು ತಾಯ್ ಹರಸಿದಳು ನಂದನನ ॥26॥
೦೨೭ ಬೆರಳ ದರ್ಭೆಯ ...{Loading}...
ಬೆರಳ ದರ್ಭೆಯ ಹರಿದು ಧೌತಾಂ
ಬರವನುಟ್ಟನು ಬಿಗಿದು ಕುಂತಿಯ
ಚರಣ ರಜವನು ಕೊಂಡು ಧರ್ಮಜನಂಘ್ರಿಗಭಿನಮಿಸಿ
ಹರುಷ ಮಿಗೆ ಹರಿತಂದು ಬಂಡಿಯ
ಶಿರದ ಹಲಗೆಯನಡರಿದನು ಬಲು
ಹುರಿಯ ಹಗ್ಗವ ಹಿಡಿದು ಜಡಿದನು ಹೂಡಿದೆತ್ತುಗಳ ॥27॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಭೀಮನು ಬೆರಳಲ್ಲಿ ಧರಿಸಿದ್ದ ದರ್ಭೆಯನ್ನು ಕಿತ್ತು ಎಸೆದು, ಮಡಿ ಮಾಡಿದ ಬಟ್ಟೆಯನ್ನು ಕಟ್ಟಿ ಉಟ್ಟುಕೊಂಡನು. ಕುಂತಿಯ ಪಾದಧೂಳನ್ನು ತಲೆಯಲ್ಲಿ ಧರಿಸಿಕೊಂಡು ಧರ್ಮರಾಜನ ಪಾದಗಳಿಗೆ ನಮಿಸಿ, ಹೆಚ್ಚಿನ ಹರುಷದಿಂದ ಓಡಿ ಬಂದು ಬಂಡಿಯ ಶಿರದ ಹಲಗೆಯನ್ನು ಹತ್ತಿ ಕುಳಿತನು. ಹುರಿಯ ಹಗ್ಗವನ್ನು ಹಿಡಿದೆಳೆದು ಹೂಡಿದ ಎತ್ತುಗಳನ್ನು ಮುಂದೆ ನಡೆಸಿದನು.
ಪದಾರ್ಥ (ಕ.ಗ.ಪ)
ಹರಿದು-ಕಿತ್ತು, ಧೌತ-ಮಡಿ ಮಾಡಿದ, ಅಂಬರ-ಬಟ್ಟೆ, ಬಿಗಿದು-ಕಟ್ಟಿ, ರಜ-ಧೂಳು, ಹರಿತಂದು-ಓಡಿಬಂದು, ಅಡರು-ಹತ್ತಿ ಕುಳಿತನು
ಮೂಲ ...{Loading}...
ಬೆರಳ ದರ್ಭೆಯ ಹರಿದು ಧೌತಾಂ
ಬರವನುಟ್ಟನು ಬಿಗಿದು ಕುಂತಿಯ
ಚರಣ ರಜವನು ಕೊಂಡು ಧರ್ಮಜನಂಘ್ರಿಗಭಿನಮಿಸಿ
ಹರುಷ ಮಿಗೆ ಹರಿತಂದು ಬಂಡಿಯ
ಶಿರದ ಹಲಗೆಯನಡರಿದನು ಬಲು
ಹುರಿಯ ಹಗ್ಗವ ಹಿಡಿದು ಜಡಿದನು ಹೂಡಿದೆತ್ತುಗಳ ॥27॥
೦೨೮ ಪುರದೊಳಗೆ ಭಿಕ್ಷಾನ್ನದಿನ್ದೈ ...{Loading}...
ಪುರದೊಳಗೆ ಭಿಕ್ಷಾನ್ನದಿಂದೈ
ವರು ಮಹಾಪಂಡಿತರು ನಿರ್ಧನ
ಪುರುಷರವರೊಳಗೊಬ್ಬನನು ನಮ್ಮೂರ ದಾನವನ
ಪರಿವಿಡಿಯ ಭೋಜನಕೆ ತದ್ಭೂ
ಸುರನ ತಾಯ್ಕೊಟ್ಟಳು ಗಡೇನ
ಚ್ಚರಿಯೆನುತ ಪವನಜನ ಮುತ್ತಿತು ನೋಟಕರ ನೆರವಿ ॥28॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಈ ಸುದ್ದಿ ಊರಿನಲ್ಲಿ ಹರಡಿತು. “ಈ ಪಟ್ಟಣದಲ್ಲಿ ಐವರು ಮಹಾಪಂಡಿತರು, ಧನವಿಲ್ಲದವರು ಭಿಕ್ಷಾನ್ನದಿಂದ ಜೀವಿಸುತ್ತಿದ್ದಾರೆ. ಅವರೊಳಗೆ ಒಬ್ಬನನ್ನು ನಮ್ಮ ಊರಿನ ರಾಕ್ಷಸನ ಸರದಿಯೂಟಕ್ಕೆ ಆ ಬ್ರಾಹ್ಮಣನ ತಾಯಿ ಕೊಟ್ಟಳಂತೆ ; ಏನಾಶ್ಚರ್ಯ ?” ಎಂದು ನೋಡುವವರ ಗುಂಪು ಪವನಜನನ್ನು ಮುತ್ತಿಕೊಂಡಿತು.
ಪದಾರ್ಥ (ಕ.ಗ.ಪ)
ನಿರ್ಧನಪುರುಷರು-ಧನವಿಲ್ಲದವರು, ಪರಿವಿಡಿಯ-ಸರದಿಯ, ಅಚ್ಚರಿ-ಆಶ್ಚರ್ಯ, ನೋಟಕರು-ನೋಡುವವರು, ನೆರವಿ-ಗುಂಪು
ಮೂಲ ...{Loading}...
ಪುರದೊಳಗೆ ಭಿಕ್ಷಾನ್ನದಿಂದೈ
ವರು ಮಹಾಪಂಡಿತರು ನಿರ್ಧನ
ಪುರುಷರವರೊಳಗೊಬ್ಬನನು ನಮ್ಮೂರ ದಾನವನ
ಪರಿವಿಡಿಯ ಭೋಜನಕೆ ತದ್ಭೂ
ಸುರನ ತಾಯ್ಕೊಟ್ಟಳು ಗಡೇನ
ಚ್ಚರಿಯೆನುತ ಪವನಜನ ಮುತ್ತಿತು ನೋಟಕರ ನೆರವಿ ॥28॥
೦೨೯ ಪೌರ ಜನವೈತರಲು ...{Loading}...
ಪೌರ ಜನವೈತರಲು ಬಂಡಿಯ
ನೂರ ಹೊರವಂಡಿಸಿದನೆಲ್ಲರು
ದೂರದಲ್ಲಿರಿ ಸಾವವನೆ ತಾ ಸಾಕು ದೈತ್ಯನಲಿ
ಸಾರಿ ನೀವೆಂದೆನುತ ಹೂಡಿದ
ಹೋರಿಗಳ ಹೊಯ್ದುಬ್ಬರಿಸಿ ರಣ
ಧೀರ ಮಾರುತಿ ಮಿಕ್ಕು ಹರಿಸಿದನಸುರನಿದ್ದಡೆಗೆ ॥29॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಪುರಜನರು ಹಾಗೆಯೆ ಗುಂಪುಗೂಡಿ ಬಂದು ಸೇರಲು ಭೀಮನು ಬಂಡಿಯನ್ನು ಊರ ಹೊರಕ್ಕೆ ಹೊರಡಿಸಿದನು. ಭೀಮನು, ಅವರಿಗೆ “ನೀವೆಲ್ಲಾ ದೂರದಲ್ಲಿರಿ, ದೈತ್ಯನಿಂದ ಸಾಯುವವನೇ ನಾನು ? ಸಾಕು, ಬಿಡಿ, ನೀವು ಹೊರಟು ಹೋಗಿ” ಎಂದು ಹೇಳಿದನು. ಬಳಿಕ ಹೂಡಿದ ಹೋರಿಗಳನ್ನು ಹೊಡೆದು ಅಬ್ಬರಿಸಿ, ರಣಧೀರ ಮಾರುತಿ, ರಾಕ್ಷಸನಿದ್ದ ಕಡೆಗೆ ಬಂಡಿಯನ್ನು ವೇಗವಾಗಿ ಹೊಡೆದುಕೊಂಡು ಹೊರಟನು.
ಪದಾರ್ಥ (ಕ.ಗ.ಪ)
ಹೊರವಂಡಿಸು-ಹೊರಡಿಸು, ಮಾರುತಿ-ಭೀಮ (ವಾಯು ಪುತ್ರರಾದ ಹನುಮಂತನಿಗೂ, ಭೀಮನಿಗೂ ಈ ಹೆಸರು ಸಲ್ಲುತ್ತದೆ)
ಮೂಲ ...{Loading}...
ಪೌರ ಜನವೈತರಲು ಬಂಡಿಯ
ನೂರ ಹೊರವಂಡಿಸಿದನೆಲ್ಲರು
ದೂರದಲ್ಲಿರಿ ಸಾವವನೆ ತಾ ಸಾಕು ದೈತ್ಯನಲಿ
ಸಾರಿ ನೀವೆಂದೆನುತ ಹೂಡಿದ
ಹೋರಿಗಳ ಹೊಯ್ದುಬ್ಬರಿಸಿ ರಣ
ಧೀರ ಮಾರುತಿ ಮಿಕ್ಕು ಹರಿಸಿದನಸುರನಿದ್ದಡೆಗೆ ॥29॥
೦೩೦ ಎಡೆಯಲೇ ಭಕ್ಷ್ಯಾದಿಗಳ ...{Loading}...
ಎಡೆಯಲೇ ಭಕ್ಷ್ಯಾದಿಗಳ ಬರಿ
ಹೆಡಗೆಯುಳಿದವು ಕೂಳೊಳರ್ಧವ
ಹೊಡೆದು ಸುರಿದನು ಹಾಲುತುಪ್ಪದ ಹರವಿಯೋಜೆಯಲಿ
ಕುಡಿದು ಪಕ್ಕಲೆ ನೀರನೊಯ್ಯನೆ
ನಡೆಸಿ ತಂದನು ಕಂಡು ದನುಜನ
ನುಡಿದನೆಲವೋ ಕುನ್ನಿ ಕೂಳಿದೆ ತಿನ್ನು ಬಾರೆನುತ ॥30॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ದಾರಿಯ ಮಧ್ಯದಲ್ಲೇ ಭಕ್ಷ್ಯಾದಿಗಳು ಖಾಲಿಯಾಗಿ ಬರಿ ಬುಟ್ಟಿಗಳು ಉಳಿದವು. ಅನ್ನದಲ್ಲಿ ಅರ್ಧವನ್ನು ಮುಗಿಸಿ ಬಿಟ್ಟನು. ಸಾಲಾಗಿದ್ದ ಮಡಕೆಗಳಿಂದ ಹಾಲು ತುಪ್ಪಗಳನ್ನು ಸುರಿದುಕೊಂಡನು. ನೀರಿನ ಚೀಲದಿಂದ ನೀರನ್ನು ಕುಡಿದು ಬಂಡಿಯನ್ನು ಮೆಲ್ಲನೆ ನಡೆಸಿಕೊಂಡು ರಕ್ಕಸನಿದ್ದ ಬಳಿಗೆ ತಂದನು. ಅವನನ್ನು ಕೂಗಿ “ಎಲವೋ ಕುನ್ನಿ ಕೂಳಿದೆ ತಿನ್ನು ಬಾ” ಎಂದು ಕರೆದನು.
ಪದಾರ್ಥ (ಕ.ಗ.ಪ)
ಎಡೆ-ದಾರಿಯ ಮಧ್ಯ,
ಓಜೆ-ಸಾಲು, ಪಕ್ಕಲೆ-ಪಕಾಲಿ-ಎತ್ತಿನ ಮೇಲೆ ನೀರು ಸಾಗಿಸಲು ಉಪಯೋಗಿಸುವ ಚರ್ಮದ ಚೀಲ
ಪಾಠಾನ್ತರ (ಕ.ಗ.ಪ)
ಹೆಡೆಗೆ- ಹೆಡಗೆ
ಮೂಲ ...{Loading}...
ಎಡೆಯಲೇ ಭಕ್ಷ್ಯಾದಿಗಳ ಬರಿ
ಹೆಡಗೆಯುಳಿದವು ಕೂಳೊಳರ್ಧವ
ಹೊಡೆದು ಸುರಿದನು ಹಾಲುತುಪ್ಪದ ಹರವಿಯೋಜೆಯಲಿ
ಕುಡಿದು ಪಕ್ಕಲೆ ನೀರನೊಯ್ಯನೆ
ನಡೆಸಿ ತಂದನು ಕಂಡು ದನುಜನ
ನುಡಿದನೆಲವೋ ಕುನ್ನಿ ಕೂಳಿದೆ ತಿನ್ನು ಬಾರೆನುತ ॥30॥
೦೩೧ ಕಣ್ಡು ಖಳ ...{Loading}...
ಕಂಡು ಖಳ ಬೆರಗಾದನಿವನು
ದ್ದಂಡತನವಚ್ಚರಿಯಲಾ ಹರಿ
ಖಂಡಪರಶುಗಳಳುಕುವರು ತನ್ನೊಡನೆ ತೊಡಕುವರೆ
ಬಂಡಿ ತುಂಬಿದ ಕೂಳನಿವನಿಂ
ದುಂಡು ಬದುಕಲಿ ಊರ ಪಾರ್ವರ
ಹಿಂಡುವೆನುಯಿವ ಸಹಿತೆನುತ ಹಲು ಮೊರೆದನಮರಾರಿ ॥31॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಇದನ್ನು ಕಂಡು ದುಷ್ಟ ರಕ್ಕಸನು ಆಶ್ಚರ್ಯಪಟ್ಟನು. “ಇವನ ದರ್ಪವು ಆಶ್ಚರ್ಯವಲ್ಲಾ ! ಹರಿಹರರೂ ನನ್ನೊಡನೆ ಸೆಣಸುವುದಕ್ಕೆ ಹೆದರುತ್ತಾರೆ. ಬಂಡಿ ತುಂಬಿದ ಅನ್ನವನ್ನು ಇವನು ಈ ದಿನ ಉಂಡು ಬದುಕಲಿ. ಊರ ಹಾರುವರನ್ನೆಲ್ಲಾ ಇವನ ಸಹಿತವಾಗಿ ಹಿಂಡುವೆನು ಎಂದು ಹಲ್ಲು ಕಡಿದು ಗರ್ಜಿಸಿದನು.
ಪದಾರ್ಥ (ಕ.ಗ.ಪ)
ಬೆರಗು-ಆಶ್ಚರ್ಯ, ಉದ್ದಂಡತನ-ದರ್ಪ, ತೊಡಕು-ಸೆಣಸು, ಪಾರ್ವರು-ಹಾರುವರು, ಹಿಂಡು-ಸಂಕಟಪಡಿಸು, ಮೊರೆ-ಗರ್ಜಿಸು, ಖಂಡಪರಶು-ಹರ
ಮೂಲ ...{Loading}...
ಕಂಡು ಖಳ ಬೆರಗಾದನಿವನು
ದ್ದಂಡತನವಚ್ಚರಿಯಲಾ ಹರಿ
ಖಂಡಪರಶುಗಳಳುಕುವರು ತನ್ನೊಡನೆ ತೊಡಕುವರೆ
ಬಂಡಿ ತುಂಬಿದ ಕೂಳನಿವನಿಂ
ದುಂಡು ಬದುಕಲಿ ಊರ ಪಾರ್ವರ
ಹಿಂಡುವೆನುಯಿವ ಸಹಿತೆನುತ ಹಲು ಮೊರೆದನಮರಾರಿ ॥31॥
೦೩೨ ಮತ್ತೆ ಶೇಷಾನ್ನದಲಿ ...{Loading}...
ಮತ್ತೆ ಶೇಷಾನ್ನದಲಿ ತೋರುತ
ತುತ್ತುಗಳ ತೂಗುತ್ತ ಮಾರುತಿ
ಮೆತ್ತಿಕೊಂಡನು ಬಾಯೊಳವನನು ಬೆರಳಲೇಡಿಸುತ
ಇತ್ತಲೆನ್ನಯ ಹಸಿವು ಹೆಚ್ಚಿದೆ
ತುತ್ತು ಹೊಗದೊಳಗಿವನ ತೊಡಗಲ
ದೆತ್ತಲಕಟಾ ವಿಧಿಯೆನುತ ಮುರಿದೆದ್ದನಮರಾರಿ ॥32॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಇತ್ತ ಇವನು ರೇಗುತ್ತಿದ್ದಾಗ, ಅತ್ತ ಮಾರುತಿ ಉಳಿದಿದ್ದ ಅನ್ನವನ್ನು ಮತ್ತೆ ಮತ್ತೆ ತೋರಿಸುತ್ತ ತುತ್ತುಗಳನ್ನು ಮಾಡಿ ತೂಗುತ್ತ ಬಾಯಲ್ಲಿ ಮೆತ್ತಿಕೊಂಡು ಅವನನ್ನು ಬೆರಳಲ್ಲಿ ಅಣಕಿಸ ತೊಡಗಿದನು. ರಕ್ಕಸನು ತನ್ನ ಮನಸ್ಸಿನಲ್ಲಿ, “ಇತ್ತ ನನ್ನ ಹಸಿವು ಹೆಚ್ಚುತ್ತಿದೆ. ತುತ್ತು ಗಂಟಲೊಳಗೆ ಇಳಿಯುವ ಹಾಗಿಲ್ಲ. ಈಗಲೇ ಇವನೊಡನೆ ಸೆಣಸಾಡಬೇಕಿದೆಯಲ್ಲ ! ಅಯ್ಯೋ ವಿಧಿಯೇ ?” ಎನುತ್ತ ತಿರುಗಿಕೊಂಡು ಎದ್ದನು.
ಪದಾರ್ಥ (ಕ.ಗ.ಪ)
ಶೇಷಾನ್ನ-ಉಳಿದ ಅನ್ನ, ಏಡಿಸು-ಅಣಕಿಸು, ತೊಡಗು-ಸೆಣಸು, ಅಮರಾರಿ-ರಕ್ಕಸ (ದೇವತೆಗಳ ಶತ್ರು)
ಮೂಲ ...{Loading}...
ಮತ್ತೆ ಶೇಷಾನ್ನದಲಿ ತೋರುತ
ತುತ್ತುಗಳ ತೂಗುತ್ತ ಮಾರುತಿ
ಮೆತ್ತಿಕೊಂಡನು ಬಾಯೊಳವನನು ಬೆರಳಲೇಡಿಸುತ
ಇತ್ತಲೆನ್ನಯ ಹಸಿವು ಹೆಚ್ಚಿದೆ
ತುತ್ತು ಹೊಗದೊಳಗಿವನ ತೊಡಗಲ
ದೆತ್ತಲಕಟಾ ವಿಧಿಯೆನುತ ಮುರಿದೆದ್ದನಮರಾರಿ ॥32॥
೦೩೩ ಎರಡು ಕೈಯನು ...{Loading}...
ಎರಡು ಕೈಯನು ಬಲಿದು ಮುಷ್ಟಿಯೊ
ಳೆರಗಿದನು ಖಳ ಬೆನ್ನನೇನಂ
ದರಿಯನಿತ್ತಲು ಭೀಮ ಬಲುದುತ್ತುಗಳ ತೋಟಿಯಲಿ
ಮರನ ಮುರಿದೆರಗಿದರೆ ಪುನರಪಿ
ಮುರಿದು ನೋಡಿದು ಬಹೆನು ನಿಲ್ಲೆನು
ತರೆಗೆಲಸ ಪೂರೈಸಲೆಂದನು ನಗುತ ಕಲಿಭೀಮ ॥33॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಎರಡೂ ಕೈಗಳನ್ನು ಬಲವಾಗಿ ಮುಷ್ಟಿ ಮಾಡಿಕೊಂಡು ರಕ್ಕಸನು ಭೀಮನ ಬೆನ್ನ ಮೇಲೆ ಗುದ್ದಿದನು. ಬಹಳ ತುತ್ತುಗಳ ನುಂಗುವಿಕೆಯಲ್ಲಿ ಇವನಿಗೆ ಅದೇನೆಂದು ತಿಳಿಯಲಾಗಲಿಲ್ಲ. ಖಳನು ಮರವನ್ನು ಮುರಿದುಕೊಂಡು ಬಂದು ಮೇಲೆರಗಿದರೆ, ಕಲಿಭೀಮನು ಮತ್ತೆ ಹಿಂದಿರುಗಿ ನೋಡಿ ನಗುತ್ತಾ “ಬರುತ್ತೇನೆ, ತಾಳು, ಉಳಿದಿರುವ ಅರ್ಧಕೆಲಸ ಮುಗಿಯಲಿ” ಎಂದನು.
ಪದಾರ್ಥ (ಕ.ಗ.ಪ)
ಎರಗು-ಮೇಲೆ ಬೀಳು, ತೋಟಿ-ಜಗಳ, ಪುನರಪಿ-ಮತ್ತೆ, ಅರೆ-ಅರ್ಧ, ಪೂರೈಸಲಿ-ಮುಗಿಯಲಿ
ಮೂಲ ...{Loading}...
ಎರಡು ಕೈಯನು ಬಲಿದು ಮುಷ್ಟಿಯೊ
ಳೆರಗಿದನು ಖಳ ಬೆನ್ನನೇನಂ
ದರಿಯನಿತ್ತಲು ಭೀಮ ಬಲುದುತ್ತುಗಳ ತೋಟಿಯಲಿ
ಮರನ ಮುರಿದೆರಗಿದರೆ ಪುನರಪಿ
ಮುರಿದು ನೋಡಿದು ಬಹೆನು ನಿಲ್ಲೆನು
ತರೆಗೆಲಸ ಪೂರೈಸಲೆಂದನು ನಗುತ ಕಲಿಭೀಮ ॥33॥
೦೩೪ ಅರಸ ಕೇಳೈ ...{Loading}...
ಅರಸ ಕೇಳೈ ನಿಮ್ಮ ಭೀಮನ
ಪರಿಯನಾ ಪರಿ ಬಂಡಿ ತುಂಬಿದ
ಸರಕನೆಲ್ಲವ ಸಂತವಿಟ್ಟನು ತನ್ನ ಜಠರದಲಿ
ವರ ಸಮಾಧಾನದಲಿ ಕೈದೊಳೆ
ದುರವಣಿಪ ತೇಗಿನ ತರಂಗದ
ಪರಬಲಾಂತಕನೆದ್ದು ನಿಂದನು ಸಿಂಹನಾದದಲಿ ॥34॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಮಹಾರಾಜ ನಿಮ್ಮ ಭೀಮನ ರೀತಿಯನ್ನು ಕೇಳು. ಆ ರೀತಿ ತುಂಬಿದ ಬಂಡಿಯ ಸಾಮಗ್ರಿಗಳನ್ನು ತನ್ನ ಹೊಟ್ಟೆಯಲ್ಲಿ ಸಂತವಿಸಿ ಬಹಳ ಸಮಾಧಾನದಿಂದ ಕೈತೊಳೆದುಕೊಂಡನು. ತೇಗಿನ ಅಲೆಗಳು ಉಕ್ಕುಕ್ಕಿ ಬರತೊಡಗಿತು. ತೇಗುತ್ತಲೇ ಶತ್ರು ಸೈನ್ಯಕ್ಕೆ ಯಮನೋಪಾದಿಯಲ್ಲಿರುವ ಭೀಮಸೇನನು ಎದ್ದು ನಿಂತು ಸಿಂಹನಾದ ಮಾಡಿದನು.
ಪದಾರ್ಥ (ಕ.ಗ.ಪ)
ಸರಕು-ಸಾಮಗ್ರಿ, ಪರಬಲಾಂತಕ-ಶತ್ರು ಸೈನ್ಯದ ಯಮ, ತರಂಗ-ಅಲೆಗಳು
ಮೂಲ ...{Loading}...
ಅರಸ ಕೇಳೈ ನಿಮ್ಮ ಭೀಮನ
ಪರಿಯನಾ ಪರಿ ಬಂಡಿ ತುಂಬಿದ
ಸರಕನೆಲ್ಲವ ಸಂತವಿಟ್ಟನು ತನ್ನ ಜಠರದಲಿ
ವರ ಸಮಾಧಾನದಲಿ ಕೈದೊಳೆ
ದುರವಣಿಪ ತೇಗಿನ ತರಂಗದ
ಪರಬಲಾಂತಕನೆದ್ದು ನಿಂದನು ಸಿಂಹನಾದದಲಿ ॥34॥
೦೩೫ ಉಣ್ಡೆವೈ ಸಮಚಿತ್ತದಲಿ ...{Loading}...
ಉಂಡೆವೈ ಸಮಚಿತ್ತದಲಿ ನೀವ್
ಕೊಂಡಿರೈ ಘಾಯಗಳನೆಡೆಯಲಿ
ಹಿಂಡುವಿರಲೈ ನಾವು ಸಹಿತೀ ಊರ ಹಾರುವರ
ಉಂಡೆವೈ ಹಲ ಕಾಲಕಿಂದಿನ
ಲುಂಡದೂಟ ಕಣಾ ನಿಧಾನವು
ಖಂಡಪರಶುವಿನಾಣೆನುತ ಮದವೇರಿದನು ಭೀಮ ॥35॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ನಾವು ಸಮಾಧಾನ ಚಿತ್ತದಿಂದ ಉಂಡೆವಯ್ಯಾ ! ಬಿಡುವಿನಲ್ಲಿ ನೀವು ಗಾಯಗಳನ್ನು ಉಂಡಿರಿ. ನಮ್ಮ ಸಹಿತವಾಗಿ ಈ ಊರ ಬ್ರಾಹ್ಮಣರನ್ನು ಹಿಂಡುವಿರಲ್ಲವೇ ? ಹಲವು ಕಾಲಕ್ಕೆ ಇಂದಿನಂಥ ಊಟ ಉಂಡೆವು ! ಇವತ್ತು ಉಂಡದ್ದೀಗ ನಿಜವಾದ ಊಟ ! ಸಾವಕಾಶವು, ಶಿವನ ಮೇಲಾಣೆ” ಎನುತ್ತ ಭೀಮನು ಬೀಗಿದನು.
ಪದಾರ್ಥ (ಕ.ಗ.ಪ)
ಸಮಚಿತ್ತ-ಸಮಾಧಾನ ಚಿತ್ತ, ಎಡೆ-ಬಿಡುವು, ಹಾರುವರು-ಬ್ರಾಹ್ಮಣರು, ನಿಧಾನ-ಸಾವಕಾಶ, ಮದವೇರು-ಬೀಗು, ಹೆಮ್ಮೆಪಡು
ಖಂಡ ಪರಶು - ಈಶ್ವರ
ಮೂಲ ...{Loading}...
ಉಂಡೆವೈ ಸಮಚಿತ್ತದಲಿ ನೀವ್
ಕೊಂಡಿರೈ ಘಾಯಗಳನೆಡೆಯಲಿ
ಹಿಂಡುವಿರಲೈ ನಾವು ಸಹಿತೀ ಊರ ಹಾರುವರ
ಉಂಡೆವೈ ಹಲ ಕಾಲಕಿಂದಿನ
ಲುಂಡದೂಟ ಕಣಾ ನಿಧಾನವು
ಖಂಡಪರಶುವಿನಾಣೆನುತ ಮದವೇರಿದನು ಭೀಮ ॥35॥
೦೩೬ ಖಾತಿಗೊಳ್ಳದ ಮುನ್ನ ...{Loading}...
ಖಾತಿಗೊಳ್ಳದ ಮುನ್ನ ಪವನಜ
ನೋತು ಕೊಟ್ಟನು ತನ್ನ ಹೊಯ್ಗಳ
ನಾತನೀತನು ಮುಳಿದು ಬಳಿಕಿವನೇನ ಮಾಡುವನೊ
ಈತನೆದ್ದನು ಗಜರಿ ಬಳಿಕಿನೊ
ಳಾತನಿದಿರಾದನು ಸುರಾರಿಯ
ವಾತಜನ ಹೋರಟೆಗೆ ಕೊರಳಳುಕಿದುದು ವಾಸುಕಿಯ ॥36॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಭೀಮನು ಕೋಪಗೊಳ್ಳುವುದಕ್ಕೆ ಮುಂಚೆಯೇ ಬಕನು ಮನಸ್ಸು ಗಟ್ಟಿ ಮಾಡಿಕೊಂಡು ತನ್ನ ಪೆಟ್ಟುಗಳನ್ನು ಕೊಟ್ಟನು. ಇವನು ಕೋಪಗೊಂಡರೆ ಬಳಿಕ ಏನು ಮಾಡುತ್ತಾನೋ ? ಎಂದು ಎಣಿಸಿರಬೇಕು. ಬಕನ ಏಟು ಬಿದ್ದ ಮೇಲೆ ಈತ ಗರ್ಜಿಸಿ ಎದ್ದು ನಿಂತನು. ಅವನು ಎದುರಾದನು. ಭೀಮ ಬಕರ ಕಾಳಗಕ್ಕೆ ವಾಸುಕಿಯ ಕೊರಳು ಕುಸಿಯಿತು.
ಪದಾರ್ಥ (ಕ.ಗ.ಪ)
ಖಾತಿ-ಕೋಪ, ಹೊಯ್ಗಳು-ಪೆಟ್ಟು, ಮುಳಿ-ಕೋಪಗೊಳ್ಳು , ಸುರಾರಿ-ರಕ್ಕಸ, ವಾತಜ-ವಾಯುಪುತ್ರ (ಭೀಮ), ಹೋರಟೆ-ಕಾಳಗ
ಮೂಲ ...{Loading}...
ಖಾತಿಗೊಳ್ಳದ ಮುನ್ನ ಪವನಜ
ನೋತು ಕೊಟ್ಟನು ತನ್ನ ಹೊಯ್ಗಳ
ನಾತನೀತನು ಮುಳಿದು ಬಳಿಕಿವನೇನ ಮಾಡುವನೊ
ಈತನೆದ್ದನು ಗಜರಿ ಬಳಿಕಿನೊ
ಳಾತನಿದಿರಾದನು ಸುರಾರಿಯ
ವಾತಜನ ಹೋರಟೆಗೆ ಕೊರಳಳುಕಿದುದು ವಾಸುಕಿಯ ॥36॥
೦೩೭ ಹಿಡಿದರೊಬ್ಬರನೊಬ್ಬರುರದಲಿ ...{Loading}...
ಹಿಡಿದರೊಬ್ಬರನೊಬ್ಬರುರದಲಿ
ಹೊಡೆದು ಹಿಂಗಿದರುಲಿದು ಹೆಮ್ಮರ
ನುಡಿಯೆ ಹೊಯ್ದಾಡಿದರು ತಿವಿದರು ತೋಳು ಬಲುಹಿನಲಿ
ಕೊಡಹಿದನು ಕಲಿ ಭೀಮನವನು
ಗ್ಗಡದ ಸತ್ವದಿಯುಂಡ ಕೂಳಿನ
ಕಡುಹ ತೋರೆಂದೊರಲಿ ತುಡಿಕಿದನನಿಲ ನಂದನನ ॥37॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಒಬ್ಬರನ್ನೊಬ್ಬರು ಹಿಡಿದರು. ಎದೆಗೆ ಹೊಡೆದು ಹಿಂದೆ ಸರಿದರು. ಗಟ್ಟಿಯಾಗಿ ಗರ್ಜಿಸುತ್ತ ಹೆಮ್ಮರ ಮುರಿಯುವಂತೆ ಹೊಯ್ದಾಡಿದರು, ತಿವಿದರು. ಕಲಿಭೀಮನು ತೋಳ ಶಕ್ತಿಯಿಂದ ಅವನನ್ನು ಕೆಡವಿದನು. ಅವನು “ಉಂಡ ಅನ್ನದ ಶಕ್ತಿಯನ್ನು ತೋರು” ಎನ್ನುತ್ತ ಅಧಿಕ ಸತ್ತ್ವದಿಂದ ವಾಯು ಪುತ್ರನನ್ನು ಹಿಡಿದನು.
ಪದಾರ್ಥ (ಕ.ಗ.ಪ)
ಉರ-ಎದೆ, ಹಿಂಗು-ಹಿಂದಕ್ಕೆ ಸರಿ, ಉಡಿ-ಮುರಿ, ಬಲುಹು-ಶಕ್ತಿ, ಕೊಡಹು-ಕೆಡವು, ಉಗ್ಗಡ-ಅಧಿಕ, ಕಡುಹು-ಶಕ್ತಿ
ಮೂಲ ...{Loading}...
ಹಿಡಿದರೊಬ್ಬರನೊಬ್ಬರುರದಲಿ
ಹೊಡೆದು ಹಿಂಗಿದರುಲಿದು ಹೆಮ್ಮರ
ನುಡಿಯೆ ಹೊಯ್ದಾಡಿದರು ತಿವಿದರು ತೋಳು ಬಲುಹಿನಲಿ
ಕೊಡಹಿದನು ಕಲಿ ಭೀಮನವನು
ಗ್ಗಡದ ಸತ್ವದಿಯುಂಡ ಕೂಳಿನ
ಕಡುಹ ತೋರೆಂದೊರಲಿ ತುಡಿಕಿದನನಿಲ ನಂದನನ ॥37॥
೦೩೮ ಸಿಕ್ಕಿದನು ಕಲಿಭೀಮನೆನೆ ...{Loading}...
ಸಿಕ್ಕಿದನು ಕಲಿಭೀಮನೆನೆ ಕೈ
ಯಿಕ್ಕಿ ಕೊಟ್ಟನು ಮೈಯನಸುರನ
ಹೊಕ್ಕು ತಿವಿದನು ತಿರುಗಿ ಬದಿಯೆಲು ನುಗ್ಗು ನುಸಿಯಾಗೆ
ಬಿಕ್ಕುಳಿಯ ತಾಳಿಗೆಯ ಮೂಗಿನೊ
ಳೊಕ್ಕು ರುಧಿರದ ಧಾರೆ ಬಿಗಿದುರೆ
ಡೊಕ್ಕರಿಸಲಸು ನೀಗಿತಸುರನ ತನುವ ನಿಮಿಷದಲಿ ॥38॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕಲಿಭೀಮನು ಸಿಕ್ಕಿ ಬಿಟ್ಟನೆನ್ನುವಂತೆ ಕೈಯಿಕ್ಕಿ ಮೈಯನ್ನು ಅವನಿಗೆ ಕೊಟ್ಟನು. ಹಾಗೆ ಮಾಡಿ ಹೊಕ್ಕು ಅಸುರನನ್ನು ತಿವಿದನು. ಆ ತಿವಿತಕ್ಕೆ ಅವನ ಪಕ್ಕೆಯ ಮೂಳೆ ಮುರಿದು ಪುಡಿಪುಡಿಯಾಯ್ತು. ನಾಲಗೆ ಬಿಗಿದು ಬಿಕ್ಕಳಿಕೆ ಮೊದಲಾಯ್ತು. ಮೂಗಿನಲ್ಲಿ ರಕ್ತದ ಧಾರೆ ಹರಿಯ ತೊಡಗಿತು. ದೇಹ ಉಸಿರಾಡದಂತಾಗಿ ಮಾಡಿ ರಕ್ಕಸನ ಪ್ರಾಣ ನಿಮಿಷ ಮಾತ್ರದಲ್ಲಿ ಮೈಯನ್ನು ಬಿಟ್ಟು ತೊಲಗಿ ಹೋಯಿತು.
ಪದಾರ್ಥ (ಕ.ಗ.ಪ)
ನುಗ್ಗುನುಸಿ-ಪುಡಿಪುಡಿಯಾಗು, ಬದಿ-ಪಕ್ಕೆ, ಎಲು-ಮೂಳೆ, ತಾಳಿಗೆ-ನಾಲಗೆ, ರುಧಿರ-ರಕ್ತ, ಅಸು-ಪ್ರಾಣ, ಡೊಕ್ಕರಿಸು-ಉಸಿರಾಡದಂತೆ ಮಾಡು
ಮೂಲ ...{Loading}...
ಸಿಕ್ಕಿದನು ಕಲಿಭೀಮನೆನೆ ಕೈ
ಯಿಕ್ಕಿ ಕೊಟ್ಟನು ಮೈಯನಸುರನ
ಹೊಕ್ಕು ತಿವಿದನು ತಿರುಗಿ ಬದಿಯೆಲು ನುಗ್ಗು ನುಸಿಯಾಗೆ
ಬಿಕ್ಕುಳಿಯ ತಾಳಿಗೆಯ ಮೂಗಿನೊ
ಳೊಕ್ಕು ರುಧಿರದ ಧಾರೆ ಬಿಗಿದುರೆ
ಡೊಕ್ಕರಿಸಲಸು ನೀಗಿತಸುರನ ತನುವ ನಿಮಿಷದಲಿ ॥38॥
೦೩೯ ಕೊನ್ದು ದನುಜನ ...{Loading}...
ಕೊಂದು ದನುಜನ ಪೆಣನ ಬಂಡಿಯ
ಹಿಂದೆ ಬಂಧಿಸಿ ಪುರದ ಬಾಹೆಗೆ
ತಂದು ಬಿಟ್ಟನು ತನತನಗೆ ಜನಜಾಲ ಜೋಡಿಯಲಿ
ಬಂದು ಕಂಡುದು ಹೆಣನ ಭೂಸುರ
ರಿಂದು ಧನ್ಯರು ವಿಪ್ರಜಾತಿಗೆ
ಸಂದುದಿನ್ನಗ್ಗಳಿಕೆಯೆಂದುದು ನೆರದ ಪೌರಜನ ॥39॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ರಕ್ಕಸನನ್ನು ಕೊಂದು ಅವನ ಹೆಣವನ್ನು ಬಂಡಿಯ ಹಿಂದೆ ಕಟ್ಟಿ ಊರಿನ ಹೊರ ಪ್ರದೇಶಕ್ಕೆ ತಂದು ಬಿಟ್ಟನು. ಜನರ ಸಮೂಹ ತಮತಮಗೆ ಜೊತೆಯಾಗಿ ಬಂದು ಆ ಹೆಣವನ್ನು ನೋಡಿತು. “ಈ ದಿನ ಬ್ರಾಹ್ಮಣರು ಧನ್ಯರು ! ಇನ್ನು ಬ್ರಾಹ್ಮಣ ಜಾತಿಗೆ ಗೌರವ ಸಲ್ಲುತ್ತದೆ” ಎಂದು ಸೇರಿದ ಪುರ ಜನರು ಪ್ರಶಂಸಿದರು.
ಪದಾರ್ಥ (ಕ.ಗ.ಪ)
ಬಂಧಿಸು-ಕಟ್ಟು, ಬಾಹೆ-ಹೊರಪ್ರದೇಶ, ಜಾಲ-ಸಮೂಹ, ಅಗ್ಗಳಿಕೆ-ಗೌರವ, ಸಂದು-ಸಂದರ್ಭ
ಮೂಲ ...{Loading}...
ಕೊಂದು ದನುಜನ ಪೆಣನ ಬಂಡಿಯ
ಹಿಂದೆ ಬಂಧಿಸಿ ಪುರದ ಬಾಹೆಗೆ
ತಂದು ಬಿಟ್ಟನು ತನತನಗೆ ಜನಜಾಲ ಜೋಡಿಯಲಿ
ಬಂದು ಕಂಡುದು ಹೆಣನ ಭೂಸುರ
ರಿಂದು ಧನ್ಯರು ವಿಪ್ರಜಾತಿಗೆ
ಸಂದುದಿನ್ನಗ್ಗಳಿಕೆಯೆಂದುದು ನೆರದ ಪೌರಜನ ॥39॥
೦೪೦ ಈ ಅಮಾನುಷ ...{Loading}...
ಈ ಅಮಾನುಷ ಶಕ್ತಿಯಮರರ
ರಾಯಗಳವಲ್ಲೆಂದು ವಿಪ್ರ ನಿ
ಕಾಯಕಿದು ಸಾಮಾನ್ಯವೇ ನಮ್ಮಗ್ರಹಾರದಲಿ
ಕಾಯಿದವರಿವರೆಂದು ವಿಪುಲ
ಶ್ರೇಯ ಪದ್ಮಜ ಸೋಮಧರ ನಾ
ರಾಯಣರು ಕೊಡಲೆಂದು ಹರಸಿತು ಭೂಸುರ ವ್ರಾತ ॥40॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಈ ಅತಿಮಾನುಷ ಶಕ್ತಿ ದೇವತೆಗಳ ರಾಜನಾದ ದೇವೇಂದ್ರನಿಗೂ ಸಾಧ್ಯವಿಲ್ಲ ಹೀಗಿರುವಲ್ಲಿ ಬ್ರಾಹ್ಮಣರಿಗೆ ಇದು ಸಾಮಾನ್ಯವೇ ? ನಮ್ಮ ಅಗ್ರಹಾರವನ್ನು ಇವರು ಕಾಪಾಡಿದರು. ಇವರಿಗೆ ಬ್ರಹ್ಮವಿಷ್ಣು ಮಹೇಶ್ವರರು ಬಹಳ ಶ್ರೇಯಸ್ಸನ್ನು ಕೊಡಲಿ” ಎಂದು ಬ್ರಾಹ್ಮಣರ ಸಮೂಹ ಹರಸಿತು.
ಪದಾರ್ಥ (ಕ.ಗ.ಪ)
ಅಮಾನುಷ-ಅತಿಮಾನುಷ, ಅಳವಲ್ಲ-ಸಾಧ್ಯವಲ್ಲ, ನಿಕಾಯ-ಸಮೂಹ, ಪದ್ಮಜ-ಬ್ರಹ್ಮ (ಕಮಲದಲ್ಲಿ ಹುಟ್ಟಿದವನು), ಸೋಮಧರ-ಶಿವ (ಚಂದ್ರನನ್ನು ಧರಿಸಿರುವವನು)
ಮೂಲ ...{Loading}...
ಈ ಅಮಾನುಷ ಶಕ್ತಿಯಮರರ
ರಾಯಗಳವಲ್ಲೆಂದು ವಿಪ್ರ ನಿ
ಕಾಯಕಿದು ಸಾಮಾನ್ಯವೇ ನಮ್ಮಗ್ರಹಾರದಲಿ
ಕಾಯಿದವರಿವರೆಂದು ವಿಪುಲ
ಶ್ರೇಯ ಪದ್ಮಜ ಸೋಮಧರ ನಾ
ರಾಯಣರು ಕೊಡಲೆಂದು ಹರಸಿತು ಭೂಸುರ ವ್ರಾತ ॥40॥