೦೦೦ ಸೂ ಬೆಮ್ಬಿಡದೆ ...{Loading}...
ಸೂ. ಬೆಂಬಿಡದೆ ಕಲಿಭೀಮ ಹಿಡಿದು ಹಿ
ಡಿಂಬಕನ ಮುರಿದವನ ತಂಗಿ ಹಿ
ಡಿಂಬಿಯನು ಕೂಡಿದನು ಪಡೆದನು ಕಲಿ ಘಟೋತ್ಕಚನ
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
ಸೂಚನೆ : ಕಲಿಭೀಮನು ಹಿಡಿಂಬಕನನ್ನು ಹಿಂಬಾಲಿಸಿ ಹಿಡಿದು ಕೊಂದು ಅವನ ತಂಗಿ ಹಿಡಿಂಬಿಯನ್ನು ಸೇರಿ ವೀರ ಘಟೋತ್ಕಚನನ್ನು ಪಡೆದನು.
ಪದಾರ್ಥ (ಕ.ಗ.ಪ)
ಬೆಂಬಿಡದೆ-ಹಿಂಬಾಲಿಸಿ, ಮುರಿ-ಕೊಲ್ಲು, ಕೂಡು-ಸೇರು,
ಮೂಲ ...{Loading}...
ಸೂ. ಬೆಂಬಿಡದೆ ಕಲಿಭೀಮ ಹಿಡಿದು ಹಿ
ಡಿಂಬಕನ ಮುರಿದವನ ತಂಗಿ ಹಿ
ಡಿಂಬಿಯನು ಕೂಡಿದನು ಪಡೆದನು ಕಲಿ ಘಟೋತ್ಕಚನ
೦೦೧ ಕೇಳು ಜನಮೇಜಯ ...{Loading}...
ಕೇಳು ಜನಮೇಜಯ ಧರಿತ್ರೀ
ಪಾಲ ಯಮನಂದನನ ಪಾರ್ಥನ
ಕಾಲೊಡೆದು ಬಸಿವರುಣ ಜಲದಲಿ ಬಟ್ಟೆ ಕೆಸರಾಯ್ತು
ಮೇಲೆ ಯಮಳರ ಕುಂತಿಯರನೇ
ವೇಳುವೆನು ಬೇಗದಲಿ ಕುರು ಭೂ
ಪಾಲ ಹಿಡಿಯಲಿ ಕೊಲಲೆನುತ ಕುಳ್ಳಿರ್ದರಡವಿಯಲಿ ॥1॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ನಡೆದು ನಡೆದು ಯಮಪುತ್ರನ ಮತ್ತು ಪಾರ್ಥನ ಕಾಲು ಬಿರಿದು ಸುರಿಯುವ ರಕ್ತದಲ್ಲಿ ದಾರಿ ಕೆಸರಾಯಿತು. ಅವಳಿ ಮಕ್ಕಳು ಮತ್ತು ಕುಂತಿಯರ ಸ್ಥಿತಿಯನ್ನು ಏನೆಂದು ಹೇಳಲಿ ? “ಕುರುಭೂಪಾಲನು ನಮ್ಮನ್ನು ಬೇಗ ಹಿಡಿಯಲಿ ಕೊಂದುಬಿಡಲಿ” ಎನ್ನುತ್ತ ಕಾಡಿನಲ್ಲಿ ಕುಳಿತಿದ್ದರು.
ಪದಾರ್ಥ (ಕ.ಗ.ಪ)
ಒಡೆ-ಬಿರಿ, ಬಸಿ-ಸುರಿ, ಅರುಣಜಲ-ರಕ್ತ, ಬಟ್ಟೆ-ದಾರಿ
ಮೂಲ ...{Loading}...
ಕೇಳು ಜನಮೇಜಯ ಧರಿತ್ರೀ
ಪಾಲ ಯಮನಂದನನ ಪಾರ್ಥನ
ಕಾಲೊಡೆದು ಬಸಿವರುಣ ಜಲದಲಿ ಬಟ್ಟೆ ಕೆಸರಾಯ್ತು
ಮೇಲೆ ಯಮಳರ ಕುಂತಿಯರನೇ
ವೇಳುವೆನು ಬೇಗದಲಿ ಕುರು ಭೂ
ಪಾಲ ಹಿಡಿಯಲಿ ಕೊಲಲೆನುತ ಕುಳ್ಳಿರ್ದರಡವಿಯಲಿ ॥1॥
೦೦೨ ಉರಿಯ ಮನೆಯಲಿ ...{Loading}...
ಉರಿಯ ಮನೆಯಲಿ ಸಾಯಲೀಯದೆ
ಸೆರಗ ಹಿಡಿದೆಳತಂದು ಕೊಯ್ದನು
ಕೊರಳನಕಟಾ ಭೀಮನೇ ಹಗೆಯೆಂದಳಾ ಕುಂತಿ
ಅರಸ ಹಿಡಿಯಲಿ ದಾನವರು ನಿಂ
ದಿರಿಕೆಯಲಿ ನುಂಗಲಿ ಕೃತಾರ್ಥರು
ಧರೆಯೊಳಾವೆಂದೊದರಿದರು ಮಾದ್ರೀಕುಮಾರಕರು ॥2॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಉರಿಯುತ್ತಿರುವ ಮನೆಯಲ್ಲಿ ಸಾಯುವುದಕ್ಕೆ ಬಿಡದೆ ಸೆರಗು ಹಿಡಿದು ಎಳೆದುಕೊಂಡು ಬಂದು ಕುತ್ತಿಗೆಯನ್ನು ಕತ್ತರಿಸಿದನು. ಅಯ್ಯೋ ಭೀಮನೇ ಶತ್ರುವಾದನು” ಎಂದಳು ಆ ಕುಂತಿ. “ಅರಸ ಹಿಡಿಯಲಿ ಅಥವಾ ರಕ್ಕಸರು ನಾವು ನಿಂತಿರುವ ಸ್ಥಿತಿಯಲ್ಲೇ ಕಬಳಿಸಲಿ. ಭೂಮಿಯಲ್ಲಿ ನಾವು ಧನ್ಯರು” ಎಂದು ಮಾದ್ರೀಮಕ್ಕಳು ಗಟ್ಟಿಯಾಗಿ ಕೂಗಿದರು.
ಪದಾರ್ಥ (ಕ.ಗ.ಪ)
ಕೊರಳು-ಕುತ್ತಿಗೆ, ಕೊಯ್ಯು-ಕತ್ತರಿಸು, ಹಗೆ-ಶತ್ರು, ನಿಂದಿರಿಕೆಯಲಿ-ನಿಂತಿರುವ ಸ್ಥಿತಿಯಲಿ, ನುಂಗಲಿ-ಕಬಳಿಸಲಿ, ಕೃತಾರ್ಥ-ಧನ್ಯ, ಒದರು-ಗಟ್ಟಿಯಾಗಿ ಕೂಗು
ಮೂಲ ...{Loading}...
ಉರಿಯ ಮನೆಯಲಿ ಸಾಯಲೀಯದೆ
ಸೆರಗ ಹಿಡಿದೆಳತಂದು ಕೊಯ್ದನು
ಕೊರಳನಕಟಾ ಭೀಮನೇ ಹಗೆಯೆಂದಳಾ ಕುಂತಿ
ಅರಸ ಹಿಡಿಯಲಿ ದಾನವರು ನಿಂ
ದಿರಿಕೆಯಲಿ ನುಂಗಲಿ ಕೃತಾರ್ಥರು
ಧರೆಯೊಳಾವೆಂದೊದರಿದರು ಮಾದ್ರೀಕುಮಾರಕರು ॥2॥
೦೦೩ ಸಾಕು ಸಾಕಾನಿರಲು ...{Loading}...
ಸಾಕು ಸಾಕಾನಿರಲು ಹೆಕ್ಕಳ
ವೇಕೆ ಹೋ ಹೋಯೆನುತ ಹೊತ್ತನು
ನೂಕಿ ಹೆಗಲೆರಡರಲಿ ಕುಂತಿಯ ಧರ್ಮನಂದನನ
ಆ ಕಿರೀಟಿಯನೆಡದಲಾ ಮಾ
ದ್ರೀ ಕುಮಾರರ ಬಲದ ಬದಿಯೊಳ
ಗೌಕಿ ನಡೆದನು ಭೀಮನೊಡೆಹಾಯ್ದೊದೆದು ಕಲು ಮರನ ॥3॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಸಾಕು ಸಾಕು, ನಾನಿರುವಾಗ ನಿಮಗೇಕೆ ಈ ಬಾಧೆ ?” ಎಂದು ನುಡಿದು ಭೀಮನು ಅವರೆಲ್ಲರನ್ನು ಹೊತ್ತುಕೊಂಡು ಮುಂದೆ ನಡೆದನು. ಎರಡು ಹೆಗಲುಗಳ ಮೇಲೆ ಕುಂತಿ ಮತ್ತು ಧರ್ಮಪುತ್ರನನ್ನು ಕೂರಿಸಿಕೊಂಡು, ಎಡ ಕಂಕುಳಲ್ಲಿ ಪಾರ್ಥನನ್ನೂ, ಬಲ ಮಗ್ಗುಲಲ್ಲಿ ಮಾದ್ರೀ ಮಕ್ಕಳನ್ನು ಔಂಕಿ ಹಿಡಿದುಕೊಂಡು ಕಲ್ಲುಗಳನ್ನು ಒದೆಯುತ್ತ ಮರಗಳನ್ನು ಸೀಳಿಕೊಂಡು ಮುಂದೆ ನಡೆದನು.
ಪದಾರ್ಥ (ಕ.ಗ.ಪ)
ಹೆಕ್ಕಳ-ಬಾಧೆ, ಕಿರೀಟಿ-ಪಾರ್ಥ, ಬದಿ-ಮಗ್ಗಲು, ಒಡೆಹಾಯ್ದು-ಸೀಳಿಕೊಂಡು
ಟಿಪ್ಪನೀ (ಕ.ಗ.ಪ)
ಕಿರೀಟಿ-ಅರ್ಜುನ; ಇಂದ್ರಕೀಲ ಪರ್ವತದಲ್ಲಿ ಪಾಶುಪತಾಸ್ತ್ರಾದಿಗಳನ್ನು ಪಡೆದ ಬಳಿಕ ಕೆಲಕಾಲ ಸ್ವರ್ಗದಲ್ಲಿದ್ದನು. ಆಗ ಅರ್ಜುನ ಇಂದ್ರನಿಂದ ಜಯಿಸಲಾಗದ ಶತ್ರುಗಳನ್ನು ಗೆದ್ದ ಮಹೋಪಕಾರ ಮಾಡಿದುದಕ್ಕಾಗಿ ಇಂದ್ರ ಅರ್ಜುನನನ್ನು ದೇವಲೋಕದಲ್ಲಿ ತನ್ನ ಸಿಂಹಾಸನದ ಮೇಲೆ ಕುಳ್ಳಿರಿಸಿ, ತನ್ನ ಕಿರೀಟವನ್ನು ಅವನ ತಲೆಯ ಮೇಲಿಟ್ಟು ಗೌರವಿಸಿದ. ಈ ಕಾರಣದಿಂದ ಅರ್ಜುನನಿಗೆ ‘ಕಿರೀಟಿ’ ಎಂಬ ಹೆಸರು ಬಂತು.
ಮೂಲ ...{Loading}...
ಸಾಕು ಸಾಕಾನಿರಲು ಹೆಕ್ಕಳ
ವೇಕೆ ಹೋ ಹೋಯೆನುತ ಹೊತ್ತನು
ನೂಕಿ ಹೆಗಲೆರಡರಲಿ ಕುಂತಿಯ ಧರ್ಮನಂದನನ
ಆ ಕಿರೀಟಿಯನೆಡದಲಾ ಮಾ
ದ್ರೀ ಕುಮಾರರ ಬಲದ ಬದಿಯೊಳ
ಗೌಕಿ ನಡೆದನು ಭೀಮನೊಡೆಹಾಯ್ದೊದೆದು ಕಲು ಮರನ ॥3॥
೦೦೪ ಬನ್ದನೀ ಪರಿ ...{Loading}...
ಬಂದನೀ ಪರಿ ಹಲವು ಯೋಜನ
ದಿಂದ ಹೇರಡವಿಯಲಿ ಬಳಲಿದೆ
ನೆಂದನೇ ನೀರಡಿಸಿದನೆ ಮೇಣ್ ನಿದ್ರೆಗೆಳಸಿದನೆ
ತಂದು ಕಾನನ ಮಧ್ಯದಲಿ ತರು
ವೃಂದದಡಿಯೊಳಗಿಳುಹಿ ಬಳಿಕರ
ವಿಂದದೆಲೆಯಲಿ ನೀರ ತಂದೆರೆದನು ಮಹೀಶರಿಗೆ ॥4॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಈ ರೀತಿ ದೊಡ್ಡ ಕಾಡಿನಲ್ಲಿ ಹಲವು ಯೋಜನಗಳ ದೂರ ಬಂದನು. ದಣಿದೆನೆಂದನೆ ? ಬಾಯಾರಿಕೆಯೆಂದನೆ ? ಇಲ್ಲವೇ ನಿದ್ರೆಗೆ ಬಯಸಿದನೆ ? ಅವರನ್ನು ತಂದು ಕಾಡಿನ ಮಧ್ಯದಲ್ಲಿ ಮರಗಳ ಗುಂಪಿನ ತಡಿಯಲ್ಲಿ ಇಳಿಸಿದನು. ಬಳಿಕ ಕೊಳಕ್ಕೆ ಹೋಗಿ ಕಮಲದೆಲೆಯಲ್ಲಿ ನೀರು ತಂದು ನೀಡಿದನು.
ಪದಾರ್ಥ (ಕ.ಗ.ಪ)
ಹೇರಡವಿ-ದೊಡ್ಡ ಕಾಡು, ಬಳಲು-ದಣಿವು, ನೀರಡಿಸು-ಬಾಯಾರು, ಎಳಸು-ಬಯಸು, ಕಾನನ-ಕಾಡು, ವೃಂದ-ಸಮೂಹ, ಅರವಿಂದ-ಕಮಲ, ಎರೆ-ಹೊಯ್ಯು , ಇಲ್ಲಿ ನೀಡು
ಮೂಲ ...{Loading}...
ಬಂದನೀ ಪರಿ ಹಲವು ಯೋಜನ
ದಿಂದ ಹೇರಡವಿಯಲಿ ಬಳಲಿದೆ
ನೆಂದನೇ ನೀರಡಿಸಿದನೆ ಮೇಣ್ ನಿದ್ರೆಗೆಳಸಿದನೆ
ತಂದು ಕಾನನ ಮಧ್ಯದಲಿ ತರು
ವೃಂದದಡಿಯೊಳಗಿಳುಹಿ ಬಳಿಕರ
ವಿಂದದೆಲೆಯಲಿ ನೀರ ತಂದೆರೆದನು ಮಹೀಶರಿಗೆ ॥4॥
೦೦೫ ತಳಿರ ತರಿದೊಟ್ಟಿದನು ...{Loading}...
ತಳಿರ ತರಿದೊಟ್ಟಿದನು ತರುವಿನ
ನೆಳಲೊಳಗೆ ವಿಶ್ರಮಿಸಿದರು ತನು
ಬಳಲಿಕೆಯ ಭಾರಣೆಯ ಕಡು ಜೋಡಿಸಿದ ಝೋಂಪಿನಲಿ
ಝಳಕೆ ಕಂದಿದ ಮೈಯ ಬಾಡಿದ
ಲಲಿತವದನದ ಮಾಸಿ ಕೆದರಿದ
ತಲೆಯೊಳಿರೆ ತನ್ನೈವರನು ಕಂಡಳಲಿದನು ಭೀಮ ॥5॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಆಮೇಲೆ, ಮರದ ಚಿಗುರೆಲೆಗಳನ್ನು ತರಿದು ರಾಶಿ ಹಾಕಿದನು. ಈ ಐವರೂ ಮರದ ನೆರಳಿನಲ್ಲಿ ವಿಶ್ರಾಂತಿ ಪಡೆದರು. ಎಲ್ಲರೂ ಹೆಚ್ಚಾದ ದೇಹದ ಆಯಾಸದಿಂದ ಗಾಢವಾದ ನಿದ್ರೆಗೆ ವಶರಾದರು. ಸೆಕೆಗೆ ಬಾಡಿದ ದೇಹ, ಕಾಂತಿಹೀನವಾದ ಸುಂದರ ಮುಖ. ಮಲಿನತೆ ಹೊಂದಿ ಕೆದರಿದ ತಲೆ -ಈ ಸ್ಥಿತಿಯಲ್ಲಿ ತನ್ನ ಐವರನ್ನು ಕಂಡು ಭೀಮ ದುಃಖಿಸಿದನು.
ಪದಾರ್ಥ (ಕ.ಗ.ಪ)
ತಳಿರು-ಚಿಗುರು, ಒಟ್ಟು-ರಾಶಿ ಹಾಕು, ವಿಶ್ರಮಿಸು-ವಿಶ್ರಾಂತಿ, ಬಳಲಿಕೆ-ಆಯಾಸ, ಭಾರಣೆ-ಹೆಚ್ಚಾದ, ಝೋಂಪು-ನಿದ್ರೆ, ಕಡು-ಬಹಳ, ಜೋಡಿಸು-ಸೇರು, ಝಳ-ಸೆಕೆ,
ಕಂದು, ಬಾಡು-ಕಾಂತಿಹೀನ,
ವದನ-ಮುಖ, ಮಾಸು-ಮಲಿನತೆ ಹೊಂದು, ಅಳಲು-ದುಃಖ
ಮೂಲ ...{Loading}...
ತಳಿರ ತರಿದೊಟ್ಟಿದನು ತರುವಿನ
ನೆಳಲೊಳಗೆ ವಿಶ್ರಮಿಸಿದರು ತನು
ಬಳಲಿಕೆಯ ಭಾರಣೆಯ ಕಡು ಜೋಡಿಸಿದ ಝೋಂಪಿನಲಿ
ಝಳಕೆ ಕಂದಿದ ಮೈಯ ಬಾಡಿದ
ಲಲಿತವದನದ ಮಾಸಿ ಕೆದರಿದ
ತಲೆಯೊಳಿರೆ ತನ್ನೈವರನು ಕಂಡಳಲಿದನು ಭೀಮ ॥5॥
೦೦೬ ತಾಯೆ ನೀ ...{Loading}...
ತಾಯೆ ನೀ ದಿಟ ನಾಗ ನಗರಿಯ
ರಾಯನರಸಿಯೆ ನಿನ್ನ ಮಕ್ಕಳು
ರಾಯರೆದೆ ದಲ್ಲಣರೆ ಭಾರಿಯ ಬಾಹುವಿಕ್ರಮರೆ
ಈಯವಸ್ಥೆಗೆ ಸೋಮವಂಶದ
ರಾಯತನವೆಂತಹುದು ಹೇಳೌ
ತಾಯೆ ಹೇಳೆನ್ನಾಣೆ ಹೇಳೆಂದಳಲಿದನು ಭೀಮ ॥6॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ತಾಯೇ, ನೀನು ನಿಜವಾಗಿಯೂ ಹಸ್ತಿನಾಪುರದ ರಾಜನ ಅರಸಿಯೇ ? ನಿನ್ನ ಮಕ್ಕಳು ರಾಜರ ಎದೆಯನ್ನು ತಲ್ಲಣಗೊಳಿಸುವರೆ? ಬಹಳ ಭುಜ ಪರಾಕ್ರಮರೆ ? ಈ ಅವಸ್ಥೆಗೆ ಚಂದ್ರವಂಶದ ದೊರೆತನ ಹೇಗೆ ಹೊಂದೀತು ? ಹೇಳು ತಾಯೆ, ಹೇಳು ನನ್ನಾಣೆ, ಹೇಳು” ಎಂದು ಭೀಮ ದುಃಖಿಸಿದನು.
ಪದಾರ್ಥ (ಕ.ಗ.ಪ)
ನಾಗನಗರಿ -ಹಸ್ತಿನಾಪುರಿ,
ರಾಯರೆದೆದಲ್ಲಣರೆ- ರಾಯರುಗಳ ಎದೆಯನ್ನು ತಲ್ಲಣಗೊಳಿಸುವರೆ?
ಭಾರಿ-ಬಹಳ,
ಸೋಮವಂಶ-ಚಂದ್ರವಂಶ,
ರಾಯತನ-ದೊರೆತನ
ಮೂಲ ...{Loading}...
ತಾಯೆ ನೀ ದಿಟ ನಾಗ ನಗರಿಯ
ರಾಯನರಸಿಯೆ ನಿನ್ನ ಮಕ್ಕಳು
ರಾಯರೆದೆ ದಲ್ಲಣರೆ ಭಾರಿಯ ಬಾಹುವಿಕ್ರಮರೆ
ಈಯವಸ್ಥೆಗೆ ಸೋಮವಂಶದ
ರಾಯತನವೆಂತಹುದು ಹೇಳೌ
ತಾಯೆ ಹೇಳೆನ್ನಾಣೆ ಹೇಳೆಂದಳಲಿದನು ಭೀಮ ॥6॥
೦೦೭ ಜನನಿಯಙ್ಘ್ರಿಯನೊತ್ತಿ ಯಮನಂ ...{Loading}...
ಜನನಿಯಂಘ್ರಿಯನೊತ್ತಿ ಯಮನಂ
ದನನ ಚರಣವ ಮುರಿದು ಬಳಿಕ
ರ್ಜುನನ ಯಮಳರ ಪದವೆನಚ್ಚರದಂತೆ ಹಿಡಿಕಿಸುತ
ಅನಿಬರಿರವನು ನೋಡಿ ಪೂರ್ವವ
ನೆನೆದು ಬಿರಿಬಿರಿದಳುತ ಘನ ಕಾ
ನನದ ಮಧ್ಯದಲೀತನಿದ್ದನು ಹಿರಿದು ಚಿಂತಿಸುತ ॥7॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ತಾಯಿಯ ಪಾದಗಳನ್ನು ಒತ್ತಿದನು. ಧರ್ಮರಾಜನ ಪಾದಗಳನ್ನು ಮೃದುವಾಗಿ ಒತ್ತಿದನು. ನಂತರ ಪಕ್ಕಕ್ಕೆ ತಿರುಗಿ ಅರ್ಜುನನ ಹಾಗೂ ನಕುಲ ಸಹದೇವರ ಪಾದಗಳನ್ನು ಎಚ್ಚರವಾಗದಂತೆ, ಹಿಸುಕಿದನು. ಅವರೆಲ್ಲರ ಸ್ಥಿತಿಯನ್ನು ನೋಡುತ್ತಾ ಇರುವಾಗ ಹಿಂದಿನದೆಲ್ಲ ನೆನಪಿಗೆ ಬಂದು ಗಟ್ಟಿಯಾಗಿ ಅಳುತ್ತ ದೊಡ್ಡ ಅರಣ್ಯದ ಮಧ್ಯದಲ್ಲಿ ಬಹಳವಾಗಿ ಚಿಂತಿಸುತ್ತ ಭೀಮನು ಇದ್ದನು.
ಪದಾರ್ಥ (ಕ.ಗ.ಪ)
ಅಂಘ್ರಿ-ಪಾದ,
ಚರಣ-ಪಾದ,
ಹಿಡಿಕಿ-ಹಿಸುಕಿ,
ಬಿರಿದು-ಜೋರಾಗಿ,
ಘನ-ದೊಡ್ಡ
ಪಾಠಾನ್ತರ (ಕ.ಗ.ಪ)
ಬಿರಿದಳುತ - ಬಿರಿಬಿರಿದಳುತ - ಆದಿಪರ್ವ, ಮಯ.ವಿ.ವಿ.- ಡಾ.ಕೆ.ಆರ್.ಶೇಷಗಿರಿ
ಮೂಲ ...{Loading}...
ಜನನಿಯಂಘ್ರಿಯನೊತ್ತಿ ಯಮನಂ
ದನನ ಚರಣವ ಮುರಿದು ಬಳಿಕ
ರ್ಜುನನ ಯಮಳರ ಪದವೆನಚ್ಚರದಂತೆ ಹಿಡಿಕಿಸುತ
ಅನಿಬರಿರವನು ನೋಡಿ ಪೂರ್ವವ
ನೆನೆದು ಬಿರಿಬಿರಿದಳುತ ಘನ ಕಾ
ನನದ ಮಧ್ಯದಲೀತನಿದ್ದನು ಹಿರಿದು ಚಿಂತಿಸುತ ॥7॥
೦೦೮ ಔಕುವುದು ಬಲು ...{Loading}...
ಔಕುವುದು ಬಲು ನಿದ್ರೆ ನಿದ್ರೆಯ
ನೂಕುವನು ಕಣ್ಣೆವೆಗಳಲಿ ನಸು
ತೂಕಡಿಕೆ ತೋರಿದೊಡೆ ಮೈಗೆದರುವನು ಕೈಯೊಡನೆ
ಸೋಕುವುದು ಮೈಮರವೆ ಮರವೆಯ
ನೋಕರಿಸುವುದು ಚಿತ್ತ ವೃತ್ತಿ ನಿ
ರಾಕುಲಾಂತಃಕರಣನಾದನು ಬಳಿಕ ಕಲಿಭೀಮ ॥8॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಭೀಮನಿಗೆ ಬಹಳ ನಿದ್ರೆ ಔಕುವುದು. ನಿದ್ರೆಯನ್ನು ಕಣ್ಣಿನ ರೆಪ್ಪೆಗಳಿಂದ ದೂಡುವನು. ಸ್ವಲ್ಪ ಜೋಮು ಕಾಣಿಸಿದೊಡನೆ ಕೂಡಲೇ ಮೈಕೊಡವಿಕೊಳ್ಳುವನು. ಮೈಮರೆವು ಉಂಟಾದರೆ, ಮರವೆಯನ್ನು ಆಕ್ಷಣವೆ ಮನೋಧರ್ಮ ಹೊರನೂಕುವುದು. ಅನಂತರ ಕ್ಲೇಶವಿಲ್ಲದ ಮನಸ್ಸನ್ನು ಹೊಂದಿ ಕಲಿಭೀಮ ಪ್ರಸನ್ನನಾದನು.
ಪದಾರ್ಥ (ಕ.ಗ.ಪ)
ಎವೆ-ರೆಪ್ಪೆ, ನಸು-ಸ್ವಲ್ಪ, ತೂಕಡಿಕೆ-ಜೋಮು, ನೂಕು-ದೂಡು, ಕೈಯೊಡನೆ-ಕೂಡಲೇ, ಓಕರಿಸು-ಹೊರನೂಕು, ಚಿತ್ತವೃತ್ತಿ-ಮನೋಧರ್ಮ, ನಿರಾಕುಲ-ಕ್ಲೇಶವಿಲ್ಲದ, ಅಂತಃಕರಣ-ಮನಸ್ಸು
ಮೂಲ ...{Loading}...
ಔಕುವುದು ಬಲು ನಿದ್ರೆ ನಿದ್ರೆಯ
ನೂಕುವನು ಕಣ್ಣೆವೆಗಳಲಿ ನಸು
ತೂಕಡಿಕೆ ತೋರಿದೊಡೆ ಮೈಗೆದರುವನು ಕೈಯೊಡನೆ
ಸೋಕುವುದು ಮೈಮರವೆ ಮರವೆಯ
ನೋಕರಿಸುವುದು ಚಿತ್ತ ವೃತ್ತಿ ನಿ
ರಾಕುಲಾಂತಃಕರಣನಾದನು ಬಳಿಕ ಕಲಿಭೀಮ ॥8॥
೦೦೯ ವ್ಯಾಳ ಗಜ ...{Loading}...
ವ್ಯಾಳ ಗಜ ಭೂದಾರ ವೃಕ ಶಾ
ರ್ದೂಲ ಸಿಂಹಾದಿಗಳ ಭಯವಾ
ಕೀಳ ದೈತ್ಯ ಪ್ರಕರ ಭಯವಹುದೆನ್ನ ಮರವೆಯಲಿ
ಹೇಳಲೇನದನಿನ್ನು ನಿದ್ರಾ
ವ್ಯಾಳ ವಿಷವನು ಮೊಗೆದು ಸೂಸಿ ವಿ
ಶಾಲ ಮತಿಯವಧಾನದಲಿ ಕಾದಿರ್ದನೈವರನು ॥9॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಈಗ ನಾನು ಮೈ ಮರೆತರೆ, ಇವರಿಗೆಲ್ಲ ಸರ್ಪ, ಆನೆ, ಕಾಡುಹಂದಿ, ತೋಳ, ಹುಲಿ, ಸಿಂಹ ಮೊದಲಾದ ದುಷ್ಟ ಪ್ರಾಣಿಗಳು ಮತ್ತು ಆ ನೀಚ ರಾಕ್ಷಸ ಸಮೂಹಗಳಿಂದ ಭಯವಿದೆ “. ಎಂದು ವಿಶಾಲ ಮತಿಯಾದ ಭೀಮಸೇನನು ನಿದ್ದೆಯೆಂಬ ಹಾವಿನ ವಿಷವನ್ನು ಹೊರಚೆಲ್ಲಿ , ಐವರನ್ನು ಎಚ್ಚರದಿಂದ ಕಾಯುತ್ತಿದ್ದನು. ಇನ್ನು ಅದನ್ನು ಏನೆಂದು ಹೇಳಲಿ ?
ಪದಾರ್ಥ (ಕ.ಗ.ಪ)
ವ್ಯಾಳ-ಸರ್ಪ, ಭೂದಾರ-ಕಾಡುಹಂದಿ, ವೃಕ-ತೋಳ, ಶಾರ್ದೂಲ-ಹುಲಿ, ಪ್ರಕರ-ಸಮೂಹ, ಮೊಗೆದು-ಹೊರಹಾಕಿ, ಸೂಸು-ಚೆಲ್ಲು, ಅವಧಾನ-ಎಚ್ಚರ
ಮೂಲ ...{Loading}...
ವ್ಯಾಳ ಗಜ ಭೂದಾರ ವೃಕ ಶಾ
ರ್ದೂಲ ಸಿಂಹಾದಿಗಳ ಭಯವಾ
ಕೀಳ ದೈತ್ಯ ಪ್ರಕರ ಭಯವಹುದೆನ್ನ ಮರವೆಯಲಿ
ಹೇಳಲೇನದನಿನ್ನು ನಿದ್ರಾ
ವ್ಯಾಳ ವಿಷವನು ಮೊಗೆದು ಸೂಸಿ ವಿ
ಶಾಲ ಮತಿಯವಧಾನದಲಿ ಕಾದಿರ್ದನೈವರನು ॥9॥
೦೧೦ ಧರಣಿಪತಿ ಕೇಳೊನ್ದು ...{Loading}...
ಧರಣಿಪತಿ ಕೇಳೊಂದು ಮಾರಿಯ
ಮುರಿವನಿವರಿಗೆ ತದ್ವನಾಂತರ
ದರಸು ದೈತ್ಯ ಹಿಡಿಂಬನೆಂಬವನತುಲ ಭುಜಬಲನು
ಮುರಿಮುರಿದು ಮೇಗಾಳಿಯಲಿ ಮೂ
ಗರಳಿ ಮಾನವ ಗಂಧವಿದು ಗೋ
ಚರಿಸಿತೆತ್ತಣದೋ ಮಹಾದೇವೆನುತ ಬೆರಗಾದ ॥10॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಜನಮೇಜಯ ಮಹಾರಾಜನೇ ಕೇಳು, ಇವರಿಗೆ ಒಂದು ಆಪತ್ತು ಆವರಿಸಿತು. ಆ ವನ ಪ್ರದೇಶದ ಅರಸು ರಕ್ಕಸ ಹಿಡಿಂಬನೆಂಬವನು. ಅವನು ಬಹಳ ಪರಾಕ್ರಮಿಯು. ಮತ್ತೆ ಮತ್ತೆ ಬರುವ ಮೇಲುಗಡೆಯ ದಿಕ್ಕಿನಿಂದ ಬೀಸುವ ಗಾಳಿಯು ಹೊತ್ತು ತಂದ ವಾಸನೆಯಿಂದ ಹಿಡಿಂಬನ ಮೂಗು ಅರಳಿತು. ಮಾನವ ವಾಸನೆಯು ವೇದ್ಯವಾಗಿ ಇದು ಎಲ್ಲಿಯದೋ ಮಹಾದೇವ ! ಎನ್ನುತ್ತ ವಿಸ್ಮಯಗೊಂಡನು.
ಪದಾರ್ಥ (ಕ.ಗ.ಪ)
ಮಾರಿ-ಆಪತ್ತು, ಮುರಿವು-ಆವರಿಸು, ಭುಜಬಲನು-ತೋಳ ಶಕ್ತಿಯವನು, ಮುರಿ ಮುರಿದು-ಮತ್ತೆ ಮತ್ತೆ ಬರುವ, ಮೇಗಾಳಿ-ಮೇಲುಗಡೆಯ ದಿಕ್ಕಿನಿಂದ ಬರುವ ಗಾಳಿ, ಗೋಚರಿಸು-ವೇದ್ಯವಾಗು, ಬೆರಗು-ವಿಸ್ಮಯ, ಗಂಧ-ವಾಸನೆ
ಟಿಪ್ಪನೀ (ಕ.ಗ.ಪ)
ಮೇಗಾಳಿ :
ಹಿಡಿಂಬ - ಹಿಡಿಂಬನು ಕ್ರೂರವಾದ ಎಂಟು ಕೋರೆ ಹಲ್ಲುಗಳುಳ್ಳ ಭಯಂಕರ ರಾಕ್ಷಸೇಶ್ವರ ಎಂದು ಮಹಾಭಾರತದ ಆದಿಪರ್ವದ 152ನೇ ಅಧ್ಯಾಯದಲ್ಲಿ ಹೇಳಲಾಗಿದೆ. ಇವನು ನರಮಾಂಶಾಪೇಕ್ಷಿ. ಲೋಹಿತಾಕ್ಷ, ಮಹಾಭಾಹು, ಊಧ್ರ್ವಕೇಶ, ಮಹಾಬಲ ಎಂದು ವ್ಯಾಸರು ಹೇಳುತ್ತಾರೆ. ಶಾಲವೃಕ್ಷದ ಮೇಲೆ ಇವನ ವಾಸ. ಮುಂದೆ ಅರಣ್ಯಪರ್ವದಲ್ಲಿ ಬರುವ ಕಿಮ್ಮೀರನೆಂಬ ದಾನವನ ಸೋದರ (ಸ್ನೇಹಿತನೆಂದೂ ಹೇಳಲಾಗಿದೆ). ಇವನ ತಂಗಿ ಹಿಡಿಂಬೆ ಅಥವಾ ಕಮಲ ಪಾಲಿಕೆ.
ಪಾಂಡವರು ಅರಗಿನ ಮನೆಯಿಂದ ತಪ್ಪಿಸಿಕೊಂಡು ತುಂಬ ದೂರ ನಡೆದು ಆಯಾಸದಿಂದ ಮಲಗಿರುತ್ತಾರೆ. ಭೀಮನು ಮಾತ್ರ ಅವರ ರಕ್ಷಣೆಗಾಗಿ ಎಚ್ಚರವಾಗಿರುತ್ತಾನೆ.
ರಾತ್ರಿಯಲ್ಲಿ ರಾಕ್ಷಸರ ಕಣ್ಣುಗಳು ಚುರುಕಾಗಿರುತ್ತವೆ. ಹಿಡಿಂಬನ ಮೂಗು ಕೂಡ ಬಲು ಚುರುಕು. ಪಾಂಡವರು ಮಲಗಿದ ಕಡೆಯಿಂದ ಬಂದ ಗಾಳಿಯಲ್ಲಿ ಅವನಿಗೆ ಮನುಷ್ಯರಕ್ತದ ವಾಸನೆ ಹತ್ತಿತು.
‘ಮಾನುಷೋ ಬಲವಾನ್ ಗಂಧೋ
ಘ್ರಾಣಂ ತಪ್ಯತೀವ ಮೇ’
(ಆಹಾ! ಮನುಷ್ಯ ವಾಸನೆ ನನ್ನ ಮೂಗನ್ನು ಅರಳಿಸುತ್ತದೆ!) ಎಂದುಕೊಂಡು ಅವರನ್ನೆಲ್ಲ ಕೊಂದು ತರಲು ತಂಗಿ ಹಿಡಿಂಬೆಯನ್ನು ಕಳಿಸಿದ. ಆದರೆ ಅವಳು ಭೀಮನ ರೂಪಕ್ಕೆ ಮರುಳಾಗಿ ಸುಂದರ ಸ್ತ್ರೀಯ ವೇಷದಲ್ಲಿ ಹೋದಾಗ ಎಷ್ಟು ಹೊತ್ತಾದರೂ ಬಾರದುದನ್ನು ಕಂಡು ತಾನೇ ಅಲ್ಲಿಗೆ ಹೋದ.
ತಂಗಿಯನ್ನು ನುಂಗಲು ಹೋದಾಗ ಭೀಮ ಅವನನ್ನು ತಡೆದ. ಈಗ ಹಿಡಿಂಬನು ಭೀಮನ ಮೇಲೆಯೆ ಏರಿ ಬರಬೇಕೆ! ಪಾಪ ಆಯಾಸದಿಂದ ಮಲಗಿರುವ ಸೋದರರೂ ತಾಯಿಯೂ ಇವನ ಕಿರುಚಾಟದಿಂದ ಎಲ್ಲಿ ಎದ್ದುಬಿಡುತ್ತಾರೋ ಎಂಬ ಯೋಚನೆ ಅವನದು. ಅದಕ್ಕೆ
‘ಕಿಂ ತಏ ಹಿಡಿಂಬ ಏತೈರ್ವಾ ಸುಖಸುಪ್ತೈಃ ಪ್ರಚೋದಿತ್ಯಃ’
(ಸುಖವಾಗಿ ಮಲಗಿ ನಿದ್ರಿಸುತ್ತಿರುವ ಇವರನ್ನು ಏಕೆ ಎಬ್ಬಿಸುತ್ತೀ) ಎಂದು ಹೇಳಿ ಅವನನ್ನು ದೂರಕ್ಕೆ ಎಳೆದುಕೊಂಡು ಹೋದ. ಆದರೂ ಅವನು U್ಪರ್ಜಿಸಿದ್ದರಿಂದ ಪಾಂಡವರೆಲ್ಲ ಎಚ್ಚೆತ್ತು ಗಾಬರಿಯಾದರು. ಅರ್ಜುನನು ಭೀಮ-ಹಿಡಿಂಬರು ಹೋರಾಡುತ್ತಿದ್ದ ಜಾಗಕ್ಕೆ ಬಂದ.
ಭೀಮನಿಗೆ ಆಯಾಸವಾಗಿದೆ ಎಂದು ಶಂಕಿಸಿ ತಾನೇ ಯುದ್ಧ ಮಾಡುವುದಾಗಿ ತಿಳಿಸಿದ. ಆದರೆ ಅzಕ್ಕೆ ಒಪ್ಪದ ಭೀಮನು ಇನ್ನೇನು ಉಷಃ ಕಾಲ ಬರಲಿದೆ ಎನ್ನುವಾಗ ರಾಕ್ಷರಿಗೆ ಪ್ರಬಲ ಶಕ್ತಿ ಬರುತ್ತದೆ ಎಂಬುದು ಗೊತ್ತಿದ್ದುದರಿಂದ ಬೇಗನೆ ‘ರೌದ್ರ’ ಮುಹೂರ್ತ ಬರುವುದಕ್ಕೆ ಮೊದಲೇ ಕೊಲ್ಲಬೇಕೆಂದು ನಿಶ್ಚಯಿಸಿ, ಬಹಳ ಕಾಲ ಗಿರಗಿರನೆ ತಿರುಗಿಸಿ ಅನಂತರ ಹಠಾತ್ತಾಗಿ ಭೂಮಿಗೆ ಕುಕ್ಕಿ ಪಶುವನ್ನು ಕೊಲ್ಲುವಂತೆ ಕೊಂದು ಹಾಕಿದ.
ಹಿಡಿಂಬವನ ಎಂದೇ ಆ ಪ್ರದೇಶಕ್ಕೆ ಹೆಸರಿತ್ತು. ಇವನನ್ನು ಕೊಂದು ಭೀಮನು ಹಿಡಿಂಬೆಯನ್ನು ಮದುವೆಯಾಗಿ ಘಟೋತ್ಕಚನೆಂಬ ಪುತ್ರನನ್ನು ಪಡೆದರೆ ಅವನು ಕರ್ಣನಿಗೆ ವೈರಿಯಾಗಿ ಬೆಳೆಯುವನೆಂದು ಇಂದ್ರನು ಹೀಗೆ ಹಂಚಿಕೆ ಹಾಕಿದ್ದನೆಂದು ವ್ಯಾಸರು ಹೇಳುತ್ತಾರೆ.”
ಮೂಲ ...{Loading}...
ಧರಣಿಪತಿ ಕೇಳೊಂದು ಮಾರಿಯ
ಮುರಿವನಿವರಿಗೆ ತದ್ವನಾಂತರ
ದರಸು ದೈತ್ಯ ಹಿಡಿಂಬನೆಂಬವನತುಲ ಭುಜಬಲನು
ಮುರಿಮುರಿದು ಮೇಗಾಳಿಯಲಿ ಮೂ
ಗರಳಿ ಮಾನವ ಗಂಧವಿದು ಗೋ
ಚರಿಸಿತೆತ್ತಣದೋ ಮಹಾದೇವೆನುತ ಬೆರಗಾದ ॥10॥
೦೧೧ ತಾಯೆ ಬಾರೌ ...{Loading}...
ತಾಯೆ ಬಾರೌ ತಂಗಿ ಗಂಧದ
ವಾಯುವಿದೆ ಹೊಣೆಗಾರನಾಗಿ ನ
ವಾಯ ಭೋಜನವಿಂದು ದೊರಕಿತು ಮನುಜ ಮಾಂಸದಲಿ
ಸಾಯಲವದಿರ ಬಡಿದು ತಾ ತಮ
ಗಾಯವಿದು ಕೃತಪುಣ್ಯಫಲವೆನೆ
ಮಾಯಗಾತಿ ಹಸಾದವೆನುತ ಹಿಡಿಂಬಿ ಗಮಿಸಿದಳು ॥11॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ತಾಯೇ, ಬಾರಮ್ಮಾ ತಂಗೀ, ವಾಸನೆಯನ್ನು ಹೊತ್ತು ತರುವ ವಾಯುವಿನ ದೆಸೆಯಿಂದ ಹೊಸದಾದ ಮನುಜ ಮಾಂಸದ ಭೋಜನ ಈ ದಿನ ದೊರಕಿತು ಎನಿಸುತ್ತಿದೆ. ಅವರನ್ನು ಸಾಯುವಂತೆ ಬಡಿದು ತೆಗೆದುಕೊಂಡು ಬಾ. ನಮಗೆ ಒಳ್ಳೆಯ ಲಾಭ ಇದು. ನಾವು ಹಿಂದೆ ಮಾಡಿದ ಪುಣ್ಯದ ಫಲ” ಎನಲು ಮೋಸಗಾತಿ ಹಿಡಿಂಬಿಯು ಅಪ್ಪಣೆ ಎನುತ್ತ ಹೋದಳು.
ಪದಾರ್ಥ (ಕ.ಗ.ಪ)
ಹೊಣೆಗಾರ-ಜವಾಬ್ದಾರ, ನವಾಯ-ಹೊಸದಾದ, ಆಯ-ಲಾಭ, ಮಾಯಗಾತಿ-ಮೋಸಗಾತಿ, ಹಸಾದ-ಅಪ್ಪಣೆ
ಟಿಪ್ಪನೀ (ಕ.ಗ.ಪ)
ಹಿಡಿಂಬಿ : ಹಿಡಿಂಬನ ತಂಗಿ, ಕಮಲಪಾಲಿಕೆಯೆಂಬುದು ನಾಮಾಂತರ. ದಿವ್ಯಜ್ಞಾನಯುಕ್ತಳು. ಭೀಮನನ್ನು ಒಲಿಸಿಕೊಂಡು ಅವನಿಂದ ಮಗ ಘಟೋತ್ಕಚನನ್ನು ಪಡೆದಳು. ಈ ರಾಕ್ಷಸಿಗೆ ‘ಸಾಲಕಟಂಕಟಾ’ ಎಂಬ ಹೆಸರೂ ಇದೆ.
ಹಿಡಿಂಬೆ - ಮಹಾಭಾರತದಲ್ಲಿ ಅಲಾಯುಧ ಅಲಂಬುಸ ಘಟೋತ್ಕಚ ಮೊದಲಾದ ರಾಕ್ಷಸರ ವಿಷಯ ಬರುತ್ತದೆ. ಇವರೆಲ್ಲ ಬಹುóಶಃ ಪರ್ವತವಾಸಿಗಳಾದ ಗಿರಿಜನರಿರಬೇಕು. ಹಿಡಿಂಬೆಯು ಹಿಡಿಂಬ ರಾಕ್ಷಸನ ತಂಗಿ. ಸಾಲಕಟಂಕಟಿ ಎಂಬ ಹೆಸರೂ ಇವಳಿಗುಂಟು. ಆದಿಪರ್ವದಲ್ಲಿ ಇವರ ಪ್ರಸಕ್ತಿಯಿದೆ. ಪಾಂಡವರು ಅರಗಿನ ಮನೆಯಿಂದ ತಪ್ಪಿಸಿಕೊಂಡು ಕಾಡಿನಲ್ಲಿ ಓಡಾಡುತ್ತ ಹಿಡಿಂಬವನಕ್ಕೆ ಬರುತ್ತಾರಷ್ಟೆ. ಅಣ್ಣನ ಆಜ್ಞೆಯಂತೆ ಮನುಷ್ಯವಾಸನೆ ಹಿಡಿದು ಪಾಂಡವರನ್ನೆಲ್ಲ ಕೊಂದು ಅಡಿಗೆ ಮಾಡಲೆಂದು ಹಿಡಿಂಬೆ ಬರುತ್ತಾಳೆ. ಆದರೆ ಕುಂತಿ ಸಮೇತ ಮಲಗಿದ ಪಾಂಡವರನ್ನು ಕಾವಲು ಕಾಯುತ್ತ ಇದ್ದ ಭೀಮನ ರೂಪಕ್ಕೆ ಮರುಳಾಗುತ್ತಾಳೆ. ಸುಂದರ ಸ್ತ್ರೀಯ ವೇಷಧರಿಸಿ ಬರುತ್ತಾಳೆ. ಭೀಮನು ತನ್ನನ್ನು ಮದುವೆಯಾಗುವುದಾದರೆ ಭೀಮನನ್ನು ದೂರಪ್ರದೇಶಕ್ಕೆ ಒಯ್ದು ಬದುಕಿಸುವುದಾಗಿ ಹೇಳುತ್ತಾಳೆ. ಅವಳ ಕಥೆಯನ್ನೆಲ್ಲ ಕೇಳಿದ ಭೀಮ ತನ್ನ ಸೋದರರನ್ನೂ ತಾಯಿಯನ್ನೂ ಬಿಡಲಾರೆ ಎಂದಾಗ ಅವರನ್ನೂ ಬದುಕಿಸುವುದಾಗಿ ಹೇಳುತ್ತಾಳೆ. ತನಗೆ ಮಾಯಾವಿದ್ಯೆ ಗೊತ್ತಿರುವುದರಿಂದ ಅವರನ್ನೆಲ್ಲ ಸುರಕ್ಷಿತ ಸ್ಥಳಕ್ಕೆ ಒಯ್ಯಲು ಒಪ್ಪುತ್ತಾಳೆ. ಆದರೆ ಭೀಮ ತನಗೆ ಹಿಡಿಂಬನ ಭಯವಿಲ್ಲವೆಂದು ಅಲ್ಲೇ ಉಳಿಯುತ್ತಾನೆ. ಸಿಟ್ಟಿನಿಂದ ತಂಗಿಯನ್ನೇ ಕೊಲ್ಲಲು ಹಿಡಿಂಬನ ಭಯವಿಲ್ಲವೆಂದು ಅಲ್ಲೇ ತುಳಿಯುತ್ತಾನೆ. ಸಿಟ್ಟಿನಿಂದ ತಂಗಿಯನ್ನೇ ಕೊಲ್ಲಲು ಹಿಡಿಂಬ ಬಂದರೆ ಭೀಮ ಅವಳನ್ನು ರಕ್ಷಿಸಿ ಹಿಡಿಂಬನ ಜೊತೆಗೆ ಮಲ್ಲಯುದ್ದ ಮಾಡಿ ಕೊಲ್ಲುತ್ತಾನೆ. ಹಿಡಿಂಬೆಯು ಭೀಮನನ್ನೇ ಮದುವೆಯಾಗುವುದಾಗಿ ಹಠ ಹಿಡಿಯುತ್ತಾಳೆ. ಅವಳನ್ನೂ ಕೊಲ್ಲು ಭೀಮನು ಮುಂದೆ ಬಂದಾಗ ಧರ್ಮರಾಯ ತಡೆಯುತ್ತಾನೆ. ಕೊನೆಗೆ ದೀರ್ಘಚರ್ಚೆಯ ಆನಂತರ ಭೀಮನನ್ನು ಅವಳು ಮದುವೆಯಾಗಲು ಕುಂತಿ ಮತ್ತು ಧರ್ಮರಾಯ ಒಪುತ್ತಾರೆ. Éಆದರೆ ಹಗಲಲ್ಲಿ ಮಾತ್ರ ಸುತ್ತಾಡಿ ರಾತ್ರಿ ಭೀಮನನ್ನು ತಮ್ಮ ಬಳಿಗೇ ಕಳಿಸಬೇಕೆಂದೂ ಒಂದು ಮಗುವಾಗುವ ತನಕ ಅವರು ಒಟ್ಟಿಗೆ ಇರಬಹುದೆಂದೂ ಹೇಳುತ್ತಾರೆ. ಭೀಮ-ಹಿಡಿಂಬೆಯರ ಪ್ರೇಮ ವಿಹಾರವನ್ನು ವ್ಯಾಸರು ದೀರ್ಘವಾಗಿ ವಿವರಿಸಿದ್ದಾರೆ. ಪರ್ವತ ಪ್ರಾಂತಗಳಲ್ಲಿ ಅವರು ಓಡಾಡಿ ವಿಹರಿಸಿದ್ದರ ರೋಚಕ ವರ್ಣನೆಯಿದೆ. ಕೊನೆಗೆ ಅವಳು ಗರ್ಭವತಿಯಾಗುತ್ತಾಳೆ. ಆ ದಿನವೇ ಮಗುವನ್ನು ಹೆರುತ್ತಾಳೆ. ಆ ಮಗುವೂ ಸದ್ಯೋಜಾತನಾಗಿದ್ದುದರಿಂದ ಹುಟ್ಟಿದ ಕೂಡಲೇ ದೊಡ್ಡ ಹುಡುಗನಾಗುತ್ತಾನೆ. ಕಾಮ ರೂಪಧಾರಿಯಾದ ಘಟೋತ್ಕಚನು ಎಲ್ಲರಿಗೆ ನಮಸ್ಕಾರ ಮಡಿ ತಾಯಿಯೊಂದಿಗೆ ಹೊರಡುತ್ತಾನೆ.
ಹೊರಡುವ ಮುನ್ನ ತಾಯಿ ಮಗ ಇಬ್ಬರೂ ಪಾಂಡವರಿಗೆ ‘‘ನೀವು ಕರೆದಾಗ ನಾವು ಬರುತ್ತೇವೆ. ಏನು ಕೆಲಸವಿದ್ದರೂ ಮಾಡಿಕೊಡುತ್ತೇವೆ’’ ಎಂದು ಹೇಳುತ್ತಾರೆ. ಮಾತಿನಂತೆ ಮಗ ಘಟೋತ್ಕಚನೊಂದಿಗೆ ಹಿಡಿಂಬೆ ಪಾಂಡವರು ಕರೆದಾಗಲೆಲ್ಲ ಬರುತ್ತಿದ್ದಲೆಂಬುದಕ್ಕೆ ಅರಣ್ಯಪವೃದಲ್ಲಿ ಅನೇಕ ನಿದರ್ಶನಗಳು ದೊರೆಯುತ್ತವೆ. ದ್ರೌಪದಿ ಮುಂದೆ ನಡೆಯಲಾರದೆ ಮೂರ್ಛೆಹೋದಾಗ ಬಂದು ಅವಳನ್ನು ಹೊತ್ತುಕೊಂಡು ದಾರಿ ಸಮೆಸಿದ್ದು ಮತ್ತು ಶತಶೃಂಗ ಪರ್ವತದಲ್ಲಿದಾಗ ಪಾಂಡವರು ಬಯಸಿದ ಜಾಗಕ್ಕೆ ಅವರನ್ನೆಲ್ಲ ಹೊತ್ತು ಒಯ್ದದ್ದು ಈ ತಾಯಿ-ಮಕ್ಕಳು ಮಾಡಿದ ಸೇವಾಕಾರ್ಯ ಎನ್ನಬೇಕು. ಕೊನೆಗೆ ಮಹಾಭಾರತ ಯುದ್ಧದಲ್ಲಿ ಕೂಡ ಭೀಕರವಾಗಿ ಕಾದಾಡಿ ಘಟೋತ್ಕಚನು ಕರ್ಣನಿಂದ ಹತನಾದುದನ್ನು ನೋಡಿದರೆ ರಾಕ್ಷಸರೆಂದು ನಾವು ಕರೆಯುವ ಈ ಜನವರ್ಗದ ಕಾರ್ಯಶ್ರದ್ಧೆ ಗೋಚರವಾಗುತ್ತದೆ. ಧರ್ಮರಾಯ ಭೀಮರೊಂದಿಗೆ ಹಿಡಿಂಬೆಯು ತಾರ್ಕಿಕವಾಗಿ ಸಚಿವಾದ ನಡೆಸಿ ಮದುವೆಗೆ ಒಪ್ಪಿಸಿದ ಪ್ರಸಂಗವಂತೂ ಅವಳ ಮಾತುಗಾರಿಕೆಯ ಕೌಶಲವನ್ನು ಸಾರುವಂತಿದೆ. ಮಹಾಭಾರತದಲ್ಲಿ ಮಾನವ-ದೈವ ಸಂಬಂಧಗಳು ಬರುವಂತೆಯೇ ಮಾನವ-ರಾಕ್ಷಸ ಸಂಬಂಧಗಳು ಹಲವಾರು ಸಂದರ್ಭಗಳಲ್ಲಿ ಉಲ್ಲೇಖಗೊಂಡಿವೆ.ಹಿಡಿಂಬನು ಕ್ರೂರವಾದ ಎಂಟು ಕೋರೆ ಹಲ್ಲುಗಳುಳ್ಳ ಭಯಂಕರ ರಾಕ್ಷಸೇಶ್ವರ ಎಂದು ಮಹಾಭಾರತದ ಆದಿಪರ್ವದ 152ನೇ ಅಧ್ಯಾಯದಲ್ಲಿ ಹೇಳಲಾಗಿದೆ. ಇವನು ನರಮಾಂಶಾಪೇಕ್ಷಿ. ಲೋಹಿತಾಕ್ಷ, ಮಹಾಭಾಹು, ಊಧ್ರ್ವಕೇಶ, ಮಹಾಬಲ ಎಂದು ವ್ಯಾಸರು ಹೇಳುತ್ತಾರೆ. ಶಾಲವೃಕ್ಷದ ಮೇಲೆ ಇವನ ವಾಸ. ಮುಂದೆ ಅರಣ್ಯಪರ್ವದಲ್ಲಿ ಬರುವ ಕಿಮ್ಮೀರನೆಂಬ ದಾನವನ ಸೋದರ (ಸ್ನೇಹಿತನೆಂದೂ ಹೇಳಲಾಗಿದೆ). ಇವನ ತಂಗಿ ಹಿಡಿಂಬೆ ಅಥವಾ ಕಮಲ ಪಾಲಿಕೆ.
ಪಾಂಡವರು ಅರಗಿನ ಮನೆಯಿಂದ ತಪ್ಪಿಸಿಕೊಂಡು ತುಂಬ ದೂರ ನಡೆದು ಆಯಾಸದಿಂದ ಮಲಗಿರುತ್ತಾರೆ. ಭೀಮನು ಮಾತ್ರ ಅವರ ರಕ್ಷಣೆಗಾಗಿ ಎಚ್ಚರವಾಗಿರುತ್ತಾನೆ.
ರಾತ್ರಿಯಲ್ಲಿ ರಾಕ್ಷಸರ ಕಣ್ಣುಗಳು ಚುರುಕಾಗಿರುತ್ತವೆ. ಹಿಡಿಂಬನ ಮೂಗು ಕೂಡ ಬಲು ಚುರುಕು. ಪಾಂಡವರು ಮಲಗಿದ ಕಡೆಯಿಂದ ಬಂದ ಗಾಳಿಯಲ್ಲಿ ಅವನಿಗೆ ಮನುಷ್ಯರಕ್ತದ ವಾಸನೆ ಹತ್ತಿತು.
‘ಮಾನುಷೋ ಬಲವಾನ್ ಗಂಧೋ
ಘ್ರಾಣಂ ತಪ್ಯತೀವ ಮೇ’
(ಆಹಾ! ಮನುಷ್ಯ ವಾಸನೆ ನನ್ನ ಮೂಗನ್ನು ಅರಳಿಸುತ್ತದೆ!) ಎಂದುಕೊಂಡು ಅವರನ್ನೆಲ್ಲ ಕೊಂದು ತರಲು ತಂಗಿ ಹಿಡಿಂಬೆಯನ್ನು ಕಳಿಸಿದ. ಆದರೆ ಅವಳು ಭೀಮನ ರೂಪಕ್ಕೆ ಮರುಳಾಗಿ ಸುಂದರ ಸ್ತ್ರೀಯ ವೇಷದಲ್ಲಿ ಹೋದಾಗ ಎಷ್ಟು ಹೊತ್ತಾದರೂ ಬಾರದುದನ್ನು ಕಂಡು ತಾನೇ ಅಲ್ಲಿಗೆ ಹೋದ.
ತಂಗಿಯನ್ನು ನುಂಗಲು ಹೋದಾಗ ಭೀಮ ಅವನನ್ನು ತಡೆದ. ಈಗ ಹಿಡಿಂಬನು ಭೀಮನ ಮೇಲೆಯೆ ಏರಿ ಬರಬೇಕೆ! ಪಾಪ ಆಯಾಸದಿಂದ ಮಲಗಿರುವ ಸೋದರರೂ ತಾಯಿಯೂ ಇವನ ಕಿರುಚಾಟದಿಂದ ಎಲ್ಲಿ ಎದ್ದುಬಿಡುತ್ತಾರೋ ಎಂಬ ಯೋಚನೆ ಅವನದು. ಅದಕ್ಕೆ
‘ಕಿಂ ತಏ ಹಿಡಿಂಬ ಏತೈರ್ವಾ ಸುಖಸುಪ್ತೈಃ ಪ್ರಚೋದಿತ್ಯಃ’
(ಸುಖವಾಗಿ ಮಲಗಿ ನಿದ್ರಿಸುತ್ತಿರುವ ಇವರನ್ನು ಏಕೆ ಎಬ್ಬಿಸುತ್ತೀ) ಎಂದು ಹೇಳಿ ಅವನನ್ನು ದೂರಕ್ಕೆ ಎಳೆದುಕೊಂಡು ಹೋದ. ಆದರೂ ಅವನು U್ಪರ್ಜಿಸಿದ್ದರಿಂದ ಪಾಂಡವರೆಲ್ಲ ಎಚ್ಚೆತ್ತು ಗಾಬರಿಯಾದರು. ಅರ್ಜುನನು ಭೀಮ-ಹಿಡಿಂಬರು ಹೋರಾಡುತ್ತಿದ್ದ ಜಾಗಕ್ಕೆ ಬಂದ.
ಭೀಮನಿಗೆ ಆಯಾಸವಾಗಿದೆ ಎಂದು ಶಂಕಿಸಿ ತಾನೇ ಯುದ್ಧ ಮಾಡುವುದಾಗಿ ತಿಳಿಸಿದ. ಆದರೆ ಅzಕ್ಕೆ ಒಪ್ಪದ ಭೀಮನು ಇನ್ನೇನು ಉಷಃ ಕಾಲ ಬರಲಿದೆ ಎನ್ನುವಾಗ ರಾಕ್ಷರಿಗೆ ಪ್ರಬಲ ಶಕ್ತಿ ಬರುತ್ತದೆ ಎಂಬುದು ಗೊತ್ತಿದ್ದುದರಿಂದ ಬೇಗನೆ ‘ರೌದ್ರ’ ಮುಹೂರ್ತ ಬರುವುದಕ್ಕೆ ಮೊದಲೇ ಕೊಲ್ಲಬೇಕೆಂದು ನಿಶ್ಚಯಿಸಿ, ಬಹಳ ಕಾಲ ಗಿರಗಿರನೆ ತಿರುಗಿಸಿ ಅನಂತರ ಹಠಾತ್ತಾಗಿ ಭೂಮಿಗೆ ಕುಕ್ಕಿ ಪಶುವನ್ನು ಕೊಲ್ಲುವಂತೆ ಕೊಂದು ಹಾಕಿದ.
ಹಿಡಿಂಬವನ ಎಂದೇ ಆ ಪ್ರದೇಶಕ್ಕೆ ಹೆಸರಿತ್ತು. ಇವನನ್ನು ಕೊಂದು ಭೀಮನು ಹಿಡಿಂಬೆಯನ್ನು ಮದುವೆಯಾಗಿ ಘಟೋತ್ಕಚನೆಂಬ ಪುತ್ರನನ್ನು ಪಡೆದರೆ ಅವನು ಕರ್ಣನಿಗೆ ವೈರಿಯಾಗಿ ಬೆಳೆಯುವನೆಂದು ಇಂದ್ರನು ಹೀಗೆ ಹಂಚಿಕೆ ಹಾಕಿದ್ದನೆಂದು ವ್ಯಾಸರು ಹೇಳುತ್ತಾರೆ.
ಮೂಲ ...{Loading}...
ತಾಯೆ ಬಾರೌ ತಂಗಿ ಗಂಧದ
ವಾಯುವಿದೆ ಹೊಣೆಗಾರನಾಗಿ ನ
ವಾಯ ಭೋಜನವಿಂದು ದೊರಕಿತು ಮನುಜ ಮಾಂಸದಲಿ
ಸಾಯಲವದಿರ ಬಡಿದು ತಾ ತಮ
ಗಾಯವಿದು ಕೃತಪುಣ್ಯಫಲವೆನೆ
ಮಾಯಗಾತಿ ಹಸಾದವೆನುತ ಹಿಡಿಂಬಿ ಗಮಿಸಿದಳು ॥11॥
೦೧೨ ಬನ್ದಳವಳತಿ ರೌದ್ರರೂಪಿನೊ ...{Loading}...
ಬಂದಳವಳತಿ ರೌದ್ರರೂಪಿನೊ
ಳಂದು ಕಂಡಳು ದೂರದಲಿ ಹರಿ
ನಂದನನ ಸುಳಿದಲೆಯ ಕೆಮ್ಮೀಸೆಗಳ ಕರ್ಕಶದ
ಕೆಂದಳದ ಕೇಸರಿಯ ಕಂಗಳ
ಕುಂದ ರದನಚ್ಛವಿಯಲಿರೆ ಮನ
ಸಂದಳಾ ಖಳನನುಜೆ ಸೋತಳು ಭೀಮಸೇನಂಗೆ ॥12॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅವಳು ಅತಿ ಭೀಕರ ರೂಪಿನಲ್ಲಿ ಬಂದಳು. ದೂರದಿಂದಲೇ ವಾಯುಪುತ್ರನ ಬಿರುಸಾದ ಸುಳಿದಲೆ ಮತ್ತು ಕೆಂಪು ಬಣ್ಣದ ಮೀಸೆ, ಕೆಂಪಾದ ಕೈ, ಕೇಸರಿ ಬಣ್ಣದ ಕಣ್ಣುಗಳು, ಮೊಲ್ಲೆಯಂತಿರುವ ಹಲ್ಲುಗಳ ಕಾಂತಿ - ಇವುಗಳನ್ನು ಕಂಡು ಅವಳಿಗೆ ಭೀಮಸೇನನ ಮೇಲೆ ಮನಸ್ಸು ಉಂಟಾಯಿತು. ಆ ನೀಚನ ತಂಗಿ ಹಿಡಿಂಬಿ ಭೀಮಸೇನನಿಗೆ ಸೋತಳು.
ಪದಾರ್ಥ (ಕ.ಗ.ಪ)
ರೌದ್ರ-ಭೀಕರ, ಹರಿನಂದನ-ವಾಯುಪುತ್ರ, ಕರ್ಕಶ-ಬಿರುಸು, ಕೆಮ್ಮೀಸೆ-ಕೆಂಪು ಬಣ್ಣದ ಮೀಸೆ, ಕೆಂದಳ-ಕೆಂಪಾದ ಕೈ, ಕುಂದ-ಮೊಲ್ಲೆ, ರದನ-ಹಲ್ಲು, ಛವಿ-ಕಾಂತಿ, ಅನುಜೆ-ತಂಗಿ
ಮೂಲ ...{Loading}...
ಬಂದಳವಳತಿ ರೌದ್ರರೂಪಿನೊ
ಳಂದು ಕಂಡಳು ದೂರದಲಿ ಹರಿ
ನಂದನನ ಸುಳಿದಲೆಯ ಕೆಮ್ಮೀಸೆಗಳ ಕರ್ಕಶದ
ಕೆಂದಳದ ಕೇಸರಿಯ ಕಂಗಳ
ಕುಂದ ರದನಚ್ಛವಿಯಲಿರೆ ಮನ
ಸಂದಳಾ ಖಳನನುಜೆ ಸೋತಳು ಭೀಮಸೇನಂಗೆ ॥12॥
೦೧೩ ಇವನ ರಮಣನ ...{Loading}...
ಇವನ ರಮಣನ ಮಾಡಿಕೊಂಡೋ
ಡುವೆನು ವಿಪಿನಾಂತರಕೆ ಮುನಿದವ
ನಿವದಿರೈವರ ತಿನಲಿ ಮರದಡಿಯಲಿ ಮಲಗಿದರ
ಇವನು ತನ್ನಯ ರೌದ್ರಮಯ ರೂ
ಪವನು ಕಂಡರೆ ಹೆದರುವನಲಾ
ಯುವತಿಯಹೆನೆಂದಸುರೆ ಸುಳಿದಳು ದಿವ್ಯರೂಪಿನಲಿ ॥13॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಇವನನ್ನು ಪತಿಯನ್ನಾಗಿ ಮಾಡಿಕೊಂಡು ಈ ಕಾಡಿನಿಂದ ದೂರ ಓಡುವೆನು. ಕೋಪಿಸಿ ಅವನು(ಹಿಡಿಂಬನು) ಬೇಕಾದರೆ ಈ ಮರದ ಕೆಳಗೆ ಮಲಗಿರುವ ಐವರನ್ನು ತಿನ್ನಲಿ ಇವನು ತನ್ನ ಭಯಂಕರ ರೂಪವನ್ನು ಕಂಡರೆ ಹೆದರುವನು. ಆದ್ದರಿಂದ ತರುಣಿಯಾಗುತ್ತೇನೆಂದು ದಿವ್ಯ ರೂಪವನ್ನು ಧರಿಸಿ ಭೀಮನ ಮುಂದೆ ಸುಳಿದಳು.
ಪದಾರ್ಥ (ಕ.ಗ.ಪ)
ರಮಣ-ಪತಿ, ವಿಪಿನಾಂತರ-ಕಾಡಿನಿಂದ ದೂರ, ಯುವತಿ-ತರುಣಿ
ಮೂಲ ...{Loading}...
ಇವನ ರಮಣನ ಮಾಡಿಕೊಂಡೋ
ಡುವೆನು ವಿಪಿನಾಂತರಕೆ ಮುನಿದವ
ನಿವದಿರೈವರ ತಿನಲಿ ಮರದಡಿಯಲಿ ಮಲಗಿದರ
ಇವನು ತನ್ನಯ ರೌದ್ರಮಯ ರೂ
ಪವನು ಕಂಡರೆ ಹೆದರುವನಲಾ
ಯುವತಿಯಹೆನೆಂದಸುರೆ ಸುಳಿದಳು ದಿವ್ಯರೂಪಿನಲಿ ॥13॥
೦೧೪ ಹೊಳೆವ ಕಙ್ಗಳ ...{Loading}...
ಹೊಳೆವ ಕಂಗಳ ಕಾಂತಿ ಮರಗ
ತ್ತಲೆಯ ಮೊತ್ತವ ಬಿಗಿಯೆ ಮೈ ಪರಿ
ಮಳಕೆ ತೂಳುವ ತುಂಬಿಗಳ ತನುಲತೆಯ ಚೆಲುವಿಕೆಯ
ಲಲನೆ ಸುಳಿದಳು ಕುಚದ ಭಾರಕೆ
ಬಳುಕೆ ನಡು ಬಿಡದೊಲೆದು ಮೇಲುದು
ತಳಿಯೆ ಸುಳಿಗುರುಳೊಲೆಯಲಾ ಕಲಿ ಭೀಮನಿದಿರಿನಲಿ ॥14॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಹೊಳೆಯುವ ಕಣ್ಣುಗಳ ಕಾಂತಿ, ದಟ್ಟವಾದ ಕತ್ತಲೆಯ ರಾಶಿಯಿಂದ ಮುಚ್ಚಿದೆಯೋ ಎನ್ನುವಷ್ಟು ಕಪ್ಪಾದ ಮೈ, ಅವಳ ಮೈ ಪರಿಮಳಕ್ಕೆ ಬೆನ್ನಟ್ಟುವ ತುಂಬಿಗಳು ಅಂಥಹ ಬಳ್ಳಿಯಂತೆ ಸುಂದರದ ದೇಹವುಳ್ಳ ವಿಲಾಸವತಿ ಸುಳಿದಳು. ಕುಚದ ಭಾರಕ್ಕೆ ಬಡನಡು ಬಳುಕುತ್ತಿತ್ತು. ನಡು ಬಳುಕಿದಾಗ ಎದೆ ಸೆರಗು ಅಲುಗುತ್ತಿತ್ತು. ಸುಳಿಗುರುಳು ಒಲೆಯುತ್ತಿತ್ತು. ಈ ಪರಿಯ ಬೆಡಗಿ ಭೀಮಸೇನನೆದುರಿಗೆ ಸುಳಿದಾಡ ತೊಡಗಿದಳು.
ಪದಾರ್ಥ (ಕ.ಗ.ಪ)
ಮರಗತ್ತಲೆ-ದಟ್ಟವಾದ ಕತ್ತಲು, ಬಿಗಿಯೆ-ಅಳವಡಿಸು, ತೂಳುವ-ಬೆನ್ನಟ್ಟುವ
ಮೂಲ ...{Loading}...
ಹೊಳೆವ ಕಂಗಳ ಕಾಂತಿ ಮರಗ
ತ್ತಲೆಯ ಮೊತ್ತವ ಬಿಗಿಯೆ ಮೈ ಪರಿ
ಮಳಕೆ ತೂಳುವ ತುಂಬಿಗಳ ತನುಲತೆಯ ಚೆಲುವಿಕೆಯ
ಲಲನೆ ಸುಳಿದಳು ಕುಚದ ಭಾರಕೆ
ಬಳುಕೆ ನಡು ಬಿಡದೊಲೆದು ಮೇಲುದು
ತಳಿಯೆ ಸುಳಿಗುರುಳೊಲೆಯಲಾ ಕಲಿ ಭೀಮನಿದಿರಿನಲಿ ॥14॥
೦೧೫ ಭೀಮ ನೋಡನು ...{Loading}...
ಭೀಮ ನೋಡನು ನುಡಿಸನೊಯ್ಯನೆ
ತಾಮರಸಮುಖಿ ಹೊದ್ದಿದಳು ನಿ
ಸ್ಸೀಮನೈ ನೀನಾರು ಮಲಗಿದ ಮತ್ರ್ಯರಿವರಾರು
ಈ ಮಹಾರಣ್ಯದಲಿ ಬರವಿದು
ಕಾಮಿತವೆ ಕೋಮಲರಿಗೆನೆ ನಿ
ಷ್ಕಾಮ ಮನದಲಿ ಸತಿಯ ನುಡಿಸಿದನಾರು ನೀನೆಂದು ॥15॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಭೀಮ ಅವಳನ್ನು ನೋಡಲಿಲ್ಲ, ಮಾತಾಡಿಸಲಿಲ್ಲ. ಕಮಲ ಮುಖಿ ಹಿಡಿಂಬಿ ಮೆಲ್ಲನೆ ಅವನ ಸಮೀಪಕ್ಕೆ ಬಂದಳು. ಭೀಮನನ್ನು ಕುರಿತು “ನೀನು ನಿಸ್ಸೀಮನಿದ್ದೀಯೆ ! ಯಾರು ನೀನು ? ಮಲಗಿರುವ ಈ ಮನುಷ್ಯರು ಯಾರು ? ಈ ಮಹಾರಣ್ಯದಲ್ಲಿ ಬರುವುದಕ್ಕೆ ಸುಕುಮಾರರು ಬಯಸುತ್ತಾರೆಯೇ ? ಎಂದಳು. ಯಾವ ಆಸೆಯೂ ಇಲ್ಲದ ಮನಸ್ಸಿನಿಂದ ಭೀಮನು ಆ ಹೆಂಗಸನ್ನು “ನೀನು ಯಾರು?” ಎಂದು ಮಾತನಾಡಿಸಿದನು.
ಪದಾರ್ಥ (ಕ.ಗ.ಪ)
ಹೊದ್ದು-ಸಮೀಪ, ಮತ್ರ್ಯರು-ಮನುಷ್ಯರು, ಕಾಮಿತ-ಬಯಸು, ಕೋಮಲರು-ಸುಂದರರು, ನಿಷ್ಕಾಮ-ಕಾಮಹೀನ, ಯಾವ ಆಸೆಯೂ ಇಲ್ಲದ
ಮೂಲ ...{Loading}...
ಭೀಮ ನೋಡನು ನುಡಿಸನೊಯ್ಯನೆ
ತಾಮರಸಮುಖಿ ಹೊದ್ದಿದಳು ನಿ
ಸ್ಸೀಮನೈ ನೀನಾರು ಮಲಗಿದ ಮತ್ರ್ಯರಿವರಾರು
ಈ ಮಹಾರಣ್ಯದಲಿ ಬರವಿದು
ಕಾಮಿತವೆ ಕೋಮಲರಿಗೆನೆ ನಿ
ಷ್ಕಾಮ ಮನದಲಿ ಸತಿಯ ನುಡಿಸಿದನಾರು ನೀನೆಂದು ॥15॥
೦೧೬ ವನ ಹಿಡಿಮ್ಬನದಾ ...{Loading}...
ವನ ಹಿಡಿಂಬನದಾ ಹಿಡಿಂಬಕ
ನನುಜೆ ತಾನು ಹಿಡಿಂಬಿಯೀ ಕಾ
ನನವಿದೆಮ್ಮಾಶ್ರಮವಗಮ್ಯವು ದಿವಿಜ ಮನುಜರಿಗೆ
ನಿನಗೆ ಕಾಮಿಸಿ ಬಂದೆನಣ್ಣನು
ಮುನಿದೊಡಿವದಿರ ತಿನಲಿ ನೀನೇ
ಳೆನಗೆ ವಲ್ಲಭನಾಗು ಕೊಂಡೊಯ್ವೆನು ಹಿಮಾಚಲಕೆ ॥16॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅವಳು, “ಈ ಅರಣ್ಯ ಹಿಡಿಂಬನದು. ನಾನು ಹಿಡಿಂಬಕನ ತಂಗಿ ಹಿಡಿಂಬಿ. ಈ ಅರಣ್ಯವಿದು ನಮ್ಮ ಆಶ್ರಮವು. ದೇವ ಮಾನವರಿಗೆ ಪ್ರವೇಶ ಮಾಡಲಾರದ ಸ್ಥಳ. ನಿನ್ನನ್ನು ಪ್ರೀತಿಸಿ ಬಂದೆನು. ನಮ್ಮ ಅಣ್ಣನು ಕೋಪಿಸಿಕೊಂಡರೆ ಇವರನ್ನು ತಿನ್ನಲಿ. ನೀನು ಎದ್ದೇಳು. ನನಗೆ ಗಂಡನಾಗು, ಹಿಮಾಲಯ ಪರ್ವತಕ್ಕೆ ಕರೆದುಕೊಂಡು ಹೋಗುವೆನು” ಎಂದಳು.
ಪದಾರ್ಥ (ಕ.ಗ.ಪ)
ಅಗಮ್ಯ-ಪ್ರವೇಶ ಮಾಡಲಾರದ್ದು, ಅನುಜೆ-ತಂಗಿ, ವಲ್ಲಭ-ಗಂಡ
ಮೂಲ ...{Loading}...
ವನ ಹಿಡಿಂಬನದಾ ಹಿಡಿಂಬಕ
ನನುಜೆ ತಾನು ಹಿಡಿಂಬಿಯೀ ಕಾ
ನನವಿದೆಮ್ಮಾಶ್ರಮವಗಮ್ಯವು ದಿವಿಜ ಮನುಜರಿಗೆ
ನಿನಗೆ ಕಾಮಿಸಿ ಬಂದೆನಣ್ಣನು
ಮುನಿದೊಡಿವದಿರ ತಿನಲಿ ನೀನೇ
ಳೆನಗೆ ವಲ್ಲಭನಾಗು ಕೊಂಡೊಯ್ವೆನು ಹಿಮಾಚಲಕೆ ॥16॥
೦೧೭ ನಿನ್ನನೊಲ್ಲೆನು ...{Loading}...
ನಿನ್ನನೊಲ್ಲೆನು ಮುನಿದೆಯಾದಡೆ
ನಿನ್ನ ದೈತ್ಯನ ಕೊಂಡು ಬಾ ಹೋ
ಗೆನ್ನ ಬಲುಹನು ನೋಡು ನೀನೆನಲಸುರೆ ವಿನಯದಲಿ
ಮುನ್ನಲೇ ಮನುಮಥನ ಶರದಲಿ
ಖಿನ್ನೆಯಾಗಿಹೆ ಮರೆಯ ಹೊಕ್ಕೆನು
ತನ್ನನೀ ಪರಿ ಮುರಿದು ನುಡಿವರೆ ಎಂದಳಿಂದುಮುಖಿ ॥17॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅದಕ್ಕೆ ಭೀಮನು, “ನಿನ್ನನ್ನು ಒಪ್ಪುವುದಿಲ್ಲ. ಕೋಪಿಸಿದೆಯಾದರೆ ನಿನ್ನ ರಾಕ್ಷಸನನ್ನು ಕರೆದುಕೊಂಡು ಬಾ ಹೋಗು, ನನ್ನ ಶಕ್ತಿಯನ್ನು ನೀನು ನೋಡುವೆಯಂತೆ” ಎಂದು ನಿರಾಕರಿಸಿ ನುಡಿದನು. ಆಗ ರಕ್ಕಸಿ ವಿನಯದಿಂದ “ಮೊದಲೇ ಮನುಮಥನ ಬಾಣದಿಂದ ನೊಂದಿದ್ದೇನೆ. ನಿನ್ನ ಆಶ್ರಯವನ್ನು ಬೇಡುತ್ತಿದ್ದೇನೆ. ನನ್ನನ್ನು ಈ ರೀತಿ ತಿರಸ್ಕರಿಸಿ ಮಾತನಾಡಬಹುದೆ” ಎಂದು ಬೇಡಿಕೊಂಡಳು.
ಪದಾರ್ಥ (ಕ.ಗ.ಪ)
ಒಲ್ಲೆ-ಒಪ್ಪದಿರು, ಮುನಿ-ಕೋಪಿಸು, ಬಲುಹು-ಶಕ್ತಿ, ಖಿನ್ನೆ-ನೊಂದವಳು, ಮರೆಹೊಗು-ಆಶ್ರಯ ಬೇಡಿ, ಪರಿ-ರೀತಿ
ಮೂಲ ...{Loading}...
ನಿನ್ನನೊಲ್ಲೆನು ಮುನಿದೆಯಾದಡೆ
ನಿನ್ನ ದೈತ್ಯನ ಕೊಂಡು ಬಾ ಹೋ
ಗೆನ್ನ ಬಲುಹನು ನೋಡು ನೀನೆನಲಸುರೆ ವಿನಯದಲಿ
ಮುನ್ನಲೇ ಮನುಮಥನ ಶರದಲಿ
ಖಿನ್ನೆಯಾಗಿಹೆ ಮರೆಯ ಹೊಕ್ಕೆನು
ತನ್ನನೀ ಪರಿ ಮುರಿದು ನುಡಿವರೆ ಎಂದಳಿಂದುಮುಖಿ ॥17॥
೦೧೮ ಅನುಜೆ ತಳುವಿದಳೆನ್ದು ...{Loading}...
ಅನುಜೆ ತಳುವಿದಳೆಂದು ರೋಷ
ಸ್ತನಿತ ಗದ್ಗದ ಕಂಠನೊದೆದೆ
ದ್ದನು ಮಹೀಮಂಡಲವನುಗ್ರಾಂಬಕನ ಡೊಂಬಿನಲಿ
ಅನಿಲಸುತನಿದಿರೆದ್ದನೀತನೆ
ದನುಜೆ ನಿನ್ನವನಾಯ್ತು ತಪ್ಪೇ
ನೆನುತ ಹಳಚಿದೊಡಾ ಹಿಡಿಂಬಕ ಜಡಿದು ಬೊಬ್ಬಿರಿದ ॥18॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅಷ್ಟರಲ್ಲಿ ಇತ್ತಕಡೆ ತಂಗಿ ತಡಮಾಡಿದಳೆಂದು ಕೋಪದಿಂದ ಗರ್ಜಿಸುತ್ತ ನಡುಗುವ ಕಂಠದ ಹಿಡಿಂಬಕನು ರೌದ್ರವಾದ ಕಣ್ಣುಳ್ಳವನ ಗರ್ವದಿಂದ (ಭೂಮಿಯನ್ನು) ಒದೆದು ಎದ್ದನು. ಪಾಂಡವರಿದ್ದ ಬಳಿ ಬರುತ್ತಿರಲು, ಭೀಮನು ಅವನ ಎದುರಾಗಿ ಎದ್ದು, “ರಾಕ್ಷಸಿಯೆ, ಈತನೇ ಏನು ನಿನ್ನವನು ? ಆಯ್ತು ತಪ್ಪೇನು” ಎನ್ನುತ್ತ ಮುನ್ನುಗ್ಗಿ ಹೊಡೆಯ ಹೋದನು. ಹಿಡಿಂಬಕ ಗರ್ಜಿಸಿ ಬೊಬ್ಬಿಟ್ಟನು.
ಪದಾರ್ಥ (ಕ.ಗ.ಪ)
ತಳುವು-ತಡಮಾಡು, ಸ್ತನಿತ-ಗರ್ಜಿಸುವ, ಗದ್ಗದ-ನಡುಗುವ, ಉಗ್ರಾಂಬಕ-ರೌದ್ರವಾದ ಕಣ್ಣುಳ್ಳವನು, ಡೊಂಬು-ಗರ್ವ, ಹಳಚು-ಹೊಡೆ, ಜಡಿ-ಗರ್ಜಿಸು
ಮೂಲ ...{Loading}...
ಅನುಜೆ ತಳುವಿದಳೆಂದು ರೋಷ
ಸ್ತನಿತ ಗದ್ಗದ ಕಂಠನೊದೆದೆ
ದ್ದನು ಮಹೀಮಂಡಲವನುಗ್ರಾಂಬಕನ ಡೊಂಬಿನಲಿ
ಅನಿಲಸುತನಿದಿರೆದ್ದನೀತನೆ
ದನುಜೆ ನಿನ್ನವನಾಯ್ತು ತಪ್ಪೇ
ನೆನುತ ಹಳಚಿದೊಡಾ ಹಿಡಿಂಬಕ ಜಡಿದು ಬೊಬ್ಬಿರಿದ ॥18॥
೦೧೯ ಒರಲ ಬೇಡವೊ ...{Loading}...
ಒರಲ ಬೇಡವೊ ಕುನ್ನಿ ಮೆಲ್ಲನೆ
ತರುಬಿ ಕಾದುವುದೆಲವೊ ಮೈಮರ
ದೊರಗಿದವರೇಳ್ವರು ಕಣಾ ಸತ್ತಂತೆ ಸಾರೆನುತ
ತರುಬಿ ಹಿಡಿದಾ ಭೀಮ ಬೆನ್ನಿನೊ
ಳೆರಗಿದನು ಹೆಮ್ಮರಕೆ ಹಾಯಿದು
ಮುರಿದು ಹೊಯ್ದು ಹಿಡಿಂಬ ಕೊಡಹಿದನನಿಲ ನಂದನನ ॥19॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಬೊಬ್ಬಿಡಬೇಡವೋ ಕುನ್ನಿ. ಮೆಲ್ಲನೆ ತಡೆದು ಕಾದುವುದು. ಎಲವೋ ಮೈಮರೆದು ಮಲಗಿದವರು ಎದ್ದು ಬಿಡುತ್ತಾರೆ. ಕಂಡೆಯಾ! ಸತ್ತಂತೆ ಸಾರು ಆಚೆಗೆ” ಎಂದು ನುಡಿಯುತ್ತ ಭೀಮ ಮುನ್ನುಗ್ಗಿ ತಡೆದು ಹಿಡಿದು ಹಿಡಿಂಬನ ಬೆನ್ನ ಮೇಲೆ ಅಪ್ಪಳಿಸಿದನು. ಹಿಡಿಂಬನು ದೊಡ್ಡ ಮರಕ್ಕೆ ಹಾಯ್ದು ತಿರುಗಿಕೊಂಡು ಹೊಡೆದು ವಾಯುಪುತ್ರನನ್ನು ನೂಕಿದನು.
ಪದಾರ್ಥ (ಕ.ಗ.ಪ)
ಒರಲು-ಬೊಬ್ಬಿಡು, ತರುಬು-ತಡೆ, ಒರಗು-ಮಲಗು, ಎರಗು-ಮೇಲೆ ಬೀಳು
ಮೂಲ ...{Loading}...
ಒರಲ ಬೇಡವೊ ಕುನ್ನಿ ಮೆಲ್ಲನೆ
ತರುಬಿ ಕಾದುವುದೆಲವೊ ಮೈಮರ
ದೊರಗಿದವರೇಳ್ವರು ಕಣಾ ಸತ್ತಂತೆ ಸಾರೆನುತ
ತರುಬಿ ಹಿಡಿದಾ ಭೀಮ ಬೆನ್ನಿನೊ
ಳೆರಗಿದನು ಹೆಮ್ಮರಕೆ ಹಾಯಿದು
ಮುರಿದು ಹೊಯ್ದು ಹಿಡಿಂಬ ಕೊಡಹಿದನನಿಲ ನಂದನನ ॥19॥
೦೨೦ ಎದ್ದು ತಿವಿದನು ...{Loading}...
ಎದ್ದು ತಿವಿದನು ಖಳನ ಬದಿಯೊಳ
ಗದ್ದುದೀತನ ಮುಷ್ಟಿ ಮುರಿದೊಡ
ನೆದ್ದು ನಿಮಿಷಕೆ ಸಂತವಿಸಿ ಹೆಮ್ಮರನ ಕೊಂಬಿನಲಿ
ಗೆದ್ದೆಯಿದ ಕೊಳ್ಳೆನುತ ಖಳನು
ಬ್ಬೆದ್ದು ಹೊಯ್ದರೆ ಮರ ಸಹಿತ ಹಿಡಿ
ದುದ್ದಿ ನೆಲದೊಳಗೊರಸಿ ಕೊಂದನು ಕಲಿ ಹಿಡಿಂಬಕನ ॥20॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಭೀಮನು ಒಡನೆ ಎದ್ದು ಹಿಡಿಂಬನನ್ನು ಮುಷ್ಟಿಯಿಂದ ಹೊಡೆದನು. ಈತನ ಮುಷ್ಟಿ ಆ ದುಷ್ಟನ ಪಕ್ಕೆಯೊಳಗೆ ನಾಟಿಕೊಂಡಿತು. ಆ ಏಟನ್ನು ತಡೆದುಕೊಂಡು ಕೂಡಲೇ ತಿರುಗಿ ಎದ್ದು ನಿಮಿಷದಲ್ಲಿ ಸಮಾಧಾನಪಡಿಸಿಕೊಂಡು ದೊಡ್ಡ ಮರದ ಕೊಂಬೆಯನ್ನು ಕೈಗೆತ್ತಿಕೊಂಡು “ಗೆದ್ದೆ, ಇದನ್ನು ತೆಗೆದುಕೋ” ಎನ್ನುತ್ತ ಖಳನು ಗರ್ವದಿಂದ ಎದ್ದು ಹೊಡೆದರೆ, ಮರ ಸಹಿತವಾಗಿ ಅವನನ್ನು ಹಿಡಿದು ನೆಲದಲ್ಲಿ ಹಾಕಿ ಭೀಮನು ಕಲಿ ಹಿಡಿಂಬಕನನ್ನು ಉಜ್ಜಿ ಕೊಂದನು.
ಪದಾರ್ಥ (ಕ.ಗ.ಪ)
ಬದಿ-ಮಗ್ಗುಲು, ಸಂತವಿಸು-ಸಮಾಧಾನಪಡಿಸು, ಉಬ್ಬು-ಗರ್ವ, ಉದ್ದಿ-ಉಜ್ಜಿ, ಒರಸು-ತಿಕ್ಕು
ಮೂಲ ...{Loading}...
ಎದ್ದು ತಿವಿದನು ಖಳನ ಬದಿಯೊಳ
ಗದ್ದುದೀತನ ಮುಷ್ಟಿ ಮುರಿದೊಡ
ನೆದ್ದು ನಿಮಿಷಕೆ ಸಂತವಿಸಿ ಹೆಮ್ಮರನ ಕೊಂಬಿನಲಿ
ಗೆದ್ದೆಯಿದ ಕೊಳ್ಳೆನುತ ಖಳನು
ಬ್ಬೆದ್ದು ಹೊಯ್ದರೆ ಮರ ಸಹಿತ ಹಿಡಿ
ದುದ್ದಿ ನೆಲದೊಳಗೊರಸಿ ಕೊಂದನು ಕಲಿ ಹಿಡಿಂಬಕನ ॥20॥
೦೨೧ ಕಳಕಳದೊಳಿವರೆದ್ದುಯಿವನತಿ ಬಳ ...{Loading}...
ಕಳಕಳದೊಳಿವರೆದ್ದುಯಿವನತಿ
ಬಳ ಮಹಾದೇವೆಮ್ಮನೆಬ್ಬಿಸಿ
ಬಳಿಕ ಕಾದದೆ ತಮ್ಮ ಕೆಡಿಸಲು ಕಾಕ ಬಳಸಿದೆಲ
ಬಳಲಿದೆಮ್ಮನು ಹೊತ್ತು ತೊಳಲಿದ
ಬಳಲಿಕೆಯಲೀ ಕೇಡು ಲೇಸಾ
ಯ್ತುಳಿದೆ ಪುಣ್ಯವಿದೆಂದರಾ ಯಮನಂದನಾದಿಗಳು ॥21॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಭೀಮ ಹಿಡಿಂಬರ ಕಾಳಗದ ಗಲಾಟೆಗೆ ಮಲಗಿದ ಇವರು ಎದ್ದು “ಮಹಾದೇವಾ ! ಇವನು ಅತಿಬಲ ! ನಮ್ಮನ್ನು ಎಬ್ಬಿಸಿ ಆಮೇಲೆ ಕಾದದೆ ಅದೇಕೆ ತಮ್ಮ, ನಮ್ಮನ್ನು ಹಾಳುಮಾಡಲು ತಪ್ಪು ಕೆಲಸ ಮಾಡಿದೆಯಲ್ಲ ? ಆಯಾಸಗೊಂಡ ನಮ್ಮನ್ನು ಹೊತ್ತು ಅಲೆದಾಡಿದ ಆಯಾಸದಲ್ಲಿ ಈ ಆಪತ್ತು ಬೇರೆ ! ಒಳ್ಳೆಯದಾಯಿತು, ನೀನು ಉಳಿದುಕೊಂಡೆ. ಇದು ನಮ್ಮ ಪುಣ್ಯ”. ಎಂದರು ಯಮಸುತ ಮೊದಲಾದವರು.
ಪದಾರ್ಥ (ಕ.ಗ.ಪ)
ಕಳಕಳ-ಗಲಾಟೆ, ಕೆಡಿಸು-ಹಾಳಾಗಿಸು, ಕಾಕು-ತಪ್ಪು, ಬಳಲಿಕೆ-ಆಯಾಸ, ತೊಳಲು-ಅಲೆದಾಡು, ಲೇಸಾಯ್ತು-ಒಳ್ಳೆಯದಾಯ್ತು
ಮೂಲ ...{Loading}...
ಕಳಕಳದೊಳಿವರೆದ್ದುಯಿವನತಿ
ಬಳ ಮಹಾದೇವೆಮ್ಮನೆಬ್ಬಿಸಿ
ಬಳಿಕ ಕಾದದೆ ತಮ್ಮ ಕೆಡಿಸಲು ಕಾಕ ಬಳಸಿದೆಲ
ಬಳಲಿದೆಮ್ಮನು ಹೊತ್ತು ತೊಳಲಿದ
ಬಳಲಿಕೆಯಲೀ ಕೇಡು ಲೇಸಾ
ಯ್ತುಳಿದೆ ಪುಣ್ಯವಿದೆಂದರಾ ಯಮನಂದನಾದಿಗಳು ॥21॥
೦೨೨ ಖಳ ಮಡಿಯಲಲವನನುಜೆ ...{Loading}...
ಖಳ ಮಡಿಯಲಲವನನುಜೆ ಭೀಮನ
ನೊಲಿಸಲರಿಯದೆ ಕುಂತಿಗೆಲ್ಲವ
ತಿಳುಹಿ ನುಡಿದಳು ತನ್ನ ಪೂರ್ವಾಪರದ ಸಂಗತಿಯ
ಹಲವು ಪರಿಯಲಿಯಿವರನವಳಂ
ಡಲೆದು ಭೀಮಗೆ ಹೇಳಿಸಿದಳಾ
ಫಲುಗುಣನ ಕೈಯಿಂದ ಧರ್ಮಜನಿಂದ ನುಡಿಸಿದಳು ॥22॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಆ ದುಷ್ಟ ಹಿಡಿಂಬನು ಮಡಿದ ಮೇಲೆ, ಅವನ ತಂಗಿ ಹಿಡಿಂಬಿ ಭೀಮನನ್ನು ಒಲಿಸಿಕೊಳ್ಳಲು ತಿಳಿಯದೆ ಕುಂತಿಗೆ ಎಲ್ಲವನ್ನೂ ತಿಳಿಸಿ ತನ್ನ ಹಿಂದಿನ ಮತ್ತು ಮುಂದಿನ ವಿಚಾರಗಳನ್ನು ಹೇಳಿದಳು. ಹಲವು ರೀತಿಯಲ್ಲಿ ಇವರನ್ನು ಪೀಡಿಸಿ ಭೀಮನಿಗೆ ಫಲುಗುಣ ಮತ್ತು ಧರ್ಮಜರಿಂದ ತಿಳಿಯ ಹೇಳಿಸಿದಳು.
ಪದಾರ್ಥ (ಕ.ಗ.ಪ)
ಪೂರ್ವಾಪರ-ಹಿಂದಿನ ಮತ್ತು ಮುಂದಿನ, ಸಂಗತಿ-ವಿಚಾರ, ಪರಿ-ರೀತಿ, ಅಂಡಲೆದು-ಪೀಡಿಸಿ
ಮೂಲ ...{Loading}...
ಖಳ ಮಡಿಯಲಲವನನುಜೆ ಭೀಮನ
ನೊಲಿಸಲರಿಯದೆ ಕುಂತಿಗೆಲ್ಲವ
ತಿಳುಹಿ ನುಡಿದಳು ತನ್ನ ಪೂರ್ವಾಪರದ ಸಂಗತಿಯ
ಹಲವು ಪರಿಯಲಿಯಿವರನವಳಂ
ಡಲೆದು ಭೀಮಗೆ ಹೇಳಿಸಿದಳಾ
ಫಲುಗುಣನ ಕೈಯಿಂದ ಧರ್ಮಜನಿಂದ ನುಡಿಸಿದಳು ॥22॥
೦೨೩ ಆರು ನುಡಿಯಲು ...{Loading}...
ಆರು ನುಡಿಯಲು ಸರ್ವಥಾ ಖಳ
ನಾರಿಯನು ಕೈಕೊಳ್ಳೆನೆಂದೇ
ವೀರ ಬಲಿದನು ಬಳಿಕ ವೇದವ್ಯಾಸಮುನಿ ಬಂದು
ಸಾರ ನಯದಲಿ ತೋರಿ ತಿಳುಹಿ ಕು
ಮಾರ ಸಂಭವದವಧಿಯೆಂದಾ
ನಾರಿಯನು ಗಂಟಿಕ್ಕಿದನು ಮುನಿ ಭೀಮಸೇನಂಗೆ ॥23॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಯಾರು ಹೇಳಿದರೂ ದುಷ್ಟ ರಕ್ಕಸಿಯನ್ನು ಖಂಡಿತವಾಗಿಯೂ ಸ್ವೀಕರಿಸುವುದಿಲ್ಲವೆಂದೇ ವೀರಭೀಮನು ದೃಢವಾದನು. ಅನಂತರ ವೇದವ್ಯಾಸ ಮುನಿ ಬಂದು ಸಮರ್ಥವಾಗಿ ಯೋಗ್ಯ ರೀತಿಯಲ್ಲಿ ಕಾಣಿಸಿ ತಿಳಿಯ ಹೇಳಿ “ಮಗನ ಜನನದ ಸಮಯ” ಎಂದು ಮುನಿ ಆ ಹೆಣ್ಣಿನೊಡನೆ ಭೀಮಸೇನನಿಗೆ ವಿವಾಹ ಮಾಡಿದನು.
ಪದಾರ್ಥ (ಕ.ಗ.ಪ)
ಸರ್ವಥಾ-ಖಂಡಿತವಾಗಿಯೂ, ಕೈಕೊಳ್ಳು-ಸ್ವೀಕರಿಸು, ಬಲಿ-ದೃಢ, ಸಾರ-ಸಮರ್ಥ, ನಯ-ಯೋಗ್ಯ, ತೋರು-ಕಾಣಿಸು,
ಗಂಟಿಕ್ಕು-ಸಂಬಂಧವನ್ನುಂಟುಮಾಡು. ಇಲ್ಲಿ ವಿವಾಹ ಮಾಡು
ಪಾಠಾನ್ತರ (ಕ.ಗ.ಪ)
ಸಂಭವವವಧಿ-ಸಂಭವದವಧಿ
ಮೂಲ ...{Loading}...
ಆರು ನುಡಿಯಲು ಸರ್ವಥಾ ಖಳ
ನಾರಿಯನು ಕೈಕೊಳ್ಳೆನೆಂದೇ
ವೀರ ಬಲಿದನು ಬಳಿಕ ವೇದವ್ಯಾಸಮುನಿ ಬಂದು
ಸಾರ ನಯದಲಿ ತೋರಿ ತಿಳುಹಿ ಕು
ಮಾರ ಸಂಭವದವಧಿಯೆಂದಾ
ನಾರಿಯನು ಗಂಟಿಕ್ಕಿದನು ಮುನಿ ಭೀಮಸೇನಂಗೆ ॥23॥
೦೨೪ ಎಲ್ಲಿ ಉಪವನ ...{Loading}...
ಎಲ್ಲಿ ಉಪವನ ವರ ಸರೋವರ
ವೆಲ್ಲಿ ಕೇಳೀ ಶೈಲ ಹಿಮಗೃಹ
ವೆಲ್ಲಿ ರಮ್ಯೋದ್ಯಾನವೆಲ್ಲಿ ವಿಹಾರ ವನಭೂಮಿ
ಅಲ್ಲಿಗಲ್ಲಿಗೆ ಹರಿದು ಮಾರುತಿ
ವಲ್ಲಭೆಯ ರಮಿಸಿದನು ಚೌಪಟ
ಮಲ್ಲ ಜನಿಸಿದ ಕಲಿ ಘಟೋತ್ಕಚನಾ ಹಿಡಿಂಬಿಯಲಿ ॥24॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಎಲ್ಲಿ ಉದ್ಯಾನವೋ, ಎಲ್ಲಿ ಅತ್ಯುತ್ತಮ ಸರೋವರವೋ ಎಲ್ಲಿ ಕ್ರೀಡಾಶೈಲಗಳೋ, ಎಲ್ಲಿ ಶೀತದ ಮನೆಯೋ, ಎಲ್ಲಿ ಮನೋಹರವಾದ ಹೂದೋಟವೋ, ಎಲ್ಲಿ ವಿಹಾರ ಸ್ಥಾನ ಪ್ರದೇಶವೋ ಅಲ್ಲಲ್ಲಿಗೆಲ್ಲ ಭೀಮ ಹೆಂಡತಿಯೊಡನೆ ಓಡಾಡಿ ವಿಹರಿಸಿದನು. ನಾಲ್ಕೂ ಕಡೆಗೆ ಕಾದಾಡ ಬಲ್ಲ ವೀರ ಘಟೋತ್ಕಚನು ಹಿಡಿಂಬಿಯಲ್ಲಿ ಜನಿಸಿದನು.
ಪದಾರ್ಥ (ಕ.ಗ.ಪ)
ಉಪವನ-ಉದ್ಯಾನ, ಕೇಳೀ-ಕ್ರೀಡಾ, ಶೈಲ-ಬೆಟ್ಟ, ಹಿಮ-ಶೀತ, ಉದ್ಯಾನ-ಹೂದೋಟ, ವಲ್ಲಭೆ-ಹೆಂಡತಿ, ಚೌಪಟಮಲ್ಲ-ನಾಲ್ಕೂ ಕಡೆಗೂ ಕಾದಾಡಬಲ್ಲ ವೀರ
ಟಿಪ್ಪನೀ (ಕ.ಗ.ಪ)
ಘಟೋತ್ಕಚ-ಹಿಡಿಂಬನ ತಂಗಿಯಾದ ಹಿಡಿಂಬೆ ಅಥವಾ ಕಮಲಪಾಲಿಕೆಯಲ್ಲಿ ಪಾಂಡುಪುತ್ರನಾದ ಭೀಮಸೇನನಿಂದ ಜನಿಸಿದವನು. ಮಹಾಪರಾಕ್ರಮಶಾಲಿ. ಮೃಣ್ಮಯವಾದ ಗಡಿಗೆಯ ಅಡಿಭಾಗದಂತೆ ಬೋಳಾಗಿಯೂ, ನುಣುಪಾಗಿಯೂ ಇವನ ತಲೆ ಇದೆ ಎಂದು ಮಗುವಿನ ತಾಯಿ ನುಡಿದುದರಿಂದ ಇವನನ್ನು ‘ಘಟೋತ್ಕಚ’ ಎಂದು ಕರೆದರು. ಇವನು ರಾಕ್ಷಸ ಸಂವತ್ಸರದಲ್ಲಿ ಆಷಾಢಮಾಸದ ಬಿದಿಗೆಯ ಮಧ್ಯಾಹ್ನದಲ್ಲಿ ಜನಿಸಿದನು. ಇವನ ಹೆಂಡತಿ ಕಾಮಕಟಂಕಟಾ ಇವಳು ಪ್ರಾಗ್ಜೋತಿಷ ನಗರಾಧೀಶ್ವರ ನರಕಾಸುರನ ಸೇನಾಪತಿ ಮುರುವೆಂಬ ರಾಕ್ಷಸನ ಮಗಳು.
(ಘಟೋ ಹಾಸ್ಯೋತ್ಕಚ ಇತಿ ಮಾತಾ ತಂ ಪ್ರತ್ಯಭಾಷತ |
ಅಬ್ರವೀತ್ತೇನ ನಾಮಾಸ್ಯ ಘಟೋತ್ಕಚ ಇತಿ ಸ್ಮಹ || )
[ಶಬ್ದ ನಿರ್ವಚನ : ಅಸ್ಯಘಟ : = ಇವನ ತಲೆಯು ಉತ್ಕಚ-ಕೇಶರಹಿತವಾಗಿದೆ ( ಕೂದಲು ನೆಟ್ಟಗೆ ನಿಂತಿರುವುದು)
ಹ : ಆಶ್ಚರ್ಯ ಇದರಿಂದ ಘಟೋತ್ಕಚ)
ಮೂಲ ...{Loading}...
ಎಲ್ಲಿ ಉಪವನ ವರ ಸರೋವರ
ವೆಲ್ಲಿ ಕೇಳೀ ಶೈಲ ಹಿಮಗೃಹ
ವೆಲ್ಲಿ ರಮ್ಯೋದ್ಯಾನವೆಲ್ಲಿ ವಿಹಾರ ವನಭೂಮಿ
ಅಲ್ಲಿಗಲ್ಲಿಗೆ ಹರಿದು ಮಾರುತಿ
ವಲ್ಲಭೆಯ ರಮಿಸಿದನು ಚೌಪಟ
ಮಲ್ಲ ಜನಿಸಿದ ಕಲಿ ಘಟೋತ್ಕಚನಾ ಹಿಡಿಂಬಿಯಲಿ ॥24॥
೦೨೫ ನುಡಿದ ಸಮಯಕೆ ...{Loading}...
ನುಡಿದ ಸಮಯಕೆ ತನ್ನ ರಮಣಿಯ
ನೊಡಬಡಿಸಿ ಹೈಡಿಂಬ ರಾಜ್ಯದ
ವೊಡೆತನವ ನೆರೆ ಮಾಡಿ ನಿಲಿಸಿದನಾ ಘಟೋತ್ಕಚನ
ನಡೆದು ಬಂದರು ಶಾಲಿಹೋತ್ರನ
ನಡುವೆ ಕಂಡುಪಚರಿಸಿ ಕೊಂಡರು
ಪಡುವಲಭಿಮುಖರಾದರನಿಬರು ವಿಪ್ರವೇಷದಲಿ ॥25॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಹಿಂದೆಯೇ ಗೊತ್ತು ಮಾಡಿದ ಸಮಯಕ್ಕೆ ತನ್ನ ಹೆಂಡತಿಯನ್ನು ಒಪ್ಪಿಸಿ, ಹಿಡಿಂಬ ರಾಜ್ಯದ ಒಡೆತನವನ್ನು ಘಟೋತ್ಕಚನಿಗೆ ವಹಿಸಿ ಆ ಪದವಿಯಲ್ಲಿ ಅವನನ್ನು ನೆಲೆಗೊಳಿಸಿದನು. ಆ ಮೇಲೆ ಪಾಂಡವರು ಅಲ್ಲಿಂದ ಹೊರಟು ಮುಂದೆ ನಡೆದರು. ದಾರಿ ಮಧ್ಯದಲ್ಲಿ ಶಾಲಿಹೋತ್ರನನ್ನು ಕಂಡು ಆತನಿಂದ ಉಪಚಾರ ಪಡೆದರು. ಆ ಬಳಿಕ ಅಷ್ಟು ಜನರೂ ಬ್ರಾಹ್ಮಣ ವೇಷದಲ್ಲಿ ಪಶ್ಚಿಮಾಭಿಮುಖವಾಗಿ ಪ್ರಯಾಣ ಮಾಡಿದರು.
ಪದಾರ್ಥ (ಕ.ಗ.ಪ)
ಒಡಬಡು-ಒಪ್ಪು, ಪಡುವ-ಪಶ್ಚಿಮ, ಅಭಿಮುಖ-ಎದುರು
ಟಿಪ್ಪನೀ (ಕ.ಗ.ಪ)
ಶಾಲಿಹೋತ್ರ-ಕಪಿಲ ಮಹರ್ಷಿಯ ಮಗ, ಅಶ್ವಶಾಸ್ತ್ರವನ್ನು ಬರೆದವ. ಈತ ತನ್ನ ತಪೋಮಹಿಮೆಯಿಂದ ಒಂದು ಕೊಳವನ್ನೂ ಒಂದು ವೃಕ್ಷವನ್ನೂ ಕಲ್ಪಿಸಿದ್ದ. ಆ ಕೊಳದ ನೀರು ಹಸಿವು ಬಾಯಾರಿಕೆಗಳನ್ನು ನೀಗಿಸುತ್ತಿತ್ತು. ಆ ಮರದ ನೆರಳು, ಬಿಸಿಲು, ಫಳಿ, ಮಳೆ, ಗಾಳಿಗಳ ಭಯವನ್ನು ದೂರ ಮಾಡುತ್ತಿತ್ತು ಪಾಂಡವರನ್ನು ಕೆಲವು ಕಾಲ ಉಪಚರಿಸಿದನು.
ಮೂಲ ...{Loading}...
ನುಡಿದ ಸಮಯಕೆ ತನ್ನ ರಮಣಿಯ
ನೊಡಬಡಿಸಿ ಹೈಡಿಂಬ ರಾಜ್ಯದ
ವೊಡೆತನವ ನೆರೆ ಮಾಡಿ ನಿಲಿಸಿದನಾ ಘಟೋತ್ಕಚನ
ನಡೆದು ಬಂದರು ಶಾಲಿಹೋತ್ರನ
ನಡುವೆ ಕಂಡುಪಚರಿಸಿ ಕೊಂಡರು
ಪಡುವಲಭಿಮುಖರಾದರನಿಬರು ವಿಪ್ರವೇಷದಲಿ ॥25॥