ರುದ್ರದೇವರು ಜಗತ್ಸೃಷ್ಟಿಕರ್ತೃಗಳಲ್ಲ

ಬ್ರಹ್ಮಪುತ್ರರಾದ ರುದ್ರದೇವರು ಜಗತ್ಸೃಷ್ಟಿಕರ್ತೃಗಳಲ್ಲ.

ಪರಮಪೂಜ್ಯ ಶ್ರೀಸುವಿದ್ಯೇಂದ್ರತೀರ್ಥಶ್ರೀಪಾದಂಗಳವರು ಒಂದು ಉಪನ್ಯಾಸದ ಮಧ್ಯದಲ್ಲಿ - ‘ರುದ್ರದೇವರು ಜಗತ್ತು ನಿರ್ಮಾಣ ಮಾಡಿಲ್ಲವಲ್ಲ’ ಎಂದು ಹೇಳಿದ್ದಾರೆ.

ಸುಬ್ರಹ್ಮಣ್ಯ ವೈದ್ಯನಾಥನ್ ಅವರು, ಆ ವಿಡಿಯೋವನ್ನು ಶೇರ್ ಮಾಡಿ ‘ಇವರಿಗೆ (ಶ್ರೀಪಾದರಿಗೆ) ಭಾಗವತ ತಿಳಿಯಿತೋ ಇಲ್ಲವೋ ಶ್ವೇತಾಶ್ವತರೋಪನಿಷತ್ತು ಖಂಡಿತ ತಿಳಿದಿಲ್ಲ’ ಇತ್ಯಾದಿ ಅಸಂಬದ್ಧಪ್ರಲಾಪ ಮಾಡಿದ್ದಾರೆ.

ಸುಬ್ರಹ್ಮಣ್ಯ ವೈದ್ಯನಾಥನ್ ಅವರ ಮಾತು -

ಅವರಿಗೆ ಭಾಗವತ ತಿಳಿಯಿತೋ ಇಲ್ಲವೋ, ಶ್ವೇತಾಶ್ವತರೋಪನಿಷತ್ತು ಖಂಡಿತ ತಿಳಿದಿಲ್ಲ: ಯೋ ಬ್ರಹ್ಮಾಣಮ್ ವಿದಾಧಾತಿ ಪೂರ್ವಂ ಯೋ ವೈ ವೆದಾಂಶಚ ಪ್ರಹಿಣೋತಿ ತಸ್ಮೈ.. ( ಯಾರು ಚತುರ್ಮುಖನನ್ನು ಮೊದಲು ಸೃಷ್ಟಿ ಮಾಡಿ ಅವನಿಗೆ ಸಕಲ ವೇದ ಜ್ಞಾನವನ್ನು ಅನುಗ್ರಹಿಸಿದರೋ (ಆ ರುದ್ರದೇವರಿಗೆ) ಮುಮುಕ್ಷುವಾದ ನಾನು ಶರಣಾಗುವೆನು.).

ಇದು ಇವರ ಕಲ್ಪನಾವಿಲಾಸ ಅಷ್ಟೇ.

ಯಾಕೆಂದರೆ ಭಾಗವತ ತಿಳಿಸುವ ಪ್ರಕಾರ ರುದ್ರದೇವರು ಬ್ರಹ್ಮದೇವರಿಂದ ಹುಟ್ಟಿದ್ದಾರೆ. ಅವರು ಹುಟ್ಟುವ ಮೊದಲೇ ಜಗತ್ತು ನಿರ್ಮಾಣ ಆಗಿತ್ತು. ಹಾಗಾಗಿ ರುದ್ರದೇವರೇ ಇನ್ನೊಬ್ಬರಿಂದ ಹುಟ್ಟಿದ ಮೇಲೆ, ಅವರು ಹೇಗೆ ತಾನೇ ಜಗತ್ತು ನಿರ್ಮಾಣ ಮಾಡಲು ಸಾಧ್ಯ?

ಆದ್ದರಿಂದ ಶ್ರೀಪಾದರು ತಿಳಿಸಿದಂತೆ, ‘ರುದ್ರದೇವರು ಜಗತ್ತು ನಿರ್ಮಾಣ ಮಾಡಿಲ್ಲವಲ್ಲ’ ಎಂಬುದು ಅತ್ಯಂತ ಪ್ರಾಮಾಣಿಕವಾಗಿದೆ. ಜೊತೆಗೆ ಸುಬ್ರಹ್ಮಣ್ಯ ವೈದ್ಯನಾಥನ್ ಅವರು ಉಲ್ಲೇಖ ಮಾಡಿದ ಶ್ರುತಿಯು, ‘ರುದ್ರದೇವರು ಬ್ರಹ್ಮದೇವರನ್ನು ಸೃಷ್ಟಿ ಮಾಡಿದ್ದಾರೆ’ ಎಂದು ಹೇಳುತ್ತಿಲ್ಲ.

ಆ ಮಂತ್ರದಲ್ಲಿ ರುದ್ರದೇವರ ಹೆಸರೇ ಇಲ್ಲ. ಹಾಗಾಗಿ ಪರಬ್ರಹ್ಮನಾರಾಯಣನಿಂದ ಬ್ರಹ್ಮದೇವರು ಸೃಷ್ಟಿ ಆದದ್ದನ್ನು ಹೇಳುವ ಮಂತ್ರಕ್ಕೆ, ಇವರು ಹೀಗೆ ಅರ್ಥ ಮಾಡಿರುವುದು ಅತ್ಯಂತ ಅಸಂಗತವಾಗಿದೆ.

ಜೊತೆಗೆ ಶ್ವೇತಾಶ್ವತರೋಪನಿಷತ್ತಿಗೆ ಶಂಕರರ ವ್ಯಾಖ್ಯಾನ ಎಂಬ ಹೆಸರಿನಲ್ಲಿ ಒಂದು ವ್ಯಾಖ್ಯಾನ ಇದೆ. ಅದರಲ್ಲಿಯೂ ಈ ಮಂತ್ರಕ್ಕೆ ವ್ಯಾಖ್ಯಾನ ಮಾಡುವಾಗ ‘ರುದ್ರದೇವರು ಬ್ರಹ್ಮದೇವರನ್ನು ಸೃಷ್ಟಿ ಮಾಡಿದ್ದಾರೆ’ ಎಂದು ವ್ಯಾಖ್ಯಾನ ಮಾಡಿಲ್ಲ. ಬದಲಾಗಿ ಪರಬ್ರಹ್ಮ ಪರವಾಗಿ ವ್ಯಾಖ್ಯಾನ ಮಾಡಿದ್ದಾರೆ.

तमेव परमात्मानं ।… ..प्रसन्ने हि परमेश्वरे बुद्धिरपि तद्विषया प्रमा निष्प्रपञ्चाकारब्रह्मात्मना अवतिष्ठते वर्तते ।

ನೋಡಿ ಈ ಮಂತ್ರದ ವ್ಯಾಖ್ಯಾನದಲ್ಲಿ ತಂ ಶಬ್ದಕ್ಕೆ ಪರಮಾತ್ಮ ಎಂದು ಅರ್ಥ ಮಾಡಿ, ಮುಂದೆ, ಪರಮೇಶ್ವರ ಪ್ರಸನ್ನನಾದಾಗ ಬುದ್ಧಿಯೂ ತದ್ವಿಷಯವಾದ ಪ್ರಮಾರೂಪವಾದ ಪ್ರಪಂಚಾದ್ಯಾಕಾರರಹಿತವಾದ ಬ್ರಹ್ಮಾತ್ಮವಾಗಿ ಇರುವುದು ಎಂದು ಹೇಳಿದ್ದಾರೆ.

ಇಲ್ಲಿ ಪರಮೇಶ್ವರ ಶಬ್ದಕ್ಕೆ ರುದ್ರ ಎಂದು ಅರ್ಥ ಮಾಡುವುದು ಆ ವ್ಯಾಖ್ಯಾನ ಪ್ರಕಾರ ಸರಿಯಲ್ಲ. ಬದಲಾಗಿ ನಿರ್ಗುಣ ಬ್ರಹ್ಮ ಎಂದು ಅರ್ಥ ಮಾಡಬೇಕು. ಅದಕ್ಕೇ ಮೊದಲು ತಂ ಎಂದರೆ ಪರಮಾತ್ಮ ಎಂದು ಬರೆದಿದ್ದಾರೆ, ಪರಮೇಶ್ವರ ವಿಷಯಕವಾದ ಪ್ರಮಾ ಎಂದರೆ ನಿಷ್ಪ್ರಪಂಚಾಕಾರಬ್ರಹ್ಮರೂಪ ಎಂದು ಹೇಳುವ ಮೂಲಕ, ಪರಮೇಶ್ವರ ಎಂದರೆ (ಆ ಮತದವರು ಹೇಳುವ) ನಿರಾಕಾರ ನಿರ್ಗುಣ ಬ್ರಹ್ಮ ಎಂದೇ ತಿಳಿಯುತ್ತದೆ.

ಹಾಗಾಗಿ ಶಾಂಕರಮತದ ವ್ಯಾಖ್ಯಾನದಂತೆಯೇ ಈ ಮಂತ್ರದಲ್ಲಿ ಪಾರ್ವತೀಪತಿ ರುದ್ರದೇವರ ಬಗ್ಗೆ, ಅವರು ಬ್ರಹ್ಮದೇವರನ್ನು ಸೃಷ್ಟಿ ಮಾಡಿದ ಬಗ್ಗೆ ಬಾರದೇ ಇರುವಾಗ, ಇಲ್ಲದ ಸಲ್ಲದ ಅರ್ಥವನ್ನು ಕಲ್ಪನೆ ಮಾಡಿ, ಅನವರತ ಭಾಗವತಾದಿ ಸದ್ಗ್ರಂಥಗಳ ಪಾಠ ಪ್ರವಚನ ಮಾಡುತ್ತಿರುವ ಪರಮಪೂಜ್ಯ ಶ್ರೀಸುವಿದ್ಯೇಂದ್ರತೀರ್ಥಶ್ರೀಪಾದರ ಪ್ರಾಮಾಣಿಕವಾದ ಉಪನ್ಯಾಸದ ಬಗ್ಗೆ, ಹೀಗೆ ವ್ಯಂಗ್ಯ ಆಡಿರುವುದು ಇವರ ಅಜ್ಞಾನವನ್ನು, ಮಾಧ್ವದ್ವೇಷವನ್ನು ಸ್ಪಷ್ಟವಾಗಿ ತಿಳಿಸುತ್ತದೆ.

ಜೊತೆಗೆ ಶ್ರೀಪಾದರು ಹೇಳಿರುವ ವಿಷಯವು ಶಾಸ್ತ್ರಸಮ್ಮತವಾಗಿದೆ. ಅನೇಕ ಗ್ರಂಥಗಳಲ್ಲಿ ಈ ವಿಷಯ ಬಂದಿದೆ.

ಭಾಗವತದಲ್ಲಿಯೇ ಮೂರನೇ ಸ್ಕಂಧದಲ್ಲಿ ಬ್ರಹ್ಮದೇವರು ಜಗತ್ತಿನಲ್ಲಿ ಸೃಷ್ಟಿ ಮಾಡಿದ್ದನ್ನು ತಿಳಿಸುತ್ತಾ, ಬ್ರಹ್ಮದೇವರಿಂದ ರುದ್ರದೇವರು ಸೃಷ್ಟಿಯಾದದ್ದನ್ನು ಹೇಳುತ್ತಾರೆ. -

ಸೋಽವಧ್ಯಾತಃ ಸುತೈರೇವಂ
ಪ್ರತ್ಯಾಖ್ಯಾತಾನುಶಾಸನೈಃ ।
ಕ್ರೋಧಂ ದುರ್ವಿಷಹಂ ಜಾತಂ
ನಿಯಂತುಮುಪಚಕ್ರಮೇ ॥ 6 ॥
ಧಿಯಾ ನಿಗೃಹ್ಯಮಾಣೋಽಪಿ
ಭ್ರುವೋರ್ಮಧ್ಯಾತ್ಪ್ರಜಾಪತೇಃ ।
ಸದ್ಯೋಽಜಾಯತ ತನ್ಮನ್ಯುಃ
ಕುಮಾರೋ ನೀಲಲೋಹಿತಃ ॥ 7 ॥
ಸ ವೈ ರುರೋದ ದೇವಾನಾಂ
ಪೂರ್ವಜೋ ಭಗವಾನ್ ಭವಃ ।
ನಾಮಾನಿ ಕುರು ಮೇ ಧಾತಃ
ಸ್ಥಾನಾನಿ ಚ ಜಗದ್ಗುರೋ ॥ 8 ॥

ಬ್ರಹ್ಮದೇವರು ಸನಕಾದಿಗಳನ್ನು ಸೃಷ್ಟಿ ಮಾಡಿ, ಅವರಿಗೆ ಸೃಷ್ಟಿ ಕಾರ್ಯ ಮಾಡಲು ಹೇಳುತ್ತಾರೆ. ಅವರು ಸೃಷ್ಟಿ ಮಾಡಲು ಒಪ್ಪದಿದ್ದಾಗ ಬ್ರಹ್ಮದೇವರಿಗೆ ಕೋಪ ಬರುತ್ತದೆ. ಅದನ್ನು ತಡೆಯುವಾಗಲೇ, (ಆ ಕೋಪದ ರೂಪವಾಗಿ) ಬ್ರಹ್ಮದೇವರ ಭ್ರೂಮಧ್ಯದಿಂದ ತತ್ಕ್ಷಣವೇ ರುದ್ರದೇವರು ಹುಟ್ಟುತ್ತಾರೆ. ಅವರು ನೀಲ ಹಾಗೂ ರಕ್ತವರ್ಣದಿಂದ ಕೂಡಿ, ನೀಲಲೋಹಿತ ಆಗಿರುತ್ತಾರೆ.

ಹೀಗೆ ದೇವತೆಗಳಿಗಿಂತ ಮೊದಲು ಹುಟ್ಟಿದ ರುದ್ರದೇವರು ಅಳಲು ಆರಂಭಿಸುತ್ತಾರೆ. ‘ಹೇ ಸೃಷ್ಟಿಕರ್ತೃವಾದ ಜಗದ್ಗುರುವಾದ ಬ್ರಹ್ಮದೇವರೇ, ನನಗೆ ನಾಮಕರಣ ಮಾಡಿ, ಸ್ಥಾನಗಳನ್ನು ನೀಡಿರಿ’ ಎಂದು ಅಳುತ್ತಾರೆ.

ಇದು ಈ ಶ್ಲೋಕಗಳ ತಾತ್ಪರ್ಯ.

ನೋಡಿ, ಇಲ್ಲಿ ಸ್ಪಷ್ಟವಾಗಿ ರುದ್ರದೇವರು ಹುಟ್ಟುವ ಮುನ್ನ ಬ್ರಹ್ಮಾದಿಗಳು ಇದ್ದದ್ದನ್ನು, ಹಾಗೂ ಬ್ರಹ್ಮದೇವರಿಂದ ರುದ್ರದೇವರು ಹುಟ್ಟಿರುವುದನ್ನೂ ಹೇಳಿದ್ದಾರೆ. ಇದು ಮಾಧ್ವರು ಮಾತ್ರ ಮಾಡುವ ವ್ಯಾಖ್ಯಾನ ಅಲ್ಲ.

ಶಾಂಕರಮತದ ಶ್ರೀಧರರ ವ್ಯಾಖ್ಯಾನದಲ್ಲಿ ಈ ಶ್ಲೋಕಗಳಿಗೆ ವ್ಯಾಖ್ಯಾನ ಇಲ್ಲದಿದ್ದರೂ, ಅದರ ವ್ಯಾಖ್ಯಾನವಾದ ವಂಶೀಧರೀ ವ್ಯಾಖ್ಯಾನದಲ್ಲಿ ಈ ಶ್ಲೋಕಗಳನ್ನು ವ್ಯಾಖ್ಯಾನ ಮಾಡಿದ್ದಾರೆ. 8 ನೇ ಶ್ಲೋಕಕ್ಕೆ ವಂಶೀಧರರ ವ್ಯಾಖ್ಯಾನ -

लोके बालस्वभावप्रवर्तनाय तस्य तं वक्ति स वा इति । देवानामिंद्रादीनाम् । धातः पितः। न केवलं मम, किं तु सर्वस्येत्याह जगद्गुरो इति। एतेन नामस्थानयोः करणे पितुरेवाधिकार इति ध्वनितम् ॥ ८ ॥

ರುದ್ರದೇವರು ಬಾಲಸ್ವಭಾವಪ್ರವರ್ತನೆಗಾಗಿ ಅತ್ತರು ಎಂದು ಹೇಳಲಾಗಿದೆ. ದೇವಾನಾಂ ಎನ್ನುವುದಕ್ಕೆ ಇಂದ್ರಾದಿ ದೇವತೆಗಳ ಎಂದು ಅರ್ಥ. ಧಾತಃ ಎಂದರೆ ತಂದೆಯೇ ಎಂದು ಸಂಬೋಧನೆ. ಕೇವಲ ನನಗೆ ಮಾತ್ರ ತಂದೆ ಅಲ್ಲ, ಎಲ್ಲರಿಗೂ ತಂದೆ ಎಂಬ ಅರ್ಥದಲ್ಲಿ ಜಗದ್ಗುರೋ ಎಂದು ರುದ್ರದೇವರು ಬ್ರಹ್ಮದೇವರನ್ನು ಕರೆದಿದ್ದಾರೆ. ಇದರಿಂದ ಮಕ್ಕಳಿಗೆ ಹೆಸರು ಹಾಗೂ ಸ್ಥಾನ ನೀಡುವುದಕ್ಕೆ ಅಪ್ಪನಿಗೇ ಅಧಿಕಾರ ಎಂಬ ಧ್ವನಿಯು ಸೂಚಿತವಾಗಿದೆ.

ಗಮನಿಸಬೇಕಾದ ಅಂಶ - ಈ ಶ್ಲೋಕದಲ್ಲಿ ಇರುವ ದೇವಾನಾಂ ಪೂರ್ವಜಃ ಎನ್ನುವುದಕ್ಕೆ ‘ಇಂದ್ರಾದಿ ದೇವತೆಗಳ ಮೊದಲು ಹುಟ್ಟಿದವರು’ ಎಂದು ಅರ್ಥ ಮಾಡಿದ್ದಾರೆ. ವಿನಹ ವಿಷ್ಣು ಬ್ರಹ್ಮ ಮೊದಲಾದವರಿಗಿಂತ ಮೊದಲು ಹುಟ್ಟಿದವರು ಎಂದು ಅರ್ಥ ಮಾಡಿಲ್ಲ.

ಇನ್ನು ರುದ್ರದೇವರು ಬ್ರಹ್ಮದೇವರನ್ನು ತಂದೆ ಎಂದು ಸಂಬೋಧಿಸಿದ್ದನ್ನು ತಿಳಿಸುತ್ತಾ, ವಂಶೀಧರರು ತಂದೆಯೇ ನಾಮಕರಣ ಮಾಡಬೇಕಾದದ್ದರಿಂದ ರುದ್ರದೇವರು ತಮ್ಮ ತಂದೆಯನ್ನು ನಾಮಕರಣ ಮಾಡಲು ಕೇಳಿದ್ದಾರೆ ಎಂದು ಹೇಳುವ ಮೂಲಕ, ರುದ್ರದೇವರು ಮಗ, ಬ್ರಹ್ಮದೇವರು ಅಪ್ಪ ಎಂಬುದನ್ನು ಯುಕ್ತಿಯುಕ್ತವಾಗಿ ತಿಳಿಸಿದ್ದಾರೆ.

ಮುಂದೆ ರುದ್ರದೇವರಿಗೆ ಬ್ರಹ್ಮದೇವರು ಹೆಸರಿಟ್ಟು, ಸ್ಥಾನಗಳನ್ನು ಕೊಟ್ಟು, ಸೃಷ್ಟಿ ಮಾಡಲು ಹೇಳಿದರು, ಆದರೆ ರುದ್ರದೇವರು ಮಾಡಿದ ಸೃಷ್ಟಿಯು ಸಮಾಜಕ್ಕೆ ತೊಂದರೆ ಮಾಡುವಂತಹದಾಗಿದೆ ಎಂದು, ಬ್ರಹ್ಮದೇವರೇ ಸೃಷ್ಟಿ ನಿಲ್ಲಿಸು ಎಂದು ಹೇಳಿ, ತಪಸ್ಸು ಮಾಡಲು ಹೇಳುತ್ತಾರೆ. ಆಗ ರುದ್ರದೇವರು ತಪಸ್ಸಿಗೆ ಹೋದ ವಿಷಯವನ್ನು ಭಾಗವತ ತಿಳಿಸುತ್ತದೆ. -

ಏವಮಾತ್ಮಭುವಾದಿಷ್ಟಃ
ಪರಿಕ್ರಮ್ಯ ಗಿರಾಂ ಪತಿಮ್ ।
ಬಾಢಮಿತ್ಯಮುಮಾಮಂತ್ರ್ಯ
ವಿವೇಶ ತಪಸೇ ವನಮ್ ॥

ಎಂದು.

ಇಲ್ಲಿ ವಂಶೀಧರರು ಗಿರಾಂ ಪತಿಂ ಎಂಬುದಕ್ಕೆ ವ್ಯಾಖ್ಯಾನ ಮಾಡುತ್ತಾ -

गिरां वेदवाचां पतिं पालकं हरिं परिक्रम्य ध्यात्वा मनसा अमुं ब्रह्माणमामन्त्र्य पृष्ट्वा वनं…..

ಎಂದು, ರುದ್ರದೇವರು ವೇದಪಾಲಕನಾದ ಹರಿಯನ್ನು ಧ್ಯಾನ ಮಾಡಿ, ಬ್ರಹ್ಮದೇವರನ್ನು ಕೇಳಿ, ತಪಸ್ಸಿಗೆ ಹೋದರು ಎಂದು ಬರೆದಿದ್ದಾರೆ.

ಇಲ್ಲಿ ರುದ್ರದೇವರು ಹರಿಯನ್ನು ಧ್ಯಾನ ಮಾಡುವುದು, ಬ್ರಹ್ಮ ದೇವರನ್ನು ಕೇಳುವುದು ಎಂಬ ಎರಡು ಚೇಷ್ಟೆಗಳನ್ನು ಮಾಡಿದರು ಎಂದು ತಿಳಿಸುವ ಮೂಲಕ, ಹರಿ ಹಿರಣ್ಯಗರ್ಭರಿಗಿಂತ ರುದ್ರದೇವರು ಚಿಕ್ಕವರು ಎಂದು ಹೇಳಿದಂತಾಗಿದೆ.

ನನಗೆ ಗೊತ್ತು. ತಕ್ಷಣ ಆ ಪುರಾಣದಲ್ಲಿ ತ್ರಿಮೂರ್ತಿಗಳ ಐಕ್ಯ ಹೇಳಿದೆ, ಈ ಪುರಾಣದಲ್ಲಿ ಶಿವನಿಗಿಂತ ಹರಿ ಹಿರಣ್ಯಗರ್ಭರು ಚಿಕ್ಕವರು ಎಂದು ಹೇಳಿದ್ದಾರೆ, ಮೂರೂ ಜನರೂ ಸಮಾನರು ಅದು ಇದು ಎಂಬ ಅಸಂಬದ್ಧವಾದ ಒಂದಿಷ್ಟು ಕಾಪಿ ಪೇಸ್ಟ್ ನ ಪೋಸ್ಟ್ ಗಳು ಬರುತ್ತವೆ. ಜೊತೆಗೆ ವಂಶೀಧರರ ವ್ಯಾಖ್ಯಾನದಲ್ಲಿ ಅಲ್ಲಿ ಹೀಗೆ ಹೇಳಿದ್ದಾರೆ, ಶ್ರೀಧರರ ವ್ಯಾಖ್ಯಾನದಲ್ಲಿ ಇಲ್ಲಿ ಹೀಗೆ ಹೇಳಿದ್ದಾರೆ. ಇತ್ಯಾದಿ ಕುಚೋದ್ಯಗಳು.

ಆದರೆ ಇದು ಸ್ತೋತ್ರ ಮಾಡುವ ಪ್ರಸಂಗ ಅಲ್ಲ. ಸೃಷ್ಟಿಯ ವಿಷಯ. ಶಾಂಕರಮತದ ವ್ಯಾಖ್ಯಾನದಲ್ಲಿಯೇ ಸ್ಪಷ್ಟವಾಗಿ ರುದ್ರದೇವರು ಬ್ರಹ್ಮದೇವರ ಪುತ್ರ ಎಂದು ಹೇಳಿದೆ. ಈ ಪ್ರಸಂಗದ ಶ್ಲೋಕಗಳಿಗೆ ಅರ್ಥಾಂತರ ಮಾಡಲು ಬರುವುದಿಲ್ಲ. ಜೊತೆಗೆ ಯುಕ್ತಿಯುಕ್ತವಾಗಿ ತಿಳಿಸಿರುವುದರಿಂದ ಈ ವಿಷಯವು ಪ್ರಬಲವಾಗುತ್ತದೆ.

ನೋಡಿ, ಶಾಂಕರಮತದ ವ್ಯಾಖ್ಯಾನದಲ್ಲಿಯೇ ಸ್ಪಷ್ಟವಾಗಿ ರುದ್ರದೇವರು ಬ್ರಹ್ಮದೇವರ ಪುತ್ರ, ರುದ್ರ ದೇವರು ಹುಟ್ಟುವ ಮುನ್ನ ಬ್ರಹ್ಮಾದಿಗಳು ಇದ್ದರು ಎಂದು ಹೇಳಿರುವಾಗ, ಶ್ರೀಪಾದರು ಹೇಳುವಂತೆ ‘ರುದ್ರದೇವರು ಜಗತ್ತು ನಿರ್ಮಾಣ ಮಾಡಿಲ್ಲವಲ್ಲ’ ಎಂಬುದು ಸರಿಯಾಗಿದೆ ಎಂದು ಸ್ಪಷ್ಟವಾಗುತ್ತದೆ.

ಈಗ ಆಲೋಚನೆ ಮಾಡಿ ಭಾಗವತ ತಿಳಿಯಿತೋ ಇಲ್ಲವೋ ಶ್ವೇತಾಶ್ವತರೋಪನಿಷತ್ತು ಖಂಡಿತ ತಿಳಿದಿಲ್ಲ ಎಂದು ಅರಚಿದರಲ್ಲ, ಭಾಗವತ ಯಾರಿಗೆ ತಿಳಿದಿಲ್ಲ? ಅಲ್ಲ ಭಾಗವತ ಆ ಮೇಲೆ. ಮೊದಲು ಅವರ ಮತದ ಗ್ರಂಥಗಳನ್ನೂ ಸರಿಯಾಗಿ ತಿಳಿಯದವರು, ಭಾಗವತ ಶ್ಲೋಕಗಳನ್ನು ಹೇಗೆ ತಾನೇ ಸರಿಯಾಗಿ ತಿಳಿದಾರು…?

ಹ ಹ ಅದೂ ಸರಿ ಉದ್ವೇಗದಲ್ಲಿ ಸರಿಯಾಗಿ ವೇದಾಂಶ್ಚ ಎಂದು ಕನ್ನಡದಲ್ಲಿ ಬರೆಯಲು ಬಾರದವರಿಂದ ಇನ್ನೇನು ನಿರೀಕ್ಷಿಸಲು ಸಾಧ್ಯ..? ಅಲ್ಲ ಎಡಿಟ್ ಮಾಡಿಯೂ ಸರಿಯಾಗಲಿಲ್ಲ ಎಂದರೆ ಅದೆಂತಹ ಉದ್ವೇಗ ಇರಬಹುದು.. ಕೇವಲ ಮಾಧ್ವದ್ವೇಷ ಅಷ್ಟೇ.

ಹಾಗಾಗಿ ಶ್ರೀಪಾದರು ಹೇಳಿದಂತೆ ‘ರುದ್ರದೇವರು ಜಗತ್ತು ನಿರ್ಮಾಣ ಮಾಡಿದವರಲ್ಲ’ ಎಂದು ಭಾಗವತದಿಂದಲೇ ಸ್ಪಷ್ಟವಾಗುವುದರಿಂದ, ಶ್ರೀಪಾದಂಗಳವರಿಗೆ ಭಾಗವತ ಚೆನ್ನಾಗಿ ತಿಳಿದಿದೆ, ಜೊತೆಗೆ ಶ್ವೇತಾಶ್ವತರೋಪನಿಷತ್ತೂ ಚೆನ್ನಾಗಿ ತಿಳಿದಿದೆ ಎಂದು ಸ್ಪಷ್ಟವಾಗುತ್ತದೆ.

ಹಾಗಾಗಿ ಶ್ರೀಪಾದರು ತಿಳಿಸಿದಂತೆ ರುದ್ರದೇವರು ಜಗತ್ತು ನಿರ್ಮಾಣ ಮಾಡಿದವರಲ್ಲ, ಅವರು ಶ್ರೀಹರಿ, ಹಿರಣ್ಯಗರ್ಭರ ಅನುಚರರು ಎಂದು ಶಾಸ್ತ್ರಗಳು ತಿಳಿಸುವಂತೆ ವಿವೇಕಿಗಳು ಉಪಾಸನೆ ಮಾಡಿ, ಶ್ರೀಹರಿವಾಯುಗುರುಗಳ ಅನುಗ್ರಹಕ್ಕೆ ಪಾತ್ರರಾಗುವುದು.

ಹೃಷೀಕೇಶ ಮಠದ

॥ श्रीश्रीशभक्तो जयति मध्वो विध्वस्तसाध्वसः ॥