शिवस्तुतौ

ಶ್ರೀಗುರುಭ್ಯೋ ನಮಃ

ಶಿವಸ್ತುತಿಯ ಹಿನ್ನೆಲೆ-ಒಂದು ಚಿಂತನೆ

ಶ್ರೀನಾರಾಯಣಪಂಡಿತಾಚಾರ್ಯರು ರಚಿಸಿರುವ ಶಿವಸ್ತುತಿಯು ಸಾಧಕರಾದ ಮಾಧ್ವರಿಗೆ ಅಚ್ಚುಮೆಚ್ಚಿನ ಕೃತಿ. ರುದ್ರದೇವರನ್ನು ವಿಶೇಷಾನುಸಂಧಾನಗಳಿಂದ ಸ್ತುತಿಸುವ ಈ ಕೃತಿಯ ವ್ಯಾಖ್ಯಾನಪರಂಪರೆಯನ್ನು ಗಮನಿಸಿದಾಗ ಇದರ ಪ್ರಭಾವದ ಅರಿವಾಗುತ್ತದೆ.

ಇಂತಹ ಶಿವಸ್ತುತಿಯ ರಚನೆಯ ಚರಿತ್ರೆಯನ್ನು ಕುರಿತು ಇಲ್ಲಿ ತಿಳಿಯೋಣ. ಸಾವಧಾನದಿಂದ ನಡೆಯೋಣ.


ನಹಿ ಸರ್ವಾಧಿಕಾರಿಕಂ ಕಿಮಪಿ ಶಾಸ್ತ್ರಮಸ್ತಿ

ಶಿವಸ್ತುತಿ ರಚನೆಯ ಚರಿತ್ರೆಯು ನಮಗೆ ಅದರ ವ್ಯಾಖ್ಯಾನಗಳಲ್ಲಿ ಮಾತ್ರ ಸಿಗುವುದು. ಅದರಲ್ಲಿಯೂ ಶಿವಸ್ತುತಿಗೆ ಇರುವ 9 ವ್ಯಾಖ್ಯಾನಗಳಲ್ಲಿ 6 ವ್ಯಾಖ್ಯಾನಗಳಲ್ಲಿ ಇದು ಉಲ್ಲಿಖಿತವಾಗಿಲ್ಲ. ಇನ್ನು ಮೂರು ವ್ಯಾಖ್ಯಾನಗಳಲ್ಲಿ ಎರಡು ರೀತಿಯಾಗಿ ಈ ಚರಿತ್ರೆಯು ವರ್ಣಿತವಾಗಿದೆ. ಅಂದರೆ ಎರಡು ಅಭಿಪ್ರಾಯವಿದೆ.

  1. ವೈಶ್ವನಾಥಿನಾರಾಯಣಾಚಾರ್ಯರು ಹಾಗೂ ಛಲಾರಿ ಆಚಾರ್ಯರು ಹೇಳಿದ ಚರಿತ್ರೆ ಹೀಗಿದೆ:- ನಾರಾಯಣಪಂಡಿತಾಚಾರ್ಯರು ಪಂಡಿತರ ಗುಂಪಿನೊಂದಿಗೆ ಒಮ್ಮೆ ಶ್ರೀಶೈಲದ ಮಲ್ಲಿಕಾರ್ಜುನನ ದರ್ಶನಕ್ಕೆ ತೆರಳಿದ್ದರು. ಅವರ ಸ್ಫುಟವಾದ ವೈಷ್ಣವಚಿಹ್ನೆಗಳನ್ನು ಕಂಡ ಅಲ್ಲಿಯ ಶಿವನ ಅರ್ಚಕರು ತಮ್ಮ ದೂತರ ಮುಖಾಂತರ ಅವರನ್ನು ಒಳಬಿಡದೆ ಬಾಗಿಲನ್ನು ಮುಚ್ಚಿ ಕಟು ಮಾತುಗಳಿಂದ ದೂರ ತಳ್ಳಲು ಪ್ರಯತ್ನಿಸಿದರು. ಅಲ್ಲದೇ ಪಾಶುಪತಮತವನ್ನು ಆಧರಿಸಿ ಶಿವನೇ ಸರ್ವೋತ್ತಮನೆಂದು ವಾದಿಸಿದರು.

ಆಗ ತಮ್ಮ ನಿಷ್ಠೆ ಹಾಗೂ ವಿದ್ವತ್ತಿನಿಂದ ವಿಷ್ಣುಸರ್ವೋತ್ತಮತ್ವವನ್ನು ಸ್ಥಾಪಿಸಿ ಅವರನ್ನು ಗೆದ್ದ ಪಂಡಿತಾಚಾರ್ಯರು ಇದು ನನ್ನ ಗೆಲುವು ಅಷ್ಟೆ ಅಲ್ಲ. ಶಿವನ ಅಭಿಪ್ರಾಯವೂ ಕೂಡ ಇದೆ ಆಗಿದೆ ಎಂದು ತೋರಿಸುವೆ ಎಂದು ನುಡಿದು “ನಾನು ಸ್ಥಾಪಿಸಿದ ವಿಷ್ಣುಸರ್ವೋತ್ತಮತ್ವವು ಶಿವನಿಗೆ ಅಭಿಮತವಾಗಿದ್ದಲ್ಲಿ ಚಿಲಕ ಹಾಕಿ ಮುಚ್ಚಿದ ಬಾಗಿಲಿನೊಳಗೆ ಇರುವ ರುದ್ರದೇವರು ಪ್ರಸನ್ನನಾಗಿ ತಾನಾಗಿಯೇ ಗೋಚರಿಸುವವನು” ಎಂದು ಪ್ರತಿಜ್ಞೆಗೈದರು.

ಅದರಂತೆ ದೇವಾಲಯದ ಹೊರಗೆ ನಿಂತು ತಲೆಯ ಮೇಲೆ ಕೈಜೋಡಿಸಿ ಭಕ್ತಿಯಿಂದ ಹನ್ನೆರಡು ಪದ್ಯಗಳಲ್ಲಿ ರುದ್ರದೇವರನ್ನು ಸ್ತುತಿಸಿದರು. ಈ ಸ್ತೋತ್ರವು ಮುಗಿಯುತ್ತಿದ್ದಂತೆಯೇ ಜೋರಾದ ಶಬ್ದದೊಂದಿಗೆ ಬಾಗಿಲು ಮುರಿದುಬಿತ್ತು. ಮಲ್ಲಿಕಾರ್ಜುನ ಗೋಚರಿಸಿದನು.

ಆಗ ಪಶ್ಚಾತ್ತಾಪದಿಂದ ಬೆಂದ ಶಿವಾರ್ಚಕರಿಂದ ಪೂಜಿತರಾದ ಪಂಡಿತಾಚಾರ್ಯರು ಶಿವನನ್ನು ಆರಾಧಿಸಿದರು.

ಹೀಗೆ ಶ್ರೀಶೈಲದಲ್ಲಿ ರಚಿತವಾಯಿತು ಎನ್ನುತ್ತವೆ ಈ ಎರಡು ವ್ಯಾಖ್ಯಾನಗಳು.

  1. ವಿಶ್ವಪತಿತೀರ್ಥರು ಹೇಳಿದ ಚರಿತ್ರೆ ಹೀಗಿದೆ:- ರಾಮೇಶ್ವರನ ದರ್ಶನಕ್ಕಾಗಿ ರಾಮಸೇತು-ರಾಮೇಶ್ವರಯಾತ್ರೆಗೆ ಹೋಗಿದ್ದ ನಾರಾಯಣಪಂಡಿತಾಚಾರ್ಯರು ರಾಮೇಶ್ವರನ ದರ್ಶನಕ್ಕೆಂದು ತೆರಳಿದಾಗ ದೇವಾಲಯದ ಬಾಗಿಲು ಮುಚ್ಚಿತ್ತು. ಆಗ ಆ ಬಾಗಿಲು ತೆಗೆದು ರಾಮೇಶ್ವರನ ದರ್ಶನವಾಗಬೇಕು ಎಂಬ ಕಾರಣದಿಂದ ರಾಮೇಶ್ವರನ ಸ್ತೋತ್ರವನ್ನು ಮಾಡಿದರು.

ಇದರಿಂದ ಈ ಸ್ತೋತ್ರವು ರಾಮೇಶ್ವರದಲ್ಲಿ ರಚಿತವಾಯಿತು ಎಂದು ತಿಳಿಯುತ್ತದೆ.

ಹೀಗೆ ರಚನೆಯ ಸ್ಥಳದ ವಿಷಯದಲ್ಲಿ ಅಭಿಪ್ರಾಯಭೇದ ತೋರುತ್ತದೆ.

ಇವೆರಡರಲ್ಲಿ ಯಾವುದನ್ನು ಸ್ವೀಕರಿಸಬೇಕು?

ಕೆಲವರಿಗೆ ಈ ಸ್ತೋತ್ರವೇ ಬೇಡ. ಕೆಲವರಿಗೆ ಈ ಸ್ತೋತ್ರ ಬೇಕು. ಆದರೆ ಅದರ ಚರಿತ್ರೆ ಬೇಡ. ಕೆಲವರಿಗೆ ವಿವಾದರಹಿತವಾದ ಚರಿತ್ರೆಯ ಅಂಶಗಳು ಮಾತ್ರ ಸಾಕು. ಕೆಲವರಿಗೆ ಪ್ರಾಚೀನವ್ಯಾಖ್ಯಾನಕಾರರನ್ನು ಅಜ್ಞಾನಿಗಳು ಎಂದು ಬಿಂಬಿಸುವುದಕ್ಕಾಗಿ ವ್ಯಾಖ್ಯಾನಗಳಲ್ಲಿರುವ ವಿಭಿನ್ನತೆ ಬೇಕು.

ಇಂಥವರಿಗಾಗಿ ಈ ಲೇಖವಲ್ಲ.

ಯಾರಿಗೆ ಸತ್ಯವನ್ನು ತಿಳಿಯುವ ಅಪೇಕ್ಷೆ, ನಿರ್ಣಯದ ಅಪೇಕ್ಷೆ ಇರುತ್ತದೆ, ಚರಿತ್ರೆಯಲ್ಲಿ ಆಸಕ್ತಿಯಿರುತ್ತದೆ, ಪ್ರಾಚೀನಗ್ರಂಥಕಾರರಲ್ಲಿ ವಿಶ್ವಾಸವಿರುತ್ತದೆ ಅಂಥವರಿಗಾಗಿ ಮಾತ್ರ ಈ ಲೇಖನ.

ಆತ್ಮಾವಲೋಕನ..

ಈ ಎಲ್ಲ ವ್ಯಾಖ್ಯಾನಗಳನ್ನು ಗಮನಿಸಿದಾಗ ನನ್ನ ಮನಸಿನಲ್ಲಿ ಮೂಡಿದ ಚಿಂತನೆ ಹೀಗಿದೆ:- ಈ ಸ್ತೋತ್ರದ ರಚನೆ ಶ್ರೀಶೈಲದಲ್ಲಿಯೇ ಆಗಿದೆ. ಈ ನಿರ್ಣಯಕ್ಕೆ ನನಗೆ ಕಂಡ ಕಾರಣಗಳು….

  1. ಒಂದು ವಿಷಯದಲ್ಲಿ ಭಿನ್ನಾಭಿಪ್ರಾಯವಿದ್ದಾಗ ಪ್ರಾಚೀನರ ಅಭಿಪ್ರಾಯಕ್ಕೆ ಮಹತ್ವವಿರುತ್ತದೆ. ವೈಶ್ವನಾಥಿನಾರಾಯಣಚಾರ್ಯರು ವಿಶ್ವಪತಿತೀರ್ಥರಿಗಿಂತಲೂ ಪ್ರಾಚೀನರು. ಈಗಿರುವ ಮಾಹಿತಿಯಂತೆ ಒಂದು ಶತಮಾನದ ಅಂತರವಿದೆ. ಉತ್ತರಾದಿಮಠದ ವೇದವ್ಯಾಸತೀರ್ಥರ ಶಿಷ್ಯರಾದ ವೈಶ್ವನಾಥಿನಾರಾಯಣಾಚಾರ್ಯರು ರಘೂತ್ತಮತೀರ್ಥರ, ವೇದವ್ಯಾಸತೀರ್ಥರ, ವಿದ್ಯಾಧೀಶತೀರ್ಥರ ಕಾಲದಲ್ಲಿ ಇದ್ದವರು.

ವಿಶೇಷವಾಗಿ ವೈಶ್ವನಾಥಿನಾರಾಯಣಾಚಾರ್ಯರು ವಾದಿರಾಜಸ್ವಾಮಿಗಳ ಸಂಪರ್ಕದಲ್ಲಿದ್ದು ಅವರಿಂದ ಅನುಗ್ರಹೀತರಾದವರು.

ಮುಖ್ಯವಾಗಿ ವಿಶ್ವಪತಿತೀರ್ಥರ ಕಾಲ 18 ನೆ ಶತಮಾನದ ಆದಿಭಾಗ. ವೈಶ್ವನಾಥಿನಾರಾಯಣಚಾರ್ಯರ ವ್ಯಾಖ್ಯಾನದ ಹಸ್ತಪ್ರತಿ 1630 ರದ್ದೇ ಸಿಗುತ್ತದೆ. ಅದೂ ಕೂಡ ಪುಣೆ, ವಡೋದರಾ ಗ್ರಂಥಾಲಯಗಳಲ್ಲಿ. ಅಂದರೆ ವಿಶ್ವಪತಿತೀರ್ಥರಿಗಿಂತಲೂ ಬಹಳ ಹಿಂದೆಯೇ ವೈಶ್ವನಾಥಿನಾರಾಯಣಾಚಾರ್ಯರ ವ್ಯಾಖ್ಯಾನದ ವ್ಯಾಪ್ತಿ ಪ್ರಸಿದ್ಧಿ ಇತ್ತು ಎಂದು ತಿಳಿಯುತ್ತದೆ.

ಅಲ್ಲದೆ ಇದೇ ವಿಷಯವನ್ನು ಪ್ರಸ್ತಾಪಿಸಿದ ಛಲಾರಿ ಆಚಾರ್ಯರು ಪ್ರಾಯ: ವಿಶ್ವಪತಿತೀರ್ಥರ ಸಮಕಾಲೀನರು.

ಹೀಗೆ ಪ್ರಾಚೀನೋಕ್ತತ್ವದಿಂದ ಶ್ರೀಶೈಲಪಕ್ಷಕ್ಕೆ ಮಹತ್ವ ಬರುತ್ತದೆ.

(ಸೂಚನೆ:- ಇಲ್ಲಿ ವಿಶ್ವಪತಿತೀರ್ಥರ ಅಭಿಪ್ರಾಯವನ್ನು ನಿರಾಕರಿಸುತ್ತಿಲ್ಲ. ಅದರ ಬಗ್ಗೆ ಮುಂದೆ ವಿವರಿಸುತ್ತೇನೆ)

  1. ಒಂದು ವಿಷಯದಲ್ಲಿ ಭಿನ್ನಾಭಿಪ್ರಾಯವಿದ್ದಾಗ ಬಹುಜನರ ಅಭಿಪ್ರಾಯಕ್ಕೆ ಮಹತ್ವವಿರುವುದು ವೈದಿಕಲೌಕಿಕ ವ್ಯವಹಾರದಲ್ಲಿ ಸಿದ್ಧವಾಗಿದೆ. ಪ್ರಸಕ್ತ ಈ ವಿಷಯದಲ್ಲಿಯೂ ಕೂಡ ಮೂವರಲ್ಲಿ ಇಬ್ಬರು ಶ್ರೀಶೈಲದಲ್ಲಿ ಎಂದು ಹೇಳಿದ್ದರಿಂದ ಬಹುಸಮ್ಮತತ್ವ ಶ್ರೀಶೈಲಪಕ್ಷಕ್ಕೆ ಬರುತ್ತದೆ.

  2. ಸಂಕ್ಷಿಪ್ತನಿರೂಪಣೆ-ವಿಸ್ತೃತನಿರೂಪಣೆಗಳಲ್ಲಿ ವಿಸ್ತೃತನಿರೂಪಣೆಗೆ ಮಹತ್ವವಿರುತ್ತದೆ. ವೈಶ್ವನಾಥಿನಾರಾಯಣಚಾರ್ಯರು ಛಲಾರಿ ಆಚಾರ್ಯರು ಪ್ರಸಂಗದ ಸಂಪೂರ್ಣ ಚಿತ್ರಣವನ್ನು ನೀಡಿದ್ದಾರೆ. ವಿಶ್ವಪತಿತೀರ್ಥರು ಅಷ್ಟು ವಿವರಣೆ ನೀಡಿಲ್ಲ. ಅರ್ಚಕರ ಪ್ರತಿರೋಧ-ವಾದಗಳು, ಪಂಡಿತಾಚಾರ್ಯರ ಸಿದ್ಧಾಂತಮಂಡನೆ, ಅದಕ್ಕೆ ರುದ್ರದೇವರ ಸಮ್ಮತಿಯ ಪ್ರತಿಜ್ಞೆ, ತಲೆಯ ಮೇಲೆ ಕೈಜೋಡಿಸಿ ಸ್ತೋತ್ರರಚನೆ, ದ್ವಾರಭಂಜನ, ಪ್ರಸನ್ನರಾದ ರುದ್ರದೇವರ ದರ್ಶನ, ಶೈವಾರ್ಚಕರಿಂದ ಗೌರವ ಈ ಯಾವ ವಿಷಯಗಳನ್ನೂ ವಿಶ್ವಪತಿತೀರ್ಥರು ಹೇಳಿಲ್ಲ.

ವಿಶ್ವಪತಿತೀರ್ಥರು ಹೇಳಿರುವುದು ರಾಮೇಶ್ವರದಲ್ಲಿ ಹಾಕಿದ ದೇವಾಲಯದ ಬಾಗಿಲು ತೆಗೆಯಲು ರುದ್ರದೇವರನ್ನು ಪಂಡಿತಾಚಾರ್ಯರು ಸ್ತುತಿಸಿದರು ಎಂದಿಷ್ಟೆ.

ಆದ್ದರಿಂದ ವಿಸ್ತೃತವಾದ ನಿರೂಪಣೆಯಿಂದಲೂ ಶ್ರೀಶೈಲಪಕ್ಷಕ್ಕೆ ಮಹತ್ವವಿದೆ.

  1. ಆರಂಭದ ಶ್ಲೋಕದಲ್ಲಿಯೇ ಶ್ರೀಶೈಲದ ಮಲ್ಲಿಕಾರ್ಜುನನ ಮಲ್ಲಿಕಾರ್ಜುನತ್ವವನ್ನು ತಿಳಿಸುವ ಸ್ಫಟಿಕಸಪ್ರಭಂ ಎಂಬ ವಿಶೇಷಣವನ್ನು ಪಂಡಿತಾಚಾರ್ಯರು ಹೇಳಿದ್ದಾರೆ.

ಈ ವಿಶೇಷಣವು ರುದ್ರದೇವರಿಗೆ ಸಂಬಂಧಪಟ್ಟದ್ದಾದರೂ ಬಾಧಕವಿಲ್ಲದಿದ್ದರೆ ರುದ್ರದೇವರ ಅಧಿಷ್ಠಾನಕ್ಕೂ ಸಂಬಂಧಿಸುತ್ತದೆ.

ಶ್ರೀಶೈಲದಲ್ಲಿ ಲಿಂಗವು ಶ್ವೇತವರ್ಣದಿಂದ ಕೂಡಿದೆ. ಶ್ರೀಶೈಲದಲ್ಲಿ ಎರಡು ಲಿಂಗಗಳಿವೆ. ಒಂದು ಅರ್ಜುನವೃಕ್ಷದ ಲಿಂಗ. ಮತ್ತೊಂದು ಶಿಲೆಯ ಲಿಂಗ. ಅರ್ಜುನವೃಕ್ಷ ಎಂಬ ಹೆಸರೇ ಹೇಳುವಂತೆ ಅದು ಶ್ವೇತವರ್ಣದ್ದು. ಆದ್ದರಿಂದ ತದಾತ್ಮಕಲಿಂಗವೂ ಕೂಡ ಶ್ವೇತವರ್ಣದ್ದು.

ಶಿಲೆಯ ಲಿಂಗವೂ ಎಲ್ಲಕಡೆಯಂತೆ ಕಡುಗಪ್ಪಿನದ್ದಲ್ಲ. ಶ್ವೇತಾಂಶವಿಶಿಷ್ಟಲಿಂಗ.

ಇವೆರಡನ್ನೂ ಚಿತ್ರದಲ್ಲಿ ಕಾಣಬಹುದು.

(ಸೂಚನೆ:- ಇತ್ತೀಚೆಗೆ ಲಿಂಗದ ಪುನಃ ಪ್ರತಿಷ್ಠೆ ಮಾಡಿದ್ದಾರೆ. ಆದರೆ ಪ್ರಾಚೀನಲಿಂಗದ ನಿರೂಪಣೆ ಇಲ್ಲಿದೆ.)

ಇದು ಕಲ್ಪನೆಯಲ್ಲ. ವಾದಿರಾಜಸ್ವಾಮಿಗಳೂ ತೀರ್ಥಪ್ರಬಂಧದಲ್ಲಿ ನಿರೂಪಿಸಿದ ವಿಷಯವಿದು.

ಶ್ರೀಪರ್ವತಕೃತಾವಾಸೋ ಭಾತೀಶೋ ಮಲ್ಲಿಕಾರ್ಜುನ:. ಬದ್ಧಸ್ವೀಯಜಟಾಜೂಟಮಧ್ಯಸ್ಥ ಇವ ಚಂದ್ರಮಾ:..

ಇದರ ವ್ಯಾಖ್ಯಾನದಲ್ಲಿ ನಾರಾಯಣಾಚಾರ್ಯರು “ಮಲ್ಲಿಕಾರ್ಜುನ: ಮಲ್ಲಿಕಾವತ್ ಮಲ್ಲಿಕಾಪುಷ್ಪವತ್ ಅರ್ಜುನ: ಧವಲ: ಮಲ್ಲಿಕಾರ್ಜುನ:” ಎಂದು ವ್ಯಾಖ್ಯಾನಿಸಿ ಶ್ರೀಶೈಲದಲ್ಲಿ ಇರುವ ಲಿಂಗವು ಶ್ವೇತವರ್ಣದ್ದು ಎನ್ನುವುದನ್ನು ಸೂಚಿಸಿದ್ದಾರೆ.

‘ಬದ್ಧಸ್ವೀಯಜಟಾಜೂಟಮಧ್ಯಸ್ಥ ಇವ ಚಂದ್ರಮಾ:’ ಎಂಬ ಉಪೆಮೆಯೂ ಕೂಡ ಪ್ರಾಕೃತಿಕವಾದ ಶ್ವೇತವರ್ಣವೈಶಿಷ್ಟ್ಯವನ್ನು ಸೂಚಿಸುತ್ತದೆ.

ಮತ್ತೊಂದು ಸ್ವಾರಸ್ಯವೆಂದರೆ ಶ್ರೀಶೈಲದಲ್ಲಿ ರುದ್ರದೇವರನ್ನು ಮಲ್ಲಿಕಾರ್ಜುನ ಎಂದು ಕರೆಯಲು ಮತ್ತೊಂದು ಕಾರಣವನ್ನು ಹೇಳಲಾಗುತ್ತದೆ. ಅರ್ಜುನವೃಕ್ಷದಲ್ಲಿ ಸನ್ನಿಹಿತವಾಗಿರುವ ರುದ್ರದೇವರನ್ನು ಪಾರ್ವತೀದೇವಿಯು ಮಲ್ಲಿಗೆಯ ಬಳ್ಳಿಯ ರೂಪದಲ್ಲಿ ಸುತ್ತುವರೆದಿದ್ದಾಳೆ. ಆದ್ದರಿಂದ “ಮಲ್ಲಿಕಯಾ ಯುಕ್ತ: ಅರ್ಜುನ: ಮಲ್ಲಿಕಾರ್ಜುನ:” ಎಂಬ ಅರ್ಥವನ್ನು ಹೇಳಲಾಗುತ್ತದೆ. ಇದರ ಸೂಚನೆ ಎಂಬಂತೆ ಪಂಡಿತಾಚಾರ್ಯರು ಕೂಡ ಶಿವಸ್ತುತಿಯ ಎರಡನೆ ಶ್ಲೋಕದಲ್ಲಿ “ಸ್ವಭಕ್ತಿಲತಯಾ ವಶೀಕೃತವತೀ ಸತೀಯಂ ಸತೀ..” ಎಂದು ವರ್ಣಿಸಿದ್ದಾರೆ.

ಹೀಗೆ ಸ್ತೋತ್ರದಲ್ಲಿರುವ ವಿಶೇಷಣಗಳು ಶ್ರೀಶೈಲಪಕ್ಷಕ್ಕೆ ಪೋಷಕವಾಗುತ್ತವೆ.

  1. ಅಲ್ಲದೇ ವೈಶ್ವನಾಥಿನಾರಾಯಣಾಚಾರ್ಯರು ಸಮಗ್ರಸ್ತೋತ್ರವನ್ನು ಈ ಘಟನೆಯ ಹಿನ್ನೆಲೆಯಲ್ಲಿಯೆ ವ್ಯಾಖ್ಯಾನಿಸುತ್ತಾರೆ. ಅದು ಅತ್ಯಂತಸ್ವರಸವಾಗಿಯೂ ತೋರುತ್ತದೆ. ಅವುಗಳನ್ನು ಇಲ್ಲಿ ನೋಡೋಣ.

ಮೊದಲ ಶ್ಲೋಕದಲ್ಲಿ “ವೀಕ್ಷಣಂ ತೇ ವಪು: ಕದಾ ದೃಶ್ಯತೇ " ಎನ್ನುವುದರ ಅಭಿಪ್ರಾಯವನ್ನು ಹೀಗೆ ತಿಳಿಸಿದ್ದಾರೆ “ಪ್ರಕೃತೇಽಪಿ ಪಾಶುಪತೈರ್ಪಿಹಿತದ್ವಾರೋಪಿ ಭವಾನ್ ಮಯಾ ಮನಸಾ ದೃಶ್ಯತ ಏವ. ತಥಾಪಿ ಚಕ್ಷುಷಾ ಭವಂತಂ ಕದಾ ದ್ರಕ್ಷ್ಯಾಮಿ? ಭವದ್ದರ್ಶನಪ್ರತಿಬಂಧಕಾನಾಮೇಷಾಂ ವ್ಯಾಪಾರಂ ವಿಫಲೀಕೃತ್ಯ ಶೀಘ್ರಮಾತ್ಮಪ್ರತಿಮಾಸ್ವರೂಪಂ ದರ್ಶಯೇತಿ ಭಾವಃ.”

ಇದೇ ವಿಷಯವನ್ನು ರಂಗನಾಥಾಚಾರ್ಯರೂ ತಿಳಿಸುತ್ತಾರೆ.

ಎರಡನೇ ಶ್ಲೋಕದ ಪೀಠಿಕೆಯಲ್ಲಿ ವೈಶ್ವನಾಥಿನಾರಾಯಣಾಚಾರ್ಯರು “ನನು ತ್ವಯಾ ಮದ್ದರ್ಶನಕಾಮೇನ ಸ್ವಸಾಮರ್ಥ್ಯಮವಲಂಬ್ಯ ಕಿಮಿತಿ ಕವಾಟೋದ್ಘಾಟನಂ ನ ಕ್ರಿಯತೇ? ಇತ್ಯತಃ ತ್ವತ್ಪ್ರಸಾದಮಂತರೇಣ ನೈತದ್ವಿಧಾತುಂ ಶಕ್ಯಂ. …. ಇತ್ಯಾಶಯೇನ ತತ್ಪ್ರಸಾದಂ ಪ್ರಾರ್ಥಯತೇ ತ್ರಿಲೋಚನೇತಿ.” ಎಂದು ಹೇಳಿ ಮುಂದೆ ಪ್ರಭುಶಬ್ದದ ಸ್ವಾರಸ್ಯವನ್ನು ಹೀಗೆ ತಿಳಿಸಿದ್ದಾರೆ “ಪ್ರಭುಶಬ್ದೇನ ನಿಗ್ರಹಾನುಗ್ರಹಸಾಮರ್ಥ್ಯಂ ಪ್ರವದತಾ ದರ್ಶನಪ್ರತಿಬಂಧಕಾನಾಂ ನಿಗ್ರಹಂ ವಿಧಾಯ ಮಯ್ಯನುಗ್ರಹೋ ವಿಧಾತವ್ಯ ಇತಿ ಧ್ವನಿತಂ ಭವತಿ.”

ಇದೇ ಭಾವವನ್ನು ಛಲಾರಿ ಆಚಾರ್ಯರೂ ಈ ಶ್ಲೋಕದಲ್ಲಿ ತಿಳಿಸುತ್ತಾರೆ “ಏವಂ ಮಯಾಪಿ ಪ್ರಾರ್ಥ್ಯಮಾನೋ ಭವಾನ್ ಪ್ರಸನ್ನಃ ಸನ್ ಸ್ವಸ್ವರೂಪಂ ಪ್ರದರ್ಶಯೇತಿ ಭಾವಃ.”

8ನೇ ಶ್ಲೋಕದ ವ್ಯಾಖ್ಯಾನದಲ್ಲಿ ವೈಶ್ವನಾಥಿನಾರಾಯಣಾಚಾರ್ಯರು ಹಾಗೂ ಛಲಾರಿ ಆಚಾರ್ಯರು “ಸಾಕ್ಷಾತ್ಕಾರಂ ಪ್ರಾರ್ಥಯತೇ” ಎಂದು ಹೇಳಿದ್ದಾರೆ. ದೃಶಂ=ಅಪರೋಕ್ಷಬುದ್ಧಿಂ, ದಿಶ=ದೇಹಿ.

12ನೇ ಶ್ಲೋಕದ ವ್ಯಾಖ್ಯಾನದಲ್ಲಿ ಛಲಾರಿ ಆಚಾರ್ಯರು ಹಾಗೂ ರಂಗನಾಥಾಚಾರ್ಯರು ‘ಆಂತರೀಂ ದೃಶಂ ಆಹರ’ ಎನ್ನುವದಕ್ಕೆ ಹೀಗೆ ಅಭಿಪ್ರಾಯವನ್ನು ತಿಳಿಸಿದ್ದಾರೆ ದೇವಾಲಯಾಂತರ್ವರ್ತಿತ್ವನ್ಮುರ್ತಿಸಾಕ್ಷಾತ್ಕಾರಂ ಪ್ರಯಚ್ಛ ಇತ್ಯರ್ಥಃ. “ವಪುರವೇಕ್ಷತೇ ವೀಕ್ಷಣಂ” ಇತಿ ತಸ್ಯೈವ ಪ್ರಾರ್ಥಿತತ್ವಾತ್.

ವೈಶ್ವನಾಥಿನಾರಾಯಣಾಚಾರ್ಯರು ಹೇಳಿರುವ ಚರಿತ್ರೆಗೆ ಅವರು ಹಾಗೂ ಬೇರೆ ವ್ಯಾಖ್ಯಾನಕಾರರು ಈ ರೀತಿ ಸಂವಾದಗಳನ್ನು ಮೂಲಗ್ರಂಥದಲ್ಲಿಯೇ ತೋರಿಸಿದ್ದಾರೆ.

ಅಲ್ಲದೇ ಮೂರನೆ ಶ್ಲೋಕದಲ್ಲಿ ವೇದಾಂಗತೀರ್ಥರು “ಅಂಜಲಿ:” ಎಂಬಲ್ಲಿ ‘ಮಯಾ ಧೃತಾ’ ಎಂದು ಶೇಷಪೂರಣೆಯನ್ನು ತಿಳಿಸಿದ್ದಾರೆ. ಇದರಿಂದ ತಲೆಯ ಮೇಲೆ ಕೈಜೋಡಿಸಿ ಸ್ತುತಿಸಿದರು ಎಂಬ ಚರಿತ್ರೆ ಸೂಚಿತವಾಗುತ್ತದೆ.

ಇನ್ನು “ಶಠಹೃದ: ಶುಚಾ ಶುಂಠಿತಾ:” ಎನ್ನುವುದರಿಂದ ದುರಾಗ್ರಹಿಗಳ ಸ್ಥಿತಿಯೂ ಸೂಚಿತವಾಗುತ್ತದೆ.

ಇನ್ನು ನಾರಾಯಣಪಂಡಿತಾಚಾರ್ಯರಿಗೆ ಇದ್ದ ವೈಷ್ಣವದೀಕ್ಷೆ ಅನೂಹ್ಯವಾದದ್ದು. ಅದನ್ನು ಸಮರ್ಥಿಸುವ ಅವಶ್ಯಕತೆಯೇ ಇಲ್ಲ. ಅವರಿಗಿದ್ದ ವಿಷ್ಣುದೀಕ್ಷೆಯನ್ನು ಕಂಡು ಇತರರು ಆಕ್ರೋಶಕ್ಕೊಳಗವುದರಲ್ಲಿ ಯಾವ ಆಶ್ಚರ್ಯವೂ ಇಲ್ಲ, ಅಸಂಭಾವನೆಯೂ ಇಲ್ಲ. ಈ ಕಾಲದಲ್ಲಿ ಇದು ಅತ್ಯಂತಸ್ಪಷ್ಟವಾಗಿ ಅನುಭವವೇದ್ಯವಾಗಿದೆ. ಇನ್ನು ಆ ಕಾಲದಲ್ಲಿ ತೀರಾ ಸಹಜ ಅಲ್ಲವೇ?

ಪಂಡಿತಾಚಾರ್ಯರ ಮೇಲೆ ರುದ್ರದೇವರ ಕಾರುಣ್ಯವಂತೂ ನಿರ್ವಿವಾದ.

ಹಾಗಾಗಿ ಈ ಚರಿತ್ರೆಯು ಪ್ರಾಮಾಣಿಕವಾಗಿದೆ ಎಂದು ತಿಳಿಯುತ್ತದೆ. ಈ ಚರಿತ್ರೆಯ ಚಿಂತೆಯೊಂದಿಗೆ ಈ ಸ್ತೋತ್ರವನ್ನು ಪಠಿಸುವುದರಿಂದ ರುದ್ರದೇವರ ವೈಷ್ಣವತ್ವ, ನಾರಾಯಣಪಂಡಿತಾಚಾರ್ಯರ ವಿಷ್ಣುವೈಷ್ಣವನಿಷ್ಠೆ, ಈ ಸ್ತೋತ್ರದ ಸಾಮರ್ಥ್ಯ ಎಲ್ಲವೂ ತಿಳಿಯುತ್ತದೆ.


ವಿಶ್ವಪತಿತೀರ್ಥರ ಅಭಿಪ್ರಾಯವೇನು?

ಹಿಂದೆ ನಿರೂಪಿಸಿದ ಕಾರಣಗಳಿಂದ ಶ್ರೀಶೈಲಪಕ್ಷವನ್ನು ನಿರಾಕರಿಸುವುದು ಕಷ್ಟ. ಹಾಗೆಂದು ವಿಶ್ವಪತಿತೀರ್ಥರ ಮಾತನ್ನು ಅಲ್ಲಗೆಳೆಯುವುದೂ ಸರಿಯಲ್ಲ.

ನನ್ನ ಅಭಿಪ್ರಾಯದಲ್ಲಿ ವಿನಿಗಮಕಾಭಾವಾತ್ ಸಿದ್ಧಮುಭಯಮಪಿ ಎಂಬ ನ್ಯಾಯದಂತೆ ಎರಡೂ ಸರಿ. ಹೇಗೆಂದರೆ ಒಂದು ಗ್ರಂಥ ಎರಡು ಸ್ಥಳಗಳಲ್ಲಿ ರಚಿತವಾಗಲು ಸಾಧ್ಯವಿಲ್ಲ ನಿಜ. ಆದರೆ ಒಂದು ಕಡೆ ರಚಿತವಾದ ಗ್ರಂಥವು ಮತ್ತೊಂದು ಕಡೆ ವಿನಿಯುಕ್ತವಾಗಬಹುದು. ಉದಾ:- ಕೃಷ್ಣನ ವಿಗ್ರಹವನ್ನು ತರುವಾಗ ರಚಿತವಾದ ದ್ವಾದಶಸ್ತೋತ್ರವು ಎತ್ತಿನ ವಿಷಪರಿಹಾರದಲ್ಲಿಯೂ ವಿನಿಯುಕ್ತವಾಯಿತು. ಅದರಂತೆ ವೈಶ್ವನಾಥಿನಾರಾಯಣಾಚಾರ್ಯರೆ ಮೊದಲಾದ ಜ್ಞಾನಿಗಳ ವಚನಗಳು ನಿರವಕಾಶವಾಗಿವೆ, ಸ್ವರಸವೂ ಆಗಿವೆ. ಅದಕ್ಕನುಗುಣವಾಗಿ ವಿಶ್ವಪತಿತೀರ್ಥರ ವಚನವು ಸಾವಕಾಶವೆಂದು ತಿಳಿಯುತ್ತದೆ.

ಅಲ್ಲದೆ ಆ ಕಾಲದಲ್ಲಿ ಈ ಎಲ್ಲ ಜ್ಞಾನಿಗಳಿಗೆ ಪರಸ್ಪರ ಸಂಬಂಧ-ಪರಿಚಯಗಳು ಇರಲಿಲ್ಲ ಎಂದೇನಿಲ್ಲ. ಪರಸ್ಪರ ಸಂಬಂಧ-ಪರಿಚಯಗಳೂ ಇದ್ದವು. ಗ್ರಂಥಗಳ ವ್ಯಾಪ್ತಿಯೂ ಇತ್ತು. ಆದರೆ ಯಾರೂ ಮತ್ತೊಬ್ಬರ ಅಭಿಪ್ರಾಯವನ್ನು ನಿರಾಕರಿಸಿಲ್ಲ. ಇದರಿಂದಲೂ ಈ ಎರಡೂ ಘಟನೆಗಳು ಸತ್ಯವೆಂದು ತಿಳಿಯುತ್ತದೆ.

ಒಂದೇ ರೀತಿಯ ಘಟನೆ ಎರಡು ಬಾರಿ ನಡೆಯಬಾರದು ಎಂದೇನಿಲ್ಲ. ಆಚಾರ್ಯರ ಚರಿತ್ರೆಯಲ್ಲಿ ಬಹುಸಂಖ್ಯಾಕ ಬಾಳೆಹಣ್ಣಿನ ಪರೀಕ್ಷೆ ಮೂರು ಬಾರಿ ನಡೆದಿದೆ. ಆಚಾರ್ಯರ ಜೊತೆ ಸ್ಪರ್ಧೆಗೆ ಬಂದ ಜಟ್ಟಿಗಳ ಕಥೆಯೂ ಒಂದೆ ರೀತಿ ಎರಡು ಬಾರಿ ಬಂದಿದೆ. ಸ್ವಲ್ಪವ್ಯತ್ಯಾಸಗಳು ಉಭಯತ್ರ ಸಮಾನ. ಹಾಗಾಗಿ ಗೊಂದಲಗಳಿಗೆ ಅವಕಾಶವಿಲ್ಲ.

ಹಾಗಾಗಿ ಪ್ರಕೃತದಲ್ಲಿ ಎರಡು ಚರಿತ್ರೆಗಳನ್ನು ಸೇರಿಸಿ ಈ ರೀತಿ ಚಿಂತಿಸಬಹುದು. ನಾರಾಯಣಪಂಡಿತಾಚಾರ್ಯರು ಶ್ರೀಶೈಲದಲ್ಲಿ ಅಭೂತಪೂರ್ವ ಸಿದ್ಧಾಂತವನ್ನು ಸಮರ್ಥಿಸಿ, ರುದ್ರದೇವರಿಗೆ ಸಮರ್ಪಿಸಿ, ಸ್ತೋತ್ರವನ್ನು ರಚಿಸಿ ರುದ್ರದೇವರ ಕೃಪೆಯಿಂದ ದರ್ಶನ ಪಡೆದು ಕಾಲಾನಂತರದಲ್ಲಿ ರಾಮೇಶ್ವರಕ್ಕೂ ಹೋಗುತ್ತಾರೆ. ಅಲ್ಲಿ ಸಾಂದರ್ಭಿಕವಾಗಿ ದೇವಸ್ಥಾನದ ಬಾಗಿಲು ಮುಚ್ಚಿರುತ್ತದೆ. (ರಾಮೇಶ್ವರದಲ್ಲಿ ವಾದ ನಡೆದಿದ್ದಕ್ಕೆ ದಾಖಲೆ ಇಲ್ಲ) ಆಗ ರುದ್ರದೇವರಿಗೆ ಅತ್ಯಂತ ಇಷ್ಟವಾದ ಈ ಸ್ತೋತ್ರವನ್ನು ಭಕ್ತಿಯಿಂದ ಪಠಿಸುತ್ತಾರೆ. ಅದರಿಂದ ರಾಮೇಶ್ವರನ ಅನುಗ್ರಹಭಾಜನರಾಗುತ್ತಾರೆ ಪಂಡಿತಾಚಾರ್ಯರು.

ಇದು ಇಬ್ಬರು ಗ್ರಂಥಕಾರರಲ್ಲಿರುವ ಆಪ್ತತ್ವನಿಶ್ಚಯದಿಂದ, ಆಚಾರ್ಯರ ಪುರಾಣಸಮನ್ವಯದ ಮಾರ್ಗದರ್ಶನದಿಂದ ಉಂಟಾದ ಚಿಂತನೆ. ಇದರಲ್ಲಿ ತಪ್ಪಿದ್ದರೆ ತಿಳಿಸಬೇಕೆಂದು ವಿನಂತಿಸುವೆ.


ಈ ವ್ಯಾಖ್ಯಾನಕಾರರಿಗೆ ಪಂಡಿತಾಚಾರ್ಯರಲ್ಲಿ ಇರುವ ಅಪಾರ ಗೌರವ

ಗ್ರಂಥದ ಪ್ರಾರಂಭದಲ್ಲಿಯೆ ವೈಶ್ವನಾಥಿನಾರಾಯಣಾಚಾರ್ಯರು ಪಂಡಿತಾಚಾರ್ಯರನ್ನು ಎರಡು ಶ್ಲೋಕಗಳಿಂದ ಸುಂದರವಾಗಿ ಸ್ತುತಿಸಿದ್ದಾರೆ.

ಶ್ರೀಮತ್ಪ್ರಾಣಗಣಾಧಿನಾಯಕತನುಸ್ವಾನಂದತೀರ್ಥಾಮಲ-
ಶ್ರೀಪಾದಾಂಬುಜಸೇವನೋದಿತಮಹಾಬುದ್ಧಿಃ ಕವೀಂದ್ರಾಗ್ರಣೀಃ.
ಚಕ್ರೇ ರುದ್ರನುತಿಂ ತ್ರಿವಿಕ್ರಮಕವೇಃ ಸೂನುರ್ಗಭೀರಾರ್ಥಕಾಂ
ಶ್ರೀನಾರಾಯಣಪಂಡಿತಾಯ ಮಹಿತಾಚಾರ್ಯಾಯ ತಸ್ಮೈ ನಮಃ..

ಶ್ರೀರಾಮಾಯಣಪಾರಿಜಾತಹರಣಶ್ರೀಮಧ್ವಚಾರಿತ್ರಿಕಾ-
ಖ್ಯಾನಂ ಕಾವ್ಯಗಣಂ ವಿಧಾಯ ವಿದಧೇ ದಿವ್ಯಾಂ ಶಿವಸ್ಯ ಸ್ತುತಿಂ.
ಪ್ರೀತಃ ಸನ್ ಜಗತಾಂ ಗುರುಃ ಕಿಲ ಯಯಾ ಗೌರೀಪತಿಃ ಸ್ವಾಂ ತನುಂ
ಸ್ಪಷ್ಟಂ ದರ್ಶಯತಿ ಸ್ಮ ತತ್ಸ್ತೂತಿಫಲಂ ಕೋ ವಾ ಕವಿರ್ವರ್ಣಯೇತ್..

ಇಲ್ಲಿ ಪಂಡಿತಾಚಾರ್ಯರ ಮಹತ್ವದೊಂದಿಗೆ ಈ ಶಿವಸ್ತುತಿಯ ಮಹತ್ವವೂ ತಿಳಿಯುತ್ತದೆ. ಭಕ್ತಿಯಿಂದ ಈ ಸ್ತೋತ್ರವನ್ನು ಪಠಿಸುವುದರಿಂದ ರುದ್ರದೇವರ ವಿಶೇಷಾನುಗ್ರಹವಾಗುವುದರಲ್ಲಿ ಸಂದೇಹವೇ ಇಲ್ಲ. “ಗೌರೀಪತಿ: ಸ್ವಾಂ ತನುಂ ಸ್ಪಷ್ಟಂ ದರ್ಶಯತಿ”

12ನೆ ಶ್ಲೋಕದಲ್ಲಿ “ಆಂತರೀಂ ದೃಶಂ ಆಹರ” ಎಂಬ ಪದವನ್ನು ವ್ಯಾಖ್ಯಾನಿಸಿ “ಅನಯಾ ಪ್ರಾರ್ಥನಯಾ ಸ್ವಸ್ಯ ಮಹರ್ಷಿತ್ವಂ ಸೂಚಯತಿ ಗ್ರಂಥಕಾರ:. ಋಷಯೋಽಂತ:ಪ್ರಕಾಶಾ: ಇತಿ ಶ್ರುತೇ:.” ಎಂದು ಪಂಡಿತಾಚಾರ್ಯರಿಗೆ ಋಷಿತ್ವವನ್ನು ತಿಳಿಸಿದ್ದಾರೆ.

ಇದೇ ವಿಷಯವನ್ನು ಛಲಾರಿ ಆಚಾರ್ಯರು, ರಂಗನಾಥಾಚಾರ್ಯರೂ ಹೇಳುತ್ತಾರೆ.

ಕೊನೆಯ ಶ್ಲೋಕದ ವ್ಯಾಖ್ಯಾನವನ್ನು ಮಾಡುತ್ತಾ ಪಂಡಿತಾಚಾರ್ಯರಲ್ಲಿ ಆಪ್ತತ್ವವನ್ನು ನಿರೂಪಿಸುತ್ತಾ ಹೀಗೆ ಹೇಳಿದ್ದಾರೆ:- “ಯತೋ ಲಿಕುಚಕುಲೋತ್ಪನ್ನಾ ಶಿಷ್ಟತ್ವೇನ ಪ್ರಸಿದ್ಧಾ:, ತತ್ರಾಪಿ ಸೂರಿ: ಪಂಡಿತ: ತ್ರಿವಿಕ್ರಮಾಚಾರ್ಯ: ತತ್ಪುತ್ರೇ ಮಯಿ….”

ಈ ಮಾತುಗಳಿಂದ ವೈಶ್ವನಾಥಿನಾರಾಯಣಾಚಾರ್ಯರೇ ಮೊದಲಾದ ಜ್ಞಾನಿಗಳಿಗೆ ಪಂಡಿತಾಚಾರ್ಯರಲ್ಲಿ ಇದ್ದ ಅಪಾರಗೌರವವು ತಿಳಿಯುತ್ತದೆ.

ಇಂತಹ ಜ್ಞಾನಿಪರಂಪರೆಗೆ ವಂದಿಸಿ ಪಂಡಿತಾಚಾರ್ಯರನ್ನು ವಂದಿಸಿ ಅವರಿಂದ ಸ್ತುತ್ಯನಾದ ರುದ್ರದೇವರ, ಅವರ ಅಂತರ್ಯಾಮಿಯಾದ ಪರಮಾತ್ಮನ ಅನುಗ್ರಹಕ್ಕೆ ಪಾತ್ರರಾಗೋಣ.

ಶ್ರೀನಿವಾಸ ಕೊರ್ಲಹಳ್ಳಿ