स्व-नियन्त्रण-चोदनम्

ಶ್ರೀಮನ್ನ್ಯಾಯಾಮೃತ ಶ್ರೀಮನ್ನ್ಯಾಯಸುಧಾದಿ ಗ್ರಂಥಗಳಿಂದ ತತ್ವನಿರ್ಣಯವಾಯಿತು ಸಾಧಕರಿಗೆ ಅನುಸಂಧಾನಕ್ಕೆ ಅನುಕೂಲವಾಯಿತೇ ಹೊರತಾಗಿ, ತಾಯಗಂಡ ಹರ ನೀ ಹೇಗಾದ್ಯೋ ಇತ್ಯಾದಿಗಳಿಂದ ಕೇವಲ ಸಮಾಜಕ್ಷೋಭೆಯುಂಟಾಯಿತು. ಮಾಣಿಕ್ಯಮಂಜರಿಯಂತಹ ಪುಸ್ತಕಗಳಿಗೆ ಅವಕಾಶ ಒದಗಿಸಿದಂತಾಯಿತು,ನಮ್ಮ ಪೂಜ್ಯರನ್ನು ನಿಂದಿಸಲು ಪರರಿಗೆ ಅವಕಾಶವಿತ್ತಂತಾಯಿತು. ಇಂದಿನ ನಾವು ನಮ್ಮ ಹಿಂದಿನವರ ಆಕ್ರೋಶವನ್ನು ಅರ್ಥೈಸಿಕೊಂಡು, ಸೌಮ್ಯವಾಗಿ ವರ್ತಿಸದ ಪಕ್ಷದಲ್ಲಿ ಮೂಲಭೂತವಾದ ದಯಾದಾಕ್ಷಿಣ್ಯಾದಿ ಧರ್ಮವನ್ನು ಅನುಸರಿಸಿದ ದೈತ್ಯರಾಗುವೆವು ಎಚ್ಚರವಿರಲಿ. ತಪ ಆಲೋಚಿತಂ ಕರ್ಮ ಎಂಬ ಭಗವಂತನ ನುಡಿ ನಮಗೆ ದಾರಿಯಾಗಲಿ. ನಾ ಬ್ರೂಯಾತ್ ಸತ್ಯಮಪ್ರಿಯಮ್ ಎಂಬ ಸಾಮಾಜಿಕ ನಿಯಮಕ್ಕೆ ನಾವು ಬದ್ಧರಾಗೋಣ

इति बिदिर-हळ्ळि-कृष्णाचार्यः।

ಪಾಪ ಇಷ್ಟು ಶ್ರೀವಾದಿರಾಜರಿಗೆ, ಶ್ರೀ ಪುರಂದರದಾಸರಿಗೆ ತಿಳಿಯಲಿಲ್ಲ.😱 ಆ ಕಾಲ ಬೇರೆ ಈ ಕಾಲ ಬೇರೆ.
ಅದು ರಾಜರ ಆಡಳಿತಕ್ಕೆ ಒಳಪಟ್ಟಿತ್ತು, ಈಗ ಅಲ್ಪಸಂಖ್ಯಾತರಾದ ನಮ್ಮ ಸುತ್ತಲೂ ಕಮ್ಯುನಿಸ್ಟ್ ಗಳೇ ಅಧಿಕ ಸಂಖ್ಯೆಯಲ್ಲಿದ್ದಾರೆ.
ಈಗ ಯಾರೂ ಮಾತಿಗೆ ಮುಂದಾಗಿ ಪರಿಹರಿಸಿಕೊಳ್ಳಲು ತಯಾರಾಗರು. ಕಾರಣ ನಮ್ಮ ಬೌದ್ಧಿಕ ಬಲದ ಅರಿವು ಅವರಿಗಿದೆ. ಹೀಗಾಗಿ ನಾವೂ ಡಿಪ್ಲೊಮ್ಯಾಟಿಕ್ ಆಗಿ ವರ್ತಿಸುವುದು ಜೀವನ ದೃಷ್ಟಿಯಿಂದ , ಲೌಕಿಕ ದೃಷ್ಟಿಯಿಂದ ಒಳಿತು.
ಬಿದರಹಳ್ಳಿ ಆಚಾರ್ಯರ ಮಾತು ಅತ್ಯಂತ ಆಳವಾದ ಚಿಂತನೆಯನ್ನು ಒಳಗೊಂಡಿದೆ.
ನಮ್ಮ ಸಾಧನೆಗೆ ನಾವೇ ಅಡ್ಡಿ ತಂದುಕೊಳ್ಳಬಾರದು.

इति सुमनाचार्यः।

ಯಾರೂ ತಮ್ಮ ತಮ್ಮ ಗುರುಗಳನ್ನೋ ತತ್ತ್ವವನ್ನೋ ಸ್ತುತಿಸಲು ಅನುಷ್ಠಾನಗೊಳಿಸಲು ಸ್ವತಂತ್ರರಿರುವರು, ಜೋತೆಯಲ್ಲಿ ಇಂದಿನ ಸಾಮಾಜಿಕ ಸ್ವಾಸ್ಥ್ಯ ಹದಗೆಡಸದೇ ಇರುವ ಜವಾಬ್ದಾರಿ ಇದೆ. ಸುಧಾದಿ ಗ್ರಂಥಗಳಲ್ಲಿ ಅನ್ಯಮತೀಯರ ವೈಯ್ಯಕ್ತಿಕ ನಿಂದನೆ ಇಲ್ಲದೇ ಕೇವಲ ಮತವಿಮರ್ಶೆ ನಡೆದಿದೆ. ಇದು ನಮಗೂ ಎಲ್ಲರಿಗೂ ಮಾದರಿ. ಇನ್ನು ಕೆಲವರು ನಮ್ಮ ಪ್ರಾಚೀನರು ಸ್ವಲ್ಪ ಗಡಸು ವಚನಗಳನ್ನು ಹೇಳಿರಬಹುದು, ಆದರೆ ಅದು ಅಂದಿನ ದಿನಕ್ಕೆ ಸಂಗತವಾಗಿರ ಬಹುದು. ಏನೇ ಆಗಲಿ ಕಟು ಭಾಷೆಯಲ್ಲಿ ವ್ಯಕ್ತಿ ದೂಷಣೆಯು ಯಾವ ಪುರುಷಾರ್ಥ ಸಾಧಕವಲ್ಲ. ಅನುಸಂಧಾನಕ್ಕೆ ಪೂರಕವಲ್ಲ.

ಶಾಸ್ತ್ರ ತಿಳಿಸಿದಂತೆ ಚತ್ವರಾದಿಗಳಲ್ಲಿ( ಸಾಮಾಜಿಕ ಜಾಲತಾಣದಲ್ಲಿ) ಸರ್ವಥಾ ಇಂತಹ ಕ್ಷೋಭಕಾರಕಗಳನ್ನು ಬಿತ್ತರಿಸಲೇಬಾರದು. ಇದರಿಂದ ಅವರು ನಮ್ಮ ಪ್ರಾಚೀನರನ್ನು ನಮ್ಮ ಸಮಾಜವನ್ನು ಮನಸ್ವಿಯಾಗಿ ನಿರಾಧಾರವಾಗಿ ನಿಂದಿಸಲು ಅವಕಾಶವಿತ್ತಂತಾಗುವುದು.

इति बिदिर-हळ्ळि-कृष्णाचार्यः।

ಹೌದು ಬಿದರಹಳ್ಳಿ ಆಚಾರ್ಯರು ಹೇಳಿದ್ದು ಅತ್ಯಂತ ಸಮೀಚೀನ. ವಿನಾ ಕಾರಣ ನಾವು ಜಗಳ ಆಡುತ್ತಾ ಕುಳಿತು ನಮ್ಮ ಪಾಠ ಪ್ರವಚನಕ್ಕೆ ನಾವೇ ಅಡ್ಡಿ ಮಾಡಿಕೊಳ್ಳಬಾರದು. ಇದು ಸಮಾಜದಲ್ಲಿ ಕೋಲಾಹಲ ಸೃಷ್ಟಿ ಮಾಡುತ್ತದೆ. ಯದ್ಯಪಿ ಸಿದ್ಧಂ ಲೋಕವಿರುದ್ಧಂ ಇದೆ. ಲೋಕದಲ್ಲಿ ವಿರೋಧವನ್ನು ಹೆಚ್ಚುಸುತ್ತದೆ. ಆದ್ದರಿಂದ ಇಂತಹ ಗ್ರಂಥಗಳ ಪಾರಾಯಣಗಳನ್ನು ಅವರವರು ತಮ್ಮ ತಮ್ಮ ಮನೆಯಲ್ಲಿ ಅಥವಾ ಏಕಾಂತದಲ್ಲಿ ಮಾಡುವುದು ಸೂಕ್ತ. ಸಾಮಾಜಿಕ ತಾಣದಲ್ಲಿ ಪ್ರಸಾರ ಮಾಡಬಾರದು.

ನಾವೆಲ್ಲ ತಿಳಿದಂತೆ ಆ ಕಾಲದಲ್ಲಿ ಆಳುವ ರಾಜರ ಪ್ರಭಾವ ಸಮಾಜದ ಮೇಲೆ ಬಹಳವಾಗಿ ಪರಿಣಾಮ ಬೀರುತ್ತದೆ. ಕೆಲವರಿಗೆ ತತ್ವ ವಿಚಾರದಲ್ಲಿ ಗೊಂದಲವಿತ್ತು ಕೆಲವರಿಗೆ ಗೊತ್ತಿದ್ದರೂ ಅನಿವಾರ್ಯವಾಗಿ ಬಹಿರಂಗವಾಗಿ ಆಚರಣೆ ಮಾಡಲಿಕ್ಕೆ ಆಗ್ತಾ ಇರ್ಲಿಲ್ಲ. ಇದರಿಂದ ತಿಳಿದು ಬರುವುದೇನೆಂದರೆ ಎಲ್ಲ ಕಾಲದಲ್ಲೂ ಗೊತ್ತಿದೆಲ್ಲವನ್ನು ಹೇಳಲಿಕ್ಕೆ ಆಗುವುದಿಲ್ಲ. ಅಷ್ಟೇ ಅಲ್ಲದೆ ನಾವು ಸಮಾಜ ಜೀವಿಗಳಾದದ್ದರಿಂದ ಸಮಾಜದ ಚೌಕಟ್ಟಿನಲ್ಲಿ ನಾವು ಇರಬೇಕೆ ವಿನಹ ಮನಬಂದಂತೆ ಮಾತಾಡಬಾರದು. ಎಲ್ಲೇ ಮೀರಿ ಮಾತಾಡಿದಾಗ ನನಗೊಬ್ಬನಿಗೆ ತೊಂದರೆ ಅಲ್ಲ ನಮ್ಮ ಸಿದ್ಧಾಂತಕ್ಕೆ ನಮ್ಮ ಸಮಾಜಕ್ಕೆ ಅದು ತೊಂದರೆ ಅಷ್ಟೇ ಅಲ್ಲದೆ ನಮ್ಮ ಆಚಾರ್ಯರನ್ನು ಮನಬಂದಂತೆ ಬೈತಾರೆ. ಪ್ರಾಚೀನ ಕಾಲದಲ್ಲಿ ತಪ್ಪಿದ್ದರೆ ಒಪ್ಪಿಕೊಳ್ಳುವ ಹೃದಯ ವೈಶಾಲ್ಯತೆಯು ಇತ್ತು. ಇದಲ್ಲದೆ ಇಷ್ಟು ಸುಲಭವಾಗಿ ಪ್ರಚಾರ ಹಾಗೂ ಪ್ರಸಾರ ಮಾಧ್ಯಮಗಳು ಇರಲಿಲ್ಲ. ಪ್ರಾಯಶಃ ವಾಟ್ಸಾಪ್ ಫೇಸ್ ಬುಕ್ ಅಂತಹ ಮಾಧ್ಯಮಗಳು ಅವತ್ತು ಇದ್ದಿದ್ದರೆ ಆಗಿನವರು ಹಾಗೆ ಮಾತನಾಡುತ್ತಿರಲಿಲ್ಲವೋ ಏನೋ. ಇವತ್ತು ಪ್ರತಿಯೊಂದು ರೆಕಾರ್ಡ್ ಆಗಿ ಬಿಡುತ್ತೆ. ಮಾತನಾಡುವವರು ಮೈಯೆಲ್ಲಾ ಕಂಡಾಗಿ ಮಾತಾಡಬೇಕು ಅದರ ಜೊತೆಯಲ್ಲಿ ಇನ್ನೊಬ್ಬರಿಗೆ ನೋವಾಗದಂತೆ ಮಾತನಾಡುವ ಶೈಲಿಯನ್ನು ನಾವು ಅಳವಡಿಸಿಕೊಳ್ಳಬೇಕು. ಅಂದಾಕ್ಷಣೀಯ ನಮಗೆ ಸಿದ್ಧಾಂತದಲ್ಲಿ ದೀಕ್ಷೆ ಇಲ್ಲ ಅಂತೇನಲ್ಲ. ನಮ್ಮ ನಮ್ಮ ಗುರುಗಳನ್ನು ಇನ್ನೊಬ್ಬರು ಬೈಬಾರದು ಎನ್ನುವ ದೃಷ್ಟಿಯಿಂದಲೇ ನಮ್ಮ ಮಾತು ಇನ್ನೊಬ್ಬರಿಗೆ ನೋವುಂಟು ಮಾಡಬಾರದು ಅನ್ನುವ ವಿವೇಕ ಬೇಕು. ಮಧ್ವಾಚಾರ್ಯರೇ ಕೆಲವೊಂದು ನೀತಿಗಳನ್ನು ಮಾಡಿ ತೋರಿಸಿದ್ದಾರೆ. ನೀತಿಂ ಪ್ರಕಾಶಯಿತುಮೇವ ವಿಪತ್ಸು ಕಾರ್ಯಾಂ ಎನ್ನುವಂತೆ ತುರುಷ್ಕ ರಾಜನಲ್ಲಿ ಅವನ ಭಾಷೆಯಲ್ಲಿ ಮಾತಾಡುವ ಅನಿವಾರ್ಯತೆ ಆಚಾರ್ಯರಿಗೆ ಇರಲಿಲ್ಲ ಆದರೂ ಮಾತಾಡಿ ನಮಗೆ ಒಂದು ದಾರಿಯನ್ನು ಹಾಕಿ ಕೊಟ್ಟಿದ್ದಾರೆ. ಈ ವಿದಿಶೆಯದಲ್ಲಿ ನಾಲ್ಕು ಗೋಡೆ ಮಧ್ಯ ಯಾವ ಕ್ಯಾಮರಾ ಫೋನು ಏನು ಇಲ್ಲದೆ ಇದ್ದಾಗ ತಮ್ಮ ಸ್ವಂತ ವಿಚಾರವನ್ನು ಮಾತನಾಡಿದರೇ ಅದನ್ನು ಅರಗಿಸಿಕೊಳ್ಳುವುದು ಕಷ್ಟವಾದಾಗ ಪ್ರಪಂಚವೇ ನೋಡುವಾಗ ನಾವು ಏನೆಂದರೆ ಅದನ್ನ ಮಾತನಾಡುತ್ತೇವೆ ಎಂದರೆ ಅದು ಹೇಗೆ ಸಾಧ್ಯ. ಆ ತರಹದ ಅಂಶಗಳು ಬಂದಾಗ ಸಾರ್ವಜನಿಕ ಸಭೆಯಲ್ಲಿ ಮಧ್ವಾಚಾರ್ಯರ ಹಿರಿತನ ಹಾಗೂ ಸಮಾಜಕ್ಕೆ ಕೊಡುಗೆಗಳು ಇವುಗಳನ್ನು ಹೈಲೈಟ್ ಮಾಡಿದ್ರೆ ಅತ್ಯುತ್ತಮ ಎಲ್ಲರೂ ಒಪ್ಪುವಂತಹ ವಿಷ್ಣು ಭಕ್ತಿ ಪರಿಣಾಮಸ್ಮರಣೆ ಮುಂತಾದವುಗಳ ಅಂಶಕ್ಕೆ ಒತ್ತುಕೊಟ್ಟು ಮಹಾಭಾರತದಲ್ಲಿ ಬಂದ ಗೊಂದಲ ಪರಿಹಾರ ಇವುಗಳ ಬಗ್ಗೆ ಹೆಚ್ಚು ಹೇಳಿದರೆ ಪರಕಿಯರಿಗೂ ಆಚಾರ್ಯರ ಬಗ್ಗೆ ಮಾಧ್ವರ ಬಗ್ಗೆಗೌರವ ಬರುತ್ತದೆ. ಇಲ್ಲದ ಸಮಸ್ಯೆಗಳನ್ನು ಮೈ ಮೇಲೆ ಹಾಕಿಕೊಳ್ಳಲಿಕ್ಕೆ ಎಂದೂ ಹೋಗಬಾರದು. ಇವತ್ತಿನ ಪರಿಸ್ಥಿತಿಯನ್ನು ನೋಡಿ ಈ ತರಹದ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದೇನೆ. ತಪ್ಪಿದ್ದರೆ ವಿದ್ವಾಂಸರಗಳು ಕ್ಷಮಿಸಬೇಕು.

ನಮಸ್ಕಾರ ಆಚಾರ್ಯರಿಗೆ. ಇವತ್ತಿನ ನಮ್ಮ ಪರಿಸ್ಥಿತಿ ಹೇಗಿದೆ ಎಂದರೆ ಪರಕೀಯರನ್ನು ನಿಂದನೆ ಮಾಡುವುದು ಒಂದು ಕಡೆ ಇರಲಿ ನಮ್ಮ ಮಕ್ಕಳನ್ನು ನಾವು ಇಂದು ಜೋರಾಗಿ ಬಯ್ಯುವ ಹಕ್ಕನ್ನ ಕಳೆದುಕೊಂಡಿರುವ ಸ್ಥಿತಿಯಲ್ಲಿದ್ದೇವೆ. ಈ ತರಹದ ಸ್ಥಿತಿಯಲ್ಲಿ ನಾವಿರುವಾಗ ಶಬ್ದ ಪ್ರಯೋಗಗಳನ್ನು ಮಾಡುವಾಗ ಬಹಳ ಎಚ್ಚರದಿಂದ ಇರಬೇಕಾಗಿದೆ. ಪ್ರಾಚೀನ ಗ್ರಂಥಕಾರರ ಹಾಗೂ ಹರಿದಾಸರ ಗ್ರಂಥಗಳಲ್ಲಿ ಬಳಸಿದಂತಹ ಭಾಷೆ ಎಷ್ಟೇ ಹರಿತವಾಗಿದ್ದರೂ ಅದಕ್ಕೆ ಪ್ರತಿಭಟನೆಯನ್ನು ಗ್ರಂಥ ರೂಪದಲ್ಲಿ ತೋರಿಸುವ ಸೌಜನ್ಯ ಇತ್ತು ಇಂದು ಆ ಸೌಜನ್ಯ ಯಾರಲ್ಲೂ ಇಲ್ಲ. ತುಂಬಾ ದೊಡ್ಡ ದುರಂತವೆಂದರೆ ಒಬ್ಬ ವ್ಯಕ್ತಿ ಸರಿಯಾಗಿ ಪ್ರತಿಭಟನೆಯನ್ನು ಮಾಡಿದ್ದರು ಆ ವ್ಯಕ್ತಿಯ ಬಗ್ಗೆ ತನಗೆ ವೈಯಕ್ತಿಕ ದ್ವೇಷವಿದ್ದರೆ ಸಮಾಜದಿಂದ ಅಕ್ಷೇಪಣೆ ಬಂದಾಗ ಅದರ ದುರ್ಲಾಭವನ್ನ ನಮ್ಮವರೇ ಪಡೆಯುತ್ತಾರೆ. ಈ ದಿಶೆಯಲ್ಲಿ ಶಬ್ದಗಳನ್ನು ಬೆಳೆಸಬೇಕಾದರೆ ಬಹಳ ಎಚ್ಚರಿಕೆಯಿಂದ ನಾವು ಕತ್ತಿಯ ಅಲಗಿನ ಮೇಲೆ ಸಾಗಿದಂತೆ ಸಾಗಬೇಕಾಗಿದೆ. ಅನೇಕ ದಾಸರ ಕೃತಿಗಳಲ್ಲಿ ನಿಷ್ಠುರವಾಗಿ ಖಂಡನೆಯನ್ನು ಮಾಡಿದ್ದಾರೆ ಮಾಡಬೇಕಾದದ್ದು ನಮ್ಮ ಕರ್ತವ್ಯವೂ ಹೌದು ಆದರೆ ಇವತ್ತಿನ ಪರಿಸ್ಥಿತಿ ಮನುಷ್ಯನ ಮನಸ್ಥಿತಿ ನಮ್ಮ ಜನದಿಂದಲೇ ಬರುವ ಅಸಹಕಾರ ಹಾಗೂ ಸರ್ಕಾರದ ಸಮತಾವಾದ ಇವುಗಳು ನಮ್ಮನ್ನ ಮೂಲೆಗುಂಪಿಗೆ ತಳ್ಳಿ ಬಿಡುತ್ತದೆ. ನಿಷ್ಠುರವಾದ ಪದ ಜಾಲವನ್ನು ಬಳಸದೆ ವಿಷಯವನ್ನು ಮಂಡನೆ ಮಾಡಬೇಕಾದ ಅನಿವಾರ್ಯತೆ ಈಗ ಉಂಟಾಗಿದೆ. 50 ವರ್ಷಗಳ ಹಿಂದೆ ಬ್ರಾಹ್ಮಣರ ಬಗ್ಗೆ ಯಾವ ಒಂದು ಗೌರವ ಒಂದು ರೀತಿಯ ಭಯದ ಭಾವನೆ ಸಮಾಜಕ್ಕೆ ಏನು ಇತ್ತು (ಅಂದರೆ ಇವರು ಶಪಿಸಿದರೆ ನಮಗೆ ಒಳ್ಳೆಯದಾಗುವುದಿಲ್ಲ) ಅನ್ನುವ ಯಾವ ತರಹದ ಭಯಭಕ್ತಿಗಳು ಈಗ ಸಮಾಜಕ್ಕೆ ಇಲ್ಲ ಅದರಂತೆ ಕೇವಲ ಹೆಸರೇಗೆ ಮಾತ್ರ ಬ್ರಾಹ್ಮಣರಾಗಿ ಕೆಲವರು ಇದ್ದಾರೆ ಅದು ಒಂದು ದುರಂತ ಹಾಗಾಗಿ ನಮ್ಮನ್ನು ನಾವು ಮೊದಲು ಕಾಪಾಡಿಕೊಳ್ಳಬೇಕಾಗಿದೆ. ಆದ್ದರಿಂದ ಬರವಣಿಗೆಯ ಪ್ರವಚನವು ಏನೇ ಮಾಡುವುದಾದರೂ ಎಚ್ಚರಿಕೆಯಿಂದ ಪದ ಪ್ರಯೋಗಗಳನ್ನು ಮಾಡಿ ಹೆಜ್ಜೆ ಇಡುವ ಅನಿವಾರ್ಯತೆ ಇದೆ. ಈ ರೀತಿ ಮಾಡುವುದು ವೀರ ವೈಷ್ಣವನ ಸ್ವಭಾವಕ್ಕೆ ವಿರುದ್ಧವಾದ ನಡೆ ಇರಬಹುದು ಆದರೆ ಆ ತರಹದ ಕಾಲಘಟ್ಟದಲ್ಲಿ ನಾವಿದ್ದೇವೆ ಆಚಾರ್ಯ. ಭಗವಂತನೇ ಈ ತರಹದ ಪರಿಸ್ಥಿತಿಯಿಂದ ನಮ್ಮನ್ನು ಪಾರು ಮಾಡಬೇಕಾಗಿದೆ.