ಶ್ರೀನಾಥ್ ಋಗ್ವೇದಿ ಅವರಿಂದ ಅಪ್ರಾಮಾಣಿಕವಾಗಿ ಶ್ರೀರಾಯರ ಸ್ತುತಿಗಳ ನಿಂದನೆ.
ಶ್ರೀನಾಥ್ ಋಗ್ವೇದಿ ಅವರು ಕ್ಷಮೆ ಕೇಳಬೇಕು.
ತತ್ತ್ವಶಂಕರ ಚಾನೆಲ್ ಮೂಲಕ ದಿನಾಂಕ 16-02-2023 ರಂದು ಬಂದ ಒಂದು ವಿಡಿಯೋದಲ್ಲಿ, ಶ್ರೀನಾಥ್ ಋಗ್ವೇದಿ ಅವರು ಮಾತನಾಡುತ್ತಾ, ಶ್ರೀಧರ ಸ್ವಾಮಿಗಳ ಚರಿತ್ರೆ ಎಂದು ಹೇಳಿ, ಮಾಧ್ವರ ಮಾಧ್ವ ಗ್ರಂಥಗಳ ನಿಂದನೆ ಮಾಡಿದ್ದಾರೆ. ಅಪ್ರಾಮಾಣಿಕವಾಗಿ ಈ ನಿಂದನೆ ಮಾಡಿದ್ದು, ಈ ಕೂಡಲೇ ನಾವು ಕೇಳುವ ಪ್ರಶ್ನೆಗೆ ಪ್ರಮಾಣ ಕೊಡಬೇಕು. ಇಲ್ಲದಿದ್ದರೆ ತಪ್ಪೋಪ್ಪಿಕ್ಕೊಂಡು ರಾಘವೇಂದ್ರ ಸ್ವಾಮಿಗಳಲ್ಲಿ ಕ್ಷಮಾಪಣೆ ಕೇಳಬೇಕು. ಇಲ್ಲದಿದ್ದರೆ ತುಂಬಾ ದುಃಖ ಪಡಬೇಕಾಗುತ್ತದೆ. ನೆನಪಿರಲಿ.
ವಿಡಿಯೋ ಲಿಂಕ್ -
https://m.youtube.com/watch?v=ZlZgNXscPxA&t=365s&ab_channel=TattvaShankara
ಈ ವಿಡಿಯೋದಲ್ಲಿ ಗುರುನಿಂದನೆಯ ಫಲ ಎಂದು ಒಂದು ಕಥೆ ಹೇಳಿ, ಒಬ್ಬ ಹಿಂದಿನ ಜನ್ಮದಲ್ಲಿ ಗುರುನಿಂದೆ ಮಾಡಿದ್ದಕ್ಕೆ, ಅವನಿಗೆ ವಾಕ್ ದೋಷ ಇತ್ತಂತೆ. ಹಾಗಾಗಿ ಗುರುನಿಂದೆ ಮಹಾಪಾಪ ದೊಡ್ಡ ದೋಷ ಪಾತಕ ಬ್ರಹ್ಮಹತ್ಯಾ ಹಾಗೆ ಹೀಗೆ ಎಂದು ಹೇಳಿ, ಆನಂತರ ಮಾಧ್ವರೂ ಶಂಕರರ ನಿಂದನೆ ಮಾಡುತ್ತಾರೆ ಎಂದು ಸುಳ್ಳು ಸುಳ್ಳಾಗಿ ಮಾಧ್ವ ಕೃತಿಗಳ ಬಗ್ಗೆ ತಪ್ಪು ಮಾತನಾಡಿದ್ದಾರೆ.
ಅವರ ಮಾತುಗಳು - (5 ನೇ ನಿಮಿಷದಿಂದ)
«<ಮಾಧ್ವ ಸಮುದಾಯದಲ್ಲಿ ಅನೇಕ ಜನ ಮಾಧ್ವರು ಶಂಕರಭಗವತ್ಪಾದಾಚಾರ್ಯರನ್ನ ನಿಂದನೆ ಮಾಡ್ತಾ ಬಂದಿದ್ದಾರೆ. ವಾಯುಸ್ತುತಿ ಪಾರಾಯಣ ಮಾಡುವಾಗ ನಿಂದನೆ ಮಾಡುತ್ತಾರೆ. ಸುಮಧ್ವವಿಜಯ ಪಾರಾಯಣ ಮಾಡುವಾಗ ಶಂಕರರ ನಿಂದನೆ ಮಾಡುತ್ತಾರೆ.
ತೂಗಿರೆ ರಾಯರ ತೂಗಿರೆ ಗುರುಗಳ ಅಂತ ರಾಯರ ಹಾಡು ಹೇಳುವಾಗ ಶಂಕರರ ನಿಂದನೆ ಮಾಡುತ್ತಾರೆ, ರಾಘವೇಂದ್ರ ಸ್ವಾಮಿಗಳ ಅಷ್ಟೋತ್ತರ ಹೇಳುವಾಗ ಶಂಕರಾಚಾರ್ಯರ ನಿಂದನೆ ಮಾಡುತ್ತಾರೆ. ಅಂದರೆ ಪಾರಾಯಣದ ಹೆಸರಿನಲ್ಲಿ ಶಂಕರಾಚಾರ್ಯರ ನಿಂದನೆ ಮಾಡುತ್ತಾ ಬರುತ್ತಿದ್ದಾರೆ. ಮಧ್ವಾಚಾರ್ಯರ ಪೂಜೆ ಮಾಡುವ ನೆಪದಲ್ಲಿ, ಮಧ್ವಾಚಾರ್ಯರ ಗ್ರಂಥಗಳ ಪಾರಾಯಣ ಮಾಡುವ ನೆಪದಲ್ಲಿ ಮಾತು ಮಾತಿಗೂ ಶಂಕರರ ನಿಂದನೆ ಮಾಡುತ್ತಾ ಬಂದಿದ್ದಾರೆ. ಇದೆಲ್ಲವೂ ಮಹಾದೋಷ.»>
ಎಂದೆಲ್ಲಾ ಮಾತನಾಡಿದ್ದಾರೆ. ಇದೆಲ್ಲವೂ ಅಪ್ರಾಮಾಣಿಕ ವಿಚಾರವಾಗಿದೆ. ಶ್ರೀಧರ ಸ್ವಾಮಿಗಳ ಚರಿತ್ರೆ ಹೇಳುವಾಗ ಮಾಧ್ವ ಗ್ರಂಥಗಳ ಬಗ್ಗೆ ಯಾಕೆ ಮಾತನಾಡಬೇಕು? ಏನು ಸಂಬಂಧ? ಶ್ರೀಧರ ಸ್ವಾಮಿಗಳು ಮಾಧ್ವ ಗ್ರಂಥದ ಬಗ್ಗೆ ಏನಾದ, ಏನಾದರೂ ಹೇಳಿದ್ದಾರಾ? ಇಂತಹ ಅಸಂಬದ್ಧಪ್ರಲಾಪ ಒಳ್ಳೆಯದಲ್ಲ.
ವಸ್ತುತಃ ವಾಯುಸ್ತುತಿ, ಸುಮಧ್ವವಿಜಯದಲ್ಲಿ ಮಾಯಾವಾದ ಮತದ, ಅದರ ಪ್ರವರ್ತಕರ ವಿಷಯವು ಬಂದಿದ್ದರೂ, ಅಲ್ಲಿ ಎಲ್ಲಿಯೂ ನಿಂದನೆ ಇಲ್ಲ. ವಸ್ತುಸ್ಥಿತಿ ವರ್ಣನೆ ಮಾಡಿರುವುದು. ಅದನ್ನು ಈಗಾಗಲೇ ವಾಯುಸ್ತುತಿಮಹೋತ್ಸವ ಮೊದಲಾದ ಲೇಖನಗಳಲ್ಲಿ ಸಮರ್ಥಿಸಲಾಗಿದೆ. ಅವುಗಳನ್ನು ಖಂಡನೆ ಮಾಡದೇ ಇರುವುದರಿಂದ, ವಾಯುಸ್ತುತಿ ಸುಮಧ್ವವಿಜಯಗಳು ನಿಂದನೆ ಮಾಡುವ ಗ್ರಂಥಗಳಲ್ಲ, ವಸ್ತುಸ್ಥಿತಿ ಹೇಳುತ್ತವೆ ಎಂದು ಸಿದ್ಧವಾಗುತ್ತದೆ.
ಜೊತೆಗೆ ಮಾತು ಮಾತಿಗೂ ಶಂಕರರ ನಿಂದನೆ ಅಂತ ಹೇಳಿದ್ದಾರೆ. ವಾಯುಸ್ತುತಿಯಲ್ಲಿ ಒಂದು ಮೂರು ಕಡೆ ಮಾಯಾವಾದಿಗಳ ವಿಷಯ ಬಂದಿರಬಹುದು. ಸುಮಧ್ವವಿಜಯದಲ್ಲಿಯೂ ಮಧ್ವಾಚಾರ್ಯರ ಅವತಾರ ಹೇಳುವ ಮುನ್ನ, ಮತ್ತು ಸರ್ಪದ ನಿಗ್ರಹ ಹಾಗೂ ಕುದ್ಯಪಸ್ತೂರು ವಿಷಯ ಈ ಪ್ರಸಂಗಗಳನ್ನು ಬಿಟ್ಟರೆ, ಇನ್ನೆಲ್ಲೂ ಪ್ರಾಯಃ ಶಂಕರರ ವಿಷಯವೇ ಬರುವುದಿಲ್ಲ. ಹೀಗಿರುವಾಗ ನಿಂದನೆ ಎಲ್ಲಿ? ಮಾತು ಮಾತಿಗೂ ಶಂಕರರ ನಿಂದನೆ ಎಲ್ಲಿ? ಎಷ್ಟು ಸುಳ್ಳು ಹೇಳುವುದು?
ಜೊತೆಗೆ ಯಾವ ಪ್ರಸಂಗದಲ್ಲಿ ಮಾಯಾವಾದಿಗಳ ವಿಷಯ ಬಂದಿದೆಯೋ, ಅದರ ಬಗ್ಗೆ ದಾಖಲೆ ಕೊಟ್ಟು ಆ ವಿಷಯಗಳ ಪ್ರಾಮಾಣಿಕತನವನ್ನು ಸಮರ್ಥನೆ ಮಾಡಿ ಆಗಿದೆ. ಅದನ್ನು ಕಿಂಕರರು ನಿರಾಕರಿಸಿಲ್ಲ.
ಹೀಗಿರುವಾಗ ಇವರ ಗುರುಗಳ ಕತೆ ಹೇಳುವ ವಿಡಿಯೋದಲ್ಲಿ, ಸಂಬಂಧಪಡದ ಆ ಗ್ರಂಥಗಳ ಉಲ್ಲೇಖವನ್ನು ಮಾಡಿದ್ದು ತಪ್ಪು.
ಇನ್ನು “ಮಾಧ್ವರು, ರಾಯರ ‘ತೂಗಿರೆ ರಾಯರ ತೂಗಿರೆ ಗುರುಗಳ’ ಎಂಬ ಹಾಡನ್ನು ಹೇಳುವಾಗ, ಶಂಕರರ ನಿಂದನೆ ಮಾಡುತ್ತಾರೆ” ಎಂದು ಶ್ರೀನಾಥ್ ಋಗ್ವೇದಿ ಅವರು ಹಸಿ ಹಸಿ ಸುಳ್ಳು ಹೇಳಿದ್ದಾರೆ. ಇದಕ್ಕೆ ಅವರ ಬಳಿ ದಾಖಲೆ ಇದ್ದರೆ ಕೊಡಲಿ. ಇಲ್ಲದಿದ್ದರೆ ಕ್ಷಮೆ ಕೇಳಬೇಕು.
ವಸ್ತುತಃ ಆ ಹಾಡಿನಲ್ಲಿ 5 ನುಡಿಗಳಿದ್ದು, ಒಂದು ನುಡಿಯಲ್ಲಿ - ಅದ್ವೈತ ಮತದ ವಿಧ್ವಂಸನ ನಿಜಗುರು ಎಂದು ಹೇಳಿದ್ದಾರೆ. ಇದನ್ನೇ ನಿಂದನೆ ಮಾಡಿದ್ದು ಎಂದು ಹೇಳುವುದಕ್ಕೆ ಅವಕಾಶ ಇಲ್ಲ.
ಇಲ್ಲಿ ಹೇಳಿದ ವಿಷಯ ಕನ್ನಡ ಬರುವ ಪ್ರತಿಯೊಬ್ಬ ವಿವೇಕಿಗೂ ತಿಳಿಯುತ್ತದೆ. ಅದ್ವೈತ ಮತದ ನಿರಾಕರಣೆಯನ್ನು ರಾಯರು ತಮ್ಮ ಅನೇಕ ಗ್ರಂಥಗಳಲ್ಲಿ ಮಾಡಿದ್ದಾರೆ. ಅದನ್ನು ದಾಸರು ವರ್ಣನೆ ಮಾಡಿದ್ದಾರೆ. ಇಲ್ಲಿ ಶಂಕರರ ಹೆಸರಾಗಲಿ, ಅವರ ವಿಚಾರವಾಗಲಿ, ನಿಂದನೆ ಆಗಲಿ ಬಂದಿಲ್ಲ. ಹೀಗಿರುವಾಗ ನಿಂದನೆ ಮಾಡುತ್ತಾರೆ ಎಂದು ಹೇಳುವುದು ತಪ್ಪಲ್ಲವೇ?
ಶ್ರೀನಾಥ್ ಋಗ್ವೇದಿ ಅವರ ಮಾತು -
«<ತೂಗಿರೆ ರಾಯರ ತೂಗಿರೆ ಗುರುಗಳ ಅಂತ ರಾಯರ ಹಾಡು ಹೇಳುವಾಗ ಶಂಕರರ ನಿಂದನೆ ಮಾಡುತ್ತಾರೆ»>
ಎಂದು ಆ ಹಾಡಿನಲ್ಲಿ ಶಂಕರರ ನಿಂದನೆ ಇದೆ ಎಂದು ಅವರು ವಿಡಿಯೋದಲ್ಲಿ ಹೇಳಿದ್ದಾರೆ. ಹಾಗಾಗಿ ಆ ಹಾಡಿನಲ್ಲಿ ಎಲ್ಲಿ ಶಂಕರರ ನಿಂದನೆ ಇದೆ? ಎಂದು ತೋರಿಸಲಿ.
ಇನ್ನು ರಾಯರ ಅಷ್ಟೋತ್ತರದಲ್ಲಿ ಶಂಕರರ ನಿಂದನೆ ಇದಂತೆ. ಇದೂ ಶುದ್ಧ ಸುಳ್ಳು. ಪ್ರಾತಃಸ್ಮರಣೀಯ ಶ್ರೀಅಪ್ಪಣ್ಣಾಚಾರ್ಯರು ಬರೆದ, ಗುರುಸ್ತೋತ್ರ ಎಂದೇ ಪ್ರಖ್ಯಾತವಾದ ರಾಯರಸ್ತೋತ್ರದಲ್ಲಿ ಎಲ್ಲಿಯೂ ಶಂಕರರ ಹೆಸರಾಗಲಿ, ಅವರ ನಿಂದನೆ ಆಗಲಿ ಬಂದಿಲ್ಲ. ಹೀಗಿರುವಾಗ ನಿಂದನೆ ಮಾಡುತ್ತಾರೆ ಎಂದು ಹೇಳುವುದು ತಪ್ಪಲ್ಲವೇ?
ಶ್ರೀನಾಥ್ ಋಗ್ವೇದಿ ಅವರ ಮಾತು -
«<ರಾಘವೇಂದ್ರ ಸ್ವಾಮಿಗಳ ಅಷ್ಟೋತ್ತರ ಹೇಳುವಾಗ ಶಂಕರಾಚಾರ್ಯರ ನಿಂದನೆ ಮಾಡುತ್ತಾರೆ.»>
ಎಂದು ವಿಡಿಯೋದಲ್ಲಿ ಹೇಳಿದ್ದಾರೆ. ಹಾಗಾಗಿ ಆ ಸ್ತೋತ್ರದಲ್ಲಿ ಎಲ್ಲಿ ಶಂಕರರ ನಿಂದನೆ ಇದೆ? ಎಂದು ತೋರಿಸಲಿ.
ಹೀಗೆ ಈ ಎರಡು ಕೃತಿಗಳಲ್ಲಿ ಶಂಕರರ ಹೆಸರೇ ಇಲ್ಲದಿದ್ದರೂ, ಅನಾವಶ್ಯಕವಾಗಿ ಶಂಕರರ ನಿಂದನೆ ಇದೆ ಎಂದು ಅಪಪ್ರಚಾರ ಮಾಡುತ್ತಿದ್ದಾರೆ. ಇವರು ಹೇಳುವಂತೆ ನಿಂದನೆ ಇದ್ದರೆ ತೋರಿಸಲಿ.
ಇಲ್ಲದಿದ್ದರೆ ಆ ಹಾಡಿನ ವಿಷಯವಾಗಿ, ಹಾಗೂ ಸ್ತೋತ್ರದ ವಿಷಯವಾಗಿ ಸುಳ್ಳು ಹೇಳಿದ್ದಕ್ಕೆ, ರಾಯರಿಗೆ ಹಾಗೂ ಆ ಹಾಡನ್ನು ಹಾಡುವ, ಸ್ತೋತ್ರವನ್ನು ಹೇಳುವ, ಅಸಂಖ್ಯಾತ ರಾಯರ ಭಕ್ತರಿಗೆ, ಇದೇ ರೀತಿ ವಿಡಿಯೋ ಮಾಡಿ ಕ್ಷಮೆ ಕೇಳಬೇಕು. ಇಲ್ಲದಿದ್ದರೆ ತುಂಬಾ ದುಃಖಪಡಬೇಕಾಗುತ್ತದೆ.
ಇನ್ನು ಗುರುನಿಂದೆ ಮಾಡಿದ್ದಕ್ಕೆ ಮಾತಿನ ದೋಷ ಉಂಟಾಗುತ್ತದೆ ಎಂದು ಕಥೆ ಹೇಳಿ, ಮಾಧ್ವ ಗ್ರಂಥಗಳಲ್ಲಿ ಮಾಡುವ ನಿಂದನೆಯೂ ಮಹಾದೋಷ ಎಂದೆಲ್ಲಾ ಹೇಳಿದ್ದಾರೆ.
ಗಮನಿಸಬೇಕಾದದ್ದು. ನಮ್ಮಲ್ಲಿ ಮಾತಿನ ದೋಷ ಇರುವ ಸಾಕಷ್ಟು ಜನರು, ವಾಯುಸ್ತುತಿ, ಸುಮಧ್ವವಿಜಯ, ರಾಯರ ಅಷ್ಟೋತ್ತರ ಇವುಗಳನ್ನು ಪಾರಾಯಣ ಮಾಡಿ, ವಾಗ್ದೋಷವನ್ನು ಪರಿಹಾರ ಮಾಡಿಕೊಂಡವರಿದ್ದಾರೆ, ಅವರೆಲ್ಲ ಒಳ್ಳೆಯ ವಾಗ್ಮಿಗಳಾಗಿದ್ದಾರೆ.
ಇವರು ಹೇಳುವಂತೆ ಈ ಗ್ರಂಥಗಳಲ್ಲಿ ನಿಂದನೆ ಇದ್ದಿದ್ದರೆ ಇದನ್ನು ಪಾರಾಯಣ ಮಾಡಿದ್ದಕ್ಕೆ ವಾಗ್ದೋಷ ಪರಿಹಾರವಾಗಬಾರದಿತ್ತು ಅಲ್ಲವೇ?
ಆದರೆ ಆ ಗ್ರಂಥಗಳು ರಚನೆಯಾದಾಗಿನಿಂದ ಇವತ್ತಿನವರೆಗೂ ಅವುಗಳನ್ನು ಪಾರಾಯಣ ಮಾಡಿದವರು, ಉನ್ನತ ವಾಕ್ಪಟುತ್ವ ಮೊದಲಾದ ಶ್ರೇಯಸ್ಸನ್ನೇ ಹೊಂದಿದ್ದಾರೆ.
ಹಾಗಾಗಿ ನಮ್ಮ ಮಾಧ್ವ ಗ್ರಂಥಗಳು ಪ್ರಾಮಾಣಿಕ ಎಂದು ಹೇಳುವುದಕ್ಕೆ ಇದೇ ಪ್ರತ್ಯಕ್ಷಸಾಕ್ಷೀ. ಒಬ್ಬರಿಬ್ಬರಲ್ಲ, ಸಾವಿರಾರು ಜನ ಈ ಫಲವನ್ನು ಕಂಡಿದ್ದಾರೆ. ಈಗಲೂ ಕಾಣುತ್ತಾ ಇದ್ದಾರೆ. ಮುಂದೆಯೂ ಕಾಣುತ್ತಾರೆ ಕೂಡ.
ಹಾಗಾಗಿ ಮಾಧ್ವರ ಏಳಿಗೆ, ರಾಯರ ವೈಭವ ಇವುಗಳನ್ನು ಸಹಿಸಲಾರದೆ ಶ್ರೀನಾಥ್ ಋಗ್ವೇದಿ ಮೊದಲಾದವರು ಇಂತಹ ಹೇಯ ಕೃತ್ಯಗಳನ್ನು ಮಾಡುತ್ತಿದ್ದಾರೆ. ಇವರ ಹಿಂದೆ ಯಾರೇ ಇರಲಿ. ಇದು ನಿಲ್ಲಲೇ ಬೇಕು.
ದಿನಾಂಕ 18-02-2023 ರಾತ್ರಿ 10.00 ಗಂಟೆಯ ಒಳಗಾಗಿ ಶ್ರೀನಾಥ್ ಋಗ್ವೇದಿ ಅವರು ಕ್ಷಮೆ ಕೇಳಬೇಕು. ಇಲ್ಲದಿದ್ದರೆ ಸೂಕ್ತ ಅಧಿಕಾರಿಗಳಿಗೆ ಕಂಪ್ಲೇಟ್ ಮಾಡಲಾಗುವುದು.
ವಿವೇಕಿಗಳ ಗಮನಕ್ಕೆ - ಮಾಧ್ವರು ಯಾವುದನ್ನೂ ಮುಚ್ಚಿಟ್ಟವರಲ್ಲ, ಸುಳ್ಳು ಹೇಳುವವರಲ್ಲ. ನಾವು ಎಲ್ಲಿ ಕೇಳಿದರೂ ಧೈರ್ಯವಾಗಿ ಹೇಳುತ್ತೇವೆ. ರಾಯರು ನಾನಾ ಪ್ರಕಾರದಲ್ಲಿ ಬಂದ ಅದ್ವೈತಮತಗಳ ನಿರಾಕರಣೆಯನ್ನು ತಮ್ಮ ಗ್ರಂಥದಲ್ಲಿ ಮಾಡಿದ್ದಾರೆ. ಇವತ್ತೂ ಅವರ ಗ್ರಂಥಗಳಲ್ಲಿ ಅದನ್ನು ನೋಡಲು ಸಿಗುತ್ತದೆ. ಅದನ್ನೇ ದಾಸರು ಅದ್ವೈತ ಮತದ ವಿಧ್ವಂಸನ ನಿಜಗುರು ಎಂದು ಹೇಳಿದ್ದಾರೆ. ಅದನ್ನೇ ನಾವು ಹಾಡುತ್ತಾ ಬಂದಿರುವುದು. ನಾವು ಯಾವತ್ತೂ ಹಾಡುತ್ತೇವೆ ಕೂಡ. ಯಾಕೆಂದರೆ ಅದು ಯಾರ ನಿಂದನೆಯೂ ಅಲ್ಲ. ಅವರ ಪಾಂಡಿತ್ಯದ ವೈಭವ.
ಈ ಕಿಂಕರರಿಗೆ ರಾಯರ ಭಕ್ತರ ಮೇಲೆ ಕಣ್ಣು. ಜಾತಿಮತ ಎಲ್ಲವನ್ನೂ ಮೀರಿ ರಾಯರ ಭಕ್ತರಿದ್ದಾರೆ ಎಂದು ಸಹಿಸಲಾಗದೆ ಹೇಗಾದರೂ ರಾಯರಿಗೆ ಅಪಚಾರ ಮಾಡಬೇಕು ಎಂದು ಇಂತಹ ಹೇಯ ಕೃತ್ಯಗಳನ್ನು ಮಾಡುತ್ತಾ ಬರುತ್ತಿದ್ದಾರೆ.
ಪ್ರಸ್ತುತ ರಾಯರ ಹಾಡಿನಲ್ಲಿ ಆಗಲಿ, ಸ್ತೋತ್ರದಲ್ಲಿ ಆಗಲಿ, ಶಂಕರರ ನಿಂದನೆ ಇಲ್ಲದೇ ಇರುವಾಗ, ಅವುಗಳಲ್ಲಿ ‘ನಿಂದನೆ ಇದೆ’ ಎಂದು ಈ ಶ್ರೀನಾಥ್ ಋಗ್ವೇದಿ ಅವರು ವಿಡಿಯೋ ಮಾಡಿ ಎಲ್ಲಾಕಡೆ ಬಿಟ್ಟಿರುವುದು ಅಕ್ಷಮ್ಯ ಅಪರಾಧ. ಈ ಅಪರಾಧಕ್ಕೆ ಕ್ಷಮೆ ಕೇಳಲೇಬೇಕು.
ಹೃಷೀಕೇಶ ಮಠದ
॥ श्रीश्रीशभक्तो जयति मध्वो विध्वस्तसाध्वसः ॥