ಕರಪಾತ್ರಿ ಸ್ವಾಮಿಗಳ ಜೊತೆ ನಡೆದ ಶ್ರೀವಿದ್ಯಾಮಾನ್ಯತೀರ್ಥಶ್ರೀಪಾದರ ವಾದ ವೈಭವ. ಅಪೂರ್ವ ದಾಖಲೆ
ಇತ್ತೀಚೆಗೆ ಕೆಲವು ದಿನಗಳ ಹಿಂದೆ ಕರಪಾತ್ರಿ ಸ್ವಾಮಿಗಳ ಆರಾಧನೆ ಎಂಬ ಕಾರಣಕ್ಕೆ ಕೆಲವು ಕಿಂಕರರು ಎಂದಿನಂತೆ ಪ್ರಾತಃಸ್ಮರಣೀಯ ಶ್ರೀವಿದ್ಯಾಮಾನ್ಯತೀರ್ಥರ ನಿಂದನೆಗೆ ಪ್ರವೃತ್ತರಾಗಿದ್ದರು. ಕಳೆದ ಎರಡು ಮೂರು ವರ್ಷಗಳಿಂದ ಈ ವಿಷಯದ ಬಗ್ಗೆ ಸ್ಪಷ್ಟೀಕರಣ ನೀಡಲಾಗಿದೆ.
ವಸ್ತುಸ್ಥಿತಿ - ಶ್ರೀವಿದ್ಯಾಮಾನ್ಯತೀರ್ಥಶ್ರೀಪಾದರಿಗೂ ಹಾಗೂ ಕರಪಾತ್ರಿ ಸ್ವಾಮಿಗಳಿಗೂ ೧೯೬೪ ರಲ್ಲಿ ಹರಿದ್ವಾರದಲ್ಲಿ ದ್ವೈತಾದ್ವೈತ ಚರ್ಚೆ ನಡೆಯಿತು.
ವಾದದಲ್ಲಿ ಕೊನೆಗೆ ಬಂದ ವಿಷಯ - “ಭೂತಪ್ರಕೃತಿಮೋಕ್ಷಂ ಚ” ಎಂಬ ಗೀತಾವಾಕ್ಯ.
ಕರಪಾತ್ರಿ ಸ್ವಾಮಿಗಳು - ಇಲ್ಲಿ ಭೂತ ಶಬ್ದಕ್ಕೆ ಏನರ್ಥ?
ಶ್ರೀವಿದ್ಯಾಮಾನ್ಯತೀರ್ಥರು - ಭೂತ ಶಬ್ದಕ್ಕೆ ಜೀವ ಎಂದು ಅರ್ಥ.
ಕರಪಾತ್ರಿ ಸ್ವಾಮಿಗಳು - ಇದು ತಪ್ಪು. ನಿಮ್ಮ ಆಚಾರ್ಯರು ಭೂತ ಶಬ್ದಕ್ಕೆ ಜಡವೆಂದು ಅರ್ಥ ಮಾಡಿದ್ದಾರೆ. ಆದರೆ ನೀವು ಅದನ್ನು ಬಿಟ್ಟು ಜೀವ ಎಂದು ಅರ್ಥ ಮಾಡಿದ್ದೀರಿ. ಹೀಗೆ ನಿಮ್ಮ ಆಚಾರ್ಯರಿಗೆ ವಿರುದ್ಧ ಅರ್ಥ ಮಾಡಿದ್ದರಿಂದ, ನಿಮಗೆ ಅಪಸಿದ್ಧಾಂತ ದೋಷ ಬಂದಿತು. ಹಾಗಾಗಿ ನೀವು ಈ ವಾದದಲ್ಲಿ ಸೋತುಹೋಗಿದ್ದೀರಿ.
ಶ್ರೀವಿದ್ಯಾಮಾನ್ಯತೀರ್ಥರು - ಇಲ್ಲ. ಶ್ರೀಮಧ್ವಾಚಾರ್ಯರು ಗೀತೆಗೆ ಸಂಬಂಧಿಸಿ, ಗೀತಾಭಾಷ್ಯ ಹಾಗೂ ಗೀತಾತಾತ್ಪರ್ಯ ಎಂದು ಎರಡು ಗ್ರಂಥಗಳನ್ನು ಬರೆದಿದ್ದಾರೆ. ಗೀತಾಭಾಷ್ಯದಲ್ಲಿ ಜಡ ಎಂದು ಅರ್ಥ ಮಾಡಿದ್ದರೂ, ಗೀತಾತಾತ್ಪರ್ಯದಲ್ಲಿ ಭೂತ ಶಬ್ದಕ್ಕೆ ಜೀವ ಎಂದೇ ಅರ್ಥ ಮಾಡಿದ್ದಾರೆ. ಹಾಗಾಗಿ ಭೂತ ಶಬ್ದಕ್ಕೆ ಜೀವ ಎಂದು ಅರ್ಥ ಮಾಡುವುದು ತಪ್ಪಲ್ಲ. ನಮ್ಮ ಆಚಾರ್ಯರಿಗೆ ವಿರುದ್ಧವಾಗಿ ನಾವು ಅರ್ಥವನ್ನು ಮಾಡಿಲ್ಲ. ಹಾಗಾಗಿ ನಮಗೆ ಅಪಸಿದ್ಧಾಂತ ಇಲ್ಲ.
ಹೀಗೆ ಕೊನೆಗೆ ಶ್ರೀವಿದ್ಯಾಮಾನ್ಯತೀರ್ಥರು ಗೀತಾತಾತ್ಪರ್ಯದಲ್ಲಿ ಬಂದ ವಿಷಯ ಹೇಳಿದರೂ, ಅದನ್ನು ಕೇಳಿಸಿ ಕೊಳ್ಳದೆ, ‘ಮಧ್ವಾಚಾರ್ಯರ ಅರ್ಥಕ್ಕೆ ವಿರುದ್ಧವಾಗಿ ಅರ್ಥ ಹೇಳಿದ್ದಾರೆ. ಹಾಗಾಗಿ ವಿದ್ಯಾಮಾನ್ಯತೀರ್ಥರು ಸೋತರು’ ಎಂದೇ ಬಿಂಬಿಸಿದರು.
ನಂತರ ಇದಕ್ಕೆ ಸಂಬಂಧಿಸಿ, ಕರಪಾತ್ರಿಸ್ವಾಮಿಗಳ ಕಡೆಯವರು ಕೆಲವು ಪುಸ್ತಕ ಬರೆದು, ಅದರಲ್ಲಿ ಈ ಚರ್ಚೆಯ ಸಂವಾದವನ್ನೆಲ್ಲಾ ಬರೆದರು, ಕೊನೆಗೆ ‘ವಿದ್ಯಾಮಾನ್ಯತೀರ್ಥರಿಗೆ ಅಪಸಿದ್ಧಾಂತ ಬಂದು ಅವರು ಸೋತರು’ ಎಂದು ಬರೆದು ಪುಸ್ತಕ ಹಂಚಿದರು.
ಇದು ತಿಳಿದು ಬೇಸರ ಮಾಡಿಕೊಳ್ಳದ, ಸಿದ್ಧಾಂತ ನಿಷ್ಠರಾದ ಶ್ರೀವಿದ್ಯಾಮಾನ್ಯತೀರ್ಥಶ್ರೀಪಾದರು, ತಾವು ನಡೆದ ವಾದದ ಸಮಗ್ರ ಚಿತ್ರಣವನ್ನು ಸಂಗ್ರಹಿಸಿ, ಅದ್ವೈತಮತದ ಪೀಠಾಧಿಪತಿಗಳಿಗೂ, ವಿದ್ವಾಂಸರಿಗೂ, ಕಳುಹಿಸಿ, ಜಯಾಪಜಯಗಳನ್ನು ಪರಿಶೀಲಿಸಲು ಹೇಳಿದರು.
ಅದನ್ನು ಪರಿಶೀಲಿಸಿದ ಅದ್ವೈತಮತದ ಪೀಠಾಧಿಪತಿಗಳು, ಹಾಗೂ ವಿದ್ವಾಂಸರು, ಶ್ರೀವಿದ್ಯಾಮಾನ್ಯತೀರ್ಥರು ಹೇಳಿದ ರೀತಿಯಲ್ಲಿ ಶ್ರೀಮಧ್ವಾಚಾರ್ಯರು ಭೂತ ಶಬ್ದಕ್ಕೆ ಜೀವ ಎಂಬ ಅರ್ಥವನ್ನೂ ಹೇಳಿದ್ದಾರೆ. ಗೀತಾತಾತ್ಪರ್ಯದಲ್ಲಿ ಎಲ್ಲರಿಗೂ ನೋಡಲು ಸಿಗುತ್ತದೆ. ಹಾಗಾಗಿ ಶ್ರೀವಿದ್ಯಾಮಾನ್ಯತೀರ್ಥರಿಗೆ ಅಪಸಿದ್ಧಾಂತ ದೋಷವಿಲ್ಲ. ಹಾಗಾಗಿ ಅವರು ಸೋತಿಲ್ಲ. ಎಂದು ನಿರ್ಣಯ ಮಾಡಿದರು.
ಇದರಿಂದ ಕರಪಾತ್ರಿ ಸ್ವಾಮಿಗಳು ಭೂತ ಶಬ್ದಕ್ಕೆ ಶ್ರೀಮಧ್ವಾಚಾರ್ಯರು ಮಾಡಿದ ಅರ್ಥವನ್ನು ಸರಿಯಾಗಿ ತಿಳಿಯದೇ, ಶ್ರೀವಿದ್ಯಾಮಾನ್ಯತೀರ್ಥರಿಗೆ ಅಪಸಿದ್ಧಾಂತ ಹೇಳುವ ಮೂಲಕ ತಮಗೆ ಅಪಜಯ ತಂದುಕೊಂಡಿದ್ದಾರೆ. ಎಂಬುದು ಎಲ್ಲರಿಗೂ ತಿಳಿಯುವ ವಿಷಯ.
ಇದಿಷ್ಟು ವಿಷಯ ತಿಳಿದವರಿಗೆ ಜಯ ಯಾರದ್ದು ಎಂದು ಸ್ಪಷ್ಟವಾಗುತ್ತದೆ. ವಸ್ತುತಃ ಈ ವಿಷಯಕ್ಕೆ ಮತ್ತೊಂದು ದಾಖಲೆ ಬೇಡ. ಶ್ರೀಮಧ್ವಾಚಾರ್ಯರ ಗೀತಾಭಾಷ್ಯ ಹಾಗೂ ಗೀತಾತಾತ್ಪರ್ಯ ಎಂಬ ಎರಡು ಗ್ರಂಥಗಳನ್ನು ಅವಲೋಕನ ಮಾಡಿದರೆ ಸ್ಪಷ್ಟವಾಗಿ ತಿಳಿಯುತ್ತದೆ.
ಆದರೆ ಕೆಲವರಿಗೆ ಅಷ್ಟೊಂದು ವಿವೇಕವಿಲ್ಲ. ಹಾಗಾಗಿ ಕರಪಾತ್ರಿ ಸ್ವಾಮಿಗಳ ಕಡೆಯವರು ಬರೆದ ಪುಸ್ತಕವನ್ನೇ ಪ್ರಾಮಾಣಿಕ ಎಂದು ತಿಳಿದು, ಶ್ರೀವಿದ್ಯಾಮಾನ್ಯತೀರ್ಥರು ಸೋತರು, ಪಲಾಯನ ಮಾಡಿದರು. ಪಾದುಕೆ ಬಿಟ್ಟು ಓಡಿಹೋದರು. ವಾದ ಮಾಡಲು ಆಗಲಿಲ್ಲ ಇತ್ಯಾದಿ ಅಸಂಬದ್ಧಪ್ರಲಾಪ ಮಾಡುತ್ತಾರೆ.
ಆದರೆ ಕರಪಾತ್ರಿ ಸ್ವಾಮಿಗಳ ಕಡೆಯವರ ಪುಸ್ತಕ, ಹಾಗೂ ಅವರ ಶಿಷ್ಯರ ವರ್ತನೆಗಳ ಬಗ್ಗೆ, ಕರಪಾತ್ರಿ ಸ್ವಾಮಿಗಳೇ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಆದ್ದರಿಂದ ಇಂತಹ ಅಪ್ರಾಮಾಣಿಕ ಪುಸ್ತಕಗಳ ಆಧಾರದಲ್ಲಿ ಅರಚುವ, ‘ಶ್ರೀವಿದ್ಯಾಮಾನ್ಯತೀರ್ಥರು ಓಡಿಹೋದರು, ಸೋತರು’ ಇತ್ಯಾದಿ ಮಾತುಗಳು, ಶುದ್ಧಸುಳ್ಳು ಎಂದು ಸಾಬೀತಾಗುತ್ತದೆ.
ಕರಪಾತ್ರಿ ಸ್ವಾಮಿಗಳ ಸ್ಮೃತಿ ಗ್ರಂಥ ಎಂದು ಅವರು ಕಡೆಯವರು ಬರೆದ ಒಂದು ಹಿಂದಿಯ ಪುಸ್ತಕ ಇದೆ. ಅದರ ಹೆಸರು - ‘ಅಭಿನವ ಶಂಕರ ಸ್ವಾಮಿ ಶ್ರೀ ಕರಪಾತ್ರೀ ಜೀ’ ಎಂದು. ಇದು ಕರಪಾತ್ರಿ ಸ್ವಾಮಿಗಳ ಬಗ್ಗೆ, ಬೇರೆಬೇರೆಯವರು ಪ್ರಶಂಸೆ ಮಾಡಿ ಬರೆದ, ಅನೇಕ ಲೇಖನಗಳನ್ನು ಹೊಂದಿದ ಪುಸ್ತಕ.
ಅದರಲ್ಲಿ ಒಂದು ಲೇಖನ - ಸನಾತನ ಸಂಸ್ಕೃತಿ ಕೇ ಸಜಗ ಪ್ರಹರೀ ಶ್ರೀ ಸ್ವಾಮಿ ಕರಪಾತ್ರೀ ಜೀ ಮಹಾರಾಜ. ಪುಟ ಸಂಖ್ಯೆ - 524-529 ಇದನ್ನು ಬರೆದವರು - ಶಾಸ್ತ್ರಾರ್ಥ ಪಂಚಾನನ ಪ್ರೇಮಾಚಾರ್ಯ ಶಾಸ್ತ್ರೀ ಎಮ್. ಎ. ಎಂಬುವವರು.
ಇದರಲ್ಲಿ ಈ ವಾದದ ಬಗ್ಗೆ ಉಲ್ಲೇಖ ಮಾಡಿ, ಅದರಲ್ಲಿ ಶ್ರೀವಿದ್ಯಾಮಾನ್ಯತೀರ್ಥರ ವಾದ ವೈಖರಿ ಬಗ್ಗೆ, ಹಾಗೂ ಕರಪಾತ್ರಿ ಸ್ವಾಮಿಗಳ ಕಡೆಯವರು ಬರೆದ ಪುಸ್ತಕದ ಬಗ್ಗೆ, ಕರಪಾತ್ರಿ ಸ್ವಾಮಿಗಳಿಗೇ ಇದ್ದ ಅಸಮಾಧಾನದ ಬಗ್ಗೆ ಬರೆಯಲಾಗಿದೆ.
ಅಲ್ಲಿಯ ವಾಕ್ಯಗಳು -
इस स्नेह और पारस्परिक विश्वास का ही परिणाम था कि स्वामी जी महारथी जी की बातों का अधिकाधिक समादर किया करते थे। इस सन्दर्भ में मेरी स्वयं की अनुभूत एक घटना है।
उडुपी के मध्व संप्रदायाचार्य श्री स्वामी विद्यामान्य तीर्थ महाराज के साथ स्वामी करपात्री जी का हरिद्वार में शास्त्रार्थ हुआ। इस शास्त्रार्थ में स्वामी जी ने बड़े संरम्भ के साथ शांकर अद्वैतमत का पक्ष लेते हुये माध्व मत का निराकरण किया। ऋषिकुल ब्रह्मचर्याश्रम के स्नातक मेरे कई सहाध्यायी विद्वान् उक्त शास्त्रार्थ में उपस्थित थे। उनका तथा अन्य प्रत्यक्षदर्शी महानुभावों का यह निष्कर्ष था कि इस शास्त्रार्थं समर में किसी भी पक्ष की जय अथवा पराजय का तो प्रश्न ही नहीं था।
हां, स्वामी विद्यामान्य तीर्थ महाराज के अविच्छिन्न धारा प्रवाह की भांति निःसृत होने वाले सानुप्रास संस्कृत संभाषण को सुनकर विद्वन्मण्डल अधिक रोमाञ्चित हो उठता था।
यद्यपि दोनों ही धर्माचार्यो ने इस शास्त्रार्थ को सामान्य शास्त्रीय विचार के रूप में ग्रहण किया था। परन्तु स्वामी करपात्री जी महाराज के कतिपय अन्धभक्तों ने अतिरिक्त आवेश में आकर देश काल का विचार किये बिना उक्त शास्त्रार्थ का विवरण “माध्वमुख चपेटिका” जैसे घटिया शीर्षक से पुस्तक रूप में छाप डाला जिसे पढ़कर समूचा वैष्णव समुदाय उद्विग्न हो उठा। क्षोभ और लज्जा उत्पन्न करने वाला तथ्य यह था कि धर्म संघ के महाधिवेशनों में स्वामी विद्यामान्य तीर्थ महाराज माध्व संप्रदायाचार्य के रूप में सिंहासनासीन होकर सर्वदा विराजमान हुआ करते थे। ऐसे मान्य धर्माचार्य के साथ शास्त्रार्थ और कोढ़ में खाज की भाँति निम्न स्तरीय पुस्तक छापकर फिर उनकी छीछालेदड़ ! ! ये दोनों ही बातें धर्म संघ की गरिमा को गिराने वाली थी। विक्षुब्ध वैष्णव समुदाय में धर्म संघ के बहिष्कार के स्वर उभरने लगे थे।
इस गृहयुद्ध की विभीषिका से भरे अनासित गरमागरम वातावरण में श्री शास्त्रार्थ महारथी जी दिल्ली धर्म संघ में स्वामी करपात्री जी से मिलने गये। मैं भी उनके साथ था। नमस्कारादि के के अनन्तर श्री महारथी जी ने दो टूक अपना अभिमत प्रस्तुत किया। वे बोले- महाराज ! हमारी आपके प्रति श्रद्धा एक अद्वैतवादी संन्यासी के रूप में कदापि नहीं है। हम तो आपको सर्व सम्प्रदाय समन्वित सनातन धर्म के निर्विवाद नेता के रूप में मानते हैं। मध्व संप्रदायाचार्य के साथ आपके शास्त्रार्थ ने वैष्णव वर्ग को खिन्न कर डाला है। मैं स्वयं श्री वैष्णव मतानुयायी हूँ। यदि आप वैष्णव सिद्धान्त की वेदानुकूल नहीं मानते हैं तो मैं शास्त्रार्थ के लिए सन्नद्ध हैं। पुनः दिल्ली में शास्त्रार्थ मंच लगवाइए ।"
यह सुनकर एक हृदयहारी मुस्कान स्वामी जी के मुखारविन्द पर बिछ गयी। फिर एक महापुरुष की भांति शान्त और स्थिर स्वर में बोले- “आचार्य जी, आपका आवेश में आना अनुचित नहीं है। किन्तु मैं सत्य कहता हूँ “माध्वमुख चपेटिका” पुस्तक के प्रकाशन में मेरी शतांश में भी सह मति नहीं है। आप निश्चिन्त रहिये। पहले की भाँति भविष्य में भी धर्म संघ समग्र सनातन धर्म के अभ्युत्थान में ही तत्पर रहेगा, किसी पक्ष विशेष का पोषक नहीं।” इतना ही नहीं, अपने अतिशय औदार्य का परिचय देते हुये स्वामी जी ने सार्वजनिक सभा में भी पुस्तक प्रकाशको को लताड़ा और इस प्रकार अपनी तथा धर्मसंघ की गरिमा को चार चांद लगाए ।
ಇದರ ತಾತ್ಪರ್ಯ -
ಕರಪಾತ್ರಿ ಸ್ವಾಮೀಜಿಯವರು ಮಹಾರಥಿಯವರ ಮಾತುಗಳನ್ನು ಹೆಚ್ಚು ಹೆಚ್ಚು ಗೌರವಿಸುತ್ತಿದ್ದರು. ಈ ಸಂದರ್ಭದಲ್ಲಿ, ನನ್ನ ಸ್ವಂತ ಅನುಭವದ ಘಟನೆ ಇದೆ.
ಉಡುಪಿಯ ಮಧ್ವ ಸಂಪ್ರದಾಯಾಚಾರ್ಯ ಶ್ರೀ ಸ್ವಾಮಿ ವಿದ್ಯಾಮಾನ್ಯ ತೀರ್ಥ ಮಹಾರಾಜರೊಂದಿಗೆ ಹರಿದ್ವಾರದಲ್ಲಿ ಸ್ವಾಮಿ ಕರಪಾತ್ರಿ ಜಿ ಅವರು ಚರ್ಚೆ ನಡೆಸಿದರು. ಈ ಶಾಸ್ತ್ರಾರ್ಥದಲ್ಲಿ, ಸ್ವಾಮಿಜಿ ದೊಡ್ಡ ಆರಂಭದೊಂದಿಗೆ, ಶಂಕರ ಅದ್ವೈತಮತದ ಪಕ್ಷವನ್ನು ತೆಗೆದುಕೊಂಡು, ಮಾಧ್ವ ಅಭಿಪ್ರಾಯವನ್ನು ಪರಿಹರಿಸಿದರು. ಈ ಚರ್ಚೆಯಲ್ಲಿ ನನ್ನ ಅನೇಕ ಸಹ ವಿದ್ವಾಂಸರು, ಋಷಿಕುಲ ಬ್ರಹ್ಮಾಚಾರ್ಯ ಆಶ್ರಮದ ಪದವೀಧರರು ಉಪಸ್ಥಿತರಿದ್ದರು. ಅವರು ಮತ್ತು ಇತರ ಪ್ರತ್ಯಕ್ಷದರ್ಶಿಗಳು ಈ ಚರ್ಚೆಯಲ್ಲಿ ಯಾವುದೇ ಪಕ್ಷದ ಗೆಲುವು ಅಥವಾ ಸೋಲಿನ ಪ್ರಶ್ನೆಯೇ ಇಲ್ಲ ಎಂದು ತೀರ್ಮಾನಿಸಿದರು.
ಹೌದು, ಸ್ವಾಮಿ ಶ್ರೀ ವಿದ್ಯಾಮಾನ್ಯ ತೀರ್ಥ ಮಹಾರಾಜರ ಅವಿಚ್ಛಿನ್ನವಾಗಿ ಧಾರೆಯಾಗಿ ಹರಿಯುತ್ತಿದ್ದ, ಪ್ರಾಸಬದ್ಧ ವಾದ ಸಂಸ್ಕೃತ ಪ್ರವಚನಗಳನ್ನು ಕೇಳಿ ವಿದ್ವತ್ ಸಮುದಾಯವು ಹೆಚ್ಚು ರೋಮಾಂಚಿತವಾಗಿತ್ತು.
ಧರ್ಮಾಚಾರ್ಯರಿಬ್ಬರೂ ಈ ಶಾಸ್ತ್ರಾರ್ಥವನ್ನು ಸಾಮಾನ್ಯ ಶಾಸ್ತ್ರೀಯ ಚಿಂತನೆಯಾಗಿ ಸ್ವೀಕರಿಸಿದ್ದರು. ಆದರೆ ಸ್ವಾಮಿ ಕರಪಾತ್ರಿ ಜಿ ಮಹಾರಾಜ್ ಅವರ ಕೆಲವು ಅಂಧ ಭಕ್ತರು ದೇಶ ಮತ್ತು ಕಾಲದ ಬಗ್ಗೆ ಯೋಚಿಸದೆ, ಶಾಸ್ತ್ರಾರ್ಥದ ವಿವರಣೆಯನ್ನು “ಮಾಧ್ವಮುಖ ಚಪೇಟಿಕಾ” ಎಂಬ ಕಳಪೆ ಶೀರ್ಷಿಕೆಯೊಂದಿಗೆ ಪುಸ್ತಕದ ರೂಪದಲ್ಲಿ ಮುದ್ರಿಸಿದರು, ಅದನ್ನು ಓದಿ ಇಡೀ ವೈಷ್ಣವ ಸಮುದಾಯವು ವಿಚಲಿತವಾಗುವಂತೆ ಮಾಡಿದರು. .
ಕೆರಳಿಸುವ ಮತ್ತು ಮುಜುಗರದ ಸಂಗತಿಯೆಂದರೆ, ಅದು ಸ್ವಾಮಿ ವಿದ್ಯಾಮಾನ್ಯ ತೀರ್ಥ ಮಹಾರಾಜರು ಯಾವಾಗಲೂ ಸಂಘದ ಮಹಾಧಿವೇಶನಗಳಲ್ಲಿ ಮಧ್ವ ಸಂಪ್ರದಾಯಾಚಾರ್ಯರ ರೂಪದಲ್ಲಿ ಸಿಂಹಾಸನದಲ್ಲಿ ಉಪಸ್ಥಿತರಿರುತ್ತಿದ್ದರು. ಅಂತಹ ಗೌರವಾನ್ವಿತ ಧರ್ಮಾಚಾರ್ಯರೊಂದಿಗೆ ನಡೆಸಿದ ಶಾಸ್ತ್ರಾರ್ಥದ ಬಗ್ಗೆ, (ಕುಷ್ಠರೋಗದಲ್ಲಿ ತುರಿಕೆಯಂತಹ) ಕೀಳುಮಟ್ಟದ ಪುಸ್ತಕವನ್ನು ಪ್ರಕಟಿಸುವ ಮೂಲಕ, ನಂತರ ಅವರ ನಿಂದೆ! , ಈ ಎರಡೂ ಸಂಗತಿಗಳು ಸಂಘದ ಘನತೆಗೆ ಕುಂದು ತಂದವು. ವಿಚಲಿತವಾದ ವೈಷ್ಣವ ಸಮುದಾಯದಲ್ಲಿ ಧರ್ಮಸಂಘದ ಬಹಿಷ್ಕಾರದ ಧ್ವನಿಗಳು ಕೇಳಿಬಂದವು.
ಈ ಅಂತರ್ಯುದ್ಧದ ಭೀಕರತೆಯಿಂದ ತುಂಬಿದ ಅಕಾಲಿಕ ಬಿಸಿ ವಾತಾವರಣದಲ್ಲಿ, ಸ್ವಾಮಿ ಕರಪಾತ್ರಿ ಜಿ ಅವರನ್ನು ಭೇಟಿಯಾಗಲು ಶ್ರೀ ಶಾಸ್ತ್ರಾರ್ಥ ಮಹಾರಥಿ ಜಿ ಅವರು ದೆಹಲಿ ಧರ್ಮ ಸಂಘಕ್ಕೆ ಹೋದರು. ಅವರ ಜೊತೆ ನಾನೂ ಇದ್ದೆ. ನಮಸ್ಕಾರದ ಕೊನೆಯಲ್ಲಿ, ಶ್ರೀ ಮಹಾರಥಿ ಜಿ ತಮ್ಮ ಅಭಿಪ್ರಾಯವನ್ನು ನೇರವಾಗಿ ಮಂಡಿಸಿದರು. ಅವರು ಹೇಳಿದರು - ಮಹಾರಾಜ! ಒಬ್ಬ ಅದ್ವೈತವಾದೀ ಸನ್ಯಾಸಿಯ ರೂಪದಲ್ಲಿ ನಿಮ್ಮ ಬಗ್ಗೆ ನಮಗೆ ಗೌರವವಿಲ್ಲ. ಎಲ್ಲಾ ಪಂಗಡಗಳ ಸಮನ್ವಯ ಧರ್ಮವಾದ ಸನಾತನ ಧರ್ಮದ ನಿರ್ವಿವಾದದ ನಾಯಕ ಎಂದು ನಾವು ನಿಮ್ಮನ್ನು ಪರಿಗಣಿಸುತ್ತೇವೆ.
ಮಧ್ವ ಸಂಪ್ರದಾಯಾಚಾರ್ಯರೊಂದಿಗಿನ ನಿಮ್ಮ ಚರ್ಚೆ ವೈಷ್ಣವ ವರ್ಗವನ್ನು ಅಸಮಾಧಾನಗೊಳಿಸಿದೆ. ನಾನು ಶ್ರೀವೈಷ್ಣವರ ಅನುಯಾಯಿ. ನೀವು ವೈಷ್ಣವ ಸಿದ್ಧಾಂತವನ್ನು ವೇದಾಧಾರಿತವೆಂದು ಒಪ್ಪಿಕೊಳ್ಳದಿದ್ದರೆ, ನಾನು ಚರ್ಚೆಗೆ ಬದ್ಧನಾಗಿದ್ದೇನೆ. ಮತ್ತೆ ದೆಹಲಿಯಲ್ಲಿ ಚರ್ಚಾ ವೇದಿಕೆ ಸ್ಥಾಪಿಸಿ.
ಇದನ್ನು ಕೇಳಿ ಸ್ವಾಮೀಜಿಯ ಮುಖದಲ್ಲಿ ಮನಮುಟ್ಟುವ ನಗು ಮೂಡಿತು. ಆಗ ಮಹಾಪುರುಷರಂತೆ ಶಾಂತ ಮತ್ತು ಸ್ಥಿರವಾದ ಧ್ವನಿಯಲ್ಲಿ ಹೇಳಿದರು - “ಆಚಾರ್ಯ ಜೀ, ನೀವು ಉದ್ರೇಕಗೊಳ್ಳುವುದು ಅನುಚಿತವಲ್ಲ, ಆದರೆ ನಾನು ಸತ್ಯವನ್ನು ಹೇಳುತ್ತಿದ್ದೇನೆ, “ಮಾಧ್ವಮುಖ ಚಪೇಟಿಕಾ” ಪುಸ್ತಕದ ಪ್ರಕಟಣೆಯ ವಿಷಯದಲ್ಲಿ ನನಗೆ ಶತಾಂಶದಷ್ಟೂ ಒಪ್ಪಿಗೆ ಇಲ್ಲ. ನೀವು ನಿಶ್ಚಿಂತರಾಗಿ.
ಮೊದಲಿನಂತೆ, ಭವಿಷ್ಯದಲ್ಲಿಯೂ ಸಹ, ಸಂಘವು ಸಂಪೂರ್ಣ ಸನಾತನ ಧರ್ಮದ ಉನ್ನತಿಗೆ ತೊಡಗುತ್ತದೆ, ಯಾವುದೇ ನಿರ್ದಿಷ್ಟ ಪಕ್ಷದ ಬೆಂಬಲಿಗರಲ್ಲ.
ಇಷ್ಟೇ ಅಲ್ಲ, ಸ್ವಾಮೀಜಿಯವರು ತಮ್ಮ ಮಹಾ ಔದಾರ್ಯವನ್ನು ತೋರಿಸುತ್ತಾ ಸಾರ್ವಜನಿಕ ಸಭೆಯಲ್ಲಿ ಪುಸ್ತಕ ಪ್ರಕಾಶಕರ ಮೇಲೆ ಹರಿಹಾಯ್ದು, ತಮ್ಮ ಮತ್ತು ಧರ್ಮ ಸಂಘದ ಘನತೆಯನ್ನು ಹೆಚ್ಚಿಸಿದರು.
ಇದಿಷ್ಟೂ ಆ ವಾಕ್ಯಗಳ ತಾತ್ಪರ್ಯ.
ಇದನ್ನು ನೋಡಿದಾಗ ಶ್ರೀಪಾದರ ಪಾಂಡಿತ್ಯ, ಧೈರ್ಯ, ವಾಕ್ಪಟುತ್ವ ಎಲ್ಲವೂ ತಿಳಿಯುತ್ತದೆ. ಜೊತೆಗೆ ಶ್ರೀಪಾದರು ಓಡಿ ಹೋದರು, ಪಲಾಯನ ಮಾಡಿದರು ಇತ್ಯಾದಿ ಅಸಂಗತಕ್ಕೆ ಅವಕಾಶ ಇಲ್ಲ ಎಂದು ಸ್ಪಷ್ಟವಾಗುತ್ತದೆ.
ಹಾಗಿದ್ದರೂ ಶ್ರೀಪಾದರು ಅಲ್ಲಿಂದ ಹೊರಟು ಹೋಗಬೇಕೆಂದರೆ, ಅಲ್ಲಿ ಯಾವ ರೀತಿಯ ವಾತಾವರಣ ಸೃಷ್ಟಿ ಮಾಡಿರಬಹುದು…? ಆಲೋಚನೆ ಮಾಡಿ.
ಪರರೇ ಹೇಳುವಂತೆ ವಿದ್ವತ್ ಸಮುದಾಯವೇ ಬೆರಗಾಗುವಂತೆ ಮಾತನಾಡುವ ಶ್ರೀಪಾದರು, ಇದ್ದಕ್ಕಿದ್ದಂತೆ ಸಭೆಯನ್ನು ಬಿಟ್ಟು ಹೋಗಲು ಕಾರಣಬೇಕಲ್ಲವೇ?
ಹಾಗಾಗಿ ‘ಕೊನೆಯಲ್ಲಿ ಶ್ರೀಪಾದರು ಗೀತಾತಾತ್ಪರ್ಯದ ಆಧಾರದಲ್ಲಿ ವಿಷಯವನ್ನು ಸಮರ್ಥನೆ ಮಾಡುವುದನ್ನು ಸಹಿಸದೆ, ಅದನ್ನು ಮೈಕಲ್ಲಿ ಹೇಳುವುದಕ್ಕೂ ಅವಕಾಶ ಕೊಡದೇ ಇದ್ದದ್ದರಿಂದ, ಶ್ರೀಪಾದರು ಅಲ್ಲಿಂದ ಹೊರಟಿದ್ದಾರೆ’ ಎಂದು ನಮ್ಮ ಗ್ರಂಥಗಳು ಹೇಳಿರುವುದು ಸತ್ಯವಾಗಿದೆ ಎಂದು ಸ್ಪಷ್ಟವಾಗುತ್ತದೆ.
ಈ ಲೇಖನದ ಮೂಲಕ ಶ್ರೀಪಾದರ ವಾದವೈಖರಿಯ ಪರಿಚಯದ ಜೊತೆ, ಕರಪಾತ್ರಿ ಸ್ವಾಮಿಗಳ ಕಡೆಯವರ ವರ್ತನೆ, ಅವರ ಪುಸ್ತಕದ ದುರಂತ ಎಲ್ಲವೂ ತಿಳಿಯುತ್ತದೆ.
ನೋಡಿ. ಇದು ಮಾಧ್ವರು ಬರೆದ ಗ್ರಂಥವಲ್ಲ. ಕರಪಾತ್ರಿ ಸ್ವಾಮಿಗಳ ವಿರೋಧಿಗಳು ಬರೆದ ಗ್ರಂಥವಲ್ಲ. ಶಾಂಕರರೇ ಸಂಪಾದಿಸಿದ ಗ್ರಂಥ. ಅದರಲ್ಲೂ ಕರಪಾತ್ರಿ ಸ್ವಾಮಿಗಳ ಸ್ಮೃತಿ ಗ್ರಂಥ. ಅದರಲ್ಲೂ ಮೂರನೇಯ ವ್ಯಕ್ತಿಯಂತಿರುವ ಶ್ರೀವೈಷ್ಣವ ಮತದ ಜ್ಞಾನಿಗಳ ಆಶಯವನ್ನು, ಜೊತೆಗಿದ್ದು ಲೇಖಕರು ಸಂಗ್ರಹ ಮಾಡಿರುವ ಲೇಖನ.
ಅದಕ್ಕಿಂತ ಮುಖ್ಯವಾಗಿ ಕರಪಾತ್ರಿ ಸ್ವಾಮಿಗಳ ಬಳಿಯೇ ಈ ವಾದದ ಬಗ್ಗೆ ಮಾತನಾಡಿ, ಅದರ ಬಗ್ಗೆ ಸುಳ್ಳು ಸುಳ್ಳಾಗಿ ಅವರ ಭಕ್ತರು ಬರೆದಿರುವ ಪುಸ್ತಕಕ್ಕೆ, ಕರಪಾತ್ರಿ ಸ್ವಾಮಿಗಳಿಂದಲೇ ಎಲ್ಲರೆದುರು ತಿರಸ್ಕಾರ ಆದದ್ದನ್ನು ಈ ಲೇಖನವು ದಾಖಲೆ ಮಾಡಿರುವುದು ಮತ್ತೊಂದು ವೈಶಿಷ್ಟ್ಯ.
ವಿಶೇಷವಾಗಿ ಲೇಖಕರೇ ಈ ಪ್ರಸಂಗದಲ್ಲಿ ಸಾಕ್ಷಿಯಾಗಿದ್ದು, ಅದನ್ನು ಕರಪಾತ್ರಿ ಸ್ವಾಮಿಗಳ ಸ್ಮೃತಿಗ್ರಂಥದಲ್ಲಿಯೇ ಸೇರಿಸಿರುವುದು, ಅದನ್ನು ಸಂಪಾದಕರು ಹಾಗೆಯೇ ಮುದ್ರಣ ಮಾಡಿರುವುದು ಅತ್ಯಂತ ವಿಶಿಷ್ಟವಾಗಿದೆ.
ಇನ್ನೇನು ಪ್ರಮಾಣ ಬೇಕು…?
ನಿಜಕ್ಕೂ ಆಶ್ಚರ್ಯವಾಗುತ್ತದೆ. ಪ್ರಾತಃಸ್ಮರಣೀಯ ಶ್ರೀವಿದ್ಯಾಮಾನ್ಯತೀರ್ಥರ ಪಾಂಡಿತ್ಯ ಅದೆಂತಹದು? ನಿರ್ವ್ಯಾಜವಾದ ಅವರ ಸಿದ್ಧಾಂತ ದೀಕ್ಷೆ ಅದೆಷ್ಟು ಉತ್ತಮಮಟ್ಟದ್ದಿರಬಹುದು? ಅವರ ಮೇಲೆ ಆ ದೇವರ ಕಾರುಣ್ಯ ಎಂತಹದ್ದು…?
ಗಮನಿಸಿ ಅವರ ಶಿಷ್ಯರಲ್ಲ, ಸಂಬಂಧಿಗಳಲ್ಲ. ಬೇರೆ ಯಾರೋ ಒಬ್ಬ ಮೂರನೇ ವ್ಯಕ್ತಿ ಶ್ರೀವಿದ್ಯಾಮಾನ್ಯತೀರ್ಥರು ಆ ಸಭೆಯಲ್ಲಿ ಯಾವ ರೀತಿ ವಿಷಯ ಮಂಡನೆ ಮಾಡಿದ್ದಾರೆ ಎಂಬುದನ್ನು ವರ್ಣಿಸುವ ಪರಿ ನೋಡಿದರೆ ಅವರ ದಿವ್ಯವ್ಯಕ್ತಿತ್ವ ತಿಳಿಯುತ್ತದೆ. -
स्वामी विद्यामान्य तीर्थ महाराज के अविच्छिन्न धारा प्रवाह की भांति निःसृत होने वाले सानुप्रास संस्कृत संभाषण को सुनकर विद्वन्मण्डल अधिक रोमाञ्चित हो उठता था।
ಇಂತಹ ಮಾತುಗಳನ್ನು ಕಾಣುವಾಗ ನಿಜವಾಗಿಯೂ ರೋಮಾಂಚನವಾಗುತ್ತದೆ.
ಛೇ ಅವತ್ತು ಆ ಅದ್ಭುತವಾದ ಕರ್ಣಾಮೃತವಾದ ಶ್ರೀಪಾದಂಗಳವರ ವಾಗ್ಝರಿಯನ್ನು ಕೇಳುವ ಸೌಭಾಗ್ಯ ನಮ್ಮದಾಗಲಿಲ್ಲವಲ್ಲ ಎಂದು ಬೇಸರವಾದರೂ, ಅವರ ಆ ವಿದ್ವತ್ತನ್ನು ಪ್ರಶಂಸೆ ಮಾಡಿರುವ, ಇವತ್ತಿಗೂ ಚಿರಸ್ಥಾಯಿಯಾಗಿ ಉಳಿದಿರುವ, ಪರಕೀಯ ಗ್ರಂಥದಲ್ಲಿಯೇ ದಾಖಲಾದ, ಈ ವಿಷಯವನ್ನು ನೋಡುವ ಸೌಭಾಗ್ಯ ನಮಗೆ ಒದಗಿದೆ ಎಂದು ಬಹಳ ಸಂತೋಷವಾಗುತ್ತದೆ. ಹೆಮ್ಮೆಯೆನಿಸುತ್ತದೆ.
ಪರಮತದ ಸಭೆಗೆ ಹೋಗಿ, ಯಾವುದೇ ಭಯ, ಕುಹಕಗಳಿಲ್ಲದೇ, ಸ್ವಮತಸ್ಥಾಪನೆ ಮಾಡಿ, ಪರಮತೀಯರಿಂದಲೇ ಪ್ರಶಂಸೆಗೆ ಪಾತ್ರರಾದ ಪ್ರಾತಃಸ್ಮರಣೀಯ ಶ್ರೀವಿದ್ಯಾಮಾನ್ಯತೀರ್ಥರ ಭಕ್ತ ಎಂದು ಹೇಳಿಕೊಳ್ಳುವುದಕ್ಕೆ ತುಂಬಾ ತುಂಬಾ ಹೆಮ್ಮೆಯೆನಿಸುತ್ತದೆ.
ಕರ್ನಾಟಕದ ಉಡುಪಿಯ ಸಮೀಪದ ಒಂದು ಸಣ್ಣ ಗ್ರಾಮದ ಭಂಡಾರಕೇರಿ ಮಠದ ಶ್ರೀವಿದ್ಯಾಮಾನ್ಯತೀರ್ಥಶ್ರೀಪಾದರ ಬಗ್ಗೆ ನಾಲ್ಕು ಜಿಲ್ಲೆ ಅಲ್ಲ, ಎಷ್ಟೋ ರಾಜ್ಯ ದಾಟಿ ಉತ್ತರಪ್ರದೇಶದ, ಕರಪಾತ್ರಿ ಸ್ವಾಮಿಗಳ ಸ್ಮೃತಿಗ್ರಂಥದಲ್ಲಿಯೇ ಇಂತಹ ಹೊಗಳಿಕೆಯ ಮಾತುಗಳು ಕಂಡು ಬರುತ್ತದೆ ಎಂದರೆ ಸ್ವಾಮಿಗಳ ವಿದ್ವತ್ತು ಹೇಗೆ ಎಲ್ಲ ಕಡೆ ಪ್ರಸಿದ್ಧವಾಗಿತ್ತು ಎಂದು ಸ್ಪಷ್ಟವಾಗಿ ತಿಳಿಯುತ್ತದೆ.
ಅದೆಂತಹ ಪ್ರಾಮಾಣಿಕತನ, ಅದೆಂತಹ ಧೈರ್ಯ, ಅದೆಂತಹ ಸಿದ್ಧಾಂತ ಸೇವೆ. ಗಂಗಾತೀರದಲ್ಲಿ ಗಂಗಾಪ್ರವಾಹದಂತೆ ಅವಿಚ್ಛಿನ್ನವಾಗಿ ತತ್ತ್ವವಾದದ ವಿಷಯ ಮಂಡನೆ ಮಾಡಿದ ಅವರ ಸಿದ್ಧಾಂತ ಸೇವೆಯನ್ನು ಗಮನಿಸಿ ಗಂಗಾಜನಕ ತನ್ನನ್ನೇ ಸ್ವಾಮಿಗಳಿಗೆ ನೀಡಿದ.
ಎಷ್ಟು ಎಷ್ಟು ಅವರನ್ನು, ಅವರ ಸಿದ್ಧಾಂತ ಸೇವೆಯನ್ನು ವರ್ಣಿಸಿದರೂ ಕಡಿಮೆ.
ಅಂತಹ ಪರಮಪೂಜ್ಯ ಪ್ರಾತಃಸ್ಮರಣೀಯ ಪಲಿಮಾರು ಭಂಡಾರಕೇರಿ ಉಭಯಮಠಾಧೀಶರಾದ ಶ್ರೀಶ್ರೀವಿದ್ಯಾಮಾನ್ಯತೀರ್ಥ ಶ್ರೀಪಾದರ ಪರಮಾನುಗ್ರಹದಿಂದ ನಮಗೂ ಯಥಾಶಕ್ತಿ ಸಿದ್ಧಾಂತ ಸೇವೆಯನ್ನು ಮಾಡುವ ಸೌಭಾಗ್ಯವನ್ನು ಹರಿವಾಯುಗುರುಗಳು ಕರುಣಿಸಲಿ.
ಪಾಪ ಕೆಲವರು ಈ ವಾದದ ವಿಷಯದಲ್ಲಿ ಅಪ್ರಾಮಾಣಿಕವಾಗಿ ಸ್ವಾಮಿಗಳ ನಿಂದನೆ ಮಾಡುತ್ತಿದ್ದರು. ಇನ್ನು ಮುಂದೆ ಯಾರೇ ಎಲ್ಲಿಯೇ ಈ ವಾದದ ವಿಷಯದಲ್ಲಿ ಆ ಸುಳ್ಳು ಸುಳ್ಳು ಪುಸ್ತಕದ ಆಧಾರದಲ್ಲಿ ನಿಂದನೆ ಮಾಡುವ ಪ್ರಯತ್ನ ಮಾಡಿದರೆ, ಅಲ್ಲಿ ಕರಪಾತ್ರಿ ಸ್ವಾಮಿಗಳೇ ಅವರ ಅಂಧ ಭಕ್ತರಿಗೆ ಹಾಗೂ ಅವರಿಂದ ಬಂದ ಪುಸ್ತಕಕ್ಕೆ ಮಾಡಿದ ತಿರಸ್ಕಾರವನ್ನು ತೋರಿಸಿ.
ಅವರು ಎಷ್ಟೇ ಅವಾಚ್ಯ ಮಾಚನಾಡಿದರೂ, ಫೋಟೋ ಎಡಿಟ್, ವಿಡಿಯೋ ಎಡಿಟ್, ಅಸಂಗತ ಪೋಸ್ಟ್ ಇತ್ಯಾದಿ ಏನೇ ಮಾಡಿದರೂ ಸತ್ಯ ಬದಲಾಗದು.
ವಿವೇಕಿಗಳ ಗಮನಕ್ಕೆ - ಮಾಧ್ವರು ಸತ್ಯ ಹೇಳುತ್ತಾರೆ, ಅಪಪ್ರಚಾರ ಮಾಡುವವರಲ್ಲ, ಅವರು ಹೇಳುವ ವಿಷಯಗಳು ಪ್ರಾಮಾಣಿಕ ವಾಗಿರುತ್ತದೆ, ಎಂಬುದಕ್ಕೆ ಇದಕ್ಕಿಂತ ಮತ್ತೊಂದು ದೃಷ್ಟಾಂತ ಬೇಡವೆಂದು ಕಾಣುತ್ತದೆ.
ಹೃಷೀಕೇಶ ಮಠದ
॥ श्रीश्रीशभक्तो जयति मध्वो विध्वस्तसाध्वसः ॥