ಸೋಮೇಶ್ವರಶತಕ

ಸೋಮೇಶ್ವರಶತಕ
ಶ್ರೀಮತ್ಕೈಲಾಸವಾಸಂ ಸ್ಮಿತಮೃದುವಚನಂ ಪಂಚವಕ್ತ್ರಂ ತ್ರಿಣೇತ್ರಂ
ಪ್ರೇಮಾಬ್ಧೀಪೂರ್ಣಕಾಯಂ ಪರಮಪರಶಿವಂ ಪಾರ್ವತೀಶಂ ಪರೇಶಂ
ಧೀಮಂತಂ ದೇವದೇವಂ ಪುಲಿಗೆಱೆನಗರೀ ಶಾಸನಾಂಕಂ ಮೃಗಾಂಕಂ
ಸೋಮೇಶಂ ಸರ್ಪಭೂಷಂ ಸಲಹುಗೆ ಜಗಮಂ ಸರ್ವದಾ ಸುಪ್ರಸನ್ನಂ॥ 1॥
ಕೆಲವಂ ಬಲ್ಲವರಿಂದೆ ಕಲ್ತು ಕೆಲವಂ ಶಾಸ್ತ್ರಂಗಳಿಂ ಕೇಳಿ ತಾಂ
ಕೆಲವಂ ಮಾಳ್ಪವರಿಂದೆ ಕಂಡು ಕೆಲವಂ ಸ್ವಜ್ಞಾನದಿಂ ನೋಡುತಂ
ಕೆಲವಂ ಸಜ್ಜನ ಸಂಗದಿಂದಲಱಿಯಲ್ ಸರ್ವಜ್ಞನಪ್ಪಂತೆ ಕೇಳ್
ಪಲವುಂ ಪಳ್ಳ ಸಮುದ್ರವೈ ಹರಹರಾ ಶ್ರೀ ಚೆನ್ನಸೋಮೇಶ್ವರಾ ॥ 2 ॥
ಅದಱಿಂ ನೀತಿಯೆ ಸಾಧನಂ ಸಕಲಲೋಕಕ್ಕೆಲ್ಲ ಬೇಕೆಂದು ಪೇ-
ಳಿದ ಸೋಮಂ ಸುಜನರ್ಕಳೀ ಶತಕದೊಳ್ ತಪ್ಪಿರ್ದೊಡಂ ತಿದ್ದಿ ತೋ-
ರ್ಪುದು ನಿಮ್ಮುತ್ತಮ ಸದ್ಗುಣಂಗಳ ಜಗದ್ವಿಖ್ಯಾತಮಂ ಮಾಳ್ಪುದುಂ
ಮುದದಿಂ ನಿಮ್ಮವನೆಂಬುದೈ ಹರಹರಾ ಶ್ರೀ ಚೆನ್ನಸೋಮೇಶ್ವರಾ ॥ 3 ॥
ಮುಕುರಂ ಕೈಯೊಳಿರಲ್ಕೆ ನೀರನೆಳಲೇಕೈ ಕಾಮಧೇನಿರ್ದುಮೂ-
ಟಕೆ ಗೊಡ್ಡಾಕಳನಾಳ್ವರೇ ಗುಣಯುತರ್ ಪಾಲುಂಡು ಮೇಲುಂಬರೇ
ಶುಕನೋದಿಂದತಿ ಚೆಲ್ವೆ ಕಾಕರವ ರಂಭಾನೃತ್ಯಕಂ ಡೊಂಬರೇ
ಸಖರಿಂದುನ್ನತ ವಸ್ತುವೇ ಹರಹರಾ ಶ್ರೀ ಚೆನ್ನಸೋಮೇಶ್ವರಾ ॥ 4 ॥
ಸವಿವಣ್ಣಲ್ಲಿನಿಮಾವು ಸರ್ವರಸದೊಳ್ ಶೃಂಗಾರ ಸಂಭಾರದೊಳ್
ಲವಣಂ ಭಾಷೆಗೆ ಬಾಲಭಾಷೆ ಸಿರಿಯಲ್ಲಾರೋಗ್ಯ ದೈವಂಗಳೊಳ್
ಶಿವ ಬಿಲ್ಲಾಳಿನೊಳಂಗಜಂ ಜನಿಸುವಾ ಜನ್ಮಂಗಳೊಳ್ ಮಾನವಂ
ಕವಿತಾವಿದ್ಯೆ ಸುವಿದ್ಯೆಯೊಳ್ ಹರಹರಾ ಶ್ರೀ ಚೆನ್ನಸೋಮೇಶ್ವರಾ ॥ 5 ॥
ಕವಿಯೇ ಸರ್ವರೊಳುತ್ತಮಂ ಕನಕವೇ ಲೋಹಂಗಳೊಳ್ ಶ್ರೇಷ್ಠ ಜಾ-
ಹ್ನವಿಯೇ ತೀರ್ಥದೊಳುನ್ನತಂ ರತುನದೊಳ್ ಸ್ತ್ರೀರತ್ನಮೇ ವೆಗ್ಗಳಂ
ರವಿಯೇ ಸರ್ವಗ್ರಹಂಗಳೊಳ್ ರಸಗಳೊಳ್ ಶೃಂಗಾರವೇ ಬಲ್ಮೆ ಕೇಳ್
ಶಿವನೇ ದೈವ ಜಗಂಗಳೊಳ್ ಹರಹರಾ ಶ್ರೀ ಚೆನ್ನಸೋಮೇಶ್ವರಾ ॥ 6 ॥
ರವಿಯಾಕಾಶಕೆ ಭೂಷಣಂ ರಜನಿಗಾ ಚಂದ್ರಂ ಮಹಾಭೂಷಣಂ
ಕುವರಂ ವಂಶಕೆ ಭೂಷಣಂ ಸರಸಿಗಂಭೋಜಾತಗಳ್ ಭೂಷಣಂ
ಹವಿ ಯಜ್ಞಾಳಿಗೆ ಭೂಷಣಂ ಸತಿಗೆ ಪಾತಿವ್ರತ್ಯವೇ ಭೂಷಣಂ
ಕವಿಯಾಸ್ಥಾನಕೆ ಭೂಷಣಂ ಹರಹರಾ ಶ್ರೀ ಚೆನ್ನಸೋಮೇಶ್ವರಾ ॥ 7 ॥
ಧರಣೀಶಂ ಧುರಧೀರನಾಗೆ ಧನಮುಳ್ಳಂ ತ್ಯಾಗಿಯಾಗಲ್ ಕವೀ-
ಶ್ವರ ಸಂಗೀತ ಜಾಣನಾಗೆ ಸುಕಲಾಪ್ರೌಢಂಗಂ ಚೆಲ್ವೆ ಕೈಸೇರಲುಂ
ಬರೆವಂ ಧಾರ್ಮಿಕನಾಗೆ ಮಂತ್ರಿ ಚತುರೋಪಾಯಂಗಳಂ ಬಲ್ಲೊಡಂ
ದೊರೆವೋಲ್ ಚಿನ್ನಕೆ ಸೌರಭಂ ಹರಹರಾ ಶ್ರೀ ಚೆನ್ನಸೋಮೇಶ್ವರಾ ॥ 8 ॥
ಕುರುಡಂ ಕನ್ನಡಿಯಂ ಕವೀಂದ್ರರ ಮಹಾದುರ್ಮಾರ್ಗಿಗಳ್ ತ್ಯಾಗಿಯಂ
ಬಱಡಂ ಬಾಲರ ಮುದ್ದ ಬಂಜೆ ಕಡುಚೋರಂ ಚಂದ್ರನಂ ಕಾವ್ಯದ-
ಚ್ಚರಿಯಂ ಗಾಂಪರು ಪಾಪಿಗಳ್ ಸುಜನರಂ ಮಾಣಿಕ್ಯಮಂ ಮರ್ಕಟಂ
ಜಱೆಯಲ್ ಸಿಂಗವಕುನ್ನಿಯೇಂ ಹರಹರಾ ಶ್ರೀ ಚೆನ್ನಸೋಮೇಶ್ವರಾ ॥ 9 ॥
ಹರನಿಂದುರ್ವಿಗೆ ದೈವವೇ ಕಿರಣಕಿಂದುಂ ಬಿಟ್ಟು ಸ್ವಾದುಂಟೆ ಪೆ-
ತ್ತರಿಗಿಂತುಂಟೆ ಹಿತರ್ಕಳುಂ ಮಡದಿಯಿಂ ಬೇಱಾಪ್ತರಿನ್ನಿರ್ಪರೇ
ಸರಿಯೇ ವಿದ್ಯೆಕೆ ಬಂಧು ಮಾರನಿದಿರೊಳ್ಬಿಲ್ಲಾಳೆ ಮೂಲೋಕದೊಳ್
ಗುರುವಿಂದುನ್ನತದೈವವೇ ಹರಹರಾ ಶ್ರೀ ಚೆನ್ನಸೋಮೇಶ್ವರಾ ॥ 10 ॥
ಹಿತಮಂ ತೋಱುವನಾತ್ಮಬಂಧು ಪೊಱೆದಾಳ್ವಂ ತಂದೆ ಪಾತಿವ್ರತಾ
ಸತಿಯೇ ಸರ್ವಕೆ ಸಾಧನಂ ಕಲಿಸಲೊಂದಂ ವರ್ಣಮಾತ್ರಂ ಗುರು
ಶ್ರುತಿಮಾರ್ಗಂ ಬಿಡದಾತ ಸುವ್ರತಿ ಮಹಾಸದ್ವಿದ್ಯೆ ಪುಣ್ಯಪ್ರಭಾ
ಸುತನೇ ಮುಕ್ತಿಗೆ ಮಾರ್ಗವೈ ಹರಹರಾ ಶ್ರೀ ಚೆನ್ನಸೋಮೇಶ್ವರಾ ॥ 11 ॥
ಪಳಿಯರ್ ಪೇಸಿಕೆಯಿಂದ ಪುತ್ರವತಿಯೆಂದೆಂಬರ್ ಸದಾ ದೇವತಾ
ಕೆಲಸಂ ಮುಂಜಿ ವಿವಾಹ ಶೋಭನಶುಭಕ್ಕಂ ಯೋಗ್ಯವಂ ನೋಡೆ ಕಂ-
ಗಳ ನೀಡಲ್ ಕುಲಕೋಟಿ ಮುಕ್ತಿದಳೆಗುಂ ಸುಜ್ಞಾನದೊಳ್ ಕೂಡಿದಾ
ಕುಲವೆಣ್ಣಿಂಗೆಣೆಯಾವುದೈಹರಹರಾ ಶ್ರೀ ಚೆನ್ನಸೋಮೇಶ್ವರಾ ॥ 12॥
ಪ್ರಜೆಯಂ ಪಾಲಿಸಬಲ್ಲೊಡಾತನರಸಂ ಕೈಯಾಸೆಯಂ ಮಾಡದಂ
ನಿಜಮಂತ್ರೀಶ್ವರ ತಂದೆತಾಯ ಸಲಹಲ್ ಬಲ್ಲಾತನೇ ಧಾರ್ಮಿಕಂ
ಭಜಕಂ ದೈವದ ಭಕ್ತಿಯುಳ್ಳೊಡೆ ಭಟಂ ನಿರ್ಭೀತ ತಾನಾದವಂ
ದ್ವಿಜನಾಚಾರತೆಯುಳ್ಳವಂ ಹರಹರಾ ಶ್ರೀ ಚೆನ್ನಸೋಮೇಶ್ವರಾ ॥ 13 ॥
ಮಳೆಯೇ ಸರ್ವಜನಾಶ್ರಯಂ ಶಿವನೆ ದೇವರ್ಕಳ್ಗೆ ತಾನಾಸ್ಪದಂ
ಬೆಳೆಯೇ ಸರ್ವರ ಜೀವನಂ ಬಡವನೇ ಸರ್ವರ್ಗೆ ಸಾಧಾರಣಂ
ಬಳೆಯೇ ಸರ್ವವಿಭೂಷಣಕ್ಕೆ ಮೊದಲೈ ಪುತ್ರೋತ್ಸವವುತ್ಸವದೊಳ್
ಕೆಳೆಯೇ ಸರ್ವರೊಳುತ್ತಮಂ ಹರಹರಾ ಶ್ರೀ ಚೆನ್ನಸೋಮೇಶ್ವರಾ ॥ 14 ॥
ಸರಿಯೇ ಸೂರ್ಯಗೆ ಕೋಟಿಮಿಂಚುಬುಳುಗಳ್ ನಕ್ಷತ್ರವೆಷ್ಟಾದೊಡಂ
ದೊರೆಯೇ ಚಂದ್ರಗೆ ಜೀವರತ್ನಕೆಣೆಯೇ ಮಿಕ್ಕಾದ ಪಾಷಾಣಗಳ್
ಉರಗೇಂದ್ರಂಗೆ ಸಮಾನಮೊಳ್ಳೆಯೆ ಸುಪರ್ಣಂಗೀಡೆ ಕಾಕಾಳಿ ಸ-
ಕ್ಕರೆಗುಪ್ಪಂ ಸರಿಮಾಳ್ಪರೇ ಹರಹರಾ ಶ್ರೀ ಚೆನ್ನಸೋಮೇಶ್ವರಾ ॥ 15 ॥
ಧನಕಂ ಧಾನ್ಯಕೆ ಭೂಷಣಾಂಬರ ಸುಪುಷ್ಪಂಗಳ್ಗೆ ಮೃಷ್ಟಾನ್ನ ಭೋ-
ಜನಕಂ ಸತ್ಫಲಚಂದನಾದಿಯನುಲೇಪಂಗಳ್ಗೆ ಸಮ್ಮೋಹ ಸಂ-
ವನಿತಾ ಸಂಗಕೆ ರಾಜಭೋಗಕೆ ಸುವಿದ್ಯಂಗಳ್ಗದಾರಾದೊಡಂ
ಮನದೊಳ್ ಕಾಮಿಸಿ ನೋಡರೇ ಹರಹರಾ ಶ್ರೀ ಚೆನ್ನಸೋಮೇಶ್ವರಾ ॥ 16 ॥
ಗತಿಯಿಂ ಗಾಡಿಯ ಸೊಂಪಿನಿಂ ಗಮಕದಾ ಗಾಂಭೀರ್ಯದಿಂ ನೋಟದಾ
ಯತದಿಂ ಸನ್ಮೃದುವಾಕ್ಯದಿಂ ಸರಸದಿಂ ಸಂಗೀತ ಸಾಹಿತ್ಯದಿಂ
ಪ್ರತಿಪಾಡಿಲ್ಲದ ರೂಪಿನಿಂ ಪ್ರವುಢಿಯಿಂದೆಯ್ತರ್ಪ ಪಾದಾಕ್ಷಿಗಂ
ಯತಿ ತಾನಾದರು ಸೋಲನೇ ಹರಹರಾ ಶ್ರೀ ಚೆನ್ನಸೋಮೇಶ್ವರಾ ॥ 17 ॥
ಕೊಲುವಾ ಕೂಟವು ನಷ್ಟಮಪ್ಪ ಕೆಲಸಂ ಕೈಲಾಗದಾರಂಬಮುಂ
ಗೆಲವೇನಿಲ್ಲದ ಯುದ್ಧ ಪಾಳುನೆಲದೊಳ್ ಬೇಸಾಯ ನೀಚಾಶ್ರಯಂ
ಹಲವಾಲೋಚನೆ ಜೂಜುಲಾಭ ಮನೆಮಾಱಾಟಂ ರಸಾದ್ಯೌಷಧಂ
ಫಲವ ಭ್ರಾಂತಿಯ ತೋರ್ಪುವೈ ಹರಹರಾ ಶ್ರೀ ಚೆನ್ನಸೋಮೇಶ್ವರಾ ॥ 18 ॥
ಸತಿಯಾಲಾಪಕೆ ಸೋಲ್ವ ಜೂಜಿಗೆ ಖಳರ್ ಕೊಂಡಾಡುತಿರ್ಪಲ್ಲಿಗಂ
ಅತಿಪಾಪಂ ಬಹ ಕಾರ್ಯಕಲ್ಪವಿಷಯಕ್ಕಂ ದಾಸಿಯಾ ಗೋಷ್ಠಿಗಂ
ಪ್ರತಿ ತಾನಿಲ್ಲದ ಮದ್ದು ಮಂತ್ರಮಣಿಗಂ ಸಂದೇಹಗೊಂಡಲ್ಲಿಗಂ
ಮತಿವಂತರ್ ಮರುಳಪ್ಪರೇ ಹರಹರಾ ಶ್ರೀ ಚೆನ್ನಸೋಮೇಶ್ವರಾ ॥ 19 ॥
ಜಡನಂ ಮೂರ್ಖನ ಕೋಪಿಯಂ ಪಿಸುಣನಂ ದುರ್ಮಾರ್ಗಿಯಂ ಪೆಂಡಿರಂ
ಬಡಿದುಂ ಬೈವನ ನಂಟರುಣ್ಣಲುಡಲುಂಟಾಗಿರ್ದೊಡಂ ತಾಳದಾ
ಕಡುಪಾಪಿಷ್ಠನ ಜಾಣ್ಮೆಯಿಲ್ಲದನನಿಷ್ಟಂ ಮಾಳ್ಪನಂ ನೋಡಿಯುಂ
ನುಡಿಸಲ್ ಸಜ್ಜನರೊಲ್ವರೇಹರಹರಾ ಶ್ರೀ ಚೆನ್ನಸೋಮೇಶ್ವರಾ ॥ 20 ॥
ಅವಿನೀತಂ ಮಗನೇ ಅಶೌಚಿ ಮುನಿಯೇ ಬೈವಾಕೆ ತಾಂ ಪತ್ನಿಯೇ
ಸವಿಗೆಟ್ಟನ್ನವದೂಟವೇ ಕುಜನರೊಳ್ ಕೂಡಿರ್ಪವಂ ಮಾನ್ಯನೇ
ಬವರಕ್ಕಾಗದ ಬಂಟನೇ ಎಡಱಿಗಂ ತಾನಾಗದಂ ನಂಟನೇ
ಶಿವನಂ ಬಿಟ್ಟವ ಶಿಷ್ಟನೇ ಹರಹರಾ ಶ್ರೀ ಚೆನ್ನಸೋಮೇಶ್ವರಾ ॥ 21 ॥
ಪೊರೆದುಂ ಬಾಳವೆ ಪಂದಿನಾಯ್ಗಳೊಡಲಂ ಮಾತಾಡವೇ ಭೂತಗಳ್
ತರುಗಳ್ ಜೀವಿಗಳಲ್ಲವೇ ಪ್ರತಿಮೆಗಳ್ ಹೋರಾಡವೇ ತಿತ್ತಿಗಳ್
ಮೊರೆಯುತ್ತೇನುಸಿರಿಕ್ಕವೇ ಗ್ರಹಂ ಗೃಹ ಚೆಲ್ವಾಂತಿರಲ್ ಸೇರದೇ-
ನಿರಲೇಕಜ್ಞರನೇಕದಿಂಹರಹರಾ ಶ್ರೀ ಚೆನ್ನಸೋಮೇಶ್ವರಾ ॥ 22 ॥
ಫಲವತ್ತಿಲ್ಲದ ರಾಜ್ಯದಲ್ಲಿ ಪ್ರಭು ದಂಡಕ್ಕಾಸೆಗೈವಲ್ಲಿ ಬಲ್
ಪುಲಿಗಳ್ ಸಿಂಗಂಗಳಿಕ್ಕೆಯಲ್ಲಿ ಪರಸ್ತ್ರೀಯಿರ್ದಲ್ಲಿ ಕುಗ್ರಾಮದೊಳ್
ಗೆಲವಂ ತೋಱದೆ ದುಃಖಮಪ್ಪಯೆಡೆಯೊಳ್ ಭೂತಂಗಳಾವಾಸದೊಳ್
ಸಲೆ ಬಲ್ಲರ್ ನಿಲಲಾಗದೈ ಹರಹರಾ ಶ್ರೀ ಚೆನ್ನಸೋಮೇಶ್ವರಾ ॥ 23 ॥
ತವೆ ಸಾಪತ್ನಿಯರಾಟ ಸಾಲ ಮಧುಪಾನಂ ಬೇಟದಾ ಜಾರಿಣೀ
ನಿವಹಂ ಮಾಡುವಾ ಮಾಟಮಂತುಟಮಿತಂ ಮೃಷ್ಟಾನ್ನಮೆಂದೂಟ ದ್ಯೂ
ತವನಾಡುತ್ತಿಹ ಪೋಟ ಸೂಳೆಯರೊಳೊಲ್ದಿರ್ಪಾಟಮಿಂತೆಲ್ಲಮುಂ
ಸವಿಯಾಗಂತ್ಯದಿ ಕಷ್ಟವೈ ಹರಹರಾ ಶ್ರೀ ಚೆನ್ನಸೋಮೇಶ್ವರಾ ॥ 24 ॥
ಕೊಲುತಿರ್ಪಯ್ಯಗಳೋದು ಬೇನೆಯಳಿವಾ ತೀಕ್ಷ್ಣೌಷಧಂ ಪಾಡುಬಿ
ದ್ದುಳುವಾರಂಬದ ಧಾನ್ಯ ಶತ್ರುಜಯ ಪುತ್ರೋತ್ಪತ್ತಿ ಕೈಗಿಕ್ಕುವಾ
ಬಳೆ ರಾಜಾಶ್ರಯಮಶ್ವಲಾಭದಧನಂ ಬೇಹಾರಮಿಂತೆಲ್ಲಮುಂ
ಪಲಕಷ್ಟಂ ಕಡೆಗೊಳ್ಳಿತೈ ಹರಹರಾ ಶ್ರೀ ಚೆನ್ನಸೋಮೇಶ್ವರಾ ॥ 25 ॥
ತೆಱವಂ ಕಾಣದ ಬಾಳ್ಕೆಯಲ್ಪಮತಿ ಕ್ಷುದ್ರಾರಂಭಮಲ್ಪಾಶ್ರಯಂ
ಕಿಱುದೋಟಂ ಕಡೆವಳ್ಳಿ ಬೀಳುವನೆ ಮುಂಗೈಯಾರ್ಭಟಂ ಸಾಲದಾ
ದೊರೆಕಾರ್ಯಂ ಘೃತಮಿಲ್ಲದೂಟದ ಸುಖಂ ಮುಗ್ಧಾಂಗನಾ ಸಂಗಮುಂ
ಬಱಿಗೈಯಂ ಸುಱಿದಂತೆಲೈ ಹರಹರಾ ಶ್ರೀ ಚೆನ್ನಸೋಮೇಶ್ವರಾ ॥ 26 ॥
ತರಮಂ ಕಾಣದ ತಾಣದಲ್ಲಿ ಕಪಟಂಗಳ್ ಮಾಳ್ಪರಿರ್ಪಲ್ಲಿ ನಿ-
ಷ್ಠುರ ಭಾಷಾನೃಪನಲ್ಲಿ ನಿಂದೆ ಬಱಿದೇ ಬರ್ಪಲ್ಲಿಯನ್ನೋದಕಂ
ಕಿಱಿದಾದಲ್ಲಿ ರಿಪುವ್ರಜಂಗಳೆಡೆಯೊಳ್ ದುಸ್ಸಂಗ ದುರ್ಗೋಷ್ಠಿಯ-
ಲ್ಲಿರಿಸಲ್ಲಿರ್ದೊಡೆ ಹಾನಿಯೈ ಹರಹರಾ ಶ್ರೀ ಚೆನ್ನಸೋಮೇಶ್ವರಾ ॥ 27 ॥
ಸುಡು ಸೂಪಂ ಘೃತಮಿಲ್ಲದೂಟವಪರಾನ್ನಾಪೇಕ್ಷೆಯಾ ಜಿಹ್ವೆಯಂ
ಸುಡು ದಾರಿದ್ರ್ಯದ ಬಾಳ್ಕೆಯಂ ಕಪಟಕೂಟಂ ಮಾಳ್ಪ ಸಂಗಾತಿಯಂ
ಸುಡು ತಾಂಬೂಲವಿಹೀನ ವಕ್ತ್ರವ ಪರಸ್ತ್ರೀ ನೋಡುವಾ ಕಣ್ಗಳಂ
ನುಡಿಯಿಂ ತಪ್ಪುವ ರಾಜನಂ ಹರಹರಾ ಶ್ರೀ ಚೆನ್ನಸೋಮೇಶ್ವರಾ ॥ 28 ॥
ಉಣದಿರ್ಪಾ ಧನಮಿರ್ದೊಡೇನು ಸುತನಿರ್ದೇಂ ಮುಪ್ಪಿನಲ್ಲಾಗದಾ
ಒಣಗಲ್ ಪೈರಿಗೆ ಬಾರದಿರ್ದ ಮಳೆ ತಾಂ ಬಂದೇನದಾಪತ್ತಿನೋಳ್
ಮಣಿದುಂ ನೋಡದ ಬಂಧುವೇತಕೆಣಿಸಲ್ ಕಾಲೋಚಿತಕ್ಕೈದಿದಾ
ತೃಣವೇ ಪರ್ವತವಲ್ಲವೇ ಹರಹರಾ ಶ್ರೀಚೆನ್ನಸೋಮೇಶ್ವರಾ ॥ 29 ॥
ಮಳೆಯಲ್ಲಿಕ್ಕಿದ ಜೇನು ಶೂದ್ರ ಕಲಿತಿರ್ಪಾ ವಿದ್ಯೆಯುಚ್ಚಿಷ್ಟಮಾ-
ಗಲು ಮೃಷ್ಟಾನ್ನವು ಸರ್ಪಕಾಯ್ವ ಧನಮಂ ಲುಬ್ಧಾರ್ಜಿತೈಶ್ವರ್ಯಮುಂ
ಹೊಲೆಪಾಡಿಂದಲಿ ಕೂಡಲಿಕ್ಕೆ ಪೆರರ್ಗಂ ತಾನಾಗದೇ ಪೋಗುವೋಲ್
ಗಳಿಸೇನುಣ್ಣದೆ ಪೋಪರೈ ಹರಹರಾ ಶ್ರೀ ಚೆನ್ನಸೋಮೇಶ್ವರಾ ॥ 30 ॥
ಚರಿಪಾರಣ್ಯದ ಪಕ್ಷಿಗೊಂದು ತರು ಗೊಡ್ಡಾಗಲ್ ಫಲಂ ತೀವಿದಾ
ಮರಗಳ್ ಪುಟ್ಟವೆ ಪುಷ್ಪವೊಂದು ಬಳಲಲ್ ಭೃಂಗಕ್ಕೆ ಪೂವಿಲ್ಲವೇ
ನಿರುತಂ ಸತ್ಕವಿಗೊರ್ವಗರ್ವಿ ಪುಸಿಯುತ್ತುಂಲೋಭಿಯಾಗಲ್ ನಿಜಂ
ಧರೆಯೋಳ್ ದಾತರು ಪುಟ್ಟರೇ ಹರಹರಾ ಶ್ರೀ ಚೆನ್ನಸೋಮೇಶ್ವರಾ॥ 31 ॥
ಗಿಡುವೃಕ್ಷಂಗಳಿಗಾರು ನೀರನೆಱೆವರ್ ನಿತ್ಯಂ ಮಹಾರಣ್ಯದೊಳ್
ಕಡುಕಾರ್ಪಣ್ಯದಿ ಕೇಳ್ವವೇ ಶಿಖಿಜಲೋರ್ವೀ ಮಾರುತಾಕಾಶಮಂ
ಮೃಡ ನೀನಲ್ಲದದಾವ ಸಾಕುವ ಜಗಕ್ಕಂ ಪ್ರೇರಕಂ ನೀನೆಲೈ
ಕೊಡುವರ್ ಕೊಂಬರು ಮರ್ತ್ಯರೇ ಹರಹರಾ ಶ್ರೀ ಚೆನ್ನಸೋಮೇಶ್ವರಾ॥ 32 ॥
ಧರೆ ಬೀಜಂಗಳ ನುಂಗೆ ಬೇಲಿ ಹೊಲನೆಲ್ಲಂ ಮೇದೊಡಂ ಗಂಡ ಹೆಂ-
ಡಿರನತ್ಯುಗ್ರದಿ ಶಿಕ್ಷಿಸಲ್ ಪ್ರಜೆಗಳಂ ಭೂಪಾಲಕಂ ಬಾಧಿಸಲ್
ತರುವೇ ಪಣ್ಗಳ ಮೆಲೆ ಮಾತೆ ವಿಷಮಂ ಪೆತ್ತರ್ಭಕಂಗೂಡಿಸಲ್
ಹರ ಕೊಲ್ಲಲ್ ನರ ಕಾಯ್ವನೇ ಹರಹರಾ ಶ್ರೀ ಚೆನ್ನಸೋಮೇಶ್ವರಾ ॥ 33 ॥
ಮರಗಳ್ ಪುಟ್ಟಿದತಾಣಮೊಂದೆ ಖಗಕಂ ರಾಜ್ಯಂಗಳೇಂ ಪಾಳೆ ಭೂ-
ವರರೊಳ್ ತ್ಯಾಗಿಗಳಿಲ್ಲವೇ ಕವಿಗೆ ವಿದ್ಯಾಮಾತೆಯೇಂ ಬಂಜೆಯೇ
ಧರೆಯೆಲ್ಲಂ ಪಗೆಯಪ್ಪುದೇ ಕರುಣಿಗಳ್ ತಾವಿಲ್ಲವೇ ಲೋಕದೊಳ್
ನರರಂ ಪುಟ್ಟಿಸಿ ಕೊಲ್ವನೇ ಹರಹರಾ ಶ್ರೀ ಚೆನ್ನಸೋಮೇಶ್ವರಾ ॥ 34 ॥
ಮೃಡ ತಾಂ ಭಿಕ್ಷವ ಬೇಡನೇ ದ್ರುಪಜೆ ತಾಂ ತೊತ್ತಾಗಳೆ ಪಾಂಡವರ್
ಪಿಡಿದೋಡಂ ತಿರಿದುಣ್ಣರೇ ಖಳನ ಕೈಯೊಳ್ ಸಿಕ್ಕಳೇ ಸೀತೆ ತಾಂ
ಸುಡುಗಾಡಕ್ಕಿಗೆ ಬಂಟನಾಗನೆ ಹರಿಶ್ಚಂದ್ರಂ ನರರ್ಪೂರ್ವದೊಳ್
ಪಡೆದಷ್ಟುಣ್ಣದೆ ಪೋಪರೇ ಹರಹರಾ ಶ್ರೀ ಚೆನ್ನಸೋಮೇಶ್ವರಾ ॥ 35 ॥
ಕಡಿದಾಡಲ್ ರಣರಂಗದೊಳ್ ನೃಪರೊಳಂ ತಾನಗ್ಗದಿಂಕಾದೊಡಂ
ಮೃಡನಂ ಮೆಚ್ಚಿಸಿ ಕೇಳ್ದೊಡಂ ತೊಳಲಿ ತಾಂ ದೇಶಾಟನಂಗೈದೊಡಂ
ಕಡಲೇಳಂ ಮಗುಚಿಟ್ಟೊಡಂ ಕಲಿಯೆ ನಾನಾ ವಿದ್ಯಪದ್ಯಂಗಳಂ
ಪಡೆದಷ್ಟಲ್ಲದೆ ಬರ್ಪುದೇ ಹರಹರಾ ಶ್ರೀ ಚೆನ್ನಸೋಮೇಶ್ವರಾ ॥ 36 ॥
ಮದನಂ ದೇಹವ ನೀಗಿದಂ ನೃಪವರಂ ಚಾಂಡಾಲಗಾಳಾದ ಪೋ
ದುದು ಬೊಮ್ಮಂಗೆ ಶಿರಸ್ಸು ಭಾರ್ಗವನು ಕಣ್ಗಾಣಂ ನಳಂ ವಾಜಿಪಂ
ಸುಧೆಯಂ ಕೊಟ್ಟ ಸುರೇಂದ್ರ ಸೋಲ್ತ ಸತಿಯಂ ಪೋಗಾಡಿದಂ ರಾಘವಂ
ವಿಧಿಯಂ ವಿೂಱುವನಾವನೈ ಹರಹರಾ ಶ್ರೀ ಚೆನ್ನಸೋಮೇಶ್ವರಾ ॥ 37 ॥
ಹುಲುಬೇಡಂ ಮುರವೈರಿಯಂ ಕುರುಬನಾ ಶೂದ್ರೀಕನಂ ರಾಮನಂ
ಬೆಲೆವೆಣ್ಣಿಂದ ಶಿಖಂಡಿ ಭೀಷ್ಮನುಮನಾ ದ್ರೋಣಾರ್ಯನಂ ವಸ್ತ್ರವಂ
ತೊಳೆವಾತಂ ಹತಮಾಡರೇ ಪಣೆಯೊಳಂ ಪೂರ್ವಾರ್ಜಿತಂ ಹಾಗಿರಲ್
ಕೊಲನೇ ಕ್ಷುದ್ರ ಸಮರ್ಥನಂ ಹರಹರಾ ಶ್ರೀ ಚೆನ್ನಸೋಮೇಶ್ವರಾ ॥ 38 ॥
ಮಧುರೇಂದ್ರಂ ಕಡುದುಷ್ಟನಾಗಲು ಬಳಿಕ್ಕೀಡೇರಿತೇ ದ್ವಾರಕಾ
ಸದನಾಂಭೋಧಿಯ ಕೂಡದೇ ಕುರುಬಲಾಂಭೋರಾಶಿಯೊಳ್ ಸೈಂಧವಂ
ಹುದುಗಲ್ ಬಾಳ್ದನೆ ಭೂಮಿಯಂ ಬಗಿದು ಪೊಕ್ಕೇಂ ದುಂದುಭಿ ರಾಕ್ಷಸಂ
ವಿಧಿ ಕಾಡಲ್ ಸುಖಮಾಂಪರೇ ಹರಹರಾ ಶ್ರೀ ಚೆನ್ನಸೋಮೇಶ್ವರಾ ॥ 39 ॥
ಸುಕುಲೋದ್ಧಾರಕನಾಗಿ ಭಾಗ್ಯಯುತನಾಗಾಯುಷ್ಯಮುಳ್ಳಾತನಾ-
ಗಕಳಂಕಾಸ್ಪದಳಾಗಿ ಬಾಳ್ವ ಸತಿಯಿರ್ದಾನಂದಮಂ ಮಾಳ್ಪ ಬಾ-
ಲಕನಿರ್ದೀಶಭಕ್ತನಾಗಿ ತನುವೊಳ್ದಾರ್ಢ್ಯಂ ಸಮಂತೊಪ್ಪುವಾ
ಸುಖ ಪೂರ್ವಾರ್ಜಿತ ಪುಣ್ಯವೈ ಹರಹರಾ ಶ್ರೀ ಚೆನ್ನಸೋಮೇಶ್ವರಾ ॥ 40 ॥
ಕಪಟಂ ಚಂದ್ರಮಗೆಯ್ದದೇ ಹರಿಯ ನಾಮಂ ಜಾರನೆಂದೆನ್ನರೇ
ತಪನಂ ಕೊಂತಿಯ ಸೋಂಕನೇ ಬುಧ ಮಹಾಪುಣ್ಯಾತ್ಮನೇ ವಾಯುಪಾ-
ದಪಗೂಳರ್ ಮುನಿವೆಣ್ಗಳಿಂ ಬಹಳ ದೂರಂ ತಾಳರೇ ಸೂಕ್ಷ್ಮದಿಂ-
ದಪನಿಂದ್ಯಂ ಬರೆ ಪೋಪುದೇ ಹರಹರಾ ಶ್ರೀ ಚೆನ್ನಸೋಮೇಶ್ವರಾ ॥ 41 ॥
ಕೊಡಬಲ್ಲಂಗೆ ದರಿದ್ರಮಂ ಪ್ರವುಢಗಂ ಮೂಢಾಂಗನಾ ಸಂಗಮಂ
ಮಡೆಯಂಗುತ್ತಮಜಾತಿನಾಯಕಿಯ ಪಾಪಾತ್ಮಂಗೆ ನಿತ್ಯತ್ವಮಂ
ಕಡುಲೋಭಂಗತಿ ದ್ರವ್ಯಮಂ ಸುಕೃತಿಗಲ್ಪಾಯುಷ್ಯಮಂ ನೀಡುವಂ
ಕಡುಪಾಪಿಷ್ಟನು ಬೊಮ್ಮನೈ ಹರಹರಾ ಶ್ರೀ ಚೆನ್ನಸೋಮೇಶ್ವರಾ ॥ 42 ॥
ಪುರಗಳ್ ಬಾನೊಳು ನಿಂದುದಿಲ್ಲ ದಶಕಂಠಂಗಾಯಿತೇ ಲಂಕೆ ಸಾ-
ಗರದೊಳ್ ಪೋದುದು ದ್ವಾರಕಾನಗರಿ ಭಿಲ್ಲರ್ಗಾದುದಾ ಗೋಪುರಂ
ದುರುಳರ್ಗಾದುದು ಷಟ್ಪುರಂ ಮಧುರೆಯೊಳ್ ಕಂಸಾಸುರಂ ಬಾಳ್ದನೇ
ಸಿರಿ ಬಂದುಂ ನಿಲೆ ಪುಣ್ಯವೈ ಹರಹರಾ ಶ್ರೀ ಚೆನ್ನಸೋಮೇಶ್ವರಾ ॥ 43 ॥।
ಉಡುರಾಜಂ ಕಳೆಗುಂದಿ ಪೆರ್ಚದಿಹನೇ ನ್ಯಗ್ರೋದಬೀಜಂ ಕೆಲಂ
ಸಿಡಿದುಂ ಪೆರ್ಮರನಾಗದೇ ಎಳೆಗಱುಂ ಎತ್ತಾಗದೇ ಲೋಕದೊಳ್
ಮಿಡಿ ಪಣ್ಣಾಗದೆ ದೈವದೊಲ್ಮೆಯಿರಲುಂ ಕಾಲಾನುಕಾಲಕ್ಕೆ ತಾಂ
ಬಡವಂ ಬಲ್ಲಿದನಾಗನೇ ಹರಹರಾ ಶ್ರೀ ಚೆನ್ನಸೋಮೇಶ್ವರಾ ॥ 44 ॥
ಸುರಚಾಪಾಯತಮಿಂದ್ರಜಾಲದ ಬಲಂ ಮೇಘಂಗಳಾಕಾರ ಬಾ-
ಲರು ಕಟ್ಟ್ಯಾಡುವ ಕಟ್ಟೆ ಸ್ವಪ್ನದ ಧನಂ ನೀರ್ಗುಳ್ಳೆ ಗಾಳೀಸೊಡರ್
ಪರಿವುತ್ತಿರ್ಪ ಮರೀಚಿಕಾ ಜಲ ಜಲಾವರ್ತಾಕ್ಷರಾದಂತಿರೈ
ಸಿರಿ ಪುಲ್ಲಗ್ರದ ತುಂತುರೈ ಹರಹರಾ ಶ್ರೀ ಚೆನ್ನಸೋಮೇಶ್ವರಾ ॥ 45 ॥
ಧೃತಶಾಪಾನ್ವಿತನಾ ಹಿಮಾಂಶುಗುರುವಿಂ ದೈತ್ಯಾರಿಯನ್ಯಾಂಗನಾ
ರತಿಯಿಂ ಕೀಚಕನಂ ಬಕಾರಿ ಮುಱಿದಂ ಸುಗ್ರೀವನಿಂ ವಾಲಿ ತಾಂ
ಹತನಾದಂ ದಶಕಂಠನಾ ಹರಿಶರಕ್ಕೀಡಾದನೇವೇಳ್ವೆನಾಂ
ಅತಿ ಕಾಮರ್ಗತಿಹಾನಿಯೈ ಹರಹರಾ ಶ್ರೀ ಚೆನ್ನಸೋಮೇಶ್ವರಾ ॥ 46 ॥
ಸುಳಿದಾ ಹೊಮ್ಮಿಗವೈದೆ ಸೀತೆಯ ಖಳಂ ಕೊಂಡೋಡಿ ತಾನಾಳ್ದನೇ
ಇಳಿದಂಭೋಧಿಯ ಬಾಳ್ದನೇ ತಮಸನಂದಾಮ್ನಾಯಮಂ ಕದ್ದೊಡಂ
ತಲೆಯಂ ಕಟ್ಟರೆ ಕಂಚಿವಾಳದೊಳು ತಾಂ ಶೂದ್ರೀಕವೀರಾಖ್ಯನಂ
ಕಳವೇಂ ಕೊಲ್ಲದೆ ಕಾಯ್ವುದೇ ಹರಹರಾ ಶ್ರೀ ಚೆನ್ನಸೋಮೇಶ್ವರಾ ॥ 47 ॥
ಪಿಡಿಯಲ್ ಹೊಮ್ಮಿಗವೆಂದು ಪೋದ ರಘುಜಂ ಭೂಪುತ್ರಿ ಸನ್ಯಾಸಿಯೆಂ-
ದಡಿಯಿಟ್ಟಳ್ ದಶಕಂಠನೊಯ್ದಿವಳನಂದಾಯುಷ್ಯಮಂ ನೀಗಿದಂ
ಕೊಡಬೇಡೆಂದೆನೆ ಶುಕ್ರ ರಾಜ್ಯವನಿತಂ ಪೋಗಾಡಿವಂ ರಾಕ್ಷಸಂ
ಕಡು ಮೋಹಂ ಕೆಡಿಕುಂ ದಲೈ ಹರಹರಾ ಶ್ರೀಚೆನ್ನಸೋಮೇಶ್ವರಾ ॥ 48 ॥
ಖಳ ವೇದಂಗಳನೊಯ್ದನುರ್ವಿತಳಮಂ ತಾಂ ಚಾಪೆವೋಲ್ ಸುತ್ತಿದಂ
ಚಲದಿಂ ಪೋರಿದರೆಲ್ಲರಂ ಗೆಲಿದು ಬಂದಾ ಪೆಣ್ಣ ಕೊಂಡೋಡಿದಂ
ತಲೆಯೊಳ್ ಕಾದಿದರೂರ್ಗಳಂ ಪಡೆದರೆಲ್ಲಾ ಗೆಲ್ದು ತಾವಾಳ್ದರೇ
ಬಲುಗರ್ವಂ ಕೊಲದಿರ್ಪುದೇ ಹರಹರಾ ಶ್ರೀ ಚೆನ್ನಸೋಮೇಶ್ವರಾ ॥ 49 ॥
ಸುರೆಯಂ ಸೇವಿಸಿದಾತ ಬಲ್ಲನೆ ಮಹಾಯೋಗೀಂದ್ರರೆಂಬುದಂ
ದೊರೆಯೊಳ್ ತೇಜವನಾಂತವಂ ಬಡವರಂ ತಾಂ ನೋಳ್ಪನೇ ಕಂಗಳಿಂ
ಪಿರಿಯರ್ ಮಾನವರೆಂದು ಕಾಣ್ಬನೆ ಮಹಾದುರ್ಮಾರ್ಗಿಯೆಂತಾದೊಡಂ
ದುರುಳಂ ಬಲ್ಲನೆ ಬಾಳ್ವರಂ ಹರಹರಾ ಶ್ರೀ ಚೆನ್ನಸೋಮೇಶ್ವರಾ ॥ 50 ॥
ಪಿಡಿಯಲ್ ಸಿಂಗವ ಮತ್ಸರ ಕವಿವುದಾ ದುರ್ಗಂಧಮೇ ಗಾಳಿಯೊಳ್
ತೊಡೆಯಲ್ ನಾರದೆ ನಾಯ ಬಾಲ ಸೆಡೆಯಂ ಕಟ್ಟಲ್ಕೆ ಚಂದಪ್ಪುದೇ
ಸುಡುಚೇಳಂ ತೆಗೆಯಲ್ಕೆ ಸುಮ್ಮನಿಹುದೇನೇನೆಂದೊಡೆಯೆಷ್ಟಾದೊಡಂ
ಬಿಡ ತನ್ನಂಗವ ನೀಚ ತಾಂ ಹರಹರಾ ಶ್ರೀ ಚೆನ್ನಸೋಮೇಶ್ವರಾ ॥ 51 ॥
ಬಡಿಗೋಲಂ ಸಮಮಾಡಬಕ್ಕು ಧರೆಯೊಳ್ ಕೂಪಂಗಳಂ ತೋಡಬ
ಕ್ಕಿಡಿದುಕ್ಕಂ ಮೃದುಮಾಡಬಕ್ಕು ಮಳಲೊಳ್ ತೈಲಂಗಳಂ ತೋರಬ
ಕ್ಕಡವೀ ಸಿಂಗವ ತಿದ್ದಬಕ್ಕು ಕರೆಯಲ್ಬಕ್ಕುಗ್ರದ ವ್ಯಾಘ್ರಮಂ
ಕಡುಮೂರ್ಖಂ ನೆಱೆ ಕೇಳನೈ ಹರಹರಾ ಶ್ರೀ ಚೆನ್ನಸೋಮೇಶ್ವರಾ ॥ 52 ॥
ತೊನೆವರ್ ಮಾತಿಗೆ ಸೋಲ್ದು ತನ್ನ ತಲೆಯೊಳ್ ತಾನಿಟ್ಟು ಬೊಬ್ಬಿಟ್ಟು ಕೈ-
ಪನೆ ಬಿಟ್ಟೆಲ್ಲರ ಮುಂದೆ ತೋಳ ನೆಗಪುತ್ತಂ ಕೋತಿಯಂತೇಡಿಸು-
ತ್ತಿನಿಸುಂ ಹೇಸದೆ ಲಜ್ಜೆಯಿಲ್ಲದನಿಬರ್ ತಾಂ ಮಾನ್ಯನೆಂದಾ
ಮನುಜಂ ಸದ್ಗತಿ ಕಾಣನೈ ಹರಹರಾ ಶ್ರೀ ಚೆನ್ನಸೋಮೇಶ್ವರಾ ॥ 53 ॥
ಘನದೈನ್ಯಂಬಡುವರ್ ಗಭೀರಗೆಡುವರ್ ಗ್ರಾಸಕ್ಕೆ ಕುಗ್ರಾಮವಾ-
ಗನುಗೆಟ್ಟಿರ್ಪರು ಆ ಕ್ಷಣಕ್ಕೆ ಕೆಲವರ್ ಮಾತಾಡಲುಂ ಬಿ-
ಱ್ರನೆ ಬಾಗರ್ ತಲೆಗೇರಿ ಸೊಕ್ಕು ತೊನೆವರ್ ತಾವೆಲ್ಲರಂ ನಿಂದಪರ್
ಮನುಜರ್ಗೆತ್ತಣ ನೀತಿಯೈ ಹರಹರಾ ಶ್ರೀ ಚೆನ್ನಸೋಮೇಶ್ವರಾ ॥ 54 ॥
ಅಗಲರ್ ಸೂಳೆಯನಾಳರಾ ಕುಲಜೆಯಂ ಸಂಕೀರ್ಣಮಂ ಮಾಳ್ಪರಾ-
ವಗ ದುರ್ಗೋಷ್ಠಿಯೊಳಿರ್ಪರೇಳು ಬೆಸನಕ್ಕೀಡಪ್ಪರಾಚಾರಮಂ
ಬಗೆಯರ್ ಸ್ವಾತ್ಮವಿಚಾರವಿಲ್ಲ ಮತಿಗೀಯರ್ ಧರ್ಮಮಂ ಪಾಲಿಸರ್
ಯುಗಧರ್ಮಂ ನರರ್ಗಪ್ಪುದೆ ಹರಹರಾ ಶ್ರೀ ಚೆನ್ನಸೋಮೇಶ್ವರಾ ॥ 55 ॥
ಕುಲದೊಳ್ ಕೂಡರು ಕೂಸನೀಯರು ನೃಪರ್ ನಿಷ್ಕಾರಣಂ ದಂಡಿಪರ್
ಪೊಳಲೊಳ್ ಸೇರಲು ಪೋರುಗೈದು ಸತಿ ತಾಂ ಪೋಗಟ್ಟುವಳ್ ಸಾಲಿಗರ್
ಕಲುಗುಂಡಂ ತಲೆಗೇಱಿಪರ್ ತೊಲಗಿರಲ್ ಲಕ್ಷ್ಮೀಕಟಾಕ್ಷೇಷಣಂ
ನೆಲ ಮುಟ್ಟಲ್ ಮುನಿದಪ್ಪುದೈ ಹರಹರಾ ಶ್ರೀ ಚೆನ್ನಸೋಮೇಶ್ವರಾ ॥ 56 ॥
ಮಡೆಯಂಗುತ್ತಮವಿದ್ಯೆ ಬೆಟ್ಟ ಕುರುಡಂಗಂ ಮಾರ್ಗವೇ ಬೆಟ್ಟ ಕೇಳ್
ಬಡವಂಗೊಂದಿನ ಘಟ್ಟ ಬೆಟ್ಟ ಜಡದೇಹಂಗುಜ್ಜುಗಂ ಬೆಟ್ಟ ಮು-
ಪ್ಪಡಿಸಿರ್ದಾತಗೆ ಪೆಣ್ಣು ಬೆಟ್ಟ ರುಣವೇ ಪೆರ್ಬೆಟ್ಟ ಮೂಲೋಕದೊಳ್
ಕಡುಲೋಭಂಗಣು ಬೆಟ್ಟವೈ ಹರಹರಾ ಶ್ರೀ ಚೆನ್ನಸೋಮೇಶ್ವರಾ ॥ 57 ॥
ತೊನೆಯಲ್ ತಾಳ್ಮೆಯನಾಂತವಂ ಬೆರೆತೊಡಾತಂ ಗರ್ವಿ ಕೈಮಾಡಲಾ
ತನೆ ಸತ್ಯವ್ರತಿ ಸೂರುಳಿಟ್ಟು ಪುಸಿಯಲ್ ಭಾಷಾ ಪ್ರತೀಪಾಲಕಂ
ಕನಲಲ್ ಸೈರಣೆವಂತನುದ್ಗುಣಯುತಂ ತಾಂನಿರ್ಗುಣಂತೋಱಲಾ
ಧನಿಕಂ ಸತ್ಕುಲಜಾತನೈ ಹರಹರ ಶ್ರೀ ಚೆನ್ನಸೋಮೇಶ್ವರಾ ॥ 58 ॥
ಕರೆಯಲ್ ಕರ್ಣಗಳಿರ್ದು ಕೇಳರು ಕರಂಗಳ್ ಚೆಲ್ವನಾಂತಿರ್ದೊಡಂ
ಮುರಿದಂತಿರ್ವರ ಮೇಲೆ ಹೇಱಿ ನಡೆವರ್ ಮಾತಿರ್ದೊಡಂ ಮೂಕರ-
ಪ್ಪರು ಕಾಲಿರ್ದೊಡೆ ಕಾಕರಲ್ಪರಿಡೆ ಕಾಲಂ ಪೂರ್ವಪುಣ್ಯಂಗಳಿಂ
ಸಿರಿಪೊರ್ದಲ್ನೆರೆಗಾಣರೈ ಹರಹರಾ ಶ್ರೀ ಚೆನ್ನಸೋಮೇಶ್ವರಾ ॥ 59 ॥
ಕೊಡಬೇಕುತ್ತಮನಾದವಂಗೆ ಮಗಳಂ ಸತ್ಪಾತ್ರಕಂ ದಾನಮಂ
ಇಡಬೇಕೀಶ್ವರನಲ್ಲಿ ಭಕ್ತಿರಸಮಂ ವಿಶ್ವಾಸಮಂ ಸ್ವಾಮಿಯೊಳ್
ಬಿಡಬೇಕೈ ಧನಲೋಭ ಬಂಧುಜನರೊಳ್ ದುಷ್ಟಾತ್ಮರೊಳ್ ಗೋಷ್ಠಿಯಂ
ಇಡಬೇಕಿದ್ದುಣಬೇಕೆಲೈ ಹರಹರ ಶ್ರೀ ಚೆನ್ನಸೋಮೇಶ್ವರಾ ॥ 60 ॥
ವರವಿದ್ವಾಂಸ ಕವೀಂದ್ರ ಗಾಯಕ ಪುರಾಣಜ್ಞರ್ ಮಹಾಪಾಠಕರ್
ಪರಿಹಾಸೋಚಿತಿತಿಹಾಸ ಮಂತ್ರಶಕುನಜ್ಞರ್ ವಾಗ್ಮಿಗಳ್ ವೇಶಿಯರ್
ಶರಶಸ್ತ್ರಾದಿ ಸಮಸ್ತ ವಿದ್ಯೆಯಱಿದರ್ ಕಾಲಾಳು ಮೇಲಾಳಿರಲ್
ದೊರೆಯೊಡ್ಡೋಲಗ ಚೆಲ್ವುದೈ ಹರಹರಾ ಶ್ರೀ ಚೆನ್ನಸೋಮೇಶ್ವರಾ ॥ 61 ॥
ಬಲವಂತರ್ ನೆರವಾಗಲಿಕ್ಕೆಲದವರ್ ಮಿತ್ರತ್ವಮಂ ತಾಳ್ದಿರಲ್
ನೆಲನೆಲ್ಲಂ ಬೆಸಲಾಗೆ ಧಾನ್ಯತತಿಯಂ ನಿಷ್ಕಾರಣಂ ದಂಡಮಂ
ಕೊಳದೆಲ್ಲರ್ ಸೊಗವಾಗೆ ನಂಬುಗೆಗಪೋಹಂ ಬಾರದಾಳಲ್ ನಿಜಂ
ಬಲುಭಾಗ್ಯಂ ದೊರೆಗಪ್ಪುದೈ ಹರಹರಾ ಶ್ರೀ ಚೆನ್ನಸೋಮೇಶ್ವರಾ ॥ 62 ॥।
ಚಪಳರ್ ಚೋರರು ಚಾಟುಗರ್ ಚರೆಯರಲ್ಪರ್ ಚೇಟಿಯರ್ ವೇಶಿಯರ್
ಕಪಟೋಪಾಯರು ಕುಂಟಸಾಕ್ಷಿಕುಜನರ್ ಕೊಂಡಾಡುವರ್ ಕೊಂಡೆಯರ್
ಅಪನಿಂದಾನ್ವಿತರಾತ್ಮಬೋಧ ಕುಹಕರ್ ಸಾಮೀಪ್ಯಮಾತ್ರೇಷ್ಟರುಂ
ನೃಪರೊಳ್ ಮಾನ್ಯರೆನಿಪ್ಪರೈ ಹರಹರಾ ಶ್ರೀ ಚೆನ್ನಸೋಮೇಶ್ವರಾ ॥ 63 ॥
ಧುರದೊಳ್ ತನ್ನಯ ವೀರರೊಳ್ ಪ್ರಜೆಗಳೊಳ್ ದಾಯಾದ್ಯರೊಳ್ ಭೃತ್ಯರೊಳ್
ಪುರದೊಳ್ ಬಂಧುಗಳೊಳ್ ಸುಭೋಜನಗಳೊಳ್ ವೈದ್ಯಂಗಳೊಳ್ ಸಂಗದೊಳ್
ಅರಿಯೊಳ್ ಜೋತಿಷಮಂತ್ರವಾದದೆಡೆಯೊಳ್ ವಿದ್ವಾಂಸರೊಳ್ ತತ್ಕ್ಷಣಂ
ಅರಸಂಗೆಚ್ಚರು ಬೇಕೆಲೈ ಹರಹರಾ ಶ್ರೀ ಚೆನ್ನಸೋಮೇಶ್ವರಾ ॥ 64 ॥
ಶಿವಸುಜ್ಞಾನವೆ ಯೋಗಿಗಳ್ಗೆ ನಯನಂ ಚಂಡಾಂಶು ಶುಭ್ರಾಂಶುಗಳ್
ಭವನೇತ್ರಂ ವಿಷ್ಣುವಿಂಗಂಬುಜದಳನಯನಂ ರಾತ್ರಿಗಾ ವಹ್ನಿಃ
ರವಿ ಲೋಕತ್ರಯಕೆಲ್ಲ ಲೋಚನ ಬುಧವ್ರಾತಕ್ಕೆ ಶಾಸ್ತ್ರಾಂಬಕಂ
ಕಿವಿಯೇ ರಾಜರ ಕಣ್ಣೆಲೈ ಹರಹರಾ ಶ್ರೀ ಚೆನ್ನಸೋಮೇಶ್ವರಾ ॥ 65 ॥
ಬರೆ ದಾರಿದ್ರ್ಯದಿ ದ್ರೋಣನಂ ದ್ರುಪದ ಪೂರ್ವಸ್ನೇಹದಿಂ ಕಂಡನೇ
ಕುರುಭೂಪಾಲನು ಪಾಂಡುಪುತ್ರರು ಮಹಾಧರ್ಮಾತ್ಮರೆಂದಿತ್ತನೇ
ಹರಿಯಂ ತಂಗಿಯ ಬಾಲನೆಂದು ಬಗೆದೇಂ ಕಂಸಾಸುರಂಕಂಡನೇ
ದೊರೆಗಳ್ಗೆತ್ತಣ ನಂಟರೈ ಹರಹರಾ ಶ್ರೀ ಚೆನ್ನಸೋಮೇಶ್ವರಾ ॥ 66 ॥
ಚಿಗುರೆಂದುಂ ಮೆಲೆ ಬೇವು ಸ್ವಾದವಹುದೇ ಚೇಳ್ ಚಿಕ್ಕದೆಂದಳ್ಕರಿಂ
ತೆಗೆಯಲ್ ಕಚ್ಚದೆ ಪಾಲನೂಡಿ ಫಣಿಯಂ ಸಾಕಲ್ಕೆ ವಿಶ್ವಾಸಿಯೇ
ಖಗಮಂ ಸಾಕುವೆನೆಂದು ಗೂಗೆಮಱಿಯಂ ಸಂಪ್ರೀತಿಯಿಂದೋವರೇ
ಪಗೆಯಂ ಬಾಲಕನೆಂಬರೇ ಹರಹರಾ ಶ್ರೀ ಚೆನ್ನಸೋಮೇಶ್ವರಾ ॥ 67 ॥
ಪುರದುರ್ಗಂಗಳ ಬಲ್ಮೆ ಮಾಡದೆ ಪ್ರಜಾಕ್ಷೋಭಂಗಳಂ ನೋಡದೆ-
ಲ್ಲರು ವಿಶ್ವಾಸಿಗಳೆಂದು ನಂಬಿ ಬಹುದಂ ಪೋದಪ್ಪುದಂ ಕಾಣದಾ-
ತುರದಿಂದುಂಡತಿ ನಿದ್ರೆಗೈದು ಮದನಂಗಾಳಾಗಿಹಂ ಲೋಕದೊಳ್
ದೊರೆಯೇ ಸೊಕ್ಕಿದ ಕೋಣನೈ ಹರಹರಾ ಶ್ರೀ ಚೆನ್ನಸೋಮೇಶ್ವರಾ ॥ 68 ॥
ಧುರಧೀರರ್ಗರೆಗಂಜಿ ಹೇಡಿಗತಿ ಪಂಕ್ತಿಭೋಜನಂ ಕೀರ್ತಿಯಂ
ಧರೆಯೊಳ್ ಬಿತ್ತುವ ಗಡ್ಡದುಡ್ಡು ಜರೆವರ್ಗಿಷ್ಟಾರ್ಥದಾನಂಗಳುಂ
ಅರೆಮೈವೆಣ್ಗರೆ ಭೋಗಮೆಲ್ಲ ಸೊಗಮುಂ ವೇಶ್ಯಾಜನಕ್ಕೀಕ್ಷಿಸಲ್
ದೊರೆಗಳ್ಗೆತ್ತಣ ನೀತಿಯೈ ಹರಹರಾ ಶ್ರೀ ಚೆನ್ನಸೋಮೇಶ್ವರಾ ॥ 69 ॥
ಅತಿಗಂಭೀರನುದಾರಧೀರನು ಮಹಾಸಂಪನ್ನ ಸದ್ವರ್ತನೂ-
ರ್ಜಿತ ನಾನಾಲಿಪಿಭಾಷೆಯೊಳ್ ಪರಿಚಿತಂ ಲಂಚಕ್ಕೆ ಕೈನೀಡದಂ
ವ್ರತಿ ಸದ್ಧರ್ಮವಿಚಾರಶಾಲಿ ಚತುರೋಪಾಯಂಗಳಂ ಬಲ್ಲವಂ
ಪತಿಕಾರ್ಯಂ ಪ್ರತಿಮಂತ್ರಿಯೈ ಹರಹರಾ ಶ್ರೀ ಚೆನ್ನಸೋಮೇಶ್ವರಾ ॥ 70 ॥
ಒಡೆಯಂಗುತ್ಸವಮಾಗೆ ಸರ್ವಜನಮಾನಂದಂಬಡಲ್ ರಾಜ್ಯದೊಳ್
ಕೊಡದೊಳ್ ತುಂಬಿರೆ ಜೇನು ನಿಚ್ಚ ಫಲಪೈರಿಂಗುರ್ವಿಯಿಂಬಾಗಿರಲ್
ಗಡಿದುರ್ಗಂಗಳು ಭದ್ರಮಾಗೆ ಧನಧಾನ್ಯಂ ತೀವೆ ಭಂಡಾರದೊಳ್
ನಡೆವಂ ಮಂತ್ರಿವರೇಣ್ಯನೈ ಹರಹರಾ ಶ್ರೀ ಚೆನ್ನಸೋಮೇಶ್ವರಾ ॥ 71 ॥
ಇಳೆಯಾಂಕಂ ತನಗಲ್ತೆವೆಗ್ಗಳನೆನುತ್ತಂ ಪಾರುಪತ್ಯಂಗಳಂ
ಖಳಗೀಯಲ್ ಸುಲಿತಿಂದು ರಾಜ್ಯವನಿತಂ ನೀವೇಕೆ ತಾವೇತಕೆಂ-
ದುಳಿದರ್ಗೀಯದೆ ಜೀತಮಂ ಕಪಿಯ ಮುಷ್ಟೀಮಾಡಿ ಕೂಗುತ್ತಿಹಂ
ದಳವಾಯೇ ತಳವಾಯೆಲೈ ಹರಹರಾ ಶ್ರೀ ಚೆನ್ನಸೋಮೇಶ್ವರಾ ॥ 72 ॥
ಅಣುಮಾತ್ರಂ ನದರಿಲ್ಲದಾಣ್ಮನೆಡೆಯೊಳ್ ಲಂಚಕ್ಕೊಡಂಬಟ್ಟು ಮಾ-
ರ್ಪಣಮಂ ಕೊಂಡತಿವಿತ್ತಮಂಕೆಡಿಸಿ ಚಾಡೀ ಕೇಳಿ ದ್ರೋಹಂಗಳಂ
ಎಣಿಸುತ್ತೆಲ್ಲರ ಬಾಳ್ಗೆ ನೀರನೆಱೆದಾರುಂ ಕಾಣದೇ ಭಕ್ಷಿಪಾ
ಗಣಕಂ ಹೆಗ್ಗಣಕಂ ಸಮಂ ಹರಹರಾ ಶ್ರೀ ಚೆನ್ನಸೋಮೇಶ್ವರಾ ॥ 73 ॥
ಬಹುಳೋಪಾಯದೊಳಾರ್ಜಿಸುತ್ತೆ ಧನಮಂ ತನ್ನಾಳ್ದನಂ ದೈವವೆಂ-
ದಹಿತರ್ ತನ್ನವರನ್ಯರೆನ್ನದಣುಮಾತ್ರಂ ಪೋಗದೋಲ್ ತ್ರಾಸಿನಂ-
ತಿಹನೊಕ್ಕಲ್ಗತಿ ಪ್ರೀತಿಪಾತ್ರನಿಳೆಮೆಚ್ಚಲ್ ಶಾನಭಾಗಾಖ್ಯನೀ
ಮಹಿವಾರಣಾಸಿ ತಪ್ಪದೈ ಹರಹರಾ ಶ್ರೀ ಚೆನ್ನಸೋಮೇಶ್ವರಾ ॥ 74 ॥
ಕಳವಂ ಕೊಂಡವನೈದೆ ಹೆಜ್ಜೆವಿಡಿದಾ ಮರ್ಮಂಗಳಂ ನೋಡದೇ
ಪೊಳಲೊಳ್ ಪೊಕ್ಕರ ಪೋದರಂ ನುಡಿವಮಾತಂ ಕೇಳದೇ ಕಾಣದೇ
ಪಳಿವನ್ಯಾಯವ ನೋಡದನ್ಯರೊಳೆ ದೂರಿಟ್ಟೆಲ್ಲರಂ ಬಾಧಿಪಾ
ತಳವಾರಂ ಬೆಳವಾರನೈ ಹರಹರಾ ಶ್ರೀ ಚೆನ್ನಸೋಮೇಶ್ವರಾ ॥ 75 ॥
ಪರರಾಯರ್ಕಳ ಸೇನೆಯಂ ಗೆಲಿದು ಮತ್ತೇಭಂಗಳಂ ಸೀಳ್ದು ತ-
ನ್ನರಿಯೆಂದೆಂಬರನೊಕ್ಕಲಿಕ್ಕುವ ಭಟರ್ಗಂಗಂಜಿ ಕೀಳ್ನಾಯ್ಗಳ್ಗಂ
ನಿರುತಂ ಸಕ್ಕರೆ ಪಾಲನಿತ್ತು ಪೊರೆವರ್ ಮಾನಂಗಳೆಲ್ಲಿರ್ಪುವೈ
ಪರಪೋಷ್ಯಕ್ಕೊಳಗಾಗಿರಲ್ ಹರಹರಾ ಶ್ರೀ ಚೆನ್ನಸೋಮೇಶ್ವರಾ ॥ 76 ॥
ಹರ ತಾಂ ಕುಂಟಣಿಯಾಗೆ ನಂಬಿ ಜಱಿದಂ ಚಂದ್ರಾವತೀದೇವಿಗಂ
ಕರಕಷ್ಟಂಗಳ ಮಾಡಿದಂ ದ್ವಿಜ ವಿರಾಟಂ ಧರ್ಮಭೂಪಾಲನಂ
ಶಿರಮಂ ಚಿಟ್ಟೆಯೊಳಿಟ್ಟನಗ್ನಿಜೆಗೆಬಂದಾಪತ್ತನೆಂತೆಂಬೆನಾಂ
ಪರಸೇವಾ ಕರಕಷ್ಟವೈ ಹರಹರಾ ಶ್ರೀ ಚೆನ್ನಸೋಮೇಶ್ವರಾ ॥ 77 ॥
ತ್ರಿಜಗಾಧೀಶ್ವರನೊಳ್ ಮನೋಜಕಲಹಕ್ಕಾಂತಗ್ನಿಗೀಡಾದ ವಾ-
ರಿಜನಾಭಂಗಿದಿರಾಂತು ಬಾಣ ಭುಜಸಾಹಸ್ರಂಗಳಂ ನೀಗಿದಂ
ದ್ವಿಜರಾಜಂಗೆಣೆವಂದು ಚಕ್ರಹತಿಯಿಂ ಸ್ವರ್ಭಾನು ತುಂಡಾಗನೇ
ಗಜದೊಳ್ ಸುಂಡಗೆ ಯುದ್ಧವೇ ಹರಹರಾ ಶ್ರೀ ಚೆನ್ನಸೋಮೇಶ್ವರಾ ॥ 78 ॥
ಮದನಂಗಂಜುವ ಯೋಗಿಯೇ ಮನೆಯ ಪೆಣ್ಣಿಂಗಂಜುವಂ ಗಂಡಸೇ
ಮದಕಂಜೋಡುವುದಾನೆಯೇ ಸುರತದೊಳ್ ಸೋತಂಜುವಳ್ ಸೂಳೆಯೇ
ಬುಧನೇ ತರ್ಕದೊಳಂಜುವಂ ಬೆದಱುಗಾಯಕ್ಕಂಜೆ ದಿವ್ಯಾಶ್ವವೇ
ಕದನಕ್ಕಂಜುವ ವೀರನೇ ಹರಹರಾ ಶ್ರೀ ಚೆನ್ನಸೋಮೇಶ್ವರಾ ॥ 79 ॥
ಇಱಿಯಲ್ಬಲ್ಲೊಡೆ ವೀರನಾಗು ಧರೆಯೊಳ್ ನಾನಾಚಮತ್ಕಾರಮಂ
ಅಱಿಯಲ್ಬಲ್ಲೊಡೆ ಮಂತ್ರಿಯಾಗು ವಿಭುವಾಗಾರೆಂದೊಡಂ ಕೋಪಮಂ
ತೊಱೆಯಲ್ಬಲ್ಲೊಡೆ ಯೋಗಿಯಾಗು ರಿಪುಷಡ್ವರ್ಗಂಗಳಂ ಬಾಧಿಸಲ್
ತೆಱಬಲ್ಲರ್ ಹೊಣೆಯಪ್ಪುದೈ ಹರಹರಾ ಶ್ರೀ ಚೆನ್ನಸೋಮೇಶ್ವರಾ ॥ 80 ॥
ವರಬಿಂಬಾಧರೆಯಾಗಿ ಚಂದ್ರಮುಖಿಯಾಗಂಭೋಜ ಶೋಭಾಕ್ಷಿಯಾ-
ಗೆರವಂ ಮಾಡದಳಾಗಿ ಚಿತ್ತವಱಿದೆಲ್ಲಾ ಬಂಧಮಂ ತೋರ್ಪ ಸೌಂ-
ದರಿಯಾಗುತ್ತಮಜಾತಿಯಾಗಿ ಸೊಗಸಿಂದಂ ಕೂಡುವಳ್ಸರತಾ
ಸುರತಕ್ಕಿಂದತಿ ಸೌಖ್ಯಮೇ ಹರಹರಾ ಶ್ರೀ ಚೆನ್ನಸೋಮೇಶ್ವರಾ ॥ 81 ॥
ಕ್ಷಿತಿಯಂ ಶೋಧಿಸಲಕ್ಕು ವೀಚಿಗಳ ಲೆಕ್ಕಂ ಮಾಡಲಕ್ಕಾಗಸೋ-
ನ್ನತಿಯಂ ಕಾಣಲಿಬಕ್ಕು ಸಾಗರಗಳೇಳಂ ದಾಂಟಲಕ್ಕು ನಭೋ-
ಗತಿಯಂ ಸಾಧಿಸಲಕ್ಕು ಬೆಟ್ಟಗಳ ಚೂರ್ಣಂ ಮಾಡಲಕ್ಕೀಕ್ಷಿಸಲ್
ಸತಿಯಾ ಚಿತ್ತವಭೇದ್ಯವೈ ಹರಹರಾ ಶ್ರೀ ಚೆನ್ನಸೋಮೇಶ್ವರಾ ॥ 82 ॥
ಹಣಮುಳ್ಳಂ ಹೆಣನಾದೊಡಂ ಮಮತೆಯಿಂ ತಾನಾವಗಂ ಬಿಟ್ಟಿರಳ್
ಕ್ಷಣಮಾತ್ರಂ ಬಲುಬೂಟಕಂ ಗಳಪಿ ಹರ್ಷೋತ್ಸಾಹದಿಂ ಹಾಲ ಮುಂ-
ದಣ ಬೆಕ್ಕಾಡುವೊಲಾಡಿಕೊಂಡು ಧನಮುಂ ಪೋಗಲ್ಕೆ ಮಾತಾಡಳೈ
ಗಣಿಕಾಸ್ತ್ರೀ ಗುಣಕಿಲ್ಲವೈ ಹರಹರಾ ಶ್ರೀ ಚೆನ್ನಸೋಮೇಶ್ವರಾ ॥ 83 ॥
ಕಡುಮುಪ್ಪಾಗಿರೆ ಕುಂಟನಾಗೆ ಕುರುಡಂ ತಾನಾಗೆಯೆತ್ತೇಱಿದಾ
ಮುಡಬಂ ಮೂಕೊಱೆ ಮೊಂಡ ಲಂಡ ಕಿವುಡಂ ಚಂಡಾಲ ತಾನಾದೊಡಂ
ಸುಡುಮೈ ಕುಷ್ಠಶರೀರಿಯಾಗಲೊಲಿವರ್ ಪೊನ್ನಿತ್ತಗಂ ಸೂಳೆಯರ್
ಕೊಡುಗೈ ವೇಶೆಯ ವಶ್ಯವೈ ಹರಹರಾ ಶ್ರೀ ಚೆನ್ನಸೋಮೇಶ್ವರಾ ॥ 84 ॥
ಕೊಱಚಾಡೆಲ್ಲರ ಮುಂದೆ ರಚ್ಚೆಗೆಲೆಯುತ್ತಂ ಕಿತ್ತು ಮೈಯೆಲ್ಲವಂ
ಹಱಿತಿಂದುಳ್ಳ ಸುವಸ್ತುವಂ ಕಡೆಯೊಳೊರ್ವಂಗಿತ್ತು ತಾಂ ಭಾಷೆಯ
ಬಱಿಗಂಟಿಕ್ಕುವನೆಂದು ತಾಯ ಹೊಸೆಬಿಟ್ಟೆಬ್ಬಟ್ಟಿ ಕೊಂಡಾಡುತಂ
ತಿಱಿವಳ್ ತಾಂ ನೆಱೆ ಸೂಳೆಯೈ ಹರಹರಾ ಶ್ರೀ ಚೆನ್ನಸೋಮೇಶ್ವರಾ ॥ 85 ॥
ಮಹಿಯೊಳ್ ಭೂಸುರವೇಷದಿಂದ ಕಲಿಯಲ್ ಕರ್ಣಂ ಧನುರ್ವೇದಮಂ
ರಹಿಗೆಟ್ಟಂ ಬಲುನೊಂದನಿಲ್ವಲ ಮಹಾವಾತಾಪಿಯೊಳ್ ಶುಕ್ರನಿಂ
ದಹಿರಾಜಾತ್ಮಜೆ ಮಂತ್ರತಂತ್ರವಱಿದಾಣ್ಮಂ ಪೋಗೆ ತಾಂ ತಂದಳೇ
ಬಹುವಿದ್ವಾಂಸಗೆ ಭ್ರಾಂತಿಯೈ ಹರಹರಾ ಶ್ರೀ ಚೆನ್ನಸೋಮೇಶ್ವರಾ ॥ 86 ॥
ಕಪಿಯಂ ಗಾಣಿಗ ಹಾವು ಕಾಷ್ಠ ಜಿನ ತಕ್ರ ತೈಲಸಿಕ್ತಂ ನಿರೋ-
ಧಿಪನೊರ್ವಂ ದ್ವಿಜ ಮುಕ್ತಕೇಶಿ ಜಟರಕ್ತಂ ರಿಕ್ತಕುಂಭಂ ವಿರಾ-
ಜಿಪ ಕಿನ್ನಾಂಗನೆ ಕುಷ್ಠನಂ ವಿಧವೆಯಂ ಕೊಂದಾಟಮಂ ಧೂಮಮಂ
ನಿಪುಣರ್ಕಂಡರೆ ಪೋಗರೈ ಹರಹರಾ ಶ್ರೀ ಚೆನ್ನಸೋಮೇಶ್ವರಾ॥ 87 ॥
ಶುಕ ಶಂಖಂ ಗಜ ವಾಜಿ ವೀಣೆ ಪಶು ತಾಳಂ ಭೇರಿ ಶೋಭಾನ ಪಾ
ಠಕ ನೃತ್ಯಾದಿ ವರಾಂಗನಾ ತಳಿರುಗಳ್ ಪೂವಣ್ಣು ವಿಪ್ರದ್ವಯಂ
ಮುಕುರಂ ಮಾಂಸವು ಮದ್ಯತುಂಬಿದ ಕೊಡಂ ಪೆರ್ಗಿಚ್ಚನಾರ್ ಕಂಡೊಡಂ
ಶಕುನಂ ಶೋಭನಕಾಸ್ಪದಂ ಹರಹರಾ ಶ್ರೀ ಚೆನ್ನಸೋಮೇಶ್ವರಾ ॥ 88 ॥
ಹಣಮಂ ನೆತ್ತರನೇಣಕೋಣಕುಱಿಯಂ ಹಾರಾಯುಧಂ ಬೀಳ್ವುದಂ
ಕುಣಬಂ ಲುಬ್ಧಕನಂ ವಿಕಾರತನುವಂ ಮೇವಾಡನುಂ ಪತ್ತುವಂ-
ದಣಮಂ ಕೆಂಪಿನ ಪೂವನೆಣ್ಣೆದಲೆ ನೂತ್ನಾಗಾರಮಂ ದೈತ್ಯರಂ
ಕನಸೊಳ್ ಕಾಣಲುಬಾರದೈ ಹರಹರಾ ಶ್ರೀ ಚೆನ್ನಸೋಮೇಶ್ವರಾ ॥ 89 ॥
ಕೊಳನಂ ತಾವರೆಯಂ ತಳಿರ್ತ ವನಮಂ ಪೂದೋಟಮಂ ವಾಜಿಯಂ
ಗಿಳಿಯಂ ಬಾಲಮರಾಳನಂ ಬಸವನಂ ಬೆಳ್ಳಕ್ಕಿಯಂ ಛತ್ರಮಂ
ತಳಿರಂ ಪೂರ್ಣತಟಾಕಮಂ ಭುಜಗನಂದೇವರ್ಕಳಂ ತುಂಬಿಯಂ
ತಿಳಿಯಲ್ ಸ್ವಪ್ನದಿ ಲೇಸೆಲೈ ಹರಹರಾ ಶ್ರೀ ಚೆನ್ನಸೋಮೇಶ್ವರಾ ॥ 90 ॥
ಪಶುಗಳ್ ಕ್ರೂರಮೃಗಂಗಳಂಡಜಗಳುಂ ಸರ್ಪಂಗಳುಂ ಕಣ್ಗೆ ಕಾ-
ಣಿಸಿದತ್ಯುಗ್ರಗ್ರಹಂಗಳುಂ ಪಟುಭಟರ್ ವಿದ್ವಜ್ಜನರ್ ಮಂತ್ರಿಗಳ್
ಋಷಿಗಳ್ ಮಿತ್ರರು ಬಂಧುಗಳ್ ಪ್ರಜೆಗಳುಂ ತಾವೆಲ್ಲರುಂ ತಮ್ಮಯಾ
ಶಿಶುವಂ ಪಾಲಿಸದಿರ್ಪರೇ ಹರಹರಾ ಶ್ರೀ ಚೆನ್ನಸೋಮೇಶ್ವರಾ ॥ 91 ॥
ರಣದೊಳ್ ಶಕ್ರನ ತೇರನೇಱಿದ ಮಹಾಶೈಲಾಳಿ ಬೆಂಬತ್ತೆ ಮಾ-
ರ್ಗಣದಿಂ ಚಿಮ್ಮಿದ ಸಪ್ತಸಾಗರಗಳಂ ದಿಕ್ಕೆಂಟು ಮೂಲೋಕಮಂ
ಕ್ಷಣದೊಳ್ ವೆಚ್ಚವ ಮಾಡಿ ಬೇಡೆ ಬಲಿ ಸಾಲಕ್ಕಂಜಿ ಬಿಟ್ಟೋಡಿದಂ
ಋಣಭಾರಕ್ಕೆಣೆಯಾವುದೈ ಹರಹರಾ ಶ್ರೀ ಚೆನ್ನಸೋಮೇಶ್ವರಾ ॥ 92 ॥
ಅಡಿಮೂಱೀಯೆನಲೀಯನೆ ಬಲಿನೃಪಂ ಮೂಲೋಕಮಂ ಖಂಡಮಂ
ಕಡಿದೀಯೆಂದೆನೆ ಪಕ್ಕಿಗೀಯನೆ ನೃಪಂ ತನ್ನಂಗದಾದ್ಯಂತಮಂ
ಮೃಡ ಬೇಕೆಂದೆನೆ ಸೀಳ್ದು ತನ್ನ ಸುತನಂ ನೈವೇದ್ಯಮಂ ಮಾಡನೇ
ಕೊಡುವರ್ಗಾವುದು ದೊಡ್ಡಿತೈ ಹರಹರಾ ಶ್ರೀ ಚೆನ್ನಸೋಮೇಶ್ವರಾ ॥ 93 ॥
ಹೊಱಬೇಡಂಗಡಿ ಸಾಲವೂರ ಹೊಣೆಯಂ ಪಾಪಂಗಳಂ ನಿಂದೆಯಂ
ಮಱೆಬೇಡಾತ್ಮಜ ಸತ್ಕಳತ್ರಸಖರೊಳ್ ನ್ಯಾಯಂಗಳೊಳ್ ಸತ್ಯದೊಳ್
ಸೆಱೆಬೇಡಂಗನೆ ಪಕ್ಷಿವೃದ್ಧತರುಣರ್ ಗೋವಿಪ್ರದಾರಿದ್ರರೊಳ್
ತೆಱಬೇಡೊತ್ತೆಗೆ ಬಡ್ಡಿಯಂ ಹರಹರಾ ಶ್ರೀ ಚೆನ್ನಸೋಮೇಶ್ವರಾ ॥ 94 ॥
ಅನುಮಾನಂಬಡೆ ರಾಮನಗ್ನಿಯೊಳೆ ಪೊಕ್ಕಾ ಸೀತೆ ತಾನೈತರಲ್
ವನದೊಳ್ ನೇಱಲವಣ್ಣನಗ್ನಿಜೆ ಮಹಾವಿಖ್ಯಾತಿಯಿಂ ಪತ್ತಿಸಲ್
ದನುಜಾರಾತಿ ಸ್ಯಮಂತರತ್ನವ ನೃಪಂಗೀಯಲ್ ಘನಂ ಪೋದುದೇ
ಜನರಂ ಮೆಚ್ಚಿಸಲಾಗದೈ ಹರಹರಾ ಶ್ರೀ ಚೆನ್ನಸೋಮೇಶ್ವರಾ ॥ 95 ॥
ಮದನಂಗೀಶ್ವರ ಶತ್ರು ಬಂಧುನಿಚಯಕ್ಕಂ ಜಾರೆಯೇ ಶತ್ರು ಪೇ-
ಳದ ವಿದ್ಯಂಗಳ ತಂದೆ ಶತ್ರು ಕುವರರ್ಗಂ ಶತ್ರು ಸನ್ಮಾನ್ಯರಾ
ಸದನಕ್ಕಂ ಬಲುಸಾಲ ರೂಪವತಿ ತಾನೇ ಶತ್ರು ಗಂಡಂಗೆ ಮೇಣ್
ಮುದಿಯಂಗೆವ್ವನೆ ಶತ್ರುವೈ ಹರಹರಾ ಶ್ರೀ ಚೆನ್ನಸೋಮೇಶ್ವರಾ ॥ 96 ॥
ಪೃಥುರೋಮೇಶ ತಿಮಿಂಗಿಲಂ ತಿಮಿಯ ನೂಂಕಲ್ ಸಿಂಧು ತಾನುಕ್ಕದೇ
ಶಿಥಿಲತ್ವಂಬಡೆದಿರ್ಪ ವಂಶ ಮೊಱೆಯಲ್ ಕಿಚ್ಚೇಳದೇ ಮಂದರಂ
ಮಥಿಸಲ್ ಕ್ಷೀರಸಮುದ್ರದೊಳ್ ಬಹುವಿಷಂ ತಾಂ ಪುಟ್ಟದೇ ಮರ್ತ್ಯರೊಳ್
ಮಥನಂ ವೆಗ್ಗಳವಲ್ಲವೈ ಹರಹರಾ ಶ್ರೀ ಚೆನ್ನಸೋಮೇಶ್ವರಾ ॥ 97 ॥
ಹರಿಯೊಳ್ ನಾರದ ಮಂದೆವಾಳದಿ ಮಹಾಶಾಪಂಗಳಂ ತಾಳನೇ
ಸುರವೆಣ್ಣಿಂದಲಿ ಪುಷ್ಪದತ್ತವನದೊಳ್ ತಾಂ ಕ್ರೋಡರೂಪಾಗನೇ
ವಿರಸಂ ಬರ್ಪುದು ಬೇಡೆನಲ್ ದ್ರುಪಜೆಯಿಂ ಭೀಮಾರಿ ತಾ ನೋಯನೇ
ಸರಸಂ ವೆಗ್ಗಳ ಹೊಲ್ಲದೈ ಹರಹರಾ ಶ್ರೀ ಚೆನ್ನಸೋಮೇಶ್ವರಾ ॥ 98 ॥
ಅಱೆಯಂ ಸೀಳುವೊಡಾನೆ ಮೆಟ್ಟಲಹುದೇ ಚಾಣಂಗಳಿಂದಲ್ಲದೇ
ಕಿಱಿದಾಗಿರ್ದೊಡದೇನುಪಾಯಪರನೊರ್ವಂ ಕೋಟಿಗೀಡಕ್ಕು ಹೆ-
ಮ್ಮರನಿರ್ದೇನದಱಿಂದಲೆತ್ತಬಹುದೇ ಬಲ್ಭಾರಮಂ ಸನ್ನೆ ಸಾ-
ವಿರ ಕಾಲಾಳಿನ ಸತ್ವವೈ ಹರಹರಾ ಶ್ರೀ ಚೆನ್ನಸೋಮೇಶ್ವರಾ ॥ 99 ॥
ಸುಚರಿತ್ರರ್ ಸಲೆ ಕೀರ್ತಿಗೋಸುಗ ಮಹಾಯತ್ನಂಗಳಿಂ ಕೇಳಿಸೂ
ರಿಚಯಕ್ಕಾದರದಿಂದೆ ಮಾನಗಳನಿತ್ತಾಚಂದ್ರ ತಾರಾರ್ಕಮಾ
ದಚಲಖ್ಯಾತಿಯನಾಳ್ದರೀಗಲಿಳೆಯೊಳ್ ತಾವೀಯರೈ ಪೋಗಲಾ
ವಚನಕ್ಕೇನು ದರಿದ್ರವೈ ಹರಹರಾ ಶ್ರೀ ಚೆನ್ನಸೋಮೇಶ್ವರಾ ॥ 100 ॥
ಹಿಡಿಯೊಳ್ ತುಂಬಿರೆ ಪಂಕ ಮೇಲುದೊಳೆಯಲ್ ತಾಂ ಶುದ್ಧಮೇನಪ್ಪುದೇ
ಕಡುಪಾಪಂ ಬಲುಮೀಯಲಾತ ಶುಚಿಯೇ ಕಾಕಾಳಿಯೇಂ ಮೀಯದೇ
ಗುಡಪಾನಂಗಳೊಳದ್ದೆ ಕೈಸೊರೆ ತಾಂ ಸ್ವಾದಪ್ಪುದೇ ಲೋಕದೊಳ್
ಮಡಿಯೇ ನಿರ್ಮಲ ಚಿತ್ತವೈ ಹರಹರಾ ಶ್ರೀ ಚೆನ್ನಸೋಮೇಶ್ವರಾ ॥ 101 ॥
ರಚನಂಗೆಯ್ಯದೆ ಧರ್ಮಕೀರ್ತಿಯೆರಡಂ ಸದ್ಧರ್ಮಮಂ ಪಾರದಾ
ನಿಚಯಕ್ಕಿಕ್ಕದೆ ತತ್ವ ಕೇಳಿ ಜಗಮೆಲ್ಲಂ ಬೊಮ್ಮವೆಂದೆನ್ನದೇ
ಉಚಿತಾಲೋಚನೆಯಿಂದೆ ತನ್ನ ನಿಜವಂ ತಾಂ ಕಾಣದೇ ವಾದಿಪಾ
ವಚನಬ್ರಹ್ಮದೆ ಮುಕ್ತಿಯೇ ಹರಹರಾ ಶ್ರೀ ಚೆನ್ನಸೋಮೇಶ್ವರಾ ॥ 102 ॥
ಸಚರಸ್ಥಾವರಕೆಲ್ಲ ಸರ್ವಸುಖದುಃಖಂಗಳ್ ಸಮಾನಂಗಳೆಂದಚಲಾನಂದದಿ ತನ್ನೊಳನ್ಯರೆಣಿಸಲ್ ಸುಜ್ಞಾನಿಗಳ್ ಕಿಚ್ಚಿನೊಳ್
ಶುಚಿಯೊಳ್ ಪಾದವನಿಟ್ಟು ತೋರ್ಪತೆಱದೊಳ್ ತಾನಾಗದೇ ವಾದಿಪಾ
ವಚನಬ್ರಹ್ಮದೆ ಮುಕ್ತಿಯೇ ಹರಹರಾ ಶ್ರೀ ಚೆನ್ನಸೋಮೇಶ್ವರಾ ॥ 103 ॥
ಶುಚಿ ತಾನಾಗದೆ ಸರ್ವಶಾಸ್ತ್ರನಿಪುಣಂ ತಾನಾಗದೇ ಕಾಮಮಂ
ಪಚನಂಗೆಯ್ಯದೆ ಕ್ರೋಧಮಂ ಬಿಡದೆ ಲೋಭಚ್ಛೇದಮಂ ಮಾಡದೇ
ರಚನಾಮೋಹವನಗ್ಗಿ ಮಗ್ಗಿ ಮದಮಂ ಮಾತ್ಸರ್ಯಮಂ ನೀಗದೇ
ವಚನಬ್ರಹ್ಮದೆ ಮುಕ್ತಿಯೇ ಹರಹರಾ ಶ್ರೀ ಚೆನ್ನಸೋಮೇಶ್ವರಾ ॥ 104 ॥
ಪ್ರಚುರಂ ಪತ್ತೊಳಗಾಗೆ ರಂಧ್ರದೊಳಗಿಲ್ಲಾದೆಂಟನೀಗೇಳಬಿ-
ಟ್ಟುಚಿತಂ ತಾನೆನಿಪಾಱ ಕಟ್ಟುತಯಿದಕ್ಕೀಡಾಗದೇ ನಾಲ್ವರಂ
ರಚನಂಗೆಯ್ಯದೆ ಮೂಱ ನಂಬದೆರಡಂ ಬಿಟ್ಟೊಂದರೊಳ್ ನಿಲ್ಲದಾ
ವಚನಬ್ರಹ್ಮದೇ ಮುಕ್ತಿಯೇ ಹರಹರಾ ಶ್ರೀ ಚೆನ್ನಸೋಮೇಶ್ವರಾ ॥ 105 ॥
ಮತಿಯಂ ಬುದ್ಧಿಯ ಜಾಣ್ಮೆಯಂ ಗಮಕಮಂ ಗಾಂಭೀರ್ಯಮಂ ನೀತಿಯಾ-
ಯತಮಂ ನಿಶ್ಚಲಚಿತ್ತಮಂ ನೃಪವರಾಸ್ಥಾನೋಚಿತಾರ್ಥಂಗಳಂ
ಅತಿಮಾಧುರ್ಯಸುಭಾಷಿತಂಗಳ ಮಹಾಸತ್ಕೀರ್ತಿಯಂ ವಾರ್ತೆಯಂ
ಶತಕಾರ್ಥಂ ಕೊಡದಿರ್ಪುದೇ ಹರಹರಾ ಶ್ರೀ ಚೆನ್ನಸೋಮೇಶ್ವರಾ ॥ 106 ॥
ಸ್ವಾಮೀ ನನ್ನಿಂದ ನೀನಿಂತೊರೆಯಿಸಿದೆ ಕೃಪಾದೃಷ್ಟಿಯಂ ಬೀಱಿ ಲೋಕ
ಪ್ರೇಮಂ ತಾಳ್ದಿಂತು ನೀತಿ ಪ್ರಕಟನೆ ಪಡೆ ನಾಲ್ಸಾಸಿರಂ ನಾಲ್ಕುನೂಱುಂ
ಈ ಮಾಯಾಪೂರ್ಣ ಕಲ್ಯಬ್ದದೆ ಗತಿಸಿ ವಿಕಾರ್ಯಬ್ದದಲ್ಲೀಶ್ವರಾ ನಿ-
ನ್ನಾ ಮಾಹಾತ್ಮ್ಯಾಂಘ್ರಿಗಿತ್ತೆಂ ಪುಲಿಗೆಱೆ ನಗರೀ ಶಾಸನಾಂಕಾ ಮಹೇಶಾ॥ 107 ॥