ರಕ್ಷಾ ಶತಕ

ರಕ್ಷಾಶತಕ
ಶ್ರೀಮದ್ ಗಂಗಾತರಂಗಾವೃತ ವಿಮಲಜಟಾಜೂಟ ಸರ್ವೇಶ ಗೌರೀ
ವಾಮಾಂಗಾಲಿಂಗನಾಲಿಂಗಿತ ಘನಮಹಿಮೋದಾರಚಾರಿತ್ರ ಚಂಚತ್
ಸೋಮಾರ್ಧೋತ್ತಂಸ ಸಂಸಾರಜಲಧಿವಡಬಾಕಾರ ಸಾಕಾರ ಭಕ್ತಿ
ಪ್ರೇಮಾಂಭೋರಾಶಿ ಪಂಪಾಪುರದರಸ ವಿರೂಪಾಕ್ಷ ರಕ್ಷಿಪ್ಪುದೆನ್ನಂ ॥ 1 ॥
ತಿರುಗುತ್ತೆಂಬತ್ತುನಾಲ್ಕುಂ ದಶಶತಶತಜನ್ಮಂಗಳೊಳ್ ಪುಟ್ಟಿ ನಿಮ್ಮೊಂ-
ದಿರವಂತಿಂತುಟೆಂದೇನುಮನಱಿಯದೆ ಮಣ್ಣಾಗಿ ಕಲ್ಲಾಗುತುಂ ದು-
ರ್ಧರಗುಲ್ಮಂ ಭೂರಿಭೂಜಂ ಪುಳು ಖಗ-ಮೃಗವಾಗುತ್ತುಮೆಂತಕ್ಕೆ ಬಂದೆಂ
ನರಜನ್ಮಕ್ಕಯ್ಯ ಪಂಪಾಪುರದರಸ ವಿರೂಪಾಕ್ಷ ರಕ್ಷಿಪ್ಪುದೆನ್ನಂ ॥ 2 ॥
ಬಸಿಱೊಳ್ ಮಾಸೊತ್ತಿ ನೆತ್ತರ್ ಪಸರಿಸಿ ಕರುಳಿಂ ಸುತ್ತಿ ಮೂತ್ರಂ ಪುರೀಷಂ
ಮುಸುಕಿಟ್ಟೆಲ್ಲಂಗದೊಳ್ ಕೆತ್ತಿರಲುದರಶಿಖಿಜ್ವಾಲೆಯಿಂದತ್ತಮಿತ್ತಂ
ಕುಸಿಯುತ್ತುಂ ಪುಟ್ಟುವೊಂದುಜ್ಜುಗದೊಳೆ ಮರಣಾವಸ್ಥೆಯಂ ತಾಳ್ದಿ ಬಂದಾ-
ಯಸಮಂಚಿತ್ತಯ್ಸಿಪಂಪಾಪುರದರಸ ವಿರೂಪಾಕ್ಷ ರಕ್ಷಿಪ್ಪುದೆನ್ನಂ ॥ 3 ॥
ಯ್ದಾನಾರೆಂದೇನುಮಂ ಭಾವಿಸದೆ ಬಧಿರನಂತಂಧನಂತಿರ್ದು ಮತ್ತಂ
ನಾನಾ ಭೋಜ್ಯಕ್ಕೆ ಪಕ್ಕಾಗುತೆ ಚರಿಸಿದೆನಿನ್ನಾಱೆನಿನ್ನಾಱೆನಯ್ಯೋ
ಆನಂದಾಂಭೋಧಿ ಪಂಪಾಪುರದರಸ ವಿರೂಪಾಕ್ಷ ರಕ್ಷಿಪ್ಪುದೆನ್ನಂ ॥ 4 ॥
ಪಿರಿದೊಂದಜ್ಞಾನದಿಂ ಯೌವನವಿಕಳತೆ ಮೈದೋಱೆ ಕಾಂತಾನಿವಾಸಾಂ-
ತರದೊಳ್ ಶ್ವಾನಂಗೆ ಹೀ ಹಂದಿಗೆ ಕಪಿಗೆಣೆಯಾಗಿರ್ದು ಬೇಳಾಗುತುಂ ತತ್
1-1ಕ್ಕಂ(ಆ)2 ಯ್ಸು(ಆ)
ಕರಣಕ್ಕಾಳಾಗಿ ಹಾಳಾಗುತೆ ಬಱುದೊಱೆವೋದೆಂ ಬಳಲ್ದೆಂ ಬಿಗುರ್ತೆಂ
ಮರುಳಾದೆಂ ದೇವ ಪಂಪಾಪುರದರಸ ವಿರೂಪಾಕ್ಷ ರಕ್ಷಿಪ್ಪುದೆನ್ನಂ ॥ 5 ॥
ಸ್ತ್ರೀಮಾತ್ರಂ ನೇತ್ರದತ್ತಲ್ ಸುಳಿದೊಡೆ ಮನವಿರ್ಭಾಗಮಾಗುತ್ತೆ ತಾಪ-
ಸ್ತೋಮಂ ಕೈಮೀಱಿ ಲಜ್ಜಾರಸಮುಡುಗಿ ವಿವೇಕಂ ಕಳಲ್ದೋಡಿ ರಾಗಂ
ಕೈಮಿಕ್ಕಾನಾವನೇನೆಂದಱಿಯದ ತೆಱನಂ ಮಾಡುತಿರ್ದಪ್ಪುದಿಂತೀ
ಕಾಮಂ ಕಾಮಾರಿ ಪಂಪಾಪುರದರಸ ವಿರೂಪಾಕ್ಷ ರಕ್ಷಿಪ್ಪುದನ್ನಂ ॥ 6 ॥
ಏಪೊಳ್ತುಂ ಗಾತ್ರಮಂ ಶೋಷಿಸುತೆ ಕರಣಮಂ ಕಂದಿಸುತ್ತುಂ ನಿರರ್ಥಂ
ತಾಪವ್ರಾತಕ್ಕೆ ಪಕ್ಕಾಗಿಸುತಮಳಗುಣಸ್ತೋಮಮಂ ಖಂಡಿಸುತ್ತುಂ
ಪಾಪಪ್ರಾರಂಭಕರ್ತೃತ್ವಮನೆನಗೆನಿಸಂ ಮಾಡುತಿರ್ದಪ್ಪುದಿಂತೀ
ಕೋಪಂ ಶಾಂತಾತ್ಮ ಪಂಪಾಪುರದರಸ ವಿರೂಪಾಕ್ಷ ರಕ್ಷಿಪ್ಪುದೆನ್ನಂ ॥ 7 ॥
ಧನಮಂ ಸ್ತ್ರೀ ಪುತ್ರರಂ ಕೆಮ್ಮನೆ ಕಿಡುವ ಗೃಹ ಕ್ಷೇತ್ರಮಂ ಮಿತ್ರರಂ ವ-
ಸ್ತ್ರನಿಕಾಯಾಕಲ್ಪಮಂ ಮುಂತೆನಗೆನುತೆ ಕರಂ ಕಾಂಕ್ಷೆಯಿಂ ಕೂರ್ಮೆಯಿಂದೆ-
ಳ್ಳನಿತುಂ ಪುಣ್ಯಕ್ಕೆ ಮಾಡಲ್ ಕುಡದೆ ಕಿಡಿಸುವೀ ಲೋಭಮಂ ದಾನಿ ನೀಂ ಛೇ-
ದನೆಯಂ ಮಾಡುತ್ತೇ ಪಂಪಾಪುರದರಸ ವಿರೂಪಾಕ್ಷ ರಕ್ಕಿಪ್ಪುದೆನ್ನಂ ॥ 8 ॥
ದೇಹೋಹಂ ಎಂದು ಮಕ್ಕಳ್ ಮನೆಧನವಳಿಯಲ್ ಕಂದಿಸುತ್ತುರ್ಬುವಾಶಾ-
ವ್ಯೂಹಕ್ಕಿಂಬಾಗಿಸುತ್ತುಂ ನೆನೆದು ಮಱುಗಿಸುತ್ತುಂ ಮುಸುಂಕಿರ್ದ ಮಿಥ್ಯಾ-
ಸ್ನೇಹಾರಂಭಾನುಕೂಲಂ ನುಡಿಗೆಡೆಗುಡದಿರ್ದಪ್ಪುದೊತ್ತಂಬದಿಂದೀ
ಮೋಹಂ ಮೋಹಾರಿ ಪಂಪಾಪುರದರಸ ವಿರೂಪಾಕ್ಷ ರಕ್ಷಿಪ್ಪುದೆನ್ನಂ ॥ 9 ॥
ಅದನೇನೆಂಬೆಂ ಗುಣವ್ರಾತಮನೆ ಪಱಿಯುತುಂ ವಿದ್ಯೆಯಂ ಖಂಡಿಸುತ್ತುಂ
ಕದಡುತ್ತುಂ ಚಿತ್ತಮಂ ಬುದ್ಧಿಯನುಱದಱೆಯಟ್ಟುತ್ತೆ ಕಾಯ್ದಪ್ಪುದೆನ್ನೀ
ಮದಮಾತಂಗಂ ಮಹಾರೋಹಕ ನಿಜಚರಣಸ್ತಂಭದೊಳ್ ಕಟ್ಟಿ ಸೈತಿ-
1 ಪಂ(ಆ), 2-2 ಳೆನೆ (ಆ)
ಪರರೈಶ್ವರ್ಯಕ್ಕಸೂಯಂಗೊಳುತೆ ಪರರ ಬಲ್ಪಿಂಗೆ ಸಂತಾಪಿಸುತ್ತುಂ
ಪರರಿಂದಂ ಮಿಕ್ಕು ಬಾಳಲ್ ಬಯಸಿ ಕುದಿದು ಬೇಳಾಗಿ ಬೆಂಬೀಳುತಿರ್ದುಂ
ಪರಚಿಂತಾಕ್ಷೋಭೆಯಿಂ ಮತ್ಸರದೊಡನೆ ಕರಂ ಗಾಸಿಯಾದಪ್ಪೆನೀ ಮ-
ತ್ಸರಮಂ ತರ್ಗೊತ್ತಿ ಪಂಪಾಪುರದರಸ ವಿರೂಪಾಕ್ಷ ರಕ್ಷಿಪ್ಪುದೆನ್ನಂ ॥ 11 ॥
ಮನವೆನ್ನಂ ದುರ್ವಿಕಾರಕ್ಕೆಳೆದಪುದು ಮನಂ ಮಾನಮಂ ನುರ್ಗಿದತ್ತೀ
ಮನವಾಶಾವಹ್ನಿಯೊಳ್ ನೂಂಕಿದಪುದು ಮನವೀ ಮಾಯೆಯಂ ಬಿಟ್ಟು ನಿಮ್ಮಂ
ನೆನೆಯಲ್ ತಾನೀಯದಯ್ಯೋ ಶಿವನೆ ಭವನೆ ಕಾರುಣ್ಯವಾರಾಶಿಯೆನ್ನೀ
ಮನಮಂ ಸಯ್ತಿಟ್ಟು ಪಂಪಾಪುರದರಸ ವಿರೂಪಾಕ್ಷ ರಕ್ಷಿಪ್ಪುದೆನ್ನಂ ॥ 12 ॥
ಪ್ರತ್ಯಕ್ಷಂ ಸತ್ತು ಹೋಗುತ್ತಿದೆ ನರನಿಕರಂ ತಾನಿದಂಕಂಡು ಕಂಡುಂ
ನಿತ್ಯತ್ವಂಬೆತ್ತ ಪಾಂಗಿಂ ಪಳಿವಮುಳಿವ ಕಾಮಿಪ್ಪ ಕೋಪಿಪ್ಪ ಲೋಭಿ-
ಪ್ಪತ್ಯಂತಂ ಗರ್ವಿಪೆನ್ನೀ ಮನಕೆ ಪರಮ ವೈರಾಗ್ಯಮಂ ಕೊಟ್ಟು ಸತ್ಯಂ
ಸತ್ಯಂ ಸತ್ಯಾತ್ಮ ಪಂಪಾಪುರದರಸ ವಿರೂಪಾಕ್ಷ ರಕ್ಷಿಪ್ಪುದೆನ್ನಂ ॥ 13 ॥
ಇನಿತುಂ ವೈರಾಗ್ಯದತ್ತಲ್ ನೆನೆಯದೆ ಮದದತ್ತಲ್ ಮಹಾಮೋಹದತ್ತಲ್
ಧನದತ್ತಲ್ ಧಾನ್ಯದತ್ತಲ್ ಸತಿಸುತಪಿತರತ್ತಲ್ ಸದಾ ಲೋಭದತ್ತಲ್
ನೆನೆಯುತ್ತಿರ್ದಪ್ಪುದೆನ್ನೀ ಮನವಿದನೆಡೆಗೊಂಡಳ್ಕಱಿಂ ದೇವ ನೀವಿಂ-
ತೆನಿತುಂ ತೀವಿರ್ದು ಪಂಪಾಪುರದರಸ ವಿರೂಪಾಕ್ಷ ರಕ್ಷಿಪ್ಪುದೆನ್ನಂ ॥ 14 ॥
ಸುವಿಚಾರಕ್ಕೊರ್ಮೆಯುಂ ಸೇರದುನಡೆಯಿಪುದತ್ಯಾಗ್ರಹವ್ಯಾಪ್ತಿಯಿಂ ತಾ-
ನವಿಚಾರಕ್ಕೆಂದೊಡೆಂಟಂ ನಿಮಿರ್ವುದು ಬಯಲಂ ಭಾವಿಸುತ್ತಿರ್ಪುದಾತ್ಮೋ-
ದ್ಭವಮೂಲಚ್ಛೇದನೋಪಾಯವನೆಣಿಸದು ಮದ್ಬುದ್ಧಿಯೀ ಬುದ್ಧಿಯಂ ಶಂ-
ಭುವೆ ಸಂತಂ ಮಾಡಿ ಪಂಪಾಪುರದರಸ ವಿರೂಪಾಕ್ಷ ರಕ್ಷಿಪ್ಪುದೆನ್ನಂ ॥ 15 ॥
ಇನಿತುಂ ತಾನಲ್ಲದಾರಂ ಬಗೆಯದು ಮದಮಂ ಗರ್ವಮಂ ಕೂಡಿಕೊಂಡಿ-
ರ್ದೆನಿತುಂ ಮುಂಗಾಣದತ್ಯುದ್ಧತತರಮುಖವಾಗಿರ್ಪುದೋರಂತೆ ವಿದ್ವ-
1-1 ಥ್ (ಅ), 2-2 ರದ(ಆ)
ಜ್ಜನಮಂ ಕೈಕೊಳ್ಳದೆನ್ನೀ ಮನದೊಡತಣಹಂಕಾರವಿಂತಿಂತಿದಂ ದೇ-
ವನೆ ನೀಂ ತರ್ಗೊತ್ತಿ ಪಂಪಾಪುರದರಸ ವಿರೂಪಾಕ್ಷ ರಕ್ಷಿಪ್ಪುದೆನ್ನಂ ॥ 16 ॥
ಧನದೊಳ್ ಧಾನ್ಯಂಗಳೊಳ್ ಭೂಷಣವಿತತಿಗಳೊಳ್ ಪುತ್ರ ಸಂತಾನದೊಳ್ ಭೋ-
ಗನಿಕಾಯಭ್ರಾಂತಿಯೊಳ್ ಕಾಂತೆಯರ ತನುಸುಖಚ್ಛಾಯೆಯೊಳ್ ಮಾಯೆಯೊಳ್ ನಿಂ-
ದೆನಸುಂ ನಟ್ಟಿರ್ದ ಮಚ್ಚಿತ್ತಮನಭವ ನಿಜಾಂಘ್ರಿದ್ವಯಧ್ಯಾನಸಾನಂ-
ದನಿವಾಸಂ ಮಾಡಿ ಪಂಪಾಪುರದರಸ ವಿರೂಪಾಕ್ಷ ರಕ್ಷಿಪ್ಪುದೆನ್ನಂ ॥ 17 ॥
ಓರಂತೀ ದೇಹಮಂ ರಕ್ಷಿಸುವತಿಭರದಿಂದುಳ್ತು ತೆತ್ತುಂಸತೇಜ
ಕ್ಕಾರೇನಂ ಪೇಳ್ದೊಡಂ ಕೈಮುಗಿದು ಸುಗಿದು ಪೆರ್ಬಿಟ್ಟಿಯಂ ಪೊತ್ತು ಸಂಸಾ-
ರಾರಂಭಂಗೆಯ್ದು ದುಃಖಕ್ಕಲಸಿ ಮಱುಗಿ ನಿಮ್ಮಂಘ್ರಿಯಂ ಪೊರ್ದಿದೆಂ ಸ-
ತ್ಯಾರಂಭಪ್ರೇಮಿ ಪಂಪಾಪುರದರಸ ವಿರೂಪಾಕ್ಷ ರಕ್ಷಿಪ್ಪುದೆನ್ನಂ ॥ 18 ॥
ಅವಿಚಾರಂ ಮಿಕ್ಕು ಲಾಭಂಬಡೆವತಿಭರದಿಂ ಸುತ್ತಿ ದೇಶಂಗಳೊಳ್ ವಿಂ-
ಧ್ಯವಿತಾನಪ್ರಾಂತದೊಳ್ ತಿಱ್ರನೆ ತಿರುಗಿ ಮೊದಲ್ಗೆಟ್ಟು ಬೆಂಬಿಳ್ದು ದುಃಖ
ವ್ಯವಹಾರಕ್ಕಳ್ಕಿ ನಿಮ್ಮೀ ಚರಣಯುಗಳಮಂ ಪೊರ್ದಿದೆಂ ಭಕ್ತವೃಂದೋ-
ತ್ಸವಕಲ್ಪೋರ್ವೀಜ ಪಂಪಾಪುರದರಸ ವಿರೂಪಾಕ್ಷ ರಕ್ಷಿಪ್ಪುದೆನ್ನಂ ॥ 19 ॥
ಅವನಿಂತಾರಾದೊಡಂ ಪಲ್ಗಿರಿದು ಪಿರಿದು ಬಾಯಿಂದೆ ದೈನ್ಯಾಕ್ಷರಂ ಸಂ-
ಭವಿಸುತ್ತೆನ್ನಾಳ್ದ ಸಂದೇಶಮನೆ ಕರುಣಿಸೆಂದಲ್ಲಿ ಮರ್ತ್ಯಂಗೆ ಸಾವು-
ತ್ತವೆ ಪುಟ್ಟುತ್ತಿರ್ಪ ಸೇವಾನರಕನದಿಯನೀಸಾಡಿ ಮದ್ಭಾಗ್ಯದಿಂ ನಿ-
ನ್ನವನಾದೆಂ ದೇವ ಪಂಪಾಪುರದರಸ ವಿರೂಪಾಕ್ಷ ರಕ್ಷಿಪ್ಪುದೆನ್ನಂ ॥ 20 ॥
ತನುವಂಸ್ತ್ರೀ ಪುತ್ರರಂ ರಕ್ಷಿಪ ವಿಪುಳತೆ ಕೈಕೊಂಡು ಕಾರ್ಪಣ್ಯ ವಕ್ತ್ರಂ
ತನುಗಾತ್ರಂ ದೀನನೇತ್ರಂ ತುಷಲಘುತರಮಾತ್ರಂ ಕರಂ ಪೊರ್ದಿ ತೋರ್ಪೀ
1-1 ಥ್ (ಆ)
ಜನಮಂ ಬೇಳ್ಪಾಸೆಯಿಂ ಸಾವಿನ ಪರಿಯೆನಿಪೀ ದೈನ್ಯಮಂ ಬಿಟ್ಟು ನಿಮ್ಮಂ
ನೆನೆಯುತ್ತಿರ್ಪಂತೆ ಪಂಪಾಪುರದರಸ ವಿರೂಪಾಕ್ಷ ರಕ್ಷಿಪ್ಪುದೆನ್ನಂ ॥ 21 ॥
ಮನೆಯೆಂದುಂ ಮಕ್ಕಳೆಂದುಂ ಜನನಿಜನಕರೆಂದುಂ ವೃಥಾ ಪತ್ನಿಯೆಂದುಂ
ಧನಮೆಂದುಂ ಧಾನ್ಯಮೆಂದುಂ ಸಕಲವಿಷಯವಿಂತೆನ್ನದೆಂದುಂ ನಿರರ್ಥಾ-
ರ್ಥನಿಮಿತ್ತಂ ಬೆಂದು ತಾಪತ್ರಯದೊಳೆ ಕುದಿದೆಂ ಬತ್ತಿದೆಂ ಬಾಡಿದೆಂ ಯಾ-
ತನೆಗೊಂಡೆಂ ದೇವ ಪಂಪಾಪುರದರಸ ವಿರೂಪಾಕ್ಷ ರಕ್ಷಿಪ್ಪುದೆನ್ನಂ ॥ 22 ॥
ವಿಪುಳಾನಂಗಾಗ್ನಿಯಿಂ ಬಂದೆಳೆದುರವಣಿಪಾಶಾಗ್ನಿಯಿಂದಂ ನಿರರ್ಥಂ
ಕುಪಿತೋದ್ಭೂತಾಗ್ನಿಯಿಂದಂ ಹರಹರ ಮಿಗೆ ಬೇವುತ್ತುಮಿರ್ದಪ್ಪೆನಾನಂ-
ದಪಯೋವಾರಾಶಿ ನಿಮ್ಮೀ ವಿಮಳಕರತಳಾಬ್ಜಂಗಳಿಂದೆತ್ತುತಯ್ಯೋ
ಕೃಪೆಯಿಂದಂ ನೋಡಿ ಪಂಪಾಪುರದರಸ ವಿರೂಪಾಕ್ಷ ರಕ್ಷಿಪ್ಪುದೆನ್ನಂ॥ 23 ॥
ನವೆದೆಂ ರೋಗಂಗಳಿಂದಂ ಸೆಡೆದೆನನುದಿನಂ ಸೇವೆಯಿಂದಂ ನಿರರ್ಥಂ
ಸವೆದೆಂ ಕಾಮಂಗಳಿಂದಂ ಮಿಗೆ ಪರಿಭವದೊಳ್ ಬಂದೆ ನಾನಾಸೆಯಿಂದಂ
ತವಿಲಾದೆಂ ಕೋಪದಿಂದಳ್ಕಿದೆನತಿಮದದಿಂ ಮುಂದುಗೆಟ್ಟಿರ್ದಪೆಂ ಶಂ-
ಭುವೆ ನೀಲಗ್ರೀವ ಪಂಪಾಪುರದರಸ ವಿರೂಪಾಕ್ಷ ರಕ್ಷಿಪ್ಪುದೆನ್ನಂ ॥ 24 ॥
ಅಯ್ಯೋ ಸಂಸಾರಸಂಗಕ್ಕಱಿಯದೆಱಗಿದೆಂ ಮಳ್ಗಿದೆಂ ಮಾಱುವೋದೆಂ
ಮುಯ್ಯಾಂತೆಂ ಮುಂದುಗೆಟ್ಟೆಂ ಸೆಡೆದೆನುಡುಗಿದೆಂ ಮಾಸಿದೆಂ ಸೂಸಿದೆಂ ಕಿ-
ರ್ಗ್ಗಯ್ಯಾದೆಂ ಕಂದಿದೆಂ ಕುಂದಿದೆನಲಸಿದೆನಾಸತ್ತೆನಲ್ಲಾಡಿದೆಂ ನೀ-
ನಯ್ಯಾ ಕೈಕೊಂಡು ಪಂಪಾಪುರದರಸ ವಿರೂಪಾಕ್ಷ ರಕ್ಷಿಪ್ಪುದೆನ್ನಂ ॥ 25 ॥
ಉರಗಾಸ್ಯಾಲಗ್ನಭಗ್ನಪ್ರಚಲಿತಹರಿವೊಲ್ ವ್ಯಾಘ್ರವಕ್ತ್ರಪ್ರಯುಕ್ತ
ಸ್ಫುರಿತಾತಂಕಾಂತರಂಗಸ್ಥಿತಿಮೃಗಶಿಶುವೊಲ್ ಸಿಂಹಹಸ್ತಾವಲಂಬ
ದ್ವಿರದಂಬೋಲಿರ್ದೆನೀ ಮಾಯೆಯ ಮುಖದೆಡೆಯೊಳ್ ಬೇಗದಿಂ ಪಿಂಗಿಸಾ ಮ-
ದ್ಗುರುವೇ ಮತ್ಸ್ವಾಮಿ ಪಂಪಾಪುರದರಸ ವಿರೂಪಾಕ್ಷ ರಕ್ಷಿಪ್ಪುದೆನ್ನಂ॥ 26 ॥
ಲಲನಾಸಂಭೋಗರೋಗಂ ಪಸಿವನುಡುಗಿಸುತ್ತಾರ್ತಿಯಂ ಪೊಂಗಿಸುತ್ತುಂ
ಬಲಮಂ ಕೈಗುಂದಿಸುತ್ತುಂ ಸುಜನವಚನಪಥ್ಯಕ್ಕೆ ತಾಂ ವಕ್ರಿಸುತ್ತುಂ
ಸಲೆ ಲಜ್ಜಾಭಾವಮಂ ಮೀಱಿಸುತುಮಿದೆಯಿದಕ್ಕೌಷಧಂಗೊಟ್ಟು ತಂದೇ
ತಲೆಯೊಳ್ ಕೈಯಿಟ್ಟು ಪಂಪಾಪುರದರಸ ವಿರೂಪಾಕ್ಷ ರಕ್ಷಿಪ್ಪುದೆನ್ನಂ॥ 27 ॥
ದ್ವಿರದಂ ಮತ್ಸ್ಯಂ ಪತಂಗಂ ಭ್ರಮರನಹಿಯೆನಿಪ್ಪಿಂತಿವೇಕಿಂದ್ರಿಯಾರ್ಥಂ
ತಿರುಗುತ್ತಿರ್ದಪ್ಪುವಿಂತೀ ಜನನದ ಬಳಿಯೊಳ್ ದೇವ ಪಂಚೇಂದ್ರಿಯಾರ್ಥಂ
ವಿರಸಂ ವಿದ್ರೂಪಿ ಮೂರ್ಖಂ ವಿಷಯವಿಕಳನೇನಪ್ಪೆನೆಂತಿರ್ಪೆನಯ್ಯೋ
ಕರುಣೀ ಕೈಕೊಂಡು ಪಂಪಾಪುರದರಸ ವಿರೂಪಾಕ್ಷ ರಕ್ಷಿಪ್ಪುದೆನ್ನಂ ॥ 28 ॥
ತರದಿಂ ರೋಗಂ ವಿಷಂ ವೃಶ್ಚಿಕವನಲನಹಿವ್ಯಾಘ್ರಮುಗ್ರಾಯುಧಂಗಳ್
ದುರಿತಂ ಮತ್ತದ್ವಿಪಂ ಮೂರ್ಖತೆ ಪೊಡೆವ ಸಿಡಿಲ್ ದುರ್ಜನಂ ದುರ್ಮದಂ ತ-
ಸ್ಕರರೆಂಬೀ ಕಂಟಕಸ್ತೋಮದ ನಡುವೊಡಲಿರ್ಪಂದಮೇಂ ಸೋಜಿಗಂ ಶಂ-
ಕರ ನೀಂ ಕೈಕೊಂಡು ಪಂಪಾಪುರದರಸ ವಿರೂಪಾಕ್ಷ ರಕ್ಷಿಪ್ಪುದೆನ್ನಂ॥ 29 ॥
ಧನಮಂ ಸೈತಾರ್ಜಿಪೆಂ ಬೈತಿಡುವೆನದಱೊಳಂ ಪುಣ್ಯವೈವಾಹಮಂ ಮಾ-
ಳ್ಪೆನದಂ ಪುತ್ರರ್ಗಲಂಕಾರಮನೊದವಿಸುವೆಂ ಕೂಡಿಭೋಗಿಪ್ಪೆನೆಂದಾಂ
ನೆನೆಯುತ್ತಿರ್ಪನ್ನೆಗಂ ತೊಟ್ಟನೆ ಮರಣಮದಾಗಲ್ಕೆ ಬೇಳಪ್ಪ ದುಶ್ಚಿಂ-
ತನೆಯಂ ತರ್ಗೊತ್ತಿ ಪಂಪಾಪುರದರಸ ವಿರೂಪಾಕ್ಷ ರಕ್ಷಿಪ್ಪುದೆನ್ನಂ ॥ 30 ॥
ಕನಕಂ ನೀರಕ್ಕರಂ ಪೆಂಡಿತಿ ಕನಸು ಸುತರ್ ಮಂಜು ತಾಯ್ತಂದೆ ವಾಯಂ
ತನುವಭ್ರಚ್ಛಾಯೆ ಮಿತ್ರರ್ ಗಗನಕುಸುಮಮಿಷ್ಟರ್ ಮರೀಚೀಜಲಂ ಯೌ-
ವನಧರ್ಮಂ ಮೇಘಚಾಪಂ ಗೃಹವಚಿರವೆನಿಪ್ಪಿಂತಿವಂ ಬಿಟ್ಟು ನಿಮ್ಮಂ
ನೆನೆಯುತ್ತಿರ್ಪಂತೆ ಪಂಪಾಪುರದರಸ ವಿರೂಪಾಕ್ಷ ರಕ್ಷಿಪ್ಪುದೆನ್ನಂ ॥ 31 ॥
ಎರವೀ ದೇಹಂ ಹಿರಣ್ಯಂ ಪುದು ಸತಿ ಪಗೆಯಾತ್ಮೇಷ್ಟರೌಪಾಧಿಕರ್ ಸೋ-
ದರರೆಲ್ಲಂ ವೈರಿಗಳ್ ತಾವೆನಿಪಿದನಱಿದುಂ ಮತ್ತಮಾವರ್ಥದಿಂದಂ
ಪೊರೆವೆಂ ರಕ್ಷಿಪ್ಪೆನೊಲ್ವೆಂ ಬಿಡದೆ ನಡೆಯಿಪೆಂ ನಂಬಿ ನಚ್ಚಿರ್ಪೆನೆನ್ನಿಂ
ಮರುಳಾರಾರಾನೆ ಪಂಪಾಪುರದರಸ ವಿರೂಪಾಕ್ಷ ರಕ್ಷಿಪ್ಪುದೆನ್ನಂ ॥ 32 ॥
ಜಲಮಂ ಪೊರ್ದಿರ್ಪ ಶೈವಾಲದ ತೆಱದೆ ಕರಂ ದೀಪಿಕಾಚ್ಛಾಯೆಯೆಂತು-
ಜ್ಜ್ವಲವಾಂತಾ ಚಂದ್ರಲಕ್ಷಂ ಮುಕುರದೊಳಗೆ ತೋರ್ಪಾ ಪ್ರತಿಚ್ಛಾಯೆಯೆಂತಂ-
ತಲೆಯುತ್ತುಂ ಪತ್ತಿ ಬೆನ್ನಂ ಬಿಡದಿದೆ ಘನಸಂಸಾರವೀ ಮಾಯೆಯಂ ನಿ-
ರ್ಮಲ ನೀನೇ ತೀರ್ಚಿ ಪಂಪಾಪುರದರಸ ವಿರೂಪಾಕ್ಷ ರಕ್ಷಿಪ್ಪುದೆನ್ನಂ ॥33॥
ನೆಳಲೊಳ್ ಪೋರ್ವಂತಿರಾಕಾಶಮನವಯವದಿಂದೀಸುವಂತುರ್ವಿಯಂ ತಾಂ
ತೊಳೆವಂತಭ್ರಾಳಿಯಂ ಕಂಡರಿಸುವ ತೆಱದಿಂ ಧೂಮಮಂ ಸೀಳ್ವ ಪಾಂಗಿಂ
ಬಳಲುತ್ತಿರ್ದಪ್ಪೆನೀ ಮಾಯೆಯ ಮನೆಯ ದುವಾಳಿಂದೆ ನಿರ್ಮಾಯ ನಿತ್ಯೋ-
ಜ್ಜ್ವಳನಿಸ್ತ್ರೈಗುಣ್ಯ ಪಂಪಾಪುರದರಸ ವಿರೂಪಾಕ್ಷ ರಕ್ಷಿಪ್ಪುದೆನ್ನಂ ॥ 34 ॥
ಮದದಿಂದಂ ಪೊಳ್ತು ಪೋಗುತ್ತಿದೆ ಶಿವಶಿವ ಮಾತ್ಸರ್ಯದಿಂ ಪೊಳ್ತು ಪೋಗು-
ತ್ತಿದೆ ಆಹಾ ಪೊಳ್ತು ಪೋಗುತ್ತಿದೆ ಮುಸುಕಿದ ತತ್ಕಾಮದಿಂ ಪೊಳ್ತು ಪೋಗು-
ತ್ತಿದೆ ಲೋಭವ್ಯಾಪ್ತಿಯಿಂ ಕೋಪದಿನಱಿಯದೆ ದುರ್ಮೋಹದಿಂ ಪೊಳ್ತುಪೋಗು-
ತ್ತಿದೆ ತಂದೇ ತಂದೆ ಪಂಪಾಪುರದರಸ ವಿರೂಪಾಕ್ಷ ರಕ್ಷಿಪ್ಪುದೆನ್ನಂ ॥ 35 ॥
ಎರೆದೇವೆಂ ಪೊರ್ದಿಯೇವೆಂ ನಿರುತದೆ ನೆನದೇವೆಂ ಮನಂ ಮುಟ್ಟಿಯೇವೆಂ
ಕರೆದೇವೆಂ ಕೂರ್ತುಮೇವೆಂ ಬಿಡದತಿಭರದಿಂ ನಂಬಿಯೇವೆಂ ಶಿವಾ ಮ-
ದ್ಗುರುವೆ ಇನ್ನೇವೆನೇವೆಂ ನಿಜಕರುಣವಣಂ ಪೊರ್ದದಸ್ಪೃಶ್ಯನಂ ಶಂ-
ಕರ ನೀಂ ಕೈಕೊಂಡು ಪಂಪಾಪುರದರಸ ವಿರೂಪಾಕ್ಷ ರಕ್ಷಿಪ್ಪುದೆನ್ನಂ॥ 36 ॥
ತವೆ ರೋಗಂ ಪತ್ತಿ ಗಾತ್ರಂ ಧರಣಿಗೆ ಕೆಡೆದಿರ್ಪಲ್ಲಿಯುಗ್ರದ್ವಿಪಂ ಬಂ-
ದವಿಚಾರಂ ಕಾಯ್ದು ಬಲ್ಪಿಂದೊದೆಯೆ ಮುದುಡಿ ಬೀಳ್ವಲ್ಲಿ ಕಾಳ್ಕಿಚ್ಚು ಸುತ್ತಂ
ಕವಿತಂದಾ ಪೊಳ್ತು ನಾಲ್ಕುಂ ದೆಸೆಗೆ ಪರಿದು ಬೇವದೆ ನೀವಲ್ಲದಾರ್ ಕಾ-
ವವರಿಂ ಕಾಮಾರಿ ಪಂಪಾಪುರದರಸ ವಿರೂಪಾಕ್ಷ ರಕ್ಷಿಪ್ಪುದೆನ್ನಂ ॥ 37 ॥
ಎಡೆಗೊಂಡೀ ಮುಪ್ಪುದೋಱಲ್ ನೆರೆ ನೆಗೆದು ಸಿರಂದೂಗಿ ಬೆನ್ ಬಾಗಿಯೆಂತ-
ಕ್ಕಡಿಯೆತ್ತಲ್ಕಾಱದೆತ್ತಂ ದಡದಡಿಸಿ ಕರಂ ಜೋಲ್ದು ಕೋಲೂಱಿ ನಿಂದುಂ
1+ ಚ್ಚಾ (ಆ)
ನಡುಗುತ್ತುಂ ಕೆಮ್ಮಿ ಕೊಮ್ಮುತ್ತೊಡಲನೊಲೆಯುತುಂ ಮುಗ್ಗಿ ಬಳ್ದುಂ ನಿತಾಂತಂ
ಕೆಡೆವಲ್ಲಿಂ ಮುನ್ನ ಪಂಪಾಪುರದರಸ ವಿರೂಪಾಕ್ಷ ರಕ್ಷಿಪ್ಪುದೆನ್ನಂ ॥ 38 ॥
ತೆಱಪಿಲ್ಲಂ ಸಾವು ಭೋಂಕೆಂದಡಸಿದ ಪದದೊಳ್ ಭಕ್ತಿಸಂಧಾನವೆಲ್ಲಿ-
ತ್ತಱಿವೆಲ್ಲಿತ್ತರ್ಥವೆಲ್ಲಿತ್ತಮಳಗುಣವದೆಲ್ಲಿತ್ತೋ ಸದ್ಧರ್ಮವೆಲ್ಲಿ-
ತ್ತೊಱಪೆಲ್ಲಿತ್ತೋಜೆಯೆಲ್ಲಿತ್ತತುಳಬಲಮದೆಲ್ಲಿತ್ತದಕ್ಕಂಜಿ ನಿಮ್ಮಂ
ಮಱೆವೊಕ್ಕೆಂ ದೇವ ಪಂಪಾಪುರದರಸ ವಿರೂಪಾಕ್ಷ ರಕ್ಷಿಪ್ಪುದೆನ್ನಂ ॥ 39 ॥
ಕಿವಿಕಣ್ಗಳ್ ಕೆತ್ತು ಬಾಯೊರ್ಗುಡಿಸಿ ಕರೆಯೆ ಪೆರ್ಗೂರಿಡುತ್ತೆಯೆ ಬಂದಿ-
ರ್ದವರಂಜಲ್ ಶ್ವಾಸಮೇಱುತ್ತಿಳಿಯುತುಮಿರೆಯಂತಲ್ಲಿ ಕೈ ಕಾಲ್ಗಳೊಳ್ ಜೀ-
ವವನಂಟಂಟೆಲ್ಲಿಯುಂ ಕಾಣದೆಯಕಟಕಟಯ್ಯೋ ಗಡಾ ಸತ್ತನೆಂಬೀ
ಪವಣಿಂದಂ ಮುನ್ನ ಪಂಪಾಪುರದರಸ ವಿರೂಪಾಕ್ಷ ರಕ್ಷಿಪ್ಪುದೆನ್ನಂ ॥ 40 ॥
ದೇವಾ ನಾನೇವೆನೆಂದೆಂದಬಲೆಯಳುತೆ ತಾಂ ಪೋಗೆ ಪಿಂದಂ ಜನಂಗಳ್
ಸಾವೀತಂಗಾಯ್ತೆನುತುಂ ಮಱುಗಿ ಬರೆ ತನುಜಾಳಿಯುಂ ಬಂಧುವರ್ಗಂ
ತಾವೆತ್ತಂ ಮತ್ತೆ ಶೋಕಂ ಮುಸುಕಿ ನಡೆಯೆ ತತ್ಕಷ್ಟದೊಳ್ ಕಾಷ್ಠರೂಪಿ
ಬೇವಲ್ಲಿಂ ಮುನ್ನ ಪಂಪಾಪುರದರಸ ವಿರೂಪಾಕ್ಷ ರಕ್ಷಿಪ್ಪುದೆನ್ನಂ ॥ 41 ॥
ಜನನೀಗರ್ಭಾಂಡದಿಂ ಬರ್ಪತಿವಿಷಮತರಕ್ಲೇಶಮಂ ಬಾಲ್ಯದೊಳ್ ಮಾ-
ಳ್ಪ ನಿಷೇಧವ್ರಾತಮಂ ಯೌವನವಿಕಳತೆಯಂ ಮುಪ್ಪಿನಾ ಹೇಯಮಂ ಸಾ-
ವನಿರೋಧಸ್ತೋಮಮಂ ಕಂಡಲಸಿದೆನದಿರ್ದೆಂ ಪೇಸಿದೆಂ ನೊಂದೆನೋರಂ
ತನುಗೆಟ್ಟೆಂ ದೇವ ಪಂಪಾಪುರದರಸ ವಿರೂಪಾಕ್ಷ ರಕ್ಷಿಪ್ಪುದೆನ್ನಂ ॥ 42 ॥
ಆನೆಂತೆಂತಕ್ಕೆಬಂದೆಂ ಮನುಜಭವದೊಳೆಂತಕ್ಕನೂನಾಂಗಸಂಗಂ
ತಾನಾಯ್ತೆಂತಕ್ಕೆ ಕೂಡಿತ್ತಘಟಿತಘಟಿತಂ ಸತ್ಕುಲಂ ಮತ್ತಮೆಂತ-
ಕ್ಕಾ ನಿಮ್ಮಂಘ್ರಿದ್ವಯಕ್ಕಾನೆಱಗಿದೆನಿನಿತಾಯಾಸದಿಂ ಬಂದೆನಯ್ ಸ-
ತ್ಯಾನಂದಜ್ಯೋತಿ ಪಂಪಾಪುರದರಸ ವಿರೂಪಾಕ್ಷ ರಕ್ಷಿಪ್ಪುದೆನ್ನಂ ॥ 43 ॥
ಶರಣಾರ್ ನೀಂ ಕಾವರಾರ್ ನೀಂ ಗತಿ-ಮತಿ-ಪತಿಯಾರ್ ನೀಂ ಕೃಪಾಂಬೋಧಿಯಾರ್ ನೀಂ
ಗುರುವಾರ್ ನೀಂ ಗೋತ್ರವಾರ್ ನೀಂ ಜನನಿ-ಜನಕರಾರ್ ನೀಂ ಮಹಾಬಂಧುವಾರ್ ನೀಂ
ವರರಾರ್ ನೀಂ ವಂದ್ಯರಾರ್ ನೀನೆನಗತಿಹಿತರಾರ್ ನೀಂ ಮಹಾದೇವ ನಿನ್ನಿಂ
ಪೆರರಾರಾರ್ ನೀನೆ ಪಂಪಾಪುರದರಸ ವಿರೂಪಾಕ್ಷ ರಕ್ಷಿಪ್ಪುದೆನ್ನಂ ॥ 44 ॥
ಮರುಳಾರಾಂ ಮತ್ತನಾರಾಂ ಮತಿವಿರಹಿತನಾರಾಂ ಬುಧದ್ವೇಷಿಯಾರಾಂ
ಪರನಾರಾಂ ಕರ್ಮಿಯಾರಾಂ ಖಲಜನಸಖನಾರಾಂ ಸದಾಕ್ರೂರವಾಕ್ಪಾ-
ಮರನಾರಾಂ ನೀಚನಾರಾಂ ವಿಷಯವಿಕಳನಾರಾಂ ಮಹಾಕ್ಷುದ್ರರೆನ್ನಿಂ
ಪರರಾರಾರಾನೆ ಪಂಪಾಪುರದರಸ ವಿರೂಪಾಕ್ಷ ರಕ್ಷಿಪ್ಪುದೆನ್ನಂ ॥ 45 ॥
ಗುರು ನೀಂ ತ್ವಚ್ಛಿಷ್ಯನಾಂ ನಿರ್ಮಳಘನನಿಧಿ ನೀಂ ಕ್ಷುದ್ರನಾಂ ದಾನಿ ನೀನಾ
ತುರನಾಂ ನಿಷ್ಕಾಮಿ ನೀಂ ಕಾಮದ ನೆಲೆವನೆಯಾಂ ತಂದೆ ನೀಂ ಪುತ್ರನಾಂ
ಶಾಂತರಸಂ ನೀಂ ಕ್ರೋಧಿಯಾಂ ಪುಣ್ಯದ ಫಲತತಿ ನೀಂ ಪಾಪಿಯಾಂ ಸ್ವಾಮಿ
ನೀಂ ಕಿಂಕರನಾಂ ಕೈಕೊಂಡು ಪಂಪಾಪುರದರಸ ವಿರೂಪಾಕ್ಷ ರಕ್ಷಿಪ್ಪುದೆನ್ನಂ ॥ 46 ॥
ಖಳನಂ ದುರ್ಬೋಧನಂ ದುರ್ವಿಷಯನಿರತನಂ ದುಷ್ಟನಂ ಧೂರ್ತನಂ ದು-
ರ್ಬಳನಂ ದುರ್ಮೋಹಿಯಂ ದುರ್ಜನಜನಹಿತನಂ ಸಜ್ಜನದ್ವೇಷಿಯಂ ಸಂ-
ಚಳನಂ ದೋಷಾರ್ತಿಯಂ ದುರ್ಧರತರವಿರಸಕ್ರೀಡನಂ ಕೋಪಿಯಂ ವ್ಯಾ-
ಕುಳನಂ ಕೈಕೊಂಡು ಪಂಪಾಪುರದರಸ ವಿರೂಪಾಕ್ಷ ರಕ್ಷಿಪ್ಪುದೆನ್ನಂ ॥ 47 ॥
ಅಳಿಪಂ ಸನ್ಮಾನಹೀನಂ ಸುಜನಜನವಿದೂರಂ ವೃಥೋತ್ಸಾಹಿ ಮೂರ್ಖಂ
ಖಳನತ್ಯಾಸ್ವಾದಿ ವಿದ್ಯಾವಿನಯನಯವಿಹೀನಂ ಕುಜಾತಿಪ್ರಸಂಗಂ
ಗಳಪಂ ಚಾರ್ವಾಕನಜ್ಞಂ ಗುಣರಹಿತನೆನಿಪ್ಪೆನ್ನನೊಲ್ದೀಶಂ ನೀಂ ವ್ಯಾ-
ಕುಳನಂ ಕೈಕೊಂಡು ಪಂಪಾಪುರದರಸ ವಿರೂಪಾಕ್ಷ ರಕ್ಷಿಪ್ಪುದೆನ್ನಂ ॥ 48 ॥
ಸತತಂ ನಿಂದಾಕರಂ ನಿಷ್ಠುರನತಿಕೃಪಣಂ ಸಜ್ಜನದ್ವೇಷಿ ದುಶ್ಚಿಂ
ತಿತಚಿತ್ತಂ ಜ್ಞಾನದೂರಂ ಪರಹಿತರಹಿತಂ ಭಕ್ತಿವಿಶ್ವಾಸಹೀನಂ
ಸ್ತುತಿಲೋಲಂ ರಾಗಶೀಲಂ ಸುಕೃತವಿಮುಖನಾನಂದಹೀನಂ ವಿಮಾನಂ
ನತಕಲ್ಪೋರ್ವೀಜ ಪಂಪಾಪುರದರಸ ವಿರೂಪಾಕ್ಷ ರಕ್ಷಿಪ್ಪುದೆನ್ನಂ ॥ 49 ॥
ಅತಿದೀನಂ ಧೂರ್ತಮಾನಂ ಪರಧನವನಿತಾಧೀನನಾನಂದಹೀನಂ
ಮತಿಶೂನ್ಯಂ ಡಂಭಮಾನ್ಯಂ ವಿಷಯವಿಸರದನ್ಯಂ ವಿಮೂಢರ್ಗನನ್ಯಂ
ನುತದೂರಂ ದುಃಖಸಾರಂ ಸುಜನಜನಘನಕ್ರೂರನೀ ಭೂಮಿಭಾರಂ
ಸತತಂ ಕೈಕೊಂಡು ಪಂಪಾಪುರದರಸ ವಿರೂಪಾಕ್ಷ ರಕ್ಷಿಪ್ಪುದೆನ್ನಂ ॥ 50 ॥
ಖರರೂಪಂ ಪಾಪದೀಪಂ ಕುಜನಜನಕಲಾಪಂ ಸದಾರಬ್ಧ ಕೋಪಂ
ಸ್ಥಿರಭಂಗಂ ದುಷ್ಪ್ರಸಂಗಂ ವಿಷಯಕುಸುಮಭೃಂಗಂ ದುರಾಶಾಂತರಂಗಂ
ವರಧೂರ್ತಂ ದಂಭಕಾರ್ತಂ ಖಳಜನಸಲಿಲಾವರ್ತನಜ್ಞಾನಗರ್ತಂ
ಕರುಣೀ ಕೈಕೊಂಡು ಪಂಪಾಪುರದರಸ ವಿರೂಪಾಕ್ಷ ರಕ್ಷಿಪ್ಪುದೆನ್ನಂ ॥ 51 ॥
ಘನವೆನ್ನೊಳ್ ಮಾಣದೀ ಕಾಮದ ವಿಕಳತೆಯೀ ಕ್ರೋಧವೀ ಲೋಭವೀ ದು-
ರ್ಮನವೀ ದುಶ್ಚಿಂತೆಯೀ ದುರ್ಮದದ ಮಮತೆಯೀ ಮೋಹವೀಯಾಸೆಯೀ ದು-
ರ್ಜನಸಂಗಪ್ರೇಮವೀ ಮತ್ಸರದ ಮಸಕವೀ ದುಃಖಸಂಸ್ತೋಮಮಂ ಛೇ-
ದನೆಯಂ ಮಾಡುತ್ತೆ ಪಂಪಾಪುರದರಸ ವಿರೂಪಾಕ್ಷ ರಕ್ಷಿಪ್ಪುದೆನ್ನಂ ॥ 52 ॥
ಸಲೆ ಮಾಯಾಮೋಹವಾಚ್ಛಾದಿಸೆ ನೆಱೆ ಧೃತಿಗೆಟ್ಟೆಂ ವೃಥಾ ಧಾತುಗೆಟ್ಟೆಂ
ಪೊಲಗೆಟ್ಟೆಂ ಮುಂದುಗೆಟ್ಟೆಂ ನೆನೆಯದೆ ಮತಿಗೆಟ್ಟೆಂ ಕರಂ ಬುದ್ಧಿಗೆಟ್ಟೆಂ
ನೆಲೆಗೆಟ್ಟೆಂ ನೀತಿಗೆಟ್ಟೆಂ ಮಱೆದು ಮಿಗೆ ಮನಂಗೆಟ್ಟೆನಾನುರ್ಬುಗೆಟ್ಟೆಂ
ತಲೆಗೆಟ್ಟೆಂ ತಂದೆ ಪಂಪಾಪುರದರಸ ವಿರೂಪಾಕ್ಷ ರಕ್ಷಿಪ್ಪುದೆನ್ನಂ ॥ 53 ॥
ನೆನೆವೆಂ ಸ್ವಪ್ನೋಪಮಸ್ಮಾರಕುವಿಷಯದ ಸಂಯೋಗಮಂ ಭೋಗಮಂ ಕೆ-
ಮ್ಮನೆ ನಿಮ್ಮೀ ಭಕ್ತಿಯೊಂದಂ ನೆನೆಯೆನೊಸೆದು ಸತ್ಯತ್ವ-ನಿತ್ಯತ್ವಮಂ ಯಾ-
ತನೆಗೊಂಡರ್ಥಾರ್ಥದಿಂದನ್ಯರನನುದಿನಮೋರಂತೆ ಬೋಧಿಪ್ಪ ದುರ್ಬೋ
ಧನನಯ್ಯೋ ನೋಡಿ ಪಂಪಾಪುರದರಸ ವಿರೂಪಾಕ್ಷ ರಕ್ಷಿಪ್ಪುದೆನ್ನಂ॥ 54 ॥
ಏಕೆನ್ನಂ ನೋಡದಯ್ಯೋ ಭವ ಭವ ಭವದೊಳ್ ತಂದೆ ಚಂದ್ರಾವತಂಸಾ
ಏಕೆನ್ನಂ ಮಾಯೆಯಿಂದಂ ಶಿವ ಶಿವ ಶಿವ ಬೆಳ್ಮಾಡುತಿರ್ದಪ್ಪೆ ಈಶಂ
ಏಕೆನ್ನಂ ಕಾಲನಿಂದಂ ಹರ ಹರ ಹರ ನೀಂ ಕಾಡುತಿರ್ದಪ್ಪೆ ದೇವಾ
ಲೋಕೈಕಾರಾಧ್ಯ ಪಂಪಾಪುರದರಸ ವಿರೂಪಾಕ್ಷ ರಕ್ಷಿಪ್ಪುದೆನ್ನಂ ॥ 55 ॥
ಭವವೇಕಾನೇಕೆ ಸತ್ತ್ವಾದಿಗುಣದ ಪುದುವಾಳೇಕದಾನೇಕೆ ಕಾಮೋ-
ತ್ಸವವೇಕಾನೇಕೆ ತಾಪತ್ರಿತಯದ ಪೊಡೆಗಿರ್ಚೇಕದಾನೇಕೆ ಕೋಪೋ-
ದ್ಭವವೇಕಾನೇಕೆ ಕರ್ಮದ್ವಯದ ಕಡುದೊಡಂಕೇಕದಾನೇಕೆ ದೇವಾ
ಭವಕರ್ಮಧ್ವಂಸಿ ಪಂಪಾಪುರದರಸ ವಿರೂಪಾಕ್ಷ ರಕ್ಷಿಪ್ಪುದೆನ್ನಂ ॥ 56 ॥
ಅದು ಸಂಸಾರಾಬ್ಧಿಯಂ ದಾಂಟಿಸುವುದದು ದುರಾಚಾರ-ದುರ್ಬುದ್ಧಿಯಂ ಕೀ-
ಳ್ವುದು ನಿತ್ಯಂ ಶ್ರೀಗುರುಶ್ರೀಪದಸರಸಿಜಮಂ ತೋರ್ಪುದಾಹಾ ಬಳಿಕ್ಕಂ-
ತದು ಲಿಂಗಾರೂಢನಂ ಮಾಡುವುದು ಶರಣಸಾಂಗತ್ಯವಾ ಸಂಗಮಂ ಪಿಂ-
ಗದವೊಲ್ ನೀಂ ಮಾಡಿ ಪಂಪಾಪುರದರಸ ವಿರೂಪಾಕ್ಷ ರಕ್ಷಿಪ್ಪುದೆನ್ನಂ॥ 57 ॥
ಹರಭಕ್ತರ್ ಬಂದೊಡುರ್ಬುತ್ತವರ ಚರಣಮಂ ಕಣ್ಗಳೊಳ್ ಕಂಠದೊಳ್ ಪೇ-
ರುರದೊಳ್ ಭಾಳಾಗ್ರದೊಳ್ ದೋರ್ಯುಗದೊಳುಭಯಗಂಡಂಗಳೊಳ್ ತಾಳ್ದುಮೆತ್ತು-
ತ್ತೊರೆಯುತ್ತಪ್ಪುತ್ತೆ ಹಿಗ್ಗುತ್ತತುಳಸುಖದೊಳಾಳುತ್ತುಮೇಳುತ್ತೆ ಬಾಳ್ದಿ-
ರ್ಪಿರವಂ ನೀನಿತ್ತು ಪಂಪಾಪುರದರಸ ವಿರೂಪಾಕ್ಷ ರಕ್ಷಿಪ್ಪುದೆನ್ನಂ ॥ 58 ॥
ಮೃಡಭಕ್ತವ್ರಾತವಾನಂದದೊಳಿದಿರ್ವರೆ ಕಂಡಾರ್ತದಿಂ ಸ್ನೇಹದಿಂ ಸೈ-
ಗೆಡೆದೆನ್ನೈಶ್ವರ್ಯವೆನ್ನಾಗಿನ ತವನಿಧಿಯೆನ್ನಾಯುವೆನ್ನೆಲ್ಲಮುಂ ನಿ-
ಮ್ಮಡಿಗಳ್ ಸರ್ವಸ್ವಮುಂ ನಿಮ್ಮಡಿಗಳೊಡವೆ ಆಂ ಕಾಪಿನಾಳೆಂದು ಚಿತ್ತಂ-
ಗುಡುತಿರ್ಪಂತಿತ್ತು ಪಂಪಾಪುರದರಸ ವಿರೂಪಾಕ್ಷ ರಕ್ಷಿಪ್ಪುದೆನ್ನಂ ॥ 59 ॥
ಮುದದಿಂದಂ ನಿಮ್ಮ ಪೂಜಾರಚನೆಯನೊಲವಿಂ ಕಂಡು ಸರ್ವಜ್ಞನಿಂತೊ-
ಪ್ಪಿದನಾನಂದಾಬ್ಧಿಯಿಂತೊಪ್ಪಿದನಹಿಧರನಿಂತೊಪ್ಪಿದಂ ಶಂಭುವಿಂತೊ-
ಪ್ಪಿದನೆಂದಶ್ರುಪ್ರವಾಹಂ ಪರಿಯಿಡೆ ಪುಳಕಂ ಪೊಣ್ಮೆ ಸಂಸ್ತೋತ್ರಮಂ ಮಾ-
ಳ್ಪುದನೆನ್ನೊಳ್ ಕೂಡಿ ಪಂಪಾಪುರದರಸ ವಿರೂಪಾಕ್ಷ ರಕ್ಷಿಪ್ಪುದೆನ್ನಂ ॥ 60 ॥
ಅದನಿನ್ನೇನೆಂಬೆನಾಹಾ ಗುರುತರಸುಖಮಂ ತುಂಗಭದ್ರಾನದೀತೀ-
ರದೊಳಿರ್ದುತ್ತುಂಗಹಸ್ತಂ ಮುಕುಲಿತನಯನಂ ಭೂತಿಸರ್ವಾಂಗನಾಗಿ-
ರ್ದು ದಯಾಂಭೋರಾಶಿ ಗಂಗಾಧರ ಪುರಹರ ಸರ್ವೇಶನೆಂದುರ್ಬುವಾಸೌ-
ಖ್ಯದ ಪೆರ್ಚಂ ಕೊಟ್ಟು ಪಂಪಾಪುರದರಸ ವಿರೂಪಾಕ್ಷ ರಕ್ಷಿಪ್ಪುದೆನ್ನಂ॥ 61 ॥
ಎನಗಿನ್ನೆಂತೆಂಬ ಚಿಂತಾಪ್ರತತಿ ಹಱಿದು ಹಾಱಿತ್ತು ಕಾಮಕ್ಕೆ ಮೋಹ-
ಕ್ಕನುಗೆಯ್ವೊಂದಾಗ್ರಹಂ ಕಟ್ಟನೆ ಕರಗಿತ್ತು ಮಾತ್ಸರ್ಯದೊಂದುಜ್ಜುಗಂ ಕ-
ಱ್ರನೆ ಕಂದಿತ್ತತ್ತಮಿತ್ತಂ ಮಿಗೆ ಮಸಗುವ ಕೋಪಂ ಕರಂ ತರ್ಗಿ ಕುರ್ಗಿ-
ತ್ತೆನಿಪಂದಂ ಮಾಡಿ ಪಂಪಾಪುರದರಸ ವಿರೂಪಾಕ್ಷ ರಕ್ಷಿಪ್ಪುದೆನ್ನಂ ॥ 62 ॥
ತಳಿರಿಂ ಪೂವಿಂ ಫಲವ್ರಾತದಿನೊಱಗುವ ಚೂತವ್ರಜಚ್ಛಾಯೆಯೊಳ್ ಕೋ-
ಮಳಹಂಸಸ್ತೋಮವಾಮಭ್ರಮರಕುಳವಿಕಾಸಾಬ್ಜಕಾಸಾರದೊಳ್ ನಿ-
ರ್ಮಳನಿಷ್ಪಂದಪ್ರಕಾಶಸ್ಥಳದೊಳಮಳಲಿಂಗಾರ್ಚನಾಸಕ್ತ ಚಿತ್ತೋ-
ಜ್ಜ್ವಳನಾಗಿರ್ಪಂತೆ ಪಂಪಾಪುರದರಸ ವಿರೂಪಾಕ್ಷ ರಕ್ಷಿಪ್ಪುದೆನ್ನಂ ॥ 63 ॥
ಅತುಳಸ್ವಚ್ಛಾಂಬುವಿಂ ಮಜ್ಜನಕೆಱೆದು ನವೀನಪ್ರಸೂನಪ್ರತಾನ-
ದ್ಯುತಿ ಸುತ್ತಲ್ ಸುತ್ತಿ ನಿಮ್ಮಂ ಸವಿನುಡಿ ಕವಿಯಲ್ ಬಣ್ಣಿಸುತ್ತಶ್ರು ಮೀಱಲ್
ನುತರೋಮಾಂಚಂಗಳೇಳಲ್ ಬೆಮರ್ವನಿ ನೆಗೆಯಲ್ ಗದ್ಗದಂ ಪೊಣ್ಮೆ ಪೂಜಾ-
ತತಿಯಂ ಮಾಳ್ಪಂತೆ ಪಂಪಾಪುರದರಸ ವಿರೂಪಾಕ್ಷ ರಕ್ಷಿಪ್ಪುದೆನ್ನಂ ॥ 64 ॥
ನೆನೆಯುತ್ತುಂ ಪೂಜಿಸುತ್ತಂ ಚರಣದೊಳಲರುತ್ತುಂ ಮರಲ್ದೀಕ್ಷಿಸುತ್ತುಂ
ಮುನಿಯುತ್ತುಂ ಮುದ್ದಿಸುತ್ತುಂ ತೊನೆದು ತವಕಿಸುತ್ತುರ್ವುತುಂ ಗರ್ವಿಸುತ್ತುಂ
ಜಿನುಗುತ್ತುಂ ಜೀವಿಸುತ್ತುಂ ಧಿಣಿಧಿಣಿರವದಿಂದಾಡುತುಂ ಪಾಡುತಿರ್ಪೊಂ-
ದನುರಾಗಂ ಮಾಡಿ ಪಂಪಾಪುರದರಸ ವಿರೂಪಾಕ್ಷ ರಕ್ಷಿಪ್ಪುದೆನ್ನಂ ॥ 65 ॥
ಎನಿಸುಂ ಮತ್ತನ್ಯದೈವಕ್ಕೆಱಗದ ಸಿರಮುಂ ನೇತ್ರಮುಂ ಶ್ರೋತ್ರಮುಂ ಮ-
ನ್ಮನಮುಂ ಮದ್ಬುದ್ಧಿಯುಂ ಮತ್ಕರತಳಯುಗಮುಂ ಜಿಹ್ವೆಯುಂ ಘ್ರಾಣಮುಂ ಮಿ-
ಕ್ಕಿನ ಸರ್ವಾಂಗಂಗಳುಂ ನಿಮ್ಮಯೆ ದೆಸೆಗೆ ಕರಂ ಚೇಷ್ಟಿಸುತ್ತೊರ್ಮೆಯುಂ ನಿ-
ಲ್ವಿನಮೆನ್ನೊಳ್ ಕೂಡಿ ಪಂಪಾಪುರದರಸ ವಿರೂಪಾಕ್ಷ ರಕ್ಷಿಪ್ಪುದೆನ್ನಂ ॥ 66 ॥
ಮುದದಿಂ ತ್ವತ್ಕೀರ್ತಿಯಂ ಕೇಳ್ವೆಡೆಯೊಳತುಳರೋಮಾಂಚದಿಂ ಸ್ಪಂದದಿಂ ಗ-
ದ್ಗದದಿಂ ಸ್ವೇದಂಗಳಿಂ ಕಂಪನದಿನೊಲವಿನಿಂ ಲೀಲೆಯಿಂ ಲೋಭದಿಂ ಸ-
ನ್ಮುದದಿಂ ಸಂತೋಷದಿಂ ಶಾಶ್ವತ ಸುಖಮುಖದಿಂ ಶೈವಸಾಮ್ರಾಜ್ಯ ಸಮ್ಯಕ್-
ಪದವಾಂತಿರ್ಪಂತೆ ಪಂಪಾಪುರದರಸ ವಿರೂಪಾಕ್ಷ ರಕ್ಷಿಪ್ಪುದೆನ್ನಂ ॥ 67 ॥
ಹರನಾಮಂ ಕರ್ಣಮಂ ತಾಗಿದ ಸಮಯದೊಳಾನಂದದಿಂದುರ್ಕಿ ರೋಮಾಂ-
ಕುರವೆಳ್ದಶ್ರುಪ್ರವಾಹಂ ಗಳಗಳನಿಳಿತಂದಂಗವಲ್ಲಾಡಿ ಭಿನ್ನ-
ಸ್ವರದಿಂದಂ ಗದ್ಗದಂ ಪುಟ್ಟುತೆ ಬೆಮರ್ವನಿಗಳ್ ಪೊಣ್ಮೆ ಸಲ್ಲೀಲೆಯಿಂದಿ-
ರ್ಪಿರವಂ ನೀನಿತ್ತು ಪಂಪಾಪುರದರಸ ವಿರೂಪಾಕ್ಷ ರಕ್ಷಿಪ್ಪುದೆನ್ನಂ ॥ 68 ॥
ಮನದೊಳ್ ವಾಕ್ಯಂಗಳೊಳ್ ನೋಳ್ಪೆಡೆಗಳೊಳೊಲವಿಂ ಮಾಳ್ಪ ಕಜ್ಜಂಗಳೊಳ್ ಕಾ-
ನನದೊಳ್ ಕಾಮಂಗಳೊಳ್ ತಣ್ಣೆಳಲೊಳೆ ಬಿಸಿಲೊಳ್ ಜಾಗ್ರದೊಳ್ ಸ್ವಪ್ನದೊಳ್ ಮೂ-
ರ್ಚ್ಛನೆಯೊಳ್ ದಾರಿದ್ರ್ಯದೊಳ್ ಸಂಪದದೊಳೆ ಸುಖದೊಳ್ ದುಃಖದೊಳ್ ದೇವ ನಿಮ್ಮಂ
ನೆನೆಯುತ್ತಿರ್ಪಂತೆ ಪಂಪಾಪುರದರಸ ವಿರೂಪಾಕ್ಷ ರಕ್ಷಿಪ್ಪುದೆನ್ನಂ ॥ 69 ॥
ಭರದಿಂದಂ ಭೀತಿಯಿಂದಂ ಶರಣವಚನದಿಂದಾಸೆಯಿಂ ಭಾಷೆಯಿಂದ-
ಚ್ಚರಿಯಿಂ ಡಂಭಿಂ ವೃಥಾಳಾಪದಿನಸವಸದಿಂ ಕಾಮದಿಂ ಕೋಪದಿಂ ಕೂ-
ರ್ಪರ ದಾಕ್ಷಿಣ್ಯಂಗಳಿಂ ಖ್ಯಾತಿಯಿನನುದಿನವೆಲ್ಲಂದದಿಂ ದೇವ ನಿಮ್ಮಂ
ಸ್ಮರಿಯಿಪ್ಪಂತಿತ್ತು ಪಂಪಾಪುರದರಸ ವಿರೂಪಾಕ್ಷ ರಕ್ಷಿಪ್ಪುದೆನ್ನಂ ॥ 70 ॥
ಚದುರಿಂದಂ ವೇಷಮಂ ತೋಱದೆ ನಿಜಗುಣಮಂ ಬೀಱದತ್ಯುಷ್ಣಮಂ ಹೇ-
ಱದೆ ಡಂಭಿಂ ಸಾರದೆಂತುಂ ಶರಣವಚನಮಂ ಮೀಱದತ್ತಿತ್ತಲುಂ ಜಾ-
ಱದೆ ಬೇಱೊಂದಿಚ್ಛೆಯಿಂ ಕೀಱದೆ ಪರವಶದಿಂ ತಾಱದೀ ಭಕ್ತಿಯಂ ಮಾ-
ಱದೆ ಬಾಳ್ವಂತಿತ್ತು ಪಂಪಾಪುರದರಸ ವಿರೂಪಾಕ್ಷ ರಕ್ಷಿಪ್ಪುದೆನ್ನಂ ॥ 71 ॥
ಇದನೊಲ್ವೆಂ ದೈನ್ಯಮಂ ಸೂಡದೆ ಪರವಧುವಂ ನೋಡದೇನೊಂದುಮಂ ಬೇ-
ಡದೆಯಾರಂ ಮಿಥ್ಯೆಯಿಂ ಕಾಡದೆ ಪರಸುಖದೊಳ್ ಬಾಡದುದ್ರೇಕದೊಳ್ ಕೋ-
ಡದೆ ಪಾಪಾಂಭೋಧಿಯೊಳ್ ಕೂಡದೆ ಚಪಳತೆಯಂ ನೀಡದತ್ಯಾಶೆಯಂ ಮಾ-
ಡದೆ ಬಾಳ್ವಂತಿತ್ತು ಪಂಪಾಪುರದರಸ ವಿರೂಪಾಕ್ಷ ರಕ್ಷಿಪ್ಪುದೆನ್ನಂ ॥ 72 ॥
ಸತಿ ಕಾರುಣ್ಯಂ ಕುಮಾರಂ ಮತಿ ಸಖನುರು ಸತ್ಯಂ ಪ್ರಧಾನಂ ವಿವೇಕಂ
ಸ್ತುತಿ ಭಂಡಾರಂ ಸುಧರ್ಮಂ ಕರಿತುರಗರಥಾಖ್ಯಂ ನಿರಾಶಾ-ಸ್ವದೇಶಂ
ಸತತಂ ತಾನಾಗಿ ಶಾಂತಿಸ್ಥಲದೊಳೆಸೆವ ಸದ್ಭಕ್ತಿಸಪ್ತಾಂಗರಾಜ್ಯ
ಸ್ಥಿತನಾಗಿರ್ಪಂತೆ ಪಂಪಾಪುರದರಸ ವಿರೂಪಾಕ್ಷ ರಕ್ಷಿಪ್ಪುದೆನ್ನಂ ॥ 73 ॥
ಗುರುವಂ ನಂಬಿರ್ದು ಮತ್ತಾ ಗುರುಕರುಣದೆ ಪಂಚಾಕ್ಷರೀ ಮಂತ್ರಮಂ ತಾ-
ಳ್ದು ರಹಸ್ಯಂ ಭಕ್ತಿಯಿಂದಂ ಜಪಮನೆಣಿಸಿ ಗುರ್ವಾಜ್ಞೆಯಂ ಮೀಱದತ್ಯಾ-
ದರದಿಂದಂ ನೆತ್ತಿಯೊಳ್ ಪೊತ್ತನುಪಮಸುಖದಿಂ ಬಾಳ್ವ ಭೃತ್ಯತ್ವಮಂ ಮ-
ದ್ಗುರುವೇ ನೀನಿತ್ತು ಪಂಪಾಪುರದರಸ ವಿರೂಪಾಕ್ಷ ರಕ್ಷಿಪ್ಪುದೆನ್ನಂ ॥ 74 ॥
ಅಲರಿಂ ಕೂರ್ತಿಟ್ಟೊಡಂ ಚಕ್ರದಿನುಱೆ ಮುಳಿದಂತಿಟ್ಟೊಡಂ ಹಂಸತೂಲ
ಸ್ಥಲದೊಳ್ ತಾಂ ಬೈತೊಡಂ ಮುಳ್ಗಳ ಹೊಸಹಸೆಯೊಳ್ ಬೈತೊಡಂ ಸ್ನೇಹ ದಿಂದಂ
ನಲವಿಂದಂ ಸ್ತೋತ್ರಮಂ ಮಾಡಿದೊಡೆ ಪಳಿದೊಡಂ ಸರ್ವ ಮೊಂದಂ ದ ಮೆಂ ದಾಂ
ಸಲೆ ಕಾಣ್ಬಂತಿತ್ತು ಪಂಪಾಪುರದರಸ ವಿರೂಪಾಕ್ಷ ರಕ್ಷಿಪ್ಪುದೆನ್ನಂ ॥ 75 ॥
ಎಸೆವೀ ಪಂಚಾಕ್ಷರೀಮಂತ್ರಮೆ ಗುರುತರಮಂತ್ರಂ ವಿಶುದ್ಧಾಂಗಲೇಪಂ
ಭಸಿತಂ ರುದ್ರಾಕ್ಷಿಯೇ ಭೂಷಣತತಿ ಪರಮಸ್ವಾಮಿ ನೀಂ ಪೂಜ್ಯನಾನಂ-
ದಸಮೇತಂ ಭಕ್ತನೇ ಸತ್ಕುಲಜನೆನಿಪಿದಂ ನಂಬಿ ಮತ್ತೇನುವಂ ಭಾ-
ವಿಸದಿರ್ಪಂತಿತ್ತು ಪಂಪಾಪುರದರಸ ವಿರೂಪಾಕ್ಷ ರಕ್ಷಿಪ್ಪುದೆನ್ನಂ ॥ 76 ॥
ಕರೆವಲ್ಲಿಂ ಮುನ್ನವೋ ಓ ಮಗನೆ ಮಗನೆ ಬಂದೆಂ ದಿಟಂ ಬಂದೆನೆಂದಾ-
ದರದಿಂದಂ ನೀನೆ ಬಂದೆನ್ನವಯವನಿತಂ ಮುಟ್ಟಿ ನೊಂದಾ ಬಳಲ್ದಾ
ಕರೆದಾ ಕಂದಾ ಎನುತ್ತುಂ ಕೃಪೆ ಮಿಗೆ ನಲವಿಂ ನೋಡಿ ಮುಂಡಾಡುತೆಂದುಂ
ಸಿರದೊಳ್ ಕೈಯಿಕ್ಕಿ ಪಂಪಾಪುರದರಸ ವಿರೂಪಾಕ್ಷ ರಕ್ಷಿಪ್ಪುದೆನ್ನಂ ॥ 77 ॥
ನಿಮಗೆನ್ನಂ ಮಾಱುಗೊಟ್ಟೆಂ ಪುರಹರ ನಿಮಗೆನ್ನಂ ಸದಾ ತೊಳ್ತುಗೊಟ್ಟೆಂ
ನಿಮಗೆನ್ನಂ ಸೂಱೆಗೊಟ್ಟೆಂ ನಿಮಗೆ ಹರುಷದಿಂದೊಚ್ಚತಂ ಕೊಟ್ಟೆನಾಹಾ
ನಿಮಗೆನ್ನಂ ಮಚ್ಚುಗೊಟ್ಟೆಂ ಗುರುವೆ ಘನವೆ ಸಂತೋಷದಿಂದೊಪ್ಪುಗೊಟ್ಟೆಂ
ನಿಮಗೆನ್ನಂ ದೇವ ಪಂಪಾಪುರದರಸ ವಿರೂಪಾಕ್ಷ ರಕ್ಷಿಪ್ಪುದೆನ್ನಂ ॥ 78 ॥
ಮುದದಿಂದಂ ಕಾಮಮಂ ಕೋಪಮನುಱೆ ಜಱೆದಾಮೋಹಮಂ ದಾಂಟಿ ಲೋಭ-
ತ್ವದ ಬೇರಂ ಕಿಳ್ತು ಮಾತ್ಸರ್ಯಮನುಡುಗಿ ಮದಾಲೇಪಮಂ ತೀರ್ಚಿಯಾಶಾ
ಸದನಕ್ಕಾಸತ್ತು ಬೇಸತ್ತತುಳಶಿವಸುಖಾವಾಸದೊಳ್ ಭಕ್ತಿಯಿಂ ತ್ವತ್
ಪದಮಂ ಸಾರ್ವಂತೆ ಪಂಪಾಪುರದರಸ ವಿರೂಪಾಕ್ಷ ರಕ್ಷಿಪ್ಪುದೆನ್ನಂ ॥ 79 ॥
ಎನಗಾರ್ ದೈವಂ ವಿರೂಪಾಕ್ಷನೆ ಗುರುವೆನಗಾವಂ ವಿರೂಪಾಕ್ಷನೇ ಕೇಳ್
ಜನಕಂ ತಾನಾರ್ ವಿರೂಪಾಕ್ಷನೆ ಜನನಿಯದಾವಳ್ ವಿರೂಪಾಕ್ಷನೇ ಆ-
ಳ್ದನದಾವಂ ಶ್ರೀವಿರೂಪಾಕ್ಷನೆ ನಿಜಸಖನಾವಂ ವಿರೂಪಾಕ್ಷನೇ ಎಂ-
ಬಿನಿತಂ ಸೈತಿತ್ತು ಪಂಪಾಪುರದರಸ ವಿರೂಪಾಕ್ಷ ರಕ್ಷಿಪ್ಪುದೆನ್ನಂ ॥ 80 ॥
ಮನೆದೈವಂ ಮುಖ್ಯದೈವಂ ಸುಖತರಕುಲದೈವಂ ಪರಾನಂದದೈವಂ
ಮನದೊಳ್ ನಟ್ಟಿರ್ಪ ದೈವಂ ಶರಣಜನಮಹೋತ್ಸಾಹದೈವಂ ಕರಂ ಪೆಂ-
ಪಿನ ದೈವಂ ದೈವದೈವಂ ಸಕಲಸುಕೃತದೈವಂ ಸುಧಾಕಾರದೈವಂ
ಘನದೈವಂ ನೀನೆ ಪಂಪಾಪುರದರಸ ವಿರೂಪಾಕ್ಷ ರಕ್ಷಿಪ್ಪುದೆನ್ನಂ ॥ 81 ॥
ಪರಮಾರ್ಥಂ ನಿಮ್ಮ ಸಮ್ಯಕ್ ಪರತರನಿಜಮಂ ಭಾವಿಸಲ್ ಬಣ್ಣಿಸಲ್ ತಾ-
ಮರಸೋದ್ಭೂತಂಗೆ ಶಕ್ರಂಗಸುರರಿಪುಗೆ ವೇದಕತರ್ಕ್ಯಂ ದಲೆಂದಂ-
ದೊರೆವಂತಾಂ ಮರ್ತ್ಯನೆಂಬೀ ವಚನಮೆ ಪರಿಹಾಸಾಸ್ಪದಂ ದೇವ ನೀನೇ
ಕರುಣಂಗೆಯ್ಯುತ್ತೆ ಪಂಪಾಪುರದರಸ ವಿರೂಪಾಕ್ಷ ರಕ್ಷಿಪ್ಪುದೆನ್ನಂ ॥ 82 ॥
ಬಿಸವಂ ತಾಳ್ದಿರ್ದು ನಿತ್ಯಂ ಸ್ಮರನನುರಿಪಿಯುಂ ಕಾಮಿ ಸರ್ವೇಶ್ವರಂ ಮ-
ತ್ತಸಮಂ ಭಿಕ್ಷೇಶ್ವರಂ ಸರ್ವಮನಳಿದನಘಂ ಚಂದ್ರನಂ ಸೂಡಿಯುಂ ಕೋ-
ಪಸಮಾಯುಕ್ತಂ ವಿರುದ್ಧಪ್ರಕೃತಿ ತಿಳಿಯದಾರ್ಗಂ ಕೃಪಾವಾರ್ಧಿ ನಿನ್ನಂ-
ಘ್ರಿಸರೋಜಂದೋಱಿ ಪಂಪಾಪುರದರಸ ವಿರೂಪಾಕ್ಷ ರಕ್ಷಿಪ್ಪುದೆನ್ನಂ ॥ 83 ॥
ಸ್ಥಿರವಲ್ಲಂ ನೋಡೆ ಸರ್ಗಸ್ಥಿತಿಲಯವಾಗಿರ್ಪುದಿಂತೀ ಪ್ರಪಂಚಂ
ಸ್ಥಿರರೂಪಂ ನೀನೆ ಕರ್ಮದ್ವಿತಯವಿರಹಿತಂ ನೀನೆ ಶುದ್ಧಾತ್ಮಕಂ ನೀ-
ನೆ ರಸಾದಿವ್ಯೋಮದಿಕ್ಪೂರಿತ ನಿಜನಿಧಿ ನೀನೆಂಬಭಿಜ್ಞಾನಮಂ ಮದ್
ಗುರುವೇ ನೀನಿತ್ತು ಪಂಪಾಪುರದರಸ ವಿರೂಪಾಕ್ಷ ರಕ್ಷಿಪ್ಪುದೆನ್ನಂ ॥ 84 ॥
ಅಪರಿಚ್ಛಿನ್ನಂ ಸ್ವತಂತ್ರಂ ನಿರವಧಿಯಮಳಂ ಶಂಕರಂ ನಿತ್ಯನಾನಂ-
ದಪದಂ ಶಾಂತಾರ್ಕಕೋಟಿಪ್ರಭನಜರನಚಿಂತ್ಯಂ ಪರಂಧಾಮರೂಪಂ
ವಿಪುಳಜ್ಞಾನಾಬ್ಧಿ ಸತ್ಯಂ ನಿರುಪಮನಿಧಿ ನೀನೆಂಬಭಿಜ್ಞಾನಮಂ ನೀಂ
ಕೃಪೆಯಂ ಮಾಡುತ್ತೆ ಪಂಪಾಪುರದರಸ ವಿರೂಪಾಕ್ಷ ರಕ್ಷಿಪ್ಪುದೆನ್ನಂ ॥ 85 ॥
ಸ್ಥೂಲಂ ಸೂಕ್ಷ್ಮಂ ಸುಸೂಕ್ಷ್ಮಂ ಸುಲಭಸುಲಭಂ ಪುಣ್ಯಪಾಪಪ್ರದೂರಂ
ನೀಲಗ್ರೀವಂ ಚಿದಾತ್ಮಂ ಭವನಭವನನೂನಾದ್ಯನಾದ್ಯಂತಶೂನ್ಯಂ
ಕಾಲಘ್ನಂ ಕಾಲರೂಪಂ ನತನಕರವಿಪಜ್ಜಾಲವಿಚ್ಛೇದಲೀಲಾ
ಲೋಲಂ ನೀಂ ನೀನೆ ಪಂಪಾಪುರದರಸ ವಿರೂಪಾಕ್ಷ ರಕ್ಷಿಪ್ಪುದೆನ್ನಂ॥ 86 ॥
ಶಿವ ಸರ್ವಾಧಾರ ಗಂಗಾಧರ ಪುರಹರ ಸರ್ವಜ್ಞ ಸರ್ವೇಶ ಗೌರೀ-
ಧವ ನೀಲಗ್ರೀವ ಕಾಲಾಂತಕ ಪಶುಪತಿ ಫಾಲಾಕ್ಷ ಭೋಗೀಂದ್ರಭೂಷಾ-
ಭವ ರುದ್ರೇಶಾನ ಭರ್ಗ ಪ್ರಮಥನಿಧಿ ಮಹಾದೇವ ಮಾರಾರಿ ನಿತ್ಯೋ-
ತ್ಸವ ಸತ್ಯಪ್ರೇಮಿ ಪಂಪಾಪುರದರಸ ವಿರೂಪಾಕ್ಷ ರಕ್ಷಿಪ್ಪುದೆನ್ನಂ ॥ 87 ॥
ಗಿರಿಶ ಶ್ರೀಕಂಠ ದಕ್ಷಾಧ್ವರಹರ ವೃಷಭಾರೂಢ ಕಾಪಾಲಿಯಂಧಾ-
ಸುರವೈರಿ ವ್ಯೋಮಕೇಶ ಕ್ರತುಕುಲನೃಪತಿ ಸ್ಥಾಣು ಭೂತೇಶ ಪಂಚಾ-
ವರಣಪ್ರತ್ಯಕ್ಷ ಪಂಚಾನನ ಮೃಡ ಗಜಚರ್ಮಾಂಬರ ಶ್ರೇಷ್ಠ ವಿಶ್ವೋ-
ದರ ಸದ್ಯೋಜಾತ ಪಂಪಾಪುರದರಸ ವಿರೂಪಾಕ್ಷ ರಕ್ಷಿಪ್ಪುದೆನ್ನಂ ॥ 88 ॥
ಹರ ಭೀಮ ತ್ರ್ಯಕ್ಷ ಭಕ್ತವ್ರಜಹೃದಯ ಪಿನಾಕಿ ತ್ರಿಶೂಲಿ ತ್ರಿಕಾಲಾ-
ಕ್ಷರ ನಿರ್ದೇಹಾಭವಾ ಧೂರ್ಜಟಿ ಜಟಿಲ ಶಿರೋಮಾಲಿ ಶಂಭು ಪ್ರಪಂಚೋ-
ತ್ತರ ಪಂಚಬ್ರಹ್ಮ ಪಂಚಾಧಿಕ ಹಿಮಕರಚೂಡಾಮಣೀ ವೀರಭದ್ರೇ-
ಶ್ವರ ಕಾಲಾತೀತ ಪಂಪಾಪುರದರಸ ವಿರೂಪಾಕ್ಷ ರಕ್ಷಿಪ್ಪುದೆನ್ನಂ ॥ 89 ॥
ವರಕಾರುಣ್ಯಾಬ್ಧಿ ಷಡ್ದರ್ಶನಹಿತ ಪರಮಸ್ವಾಮಿ ಸರ್ವಜ್ಞಪಂಚಾ-
ಕ್ಷರ ಗರ್ಭಾವಾಸ ಮಾದ್ಯತ್ ಪ್ರಮಥಜನಪರೀತೋಷ ವಿಶ್ವೇಶ ತತ್ತ್ವಾ-
ಕರ ತಾರಾದ್ರೀಶ ನಾರಾಯಣನಯನಲಸತ್ಪಾದ ನಾದಾತ್ಮ ಭಕ್ತಾ-
ತುರಚಿತ್ತಗ್ರಾಹಿ ಪಂಪಾಪುರದರಸ ವಿರೂಪಾಕ್ಷ ರಕ್ಷಿಪ್ಪುದೆನ್ನಂ॥ 90 ॥
ಶಿವ ನಿಮ್ಮಿಂ ಪುಟ್ಟಿತೀ ಮಾಯೆ ಗಡೆನಿಪಿದನಾಂ ಸೈರಿಸೆಂ ಪುಟ್ಟಿತೆಂಬೊಂ-
ದವಿಚಾರಂ ನಿಷ್ಕ್ರಿಯಾತ್ಮಪ್ರಭುತನಕೆ ಕರಂ ಹಾನಿ ಶುದ್ಧಾತ್ಮನೊಳ್ ಶಂ-
ಭುವಿನೊಳ್ ಸಮ್ಯಕ್ ಪರಾನಂದದ ತವನಿಧಿಯೊಳ್ ನಿನ್ನೊಳೀ ಭ್ರಾಂತಿಯೆಂಬಾ
ಶ್ರವೆಯಂ ತರ್ಗೊತ್ತಿ ಪಂಪಾಪು ರದರಸ ವಿರೂಪಾಕ್ಷ ರಕ್ಷಿಪ್ಪುದೆನ್ನಂ ॥ 91 ॥
ಮೊದಲಿಂದಂ ಕೂರ್ಮರೋಮಂ ಬಗೆಯ ಶಶಿವಿಷಾಣಂ ವಿಯತ್ ಪುಷ್ಪದಂತಿ-
ಲ್ಲದುದೇ ಸತ್ಯಂ ಪ್ರಪಂಚೆಂದಱಿದು ತಿಳಿದು ನಿಷ್ಕಾಮ ನಿರ್ಮಾಯ ನಿತ್ಯಾ-
ಭ್ಯುದಯಾನಂದೈಕತೇಜೋನಿಧಿ ನಿರುಪಮ ನಿರ್ಲೇಪ ನಿರ್ವಾಣ ನೀನೆಂ-
ಬಿದನೇ ಸೈತಿತ್ತು ಪಂಪಾಪುರದರಸ ವಿರೂಪಾಕ್ಷ ರಕ್ಷಿಪ್ಪುದೆನ್ನಂ ॥ 92 ॥
ತೋಱುತ್ತಿರ್ಪೀ ಜಗಂ ತಾನಱಿವಿನ ಮುಖದೊಳ್ ತೋಱದಿರ್ಪಂತೆ ತೋರ್ಕುಂ
ತೋಱಲ್ ಪೇಳಲ್ಕೆ ಕೇಳಲ್ಕಸದಳಮೆನಿಪಾ ಬ್ರಹ್ಮತಾ ಬ್ರಹ್ಮವಾಗು-
ತ್ತಾಱುಂ ಬಣ್ಣಕ್ಕಮೇಳುಂ ತನುವಿನ ಪೊರೆಗೆಂಟುಂ ಶರೀರಕ್ಕೆ ಮಿಕ್ಕುಂ
ಮೇಱಿರ್ಪಂತಿತ್ತು ಪಂಪಾಪುರದರಸ ವಿರೂಪಾಕ್ಷ ರಕ್ಷಿಪ್ಪುದೆನ್ನಂ ॥ 93 ॥
ತೊಳಗುತ್ತಿರ್ಪರ್ಕನಿಂದಾಗಸವೆನಿತನಿತಂ ಮಾಡಿದಂತಿರ್ಪ ಧಾತ್ರೀ-
ತಳಮೆಲ್ಲಂ ಚಂದ್ರನಿಂದಂ ಸಮೆದುದೆನಿಸಿದಂತಿರ್ಪ ದಿಕ್ಸಂಕುಳಂ ನಿ-
ರ್ಮಳವಿದ್ಯುಲ್ಲೇಖೆಯಿಂ ನಿರ್ಮಿಸಿದವೊಲೆಸೆದಿರ್ಪಾ ಪರಂಜ್ಯೋತಿಯೆನ್ನೊಳ್
ಬೆಳಗುತ್ತಿರ್ಪಂತೆ ಪಂಪಾಪುರದರಸ ವಿರೂಪಾಕ್ಷ ರಕ್ಷಿಪ್ಪುದೆನ್ನಂ ॥ 94 ॥
ಗುರುವಿಂ ಸುದ್ಧಾತ್ಮನಾದೆಂ ಗುರುವಿನ ಕೃಪೆಯಿಂದಂ ಜಗತ್ ಪೂಜ್ಯನಾದೆಂ
ಗುರುವಿಂ ನಿಷ್ಕಾಮನಾದೆಂ ಘನತರಗುರುವಿಂ ಶಾಂತಿಸಂಪನ್ನನಾದೆಂ
ಗುರುವಿಂ ಸರ್ವಜ್ಞನಾದೆಂ ದಿಟವೆನಿಪಿದನೆನ್ನೊಳ್ ದಿಟಂ ಮಾಡುತುಂ ಮದ್
ಗುರುವೇ ಗೌರೀಶ ಪಂಪಾಪುರದರಸ ವಿರೂಪಾಕ್ಷ ರಕ್ಷಿಪ್ಪುದೆನ್ನಂ ॥ 95 ॥
ಎನ್ನಾನಂದಾಬ್ಧಿಯೇ ಎನ್ನನುಪಮಸುಧೆಯೇ ಎನ್ನ ಪುಣ್ಯಸ್ವರೂಪವೇ
ಎನ್ನಾಯುಃಪುಂಜವೇ ಎನ್ನಯ ಗತಿಮತಿಯೇ ಎನ್ನ ವಿಜ್ಞಾನಮೂರ್ತಿ
ಎನ್ನತ್ಯಾಶ್ಚರ್ಯವೇ ಎನ್ನತಿಶಯ ಗುರುವೇ ಎನ್ನ ಚೈತನ್ಯದಾಗೇ
ಎನ್ನ ಪ್ರಾಣೇಶ ಪಂಪಾಪುರದರಸ ವಿರೂಪಾಕ್ಷ ರಕ್ಷಿಪ್ಪುದೆನ್ನಂ ॥ 96 ॥
ನಿತ್ಯಜ್ಞಾನೈಕಮೂರ್ತೀ ಸುಖತರಪರಮಾನಂದ ಸರ್ವಜ್ಞ ಮೂರ್ತೀ
ನಿತ್ಯತ್ವಾಧಾರಮೂರ್ತೀ ನಿರವಯವಮಹಾಮೂರ್ತಿ ನಿರ್ಲೇಪಮೂರ್ತೀ
ನಿತ್ಯಪ್ರತ್ಯಕ್ಷಮೂರ್ತೀ ನಿಖಿಲಗುಣಗಣಾಧಾರ ನಿರ್ಮಾಯಮೂರ್ತೀ
ನಿತ್ಯಶ್ರೀಮೂರ್ತೀ ಪಂಪಾಪುರದರಸ ವಿರೂಪಾಕ್ಷ ರಕ್ಷಿಪ್ಪುದೆನ್ನಂ ॥ 97 ॥
ಬಿಡೆನೀಶಾ ನಿಮ್ಮ ಪಾದಾಬ್ಜಮನೆಲೆಲೆ ಬಿಡೆಂ ಸೀಳ್ದೊಡಂ ಪೋಳ್ದೊಡಂ ಪೊ-
ಯ್ದೊಡಮಂದಿಂದೆಂದುಮೆಂತು ಬಿಡೆನಭವ ಬಿಡೆಂ ಶಂಕರಾ ಮಾಣೆನಾಂ ಬ ಲ್-
ವಿಡಿದೆಂ ಮತ್ತತ್ತಮಿತ್ತಂ ಚಲಿಯಿಸದೆಲೆ ಮತ್ಸ್ವಾಮಿ ನಿಮ್ಮಾಜ್ಞೆಯಿಂದಂ
ಮೃಡನೇ ಭಕ್ತಾರ್ಥಿ ಪಂಪಾಪುರದರಸ ವಿರೂಪಾಕ್ಷ ರಕ್ಷಿಪ್ಪುದೆನ್ನಂ ॥ 98 ॥
ಕರ್ತಾರಂ ನೀನೆ ಪಂಪಾಪುರದರಸ ವಿರೂಪಾಕ್ಷ ರಕ್ಷಿಪ್ಪುದೆನ್ನಂ
ಭರ್ತಾರಂ ನೀನೆ ಪಂಪಾಪುರದರಸ ವಿರೂಪಾಕ್ಷ ರಕ್ಷಿಪ್ಪುದೆನ್ನಂ
ಹರ್ತಾರಂ ನೀನೆ ಪಂಪಾಪುರದರಸ ವಿರೂಪಾಕ್ಷ ರಕ್ಷಿಪ್ಪುದೆನ್ನಂ
ಕೂರ್ತಿಂತೋರಂತೆ ಪಂಪಾಪುರದರಸ ವಿರೂಪಾಕ್ಷ ರಕ್ಷಿಪ್ಪುದೆನ್ನಂ ॥ 99 ॥
ಭರದಿಂ ಕೇಳ್ದೋದುವಾನಂದದೊಳತಿಶಯದಿಂ ಮಚ್ಚಿ ಲಾಲಿಪ್ಪವರ್ಗಾ-
ದರದಿಂ ನಿತ್ಯಾಯುವಂ ಸಂಪದವನಭವನೀಯುತ್ತುಮಿರ್ಕೆಂದನೂನಂ
ಧರೆಯೊಳ್ ಕೈಕೊಂಡು ರಕ್ಷಾಶತಕವನೊಲವಿಂ ಪ್ರೇಮದಿಂ ನಚ್ಚಿ ಪೇಳ್ದಂ
ಹರಿದೇವಂ ದೇವ ಪಂಪಾಪುರದರಸ ವಿರೂಪಾಕ್ಷ ರಕ್ಷಿಪ್ಪುದೆನ್ನಂ ॥ 100 ॥
ಪಿಂದೇನೇನಾಗಿ ಬಂದೆಂ ಮನುಜಜನನಮುಂ ತಾನಿದೆಂತಾಯ್ತು ಸಂಸಾ
ರಂ ದೋಷಂ ಕಾಮಲೋಭಾದಿಗಳೆನಗಮಿವೆಲ್ಲಿಂದೆ ಬಂದತ್ತು ಮತ್ತಂ
ಮುಂದೇನಾದಪ್ಪೆನೆಂದಾನಱಿಯದೆ ಭಯದಿಂ ಶಂಕಿಸುತ್ತಿರ್ದಪೆಂ [ನಿಃ]
ಸಂದೇಹಂ ಮಾಡಿ ಪಂಪಾಪುರದರಸ ವಿರೂಪಾಕ್ಷ ರಕ್ಷಿಪ್ಪುದೆನ್ನಂ॥ 101 ॥