ನಿಜಲಿಂಗಶತಕ
ನಿತ್ಯ ನಿರುಪಮ ವಿಶ್ವಮೂರ್ತಿ ನಿಜಲಿಂಗೇಶ
ನುತ್ತಮೋತ್ತಮವೆನಿಪ ಶತಕವನು ಬಲ್ಲಂತೆ
ಬಿತ್ತರಿಪೆ ವಾರ್ಧಿಕ[ದ]ಷಟ್ಪದಿಗಳಿಂದೆ ಮನವಿತ್ತು ಸುಜನರು ಕೇಳ್ವುದು॥ಪಲ್ಲ॥
ಗೋಪ ಗೋಪತಿನಮಿತ ಗೋಕರ್ಣಲಂಕಾರ
ಗೋಪುತ್ರಿಯರ್ಧಾಂಗ ಗೋಜಾತಶತ್ರುಧರ
ಗೋಪವಾಹನಮಿತ್ರ ಗೋತನಯಶಿರಪಾತ್ರ ಗೋವಸನಪಂಚಾನನ
ಗೋಪುತ್ರ ಸಂಹನನಗೋರಹಿತ ಖಳಶಿಕ್ಷ
ಗೋಪ್ರೀಯ ಶಿಶುಧರನೆ ಗೋತ್ರಿತಯ ಘನಮಹಿಮ
ಗೋಪಂಚಧರನಾಶ ನಿಜಲಿಂಗ ಭವಭಂಗ ಶರಣಜನವರದ ಜಯತು ॥ 1॥
ಹರಿಗರ್ಭಶಿರಪಾಣಿ ಹರಿತನುಜವಪುದಹನ
ಹರಿಮುಖ್ಯಸುರವಿನುತ ಹರಿಕೋಟಿಹರಿರೂಪ
ಹರಿಮಿತ್ರ ಹರಿಗಾತ್ರ ಹರಿಭೂಷ ಹರಿನಾಶ ಹರಿಣಾಂಕಧರ ಶಂಕರ
ಹರಿಯಾಪ್ತ ಹರಿಜನಕ ಹರಿನೇತ್ರ ದಯಭರಿತ
ಹರಿಮೌಳಿ ಹರಿವಸನ ಹರಿಗಮನಸಖ ಕರುಣ
ಹರಿಕಾರಿ ಹರಿಧರನೆ ನಿಜಲಿಂಗ ಭವಭಂಗ ಶರಣಜನವರದ ಜಯತು ॥ 2 ॥
ಅಮೃತೋದ್ಭವ ಮುಖ್ಯ ಮುನಿವಿನುತ ಸುಪ್ರೀತ
ಅಮೃತೋದ್ಭವಶೇಖರ ಭವಭಂಜಗಿರಿಚಾಪ
ಅಮೃತೋದ್ಭವನಯನಮಿತ್ರನಾರದ ಸ್ತೋತ್ರ ಅಮೃತಾಕರ ಧೂರ್ಜಟಿ
ಅಮೃತಾಖ್ಯಾಯ ಪಾರ್ವಪ್ರಿಯ ನುತಕಾಯ
ಅಮೃತಶರೀರ ಭವದೂರ ಸದ್ಗುಣಸಾರ
ಅಮೃತಚರಿತ್ರ ಘನ ನಿಜಲಿಂಗ ಭವಭಂಗ ಶರಣಜನವರದ ಜಯತು ॥ 3 ॥
ಶಿವಚರಿತ ದಯಭರಿತ ಶಿವಗಾತ್ರ ಶಿಖಿನೇತ್ರ
ಶಿವಭೂಷ ಶಿವನಾಶ ಶಿವಪ್ರೀಯ ಶಿರಗೈಯ
ಶಿವನಾಮ ಸಲೆ ಭೀಮ ಶಿವಧರನೆ ಶಂಕರನೆ ಶಿವರಮಣ ಸ್ತೋತ್ರಚರಣ
ಶಿವಶಯನ ಸುತದಹನ ಶಿವಕಥನ ಪುರಮಥನ
ಶಿವಕಳೆಯ ಶಿವನಿಳಯ ಶಿವಶಿಕ್ಷ ಸುರರಕ್ಷ
ಶಿವ ದುರಿತಗಜಸಿಂಹ ನಿಜಲಿಂಗ ಭವಭಂಗ ಶರಣಜನವರದ ಜಯತು ॥ 4॥
ಈಶನೇಕರುಣಿ ಜಗದೀಶನೇರಜತಾದ್ರಿ
ವಾಸನೇಅಖಿಳಭೂತೇಶನೇತುಹಿನಗಿರಿ
ಜೇಶನೇಆಕಾಶಕೇಶನೇದೈತ್ಯಪುರನಾಶನೇನಿರ್ದೋಷನೇ
ಶೇಷನಂ ಧರಿಸಿದ ವಿಲಾಸನೇ ಸ್ಮರಭಸ್ಮ
ಭೂಷನೇ ಭಕ್ತರೋಲ್ಲಾಸನೇಶಂಭು ಸ
ರ್ವೇಶನೇಧವಳಾಂಗ ನಿಜಲಿಂಗ ಭವಭಂಗ ಶರಣಜನವರದ ಜಯತು॥ 5 ॥
ನೋಡುತಿಪ್ಪುದರಿಂದೆ ಕೇಳುವನ ದೆಸೆಯಿಂದೆ
ರೂಢಿಯೊಳು ಮರಣವಾದಪನ ತಾತನ ಪಿತನ
ಪಾಡುಗೆಲಿಸಿದನ ತನುಭವನ ಬಾಣಕೆ ಸಿಲ್ಕದವನ ಜನಕನ ತನುಜನ
ಕೂಡೆ ಕಾಳಗವಿತ್ತು ಮಡಿದನೊಳು ಸ್ನೇಹವನು
ಮಾಡಿದಪನಯ್ಯನಿಂದರಳುವ ಸುಮಾರಿಯನು
ಸೂಡಿದನೆ ಸುಚರಿತ್ರ ನಿಜಲಿಂಗ ಭವಭಂಗ ಶರಣಜನವರದ ಜಯತು॥ 6 ॥
ಧ್ವನಿಗೇಳುವದರ ನಾಮದನ ಜನಕನ ಸುತನ
ತನುಜನನುಜನ ಬೊಪ್ಪನಣುಗನೊಡೆಯನ ಸತಿಯ
ಘನಗರ್ವದಿಂದೆ ಸೆರೆವಿಡಿದನಗ್ರಜನೆನಿಪ ದಿಗ್ವೆಸರ ತಾಳಿದವನ
ಅನುಜೆಯರಸನಭಾವನಾತ್ಮಜನ ಸತಿಯಳ
ಯ್ಯನಪಿತನ ಜನಕನಜನಕನಯ್ಯನ
ಯ್ಯನತಾತಶಿರಪಾಣಿ ನಿಜಲಿಂಗ ಭವಭಂಗ ಶರಣಜನವರದ ಜಯತು॥ 7॥
ಪ್ರಥಮರಾಶಿಯ ಪೆಸರ ವಾಹನಗೆ ಶಪಿಸಿದನ
ಸತಿಯ ರಮಣನಬಳಿಗೆ ಕುಟಿಲವೇಷದೊಳೈದಿ
ಹತಗೈದ ಸ್ನೇಹಿತನ ಪಡೆದಂಥ ಪೊಡವಿಪನ ಪಿರಿಯ ಸೊಸೆಯಳ ಮಾತೆಯ
ಸತತ ಧರಿಸಿದನ ಶತ್ರುವಿನಣ್ಣನೊಡೆಯನಿಗೆ
ಸುತನಾದನಗ್ರಜನ ಶರದಿಂದೆ ಕೆಡಪಿದನ
ಅತಿಶಯದ ಸ್ನೇಹಿತನೆ ನಿಜಲಿಂಗ ಭವಭಂಗ ಶರಣಜನವರದ ಜಯತು॥ 8 ॥
ಧರಣಿಯಮರರ್ಗೀವ ಕಾಂಚನದ ನಾಮದಲಿ
ಕರಸಿಕೊಳುತಿರ್ಪ ದಿಗ್ವಸನ ಸತಿಯಳ ಪಿತನ
ಸಿರಗಡಿದನವ್ವೆಯಣುಗನ ಜಠರವನು ಸುತ್ತಿಕೊಂಡಿರ್ಪನಾರಾತಿಯ
ಪರಮಸತ್ವಕೆ ಸೋತು ಸುಧೆಯನಿತ್ತನ ಸುತನ
ವರಸತಿಯಳಗ್ರಜನ ಪಟ್ಟದರಸಿಯ ಸಹೋ
ದರನ ಜಾಮಾತಹರ ನಿಜಲಿಂಗ ಭವಭಂಗ ಶರಣಜನವರದ ಜಯತು ॥ 9 ॥
ಸವಿರುಚಿಯ ತೋರುತಿರ್ಪವು ಸಪ್ತವಿರುತಿಹನ
ತವೆ ಸಖನ ವಾಹನವ ಧರಿಸಿದನ ಪಿತನ ವಸ
ನವ ಮಾಡಿಕೊಂಡಿಹಳ ತಸ್ಕರನಯನನ ತದ್ವರ್ಣಗರ್ಭನ ತಮ್ಮನ
ವಿವರವಾಗಿರುತಿರ್ಪ ಧ್ವಜದಗಂಧಿಯಪತಿಯ
ಯುವತಿಯಳ ತನುಭವ ಪೌತ್ರಗೊಲಿದೊಲಿದು ಬಾ
ಣವನಿತ್ತು ರಕ್ಷಿಸಿದ ನಿಜಲಿಂಗ ಭವಭಂಗ ಶರಣಜನವರದ ಜಯತು ॥ 10 ॥
ಕಡುಚಲುವೆ ಪಾರ್ವತಿಯ ತೊಡೆಯಡಿಯೊಳಿಂಬಿಟ್ಟು
ನಿಡುಗುರುಳ ನೇವರಿಸಿ ಕುಡಿಪುರ್ಬುಗಳ ತೀಡಿ
ಇಡಿಕಿರಿದ ನುಣ್ಗಲ್ಲವಿಡಿದು ನುಣ್ಪಿಡುತ ಪೊಂಗೊಡಮೊಲೆಯೊಳುಗುರನಿಡುತ
ಮುಡಿಸಿ ಪೂಸರಗಳನು ಮುಡಿವಿಡಿದು ಚೆಂದುಟಿಯ
ಬಿಡದೆ ಚುಂಬನಗೈವುತಡಿಗಡಿಗೆ ಹಾಯೆನುತ
ಬೆಡಗಿನಿಂದೊಡವೆರೆದ ನಿಜಲಿಂಗ ಭವಭಂಗ ಶರಣಜನವರದ ಜಯತು॥ 11॥
ಗಳರವದಿ ಚುಂಬನಂಗಳ ರವದಿಯಂಗುಲಂ
ಗಳ ರವದಿ ಕಂಕಣಂಗಳ ರವದಿ ಕಾಲ್ಗೆಜ್ಜೆ
ಗಳ ರವದಿ ತಾಡನಂಗಳ ರವದಿ ಹಾರಹೀರಾವಳಿಯ ರವದಿಂದಲಿ
ಹೊಳೆಹೊಳೆವ ಶಕುನಿಮಂಚದ ರವದಿ ಜಾಣ್ವಾತು
ಗಳನಾಡುತಿರ್ಪ ರವದಿಂದೆ ಗಿರಿರಾಜಸುತೆ
ಯೊಳುಸುರುತ ಸವಿಗರೆವ ನಿಜಲಿಂಗ ಭವಭಂಗ ಶರಣಜನವರದ ಜಯತು ॥ 12 ॥
ಮೂರುಮೊಗವಿರುತಿಹನೆ ಪಂಚನೇತ್ರನೆ ದಿತಿಸು
ತಾರಾತಿಸಂಹರನೆ ಭಾವಜನ ಸ್ನೇಹಿತನೆ
ತಾರಾಧಿಪತಿಪಾಣಿ ತ್ರಿಶೂಲಮೌಳಿ ವೃಷಶಿರಪಾತ್ರ ಬ್ರಹ್ಮನಮನ
ಮೂರುಪುರರಕ್ಷಕನೆ ಬಲಿಸುತನ ದಹಿಸಿದನೆ
ಬಾರೆಂದು ವಿಕಳದಿಂ ಕರೆವ ಗಿರಿಜೆಯ ಬಳಿಗೆ
ಸಾರಿ ಬಿಗಿದಪ್ಪಿದನೆ ನಿಜಲಿಂಗ ಭವಭಂಗ ಶರಣಜನವರದ ಜಯತು ॥ 13 ॥
ಅಂಗಜನ ಮುಂಗಯ್ಯ ಗಿಣಿಯೆ ಮುತ್ತಿನ ಮಣಿಯೆ
ತುಂಗಜವ್ವನೆಯೆ ಸದ್ಗುಣಶ್ರೇಣಿ ಫಣಿವೇಣಿ
ಭೃಂಗಕುಂತಳೆ ಚಂದ್ರಮುಖಿಯೆ ಹರಿಣಾಂಬಕಿಯೆ ಶೃಂಗಾರ ಹೊಂತಕಾರಿ
ಪೊಂಗಳಸಕುಚದ ಮೋಹನ್ನೆ ಮಾನಿನಿ ರನ್ನೆ
ಇಂಗಿತವ ಬಲ್ಲ ವೈಯ್ಯಾರಿ ಮನಹಾರಿಯೆನು
ತಂಗನೆಯ ತಕ್ಕೈಪ ನಿಜಲಿಂಗ ಭವಭಂಗ ಶರಣಜನವರದ ಜಯತು ॥ 14 ॥
ಏತಕೆನ್ನೊಳು ಮುನಿಸು ಭೂತೇಶ ದಯಭರಿತ
ನೀತಿಸಾರವ ಬಲ್ಲ ಜಾತವಿರಹಿತ ಪ್ರಾಣ
ನಾಥ ಚಿತ್ತೈಸು ಕಾಮಾತುರವು ಹೆಚ್ಚಿರಲು ನಾ ತಾಳಲಾರೆನಭವ
ಪ್ರೀತಿಯಿಂದಲಿ ಮಕರಕೇತುವಿನ ತಂತ್ರದೊಳ
ಗೋತು ಕೂಡೆನಲದ್ರಿಜಾತೆಯಳ ಬಿಗಿಯಪ್ಪು
ತೀ ತೆರದೊಳಾಡುತಿಹ ನಿಜಲಿಂಗ ಭವಭಂಗ ಶರಣಜನವರದ ಜಯತು॥ 15॥
ಘುಡುಘುಡಿಸುತಡಿಗಡಿಗೆ ಕಡುವಿಡಿದು ಜಡಿಜಡಿದು
ನುಡಿನುಡಿಯುತಡಿಗಡಿಗೆ ಗಡಗಡನೆ ದಡದಡಿಸು
ತಡಿಯಿಡುತ ತಡವಿಡದೆ ನಡೆನಡೆದು ಬಿಡಬಿಡದೆ ಒಡನೊಡನೆ ಜಡಗಡಣವ
ಪಿಡಿಪಿಡಿದು ಗಡಬಡಿಸಿ ಸಡೆಸಿಡಿದು ತಡೆಗಡಿದು
ಪಿಡಿಪಿಡಿದು ಕಡಿಕಡಿದು ದೃಢವೀರಭದ್ರನಂ
ಪಡೆದೊಡೆದು ನಿಡುಜಡೆಯ ನಿಜಲಿಂಗ ಭವಭಂಗ ಶರಣಜನವರದ ಜಯತು ॥ 16 ॥
ಘುಳುಘುಳಿಪ ಜಳಧಿಯಿಂದೆಳದೆಳಸಿ ಬಲುವಿಷವು
ಸುಳುಸುಳನೆ ಪೊರಮಟ್ಟು ಛಿಳಿಛಿಳಿಲು ಛಿಳಿಲೆನುತ
ಚಳಚಳಕದುಗ್ರವೆಗ್ಗಳದಳೆದು ಪ್ರಳಯದಲಿ ದಳದುಳನೆ ಸುಡುತ ಬರಲು
ಕಳವಳಿಸಿ ಸಕಳರತಿ ಬಳಬಳಲಿ ಬಾಯಾರಿ
ಬೆಳುಗಳೆಯ ಧರಿಸಿದನೆ ಕಳೆದುಳುಹುಯೆನಲು ಗಳ
ದೊಳು ತಳೆದ ಸಿತಿಕಂಠನಿಜಲಿಂಗ ಭವಭಂಗ ಶರಣಜನವರದ ಜಯತು ॥ 17 ॥
ಆರ್ಭಟಿಸಿ ಕೆಂಗಿಡಿಯು ನೆಗೆದು ಛಿಟಿಛಿಟಿಲೆನುತ
ಕರ್ಬೊಗೆಯ ಸೂಸುತಲಿ ಸಿಮಿಸಿಮಿಲು ಸಿಮಿಲೆನುತ
ಪರ್ಬಿತಾಕಾಶಕ್ಕೆ ಪೇರುರಿಯು ಭುಗಿಭುಗಿಲು ಭುಗಿಲೆಂಬ ರವದಿಂದಲಿ
ಪೆರ್ಬೆಂಕಿ ಪಸರಿಸಿತು ಛಿಳಿಛಿಳಿಲು ಛಿಳಿಲೆನುತ
ಸರ್ಬಜನ ಬೆದಬೆದರಲಿಂತು ಪರಿಯಲಿ ಸುಟ್ಟು
ಕೊರ್ಬಿದಸುರರ ಪುರವನಿಜಲಿಂಗ ಭವಭಂಗ ಶರಣಜನವರದ ಜಯತು ॥ 18 ॥
ಹೊಳೆಹೊಳೆವ ಕಾಲಂದುಗೆಯು ಘಲಿರುಘಲಿರೆನುತ
ತೊಳತೊಳಗಿ ತೋರ್ಪ ಗೆಜ್ಜೆಗಳು ಘಲಘಲಿಕೆನುತ
ಥಳಥಳಿಪ ಉಡಿಯ ಘಂಟೆಯ ನಾದ ಘಳಿಘಳಿಸಲು ಘಳಿಲೆನುತ ನುಡಿಯುತಿರಲು
ಝಳಝಳಿಪ ಭುಜಕೀರ್ತಿ ಝಣಝಣರು ಝಣರೆನುತ
ನಳನಳಿಸುತಂಧಕಾಸುರನ ಎದೆಯೊಳು ನಿಂದು
ನಲಿನಲಿದು ಕುಣಿಕುಣಿದನಿಜಲಿಂಗ ಭವಭಂಗ ಶರಣಜನವರದ ಜಯತು ॥ 19 ॥
ಕೆಂಡಗಣ್ಣಿನ ಕೋಪದಂಡಲೆಯೊಳತಿ ಕ್ರೋಧ
ಗೊಂಡು ಹೂಂಕಾರದಲಿ ಡೆಂಡಣಿಸುತ ಸಹಾಯ
ಮಂಡಲಕೆ ಬಂದು ಬ್ರಹ್ಮಾಂಡ ಬಿರಿದೊಡೆವಂತೆ ಖಂಡೆಯವ ಝಳಪಿಸುತಲಿ
ಕೆಂಡ ಗಜರಾಕ್ಷಸನ ಕಂಡು ವೇಗದೊಳೈದಿ
ತುಂಡುಗಡಿದಾ ಶಿರವ ಕೊಂಡೊಯ್ದು ಮಲೆತವರ
ಗಂಡ ನಿನಗಿದಿರುಂಟೆ ನಿಜಲಿಂಗ ಭವಭಂಗ ಶರಣಜನವರದ ಜಯತು ॥ 20 ॥
ವರಚಲುವ ಸದ್ಗುಣವನೊರೆದೊರೆದು ಬೋಧಿಸಲು
ಹರನೆನಿನಗಿಂದಾರು ಪಿರಿಯರಿಲ್ಲದರಿಂದೆ
ಕೊರಳೊಳಗೆ ಬಗೆಬಗೆಯ ಶಿರಮಾಲೆಗಳತಾಳ್ದೆ ಕರಿದೊಗಲಪೊರ್ದೆಯಭವ
ಉರಗನಾಭರಣವನು ಧರಿಸಿಕೊಂಡೆಲೆ ದೇವ
ಸಿರಿಯಿರಲು ಮರುಳಂತೆ ತಿರಿದುಂಡೆ ಸತಿಯನಾ
ದರೆ ಬೇಡಿದರಿಗಿತ್ತೆ ನಿಜಲಿಂಗ ಭವಭಂಗ ಶರಣಜನವರದ ಜಯತು ॥ 21 ॥
ಕಡುಮೋಹದಿಂದೆ ಕೈವಿಡಿದು ರಕ್ಷಿಸಿಕೊಂಬ
ಒಡೆಯರೆಂಬುವರಿಲ್ಲ ಅಡಿಗಡಿಗೆ ಬಣ್ಣಿಸುವ
ಪಡೆದವರು ಮುನ್ನಿಲ್ಲದೊಡೆ ಶಿರವ ಕುಂತಳವು ತೊಡರಿ ನಿಡುಜಡೆಯಾದವು
ಉಡಿಗೆ ಪುಲಿಚರ್ಮ ಮೈಗಿಡಿವಿಡಿದ ಬೂದಿ ಕ
ಪ್ಪಡರಿತಿದನೇಂ ಪೇಳ್ವೆ ಬಿಡದೆ ಕರತಳದಲ್ಲಿ
ಪಿಡಿದೆ ಶಿರಪಾತ್ರೆಯನು ನಿಜಲಿಂಗ ಭವಭಂಗ ಶರಣಜನವರದ ಜಯತು ॥22 ॥
ಸಿರಿವಂತನೆನಲು ಭಿಕ್ಷವ ಬೇಡಿದೆಲೆ ದೇವ
ಸಿರಿಹೀನನೆನಲು ಮೂಲೋಕದೊಡೆಯನು ನೀನು
ಧರಣೀಶನೆನಲು ಬಲಿಸುತನ ದ್ವಾರವಕಾಯ್ದೆ ಬಡವನೆನಲಪ್ರತಿಮನು
ಹಿರಿಯನೆಂಬೆನೆ ಕಲ್ಲಲಿಡಿಸಿಕೊಂಡೆಲೆ ದೇವ
ಕಿರಿಯನೆಂದೆನಲು ದೇವಾಧಿದೇವೇಶನಿ
ಮ್ಮಿರವ ಬಣ್ಣಿಸಲರಿದು ನಿಜಲಿಂಗ ಭವಭಂಗ ಶರಣಜನವರದ ಜಯತು ॥23 ॥
ಪ್ರತಿರಹಿತನೆಂಬುವದು ಪುಸಿಯಲ್ಲವೈ ಸದಾ
ಗತಿಯಾಪ್ತಸಾರಂಗ ತುಹಿನಕರಮೌಳಿ ದುಃ
ಕೃತಿಭೂಷಣಾಂಬುಜೋದರಬಾಣ ಮೇರುಪರ್ವತಶರಾಸನಗಳಿವೆ ಕೋ
ಶತಪತ್ರಸಖಕೋಟಿತೇಜವಿಗ್ರಹನೆ ಮ
ನ್ಮಥನಾಶ ನಿನಗಿಲ್ಲದಿನ್ನೊರ್ವಗಿನಿತುಂಟೆ
ಚತುರಾಸ್ಯನುತಚರಣ ನಿಜಲಿಂಗ ಭವಭಂಗ ಶರಣಜನವರದ ಜಯತು॥ 24॥
ಶಿವ ನಿಮ್ಮ ಸ್ತುತಿಸಲುರಗೇಂದ್ರನಂತಿರಬೇಕು
ಶಿವ ನಿಮ್ಮ ನೋಡುವರೆ ಸುರಪನಂತಿರಬೇಕು
ಶಿವ ನಿಮಗೆ ಪುಷ್ಪಾರ್ಚನೆಯ ಮಾಡುವರೆ ಕಾರ್ತಿವೀರ್ಯನಂತಿರಲುಬೇಕು
ಶಿವ ನಿಮ್ಮ ಪೂಜಿಸಲು ಬಾಣನಂತಿರಬೇಕು
ಶಿವಕತೆಯ ಕೇಳೆ ರಾವಣನಂತೆಯೆನಗೆಯಿಂ
ತಿವನೆಲ್ಲ ಕೊಡದಾದೆ ನಿಜಲಿಂಗ ಭವಭಂಗ ಶರಣಜನವರದ ಜಯತು॥ 25॥
ಚಿತ್ತೈಸು ಶಂಕರನೆ ಮತ್ತೊರ್ವ ಸತಿಯಳನು
ಅತ್ಯಂತ ಪ್ರೇಮದಲಿ ಪೊತ್ತೆ ಸಿರದೆಡೆಯಲ್ಲಿ
ಮತ್ತೆ ನಾನಾಕೆಗಿಂದತ್ತತ್ತಲಾದೆನೆಂದೆನುತ ಪಾರ್ವತಿ ನುಡಿಯಲು
ಗೋತ್ರಾರಿಗತಿಭೋಗವಿತ್ತು ನಾಗಜಚರ್ಮ
ವಸ್ತ್ರನಾದಡೆ ಕಿರಿದೆ ಚಿತ್ತವಲ್ಲಭೆ ಕೇಳೆ
ನುತ್ತ ಸಂತೈಸಿದನು ನಿಜಲಿಂಗ ಭವಭಂಗ ಶರಣಜನವರದ ಜಯತು ॥ 26 ॥
ಮದನಾರಿಯನು ತಿಳಿಯದೆ ವಿಚಾರಿಸದೆ ದಯಾ
ನಿಧಿಯೆಂದು ಫಣಿರಾಜನಧಿಕಹರುಷದೊಳಿರಲು
ಗದಗದಿಪ ಸೀತಾಳನದಿಯ ಸನ್ನಿಧಿಯೊಳಿರಲಿದಕೆ ಬಲುಸನ್ನಿಗೊಂಡು
ಹದಗೆಟ್ಟು ಕರ್ಣ ಕೇಳದವೊಲಾಯಿತು ನಿನ್ನ
ಬದಿಯೊಳಾನಿರ್ದು ವ್ಯಾಧಿಯಲಿ ಬಡವಾದೆನೆನೆ
ಸುದತಿಯಳ ಮುದ್ದಿಸಿದನಿಜಲಿಂಗ ಭವಭಂಗ ಶರಣಜನವರದ ಜಯತು ॥ 27 ॥
ಶಶಿಯು ಗಗನದಲಿ ಬಲು ಬಿಸಿಗಾತ್ರವನು ತಳೆದ
ನಿಶಿವೈರಿ ಬಲಿಸೀತಳವನಾಂತ ಜಗವರಿಯೆ
ಒಸೆದು ಹಿಮಗಿರಿರಾಜ ಖೇಚರಕೆ ಪಾರಿದನು ಹನುಮಂತ ರತಿಯ ಕಾಂತ
ಅಸಮಶರ ಭೂಮಿಯನು ಕದ್ದ ರಾಕ್ಷಸನಂತೆ
ವಿಷಗೊರಳ ಚಿತ್ತೈಸೆನಲು ಮೆಚ್ಚಿ ಸತಿಯ ಸಂ
ತಸದಿಂದ ಮುದ್ದಿಸಿದ ನಿಜಲಿಂಗ ಭವಭಂಗ ಶರಣಜನವರದ ಜಯತು॥ 28 ॥
ಕನ್ನಡಿಯ ಮೇಲ್ವಲಗೆಯೊಳಗೆ ಪಾರ್ವತಿಯ ಮೊಗ
ಚೆನ್ನಾಗಿ ಪೊಳೆಯೆ ಗಗನದಿ ಮೆರೆವ ಪೂರ್ಣಶಶಿ
ಯೆನ್ನುತಲಿ ಷಣ್ಮುಖನು ಗಣಪತಿಗೆ ತೋರುತಿರಲವ ನೋಡುತಿರಲದರೊಳು
ತನ್ನ ರೂಪವ ಕಂಡು ಇನ್ನುಂಟೆ ಪ್ರತಿಗಣಪ
ನೆನ್ನುತವನನು ಸೀಳ್ವೆನೆಂದು ಸೊಂಡಿಲ ನೆಗಪು
ವನ್ವಯಕೆ ನೆರೆ ನಗುವ ನಿಜಲಿಂಗ ಭವಭಂಗ ಶರಣಜನವರದ ಜಯತು॥ 29 ॥
ಕಂಗೊಳಿಪ ಕುಂತಳಕೆ ನಾಸಿಕಕೆ ವೈರತ್ವ
ಕಂಗಳಿಗೆ ರಾಜಿಸುವ ಪಣೆಗೆ ಬಲು ವೈರತ್ವ
ರಂಗುದುಟಿಗಳ್ಗೆ ರದನಂಗಳ್ಗೆ ವೈರತ್ವ ಮೊಲೆಗೆ ಮಧ್ಯಕೆ ವೈರವು
ಇಂಗಿತದಿ ತಿಳಿಯಲಿಂತಪ್ಪ ಹಗೆತನವಿರಲು
ಸಂಗಡಿಸಿಕೊಂಡು ಸಂತೈಸಿಕೊಂಡಿರುತಿರ್ಪ
ಮಂಗಳಾಂಗಿಯಕಾಂತನಿಜಲಿಂಗ ಭವಭಂಗ ಶರಣಜನವರದ ಜಯತು ॥ 30 ॥
ಕಾಪುರುಷರಿಗೆ ಸುಜನರಿಂಗಿತವು ತಿಳಿಯುಂಟೆ
ಕೋಪಿಗಳ ಮನದೊಳಗೆ ಕರುಣಗುಣವಿರಲುಂಟೆ
ಪಾಪಿಮನುಜರಿಗೆಲ್ಲ ಧರ್ಮವಾಸನೆಯುಂಟೆ ನಿಂದಕಗೆ ನೀತಿಯುಂಟೆ
ಕೂಪದೊಳು ಹರಿಯುತಿಹ ಜಲವ ನೋಡಿದರುಂಟೆ
ಆ ಪರಮ ಮೂಢರಿಗೆ ಶಿವ ನಿಮ್ಮ ಸ್ಮರಣೆಯಾ
ಲಾಪದೊಳಗಿರಲುಂಟೆ ನಿಜಲಿಂಗ ಭವಭಂಗ ಶರಣಜನವರದ ಜಯತು॥ 31 ॥
ಧುರಧೀರನಾದವಗೆ ಮರಣದಂಜಿಕೆಯುಂಟೆ
ವರ ಜಿತೇಂದ್ರಿಗೆ ಚದುರೆಯರ ಹಂಬಲಿರಲುಂಟೆ
ಮೆರೆವ ತ್ಯಾಗಿಗೆ ಹಣದ ಪರವೆಯೆಂಬುವುದುಂಟೆ ಬಲ್ಲರ್ಗೆ ಭಯಗಳುಂಟೆ
ಪರಮ ಸುಜ್ಞಾನಿಗಳಿಗತಿಗರ್ವವಿರಲುಂಟೆ
ಧರಣಿಯೊಳು ಮೋಕ್ಷವನು ಬಯಸುವರು ಶಿವ ನಿಮ್ಮ
ಸ್ಮರಣೆಯನು ಬಿಡಲುಂಟೆ ನಿಜಲಿಂಗ ಭವಭಂಗ ಶರಣಜನವರದ ಜಯತು॥ 32 ॥
ಧೃಡವಿಲ್ಲದನ ಭಜನೆ ಸಿದ್ಧಿಯಾಗುವುದುಂಟೆ
ಕಡುಮಂದಮತಿಗೆ ಪೇಳಲು ಜ್ಞಾನ ಬರಲುಂಟೆ
ನಡತೆಹೀನನ ಹೃದಯದೊಳು ಭಕ್ತಿಗುಣವುಂಟೆ ಖೂಳರಿಗೆ ಸತ್ಯವುಂಟೆ
ಬಡಮನದವಂಗೆ ಔದಾರ್ಯಬುದ್ಧಿಗಳುಂಟೆ
ಪಡೆದುದಲ್ಲದೆ ಹೆಚ್ಚು ಬರಲುಂಟೆ ನಿನ್ನೆನೆಯ
ದೊಡೆ ಸ್ಥಿರದ ಪದವುಂಟೆ ನಿಜಲಿಂಗ ಭವಭಂಗ ಶರಣಜನವರದ ಜಯತು॥ 33 ॥
ಜಗದಂಬಕನ ಕೂಡೆ ತಮವು ಸೆಣಸುವುದುಂಟೆ
ಖಗರಾಜನೊಡನೆ ದ್ವಯಜಿಹ್ವೆ ಗೆಲ್ಲುವುದುಂಟೆ
ಭುಗಿಲೆನಿಪ ವ್ಯಾಘ್ರನೊಳು ಮೇಷ ಜಯಿಸುವುದುಂಟೆ ಕುಲಿಶ ಗಿರಿಗಂಜಲುಂಟ
ಮೃಗರಾಜನೊಳು ಕಾದಿ ಕುಂಭಿ ಜೀವಿಸಲುಂಟೆ
ಜಗದೊಡೆಯ ನಿನ್ನ ನಾಮವ ನುತಿಪ ಪುಣ್ಯಾತ್ಮ
ರಿಗೆ ದೋಷವಿರಲುಂಟೆ ನಿಜಲಿಂಗ ಭವಭಂಗ ಶರಣಜನವರದ ಜಯತು॥ 34 ॥
ಸಂಗೀತಸವಿಯು ಬಧಿರಂಗೆ ತೋರುವುದುಂಟೆ
ಕಂಗುರುಡನಿಗೆ ಕನ್ನಡಿಯ ಹಂಬಲಿರಲುಂಟೆ
ರಂಗುದುಟಿಮಾಣಿಕ್ಯ ಥಳಥಳಿಸುತಿರಲುಗೋಲಾಂಗುಲಗೆ ಪರಿಖೆಯುಂಟೆ
ಕಂಗೊಳಿಸುವಿನಿಗೋಲ ರುಚಿಯು ಬೋಡನಿಗುಂಟೆ
ಮಂಗಳಾತ್ಮಕ ನಿನ್ನ ದಿವ್ಯನಾಮವನರಿಯ
ದಂಗೆ ಭವ ಬಿಡಲುಂಟೆ ನಿಜಲಿಂಗ ಭವಭಂಗ ಶರಣಜನವರದ ಜಯತು॥ 35 ॥
ಮರಣಕಾಲಕೆ ಪಿರಿದು ಅರಸುತನ ಬರಲೇನು
ಪರಮರೋಗದೊಳು ಘೃತಪರಮಾನ್ನ ಬರಲೇನು
ಹರಿಣಾಕ್ಷಿ ವೃದ್ಧನಾಗಿರುವಾಗ ಬರಲೇನು ಧರಣಿಯೊಳು ಬೆಳೆದ ಫಲವು
ಉರಿದು ಹಾರಿದ ಬಳಿಕ ಭರದಿ ಮಳೆ ಬರಲೇನು
ಹರಣ ಹಿಂಗದ ಮುನ್ನ ನಿನ್ನ ಸ್ಮರಿಸದ ಮನುಜ
ನಿರಲೇನು ಧರೆಯೊಳಗೆ ನಿಜಲಿಂಗ ಭವಭಂಗ ಶರಣಜನವರದ ಜಯತು॥ 36 ॥
ಪತಿಯ ನಿಂದಿಸುತಿಪ್ಪ ಸತಿಯಿದ್ದುಫಲವೇನು
ಅತಿಮಂದಮತಿಯಾದ ಸುತನಿದ್ದುಫಲವೇನು
ಮತಿಯಿಲ್ಲದವನ ಸಂಗತಿಯಿದ್ದುಫಲವೇನು ಹಿತವಿಲ್ಲದರ ಬಳಿಯಲಿ
ಸತತ ಮನಮುಟ್ಟಿ ಧಾವತಿಯ ಮಾಡಿದಡೇನು
ಚತುರಾಸ್ಯನಮಿತ ನಿನ್ನಯ ಪುಣ್ಯನಾಮವನು
ನುತಿಸದವನಿದ್ದೇನು ನಿಜಲಿಂಗ ಭವಭಂಗ ಶರಣಜನವರದ ಜಯತು ॥ 37 ॥
ಚೋರ ನಿಂದಿಸಲಾಗಿ ಚಂದಿರಗೆಕುಂದೇನು
ಪೋರ ನಿಂದಿಸಲಾಗಿ ಪ್ರಾಜ್ಞರಿಗೆ ಕುಂದೇನು
ದಾರಿದ್ರ ನಿಂದಿಸಲು ದಾನಶೂರಗೆ ಬಂದ ಕುಂದೇನು ಹುಟ್ಟಂಧಕ
ಭೂರಿಕೋಪದಿ ಹಳಿಯೆ ಭಾಸ್ಕರಗೆ ಕುಂದೇನು
ಮಾರಾರಿ ನಿನ್ನ ನಿಂದಿಸುವವರು ನರಕದೊಳು
ಸೇರುವರು ಸತ್ಯವಿದು ನಿಜಲಿಂಗ ಭವಭಂಗ ಶರಣಜನವರದ ಜಯತು ॥ 38 ॥
ಬಲುಲೋಭಿಗಳ ಬಳಿಯೆ ಧನವಿದ್ದು ಫಲವೇನು
ಕಲಿಯಿಲ್ಲದವಗೆ ಚಂದ್ರಾಯುಧವು ಇದ್ದೇನು
ನೆಲೆಯರಿತುವೋದಲರಿಯದವನ ಬಳಿಯೆ ಕಾವ್ಯಸಾರಂಗಳಿದ್ದರೇನು
ಹೊಲಬರಿಯದನ ಬಳಿಯೆ ಸಂಜೀವವಿದ್ದೇನು
ಮಲಹರನೆ ನಿನ್ನ ಭಜಿಸದ ಮನುಜ ನರಜನ್ಮ
ದಲಿ ಬಂದು ಫಲವೇನು ನಿಜಲಿಂಗ ಭವಭಂಗ ಶರಣಜನವರದ ಜಯತು ॥ 39 ॥
ಸಂಗರಕೆ ಭೀತಿಗೊಂಬುವ ಬಂಟನಿದ್ದೇನು
ಮುಂಗಂಡು ಮಾತನಾಡದ ಸಚಿವನಿದ್ದೇನು
ಇಂಗಿತವನರಿತು ನಡೆಯದ ಗೆಳೆಯನಿದ್ದೇನು ವಿಮಲಶಾಸ್ತ್ರಾಗಮವನು
ಅಂಗಯಿಸಿ ಓದಿಕೊಳ್ಳದ ಪಾರ್ವನಿದ್ದೇನು
ಅಂಗಭವಹರ ನಿಮ್ಮ ಸ್ತುತಿಮಾಡದಿಪ್ಪ ಪಾ
ಪಾಂಗನವನಿದ್ದೇನು ನಿಜಲಿಂಗ ಭವಭಂಗ ಶರಣಜನವರದ ಜಯತು ॥ 40 ॥
ಕೊಟ್ಟಬಳಿಕಿನ್ನು ಮನದೊಳಗೆ ಕುದಿವನು ಮೂರ್ಖ
ಕೆಟ್ಟು ಪಿಸುಣಿಗ ನೆಂಟರನು ಸೇರುವನು ಮೂರ್ಖ
ನಿಷ್ಠೆವಂತರ ಹಳಿದು ನಿಂದಿಸುವನತಿಮೂರ್ಖ ದಯದೊಳಾಳುವವೊಡೆಯನ
ಬಿಟ್ಟಾಡಿ ದೂರಿಕೊಂಬುವನೀಗ ಕಡುಮೂರ್ಖ
ಸೃಷ್ಟಿಗೀಶ್ವರ ನಿಮ್ಮ ಸ್ತುತಿಗಳನು ಜಗದೊಳಗೆ
ಬಿಟ್ಟವನು ಬಲುಮೂರ್ಖ ನಿಜಲಿಂಗ ಭವಭಂಗ ಶರಣಜನವರದ ಜಯತು ॥ 41 ॥
ಸರಿಯಿಲ್ಲದರ ಕೂಡ ವಾದಿಸುವವನತಿಮೂರ್ಖ
ಗುರುಹಿರಿಯರುಗಳ ವಾಕ್ಯವ ವಿೂರುವವ ಮೂರ್ಖ
ಗುರುವಚನದಲಿ ಹಮ್ಮನಾಡುವವಮೂರ್ಖ ಬಲುಗಾಡಿಕಾರ್ತಿಯರೊಲವನು
ನೆರೆನಂಬಿ ನಿಜವೆಂದು ಮರುಳುಗೊಂಡವ ಮೂರ್ಖ
ಕರುಣನಿಧಿ ಭಕ್ತವತ್ಸಲ ನಿಮ್ಮ ನಾಮವನು
ಸ್ಮರಿಸದವ ಘನಮೂರ್ಖ ನಿಜಲಿಂಗ ಭವಭಂಗ ಶರಣಜನವರದ ಜಯತು ॥ 42 ॥
ಅಂತರಂಗವ ಕಪಟಮನುಜಗುಸುರುವ ಮೂರ್ಖ
ಚಿಂತಾತುರನೊಳು ಸರಸವನಾಡುವವ ಮೂರ್ಖ
ಸಂತೆಯೊಳು ಶಾಸ್ತ್ರವನು ಹೇಳುವವ ಕಡುಮೂರ್ಖ ತನಗಿಂದ ಬಲ್ಲಿದರೊಳು
ಪಂತವನು ಕಟ್ಟಿಕೊಂಬುವನೀಗ ಸಲೆಮೂರ್ಖ
ಕಂತುಹರ ನಿಮ್ಮ ನಾಮವ ನುತಿಸದಿರ್ಪನ
ತ್ಯಂತವಾಗಿಹಮೂರ್ಖ ನಿಜಲಿಂಗ ಭವಭಂಗ ಶರಣಜನವರದ ಜಯತು॥ 43 ॥
ಮನ್ನಣೆಯ ಕೊಡದ ಠಾವಿಗೆ ಹೋಗುವವಮೂರ್ಖ
ಅನ್ಯರನು ಧಿಕ್ಕರಿಸಿಯಾಡಿ ಕೊಂಬವಮೂರ್ಖ
ಹೊನ್ನುಳ್ಳ ದೊರೆಗಳನು ನೋಡಿ ಮರುಗುವ ಮೂರ್ಖ
ತನ್ನೊಳೇನುವನರಿಯದೆ
ಉನ್ನತೋನ್ನತ ಪಂಡಿತರ ಹಳಿಯುವವಮೂರ್ಖ
ಪನ್ನಂಗಭೂಷಣಾನ್ವಿತ ನಿನ್ನ ಚಾರಿತ್ರ
ವನ್ನು ಜರಿವವ ಮೂರ್ಖ ನಿಜಲಿಂಗ ಭವಭಂಗ ಶರಣಜನ ವರದ ಜಯತು॥ 44 ॥
ಅನುವರಿಯದಾತಂಗೆ ದೈನ್ಯಬಡುವವಮೂರ್ಖ
ತನುಜರಿಗೆ ವಿದ್ಯೆಯನು ಕಲಿಸದವನತಿ ಮೂರ್ಖ
ಜನನಿಜನಕರ ಬೈದು ಬಳಲಿಸುವಬಲುಮೂರ್ಖ ಮಾತುಹೋಗಾಡಿ ಬಳಿಕ
ನೆನೆನೆನೆದು ಕಡೆಯಲ್ಲಿ ಹುಡುಕಾಡುವವ ಮೂರ್ಖ
ಘನಕರುಣಿ ನಿಮ್ಮ ಧ್ಯಾನವ ಮಾಡದವ ಮೂರ್ಖ
ಮುನಿಜನರ ವಂದಿತನೆ ನಿಜಲಿಂಗ ಭವಭಂಗ ಶರಣಜನವರದ ಜಯತು ॥ 45 ॥
ಏಕಾಂತವಾಡುವಲ್ಲಿಗೆ ಹೋಗದವ ಜಾಣ
ಲೋಕದೊಳಗವರವರ ತೆರದಿ ನಡೆವವ ಜಾಣ
ಕಾಕುಮನುಜರನು ಸರಿಗಟ್ಟಿಕೊಳದವ ಜಾಣ ಭೂಕಾಂತರಾಸ್ಥಾನದಿ
ಜೋಕೆಯಿಂದೇಕಚಿತ್ತದಲಿ ನಡೆವವ ಜಾಣ
ಲೋಕೇಶ ನಿಮ್ಮ ಚರಣವ ನಂಬಿದವ ಜಾಣ
ಲೋಕದೊಳು ಸಲೆಜಾಣನಿಜಲಿಂಗ ಭವಭಂಗ ಶರಣಜನವರದ ಜಯತು ॥ 46 ॥
ಮಂದಮತಿ ನಿಂದಿಸಲು ತಾಳಿಕೊಂಡವ
ಒಂದೆ ಮನದಲಿ ಧ್ಯಾನವನು ಮಾಡುವವ ಜಾಣ
ಬಂದ ಬಲುಚಿಂತೆಯೊಳು ಧೈರ್ಯವಿಡಿದವ ಜಾಣ ಹೀನರಿಂ ಕಲಹಂಗಳು
ಸಂದಿಸಲು ಶಾಂತಗುಣವನು ತಾಳಿದವ ಜಾಣ
ಇಂದುಶೇಖರ ನಿಮ್ಮ ಪೂಜಿಪನು ಕಡುಜಾಣ
ಅಂಧಕಾಸುರಹರನೆ ನಿಜಲಿಂಗ ಭವಭಂಗ ಶರಣಜನವರದ ಜಯತು ॥ 47 ॥
ಸತಿಯಳಿಗೆ ಸಲುಗೆಯನು ಕೊಡದವನು ಕಡುಜಾಣ
ಚತುರ ನುಡಿ ಬಾರದಿರೆ ಸುಮ್ಮನಿರುವವ ಜಾಣ
ಗತಿಯಿಲ್ಲದವಗೆ ಹೊಣೆಯಾಗದಿದ್ದವ ಜಾಣ ಯೋಗ್ಯವಲ್ಲದ ನುಡಿಗಳ
ಶ್ರುತಿಗೊಟ್ಟು ಕೇಳಲೊಲ್ಲದೆ ತೊಲಗುವವ ಜಾಣ
ಸಿತಿಕಂಠ ನಿನ್ನ ಚರಣಾಂಬುಜವ ನಂಬಿದವ
ಕ್ಷಿತಿಯೊಳಗೆ ಬಹುಜಾಣ ನಿಜಲಿಂಗ ಭವಭಂಗ ಶರಣಜನವರದ ಜಯತು ॥ 48 ॥
ಕ್ಷುಧೆಯಿಲ್ಲದರೋಗಣೆಯ ಮಾಡದವ ಜಾಣ
ಮೃದುನುಡಿಯನಾಡುತಹುದೆನಿಸಿಕೊಂಬವ ಜಾಣ
ಅಧಿಕಕೋಪಿಗಳೊಡನೆ ಸೋತು ನಡೆವವಜಾಣ ಚೂರ್ಣ ಕೈಸಾರದನಕ
ವದನದೊಳು ಕ್ರಮುಕವನು ಹಾಕಿಕೊಳದವ ಜಾಣ
ಹೃದಯದೊಳು ಆವಗಂ ನಿಮ್ಮ ಧ್ಯಾನವನು ತ
ಪ್ಪದೆ ಮಾಡುವವ ಜಾಣ ನಿಜಲಿಂಗ ಭವಭಂಗ ಶರಣಜನವರದ ಜಯತು ॥ 49 ॥
ತನುಜರೊಳು ಕೋಪವನು ಹಿಡಿಯದವ ಬಲುಜಾಣ
ಮನೆಯ ಕದನವನು ಪರರೊಳು ಪೇಳದವ ಜಾಣ
ಧನವಿರಲು ಧರ್ಮವನು ಗಳಿಸಿಕೊಂಬವ ಜಾಣ ದುರ್ಜನರು ಹಳಿವುತಿರಲು
ಮನದೊಳಗೆ ಹಿಡಿದ ವ್ರತಗಳನು ಬಿಡದವ ಜಾಣ
ಅನಲಾಕ್ಷ ನಿಮ್ಮ ಧ್ಯಾನವ ಬಿಡದೆ ಮಾಡುತಿ
ಪ್ಪನು ತಾನು ಸಲೆಜಾಣ ನಿಜಲಿಂಗ ಭವಭಂಗ ಶರಣಜನವರದ ಜಯತು ॥ 50 ॥
ರತಿಕೇಳಿಯಾನಂದವೆಂತೆಂಬ ನೆವದಿಂದೆ
ಪತಿಯ ಜಠರವ ಬಿಟ್ಟು ತನ್ನ ತಾ ಪೊರಮಟ್ಟು
ಸತಿಯ ಗರ್ಭಕೆ ಬಂದು ಇಂಬುಗೊಡುತಲೆ ನಿಂದು ದಿನದಿನಕೆ ಪಿಂಡಬಲಿದು
ಮಿತಿಯಿಂದ ಒಂಬತ್ತು ಮಾಸ ತುಂಬಿದ ಬಳಿಕ
ಕ್ಷಿತಿಗೆ ಪುಟ್ಟಿಸುವ ದೇವರ ದೇವ ನಿನ್ನ ಸ
ತ್ಕೃತಿಯ ಬಲ್ಲವರಾರು ನಿಜಲಿಂಗ ಭವಭಂಗ ಶರಣಜನವರದ ಜಯತು ॥ 51 ॥
ಪುಟ್ಟಿದಾಕ್ಷಣ ಜನನಿಜನಕರ್ಗೆ ಕಡುಮೋಹ
ಪುಟ್ಟಿ ನಲವಿಂದ ಸಲಹುವರು ಬಳಿಕೊಂದು ಪೆಸ
ರಿಟ್ಟು ತೊಟ್ಟಿಲನಿಕ್ಕುವಾಗ ಜೋ ಜೋಯೆಂದು ಪಾಡುವರು ಸಂಭ್ರಮದೊಳು
ನಿಟ್ಟಿಸುವರಡಿಗಡಿಗೆ ಮುದ್ದಿಸುತ ಮೊಲೆವಾಲ
ಕೊಟ್ಟು ರಕ್ಷಿಸುವಂತೆ ನೇಮಿಸಿದೆ ಶಿವ ನಿಮ್ಮ
ಕಟ್ಟಳೆಗೆ ಸರಿಯುಂಟೆ ನಿಜಲಿಂಗ ಭವಭಂಗ ಶರಣಜನವರದ ಜಯತು ॥ 52 ॥
ಮಿಡಿಹಸುಳನಾಗಿರುತ ಬಳಿಕ ಗಾಗೂಯೆಂದು
ಹೊಡೆಮಗ್ಗಲಾಗಿ ಬಳಿಕಂಬೆಗಾಲಿಕ್ಕುತಲಿ
ನಡೆಗಲಿತು ಬೀಳುತೇಳುತ ನಗುತಲಳುತ ತೊದಲ್ನುಡಿಯಿಂದೆ ಮಾತಾಡುತ
ಒಡನೆ ಸರಿಗೆಳೆಯರೊಳು ಬಾಲಕೇಳಿಯನೆಲ್ಲ
ಬೆಡಗಿನಿಂದಾಡುತಿಹರಿಂತು ನೇಮಿಸಿದ ಜಗ
ದೊಡೆಯ ನೀನಹುದಹುದು ನಿಜಲಿಂಗ ಭವಭಂಗ ಶರಣಜನವರದ ಜಯತು ॥ 53 ॥
ವಿನಯದಿಂ ಬಾಲಕೇಳಿಯನಾಡುತಿರೆ ಬಳಿಕ
ಅನುನಯದಿ ಉಪನಯನಮಂ ಮಾಡಿ ಕುಲವಿದ್ಯೆ
ಯನು ಕಲಿಸಿ ವೈವಾಹವಾದ ಬಳಿಕಿನ್ನು ಯೌವನದೇವಿ ಬಂದೊದಗಲು
ತನಗಾರು ಸರಿಯಿಲ್ಲವೆನುತ ಪಶುಧನಧಾನ್ಯ
ವನು ತನ್ನದೆನ್ನದೆಂದೆನುತ ಗಳಿಸುವ ತಂತ್ರ
ವನು ಜಗಕೆ ನಿರ್ಮಿಸಿದ ನಿಜಲಿಂಗ ಭವಭಂಗ ಶರಣಜನವರದ ಜಯತು ॥ 54 ॥
ಪ್ರಾಯದಿಂದಿರೆ ಜರಾಂಗನೆಯು ಬಂದೆಡೆಗೊಳಲು
ಕಾಯ ಸತುಗೆಟ್ಟು ಪಂಚೇಂದ್ರಿಗಳು ಸವಿಗೆಡಲು
ಸಾಯಬೇಕಿನ್ನೆನುತ ನುಡಿಯುತಿರೆ ಮರಣಕಾಲಕೆ ರೋಗ ಪ್ರಾಪ್ತಿಯಾಗಿ
ವಾಯು ದೇಹವ ಬಿಟ್ಟು ತೊಲಗಿದಡೆ ಕಿಚ್ಚಿನೊಳ
ಗೊಯ್ದಿಡಲು ರೂಪಳಿದು ಹೋಗುವುದು ಶಿವ ನಿಮ್ಮ
ಮಾಯವಾರಿಗೆ ತಿಳಿವು ನಿಜಲಿಂಗ ಭವಭಂಗ ಶರಣಜನವರದ ಜಯತು॥ 55 ॥
ಕನ್ನಡಿಯು ಹೊಳೆವುತರಮನೆಯೊಳಗೆ ತಾನಿರ್ದು
ತನ್ನೊಳಗೆ ಮನೆಯನೆಲ್ಲವ ತೋರುವಂದದಲಿ
ಪನ್ನಂಗಭೂಷಣನೆ ನಿನ್ನೊಳಗೆ ಜಗವೆಲ್ಲವನು ತಾಳಿಕೊಂಡ ಬಳಿಕ
ಇನ್ನೇನು ಪೇಳ್ವೆ ಜಗದೊಳಗೆಲ್ಲ ನೀನಿರ್ದು
ನನ್ನಿಯಿಂದರಿವ ಜಾಣರಿಗೆ ರೂಪವ ತೋರ್ಪ
ಉನ್ನತೋನ್ನತ ಮಹಿಮ ನಿಜಲಿಂಗ ಭವಭಂಗ ಶರಣಜನವರದ ಜಯತು ॥ 56 ॥
ದಧಿಯ ಮಥನಿಸಲಾಗಿ ನವನೀತ ತೋರ್ಪಂತೆ
ಸುಧೆಗೋಲ ಮರ್ದಿಸಲು ಸಕ್ಕರೆಯು ಆದಂತೆ
ಮುದದಿಂದ ಚಂದನವನರೆಯಲಾಕ್ಷಣದಲ್ಲಿ ಶ್ರೀಗಂಧ ಪೊಣ್ಮುವಂತೆ
ಅಧಿಕ ಜ್ಞಾನಾರೂಢರಾಗಿ ನಿಟ್ಟಿಸುವ ಸದು
ಹೃದಯರಿಗೆ ತಾನು ತಾನಾಗಿ ಸವಿಗೊಡುವ ದಯ
ನಿಧಿಯೇ ನೀನಹುದಹುದು ನಿಜಲಿಂಗ ಭವಭಂಗ ಶರಣಜನವರದ ಜಯತು ॥ 57 ॥
ಮೊಲೆವಾಲ ಮೇಲೆ ಬಾಲಕರ ಮನವಿರುವಂತೆ
ಜಲಜಪರಿಮಳಕೆ ಷಟ್ಟದಿಯ ಮನವಿರುವಂತೆ
ಚಲುವ ಚಂದ್ರಮನ ಹಂಬಲು ಚಕೋರಂಗಿರುವ ತೆರನಂತೆ ಭಕ್ತಿಯಿಂದ
ಒಲಿದು ಶಿವ ನಿಮ್ಮಧ್ಯಾನವ ಮಾಳ್ಪ ಸಜ್ಜನರ
ಹಲವು ದೋಷವನೆಲ್ಲ ಕಳೆದು ಮರಮರಳಿ ಭವ
ದಲಿ ಬಾರದೊಲು ಮಾಳ್ಪ ನಿಜಲಿಂಗ ಭವಭಂಗ ಶರಣಜನವರದ ಜಯತು ॥ 58 ॥
ಹಲವು ಜಲಕುಂಭದೊಳು ಭಾನುವಿನ ಪ್ರತಿಬಿಂಬ
ಹಲವಾಗಿ ತೋರುತಿರೆ ಗಗನದಲ್ಲಿಹ ಸೂರ್ಯ
ಸಲೆ ತೇಜದಿಂದೊರ್ವನಿರುವಂತೆ ಪದಿನಾಲ್ಕು ಲೋಕದೊಳಗರ್ತಿಯಿಂದ
ನೆಲೆಗೊಂಡು ಪಿಂಡಾಂಡಬ್ರಹ್ಮಾಂಡದೊಳು ತುಂಬಿ
ನಲಿನಲಿದು ನೀನೆ ನೀನಾಗಿಪ್ಪೆ ಜಗದೊಡೆಯ
ಮಲಹರನೆ ನಿರುಪಮನೆ ನಿಜಲಿಂಗ ಭವಭಂಗ ಶರಣಜನವರದ ಜಯತು ॥ 59 ॥
ಆವ ಮನೆಯೊಳಗಿಪ್ಪ ದೀವಿಗೆಯ ಬೆಳಗೊಂದೆ
ಆವ ಹಸುವನು ಕರೆಯೆ ಕ್ಷೀರರುಚಿ ಕರಮೊಂದೆ
ಆವ ಕೃಷಿಯೊಳು ಬೆಳದ ತಿಲದೊಳಗೆ ಬಪ್ಪ ತೈಲವ ನೋಡೆ ಗುಣಮದೊಂದೆ
ಆವ ಕುಲದೊಳಗಿರಲು ಆವನಾಮದೊಳಿರಲು
ಆವ ರೂಪಾಗಿರಲು ಒಳಗಿರುವ ಸ್ವಯಂಜ್ಯೋತಿ
ದೇವ ನೀನಹುದಹುದು ನಿಜಲಿಂಗ ಭವಭಂಗ ಶರಣಜನವರದ ಜಯತು॥ 60 ॥
ಎಂಬತ್ತು ನಾಲ್ಕುಲಕ್ಷದ ಯೋನಿಯೊಳಗೆಲ್ಲ
ಬೆಂಬಿಡದೆ ತೊಳತೊಳಲಿ ಸಕಲರೊಳಗಧಿಕವೆಂ
ದೆಂಬ ಮಾನುಷ ಜನ್ಮದೊಳುಪುಟ್ಟಿದಾಬಳಿಕ ಶಿವ ನೀನು ಕರುಣಿಯೆಂದು
ಇಂಬಾಗಿ ತಿಳಿತಿಳಿದು ನಂಬಿದೆನು ನಿನ್ನ ಪಾ
ದಾಂಬುಜವ ಬಿಡದೆನ್ನ ರಕ್ಷಿಪುದು ದುರಿತಾದ್ರಿ
ಶಂಬ ನೀನಹುದಹುದು ನಿಜಲಿಂಗ ಭವಭಂಗ ಶರಣಜನವರದ ಜಯತು ॥ 61 ॥
ಭವಗಡಲನುತ್ತರಿಸಿ ಕಡೆಹಾಯ್ದು ಪೋಗುವರೆ
ಹವಣವಾಗಿರುತಿರ್ಪ ಕಾಯವೆಂದೆಂಬ ಹಡ
ಗವಿದು ಕೈಸಾರಿರ್ದ ಸಮಯದಲಿ ಶಿವ ನಿಮ್ಮ ಧ್ಯಾನವನು ಮರೆಯದಂತೆ
ವಿವರವಾಗಿರುತಿರ್ಪ ಜ್ಞಾನವನು ಕೊಟ್ಟು ಸಲ
ಹುವುದೆನ್ನ ಪರಮಾತ್ಮ ಪರಂಜ್ಯೋತಿ ಪರಬ್ರಹ್ಮ
ಧವಳಾಂಗ ದಯಭರಿತ ನಿಜಲಿಂಗ ಭವಭಂಗ ಶರಣಜನವರದ ಜಯತು॥ 62 ॥
ನಿನ್ನ ನಾಮಾಮೃತವಹಾಯೆಂದು ಸವಿವಂತೆ
ನಿನ್ನ ನಾಮವ ನುತಿಸಿಯಡಿಗಡಿಗೆ ನಲಿವಂತೆ
ನಿನ್ನ ನಾಮವ ನೆನೆದು ಹರುಷಾಬ್ಧಿಯೊಳು ಬಿದ್ದು ಮುಳುಗಿ ನಲಿದಾಡುವಂತೆ
ನಿನ್ನ ನಾಮವ ನುತಿಸಿಯೆನ್ನ ಮೈಮರೆವಂತೆ
ನಿನ್ನ ನಾಮವು ಸತತ ಮರೆಯದೋಲಿರುವಂತೆ
ನಿನ್ನ ನಾಮದೊಳಿರಿಸು ನಿಜಲಿಂಗ ಭವಭಂಗ ಶರಣಜನವರದ ಜಯತು॥ 63 ॥
ಒಮ್ಮೆ ಸಂಸಾರವನು ತೊರೆಯಬೇಕೆಂಬಂತೆ
ಒಮ್ಮೆ ಸಂಸಾರವನು ಮಾಡಬೇಕೆಂಬಂತೆ
ಒಮ್ಮೆ ದೇವರ ಭಜನೆಯನು ಮಾಡಿ ನಿತ್ಯಪದವಿಯ ಪಡೆಯಬೇಕೆಂಬುವ
ಒಮ್ಮೆ ದೇವರ ಭಜನೆಯಿಂದೇನು ಫಲವೆಂದು
ಹಮ್ಮೈಸಿ ಹರಿಯುತಿಹ ಮನವನೊಬ್ಬುಳಿಗೊಳಿಸಿ
ನಿಮ್ಮ ಚರಣದೊಳಿರಿಸು ನಿಜಲಿಂಗ ಭವಭಂಗ ಶರಣಜನವರದ ಜಯತು॥ 64 ॥
ಏನೇನು ತಿಳಿಯದಜ್ಞಾನಿ ದಿಟವಹುದೆನುತ
ಹೀನೈಸುತೆನ್ನ ಕೈ ಬಿಡಲಾಗದೆಲೆ ದೇವ
ನೀನು ಶಂಕರನು ಭವಹರನು ಶಶಿಧರನು ಸಿರಿಕರನುಮೆಯವರನೆನ್ನುತ
ನಾ ನಿನ್ನ ಚರಣಶತಪತ್ರವನು ನಂಬಿದೆನು
ಜ್ಞಾನವನು ಕೊಟ್ಟು ಸಲಹುವುದೆನ್ನ ಜಗದೊಡೆಯ
ನೀನಲ್ಲದಿನ್ನುಂಟೆನಿಜಲಿಂಗ ಭವಭಂಗ ಶರಣಜನವರದ ಜಯತು ॥ 65 ॥
ಸ್ಥಿರಪದವು ಬರುತಿರ್ಪಚರಿತವನು ಪಿಡಿದಂತೆ
ಮರಮರಳಿಭವಕೆ ಬಹ ಚರಿತವನು ತೊರೆವಂತೆ
ನರಲೋಕದಾಟದೊಳಗಿದ್ದುದಕೆ ಮನವ ತೊಡಕಿಸದೆ ಹೊರಗಾಗುವಂತೆ
ನಿರುತದಿಂದಾತ್ಮದೊಳು ಶಿವ ನಿಮ್ಮ ರೂಪವನು
ಅರಿವಂತೆ ಮರೆವಂತೆ ಕರೆವಂತೆ ಬೆರೆವಂತೆ
ವರವಿತ್ತು ಸಲಹುವುದು ನಿಜಲಿಂಗ ಭವಭಂಗ ಶರಣಜನವರದ ಜಯತು॥ 66 ॥
ನೀನಿದ್ದ ಸಮಯದಲಿ ನಿನ್ನ ತಿಳಿಯದೆ ಜ್ಞಾನ
ಹೀನನಾದಡೆ ಬಳಿಕ ನೀ ತೊಲಗಿದಾಕ್ಷಣಕೆ
ಏನು ಪೇಳುವೆನಿನ್ನು ಬಗೆಬಗೆಯ ಯೋನಿಯೊಳು ತೊಳತೊಳಲಿ ಬಳಬಳಲುತ
ನಾನೆಂತು ಜೀವಿಸುವೆನಯ್ಯ ಕರುಣಾಕರನೆ
ಸ್ವಾನುಭಾವದೊಳೆನ್ನ ಮನವ ನಿಲ್ಲಿಸಿ ನಿನ್ನ
ಧ್ಯಾನದೊಳಗಿರಿಸೆನ್ನ ನಿಜಲಿಂಗ ಭವಭಂಗ ಶರಣಜನವರದ ಜಯತು ॥ 67 ॥
ನಿತ್ಯವಾದುದನೆಲ್ಲ ಹಿಡಿಯಲೊಲ್ಲದು ಮನವು
ಮಿಥ್ಯವಾದುದನೆಲ್ಲ ಹಿಡಿಯುತಿಹುದೀ ಮನವು
ಸತ್ಯವಾಡುವರಡಗಿಕೊಂಡಿಹರಸತ್ಯಕ್ಕೆ ಕುಣಿಕುಣಿದು ಬರುತಲಿಹರು
ಮೃತ್ಯುಂಜಯನೆ ನಿಮ್ಮ ಮರೆಹೊಕ್ಕೆ ದುರ್ಮನವ
ಕತ್ತರಿಸಿ ಸನ್ಮಾರ್ಗದೊಳು ಬಿಡದೆ ನಡೆವ ಮನ
ವಿತ್ತು ಸಲಹುವುದೆನ್ನ ನಿಜಲಿಂಗ ಭವಭಂಗ ಶರಣಜನವರದ ಜಯತು॥ 68 ॥
ಪರಸತಿಯ ಬಳಿಗೆಳೆಯುತಿದೆ ಕಾಮವೆಂಬುವುದು
ಪಿರಿದು ಬೈದಾಡಿಸುವುದೀ ಕ್ರೋಧವೆಂಬುವುದು
ನೆರೆ ಧರ್ಮಮಾಡಗೊಡದೀ ಲೋಭ ಮೋಹ ತಾ ಮಿಥ್ಯವನುಹರಿಯಗೊಡದು
ಗುರುಹಿರಿಯರಿಗೆ ನಮಿಸಗೊಡದು ಮದವೆಂಬುವುದು
ಪರಮ ವೈರವ ಬೆಳೆಸುತಿದೆ ಮತ್ಸರಿಂತಿವನು
ಪರಿಹರಿಸಿ ಸಲಹೆನ್ನ ನಿಜಲಿಂಗ ಭವಭಂಗ ಶರಣಜನವರದ ಜಯತು॥ 69 ॥
ಪರುಷ ಲೋಹವನು ತನ್ನಂತೆ ಮಾಡುವ ತೆರದಿ
ಕುರುಡಿ ಪರಹುಳವ ತನ್ನಂತೆ ಮಾಡುವ ತೆರದಿ
ಪರಿಮಳದಿ ಚಂದನವು ಕಾಮರವ ತನ್ನಂತೆ ಮಾಡಿಕೊಂಬುವ ತೆರದಲಿ
ಪರಮಾತ್ಮ ನಿನ್ನ ಭಕ್ತರಿಗೆ ಸ್ಥಿರಪದವೀವ
ಬಿರುದಂಕನೆಂದು ನಂಬಿದೆನು ಭವಪಾಶವನು
ಪರಿಹರಿಸಿ ಸಲಹೆನ್ನ ನಿಜಲಿಂಗ ಭವಭಂಗ ಶರಣಜನವರದ ಜಯತು॥ 70 ॥
ಎನ್ನೊಳಪರಾಧವೇನಯ್ಯ ದೇವರ ದೇವ
ನಿನ್ನಿಂದ ನಡೆವುದನು ನಿನ್ನಿಂದ ನುಡಿವುದನು
ನಿನ್ನಿಂದ ಸಕಲ ಸುಖದುಃಖಗಳನನುಭವಿಸಿಕೊಂಡಿಪ್ಪ ಬಡವ ನಾನು
ಪನ್ನಂಗಭೂಣನೆ ಪಾವನ್ನ ವಿಗ್ರಹನೆ
ನಿನ್ನ ನಾಮವಮರೆಯದಂತೆ ಸದ್ಗುಣವಿತ್ತು
ಎನ್ನ ಸಲಹುವುದಯ್ಯ ನಿಜಲಿಂಗ ಭವಭಂಗ ಶರಣಜನವರದ ಜಯತು ॥ 71 ॥
ಜನನಿಜಠರದಿ ತರಳನಿರಲು ಸಲಹುವರಾರು
ಅನುನಯದೊಳಲ್ಲಿಂದ ಪೊರಮಡಿಸುತಿಹರಾರು
ದಿನದಿನಕೆ ಹೆಚ್ಚಾಗಿ ಬೆಳಸುತಿಪ್ಪರದಾರು ಬಳಿಕೊಂದು ನೆವದಿಂದಲಿ
ತನುವಿಂದೆ ಪ್ರಾಣವನು ಕಡೆಗೆ ತೊಲಗಿಪರಾರು
ಅನಲಾಕ್ಷ ನೀನಲ್ಲದಿನ್ನುಂಟೆ ಭಕ್ತಿಗುಣ
ವನು ಕೊಟ್ಟು ಸಲಹೆನ್ನ ನಿಜಲಿಂಗ ಭವಭಂಗ ಶರಣಜನವರದ ಜಯತು॥ 72 ॥
ತೆಂಗಿನೊಳು ವಿಮಲೋದಕವ ಹಾಕಿದವರಾರು
ಭೃಂಗವೈರಿಗೆ ಪರಿಮಳವನು ಕೊಟ್ಟವರಾರು
ಕಂಗೊಳಿಪ ನವಿಲಿಂಗೆ ಬಗೆಬಗೆಯ ಬಣ್ಣವನು ಬರೆದು ನಿರ್ಮಿಸಿದರಾರು
ರಂಗುಬಣ್ಣವನು ಪವಳಕೆ ಸಾರ್ಚಿದವರಾರು
ಮಂಗಳಾತ್ಮಕನೆ ನೀನಲ್ಲದಿನ್ನಾರುಂಟು
ಹಿಂಗದೆನ್ನನು ಸಲಹು ನಿಜಲಿಂಗ ಭವಭಂಗ ಶರಣಜನವರದ ಜಯತು ॥ 73 ॥
ಕುಸುಮವನು ಕಿವಿಗೆ ಸಾರ್ಚಿದಡೆ ಪರಿಮಳವಹುದೆ
ರಸದಾಳಿ ಕಬ್ಬನಾಸಿಕ ಹಸಿದು ಸೇವಿಪುದೆ
ಕುಶಲ ವಿದ್ಯೆಯನೆಲ್ಲ ಬಾಯಿ ತಾ ನೋಡುವುದೆ ಹಸಿಹಸಿದು ಬಳಲುತಿರಲು
ಒಸೆದು ನಯನವು ಭೋಜನವನೂಡಿಕೊಂಬುವುದೆ
ಅಸಮಾಕ್ಷ ನೀನಲ್ಲದತಿ ದುರಿತವನು ಪರಿಹ
ರಿಸುವನ್ನರಿನ್ನಾರುನಿಜಲಿಂಗ ಭವಭಂಗ ಶರಣಜನವರದ ಜಯತು ॥ 74॥
ಮಾರುತನು ನಡೆತಂದ ಸಮಯದಲಿ ಧಾನ್ಯವನು
ತೂರಿಕೊಳಬೇಕು ಸಟೆಯಲ್ಲವೀ ವಾಕ್ಯವು ಶ
ರೀರದೊಳುಪ್ರಾಣನಾಯಕನಿದ್ದ ಸಮಯದಲಿ ಶಿವ ನಿಮ್ಮ ಹಾಡಿಹೊಗಳಿ
ಭೂರಿಪಾಪವನೆಲ್ಲ ಈಡಾಡಬೇಕೆಂದು
ಮಾರಾರಿ ನಿನ್ನ ಮರೆಹೊಕ್ಕೆ ಸಲಹುವುದೆನ್ನ
ಮೂರು ಕಣ್ಣುಳ್ಳವನೆ ನಿಜಲಿಂಗ ಭವಭಂಗ ಶರಣಜನವರದ ಜಯತು॥ 75 ॥
ಭವಭವದ ಚರಿತವನು ತಿಳಿತಿಳಿದು ನೋಡಿದರೆ
ಲವಲವಿಸುತೆನ್ನೆದೆಯು ಗದಗದಿಸಿ ನಡುಗುತಿದೆ
ಶಿವನೆ ಕೇಳಿನ್ನು ಪುಟ್ಟಿಸಬೇಡ ಭೂಮಿಯೊಳು ಬೇಡಿಕೊಂಬೆನು ನಿಮ್ಮನು
ಇವನು ಬಲುಮಂದಮತಿಯೆಂದೆನ್ನಜರಿಯದಲೆ
ಅವಿರಳಾನಂದ ಜ್ಞಾನವನಿತ್ತು ಬಿಡದೆ ಸಲ
ಹುವುದೆನ್ನ ಕರುಣದಲಿನಿಜಲಿಂಗ ಭವಭಂಗ ಶರಣಜನವರದ ಜಯತು॥ 76 ॥
ಮನುಮಥನ ಸತ್ಕ್ರೀಡೆಯಾಂತ್ಯದಲಿ ಮದನಾಂಬು
ಜನಕನಾತ್ಮವ ತೊಲಗಿ ಜನನಿಯುದರದಿ ನಿಂದು
ಘನ ಹೇಸಿಕೆಯ ರಕ್ತಮಾಂಸಕಫಕ್ರಿಮಿಯೊಳಗೆ ದಿನದಿನಕೆ ಪಿಂಡಬೆಳೆದು
ಅನುವಿಲ್ಲದುಬ್ಬಸದಿ ಹುದುಗಿಕೊಂಡಿರಬೇಕು
ಜನನಕಾಲದಲಿ ಪೊರಮಡುವಾಗ ಬಲುಕಷ್ಟ
ವನು ಪೇಳಲಳವಲ್ಲ ನಿಜಲಿಂಗ ಭವಭಂಗ ಶರಣಜನವರದ ಜಯತು ॥ 77 ॥
ದೋಷವಾಸದ ಯೋನಿಯಿಂದೆ ಪುಟ್ಟಿದ ಬಳಿಕ
ಪಾಸಿನೊಳಗಿಹತಗಣಿ ಕೂರಿ ಚಿಕ್ಕಡ ಕಡಿಯ
ಲಾ ಸಂಕಟವದೊಂದು ಹೊಟ್ಟೆನೊಂದಳುತಿರಲು ಮೊಲೆವಾಲನೂಡುತಿಹರು
ಹೇಸಿಕೆಯ ತನ್ನ ಮಲಮೂತ್ರದೊಳು ತಾ ಹೊರಳಿ
ಘಾಸಿಯಾಗುತ ಪೇಳುವರೆ ನುಡಿಗಳಿಲ್ಲಲಾ
ಯಾಸವದನೇಂ ಪೇಳ್ವೆ ನಿಜಲಿಂಗ ಭವಭಂಗ ಶರಣಜನವರದ ಜಯತು॥ 78 ॥
ತರಳತನದಿಂದರಲು ಬಳಿಕ ಯೌವನ ಬರಲು
ತರುಣಿ ಸುತರಾಗಲವರನು ಸಲಹಬೇಕೆನುತ
ಪರಿಪರಿಯ ಧಾವತಿಯ ನೆಗಳಿ ಬಳಬಳಲಿ ನಾನಾಯೋಚನೆಯನೆಸಗುತ
ಇರಲನಿತರೊಳು ಸತಿಯು ಸುತರು ಮರಣಂಗೈಯೆ
ಪರಮಶೋಕಾತುರದಿ ನೊಂದು ಚಿಂತಿಸುವ ಕರ
ಕರಿಯು ಪೇಳುವರಳವೆ ನಿಜಲಿಂಗ ಭವಭಂಗ ಶರಣಜನವರದ ಜಯತು ॥ 79 ॥
ಬದುಕುಮನೆಮಾಡಿಕೊಂಡಿರೆಜರಾಂಗನೆಯು ತಾ
ನೊದಗಲಾಕ್ಷಣದಲ್ಲಿ ಪಂಚೇಂದ್ರಿಯಗಳು
ಹದಗೆಡಲು ಸತಿಸುತರು ಮುದಿಪಾಪಿ ತಾಸಾಯಲೊಲ್ಲನು ಯೆಂದು ಹಳಿಯು ತಿರಲು
ಇದು ಹೊರತು ಮರಣಗಾಲದೊಳೊಂದು ವ್ಯಾಧಿಯೊಳು
ಕುದಿಕುದಿದು ಪ್ರಾಣವನು ಬಿಡಬೇಕು ಸತ್ತುಹು
ಟ್ಟದ ಬಗೆಯ ಮಾಡುವುದು ನಿಜಲಿಂಗ ಭವಭಂಗ ಶರಣಜನವರದ ಜಯತು ॥ 80 ॥
ರೂಢಿಯೊಳಗೆಂತು ಜೀವಿಸಬೇಕು ಚಿತ್ತೈಸು
ಚಾಡಿಕೋರರು ಚೋರರುಗಳು ಸಿರಿವಂತರಡಿ
ನೋಡಿ ಬಳಲುವ ದುರಾಚಾರಿಗಳು ಪಾಪಿಗಳು ದುರ್ಜನರು ದಯಹೀನರು
ಕೂಡಿ ನಡೆವಲ್ಲಿ ಭೇದವನಿಕ್ಕುವರು ಪರರ್ಗೆ
ಕೇಡನೆಣಿಸುವರು ಕುಟಿಲರು ಕುಹಕಿಗಳು ಶಶಿಯ
ಸೂಡಿದನೆ ಸುಚರಿತ್ರ ನಿಜಲಿಂಗ ಭವಭಂಗ ಶರಣಜನವರದ ಜಯತು ॥ 81 ॥
ಒಡವೆಯಾಸೆಗೆ ಬಾಲಕರ ಕೊರಳ ಛೇದಿಪರು
ಬಿಡದೆ ಸವತಿಯ ಶಿಶುವ ಬಾವಿಯೊಳು ಕೆಡಹುವರು
ಕಡೆಗೆ ಧನಬರಲೆಂದು ಗರ್ಭಿಣಿಯ ಕೊಂಡೊಯ್ದು ಕಡಿಕಡಿದು ಕೊಲ್ಲುತಿಹರು
ಕಡುವಿಷವನಿಕ್ಕಿ ಮಲಮಕ್ಕಳನು ಕೊಲುತಿಹರು
ಕೊಡುವ ಧರ್ಮವ ಮಾಣಿಸುವರು ನಿಷ್ಕರುಣಿಗಳು
ನುಡಿದು ಪೇಳುವರಳವೆ ನಿಜಲಿಂಗ ಭವಭಂಗ ಶರಣಜನವರದ ಜಯತು ॥ 82॥
ಧನವಿರಲು ಧರ್ಮಮಾರ್ಗವ ಬಿಟ್ಟು ಮದವೇರಿ
ತನಗಾರು ಸರಿಯಿಲ್ಲವೆಂದು ಗರ್ವಿಸುತಿರಲು
ಮನೆಗೆ ಯಾಚಕರು ಬರಲವರಿಗೊಂದರೆಕಾಸು ಕೊಡದೆ ಹೊರಯಿಕೆ ಹಾಕಿಸಿ
ಮನಕೆ ಬಂದಂತೆ ಸುಜ್ಞಾನಿಗಳ ನಿಂದಿಸುತ
ಘನಮದೋನ್ನತದಬಲುದುರ್ಜನರ ಚಾರಿತ್ರ
ವನು ಪೇಳಲಳವಲ್ಲ ನಿಜಲಿಂಗ ಭವಭಂಗ ಶರಣಜನವರದ ಜಯತು ॥ 83 ॥
ಸಲೆ ನಂಬಿದರೊಳೆರಡನೆಣಿಸುವರು ಕೈವಿಡಿದು
ಸಲಹಿ ದೊಡ್ಡವನ ಮಾಡಿದನ ಲೆಕ್ಕಿಸದಿಹರು
ಬಲುಸವಿಯ ಬಾಯಿಂದ ಪೊಣ್ಮಿಸುವರಾತ್ಮದೊಳಗವಗುಣವ ಸೇರಿಸಿಹರು
ಹೊಲೆಮನದ ವಿಶ್ವಾಸಘಾತಕರು ಪಾತಕರು
ಕುಲಹೀನರುಗಳು ಖೂಳರು ತಾವೆ ತಾವಾಗಿ
ನೆಲಸಿಹರು ಭೂಮಿಯೊಳು ನಿಜಲಿಂಗ ಭವಭಂಗ ಶರಣಜನವರದ ಜಯತು ॥ 84 ॥
ನೀತಿಯನು ಹಿಡಿಯಲೊಲ್ಲರು ಗುರುಹಿರಿಯರುಗಳ
ಮಾತ ಕೇಳರುಸಜ್ಜನರನು ದೂಷಿಸುತಿಹರು
ಮಾತೆಪಿತರನು ಬೈದು ಬಳಲಿಸುವ ದುರ್ಜನರೊಳೆಂತು ಜೀವಿಸಲುಬೇಕು
ಭೂತನಾಯಕ ನೀನುಮೋಕ್ಷದಾಯಕನೆಂದು
ನಾ ತಿಳಿದು ನಿನ್ನ ಪಾದಾಬ್ಜವನು ನಂಬಿದೆನು
ಓತು ಸಲಹುವುದಯ್ಯ ನಿಜಲಿಂಗ ಭವಭಂಗ ಶರಣಜನವರದ ಜಯತು ॥ 85॥
ಶಿವ ನಿಮ್ಮ ಚರಣಾರವಿಂದವನು ನೆರೆ ನಂಬಿ
ಭವಕಡಲನುತ್ತರಿಸಿ ನಿತ್ಯಪದವಿಯ ಸಾಧ
ನವ ಮಾಡಬೇಕೆಂಬ ಸದ್ಗುಣವು ಪಿರಿದು ಸುಕೃತವ ಮಾಡಿದರಿಗಲ್ಲದೆ
ಕವಲುಗೊಂಡಿಹ ಮನದ ನರಕಿಗಳಿಗೆಲ್ಲರಿಗೆ
ಧವಳಾಂಗ ನಿನ್ನ ನಾಮಾಮೃತವು ಬರಲುಂಟೆ
ರವಿಕೋಟಿಸನ್ನಿಭನೆ ನಿಜಲಿಂಗ ಭವಭಂಗ ಶರಣಜನವರದ ಜಯತು ॥ 86॥
ಮಲಯಜದ ಪರಿಮಳ ಸೂಕರಗೆ ತಿಳಿಯುಂಟೆ
ಜಲಜಾತಪರಿಮಳವು ಮಕ್ಷಿಕಗೆ ತಿಳಿಯುಂಟೆ
ಚೆಲುವ ಮುತ್ತಿನ ಸರವು ಮರ್ಕಟಗೆ ತಿಳಿಯುಂಟೆ ಮಧುರಸ್ವರ ಗೂಗೆಗುಂಟೆ
ಲಲಿತವೀಣೆಯ ಧ್ವನಿಯು ಕೋಣಂಗೆ ತಿಳಿಯುಂಟೆ
ಮಲಹರನೆ ನಿನ್ನ ಭಜನೆಯ ಮಾಡುವರೆ ಪೂರ್ವ
ದಲಿ ಪಡೆಯದರಿಗುಂಟೆ ನಿಜಲಿಂಗ ಭವಭಂಗ ಶರಣಜನವರದ ಜಯತು ॥ 87॥
ಅರಗಿಳಿಗಳಂತೆ ಮರಕುಟಿಕಮಾತಾಡುವುದೆ
ತುರಗನಂದದಲಿ ಗಾರ್ದಭನು ನಲಿದಾಡುವುದೆ
ಮೆರೆವ ಹಂಸನ ತೆರದಿ ಬಕನು ನೀರುಳುಹಿ ಕ್ಷೀರವನು ಸೇವಿಸಬಲ್ಲುದೆ
ವರಕೋಕಿಲನ ತೆರದಿ ಕಾಕ ಧ್ವನಿದೋರುವುದೆ
ಪರಮಭಕ್ತರು ನಿನ್ನ ಧ್ಯಾನವನು ಮಾಳ್ಪಂತೆ
ನರಕಿಗಳಿಗರಿವುಂಟೆ ನಿಜಲಿಂಗ ಭವಭಂಗ ಶರಣಜನವರದ ಜಯತು ॥ 88॥
ಕುರಿಗಳಿಗೆ ಕಬ್ಬಿನೊಳಗಿಹ ರಸವು ಬರಲುಂಟೆ
ಖರಗಳಿಗೆ ತೆಂಗಿನೊಳಗಿಹ ನೀರು ಬರಲುಂಟೆ
ಹರಿದು ರಕ್ತವ ಕುಡಿವ ಉಣ್ಣಿಗಳಿಗೆಲ್ಲ ಗೋವಿನ ಕ್ಷೀರ ಬರುವುದುಂಟೆ
ಹರನೆ ಭವಹರನೆ ಯಮಹರನೆ ಸ್ಮರಹರನೆ ಪುರ
ಹರನೆ ಶಿರಕರನೆ ನಿನ್ನಯ ದಿವ್ಯ ಸ್ಮರಣೆಯದು
ಬರಲುಂಟೆ[ಪಾತಕಿಗೆ]ನಿಜಲಿಂಗ ಭವಭಂಗ ಶರಣಜನವರದ ಜಯತು ॥ 89॥
ಶಿಲೆಯ ಮೇಲರವಿಂದವುದ್ಭವಿಸಿ ತೋರುವುದೆ
ಚೆಲುವ ಮುಕ್ತಾಫಲವು ಬೆಂಚೆಯೊಳಗಿರುತಿಹುದೆ
ಜಲವ ಮರ್ದಿಸಲುನವನೀತ ಪೊಣ್ಮುವುದೆ ಅಜಗಳದಲ್ಲಿ ಮೆರೆವುತಿಪ್ಪ
ಮೊಲೆಗಳನು ತೊರೆವಿಡಿಯೆ ತನಿವಾಲು ಹೊರಡುವುದೆ
ಕುಲರಹಿತ ನಿನ್ನ ಧ್ಯಾನವು ಮಂದಮತಿಯ ಮನ
ದಲ್ಲಿ ತಾ ನೆಲಸುವುದೆ ನಿಜಲಿಂಗ ಭವಭಂಗ ಶರಣಜನವರದ ಜಯತು॥ 90 ॥
ನಡುಮಾರ್ಗದೊಳಗೊರ್ವ ನಡೆನಡೆದು ಪೋಗುತಿರೆ
ಬಿಡದೆ ಪೆರ್ಬುಲಿ ಕಂಡು ಸಿಡಿಲು ಭೋರ್ಗರೆವಂತೆ
ಘುಡುಘುಡಿಸುತಾರ್ಭಟಿಸುತಡಿಗಡಿಗೆ ಮಲೆಯುತಲಿ ತಡವಿಡದೆ ಲಂಗಿಸುತಲಿ
ಕಡು ಭಯಂಕರದಿಂದೆ ನಡೆತರಲು ಭೀತಿಸದೆ
ಮೃಡನಿನ್ನ ನಾಮವನು ಬಿಡದೆ ಕೀರ್ತಿಸುತಿರಲು
ದೃಢಭಕ್ತನಹುದಹುದು ನಿಜಲಿಂಗ ಭವಭಂಗ ಶರಣಜನವರದ ಜಯತು ॥ 91॥
ಪೊದೆಪೊದೆಯ ತೃಣ ಬೆಳೆದ ಕಾಂತಾರದೊಳಗೊರ್ವ
ಒದವೊದಗಿ ನಡೆತರುವ ಸಮಯದೊಳಗಾ ತೃಣಕೆ
ಬೆದಬೆದನೆ ಕಿಚ್ಚೆದ್ದು ಸುಡುಸುಡುತ ಪೇರುರಿಯು ಧಗಧಗಿಸಿ ನಾಲ್ದೆಸೆಯನು
ಪದುಪದುಳದಿಂ ಮುಸಿಕಿಕೊಂಡು ಬರುತಿರಲದಕೆ
ಹೆದಹೆದರದಾತ್ಮದೊಳು ನಿನ್ನ ಧ್ಯಾನವ ಮಾಳ್ಪ
ಸದುಭಕ್ತನಹುದು ನಿಜಲಿಂಗ ಭವಭಂಗ ಶರಣಜನವರದ ಜಯತು ॥ 92॥
ತುರುಗಿರ್ದ ಕತ್ತಲೆಯೊಳೊರ್ವ ನಡುದಾರಿಯಲಿ
ಬರುವ ತತ್ಸಮಯದಲಿ ಕಾಳರಕ್ಕಸಿ ತನ್ನ
ಕರದಲ್ಲಿ ಕೊಳ್ಳಿಯನು ಹಿಡಕೊಂಡು ದಾಡೆಯೊಳು ಶಿರಗಳನು ಕಚ್ಚಿಕೊಂಡು
ಗರಗರನೆ ಕಣ್ಣು ತಿರುವುತ ಬಂದು ನಿಲಲದರ
ಪರಿಯ ಕಾಣುತ ಭೀತಿಗೊಳದೆ ಮನದೊಳು ನಿನ್ನ
ಸ್ಮರಿಸುವವ ದೃಢಭಕ್ತ ನಿಜಲಿಂಗ ಭವಭಂಗ ಶರಣಜನವರದ ಜಯತು॥ 93॥
ಕಾಳಿಂಗಸರ್ಪ ತನ್ನೊಳು ತಾನೆ ರೋಷವನು
ತಾಳಿ ಭೋರ್ಗರೆಯುತ್ತಲಡಿಗಡಿಗೆ ನಾಲಗೆಯ
ಸೂಳೈಸಿ ತೆಗೆತೆಗೆದು ಬಲುವೇಗದಿಂದೆ ಹರಿಹರಿದು ಬರುವ
ವೇಳೆಯೊಳು ತನ್ನ ಮನದೊಳಗೆ ನಿರ್ಭೀತಿಯಲಿ
ಭಾಳಲೋಚನ ನಿನ್ನ ದಿವ್ಯ ನಾಮಾಮೃತವ
ಪೇಳುವವ ಸದ್ಭಕ್ತ ನಿಜಲಿಂಗ ಭವಭಂಗ ಶರಣಜನವರದ ಜಯತು ॥ 94 ॥
ಕೆಲರು ಬಲುಮರುಳೆಂದು ಧಿಕ್ಕರಿಸಿ ಹಳಿಯುತಿರೆ
ಕೆಲರು ಬಲುಸುಜ್ಞಾನಿಯೆಂದೆನುತ ಪೊಗಳುತಿರೆ
ಕೆಲರು ಮತಿಹೀನ ಪಾಪಾತ್ಮನೆಂದಾಡುತಿರೆ ಕೆಲರು ಪುಣ್ಯಾತ್ಮನೆನಲು
ಕೆಲರು ಲೆಕ್ಕಿಸದೆ ನಡೆಯೆಂದು ಧೂಟಿಸುತಿರಲು
ಕೆಲರು ಮನ್ನಣೆಯಿಂದ ಕರೆಯೆ ಕುಂದದೆ ಹಿಗ್ಗ
ದಲೆ ನಡೆವನವ ಭಕ್ತ ನಿಜಲಿಂಗ ಭವಭಂಗ ಶರಣಜನವರದ ಜಯತು॥ 95॥
ಅರುವತ್ತುನಾಲ್ಕು ವಿದ್ಯೆಯಲಿ ಪರಿಣತನಾಗಿ
ಧುರಧೀರ ಧರ್ಮಾತ್ಮ ತ್ಯಾಗಿ ಭೋಗಿಯುಮೆನಿಸಿ
ನರಲೋಕದೊಳು ನರರ ನಡತೆಯಿಂದಲಿ ನಡೆಯುತಹುದೆನಿಸಿಕೊಂಡು ಬಳಿಕ
ಮೆರೆವ ಪಿಂಡಾಂಡದೊಳು ಸೂಕ್ಷ್ಮದಿಂದಡಗಿಪ್ಪ
ಪರಮಾತ್ಮನೊಳು ಮನವ ಸಂದು ಭವಕಡಲನು
ತ್ತರಿಸುವಂಗೆಣೆಯುಂಟೆ ನಿಜಲಿಂಗ ಭವಭಂಗ ಶರಣಜನವರದ ಜಯತು ॥96 ॥
ಬರಹ ಲೀಲಾವತಿಯು ಶಿಲ್ಪಸಾಮುದ್ರಿಕವು
ಭರತಶಾಸ್ತ್ರವು ಸೂಪಶಾಸ್ತ್ರ ಮನ್ಮಥಶಾಸ್ತ್ರ
ಮೆರೆವ ಜ್ಯೋತಿಷಶಾಸ್ತ್ರ ಶಬ್ದತರ್ಕಾದಿಗಳು ಸಕಲ ಶಾಸ್ತ್ರಗಳನೆಲ್ಲ
ನಿರುತದಿಂ ಸಾಧನವ ಬಿಡದೆ ಮಾಡಿದಡೇನು
ಪರಂಜ್ಯೋತಿವಸ್ತುವನು ತನ್ನೊಳಗೆ ತಿಳಿದು ಸುಖ
ವಿರುವ ವಿದ್ಯಕ್ಕೆಣೆಯೆ ನಿಜಲಿಂಗ ಭವಭಂಗ ಶರಣಜನವರದ ಜಯತು॥ 97॥
ಸತ್ವದಿಂದಲಿ ಮಲೆತಗಜವ ನಿಲಿಸಿದಡೇನು
ಮತ್ತೆ ಕೇಸರಿಯೊಡನೆ ಕಾದಿ ಜಯಿಸಿದಡೇನು
ಬಿತ್ತರದ ಛಪ್ಪನ್ನ ಭಾಷೆಗಳ ಕಲಿಕಲಿತು ಪ್ರೌಢನಾಗಿರ್ದಡೇನು
ಸತ್ತು ಮರಮರಳಿಹುಟ್ಟುವ ಬಾಧೆಯನು ಕಳೆದು
ನಿತ್ಯ ನಿರ್ಮಲ ನಿಜಾನಂದನಾಗಿರುವಪರ
ಮಾತ್ಮವಿದ್ಯಕ್ಕೆಣೆಯೆ ನಿಜಲಿಂಗ ಭವಭಂಗ ಶರಣಜನವರದ ಜಯತು ॥ 98॥
ಗೋತ್ರಕುಲಜಾತೆಯ ಕಳತ್ರ ಕಮನೀಯ ಚಾ
ರಿತ್ರ ಚತುರಾಸ್ಯ ಶಿರಪಾತ್ರ ನಿರ್ಮಲ ಧವಳ
ಗಾತ್ರ ನಾರದಸ್ತೋತ್ರ ಮಿತ್ರ ಹರಿಣಾಂಕ ಶಿಖಿನೇತ್ರ ಭವಲತಲವಿತ್ರ
ನೇತ್ರ ಶ್ರವಣಭೂಷ ಶತಪತ್ರಸಖ ಶರಧಿ
ಪುತ್ರಶೇಖರ ಪಂಚವಕ್ತ್ರ ಮಾಂ ಪಾಹಿ ಲೋ
ಕತ್ರಯಾಧಿಪ ದೇವ ನಿಜಲಿಂಗ ಭವಭಂಗ ಶರಣಜನವರದ ಜಯತು ॥ 99 ॥
ರುದ್ರಾಣಿಯರಸ ಕನಕಾದ್ರಿಬಾಣಾಸನ ಸ
ಮುದ್ರಾತ್ಮಭವಮೌಳಿ ಭದ್ರನಾಗಿಹವೀರ
ಭದ್ರನಂ ಪಡೆದ ಬಲಭದ್ರರಾಜಸುಮಿತ್ರ ಕ್ಷುದ್ರಾಂಧಕಾಸುರಹರ
ರುದ್ರನಂ ನಾಕಜೋಪದ್ರ ಸಂಹರನ ದುರಿ
ತಾದ್ರಿಕುಲಿಶಂ ತುಂಗಭದ್ರತೀರದೊಳೆಸೆವ
ಕದ್ರುಭವಪುರವಾಸ ನಿಜಲಿಂಗ ಭವಭಂಗ ಶರಣಜನವರದ ಜಯತು ॥ 100 ॥