ತತ್ವಮಯ ಕೇಶವಾ
ಗಿರಿಧರಾ ಮುರಹರಾ
ಪತಿತೋದ್ಧಾರ ಸುಗುಣಕರಾ
ಶ್ಯಾಮ ಸುಂದರ ಕೃಷ್ಣ
ಮುರಳಿಧರ ಕರುಣಾಕರ
ಗೋಪಿಜನ ಮಂದಾರ
ಯದುಕುವರ ಶ್ರೀಹರೇ
ಶಾಂತಿಗ್ರಾಮ
೧. ಹೊಯ್ಸಳ ರಾಜ ವಿಷ್ಣುವರ್ಧನ
ಪಟ್ಟದ ರಾಣಿ ಶಾಂತಲೆಯು(೨)
ನಮ್ಮೂರಿಗೆ ಶಾಂತಲೆ ಬಂದಾಗ
ಇಲ್ಲಿಯ ಗುಡಿಗಳ ನೋಡಿದಳು
೨.ದೇವಾಲಯಗಳ ಸಂರಕ್ಷಣೆಗೆ
ಭೂಮಿ ಕಾಣಿಕೆಯನು ನೀಡಿದಳು(೨)
ಶಾಂತಲೆ ನೆನಪಿಗೆ ನಮ್ಮೂರಿಗೆ
ಶಾಂತಿಗ್ರಾಮವೆಂದ್ಹೆಸರಾಯ್ತು
೩.ಪ್ರಾಚೀನ ಕಾಲದಿಂ ಶಾಂತಿಗ್ರಾಮದಿ
ಕೇಶವ ನರಸಿಂಹರು ನೆಲೆಸಿಹರು(೨)
ಕಾಲಕಾಲಕೆ ಮಳೆಬೆಳೆಯಾಗಿ
ಸುಭಿಕ್ಷವಾಯ್ತು ನಮ್ಮೂರು
೪.ಇದ್ದರು ಹಿರಿಯರು ನಮ್ಮೂರಿನಲಿ
ಚತುಶ್ಶಾಸ್ತ್ರ ಪಂಡಿತರು(೨)
ಘನ ವಿದ್ವಾಂಸರು ವೇದಾಂತಿಗಳು
ಯಜ್ಞಯಾಗಾದಿಗಳ ಮಾಡಿದರು
೫.ಅಯ್ಯೋ ಹೋಯಿತು ಆ ಕಾಲ
ಅಯ್ಯೋ ಬಂದಿತು ಈ ಕಾಲ(೨)
ಗತವೈಭವದ ಸ್ಮರಣೆ ಮಾತ್ರದಿ
ಮನದಲಿ ದುಃಖವು ಉಕ್ಕುವುದು
೬.ಮಳೆಯೂ ಹೋಯಿತು ಬೆಳೆಯೂ ಹೋಯಿತು
ಊರನು ಬಿಟ್ಟರು ಜನರೆಲ್ಲಾ (೨)
ಹೊಟ್ಟೆಯ ಪಾಡಿಗೆ ಕೆಲಸವ ಹುಡುಕಲು
ಪಟ್ಟಣ ಸೇರಿದವರೆಲ್ಲಾ
೭. ನಮ್ಮೂರ ಸುತ್ತಾ ಬಲುದೊಡ್ಡ ಕೆರೆಯೂ
ಸಣ್ಣ ದೊಡ್ಡ ಕಲ್ಯಾಣಿಗಳಿರುವುದು(೨)
ಹಿಂದೆಲ್ಲಾ ಒಣಗ್ಲಿಲ್ಲ ಈಗಂತೂ ತುಂಬಿಲ್ಲ
ಇದ್ದೂ ಇಲ್ಲದ ಹಾಗಾಯ್ತು
೮. ಹಿಂದಿನ ಕಾಲದ ಸುಂದರ ರಥವು
ಸ್ವಾಮಿಗೆ ಸೇವೆಯ ಸಲ್ಲಿಸಿತು(೨)
ವಯೋಧರ್ಮದಿ ಮುಪ್ಪಾಗಿ ತೇರೊ
ವಿಶ್ರಾಂತಿಗರ್ಜಿಯ ಸಲ್ಲಿಸಿತು
೯. ಬಿಡಲಿಲ್ಲ ನಮ್ಮ ಜನ ಕೊಡಲಿಲ್ಲ ವಿಶ್ರಾಂತಿ
ವರ್ಷ ವರ್ಷವೂ ದುಡಿಸಿದರು(೨)
ಎಡವುತ್ತ ಕುಂಟುತ್ತ ನಿಲ್ದಾಣ ಸೇರ್ತಿತ್ತು
ತೇರಾದ ಮರುದಿನ ಸಂಜೆಯಲಿ
೧೦. ಕಡೆಗೊಮ್ಮೆ ಹಣ್ಣಾಗಿ ಟೊಂಕವು ಮುರಿಯಿತು
ತಾನೇ ಪಡೆದಿತು ವಿಶ್ರಾಂತಿ(೨)
ಅದರಾತ್ಮ ಶಾಂತಿಯ ಕೋರುವ ನಾವು
ಎರಡು ನಿಮಿಶದಿಂ ಮನಸಿನಲಿ
೧೧. ಕೊಡುಗೈದಾತರು ಅಂತರಂಗ ಭಕ್ತರೂ
ಹೊಸತೇರಿಗೆ ಹಣ ನೀಡಿದರು(೨)
ಸಿದ್ಧವಾಯಿತು ನೂತನ ರಥವು
ಸಾವಿರ್ದೊಂಭೈನೂರೆಪ್ಪತ್ತರಲಿ
೧೨. ಊರನು ಬಿಟ್ಟರು ಇಂದಿನ ಪೀಳಿಗೆ
ಎಲ್ಲೆಲ್ಲೂ ಸುಖದಲ್ಲಿ ಇರುತಿಹರು(೨)
ಭಾರತ ಅಮೆರಿಕ ಇಂಗ್ಲಂಡ ಮುಂತಾದ
ದೇಶ ವಿದೇಶದಲಿ ನೆಲೆಸಿಹರು
೧೩. ದೇವರ ಸೇವೆಗೆ ಭಕ್ತಾದಿಗಳು
ರೈಲು ಬಸ್ಸಲಿ ಬರುತಿಹರು(೨)
ವ್ಯಾನು ಕಾರನು ನೋಡಿರಲಿಲ್ಲವು
ಹಿಂದಿನ ಕಾಲದಿ ನಮ್ಮೂರು
೧೪. ಈಗೇನು ವರ್ಷ ವರ್ಷವೂ ಪೈಪೋಟಿಯಲಿ
ಕಾರು ವ್ಯಾನಲ್ಲಿ ಬರುತಿರುವರು(೨)
ಕೇಶವ ಕಟಾಕ್ಷವಿದ್ದರೆ ಸಾಕು
ಹೆಲಿಕೊಯಾಪ್ಟರಲ್ಲೂ ಬರಬಹುದು
೧೫. ಕೇಶವ ದೇವರ ರಾಜಗೋಪುರವು
ಕುಸಿದು ಭಗ್ನಗೋಪುರವಾಯ್ತು(೨)
ಊರಿಗೆ ಬರುವ ಭಕ್ತರ ಕಣ್ಣಿಗೆ
ನೋವನು ತರುವ ತೆರನಾಯ್ತು
೧೬. ರಾಜಗೋಪುರದ ಜೀರ್ಣೋದ್ಧಾರಕೆ
ಭಕ್ತರೆಲ್ಲರೂ ಕೂಡಿದರು(೨)
ಭಕ್ತ ಮಂಡಳಿ ಸ್ಥಾಪನೆ ಮಾಡಿ
ಹೊಸ ಗೋಪುರಕೆ ಶ್ರಮಿಸಿದರು
೧೭. ಕುಮಾರಿ ರಮ್ಯಳ ಅಮೋಘ ನೃತ್ಯವು
ಅರವತ್ತು ಸಹಸ್ರ ಒದಗಿಸಿತು(೨)
ಗೋಪುರ ನಿರ್ಮಾಣದಾರಂಭ ಕಾರ್ಯವು
ವಿಘ್ನವಿಲ್ಲದೇ ನಡೆದ್ಹೋಯ್ತು
೧೮. ಉಭಯ ವೇದಾಂತ ಪ್ರವರ್ತನ ಸಭೆಯು
ಹೆಬ್ಬಾರ ಶ್ರೀ ವೈಷ್ಣವ ಸಭೆಯೂ(೨)
ಘನ ಸರ್ಕಾರವು ಕಪೂರಚಂದ ಭೂರಮಲ್
ಅಪಾರ ಧನವನು ನೀಡಿದರು
೧೯. ಜನಸಾಮಾನ್ಯರು ಭಕ್ತಾದಿಗಳು
ಶಕ್ತಿಮೀರಿ ಕೊಟ್ಟರು ಹಣವನ್ನು(೨)
ಗೋಪುದ ದುರಸ್ತಿ ನೂತನ ನಿರ್ಮಾಣ
ಭರದಿಂ ಸಾಗಿದೆ ವೀಕ್ಷಿಸಿರಿ
೨೦. ಹಿರಿಯರು ಕಿರಿಯರು ಬಡವರು ಧನಿಕರು
ನಾನು ತಾನೆಂದು ಕೊಡುತಿಹರು
ಮುಕ್ತಹಸ್ತದಿ ಕೊಡುತಿಹರು
ಹನಿಗೂಡಿ ಹಳ್ಳ ತೆನೆಗೂಡಿ ಬತ್ತ
ಎಂಬಂತೆ ಸೇರಿತು ಸಹಾಯಧನ
೨೧. ಊರನು ಬಿಟ್ಟರೂ ನಮ್ಮೂರಿನವರಿಗೆ
ಲಕ್ಷ್ಮೀಕಟಾಕ್ಷವು ಲಭಿಸಿಹುದು(೨)
ಎಲ್ಲೇ ನೀವಿರಾ ಹೇಗೇ ನೀವಿರಿ
ನಮ್ಮೂರ ಮಮತೆಯ ತೊರೆಯದಿರಿ
೨೨. ಹೊಸ ಗೋಪುರದ ಕುಂಭಾಭಿಷೇಕವು
ವಿಜೃಂಭಣೆಯಲಿ ನಡೆಯುವುದು(೨)
ಅಮೋಘವಾಗಿ ನಡೆಯುವುದು
ಜಯ ಜಯ ಕೇಶವ ಎನ್ನುತ ಭಕ್ತರು
ಈ ಮಹೋತ್ಸವವ ಸೇವಿಸಿರಿ
೨೩. ಶಾಂತಿಗ್ರಾಮದ ಹೆಸರನು ಹೊತ್ತ
ನಮ್ಮೂರ ಕತೆಯನು ಹೇಳಿದೆನು(೨)
ಸಂಗ್ರಹವಾಗಿ ತಿಳಿಸಿಹೆನು
ತಪ್ಪು ನೆಪ್ಪುಗಳನ್ನೆಲ್ಲ ಒಪ್ಪಿಸಿಕೊಂಡು
ಈ ಅಲ್ಪ ಕಾಣಿಕೆ ಸ್ವೀಕರಿಸಿ