विस्तारः (द्रष्टुं नोद्यम्)
- ತಾಳ - ಖಂಡಚಾಪು
- ಲೇಖಕ - ಬೀರೂರು-ಚಿದಂಬರ-ಜೋಯಿಸ
ಜಯ ಸತ್ಯನಾರಾಯಣ ಜಯ ಸತ್ಯಭಾಮೇಶ
ಜಯ ಸತ್ಯ ಗಣಪತಿಯೆ ಜಯತು ಜಯತು
ನೈಮಿಷಾರಣ್ಯದಲಿ ಶೌನಕಾದಿಗಳೊಮ್ಮೆ
ಪ್ರೇಮದಿಂ ಸೂತರನು ಕೇಳಲಾಗ ।
ಭೂಮಿಯಲಿ ಬಳಲುತಿಹ ಕಲಿಯುಗದ ಜನಗಳಿಗೆ ।
ಕಾಮಿತವನೀವೊಂದು ವ್ರತವ ಪೇಳಿದರು
ವ್ರತವಿಹುದು ಸತ್ಯನಾರಾಯಣನ ಪೂಜೆಯದು ।
ಸತತ ಕಷ್ಟವನೆಲ್ಲ ಪರಿಹರಿಸುವುದದು ।
ಕಂತುಪಿತ ನಾರದಗೆ ಪೇಳಿದನು ಮೊದಲಿದನು ।
ಚಿಂತಿಸಿದ ಫಲಗಳನ್ನು ಕೊಡುವುದಿದುವೆ
ಭಕ್ತಿಯಿಂದರ್ಚಿಸುತೆ ಸತ್ಯನಾರಾಯಣನ ।
ಉಕ್ತವಿಧಿಯಂ ಬಿಡದೆ ವರುಷ ನಾಲ್ಕರೊಳು ।
ಶಕ್ತಿಯಿಂದಾಚರಿಸೆ, ನಿಯಮದುದ್ಯಾಪನೆಯ ।
ಮುಕ್ತಿಯನ್ನು ಸುಲಭದಲೆ ಪಡೆಯಬಹುದು । ೩ ।
ವಿಪ್ರನೋರ್ವನು ಭಿಕ್ಷೆಯಿಂದ ಜೀವಿಸುತಿರಲು ।
ವಿಪ್ರವೇಶದಿ ಬಂದು ಕಾರುಣ್ಯಸಿಂಧು ।
ಅಪ್ರಮೇಯನು ಪೇಳಲೀ ವ್ರತವನಾಚರಿಸಿ ।
ಕ್ಷಿಪ್ರದಲಿ ಸಂಪದವ ಪಡೆದನೆಂದು
ವಿಪ್ರನೀಪರಿಯಲ್ಲಿ ವ್ರತವನಾಚರಿಸುತಿರೆ ।
ಕಾಷ್ಠ-ವಿಕ್ರಯಿಯೋರ್ವ ನೀರಡಿಸಿ ಬಂದು ।
ಹೊತ್ತ ಸೌದೆಯ ಹೊರೆಯನಿಳುಹಿ ಪೂಜೆಯ ಕಂಡು ।
ವಿಧಿಯನೆಲ್ಲವ ಕೇಳ ತಾ ಮಾಡಲೆಂದು ।
ಸಂಕಲ್ಪವಂ ಮಾಡಿ ಕಟ್ಟಿಗೆಯ ಮಾರುತಲಿ ।
ದ್ವಿಗುಣ ಧನವನು ಪಡೆದು ಭಕ್ತಿಯಿಂದ ।
ಸತ್ಯನಾರಾಯಣ ಪೂಜಿಸುತಲಿಹಪರದ ।
ಸಕಲ ಸೌಖ್ಯಗಳನ್ನು ಪಡೆದನಾಗ ।೬।
ರಾಜನುಲ್ಕಾಮುಖನು ಸಂತತಿಯ ಬಯಸುತಲಿ ।
ವ್ರತವನಾಚರಿಸುತಿರೆ ವರ್ತಕನು ಕಂಡು ।
ಮಕ್ಕಳಾದರೆ ತಾನು ವ್ರತವ ಮಾಡುವೆನೆಂದು ।
ಹರಕೆಯನು ಹೊತ್ತನಾ ಸೆಟ್ಟಿಮನದೊಳಗೆ
ಸತಿಯು ಲೀಲಾವತಿಯು ಗರ್ಭವನ್ನು ತಳೆದಳೈ ।
ಸತ್ಯನಾರಾಯಣನ ಕರುಣೆಯಿಂದ ।
ಕನ್ಯೆಯನು ಪಡೆದಳಾ ಶಿಶು ಕಲಾವತಿಯೆಂದು
ಶುಕ್ಲಶಶಿಯಂದದಲಿ ಬೆಳೆದಳಾಗ
ವರ್ಷ ತುಂಬಲಿಯಂದು ಮದುವೆ ಸಮಯದೊಳೆಂದು ।
ವ್ರತವ ಮುಂದೂಡುತಲಿ ಮರೆತನಾಗ ।
ಸತ್ಯದೇವನು ತಾನು ಧನಮದವನಿಳಿಸಿ ।
ಶಪಿಸಿದನು ದಾರುಣದ ಕಷ್ಟಬರಲೆಂದು
ವಾಣಿಜ್ಯ ವೃತ್ತಿಯಿಂ ರತ್ನಸಾರ ಪುರಕ್ಕೆ ।
ಅಳಿಯನೊಂದಿಗೆ ತೆರಳಿ ದುಡಿಯುತಿರಲು ।
ನೃಪ ಚಂದ್ರಕೇತುವಿನ ಧನವ ಚೋರನು ಕದ್ದು ।
ತಂದಿವರ ಬಳಿಯಿರಿಸಿ ಕಾಣದಾದ
ರಾಜದೂತರು ಬಂದು ಬಂಧಿಸಿದರೀರ್ವರನು ।
ದೇವಮಾಯೆಯೋಳವರ ಮಾತನಾಲಿಸದೆ ।
ಸೆರೆಯೊಳಿಟ್ಟರು ಸಕಲ-ಧನಕನಕ-ವಸ್ತುಗಳ ।
ಬೊಕ್ಕಸಕೆ ಸುರಿದರಲೆ ಲೆಕ್ಕವಿಲ್ಲದಲೆ
ಇತ್ತ ಲೀಲಾವತಿಯ ಮನೆಗೆ ಕಳ್ಳರು ಹೊಕ್ಕು ।
ವಿತ್ತವನ್ನಪಹರಿಸೆ ತಿರಿದು ತಿನ್ನುತಲಿ ।
ಬಳಲುತಿರೆ ಮಗಳೊಮ್ಮೆ ತಾ ಕಂಡ ಪೂಜೆಯನು ।
ವಿವರಿಸಲು ನೆನೆದಳೈ ವ್ರತವ ಬಿಟ್ಟುದನು
ತಾಯಿಮಗಳಿಬ್ಬರೂ ಭಕ್ತಿಯಿಂ ಪೂಜಿಸುತೆ ।
ತಮ್ಮಯಪರಾಧಗಳ ಮನ್ನಿಪುದು ಎಂದು ।
ತಮ್ಮ ಪತಿಗಳು ಬರಲು ವ್ರತವ ಮಾಡುವೆವೆಂದು ।
ಬೇಡೆ ದಯದೋರಿದನು ಕಾರುಣ್ಯಸಿಂಧು । ೧೩ ।
ಅತ್ತ ಸೆರೆಯೊಳಗಿಟ್ಟ ಬಂದಿಗಳನೀರ್ವರನು ।
ಬಿಡುತವರ ಧನವ ಕೊಡುಯೆಂದು ಕನಸಿನಲಿ ।
ಪ್ರಭು ಪೇಳೆ ನೃಪ ಬೆದರಿ ಲೆಕ್ಕವಿಲ್ಲದಿರಿ ।
ಒಂದಕ್ಕೆ ಹತ್ತಾಗಿ ಕೊಟ್ಟು ಕಳುಹಿದನು
ದಂಡಿವೇಷದಿ ಬಂದು ಪರಿಕಿಸಲು ನಾವೆಯೊಳು ।
ಸೊಪ್ಪುಸದೆಯಿಹುದೆಂದುದದೆ ಸತ್ಯವಾಯ್ತು ।
ಕ್ಷಮೆಯ ಬೇಡಲು ಬಳಿಕ ಕೊಟ್ಟನೆಲ್ಲವ ತಿರುಗಿ ।
ಊರು ಕಾಣಲು ಮನೆಗೆ ಹೇಳಿ ಕಳುಹಿದರು
ಪತಿಗಳೆತಂದುದರೆಂದುದ ಕೇಳಿ ಸಂಭ್ರಮದಿ ।
ತಾಯಿ ಹೊರಡಲು ಮಗಳು ಪೂಜೆ ಮುಗಿಸಿ ।
ದೇವ ಪ್ರಸಾದವನ್ನು ಮರೆಯುತೋಡುತ ನೋಡೆ ।
ಪತಿಯು ನಾವೆಯ ಸಹಿತ ಕಾಣದಾದನಹೋ
ಗೋಳಿಟ್ಟು ದೇವನನು ಮರೆಹೊಗಲು ಬಾನ್ನುಡಿಯ ।
ಕೇಳಿ ಪ್ರಸಾದವನು ಭುಜಿಸಿ ಬರಲು ।
ತೇಲಿತಾ ನಾವೆಯದು, ಪತಿಯೊಡನೆ ಭಕ್ತಿಯಲಿ ।
ಚರಿಸಿ ವ್ರತವನು ಸಕಲ ಸುಖವ ಹೊಂದಿದರು
ರಾಜನಂಗಧ್ವಜನು ಬೇಟೆಯಾಡುತ ಬಂದು ।
ಗೊಲ್ಲರಾಚರಿಸುತಿಹ ವ್ರತವ ಕಂಡು ।
ಗರ್ವದಿಂ ತ್ಯಜಿಸುತ್ತೆ ದೇವಪ್ರಸಾದವನು ।
ಕಳೆದುಕೊಂಡನು ಸಕಲ ಸಿರಿಯ ಸುತರೊಡನೆ
ಮದವಳಿಯ ಗೊಲ್ಲರೆಡೆಗೈತಂದು ಭಕ್ತಿಯಲಿ ।
ವ್ರತವ ಮಾಡುತೆ ಗೋಪಬಾಲರೋಡನೆ ।
ಸುತರೊಡನೆ ಸಿರಿಯ ತಾ ತಿರುಗಿ ಪಡೆದನು ಜಗದಿ ।
ಸತ್ಯದೇವನ ಮಹಿಮೆ ಪೇಳಲಸದಳವು
ಸತ್ಯನಾರಾಯಣನೆ ಸತ್ಯಭಾಮಾಧವನೆ ।
ಸತ್ಯಗಣಪತಿರೂಪ ಸತ್ಯನಾಥ ।
ಸತ್ಯ ಮಂಗಳ ನಿತ್ಯ ಬೀ ಚಿದಂಬರವಿನುತ ।
ಸತ್ಯನಿಧಿ ಸತ್ಯೇಶ ಶುಭಮಂಗಳಂ । ೨೦ ।