ಹತ್ತು ವರ್ಷದ ಹಿಂದೆ ಮುತ್ತೂರ ತೇರಿನಲಿ
ಅತ್ತಿತ್ತ ಸುಳಿದವರು ನೀವ್ ಅಲ್ಲವೇ
ಹತ್ತಿರದ ಹೆಣ್ಣೆಂದು ಮತ್ತೆ ಮುತ್ತೂರಿನಲಿ
ಒಪ್ಪಿ ಕೈ ಹಿಡಿದವರು ನೀವ್ ಅಲ್ಲವೇ
ಬೆಟ್ಟಗಳಾ ಬೆನ್ನಿನಲಿ ಬೆಟ್ಟಗಳಾ ದಾರಿಯಲಿ
ಕಟ್ಟಿಕೊಂಡ್ ಅಲೆದವರು ನೀವ್ ಅಲ್ಲವೇ
ತಿಟ್ಟಿನಲ್ಲಿ ಮುಂದಾಗಿ ಕಣಿವೆಯಲಿ(=ಶೋಲೆಯಲ್ಲಿ) ಹಿಂದಾಗಿ
ನಗು-ನಗುತಾ ನಡೆದವರು ನೀವ್ ಅಲ್ಲವೇ
ಬಾಗಿಲಿಗೆ ಬಂದವರು, ಬೇಗ ಬಾ ಎಂದವರು
ಬರಬೇಕೆ ಎಂದವರು ನೀವ್ ಅಲ್ಲವೇ
ನೋಡು ಬಾ ಎಂದವರು ಬೇಡ ಹೋಗ್ ಎಂದವರು
ಎಂದಿಗೂ ಬಿಡದವರು ನೀವ್ ಅಲ್ಲವೇ
ಸೆರಗ್ ಎಳೆದು ನಿಲ್ಲಿಸಿದ್ ಅವರು, ಜಡೆಯ್ ಎಳೆದು ನೋಯಿಸಿದ್ ಅವರು
ಎತ್ತರದ ಮನೆಯವರು ನೀವ್ ಅಲ್ಲವೇ
ನೀನೆ ಬೇಕ್ ಎಂದವರು, ನೀನೆ ಸಾಕ್ ಎಂದವರು
ಬೆಟ್ಟದಲಿ ನಿಂತವರು ನೀವ್ ಅಲ್ಲವೇ
ಕೈಗೆ ಬಳೆಯ್ ಏರದೇ ಅಯ್ಯೋ ನೋವ್ ಎಂದಾಗ
ಮಹಡಿಯಿಂದ್ ಇಳಿದವರು ನೀವ್ ಅಲ್ಲವೇ
ಬಳೆಗಾರ ಶೆಟ್ಟಿಯನು ಗದರಿಸಿಕೊಂಡವರು
ಬೆತ್ತವನು ತಂದವರು ನೀವ್ ಅಲ್ಲವೇ
ಹೊನ್ನು ಹೊಳೆ ನೀನೆಂದು, ಮುತ್ತು ಮಳೆ ನೀನೆಂದು
ಹಾಡಿ ಕುಣಿದವರು ನೀವ್ ಅಲ್ಲವೇ
ಮಲೆ-ನಾಡ ಹೆಣ್ಣೆಂದು, ಒಲವ್ ಇತ್ತ ಹೆಣ್ಣೆಂದು
ಏನ್ ಏನೋ ಬರೆದವರು ನೀವ್ ಅಲ್ಲವೇ (5)
ಚಂದಿರನ ಮಗಳ್ ಎಂದು ಚಂದ್ರ-ಮುಖಿ ನೀನ್ ಎಂದು
ಹೊಸ ಹೆಸರನ್ ಇಟ್ಟವರು ನೀವ್ ಅಲ್ಲವೇ
ಮಲ್ಲಿಗೆಯ ದಂಡೆಯನು ತುರುಬಿಗೆ ಹಿಡಿದವರು
ತುಟಿಗೆ ತುಟಿ ತಂದವರು ನೀವ್ ಅಲ್ಲವೇ (5)
ಬಡತನವೊ ಸಿರಿತನವೊ ಯಾರಿರಲಿ ಎಲ್ಲಿರಲಿ
ದೊರೆಯಾಗಿ ಮೆರೆವ್ ಅವರು ನೀವ್ ಅಲ್ಲವೇ
ಗಂಡನಿಗೆ ಒಪ್ಪಾಗಿ, ಕಂದನಿಗೆ ದಿಕ್ಕಾಗಿ
ಪಯಣದಲಿ ಜೊತೆಯಾಗಿ ನಾನಿಲ್ಲವೇ