~ ಪ್ರಥಮಂ ಸರ್ಗಂ ~
विश्वास-प्रस्तुतिः
ಕಂದಪದ್ಯ॥
ಆರಿಂ ವಿಘ್ನಂ ಜನಿಯಿಕುಮ್
ಆರಿಂದಂ ಕೞೆವುದ್ ಅಂತೆ ಸಂಕಷ್ಟಂಗಳ್।
ಗೌರಿಯ ತನೂಜನ್ ಅವನೇ
ಸ್ಫಾರಾಂಗಂ ಗೆಯ್ಗೆ+++(=ವರ್ಧಿಸಲಿ)+++ ಗಣಪನ್ ಒಳ್ಪನ್ ಅಜಸ್ರಂ ॥೧॥
मूलम्
ಕಂದಪದ್ಯ||
ಆರಿಂ ವಿಘ್ನಂ ಜನಿಯಿಕು-
ಮಾರಿಂದಂ ಕೞೆವುದಂತೆ ಸಂಕಷ್ಟಂಗಳ್|
ಗೌರಿಯ ತನೂಜನವನೇ
ಸ್ಫಾರಾಂಗಂ ಗೆಯ್ಗೆ ಗಣಪನೊಳ್ಪನಜಸ್ರಂ ||೧||
ಅರ್ಥ
ಯಾರಿಂದ ವಿಘ್ನವು ಜನಿಸುವುದೋ, ಹಾಗೆಯೇ ಯಾರಿಂದ ಸಂಕಷ್ಟಗಳು ಕಳೆಯುವುದೋ, ಗೌರಿಯ ಮಗನಾದ ಆತನೇ ಪ್ರಕಾಶಮಾನವಾದ ಶರೀರವುಳ್ಳ ಗಣಪತಿ ಯಾವಾಗಳೂ ಒಳ್ಳೆಯದನ್ನು ಮಾಡಲಿ
विश्वास-प्रस्तुतिः
ಮಾತೆ ಸರಸ್ವತಿ ಮುನಿದೊಡೆ
ಮಾತ್-ಎಸಕಂ+++(=ತೇಜಃ)+++ +ಪೊಂದಲ್ ಎಂತು ಶಕ್ಯಂ? ಕವಿ+++(=ಬ್ರಹ್ಮ)+++-ಸಂ-
ಜಾತೆ ಕರುಣಿಸಲ್ ಕವಿ-ಸಂ-
ಜಾತ-ಕವಿತೆಯ್ ಅಪ್ಪುದ್ ಅಲ್ತ್ ಎ ಚಿರಮುಂ ವರಮುಂ ॥೨॥
मूलम्
ಮಾತೆ ಸರಸ್ವತಿ ಮುನಿದೊಡೆ
ಮಾತೆಸಕಂಬೊಂದಲೆಂತು ಶಕ್ಯಂ ಕವಿಸಂ-
ಜಾತೆ ಕರುಣಿಸಲ್ ಕವಿಸಂ-
ಜಾತಕವಿತೆಯಪ್ಪುದಲ್ತೆ ಚಿರಮುಂ ವರಮುಂ ||೨||
ಅರ್ಥ
ಮಾತೆ ಸರಸ್ವತಿ ಮುನಿಸಿಕೊಂಡರೆ, ಮಾತಿನಲ್ಲಿ ಹೊಳಪು ಇರಲು ಹೇಗೆ ಸಾಧ್ಯ? ಬ್ರಹ್ಮಸಂಜಾತೆ ಶಾರದೆ ಕರುಣಿಸಿದರೆ ಮಾತ್ರ ಕವಿಸಂಜಾತವಾದ ಕವಿತೆ ಚೆನ್ನಾಗಿರುತ್ತದೆ ಹಾಗೂ ಚಿರಕಾಲ ಉಳಿಯುತ್ತದೆ.
विश्वास-प्रस्तुतिः
ಪೂರ್ವ-ಕವೀಶ್ವರರ್ ಎಲ್ಲರ
ಚಾರ್ವ್-ಆಖ್ಯಾನಂಗಳಿಂದೆ ಬಳೆವರ್ ಕವಿಗಳ್
ಸರ್ವರಿನ್ ಉಪಕೃತರ್ ಆಗಿಯುಮ್
ಒರ್ವರುಮಂ ಸ್ತುತಿಸಿ ಪೇೞದ್ ಇರ್ದ್ ಒಡೆ ಚೆನ್ನೇಂ? ॥೩॥
मूलम्
ಪೂರ್ವಕವೀಶ್ವರರೆಲ್ಲರ
ಚಾರ್ವಾಖ್ಯಾನಂಗಳಿಂದೆ ಬಳೆವರ್ ಕವಿಗಳ್
ಸರ್ವರಿನುಪಕೃತರಾಗಿಯು-
ಮೊರ್ವರುಮಂ ಸ್ತುತಿಸಿ ಪೇೞದಿರ್ದೊಡೆ ಚೆನ್ನೇಂ! ||೩||
ಅರ್ಥ
ಹಿಂದಾದ ಎಲ್ಲ ಕವಿಗಳ ಮಧುರವಾದ ಕಥಾನಕಗಳಿಂದಲೆ ಮುಂದಿನ ಕವಿಗಳು ಬೆಳೆಯುತ್ತಾರೆ. ಹೀಗೆ ಎಲ್ಲರಿಂದಲೂ ಉಪಕೃತರಾಗಿಯೂ ಒಬ್ಬರನ್ನೂ ಸ್ಮರಿಸದಿದ್ದರೆ ಚೆನ್ನಾಗಿರುವುದೇ?
विश्वास-प्रस्तुतिः
ವ್ಯಾಸಂ ವಾಲ್ಮೀಕಿಯುಮ್ ಆ
ಭಾಸಂ ಕವಿ-ಕಾಳಿದಾಸ-ಶೂದ್ರಕ-ಬಾಣರ್
ಭಾಸುರ-ಕೃತಿಗಳಿನ್ ಆವಗಮ್+++(=ಯಾವಾಗಲೂ)+++
ಈ ಸಂಸ್ಕೃತದ್ ಒಳಗೆ ವಂದ್ಯರ್, ಅಮರುಕನುಂ ದಲ್+++(=ಧ್ರುವಂ)+++ ॥೪॥
मूलम्
ವ್ಯಾಸಂ ವಾಲ್ಮೀಕಿಯುಮಾ
ಭಾಸಂ ಕವಿಕಾಳಿದಾಸಶೂದ್ರಕಬಾಣರ್
ಭಾಸುರಕೃತಿಗಳಿನಾವಗ-
ಮೀ ಸಂಸ್ಕೃತದೊಳಗೆ ವಂದ್ಯರಮರುಕನುಂ ದಲ್ ||೪||
ಅರ್ಥ
ವ್ಯಾಸ ವಾಲ್ಮೀಕಿ ಭಾಸ ಕವಿ ಕಾಳಿದಾಸ ಶೂದ್ರಕ ಬಾಣ, ಮತ್ತು ಅಮರುಕ ಇವರುಗಳು ತಮ್ಮ ಸೊಗಸಾದ ಕೃತಿಗಳಿಂದ ವಂದ್ಯರಲ್ಲವೇ!
विश्वास-प्रस्तुतिः
ಕನ್ನಡದ್ ಒಳಗ್ ಅಭಿವಂದ್ಯರ್
ರನ್ನಂ, ಪಂಪಂ, ವಲಂ+++(=ಅಲ್ಲವೇ)+++ ಕುಮಾರವ್ಯಾಸಂ
ಮುನ್ನಮ್ ಇರೆ ನಾಗ-ವರ್ಮಂ
ಸನ್-ನುತ ಲಕ್ಷ್ಮೀಶ-ರಾಘವರ್ ಮುದ್ದಣನುಂ ॥೫॥
मूलम्
ಕನ್ನಡದೊಳಗಭಿವಂದ್ಯರ್
ರನ್ನಂ ಪಂಪಂ ವಲಂ ಕುಮಾರವ್ಯಾಸಂ
ಮುನ್ನಮಿರೆ ನಾಗವರ್ಮಂ
ಸನ್ನುತ ಲಕ್ಷ್ಮೀಶರಾಘವರ್ ಮುದ್ದಣನುಂ ||೫||
ಅರ್ಥ
ಕನ್ನಡದಲ್ಲಿ ಅಭಿವಂದ್ಯರಾದವರು ರನ್ನ, ಪಂಪ, ಕುಮಾರವ್ಯಾಸ, ಹಿಂದಿದ್ದ ನಾಗವರ್ಮ, ಸ್ತುತ್ಯನಾದ ಲಕ್ಷ್ಮೀಶ, ರಾಘವಾಂಕ ಹಾಗೂ ಮುದ್ದಣ
विश्वास-प्रस्तुतिः
ಸಮಕಾಲೀನರ್ ಪಲವರ್
ಕಮನೀಯಾಖ್ಯಾನ-ಕರ್ತೃಗಳ್ ಸಂದ್ ಇರ್ಪರ್
ಸಮರ್ ಇಲ್ಲದ ಪ್ರತಿಭೆಯಿಂದ್
ಅಮಮಾ! ಗೆಲ್ದಿರ್ಪರ್ ಅಲ್ತೆ ರಸಿಕ-ಜಗತ್ತಂ ॥೬॥
मूलम्
ಸಮಕಾಲೀನರ್ ಪಲವರ್
ಕಮನೀಯಾಖ್ಯಾನಕರ್ತೃಗಳ್ ಸಂದಿರ್ಪರ್
ಸಮರಿಲ್ಲದ ಪ್ರತಿಭೆಯಿಂ-
ದಮಮಾ! ಗೆಲ್ದಿರ್ಪರಲ್ತೆ ರಸಿಕಜಗತ್ತಂ ||೬||
ಅರ್ಥ
ಸಮಕಾಲೀನರು ಹಲವರು ಕಮನೀಯವಾದ ಕಥಾನಕಗಳ ಕರ್ತೃಗಳೂ ಇದ್ದಾರೆ, ಅವರಿಗೆ ಸಮಾನರಿಲ್ಲದ ಪ್ರತಿಭೆಯಿಂದ ಅಬ್ಬ! ರಸಿಕ ಜಗತ್ತನ್ನೇ ಗೆದ್ದುಬಿಟ್ಟಿದ್ದಾರೆ!
विश्वास-प्रस्तुतिः
ಕವಿಗಳನ್ ಇವಱಂ ಪೂಜಿಸಿ
ಕವಿತಾ-ವಲ್ಲಿಯೊಳ್ ಅರಳ್ದ ಪೂ-ತಿಱಿಯಲ್ಕಾಂ,
ಕವಿಯ್ ಎನಿಸುತೆ ಬಂದಾಗಳ್
ತವೆ ಕಯ್ಗ್ ಎಟುಕಿರ್ಪ ಪುಷ್ಪ-ಚಯಮಂ ಕೊಂಡೆಂ ॥೭॥ +++(5)+++
मूलम्
ಕವಿಗಳನಿವಱಂ ಪೂಜಿಸಿ
ಕವಿತಾವಲ್ಲಿಯೊಳರಳ್ದ ಪೂತಿಱಿಯಲ್ಕಾಂ
ಕವಿಯೆನಿಸುತೆ ಬಂದಾಗಳ್
ತವೆ ಕಯ್ಗೆಟುಕಿರ್ಪ ಪುಷ್ಪಚಯಮಂ ಕೊಂಡೆಂ ||೭||
ಅರ್ಥ
ಈ ಕವಿಗಳನ್ನು ಪೂಜಿಸಿ, ಕವಿತೆಯೆಂಬ ಬಳ್ಳಿಯೊಳಗೆ ಅರಳಿದ ಹೂವನ್ನು ತಿರಿಯಲು ನಾನು ಕವಿ ಎಂದೆನಿಸಿಕೊಂಡು ಬಂದಾಗ ನನ್ನ ಕೈಗೆ ಎಟುಕಿದ ಹೂವಿನ ಗೊಂಚಲನ್ನು ಕೊಂಡೆ
विश्वास-प्रस्तुतिः
ಕಟ್ಟುವೆನ್ ಅದಱಿಂದ್ ಈಗಳ್
ನೆಟ್ಟಗ್ ಎನಿಪ್ಪ್ ಒಂದು ಮಾಲ್ಯಮಂ ರಸಿಕರ್ಗಂ
ಕೊಟ್ಟ್ ಒಡೆ ಮೆಚ್ಚಿರಲ್ ಎಲ್ಲರ್
ಪುಟ್ಟುಗುಮ್+++(=ಹುಟ್ಟುತ್ತದೆ)+++ ಆನಂದ-ಬಿಂದುವ್ ಒಂದ್ ಎನ್ನ್ ಎರ್ದೆಯಿಂ+++(=ಎದೆಯಿಂ)+++ ॥೮॥ +++(5)+++
मूलम्
ಕಟ್ಟುವೆನದಱಿಂದೀಗಳ್
ನೆಟ್ಟಗೆನಿಪ್ಪೊಂದು ಮಾಲ್ಯಮಂ ರಸಿಕರ್ಗಂ
ಕೊಟ್ಟೊಡೆ ಮೆಚ್ಚಿರಲೆಲ್ಲರ್
ಪುಟ್ಟುಗುಮಾನಂದಬಿಂದುವೊಂದೆನ್ನೆರ್ದದೆಯಿಂ ||೮||
ಅರ್ಥ
ಅದರಿಂದ ಈಗ ಚೆನ್ನಾಗಿ ಒಂದು ಮಾಲೆಯನ್ನು ರಸಿಕರಿಗೆಂದು ಕಟ್ಟುವೆ, ಅದನ್ನು ಕೊಟ್ಟಾಗ ಎಲ್ಲರೂ ಮೆಚ್ಚಿದರೆ, ಆನಂದಬಿಂದುವೊಂದು ನನ್ನ ಎದೆಯಿಂದ ಹುಟ್ಟುತ್ತದೆ
विश्वास-प्रस्तुतिः
ಕದಳಿಯ್+++(→ಕಾವ್ಯದಲ್ಲಿ ಕದಳೀಪಾಕ)+++ ಅಪಥ್ಯಂ ಮತ್ತಂ
ಚದುರ್+++(=ಚತ್ತುರ್)+++ ಅಲ್ತ್ ಆ ನಾಳಿಕೇರ+++(ಪಾಕ)+++-ರಸಮಂ ಬಯಸಲ್.
ಮೃದು-ಹೃದಯದ ಬುಧರ್ ಎಲ್ಲರ್
ಮುದದಿಂದಂ ಸವಿವರ್ ಅಲ್ತ್ ಎ ದ್ರಾಕ್ಷಾ+++(ಪಾಕ)+++-ರಸಮಂ ॥೯॥
मूलम्
ಕದಳಿಯಪಥ್ಯಂ ಮತ್ತಂ
ಚದುರಲ್ತಾ ನಾಳಿಕೇರರಸಮಂ ಬಯಸಲ್
ಮೃದುಹೃದಯದ ಬುಧರೆಲ್ಲರ್
ಮುದದಿಂದಂ ಸವಿವರಲ್ತೆ ದ್ರಾಕ್ಷಾರಸಮಂ ||೯||
ಅರ್ಥ
ಬಾಳೆಯ ಹಣ್ಣು (ಕಾವ್ಯದಲ್ಲಿ ಕದಳೀಪಾಕ) ಅಪಥ್ಯ, ತೆಂಗನ್ನು (ನಾರಿಕೇಳಪಾಕವನ್ನು)ಬಯಸುವುದೂ ಬುದ್ಧಿವಂತಿಕೆಯಲ್ಲ. ಮೃದು ಹೃದಯದವಾರದ ಬುದ್ಧಿವಂತರೆಲ್ಲರೂ ಸಂತೋಷದಿಂದ ದ್ರಾಕ್ಷಾರಸವನ್ನೇ(ದ್ರಾಕ್ಷಾಪಾಕವನ್ನೇ) ಸವಿಯುವರಲ್ಲವೇ!
विश्वास-प्रस्तुतिः
ಕೊಳೆವುದು ಕಾಲದೆ ಕದಳಿಯುಮ್,
ಅೞಿವುದು ಬರಡಾಗಿ ನಾಳಿಕೇರಂ; ಪೇೞಲ್ಕ್
ಉಳಿವುದು ದ್ರಾಕ್ಷಿಯ ಸವಿಯ್ ಏ-
-ಗಳ್+++(=ಸದಾ)+++ ಎನುತ್ತ್ ಆದತ್ತು ಚಿತ್ತಮ್ ಅದಱೊಳ್ ಲಗ್ನಂ ॥೧೦॥+++(4)+++
मूलम्
ಕೊಳೆವುದು ಕಾಲದೆ ಕದಳಿಯು-
ಮೞಿವುದು ಬರಡಾಗಿ ನಾಳಿಕೇರಂ ಪೇೞ-
ಲ್ಕುಳಿವುದು ದ್ರಾಕ್ಷಿಯ ಸವಿಯೇ-
ಗಳೆನುತ್ತಾದತ್ತು ಚಿತ್ತಮದಱೊಳ್ ಲಗ್ನಂ ||೧೦||
ಅರ್ಥ
ಕಾಲದಲ್ಲಿ ಬಾಳೆಹಣ್ಣು (ಕದಳೀಪಾಕ)ಕೊಳೆತು ಹೋಗುತ್ತದೆ, ನಾರಿಕೇಳಪಾಕ- ತೆಂಗಿನ ಕಾಯಿ ಬರಡಾಗಿ ಅಳಿದು ಹೋಗುತ್ತದೆ. ಇನ್ನು ಹೇಳಬೇಕೆಂದರೆ ದ್ರಾಕ್ಷಿಯ ಸವಿಯೊಂದೇ (ಒಣದ್ರಾಕ್ಷಿಯ ರೂಪದಲ್ಲಿ) ಯಾವಾಗಳೂ ಉಳಿಯುವುದು. ಹಾಗಾಗಿ ನನ್ನ ಮನಸ್ಸು ಅದರಲ್ಲೇ ನಟ್ಟಿದೆ
विश्वास-प्रस्तुतिः
ಬಗೆಯೊಳ್+++(=ಮನಸ್ಸಿನಲ್ಲಿ)+++ ಕವಿತಾ-ವಿರಹಂ-
ಬುಗೆ+++(←ಪುಗು ಪ್ರವೇಶೇ)+++ ಪುಟ್ಟಲ್ಕ್ ಎಂತು ಶಕ್ಯಮ್ ಅಲ್ತ್ ಏ ಕಂದಂ!
ಸೊಗಮ್+++(=ಸೊಗಸು)+++ ಆವಗಮ್+++(=ಯಾವಾಗಲೂ)+++ ಇರೆ ಸಂಗಂ -
ಜಗಮೇ ಮಱೆಯಕ್ಕುಮ್ ಅಲ್ತ್ ಎ ಸೃಷ್ಟಿ-ಕ್ರಿಯೆಯೊಳ್ ॥೧೧॥
मूलम्
ಬಗೆಯೊಳ್ ಕವಿತಾವಿರಹಂ-
ಬುಗೆ ಪುಟ್ಟಲ್ಕೆಂತು ಶಕ್ಯಮಲ್ತೇ ಕಂದಂ!
ಸೊಗಮಾವಗಮಿರೆ ಸಂಗಂ
ಜಗಮೇ ಮಱೆಯಕ್ಕುಮಲ್ತೆ ಸೃಷ್ಟಿಕ್ರಿಯೆಯೊಳ್ ||೧೧||
ಅರ್ಥ
ಮನಸ್ಸಿನಲ್ಲಿ ಕವಿತೆಯ ಜೊತೆ ವಿರಹ ಸೃಷ್ಟಿಯಾದಾಗ ಕಂದ(ಕಂದಪದ್ಯ) ಹೇಗೆ ತಾನೆ ಹುಟ್ಟಲು ಸಾಧ್ಯ! ಯಾವಾಗಳೂಕವಿತೆಯ ಸಂಗವೇ ಸೊಗಸು, ಸೃಷ್ಟಿಕ್ರಿಯೆಯಲ್ಲಿ ಜಗತ್ತೇ ಮರೆಯಾಗಿಬಿಡುವುದಲ್ಲವೇ!
विश्वास-प्रस्तुतिः
ವೇಗಂ ಲಾಘವಮ್ ಅಂತುಟೆ+++(=ಹಾಗೆಯೇ)+++
ರಾಗಂ ಪೆರ್ಚಲ್ಕೆ+++(=ಹೆಚ್ಚಲು)+++ ನಿಚ್ಚಮುಂ ಬರೆಯ್ ಎಂಬ್ ಆ
ರಾಗಾನ್ವಿತ-ಗುರ್ವಾಜ್ಞೆಯಿನ್
ಈಗಳ್ ಸಲೆ+++(=ಸದಾ)+++ ಕುಂಭಸಂಭವೀಯಮನ್ ಉಲಿವೆಂ+++(=ಹೇಳುತ್ತಿರುವೆ)+++ ॥೧೨॥
/ ಈಗಳ್ ನೋಂತ್+++(=ವ್ರತಿಸಿ)+++ ಇಂತ್ ಅಗಸ್ತ್ಯಚರಿತೆಯನ್ ಉಲಿವೆಂ
मूलम्
ವೇಗಂ ಲಾಘವಮಂತುಟೆ
ರಾಗಂ ಪೆರ್ಚಲ್ಕೆ ನಿಚ್ಚಮುಂ ಬರೆಯೆಂಬಾ
ರಾಗಾನ್ವಿತಗುರ್ವಾಜ್ಞೆಯಿ-
*ನೀಗಳ್ ಸಲೆ ಕುಂಭಸಂಭವೀಯಮನುಲಿವೆಂ ||೧೨||
(*ನೀಗಳ್ ನೋಂತಿಂತಗಸ್ತ್ಯಚರಿತೆಯನುಲಿವೆಂ)
ಅರ್ಥ
ಬರೆಹದಲ್ಲಿ ವೇಗವೂ, ಲಾಘವವೂ ಹಾಗೆಯೇ ರಕ್ತಿಯೂ ಹೆಚ್ಚಲು ನಿತ್ಯವೂ ಬರೆಯಬೇಕು ಎನ್ನುವ ಪ್ರೀತಿ ತುಂಬಿದ ಗುರುವಿನಾಜ್ಞೆಯಿಂದಾಗಿ ಈಗ ಕುಂಭಸಂಭವೀಯಂ ಎಂಬ ಅಗಸ್ತ್ಯಚರಿತೆಯನ್ನು ಹೇಳುತ್ತಿರುವೆ.
ರಾಗ = ರಾ ಗಣೇಶ ಶತಾವಧಾನೀ
विश्वास-प्रस्तुतिः
ಪದದೊಳ್ ರತ್ನಾಕರಮುಂ
ಹೃದಯ-ಸ್ಥಾನದೊಳೆ ಕಾಂಚನಾದ್ರಿಯುಮ್ ಇರ್ದುಂ+++(=ಇದ್ದರೂ)+++
ಮುದದಿಂ ಶಿರ-ದೊಳ್ ಕೈಲಾ-
ಸದೆ ಸಲ್ವ ವಿರಾಗದಿಂದ್+++(=ವೈರಾಗ್ಯದಿಂದ)+++ ಎ ಭಾರತಮ್ ಇರ್ಕುಂ+++(=ಉರುವುದು)+++ ॥೧೩॥ +++(5)+++
मूलम्
ಪದದೊಳ್ ರತ್ನಾಕರಮುಂ
ಹೃದಯಸ್ಥಾನದೊಳೆ ಕಾಂಚನಾದ್ರಿಯುಮಿರ್ದುಂ
ಮುದದಿಂ ಶಿರದೊಳ್ ಕೈಲಾ-
ಸದೆ ಸಲ್ವ ವಿರಾಗದಿಂದೆ ಭಾರತಮಿರ್ಕುಂ ||೧೩||
ಅರ್ಥ
ಕಾಲಿನಲ್ಲಿ ರತ್ನಾಕರವೂ(ಸಮುದ್ರ), ಹೃದಯಸ್ಥಾನದಲ್ಲಿ ಕಾಂಚನಾದ್ರಿಯೂ(ಮೇರು) ಇದ್ದರೂ ಸಂತೋಷದಿಂದ ತಲೆಯಲ್ಲಿ ಕೈಲಾಸದಿಂದ ಸಲ್ಲುವ ವಿರಾಗದಿಂದ(ಕೆಂಪು ಬಣ್ಣವಿಲ್ಲದಿರುವಿಕೆಯಿಂದ/ ಸಂಸಾರಾಸಕ್ತಿಯಿಲ್ಲದಿರುವಿಕೆಯಿಂದ) ಭಾರತದೇಶವಿರುವುದು
विश्वास-प्रस्तुतिः
ಪಣ್ಯಂ ಸ್ವರ್ಗದೊಳ್ ಏಗಳ್+++(=ಎಲ್ಲೆಡೆ)+++
ಪುಣ್ಯಂ ಮೇಣ್+++(=ಹಿ)+++ ಅದನೆ ಪಡೆಯಲ್ ಎಂದ್ ಅಲ್ಲಿಂದಂ
ಗಣ್ಯರ್ ಜನಿಸುತ್ತಿರ್ಪರ್, ಅ-
ಗಣ್ಯಂ ಭಾರತದೆ+++(ವಿ೭)+++ ಪುಣ್ಯದ ಸ್ಥಾನಂಗಳ್ ॥೧೪॥
मूलम्
ಪಣ್ಯಂ ಸ್ವರ್ಗದೊಳೇಗಳ್
ಪುಣ್ಯಂ ಮೇಣದನೆ ಪಡೆಯಲೆಂದಲ್ಲಿಂದಂ
ಗಣ್ಯರ್ ಜನಿಸುತ್ತಿರ್ಪರ-
ಗಣ್ಯಂ ಭಾರತದೆ ಪುಣ್ಯದಸ್ಥಾನಂಗಳ್ ||೧೪||
ಅರ್ಥ
ಸ್ವರ್ಗದಲ್ಲಿ ಪುಣ್ಯವನ್ನೇ ಎಲ್ಲೆಡೆ ವ್ಯಯಮಾಡಬೇಕೆಂದು ಅದನ್ನೇ ಪಡೆಯುವುದಕ್ಕೋಸ್ಕರ ಅಲ್ಲಿಂದ ಗಣ್ಯರಾದವರು ಹುಟ್ಟುತ್ತಿದ್ದರು. ಭಾರತದಲ್ಲಿ ಪುಣ್ಯವನ್ನು ಕೊಡುವ ಸ್ಥಾನಗಳು ಎಣಿಕೆಗೆ ಸಿಗುವುದಿಲ್ಲವಷ್ಟೆ!
विश्वास-प्रस्तुतिः
ಇಂತ್ ಇರೆ ಸಾರ್ಚಿ +++(=ಚಾಚಿ)+++ ಕರಂಗಳ-
ನ್ ಅಂತ್ ಅರ್ಕಂ ತಾನೆ ನಿಚ್ಚಮುಂ ಭಾರತಕಂ
ಶಾಂತಂ ದಾಂತಂ ಸಂದಂ
ನೋಂತಂ+++(=ವ್ರತಿಸಿದವನು)+++ ಮಿತ್ರಾಖ್ಯ-ನಾಮಮಂ ಪಡೆದಿರ್ದಂ ॥೧೫॥
मूलम्
ಇಂತಿರೆ ಸಾರ್ಚಿ ಕರಂಗಳ-
ನಂತರ್ಕಂ ತಾನೆ ನಿಚ್ಚಮುಂ ಭಾರತಕಂ
ಶಾಂತಂ ದಾಂತಂ ಸಂದಂ
ನೋಂತಂ ಮಿತ್ರಾಖ್ಯನಾಮಮಂ ಪಡೆದಿರ್ದಂ ||೧೫||
ಅರ್ಥ
ಹೀಗಿರುವಾಗ, ಸೂರ್ಯನು ಭಾರತಕ್ಕೆ ತನ್ನ ಕರಗಳನ್ನು(ಕಿರಣ/ಕೈ) ಚಾಚಿ ಶಾಂತನೂ ದಾಂತನೂ ಆಗಿ ವ್ರತತೊಟ್ಟವನು “ಮಿತ್ರ” ಎಂಬ ಹೆಸರನ್ನು ಪಡೆದಿದ್ದನು
विश्वास-प्रस्तुतिः
ಪರಮಾತ್ಮನ ಲೀಲೆಯ್ ಅದ್ ಏಂ
ನರ-ನಾರಾಯಣರ್ ಎನಿಪ್ಪ ರೂಪದಿನ್ ಒರ್ಮೆ
ಸ್ಫುರಿಸಿ ತಪಸ್ಸಂ ಗೆಯ್ದುದುಮ್
ಅರರೇ! ಕೇಳ್ದರ್ಗೆ ಚಿತ್ರಮ್ ಎನಿಪಂತ್ ಆಯ್ತೈ+++(=ಆಯ್ತು)+++ ॥೧೬॥
मूलम्
ಪರಮಾತ್ಮನ ಲೀಲೆಯದೇಂ
ನರನಾರಾಯಣರೆನಿಪ್ಪ ರೂಪದಿನೊರ್ಮೆ
ಸ್ಫುರಿಸಿ ತಪಸ್ಸಂ ಗೆಯ್ದುದು-
ಮರರೇ! ಕೇಳ್ದರ್ಗೆ ಚಿತ್ರಮೆನಿಪಂತಾಯ್ತೈ ||೧೬||
ಅರ್ಥ
ಪರಮಾತ್ಮನ ಲೀಲೆ ಅದೆಂತೋ! ನರ-ನಾರಾಯಣ ಎಂಬ ರೂಪದಿಂದ ಒಮ್ಮೆ ಸೃಜಿಸಿ ತಪಸ್ಸನ್ನು ಮಾಡಿದರು. ಅರರೇ! ಇದು ಕೇಳುವವರಿಗೆ ವಿಚಿತ್ರವೆನಿಸುವಂತ್ ಆಯ್ತು
विश्वास-प्रस्तुतिः
ತಪದಿಂ ಪೊಣ್ಮುವ+++(=ಹೊಮ್ಮುವ)+++ ತೇಜಸ್ಸ್-
ಉಪನದಿಯಿಂದ್ ಉರ್ಕುತ್ ಇರ್ಪ ನದಿಯಂತ್ ಆಗಲ್
ತಪಿಪ ತಪಸ್ವಿಗಳ್ ಇರ್ಪೆಡೆಗ್+++(=ಇದ್ದಲ್ಲಿಗೆ)+++
ಅಪರಿಮಿತ-ಚ್ಛವಿಯೆ ಸಂದುದ್ ಅತಿಶಯಮ್ ಅಲ್ಲಂ ॥೧೭॥
मूलम्
ತಪದಿಂ ಪೊಣ್ಮುವ ತೇಜ-
ಸ್ಸುಪನದಿಯಿಂದುರ್ಕುತಿರ್ಪ ನದಿಯಂತಾಗಲ್
ತಪಿಪ ತಪಸ್ವಿಗಳಿರ್ಪೆಡೆ-
ಗಪರಿಮಿತಚ್ಛವಿಯೆ ಸಂದುದತಿಶಯಮಲ್ಲಂ ||೧೭||
ಅರ್ಥ
ತಪಸ್ಸಿನಿಂದ ಹೊಮ್ಮುವ ತೇಜಸ್ಸು, ಉಪನದಿಗಳಿಂದ ಕೂಡಿ ಉಕ್ಕುತ್ತ ಬರುವ ನದಿಯಂತಾಗಿ, ತಪಸ್ವಿಗಳು ಇರುವ ತಾಣಕ್ಕೆ ಅಪರಿಮಿತವಾದ ಕಾಂತಿಯನ್ನು ತಂದುಕೊಟ್ಟಿತು. ಇದು ಅತಿಶಯವೇನಲ್ಲ!
विश्वास-प्रस्तुतिः
ಬದರಿ-ಕ್ಷೇತ್ರದೊಳ್ ಇವಱಿಂದ್
ಒದವಿತ್ತ್ ಆ ಹಿಮಕೆ ಜೀವನತ್ವಂ ಸತ್ತ್ವಂ
ಹೃದಯ-ವಿಶಾಲತೆಯ್ ಒದವಲ್ಕ್
ಅದಱಿಂದ್ ಒಳ್ಪಕ್ಕುಮ್ ಅಲ್ತ್ ಎ ಲೋಕಕ್ಕ್ ಎಲ್ಲಂ॥೧೮॥
मूलम्
ಬದರಿಕ್ಷೇತ್ರದೊಳಿವಱಿಂ-
ದೊದವಿತ್ತಾ ಹಿಮಕೆ ಜೀವನತ್ವಂ ಸತ್ತ್ವಂ
ಹೃದಯವಿಶಾಲತೆಯೊದವ-
ಲ್ಕದಱಿಂದೊಳ್ಪಕ್ಕುಮಲ್ತೆ ಲೋಕಕ್ಕೆಲ್ಲಂ||೧೮||
ಅರ್ಥ
ಬದರಿಕ್ಷೇತ್ರದಲ್ಲಿ ಇವರಿಂದ ಹಿಮಕ್ಕೆ ಜೀವನತ್ವವೂ(ದ್ರವರೂಪವೂ) ಸತ್ತ್ವವೂ(ಒಳ್ಳೆಯ ತನವೂ) ಒದಗಿತು. ಹೃದಯದಲ್ಲಿ ವಿಶಾಲತೆ ಇದ್ದಾಗ ಅದರಿಂದ ಲೋಕಕ್ಕೆಲ್ಲ ಒಳ್ಳೆಯದೇ ಆಗುವುದಿಲ್ಲವೇ!
विश्वास-प्रस्तुतिः
ತವಸಿಗಳ್ ಇರ್ದೊಡೆ ತಪದೊಳ್
ಭವ-ಭಾವಂಗಳಿನ್ ಅತೀತರ್ ಆಗ್ ಆ ನೆಲೆಯೊಳ್
ಕವಿಯಲ್+++(=ಆವರಿಸಲ್)+++ ಪ್ರೇಮಿಗಳ್ ಎಲ್ಲರ
ಸವಿಯ್ ಎನಿಪಂತ್ ಆ ವಸಂತ-ಸಮಯಂ ಸ-ರಯಂ+++(=ವೇಗಂ)+++॥೧೯॥
मूलम्
ತವಸಿಗಳಿರ್ದೊಡೆ ತಪದೊಳ್
ಭವಭಾವಂಗಳಿನತೀತರಾಗಾ ನೆಲೆಯೊಳ್
ಕವಿಯಲ್ ಪ್ರೇಮಿಗಳೆಲ್ಲರ
ಸವಿಯೆನಿಪಂತಾ ವಸಂತಸಮಯಂ ಸರಯಂ||೧೯||
ಅರ್ಥ
ಆ ನೆಲೆಯಲ್ಲಿ ಭವಭಾವಗಳಿಂದೆಲ್ಲ ಅತೀತರಾಗಿ ತಪಸ್ವಿಗಳು ತಪಸ್ಸಿನಲ್ಲಿದ್ದಾಗ, ಪ್ರೇಮಿಗಳ ಎಲ್ಲರ ಸವಿಯೆನ್ನುವಂತಹ ವಸಂತಸಮಯ ವೇಗದಿಂದ ಕವಿದು ಬಂತು
विश्वास-प्रस्तुतिः
ನವನೀತಂ ಘೃತಮ್ ಅಪ್ಪ್+++(=ಆಗುವ್)+++-ಅಂತ್
ಅವಿರಳಮ್ ಆಗಿರ್ದ ತುಹಿನ-ರಾಶಿ ದ್ರವಿಸಲ್
ನವೆಯದೆ ಮುಪ್ಪಂ ತ್ಯಜಿಸುತೆ
ನವ-ಯೌವನಮಂ ಧರಿಪ್ಪ ತೆಱದಿಂ ಕಾಣ್ಗುಂ॥೨೦॥ +++(5)+++
मूलम्
ನವನೀತಂ ಘೃತಮಪ್ಪಂ-
ತವಿರಳಮಾಗಿರ್ದ ತುಹಿನರಾಶಿ ದ್ರವಿಸಲ್
ನವೆಯದೆ ಮುಪ್ಪಂ ತ್ಯಜಿಸುತೆ
ನವಯೌವನಮಂ ಧರಿಪ್ಪ ತೆಱದಿಂ ಕಾಣ್ಗುಂ||೨೦||
ಅರ್ಥ
ಬೆಣ್ಣೆ ತುಪ್ಪವಾಗುವಂತೆ ದಟ್ಟವಾಗಿದ್ದ ಹಿಮರಾಶಿ ದ್ರವಿಸಿತು. ಆಗ ತೊಂದರೆಯಿಲ್ಲದೆ ಮುಪ್ಪನ್ನು ತ್ಯಜಿಸಿ ಹೊಸಜವ್ವನವನ್ನು ಪಡೆದಂತೆ ಭೂಮಿ ಕಾಣುತ್ತಿತ್ತು
विश्वास-प्रस्तुतिः
ಗಿರಿಯ ಶಿರಂ ಕಣಿವೆಗಳುಂ+++(=valley)+++
ಭರದಿಂ ತಳೆಯಲ್ಕೆ+++(=ಮುಡಲು)+++ ಪೂಗಳಂ ಚೆಲ್ವಿಂದಂ
ಗಿರಿಶಂ ಗೌರಿಯ ರಮಿಸಲ್
ಸ್ಫುರಿಸ್ ಇರ್ಪಂ ಕುಸುಮ-ಮಂಚಮಂ ತಾನ್ ಎನಿಕುಂ॥೨೧॥ +++(5)+++
मूलम्
ಗಿರಿಯ ಶಿರಂ ಕಣಿವೆಗಳುಂ
ಭರದಿಂ ತಳೆಯಲ್ಕೆ ಪೂಗಳಂ ಚೆಲ್ವಿಂದಂ
ಗಿರಿಶಂ ಗೌರಿಯ ರಮಿಸಲ್
ಸ್ಫುರಿಸಿರ್ಪಂ ಕುಸುಮಮಂಚಮಂ ತಾನೆನಿಕುಂ||೨೧||
ಅರ್ಥ
ಪರ್ವತದ ತುದಿಗಳು, ಕಣಿವೆಗಳು ಎಲ್ಲವೂ ಭರದಿಂದ ಹೂವನ್ನು ತಳೆದಾಗ ಚೆಲುವಿನಿಂದ ಗಿರಿಶನಾದ ಶಿವ ಗೌರಿಯನ್ನು ರಮಿಸಲು ಹೂವಿನ ಮಂಚವನ್ನು ಸ್ಫುರಿಸಿದ್ದಾನೆ ಎಂಬಂತೆ ಕಾಣುತ್ತಿತ್ತು
विश्वास-प्रस्तुतिः
ಹಿಮಮ್ ಎಂಬ ಭಸ್ಮ-ಚಯದಿಂದ್
ಎ ಮೃತಂ ಮಾರಂ ನೆಗೞ್ದು ಪುಟ್ಟಿರ್ಪ-ವೊಲ್ ಏ
ಸುಮ-ರಾಜಿಯಿಂದೆ ತರುಗಳ್
ಕಮನೀಯತೆ ವೆತ್ತು+++(→ಪೆತ್ತು=ಹೆತ್ತು)+++ ರಾಜಿಸಿರ್ದಪುವ್ ಆಗಳ್॥೨೨॥ +++(5)+++
मूलम्
ಹಿಮಮೆಂಬ ಭಸ್ಮಚಯದಿಂ-
ದೆ ಮೃತಂ ಮಾರಂ ನೆಗೞ್ದು ಪುಟ್ಟಿರ್ಪವೊಲೇ
ಸುಮರಾಜಿಯಿಂದೆ ತರುಗಳ್
ಕಮನೀಯತೆವೆತ್ತು ರಾಜಿಸಿರ್ದಪುವಾಗಳ್||೨೨||
ಅರ್ಥ
ಹಿಮವೆನ್ನುವ ಭಸ್ಮದ ರಾಶಿಯಿಂದ ಸತ್ತು ಹೋದ ಮನ್ಮಥ ಮತ್ತೆ ಹುಟ್ಟಿದಂತೆ ಹೂವುಗಳಿಂದ ಮರಗಳು ಸೌಂದರ್ಯವನ್ನು ಹೆತ್ತು ಶೋಭಿಸುತ್ತಿದ್ದವು
विश्वास-प्रस्तुतिः
ಶಶಿಯ ಶ್ವೇತ-ಕರಂಗಳ್
ನಿಶೆಯ್ ಅಂತ್ಯದೆ ಪೋಪ ತೆಱದೊಳ್ ಅಲ್ಲಿಯ ಹಿಮಮುಂ
ಕೃಶಮ್ ಆಗಲ್ ರವಿಕಿರಣಂ
ದಿಶೆಯೊಳ್ ಪರ್ವಿರ್ಪ-ವೋಲೆ ಕಂಡವು ಪೂಗಳ್ ॥೨೩॥
मूलम्
ಶಶಿಯ ಶ್ವೇತಕರಂಗಳ್
ನಿಶೆಯಂತ್ಯದೆ ಪೋಪ ತೆಱದೊಳಲ್ಲಿಯ ಹಿಮಮುಂ
ಕೃಶಮಾಗಲ್ ರವಿಕಿರಣಂ
ದಿಶೆಯೊಳ್ ಪರ್ವಿರ್ಪವೋಲೆ ಕಂಡವು ಪೂಗಳ್ ||೨೩||
ಅರ್ಥ
ಚಂದ್ರನ ಬಿಳಿಯ ಕಿರಣಗಳು ರಾತ್ರಿಯ ಕೊನೆಯಲ್ಲಿ ಹೋಗುವ ಹಾಗೆ ಅಲ್ಲಿಯ ಹಿಮವೂ ಕೃಶವಾಗುತ್ತಿತ್ತು, ಸೂರ್ಯನ ಕಿರಣಗಳು ಪೂರ್ವದಿಕ್ಕಿನಲ್ಲಿ ಹಬ್ಬುವಂತೆ ಹೂಗಳು ಕಂಡವು
विश्वास-प्रस्तुतिः
ಪರಿದುದು ಮಲಯಾನಿಲಮುಂ
ಪರಿದುದು ಮೆಯ್ದುಂಬಿದಲಕನಂದಾ ನದಿಯುಂ
ಸೊರಗಿತು ಬಿರಯಿಗಳೆರ್ದೆಯುಂ
ಸೊರಗಿತು ಹಿಮಗಿರಿಯ ಕೊರ್ವಿ ತೋರ್ದಾ ಮೆಯ್ಯುಂ॥೨೪॥
मूलम्
ಪರಿದುದು ಮಲಯಾನಿಲಮುಂ
ಪರಿದುದು ಮೆಯ್ದುಂಬಿದಲಕನಂದಾ ನದಿಯುಂ
ಸೊರಗಿತು ಬಿರಯಿಗಳೆರ್ದೆಯುಂ
ಸೊರಗಿತು ಹಿಮಗಿರಿಯ ಕೊರ್ವಿ ತೋರ್ದಾ ಮೆಯ್ಯುಂ॥೨೪॥
ಅರ್ಥ
ದಕ್ಷಿಣದ ಬೆಟ್ಟಗಳ ಗಾಳಿ ಹರಿದು ಬಂತು, ಹಾಗೆಯೇ ಅಲಕನಂದಾ ನದಿಯೂ ಮೈತುಂಬಿ ಹರಿಯಿತು. ವಿರಹಿಗಳ ಎದೆ ಸೊರಗತೊಡಗಿತು, ಹಾಗೆಯೇ ಹಿಮಗಿರಿಯ ಕೊಬ್ಬಿನಿಂದ ಕೂಡಿದಂತೆ ಕಾಣುತ್ತಿದ್ದ ಮೈಯೂ ಸೊರಗತೊಡಗಿತು
विश्वास-प्रस्तुतिः
ರುಚಿರ ಸುಮಾಳಿಯನೀಕ್ಷಿಸು-
ತಚಿರದೆ ಚಂಚಲತೆವೆತ್ತು ವಾಱಡಿಗಳ್ ತಾ-
ಮಚಲಮನಸ್ಕರೆನಿಪ್ಪರ್
ಸ್ವಚಿತ್ತನಿಗ್ರಹದೆ ಸೋಲ್ತರಾ ಕಿತ್ತಡಿಗಳ್॥೨೫॥
मूलम्
ರುಚಿರ ಸುಮಾಳಿಯನೀಕ್ಷಿಸು-
ತಚಿರದೆ ಚಂಚಲತೆವೆತ್ತು ವಾಱಡಿಗಳ್ ತಾ-
ಮಚಲಮನಸ್ಕರೆನಿಪ್ಪರ್
ಸ್ವಚಿತ್ತನಿಗ್ರಹದೆ ಸೋಲ್ತರಾ ಕಿತ್ತಡಿಗಳ್॥೨೫॥
ಅರ್ಥ
ಸುಂದರವಾದ ಹೂವುಗಳನ್ನು ನೋಡುತ್ತಾ ಶೀಘ್ರದಲ್ಲಿಯೇ ದುಂಬಿಗಳು ಚಂಚಲತೆಯನ್ನು ಹೊಂದಿದವು. ತಾವು ಅಚಲವಾದ ಮನಸ್ಸುಳ್ಳವರು ಎಂಬಂತಹ ಋಷಿಗಳೂ ತಮ್ಮ ಚಿತ್ತನಿಗ್ರಹದಲ್ಲಿ ಸೋತು ಹೋಗುತ್ತಿದ್ದರು
विश्वास-प्रस्तुतिः
ನರನಾರಾಯಣರಚಲತೆ
ಸುರಪನೊಳೆಂತೆಂತೊ ಚಂಚಲತೆಯಂಬುಗಿಸ-
ಲ್ಕರರೇ! ನೋೞ್ಪೆನೆನುತ್ತುಂ
ಸ್ಮರನಂ ಗೆಲ್ದಿರ್ಪ ಚೆಲ್ವೆಯರನೆ ಕಳುಪಿದಂ॥೨೬॥
मूलम्
ನರನಾರಾಯಣರಚಲತೆ
ಸುರಪನೊಳೆಂತೆಂತೊ ಚಂಚಲತೆಯಂಬುಗಿಸ-
ಲ್ಕರರೇ! ನೋೞ್ಪೆನೆನುತ್ತುಂ
ಸ್ಮರನಂ ಗೆಲ್ದಿರ್ಪ ಚೆಲ್ವೆಯರನೆ ಕಳುಪಿದಂ॥೨೬॥
ಅರ್ಥ
ಆದರೆ ನರನಾರಾಯಣರ ಅಚಲತೆ ದೇವತೆಗಳ ಒಡೆಯನಾದ ಇಂದ್ರನಲ್ಲಿ ಚಂಚಲತೆಯನ್ನು ಹುಟ್ಟಿಸಿತು. ಅವನು “ಅರರೇ! ನೋಡುವೆ” ಎಂದು ಮನ್ಮಥನನ್ನೇ ಗೆದ್ದ ಚೆಲುವೆಯರನ್ನು ಕಳುಹಿಸಿದನು
विश्वास-प्रस्तुतिः
ವನದೇವತೆಯರ ಪಾಂಗಿಂ
ಮನದೊಳ್ ಸ್ಮರನರ್ಚಿಯಂ ಸದಾ ಪೆರ್ಚಿಪರಾ
ವನಿತೆಯರೆಯ್ದಿದರಾಗಳ್
ಮುನಿಜನರೆರ್ದೆಗಸಿಯ ತಿವಿತದಂದದೆ ತೋರ್ದರ್॥೨೭॥
मूलम्
ವನದೇವತೆಯರ ಪಾಂಗಿಂ
ಮನದೊಳ್ ಸ್ಮರನರ್ಚಿಯಂ ಸದಾ ಪೆರ್ಚಿಪರಾ
ವನಿತೆಯರೆಯ್ದಿದರಾಗಳ್
ಮುನಿಜನರೆರ್ದೆಗಸಿಯ ತಿವಿತದಂದದೆ ತೋರ್ದರ್॥೨೭॥
ಅರ್ಥ
ವನದೇವತೆಯರ ಹಾಗಿರುವ ಆ ವನಿತೆಯರು ಮನಸ್ಸಿನಲ್ಲಿ ಕಾಮಜ್ವಾಲೆಯನ್ನು ಹೆಚ್ಚಿಸುತ್ತಿದ್ದರು. ಹಾಗೆ ಅಲ್ಲಿಗೆ ಬಂದವರು ಮುನಿಜನರ ಎದೆಗೆ ಕತ್ತಿಯ ತಿವಿತದಂತೆ ತೋರುತ್ತಿದ್ದರು
विश्वास-प्रस्तुतिः
ಅಕಟಾ! ನಿರ್ದಯಿ ಮಾರಂ
ಪ್ರಕಟಂಗೊಂಡಿರ್ಪನಿವರ ಕುಡಿನೋಟದೊಳೀ
ವಿಕಟತೆಯಿಂ ಬೆರ್ಚುತ್ತುಂ
ಸಕಲಮುನೀಶರ್ಕಳಕ್ಷಿ ತೆರೆಯಲ್ಕಾಱರ್॥೨೮॥
मूलम्
ಅಕಟಾ! ನಿರ್ದಯಿ ಮಾರಂ
ಪ್ರಕಟಂಗೊಂಡಿರ್ಪನಿವರ ಕುಡಿನೋಟದೊಳೀ
ವಿಕಟತೆಯಿಂ ಬೆರ್ಚುತ್ತುಂ
ಸಕಲಮುನೀಶರ್ಕಳಕ್ಷಿ ತೆರೆಯಲ್ಕಾಱರ್॥೨೮॥
ಅರ್ಥ
“ಅಯ್ಯೋ! ದಯೆಯಿಲ್ಲದ ಮನ್ಮಥ, ಇವರ ಕುಡಿನೋಟದಲ್ಲೇ ಪ್ರಕಟವಾಗಿದ್ದಾನೆ.” ಎಂದು ಈ ವಿಕಟತೆಯಿಂದ ಹೆದರುತ್ತ ಸಕಲ ಮುನೀಶರು ಕಣ್ಣುಗಳನ್ನೇ ತೆರೆಯಲಾರರು
विश्वास-प्रस्तुतिः
ಪೊಱಗಣ ಕಷ್ಟಂಗಳನಾಂ
ಪರಿಹರಿಸಲ್ಕಾರ್ಪೆವಾದೊಡಂತಸ್ಥಂಗಳ್
ಪರಿತಾಪಮನೀಯುತಿರ-
ಲ್ಕರಿದಾದತ್ತಲ್ತೆ ಮೋಕ್ಷಮೆಂಬರ್ ಮುನಿಗಳ್॥೨೯॥
मूलम्
ಪೊಱಗಣ ಕಷ್ಟಂಗಳನಾಂ
ಪರಿಹರಿಸಲ್ಕಾರ್ಪೆವಾದೊಡಂತಸ್ಥಂಗಳ್
ಪರಿತಾಪಮನೀಯುತಿರ-
ಲ್ಕರಿದಾದತ್ತಲ್ತೆ ಮೋಕ್ಷಮೆಂಬರ್ ಮುನಿಗಳ್॥೨೯॥
ಅರ್ಥ
ಹೊರಗಿನ ಕಷ್ಟಗಳನ್ನು ಪರಿಹರಿಸಲು ನಾವು ಸಮರ್ಥರು. ಆದರೆ ಒಳಗಡೆ ಹುಟ್ಟುವಂತಹವು ಪರಿತಾಪವನ್ನು ಕೊಡುತ್ತಿರುವಾಗ ಮೋಕ್ಷವೆನ್ನುವುದು ಕಷ್ಟವಾಗುವುದಲ್ಲವೇ!” ಎಂದು ಮುನಿಗಳು ಹೇಳಿದರು.
विश्वास-प्रस्तुतिः
ಕೆಟ್ಟೆವು ಸ್ಮರಶರದಿಂದಂ
ದಿಟ್ಟಿಸಿದೊಡನಂದು ಸತ್ತನಿಲ್ಲಂ ಶಿವನಿಂ
ದಿಟ್ಟಿಯೊಳೀ ನಾರಿಯರೊಳ್
ಗಟ್ಟಿಗನಾಗಿರ್ಪನೆಂದು ಪೇೞ್ದರ್ ಮುನಿಗಳ್॥೩೦॥
मूलम्
ಕೆಟ್ಟೆವು ಸ್ಮರಶರದಿಂದಂ
ದಿಟ್ಟಿಸಿದೊಡನಂದು ಸತ್ತನಿಲ್ಲಂ ಶಿವನಿಂ
ದಿಟ್ಟಿಯೊಳೀ ನಾರಿಯರೊಳ್
ಗಟ್ಟಿಗನಾಗಿರ್ಪನೆಂದು ಪೇೞ್ದರ್ ಮುನಿಗಳ್॥೩೦॥
ಅರ್ಥ
ಈ ಮನ್ಮಥನ ಬಾಣದಿಂದ ನಾವು ಕೆಟ್ಟೆವು. ಅಂದು ದಿಟ್ಟಿಸಿದಾಗ ಶಿವನಿಂದ ಸತ್ತಿಲ್ಲ. ಈ ನಾರಿಯರ ದೃಷ್ಟಿಯಲ್ಲಿ ಮತ್ತೆ ಗಟ್ಟಿಗನಾಗಿದ್ದಾನೆ” ಎಂದು ಮುನಿಗಳು ಹೇಳಿದರು.
विश्वास-प्रस्तुतिः
ಲೋಕದ ಪೂರ್ವದೆ ಪುಟ್ಟಿದ-
ನೇ ಕಾವಂ ಕಾವನಲ್ತು ಜಗದೊಳಗೇಗಳ್
ವ್ಯಾಕುಲತೆಯನೞಿಪಂ ನಿ-
ರ್ವ್ಯಾಕುಲನಾ ಹರಿಯೆ ಕಾವನಮ್ಮಂ ಕಾವಂ ॥೩೧॥
मूलम्
ಲೋಕದ ಪೂರ್ವದೆ ಪುಟ್ಟಿದ-
ನೇ ಕಾವಂ ಕಾವನಲ್ತು ಜಗದೊಳಗೇಗಳ್
ವ್ಯಾಕುಲತೆಯನೞಿಪಂ ನಿ-
ರ್ವ್ಯಾಕುಲನಾ ಹರಿಯೆ ಕಾವನಮ್ಮಂ ಕಾವಂ ॥೩೧॥
ಅರ್ಥ
ಜಗತ್ತಿನ ಪೂರ್ವದಲ್ಲಿಯೇ ಹುಟ್ಟಿದ ಕಾವನು(ಮನ್ಮಥ/ಕಾಪಾಡುವವನು) ಕಾಪಾಡುವವನಲ್ಲ. ಜಗತ್ತಿನಲ್ಲಿ ಯಾವಾಗಳೂ ವ್ಯಾಕುಲತೆಯನ್ನು ನಾಶಮಾಡುವ ನಿರ್ವ್ಯಾಕುಲನಾದ ಕಾಮನ ಅಪ್ಪನಾದ ಹರಿಯೆ ಕಾಪಾಡುವವನು
विश्वास-प्रस्तुतिः
ಎನುತುಂ ಚಿಂತಿಸಿ ನುತಿಸಲ್
ಮುನಿಗಳ್ ತಪದೊಳಗೆ ಮಗ್ನನಾಗಿರ್ಪಾತಂ
ಮನದೊಳಗಱಿತೆಲ್ಲಮುಮಂ
ಮುನಿಯದೆ ನಿಜಲೀಲೆಯಿಂದ ನಕ್ಕಂ ಬೞಿಕಂ॥೩೨॥
मूलम्
ಎನುತುಂ ಚಿಂತಿಸಿ ನುತಿಸಲ್
ಮುನಿಗಳ್ ತಪದೊಳಗೆ ಮಗ್ನನಾಗಿರ್ಪಾತಂ
ಮನದೊಳಗಱಿತೆಲ್ಲಮುಮಂ
ಮುನಿಯದೆ ನಿಜಲೀಲೆಯಿಂದ ನಕ್ಕಂ ಬೞಿಕಂ॥೩೨॥
ಅರ್ಥ
ಹೀಗೆಂದು ಚಿಂತಿಸಿ ಮುನಿಗಳು ಸ್ತುತಿಸಲು ತಪಸ್ಸಿನಲ್ಲಿ ಮಗ್ನನಾಗಿರುವವನು ತನ್ನ ಮನಸ್ಸಿನಲ್ಲಿಯೇ ಎಲ್ಲವನ್ನೂ ತಿಳಿದುಕೊಂಡು ಸಿಟ್ಟಾಗದೆ ತನ್ನ ಲೀಲೆಯಿಂದ ಬಳಿಕ ಒಮ್ಮೆ ನಸುನಕ್ಕನು
विश्वास-प्रस्तुतिः
ನಾರಾಯಣನೊರ್ಮೆಗೆ ತ-
ನ್ನೂರುಮನೇ ತುಱಿಸಲದಱಿನಾದುದು ಚಿತ್ರಂ
ಕ್ಷೀರಾಬ್ಧಿಯ ಮಂಥನದಿಂ
ಶ್ರೀರಮೆ ಪುಟ್ಟಿರ್ಪ ತೆಱದೆ ಪುಟ್ಟಿದಳೊರ್ವಳ್॥೩೩॥
मूलम्
ನಾರಾಯಣನೊರ್ಮೆಗೆ ತ-
ನ್ನೂರುಮನೇ ತುಱಿಸಲದಱಿನಾದುದು ಚಿತ್ರಂ
ಕ್ಷೀರಾಬ್ಧಿಯ ಮಂಥನದಿಂ
ಶ್ರೀರಮೆ ಪುಟ್ಟಿರ್ಪ ತೆಱದೆ ಪುಟ್ಟಿದಳೊರ್ವಳ್॥೩೩॥
ಅರ್ಥ
ನಾರಾಯಣ ಒಂದು ಬಾರಿ ತನ್ನ ತೊಡೆಯನ್ನು ತುರಿಸಿದನಷ್ಟೆ. ಅದರಿಂದ ವಿಚಿತ್ರವೊಂದು ಜರುಗಿತು. ಕ್ಷೀರಸಾಗರವನ್ನು ಕಡೆದಾಗ ಅದರಿಂದ ಲಕ್ಷ್ಮಿಯೇ ಹುಟ್ಟಿ ಬಂದಂತೆ ನಾರಾಯಣನ ತೊಡೆಯಿಂದ ಒಬ್ಬಳು ಹುಟ್ಟಿದಳು
विश्वास-प्रस्तुतिः
ಅರರೇ! ಸೌಂದರ್ಯಮಿದೇ-
ನರಿದೋ ದಿಟದಿಂದ ಬಣ್ಣಿಸಲ್ ವಾಣಿಗಮಿಂ-
ತಿರೆ ಶಬ್ದಂಗಳ್ ಜಿಹ್ವೆಯ
ಪೊಱಗಡೆಗಂ ಸಾರ್ದುವಿಲ್ಲಮಾರ್ಗಂ ನೋಡಲ್॥೩೪॥
मूलम्
ಅರರೇ! ಸೌಂದರ್ಯಮಿದೇ-
ನರಿದೋ ದಿಟದಿಂದ ಬಣ್ಣಿಸಲ್ ವಾಣಿಗಮಿಂ-
ತಿರೆ ಶಬ್ದಂಗಳ್ ಜಿಹ್ವೆಯ
ಪೊಱಗಡೆಗಂ ಸಾರ್ದುವಿಲ್ಲಮಾರ್ಗಂ ನೋಡಲ್॥೩೪॥
ಅರ್ಥ
ಅರರೇ! ಇದೇನು ಸೌಂದರ್ಯ! ಮಾತಿನ ದೇವತೆಯಾದ ವಾಣಿಗೂ ಸಹ ಇದನ್ನು ಬಣ್ಣಿಸಲು ಕಷ್ಟ. ಹಾಗಿರುವಾಗ ನೋಡಲು ಯಾರಿಗೂ ನಾಲಗೆಯ ಹೊರಗಡೆಗೆ ಶಬ್ದಗಳು ಹೊರಡಲೇ ಇಲ್ಲ.
विश्वास-प्रस्तुतिः
ಸುಂದರಿಯುರ್ವಶಿಯೆನಿಪಳ್
ಮುಂದೆಯ್ದಳ್ ನರ್ತಿಸಿರ್ಪ ಬರ್ದಿಲವೆಣ್ಗಳ್
ಕುಂದಿದ ತೇಜದೊಳಲ್ಲಿಂ
ಪಿಂದೆಯ್ದರ್ ಮೇಣ್ ದಿವಂಗತರ್ ಸಂದಿರ್ದರ್ ॥೩೫॥
मूलम्
ಸುಂದರಿಯುರ್ವಶಿಯೆನಿಪಳ್
ಮುಂದೆಯ್ದಳ್ ನರ್ತಿಸಿರ್ಪ ಬರ್ದಿಲವೆಣ್ಗಳ್
ಕುಂದಿದ ತೇಜದೊಳಲ್ಲಿಂ
ಪಿಂದೆಯ್ದರ್ ಮೇಣ್ ದಿವಂಗತರ್ ಸಂದಿರ್ದರ್ ॥೩೫॥
ಅರ್ಥ
ಸುಂದರಿಯಾದ ಅವಳು ಉರ್ವಶಿ ಎಂಬವಳು ನರ್ತನ ಮಾಡುತ್ತಿದ್ದ ದೇವತಾಸ್ತ್ರೀಯರ ಮುಂದೆ ಬಂದಳು. ಆಗ ಅವರ ತೇಜಸ್ಸೆಲ್ಲ ಕುಂದಿತು, ಅವರು ಹಿಂದೆ ಸಾಗಿದರು. ದಿವಂಗತರಾದರು (ಸ್ವರ್ಗಕ್ಕೆ ಹೋದರು)
विश्वास-प्रस्तुतिः
ಸುರಪನ ಸೊರ್ಕಂ ಮುರಿದಳ್
ಪೆಱತೇನೀಗಳ್ ವಧೂಟಿಯಾರ್ಗಕ್ಕುಮೆನಲ್
ಹರಿ ಪರಿಹರಿಸಲ್ ಯೋಚಿಸಿ
ವರಮೆಂದಿತ್ತಿರ್ದನವಳನಾ ಮಿತ್ರಂಗಂ॥೩೬॥
मूलम्
ಸುರಪನ ಸೊರ್ಕಂ ಮುರಿದಳ್
ಪೆಱತೇನೀಗಳ್ ವಧೂಟಿಯಾರ್ಗಕ್ಕುಮೆನಲ್
ಹರಿ ಪರಿಹರಿಸಲ್ ಯೋಚಿಸಿ
ವರಮೆಂದಿತ್ತಿರ್ದನವಳನಾ ಮಿತ್ರಂಗಂ॥೩೬॥
ಅರ್ಥ
ದೇವೇಂದ್ರನ ಸೊಕ್ಕನ್ನು ಮುರಿದಳು, ಇನ್ನೇನು ಈಗ ಈ ವಧು ಯಾರಿಗೆ ಸಲ್ಲುವಳು ಎಂದು ಹರಿ ಪರಿಹಾರವನ್ನು ಯೋಚಿಸಿ “ಮಿತ್ರ”ನಿಗೆ ವರ ಎಂದು ನೀಡಿದನು
विश्वास-प्रस्तुतिः
ಬೞಿಕಂ ತಪದೊಳ್ ನೆಱೆದುದು
ಪಲಕಾಲಂ ಮೌನಿಯುಗ್ಮಮಾ ಬದರಿಯೊಳೇ
ಸಲೆ ಪುಣ್ಯಾಶ್ರಯಮಾದುದು
ನೆಲೆಸಿರ್ಪವರಿಂದೆ ತೀರ್ಥಮಾದುದು ನದಿಯುಂ॥೩೭॥
मूलम्
ಬೞಿಕಂ ತಪದೊಳ್ ನೆಱೆದುದು
ಪಲಕಾಲಂ ಮೌನಿಯುಗ್ಮಮಾ ಬದರಿಯೊಳೇ
ಸಲೆ ಪುಣ್ಯಾಶ್ರಯಮಾದುದು
ನೆಲೆಸಿರ್ಪವರಿಂದೆ ತೀರ್ಥಮಾದುದು ನದಿಯುಂ॥೩೭॥
ಅರ್ಥ
ಆ ಬಳಿಕ ತಪಸ್ಸಿನಲ್ಲಿ ಹಲವು ಕಾಲ ಕಳೆಯಿತು. ನರನಾರಾಯಣರಿಬ್ಬರೂ ಬದರಿಯಲ್ಲಿಯೇ ಸಲ್ಲುತ್ತಿರಲು ಅದು ಪುಣ್ಯಾಶ್ರಯವಾಯಿತು. ನೆಲೆಸಿರುವ ಅವರಿಂದಾಗಿ ನದಿಯೂ ತೀರ್ಥವಾಯಿತು.
विश्वास-प्रस्तुतिः
ಹಿಮಗಿರಿ ಬದರಿಕ್ಷೇತ್ರದ
ಸಮೀಪದೊಳಗಿರ್ದುದಂತೆ ಪುಣ್ಯಾಶ್ರಮಮುಂ
ಕ್ರಮದಿಂದಗಣಿತಮೆನಿಸ-
ಲ್ಕೆ ಮುನಿಗಳಲ್ಲಿಗೆ ಬರುತ್ತುಮಿರ್ದರ್ ನಿಚ್ಚಂ ॥೩೮॥
मूलम्
ಹಿಮಗಿರಿ ಬದರಿಕ್ಷೇತ್ರದ
ಸಮೀಪದೊಳಗಿರ್ದುದಂತೆ ಪುಣ್ಯಾಶ್ರಮಮುಂ
ಕ್ರಮದಿಂದಗಣಿತಮೆನಿಸ-
ಲ್ಕೆ ಮುನಿಗಳಲ್ಲಿಗೆ ಬರುತ್ತುಮಿರ್ದರ್ ನಿಚ್ಚಂ ॥೩೮॥
ಅರ್ಥ
ಹಿಮಗಿರಿಯ ಬದರಿಕ್ಷೇತ್ರದ ಸಮೀಪದಲ್ಲಿಯೇ ಹಾಗೆಯೇ ಪುಣ್ಯಾಶ್ರಮಗಳೂ ಅಗಣಿತವೆನಿಸಿದವು. ನಿತ್ಯವೂ ಮುನಿಗಳು ಅಲ್ಲಿಗೆ ಬರುತ್ತಿದ್ದರು
विश्वास-प्रस्तुतिः
ತವಸಿಗಳಿಂದಂ ಜ್ಞಾನಕೆ
ಭವತಪ್ತರ್ ಯಾತ್ರೆಗೆಂದು ಸಾರ್ದಪರೇಗಳ್
ಕವಿದಿರೆ ಕೞ್ತಲ್ ಸರ್ವರ್
ರವಿಯಾಗಮನಕ್ಕೆ ಕಾಂಕ್ಷಿಪಂದದೊಳಿದು ದಲ್॥೩೯॥
मूलम्
ತವಸಿಗಳಿಂದಂ ಜ್ಞಾನಕೆ
ಭವತಪ್ತರ್ ಯಾತ್ರೆಗೆಂದು ಸಾರ್ದಪರೇಗಳ್
ಕವಿದಿರೆ ಕೞ್ತಲ್ ಸರ್ವರ್
ರವಿಯಾಗಮನಕ್ಕೆ ಕಾಂಕ್ಷಿಪಂದದೊಳಿದು ದಲ್॥೩೯॥
ಅರ್ಥ
ತಪಸ್ವಿಗಳಿಂದ ಜ್ಞಾನಕ್ಕೆಂದು ಸಂಸಾರದಲ್ಲಿ ಬೆಂದವರು ಯಾತ್ರಗೆಂದು ಯಾವಾಗಳೂ ಬರುತ್ತಿದ್ದರು. ಎಲ್ಲೆಡೆ ಕತ್ತಲು ಕವಿದಾಗ ಸೂರ್ಯನ ಬರುವಿಕೆಯನ್ನೇ ಆಶಿಸುವಂತೆಯೇ ಇದೂ ಅಲ್ಲವೇ!
विश्वास-प्रस्तुतिः
ಮತ್ತಂ ಮಂತ್ರಂಗಳೆ ತಾ-
ಮುತ್ತರ ದಿಗ್ಭಾಗಕಾಗಿ ದುರ್ಗಮದುರ್ಗಂ
ಸತ್ತಂ ಕಾಯಲ್ಕೆನುತುಂ
ಧುತ್ತನೆ ಘನಮಾದವೋಲೆ ಕಾಣ್ಬಂ ನಗಪಂ ॥೪೦॥
मूलम्
ಮತ್ತಂ ಮಂತ್ರಂಗಳೆ ತಾ-
ಮುತ್ತರ ದಿಗ್ಭಾಗಕಾಗಿ ದುರ್ಗಮದುರ್ಗಂ
ಸತ್ತಂ ಕಾಯಲ್ಕೆನುತುಂ
ಧುತ್ತನೆ ಘನಮಾದವೋಲೆ ಕಾಣ್ಬಂ ನಗಪಂ ॥೪೦॥
ಅರ್ಥ
ಮತ್ತೆ ಮಂತ್ರಗಳೇ ಉತ್ತರದಿಕ್ಕಿನಲ್ಲಿ ಹೋಗಲು ಅಸಾಧ್ಯವಾಗುವಂತಹ ಕೋಟೆಯಂತೆಯೇ ಒಳ್ಳೆಯತನವನ್ನು ಕಾಯಲು ಧುತ್ತನೆ ಗಟ್ಟಿಯಾಗಿ ನಿಂತ ಹಾಗೆ ಪರ್ವತಗಳು ಕಾಣುತ್ತಿದ್ದವು
विश्वास-प्रस्तुतिः
ಕಾಂಚನಮುಂ ಕಳೆಗುಂದಲ್
ಸಂಚಿತದೋಷಂಗಳಂ ಕೞೆಯಲೆಂದೆನುತುಂ
ಮುಂಚಿನ ಸಂಸ್ಕಾರಂಗಳು-
ಮಂ ಚಿರದೊಳ್ ಗೆಯ್ವರಲ್ತೆ ಪೆಱತೇನಂತೇ! ॥೪೧॥
मूलम्
ಕಾಂಚನಮುಂ ಕಳೆಗುಂದಲ್
ಸಂಚಿತದೋಷಂಗಳಂ ಕೞೆಯಲೆಂದೆನುತುಂ
ಮುಂಚಿನ ಸಂಸ್ಕಾರಂಗಳು-
ಮಂ ಚಿರದೊಳ್ ಗೆಯ್ವರಲ್ತೆ ಪೆಱತೇನಂತೇ! ॥೪೧॥
ಅರ್ಥ
ಬಂಗಾರವೂ ಕಳೆಗುಂದಿದರೆ ಅದರಲ್ಲಿ ಸಂಚಿತವಾದ ದೋಷಗಳನ್ನು ಕಳೆಯಲು ಮೊದಲಿನ ಸಂಸ್ಕಾರಗಳನ್ನು ಮತ್ತೆ ತತ್ಕ್ಷಣದಲ್ಲಿ ಮಾಡುವುದಿಲ್ಲವೇ ಹಾಗೇ…
विश्वास-प्रस्तुतिः
ಕೃತ ಪುಣ್ಯಕ್ಷಯದಿಂದಂ
ಪತಿತರ್ ತಾಮಪ್ಪರೆಂಬ ಭೀತಿಯೊಳಂ ದಲ್
ಹಿತಮಪ್ಪಂದದೆ ತಪದೆ ನಿ
ರತರಪ್ಪರ್ ಬರ್ದಿಲರ್ಕಳಲ್ಲಿಗೆ ಬರ್ಪರ್ ॥೪೨॥
मूलम्
ಕೃತ ಪುಣ್ಯಕ್ಷಯದಿಂದಂ
ಪತಿತರ್ ತಾಮಪ್ಪರೆಂಬ ಭೀತಿಯೊಳಂ ದಲ್
ಹಿತಮಪ್ಪಂದದೆ ತಪದೆ ನಿ
ರತರಪ್ಪರ್ ಬರ್ದಿಲರ್ಕಳಲ್ಲಿಗೆ ಬರ್ಪರ್ ॥೪೨॥
ಅರ್ಥ
ಮಾಡಿದ ಪುಣ್ಯವು ಕ್ಷಯಿಸುತ್ತಿರಲು, ನಾವು ಪತಿತರಾಗುತ್ತೇವೆ ಎಂಬ ಭೀತಿಯಿಂದಲೂ ಕೂಡ ಅಲ್ಲಿಗೆ ಬರುವ ದೇವತೆಗಳು ಹಿತವಾಗುವಂತೆ ತಪಸ್ಸಿನಲ್ಲಿ ನಿರತರಾಗುತ್ತಿದ್ದರು
विश्वास-प्रस्तुतिः
ಕ್ಷಯಮಾಗುತ್ತಿರಲಾಯುವು
ಚಯಮಾಗಿರ್ಪೆಲ್ಲ ಪಾಪದಿಂ ಕೆಟ್ಟೆವಲಾ
ನಿಯಮಕೆ ದೂರಾಗಿರ್ದಪೆ-
ವಯಸ್ಸು ಕೀಳ್ ಕೂಡೆ ಸೆಳೆವ ಚುಂಬಕಮುಂಟೇ! ॥೪೩॥
मूलम्
ಕ್ಷಯಮಾಗುತ್ತಿರಲಾಯುವು
ಚಯಮಾಗಿರ್ಪೆಲ್ಲ ಪಾಪದಿಂ ಕೆಟ್ಟೆವಲಾ
ನಿಯಮಕೆ ದೂರಾಗಿರ್ದಪೆ-
ವಯಸ್ಸು ಕೀಳ್ ಕೂಡೆ ಸೆಳೆವ ಚುಂಬಕಮುಂಟೇ! ॥೪೩॥
ಅರ್ಥ
ಆಯಸ್ಸು ಕ್ಷಯವಾಗುತ್ತಿರುವಾಗ ಒಟ್ಟು ಗೂಡುತ್ತಿರುವ ಪಾಪದಿಂದ ನಾವು ಕೆಟ್ಟೆವು. ನಿಯಮಕ್ಕೆ ದುರವಾಗುತ್ತಿದ್ದೆವು. ಕಬ್ಬಿಣಕ್ಕೆ ಕಿಲುಬು ಹಿಡಿದಾಗಳೂ ಸೆಳೆಯುವ ಅಯಸ್ಕಾಂತವಿದೆಯೇ
विश्वास-प्रस्तुतिः
ಎಂಬರ್ ಲೋಗರ್ ತೀರ್ಥದೊ-
ಳಂ ಬಂದರ್ ಮಿಂದು ಪಾಪಮಂ ಕೞೆಯುತ್ತುಂ
ಕಾಂಬರ್ ಪುಣ್ಯದ ನದಿಯಂ
ಬಾಂಬೊಳೆಯಂ ಸೇರ್ವುದಲಕನಂದಾ ಎನುತುಂ॥೪೪॥
मूलम्
ಎಂಬರ್ ಲೋಗರ್ ತೀರ್ಥದೊ-
ಳಂ ಬಂದರ್ ಮಿಂದು ಪಾಪಮಂ ಕೞೆಯುತ್ತುಂ
ಕಾಂಬರ್ ಪುಣ್ಯದ ನದಿಯಂ
ಬಾಂಬೊಳೆಯಂ ಸೇರ್ವುದಲಕನಂದಾ ಎನುತುಂ॥೪೪॥
ಅರ್ಥ
ಎನ್ನುವ ಜನರು ತೀರ್ಥದಲ್ಲಿ ಬಂದು ಸ್ನಾನಮಾಡಿದರು, ಪಾಪವನ್ನು ಕಳೆಯುತ್ತಾ ಪುಣ್ಯವನ್ನು ಕೊಡುವ ಗಂಗಾನದಿಯನ್ನು ಸೇರುವ ಅಲಕನಂದಾ ನದಿಯನ್ನು ನೋಡುವರು.
विश्वास-प्रस्तुतिः
ನಾರಾಯಣನೂರುವಿನಿಂ-
ದಾ ರಮಣಿಯವಳ್ ಪ್ರಜಾತಳಾದಾ ಬಳಿಕಂ
ಸೇರಿರ್ಪಳ್ ನೇಸಱನಾ
ನಾರಿಯ ಕಥೆಯಾದುದಂತು ಮುಂದೆ ವಿಚಿತ್ರಂ॥೪೫॥
मूलम्
ನಾರಾಯಣನೂರುವಿನಿಂ-
ದಾ ರಮಣಿಯವಳ್ ಪ್ರಜಾತಳಾದಾ ಬಳಿಕಂ
ಸೇರಿರ್ಪಳ್ ನೇಸಱನಾ
ನಾರಿಯ ಕಥೆಯಾದುದಂತು ಮುಂದೆ ವಿಚಿತ್ರಂ॥೪೫॥
ಅರ್ಥ
ನಾರಾಯಣನ ತೊಡೆಯಿಂದ ಆ ರಮಣಿ ಹುಟ್ಟಿದ ಬಳಿಕ ಸೂರ್ಯನನ್ನು ಸೇರಿದಳು. ಆ ನಾರಿಯ ಕಥೆ ಮುಂದೆ ವಿಚಿತ್ರವಾಯಿತು
विश्वास-प्रस्तुतिः
ನೆಲೆಸಲ್ ಭಾಸ್ವದ್ಭಾಸ್ಕರ-
ನೊಲವಿಂದಂ ಸಖಿಯರೊಡನೆ ದಿವ್ಯಾಂಗನೆ ತಾಂ
ಕೞೆಯುತ್ತಿರ್ದಳ್ ಕಾಲಮ-
ನಲೆಯುತ್ತುಂ ಕೇಳಿಯಿಂದಮತ್ತಲ್ ಮತ್ತಂ ॥೪೬॥
मूलम्
ನೆಲೆಸಲ್ ಭಾಸ್ವದ್ಭಾಸ್ಕರ-
ನೊಲವಿಂದಂ ಸಖಿಯರೊಡನೆ ದಿವ್ಯಾಂಗನೆ ತಾಂ
ಕೞೆಯುತ್ತಿರ್ದಳ್ ಕಾಲಮ-
ನಲೆಯುತ್ತುಂ ಕೇಳಿಯಿಂದಮತ್ತಲ್ ಮತ್ತಂ ॥೪೬॥
ಅರ್ಥ
ಪ್ರಕಾಶಮಾನವಾದ ಭಾಸ್ಕರನ ಪ್ರೀತಿ ನೆಲೆಸಿರುವಾಗ ಸಖಿಯರೊಡನೆ ದಿವ್ಯಾಂಗನೆ ಅತ್ತಿತ್ತ ಅಲೆಯುತ್ತಾ ಆಟದಿಂದ ಕಾಲವನ್ನು ಕಳೆಯುತ್ತಿದ್ದಳು.
विश्वास-प्रस्तुतिः
ಹರಿದಶ್ವನ ನೆಱವಿಂದ
ಚ್ಚರಸಿಯರೊಡನಾಟಮೊದವಿದುದು ಸರ್ವತ್ರಂ
ಚರಿಸಲ್ ಶಕ್ತಿಯುಮಂತುಟೆ
ಧರಿಸಲ್ ನಿಜಕಾಮರೂಪಮಂ ಬಲ್ಲಳ್ಗಂ ॥೪೭॥
मूलम्
ಹರಿದಶ್ವನ ನೆಱವಿಂದ
ಚ್ಚರಸಿಯರೊಡನಾಟಮೊದವಿದುದು ಸರ್ವತ್ರಂ
ಚರಿಸಲ್ ಶಕ್ತಿಯುಮಂತುಟೆ
ಧರಿಸಲ್ ನಿಜಕಾಮರೂಪಮಂ ಬಲ್ಲಳ್ಗಂ ॥೪೭॥
ಅರ್ಥ
ಸೂರ್ಯನ ನೆರವಿನಿಂದ ಅಪ್ಸರೆಯರೊಡನೆ ಎಲ್ಲಾ ಕಡೆಗಳಲ್ಲಿಯೂ ಸಂಚರಿಸುವ ಶಕ್ತಿ ಹಾಗೆಯೇ ಮನಸ್ಸಿಗೆ ಬಂದ ರೂಪವನ್ನು ಧರಿಸುವ ಶಕ್ತಿ ಅವಳಿಗೆ ಒದವಿತ್ತು
विश्वास-प्रस्तुतिः
ಮಣಿಮಯಮಾಲ್ಯಂ ನೂತ್ನಂ
ಗಣಿಸಲ್ ಮಂಜೂಷಸಂಸ್ಥಮಾಗಲ್ ಚೆನ್ನಂ
ಗಣಿಸದೆ ಮೌಲ್ಯಮನಿಟ್ಟೊಡ-
ಮಣಮುಂ ಸಂತೋಷಮಿಲ್ಲದಿರ್ಕುಂ ಮನಕಂ ॥೪೮॥
मूलम्
ಮಣಿಮಯಮಾಲ್ಯಂ ನೂತ್ನಂ
ಗಣಿಸಲ್ ಮಂಜೂಷಸಂಸ್ಥಮಾಗಲ್ ಚೆನ್ನಂ
ಗಣಿಸದೆ ಮೌಲ್ಯಮನಿಟ್ಟೊಡ-
ಮಣಮುಂ ಸಂತೋಷಮಿಲ್ಲದಿರ್ಕುಂ ಮನಕಂ ॥೪೮॥
ಅರ್ಥ
ಹೊಸದಾದ ಮಣಿಮಯವಾದ ಮಾಲೆಯನ್ನು ಚೆನ್ನಾಗಿ ಪೆಟ್ಟಿಗೆಯೊಳಗಿಟ್ಟರೆ ಚೆನ್ನ. ಅದರ ಮೌಲ್ಯವನ್ನು ಲೆಕ್ಕಿಸದೆ ಎಲ್ಲೋ ಇಟ್ಟಾಗ ಮನಸ್ಸಿಗೆ ಸ್ವಲ್ಪವೂ ಸಂತೋಷವಿಲ್ಲದೇ ಹೋಗುತ್ತದೆ
विश्वास-प्रस्तुतिः
ಎನಿಪಂತಿವಳಂ ಗಣಿಸದೆ
ದಿನಪಂ ನಿಜಕರ್ಮನಿರತನಾಗಿರ್ದಪನಾ
ಮನಸಿಜ ಶರಕಂ ನಿಕಷಾ-
ಭೆ ನಿರಂಕುಶಳಾಗಿ ಚರಿಸುತಿರ್ದಳ್ ಜಗದೊಳ್॥೪೯॥
मूलम्
ಎನಿಪಂತಿವಳಂ ಗಣಿಸದೆ
ದಿನಪಂ ನಿಜಕರ್ಮನಿರತನಾಗಿರ್ದಪನಾ
ಮನಸಿಜ ಶರಕಂ ನಿಕಷಾ-
ಭೆ ನಿರಂಕುಶಳಾಗಿ ಚರಿಸುತಿರ್ದಳ್ ಜಗದೊಳ್॥೪೯॥
ಅರ್ಥ
ಅಂತಿರುವವಳ ಇವಳನ್ನು ಲೆಕ್ಕಿಸದೆ ಸೂರ್ಯನು ತನ್ನ ಕರ್ಮದಲ್ಲಿ ನಿರತನಾಗಿದ್ದ. ಮನ್ಮಥನ ಬಾಣಕ್ಕೆ ಒರೆಗಲ್ಲಂತಿರುವ ಇವಳು ನಿರಂಕುಶಳಾಗಿ ಜಗತ್ತಿನಲ್ಲಿ ಓಡಾಡುತ್ತಿದ್ದಳು.
विश्वास-प्रस्तुतिः
ಮಾಲಿನೀ॥
ಹರಿಯ ತೊಡೆಯಿನಾಗಳ್ ಪುಟ್ಟಿದಳ್ ಸಾಗುವಾಗಳ್
ಸ್ಮರನ ಶರದ ವೇಗಂ ಪೆರ್ಚುಗುಂ ಕರ್ಪುರಕ್ಕಂ
ಪರಿದೊಡನಲನೇ ತಾಂ ಶಕ್ಯಮೇ ನಿಲ್ಲಲಂತೇ
ಸುರರ ನಗರದೊಳ್ ತಾನುರ್ವಶಿ ಖ್ಯಾತಳಾದಳ್॥೫೦॥
मूलम्
ಮಾಲಿನೀ॥
ಹರಿಯ ತೊಡೆಯಿನಾಗಳ್ ಪುಟ್ಟಿದಳ್ ಸಾಗುವಾಗಳ್
ಸ್ಮರನ ಶರದ ವೇಗಂ ಪೆರ್ಚುಗುಂ ಕರ್ಪುರಕ್ಕಂ
ಪರಿದೊಡನಲನೇ ತಾಂ ಶಕ್ಯಮೇ ನಿಲ್ಲಲಂತೇ
ಸುರರ ನಗರದೊಳ್ ತಾನುರ್ವಶಿ ಖ್ಯಾತಳಾದಳ್॥೫೦॥
ಅರ್ಥ
ಹರಿಯ ತೊಡೆಯಿಂದ ಅಂದು ಹುಟ್ಟಿರುವವಳು ಸಾಗುವಾಗ ಮನ್ಮಥನ ಬಾಣದ ವೇಗ ಹೆಚ್ಚುತ್ತಿತ್ತು. ಕರ್ಪೂರಕ್ಕೆ ಬೆಂಕಿ ತಾಗಿದಾಗ ನಿಲ್ಲಲು ಸಾಧ್ಯವೇ! ಹಾಗೇ ಸುರರ ನಗರದಲ್ಲಿ ಉರ್ವಶಿ ಖ್ಯಾತಳಾದಳು
॥ಇಂತುರ್ವಶೀಜನನವೃತ್ತಾಂತಮೆಂಬ ಪ್ರಥಮಂ ಸರ್ಗಂ॥