ಕಗ್ಗದ ಕಥೆ

ಹಳ್ಳಿ ಮಕ್ಕಳಿಂಗೆ ಗುರುವು, ಹಳ್ಳಿಗೆಲ್ಲ ಗೆಳೆಯನು,-
“ಒಳ್ಳೆ ಹಾರುವಯ್ಯ”+++(=ಬ್ರಾಹ್ಮಣಃ)+++, " ಹಸುವು", “ಹಸುಳೆ”+++(=ಶಿಶುಃ)+++ ಎನುವರ್ ಅವನನು.
ಮಂಕುತಿಮ್ಮನ್ ಎನುತ ಹೆಸರನ್ ಅವನು ಹೇಳಿ-ಕೊಳುವನು;
ಬಿಂಕ ಕೊಂಕು ಒಂದು ಅರಿಯದ್ ಇದ್ದ ಸಾಧುವ್ ಆತನು.

ಬಾಳಿದ್ ಏತಕ್ ಎನುತಲ್ ಒಮ್ಮೆಯ್ ಒಮ್ಮೆ ತಾನೆ ಕೇಳ್ವನು;
ಕೂಳು-ಹೆಣವು ತಾನ್ ಎನುತ್ತಲ್ ಒಮ್ಮೆ ನಕ್ಕು ಪೇಳ್ವನು.
ಬೆದರರ್ ಆರುಮ್ ಅವನ ಕಂಡು; ಬಳಸಿ ನಿಂತು ಹುಡುಗರು
ಮುದ-ದೊಳ್ ಅವನ ಸಲುಗೆಯಿಂದ, ’ಮೇಷ್ಟ್ರೆ’, ’ಮೇಷ್ಟ್ರೆ’ ಎನುವರು.

ಮೂಡಲೂರ ಸುತ್ತ-ಮುತ್ತಣ್ ಐದು ಮೈಲಿಯಿಂದಲಿ
ಕೂಡಿ ಬರುವರ್ ಅಣುಗರ್+++(=ಮಕ್ಕಳ್)+++ ಓದೆ ತಿಮ್ಮ ಗುರುವಿನ್ ಎಡೆಯಲಿ.
ಶಾಲೆಗ್ ಅವನು ಹೊತ್ತು-ಗೊತ್ತಿಗ್ ಒಪ್ಪುವಂತೆ ಬರುವನು;
ವೇಳೆ ವೆರ್ತವ್+++(=ವ್ಯರ್ಥವ್)+++ ಆಗದಂತೆ ಪಾಠ ಹೇಳುತಿರುವನು;

ಆಟ, ಅಮರ, ಮಗ್ಗಿ, ಬರಹ -ಎಲ್ಲ ಕಲಿಸಿ ಕೊಡುವನು;
ಏಟು, ಪೆಟ್ಟು, ಬಯ್ಲು, ಗದರು -ಒಂದನುಮ್ ಅವನ್ ಅರಿಯನು;
ಕತೆಯ ಹೇಳಿ ನಗಿಸುತ್ ಅವರ ತುಂಟತನವ ಕಳೆವನು;
ಮಿತದಿನ್ ಎಲ್ಲರ್ ಒಡನೆ ಮಾತು-ಕತೆಯನ್ ಆಡಿ ನಲಿವನು.

ಅವನ ತಾಯಿಯ್ ಅರ್ಧ ಕುರುಡಿ, ಸಿರಿಯನ್ ಎಡರಿಗ್+++(=ದಾರಿದ್ರ್ಯಕ್)+++ ಇಳಿದವಳ್,
ಶಿವನ ನಂಬಿ ಮುದುಕಿ ತನ್ನ ಮಗಳ ಮನೆಗೆ ದುಡಿಯುವಳ್-
ಆಕೆ,-ಅವನ ತಂಗಿ,-ಗಂಡನ್ ಒಡನೆ ಸುಖದಿ ಬಾಳ್ವರು;
ಲೋಕ-ಸೇತು ತಿಮ್ಮ ಗುರುವಿಗ್ ಅಲ್ಲೆ ಅಲ್ಲೆ ವಾಸವು.

ಬೇರೆ ಮನೆಯ ಚಿಂತೆಯ್ ಏಕೆ ಹೆಂಡರ್ ಇಲ್ಲದ್ ಅವನಿಗೆ?
ಆರು ಮರಿಯರ್ ಅವನು ಮದುವೆಯ್ ಆಗದಿದ್ದುದ್ ಏತಕೋ;
ಬಡವನ್ ಎಂದೊ; ಚೆಲುವನ್ ಅಲ್ಲವ್ ಎಂದೊ; ಹೆಣ್ಣ ಹೆತ್ತವರ್
ಕೊಡಲು ಬಾರದಿದ್ದರ್ ಏನೊ ! ಅವನೆ ಬೇಡವ್ ಎಂದನೋ!!

ಹೇಗೆ ಇರಲಿ - ವರ್ಷವ್ ಐದು ದಶಕಗಳನು ಕಳೆದವನ್,
ನೀಗುತಿದ್ದನ್ ಆಯುವನ್ನು ಸರಳ-ಮನದ ತೃಪ್ತಿಯಿನ್.
ತರಣಿಯ್+++(=ಸೂರ್ಯ)+++ ಉದಿಪ ಮುನ್ನ ಪಾಡಿ ನಾರಸಿಂಹ-ಶತಕಮಂ,
ಇರುಳು ಬರಲು ರಾಮ-ದಾಸ ಕೀರ್ತನೆಗಳ ಪಾಡುವಂ.

ಬಿಡುವು ಹೊತ್ತು ಗುಡಿಯಳ್ ಎಲ್ಲೊ ಕುಳಿತು ದೈವ-ಚಿಂತೆಯೊಳ್
ನಡೆಯುತಿದ್ದನ್ ಅವನು ಬಾಳ ಹೊರೆಯ ಹೊತ್ತು, ಹೊರದ-ವೊಲ್+++(=ಹಾಗೆ)+++
ಭಾನುವಾರ ಬೆಟ್ಟದೊಂದು ಮೊಡಕ+++(=ವಿವಿಕ್ತಸ್ಥಾನವ)+++ ಸೇರಿ ಕೂಡುವಂ;
ಮೌನದಿಂದ ಗಗನ ಧರೆಯನ್ ಅಪ್ಪುವ್ ಅತ್ತ ನೋಡುವಂ;

ದೇಗುಲದ್ ಒಳದ್ ಒಂದು ಮಬ್ಬು ಮಂಟಪವನು ಸೇರುವಂ;
ಹೋಗಿ ಬರುವ ಭಕುತ ಜನಕೆ ಮರುಕ+++(=ಕನಿಕರ)+++-ನೋಟ ತೋರುವಂ.
ಹಳೆಯ ಹಚ್ಚಡವನು+++(=ಕಮ್ಬಳಿ)+++ ತಲೆಯಿನ್ ಅಡಿಯವರೆಗೆ ಹೊದ್ದವಂ
ಹೊಳೆವ ಕಣ್ಣ ಕಾಣದರ್ಗೆ ಮೂಟೆಯೆಂದೆ ಕಾಣುವಂ.

ಗುರುತನ್ ಅರಿತರ್ ಆರುಮ್-ಆನುಮ್+++(=ಆದರ್)+++ ಏನನ್-ಆನುಮ್ ಒರೆ+++(=ತೆಗೆ)+++ದೊಡಂ
ಕಿರು-ನಗೆಯಿನೆ ಮಾರುವ್ ಏ+++(ಹೇ)+++ಳ್ವನ್, ಆಡನ್ ಅತಿಯ ನುಡಿಗಳಂ.
ಅವನ ತಂಗಿಗ್ ಒಬ್ಬ ಮಗನು; ಮುದ್ದಿನಿಂದ ಬೆಳೆದನು;
ಇವನೆ ತಿಮ್ಮ ಗುರುಗೆ ಜೀವವ್ ಇವನೆ ಲೋಕವ್ ಎಲ್ಲವು.

ಸೋಮಿಯ್ ಅವನು; ಮಾವನ್ ಇವನನ್ ಎತ್ತಿ, ನಡಸಿ, ಲಾಲಿಸಿ,
ಪ್ರೇಮದಂಗಿ ತೊಡಿಸಿ, ಪದ್ಯ ಕಲಿಸಿ, ಬರಹ ತಿದ್ದಿಸಿ,
ನೋಡಿ ಮುಂಜಿಯ್ ಆದುದನ್ನು, ಕೇಳಿ ವಿದ್ಯೆ-ಪೆಂಪನು+++(=ವೃದ್ಧಿಯನ್ನು)+++,
ಷೋಡಶಾಬ್ದದ್ ಉತ್ಸವವನು ಮಾಡಿ ಮಾವ ನಲಿದನು.

ಧನ್ಯಳ್ ಈಗ ತಾನ್ ಎನುತ್ತ ಸೋಮಿಯ್ ಅಜ್ಜಿ ಹಿಗ್ಗಿದಳ್;
ಇನ್ನು ಹತ್ತು-ವಾರ ಕಳೆಯಲ್ ಆಕೆ ಕಣ್ಣು ಮುಚ್ಚಿದಳ್.
ಬಳಿಕ ಮುಂದಿನ್ ಓದಿಗೆಂದು ಸೋಮಿಯು ಮೈಲಾರಕೆ
ತೆರಳ್ವುದ್ ಎಂದು ಸಿದ್ಧವಾಯಿತ್ ಅವನು ಮೂಟೆ ಕಟ್ಟಿದ. +++(5)+++

ಬಂದಿತ್ ಅವನ ಪಯಣದ ದಿನವ್ ಅವನ ಮೊಗದೊಳ್ ಉತ್ಸಹ;
ಅಂದು ತಿಮ್ಮ-ಗುರುವಿನ ದನಿಯಲ್ಲಿ ಕೊಂಚ ಗದ್ಗದ.
ಬೆರೆಯಿತ್ ಅಂದು ಮಾವನ್ ಒಳಗೆ ಸಂತಸದಲಿ ಚಿಂತೆಯು,
ಕೊರೆಯಿತ್ ಅವನ ಮನವ ಸೋದರ್-ಅಳಿಯನ್ ಅಗಲ್ವ+++(=[ಅನ್ತರವನ್ನು] ಅಗಲಿಸುವ)+++ ಬೆಸನವು.

ಐದುವಾರ ಕಳೆದು ತಿಮ್ಮ ಗುರುವಿಗ್ ಆಯ್ತು ವರ್ಗವು;
ಮೂಡಲೂರಿನಿಂದಲ್ ಅವನು ಮಂಡುಗೆರೆಯ ಸೇರ್ದನು.
ಕೆಲವು ತಿಂಗಳ್ ಆದ ಬಳಿಕ್ ಅದ್ ಒಂದು ಸಂಜೆ ಮಾವನು
ತಲುಪಿದ ಮೈಲಾರವನ್ ಆ ಪುರದ ಬೆಡಗ+++(=ಸೊಬಗು)+++ ಕಂಡನು.

ಅರಸಿಯ್ ಅರಸಿ ಸೋಮಿಯ ವಿದ್ಯಾರ್ಥಿ-ನೆಲೆಯ ಮುಟ್ಟಿದ;
ಬೆರಗು ಪಟ್ಟನ್ ಅದರ ಜರಬಿನ್+++(=ಗಾಂಭೀರ್ಯದ್)+++ ಅಂದಗಳನು ನೋಡುತ.
ಬಳಿಯ ಬಯಲಿನಲ್ಲಿ ಸೋಮಿ ಚಂಡನ್ ಆಡುತ್ತಿದ್ದನು,
ಗೆಳೆಯರ್ ಒಡನೆ ನಾಗರಿಕದ ಪೆರ್ಮೆ ತೋರುತ್ತಿದ್ದನು.

ಮಾತು, ನಗುವು, ನಡಿಗೆಯುಡಿಗೆ -ಎಲ್ಲ ಕೊಂಚ ಹೊಸಬಗೆ,
ರೀತಿ ದೊಡ್ಡದಾಯ್ತು ಮಾವ ತಂದ ಹಳ್ಳಿ ಕಣ್ಣಿಗೆ.
ಆಟಮುಗಿಸಿ ಬರಲಿ ಸೋಮಿಯ್ ಎಂದು ಮಾವ ಕುಳಿತನು;
ನೋಟವ ಕೈ-ಸಾಲೆಯಿಂದ+++(=ಅಂಗಣದಿನ್ದ)+++ ನೋಡಿ ಘಳಿಗೆ ಕಳೆದನು.

ಕತ್ತಲಾಗೆ ಸೋಮಿ ಗೆಳೆಯರ್ ಒಡನೆ ನೆಲೆಗೆ ಬಂದನು;
ಅತ್ತಲ್ ಇದ್ದ ಮಾವನನ್ ಅಚ್ಚರಿ-ನೋಟದೆ ಕಂಡನು.
“ಏನು ಮಾವ? ಎಂದು ಬಂದೆ? ಹೇಗೆ ಬಂದೆ?"-ಎನ್ನುತ
ಸೋಮಿ ಕೇಳುತಿದ್ದನ್ ಒಲಿದು ಕೆಲದಿ ಕೆಳೆಯರ್ ಇದ್ದರು.

ಮಾವ-“ಎಲ್ಲ ಚೆನ್ನ; ಸೋಮಿ, ನೀನು ಸುಖವೆ?"-ಎಂದನು.
ಆದರ್ ಏನು? ಸೋಮಿ ನಡತೆಯೊಳಗ್ ಅದೇನೊ ಹಿಡಿತವು;
ಭೇದವೇನೊ ಆಯಿತೆಂದು ಮಾವನಿಗಂ ಬಿಗಿತವು.
ಹರಕಲಂಗಿ, ಹುಲುಸು+++(=ಸ್ಫೀತ)+++-ಗಡ್ಡ, ಹಳ್ಳಿ-ರೀತಿ-ಮಾವನು;
ಪುರದ ವೇಷ, ಠೀವಿ+++(=ಗಾಂಭೀರ್ಯ)+++, ನೋಟ, ಆಂಗ್ಲ-ರೀತಿ-ಅಳಿಯನು. +++(ರ 5)+++

ಕೆಲವು ನಿಮಿಷವ್ ಇದ್ದಿತ್ ಇಂತು; ಕೆಳೆಯರೆಲ್ಲ ತೆರಳಲು,
ಕಲೆತರ್ ಆಗ ಮಾವ ಅಳಿಯ ಹಿಂದಿನಂತೆ ಹರಟಲು.
ಮಾವ ತನ್ನ ಮೂಟೆ ಬಿಚ್ಚಿ,-’ಕೋ’ ಎನುತ್ತ ತೆಗೆದನು,
ಆವು+++(=ಗೋ)+++-ತುಪ್ಪವ್ ಎರಡು ಕುಡಿಕೆ, ಅವಲ್-ಅಕ್ಕಿಯು ಬೆಲ್ಲವು,

ಅರಳುಹಿಟ್ಟು, ಕೋಡುಬಳೆಗಳ್- ಇಷ್ಟನವನು ಕೊಟ್ಟನು.
ಮುರಿದು ಸೋಮಿ ಕೋಡುಬಳೆಯನ್ ಒಡನೆ ಬಾಯಿಗ್ ಇಟ್ಟನು;
ಬೇಗಬೇಗ ಮೇಜಿನ್ ಒಳಗೆ ಮಿಕ್ಕುದೆಲ್ಲ ಸುರಿದನು;
ಜಾಗಟೆ ಸದ್ದಾಗೆ ಸಂಜೆಯೂಟಕೆಂದು ಹೊರಟನು.

ಮಾವನು “ನಾನ್ ಊಟ ಮಾಡೆ; ಏಕಾದಶಿ” ಎನ್ನಲು,
ಸೋಮಿ ಪೇಟೆಯಿಂದ ಕದಲಿ ದ್ರಾಕ್ಷಿ ತಂದು ಕೊಟ್ಟನು.
ಮಾವ ಸಂಜೆ ಸಂಧ್ಯೆ ಮಾಡಿ ಫಲವನ್ ಉಂಡು ಕುಳಿತನು;
ಸೋಮಿಯ್ ಊಟ ಮುಗಿಸಿ ಬಂದು ಮಾವನ ಬಳಿ ಕುಳಿತನು.+++(5)+++

ಮಾತು-ಕತೆಗಳ್ ಆಗ ಸಾವಕಾಶದಿಂದ ಪರಿದುವು+++(=ಹರಿದವು)+++,
ಪ್ರೀತಿ-ಮಾತು, ಮನೆಯ ಮಾತು, ಊರ ಮಾತು- ಎಲ್ಲವು.
ಏನು ಮಾತು! ಏನು ಹರಟೆ! ಏನು ಅಂತರಂಗಗಳ್!
ಏನದೇನೊ ಸವಿಯ ನೆನಪು! ಏನೊ ನಗು-ತರಂಗಗಳ್!

ತಿಳಿದನಾಗ ಮಾವ ತನ್ನ ಸೋಮಿಯೆ ಇವನ್ ಎನ್ನುತ,-
ಎಳೆಯನ್ ಆಗಿ ತನ್ನ ತೊಡೆಯಳ್ ಆಡಿದವನೆ ಎನ್ನುತ.
ಕಳೆಯಲು ಮುಕ್-ಕಾಲು ರಾತ್ರಿಯ್ ಆಗ ಮಾವನ್ ಎದ್ದನು;
ತಲೆಗೆ ತನ್ನ ಮೂಟೆಯನ್ನು ಮರಳಿ ಹೊರಿಸಿ ನಿಂತನು.

“ಏನು ಮಾವ ಇಷ್ಟು ಬೇಗ?” ಎನುತ ಸೋಮಿಯ್ ಎದ್ದನು;
-“ಏನ್ ಇದ್ ಏನು ಹೊರಟೆ?” ಇನ್ನುಮ್ ಎಷ್ಟೊ ಹೇಳಲ್ ಇರುವುದು.
ಇಂದು ನಿಲ್ಲು, ಮಾವ; ಊಟಗೈವ ನಾವು ಜೊತೆಯಲಿ”-
ಎಂದು ಸೋಮಿ ಹಂಬಲಿಸುತ ಮಾವನನ್ನು ಬೇಡಿದ.

“ಕೇಳು ಸೋಮಿ”-ಎಂದ ಮಾವ-“ವೇಳೆ ಪಯಣಕ್ ಇದು ಸರಿ;
ನಾಳೆಯ್ ಎನಗೆ ಶಾಲೆಯ್ ಇರುವುದ್ ಅದನು ತಪ್ಪಲಾಗದು.
ಮೊನ್ನೆ ರಾತ್ರಿ ಕನಸಿನಲ್ಲಿ ನಿನ್ನ ಕಂಡೆನ್ ಏತಕೋ!
ಕಣ್ಣು-ತುಂಬ ಕಾಣುವ್ ಆಶೆ ತಡೆಯಲಾರದ್ ಆಯಿತು.

ನಿನ್ನೆ ರಜವ ಪಡೆದು ನಡೆದು ಬಂದೆನ್ ಇಂದು ರವಿದಿನ;
ತಣ್ಣನೆ ಹೊತ್ತ್ - ಈಗ ಹೊರಡೆ ದಾರಿ ಬೇಗ ಸವೆವುದು+++(=ಕಳಿಯುವುದು)+++.
ಕೀರು+++(=ಸಶಬ್ದ)+++-ಹೊಳೆಯ ದಡದೊಳ್ ಇರುವೆ ಹತ್ತು-ಗಂಟೆ-ಸಮಯಕೆ;
ಪಾರಣೆಯನು ಸತ್ರದಲ್ಲಿ ಮುಗಿಸಿ ದಣಿವನ್+++(=ಆಯಾಸ)+++ ಆರಿಸಿ,

ಮರಳಿ ಮೂರು ಘಂಟೆ ನಡೆದು, ಸಂಜೆಗ್ ಊರ ಸೇರುವೆ;
ಇರುವೆ ನಾಳೆ ಮಂಡುಗೆರೆಯೊಳ್ ಉದಯ ಶಾಲೆವೇಳೆಗೆ.”
-ಇಂತು ಹೇಳು-ತಡಿಯನ್ ಇಡುತ ಹೊರಟ ತಿಮ್ಮ ಮಾವನು;
ಚಿಂತೆಪಡುತ ಅಳಿಯ ಕೊಂಚ ದೂರ ಕೂಡ ನಡೆದನು.

ಬೆಳಕು ಹರಿಯೆ ವೆಸನದಿಂದ ಸೋಮಿ ನೆಲೆಗೆ ತಿರುಗಿದ;
ತಳಮಳವನು ನುಂಗಿ ಮಾವ ನಡೆದನ್ ಎರಡು ಗಾವುದ+++(=೧೦ ಕಿ.ಮಿ.)+++.
ಒಂದು ತಿಂಗಳಾದ ಬಳಿಕ್ ಅದ್ ಒಂದು ದಿವಸ ಸೋಮಿಯ
ತಂದೆಗ್ ಒಂದು ಪತ್ರ ಬಂತು, ತಿಮ್ಮ-ಗುರುವಿನ್ ಆಶಯ.

ಅದರೊಳ್ ಆತನ್ ಇಂತು ಬರೆದನ್ ಎರಗಿ+++(=ನಮಿಸಿ)+++ ಭಾವನ್ ಅಡಿಯೊಳು -
“ಇದುವೆ ನನ್ನ ಕಡೆಯ ಬರಹ; ತಿರುಪತಿಗಾಂ ಬಂದಿಹೆಂ;
ಎನಗೆ ಕೆಲಸ ಸಾಕೆನುತ್ತ ಮೇಲಕೆ ನಾಂ ಬರೆದಿಹೆಂ;
ಋಣದ ರೊಕ್ಕ+++(=ಧನ)+++-ಲೆಕ್ಕವೆಲ್ಲ ಶೇಷ ಬಿಡದೆ ಸಲಿಸಿಹೆಂ;

ಮುಂದೆ ಹೀಗೆ ಯಾತ್ರೆ ಕಾಶಿಗ್ ಎಂದು ಮನವ ಮಾಡಿಹೆಂ.
ದುಂದುಗವ್+++(=ಸಂಕಟವ್)+++ ಏನ್ ಎನ್ನೊಳಿಲ್ಲ; ವೆಸನಕಿಲ್ಲ ಕಾರಣಂ.
ಸೋಮಿ ಹರೆಯವಾ+++(=ವಯಸ್ಸಿನವಾ)+++ಽಂತ ಬಳಿಕ ಹಗುರವಾಯಿತ್ ಎನ್ನ್ ಎದೆ.
ಸ್ವಾಮಿ-ಕೃಪೆಯಿನ್ ಅವನು ಬೆಳೆದು ಸೊಗವ+++(=ಸುಖವ)+++ ಯಶವ ಗಳಿಸುಗೆ.

ಏನೊ ಮಮತೆ, ಏನೊ ಮೋಹ, ಏನೊ ಋಣದ ಬಂಧನ
ಎನ್ನನ್ ಇಷ್ಟು ದಿನವು ಕಟ್ಟಿ ನಿಲಿಸಿತ್ ಅವನ ಕಾರಣ.
ಈಗಳ್ ಅವನು ತನ್ನ ಶಕ್ತಿಯಿಂದ ಬೆಳೆಯೆ ತಕ್ಕನು;
ಈಗಳ್ ಎನಗಮ್ ಅಂತರಾತ್ಮ ಸೇವೆಯೊಂದೆ ತಕ್ಕುದು.

ಇಂತಹ ದಿನ ಬರಲ್ ಎನುತ್ತ ಬೇಡಿ ಕಾಯುತ್ ಇದ್ದೆನು;
ಸಂತಸವನು ಸೋಮಿಯ್ ಏಳ್ಗೆಯಿಂದಲ್ ಈಗ ಕಂಡೆನು.
ಇನ್ನ್ ಅದ್ ಏನುಮ್ ಇಲ್ಲಮ್ ಎನಗೆ ಮನಸು ಬೇಳ್ಪ ಭಾಗ್ಯವು;
ಇನ್ನು ಬೇರೆ ತೋರದ್ ಈಗ ಲೋಕದಿ ಕರ್ತವ್ಯವು.

ಒದಗಿತ್ ಈಗಳ್ ಆಯುವ ಶಿವ-ಸೇವೆಗ್ ಈವ ಸಮಯವು;
ಇದುವೆ ಸಮಯ ಪುಣ್ಯ-ಯಾತ್ರೆಗ್ ಇನ್ನು ತಡವು ಸಲ್ಲದು.
ನಾನು ಮಂಡುಗೆರೆಯೊಳ್ ಇದ್ದ ಮನೆಯೊಳ್ ಒಂದು ಗೂಡಿನೊಳ್
ಏನೊ ಬರೆದ ಕಡತವ್+++(=ಸಂಚಿಕೆಯ್)+++ ಒಂದನ್ ಇರಿಸಿರುವೆನು ಗಂಟಿನೊಳ್;

ಸೋಮಿಯ್ ಅದನು ನೋಡಿ ತೆಗೆದು-ಕೊಳುವೊಡ್+++(=ಕೊಳ್ಳುವ)+++-ಅಂತು ಮಾಡಲಿ;
ನೀಮದ್ ಆರುಮ್ ಎನ್ನ ತುಂಬ ನೆನೆಯದ್ ಇರಿರಿ- ಮರೆಯಿರಿ.
ಪ್ರೇಮವ್ ಉಕ್ಕಿ ಬೆಸನ ಕುದಿದೊಡ್ ಆಗ ದೀಪವ್ ಒಂದನು
ಸೋಮ-ಶಿವನ ಗುಡಿಯೊಳ್ ಇರಿಸಿ ’ದೇವಗೆ ನಮೊ’ಯ್ ಎನ್ನಿರಿ.

ದೇವ-ದೇವನ್ ಒಲಿದು ನಿಮ್ಮನ್ ಎಲ್ಲ ಹರಸಿ ಸಲಹುವಂ+++(=ಸಾಕುವಂ)+++.
ಜೀವ-ಪಥವ ಸುಗಮವ್ ಎನಿಸಿ ನಿಮ್ಮನೆಲ್ಲ ನಡಸುವಂ”

ಆಯಿತ್ ಇನಿತು ವ್ಯಾಕುಲವ್ ಈಯ್ ಓಲೆಯಿಂದ ಸೋಮಿಯ
ತಾಯಿ-ತಂದೆಯರಿಗೆ; ಅವನ ಕಣ್ಣೊಳ್ ಅಶ್ರುವ್ ಉಕ್ಕಿತು.
ಮಂಡುಗೆರೆಗೆ ಸೋಮಿ ಹೋಗಿ ನೋಡಿದನ್ ಆ ಕಡತವ;
ಕಂಡನ್ ಅದೊರಳ್ ಇನಿತು ಬಾಳ್ಗೆ ಸಲುವ ತತ್ತ್ವ ಮಥಿತವ.
ಸಖರ ತೃಪ್ತಿಗ್ ಎಂದು ಸೋಮಿಯ್ ಆಯ್ದು ಹಲವು ಬಂತಿಯ+++(=ಪಂಕ್ತಿಯ)+++
ಲಿಖಿಸಿದ ಪಡಿ+++(=ಪ್ರತಿ)+++-ಹೊತ್ತಗೆಯ್+++(=ಪುಸ್ತಕ)+++ ಇದು ಮಂಕುತಿಮ್ಮ-ಕಂತೆಯ.