ಕನ್ನಡದಲ್ಲಿ ಭಾಷಾನುರಾಗದ ಪರಿಚಯ

ನಿಮ್ಮ ಕನ್ನಡವೇ ಸ್ವಲ್ಪ ಬೇರೆ ಇದೆ. ಕರ್ನಾಟಕದಲ್ಲಿ ನೀವು ಯಾವ ಜಿಲ್ಲೆಯವರು?

ಬೆಙ್ಗಳೂರುನಗರೋದ್ಭವನು ನಾನು. ಹೆಬ್ಬಾರ್-ಶ್ರೀವೈಷ್ಣವರ ಕನ್ನಡ-ತಮಿಳು-ಸಂಸ್ಕೃತ-ಮಿಶ್ರಿತವಾದ ವಿಶಿಷ್ಟಭಾಷೆ ನಮ್ಮ ಮನೆಭಾಷೆಯ್ ಆಗಿತ್ತು - ಸಂಕೇತಿಯರು, ಅಷ್ಟಗ್ರಾಮಯ್ಯರರು ಮುನ್ತಾದ ಹಲವಾರು ದಕ್ಷಿಣ-ಕರ್ಣಾಟಕದ ಸಮುದಾಯದವರು ಈ ಭಾಷಾಜಾತಿಯನ್ನು ಬಳೆಸುತ್ತಾರೆ. ಗೊರೂರು ರಾಮಸ್ವಾಮಿ ಅಯ್ಯಙ್ಗಾರರು, ಮಾಸ್ತಿ ವಿಙ್ಕಟೇಶ ಅಯ್ಯಙ್ಗಾರರು ಮುನ್ತಾತದ ಕನ್ನಡಸಾಹಿತಿಗಳ ಮಾತೃಭಾಷೆ.

ಇತ್ತೀಚೆಗೆ ಶತಾವಧಾನಿ-ಗಣೇಶರನ್ನು ಕಣ್ಡು ಹಳೆಗನ್ನಡದಲ್ಲಿ ಸ್ವಲ್ಪ ಆಸಕ್ತಿ (ಜ್ಞಾನವೊನ್ತೂ ಶೂನ್ಯವೇ.)

ಸಂಸ್ಕೃತ ಅಭ್ಯಾಸ ಶಾಲೆಯಿಂದಲೂ ಇದೆಯೋ ಅಥವಾ ಇದು ನಿಮ್ಮ ಹವ್ಯಾಸವೋ?

ಸಂಸ್ಕೃತವು ಎನ್ನ ಹವ್ಯಾಸವಲ್ಲ, ಜೀವನದ ಕೇನ್ದ್ರವೇ ಎನ್ನಬಹುದು. ಈ ಸಮ್ಬನ್ಧದ ಹಲವು ಹನ್ತಗಳು -

  • ಶಾಲೆಯಲ್ಲಿ ಓದಿ ಮರೆತ ಆ ಭಾಷೆಯನ್ನು ಮತ್ತೆ ಬಹಳ ವರ್ಷಗಳ ಮೇಲೆ ಸಂಸ್ಕೃತಭಾರತೀ ಎಂಬ ಸಂಸ್ಥೆಯ ಸ್ವಯಂಸೇವಕರ ಸಂಪರ್ಕದಿನ್ದ ನನ್ನ ಚಿತ್ತದಲ್ಲಿ ವಿಕಸಿಸಿದೆ.
  • ನನ್ತರ, ಆ ಭಾಷೆಯಲ್ಲಿ ಛನ್ದೋಬದ್ಧ-ಕವಿತೆಗಳನ್ನು ಬರೆಯುವುದಲ್ಲದೆ, ಪ್ರತಿಸಪ್ತಾಹವೂ ಆ ಭಾಷೆಯ ವ್ಯಾಕರಣವನ್ನೂ ವಾಙ್ಮಯವನ್ನೂ ಭಿನ್ನವರ್ಗಗಳಲ್ಲಿ ಕಲಿತು, ಅದರ ಪರಿಚಯವನ್ನು ಬೇರೆಯವರಲ್ಲಿ ಹಂಚುವ ವೃತ್ತಿಯು ಎನ್ನದಾಯಿತು.

ಹಲವಾರು-ಜನರ ಸಂಸ್ಕೃತದಬಗ್ಗೆ ಇರುವ “ಕಠಿನಭಾಷೆ, ಮಾತಾಡಲಾರದ ಭಾಷೆ, ಉಪಯೋಗಕ್ಕೆ ಇಲ್ಲದ ಭಾಷೆ, ಬ್ರಾಹ್ಮಣರ ಭಾಷೆ” ಇತ್ಯಾದಿ ತಪ್ಪು-ಕಲ್ಪನೆಗಳು ಯಾವಾಗ ದೂರವಾಗುವವೋ ಎನ್ದು ಕಾತರದಿನ್ದ ಕಾಯ್ವ ಹೃದಯವು ಎನ್ನದು.

ಶುದ್ಧ-ಭಾರತೀಯ-ಭಾಷೆಯನ್ನು ನುಡಿಯುವುದರಲ್ಲಿ ಆಸಕ್ತಿ.

ಭಾರತೀಯರೊಡನೆ ಭಾರತೀಯಭಾಷೆಗಳನ್ನೇ ನುಡಿಯಬೇಕೆಂಬ ವ್ರತವನ್ನಾಚರಿಸುವೆ. ಹಾಗಾಗಿ, ಸಂಸ್ಕೃತ ಬಲ್ಲವರೊಡನೆ ಸಂಸ್ಕೃತ, ಕನ್ನಡ ಬಲ್ಲವರೊಡನೆ ಕನ್ನಡ, ಬೇರೆ ರಾಜ್ಯದವರೊಡನೆ ಹಿನ್ದೀ ಮಾತಾಡುತ್ತೇನೆ. ಭಾಷೆ ಯಾವುದೇ ಆಗಲಿ, ಅದರಲ್ಲಿ ಆಙ್ಗ್ಲ-ಉರ್ದು-ಶಬ್ದಗಳಿಲ್ಲದಿರುವನ್ತೆ ಶುದ್ಧವಾಗಿ ನುಡಿಯುವ ವ್ರತ.