ಅಂದು ಭಾರತಯುದ್ಧದ ಮೊದಲ ದಿನ.
ಪಾಂಡವರ ಶಿಬಿರದಲ್ಲಿ ಯುಧಿಷ್ಠಿರ ಭೀಮಾದಿಗಳು ಮಂಗಳ ಸಾನಾದಿಗಳನ್ನು ಮುಗಿಸಿ,
ಕವಚ ಕಿರೀಟಗಳನ್ನು ಧರಿಸಿದ್ದಾರೆ.
ಭೀಮ ಗದೆಯನ್ನು ಲೀಲಾಜಾಲವಾಗಿ ತೂಗಾಡಿಸುತ್ತ ತಾಲೀಮು ನಡೆಸಿದ್ದಾನೆ.
ಅರ್ಜುನನು ಗಾಂಡೀವಕ್ಕೆ ವಂದಿಸುತ್ತಿದ್ದಾನೆ.
ನಕುಲ ಸಹದೇವರು ಶಸಾಸಗಳನ್ನು ರಥಗಳಲ್ಲಿ ಅಣಿಗೊಳಿಸುವ ಕೆಲಸದಲ್ಲಿ ನಿರತರಾಗಿದ್ದಾರೆ.
ಚೆದುರಿದ ಕೇಶರಾಶಿಯನ್ನು ಹಿಂಸರಿಸುತ್ತ ಪಾಂಚಾಲಿ ಪತಿಗಳಲ್ಲಿ ಒಬ್ಬೊಬ್ಬರ ಬಳಿಗೂ ಹುರಿದುಂಬಿಸುತ್ತಿದ್ದಾಳೆ.
ಎಲ್ಲೆಲ್ಲೂ ಶಸ್ತ್ರಸಜ್ಜಿತರ ಉತ್ಸಾಹ,
ಸಡಗರ ಸಂಭ್ರಮಗಳಿಂದ ಓಡಾಡುತ್ತಿದ್ದಾರೆ.
ಕೆಲವರನ್ನು ಅವರವರ ಹೆಂಡತಿ ಮಕ್ಕಳು, ತಾಯಿ ತಂದೆ ಬಂಧು ಬಾಂಧವರು ಬೀಳ್ಕೊಡುತ್ತಿದ್ದಾರೆ.
ಅಲ್ಲಿ ಅಂದಿನ ಮೊದಲ ಯುದ್ಧದ ಕಾವು ಹೇಗಿರಬಹುದು ಎಂದು ಕಾತರ ಉತ್ಸಾಹಗಳಿಂದ ಚರ್ಚಿಸುತ್ತಿದ್ದಾರೆ.
ಕುದುರೆಗಳು ಕೆನೆಯುತ್ತಿವೆ. ಆನೆಗಳು ಘೀಳಿಡುತ್ತಿವೆ.
ಭಟರು ಕತ್ತಿಗಳನ್ನು ಝಳಪಿಸುತ್ತ, ತಮ್ಮ ತಮ್ಮ ಬಿಲ್ಲುಗಳಿಗೆ ಹೆದೆಯೇರಿಸುತ್ತ+++(=ಜ್ಯಾ)+++ ಕವಾಯತು+++(=ವ್ಯಾಯಾಮ)+++ ನಡೆಸಿದ್ದಾರೆ.
ಎಲ್ಲೆಲ್ಲೂ ಯುದ್ದದ ಸಡಗರ ಸಂಭ್ರಮ ಕೋಲಾಹಲಗಳಿಂದ ತುಂಬಿದೆ.
ಕೃಷ್ಣ ಎಂದಿನ ತನ್ನ ಶಾಂತ ಸ್ನಿಗ್ಧ ಮುಖಮುದ್ರೆಯಲ್ಲಿ, ಶಿಬಿರದ ಉನ್ನತಾಸನವೊಂದರ ಮೇಲೆ ಕುಳಿತಿದ್ದಾನೆ.
ಕಡೆಗಣ್ಣೋಟದಿಂದ ಶಿಬಿರದ ಸುತ್ತ ನೋಡುತ್ತಿದ್ದಾನೆ. ಆದರೂ…
ಮೇಲ್ನೋಟಕ್ಕೆ ಶಾಂತವಾಗಿ ಕಾಣುತ್ತಿದ್ದರೂ, ಕೃಷ್ಣನ ಮನಸ್ಸಿನೊಳಗೇನೋ ತುಮುಲ, ಏನೋ ಸಂಕಟ ಮನ ಮಾಡಿದೆ, ಬೇಕೆಂದೇ ಆ ಸಂಕಟವನ್ನು ಶಮನಮಾಡಿಕೊಳ್ಳಲು ಅವನು ಸುತ್ತಲೂ ದೃಷ್ಟಿ ಬೀರುತಿದ್ದಾನೆ.
ಇಲ್ಲ. ಅವನಿಗೆ ಸಾಧ್ಯವಾಗುತ್ತಿಲ್ಲ. ಅವನ ಅಂತರಾಳದಲ್ಲಿ ಏನೋ ಕೋಲಾಹಲ ನಡೆಯುತ್ತಿದೆ.
ನೋವಿನಿಂದ ಹಿಂಡಿದಂತಾಗುತ್ತಿದೆ.
ಅದೆಂತಹುದೋ ಮೊರತ. ಅವನಿಗೇ ಅಚ್ಚರಿ. ಅಂತಹ ವೇದನೆಯನ್ನು ತಾನೆಂದೂ ಅನುಭವಿಸಿದಂತಿಲ್ಲ!
ಈಗ ಅವನಿಗೆ ತನ್ನ ಆಂತರ್ಯವನ್ನು ತಿಳಿಯಬೇಕೆನಿಸುತ್ತಿದೆ….
ಕೃಷ್ಣ ಮತ್ತೊಮ್ಮೆ ಸುತ್ತಲೂ ದೃಷ್ಟಿ ಬೀರಿದ. ಶುಭ್ರ ನಿರಭ್ರ ಆಕಾಶದಲ್ಲಿ ತಾರೆಗಳು ಮಿನುಗುತ್ತಿದ್ದವು.
ಸೂರ್ಯನುದಿಸಲು ಇನ್ನೂ ಸ್ವಲ್ಪ ಸಮಯ ಇತ್ತು.
ಬ್ರಾಹ್ಮೀಮುಹೂರ್ತದಲ್ಲೇ ಎಲ್ಲರೂ ಎದ್ದು ಸಮರ ಸಿದ್ಧರಾಗುತ್ತಿದ್ದರು.
ಅವನು ಹಾಗೆಯೇ ಹಿಂದಕ್ಕೊರಗಿದ.
ಕಮಲ ಪತ್ರದಂತಹ ತನ್ನ ವಿಶಾಲನೇತ್ರಗಳನ್ನು ಒಮ್ಮೆ ಅಗಲವಾಗಿ ತೆರೆದು ಮುಚ್ಚಿದ.
ಒಮ್ಮೆ ದೀರ್ಘಶ್ವಾಸವನ್ನೆಳೆದುಕೊಂಡು ಶ್ವಾಸ ಬಂಧಿಸಿದ.
ಸ್ವಲ್ಪ ಸ್ವಲ್ಪವೇ ಆಳಕ್ಕಿಳಿದ…
ಅಲ್ಲಿ ಅವನು ಕಂಡ ದೃಶ್ಯವೇನು!? ಅವನ ಹೃದಯವನ್ನು ಎಳೆದೆಳೆದು ಹಿಂಜಿದ ಆ ದೃಶ್ಯ!
ಓಹ್! ಅವನ ಹೃದಯೇಶ್ವರಿ-ಪ್ರೇಮಮಯಿ ರಾಧೆ ಕೊನೆಯುಸಿರೆಳೆಯುತ್ತಿದ್ದಾಳೆ.
ಅವನಾತ್ಮ ಚೀರಿತು.
ಇಷ್ಟು ದುಃಸ್ಥಿತಿಗಿಳಿದೆಯಾ ರಾಧೆ- ಎಷ್ಟು ನೊಂದೆಯೋ ದೇವಿ-ಕರ್ತವ್ಯಬದ್ದನಾಗಿ ನಾನು ಈ ಕಡೆ ಗಮನ ಕೂಡಲಾಗಲೇ ಇಲ, ಹುಂ ನಿನ್ನ ಬದುಕು ಇಲ್ಲಿಗೆ ಸಾಕು. ಸಾರ್ಥಕಜೀವಿ ನೀನು ರಾಧೆ, ಬಾ ನನ್ನ ಹೃದಯದಲ್ಲೆಂದೆಂದೂ ಲೀನವಾಗಿಬಿಡು.
ಪರಮ ಆತ್ಮದಲ್ಲಿ ಒಂದಾಗು ಬಾ… ಎಂದು ಚೀರಿತು ಅವನ ಒಳದನಿ.
ಕೃಷ್ಣನ ದೇಹದಲ್ಲಿ ಉಸಿರಾಟ ಸ್ತಬ್ಧವಾಯಿತು. ರಕ್ತಚಲನೆ ಸ್ಥಗಿತಗೊಂಡಿತು.
ಮೊದಲೇ ನೀಲಿಮೈ ಕಡು ನೀಲಿಗೆ ತಿರುಗಿತು. ದೇಹದಿಂದ ಆತ್ಮ ಬೇರ್ಪಟ್ಟು ಬಹಳ ದೂರ ಬೃಂದಾವನದತ್ತ ರೆಪ್ಪೆ ಮಿಟುಕುವಷ್ಟರಲ್ಲಿ ಹಾರಿಬಂದಿತು.
ರಾಧೆ ಒರಟು ಚಾಪೆಯ ಮೇಲೆ ಕೃಷ್ಣನ ಧ್ಯಾನದಲ್ಲಿ - ಮಗ್ನಳಾಗಿ ಕಡೆಯುಸಿರೆಳೆಯಲು ಚಣಗಳನ್ನೆಣಿಸುತ್ತಿದ್ದಳು.
ಅವಳ ಹೃದಯ ‘ಮಾಧವಾ, ಕೃಷ್ಣಾ ಬಾ, ನನ್ನನ್ನ ಸಂತೈಸು ಬಾ’ ಎಂದು ಮೊರೆಯಿಡುತ್ತಿತ್ತು.
ತಂದೆ-ತಾಯಿ ಗಂಡ ಬಂಧು-ಬಳಗ ಎಲ್ಲರನ್ನೂ ಕಳೆದುಕೊಂಡು ಏಕಾಂಗಿಯಾಗಿದ್ದಳು ರಾಧೆ.
ಬಾಳೆಲ್ಲವನ್ನೂ ಕೃಷ್ಣನ ನೆನಪಿನಲ್ಲಿ ಕಳೆದಿದಳು.
ಊಟ, ತಿಂಡಿ, ನಿದ್ರೆಗಳನ್ನು ಮರೆತು ಕೃಷ್ಣನ ಧ್ಯಾನ, ಭಜನೆ, ಕೀರ್ತನೆಗಳಲ್ಲಿ ಲೀನವಾಗಿರುತ್ತಿದಳು.
ಇವೇ ಅವಳ ಬಾಳಿಗೆ ಊರುಗೋಲು, ಆಧಾರ, ಆನಂದ.
ಸುಂದರಿ ರಾಧೆ ಈಗ ಹರೆಯದ ಸೌಂದರ್ಯವನ್ನೆಲ್ಲ ಕಳೆದುಕೊಂಡು ಕೃಶಾಂಗಿಯಾಗಿದ್ದಳು.
ಆದರೂ ಅವಳ ಮುಖದಲ್ಲಿ ಅಪೂರ್ವಕಾಂತಿ, ಕಣ್ಣಿನಲ್ಲಿ ಉಜ್ಜಲತೇಜಸ್ಸು.
ದೇಹ ಜರ್ಜರಿತವಾಗಿದ್ದರೂ, ಅವಳ ತುಟಿಯಂಚಿನಲ್ಲಿ ಕೃಷ್ಣನಿಗಾಗಿಯೇ ಮೀಸಲಾಗಿದ್ದ ಮಂದಹಾಸ ಮಿನುಗುತ್ತಿತು.
ರಾಧೆ ಉನ್ಮತ್ತಳಾಗಿ ‘ಕೃಷ್ಣಾ ಕೃಷ್ಣಾ’ ಎಂದು ಚೀರಿದಳು.
‘ಹಾ ಇದೇನಿದು!?’ ಯಾವ ಮಾಯೆ ತನ್ನ ದನಿಗೆ ಓಗೊಡುತ್ತ ‘ಬಂದೆ, ಬಂದೆ’ ಎನ್ನುತ್ತಿದೆ!?
ಆ ದನಿ ಎಲ್ಲಿಂದ? ಎಲ್ಲಿ? ತನ್ನ ಅಂತರಾಳದಲ್ಲಿಯೇ..
‘ಎನ್ನ ದೇವ ಗೋವಿಂದ ಕಡೆಗೂ ಬಂದನೆ? ಕೃಷ್ಣಾ".
ಅವಳ ಹೃದಯ ಆನಂದದಿಂದ ಅರಳಿತು.
‘ಓ’ ಎಂದಿತು ಮರುದನಿ-ಒಳದನಿ!
‘ರಾಧೆ…’ ಕೃಷ್ಣ, ಮೃತ್ಯುಶಯ್ಯೆಯಲ್ಲಿದ್ದ ರಾಧೆಯ ಕಿವಿಯಲ್ಲುಸುರಿದ ಮೆಲ್ಲನೆ, ಬಹು ಮೃದುವಾಗಿ.
‘ಆಂ… ಆಂ..’ ರಾಧೆ ನಿಧಾನವಾಗಿ ಕಣ್ಣು ತೆರೆದು ನೋಡಿದಳು.
ಓಹ್! ನೀಲಮೇಘಶ್ಯಾಮ! ಅವಳ ಮುಖದ ಸಮೀಪಕ್ಕೆ ತನ್ನ ಮುಖವನ್ನು ತಂದು ಅವಳ ಕಣ್ಣುಗಳಲ್ಲಿ ದೃಷ್ಟಿ ನೆಟ್ಟಿದ್ದ.
ಅವನ ಮುಖ ಎಂದಿನಂತೆ ಶಾಂತ-ಸ್ನಿಗ್ಧ-ಮಂದಸ್ಮಿತ.
ರಾಧೆಗೆ ನಂಬಲೇ ಆಗಲಿಲ್ಲ.
ತನ್ನ ಆರಾಧ್ಯದೈವ ಕೃಷ್ಣ ನಿಜವಾಗಿಯೂ ತನ್ನ ಬಳಿಸಾರಿ ಬಂದಿದ್ದಾನೆಯೇ?
ಅಥವಾ ಇದೆಲ್ಲ ಭ್ರಮೆಯೋ…
ಕಣ್ಣನ್ನು ಮತ್ತೂ ಅರಳಿಸಿದಳು. ಒಂದೇ ಕ್ಷಣ.
ಮರುಕ್ಷಣ ಅವಳ ನಿರ್ಬಲವಾದ ಬಾಹುಗಳು ಅದೆಂತು ಶಕ್ತಿ ಪಡೆದವೋ, ಕೃಷ್ಣನ ಕುತ್ತಿಗೆಗೆ ಜೋತುಬಿದ್ದವು.
ಆರುವಾಗ ದೀಪ ಉಜ್ಜ್ವಲಕಾಂತಿ ಬೀರುವಂತೆ ರಾಧೆಯ ಕಣ್ಣ ಜ್ಯೋತಿ ದೀಪ್ತವಾಯಿತು.
ಓಹ್! ಆತ್ಮಾತ್ಮಗಳ ಮಿಲನ ವರ್ಣಿಸಲಸದಳ+++(=ಅಸಾಧ್ಯ)+++.
ಮಾತಿಗೆ ಮೀರಿದ ಭಾವದಿಂದ ಅವಳ ಹೃದಯ ತುಂಬಿತ್ತು.
ರಾಧೆಯ ಕಣ್ಣುಗಳಲ್ಲಿ ಆನಂದದ ಸಾರ್ಥಕತೆಯ ಕಣ್ಣೀರ ಧಾರೆ.
ಕೃಷ್ಣ ತನ್ನ ಉತ್ತರೀಯದಿಂದ ಅವಳ ಕಂಬನಿಗಳನ್ನು ತೊಡೆಯುತ್ತಿದ್ದ.
ಅವನ ಕಣ್ಣ ಪ್ರೇಮಾನಂದ-ರಸಧಾರೆ ಅವಳ ಎದೆಯ ಮೇಲೆ ಬಿದ್ದು ಅವಳ ಹೃದಯದ ತಾಪವನ್ನಾರಿಸಿ ತಂಪನ್ನೆರೆಯಿತು.
‘ರಾಧೆ..’ ಕೃಷ್ಣನ ವಾತ್ಸಲ್ಯದ ಇನಿದನಿ.
‘ಕೃಷ್ಣಾ… ಕೃಷ್ಣಾ..’ ಕ್ಷೀಣವಾದರೂ ದೃಢವಾದ ಸ್ವರದಿಂದುಸುರಿದಳು ರಾಧೆ, ಅವನಿಂದ ಕಣ್ಣನ್ನು ಕೀಳದೆ.
‘ನಿನ್ನದು ತುಂಬು ಬದುಕು, ಸಾರ್ಥಕಜೀವನ. ನೀನು ಪ್ರೇಮ-ಪ್ರತಿಮೆ, ನನ್ನ ಆತ್ಮಾನಂದ..’
‘ಎಷ್ಟು ದೊಡ್ಡ ಮಾತನಾಡಿದೆ.. ಕೃಷ್ಣಾ…’
‘ಹೌದು ರಾಧೆ, ನೀನು ಅವತಾರ ಸ್ತ್ರೀ..
ಜಗತ್ತಿನ ಆಧಾರಪ್ರೇಮದ ಸಾಕಾರರೂಪಿ ನೀನು, ನಾನಾರು ಗೊತ್ತೆ?
ಈ ಸೃಷ್ಟಿ-ಸ್ಥಿತಿ-ಲಯಗಳಿಗೆ ಕಾರಣನಾದ ಸಾಕ್ಷಾತ್ ಭಗವಾನ್ ವಿಷ್ಣು. ನೀನು ನನ್ನ ಚಿರ ಆನಂದ ಅಂದರೆ ನನ್ನ ಯೋಗಮಾಯೆ. ಈ ರಾಧಾಕೃಷ್ಣರ ಪ್ರೇಮ ವೆಶ್ವವಿರುವವರೆಗೆ ಅಮರವಾಗಿ ಆದರ್ಶವಾಗಿ ಉಳಿಯುತ್ತದೆ.
‘ಹಾಂ… ಹೂಂ…’
‘ರಾಧೆ, ನಿನ್ನ ಅವತಾರ ಸಮಾಪ್ತಿಯಾಯಿತು.
ನಿನ್ನ ಈ ಋಣ ತೀರಿತು.
ಬಾ, ನನ್ನ ಆತ್ಮದ ಆನಂದದಲ್ಲಿ ಲೀನವಾಗು.
ಈ ಪೃಥ್ವಿಯಲ್ಲಿ ಮಾಡಬೇಕಾದ ಕಾರ್ಯಗಳು ಬಹಳಷ್ಟಿವೆ.
ಅವೆಲ್ಲ ಯೋಗಮಾಯೆಯಿಂದಲೇ ಸಾಧ್ಯ.
ನೀನು ನನ್ನ ಆತ್ಮದಲ್ಲಿ ಸೇರಿಹೋದರೆ ಆ ಕಾರ್ಯಗಳೆಲ್ಲ ಸಮರ್ಪಕವಾಗಿ ನೆರವೇರುತ್ತವೆ.
ಬಾ.. ರಾಧಾ… ಬಾ..’
ರಾಧೆ ಕಣ್ಣರಳಿಸಿ ಕೃಷ್ಣನನ್ನು ಆಳವಾಗಿ, ದೀರ್ಘವಾಗಿ ನೋಡಿದಳು.
ಉಜ್ವಲವಾದ ಪ್ರಭೆ!
ಕೋಟಿಸೂರ್ಯರು ಒಮ್ಮೆಲೇ ಬೆಳಗಿದಷ್ಟು ಪ್ರಕಾಶ!
ತಾನೊಂದು ಆ ಜಾಜ್ವಲ್ಯಮಾನವಾದ ಬೆಳಕಿನ ಜ್ಯೋತಿಃಕಿರಣ - ಈ ಭಾಸವಾಯಿತು.
ರಾಧೆ ಆತ್ಮಾನುಭೂತಿಯನ್ನು ಪಡೆದಳು
“ನನ್ನ ಕೃಷ್ಣಾ…” ಅವಳ ಕೊನೆಯ ಮಾತುಗಳು ಕೃಷ್ಣನ ಆತದಾಳದಲ್ಲಿ ಸ್ಪಂದಿಸಿದುವು.
ಅವನ ನೀಳಬಾಹು ಅಪ್ಪುಗೆಯಲ್ಲಿ ಅವನ ವಿಶಾಲ ವಕ್ಷಃಸ್ಥಲಕ್ಕೊರಗಿದಂತೆಯೇ ರಾಧೆಯ ಪಂಚಪ್ರಾಣಗಳು ಅನಂತದಲ್ಲಿ ಲೀನವಾದವು.
‘ಕೃಷ್ಣಾ….. ಸಖಾ…’
ಅರ್ಜುನ ಕೃಷ್ಣನನ್ನಲುಗಿಸಿದ.
‘ಹಾಂ’ ಬೆಚ್ಚಿದ ಸವ್ಯಸಾಚಿ!
‘ಇದೇನಿದು? ತನ್ನ ನೆಚ್ಚಿನ ಮಿತ್ರ ಮೃತನಾಗಿದ್ದಾನೆ! ಮೈಯೆಲ್ಲ ನೀಲಿಗಟ್ಟಿದೆ! ತಣ್ಣಗಾಗಿದೆ? - ಏನಿದು ವಿಚಿತ್ರ…?
ಇಂದೇ ಯುದ್ಧಾರಂಭ! ಕೃಷ್ಣನಿಲ್ಲದೆ ಹೇಗೆ?’
ಅರ್ಜುನ ಭಯಭೀತನಾಗಿ ಕೃಷ್ಣನ ಎದೆಯ ಮೇಲೆ ಕಿವಿಯಿಟ್ಟು ಆಲಿಸಿದ.
‘ಉಹುಂ, ಉಸಿರಾಟ ನಿಂತಿದೆ. ಏನಿದು ಆಶ್ಚರ್ಯ!?’
ನಮ್ಮೆಲ್ಲರ ಆರಾಧ್ಯದೈವ ಕೃಷ್ಣ ಮೃತನಾಗಿಹನೆ!?
ಅರ್ಜುನನಿಗೆ ದಿಕ್ಕೇ ತೋಚದಂತಾಯಿತು.
ಮೂಕನಾಗಿ ಕೃಷ್ಣನ ಶಾಂತಗಂಭೀರಮುಖವನ್ನೇ ದಿಟ್ಟಿಸುತ್ತ - ಅಸಹಾಯಕನಾಗಿ ತಲೆಯ ಮೇಲೆ ಕೈ ಹೊತ್ತು ಕುಳಿತುಬಿಟ್ಟ.
ಹೀಗೆ ಅದೆಷ್ಟು ಹೊತ್ತು ಉರುಳಿತೋ…
‘ಆಹ್ ಇದೇನಿದು ಅದ್ಭುತ!
ಕೃಷ್ಣನ ತುಟಿ ಅರಳುತ್ತಿದೆ!
ಕಣ್ರೆಪ್ಪೆಗಳು ಅಲುಗುತ್ತಿವೆ!
ಧನಂಜಯನು ಆನಂದೋದ್ವೇಗದಿಂದ ನಾರಾಯಣನ ಎದೆಗೆ ಕಿವಿಗೊಟ್ಟು ಆಲಿಸಿದ!
ಉಸಿರಾಡುತ್ತಿದೆ! ಅಬ್ಬಾ!
ಎಂತಹ ಭವ್ಯ ಅನುಭವ!
ತನ್ನ ಸಖ, ಉದಧಾರಕ, ಕೃಷ್ಣ ಜೀವಂತವಾಗಿದ್ದಾನೆ!
ತಾನೊಬ್ಬ ಮೂರ್ಖ- ಆವನೆಂದಾದರೂ ಸಾಯುವುದುಂಟೆ ಭಾರತ ಯುದ್ಧ ಮುಗಿಯುವವರೆಗೆ…’
ಅರ್ಜುನ ಅವರ್ಣನೀಯ ಆನಂದದಲ್ಲಿ ತೇಲಾಡಿದ.
ಕಳೆದು ಹೋಗಿದ್ದ ಅಮೂಲ್ಯ ಜೀವರತ್ನ ಮರಳಿ ಸಿಕ್ಕಿತ್ತು!
ಅರ್ಜುನ ಭಕ್ತಿ, ಸ್ನೇಹಗಳಿಂದ, ಶರಣ ಭಾವದಿಂದ ಕೃಷ್ಣನ ಕಣ್ಣುಗಳನ್ನೇ ತದೇಕಚಿತ್ತದಿಂದ ನೋಡುತ್ತ ಕುಳಿತ,
‘ಹೌದು, ತನ್ನ ಕೃಷ್ಣನ ಮುಖ ಎಂದಿಗಿಂತ ತೇಜೋಮಯವಾಗಿದೆ.
ಅನಂತ ಆಗಸದ ರವಿ-ಶಶಿ-ತಾರೆಗಳ ಉಜ್ಜಲಪ್ರಭೆಯೆಲ್ಲ ಒಂದುಗೂಡಿ ಅವನ ತೇಜಸ್ವಿಮುಖದಲ್ಲಿ ಲಾಸ್ಯವಾಡುತ್ತಿರುವಂತೆ ಒಂದು ಕ್ಷಣ ಮುಖಬಿಂಬ ಬರಿ ಜ್ಯೋತಿರ್ಮಯವಾಗಿ ಕಂಡಿತವನಿಗೆ,
ಅರ್ಜುನ ದಂಗುಬಡಿದಂತಾದ.
ಸಂಪೂರ್ಣ ಮೈ ಮರೆತ…
ಈಗ ಅರ್ಜುನನನ್ನೆಚ್ಚರಿಸುವ ಸರದಿ ಕೃಷ್ಣನದಾಯಿತು.
ಕಷ್ಣ ಒಮ್ಮೆ ನೀಳವಾಗಿ ಉಸಿರ್ಗರೆದು ತನ್ನೆದುರಿಗೆ ಭವರಹಿತನಾಗಿ ಪ್ರತಿಮೆಯಂತೆ ಕುಳಿತಿದ್ದ ತನ್ನ ಪ್ರೀತಿಯ ಗೆಳೆಯನತ್ತ ಪ್ರೇಮದ ನೋಟ ಬೀರಿದ.
‘ಪಾರ್ಥಾ…’ ಕೃಷ್ಣನ ಮೃದುಮಧುರ ಧ್ವನಿ ಅರ್ಜುನನನ್ನು ವಾಸ್ತವಪ್ರಪಂಚಕ್ಕೆ ಸಳೆ ತಂದಿತು.
‘ಓಹ್! ಕೃಷ್ಣಾ… ನನ್ನ ಕೃಷ್ಣಾ…’
ಅರ್ಜುನ ಭಾವುಕನಾಗಿ, ಎಳೆಯ ಮಗು ತಾಯನ್ನಷ್ಟುವಂತೆ ಕೃಷ್ಣನನ್ನಪ್ಪಿಕೊಂಡು ಕಣ್ಣೀರ್ಗರೆಯತೊಡಗಿದ.
ಅವನ ಪ್ರೇಮ ಭಕ್ತಿ-ಭಾವ, ಅನನ್ಯ ಶರಣತ್ವ, ಸಮರ್ಪಣ-ಭಾವ ಕಣ್ಣೀರಾಗಿ ಕೋಡಿ ಹರಿದಿತ್ತು.
ಮಾತಿಗೂ ಮೀರಿದ ಅಪೂರ್ವ-ಭಾವೋನ್ಮಾದದಲ್ಲಿ ಮುಳುಗಿ ಕೃಷ್ಣನನ್ನೇ ತದೇಕ-ಚಿತ್ತದಿಂದ ನೋಡತೊಡಗಿದ.
ಕೃಷ್ಣ ಮರುಕದಿಂದ, ವಾತ್ಸಲ್ಯದಿಂದ ಅರ್ಜುನನ ತಲೆ ನೇವರಿಸುತ್ತ
“ಧನಂಜಯಾ…. ನಿನಗೆ ಆಶ್ಚರ್ಯವಾಗಿರಬಹುದಲ್ಲವೇ? ನಾನು ಮರಣ ಹೊಂದಿದೆ ಎಂದುಕೊಂಡೆಯಾ? ಇಲ್ಲ ಅರ್ಜುನ, ಹೆದರಬೇಡ, ನನ್ನ ಕರ್ತವ್ಯ ಮುಗಿವವರೆಗೆ ನಾನು ಹೋಗಲಾರೆ.”
ಕ್ಷಣ ಕಾಲ ಮೌನ. “ಯಾವುದೋ ಒಂದು ದಿವ್ಯಚೇತನವನ್ನು ಉದ್ಧರಿಸಲು ಸಮಾಧಿಸ್ಧನಾಗಿದ್ದೆ ಅಷ್ಟೆ.
ಭಯ ಬೀಳದಿರು ಸಖ.
ನಿನ್ನನ್ನು ಬಿಟ್ಟು ನಾನು ಹಾಗೆಲ್ಲಾ ಹೋಗಲಾರೆ,
ನಾನೂ ನೀನೂ ಮಾಡಬೇಕಾದ್ದು ಬಹಳಷ್ಟಿವೆ.
ಅದೆಲ್ಲ ನಿನಗೆ ಮುಂದೆ ಅರಿವಾಗುತ್ತದೆ.
ಏಳು ಮಿತ್ರ ಏಳು…
ಅಗೋ ನೋಡು ಆಗಲೇ ಮೂಡಣದಲ್ಲಿ ನೇಸರ ಉದಿಸುವ ಸೂಚನೆ ಕಂಡು ಬರುತ್ತಿದೆ.
ಏಳು ನಿನ್ನ ಬಾಳಿನಲ್ಲೂ ಆದಿತ್ಯನುದಿಸಿ ಪ್ರಕಾಶ ತರುತ್ತಾನೆ.
ಎದ್ದೇಳು ಪಾರ್ಥಾ… ಎಚ್ಚರ ಮಾಡಿಕೊ.
ಮುಹೂರ್ತ ಸಮೀಪಿಸುತ್ತಿದೆ…’
ಕೃಷ್ಣ ಮೃದುವಾಗಿ ಅರ್ಜುನನ ಬೆನ್ನು ತಟ್ಟಿದ.
ಅರ್ಜುನ ಎಚ್ಚೆತ್ತು, ಅವರ್ಣನೀಯ-ಭಾವದಿಂದ ಕೃಷ್ಣನತ್ತ ನೋಡಿ,
ಯಾವುದೋ ಭಾವಾವೇಶಕ್ಕೊಳಗಾದವನಂತೆ ಕೃಷ್ಣನ ಚರಣಗಳನ್ನು ಕಣ್ಣಿಗೊತ್ತಿಕೊಂಡ.
ಆ ವೇಳೆಗೆ ಅಲ್ಲಿಗೆ ಬಂದ ಯುಧಿಷ್ಠಿರ, ಭೀಮ, ನಕುಲ, ಸಹದೇವ, ದೌಪದಿಯರು ಪ್ರತಿಮೆಯಂತೆ ಕುಳಿತಿದ್ದ ಕೃಷ್ಣಾರ್ಜುನರನ್ನು ನೋಡುತ್ತ ನಿಂತರು.
ಕೃಷ್ಣ ಅವರನ್ನು ನಗೆಮೊಗದಿಂದ ಸ್ವಾಗತಿಸಿದ.
ಕೃಷ್ಣನಿಗಿಂತ ಹಿರಿಯನಾದ ಧರ್ಮಜನನನ್ನುಳಿದು ಉಳಿದವರೆಲ್ಲ ಅರ್ಜುನನನ್ನನುಸರಿಸಿ ಭಕ್ತಿಯಿಂದ ಕೃಷ್ಣನ ಪಾದಕ್ಕೆರಗಿದರು.
ಕೃಷ್ಣ, ಅವರೆಲ್ಲರ ಪಾಲಿಗೆ ಕೇವಲ ಬಂಧುವಲ್ಲ-ಸಖನಲ್ಲ.
ಅವರೆಲ್ಲರ ಮಾರ್ಗದರ್ಶಕ, ಉದ್ಧಾರಕ!
ಅವರ ಕನಸು ಅವನು.
ಆ ಕನಸುಗಳನ್ನು ನನಸು ಮಾಡುವ, ಅವರ ಪ್ರತಿಜ್ಞೆಗಳೆಲ್ಲ ನೆರವೇರುವಂತೆ ಮಾಡುವ ಆರಾಧ್ಯದೈವ.