ಇಂತಿ ರಾಧೆ

ಇಂತೀ ನಿನ್ನ ರಾಧೆ -ಶತಾವಧಾನಿ ಡಾ. ಆರ್ ಗಣೇಶ್

ಪ್ರಿಯ ಗೋಪಾಲ,

ನಿನ್ನನ್ನು ಈಚಿನ ವರ್ಷಗಳಲ್ಲಿ ವಾಸುದೇವ ಶ್ರೀಕೃಷ್ಣ ಎಂದೂ ಯಾದವಶ್ರೇಷ್ಠ ಶೌರಿ ಎಂದೂ ಕರೆಯುವವರು ಹೆಚ್ಚಾಗಿದ್ದಾರೆ. ಅಷ್ಟೇ ಅಲ್ಲ, ತೀರ ಈಚೀಚೆಗೆ ಪಾಂಡವಪ್ರತಿಷ್ಠಾಪನಾಚಾರ್ಯ, ಗೀತಾಚಾರ್ಯ, ಭಗವಾನ್‌ ಎಂದೂ ಗೌರವಾದರಗಳಿಂದ ಕರೆಯುವವರ ಸಂಖ್ಯೆ ಕೂಡ ಮಿಗಿಲಾಗುತ್ತಿದೆಯಂತೆ. ಆದರೆ ಏನು ಮಾಡುವುದು? ಹೇಳೀ ಕೇಳೀ ಹಳ್ಳಿಯ ಹೆಣ್ಣಾದ ನನಗೆ ಇಂಥ ದೊಡ್ಡ ದೊಡ್ಡ ಹೆಸರುಗಳು ನಿನ್ನನ್ನು ನನ್ನಿಂದ ಭಾವನಾತ್ಮಕವಾಗಿ ದೂರವಿಡುವುವೆಂದು ತಿಳಿದು ನಿನ್ನ ಹಳೆಯ ಹೆಸರನ್ನೇ ಬಳಸಿದ್ದೇನೆ.

ಗೋಕುಲದಲ್ಲಿ ನೀನಿರುವಾಗ (ಅಂದ ಹಾಗೆ ನೀನು ನಮ್ಮೆಲ್ಲರ ನೆನಪಾಗಿ, ನಲವಾಗಿ, ಇರವಾಗಿ, ವರವಾಗಿ ನಮ್ಮಲ್ಲಿಯೇ, ನಮ್ಮೊಳಗೆಯೇ ಇಲ್ಲವಾದರೂ ಎಂದು?) ನಿನ್ನನ್ನು ನಾವೆಲ್ಲ ಪ್ರೀತಿಯಿಂದ ಕರೆಯುತ್ತಿದ್ದ ಹೆಸರುಗಳಾದ ಕೃಷ್ಣ , ಗೋವಿಂದ, ಗೋಪಾಲ, ಗಿರಿಧಾರಿ, ಮುರಳೀಧರ ಮುಂತಾದುವೇ ನಮಗೆ ಇಂದೂ ಬಳಕೆ. ಅಷ್ಟೇಕೆ, ನೀನು ಪಾಂಡವರ ಶಾಂತಿದೂತನಾಗಿ ಕೌರವರಲ್ಲಿಗೆ ಹೊರಟಾಗಲೂ ಕುರುಕ್ಷೇತ್ರದ ಮಹಾಯುದ್ಧದಲ್ಲಿ ಸೇನಾಸೂತ್ರಧಾರನಾಗಿ ತೆರಳಿದಾಗಲೂ ನಾವು ನಿನ್ನನ್ನು ಕಲ್ಪಿಸಿಕೊಂಡದ್ದು ನವಿಲುಗರಿಯ ಮಕುಟ ಧರಿಸಿ, ವನಸುಮಗಳ ಮಾಲೆ ಹಾಕಿ, ಬಿದಿರಿನ ಕೊಳಲನ್ನು ಹಿಡಿದ ಗೋಕುಲ-ಬೃಂದಾವನಗಳ ಗೋಪಾಲನನ್ನಾಗಿಯೇ! ಪ್ರಿಯ ಗೋವಿಂದ ! ಇದೊ, ಈಗಲೇ ಭವಿಷ್ಯವನ್ನು ಹೇಳುತ್ತಿದ್ದೇನೆ; ಮುಂದೆಂದೂ ನಿನ್ನನ್ನು ಈ ಜಗತ್ತು ಹೀಗೆಯೇ ಕಲ್ಪಿಸಿಕೊಳ್ಳುವುದಲ್ಲದೆ ಬೇರೆ ಬಗೆಯಲ್ಲಲ್ಲ. ರಾಜ-ಮಹಾರಾಜರ ವೇಷ ಚೆನ್ನಾಗಿಯೇ ತೋರಬಹುದು. ಆದರೆ ಅಲ್ಲಿ ಯಾವುದೇ ಅನನ್ಯತೆ ಇಲ್ಲ. ಅಷ್ಟೇಕೆ, ಇಂದ್ರ-ವರುಣ-ವಾಯು-ಆದಿತ್ಯರಂಥ ಯಾವ ದೇವತೆಗಳಿಗೆ ಕೂಡ ನಿನಗಿರುವಂಥ ವಿಶಿಷ್ಟವಾದ ಅಲಂಕಾರವಿಲ್ಲ, ಅಭಿವ್ಯಕ್ತಿಯೂ ಇಲ್ಲ. ಇದೆಲ್ಲ ನೀನು ನಮ್ಮ ಗೊಲ್ಲರಿಂದ ಗಳಿಸಿಕೊಂಡ ಗೆಲುಮೆಯಲ್ಲವೇ ಗೋಪಾಲ! ಇವಿಂತಿರಲಿ, ನಿನ್ನ ಈ ಗೋಪಾಲತ್ವ , ಗೋವಿಂದತ್ವಗಳಿಗೆ ಮುಂದೆಂದೋ ಮಹಾ ಮಹಾ ಅರ್ಥಗಳನ್ನು ಕಲ್ಪಿಸಿ ಸಾಕ್ಷಾತ್‌ ವೇದ-ಉಪನಿಷತ್ತುಗಳ ಮಂತ್ರಗಳಿಗೆ ಇವನ್ನು ಸಮನಾಗಿಯೋ ಮಿಗಿಲಾಗಿಯೋ ಒಪ್ಪವಿಡುವರೆಂದೇ ಗೋಕುಲದ ನಮ್ಮ ಗೆಳತಿಯರೆಲ್ಲ ಬಾಜಿ ಕಟ್ಟಿದ್ದೇವೆ. ಹೆಚ್ಚೇನು, ಗಿರಿಧರ ! ನೀನು ನಮ್ಮವನು, ನಮ್ಮನ್ನೇ ನಮಗೆ ಅರ್ಥಪೂರ್ಣವಾಗಿ ಮರುಕಳಿಸಿಕೊಟ್ಟ ನಮ್ಮುಸಿರು, ನಮ್ಮೊಡಲು…

ಅಯ್ಯೋ! ಇದಲ್ಲವೇ ಹೆಣ್ಣುಬುದ್ಧಿಯೆಂದರೆ ! ನಾನು ಯಾರೆಂಬುದನ್ನೇ ನಿನಗಿನ್ನೂ ಹೇಳಿಲ್ಲ! ಅಥವಾ ಅದನ್ನಾದರೂ ಹೇಗೆ ಹೇಳುವುದು? ಇಷ್ಟಕ್ಕೂ ಅದು ನನಗಾದರೂ ತಿಳಿದಿದೆಯೇ? ನೀನು ಗೋಕುಲದ ಎಲ್ಲರನ್ನೂ ಇಂದು ಕೂಡ ಚೆನ್ನಾಗಿ ಬಲ್ಲವನಂತೆ. ಮೊನ್ನೆ ಮೊನ್ನೆ ತಾನೆ ಸ್ಯಮಂತಪಂಚಕದ ಬಳಿ ಸೂರ್ಯಗ್ರಹಣಸ್ನಾನಕ್ಕೆ ತೆರಳಿದ್ದ ನಮ್ಮ ಒಡೆಯ ನಂದಗೋಪ ಮಾವಯ್ಯನಿಗೂ ಒಡತಿ ಯಶೋದತ್ತೆಗೂ ಸಿಕ್ಕಿದ್ದೆಯಂತೆ. ಆಗ ಗೋಕುಲದ ಮನೆ-ಮನೆಯವರನ್ನೂ ಹೆಸರು ಹೇಳಿ ಹೆಸರು ಹೇಳಿ ವಿಚಾರಿಸಿದ್ದಲ್ಲದೆ ಪ್ರತಿಯೊಂದು ದನ-ಕರುಗಳನ್ನೂ ಮರ-ಗಿಡಗಳನ್ನೂ ಹೊಳೆ-ಗುಡ್ಡಗಳನ್ನೂ ಅಕ್ಕರೆಯಿಂದ ನೆನೆದು ಕ್ಷೇಮಸಮಾಚಾರ ಕೇಳಿಕೊಂಡೆಯಂತೆ… ಅಷ್ಟೇಕೆ, ನಿನ್ನ ಬಾಲ್ಯದ ತುಂಟತನದ ಪ್ರತಿಯೊಂದು ಹಂತವನ್ನೂ ನೆನೆದು ನಲಿದೆಯಂತೆ, ನಲಿಸಿದೆಯಂತೆ. ಮಕರಂದನೊಡನೆ ನೀನು ಸೋಮೆಯ ಮನೆಗೆ ಹಾಲು-ಬೆಣ್ಣೆ ಕದಿಯಲು ಬಂದು ಅಲ್ಲಿ ನೆಲುವಿನ ಮೇಲಿದ್ದ ಹಾಲಿನ ಗಡಿಗೆಗೆ ತೂತು ಮಾಡಿ ಬಾಯಿ ಹಾಕಿ ಗುಟುಕಿಸುವಷ್ಟರಲ್ಲಿ ಒಳಗೆ ನುಗ್ಗಿ ಬಂದ ಆಕೆಯ ಮುಖಕ್ಕೇ ಆ ಹಾಲನ್ನೆಲ್ಲ ಪುರ್ರನೆ ಊದಿ ಓಡಿದೆಯಂತೆ (ಕೃಷ್ಣ ! ಆದರೆ ಇಂದು ಗೋಕುಲಕ್ಕೆ ಮಧುರೆಯಿಂದಲೇ ಹಾಲು-ಮೊಸರು ಬರಬೇಕಿದೆ. ಇಲ್ಲಿ ನೀರು ನವೆಯಿತು, ಹಸುರು ತಗ್ಗಿತು, ಹಸುಗಳೂ ಹಿಂಗಿದವು. ದನ ಕಾಯುವುದೆಂದರೆ ಎಲ್ಲರಿಗೂ ಕೀಳರಿಮೆ ಬೇರೆ! ನಿನ್ನಂತೆ ಯಾರು ತಾನೆ ಗೋಪಾಲಕವೃತ್ತಿಯನ್ನು ಗೌರವಿಸಿದವರು? ಅಷ್ಟೇಕೆ, ನೀನೇನನ್ನು ಮಾಡುವಾಗಲೂ ಅದಕ್ಕೆ ಸಲ್ಲಿಸಬೇಕಾದುದನ್ನು ಮರೆಯದೆ ಸಲ್ಲಿಸುತ್ತಿದ್ದ ಕೆಲಸಗಾರ. ಅದೇನೋ ನಿನ್ನದೇ ಪದವುಂಟಂತೆ, ಕರ್ಮಯೋಗಿ ಎಂದು, ಅಂಥವನು ನೀನು) ಅವಳಿಂದೂ ಆ ಒಡಕು ಮಡಕೆಯನ್ನು ಜೋಪಾನವಾಗಿಟ್ಟುಕೊಂಡು ಹೆಮ್ಮೆಯಿಂದ ಮೊಮ್ಮಕ್ಕಳಿಗೆ ತೋರಿಸುತ್ತಿರುತ್ತಾಳೆ…

ಇರಲಿ, ಮೊದಲು ನನ್ನ ವಿಷಯಕ್ಕೆ ಬರುತ್ತೇನೆ. ನಾನು ರಾಗಿಣಿ, ಅದೇ, ಗೋಕುಲದಲ್ಲಿ ನೀನಿದ್ದಾಗ ನಿನ್ನ ಅನುದಿನದ ಗೋಮಾಳದ ಯಾತ್ರೆಯ ಮೊದಲಿಗೇ ನಮ್ಮ ಮನೆ ಎದುರಾಗುತ್ತಿತ್ತು. ಇದು ನೆನಪಿರಬೇಕಲ್ಲವೇ! ನಮ್ಮ ಮನೆಯೆದುರೇ ನೀನು ಪಿತ್ತನೆತ್ತಿಗೇರಿದ್ದ ಆ ತೊಂಡು ಗೂಳಿಯನ್ನು ಬಗ್ಗುಬಡಿದಿದ್ದು. ಅಬ್ಟಾ ! ಆ ವಯಸ್ಸಿಗೆ ಅದೆಂಥ ಸಾಹಸ!… ನೆನಪಾಗಲಿಲ್ಲವೇ? ಅದೇ ನಾನು, ಕಾತ್ಯಾಯನೀ ವ್ರತಕ್ಕೆಂದು ಮಾರ್ಗಶೀರ್ಷ ಮಾಸದ ಚಳಿಯಲ್ಲಿ ನೀರಿಗಿಳಿದ್ದಿದ್ದ ಹುಚ್ಚುಹುಡುಗಿಯರ ಪೈಕಿ ಮೊದಲನೆಯವಳು ನಾನೇ; ಅಂದು ನನ್ನ ನೀಲಿಯ ಪತ್ತಲವನ್ನು ನೀನಲ್ಲವೇ ಸೆಳೆದದ್ದು… ಸೀರೆ ಇಂದೂ ನನ್ನಲ್ಲಿದೆ ; ಹಳತಾದರೂ ಹೊಸತೆಂಬಂತೆ ಜೋಪಾನ ಮಾಡಿದ್ದೇನೆ. ಇನ್ನೂ ನೆನಪಾಗಲಿಲ್ಲವೆ? ನಿನ್ನ ಕೊಳಲಿನಷ್ಟು ಇಂಪಾಗಿ ಮತ್ತಾರ ಕೊಳಲೂ ಉಲಿಯದೆಂದು ಬಲ್ಲ ನಾವೆಲ್ಲ ನಿನ್ನ ಆ ಮುರಳಿಯನ್ನು ಅದೊಮ್ಮೆ ಕದ್ದಿದ್ದೆವು. ಮುಖ್ಯವಾಗಿ ಆ ಗಂಡುಬೀರಿ ಚಾರುಮತಿಯೇ ಈ ಸಾಹಸದಲ್ಲಿ ನಾಯಿಕೆ. ಆಗ ನಾನು ನಿನ್ನ ತುಟಿ ಸೋಂಕಿ ಸವಿಯಾದ ಕೊಳಲನ್ನು ಮೊದಲಿಗೆ ಮುದ್ದಿಡುವಷ್ಟರಲ್ಲಿ ಆ ನಿನ್ನ ಒರಟ ಅಣ್ಣ ಬಲರಾಮ ಬಂದು ನಿರ್ದಯವಾಗಿ ನನ್ನಿಂದ ಅದನ್ನು ಕಸಿದು ನಿನ್ನತ್ತ ಸಾಗಿಸಿದ್ದ. ಆದರೆ ನಮ್ಮಗಳ ಪೆಚ್ಚುಮೋರೆ ನೋಡಿದ ನೀನು ‘ಅಣ್ಣಾ ! ಇರಲಿ, ಪಾಪ ಈ ಹುಡುಗಿಯರಿಗೆ ತಮ್ಮ ಬಿಸಿಯುಸಿರಿಗಿಂತ ನನ್ನೀ ತಣ್ಣನೆಯ ಕೊಳಲಿನಲ್ಲಿಯೇ ಹೆಚ್ಚು ನಂಬಿಕೆ. ಅವರೂ ಒಂದಿಷ್ಟು ಇದನ್ನೂದಿ ಚಪಲ ತೀರಿಸಿಕೊಳ್ಳಲಿ, ಅವರ ಭ್ರಮೆಯೂ ತಾನಾಗಿ ನೀಗಲಿ’ ಎಂದು ನಗುನಗುತ್ತ ಹೇಳಿ ನನ್ನತ್ತ ನಿನ್ನ ಮುರಳಿಯನ್ನು ಮುಂದುಮಾಡಿದ್ದು ನನಗಂತೂ ಮರೆಯಲಾಗದ ಘಟನೆ. ಅಷ್ಟೇಕೆ, ಅದೊಮ್ಮೆ ಭಾರಿಯ ಮಳೆಯಲ್ಲಿ ನಮ್ಮ ಹಳ್ಳಿಯೆಲ್ಲ ತತ್ತರಿಸಿದಾಗ ನೀನೇ ತಾನೆ ನಮ್ಮ ಮನೆಯ ಮಾಡಿಗೆಂದು ಕಾಡಿನಿಂದ ಬಿದಿರುಗಳುಗಳನ್ನು ಹೊತ್ತುತಂದದ್ದು. ಇಂದೂ ಆ ಮಾಡು ಹಾಗೆಯೇ ಇದೆ; ಆ ಗಳುಗಳಿಗೆ ಈಗಲೂ ಹುಳ ಹಿಡಿದಿಲ್ಲ, ಬಣ್ಣ ಮಾಸಿಲ್ಲ. ಎಲ್ಲ ನಿನ್ನ ನೆನಪಿನ ಹಾಗೆ, ನಿನ್ನ ಕನಸಿನ ಹಾಗೆ… ನನ್ನ ಪರಿಚಯವಿನ್ನೂ ಮಗುಚುತ್ತಿಲ್ಲವೇ?

ಗೋಪಾಲ! ನೀನು ಕಾಳಿಯನ ಮಡುವನ್ನು ಶುದ್ಧೀಕರಿಸಲು ಹೋದ ದಿನ ಆ ಸುದ್ದಿ ಕೇಳಿ ಕಂಗಾಲಾಗಿ ಪರಿವೆ ತಪ್ಪಿದ ಪಾಪದವರಲ್ಲಿ ನಾನೂ ಒಬ್ಬಳು (ಈಚಿನ ವರ್ಷಗಳಲ್ಲಿ ಮತ್ತೆ ಆ ಮಡು ಹೊಲಸಾಗಿದೆ, ಅಪಾಯಕಾರಿಯಾಗಿದೆ. ನಮ್ಮವರಾರೂ ಅದಕ್ಕೆ ನಿನ್ನಂತೆ ಪುನಶ್ಚೇತನ ನೀಡಲು ತಯಾರಿಲ್ಲ. ನಾವು ಕೆಲವರು ನಿನ್ನ ಕಾಲದ ಹುಡುಗಿಯರು, ಇದೀಗ ಕಾಲದ ಪಾಲಿಗೆ ಮುದುಕಿಯರು, ಅದಕ್ಕೊಂದಿಷ್ಟು ಜೀವ ತುಂಬಲು ಹೆಣಗುತ್ತಿದ್ದೇವೆ). ಅಂದು ನೀನು ತಾನೆ ನನ್ನನ್ನು ಹೆದರುಪುಕ್ಕಲಿಯೆಂದು ಲಘುವಾಗಿ ಗೇಲಿ ಮಾಡಿದ್ದು! ಮತ್ತೂ ಒಂದು ಗುರುತು ಹೇಳುತ್ತೇನೆ; ಕಾರ್ತಿಕಮಾಸದ ಹುಣ್ಣಿಮೆಯಂದು ಯಮುನೆಯ ತೀರದಲ್ಲಿ ರಾಸ-ಹಲ್ಲೀಸಕನೃತ್ಯಕ್ಕೆ ಹಿಗ್ಗಿನಿಂದ ಸಜ್ಜಾಗುತ್ತಿದ್ದ ನನ್ನ ಕಾಲಿಗೆ ಬೆಳ್ಳಿಯ ಗೆಜ್ಜೆ ಕಟ್ಟಿದವನು ನೀನೇ ಅಲ್ಲವೇ ಗೋವಿಂದ! ಹೋಗಲಿ ಬಿಡು, ಕೊನೆಯ ನೆನಪಾಗಿ ಹೇಳುತ್ತಿದ್ದೇನೆ; ನೀನು ಮಧುರೆಗೆ ಹೊರಟ ಹೊತ್ತು ಅಕ್ರೂರ ಮಾವಯ್ಯನ ರಥದ ಚಕ್ರಕ್ಕೇ ಅಡ್ಡ ಮಲಗಿ ನಿನ್ನ ಪಯಣವನ್ನು ತಡೆಯಲೆಳಸಿದ ಹತಾಶೆಯರಲ್ಲಿ ನಾನೂ ಒಬ್ಬಳು (ಅಂದ ಹಾಗೆ ಮಾತಿನಾಳದಿಂದೊಂದು ಮಾತು; ಅಂದಿನ ನಿನ್ನ ವಲಸೆ ಈ ಹೊತ್ತಿಗೆ ಎಷ್ಟು ಹೆಚ್ಚಾಗಿದೆಯೆಂದರೆ ಇದೀಗ ಗೋಕುಲದಲ್ಲಿ ಮಕ್ಕಳೂ ಇಲ್ಲ, ಯುವಜನತೆಯೂ ಇಲ್ಲ. ಇರುವವರೆಲ್ಲ ನಿನ್ನ ಕಾಲದ ಮಕ್ಕಳಾದ ನಾವೇ. ಈ ಕಾಲದ ಗೋಕುಲಕ್ಕೇ ಮುಪ್ಪು ಬಂದಿದೆ. ಮುಪ್ಪು ಮುಪ್ಪೆಂದು ನಮಗೆ ತಿಳಿಯುವುದೆಂದರೆ ಅದು ಸಾವೇ ಅಲ್ಲವೇ ಕೃಷ್ಣ !) ಆಗ ಕಲ್ಲಿಗೆ ತಾಕಿದ ನನ್ನ ಹಣೆಗೆ ಗಾಯವಾಗಿ, ನೀನು ರಥದಿಂದ ಕೆಳಗೆ ಧುಮುಕಿ, ನಿನ್ನ ಪೀತಾಂಬರವನ್ನೇ ಹರಿದು ನನ್ನ ನೆತ್ತರನ್ನು ತಡೆದದ್ದು… ಹಾ! ಈಗ ನೆನಪಾಗಿರಬೇಕಲ್ಲ … ಆ ಗಾಯದ ಗುರುತು ಇನ್ನೂ ನನ್ನ ಹಣೆಯ ಮೇಲೆ ಉಳಿದಿದೆ. ಅಂದು ನೀನು ಕಟ್ಟಿದ ಪೀತಾಂಬರದ ತುಂಡಿನದೂ ಇದೇ ಕಥೆ… ಇದು ಬರಿಯ ನನ್ನೊಬ್ಬಳ ಕಥೆಯಲ್ಲ ಗೋವಿಂದ… ಗೋಕುಲದ ಎಲ್ಲ ಜೀವಾಜೀವರಾಶಿಗಳ ವ್ಯಥೆ… ಅಲ್ಲಲ್ಲ, ಇದೊಂದು ಬಗೆಯ ಮಧುರವೇದನೆ, ನೆನಪಿನ ನಿರ್ವಾಣ. ಆ ರಾಗಿಣಿಯೇ ನಾನು… ಮುಜುಗರ ಮಾಡಿಕೊಳ್ಳಬೇಡ. ಈಗ ನಿನಗೆ ಹತ್ತಾರು ಮದುವೆಗಳಾಗಿ ಮಕ್ಕಳು ಮೊಮ್ಮಕ್ಕಳು; ನನಗೂ ಮದುವೆಯಾಗಿ ಮಕ್ಕಳು ಮೊಮ್ಮಕ್ಕಳು.

ಆದರೆ ನಾಚಿಕೆ ಬಿಟ್ಟು ಹೇಳುತ್ತಿದ್ದೇನೆ; ನನ್ನ ಗಂಡನಲ್ಲಿ ನಾನು ನಿನ್ನನ್ನೇ ಕಂಡದ್ದು. ಇದು ಬರಿಯ ನನ್ನ ಬಗೆಯಲ್ಲ, ನಮ್ಮೀ ಗೋಕುಲದ ಎಲ್ಲ ಹೆಣ್ಣುಗಳ ಪರಿ. ಹೆಚ್ಚೇನು ಗೋಪಾಲ, ಗೋಕುಲದಲ್ಲಿ ನೀನಲ್ಲದೆ ಮತ್ತಾರು ತಾನೆ ನಮ್ಮ ಪಾಲಿಗೆ ಗಂಡಸರು… ಹಂ ಹಂ ಹಂ ! ಹೆದರಬೇಡ, ನಿನ್ನ ಹೆಂಡಿರ ಹತ್ತಿರ ನಾವಾರೂ ನಿನ್ನಲ್ಲಿ ಪಾಲು ಕೇಳಲು ಬರುವುದಿಲ್ಲ. ನಮ್ಮ ಮಕ್ಕಳಾದರೂ ನಿನ್ನ ಮಕ್ಕಳಲ್ಲಿ ಭಾಗಕ್ಕೆಂದು ಬರುವುದಿಲ್ಲ. ನಮಗೆಲ್ಲ ನಿನ್ನ ಸ್ಮತಿಯೇ ಶ್ರುತಿ.

ಗೋವಿಂದ! ನೀನು ಮಧುರೆಗೆ ತೆರಳಿದ ಬಳಿಕ ನಿನ್ನ ಸುದ್ದಿಯೆಂದು ಕೆಲಮಟ್ಟಿಗೆ ತಿಳಿಯುತ್ತಿದ್ದದ್ದು ಆ ನಿನ್ನ ಚಿಕ್ಕಪ್ಪ ದೇವಭಾಗರ ಮಗ ಉದ್ಧವನ ಮೂಲಕ ಮಾತ್ರ. ಆಗೀಗ ನಿನ್ನ ಅಣ್ಣನೇನೋ ಇತ್ತ ಬರುತ್ತಿದ್ದ. ಆದರೆ ಅವನಿಗೆ ಇಲ್ಲಿ ಕಳ್ಳುಕುಡಿದು, ಈಜುಹೊಡೆದು, ಹೊಲ-ಗದ್ದೆಗಳತ್ತ ಅಡ್ಡಾಡಿ ಬರುವುದರಲ್ಲಿದ್ದ ಆಸಕ್ತಿ, ಎಂದೂ ನಮಗೆ ನಿನ್ನ ಸುದ್ದಿಯನ್ನು ಹೇಳುವುದರಲ್ಲಿರಲಿಲ್ಲ. ಅದೂ ಒಂದು ರೀತಿ ಸರಿಯೇ ಎನ್ನು. ಏಕೆಂದರೆ ನಾವೆಲ್ಲ ಒಮ್ಮೆ ಕೂಡ ಅವನ ಬಗೆಗಾಗಲಿ, ಅವನ ಹೆಂಡತಿ ರೇವತಿಯ ಬಗೆಗಾಗಲಿ ಎಂದೂ ಕೇಳುತ್ತಿರಲಿಲ್ಲ. ಎಲ್ಲರಿಗೂ ನಿನ್ನ ಬಗೆಗೇ ಆಸ್ಥೆ , ಅಕ್ಕರೆ, ಕೌತುಕ, ಕಕ್ಕುಲಾತಿ. ಆದರೂ ಹೇಗೆ ತಾನೇ ಆ ಹಮ್ಮು-ಬಿಮ್ಮಿನ ಹೈದನೊಡನೆ ಹೆಣಗುತ್ತಿದ್ದೀಯೋ? ಅವನೊಬ್ಬ ಹುಂಬನೂ ಹೌದು, ಹೊಲೆಬಾಯಿಯವನೂ ಹೌದು. ಹಲವೊಮ್ಮೆ ಅವನದು ಮನೆಹಾಳು ಜಾಣತನ, ತಲೆತಿರುಕು ಬೋಳೆತನ.

ಕುರುಕ್ಷೇತ್ರ ಯುದ್ಧದಲ್ಲಿ ಅವನಿಗೆ ನಿನ್ನೆದುರು ನಿಲ್ಲುವ ನೆಣವೂ ಇಲ್ಲದೆ, ನಿನ್ನೊಡನೆ ಸಲ್ಲುವ ಸವಿಯೂ ಸಲ್ಲದೆ ತೀರ್ಥಯಾತ್ರೆಯಲ್ಲಿ ತಲೆಮರೆಸಿಕೊಂಡನಂತೆ. ಇದೀಗ ಯುದ್ಧವೆಲ್ಲ ಮುಗಿದ ಮೇಲೆ ಎಲ್ಲ ಯಾದವರಿಗೆ, ಮುಖ್ಯವಾಗಿ ನಿನ್ನ ಮಕ್ಕಳಿಗೆ, ಮೊಮ್ಮಕ್ಕಳಿಗೆ, ನಿಮ್ಮ ಕುಲದ ಪಡ್ಡೆಹುಡುಗರಿಗೆಲ್ಲ ಹೆಂಡ-ಹಾದರಗಳ, ಹೊಲೆಬಾಯಿ-ಹೋರಾಟಗಳ ಹಾದಿಯನ್ನು ತೋರುತ್ತಿದ್ದಾನಂತೆ. ಎಚ್ಚರ ಗೋಪಾಲ, ಎಚ್ಚರ! (ಹಳ್ಳಿಯ ಹುಡುಗರಾದ ನಮ್ಮ ಗೋಕುಲದ ಮಕ್ಕಳಿಗೂ ಈ ಚಾಳಿ ಬಂದರೆ ಏನು ಗತಿಯೆಂದು ಕಳವಳವಾಗುತ್ತಿದೆ.

ಕೃಷ್ಣ , ಚಟಗಳಿಗೆ ಸಿರಿತನ-ಬಡತನಗಳ ವಿವೇಕವಿಲ್ಲ, ಹಳ್ಳಿ-ನಗರಗಳ ತಾರತಮ್ಯವೂ ಇಲ್ಲ. ಆದರೆ ಇವುಗಳಿಂದ ಹಾಳಾದವರ ಪೈಕಿ ಹೆಚ್ಚು ಹೊಡೆತ ಬೀಳುವುದು ಬಡಪಾಯಿ ಹಳ್ಳಿಗರಿಗೇ. ಇದೆಲ್ಲ ನಿನಗೆ ಗೊತ್ತಿಲ್ಲದ ಸಂಗತಿಯೇನಲ್ಲ. ನೀನಿಲ್ಲಿ ಚೋಟುದ್ದದ ಹುಡುಗನಾಗದ್ದಾಗಲೇ ಇಂದ್ರಧ್ವಜೋತ್ಸವದ ಸೋಗಿನಲ್ಲಿ ಸಾಗುತ್ತಿದ್ದ ಮೋಜು-ಮಸ್ತಿಗಳ ಅಪಾಯವನ್ನು ಮನಗಂಡು ಅವಕ್ಕೆ ಬದಲಾಗಿ ಗೋವರ್ಧನಗಿರಿಪೂಜೆಯ ಹಬ್ಬವನ್ನು ಹಮ್ಮಿಕೊಂಡವನಲ್ಲವೆ ! ಆದರೇನು, ಅಂಥ ಕೊಳೆಯಿಲ್ಲದ ಸಮಾಜೋತ್ಸವವೂ ಈಗ ಇಂದ್ರಧ್ವಜೋತ್ಸವದ ದಾರಿ ಹಿಡಿದಿದೆ. ಅದನ್ನು ಮತ್ತೆ ನೀನೇ ಬಂದು ಸರಿಪಡಿಸಬೇಕೆಂದರೆ ನಮಗದು ನಗೆಗೇಡು ಮಾತ್ರವಲ್ಲ , ನಿನಗೂ ಈ ಕಾಲದ ಹೈಕಳನ್ನು ತಿದ್ದಲಾದೀತೋ ಇಲ್ಲವೋ! ಸಂದೇಹಿಸಿದೆನೆಂದು ಬೇಸರಿಸಬೇಡ ಗೋಪಾಲ!).

ಇದನ್ನೆಲ್ಲ ಮೊನ್ನೆ ನಿನ್ನ ಹಿರಿಯ ಹೆಂಡತಿ ರುಕ್ಮಿಣಿಯೇ ಯಶೋದತ್ತೆಯಲ್ಲಿ ಹೇಳಿಕೊಂಡು ಅತ್ತಳಂತೆ. ಪಾಪ, ಅವಳ ಅಣ್ಣನನ್ನೇ ನಿನ್ನ ಈ ಅಣ್ಣ ಮದುವೆಯ ಮನೆಯಲ್ಲಿ ಜೂಜಿನಹಲಗೆಯಿಂದ ಬಡಿದು ಕೊಂದನಂತೆ (ಆ ರುಕ್ಮಿಗಾದರೂ ಅದು ತಕ್ಕ ಸಾವೇ ಸರಿ, ಬದುಕಿನುದ್ದಕ್ಕೂ ನಿನ್ನ ಮೇಲೆ, ಒಡಹುಟ್ಟಿದ ತಂಗಿಯ ಮೇಲೆ ವೃಥಾವೈರ ಸಾಧಿಸಿಕೊಂಡೇ ಸೆಡೆತುಕೊಂಡನಂತೆ). ಹಾಳಾದ ಈ ಜೂಜೇ ಅಷ್ಟು; ನಿನ್ನ ಸೋದರತ್ತೆ ಕುಂತಿಯ ಮಕ್ಕಳಂಥ ಮರ್ಯಾದಸ್ಥರನ್ನೇ ಮರುಳುಮಾಡಿ ಅವರ ಮಡದಿಯನ್ನೇ ಬೀದಿಗೆಳೆಯಿತಲ್ಲ! ಒಂದು ದಿನವೂ ಜೂಜಿನ ದಾಳಗಳನ್ನು ಹಿಡಿಯದ ನೀನು ಆ ಪಾಂಡವರಿಗಾಗಿ ಅದೆಷ್ಟು ಕಷ್ಟಪಟ್ಟೆಯೆಂದು ಆಗೀಗ ಉದ್ಧವ ಹೇಳುತ್ತಲೇ ಇದ್ದ.

ಗೋಪಾಲ, ಅದೇನು ಮೋಹ ಆ ಪಾಂಡವರಲ್ಲಿ ! ಮುಖ್ಯವಾಗಿ ಆ ಅರ್ಜುನನಲ್ಲಿ ! ಅವನಿಗಾಗಿ ನೀನು ಸೂತನ ಕೆಲಸವನ್ನೂ ಮಾಡಿದೆಯಂತೆ, ಮಾಡಿದ್ದ ಶಪಥವನ್ನೂ ಮುರಿದೆಯಂತೆ, ಯುದ್ಧರಂಗದಲ್ಲಿಯೇ ಅದೆಂಥದೋ ಯೋಗವಿದ್ಯೆಯನ್ನು ವಿಸ್ತರಿಸಿದೆಯಂತೆ (ನಮಗಾದರೂ ಆ ಜೀವನಧರ್ಮಯೋಗವನ್ನು ಅಷ್ಟಿಷ್ಟು ಹೇಳಿಕೊಡು ಗೋವಿಂದ ಅಥವಾ ನಮ್ಮಂಥ ಗೊಲ್ಲತಿಯರಿಗೆ ಅವೆಲ್ಲ ಏನು ತಿಳಿದೀತೆನ್ನುವ ಶಂಕೆಯೇ ನಿನಗೆ? ಬೇಡ, ಬೇಡ. ನೀನಿಲ್ಲಿದ್ದಾಗಲೇ ನಮ್ಮ ಅಂಶು, ವಿಶಾಲ, ಪುಟ್ಟಕೃಷ್ಣ ಮುಂತಾದವರಿಗೆ ಬರಿಯ ಮರ-ಗಿಡಗಳನ್ನು ತೋರಿಸಿಕೊಂಡೇ ಪರಮಾರ್ಥವನ್ನು ಹೇಳಿಕೊಟ್ಟಿಯಲ್ಲವೆ ! ಅಥವಾ ನೇರವಾಗಿ ನಿನ್ನನ್ನಷ್ಟೇ ಪ್ರೀತಿಸಿದ ನಮಗೆ ಮತ್ತಾವ ಉಪದೇಶವೂ ಬೇಡವೇನೋ! ಇಷ್ಟಕ್ಕೂ ನಮಗೆ ಎಂದೂ ಸಹ ಬದುಕಿನಲ್ಲಿ ಬಿರುಕು, ಭಾವದಲ್ಲಿ ಬಿಗುಪು ಬಂದಿಲ್ಲ. ಇನ್ನು ನಮಗೇತಕ್ಕೆ ಉಪದೇಶ? ಗೋವಿಂದ! ನಮಗೆ ನೀನು ಸಾಕು, ನಿನ್ನ ನೆನಪು ಸಾಕು) ಬಹುಶಃ ಆ ಅರ್ಜುನನೊಬ್ಬನೇ ನಿನಗೆ ನಿಜವಾದ ಗೆಳೆಯನಾಗಬಲ್ಲನೇನೋ. ನಿನ್ನ ಸ್ವಭಾವವನ್ನು ಅಷ್ಟಿಷ್ಟು ಬಲ್ಲ ನನಗನ್ನಿಸುವುದಿಷ್ಟೇ: ನಿನಗೆ ರಸಿಕರೆಂದರೆ ತುಂಬ ಇಷ್ಟ . ಬದುಕನ್ನು ಬೆಳಕಾಗಿ ಮಾಡುವವರೆಲ್ಲ ರಸಿಕರು. ಅಂಥ ರಸಿಕತೆ ಅವನಿಗೂ ಒಂದಷ್ಟಿದ್ದಿರಬೇಕು. ನೀನು ಬರಿಯ ಬಲವನ್ನೋ ಬುದ್ಧಿಯನ್ನೋ ಸಿರಿಯನ್ನೋ ಸೊಗಸನ್ನೋ ಕಂಡು ಮರುಳಾಗುವವನಲ್ಲ. ನಿಜ, ಇವಾವುದು ಇಲ್ಲದಿದ್ದರೂ ಒಳ್ಳೆಯವರೆನ್ನಿಸಿಕೊಂಡ ಎಲ್ಲ ಸಾಮಾನ್ಯರನ್ನೂ ಪ್ರೀತಿಸಿದ್ದೀಯ, ಹತ್ತಿರಮಾಡಿಕೊಂಡಿದ್ದೀಯ. ಆದರೆ ನಿನ್ನ ಜೀವದ ಗೆಳೆಯರಾಗುವುದಕ್ಕೆ ಮತ್ತೇನೋ ವಿಶೇಷ ಬೇಕೆಂದು ಅನಿಸುತ್ತೆ. ಆ ಪುಣ್ಯ ಅರ್ಜುನನಿಗಿತ್ತು. ಅವನ ಹೆಂಡತಿ ದ್ರೌಪದಿಗೂ ಅದಿತ್ತೂಂತ ಅನ್ನಿಸುತ್ತೆ. ಏನೇ ಆಗಲಿ, ಅರ್ಜುನ ಸೊಗಸುಗಾರ, ಜಾಣ; ಹೆಣ್ಣು-ಹೆಸರುಗಳಿಗೆ ಹುಸಿಯದ ಮನಸ್ಸು ಅವನದೂಂತ ಉದ್ಧವ ಹೇಳುತ್ತಿದ್ದ. ನಾವೆಲ್ಲ ನಿನಗೆ ಸೋತಂತೆ ಅವನಿಗೆ ನೀನು ಸಹಜವಾಗಿಯೇ ಮರುಳಾದೆಯೆಂದು ಅನ್ನಿಸುತ್ತೆ. ಇನ್ನೇನು ಆಗಬೇಕಿತ್ತು ಹೇಳು? ನಿನಗೆ ನಿನ್ನ ಕುಲಬಾಂಧವರ ಜೊತೆ ಎಲ್ಲಿ ನೆಮ್ಮದಿ? ಹೀಗೆ ಹೇಳ್ತೀನೀಂತ ತಪ್ಪು ತಿಳಿಯಬೇಡ; ಯಾದವರೆಲ್ಲ ಬಲುಮಟ್ಟಿಗೆ ನಿನ್ನ ಅಣ್ಣನ ಹಾಗೆ; ಹೆಣ್ಣು -ಹೆಂಡ-ಹೊನ್ನು- ಹಮ್ಮು , ಜೂಜು-ಜಗಳ-ಬೊಗಳೆ-ರಗಳೆ. ಎಲ್ಲೋ ಒಬ್ಬ ಸಾತ್ಯಕಿ ಮತ್ತೂಬ್ಬ ಉದ್ಧವ ನಿನ್ನ ಹತ್ತಿರದವರು. ಆದರೆ ಸಾತ್ಯಕಿ ಶಿಷ್ಯನಾಗಬಲ್ಲನೇ ಹೊರತು ಸಖನಾಗಲಾರ. ಇನ್ನು ಆ ಉದ್ಧವ ತುಂಬ ಸಾತ್ವಿಕ; ನಿನ್ನಲ್ಲಿ ಭಕ್ತನಾಗಬಲ್ಲನೇ ಹೊರತು ರಕ್ತನಾಗಲಾರ. ಗೋವಿಂದ! ನೀನು ಬೆರಗು-ಬದುಕಿನ ದೇವರು, ಭಯ-ಭಕ್ತಿಯ ದೇವರಲ್ಲ; ಚೆಲುವು-ಒಲವಿನ ಜೀವ, ತಗ್ಗು-ಬಗ್ಗಿನ ಭಾವವಲ್ಲ.

ಇರಲಿ ಬಿಡು, ಹತ್ತಾರು ಸಂಸಾರಗಳಿರುವ ನಿನಗೆ ಅವು ಯಾವುದರಲ್ಲಿಯೂ ಅಷ್ಟು ಅಂಟು-ನಂಟು ಕೂಡದೆ ಇದ್ದದ್ದು ಜಗತ್ತು ಮಾಡಿದ ಪುಣ್ಯವೆಂದೆನ್ನಿಸುತ್ತದೆ. ಇಲ್ಲವಾದರೆ ಹೆಚ್ಚೆಂದರೆ ನೀನೂ ಒಬ್ಬ ಮನೆವಂದಿಗನಾಗುತ್ತಿದ್ದೆಯೇ ಹೊರತು ಮನವಂದಿತನಾಗುತ್ತಿರಲಿಲ್ಲ

ಎಷ್ಟು ಹೊತ್ತಿಗೂ ಈ ರಾಗಿಣಿ ನನ್ನದೇ ಕಥೆ ಹೇಳುತಿದ್ದಾಳೆ; ಅವಳದೇನೂ ಇಲ್ಲವೇ ಎಂದು ಚಿಂತಿಸುತ್ತಿರುವೆಯಾ ಕೃಷ್ಣ? ನಮಗೆಲ್ಲ ನಿನ್ನ ಕಥೆಯಲ್ಲದೆ ಮತ್ತಾವ ಕಥೆಯಿದ್ದೀತು?

ನಾವೇನು ಹುಟ್ಟುವಾಗಲೇ ಸೆರೆ ಸೇರಿದವರಲ್ಲ; ಹುಟ್ಟಿದ ಬಳಿಕ ನಮ್ಮ ಮನದ ಸುತ್ತ ಸೆರೆಮನೆ ಕಟ್ಟಿಕೊಂಡವರು. ನಮಗಾವ ಸೋದರಮಾವನೂ ಮತ್ತವನ ಮಾವನೂ ತ್ರಾಸ ಕೊಟ್ಟವರಲ್ಲ, ನಮಗೆ ನಾವೇ ತ್ರಾಸವಾದವರು. ಹುಟ್ಟುತ್ತಿದ್ದಂತೆಯೇ ಹೆತ್ತವರಿಗೆ ದೂರವಾದವರಲ್ಲ, ನಾವಾಗಿಯೇ ಹೆತ್ತವರನ್ನು ದೂರಮಾಡಿಕೊಂಡವರು. ಕಣ್ಣು-ಕಿವಿಗಳು ಸಾಗುವಲ್ಲೆಲ್ಲ ಮನೋಬುದ್ಧಿಗಳು ಮಾಗುವಲ್ಲೆಲ್ಲ ಕಲಿಕೆಯ ಕ್ರೀಡೆಯುಂಟೆಂದು ಅರಿತು ನಡೆದವರು ನಾವಲ್ಲ, ಕಲಿಕೆಯನ್ನೇ ಕುಬ್ಜೀಕರಿಸಿಕೊಂಡವರು.

ಯಾಚಕನಾಗಲು ಬಂದ ಬಾಲ್ಯದ ಗೆಳೆಯನಿಗೆ ಗೆಳೆತನದ ಗೌರವ-ಸಲುಗೆಗಳನ್ನೇ ಕೊಡುಗೆಯಾಗಿ ಕೊಟ್ಟವರಲ್ಲ, ಸಲುಗೆ-ಸರಳತೆಗಳ ಸಹಜ ಸ್ವಾರಸ್ಯವನ್ನೇ ಕಳೆದುಕೊಂಡವರು. ಇಂಥ ನಮಗೆ ಮತ್ತಾವ ಹೊಸತಾದ ಕಥೆಗಳಿರುತ್ತವೆ ಕೃಷ್ಣ? ನನಗೆ ಗೊತ್ತು, ನಾನು ಹೀಗೆ ರಾಗವೆಳೆದರೆ ನಿನ್ನೊಡನೆ ಅಂದು ನಾವೆಲ್ಲ ಆಟವಾಗಿ ಕಲಿತ ಪಾಠವಷ್ಟೂ ವ್ಯರ್ಥವಾಯಿತೆಂದು ಮುನಿಯುತ್ತೀಯ! ಅಲ್ಲಲ್ಲ, ದುಃಖೀಸುತ್ತೀಯ… ನಿನಗೆ ಮುನಿಸೆಲ್ಲಿಯದು? ಬೇಸರ ತಾನೆ ಮತ್ತೆಲ್ಲಿಯದು? ಆದರೆ ಗೋಪಾಲ! ನೀನು ನೊಂದಾಗ ಮಾತ್ರ ನಾವು, ಈ ಗೋಕುಲದ ಗೋಪಿಕೆಯರು, ತಾಳಲಾರೆವು. ನೀನೇನಾದರೂ ನೊಂದೆಯೆಂದು ತಿಳಿದಾಗ ಇಡಿಯ ಈ ಜಗತ್ತಿನಲ್ಲಿ ಅದಕ್ಕಾಗಿ ಮರುಗಿ ನಿನ್ನನ್ನು ಎದೆಗವಚಿಕೊಂಡು ಸಮಾಧಾನವನ್ನು ಹೇಳಬಲ್ಲವರು, ನಿನ್ನ ತಲೆ ಸವರಿ ಕೆನ್ನೆ ತಟ್ಟಿ ನೆಮ್ಮದಿ ನೀಡಬಲ್ಲವರು ಆ ನಿನ್ನ ಪಾಂಡವರೂ ಅಲ್ಲ, ಆ ನಿನ್ನ ಯಾದವರೂ ಅಲ್ಲ; ಹೆಮ್ಮೆಯಿಂದ ಹೇಳುತ್ತೇನೆ ಗೋವಿಂದ! ಈ ಗೊಲ್ಲತಿಯರಿಗಷ್ಟೇ ಅದು ಸಾಧ್ಯ. ಹೆಚ್ಚೇಕೆ, ನಮ್ಮಂಥ ಹೆಣ್ಣೇ ಆದ, ನಮಗಿಂತ ತುಂಬ ನೊಂದು ಬೆಂದು ಹಣ್ಣಾದ ಆ ನಿನ್ನ ಕೃಷ್ಣೆಗಾಗಲಿ, ನಿನ್ನದೇ ರಕ್ತ ಹಂಚಿಕೊಂಡು ಹುಟ್ಟಿದ ಸುಭದ್ರೆಗಾಗಲಿ ಇದು ಅಸಾಧ್ಯ.

ಅವರೆಲ್ಲ ನಿನ್ನಿಂದ ಪಡೆದುಕೊಳ್ಳಬಲ್ಲವರೂ ಪಡೆದುಕೊಂಡವರೂ ಅಲ್ಲದೆ ಕೊಡಬಲ್ಲವರಲ್ಲ. ಮತ್ತೂ ಹೇಳುತ್ತೇನೆ; ನಿನ್ನ ಯಾವುದೇ ಅಷ್ಟಮಹಿಷಿಯರಿಗೂ ಇಷ್ಟಮಹಿಷಿಯರಿಗೂ ಸಹ ಇದು ಅಳವಲ್ಲ.

ಎಲ್ಲಕ್ಕಿಂತ ಮಿಗಿಲಾಗಿ ಸಾರುತ್ತೇನೆ, ಆ ನಿನ್ನ ಹೆತ್ತ ತಾಯಿ ದೇವಕೀದೇವಿಗೂ ನಿನ್ನನ್ನು ಸಂಕಟದಲ್ಲಿ ಸಂತಯಿಸಲು ಸಾಧ್ಯವಿಲ್ಲ. ಏಕೆಂದರೆ ಆಕೆ ಪಾಪ, ನಿನ್ನನ್ನು ಮಗುವಾಗಿ ನೋಡಿಯೇ ಇಲ್ಲವಲ್ಲ! ಎಲ್ಲರಿಗೂ ನೀನು ದೇವರು ಇಲ್ಲವೇ ದಾನವ; ಮಿತ್ರ ಇಲ್ಲವೇ ಶತ್ರು. ಸಜ್ಜನ ಇಲ್ಲವೇ ದುರ್ಜನ. ಆದರೆ ನಮಗೆ ಮಾತ್ರ ನೀನು ಮಗುವಾಗಿದ್ದೀಯ, ಜಗವಾಗಿದ್ದೀಯ, ನಾವೇ ಆಗಿದ್ದೀಯ. ನಮ್ಮ ಸಮಾಧಾನ ನಮ್ಮಿಂದಲ್ಲದೆ ಮತ್ತಾರಿಂದ ತಾನೆ ಸಾಧ್ಯ?

ಇರಲಿ, ಈ ಪತ್ರವನ್ನು ತುಂಬ ಬೆಳೆಸಿಬಿಟ್ಟಿದ್ದೀನಿ. ಇಲ್ಲಿಯ ನಿರೂಪಣಕ್ರಮವೂ ಅಕ್ರಮವೇ ಆಗಿಬಿಟ್ಟಿದೆ. ಏನು ಮಾಡುವುದು? ನಮ್ಮ ಮನಸ್ಸು ನಮಗೆ ಹೇಗೆ ತೋರುವುದೋ ಹಾಗೆ ಹರವಬೇಕಲ್ಲವೇ! ಇನ್ನೇನು, ನಿನ್ನ ಜನ್ಮದಿನ ಸಮೀಪಿಸುತ್ತಿದೆ. ಅದು ನಿನಗಾದರೂ ನೆನಪಿನಲ್ಲಿದೆಯೇ? ಎಲ್ಲೆಡೆಯಲ್ಲಿಯೂ ಕತ್ತಲೆ ತುಂಬಿರುವಾಗ, ಎಲ್ಲ ದಿಕ್ಕುಗಳಿಗೂ ಕಾರ್ಮೋಡ ಕವಿದಿರುವಾಗ ನಿನ್ನ ಹುಟ್ಟನ್ನೇ ನಿನಗೆ ಸಾವಾಗಿ ರೂಪಿಸಬೇಕೆಂದು ಸುತ್ತಲಿನ ಮತ್ತಜಗತ್ತು ಕಾದುಕುಳಿತಿರುವಾಗ ನೀನು ಜನಿಸಿದೆಯಂತೆ. ಅಂಥ ಈ ಶುಭದಿನದಂದು ನಿನಗೆ ಎಂಥ ಶುಭಾಶಯವನ್ನು ಹೇಳಲಿ? ಇದೊಂದು ರೀತಿ ಕೃತಕವಲ್ಲವೇ!… ಭಾಷೆಯೇ ಕೃತಕ, ಬರೆಹವೇ ಕೃತಕ. ಹೀಗಾಗಿ ತುಂಬ ಸಹಜವಾದ ಒಂದು ಹಾರೈಕೆ ನನ್ನದು ಗೋವಿಂದ, ಅದನ್ನು ನೀನೊಪ್ಪಿ ಮೆಚ್ಚುವೆಯೆಂದು ನನ್ನ ನಂಬುಗೆ. ನಿನ್ನ ಸಾವು ನಿನ್ನ ಹುಟ್ಟಿನಷ್ಟೇ ಅನನ್ಯವಾಗಲಿ; ಬಾಳಿನಷ್ಟೇ ಬೇಳ್ವೆಯಾಗಲಿ. ಛೇ! ಛೇ! ಬಿಡತು, ಬಿಡತು… (ಅಲ್ಲಲ್ಲ, ಸುಸಂಸ್ಕೃತವಾಗಿ ಶಾಂತಂ ಪಾಪಂ ಎನ್ನಲೆ?) ನಿನ್ನ ಜನ್ಮದಿನದಂದು ನಿನ್ನದೇ ಸಾವಿನ ಬಗೆಗೆ ಪ್ರಸ್ತಾವವೇ? ಏನು ಮಾಡಲಿ? ಸಾವನ್ನು ಸ್ವೀಕರಿಸುವ ಬದುಕನ್ನು ಭೋಗಿಸುವ ಹುಟ್ಟನ್ನು ಹೋಮಿಸುವ ಕಲೆಯನ್ನು ಕಲಿಸಿ ನಲಿದ, ನಲಿಯಿಸಿ ಒಲಿದ ನಿನಗೆ ಮತ್ತೇನೆಂದು ಹಾರೈಸಲಿ? ನೀನು ನಮಗೆ ನೀಡಿದುದನ್ನೇ ನಿನಗೆ ನಾನು ಕೊಡಬಲ್ಲೆ.

ಕೊಳಲಿಗೆಲ್ಲಿಯದೋ ಉಸಿರು? ಒಲುಮೆಗೆಲ್ಲಿಯದೋ ಬಸಿರು? ಇಂತು ನಿನ್ನವಳು, ಅಲ್ಲ, ನೀನೇ ಆದ

(ವಿ-ಅನು)ರಾಗಿಣಿ