ಚಕ್ರವರ್ತಿ ಸೂಲಿಬೆಲೆ ಅವರ ಬರೆಹ:
ಆಕಾಶವನ್ನೇ ಮುಟ್ಟಿದರೂ, ಭೂಮಿಗೆಷ್ಟು ಹತ್ತಿರ!
ಕನ್ನಡದಲ್ಲಿ ಅವಧಾನ ಕಲೆ ಎಂಬ ಒಂದು ಶೋಧಗ್ರಂಥ. ಡೀಲಿಟ್ ಪದವಿಗೆಂದು ಅದನ್ನು ಪ್ರಸ್ತುತಪಡಿಸಲಾಗಿತ್ತು. ಲೇಖಕರಿಗೆ ವಿದ್ವಾಂಸರೊಬ್ಬರು, ‘ನಿಮಗೆ ಕನ್ನಡದಲ್ಲಿ ಡಾಕ್ಟರೇಟ್ ಇಲ್ಲದಿರುವುದರಿಂದ ನೀವು ಆಡುವ ಮಾತುಗಳಿಗೆ ಪ್ರಮಾಣವಿಲ್ಲ’ ಎಂದರು. ಲೇಖಕರು ಈ ವಿದ್ವಾಂಸರೊಡನೆ ವಾದ ಮಾಡುತ್ತ ಕೂರದೇ ನೂರಾರು ಅರ್ಥಗಳನ್ನು ಹೊಮ್ಮಿಸಬಲ್ಲ ವಿದ್ವತ್ಪೂರ್ಣವಾದ ಸ್ರಗ್ಧರಾ ಪದ್ಯವೊಂದನ್ನು ಅವರಿಗೆ ಕಳಿಸಿದರು. ಅದರೊಂದಿಗೆ ಏನೆಂದು ಬರೆದಿದ್ದರು ಗೊತ್ತೇ?
‘ನೀವು ಕನ್ನಡದಲ್ಲಿ ಡಾಕ್ಟರೇಟ್ ಪಡೆದಿದ್ದೀರಿ ನಿಜ. ಆದರೆ ನಿಜವಾಗಿಯೂ ನೀವು ವಿದ್ವಾಂಸರೇ ಆಗಿದ್ದರೆ ಈ ಪದ್ಯದ ಅರ್ಥವನ್ನು ವಿವರಿಸಿಬಿಡಿ ಅಥವಾ ಕವಿಯಾಗಿದ್ದರೆ ಇಂತಹ ಒಂದು ಪದ್ಯವನ್ನು ಬರೆದುಬಿಡಿ’
ಎಂದಿದ್ದರು. ಪಂಡಿತರ ಸ್ಥಿತಿ ದೇವರಿಗೇ ಪ್ರೀತಿ. ಹೀಗೆ ತಮ್ಮ ಪಾಂಡಿತ್ಯ ಮಾತ್ರದಿಂದಲೇ ವ್ಯಕ್ತಿಯ ಸವಾಲಿಗೆ ಪ್ರಖರ ಉತ್ತರವನ್ನು ಕೊಟ್ಟಂತಹ ಆ ಧೀಮಂತ ಯಾರು ಗೊತ್ತೇ? ಶತಾವಧಾನಿ ಆರ್.ಗಣೇಶ್. ಅವರಿಗೆ 60 ವರ್ಷ. ಹೀಗಾಗಿ ವಸಂತ ಪ್ರಕಾಶನದವರು ಗಣೇಶರ ಆಪ್ತವಲಯದ ಬಿ.ಎನ್ ಶಶಿಕಿರಣ್ ಅವರಿಂದ ‘ವ್ಯಕ್ತಿವಿಭೂತಿ’ ಎಂಬ ಕೃತಿಯೊಂದನ್ನು ಕನ್ನಡಿಗರಿಗೆ ಸಮರ್ಪಿಸಿದ್ದಾರೆ. ಇಡಿಯ ಕೃತಿ ಶತಾವಧಾನಿ ಗಣೇಶರ ಬದುಕು ಮತ್ತು ವ್ಯಕ್ತಿತ್ವಕ್ಕೆ ಗೌರವದಿಂದ ಸಮರ್ಪಿಸಿದ ಒಂದು ಸುಗಂಧ ಪುಷ್ಪ ಎಂದೆನಿಸುವುದು ಸಹಜ.
ಗಣೇಶರ ಪಾಂಡಿತ್ಯದ ಕುರಿತಂತೆ ಭೈರಪ್ಪನವರ ಮಾತುಗಳನ್ನು ಉಲ್ಲೇಖಿಸುವುದೇ ಸೂಕ್ತ. ‘ಗಣೇಶರು ಉನ್ನತ ಮಟ್ಟದಲ್ಲಿ ತಂತ್ರಜ್ಞಾನ-ವಿಜ್ಞಾನವನ್ನು ಓದಿದವರು; ಸಂಸ್ಕೃತಭಾಷೆ, ವ್ಯಾಕರಣ, ಸಾಹಿತ್ಯಗಳನ್ನು ಅರೆದುಕುಡಿದವರು; ಹಾಗೆಯೇ ಭಾರತೀಯ ದರ್ಶನಶಾಸ್ತ್ರಗಳ ಎಲ್ಲ ಶಾಖೆಗಳನ್ನೂ ಸಾಕಷ್ಟು ಮಟ್ಟಿಗೆ ಅಧ್ಯಯನ ಮಾಡಿದವರು; ಹಳಗನ್ನಡ, ನಡುಗನ್ನಡ, ಸಮಕಾಲೀನ ಕನ್ನಡಸಾಹಿತ್ಯವನ್ನೂ ಅಭ್ಯಾಸ ಮಾಡಿರುವವರು; ವಿಶೇಷವಾಗಿ ಕರ್ನಾಟಕ ಸಂಗೀತದಲ್ಲಿ ಸ್ವತಃ ಕೀರ್ತನೆಗಳನ್ನು ರಚಿಸುವ ಮಟ್ಟಿಗೆ ಅಭ್ಯಾಸ ಮಾಡಿರುವವರು; ಭಾರತೀಯ ನರ್ತನಶಾಸ್ತ್ರವನ್ನು ತಿಳಿದವರು; ಭಾರತೀಯ ಶಿಲ್ಪ-ದೇವಾಲಯ ನಿರ್ಮಾಣದ ಶಾಸ್ತ್ರಗಳಲ್ಲಿ ಪ್ರವೇಶ ಉಳ್ಳವರು; ಸೋದರ ತಮಿಳು, ತೆಲುಗು ಭಾಷೆಗಳ ಸಾಹಿತ್ಯವನ್ನು ಓದಿದವರು; ಇಂಗ್ಲಿಷ್ ಸಾಹಿತ್ಯವನ್ನೂ ಪರಿಶೀಲಿಸಿರುವವರು; ಕನ್ನಡ, ಸಂಸ್ಕೃತ, ತೆಲುಗುಗಳಲ್ಲಿ ಅವಧಾನ ಮಾಡಿರುವ ಅಸಾಧಾರಣ ಸ್ಮೃತಿಶಕ್ತಿ ಮತ್ತು ಕಲ್ಪನಾಶೀಲತೆಯನ್ನು ಗಳಿಸಿಕೊಂಡಿರುವವರು; ಇಷ್ಟೆಲ್ಲ ಇದ್ದೂ ಕೇವಲ ಭೂತಕಾಲದತ್ತ ನೋಡದೆ ಸಮಕಾಲೀನ ಕಲಾಪ್ರಕಾರಗಳಲ್ಲಿ ಆಸಕ್ತಿಯಿರುವವರು. ಅವರು ಸಿನಿಮಾಗಳನ್ನು ನೋಡುತ್ತಾರೆ..
ಗಣೇಶರು ಏನು ಬರೆದರೂ ವ್ಯಾಪಕ ಸಂಶೋಧನೆ ಮತ್ತು ವಿಪುಲ ಸಾಮಗ್ರಿಯ ಆಧಾರವಿಲ್ಲದೆ ಬರೆಯುವುದಿಲ್ಲ.. ಅವರದು ರಸಪೂರ್ಣ ವಿದ್ವತ್ತು. ಇಷ್ಟಾದರೂ ಭೈರಪ್ಪನವರ ಕಣ್ಣಿಗೆ ಕಾಣದೇ ಅಥವಾ ಅವರ ಪದಗಳಿಗೆ ನಿಲುಕದೇ ನುಸುಳಿಹೋಗಿರುವ ಅನೇಕ ಸಂಗತಿಗಳು ಗಣೇಶರ ಬದುಕಿನಲ್ಲಿ ಇಲ್ಲ ಎನ್ನಲಾಗದು.
- ಈ ಕೃತಿ ಓದುವಾಗಲೇ ನನಗೂ ಅಚ್ಚರಿ ಎನಿಸಿದ್ದೇನೆಂದರೆ ಮನೆಯವರ ಒತ್ತಾಯಕ್ಕೆ ಮಣಿದು ಶತಾವಧಾನಿಗಳು ವೈದ್ಯಕೀಯ ವಿಭಾಗದ ಅಧ್ಯಯನಕ್ಕೆ ಮನಸ್ಸು ಮಾಡಿದ್ದರಂತೆ. ಅವರ ಬುದ್ಧಿವಂತಿಕೆಗೆ ಮಣಿಪಾಲದ ಮೆಡಿಕಲ್ ಕಾಲೇಜಿನಲ್ಲಿ ಸೀಟೂ ದಕ್ಕಿತ್ತು. ಅದು ದುಬಾರಿ ಎನ್ನುವ ಕಾರಣಕ್ಕೆ ಅದನ್ನು ಬಿಟ್ಟು ಇಂಜಿನಿಯರಿಂಗ್ ಅನ್ನು ಆರಿಸಿಕೊಂಡರಂತೆ.
- ಮತ್ತೊಂದು ಅಚ್ಚರಿ ಏನು ಗೊತ್ತೇ? ಇಂಜಿನಿಯರಿಂಗ್ ಫಲಿತಾಂಶ ಬರುವ ಹೊತ್ತಲ್ಲೇ ಐಎಎಸ್ಗೂ ಹಾಜರಾಗಿ ಪ್ರಿಲಿಮ್ಸ್ ಅನ್ನೂ ಮುಗಿಸಿಕೊಂಡಿದ್ದರಂತೆ ಅವರು. ತಾವು ಓದಿದ ಯುವಿಸಿಇ ಕಾಲೇಜಿನಲ್ಲೇ ಕೆಲಸ ಸಿಕ್ಕಿದ್ದರಿಂದ ಅವರು ಅಧಿಕಾರಿಯಾಗುವ ಅವಕಾಶ ತಪ್ಪಿತು, ನಮ್ಮೆಲ್ಲರಿಗೂ ಲಾಭವಾಯ್ತು.
ಗಣೇಶರಿಗೆ ಗ್ರೀಕ್, ಲ್ಯಾಟಿನ್, ಇಟಾಲಿಯನ್ ಸೇರಿದಂತೆ 18 ಭಾಷೆಗಳ ಪರಿಚಯವಿದೆ ಮತ್ತು ಅವುಗಳಲ್ಲಿ 8 ಭಾಷೆಗಳ ಮೇಲೆ ಎಷ್ಟರಮಟ್ಟಿಗೆ ಹಿಡಿತವಿದೆ ಎಂದರೆ ಕವನಗಳನ್ನೂ ರಚಿಸಬಲ್ಲಷ್ಟು. ಅವರು ಗ್ರೀಕ್ ಕಲಿತ ವಿಧಾನವನ್ನು ಶಶಿಕಿರಣ್ ತಮಾಷೆಯಾಗಿ ಹಿಡಿದುಕೊಟ್ಟಿದ್ದಾರೆ. ಗ್ರೀಕ್ ನಾಗರಿಕತೆಯನ್ನು ಸಮಗ್ರವಾಗಿ ಅರಿಯಲೆಂದು ಅಲ್ಲಿನ ಮಹಾಕಾವ್ಯಗಳನ್ನು ಮೂಲಭಾಷೆಯಲ್ಲಿಯೇ ಅಧ್ಯಯನ ಮಾಡುವ ಮನಸ್ಸು ಇವರಿಗಾಯ್ತು. ಸರಿಯಾದ ಮಾರ್ಗ ತಿಳಿಯದೇ ಅಂದಿನ ದಿನಗಳ ಏರ್ಮೈಲ್ ಆವೃತಿಯ ಪತ್ರವೊಂದರಲ್ಲಿ, To any Professor of Greek, USA ಎಂದು ಬರೆದು ಅಂಚೆಗೆ ಹಾಕಿದರಂತೆ. ಈ ಕಾಗದ ಟೆಕ್ಸಾಸ್ ವಿಶ್ವವಿದ್ಯಾಲಯದ ಪ್ರೊಫೆಸರ್ ಕೈ ಸೇರಿ ಅವರು ಸಾಕಷ್ಟು ಪುಸ್ತಕಗಳನ್ನು ಕಳಿಸಿಕೊಟ್ಟರಂತೆ.
19ನೇ ವಯಸ್ಸಿನಲ್ಲಿ ಗಣೇಶರು ಮೊದಲ ಅಷ್ಟಾವಧಾನವನ್ನು ಮಾಡಿದ್ದಂತೆ. ನಮ್ಮಲ್ಲಿ ಬಹುತೇಕರಿಗಿನ್ನೂ ಆ ವಯಸ್ಸು ಮೀಸೆಯ ಮೇಲೆ ಕೈಯ್ಯಾಡಿಸುತ್ತಾ ಕನ್ನಡಿ ಮುಂದೆ ನಿಂತುಕೊಂಡು ತನ್ನ ತಾನು ಬಣ್ಣಿಸಿಕೊಳ್ಳುವುದಾಗಿದೆ. ಗಣೇಶರು ಆ ಹೊತ್ತಿಗೆ ಸಾಹಿತ್ಯ ಸಾಹಸವನ್ನೇ ಮಾಡಿಬಿಟ್ಟಿದ್ದರು. ಅವಧಾನ ಸಾಮಾನ್ಯವಾದ ಕಲೆಯಲ್ಲ. ಎಂಟು ಮಂದಿ ಪೃಚ್ಛಕರು ಎಂಟು ಭಿನ್ನ ಬಗೆಯ ಸವಾಲುಗಳನ್ನೆಸೆಯುತ್ತಾರೆ. ಪುಸ್ತಕ, ಲೇಖನಿಗಳನ್ನು ಬಳಸದಂತೆ ಪೃಚ್ಛಕರು ಕೇಳುವ ಪ್ರಶ್ನೆಯನ್ನು ಮನದಲ್ಲೇ ಧಾರಣ ಮಾಡಿಕೊಂಡು ಅದಕ್ಕೆ ಸೂಕ್ತ ಉತ್ತರ ಕೊಡುವ ಚಮತ್ಕಾರ ಇದು. ಒಂದೆಡೆ ವಸ್ತು ಮತ್ತು ಛಂದಸ್ಸನ್ನು ಸೂಚಿಸಿ, ಸಂಬಂಧವೇ ಇಲ್ಲದ ಪದಗಳನ್ನು ಮುಂದಿಟ್ಟುಕೊಂಡು ಕವನ ರಚಿಸುವ ಸವಾಲಾದರೆ, ಮತ್ತೊಂದೆಡೆ ಹೆಜ್ಜೆ ಹೆಜ್ಜೆಗೂ ಅಕ್ಷರಗಳನ್ನೇ ನಿಷೇಧಿಸುತ್ತಾ ಕವನ ಬರೆಯುವ ಸವಾಲು. ಇವುಗಳ ನಡುವೆ ಮ್ಯಾಜಿಕ್ ಸ್ಕ್ವೇರ್, ಘಂಟಾನಾದ ಮತ್ತು ಅಪ್ರಸ್ತುತವಾದ ಪ್ರಶ್ನೆಗಳ ತಲೆನೋವು ಬೇರೆ. ಅವಧಾನಿಯಾದವ ಶಾಂತಚಿತ್ತನಾಗಿ ಇವೆಲ್ಲಕ್ಕೂ ಸೂಕ್ತವಾಗಿ ಉತ್ತರಿಸುತ್ತಾ ಹೋಗಬೇಕು.
ಸಾಮಾನ್ಯವಾಗಿ ಅಷ್ಟಾವಧಾನಕ್ಕೆ ಎಂಟು ಗಂಟೆಗಳು ಬೇಕಾಗುತ್ತವೆ. ಗಣೇಶರು ಅರ್ಧಗಂಟೆಯಲ್ಲೇ ಒಂದು ಅಷ್ಟಾವಧಾನವನ್ನೂ, ಮೂರು ದಿವಸಗಳು ಹಿಡಿಯುವ ಶತಾವಧಾನವನ್ನು ಒಂದು ದಿನದಲ್ಲೇ ಮುಗಿಸಿರುವ ಸಾಧಕರು. ಸಾವಿರ ಪೃಚ್ಛಕರು ಸಿಕ್ಕಿದರೆ ಪುಣ್ಯಾತ್ಮ ಸಹಸ್ರಾವಧಾನವನ್ನೂ ಮಾಡಿಬಿಡುತ್ತಾರೋ ಏನೋ! ಅವಧಾನವಲ್ಲದೇ ಗಣೇಶರು ಅನೇಕ ರಚನೆಗಳನ್ನೂ ಮಾಡಿದ್ದಾರೆ. ಅದರ ಸಂಖ್ಯೆ ಎಷ್ಟು ದೊಡ್ಡದ್ದೆಂದರೆ ಅನೇಕ ಬಾರಿ ತಾವೇ ರಚಿಸಿದ ರಚನೆಯನ್ನು ಗಣೇಶರೇ ಮರೆತುಹೋಗಿರುತ್ತಾರೆ. ಮಿತ್ರರು ಯಾವುದಾದರೊಂದು ರಚನೆಯನ್ನು ಹೇಳಿಕೊಳ್ಳುತ್ತಿದ್ದರೆ ಆಸಕ್ತಿಯಿಂದ ಕೇಳುವ ಗಣೇಶರು, ಯಾರೊ ಚೆನ್ನಾಗಿ ಬರೆದಿದ್ದಾರೆ ಎಂದು ಖುಷಿ ಪಡುತ್ತಾರಂತೆ. ಗುನುಗಿಕೊಳ್ಳುತ್ತಿದ್ದವರು ಬರೆದವರು ನೀವೇ ಎಂದಾಗ ಅವಾಕ್ಕಾಗದೇ ಮತ್ತೇನು ಮಾಡಬೇಕು ಹೇಳಿ?!
ಈ ಕೃತಿಯಲ್ಲಿ ಮೂರು ಭಾಗವಿದೆ. ಗಣೇಶರ ಬದುಕಿನ ಸಹಜ ಸಂಗತಿಗಳನ್ನೊಳಗೊಂಡ ಇರವು, ಅವರ ಪಾಂಡಿತ್ಯದ ಬಣ್ಣನೆಯ ಅರಿವು ಮತ್ತು ಗಣೇಶರನ್ನು ಹೃದಯದ ಆಳಕ್ಕಿಳಿಸಬಲ್ಲ ಅವರ ಬದುಕಿನ ಅಪರೂಪದ ಘಟನೆಗಳ ನಲವು. ಬೆಂಗಳೂರಿನ ಸಂಸ್ಥೆಯೊಂದು ಗಣೇಶರನ್ನು ಒಮ್ಮೆ ಸನ್ಮಾನಿಸಿತಂತೆ. ಗೌರವ ಸ್ವೀಕರಿಸಿ ಮಾತನಾಡಿದ ಅವರು ‘ಒಬ್ಬ ವ್ಯಕ್ತಿ ಜೀವನದಲ್ಲಿ ಸಮೃದ್ಧವಾಗಿ ಸುಖಪಟ್ಟಿರುವುದಕ್ಕೆ ಎಲ್ಲಿಯಾದರೂ ಸಮ್ಮಾನ ಸಲ್ಲುವುದೇನು?’ ಎಂದಿದ್ದರಂತೆ. ಗಣೇಶರು ಅನುಭವಿಸಿದ ಸುಖ ಬಹುಶಃ ನಮ್ಮ-ನಿಮ್ಮ ಸಾಮಾನ್ಯ ಅಳತೆಗೆ ನಿಲುಕುವಂಥದ್ದಲ್ಲ. ಒಂದಷ್ಟು ಬ್ಯಾಂಕ್ ಬ್ಯಾಲೆನ್ಸು, ಒಂದು ಮನೆ, ಕಾರು ಇವುಗಳ ಆಸು-ಪಾಸಿನಲ್ಲೇ ಸುಖದ ಚಿತ್ರಣ ಗಿರಕಿ ಹೊಡೆಯುತ್ತಿದ್ದರೆ ಗಣೇಶರ ಈ ಮಾತನ್ನು ಅರ್ಥಮಾಡಿಕೊಳ್ಳುವುದು ಬಲುಕಷ್ಟ. ನಿರಂತರ ಸಾಹಿತ್ಯ ರಸಾಸ್ವಾದನೆಯಲ್ಲಿ ಆನಂದವನ್ನು ಕಾಣುತ್ತಾ ಮೈಮರೆತ ಗಣೇಶರು ತಮ್ಮ ಆನಂದವನ್ನು ಮತ್ತೊಬ್ಬರಿಗೆ ಹಂಚುತ್ತಾ ಅವರೂ ಮೈಮರೆಯುವಂತೆ ಮಾಡಿದರಲ್ಲ, ನಿಜಕ್ಕೂ ಇದಕ್ಕಿಂತಲೂ ಹೆಚ್ಚಿನ ಸುಖ ಮತ್ಯಾವುದಿದೆ?
ಬಹುತೇಕರಿಗೆ ಗೊತ್ತಿರದ ಸಂಗತಿ, ಗಣೇಶರು ಯೌವ್ವನ ಕಾಲದಲ್ಲಿ ಸಿನಿಮಾಗಳಿಂದ ಸಾಕಷ್ಟು ಪ್ರಭಾವಿತರಾಗಿದ್ದರು ಅನ್ನೋದು. ತೆಲುಗು ಪೌರಾಣಿಕ ಸಿನಿಮಾಗಳಂತೂ ಅವರನ್ನು ಅಪಾರವಾಗಿ ಸೆಳೆದಿವೆ. ಅದನ್ನವರು ಗುರುವೆಂದೇ ಭಾವಿಸುತ್ತಾರೆ. ಅನೇಕ ಬಾರಿ ಸಿನಿಮಾ ಥಿಯೇಟರ್ನಲ್ಲಿ ಕುಳಿತು ಹಾಡು ಯಾವ ಛಂದಸ್ಸಿನಲ್ಲಿದೆ, ಇದರ ರಾಗ ಯಾವುದು ಎಂದು ತಮ್ಮ ಬಳಿಯಿದ್ದ ಚೀಟಿಯಲ್ಲಿ ಗೀಚಿಕೊಂಡು ಬರುತ್ತಿದ್ದರಂತೆ. ಸಿನಿಮಾ ಮಂದಿರದೊಳಗೂ ಇವರ ಅವಧಾನ ನಿಲ್ಲುತ್ತಿರಲಿಲ್ಲ! ಗಣೇಶರು ಇಂಗ್ಲೀಷ್ ಸಿನಿಮಾಗಳನ್ನೂ ನೋಡುತ್ತಿದ್ದರಂತೆ. ಪಂಚೆ ಉಟ್ಟುಕೊಂಡು, ವಿಭೂತಿ ಬಳಿದುಕೊಂಡು, ಕೈಯ್ಯಲ್ಲೊಂದು ಪುಸ್ತಕವನ್ನು ಹಿಡಿದು ಓದುತ್ತಾ ಇಂಗ್ಲೀಷ್ ಸಿನಿಮಾಗೆ ಟಿಕೆಟ್ ಪಡೆಯಲು ನಿಲ್ಲುತ್ತಿದ್ದ ವ್ಯಕ್ತಿಯನ್ನೊಮ್ಮೆ ಊಹಿಸಿಕೊಳ್ಳಿ! ಹೇಳಿದೆನಲ್ಲ, ಗಣೇಶರು ನಾವೆಷ್ಟೇ ಯೋಚಿಸಿದರೂ ಅದಕ್ಕಿಂತಲೂ ತುಸು ಹೆಚ್ಚಿನವರು.
ಗಣೇಶರದ್ದು ಬಲು ನಿಷ್ಠುರ ವ್ಯಕ್ತಿತ್ವ. ಏನನ್ನು ಹೇಳಬೇಕೋ ಮುಲಾಜಿಲ್ಲದೇ ಹೇಳಿಬಿಡುತ್ತಾರೆ. ಅವರ ಪ್ರವಚನಗಳನ್ನು ಕೇಳಬೇಕು. ಅದು ಅನೇಕ ಬಾರಿ ಇಡಿಯ ಜಗತ್ತನ್ನು ಸುತ್ತಾಡಿಕೊಂಡು ಯಾರಿಗೆ, ಯಾವ ವಿಚಾರವನ್ನು ಮುಟ್ಟಿಸಬೇಕು ಒಂದಿನಿತೂ ದ್ವಂದ್ವವಿಲ್ಲದಂತೆ ಮುಟ್ಟಿಸಿಬಿಡುತ್ತಾರೆ. ಬೈಗುಳವೂ ಕಾವ್ಯಾತ್ಮಕವಾಗಿರುತ್ತದೆ ಎನ್ನುವುದೇ ಬೈಸಿಕೊಂಡವನಿಗೂ ಸಂತಸದ ಸಂಗತಿ.
ಹೊಸ ಕಾರು ತೆಗೆದುಕೊಂಡ ಮಿತ್ರರೊಬ್ಬರು ಗಣೇಶರನ್ನು ಒಂದು ಸುತ್ತುಹೊಡೆಸಿ ಅದರ ವಿವರಗಳನ್ನು ಬಗೆ-ಬಗೆಯಾಗಿ ವರ್ಣಿಸಿ ಕಾರಿನಿಂದಿಳಿಯುವಾಗ ‘ಹೇಗಿದೆ?’ ಎಂದು ಬಲು ಕಾಳಜಿಯಿಂದಲೇ ಕೇಳಿದರಂತೆ. ಗಣೇಶರಿಗೇನು? ‘ನಿಮ್ಮ ಹಳೆಯ ಮಾರುತಿ ಕಾರಿಗೂ ಇದಕ್ಕೂ ಯಾವ ವ್ಯತ್ಯಾಸವೂ ಕಾಣುತ್ತಿಲ್ಲ. ಎರಡೂ ಚೆನ್ನಾಗಿಯೇ ಇವೆ’ ಎಂದರಂತೆ. ಹೊಸ ಕಾರು ಕೊಂಡವನ ಉತ್ಸಾಹ ಪಾತಾಳಕ್ಕೇ ಇಳಿದುಹೋಗಿರಬೇಕು!
ಹಾಗೆಂದು ಗಣೇಶರು ಪ್ರೀತಿಯಿಂದ ಮೈದಡವಿ ಮಾತನಾಡುವುದೇ ಇಲ್ಲ ಎಂದುಕೊಳ್ಳಬೇಡಿ. ಗೋಖಲೆಯಲ್ಲಿ ಒಮ್ಮೆ ಉಪನ್ಯಾಸ ಮಾಲೆ ಆಯೋಜಿತವಾಗಿತ್ತು. ಮೊದಲ ದಿನದ ಉಪನ್ಯಾಸ ಮುಗಿದಿತ್ತು. ಎರಡನೆಯ ದಿನಕ್ಕೂ ಮುನ್ನ ಧಾವಂತದಲ್ಲಿ ಬಂದ ಗಣೇಶರು ಬಹಳ ಪ್ರೀತಿಯಿಂದ ಮೈದಡವಿ ‘ಒಳ್ಳೆಯ ವಿಚಾರವನ್ನೇ ಆರಿಸಿಕೊಂಡಿದ್ದೀರಿ. ಸಮಾಜಕ್ಕೆ ಇದನ್ನು ಸೂಕ್ತ ರೀತಿಯಲ್ಲಿ ಮುಟ್ಟಿಸುವ ಅಗತ್ಯವಿದೆ’ ಎಂದರಲ್ಲದೇ ತಡವಾದರೆ ನೀವು ಹೊರಟುಬಿಡಬಹುದೇನೋ ಎಂದು ಮುಂಚಿತವಾಗಿಯೇ ಬಂದೆ ಎಂದಾಗ ನೀರಾಗಿ ಕರಗಿಹೋಗಿಬಿಡುವ ಪ್ರಸಂಗ ನನಗೆ. ಗಣೇಶರೇ ಹೀಗಿರಬಹುದಾದರೆ ಇನ್ನು ಇವರನ್ನು ಪಳಗಿಸಿದ, ಇವರ ಸಾಮರ್ಥ್ಯಕ್ಕೆ ಒರೆಗಲ್ಲಾದ ಆ ಮಹಾಪುರುಷರೆಲ್ಲ ಹೇಗಿರಬಹುದು?! ಯೋಚನೆ ಮಾಡಿಯೇ ರೋಮಾಂಚನವೆನಿಸುತ್ತದೆ.
ದೊಡ್ಡವರೆಂದರೆ ಹಾಗೆಯೇ ಅಲ್ಲವೇ? ಅವರು ಎಷ್ಟು ಸಾಮಾನ್ಯವಾಗಿರುತ್ತಾರೆಂದರೆ ಅತ್ಯಂತ ಕಿರಿಯರು ಅವರೊಂದಿಗೆ ಸಹಜವಾಗಿ ಕೂರಬಲ್ಲರು. ಹಾಗೆಯೇ ಅವರೇನಾದರೂ ಎದ್ದುನಿಂತರೆ ಜೊತೆಗಿರುವ ದೊಡ್ಡವರೂ ಕುಳಿತುಕೊಳ್ಳಲಾರರು. ಗಣೇಶರದ್ದು ಅಂಥದ್ದೇ ವ್ಯಕ್ತಿತ್ವ.
ಹೆಸರು, ಕೀರ್ತಿಯಿಂದ ದೂರವಿರುವ ಗಣೇಶರು, ಶತಾವಧಾನಿ ಎಂಬ ವಿಶೇಷಣವನ್ನು ತಮ್ಮ ಹೆಸರಿನೊಂದಿಗೆ ಜೋಡಿಸಿಕೊಂಡಿರುವುದು ಅಚ್ಚರಿ ಎನಿಸುತ್ತಿತ್ತು. ಶಶಿಕಿರಣ್ ಆ ಕುರಿತಂತೆ ಈ ಕೃತಿಯಲ್ಲಿ ಉಲ್ಲೇಖ ಮಾಡಿದಾಗಲೇ ಅದೂ ಕೂಡ ಅವರ ಬಯಕೆಯಲ್ಲ, ತರಂಗಕ್ಕೆ ಬರೆಯುತ್ತಿದ್ದಾಗ ಆದ ಒಂದು ಗೊಂದಲದ ಕಾರಣಕ್ಕೆ ಸಂಪಾದಕ ಗುಲ್ವಾಡಿಯವರು ಮಾಡಿದ ಹೆಸರಿನ ಸಣ್ಣ ಬದಲಾವಣೆ ಅಂತ ಗೊತ್ತಾಗಿದ್ದು.
ಈ ಕೃತಿ ನಾವೆಲ್ಲ ಓದಲೇಬೇಕಾದ್ದು ಏಕೆಂದರೆ ಇದು ವ್ಯಕ್ತಿಯೊಬ್ಬರ ಬಗ್ಗೆಯಿರುವಂತಹ ಸಾಮಾನ್ಯವಾದ ಚಿತ್ರಣವೆನಿಸದೇ ವ್ಯಕ್ತಿತ್ವವೊಂದರ ಆದರ್ಶ ರೂಪದ ಕನ್ನಡಿಯಂತಿದೆ. “ವ್ಯಕ್ತಿವಿಭೂತಿ ಎನ್ನುವುದು” ಈ ಕೃತಿಗೆ ಬಲು ಸೂಕ್ತವಾದ ಹೆಸರು. ಶಶಿಕಿರಣ್ರು ಅಷ್ಟೇ ಲಾಲಿತ್ಯಪೂರ್ಣವಾಗಿ ಬರೆದಿದ್ದಾರೆ. ಗಣೇಶರ ಕುರಿತಂತೆ ಮತ್ಯಾರು ಬರೆದಿದ್ದರೂ ಅದು ಇಷ್ಟು ಸೊಗಸಾಗಿ ಮೂಡಿರಬಹುದಿತ್ತು ಎಂದೆನಿಸುವುದಿಲ್ಲ. ಮಕ್ಕಳೆದುರು ಈ ಕೃತಿಯನ್ನು ಸುಮ್ಮನೆ ಓದುತ್ತಾ ಹೋಗಬೇಕು. ಅವರು ಯೌವ್ವನಕ್ಕೆ ಬರುವವೇಳೆಗೆ ಯಾವ ಮಾರ್ಗದಲ್ಲಿ ಹೆಜ್ಜೆ ಇಡಬೇಕು ಎಂಬುದಕ್ಕೆ ಅದೊಂದು ದಾರಿದೀಪವಾಗಬಲ್ಲದು. ಗಣೇಶರಿಗೆ 60 ಆದುದು ಒಳ್ಳೆಯದೇ ಆಯ್ತು. ಇಲ್ಲವಾದರೆ ಇಂತಹದ್ದೊಂದು ಕೃತಿಯನ್ನು ಸಮಾಜದ ಮುಂದಿಡುವ ಯೋಚನೆಯನ್ನೂ ಯಾರು ಮಾಡುತ್ತಿರಲಿಲ್ಲವೇನೋ. ಇದರ ಹಿಂದಿರುವ ಎಲ್ಲ ಮಿತ್ರರಿಗೂ ನಾನಂತೂ ಋಣಿ.
ಇಂದಿನ #ವಿಶ್ವಗುರು ಅಂಕಣ