ಭಕ್ತಕವಿಯ ಮಾತು ಕೇಳಿದ ಭಗವಂತ- ಯಥೋಕ್ತಕಾರಿ ಪೆರುಮಾಳ್
ಶ್ರೀವೈಷ್ಣವ ಸಂಪ್ರದಾಯವು ಪ್ರಮುಖವಾಗಿ ವಿಷ್ಣುಭಕ್ತಿ ಅಥವಾ ನಾರಾಯಣಭಕ್ತಿಯನ್ನು ಆಶ್ರಯಿಸಿಕೊಂಡಿರುವ ಉಪಾಸನಾ ಮಾರ್ಗವಾಗಿದೆ. ಅದರಲ್ಲೂ ಭಗವಂತನಲ್ಲಿ ಸಂಪೂರ್ಣ ಶರಣಾಗತಿಯನ್ನು ಹೇಳುವ ಪ್ರಪತ್ತಿಭಕ್ತಿಗೆ ಅಲ್ಲಿ ಹೆಚ್ಚು ಪ್ರಾಮುಖ್ಯ. ಶ್ರೀವೈಷ್ಣವ ಸಂಪ್ರದಾಯದ ಸಂತ ಭಕ್ತಕವಿಗಳನ್ನು ಆಳ್ವಾರರು ಎಂದು ಕರೆಯುತ್ತಾರೆ. ಇವರುಗಳು ಬಹುತೇಕ ತಮಿಳುನಾಡಿನಲ್ಲಿದ್ದವರು. ಮತ್ತು ಎಲ್ಲಾ ವರ್ಣ-ವರ್ಗಗಳಿಂದಲೂ ಬಂದ ಭಕ್ತಕವಿಗಳಾಗಿದ್ದಾರೆ. ಇವರ ಸಂಖ್ಯೆ ೧೦ ಅಥವಾ ೧೨ ಎಂಬುದು ಪರಂಪರೆಯ ನಂಬಿಕೆ. ತಿರುವಿಲ್ಲಿಪುತ್ತೂರಿನ ವಟಪತ್ರಶಾಯಿಗೆ ತನ್ನನ್ನು ಸಮರ್ಪಿಸಿಕೊಂಡಿದ್ದ ಆಂಡಾಳ್ ಏಕೈಕ ಮಹಿಳಾ ಆಳ್ವಾರ್ ಆಗಿದ್ದಾಳೆ.
ಆಳ್ವಾರ್ ಎಂಬುದನ್ನು ಎರಡು ರೀತಿಯಿಂದ ನಿರ್ವಚಿಸಲಾಗುತ್ತದೆ. ಒಂದು ವಿಷ್ಣುಭಕ್ತಿಯೆಂಬ ಸಾಗರದಲ್ಲಿ ಸಂಪೂರ್ಣವಾಗಿ ಮುಳುಗಿದವರು ಎಂದಾದರೆ, ಮತ್ತೊಂದು ನಿರ್ವಚನವು “ ಭಕ್ತಿಪಂಥವನ್ನು ಆಳಿದವರು “ ಎಂಬ ಅರ್ಥವನ್ನು ಹೇಳಿದೆ. ಆಳ್ವಾರರುಗಳು ಸುಮಾರು ಸಾಮಾನ್ಯ ಶಕೆ ೫ ರಿಂದ ೧೦ ನೆಯ ಶತಮಾನದಲ್ಲಿ ಇದ್ದವರು ಎಂದು ಹೇಳಲಾಗುತ್ತದೆ. ಈ ಆಳ್ವಾರುಗಳೆಲ್ಲರೂ ನಾರಾಯಣನ ಅನನ್ಯ ಭಕ್ತರು. ಭಗವಂತನಿಗಾಗಿ ಹಾತೊರೆದು ಅವನನ್ನು ಬಗೆಬಗೆಯಾಗಿ ಸ್ತುತಿಸಿದವರು. ತಮ್ಮ ಒಳಗಣ್ಣಿನ ಮುಂದೆ ಭಗವಂತನ ವಿಧ-ವಿಧವಾದ ರೂಪಗಳನ್ನು ಕಂಡು ಆನಂದದಿಂದ ಹಾಡಿದವರು. ಇವರ ರಚನೆಗಳನ್ನು ಪಾಸುರಗಳು ಎಂದು ಕರೆಯಲಾಗುತ್ತದೆ. ಇವು ಬಹಳ ಭಾವುಕವಾದ ಗೀತೆಗಳು.
ಒಬ್ಬ ತಾಯಿಯು ಹೇಗೆ ತನ್ನ ಮಗನನ್ನು ವಾತ್ಸಲ್ಯದಿಂದ ಕಂಡು,
ತನಗೆ ಬೇಕಾದಂತೆ ಅವನನ್ನು ತಿದ್ದಿ ತೀಡಿ, ಅಪ್ಪಣೆಮಾಡಿ ಅವನೊಂದಿಗೆ ನಡೆದಕೊಳ್ಳುವಳೋ ಹಾಗೆ, ಒಬ್ಬ ಗೆಳೆಯನು ಹೇಗೆ ಸಲುಗೆಯಿಂದ ನಡೆದುಕೊಳ್ಳುವನೋ ಹಾಗೆ ಎಣೆಯಿಲ್ಲದ ಸಲುಗೆಯಿಂದ ಭಗವಂತನ ಜೊತೆ ಆಳ್ವಾರರುಗಳೆಲ್ಲರು ನಡೆದುಕೊಂಡಿರುವುದು ಅವರ ರಚನೆಗಳಲ್ಲಿ ಕಂಡು ಬರುತ್ತದೆ. ಹೀಗೆ ಸಲುಗೆ-ಪ್ರೀತಿಯಿಂದ ಭಗವಂತನನ್ನು ನಡೆಸಿಕೊಂಡ ಬಹಳ ರೋಚಕವಾದ ಘಟನೆ ತಿರುಮಳಿಶೈ ಎಂಬ ಆಳ್ವಾರರ ಪಾಸುರಗಳಲ್ಲಿ ಕಂಡು ಬರುತ್ತದೆ.
ತಿರುಮಳಿಶೈ ಆಳ್ವಾರ್ -ಇವರು ಕಾಂಚೀಪುರಕ್ಕೆ ಸಮೀಪದ ( ಅಥವಾ ಚೆನ್ನೈಗೆ ಸಮೀಪ) ತಿರುಮಳಿಸೈ ಎಂಬ ಸ್ಥಳದಲ್ಲಿ ಹುಟ್ಟಿದ್ದರಿಂದ ಇವರ ಹೆಸರು ತಿರುಮಳಿಶೈ ಆಳ್ವಾರ್ ಎಂದಾಯಿತು. ಪ್ರಚಲಿತವಾದ ನಂಬಿಕೆಯ ಪ್ರಕಾರ ಇವರು ವಿಷ್ಣುವಿನ ಸುದರ್ಶನಚಕ್ರದದ ಅಂಶಾವತಾರಿಗಳು. ಇವರು ಸಂತರು ಮಾತ್ರವಲ್ಲದೆ ಅನೇಕವಿಧವಾದ ಸಿದ್ಧಿಗಳನ್ನು ಹೊಂದಿದ್ದವರೆಂದೂ, ಅನೇಕ ಪವಾಡಸದೃಶವಾದ ಚಮತ್ಕಾರಗಳು ಇವರಿಂದ ನಡೆದಿವೆಯೆಂದೂ ಅವರ ಜೀವನಚರಿತ್ರೆಯಲ್ಲಿ ಉಲ್ಲೇಖವಿದೆ. ಮಹಾನ್ ಜ್ಞಾನಿಗಳೂ ಆಗಿದ್ದ ತಿರುಮಳಿಸೈ ಆಳ್ವಾರರು ಕಾಂಚೀಪುರದ ಸಮೀಪದ ತಿರುವೆಕ್ಕಾ ಎಂಬಲ್ಲಿ ವಾಸಿಸುತ್ತಿದ್ದಾಗ ಇವರಿಗೆ ಕಣಿಕಣ್ಣನ್ ಎಂಬ ಶಿಷ್ಯನೊಬ್ಬನಿದ್ದ. ಗುರು-ಶಿಷ್ಯರಿಬ್ಬರೂ ತಿರುವೆಕ್ಕಾ ದಲ್ಲಿರುವ ಶೇಷಶಾಯಿಯಾದ ವಿಷ್ಣುವಿನ ಪರಮ ಭಕ್ತರಾಗಿದ್ದು, ನರಸ್ತುತಿಯನ್ನು ಮಾಡುತ್ತಿರಲಿಲ್ಲ. ವಿಷ್ಣುಭಗವಂತನನ್ನು ಕುರಿತು ಅನೇಕ ಗೀತೆಗಳನ್ನು (ಪಾಸುರ) ರಚಿಸಿ ಹಾಡುತ್ತಿದ್ದರು.
ಒಮ್ಮೆ ಅಲ್ಲಿಯ ಪಲ್ಲವರಾಜ ಕಣಿಕಣ್ಣನನ್ನು ಕರೆಸಿ ತಿರುಮಳಿಶೈ ಆಳ್ವಾರರನ್ನು ತನ್ನ ಆಸ್ಥಾನಕ್ಕೆ ಕರೆತರಬೇಕೆಂದು, ಅವರಿಂದ ತನ್ನ ಸ್ತುತಿಗೀತವೊಂದನ್ನು ರಚಿಸಿ ಕೊಡಬೇಕೆಂದು ಕೇಳುತ್ತಾನೆ. ಕಣಿಕಣ್ಣನ್ ಅದಾಗದು, ನನ್ನ ಗುರುಗಳು ಶೇಷಶಾಯಿಯನ್ನಲ್ಲದೆ ಬೇರೆ ಯಾರಸ್ತುತಿಯನ್ನೂ ಮಾಡರು ಎಂದು ಖಡಾಖಂಡಿತವಾಗಿ ಹೇಳಿಬಿಡುತ್ತಾನೆ. ಹಾಗಿದ್ದರೆ ನೀನೇ ಒಂದು ಪದ್ಯ ಬರೆದು ಹಾಡು ಎಂದಾಗ, ನಾನು ಗುರುಗಳ ಹಾದಿಯಲ್ಲಿ ನಡೆಯುವವ. ನನ್ನ ಗುರುಗಳು ಮಾಡದ ಕೆಲಸ ನಾನು ಮಾಡಲಾರೆ ಎಂದು ಕಣಿಕಣ್ಣ ಹೇಳಿದಾಗ ಕೋಪಗೊಂಡ ರಾಜ, ನನ್ನನ್ನು ಸ್ತುತಿಸದ ನಿನಗೆ ಇನ್ನು ನಾನು ಆಳುವ ಈ ನಗರದಲ್ಲಿ ಜಾಗವಿಲ್ಲ ಹೊರಡು ಎಂದು ಅವನಿಗೆ ಅಪ್ಪಣೆ ಕೊಡುತ್ತಾನೆ. ಕಣಿಕಣ್ಣ ಗುರುಗಳ ಬಳಿಗೆ ಬಂದು ಈ ವಿಷಯವನ್ನು ಹೇಳಲಾಗಿ, ಗುರುಗಳು ಶಿಷ್ಯನೇ ಇಲ್ಲದ ಮೇಲೆ ನಾನೇಕೆ ಇಲ್ಲಿರಬೇಕು ? ನಾನು ಹೊರಡುವೆ ಎಂದು ನಿರ್ಧರಿಸಿ ಹೊರಡುತ್ತಾರೆ. ಹಾಗೆ ಹೊರಡುವ ಮೊದಲು ಅವರು ತಮ್ಮ ಇಷ್ಟದೈವವಾದ ಭುಜಗಶಾಯಿಯನ್ನು ಜೊತೆಯಲ್ಲಿ ಬರುವಂತೆ ಕರೆಯುತ್ತಾ-
ಕಣಿಕಣ್ಣನ್ನ ಪೋಗಿನ್ರಾನ್ ಕಾಮರೂಪಂಗಚ್ಚಿ
ಮಣಿವಣ್ಣಾ ನೀ ಕಿಡಕ್ಕವೇಂಡಾ ತುಣೆವುಡೆಯ
ಸೆನ್ನಪ್ಪುಲವನುಮ್ ಪೋಗಿನ್ರೇನ್ ನೀಯುಮ್ ಉನ್ರನ್
ಪಯ್ ನಾಗಪಾಯೈ ಸುರುಟಿಕೊಳ್
ಕಣಿಕಣ್ಣನು ಹೋಗುತಿದ್ದಾನೆ . ಮನ್ಮಥನಂತಿರುವ ಕೃಷ್ಣನೇ ನೀ ನಿಲ್ಲಿರಬೇಡ . ಜೊತೆಯಲ್ಲಿ ಕವಿಯಾದ ನಾನು ಹೋಗುತ್ತಿದ್ದೇನೆ. ನೀನೂ ನಿನ್ನ ಹಾವಿನ ಹಾಸಿಗೆಯನ್ನು ಸುತ್ತಿಕೊಂಡು ಹೊರಡು ಎಂದು ಅಪ್ಪಣೆ ಕೊಡುತ್ತಾರೆ.
ಭಕ್ತಕವಿಯ ಮಾತುಕೇಳಿದೊಡನೆಯೆ ಮಲಗಿದ್ದ ಭಗವಂತ ಎದ್ದು ತನ್ನ ಹಾಸಿಗೆಯನ್ನು ಸುತ್ತಿ ಕಂಕುಳಲ್ಲಿ ಇರುಕಿಕೊಂಡು ಇವರ ಹಿಂದೆ ಹೊರಟೇ ಬಿಡುತ್ತಾನೆ. ಹೂವ ತರುವರ ಮನೆಗೆ ಹುಲ್ಲ ತರುವ ದೇವನಲ್ಲವೇ ಅವನು ?
ಹೀಗೆ ಮೂವರೂ ಹೊರಟು ಕಾಂಚಿಪುರದಿಂದ ಸ್ವಲ್ಪದೂರದಲ್ಲಿರುವ ಒಂದು ಜಾಗದಲ್ಲಿ ಒಂದು ರಾತ್ರಿಯನ್ನು ಕಳೆಯುತ್ತಾರೆ.
ಅಷ್ಟರಲ್ಲಿ, ಪಲ್ಲವನ ರಾಜಧಾನಿಯಲ್ಲಿ ದೈವಸಾನಿಧ್ಯವಿಲ್ಲದೇ ಅನೇಕ ಉತ್ಪಾತಗಳು, ಅಪಶಕುನಗಳುಂಟಾಗುತ್ತವೆ. ಕಾಂಚೀ ಪಟ್ಟಣವು ಕಳಾಹೀನವಾಗುತ್ತದೆ. ಜನಜೀವನವು ತೊಂದರೆಗೆ ಒಳಗಾಗುತ್ತದೆ. ರಾಜನಿಗೆ ತನ್ನ ತಪ್ಪಿನ ಅರಿವಾಗುತ್ತದೆ. ಮಂತ್ರಿಗಳ ಮಾತಿನಂತೆ ಅವನು ಭಕ್ತ-ಭಗವಂತ-ಶಿಷ್ಯ ಈ ಮೂವರು ತಂಗಿದ್ದ ಜಾಗಕ್ಕೆ ಹೋಗಿ ತನ್ನ ತಪ್ಪನ್ನು ಒಪ್ಪಿಕೊಂಡು, ಮತ್ತೆ ಊರಿಗೆ ಮರಳುವಂತೆ ಕೇಳಿಕೊಳ್ಳುತ್ತಾನೆ. ತಿರುಮಳಿಶೈ ಆಳ್ವಾರರು ಹಟಮಾಡದೆ ರಾಜನ ಕೋರಿಕೆಗೆ ಓಗೊಟ್ಟು ವಾಪಸ್ಸು ಹೊರಡುತ್ತಾರೆ. ಕಣಿಕಣ್ಣನಿಗೂ ಹೊರಡಲು ಹೇಳಿ, ಜೊತೆಯಲ್ಲಿ ಬಂದಿದ್ದ ಭಗವಂತನ ಕಡೆಗೆ ತಿರುಗಿ-
ಕಣಿಕಣ್ಣನ್ ಪೋಕೊಳಿನ್ರಾನ್ ಕಾಮರೂಪಂಗಚ್ಚಿ ನೀ ಕಿಡಕ್ಕ ವೇಂಡುಮ್ ತುಣೈವುಡೆಯ
ಸೆನ್ನಪ್ಪುಲವನುಮ್ ಪೋಕೊಳಿನ್ರಾನ್ ನೀಯುಮ್ ಉನ್ ಪಯ್ ನಾಗಪಾಯಿಲ್ ಪಡುತ್ತುಕೊಳ್ |
ಕಣಿಕಣ್ಣನ್ ಹೋಗುವುದನ್ನು ನಿಲ್ಲಿಸಿದ ಕಾಮದೇವನಂತಿರುವ ಮಣಿವಣ್ಣಾ ನೀನೂ ಇರಬೇಕು. ಆಶುಕವಿಯಾದ ನಾನೂ ಹೋಗುವುದನ್ನು ನಿಲ್ಲಿಸಿದೆ. ನೀನೂ ನಿನ್ನ ಹಾವಿನ ಹಾಸಿಗೆಯಮೇಲೆ ಮಲಗಿಕೊ – ಎಂದು ಸಲುಗೆಯ ಪ್ರೀತಿಯ ಅಪ್ಪಣೆ ಕೊಡಿಸುತ್ತಾರೆ. ಅವರು ಹೇಳಿದಂತೆ ನಾರಾಯಣನು ಅವರ ಜೊತೆಯಲ್ಲಿ ಮರಳಿ ತಿರುವೆಕ್ಕಾ ಗೆ ಬಂದು ಮತ್ತೆ ಶೇಷನ ಹಾಸಿಗೆಯ ಮೇಲೆ ಮಲಗಿಬಿಡುತ್ತಾನೆ.
ಇದು ಕಥೆ. ಇದು ತಿರುಮಳಿಶೈ ಆಳ್ವಾರರ ಜೀವನದಲ್ಲಿ ನಡೆದದ್ದು ಎನ್ನುವ ನಂಬಿಕೆಯಿದೆ. ಆಳ್ವಾರರು ಹೇಳಿದ ಮಾತನ್ನು ಕೇಳಿ ಅದರಂತೆಯೇ ನಡೆದುಕೊಂಡದ್ದರಿಂದ ಅಲ್ಲಿರುವ ಭಗವಂತನಿಗೆ “ ಯಥೋಕ್ತಕಾರಿ “ ಎಂದು ಹೆಸರು . ಅಂದರೆ ಭಕ್ತ ಕವಿಯು ಹೇಳಿದಂತೆ ಮಾಡಿದವ ಎಂದರ್ಥ. ತಮಿಳಿನಲ್ಲಿ “ ಸೊನ್ನ ವಣ್ಣಮ್ ಸೇಯ್ದ ಪ್ಪೆರುಮಾಳ್ “ ಎಂದು ಇದರ ಅರ್ಥ.
ಭಕ್ತಕವಿ-ಶಿಷ್ಯ-ಭಗವಂತ ಈ ಮೂವರೂ ಒಂದುರಾತ್ರಿ ತಂಗಿದ್ದ ಜಾಗವನ್ನು ಓರಿಕ್ಕೈ (ಓರ್ ಇರಿಕ್ಕೈ) ಎಂದು ಕರೆದಿದ್ದಾರೆ. ಇಂದೂ ಕಾಂಚಿಯಲ್ಲಿ ತಿರುವೆಕ್ಕಾ, ಓರಿಕ್ಕೈ ಎಲ್ಲವನ್ನೂ ನೋಡಬಹುದಾಗಿದೆ.
ಎಲ್ಲ ಕಡೆಯೂ ವಿಷ್ಣುವು ಬಲಗೈಯನ್ನು ತಲೆಗೆ ಆನಿಸಿಕೊಂಡು ಪವಡಿಸಿದ್ದರೆ, ಇಲ್ಲಿ ಮಾತ್ರ ತಾನು ತಿರುಮಳಿಶೈ ಆಳ್ವಾರರ ಮಾತುಕೇಳಿದವ ಎಂದು ನಿರೂಪಿಸಲು ತನ್ನ ಎಡಗೈಯನ್ನು ತಲೆಗೆ ಇಟ್ಟುಕೊಂಡು ಪವಡಿಸಿರುವ ಭಂಗಿಯಲ್ಲಿದ್ದಾನೆ ಎನ್ನುತ್ತಾರೆ.
ಈ ಕಥೆ ನಿಜವೋ ಸುಳ್ಳೋ ಗೊತ್ತಿಲ್ಲ. ಬಹುಪಾಲು ನಿಜವಾಗಿರಲಿಕ್ಕಿಲ್ಲ. ಆದರೆ ಭಗವಂತನಿಗೆ ಅಪ್ಪಣೆ ಮಾಡುವ, ಅವನನ್ನು ತಮ್ಮ ತಾಳಕ್ಕೆ ಕುಣಿಯುವಂತೆ ಮಾಡುವ ಆಳ್ವಾರರ ಹಾಡುಗಳಲ್ಲಿರುವ ಭಕ್ತಿಯ ತೀವ್ರತೆ, ಕೆಚ್ಚು, ಸಲುಗೆಗಳು ಮಾತ್ರ ನಿಜವೇ. ತರ್ಕವನ್ನು ಮೀರಿದ ಭಾವವೇ.
ನ ದೇವೋ ವಿದ್ಯತೇ ಕಾಷ್ಠೇ
ನ ಪಾಷಾಣೇ ನ ತು ಮೃಣ್ಮಯೇ|
ಭಾವೇ ತು ವಿದ್ಯತೇ ದೇವಃ
ತಸ್ಮಾತ್ ಭಾವೇನ ಭಾವಯೇತ್ ||
ಎನ್ನುವಂತೆ ಭಾವದಲ್ಲಿ ಭಗವಂತನಿದ್ದಾನೆ. ಭಾವಿಸಿದರೆ ಭಗವಂತ ಒಡನಾಡಿಯಾಗುತ್ತಾನೆ. ಲಾಲಿಸಿದರೆ ಮಗುವಾಗುತ್ತಾನೆ. ಪಾಲಿಸಿದರೆ ನಮ್ಮನ್ನೇ ಕಾಪಾಡುತ್ತಾನೆ. ಆಳ್ವಾರರ ಈ ಕಥೆಯೂ ಇದೇ ತತ್ವವನ್ನು ಸಾರಿದೆಯಲ್ಲವೇ.
ಶಾಂತಾ ನಾಗಮಂಗಲ