“ರಾವೀ ಪಾರ್ “ - ಗುಲ್ಝಾರರ ಸಣ್ಣಕಥೆಯ ಕನ್ನಡ ಅವತರಣಿಕೆ
ರಾವೀ ದಾಟುವಾಗ ದರ್ಶನ ಸಿಂಹನು ಹುಚ್ಚ ಯಾಕಾಗಲಿಲ್ಲವೋ ಗೊತ್ತಿಲ್ಲ . ಅಪ್ಪ ಮನೇಲೇ ಸತ್ತು ಹೋದ , ಅಮ್ಮ ಅಳಿದುಳಿದ ಗುರುದ್ವಾರಗಳಲ್ಲಿ ಕಳೆದು ಹೋದ್ಲು. ಮತ್ತು ಶಾಹನೀ ಒಂದೇ ಸಲಕ್ಕೆ ಎರಡು ಮಕ್ಕಳನ್ನು ಹೆತ್ತಳು. ಎರಡು ಗಂಡು ಮಕ್ಕಳು… ಅವಳಿಜವಳಿ. ಅಳೋದೋ ನಗೋದೋ.. ಅವನಿಗೆ ತಿಳಿತಿರಲಿಲ್ಲ. ಈ ಕೈಯಿಂದ ಕಿತ್ಕೊಂಡು ಆ ಕೈಗೆ ಕೊಡೋ ವ್ಯಾಪಾರ ಮಾಡಿತ್ತು ಅವನ ವಿಧಿ. ಸ್ವಾತಂತ್ರ ಬಂದಾಯ್ತು, ಅಥವಾ ಬರ್ತಾ ಇದೆ ಅಂತ ಕಿವಿಮೇಲೆ ಬೀಳ್ತಿತ್ತು.. ಆದರೆ ಅದು ಟೋಡರ್ ಮಲ್ ಪುರ್ ತಲುಪೋದು ಯಾವಾಗ್ಲೋ ಗೊತ್ತಾಗ್ತಿರಲಿಲ್ಲ. ಹಿಂದುಗಳು, ಸಿಕ್ಖರು ಎಲ್ರೂ ಅಡಗ್ಕೊತಾ ಅಡಗ್ಕೊತಾ ಗುರುದ್ವಾರದಲ್ಲಿ ಒಟ್ಟಾಗ್ತಾ ಇದ್ರು. ಶಾಹನೀ ಹಗಲು ರಾತ್ರಿ ನೋವಿನಿಂದ ಚೀರ್ತಾ ಇರ್ತಿದ್ಲು. ಹಸಿ ಬಾಣಂತಿಗೆ ಹೊಲೆಮನೆಯ ಕೊನೇದಿನ, ಮತ್ತು ಮೊದಲನೇ ಹೆರಿಗೆ.
ದರ್ಶನಸಿಂಹ ದಿನಕ್ಕೊಂದು ಹೊಸ ಹೊಸ ಸುದ್ದಿ ತರ್ತಿದ್ದ, ಕಿಡಿಗೇಡಿತನದ್ದು. ಅಪ್ಪ ಧೈರ್ಯ ತುಂಬ್ತಿದ್ರು- “ ಏನೂ ಆಗಲ್ಲ ಮಗ, ಏನೂ ಆಗಲ್ಲ. ಇಲ್ಲಿವರೆಗೆ ಯಾವ ಹಿಂದೂ-ಸಿಖ್ ರ ಮನೆ ಮೇಲೆ ಧಾಳಿ ಆಗಿದೆ ?” “ ಗುರುದ್ವಾರದ ಮೇಲೆ ಆಗಿದೆಯಲ್ಲಾ ಅಪ್ಪಾ . ಎರಡು ಸಲ ಬೆಂಕಿ ಬಿದ್ದಾಗಿದೆ. “ “ ಹಾಗಿದ್ರೂ ನೀವುಗಳು ಅಲ್ಲೇ ಹೋಗಿ ಸೇರ್ಕೋಬೇಕು ಅಂತಿರಿ “ ಈ ಮಾತಿಗೆ ದರ್ಶನಸಿಂಹ ಸುಮ್ಮನಾಗಿ ಬಿಡ್ತಿದ್ದ. ಆದರೆ ಯಾರನ್ನ ನೊಡಿದ್ರೂ ಅದೇ, ಮನೆ ಬಿಟ್ಟು ಗುರುದ್ವಾರದಲ್ಲಿ ಸೇರ್ತಾನೇ ಇದ್ರು. “ ಒಂದೇ ಕಡೆ ಒಟ್ಟಾಗಿರೊದ್ರಿಂದ ನಂಬಿಕೆ ಹುಟ್ಟತ್ತೆ ಅಪ್ಪ. ನಮ್ಮ ಬೀದಿಲಂತೂ ಈಗ ಒಬ್ಬ ಹಿಂದೂ ಇಲ್ಲ ಸಿಖ್ ಉಳಿದಿಲ್ಲ. ಹೂಂ , ನಾವೊಬ್ರೇ ಈಗ ಇಲ್ಲಿ.”
ಹತ್ಹದಿನೈದು ದಿನಕ್ಕೆ ಮುಂಚಿನ ಮಾತು, ರಾತ್ರಿಹೊತ್ತಲ್ಲಿ ಆಪ್ಪ ಬಿದ್ದ ಸದ್ದಾಯ್ತು, ಅಂಗಳದಲ್ಲಿ. ಎಲ್ಲರೂ ಎದ್ವು. ದೂರದ ಗುರುದ್ವಾರದ ಕಡೆಯಿಂದ “ ಬೋಲೇ ಸೋ ನಿಹಾಲ್ “ ಕೂಗು ಕೇಳಿ ಬರ್ತಿತ್ತು. ಅಪ್ಪನಿಗೆ ಅದರಿಂದಲೇ ಎಚ್ಚರಿಕೆ ಆಗಿತ್ತು, ಅದೇನು ಅಂತ ನೋಡಕ್ಕೆ ಅಂತ ಛಾವಣಿ ಮೇಲಕ್ಕೆ ಹೋಗಿದ್ರು. ಮೆಟ್ಟಲಿಳಿಯುವಾಗ ಜಾರಿದ್ದೇ , ಅಂಗಳದಲ್ಲಿ ನಿಲ್ಲಿಸಿದ್ದ ಸನಿಕೆ ತಲೆಗೆ ಚುಚ್ಚಿಕೊಂಡಿತ್ತು.
ಹೇಗೋ ಅಪ್ಪನ ಅಂತ್ಯಸಂಸ್ಕಾರ ಮುಗಿಸಿದ್ವು, ಕೆಲವು ಸಾಮಾನುಗಳಿದ್ವು, ಒಂದು ಚೀಲದಲ್ಲಿ ತುಂಬಿ, ಉಳಿದ ಮೂರೂ ಜನ ಗುರುದ್ವಾರದಲ್ಲಿ ಹೋಗಿ ತಂಗಿದ್ವು. ಗುರುದ್ವಾರದಲ್ಲು ಹೆದರಿದ ಜನಕ್ಕೇನು ಕಮ್ಮಿಯಿರಲಿಲ್ಲ. ಇದರಿಂದಲೇ ಒಂಥರಾ ಧೈರ್ಯ ಇರ್ತಿತ್ತು, ಈಗ ಅವನಿಗೆ ಹೆದರಿಕೆ ಅಂತಾ ಅನ್ನಿಸ್ತಾ ಇರಲಿಲ್ಲ. ದರ್ಶನಸಿಂಹ ಅಂತಿದ್ದ – “ ನಾವೇನು ಒಂಟಿ ಅಲ್ಲವಲ್ಲ, ಬೇರೆ ಯಾರೂ ಇಲ್ದೇ ಹೋದ್ರೂ “ ವಾಹೇಗುರು” ಹತ್ರ ಅಂತೂ ಇದೀವಿ “ ಅಂತಾ ಯುವಕ ಸೇವಾರ್ಥಿಗಳ ತಂಡ ಹಗಲು-ರಾತ್ರಿ ಕೆಲಸದಲ್ಲಿ ತೊಡಗಿರ್ತಿತ್ತು. ಜನರು ತಮ್ಮ-ತಮ್ಮ ಮನೆಗಳಿಂದ ಎಷ್ಟಾಗುತ್ತೋ ಅಷ್ಟು ಹಿಟ್ಟು, ಬೇಳೆ, ತುಪ್ಪ.. ಎತ್ಕೊಂಡು ಬಂದಿದ್ರು.”ಲಂಗರ್ ʼ ಹಗಲು-ರಾತ್ರಿ ನಡೀತಾ ಇತ್ತು. ಆದ್ರೆ ಎಷ್ಟು ದಿನ ? – ಈ ಪ್ರಶ್ನೆ ಎಲ್ಲರ ಮನಸ್ಸಲ್ಲಿ ಇತ್ತು. ಜನರು ಸರಕಾರ ಏನಾದರೂ ಸೇನೆಯ ಸಹಾಯ ಕಳಿಸ್ಬೋದು ಅಂತಾ ನಿರೀಕ್ಷಿಸ್ತಿದ್ರು. ಒಬ್ಬ ಕೇಳ್ದ “ ಯಾವ ಸರಕಾರ”…. “ ಇಂಗ್ಲೀಷರು ಹೋಗಾಯ್ತು “ “ ಇಲ್ಲಿ ಪಾಕಿಸ್ತಾನವಂತೂ ಆಯ್ತು, ಆದ್ರೆ ಪಾಕಿಸ್ತಾನದ ಸರಕಾರ ಇನ್ನೂ ಆಗಿಲ್ಲ.” “ ಮಿಲ್ಟ್ರಿ ಎಲ್ಲಾ ಕಡೆ ಗಸ್ತುತಿರುಗ್ತಿದೆ. ತನ್ನ ರಕ್ಷಣೆಯಲ್ಲೇ ಶರಣಾರ್ಥಿಗಳ ತಂಡವನ್ನು ಬಾರ್ಡರ್ ವರೆಗು ತಲುಪಿಸತ್ತೆ- ಅಂತಾ ಕೇಳ್ದೆ “ “ ಶರಣಾರ್ಥೀ ? ಹಾಗಂದ್ರೇನು ? “ “ರೆಫ್ಯೂ-ಜೀ” “ ಈ ಶಬ್ದ ಇದಕ್ಕೆ ಮೊದಲು ಕೇಳೇ ಇರಲಿಲ್ಲ “
ಎರಡು ಮೂರು ಕುಟುಂಬಗಳು, ಯಾರಿಗೆ ಒತ್ತಡ ತಡಕೊಳಕ್ಕೆ ಆಗಲಿಲ್ಲವೋ ಅವು ಹೊರಟು ಬಿಟ್ಟವು. -
“ ನಾವಂತೂ ಹೊರಡ್ತೀವಿ. ಸ್ಟೇಶನ್ ನಲ್ಲಿ ಹೇಳ್ತಾ ಇದ್ದಾರೆ, ರೈಲುಗಳು ಓಡಾಡ್ತಿವೆ ಅಂತ . ಇಲ್ಲಾದ್ರೂ ಎಷ್ಟು ದಿನಾ ಅಂತ ಕೂತಿರೋದು ?
“ ಧೈರ್ಯ ಮಾಡಲೇ ಬೇಕು ತಮ್ಮ ! “ವಾಹೇಗುರು” ಹೆಗಲ ಮೇಲೆ ಕೂರಿಸ್ಕೊಂಡು ಕರಕೊಂಡು ಹೋಗಲ್ಲ ತಾನೇ ? “
ಇನ್ನೊಬ್ಬ ಒಂದು “ಗುರುಬಾನಿ” ಯ ಉದಾಹರಣೆ ಕೊಟ್ಟ-
“ ನಾನಕ್ ನಾಮವು ಹಡಗದುವೆ
ಯಾರು ಹತ್ತುವರೋ ದಾಟುವರು “
ಕೆಲವರು ಹೊರಟು ಹೋದ ಬಳಿಕ ವಾತಾವರಣದಲ್ಲಿ ಒಂದು ಬಗೆಯ ನಿಶ್ಯಬ್ದತೆಯ ಗುಳ್ಳೆ ನೆಲಸುತ್ತದೆ. ಮತ್ತೆ ಯಾರಾದರೂ ಅಲ್ಲಿ ಬಂದರಾದರೆ ಹೊರಗಿನ ಸುದ್ಧಿಗಳ ಗುಳ್ಳೆ ಒಡೆದು ಬಿಡುತ್ತದೆ-
“ ಸ್ಟೇಶನ್ ನಲ್ಲಂತೂ ಭಾರಿ ದೊಡ್ಡ ಕ್ಯಾಂಪ್ ಹಾಕಿದ್ದಾರೆ ಸ್ವಾಮಿ “
“ ಜನ ಹಸ್ಕೊಂಡೂ ಸಾಯ್ತಿದ್ದಾರೆ ಹಾಗೇನೇ ತಿಂದೂ-ತಿಂದೂ ಸಾಯ್ತಿದ್ದಾರೆ. ರೋಗ ಹರಡ್ತಾ ಹೋಗ್ತಾ ಇದೆ. “
“ ಐದು ದಿನಕ್ಕೆ ಮುಂಚೆ ಒಂದು ಟ್ರೈನ್ ಹೋಯ್ತು ಇಲ್ಲಿಂದ, ಎಳ್ಳಿಡಕ್ಕೆ ಜಾಗ ಇರಲ್ಲಿಲ್ಲ. ಜನ ರೈಲಿನ ಛಾವಣಿ ಮೇಲೂ ತುಂಬ್ಕೊಂಡಿದ್ರು. “
ಅದು ಸಂಕ್ರಾಂತಿಯ ದಿನವಾಗಿತ್ತು. ಗುರುದ್ವಾರೆಯಲ್ಲಿ ಹಗಲು-ರಾತ್ರಿ “ಗುರುಬಾನಿ” ಯ ಪಠಣ ನಡೀತಾ ಇತ್ತು. ಬಹಳ ಒಳ್ಳೆಯ ಮೂಹರ್ತದಲ್ಲಿ ಶಾಹನೀ ತನ್ನೆರಡು ಅವಳಿ ಮಕ್ಕಳಿಗೆ ಜನ್ಮಕೊಟ್ಟಿದ್ದಳು. ಒಂದಂತೂ ತುಂಬಾ ದುರ್ಬಲವಾಗಿ ಹುಟ್ಟಿತ್ತು. ಉಳಿಯುವ ಯಾವ ಆಸೆಯೂ ಇರಲಿಲ್ಲ. ಆದರೆ ಶಾಹನೀ ತನ್ನ ಹೊಟ್ಟೆಗೆ ಅವುಚಿಕೊಂಡಿದ್ದಳು.
ಅಂದೇ ರಾತ್ರಿ ಯಾರೋ ಹೇಳಿದ್ರು –“ ಸ್ಪೆಷಲ್ ಟ್ರೈನ್ ಬಂದಿದೆ, ರೆಫ್ಯೂಜಿಗಳನ್ನು ಕರೆದುಕೊಂಡು ಹೋಗಲು, ಹೊರಟು ಬಿಡಿ “ ಅಂತಾ.
ಒಂದು ದೊಡ್ಡ ಗುಂಪು ಗುರುದ್ವಾರದಿಂದ ಹೊರಟಿತು. ದರ್ಶನಸಿಂಹನೂ ಹೊರಟ. ಶಾಹನೀ ಬಹಳ ಸುಸ್ತಾಗಿದ್ಲು, ಆದರೆ ಮಕ್ಕಳ ಜೊತೆ ಹೊರಡಲು ಸಿದ್ಧಳಾದಳು. ಅಮ್ಮ ಮಾತ್ರ “ ನಾನು ಬರ್ತೀನಿ ಮಗ ! ಮುಂದೆ ಬರೋ ಯಾವುದಾದರೂ ತಂಡದ ಜೊತೆ ಬರ್ತೀನಿ. ನೀನು ಸೊಸೆ ಮತ್ತು ನನ್ನ ಮೊಮ್ಮಕಳನ್ನು ಸವರಿಸಿಕೊಂಡು ಹೊರಡು.” ಎಂದು ಹೇಳಿ ಅಲ್ಲಿಂದ ಅಲುಗಲು ಒಪ್ಪದೇ ಹೋದಳು. ದರ್ಶನಸಿಂಹ ತುಂಬಾ ಹಠ ಮಾಡಿದಾಗ ಗ್ರಂಥೀ ( ಗುರುದ್ವಾರದಲ್ಲಿ ಗುರುಗ್ರಂಥಸಾಹೇಬ್ ನ್ನು ಪಠಿಸುವವ ) ಇವನನ್ನು ಸಮಾಧಾನ ಮಾಡಿದ, ಸೇವಕರು ಧೈರ್ಯ ತುಂಬಿದರು-
“ ಹೊರಡಿ ಸರದಾರ್ ಜೀ , ಒಬ್ಬೊಬ್ಬರಾಗಿ ಎಲ್ಲಾ ಬಾರ್ಡರ್ ದಾಟಿ ಬರ್ತೀವಿ. ಬೀಜೀ ನಮ್ಮ ಜೊತೆ ಬರ್ತಾಳೆ.”
ದರ್ಶನಸಿಂಹ ಎಲ್ಲರೊಟ್ಟಿಗೆ ಹೊರಟು ಬಿಟ್ಟ. ಮುಚ್ಚಳ ಇರುವ ಒಂದು ಬೆತ್ತದ ಬುಟ್ಟಿಯಲ್ಲಿ ಮಕ್ಕಳನ್ನು ಇಟ್ಟು ಅದನ್ನು ಕುಟುಂಬದ ಗಂಟನ್ನು ಎತ್ತಿಕೊಂಡು ಹೋಗ್ತಿದ್ದಾನೇನೋ ಅನ್ನುವ ಹಾಗೆ ತಲೆಯ ಮೇಲೆ ಇಟ್ಟುಕೊಂಡ.
ಸ್ಟೇಶನ್ ನಲ್ಲಿ ಗಾಡಿ ಇತ್ತು, ಆದರೆ ಗಾಡಿಯಲ್ಲಿ ಜಾಗ ಇರಲಿಲ್ಲ. ರೈಲಿನ ಮೇಲೂ ಜನ ಹುಲ್ಲಿನ ಹಾಗೆ ಮೊಳೆತಿದ್ದರು.
ಪಾಪದ ಹಸಿಬಾಣಂತಿ ಮತ್ತು ಎಳೇ ಬೊಮ್ಮಟೆಗಳನ್ನು ನೋಡಿ ಜನ ಅವರನ್ನು ಮೇಲಕ್ಕೆ ಹತ್ತಿಸಿ ಜಾಗ ಕೊಟ್ಟರು.
ಸುಮಾರು ೧೦ ಘಂಟೆಗಳ ಬಳಿಕ ಗಾಡಿಗೆ ಸ್ವಲ್ಪ ಜೀವಬಂತು. ಸಂಜೆ ಬಹಳವಾಗಿ ಕೆಂಪಾಗಿತ್ತು, ರಕ್ತಸಿಕ್ತವಾದಂತೆ, ಕಾದುಕೆಂಪಾದಂತೆ, ನಿಗಿನಿಗಿ ಎನ್ನುವಂಥ ಮುಖ. ಶಾಹನೀ ಯ ಎದೆ ಹಿಂಡಿ ಹಿಪ್ಪೆಯಾಗಿತ್ತು. ಒಂದನ್ನು ಕೆಳಗಿಟ್ಟರೆ, ಮತ್ತೊಂದನ್ನು ಎತ್ತಿಕೊಳ್ಳುತ್ತಿದ್ದಳು. ಕೊಳೆಯಾದ ಸುಕ್ಕುಸುಕ್ಕಾದ ಬಟ್ಟೆಗಳಲ್ಲಿ ಸುತ್ತಿದ ಎರಡು ಮಕ್ಕಳ ಬಟ್ಟೆಗಂಟುಗಳು , ಯಾವುದೋ ಕಸದ ರಾಶಿಯಿಂದ ಎತ್ತಿಕೊಂಡ ಬಂದವೆನಿಸುತ್ತಿದ್ದವು.
ಕೆಲವು ಘಂಟೆಗಳು ಕಳೆದಮೇಲೆ, ಗಾಡಿ ಯಾವಾಗ ರಾತ್ರಿಗೆ ಪ್ರವೇಶ ಮಾಡಿತೋ, ಆಗ ದರ್ಶನಸಿಂಹ ನೋಡಿದ.. ಒಂದು ಮಗುವಿನ ಕೈಕಾಲುಗಳು ಆಡುತ್ತಿದ್ದವು, ಆಗಾಗ ಅಳುವ ಸದ್ದು ಕೇಳುತ್ತಿತ್ತು, ಆದರೆ ಇನ್ನೊಂದು ಪೂರ್ತಿ ನಿಶ್ಚಲವಾಗಿತ್ತು. ಬಟ್ಟೆ ಪೊಟ್ಟಣದೊಳಗೆ ಕೈ ಹಾಕಿ ನೋಡಿದರೆ, ಯಾವಾಗಲೋ ತಣ್ಣಗಾಗಿ ಹೋಗಿತ್ತು.
ದರ್ಶನಸಿಂಹ ಬಿಕ್ಕಿ ಬಿಕ್ಕಿ ಅತ್ತಾಗ ಅಕ್ಕ-ಪಕ್ಕದ ಮಂದಿಗೂ ವಿಷಯ ತಿಳಿಯಿತು. ಶಾಹನಿಯಿಂದ ಆ ಮಗುವನ್ನು ತೆಗೆದುಕೊಳ್ಳೋಣವೆಂದರೆ, ಅವಳೋ ಮೊದಲೇ ಕಲ್ಲಾಗಿದ್ದಳು. ಬುಟ್ಟಿಯನ್ನು ಗಟ್ಟಿಯಾಗಿ ಹಿಡಿದು ಕುಳಿತಿದ್ದಳು- “ ಇಲ್ಲ, ಸೋದರನಿಲ್ಲದೆ ಇನ್ನೊಬ್ಬ ಹಾಲು ಕುಡಿಯಲ್ಲ.”
ಬಹಳ ಪ್ರಯತ್ನದ ನಂತರವೂ ಶಾಹನೀ ಬುಟ್ಟಿಯನ್ನು ಬಿಡಲೇ ಇಲ್ಲ.
ಟ್ರೈನ್ ಹತ್ತು ಸಲ ನಿಂತಿತು, ಹತ್ತು ಸಲ ಚಲಿಸಿತು . ಜನ ಕತ್ತಲೆಯಲ್ಲಿ ಅಂದಾಜಿಸುತ್ತಿದ್ದರು- “ ಓ ಖೈರಾಬಾದ್ ಹೋಯ್ತು ಸ್ವಾಮಿ ”
“ ಇದು ಗುಂಜರಾವಾಲಾ ಸ್ವಾಮಿ “
ಅಬ್ಬಾ ಇನ್ನೊಂದು ಘಂಟೆ ಅಷ್ಟೆ . ಲಾಹೌರ್ ಬಂತು ಅಂದ್ರೆ ತಲುಪಿದ್ವು ಹಿಂದುಸ್ತಾನ್ ಅಂತಲೇ ."
ಉತ್ಸಾಹಿತರಾಗಿ ಜನ ಘೋಷಣೆ ಕೂಗಕ್ಕೆ ಶುರು ಹಚ್ಕೊತಿದ್ರು.
“ ಹರ ಹರ ಮಹಾದೇವ “
“ಹೇಳಿದವರೆ ತೃಪ್ತರು”
ರೈಲು ಒಂದು ಸೇತುವೆಯನ್ನು ಹತ್ತಿದಾಗ ಉತ್ಸಾಹ ಉಕ್ಕಿತು.
“ ರಾವೀ ಬಂತು ಸ್ವಾಮಿ “
“ ರಾವೀ ಇದು.. ಲಾಹೌರ್ ಬಂದಾಯ್ತು.”
ಈ ಗದ್ದಲದಲ್ಲಿ ಯಾರೋ ಒಬ್ಬರು ದರ್ಶನಸಿಂಹನ ಕಿವಿಯಲ್ಲಿ ಪಿಸುಗುಟ್ಟಿ ಹೇಳಿದರು. “ ಸರದಾರ್ ಜೀ, ಮಗುನಾ ಇಲ್ಲೇ ರಾವಿಯಲ್ಲಿ ಎಸೆದು ಬಿಡಿ, ಅವನಿಗೆ ಸದ್ಗತಿ ಸಿಗುತ್ತೆ. ಆ ದಡಕ್ಕೆ ತೆಗೆದುಕೊಂಡು ಹೋಗಿ ಏನು ಮಾಡ್ತೀರಿ ?
ದರ್ಶನಸಿಂಹ ನಿಧಾನವಾಗಿ ಬುಟ್ಟಿಯನ್ನು ಸರಿಸಿದ. ಒಮ್ಮೆಲೆ ಅಂದಾಜಿನಿಂದ ಬಟ್ಟೆಯ ಪೋಟಲಿಯನ್ನು ಎತ್ತಿಕೊಂಡ, “ ವಾಹೇ ಗುರು “ ಎಂದು ಹೇಳ್ತಾ ರಾವಿಯಲ್ಲಿ ಅದನ್ನು ಎಸೆದು ಬಿಟ್ಟ.
ಕತ್ತಲಲ್ಲಿ ಕ್ಷೀಣವಾದ ಒಂದು ದನಿ, ಮಗುವೊಂದರದು, ಕೇಳಿಸಿತು. ದರ್ಶನಸಿಂಹ ಗಾಬರಿಯಿಂದ ಶಾಹನೀ ಕಡೆ ನೋಡಿದ. ಸತ್ತ ಮಗು ಶಾಹನಿಯ ಎದೆಗೆ ಅಂಟಿಕೊಂಡಿತ್ತು! ಮತ್ತೊಮ್ಮೆ ಗದ್ದಲದ ಅಲೆ ಎದ್ದಿತು-
“ ವಾಘಾ ! ವಾಘಾ !
ಹಿಂದುಸ್ತಾನ್ ಝಿಂದಾಬಾದ್ “
ಮೂಲ : ಗುಲ್ಝಾರರ ಹಿಂದೀ ಕಥೆ “ ರಾವೀ ಪಾರ್ “ ಆಕರ : ಅಂತರ್ಜಾಲದ “ ಹಿಂದೀ ಕಹಾನೀ ಕೋಶ್ “ ಅನುವಾದ : ಶಾಂತಾ ನಾಗಮಂಗಲ
ಗುಲ್ಝಾರ ಕಿರುಪರಿಚಯ ;
ಗುಲ್ಝಾರ್…
ಇವರ ಜನ್ಮನಾಮ – ಸಂಪೂರ್ಣ ಸಿಂಗ್ ಕಾರ್ಲಾ.. ( ೧೮ ಆಗಸ್ಟ್ ೧೯೩೪ ರಂದು ಅವಿಭಜಿತ ಭಾರತದ ಪಂಜಾಬ್ ಪ್ರಾಂತದ ಜೇಲಮ್ ಜಿಲ್ಲೆಗೆ ಸೇರಿದ ದೀನಾ ಗ್ರಾಮದಲ್ಲಿ ಹುಟ್ಟಿದ್ದು. ಈಗ ಇದು ಪಾಕಿಸ್ತಾನದಲ್ಲಿದೆ.
ಉರ್ದುಭಾಷಾ ಕವಿ, ಚಲನಚಿತ್ರಗೀತ ರಚನಕಾರರು, ಲೇಖಕರು, ಚಲನಚಿತ್ರಕಥಾ ಲೇಖಕರು ಮತ್ತು ಸಿನಿಮಾ ನಿರ್ದೇಶಕರೂ ಆಗಿರುವ ಗುಲ್ಝಾರ್ ಈ ಸಾಲಿನ ನಮ್ಮ ನಾಡಿನ ಸಾಹಿತ್ಯದ ಸರ್ವೋಚ್ಚ ಪ್ರಶಸ್ತಿ “ ಜ್ಞಾನಪೀಠ” ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಇದಕ್ಕೆ ಮೊದಲೇ ಪದ್ಮಭೂಷಣ, ಸಾಹಿತ್ಯ ಅಕಾಡಮಿ ಪ್ರಶಸ್ತಿ, ಗ್ರಾಮೀ ಅವಾರ್ಡ್…ದಾದಾ ಸಾಹೆಬ ಫಾಲ್ಕೆ ಪ್ರಶಸ್ತಿ…. ಮುಂತಾದ ಪ್ರತಿಷ್ಠಿತ ಪ್ರಶಸ್ತಿಗಳು..
ಈ ಯುಗದ ಸರ್ವಶ್ರೇಷ್ಠ ಉರ್ದು ಭಾಷೆಯಲ್ಲಿ ಬರೆಯುವ ಭಾರತೀಯ ಕವಿಗಳಲ್ಲಿ ಒಬ್ಬರು ಎಂಬ ಮಾನ್ಯತೆಯೂ ಇವರಿಗೆ ಇದೆ.
ರಾವೀ ಪಾರ್… ಈ ಕಥೆಯು ಲೇಖಕರಾದ ಗುಲ್ಝಾರ್ ರ ನಿಜಜೀವನದಲ್ಲಿ ನಡೆದ ಘಟನೆಯನ್ನು ಆಧರಿಸಿದ್ದು ಎಂದು ಹೇಳುತ್ತಾರೆ. ಭಾರತ-ಪಾಕಿಸ್ತಾನದ ವಿಭಜನೆಯ ಸಮಯದಲ್ಲಿ ಹಿಂದುಸ್ತಾನಕ್ಕೆ ವಲಸೆ ಬರುತ್ತಿದ್ದಾಗ ಲೇಖಕರನ್ನು ತಮ್ಮ ಸ್ವಂತ ಮಗುವೆಂದು ಮತ್ತೊಂದು ಕುಟುಂಬ ತಪ್ಪಾಗಿ ಅಂದುಕೊಂಡಿದ್ದನ್ನು ಆಧರಿಸಿದ್ದು ಎನ್ನುತ್ತಾರೆ.
ರಾವೀ ಪಾರ್ – ಇದು ಗುಲ್ಝಾರರ ಸಣ್ಣಕಥೆಗಳ ಇದೇ ಹೆಸರಿನ ಸಂಗ್ರಹದಲ್ಲಿನ ಮೊದಲ ಕಥೆ.
ವಿಭಜನೆಯ ಸಂದರ್ಭದ ಕಟುವಾಸ್ತವದ ಮತ್ತು ಇತರ ಮನಕರಗುವ ಅನೇಕ ಭಾವುಕ ಕಥೆಗಳು ಇದರಲ್ಲಿವೆ. ಸರಳವಾದ ಉರ್ದು ಶಬ್ದಗಳ ಸಮೃದ್ಧಿಯ, ಆಡುಮಾತಿನಲ್ಲೇ, ಸೂಕ್ಷ್ಮವಾದ ವಿವರಣೆಗಳು ಈ ಕಥೆಗಳ ವೈಶಿಷ್ಟ್ಯ ಎನ್ನಬಹುದು.