ಪನ್ನೀರುದಾನಿ

ಪನ್ನೀರುದಾನಿ

ನನ್ನ ತಮ್ಮನ ಮಗಳ ಮದುವೆ ಗೊತ್ತಾಗಿತ್ತು. ಮದುವೆಯ ದಿನಾಂಕವೂ ನಿಗದಿಯಾಗಿತ್ತು. ನನ್ನ ತಮ್ಮನ ಹೆಂಡತಿ ನಮ್ಮಮ್ಮನಿಗೆ ಅಂದರೆ ಅವರತ್ತೆಮ್ಮನವರಿಗೆ ಫೋನ್‌ ಮಾಡಿ ವಿಷಯತಿಳಿಸಿದ ಮೇಲೆ “ ಅಮ್ಮ ನೀವು ಬರುವಾಗ ನಿಮ್ಮ ಹತ್ರ ಇರೋ ಬೆಳ್ಳಿ ಪನ್ನೀರ್‌ ದಾನಿ ತೆಗೊಂಡು ಬನ್ನಿ.. “ ಅಂತಾ ಹೇಳ್ತಿದ್ಲು. ಅದನ್ನು ಕೇಳಿ ನನಗೆ ಈ ಶಬ್ದ… ಮತ್ತದು ಸಂಕೇತಿಸುವ ವಸ್ತು…. ಎರಡನ್ನೂ ಕಲ್ಪಿಸಿಕೊಳ್ಳಲು ಸ್ವಲ್ಪ ಸಮಯವೇ ಹಿಡಿಯಿತು. ಪದ-ಪದಾರ್ಥಗಳು ಒಂದನ್ನೊಂದ ಬಿಟ್ಟರೆ ಎರಡಕ್ಕೂ ಉಳಿಗಾಲವೇ ಇಲ್ಲ ತಾನೇ ? ನಾನಿಲ್ಲಿ ಹೇಳ್ತಾ ಇರೋ ಪದಾರ್ಥ ಅಂದರೆ ವಸ್ತು ಅಂತಾ. ಹಾಗೆಯೇ ಒಂದು ಪದವನ್ನೋ ಅಥವಾ ಒಂದು ಪದಾರ್ಥವನ್ನೋ ಬಹಳ ದಿನ ಕೇಳದೆ-ನೋಡದೇ ಇದ್ದರೂ ಅವೆರಡೂ ನಮ್ಮ ಮನ-ಮಸ್ತಿಷ್ಕಗಳಿಂದ ಮರೆಯಾಗಿ ಬಿಡುತ್ತವೇನೋ. ಮರೆಯಾಗಿರುತ್ತವೆ ಅಷ್ಟೆ. ಸ್ಮೃತಿ ಅನ್ನುವ ವಾಸನೆಯಿಂದ ಹೋಗಿರುವುದಿಲ್ಲ ಅನ್ಸತ್ತೆ. ಹಾಗಾಗಿ ನೆನಪಿನ ಚಕ್ರವನ್ನು ಹಿಂದಕ್ಕೆ, ಹಿಂದಕ್ಕೆ ತಿರುಗಿಸ್ತಾ ಹೋದೆ…. ಕಣ್ಮುಂದೆ ಬಂತು ಪನ್ನೀರ್‌ ದಾನಿಯ ರೂಪ.

ಇತ್ತೀಚೆಗೆ ಈ ಪನ್ನೀರದಾನಿಯನ್ನು ನಾನು ನೋಡೇ ಇಲ್ಲ. ಬೆಳ್ಳಿ ಅಂಗಡಿಗಳಲ್ಲೂ ಜಾಸ್ತಿ ಕಣ್ಣಿಗೆ ಬಿದ್ದಂತಿಲ್ಲ. ಹಿಂದೆಲ್ಲ ಸ್ವಲ್ಪ ಸ್ಥಿತಿವಂತರ ಮನೆಗಳಲ್ಲಿ ಪೂಜೆ, ಮದುವೆಯಂತಹ ಮಂಗಳಕಾರ್ಯಗಳಲ್ಲಿ ಬಳಕೆಯಾಗ್ತಿದ್ದ ಬೆಳ್ಳಿ ಸಾಮಾನುಗಳ ಗುಂಪಿನಲ್ಲಿ ಹೂವಿನಬುಟ್ಟಿ, ಪನ್ನೀರದಾನಿಗಳೂ ಇರ್ತಿದ್ವು. ಒಮ್ಮೊಮ್ಮೆ ಅಪರೂಪಕ್ಕೆ ಸ್ಥಿತಿವಂತರಲ್ಲದವರಿಗೂ ಇವು ಉಡುಗೊರೆಯಾಗಿ ಬಂದು, ಇವರ ದರ್ಜೆಯನ್ನೂ ಒಂದಂಗುಲದಷ್ಟು ಏರಿಸ್ತಿದ್ವು. ನಮ್ಮಮ್ಮನ ಬಳಿಗೂ ಇದು ಉಡುಗೊರೆಯಾಗೇ ಬಂದಿದ್ದು. ಅದನ್ನೇ ನನ್ನ ನಾದಿನಿ ತೆಗೊಂಡು ಬರಲು ಹೇಳ್ತಾ ಇದ್ದಿದ್ದು.
ಅಲ್ಲಾ ಮಾತಾಡುವಾಗ ಎದುರು ನಿಂತವರಿಗೆ ಉಚ್ಚಿಷ್ಟಸಿಂಚನ – ಅದೇ ಉಗುಳುಹಾರಿಸೋದು.. ಮಾಡೋರಿಗೆ ಪನ್ನೀರದಾನಿ ಅಂತಾ ಅಡ್ಡಹೆಸರಿಟ್ಟು ಕರೆದು ತೃಪ್ತಿ ಪಡೋದು ಗೊತ್ತು. ಇದ್ಯಾವ ಪನ್ನೀರದಾನಿ ಸ್ವಾಮಿ.. ಅಂತಾ ನೀವು ಪ್ರಶ್ನೆ ಕೇಳ್ತೀರಿ ಅಂತಾ ಗೊತ್ತು. ಅದಕ್ಕೆ ಹೇಳ್ತಾ ಇದೀನಿ…. ಈ ಅಡ್ಡಹೆಸರಿರುವವರು ಮಾಡೋ ಕೆಲಸಾನೇ ನಾನು ಹೇಳೋ ಪನ್ನೀರದಾನಿನೂ ಮಾಡೋದು. ಅಲ್ಲ ಅಲ್ಲ…. ಪನ್ನೀರದಾನಿ ಮಾಡೋಕೆಲಸ ನೋಡೇ ಇವರಿಗೆ ಹೆಸರು ಬಂದಿದ್ದು ಅನ್ನೋದೇ ಹೆಚ್ಚು ಸರಿ. ಒಂದೇ ವ್ಯತ್ಯಾಸ ಪನ್ನೀರದಾನಿ ಸೊಗಸಾದ ಗುಲಾಬಿಜಲವನ್ನೋ, ಅತ್ತರಿನಿಂದ ಸುವಾಸಿತವಾದ ಜಲವನ್ನೋ ಸಿಂಪಡಿಸಿ ಆಹ್ಲಾದ ಉಂಟುಮಾಡತ್ತೆ. ಪನ್ನೀರದಾನಿ ಅಡ್ಡಹೆಸರಿನವರೆಗೆಲ್ಲಿ ಆ ಭಾಗ್ಯ ? ಅಬ್ಬಬ್ಬಾ ಎಂದರೆ “ ತಂಬೂಲ ಸೂಸೆ ನಗುವಷ್ಟು ತಾಂಬೂಲಸೇವನೆಯಾಗಿದ್ದರೆ ಬಣ್ಣದ ಪಿಚಕಾರಿಯಂತೆ ಎದುರಿನವರ ಮೋರೆ-ಬಟ್ಟೆಬರೆಗಳಿಗೆಲ್ಲ ಬಣ್ಣದ ಚುಕ್ಕೆ ಸಿಂಪಡಿಸಬಹುದಷ್ಟೆ. ಆದರೂ ನಮ್ಮಲ್ಲಿ ಅಡ್ಡ ಹೆಸರಿಡೋರಿದ್ದಾರಲ್ಲ ಇವರು ಮಹಾಗಟ್ಟಿಗರು. ಹಲ್ಲುಬ್ಬರಿಗೆ ಈಳಿಗೆಮಣೆ ಅನ್ನೋದು. ಸಿಕ್ಕಾಪಟ್ಟೆ ದಪ್ಪ ಇರೋರ ಉಡುಪನ್ನು ಆನೆಚಡ್ಡಿ ಅನ್ನೋದು…. ಅಬ್ಬಾ ಒಂದೇ ಎರಡೇ… ಈ ಪ್ರತ್ಯುತ್ಪನ್ನ ಮತಿಗಳ ಪ್ರತಿಭಾವಿಲಾಸಕ್ಕೆ ನಾನೇನೊ ಶರಣು ಅಂತೀನಿ. ಅದೂ ಒಂದು ರಸಕ್ರೀಡೆ…ಹಾಸ್ಯರಸಕ್ರೀಡೆ… ಯಾರಮನಸ್ಸನ್ನೂ ನೋಯಿಸದಂತೆ ಆಡಬೇಕಷ್ಟೆ. ಪನ್ನೀರದಾನಿ ಎಲ್ಲೋ ಹಿಂದಾಯ್ತು. ಇಷ್ಟೆಲ್ಲಾ ಬರೆಯೋಕೆ ಮೂಲವಾದ್ದು ನನ್ನ ತಮ್ಮನ ಮಗಳಮದುವೆಗೆ ಬಂದಿಳಿಯ ಬೇಕಾಗಿದ್ದ ಪನ್ನೀರುದಾನಿ. ನಮ್ಮಮ್ಮನೂ ಬಹಳ ಅಚ್ಚೆ-ಮುಚ್ಚಟೆಯಿಂದ ಅದನ್ನು ಒಂದು ಬಿಳಿಬಟ್ಟೇಲಿ ಸುತ್ತಿ ಏಟಾಗದಂತೆ, ಹೊಳಪಳಿಯದಂತೆ ಮೊಮ್ಮಗಳ ಮದುವೆಗೆ ತಂದಳು. ಹಾಗೆ ಸವಾರಿ ಬಂದ ಅದು ಮದುವೆಮನೇಲಿ ಏನು ಮಾಡ್ತು ಅಂತೀರಾ? ಅದಕ್ಕೆ ಒಂದೇ ದಿನ ಕೆಲಸವಿದ್ದದ್ದು. ವರಪೂಜೆದಿನ ಛತ್ರದ ಬಾಗಿಲಿಗೆ ಬಂದಿಳಿಯೊ ಬೀಗರು ಮತ್ತವರ ಕಡೆಯವರಿಗೆ ಪನ್ನೀರನ್ನು ಸಿಂಪಡಿಸಿ ಎದುರುಗೊಳ್ಳೋ ದಿನ ಮಾತ್ರ ಅದಕ್ಕೆ ಕೆಲಸ. ಅದನ್ನು ನನ್ನ ನಾದಿನಿ ಬಹಳ ಪ್ರೀತಿಯಿಂದ, ಬೇರೆ ಯಾವ ಕೆಲಸವನ್ನು ಮರೆತರೂ, ಇದನ್ನು ಮರೆಯದೆ ಮಾಡಿದಳು. ಆಮೇಲೆ ಅದನ್ನು ಕ್ಯಾರೇ ಅನ್ನೋರಿರಲಿಲ್ಲ. ಅದರ ಆಕಾರವೂ ಹಾಗೆ, ಸ್ವಲ್ಪ ಕೈತಗುಲಿದರೆ ಉರುಟಿಕೊಳ್ಳೋ ಹಾಗೆ. ಅರಿಶಿನಕುಂಕುಮದ ತಟ್ಟೆಲಿ ಇಟ್ರೆ ಬೀಳೋದರಿಂದ ಅದನ್ನು ಅಲ್ಲೇ ಪಕ್ಕದಲ್ಲಿ ಪ್ರತಿಷ್ಠೆ ಮಾಡಿ ಕೂರ್ಸೋದಷ್ಟೆ.

ಅದರ ಆಕಾರ ಬಹಳ ವಿಶೇಷವಾಗಿ, ಎದ್ದು ಕಾಣೋ ಹಾಗೆ ಇರತ್ತೆ. ಕೆಳಗೆ ಒಂದಿಷ್ಟು ಕಲೆಯ ಕುಸುರಿಕೆಲಸ ಮಾಡಿದ ಬುದ್ದಲಿ ತರಹ. ಅದಕ್ಕೊಂದು ಸಣ್ಣ ಪೀಠ. ಮೇಲೆ ಉದ್ದಕ್ಕೆ ಹೊರಟ ಬೆಳ್ಳಿ ಕೊಳವೆ. ಅದು ತುದಿಯಲ್ಲಿ ಸ್ವಲ್ಪ ಹೂವಿನಂತೆ ಅರಳಿ ಸುತ್ತ ರಂಧ್ರಗಳನ್ನೊಳಗೊಂಡಿರುತ್ತದೆ. ಇಲ್ಲ ಆ ಕೊಳವೆಗಳು ತುದಿಯಲ್ಲಿ ಸ್ವಲ್ಪ ಬಾಗಿದ ಹೂವಿರುವ ದಂಟಿನಂತೆ ಇರುತ್ತದೆ. ಈ ಕೊಳವೆ ಮತ್ತು ಕೆಳಗಿನ ಬುದ್ದಲಿ ( ಚಿಕ್ಕ ಸ್ಥಾಲಿಯಂಥಹದು) ಎರಡೂ ಬಿಚ್ಚಿ ಜೋಡಿಸುವಂತೆ ಇರುತ್ತದೆ. ಸುಗಂಧಭರಿತವಾದ ನೀರನ್ನು ಕೆಳಗಿನ ಬುದ್ದಲಿಯಲ್ಲಿ ತುಂಬಿಸಿ, ತಿರುಗಣೆಯ ತಿರುಪಿರುವ ಮೇಲಿನ ಕೊಳವೆಯನ್ನು ಜೋಡಿಸಿದರೆ ಆಯ್ತು. ಒಡಲತುಂಬಾ ಪರಿಮಳವನ್ನು ತುಂಬಿಕೊಂಡು, ಬೇಕಾದವರ ಮೇಲೆ ತುಳುಕಿಸುತ್ತಾ ಸುಗಂಧಾನುಭವವನ್ನು ಹಂಚಲು ಸಿದ್ಧವಾಯ್ತು ಅಂತಲೇ. ಸುಗಂಧಬ್ರಹ್ಮದಂತೆ. ಮದುವೆ ಮನೇಲಿ ಬಿಟ್ಟರೆ ಇದರ ಉಪಯೋಗ ಬೇರೆಕಡೆ ಇದ್ದದ್ದು ನಾನು ನೋಡಿಲ್ಲ.

ಈ ಪನ್ನಿರದಾನಿಯು ನನಗೆ ತಿಳಿದಂತೆ ನಮ್ಮ ದಕ್ಷಿಣದೇಶಕ್ಕಿಂತ ಉತ್ತರದೇಶದಲ್ಲಿ ಹೆಚ್ಚು ಬಳಕೆಯಲ್ಲಿತ್ತು ಅನ್ಸತ್ತೆ. ಅದೂ ಮುಸಲ್ಮಾನರ ಅತ್ತರ್‌ ಸಂಸ್ಕೃತಿ ನಮ್ಮ ದೇಶದಲ್ಲಿ ಬೇರುಬಿಟ್ಟ ಮೇಲೆಯೆ ಹೆಚ್ಚು ಬಳಕೆಗೆ ಬಂತೋ ಏನೋ. ಇತಿಹಾಸ ಬಲ್ಲವರು ಹೇಳಬೇಕು. ಇವತ್ತು ಕೂಡ ಮುಗಲಾಯಿ ಚಿತ್ರಕಲೆಗಳಲ್ಲಿ ಈ ಪನೀರದಾನಿ ಇರೋದನ್ನು ಕಾಣಬಹುದು. ಡಿ.ವಿ. ಜಿಯವರ ಜ್ಞಾಪಕಚಿತ್ರಶಾಲೆಯ ಕಲೋಪಾಸಕರು ಸಂಪುಟದಲ್ಲಿ ಈ ಪನ್ನೀರದಾನಿಯ ಉಲ್ಲೇಖ ಬರುತ್ತದೆ. ಈ ಸಂಪುಟದಲ್ಲಿ ಬೆಂಗಳೂರಿನ ನಾಗಸ್ವರ ವಿದ್ವಾಂಸರ ಬಗ್ಗೆ ಬರೆಯುತ್ತಾ ಡಿ.ವಿ.ಜಿ ಯವರು ಮರಾಠೀ ಜನರು ಆಚರಿಸುತ್ತಿದ್ದ ಗಣೇಶಚೌತಿಯ ಮತ್ತು ಆಗ ಅವರು ಏರ್ಪಡಿಸುತ್ತಿದ್ದ ಸೊಗಸಾದ ಮೇಳದೊಂದಿಗೆ ಮಾಡುತ್ತಿದ್ದ ಮೆರವಣಿಗೆಯನ್ನು ವರ್ಣಿಸ್ತಾ ಅವರಲ್ಲಿ ಪ್ರಮುಖರಾದವರು ಪನ್ನೀರುದಾನಿಯನ್ನೂ, ಹೂವಿನಹಾರವನ್ನೂ ಕೈಯಲ್ಲಿ ಹಿಡಿದು ದಾರಿಯಲ್ಲಿ ಅವರಿಗೆ ಕಾಣಬರುತ್ತಿದ್ದ ದೊಡ್ಡ ಮನುಷ್ಯರಿಗೆಲ್ಲ ಹೂ ಗಂಧಗಳನ್ನು ಸಮರ್ಪಿಸುತ್ತಿದ್ದರು ಅಂತಾ ಹೇಳ್ತಾರೆ. ಅಲ್ಲಿಗೆ ಪನ್ನೀರುದಾನಿಯ ಕೆಲಸ ಬಹಳ ಸೀಮಿತ ಮತ್ತು ವಿಶೇಷ ಅನ್ನೋದಂತು ಖಾತ್ರಿ.

ನಮ್ಮ ಕಾವ್ಯಗಳಲ್ಲಿ ಎಲ್ಲಾದರು ಪನ್ನೀರು ದಾನಿಯ ಉಲ್ಲೇಖವಿದೆಯೇ ? ನಾನು ಓದಿರುವ ಒಂದು ನಾಲ್ಕಾರು ಕಾವ್ಯಗಳಲ್ಲಿ ಕಂಡಂತಿಲ್ಲ. ಕುಮಾರವ್ಯಾಸ ಭಾರತದಲ್ಲಿ ದ್ರೌಪದಿಯ ಸ್ವಯಂವರಮಂಡಪದಲ್ಲಿ ಸಾಲಭಂಜಿಕೆಗಳೇ ಪರಿಮಳಿತವಾದ ಸುಗಂಧದ ತುಹಿನ ರೇಣುಗಳನ್ನು ಎಲ್ಲರ ಮೇಲೆ ಸಿಂಪಡಿಸುವಂತೆ ಸೂತ್ರಿಸಿ ರಚಿಸಿದ್ದರು ಅಂತಾ ವರ್ಣನೆ ಮಾಡಿದ್ದಾನೆ. ದ್ರೌಪದಿಯ ಸ್ವಯಂವರಕ್ಕೆ ಎಂಥೆಂಥವರೆಲ್ಲಾ ಬಂದಿದ್ದರು. ವಯಸ್ಸು ಗಿಯಸ್ಸು ಅಂತಾ ನೋಡ್ದೆ ಬಂದಿದ್ದರು. ಇಂಥ ವಿಚಿತ್ರವನ್ನೆಲ್ಲ ನೋಡ್ತಾ, ಅಲ್ಲಿ ನಡೆಯೋ ದಾನ-ಧರ್ಮಗಳಿಂದ ಸಾಧ್ಯವಾದಷ್ಟು ಲಾಭ ಮಾಡಿಕೊಳ್ಳೋಣ ಅಂತಾ ಬಂದಿದ್ದೋರು… ಇನ್ನು ಯಾರ್ಯರೋ… ಅಂತೂ ದೊಡ್ಡ ಜನಸಂದಣಿ. ಅಂಥಾ ಜನಸಂದಣಿಗೆ ನಾನು ಹೇಳೋ ಪನ್ನೀರುದಾನಿ ಸಾಕಾಗತ್ಯೇ ? ಅದಕ್ಕೆ automation ಮಾಡಿ ಬಿಟ್ಟಿದ್ರು ಅನ್ಸತ್ತೆ. ಇಷ್ಟಲ್ಲದೆ ಪನ್ನೀರನ್ನು ಕೊಪ್ಪರಿಗೆಗಳಲ್ಲಿ ಸಿದ್ಧಪಡಿಸಿಟ್ಟಿದ್ರಂತೆ. “ ನವಯಂತ್ರಮಯ ಪುತ್ಥಳಿಗಳೇ ನೀಡುವವು ಬೇಡಿದರಿಗೆ ಸುವಸ್ತುಗಳ “ ಅಂತಾ ಅಲ್ಲಿನ ವೈಭವವನ್ನು ಹೇಳಿದೆ ಗದುಗಿನ ಭಾರತ. ಒಟ್ಟಿನಲ್ಲಿ ಪನ್ನೀರಿಲ್ಲದ ಮದುವೆಯಿಲ್ಲ. “ ಉಳ್ಳವರು ಶಿವಾಲಯವ ಮಾಡುವರು “ ಎನ್ನುವಂತೆ ದ್ರುಪದ ಸಾಲಭಂಜಿಕೆಗಳನ್ನೇ ಪನ್ನೀರುದಾನಿಯಾಗಿಸಿದ್ದ. ಈಗೆಲ್ಲ ಅನುಕೂಲಸ್ಥರ ಮದುವೆಯಲ್ಲಿ ದೊಡ್ಡ ದೊಡ್ಡ ಛತ್ರದ ಬಾಗಿಲಲ್ಲೇ ಸುಗಂಧಿತವಾದ ತುಂತುರನ್ನು ಅಸಾಧ್ಯವಾಗಿ ಸದ್ದು ಮಾಡುತ್ತಾ ಬಂದವರಮೇಲೆಲ್ಲಾ ಎರಚುವ ಫ್ಯಾನ್‌ ಗಳನ್ನು ಇಟ್ಟಿರ್ತಾರಲ್ಲ ಹಾಗೆ. ಆದರೆ ದ್ರುಪದನಿಗೆ ಸ್ವಲ್ಪ ರಾಸಿಕ್ಯವಿತ್ತು ಅನ್ಸತ್ತೆ. ಅದಕ್ಕೆ ಸಾಲಭಂಜಿಕೆಗಳನ್ನು ಸಾಲಾಗಿ ನಿಲ್ಲಿಸಿದ್ದ. ಆದರೆ ನಾವು ಬಡಪಾಯಿಗಳು ಈ ಹಸ್ತಚಾಲಿತ ಪನ್ನೀರುದಾನಿಯನ್ನೇ ಹಿಡಿಯಬೇಕು. ಈ ನಮ್ಮ ಪನ್ನೀರುದಾನಿಯಿಂದ ಸುಗಂಧ ಸಿಂಪಡಣೆ ಮಾಡುವಾಗ ಎದುರಿನವರ .. ಅದರಲ್ಲೂ ಬೀಗರ ತಲೆಗೆ ತಗುಲಿ, ತೂತಾಗಿ ಎಡವಟ್ಟಾಗದಂತೆ ಎಚ್ಚರವಹಿಸ ಬೇಕಷ್ಟೆ.

ಹೂವು-ಗಂಧ ಕೊಡೋದು ಅತಿಥಿ ಸತ್ಕಾರದ ಒಂದು ಕ್ರಮವೇ. ಇದನ್ನು ನಾವು ನಮ್ಮ ಎಲ್ಲಾ ಆಚರಣೆಗಳಲ್ಲೂ ಕಾಣ್ತೀವಿ. ಹಿಂದೆಲ್ಲಾ ಗಣಪತಿ ಮಂಗಳಾರತಿ, ಅನಂತನ ಮಂಗಳಾರತಿ ಅಂತೆಲ್ಲ ಮನೆಗೆ ಕರೆದಾಗ ಹೆಂಗುಸರಿಗೆ ಅರಶಿನ ಕುಂಕುಮದ ಜೊತೆ ಗಂಧದ ಬಟ್ಟಲಲ್ಲಿರುತ್ತಿದ್ದ ಗಂಧದ ನೀರನ್ನು ಕೊಡುತ್ತಿದ್ದರು. ಆಮೇಲೆ ಮಾಡಿದ ಚರ್ಪು-ಗಿರ್ಪು. ಎಲಡಿಕೆ ಬಾಗಿನ ಎಲ್ಲ . ಗಂಡಸರಿಗೂ ಸಹ ಕೈಗೆ ಗಂಧ ಕೊಟ್ಟು, ಹೂವು ಕೊಟ್ಟು ಆಮೇಲೆ ಎಲಡಿಕೆ ಕೊಡ್ತಾ ಇದ್ದದ್ದು. ಈಗ ಈ ಆಚರಣೆಗಳು ಇಲ್ಲವೇ ಇಲ್ಲ ಎನ್ನುವಷ್ಟು ಕಡಿಮೆಯಾಗಿದೆ. ನಮ್ಮ ಈ ಆಚರಣೆಗಳೆಲ್ಲಾ ಕಷ್ಟ-ಸುಖಗಳಿಂದ ಕೂಡಿದ ನಿತ್ಯ ಜೀವನದಲ್ಲಿ ಒಂದು ಸೊಬಗನ್ನು, ಸಂತಸವನ್ನು, ರುಚಿಯನ್ನು ಉಂಟುಮಾಡುತ್ತಿದ್ದವು. ಈಗಿನ ಸೊಬಗು ಸಂತಸಗಳ ರೀತಿ ನೀತಿಗಳು ಬೇರೆಯಾಗಿವೆ.
ಕೊನೆಯ ಮಾತು. ಸುಮ್ಮನೆ ಕುತೂಹಲಕ್ಕೆ ಗೂಗಲ್‌ ಗುರು ಹತ್ರ ಪನ್ನೀರದಾನಿ ಬಗ್ಗೆ ಕೇಳಿದೆ. ಅದರ ಬಗ್ಗೆ ಮಾಹಿತಿ ಏನೂ ಕೊಡದೇ ಹೋದರೂ, ಅಮೇಜಾನ್‌ ನಲ್ಲಿ ಬಗೆಬಗೆಯ, ಕಲಾತ್ಮಕವಾದ ಜರ್ಮನ್‌ ಸಿಲ್ವರ್‌ ಪನ್ನೀರದಾನಿಯ ಮಾರಾಟದ ಭರ್ಜರಿ ಮಾಹಿತಿ ಸಿಗ್ತು. ಅಲ್ಲಿಗೆ ಈ ಪನ್ನೀರದಾನಿ ಇನ್ನೂ ಚಾಲ್ತಿಯಲ್ಲಿದೆ ಎಂದಾಯ್ತು.

ಶಾಂತಾ ನಾಗಮಂಗಲ