ಲಂಗೋಟಿ ಮೆರವಣಿಗೆ

ಲಂಗೋಟಿ ಮೆರವಣಿಗೆ

ಹಿಂದೆ ಯಾವಾಗಲೋ ನಮ್ಮ ಮಂಡ್ಯದ ವೀರಕೃಷಿಕರು ಚಡ್ಡಿ ಮೆರವಣಿಗೆ ಮಾಡಿ ಪ್ರತಿಭಟಿಸಿದ್ದನ್ನು ಓದಿದ್ವು. ಮಂಡ್ಯದ ರೈತರು ದಿನಾ ಹಾಕೋಳೋ ಉಡಿಗೆನೇ ಚಡ್ಡಿ, ಮೇಲೊಂದು ಅಂಗಿ. ಆದರೂ ಹೊಸ ಚಡ್ಡಿ ಹಾಕ್ಕೊಂಡು ಮೆರವಣಿಗೆ ಮಾಡಿದ್ದಂತೂ ನಿಜ. ಅದು ಸರಿ. ಇದೇನು ಲಂಗೊಟಿ ಮೆರವಣಿಗೆ… ಯಾವಾಗ ನಡೆದದ್ದು ? ಯಾರು ಮಾಡಿದ್ದು ಅಥವಾ ಮಾಡ್ಸಿದ್ದು ? ಯಾವ ರಾಜಕೀಯ ಪಕ್ಷದ ಹೊಸ ಪ್ರತಿಭಟನಾ ತಂತ್ರ ? …. ಸಾಲು ಸಾಲು ಪ್ರಶ್ನೆಗಳ ಇರುವೆಗೂಡು ತಲೆಯೊಳಗೆ ಬಿಟ್ಟಂತಾಗಿರಬಹುದು ಅಲ್ವಾ… ಈ ಶೀರ್ಷಿಕೆ ನೋಡ್ತಾ ಇದ್ದಂತೆಯೇ. ಸದ್ಯಕ್ಕೆ ಯಾವ ಪಕ್ಷದವರ ಹುನ್ನಾರವೂ ಅಲ್ಲ ಅಂತಾ ಮೊದಲೇ ಡಿಸ್ಕ್ಲೈಮರ್‌ ಹಾಕ್ತಾ ಇದ್ದೀನಿ. ಜೊತೆಗೆ “ ಗಂಡ್ಸಿಗ್ಯಾಕೆ ಗೌರಿ ದುಕ್ಕ” ಅನ್ನೋ ಹಾಗೆ ಇವಳಿಗ್ಯಾಕೆ ಈ ಲಂಗೋಟಿ ತಂಟೆ ಅಂತಾನೂ ಅನ್ಸಿರಬಹುದು. ಯಾಕೆ ನನಗೆ ಈ ಲಂಗೋಟಿಯ ಕಂತೆಯ ಚಿಂತೆ ಅನ್ನೋದು ನಿಮಗೆ ತಿಳಿಸೋಕೆ ಬರೀತಾ ಇರೋದು. ನಾನು ಈಗ ಹೇಳಬೇಕು ಅಂತಾ ಹೊರಟಿರೋ ಮೆರವಣಿಗೆ.. ನಿಜವಾಗಿಯೂ ನಾವೆಲ್ಲಾ ನೋಡಿರುವಂಥಹ ಬಹುಜನರು ಕೂಡಿ ಸಾಗುವ ಮೆರವಣಿಗೆ ಏನಲ್ಲ. ಇದು ಏಕವ್ಯಕ್ತಿ ಪ್ರದರ್ಶನ.

ಓ… ಸರಿ ಸರಿ. ಯಾರೋ ಅವಧೂತರ ವಿಷಯ ಬರೀತಾ ಇದೀರಿ ನೀವು ಹಾಗಿದ್ರೆ… ಅಂತೆಲ್ಲಾ ಅತಿ ಬುದ್ಧಿವಂತಿಕೆಯ ಊಹೆಗಳನ್ನೇನಾದರೂ ನೀವಾಗಲೇ ಮಾಡಿಯೇ ಇರ್ತೀರಿ. ನೀವು ಎಷ್ಟೇ ಬುದ್ಧಿವಂತರಾದರೂ, ಎಷ್ಟೇ ಅಳೆದೂ ಸುರಿದೂ ಊಹೆ ಮಾಡಿದ್ದರೂ… ಊ ಹುಂ… ನಿಮ್ಮ ಈ ಊಹೆಯೂ ಸರಿ ಅಲ್ಲ. ಯಾಕೆ ಅಂತೀರಾ… ನಾನು ಬರೀತಾ ಇರೋದು ನಮ್ಮ ತಾತ ಹೆಚ್ಚುಕಡಿಮೆ ನಿತ್ಯವೂ ಮಾಡ್ತಾ ಇದ್ದ ಬೆಳಗಿನ ಮೆರವಣಿಗೆ ಬಗ್ಗೆ. ಪಾಪ ಅದು ಅವರ ನಿತ್ಯಕರ್ಮದ ಒಂದು ಭಾಗವಾಗಿತ್ತು. ನನಗೆ ಈಗ…ನಮ್ಮ ತಾತನ ಆ ಚರ್ಯೆ ಮೆರವಣಿಗೆಯಾಗಿ ಕಾಣುವ ಕುಬುದ್ಧಿಯೋ ಕುಹಕದ ಬುದ್ಧಿಯೋ ಹುಟ್ಟಿದೆ ನೋಡಿ. ಏನಿದು ಮಂತ್ರಕ್ಕಿಂತ ಉಗುಳೇ ಜಾಸ್ತಿಯಾಯ್ತಲ್ಲ ನಿಮ್ದು… ಹೇಳೋದನ್ನು ಭಡಾನೆ ಹೇಳಿ ಮುಗಿಸೋದಪ್ಪ… ಏನ್‌ ಒಳ್ಳೇ ಸೀಮೆ ಅಕ್ಕಿಪಾಯಸದ ತರಾ ಎಳೀತಾರೆ… ಅಂತಾ ನೀವು ಮನಸ್ಸಲ್ಲಾದರೂ ಅಂದುಕೊಂಡಿರ್ತೀರಾ ಗೊತ್ತು…

ನೆಟ್ಟಗೆ ಗಣೇ ಮರದ ತರಹ, ಅನ್ನಶುದ್ಧಿಗೆ ಅಂತ ಸೌಟುಗಾತ್ರದ ಚಮಚದಲ್ಲಿ ತುಪ್ಪ ಹಾಕಿಕೊಂಡು ಊಟಮಾಡ್ತಿದ್ರೂ ಎಲ್ಲೂ ಒಂದು ಗ್ರಾಂ ಹೆಚ್ಚು ಅನ್ನುವಂತಹ ಕೊಬ್ಬು ಸೇರದೆ ಒಳ್ಳೆ ಚಕ್ಕೆತರಹದ ಮೈಕಟ್ಟಿನ ಬ್ರಾಹ್ಮಣ, ಚುರುಕಿನ ಕರ್ಮಜೀವಿಯಾಗಿದ್ದ ನಮ್ಮ ತಾತನಿಗೆ ಕಳತ್ರಭಾಗ್ಯ ಇರಲಿಲ್ಲ. ಅಂದರೆ ಮದುವೆಯಾಗಿರಲಿಲ್ಲ ಅಂತೇನೂ ಅಲ್ಲ. “ನಷ್ಟಾ ಜಾಯಾ ಪುನರ್ಜಾಯಾ” ಎನ್ನುವಂತೆ ಒಂದು ಸಾಲ್ದು ಅಂತಾ ಎರಡು ಮದುವೆ. ಎರಡು ಮದುವೆಗಳಿಂದ ಸೇರು, ಅಚ್ಚೇರು, ಪಾವು, ಚಟಾಕು ಅಂತಾ ಸಂತಾನಭಾಗ್ಯವೇನೋ ಬೇಕಾದಷ್ಟು ಇತ್ತು. ಇಬ್ಬರು ಹೆಂಡಿರೂ ಬಹುಕಾಲ ಬಾಳದೇ ಅರ್ಧದಲ್ಲೇ ಮರಣಿಸಿ ಇವರನ್ನು ವಿಧುರರನ್ನಾಗಿಸಿಬಿಟ್ಟಿದ್ದರು. ಸಂಸಾರನೌಕೆಯ ಕರ್ಣಧಾರರಾಗಿದ್ದ ನಮ್ಮ ತಾತನಿಗೆ ಎಲ್ಲಾ ಕೆಲಸಗಳನ್ನೂ ಮಾಡಿಕೊಳ್ಳಬೇಕಾದ ಸ್ಥಿತಿ. ಒಂದು ರಸ್ತೆಗೆ ಮುಂಬಾಗಿಲು ಮತ್ತೊಂದು ರಸ್ತೆಗೆ ಹಿಂಬಾಗಿಲು ಇದ್ದ ದೊಡ್ಡ ಮನೆ, ತೋಟ, ಹಸುಕರು, ಜೊತೆಗೆ ಊರಿನ, ಸುತ್ತಲ ಹಳ್ಳಿಗಳ ಪುರೋಹಿತಿಕೆ… ಹೇಗೋ ಎಲ್ಲವನ್ನೂ ಸುಧಾರಿಸಿಕೊಂಡು ಬರುತ್ತಿದ್ದ ಕರ್ಮಯೋಗಿ. ಈ ಎಲ್ಲಾ ಕೆಲಸಗಳ ಒತ್ತಡವೋ, ಸ್ವಭಾವವೋ ಅಂತೂ ಸ್ವಲ್ಪ ಸಿಡುಕು. ಮುಂಗೋಪ. ಎಲ್ಲಾ ತಮ್ಮ ತಾಳಕ್ಕೆ ನಡೀಬೇಕು. ಎಲ್ಲಿವರೆಗೆ ಅಂದರೆ.. ಬೆಳಿಗ್ಗೆ ಹೊತ್ತಿಗೆಮುಂಚೆಯೇ ಎದ್ದು ಬಚ್ಚಲ ಹಂಡೆಗೆ ತೆಂಗಿನ ಸೋಗೆ, ಗೊದಮೊಟ್ಟೆಗಳನ್ನು ಒಟ್ಟಿ, ಚಳಿಗೆ ಹಿತವಾಗುವಂತೆ ಬೆಂಕಿಕಾಯಿಸಿಕೊಳ್ಳುತ್ತಾ, ಮುಕುಂದಮಾಲೆಯನ್ನೋ, ಮತ್ತಾವುದನ್ನೋ ಹೇಳುತ್ತಾ, ನೀರು ಕಾಯಿಸಿ,, ಬೆಳಗಿನ ಕೆಲಸಗಳು ಮುಗಿದು ದೇವರ ತಲೆಗೊಂದಿಷ್ಟು ನೀರು ಸುರಿದು ಪೂಜೆಮಾಡಿ , ಜೊತೆಜೊತೆಗೆ ಅಡುಗೆ ಒಲೇಲಿ ಹುರಳಿಯನ್ನೋ ಬೇಳೆಯನ್ನೋ ಬೇಯಕ್ಕೆ ಅಂತಾ ಇಟ್ಟಿರ್ತಿದ್ರು. ಇವರು ದೇವರಿಗೆ ಮಂಗಳಾರತಿ ಘಂಟೆ ಬಾರಿಸೋದನ್ನ ತಿಳಿದು ತಪ್ಪಲೇಲಿ ಕುದಿತೀರೋ ಬೇಳೆ ಬೆಂದಿರಬೇಕು. ಇಲ್ಲವೋ ಅವತ್ತು ಮನೆ ಮಕ್ಕಳಿಗೆ ತಲೆಒಡೆಯದ ಬೇಳೆ ಹುಳಿತಿನ್ನೋ ಭಾಗ್ಯ ಅಷ್ಟೇ..

ಹೀಗೆ ಜೀವನ ನಡೆಸಿಕೊಂಡು ಬರುತ್ತಿದ್ದ ತಾತನಿಗೆ ನಮ್ಮಮ್ಮ ಸೊಸೆಯಾಗಿ ಬಂದಮೇಲೆ ಅಡುಗೆ ಕಟ್ಟೆಯಿಂದ ಬಿಡುಗಡೆ. ಆದರೆ ಹುಟ್ಟಾ ಚಟುವಟಿಕೆಯವರಾದ ಅವರು ಮಿಕ್ಕ ಕೆಲಸಗಳನ್ನೇನೂ ನಿಲ್ಲಿಸಲಿಲ್ಲ. ತಮ್ಮ ಬಟ್ಟೆ ತಾವೇ ಒಗೆಯೋದು, ಮಡಿ ಹಾಕೋದು, ಮನೆಯ ಅಂಗಳದಲ್ಲಿ ತರಕಾರಿ ಬೆಳೆಯೋದು, ನಾವು ಮೊಮ್ಮಕ್ಕಳು ಸೀಬೆಮರ ಹತ್ತಿ ಕಾಯಿ ಕೀಳೋದನ್ನು ತಡೆಯೋದು, ನಮ್ಮನೆ ಕಾಂಪೌಂಡ್‌ ನೊಳಗೆ ಬೆಳೆದಿದ್ದ ಸೊಪ್ಪು ಸದೆ ಕದಿಯೋರನ್ನು ಓಡಿಸೋದು, ಸಂಜೆ ಬಾಯಿಪಾಠ ಹೇಳಿಕೊಡೋದು… ಎಲ್ಲವೂ ಇರ್ತಾನೆ ಇದ್ವು.

ತಮ್ಮ ಬಟ್ಟೆ ತಾವೇ ಒಗೆಯೋ ವ್ರತ ಹಿಡಿದಿದ್ದ ತಾತ, ಬಹುಪಾಲು ಮನೇಲಿ ಬಟ್ಟೆ ಒಗೀತಾ ಇರಲಿಲ್ಲ. ಆಗೆಲ್ಲಾ ತಪ್ಪದೇ ಮಳೆ ಆಗಿ ನಮ್ಮೂರ ಕೆರೆ ಹೆಚ್ಚುಕಡಿಮೆ ಪ್ರತಿವರ್ಷವೂ ಕೋಡಿ ಬಿದ್ದು, ತುಂಬಿಯೇ ಇರ್ತಿತ್ತು. ನಮ್ಮ ತಾತ ಬೆಳಗ್ಗೆ ಮುಂಚೆಯೇ ಉಟ್ಟ ಪಂಚೇಲೆ ಮೈಮೇಲೊಂದು ಶಾಲು ಹೊದ್ದು ಹೊರಟು, ಕೆರೆಗೆ ಹೋಗಿ ಬಟ್ಟೆ ಒಗೆದುಕೊಂಡು ಬರೋ ಅಭ್ಯಾಸ ಮಾಡ್ಕೊಂಡಿದ್ರು. ಒಗಿಬೇಕಾದ ಎರಡು ಬಟ್ಟೆಗಳು- ಒಂದು ಉಟ್ಕೊಳ್ಳೋದು, ಇನ್ನೊಂದು ಹೊದ್ಕೊಳ್ಳೋದು ಮೈ ಮೇಲೆ ಇರ್ತಿದ್ವು. ಕೆರೆಗೆ ಹೋಗಿ ಅಲ್ಲೇ ಬಟ್ಟೆ ಬಿಚ್ಚಿ, ಲಂಗೋಟಿಯಲ್ಲೇ ಕೆರೆಗಿಳಿದು ನಿಂತು ಒಗೆಯೋದು. ಒಗೆಯೋದು ಅಂದ್ರೆ ಏನು.. ಸೋಪೇ, ನೀಲಿನೇ… ಎಂಥದ್ದೂ ಇರ್ತಿರಲಿಲ್ಲ. ಅಲ್ಲೇ ಸೋಪಾನದ ಕಲ್ಲಿನಮೇಲೆ ಎರಡು ಕುಕ್ಕು ಕುಕ್ಕೋದು, ಚೆನ್ನಾಗಿ ಕೆರೆನೀರಲ್ಲಿ ಜಾಲ್ಸೋದು, ಹಿಂಡೋದು. ಒಗೀಬೇಕಾದಾಗ ಹಾಕ್ಕೊಂಡಿರ್ತಿದ್ದ ಲಂಗೋಟಿನಲ್ಲೇ, ಶಾಲು ಹೊದ್ದು ತಲೆ ಮೇಲೆ ಒಗೆದ ಬಟ್ಟೆ ಸಿಂಬಿ ಇಟ್ಕೊಂಡು ಕೆರೆ ಬೀದಿ ಹಾದು, ಇನ್ನೊಂದು ತುದೀಲಿದ್ದ ಮನೆಗೆ ನಡೆದುಕೊಂಡು ಬರೋದು ಅವರ ನಿತ್ಯದ ವಾಯುಸೇವನೆಯ ಕ್ರಮ. ಇವರು ಊರಲ್ಲಿ ಈ ವೇಷದಲ್ಲಿ, “ಕೌಪೀನವಂತಃ ಖಲು ಭಾಗ್ಯವಂತಃ “ ಅಂತಾ ಬರ್ತಾ ಇರ್ಬೇಕಾದ್ರೆ, ನಮ್ಮೂರಿನಲ್ಲಿ ನಲ್ಲಿನೀರು ಬರೋ ಹೊತ್ತಾಗಿರ್ತಿತ್ತು. ಆಗೆಲ್ಲಾ ನಮ್ಮೂರಲ್ಲಿ ನೀರಿಗೆ ಕಷ್ಟವಾಗಿ, ಎಲ್ಲರ ಮನೆಯ ಮುಂದೂ ಮೂರಡಿ-ನಾಲ್ಕಡಿ ಆಳಕ್ಕೆ ಗುಂಡಿ ತೋಡಿ, ನೀರಿನ ಮೇಯಿನ್‌ ಪೈಪ್‌ ಗೆ ತೂತು ಕೊರೆದು , ಅಲ್ಲಿಂದ ನೀರು ಹಿಡಿದು ಸ್ನಾನ-ಪಾನಾದಿಗಳಿಗೆ ಸಂಗ್ರಹಿಸ ಬೇಕಾಗಿತ್ತು. ಹಾಗಾಗಿ ಎಲ್ಲರ ಮನೆ ಹೆಂಗಸರಿಗೂ ಬೆಳಗಿನ ಹೊತ್ತು ನೀರಿನ ಗುಂಡಿಲೇ ಕೆಲಸ. ಇಂತಪ್ಪ ಈ ಗಂಗಾವತರಣದ ವೇಳೆಯಲ್ಲಿ ಭಗೀರಥನಂತೆ ನಮ್ಮ ತಾತ ಲಂಗೋಟಿ ವೇಷಧಾರಿಗಳಾಗಿ ಮೆರವಣಿಗೆಯಲ್ಲಿ ನಿಧಾನವಾಗಿ ಬರ್ತಾ ಇದ್ರೆ ನೋಡೊರಿಗೆ ಏನನ್ನಸ ಬೇಡ ? ದಾರಿಯಲ್ಲಿ ಸಿಗುವ ಗೆಳೆಯರೊಂದಿಗೆ ಕಷ್ಟ ಸುಖಗಳ ಸಂಕಥಾ ವಿನೋದವೂ ಆಗಬೇಕು. ಅಲ್ಲಲ್ಲಿ ಈ ಮೆರವಣಿಗೆಗೆ ಮಂಟಪೋತ್ಸವ ಬೇರೆ ಇರ್ತಿತ್ತು. ಎಷ್ಟೋ ಜನ ಹೆಂಗಸರೇ ಸಂಕೋಚದಿಂದ ಗುಂಡಿ ಹತ್ತಿ ಮನೆ ಒಳಗೆ ಹೋಗಿ ನಮ್ಮ ತಾತ ಅವರ ಮನೇನಾ ದಾಟಿ ಹೋಗೋದನ್ನು ಕಾದು ಮತ್ತೆ ಬಂದು ಗುಂಡಿ ಇಳಿತಿದ್ರು. ಪಾಪ ಎಷ್ಟೋ ಬಾರಿ ನಲ್ಲಿ ಕೆಳಗೆ ಇಟ್ಟಿದ್ದ ಬಿಂದಿಗೆಯೋ, ಬಕೆಟ್ಟೋ ತುಂಬಿ ನೀರೆಲ್ಲಾ ಹೊರಚೆಲ್ಲಿ, ನಲ್ಲಿ ಗುಂಡಿಯೆಲ್ಲ ಕೆಸರು ಗದ್ದೆ ಆಗಿಬಿಟ್ಟಿರ್ತಿತ್ತು. ಪಾಪ, ತಿರುಪೇ ಇರದ ನಲ್ಲಿಯ ತೂತಿಗೆ ಬಟ್ಟೆ ಗಿಡಿದು, ಕೆಸರುನೀರನ್ನು ಹೊರಚೆಲ್ಲಿ ಮತ್ತೆ ಹಿಡಿಯೋ ಕಷ್ಟಕ್ಕೆ ಅವರೆಲ್ಲಾ ನಮ್ಮ ತಾತನ್ನ ಮನಸ್ಸಿನಲ್ಲೇ ಎಷ್ಟು ಬಯ್ದುಕೊಂಡಿರ್ತಿದ್ರೋ ಗೊತ್ತಿಲ್ಲ. ಭೀಷ್ಮಾಚಾರ್ಯರ ಹಾಗಿದ್ದ ತಾತನ ಮೇಲಿನ ಗೌರವಕ್ಕೆ ಬಾಯಿ ಬಿಡ್ತಿರಲಿಲ್ಲ ಅಷ್ಟೇ.

ತಾತನ ಲಂಗೋಟಿ ವೇಷದ ಮೆರವಣಿಗೆಯಾಗುವಾಗ ಹೀಗೆ ಮನೆ ಒಳಗೆ ಹೋಗಿ ಅವಿತು ಬರುತ್ತಿದ್ದ ನಮ್ಮೂರಿನ ಸೀತಮ್ಮ, ಕಾವೇರಮ್ಮ, ನಂಜಮ್ಮನವರಂಥಹ ಮಹಿಳೆಯರನ್ನು ನೆನೆಸಿಕೊಂಡಾಗ ಭಾಗವತದಲ್ಲಿ ಬರುವ ವ್ಯಾಸರು ಮತ್ತು ಶುಕಮಹರ್ಷಿಗಳ ಕಥೆ ನೆನಪಾಗುತ್ತದೆ. ಗ್ರಾಮದ ಕೊಳ, ಕೆರೆಗಳಲ್ಲಿ ಸ್ನಾನಕ್ಕೆಂದು ಸೇರಿರ್ತಿದ್ದ ಯುವತಿಯುರು, ವಯಸ್ಸಿನಲ್ಲಿ ಚಿಕ್ಕವರಾದ, ತರುಣರಾದ ಶುಕಮಹರ್ಷಿಗಳು ನಡೆದು ಬರುತ್ತಿದ್ದರೂ, ಪರಪುರುಷನ ಕಣ್ಣಿಗೆ ಬಿದ್ದೀತು ಅಂತಾ ಸಂಕೋಚದಿಂದ ತಮ್ಮ ಅಂಗಾಂಗಳನ್ನು ಮುಚ್ಚಿಕೊಳ್ಳುವ ಗೋಜಿಗೆ ಹೋಗುತ್ತಿರಲಿಲ್ಲವಂತೆ. ಅದೇ ಶುಕತಾತ ಅಂದರೆ ಶುಕನ ತಂದೆ, ಮುದುಕರಾದ ಬಿಳಿಗಡ್ಡದ ವ್ಯಾಸರು ಬರುತ್ತಿದ್ದದ್ದುನ್ನು ಕಂಡರೆ ಮಾತ್ರ ಆ ಹೆಂಗೆಳೆಯರೆಲ್ಲಾ ಕೊಳದಿಂದ ಬುಡು ಬುಡು ಅಂತಾ ಎದ್ದು ಬಂದು ಮೆಟ್ಟಿಲುಗಳ ಮೇಲೆ ಇಟ್ಟಿರುತ್ತಿದ್ದ ಉತ್ತರೀಯಗಳಿಂದ ತಮ್ಮ ಮೈಯನ್ನು ಮುಚ್ಚಿಕೊಳ್ಳುತ್ತಿದ್ದರಂತೆ. ವ್ಯಾಸರು ಕಣ್ಣಿಗೆ ಕಾಣದಂತಾದಾಗ ಮತ್ತೆ ಜಲಕೇಳಿಗೆ ಶುರು ಹಚ್ಕೊತಿದ್ರಂತೆ. ಶುಕನ ವೈರಾಗ್ಯದ ಪರಾಕಾಷ್ಠೆಯನ್ನೂ, ವಯಸ್ಸಾಗಿದ್ದರೂ, ಭರ್ತೃಹರಿ ಹೇಳುವಂತೆ ಮುಖವೆಲ್ಲಾ ಸುಕ್ಕಿನಿಂದ ಆವೃತವಾಗಿ, ತಲೆಯೆಲ್ಲಾ ಬಿಳಿಕೂದಲಿಂದ ಕಬ್ಬಿನಗದ್ದೆಯ ಸೂಲಂಗಿಯಂತಾಗಿದ್ದರೂ “ತೃಷ್ಣೈಕಾ ತರುಣಾಯತೇ” ಅನ್ನುವಂತೆ ಯುವತಿಯರ ಕಣ್ಣಿಗೆ ಕಾಣುತ್ತಿದ್ದ ವ್ಯಾಸರ ಚಿತ್ರವನ್ನು ಕೊಡಲು ಈ ಸಂದರ್ಭವನ್ನು ಹೇಳುತ್ತಾರೆ. ನಮ್ಮ ತಾತ ಪಾಪ… ವ್ಯಾಸರೂ ಅಲ್ಲ ಶುಕರು ಅಲ್ಲ . ಸಂಸಾರಸ್ಥರಾಗಿ ಬೇಕಾದಷ್ಟು ಮಕ್ಕಳಾಗಿ, ಹಾಗಾಗಿ ತೆಳುವಲ್ಲದ ಅನುಭವವೂ ಇದ್ದವರಾಗಿ, ಈಗ ವಾನಪ್ರಸ್ಥಕ್ಕೆ ಪ್ರಸ್ಥಾನ ಮಾಡಲು ಹದವಾದ ವಯಸ್ಸಿನವರಾಗಿದ್ದರು. ಕರ್ಮಠರು. ನೈತಿಕವಾಗಿ ಒಂದಿಷ್ಟೂ ಕಳಂಕವಿಲ್ಲದವರು. ಅಷ್ಟೇ ಅಲ್ಲ ಆಗ್ಗಾಗ್ಗೆ ವಾನಪ್ರಸ್ಥವನ್ನೂ ಮಾಡಿ-ಮಾಡಿ ಬರ್ತಿದ್ದವರು. ಹೇಗೆ ಅಂತೀರಾ ?

ಒಂಥರಾ ಅಲಕ್‌ ನಿರಂಜನ್‌ ತರಹದ ಇಸಮ್‌ ಆದ ಅವರು, ಮನೆ ವಾಸ ಬೇಜಾರಾಗಿ, ಮಗ-ಸೊಸೆಯ ಜೊತೆಯ ಜೀವನ ಅಂಟು ಅಂತ ಅನ್ನಿಸಿ ನಿಸ್ಸಂಗರಾಗಿ ವಾನಪ್ರಸ್ಥಕ್ಕೆ ಹೊರಡಲು ಇದ್ದಕ್ಕಿದ್ದಂತೆ ನಿಶ್ಚಯಿಸಿಬಿಡ್ತಿದ್ದರು. ಅವರ ವನ ಅಂದರೆ ತಾವೇ ಬೆವರು-ರಕ್ತ ಬಸಿದು ರೂಢಿಸಿದ್ದ ಸೊಗಸಾದ ತೆಂಗು-ಕಂಗು-ಬಾಳೆಗಳನ್ನು ಬೆಳಸಿದ್ದ ತೋಟವೇ. ಸರಿ ಒಂದು ಚೀಲದಲ್ಲಿ ಒಂದು ಜೊತೆ ಉಡಲು-ಹೊದೆಯಲು ಪಂಚೆ, ಒಂದು ಶಾಲು, ಒಂದು ಹಾಸಿಗೆ ಸುರುಳಿ, ಒಂದಷ್ಟು ಪಾತ್ರೆ-ಪಡಗ… ಎಲ್ಲಾ ಕಟ್ಟಿಕೊಂಡು, ನಮ್ಮನೆ ಆಳುಮಗನ ಕೈಯಲ್ಲಿ ಹೊರೆಸಿಕೊಂಡು ಹೊರಟರು ಅಂತಲೇ ಲೆಕ್ಕ. ತೋಟದ ಗುಡ್ಲಿನಲ್ಲಿ ಭೈರಪ್ಪನವರ “ಸಾಕ್ಷಿ” ಯ ಸತ್ಯಪ್ಪನ ಹಾಗೆ ಇವರ ವಾನಪ್ರಸ್ಥ ಆರಂಭ. ಒಂದೆರಡು ಮೂರು ತಿಂಗಳ ತೋಟದ ವಾಸ. ಅದಕ್ಕೆ ಏನೋ ಅವರಿಗೆ ತೋಟದ ತಾತ ಅನ್ನೋ ಉಪನಾಮ ಅಂಟಿಬಂದಿತ್ತು ಅನ್ಸತ್ತೆ. ತೋಟದ ತಾತನ ತೋಟದವಾಸದ ಅವಧಿಯಲ್ಲಿ ನಮಗೆಲ್ಲಾ ಬೆಳಗ್ಗಿನ ಹೊತ್ತು ಅವರಿಗೆ ಹಾಲು ಒಯ್ದು ಕೊಡುವ ಕೆಲಸ. ರಾತ್ರಿಹೊತ್ತು ನಮ್ಮ ತಂದೆ ತಾಯಿ ತಾತನಿಗೆ ಫಲಾಹರ ಅಂದ್ರೆ.. ದೋಸೆ,ಉಪ್ಪಿಟ್ಟು ಅಂತಾ ಮಡಿಯಲ್ಲೇ ಮಾಡಿ ಮಡಿಯಲ್ಲೇ ಕೊಟ್ಟು ಬರುವ ಕಾಯಕವೂ ಆಗ್ಗಾಗ್ಗೆ ನಡಿತಿತ್ತು. ಮನೇಲಿ ಕರಾವು ಇದ್ದಿದ್ದರಿಂದ, ಜೊತೆಗೆ ಊರಾಚೆ, ಗದ್ದೆಬಯಲಿನ ನಡುವೆ ಇದ್ದ ನಮ್ಮ ತೋಟಕ್ಕೆ ಯಾವ ಗೌಳಿಗಿತ್ತಿಯೂ ಹಾಲು ಹಾಕಲು ಹೋಗುತ್ತಿರಲಿಲ್ಲವಾದ್ದರಿಂದ, ನಾವು ಹುಡುಗರೇ ತಾತನ ತೋಟದ ಮನೆಗೆ ತಾತ್ಕಾಲಿಕ ಗೌಳಿಗರಾಗ್ತಿದ್ದವು. ಬೆಳಗಿನ ಚುಮು-ಚುಮು ಚಳಿಯಲ್ಲಿ, ಹಸುರು ಹೊಲ-ಗದ್ದೆಗಳ ಮಧ್ಯೆ ಬದುವಿನ ಮೇಲೆ ನಡೆಯೋ ಅನುಭವ .. ಆಹಾ.. ಕಹಾಂ ಗಯೆ ಓ ದಿನ…… ? ಮಾರ್ಗಶಿರದ ಸೊಪ್ಪಿನ ಕಡಲೆಕಾಯಿ ಕಾಲವಾದರಂತೂ… ನಮಗೆ ಈ ಹಾಲುಹಾಕುವ ಕೆಲಸ ಇನ್ನೂ ಪ್ರಿಯವೇ. ಕಡಲೆ ಹೊಲದಲ್ಲಿ ಬೆಳೆದು ನಿಂತಿರುತ್ತಿದ್ದ ಕಡಲೆಗಿಡವನ್ನು ಕಿತ್ತು ಕಾಯಿಬಿಡಿಸಿ ತಿನ್ನುತ್ತಾ … ತೋಟ ಸೇರುವ ಮಜಾ… ಆಮೇಲೆ,.. ನೀರಲ್ಲಿ ಅದ್ದಿ ತೊಳೆಯದೇ ಸೊಪ್ಪಿನಕಡಲೆಯನ್ನು ಕಚ್ಚಿ ಕಚ್ಚಿ ತಿಂದು.. ಅದರ ಮೇಲೆ ತೆಳುವಾಗಿ ಇರುತ್ತಿದ್ದ ನೈಟ್ರಿಕ್‌ ಆಸಿಡ್‌ ನ ಕಾರಣ ತುಟಿಯೆಲ್ಲಾ ಉರಿ ಹತ್ತಿ ಒದ್ದಾಡುವ ಸಜಾ… ಎರಡೂ ಚಂದವೇ.. ಈಗ ಹಿಂದಿರುಗಿ ನೋಡಿದಾಗ. ಯತಿಗಳ ಲಾಂಛನವಾದ ಕೌಪೀನಪಂಚಕದಿಂದ ಶಾಸ್ತ್ರವಿರುದ್ಧವಾದ ಹಿಂಬಡ್ತಿ ವಾನಪ್ರಸ್ಥಕ್ಕೆ ಹೋಯಿತು ನನ್ನ ನೆನಪಿನ ಮೆರವಣಿಗೆ. ತಾತನಿಗೆ ಎಷ್ಟೇ ವಯಸ್ಸಾಗಿರಲಿ, ಎದುರಿಗೆ ನಿಂತೋರು ಹೆಣ್ಣೋ-ಗಂಡೋ, ಕತ್ತೆಯೋ ಕುದುರೆಯೋ ಅಂತಾ ಗೊತ್ತಾಗದಂತೆ ಕಣ್ಣಿನ ಪಾಟವ ಮಸುಕೇ ಅಗಿದ್ದರೂ… ಕಣ್ಣು ಚೆನ್ನಾಗಿಯೇ ಕಾಣುವ ಹೆಂಗುಸರಿಗೆ ಈ ಲಂಗೋಟಿಪುರುಷನ ಮೆರವಣಿಗೆ ನೋಡಲು ಇಷ್ಟವಿರುತ್ತದೆಯೇ ? ಇದ್ಯಾವ ಕರ್ಮ ಅಂತಾ ಅವರು ಗುಂಡಿಯಿಂದ ಎದ್ದು ಮನೆಸೇರುತ್ತಿದ್ದರು ಅನ್ಸತ್ತೆ. ಯಾರೇನಾದರೂ ಅಂದುಕೊಳ್ಳಲಿ… ನನಗೇನು ಅಂತ ಹೀಗೆಯೇ ನಮ್ಮ ತಾತನ ಕೌಪೀನಯಾನ ಏನೊಂದು ಅಡ್ಡಿ ಆತಂಕಗಳಿಲ್ದೇ ಮನೆ ಸೇರುತ್ತಿತ್ತು.

ನಮ್ಮೂರಿನ ಬೆಳಗಿನ ಚಟುವಟಿಕೆಗಳ ಒಂದು ಭಾಗವೇ ಆಗಿಹೋಗಿದ್ದ ನಮ್ಮ ತಾತನ ಈ ಮೆರವಣಿಗೆ ನಮ್ಮೂರ ಕೆರೇಲಿ ನೀರಿಲ್ಲದಿದ್ದಾಗ ಮಾತ್ರ ಇರ್ತಿರಲಿಲ್ಲ. ಆಗ ಇನ್ನೊಂದು ಬಗೆಯ ಪ್ರಹಸನಕ್ಕೆ ನಾಂದಿಯಾಗ್ತಿತ್ತು. ತಮ್ಮ ಬಟ್ಟೆ ತಾವೇ ಒಗೆದು ಮಡಿಗೆ ಒಣಹಾಕಿಕೊಳ್ಳೋದು ತಾತನ ಪಾಲಿಗೆ ಒಂಥರಾ ಅಸಿಧಾರಾ ವ್ರತವಿದ್ದಂತೆ. ಅಥವಾ ಚಾಂದ್ರಾಯಣವಿದ್ದಂತೆ. ಹಾಗಾಗಿ ನಮ್ಮಮನೆಯ ಹಿಂದೇ ಇದ್ದ ಅಗಸಗಿತ್ತಿಗೆ ಎಂದೂ ಕೊಡುತ್ತಿರಲಿಲ್ಲ. ಕೆರೆಗೆ ಹೋಗೊದು ಇಲ್ಲ ಎಂದಾದಾಗ ತಾತ ಎಂದಿನಂತೆಯೇ ಬೆಳಗು ಮುಂಚೆಯೇ ಎದ್ದು ನಲ್ಲಿ ನೀರು ಬರುವ ಹೊತ್ತಿಗೆ ಯಥಾಪ್ರಕಾರ ತಮ್ಮ ಬಟ್ಟೆ ಒಗೆಯಲು ರಜಕರ ಯೂನಿಫಾರ್ಮ್‌ .. ಅದೇ ಲಂಗೋಟಿಧಾರಿಗಳಾಗಿ.. ಒಂದು ಬಕೆಟ್‌ ನಲ್ಲಿ ಕೊಳೆಪಂಚೆ ತುರುಕಿಟ್ಟುಕೊಂಡು ಮನೆ ಮುಂದಿದ್ದ ನಲ್ಲಿ ಗುಂಡಿ ಇಳಿದು ನಿಂತಿರ್ತಿದ್ರು. ಗಂಗಾವತರಣದ ಸಿಹಿವಾರ್ತೆಯನ್ನು ಮಾರುತ ಮೊದಲು ಹೊತ್ತು ತಂದು…ಬುರ್..ಬುಸ್..ಬುರ್..ಬುಸ್‌ ಗಳನ್ನು ತಾತನ ಕಿವಿಗೆ ಮೊದಲು ಹಾಕ್ತಿದ್ದ. ಆಮೇಲೆ ಗಂಗಮ್ಮ ನಾಲ್ಕು ಹನಿಗಳನ್ನು ಮೈಮೇಲೆ ಸಿಡಿಸ್ತಿದ್ಲು. ತಕ್ಷಣವೇ ತಾತ ಕಾರ್ಯಪ್ರವೃತ್ತರಾಗಿ ಕೊಳೆಬಟ್ಟೆ ಬಕೆಟ್‌ ನ್ನು ಆ ಪೈಪಿನ ಕೆಳಗೆ ಪ್ರತಿಷ್ಠಾಪಿಸಿ ಬಿಡ್ತಿದ್ರು. ನೆನೆದ ಪಂಚೆಯನ್ನು ನಾಲ್ಕು ಮಡಿಕೆಗಳನ್ನು ಮಾಡಿಕೊಂಡು… ಎದುರಿಗೆ ಇದ್ದ ಕಲ್ಲಿನ ಮೇಲೆ ರಪ್‌ ರಪ್‌ ಅಂತಾ ನಾಲ್ಕೇಟು ಹಾಕಲು ಶುರು ಮಾಡೋರು. ಅಕ್ಕ ಪಕ್ಕದ ನಲ್ಲಿಗುಂಡಿಗಳಲ್ಲಿ ನೀರು ಹಿಡಿಯೋರಿಗೆಲ್ಲಾ “ತುಂತುರು ಅಲ್ಲಿ ನೀರ ಹಾಡು” ಅಂತಾ ಸಿನಿಮಾ ರೀತಿಯ ಮಳೆಯ ಅನುಭವ. ಅಥವಾ ಹೋಮ ಗೀಮ ಮಾಡಿದಮೇಲೆ ಕೊನೆಯಲ್ಲಿ ಪ್ರೋಕ್ಷಣೆ ಮಾಡ್ತಾರಲ್ಲ ಹಾಗೊಂದು ಅನುಭವ. ಅಕ್ಕ ಪಕ್ಕದ ಮನೆಯವರಿಗೆ ಅದು ಅಭ್ಯಾಸವೂ ಆಗಿತ್ತು ಅಂತಿಟ್ಕೊಳ್ಳಿ. ಹೇಗೂ ಜೋಯಿಸ್ರು.. ಪ್ರೋಕ್ಷಣೆಮಾಡ್ತಿದ್ದಾರೆ ಅಂತ ಅನ್ಕೊತಿದ್ರೋ ಏನೋ.. ಆದರೆ ಅದೇ ಸಮಯಕ್ಕೆ ನಮ್ಮನೆ ಮೇಲಿದ್ದ ಒಕ್ಕಲಿಗರ ಕೇರಿಯಿಂದ ಹಾಲುತೆಗೊಂಡು ಮಾರೊರಿಗೆ ಮಾತ್ರ ನಮ್ಮತಾತನ ಮೇಲೆ ಕೇಣ. ಇವರ ಒಗೆಯಾಟದಲ್ಲಿ ಸಿಡಿಯೋ ಕೊಳೆ ನೀರು, ಹಾಲಿಗೆ ಸಿಡಿದು ಹಾಲು ಒಡೆದು, ವರ್ತನೆ ಮನೆಯೋರಕೈಲಿ ಬೋಗಳ ತಿನ್ನಬೇಕಲ್ಲ ಅಂತಾ. “ ಇದ್ಯಾಕೆ ಸಾಮಿ ಹಿಂಗ್‌ ಬಟ್ಟೆ ಸೆಣಿತೀರಾ.. ಜನ ಯಾನು ಓಡಾಡ್ ಬ್ಯಾಡ್ವಾ ಬೀದೀಲಿ.. ಹಿತ್ಲಾಗ್‌ ಸೆಣ್ಕೊಳಿ ಬಟ್ಟೆನಾ…ಅಂತಾ ಹೇಳ್ಕೊಂಡೇ ಹೋಗೋರು. ದಂಡಿಗೆ ಹೆದರಲಿಲ್ಲ ದಾಳಿಗ್ಹೆದರಲಿಲ್ಲ… ಇನ್ನು ಪುಟಗೋಸಿ ಹಾಲಮ್ಮಂಗೆ ಹೆದರೋದು ಅಂದರೆ ಏನು ? ತಾತ ಅದಕ್ಕೆಲ್ಲಾ ಸೊಪ್ಪೇ ಹಾಕ್ತಿರಲಿಲ್ಲ. ಅದು ಹೇಗಾರೂ ಇರಲಿ… ನೀರಿಗೆ ತತ್ವಾರವಿದ್ದ ನಮ್ಮೂರಲ್ಲಿ ಬೆಳಗ್ಗೆ ಒಂದೆರಡು ಗಂಟೆಗಳು ಮಾತ್ರವೇ ನಲ್ಲಿ ನೀರು ಬರ್ತಿದ್ದಿದ್ದು. ಈ ತಾತನ ಧೋಬೀ ಘಾಟ್‌ ಕೆಲಸ ಮುಗಿಯೋವರೆಗೂ ನಾವೆಲ್ಲಾ ಕೊಡ, ಬಕೆಟ್‌ ಹಿಡ್ಕೊಂಡು ಕಾಯ್ತಿರಬೇಕಿತ್ತು. ತಾತನದು ಆದ ಮೇಲೆ ನಮ್ಮಮ್ಮನ ಮಡಿನೀರು ಹಿಡಿಯೋ ಸಂಭ್ರಮ. ಅಷ್ಟರಲ್ಲಿ ಗಂಗೆ ಬಂಗಾಳಕೊಲ್ಲಿ ಸೇರಿಬಿಟ್ಟಿರ್ತಿದ್ಲು. ನಮಗೂ ಸ್ಕೂಲಿಗೆ ಹೋಗೋ ಅವಸರ. ನೀರು ಹೊರೊ ಕಷ್ಟ ತಪ್ತಲ್ಲಾ ಅಂತಾ ಒಂಥರಾ ಖುಶಿನೇ ಆಗ್ತಿತ್ತು. ಒಳಗೆ ಬಚ್ಚಲುಮನೆ, ಹಿತ್ಲು ಎಲ್ಲಾ ಕಡೆ ಸಿಮೆಂಟ್‌ ತೊಟ್ಟಿಗಳಿದ್ದು ಹೇಗೋ ನಡ್ಕೊಂಡು ಹೋಗ್ತಿತ್ತು ಅನ್ನಿ.

ಮೊನ್ನೆ ಮೊನ್ನೆ “ಯತಿಪಂಚಕ” ವನ್ನು ಹೇಳ್ತಾ ಇದ್ದಾಗ ಅದರಲ್ಲಿನ ಐದೂ ಪದ್ಯಗಳಲ್ಲಿ ಪಲ್ಲವಿಯಂತೆ ಕೊನೆಗೊಳ್ಳುವ “ ಕೌಪೀನವಂತಃ ಖಲು ಭಾಗ್ಯವಂತಃ “ ಸಾಲುಗಳು ಇದ್ದಕ್ಕಿದ್ದಂತೆಯೇ ನಮ್ಮ ತಾತನ ಈ ಬೆಳಗಿನ ಲಂಗೋಟಿ ಮೆರವಣಿಗೆಯ ನೆನಪನ್ನು ಮೀಟಿತು. ಕೌಪೀನವಂತರು ಖಲು ಭಾಗ್ಯವಂತರು ಅಂತಾ ಆಚಾರ್ಯ ಶಂಕರರೇನೋ ಉದ್ಘೋಷಿಸಿದ್ದಾರೆ. ನಮ್ಮ ತಾತ ನಿಜಕ್ಕೂ ಭಾಗ್ಯವಂತರಾಗಿದ್ದರೇ ? ಗೊತ್ತಿಲ್ಲ. ಆಗ ಕೇಳೋ ಅಷ್ಟು ತಿಳಿವಳಿಕೆ ನನಗಿರಲಿಲ್ಲ. ಈಗ ಕೇಳಲು ತಾತ ಇಲ್ಲ. ಈಗೆಲ್ಲಾ ಈ ವೇಷದಲ್ಲಿ ನಾಗರಕರು ಎನಿಸಿಕೊಂಡವರು ಏನೊಂದೂ ಸಂಕೋಚವಿಲ್ಲದೆ ಓಡಾಡೋದನ್ನು ಕಲ್ಪಿಸಿಕೊಳ್ಳಲ್ಲೂ ಆಗಲ್ಲ. ಇಂಥಾ ತಾತನೋ, ಮುತ್ತಾತನೋ ನಿಮ್ಮ ಮನೆಯಲ್ಲೂ ಇದ್ದಿರಬಹುದೇನೋ.. ನೀವೇ ಹೇಳಬೇಕು.