ಕೋಶ ಓದುವ ಸುಖ—
“ದೇಶಸುತ್ತು ಕೋಶ ಓದು”- ಇದು ನಮ್ಮಲ್ಲಿನ ಚಿರಪರಿಚಿತ ಗಾದೆ. ದೇಶಸುತ್ತೋದು ಮತ್ತೆ ಕೋಶ ಓದೋದು ಈ ಎರಡು ನಮ್ಮ ವಿಷಯದ ತಿಳಿವಳಿಕೆಯನ್ನು ಹೆಚ್ಚಿಸಲು ಸಹಾಯಕ ಅಂತಾ ನಮ್ಮ ಪೂರ್ವಜರು ಬಹಳ ಮೊದಲೇ ಕಂಡು ಕೊಂಡಿದ್ದರು. ಅಲ್ಲದೇ ದೇಶಸುತ್ತಿ ಕಂಡು ಅನುಭವಿಸಿದ ಹಲವಾರು ಸ್ವಾನುಭವಗಳು, ಕೇಳಿದ ಮಾತು-ಕತೆಗಳು ಕೋಶದಲ್ಲಿ ಅಡಗಿ ಕುಳಿತ ಪದಾರ್ಥಗಳನ್ನು ಅವುಗಳ ಸರಿಯಾದ ನೆಲೆಯಲ್ಲಿ ಮನಸ್ಸಿಗೆ ತಂದುಕೊಳ್ಳಲು ಪೂರಕವಾಗುತ್ತವೆ ಕೂಡ. ಈ ಗಾದೆ ಬಂದದ್ದೂ ಹಾಗೇ ಇರಬೇಕು. ದೇಶ ಸುತ್ತುವುದರಲ್ಲಿ ಸುಖವಿದೆ. ಹೊಸ ಜಾಗ, ಜನ, ಹೊಸಬಗೆಯ ತಿಂಡಿ-ತೀರ್ಥಗಳು, ಹೊಸ ಭಾಷೆ, ಉಡುಪಿನ ಹೊಸತನ ಜೊತೆಗೆ ನಿತ್ಯ-ನಿತ್ಯದ ಜಂಜಾಟದಿಂದ ಬಿಡುಗಡೆ.. ಹೀಗೆ ಹಲವು ಹದಿನೆಂಟು ಕಾರಣಗಳಿಂದ ದೇಶಸುತ್ತೋದರಲ್ಲಿ ಸುಖವಿದೆ ಎನ್ನೋಣ. ಆದರೆ ಅಷ್ಟು ಗಾತ್ರದ ಕೋಶ ಓದೋದರಲ್ಲಿ ಏನು ಸುಖ ? ಬರೀ ಕೈ ನೋವಲ್ಲವೇ ? ಅದನ್ನು ಓದೋಕೆ ಅದೇನು ಕಥೆಯೇ-ಕಾದಂಬರಿಯೇ ? ಅಥವಾ ಅಷ್ಟೋತ್ತರ, ಸಹಸ್ರನಾಮಗಳಂತೆ “ಅ” ಕಾರದಿಂದ ಶುರುಮಾಡಿ “ಕ್ಷ” ಕಾರದವರೆಗೂ ಓದಿ ಪುಣ್ಯಕಟ್ಟಿಕೊಳ್ಳೋಕೆ – ಅನ್ನೋ ಪ್ರಶ್ನೆ ಹುಟ್ಟಬಹುದು. ಆದರೆ ನನಗೇನೋ ಕೋಶ ಓದೋದರಲ್ಲಿಯೂ ಒಂಥರಾ ಸುಖ. ಅಥವಾ ಸುಖವಾದ ಥ್ರಿಲ್ ಸಿಗತ್ತೆ.
ಅಯ್ಯೋ ಈಗೆಲ್ಲಾ ಆನ್ಲೈನ್ ಡಿಕ್ಷನರಿಗಳು ಬೇಕಾದಷ್ಟಿವೆ. ಅವುಗಳಲ್ಲಿ ಹುಡುಕು ಕಿಡಕಿಯೂ ಇದ್ದೇ ಇರತ್ತೆ. ನಮಗೆ ಯಾವ ಪದದ ಅರ್ಥಬೇಕೋ ಅದನ್ನು ಅಲ್ಲಿ ಟಂಕಿಸಿದರೋ, ವಾಚಿಸಿದರೋ ಆಯ್ತು- ಅವುಗಳ ಅರ್ಥಪ್ರಪಂಚವೇ ನಮ್ಮ ಮುಂದೆ ಅವತರಿಸುತ್ತವೆ. ಅನೇಕ ಲೇಖನಗಳಲ್ಲಿ ಗೊತ್ತಾಗದ ಪದಗಳ ಮೇಲೆ ಕೈಯಿಟ್ಟರೆ ಸಾಕು ಅರ್ಥ ಅಲ್ಲೇ ಪುಟ್ಟ ಸಂಪುಟದಲ್ಲಿ ಪ್ರತ್ಯಕ್ಷವಾಗೋ ತಾಂತ್ರಿಕತೆಯೇ ಬಂದಿದೆ. ಇಷ್ಟೆಲ್ಲಾ ಸೌಲಭ್ಯಗಳಿರುವಾಗ ಯಾಕೆ ಈ ಕೋಶವನ್ನು ತೆಗೆದು, ಧೂಳು ಹಿಡಿದಿದ್ದರೆ ಝಾಡಿಸಿ, ಜೂಲಾಗಿದ್ದರೆ ಸಂಭಾಳಿಸಿ ನೋಡೋದು ಅಂತೀರಾ ? ಈ ಆನ್ಲೈನ್ ಕೋಶಗಳು ಬಹಳ ಚೌಕಾಸಿ ಜಾತಿಯೋವು ಅಂತಾ ನನಗೆ ಒಂದು ಗುಮಾನಿ ಇದೆ. ಯಾಕೆ ಅಂತೀರಾ. ನಾವು ಯಾವ ಪದದ ಅರ್ಥ ಕೇಳ್ತೀವೋ ಅದಕ್ಕಿರುವ ಎಲ್ಲಾ ಬಗೆಯ ಅರ್ಥಗಳನ್ನು ಮಾತ್ರವೇ ನಮಗೆ ಕೊಡೋದು. ಆದರೆ ಈ ಮುದ್ರಿತ ಕೋಶಗಳದ್ದು ಬಹಳ ಧಾರಾಳ ಮನೋಧರ್ಮ. ಒಂದು ಶಬ್ದದ ಅರ್ಥ ಹುಡುಕಲು ಹೋದವರ ಕಣ್ಣಿಗೆ ಹತ್ತೆಂಟು ಶಬ್ದಗಳನ್ನು ತೋರಿಸುತ್ತವೆ. ಶಬ್ದಪ್ರಿಯರಿಗೆ, ತಮಗೆ ಬೇಕಾದ ಶಬ್ದವು ಮುಂದೆಲ್ಲೋ ಇದ್ದರೂ, ಪ್ರಯತ್ನವಿಲ್ಲದೆಯೇ ಕಣ್ಣಿಗೆ ಬೀಳುವ ಕೆಲವು ಶಬ್ದಗಳು ಸೂಜಿಗಲ್ಲಿನಂತೆ ಸೆಳೆದು ನಿಲ್ಲಿಸಿ, ನನ್ನ ಅರ್ಥವೇನು ಹೇಳು ನೋಡೋಣ – ಎಂದು ಸವಾಲೆಸೆಯುತ್ತವೆ. ಹಾಗೆಲ್ಲಾ ಸವಾಲೆಸೆದಾಗ ನಾನು ಕೋಶದೊಂದಿಗೆ ಒಂದು ಆಟವಾಡುತ್ತಾ ಇರುತ್ತೇನೆ. ಆ ಶಬ್ದವನ್ನು ಕೈಯಿಂದ ಮುಚ್ಚಿಕೊಂಡು, ಅದರ ಅರ್ಥವನ್ನು ಊಹಿಸೋದು. ಆಮೇಲೆ ಕೈ ತೆಗೆಯೋದು ಅಕಸ್ಮಾತ್ ಸರಿಯಾಯ್ತೋ- ನನ್ನ ಬೆನ್ನನ್ನು ನಾನೇ ತಟ್ಟಿಕೊಂಡು ಸುಖಿಸೋದು. ಬೆನ್ನು ತಟ್ಟಿಕೊಳ್ಳೋ ಸಂದರ್ಭ ಬರೋದು ಕಡಿಮೆ ಅನ್ನಿ. ನನಗೆ ಬೆನ್ನು ನೋವಾಗದರಿಲಿ ಎಂಬ ಕಾಳಜಿ ಕೋಶಕ್ಕೆ ಇರೋದರಿಂದಲೇ, ನಾನು ಊಹಿಸುವ ಅರ್ಥವನ್ನು ಆ ಶಬ್ದದ ತನ್ನ ಪಕ್ಕದಲ್ಲಿ ಇಟ್ಟುಕೊಂಡೇ ಇರೋದಿಲ್ಲ. ಬಿಡಿ ಒಳ್ಳೆಯದೇ ಆಯ್ತು. ನನಗೂ ಹೊಸ ಶಬ್ದದ ಪರಿಚಯವಾಯ್ತು . ನೋಡಿ ಮೊನ್ನೆ ಮೊನ್ನೆ ಯಾವುದೋ “ ಅಭಿ - ಹೀಗೆ ಆರಂಭವಾಗೋ ಒಂದು ಶಬ್ದಕ್ಕೆ ಅರ್ಥನೋಡಬೇಕಾದ ಸಂದರ್ಭ ಬಂತು. ಕ.ಸಾ.ಪ ದ ಎಂಟು ಸಂಪುಟಗಳ ನಿಘಂಟುವಿನ ಮೊದಲನೇ ಸಂಪುಟ ತೆಗೆದೆ. ನನಗೆ ಬೇಕಾದ ಶಬ್ದ ಹುಡುಕುವಾಗ ಅದರ ಹಿಂದೆ-ಮುಂದೆ , ಅಕ್ಕ-ಪಕ್ಕ ಇರುವ ನಾಲ್ಕಾರು ಶಬ್ದಗಳು ಕಣ್ಣಿಗೆ ಬಿದ್ದವು. ಕುತೂಹಲದಿಂದ ನೋಡಿದೆ. ನಾವು ಅಂದರೆ ನಮ್ಮಂಥಹ ಅಲ್ಪತಿಳಿವಿದ್ದವರು ; ಊಹಿಸಲೂ ಆಗದ ಅರ್ಥಗಳು. ಉದಾಹರಣೆಗೆ ನೋಡಿ-
ಅಭಿಮರ ಅಂದರೆ ಕೊಲೆ, ಯುದ್ಧ, ಕಾಳಗ, ವಿಶ್ವಾಸಘಾತ… ಈ ಅರ್ಥಗಳು. ನಮಗೆ ಗೊತ್ತಿರುವ ಅಭಿಮಾನ, ಅಭಿಮತಗಳಿಗಿರುವ ಅರ್ಥಗೌರವಕ್ಕೆ ತೀರ ವಿರುದ್ಧವಾದ ಅರ್ಥ ಈ ಶಬ್ದಕ್ಕೆ. “ಅಭಿ” ಅನ್ನೋದು ಉಪಸರ್ಗ. ಸಂಸ್ಕೃತ ವ್ಯಾಕರಣಸೂತ್ರವೊಂದರ ಪ್ರಕಾರ ಉಪಸರ್ಗವು ಶಬ್ದಾರ್ಥವನ್ನು ಎತ್ತೆತ್ತಲೋ ತಿರುಗಿಸಿ ಬಿಡುತ್ತದಂತೆ. ಸರಿ. ಎತ್ತ ತಿರುಗುತ್ತದೆ ಅಂತಾ ನಮಗೆ ಹೇಗೆ ತಿಳಿಬೇಕು ಹೇಳಿ ?
ಅಭಿಮಾನ ಅಂದರೆಗೊತ್ತಲ್ಲ. ಈ ಅಭಿಮಾನನ ಕದೀಯೋರು ಇರ್ತಾರಾ ? ಇರ್ತಾರೆ ಅಂತಾ ಹೇಳ್ತಿವೆ ನೋಡಿ ನಮ್ಮ ಕನ್ನಡಕೋಶಗಳು. ಅದಕ್ಕೊಂದು ಶಬ್ದವೂ ಇರೋದನ್ನು ಹುಡುಕಿ ಅಲ್ಲಿ ಸೇರಿಸಿದ್ದಾರೆ. ಅಭಿಮಾನವನ್ನು ಕದಿಯೋನು “ಅಭಿಮಾನಗಳ್ಳ”- ಹಾಗಂದರೆ ದರ್ಪಿಷ್ಠರ ದರ್ಪವನ್ನು ಅಪಹರಿಸುವವನು. ಇದು ಒಂದು ಬಿರುದು ಆಗಿರಬಹುದು ಅಂತಾ ಊಹೆನೂ ಮಾಡಿದ್ದಾರೆ. ಶತ್ರುಗಳ ದರ್ಪವನ್ನು ಸೂರೆಗೊಳ್ಳುವ ರಾಜನಿಗೋ, ಇಲ್ಲ ವಿದ್ಯೆಯಮದದಿಂದ ಮೆರೆಯುವ ವಿದ್ವಾಂಸರ ದರ್ಪವನ್ನು ಅಡಗಿಸಿದ ವಿದ್ಯಾವಿನಯಸಂಪನ್ನನಿಗೋ ಈ ಬಿರುದು ಇದ್ದಿರಬಹುದೇನೋ.
“ಅಲಾಬು”- ಈ ಶಬ್ದ ಕೇಳಿದ್ದೀರಾ ? ಇದೂ ನನಗೆ ಕೋಶ ಓದುವಾಗ ಅಕಸ್ಮಾತ್ತಾಗಿ ಕಣ್ಣಿಗೆ ಬಿತ್ತು ನೋಡಿ. ಅಲಾಬು ಅಂದರೆ ಸೋರೆಕಾಯಂತೆ. ಇದು ಈ ಶಬ್ದ ಸಂಸ್ಕೃತದ “ ಅಲಾವು” ಶಬ್ದದ ಸ್ವಲ್ಪ ಅಕ್ಷರಪಲ್ಲಟವಾದ ರೂಪ. ಹಾಸನದ ಕಡೆ ಈ ಸೋರೆಕಾಯಿಗೆ ಹಾಲುಸೋರೆಕಾಯಿ ಅಂತಲೂ ಕರೆಯೋದುಂಟು. ಅಲಾಬುಸೋರೆಕಾಯಿ- ಎಂಬ ದ್ವಿರುಕ್ತಿಯ ಪ್ರಯೋಗ ಹಾಲುಸೋರೆಕಾಯಿ ಆಗಿರಬಹುದೇ ?
ಅಲಾಬುವಲ್ಲಕೀ – ಅಂದರೆ ಸೋರೆಬುರುಡೆಯ ವೀಣೆ, ಅದೇ ತತ್ತ್ವಪದಗಳನ್ನು ಹಾಡೋ ಏಕತಾರಿ.
ಅಲಾಬುಸ್ತನಿ– ಈ ಪ್ರಯೋಗವೂ ಕಾವ್ಯಾದಿಗಳಲ್ಲಿ ಇದ್ದಿರಬೇಕು. ಎಲ್ಲಿ ? ಕೋಶವೇನೂ ಪ್ರಯೋಗದ ಸಂದರ್ಭವನ್ನು ಸೂಚಿಸಿಲ್ಲ. ನನಗನ್ನಿಸುವಮಟ್ಟಿಗೆ ಈ ಶಬ್ದ ಸಕಲ ಜೀವರಾಶಿಗಳ ಹೊಟ್ಟೆ ತುಂಬಿಸುವ ಹೊಣೆ ಹೊತ್ತಿರುವ ಆ ಜಗನ್ಮಾತೆಗೇ ವಿಶೇಷಣವಾಗುವಂಥದ್ದು .
ಬೆರಳಿಟ್ಟ ಕಡೆ ನಮಗೆ ಕೋಶದ ವಿಶ್ವದಲ್ಲಿ ಅದ್ಭುತವಾದ ಬರಿಯ ಶಬ್ದಗಳೇ ಹೇಳುವ ಸಮಾಜದ ಚಿತ್ರಣ ಕಣ್ಣಿಗೆ ಬೀಳುತ್ತಾ ಹೋಗುತ್ತದೆ. ಈಗ ನೋಡಿ, ಸುಮ್ಮನೆ ಒಂದು ಉದಾಹರಣೆಗೆ ಒಂದು ಶಬ್ದ- ಜಾಯಾಜೀವಿ ಅಂತ. ಬುದ್ಧಿಜೀವಿ, ಪರೋಪಜೀವಿ, ಅಂತಾ ಕೇಳಿದ್ದೀವಿ. ಇದ್ಯಾವ ಜೀವಿ ಅನ್ಸತ್ತಾ ? ಇದೂ ಒಂಥರಾ ಪರೋಪಜೀವಿಯೇ. ಹೆಂಡತಿ ಅನ್ನುವ ಜೀವಿಯನ್ನು ದುಡಿಮೆಗೆ ಹಚ್ಚಿ ತಾನು ಜೀವಿಸುವ ಜೀವಿ. ಯಾವಬಗೆಯ ದುಡಿಮೆ ಅಂತೀರಾ? ಬಹುಶಃ ಮಡದಿಯಿಂದ ಗೀತ-ನೃತ್ಯಗಳನ್ನು ಮಾಡಿಸಿ ಪ್ರದರ್ಶಿಸಿ ಬದುಕುವವನು ಎಂಬರ್ಥ. ಯಾಕೆಂದರೆ ಈ ಜಾಯಾಜೀವ/ಜೀವಿ ಗೆ ನಟ ಎಂಬ ಅರ್ಥವೂ ಇದೆ. ಈ ಶಬ್ದ ಬಹಳ ಬಹಳ ಹಳೆಯದು. ರಾಮಾಯಣ, ಸ್ಮೃತಿಗಳ ಕಾಲಕ್ಕೂ ಹಳೆಯದಿರಬೇಕು. ಅವುಗಳಲ್ಲೆಲ್ಲಾ ಈ ಶಬ್ದಗಳು ಬಳಕೆಯಾಗಿವೆ.
ಹಾಗೆಯೇ “ರೂಪಜೀವೆ” ಎಂಬೊಂದು ಶಬ್ದವೂ ಕನ್ನಡಕೋಶಗಳಲ್ಲಿ ಬಂದು ಕುಳಿತಿದೆ. ರೂಪಜೀವಾ – ಈ ಸಂಸ್ಕೃತದ ಕನ್ನಡದ ರೂಪ ಇದು. ನಮ್ಮ ಹೆಣ್ಣುಮಕ್ಕಳಿಗೆ ಹೆಸರಿಡಬಹುದಾದಷ್ಟು ಕರ್ಣಮಧುರವಾಗಿ ಕೇಳುವ ಈ ಶಬ್ದದ ಅರ್ಥವೇನು ಊಹಿಸಬಲ್ಲಿರಾ ? ಅರ್ಥಗೊತ್ತಾದ ಮೇಲೆ ಹೆಸರಿಡುವ ಯೋಚನೆಯನ್ನಾದರೂ ಮಾಡಲುಂಟೇ ? ಹೇಗೆ ಊಹಿಸೋದು? ಈಗೆಲ್ಲಾ ನಮ್ಮ ಸಾಹಿತ್ಯದಲ್ಲಿ ಈ ಬಗೆಯ ಪದಪ್ರಯೋಗಗಳು ಆಗೋದೆ ಇಲ್ವಲ್ಲಾ . ಕೋಶಕ್ಕೊಂದು ವಿಸಿಟ್ ಮಾಡಿ, ಸುಮ್ಮನೆ ಪುಟತಿರುವಿದಾಗ ಮಾತ್ರ ಕಣ್ಣಿಗೆ ಬಿದ್ದೀತು. ಸರಿ ಬಿಡಿ. ಯಾಕೆ ಎಲ್ಲೆಲ್ಲೋ ಹೋಗಿ ವಿಷಯಾಂತರ ಮಾಡ್ತೀರಿ, ರೂಪಜೀವೆಯ ಅರ್ಥ ಹೇಳಿ. ರೂಪಜೀವೆ ಅಂದರೆ ವೇಶ್ಯೆ, ಗಣಿಕೆ, ಪಣ್ಯಾಂಗನೆ ಎಂದು.
ಈ ಸಂಸ್ಕೃತದ ಶಬ್ದಗಳು ನಮ್ಮ ಕನ್ನಡದ ನಿಘಂಟುವಿನಲ್ಲೂ ಸೇರಿಕೊಂಡಿವೆ. ಅಂದರೆ ಈ ಬಗೆಯ ವೃತ್ತಿಗಳು, ಜೀವನಶೈಲಿ, ಜೀವಿಕೆಯ ಉಪಾಯಗಳು ಯಾವ ಕಾಲದಿಂದಲೂ, ಎಲ್ಲಾ ಪ್ರದೇಶಗಳಲ್ಲೂ ಇರುವಂಥವೇ ಅಲ್ಲವೇ ?
ನನ್ನ ಕೋಶ ಪ್ರವಾಸದಲ್ಲಿ ಕಣ್ಣಿಗೆ ಬಿದ್ದ ಒಂದೆರಡು ಸಂಸ್ಕೃತ ಮೂಲದ ಶಬ್ದಗಳನ್ನು ಉದಾಹರಿಸಿದೆ. ಇನ್ನೊಂದೆರಡು ಕನ್ನಡದ ಶಬ್ದಗಳನ್ನು ಗಮನಿಸೋಣ.
ಚುಂಚು- ಶಬ್ದಕ್ಕೆ ನಮಗೆಲ್ಲಾ ಹಕ್ಕಿಯ ಕೊಕ್ಕು ಎಂಬರ್ಥ ಗೊತ್ತೇ ಇದೆ. ಅದೇ ಶಬ್ದಕ್ಕೆ “ಹೆಸರುವಾಸಿಯಾದ” ಎಂಬರ್ಥವೂ ಕಣ್ಣಿಗೆ ಬಿತ್ತು.
ಹಾಗೆಯೇ ರಸದಾಳಿ – ಈ ಪದದ ಅರ್ಥವಂತೂ ಗೊತ್ತೇ ಇರತ್ತೆ. ಅದೂ ಈಗಷ್ಟೇ ಸಂಕ್ರಾಂತಿ ಕಳೆದಿದೆ. ಹೌದು. ಒಂದು ಜಾತಿಯ ಕಬ್ಬು. ನಮ್ಮ ಕಡೆ ಇದನ್ನು ಪಟ್ಟೆಕಬ್ಬು ಅಂತಾರೆ. ರಸಭರಿತವಾಗಿರೋದರಿಂದ ರಸದಾಳಿ . ರಸದಾಳಿವಿಲ್ಲ- ಅಂದರೆ ಯಾರು ? ಅದೇ ಸುಂದರಾಂಗ ಮನ್ಮಥ ಕಣ್ರಿ . ಅವನ ಬಿಲ್ಲು ರಸದಾಳಿಯದು. ಎಷ್ಟು ಸಿಹಿ ಸಿಹಿಯಾದ ಬಿಲ್ಲು ಹಿಡಿದಿದ್ದಾನೆ ಅಲ್ಲವೇ ? ಹಾಗಾಗೆ ಎಲ್ಲ ರತಿಯರೂ ಇವತ್ತಿಗೂ ಅವನಿಗೆ ಒಲಿಯೋದು ನೋಡಿ.
ಇನ್ನು ಜಾರುಗಣ್ಣು- ಇದಕ್ಕೆ ಪಿಸುರುತುಂಬಿದ ಕಣ್ಣು ಅಂತಾ ಅರ್ಥವಂತೆ. ರಾಮ ರಾಮ ! ಆ ಶಬ್ದ ನೋಡ್ತಾ ಇದ್ದಂತೆ ನಾನು ಕೈಜಾರೋದು, ಕಾಲುಜಾರೋದು ಇದ್ದಹಾಗೆ ಯಾರನ್ನೋ ನೋಡಿ ಜಾರಿದ ಕಣ್ಣು… ಎಂದೂಹಿಸಿ ನೋಡಿದರೆ ಅದರ ಅರ್ಥ ಹೀಗೆ. ಈ ಪರಿಯಲ್ಲಿ ಪಿಸುರುಗಟ್ಟಿದ ಪಿಚ್ಚುಕಣ್ಣಲ್ಲಿ ಯಾರನ್ನು ತಾನೇ ನೋಡಕ್ಕಾಗತ್ತೆ ಹೇಳಿ. ಅಂತೂ ಈ ಕೋಶದ ದೇಶವಿದೆಯಲ್ಲಾ ಅದರ ಪೂರ್ಣ ಸಂಚಾರ ಕಷ್ಟ. ಆದರೆ ಮಾಡುವ ಇಷ್ಟ.
ಕೋಶ ಓದೋ ಸುಖದ ಕಥೆ ಹೇಳ್ತಾ ಹೋದ್ರೆ , ಕಥೆಕೇಳೋ ಹುಚ್ಚಿನ ಯಾವ್ದೋ ಊರಿನ ಒಬ್ಬ ರಾಜಂಗೆ ಜಾಣೆಯೊಬ್ಬಳು ಕಣಜದ ಭತ್ತವೆಲ್ಲಾ ಖಾಲಿಯಾಗೋ ತನಕ –ಒಂದು ಗುಬ್ಬಿ ಬಂತಂತೆ ಒಂದು ಭತ್ತದ ಕಾಳು ತೆಗೆದುಕೊಂಡು ಹೋಯ್ತಂತೆ, ಇನ್ನೊಂದು ಬಾರಿ ಬಂತಂತೆ ಇನ್ನೊಂದು ಕಾಳು ತೆಗೆದುಕೊಂಡು ಹೋಯ್ತಂತೆ ಅಂತಾ ಹೇಳಿದಂತೆ ಕೊನೆ ಮೊದಲಿಲ್ಲ. ಈ ಸುಖದ ಕಥೆಗೆ. ಹಾಗೆ ಕೋಶವನ್ನಿಟ್ಟುಕೊಂಡು ಶಲಾಕಾಪರೀಕ್ಷೆ ಮಾಡ್ತಾ ಹೋದ್ರೆ ನಾನೇ ಒಂದು ಬದಲೀ ಕೋಶವನ್ನೇ ರಚಿಸ ಬೇಕಾಗತ್ತೆ “ ನನ್ನ ಕುತೂಹಲದ ಕೋಶ “ ಅಂತಲೋ ಏನೋ ಒಂದು ಹೆಸರಿಡಬೇಕಾಗುತ್ತದೆ ಅಷ್ಟೇ. ನನ್ನದೇನೋ ಕೋಶಯಾತ್ರೆ “ ರಾಂಡಮ್" – ಅಂತಾರಲ್ಲ ಹಾಗೇ, ಯಾವಾಗಲೋ ಯಾವುದೋ ಒಂದು ಪದದ ಅರ್ಥದ ಬೆನ್ನು ಹಿಡಿದು ಸಾಗುವಂಥದ್ದು. ಕೆಲವೊಮ್ಮೆ ಸುಮ್ಮನೆ ಗೊತ್ತುಗುರಿಯಿಲ್ಲದೆಯೂ ನಡೆಯುವಂಥದ್ದು ಕೂಡ. ಆದರೆ ನನ್ನ ಪರಿಚಯದವರೊಬ್ಬರು ಸಂಸ್ಕೃತಕೋಶವೊಂದನ್ನು ಮೊದಲಿನಿಂದ ಕೊನೆಯವರೆಗೂ ಪಾರಾಯಣಗ್ರಂಥವೋ ಎಂಬಂತೆ ಪಾರಾಯಣ ಮಾಡಿದ್ದಾರಂತೆ. ಅಬ್ಬಬ್ಬಾ !! ಅವರಿಗೆ ಸುಖವಲ್ಲ, ಶಬ್ದಬ್ರಹ್ಮದರ್ಶನದ ಆನಂದವೇ ಸಿಕ್ಕಿರಬಹುದೇನೋ. ಅಂತೂ ಈ ಕೋಶಯಾತ್ರೆಗೆ ಸಹಸಂಚಾರಿಗಳಿದ್ದಾರೆ ಎಂದಾಯ್ತು.
ಶಬ್ದಗಳು ನಿಜಕ್ಕೂ ನಮಗೆ ಜ್ಯೋತಿಗಳಿದ್ದಂತೆ. ಅವುಗಳ ಬೆಳಕಿನಲ್ಲೇ ಲೋಕದ ವ್ಯವಹಾರ. ಅಷ್ಟಲ್ಲದೆ ಲಾಕ್ಷಣಿಕ ದಂಡಿಯು “ಕಾವ್ಯಾದರ್ಶ” ಎನ್ನುವ ಗ್ರಂಥದಲ್ಲಿ –
ಇದಮ್ ಅಂಧಂ ತಮಂ ಕೃತ್ಸ್ನಂ ಜಾಯೇತ ಭುವನತ್ರಯಮ್ |
ಯದಿ ಶಬ್ದಾಹ್ವಯಂ ಜ್ಯೋತಿಃ ಆಸಂಸಾರಾನ್ನ ದೀಪ್ಯತೇ ||
ಅಂದರೆ – ಶಬ್ದವೆಂಬ ಜ್ಯೋತಿಯು ಸೃಷ್ಟಿಕಾಲದಿಂದ ಹಿಡಿದು ಇಲ್ಲಿಯವರೆಗೂ ಬೆಳಗದೇ ಇದ್ದಿದ್ದರೆ ಈ ಮೂಜಗವೆಲ್ಲವೂ ಕತ್ತಲೆಯಲ್ಲೇ ಮುಳುಗಿರುತ್ತಿತ್ತು- ಎಂದು ಘೋಷಿಸಿ ತನ್ನ ಗ್ರಂಥವನ್ನು ಆರಂಭಿಸುತ್ತಿದ್ದನೇ?
ಆಗ್ಗಾಗ್ಗೆ ಕೋಶವನ್ನು ಸುಮ್ಮನೆತಿರುವಿಹಾಕ್ತಾ ಇದ್ರೂ ಸಾಕು ಶಬ್ದಗಳು ನಮ್ಮ ಸ್ನೇಹಿತರೇ ಆಗಿ ಬಿಡುತ್ತವೆ. ಸ್ನೇಹದ ರೀತಿಯೂ ಬಹಳ ವಿಚಿತ್ರವೇ. ಯಾವುದೋ ಒಂದು ಅಮೃತಘಳಿಗೆಯಲ್ಲಿ, ಯಾರು-ಯಾರ ಜೊತೆಗೋ ದೇಶ-ಕಾಲಗಳ ಅಂತರಗಳನ್ನು ಗಣಿಸದೆಯೆ ಸ್ನೇಹ ಹುಟ್ಟಿಬಿಡುತ್ತದೆ. ವ್ಯಕ್ತಿಗಳು ಕಣ್ಣಿಂದ ಮರೆಯಾದರೆ ಎಂಥಹ ಗಾಢವಾದ ನಂಟೂ “ ಔಟ್ ಓಫ್ ಸೈಟ್ ಔಟ್ ಓಫ್ ಮೈಂಡ್ " ಎನ್ನುವಂತೆ. ಸ್ವಲ್ಪ ತೆಳುವಾಗುವುದೂ ಸಹಜವೇ. ಹಾಗಾಗದೆ ಇರಬೇಕಾದರೆ, ಸ್ನೇಹವನ್ನು ಆಗ್ಗಾಗ್ಗೆ ಅದನ್ನು ಮಾತಿನ ಮೂಲಕ, ಸಂಪರ್ಕದ ಮೂಲಕ, ಬಂದು ಹೋಗುವುದರ ಮೂಲಕ ಜೀವಂತವಾಗಿರಿಸಿಕೊಳ್ಳಬೇಕಾಗುತ್ತದೆ. ಪೋಷಿಸಿಕೊಂಡು ಬರಬೇಕಾಗುತ್ತದೆ.+++(4)+++ ಹಾಗೆಯೇ ಶಬ್ದಗಳೂ ಸಹ. ಶಬ್ದಗಳೊಂದಿಗೆ ಕೆಳೆತನ ಮಾಸದೇ ಇರಬೇಕಾದರೆ, ತಪ್ಪದೇ ಕೋಶಗಳ ಹತ್ತಿರ ಆಗ್ಗಾಗ್ಗೆ ಹೋಗಿ-ಬಂದು, ಮಾತಾಡಿಸುತ್ತಿರ ಬೇಕು. ಬೆನ್ನು ತಟ್ಟುತ್ತಿರಬೇಕು ನೋಡಿ.
ನಾನು ಏಳನೇ ತರಗತಿಯಲ್ಲಿದ್ದಾಗಲೋ ಏನೋ, ನಮ್ಮ ಊರಿನಲ್ಲಿ ಕೆನರಾ ಬ್ಯಾಂಕ್ ಏರ್ಪಡಿಸಿದ್ದ ಪ್ರಬಂಧಸ್ಪರ್ಧೆಯಲ್ಲಿ ಗೆದ್ದ ಬಹುಮಾನವಾಗಿ ಡಿ. ಕೆ. ಭಾರದ್ವಾಜ್ ಅವರ ಇಂಗ್ಲಿಷ್-ಕನ್ನಡ ಡಿಕ್ಷನರಿ ಸಿಕ್ಕಿತ್ತು. ಅದನ್ನು ತಂದು ತೋರಿಸಿದಾಗ ನಮ್ಮ ತಂದೆ ದಿನಾ ರಾತ್ರಿ ಮಲಗುವ ಮೊದಲು ಆ ಡಿಕ್ಷನರಿಯಲ್ಲಿ ಒಂದು ಹತ್ತು ಹೊಸ ಪದಗಳನ್ನಾದರೂ ನೋಡಬೇಕು ಎಂದು ತಾಕೀತು ಮಾಡಿದ್ದರು. ನಮ್ಮ ತಂದೆ ಹಳೇ ಕಾಲದವರು. ಅಮರಕೋಶ ಉರುಹೊಡೆದು ಬಾಯಲ್ಲಿ ಇಟ್ಕೋ ಬೇಕು, ಮುಖಸ್ಥವಾಗಿರುವ ವಿದ್ಯೆಯೇ ವಿದ್ಯೆ ಎನ್ನುವ ಅಭಿಪ್ರಾಯದ ಪಂಡಿತರ ಮಾತನ್ನು ಯಥಾವತ್ತಾಗಿ ನಂಬಿದವರು.+++(4)+++ ಆ ಹಿನ್ನೆಲೆಯಲ್ಲಿ ಅವರು ನನಗೆ ನಿತ್ಯವೂ ಕೋಶ ಓದು ಎಂದಿದ್ದರೋ ಏನೋ. ಆದರೂ, ಆ ಮಾತು ಯಾಕೋ ನನ್ನ ಮನಸ್ಸಿಗೆ ಬಹಳ ಹಿಡಿಸಿತು. ಈಗಲೂ ನನಗೆ ಆನ್ಲೈನ್ ಕೋಶಗಳಿಗಿಂತ, ಮುದ್ರಿತವಾದ ಕೋಶಗಳನ್ನು ಓದೋದರಲ್ಲೇ ಹೆಚ್ಚು ಸುಖ. ಹಾಗಂತ ಆನ್ಲೈನ್ ಕೋಶಗಳ ಪ್ರಯೋಜನ ಕಡಿಮೆಯದ್ದೇನಲ್ಲ. ತರಾತುರಿಯಲ್ಲಿ ಯಾವುದೋ ಒಂದು ಶಬ್ದದ ಅರ್ಥ ಹೊಳೆಯದೇ ಅಥವಾ ತಿಳಿಯದೇ ಒದ್ದಾಟ ನಡೆದಿದ್ದಾಗ ಭಾರರಹಿತವಾದ, ಧೂಳು, ಜೂಲು ಏನೂ ಇಲ್ಲದ ಈ ಆನ್ಲೈನ್ ಕೋಶಗಳನ್ನು ಕೇವಲ ಬೆರಳ ಬಡಿತದಲ್ಲೇ ತೆರೆದು ನೋಡುವ ಲಾಘವವನ್ನು ನಿರಾಕರಿಸಲಾದೀತೇ ? ಮನೆಯಲ್ಲೇ ಮಾಡಿದ ಚಕ್ಕುಲಿ-ಕೋಡುಬಳೆ, ಹೋಳಿಗೆ-ಹಾಲುಬಾಯಿಗಳು ಬಹಳ ಉತ್ಕೃಷ್ಟವೇ. ಹಾಗಂತ ಬೇಕು ಅಂದ ಕ್ಷಣದಲ್ಲೇ ಸಿಗುವ ಅಂಗಡಿಯ ತಿಂಡಿಯ ಸುಕರತೆಯನ್ನು ತಳ್ಳಿಹಾಕಲಾದೀತೇ ?
ಆದರೂ ಕೂತಲ್ಲೇ ದೇಶಸುತ್ತಿಸುವ ಮುದ್ರಿತ ಕೋಶಗಳ ಓದನ್ನು ನಾನು ಬಿಡಲಾರೆ. ದೇಶ- ವಿದೇಶಗಳನ್ನಲ್ಲವಾದರೂ ನಮ್ಮ ಕನ್ನಡಸಾಹಿತ್ಯರಾಜ್ಯವನ್ನು ಸುತ್ತಿಬಂದ ಲಾಭವಂತೂ ಆಗೇ ಆಗುತ್ತದೆ.. ಹೇಗೆ ಅಂತೀರಾ ? ಒಂದೊಂದು ಶಬ್ದವೂ ಕನ್ನಡ ಸಾಹಿತ್ಯದ ಯಾವ ಯಾವ ಗ್ರಂಥಗಳಲ್ಲಿ ಪ್ರಯೋಗವಾಗಿದೆ – ಎನ್ನುವ ಸೋದಾಹರಣ ವಿವರಗಳು ಅಲ್ಲಿ ಸಿಗುತ್ತವಲ್ಲಾ. ನಮ್ಮ ಈ ಜನ್ಮದಲ್ಲಂತೂ ಅಷ್ಟೂ ಕಾವ್ಯಗಳನ್ನು ಓದಲಾರೆವು. ಕೊನೇಪಕ್ಷ ಕಾವ್ಯಗಳ ಹೆಸರುಗಳನ್ನೂ, ಅವುಗಳ ಒಂದೆರಡು ವಾಕ್ಯಗಳನ್ನಾದರೂ ಓದಿ, ಕನ್ನಡ ಭಾಷೆ-ಭಾವಗಳ ಜಾಯಮಾನವೇನೂ ಎಂಬುದನ್ನು ಕಿಂಚಿತ್ತಾದರೂ ಅರಿಯಬಹುದಲ್ಲಾ. ಈಗ ಮೇಲೆ ಹೇಳಿದ ಜಾಯಾಜೀವ- ಶಬ್ದವನ್ನೇ ತೆಗೆದುಕೊಳ್ಳಿ. ಅದು ಅಚ್ಚಣ್ಣ ಕವಿಯ ಕನ್ನಡ “ವರ್ಧಮಾನ ಪುರಾಣ” ದಲ್ಲಿ, ಜೀವವು ಭವಾವಳಿಗಳಲ್ಲಿ ತೊಳಲುವ ಪರಿಯನ್ನು “ ಬಹುರೂಪಮಂ ತಳೆದು ಜಾಯಾಜೀವನೆಂತಂತೆವೋಲ್ ತಿರಿಗುಂ…. ಜೀವಂ ಭವಾರಣ್ಯದೊಳ್ “- ಎಂದು ವರ್ಣಿಸಿದೆ. ಈಗ ಹೇಳಿ ದೇಶಸುತ್ತು, ಕೋಶ ಓದು ಈ ಮಾತು ಯಥಾರ್ಥವಾದ್ದೋ ಅಲ್ಲವೋ ? ಕೋಶಗಳನ್ನು ಓದುವದು ಸುಖವೋ ಅಲ್ಲವೋ ?
ಶಾಂತಾ ನಾಗಮಂಗಲ