ನಮ್ಮಮ್ಮ…
ನಮ್ಮಮ್ಮ ಶಿಸ್ತಿನ ಸಿಪಾಯಿ. ಗುಣಕ್ಕೆ ಲಿಂಗಭೇದವಿಲ್ಲ. ಹಾಗಾಗಿ ಶಿಸ್ತಿನ ಸಿಪಾಯಿ ಅಂತಾ ಕರೆದಿರೋದು. ನಮ್ಮಪ್ಪ ಶಿಸ್ತು ಅದು ತಾನಾಗಿ ಬಂದರೆ ಬರಲಿ, ಇಲ್ಲದಿದ್ದರೆ ಇಲ್ಲ ಎನ್ನುವ ಭಾವಜೀವಿ. ದುರ್ವಾಸರನ್ನು ನೋಡಿರದವರು ತಾತನನ್ನು ನೋಡಿ- ಓಹೋ ದುರ್ವಾಸರು ಹೀಗಿದ್ದರು ಎಂದುಕೊಳ್ಳಬಹುದಾದಂಥವರು ನಮ್ಮ ತಾತ. ಹತ್ತೊಂಭತ್ತರ ಎಳವೆಯಲ್ಲೇ ಅತ್ತೆಯ ಮಗನೇ ಆಗಿದ್ದರು ಮುತ್ತಿನ ಚಂಡು ಅಂತ ನಮ್ಮಮ್ಮನಿಗೆ ಅನಿಸಿತ್ತೋ ಇಲ್ಲವೋ, ಅಂತೂ ನಮ್ಮಪ್ಪನನ್ನು ಮದುವೆಯಾಗಿ, ಅತ್ತೆಯಿಲ್ಲದ ಮನೆಗೆ ಗೃಹಿಣಿಯಾಗಿ ಬಂದಾಕೆ ನಮ್ಮಮ್ಮ. ಎರಡು ಬೀದಿಗಳ ನಡುವೆ ಈ ತುದಿಯಿಂದ ಆ ತುದಿಯವರೆಗೆ ಹರಡಿಕೊಂಡಿದ್ದ ದೊಡ್ಡ ಮನೆ. ವ್ಯವಸಾಯ, ದನ-ಕರು, ಜೊತೆಗೆ ನಮ್ಮ ಮನೆತನಕ್ಕೆ ಬಂದಿದ್ದ ಪೌರೋಹಿತ್ಯ. ಇವೆಲ್ಲದರ ಜೊತೆಗೆ ಮಡಿ-ಹುಡಿ, ಪೂಜೆ-ಪುರಸ್ಕಾರ, ಹೆಚ್ಚುಗಟ್ಳೆಗಳ ಸಾಲು ಸಾಲುಗಳು…. ಮದುವೆಯಾಗಿ ಒಂದೇ ವರ್ಷದಲ್ಲಿ ನನಗೆ ಅಮ್ಮನಾದಳು. ವೈವಾಹಿಕ ಜೀವನದ ರಮ್ಯಕನಸುಗಳು ಎಲ್ಲೋ ಕಳೆದು ಹೋಗಿರ ಬೇಕು. ಬಹುಶಃ ಆ ಚಿಕ್ಕವಯಸ್ಸಿನಲ್ಲಿ ನಮ್ಮಮ್ಮ ಹಣ್ಣಾಗಿರಬಹೇಕು. ನಂತರ ನಮ್ಮೊಡನೆ ಹಂಚಿಕೊಳ್ಳುತ್ತಿದ್ದ ಮಾತುಗಳಿಂದ, ಅಥವಾ ತೋಡಿಕೊಳ್ಳುತ್ತಿದ್ದ ಬಗೆಯಿಂದ ನಮಗೆ ಅನ್ನಿಸಿದ್ದೆಂದರೆ ಅತ್ತೆಯ ಕಾಟವಿಲ್ಲ ಅಂತಾ ನಿಶ್ಚಿಂತೆಯೇನೂ ಇರಲಿಲ್ಲವೋ ಏನೋ. ಏನೇ ಆದರೂ, ಎಷ್ಟೇ ಕಷ್ಟವಾದರು ಅವಳು ತಾನು ನಂಬಿದ ಜೀವನ ಶೈಲಿಯನ್ನಾಗಲೀ, ವಿಚಾರಗಳನ್ನಾಗಲೀ ಬಿಡದ ವೀರವನಿತೆ. ಈ ಸ್ವಭಾವದಿಂದ ಎಷ್ಟೋ ಬಾರಿ ಮಕ್ಕಳಾದ ನಮಗೂ ಕಷ್ಟವೇ ಆಗಿದೆ. ಅವಳಿಗಂತೂ ಇನ್ನಿಲ್ಲದ ಕಷ್ಟ. ಉಪವಾಸ-ವನವಾಸ. ಆದರೂ ಅವಳು ಒನಕೆ ಓಬ್ಬವ್ವನೇ.
ನಮಗೆ ನಮ್ಮಮ್ಮ ತುಂಬಾ ಮುದ್ದು ಮಾಡಿದ ನೆನಪು ಇಲ್ಲ. ಹಾಗೆಂದು ಅವಳ ವಾತ್ಸಲ್ಯವನ್ನು ಅಲ್ಲಗಳೆಯಲಾದೀತೇ ? ನಮ್ಮ ಓದು, ಶಾಲೆಯ ಫೀಸು, ಸಂಜೆಯ ಬಾಯಿಪಾಠ, ಊಟ-ತಿಂಡಿ…. ಯಾವುದನ್ನೂ ಮರೆಯದೆ ಕಾಲಕಾಲಕ್ಕೆ ಗಮನಿಸುವ ನಾಲ್ಮೊಗನಂತೆ ಚತುರ ವದನೆ. ನನ್ನ ತಮ್ಮ ಹೇಳುವಂತೆ ಅವಳು ಒಂಥರಾ ಜೇನು ಹುಳುವಿನಂತೆ. ಸದಾ ಕೆಲಸ, ಕೆಲಸ, ಕೆಲಸ…. ಒಂದು ಚೂರೂ ಪೋಲಾಗದಂತೆ-ಪಾಳಾಗದಂತೆ ಇರುವುದರಲ್ಲೇ .. ಇರುವುದು ಎಂದರೆ ತಾತ ತರುತ್ತಿದ್ದ ಪುರೋಹಿತರ ಗಂಟಿನಲ್ಲಿ ಬರುವ ಕಾಳು-ಬೇಳೆ, ಅಕ್ಕಿ- ತೆಂಗಿನಕಾಯಿಗಳಲ್ಲಿ ಪೋಲಾಗದಂತೆ ಸಂಸಾರ ತೂಗಿಸುವ ಸಂಭ್ರಮದಲ್ಲಿ ಸದಾ ನಿರತೆ. ಇದರಿಂದ ನಮಗೆ ಎಷ್ಟು ಲಾಭವಾಗುತ್ತಿತ್ತೆಂದರೆ ಹೇಳಲಾಗದಷ್ಟು. ಹಾಲುಬಾಯಿ, ಕಾಯಿ ಕೋಡುಬಳೆ, ಕಾಯಿಹುರಿಟ್ಟು, ಕಾಯಿದೋಸೆ-ಸಿಹಿಚಟ್ನಿ… ಒಂದೇ ಎರಡೇ. ಆಗ ಚಿಕ್ಕವರಾಗಿದ್ದಾಗ ಲೆಕ್ಕವಿಲ್ಲದಷ್ಟು ತಿನ್ನುವ ಲಾಭವಾದರೆ, ಈಗ ಆ ಅಡುಗೆಯ ರಹಸ್ಯವೆಲ್ಲವೂ ಕರತಲಾಮಲಕವಾದ ಲಾಭ. ಹೀಗೆ ಬರೀ ಅಡುಗೆಅಮ್ಮನಾಗಿದ್ದು ಅವಳಿಗೆ ಹವ್ಯಾಸಗಳೇ ಇರಲಿಲ್ಲವೇ ? ಅವಳು ಅನಕ್ಷರಸ್ಥೆಯೇ ? ಇಲ್ಲ.
ಆ ಕಾಲಕ್ಕೇ ನಮ್ಮಮ್ಮ ಎಸ್. ಎಸ್ .ಎಲ್. ಸಿ ಪದವೀಧರೆ. ಜೊತೆಗೆ ಹಿಂದೀ ಪರೀಕ್ಷೆಗಳನ್ನು ಮಾಡಿಕೊಂಡಿದ್ದಳು. ಈ ಹಿಂದೀ ಪರೀಕ್ಷೆಯದೊಂದು ಸ್ವಾರಸ್ಯವಿದೆ. ಆ ಕಾಲದಲ್ಲಿ ಮದುವೆ ಮುಹೂರ್ತಗಳನ್ನು ಇಡುವಾಗ ಹೆಣ್ಣಿನ, ಹೆಣ್ಣಿನ ತಾಯಿ, ಗಂಡಿನ ತಾಯಿ – ಈ ಎಲ್ಲರ ಮಾಸಿಕ ಸ್ತ್ರೀಧರ್ಮವನ್ನು ನೋಡಿಯೇ ಇಡುತ್ತಿದ್ದರು. ಯಾವ ಕೃತಕ ತಡೆ ಸಾಧನಗಳೂ ಇರದಿದ್ದ ಕಾಲವಾದ್ದರಿಂದ. ಎಷ್ಟೇ ನೋಡಿದರು ಪ್ರಕೃತಿಯದು ಒಂದು ಮೇಲುಗೈ ಇದ್ದೇ ಇರುತ್ತದಲ್ಲವೇ ? ಹಾಗೆಯೇ ನಮ್ಮಮ್ಮ ಧಾರೆಯ ದಿನವೇ ಹೊರಗಾದಳಂತೆ. ಹಾಗಾಗಿ ಮುಂದಿನ ನಾಗೋಲಿ( ನಾಕಬಲಿಯ ಆಡುರೂಪ) ಮುಂದೂಡ ಬೇಕಾಯಿತಂತೆ. ಫೆಬ್ರವರಿ ೨೧ ಮದುವೆ. ೨೨ ಕ್ಕೆ ಇವಳು, ನಮ್ಮಪ್ಪ ಇಬ್ಬರೂ ಹಿಂದಿ ರಾಷ್ಟ್ರಭಾ಼ಷಾ ಪ್ರವೇಶ.. ಪರೀಕ್ಷೆ ಕಟ್ಟಿದ್ದರಂತೆ. ಮದುವೆ ಗೊತ್ತಾಗಿದ್ದರಿಂದ .. ಇನ್ನೇನು ಪರೀಕ್ಷೆಗೆ ತಿಲಾಂಜಲಿ ಎಂದುಕೊಂಡು ಸುಮ್ಮನಿದ್ದರಂತೆ. ದೈವವೇ ಒದಗಿಸಿದ ಈ ಅವಕಾಶವನ್ನು ಉಪಯೋಗಿಸಿಕೊಂಡು, ಹಠಮಾಡಿ ಅಮ್ಮ ಪರೀಕ್ಷೆ ಬರೆದು ಬಂದಳಂತೆ. ಅಂತೆ-ಕಂತೆಯೇನಲ್ಲ. ನಾನೇ ನಮ್ಮಮ್ಮನ ಆ ಪರೀಕ್ಷೆಯ ಪಾಸಾದ ಸರ್ಟಿಫಿಕೇಟ್ ನೋಡಿದ್ದೆ. ನನ್ನ ಹತ್ತಿರ ಇಟ್ಟುಕೊಂಡಿದ್ದೆ. ಅವಳ ಹಿಂದೀ ಚೆನ್ನಾಗಿತ್ತು. ಮುಂದೆ ನಾನು ಹಿಂದೀ ಪರೀಕ್ಷೆಗಳನ್ನು ಕಟ್ಟುವಾಗ, ಎಷ್ಟೋ ನೋಟ್ಸಗಳನ್ನು ಬರೆದು ಕೊಡುತ್ತಿದ್ದಳು. ನನ್ನ ತಮ್ಮಂದರಿಗೆ ಪಾಠವನ್ನೂ ಹೇಳಿಕೊಡುತ್ತಿದ್ದಳು. ಇದು ಅವಳ ವಿದ್ಯಾಪ್ರೀತಿಗೆ ಒಂದು ನಿದರ್ಶನ.
ಸ್ವಾತಂತ್ರಪೂರ್ವದಲ್ಲಿ ಆರಂಭವಾದ ಚರಕದ ಆಂದೋಲನದ ಭಾಗವಾಗಿ ಚರಕನೂಲುವುದನ್ನು ಕಲಿತಿದ್ದಳು. ಅದಕ್ಕೆ ಸಾಕ್ಷಿಯಾಗಿ ನಮ್ಮ ಮನೆಯ ಅಟ್ಟದಲ್ಲಿ ಒಂದು ಹಳೆಯ ಚರಕವೂ ಇತ್ತು. ನಾವು ಅದರೊಂದಿಗೆ ಆಡಿದ್ದೂ ಉಂಟು.
ಇನ್ನು ಟೈಲರ್ ರಾಮಶಾಸ್ತ್ರಿಗಳ ಮಗಳಾದ ಅವಳು ದರ್ಜಿಯೂ ಆಗಿದ್ದಳು. ಅವರ ಅಪ್ಪ ಟೈಲರ್ ರಾಮಶಾಸ್ತ್ರಿಗಳು… ಆ ಕಾಲಕ್ಕೇ ವರ್ಣಾಂತರ ಧರ್ಮವನ್ನು, ಸವರ್ಣದ ಧರ್ಮವನ್ನೂ ಏಕ ಕಾಲಕ್ಕೆ ಅನುಸರಿಸುತ್ತಾ ಬಂದಿದ್ದವರು. ಅಂದರೆ.. ಬ್ರಾಹ್ಮಣವರ್ಣದ ವೇದಾಧ್ಯಯನವನ್ನೂ, ನಮ್ಮ ಸ್ಮೃತಿಗಳಲ್ಲಿ ಬ್ರಾಹ್ಮಣವರ್ಣಕ್ಕೆ ಹೇಳದೇ ಇದ್ದ ಸಿಂಪಿಗರ ವೃತ್ತಿಯನ್ನು ಜೀವಿಕೆಗಾಗಿ ಇಟ್ಟುಕೊಂಡಿದ್ದವರು. ಅವರು ಒಂಥರಾ “ ಪರಫೆಕ್ಷನಿಸ್ಟ್”. ಯಾವುದನ್ನೂ ಸುಲಭವಾಗಿ ಒಪ್ಪುತ್ತಿರಲಿಲ್ಲ. ಇದೇ ವಂಶವಾಹಿನಿಯನ್ನು ನಮ್ಮಮ್ಮನಿಗೂ ಅವರು ರವಾನಿಸಿದ್ದರು. ಹಾಗಾಗಿ ನಮ್ಮಮ್ಮನ ಹೊಲಿಗೆ ಎಂದರೆ ಕರಾರುವಾಕ್ಕು. ಅವಳ ಡ್ರೆಸ್ ಡಿಸೈನಿಂಗ್ ಬೊಟಕ್ ಗೆ ನಾವೇ ಮಾಡೆಲ್ ಗಳು. ಅವಳಿಗೆ ನಮಗೆ ಅನೇಕ ಉಡುಪುಗಳನ್ನು ಹೊಲಿಯಲು ಹೊಸ ಬಟ್ಟೆ ಬೇಕೆಂದೇನೂ ಇಲ್ಲ.. ಜೋಯಿಸತನದಲ್ಲಿ ಬರುತ್ತಿದ್ದ ಪಂಚೆ, ಸ್ವಲ್ಪ ಹಳೆಯದಾಗಿದ್ದ ರೇಶ್ಮೆ ಮಗುಟ… ಯಾವುದೂ ಆಗುತ್ತಿತ್ತು.. ಕ್ರಿಯಾಸಿದ್ಧಿಃ ಸತ್ತ್ವೇ ಭವತಿ ಮಹತಾಂ ನೋಪಕರಣೇ… ಇದಕ್ಕೆ ನಮ್ಮಮ್ಮನೂ ಒಂದು ಉದಾಹರಣೆ.
ನಮ್ಮಮ್ಮನೇ ನನಗೆ ಹೊಲಿಗೆಯ ಗುರುಕೂಡ. ಒಂಥರಾ ಏಕಲವ್ಯನಂಥಹ .. ಅಥವಾ ಏಕಲವ್ಯೆ ಅನ್ನಿ ಬೇಕಾದರೆ… ಶಿಷ್ಯತ್ವ ನನ್ನದು. ಯಾವುದನ್ನೂ ವೇಸ್ಟ್ ಮಾಡಬಾರದು ಎನ್ನುವ ವೀರವ್ರತಿಯಾದ ನಮ್ಮಮ್ಮ ಅಷ್ಟು ಸುಲಭದಲ್ಲಿ ನನಗೆ ಮಿಶನ್ ಮುಟ್ಟಲು ಅನುಮತಿಸುತ್ತಿರಲಿಲ್ಲ. ಸೂಜಿ ಮುರಿದು ಬಿಡುವ, ಬಾಬಿನ್ ಷಟಲ್ ಹಾಳು ಮಾಡುವ, ಬಟ್ಟೆ ಸಿಕ್ಕಿಸುವ, ದಾರ ಗೋಜಲಾಗಿಸುವ….. ಏನೇನೋ ಆತಂಕಗಳು ಅವಳಿಗೆ. ಆದರೆ ನಾನು ನಮ್ಮಮ್ಮನ ಮಗಳೇ… ಹಾಗಾಗಿ… ಛಲಬಿಡಲಿಲ್ಲ. ಅವಳ ಈ ಹವ್ಯಾಸಗಳೇನಿದ್ದರು ಪೋಸ್ಟ ಲಂಚ್ ಹವ್ಯಾಸಗಳು.. ನಮ್ಮ ತಾತನ ( ಇವರಿಗೆ ತೋಟದ ತಾತ ಅಂತಲೇ ನಾವು ಕರೀತಿದ್ದದ್ದು) ಅಂದರೆ ಅವಳ ಮಾವನವರು ತೋಟದಿಂದ ಬಂದು, ಮಾಧ್ಯಾಹ್ನಿಕ ಮಾಡಿ, ಊಟ ಮಾಡಿ, ತಮ್ಮ ರೂಮಿನಲ್ಲಿ ಪವಡಿಸಿದ ಮೇಲೆಯೇ. ಅಲ್ಲಿವರೆಗೂ ಆ ದೊಡ್ಡಮನೆಯ ಯಾವುದೋ ರೂಮಿನಲ್ಲಿರುತ್ತಿದ್ದ ಹೊಲಿಗೆ ಮಿಷನ್ ಅವಳ ನಿಯಂತ್ರಣದಿಂದ ದೂರ. ನನಗೆ ನನ್ನ ಪ್ರಯೋಗಕ್ಕೆ ಸಿಗುತ್ತಿತ್ತು. ಹೀಗೆ ಕದ್ದು-ಮುಚ್ಚಿ, ಅವಳಿಂದ ಬೈಸಿಕೊಂಡು, ಅವಳು ರವಿಕೆ, ಲಂಗ, ನನ್ನ ತಮ್ಮಂದಿರಿಗೆ ಚಡ್ಡಿ, ಅಂಗಿ… ಎಲ್ಲಾ ಕಟ್ ಮಾಡುವಾಗ ನೋಡುತ್ತಾ, ತಾನು ಕಟ್ ಮಾಡಿದ್ದು ಏನೋ ಎಡವಟ್ಟಾದಾಗ, ಅವಳ ಈ ಸಿಂಪಿಗವಿದ್ಯೆಯ ಗೆಳತಿಯರಾದ ಎದುರು ಮನೆ ನಂಜಮ್ಮನೋರೋ, ಲೀಲಮ್ಮನೋ, ಸುಧಮ್ಮನವರ ಹತ್ತಿರ ಆ ಎಡವಟ್ಟನ್ನು ಸರಿಪಡಿಸೋದರ ಬಗ್ಗೆ ಮಾತಾಡುವಾಗ ಕೇಳ್ತಾ….. ನನಗೂ ಹೊಲಿಗೆ ಬಂದೇ ಬಿಡ್ತು ನೋಡಿ. ಅದಕ್ಕೆ ನಾನು ನನ್ನನ್ನು ಏಕಲವ್ಯೆ ಅಂತ ಕರೆದುಕೊಂಡಿದ್ದು. ಮುಂದೆ ನಾನೂ ಟೈಲರಿಂಗ್ ಡಿಪ್ಲೊಮೊ ಮಾಡಿಕೊಂಡು, ಅನುಕೂಲಗಳು ಇದ್ದದ್ದರಿಂದ ಆಧುನಿಕವಾದ ಹೊಲಿಗೆ ಯಂತ್ರವನ್ನು ಖರೀದಿಸಿ, ನನ್ನ ಮಕ್ಕಳಿಗೆ ಬಗೆಬಗೆಯಾದ ಬಟ್ಟೆಗಳನ್ನು ಹೊಲಿದು ಹಾಕಿ ಆನಂದ ಪಡಲು ನಮ್ಮಮ್ಮನ ಗುಣವೇ ನನಗೆ ಪ್ರೇರಣೆ. ಸ್ಫೂರ್ತಿ. ನಾನು ಹೀಗೆ ಬಗೆಬಗೆಯಾದ ಬಟ್ಟೆಗಳನ್ನು ಹೊಲಿಯುತ್ತಿದ್ದಕಾಲದಲ್ಲಿ, ನಮ್ಮ ನೆರೆಮನೆಯ ಗೆಳತಿಯೊಬ್ಬರು …” ನೀವು ಒಂದೊಂದು ಬಟ್ಟೆ ಹೊಲಿದಾಗಲೂ ಅದಕ್ಕೊಂದಿಷ್ಟು ಬೆಲೆಕಟ್ಟಿ ಸುಮ್ಮನೆ ದುಡ್ಡು ಎತ್ತಿಡಿ… ಮುಂದೆ ಯಾವತ್ತೋ ಒಂದು ದಿನ ನಿಮಗೆ ನೀವು ಮಾಡಿದ ಉಳಿತಾಯವೆಷ್ಟು ಅಂತಾ ಗೊತ್ತಾಗತ್ತೆ—ಅನ್ನೋರು. ನಾನು ಮಾಡಲಿಲ್ಲ. ಆದರೆ “ ಮನಿ ಸೇವ್ಡ್ ಈಸ ಮನಿ ಅರ್ನ್ಡ್” - ಈ ಅರ್ಥಶಾಸ್ತ್ರದ ಸರಳ ಸೂತ್ರದನ್ವಯ…. ನಮ್ಮಮ್ಮ ಎಷ್ಟು ಗಳಿಸಿರಬಹುದಲ್ಲವೇ ? ಅವಳನ್ನು ವರ್ಕಿಂಗ್ ವುಮೆನ್ ಅಲ್ಲ ಅಂತಾಅನ್ನೋಕ್ಕಾಗತ್ತದೆಯೇ ? ಅಷ್ಟೇ ಅಲ್ಲ ಸಮಯ ಬಂದಾಗ ಬೇರೆಯವರಿಗೂ ಬಟ್ಟೆ ಹೊಲಿದು ಕೊಟ್ಟು ಅಲ್ಪ ಸ್ವಲ್ಪ ಸಂಪಾದಿಸಿದ್ದೂ ಉಂಟು ನಮ್ಮಮ್ಮ.
ಬಗೆ ಬಗೆಯಾದ ಹತ್ತಿಯ ಹಾರಗಳನ್ನು ಮಾಡೋದು, ನವರಾತ್ರಿಬಂತೆಂದರೆ ಬೊಂಬೆಗೆ ಸೀರೆ-ಶರಾಯಿ ಹೊಲಿದು ಹಾಕೋದು… ಸ್ವೆಟರ್ ಹಾಕೋದು…. ಸರಿಸುಮಾರು ಆ ಕಾಲದ ಗೃಹಿಣಿಯರ ಹವ್ಯಾಸಗಳೇ ಆಗಿದ್ದವು. ನಮ್ಮಮ್ಮನೂ ಅವುಗಳಲ್ಲಿ ಕುಶಲೆ. ಇವೆಲ್ಲವನ್ನೂ ನನಗಂತೂ ವರ್ಗಾಯಿಸಿದ್ದಾಳೆ. ನಾನು ಮದುವೆಯಾಗಿ ತಮಿಳುನಾಡಿನ ಮೇಟ್ಟೂರಿನಂಥಹ ಒಂದು ಸಣ್ಣ ಊರಲ್ಲಿ, ಭಾಷೆತಿಳಿಯದೆ ಒದ್ದಾಡಿದ ದಿನಗಳಲ್ಲಿ.. ಇವುಗಳೇ ನನಗೆ ಸಮಯಕಳೆಯುವ ಸಾಧನಗಳು. ಅಮೇಲೆ ಅಲ್ಲಿನ ಹೆಂಗೆಳೆಯರ ಮಧ್ಯೆ ನನಗೊಂದು ಐಡೆಂಟಿಟಿಯನ್ನು ತಂದುಕೊಟ್ಟಿದ್ದೂ ಈ ಹವ್ಯಾಸಗಳೇ.
ಹಾಡು ಹಸೆಗಳ ಸಂಗ್ರಹವೂ ನಮ್ಮಮ್ಮನ ಒಂದು ಹವ್ಯಾಸ. ಅವಳ ಒಂದೇ ಒಂದು ಸ್ವಂತದ ಆಸ್ತಿಯಾದ ಟ್ರಂಕ್ ನಲ್ಲಿ, ಒಂದು ನೋಟು ಪುಸ್ತಕದಲ್ಲಿ , ಚಿಕ್ಕ ಚಿಕ್ಕ ಅಕ್ಷರಗಳಲ್ಲಿ ಎಷ್ಟೋ ಹಾಡುಗಳೂ, ವ್ರತದ ಹಾಡುಗಳೂ ಇರುತ್ತಿದ್ದವು. ನನಗೆ ಕೆ. ಎಸ್. ನ ರವರ “ ರಾಯರು ಬಂದರು ಮಾವನ ಮನೆಗೆ “ ಕನಕದಾಸರ “ ಈಶ ನಿಮ್ಮ ಚರಣ ಭಜನೆ”…. ಇವೆಲ್ಲವೂ ನಮ್ಮಮ್ಮನ ಹಾಡಿನ ಪುಸ್ತಕದಿಂದಲೇ ಮೊದಲ ಪರಿಚಯ. ಈಶ ನಿಮ್ಮ ಚರಣ ಭಜನೆಯಂತೂ…. ನಮ್ಮಮ್ಮನ ನಿತ್ಯ ಪೂಜೆಯ ಹಾಡುಗಳಲ್ಲಿ ಒಂದು. ಈ ಎಲ್ಲವೂ ನಮಗೇ ತಿಳಿಯದಂತೆ ನಮ್ಮಲ್ಲಿ ಎಂಥದೋ ಒಂದು ಸುಸಂಸ್ಕಾರದ ಬೀಜವನ್ನು ಬಿತ್ತಿವೆ ಎಂದೇ ನನ್ನ ನಂಬಿಕೆ.
ನಮ್ಮಮ್ಮ ತನ್ನ ಮಕ್ಕಳನ್ನೂ ಯಾವತ್ತೂ ತುಂಬಾ ಹೊಗಳಿದ್ದಾಗಲೀ, ಬಾಳೇಹಣ್ಣಿನ ಗುಡಾಣದಲ್ಲಿ ಬೆಳೆಸುವಂತೆ ತುಂಬಾ ಮುಚ್ಚಟೆ ವಹಿಸಿದ್ದಾಗಲೀ ಇಲ್ಲ. ನಾನು ಕಂಡಂತೆ ಅವಳು ತುಂಬಾ ಭಾವುಕಳೂ ಅಲ್ಲ. ಪ್ರಾಕ್ಟಿಕಲ್ ಆಗಿ ಯೋಚನೆ ಮಾಡುವ ಗುಣವೇ ಅವಳಲ್ಲಿ ಹೆಚ್ಚು ಆದರೂ ತನ್ನ ಮಕ್ಕಳಿಗೆ ತೊಂದರೆಯೋ ಮತ್ತೊಂದೋ ಆದಾಗ ಅವಳ ಭಾವನೆಗಳೆಲ್ಲಾ ಕಣ್ಣೀರಾಗಿ ಹೊರಬಂದು ಮುಗಿದು ಹೋಗುತ್ತಿದ್ದವು. ಕ್ರಿಯಾರೂಪಕ್ಕೆ ಬರುತ್ತಿದ್ದುದು ಕಡಿಮೆ. ಅದು ಅವಳ ಸ್ವಭಾವ. ಅಂತರಂಗದಲ್ಲಿ ವಾತ್ಸಲ್ಯಮಯಿಯೇ. ಆದರೂ ತನ್ನ ಕೆಲವು ಲಿಮಿಟೇಷನ್ಸ್ ಗಳ ಚೌಕಟ್ಟಿನಲ್ಲಿ ತಾನೇ ಬಂಧಿ. ಹೊರಬರಲಾಗದ ದೌರ್ಬಲ್ಯವೋ, ಹೊರಬರುವುದು ಬೇಡವೋ… ಅಂತೂ ಸ್ವಲ್ಪ ಅಂತರ್ಮುಖಿ. ತಾನು ಅಂದುಕೊಂಡಂತೆಯೇ ನಡೆಯಬೇಕು. ಎಲ್ಲರೂ ತನಗೆ ಹೊಂದಿ ನಡೆಯಬೇಕು ಎನ್ನುವ ಮನೋಧರ್ಮ ಸ್ವಲ್ಪ ಜಾಸ್ತಿ. ಇದು ಬಹುಶಃ ಎಲ್ಲ ವ್ಯಕ್ತಿಗಳ ಮನೋಧರ್ಮವೋ ಏನೋ….. ನಿಖರವಾಗಿ ಹೇಳಲಾರೆ.
ಅನೇಕ ಗುಣವಿಶೇಷಗಳು, ಕೌಶಲಗಳು , ಮುಂದಾಲೋಚನೆ, ತನ್ನ ಸುತ್ತಮುತ್ತಿನ ಎಲ್ಲದರ ಸೂಕ್ಷ್ಮವಾದ ಅವಲೋಕನ , ಖಡಕ್ಕಾದ ಲೆಕ್ಕಾಚಾರದ ಗುಣ….. ಎಲ್ಲವೂ ಇದ್ದೂ….. ಯಾಕೋ ಗೊತ್ತಿಲ್ಲ ಮುನ್ನುಗ್ಗುವ ಗುಣ ಇರಲಿಲ್ಲ. ತನ್ನ ಮನೆಗೆ ಸಂಬಂಧಿಸಿದ್ದನ್ನು ಬಿಟ್ಟು. ಇತರ ಎಲ್ಲದರಲ್ಲೂ ಸ್ವಲ್ಪ ಹಿಂಜರಿಕೆ. ಅಂಜಿಕೆ. ಎಕ್ಸ್ ಪೋಷರ್ ಕಡಿಮೆಯಿದ್ದದ್ದೋ, ಸ್ವಭಾವವೋ, ಅಥವಾ…. ಸುಮ್ಮನೆ ಯಾಕೆ ರಿಸ್ಕ್…. ಎಂಬ ವ್ಯಾವಹಾರಿಕ ಲೆಕ್ಕಾಚಾರವೋ… ಅಂತೂ ನನ್ನ ಮಕ್ಕಳ ಮದುವೆ ಮುಂತಾದ ಸಂದರ್ಭಗಳಲ್ಲೂ ತಾನಾಗಿ ಮುಂದೆ ಬಂದು –“ಹೀಗಾಗ ಬೇಕು, ಹೀಗೆ ಮಾಡು, … ಎಂದು ಸ್ಪಷ್ಟವಾಗಿ ಹೇಳಿದ್ದಿಲ್ಲ. ಇದು ನನಗೆ ಸ್ವಲ್ಪ ಆಶ್ಚರ್ಯವೇ.
ನಮ್ಮಮ್ಮ ಒಳ್ಳೆಯ ನೆರೇಟರ್ ( narrator). ಅದಕ್ಕೆ ತಕ್ಕಂತೆ ಅಗಾಧವಾದ ನೆನಪಿನ ಶಕ್ತಿ. ಎಳೆದರೂ ಐದಡಿ ಮುಟ್ಟದ ಅವಳ ದೇಹದ ಎಲ್ಲಾ ಕೋಶಗಳೂ ಸ್ಮೃತಿಕೋಶವೇ ಏನೋ ಎಂಬಷ್ಟು ನೆನಪು. ಯಾವುದೇ ನಡೆದ ಘಟನೆಯನ್ನು ಚ-ತು ತಪ್ಪದಂತೆ, ರೋಚಕವಾಗಿ ಹೇಳುವುದರಲ್ಲಿ ನಿಸ್ಸೀಮೆ. ನಾವು ಅಕ್ಕ ತಮ್ಮಂದಿರು… ನಮ್ಮಮ್ಮನಿಂದ ಇಂಥಹ ನೆರೇಶನ್ ಗಳನ್ನು ಕೇಳಲು ಹಾತೊರೆಯುತ್ತಿರುತ್ತೇವೆ. ಬಹಳ ವಿನೋದದ ಕ್ಷಣಗಳು ಅವು. ಬೆಣ್ಣೆ ತಂದು ಕೊಟ್ಟ ಬೋರನೋ, ಲಿಂಗನೋ ತೂಕದಲ್ಲಿ ಮೋಸ ಮಾಡಿದ್ದಿರಬಹುದು…. ಹಾಲು ಒಡೆದು ಹೋದದ್ದಿರಬಹುದು… ಊರಿನಲ್ಲಿ ನಡೆದ ಯಾವುದೋ ಸಂಗತಿ ಇರಬಹುದು…… ಎಲ್ಲವೂ ಅಮ್ಮನ ಬಾಯಿಂದ ಬರುವಾಗ ನಮಗೆ ಪ್ರತ್ಯಕ್ಷದರ್ಶಿಗಳಾದ ಅನುಭವ. ಇವಳೇನಾದರೂ ಸಾಹಿತ್ಯರಂಗವನ್ನು ಪ್ರವೇಶಿಸಿದ್ದರೆ…. ತ್ರಿವೇಣಿಯೋ, ವಾಣಿಯೋ… ಯಾರೂ ಇವಳ ಮುಂದೆ ಸೊನ್ನೆಯೇ .
ಇಂಥಾ ಚಂದವಾಗಿ ನೆರೇಟ್ ಮಾಡುವ ನಮ್ಮಮ್ಮ…. ಕೋಪಬಂದಾಗ ಮಾತ್ರ ಎಪರಾ ತಪರಾ ಮಾತಾಡಿ, ನಮಗೆಲ್ಲಾ ನಗು ತರಿಸಿ… ನಾವು ನಕ್ಕು, ತನ್ನ ಕೋಪಕ್ಕೆ ಬೆಲೆಯಿಲ್ಲದೇ ಹೋದದ್ದು ಗೊತ್ತಾಗಿ… ಮತ್ತೂ ಬೈಯುತ್ತಿದ್ದ ದಿನಗಳು ಇದ್ದವು. ನಮಗೆ ಬೇಸಿಗೆ ರಜೆಯಿದ್ದಾಗ ಒಮ್ಮೆ ನಮ್ಮಮ್ಮ ಅಡುಗೆ ಮುಗಿಸಿ ಮುಚ್ಚಿಟ್ಟು ಕೆರೆಗೆ ಬಟ್ಟೆ ಒಗೆಯಲು ಹೋಗಿದ್ದಳು. ಹೋಗುವಾಗ ಅವಳು ಅಡುಗೆ ಮನೆಯ ಬಾಗಿಲನ್ನು ಮುಂದೆಮಾಡಿ ಚಿಲಕಕ್ಕೆ ಕಡೆಯುವ ಮಂತನ್ನು ಸಿಕ್ಕಿಸಿ… ಕಾಕೇಭ್ಯೋ ದಧಿ ರಕ್ಷತಾಂ… ಎನ್ನುವಂತೆ ನಮಗೆ ಅಡುಗೆ ಮನೆ ಬಾಗಿಲು ತೆಗೆದರೆ ಸರಿಯಾಗಿ ಮತ್ತೆ ಮುಚ್ಚಿ ಎಂದು ಹೇಳಿ ಹೋದಳು. ಚೌಕಾಬಾರವೋ, ಅಣೆಕಲ್ಲಾಟವೋ, ಏನೋ ಆಡ್ತಾ ಇದ್ದ ನಮಗೆ ಅದು ಕೇಳಿಯೂ ಕೇಳದಂತಹ ಅಶರೀರವಾಣಿ. ಸುಮ್ಮನೆ ತಲೆ ಆಡಿಸಿದ್ದೆವೋ ಏನೋ. ಪಾಪ ನಮ್ಮಮ್ಮ ತನ್ನ ಮಕ್ಕಳು ಬಹಳ ವಿಧೇಯರು ಎಂದು ನಂಬಿ ಕೆರೆಗೆ ಹೋದಳು. ನಾವು ಆಟದಲ್ಲಿ ಮುಳುಗಿದೆವು. ನಾವು ಎಂದರೆ ನಮ್ಮಮ್ಮನ ಮೂರು ಮಕ್ಕಳು ಮಾತ್ರವಲ್ಲ…. ಊರ ಮಕ್ಕಳ ದಂಡೇ ನಮ್ಮಮನೆಯಲ್ಲಿ ಇರುತ್ತಿದ್ದವು. ದೊಡ್ಡ ಹಜಾರದಲ್ಲಿದ್ದ ಬೀಟೆ ಮರದ ತೂಗು ತೊಟ್ಟಿಲು, ಹುಲ್ಲಿನ ಮೆದೆ, ಕೊಟ್ಟಿಗೆ ಎಲ್ಲಾ ಇರುತ್ತಿದ್ದ ದೊಡ್ಡ ಅಂಗಳ, ಹಿತ್ತಲು…..ಎಲ್ಲವೂ ಊರ ಹುಡುಗರ ಪಾಲಿಗೆ ಯಾವ ಅಮ್ಯೂಸ್ ಮೆಂಟ್ ಪಾರ್ಕಿಗೂ ಕಡಿಮೆಯಾದದ್ದಲ್ಲ. ಈಗ ಪ್ರಸಿದ್ಧನಾಗಿರುವ ಮಂಡ್ಯ ರಮೇಶನ ಎಲ್ಲಾ ನಟನ ಕೌಶಲಕ್ಕೂ ನಮ್ಮಮನೆಯೇ ಪೂರ್ವರಂಗ. .. ಬರೀ ಹುಡುಗರು ಮಕ್ಕಳಿಗೇ ಅಲ್ಲ, ಬೀದಿ ನಾಯಿ ಬೆಕ್ಕುಗಳೂ ಅಷ್ಟೇ ಸಲೀಸಾಗಿ ಒಡಾಡೋವು ನಮ್ಮನೆ ಮೂಲಕ. ಕೆರೆಗೆ ಹೋದ ನಮ್ಮಮ್ಮ ಬರುವಷ್ಟರಲ್ಲಿ…. ನಾವು ನೀರುಕುಡಿಯಲು, ಕಾಯಿ-ಬೆಲ್ಲ ತಿನ್ನಲು ಅಂತಾ… ಅಡುಗೆ ಮನೆ ಬಾಗಿಲು ತೆಗೆದು ಹಾಕಿ…. ಮಾಡುತ್ತಿದ್ದೆವು. ಯಾರು ಯಾವಾಗ ಅವಳು ಸಿಕ್ಕಿಸಿದ್ದ ಮಂತನ್ನು ಮತ್ತೆ ಚಿಲಕಕ್ಕೆ ಸಿಕ್ಕಿಸದೇ ಬಾಗಿಲನ್ನು ಹಾರುಹೊಡೆದಿದ್ದರೋ ಗೊತ್ತಿಲ್ಲ… ನಮ್ಮಮ್ಮ ಬಟ್ಟೆ ಮಂಕರಿ ಸೊಂಟದಲ್ಲಿಟ್ಟು ಬಿಸಿಲಲ್ಲಿ ಬಂದಾಗ… ಅಡುಗೆ ಮನೆಯ ತೆರೆದಬಾಗಿಲು ಕಣ್ಣಿಗೆ ಬಿತ್ತು. ಮೊದಲೇ ಬಿಸಿಲು. ಬಟ್ಟೆ ಒಗೆದ ಸುಸ್ತು… ಹಸಿವೆ… ಎಲ್ಲಾ ಸೇರಿ ಅವಳ ಪಿತ್ಥ ನೆತ್ತೆಗೇರಿ… ಒಂದಷ್ಟು ಬೈಯುತ್ತಾ ಬೈಯುತ್ತಾ… ನಿಮ್ಮಣ್ಣ ಊಟಕ್ಕೆ ಬರೋ ಹೊತ್ತಾಯ್ತು, ಹೀಗೆ ಬಾಗಿಲು ಹಾರುಹೊಡೆದು ಕೂತಿದ್ದೀರಲ್ಲ, “ ಸಾರು ಬಂದು ನಾಯಿಮುಟ್ಟಿದ್ರೆ ಏನು ಮಾಡಬೇಕಾಗಿತ್ತು ? …. ಅಮ್ಮನ ಮಾತು ಮುಗೀಲೇ ಇಲ್ಲ….. ನಾವೆಲ್ಲಾ ಸೂರು ಹಾರುವಂತೆ ಜೋರಾಗಿ ನಗಲು ಆರಂಭಿಸಿದ್ದೆವು. ಪಾಪ ! ಅಮ್ಮನಿಗೆ ತಾನು ಆವೇಶದಲ್ಲಿ ಮಾತನ್ನು ಉಲ್ಟಾ ಪಲ್ಟಾ ಮಾಡಿದ್ದು , ವಾಕ್ಯದಲ್ಲಿ ಕರ್ತೃ-ಕ್ರಿಯೆಗಳನ್ನು ಎಲ್ಲೆಲ್ಲೋ ಇಟ್ಟದ್ದು ಗೊತ್ತಾಗಲು ಸ್ವಲ್ಪ ಸಮಯವೇ ಹಿಡಿಯಿತು. ಅವಳೂ ನಗುತ್ತಾ “ ನಿಮಗೆಲ್ಲಾ ನನ್ನ ಮಾತೂ ಅಂದ್ರೆ ಸಸಾರ… ಅಂತಾ ಮತ್ತೊಂದಿಷ್ಟು ಆಶೀರ್ವಾದ ಮಾಡಿ ಒಳಗೆ ಹೋದಳು- ನಿಜವಾಗಿ ಸಾರಿಗೆ ಕಾಲು ಬಂದಿದೆಯಾ ಅಂತಾ ನೋಡಲು..
ಹೊಸದನ್ನು ಕಲಿಯುವ ಉತ್ಸಾಹಿ ನಮ್ಮಮ್ಮ. ಸ್ವೆಟರ್ ಹಾಕ್ತಾ ಇದ್ದ ಕಾಲದಲ್ಲಿ, ಕ್ರೋಶಾ ಶಾಲುಗಳನ್ನು ಹಾಕ್ತಾ ಇದ್ದ ಕಾಲದಲ್ಲಿ, ಯಾರೋ ಬಟಾಣಿ ಪ್ಯಾಟ್ರನ್ ಸ್ವೆಟರ್ ಹಾಕಿದ್ರಂತೆ, ಯಾರೋ ಯು ಪಿನ್ ಶಾಲು ಹಾಕಿದ್ರಂತೆ … ಅಂತಾ ಗೊತ್ತಾದರೆ ಸಾಕು… ಅದನ್ನು ಹೇಗೋ ಕಲಿಯುವ ಹುಮ್ಮಸ್ಸು. ಈ ಹುಮ್ಮಸ್ಸೇ ಮುಂದೆ ನಮ್ಮ ತಂದೆ ನಮ್ಮ ನಾಗಮಂಗಲದಲ್ಲಿ ಮಹಿಳೆಯರಿಗೆ ವೇದಪಾಠವನ್ನು ಆರಂಭಿಸಿದಾಗ, ಅವಳೂ ಶಿಷ್ಯೆಯಾಗಿ “ ಸಸ್ವರ ವೇದಮಂತ್ರವನ್ನು “ ಹಿಡಿದು, ಬಹಳ ನಿಷ್ಠೆಯಿಂದ ಕಲಿಯುವಂತೆ ಮಾಡಿದ್ದು. ಸ್ವರಗಳನ್ನು ಸರಿಯಾಗಿ ಹಿಡಿದು ವೇದವನ್ನು ಹೇಳುವುದನ್ನು ಕಲಿತರೂ , ಗಂಟಲಿಗೆ ಅಷ್ಟು ತ್ರಾಣವಿಲ್ಲದ್ದರಿಂದ… ಅವಳ ಪಠಣ ಗುಂಪಿನಲ್ಲಿ ಗೋವಿಂದವೇ ಇವತ್ತಿಗೂ . ಆದರೆ ಆ ಸಸ್ವರ ವೇದಮಂತ್ರದ ಪುಸ್ತಕದಲ್ಲಿ ನಮ್ಮ ತಂದೆ ಪಾಠ ಮಾಡಿರುವ ಯಾವ ಯಾವ ಸೂಕ್ತಗಳು ಯಾವ ಯಾವ ಪುಟದಲ್ಲಿ ಇವೆ… ಇದನ್ನು ಮಾತ್ರ ಕರಾರುವಾಕ್ಕಾಗಿ ಹೇಳುವವಳು ನಮ್ಮಮ್ಮ ಒಬ್ಬಳೇ.
ಇನ್ನು ನಮ್ಮ ತಂದೆ ನಮ್ಮೂರಿನ ಕೆಲವು ಲೆಕ್ಕಾಚಾರದಲ್ಲಿ ಜಾಣೆಯರಾದ ಕೆಲವು ಆಸಕ್ತ ಮಹಿಳೆಯರಿಗೆ ಜಾತಕವನ್ನು ಬರೆಯುವುದನ್ನು ಹೇಳಿಕೊಟ್ಟು, ಸಂಪಾದನೆಗೆ ಒಂದು ಮಾರ್ಗವನ್ನು ತೋರಿಸಿದ್ದರು. ಈ ಕರಣಿಳಂತಹ ನಮ್ಮಮ್ಮ ಬಹಳ ಚೆನ್ನಾಗಿ ಅದನ್ನು ಕಲಿತು ಎಷ್ಟೋ ಜಾತಕಗಳನ್ನು ಗಣಿಸಿ-ಗುಣಿಸಿ, ಆ ಜಾತಕದ ಒಡೆಯರ ಭವಿಷ್ಯವನ್ನು ನಿರ್ಧರಿಸಿದ ದೈವಜ್ಞೆಯಾಗಿದ್ದಾಳೆ . ನನಗೆ ತಿಪ್ಪರಲಾಗ ಹೊಡೆದರೂ ಅದರ ತಲೆ ಬುಡ ಅರ್ಥವಾಗಲಿಲ್ಲ. ನಮ್ಮಮ್ಮನ ಮುಂದೆ ನಾನು ಸೋಲೊಪ್ಪಿಕೊಂಡ ಸಂತಸ ನನಗೆ.
ಇವಳು ಶಿಸ್ತಿನ ಸಿಪಾಯಿ ಅಂದೆನಲ್ಲವೇ. ಮತ್ತೆ ನಾವು ಮಕ್ಕಳು ತಪ್ಪುದಾರಿ ತುಳಿದಾಗ ಒಂದಿಷ್ಟು ಮೋಹಕ್ಕೆ ಒಳಗಾಗದೆ ಖಂಡಿಸುವಾಕೆ. ನಾನೊಮ್ಮೆ ಸಿನಿಮಾಕ್ಕೆ ಹೋಗುವ ಆಸೆಯಿಂದಲೋ, ಅಥವಾ ಬಳೆ ಖರೀದಿಸುವ ಆಸೆಯಿಂದಲೋ… ನಮ್ಮ ಮನೆಯ ಅಡುಗೆಮನೆಯಲ್ಲಿ ಯಾವಾಗಲೂ ಇರುತ್ತಿದ್ದ ಚಿಲ್ಲರೆ ಹಾಕುವ ಬುಟ್ಟಿಯಿಂದ ( ಪುರೋಹಿತರ ಮನೇಲಿ ಬಂದ ಎಲ್ಲಿಂದ ಬರಬೇಕು…ಚಿಲ್ಲರೇನೇ ) ಒಂದೋ ಎರಡೋ ರೂಪಾಯಿ ಎಗರಿಸಿದ್ದೆ. ಅದು ಗೊತ್ತಾದಾಗ ನಮ್ಮಮ್ಮ ಸಂಜೆಯಿಂದ ಎಲ್ಲೋ ಹೋಗಿದ್ದ ನಮ್ಮಪ್ಪ ರಾತ್ರಿ ಮನೆಗೆ ಬರುವವವರೆಗೂ ಬಾಗಿಲಲ್ಲೇ ಕೂರಿಸಿದ್ದಳು. ನಾನು ಹೊರಗೆ… ಕಪಿಸ್ವಭಾವದ ನನ್ನ ತಮ್ಮಂದಿರಿಬ್ಬರು ಒಳಗೆ… ಮಹಾ ಸಾಭ್ಯಸ್ಥರ ಹಾಗೆ ಹೊರಗೆ ಬಂದು ನನ್ನನ್ನು ಅಣಕಿಸಿ ಹೋಗೋದು… ನನಗೋ ಉರಿ… ನಮ್ಮಪ್ಪ ಬಂದು ಏನು ಮಾಡಬಹುದು ? ಎಂದೂ ಯಾರಮೇಲೋ ಕೈಯೆತ್ತದ ನಮ್ಮಪ್ಪ ಯಾವ ಶಿಕ್ಷೆ ಕೊಡಬಹುದು.. ಅಂತಾ ಯೋಚಿಸ್ತಾ ಕೂತಿದ್ದೆ. ನಮ್ಮಪ್ಪ ಬಂದ್ರು. “ ಯಾಕೆ ಕತ್ಲೆಲಿ ಹೊರಗೆ ಕೂತಿದ್ದಿ.. ಒಳಗೆ ಬಾ.. ಅಂದ್ರು… ಒಳಗೆ ಹೋದೆ. ಅಷ್ಟೇ. ನಮ್ಮಮ್ಮನ ಅಹವಾಲು ವಿಚಾರಣೆಗೆ ಮೊದಲೇ ಬಿದ್ದು ಹೋಯ್ತು. ಆದರೆ…. ಸಾಮಾನು ಮನೆಯದೇ ಆದರೂ ಗೊತ್ತಿಲ್ಲದೆ ತೆಗೆಯಬಾರದು, ನಂಬಿಕೆ ಮುಖ್ಯ ಎಂಬ ಪಾಠವನ್ನು ಕಲಿಸಿದ್ದು ಅಂದು ನಮ್ಮಮ್ಮ. ಹಾಗೆಯೇ… ಕ್ಷಮೆಯೂ ದೊಡ್ಡದು ಎಂಬುದನ್ನು ನಮ್ಮಪ್ಪ ತಿಳಿಸಿದ್ದು..
ಹೀಗೆ ಎಷ್ಟೂ ಹೇಳಬಹುದು. ಎದೆಯತುಂಬ ಎದೆಹಾಲು ಕೊಟ್ಟವಳ ಜೊತೆಗೇ ಬಾಲ್ಯ-ಹರಯದ ದಿನಗಳಲ್ಲಿ ಇದ್ದ ನೆನಪುಗಳು. ಈಗಲೂ ಅನಸೂಯೆಯಂತೆ ಹಣ್ಣಾಗಿರುವ ನಮ್ಮಮ್ಮನ ನೆನಪುಗಳು ಹಸಿರೋ ಹಸಿರು. ರೋಗರುಜಿನಗಳಿಲ್ಲದಂತಹ ವಂಶವಾಹಿನಿಯನ್ನು ಕೊಟ್ಟು, ಸಣ್ಣ ಪುಟ್ಟ ರೋಗರುಜಿನಗಳು ಬಂದರೂ ತನಗೆ ತಾನೇ ಸರಿಮಾಡಿಕೊಳ್ಳಬಲ್ಲ ಶಕ್ತಿಯ ಸ್ತನ್ಯವನ್ನು ಕೊಟ್ಟು ಬೆಳೆಸಿದ, ಜೊತೆಗೆ ಸುಳ್ಳು ತಟವಟ, ಪರಸ್ವಕ್ಕೆ ಆಸೆಪಡದೆ ಬದುಕ ಬೇಕೆಂಬ ಸಂಸ್ಕಾರವನ್ನೂ ತಾವೇ ಬದುಕಿ ತೋರಿಸಿದ ನಮ್ಮಮ್ಮನಿಗೆ ನಾನೇನು ತಾನೇ ಕೊಡಬಲ್ಲೆ….ನಾಲ್ಕು ಅಕ್ಷರಗಳಲ್ಲಿ ನನ್ನ ಮನಸ್ಸಿನ ಭಾವವನ್ನು ಹೇಳುವುದಲ್ಲದೇ.
ಶಾಂತಾ ನಾಗಮಂಗಲ ೧೪-೦೫-೨೦೨೩
( ವಿಶ್ವ ಅಮ್ಮಂದಿರ ದಿನಕ್ಕೆ…. ಈ ನಮ್ಮಮ್ಮ ಬಹುತೇಕ ಎಲ್ಲರ ಅಮ್ಮನೂ ಆಗಿಯೇ ಇರಬಹುದು. ಹಾಗಾಗಿ ಎಲ್ಲ ಅಮ್ಮಂದಿರಿಗೆ ನನ್ನ ಪ್ರೀತಿ-ಶ್ರದ್ಧೆಗಳು ಸಲ್ಲುತ್ತವೆ.)